ಲೇಖಕರು :ಷಣ್ಮುಖಯ್ಯ ಅಕ್ಕೂರಮಠ
(ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.
ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ಶ್ರೀಮತಿ ಶಾಂತ ಶ್ರೀ ಬಿ.ವಿ. ಗೌಡ ಫೌಂಡೇಶನ್‍ನಿಂದ ಪಂಚಾಚಾರ್ಯ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶಕುಂತಳ ಜಯದೇವ ಶರಣ ಪ್ರಶಸ್ತಿ, ಕಾಶಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನದಿಂದ `ಸಾಹಿತ್ಯ ವಿಶಾರದ’ ಹಾಗೂ `ಆರ್ಯಭಟ’ ಪ್ರಶಸ್ತಿಗಳು ಸಂದಿವೆ.)
ಭಾರತೀಯ ತತ್ತ್ವಶಾಸ್ತ್ರಚಿಂತನೆಯ ಹಾದಿಯಲ್ಲಿ ಜೀವಾತ್ಮ-ಪರಮಾತ್ಮರ ಸ್ವರೂಪ ಸಂಬಂಧಗಳ ಬಗೆಗೆ ಪ್ರಾಚೀನ ಕಾಲದಿಂದಲೂ ಜಿಜ್ಞಾಸೆ ನಡೆದು ಬಂದಿದೆ. ದಾರ್ಶನಿಕರ ಅಭಿಪ್ರಾಯಗಳೂ ಬೇರೆ ಬೇರೆಯಾಗಿವೆ.
ಅದ್ವೈತಿಗಳು-ಜೀವಾತ್ಮ-ಪರಮಾತ್ಮ ಬೇರೆ ಅಲ್ಲ; ‘ಸರ್ವಂ ಖಲ್ವಿದಂ ಬ್ರಹ್ಮ’ ಎಂದು ಬ್ರಹ್ಮತತ್ತ್ವವೊಂದನ್ನೇ ಒಪ್ಪುತ್ತಾರೆ. ದ್ವೈತಿಗಳು-ಜೀವಾತ್ಮ ಪರಮಾತ್ಮರಲ್ಲಿ, ಜೀವ-ಜೀವರಲ್ಲಿ ಭೇದವಿದೆ ಎಂದು ಮನ್ನಿಸುತ್ತಾರೆ. ವಿಶಿಷ್ಟಾದ್ವೈತಿಗಳು ಚಿತ್- ಆಚಿತ್-ಈಶ್ವರ ಎಂಬುದಾಗಿ ಮೂರು ತತ್ತ್ವಗಳಿವೆ ಎಂದು ಹೇಳುತ್ತಾ ಇವು, ಪ್ರತ್ಯೇಕವಾಗಿಲ್ಲ; ದಾಳಿಂಬ ಹಣ್ಣಿನ ಕಾಳಿನಂತೆ ಈಶ್ವರನಲ್ಲಿ ಸೇರಿವೆ. ಪರಮಾತ್ಮ ಒಂದೇ ಆಗಿದೆ, ಎಂದು ಸಮನ್ವಯಗೊಳಿಸುತ್ತಾರೆ. ಬೌದ್ಧ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮ ಶಬ್ದಗಳ ಪ್ರಯೋಗವಿಲ್ಲ. ಬುದ್ಧನದು ಅನಾತ್ಮವಾದ. ದೇವರ ಕಲ್ಪನೆ ಇಲ್ಲ. ಜೈನ ದಾರ್ಶನಿಕರು-ಮೂರು ಪ್ರಕಾರದ ಆತ್ಮಗಳನ್ನು ಒಪ್ಪುತ್ತಾರೆ. ಆದರೆ ಪ್ರತ್ಯೇಕ ಪರಮಾತ್ಮನ ಕಲ್ಪನೆ ಇಲ್ಲ. ಲೋಕಾಯುತ (ಚಾರ್ವಾಕ) ದರ್ಶನದಲ್ಲಿ ಆತ್ಮ-ಪರಮಾತ್ಮರ ವಿಚಾರವೇ ಇಲ್ಲ, ಮೀಮಾಂಸಕರ ಪ್ರಕಾರ ಆತ್ಮಗಳು ಆನೇಕ. ಆದರೆ, ಅವರಿಗೆ ದೇವರಲ್ಲಿ ನಂಬಿಕೆ ಇಲ್ಲ.
ವೀರಶೈವ (ಶಕ್ತಿ ವಿಶಿಷ್ಟಾದ್ವೈತ) ದಾರ್ಶನಿಕರು ಪರಶಿವನಿಗೆ ‘ಶಿವ’ ‘ಲಿಂಗ’ ‘ಸ್ಥಲ’ವೆಂಬ ಪದಗಳಿಂದ ಕರೆದಿದ್ದಾರೆ. ಜೀವಾತ್ಮನಿಗೆ ‘ಅಂಗ’ ವೆಂಬ ವಿಶಿಷ್ಟ ಪದ ಪ್ರಯೋಗ ಮಾಡಿದ್ದಾರೆ. ಹೀಗೆ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮರ ಬಗೆಗೆ ವಿಭಿನ್ನ ವಿಚಾರಗಳಿದ್ದರೂ, ಎಲ್ಲ ಧರ್ಮಗಳ ಧೈಯ ಆತ್ಮ-ಪರಮಾತ್ಮರ ಏಕತೆ. ಜೀವ-ದೇವನಾಗುವ, ಮಹೋನ್ನತ ನಿಲುವನ್ನೇ ಸಾರುತ್ತವೆ. ವೀರಶೈವ ದಾರ್ಶನಿಕರು ಪರವಸ್ತುವಿನ (ಲಿಂಗ) ಒಂದು ಅಂಶವಾಗಿರುವ ಜೀವಾತ್ಮ (ಅಂಗ) ಶಿವಯೋಗ ಸಾಧನೆಯ ಮೂಲಕ ಷಟ್‌ಸ್ಥಲದ ಮಾರ್ಗದಲ್ಲಿ ಕ್ರಮಿಸಿ, ಮತ್ತೆ ಅಂಗ-ಲಿಂಗದಲ್ಲಿ ಒಂದಾಗುವುದು. ಇದು, ವೀರಶೈವ ಪರಿಭಾಷೆಯಲ್ಲಿ ‘ಲಿಂಗಾಂಗ ಸಾಮರಸ್ಯ’, ‘ಬಯಲು’, ‘ಶೂನ್ಯ’ ಎನ್ನುವ ಪದಗಳಿಂದಲೂ ಕರೆಯುತ್ತಾರೆ. ‘ಲಿಂಗಾಂಗ ಸಾಮರಸ್ಯವೇ ವೀರಶೈವ ಸಿದ್ಧಾಂತದ ಪರಮ ಧೈಯ’.
ಜಾಗತಿಕ ಧರ್ಮಗಳು ಜೀವ-ದೇವನಾಗುವ ಪರಿಯನ್ನು ವಿವರಿಸುತ್ತವೆ. ವೀರಶೈವದ ಉದ್ದೇಶವೂ ಇದೇ ಆಗಿದೆ. ವೀರಶೈವ ಧರ್ಮ-ಪ್ರಾಚೀನ ಶೈವ ಧರ್ಮ ಮಹಾವೃಕ್ಷದ ಪ್ರಧಾನ ಶಾಖೆಯಾಗಿದೆ. ಆಚಾರ ಭೇದ ಹಾಗೂ ಅನುಭವ ಭೇದಗಳಿಂದಾಗಿ ಅನಾದಿಶೈವ, ಆದಿಶೈವ, ಅನುಶೈವ, ಮಹಾಶೈವ, ಯೋಗಶೈವ, ಜ್ಞಾನಶೈವ, ವೀರಶೈವ ಎಂಬ ಏಳು ಪ್ರಭೇದಗಳನ್ನು ಶಿವಾಗಮಗಳು ವಿವರಿಸುತ್ತವೆ.
ಭಾರತೀಯ ಅಧ್ಯಾತ್ಮ ಚಿಂತನೆಯ ಪರಂಪರೆಯಲ್ಲಿ ಲಿಂಗ-ಅಂಗಗಳ ಪರಿಕಲ್ಪನೆ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಉಪನಿಷತ್ತುಗಳಲ್ಲಿ ಜೀವಾತ್ಮ-ಪರಮಾತ್ಮ ಬ್ರಹ್ಮ ಎನ್ನುವ ಪದಗಳ ಪ್ರಯೋಗವಿದೆ. ಭಾರತೀಯ ತತ್ತ್ವಶಾಸ್ತ್ರದ ಸೌಧಕ್ಕೆ ಜೀವಾತ್ಮ-ಪರಮಾತ್ಮ ಎಂಬ ಎರಡು ಆಧಾರ ಸ್ಥಂಭಗಳಾದಂತೆ, ವೀರಶೈವ ಸಿದ್ಧಾಂತಕ್ಕೆ ಅಂಗ-ಲಿಂಗ ತತ್ತ್ವಗಳು ಅಡಿಗಲ್ಲು ಗಳಾಗುತ್ತವೆ.
ಲಿಂಗದ ಪರಿಕಲ್ಪನೆ :
“ಲಿಂಗ’ ಪದ ವೀರಶೈವ ಧರ್ಮದಲ್ಲಿ ವಿಸ್ತಾರವಾದ ಅರ್ಥವನ್ನೊಳಗೊಂಡಿರುತ್ತದೆ. ‘ಲಿಂಗ’ ವೀರಶೈವ ಧರ್ಮದ ಕೇಂದ್ರ ಬಿಂದು ಆರಾಧ್ಯ ದೈವ, ಲಿಂಗಕ್ಕೆ, ಪರತತ್ತ್ವ, ಪರಶಿವ, ಪರಶಿವನ ಒಂದು ಸಂಕೇತ. ಇತ್ಯಾದಿ- ಅರ್ಥಗಳಿವೆ. (ವೀ.ಪಾ.ಪ.ಕೋ.ಶ.ಪು.೪೪೮) ಲೀನಮರ್ಥಂಗಮಯತಿ ಇತಿಲಿಂಗಂ’ʼ ಎನ್ನುವ ವ್ಯುತ್ಪತ್ತಗನುಗುಣವಾಗಿ, ಈ ಪ್ರಪಂಚ ಯಾವುದರಿಂದ ಸೃಷ್ಟಿಯಾಗಿ, ರಕ್ಷಿತವಾಗಿ ಪುನಃ ಯಾವುದರಲ್ಲಿ ಲಯವಾಗುವುದೋ ಅಂತಹ ಸರ್ವಾಧಾರವಾದ ವಸ್ತುವೇ ಲಿಂಗ. ‘ಯತೋವಾ ಇಮಾನಿ ಭೂತಾನಿ
ಜಾಯಂತೇ’ ಎನ್ನುವ ತೈತ್ತರೀಯ ಉಪನಿಷತ್ತು ಇದೇ ಅರ್ಥವನ್ನು ಸೃಷ್ಟಿಕರಿಸುತ್ತದೆ. ‘ಲಿಂಗಂ ತದ್ಬ್ರಹ್ಮ ಶಾಶ್ವತಂ’ ‘ಲಿಂಗಂ ಬ್ರಹ್ಮ ಸನಾತನಂ’ ಎನ್ನುವ ವಾಕ್ಯಗಳು, ‘ಲಿಂಗ’ ವನ್ನು ಶಿವನೆಂದೂ, ಬ್ರಹ್ಮನೆಂದು ಕರೆಯುತ್ತವೆ. ‘ಶೇತೇ ಅಸ್ಮಿನ್ ಸರ್ವಮಿತಿ ಶಿವಃ’ ಎನ್ನುವ ನಿರುಕ್ತಿಯು, ಚರಾಚರ ಜಗತ್ತೆಲ್ಲ-ಇವನಲ್ಲಿ ಅಡಗಿರುವುದರಿಂದ ಶಿವನೆಂದು ಹೆಸರಾಗಿದೆ.
ಲೀಯತೆ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತಸ್ಮಾಲ್ಲಿಂಗಂ ಪರಂ ಬ್ರಹ್ಮ ಕಾರಣಂ ನಿತ್ಯಮವ್ಯಯಂ ||
ಎಂದು ಸಿದ್ಧಾಂತ ಶಿಖಾಮಣಿ ಮೇಲಿನ ವಿಷಯವನ್ನೇ ಸಮರ್ಥಿಸುತ್ತದೆ.
