ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು

ಇನ್ನೊಬ್ಬರ ಅನುಕರಣೆ ಮಾತ್ರ.

 ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.

 ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು.  ಅವು ದೇವರಿಗೆ ಒಪ್ಪಿತವಾದ ನೇಮಗಳು.

 ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ

ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.

 

ರಚನೆ: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳುಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ. ಕ್ಯಾಂಪ: ಅಧ್ಯಾತ್ಮ ಸಿರಿಗಿರಿ ಫಾರ್ಮ ಯಶವಂತನಗರ

ಜಯದೇವ ಗುರುದೇವ ಸದ್ಗುರು ಕುಮಾರ

ಇನ್ನಷ್ಟು ಬೇಡುವೆನು ಸ್ಮರಣೆಯನು ಕುಮಾರ

ಬಂದಷ್ಟು ಹಾಡುವೆನು ಅನುದಿನವು ಕುಮಾರ ||

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೧  ||

ಪೂರ್ಣ ನೀನು ಮಂದಿರದಿ ಪ್ರಕಟವಾದೆ ಕುಮಾರ

ಜಗದೊಳಗೆ ಜಗವಾಗಿ ಆಡಿರುವೆ ಕುಮಾರ

ಉಂಬಾತ ಉಣಿಸುವಾತ ನೀನೆ  ಕುಮಾರ

ಕೊಂಬಾತ ಕೊಡುವಾತ ನೀನೇ ಕುಮಾರ

ತನಗನ್ಯ ತಾ ಅನ್ಯ ಬಿಡಿಸಿಬಿಡು ಕುಮಾರ

ಮನೆಮಾರು ಬಂಧುಗಳು ಇಲ್ಲೆನಗೆ ಕುಮಾರ

ಕಡು ದುಃಖಿಯ ಸಲುಹುವ ಕರಣಾಳು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೨  ||

ನಿನ್ನಡಿಯ ಬಿಡಲಾರೆ ತೊರೆಯದಿರು ಕುಮಾರ

ಸಾಮಿಪ್ಯ ಬೇಡುವೆನು ಸದ್ಗುರು ಶ್ರೀ ಕುಮಾರ

ಕತ್ತಲೆಗೆ ತುತ್ತಾಗಿ ಸಾಯುವೆನು ಕುಮಾರ

ನಿನ್ನ ಪಾದ ಬಿಡದಂಥ ಮನವ ಕೊಡು ಕುಮಾರ

ನೀನಿರಿಸಿದಂತೆ ನಾನಿರುವೆನೈ ಕುಮಾರ

ನೀ ಮುಂದೆ ನಡೆದರೆ ಜಗ ಬೆಳಗು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೩  ||

ತಂದೆ ನೀನಿತ್ತ ಕಣ್ಣು ಮೂಡಿದರೆ ಕುಮಾರ

ಜಡ ದೇಹಿ ಮನುಜರ ಭವದೂರ ಕುಮಾರ

ನಡೆಯಿತ್ತು ಶಿವಗೋಷ್ಟಿ ನೆನಹಿನಲಿ ಕುಮಾರ

ಒಂದಾಯ್ತು ಗುನಗುನಸಿ ನಿನ್ನಲ್ಲಿ ಕುಮಾರ

ಆಕಾಶದತ್ತತ್ತ ನೀನೆ ಕುಮಾರ

ಪಾತಾಳದತ್ತಾಚೆ ನೀನೆ ಶ್ರೀ ಕುಮಾರ

ಎನ್ನಗಲ ನಿಮ್ಮಗಲ ಜಗದಗಲ ಕುಮಾರ

ದಿಕ್ಕುಗಳು ಕಟ್ಟದ ಅನಂತ ನೀ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೪  ||

ಎನ್ನಂಗದೊಳು ನೀ ಮೂಡಲ್ಕೆ ಕುಮಾರ

ಎನ್ನ ನಾಸಿಕದ ಗಂಧ ಆಚಾರಲಿಂಗ ಕುಮಾರ

ಎನ್ನ ನಾಲಗೆಯ ರಸ ಗುರುಲಿಂಗ ಕುಮಾರ

ಎನ್ನ ಕಣ್ಣಿನ ರೂಪ ಶಿವಲಿಂಗ ಕುಮಾರ

ಎನ್ನ ಚರ್ಮದ ಸ್ಪರ್ಷ ಚರಲಿಂಗ ಕುಮಅರ

ಎನ್ನ ಕಿವಿಯ ಶಬ್ಧ ಪ್ರಸಾದಲಿಂಗ ಕುಮಾರ

ನಾನಾಗಿ  ಇರುವುದೆಲ್ಲ ಮಹಾಲಿಂಗ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ   || ೫  ||

 ದೇಹ ದೇವಾಲಯದಲಿ ಚೈತನ್ಯ ಕುಮಾರ

ನೆಲ ನೀರುಗಾಳಿ ಬೆಂಕಿ ಬಯಲು ಶ್ರೀಕುಮಾರ

ದ್ವೈತ ಲೀಲೆಯ ಸುಖ ಗೀತಭಕ್ತಿ ಕುಮಾರ

ಸ್ವರವಿಟ್ಟು ಹಾಡಿದರೆ ಕೆಡುವ ಗೌಪ್ಯ ಕುಮಾರ

ಸ್ವಯಮೇವ ಸ್ವಯಂಭು ಪರಮ ಶ್ರೀಕುಮಾರ

ರತಿರಹಿತ ಅನ್ನದಾನಿ ಪರಿಣಾಮಿ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೬  ||

ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

 

 

ಪ್ರತೀ ಜೀವಿಗೆ ಆಧಾರ ಭಗವಂತನಿಂದ ನಿರ್ಮಾಣವಾದ ಈ ಭೂಮಂಡಲ.ಇದು ಪಂಚಭೂತಗಳಿಂದ ಆವೃತವಾದದ್ದು.ಇಲ್ಲಿ ಜೀವಿಸುವ ಪ್ರತಿ ಜೀವಿಗೂ ಸುಖ – ದುಃಖ, ಆಸೆ – ನಿರಾಸೆ,ನೋವು – ನಲಿವು ಹೀಗೆ ಎಲ್ಲ ಅನುಭವಗಳು ಸಾಮಾನ್ಯವೇ.ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ತಮ್ಮ ಕುಂದು ಕೊರತೆಗಳನ್ನು,ಕಷ್ಟ ಸುಖಗಳನ್ನು ತಮ್ಮಷ್ಟಕ್ಕೆ ತಾವೇ ನಿಭಾಯಿಸಿಕೊಳ್ಳುತ್ತವೆ. ಸಮತೋಲನದಲ್ಲಿ ಬದುಕು ನಡೆಸುತ್ತವೆ.ಆದರೆ ಮಾನವ ಮಾತ್ರ ಇವುಗಳಿಗಿಂತ ಭಿನ್ನ.ಇವನು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವವ. ಅತೃಪ್ತ,ಸ್ವಾರ್ಥ ಪರತೆಯನ್ನು ತುಂಬಿಕೊಂಡು ನಡೆವವ.ಇವನಿಗೆ ಸುಖ – ದುಃಖ,ನೋವು – ನಲಿವು ,ಲಾಭ – ನಷ್ಟ ಬಂದೊದಗಿದಾಗ ಒಂದೊಂದು ತರಹದ ಮನೋಸ್ಥಿತಿ ಇವನು ಎದುರಿಸುತ್ತಾನೆ.ಇವನು ಭೂಮಿಗೆ ಬಂದ ಕಾರಣ,ಧೇಯೋದ್ದೇಶ,ಕಾರ್ಯ ಕಲ್ಪ ಎಲ್ಲವನ್ನೂ ಬದಿಗೊತ್ತಿ ಲೋಕದ ಮಾಯಾವಶನಾಗಿ ಭವದ ಚಕ್ರದಲ್ಲಿ ಬಿದ್ದು ಭಿನ್ನ ಭಿನ್ನ ರೀತಿಯ ಗುಣಗಳನ್ನು ಹೊಂದಿ ದುಃಖಿಯಾಗಿ ಕೊನೆಗೆ ತನ್ನ ಕೈಲಾಗದಿದ್ದ ಪಕ್ಷದಲ್ಲಿ ಭಗವಂತ ,ಆತ್ಮ ,ಪರಮಾತ್ಮ ಎಂಬುದರ ಕಡೆಗೆ ಚಿತ್ತೈಸುವ. ಈ ಲೋಕದ ವ್ಯವಸ್ಥೆಗೆ ಅಂಟಿಕೊಂಡು ಬದಲಾದ ಮನುಷ್ಯ ಮತ್ತೆ ಆ ಪರಮ ಸ್ವರೂಪ ಪಡೆಯಬೇಕಾದರೆ ಅದಕ್ಕೆ ಮೂಲ ಬೇರು ಈ ಅಂತರಾತ್ಮ ನ ಅರಿವನ್ನು ತಿಳಿಸುವ ಅಧ್ಯಾತ್ಮ. ಇದು ಅವನ ಪಾಪಯುಕ್ತ ದೇಹ,ಮನಸು ಬುದ್ಧಿಯನ್ನು ಪುಣ್ಯಯುಕ್ತವನ್ನಾಗಿ ಮಾಡಿ ಮುಕ್ತನನ್ನಾಗಿ ಮಾಡುತ್ತದೆ.ಆ ಅಧ್ಯಾತ್ಮವನ್ನು ಅರಿಯಲು ಅವನಿಗೆ ಕೆಲವೊಂದಿಷ್ಟು ಮಾರ್ಗಗಳು ಅವಶ್ಯ.ಅವುಗಳಲ್ಲಿ ನೂರಾರು ಮಾರ್ಗಗಳು ಉಂಟು.ಆ ನೂರಾರು ಮಾರ್ಗಗಳಲ್ಲಿ ಅತ್ಯಂತ ಸುಲಭ ಸೂಕ್ಷ್ಮ ಶಿಸ್ತಿನ ವಿದ್ಯೆಯೇ ಈ “ಧ್ಯಾನ ಮತ್ತು ಅನುಷ್ಠಾನ.”

ಧ್ಯಾನ ಮತ್ತು ಅನುಷ್ಠಾನ ಎಂದರೇನು ಅವುಗಳ ಕ್ರಮಗಳೇನು ಹೇಗೆ ಆಚರಿಸಬೇಕು ಎನ್ನುವ ಪರಿಯನ್ನು ಈ ಕೆಳಕಂಡಂತೆ ಅವಲೋಕಿಸೋಣ.

ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.

ಧ್ಯಾನ ಎಂದರೇನು?

ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ.  ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.

*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.

*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.

*ಧ್ಯಾನ ಎಂದರೆ ತಲ್ಲೀನತೆ.

*ಅದು ಒಂದು ವಸ್ತುವನ್ನು ಕೇಂದ್ರವಾಗಿ ಇಟ್ಟುಕೊಂಡು ನಮ್ಮನ್ನು ಅದರೊಂದಿಗೆ ಅಳವಡಿಸಿಕೊಳ್ಳುವುದು.

ಧ್ಯಾನದಲ್ಲಿ ಎರಡು ಪ್ರಕಾರ

1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.

2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.

ಕಮಲ

ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.

ಧ್ಯಾನಕ್ಕೆ ಸಿದ್ಧತೆ

ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.

ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.

ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.

ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.

ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.

ಎಚ್ಚರಿಕೆ

*ಮನಸ್ಸು ಚಂಚಲ,ಉದ್ವೇಗ,ಚಿಂತೆ ಇವುಗಳಿಂದ ಆವೃತವಾದ ಸಮಯದಲ್ಲಿ ಮಾಡಬಾರದು.ಕೆಲವು ನಿಮಿಷ ದೀರ್ಘ ಉಸಿರಾಟ ಮಾಡಿ ಮುಂದುವರೆಯ ಬೇಕು.

* ಯೋಗಾಸನಗಳು, ಪ್ರಾಣಾಯಾಮ ಅಭ್ಯಾಸದ ತಕ್ಷಣ ಧ್ಯಾನ ಬೇಡ. ಪ್ರಾಣಾಯಾಮ, ಧ್ಯಾನಗಳೆರಡನ್ನೂ ಪೂರೈಸುವವರೆಗೆ ಕೂರುವ ಸಾಮರ್ಥ್ಯವಿದ್ದರೆ ಎರಡನ್ನು ಅಭ್ಯಸಿಸಬಹುದು.

* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.

* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.

ಪ್ರಯೋಜನಗಳು

* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.

* ದೇಹ, ಮನಸ್ಸಿನ ದ್ವಂದ್ವ ದೂರ.

* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.

* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.

* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.

* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.

* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.

* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.

* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.

* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.

* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.

* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.

* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.

*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.

ಅನುಷ್ಠಾನ.

ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸುವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ನಮ್ಮ ಒಳ ಅರಿವನ್ನು ಹೊರತೆಗೆಯಲು, ಪರಿಶುದ್ಧ ಪರಿಪಕ್ವ ಸ್ಥಿತಿಯನ್ನು ತಲುಪಲು,ಆತ್ಮಾನಂದವನ್ನು ಆನಂದಿಸಲು ಇರುವ ಏಕೈಕ ಮಾರ್ಗ ಎಂದರೆ ಅನುಷ್ಠಾನ.

*ನಮ್ಮ ಸಂಕಲ್ಪವನ್ನು ಈಡೇರಿಸಲು ಅಂದರೆ ಜಾರಿಗೆ ತರಲು ಇರುವ ಸೋಪಾನವೆ ಈ ಅನುಷ್ಠಾನ.

*ಯೋಗ ಸಾಧನೆಯಿಂದ ಯಾವ ಯಾವ ಸಾಧನೆಯನ್ನೂ ಸಿದ್ಧಿಯನ್ನು ಪಡೆಯಲಿಕ್ಕೆ ಸಾಧ್ಯವೋ ಅದನ್ನೆಲ್ಲ  ಶಿವಯೋಗ ಆಚರಣೆಯ ಅನುಷ್ಠಾನದಿಂದ ಪಡೆಯಲು ಸಾಧ್ಯ.

*ಹೆಸರೇ ಹೇಳುವಂತೆ ಅನುಷ್ಠಾನ ಎಂದರೆ ಇದು ಕೇವಲ ಮೌಖಿಕವಾಗಿ ನುಡಿಯುವ ನುಡಿ ಅಲ್ಲ ಇದು ದೇಹ ಹಾಗೂ ಆತ್ಮ ವಿಜ್ಞಾನದ ಕ್ರಿಯೆಯಾಗಿದೆ.

*ನಿಗ್ರಹಾನುಗ್ರಹ ಶಕ್ತಿ ಪ್ರಾಪ್ತವಾಗಿ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಳು ಅನುಷ್ಠಾನ ಅವಶ್ಯಕ.

*ಅನುಷ್ಠಾನ ಮಾಡಿದ ಮಹನೀಯನಿಗೆ ಪಂಚ ಪರುಷ ಸಿದ್ಧಿಗಳು(ವಾಕ್,ದೃಷ್ಠಿ,ಹಸ್ತ,ಮನೋ,ಭಾವ) ಅವರ ವಶವಾಗಿ

ಅವರ ಬೌದ್ಧಿಕ,ಶಾರೀರಿಕ,ಮಾನಸಿಕ ಚಟುವಟಿಕೆಗಳೆಲ್ಲವೂ ಲೋಕೊದ್ಧಾರಕ್ಕಾಗಿ ಕಾರಣವಾಗುವವು.

*ಸಾಮಾನ್ಯರಂತೆ ಈ ಭೂಮಿಯಲ್ಲಿ ಜನಿಸಿದರೂ ಸಹ ಅನುಷ್ಠಾನ ಮಾತ್ರದಿಂದ ಅವರ ಅಂಗ ಗುಣಗಳೆಲ್ಲ ಶಿವಗುಣಗಳಾಗಿ ಅರಳಿ ನಿತ್ಯ ನಿರಂತರ

ಸುಗಂಧವನ್ನು ಬೀರುತ್ತಲೇ ಇರುತ್ತದೆ.

*ಅನುಷ್ಠಾನ ಎಂದರೆ ಏನೋ ಸಾಮಾನ್ಯ ಇಲ್ಲವೇ ವಿಶೇಷ ಪೂಜಾ ವಿಧಿ ಎಂದು ಯಾರೂ ಭಾವಿಸಬಾರದು.ಅನುಷ್ಠಾನ ಕಾಲದಲ್ಲಿ  ಅಣು ಯುದ್ದ,ಪರಮಾಣು ಯುದ್ಧದಂತಹ ಪ್ರಸಂಗಗಳು ದೇಹದಲ್ಲಿ ಎದುರಿಸಬೇಕಾಗುತ್ತದೆ.ಸೃಷ್ಠಿಯ ಅಸುರೀ ಶಕ್ತಿಗಳನ್ನು ದಮನಮಾಡಿ ವಿಜಯ ಸಂಪಾದಿಸಬೇಕು. ಹೋರಾಟಕ್ಕಿಳಿದಾಗ ಘೋರರೂಪದಲ್ಲಿ ಮೇಲೇರಗುತ್ತವೆ ಅವುಗಳ ನಿಗ್ರಹ ಅಧ್ಯಾತ್ಮಿಕವಾಗಿ ಶಕ್ತಿಶಾಲಿಯಾದ ತಪಸ್ಸಿಗೆ ಮಾತ್ರ ಸಾಧ್ಯ. ಈ ಅನುಷ್ಠಾನ ಭೂಮಿಯು ದೇಹ ಮನಸ್ಸು ಹಾಗೂ ದಶೆಂದ್ರಿಯಗಳು,ಪಂಚ ತನ್ಮಾತ್ರಯಗಳು,ಪಂಚಭೂತಗಳು,ಮತ್ತು ಅಂತಃಕರಣ ಚತುಷ್ಟಯಗಳ ನಡುವಿನ ಮಹಾಯುದ್ಧದ ರಣರಂಗವಾಗಿದೆ.ಅದಕ್ಕಾಗಿಯೇ ಇದನ್ನು ಪಡೆಯಲು ಯೋಗ್ಯ ಗುರುವಿನ ಮಾರ್ಗದರ್ಶನ ಅವಶ್ಯಕ.

ಅನುಷ್ಠಾನ ವಿಧಗಳು.

ಇದರಲ್ಲಿ 3 ವಿಧಗಳು

1.ಸಾತ್ವಿಕ ಅನುಷ್ಠಾನ.

2.ರಾಜಸಿಕ ಅನುಷ್ಠಾನ.

3 ತಾಮಸಿಕ ಅನುಷ್ಠಾನ.

ಸಾತ್ವಿಕ ಅನುಷ್ಠಾನ:- ಇದು ಅಂತರಂಗದ ಅರಿವಿನ ಖನಿಯಾದ ಆತ್ಮವನ್ನು ಶಿವಯೋಗ ಮಾರ್ಗದ ಮೂಲಕ ಅಂದರೆ ಮೊದಮೊದಲು ಸ್ಥೂಲ ತನುವಿನೊಡಗೂಡಿ ಸ್ಥೂಲ ಗ್ರಾಹಿಯಾದ  ಗುರು ಕೊಟ್ಟ ಇಷ್ಟಲಿಂಗದ ನಿರಿಕ್ಷಣೆಯ ಮೂಲಕ ಬಾಹ್ಯ ಇಂದ್ರಿಯಗಳ ಒಳಸೆಳೆತವನ್ನು ಮಾಡುತ್ತಾ ಸೂಕ್ಷ್ಮ ಶರೀರದ ಪ್ರಾಣಲಿಂಗವನ್ನು ಕಂಡುಕೊಳ್ಳುವುದು.ಇದು ಮನೋಗ್ರಾಹಿ.ಇಲ್ಲಿ ಮನೋನಿಗ್ರಹ ವೆ ಇದಕ್ಕೆ ತಾಯಿ ಬೇರು.ನಂತರ ಭಾವಲಿಂಗವನ್ನು ಅದರ ಅರಿವನ್ನು ಭಾವಗಾನುವುದು.ಇಲ್ಲಿ ಅಭ್ಯಂತರ ಸಾಧನೆಯ ಮೂಲಕ ಭಾವಗ್ರಾಹಿ ಆತ್ಮವನ್ನು ಕಾಣುವ ಸ್ಥಿತಿ. ಇದಕ್ಕೆ ಮೂಲ ಮಾರ್ಗವೇ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಮಾರ್ಗ.

ಇಲ್ಲಿ ಆತ್ಮನನ್ನು ಪ್ರಾಧಾನ್ಯವಾಗಿಟ್ಟುಕೊಂಡು ಮುನ್ನಡೆವ ಸಾಧಕನು ದೇಹದ ಸುಖ ದುಃಖಕ್ಕೆ ಬೆಲೆ ಕೊಡದೆ ಇರುತ್ತಾನೆ.ಹಾಗಾಗಿ ಸಾತ್ವಿಕ ಆಹಾರ ಸೇವನೆ,ಸಾತ್ವಿಕ ನಡೆ,ಸಾತ್ವಿಕ ನುಡಿ,ಸಾತ್ವಿಕ ವಾತಾವರಣ,ಸಾತ್ವಿಕ ವಿಚಾರಗಳು ಇದಕ್ಕೆ ಸಹಕಾರಿ.

ಇದನ್ನು  ಬಸವಾದಿ ಪ್ರಮಥ ಶಿವಶರಣರು,ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಲಕಲ್ ವಿಜಯ ಮಹಾಂತ ಶಿವಯೋಗಿಗಳು,ಹಾನಗಲ್ಲ ಕುಮಾರ ಮಹಾ ಸ್ವಾಮಿಗಳು,ಹಾವೇರಿ ಶಿವಬಸವ ಮಹಾ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಶಿವಯೋಗಿಗಳು, ಒಳಬಳ್ಳಾರಿಯ ಚನ್ನಬಸವ ತಾತನವರು ಇನ್ನೂ ಹಲವಾರು ಶಿವಯೋಗಿಗಳು ಮಾಡಿದ್ದಾರೆ.

ರಾಜಸಿಕ ಅನುಷ್ಠಾನ:- ಇದು ಒಂದು ಲೌಕಿಕ ಅನುಷ್ಠಾನ ವೆ ಸರಿ.ಲೋಕಾನುಭವ ಇರುವ ವ್ಯಕ್ತಿ ಲೌಕಿಕ ವಸ್ತುವನ್ನು (ತನ್ನ ಹೊಲ, ಮನೆ, ಆಸ್ತಿ,ಪಾಸ್ತಿಗಳನ್ನು ಪಡೆಯಲು ತನ್ನ ಪ್ರತಿಷ್ಠೆಗಳು ,ಬಯಕೆಗಳನ್ನು ಪೂರೈಸಲು ಸಾಮಾನ್ಯವಾಗಿ ದೇವರಿಗೆ ಮೊರೆಹೋಗುತ್ತಾರೆ.ತಾತ್ಕಾಲಿಕ ಭಕ್ತಿ ಇಂದ ಮಾಡುವ ದೇವರ ಪ್ರಾರ್ಥನೆ ಇದು.ಇದು ಲೋಕಾಸಕ್ತ ಎಲ್ಲ ಜನರು ಮಾಡುತ್ತಾರೆ.

ತಾಮಸ ಅನುಷ್ಠಾನ:- ಇದು ಕಾಮಾದಿ ಅರಿಷಡ್ ವೈರಿಗಳನ್ನು ಜಾಗೃತಗೊಳಿಸಿ ದುಷ್ಟಶಕ್ತಿಗಳನ್ನು ವಶಮಾಡಿಕೊಂದು ತನ್ನ ಮನೋವಾಂಚೆಯನ್ನು, ಪ್ರಲೋಭನೆಗಳನ್ನು ಪೂರೈಸುವ ಅನುಷ್ಠಾನವಾಗಿದೆ. ಇದು ವಾಮಾಚಾರ ಬಾನಾಮತಿ ಇತ್ಯಾದಿ ವಿಧಿಗಳು ಇದರಲ್ಲಿವೆ.ಇದನ್ನು ವಾಮಮಾರ್ಗದ ಅಮಾನುಷ ಶಕ್ತಿ ಪಡೆಯಲು ಬಯಸುವವರು ಮಾಡುತ್ತಾರೆ.

ಉಪಸಂಹಾರ:-

ಹೀಗೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ ಆಗುವವು ಈ ಧ್ಯಾನ ಮತ್ತು ಅನುಷ್ಠಾನ.ಅವರವರ ಸಂಪ್ರದಾಯ ಮನೋಸ್ಥಿತಿ ಗೆ ತಕ್ಕಹಾಗೆ ಇವುಗಳು ಅವನ ರೂಢಿಗೆ ಬರುತ್ತವೆ.ಇವೆರಡರಲ್ಲಿ ಏನೇ ವ್ಯತ್ಯಾಸ ಗಣನೀಯವಾಗಿ ಕಂಡು ಬರದಿದ್ದರೂ ಮಾರ್ಗಗಳಲ್ಲಿ,ಅದಕ್ಕೆ ಉಪಯೋಗವಾಗುವ ವಸ್ತು ವ್ಯವಸ್ಥೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.ಏನೇ ಆಗಲಿ ಪಂಚಭೂತ ಗಳಿಂದ ನಿರ್ಮಾಣವಾದ ಈ ಶರೀರ ಲೋಕದ ಮಾಯೆಗೆ ಅಳವಟ್ಟಾಗಿ ದೇಹಸ್ಥಿತಿ ಪಂಚಭೂತಗಳು ವ್ಯತ್ಯಾಸ ವಾಗುತ್ತವೆ.ಅದನ್ನು ಗಮನಿಸಿ ಅವುಗಳನ್ನು ಸಮಸ್ಥಿತಿಯಲ್ಲಿ ಇಡಲು ಇವುಗಳು ಅತ್ಯವಶ್ಯ. ಬನ್ನಿ ಆಚರಿಸಿ ಆನಂದಿಸೋಣ.

ಲೇಖಕರು: ಚಿಂದೋಡಿ ಬಂಗಾರೇಶ

ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು

ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.

“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”

ನಿಷ್ಠೆಯಿಂದ ಲಿಂಗವ ಪೂಜಿಸಿ

ಮತ್ತೊಂದು ಪಥವನರಿಯದ ಶರಣರು

ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !

ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,

ಕೂಡಲಸಂಗಮದೇವಾ, ನಿಮ್ಮ ಶರಣರು.

ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.

ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು  ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.

ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.

ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.

“ಕಣ್‌ ಗಳ ನೋಟ ಹೃದಯದ ಜ್ಞಾನ

ಮನದಲ್ಲಿ ಮಾತಅಡುತಿರ್ದಯ್ಯ

ಜೇನು ಮಳೆಗಳು ಕರೆದವು

ಅಮೃತದ ಕಳೆಗಳು ಸುರಇದವು

ಕೂಡಲಸಂಗಮ ದೇವನೆಂಬ

ಸಾಗರದೊಳಡುತಿದ್ದನಯ್ಯ

ಕೂಡಲಸಂಗಮದೇವ.

ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.

ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ

ನಿಮ್ಮಾಣೆ! ನಿಮ್ಮ ಪುರಾತರಾಣೆ.

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,

ಕೂಡಲಸಂಗಮದೇವಾ.

ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ  ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.

