ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ದೇವಪೊರೆಯೊ  ಭವಮಾಲೆಯಜಿತ |

ಭಾವಜಮದಹತ  ಈ ವಸುಜಾತ  ||||

ಚಿತ್ತದ ರಾಗ  ಭ್ರಾಂತಿಯ ಪೂಗ ಗುಹೇಶ್ವರ

ಜೊತೆಗೂಡಿ ಅತಿಬೇಗ  || ||

ವೃತ್ತಿಯ ಜಾಲ  ಚಿಂತೆಯ ಮೂಲ  ಚರೇಶ್ವರ

ಹತಮಾಡಿ ಘನಲೀಲ  || ||

ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ

ಆನುಗೈದು ಶಿವಯೋಗ || ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ತರಳ ಕೇಳು ಮಾ | ಕ್ಷರವೆ ಮೂರೊಂದಾದ

ವರ ಮೂಲ ಪ್ರಣವದಿರವೆ ಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೬||

ಲಿಂಗವು ಪೂಜ್ಯವಸ್ತುವೆಂಬುದನ್ನು ಸಿದ್ಧಮಾಡುತ್ತ ಅದು ಮೂಲ ಪ್ರಣವ ರೂಪವೆಂದು ಪ್ರತಿಪಾದಿಸುತ್ತಾನೆ.

ಸದ್ಗುರುನಾಥನ ಬೋಧೆಯು ಜೀವನ ವಿಕಾಸದಾಯಕವೂ ಮೋಕ್ಷಪ್ರದಾಯಕವೂ ಆಗಿದೆ. ಆತನು ಶಿಷ್ಯನಲ್ಲಿ ಅತ್ಯಂತ ಕರುಣಾಮಯಿಯಾಗಿ ಪ್ರೀತಿಯ ಪುತ್ರನೆಂದು ಮೈದಡವಿ ತತ್ತ್ವದ ತಿರುಳನ್ನು ತುತ್ತುಮಾಡಿ ಉಣಿಸುವ ಸನ್ನಿವೇಶ ರೋಮಾಂಚನಕಾರಿಯಾದುದು. ವಾತ್ಸಲ್ಯದಿಂದ ಶಿಷ್ಯನ ಚಿತ್ತವೃತ್ತಿಗಳು ಗುರು ವಚನದತ್ತ ಕೇಂದ್ರೀಕೃತವಾದರೆ ಅನುಭವದ ವಿಷಯ ಸುಲಭವಾಗುವದು. ಗುರುವಾದವನು ತನ್ನ ಶಿಷ್ಯವೃಂದಕ್ಕೆ ದಯಾಸಾಗರನೆನಿಸಬೇಕೆಂಬುದು ಇಲ್ಲಿ ಸೂಚಿತ ವಾಗುತ್ತದೆ. ಅಂತೆಯೇ ಗುರುವು ತರಳ ! ಕೇಳು, ಈ ನಿನ್ನ ಲಿಂಗವು ಓಂಕಾರದಿರವು. ಓಂಕಾರವು ಮೂಲ ಪ್ರಣವವಾಗಿದೆ. ಈ ಓಂಕಾರದಲ್ಲಿ ಅ, ಉ, ಮ,’ ಗಳೆಂಬ ಮೂರಕ್ಷರಗಳಿವೆ. ಈ ಮೂರೊಂದಾದುದೇ ಮೂಲಪ್ರಣವೆನಿಸುವದು.

ಚನ್ನಬಸವಣ್ಣನವರು ಕರಣಹಸಿಗೆಯ ಪ್ರಾರಂಭವನ್ನು ಪ್ರಣವದುತ್ಪತ್ತಿಯಿಂದಲೇ ಪ್ರಾರಂಭಿಸುತ್ತದೆ .

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು

ಮೂರು ಬೀಜಾಕ್ಷರ, ಅಕಾರವೇ ನಾದ, ಉಕಾರವೆ ಬಿಂದು,

ಮಕಾರವೆ ಕಳೆ, ಮತ್ತಂ ಆಕಾರವೆ ರುದ್ರ, ಉಕಾರವೆ ಈಶ್ವರ,

ಮಕಾರವೆ ಸದಾಶಿವ. ಇಂತೀ ಅಕಾರ, ಉಕಾರ, ಮಕಾರಕ್ಕೆ

 ನಾದ ಬಿಂದು ಕಳೆಯೇ ಆಧಾರ, ಆ ನಾದ ಬಿಂದು ಕಳಗೆ

ಪ್ರಕೃತಿಯೆ ಆಧಾರ, ಆ ಪ್ರಕೃತಿಗೆ ಪ್ರಾಣವೆ ಆಧಾರ.

 ಆ ಪ್ರಾಣಕ್ಕೆ ಲಿಂಗವೆ ಆಧಾರ, ‘ಅ’ ಎಂದಡೆ ಅನಾಹತ,

ಉ’ ಎಂದಡೆ ನಾದ ಉಳಿಯತ್ತು, ‘ಮ’ ಎಂಬಲ್ಲಿ

 ಬಿಂದು ಬಂದು ಕೂಡಲು ಶಿವಶಕ್ತಿಯಾಗುತ್ತಂ

ಇಂತಹ ಓಂಕಾರವಾಯಿತ್ತು

ಮುಂದುವರೆದು

 “ಓಂಕಾರಾತ್ಪ್ರಭವಾ ವೇದಾ ಓಂಕಾರಾತ್ಪ್ರಭವಃ ಸ್ವರಃ |

 ಓಂಕಾರಾತ್ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।”

 ಎಂದು ಓಂಕಾರದ ಹಸಿಗೆಯನ್ನು ಮಾಡಿರುವರು. ಓಂಕಾರದಲ್ಲಿ ಶಿವಶಕ್ತಿಯರ ಸಮ್ಮಿಲನವಿದೆ. ಲಿಂಗದಲ್ಲಿ ಅಡಿಪೀಠವೆ ಶಕ್ತಿ ಮುಡಿ ಲಿಂಗವೇ ಶಿವನೆನಿಸಿದ್ದಾನೆ. ಓಂಕಾರದಿಂದಲೇ ವೇದಗಳು, ಸ್ವರಗಳು, ಅಷ್ಟೇ ಅಲ್ಲದೆ ಸಕಲ ಸಚರಾಚರ ಜಗವೆಲ್ಲವೂ ಉತ್ಪನ್ನವಾಗಿದೆ. ಲಿಂಗದ ಲಕ್ಷಣವೂ ಇದೇ ಅರ್ಥವನ್ನು ಒಳಗೊಂಡಿರುವುದಾಗಿ ಈಗಾಗಲೇ ಅರಿತಿದ್ದೇವೆ. ಲಿಂಗ ಮತ್ತು ಪ್ರಣವಕ್ಕೆ ಅಭೇದವಿದೆ. ಕೆಳದಿ ಬಸವಪ್ಪ ನಾಯಕ ವಿರಚಿತ ‘ಶಿವತತ್ತ್ವರತ್ನಾಕರ” ದಲ್ಲಿ-“

“ಓಂಕಾರ ಏವ ಲಿಂಗಂ ಸ್ಯಾತ್ ಸರ್ವಕಾರಣಕಾರಣಮ್ |

ಓಮಿತಿ ಬ್ರಹ್ಮ ಪರಮಂ ಲಿಂಗಾಕಾರಂ ಮಹೇಶ್ವರಮ್॥ ೧-೫-೭ ||

“ಸರ್ವಕಾರಣಕ್ಕೆ ಕಾರಣವಾದ ಓಂಕಾರವೇ ಲಿಂಗವು. ಅದುವೇ ಪರಬ್ರಹ್ಮ ಅದುವೇ ಲಿಂಗಾಕಾರದ ಮಹೇಶ್ವರ” ವೆಂದು ಪ್ರತಿಪಾದಿತವಾಗಿದೆ.

ಈ ರೀತಿಯಾಗಿ ಪ್ರಣವರೂಪವು ಈ ಇಷ್ಟಲಿಂಗವು; ಆದುದರಿಂದ ಇದು ಮಂತ್ರಮೂರ್ತಿಯೆನಿಸಿದೆ, ಅದನ್ನು ಪೂಜಿಸಿ ನೀನೂ ಮಂತ್ರಮಯನೂ ಲಿಂಗ ರೂಪನೂ ಆಗೆಂದು ಬೋಧಿಸಿದ ಗುರುವೆ ! ಲಿಂಗರೂಪವನ್ನು ಕರುಣಿಸು.

ತಾರಕ ಕೃತಿ ಮೊದಲಾ | ದಾರು ಕೃತಿಗಳೆ ಲಿಂಗ

 ದಾರು ಸ್ಥಾನದೊಳು-ಆರು ಪ್ರಣವದ ಕೃತಿಯ

ತೋರಿಸಿದೆ ಗುರುವೆ ಕೃಪೆಯಾಗು     ||೧೧೭||

ಪ್ರಣವರೂಪವೇ ಇಷ್ಟಲಿಂಗವೆಂದು ತಿಳಿಸಿ ಪ್ರಣವದ ಸ್ವರೂಪವೇನೆಂಬುದನ್ನು ನಿರೂಪಿಸುತ್ತಾನೆ.

 ಪ್ರಣವವು ಆರು ಆಕೃತಿಗಳಿಂದ ಮೂರ್ತಿಮತ್ತಾಗಿದೆ. ೧. ತಾರಕ ೨. ದಂಡಕ ೩. ಕುಂಡಲ ೪, ಅರ್ಧಚಂದ್ರ ೫ ದರ್ಪಣ ೬. ಜ್ಯೋತಿ ಎಂಬಿವು ಪ್ರಣವದ ಆರಾಕೃತಿಗಳು. ಪ್ರಣವದ ಶಿರಸ್ಸೇ ತಾರಕಾಕೃತಿ, ಪ್ರಣವದ ಕೊರಳು ದಂಡಾಕೃತಿ; ಅದರ ಕೆಳಗಡೆಯ ಮುಡಿಯೇ ಕುಂಡಲಾಕೃತಿ, ಎರಡನೆಯ ಮುಡಿ ಅರ್ಧ ಚಂದ್ರಾಕೃತಿ; ಮಗ್ಗಲದ ಬಿಂದುವೇ ದರ್ಪಣಾಕೃತಿ; ಪ್ರಣವದ ಮೇಲ್ಗಡೆಯ ಕುಡಿಯೇ ಜ್ಯೋತಿರಾಕೃತಿಯು

ತಾರಕ-ದಂಡಕೋಭಯಾಕೃತಿಗಳಿಗೆ ಕ್ರಮದಿಂದ ನಕಾರ-ಮಕಾರಗಳು (ಪ್ರಣವದ ಬೀಜಾಕ್ಷರಗಳು). ಇವೆರಡಕ್ಕೂ ಅ’ಕಾರ ನಾದ ಪ್ರಣವದ ಸಂಬಂಧ ವಾಗುತ್ತದೆ. ಕುಂಡಲ-ಅರ್ಧಚಂದ್ರೋಭಯಾಕೃತಿಗಳಿಗೆ ಕ್ರಮದಿಂದ ಶಿಕಾರ ವಾಕಾರ ಪ್ರಣವಗಳು. ಇವೆರಡಕ್ಕೂ ‘ಉ’ಕಾರ ಬಿಂದು ಪ್ರಣವದ ಸಂಬಂಧವಿದೆ. ಇನ್ನು ದರ್ಪಣ ಮತ್ತು ಜ್ಯೋತಿರುಭಯಾಕೃತಿಗಳಿಗೆ ಕ್ರಮದಿಂದ ಯಕಾರ ಓಂಕಾರ ಪ್ರಣವಗಳು ಇವೆರಡಕ್ಕೂ ‘ಮ” ಕಾರ ಕಲಾ ಪ್ರಣವದ ಸಂಬಂಧವುಂಟು.