“ಶಿವ ಏವ ಸ್ವಯಂ ಲಿಂಗಂ ಇತಿ ಲಿಂಗಸ್ಯ ವೈಭವಮ್ (ಅನುಭವ ಸೂತ್ರ ೩-೭)
ಶಿವನೇ ಸ್ವಯಂ ಲಿಂಗವೆಂದು ಅನುಭವಸೂತ್ರ ತಿಳಿಸುತ್ತದೆ.
ಆಕಾಶಂ ಲಿಂಗ ಮಿತ್ಯಾಹುಃ ಪೃಥ್ವೀ ತಸ್ಯ ಪೀಠಿಕಾ |
ಆಲಯಂ ಸರ್ವಭೂತಾನಾಂ, ಲಯನಾ ಲಿಂಗಮುಚ್ಯತೇ || (ಚಂದ್ರಜ್ಞಾನಾಗಮ ಕ್ರಿಯಾಪಾದ, ೩೫೧)
ವಿಶಾಲವಾದ ಆಕಾಶವೇ ಲಿಂಗ, ವಿಸ್ತಾರವಾದ ಭೂಮಿ ಪೀಠಿಕೆ, ಜಗತ್ತಿಗೆ ಆಧಾರವಾಗಿ ಆಲಯವಾಗಿದೆ ಎನ್ನುವ ಲಿಂಗದ ಸ್ವರೂಪ ಕಲ್ಪನೆ ಆಗಮದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಲಿಂಗದ ವಿರಾಟ್ ಸ್ವರೂಪವನ್ನು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ ;
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ, ಅಗೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು, ಚುಳುಕಾದಿರಯ್ಯ
ಎನ್ನುತ್ತಾರೆ. ವೀರಶೈವ ಧಾರ್ಮಿಕ ಸಾಹಿತ್ಯದಲ್ಲಿ ಲಿಂಗದ ಪರಿಕಲ್ಪನೆ ಮಹೋನ್ನತವಾಗಿದೆ. ಲಿಂಗವನ್ನು ಶರೀರದಲ್ಲಿ ಧರಿಸಿ, ಕರಪೀಠದಲ್ಲಿ ಅರ್ಚಿಸಬೇಕೆಂಬ ವಿಶೇಷ ನಿಯಮವಿದೆ. ಲಿಂಗವು ಸ್ಥಾವರ, ಇಷ್ಟಲಿಂಗವೆಂದು ಎರಡು ವಿಧ. ದೇವಾಲಯಗಳಲ್ಲಿ ಸ್ಥಾಪಿತವಾದ ಲಿಂಗ ಸ್ಥಾವರ, ಗುರುಗಳಿಂದ ದೀಕ್ಷೆ ಪಡೆದು ಶರೀರದ ಮೇಲೆ ಧರಿಸುವುದು ಇಷ್ಟಲಿಂಗ. ಸ್ಥಾವರಲಿಂಗವನ್ನು ಅನೇಕರು ಸಾಮೂಹಿಕವಾಗಿ ಪೂಜಿಸಬಹುದು; ಆದರೆ ಇಷ್ಟಲಿಂಗವನ್ನು ಯಾವ ಸಾಧಕನು ಧರಿಸುತ್ತಾನೋ ಆತನು ಮರಣ ಪರ್ಯಂತ ನಿತ್ಯವೂ ಪೂಜಿಸಬೇಕೆಂಬ ನಿಯಮವಿದೆ. ಸಾಧಕನ ದೇಹ ತ್ಯಾಗದ ನಂತರವೂ ಲಿಂಗ ಅವನೊಡನೆ ವಿಲೀನವಾಗುತ್ತದೆ. ಆದ್ದರಿಂದ ಇದು ಇಷ್ಟಲಿಂಗ. ಈ ಲಿಂಗ ಪೂಜಾ ವ್ರತವನ್ನು ಶಾಂಭವ ವ್ರತ, ಪಾಶುಪತ ವ್ರತ, ಶಿರೋವ್ರತವೆಂದು, ಆಗಮಗಳು ಬಣ್ಣಿಸುತ್ತವೆ.
ಅಂಗದ ಪರಿಕಲ್ಪನೆ :
ವೀರಶೈವರಲ್ಲಿ ಜೀವಾತ್ಮ ಎಂಬ ಪದಕ್ಕೆ ಪರ್ಯಾಯವಾಗಿ- ‘ಅಂಗ’ ಪದ ಪ್ರಯೋಗವಾಗಿದೆ. ಶ್ರೀ ಗುರುವಿನಿಂದ ದೀಕ್ಷೆಯನ್ನು ಪಡೆದು ಪರಿಶುದ್ಧ ಜೀವ ಎಂದೂ, ‘ಅಂ’ ಎಂದರೆ ಪರಶಿವಲಿಂಗ, ‘ಗಂ’ ಎಂದರೆ- ಗಮಿಸಲು, ಹೊಂದಲು, ಸನ್ನದ್ಧವಾದ ಜೀವ ಎಂದೂ-
”ಅಮಿತಿ ಬ್ರಹ್ಮ ಸನ್ಮಾತ್ರಂ ಗಚ್ಛತೀತಿ ಗಮುಚ್ಛ್ಯತ” (ಅನುಭವ ಸೂತ್ರ)
ಅಂಗವು, ಲಿಂಗದೆಡೆಗೆ ಸಾಗುವ ತತ್ತ್ವ. ಇದು ಅಂಗದ ನಿರುಕ್ತಿ ತನ್ನೊಳಗಿರುವ ಲಿಂಗಕ್ಕೆ ಅಂಗವಾಗುವ ಕಾರಣ ಅಂಗನೆಂಬ ನಾಮ’ ಮೂಲ ಚಿನ್ನವಿದ್ದಂತೆ ಲಿಂಗ, ಆ ಚಿನ್ನದಿಂದಾದ ಆಭರಣ ಅಂಗ. ನಾಮರೂಪಗಳು ಅಳಿದರೆ ಅಂಗವೇ ಲಿಂಗ ಇತ್ಯಾದಿ, ಅಂಗ ಶಬ್ದಕ್ಕೆ ದಾರ್ಶನಿಕರು ಶರಣರು, ಅತ್ಯಂತ ಮೌಲಿಕವಾದ ಅರ್ಥ ವಿವರಣೆ ನೀಡಿದ್ದಾರೆ. ʼಅಜ್ಞಾನದಿಂದ ಆವೃತವಾದ ಜೀವ
ಎಚ್ಚರಗೊಂಡು-ಅಧ್ಯಾತ್ಮಿಕ ಜಾಗೃತಿಯಿಂದ ಮುಮುಕ್ಷುವಾಗಿ ‘ಅಂಗ’ ಎನಿಸಿಕೊಳ್ಳುತ್ತಾನೆ ಎನ್ನುವ ಉದಾತ್ತ ಕಲ್ಪನೆ ಇದೆ.
ಇನ್ನು ವೀರಶೈವ ಪಾರಿಭಾಷಿಕ ಪದಕೋಶದಲ್ಲಿ ಅಂಗ ಶಬ್ದಕ್ಕೆ ಒಡಲು, ದೇಹ, ದೀಕ್ಷೆ ಹೊಂದಿದ ದೇಹ, ದೇಹದ ಒಂದು ಭಾಗ, ಅವಯವ, ಶಿವಾಂಶವುಳ್ಳ ಚೇತನ, ಶುದ್ಧ ಜೀವಾತ್ಮ ಇತ್ಯಾದಿ ಅರ್ಥಚ್ಛಾಯೆಗಳಿವೆ. ಆದರೂ ಅಂಗ, ಬರೀ ದೇಹವಲ್ಲ, ಬರೀ ಜೀವಾತ್ಮನಲ್ಲ, ದೇಹಾತ್ಮ ಅಥವಾ ಅಂಗವೆನ್ನುವುದೇ ಸೂಕ್ತವಾಗಿ ಕಾಣುತ್ತದೆ. ದೇಹ, ಜೀವಾತ್ಮಎನ್ನುವ ಅರ್ಥಗಳಿದ್ದರೂ ಅವು ಬೇರೆ-ಬೇರೆ ಅಲ್ಲ ʼʼಲಿಂಗವೆಂದರೆ ಶಿವ, ಅಂಗವೆಂದರೆ ಜೀವ, ಜೀವನಿಗೆ ಅಧಿಷ್ಠಾನವಾದ ದೇಹ-ಜೀವನಿರುವಷ್ಟು ಕಾಲ ಈ ದೇಹವೂ ಶಿವ, ಅವನಿಲ್ಲದಾಗ ಬರೀ ಶವ” ಎನ್ನುವ ಅನುಭವಿಗಳ ಮಾತು ಸತ್ಯ. ದೇಹ, ಪ್ರಸಾದ ಕಾಯ, ಚೈತನ್ಯದ ದೇಗುಲ ಅದು ಬೇರೆ ಅಲ್ಲ. ಒಂದೆಡೆ, ದೇಹಾತ್ಮ ವಿಚಾರವಾಗಿ ಓಷೋ ಹೇಳುತ್ತಾರೆ.
“Do not divide them. They are not two. They are already one. They have always been one. Where the energy becomes conscious it is the soul. When it becomes unconscious it becomes the body…… Body and conscious are two poles of one phenomenon”.
(The great challenge p. 167)
ಈ ವಿವರಣೆಯನ್ನು ಗಮನಿಸಿದರೆ, ವೀರಶೈವ ದಾರ್ಶನಿಕರು ದೇಹಾತ್ಮನಿಗೆ ‘ಅಂಗ’ ವೆಂದೂ ಕರೆದಿರುವುದು ಅರ್ಥಪೂರ್ಣ ಎನಿಸುತ್ತದೆ. ಕಾರಣ ಮಾನವ ದೇಹದಲ್ಲಿ ಬರೀ ಆತ್ಮವೊಂದೇ ಇಲ್ಲ. ಪಂಚಜ್ಞಾನೇಂದ್ರಿಯಗಳು (ಕಣ್ಣು-ಕಿವಿ-ಮೂಗು-ನಾಲಗೆ ಚರ್ಮ) ಪಂಚ ಕರ್ಮೇಂದ್ರಿಯಗಳು (ವಾಕ್-ಪಾಣಿ-ಪಾದ, ಪಾಯು-ಉಪಸ್ಥೆ) ಪಂಚಭೂತಗಳು (ಪೃಥ್ವಿ, ಅಪ್, ತೇಜ, ವಾಯು, ಆಕಾಶ) ಪಂಚತನ್ಮಾತ್ರಗಳು(ಶಬ್ದ-ಸ್ಪರ್ಶ-ರೂಪ-ರಸ-ಗಂಧ) ಹೀಗೆ ದೇಹ ಇವೆಲ್ಲವುಗಳನ್ನೊಳಗೊಂಡ ವಿಶಾಲ ಸಂಗ್ರಹಾಲಯವಾಗಿದೆ.
ತ್ರಿವಿಧ ಶರೀರ :
ಮನುಷ್ಯನಿಗೆ ತ್ರಿವಿಧ ಶರೀರಗಳಿವೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅವು ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳು.
ಸ್ಥೂಲ ಶರೀರ ಪಂಚೂಭೂತಗಳಿಂದಾಗಿ, ಆಹಾರದಿಂದ ರಕ್ಷಿತವಾಗಿದೆ. ಸೂಕ್ಷ್ಮ ಶರೀರ, ಇದು ಸ್ಥೂಲ ದೇಹದ ಒಳಭಾಗದಲ್ಲಿದೆ, ಪ್ರತ್ಯೇಕವಾಗಿದೆ. ಇಲ್ಲಿ ಮನುಷ್ಯನ ಚಿತ್ತ ವೃತ್ತಿಗಳು, ಆಲೋಚನೆಗಳು ಎಂಬ ಅಲೆಗಳು-ವ್ಯಕ್ತವಾಗುತ್ತವೆ. ಬುದ್ಧಿ-ಅಹಂಕಾರ, ಮನಸ್ಸು ಪ್ರಾಣ ಪಂಚತನ್ಮಾತ್ರಗಳು ಇಲ್ಲಿವೆ. ಕಾರಣ ಶರೀರ, ಇದು ಅತ್ಯಂತ ಒಳಗೆ ಇರುವುದು. ಇಲ್ಲಿಯೇ ಅವಿದ್ಯೆಯ ಬೀಜ, ಮಾಯೆಯ ಭಾವನೆ ಬೇರೂರುವುದು. ಇವುಗಳ ಹಿಂದೆ ಆತ್ಮವಿದೆ ಎಂದು ಯೋಗ ಶಾಸ್ತ್ರದ ನಿರೂಪಣೆ.
