ಫ. ಗು. ಹಳಕಟ್ಟಿ, ವಿಜಾಪೂರ

ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

ಷಟ್ಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಷಟ್ಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟ್ಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟ್ಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟ್ಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತ್ತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟ್ಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ,‌ ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

 ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು, ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದು ಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

 ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

 ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತ್ತಿಗಳು ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿ ಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಙ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳೆಯು ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು; ಓಜಸ್ಸುಂಟು, ವಚನಗ್ರಂಥಗಳೆಲ್ಲ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ವಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ಬಿಂಬಿಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು

ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕೆಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿ೦ದಲೇ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ. ನುಡಿದಂತೆ ನಡೆಯುವುದಿಲ್ಲ . ಆದ್ದರಿಂದ ಇಂಥವರ ಮಾತಿನಲ್ಲಿ ಬಲವಿರುವದಿಲ್ಲ. ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯು ಉತ್ಪನ್ನವಾಗಿರುತ್ತದೆ.

 ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣ ವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಿಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು  ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಛೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜ೦ಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ದಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಅವರು ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

 ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಆತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳು ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧ್ಯೇಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಗೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಭಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತ್ತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ಧಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ್ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ. ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್‌ ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬೈಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ  ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ತೆಳ್ಳನೆಯ ಮೈಕಟ್ಟು,

ತಿಳಿಯ ಕಾವಿಯ ತೊಟ್ಟು,

ಬಂಧನಗಳ ಮೋಹವ ಬಿಟ್ಟು,

ಆತ್ಮನಲಿ ಮನಸನು ಇಟ್ಟು,

ನಿಜಗುರುವಿನ ಅರಸುತ ಹೊರಟು,

ದಿವ್ಯತೆಯ ಭಾವವ ತೊಟ್ಟು,

ಗುರುಪದದಲಿ ಶಿರವನು ಇಟ್ಟು,

ಸಮಾಜೋನ್ನತಿಯ ದೀಕ್ಷೆಯ ತೊಟ್ಟು,

ನಾಡಿಗೆ ಧಾರ್ಮಿಕ ಕೇಂದ್ರವ ಕೊಟ್ಟು,

ಶಿವಮಂದಿರವೆಂಬ ನಾಮವ ಇಟ್ಟು,

ಬಾಲವಟುಗಳ ಪೋಷಿಸ ಹೊರಟು,

ದೈವೀಶಕ್ತಿಯ ಕುರುಹನು ಇಟ್ಟು,

ದುರಿತ ಗುಣಗಳ ದೂಡುತ ಹೊರಟು,

ಕಲ್ಯಾಣ ರಾಜ್ಯವ ಕಟ್ಟುತ ಹೊರಟ

ದ್ವಿತೀಯ ಬಸವ ಅಪ್ಪ ಹಾನಗಲ್ಲ ಕುಮಾರೇಶ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

“ಸುಕುಮಾರ”  ಮುದ್ರಣರೂಪದಲ್ಲಿ ದೈಮಾಸಿಕವಾಗಿ ,ಶ್ರೀ ಶಿವಯೋಗಮಂದಿರದ ಮುಖವಾಣಿಯಾಗಿ ಹೊರಹೊಮ್ಮಿದ ಪರ್ವಕಾಲದಲ್ಲಿ  , ಬ್ಲಾಗ ರೂಪದಲ್ಲಿ ಎರಡು ವರ್ಷಗಳಿಂದ ಮಾಸಿಕವಾಗಿ ನಿರಂತರವಾಗಿ  ಪ್ರಕಟಗೊಳ್ಳುತ್ತಿರುವ  ಮಾಸಿಕ ಬ್ಲಾಗ ಬರುವ ಮಾರ್ಚ ತಿಂಗಳಿಂದ  “ಶ್ರೀಕುಮಾರ ತರಂಗಿಣಿ” ಹೆಸರಿನಿಂದ ಆನಲೈನ ನಲ್ಲಿ ಮುಂದುವರೆಯುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ.

೧೯೧೧ ರಲ್ಲಿ ಪೂಜ್ಯ ಹಾನಗಲ್ಲ ಲಿಂ. ಶ್ರೀ ಕುಮಾರ ಶಿವಯೋಗಿಗಳು  ಶಿವಯೋಗಮಂದಿರದಲ್ಲಿ ಆರಂಭಿಸಿದ್ದ ತರಂಗಿಣಿ  ಮಾಸ ಪತ್ರಿಕೆಯನ್ನು ಆನ್ ಲೈನ ಮೂಲಕ  ಮತ್ತೋಮ್ಮೆ ಪ್ರಕಟಿಸುವ ಹೆಬ್ಬಯಕೆಯೊಂದಿಗೆ ನಮ್ಮದೊಂದು ಸಣ್ಣ ಪ್ರಯತ್ನ.

ಶ್ರೀಕುಮಾರ ತರಂಗಿಣಿ ಮಾರ್ಚ ೨೦೨೩  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ಪರ ಶಿವಯೋಗದ ಸಾರ ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೨ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಮಾನವೀಯತೆಯ ಮಹಾಮೂರ್ತಿ ಸಿಂದಗಿ ಪಟ್ಟಾಧ್ಯಕ್ಷರು. ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
  4. ಶ್ರೀ ಚನ್ನಬಸವಣ್ಣನವರು• ಶ್ರೀ ನಿ.ಪ್ರ. ಶ್ರೀ ಶಿವಬಸವಸ್ವಾಮಿಗಳು ಹೊಸಮಠ,ಅಕ್ಕಿಹೊಂಡ, ಹುಬ್ಬಳ್ಳಿ
  5. ಕರಣ ಹಸಿಗೆ ಅರ್ಥಾತ್‌ ದೇಹಾತ್ಮವಿಜ್ಞಾನ ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  6. ಗುರುಪಥ-ಶಿವಪಥ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  7. . ಷಟ್‌ಸ್ಥಲ ಚಕ್ರವರ್ತಿ ಶ್ರೀ ಚನ್ನಬಸವರಾಜ ದೇವರು ನಿರೂಪಿಸಿದ ಕರಣ ಹಸಿಗೆ ಅರ್ಥಾತ್ ದೇಹಾತ್ಮ ವಿಜ್ಞಾನ: ಲೇಖಕರು ಡಾ.ಸ. ಜ. ನಾಗಲೋಟಿಮಠ
  8. . ಲಿಂಗಾಂಗ ಸಾಮರಸ್ಯ : ಪರಿಕಲ್ಪನೆ :ಲೇಖಕರು ಶ್ರೀ ಷಣ್ಮುಖಯ್ಯ ಅಕ್ಕೂರಮಠ
  9. ಆಡಿಯೋ೧ : ಶ್ರೀಕುಮಾರ ಭಜನ್
  10. ಆಡಿಯೋ ೨ : ದ್ಯಾಂಪುರ ಚನ್ನಕವಿಗಳು : ಪರಮಪೂಜ್ಯ ಶ್ರೀ ಮ.ನಿ.ಪ್ರ. ಕುಮಾರ ವಿರುಪಾಕ್ಷ ಹಾಸ್ವಾಮಿಗಳಿಂದ ಮೂರುಸಾವಿರ ವಿರಕ್ತಮಠ. ಉಪ್ಪಿನಬೆಟಗೇರಿ ಪೂಜ್ಯರಿಂದ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ರಾಗ – ಭೂಪ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

ಪ್ರಾಣಾಯಾಮದ ತ್ರಾಣಗುಂದುವಿಕೆ

ಪ್ರಾಣಾಯಾಮದ ಯೋಗ | ತ್ರಾಣಗುಂದುವುದೆಂದು

ಮಾಣಿಸಿ ಮುಕ್ತಿಯ-ಪ್ರಾಣಲಿಂಗವನಿತ್ತ

ಜಾಣ ಶ್ರೀಗುರುವೆ ಕೃಪೆಯಾಗು   ||೯೬ ||

ನಾಲ್ಕನೆಯದು ಪ್ರಾಣಾಯಾಮ. ಆಸನಗಳ ಸಿದ್ಧಿಯಾದರೂ ಪ್ರಾಣಾಯಾಮದ ಸಾಧನೆಗೆ ಅವಶ್ಯಬೇಕು. ಆಸನಗಳನ್ನು ಸಾಧಿಸಿ ಶ್ವಾಸ ನಿಃಶ್ವಾಸಗಳನ್ನು ನಿಯಮಿತ ಗೊಳಿಸುವದೇ ಪ್ರಾಣಾಯಾಮವೆನಿಸುವದು. ಪ್ರಾಣ ವಾಯುವಿನ ಗಮನಾಗಮನ

ಗಳನ್ನು ನಿರೋಧಗೊಳಿಸುವದಕ್ಕೇನೆ ಪ್ರಾಣಾಯಾಮವೆಂದು ಹೆಸರು. ಹೊರಗಿನ ಶುದ್ಧವಾದ ಪ್ರಾಣ ವಾಯುವನ್ನು ಘ್ರಾಣದಿಂದ ತೆಗೆದುಕೊಳ್ಳುವದು ಶ್ವಾಸವು. ಒಳಗಿನ ಅಶುದ್ಧವಾದ ಅಂಗಾರಾಮ್ಲ ವಾಯುವನ್ನು ಹೊರಕ್ಕೆ ಬಿಡುವದು ನಿಃಶ್ವಾಸವು. ಈ ಕ್ರಿಯೆಯು ಸದಾ ನಡೆದಿರುತ್ತದೆ. ಈ ವಾಯುವಿನ ಗತಿಯನ್ನು ಯೋಗಿಯಾದವನು ಕ್ರಮಬದ್ಧಗೊಳಿಸುವ ಸಾಧನವೇ ಇದು ಪ್ರಾಣಾಯಾಮ. ಇದರಿಂದ ಶಾರೀರಿಕ, ಮಾನಸಿಕ ಪ್ರಸನ್ನತೆ ಮತ್ತು ಸ್ಥಿರತೆಯುಂಟಾಗುವದು.

 ಮನುಸ್ಮೃತಿ”ಯಲ್ಲಿ–

ದಹ್ಯಂತೇ ದಾಹ್ಯಮಾನಾನಾಂ ಧಾತೂನಾಂ ಚ ಯಥಾ ಮಲಾಃ |

ತಥೇಂದ್ರಿಯಾಣಾಂ ದಹ್ಯಂತೇ ದೋಷಾಃ ಪ್ರಾಣಸ್ಯ ನಿಗ್ರಹಾತ್ ||ʼʼ

ʼʼಅಗ್ನಿಯ ಸಂಪರ್ಕದಿಂದ ವಿವಿಧ ಧಾತುಗಳ ಸರ್ವದೋಷ (ಹೊಲಸು) ವು ಸುಟ್ಟು ಹೋಗುವಂತೆ ಪ್ರಾಣಾಯಾಮದಿಂದ ಶಾರೀರಿಕ ಮತ್ತು ಮಾನಸಿಕ ದೋಷಗಳೆಲ್ಲ ಸುಟ್ಟು ತನು-ಮನಗಳೆರಡೂ ಅತ್ಯಂತ ಪವಿತ್ರ, ಪ್ರಸನ್ನ ಹಾಗೂ ನಿರ್ವಿಕಾರಿಗಳಾಗುತ್ತವೆ” ಯೆಂದು ಪ್ರಾಣಾಯಾಮದ ಮಹತಿಯು ಹೇಳಲ್ಪಟ್ಟಿದೆ.

 ”ಯೋಗಾಸನಗಳು” ಎಂಬ ಪುಸ್ತಕದಲ್ಲಿ ಟಿ. ಕೃಷ್ಣಮಾಚಾರ್ಯರು- “ಪ್ರಾಣ ಶಕ್ತಿಗೆ ಆಧಾರವಾದುದೇ ಪ್ರಾಣವಾಯುವು. ಇದು ಹೊರಗಿನ ಗಾಳಿಯಂತಲ್ಲ. ಇದೊಂದು ಸೂಕ್ಷ್ಮ ಮತ್ತು ಅದ್ಭುತವಾದ ಮಿಂಚಿನಂತೆ ವೇಗವುಳ್ಳ ಹಾಗೂ ಬಿಸಿಯೊಂದಿಗೆ ಕೂಡಿದ ತೇಜಃಪ್ರವಾಹ. ಅದನ್ನು ದೃಢಪಡಿಸುವದು ಪ್ರಾಣಾಯಾಮವೆಂಬ ಯೋಗಾಂಗದ ೪ನೆಯ ಮೆಟ್ಟಿಲೆಂದು ಬಣ್ಣಿಸಿದ್ದಾರೆ.

ಪ್ರಾಣಾಯಾಮಕ್ಕೂ ಆಸನಕ್ಕೂ ಸಂಬಂಧವಿದೆ. ಆಸನದ ಸಾಧನೆಯಿಲ್ಲದೆ ಪ್ರಾಣಾಯಾಮವನ್ನು ಮಾಡಲು ಬರುವದಿಲ್ಲ. ಪ್ರಾಣಾಯಾಮವನ್ನು ಚನ್ನಾಗಿ ತಿಳಿಯದೇ ಮಾಡಬಾರದು. ಗುರುಮುಖದಿಂದ ಅರಿತಾಚರಿಸಬೇಕು. ಈ ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂದೆರನಾಗಿದೆ. ಋಜುಕಾಯನಾಗಿ ಕುಳಿತು ಕನಿಷ್ಠ-ಅನಾಮಿಕ ಬೆರಳುಗಳಿಂದ ತನ್ನವಾಮ (ಎಡ) ನಾಸಾಪುಟವನ್ನು ಹಿಡಿದು, ಮಾತ್ರಾಗಣನೆಯಿಲ್ಲದೆ ದಕ್ಷಿಣನಾಸಾಪುಟದಿಂದ ಬಂದು ಮಾಡಿ ಹೊಟ್ಟೆಯೊಳಗಿನ ದೂಷಿತವಾಯುವನ್ನು ನಿಶ್ಯೇಷವಾಗಿ ಹೊರಗೆ ಹಾಕುವದೇ ರೇಚಕವು. ಬಲದ ನಾಸಿಕರಂಧ್ರವನ್ನು ಹೆಬ್ಬೆರಳಿನಿಂದ ಹಿಡಿದು ಎಡಗಡೆಯ ನಾಸಿಕರಂಧ್ರದಿಂದ ಅತಿ ಶೀಘ್ರವೂ ಅತಿಸಾವಕಾಶವೂ ಆಗದಂತೆ ಸಮಾನ ರೀತಿಯಿಂದ ಹನ್ನೆರಡು ಮಾತ್ರೆಗಳವರೆಗೆ ಹೊರಗಣ ಶುದ್ಧವಾಯುವನ್ನು ಮಂತ್ರೋಚ್ಚಾರ ಪೂರ್ವಕ ಒಳಕ್ಕೆ ತೆಗೆದುಕೊಳ್ಳುವದೇ ಪೂರಕವೆನಿಸುವದು.  ಒಳಗೆ ತುಂಬಿಕೊಂಡ ಪ್ರಾಣವಾಯುವನ್ನು, ನಾಶಿಕದ ಎರಡೂ ರಂಧ್ರಗಳನ್ನು ಬಂದು ಮಾಡಿ ಹನ್ನೆರಡು ಅಥವಾ ೧೮ ಮಾತ್ರೆಗಳ ವರೆಗೆ ಅಲ್ಲೇ ತಡೆಯುವದು ಕುಂಭಕವಾಗುವದು. ಪುನಃ ಪುನಃ ಮಾತ್ರೆಗಳನ್ನು ಹೆಚ್ಚಿಸುತ್ತ ಹೋಗಬೇಕು. ಈ ರೀತಿಯಾಗಿ ಪ್ರಣಾಯಾಮವನ್ನು ಸಾಧಿಸುವಲ್ಲಿ ಮಿತಹಾರಿಯಾಗಿರಬೇಕು. ಇದರಿಂದ ಸಾಧಕನು ಶಕ್ತಿಗುಂದುವನು. ಪ್ರಾಣಾಯಾಮವನ್ನೇ ಮುಖ್ಯವಾಗಿರಿಸಿ ಬಹಳ ಹೊತ್ತು ಸಾಧಿಸಿದರೆ ಅಪಾಯವೂ ಸಂಭವಿಸುವದು. .

 ಇದೆಲ್ಲವನ್ನರಿತ ಶರಣರು ಪ್ರಾಣದ ತ್ರಾಣವನ್ನು ಕಡೆಗಾಣಿಸುವ ಪ್ರಾಣಾಯಾಮವನ್ನು ಬಿಡಿಸಿದರು. ಪ್ರಾಣಾಯಾಮದ ಸಾಧನೆಗಿಂತ ಸದ್ಗುರುವು ಮುಕ್ತಿಯನ್ನು ಕರುಣಿಸಬಲ್ಲ ವರರತ್ನವೆನಿಸಿದ ಪ್ರಾಣಲಿಂಗವನ್ನು ಆರಾಧಿಸಲು ಉಪದೇಶಿಸಿದನು. ಈ ಪ್ರಾಣಲಿಂಗಾನುಸಂಧಾನದಲ್ಲಿ ಮನ ಲೀನಗೊಳ್ಳುವದು. ಚಾಂಚಲ್ಯ ಕಡಿಮೆಯಾಗುವದು. ಲಿಂಗಪೂಜಕನು ಶಿವಪೂಜೆಯ ಪ್ರಾರಂಭದಲ್ಲಿ ಸಂಕ್ಷಿಪ್ತವಾದ ಪ್ರಾಣಾಯಾಮವನ್ನು ಮಾಡುತ್ತಾನೆ. ಅದರಿಂದ ಆಂತರಿಕ ವಾಯುವು  ಶುದ್ಧವಾಗುವದು. ಷಡಕ್ಷರ ಮಂತ್ರಸ್ಮರಣೆಗೆ ಅನುಕೂಲವಾಗುವದು. ಗುರುಕರುಣಿಸಿದ ಇಷ್ಟಲಿಂಗವನ್ನು ಷೋಡಶೋಪಚಾರಗಳಿಂದ ಅರ್ಚಿಸಿ ಆಮೇಲೆ ಪ್ರಾಣ ಲಿಂಗಾನುಸಂಧಾನದಿಂದ ಪ್ರಾಣವು ಲಿಂಗಮಯವಾಗುವದು. ಲಿಂಗ-ನಿರೀಕ್ಷಣೆ ಮಾಡುತ್ತ ಮಂತ್ರಾನುಷ್ಠಾನ ಜಪದಿಂದ ಪ್ರಾಣಲಿಂಗದ ಸಾಕ್ಷಾತ್ಕಾರವಾಗುವದು. ಪ್ರಾಣವು ಪ್ರಣವ ಸ್ವರೂಪಗೊಳ್ಳುವದು.

ಪ್ರಾಣವೇ ಲಿಂಗವಾಗಿಯುಳ್ಳ ಶಿವಭಕ್ತನು ಪ್ರಾಣಲಿಂಗದಲ್ಲಿ ಲೀನವಾಗಿ ಹೊರಗಿನ ವೈಷಯಿಕ ವ್ಯಾಮೋಹದಿಂದ ಬಿಡುಗಡೆಯಾಗುವನು. ಭಾವದಲ್ಲಿ ಬೆರೆಯುವ ಯೋಗ್ಯತೆಯನ್ನು ಪಡೆಯುವನು. ಈ ರೀತಿಯಾದ ಸರಳವಾದ ಉಪಾಯವನ್ನು ಕರುಣಿಸಿದ ಸದ್ಗುರುನಾಥನು ನಿಜವಾಗಿಯೂ ಜಾಣನಲ್ಲವೆ |

ಪ್ರತ್ಯಾಹಾರದ ಮಿಥ್ಯತ್ವ

ಪ್ರತ್ಯಾಹಾರವ ಕೊಂಬ | ಮಿಥ್ಯಾಯೋಗವ ಬಿಡಿಸಿ

ತಥ್ಯವಾಗಿರ್ದ – ನಿತ್ಯತೃಪ್ತಿಯ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು   ||೯೭||

ಪ್ರತ್ಯಾಹಾರವು ಅಷ್ಟಾಂಗಯೋಗದಲ್ಲಿ ಐದನೆಯದು. ಇಲ್ಲಿಯವರೆಗೆ ವಿವರಿಸಿದ ಯಮ-ನಿಯಮ-ಆಸನ-ಪ್ರಾಣಾಯಾಮ ಮತ್ತು ಈ ಪ್ರತ್ಯಾಹಾರ ಇದು ಅಷ್ಟಾಂಗ ಯೋಗದಲ್ಲಿ ಬಹಿರಂಗ ಸಾಧನೆಗಳೆನ್ನುತ್ತಾರೆ. ಈ ಐದರಿಂದಲೂ ಬಹಿರಿಂದ್ರಿಯಗಳ ನಿಗ್ರಹವೇ ಮುಖ್ಯ-ಸಾಧ್ಯವಾಗಿದೆ. ಈ ಐದು ಸಾಧನೆಯಿಂದ ಮುಂದಿನ ಮೂರನ್ನು ಸಾಧ್ಯಗೊಳಿಸಲು ಅನುಕೂಲವಾಗುವದು. ಇಲ್ಲಿ ಪ್ರತಿಪಾದಿಸಬೇಕಾದ ಪ್ರತ್ಯಾಹಾರದಲ್ಲಿಯೂ ಕಾಯ-ಕರಣೇಂದ್ರಿಯಗಳನ್ನು ವಿಷಯಗಳಿಂದ ವಿರಮಿಸಿ (ಮುಕ್ತಗೊಳಿಸಿ) ಆತ್ಮ ಸ್ವರೂಪ ಮಾತ್ರದಲ್ಲಿ ಚಿತ್ತವು ಬೆರೆಯುವಂತೆ ಮಾಡುವ ವಿಧಾನವೇ ಇರುತ್ತದೆ. ನಿಜಗುಣ ಶಿವಯೋಗಿಗಳು

 ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿಯೇ

 ನಿಲ್ಲಿಸುವುದು ಪ್ರತ್ಯಾಹಾರವು. ಹೃದಯ ಸ್ಥಾನದಿಂದ ಚಲಿಸುವ

ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದು ಪ್ರತ್ಯಾ ಹಾರವು.

ಅನಾತ್ಮಕವಾದ ದೇಹೇಂದ್ರಿಯಾದಿಕದಲ್ಲಿಯ ಆತ್ಮ

 ಬುದ್ಧಿಯಂ ಬಿಡಿಸಿ ಸ್ವಸ್ವರೂಪ ಸಾಕ್ಷಾತ್ಕಾರಮಂ ಮಾಳ್ಪುದು

 ಪ್ರತ್ಯಾಹಾರವು”

 ಎಂದು ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ ಪ್ರತಿಪಾದಿಸಿದ್ದಾರೆ. ಮತ್ತು ಪ್ರತ್ಯಾಹಾರವನ್ನು ಸೂಕ್ಷ್ಮವಾಗಿ ಐದು ತೆರನಾಗಿ ವಿವೇಚಿಸುತ್ತಾರೆ. ಪ್ರೇಮ ವಸ್ತುವಿನ ಮೋಹ ತ್ಯಾಗಕ್ಕಾಗಿ ನಿವಾಂತ ಸ್ಥಾನಕ್ಕೆ ಹೋಗುವದು ತನುಪ್ರತ್ಯಾಹಾರವೆಂತಲೂ, ಅಭಿಮಾನ ಬಿಟ್ಟು ನಾನೊಬ್ಬ ಪರಶಿವನ ಸೇವಕನೆಂದು ಸತ್ಕರ್ಮವನ್ನು ಕರ್ಮೇಂದ್ರಿಯಗಳಿಂದ ಮಾಡಹತ್ತಿದರೆ ಅದಕ್ಕೆ ಕರ್ಮೇಂದ್ರಿಯ ಪ್ರತ್ಯಾಹಾರವೆಂತಲೂ, ಎಲ್ಲೆಲ್ಲಿ ದುರ್ವಿಷಯಗಳಿರುವವೋ ಅಲ್ಲಲ್ಲಿ ತನ್ನ ಜ್ಞಾನೇಂದ್ರಿಯಗಳಿಗೆ ಬುದ್ಧಿಕಲಿಸಿ ನಿರೋಧಿಸುವದೇ ಜ್ಞಾನೇಂದ್ರಿಯ ಪ್ರತ್ಯಾಹಾರವೆಂತಲೂ, ಆತ್ಮಚಿಂತನೆಯಲ್ಲಿ ಮನಸ್ಸನ್ನು ತೊಡಗಿಸಿದರೆ ಮನಸ್ಸಿನ ಪ್ರತ್ಯಾಹಾರವೆಂದೂ, ಬುದ್ಧಿಯನ್ನು ಇಂದ್ರಿಯಗಳ ಸಂಬಂಧದಿಂದ ಬಾಹ್ಯಾಂತರ ವಿಷಯಗಳ ವಿಚಾರಕ್ಕೆ ಬಿಡದೆ ಜ್ಞಾನ ಸ್ವರೂಪವಾದ ಆತ್ಮನ ವಿಚಾರದಲ್ಲಿಯೇ ದೃಢವಾಗಿ ನಿಲ್ಲುವಂತೆ ಉಪಯೋಗಿಸುವದೇ ಬುದ್ಧಿಯ ಪ್ರಾತ್ಯಾಹಾರವೆಂತಲೂ ಪ್ರತ್ಯಾಹಾರದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಒಟ್ಟಿನ ಮೇಲೆ ತನುವಿನಿಂದ, ಕರ್ಮೇಂದ್ರಿಯಗಳಿಂದ, ಜ್ಞಾನೇಂದ್ರಿಯಗಳಿಂದ ಮನ-ಬುದ್ಧಿಗಳಿಂದಲೂ ವಿಷಯಗಳನ್ನು ನಿರೋಧಿಸುವದು ಪ್ರತ್ಯಾಹಾರದ ಸ್ಪಷ್ಟವಾದ ಅರ್ಥವೆನಿಸಿದೆ. ಇಂಥ ನಿಗ್ರಹಯೋಗವನ್ನು ಶರಣರು ಮಿಥ್ಯಾಯೋಗವೆಂದು ಕರೆದರು. ಯಾಕೆಂದರೆ ಪ್ರಕೃತಿಯು ಪ್ರತಿಯೊಂದು ಪದಾರ್ಥವನ್ನು ಮಾನವನ ಉಪಯೋಗಕ್ಕಾಗಿ ಕಲ್ಪಿಸಿರುವಾಗ ಇಂದ್ರಿಯಗಳು ಅವುಗಳಿಗಾಗಿ ಆಶಿಸುತ್ತಿರುವಾಗ ಪ್ರತ್ಯಾಹಾರ ಮಾಡುವದು ವ್ಯರ್ಥವೆನಿಸುವದು. ಪದಾರ್ಥಗಳಿಂದ ಜೀವಿಸುವ

ಜೀವಾತ್ಮನು, ಹಸಿರು ಹುಲ್ಲನ್ನು ಮುಂದಿರಿಸಿ ದೂರದಲ್ಲಿ ಕಟ್ಟಿ ಹಾಕಿದ ಪಶುವಿನಂತೆ  ವಿಷಯಗಳಿಂದ ದೂರವಿರುವದು ಅಸಮಂಜಸವೆನಿಸದಿರದು. ಗುರುನಾಥನು ಇಂಥ ವ್ಯರ್ಥವಾದ ವಿಷಯ ನಿಗ್ರಹಯೋಗವನ್ನು ಬಿಡಿಸಿ ಗಂಧ, ರಸ, ರೂಪು, ಸ್ಪರ್ಶ, ಶಬ್ದಗಳೆಂಬ ವಿಷಯಗಳನ್ನು ಉದಾತ್ತೀಕರಣಗೊಳಿಸಿ ಪ್ರಸಾದ ಸ್ವರೂಪವಾಗಿ ಲಿಂಗಭೋಗೋಪಭೋಗಿಯೆನಿಸಿ ನಿತ್ಯ ತೃಪ್ತಿಯನ್ನು ಹೊಂದೆಂದು ಕರುಣಿಸುತ್ತಾನೆ. ತಥ್ಯವಾದ ಅರ್ಪಣಯೋಗವನ್ನು ಕಲಿಸುತ್ತಾನೆ. ಏನೆಲ್ಲವನ್ನು ಭೋಗಿಸಿಯೂ ಉಪವಾಸಿಯಂತಿರುವ ಕಲೆಯನ್ನು ಅನುಗ್ರಹಿಸುತ್ತಾನೆ.