 ಪ್ರಥಮಂ ತಾರಕರೂಪಂ ದ್ವಿತೀಯಂ ದಂಡ ಉಚ್ಯತೇ |

ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಮ್‌ ||

ಪಂಚಮಂ ಬಿಂದು ಸಂಯುಕ್ತಂ ಪ್ರಣವಂ ಪಂಚಬ್ರಹ್ಮರಾಟ್||

 ಆರಾಕೃತಿಗಳಿಗೆ ಆರು (ಬೀಜಾಕ್ಷರ ಅಥವಾ) ಪ್ರಣವದ ಸಂಬಂಧವನ್ನು ಶಿವತತ್ತ್ವ ರತ್ನಾಕರದಲ್ಲಿ

 ನಕಾರ ಸ್ತಾರಕಸ್ಥಾನಂ ಮಕಾರೋ ದಂಡಮುಚ್ಯತೇ ।

ಶಿಕಾರಃ ಕುಂಡಲಾಕಾರೋ ವಾಕಾರಾಶ್ಚಾರ್ಧಚಂದ್ರಕಃ ||

ಯಕಾರೋ ಬಿಂದುರೂಪೋ ಯಮೋಂಕಾರಃ ಪಂಚವರ್ಣಕಃ ||        ||೧-೫-೨೦||

ಎಂದು ವಿವರಿಸಿದ್ದಾರೆ.

ಶಿ. ಶಿ. ಬಸವನಾಳರು ಸಂಪಾದಿಸಿದ ಈ ಗುರುಕರುಣ ತ್ರಿವಿಧಿಯಲ್ಲಿ ತಾರಕಾ ಕೃತಿ’ ಎಂಬ ಪಾಠಾಂತರವಿದೆ. ಆಕೃತಿಯೆಂದರೆ ಆಕಾರ; ಕೃತಿಯೆಂದರೆ ಕ್ರಿಯೆಯೆನಿಸುವದು. ಲಿಂಗದಲ್ಲಿ ನಾಮರೂಪವೂ ಇದೆ. ಕ್ರಿಯೆಯೂ ಸಮನ್ವಯ ಗೊಂಡಿದೆ. ಓಂಕಾರದಲ್ಲಿ  ನಾಮ-ರೂಪ-ಕ್ರಿಯೆಗಳಿರುವಂತೆ ಇಷ್ಟಲಿಂಗದಲ್ಲಿಯೂ ಅವುಗಳು ವ್ಯಾಪಿಸಿವೆ. ನಾಮ-ರೂಪ-ಕ್ರಿಯಾತ್ಮಕವಾದ ಈ ಲಿಂಗವು ಸಕಲ ವೆನಿಸಿದೆ. ನಾಮ-ರೂಪ-ಕ್ರಿಯಾ ಶೂನ್ಯವಾದುದು ನಿಷ್ಕಲವೆನಿಸುವದು. ತೋರುವ ಜಗತ್ತು ಈ ಮೂರರಿಂದಲೇ ಆವರಿಸಿಕೊಂಡಿದೆ. ಜಗದಲ್ಲಿ ಕಾಣಿಸಿಕೊಂಡ ನಾಮ- ರೂಪ-ಕ್ರಿಯಾತ್ಮಕನಾದ ಅಂಗನಿಗೆ ಈ ಲಿಂಗವೂ ನಾಮರೂಪಾತ್ಮಕವೆಂದು ಗುರು ನಾಥನು ತತ್ತ್ವದ ತಿರುಳನ್ನು ತಿಳಿಸಿದ್ದಾನೆ.  

 ಸಕಲಕ್ಕೂ ಕಾರಣವೆನಿಸಿದ ಓಂಕಾರವೇ ಲಿಂಗವಾಗಿರುವಂತೆ; ಸಮಸ್ತ ಕಾರ್ಯಗಳಿಗೆ ನಾಯಕನೆನಿಸಿದ ವಿನಾಯಕ ಅಥವಾ ಗಣಪತಿಯ ಆಕಾರವಾದರೂ ಓಂಕಾರ ಮಯವಾಗಿದೆ. ಓಂಕಾರದ ಆ ಆರು ಆಕೃತಿಗಳಿಂದಲೇ ಗಣಪತಿಯ ಆಕಾರದ ಕಲ್ಪನೆಯು ಸ್ಪಷ್ಟವಾಗುವದು. ಗಣೇಶನ ಪೌರಾಣಿಕ ಕಥಾನಕಗಳು ರೋಚಕ ವಾಗಿರಬಹುದು. ತಾತ್ವಿಕ ವಿಚಾರದಲ್ಲಿ ಪ್ರಣವ ಸ್ವರೂಪವು ಪ್ರಕಟವಾಗುವದು. ಕುಂಡಲ ಮತ್ತು ಅರ್ಧಚಂದ್ರಾಕೃತಿಗಳೇ ವಿನಾಯಕನ ಎರಡು ಹುಬ್ಬುಗಳಾದರೆ  ತಾರಕ-ದಂಡಕಾಕೃತಿಗಳು ಸೊಂಡಿಲೆನಿಸಿದೆ. ಮುಖಮಂಡಲವೇ ದರ್ಪಣ,  ಏಕದಂತವೇ ಜ್ಯೋತಿರಾಕೃತಿಯು.  ಆದ್ದರಿಂದಲೇ ವೈದಿಕ ಕಾರ್ಯಗಳಲ್ಲಿ, ವಿದ್ಯಾ ರಂಭಾದಿ ಕೆಲಸಗಳಲ್ಲಿಯೂ ವಿಘ್ನವಿನಾಶವಾಗಲೆಂದು ಓಂಕಾರ ರೂಪಿ ವಿನಾಯಕನ ಪೂಜೆಯಾಗುತ್ತದೆ. ಓಂಕಾರದ ಗೌರವವಾದರೂ ಗಣಪತಿಯ ರೂಪದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆಯೆಂದು ಹೇಳಬಹುದು.

ದೇವನಾಗರಿ ಲಿಪಿಯ ಓಂಕಾರಕ್ಕೂ (ದ್ರಾವಿಡ) ಕನ್ನಡ ಲಿಪಿಯ ಓಂಕಾರಕ್ಕೂ ವ್ಯತ್ಯಾಸವಿಲ್ಲ. ದೇವನಾಗರಿ ಲಿಪಿಯ ಓಂಕಾರವನ್ನು ತಿರುವಿದ (ಹೊರಳಿಸಿದ) ರೂಪವೇ ಗಣಪತಿಯ ರೂಪಾಗಿದೆ. ಒಟ್ಟಿನಲ್ಲಿ ಆರು ಕೃತಿಗಳು ಅದರಲ್ಲಿಯೂ ಇವೆ. ಆರಾಕೃತಿಗಳುಳ್ಳದೇ ಪ್ರಣವವು. ಪ್ರಣವದಿರವೇ ಈ ಲಿಂಗವು. ಇದರರ್ಥವನ್ನು ತಿಳಿಸಿ ಪ್ರತ್ಯಕ್ಷ ತೋರಿಸಿ ರಕ್ಷಿಸಿದವನು ಶ್ರೀಗುರುನಾಥನು. ಮಹಾಜ್ಞಾನಿಯಾದ ಕುಮಾರ ಷಣ್ಮುಖನಿಗೆ ಶಿವನು ಓಂಕಾರದ ಅರ್ಥವನ್ನು ಅದೆಷ್ಟೋ ದಿನಗಳವರೆಗೆ ಹೇಳಿದನೆಂಬುದು ಪೌರಾಣಿಕ ಸತ್ಯಕಥೆಯಾಗಿದೆ. ಓಂಕಾರದ ಮಹತ್ವವು ಮಹತ್ತರವಾದುದು. ಈ ಪ್ರಣವ ಮಂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನವೇ ಲಿಂಗ, ಲಿಂಗವೇ ಪ್ರಣವವು.

 ಓ ಪರಮ ಗುರುವೇ ! ಮಂತ್ರ ಮೂರುತಿಯೇ ನಿರಂಜನ ಪ್ರಭುವೇ | ಪ್ರಣವರೂಪ ಲಿಂಗವನ್ನು ಅನುಸಂಧಾನ ಮಾಡಿ ತತ್ಸ್ವರೂಪಿಯಾಗುವ ಸೌಭಾಗ್ಯ ವನ್ನು ಕರುಣಿಸಿ ಕಾಪಾಡು.