ಇವುಗಳಲ್ಲದೆ, ದೇಹದಲ್ಲಿ ಪಂಚಕೋಶಗಳು ಇವೆ. ಕತ್ತಿಯ ಒರೆಯಲ್ಲಿರುವಂತೆ, ಆತ್ಮ ಪಂಚಕೋಶಗಳೊಳಗಿದ್ದಾನೆ, ಎನ್ನುವ ಪರಿಕಲ್ಪನೆ ಇದೆ.
ಅನ್ನಮಯ ಕೋಶ-ಸ್ಥೂಲ ಶರೀರ, ಪ್ರಾಣಮಯ ಕೋಶ ಇದು ಕರ್ಮೇಂದ್ರಿಯ ಮೂಲಕ ವ್ಯಕ್ತವಾಗುತ್ತದೆ. ಮನೋಮಯ ಕೋಶ-ಪಂಚ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ವಿಜ್ಞಾನಮಯಕೋಶ ಬುದ್ಧಿ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಪ್ರಾಣಮಯ ಮನೋಮಯ-ವಿಜ್ಞಾನಮಯ ಕೋಶಗಳಲ್ಲಿ ಸೂಕ್ಷ್ಮ ಶರೀರ ಕೆಲಸ ನಿರ್ವಹಿಸುತ್ತದೆ. ಐದನೆಯದು ಆನಂದಮಯ ಕೋಶ ಇದೇ ಕಾರಣ ಶರೀರ. ಇದು ಜೀವಾತ್ಮನಿಗೆ, ತೀರಾ ನಿಕಟವಾಗಿರುವ ಕೋಶ. ಜಾಗ್ರದಾವಸ್ಥೆಯಲ್ಲಿ ನಾವು ಸ್ಥೂಲ ದೇಹದಲ್ಲಿರುತ್ತೇವೆ. ಕನಸಿನಲ್ಲಿ ಸೂಕ್ಷ್ಮ ಶರೀರಕ್ಕೆ ಹೋಗುತ್ತೇವೆ. ಸುಷುಪ್ತಿಯಲ್ಲಿ ಕಾರಣ ಶರೀರಕ್ಕೆ ಹೋಗುತ್ತೇವೆ-ಈ ಮೂರು ಅವಸ್ಥೆಗಳಲ್ಲೂ ಸಾಕ್ಷೀ ಭಾವ ಇದೆ. ಅದೇ ಆತ್ಮ ಎಂದು ಯೋಗಶಾಸ್ತ್ರದ ವಿವರಣೆ.
ಯೋಗದರ್ಶನ :
ಭಾರತೀಯ ದರ್ಶನಗಳಲ್ಲಿ ಯೋಗ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಯೋಗ ದರ್ಶನ ಪ್ರಾಚೀನವಾದುದು. ಎಲ್ಲರಿಗೂ ಬೇಕಾದುದು. ಯೋಗ ಯುಜ್-ಸಂಗತ ಕರಣೇ=ಘಟಿಸು, ಕೂಡುವಿಕೆ, ಒಂದಾಗುವಿಕೆ ಎನ್ನುವ ಅರ್ಥಗಳಿವೆ. ಯುಜ್ ಧಾತುವಿನಿಂದ ಯೋಗ ಪದವು ನಿಷ್ಪನ್ನಗೊಳ್ಳುತ್ತದೆ. ಪತಂಜಲಿ ಹಠಯೋಗ, ಲಯಯೋಗ-ಮಂತ್ರಯೋಗ, ರಾಜಯೋಗ ಎಂಬ ಯೋಗ ಪ್ರಭೇದಗಳನ್ನು ಹೇಳಿ, ಅವುಗಳ ಪ್ರಯೋಜನವನ್ನು ತಿಳಿಸಿದ್ದಾನೆ.
ರಾಜಯೋಗ-ಹಠಯೋಗದಿಂದ, ಶರೀರಶುದ್ಧಿ; ಲಯಯೋಗದಿ೦ದ ಪ್ರಾಣಶುದ್ಧಿ; ಮಂತ್ರಯೋಗದಿಂದ ಮನಶುದ್ಧಿ ಈ ಯೋಗಗಳ ಸಾಧನೆಯಿಂದ ಜೀವನ ಶುದ್ಧಿ ಎಂದು ವಿವರಿಸುತ್ತಾನೆ. ‘ಯೋಗ’ ವನ್ನು ಕುರಿತು ವಿವಿಧ ವ್ಯಾಖ್ಯಾನಗಳಿವೆ.
ಪತಂಜಲಿ ಯೋಗ ದರ್ಶನದಲ್ಲಿ ‘ಯೋಗಶ್ಚಿತ್ತ ವೃತ್ತಿನಿರೋಧಃ’, ಅಂದರೆ ಮನಸ್ಸಿನ ಚಂಚಲ ವೃತ್ತಿಗಳ ನಿರೋಧವೇ ಯೋಗವೆನ್ನುತ್ತಾನೆ. ಭಗವದ್ಗೀತೆಯಲ್ಲಿ ‘ಯೋಗಃ ಕರ್ಮಸು ಕೌಶಲಂ’ ‘ಸಮತ್ವಂ ಯೋಗಮುಚ್ಚತೇ’ ಅಂದರೆ ಕರ್ಮದಲ್ಲಿ ಕುಶಲತೆ, ಚಿತ್ತ ಸಮತೆಯೇ ಯೋಗವೆನ್ನುವ ವ್ಯಾಖ್ಯೆ ಇದೆ. ʼʼಮನಃ ಪ್ರಶಮನೋಪಾಯ ಯೋಗ ಇತ್ಯಭಿಧೀಯತೆ’ ಮನಸ್ಸನ್ನು ಪ್ರಶಾಂತಗೊಳಿಸುವ ಉಪಾಯವೇ ಯೋಗ ಎನ್ನುತ್ತದೆ- ಯೋಗವಾಶಿಷ್ಟ.
”ತಾಂ ಯೋಗಮಿತಿಮನ್ಯತೇ ಸ್ಥಿರಾಂ ಇಂದ್ರಿಯ ಧಾರಣಂ” ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ಸ೦ಪೂರ್ಣ ಹತೋಟಿ ಹೊಂದಿರುವ ಸ್ಥಿತಿ ಎಂದು ಕಠೋಪನಿಷತ್ತು ತಿಳಿಸುತ್ತದೆ. ಹೀಗೆ ಯೋಗವನ್ನು ಕುರಿತು ವಿವಿಧ ವ್ಯಾಖ್ಯಾನಗಳಿದ್ದರೂ ಅವುಗಳ ಆಶಯ ಒಂದೇ ಆಗಿದೆ. ಅದು ಮನಸ್ಸಿನ ಏಕಾಗ್ರತೆ, ನಿಗ್ರಹ ಹಾಗೂ ವಿಕಾಸದ ವಿಧಾನ.
ಅತ್ತ ಇತ್ತ ಹರಿವ ಮನವ ಒಂದು ಕಡೆ
ನಿಲ್ಲಿಸಬಲ್ಲರೆ ಗುಹೇಶ್ವರ ಲಿಂಗದ ಬೆಳಗು
ಅಂತರಂಗದಲ್ಲಿಯೇ ಗೋಚರಿಸುತ್ತದೆ ಎನ್ನುತ್ತಾರೆ ಅಲ್ಲಮಪ್ರಭು.
“Yoga literally means connection or union with the supreme spirit. What unites us with the supreme spirit is yoga. There is only one in the universe”.
“Yoge for its true understanding depends not on words but on Experience”.
ಜೀವ ದೇವನೊಂದಿಗೆ ಸೇರುವುದೇ ಯೋಗ, ಜೀವ-ದೇವ ಸಂಬಂಧವು ಯೋಗ ಸಾಧನೆಯ ವಿಷಯ. ಅನುಭವಕ್ಕೆ ತಂದುಕೊಳ್ಳುವ ವಿಷಯವೇ ವಿನಃ ಅದನ್ನು ಕುರಿತು, ಚರ್ಚಿಸುವ, ವರ್ಣಿಸುವ ವಿಷಯವಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. (Common Sense About Yoga P. 75)
ಯೋಗ ಸಾಧನೆಯ ಹಾದಿಯಲ್ಲಿ ಮನಃಶುದ್ಧಿ ಏಕಾಗ್ರತೆ, ಅತ್ಯವಶ್ಯ. ಮನಸ್ಸಿನ ಏಕಾಗ್ರತೆಗೆ ಅನೇಕ ಯೋಗಗಳ ಪ್ರಯೋಗಗಳಿವೆ. ಮನೋದೇಹಿಯಾದ ಮಾನವನ ಮನಸ್ಸು ಮರ್ಕಟ. ಮನಸ್ಸೇ ಮನುಷ್ಯ ಜಗತ್ತಿನ ಆಗು-ಹೋಗು, ಕಲ್ಪನೆ-ಪರಿಕಲ್ಪನೆಗಳಿಗೆಲ್ಲ ಕಾರಣ. ಮನಶ್ಯಾಸ್ತ್ರದ ವ್ಯಾಖ್ಯಾನಗಳಲ್ಲಿ ವಿಜ್ಞಾನದ ಪ್ರಯೋಗಗಳಲ್ಲಿ ಇಂದಿನವರೆಗೆ ನಿಖರವಾಗಿ ಮನಸ್ಸು ಎಂದರೆ ಇದೇ ಎಂದು ತೀರ್ಮಾನವಾಗಿಲ್ಲ. ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಮನಸ್ಸು ನಮ್ಮ ಜೀವನದ ಭಾಗವಾಗಿದ್ದರೂ, ನಮಗೆ ಅಪರಿಚಿತವಾಗಿದೆ. ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಅದನ್ನು ನಿಗ್ರಹಿಸುವ, ಏಕಾಗ್ರತೆಗೆ ತರುವ ವಿಧಾನಗಳಿವೆ. ಮಾನವ ದೇವರೊಂದಿಗೆ ಜಗತ್ತಿನೊಂದಿಗೆ ಸಂಬಂಧ ಬೆಳಸುವುದು ಮನಸ್ಸಿನ ಮೂಲಕವೆ, ಇದೇ ಯೋಗ ! ಇದೇ ಭಾರತೀಯ ಅಧ್ಯಾತ್ಮಿಕ ಇತಿಹಾಸ.
ಯೋಗ ಸಾಧನೆ ದುರ್ಗಮ ಮಾರ್ಗ, ಸರ್ವಜ್ಞನ ವಚನವೊಂದು ಹೀಗಿದೆ :
ದಾಸಿಯ ಕೊಡದಂತೆ ಸೂಸುತಿಪ್ಪುದು ಯೋಗ
ದಾಸಿ ಪರ ಪುರುಷನಾಶಿಸಲದು |
ಬೀಸಿ ಬಿದ್ದಂತೆ ಸರ್ವಜ್ಞ ||
ಯೋಗವು ದಾಸಿಯ ತಲೆಯ ಮೇಲಿನ ತುಂಬಿದ ಕೊಡದಂತೆ, ಮನಸ್ಸು ಅತ್ತಿತ್ತ ಹೊರಳಿದರೆ, ಕೊಡವು ಬಿದ್ದು, ಚೂರಾಗುತ್ತದೆ ಎಂದು ಮನಸ್ಸಿನ ಏಕಾಗ್ರತೆ, ಯೋಗ ಮಹತ್ವವನ್ನು ತಿಳಿಸುತ್ತಾನೆ.