 ಪ್ರಕೃತಿ ಮಾತೆ ಕರುಣಿಸಿದ ಪದಾರ್ಥಗಳನ್ನು ಸುಜ್ಞಾನ ಸತ್ಕ್ರಿಯೆಗಳಿಂದ ಪ್ರಸಾದಗೊಳಿಸಿ ಸ್ವೀಕರಿಸುವದೇ ಪ್ರಸಾದ ಯೋಗವು. ಇದರಿಂದ ನಿತ್ಯತೃಪ್ತತೆ ಸಾಧ್ಯ ವಾಗುವದು. ಅದು ಕಾರಣ ತೃಪ್ತಿಯಿಲ್ಲದ ಪ್ರತ್ಯಾಹಾರವು ಮಿಥ್ಯಾಯೋಗವೇ ಸರಿ. ಯೋಗಾಂಗದ ಅಂಗವಾದ ಈ ಪ್ರತ್ಯಾಹಾರದಿಂದ ಮಾನಸಿಕ ಸಮಾಧಾನ ಸುಲಭವಾಗಿ ಸಿಕ್ಕಲಾರದು. ಅಂತೆಯೇ ಅದನ್ನು ಮಿಥ್ಯಾ ಯೋಗವೆಂಬುದಾಗಿ ವ್ಯಾಖ್ಯಾನಿಸಿದುದರಲ್ಲಿ ಯಥಾರ್ಥತೆಯಿದೆ.

ಇಷ್ಟಲಿಂಗ ಪೂಜೆಯನ್ನು ಪೂರೈಸಿದ ಫಲವು` ಗುರುಲಿಂಗ-ಜಂಗಮರ ಪಾದೋದಕ ಪ್ರಸಾದದಲ್ಲಿ ಪರಿಣಮಿಸುತ್ತದೆ. ಪ್ರತಿನಿತ್ಯದಲ್ಲೂ ಫಲ ಪಡೆಯುವ ಲಿಂಗಭಕ್ತನು ನಿತ್ಯತೃಪ್ತನು, ನಿತ್ಯಮುಕ್ತನು. ಅದಕ್ಕಾಗಿಯೇ ಆತನ ಕರಣೇಂದ್ರಿಯಗಳು ಲಿಂಗೇಂದ್ರಿಯಗಳಾಗುತ್ತವೆ. ವಿಷಯ ವಾಸನೆಯ ಸೋಂಕು ಅವಕ್ಕೆ ಸುಳಿಯಲಾರದು. ಪ್ರತ್ಯಾಹಾರದ ಪರಿಪೂರ್ಣಭಾವ ಲಿಂಗವಂತನಲ್ಲಿಯೇ ಮೈಗೂಡಿಕೊಂಡಿದೆ. ಸರ್ವಾಂಗ ಲಿಂಗಿಯಾದ ಶರಣನು ನಿತ್ಯವೂ ಸಂತೃಪ್ತನೆನಿಸಿದ ಮೇಲೆ ತನುಪ್ರತ್ಯಾಹಾರ, ಕರ್ಮಂದ್ರಿಯ ಪ್ರತ್ಯಾಹಾರ, ಜ್ಞಾನೇಂದ್ರಿಯ ಪ್ರತ್ಯಾಹಾರ, ಮಾನಸಿಕ ಪ್ರತ್ಯಾಹಾರ, ಬುದ್ಧಿಯ ಪ್ರತ್ಯಾಹಾರಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಅವಶ್ಯಕತೆಯೆ ಉಳಿಯಲಾರದು.

ಓ ಪರಮ ಗುರುವೆ, ಇಂಥ ತಥ್ಯ ಯೋಗವೆನಿಸಿದ ಅರ್ಪಣ ಸದ್ಭಾವವನ್ನು ಅರುಹಿ ನಿತ್ಯತೃಪ್ತನನ್ನಾಗಿ ಮಾಡು. ನಿತ್ಯ ಮುಕ್ತನಾಗುವ ಪರಿಯನ್ನು ಕರುಣಿಸು. ಲಿಂಗಾಂಗ ಸಾಮರಸ್ಯದಲ್ಲಿ ಸಂತೃಪ್ತಿ ಸದಾ ಸನ್ನಿಹಿತವಾಗಿರುತ್ತದೆ.

ಧ್ಯಾನ ಯೋಗದ ಪರಿಹಾರ

ಮೌನಗೊಂಡಿರುತಿರ್ಪ |  ಧ್ಯಾನಯೋಗವ ಬಿಡಿಸಿ

ನೀನಿಷ್ಟಲಿಂಗ-ಧ್ಯಾನದೊಳಗಿರಿಸಿದೈ

ಮೌನಿ ಶ್ರೀಗುರುವೆ ಕೃಪೆಯಾಗು    ||೯೮||

 ಅಷ್ಟಾಂಗ ಯೋಗದಲ್ಲಿ ಧ್ಯಾನ ಧಾರಣ-ಸಮಾಧಿಗಳ ವಿವೇಕ ಖ್ಯಾತಿಯನ್ನು ಉತ್ಪತ್ತಿ ಮಾಡುವಲ್ಲಿ ಉಪಯುಕ್ತ ಸಾಧನಗಳು. ಆತ್ಮ ಸಾಕ್ಷಾತ್ಕಾರಕ್ಕೆ ಇವು ಮುಖ್ಯವಾದವುಗಳು. ಯೋಗ ದರ್ಶನದಲ್ಲಿ ಮೊದಲು ಧಾರಣ ಯೋಗವನ್ನು ತಿಳಿಸಿ ನಂತರ ಧ್ಯಾನದ ಪ್ರತಿಪಾದನೆ ಬಂದಿದೆ. ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಪರಿಶುದ್ಧವಾದ ಚಿತ್ತವು ಸ್ಥಿರಗೊಂಡು ಧೈಯ ವಸ್ತುವಿನ ಧಾರಣ (ಧರಿಸಲು ಯೋಗ್ಯ) ಮಾಡಲು ಶಕ್ತವಾಗುವದು. ಆ ಚಿತ್ತದಲ್ಲಿ ನಿಂತ ಧೈಯವನ್ನು ಧ್ಯಾನಿಸುವುದೇ ಧ್ಯಾನವಾಗುವದು. ಈ ಧ್ಯಾನದ ವ್ಯಾಖ್ಯೆಯನ್ನು ಯೋಗ ದರ್ಶನದಲ್ಲಿ

ತತ್ರ ಪ್ರತ್ಯಯ್ಯೆಕತಾನತಾ ಧ್ಯಾನಮ್ ʼʼ[೩-೨ ||

ಧೈಯ ಮೂರ್ತಿಗಳಲ್ಲಿರಿಸಿದ ವೃತ್ತಿಯ ಏಕಾಕಾರವೇ ಧ್ಯಾನವೆನಿಸುವದೆಂದು ವಿವರಿಸಲಾಗಿದೆ.

ಶಿವಯೋಗ ಪ್ರದೀಪಿಕೆಯಲ್ಲಿ ಮತ್ತು ಪಾರಮಾರ್ಥ ಪ್ರಕಾಶಿಕೆಯಲ್ಲಿ ಧ್ಯಾನ- ಧಾರಣ-ಸಮಾಧಿಗಳೆಂತಲೂ ಕ್ರಮ ನಿರೂಪಿಸಲ್ಪಟ್ಟಿದೆ. ನಮ್ಮ ಶಿವಕವಿಯಾದರೂ ಈ ಮಾರ್ಗವನ್ನೇ ಅನುಸರಿಸಿದ್ದಾನೆ. ಇಲ್ಲಿ ಪ್ರಥಮತಃ ಧ್ಯಾನದ ವಿಚಾರವನ್ನು ವಿವರಿಸಿದ್ದಾನೆ. ಯಾಕೆಂದರೆ ಯೋಗಮಾರ್ಗದಲ್ಲಿ ಯಮ-ನಿಯಮಾದಿಗಳನ್ನು ಸಾಧಿಸಿ ಶುದ್ಧವಾದ ಚಿತ್ತ  ಭಿತ್ತಿಯಲ್ಲಿ ಧೈಯವನ್ನು ಧಾರಣ ಮಾಡಿಕೊಂಡರೇನೆ ಧ್ಯಾನಕ್ರಿಯೆಗೆ ಅನುಕೂಲವಾಗುವದು. ಆದರೆ ಇಲ್ಲಿ ಶಿವಾದ್ವೈತ ಸಿದ್ಧಾಂತವು ಲಿಂಗಧಾರಣ ಪ್ರಕ್ರಿಯೆಯಿಂದಲೇ ಪ್ರಾರಂಭವಾಗುತ್ತದೆ. ಅದುಕಾರಣ ಗುರು ಕೃಪೆಯಿಂದ ಧರಿಸಿಕೊಂಡ ಲಿಂಗವನ್ನು ಧ್ಯಾನಿಸುವುದೇ ಪ್ರಧಾನ ಕರ್ತವ್ಯವಾಗಿದೆ.

ಅಲ್ಲದೇ ಯೋಗ ದರ್ಶನಕಾರರ ಧ್ಯಾನವು ಆಧಾರಾದಿ ಚಕ್ರಗಳಲ್ಲಿಯ ಜ್ಯೋತಿಯನ್ನು ಧ್ಯಾನಿಸುವದೇ ಆಗಿದೆ. ಅವರು ವಿಭಿನ್ನ ಚಕ್ರಗಳಲ್ಲಿ ಭಿನ್ನಮೂರ್ತಿಗಳನ್ನೇ ಧ್ಯಾನಿಸುತ್ತಾರೆ. ಆಧಾರದಲ್ಲಿ ಗಣಪತಿಯನ್ನು ಸ್ವಾಧಿಷ್ಠಾನದಲ್ಲಿ ಚತುರ್ಮುಖ ಬ್ರಹ್ಮನನ್ನು, ಮಣಿಪೂರಕದಲ್ಲಿ ವಿಷ್ಣುವನ್ನು, ಅನಾಹತಚಕ್ರದಲ್ಲಿ ರುದ್ರನನ್ನು, ವಿಶುದ್ಧಿಚಕ್ರದಲ್ಲಿ ಜೀವನನ್ನು, ಆಜ್ಞಾಚಕ್ರದಲ್ಲಿ ಪರಮಾತ್ಮನನ್ನು, ಸಹಸ್ರಾರ ಚಕ್ರದಲ್ಲಿ ಪರಬ್ರಹ್ಮನನ್ನು ಧ್ಯಾನಿಸುತ್ತಾರೆ. ಈ ಏಳು ಚಕ್ರಗಳಲ್ಲಿ ಸಗುಣ ಮೂರ್ತಿಗಳನ್ನು ಕಲ್ಪಿಸುತ್ತ ಅವುಗಳ ಪ್ರಕಾಶವನ್ನೇ ನಿರ್ಗುಣವನ್ನಾಗಿ ಭಾವಿಸುತ್ತಾರೆ. ಇನ್ನು ಕೆಲವರು ಬಾಹ್ಯ ಮೂರ್ತಿಗಳಲ್ಲಿಯೂ ಮನ-ದೃಷ್ಟಿಗಳನ್ನಿಟ್ಟು ಧ್ಯಾನಿಸುತ್ತಾರೆ. ಧೈಯ ಮೂರ್ತಿಗಳನ್ನು ಪುನಃ ಪುನಃ ಮನಸ್ಸಿನಲ್ಲಿಟ್ಟು ಭಾವಿಸುವದರಿಂದ ಧ್ಯಾನವಾಗುವದು. ವಿಭಿನ್ನ ಮೂರ್ತಿಗಳನ್ನು ಧ್ಯಾನಿಸುವದು ಸಹಜ ಮಾರ್ಗವಲ್ಲ, ಮತ್ತು ಅದು ಈ ಧ್ಯಾನವು ಕೇವಲ ಮೌನಯುತವಾದುದು. ಮೌನಿಯಾಗಿ ವಿಭಿನ್ನ ಚಕ್ರಗಳಲ್ಲಿ ಪರಿಪೂರ್ಣ ಧ್ಯಾನವೂ ಆಗುವದಿಲ್ಲವೆಂದು ಶರಣರು ಹೇಳುತ್ತಾರೆ. ಕಾಣದ, ಕಲ್ಪನೆಗೆ  ಬಾರದ ಮೂರ್ತಿಗಳನ್ನು ಕಲ್ಪಿಸಿ ಧ್ಯಾನಿಸುವದರಿಂದ ಅಲ್ಲಿ ಸಗುಣಕ್ಕಿಂತ ನಿರ್ಗುಣದ ಕಲ್ಪನೆಯೇ ಬೆಳೆದು ಬರುತ್ತದೆ.  ನಿರ್ಗುಣ ವಸ್ತುವಿನಲ್ಲಿ ಮನದ ವೃತ್ತಿ ಏಕಾಕಾರವಾಗುವದು ಕಠಿಣ. ಕಾಣದ ವಸ್ತುವನ್ನು ಧ್ಯಾನಿಸಲು ಸುಲಭವಾಗುವದಿಲ್ಲ.

ಅವ್ಯಕ್ತಾಹಿ ಗತಿರ್ದುಖಂ- (ಭ. ಗೀತೆ)

.

 ಆದ್ದರಿಂದ ಮೌನಗೊಂಡಿರುವ ಧ್ಯಾನಯೋಗ ಸಾಧುವಲ್ಲ. ಅಂಥ ಧ್ಯಾನದಿಂದ ಪೂರ್ಣತ್ತ್ವ ಪ್ರಾಪ್ತಿಯಾಗಲಾರದು. . ಗುರುಕರುಣಿಸಿದ ಇಷ್ಟಲಿಂಗವು ಸಾಕಾರವಿರುವದರಿಂದ ಸಗುಣವೂ, ಅರುಹಿನ ಕುರುಹೇ ಆಗಿರುವದರಿಂದ ನಿರ್ಗುಣವೂ ಆಗಿರುತ್ತದೆ. ಕಾಣುವ ಕಾಂತಿಯುಕ್ತವಾದ ಈ ಲಿಂಗದಲ್ಲಿ ದೃಷ್ಟಿಯನ್ನಿರಿಸಿ ಗುರೂಪದಿಷ್ಟವಾದ ಷಡಕ್ಷರ ಮಹಾಮಂತ್ರದ ಅರ್ಥವನ್ನು ಸುಬುದ್ಧಿಯಿಂದ ಗ್ರಹಿಸುತ್ತ ಭಾವದಲ್ಲಿ  ಬೆರೆಯುವ ಲಿಂಗಧ್ಯಾನವು ಅಮೋಘವಾಗಿದೆ. ಅನುಪಮವಾಗಿದೆ.

 ಯೋಗದ ಧ್ಯಾನಕ್ಕಿಂತಲೂ ಶಿವಯೋಗದ ಧ್ಯಾನವು ಯುಕ್ತಿಯುಕ್ತವಾಗಿದೆ. ಇಷ್ಟಲಿಂಗದ ಧ್ಯಾನವು ದೃಷ್ಟಿಯೋಗವೆನಿಸಿದೆ. ಕಣ್ಣಿಗೆ ಕಾಣುವ ಲಿಂಗದಲ್ಲಿ ಮನವು ನಿಲ್ಲುವದು. ಲಿಂಗವು ಕಣ್ಣಿಗೆ ಕಾಣುವ ಆಕಾರವುಳ್ಳುದಾದರೂ ಅದನ್ನು ಪಡೆದ ಪರಿಯನ್ನು ಈ ಹಿಂದೆ ವಿಶದವಾಗಿ ಅರಿತಿದ್ದೇವೆ. ನವಚಕ್ರಗಳಲ್ಲಿಯ ನವಬ್ರಹ್ಮರ ಮಹಾಚೈತನ್ಯವನ್ನು ಸಂಸ್ಕಾರಗೊಳಿಸಿ ಇಷ್ಟಲಿಂಗದ ಕಿರಣಗಳನ್ನಾಗಿ ನವಲಿಂಗಗಳನ್ನು ನೆಲೆಸುವಂತೆ ಗುರುವು ಕರುಣಿಸುತ್ತಾನೆ. ಈ ನವಲಿಂಗಗಳು ತನ್ನ ಚಿಚ್ಛೈತನ್ಯದ ಕುರುಹುಗಳಾಗಿರುವದರಿಂದ ಧ್ಯಾನವು ಸುಲಭಸಾಧ್ಯವಾಗುವದು. ದೃಷ್ಟಿಯೋಗವುಳ್ಳ ಲಿಂಗಧ್ಯಾನವು ಸಫಲವಾಗುವದು.

ದೃಷ್ಟಿಯೋಗದ ಮಹತಿಯು ಅಪಾರವಾಗಿದೆ. ಅಕ್ಕಮಹಾದೇವಿಯು ತನ್ನ ‘ʼಯೋಗಾಂಗ ತ್ರಿವಿಧಿ” ಯಲ್ಲಿ ಅಷ್ಟಾಂಗ ಯೋಗವನ್ನು ಅತಿಗಳೆದು ದೃಷ್ಟಿಯೋಗವನ್ನು ಎತ್ತಿ ತೋರಿಸಿರುವಳು-

ಅಷ್ಟಾವರಣದ ಹಣ್ಣು ಬಟ್ಟಬಯಲೊಳಗಿರಲು

ಅಷ್ಟಾಂಗಯೋಗವನ್ನು ಮಾಡಿ ಬಳಲುವರು

ದೃಷ್ಟಿಯಿಡುವುದನು ಮರೆದಿಹರು ||

ಅಷ್ಟಾವರಣದ ಹಣ್ಣೆಂದರೆ ಕರಕಮಲದಲ್ಲಿ ಕಾಣಿಸಿಕೊಂಡ ಇಷ್ಟಲಿಂಗವು ಅದರಲ್ಲಿ ದೃಷ್ಟಿಯಿಡುವದು ಶ್ರೇಷ್ಠವಾದ ಕೆಲಸ. ಅದನ್ನು ಮರೆತು ಅಷ್ಟಾಂಗ ಯೋಗದ ಬರಿ ಧ್ಯಾನ ಮಾಡಿ ಬಳಲುವಿಕೆಯನ್ನೇ ಪಡೆಯಬೇಕಾಗುವದೆಂದು ತಿಳಿಸಿದ್ದಾಳೆ. ಆಲಿನಿಂದೊಡೆ ಗಾಳಿ, ಮನ, ನಿಂತು ಕಾಲ-ಕರ್ಮರ ಕಾಟ ಅಳಿಯುವದೆಂಬ ಚಾಮರಸನು ಹೇಳಿದ ಪ್ರಭುವಿನ ವಿಚಾರವನ್ನು ಈಗಾಗಲೇ

ತಿಳಿಸಿದ್ದೇವೆ. ಈ ದೃಷ್ಟಿಯೋಗದ ವಿಷಯವನ್ನು ಉಸುರದ ಶರಣರೇ ವಿರಳ. ಸಿದ್ಧಾಂತಕ್ಕನುಗುಣವಾಗಿ

 ʼʼಮನದೊಳಗೆ ದೃಷ್ಟಿಯಿಟ್ಟವನೆ ನಿಜಮುಕ್ತ’ʼ

ಪ್ರಾಣಲಿಂಗದಲ್ಲಿ ದೃಷ್ಟಿ ಬೆರೆಯುವಿಕೆಯೇ ನಿಜಮುಕ್ತಿಯೆನಿಸುವದು. ಛಾಂದೋ ಗ್ಯೋಪನಿಷತ್ತು ಪ್ರತಿಪಾದಿಸಿದ

ಆತ್ಮಾ ವಾರೇ ದೃಷ್ಟವ್ಯಃ’

“ಆತ್ಮನನ್ನು ನೋಡಬೇಕು’ ಎನ್ನುವ ತತ್ತ್ವವನ್ನು ಶರಣರು ಕರಗತ ಮಾಡಿ ಕೊಂಡಿದ್ದಾರೆ. ಶಿವನನ್ನು ನೋಡಿ ಧ್ಯಾನಿಸುವ ನಯನ-ಮನಗಳೆರಡೂ ಪವಿತ್ರವಾಗುತ್ತವೆ. ಶಿವಲಿಂಗವನ್ನು ಕೇವಲ ಉಪಚಾರಗಳಿಂದ ಉಪಚರಿಸುವದು ಅರ್ಚನೆಯಲ್ಲ. ಲಿಂಗವನ್ನು ನಿರೀಕ್ಷಿಸದ ಜಪ ಧ್ಯಾನವಲ್ಲ. ಇವೆಲ್ಲವುಗಳ ಸಂಗಮದಿಂದಲೇ  ಶಿವಯೋಗ ಸಾಧಿಸುವದು. ಈ ವಿಚಾರವನ್ನು ಚನ್ನಬಸವಣ್ಣನವರು ಅನೇಕ ದೃಷ್ಟಾಂತಗಳ ಮೂಲಕ ತಮ್ಮ ವನಚದಲ್ಲಿ ವ್ಯಕ್ತಮಾಡಿದ್ದಾರೆ-

ಕತ್ತಲ ಮನೆಯಲ್ಲಿರ್ದ ಮನುಜನು

 ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ

 ಬೆಂಕಿಯ ಹೊತ್ತಿಸದನ್ನಕ್ಕ ?

ಮರದುದಿಯ ಫಲವು ನೋಟ ಮಾತ್ರಕ್ಕುದುರುವುದೇ

 ಹತ್ತಿ ಹರಿಯದನ್ನಕ್ಕ ?

 ಹುಟ್ಟು ಗುರುಡನು ಕಷ್ಟ ಬಟ್ಟು ಎಷ್ಟು ಹೊತ್ತು ನಡೆದಡೆಯೂ

ಇಚ್ಛಿತ ಪಟ್ಟಣವ ಮುಟ್ಟುವನೇ, ಕಣ್ಣುಳ್ಳವನ ಕೈವಿಡಿಯದನ್ನಕ್ಕ ?

ಹಾಂಗೆ, ಸಮ್ಯಗ್ ಜ್ಞಾನಾತ್ಮಕವಾದ

ಲಿಂಗಾರ್ಚನ, ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ

 ಆ ನೆನಹು ನಿರೀಕ್ಷಣೆ ಪೂಜೆ ಇವುಗಳೊಂದೊಂದೆ

ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದ ಮತಿಗಳ ಮೆಚ್ಚುವನೆ,

ಕೂಡಲ ಚನ್ನಸಂಗಮದೇವನು ?

ಕತ್ತಲ ಮನೆಯ ಕುಳಿತು ಬೆಂಕಿಯನ್ನು ಹೊತ್ತಿಸದೆ ಎಷ್ಟೊತ್ತು ಜ್ಯೋತಿಯನ್ನು ನೆನೆದಡೆ ಎಂದೂ ಬೆಳಕಾಗುವದಿಲ್ಲ, ವೃಕ್ಷದ ತುದಿಯ ಹಣ್ಣನ್ನು ಹತ್ತಿ ಹರಿಯ ಬೇಕಲ್ಲದೆ ನೋಟ ಮಾತ್ರದಿಂದ ಕೆಡವುದಕ್ಕಾಗುವದಿಲ್ಲ. ಹುಟ್ಟು ಗುರುಡನು ಕಣ್ಣುಳ್ಳವರ ಕೈಹಿಡಿಯದೆ ಕಷ್ಟಪಟ್ಟು ಎಷ್ಟು ಹೊತ್ತು ನಡೆದರೂ ಇಚ್ಛಿತವಾದ ಪಟ್ಟಣಕ್ಕೆ ಹೋಗಲಾರನು, ಇದರಂತೆ ಸಮ್ಯಗ್ ಜ್ಞಾನಾತ್ಮಕವೆನಿಸಿದ ಸತ್ಕ್ರಿಯಾರೂಪ ಲಿಂಗಾರ್ಚನೆಯು ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ ಪರಿಪೂರ್ಣವಾಗುವದಿಲ್ಲ. ಅಲ್ಲದೆ ಈ ನೆನಹು, ನೋಟ, ಪೂಜೆಗಳಲ್ಲಿ ಒಂದೊಂದೇ ಕ್ರಿಯೆಯಿಂದ ಎಂದಿಗೂ ಶಿವಯೋಗ ಸಾಧ್ಯವಾಗುವುದಿಲ್ಲ. ಒಂದೊಂದರಿಂದಲೇ ಮುಕ್ತಿಯನ್ನು ಹೊಂದುವನೆಂಬ ಮಂದಮತಿಯನ್ನು ಮಹಾದೇವನೆಂದಿಗೂ ಮೆಚ್ಚುವದಿಲ್ಲ. ಕಾರಣ  ಅರ್ಚನೆಯಾದ ಬಳಿಕ ಲಿಂಗದಲ್ಲಿ ದೃಷ್ಟಿಯಿಟ್ಟು ಶಿವಷಡಕ್ಷರ ಮಹಾಮಂತ್ರದ ಧ್ಯಾನವನ್ನು ಮಾಡಬೇಕು. ಅಂತೆಯೇ ಅನೇಕ ಶರಣರು ದೃಷ್ಟಿಯೋಗದ ವಿಚಾರ ವಾಗಿ ಕೆಳಗಿನಂತೆ ಪ್ರತಿಪಾದಿಸಿದ್ದಾರೆ, ಬಹುರೂಪಿ ಚೌಡಯ್ಯ ಶರಣನು-

ನೋಡುವವರ ದೃಷ್ಟಿ ಬಟ್ಟಬಯಲು

ಮೋಳಿಗೆ ಮಾರಯ್ಯನವರ ಧರ್ಮಪತ್ನಿ ಮಹಾದೇವಿಯು

ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ’

ಮಹಾನುಭಾವಿ ಬಸವಣ್ಣನವರು-

ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ’

“’ಹೊತ್ತಾರೆ ಎದ್ದು ಲಿಂಗದೇವನ ದೃಷ್ಟಿಯಾರೆ

ನೋಡದವನ ಸಂಸಾರವೇನವನ ?