ವೃತ್ತಕಟಿ  ವರ್ತುಳವು | ಮತ್ತೆ ಗೋಮುಖ ನಾಳ

ಚಿತ್ಪೀಠವಾರು ಗೊತ್ತತೋರಿಸಿ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು     || ೧೧೮ ॥

ಪ್ರಣವದ ಆರಾಕೃತಿಗಳಿಂದ ಕೂಡಿ ನಾಮ-ರೂಪ ಕ್ರಿಯಾತ್ಮಕವಾದ ಲಿಂಗವು ಆರು ಸ್ಥಲವುಳ್ಳದಾಗಿದೆ. ಅರ್ಥಾತ್ ಷಡವಯವವನ್ನು ಹೊಂದಿದೆಯೆಂಬುದನ್ನು ವಿವರಿಸುತ್ತ ಆ ಆರುಸ್ಥಲಗಳಲ್ಲಿ ಆರಕ್ಷರಗಳನ್ನು ಸಂಬಂಧಿಸಿ ತೋರಿಸುತ್ತಾನೆ ಶಿವ

ಕವಿಯು. ೧) ವೃತ್ತ,  ೨) ಕಟಿ,  ೩) ವರ್ತುಳ,  ೪) ಗೋಮುಖ,  ೫) ನಾಳ,  ೬) ಚಿತ್ಪೀಠ ಇವು ಆರು ಲಿಂಗದ ಅವಯವಗಳು. ಅಂಗನು ಆರಾದಂತೆ ಲಿಂಗವೂ ಆರಾಗಿದೆ. ಆರು ಸ್ಥಲ (ಅವಯವ) ಗಳನ್ನು ಪಡೆದಿದೆ. ಲಿಂಗ ಷಟ್‌ಸ್ಥಲಗಳಲ್ಲಿ ಮಂತ್ರ ಷಡಕ್ಷರ ಆವರಿಸಿಕೊಂಡಿದೆ. ಮಂತ್ರರೂಪವೇ ಲಿಂಗವೆಂಬುದಾಗಿ ಸದ್ಗುರುನಾಥನು ಶಿಷ್ಯನಿಗೆ ಬೋಧಿಸುತ್ತಾನೆ. ಮಂತ್ರರೂಪವಾದ ಲಿಂಗಾರ್ಚನೆಯಿಂದ ಮಂತ್ರಮಯನಾಗ ಬೇಕೆಂಬುದೇ ಗುರುವಿನ ಉಪದೇಶ.

 ಹಿಂದೆ ತಿಳಿಸಿದ ಲಿಂಗದ ಪಂಚಸೂತ್ರಗಳೂ ಈ ಲಿಂಗ ಷಟ್‌ಸ್ಥಲದಲ್ಲಿ ವ್ಯಕ್ತವಾಗುತ್ತದೆ. ವೃತ್ತವೆಂದರೆ ಕೆಳಗಿನ  ಸುತ್ತಳತೆ ಅಥವಾ ಪರಿಘವೆನ್ನಬಹುದು.  ವೃತ್ತವು  ಪೂರ್ಣತೆಯ ಕುರುಹಾಗಿದೆ. ಕಟಿಯೆಂದರೆ ಲಿಂಗದ ನಡುವು. ಕೆಳಗಿನ ವೃತ್ತ ಮತ್ತು ಮೇಲಿನ ವರ್ತುಳದ ನಡುವಿನ ಸಣ್ಣ ಭಾಗವು. ಮೂರನೆಯದು ಮೇಲಿನ ವರ್ತುಳವು. ಪೀಠವೆನಿಸಿದ ಈ ಕೆಳಭಾಗದಲ್ಲಿ ಲಿಂಗವನ್ನಿಡುವ ರಂಧ್ರವು ನಾಳವೆನಿಸುವದು. ಪೀಠದ ನಾಳದಲ್ಲಿದ್ದ ಪ್ರಕಾಶಮಯವಾದ ಬಾಣರೂಪ ಲಿಂಗವೇ ಚಿತ್ಪೀಠವಾಗಿದೆ. ಈ ರೀತಿಯಾಗಿ ಲಿಂಗದಲ್ಲಿಯ ಆರು ಸ್ಥಲಗಳನ್ನು ಗುರುವರನು ದೀಕ್ಷಾ ಸಮಯದಲ್ಲಿ ವಿವರಿಸಿ ಲಿಂಗವನ್ನು ಕರುಣಿಸುತ್ತಾನೆ. ಅಂಗದಲ್ಲಿ ಷಟ್ ಚಕ್ರಗಳನ್ನು ತಿಳಿಸಿ ಷಡ್ಲಿಂಗಗಳ ಮರ್ಮವನ್ನು ಬೋಧಿಸಿದಂತೆ ಇನ್ನು ಲಿಂಗಗಳ ಷಟ್‌ಸ್ಥಲಗಳಲ್ಲಿ ಮಂತ್ರರಹಸ್ಯವನ್ನು ತಿಳಿಸುವ ಮಾತನ್ನು ಮುಂದಿನ ತ್ರಿಪದಿಯಲ್ಲಿ ಪ್ರತಿಪಾದಿಸುತ್ತಾನೆ.

ಬಾಲ ಬಾರೆಂದೆನ್ನ | ಕೈಲಿ ಲಿಂಗವ ಕೊಟ್ಟು

ಈ ಲಿಂಗದೊಳಗೆ-ಮೂಲ ಷಣ್ಮಂತ್ರವನು

ಕೀಲಿಸಿದ ಗುರುವೆ ಕೃಪೆಯಾಗು       ||೧೧೯ ||

ಕರುಣಾಮಯನೂ, ಜ್ಞಾನಸಾಗರನೂ, ವೈರಾಗ್ಯಪರನೂ ಆದ ಸದ್ಗುರುವಿನ ಸನ್ನಿಧಿಯಲ್ಲಿ ವಯೋಮಾನದಿಂದ ಹಿರಿಯನಾದರೂ ಶಿಷ್ಯನು ಬಾಲಕನೇ.  ಜ್ಞಾನ-ವೈರಾಗ್ಯಗಳ ತುಲನೆಯಿಂದ ಸಣ್ಣವನೇ ಸರಿ.  ಕಿಂಕರತ್ವವನ್ನು ವಹಿಸಿದರೆ ಮಾತ್ರ ಗುರುವಿನಿಂದ ಜ್ಞಾನಕಿರಣ ಹರಿದು ಬರುತ್ತದೆ. ಕೀಳಿಂಗಲ್ಲದೆ ಹಯನ ಕರಯದೆಂದುʼʼ ಅಣ್ಣನವರು ಅನುಭವದ ಅಮೃತವನ್ನೇ ಸುರಿದಿರುವರು. ಶಿಷ್ಯನ ಸದಾಚರಣೆ ಗುರುನಾಥನಿಗೆ ತೃಪ್ತಿಯನ್ನೀಡಬೇಕು. ಆಗ ಗುರುವರನು ಸದಯಾಂತಃ ಕರಣದಿಂದ ಶಿಷ್ಯನನ್ನು ಕಂದನಂತೆ, ಹೇ ಬಾಲ ! ಬಾ ನನ್ನ ಹತ್ತಿರಕೆ; ಬಾಳ ಬಾ; ನಿಜವಾದ ಬಾಳು ಈ ನಿನ್ನ ಕೈಯಲ್ಲಿತ್ತ ಇಷ್ಟಲಿಂಗದಲ್ಲಿದೆ.  ಈ ಲಿಂಗವೇ ಜೀವನ ಸಾಗರವನ್ನು ದಾಟಿಸುವ ದಿವ್ಯಸಾಧನ.  ಲಿಂಗದ ಜ್ಞಾನವೇ ಜೀವನದ ಜೀವಾಳ.  ಕ್ರಿಯಾದಿ ದೀಕ್ಷೆಗಳಿಂದ ನಿನ್ನ ಸ್ಥೂಲ-ಸೂಕ್ಷ್ಮ-ಕಾರಣ ಶರೀರವು ಪವಿತ್ರಗೊಂಡು ಮಂತ್ರಮಯವಾಗಿರುವಂತೆ ಈ ಲಿಂಗದಲ್ಲಿಯೂ ಮೂಲಮಂತ್ರವನ್ನು ಕೀಲಿಸಿರುವೆ.

ಇದೂ ಮಂತ್ರಮಯವಾಗಿದೆ. ನಿತ್ಯ ಲಿಂಗಾರ್ಚನೆ, ಲಿಂಗಾರ್ಪಣ, ಲಿಂಗಾನುಭವಗಳಿಂದ ಶಿವಯೋಗದ ಅಥವಾ ಲಿಂಗಾಂಗಯೋಗದ ಅನುಸಂಧಾನ (ಸಾಕ್ಷಾತ್ಕಾರ) ನಡೆಯಬೇಕು. ಮಹಾನುಭಾವಿಗಳು ಅನುಸರಿಸಿದ ಅನುವಿದಾಗಿದೆ” ಎಂದು ಮುಂತಾಗಿ ಬೋಧಿಸಿ ಕೃಪೆಗೆಯುತ್ತಾನೆ.

ಶಿಲ್ಪಿಯು ಅದೆಷ್ಟು ಸುಂದರವಾಗಿ ಕಲಾಮಯವಾದ ಲಿಂಗವನ್ನು ತಯಾರಿಸ ಬಹುದು. ಆದರೆ ಅದು ಲಿಂಗಾಕಾರದ ಮೂರ್ತಿಯಾದೀತೇ ವಿನಾ ಲಿಂಗವೆನಿಸುವದಿಲ್ಲ . ಗುರುಕರಕಮಲ ಸ್ಪರ್ಶದಿಂದಲ್ಲದೆ ಅದರಲ್ಲಿ ಲಿಂಗಗುಣವು ಮೈದೋರುವ ದಿಲ್ಲ. ಶಿಲಾಭಾವವು ಸರಿಯುವದಿಲ್ಲ.  ಅದುಕಾರಣವೇ ಮಾರಾಟಕ್ಕಿಕ್ಕಿದ ಲಿಂಗವನ್ನು ಧರಿಸುವದರಿಂದ ಲಿಂಗ ಕಳೆಯು ಸಮನಿಸುವದಿಲ್ಲ. ಇಂಥ ಲಿಂಗವನ್ನು ಕಟ್ಟಿಕೊಳ್ಳಲೇ ಬಾರದು. ಅದರಿಂದ ಯಾವ ಪ್ರಯೋಜನವಾಗುವದಿಲ್ಲ. ಇವೆಲ್ಲ ದೋಷಗಳನ್ನು ದೂರೀಕರಿಸುವದಕ್ಕಾಗಿ ಗುರುನಾಥನು ಲಿಂಗದ ಮೇಲೆ ಷಡವಯವಗಳಲ್ಲಿ ಷಣ್ಮಂತ್ರಾಕ್ಷರಗಳನ್ನು ಕೀಲಿಸುತ್ತಾನೆ. ಮಂತ್ರಾಕ್ಷರ ಸಂಸ್ಕಾರದಿಂದ ಮಂತ್ರಾಕ್ಷರನ್ಯಾಸ ದಿಂದ ಶಿಲಾಭಾವದ ಲಿಂಗವು ಮಂತ್ರಮಯವಾಗುವದರಲ್ಲಿ ಯಾವ ಸಂದೇಹವಿಲ್ಲ.