ಯೋಗ ಸಾಧನೆಯಲ್ಲಿ ಅಧ್ಯಾತ್ಮಿಕ ಆದರ್ಶದಲ್ಲಿ ನಂಬಿಕೆ ಇರಬೇಕು. ಅಧ್ಯಾತ್ಮಿಕ ಜೀವನದ ಪ್ರಥಮ ಅರ್ಹತೆ, ನೈಜ ಆತ್ಮವನ್ನು ಅರಿಯುವ ಸಾಮರ್ಥದಲ್ಲಿ ಅತೀವ ಶ್ರದ್ಧೆ ಬೇಕು, ತಾನು ಚಿಂತಿಸುವ, ಅದೇ ತಾನಾಗುವ ದೈವದ ಬಗ್ಗೆ ನಂಬಿಕೆ ಬೇಕು. ನಂಬಿಕೆಗೆ ಅಗಾಧ ಶಕ್ತಿ ಇದೆ. ಸಾಧಕ ಏನನ್ನು ಅರಸಿಕೊಂಡು ಬಂದನೋ, ಅದೇ ತಾನು ಎಂದು, ಅರಿವಾಗುವ ಸ್ಥಿತಿ, ಈ ಸ್ಥಿತಿ ಇನ್ನೊಬ್ಬರಿಗೆ ವಿವರಿಸಲುಬಾರದು. ಇಂತಹ ಸ್ಥಿತಿಗೇರಿದ ಯೋಗಿಗಳ ಸಾನಿಧ್ಯದಲ್ಲಿ ಕ್ರೂರ ಪ್ರಾಣಿಗಳು ತಮ್ಮ ಕ್ರೌರ್ಯವನ್ನು ಮರೆತು ಪ್ರೇಮವನ್ನು ಮೆರೆಯುತ್ತವೆ ಎಂದು ಪತಂಜಲಿ ಹೇಳುತ್ತಾನೆ. ನಂಬಿಕೆ- ದೃಢವಾದ ನಂಬಿಕೆ ಇರವಲ್ಲಿ ವಿಚಾರ ವಿಮರ್ಶೆಗೆ ಸ್ಥಾನವಿಲ್ಲ. ಕಾರಣ Reason is the great enemy that faith has ಎನ್ನುವ ಮಾತಿನಂತೆ, ವಿಚಾರ ನಂಬಿಕೆಯ ಪ್ರಬಲ ಶತ್ರು. ಯೋಗ ಸಾಧನೆಯಲ್ಲಿ ನಂಬಿಕೆಗೆ ಪ್ರಾಧಾನ್ಯ.
ವೀರಶೈವ-ಶಿವಯೋಗ : ಪರಿಕಲ್ಪನೆ
ವೀರಶೈವ ಧರ್ಮದ ಶಿವಯೋಗ, ಇತರ ಯೋಗಗಳಿಗಿಂತ, ವಿಭಿನ್ನವಾಗಿ ಭಾರತೀಯ ಯೋಗ ಪರಂಪರೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿದೆ. ಇದರ ನೆಲೆ-ಹಿನ್ನೆಲೆ ಶಿವಾಗಮಗಳಲ್ಲಿ ಪಾರಮೇಶ್ವರ- ಸೂಕ್ಷ್ಮ-ಚಂದ್ರಜ್ಞಾನ ಆಗಮಗಳಲ್ಲಿ ಶಿವಯೋಗದ ವಿಚಾರವಿದೆ. ವೀರಶೈವ ತತ್ತ್ವಜ್ಞಾನದ ಮೂಲ, ವಿಚಾರಗಳ ಸ್ರೋತ ಆಗಮಗಳಲ್ಲಿರುವುದರಿಂದ, ಅಲ್ಲಿ ಬರುವ ಷಟ್‌ಸ್ಥಲ ಸಿದ್ಧಾಂತವು ಶಿವಯೋಗವನ್ನೇ ಪ್ರತಿಪಾದಿಸುತ್ತದೆ. ಷಟ್‌ಸ್ಥಲದಲ್ಲಿ ಬರುವ ಪ್ರಾಣಲಿಂಗದ ಸ್ಥಲದಲ್ಲಿ ಬರುವ ವಿಚಾರಗಳು ಸಂಪೂರ್ಣ ಶಿವಯೋಗಮಯವಾಗಿವೆ.
ಚರಾಚರಾತ್ಮಕಂ ಸರ್ವಂ ಜಗದೇತಚ್ಛವಾತ್ಮಕಂ |
ಭಾವಯನ್ನಾತ್ಮ ತಾದಾತ್ಮ್ಯಂ ಯೋಗ ಶೈವಮಿತಿಸ್ಮೃತಃ | (ಪಾ.ಅ.ಪ. ಶ್ಲೋ ೨೫)
ಜಗತ್ತನ್ನು ಶಿವಸ್ವರೂಪವೆಂದು, ಭಾವಿಸಿ, ಅದರಲ್ಲಿ ಅಧ್ಯಾತ್ಮ ಭಾವ ಹೊಂದುವುದು ‘ಯೋಗಶೈವ’ ಎಂದು ಪಾರಮೇಶ್ವರಾಗಮ ತಿಳಿಸುತ್ತದೆ.
ಶಿವಜ್ಞಾನ ಶಿವೇಭಕ್ತಿ: ಶಿವಾಚಾರ: ಶಿವವ್ರತಮ್ |
ಶಿವಲಿಂಗಾರ್ಚನಾಜ್ಞಪ್ತಿಃ ಶಿವಯೋಗೋಹಿ ಪಂಚಧಾ ||
ಎಂದು ಐದು ವಿಧ ಶಿವಯೋಗಗಳನ್ನು ವೀರಾಗಮ ವಿವರಿಸುತ್ತದೆ. ಮತ್ತೆ ಚಂದ್ರಜ್ಞಾನಾಗಮದಲ್ಲಿ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ, ಭಾವಲಿಂಗದಲ್ಲಿ ಭಾವಯೋಗಗಳನ್ನು, ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗ ಎಂದು ತಿಳಿಸುತ್ತದೆ. (ಪಾ.ಆ.ಕ್ರ.ಪಾ. ೩-೩೯-೪೦). ವ್ಯಕ್ತಿ ತನ್ನ ಬಾಹ್ಯ ಸ್ವರೂಪವನ್ನು ಅರಿಯಲು ಕನ್ನಡಿಯ ಅಗತ್ಯವಿರುವಂತೆ ಆಂತರಿಕ ಆತ್ಮ ಸ್ವರೂಪವನ್ನು ಅರಿಯಲು ಕನ್ನಡಿಯಂತಹ ಒಂದು ಪವಿತ್ರ ವಸ್ತು (ಇಷ್ಟಲಿಂಗ) ವನ್ನು ವೀರಶೈವ ಸಾಧಕರು ಸ್ವೀಕರಿಸಲೇಬೇಕಾಯಿತು. ಸ್ಥಾವರ ಮೂರ್ತಿಗಳ ಬದಲಾಗಿ ಆತ್ಮನ ಕುರುಹಾದ
ಇಷ್ಟಲಿಂಗವನ್ನು, ಸ್ವೀಕರಿಸಿ ಅಹಂ ಗ್ರಹೋಪಾಸನೆಯಿಂದ ಸಾಧನೆ ಮಾಡುತ್ತಾರೆ. ತನ್ನನ್ನು ಹಾಗೂ ಹೊರಗಿನ ಪ್ರಪಂಚವನ್ನು ಮರೆತು ಮನಸ್ಸಿನ ಸಮಾಧಿ ಸ್ಥಿತಿ ಹೊಂದಲು, ಒಂದು ವಸ್ತುವಿನ ಅಗತ್ಯವಿದೆ, ಎಂಬುದು ಮನಶ್ಯಾಸ್ತ್ರಜ್ಞರ ಅಭಿಮತ. ಬಹುಪಾಲು ಸಾಮಾನ್ಯ ಜನರಿಗೆ ಧ್ಯಾನ ಮಾಡಲು ಒಂದು ಕುರುಹು (ಪ್ರತೀಕ) ಬೇಕೇ ಬೇಕು. ಅದು ಇಲ್ಲದಿದ್ದರೆ, ಮನಸ್ಸು ಅಲೆದಾಡುತ್ತದೆ. ಹಾರುವ ಪಟದಂತಿರುವ ಮನಸ್ಸಿಗೆ ಒಂದು ಸೂತ್ರ ಬೇಕು. ಮನಸ್ಸಿನ ಏಕಾಗ್ರತೆಗೆ ಕುರುಹಿನ ಮೂಲಕ ದೇವರನ್ನು ಧ್ಯಾನಿಸುತ್ತಾನೆ. ಏಕಾಗ್ರತೆಗೆ ಓಂಕಾರ ಜಪ ಸಾಕು ಎಂದು ಪತಂಜಲಿ ತಿಳಿಸುತ್ತಾನೆ. (ಯೋಗಸೂತ್ರ ೧-೨೭-೨೯), ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ, ಯಾವುದೇ ವಸ್ತು ದೇವರ ಪ್ರತೀಕವಾಗಬಹುದು. ಕುರುಹೇ ದೇವರಲ್ಲ. ಆದರೆ ಕುರುಹಿನ ಮೂಲಕ ಅರಿವು ಪಡೆದು ಅದರ ಹಿಂದಿರುವ ಪರಮ ಸತ್ಯವನ್ನು ಗ್ರಹಿಸಬೇಕಾಗುತ್ತದೆ.
ತಂತ್ರಸಾರದ ಶ್ಲೋಕವೊಂದು ಹೀಗಿದೆ :
ಪ್ರಥಮಾ ಪ್ರತಿಮಾ ಪೂಜಾ | ಜಪಸ್ತೋತ್ರಾದಿ ಮಧ್ಯಮಾ |
ಉತ್ತಮಾ ಮಾನಸೀ ಪೂಜಾ ಸೋಹಂ ಪೂಜೋತ್ತಮೋತ್ತಮಾ |
ಮೊದಲನೆಯದು ಪ್ರತಿಮಾ ಪೂಜೆ, ಜಪಸ್ತೋತ್ರಗಳು ಮಧ್ಯಮ, ಉತ್ತಮವಾದದ್ದು ಮಾನಸ ಪೂಜೆ. ಇವುಗಳಿಗಿಂತ ಶ್ರೇಷ್ಠವಾದುದ್ದು. ‘ಸೋಹಂ’ ಪೂಜೆ. ಈ ಸೋಹಂ ಪೂಜೆ ಅಥವಾ ಅಹಂ ಗ್ರಹೋಪಾಸನೆ ವೀರಶೈವರದು. ಇಷ್ಟಲಿಂಗ ಆತ್ಮನ ಪೂಜೆ, ಉಪಾಸಕ ಉಪಾಸ್ಯ ವಸ್ತು (ಇಷ್ಟಲಿಂಗ) ವಿನೊಂದಿಗೆ ತನ್ನನ್ನು ಒಂದಾಗಿಸಿಕೊಂಡು, ತನ್ನ ಆತ್ಮನ ಮೇಲೆ ಧ್ಯಾನ ಮಾಡುತ್ತಾನೆ. ಅಲ್ಲಿ ಉಪಾಸ್ಯ-ಉಪಾಸಕರ ಏಕತೆ ಸಾಮರಸ್ಯವಾಗುತ್ತದೆ. ಇದೇ ಪ್ರಾಣಲಿಂಗ ಪೂಜೆ, ಅಧ್ಯಾತ್ಮಿಕ ಜೀವನ,
ಒಂದು ಏಣಿ ಇದ್ದಂತೆ, ಹಂತ ಹಂತವಾಗಿ ಮುಂದುವರಿಯಬೇಕು.
ಇಷ್ಟಲಿಂಗ ದೀಕ್ಷೆ : ಪರಿಕಲ್ಪನೆ
ಶಿವಯೋಗ ಪಥದಲ್ಲಿ ಸಾಗಿ ಲಿಂಗಾಂಗ ಸಾಮರಸ್ಯದ ಗುರಿ ತಲುಪಲು ಸಾಧಕನಿಗೆ ಇಷ್ಟಲಿಂಗ ದೀಕ್ಷೆ ಅತ್ಯಾವಶ್ಯಕ. ದೀಕ್ಷೆಯಿಂದಲೇ ಅವನು ವೀರಶೈವನಾಗಿ ಅರ್ಹತೆ ಪಡೆಯುತ್ತಾನೆ. ಸಾಧಕನಿಗೆ ಶಿವಯೋಗ ಪಥದಲ್ಲಿ ಸಾಗಿದಂತೆ ಅವನ ಮನಸ್ಸು ಕ್ರಮೇಣ ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ಉಂಟಾಗಿ, ಅಧ್ಯಾತ್ಮದ ಮಾರ್ಗದರ್ಶನಕ್ಕಾಗಿ, ಗುರುವನ್ನು ಆಶ್ರಯಿಸುತ್ತಾನೆ. ಗುರೂಪದೇಶ ಮಹತ್ವದ್ದಾಗಿದೆ.