ಅವರಾತ್ಮಕ್ಕೊಂದು ಶರಣು ಶರಣಾರ್ಥಿಗಳು

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಹಾರ್ದಿಕ ಶುಭಾಶಯಗಳು. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗನ ೨೪ತಿಂಗಳಲ್ಲಿ ೨೧೮ ಲೇಖನಗಳುನ೨೮ ಕಾವ್ಯಗಳು ಹಾಗು ೧೦ ಮುದ್ರಿತ ವಾಚನಗಳು

ಜೊತೆಗೆ ೧೧೧೪೮ ಓದುಗರು. ಈ ಯಶಸ್ಸಿಗೆ ಸಹಕರಿಸಿದ ಎಲ್ಲ ಪರಮಪೂಜ್ಯರಿಗೆ ಭಕ್ತಿಪೂರ್ವಕ ಮತ್ತು ಹೃದಯಪೂರ್ವಕ ಕೃತಜ್ಞತೆಗಳು

ಶ್ರೀಕುಮಾರ ತರಂಗಿಣಿ  ೨೦೨೩ ಮೇಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ಪರಾತ್ಪರ ಬಸವೇಶ್ವರನನು” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀ ಕುಮಾರ ಸ್ವಾಮಿಗಳ ವಿಚಾರಗಳು : ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು
  4. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೨ ಪ್ರವೇಶ: ಲೇಖಕರು: ಪೂಜ್ಯ ಜ.ಚ.ನಿ
  5. ವಿದ್ಯೆ-ಅವಿದ್ಯೆ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  6. ಪಂಚಾಚಾರ: ಪರಿಕಲ್ಪನೆ : ಡಾ:ಸ್ನೇಹಾ ಭೂಸನೂರ
  7. ಆಡಿಯೋ೧ :
  8. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಸವಿನೆನಪಿಗೆ ಲೋಕಾರ್ಪಣೆಯ ಸವಿನೆನಪು
  9. ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ
  10. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  11. ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
  12. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
  13. ಪೂಜ್ಯರ ಆಶೀರ್ವಚನ ೧೪-೦೫-೨೦೨೧
  14. ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು” 

               ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ  ಮಹಾಸ್ವಾಮಿಗಳಿಂದ  ಶಾಂತಾಶ್ರಮ ಹುಬ್ಬಳ್ಳಿ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ದರ್ಬಾರಿ ಕಾನಡಾ)

ಶ್ರೀ ಪರಾತ್ಪರ ಬಸವೇಶ್ವರನನು |

ಸಾರುತ -ಸೇರುತ ಭಜಿಸೋ ನೀ ಮಾನವ || ಪ ||

ಭಕ್ತಿಯ ಮಾರ್ಗದಿ ನಡೆಯುವ ಜನರಿಗೆ

ಶಕ್ತಿಯನರಿತು ಫಲಗಳ ಕೊಡುವ

ಮುಕ್ತಿಯ ಪಥವನ್ನೀಯುವ ಪರಮ || 1 ||

ವೀರಶೈವ ಮತ ಜೀರ್ಣೋದ್ಧಾರಕ

ಸಾರ ಸುಬೋಧಕ ಪರತರಶೋಧಕ

ಪೂರಿತ ಕರುಣದಿ ದೀನಸುರಕ್ಷಕ || 2 ||

ಶಿವಯೋಗದಲಿ ಸುವಿರಾಗದಲಿ

ಭವಿಗಳನೀಕ್ಷಿಸಿ ಭಕ್ತರ ಮಾಡಿದ

ಸುವಿವೇಕದ ಗುರುವಿಗೆ ಗುರುವೆನಿಸಿದ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ-

ದೊಲಿದು ಲಿಂಗಾಂಗ-ಸುಲಭಯೋಗವನೊಡನೆ

ಕಲಿಸಿದಾ ಗುರುವೆ ಕೃಪೆಯಾಗು     I ೧೦ II

 ಯೋಗಮಾರ್ಗದ ವಿಚಾರಕ್ಕೆ ವಿರಾಮವಿತ್ತು ಅವುಗಳಿಗಿಂತಲೂ ಮಿಗಿಲಾದ ಲಿಂಗಾಂಗಯೋಗದ ಸುಲಭತೆಯನ್ನು ಮತ್ತು ಸಾರ್ಥಕತೆಯನ್ನು ಸರಳವಾಗಿ ಸಾರುತ್ತಾನೆ ಶಿವಕವಿಯು.  

ಯೋಗ ಮಾರ್ಗದಲ್ಲಿ ಮಂತ್ರ, ಲಯ, ಹಠ, ರಾಜಯೋಗಳು ಮುಖ್ಯವಾದ ನಾಲ್ಕು ಯೋಗಗಳಾದರೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಯೋಗಗಳು ಹಲವಾರು ಇವೆ. ಗೀತೆಯಲ್ಲಿ ಪ್ರತಿಯೊಂದು ಅಧ್ಯಾಯದ ಒಂದೊಂದು ವಿಷಯವೂ ಒಂದೊಂದು ಯೋಗವೆಂಬುದಾಗಿಯೇ ಪ್ರತಿಪಾದಿತವಾಗಿದೆ. ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಜ್ಞಾನ-ವಿಜ್ಞಾನ ಯೋಗ, ರಾಜವಿದ್ಯಾ-ರಾಜಗುಹ್ಯಯೋಗ, ವಿಭೂತಿಯೋಗ, ಭಕ್ತಿಯೋಗ ಮೊದ ಲಾದವುಗಳು ವಿವರಿಸಲ್ಪಟ್ಟಿವೆ. ಸ್ವಾಮಿ ವಿವೇಕಾನಂದರು ಕರ್ಮಯೋಗ, ಜ್ಞಾನ ಯೋಗ, ರಾಜಯೋಗ, ಭಕ್ತಿಯೋಗಗಳನ್ನು ವಿಶ್ಲೇಷಿಸಿದ್ದಾರೆ. ಇವೆಲ್ಲ ಹಲವಾರು ಯೋಗಗಳನ್ನು ಸಾಧನೆ ಮಾಡಿದರೆ ಏಕೈಕ ಫಲವು ಸಿಕ್ಕಬಹುದು. ಆದರೆ ಸಂಪೂರ್ಣ ಫಲ ಸಿಕ್ಕಲಾರದೆಂಬ ಅಭಿಪ್ರಾಯ ಈ ಕೃತಿಕರ್ತರದು. ಅಲ್ಲದೆ ಶರಣ ಸಿದ್ಧಾಂತವೂ ಇದನ್ನೇ ಅನುಮೋದಿಸಿದೆ.

ಹರಭಕ್ತನಾದ ಹರದ ಶರಣನು ತನ್ನ ಸ್ವಾನುಭಾವವನ್ನು ವಿವರಿಸುತ್ತ ಅಷ್ಟಾಂಗ ಯೋಗಗಳಿಗಿಂತ ತಾಂತ್ರಿಕ ಮುದ್ರೆಗಳಿಗಿಂತ ಈ ಲಿಂಗಾಂಗ ಯೋಗದ ಸಹಜತೆಯನ್ನು ತಾತ್ವಿಕತೆನ್ನು ಬಿತ್ತರಿಸುತ್ತಾನೆ. ಕರುಣಾಳು ಗುರುರಾಯನು ಒಲುಮೆಯಿಂದ ಎನಗೆ ಲಿಂಗಾಂಗ ಯೋಗವನ್ನು ಬೋಧಿಸಿದನು. ಇದು ಸುಲಭ ಹಾಗೂ ಸಹಜ ಯೋಗವು. ಎಲ್ಲ ಯೋಗಗಳಲ್ಲಿ ರಾಜಯೋಗವು ಮಿಗಿಲೆನಿಸಿದರೆ  ಅವೆಲ್ಲವುಗಳಿಗೂ ರಾರಾಜಿಸುವ ಈ ಲಿಂಗಯೋಗ, ಅಥವಾ ಶಿವಯೋಗವಾಗಿದೆ. ಇದರಲ್ಲಿ ಎಲ್ಲ ಯೋಗಗಳ ಸಾರ ಅಡಕವಾಗಿದೆ. ಅಂತೆಯೇ ಶಿವಯೋಗವನ್ನು ಯೋಗರಾಜವೆಂದು ಬಣ್ಣಿಸಿದ್ದಾರೆ.  

ಒಂದೊಂದು ಪದಾರ್ಥಗಳಲ್ಲಿ ಒಂದೊಂದು ಗುಣವಿರುವಂತೆ ಒಂದೊಂದು ಯೋಗ ಸಾಧನೆಯಿಂದ ಏಕೈಕ ಫಲ ಲಭ್ಯವಾಗಬಹುದು. ಅನೇಕ ಸಾರವತ್ತಾದ ವಸ್ತುಗಳಿಂದ ತಯಾರಿಸಿದ ‘ಸಾರು’ (ಸಾಂಬಾರ) ವನ್ನು ಊಟದ ಕೊನಗೆ ಸುರಿದು

ಸಂತೃಪ್ತರಾಗುತ್ತಾರೆ. ಹಾಗೇ ಈ ಶಿವಯೋಗದಲ್ಲಿ ಮಂತ್ರಾದಿ ನಾಲ್ಕು ಯೋಗಗಳು, ಕರ್ಮ, ಭಕ್ತಿ, ಜ್ಞಾನ ಯೋಗಗಳು ಮುಪ್ಪುರಿಗೊಂಡು ಶೋಭಿಸುವ ಶಿವಯೋಗವು ಶಿವಭಕ್ತನನ್ನು ಮುಕ್ತನನ್ನಾಗಿಸುವದು. ಶಿವಯೋಗ ಸಾಧಿಸಿದ ಮೇಲೆ ಪುನರ್ಜನ್ಮವಿಲ್ಲ ಕರ್ಮದ ತೊಡಕಿಲ್ಲ. ಭವ-ಬಂಧನದ ಸೋಂಕಿಲ್ಲ.

ಶಿವಲಿಂಗಭಕ್ತನು ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳನ್ನು ಮೈಗೂಡಿಸಿಕೊಳ್ಳುತ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಸ್ಥಲಗಳಲ್ಲಿ ನಿಲ್ಲುತ್ತ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಗಳನ್ನು ಆರಾಧಿಸುತ್ತ ಅವುಗಳಲ್ಲಿ ಬೆರೆಯುವನು. ಗಂಧ, ರಸ, ರೂಪ, ಸ್ಪರ್ಶ ಶಬ್ದ ಹಾಗೂ ಇವುಗಳಿಂದ ದೊರೆಯುವ ತೃಪ್ತಿಯೆಂಬ ಪದಾರ್ಥಗಳನ್ನು ಸುಚಿತ್ತ, ಸುಬುದ್ದಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವಗಳೆಂಬ ಹಸ್ತದಿಂದ ಸುಗಂಧ, ಸುರಸ, ಸುರೂಪ, ಸುಸ್ಪರ್ಶ, ಸುಶಬ್ದ, ಸಂತೃಪ್ತಿಗಳೆಂಬ ಪ್ರಸಾದಗಳನ್ನಾಗಿ

ಉದಾತ್ತೀಕರಿಸಿ ಕೊಂಡು ಆಯಾ ಲಿಂಗ ಮುಖಕ್ಕೆ ಸಮರ್ಪಿಸಿ ಪರಮಾನಂದದಲ್ಲಿ ಲೀನನಾಗಿ ಲೋಲಾಡುವನು. ಇದಲ್ಲದೆ ಲಿಂಗಗತ ಶಕ್ತಿಗಳನ್ನು, ಪ್ರಣವಗಳನ್ನು ಕಲೆಗಳನ್ನು ಸಾದಾಖ್ಯಗಳನ್ನು, ಅಧಿದೇವತೆಗಳನ್ನು ಮತ್ತು ಲಕ್ಷಣಗಳನ್ನು ಅಳವಡಿಸಿ

ಕೊಳ್ಳುವನು. ನೂರೊಂದು ಸ್ಥಲವನ್ನರಿತು ಇನ್ನೂರಾ ಹದಿನಾರು (೨೧೬) ಸಕೀಲುಗಳಲ್ಲಿ ಆಚರಿಸುವನು. ಇಂಥ ಅಸದೃಶವಾದ ಆತ್ಮವಿಜ್ಞಾನಿಯಾಗಿ ಶಿವಯೋಗಿಯೆನಿಸುವನು.

 ಪರಮ ಗುರುವು ಹರಸುವ ಈ ಸರಳವಾದ ಶಿವಯೋಗದಲ್ಲಿ ಯಮಾ ದ್ಯಷ್ಟಾಂಗ ಯೋಗಗಳೂ, ಕ್ರಿಯಾ-ಜ್ಞಾನ-ಭಕ್ತಿ ಸಮನ್ವಯವೂ ಹಾಸುಹೊಕ್ಕಾಗಿದೆ. ಅದು ಕಾರಣ ಈ ಲಿಂಗಾಂಗ ಯೋಗಕ್ಕೆ ಇತರ ಯೋಗಗಳು ಸರಿಬಾರವು.

ಓ ನಿರಂಜನ ನಿರಾಭಾರಿ ಗುರುವೆ ! ಇಂಥ ಸುಲಭ ಸಹಜವಾದ ಲಿಂಗಾಂಗ ಯೋಗವನ್ನು ಮೈಗೂಡಿಸಿಕೊಳ್ಳುವ ಅನುವನ್ನು ಆಚರಿಸಿ ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿ ಕಾಪಾಡು. ನಿನ್ನ ಕೃಪೆಯಿಲ್ಲದೆ, ಮಾರ್ಗದರ್ಶನವಿಲ್ಲದೆ ಈ ಶಿವಯೋಗ ಅರಿವಿಗೆ ಬರಲಾರದು.

ಈ ಲಿಂಗ ನಿನ್ನಂಗ | ಕಾಲಿಂಗನವಾಗಲ್ಕೆ

ನೀ ಲಿಂಗ ನಿನ್ನ-ಮೈಲಿಂಗವೆಂದೆನ್ನೊಳ್

ಕೀಲಿಸಿದ ಗುರುವೆ ಕೃಪೆಯಾಗು     ||೧೦೭||

 ಲಿಂಗಾಂಗಯೋಗದ ಮಹತ್ವವನ್ನು ಪುನಃ ಪುನಃ ವರ್ಣಿಸಿದ್ದಾನೆ. ಶಿವಕವಿಯು. ಗುರುಕರುಣಿಸುವ ಇಷ್ಟಲಿಂಗ ಪ್ರತ್ಯಕ್ಷ ಕಾಣುವದು. ಈ ಲಿಂಗವು ಶಿಷ್ಯನಂಗವನ್ನು ಆಲಿಂಗಿಸುತ್ತಲೇ ಅಂಗವನ್ನು ಲಿಂಗಮಯವನ್ನಾಗಿಸುವದು. ಒಳಗಿರುವ ಚೈತನ್ಯವು

ಗುರು-ಲಿಂಗ-ಜಂಗಮ ಕೃಪೆಯಿಂದ ಹೊರಗೆ, ವ್ಯಾಪಿಸಿ ಒಳಹೊರಗು ಬೆಳಗುವದು. ಲಿಂಗಚೈತನ್ಯವು ಜಾಗೃತಗೊಂಡು ಅಜ್ಞಾನ-ದುರ್ಭಾವನೆಗಳನ್ನು ದೂರಗೊಳಿಸುವದು. ಸೂರ್ಯನ ಸನ್ನಿಧಿಯಲ್ಲಿ ಕತ್ತಲಿರಲು ಸಾಧ್ಯವೆ ! ಶ್ರೀಗುರುವು ಶಿಷ್ಯನ ಮಸ್ತಕದ ಚಿಚೈತನ್ಯವನ್ನು ತನ್ನ ಭಾವದಲ್ಲಿ ಭಾವಿಸಿ  ಆತನ ಹೃದಯ ಕಮಲವನ್ನು ಅರಳಿಸಿ ಮಹಾಲಿಂಗವನ್ನು ಕರಕಮಲದಲ್ಲಿ ಕಾಣಿಸು ವಂತೆ ಕರುಣಿಸುವಾಗ ತನು-ಮನ-ಭಾವಗಳನ್ನು ಹಿಂದೆ ವಿವರಿಸಿದಂತೆ ಸಂಸ್ಕರಿಸಿ ಪರಿಶುದ್ಧಗೊಳಿಸುವನು “ಲಿಂಗವನ್ನು ಧರಿಸಿಕೊಂಡ ನೀನು ಸದಾ ಶುದ್ಧ’ ನೆಂದು ಬೋಧಿಸುವನು. ಸಂಚಿತ-ಪ್ರಾರಬ್ಧ-ಆಗಾಮಿಕರ್ಮಗಳಿಂದ ಮುಕ್ತನನ್ನಾಗಿಸುವನು. ತ್ರಿಮಲಗಳ ನಾಶ ಮಾಡುವನು. ಅಗ್ನಿಯನ್ನು ಆವರಿಸಿದ (ಸಂಪರ್ಕಿಸಿದ) ಕಟ್ಟಿಗೆಯು ಅಗ್ನಿಯೇ ಆಗುವಂತೆ; ಲಿಂಗವನ್ನು ಧರಿಸಿದವನು ಲಿಂಗಮಯನೇ ಆಗುವನು. ಆಗಮದಲ್ಲಿ ಉಕ್ತವಾದ ಉತ್ತಮ ಉದಾಹರಣೆ ಉದಾಹರಿಸಲು ಯೋಗ್ಯವಾಗಿದೆ. ಈ ಮಾತನ್ನು ಶ್ರೀಪತಿಪಂಡಿತರು ಶ್ರೀಕರಭಾಷ್ಯದಲ್ಲಿ ಒತ್ತಿ ಹೇಳಿದ್ದಾರೆ-

“ಮಾನವಃ ಶಿವಯೋಗೇನ ಶಿವೋ ಭವತಿ ನಾನ್ಯಥಾ |

ಭ್ರಮಮರಚಿಂತಾಯಾಂ ಕೀಟೋಪಿ ಭ್ರಮರಾಯತೇ”

ಮನೆಗಳಲ್ಲಿ ಇದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಆದರೆ ಆ ವಿಷಯವನ್ನು ಅನುಭವದಲ್ಲಿ ತಂದುಕೊಳ್ಳುವದಿಲ್ಲ, ಕುಡೀಕುಕಾರವೆಂಬ ಭ್ರಮರವು ಬಾಯಲ್ಲಿ ಮಣ್ಣನ್ನು ತಂದು ಬಾಗಿಲು ಕಿಡಿಕಿಗಳ ಸಂಧಿಯಲ್ಲಿ ಮನೆಮಾಡುತ್ತದೆ. ಅದರಲ್ಲಿ ಸಣ್ಣ

ಕೀಡೆಯನ್ನು ತಂದು ತನ್ನ ಭಾವವನ್ನು ನಿತ್ಯವೂ ಭಾವಿಸುತ್ತದೆ. (ತುಂಬುತ್ತದೆ) ಕ್ರಮೇಣ ಕೆಲವು ದಿನಗಳಲ್ಲಿ ಕ್ರೀಡೆಯೂ ಆ ಭ್ರಮರದಂತಾಗುವದು. ಅಂದಮೇಲೆ ಮಾನವನು ಶಿವಲಿಂಗದ ಸಂಪರ್ಕದಿಂದ ಶಿವಮಯನಾಗುವದರಲ್ಲಿ ಯಾವ ಸಂದೇಹವಿಲ್ಲ. ಶಿವನು ತನ್ನ ಸೃಷ್ಟಿಯಲ್ಲಿ ಅನಂತ ಉಪದೇಶವನ್ನು ತುಂಬಿರಿಸಿದ್ದಾನೆ. ಅದನ್ನು ತಿಳಿದುಕೊಳ್ಳುವ ಅಂತರ್ದೃಷ್ಟಿಯು ನಮ್ಮಲ್ಲಿ ಬೆಳೆದು ಬಂದರೆ ನಾವು ನಿಜವಾಗಿಯೂ ಸುಜ್ಞಾನಿಗಳಾಗುತ್ತೇವೆ. ಅರಿವನ್ನು ಕುರುಹನ್ನಾಗಿ ಕರುಣಿಸಿ

ಇಂಥ ಅಂರ್ತದರ್ಶನ ಮಾಡಿಸುವವನೇ ಗುರುವು. ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡರೆ ಅರಿವುಳ್ಳವನನ್ನಾಗಿಸುವನು. ಲಿಂಗವೇ ತಾನಾಗುವದರಲ್ಲಿ ಯಾವ ನ್ಯೂನತೆಯೂ ಇರದು.

 ಓ ಗುರುವೆ ! ಲಿಂಗವನ್ನು ಕರುಣಿಸಿ ಲಿಂಗ ಗುಣಗಳನ್ನು ಎನ್ನಂಗದಲ್ಲಿ ಕೀಲಿಸಿ ಲಿಂಗಮಯನನ್ನಾಗಿ ಮಾಡಿದ ನಿನಗೆ ನಾನು ಚಿರಋಣಿ, ನಿನ್ನ ಋಣ ಎಂದೆಂದಿಗೂ ತೀರದು.  ಮನುಷ್ಯನಾಗಿ ಬಾಳಿ ಬದುಕಿದ ಮೇಲೆ ಮಾತೃಋಣ, ಪಿತೃಋಣ, ಸಮಾಜ

ಋಣಗಳನ್ನು ತೀರಿಸಲೇಬೇಕು. ಅವರವರ ಉಪಕೃತಿಯನ್ನು ಸ್ಮರಿಸಿ ತಕ್ಕ ಕರ್ತವ್ಯ ನಿಷ್ಠನಾದರೆ ಆ ಋಣಗಳು ತೀರಿದಂತಾಗುವವು.

ಈ ಲಿಂಗವೆ ಸತ್ಕ್ರಿ| ಮೂಲ ಸಮ್ಯಕ್ ಜ್ಞಾನ

ದಾಲಯ ನೀ ತ್ರೈ-ಕಾಲ ಪೂಜಿಪುದೆಂದು

ಪಾಲಿಸಿದ ಗುರುವೆ ಕೃಪೆಯಾಗು         | ೧೦೮ |

ಲಿಂಗಭಕ್ತನು ಸರ್ವಾಂಗಲಿಂಗಮಯನಾಗಲು ಲಿಂಗಪೂಜೆಯೇ ಸಾಧನವು. ಲಿಂಗಪೂಜೆಯೇ ಶಿವಯೋಗವು, ಬಾಲಲೀಲಾ ಮಹಾಂತೇಶ್ವರ ಪುರಾಣದಲ್ಲಿ ಕವಿರತ್ನ ಚನ್ನಕವಿಗಳು-

ಶಿವಪೂಜೆಯೇ ಮುಖ್ಯ ಶಿವಯೋಗಮೆನಿಸುವದು |

ಶಿವಪೂಜೆಯಿಲ್ಲದಗೆ ಮುಕ್ತಿ ಘಟಿಸದು ಮತ್ತೆ ʼ’|

ಶಿವಪೂಜೆಗೆಣೆಯುಂಟೆ ಮೂಜಗದೊಳು‘ʼ (ನಾಲ್ಕನೆಯ ಸಂಧಿ)

ಶಿವಪೂಜೆಯೇ ಮುಖ್ಯ ಶಿವಯೋಗವೆಂತಲೂ ಅದಿಲ್ಲದೆ ಮುಕ್ತಿ ದೊರಕದೆಂದೂ ಆ ಶಿವಯೋಗದ ಮಹತ್ವವನ್ನು ತಿಳಿಸಿದ್ದಾರೆ. ಈ ಶಿವಯೋಗದಲ್ಲಿ ಸತ್ಕ್ರಿಯೆಗಳು ಸಮ್ಯಕ್ ಜ್ಞಾನವು ಸಮನ್ವಯವಾಗಿರುತ್ತವೆ. ಅಂತೆಯೇ ಶಿವಯೋಗವು ಜ್ಞಾನ ಕ್ರಿಯೆಗಳ ಸಮನ್ವಯ ಮಾರ್ಗವಾಗಿದೆ. ಇಂಥ ಶಿವಯೋಗವನ್ನು ಸಾಧಿಸುವ ಮೂಲವೇ ಲಿಂಗವು.  ಅದುಕಾರಣ ಈ ಲಿಂಗವು ಸತ್ಕ್ರಿಯಾ ಮೂಲವೂ, ಸಮ್ಯಕ್ ಜ್ಞಾನಕ್ಕೆ ಆಲಯವೂ ಆಗಿದೆ. ಲಿಂಗವಿಲ್ಲದೆ ಮಾಡುವ ಕ್ರಿಯೆಗಳು ಜಡಕರ್ಮಗಳಾಗುತ್ತವೆ. ಜ್ಞಾನಪರಿಪೂರ್ಣವಾಗುವದಿಲ್ಲ. ಗುರುಕರಜಾತನಾದ ಮೇಲೆಯೇ ಲಿಂಗಕ್ರಿಯೆಗಳು ಲಿಂಗಜ್ಞಾನವು ಸಮನಿಸುತ್ತವೆ. ಲಿಂಗವು ಸಮರಸದ ಸ್ರೋತವೆನಿಸುವದು.

ಲಿಂಗಪೂಜೆಯಲ್ಲಿ ಸಮ್ಯಕ್ ಜ್ಞಾನವುಳ್ಳವನಾಗಿ ಸತ್ಕ್ರಿಯೆಗಳನ್ನು ಮಾಡುತ್ತಿರುವದರಿಂದ ಕರ್ಮವು ಜಡವಾಗಲಿ, ಬಂಧನಕಾರಿಯಾಗಲಿ ಆಗುವದಿಲ್ಲ. ಇಲ್ಲಿ ಯಾವ ಫಲಾಪೇಕ್ಷೆಯಾಗಲಿ ಇರುವದಿಲ್ಲ. ಆದರೂ ಅಷ್ಟಾವರಣದ ಪ್ರತ್ಯಕ್ಷ ಫಲಗಳೆನಿಸಿದ ಪಾದೋದಕ-ಪ್ರಸಾದಗಳು ಕೈ ಮೇಲೆಯೇ ದೊರೆಯುವವು. ಭಗವದ್ಗೀತೆಯಲ್ಲಿಯೂ ಯಾವುದೇ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ಮಾಡು, ಆದರೆ ಅ ಫಲದಲ್ಲಿ ಮಾತ್ರ ನಿನಗೆ ಅಧಿಕಾರವಿಲ್ಲವೆಂದು ತಿಳಿಸಿದೆ. ಆದರೆ ನಮ್ಮ ಶರಣ ಸಿದ್ಧಾಂತವು

 ʼʼಕೂಡಲ ಸಂಗಮದೇವರನ್ನು ಪೂಜಿಸಿದ ಫಲ ಕೈಮೇಲೆʼ’

 ಎಂದು ಬಣ್ಣಿಸಿದೆ. ಗುರುವು ಶಿಷ್ಯನ ಅಂಗದಲ್ಲಿ ಕೀಲಿಸಿದ ಲಿಂಗ ಕಲೆಗಳನ್ನು ಅರುವಿನಲ್ಲಿ ತರುವದೇ ಸತ್ಕ್ರಿಯೆಯಾಗುವದು. ಈ ಕಾರ್ಯ ಶಿವಪೂಜೆಯಲ್ಲಿ ಸಾಂಗವಾಗುವದು. ಆಗಬೇಕು. ಅಂತೆಯೇ ಗುರುವು ಈ ನಿನ್ನ ಲಿಂಗವು ಸತ್ಕ್ರಿಯಾ ಜ್ಞಾನಗಳ ಸ್ವರೂಪವಾಗಿದೆ. ಅದನ್ನು ನೀನು ಪೂಜಿಸಿ ಲಿಂಗವೇ ನೀನಾಗೆಂದು ಉಪದೇಶಿಸಿದ್ದಾನೆ. ಗುರೂಪದೇಶವನ್ನು ಅನುಸಂಧಾನ ಮಾಡಿಕೊಳ್ಳುವದೇ ಶಿವಯೋಗವು.