ಚಾರುವೃತ್ತದೊಳಿರ್ಪಾ | ಚಾರಲಿಂಗದೊಳಗೆ ನ

ಕಾರ ಮೊದಲಾದ – ಆರು ಪ್ರಣವದ ನೆಲೆಯ

ತೋರಿಸಿದ ಗುರುವೆ ಕೃಪೆಯಾಗು    ೧೨೦ |

ಶರಣಕವಿಯು ಲಿಂಗದ ಒಂದೊಂದು ಸ್ಥಲದಲ್ಲಿ ಒಂದೊಂದು ಮಂತ್ರಾಕ್ಷರಗಳ ಸಂಬಂಧವನ್ನು ತೋರಿಸುತ್ತ ಹೋಗುತ್ತಾನೆ.

ವೃತ್ತ ಸ್ಥಾನವು ಚಾರುತರವಾದುದು. ಯಾಕಂದರೆ ವೃತ್ತವು ಗೋಲಾಕಾರ ವಾಗಿರುವದು.  ದುಂಡಾಗಿರುವದರಿಂದ ಪರಿಪೂರ್ಣವಾಗಿ ಶೋಭಿಸುತ್ತದೆ.  ಅಂತೆಯೇ ಶಿವಕವಿಯು ವೃತ್ತಕ್ಕೆ ಚಾರು ಪದವನ್ನು ವಿಶೇಷಣವಾಗಿ ಬಳಸಿದ್ದಾನೆ. ಅಲ್ಲದೆ ಪೂರ್ಣವಾದ ಪರಿಘದಲ್ಲಿ ಸಕಲವೂ ಸೇರಿದೆಯೆಂಬ ಭಾವವೂ ವ್ಯಕ್ತವಾಗುವದು. ಈ ವೃತ್ತ ಸ್ಥಾನದಲ್ಲಿರುವ ಲಿಂಗ ಆಚಾರಲಿಂಗವೆನಿಸಿದೆ. ವೃತ್ತವು ಎಲ್ಲ ಸ್ಥಲಗಳಿಗೆ ಆಧಾರವಾಗಿರುವಂತೆ ಆಚಾರಲಿಂಗವು ಎಲ್ಲ ಲಿಂಗಗಳಿಗೆ ಆಶ್ರಯವಾಗಿದೆ.

ಈ ಆಚಾರಲಿಂಗದಲ್ಲಿ ನಕಾರ ಪ್ರಣವ ಪ್ರಕಾಶಮಾನವಾಗಿದೆ. ಇಲ್ಲಿ ‘ನ ʼಕಾರ ಮುಖ್ಯವಾಗಿದ್ದು ಅದರಲ್ಲಿ ಉಳಿದೈದು ಪ್ರಣವಗಳು ಸುಪ್ತವಾಗಿವೆ. ವೃತ್ತ ಪೂರ್ಣವಾಗಿರುವಂತೆ ಆಚಾರವು ಪರಿಪಕ್ವಗೊಂಡರೆ ಮಾತ್ರ ಆಚಾರಲಿಂಗದ ಅರಿವು ಆಗುವದು. ಆ ಮಂತ್ರದ ನೆಲೆ ಸ್ಥಿರವಾಗುವದು.

ಶಿವ ಪಂಚಾಕ್ಷರ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ನ ʼಕಾಲ ಮಂತ್ರಾಕ್ಷರದ ವರ್ಣನೆಯನ್ನು –

ನಾಗೇಂದ್ರ-ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |

ನಿತ್ಯಾಯ ಶುದ್ಧಾಯ ದಿಗಂಬರಾಯ

ಸ್ಮೈ ನಕಾರಾಯ ನಮಃ ಶಿವಾಯ

ಎಂದು ಸುಂದರವಾಗಿ, ಮಾರ್ಮಿಕವಾಗಿ ಹಾಡಿರುವರು. ಇದರಂತೆ ಶ್ರೀರುದ್ರಯಾಮಲತಂತ್ರದಲ್ಲಿ ಉಮಾಮಹೇಶ್ವರ ಸಂವಾದಲ್ಲಿಯೂ ಷಡಕ್ಷರ ಸ್ತೋತ್ರವು ಅರ್ಥ ಪೂರ್ಣವಾಗಿದೆ-

“ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂಗನಾಃ |

ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ” ||

ಮಹಾಮಂತ್ರಕ್ಕೆ ಮಣಿಯದವರಾರು ? ಸಕಲರೂ ಶಿರ ಬಾಗಿಸಲೇಬೇಕಾಗುವದು.

ಜ.ಚ.ನಿ

ಮನೆಯು ಜನಗಳಿಂದ ತುಂಬಿತ್ತು. ಧನಧಾನ್ಯಗಳಿಂದ ಬರಿದಾಗಿತ್ತು. ತಾತ ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮುಂತಾಗಿ ಮನೆಯಲ್ಲಿ ಹತ್ತು ಹನ್ನೆರಡು ಜನರಿದ್ದರು. ಸಂಪಾದನೆ ಯಾವ ಬಗೆಯಲ್ಲಿಯು ಇರಲಿಲ್ಲ. ಅಜ್ಜಂದಿರು ಓದಿಸುತ್ತಿದ್ದ ಸ್ವತಂತ್ರ ಶಾಲೆಯ ಫಲವಾಗಿ ಜನಗಳಿಂದ ವರ್ಷಕ್ಕೊಮ್ಮೆ ಬರುತ್ತಿದ್ದ ಅಲ್ಪಸ್ವಲ್ಪ ಪ್ರಾಪ್ತಿ.  ಅದೇತಕ್ಕೂ ಸಾಲುತ್ತಿರಲಿಲ್ಲ. ಪ್ರತಿನಿತ್ಯ ಭಿಕ್ಷೆಯ ಮಾಡದೆ ವಿಧಿಯಿರಲಿಲ್ಲ. ಈ ಮಧ್ಯೆ ತಂದೆಯವರು ಹಠಾತ್ತಾಗಿ ಶಿವಾಧೀನರಾದದ್ದು ಒಂದು ತುಂಬಿಬಾರದ ಕೊರತೆ. ಕೆಲಸ

ಮಾಡುವವರ ಸಂಖ್ಯೆ ಕಡಿಮೆಯಾಯಿತು. ೧೦೫ ವರ್ಷ ವಯಸ್ಸಿನ ತಾತಂದಿರು ಸಹ ಹಸುವಿಗೆ ಹುಲ್ಲನ್ನು ಕೊಯ್ದು ಇಲ್ಲವೆ ಕೆತ್ತಿ ತರುವ ಕಾಯಕ ಮಾಡಬೇಕಾಯಿತು. ಅಣ್ಣಂದಿರಾದ ಶಿವಬಸವಯ್ಯನವರು ಒಬ್ಬರೆ ತರುವ ಭಿಕ್ಷೆಯಿಂದ ಚರಿತಾರ್ಥ ಸಾಗದಂತಾಯಿತು. ಸದಾಶಿವಯ್ಯನವರು ಭಿಕ್ಷಕ್ಕೆ ಹೋಗುವ ಸರದಿ ಬಂದಿತು. ಹೋಗದಿದ್ದರೆ ವಿಧಿಯಿಲ್ಲದೆ ಹೋಯಿತು. ಒಪ್ಪೋತಿನ ಶಾಲೆಗೆ ತಿಲಾಂಜಲಿ ಬಿಡಬೇಕಾಯಿತು; ಬಿಟ್ಟಾಯಿತು. ಒಪ್ಪತ್ತಿನ ಓದು ಅವರ ಮನಸ್ಸಿಗೆ ತೃಪ್ತಿತರಲಿಲ್ಲ. ಅದೇ ಅವರಿಗೊಂದು ಚಿಂತೆಯಾಗಿತ್ತು; ಚಿತ್ತಚಪಲತೆಯಾಗಿತ್ತು.