ಗುರೂಪದೇಶತೋಜ್ಞೇಯಂ ನಜ್ಞೇಯಂ ಶಾಸ್ತ್ರಕೋಟಿಭಿಃ
ಎನ್ನುವಂತೆ ಶಾಸ್ತ್ರದ ಕೋಟಿ-ಕೋಟಿ ಗ್ರಂಥಗಳಿಗಿಂತ ಗುರೂಪದೇಶ ಮಿಗಿಲಾದದ್ದು, ಶ್ರೀಗುರು ಶಿಷ್ಯನನ್ನು ಪರೀಕ್ಷಿಸಿ ಶಿವದೀಕ್ಷೆಯನ್ನು ಅನುಗ್ರಹಿಸುತ್ತಾನೆ. ಶಿಷ್ಯನ ಸ್ಥೂಲ-ಸೂಕ್ಷ್ಮ-ಕಾರಣ ದೇಹಗಳಲ್ಲಿರುವ ಆಣವ ಮಾಯಾ-ಕಾರ್ಮಿಕಗಳೆಂಬ, ಮಲತ್ರಯಗಳನ್ನು ವೇಧಾ-ಮನು-ಕ್ರಿಯೆಗಳೆಂಬ ದೀಕ್ಷೆಗಳಿಂದ ಪರಿಹರಿಸಿ ತನುತ್ರಯಗಳಲ್ಲಿ ಇಷ್ಟ-ಪ್ರಾಣ- ಭಾವಲಿಂಗಗಳನ್ನು ಸ್ಥಾಪಿಸಿ ಹಸ್ತ-ಮಸ್ತಕ ಸಂಯೋಗದಿಂದ ಶಿಷ್ಯನ ಚಿತ್‌ಕಲೆಯನ್ನು ಶಿವಲಿಂಗದಲ್ಲಿ ನಿಯೋಜಿಸಿ ಶಿವಕ್ಕೂ- ಜೀವಕ್ಕೂ ಸಾಮರಸ್ಯ ಮಾಡಿ ಇಷ್ಟಲಿಂಗವನ್ನು ಶಿಷ್ಯನ ಹಸ್ತದಲ್ಲಿರಿಸಿ ಪಂಚಾಕ್ಷರಿ ಮಹಾ ಮಂತ್ರವನ್ನು ಉಪದೇಶಿಸಿ ಇದು ನಿನ್ನ ಪ್ರಾಣಲಿಂಗ, ದೇಹದಿಂದ ಎಂದೂ ಅಗಲಿಸಬಾರದೆಂದು ಉಪದೇಶ ಮಾಡುತ್ತಾನೆ. ʼʼಪ್ರಾಣವದ್ಧಾರಣೀಯ ತತ್ ಪ್ರಾಣಲಿಂಗಮಿದಂ ತವʼʼ(ಸಿ.ಶಿ.) ಎಂಬುದಾಗಿ, ಲಿಂಗ ದೀಕ್ಷೆಗೆ ಅರ್ಥಪೂರ್ಣ ವ್ಯಾಖ್ಯೆ ಇದೆ. “ದೀಯತೇ ಪರಮಂಜ್ಞಾನಂ ಕ್ಷೀಯತೇ ಪಾಶಬಂಧನಂʼʼ (ಸಿ.ಶಿ). ‘ಇಷ್ಟಾವಾಸ್ತಿಕರಂ ಸಾಕ್ಷಾತ್ ಅನಿಷ್ಟ ಪರಿಹಾರಕಂ (ಅನುಭವ ಸೂತ್ರ) ಇತ್ಯಾದಿ ವಾಕ್ಯಗಳೂ ದೀಕ್ಷೆಯ ಮಹತ್ವವನ್ನೇ ಸಾರುತ್ತವೆ. ದೀಕ್ಷಾಬದ್ಧನಾದ ಸಾಧಕನು ಕ್ರಿಯಾ ಪ್ರಧಾನ ಅಷ್ಟಾವರಣ; ನೀತಿ ಪ್ರಧಾನ ಪಂಚಾಚಾರ; ಜ್ಞಾನ ಪ್ರಧಾನ ಷಟ್‌ಸ್ಥಲಗಳ ಸಾಧನೆಯಿಂದ ಲಿಂಗಾಂಗ ಸಾಮರಸ್ಯ ಪಡೆಯುತ್ತಾನೆ. ವೀರಶೈವರ ಈ ದೀಕ್ಷಾ ಕ್ರಮ ಬರೀ ಪೂಜಾ ವಿಧಾನವಲ್ಲ: ಸಾಧಕನ ದೈವೀ ಶಕ್ತಿಯನ್ನು ಬೆಳಗಿಸಿ, ಅದನ್ನು ಪರಿಪೂರ್ಣಗೊಳಿಸುವ ಪರಮ ಸಾಧನವಾಗಿದೆ.
ದೀಕ್ಷೆಯನ್ನು ಕುರಿತು ಬಸವಣ್ಣನವರು.
”ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿರುವ
ಪರಮ ಚಿದ್ಬೆಳಗ ಹಸ್ತ-ಮಸ್ತಕ ಸಂಯೋಗದಿಂದೊಳಗೂಡಿ
ಮಹಾ ಬೆಳಗ ಮಾಡಿದಿರಲ್ಲ
”ಅಯ್ಯಾ ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗು ತಂದು
ಭಾವದೊಳಗಿಂಬಿಟ್ಟಿರಲ್ಲಾ
ಅಯ್ಯಾ ಎನ್ನ ಭಾವದೊಳಗೂಡಿದ ಮಹಾಬೆಳಗು ತಂದು
ಮನಸ್ಸಿನೊಳಗಿಂಬಿಟ್ಟಿರಲ್ಲಾ
ಅಯ್ಯಾ ಎನ್ನ ಮನಸಿನೊಳು ಕೂಡಿಹ ಮಹಾಬೆಳಗು ತಂದು
ಎನ್ನ ಕಂಗೊಳೊಳಗಿಂಬಿಟ್ಟಿರಲ್ಲಾ
ಅಯ್ಯಾ ಎನ್ನ ಕರಸ್ಥಲದಲ್ಲಿ ಥಳಥಳಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡ
ತೇಜವನೆ, ಇಷ್ಟಲಿಂಗವೆಂಬ, ದೃಷ್ಟಿ ತೋರಿ ನಿಶ್ಚಯದ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ
ಅಯ್ಯಾ ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ
ಹುದುಗಿದಿರಲ್ಲಾ ಅಯ್ಯಾ ಎನ್ನ ಆರಾಧ್ಯ ಕೂಡಲ ಸಂಗಮದೇವಾ
ಎನ್ನೊಳಗೆ ನಿಮ್ಮಿರವ, ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾʼʼ
ಬಸವಣ್ಣನವರ ಈ ವಚನ ಸರಳವಾಗಿ, ದೀಕ್ಷೆಯ ರಹಸ್ಯವನ್ನು ಬಿಚ್ಚಿ ತೋರಿಸುತ್ತದೆ.
ದೀಕ್ಷೆಯ ಪರಿಣಾಮ ಸಾಧಕನಿಗೆ ಹೇಗಾಗುತ್ತದೆ ಎಂದು ಚನ್ನಬಸವಣ್ಣನವರ ವಚನ ಹೀಗೆ ಹೇಳುತ್ತದೆ.
“ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ,
ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ,
ಶಬ್ದದಲ್ಲಿ ವಿರೋಧ ಇಂತೀ ಭವಿಯ ಕಳೆದು ಭಕ್ತನ ಮಾಡಿದ ಪರಿ….
ಇಂತು ಪೂರ್ವ ಗುಣವಳಿದು, ಪುನರ್ಜಾತನಾದ, ಕಾರಣ ಕೂಡಲ ಚನ್ನಸಂಗಾ
ನಿಮ್ಮ ಶರಣ ಸರ್ವಾಂಗಲಿಂಗಿಯಾದ.
ಎನ್ನುತ್ತಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಗುರುವಿಗೆ ತಕ್ಕ ಶಿಷ್ಯ ಅಧ್ಯಾತ್ಮ ಕ್ಷೇತ್ರದಲ್ಲಿ ಸಿಗುವುದು ಒಂದು ಮಂಗಳದ ಘಟನೆ. ಅನರ್ಹ ಶಿಷ್ಯನಿಗೆ ನೀಡುವ ದೀಕ್ಷೆ ವ್ಯರ್ಥ, “ಹಸನಮಾಡಿ ಹರಗಿದ ಹೊಲದಲ್ಲಿ ಕಸವ ಬಿತ್ತುವ ಮರುಳತನ’ವಾಗುತ್ತದೆ. ಎಂದು ತೋಂಟದ ಸಿದ್ಧಲಿಂಗರು ಎಚ್ಚರಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಹೇಳುವಂತೆ-
ಸದ್ಗುರು ಉರಿಯುತ್ತಿರುವ ಪಂಜನಂತಿರಬೇಕು ಯೋಗ್ಯನಾದ ಶಿಷ್ಯ-ಒಣಗಿದ ಸೌದೆಯಂತಿರಬೇಕು. ಒಣಗಿದ ಸೌದೆ ಬೆಂಕಿ ಸ್ಪರ್ಶವಾದ ಕೂಡಲೇ ಹತ್ತಿಕೊಳ್ಳುತ್ತದೆ. ಹಸೀ ಸೌದೆಯಾದರೆ, ಹತ್ತುವುದಿಲ್ಲ. ಶಿಷ್ಯ ಒಣಗಿದ ಸೌದೆಯಂತಿರಬೇಕು. ಅಂದರೆ ಗುರುವಿನ ಉಪದೇಶದ ಜ್ಞಾನದ ಕಿಡಿ ಅವನಲ್ಲಿ ಹೊತ್ತಿಕೊಳ್ಳುತ್ತದೆ” ಎಂದು ಅವರು ಕೊಡುವ ದೃಷ್ಟಾಂತಗಳು ದೀಕ್ಷೆ-ಗುರು-ಶಿಷ್ಯರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ.
ಶಿವಯೋಗ ಸಾಧಕ ಗುರೂಪದೇಶವನ್ನು, ಒಬ್ಬ ವಿಜ್ಞಾನಿ ಪ್ರಯೋಗ ಶಾಲೆಯಲ್ಲಿ ವಿಜ್ಞಾನವನ್ನು ಪರೀಕ್ಷೆ ಮಾಡುವಂತೆ, ತನ್ನ ಸಾಧನೆಯ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಬೇಕು, ಅಧ್ಯಾತ್ಮದ ದಾರಿ ಸಾಹಸದ ದಾರಿ, ಅಲ್ಲಿ ಜಾರುವ ಸಂಭವವೇ ಹೆಚ್ಚು. ಅದಕ್ಕೆ ಅಖಂಡ ತಾಳ್ಮೆಬೇಕು. ಆದರ್ಶಗಳನ್ನು ಪಾಲಿಸ ಬೇಕಾದರೆ ಅವಿಶ್ರಾಂತ ಶ್ರಮಬೇಕು. ದೀಕ್ಷೆ ದುರ್ಬಲರಿಗೆ, ಸೋಮಾರಿಗಳಿಗೆ ಸಲ್ಲದು. ಬರೀ ಗುರೂಪದೇಶ ಪಡೆದು ಕುಳಿತರೆ ಸಾಲದು. ಜೀವನದಲ್ಲಿ ಸತತ ಸಾಧನೆಯಿಂದ, ಅಳವಡಿಸಿಕೊಂಡಾಗ ಮಾತ್ರ ಉಪದೇಶ ಸಫಲವಾಗುತ್ತದೆ. “ಕೈದುವ ಕೊಡಬಹುದಲ್ಲದೆ ಕಲಿತನವ ಕೋಡಬಹುದೇ? ಸದ್ಗುರು
ಕಾರುಣ್ಯವಾದರೂ, ಸಾಧಿಸಿದವನಿಲ್ಲ, ಸಕಲೇಶ್ವರಾ” ಎಂದು ಎಚ್ಚರಿಸಿದ್ದಾನೆ- ಸಕಲೇಶ ಮಾದರಸ.