ಶಂಭು ನಿಮ್ಮಯ ನೋಟ, ಹೆರಹಿಂಗದ ಕಣ್ಬೇ

ನಿಮ್ಮ ನೋಟ ಅನಂತಸುಖ, ಕೂಟ ಪರಮಸುಖ”

ಷಟ್‌ಸ್ಥಲ ಮಹಾಜ್ಞಾನಿ ಚನ್ನಬಸವಣ್ಣನವರು-

“ಸ್ನೇಹದ ನೋಟದಲ್ಲಿಯೇ ತೃಪ್ತಿ”

ತೋಂಟದ ಸಿದ್ಧಲಿಂಗ ಶಿವಯೋಗಿಗಳು-

ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು

ಲಿಂಗ ತಾನೆ ಅಯ್ಯಾ’ |

ಘನಲಿಂಗ ದೇವನು-

ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಮಾಡಿ

ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ

ನೋಡುವುದೀಗ ಲಿಂಗದ ನೋಟ

ಹೀಗೆ ಹೇಳಿರುವ ಹಲವಾರು ಶರಣರ ದೃಷ್ಟಿಯೋಗದ ವಿಚಾರವನ್ನು ಚ. ಸುಂದರೇಶನ್ನರು ತಮ್ಮ “ದೃಷ್ಟಿಯೋಗ’ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ. ದೃಷ್ಟಿ ಯೋಗವು ಶಿವಯೋಗದ ಜೀವಾಳ. ಇದರಿಂದ ಲಿಂಗಧ್ಯಾನವು ಪರಿಪೂರ್ಣವೂ ಫಲದಾಯಕವೂ ಆಗುವದು.   

ಶಿವಯೋಗವು ತನ್ನದೇ ಆದ ಐದಂಗಳನ್ನು ಹೊಂದಿದೆ. ೧) ಶಿವಜ್ಞಾನ, ೨) ಶಿವಭಕ್ತಿ, ೩) ಶಿವಧ್ಯಾನ, ೪) ಶಿವವ್ರತ, ೫) ಶಿವಾರ್ಚನ, ಶಿವನ ವಿಷಯಕ ಜ್ಞಾನವಿದ್ದರೆ ಶಿವನಲ್ಲಿ ಭಕ್ತಿ ಬೆಳೆಯುವದು ಅಂಥ ಶಿವಲಿಂಗದಲ್ಲಿ ಭಕ್ತಿಯಿಂದ ಧ್ಯಾನವುಳ್ಳವನಾಗಿ ಬಹಿರ್ಲಕ್ಷ್ಯವನ್ನು ಅಂತರ್ಮುಖಗೊಳಿಸಬೇಕು. ಧೈಯ ವಸ್ತುವಾದ ಲಿಂಗಾಕಾರವೇ ತಾನಾಗಬೇಕು.   ಸರ್ವವೂ ಶಿವಮಯವೆಂಬ ವ್ರತವು  ವಿಶಾಲ ಮನೋಭಾವವುಳ್ಳವನನ್ನಾಗಿ ಮಾಡುವದು. ಶಿವಾರ್ಚನೆಯಲ್ಲಿ ಬಾಹ್ಯವಾದ ಇಷ್ಟಲಿಂಗದ ಪೂಜೆಯು ಉಪಚಾರಗಳಿಂದ ಕೂಡಿದ್ದರೆ, ಪ್ರಾಣಲಿಂಗದ ಪೂಜೆ ಆಂತರಿಕ ಜ್ಞಾನ ಮತ್ತು ಧ್ಯಾನಗಳಿಂದ ಕೂಡಿರುತ್ತದೆ. ಈ ಲಿಂಗ ಧ್ಯಾನವು ಹೆಚ್ಚಿದಂತೆ ಪ್ರಾಣಲಿಂಗವೇ ತಾನಾಗುವನು. ಇಂಥ ಇಷ್ಟಲಿಂಗ ಧ್ಯಾನವುಳ್ಳ ಶ್ರೀಗುರುವು ಮೌನಿಯಾಗುತ್ತಾನೆ. ಬಾಹ್ಯ ವ್ಯವಹಾರದಲ್ಲಿ ಮೌನವುಳ್ಳವನಾಗುತ್ತಾನೆ. ಇಂಥ ಲಿಂಗಧ್ಯಾನವನ್ನು ಕಲಿಸಿಕೊಡುವ ಗುರುನಾಥನು ಮಾನ್ಯತೆಯನ್ನು ಪಡೆದವನಾಗುತ್ತಾ.  ನೆಂತಲೂ ಪಾಠಾಂತರದ ಅರ್ಥ ಸರಿಹೋಗುವದು.

ಧಾರಣಯೋಗದ ನಿರಸನ

ಧಾರಣದ ಯೋಗದಾ | ಚರಣೆಯನೆ ಅತಿಗಳೆದು

ಕಾರಣದ ಲಿಂಗ-ಧಾರಣವ ಗೈದ ಪರಿ

ಪೂರ್ಣ ಶ್ರೀಗುರುವೆ ಕೃಪೆಯಾಗು   ||೯೯ ||

ಧಾರಣವೆಂದರೆ ಧರಿಸುವದು. ಪರಿಶುದ್ಧವಾದ, ಸ್ಥಿರವಾದ ಮನೋಭೂಮಿಕೆಯಲ್ಲಿ ಆರಾಧ್ಯ ವಸ್ತುವಿನ ಆಕಾರ ಕರಿಗೊಳ್ಳುವದು. ಪೂರ್ವೋಕ್ತ ಪಂಚಾಂಗಗಳಿಂದ ಧಾರಣಯೋಗವನ್ನು ಸಾಧಿಸಲು ಅನುಕೂಲವಾಗುವದು. ಮನಸ್ಸಿನ ಅಧೀನಗಳಾದ ಇಂದ್ರಿಯಗಳು ಮನೋನಿಗ್ರಹದಿಂದ ವಶವಾದರೆ ಧೈಯ ವಸ್ತುವಿನ ಸ್ವಸ್ವರೂಪವು ಚಿತ್ತದಲ್ಲಿ ಸ್ಥಿರಗೊಳ್ಳುವದು. ಆ ಧೈಯವನ್ನು ಕಾಣುತ್ತ ಧ್ಯಾನ ಲೀನವಾಗುವನು. ಅದಕ್ಕಾಗಿಯೇ ಧ್ಯಾನ-ಧಾರಣ-ಸಮಾಧಿಗಳು ವಿವೇಕ ಖ್ಯಾತಿಗಳೆಂದು ಕರೆಯಲ್ಪಟ್ಟಿವೆ. ಅಂದರೆ ಆತ್ಮನ ಅರಿವನ್ನು ಹೇಳತಕ್ಕವುಗಳೆಂದರ್ಥ.

 ಧಾರಣವು ಆಧಿಭೌತಿಕ, ಅಧ್ಯಾತ್ಮಿಕವೆಂದು ವಿಭಾಗವಾಗುತ್ತದೆ. ಸೂರ್ಯ- ಚಂದ್ರ, ದೇವತಾ ಮೂರ್ತಿ, ಶಿವಲಿಂಗ (ಸ್ಥಾವರ), ಸಾಲಿಗ್ರಾಮಾದಿಗಳು ಧಾರಣ ಕ್ರಿಯೆಯ ಆಧಿಭೌತಿಕ ಸ್ಥಾನಗಳೆನಿಸುತ್ತವೆ. ಆಧಾರಾದಿ ಚಕ್ರಗಳ ಮೂರ್ತಿಗಳ ಚೈತನ್ಯ ಧಾರಣವು ಆಧ್ಯಾತ್ಮಿಕ ಸ್ಥಲವುಳ್ಳದಾಗುವದು. ಆಧಿಭೌತಿಕ ಧಾರಣವು ಬಾಹ್ಯವಾಗಿದ್ದರೆ ಆಧ್ಯಾತ್ಮಿಕ ಧಾರಣಯೋಗವು ಆಂತರಿಕವಾಗಿದೆ.

 ಧಾರಣಕ್ರಿಯೆಯು ನಿತ್ಯ ವ್ಯವಹಾರದಲ್ಲಿಯೂ ನಡೆಯುತ್ತದೆ. ಉದಾಹರಣೆಗಾಗಿ-ಹಿರಿಯರು ಹೇಳುವ ಮಾತಿನಲ್ಲಿ ಶ್ರದ್ಧೆಯಿಂದ ಕಿವಿಗೊಟ್ಟರೆ ಸರಿ, ಉದಾಸೀನದಿಂದ ಅವರೇನಾದರೂ ಹೇಳಿಕೊಳ್ಳಲಿ, ತನ್ನ ಮನ ಮಾತ್ರ ಬೇರೆಡೆಗೆ ಇದ್ದರೆ ಅವರ ಅಭಿಪ್ರಾಯ ಅವನಿಗೆ ತಿಳಿಯುವದೇ ಇಲ್ಲ. ಕೇಳುವ ಕಿವಿಯಲ್ಲಿ ಮನಸ್ಸು ನಿಂತರೆ ಶಬ್ದ ವಾಕ್ಯಾರ್ಥ ಅನುಭವಕ್ಕೆ ಬರುತ್ತದೆ. *ಶಾಕುಂತಲ ನಾಟಕದಲ್ಲಿ ಶಕುಂತಲೆಯು ದುಷ್ಯಂತ ರಾಜನ ಚಿಂತೆಯಲ್ಲಿ ಮಗ್ನವಾಗಿರುವಾಗ ದೂರ್ವಾಸ ಮುನಿಯು ಭಿಕ್ಷೆ ಕೇಳಿ  ಬೇಡಿದ್ದಾಗಲಿ, ಸಿಟ್ಟಿಗೆದ್ದು ಶಾಪಕೊಡುವುದನ್ನಾಗಲಿ ಅವಳು ಅರಿಯುವದಿಲ್ಲ. ಮಹಾಮುನಿಯ ಮಾತನ್ನು ಅನಾದರ ಗೊಳಿಸಿದುದುಕ್ಕೇನೇ ಅವಳು ಮುಂದೆ ತೊಂದರೆಯನ್ನು ಅನುಭವಿಸಿದಳು.

 ಇದರಂತೆ ಊಟ ಮಾಡುವಾಗ ಮನ ವ್ಯಗ್ರವಾದರೆ ಷಡ್ರಸಾನ್ನವೂ ಸಹರುಚಿಸುವದಿಲ್ಲ. ಸುಗಂಧದ ವಾಸನೆಯೂ ತಿಳಿಯುವದಿಲ್ಲ, ಬುದ್ಧಿಯ ಗ್ರಹಿಕೆಯೂ ನಿಂತುಹೋಗುತ್ತದೆ. ಕಾರಣ ಆಯಾ ಕಾರ್ಯಗಳಲ್ಲಿ ಮನ ಕೂಡಿರಬೇಕು. ಚಿತ್ತಭಿತ್ತಿ ಹಸನಾಗಿರಬೇಕು. ಅಂತೆಯೇ    ಹಿರಿಯರು ಮನವಿಟ್ಟು ಕೆಲಸ ಮಾಡಲು. ಹೇಳುವದುಂಟು. ಮನಮುಟ್ಟಿ ಮಾಡುವ ಕಾರ್ಯದಲ್ಲಿ ಕುಶಲತೆ ಲಭಿಸುವದು. ಅದಕ್ಕಾಗಿ ಕೃಷ್ಣನು “ಯೋಗಃ ಕರ್ಮಸು ಕೌಶಲಮ್  ಕಾರ್ಯದಲ್ಲಿ ಕುಶಲತೆಯನ್ನು ಸಾಧಿಸುವುದೇ ಯೋಗವೆಂದು ಪ್ರತಿಪಾದಿಸಿದ್ದಾನೆ. ಅರ್ಜುನನಿಗೆ ಯುದ್ಧ ಕಾರ್ಯದಲ್ಲಿಯಾದರೂ ಮನಃಪೂರ್ವಕ ಬಾಣಪ್ರಯೋಗ ಮಾಡೆಂದು ತಿಳಿಸುತ್ತಾನೆ. ಅಂದರೇನೆ ಗುರಿಸಾಧಿಸಲು ಸಾಧ್ಯವಾಗುವದು.

 ಸಾಧಕನಾದವನು ತನ್ನ ಧೈಯ ವಸ್ತುವಿನಲ್ಲಿ ಮನಸ್ಸನ್ನು ಕೇಂದ್ರೀಕೃತಗೊಳಿಸ ಬೇಕು. ಗುರುವಾದ ದ್ರೋಣಾಚಾರ್ಯರ ಬಾಣ ಪ್ರಯೋಗ ಪರೀಕ್ಷೆಯಲ್ಲಿ ಏಕಲಕ್ಷ್ಯವುಳ್ಳ ಅರ್ಜುನನಿಗೆ ಗುರಿಯಾದ ಪಕ್ಷಿಯ ಕೊರಳೊಂದೆ ಕಂಡಿತು. ಉಳಿದ ಯಾವ ಪಕ್ಷಿಯ ಅವಯವವೂ ಕಾಣಲಿಲ್ಲ. ಗಿಡದ ಶಾಖೆಗಳೂ ಗೋಚರಿಸಲಿಲ್ಲ. ಆದರೆ ಉಳಿದ ಶಿಷ್ಯರಿಗೆ ಎಲ್ಲವೂ ಕಂಡುದರಿಂದ ಗುರಿ ಸಿಕ್ಕಲಿಲ್ಲ. ಅರ್ಜುನನು ಮಾತ್ರ ಅದನ್ನು ಸಾಧಿಸಿ ಉತ್ತೀರ್ಣನಾದ. ಅಂತೆಯೇ ಮುಂದೆ ದ್ರೌಪದಿಯ ಸ್ವಯಂವರದಲ್ಲಿಯಾದರೂ ಕಾಯ್ದ ಎಣ್ಣೆಯಲ್ಲಿ ಮೇಲಿನ ಮೀನದ ಛಾಯೆಯನ್ನು ನೋಡಿ ಮೇಲೆ ಗುರಿ ಹೊಡೆಯುವ ಮಹಾಕಾರ್ಯದಲ್ಲಿ ಅವನು ಜಯಶಾಲಿಯಾದನು. ಈ ರೀತಿಯಾಗಿ ಸರ್ವೆ೦ದ್ರಿಯ ವಿಷಯಗಳ ಅರಿವಾಗಬೇಕಾದರೂ ಆ ಇಂದ್ರಿಯಗಳಲ್ಲಿ ಚಿತ್ತವು ಸ್ಥಿರವಾಗಬೇಕಾಗುವದು.

 ಅಧ್ಯಾತ್ಮ ಸಾಧಕನು ತಾನು ಹೊಂದಬೇಕಾದ ಆರಾಧ್ಯ ವಸ್ತುವಿನಲ್ಲಿಯೇ ತನ್ನ ಎಲ್ಲ ಇಂದ್ರಿಯಗಳು ತಲ್ಲೀನವಾಗಬೇಕು. ಶಿವನನ್ನು ಭಜಿಸುವ ಭಕ್ತನಿಗೆ ಕಣ್ಣಿನಲ್ಲಿ ಕಾಣುವ ವಸ್ತುಗಳೆಲ್ಲವೂ ಆ ಶಿವನ ಆಕಾರದಲ್ಲಿಯೇ ಕಾಣಬೇಕು. ಕಿವಿಯಲ್ಲಿ ಆತನ ಗುಣಗಾನವೇ ಕೇಳಿಸುವಂತಾಗಬೇಕು. ಉಣ್ಣುವ ಪದಾರ್ಥವು ಶಿವಪ್ರಸಾದವಾಗಿಯೇ ತೀರಬೇಕು. ವಾಸಿಸುವ ಗಂಧವೂ ಶಿವನಿಗೆ ಸಮರ್ಪಿಸಿದ ಪುಷ್ಪ-ಧೂಪ ಗಂಧವಾಗಿ ಅಭ್ಯಾಸವಾಗಬೇಕು. ಹೀಗಾದರೆ ಆ ಸಾಧಕನು ತೀವ್ರದಲ್ಲಿ ಧೈಯ ವಸ್ತುವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವನು. ಮೀರಾಬಾಯಿಯು ವಿಷವನ್ನು ಸಹ ಕೃಷ್ಣನ ಚರಣಾಮೃತವೆಂದು ಸ್ವೀಕರಿಸಿ ಅಮರಳಾದಳು. ಒಟ್ಟಿನಲ್ಲಿ ಮನವು ಲಕ್ಷದಲ್ಲಿ ಲೀನವಾದರೆ ಧಾರಣಯೋಗವು ಸುಗಮವಾಗುವದು.

 ಯೋಗಶಾಸ್ತ್ರಕಾರರ ಧಾರಣವು ಶರೀರದ ಸಪ್ತ ಚಕ್ರಗಳಲ್ಲಿಯ ನಿರ್ಗುಣ ವಸ್ತುವಿನ ಧಾರಣವಾಗಿದೆ. ಅಧ್ಯಾತ್ಮಿಕವಾಗಿರುವದರಿಂದ ಸುಲಭ ಸಾಧ್ಯವಾಗುವದಿಲ್ಲ. ಈ ನಿರವಯವನ್ನು ಧಾರಣ ಮಾಡುವದು ಸರಿಯಲ್ಲವೆಂದು ವಿಚಾರಿಸಿ ಶರಣರು ಸಗುಣವೂ, ನಿರ್ಗುಣ ನಿರಾಕಾರವೂ ಆದ ಪ್ರಾಣಲಿಂಗದ ಧ್ಯಾನದಿಂದ ಲಭ್ಯವಾಗುವ ಭಾವಲಿಂಗದ ಧಾರಣವು ಪರಿಪೂರ್ಣವಾದುದೆಂದು ಬೋಧಿಸಿದ್ದಾರೆ. ಬಾಹ್ಯದಲ್ಲಿ ಇಷ್ಟಲಿಂಗದ ಧಾರಣೆಯು ಸರ್ವೆಂದ್ರಿಯಗಳಲ್ಲಾದರೆ ಪ್ರಾಣದಲ್ಲಿ ಪ್ರಾಣಲಿಂಗದ ಧ್ಯಾನ ಸಾರ್ಥಕವಾಗುವದು. ಆಗ ಕಾರಣತನುವಿನ ಭಾವವು ಬೆರೆಯುವದು. ತನುಭಾವ, ಇಂದ್ರಿಯಭಾವ ಬಯಲಾಗಿ ಎಲ್ಲ ಇಂದ್ರಿಯಗಳಲ್ಲಿ ಲಿಂಗಭಾವ ಬರಬೇಕು. ಕ್ರಿಯಾಜ್ಞಾನಗಳು ಅನುಭವದಲ್ಲಿ ಅಳವಡಬೇಕು. ಅಂದರೆ ಭಾವದಲ್ಲಿ ಭಾವಲಿಂಗವಾಗಿ ಬಯಲಾತ್ಮನಾಗುವ ಶಕ್ತಿ ಬರುತ್ತದೆ. ಇಂಥ ಭಾವವನ್ನೇ ಹೊಂದಿದ ಅಲ್ಲಮ ಪ್ರಭುಗಳು ವೋಮಕಾಯರೇನಿಸಿದ್ದರು. ಇದು ನಿರಂಜನ ಪ್ರಭುವಿನ ಅನುಗ್ರಹವಿಲ್ಲದೆ ದೊರೆಯದು. ನಿರಾಭಾರಿ ಗುರುನಾಥನು ಸ್ವತಃ ತಾನು

ತನು-ಮನ-ಭಾವಂಗಳಲ್ಲಿ ತ್ರಿಲಿಂಗಗಳನ್ನು ಧಾರಣ ಮಾಡಿ ಪರಿಪೂರ್ಣವಾಗಿರುತ್ತಾನೆ. ಅಂಥವರ ಕೃಪೆಯಾದರೆ ಧಾರಣಯೋಗವು ಸುಗಮವಾಗುವದು.

ಅಣ್ಣನವರ-

ವಚನದಲ್ಲಿ ನಾಮಾಮೃತ ತುಂಬಿ

ನಯನದಲ್ಲಿ ನಿಮ್ಮ ಮೂರುತಿ ತುಂಬಿ

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲಾನು ತುಂಬಿ

ವಚನ, ನಯನ, ಮನ, ಶ್ರವಣೇಂದ್ರಿಯ ಮೊದಲಾದವುಗಳಲ್ಲಿಯೂ ಶಿವನೇ ತುಂಬಿದರೆ ನಾನು ಭ್ರಮರದಂತೆ ನಿಮ್ಮ ಚರಣಕಮಲದಲ್ಲಿ ತುಂಬಿ ಬಾಳುವೆನೆನ್ನುವ ಮಾತು ಧಾರಣ ತತ್ತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಬಾಹ್ಯ ವ್ಯವಹಾರವು ಈ ರೀತಿಯಾದರೆ ಅಂತರಂಗದಲ್ಲೂ ಪ್ರಾಣ-ಭಾವಲಿಂಗಗಳು ಭರಿತವಾಗುವವು.

  ಸಮಾಧಿಯೋಗದ ನಿರಸನ

ಸುಸಮಾಧಿಯೋಗ ತಾ | ಮಸವೆಂದು ತೊಲಗಿಸುತ

 ಅಸಮ ಲಿಂಗದೊಳು-ಅಸುವಳಿದೊಡೈಕ್ಯವೆಂ-

ದುಸುರಿದೈ ಗುರುವೆ ಕೃಪೆಯಾಗು       ||೧೦೦||

ಅಷ್ಟಾಂಗಯೋಗದ ಅಂತಿಮ ಸಾಧನವೇ ಸಮಾಧಿಯು. ಇಲ್ಲಿ ಧ್ಯಾನ-ಧ್ಯಾತ್ಮ ಧೈಯಗಳು ಏಕಾಕಾರವಾಗುವವು. ಧೈಯವಸ್ತುವೇ ತಾನಾಗುವದೇ ಸಮಾಧಿಯ  ಮುಖ್ಯಗುರಿ.  ಧ್ಯಾನಗೈಯುವವನು, ಧ್ಯಾನವು, ಒಂದಾಗುವದು ಸಮಾಧಿಯಾಗು ವದು. ಚಿತ್ತದ ವಿಕ್ಷೇಪ (ಚಂಚಲವೃತ್ತಿ) ಗಳು ಇಲ್ಲಿ ಉಳಿದಿರುವುದಿಲ್ಲ. ಧಾರಣ ಮಾಡಿದ ಧೈಯವೇ ತಾನಾಗುವಾಗ ಬಾಹ್ಯ ವೃತ್ತಿಗಳು ಬಯಲಾಗುತ್ತವೆ.

‘ಸಮಾಧಿ’ ಶಬ್ದದ ವ್ಯುತ್ಪತ್ತಿ ಲಭ್ಯವಾದ ಅರ್ಥವಾದರೂ ಕೂಡುವದು, ಅಥವಾ ಏಕರೂಪವಾಗುವದು-

ಸಮ್ಯಗಾಧೀಯತೇ ಏಕಾಗ್ರೀಕ್ರಿಯತೇ

ವಿಕ್ಷೇಪಾನ್ ಪರಿಹೃತ್ಯ ಮನೋ ಯತ್ರ ಸ ಸಮಾಧಿಃ”

 ವಿಕ್ಷೇಪಗಳನ್ನು ತಡೆದು ಚಿತ್ತವನ್ನು ಏಕಾಗ್ರಗೊಳಿಸುವದು. ಧ್ಯಾನಾವಸ್ಥೆಯಲ್ಲಿ ಧ್ಯಾನ-ಧೈಯವಸ್ತು ಮತ್ತು ಧ್ಯಾನಮಾಡುವವ ಇವುಗಳು ಭಿನ್ನ ಭಿನ್ನವಾಗಿ ಪ್ರತೀತವಾಗುತ್ತವೆ. ಆದರೆ ಸಮಾಧಿಯಲ್ಲಿ ಧೈಯ ವಸ್ತುವು ಮಾತ್ರ ಉಳಿಯುತ್ತದೆ. ಯೋಗದರ್ಶನದಲ್ಲಿ(ಮೂರನೆಯಪಾದ ೩ನೇ ಸೂತ್ರ).