ʼ’ಜ್ಞಾನಂ ಶಿವಮಯಂ, ಭಕ್ತಿಃ ಶೈವೀ, ಧ್ಯಾನಂ ಶಿವಾತ್ಮಕಂ |

ಶಿವವ್ರತಂ ಶಿವಾರ್ಚೇತಿ ಶಿವಯೋಗೋ ಹಿ ಪಂಚಧಾ ||

ಶಿವಯೋಗವು ಶಿವಜ್ಞಾನ ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನ ಎಂದು ಐದು ತೆರನಾಗುತ್ತದೆ. ಸದ್ಗುರು ಕೃಪೆಯಿಂದ ಇಷ್ಟಲಿಂಗದ ಸ್ವರೂಪ ಜ್ಞಾನವು ಅಳವಡವದು. ಲಿಂಗಜ್ಞಾನವಿಲ್ಲದೆ ಭಕ್ತಿಧ್ಯಾನಾದಿಗಳು ಸಾಧ್ಯವಾಗುವದಿಲ್ಲ. ಗುರು ಕರುಣೆಯಿಂದ ಶಿವಜ್ಞಾನೋದಯವಾಗುವದು. ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರಗತ ಮಹಾಚೈತನ್ಯವನ್ನು ಕರದಿಷ್ಟ ಲಿಂಗವನ್ನಾಗಿ ಕಂಡು ಶಿಷ್ಯನು ಭಯ ಕ೦ಪಿತನಾಗುವದೇ ಭಕ್ತಿಯ ಬೀಜವು ಮೈದೋರುವದು. ಚಿಚ್ಚೈತನವೇ ಪ್ರತ್ಯಕ್ಷವಾದ ಮೇಲೆ ತನ್ಮಯತೆಯುಂಟಾಗುವದೇ ಧ್ಯಾನಕ್ಕೆ ಮೂಲವಾಗುವದು. ಇಂಥ ಪರವಸ್ತುವೇ ಲಿಂಗವೆಂದರಿದ ಬಳಿಕ ಎಲ್ಲವೂ ಶಿವಮಯವೆಂತಲೂ ಶಿವಲಿಂಗಕ್ಕಿಂತ ಭಿನ್ನ ದೇವರಿಲ್ಲವೆಂಬ ದೃಢ ನಿಶ್ಚಯವೇ ಶಿವವೃತವಾಗುವದು. ಶಿವವ್ರತಿಯಾದ ಲಿಂಗಭಕ್ತನು ಗುರು ಪೇಳಿದಂತೆ ಇಷ್ಟಲಿಂಗವನ್ನು ಪೂಜಿಸಿ ಪೂರ್ಣಲಿಂಗನಾಗುವದೇ ಶಿವಾರ್ಚನೆ. ಈ ಐದು ಸತ್ಕ್ರಿಯೆಗಳ ಸಾಕ್ಷತ್ಕಾರವೇ ಶಿವಯೋಗವಾಗಿರುವದು.  

ಅಷ್ಟಾವರಣ ಸಂಪನ್ನನೂ ಪಂಚಾಚಾರ ಪರಾಣಯನೂ ಆದ ಸದ್ಭಕ್ತನು ಮೆಲ್ಲ ಮೆಲ್ಲನೆ ಷಟ್‌ಸ್ಥಲಗಳನ್ನು ಮೈಗೂಡಿಸಿಕೊಳ್ಳುತ್ತ ಐಕ್ಯನೆನಿಸಿ ಮಹಾಲಿಂಗ ದೊಡನೆ ಮಹವ ಸಾಧಿಸುವದೇ ಷಟ್‌ಸ್ಥಲ ಸಿದ್ಧಾಂತದ ಶಿವಪೂಜೆಯು. ಶಿವಪೂಜೆಯಲ್ಲಿ ಮಾಡುವ ಪ್ರತಿಯೊಂದು ವಿಧಾನಗಳು ಸತ್ಕ್ರಿಯೆಗಳೆನಿಸಿವೆ. ಅವುಗಳ ಅರಿವು ಸಮ್ಯಕ್ ಜ್ಞಾನವಾಗಿದೆ. ಈ ಶಿವಾದ್ವೈತ ಸಿದ್ಧಾಂತ (ಶರಣತತ್ತ್ವ) ದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ವೈಜ್ಞಾನಿಕತೆ, ತಾತ್ವಿಕತೆ ಮನೆಮಾಡಿಕೊಂಡಿವೆ. ಪರಿಶುದ್ಧಗೊಂಡ ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಂದುಗೂಡಿಸುತ್ತಾ ಹೋಗ ಬೇಕಾಗುವದು. ಇಷ್ಟಲಿಂಗಾರ್ಚನೆಯು ಜೀವನದ ಅಮೃತ ಸಮಯವೆನಿಸಿದೆ. ಅಂತೆಯೇ ಕೇವಲ ಹದಿನಾರು ವರ್ಷ ವಯೋಮಿತಿಯುಳ್ಳ ಮಾರ್ಕಂಡೇಯನು ಸ್ಥಾವರಲಿಂಗವನ್ನು ಪೂಜಿಸಿ ಚಿರಂಜೀವಿಯಾದನು. ಅದಕ್ಕಿಂತಲೂ ಮಿಗಿಲಾದ ಶಿವಪೂಜೆಯ ಪರಿಯನ್ನು ಅರಿತು ಆಚರಿಸುವ ಸಮ್ಯಕ್ ಜ್ಞಾನವುಳ್ಳವನಾಗುವದು ಅತಿಮುಖ್ಯ.

ಶಿವಪೂಜೆಗೈಯ್ಯುವ ಪರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶಿವಪೂಜೆ (ಶಿವಯೋಗವು)ಯು ಸತ್ಕ್ರಿಯಾ ಸಮ್ಯಕ್ ಜ್ಞಾನಗಳ ಸಮರಸವೆಂಬುದು ಅರಿವಾಗದೇ ಇರದು. ಲಿಂಗವಂತನು ಲಿಂಗತಂದೆಯನ್ನು ಧ್ಯಾನಿಸಿ ನಮಿಸಿ ನಿದ್ದೆಗೈದರೆ ಸ್ವಪ್ನಾವಸ್ಥೆಯ ದೋಷಗಳಿಂದ ದೂರವಾಗುವನು. ಬ್ರಾಹೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ  ಗೈಯುತ್ತ ಜಾಗ್ರತ (ಎದ್ದು) ನಾಗಿ ಲಿಂಗವನ್ನು ಲಿಂಗಯೋಗಿಗಳ ಭಾವಚಿತ್ರಗಳನ್ನು ಸಂದರ್ಶಿಸಿ ಲಿಂಗಬಿಂದವನ್ನು ಭ್ರೂಮಧ್ಯದಲ್ಲಿ ಧ್ಯಾನಿಸಬೇಕು. ಲಿಂಗದೇವನಿಗೆ ಕೇವಲ ಶರಣೆಂದರೂ ಸಾಕು, ‘ಹೊತ್ತಾರೆ ಎದ್ದು ಲಿಂಗವ ನೆನೆದರೆ ಅಪಮೃತ್ಯುಗಳು, ಕಾಲಕರ್ಮಂಗಳು ತಪ್ಪುವವು’ ಎಂದಿದ್ದಾರೆ ನಮ್ಮ ಪ್ರಮಥರು. ಪ್ರಾತಃಕಾಲದ ಶಿವನಾಮಸ್ಮರಣೆ ಅನಂತ ಸಮಸ್ಯೆಗಳನ್ನು ಪರಿಹರಿಸುವದಲ್ಲದೆ ಭವ-ಭಯವನ್ನೇ ನಿವಾರಿಸುವದು. ಅನಂತರ ತನ್ನ ತಂದೆ-ತಾಯಿಗಳಿಗೆ, ಗುರು ಹಿರಿಯರ ಪಾದಕ್ಕೆ ಮಣಿಯಬೇಕು. ಜೀವನದಲ್ಲಿ ಬಾಗಿದವನ ಬಾಳು ಬಂಗಾರ ವಾಗುವದು.

ಸೂರ್ಯೋದಯಕ್ಕೆ ಮುಂಚೆ ಶಿವನಾಮಗಳನ್ನು ಗುರು-ಲಿಂಗ-ಜಂಗಮ ಸ್ತೋತ್ರಗಳನ್ನು ಮನದಲ್ಲಿಯೂ, ಸ್ಪಷ್ಟವಾಗಿಯೂ ಉಚ್ಚರಿಸುತ್ತ ಬಹಿರ್ದೆಶಕ್ಕೆ ಹೋಗಿ ಬಂದು ಕೈಗಳಿಗೆ ಶುದ್ಧವಾದ ಮಣ್ಣನ್ನು ಹಚ್ಚಿ ತೊಳೆದುಕೊಳ್ಳಬೇಕು. ನಂತರ ತಂಬಿಗೆಯನ್ನು

ಬೆಳಗಬೇಕು. ಶೌಚ ಕ್ರಿಯೆಯನ್ನು ಮುಗಿಸಿ ಬರುವಾಗ್ಗೆ ಎಡಗೈಯಲ್ಲಿ ತಂಬಿಗೆಯನ್ನು ಹಿಡಿದು ತರಬಾರದು. ಮಣ್ಣಿನಿಂದ ಕೈ ತೊಳೆಯುವದರಿಂದ ಅದರ ಅಗಾಧವಾದ ಶಕ್ತಿ ಉಗುರಿನ ಮುಖಾಂತರ ಶರೀರದಲ್ಲಿ ಸಂಚಾರವಾಗುವದು. ನೈಸರ್ಗಿಕ ಚಿಕಿತ್ಸಕರು ಈ ಮಾತನ್ನು ಧಾರಳವಾಗಿ ಒಪ್ಪುತ್ತಾರೆ. ಮಣ್ಣಿನ ಪಟ್ಟಿಯ ಉಪಚಾರವನ್ನು ವಿಶೇಷವಾಗಿ ಮಾಡುತ್ತಾರೆ. ಆರೋಗ್ಯ ಭಾಗ್ಯ ಆಚಾರದಲ್ಲಿ ಪೂರ್ಣವಿದೆ. ಮೊಳಕೈ ಮೊಣಕಾಲಿನ ವರೆಗೆ ಸ್ವಚ್ಛವಾಗಿ ತೊಳೆದು ಮುಖವನ್ನು ಬಾಯಿಯನ್ನು ಸ್ವಚ್ಛಗೊಳಿಸಬೇಕು. ಕನಿಷ್ಟ ೩ ಸಲುವಾದರೂ ಮುಕ್ಕುಳಿಸಬೇಕು. ಹನ್ನೆರಡಂಗುಲ ಪ್ರಮಾಣದ ಮಾವು, ಬೇವು, ಜಾಲಿ, ನೆಲ್ಲಿ, ಉತ್ತರಾಣಿ, ಹುಲಗಲಿ, ಮೊದಲಾದ ರಸವುಳ್ಳ ವನಸ್ಪತಿ (ಗಿಡ)ಗಳ ಕಡ್ಡಿಯಿಂದ ಹಲ್ಲುಗಳನ್ನು ತಿಕ್ಕಬೇಕು. ಗಿಡಗಳ ರಸ ಹಲ್ಲಿನಲ್ಲಿ ಹಾಗೂ ವಸಡೆಗಳಲ್ಲಿ ಸಂಬಂಧವಾಗಿ ದೀರ್ಘಕಾಲ ಹಲ್ಲುಗಳ ಶಕ್ತಿ ಹೀನವಾಗುವದಿಲ್ಲ. ಹಲ್ಲುಕಡ್ಡಿಯನ್ನು ಮುಖದಲ್ಲಿರಿಸುವಾಗಲೂ ಉರದ ಲಿಂಗದೇವನಿಗೆ ತೋರಿಸಿದರೆ ಆ ಕರ್ಮವೂ ಸತ್ಕ್ರಿಯೆಯೆನಿಸುವದು. ವೀರಶೈವರು ಮುಖ ತೊಳೆಯುವದಕ್ಕಾಗಲಿ, ಸ್ನಾನ ಮಾಡುವದಕ್ಕಾಗಿಯಾಗಲಿ ಅಡಿಗೆ ಮಾಡುವದಕ್ಕಾಗಲಿ ಅಥವಾ ಕುಡಿಯುವದಕ್ಕಾಗಲಿ ಯಾವದೇ ಕೆಲಸಕ್ಕೆ ಬೇಕಾದ ನೀರಿನಲ್ಲಿ ಧೂಳ ಪಾದೋದಕವನ್ನು ಬೆರೆಸಬೇಕು.

ಕೇವಲ ಬಾಯಿ (ವಾಣಿ) ಯಿಂದ ಅನಂತ ನದಿಗಳ-ತೀರ್ಥಗಳ ಸ್ಮರಣೆ ಮಾಡುವದಕ್ಕಿಂತ ಅಷ್ಟಷಷ್ಠಿ (೬೮) ತೀರ್ಥಗಳ ಫಲಕ್ಕಿಂತ ಮಿಗಿಲೆನಿಸಿದ ಧೂಳ ಪಾದೋದಕವನ್ನು ಉಪಯೋಗಿಸುವದರಿಂದ ಜಲದ ಜಡತ್ವವು ಬಯಲಾಗುವದು. ಧೂಳಪಾದೋದಕವನ್ನು ಸ್ನಾನಾದಿ ಕ್ರಿಯೆಗಳಿಗೆ ಉಪಯೋಗಿಸುವದರಿಂದ ಸ್ಥೂಲ ತನು ಪವಿತ್ರವಾಗುವದು. ಅಪ್ಯಾಯನ ಮಾಡಿದ ಮನ ತಣಿಯುವದು. ಸ್ನಾನ ಮಾಡಿ ಮಡಿಬಟ್ಟೆಯನ್ನು ಉಟ್ಟುಕೊಂಡು ಶಿವನಾಮಗಳನ್ನು ನುಡಿಯುತ್ತ ಶಿವಪೂಜಾ ಗೃಹವನ್ನು ‘ಇದು ಶಿವನ ಸದನವೆಂದು ಭಾವಿಸುತ್ತ ಪ್ರವೇಶಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಬಿಳೇ ಕಂಬಳಿ ಅಥವಾ ಹುಲ್ಲಿನ (ದರ್ಭೆಯ) ಚಾಪೆಯ ಮೇಲೆ ಮುಹೂರ್ತ ಮಾಡಬೇಕು. ನೆಲ-ಕಲ್ಲುಗಳ ಮೇಲೆ ಕುಳಿತುಕೊಂಡು  ಪೂಜಿಸಬಾರದು. ಯಾಕೆಂದರೆ ಕಟ್ಟಿಗೆಗೆ ವಿದ್ಯುತ್ ಪ್ರವಾಹ ಹರಿಯದಿರುವಂತೆ ಆಸನಗಳ ಮೇಲೆ ಕೂಡುವದರಿಂದ ಲಿಂಗತೇಜಃ ಪ್ರವಾಹವು ಶರೀರವನ್ನು ಬಿಟ್ಟು ಚಲಿಸುವದಿಲ್ಲ, ಮತ್ತು ಭೌತಿಕ ಬಾಧೆಯೂ ತಗಲುವದಿಲ್ಲ.

ಸಿದ್ಧಾಸನ, ಪದ್ಮಾಸನ, ವೀರಾಸನ ಅಥವಾ ಸುಖಾಸನಗಳಲ್ಲಿ ಯಾವುದೊಂದು ಆಸನಯುಕ್ತನಾಗಿ  ಋಜುಕಾಯನಾಗಿ ಶುದ್ಧೋದಕದಲ್ಲಿ ಪ್ರಣವವನ್ನು ಬರೆದು ಲಿಂಗಾಭಿಷೇಕ ಮಾಡಿ ಸಂಕ್ಷಿಪ್ತ ಪೂಜೆಯನ್ನು ಮುಗಿಸಬೇಕು. ಗುರುಪಾದೋದಕ ಮಾಡಿಕೊಂಡೇ ಶಿವಪೂಜೆ ಮಾಡುವದು. ಕ್ರಿಯಸ್ತರಿಗೆ ಯೋಗ್ಯವಾದುದು. ಮೊದಲು ಗುರು-ಲಿಂಗ-ಜಂಗಮ ಧ್ಯಾನಮಾಡಿ ಲಿಂಗ ಪೂಜೆಯನ್ನು ಪಾದೋದಕ-ಪ್ರಸಾದ ಸಿದ್ಧಿಗಾಗಿ ಪೂರೈಸುವೆನೆಂದು ಸಂಕಲ್ಪಿಸಬೇಕು. ಈ ಸಂಕಲ್ಪ ಜಡವಾದುದಲ್ಲ. ಜ್ಞಾನೇಂದ್ರಿಯಗಳಿಗೆ ಷಡಕ್ಷರ ಪ್ರಣವಗಳ ಸಂಬಂಧ ಅಥವಾ ಸ್ಪರ್ಶಮಾಡುವದು. ಮತ್ತು ಶರೀರದೊಳಗಿನ ಅಶುದ್ಧ ವಾಯುವನ್ನು ಪ್ರಾಣಾಯಾಮದಿಂದ ಪರಿಶುದ್ಧಗೊಳಿಸುವದಾದ ಮೇಲೆ ಭಕ್ತಸ್ಥಲದ ಆಚರಣೆಯು ಪ್ರಾರಂಭವಾಗುವದು. ಇಲ್ಲಿಯವರೆಗೆ ವಿವರಿಸಿದ ವಿಧಾನವು ಅಷ್ಟಾಂಗ ಯೋಗದ ಪೂರ್ವಭಾಗವನ್ನು ಕೆಲಮಟ್ಟಿಗೆ ಪೂರೈಸುವದು. ಈ ರೀತಿ ಸಹಜವಾದ ಆ ಯೋಗ ಇಲ್ಲಿ ಸಂಗತವಾಗುವದು.

 ಭಕ್ತಸ್ಥಲದಲ್ಲಿ ಆಚಾರಲಿಂಗದ ಅರಿವು ವೇದ್ಯವಾಗುವದು. ಅಷ್ಟಾವರಣದಲ್ಲಿ ಪೂಜಾ ಸಾಧನೆಯ ಮೊದಲನೆಯ ಸಾಮಗ್ರಿ ಭಸ್ಮವಾಗಿದೆ. ಭಸ್ಮದಿಂದ ತನು-ಮನ- ಇ೦ದ್ರಿಯಗಳ ಪೂರ್ವಭಾವವು ಭಸ್ಮವಾಗುತ್ತದೆ. ಭಸ್ಮವನ್ನು ಪೂಜಿಸಿ ಪಂಚಬ್ರಹ್ಮ ಮಂತ್ರೋಚ್ಛಾರಣೆಯಿಂದ ಸಿಂಪರಣೆ ಮಾಡಿಕೊಳ್ಳುವದು ಭಸ್ಮಸ್ನಾನವು. ಜಲಸ್ನಾನವಾದ ಮೇಲೆ ಭಸ್ಮಸ್ನಾನದಿಂದ ಅಂತರಂಗದ ಜಳಕವು ನೈರ್ಮಲ್ಯವು ಮುಗಿದಂತಾಗುವದು. ಎರಡೂ ಕೈಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಮಂತ್ರ ಸಂಬಂಧಮಾಡಿ ಶರೀರದ ಅಂಗಾಂಗಗಳಿಗೆ ಸವರಿಕೊಳ್ಳಬೇಕು. ಭಸ್ಮ ಸ್ನಾನ ಹಾಗೂ ಲೇಪನಗಳಿಂದ ಶರೀರದ ಶೈತ್ಯಾಂಶವು ನಾಶವಾಗುವದು. ಚರ್ಮದ ಪರಿಶುದ್ಧತೆ ಯುಂಟಾಗುವದು. ನಂತರ ತೋರ ಬೆರಳು, ನಡುವಿನ ಬೆರಳು, ಮತ್ತು ಉಂಗುರ ಬೆರಳು ಈ ಮೂರು ಅಂಗುಲಿಗಳಿಂದ ತ್ರಿಪುಂಡ್ರವನ್ನು ಧರಿಸಬೇಕು. ಗುರುವಿನ ಅಪ್ಪಣೆಯಂತೆ ಆಯಾ ಅವಯವಗಳಲ್ಲಿ ಸ್ಪಷ್ಟವಾಗಿ ಧರಿಸಬೇಕು. ಭಸ್ಮಧರಿಸುವಾಗ ಸಂಕೋಚಗೊಳ್ಳುವದು ಸರಿಯಲ್ಲ. ಭಸ್ಮದಿಂದ ಶರೀರವು ಪವಿತ್ರ ಹಾಗೂ ಶಾಂತ   ವಾಗುವುದು. ಇನ್ನು ರುದ್ರಾಕ್ಷಧಾರಣೆಯಿಂದ ಶರೀರದ ಹೆಚ್ಚಿನ ಉಷ್ಣತೆಯೂ ದೂರವಾಗುವದು.

ಮಾಹೇಶ್ವರ ಸ್ಥಲದಲ್ಲಿ ಮಂತ್ರನ್ಯಾಸಗಳು ದಿಗ್ಭಂಧನ, ಧ್ಯಾನ ಹಾಗೂ ಜಪ ವಿಧಾನಗಳು ಸೇರುವವು. ಶರೀರದಲ್ಲಿ ಶಿವನ ಷಟ್‌ಶಕ್ತಿಗಳನ್ನು ಮಂತ್ರಪೂರೈಕ ಸಂಬಂಧ ಮಾಡಿಕೊಳ್ಳುವದೇ ಮಂತ್ರನ್ಯಾಸವು.

 ಸರ್ವಜ್ಞತಾ ತೃಪ್ತಿರನಾದಿಬೋಧಃ |

ಸ್ವತಂತ್ರತಾ ನಿತ್ಯಮಲುಪ್ತ ಶಕ್ತಿಃ |

ಅನಂತಶಕ್ತಿಶ್ಚ ವಿಭೋರ್ವಿಧಿಜ್ಞಾ

ಷಡಾಹುರಂಗಾನಿ ಮಹೇಶ್ವರಸ್ಯ || ಪಾರಮೇಶ್ವರ ತಂತ್ರ ||

ಮಹಾಪರಶಿವನ ಆರುಶಕ್ತಿಗಳೆನಿಸಿದ ೧) ಸರ್ವಜ್ಞ ಶಕ್ತಿ ೨) ನಿತ್ಯತೃಪಶಕ್ತಿ ೩) ಅನಾದಿ ಬೋಧಶಕ್ತಿ ೪) ಸ್ವತಂತ್ರಶಕ್ತಿ ೫) ಅಲುಪಶಕ್ತಿ, ೬) ಅನಂತಶಕ್ತಿಗಳನ್ನು ಕರಗಳಲ್ಲಿ ದೇಹದಲ್ಲಿ ಮತ್ತು ಅಂಗಾಂಗಗಳಲ್ಲಿ ವಿಧಾನಪೂರ್ವಕ ನ್ಯಾಸ (ಸಂಬಂಧ) ಮಾಡಿಕೊಳ್ಳುವದರಿಂದ ಅಂಥ ಶಕ್ತಿಗಳನ್ನು ತಾನೂ ಧರಿಸಿಕೊಂಡಂತಾಗುವದು. ಅಂತೆಯೇ ಶಿವಯೋಗಿಯ ಸರ್ವಾಂಗವೂ ಲಿಂಗಮಯವಾಗುತ್ತದೆ. ಪರುಷಮಯವೆನಿಸುತ್ತದೆ. ಇಂಥ ಪೂಜ್ಯರು ಮುಟ್ಟಿದ ಪದಾರ್ಥ ಪ್ರಸಾದವಾಗಿ ಪರಿಣಮಿಸುತ್ತದೆ. ಈ

ಷಟ್‌ಶಕ್ತಿಗಳನ್ನು ನ್ಯಾಸಮಾಡಿಕೊಳ್ಳುವದರಿಂದ ಶಿವಯೋಗಿಯು ಸಾಕ್ಷಾತ್ ಶಿವನಾಗುವನು. ಪಂಚಪರುಷಗಳೂ ಅವನಲ್ಲಿ ಗುಪ್ತವಾಗಿ ಪ್ರಭಾವ ಬೀರುವವು.

ನ್ಯಾಸಗಳು ಪೂರೈಸಿದ ಮೇಲೆ ದಿಗ್ಭಂಧನ ಮಾಡಿ ಜಪಮಾಡಬೇಕು. ಜಪ ವಿಧಾನದಿಂದ ನಿಷ್ಠಾಭಕ್ತಿಯು ಬೆಳೆದು ಗುರುಲಿಂಗದ ಪೂಜೆ ಬಲಗೊಳ್ಳುವದು. ನಂತರ ವಾಮಕರವನ್ನು ಪೂಜಿಸಿ ಪಶ್ಚಿಮ ಶಿಖಾಚಕ್ರದಲ್ಲಿರಿಸಿ ಭಾವಲಿಂಗವನ್ನು ಭಾವಿಸಿ ಭ್ರೂಮಧ್ಯದಲ್ಲಿ ಪ್ರಾಣಲಿಂಗವನ್ನು ಕಲ್ಪಿಸಿ ಉರದ ಇಷ್ಟಲಿಂಗವನ್ನು ಕರ ಕಮಲಕ್ಕೆ ಬಿಜಯಂಗೈಸಿಕೊಂಡು ಷೋಡಶೋಪಚಾರ ಅಷ್ಟವಿಧಾರ್ಚನಗಳಿಂದ ಪೂಜಿಸುವದು ಪ್ರಸಾದಿ-ಪ್ರಾಣಲಿಂಗಿಸ್ಥಲದ ಪೂಜೆಯಾಗುವದು. ಜಲ, ಗಂಧ, ಅಕ್ಷತೆ, ಪತ್ರಿ, ಪುಷ್ಪ, ಧೂಪ, ದೀಪ, ನೈವೇದ್ಯ ಇವುಗಳಿಂದ ಮಾಡಿದ ಪೂಜೆ ಅಷ್ಟವಿಧಾರ್ಚನೆಯೆನಿಸುವದು. ಇನ್ನು ಅರ್ಘ್ಯ, ಪಾದ್ಯ, ಅಚಮನ, ಪತ್ರಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಇವು ಷೋಡಶೋಪವಿಚಾರಗಳು, ಈ ಉಪಚಾರಗಳು ಎಲ್ಲರಿಗೆ ಸಾಧ್ಯವಾಗದಿದ್ದರೂ ಅಷ್ಟ ವಿಧಾರ್ಚನೆಯನ್ನು ಮಾಡ ಬಹುದು.

 ಪೂಜೆಯ ಒಂದೊಂದು ಉಪಚಾರವೂ ಒಂದೊಂದು ಅಮೋಘ ಫಲವನ್ನು ಕರುಣಿಸುತ್ತದೆ. ಜಲವು ಶಾಂತಿಯನ್ನು ಗಂಧವು ಪುಷ್ಟಿಯನ್ನು ಮತ್ತು ಆಯುಷ್ಯವನ್ನು ಬೆಳೆಸುವದು. ಅಕ್ಷತೆಯು ಕ್ಷತಿ (ದುಃಖ) ಯನ್ನು ಕಳೆಯವದು. ಪತ್ರ-ಪುಷ್ಪಗಳು ಶಮ-ದಮಾದಿ ದೈವೀ ಸಂಪತ್ತನ್ನು, ಧೂಪವು ಪಾಪವನ್ನು ನಿವಾರಿಸಿ ಪವಿತ್ರತೆಯನ್ನು ಕೊಡುವದು. ದೀಪನೀರಾಜನವು ಅಪಮೃತ್ಯುವನ್ನು  ಹರಣ ಮಾಡುವದು. ನೈವೇದ್ಯವು ಸರ್ವಸಂಪತ್ತನ್ನು ಕೊಡುವದು. ವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಈ ಫಲವನ್ನು ಪ್ರತಿಪಾದಿಸಿದ್ದಾರೆ.