ವೀರಶೈವ ಸಿದ್ಧಾಂತದಲ್ಲಿ ಶಿವ, ಬ್ರಹ್ಮವನ್ನು ‘ಸ್ಥಲ’ ವೆಂದು ಕರೆದಿದ್ದಾರೆ. ಲಿಂಗ ಶಬ್ದ ಇದಕ್ಕೆ ಪರ್ಯಾಯವಾಗಿದೆ. “ಸ್ಥಿಯತೇ ಲೀಯತೇ ಯತ್ರ ಜಗದೇತಚ್ಚರಾಚರಂ ತದ್ಬ್ರಹ್ಮಸ್ಥಲಮಿತ್ಯುಕ್ತಂ ಸ್ಥಲತತ್ತ್ವ ವಿಶಾರದೈಃʼʼ ಎನ್ನುವ ಆಗಮ ಪ್ರಮಾಣದಂತೆ ಯಾವುದರಿಂದ ಎಲ್ಲಾ ಬಂದಿದೆಯೋ, ಯಾರಲ್ಲಿ ಎಲ್ಲಾ ಜೀವಿಸಿದೆಯೋ, ಎಲ್ಲಿಗೆ ಕೊನೆಗೆ ತೆರಳುವುದೋ ಅದೇ ಬ್ರಹ್ಮ ಅಥವಾ ಲಿಂಗ. ಇದನ್ನೇ ಸ್ಥಲವೆಂದು ಕರೆದಿದ್ದಾರೆ.
ಈ ‘ಸ್ಥಲ’ ಪರಶಿವ ಸ್ವಲೀಲೆಯಿಂದ ಅಂಗಸ್ಥಲ ಲಿಂಗಸ್ಥಲವೆಂದು ಎರಡು ವಿಧವಾಗುತ್ತದೆ. ‘ಲಿಂಗವು’ ಭಕ್ತನ ಅನುಗ್ರಹಾರ್ಥವಾಗಿ ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳ ಸ್ಥಾನ ಭೇದದಿಂದ ಇಷ್ಟ-ಪ್ರಾಣ-ಭಾವ ಲಿಂಗಗಳೆಂದು, ಮೂರು ವಿಧವಾಗುತ್ತವೆ. ಮತ್ತೆ ಇಷ್ಟಲಿಂಗದಲ್ಲಿ ಆಚಾರಲಿಂಗ, ಗುರುಲಿಂಗವೆಂದೂ, ಪ್ರಾಣ-ಲಿಂಗದಲ್ಲಿ ಶಿವಲಿಂಗ-ಜಂಗಮ ಲಿಂಗವೆಂದೂ, ಭಾವಲಿಂಗದಲ್ಲಿ-
ಪ್ರಸಾದಲಿಂಗ-ಮಹಾಲಿಂಗವೆಂದೂ ಆರು ಪ್ರಕಾರಗಳಾಗುತ್ತವೆ. ಪರಶಿವನ ಮತ್ತೊಂದು ರೂಪವೇ ‘ಅಂಗ’ (ಜೀವ) ಇದರಲ್ಲೂ ಯೋಗಾಂಗ-ಭೋಗಾಂಗ-ತ್ಯಾಗಾಂಗ ಎಂದು ಮೂರು ವಿಧ-ಇವುಗಳನ್ನು ಅನುಸರಿಸಿ, ಬೇರೆ-ಬೇರೆ ಸ್ಥಲಗಳೂ ಉಂಟಾಗುತ್ತವೆ.
ತ್ಯಾಗಾಂಗದಲ್ಲಿ ಭಕ್ತ-ಮಹೇಶ ಎಂದೂ; ಭೋಗಾಂಗದಲ್ಲಿ ಪ್ರಸಾದಿ- ಪ್ರಾಣಲಿಂಗಿ ಎಂದೂ ಯೋಗಾಂಗದಲ್ಲಿ-ಶರಣ-ಐಕ್ಯವೆಂದು, ಆರು ಪ್ರಕಾರಗಳಾಗುತ್ತವೆ.
ಹೀಗೆ ಇನ್ನೂ ಉಪಾಂಗಗಳೊಂದಿಗೆ ಅಂಗಸ್ಥಲ ೪೪ ಭಾಗಗಳಾಗಿ ಲಿಂಗಸ್ಥಲ ೫೯ ಭಾಗಗಳಾಗಿ ವಿಭಾಗಿಸಲ್ಪಟ್ಟಿರುತ್ತವೆ. ಅಂಗಸ್ಥಲವು ೪೪ ಲಿಂಗಸ್ಥಲವು ೫೭ ಒಟ್ಟು ೧೦೧ ಸ್ಥಲಗಳಾಗುತ್ತವೆ.
ಅಂಗಸ್ಥಲದ
ತ್ಯಾಗಾಂಗದಲ್ಲಿ ಭಕ್ತಸ್ಥಲ ಮಹೇಶ ಸ್ಥಲ ಶ್ರದ್ಧಾಭಕ್ತಿ-ನಿಷ್ಠಾಭಕ್ತಿಗಳು,
ಭೋಗಾಂಗದಲ್ಲಿ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಅವಧಾನ ಭಕ್ತಿ- ಅನುಭಾವ ಭಕ್ತಿಗಳು,
ಯೋಗಾಂಗದಲ್ಲಿ ಶರಣಸ್ಥಲ ಐಕ್ಯಸ್ಥಲ ಆನಂದಭಕ್ತಿ-ಸಮರಸ ಭಕ್ತಿ.
ಲಿಂಗಸ್ಥಲದ
ಇಷ್ಟಲಿಂಗದಲ್ಲಿ ಆಚಾರಲಿಂಗ-ಗುರುಲಿಂಗ, ಕ್ರಿಯಾಶಕ್ತಿ-ಜ್ಞಾನಶಕ್ತಿಗಳು,
ಪ್ರಾಣಲಿಂಗದಲ್ಲಿ ಶಿವಲಿಂಗ-ಜಂಗಮಲಿಂಗ, ಇಚ್ಛಾಶಕ್ತಿ-ಆದಿಶಕ್ತಿಗಳು,
ಭಾವಲಿಂಗದಲ್ಲಿ ಪ್ರಸಾದಲಿಂಗ-ಮಹಾಲಿಂಗ, ಪರಾಶಕ್ತಿ-ಚಿತ್‌ಶಕ್ತಿಗಳು ಪ್ರಧಾನ
ಹೀಗೆ ವೀರಶೈವ ಶಿವಯೋಗಿಯು ೧೦೧ ಸ್ಥಾನಗಳ ಜ್ಞಾನವನ್ನು ಪಡೆದು ಹಂತ ಹಂತವಾಗಿ ಮುಂದುವರಿದು ಶಿವಯೋಗ ಸಿದ್ಧಿಯನ್ನು ಪಡೆಯಬೇಕಾಗುತ್ತದೆ. ಭಾರತೀಯ ಯೋಗಶಾಸ್ತ್ರ ಪರಂಪರೆಯಲ್ಲಿ ವೀರಶೈವ ಶಿವಯೋಗದ ಪರಿಕಲ್ಪನೆ, ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಸ್ಥಲಗಳ ಪರಿಕಲ್ಪನೆಯಲ್ಲಿ ಒಂದು-ಎರಡಾಗಿ, ಮೂರಾಗಿ, ಆರಾಗಿ ಮುವತ್ತಾರೂ ಆಗಿ; ಕೊನೆಗೆ ೧೦೧ ಆಗುವ ಸಾಧನಾ ಪಥದ ಹೆಜ್ಜೆಗಳು ಕೇವಲ ಸಂಖ್ಯಾ ಚಮತ್ಕಾರವಲ್ಲ: ಶಿವಯೋಗಿಗಳು ಸಾಧಿಸಬಹುದಾದ ಶಿವಯೋಗದ ಅಂಕಗಣಿತ; ಜೀವಂತ ಪ್ರಕ್ರಿಯೆ. ಯಾವ ಏಕ(ಸ್ಥಲ) ದಿಂದ ಅನೇಕ (೧೦೧) ವಾಗಿದೆಯೋ, ಯಾವ ಏಕ, ಅನೇಕದಂತಿದೆಯೋ, ಆ ಏಕವನ್ನು ಕಂಡು ಹಿಡಿದು ಅದರಲ್ಲಿ ಐಕ್ಯವಾಗುವುದೇ, ಶಿವಯೋಗದ ಪರಿ, ಲಿಂಗಾಂಗ ಸಾಮರಸ್ಯದ ಗುರಿ. ಶಿವನ ಪೂಜೆ, ಶಿವನ ಕ್ರಿಯೆ, ಶಿವಜಪ, ಶಿವಧಾನ್ಯ, ಶಿವಜ್ಞಾನಗಳ ಯೋಗಶಾಸ್ತ್ರ ಇಲ್ಲಿಯ ೧೦೧ ಸ್ಥಲಗಳು ಶಿವಯೋಗ ಸಾಧನೆಯ ಸೋಪಾನಗಳು. ಸೋಪಾನಗಳು ಶಿಖರಗಳಲ್ಲಿ ಬೆಟ್ಟದ ತುದಿಯಲ್ಲಿರುವ ದೇಗುಲಕ್ಕೆ, ಒಂದೊಂದೇ ಮೆಟ್ಟಿಲನ್ನು ಏರಿ, ಮನಸ್ಸಿನ ಎಲ್ಲ ಆತ೦ಕಗಳನ್ನು ಹಿಂದಕ್ಕೆ ತಳ್ಳಿ, ಮುಂದೆ ಸಾಗುವ ಯಾತ್ರಿಕನಂತೆ ಅಂಗನು ಲಿಂಗದೇವನ ಯಾತ್ರೆಗೆ ಸಾಗುವ ಮಹಾಯಾತ್ರೆ (Long Journey). ಇದು ಶಿವಯೋಗ, ವಿಜ್ಞಾನ, ಪರವ ಮಾನಸಶಾಸ್ತ್ರ, ವ್ಯಕ್ತಿಯ ಮಾನಸಿಕ ವಿಕಾಸದ ಪರಿಪೂರ್ಣತೆ.
ಷಟ್ ಸ್ಥಲಗಳ ಸಾಧನಾಕ್ರಮ : ಪರಿಕಲ್ಪನೆ
ಶಿವನಲ್ಲಿರುವ ಶಕ್ತಿಯು, ಪ್ರವೃತ್ತಿ ಮಾರ್ಗದಲ್ಲಿ ಶಕ್ತಿರೂಪದಿಂದಿದ್ದು ನಿವೃತ್ತಿ ಮಾರ್ಗದಲ್ಲಿ ಭಕ್ತಿ ಸ್ವರೂಪವನ್ನು ತಾಳುತ್ತದೆ. ಅದೇ ಭಕ್ತಿ
ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯವೆಂಬ ಆರು ಸ್ಥಲಗಳಲ್ಲಿ ಕ್ರಮವಾಗಿ ಶ್ರದ್ಧಾ-ನಿಷ್ಕಾ-ಅವಧಾನ-ಅನುಭವ, ಆನಂದ-ಸಮರಸ ಭಾವವನ್ನು ಆಶ್ರಯಿಸುತ್ತವೆ.
ಸಾಧಕ (ಅಂಗ)ನು ಭಕ್ತಸ್ಥಲದಲ್ಲಿ ಅಷ್ಟಾವರಣ ಸಂಪನ್ನನಾಗಿ, ಪಂಚಾಚಾರ ಶೀಲನಾಗಿ, ಅವುಗಳನ್ನು ಅನುಷ್ಠಾನ ಮಾಡುವ ಪ್ರವೃತ್ತಿ ಬೆಳೆದು ಅವನಿಗೆ ‘ಶ್ರದ್ಧಾʼ ಭಾವನೆ ಬೆಳೆಯುತ್ತದೆ. ‘ಬೀಜ-ವೃಕ್ಷ’ ನ್ಯಾಯದಂತೆ, ಈ ಹಂತದಲ್ಲಿ ಬೀಜ ಪರಿವರ್ತನೆಗೊಂಡು, ವೃಕ್ಷ ಬೆಳೆಯುವಂತೆ, ದೇಹಾದಿ ಅಭಿಮಾನ ನಷ್ಠವಾಗಿ, ದೈವೀ ಶ್ರದ್ಧೆ ಬೆಳೆಯುತ್ತದೆ.