ತದೇವಾರ್ಥಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಮಿವ ಸಮಾಧಿ: ೩||

ಅದೇ ಧ್ಯಾನವೃತ್ತಿಗೆ ಕೇವಲ ಧ್ಯೇಯವೊಂದೇ ಭಾಸವಾದಾಗ ಸ್ವರೂಪ ಶೂನ್ಯದಂತಾಗುವದೇ ಸಮಾಧಿ ಎಂದು ಪ್ರತಿಪಾದಿಸಿದೆ. ಈ ಸಮಾಧಿಯು ಎರಡು ತೆರನಾಗುತ್ತದೆ. ಸದಾನಂದ ಯೋಗಿಯು ವೇದಾಂತಸಾರ’ದಲ್ಲಿ

ಸಮಾಧಿರ್ದ್ವಿವಿಧಃ ಸವಿಕಲ್ಪೋ ನಿರ್ವಿಕಲ್ಪ ಕಶ್ಚಿತಿ”

ಸವಿಕಲ್ಪಕ ನಿರ್ವಿಕಲ್ಪಕಗಳೆಂದು ಸಮಾಧಿಯನ್ನು ವಿಭಾಗಮಾಡಿಸಿದ್ದಾನೆ. ಇವನ್ನೇ ಯೋಗದರ್ಶನಕಾರರು- “ಸಂಪ್ರಜ್ಞಾತ ಸಮಾಧಿ, ಅಸಂಪ್ರಜ್ಞಾತ ಸಮಾಧಿ” ಎಂದು ಕರೆದಿರುವರು. ಉದಾಹರಣೆಗಾಗಿ ಬೆಂಕಿಯನ್ನು ತಕ್ಕೊಳ್ಳಬಹುದು. ಬೆಂಕಿಯು ಕಟ್ಟಿಗೆಯ ತುಂಡುಗಳನ್ನು ಸುಟ್ಟು ತನ್ನಂತಾದ ಮೇಲೂ ಎಷ್ಟೋ ಹೊತ್ತು ಉರಿಯುತ್ತದೆ. ಹಾಗೆ ಸಂಪ್ರಜ್ಞಾತ ಸಮಾಧಿಯಲ್ಲಿ ಧ್ಯಾನ ಧ್ಯಾತ್ಮ, ಧ್ಯೇಯಗಳು ಅಡಗಿ ಕೇವಲ ಧ್ಯೇಯವಾಗಿರುತ್ತಾನೆ. ಅಗ್ನಿಯು ಉರಿದು ಕೊನೆಗೆ ತಾನೂ ಶಾಂತವಾಗುವಂತೆ ಸಮಾಧಿಸ್ಥಿತಿಯಲ್ಲಿ ಧ್ಯೇಯವೂ ಅಡಗಿ ಹೋಗುವದನ್ನೇ ಅಸಂಪ್ರಜ್ಞಾತ ಸಮಾಧಿಯೆಂದು ಕರೆದಿರುವರು.

ಸಮಾಧಿಸ್ಥಿತಿಯಲ್ಲಿಯೂ ಧ್ಯೇಯದ ಅರ್ಥಪ್ರತ್ಯಯವಿರುವದರಿಂದ ಇದು ಪೂರ್ಣವಾದ ಸಮರಸವಲ್ಲವೆಂದು ಶರಣರು ಅದನ್ನು ತಾಮಸವೆಂದು ಕರೆದರು. ಸಮಾಧಿಸ್ಥಿತಿಯಲ್ಲಿ ಯಾವುದೂ ಇರಬಾರದು. ಅಲ್ಲಿ ವಿಚಾರಸುಳಿದರೆ ತನ್ನ ಜೀವಜ್ಞಾನ ಉಳಿದಿರುವದು. ಆದರೆ ಲಿಂಗಾಂಗಯೋಗದಲ್ಲಿ ಪ್ರಾಣವೂ ಲಿಂಗವಾಗಿ ಭಾವದಲ್ಲಿ ಬೆರೆಯುವವನೇ ಐಕ್ಯನು. ಲಿಂಗಭಕ್ತನು ನಿತ್ಯಜೀವನದಲ್ಲಿ ಸಂಸಾರ ಹೊಂದಿದ್ದರೂ ಐಕ್ಯ ಸ್ಥಿತಿಗೇರಬಲ್ಲನು. ಕಮಲದ ಎಲೆಯು ನೀರಿನಲ್ಲಿದ್ದರೂ ನೀರಿನ ಲೇಪವಿಲ್ಲದಂತೆ

ಶರಣನು ಸಂಸಾರಿಯಾದರೂ ಸಂಸಾರ ಲೇಪವಿಲ್ಲದಂತಿರುವನು. ಸರ್ಪಭೂಷಣ ಶಿವಯೋಗಿಗಳು-

ಯಾವ ಕೃತ್ಯದೊಳಿರುತಿರ್ದ್ದರು ಶಿವಯೋಗಿ

ಭಾವದೊಳಗೆ ಬ್ರಹ್ಮವನು ಬಿಡದಿಹನು

ಹೊರಗೆ ಸಕಲ ಲೋಕ ವ್ಯವಹಾರದೊಳಗಿರ್ದು         || ||

ಗುರುಸಿದ್ದನನು ಸಂಧಾನದೆ ಬೆರೆದಿಹನು

ಶಿವಯೋಗಿಯಾದವನು ಯಾವ ಲೌಕಿಕ ಕೆಲಸದೊಳಗೆ ತೊಡಗಿದ್ದರೂ ತನ್ನ ಭಾವದಲ್ಲಿ ಶಿವನನ್ನು ಧ್ಯಾನಿಸದೇ ಬಿಡನು. ಲೋಕವ್ಯವಹಾರಗಳಲ್ಲಿಯೂ ಗುರುಸಿದ್ಧನಾದ ಪರಶಿವಲಿಂಗನ ಅನುಸಂಧಾನದಲ್ಲಿಯೇ ಬೆರೆದಿರುವನು. ಎಂದು ಐಕ್ಯಸ್ಥಿತಿಯಲ್ಲಿರುವ ಶಿವಯೋಗಿಯ ಸ್ವರೂಪವನ್ನು ವರ್ಣಿಸಿರುವರು.

 ಯೋಗಿಯು ಸಂಸಾರ ಭಾವವನ್ನು ತುಚ್ಛವೆಂದು ತ್ಯಜಿಸಿ ಮೌನಧ್ಯಾನದಲ್ಲಿ ನಿರ್ಗುಣ ಬ್ರಹ್ಮವನ್ನು ಧಾರಣ ಮಾಡಿ ಸಮಾಧಿ ಹೊಂದುವದು ತಾಮಸ ಗುಣ (ಅಜ್ಞಾನ) ಎಂದು, ಇಂಥ ಸಮಾಧಿಯೋಗವನ್ನು ಬಿಡಿಸಿ ಗುರುವು ಅಸಮ ಅನುಪಮವೆನಿಸಿದ ತನ್ನ ಕರದಿಷ್ಟದ ಮಹಾಲಿಂಗದಲ್ಲಿ ಪ್ರಾಣವು-ಭಾವವು ಏಕಾಕಾರವಾಗುವದೇ ಐಕ್ಯಸ್ಥಿತಿಯೆಂದು ಬೋಧಿಸುತ್ತಾನೆ. ಐಕ್ಯನಲ್ಲಿ ಅರ್ಥ-ಪ್ರಾಣ- ಅಭಿಮಾನಗಳು ಅಡಗಿ ತೋರದಂತಾಗಿರುತ್ತವೆ. ಅಂತೆಯೇ ಹಡಪದಪ್ಪಣ್ಣನು ಕೂಡಲಸಂಗಮನಲ್ಲಿ ಬಸವಣ್ಣನವರು ಐಕ್ಯವಾಗುವ ಸಂದೇಶವನ್ನು ತಿಳಿಸಿದಾಕ್ಷಣ ನೀಲಮ್ಮನವರು-“ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವನ್ನು ಅಳಿದು ತಮ್ಮ ಕರದಿಷ್ಟ ಲಿಂಗದಲ್ಲಿ ಬೆರೆದು ಐಕ್ಯರಾಗುವ ಕಥಾನಕ’ ಅನುಭವಪೂರ್ಣವಾಗಿದೆ. ಈ ರೀತಿಯಾದ ಶಿವಯೋಗವು ಸಹಜಯೋಗ. ಅಷ್ಟಾಂಗಯೋಗವು ಶಿವಯೋಗದಂತೆ ಸಹಜವೆನಿಸದು. ಅದುಕಾರಣ ಅದು ಅಸಹಜವೆನಿಸುತ್ತದೆ. ಅಸಹಜತೆಯಲ್ಲಿ ತಾಮಸಗುಣ ವ್ಯಕ್ತವಾಗುವದರಿಂದ ಅದನ್ನು ತಾಮಸವೆಂದರು. ಇಂಥ ತಾಮಸಮಯವಾದ ಸಮಾಧಿಯೋಗವನ್ನು ತೊಲಗಿಸಿ ಲಿಂಗಾಂಗ ಸಾಮರಸ್ಯದ ಸವಿಯನ್ನು ಸವಿಯುವಂತೆ ಗುರುವರನು ಕರುಣಿಸುತ್ತಾನೆ. ಲಿಂಗೈಕ್ಯನಾಗುವ ಗುರಿಯನ್ನು ತೋರಿಸಿ ಕೊಡುತ್ತಾನೆ. ಐಕ್ಯಸ್ಥಲದ ವಿಚಾರ ಮುಂದೆ ಬರುವದರಿಂದ ಇಲ್ಲಿ ವಿಸ್ತಾರಗೊಳಿಸುವ ಅವಶ್ಯಕತೆಯಿಲ್ಲ.

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಶ್ರೀಮ. ನಿ.ಪ್ರ. ಶ್ರೀ ಶಿವಬಸವಸ್ವಾಮಿಗಳು ಹೊಸಮಠ,

ಅಕ್ಕಿಹೊಂಡ, ಹುಬ್ಬಳ್ಳಿ

ಹನ್ನೆರಡನೆಯ ಶತಮಾನವು ವೀರಶೈವರ ಕ್ರಾಂತಿಯ ಕಾಲ. ವೀರಶೈವವನ್ನು ಅಂಗೀಕರಿಸಿದ ಅನೇಕರು ಈ ಕಾಲದಲ್ಲಿ ಈ ಮಾರ್ಗವನ್ನು ಹಿಡಿದು ಮಹಾಮಹಿಮರೆನಿಸಿದ್ದಾರೆ. ಅವರು ಶರಣರೆಂದು ಪ್ರಮಥರೆಂದೂ ಪ್ರಸಿದ್ಧಿ ಪಡೆದಿರುವರು. ಪ್ರಮಥ ಎಂಬುದು ಅಲೌಕಿಕ ಪದವಿ. ಈ ಪದವಿಯನ್ನು ಪಡೆದವರಿಗೆಲ್ಲ ಶ್ರೀ ಬಸವೇಶ್ವರರು ಪ್ರಮುಖರು. ಅಂತೆಯೇ ಬಸವಾದಿ ಪ್ರಮಥರು ಎಂದು ಕರೆಯುವ ರೂಢಿ ಬಂದಿದೆ.

ಶ್ರೀ ಚನ್ನಬಸವೇಶ್ವರರೂ ಪ್ರಮಥರಲ್ಲಿ ಮುಂದುವರೆದವರೇ ಆಗಿದ್ದರು. ಬಸವೇಶ್ವರರು ದಂಡನಾಯಕರೆನಿಸಿದ್ದರೆ, ಚನ್ನಬಸವೇಶ್ವರರು ಚಿಕ್ಕದಂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರು ಷಟ್‌ಸ್ಥಲ ಚಕ್ರವರ್ತಿಗಳೂ ಆಗಿದ್ದಾರೆ. ಆದುದರಿಂದಲೆ ಅನುಭವ ಮಂಟಪದ ಮಹಾಸಭೆಯಲ್ಲಿ ಚನ್ನಬಸವೇಶ್ವರರ ಸ್ಥಾನ ಇನ್ನೂ ಹಿರಿದು. ಇವರು ಅನೇಕ-ಸಲ ಬಸವೇಶ್ವರರಿಗೂ ಹಿತನುಡಿಗಳನ್ನು ತಿಳಿಸಿ ಎಚ್ಚರಿಸಿದ್ದಾರೆ. ಅಂತೆಯೇ ಇವರು ಲೌಕಿಕ-ಪಾರಮಾರ್ಥಿಕಗಳೆರಡರಲ್ಲಿಯೂ ಮುಂದುವರೆದು ಮಹಾಮುತ್ಸದ್ದಿಗಳೂ, ಮೇಧಾವಿಗಳೂ, ಆಗಿದ್ದಾರೆ. ಈ ಚನ್ನಬಸವೇಶ್ವರರು ಜನನದ ಬಗ್ಗೆ ಈಗೀಗ ಅಪಸ್ವರಗಳು ಕೇಳಿಬರಹತ್ತಿದೆ. ಈ ಅಪಸ್ವರಗಳು ಸಮಾಜದಲ್ಲಿಯ ಜನರ ಮನಸ್ಸುಗಳನ್ನು ಕದಡಿವೆ.

ಚನ್ನಬಸವೇಶ್ವರರು ಪ್ರಸಾದದಿಂದ ಜನಿಸಿದರು ಎಂದು ಒಬ್ಬ ಕವಿಗಳು ತಿಳಿಸಿದ್ದರೆ, ಕಕ್ಕಯ್ಯನವರ ಪ್ರಸಾದದಿಂದ ಜನಿಸಿದರೆಂದು ಇನ್ನು ಕೆಲವರು ತಿಳಿಸುತ್ತಾರೆ. ಶಿವಪ್ರಸಾದದಿಂದ ಜನಿಸಿದರೆಂದು ವಿರೂಪಾಕ್ಷ ಪಂಡಿತರು ತಿಳಿಸುತ್ತಾರೆ. ಅಂತು

ಇವರೆಲ್ಲರ ಅಭಿಪ್ರಾಯಗಳೂ ಚನ್ನಬಸವೇಶ್ವರರ ಜನನವು ಪ್ರಸಾದದಿಂದ ಆಯಿತೆಂದು ಇರುತ್ತವೆ. ಆದರೆ ಸಿಂಗಿರಾಜನು ಮಾತ್ರ ಚನ್ನ ಬಸವೇಶ್ವರರು ಶಿವದೇವನ ಮಗನೆಂದು ತಿಳಿಸಿದ್ದಾರೆ. ಕರ್ನಾಟಕ ಕವಿಚರಿತೆಯ ಅಭಿಪ್ರಾಯದ ಪ್ರಕಾರ ಇವರೆಲ್ಲ ಹದಿನೈದು, ಹದಿನಾರು, ಹದಿನೇಳನೆಯ ಶತಮಾನದವರಾಗಿದ್ದಾರೆ. ಹನ್ನೆರಡನೆಯ ಶತಮಾನದ  ಸ೦ಗತಿಯನ್ನು ಮೂರ್ನಾಲ್ಕೈದು ನೂರು ವರ್ಷಗಳ ನಂತರ ತಿಳಿಸುವಾಗ ನಾಲಿಗೆಯಿಂದ ನಾಲಿಗೆಗೆ ಸೇರಿ ಕಿವಿಯಿಂದ ಕಿವಿಗಳಿಗೆ ತಲ್ಪುವಾಗ ಅನೇಕ ವ್ಯತ್ಯಾಸಗಳು ಆಗುವ ಸಂಭವವು ಸಹಜವಾದುದು.

ಇಂಗಳೇಶ್ವರ ಬಾಗೇವಾಡಿಯ ನಾಡಿನ ಮಾದರಸ ಮಾದಲಾಂಬಿಕೆ ಎಂಬ ದಂಪತಿಗಳಿಗೆ ಅನೇಕ ವರುಷಗಳ ವರೆಗೆ ಮಕ್ಕಳಾಗದಿರಲು ಇವರು ಕಂದನನ್ನು ಪಡೆಯಲು ನಂದೀಶ್ವರ ವ್ರತವನ್ನಾಚರಿಸಿದರು. ಈ ಸಮಯದಲ್ಲಿ ವೀರಶೈವದ ಮೇಲೆ

ಬೇರೆಯವರ ಅಘಾತದಿಂದ ಕೆಟ್ಟ ಪರಿಣಾಮವು ಆಗುತ್ತಲಿತ್ತು ಇದನ್ನು ಸರಿಪಡಿಸುವ ಸಲುವಾಗಿ ಒಬ್ಬ ಮಹಾವಿಭೂತಿಯ ಉದಯವು ಆಗಬೇಕಾದ ಅವಶ್ಯಕತೆಯೂ ಬಹಳವಾಗಿತ್ತು. ಅಂತೆಯೇ ಶಿವಮತದ ಮೇಲೆ ಆಗುತ್ತಿರುವ ಅಘಾತವನ್ನು ನಿವಾರಣೆಮಾಡಲು ಈ ದಂಪತಿಗಳು ನಡೆಸುತ್ತಿರುವ ನಂದಿ ವ್ರತದ ಫಲವಾಗಿ ಶಿವನ ಅಪ್ಪಣೆಯಿಂದ ನಂದಿಕೇಶ್ವರನು ಇವರ ಮಗುವಾಗಿ ಜನಿಸಿದನು. ಮುಂದೆ ಈ ಮಗುವಿಗೆ ಬಸವೇಶ್ವರ ಎಂಬ ಹೆಸರು ಬಂದಿದೆ. ಈ ಬಸವೇಶ್ವರರಿಗೆ ನಾಗಮ್ಮ ಎಂಬ ಅಕ್ಕನೂ ಇದ್ದಾಳೆ. ಇವಳಿಗೆ ಅಕ್ಕನಾಗಮ್ಮ ಎಂಬ ಹೆಸರು ರೂಢವಾಗಿ ಬಂದಿದೆ.

 ಬಸವೇಶ್ವರರು ಎಂಟನೆಯ ವರ್ಷದವರಾದರು. ಆಗ ಅವರ ತಂದೆ ಅವರ ವಂಶಪರಂಪರೆಯ ಸಾಂಪ್ರದಾಯಕ-ಧಾರ್ಮಿಕ-ಸಂಸ್ಕಾರವಾದ ಉಪನಯನವನ್ನು ಮಾಡಿಸಬೇಕಾಯಿತು. ಬಸವೇಶ್ವರರಿಗೆ ಇದು ಒಪ್ಪಿತವಾಗಲಿಲ್ಲ ಕೇವಲ ಬ್ರಾಹ್ಮಣ್ಯವನ್ನುಂಟು ಮಾಡುವ ಈ ಸಂಸ್ಕಾರಕ್ಕಿಂತ ಮಾನವನನ್ನು ಮಾನವ ಧರ್ಮದ ಕಡೆಗೆ ಕರೆದೊಯ್ಯುವ ವಿಧಾಯಕ ಕ್ರಿಯೆಗಳನ್ನು ಹೊಂದಿದ ಯಾವುದಾದರೂ ಹೆದ್ದಾರಿಯಿರುವುದೇ ? ಎಂಬ ವಿಚಾರಮಾಡಿ ಈ ಹೆದ್ದಾರಿಯನ್ನು ಹಿಡಿಯಬೇಕೆಂಬ ಯೋಚನೆಯನ್ನು ಮಾಡಿದರು. ಈ ಬಗ್ಗೆ ತಂದೆ ಮಕ್ಕಳ ನಡುವೆ ವಿವಾದವೂ ಆಯಿತು. ಕೊನೆಗೆ ಬಸವೇಶ್ವರರು ತತ್ವದ ಸಲುವಾಗಿ ತಂದೆಯನ್ನಗಲುವ ಪ್ರಸಂಗವೂ ಪ್ರಾಪ್ತವಾಯಿತು. ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿರುವಾಗ ತಮ್ಮ ಸಮೀಪದಲ್ಲಿಯೇ ಪ್ರಸಿದ್ಧಿ ಪಡೆದ ಕೂಡಲಸಂಗಮ ಕ್ಷೇತ್ರದಲ್ಲಿರುವ ಅಧ್ಯಾತ್ಮಿಕ ಕೇಂದ್ರಕ್ಕೆ ಹೊರಡುವ ನಿರ್ಧಾರಮಾಡಿದರು. ಈ ನಿರ್ಧಾರವನ್ನು ತನ್ನ ಅಕ್ಕನಾದ ನಾಗಮ್ಮನಿಗೂ ತಿಳಿಸಿದರು. ನಾಗಮ್ಮನವರು ಇದಕ್ಕೊಪ್ಪಿದರಲ್ಲದೆ ತಾವು ಸಹ ತಮ್ಮನ ಸಂಗಡ ಹೊರಡಲು ತಯಾರಾದರು. ಮಾನವನು ಬ್ರಾಹ್ಮಣನಾಗಿ ಬ್ರಹ್ಮಜ್ಞಾನಮಾಡಿಕೊಳ್ಳುವದಷ್ಟೇ ಮಾನವಧರ್ಮವಲ್ಲ, ಆ ಜ್ಞಾನವನ್ನು ಕ್ರಿಯೆಯಲ್ಲಿ ತಂದು ದೇವರ ಲೋಕಕ್ಕೆ ಹೋಗಬೇಕು. ದೇವರ ಬಳಿಯಲ್ಲಿರಬೇಕು. ದೇವರ ರೂಪವನ್ನು ಹೊಂದಬೇಕು, ದೇವರೊಡನೆ ಹೊಂದಿಕೊಳ್ಳಬೇಕು, ಕೊನೆಗೆ ದೇವನೇ ತಾನಾಗಬೇಕು. ಇದುವೆ ಮಾನವಧರ್ಮ ಎಂದು ಪ್ರತಿಪಾದಿಸುತ್ತ ಲಿಂಗಭೇದವಿಲ್ಲದೆ ಸ್ತ್ರೀಯರೂ ಈ ದಾರಿಯನ್ನು ಹಿಡಿಯಲು ಬರುತ್ತದೆ. ಎಂದು ತಿಳಿಸುತ್ತಿರುವ ತಮ್ಮನ ಪ್ರತಿಪಾದನೆಯಿಂದ ಅಕ್ಕನು ಪ್ರಭಾವಿತಳಾದುದು ಸಹಜವೇ ಆಗಿದೆ. ಅಂತೆಯೇ ಅವಳು ತಂದೆ ತಾಯಿಗಳನ್ನಗಲುವ  ಸಾಹಸಕ್ಕೆ ಮುಂದಾದಳು. ಅಲ್ಲದೆ ಅವಳು ಇವರಲ್ಲಿಯೇ ಮದುವೆಯಾಗಿ ಕೂಸುಳ್ಳವಳಾಗಲಿ ಗರ್ಭವತಿಯಾಗಲಿ ಇರಬಹುದಾಗಿದೆ. ಸಂಸಾರ ಭ್ರಾಂತಿಯಿಲ್ಲದ ಪತಿದೇವನಾದ ಶಿವಸ್ವಾಮಿ ಇದ್ದುದರಿಂದಲೂ ಅವಳ ಅಧ್ಯಾತ್ಮಜೀವನವನ್ನು ಸಾಗಿಸಲು  ಪ್ರೇರಕವಾಗಿದೆಯೆನ್ನುಬಹುದು.

ಕೂಡಲಸಂಗಮಕ್ಷೇತ್ರಕ್ಕೆ ತಲುಪಿದ ಈ ಅಕ್ಕತಮ್ಮಂದಿರು ಆಗ ಅಲ್ಲಿ ಪ್ರಸಿದ್ಧವಾಗಿರುವ ಮಠಕ್ಕೆ ಬಂದರು. ಅಲ್ಲಿ ಜಾತವೇದರೆಂಬ ಗುರುಗಳು ಇದ್ದರು. ಇವರು ಮುಮುಕ್ಷುಗಳಿಗೆ ಮಾನವಧರ್ಮವನ್ನು ಬೋಧಿಸುತ್ತಿದ್ದರು. ಅನೇಕ ಜನ್ಮಗಳನ್ನು ಕಳೆದು ಅವುಗಳಲ್ಲಿ ಮಾಡಿದ ಪುಣ್ಯವಿಶೇಷದಿಂದ ಈಗ ಮಾನವನಾದವನು ಕೇವಲ ಮಾನವನಾಗಿಯೇ ಉಳಿಯಬಾರದು. ಹೀಗೆ ಉಳಿದರೆ ಇವನಿಗೆ ಈ ಜನನ ಮರಣರೂಪವಾದ ಭವರೋಗವು ತಪ್ಪುವುದಿಲ್ಲ. ಮಾನವನು ತನಗೆ ದೊರೆತ ಈ ಶರೀರವನ್ನು ಲಿಂಗವನ್ನಾಗಿ ಮಾಡಿಕೊಳ್ಳಬೇಕು. ಈ ಅಂಗವು ಸಾಧನೆಯಿಂದ ಲಿಂಗವಾಗುವದು. ಹೀಗೆ ಲಿಂಗವಾಗುವುದೇ ಮೋಕ್ಷ ಎಂದು ಅವರು ಮುಮುಕ್ಷುಗಳಾದ ಭಕ್ತಿ-ಭಾವುಕರಿಗೆ ಬೋಧಿಸುತ್ತಿದ್ದರು. ಲಿಂಗವೆಂದರೇ ಶಿವ. ಈ ಶಿವನನ್ನು ಅನುಭವದಿಂದ ಅರಿಯುವದೇ ಶಿವಾನುಭವ. ಈ ಶಿವಾನುಭವ ಸಾಧನೆಯಿಂದಲೇ ಮೋಕ್ಷ ಸಾಧ್ಯ ಇಲ್ಲವಾದರೆ ಇಲ್ಲ. ಇದನ್ನು ಸಾಧಿಸಿದವರಿಗೆ ಪುನರ್ಜನ್ಮವೆಂಬ ಭವರೋಗವು ಸೋಂಕುವುದಿಲ್ಲ ಎಂದು ಶಿವಾನುಭವವನ್ನು ಗುರುಗಳು ಅವರಿಗೆಲ್ಲ ತಿಳಿಸುತ್ತಿದ್ದರು.