ಒಂದು ದಿನ ಬೆಳಗಿನ ಜಾವ. ಎಂದಿನಂತೆ ಎದ್ದು ಮುಖ ತೊಳೆದು ವಿಭೂತಿ ಧಾರಣೆ ಮಾಡಿಕೊಂಡು ಒಂದು ಹಳ್ಳಿಗೆ ಸದಾಶಿವಯ್ಯನವರು ಭಿಕ್ಷಕ್ಕೆ ಹೋದರು. ನಾಲ್ಕಾರು ಮನೆ ಭಿಕ್ಷವಾಯಿತು. ಮತ್ತೊಂದು ಮನೆಯೊಳಕ್ಕೆ ಹೋಗಲು ಮುಂದುವರಿದರು. ಅಷ್ಟರಲ್ಲಿ ಅದೇ ಮನೆಯ ಕಟ್ಟೆಯ ಮೇಲಿದ್ದ ಮುದುಕನೊಬ್ಬನು, ‘ಏನ ಅಯ್ಯಪ್ಪ, ಭಿಕ್ಷೆ ಬೇಡಲು ನೀನೇನು ಮುದುಕನೆ ? ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗ, ಈಗಲೇ ಈ ತಿರುಪೆಗೆ ನಿಂತರೆ ಹೇಗೆ ? ಇನ್ನೂ ನೀನು ಎಷ್ಟು ದಿನ ಬದುಕಬೇಕಾಗಿದೆ ? ಎಷ್ಟು ಜನ ಮಕ್ಕಳು ಮರಿಗಳನ್ನು ಹೆತ್ತು ಸಾಕಬೇಕಾಗಿದೆ ? ಭಿಕ್ಷಾನ್ನದಿಂದಲೇ ಇದೆಲ್ಲ ಹೇಗೆ ಸಾಧ್ಯ ? ವಿದ್ಯೆ ಕಲಿತು ಬುದ್ಧಿವಂತನಾಗದೆ ಸೋಮಾರಿಯಾಗಿ ‘ಭಿಕ್ಷಾಂ ದೇಹಿ’ ಎಂದು ಭಿಕ಼್ಷೆ ಬೇಡುವುದೆ ? ಇನ್ನೊಬ್ಬರಿಗೆ ಹೊರೆಯಾಗಿ ಬಾಳುವುದೊಂದು ಬಾಳೆ ? ಬದುಕುವುದೊಂದು ಬದುಕೆ ? ನೀನು ಜನಿಸದಿದ್ದರೆ ಜಗತ್ತು ಹಾಳಾಗುತಿತ್ತೆ? ಎಂದು ಮುಂತಾಗಿ ಬುದ್ಧಿವಾದ ಬೈಗಳ ಸುರಿಸಿದನು. ಸದಾಶಿವಯ್ಯನವರ ಮೃದುವಾದ ಮನಸ್ಸಿನ ಮೇಲೆ ಆ ಮೊನಚಾದ ಮಾತುಗಳು ಚೆನ್ನಾಗಿ ನಾಟಿದವು. ತಾಳ್ಮೆಗೆಟ್ಟರು. ಅಲ್ಲಿಂದ ಮುಂದಿನ ಮನೆಗೆ ಭಿಕ್ಷಕ್ಕೆ ಹೋಗುವ ಮನಸ್ಸು ಉಳಿಯಲಿಲ್ಲ. ಮೊದಲೆ ವಿದ್ಯಾರ್ಜನೆಗಾಗಿ ತವಕಿಸುತ್ತಿದ್ದ ಮನಸ್ಸು ಮತ್ತಿಷ್ಟು ತವಕಗೊಂಡಿತು. ಹೇಗಾದರೂ ಮಾಡಿ ವಿದ್ಯಾರ್ಜನೆ ಮಾಡಬೇಕೆಂದು ಗಟ್ಟಿಗೊಂಡಿತು. ಹಾಗೆಯೇ ಊರಿಗೆ ಹಿಂದಿರುಗಿದರು. ಬರುತ್ತ ಆ ಮುದುಕನು ಆಡಿದ ಮಾತುಗಳನ್ನು ನೆನೆದು ದುಃಖ ಉಕ್ಕಿತು, ಕಣ್ಣೀರು ಮುನ್ನೀರಾಗಿ ಹರಿಯತೊಡಗಿತು. ಸಮಾಧಾನ ಮಾಡುವರಾರು ? ದಾರಿಯುದ್ದಕ್ಕು ಅತ್ತು ಅತ್ತು ಹೃದಯ ಭಾರವಾಯಿತು. ಬುದ್ಧಿಸಿಮಿತವಿಲ್ಲದಾಯಿತು. ಮನಸಿನ ಮೇಲೆ ಮೂಡಿದ ಮಾತಿನ ಗಾಯ ಮಾಣಲಿಲ್ಲ. ದುಃಖದ ಭರದಲ್ಲಿ ದಾರಿ ಸಾಗಲಿಲ್ಲ. ದಟ್ಟಡಿಯಿಟ್ಟು ನಡೆದಿದ್ದನು. ಹೊತ್ತು ಹೆಚ್ಚಾದರೂ ಅವನಿಗೇನು ಕಾಣಲಿಲ್ಲ. ಚಿಂತೆ ಶೋಕಗಳಲ್ಲಿ ಹೊತ್ತುಗೊತ್ತುಗಳಿಗೆ ಸ್ಥಾನವೆಲ್ಲಿ ? ಅಷ್ಟರಲ್ಲಿ ಊರು ಹತ್ತಿರಕ್ಕೆ ಬಂದಿತು. ಬೆಚ್ಚಿನೋಡಿ ಕಣ್ಣೀರು ಒರಸಿಕೊಂಡು ಬಾಗಿಲ ಬಳಿಗೆ ಬಂದನು. ತಂಗಿಯು ತಂಬಿಗೆಯಲ್ಲಿ ತಂದ ನೀರಿನಿಂದ ಕಾಲುತೊಳೆದು ಒಳಗೆ ಹೋದನು. ಅಕ್ಕನು ಓಡಿ ಬಂದು ಜೋಳಿಗೆಯನ್ನು ನೋಡಿದಳು. ದಿನಕ್ಕಿಂತಲು ಹಿಟ್ಟು ತೀರ ತುಸು ಇದ್ದಿತು. ಅವ್ವಾ, ತಮ್ಮನಿಂದು ಹಿಟ್ಟು ತುಸು ತಂದಿದ್ದಾನೆ ಎಂದು ಕೂಗಿ ಹೇಳಿದಳು. ಆ ಮಾತು ಕೇಳಿ ಅಲ್ಲಿಯೇ ಇದ್ದ ಅಣ್ಣನು, ಅಂಗಡಿಗೆ ಹಾಕಿ ಫಲಾರ (ಫಲಾಹಾರ) ತಿಂದಿರಬೇಕು ಎಂದು ದೂರು ಹೇಳಿದನು.

ತಾಯಿ ನೀಲಾಂಬೆ ಜಳಕ ಮಾಡಿ ಮಡಿಯುಟ್ಟು ಅಡುಗೆಯ ಮನೆಯ ತನ್ನ  ಕೆಲಸದಲ್ಲಿ ತೊಡಗಿದ್ದಳು. ಮಕ್ಕಳ ಮಾತುಗಳ ಕೇಳಿ ಮನಸ್ಸು ತಾಳದೆ ಬಂದು ನೋಡಿದಳು. ಅವರು ಹೇಳಿದಂತೆ ನಿಜವಾಗಿಯೂ ಎಂದಿಗಿಂತ ತೀರ ಕಡಿಮೆಯಾಗಿತ್ತು. ಮಗನ ಮೇಲೆ ತಾಯಿಗೆ ತುಂಬಾ ಮಮತೆಯಿತ್ತಾದರು ಸಂಸಾರ ನಿರ್ವಹಣ ದೃಷ್ಟಿಯಿಂದ ತುಂಬ ಸಿಟ್ಟಿಗೆದ್ದಳು; ಸಾವಿರಾಡಿದಳು. ಗಾಯದ ಮೇಲೆ ಕಾಯ್ದ ಕಂಬಿಯ ಕೀಸಿದಂತಾಯಿತು. ಮೊದಲೆ ಮುದುಕನ ಬಿರಿನುಡಿಗಳಿಂದ ಬೆಂದ ಹೃದಯ ಮತ್ತಿಷ್ಟೂ ನೊಂದಿತು.  ಅಕ್ಕನ ಚಾಡಿ, ಅಣ್ಣನ ಅಪವಾದ, ಅವ್ವನ ಆರ್ಭಟ ಯಾವುದನ್ನು ಸಹಿಸಬೇಕು. ಏನೆಂದು ಸಮಾಧಾನ ಹೇಳಬೇಕು. ಹೇಳಬೇಕೆಂದಿದ್ದರೆ ಬೇಕಾದಷ್ಟಿತ್ತು. ಹೇಳುವ ಮನಸ್ಸು ಮಾಡಲಿಲ್ಲ. ಇದಿರಾಡಲು ಇವನಿಗೆ ಇಷ್ಟವಿಲ್ಲದೆ ಹೋಯಿತು. ಕಷ್ಟವೊದಗಿದಷ್ಟು ಅವನ ಮನ ಪುಟಕ್ಕಿಟ್ಟ ಚಿನ್ನದಂತೆ ಚೊಕ್ಕಟವಾಗ ತೊಡಗಿತ್ತು. ಅಲ್ಲದೆ ಬಾಗಿಲ ಬಳಿ ತಂಗಿ ನೀರು ತಂದು ಕೊಟ್ಟಾಗ ಅವನು ಬರಿ ಕಾಲುಗಳನ್ನೇ ತೊಳೆದಿರಲಿಲ್ಲ. ಜೊತೆಗೆ ಕಾಮಕ್ರೋಧಗಳನ್ನು ತೊಳೆದಿದ್ದನು. ತೊಡೆದು ಹಾಕಿದ್ದನು. ಅದರಿಂದ ಅವನ ಮುಚ್ಚಿದ ತುಟಿ ಎರಡಾಗಲಿಲ್ಲ. ಊಟದ ಆಶೆ ಉಳಿಯಲಿಲ್ಲ. ಏನೂ ತೋಚದಾಯಿತು. ಯಾವುದೂ ಬೇಡವಾಯಿತು. ಸಹಿಸದ ಸಂಕಟದಿಂದ ಮರುಮಾತಾಡದೆ ಮನೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತನು.ಅವನು ಕುಳಿತರೂ ಅವನ ಮನಸ್ಸು ಸುಮ್ಮನಾಗಲಿಲ್ಲ. ಅದು ಚಿಂತೆಗೊಳಗಾಯಿತು. ಇನ್ನು ನಾನು ಇಲ್ಲಿ ಇರುವುದರಿಂದ, ಹೀಗೆ ಕಾಲಕಳೆವುದರಿಂದ ಯಾವ ಪ್ರಯೋಜನವಿಲ್ಲ. ಮಾನಮರ್ಯಾದೆ ಮತ್ತೂ ಇಲ್ಲ. ಎಲ್ಲಿಗಾದರೂ ಹೋಗಿ ಯಾರ ಆಶ್ರಯವನ್ನಾದರೂ ಬೇಡಿ ಓದಿಕೊಳ್ಳಬೇಕು. ಆದರೆ ಎಲ್ಲಿಗೆ ಹೋಗುವುದು ? ಯಾರನಾಶ್ರಯಿಸುವುದು ? ಎಂದು ಎಷ್ಟೋ ಬಗೆಯಾಗಿ ಯೋಚಿಸತೊಡಗಿತ್ತು. ಅಷ್ಟರಲ್ಲಿ ಅಣ್ಣನ ಕೂಗು. ಹೀಗೆ ಸುಮ್ಮನೆ ಮೂಲೆ ಹಿಡಿದು ಕುಳಿತರೇನು ? ಮನೆಗೆಲಸ ಮಾಡುವರಾರು ? ದನದ ಮನೆ ಕಸಗೂಡಿಸಿಲ್ಲ. ಮೈಲಿಗೆಯ ಬಟ್ಟೆಗಳ ತೊಳೆದಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಮಾಡ ಏಳು ! ಎನ್ನಲು ಸದಾಶಿವಯ್ಯನು ಬಟ್ಟೆ ತೊಳೆವುದನ್ನೇ ಒಪ್ಪಿಕೊಂಡು ಬಟ್ಟೆಗಳೊಡನೆ ಬಾವಿಯಿದ್ದಲ್ಲಿಗೆ ಬಂದು ಬಟ್ಟೆಗಳನ್ನು ಹಸನಾಗಿ ತೊಳೆದನು. ಆದರೆ ಮರಳಿ ಮನೆಗೆ ಹೋಗಲು ಮನಸ್ಸಿಲ್ಲ. ಬಡತನದ ಬಾಳಿನಲ್ಲಿ ಇಷ್ಟು ದಿನ ತಮ್ಮ ಮನಸ್ಸಿಗೆ ವಿರೋಧವಾಗಿ ಅದೆಷ್ಟೋ ತಗ್ಗಿ ನಡೆದನು; ಅದೆಷ್ಟೋ ಕುಗ್ಗಿ ನಡೆದನು. ಇನ್ನು ಹಾಗೆ ಇರಲು ಸಾಧ್ಯವಿರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಅವನ ಮನಸ್ಸು ತೀವ್ರವಾಗಿ ಹರಿಯಿತು. ಬೆಳಗಿನಿಂದ ಊಟವಿಲ್ಲದಿದ್ದರು ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಬಟ್ಟೆಗಳನ್ನು ಮನೆಗೆ ಕಳಿಸುವ ಬಗೆ ಹೇಗೆ ? ಎಂದು ಯೋಚಿಸುತ್ತಿರುವಾಗ ನೆರೆಮನೆಯವರೊಬ್ಬರು ನೀರಿಗೆಂದು ಅಲ್ಲಿಗೆ ಬಂದರು. ಅವರನ್ನು ನೋಡಿ ಮನ ಹಿಗ್ಗಿತು. ಉಂಡಷ್ಟು ಸಂತಸವಾಯಿತು. ಮನೆಯಲ್ಲಿ ಕೊಡಹೇಳಿ ತೊಳೆದ ಬಟ್ಟೆಗಳನ್ನು ಅವರ ಕೈಯಲ್ಲಿ ಕೊಟ್ಟನು. ನನ್ನನ್ನು ಕೇಳಿದರೆ ಹಳ್ಳಿಗೆ ಹೋದನೆಂದು ಹೇಳಿ ಎಂದು ತಿಳಿಸಿದನು. ಹಾಗೆಯೇ ಹೊರಟುಬಿಟ್ಟನು. ಸ್ವಲ್ಪ ದೂರ ಹೋದಮೇಲೆ ಹಸಿದಿದ್ದರೂ ಹಂಗಿಲ್ಲದೆ ನಿಟ್ಟೋಟದಿಂದ ಓಡಿದನು. ಏಕೆಂದರೆ ಯಾರಾದರು ಬಂದು ಹಿಂದಕ್ಕೆ ಕರೆದೊಯ್ದಾರೆಂಬ ಭಯ ಅವನಿಗೆ. ಅದರಿಂದಾಗಿ ಬೇಗ ಅವನು ಕಜ್ಜರಿ ಗ್ರಾಮವನ್ನು ಸೇರಿದನು; ಕೊಂಚ ಮನ ಸೈರಣೆಗೊಂಡಿತು.