ಮಹೇಶ ಸ್ಥಲದಲ್ಲಿ ಶ್ರದ್ಧೆ-ಕ್ರಮೇಣ ನಿಷ್ಠೆಯಾಗಿ, ಪರಿಣಮಿಸುತ್ತದೆ. ಸಾಧಕ ತನ್ನ ಆಚಾರ ವಿಚಾರಗಳಲ್ಲಿ ವ್ರತ ನಿಷ್ಠನಾಗುತ್ತಾನೆ. ದಾರ್ಶನಿಕರು ಈ ಸ್ಥಲವನ್ನು ‘ಸಲಿಲ-ಮುಕ್ತ ನ್ಯಾಯ’ಸ್ಥಲವೆಂದು ಕರೆದಿದ್ದಾರೆ. ಸಮುದ್ರದ ಮುತ್ತಿನ ಚಿಪ್ಪಿನಲ್ಲಿ ಬಿದ್ದ ಸ್ವಾತಿಯ ಮಳೆಯ, ನೀರು ಕಾಲಾನಂತರದಲ್ಲಿ ಗಟ್ಟಿಗೊಂಡು ಮುತ್ತು ಆಗವಂತೆ ಅಂಗನಲ್ಲಿ (ಸಾಧಕ) ಶ್ರದ್ಧೆ ನಿಷ್ಠೆಯಾಗಿ ಪರಿಣಮಿಸುತ್ತದೆ.
ಪ್ರಸಾದಿ ಸ್ಥಲದಲ್ಲಿ ಸಾಧಕನ ಭಕ್ತಿಯು ಚಿತ್ತಶುದ್ಧಿಯ ಮೂಲಕ ಅವಧಾನ ಭಕ್ತಿ ಎನಿಸುತ್ತದೆ. ಈ ಹಂತದಲ್ಲಿ ಸಾಧಕನಿಗೆ ಜಾಗ್ರತ, ಎಚ್ಚರ ಮೂಡುತ್ತದೆ. ಇದನ್ನು ‘ಅನಲ ಕಾಷ್ಠ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಅಗ್ನಿ ಸಂಪರ್ಕಕ್ಕೆ ಬಂದ ಕಾಷ್ಠ ತನ್ನ ಗುಣಗಳನ್ನು ಕಳೆದುಕೊಳ್ಳುವಂತೆ, ಸಾಧಕನಲ್ಲಿ ಶಿವಭಕ್ತಿ ಎಚ್ಚರಗೊಂಡು ಅವನ, ಮನಸ್ಸಿನ ದೋಷಗಳು, ಕಷಾಯಗಳು ಭಸ್ಮವಾಗಿ, ಚಿತ್ತ ಪ್ರಸನ್ನವಾಗಿ, ಪ್ರಸಾದ ಕಾಯನಾಗುತ್ತಾನೆ.
ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕನ ಭಾವನೆ ಇನ್ನೂ ತೀವ್ರವಾಗಿ ಬೆಳೆದು ಅನುಭಾವ ಉಂಟಾಗುತ್ತದೆ. ಇದನ್ನು ದಾರ್ಶನಿಕರು ‘ಭ್ರಮರ-ಕೀಟ ನ್ಯಾಯ’ ಎಂದು ಕರೆದಿದ್ದಾರೆ. ಕೀಟವೊಂದು ಭ್ರಮರವನ್ನು ನೆನೆದು-ನೆನೆದು, ಭ್ರಮರವೇ ಆಗುವಂತೆ, ಅಂಗನು ಲಿಂಗವನ್ನು ನೆನೆದು-ನೆನೆದು, ಲಿಂಗವಾಗುವ ಹಂತಕ್ಕೆ ಏರುತ್ತಾನೆ. ʼʼಕೀಟ ಭ್ರಮರ ಯೋಗೇನ ಭ್ರಮರೋ ಭವತಿ ಧ್ರುವಂʼ’- ಶಿವಭಕ್ತ ಶಿವಯೋಗೇನ ʼʼಶಿವೋ ಭವತಿ ನಿಶ್ಚಿತಂ” ಎನ್ನುವ ಪ್ರಮಾಣ ವಾಕ್ಯದಲ್ಲಿ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿ, ಶಿವಾನುಭವದ ನೆಲೆಗೆ ಏರುತ್ತಾನೆ.
ಶರಣಸ್ಥಲ ಈ ಸ್ಥಲದಲ್ಲಿ ಸಾಧನಕಲ್ಲಿ ಆನಂದ ಭಕ್ತಿ ಉಂಟಾಗುತ್ತದೆ. ಶಿವನಲ್ಲಿ ಅಚಲ ನಂಬಿಕೆ ಬಂದು ಆನಂದವಾಗುತ್ತದೆ. ಈ ಸ್ಥಲವನ್ನು ʼʼಸತಿ-ಪತಿ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಇಲ್ಲಿ ಸಾಧಕನಿಗೆ ತಾನು ಶರಣನೆಂಬ ಅಭಿಮಾನ ಉಂಟಾಗುತ್ತದೆ. ತಾನು ಸತಿ-ಲಿಂಗಪತಿ ಎಂಬ ಭಾವನೆ ಬೆಳೆದು ಸಾಧನೆ ಮುಂದುವರಿಯುತ್ತದೆ.
ಐಕ್ಯಸ್ಥಲ-ಈ ಸ್ಥಲದಲ್ಲಿ ಸಾಧಕನಿಗೆ ಸಮರಸ ಭಾವ ಬೆಳೆಯುತ್ತದೆ. ಈ ಹಂತದಲ್ಲಿ ಜೀವ ಭಾವವಳಿದು, ಪರಮಾತ್ಮನಲ್ಲಿ ಅಂಗ ಭಾವವಳಿದು, ಲಿಂಗದಲ್ಲಿ ಬೆರೆಯುತ್ತಾನೆ. ಈ ಸ್ಥಲವನ್ನು ದಾರ್ಶನಿಕರು “ಶಿಖಿ-ಕರ್ಪೂರ ನ್ಯಾಯ’ವೆಂದು ಗುರುತಿಸುತ್ತಾರೆ. ಬೆಂಕಿ-ಕರ್ಪುರ ಸಂಯೋಗದಿಂದ ಉರಿದು ಕಡೆಗೆ, ಎರಡೂ ಇಲ್ಲವಾಗುವಂತೆ, ನೀರು-ನೀರಿನಲ್ಲಿ, ಬೆಂಕಿ-ಬೆಂಕಿಯಲ್ಲಿ ಬೆರೆಯುವಂತೆ, ನದಿಯು ಸಮುದ್ರವನ್ನು ಸೇರುವಂತೆ, (ಜಲೇ-ಜಲಮಿವನ್ಯಸ್ತಂ ವಹ್ನೌವಹ್ನಿರಿವಾರ್ಪಿತಂ | ಪರಬ್ರಹ್ಮಣಿ ಲೀನಾತ್ಮ ವಿಭಾಗೇನ ಸದೃಕತ್ ಸಿದ್ಧಾಂತ ಶಿಖಾಮಣಿ). ಇದೇ ಲಿಂಗಾಂಗ – ಸಾಮರಸ್ಯ.
ಷಟ್‌ಸ್ಥಲಗಳ ಮಾರ್ಗದಲ್ಲಿ-ಭಕ್ತ-ಮಹೇಶ-ಪ್ರಸಾದಿ ಸ್ಥಲಗಳು- ಶಿವಯೋಗದ ಬಹಿರ್ ಸಾಧನೆಗಳಾದರೆ; ಪ್ರಾಣಲಿಂಗಿ-ಶರಣ-ಐಕ್ಯಸ್ಥಲಗಳು ಅಂತರಂಗ ಶಿವಯೋಗದ ಸಾಧನೆಗಳು
ಯೋಗ-ಶಿವಯೋಗ :
ಪತಂಜಲಿಯ ಯೋಗಶಾಸ್ತ್ರಕ್ಕೂ ಶಿವಯೋಗಕ್ಕೂ ತುಂಬಾ ಸಾಮ್ಯತೆಯನ್ನು ಗುರುತಿಸಬಹುದಾಗಿದೆ. ದೇಹದ ಅಂತರ್- ಬಹಿರ್ ಶುದ್ಧಿಗಾಗಿ ಪತಂಜಲಿ ಹೇಳುವ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರಗಳು ಬಹಿರ್ಯೊಗ, ಸಾಧನೆಗಳು, ಧಾರಣ ಧ್ಯಾನ-ಸಮಾಧಿಗಳು ಅಂತರಂಗದ ಯೋಗ ಸಾಧನೆಗಳು. ಯಮ-ನಿಯಮ ಪರಿಪಾಲನೆ ಶಿವಯೋಗದ ಭಕ್ತಸ್ಥಲದಲ್ಲಿ ಆಗುತ್ತದೆ. ಪ್ರತ್ಯಾಹಾರ- ಪ್ರಸಾದಿ ಸ್ಥಲದಲ್ಲೂ; ಧ್ಯಾನ-ಧಾರಣ, ಪ್ರಾಣಲಿಂಗಿ ಸ್ಥಲದಲ್ಲೂ; ಸಮಾಧಿ-ಐಕ್ಯಸ್ಥಲದಲ್ಲೂ, ಶಿವಯೋಗಿಯ ಆಚರಣೆಯ ಅನುಭವಕ್ಕೆ ಬರುತ್ತವೆ.
ಲಿಂಗಾಂಗ ಸಾಮರಸ್ಯವನ್ನು ಸಾಧಿಸಲು, ಶಿವಯೋಗಿಗಳು ಸಾಧಿಸಿದ ಯೋಗ- ಶಿವಯೋಗ. ಹಠ-ಲಯ-ಮಂತ್ರ-ರಾಜ ಯೋಗಗಳು ಶರೀರ, ಪ್ರಾಣ, ಮನ, ಬುದ್ಧಿಗಳನ್ನು ಶುದ್ದೀಕರಿಸಿ, ಅವುಗಳ ವಿಕಾಸಕ್ಕೆ ಕಾರಣವಾದರೆ ಶಿವಯೋಗ, ಈ ಎಲ್ಲಾ ಶಕ್ತಿಗಳನ್ನು ವಿಕಾಸಗೊಳಿಸಿ, ಲಿಂಗಾಂಗ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಶರೀರ- ಇಂದ್ರಿಯ, ಮನ, ಪ್ರಾಣ, ಬುದ್ಧಿಗಳಲ್ಲಿ ಲಿಂಗ ಕಿರಣಗಳನ್ನು ಬೆಳಗಿಸಿ, ಶಿವಾತ್ಮಕವಾಗಿ ರೂಪಾಂತರಗೊಳಿಸುವುದೇ, ಶಿವಯೋಗ. ದೇಹಕ್ಕೆ ಸ್ಥಿರತೆ ನೀಡುವ ಆಸನ, ವಾಯುವಿಗೆ ಸ್ಥಿರತೆ ನೀಡುವ ಪ್ರಾಣಾಯಾಮ ಇವು ಇಷ್ಟಲಿಂಗದ ದೃಷ್ಟಿಯೋಗದಿಂದ ಸಂಭವಿಸುತ್ತವೆ. ಇಂದ್ರಿಯಗಳ ಬಯಕೆಗಳನ್ನು, ಹಿಂದಿರುಗಿಸುವ, ಪ್ರತ್ಯಾಹಾರವು ಪ್ರಸಾದಿ ಸ್ಥಲದಲ್ಲೇ ಅನುಭವಕ್ಕೆ ಬರುತ್ತದೆ. ಇಂದ್ರಿಯಗಳ ವಿಷಯಗಳನ್ನು ಪದಾರ್ಥರೂಪದಿಂದ ಗ್ರಹಿಸದೇ ಪ್ರಸಾದ ರೂಪದಿಂದ ಗ್ರಹಿಸುವ ಕಾರಣ, ಪ್ರತ್ಯಾಹಾರವನ್ನು ಪ್ರತ್ಯೇಕವಾಗಿ ಆಚರಿಸುವ ಅಗತ್ಯವಿಲ್ಲ. ಧ್ಯಾನ-ಸಮಾಧಿಗಳು, ಐಕ್ಯಸ್ಥಲದಲ್ಲಿ ಅನುಭವಕ್ಕೆ ಬರುತ್ತವೆ. ಕಣ್ಣಿಗೆ ಕಾಣುವುದು, ಇಷ್ಟಲಿಂಗ, ಮನಸ್ಸಿಗೆ ಕಾಣುವುದು ಪ್ರಾಣಲಿಂಗ, ಭಾವದಲ್ಲಿ ಕಾಣುವುದು ಭಾವಲಿಂಗ, ಪತಂಜಲಿಯೂ ಸಮಾಧಿಗಳಲ್ಲಿ ಸಂಪ್ರಜ್ಞಾತ ಅಸಂಪ್ರಜ್ಞತವೆಂದು ಎರಡು ವಿಧವೆಂದು ಹೇಳುತ್ತಾನೆ.