 ಬಸವೇಶ್ವರರು ಕುಶಾಗ್ರಮತಿಗಳು, ಶ್ರೀಗುರುಗಳು ಬೋಧಿಸುತ್ತಿರುವ ಸಂಗತಿಗಳನ್ನೆಲ್ಲ ಗ್ರಹಿಸಿದರು. ಶರೀರವು ಸ್ಥೂಲವಾಗಲಿ, ಸೂಕ್ಷ್ಮವಾಗಲಿ, ಕಾರಣವೇ ಆಗಲಿ; ಅದು ಶರೀರವೇ. ಶರೀರವೆಂದರೆ ಹಳೆಯ ಅ೦ಗಿಯಂತೆ ಹರಿದುಹೋಗುವದೇ ಆಗ ಹೊಸ

ಅಂಗಿಯನ್ನು ತರಿಸಿ ತೊಡುವಂತೆ ಮತ್ತೊಂದು ಶರೀರವು ಬರಲೇಬೇಕು. ಮತ್ತೆ ಕಳೆಯಬೇಕು. ಮತ್ತೆ ಹೊಸದನ್ನು ತರಬೇಕು. ಈ ಕ್ರಮದಿಂದ ಶರೀರವು ಇರುವವರೆಗೂ ಅದಕ್ಕೆ ಜನನ ಮರಣಗಳು ತಪ್ಪಲಾರವು. ಆದುದರಿಂದ ಈ ಶರೀರಗಳನ್ನು ಲಿಂಗ

ಸಂಬಂಧದಿಂದ ಅಂಗಗಳನ್ನಾಗಿ ಮಾರ್ಪಡಿಸಬೇಕು. ಈ ಅಂಗಗಳು ಅಂಗತನವನ್ನು ಮೀರಿ ಲಿಂಗತನವನ್ನು ಸಂಪಾದಿಸಬೇಕು. ಮುಂದೆ ಈ ಅಂಗಲಿಂಗವೆಂಬ ಜ್ಞಾನವು ಸಹ ಶೂನ್ಯವಾಗಬೇಕು. ಎಂಬ ಉಪದೇಶವನ್ನು ಸಾಧನ ಮಾರ್ಗದಿಂದ ಸಿದ್ಧಿಯನ್ನು ಪಡೆದರು. ಈ ಬಗೆಯ ಶಿವಾನುಭವದ ಅಭ್ಯಾಸವನ್ನು ಮಾಡಿಮುಗಿಸಲು ಅವರಿಗೆ ಹನ್ನೆರಡು ವರ್ಷಗಳೂ ನಂತರ ಅದರ ಸಿದ್ಧಿಯನ್ನು ಪಡೆಯಲು ಆರು ವರ್ಷಗಳೂ ಕಳೆದಿರಬೇಕು. ಉಪನಯನವನ್ನು ತೊರೆದು ಬಂದ ಇವರಿಗೆ ಇಷ್ಟು ಅವಧಿಯನ್ನು ಕಳೆದ ಮೇಲೆ ಶ್ರೀ ಬಸವೇಶ್ವರರಿಗೆ ಇಪ್ಪತ್ತೈದು ವರ್ಷಗಳು ಆಗಿರಬೇಕಾಗುತ್ತದೆ. ಕೂಡಲ ಸಂಗಮ ಕ್ಷೇತ್ರದಲ್ಲಿ ಅವರು ತಮ್ಮ ಸಾಧನೆಯನ್ನು ಸಾಗಿಸಿ ಸಿದ್ಧಿ ಪಡೆದ ಸಲುವಾಗಿ ತಮ್ಮ ಅಂಗಯ್ಯಲ್ಲಿಯ ಲಿಂಗದೇವನಿಗೆ ಕೂಡಲಸಂಗಯ್ಯನೆಂದು ಕರೆದಿರುವದನ್ನು ಅವರ ವಚನಗಳಲ್ಲಿರುವ ಮುದ್ರಿಕೆಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದೇವೆ.

 ಅಕ್ಕನಾಗಮ್ಮ ಶಿವದೇವ ದಂಪತಿಗಳ ಮಗುವಾದ ಚನ್ನಬಸವೇಶ್ವರರು ಸಹ ಈಗ ಈ ಮಹಾನುಭಾವಿಗಳಾದ ಬಸವೇಶ್ವರರ ಜೊತೆಗೆ ಇರಬೇಕು. ಅಂತೆಯೇ ಚನ್ನಬಸವೇಶ್ವರರು ಸಹ ಈ ಕೂಡಲ ಸಂಗಮನಾಥನ ಹೆಸರನ್ನೇ ನಡುವೆ ಚನ್ನ’ ಎಂದು ಸೇರಿಸಿ ‘ಕೂಡಲಚನ್ನಸಂಗಮದೇವ’ ಎಂದು ತಮ್ಮ ಲಿಂಗದೇವನಿಗೆ ಹೆಸರಿಸಿದ್ದಾರೆ. ಸಂಗಮನಾಥನ ಸ್ಥಲದ ಪ್ರಭಾವವು ಬಸವೇಶ್ವರರ ಮೇಲೆ ಪರಿಣಮಿಸಿದಂತೆ ಚನ್ನಬಸವೇಶ್ವರರ ಮೇಲೆಯೂ ಪರಿಣಮಿಸಿರಬೇಕು ಎಂಬುದನ್ನು ಇವರ ಈ ವಚನ ಮುದ್ರಿಕೆಗಳು ತಿಳಿಸುತ್ತವೆ.   

 ಬಸವೇಶ್ವರರು ಹಾಗೂ ಚನ್ನಬಸವೇಶ್ವರರು ಇಬ್ಬರೂ ಕೂಡಲ ಸಂಗಮದ ಪರಿಸರದಲ್ಲಿ ವ್ಯಾಸಂಗ ಮಾಡುತ್ತ ಸಾಧನೆಯ ಮಾರ್ಗದಲ್ಲಿದ್ದರೆಂಬುದನ್ನು ನಾವು ಗ್ರಹಿಸಿದ ಬಳಿಕ ಕಲ್ಯಾಣದಲ್ಲಿ ನಡೆಯಿತೆಂದು ತಿಳಿಸುವ ಕಕ್ಕಯ್ಯನವರ ಪ್ರಸಾದದಿಂದ ಆದ

ಚನ್ನಬಸವೇಶ್ವರರ ಜನನಕ್ಕೂ ಈ ಕೂಡಲ ಸಂಗಮದಲ್ಲಿ ಇವರು ವಾಸ ಮಾಡಿದ ಸಂಗತಿಗೂ ಸಂಬಂಧವು ಬರುವುದೇ ಇಲ್ಲ, ಏಕೆಂದರೆ ಕೂಡಲಸಂಗಮದಲ್ಲಿ ವಾಸ ಮಾಡಿ ಪ್ರಸಿದ್ಧಿಯನ್ನು ಪಡೆದ ನಂತರವೇ ಇವರು ಕಲ್ಯಾಣದ ಕಡೆಗೆ ಹೋದರು ಎಂಬುದು ಎಲ್ಲರೂ ಅರಿತ ಸಂಗತಿಯಾಗಿದೆ. ಅಂದ ಬಳಿಕ ಕಕ್ಕಯ್ಯನವರ ಪ್ರಸಾದದಿಂದ ಚನ್ನಬಸವೇಶ್ವರರ ಜನನವಾಯಿತೆಂಬ ಮಾತಿಗೆ ಪುಷ್ಟಿ ದೊರೆಯಲಾರದು.

 ಗಂಡು-ಹೆಣ್ಣುಗಳೆರಡೂ ಸೇರಿದಾಗ ಈ ಎರಡು ಶಕ್ತಿಗಳಿಂದ ಮಗುವು ಜನಿಸುತ್ತಿದೆ ಎಂಬ ಸಂಗತಿಯನ್ನು ಜಗತ್ತಿನಲ್ಲಿರುವ ಸಾಮಾನ್ಯರೂ ಅರಿತಿದ್ದಾರೆ. ಈ ಮಾತನ್ನು ನಮ್ಮ ಶರಣರು ಸಹ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ” ಎಂದು ತಿಳಿಸಿದ್ದಾರೆ. ಹೀಗಿದ್ದು ಚನ್ನಬಸವೇಶ್ವರರು ಜನನವಾದ ಬಗ್ಗೆ ತಿಳಿಸುತ್ತಿರುವ ಈ ಸಂಗತಿಗಳು ವ್ಯತ್ಯಾಸಗೊಂಡಿರಬಹುದೆಂದು ಸ್ಪಷ್ಟವೇ ಇದೆ. ಚನ್ನಬಸವೇಶ್ವರರು ಕಲ್ಯಾಣದಲ್ಲಿ ಶರಣರೊಳಗೆಲ್ಲ ಜ್ಞಾನನಿಧಿಯಾದ ಮಹಿಮಾ ಶಾಲಿಗಳಾಗಿದ್ದಾರೆ. ತಂದೆಯು ಚಿಕ್ಕಂದಿನಲ್ಲಿ ತೀರಿ ಹೋದುದರಿಂದ ಅವರ ಹೆಸರು ಪ್ರಸಿದ್ಧವಾಗಿಲ್ಲವಾದುದರಿಂದಲೂ ಚನ್ನಬಸವೇಶ್ವರರ ಮಹಿಮೆ ಘನವಾಗಿ ಕಂಡ ಕಾರಣದಿಂದಲೂ ಈ ಸಂಗತಿಯು ನಡೆದ ಮೂರುನೂರು ವರ್ಷಗಳ ನಂತರ ಇವರ ಚರಿತ್ರೆಗಳು ರಚನೆಗೊಂಡುದರಿಂದಲೂ ಇವರು ಚನ್ನಬಸವೇಶ್ವರ ಅಯೋನಿಜತನವನ್ನು ಮುಂದು ಮಾಡಿ ಅವರ ಹಿರಿಮೆ ಗರಿಮೆಗಳನ್ನು ತಿಳಿಸಲು ಮಾಡಿದ ಪ್ರಯತ್ನವಾಗಿರಬಹುದೆಂದು ಈ ಚರಿತೆಗಳಿಂದ ಅನಿಸದೆ ಇರಲಾರದು. ಆದರೆ ಶಿವಸ್ವಾಮಿಯೆಂಬ ತಂದೆಯು ಇವರಿಗಿದ್ದನೆ೦ಬ ಸಂಗತಿಯು ಎಲ್ಲರೂ ಒಪ್ಪುವ ಸಂಗತಿಯಾಗಿದೆ.

 ಚಿಕ್ಕದಣ್ಣಾಯಕರೆನಿಸಿಕೊಂಡ ಚನ್ನಬಸವೇಶ್ವರರು ಅನುಭವ ಮಂಟಪದಲ್ಲಿ ಮಹಾಜ್ಞಾನಿಗಳೆನಿಸಿ ಷಟ್‌ಸ್ಥಲಗಳ ಅರಿವನ್ನು ಸರ್ವಾತ್ಮನಾ ಹೊಂದಿದವರಾಗಿದ್ದರು. ಅಂತೆಯೇ ಅವರು ಅಲ್ಲಮಪ್ರಭುದೇವರ ತರುವಾಯ ಶೂನ್ಯ ಸಿಂಹಾಸನವನ್ನಲಂಕರಿಸಿದ ಪೀಠಾಧಿಕಾರಿಗಳಾಗಿ ಜಗದ್ಗುರು ಎಂಬ ಅತ್ಯುಚ್ಚ ಪದವಿಯನ್ನು ಪಡೆದು ಷಟ್‌ಸ್ಥಲ  ಚಕ್ರವರ್ತಿಗಳು ಎನಿಸಿದ ಸಂಗತಿಯೂ ಪ್ರಸಿದ್ಧವೆ ಇದೆ. ಹೀಗೆ ಷಟ್ ಸ್ಥಲ ಚಕ್ರವರ್ತಿಗಳಾದ ಇವರು ಗುರುಕರಸಂಜಾತರಾದುದರಿಂದಲೂ ಪೂರ್ವಾಶ್ರಯದ ನಿರಸನವಾದುದರಿಂದಲೂ, ತಂದೆಯ ಹೆಸರು ಪ್ರಸಿದ್ಧವಿಲ್ಲದುದರಿಂದಲೂ, ಚರಿತೆಕಾರರು ಇವರ ಅಯೋನಿಜತನವನ್ನು ಮೂರುನೂರು ವರ್ಷಗಳ ನಂತರ ತಿಳಿಸಿರುವದು ಒಂದು ಬಗೆಯಿಂದ ಯುಕ್ತವಾಗುತ್ತದೆ. ಈಗ ಇವರು ಗುರುಪ್ರಸಾದ, ಶಿವಪ್ರಸಾದ, ಶರಣರ ಪ್ರಸಾದ ಅ೦ದರೆ ಕಾರುಣ್ಯದಿಂದ ಈ ಬಗೆಯಾಗಿ ಷಟ್‌ಸ್ಥಲ ಚಕ್ರವರ್ತಿಗಳಾದರೆಂದು ತಿಳಿಸುವದೂ ಜನತೆ ತಿಳಿದುಕೊಳ್ಳುತ್ತಿರುವುದೂ ಸಮಂಜಸವಾಗಿದೆ.

 ಈ ಬಗೆಯಾಗಿ ಶ್ರೀ ಚನ್ನಬಸವವೇಶ್ವರರ ಚರಿತೆಯು ಸ್ಪಷ್ಟವಾಗಿರುವಾಗ ಇತಿಹಾಸ ಸಂಶೋಧನೆಯ ಬಗೆಗೆ ವ್ಯಾಸಂಗ ಮಾಡಿ ಶಾಸನಗಳ ಸಂಶೋಧಕರಾಗಿ ಮಹಾಪಾಂಡಿತ್ಯವನ್ನು ಸಂಪಾದಿಸಿದ ಮಹಾನುಭಾವರೊಬ್ಬರು ಒಂದು ತರ್ಕಬದ್ಧಊಹೆಯನ್ನೂ ಮಾಡಬಹುದು’ ಎಂಬ ಸಂಶಯದ ಕಡೆಗೇಕೆ ಕೈ ಚಾಚಿದರೋ ತಿಳಿಯದು. ಶರಣ ಮಾರ್ಗದಲ್ಲಿ ವಿಜಾತೀಯ ವಿವಾಹದಷ್ಟೇ ಏಕೆ ಬಳಿಕೆಗಳು ಇರುವದಿಲ್ಲ. ಅವರ ಬಳಕೆ ಭಕ್ತರೊಡನೆ ಅಲ್ಲದೆ ಭವಿಗಳ ಸಂಗಡ ಅಲ್ಲ, ಯಾರೇ ಇರಲಿ ಲಿಂಗವಂತಿಕೆಯನ್ನು ಪಡೆದು ಶಿವಭಕ್ತನಾದ ಮೇಲೆ ಅವರ ಪೂರ್ವಾಶ್ರಮವು ಕಳೆದು ಹೋಗುವದೆಂಬುದನ್ನು ಶರಣ ಮಾರ್ಗಾವಲಂಬಿಗಳು ಒಪ್ಪುತ್ತಿರುವಾಗ “ಅಕ್ಕನಾಗಮ್ಮನನ್ನು ಡೋಹರ ಕಕ್ಕಯ್ಯನಿಗೆ ಮದುವೆ ಮಾಡಿಸಿರುವದು ಹೆಚ್ಚು ಸಂಭವನೀಯವಾಗಿ ತೋರುತ್ತದೆ’ ಎಂಬ ಮಾತು ಅಪಸ್ವರವಾಗಿ ಪರಿಣಮಿಸುತ್ತದೆ.

ಕಕ್ಕಯ್ಯನವರು ಜಾತಿಯಿಂದ ಡೋಹರರೋ ? ಅಥವಾ ಶರಣ ಮಾರ್ಗದಲ್ಲಿ ಡೋಹರರ ಕಾಯಕವನ್ನು ಕೈಕೊಂಡು ಡೋಹರರೆನಿಸಿದರೋ? ಎಂಬ ಅಂಶವು ಸಹ ವಿಚಾರಣೀಯವಾಗಿದೆ. ಕಾಶ್ಮೀರದ ಅರಸು ಮಹಾದೇವ ಭೂಪಾಲನು ಆಗ ತನ್ನ ಕಾಯಕದಿ೦ದ ಮೋಳಿಗೆ ಮಾರುವ ಸಲುವಾಗಿ ಮೋಳಿಗೆಯ ಮಾರಯ್ಯನೇ  ಆಗಿರುವದನ್ನು ಶರಣರ ಚರಿತೆಯಲ್ಲಿ ನಾವು ಕಾಣುತ್ತೇವೆ. ಇದರಂತೆ ಶರಣರಿಗಾಗಿ ಆಯಾ ಕಾಯಕಗಳಲ್ಲಿ ನಿರತರಾದವರಿಗೆ ಆಯಾ ಹೆಸರು ಬಂದಿರುವುದೇನೂ ಅಸಂಭವನೀಯವಲ್ಲ. ಬಸವೇಶ್ವರರು ಒಂದು ವಚನದಲ್ಲಿ ಕಕ್ಕಯ್ಯನವರಿಗೆ ಡೋಹರ ಎಂದು ಪ್ರಯೋಗಿಸಿರುವದನ್ನು ಡೋಹರನೆಂಬೆನೆ ಕಕ್ಕಯ್ಯನ ಎಂಬ ಮಾತಿನಿಂದ ಉದ್ಧರಿಸಿದ್ದಾರೆ. ಇದರಿಂದ ಅವರು ಕಕ್ಕಯ್ಯನವರ ಡೋಹರತನವನ್ನು ಆ ಕಾಲದಲ್ಲಿಯೇ ಅಲ್ಲಗಳೆದಿರುವಾಗ ಈಗಲೂ ನಾವು ಅವರಿಗೆ ಜಾತೀಯಭಾವನೆಯಿಂದ ಆ ಮಾತನ್ನು ಬಳಿಸಿ ಅವರ ಪವಿತ್ರ ಕಾಯಕಕ್ಕೆ ಜಾತೀಯ ಕಲಂಕವನ್ನು ಬಳಿದಂತಾದೀತು.

 ಬಸವೇಶ್ವರರು ಕಕ್ಕಯ್ಯನವರೊಡನೆ ನಡೆದುಕೊಂಡ ರೀತಿಯನ್ನು ನೋಡಿದರೆ ಕಕ್ಕಯ್ಯನವರು ಬಸವೇಶ್ವರರಿಗಿಂತ ಎಷ್ಟೋ ಹಿರಿಯ ವಯಸ್ಸಿನವರಾಗಿ ತೋರುತ್ತಿದೆ. ಬಸವೇಶ್ವರರು ಒಂದು ವಚನದಲ್ಲಿ ಅಪ್ಪ ನಮ್ಮ ಮಾದರ ಚನ್ನಯ್ಯ ಬೊಪ್ಪನು ನಮ್ಮ

ಡೋಹರ ಕಕ್ಕಯ್ಯ’ ಎಂದು ನುಡಿವಲ್ಲಿ ಕಕ್ಕಯ್ಯನವರು ಬಸವೇಶ್ವರರ ಅಜ್ಜನ ಸ್ಥಾನವನ್ನು ಹೊಂದುವ ವಯಸ್ಸಿನಲ್ಲಿದ್ದಾರೆ. ಅಲ್ಲದೆ ಬಸವಾದಿಗಳಿಗಿಂತಲೂ ಹಿಂದಿನವರಾದ ದೇವರ ದಾಸಿಮಯ್ಯನವರು ಸಹ ತಮ್ಮ ವಚನದಲ್ಲಿ ‘ಕೀಳು ಮಾದರ ಚೆನ್ನಯ್ಯ, ಕೀಳು

ಡೋಹರಕಕ್ಕಯ್ಯ ಎಂದು’ ಪ್ರಯೋಗಿಸಿರುವದನ್ನು ಕಾಣುತ್ತೇವೆ. ಇದರಿಂದ ಕಕ್ಕಯ್ಯನವರು ವಯಸ್ಸಿನಿಂದ ಬಹಳ ಹಿರಿಯರು ಎಂಬುದು ತೋರುತ್ತದೆ. ಅಲ್ಲದೆ ವಿಜಾತಿಯ ವಿವಾಹಕ್ಕೆ ಬಸವೇಶ್ವರರ ಕ್ರಾಂತಿಗಿಂತ ಹಿಂದೆ ನಡೆದ ಸಂಗತಿಯು ಚರಿತೆಗಳಲ್ಲಿ

ತೋರುವದಿಲ್ಲ. ಆದುದರಿಂದ ಈ ವಿಜಾತೀಯ ವಿವಾಹವು ಅದರಲ್ಲಿಯೂ ವಯೋಮಾನದಿ೦ದ ತೀರ ಹಿರಿಯರಾದವರೊಡನೆ ನಡೆದ ವಿಷಮ ವಿವಾಹವು ನಡೆಯಿತೆಂದು ಹೇಳುವದು ಕೂಡ ವ್ಯವಹಾರಿಕವಾಗಿ ಒಪ್ಪದ ಸಂಗತಿಯಾಗಿಲ್ಲ.

 ಕಕ್ಕಯ್ಯನವರಿಗೆ ಮದುವೆಯಾದ ಸಂಗತಿಯು ಬೇರೆ ಕಡೆಗೆ ದೊರೆಯುತ್ತದೆ. ಅವರ ಧರ್ಮಪತ್ನಿ ನಲಿನಿದೇವಿ ಮಗ ಧೂರಯ್ಯ ಎಂಬುವರಿದ್ದರೆಂದೂ, ಮಲ್ಲದೇವಿಯೆಂಬ ಸತಿಯು ಕಕ್ಕಯ್ಯನವರಿಗಿದ್ದಳೆಂದೂ ತಿಳಿಯುತ್ತದೆ. ಹೀಗೆ ಅವರ ದಾಂಪತ್ಯ ಜೀವನವು

ಸಕಲವಾಗಿ ಸಾಗಿರುವಾಗ ಅಕ್ಕನಾಮ್ಮನ ಸಂಗಡ ಡೋಹರ ಕಕ್ಕಯ್ಯನವರ ಮದುವೆ ಮಾಡಿಸಿದ ಸಂಗತಿಯು ಹೆಚ್ಚು ಸಂಭವನೀಯವು ಹೇಗೆ ಆದೀತು ? ಆದುದರಿಂದ ಮದುವೆಯ ವಿಚಾರದಲ್ಲಿ ಅಕ್ಕನಾಗಮ್ಮ ಹಾಗೂ ಕಕ್ಕಯ್ಯನವರ ನಡುವೆ ಯಾವದೇ ಬಗೆಯ ಸಂಬಂಧ ಉಳಿಯುವದಿಲ್ಲ ಎಂಬುದು ಚರಿತೆಯಿಂದಲೇ ಸ್ಪುಟವಾಗಿ ಕಾಣುತ್ತಿದೆ.

ಕಕ್ಕಯ್ಯನವರು ಜಾತಿ ಡೋಹರರಾಗಿದ್ದು ಮಹಾನುಭಾವರೊಬ್ಬರು ಕಲ್ಪಿಸಿದ ಮದುವೆಯು ಅಕ್ಕನಾಗಮ್ಮನ ಸಂಗಡ ಆದುದೇ ನಿಜವಾಗಿದ್ದರೆ,-ಹರಳಯ್ಯ ಮಧುವರಸರ ಮಕ್ಕಳ ಮದುವೆ ನಡೆದಾಗ ಆ ಕೂಡಲೇ ನಡೆಯಿತೆಂದು ತಿಳಿಯುವ ಘನಘೋರ ಪ್ರಸ೦ಗವು ಆಗಲೇ ನಡೆದು ಹೋಗುತ್ತಿತ್ತು. ಅಲ್ಲದೆ ಅಂತಹ ಸಂಕರವನ್ನು ಒಪ್ಪದ ಆಗಿನ ರಾಜಕೀಯವು ಇದಕ್ಕೆ ಕಾರಣವಾದ ಬಸವೇಶ್ವರರನ್ನು ದಂಡನಾಯಕ ಪದವಿಗೆ ತರುತ್ತಲೇ ಇದ್ದಿಲ್ಲ. ಹೀಗೆ ಜನಿಸಿದ ಚನ್ನಬಸವೇಶ್ವರರನ್ನು ಚಿಕ್ಕದಂಡನಾಯಕರನ್ನಾಗಿ ಮಾಡುತ್ತಲೇ ಇರಲಿಲ್ಲ. ಇಷ್ಟೇ ಅಲ್ಲ ಕಲ್ಯಾಣದ ಶರಣರ ಕ್ರಾಂತಿಯೇ ಆಗುತ್ತಿರಲಿಲ್ಲವಾಗಿ ಈಗ ದೊರೆಯುವ ಇತಿಹಾಸವೂ ದೊರೆಯದೆ ಬೇರೆ ಸ್ವರೂಪದಲ್ಲಿ ಬರುತ್ತಿತ್ತು.

ಸಿಂಗಿರಾಜರು ತಿಳಿಸಿದಂತೆ ನಾಗಮ್ಮನವರಿಗೆ ಶಿವಸ್ವಾಮಿ ಎಂಬ ಪತಿಯಿದ್ದನೆಂಬುದನ್ನು ಒಪ್ಪಿಕೊಳ್ಳಬೇಕು. ಇವರು ಆರಾಧ್ಯ ಬ್ರಾಹ್ಮಣರಾಗಿದ್ದರು. ಜನಾಂಗವು ವೀರಶೈವರಾಗಿದ್ದ ಬ್ರಾಹ್ಮಣರ ಜೋಕಾಲಿಯೊಳಗೆ ಕುಳಿತು ಜನಿವಾರವನ್ನು ಹೊಂದಿದ್ದರು. ಇಂತಹ ಪವಿತ್ರ ದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರೆಂಬುದು ಸ್ಪಷ್ಟವೇ ಇದೆ. ಇದರಂತೆಯೇ ಕಕ್ಕಯ್ಯನವರು ಸಹ ತಮ್ಮ ಧರ್ಮಪತ್ನಿಯೊಡನೆ ದಾಂಪತ್ಯ ಜೀವನವನ್ನು ಸಾಗಿಸಿ ಮಗುವನ್ನು ಪಡೆದಿದ್ದರೆಂಬುದು ಸಹ ಚರಿತೆಯಲ್ಲಿ ತಿಳಿಯುತ್ತದೆ. ಹೀಗಿದ್ದೂ ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಮಹಾ ಪಾಂಡಿತ್ಯವನ್ನು ಪ್ರಕಟಿಸಿದ ಮಹಾನುಭಾವರೊಬ್ಬರು ‘ಸಂಭವನೀಯ ನಿರ್ಣಯಗಳನ್ನು ಭಾವಿಸಬೇಕು’ ಎಂಬ ಭಾವನಾ ಪ್ರಪಂಚಕ್ಕೆ ಏಕೆ ಮರಳಿದರೋ ? ಎಂಬುದು ತಿಳಿಯದಂತಿದೆ.

ಎಂಟನೂರು ವರ್ಷಗಳ ಹಿಂದಿನ ಸಂಗತಿಯನ್ನು ಇಂದು ವಿಚಾರಿಸುವಾಗ ಲಭ್ಯವಿರುವ ಸಂಗತಿಗಳನ್ನು ಆಧರಿಸಿ ಅವುಗಳಿಗೆ ಹೊಂದಿಕೆಯಾಗುವ ಒಳ್ಳೆಯ ರೂಪವನ್ನೂ ಕೊಡುವದು ವಿಹಿತವಲ್ಲದೆ, ಕಲ್ಪನಾ ಪ್ರಪಂಚಕ್ಕೆ ಮರುಳಾಗಿ ಸಾಮಾಜಿಕರ ಒಳ್ಳೆಯ ಭಾವನೆಯ ಮೇಲೆ ಗೆರೆಯೆಳೆಯುವದು ಪಂಡಿತರಾದವರಿಗೆ ವಿಹಿತವಲ್ಲ.