 ಉಪಚಾರಯುಕ್ತವಾದ ಅರ್ಚನೆಯನ್ನು ಪೂರೈಸಿ ತನ್ನ ನಾಶಿಕಾಗ್ರದಿಂದ ಹನ್ನೆರಡು ಅಂಗಲ ಪರಿಮಿತಿಯಲ್ಲಿ ಅಂಗೈಯೊಳಗಣ ಲಿಂಗವನ್ನು ಕಂಗಳಿಂದ ನಿರೀಕ್ಷಣ ಮಾಡುತ್ತ ಗುರೂಪದಿಷ್ಟ ಷಡಕ್ಷರ ಮಹಾಮಂತ್ರವನ್ನು ನೂರೆಂಟು ಸಲಕ್ಕೆ ಕಮ್ಮಿಯಾಗದಂತೆ ಜಪಿಸಬೇಕು. ಈ ಲಿಂಗ ನಿರೀಕ್ಷಣವು ಪ್ರಾಣಲಿಂಗಿಯ ಅನುಸಂಧಾನವಾಗುವದು. ಪ್ರಸಾದಿಯಾಗಿ ಶಿವಲಿಂಗಕ್ಕೆ ಉಪಚಾರಗಳನ್ನು ಸಮರ್ಪಿಸಿ ಪ್ರಾಣಲಿಂಗಿಯಾಗಿ ಜಂಗಮ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳನ್ನು ಬೆರೆಯಿಸಬೇಕು. ಪುನಃ ಜಪಿಸಿ ಅರ್ಘ್ಯಕೊಟ್ಟು ಮಂಗಲ ಸ್ತೋತ್ರವನ್ನು ಪಾಡುವ ಶರಣನು ಪತಿಯಾದ ಪ್ರಸಾದಲಿಂಗನ ಪ್ರಸನ್ನತೆಯನ್ನು ಪಡೆಯುವನು. ಅನುಭವದ ಆನಂದವನ್ನು ಸವಿಯುವದು.

ಪೂಜೆಯನ್ನು ಪೂರೈಸಿ ಐಕ್ಯಸ್ಥಲದಲ್ಲಿ ನಿಂದ ಶರಣನು ಗುರು-ಲಿಂಗ- ಜಂಗಮದ ಪಾದೋದಕ-ಪ್ರಸಾದದಲ್ಲಿ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ಸಮರಸವಾಗುವನು. ಮಹದಾನಂದಭರಿತನಾಗುವನು. ಇವೆಲ್ಲವುಗಳೂ ಶಿವಪೂಜೆಯ ಸತ್ಕ್ರಿಯೆಗಳಲ್ಲದೆ ಮತ್ತೇನು ? ಈ ಸತ್ಕ್ರಿಯೆಗಳಲ್ಲಿ ಸಮ್ಯಕ್ ಜ್ಞಾನ ಅವಶ್ಯ ಬೇಕಾಗುವದು. ಸುಜ್ಞಾನವಿಲ್ಲದ ಕ್ರಿಯೆ ಸತ್ಕ್ರಿಯೆಯೆನಿಸದು. ಸುಜ್ಞಾನ-ಸತ್ಕ್ರಿಯೆಗಳ ಸಂಗಮವೇ ಶಿವಯೋಗಸಿದ್ಧಿಗೆ ಕಾರಣವಾಗುವದು. ಶಿವಯೋಗದಿಂದ ಪದಾರ್ಥ ಕಾರ್ಯವು ಪ್ರಸಾದ ಕಾಯವೆನಿಸುವದು. ಪರಿಪೂರ್ಣವೆನಿಸುವದು.

ಶ್ರೀ ಗುರುನಾಥನು ಇಂಥ ಮಂಗಲಮಯ ಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಲು ಬೋಧಿಸುವನು. ಅನಾನುಕೂಲವಾದಲ್ಲಿ ದ್ವಿಕಾಲದಲ್ಲಿ ಅಥವಾ ಏಕಕಾಲದಲ್ಲಿ ಯಾಗಲಿ ಸ್ವಸ್ವರೂಪಾನುಸಂಧಾನವುಳ್ಳ ಈ ಸ್ವಯಂ ಲಿಂಗವನ್ನು ಪೂಜಿಸಿ ಪುನೀತ ನಾಗಬೇಕೆಂಬ ಪಾಲನೆಯನ್ನು ಗುರುವು ಬೋಧಿಸುತ್ತಾನೆ. ಲಿಂಗಪೂಜೆಯಿಂದಲೇ ಲಿಂಗಭಕ್ತನ ಪಾಲನ-ಪೋಷಣವಾಗುತ್ತದೆ. ಅಂತೆಯೇ ಶಿವಕವಿಯು ಪ್ರಯೋಗಿಸಿದ ಹಾಗೂ ಮುಂದೆಯೂ ಉಪಯೋಗಿಸುವ ‘ಪಾಲಿಸಿದ’ ಪದ ಅರ್ಥಪೂರ್ಣವಾಗಿದೆ.

ತ್ಮಿಕವಾಗಿದೆ. ಇಲ್ಲಿ ಪೂಜೆಯ ಪಾಲನೆ ಮತ್ತು ಈ ನಿಯಮವನ್ನು ಪಾಲಿಸುವದರಿಂದ ತನ್ನ ಪಾಲನೆಯೂ ಅವಶ್ಯವಾಗುವದು. ನಂಬಿದರಿಗೆ ಶಂಭು ಇಂಬಾಗಿರುವನು.

ಈ ಲಿಂಗವನು ಭಕ್ತಿ | ಶೀಲನೇಮಗಳಿಂದ

ಓಲೈಸು ನಿನಗೆ-ಮೇಲುಪದವಹುದೆಂದು

ಪಾಲಿಸಿದ ಗುರುವೆ ಕೃಪೆಯಾಗು   ||೧೦೯ ||

ದೃಷ್ಟವಾದ ಇಷ್ಟಲಿಂಗವನ್ನು ಪೂಜಿಸಲು ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಸಾಧನಗಳಾದರೆ ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯು ಅವುಗಳಿಂದ ಆಗಲಾರದು. ಅಲ್ಲಿ ಭಕ್ತಿ, ಶೀಲ, ನೇಮಗಳು ಮುಖ್ಯವಾಗಿವೆ. ಯಾಕೆಂದರೆ ಭಂಡಾರಿ ಬಸವಣ್ಣನವರು-

ಅಳಿಯೆರಗದ ಅನಿಲನಲುಗದ ರವಿಕರಂಪುಗದ

ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ

 ಸುರುಚಿರಮೆನಿಪ್ಪ ಮೂಸಲಮೊಗ್ಗೆಯಂ ಕೊಂಡು

ತಂದು ಕೂಡಲಸಂಗಮನಾಥನನ್ನು ಭಕ್ತಿಯಿಂದ ಪೂಜಿಸಿದರೂ ತೃಪ್ತಿಯಾಗಲಿಲ್ಲ. ಭಯಕಂಪಿತರಾಗಿ ಭಗವಂತನನ್ನು ಬೇಡುತ್ತಾರೆ.

 ಹಾಲೆಂಜಲು ಪಯ್ಯನ, ಉದಕವೆಂಜಲು ಮತ್ಸ್ಯದ

ಪುಷ್ಪವೆಂಜಲು ತುಂಬಿಯು,

ಎಂತು ಪೂಜಿಸುವೆನಯ್ಯಾ,

ಶಿವ, ಶಿವಾ ! ಎಂತು ಪೂಜಿಸುವೆ ?

ಈ ಎಂಜಲವನತಿಗಳೆವಡೆ ಎನ್ನಳವಲ್ಲ

ಬಂದುದ ಕೈಕೋ ಕೂಡಲ ಸಂಗಮದೇವಾ

ವಿಚಾರಿಸಿದಲ್ಲಿ ಯಾವುದೂ ಶುದ್ಧವಾದುದಲ್ಲ, ಹಾಲುಕರುವಿನ ಎಂಜಲು, ನೀರು ಜಲಚರ ಪ್ರಾಣಿಗಳ ಎಂಜಲು, ಹೂಪತ್ರೆಗಳು ಕೀಟಗಳ ಎಂಜಲು, ಯಾವ ಪದಾರ್ಥವೂ ಮಿಸಲವಲ್ಲ, ಯಾವುದನ್ನೂ ಶುದ್ಧ ಮಾಡುವ ಶಕ್ತಿಯು ನಮ್ಮಲ್ಲಿಲ್ಲ. ದೇವಾ ! ಭಕ್ತಿಯ

ಮನದಿಂದ ಬಂದುದನ್ನು ಸ್ವೀಕರಿಸು. ಅದು ನಿನ್ನ ಪೂಜೆಯಾದೀತು. ಕೃಷ್ಣನಾದರೂ-

ಪತ್ರಂ ಪುಷ್ಪಂ ಫಲಂ ತೋಯಂ

ಯೋ ಮೇ ಭಕ್ತ್ಯಾ ಪ್ರಯಚ್ಛತಿ ।। ಗೀತೆ ||

ಯಾವ ಭಕ್ತನು ಪತ್ರಿಯನ್ನಾಗಲಿ, ಪುಷ್ಪವನ್ನಾಗಲಿ, ಫಲವನ್ನಾಗಲಿ, ನೀರನ್ನಾಗಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಮಾತ್ರ ನನಗೆ ಸಲ್ಲುವದು ಎಂದಿದ್ದಾನೆ. ನಾವು ಕೊಡುವ ಯಾವ ದ್ರವ್ಯವು ನಮ್ಮದಿದೆ ? ಎಲ್ಲವೂ ಶಿವನದೇ ಶಿವನಿಂದ ಬಂದಂಥವುಗಳು. ಅಂತೆಯೇ ಜ್ಞಾನನಿಧಿ ಚನ್ನಬಸವಣ್ಣನವರು ವೈಚಾರಿಕವಾದ ಸುಜ್ಞಾನ ಬೆಳಕನ್ನು ಬೀರಿದ್ದಾರೆ.

 ತನು-ಮನ-ಧನ ಮುಂತಾದವೆಲ್ಲವು

ಶಿವನೊಡವೆಯೆಂದು ಮಾಡುವ ಭಕ್ತಂಗೆ

 ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?

ಮಾಡಬೇಕೆಂಬರಿವಿನ ಕಂದೆರೆದವರಾರು ?

ಮಾಡುವೆನೆಂದು ನೆನೆದ ಚೇತನದ ಪ್ರಾಣವ ತಂದಿರಿಸಿದವರಾರು ?

ಅವರಿಂದಾದ ಒಡವೆಯ ಅವರಿಗೀವುತ್ತ ಉಪಚರಿಯವೆ ?

ನದಿಯ ಉದಕವ ನದಿಗರ್ಪಿಸುವಂತೆ

ಒಡೆಯರಿಗೆ ಒಡವೆಯನರ್ಪಿಸಿ

ತಾ ಶುದ್ಧವಾಗಿ ನಡೆನುಡಿಯಲ್ಲಿ ಕವಲುದೋರದೆ

ತನ್ನಲ್ಲಿ ತಾನೆ ತಿಳಿದು ಘನವೆಡೆಗೊಂಡ ಮಹಾನುಭಾವಿಗಳು   (, ಬ. ವ-೬೨)

ಶಿವಭಕ್ತನು ತನ್ನ ತನು-ಮನ-ಧನಗಳು ಶಿವನವುಗಳೆಂದು ಅರಿಯಬೇಕು. ಗುರು-ಲಿಂಗ-ಜಂಗಮಕ್ಕೆ ಸಮರ್ಪಣೆ ಮಾಡುವ ದ್ರವ್ಯವನ್ನು ಸತ್ಕ್ರಿಯೆಯನ್ನು ಆಚರಿಸುವ ಮನಸ್ಸನ್ನು ಹಾಗೂ ಚೇತನವನ್ನು ಶಿವನೇ ಕೊಟ್ಟಿದ್ದಾನೆ. ನದಿಯನ್ನು ಪೂಜಿಸುವವರು ನದಿಯ ನೀರಿನಿಂದಲೇ ಅರ್ಚಿಸುವಂತೆ ಜಗದೊಡೆಯನಾದ ಪರಶಿವನ ಸೊತ್ತುಗಳನ್ನು ಆ ಶಿವನಿಗೆ ಸಮರ್ಪಿಸುವಂತೆ ಅದಾವ ದೊಡ್ಡಸ್ತನವಿದೆ. ? ನಡೆ-ನುಡಿ ಭಿನ್ನವಾಗದೆ ಎರಡೊಂದಾಗಿ ತನ್ನಲ್ಲಿ ತಾನು ಅರಿತು ಆಚರಿಸಿದರೆ; ಅರ್ಚಿಸಿದರೆ ಮಹಾನುಭಾವಿಯಾಗುವನು. ಜ್ಞಾನಯುತವಾದ ಸತ್ಕ್ರಿಯಾಭರಿತ ಭಕ್ತಿಯು ಶಿವನಿಗರ್ಪಿತವಾಗುತ್ತದೆ. ಆಂತರಿಕ ಅಷ್ಟವಿಧಾರ್ಚನೆಯಲ್ಲಿ ಅಂಗಸುಖಕ್ಕೆ ಅವಕಾಶವಿರಬಾರದು. ಅರಿಷಡ್‌ವರ್ಗಗಳು ಇಲ್ಲದಾಗಬೇಕು. ಅ೦ದರೆ ಭಕ್ತಿಯೊಡನೆ ಶೀಲವು ಸಮನಿಸುವದು.

 ಚಿತ್ತರಗಿ ಸಂಸ್ಥಾನಮಠದ ಮಹಾಂತಸ್ವಾಮಿಗಳವರು ತಮ್ಮ ಲಿಂಗತತ್ತ್ವ ಪರಾಮರ್ಶೆ” ಯಲ್ಲಿ – ಲಿಂಗಪೂಜೆ ಒಂದು ಸಿದಾಂತವೂ ಹೌದು; ವಿಜ್ಞಾನವೂ ಹೌದು, ಅರ್ಚನೆ, ಅಭಿಷೇಕ ಉಪಚಾರ ಉಪಾಸನೆಗಳು ಸ್ಥಾವರ ಲಿಂಗಮೂರ್ತಿ ಪೂಜೆಗಳ ವಿಧಾನ. ಲಿಂಗಪೂಜೆ ಮಾತ್ರ ಇವುಗಳನ್ನು ಬಳಸಿಯೂ ಅತೀತವಾಗಿ ನಿಂತ ಒಂದು ತಂತ್ರ. ಒಂದು ಪದ್ದತಿ, ಒಂದು ವಿಕಾಸಯಾತ್ರೆ, ಇದೊಂದು ಭಾರತೀಯ ಯೋಗಸಮನ್ವಯವೆಂದೂ, ಪೌರ್ವಾತ್ಯ ಸಿದಾಂತದ ತುಟ್ಟತುದಿಯ ಹೂಗೊಂಚಲೆಂದೂ ಹೇಳಲಾಗುತ್ತಿದೆ. ದ್ವೈ, ದ್ವೈ, ದ್ವೈತಾದ್ವೈ, ಶಕ್ತಿವಿಶಿಷ್ಟಾದ್ವೈತ ಕರ್ಮ-ಭಕ್ತಿ- ಜ್ಞಾನ-ಲಯ-ರಾಜಯೋಗಗಳಿಗೆ ಇದೊಂದು ಏಕೈಕ ಮಣಿಮಂಚ; ಯಾವುದೂ ಇದರಲ್ಲಿ ತ್ಯಾಜ್ಯವಿಲ್ಲ. ಎಲ್ಲವೂ ಆಂಶಿಕವಾಗಿ ಬಂದು ಪೂರ್ಣತ್ವವನ್ನು ವ್ಯವಸ್ಥೆಗೊಳಿಸುತ್ತವೆ”, ಎಂದು ಲಿಂಗಪೂಜೆಯ ಸೂಕ್ಷ್ಮತೆಯನ್ನು ಪರಾಮರ್ಶಿಸಿದ್ದಾರೆ.

ಲಿಂಗಭಕ್ತನು ಶೀಲವನ್ನು ಸಂಪಾದಿಸುವ ಪರಿ ಬಹುಸೂಕ್ಷ್ಮವಾಗಿದೆ. ಅರ್ಥ ಪೂರ್ಣವಾಗಿದೆ ಭಕ್ತನು ಆಚಾರಾದಿ ಲಿಂಗಗಳನ್ನು ಅರುವಿನಿಂದ ಅರ್ಚಿಸಬೇಕಗುವದು. ಆಚಾರಲಿಂಗದಲ್ಲಿ ಆಸಕ್ತಿಯುಳ್ಳ ಶಿವಭಕ್ತನು ಸಖೀ-ಸಹೋದರ ಮೋಹವ ಮರೆಯಬೇಕು. ಪೂರ್ವಾಚಾರವನ್ನು ಬಿಡಬೇಕು. ಅನ್ಯದೇವತಾ ಪೂಜೆಯ ಮಾಡಬಾರದು. ಹಿಡಿದ ನೇಮವ ಬಿಡಬಾರದು. ಅಶುಚಿಯಾಗದೇ, ಭಕ್ತನಿಂದೆಯ ಕೇಳದೇ ಇರಬೇಕು. ಗುರುಲಿಂಗ ಪೂಜಕನಾದರೆ ಮಾತಾ-ಪಿತರ ಮೋಹವನ್ನು ತ್ಯಜಿಸಬೇಕು. ಗುರ್ವಾಜ್ಞೆಯ ಮಿರದೆ ಗುರುಮಾರ್ಗಾಚಾರದಲ್ಲಿ ಮುನ್ನಡೆಯಬೇಕು. ಮಾನವರ ಸೇವೆ ಮಾಡಬಾರದು. ಶಿವಲಿಂಗ ಭಕ್ತನಾದರೆ ಅನ್ಯಮೋಹ, ಅನ್ಯದೈವ ಭಜನೆ ಪೂಜೆಗಳನ್ನು ಪೂರ್ಣವಾಗಿ ಪರಿಹರಿಸಬೇಕು. ಪುಣ್ಯಕ್ಷೇತ್ರಗಳನ್ನು ಕುರಿತು ಹೋಗಬಾರದು. ಅಂಗಭೋಗ, ಸತಿಸಂಗವನ್ನು ದೂರೀಕರಿಸಬೇಕು ಜಂಗಮಲಿಂಗಾರಾಧಕನೆನಿಸಿದರೆ ಪೂರ್ವಕುಲಗೋತ್ರವನ್ನು ಮರೆಯಬೇಕು. ಮತ್ತೆ ಅವರೊಡನೆ ಬೆರೆಸಬಾರದು. ಆಸೆಯಿಂದ ಅರ್ಥ ಸಂಗ್ರಹವನ್ನು ಮಾಡಬಾರದು. ಬೇಡಿದಡೆ ಇಲ್ಲೆನ್ನಬಾರದು. ಶಿವಲಾಂಛನದ ನಿಂದೆಯನ್ನು ಕೇಳಬಾರದು. ಪ್ರಸಾದಲಿಂಗದಲ್ಲಿ ಪ್ರಸನ್ನ ಮನವುಳ್ಳವನಾದರೆ ಅಂಗರುಚಿಯನ್ನು ಕಳೆದುಕೊಳ್ಳಬೇಕು. ಅನ್ಯರಿಗೆ ಕೈಯೊಡ್ಡಬಾರದು. ಜೀವ ಹಿಂಸೆಯನ್ನು ಮಾಡದೇ ಆತ್ಮನಿಗ್ರಹವನ್ನು ಸಾಧಿಸಬೇಕು. ಮಹಾಲಿಂಗ ಭಕ್ತನಾದರೆ ಲೋಕದ ಮೋಹವನ್ನು ಮರೆತು ಅಜ್ಞಾನಿಗಳ ಸಂಗವನ್ನು ಪರಿಹರಿಸಬೇಕು. ಮರಣಕ್ಕಂಜದೆ ಸಮತೆ ಸಮಾಧಾನಗಳು ನೆಲೆಗೊಳ್ಳಬೇಕು. ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗದಂತಿರಬೇಕು. ಇದು ನಿಜವಾದ ಲಿಂಗಭಕ್ತನ ಭಕ್ತಿಯ ಶೀಲವೆಂದು ಶರಣರು ಸಾರಿದ್ದಾರೆ.

ಅಚ್ಚಶೀಲತನದ ಹಾಗೂ ಶೀಲವಂತನ ವ್ಯಾಖ್ಯೆಯನ್ನು ಚನ್ನಬಸವಣ್ಣನವರು ಸುಂದರವಾಗಿ, ಸರಳವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ-

 ಚಿತ್ತದ ಕಳವಳವಳಿದು ಮನವು ಮಹಾ ಘನದಲ್ಲಿ ನೆಲೆಗೊಂಡುದೆ ಶೀಲ

 ಪರಮ ಪರಿಣಾಮ ನೆಲೆಗೊಂಡುದೆ ಶೀಲ

ಮತ್ತು

 ಭಕ್ತರು ಮತಕ್ಕೆ ಬಂದು ಒಳಹೊರಗೆಂಬುದು ಶೀಲವೆ ?

ಎನ್ನ ಲಿಂಗಕ್ಕೆ ಒಳ್ಳೆಯ ಅಗ್ಗವಣಿಯ ತನ್ನಿ,

ಒಳ್ಳೆಯ ಪುಷ್ಪವ ತನ್ನಿ, ಒಳ್ಳೆಯ ಓಗರವ ಮಾಡಿ

 ಎಂಬುದು ಶೀಲವೆ ? ಅಲ್ಲ

ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ,

ಅಷ್ಟಮದಂಗಳ ಕೊಂದಾತನೆ ಶೀಲವಂತ

ಕೂಡಲಚನ್ನಸಂಗಮದೇವಾ    II ೧೦೮೩ II

ಶೀಲವಾದಡೆ ಪ್ರಪಂಚುನಾಸ್ತಿಯಾಗಿರಬೇಕು.

 ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು

ಇಂತಪ್ಪ ಶೀಲಕ್ಕೆ ಭವನಾಸ್ತಿ, ಸೀಮೆಗೆ ಭವನಾಸ್ತಿ,

 ಈ ದ್ವಿವಿಧ ನಾಸ್ತಿಯಾದಲ್ಲದೆ

ಕೂಡಲ ಚನ್ನಸಂಗಯ್ಯನಲ್ಲಿ ಶೀಲವಂತನೆನಿಸಬಾರದು. || ೧೦೮೪ |

ಭಕ್ತನಾದವನು ಶಿವಭಕ್ತರೊಡನೆ ಆತ್ಮೀಯವಾಗಿ ಸಹಕರಿಸಬೇಕು. ಭಿನ್ನತೆ ಯನ್ನೆಣಿಸಬಾರದು. ಪಂಚೇಂದ್ರಿಯಗುಣ, ಸಪ್ತಧಾತು, ಅರಿಷಡ್‌ವರ್ಗ ಹಾಗೂ ಅಷ್ಟಮದಗಳನ್ನು ಜಯಿಸಿದವನೇ ನಿಜವಾದ ಶೀಲವಂತನೆನಿಸುವನು. ಅಂತರಂಗದ ಸಾಧಿಸುವಲ್ಲಿಯೇ ಲಿಂಗವಂತಿಕೆ ವ್ಯಕ್ತವಾಗುವದು. ಜಡಗುಣಗಳು ದೂರವಾದಲ್ಲದೆ ಶೀಲ ಸದ್ಗುಣಗಳು ಸಮನಿಸಲಾರವು. ಸಚ್ಛೀಲವನ್ನು ಸಾಧಿಸುಚಲ್ಲಿಯೆ ಲಿಂಗವಂತಿಕೆ ವ್ಯಕ್ತವಾಗುವದು.

  ಶೀಲತನದೊಂದಿಗೆ ನಿಯಮಿತತನವು ಶಿವಭಕ್ತನನ್ನು ಸುಂದರಗೊಳಿಸುವದು. ಭಕ್ತಿಯ ಸತ್ಯತೆಯೊಂದಿಗೆ ಶೀಲದ ಶಿವಭಾವನೆಯನ್ನು ಸಂಪಾದಿಸಿದರೆ ನಿಯಮದ ಸೌಂದರ್ಯ ಶೋಭಾಯಮಾನವಾಗುವದು. ಶಿವನ ‘ಸತ್ಯಂ ಶಿವಂ ಸುಂದರಂ’ ತತ್ತ್ವ ಮೈಗೂಡಿಸಿಕೊಳ್ಳುವದು. ನೇಮದ ನಿಜವನ್ನು ಅಣ್ಣನ ಮಾತಿನಲ್ಲಿ ನೋಡಿ-

ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !

ತನುವುದ್ದೇಶ, ಮನವುದ್ದೇಶವಾಗಿ,-

ಮಾಡುವ ನೇಮ ಸಲ್ಲವು ! ಸಲ್ಲವು !

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !

ಕೂಡಲ ಸಂಗಮದೇವಯ್ಯ ಇವು ನಿಮ್ಮ-

ನಿಜದೊಳಗೆ ನಿಲ್ಲವು; ನಿಲ್ಲವು; (ಬ. ಷ. ವ. ೭೧)

ಮತ್ತು

ಬಂದುದ ಕೈಕೊಳಬಲ್ಲಡೆ ನೇಮ,

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ

ನಡೆದು ತಪ್ಪದಿದ್ದಡೆ ನೇಮ

ನುಡಿದು ಹುಸಿಯದಿದ್ದಡೆ ನೇಮ

ನಮ್ಮ ಕೂಡಲ ಸಂಗನ ಶರಣರು ಬಂದಡೆ

ಒಡೆಯರಿಗೊಡವೆಯನೊಪ್ಪಿಸುವುದೇ ನೇಮ (೨೩೧ ಬ.ಷ.ವ.)

ಮತ್ತು

ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ,

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? || ೧೮೩||

 ಶಿವಭಕ್ತನು ಮಾಡುವ ಕ್ರಿಯೆಗಳೆಲ್ಲ ಲಿಂಗದಕ್ರಿಯೆಗಳು, ಲಿಂಗದ ನೇಮಗಳಾದುದರಿಂದ ತನು-ಮನಕ್ಕೆ ಅವಕಾಶ, ಅಲ್ಲಲ್ಲಿ, ಗುರುವಚನದಂತೆ ನಡೆಯುವದು, ನುಡಿಯುವದು ನೀಜನೇಮ. ಬಂದುದನ್ನು ಪ್ರಸಾದವೆಂದು ಕೈಕೊಳ್ಳಬೇಕು. ತನ್ನಲ್ಲಿದುದ್ದನ್ನು ಶಿವಭಕ್ತರಿಗೆ ಇಲ್ಲೊಂದು ವಂಚಿಸಬಾರದು. ನಡೆದು ತಪ್ಪದೆ, ನುಡಿದು ಹುಸಿಯಾಗದಿದ್ದಡೆ ಅದುವೆ ಶಿವನ ನೇಮವಾಗುವದು. ಶಿವನಿಗೆ ಸಮರ್ಪಿಸುವ ಸಾಮಗ್ರಿಗಳನ್ನು ಸ್ವತಃ ಸಂಪಾದಿಸಿ ಪೂರೈಸಬೇಕು. ಅಂದರೆ ಶಿವಲಿಂಗಕ್ಕೆ ತೃಪ್ತಿ ಇಂಥ ಭಕ್ತಿ ಶೀಲ-ನೇಮಗಳಿಂದ ಕೈಗೊಳ್ಳುವ ಶಿವಪೂಜೆಗೆ ಸಮನಾದ ಮೇಲುಪದವಿಲ್ಲ.

ಶಿವಪೂಜೆಗೈಯ್ಯುವ, ಶಿವಯೋಗಾನಂದದಲ್ಲಿ ತುಂದಿಲರಾಗುವ ಶರಣರು ಶಿವನ ಕೈಲಾಸವನ್ನು ಬಯಸಲಿಲ್ಲ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಿಗೆ ಆಶಿಸಲಿಲ್ಲ.  ಅವರಿದ್ದ ಠಾವು, ಅವರಂಗಳ ವಾರಾಣಿಸಿ, ಕಾಯವೇ ಕೈಲಾಸ, ಅವರ ನುಡಿಯೊಳಗೆ ಚಿಂತಾಮಣಿ, ಅವರಂಗಳ ಮುಂದಣ ಗೋವೇ ಕಾಮಧೇನು. ವೃಕ್ಷವೇ ಕಲ್ಪವೃಕ್ಷವಾಗಿರುತ್ತದೆ. ಇದನ್ನರಿತ ಶಿವಭಕ್ತರು ಬ್ರಹ್ಮಪದವಿ, ವಿಷ್ಣು ಪದವಿ, ರುದ್ರ ಪದವಿಗೆ ಹಾತೊರೆಯದೇ ಶಿವಶರಣರ ತೊತ್ತಾಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿರುವರು. ಶರಣ ಪದವಿಯೇ ಘನವಾದುದು. ಲಿಂಗಭಕ್ತತನವೇ ಮಿಗಿಲಾದುದು. ಅನುಪಮವಾದುದು. ಗುರುನಾಥನು ಭಕ್ತಿ-ಶೀಲ-ನೇಮಗಳಿಗಾ ಶ್ರಯವಾದ ಇಷ್ಟಲಿಂಗವನ್ನು ಕರುಣಿಸಿ ಮೇಲು ಪದವಿಯನ್ನು ಪಡೆಯಲು ಶಿವಯೋಗ ಪಾಲನೆಯನ್ನು ದಯಪಾಲಿಸಿದ್ದಾನೆ. ಅಂಥ ಆತನ ಸತ್ಕೃಪೆಗೆ ಅದಾವುದು ಸರಿಯಾದೀತು !