 ಆಗ ಆ ಊರಿನಲ್ಲಿ ಶಾಲೆ ಉತ್ತಮ ರೀತಿಯಲ್ಲಿದ್ದು ಹೆಸರುವಾಸಿಯಾಗಿತ್ತು. ಅದರಿಂದ ಅಲ್ಲಿ ತನ್ನ ಹೆಚ್ಚಿನ ಅಭ್ಯಾಸ ಆಗುತ್ತದೆಂದು ಆಲೋಚಿಸಿ ಅಲ್ಲಿಗೆ ಬಂದಾಯಿತು. ಆದರೆ ಅವನ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಷ್ಟು ಅಕಿಂಚನನಾಗಿದ್ದನು. ಆಶ್ರಯದ ಮಾತು ಮುಂದೆ ಬಂದಿತು. ಊರಿನಲ್ಲಿ ಯಾರ ಪರಿಚಯವೂ ಇರಲಿಲ್ಲ. ಎಲ್ಲಿ ಯಾರ ಮನೆಗೆ ಹೋಗಿ ಕೇಳುವುದು ? ಸಾಧ್ಯವಾಗದೆ ಹೋಯಿತು. ಹಾಗೆಯೇ ಅದೇ ಊರಿನ ಅರಳಿಕಟ್ಟೆಯ ಮೇಲೆ ಕುಳಿತು ಬಿಟ್ಟನು. ಬೆಳಗಿನಿಂದ ಊಟವಿಲ್ಲ. ಮೈಮೇಲೆ ಸರಿಯಾದ ಬಟ್ಟೆಯಿಲ್ಲ. ಇತ್ತಹಸಿವಿನ ಬಾಧೆ, ಅತ್ತ ಮನಸ್ಸಿನ ವೇಧೆ, ಎರಡನ್ನೂ ಸಹಿಸದೆ ಹೋದನು. ಕಣ್ಣುಗಳಲ್ಲಿ ನೀರೂರಿತು. ಭವಿಷ್ಯತ್ತಿನ ಕಾರ್ಗತ್ತಲೆಯ ಕಪ್ಪುಕಲೆ ಕಂದಿದ ಮುಖದ ಮೇಲೆ ನೆಲೆ ನಿಂತಿತು. ಆ ಸಮಯಕ್ಕೆ ಅದೇ ಊರಿನ ಹಿರಿಯಮಠದ ರಾಚಯ್ಯನವರೆಂಬುವರು ಅಲ್ಲಿಗೆ ಆಕಸ್ಮಿಕವಾಗಿ ಬಂದರು. ಅರಳಿಕಟ್ಟೆಯಲ್ಲಿ ಕುಳಿತು ಅಳುತ್ತಿರುವ ಅಣುಗನ ಮೇಲೆ ಅವರ ದೃಷ್ಟಿ ಹರಿಯಿತು. ಪಡುವ ಅವಸ್ಥೆಯನ್ನು ನೋಡಿ ಆದ್ಯಂತವನ್ನು ಕೇಳಿ ಮನಮರುಗಿ, ಕರಳುಕರಗಿ ಮಠಕ್ಕೆ ಕರೆದೊಯ್ದರು. ಹಸಿದ ಹೊಟ್ಟೆಗೆ ಊಟ ದೊರೆಯಿತು. ಓದಲು ಊರಿನವರಿಂದ ಸಹಾಯ  ಮಾಡಿಸಿಕೊಡುವೆನೆಂಬ ಅಭಯವೂ ಅವರಿಂದ ದೋರೆಯಿತು.  ಕೇಳಿ ಮನಸ್ಸಿಗೆ ನೆಮ್ಮದಿಯಾಯಿತು. ಆ ದಿನ ಸುಖವಾಗಿ ನಿದ್ದೆ ಹೋದನು.

 ಮರುದಿನ ರಾಚಯ್ಯನವರು ಮಾತುಕೊಟ್ಟಂತೆ ಊರಿನಲ್ಲಿ ಹೋಗಿ ಇದ್ದ ಸಂಗತಿಯನ್ನು ಜನರಿಗೆ ಹೇಳಿ ವಿದ್ಯಾಸಹಾಯವೆಂದು ಕೇಳಿ ಹಣ ಶೇಖರಿಸಿದರು. ಬಂದ ಹಣದಲ್ಲಿ ಬಟ್ಟೆ ಓದುವ ಪುಸ್ತಕ ಹಲಗೆ ಬಳಪ ಮುಂತಾದ ಸಾಮಾನುಗಳನ್ನು ತಂದು ಸದಾಶಿವಯ್ಯನವರಿಗೆ ಕೊಟ್ಟು ಶಾಲೆಗೆ ಸೇರಿಸಿದರು. ಅವನ ಧೈರ್ಯದ ಸಾಹಸಕ್ಕೆ ಇಂದು ದಾರಿ ಸಿಕ್ಕಿತು. ಮುಖದ ಮೇಲೆ ಕೃತಜ್ಞತೆಯ ಚಿನ್ಹೆ ಚಿಮ್ಮಿತು. ಸದಾಶಿವಯ್ಯನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅನಿರೀಕ್ಷಿತವಾದ ಈ ಸಹಾಯದಿಂದ ಅವರ ಓದುವ ಉತ್ಸಾಹ ಇಮ್ಮಡಿ ಮುಮ್ಮಡಿಯಾಗಿ ಹೆಮ್ಮಿತು. ಮನಸಿಟ್ಟು ಮತಿಗೊಟ್ಟು ಓದತೊಡಗಿದರು. ಒಂದರಗಳಿಗೆಯನ್ನು ಸಹ ವ್ಯರ್ಥ ಕಳೆಯುತ್ತಿರಲಿಲ್ಲ. ಪಾಠಬರುವವರಿವಿಗೂ ಊಟ ಮಾಡುತ್ತಿರಲಿಲ್ಲ. ಆಟವಾಡುತ್ತಿರಲಿಲ್ಲ. ನೆರವನ್ನು ನಿರರ್ಥಕಮಾಡಿಕೊಳ್ಳಲಿಲ್ಲ. ತನ್ನ ಓದಾಯ್ತು. ತಾನಾಯ್ತು. ಈ ರೀತಿ ಒಮ್ಮನದಿಂದ ಓದಿ ಕೆಲವು ದಿನಗಳಲ್ಲಿಯೆ ಶಾಲೆಯ ಜಾಣ ವಿದ್ಯಾರ್ಥಿಯಾದರು. ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸದ್ಗುಣಗಳಿಂದ ಮಠದವರಿಗೆ ಮುದ್ದು ಹುಡುಗರಾದರು.

 ಈ ಬಗೆಯಾಗಿ ನಾಲ್ಕು ವರ್ಷ ಓದಿದರು. ಏಳನೆಯ ವರ್ಗದ ಅಭ್ಯಾಸವೂ ಕೊನೆಗಂಡಿತು. ಉತ್ತಮವಾಗಿ ಕೊನೆಗಂಡಿತು. ಈ ವರ್ಗದ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎಂದು ಹೆಸರು. ಇದು ಜಿಲ್ಲೆಯ ಕೇಂದ್ರಸ್ಥಳದಲ್ಲಿಯೇ ಜರುಗುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಗೆ ಕುಳಿತುಕೊಳ್ಳಲು ಸದಾಶಿವಯ್ಯನವರು ಮನಸ್ಸು ಮಾಡಿದರು. ಶಿಕ್ಷಕರ ಅನುಮತಿಯನ್ನು ಪಡೆದರು. ಅಸುಂಡಿ ಶಿವನಗೌಡನೆಂಬ ಸಹಾಧ್ಯಾಯಿಯೊಡನೆ ಕಾಲುನಡಿಗೆಯಿಂದ ಧಾರವಾಡಕ್ಕೆ ಬಂದರು. ಪರೀಕ್ಷೆ ಕಟ್ಟಿ ಆಯಿತು, ಕೊಟ್ಟು ಆಯಿತು. ಆದರೇನು ? ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಉದ್ದೇಶವೆ ಬೇರೆಯಾಯಿತು. ಆದದ್ದೆ ಬೇರೆಯಾಯಿತು. ಮಹಾತ್ಮರ ಚರಿತ್ರೆಯೆ ಮರ್ತ್ಯಕ್ಕೆ ವಿಲಕ್ಷಣವಾದುದು, ಮನುಷ್ಯರಿಗೆ ಮೀರಿದುದು ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಎಲ್ಲರಿಗಿಂತಲು ಬುದ್ಧಿವಂತರಾದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವುದೆಂದರೇನು ? ಮನೋನಿಶ್ಚಯಕ್ಕೆ ವಿಪರೀತವಾದ ಫಲಿತಾಂಶ ಸಿಕ್ಕುವುದೆಂದರೇನು ?