ಇವರು ಮಹಾ ಪ೦ಡಿತರೆಂದು ಗ್ರಹಿಸಿ ಇವರು ನುಡಿದ ನುಡಿಯನ್ನು ಪ್ರಮಾಣಿಸಿಕೊಂಡು ಕೊಟ್ಟ ಹೇಳಿಕೆಯೊಂದರಿಂದ ಸಾಮಾಜಿಕರ ಚಿತ್ತ ಭಿತ್ತಿಯ ಮೇಲೆ ವಿರೂಪದ ಚಿತ್ರವನ್ನು ಮೂಡುವಂತೆ ಮಾಡಿದುದು ಸಹ ಈ ಮಹಾಪಂಡಿತರೇ ಹೊಣೆಯಾಗಬಹುದಾದ ಅನ್ಯಾಯವಾಗಿದೆ. ಏನೇ ಆಗಲಿ ಆ ಮಾತನ್ನು ಈಗ ಮರೆತು ಬಿಡೋಣ.

ಶಿವಸ್ವಾಮಿ ಅಕ್ಕನಾಗಮ್ಮ ಎಂಬ ದಂಪತಿಗಳ ಪವಿತ್ರದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರು. ತೀರ ಎಳೆತನದಲ್ಲಿಯೇ ಶಿವಸ್ವಾಮಿಯು ತೀರಿಹೋದನು. ಆದುದರಿಂದ ಅವರ ಹೆಸರು ಜನತೆಗೆ ಹೆಚ್ಚಾಗಿ ಪರಿಚಯವಾಗಲಿಲ್ಲ. ಚನ್ನಬಸವೇಶ್ವರರು ಮುಂದೆ ತಮ್ಮ ಅಧ್ಯಾತ್ಮಿಕ ತೇಜದಿಂದ ಶೂನ್ಯಪೀಠದ ಅಧಿಕಾರಿಗಳಾಗಿ ಷಟ್‌ಸ್ಥಲ ಚಕ್ರವರ್ತಿಗಳೂ ಆದರು. ಈ ಪ್ರಸಂಗದಲ್ಲಿ ಪ್ರಮಥ ಪುಂಗವರಾದ ಬಸವೇಶ್ವರರ ಅನುಭವ ಮಂಟಪದ ಮಹಾಶರಣರ ಹಾಗೂ ಶಿವನ ಕಾರುಣ್ಯದ ಕಂದರಾದುದರಿಂದ ಈ ಸಂಗತಿಯು ಮೂರುನೂರು ವರ್ಷಗಳ ನಂತರ ಚರಿತೆಯನ್ನು ಬರೆಯುವ ಕವಿಗಳಿಗೆ ನಾಲಿಗೆಯಿಂದ ನಾಲಿಗೆಯ ಮೇಲೆ ಬಂದು ಕಿವಿಯಿಂದ ಕಿವಿಗೆ ತಲ್ಪುತ್ತ ವ್ಯತ್ಯಾಸಗೊಂಡು ದೊರಕಿದೆ. ಆದ್ದರಿಂದ ಅವರೆಲ್ಲ ಪವಿತ್ರಭಾವನೆಗಳಿಗಾಗಿ ಪ್ರಸಾದದಿಂದ ಜನಿಸಿದರೆಂದು ತಿಳಿಸಿರಬಹುದಾಗಿದೆ. ಈ ಪವಿತ್ರ ಭಾವನೆಯು ಈಗಲೂ ಜನತೆಯಲ್ಲಿರುವಾಗ ಅವನ್ನು ಕೆಡಿಸದಂತೆ ಉಳಿಸುವುದೇ ಸರಿಯಾಗುವದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

೧. ಪ್ರಸ್ತಾವನೆ

ಎಂಬತ್ತು ನಾಲ್ಕು ಲಕ್ಷ ಜೀವ ರಾಶಿಗಳಲ್ಲಿ ಮಾನವ ಜೀವಿ ಶ್ರೇಷ್ಠ. ಮಾನವನಿಗೆ ಮಹಾದೇವನು ತನು-ಮನ-ಭಾವಗಳನ್ನು ದಯಪಾಲಿಸಿದ್ದಾನೆ. ಉಳಿದೆಲ್ಲ ಪ್ರಾಣಿಗಳಿಗೆ ತನುವನ್ನು ಮಾತ್ರ ನೀಡಿದ್ದಾನೆ. ಮಾನವನಿಗೆ ತನುವಿನಲ್ಲಿ ವಾಕ್‌ಶಕ್ತಿಯನ್ನು ಧೀಶಕ್ತಿಯನ್ನು ಮತ್ತು ಕೃತು ಶಕ್ತಿಯನ್ನು ಕರುಣಿಸಿದ್ದಾನೆ. ಈ ತ್ರಿವಿಧ ಶಕ್ತಿಗಳಿಂದ ಮಾನವ ಶ್ರೇಷ್ಠತೆಯನ್ನು ಮೆರೆಯುತ್ತಾನೆ. ವಾಕ್‌ಶಕ್ತಿಯ ಪ್ರಭಾವದಿಂದ ಭಾವನೆಗಳನ್ನು ವ್ಯಕ್ತ ಮಾಡುವನು. ಧೀಶಕ್ತಿಯಿಂದ ಜಾಣ್ಮೆಯನ್ನು ತೋರುವನು. ಕೃತುಶಕ್ತಿಯಿಂದ ಧೀಶಕ್ತಿಯ ಪ್ರಭಾವವನ್ನು ಬೀರಬಲ್ಲನು.

ಮನುಷ್ಯನ ದೇಹವು ಯಂತ್ರವಿದ್ದಂತಿದೆ. ಬ್ರಹ್ಮಾಂಡವು ಬೃಹತ್ತಾದ ವಿಜ್ಞಾನವಾಗಿದೆ. ಪಿಂಡಾಂಡವು ಬ್ರಹ್ಮಾಂಡದ ಪ್ರತಿರೂಪವೇ ಆಗಿದೆ. ಪಿಂಡಾಂಡವೆಂದರೇನೆ ದೇಹ, ತನು, ಶರೀರ, ಕಾಯ ಇತ್ಯಾದಿ ಅನೇಕ ನಾಮಗಳಿವೆ. ನಿಜಗುಣರು – ‘ತನುವಿದನುಳಿದಿಂದ್ರ ಜಾಲವದುಂಟೆ ?’ ಎಂದಿರುವುದು ಯಥಾರ್ಥವಾಗಿದೆ. ಇಂದ್ರಜಾಲ ಮನುಷ್ಯನನ್ನು ಆಶ್ಚರ್ಯಗೊಳಿಸುವಂತೆ, ತನುವನ್ನು ಕುರಿತು ಚಿಂತಿಸಿದರೆ ಅತ್ಯಾಶ್ಚರ್ಯವೇ ಉಂಟಾಗುವದು. ಆದರೆ ಅದರ ಚಿಂತನ ಮಾಡುವವರು ವಿರಳ.

ತನ್ನ ತನು ಸುಂದರವಾಗಿರಬೇಕು; ಗಟ್ಟಿಯಾಗಿರಬೇಕು. ದಷ್ಟ ಪುಷ್ಟವಾಗಿರಬೇಕೆನ್ನುವವರು ಬಹಳ. ಶರೀರ ಬೆಳವಣಿಗೆಯತ್ತ ಗಮನ ಹರಿಸುವವರೆ ಹೆಚ್ಚು. ಕವಿರತ್ನ ಕಾಲಿದಾಸನು-ʼʼಶರೀರಮಾದ್ಯಂ ಖಲು ಧರ್ಮಸಾಧನʼʼ ಧರ್ಮಾಚರಣೆಗೆ ಶರೀರವೆ ಮೊದಲಿನ ಸಾಧನ ವಾಗಿದೆಯೆಂದಿದ್ದಾನೆ. ಶರೀರವಿಲ್ಲದೆ ಯಾವ ಧರ್ಮಕಾರ್ಯಗಳು ಘಟಿಸುವುದಿಲ್ಲ. ಆದರೆ ತನುವಿನಲ್ಲಿ ನೆಣವಿದ್ದಾಗ ಮಾತ್ರ ಧರ್ಮಕಾರ್ಯಗಳಾಗಲಿ, ಪರೋಪಕಾರ್ಯಗಳಾಗಲಿ ನಡೆಯಬಲ್ಲವು. ಶರೀರವಿದ್ದು ರೋಗಗ್ರಸ್ಥವಾದರೆ ಏನನ್ನು ಮಾಡಲಾಗದು. ಅದಕ್ಕಾಗಿ ದೇಹ ಸ್ವಸ್ಥವಿರುವಾಗಲೆ ಭಗವಚ್ಛಿಂತನೆ, ಆತ್ಮಚಿಂತನೆ; ಪರೋಪಕಾರ ಮಾಡಬೇಕು. ಅಂತೆಯೇ ಬಸವ   ಮಹಾನುಭಾವರು ”ಕೂಡಲ ಸಂಗಮದೇವರನೊಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು” ಎಂದು ಹಿತನುಡಿದಿರುವರು. ಕಾಯ ಪ್ರಸಾದಕಾಯವಾಗಬೇಕು, ಧರ್ಮಕಾರ್ಯಕ್ಕೆ ಸಾಧನವಾಗಿರಬೇಕು. ಪರೋಪಕಾರಕ್ಕೆ ಮುಂದಾಗಬೇಕಲ್ಲದೆ ಪರಪೀಡನೆಗೆ ಕಾರಣವಾಗಬಾರದು.

 ಶರೀರ ಆರೋಗ್ಯಪೂರ್ಣವಾಗಿದ್ದರೇನೆ ಮನಸ್ಸು ಬುದ್ಧಿಗಳು ಸ್ವಸ್ಥವಾಗಿರಬಲ್ಲವು.ಶರೀರದ ಆರೋಗ್ಯವನ್ನು, ಮಾನಸಿಕ ಸ್ವಾಸ್ಥ್ಯವನ್ನು ಬುದ್ಧಿಯ ವಿಕಾಸವನ್ನು, ಆತ್ಮದ ಚಿಂತನವನ್ನು ಕಾಪಾಡಿಕೊಳ್ಳಲು ಮಾನವ ಪ್ರಯತ್ನಿಸಬೇಕಾಗುವದು. ಈ ದಿಶೆಯಲ್ಲಿ ಯಾವುದನ್ನು ಅಲಕ್ಷಿಸುವಂತಿಲ್ಲ. ಶಾರೀರಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ವಿಕಾಸ, ಆತ್ಮದ ಚಿಂತನಗಳೊಂದಿಗೆ ಭೌತಿಕ ಜಗತ್ತಿನ ಸಂಬಂಧ ಹಾಗೂ ಜಗತ್‌ಸೃಷ್ಟಿಗೆ ಕಾರಣಕರ್ತನಾದ ಪರಮಾತ್ಮನನ್ನು ಅರಿಯುವ ಕಾರ್ಯ ಬಹುಕಾಲದಿಂದ ಬೆಳೆದುಬಂದಿತು. ಭೌತಿಕ ಜಗತ್ತಿನ ಬೆಳವಣಿಗೆಯ ಬಗೆಗೆ ಅನೇಕ ಅನುಮಾನಗಳು, ಪ್ರಶ್ನೆಗಳು ಉಂಟಾದರೆ, ವಿಜ್ಞಾನ ಪರಿಹಾರಗಳನ್ನು ಒದಗಿಸಿರಲು ಸಾಕು. ದೈಹಿಕ ಬೆಳವಣಿಗೆಯನ್ನು ಸಹ ವಿಜ್ಞಾನ ವಿಶ್ಲೇಷಿಸಬಹುದು. ಆದರೆ ದೇಹಾತೀತ ಅನುಭವಗಳನ್ನು ವಿಜ್ಞಾನ ತಿಳಿಸಲಾರದು. ವಿಜ್ಞಾನ ತಿಳಿಸದುದನ್ನು ಅಧ್ಯಾತ್ಮತಿಳಿಸಬಲ್ಲುದು. ಅಧ್ಯಾತ್ಮಿಕ ವಿಜ್ಞಾನ ಅನುಭವ- ಅನುಭೂತಿ-ಆತ್ಮಾನಂದವನ್ನು ತಿಳಿಸುವದು. ಇವೆಲ್ಲದಕ್ಕೂ ಸ್ವಸ್ಥ ಶರೀರವೇ ಸಾಧನ ಮಾತ್ರ.

 ಆತ್ಮಜ್ಞಾನದ ಅರಿವು ಉಂಟಾಗಲು, ಆನಂದಮಯ ಜೀವನ ಸಾಗಿಸಲು ಶಾರೀರಿಕ ಆರೋಗ್ಯ ಅವಶ್ಯ. ಅದಕ್ಕಾಗಿ ಶರೀರ ವಿಜ್ಞಾನವನ್ನು ತಿಳಿದುಕೊಳ್ಳಬೇಕಾಗುವದು. ಅಧಿ+ಆತ್ಮಪದಗಳೇ ಅಧ್ಯಾತ್ಮವೆನಿಸುವದು. ಕೇವಲ ದೈಹಿಕವಾಗಿ ವಿಚಾರಿಸದೆ ದೇಹಕ್ಕೆ ಚೈತನ್ಯ ನೀಡುವ ಆತ್ಮನ ಬಗೆಗೆ ಚಿಂತಿಸುವುದು ಅಧ್ಯಾತ್ಮವೆನಿಸುವದು. ಕೇವಲ ಪರಚಿಂತೆಯನ್ನು ಮಾಡದೆ ನಮ್ಮ ಚಿಂತೆಯನ್ನು ಮಾಡುವುದು ಅಧ್ಯಾತ್ಮವೆನಿಸುವುದು. ನಮ್ಮ ಚಿಂತೆಯೆಂದರೆ ನಮ್ಮ ಹೊಟ್ಟೆಪಾಡಿನ, ಹೆಂಡರು ಮಕ್ಕಳ ಚಿಂತನೆಯಲ್ಲ. ನಾನಾರು ? ನಾನು ಏಕೆ ಹುಟ್ಟಿದೆ ? ಹುಟ್ಟಿಗೆ ಕಾರಣವೇನು ? ಹುಟ್ಟಿದವನು ಸಾಯುವುದೇಕೆ ? ಸಾವು ಎಂದರೇನು ? ಏಕೆ ? ಸತ್ತನಂತರ ಎಲ್ಲಿಗೆ ಹೋಗುತ್ತೇವೆ ? ಶರೀರ ಮತ್ತು ಆತ್ಮನಿಗಿರುವ ಸಂಬಂಧವೇನು ? ಸತ್ತನಂತರ ಮತ್ತೆ ಹುಟ್ಟುತ್ತದೆಯೋ ? ಸಾವಿಗೂ ಮರು ಹುಟ್ಟಿಗೂ ಮಧ್ಯದಲ್ಲಿ ಎಲ್ಲಿರುತ್ತೇವೆ ? ಹೋಗುವುದೆಲ್ಲಿಗೆ ? ಬರುವುದಾದರೂ ಎಲ್ಲಿಂದ ? ಮತ್ತೆ ಮತ್ತೆ ಹುಟ್ಟಲೇಬೇಕೆ ? ಹುಟ್ಟದಂತಾಗಲು ಸಾಧ್ಯವೇ ? ಹುಟ್ಟದಂತಾಗಲು ನಾವೇನು ಮಾಡಬೇಕು ? ಹುಟ್ಟು-ಸಾವಿನ ನಡುವೆ ಸಾಗಿಸುವ ಜೀವನ, ಜೀವನದಲ್ಲಿ ಬರುವ ಸುಖ- ದುಃಖ, ನೋವು-ನಲಿವು, ಆಟ-ಪಾಠ, ಸೋಲು – ಗೆಲುವು, ಸಿರಿತನ – ಬಡತನ, ರೋಗ – ರುಜಿನಗಳು ಏಕೆ ? ಕೆಲವರೇಕೆ ಬಡವರು ? ಹಲವರು ಸಿರಿವಂತರೇಕೆ ? ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೂ ಬರುವ ಯಾತನೆಗಳೇಕೆ ? ಜೀವನದಲ್ಲಿ ನಡೆಯುವ ಘಟನೆಗಳಿಗೂ,  ವಿಜ್ಞಾನ ಉತ್ತರಿಸದು.  

 ಸಾಮಾನ್ಯ ವಿಜ್ಞಾನ ಉತ್ತರಿಸಲಾಗದ ವಿಷಯಗಳನ್ನು ತಿಳಿಸಬಲ್ಲುದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ವಿವರಿಸಲಾಗದ ನಿಗೂಢ ವಿಶ್ವ ಸತ್ಯಗಳನ್ನು ವಿವರಿಸಬಲ್ಲದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ನಿಯಂತ್ರಿಸಲಾಗದ ಚೈತನ್ಯದ ಸ್ತರಗಳೇ ಅಧ್ಯಾತ್ಮ. ಮಾನವನ ಬುದ್ಧಿವಂತಿಕೆಯ ಜಾಣ್ಮೆಯನ್ನು ಮೀರಿದ ವಿಚಾರಗಳನ್ನು ನಿರೂಪಿಸುವುದು ಅಧ್ಯಾತ್ಮ ಮಾನವನ ದೇಹಾತೀತ ಅನುಭವಗಳೇ ಅಧ್ಯಾತ್ಮ. ಮಾನವನ ಅತೀಂದ್ರಿಯ ಅನುಭವಗಳೇ ಆಧ್ಯಾತ್ಮ. ಸಾಮಾನ್ಯ ವಿಜ್ಞಾನವನ್ನು ಮೀರಿದ ಜ್ಞಾನವೇ ಅಧ್ಯಾತ್ಮಿಕ ವಿಜ್ಞಾನ. ಇಂಥ ಅಧ್ಯಾತ್ಮ ಜ್ಞಾನದಿಂದ ಮೇಲಿನ ಪ್ರಶ್ನೆಗಳಿಗೆ ಪರಿಹಾರ ದೊರೆಯುವದು. ಶಾಂತಿ-ಸಮಾಧಾನಗಳು ಲಭಿಸುವವು.

ವೇದಾಂತಿಗಳು ಶರೀರದ ಅನಿತ್ಯತೆಯನ್ನು, ಕ್ಷಣಭಂಗುರತೆಯನ್ನು ಹೇಳಿದರೆ, ಶರಣರು ದೇಹ ದೇಗುಲವೆಂದರು, ಪ್ರಸಾದಕಾಯವೆಂದು ಕೊಂಡಾಡಿದರು. ವಸ್ತುತಃ ಶರೀರವು ಷದ್ಭಾವವಿಕಾರವುಳ್ಳುದು. ಬಾಲ್ಯ- ಯೌವ್ವನ ವಾರ್ಧಕ್ಯಾದಿಗಳಿಂದ ವಿಕಾರಗೊಳ್ಳುವದು. ಕೆನ್ನೆಯ ಕೂದಲು ನೆರೆಯೊಡೆದು, ಗಲ್ಲಗಳು ಒಳಸೇರಿ ಹಲ್ಲು ಹೋಗಿ, ಬೆನ್ನುಬಾಗಿ, ಕಾಲ ಮೇಲೆ ಕೈಯೂರಿ ಅನ್ಯರ ಹಂಗಿನಲ್ಲಿ ಬಾಳಬೇಕಾದ ಶರೀರದ ಯಥಾರ್ಥತೆಯನ್ನರಿತು ಸಾರ್ಥಕ ಬದುಕಿಗಾಗಿ ಬಳಸಿಕೊಳ್ಳಬೇಕು. ಪಾರಮಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಹುಟ್ಟಿದವನುಸಾಯಲೇಬೇಕು; ಶರೀರ ಗಟ್ಟಿಯಾಗಿರುವಾಗಲೇ ಸದುಪಯೋಗವಾಗಬೇಕು.

ತನುವೆಂಬುದೊಂದು ಇಂದ್ರಜಾಲವೆಂದು ಬಣ್ಣಿಸಿದಂತೆ ಈ ಶರೀರದಲ್ಲಿ ಅದೆಷ್ಟು ಇಂದ್ರಿಯಗಳು, ಅದೆಷ್ಟು ವಾಯುಗಳು, ಅದೆಷ್ಟು ಕರಣಗಳು, ಅದೆಷ್ಟು ತತ್ವಗಳು, ಅದೆಷ್ಟು ನಾಡಿಗಳು, ಅದೆಷ್ಟು ಆತ್ಮಗಳು ಇವೆಯೆಂಬುದನ್ನು ಆಲೋಚಿಸಬೇಕು. ಕಾಣುವ ಶರೀರವೊಂದೆನಿಸಿದರೂ ಅದರೊಳಗೆ ಮತ್ತೆಷ್ಟು ತನುಗಳಡಗಿವೆಯೆಂಬುದು ವಿಚಾರಣೀಯ. ಈ ಶರೀರದಲ್ಲಿ ಅದೆಷ್ಟು ಮದಗಳು, ಅದೆಷ್ಟು ಅನಿಮಿತ್ತ ವೈರಿಗಳು, ಅದೆಷ್ಟು ಧಾತುಗಳು, ಅದೆಷ್ಟು ವ್ಯಸನಗಳು, ಅದೆಷ್ಟು ತೆರೆಗಳು, ಅದೆಷ್ಟು ಭ್ರಮೆಗಳು, ಅದೆಷ್ಟು ಕೋಶಗಳು, ಅದೆಷ್ಟು ಕ್ಲೇಶಗಳು, ಅದೆಷ್ಟು ಗುಣಗಳು, ಅದೆಷ್ಟು ಅಹಂಕಾರಗಳು, ಅದೆಷ್ಟು ತಾಪತ್ರಯಗಳು, ಅದೆಷ್ಟು ಜೀವಗಳು, ಅದೆಷ್ಟು ಅವಸ್ಥೆಗಳು,ಅದೆಷ್ಟು ಭಾವಗಳು, ಅದೆಷ್ಟು ಮನಗಳು, ಅದೆಷ್ಟು ಅಗ್ನಿಗಳು ಅಡಿಗಿವೆಯೆಂಬುದನ್ನು ತಿಳಿದರೆ ಅಬ್ಬಬ್ಬಾ ಶರೀರವೆಂಬುದೊಂದು ಅದ್ಭುತವಾದ ಆಶ್ಚರ್ಯಕಾರಕ ಯಂತ್ರವೆಂಬುದರ ಅರಿವಾಗದಿರದು. ಇವೆಲ್ಲವುಗಳ ವಿಶ್ಲೇಷಣೆಯನ್ನು ಮಹಾಜ್ಞಾನಿ ಕಿರಿವಯದ ಹಿರಿಯ ಅನುಭಾವಿ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರವಾಗಿ ನಿರೂಪಿಸಿರುವರು.

ಭಾರತೀಯ ದರ್ಶನಗಳಲ್ಲಿ ಆಸ್ತಿಕ ದಾರ್ಶನಿಕರಿಗಿಂತ ನಾಸ್ತಿಕ ದಾರ್ಶನಿಕರಾದ ಲೋಕಾಯತ ಸಂಪ್ರದಾಯದವರು, ಅರ್ಥಾತ್ ಚಾರ್ವಾಕರು ದೇಹದ ಯಥಾರ್ಥತೆಯನ್ನು ಅರಿತಿದ್ದಾರೆ. ದೇಹಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದವರು. ‘ಋಣಂ ಕೃತ್ವಾ ಘೃತಂ ಪಿಬೇತ್ ʼ ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. ಅ೦ದರೆ ಸಾಲವಾದರೂ ಸರಿ, ಸುಖವಾಗಿ ಇರಬೇಕೆನ್ನುವರು. ಕಾಣದ ಆತ್ಮವನ್ನು ಮನ್ನಿಸದೆ, ಕಾಣುವ ಕಾಯಕ್ಕೆ ಪ್ರಾಶಸ್ತ್ಯ ಕೊಟ್ಟರು.ʼ ‘ಚೈತನ್ಯ ವಿಶಿಷ್ಟ ಕಾಯಃ ಪುರುಷಃ ʼʼ ಎಂಬ ಸೂತ್ರವನ್ನು ಲೋಕಾಯತ ಮತದ ಮೂಲ ದಾರ್ಶನಿಕನಾದ ಬೃಹಸ್ಪತಿಯ ಪ್ರತಿಪಾದಿಸಿದರು. ಆದರೆ ಆಸ್ತಿಕ ದಾರ್ಶನಿಕರು ಶರೀರ ಅನಿತ್ಯವೆಂದು ಹೇಳಿದರೂ “ಮುಕ್ತಿಗೆ ಪರಮೋಪಾಯವೆನಿಸಿದ ಆತ್ಮ ಜ್ಞಾನವು ದೇಹವಿರುವಾಗಲೇ ಸಾಧ್ಯವಾಗುವದೆಂದೂ’ ನಿರೂಪಿಸಿದರು.