ಸಾಲೋಕ್ಯ ಮೊದಲಾದ | ಮೇಲಾದ ಪದನಾಲ್ಕು

ಈ ಲಿಂಗ ಪದಕೆ-ಕೀಳಾಗುತಿಹವೆಂದು

ಪೇಳಿದೈ ಗುರುವೆ ಕೃಪೆಯಾಗು   ||೧೧೦||

ಮೇಲಾದ ಪದ ಅಥವಾ ಪದವಿ, ಕೈವಲ್ಯ, ಮುಕ್ತಿ, ನಿರ್ವಾಣ, ಮೋಕ್ಷ ವೆಂಬುದಾಗಿ ಧರ್ಮ ಗ್ರಂಥಗಳು ಸಾರುತ್ತವೆ. ಜಗತ್ತಿನಲ್ಲಿ ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬೇಕು. ಅಂದರೆ ಮಾನವ ಜೀವನ ಸಾರ್ಥಕವಾಗುವದು. ಪುರುಷಾರ್ಥಗಳಲ್ಲಿ ಪ್ರಧಾನವಾದುದು ಮೋಕ್ಷ, ಮೋಕ್ಷವನ್ನು ಹೊಂದುವದೇ ಜೀವಾತ್ಮರ ಮಹಾಮಣಿಹ. ಈ ಮೋಕ್ಷವು ನಾಲ್ಕು ತೆರನೆಂದು ಪ್ರತಿಪಾದಿಸುತ್ತಾರೆ -ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂದು. ಈ ನಾಲ್ಕು ಮುಕ್ತಿ-ಪದಗಳು ಲಿಂಗೈಕ್ಯನ ಸಮರಸ ಅಥವಾ ಲಿಂಗಾಂಗಸಮರಸ ಪದವಿಗೆ ಸರಿಬರುವುದಿಲ್ಲವೆಂಬುದು ಸದ್ಗುರುವಿನ ಅಪ್ಪಣೆ.

ಲಿಂಗಪದವಿಗೆ ಅವು ಕೀಳೆಂದು ಹೇಳುವ ಧೈರ್ಯ ಶರಣದು. ಇನ್ನಾವ ಸಿದ್ಧಾಂತ ಇದನ್ನು ಪ್ರತಿಪಾದಿಸುವ ಸಾಹಸ ಮಾಡಿರುವದಿಲ್ಲ.

 ಸದ್ಧರ್ಮದಿಂದ ದುಡ್ಡನ್ನು ಸಂಗ್ರಹಿಸಿ ಸತ್ಕಾಮನೆಗಳನ್ನು ಪೂರೈಸಿದರೆ ಮೋಕ್ಷದ ಒಂದೊಂದು ಮೆಟ್ಟಿಲೂ ಸಾಧಕನಿಗೆ ಸಿಕ್ಕುವದು. ಪುಣ್ಯಫಲದಿಂದ ಜೀವನು ಶಿವಸಾಕ್ಷಾತ್ಕಾರ ಮಾಡಿಕೊಂಡು ಆತನ ಲೋಕದಲ್ಲಿ ವಾಸಿಸಿ ಆ ಪರಶಿವನ

ಆಲೋಕನೆಯಲ್ಲಿರುವುದೇ ಸಾಲೋಕ್ಯ ಪದವಿಯೆನಿಸುವದು. ಅಪರಿಚಿತ ವ್ಯಕ್ತಿಯು ಮೊದಮೊದಲು ದೂರಿಂದ ಅಲೋಕಿಸುವದು ಸಹಜ. ಪರಿಚಯವಾದಂತೆ ಸಮೀಪ ಸಂಬಂಧವನ್ನು ಹೊಂದುವನು. ಅದರಂತೆ ಶಿವಕೃಪೆ ಪಡೆದು ಅವನ ಸಾಮಿಪ್ಯವನ್ನು

ಪಡೆಯುವದೇ ಸಾಮಿಪ್ಯ ಮುಕ್ತಿಯೆನಿಸುವದು. ಸಾಮಿಪ್ಯ-ಸಂಬಂಧ ಸಂಸ್ಕಾರಗಳಿಂದ ಜೀವನು ಶಿವರೂಪವನ್ನು ಸಾಧಿಸುವುದೇ  ಸಾರೂಪ್ಯ ಮುಕ್ತಿಯಾಗುವದು. ಕೊನೆಗೆ ಶಿವನೊಡನೆ ಸಮರಸವಾಗಿ ಬೆರೆಯುವಿಕೆಯು ಸಾಯುಜ್ಯವೆನಿಸುವದು. ಇದುವೇ ಶ್ರೇಷ್ಠವಾದ ಮುಕ್ತಿಯೆನಿಸುವದು. ಉಪಾಸಕರ ಇಚ್ಛೆ ಮತ್ತು ಯೋಗ್ಯತೆಗಳಿಗನುಗುಣವಾಗಿ ಪರಮಾತ್ಮನು ತಕ್ಕ ಫಲವನ್ನು ಕೊಡುತ್ತಾನೆ. ಆದರೆ ಶಿವಶರಣರು ಶಿವನ ಹಂಗನ್ನೇ ಹರಿದಿರುತ್ತಾರೆ. ನಿನ್ನನ್ನು ನಾವು ಏನನ್ನೂ ಬೇಡುವದಿಲ್ಲವೆನ್ನುತ್ತಾರೆ..

ಸಾಲೋಕ್ಯಬೇಕೆಂದು ಪೂಜಿಸಿ ಸಾಲೋಕ್ಯವರವ ಪಡೆದರು.

ಸಾಮೀಪ್ಯ ಬೇಕೆಂದು ಪೂಜಿಸಿ ಸಾಮಿಪ್ಯವರವ ಪಡೆದರು.

ಸಾರೂಪ್ಯಬೇಕೆಂದು ಪೂಜಿಸಿ ಸಾರೂಪ್ಯವರವ ಪಡೆದರು.

ಸಾಯುಜ್ಯಬೇಕೆಂದು ಪೂಜಿಸಿ ಸಾಯುಜ್ಯವರವ ಪಡೆದರು.

ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ

ಈ ನಾಲ್ಕು ಪದವಿಗಳ ಪಡೆದು ಇತ್ತಿತ್ತಲಾದವರೆಲ್ಲಾ

ಅವರು ನಿಮ್ಮ ವೇದಿಸಲರಿವರೆ ?

ಇಂತಿಪ್ಪವ ಕೊಟ್ಟು ಕೊಂಡಾಡುವ

ಕೈಕೂಲಿಕಾರರೆಲ್ಲಾ ನಿಮ್ಮ ಬಲ್ಲರೆ ?

ಕೂಡಲ ಚನ್ನ ಸಂಗಯ್ಯ

 ನಿಮ್ಮ ಶರಣಂಗೆ ಚತುರ್ವಿಧ ಬಯಕೆಯಿಲ್ಲ ಭವಕಲ್ಪಿತವಿಲ್ಲ  (ಚ.ಬ.ವ. ೯೩೯)

ಈ ನಾಲ್ಕು ಪದವಿಗಳನ್ನು ಬೇಕೆಂದು ಬಯಸಿ ಶಿವನನ್ನು ಕೊಂಡಾಡಿ ಪಡೆದ ಸಾಧಕನು ಶಿವನ ನಿಜವನ್ನು ಅರಿಯಲಾರನು. ಪುಣ್ಯವನ್ನು ಕೊಟ್ಟು ಕೊಂಡುಕೊಂಡ – (ಖರೀದಿಸಿದ) ಪದವಿ ಈ ವೇಷ. ಇಂಥದನ್ನು ನಮ್ಮ ಶರಣರು ಬಯಸುವದಿಲ್ಲವೆಂದು ಚನ್ನಬಸವಣ್ಣನವರು ನಿರ್ಧಾರವಾಗಿ ನಿರ್ವಚಿಸಿದ್ದಾರೆ.

ಲಿಂಗವನ್ನು ಸದಾ ಅಂಗದಲ್ಲಿ ಧರಿಸಿ ಇಂದ್ರಿಯಂಗಳಿಗೂ ಲಿಂಗಗಳನ್ನು ಸಂಬಂಧಿಸಿಕೊಂಡ ಲಿಂಗಭಕ್ತನಿಗೆ ಲಿಂಗಾಂಗಯೋಗದಲ್ಲಿ ಈ ಚತುರ್ವಿಧ ಫಲಗಳು ಸಹಜವಾಗಿ ಪ್ರಾಪ್ತವಾಗುತ್ತದೆ. ಶಿವನ (ಶಿವಲಿಂಗದ) ಆರಾಧನೆಯಲ್ಲಿ ಈ ನಾಲ್ಕೂ ಪದವಿಗಳು ಲಭ್ಯವಾಗುವವೆಂಬ ಮಾತನ್ನು ಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ (ಪದ್ಯ-೨೮)

ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ |

ಸಾಮೀಪ್ಯಂ ಶಿವಭಕ್ತಿಧುರ್ಯಜನತಾ ಸಾಂಗತ್ಯ ಸಂಭಾಷಣೇ |

ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ |

ಸಾಯುಜ್ಯಂ ಮಮ ಸಿದ್ಧಮತ್ರಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್ ||

ಹೇ ಭವಾನೀಪತಿಯೇ | ನಿನ್ನ ಪೂಜೆಯಿಂದ ಸಾರೂಪ್ಯಮುಕ್ತಿಯು; ಶಿವ ಮಹಾ ದೇವ ಎಂಬ ನಾಮ ಸಂಕೀರ್ತನದಿಂದ ಸಾಮೀಪ್ಯ-ಮುಕ್ತಿಯು; ಶಿವಭಕ್ತಿಯಲ್ಲಿ ಶ್ರೇಷ್ಠರಾದ ಶರಣರೊಡನೆ ಸಹವಾಸ-ಸಂಭಾಷಣೆಗಳಿಂದ ಸಾಲೋಕ್ಯ ಮುಕ್ತಿಯು;

ನಿನ್ನ ಚರಾಚರಾತ್ಮಕರೂಪದ ಧ್ಯಾನದಿಂದ ಸಾಯುಜ್ಯ ಮುಕ್ತಿಯು ನನಗೆ ಇಲ್ಲಿ ಭೂಲೋಕದಲ್ಲಿಯೇ ಸಿದ್ಧವಾಗಿರುತ್ತವೆ. ಆದ್ದರಿಂದ ಹೇ ಸ್ವಾಮಿನ್ ನಾನು ಧನ್ಯನು” ಎಂದು ವರ್ಣಿಸಿರುವರು.

 ಇದರಂತೆ ಮಹಾಶರಣ ಉರಿಲಿಂಗ ಪೆದ್ದಿಗಳು ಚತುರ್ವಿಧ ಮುಕ್ತಿಗಳು ಶರಣನಿಗೆ ಸುಲಭ ಸಾಧ್ಯವೆಂದು ವಿಶ್ಲೇಷಿಸುತ್ತಾರೆ.

 ಸಾಲೋಕ್ಯ ವೆಂದೇನು

ಅಂಗದ ಮೇಲೆ ಲಿಂಗ ಸಂಬಂಧಿಯಾಗಿರುತ್ತಿರಲು !

ಸಾಮೀಪ್ಯವೆಂದೇನು |

ಗುರು-ಲಿಂಗ-ಜಂಗಮದ ದಾಸೋಹದ ಸನ್ನಿಧಿಯೊಳಿರುತ್ತಿರಲು

ಸಾರೂಪ್ಯವೆಂದೇನು ?

ಅನವರತ ಅರ್ಚನೆಯೊಳಿರುತ್ತಿರಲು !

ಸಾಯುಜ್ಯವೆಂದೇನು ?

ಚತುರ್ದಶಭುವನವ ಒಳಕೊಂಡ ಮಹಾಘನವ

ಮನವನಂಗವಿಸಿ ನೆನೆಯುತ್ತಿರಲು !

ಇಂತೀ ಚತುರ್ವಿಧ ಪದವೆಂದೇನು ?

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ |

ವಸತ

ನಾಲ್ಕೂ ಮುಕ್ತಿಗಳು ಶಿವಶರಣರಿಗೆ ನಿತ್ಯ ಸನ್ನಿಹಿತವಾಗಿರುತ್ತವೆ. ಅನವರತ ಅಂಗದ ಮೇಲೆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಸಾಲೋಕ್ಯ ಸಿದ್ಧಿ ಸುಲಭ ವಾಗುವದು. ಅಂಗದ ಲಿಂಗವನ್ನು ಅಂಗೈಯಲ್ಲಿ ಕಂಗಳಿಂದ ಕಾಣುವ ಲಿಂಗಭಕ್ತನಿಗೆ ಬೇರಾರು ಸರಿಸಾಟಿಯಾಗರು. ವಿಭೂತಿ ರುದ್ರಾಕ್ಷಧಾರಣ ಮಾಡಿಕೊಂಡು ‘ರುದ್ರೋ ಭೂತ್ವಾ, ರುದ್ರಂ ಯಜೇತ್’ ಶಿವನಾಗಿ ಶಿವಲಿಂಗವನ್ನು ಪೂಜಿಸೆಂಬ ಶ್ರುತಿಮಾತಿನಂತೆ ಶಿವನ ಸ್ವರೂಪ (ಸಾರೂಪ್ಯ) ವನ್ನು ಪಡೆಯುತ್ತಾನೆ. ಶಿವನ ಷಟ್‌ಶಕ್ತಿಗಳನ್ನು ಶರೀರದಲ್ಲಿ ನ್ಯಾಸ ಮಾಡಿಕೊಳ್ಳುತ್ತಾನೆ. ಷಡಕ್ಷರ ಮಹಾಮಂತ್ರ ಜಪದಿಂದ ಶಿವಲಿಂಗದಲ್ಲಿ ಬೆರೆಯುವವನಾದ್ದರಿಂದ ಲಿಂಗಸಾಮಿಪ್ಯ ಅತ್ಯಂತ ಸಮೀಪವಾಗುತ್ತದೆ. ಶರಣರ ಸಂಗಮಾಡಿ ಶಿವನನ್ನು ಪ್ರತ್ಯಕ್ಷ ಕಾಣುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಗುರು-ಲಿಂಗ- ಜಂಗಮರೇ ಪ್ರತ್ಯಕ್ಷ ಶಿವನಲ್ಲವೇ ? ವೀರಶೈವರು ಪಾದೋದಕ ಪ್ರಸಾದಲ್ಲಿ ಸಮರಸವನ್ನು ಹೊಂದಿ ಸಾಯುಜ್ಯವನ್ನು ಪಡೆಯುತ್ತಾರೆ. ಪ್ರತಿನಿತ್ಯದಲ್ಲೂ ಚತುರ್ವಿಧಮುಕ್ತಿ ಸುಖದಲ್ಲಿರುವ ಶರಣನಿಗೆ ಕಾಣದ ಪದವಿಗಳಿಗಾಗಿ ಅದೆಂತು ಆಶೆಯೊಡ ಮೂಡೀತು.

ಕೇವಲ ಪುಣ್ಯ ವಿಶೇಷದಿಂದ ಲಭ್ಯವಾಗುವ ಮೋಕ್ಷವು ದೇಹ ತ್ಯಾಗದ ನಂತರ ಪ್ರಾಪ್ತವಾದರೂ ಪ್ರಯೋಜನವಿಲ್ಲ. ಅಂದರೆ ಶರಣನು ದೇಹವಿರುವಾಗಲೇ ಪ್ರತಿ ನಿತ್ಯ ಮುಕ್ತನಾಗುವನು. ಅದುಕಾರಣ ಈ ಲಿಂಗ ಪದವಿಗೆ ಸಾಲೋಕ್ಯ ಮೊದಲಾದ ಮೇಲಾದ ಪದನಾಲ್ಕು ಕೀಳಾಗುತ್ತವೆಯೆಂದು ಶ್ರೀಗುರುವು ಬೋಧಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ನದಿಗಳೆಲ್ಲ ಸಮುದ್ರವನ್ನು ಸೇರಿ ಸಮುದ್ರವೇ ಆಗುವಂತೆ ಶಿವನನ್ನು ರೋಮ ರೋಮಂಗಳಲ್ಲಿ ಧರಿಸಿಕೊಂಡ ಶಿವಭಕ್ತನು ತನ್ನ ಇಂದ್ರಿಯಗಳನ್ನೆಲ್ಲ ಲಿಂಗಗಳನ್ನಾಗಿ ಮಾಡಿಕೊಳ್ಳುತ್ತಾನೆ. ಹೃದಯದೊಳಡಗಿದ ಪ್ರಾಪಂಚಿಕ ಆಶೆ-ಆಮಿಷಗಳು ಶಿವ ಮಯವಾಗಿ ಶಿವಪ್ರಸಾದವಾದ ಮೇಲೆ ಇನ್ನಿತರ ಬಯಕೆಗಳು ಉತ್ಪನ್ನವಾಗುವದಿಲ್ಲ. ಶಿವಶರಣರ ಪ್ರಸಾದ ರುಚಿಯನ್ನುಂಡ ಶಿವನು ಕೈಲಾಸಕ್ಕೇ ಹೋಗಲಿಲ್ಲವಂತೆ ! ಅಂದಮೇಲೆ ಗುರು ಕರುಣಿಸುವ ಲಿಂಗ ಪದವಿ ಮಹತ್ತರವಾದುದಲ್ಲವೆ

ಶಿವಯೋಗಮಂದಿರದ ಸಾಧಕರಾಗಿದ್ದಾಗಿನ ಅವಧಿಯಲ್ಲಿ ಶ್ರೀ ಕುಮಾರ ಸ್ವಾಮಿಗಳು ಹೇಳಿದವಿಚಾರಗಳನ್ನು ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು ಬರೆದುಕೊಂಡ ಟಿಪ್ಪಣಿಗಳು.

ವೀರಶೈವ ತತ್ತ್ವ ವಿಚಾರ

೧. ಷಣ್ಮತಗಳಲ್ಲಿ ವೀರಶೈವ ಮತವು, ಶೈವದೊಳಗಿನ ಒಂದು ಭೇದವು. ಸಪ್ತವಿಧ ಶೈವಗಳಲ್ಲಿ ಶಿಷ್ಟತಮವಾದ ಅಪ್ರಾಕೃತವೆನಿಸಿದ ವೀರಶೈವ ಮತವು ವಿಶೇಷವು. ಈ ಮತಕ್ಕೆ ಲಿಂಗಾಂಗ ಸಾಮರಸ್ಯವೆ ಅಸಾಧಾರಣ ಲಕ್ಷಣವು.

 ೨. ವೀರಶೈವರಿಗೆಲ್ಲ ಅಪ್ರಾಕೃತತ್ವವು ಜನ್ಮದಿಂದಲೂ ಧರ್ಮದಿಂದಲೂ ಉಂಟು. ಅಪ್ರಾಕೃತತ್ವವು ಜನ್ಮದಿಂದ ಅವ್ಯಕ್ತ ಸ್ಥಿತಿಯಲ್ಲಿದ್ದು ಧರ್ಮದಿಂದ ವ್ಯಕ್ತಸ್ಥಿತಿಯನ್ನು ಹೊಂದುವುದು. ಇದರಿಂದ ಲಿಂಗಧಾರಣಾದಿಗಳು ವ್ಯರ್ಥವೆನಿಸವು. ಆಗಂತುಕರಿಗೆ ಮಾತ್ರ ಧರ್ಮದಿಂದ ಉಂಟು.

 ಈ ಧರ್ಮವು ಅತಿವರ್ಣಾಶ್ರಮಾನುಸಾರವಾದುದು. ಅಂದರೆ ಬ್ರಹ್ಮ ನಿರ್ಮಿತಗಳಾದ ಪ್ರಾಕೃತ ವರ್ಣಾಶ್ರಮ ಧರ್ಮಗಳನ್ನು ಮೀರಿದುದು. ಶಿವನಿರ್ಮಿತ ವರ್ಣಾಶ್ರಮ ಧರ್ಮವುಳ್ಳುದು. ಆದ್ದರಿಂದ ಅಪ್ರಾಕೃತ ಬ್ರಾಹ್ಮಣ್ಯಕ್ಕೂ ತದ್ಗತ ಗುರುತ್ವಕ್ಕೂ ಹಾನಿಯಲ್ಲ.

 ೩. ‘ಶಿವಲಿಂಗವನ್ನು ಧರಿಸಿದೊಡನೆ ಶಿವನೇ ಆಗುವನು’ ಎಂಬ ವಾಕ್ಯವು ಶಿವತ್ವದ ಅಂಕುರಾರೋಪಣ ಸೂಚಕವಾಗಿರುವುದು. ಕೇವಲ ತನ್ನೊಳಗೆ ಅವ್ಯಕ್ತವಾದ ಕಿಂಚಿತ್ ‘ ಶಿವತ್ವವನ್ನೇ ಲಿಂಗಧಾರಣಾದಿ ಸಂಸ್ಕಾರವು, ಅಂಕುರ ರೂಪದಿಂದ ವ್ಯಕ್ತಗೊಳಿಸುವ ಕಾರಣ ಇದು ಅರ್ಥವಾದವಲ್ಲ.  ʼʼಶಿವ ಏವ ನ ಸಂಶಯ?” ಎಂಬ ವಾಕ್ಯವು ಸಾರ್ಥಕವೆನಿಸುವುದು. ಶ್ರೀಗುರು ಸಂಸ್ಕಾರದಿಂದ ಬಂದ ಅಂಕುರರೂಪ ಶಿವತ್ವವನ್ನೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಾಂತರ್ಗತ ಲಿಂಗಾಂಗ ಸಾಮರಸ್ಯ ಮುಂತಾದವುಗಳು ಆಚಾರ ವಿಚಾರಗಳಿಂದ ಕೇವಲ ವ್ಯಕ್ತಸ್ಥಿತಿಗೆ ತರುವುದರಿಂದ ಶಿವತ್ವದ ವ್ಯಾಪಕಸ್ಥಿತಿಯು ಸ್ಪಷ್ಟ ಫಲವೆನಿಸುವುದು. ಅಂಕುರರೂಪ ಶಿವತ್ವವನ್ನು ವ್ಯಕ್ತಪಡಿಸುವುದರಿಂದ ʼʼಶಿವ ಏವ ನ ಸಂಶಯಃ” ಎಂಬ ವಾಕ್ಯ ಸಮನ್ವಯಕ್ಕೆ ಭಂಗಬಾರದು.

 ೪. ಲಿಂಗಧಾರಿಗಳಲ್ಲಿ ಏಳು ಭೇದಗಳಿರುವವು. ಅವುಗಳಲ್ಲಿ ಏಳನೇ ಭೇದವನ್ನು ಹೊಂದುತ್ತಾನೆಂದು ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವುದು.

 ಅಷ್ಟಾವರಣ ವಿಶಿಷ್ಟ ಪಂಚಾಚಾರವೆ ವೀರಶೈವ ಧರ್ಮವಾದ್ದರಿಂದ ಈ ಧರ್ಮವೇ ಇತರ ಲಿಂಗಧಾರಿಗಳ ಭೇದವನ್ನು ಸೂಚಿಸುವುದು. ಇದರಿಂದಾಗಿ ಇದು ವ್ಯಾವರ್ತಕ ಧರ್ಮವೆನಿಸುವುದು (ಇಲ್ಲಿ ವಿಚಾರವಿದೆ) ಯೋಗಜ್ಞಾನ ಸಮುಚ್ಚಯವೆ ವ್ಯಾವರ್ತಕ ಧರ್ಮವು

೫. ಲಿಂಗಧಾರಿಗಳಾದ ಅಪ್ರಾಕೃತರೆಲ್ಲರಿಗೂ ಪ್ರಾಕೃತ ವರ್ಣಾಶ್ರಮಗಳಿರುವುದಿಲ್ಲ. ಅಷ್ಟಾವರಣ, ಪಂಚಾಚಾರಾದಿ ಧರ್ಮವೃತ್ತಿಯಿಂದ ಜೀವಿಸುತ್ತಾರೆ. ಅದು ಹೇಗೆಂದರೆ : ಕೃಷಿ, ವಾಣಿಜ್ಯಾದಿ ವೃತ್ತಿಗಳನ್ನು ವೀರಶೈವರಲ್ಲಿ ಕಂಡರೂ ಗುರು, ಲಿಂಗ,  ಜಂಗಮ ಸೇವಾರ್ಥವಾಗಿಯೇ ಆ ವೃತ್ತಿಗಳನ್ನು ಕೈಗೊಂಡಿರುವುದರಿಂದ ಅವು ಪ್ರಾಕೃತವೆನಿಸದೆ ಅಪ್ರಾಕೃತ ವೃತ್ತಿಯಲ್ಲಿ ಗಣನೆಯಾಗಿರುವವು.

 ೬. ವೀರಶೈವ ನಿಯತಿಯಂತೆ ಲಿಂಗಧಾರಿಗಳಾದ ಅಪ್ರಾಕೃತರಲ್ಲಿಯೂ ಅಷ್ಟಾವರಣವೇ ಅಂಗ; ಪಂಚಾಚಾರವೆ ಪ್ರಾಣವಾದ ಭಕ್ತತ್ವವು ಉಂಟು.

೭. ಗುರು, ಲಿಂಗ, ಜಂಗಮ ಈ ತ್ರಿವರ್ಗಕ್ಕೂ ಅಷ್ಟಾವರಣ ವಿಶಿಷ್ಟ ಭಕ್ತತ್ವವುಂಟು.

೮. ಗುರು, ಲಿಂಗ, ಜಂಗಮವು-ಪರಶಿವ ಅಥವಾ ಪರಬ್ರಹ್ಮ ತತ್ತ್ವದ ಪರಿಣಾಮವು. ಲಿಂಗ, ಗುರು, ಜಂಗಮತ್ರಯದಲ್ಲಿ ಉಪಾಸಕೋಪಾಸ್ಯಭೇದವು ಕ್ರಮದಿಂದ ಸಂದರ್ಭಾನುಸಾರ ತೋರುವುದು. ಹೇಗಂದರೆ ಲಿಂಗ, ಗುರು, ಜಂಗಮತ್ರಯಗಳಲ್ಲಿ ಒಂದೊಂದು ಮೂರು ಮೂರು ಭೇದವಾಗಿ ನವವಿಧವಾದುದು ಶಾಸ್ತ್ರಾನುಭವ ಸಮ್ಮತವಾಗಿರುವುದರಿಂದ ಲಿಂಗದೊಳಗಿನ ಲಿಂಗಕ್ಕೆ ಗುರುವಿನಲ್ಲಿ ತೋರಿದ ಲಿಂಗವು ಉಪಾಸ್ಯವಾದುದು. ಅದಕ್ಕಿಂತಲೂ ಜಂಗಮದೊಳಗಿನ ಲಿಂಗವು ಶ್ರೇಷ್ಠ (ಉಪಾಸ್ಯ)ವಾದುದು. ಲಿಂಗದೊಳಗಿನ ಗುರುತ್ವಕ್ಕಿಂತಲೂ ಗುರುವಿನಲ್ಲಿರುವ ಗುರುತ್ವವು ಅಧಿಕ. ಅದಕ್ಕಿಂತಲೂ ಜಂಗಮದೊಳಗಿನ ಗುರುತ್ವವು ಶ್ರೇಷ್ಠ.  ಲಿಂಗದೊಳಗಿನ ಜಂಗಮತ್ವಕ್ಕಿಂತಲೂ ಗುರುವಿನಲ್ಲಿರುವ ಜಂಗಮತ್ವವು ಶ್ರೇಷ್ಠವು.