ಭಾವದಲ್ಲಿ ಮನಸ್ಸು ಮಗ್ನವಾಗುವುದು ಸಂಪ್ರಜ್ಞಾತ ಸಮಾಧಿ, ಭಾವದಲ್ಲೇ ಮನಸ್ಸು ನಿಮಗ್ನ (ಮುಳುಗು) ವಾಗುವುದು, ಅಸಂಪ್ರಜ್ಞಾತ ಸಮಾಧಿ ಇದಕ್ಕೊಂದು ದೃಷ್ಟಾಂತ ಹೀಗಿದೆ. ಒಂದು ತೊಟ್ಟಿಲಲ್ಲಿ ಮಗು ಆಡುತ್ತಾ ಮಲಗಿದೆ. ಅದನ್ನು ಮಲಗಿಸಲು ತಾಯಿ ಜೋಗುಳ ಹಾಡುತ್ತಾ ತೂಗುತ್ತಿದ್ದಾಳೆ ಆಕೆ ಹಾಡುತ್ತಿದ್ದಾಳೆ, ಕಾಲ ಸರಿಯುತ್ತದೆ. ತಾಯಿಯ ಹಾಡು ಕೇಳುತ್ತಾ ಕೇಳುತ್ತಾ ಮಗು ಮೌನವಾಗುತ್ತದೆ. ಮಲಗಿ ಆನಂದಿಸುತ್ತದೆ. ತೂಗುತ್ತಾ-ತೂಗುತ್ತಾ ತಾಯಿ ತನಗರಿವಿಲ್ಲದಂತೆ, ನಿಶ್ಯಬ್ದ ನಿದ್ರೆಯಲ್ಲಿ ಪ್ರವೇಶಿಸುತ್ತಾಳೆ. ಆ ಸಮಯದಲ್ಲಿ ಮಗುವಿಲ್ಲ; ತಾಯಿಯಿಲ್ಲ; ತೊಟ್ಟಿಲಲ್ಲಿ ತೂಗುವಿಕೆಯೂ ಇಲ್ಲ. ಆನಂದ ಸಮರಸಗೊಂಡಿದೆ. ಅಲ್ಲಿ ವ್ಯಕ್ತಿ ಪ್ರಜ್ಞೆಯೂ ಇಲ್ಲ. ಇದು ಅಸಂಪ್ರಜ್ಞಾತ ಸಮಾಧಿಯೋಗ.
ಲಿಂಗವು ಪೂಜ್ಯವಸ್ತು; ಅಂಗ ಪೂಜಕ, ಶರೀರದಲ್ಲಿ ಆರು ಚಕ್ರಗಳಿವೆ. ಎಂದು ಯೋಗಿಗಳು ಹೇಳುತ್ತಾರೆ. ಮೂಲಾಧಾರ (ಮಲಸ್ಥಾನ) ಸ್ವಾಧಿಷ್ಠಾನ (ಜಲಸ್ಥಾನ) ಮಣಿಪುರ (ಅಗ್ನಿಸ್ಥಾನ) ಅನಾಹತ (ವಾಯು ಸ್ಥಾನ) ವಿಶುದ್ಧಿ (ಶಬ್ದ) ಆಜ್ಞಾ (ಮನಸ್ಸು) ಇವು ಶಕ್ತಿಯ ಜಾಗೃತ ಸಾಧನೆಯ ಅಂಶಗಳು, ಈ ಆರು ಚಕ್ರಗಳಲ್ಲಿ ಒಂದೊಂದರಂತೆ ಆರು ಲಿಂಗಗಳಿದ್ದು, ಪ್ರತಿಯೊಂದು ಚಕ್ರದಲ್ಲೂ ಲಿಂಗ- ಅಂಗಗಳ ಸಾಮರಸ್ಯವನ್ನು, ಶಿವಯೋಗಿಯು, ಇಷ್ಟಲಿಂಗದ ಮೂಲಕ ಸಾಧಿಸಬೇಕು. ಮೂಲಾಧಾರದಲ್ಲಿ ಆಚಾರಲಿಂಗ, ಸ್ವಾಧಿಷ್ಠಾನದಲ್ಲಿ ಗುರುಲಿಂಗ, ಮಣಿಪುರದಲ್ಲಿ ಶಿವಲಿಂಗ : ಅನಾಹತ ಚಕ್ರದಲ್ಲಿ ಜಂಗಮ ಲಿಂಗ, ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗ; ಆಜ್ಞಾಚಕ್ರದಲ್ಲಿ ಮಹಾಲಿಂಗ. ಹೀಗೆ ಶಿವಯೋಗ ಸಾಧಕನ ಇಡೀ ದೇಹವೇ, ಲಿಂಗಮಯ ಎನ್ನುವ ಅದ್ಭುತ ಕಲ್ಪನೆ ಶಿವಯೋಗದಲ್ಲಿದೆ. ಭ್ರೂಮಧ್ಯದ, ಮೇಲು ಭಾಗದಲ್ಲಿ ಬ್ರಹ್ಮರಂಧ್ರವಿದೆ. ಅಲ್ಲಿ ಸಾವಿರಾರು ದಳದ ಕಮಲ ಮಧ್ಯದಲ್ಲಿ ಚಂದ್ರಮಂಡಲ-ಕೈಲಾಸ. ಅಲ್ಲಿ ಮೂವತ್ತಾರು ತತ್ತ್ವಗಳಿಗೆ, ಅತೀತವಾದ ಸ್ವಪ್ರಕಾಶವಿದೆ. ಅಲ್ಲಿ ಹಂಸರೂಪಿ ಲಿಂಗವನ್ನು ಅವನೇ ನಾನು (ಸೋಹಂ) ಎನ್ನುವ ಭಾವನೆಯಿಂದ ಧ್ಯಾನಿಸುತ್ತಾನೆ ಇದೇ ಶಿವ ಜೀವೈಕ್ಯ ಸಿದ್ಧಿ. ಇದೇ ಲಿಂಗಾಂಗ ಸಾಮರಸ್ಯದ ಪರಿಕಲ್ಪನೆ. ಇದೇ ಶಿವಯೋಗ ಸಮಾಧಿ. ಶಿವಯೋಗದಲ್ಲಿ ಭಕ್ತಸ್ಥಲ ದಿಂದ-ಐಕ್ಯಸ್ಥಲದ ವರೆಗೆ ಸಾಧಕ ಬೆಳೆಯುತ್ತಾ ಬಂದಂತೆ, ಲಿಂಗೋಪಾಸನೆಯಿಂದ, ಭಕ್ತಿಯೂ ವಿಕಾಸಗೊಳ್ಳುತ್ತಾ ಬರುತ್ತದೆ. ಆಯಾ ಲಿಂಗಗಳ ಕ್ರಿಯಾ ಶಕ್ತಿಯೂ, ವಿಕಾಸವಾಗುತ್ತದೆ. ವೀರಶೈವ ಶಿವಯೋಗದ ವಿಭಾಗ ವಿಫುಲ ವೈವಿಧ್ಯವನ್ನು ಪಡೆದಿದೆ. ಷಟ್‌ಸ್ಥಲಗಳಲ್ಲಿ ೧೮ ವಿಭಾಗ ; ೩೬ ವಿಭಾಗ ಕೆಲವೆಡೆ ೨೧೬ ರವರೆಗೂ ಹಬ್ಬಿ ಹರಡಿದೆ. ಇವುಗಳಲ್ಲಿ ಏಕೋತ್ತರ ಶತಸ್ಥಲದ ಪರಿಕಲ್ಪನೆ ಪ್ರಸಿದ್ಧವಾಗಿದೆ. ೧೦೧ ಸ್ಥಲಗಳ ವಿಭಾಗ ಕ್ರಮದಲ್ಲಿ ಅಧ್ಯಾತ್ಮಿಕ ವಿಕಾಸದ ಆಶಯ ವ್ಯಕ್ತವಾಗಿದೆ. ಲಿಂಗ ಸ್ವರೂಪ-ಉಪಾಸನಾ ವಿಧಾನ, ಶಕ್ತಿ-ಭಕ್ತಿಗಳ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿ ತಿಳಿಸುತ್ತವೆ. ಶಿವಯೋಗ ಸಾಧನೆಗೆ ಇದು ಒಂದು ಮನಶ್ಯಾಸ್ತ್ರದ ಕೈಪಿಡಿ. ಇಲ್ಲಿ ಭಕ್ತಿ-ಜ್ಞಾನ-ಕ್ರಿಯೆ-ಧ್ಯಾನ-ಉಪಾಸನೆ ಎಲ್ಲವೂ ಸಂಮಿಲಿತವಾಗಿದೆ. ವೀರಶೈವ ಧರ್ಮದ ತಾತ್ವಿಕ ಭಾಗ ಸಿದ್ಧಾಂತವಾದರೆ ಶಿವಯೋಗ ಅದರ ಪ್ರಯೋಗ. ಲಿಂಗಾಂಗ ಸಾಮರಸ್ಯ ಅದರ ಸಿದ್ಧಿ Science and applied science ಎಂದು ಹೇಳಬಹುದು. ಒಟ್ಟಿನಲ್ಲಿ ವೀರಶೈವದ ಶಿವಯೋಗ ಸಾಧನಾ ರಂಗವು ಲಿಂಗಾಗ ಸಾಮರಸ್ಯ ಯೋಗ ವಿಜ್ಞಾನದ ಮಹಾ ಪ್ರಯೋಗ ಶಾಲೆ ಎಂದು ಹೇಳಬಹುದಾಗಿದೆ.
ಅವಲೋಕಿಸಿದ ಕೃತಿಗಳು :
೧. ಶಿವಯೋಗ ಪ್ರದೀಪಿಕಾ : ಚನ್ನಸದಾಶಿವಯೋಗಿ
೨. ಯೋಗದರ್ಶನ : ಪತಂಜಲಿ
೩. ಯೋಗಾಂಕ : ಗೀತಾ ಪ್ರೆಸ್ ಗೋರಖಪುರ
೪. ಶಕ್ತಿವಿಶಿಷ್ಟಾದ್ವೈತ : ವೈ. ನಾಗೇಶ ಶಾಸ್ತ್ರಿ
೫.ಶಿವಾದ್ವೈತ ದರ್ಶನ; ಡಾ .ಜ.ಚ.ನಿ
೬. ಶಕ್ತಿವಿಶಿಷ್ಟಾದ್ವೈ ತ ತತ್ತ್ವತ್ರಯ ವಿಮರ್ಶೆ : ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.
೭.ಭಾರತೀಯ ತತ್ತ್ವಶಾಸ್ತ್ರ : ಡಾ. ಎಂ. ಪ್ರಭಾಕರ ಜೋಷಿ, ಪ್ರೊ. ಹೆಗಡೆ ಸಿದ್ದಾಪುರ
೮.ಮಹಾಯಾತ್ರೆ : ಡಾ. ಆರ್. ಸಿ. ಹಿರೇಮಠ .
೯.ವಚನಗಳಲ್ಲಿ ವೀರಶೈವ ಧರ್ಮ : ಡಾ. ಹೆಚ್. ತಿಪ್ಪೇರುದ್ರಸ್ವಾಮಿ
೧೦. ವಚನ ಶಾಸ್ತ್ರ ರಹಸ್ಯ : ರಂ. ರಾ. ದಿವಾಕರ
೧೧. ವೀರಶೈವ ಸಂಹಿತೆ : ಷಣ್ಮುಖಯ್ಯ ಅಕ್ಕೂರಮಠ
೧೨. ಸೂಕ್ಷ್ಮಾಗಮ : ಅನು : ಷಣ್ಮುಖಯ್ಯ ಅಕ್ಕೂರಮಠ
೧೩. ಶಕ್ತಿ ವಿಶಿಷ್ಟಾದ್ವೈತ ದರ್ಶನ : ಡಾ. ಟಿ. ಜಿ. ಸಿದ್ಧಪ್ಪಾರಾಧ್ಯ
೧೪. ದರ್ಶನ : ದಿಗ್ದರ್ಶನ : ಮಹಾಪಂಡಿತ ರಾಹುಲ ಸಾಂಕೃತ್ಯಾಯನ
೧೫. ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ : ಸ್ವಾಮಿ ಯತೀಶ್ವರಾನಂದ
.