 ಆತ್ಮಜ್ಞಾನಕ್ಕೆ ಆಶ್ರಯವಾದುದು ಕಾಯ. ಅದರಂತೆ ಪ್ರಾಣಕ್ಕಾಶ್ರಯವೆನಿಸಿದ್ದು ಕಾಯ, ಧರ್ಮಸಾಧನಗಳಿಗೆ ಪ್ರೇರಣೆ ನೀಡುವದು ಕಾಯ. ಅವಿರಳಜ್ಞಾನಿ ಚನ್ನಬಸವಣ್ಣನವರು-““ತಿಳಿಯುವದೇ ಜ್ಞಾನ, ತಿಳಿದಂತೆ ನಡೆಯುವದೇ ಕ್ರಿಯೆ. ಅರಿತು ನಡೆಯದಿದ್ದರೆ ಅದೇ ಅಜ್ಞಾನ’ ವೆಂದು ಜ್ಞಾನ ಕ್ರಿಯೆಗಳ ಸ್ವರೂಪವನ್ನು ಮಾರ್ಮಿಕವಾಗಿಯೇ ಹೇಳಿದ್ದು ದಾರ್ಶನಿಕರಿಗೂ ಅಚ್ಚರಿಯಾಗಿರಲು ಸಾಕು. “ದೇಹವಿಲ್ಲದಿದ್ದೊಡೆ ಪ್ರಾಣಕ್ಕಾಶ್ರಯವುಂಟೆ ?” ಎಂದೂ ಪ್ರಶ್ನಿಸಿದ್ದರಲ್ಲಿ ದೇಹದ ಅವಶ್ಯಕತೆ ವ್ಯಕ್ತವಾಗುತ್ತದೆ. ಜ್ಞಾನವನ್ನು ಸಂಪಾದಿಸಲು ಸ್ವಸ್ಥಕಾಯಬೇಕು. ಜ್ಞಾನದ ಸಾಕಾರರೂಪ ವ್ಯಕ್ತವಾಗಲು ಕ್ರಿಯೆಬೇಕು. ತಿಳಿದಂತೆ ಕಾರ್ಯಗೈದಾಗ ಜ್ಞಾನ ಪ್ರತ್ಯಕ್ಷವಾಗುವದು. ಪರಸ್ತ್ರೀಯನ್ನು ಭೋಗಿಸಬಾರದೆಂಬ ಜ್ಞಾನ. ಅದರಂತೆ ನಡೆದಾಗ ಆ ಜ್ಞಾನಕ್ಕೆ ಬೆಲೆಯಿದೆ. ಇಲ್ಲದಿದ್ದರೆ ಅದೇ ಅಜ್ಞಾನವೆಂಬ ನುಡಿಯಲ್ಲಿ ಔಚಿತ್ಯವಿದೆ. ದೇಹವನ್ನು ಹೇಯವೆಂದವರಿಗೆ ಶರಣರು ಎಚ್ಚರಿಕೆ ಕೊಟ್ಟರು. ದೇವರ ನೊಲಿಸಬಂದ ಪ್ರಸಾದಕಾಯವನ್ನು ಕೆಡಿಸಲಾಗದೆಂದರು. ಬೀಜವು ಚೆನ್ನಾಗಿ ಫಲಿಸಬೇಕಾದರೆ ಉತ್ತಮವಾದ ಭೂಮಿಯ ಅವಶ್ಯಕತೆಯಿರುವಂತೆ; ಜಲ, ಬೆಳಕು ಹಾಗೂ ಗಾಳಿಗಳೂ ಬೇಕು. ಅದರಂತೆ ಮಾನವನ ಆತ್ಮಶಕ್ತಿಯು ವಿಕಾಸಗೊಳ್ಳಬೇಕಾದರೆ ದೇಹ ಮತ್ತು ಅದಕ್ಕೆ ಪೋಷಕವಾದ ಅನ್ನ-ನೀರು- ಪರಿಸರಗಳು ಮುಖ್ಯ, ದೇಹ ಸದೃಢವಾಗಿರದಿದ್ದರೆ ಯಾವುದನ್ನೂ ಸಾಧಿಸಲಾಗದು. ಅಂತೆಯೇ ಅನುಭಾವಿ ಚನ್ನಬಸವಣ್ಣನವರು-

ಕಾಯದಿಂದ ಲಿಂಗ ದರುಶನ,

 ಕಾಯದಿಂದ ಜಂಗಮ ದರುಶನ,

 ಕಾಯದಿಂದ ಪ್ರಸಾದ ಸಂಪತ್ತು,

 ಕೂಡಲ ಚನ್ನಸಂಗಯ್ಯಾ ಈ ಕಾಯದಿಂದ

 ನಿಮ್ಮವನು ಕಂಡೆನಯ್ಯಾ.

 ಕಾಯದ ಮಹತ್ವವನ್ನು ಬಿತ್ತರಿಸಿರುವರು. ಮಾನವನು ಕಾಯದಿಂದ ಕಾಯಕ ಮಾಡಿ ಸಕಲ ಪದಾರ್ಥಗಳನ್ನು ಪಡೆಯುವನು, ಗುರುಸೇವೆ ಮಾಡಿ ಲಿಂಗವನ್ನು ಹೊಂದುವನು. ನಿತ್ಯ ಲಿಂಗದರ್ಶನವಾಗುವದು. ಲಿಂಗ ಪೂಜೆಯ ಫಲ ಜಂಗಮ ದರುಶನ. ಜಂಗಮನ ಅನುಗ್ರಹದಿಂದ ಪ್ರಸಾದ ಸಂಪತ್ತು ಲಭಿಸುವದು. ಅಷ್ಟೇ ಅಲ್ಲ,  ಲಿಂಗವನ್ನು ಪೂಜಿಸಿ ಲಿಂಗಗಳನ್ನು ಸರ್ವಾಂಗದಲ್ಲಿ ಸಂಬಂಧಗೊಳಿಸಿ ಸರ್ವಾಂಗಲಿಂಗ ಮಯನೆನಿಸುವ ಸಾಮರ್ಥ್ಯ ಲಭಿಸುವುದು ಸಂಸ್ಕಾರಗೊಂಡ ಕಾಯದಿಂದ.

ಕಾಯಕ್ಕೆ ದೇಹ, ತನು, ಶರೀರ, ಭೋಗಾಯತನ ಇತ್ಯಾದಿ ಹಲವು ನಾಮಗಳಿದ್ದರೆ ವೀರಶೈವರು ಅಂಗವೆಂದು ಕರೆದಿರುವರು. ಕಾಯ ಕಷ್ಟಗಳನ್ನು ಮಾಡಬಲ್ಲುದು ಕಾಯವೆನಿಸಿದರೆ, ಸಾಂಸಾರಿಕ ಚಿಂತಾಗ್ನಿಯಲ್ಲಿ ಸುಡಲ್ಪಡುವುದರಿಂದ ಇದು ದೇಹವೆನಿಸಿತು. ಶಿವನ ಶಕ್ತಿಗಳು ಸಂಕೋಚಗೊಂಡು ಜೀವನಾಗುತ್ತಾನೆ. ಮತ್ತು ಜೀವಾತ್ಮನು ತನುವೆನಿಸುವನು. ತನುವೆಂದರೆ ಚಿಕ್ಕದು, ಜೀವಿಯ ಶಕ್ತಿ ಚಿಕ್ಕದು. ಕಾರ್ಯಕ್ಷಮತೆ ಸಣ್ಣದು. ಮನಸ್ಸು ಅಲ್ಪ; ಭಾವ ಸಹ ಸಂಕೋಚಗೊಂಡುದು. ಅದಕ್ಕಾಗಿ ಇದು ತನುವೆನಿಸಿದೆ. ಶರೀರವೆಂದರೆ ಸಣ್ಣಾಗುವದು, ಸೊರಗುವದು. ಬಾಲ್ಯದಿಂದ ಯೌವನಾವಸ್ಥೆಯಲ್ಲಿ ದೊಡ್ಡದಾದ ಶರೀರವು ವಾರ್ಧಕ್ಯಕ್ಕೆ ಸೊರಗುತ್ತ ಹೋಗುವುದಿಲ್ಲವೇ? ಲೋಕಾಯತರು ಶಾರೀರಿಕ ಭೋಗಕ್ಕೇನೆ ಮಹತ್ವ ನೀಡಿದ ಕಾರಣ ಇದಕ್ಕೆ ಭೋಗಾಯತನವೆಂದು ಕರೆದರು. ಶರೀರವು ಎಲ್ಲ ಭೋಗಗಳಿಗೆ ಆಶ್ರಯ ಸ್ಥಾನವಾಗಿದೆ. ಜ್ಞಾನ-ಕ್ರಿಯೆಗಳಲ್ಲಿ ಸಮಸಮುಚ್ಚಯವನ್ನು ಪ್ರತಿಪಾದಿಸುವ ವೀರಶೈವರು ತನುವಿಗೆ ಅಂಗವೆಂದು ಕರೆದರು. ‘ಅಂ’ ಎಂದರೆ ಪರಮಾತ್ಮ, ಆ ಪರಶಿವನನ್ನು ಕೂಡುವ ಕಾಯವು ಅಂಗವೆನಿಸಿತು. ಭಾರತೀಯ ಎಲ್ಲ ದಾರ್ಶನಿಕರು- ʼʼಜನ್ಮನಾ ಜಾಯತೇ ಶೂದ್ರಃ, ಕರ್ಮಣಾ ದ್ವಿಜ ಉಚ್ಯತೇ”  ಪ್ರಾಕೃತಿಕವಾಗಿ ಹುಟ್ಟವ ಜೀವಿಗಳು ಶೂದ್ರರಾಗಿಯೇ ಜನಿಸಿ ಉಪನಯನ ಸಂಸ್ಕಾರದಿಂದ ದ್ವಿಜರೆನಿಸುವರು, ಅರ್ಥಾತ್ ಸಂಸ್ಕಾರ ಹೊಂದಿ ಬ್ರಾಹ್ಮಣತ್ವವನ್ನು ಹೊಂದುವರು. ಆದರೆ ವೀರಶೈವರು ತಾಯಿಯ ಗರ್ಭದಲ್ಲಿರುವ ಶಿಶುವಿಗೆ ೮ನೇ ತಿಂಗಳಲ್ಲಿ ಲಿಂಗಸಂಸ್ಕಾರ ಮಾಡುವದರಿಂದ ಈ ಮಗು ಶೂದ್ರನಾಗದೆ ಲಿಂಗ ಸಂಬಂಧವುಳ್ಳದಾಗಿ ಜನಿಸುವದು. ಲಿಂಗೋದ್ಭವನಾಗಿಯೇ ಮರ್ತ್ಯಕ್ಕೆ ಬರುವದು. ಲಿಂಗಧಾರಿಯಾಗಿ ಲಿಂಗವನ್ನೇ ಪ್ರಾಣವಾಗಿಸಿಕೊಳ್ಳುವನು. ಪ್ರಾಣಲಿಂಗಿಯೆನಿಸುವನು. ವೀರಶೈವರು ಜಗತ್ತನ್ನು ಮಿಥ್ಯವೆಂದು ಭಾವಿಸಲಿಲ್ಲ. ಎಲ್ಲವೂ ಶಿವಮಯವೆಂದು ಭಾವಿಸಿ ಶಿವನಿತ್ತ ಪದಾರ್ಥಗಳನ್ನು ಲಿಂಗಮುಖವಾಗಿ ಭೋಗಿಸುವರು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರವು ಭೋಗಾಂಗವೆನಿಸುವದು. ಲಿಂಗಭೋಗೋಪಭೋಗಿಗಳಾಗಿ, ಲಿಂಗದಲ್ಲಿ ಬೆರೆಯುವ ಯೋಗವನ್ನು ಸಾಧಿಸುವರು. ಅದಕ್ಕಾಗಿ ಕೊನೆಯದು ಯೋಗಾಂಗವೆನಿಸಿತು. ತ್ಯಾಗಾಂಗದಲ್ಲಿ ಜೀವಗುಣಗಳ ತ್ಯಾಗವಿದೆ. ಸಾಂಸಾರಿಕ ವ್ಯಾಮೋಹದ ತ್ಯಾಗವಿದೆ. ಜಡಗುಣಗಳ ತ್ಯಾಗವಿದೆ. ತನುಗುಣಗಳ ತ್ಯಾಗವಿದೆ. ಲಿಂಗಭೋಗೋಪಭೋಗಿಯಾಗಿ ಎಲ್ಲ ಭೋಗಗಳನ್ನು ಭೋಗಿಸಿ ಲಿಂಗದೊಡನೆ ಬೆರೆಯುವ ಶಿವಯೋಗ ಸಾಧನೆಯಿರುವುದರಿಂದ ಯೋಗಾಂಗವೆನಿಸುವದು. ಲಿಂಗವೆ ತಾನಾಗುವ ಯೋಗವನ್ನು ಹೊಂದುವನು.

ಇಂಥ ಕಾಯದ ಅರಿವನ್ನು ಯಥಾರ್ಥವಾಗಿ ನಿರೂಪಿಸಿದ ‘ಕರಣ ಹಸಿಗೆ’ ಯು ಶಿವಾನುಭವಿಗಳ ಪಠ್ಯವೇ ಆಗಿರುವದು. ಚಿನ್ಮಯಾನುಗ್ರಹವನ್ನು ಹೊಂದುವವರು ಅವಶ್ಯವಾಗಿ ಕರಣಹಸಿಗೆಯನ್ನು ಅಧ್ಯಯನ ಮಾಡಲೇಬೇಕು. ಅನುಗ್ರಹ ಮಾಡುವ  ಪೂರ್ವದಲ್ಲಿ ಕರಣ ಹಸಿಗೆಯನ್ನು ಕುರಿತು ಚಿಂತನ ಮಾಡುತ್ತಿದ್ದರು. ನಂತರ ಧಾರ್ಮಿಕ ಸಂಸ್ಕಾರ ಸಂಪನ್ನವಾಗುತ್ತಿತ್ತು, ಸಂಸ್ಕಾರಕ್ಕೆ ಪೂರಕವಾಗಿ ಅಧ್ಯಾತ್ಮದ ಚಿಂತನ ನಡೆಯಬೇಕು. ಶರೀರವಿಜ್ಞಾನದ ವಿವೇಚನೆಗೈಯ್ಯುವದರಿಂದ ಆತ್ಮಜ್ಞಾನಕ್ಕೆ ಅನುವಾಗುವದು. ಅಧ್ಯಾತ್ಮಸಿದ್ಧಿ ಲಭಿಸುವುದು.

 ‘ಕರಣ ಹಸಿಗೆ’ಯ ವಿಷಯಗಳನ್ನು ಪರಶೀಲಿಸಿದರೆ ಇದು ವೀರಶೈವರಿಗೇನೇ ಮೀಸಲಾದ ಕೃತಿಯಲ್ಲ. ಮಾನವ ಮಾತ್ರರಿಗೇನೇ ಸಂಬಂಧಿಸಿದ ಮಹತ್ವದ ಕೃತಿಯಾಗಿದೆ. ಮಾನವ ಶರೀರವನ್ನು ವಿಶ್ಲೇಷಿಸುವ ಗ್ರಂಥವಾಗಿರುವದರಿಂದ ಸಕಲ ಮಾನವರು ಇದನ್ನು ಓದಿ ಅರ್ಥೈಸಿಕೊಳ್ಳ ಬಹುದು. ಶರೀರದ ರಚನೆಯ ಸಿದ್ದಾಂತ ಇದಾಗಿರುವುದರಿಂದ ಇದರ ವಿಶೇಷತೆಯನ್ನು ಸಕಲರೂ ಅರಿಯಬೇಕು. ವೀರಶೈವರ ಸಿದ್ಧಾಂತವು ತತ್ವ ತ್ರಯಗಳಲ್ಲಿ ಅಡಗಿರುವದರಿಂದ ಆ ವಿಚಾರ ಇದರಲಿಲ್ಲ. ಇದು ವಾದ- ವಿವಾದಗಳಿಗೂ ಕಾರಣವಾಗಿಲ್ಲ. ಮತ ಧರ್ಮದ ಚರ್ಚೆ ಇದರಲ್ಲಿಲ್ಲ. ಭಾರತೀಯ ಸನಾತನ ಧರ್ಮದ ಅರಿವನ್ನು ಮಾಡಿಕೊಳ್ಳಬಹುದಾದ ವಿಶಿಷ್ಟ ಕೃತಿಯಿದು. ವೇದಾಂತಿಗಳು ಚಿಂತಿಸಿದ ಪಂಚೀಕರಣದ ವಿಚಾರ ಇಲ್ಲಿದೆ. ಪಂಚಭೂತಗಳ ಗುಣ-ಕರ್ಮ-ವರ್ಣ-ಧರ್ಮಗಳ ಅಧಿದೇವತೆ ಚಿಂತನ ಇಲ್ಲಿದೆ. ಇಂದ್ರಿಯಗಳ ವಿಶ್ಲೇಷಣೆಯೊಂದಿಗೆ ಹಲವಾರು ವಿಷಯಗಳ ವಿವೇಚನೆಯಿದೆ.

 ಆಧುನಿಕ ಶರೀರ ವಿಜ್ಞಾನಿಗಳು ಚಿಂತಿಸಿರುವುದಕ್ಕಿಂತಲೂ ಹೆಚ್ಚಿನ ವಿಷಯ ವಿವೇಚನೆ ಇಲ್ಲಿ ಲಭಿಸುವುದು. ಆದರೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಾರೀರಿಕ ಕ್ರಿಯೆಗಳ ಬಗೆಗೆ, ಶಾರೀರಿಕ ರೋಗಗಳ ಬಗೆಗೆ, ಮತ್ತು ರೋಗ ಚಿಕಿತ್ಸೆ ಬಗೆಗೆ ಬಹಳಷ್ಟು ಸಂಶೋಧನೆ, ಚಿಂತನಗಳು ಬೆಳೆದು ಬಂದಿವೆ. ಯಾಂತ್ರೀಕರಣಗಳ ಆವಿಷ್ಕಾರವೂ ಆಗಿದೆ. ಹಲವಾರು ಮುಖ್ಯ ಅವಯವಗಳ ಜೋಡಣೆಯೂ ಆಗುತ್ತಿದೆ. ಇದೂ ಇಂದಿನ ಅದ್ಭುತ ಸಾಧನೆಯೇ ಎನ್ನಬೇಕು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಶರೀರ ರಚನೆಯನ್ನು ತಿಳಿಸಿ ಕೊಡಲು ಶರೀರ ವಿಜ್ಞಾನ ಶಾಸ್ತ್ರ (Anatomy) ವನ್ನು ಆಮೂಲಾಗ್ರವಾಗಿ ಕಲಿಸುತ್ತಾರೆ. ಶರೀರ ಉತ್ಪತ್ತಿಗೆ ಸ್ತ್ರೀಯಳ ಅಂಡಾಣು ಪುರುಷನ ವೀರ್ಯಾಣು ಕಾರಣ. ಅದನ್ನೇ ಬಸವಣ್ಣನವರೂ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ʼ ಎಂದು ವಚನಿಸಿದ್ದುಂಟು. ಗರ್ಭಧಾರಣೆಯಾಗಬೇಕಾದರೆ ಸ್ತ್ರೀಯಳು ರಜಸ್ವಲೆಯಾದಾಗ ಪುರುಷನ ಸಂಯೋಗವೂ ಅವಶ್ಯವೆಂಬುದನ್ನು ಸ್ಪಷ್ಟಪಡಿಸಿರುವರು. ಗರ್ಭಧಾರಣೆಯಾದಂದಿನಿಂದ ಮಗು ಜನನವಾಗುವ ವರೆಗಿನ ವಿವರವನ್ನು ಕರಣ ಹಸಿಗೆ ಪ್ರತಿಪಾದಿಸಿದ್ದಕ್ಕಿಂತ ಮಿಗಿಲಾಗಿ ವೈದ್ಯಕೀಯ ವಿಜ್ಞಾನ ಅವಗತ ಮಾಡಿಸುತ್ತದೆ. ಗರ್ಭಧರಿಸಿ ಶರೀರದ ಅಂಗಗಳು ಬೆಳೆದ ೨೮೦ನೆ ದಿನ ಮಗು ಈ ಮರ್ತ್ಯಲೋಕಕ್ಕೆ ತಲೆಕೆಳಗಾಗಿ ಬರುವದು. ಜೀವಿಯ ಆರೋಗ್ಯ ರಕ್ಷಣೆ ಕಾಪಾಡಲು ರೋಗಕಾರಣ ಹಾಗೂ ರೋಗ ನಿಧಾನವನ್ನು ಹುಡುಕಲು ಸೂಕ್ಷ್ಮವಾದ ಅಧ್ಯಯನ  ನಡೆದಿರುವುದು. ಮಾನವನ ಕೈಕಾಲುಗಳ ಬಗೆಗೆ ಆರು ತಿಂಗಳ ಚಿಂತನ ನಡೆದರೆ; ಕುತ್ತಿಗೆಯಿಂದ ಮೇಲೆ ಕಿವಿ, ಮೂಗು, ತಲೆ ಬರುಡೆಗಳ ಬಗೆಗೆ ಅಧ್ಯಯನ ಮುಂದುವರೆವುದು. ಹೀಗೆ ಚಿಂತನ ಮಂಥನ ನಡೆದಂತೆ, ಹೊಟ್ಟೆಯಲ್ಲಿಯ ಅಂಗಾಂಗಗಳ ಸಂಶೋಧನೆಯೂ ಮುಖ್ಯವಾಗುವದು. ದೇಹದ ಬಿಡಿಭಾಗಗಳನ್ನು ಕುರಿತು ಸೂಕ್ಷ್ಮವಾದ ಅನ್ವೇಷಣೆ ಜರುಗುತ್ತದೆ. ಶರೀರದಲ್ಲಿಯ ಕೈಕಾಲುಗಳ, ಹೊಟ್ಟೆಯಲ್ಲಿ ಪುಪ್ಪಸ, ಯಕೃತ್ತು ಮೊದಲಾದವುಗಳನ್ನು ಚನ್ನಾಗಿ ಪರಿಶೀಲಿಸುತ್ತಾರೆ. ನರನಾಡಿಗಳ-ಅಸ್ಥಿಗಳ ಬೆಳವಣಿಗೆ, ರಕ್ತ ಪ್ರಸರಣ ರಕ್ತಶುದ್ದೀಕರಣ ಇವೆಲ್ಲವುಗಳ ವ್ಯವಸ್ಥಿತ ಅಧ್ಯಯನ ಇಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.

ಆಧುನಿಕ ವೈದ್ಯ ವಿಜ್ಞಾನಿಗಳು ಮಾನವರ ಗುಣಾವಗುಣಗಳ ರೋಗಾದಿಗಳನ್ನು ಅರಿಯಲು ವಂಶವಾಹಿನಿ (ಜೀನ್ಸ)ಯ ಅಧ್ಯಯನಕ್ಕೆ ಮಹತ್ವ ಕೊಟ್ಟಿರುವರು. ಆದರೆ ಸೃಷ್ಟಿಕರ್ತನಾದ ಜಗನ್ನಿಯಾಮಕತ್ವದ ವ್ಯವಸ್ಥೆ ಕುರಿತು ಇಂದಿಗೂ ಉತ್ತರಿಸಿಲ್ಲವೆಂಬುದನ್ನು ಸಂಶೋಧಕರೂ ಒಪ್ಪುತ್ತಾರೆ. ೮೫೦ ವರುಷಗಳ ಹಿಂದೆಯೇ ಶಿವಶರಣರ ಅನುಭಾವ ಅನುಭೂತಿಗಳು ಬಹು ಎತ್ತರಕ್ಕೆ ತಲುಪಿವೆ. ಆತ್ಮನನ್ನು ಕುರಿತು ಚಿಂತಿಸಿದ್ದಾರೆ. ಅಲ್ಲದೆ ಮಾನವನ ಹುಟ್ಟು ಬೆಳವಣಿಗೆಯ ಬಗೆಗೂ ಆಲೋಚಿಸಿದ್ದಾರೆ. ಇಂದು ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಗುರುತಿಸಬಹುದಾದ ಸಂಗತಿಗಳನ್ನು ಸಾಧನ-ಸಾಮಗ್ರಿಗಳಿಲ್ಲದ ಪೂರ್ವದಲ್ಲೂ ಹಿಂದಿನವರು ಸಾಧಿಸಿದ ಸಾಧನೆಯೂ ಅಲ್ಪವಲ್ಲ. ಗರ್ಭ ಬೆಳವಣಿಗೆ ಶರೀರದಲ್ಲಿ ಅವಯವಗಳ ಕ್ರಿಯೆಗಳೊಂದಿಗೆ ಆಂತರಿಕ ಗುಣಾವಗುಣಗಳ ವಿಚಾರವನ್ನು ನಿರೂಪಿಸಿದ್ದು ಮಹತ್ವದ ಅಂಶಗಳಲ್ಲವೇ ?

ಕರಣಹಸಿಗೆಯ ವ್ಯಾಖ್ಯಾನಗಳು ಸಾಕಷ್ಟು ಕಾಣಬರುವುದಿಲ್ಲ. ಒಂದೆರಡು ವೇದ್ಯವಾದರೂ ಅರ್ಥೈಸುವುದು ಸುಲಭವೆನಿಸವು. ಇನ್ನು ಬೇರೆ ಬೇರೆ ರೀತಿಯ ಮೂಲ ಪ್ರಕಟನೆಗಳು ಮಾತ್ರ ಕೆಲಮಟ್ಟಿಗೆ ಆಗಿವೆ. ಇತ್ತೀಚೆಗೆ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಸಂಪಾದಿಸಿದ ಚನ್ನಬಸವಣ್ಣನವರ ಕರಣ ಹಸಿಗೆಯು ಸುಂದರ ಆವೃತ್ತಿಯಲ್ಲಿ ಬೆಳಕು ಕಂಡಿದೆ. ಅನೇಕ ನ್ಯೂನ್ಯತೆಗಳನ್ನು ಸರಿಪಡಿಸಿ ಪ್ರಕಟಿಸಿದ್ದಾರೆ. ಆದರೂ ಮೂಲ  ಕೃತಿಗಿಂತಲೂ ಟೀಕಾಕಾರನ ವಿವರಣೆ ಸರಳವೆನಿಸುವುದಿಲ್ಲ. ಭಾಷೆ ಶಬ್ದಗಳು ಸುಲಭ ಗ್ರಾಹ್ಯವೆನಿಸುವುದಿಲ್ಲ, ಸಂವಾದ ರೂಪದಲ್ಲಿ ದೀರ್ಘವಾದ ಟೀಕೆ ಬಂದಿದ್ದರೂ ಇಂದಿನ ದಿನಮಾನಗಳಲ್ಲಿ ಕಾಲಾವಕಾಶಕ್ಕೆ ಅನುಗುಣವಾಗಿ ಅರ್ಥೈಸಿಕೊಳ್ಳಲು ಸುಲಭವಾಗಲೆಂದು ಈ ಕೃತಿಯ ವ್ಯಾಖ್ಯಾನವನ್ನು ಕೈಕೊಳ್ಳ ಬೇಕಾಯಿತು.

 “ಕರಣ ಹಸಿಗೆ’ ಇಲ್ಲಿ ಎರಡು ಪದಗಳಿವೆ. ಕರಣ ಮತ್ತು ಹಸಿಗೆ; ಕರಣವೆಂದರೆ ಸಾಧನ, ಇಲ್ಲಿ ಕರಣ ಪದಕ್ಕೆ ತತ್ತ್ವಂಗಳು ಎಂದು, ಹಸಿಗೆ ಯೆಂದರೆ ವಿಭಾಗ; ಶರೀರದಲ್ಲಿ ಬರುವ ತತ್ತ್ವಗಳನ್ನು ಬೇರೆ ಬೇರೆಯಾಗಿ ವಿಭಾಗಿಸಿ ತೋರುವುದೇ ಈ ಕರಣ ಹಸಿಗೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೊಂದು ದೃಷ್ಟಾಂತವನ್ನು ಸಹ ನೀಡಿರುವರು.