 ಸದಾಶಿವಯ್ಯನವರ ಮನಸ್ಸು ಇದರಿಂದಾಗಿ ವಿಶೇಷ ವ್ಯಥೆಗೊಳಗಾಯಿತು. ಕಜ್ಜರಿಯಲ್ಲಿ ಯಾರಿಗೂ ಮುಖ ತೋರದೆ ಮರೆಯಲ್ಲಿಯೇ ಇದ್ದು ಹೋದರು. ಅನ್ನದ ಆಶೆ ಹರಿದರು. ಆನೆಯೆತ್ತರದ ಆಲೋಚನೆಗಳಿಗೆ ಆಗರವಾದರು. ಸ್ನೇಹಿತರು ಶಿಕ್ಷಕರು ಏನೇನೋ ಸಮಾಧಾನ ಹೇಳಿದರು. ಆದರೆ ಒಂದೂ ಪ್ರಯೋಜನ ವಾಗಲಿಲ್ಲ. ಮರಳಿ ಪ್ರಯತ್ನ ಮಾಡಿನೋಡೆಂದರು.ಮನಸ್ಸು   ಮಾಡಲಿಲ್ಲ. ಪೂರ್ತಿ ಮನಃಪರಿವರ್ತನವಾಗಿ ಹೋಗಿತ್ತು. ಎಲ್ಲರ ಹೇಳಿಕೆಗಳಿಗೂ ಅವರ ಆಲೋಚನೆಗೂ ನೆಲಮುಗಿಲ ಅಂತರವಾಯಿತು. ಒಂದಕ್ಕೊಂದು ಮೇಳೆಸುವ ಬಗೆ ಹೇಗೆ ? ಸಾಧ್ಯವಾಗಲಿಲ್ಲ. ಇನ್ನು ಅಲ್ಲಿರಲು ಅವರ ಮನಸ್ಸು ಒಪ್ಪಲಿಲ್ಲ. ಹಾಗೆಯೇ ಹೊರಟು ಅವರ ತಾಯಿಯ ತವರು ಮನೆಯಿದ್ದ ಲಿಂಗದಹಳ್ಳಿಗೆ ಬಂದರು. ತಾಯಿಯ ತವರುಮನೆಯಲ್ಲಿ ನಿಂತರು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಥೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಅನುಭವಗಳೆಲ್ಲ ಲೌಕಿಕವಾದವು. ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ, ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ. ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು, ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.

 ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಹಿತಂ ಮುಖಂ

 ತತ್ವಂ ಪೂಷನ್ನಪಾವೃಣು ಸತ್ಯ ಧರ್ಮಾಯ ದೃಷ್ಟಯೇ

 ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ. ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು ಹೇಳಿರುವುದು.

 ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ. ಅನುಭಾವದಲ್ಲಿ ದೊರೆವ ಆನಂದವೇ ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.

ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ.

ಸ್ವಾನುಭಾವದ ನೆಲೆಯ ನಾನೇನು ಬಲ್ಲೆನೈ

ನೀನೇ ಒಳವೊಕ್ಕು ಏನ ನುಡಿಸಿದೊಡನೆ

ನಾ ನುಡಿವೆ ಗುರುವೇ ಕೃಪೆಯಾಗು.||

ಶಿಲೆಯ ತೆಪ್ಪವ ನೇರಿ ಜಲವ ದಾಟುವೆನೆಂಬ

ಬಲು ಮೂಡತನವ ತೊಳಗಿಸುತ ನೀಎನ್ನ

ಸಲಹು ಶ್ರೀ ಗುರುವೇ ಕೃಪೆಯಾಗು.||

ಕನ್ನಡ ನಾಡಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ್ದು 12 ನೇಯ ಶತಮಾನದ ಶರಣರು, ಮಾನವ ಕುಲವು ಸರಿಸಮಾನವಾಗಿ ಮೇಲು-ಕೀಳು, ಜಾತಿ, ಕುಲ, ವರ್ಣದಿಂದ ಬೇರ್ಪಡಿಸಿ  ಬದುಕಲು ಪ್ರಯತ್ನವನ್ನು ಪಟ್ಟವರು, ಅವರಿಗೆ ಮುಂದಿನವರು ತಮ್ಮ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣನಾಗಿ ಮಹಾದೇವನೊಂದಿಗೆ ಇರಬೇಕು ಸರ್ವರು ಬಂದುತ್ವದಿಂದ ಇರಬೇಕೆಂಬ ಮಹಾದಾಸೆ, ಅದುವೇ ಶರಣ ಜೀವನ. ಶಿವಾನುಭವಿಗಳ ಜೀವನ ಹೇಗಿರಬೇಕೆಂದು ಬದುಕಿ ತೋರಿಸಿ ಕೊಟ್ಟವರಾಗಿದ್ದಾರೆ, ಅವರ ನೆರಳಿನಲ್ಲಿಯೇ 15 ನೇಯ ಶತಮಾನದಲ್ಲಿ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು “ಷಟಸ್ಥಲ ಜ್ಞಾನಸಾರಾಮೃತ”ವನ್ನು ರಚಿಸಿ ತಮ್ಮ ಶಿಷ್ಯ ಸಂಪತ್ತನ್ನು ಸಂಪಾದಿಸಿ ದೇಶ ಸಂಚಾರ ಮಾಡಿ ಹಲವು ಕಡೆಗಳಲ್ಲಿ ಹಲವು ಜನರನ್ನು ಶಿವಾನುಭವಿಗಳನ್ನು ಹುಟ್ಟು ಹಾಕಿದರು, ನಂತರದಲ್ಲಿ  ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಶ್ರೀ ಘನಮಠದಾರ್ಯರು ಕೇವಲ ಭಕ್ತಿಯ ಭಾವದಿಂದ ಹಾಡುಗಬ್ಬ ಪದಗಳನ್ನು‌ ರಚಿಸಲಿಲ್ಲಾ, ಏನೋ ಬರೆಯಬೇಕು ಎಂದು ಬರೆದವುಗಲ್ಲಾ, ತತ್ವ, ಶಾಸ್ತ್ರ, ಆಚಾರ, ಸಿದ್ದಾಂತವನ್ನು ತಾವು ಸಂಪೂರ್ಣವಾಗಿ ಅಳವಡಿಸಿಕೊಂಡು ಇನ್ನಿತರರಿಗೆ ಅಧಿಕಾರ ವಾಣಿಯಿಂದ ಪ್ರತಿಪಾದಿಸಿದ್ದಾರೆ, ಅದೇ ಸಾಲಿನಲ್ಲಿ ಮೈಲಾರ ಬಸವಲಿಂಗ ಶರಣರು ಬರುವರು.

ಶಿವ ಭಕ್ತರಾದ ಬಸವಪ್ಪ ಒಬ್ಬ ವ್ಯಾಪಾರಿ ಶರಣನಾದ ಶ್ರೀ ಬಸವಲಿಂಗ ಶರಣರು ತಾವು ನಿಜಜೀವನದಲ್ಲಿ ನಡೆಸಿದ ಆಚರಣೆ, ಗುರುಗಳ ಮುಖಾಂತರ ತಿಳಿದುಕೊಂಡಿದ್ದಾ ವೀರಶೈವ ಸಿದ್ಧಾಂತ ತತ್ವವನ್ನು,

1) ಷಟಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ.

2) ಗುರು ಕರುಣ ತ್ರವಿಧಿ.

3) ಶಿವಾನುಭವ ದರ್ಪಣ.

4) ಲಿಂಗ ಪೂಜಾ ವಿಧಾನ ಎಂಬ ಗ್ರಂಥಗಳನ್ನು ಸ್ವತಃ ರಚನೆಯಾಗಿದ್ದು ಗುರುವಿನ ಕರುಣೆಯಿಂದ.

ಜನಸಾಮಾನ್ಯರ ನಡೆನುಡಿಯಲ್ಲಿ ವೀರಶೈವ ಸಿದ್ಧಾಂತ ತತ್ವವನ್ನು ಮೂಡಿಸಿಕೊಳ್ಳುವ ದಿವ್ಯ ದರ್ಶನ ನೀಡಿದವರು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಶಿವಾನುಭವ ಸಾರಾಮೃತವನ್ನು ಸ್ವತಃ ನಡೆಸುವುದರ ಮೂಲಕ ಉಪದೇಶವನ್ನು ನೀಡಿದವರಾಗಿದ್ದಾರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ. ನೋಡುಗರ ಕಣ್ಣು ಸೆಳೆಯುವ ಸ್ಥಾನ, ತುಂಗಭದ್ರೆಯು ತುಂಬಿ ಹರಿಯುವ ಮೂಲಕ ಅಲ್ಲಿನ ಪ್ರಕೃತಿಯನ್ನು ಸುಮಧುರವಾಗಿಸಿ ತನ್ನಲ್ಲಿಯೇ ಗುರುಗಳನ್ನು ಕರೆಯಿಸಿಕೊಂಡಿದ್ದಾಳೆಇಲ್ಲಿ ತಪೋನಿಷ್ಟರು ನಡೆದಾಡಿದ ಸ್ಥಾನ, ಶ್ರೀ ಚೆನ್ನವೀರ ಶಿವಯೋಗಿಗಳು ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಹಲವು ಸಾಧಕರಿಗೆ ಮಾರ್ಗದರ್ಶನ ಉಪದೇಶವನ್ನು ಮಾಡಿದವರುಹೊಳಲಿನ ಲಿಂಗಪ್ಪ ಶರಣರು, ಬನ್ನಿಮಟ್ಟಿಯ ಚೆನ್ನಪ್ಪ ಶರಣರು, ಮೈಸೂರು ಪ್ರಾಂತ್ಯದ ಶಿವಬಸವ ಸ್ವಾಮಿಗಳು, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇನ್ನೂ ಹಲವು ಸಾಧಕರು ಇಲ್ಲಿಯೇ ತಮ್ಮ ತಪವನ್ನು ಆಚರಿಸಿ ವಿದ್ಯೆಗೈದಿದ್ದಾರೆ. ಆ ದಿವ್ಯ ಜ್ಯೋತಿ ಪ್ರಕಾಶದಲ್ಲಿ ಬೆಳಗಿದವರು ಅಗ್ರಗಣ್ಯರಲ್ಲಿ ಒಬ್ಬರಾದವರು ಮೈಲಾರದ ಬಸವಲಿಂಗ ಶರಣರು.