ಅದಕ್ಕಿಂತ ಜಂಗಮದೊಳಗಿನ ಜಂಗಮತ್ವವು ಅಧಿಕವು. ಈ ಕ್ರಮವನ್ನನುಸರಿಸಿ ಉಪಾಸಕೋಪಾಸ್ಯ ಭಾವವನ್ನು ತಿಳಿಯತಕ್ಕುದು. ಆದರೂ ಒಂದೊಂದು ವಸ್ತುವಿನಲ್ಲಿರತಕ್ಕ ಲಿಂಗ, ಗುರು, ಜಂಗಮ ಇವು ಸಂದರ್ಭಾನುಸಾರವಾಗಿ ಪೂಜಕ

ಪೂಜ್ಯತ್ವವನ್ನು ಹೊಂದುವವು. ಇವುಗಳಿಗೆ ಕ್ರಮವಾಗಿ ಉಪಾಸಕೋಪಾಸ್ಯಭಾವವು ಇರುವುದು. ಸಂದರ್ಭಾನುಸಾರವಾಗಿ ಭಕ್ತವರ್ಗದ ಭಕ್ತಸ್ವರೂಪವಾದ ಲಿಂಗದಲ್ಲಿರುವ ಜಂಗಮಕ್ಕಿಂತಲೂ ಗುರುವಿನಲ್ಲಿರುವ ಲಿಂಗವು ಅಧಿಕವು.  ಗುರುವಿನಲ್ಲಿರುವ ಗುರು ಜಂಗಮಕ್ಕಿಂತಲೂ ಜಂಗಮದಲ್ಲಿರುವ ಜಂಗಮವು ಅಧಿಕವಾದುದು, ಮತ್ತು ಭಕ್ತವರ್ಗದ ಭಕ್ತನಾದರೂ ಯೋಗ್ಯವೃತ್ತಿಯಿಂದ ಗುರು, ಲಿಂಗ, ಜಂಗಮ ಸ್ವರೂಪನಾಗುವನು. ಗುರು, ಜಂಗಮರು ಯೋಗ ರೂಢಿಯಿಂದ ಗುರು ಲಿಂಗ ಜಂಗಮ ಸ್ವರೂಪರಾಗುವದು. ತತ್ತ್ವರೂಪವನೈದದೆ ತತ್ತ್ವದ್ದೇವತಾರಾಧನೆ ಮಾಡಲಿಕ್ಕೆ ಬರುವುದಿಲ್ಲ. ಆದ್ದರಿಂದ ಪದಾರ್ಥ ತನುವೆ ಕಾಲಾನುಗುಣವಾಗಿ ಪ್ರಸಾದತನು ಆಗುವಂತೆ ಭಕ್ತನಾದರೂ ಯೋಗ ವೃತ್ತಿಯಿಂದ ಗುರು ಲಿಂಗ ಜಂಗಮ ಸ್ವರೂಪವನ್ನು ಹೊಂದಿ  ಸಿದ್ಧನೆನಿಸುವನು. ಇದರಂತೆ ಗುರುವರ್ಗದಲ್ಲಿ ಜನಿಸಿರುವವರು, ಗುರುತ್ವ ಸಂಸ್ಕಾರದಿಂದ ಯೋಗರೂಢಿಯಿಂದ ಗುರುಲಿಂಗ ರೂಪವನ್ನು ಹೊಂದುವರು. ಮರಳಿ ಅವರಿಗೆ ಸಂಸ್ಕಾರ ವಿಶೇಷವಾದರೆ ರೂಢಿಯಿಂದಲೂ ಗುರು ಲಿಂಗ ಜಂಗಮ ಸ್ವರೂಪರಾಗುವರು. ಇವರಾದರೂ ಮೇಲ್ಕಂಡಂತೆ ಸಾಧಕ ಸ್ಥಿತಿಯಲ್ಲಿದ್ದು ಉನ್ನತಾವಸ್ಥೆಯನ್ನು ಹೊಂದುತ್ತ ಮುಂದೆ ಸಿದ್ಧ ಸ್ಥಿತಿಯನ್ನು ಹೊಂದುವರು. ಈ ಪ್ರಕಾರವಾಗಿ ಸಂಸ್ಕಾರವಾಗಿ ಅನುಷ್ಠಾನ ಉಪಾಸಕೋಪಾಸ್ಯ ವ್ಯವಸ್ಥೆಯು.

೯. ಗುರು ಜಂಗಮರಿಗೆ ಮತ್ತೊಂದನ್ನಾಶ್ರಯಿಸಿ ಪೂಜ್ಯತ್ವವಿಲ್ಲ. ಅವರು ಸ್ವಯಂ ಪೂಜ್ಯರು. ನಿತ್ಯ ಮುಕ್ತರು.  ಜಗದ್ಧಿತಾರ್ಥವಾಗಿ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಉಪಾಸಿಸುವುದುಂಟು. ವ್ಯಾಪಕವಾದ ಪರಲಿಂಗಕ್ಕೆ ಗುರುಲಿಂಗ ಜಂಗಮವೆಂತಲೂ ಪರ್ಯಾಯ ನಾಮಗಳುಂಟು. ಇದನ್ನೇ ಭೇದೋಪಭೇದಗಳಿಂದ ಸಮಯೋಚಿತವಾಗಿ ಸ್ವಸ್ವರೂಪವಾಗಿ ವ್ಯಾಪ್ಯರಾದ ಗುರು ಲಿಂಗ ಜಂಗಮರು ಪೂಜಿಸುವರು.

 ಗುರು ಜಂಗಮರು ಪೂಜ್ಯರಾಗಬೇಕಾದರೆ ವ್ಯಾಪಕವಾದ ತಮ್ಮ ನಿಜ ಸ್ವರೂಪವಾದ ಮೂಲ ಲಿಂಗವನ್ನು ತಂತಮ್ಮನಿರಾಭಾರಿ-ಸಾಭಾರಿ ಗುರುಗಳ ಪ್ರಯತ್ನ ವಿಶೇಷದಿಂದ ಸಂಸ್ಕರಿಸಿ ಲಿಂಗಾಕಾರಗೊಳಿಸಿ, ಅಂಗತ್ರಯವನ್ನು ಸಂಬಂಧಗೊಳಿಸಿ ಆಜ್ಞಾಪಿಸಿದಂತೆ ಆಚರಿಸುವುದರಿಂದ ಪೂಜ್ಯರೆನಿಸುವರು. ವಿಶುದ್ಧ ಸತ್ವಸ್ವರೂಪೋ ಪಾಧಿಯಂದೊಪ್ಪುವ ಗುರುಮೂರ್ತಿಯು ಮಲಿನ ಸತ್ವಸ್ವರೂಪ ವಿದ್ಯೋಪಹಿತ ಪುರುಷಾಕಾರ ಶರೀರದಲ್ಲಿದ್ದು ಜೀವಕಲೆಯನ್ನು ಸಂಸ್ಕರಿಸಿ ತಮಃ ಪ್ರಧಾನ ಪ್ರಕೃತಿ ಸ್ವರೂಪ ಶಿಲಾಮಯವಾದ ಲಿಂಗಾಕಾರದಲ್ಲಿ ಸ್ಥಾಪಿಸೋಣದರಿಂದ ಲಿಂಗವು ಪೂಜ್ಯವಾಗಿರುವುದು. ಅಂದರೆ ಗುರು ಜಂಗಮರಿಂದಲೆ ಲಿಂಗಕ್ಕೆ ಪೂಜ್ಯತ್ವವು ಬಂದಿರುವುದೆಂದು ಸ್ಪಷ್ಟವೆನಿಸುವುದು.

 ಚತುರ್ವಿಧ ವಾಗ್ವ್ಯವಹಾರ ಪರಬ್ರಹ್ಮಜ್ಞಾನ ಅಧಿಕಾರವುಳ್ಳ ಜೀವ ಚೈತನ್ಯ ವಿಶಿಷ್ಟ ಮನುಷ್ಯರಲ್ಲಿ ಬದ್ಧತ್ವ ಮುಕ್ತತ್ವವಿದ್ದಂತೆ-ಪಶುಪಕ್ಷ್ಯಾದಿ ಮೃತ್ಪಾಷಾಣಾದಿಗಳಲ್ಲಿ ಇಂಥ ಬಂಧತ್ವ ಮುಕ್ತತ್ವವಿರುವುದಿಲ್ಲ. ತಮಃ ಪ್ರಧಾನ ಕೃತಿಯಿಂದ ತೋರಿದ ಜಡಶಿಲೆಯಲ್ಲಿ ಪುರುಷನ ಚೈತನ್ಯಗತವಾಗಿರುವ ಚಿತ್ಕಲೆಯನ್ನು ಪ್ರತಿಷ್ಠಿಸಲು ಆಯಾ ವ್ಯಕ್ತಿಗೆ ಅದು ಪೂಜ್ಯವಾದ ಲಿಂಗವಿರುವುದು. ಚಿತ್ಕಲಾ ಪ್ರತಿಷ್ಠಿತವಾಗುವುದಕ್ಕಿಂತಲೂ ಪೂರ್ವದಲ್ಲಿ ಶಿಲಾಮಯ ಲಿಂಗಾಕಾರದಲ್ಲಿ ಈ ಬಗೆಯ ಬಂಧತ್ವದ ವ್ಯವಹಾರವೇ ಇಲ್ಲದ್ದರಿಂದ ಆ ಲಿಂಗಕ್ಕೆ ಮೋಕ್ಷಾಧಿಕಾರವೇ ಇಲ್ಲ.

ಗುರು ಜಂಗಮರಿಗೆ ಸ್ವಾಮಿತ್ವ, ಸ್ವತಂತ್ರತ್ವದ ಅಧಿಕಾರವು, ಗುರುತ್ವ ಜಂಗಮತ್ವ ಸಂಸ್ಕಾರವಾಗುವದಕ್ಕಿಂತಲು ಮೊದಲು ಅವ್ಯಕ್ತಸ್ಥಿತಿಯಲ್ಲಿದ್ದು ಸಂಸ್ಕಾರ ವಿಶೇಷದಿಂದ ಸ್ಪಷ್ಟವೆನಿಸಿರುವ, ಅಂದರೆ ವ್ಯಕ್ತವಾಗಿರುವ ಸ್ಥಿತಿಯೇ ಮುಕ್ತಿಯೆನಿಸುವುದು. ವಿಸ್ತೃತ

ಸ್ಥಿತಿಯಲ್ಲಿದ್ದ ಬದ್ಧತ್ವವು ನಾಶವಾಗುತ್ತಾಗುತ್ತ ವ್ಯಾಪಕ ಸ್ಥಿತಿಯ ಸ್ವಾಮಿತ್ವ ಸ್ವತಂತ್ರತ್ವ ವುಂಟಾದದ್ದೇ ಮುಕ್ತತ್ವವೆನಿಸುವುದು. ಗುರು ಜಂಗಮರಲ್ಲಿ ಅಪ್ರಾಕೃತ ಪುರುಷತ್ವ ವಿದ್ದಂತೆ ಲಿಂಗದಲ್ಲಿಯಾದರೂ ಅಪ್ರಾಕೃತ ಶಿಲಾತ್ವವಿರುವುದು. ಪುರುಷಾಕಾರದ ಗುರು ಜಂಗಮಾದಿಗಳ ಪ್ರಯತ್ನದಿಂದಲೇ ಶಿಲೆಯಲ್ಲಿದ್ದ ಶಿಲಾಭಾವವು ಹೋಗಿ ಶಿವತ್ವವುಂಟಾಗುವುದು. ಆ ಶಿವತ್ವವು ವ್ಯಾಪಕಸ್ಥಿತಿಗೆ ಬರಬೇಕಾದರೆ ಆ ಭಕ್ತನು ಗುರು ಜಂಗಮರ ಪಾದೋದಕ ಪ್ರಸಾದಾದಿಗಳಿಂದ ಲಿಂಗದಲ್ಲಿ ವ್ಯಾಪಕತ್ವವನ್ನು

ತಂದುಕೊಂಡು ತದ್ವಾರಾ ವ್ಯಾಪಕನಾಗುವುದೇ ಮುಕ್ತಿಯು.  ಸಾರಾಂಶವಿದು : ಗುರು ಜಂಗಮರು ಅನ್ಯವಾದ ಲಿಂಗಾಶ್ರಯವನ್ನು ಮಾಡದೆ ಸ್ವಸ್ವರೂಪ ಲಿಂಗಾರ್ಚನಾದಿಗಳಿಂದ ಮುಕ್ತರಾಗುವರು. ಲಿಂಗವು ಗುರು ಜಂಗಮರಿಂದ ಸ್ಥಾಪಿಸಲ್ಪಟ್ಟು ಗುರು ಜಂಗಮರ ಕೃಪೆಯಿಂದಲೇ ವ್ಯಾಪಕ ಸ್ಥಿತಿಯನ್ನು ಹೊಂದಿ ತನ್ನನ್ನು ಆಶ್ರಯಿಸಿದ ಭಕ್ತನಿಗೆ ಮುಕ್ತಿಯನ್ನುಂಟು ಮಾಡುವುದು.

೧೦. ಕ್ರಿಯಾಜ್ಞಾನರೂಪ ಗುರು. ಕ್ರಿಯಾರೂಪ ಲಿಂಗ. ಜ್ಞಾನರೂಪ ಜಂಗಮ. ಹೀಗೆ ಗುರು-ಲಿಂಗ-ಜಂಗಮ ಶಬ್ದದ ಅನ್ವರ್ಥಕವಿರುವುದು. ಮತ್ತು ಭಕ್ತರ ಅನಿಷ್ಟವನ್ನು ಪರಿಹರಿಸಿ ಕೊಡುವುದರಿಂದಲೂ ‘ಇಷ್ಟಿ’ ಅಂದರೆ ಪೂಜಾ; ಆ ಪೂಜೆಯಿಂದ ನಿರಂತರ ಆರಾಧಿಸಲ್ಪಡುವುದರಿಂದಲೂ ಇಷ್ಟಲಿಂಗವೆ೦ದು ಅನ್ವರ್ಥಕವಾಗಿರುವುದು. ಮಲತ್ರಯ ರೂಪ ಅಜ್ಞಾನಾಂಧಕಾರವನ್ನು ದೂರಮಾಡಿ ಶಿವಾದೈತರೂಪ ನಿತ್ಯಾನಂದವನ್ನುಂಟುಮಾಡಿಕೊಡುವುದಕ್ಕೆ ಕರ್ತೃವಾದ್ದರಿಂದಲೂ ಸಂಶಯ ನಿರಸನದ್ವಾರದಿಂದ ನಿತ್ಯ ಮುಕ್ತಿಯನ್ನುಂಟುಮಾಡುವನಾದ್ದರಿಂದಲೂ  ಬಾಹ್ಯಾಂತರಗಳಲ್ಲಿ  ಹರಿದಾಡುವ ಮನಸ್ಸನ್ನು ಭೇದಿಸಿ ಬೋಧಿಸುವ ಘನ ಸಾಮರ್ಥ್ಯವುಳ್ಳವನಾದ್ದರಿಂದಲೂ ಗುರುವೆಂಬ ಶಬ್ದವು ಅನ್ವರ್ಥಕವಾಗಿರುವುದು.

ತನ್ನ ಪ್ರಕಾಶ ಸಾನ್ನಿಧ್ಯಮಾತ್ರದಿಂದ ಶಿವಶಕ್ತ್ಯತ್ಮಕ ಪ್ರಪಂಚವನ್ನು ಬೆಳಗಿ ಅನಿಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನುಂಟುಮಾಡಿ ಅಂತರ್ಬಹಿರ್ಮನಸ್ಸನ್ನು ಭೇದಿಸುವ ಸ್ವಯಂಪ್ರಕಾಶ ಸ್ವರೂಪವೇ ಜಂಗಮದ ಅನ್ವರ್ಥಕವಾಗಿರುವುದು.

ಸಚ್ಚಿದಾನಂದತ್ವವು ಲಿಂಗ-ಗುರು-ಜಂಗಮ ಈ ತ್ರಿವರ್ಗದ ಅಸಾಧಾರಣ ಲಕ್ಷಣಗಳಾಗಿದ್ದರೂ ಪರಸ್ಪರ ಭಿನ್ನಾಭಿನ್ನ ಲಕ್ಷಣಗಳಿಂದ (ಇಲ್ಲಿ ಅಭಿನ್ನವೆಂದರೆ ಅನ್ನೋನ್ಯವೆಂದರ್ಥ). ಜಗದ್ಧಿತಾರ್ಥವಾಗಿ ದಿವ್ಯ ಚೇಷ್ಟೆಯಿಂದ ಶೋಭಿಸುವವು.

 ೧೧. ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಶೋಭಿಸುವ ಅಂಗನೇ ಭಕ್ತಶಬ್ದವಾಚ್ಯನು. ಶಿವನು, ‘ನಾನು ಭಕ್ತನ ಕೇವಲ ಚೈತನ್ಯ ಸ್ವರೂಪವಾದ ಶಿವಕಲೆಯಿಂದಲೂ ಶಿಲಾಮಯವಾದ ಲಿಂಗಾಕಾರದಲ್ಲಿ ಶೋಭಿಸಿ ಪೂಜ್ಯತೆಯ ಪಡೆದಿರುವದರಿಂದ ಆ ಭಕ್ತನ ಜಿಹ್ವಾದ್ವಾರದಿಂದಲೇ ಲಿಂಗರೂಪಿಯಾಗಿ ತೃಪ್ತಿಯನ್ನು ಹೊಂದುವೆನೆಂದು ಹೇಳುವುದೇ ಇದು ಪರ್ಯವಸಿತಾರ್ಥವು.

೧೨. ಅಪ್ರಾಕೃತ ಮುಮುಕ್ಷುಗಳಾದ ಗುರುಜಂಗಮೇತರ ಭಕ್ತವಂಶೀಯರೂ ಆಗಂತುಕರೂ ತಂತಮ್ಮ ಉದ್ಧಾರತೆಯ ದೆಸೆಯಿಂದ ಸ್ವಸ್ವರೂಪ ಲಿಂಗವನ್ನೂ ಆ ಲಿಂಗವನ್ನು ಕರುಣಿಸಿದ ಗುರುಮೂರ್ತಿಗಳನ್ನೂ ಆ ಲಿಂಗ ಮುಖವಾದ ಜಂಗಮ ಮೂರ್ತಿಗಳನ್ನೂ ಗುರು ಲಿಂಗ ಜಂಗಮ ಪೂಜಾಧಿಕಾರ ಪ್ರದಾಯಕ ವ್ರತರೂಪ ಭಸ್ಮ ರುದ್ರಾಕ್ಷಗಳ ಧಾರಣವನ್ನೂ ಇಷ್ಟಲಿಂಗವನ್ನು ಜಾಗ್ರತೆಗೊಳಿಸುವ ಸಾಧನವಾದ ಪಂಚಾಕ್ಷರ ಮಂತ್ರ ಜಪವನ್ನೂ ಗುರು ಲಿಂಗ ಜಂಗಮರೆಂಬ ಇಷ್ಟ ದೇವತೆಗಳ ಪಾದೋದಕ-ಪ್ರಸಾದರೂಪ ಫಲವನ್ನೂ ಭಕ್ತಿಯಿಂದ ಅರ್ಚನಾದಿಗಳ ದ್ವಾರಾ ಸೇವಿಸುವರು.

ಗುರು ಜಂಗಮರಾದರೂ ತಂತಮ್ಮ ಸಾಭಾರಿ ಗುರುಗಳಿಂದ ಮೂರ್ತಿಕರಿಸಿ. ಕೊಡಲ್ಪಟ್ಟ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಪೂಜ್ಯ ಪೂಜಕ ಕ್ರಮವನ್ನತಿಕ್ರಮಿಸದೆ ಗುರು ಜಂಗಮರಿಂದ ಕೊಡಲ್ಪಟ್ಟ ಭಸ್ಮ ರುದ್ರಾಕ್ಷಧಾರಣವನ್ನು ಮತ್ತು ಪಂಚಾಕ್ಷರ ಜಪವನ್ನು ಗುರು ಲಿಂಗ ಜಂಗಮರ ಪಾದೋದಕ ಪ್ರಸಾದಗಳನ್ನು ಜಗದ್ಧಿತಾರ್ಥವಾಗಿ ಪವಿತ್ರ ಲೀಲೆಯಿಂದ ಅಪ್ರಾಕೃತ ಮುಮುಕ್ಷುಗಳೆಂಬಂತೆ ಸಿದ್ಧರಾದವರು ಅರ್ಚನಾದಿ ದ್ವಾರದಿಂದ ಸೇವಿಸುವರು. ಇವರು ಸಹ ಮುಂದೆ ಆಚರಣೆಯ ವಿಶೇಷದಿಂದ ಸಿದ್ಧರಾಗುವರು. ಇದರಿಂದ ಜಂಗಮ ಸಂಪ್ರದಾಯಕರ ಮತ್ತು ಗುರು ಜಂಗಮೇತರ ವಂಶೀಯರ ಅಷ್ಟಾವರಣಾಚರಣೆಯಲ್ಲಿ ತಾರತಮ್ಯ ಭಾವವುಂಟೆಂದು ಸ್ಪಷ್ಟವಾಗಿ ಕಂಡುಬರುವುದು.

ಸಾರಾಂಶವಿದು : ಲಿಂಗಧಾರಿಗಳಾದ ಇತರರು ಧರಿಸಿದ ಲಿಂಗಕ್ಕೂ, ವೀರಶೈವರು ಧರಿಸಿದ ಲಿಂಗಕ್ಕೂ ಯಾವ ತಾರತಮ್ಯವುಂಟೋ ಅವೇ ತಾರತಮ್ಯವು ವೀರಶೈವರಲ್ಲಿಯ ಪೂಜ್ಯ ಪೂಜಕರು ಧರಿಸಿರುವ ಲಿಂಗದಲ್ಲಿಯೂ ಉಂಟು. ಎಲ್ಲರೂ ಧರಿಸಿದ ಲಿಂಗದಲ್ಲಿ ತಾರತಮ್ಯವಿಲ್ಲದೆ ಒಂದೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಗುರು ಜಂಗಮರನ್ನು ಅಗಲಿದರೆ ಅಥವಾ ಅಪ್ಪಣೆಯನ್ನು ಮೀರಿದರೆ ಅದರಂತೆ ಲಿಂಗವನ್ನಗಲಿದರೆ ಅಪೂಜ್ಯತೆಯುಂಟಾಗುತ್ತದೆ.

೧೩. ಗುರುವು ದೀಕ್ಷಾಕಾಲದಲ್ಲಿ ಶಿಷ್ಯನ ಮಸ್ತಕದಲ್ಲಿದ್ದ ಚಿತ್ಕಲೆಯನ್ನು ಲಿಂಗದಲ್ಲಿ ಸ್ಥಾಪಿಸಿ ಲಿಂಗದಲ್ಲಿದ್ದ ಶಿವಕಲೆಯನ್ನು ಶಿಷ್ಯನ ಪ್ರಾಣದಲ್ಲಿ ಸ್ಥಾಪಿಸಿ ಎರಡನ್ನು ಏಕೀಕರಿಸಿದ ನಂತರ ಲಿಂಗವು ಭಕ್ತನ ಅಂಗವನ್ನು ಬಿಟ್ಟು ಅಗಲಿ ಹೋದಲ್ಲಿ ಪರಸ್ಪರ ಐಕ್ಯತೆಗೂ-ಗುರ್ವಾಜ್ಞಾಪಾಲನೆಗೂ ಭಂಗ ಬರುವುದರಿಂದ ಗುರುವಿನ ಆಜ್ಞೆಗೂ ಲಿಂಗಕ್ಕೂ ಅಪೂಜ್ಯತೆಯುಂಟಾಗುವುದಲ್ಲದೆ ಲಿಂಗವನ್ನಗಲಿದ ಸಾಧಕನಿಗೆ ಭಕ್ತತ್ವದಿಂದ ಪಾತಿತ್ಯವುಂಟಾಗುವುದು. ಲಿಂಗವು ಭಕ್ತನ ದೇಹವನ್ನಾಶ್ರಯಿಸಿಕೊಂಡು ಪೂಜ್ಯತ್ವವನ್ನು ಹೊಂದಿರುವುದು. ಭಕ್ತದೇಹದಿಂದಗಲಿ ಲಿಂಗವು ಸ್ವತಂತ್ರಿಸಿ ಪೂಜಾರ್ಹವಾಗಲಾರದು. ಭಕ್ತ ದೇಹಸಾಪೇಕ್ಷೆಯುಳ್ಳ ಲಿಂಗವು ಅಗಲಿ ಹೋದಲ್ಲಿ ಲಿಂಗತ್ವವು ಲುಪ್ತವಾಗುವುದು. ಗುರುಕುಲೋತ್ಪನ್ನ ಗುರುಕರ ಸಂಜಾತ ಗುರುಕುಲವಾಸಿ ಸಾಧಕ ಸ್ಥಿತಿಯ ಗುರು ಜಂಗಮರಿಗೆ ಸ್ವಸ್ವರೂಪವಾದ ಗುರುದತ್ತ ಲಿಂಗವು ವಿಯೋಗವಾದಲ್ಲಿ ಗುರ್ವಾಜ್ಞಾ

ಪೂರ್ಣಸಿದ್ಧತೆಯ ಉಳುಮೆಯ ಮೂಲಕ ಕ್ರಿಯಾಲೋಪವೆನಿಸಿದ್ದರಿಂದ ಅಪೂಜ್ಯತೆಯೂ ಲಿಂಗಕ್ಕೆ ಭ್ರಷ್ಟತೆಯೂ ಪ್ರಾಪ್ತವಾಗುವುದು. ಪೂರ್ಣಸಿದ್ಧತೆಯನ್ನು ಹೊಂದಿದವರ ಶರೀರದಲ್ಲಿದ್ದ ಲಿಂಗಕ್ಕೂ ಪ್ರಾಣಕ್ಕೂ ಎಂದೂ ವಿಯೋಗವಾಗಲಾರದು. ಇದರಿಂದ ಸಾಧಕ ದೆಸೆಯಲ್ಲಿ ಅವಧಾನಿಗಳ ಅವಶ್ಯಕತೆಯಿಲ್ಲ. ಲಿಂಗಮೂರ್ತಿಯಲ್ಲಿ ಅವಧಾನಕ್ಕೆ ಅವಕಾಶವೇ ಇಲ್ಲದ್ದರಿಂದ ಸಾಧ್ಯ ಸಾಧಕದೆಸೆಯು ಇಲ್ಲವು. ಭಕ್ತಿಯಲ್ಲಿ ವ್ಯಾಪ್ಯವ್ಯಾಪಕತ್ವವು ಸಿದ್ಧ ಸಾಧಕತ್ವವು ಅವಧಾನಾದಿಗಳ ಪ್ರಯತ್ನದಿಂದ ಉಂಟಾಗಿ ತೋರುವಲ್ಲಿ ಗುರು ಜಂಗಮರಲ್ಲಿ ತೋರುವ ಸ್ಥಿತಿಯನ್ನು ಹೇಳುವುದೇನು ?