 ಒಬ್ಬ ಒಕ್ಕಲಿಗನು ತನ್ನ ಹೊಲದಲ್ಲಿ ಹದವಾದ ಮಳೆಯಾದರೆ ಎತ್ತುಗಳ ಸಹಾಯದಿಂದ ಉಪಕರಣಗಳನ್ನು ಉಪಯೋಗಿಸಿ ಹೊಲವನ್ನು ಹಸನುಮಾಡಿ ಹಲವಾರು ರೀತಿಯ ಬೀಜಗಳನ್ನು ಬಿತ್ತುತ್ತಾನೆ. ಕಾಲಕಾಲಕ್ಕೆ ಕಳೆ ಕಸಗಳನ್ನು ತೆಗೆದು ಬೆಳೆಯನ್ನು ಬೆಳೆಸುವನು. ಬೆಳೆ ಮಾಗಿದ ಬಳಿಕ, ಅದನ್ನು ಕಟಾವು ಮಾಡಿ ಕೂಡಿ ಹಾಕುತ್ತಾನೆ. ಶುಭಮುಹೂರ್ತದಲ್ಲಿ ಕಣಮಾಡಿ ಒಕ್ಕೂವನು. ಒಕ್ಕಿ ತೂರಿ ರಾಶಿಯನ್ನು ಸಿದ್ಧಗೊಳಿಸುವನು. ಪೂಜಿಸಿ ಗೋಣಿಚೀಲಗಳಲ್ಲಿ ಸಂಗ್ರಹಿಸುವನು. ಚಕ್ಕಡಿಯಲ್ಲಿ ಮನೆಗೆ ಒಯ್ದು ವ್ಯವಸ್ಥೆಗೊಳಿಸುವನು. ಎಲ್ಲ ಧಾನ್ಯಗಳ ಲೆಕ್ಕಾಚಾರ ಮಾಡುವನು. ಜೋಳ ಇಷ್ಟಾ ಯಿತು. ಹೆಸರು, ಮಡಕೆ, ತೊಗರಿ, ಉದ್ದು, ಅಲಸಂದಿ ಇಷಿಷ್ಟಾದವು. ಭತ್ತ, ಗೋದಿ, ಕಡಲೆ ವಗೈರೆ ಕಾಳುಗಳು ಇಷ್ಟಿಷ್ಟಾದವು ಎಂದು ಎಲ್ಲವನ್ನು ಅಳೆದಳೆದು ಭಾಗ

ಮಾಡುವನು. ಇದುವೆ ಹಸಿಗೆಯೆನಿಸುವದು.

ಇದರಂತೆ ಬ್ರಹ್ಮಾಂಡವೆಂಬ ಜಗತ್ತಿನ ಕ್ಷೇತ್ರಕ್ಕೆ ಒಡೆಯನಾದ ಪರಶಿವನೆಂಬ ಮಹಾ ಒಕ್ಕಲಿಗನು- ಜಗತ್ತಿನ ನಿರ್ಮಾಣ ಮಾಡಿದನು. ಮೊಟ್ಟ ಮೊದಲು ತನ್ನ ಪಂಚಮುಖಗಳಿಂದ ಪಂಚಭೂತಗಳನ್ನು ನಿರ್ಮಿಸಿದನು. ಅವುಗಳ ತಾರತಮ್ಯದಿಂದ ಇಪ್ಪತ್ತೈದು ತತ್ತ್ವಗಳನ್ನು ಹುಟ್ಟಿಸಿ ಶರೀರ ರಚನೆಯೊಂದಿಗೆ ತನ್ನ ಗೋಪ್ಯಮುಖದಲ್ಲಿ ಆತ್ಮನನ್ನು ಸೃಜಿಸಿದನು. ಆ ಆತ್ಮನು ದೇಹವೆ ನಾನೆಂಬ ಭಾವದಿಂದ ತನ್ನ ನಿಜದರಿವನ್ನು ಮರೆಯುವನು. ಅಜ್ಞಾನಿಯಾಗಿ ಅನೇಕ ಜನ್ಮ-ಜನ್ಮಾಂತರಗಳನ್ನು ಹೊಂದುತ್ತಲಿರುವನು. ಪುಣ್ಯವಶದಿಂದ ದೇವತಾ ಜನ್ಮವನ್ನು, ಪಾಪದಿಂದ ಸ್ಥಾವರ ಜನ್ಮವನ್ನು ಪುಣ್ಯ-ಪಾಪಗಳ ಸಮ್ಮಿಶ್ರಣದಿಂದ ಮಾನವ ಜನ್ಮವನ್ನು ಪಡೆಯುವನೆಂದು ಅನುಭಾವಿಗಳು ನಿರೂಪಿಸುವುದುಂಟು. ಈ ಮಾನವ ಶರೀರದಲ್ಲಿಯೂ ಶಾರೀರಿಕ ಹಸಿಗೆಯನ್ನು ವಿವರಿಸುವದೇ ಈ ಕೃತಿಯ ಮೂಲ ಗುರಿಯಾಗಿದೆ.

 ಶಿವಶರಣರು ವೇದ-ಉಪನಿಷತ್ತುಗಳನ್ನು, ಆಗಮ-ತಂತ್ರಗಳನ್ನು, ಯೋಗ-ಪುರಾಣಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಅವರಲ್ಲಿ ಚನ್ನಬಸವಣ್ಣನವರು ಸಂಸ್ಕೃತ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಭ್ಯಾಸ ಮಾಡಿದವರು. ಈ ”ಕರಣ ಹಸಿಗೆ’ ಕೃತಿಯಲ್ಲಿ ವಿಜಯ ಭೈರವಾಗಮ’ದ ಉಲ್ಲೇಖ ಮಾಡಿದ್ದಾರೆ. ಈ ಆಗಮವು ಪಾರಮೇಶ್ವರಾಗಮದ ಶಾಖಾಗಮ ವಿಜಯ ಭೈರವಿ ಆಗಮ. ತಂತ್ರ ಸಂಗ್ರಹ ಹಾಗೂ ವಾತುಲ ಶುದ್ಧಾಗಮಬಗಳೂ ಈ ಕೃತಿಗೆ ಸಹಕಾರಿಯೆನ್ನಬಹುದು. ವೇದದ ಅಂತಿಮ ಭಾಗವಾದ ಉಪನಿಷತ್ ಪ್ರತಿಪಾದ್ಯ ವಿಷಯವೇ ವೇದಾಂತವೆನಿಸಿದೆ. ವೇದಾಂತದಲ್ಲಿಯೂ ಪಂಚೀಕರಣದ ವಿಚಾರ ಮಾಡಲಾಗಿದೆ. ದೇಹೋತ್ಪತ್ತಿಗೆ ಪಂಚೀ ಕರಣವೇ ಮುಖ್ಯ.  ಸಾ೦ಖ್ಯರು ಮೊಟ್ಟ ಮೊದಲು ತತ್ತ್ವಗಳನ್ನು ಪರಿಗಣಿಸಿದವರು. ೨೫ ತತ್ತ್ವಗಳನ್ನು ಪ್ರತಿಪಾದಿಸಿದವರು ಸಾಂಖ್ಯರು. ಅಹಂಕಾರ, ದಶನಾಡಿ, ದಶವಾಯು, ಪಂಚೀಕರಣ,ತ್ರಿಗುಣಗಳು,ತಾಪತ್ರಯ ಮುಂತಾದವುಗಳನ್ನು ವಿವರಿಸುವಲ್ಲಿ ಅತ್ಯಂತ ಪ್ರಾಚೀನ ಪರಂಪರೆ ಸಾಂಖ್ಯರಲ್ಲಿದೆ. ಆದರೆ ಸಾಂಖ್ಯರ ಪದ್ದತಿಗಿಂತ ʼಕರಣಹಸಿಗೆʼಯು ಭಿನ್ನವಾಗಿದೆಯೆಂಬುದನ್ನು ನೋ

ಪೂಜ್ಯ ಜಗದ್ಗುರು ಡಾ.ಶ್ರೀ ಸಿದ್ದರಾಮ ಸ್ವಾಮಿಗಳು ತೋಂಟದಾರ್ಯಮಠ  ಗದಗ

ಸಂಸಾರದ ಕಷ್ಟಕೋಟಲೆಗಳಲ್ಲಿ ಸಿಕ್ಕು ಘಾಸಿಯಾದ ಮನುಷ್ಯನು ಶಿವಪಥವನ್ನು ಅರಿತು ನಿತ್ಯಸುಖಿಯಾಗಬೇಕೆಂದು ಬಯಸುತ್ತಾನೆ. ಶಿವಪಥವೆಂದರೆ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ. ತಾನು ಶಿವನ ಅಂಗವಾದ ಆತ್ಮ ಎಂಬ ಜ್ಞಾನ

ಪಡೆದು ಪುನಃ ಶಿವನೊಂದಿಗೆ ಸಾಮರಸ್ಯ ಪಡೆಯುವುದು. ಇದುವೆ ಮೋಕ್ಷಮಾರ್ಗ. ಶಿವಪಥದಲ್ಲಿ ಮುನ್ನಡೆಯಬೇಕೆಂಬ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ(ಗುರುಪಥ)ದ ಆವಶ್ಯಕತೆ ಇದೆ.  ವೇದ, ಆಗಮ, ಶಾಸ್ತ್ರ, ಪುರಾಣಗಳು ಕಾಣಲರಿಯದ ಶಿವಪಥವನ್ನು

ಕಂಡವನು ಗುರುಮಾತ್ರ. ಶಿವಪಥವನ್ನು ತೋರಲು ಆತನೇ ಸಮರ್ಥ. ಗುರು ತನ್ನಲ್ಲಿರುವ ಅಪಾರ ಕರುಣೆಯಿಂದ ಮೋಕ್ಷಾಪೇಕ್ಷಿಯಾದ ವ್ಯಕ್ತಿಯ ಅಜ್ಞಾನವನ್ನು ಕಳೆದು ಸುಜ್ಞಾನಿಯಾಗಿಸುತ್ತಾನೆ. ಭವಿತನವನ್ನು ಕಳೆದು ಭಕ್ತನಾಗಿಸುತ್ತಾನೆ. ಹೀಗೆ

ಗುರುಕರುಣೆ ಪಡೆದ ಭಕ್ತನೆ ಶಿವಪಥಕ್ಕೆ ಅರ್ಹನಾಗುತ್ತಾನೆ.

 ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಗುರುವಿಗಿಂತ ಅಧಿಕವಾದುದು ಯಾವುದೂ ಇಲ್ಲ. ಗುರೋರಧಿಕಂ ನ ಗುರೋರಧಿಕಂ’ ಎಂಬುದು ಶೃತಿವಾಕ್ಯ. ‘ಗುರುದೈವಾತ್ಪರಂ ನಾಸ್ತಿ’ ಗುರುವಿಗಿಂತಲೂ ಶ್ರೇಷ್ಠನಾದ ದೇವರಿಲ್ಲ. ಅವನು ಬ್ರಹ್ಮನ್ನರಿತ ಪರಬ್ರಹ್ಮ. ನಿಜವನರಿದ ನಿಶ್ಚಿಂತ, ಅವನೇ ಶಿವಪಥದರ್ಶಕ. ಶಿಲೆಯೊಳಗಣ ಬೆಂಕಿಯಂತೆ, ಬೀಜದೊಳಗಣ ವೃಕ್ಷದಂತೆ ದೃಷ್ಟಿಗೆ ಅಗೋಚರನಾದ ಶಿವನನ್ನು ತೋರುವವನೇ ಶ್ರೀಗುರು. ಇಂಥ ಗುರುವಿನ  ಉಪದೇಶವನ್ನು ಹೊಂದಿದಾಗಲೇ ನರರಿಗೆ ಮುಕ್ತಿ. ಗುರುವಚನದಿಂದ ಅಂಗ ಮನ ಪ್ರಾಣಗಳು ಪರಿಶುದ್ಧವಾಗಿ ಸದ್ಭಕ್ತಿ ನೆಲೆಗೊಳ್ಳುವುದು. ಭವಪಾಶ ಹರಿದು ನಿಜಮುಕ್ತಿಯ ದರ್ಶನವಾಗುವುದು.

ಗುರೂಪದೇಶ, ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತಪಸ್ಸಿನಿಂದ ಮೋಕ್ಷವನ್ನು ಪಡೆಯಬೇಕೆಂಬ ಛಲದಿಂದ ಯುವಕ್ರೀತನೆಂಬ ಋಷಿಕುಮಾರ ಕಾಡಿಗೆ ತೆರಳಿದ. ಕಾಡಿನಲ್ಲಿ ಆಗಲೇ ತಪೋನಿರತರಾಗಿದ್ದ ಹಿರಿಯ ಋಷಿಮುನಿಗಳೆಲ್ಲರೂ

ಗುರೂಪದೇಶ ಹೊಂದಿ ಸಾಧನೆ ಮುಂದುವರಿಸಲು ಪರಿಪರಿಯಾಗಿ ಹೇಳಿದರೂ ಆತ ತನ್ನ ನಿರ್ಧಾರಕ್ಕೆ ಅಚಲನಾಗಿದ್ದ. ಒಂದು ದಿನ ಯುವಕ್ರೀತ ಗಂಗಾನದಿಯ ತೀರದಲ್ಲಿ ನಡೆದು ಹೋಗುವಾಗ ನದಿಯಲ್ಲಿ ಮಳಲನ್ನು (ಉಸುಕು) ಎಸೆಯುತ್ತ ಕುಳಿತಿದ್ದ ಮುದುಕನೊಬ್ಬನನ್ನು ಕಂಡ. ಆಶ್ಚರ್ಯಚಕಿತನಾಗಿ ‘ಎಷ್ಟು ದಿನಗಳಿಂದ ಹೀಗೆ ನದಿಯಲ್ಲಿ ಮಳಲನ್ನು ಎಸೆಯುತ್ತ ಕುಳಿತಿರುವೆ? ಮಳಲನ್ನು ನದಿಗೆ ಎಸೆಯುತ್ತಿರುವ ಕಾರಣವೇನು?’ ಎಂದು ಕೇಳಿದ. ಆಗ ಮುದುಕನು ‘ಕಳೆದ ಎಂಬತ್ತು ವರ್ಷಗಳಿಂದ ತುಂಬಿ ಹರಿಯುತ್ತಿರುವ ಈ ನದಿಗೆ ಮಳಲಿನಿಂದ ಸೇತುವೆ ನಿರ್ಮಿಸುತ್ತಿರುವೆ’ ಎಂದು ಉತ್ತರಿಸಿದ. ಅಯ್ಯಾ! ಎಂದಾದರೂ ಈ ಮಳಲಿನಿಂದ ಸೇತುವೆ ನಿರ್ಮಾಣ ಸಾಧ್ಯವೇ? ವ್ಯರ್ಥವಾಗಿ ಸಮಯವನ್ನೇಕೆ ಕಳೆಯುತ್ತಿರುವೆ! ಎಂದು ಯುವಕ್ರೀತ ಮರಳಿ ಮುದುಕನನ್ನು ಪ್ರಶ್ನಿಸಿದ. ಪ್ರಶಾಂತ ಮುದ್ರೆಯಲ್ಲಿದ್ದ ಆ ಮುದುಕ ‘ಅಪ್ಪಾ ಯುವಕ್ರೀತ! ಗುರೂಪದೇಶ, ಗುರುಕರುಣೆ, ಗುರುವಿನ

ಮಾರ್ಗದರ್ಶನವಿಲ್ಲದೆ ನೀನು ಮೋಕ್ಷವನ್ನು ಸಂಪಾದಿಸುವುದಾದರೆ ಈ ಹಿಡಿ ಮಳಲಿನಿಂದ ಜನ ಸಂಚಾರಕ್ಕೆ ಸೇತುವೆ ನಿರ್ಮಾಣವೂ ಸಾಧ್ಯ’ ಎಂದು ಉತ್ತರಿಸಿದಾಗ ತನ್ನ ತಪ್ಪಿನ ಅರಿವಾಗಿ ಶಿವಜ್ಞಾನ ಸಿದ್ಧಿಯುಳ್ಳ ಗುರುವಿನಿಂದ ಶಿವಪಥವನ್ನರಿಯುತ್ತಾನೆ.

 ಅಧ್ಯಾತ್ಮ ಸಿದ್ಧಿಯನ್ನು ಪಡೆದ, ನಿಜದ ನಿಲವನ್ನರಿತ, ಅಪಾರ ಕರುಣೆಯುಳ್ಳ ಗುರುವಿನ ಮಾರ್ಗದರ್ಶನದಲ್ಲಿ ಮಾತ್ರ ಶಿವಪಥದ ಅರಿವು ಸಾಧ್ಯವಾಗುವುದು. ಅಂತೆಯೇ ಬಸವಣ್ಣನವರು ‘ಶಿವಪಥ ಅರಿವೊಡೆ ಗುರುಪಥ ಮೊದಲು’ ಎಂದು ಹೇಳಿರುವುದು. ಆದ್ದರಿಂದ ಮೋಕ್ಷಾಪೇಕ್ಷಿಯಾದ ಮನುಷ್ಯನು ಶ್ರದ್ಧೆಯಿಂದ, ಕಿಂಕರಭಾವದಿಂದ ಗುರುಸೇವೆ ಮಾಡಿ ಗುರುಕರುಣೆ, ಗುರುಪಥ ಹೊಂದುವುದೇ ಸೂಕ್ತ.

ಕರಣ ಹಸಿಗೆ ಅರ್ಥಾತ್ ದೇಹಾತ್ಮ ವಿಜ್ಞಾನ

ಲೇಖಕರು ಡಾ.ಸ. ಜ. ನಾಗಲೋಟಿಮಠ

MBBS.DCP.MD.FIC Path.

President Karnataka Rajya Vijnan Parishat.

Chairman Indian College of Pathologists

ಇದರಲ್ಲಿ ಚೆನ್ನಬಸವಣ್ಣನವರು ಹಲವಾರು ಸಂಗತಿಗಳನ್ನು ವಿವರಿಸಿದ್ದಾರೆ. ಜಗತ್ತಿನಲ್ಲಿ ಮೊಟ್ಟ ಮೊದಲು ಹುಟ್ಟಿದ್ದು ಪ್ರಣವ; ಅದು ಓಂಕಾರ. ಓಂಕಾರದಿಂದ ಜನ್ಮತಾಳಿದ್ದು ಎಂದರೆ ಪಂಚಮಹಾಭೂತಗಳು ಭಾರತೀಯರಾದ ನಾವು ಇದನ್ನು ನಂಬುತ್ತೇವೆ. ಪಂಚಮಹಾಭೂತಗಳೆಂದರೆ ಪೃಥ್ವಿ, ಅಪ್, ತೇಜ, ವಾಯು ಹಾಗೂ ಆಕಾಶ, ಈ ಪಂಚಭೂತಗಳನ್ನು ಬೇರೆ ದೇಶದವರು, ಸಂಸ್ಕೃತಿಯವರು ಮಾನ್ಯ ಮಾಡಿದಂತಿಲ್ಲ. ಈ ಸಂಗತಿಯನ್ನು ಭಾರತೀಯ ವಿಜ್ಞಾನಿಗಳು ಒರೆಗೆ ಹಚ್ಚಿ ಸ್ಪಷ್ಟ ಪಡಿಸಬೇಕು. ಜೀವ ಜಗತ್ತು ಹುಟ್ಟಿದುದು ಪಂಚಮಹಾಭೂತಗಳಿಂದ ಎಂದು ವರ್ಣಿಸುತ್ತೇವೆ. ಇದನ್ನೂ ಸಹ ಸಂಶೋಧಿಸಿ ಜಗತ್ತಿನ ವಿಜ್ಞಾನಿಗಳಿಗೆ ವಿವರಿಸಬೇಕು. ಓಂಕಾರವಾಗಲಿ, ಪಂಚ ಮಹಾಭೂತಗಳಾಗಿ ಸುಳ್ಳು ಎಂದು ಹೇಳಲು ಬರುವದಿಲ್ಲ. ಯಾಕಂದರೆ ಮುಂದೆ ವರ್ಣಿಸಲ್ಪಡುವ ಪಿಂಡಸ್ಥಲದಲ್ಲಿಯ ವಿವರಣೆ ಎಷ್ಟು ಖಚಿತವಾಗಿದೆ ಎಂದರೆ ಅಚ್ಚರಿ ಎನಿಸುತ್ತದೆ. ಬರಿಗಣ್ಣಿಗೆ ಕಾಣಲು ಸಾಧ್ಯವಿರದ ವಸ್ತುಗಳನ್ನು ಕರಾರುವಕ್ಕಾಗಿ ವರ್ಣಿಸಿದ್ದಾರೆ. ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಬೆಳವಣಿಗೆಯನ್ನು ದಿನದಿನಕ್ಕೆ ವಾರದಿಂದ ವಾರಕ್ಕೆ ವಿವರಿಸಿದ್ದಾರೆ. ಪ್ರಥಮ ದಿನದಿಂದ ಪ್ರಾರಂಭಿಸಿ ಪ್ರಸವವಾಗುವವರೆಗೆ ಸರಿಯಾಗಿ ವರ್ಣನೆ ಬರುತ್ತದೆ. ಇಂದಿನ ವೈದ್ಯಶಾಸ್ತ್ರದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. (ಈ ವಿವರಗಳು ನಮಗೆ ದೊರೆಯುವದು ವಿರುಪಾಕ್ಷ ಪಂಡಿತರು ಬರೆದ ಚೆನ್ನಬಸವ ಪುರಾಣದಲ್ಲಿ )ಈ ಸಂಗತಿಗಳು ನಮ್ಮ ಜನರಿಗೆ ತಿಳಿಯಲೆಂದು  ನಾನು ಕೆಲವು ಮೆಡಿಕಲ್ ಕಾಲೇಜುಗಳ ಪ್ರಸವ ವಿಭಾಗಗಳಲ್ಲಿ ಇವನ್ನು ಬರೆಸಿ ತೂಗುಬಿಟ್ಟಿದ್ದೆ.  ಗ್ರಂಥದಲ್ಲಿ ಹೇಳಲ್ಪಡುವ ವಿಷ್ಣುವಾಯು ಹಾಗೂ ಸೂತಿಕಾವಾಯುಗಳು ಸತ್ಯವೇ ? ಎಂಬುದು ಚರ್ಚಿಸಲ್ಪಡಬೇಕು. ಇದಾಗಿಲ್ಲ, ಇದೆಲ್ಲ ಜರುಗಬೇಕಾಗಿದೆ. ನಮ್ಮ ವೈದ್ಯವಿಜ್ಞಾನಿಗಳು ಸಂಶೋಧಿಸಬೇಕು. ಇನ್ನೂ ಮುಂದೆ ಹೋಗಿ ಕರಣ ಹಸಿಗೆಯಲ್ಲಿ ಸಂಭೋಗದ ವೇಳೆ ದಿನಗಳ ಆಧಾರದ ಮೇಲೆ ಹುಟ್ಟುವ ಕೂಸಿನಲ್ಲಿ ಗುಣಗಳು ಮೂಡುತ್ತವೆ ಎನ್ನುತ್ತಾ, ಹುಟ್ಟುವ ಮಗುವಿನ ಲಿಂಗ ನಿರ್ಣಯಿಸಲ್ಪಡುತ್ತದೆ ಎನ್ನುತ್ತಾರೆ. ಇಂಥ ಸಂಗತಿಗಳನ್ನು ನಾವು ವಿಚಾರಿಸಬೇಕು. ಗರ್ಭದಲ್ಲಿಯ ಕೂಸಿಗೆ ಕಿವಿ ಕೇಳುವದು ಎಂದಿನಿಂದ ಎಂಬ ಪ್ರಶ್ನೆಗೆ ಇಲ್ಲಿ ಸೂಚನೆ ಇದೆ. ನಾವು ಅದನ್ನು ನಿರ್ಲಕ್ಷಿಸಿ ಬಿಟ್ಟೆವು. ಈ ಸಂಗತಿಯನ್ನು ಖಚಿತಗೊಳಿಸಲು ಬ್ರಿಟೀಷ ವೈದ್ಯ ವಿಜ್ಞಾನಿಗಳು ಮಾನವ ಪ್ರಯೋಗಗಳನ್ನು ನಡೆಸಿದರು. ಆರು ತಿಂಗಳ ಗರ್ಭವಾದಾಗ ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳಿಸುತ್ತದೆ ಎಂದು ಜಗತ್ತಿಗೆ ತೋರಿಸಿದರು.    ಇಂಥ ಘಟನೆಗಳು ನಮ್ಮನ್ನು ಬಡಿದೆಬ್ಬಿಸಬೇಕಾಗಿದೆ. ಮೂಲ ಕರಣ ಹಸಿಗೆ ಓದಲು ಸುಲಭವೆನಿಸುತ್ತಿರಲಿಲ್ಲ. ಮುಂಡರಗಿಯ ಸನ್ನಿಧಿಯವರು ಈ  ಗ್ರಂಥವನ್ನು ಬರೆದು ವಿಜ್ಞಾನಿಗಳಿಗೆ ಸಂಶೋಧನೆಯ ಮಹಾದ್ವಾರವನ್ನೇ ತೆರೆದಿದ್ದಾರೆ. ಮುಂದಿನ ಕಾರ್ಯವನ್ನು ವೈದ್ಯರೂ ವಿಜ್ಞಾನಿಗಳೂ ಎತ್ತಿಕೊಳ್ಳಬೇಕು.

ಕರಣಹಸಿಗೆ ಕೇವಲ ಧರ್ಮ ಗ್ರಂಥವಲ್ಲ ಅದು ವೀರಶೈವರಿಗೆ ಅವರ ತತ್ವಗಳನ್ನು ತಿಳಿಸುವ ಗ್ರಂಥವಲ್ಲ. ಇದು ವೈಜ್ಞಾನಿಕ ಗ್ರಂಥ. ಇಡೀ ಜಗತ್ತಿನ ಜನರು ಪಠಣ ಮಾಡುವ ಗ್ರಂಥ ಸಂಶೋಧನೆಗಳ ಬೀಜಗಳಿಂದ ಕೂಡಿ ಇಟ್ಟಿರುವ ಕಣಜವಾಗಿದೆ.

ಈ ಪುಸ್ತಕವನ್ನು ವಿರಕ್ತಸ್ವಾಮಿಗಳ ಬೆನ್ನಿಗೆ ಕಟ್ಟುವ ಪದ್ಧತಿ ಇದೆ. ಅದನ್ನು ಮುಂದುವರೆಸುವದಲ್ಲದೆ ವೈದ್ಯವಿಜ್ಞಾನಿಗಳ ಬೆನ್ನಿಗೆ ಕಟ್ಟಬೇಕೆಂಬುದು ನನ್ನ ಅನಿಸಿಕೆ.