೧೪. ಪೂಜಕರಾದ ಅಷ್ಟಾವರಣ-ಪಂಚಾಚಾರವುಳ್ಳ ವೀರಶೈವರಿಗೆಲ್ಲ ಪಾದೋದಕವು ಅವಶ್ಯಕವಾಗಿ ಬೇಕು. ಅದರಂತೆ ಪೂಜ್ಯರಾದ ಗುರು ಲಿಂಗ ಜಂಗಮಗಳಿಗಾದರೂ ಬೇಕು. ಲಿಂಗಕ್ಕೆ ಹೇಗೆ ಬೇಕೆಂದರೆ : ಭಕ್ತನಿಚ್ಛೆಯು. ಭಕ್ತನ ಶಿರದರಮನೆಯ ಚಿತ್ಕಲಾ ವಸ್ತುವೇ ಲಿಂಗವು. ಅದೇ ಅವನ ಕರಗತವಾದದ್ದು. ಲಿಂಗವು ಭಕ್ತನನ್ನಾಶ್ರಯಿಸಿಕೊಂಡೇ ಇರಬೇಕಾಗುತ್ತದೆ. ಭಕ್ತನು ಲಿಂಗ ಭೋಗೋಪ ಭೋಗಿಯಾಗಿರುತ್ತಾನೆ. ಅನ್ನೋನ್ಯಾಪೇಕ್ಷೆಯಿರುವುದರಿಂದ ಭಕ್ತನಿಗೆ ಪಾದೋದಕ ಬೇಕಾಗಿದ್ದರೆ ಲಿಂಗಕ್ಕಾದರೂ ಬೇಕು. ಇದರಂತೆ ಗುರು ಜಂಗಮರಿಗೂ ಅವಶ್ಯ ಅವರವರ ಸ್ವಸ್ವರೂಪವಾದ ಲಿಂಗಕ್ಕೂ ಬೇಕು.

 ಪಾದೋದಕವು ಸಂಬಂಧದಿಂದ ದಶವಿಧವಾಗಿರುವುದು. ಮುಖ್ಯವಾಗಿ ತ್ರಿವಿಧವೆನಿಸಿರುವುದು. ಇದು ಸಹಜವು.

೧೫. ಗುರುಲಿಂಗ ಜಂಗಮರಲ್ಲಿ ಅಂತಃಪ್ರಭೇದಗಳಿರುವುದರಿಂದ ಲಿಂಗದಲ್ಲಿದ್ದ ಗುರುಜಂಗಮರ ಸಾನಿಧ್ಯದಿಂದ ಅನಿರ್ವಾಹ ಪಕ್ಷದಲ್ಲಿ ಸಂಬಂಧಾಚರಣೆಯಿಂದ ಪಾದೋದಕ ಪ್ರಸಾದಗಳ ನಿರ್ವಾಹವಾಗುತ್ತದೆ.  

೧೬. ಮುಖ್ಯವಾಗಿ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕಗಳೆಂದು ಮೂರು ಪ್ರಕಾರಗಳು. ಇವು ಒಂದೊಂದೇ ಮೂರು ಮೂರು ಭೇದಗಳಿಂದ ಕೂಡಿ ನವವಿಧವಾಗಿರುವುದು. ಇವೆಲ್ಲವುಗಳ ಸಮಷ್ಠಿಯಾದುದೇ ಮಹಾ ಪಾದೋದಕ ಜಂಗಮ ಪಾದೋದಕವು. ಇದು ಗಣನೆಯಲ್ಲಿ ಸೇರಲು ದಶ ವಿಧವಾಯಿತು. ಈ ದಶವಿಧ ಪಾದೋದಕದಲ್ಲಿ ಸಂಬಂಧದಿಂದಲೂ ಸಹಜದಿಂದಲೂ ಅನೇಕ ರೀತಿಯಿಂದ ಸಂಬಂಧವುಂಟು. ಸಹಜವು ಒಂದೇ ಪ್ರಕಾರವಿದ್ದು ಸಂಬಂಧದಿಂದ

ಅನೇಕ ವಿಧವಾಗಿರುವುದು. ಸಂದರ್ಭಾನುಸಾರ ಸಂಬಂಧವನ್ನೂ ಮತ್ತೆ ಅನೇಕ ಪ್ರಕಾರ ಮಾಡುವುದುಂಟು. ಮೂರು ಪಾದೋದಕಗಳಲ್ಲಿ ಒಂದೊಂದರೊಳಗೆ ಮೂರು ಮೂರು ಲಿಂಗಗಳ ಸಂಬಂಧ ಮತ್ತು ಪರತರ ಶಿವಲಿಂಗ ಸಂಬಂಧ ; ಇವುಗಳಿಂದ ದಶವಿಧವಾಗಿರುವುದು. ಪಂಚಾಂಗುಲಿಗಳಿಂದ ಅಂದರೆ ಸೂಚಕ ಮುದ್ರೆಯಿಂದ ಎರೆದು ಸ್ವೀಕರಿಸುವುದೇ ದೀಕ್ಷಾಪಾದೋದಕ ಅಥವಾ ಗುರು ಪಾದೋದಕ; ಶಂಖಮುದ್ರೆಯಲ್ಲಿ ಲಿಂಗದ ಮೇಲೆ ಅಭಿಷೇಕ ಮಾಡಿ ಪೂಜಿಸಿದ ಪಾದೋದಕವನ್ನು ಲಿಂಗವನ್ನೆತ್ತಿ ಸ್ವೀಕರಿಸುವುದೆ ಶಿಕ್ಷಾಪಾದೋದಕ ಅಥವಾ ಲಿಂಗ ಪಾದೋದಕ (ಕ್ರಿಯಾ ಪಾದೋದಕ)ವೆಂದು ಪರ್ಯಾಯ ನಾಮಗಳು. ಜಿಹ್ವಾಗ್ರಕ್ಕೆ ಪಾತ್ರೆಯನ್ನೆತ್ತಿ ಇಲ್ಲವೆ ಚಿನ್ಮುದ್ರೆಯಿಂದಾಗಲಿ ಕುರಂಗ ಮುದ್ರೆಯಿಂದಾಗಲಿ ಮುಟ್ಟಿ ಸ್ವೀಕರಿಸುವುದೇ ಮೋಕ್ಷ ಪಾದೋದಕ ಅಥವಾ ಜ್ಞಾನ ಪಾದೋದಕ (ಜಂಗಮ ಪಾದೋದಕ)ವೆಂದು ಹೆಸರುಗಳು. ಪಂಚಾಂಗುಲಿಗಳ ಕೂಟದಲ್ಲಿ ನಿರಾಭಾರಿಗಳು ಸಮಷ್ಟಿರೂಪ ಪ್ರಣವನನ್ನು ಭಾವಿಸಿ ಅದೇ ತನ್ನ ಗುರುವೆಂಬ ಭಾವನೆಯಿಂದ ಸ್ವೀಕರಿಸುವ ಕಾರಣ ಗುರು ಪಾದೋದಕವು; ಹಸ್ತದಲ್ಲಿಯೆ ಲಿಂಗ ಸಂಬಂಧವಿರುವುದರಿಂದಲೂ ಲಿಂಗಾಭಿಷಿಕ್ತವಾದ್ದರಿಂದಲೂ ಲಿಂಗ ಪಾದೋದಕ; ಜಿಹ್ವಾಗ್ರದಲ್ಲಿ ಜಂಗಮ ವಿರುವದರಿಂದ ಜಂಗಮಕ್ಕೆ ಮುಟ್ಟಿಸಿ ತೆಗೆದುಕೊಳ್ಳುವುದರಿಂದ ಜಂಗಮ ಪಾದೋದಕವೆಂಬ ಹೆಸರು.

೧೭. ಭ್ರಮಾರೂಪ ಸಂಸ್ಕಾರಕ್ಕೆ ಕಾರಣವಾದ ಕಲ್ಪನೆಯ ಪದಾರ್ಥ ಲಕ್ಷಣವು ಅರ್ಥಾತ್ ಕಲ್ಪಿತ ತತ್ತ್ವವೇ ಪದಾರ್ಥ ಲಕ್ಷಣವು. ಸಚ್ಚಿದಾನಂದತ್ವವೆ ಪ್ರಸಾದ ಲಕ್ಷಣವು. ಸಾಧಕರಿಂದ ವೀರಮಾಹೇಶ್ವರರು ಸ್ಥೂಲ ಪದಾರ್ಥವನ್ನು ತ್ಯಜಿಸಿ ಸೂಕ್ಷ್ಮ ರೂಪ ಪದಾರ್ಥವನ್ನು ಗುರ ಲಿಂಗ ಜಂಗಮಕ್ಕೆ ಅರ್ಪಿಸಿ ತನ್ಮುಖದಿಂದ ಒಕ್ಕುಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

೧೮. ಗುರು ಜಂಗಮರ ಪಾದೋದಕವು ಪ್ರಸಾದವಲ್ಲ. ಪದಾರ್ಥವೆಂದರೆ ಗುರು ಲಿಂಗ ಜಂಗಮರಿಗೆ ಅರ್ಪಣವಾದ ಪ್ರತಿಯೊಂದು ಪರಿಶುದ್ಧ ವಸ್ತುವು ಪ್ರಸಾದವಾಗುವುದೆಂಬ ಪ್ರಮಾಣ ಅನುಭವಾದಿಗಳಿಗೆ ವಿರೋಧವಾಗುವುದು. ಪ್ರಸಾದವೆಂದರೆ ಅಷ್ಟಾವರಣಗಳಲ್ಲಿ ಅಂತಿಮವಾದ ಪಾದೋದಕ ಸೇವನಾಂತರ ಗ್ರಹಿಸಬೇಕಾದ ಪ್ರಸಾದವು; -ಇದಕ್ಕೆ ಬೇರೆಯಾದುದೊ ? ಒಂದೆಯೊ ? ಒಂದೆಯಾದರೆ ಅದರ ಸ್ವೀಕಾರವೇಕೆ ? ಇದೇ ಪ್ರಸಾದವಾದರೆ ಅಷ್ಟಾವರಣಗಳು ಹೇಗೆ ನಿರ್ವಾಹಕ ಮಾಡಲ್ಪಡುವವು ? ಬೇರೆಯಾದರೆ ಪಾದೋದಕಕ್ಕೆ ಕಲ್ಪಿತತ್ವದಿಂದ ಪದಾರ್ಥತ್ವ ವುಂಟಾಗುವುದು. ಮತ್ತು ಗುರು ಲಿಂಗ ಜಂಗಮಕ್ಕೆ ಅರ್ಪಣವಾದುದು ಪ್ರಸಾದ ವಾಗುವುದೆಂಬ ಪ್ರಮಾಣಗಳಿಗೆ ವ್ಯರ್ಥತೆಯುಂಟಾಗುವುದು. ಇದಲ್ಲದೆ ಅಷ್ಟಾವರಣವೆ ಅಂಗವಾಗಿ ಪಂಚಾಚಾರವೆ ಪ್ರಾಣವಾದ ವೀರಶೈವತ್ವಕ್ಕೆ ಅಂಗಲೋಪದಿಂದ ದೋಷವುಂಟಾಗುವುದು. ಪಾದೋದಕವು ಪ್ರಸಾದವೆನಿಸುವುದು. ಪಾದೋದಕವು ಪೂಜ್ಯರ ಮಸ್ತಕದಲ್ಲಿ ಸಚ್ಚಿದಾನಂದ ಸ್ವರೂಪವಾಗಿರುವದೆಂದು ಈ ಮೊದಲು ಉಕ್ತವಾಗಿರುವುದು. ಅಂತಹ ಸಚ್ಚಿದಾನಂದ ಸ್ವರೂಪವೆ ಪ್ರಸಾದವೆನಿಸುವುದು. ಆ ಪ್ರಸಾದವೆ ಪೂಜಕನ ಇಚ್ಛಾ ಜ್ಞಾನ ಕ್ರಿಯಾದಿಗಳಿಂದ ಚಲನಕ್ರಿಯೆಯನ್ನು ಹೊಂದಿ ಚಿದ್ರಸವಾಗಿ ಬಹಿಷ್ಕರಿಸುವುದರಿಂದ ಪ್ರಸಾದವೆನಿಸಿರುವುದು. ಆ ಪೂಜ್ಯರಾದ

ಮೂರ್ತಿಗಳಲ್ಲಿ ಈ ಪಾದೋದಕ ಸಂಬಂಧಗಳಿಂದ ಇಚ್ಛಾ ಜ್ಞಾನ ಕ್ರಿಯೆಗಳೇನೂ ಇಲ್ಲದೆ ಸ್ವಸ್ವರೂಪಾನು ಸಂಧಾನವೇ ಇರುವುದು. ಇಂತಹ ಪೂಜ್ಯರ ಮಸ್ತಕಗತವಾದ ಚಿದ್ಬಿಂದುವೆ ದ್ರವಿಸಿ ಸುಷುಮ್ನಾದ್ವಾರವಾಗಿ ಪಾದಾಂಗುಷ್ಪಗಳಿಂದ ಬಹಿಷ್ಕರಿಸಿದಲ್ಲಿ ಗುರು ಲಿಂಗ ಜಂಗಮ ಪಾದೋದಕ ರೂಪವಾಗಿ ಕಂಗೊಳಿಸುವುದರಿಂದ ಪಾದೋದಕ ರೂಪ ಪ್ರಸಾದವೆನಿಸುವುದು. ಇದೇ ಪ್ರಸಾದವಾದರೆ ಮುಂದೆ ಪ್ರಸಾದವನ್ನು ಏಕೆ ಪಡೆಯಬೇಕೆಂದರೆ : ಪ್ರಸಾದವು ಸಾಮಾನ್ಯ ವಿಶೇಷವೆಂದು ಎರಡು ಬಗೆಯಾಗಿರುವುದು. ಈ ಪಾದೋದಕ ರೂಪ ಪ್ರಸಾದದ ಸಾಮಾನ್ಯ ರೂಪದಿಂದ ಪ್ರಸಾದವೆನಿಸಿ ವಿಶೇಷ ರೂಪದಿಂದ ಪಾದೋದಕವೆನಿಸುವುದು. ಇದರಂತೆ ಅಷ್ಟಾವರಣಗಳಲ್ಲಿಯೂ ಪ್ರಸಾದತ್ವವು ಸಾಮಾನ್ಯ ನೀತಿ ರೀತಿಯಿಂದಿರುವುದು. ಅಂದರೆ ಭಸ್ಮ ರುದ್ರಾಕ್ಷಿ ಮಂತ್ರಾದಿಗಳು ಸಾಮಾನ್ಯವಾಗಿ ಪ್ರಸಾದವಾಗಿದ್ದರೂ ವಿಶೇಷತ್ವದಿಂದ ಭಸ್ಮರುದ್ರಾಕ್ಷಿಗಳೇ ಆಗುವುವು. ಕಡೆಯದಾದ ಈ ಪ್ರಸಾದವು ಫಲರೂಪವಾದ್ದರಿಂದ ಇದರಲ್ಲಿ ಸಾಮಾನ್ಯ ವಿಶೇಷ ರೂಪ ಪ್ರಸಾದತ್ವವಿರುವುದು. ಸಾಮಾನ್ಯ ವಿಶೇಷತ್ವಗಳೆರಡೂ ಇಲ್ಲಿ ಐಕ್ಯವಾಗಿರುವುದರಿಂದ ಐಕ್ಯ ಸ್ಥಲದಲ್ಲಿ ನಿಲುಕಡೆಯೆನಿಸಿರುವುದು.

೧೯. ವೀರಶೈವ ಸಿದ್ಧಾಂತವು .ದ್ವೈತಾದ್ವೈ ತವಾದ್ದರಿಂದ ಗುರು ಲಿಂಗ ಜಂಗಮರಲ್ಲಿ ಭೇದಾಭೇದ ಭಕ್ತನಿಗೆ ಇರಬೇಕು. ಭಕ್ತ ಶಬ್ದವನ್ನು ವಿಚಾರಿಸಿದರೆ ಭಕ್ತಿಪ್ರಧಾನವುಳ್ಳವನೆ ವೀರಶೈವನೆಂದು ತಿಳಿಯುವುದರಿಂದಲೂ, ಭೇದಾಭೇದವನ್ನುಂಟುಮಾಡುವುದರಿಂದ ವೀರಶೈವ ಮತವು ಭಾಕ್ತಿಕ ಮತವಾದ್ದರಿಂದಲೂ, ಭೇದ ಪದವು ಭಾಗ-ವಿಭಾಗ ಮಾಡುವ ಸ್ವಭಾವವುಳ್ಳದ್ದೆಂತೂ, ಪೂಜ್ಯ ಪೂಜಕ ವಸ್ತುಗಳಲ್ಲಿ ಭೇದಾ ಭೇದವನ್ನೆಸಗುವ ಸಾಮರ್ಥ್ಯವುಳ್ಳದ್ದೆಂತಲೂ, ಪ್ರಸಾದ ಭಕ್ತಿ-ಮುಕ್ತಿಗಳಿಗೆ ಏಕದೇಶ ಸ್ಥಿತಿಯಿರುವುದರಿಂದ ಭೇದಾ  ಭೇದಭಾವನೆಯು ಅವಶ್ಯ ಇರಬೇಕಾಗುವುದು. ಆದ್ದರಿಂದ ನಿರ್ವಿಶೇಷೋಪಾಸನೆಯು ಘಟಿಸುವುದು.

೨೦. ಲಿಂಗಪಾದೋದಕವನ್ನು ಗುರು ಜಂಗಮರ ಮಸ್ತಕಕ್ಕೆ ಎರೆಯದಿದ್ದರೂ ಅದು ಲಿಂಗ ಪಾದೋದಕವಾಗುವುದು ಎಂಬ ವಿಷಯವನ್ನು ಶಾಸ್ತ್ರವು ವಿಧಿಸಿರುವುದಿಲ್ಲ; ವಿಧಿಸಬೇಕಾಗಿಯೂ ಇಲ್ಲ. ಮತ್ತು ಅಂಗರೂಪ ಭಕ್ತನಿಗೆ ಗುರು ಜಂಗಮ ಪಾದೋದಕವನ್ನು ಲಿಂಗದ ಮೇಲೆ ಅಭಿಷೇಕ ಮಾಡದಿದ್ದರೆ ಗುರು ಜಂಗಮರ ಪಾದೋದಕವಾಗುವುದಿಲ್ಲ. ಆಚಾರದಲ್ಲಿ ಸಂಬಂಧವೆಂತಲೂ, ಸಹಜವೆಂತಲೂ ಎರಡು ವಿಧವಾಗಿರುವುದು. ಇವೆರಡನ್ನೂ ಪರಸ್ಪರ ಭಿನ್ನ ಭಿನ್ನ ಕಾಲದಲ್ಲಿ ಆಚರಿಸಿ ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಹೊಂದಬೇಕು. ಗುರು ಜಂಗಮರು ಪ್ರತ್ಯಕ್ಷವಿಲ್ಲದಾಗ ಲಿಂಗಮೂರ್ತಿಯಲ್ಲಿ ಗುರುಜಂಗಮರನ್ನು ಅನುಸಂಧಾನಿಸಿ ಆ ಲಿಂಗಮೂರ್ತಿಯನ್ನು ನಿಯಮಿತ ಸ್ಥಿತಿಯಲ್ಲಿರಿಸಿ ಹಸ್ತಪಾದಾದಿಗಳನ್ನು ಭಾವಿಸಿ  ವಾಮ ದಕ್ಷಿಣ ಪಾದಾಂಗುಷ್ಠಗಳನ್ನೂ, ತನ್ನ ಧ್ಯೇಯ ಸ್ಥಾನವನ್ನೂ ಕಲ್ಪಿಸಿ ಗುರು ಲಿಂಗ ಜಂಗಮರ ಸ್ವರೂಪವನ್ನು ಮಂತ್ರಾದಿಗಳ ಅವಧಾನತೆಯಿಂದ ಎರೆದರೆ ಅವ್ಯಕ್ತವಾದ ಶಿವಸ್ವರೂಪ ಪಾದೋದಕವು ವ್ಯಕ್ತವಾಗುವುದು. ಹೀಗಾಗುವ ಪೂರ್ವದಲ್ಲಿ ಶಿವನು

ಅದೇ ಆತ್ಮನಲ್ಲಿ ತನ್ನೊಡನೆ ಐಕ್ಯವಾಗಬೇಕಾಗಿರುವುದು. ಆದರೆ ಹೇಗೆ ಸೃಷ್ಟಿಯೋ ಹಾಗೆ ಸ೦ಹಾರವಿರಬೇಕಾಗುವುದು.

೨೧. ಪೂಜ್ಯರಾದ ಗುರು ಜಂಗಮರಲ್ಲಿ ಪಾದೋದಕವನ್ನು ಕೊಡುವ ಇಚ್ಛೆ ಯತ್ನಾದಿಗಳು ಇಲ್ಲವೇ ಇಲ್ಲ. ಪ್ರದಾತೃತ್ವವು ಗುರು ಜಂಗಮರ ಭಾವನೆಯಲ್ಲಿ  ಎಂದೂ ಬರುವುದಿಲ್ಲ. ಸುಮ್ಮನೆ ನೋಡುವವರಿಗೆ ಮಾತ್ರ ಇದ್ದಂತೆ ಕಾಣಿಸಬಹುದು. ಪೂಜ್ಯರಾದ ಗುರು ಜಂಗಮರ ಮಸ್ತಕದ ಮಧ್ಯ ಸಹೃದಯದಲ್ಲಿ ನೆಲೆಸಿರುವ ಶಿವನಂದಾಮೃತವು ಪೂಜಕರ ಇಚ್ಛೆ ಯತ್ನಾದಿಗಳಿಂದ ಸುಷುಮ್ನಾ ಮಾರ್ಗವಾಗಿ ಪಾದಾಂಗುಷ್ಠ ದ್ವಾರದಿಂದ ಬಹಿಷ್ಕರಿಸಿ ಭಕ್ತನ ಹಸ್ತಗತವಾಗುವುದು. ಆ ಭಕ್ತನು ತಾನು ಪಡೆದುಕೊಂಡು ಪರಮಾನಂದ ಶಿವಸ್ವರೂಪವೇ ಪ್ರತ್ಯಕ್ಷವಾಗಿರುವುದನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸದೆ ಸ್ವೀಕರಿಸಬಾರದು. ಸ್ವೀಕರಿಸಿದ್ದಾದರೆ ಪಾತಿತ್ಯವುಂಟಾಗುವುದೆಂಬ ಶಾಸ್ತ್ರವಿಧಿಗನುಸರಿಸಿ ಆ ಪೂಜ್ಯ ಮೂರ್ತಿಗಳಿಗೆ ಭಕ್ತಿಪೂರ್ವಕ ಶಿವನಂದಾಮೃತವನ್ನು ಅರ್ಪಿಸಿದರೆ ಅವರು ಕೈಕೊಳ್ಳಲೇಬೇಕು. ಪಕ್ಷಾಂತರ ಕೈಕೊಳ್ಳದಿದ್ದರೆ ಭಕ್ತನ ಸಶಾಸ್ತ್ರೀಯವಾದ ಭಕ್ತಿಯನ್ನು ತಿರಸ್ಕರಿಸಬಾರದೆಂಬ ಶಾಸ್ತ್ರೋಕ್ತಿಯ ಉಲ್ಲಂಘನೆಯೇ ವೀರಶೈವ ಮತದ ಭಾಕ್ತಿಕ ಧರ್ಮಾಚರಣೆಗೆ ಲೋಪವುಂಟಾಗುವುದು. ಆದ್ದರಿಂದ ಯೋಗ್ಯವೆಂದು ಅದನ್ನು ಸ್ವೀಕರಿಸಿದರೆ ದತ್ತಾಪಹಾರ ದೋಷವೆನಿಸುವುದು. ಮಧ್ಯೆ ಸಮಷ್ಟಿಯಿಂದ ಆದಿ ಸಮಷ್ಟಿಗೆ ಹೋಗಬೇಕಾದುದು ಸ್ವಭಾವಸಿದ್ಧವಾದುದು. ದತ್ತಾಪಹಾರ ದೋಷವೆಂದರೆ ದಾನವನ್ನು ಕೊಡತಕ್ಕ ವಸ್ತುವಿನಲ್ಲಿ ತನ್ನದೆಂದು ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಉಪಯೋಗ ಮಾಡುವುದೆ ದತ್ತಾಪಹಾರ ದೋಷವೆನಿಸುವುದು.

 ಉದಾಹರಣೆಗಾಗಿ : ಗುರು ಲಿಂಗ ಜಂಗಮಕ್ಕೆ ತನು ಮನ ಧನಗಳನ್ನು ಸಂಕಲ್ಪಪೂರ್ವಕ ಅರ್ಪಿಸಿ ಮರಳಿ ಆ ಗುರು ಜಂಗಮರ ಸೇವೆಗಾಗಿಯೂ ಆ ಗುರು ಜಂಗಮರ ಇಚ್ಛಾನುಸಾರವಾದ ವೀರಶೈವ ಧರ್ಮಾರ್ಥ ಕಾರಗಳಿಗಾಗಿಯೂ ಆ ತನು ಮನ ಧನಗಳ ವಿನಿಯೋಗಿಸದೆ ತನ್ನ ಮತ್ತು ತನ್ನವರ ಶರೀರಾದಿಗಳ ರಕ್ಷಣೆಗಾಗಿಯೂ ಬಂಧು ಬಳಗದವರ ಪೋಷಣೆಗಾಗಿಯೂ ಆ ತನು ಮನ ಧನಗಳನ್ನು ಪ್ರಯೋಗಿಸಿದರೆ ದತ್ತಾಪಹಾರ ದೋಷವೆನಿಸುವುದು. ಮತ್ತು ಶಿವನು ಲೋಕದಲ್ಲಿ ಅನೇಕ ಪದಾರ್ಥಗಳನ್ನು ಕೊಟ್ಟಿರುವನಷ್ಟೆ ? ಭಕ್ತನು ಭಕ್ತಿಯಿಂದ ಆ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿದರೆ ಅವುಗಳನ್ನು ಪರಮಾತ್ಮನು ಸ್ವೀಕರಿಸದಿದ್ದರೆ ಆ ಭಕ್ತನು ಹೇಗೆ ಉದ್ಧಾರವಾಗಬೇಕು ? ಸ್ವೀಕರಿಸಿದ್ದಾದರೆ ಶಿವನು ದತ್ತಾಪಹಾರಕನಾಗುವನೇನು ? ಅದರಂತೆ ಪರಶಿವನ ಆಜ್ಞಾನುಸಾರವಾಗಿಯೂ ಜಗದ್ದಿತಾರ್ಥವಾಗಿಯೂ ಅವತರಿಸಿದ ಗುರು ಇಚ್ಛಾನುಸಾರವಾಗಿಯೂ ಜಂಗಮರ ಉತ್ತಮಾಂಗಗತ ಚಿದ್ರಸವನ್ನು ಶಿಷ್ಯನ ಪ್ರಾರ್ಥನಾದಿಗಳಿಂದ ಸಾಕ್ಷತ್ಕರಿಸಿದ್ದನ್ನು ಭಕ್ತನು ಭಕ್ತಿಪೂರ್ವಕ ಆರ್ಪಿಸಲು  ಅದನ್ನು ಆ ಪೂಜ್ಯರು ಸಸ್ವರೂಪವಾದ ಲಿಂಗಕ್ಕರ್ಪಿಸಿ ಆ ಲಿಂಗಮೂರ್ತಿಯ ಕೃಪಾಪ್ರಸಾದವನ್ನು ಸೇವಿಸಿದುದಕ್ಕೆ ದತ್ತಾಪಹಾರ ದೋಷವು ವಿರುವುದೆಂದು ಹೇಳುವ ಬಗೆ ಹೇಗೆ ? ಅಲ್ಲದೆ ನಾವು ನಿತ್ಯಲಿಂಗ ಪೂಜೆಯಲ್ಲಿ ಲಿಂಗಕ್ಕೆ ಅರ್ಪಿಸಿದುದನ್ನೆಲ್ಲ ಲಿಂಗವು ಕೈಕೊಂಡರೆ ಅದೂ ಸಹ ಲಿಂಗದ ದತ್ತಾಪಹಾರ ವಾದೀತಲ್ಲವೆ ?

೨೨. ಗುರು ಕರುಣಿಸಿದ ಲಿಂಗವನ್ನು ಪೂಜ್ಯವೆಂದು ತಿಳಿದು ಆರಾಧಿಸುವರು. ಆ ಲಿಂಗಕ್ಕೆ ಮಾತೃಸ್ಥಾನವಾದ ಗುರುಮೂರ್ತಿಯನ್ನು ಮಾತ್ರ ಧಿಕ್ಕರಿಸುವುದು ತನ್ನ ಜನಕನ ಮುಖ್ಯ ಸಾಮರ್ಥ್ಯವನ್ನು ತಿರಸ್ಕರಿಸಿದವನಿಗಿಂತಲೂ ಅಧಿಕವಾದ

ದೋಷವಾಗುವುದು. ಗುರುವಿಲ್ಲದೆ ಲಿಂಗ ದೊರೆಯದು. ಕಾರಣ ಸಾಧಕ ಗುರುವಾಗಿದ್ದರೂ ಆತನಲ್ಲಿ ದೋಷವನ್ನು ಕಲ್ಪಿಸಬಾರದು; ಗುಣವನೆಣಿಸಬಾರದು. ಶಿವಸ್ವರೂಪರಾದರೂ ಸ್ವಸ್ವರೂಪ ಲಿಂಗಭಕ್ತರು ಎಣಿಸಿದ ಗುರು ಜಂಗಮರು ತಮ್ಮ

ಅನುಸಂಧಾನದ ನಿಲುಕಡೆಗೆ ಅತೀತವಾದ ಅಣುಚಕ್ರದ ನಿರಂಜನ ಲಿಂಗದಿಂದ ಭಾವಲಿಂಗಕ್ಕೆ ಪ್ರಾಣರೂಪವಾದ ಪರ ಜಂಗಮದಿಂದೊಗೆದ ಚಿತ್ಕಲೆಯೇ ಭಕ್ತನ ಭಕ್ತಿ ಪ್ರಾರ್ಥನಾದಿಗಳಿಂದ ಶಿಖಾಚಕ್ರಕ್ಕೆ ಆವಿರ್ಭವಿಸಿದಲ್ಲಿ ಪ್ರಾಣಲಿಂಗಕ್ಕೆ ಚೇತನಾ

ರೂಪವಾದ ಚರಜಂಗಮದಿಂದೊಗೆದು ಚಿನ್ನಾದ ಸ್ವರೂಪವನ್ನು ಧರಿಸಿ ಅಲ್ಲಿಂದ ಭಕ್ತನ ಪ್ರಾರ್ಥನೆಯ ವಿಶೇಷದಿಂದ ಬ್ರಹ್ಮರಂಧ್ರಕ್ಕೆ ಅವತರಿಸಿ ಅಲ್ಲಿಯ ಇಷ್ಟಲಿಂಗಕ್ಕೆ ಚೇತನ ಸ್ವರೂಪವಾದ ಸ್ವಯಜಂಗಮದಿಂದೊಗೆದ ಚಿದ್ಬಿಂದುವೇ ಚಿದ್ರಸವೆನಿಸಿ ಭ್ರೂಮಧ್ಯಾದಿ ಆಧಾರಾಂತವಾದ ಮಹಾಲಿಂಗಾದಿ ಆಚಾರ ಲಿಂಗಾಂತಮಾದ ಷಡ್ಲಿಂಗಗಳನ್ನು ಭಕ್ತನು ಪ್ರಾರ್ಥಿಸಿ ಭಾವನಾದಿ ಸಂಸ್ಕಾರ ವಿಶೇಷದಿಂದ ಆಯಾ ಲಿಂಗಗಳಿಂದ ಆಯಾ ಸ್ಥಾನಗಳಿಗೆ ಅವತರಿಸುತ್ತ ಮೂಲಾಧಾರಗತವಾದ ಆಚಾರಲಿಂಗ ಸ್ಥಾನದಲ್ಲಿ ಇತ್ತೆರನಾಗಿ ಲಿಂಗಾಂಗ ಶಿವಶಕ್ತಿ ಗುರುಲಿಂಗ ಈ ಅಪರ ಪರ್ಯಾಯ ನಾಮಗಳುಳ್ಳ ಪಾದಾಂಗುಷ್ಠ ದ್ವಯಗಳಿಂದ ಆಯಾ ಸ್ವರೂಪವನ್ನು ಹೊಂದಿ ಬಲದಂಗುಷ್ಠದಲ್ಲಿ ಗುರು  ಪಾದೋದಕವಾಗಿ   ಎಡದಂಗುಷ್ಠದಲ್ಲಿ ಲಿಂಗಪಾದೋದಕವಾಗಿ ಅವತರಿಸಿದ ನಂತರ ಆ ಎರಡು ಅಂಗುಷ್ಠಗಳ ಮಧ್ಯದಲ್ಲಿ ಸಂಬಂಧದಿಂದುಂಟಾದ ಸಾಮರಸ್ಯ ರೂಪಾದ ಜಂಗಮ ಪಾದೋದಕವು ಅವತರಿಸಿ ಆಯಾ ಮಂತ್ರ ತಂತ್ರ ಪ್ರಯೋಗಗಳಿಂದ ಸಂಸ್ಕರಿಸಿದ ಪರಿಶುದ್ಧ ಪಾತ್ರೆಯಲ್ಲಿ ಕಂಗೊಳಿಸುತ್ತಿರುವುದು.

೨೩. ಲಿಂಗದಲ್ಲಿ ಲಿಂಗ ಪಾದೋದಕವನ್ನು, ಗುರುವಿನಲ್ಲಿ ಗುರು ಪಾದೋದಕವನ್ನು, ಜಂಗಮದಲ್ಲಿ ಜಂಗಮ ಪಾದೋದಕವನ್ನು ಹೊಂದಬೇಕೆಂಬ ವಿಶೇಷ ವಿಧಿಯಲ್ಲ. ಶಿವ ಪಾದೋದಕವನ್ನು ಸ್ವೀಕರಿಸಬೇಕೆಂಬ ಸಾಮಾನ್ಯ ವಿಧಿಯಾಗಿರುವುದು. ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಸ್ವೀಕರಿಸಬೇಕು. ಅದರಲ್ಲಿ ಒಂದು ಕಡಿಮೆಯಾದರೂ ಅದು ಅನಶನವಾಗುವುದು; ಎಂಬ ವಿಶೇಷ ವಿಧಿಯು ಮಾತ್ರ ಇರುವುದು. ಗುರುಜಂಗಮರು ಸ್ವಪಾದೋದಕದಿಂದ ಸ್ವಪೂಜ್ಯವಾದ ಲಿಂಗಕ್ಕೆರೆಯುವರೆಂದು ಭ್ರಮಾದೃಷ್ಟಿಯುಳ್ಳವರಿಗೆ ಕಂಡರೂ ಪ್ರಮಾದೃಷ್ಟಿ ಯುಳ್ಳವರಿಗೆ ಮಾತ್ರ ಹಾಗೆ ಕಾಣದು. ಒಬ್ಬನು ಮಗಳನ್ನೂ ಮಡದಿಯನ್ನೂ ಆಲಂಗಿಸುವನು. ಆದರೆ ದೋಷದೃಷ್ಟಿಯುಳ್ಳವನಿಗೆ ಪುತ್ರಿಯ ಆಲಿಂಗನವೂ ಸಹ ದೋಷವಾಗಿಯೇ ಕಾಣುವುದು. ಪ್ರಮಾದೃಷ್ಟಿಯುಳ್ಳ ವಿಚಾರಿಗೆ ಮಾತ್ರ ಆ ಆಲಿಂಗನದ ನಿರ್ದೋಷದ ನಿಜಸ್ಥಿತಿಯು ಗೊತ್ತಾಗುವುದು. ಇದು ಸ್ವಚ್ಛವಾದ ನಂತರ ಪರಬ್ರಹ್ಮಸ್ವರೂಪ ಗುರು ಲಿಂಗ ಜಂಗಮದ ಪಾದೋದಕವು.

೨೪. ಪತಿ ಸ್ಥಾನವನ್ನು ಹೊಂದಿದವನು ಪೂಜ್ಯನು. ಪತ್ನಿ ಸ್ಥಾನಾಪನ್ನನಾದವನು ಪೂಜಕನು. ಪತಿರೂಪನಾದ ಪೂಜ್ಯನಿಂದ ಪತ್ನಿ ಸ್ವರೂಪನಾದ ಪೂಜಕನಲ್ಲಿ ಆವಿರ್ಭವಿಸಿ ಪಾದೋದಕ ಶಿಶುವು ತೋರುವುದು. ಇದಕ್ಕೆ ಉದಾಹರಣೆಗಾಗಿ ಕೊಟ್ಟಿರುವ

ಲೋಕಾನುಭವವಾದರೂ ವಿರೋಧಿಸದು. ಸತಿ-ಪತಿಗಳ ಸಾಮರಸ್ಯ ಸಂಯೋಗ ದಿಂದುಂಟಾಗುವ ಶಿಶುವು ಪತಿಯಲ್ಲಿ ಅವ್ಯಕ್ತರೀತಿಯಿಂದ ಬಿಂದುವಿನಷ್ಟು ಜೀವ ಚೈತನ್ಯ ರೂಪವಾಗಿ ಮೂರು ತಿಂಗಳು ವಾಸ ಮಾಡಿದ್ದು ಸತಿಪತಿಗಳ ಸಂಯೋಗ

ವಿಶೇಷದಿಂದ ಘನೀಭೂತವಾದ ಬಿಂದುವೇ ದ್ರವಿಸಿ ಆ ಜೀವ  ಚೈತನ್ಯದೊಡಗೊಂಡು ಜನನ ಧೃತಿಯೆನಿಸಿ  ಸತಿಯ ಗರ್ಭವನ್ನು ಪ್ರವೇಶಿಸಿ ಕ್ರಮದಿಂದ ಸಾವಯವ ರೂಪ ಪಿಂಡವು ವರ್ಧನವಾಗುತ್ತ ಕಡೆಗೆ ಬಹಿಷ್ಕೃತವಾಗಿ ಪುತ್ರರೂಪದಿಂದ ತೋರುವಂತೆ ಪೂಜ್ಯನಲ್ಲಿದ್ದ ಪಾದೋದಕವು ಪೂಜಕನಲ್ಲಿ ತೋರುವದಾದ್ದರಿಂದ ವಿರೋಧವೆನಿಸದು.

೨೫. ಅದು ತನ್ನ ಪಾದೋದಕವಲ್ಲ. ಹೇಗೆಂದರೆ : ವ್ಯಾಪ್ಯನಾದ ಗುರುವು ಅಥವಾ ಜಂಗಮವು ಅಭಿನ್ನವಾದ ಪರಲಿಂಗಾನುಭವದಿಂದ ಅನುಸಂಧಾನದಿಂದಿರುವಾಗ ಆ ಪಶ್ಚಿಮ ಚಕ್ರಗತವಾಗಿ ಸ್ವಸ್ವರೂಪದಿಂ ಘನೀಭೂತವಾಗಿದ್ದ ಆನಂದವೇ ದ್ರವಿಸಿ ಭಕ್ತನ ಕ್ರಿಯಾಕಲಾಪಗಳಿಂದ ಭೇದರೂಪವಾಗಿ ಪಾದದ್ವಾರಾ ತೋರುವುದು. ಅಂತಹ ಪರಲಿಂಗ ಸ್ವರೂಪ ಆನಂದ ರಸವನ್ನು ಭಕ್ತನು ಭಕ್ತಿಯಿಂದ ಶಾಸ್ತ್ರ ವಿಧಿಗನುಸರಿಸಿ ಪೂಜ್ಯರಿಗೆ ಅರ್ಪಿಸುವನು. ಅದನ್ನೇ ಆ ಭಕ್ತಿರೂಪವಾಗಿ ಬಂದ

ಶಿವಾನಂದರೂಪ ತೀರ್ಥವನ್ನೇ ಪೂಜ್ಯರು ತಮಗೆ ಪೂಜ್ಯವೆನಿಸಿದ ಸ್ವಸ್ವರೂಪ ಲಿಂಗಕ್ಕೆ ಅರ್ಪಿಸಿ ಸೇವಿಸುವುದರಿಂದ ದೋಷವೆನಿಸುವುದಿಲ್ಲ. ಆದ್ದರಿಂದ ಸ್ವಪಾದೋದಕವನ್ನು ಶ್ರೇಷ್ಟ ಲಿಂಗಕ್ಕೆ ಅಭಿಷೇಕಿಸಿ ಸ್ವೀಕರಿಸುವುದು ಭೇದಾಭೇದ ಸಿದ್ಧಾಂತ ವಿರೋಧವೆನಿಸದು. ವೀರಶೈವ ಮತವು ಭೇದಾಭೇದ ಸ್ವರೂಪವುಳ್ಳದ್ದಾದ್ದರಿಂದ ಪಾದೋದಕವಾದರೂ ಸ್ವಸ್ವರೂಪದಲ್ಲಿ ಅಭೇದರೂಪವಾಗಿಯೂ ಕ್ರಿಯೆಯಲ್ಲಿ ಭೇದರೂಪವಾಗಿಯೂ ತೋರುವುದು. ಇಂತಹ ಭೇದಾಭೇದ ಸ್ವರೂಪವೆನಿಸಿದ ಚಿದ್ರಸಕ್ಕೆ ಸ್ವಪಾದೋದಕವೆಂದು ಆಕ್ಷೇಪಿಸುವುದು ವೀರಶೈವಮತ ಸಿದ್ಧಾಂತಕ್ಕೆ ವಿರೋಧವೆನಿಸುವುದು.

ಜ.ಚ.ನಿ

ಕನ್ನಡ ನಾಡಿನಲ್ಲಿ ಇಂದಿನವರೆಗೂ ಆಗಿ ಹೋದ ಅನಂತ ಮಹಾನುಭಾವರು ಒಂದೊಂದು ಕೃತಿ ಕಲೆಗಳಿಂದ ತಮ್ಮ ತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ; ರಹಸ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಕಲಾವಂತರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿದ್ದಾರೆ. ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸಿದ ಶ್ರೇಷ್ಠ ಮಹಾನುಭಾವನೆಂದರೆ ವರಿಷ್ಠ ಕಾರಣಿಕ ಪುರುಷನೆಂದರೆ ಲಿಂ. ಶ್ರೀ ನಿ. ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು. ಅವರ ಇಡೀ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ; ಐಹಿಕಾಮುಷ್ಮಿಕ ಸಾಧನವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸದ್ಗುಣಗಳು ಗುಂಪಿತವಾಗಿದ್ದವು; ಗುಡ್ಡೆಯಾಗಿದ್ದವು. ವಿಚಾರ ಸ್ವಾತಂತ್ರ ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯಭಿಮಾನ, ಕಾರ್ಯಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದವು. ಅಸದೃಶವಾದ ಸ್ವಾರ್ಥತ್ಯಾಗ, ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ

ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾತ್ತ ಉದ್ದೇಶ, ಉದಾರ ಉತ್ತೇಜನ, ಉನ್ನತ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಪ್ರಕೃತಿ ಗುಣಗಳಾಗಿದ್ದವು. ಈ ಎಲ್ಲ ಸದ್ಗುಣಗಳಿಂದ ಶ್ರೀ ಕುಮಾರಯೋಗಿಯು ತನ್ನ

ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿಯೆ ಇಡೀ ಕನ್ನಡ ಕುವರನಾಗಿ ಬದುಕಿದನು. ಕಾರಣಿಕನಾಗಿ ಬಾಳಿದನು. ಹೊಟ್ಟೆಯಲ್ಲಿ ಹುಟ್ಟುವ ಸಾಮಾನ್ಯ ಕುವರನು ತನ್ನ ತಂದೆ-ತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಇಡೀ ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲಕೇಳಿಗಳಿಂದ ತನ್ನ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು, ಅಸಾಧಾರಣವಾದ ಪ್ರೌಢಲೀಲೆಗಳಿಂದ ಪವಿತ್ರ ಕಾರ್ಯಗಳಿಂದ ಇಡೀ ಜನಾಂಗವನ್ನು ಕಡುಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರಯೋಗಿಯು ಮಾಡಿದನು; ಮಹಾಕಾರಣಿಕನಾದನು. ಆತನ ಸಹಜವಾದ ಸಣ್ಣನಗೆ, ನನ್ನಿವಾತು, ಪುಣ್ಯಕಳೆಗಳನ್ನು ಕಂಡು ಕೇಳಿ ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ, ಮಿತವಾದ ಅನುಭವಪೂರ್ಣ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ ಪಾಮರರಿಲ್ಲ. ಅವರು ಕೈಕೊಳ್ಳುತ್ತಿರುವ ಕಲ್ಮಷರಹಿತವಾದ ಕಾರ್ಯಕಲಾಪಗಳಿಗೆ ಸಂಪತ್ತು ಸಹಾಯಗಳನ್ನು ನೀಡದ ಸಾಹುಕಾರರಿಲ್ಲ, ಸಾಮಾಜಿಕರಿಲ್ಲ.

 ಅವರು ಓಜಸ್ಸಿನಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೆ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಆಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಡಿಯನ್ನಿಟ್ಟರು. ಆ ಮಹತ್ಕಾರ್ಯಗಳಲ್ಲಿ ಒದಗುವ ತೊಡಕು ತೊಂದರೆಗಳಿಗೂ ಬರುವ ಭಯಭೀತಿಗಳಿಗೂ ಅವರು ಅಂಜಲಿಲ್ಲ; ಅಳುಕಲಿಲ್ಲ. ದೊಡ್ಡ ಪ್ರವಾಹವು ತನಗೆ ಎದುರಾಗುವ ಕಾಡುಗೀಡುಗಳನ್ನು ತನ್ನ ಸೆಳೆವಿನಿಂದ ಭೇದಿಸಿ, ದೊಡ್ಡ ದೊಡ್ಡ ದುಂಡುಬಂಡೆಗಳ ಮೇಲೆ ನೆಗೆದು ಮುಂದಕ್ಕೆ ಸಾಗುವಂತೆ, ಸಾಗರ ಸೇರುವಂತೆ ಶ್ರೀಗಳು ತಮ್ಮ ಸತ್ಕಾರ್ಯಸಾಧನೆಯಲ್ಲಿ ಎಡೆಬಿಡದೆ ಅಡ್ಡಬರುವ ದುರಂತವಾದ ಎಡರುತೊಡರುಗಳನ್ನು ಸಹ ತನ್ನ ವೈರಾಗ್ಯದ ವಜ್ರಾಘಾತದಿಂದ ಹೊಡೆದು ಒಡೆದು ಪುಡಿಮಾಡಿ ತನ್ನ ಧೈಯದತ್ತ ವಾಯುವೇಗದಿಂದ ಸಾಗಿದರು. ಸಾಧಿಸಿದರು. ಸತ್ಯವನ್ನು ಎತ್ತಿಹಿಡಿಯಲು ಸಮಾಜವನ್ನು ಸುಂದರಗೊಳಿಸಲು ಸ್ವಲ್ಪವೂ ಹೆದರದೆ ಹಿಂಜರಿಯದೆ ಛಲತೊಟ್ಟರು; ಬಲ ಮುಡಿಪಿಟ್ಟರು. ಅವರು ಮಾಡಿದ ಮಹಾಕಾರ್ಯಗಳ ಮಹಾಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು, ಬೆರಗುಗೊಳಿಸಿತು. ಆ ಪುಣ್ಯಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು; ದಾರಿ ಹಚ್ಚಿತು. ಆ ಕುಮಾರಯೋಗಿಯು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ ಪ್ರತಿಯೊಬ್ಬ ಸಮಾಜಾಭಿಮಾನಿಯ ಸಂಸ್ಕೃತಿಯಭಿಮಾನಿಯ ಹೃದಯಮಂದಿರದ ಮಾನ್ಯಮೂರ್ತಿಯಾದನು; ಪೂಜ್ಯವ್ಯಕ್ತಿಯಾದನು;  ಯೋಗಿಯಾದನು; ವಿರಾಗಿಯಾದನು ಕಾರಕನಾದನು; ಕಾರಣಿಕನಾದನು. ಅಂತಹ ಪುಣ್ಯಶ್ಲೋಕಿಯ ಪವಿತ್ರಚರಿತ್ರೆಯನ್ನು ಮನತಟ್ಟಿದ ರೀತಿಯಲ್ಲಿ ಮಂದಟ್ಟಾಗುವಂತೆ ಮುಂದಿರಿಸುವ ಪ್ರಯತ್ನ ಪಡಲಾಗಿದೆ; ಪ್ರವೇಶ ಮಾಡಲಾಗಿದೆ.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ವಿದ್ಯೆ-ಅವಿದ್ಯೆಗಳೆರಡೂ ಭಾರತೀಯ ತತ್ವಶಾಸ್ತ್ರದ ಅಮೂಲ್ಯ ಪಾರಿಭಾಷಿಕ ಪದಗಳು. ನಮ್ಮ ಪ್ರಾಚೀನ ಋಷಿಮುನಿಗಳ ದೃಷ್ಟಿಯಲ್ಲಿ ಇವು ಬ್ರಹ್ಮದ ಶಕ್ತಿಗಳು. ಈಗ ನಾವು ದಿನನಿತ್ಯ ‘ವಿದ್ಯೆ’ ಎಂದು ಕರೆಯುವುದೆಲ್ಲ ವಾಸ್ತವದಲ್ಲಿ ಅವಿದ್ಯೆ. ಅವಿದ್ಯೆ ಎಂದಾಕ್ಷಣ ತಿರಸ್ಕರಣೀಯವಾದುದು ಎಂದಲ್ಲ. ಲೌಕಿಕ ಜೀವನಕ್ಕೆ ತೀರ ಅಗತ್ಯವಾದುದು. ನಮ್ಮ ಐಹಿಕ ಸುಖ ಹಾಗು ಅಭ್ಯುದಯಕ್ಕೆ ಕಾರಣವಾದುದು ಈ ಅವಿದ್ಯೆಯೇ. ದಾರ್ಶನಿಕರು ಅವಿದ್ಯೆಗೆ ಕರ್ಮವೆಂದೂ ಕರೆದುದುಂಟು. ಕರ್ಮರಹಿತವಾಗಿ ಮನುಷ್ಯ ಬದುಕಲಾರ. ಆದರೆ ಅವನು ಮಾಡುವ ಕರ್ಮದಲ್ಲಿ ಅಂದರೆ ಭಗವತ್ಸೇವೆಯಲ್ಲಿ ನಾನೆಂಬ ಅಭಿಮಾನವಿರಬಾರದು. ಅಹಂಕಾರ ಮಮಕಾರಗಳಿಗೆ ಅಲ್ಲಿ ಅವಕಾಶವಿಲ್ಲ. ರಾಗದ್ವೇಷಗಳಿರಬಾರದು. ಪ್ರತಿಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಸೇವೆ ಮಾಡುವುದು ಸತ್ಯಕರ್ಮವೆನಿಸುವುದು. ಇದು ಮೃತ್ಯುವನ್ನು ಗೆಲ್ಲಲು ಅತ್ಯಂತ ಸಹಕಾರಿಯಾದುದು.

 ಅವಿದ್ಯೆ ಮೌಲಿಕವಾಗುವುದು ವಿದ್ಯೆಯ ಸ್ಪರ್ಶದಿಂದ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಅಂದರೆ ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುವುದೋ ಅದು ನಿಜವಾದ ವಿದ್ಯೆ. ಇದು ಮನುಷ್ಯನನ್ನು ದೈವತ್ವಕ್ಕೇರಿಸುವುದು. ದಾರ್ಶನಿಕರ ದೃಷ್ಟಿಯಲ್ಲಿ ಈ ವಿದ್ಯೆಯೇ ಜ್ಞಾನ.  ಮನುಷ್ಯನ ಅಧ್ಯಾತ್ಮ ಸಾಧನೆಗೆ ಅತ್ಯವಶ್ಯವಾದುದು. ಇಂತಹ ವಿದ್ಯೆಯನ್ನು ಕರಗತ ಮಾಡಿಕೊಂಡವನು ನಿತ್ಯಾನಿತ್ಯವನ್ನು ವಿವೇಕವುಳ್ಳವನಾಗುತ್ತಾನೆ. ಐಹಿಕ ಸುಖ ಭೋಗಗಳನ್ನು ಕ್ಷಣಿಕವೆಂದು ಪರಿಭಾವಿಸಿ ಅವುಗಳಲ್ಲಿ ಪೂರ್ಣ ವಿರಕ್ತಿಯನ್ನು ಹೊಂದುತ್ತಾನೆ. ಸಂಯಮದಿಂದ ಕೂಡಿದ ಪವಿತ್ರ ಜೀವನವನ್ನು ನಡೆಸುತ್ತ ಸದಾ ಪರಮಾರ್ಥ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕೊನೆಗೆ ಬ್ರಹ್ಮನನ್ನು ಅರಿತು ಬ್ರಹ್ಮಸ್ವರೂಪಿಯೇ ಆಗುತ್ತಾನೆಂಬುದು ನಮ್ಮ ದಾರ್ಶನಿಕರ ಅಭಿಮತ.

ಮಾನವರ ಬದುಕಿನಲ್ಲಿ ವಿದ್ಯೆ-ಅವಿದ್ಯೆಗಳೆರಡೂ ಪ್ರಮುಖ ಸ್ಥಾನ ಪಡೆದಿವೆ. ಇವುಗಳ ಸಂಯೋಗದಿಂದ ಅಮೃತತ್ವವನ್ನು ಹೊಂದಲು, ಆತ್ಮತತ್ವ ತಿಳಿಯಲು ಸಾಧ್ಯವಾಗುತ್ತದೆ.

ವಿದ್ಯಾಂ ಚಾ ವಿದ್ಯಾಂ ಚ ಯಸ್ತದ್ವೇದೋ ಭಯಗ್ಂ ಸಹ

 ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ

 ಅಂದರೆ ವಿದ್ಯೆ ಮತ್ತು ಅವಿದ್ಯೆಗಳೆರಡನ್ನೂ ಅರಿತವರು ಲೌಕಿಕ ರೂಪವಾದ ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ ಅಧ್ಯಾತ್ಮ ಸಾಧಕವಾದ ವಿದ್ಯೆಯ ಮೂಲಕ ಅಮೃತತ್ವವನ್ನು ಪಡೆಯುತ್ತಾರೆ ಎಂದರ್ಥ.

ಸಾಮಾನ್ಯ ಜನರು ತಮ್ಮ ಜೀವನವನ್ನು ಅವಿದ್ಯೆಗೆ ಸೀಮಿತಗೊಳಿಸಿ, ಪ್ರಪಂಚದಲ್ಲಿ ಸುಖ ಮತ್ತು ತೃಪ್ತಿಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಆದರೆ ಜ್ಞಾನಿಗಳು ಅಮೃತತ್ವದ ಕಡೆಗೆ ಶಾಶ್ವತ ಸುಖದ ಕಡೆಗೆ ಸಾಗುತ್ತಾರೆ. ಒಟ್ಟಾರೆ ಮನುಷ್ಯ ಜೀವನದ ಗುರಿ ಅವಿದ್ಯೆಯನ್ನು ವಿದ್ಯೆಯಲ್ಲಿ ರೂಪಾಂತರಗೊಳಿಸುವುದು. ಅಂದರೆ ಅವಿದ್ಯೆಯ ದುರ್ಗಮ ಮಾರ್ಗದಲ್ಲಿ ಮುನ್ನಡೆದು ವಿದ್ಯೆಯ ಬೆಳಕಿನಲ್ಲಿ ಜೀವನವನ್ನು ಅರಳಿಸುವುದೇ ಆಗಿದೆ. ಹೀಗೆ ಆನಂದಮಯವಾದ ವಿದ್ಯಾಭೂಮಿಕೆಯಲ್ಲಿ ಜೀವನವನ್ನು ಅರಳಿಸಿದಾಗ ದಿವ್ಯತೃಪ್ತಿ ಹಾಗು ಅಮೃತತ್ವವನ್ನು ಪಡೆಯಲು ಸಾದ್ಯವಾಗುವದು.