ಬಸವಲಿಂಗ ಶರಣರ ಜೊತೆ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳು ಕ್ರಿ. ಶ. 1810-1830 ಇದ್ದು ಸಹಪಾಠಿ ಆಗಿ ಅವರಿಂದಲೇ ಶಾಸ್ರ್ತಾಭ್ಯಾಸವನ್ನು ಮಾಡಿದ್ದರಿಂದ ಚಿಂತಕರು ಹೇಳುವ ಪ್ರಕಾರ ಅವರದ್ದು 18 ನೇಯ ಶತಮಾನದ ಕಡೆಯ ಭಾಗದಲ್ಲಿ ಕ್ರಿ. ಶ. 1780-1800 ಇದ್ದವರು ಎಂದು ತಿಳಿಯಬಹುದಾಗಿದೆ. 

ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡಿನ ಹೆಸರಾಂತ ಮೈಲಾರ ಗ್ರಾಮದವರು, ಮೈಲಾರ ಎಂದೊಡನೆ ನಮ್ಮ ನೆನಪಿಗೆ ಬರುವುದು ಮೈಲಾರಲಿಂಗೇಶ್ವರ, ಈ ದೇವಸ್ಥಾನಕ್ಕೆ ಹೋಗುವ ಎಡಗಡೆ, ದೇವಸ್ಥಾನದ ಹತ್ತಿರವೇ ಬಸವಪ್ಪನ (ಬಸವಲಿಂಗ ಶರಣರು) ಮನೆ ಇದೆ, ಇವರು  ವ್ಯಾಪಾರ ಕಾಯಕವನ್ನು ಮಾಡುತ್ತಿದ್ದ ಮನೆತನದಲ್ಲಿ ಜನಿಸಿದವರು, ಇವರ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಕಂಡು ಬಂದಿಲ್ಲಾ, ತಾತ್ವಿಕವಾಗಿ ಅಧ್ಯಾತ್ಮದ ಹಾದಿಯಲ್ಲಿ ಬರುವ ಸಾಧಕನು ಗುರುಕರಣೆಯನ್ನು ಪಡೆದು ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನು ಮಾಡಿಕೊಂಡು ಗುರುಸಂಬಂಧವನ್ನು ಇಟ್ಟುಕೊಳ್ಳುವುದರಿಂದ ತಂದೆ ತಾಯಿಯ ಹೆಸರನ್ನು ಮುನ್ನೆಲೆಗೆ ತೋಚದೇ ಗುರುವಿನ ಹೆಸರನ್ನು ತೋರುವುದೇ ರೂಡಿಯಲ್ಲಿದೆ, ಅದೇ ಮಾರ್ಗದಲ್ಲಿ ಬಸವಪ್ಪನು ತನ್ನ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಹೇಳದೇ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಅನುಗ್ರಹವನ್ನು ಪಡೆದು ಅವರ ಅಂಕಿತದಲ್ಲಿಯೇ ತನ್ನ ಕೃತಿಯನ್ನು ರಚಿಸಿದ್ದಾರೆ.

ಬಸವಪ್ಪನು ಯಾರಲ್ಲಿ ವಿದ್ಯೆಯನ್ನು ಕಲಿತಿದ್ದಾರೆ ಎಂಬುದು ತಿಳಿಯುವುದಿಲ್ಲ, ಅವರು ಕನ್ನಡದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರು, ಅವರ ಹತ್ತಿರಕ್ಕೆ ಬರುವ ವ್ಯಾಪಾರಿಗೆ ಬೇಕಾದ ವಸ್ತುಗಳನ್ನು ಯೋಗ್ಯವಾದ ಬೆಲೆಗೆ ಮಾರಾಟಮಾಡುವವರಾಗಿದ್ದರು, ಅವರು ಸಮಯವನ್ನು ಕೊಟ್ಟರೇ ಅವರ ಕಷ್ಟ ಸುಖವನ್ನು ವಿಚಾರಿಸಿ ತಕ್ಕ ನೀತಿ ಧರ್ಮವನ್ನು ಹೇಳಿ ಧೈರ್ಯವನ್ನು ಹೇಳಿಕೊಡುವ ಜನಾನುರಾಗಿಯಾಗಿದ್ದರು, ಇವರು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರುಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಂತ ಅವರು ಮಾತಿನಲ್ಲಿ ಬರುವ ತತ್ವ, ನೀತಿ, ಧರ್ಮದ ತತ್ವವನ್ನು, ಧರ್ಮದ ಸಿದ್ದಾಂತವನ್ನು ಕೊಂಡುಕೊಂಡು ಹೋಗಲು ಬಂದವರೇ ಹೆಚ್ಚು.

ಬಸವಪ್ಪನವರು ಯಾರಿಗೂ ವ್ಯಾಪಾರದಲ್ಲಿ ಮೋಸ ವಂಚನೆಯನ್ನು ಮಾಡಿದವರಲ್ಲಾ, ಯಾವುದೇ ಆಸೆ ಆಕಾಂಕ್ಷೆಗಳು ಸಾಸಿವೆಯಷ್ಟು ಇದ್ದಿಲ್ಲಾ, ಅವರು ಎಲ್ಲವನ್ನೂ ಹೊಂದಿದ್ದರು ಗುರು ಲಿಂಗ ಜಂಗಮರ ದಾಸೋಹಿಯಾಗಿದ್ದಾಕೊಂಡು ಬಸವಪ್ಪನು ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಚಿನ್ಮಯ ದೀಕ್ಷೆಯನ್ನು ಪಡೆದು ಬಸವಲಿಂಗ ಶರಣರು ಎಂದಾಗುವರು, ಮನೆಯಿಂದ ಕಿಲೋಮೀಟರ್ ದೂರದಲ್ಲಿದ್ದರೂ ಮನಕ್ಕೆ ಹತ್ತಿರದಲ್ಲಿದ್ದ ಲಿಂಗನಾಯಕನಹಳ್ಳಿಗೆ ಬಂದು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಸಾಮೀಪ್ಯದಲ್ಲಿಯೇ ಹೆಚ್ಚು ಕಾಲ ಇರತೊಡಗಿದರು, ಅವರ ಸಾನಿಧ್ಯದಲ್ಲಿ ಹಲವಾರು ಸಾಧಕರು ಮೊದಲೇ ಇದ್ದವರು ಅವರ ಜೊತೆ ಶಾಸ್ತ್ರ ಚಿಂತನವನ್ನು ಮಾಡುತ್ತಿದ್ದರು, ಖಾವಿದಾರರಿಗೆ  “ನೀವು ಖಾವಿ ಲಾಂಛನದಾರಿಗಳು ನೀವು ಎಷ್ಟು ವೀರಶೈವ ಶಾಸ್ರ್ತಾಭ್ಯಾಸವನ್ನು ಮಾಡಿದ್ದೀರಿ? ನೀವು ಎಷ್ಟು ವೇದಾಂತವನ್ನು ತಿಳಿದಿದ್ದೀರಿ? ಶಿವಾನುಭವವನ್ನು ಎಷ್ಟು ಓದಿದ್ದೀರಿ?” ಎಂದು ಕೇಳಿದಾಗ ಅವರುಗಳು ಉತ್ತಮವಾದ ಉತ್ತರವನ್ನು ಕೊಟ್ಟರೆ ಸರಿ ಇಲ್ಲ ಅಂದರೆ “ಏಕೆ ನೀವು ಜನರನ್ನು ಮೋಸಗೊಳಿಸುವಿರಿ? ಭಕ್ತರ ವಿತ್ತಾಪಹರಣವನ್ನು ಏಕೆ ಮಾಡುವಿರಿ? ಭಕ್ತರೇನೊ ಗುರುಗಳು ಎಂದು ಭಕ್ತಿಯಿಂದ ಬರುವರು ಅವರಿಗೆ ಏಕೆ ಮೋಸವನ್ನು ಮಾಡುವಿರಿ?” ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರು ಹಾದಿಯಲ್ಲಿ ತಪ್ಪಿದಾಗ ತಿದ್ದಿ ಅವರನ್ನು ಚೆನ್ನವೀರೇಶನ ಸೇವೆಯಲ್ಲಿರಿಸಿ ಅವರಿಗೆ ವೀರಶೈವ ಸಿದ್ದಾಂತವನ್ನು, ಶಿವಾನುಭವ, ಷಟಸ್ಥಲ ಸಿದ್ಧಾಂತವನ್ನು ತಿಳಿಸಿ ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪ್ರಬುದ್ಧರಾದಾಗ ಅವರುಗಳಿಗೆ ನಮಸ್ಕರಿಸುವರು, ಹೀಗೆ ಬಸವಲಿಂಗರು ಅಗ್ರಗಣ್ಯರಾಗಿ ಹೆಸರುವಾಸಿ ಆಗುವರು.

ಆದರಿಂದ ಆ ಪ್ರದೇಶವು ವೀರಶೈವರ ಪ್ರಮುಖ ಸ್ಥಾನದಲ್ಲಿ ಒಂದಾಗಿ ಅನೇಕ ಗ್ರಾಮಗಳಲ್ಲಿ ವೀರಶೈವತತ್ವವು ಅಚ್ಚಳಿಯದೆ ಉಳಿದಿದೆ.

ಒಮ್ಮೆ ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ತಮ್ಮ ಮಠಕ್ಕೆ ಯೋಗ್ಯ ಮರಿಯನ್ನು  ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಶ್ರೀ ಮೈಲಾರದ ಬಸವಲಿಂಗ ಶರಣರು ಒಬ್ಬ ದೇವರಿಗೆ ವಿರೋಧ ಮಾಡುವರು ಈ ಮರಿದೇವರು ಮುಕ್ಕಾಗಿದ್ದಾರೆ ಇವರಿಗೆ ಸ್ವಾಮಿಯಾಗಲು ಅರ್ಹರಲ್ಲ ಎಂದು ಕ್ಯಾತೆಮಾಡುವರು, (ಒಮ್ಮೆ ಗುರುಗಳು ಹಾಗೂ ಶಿಷ್ಯರು ದೇಶ ಸಂಚಾರಕ್ಕೆ ಕೈಗೊಂಡಿದ್ದರು ಎಲ್ಲಿಯೋ ಇದ್ದ ನರಿಯು ಬಂದು ಒಬ್ಬ ಮರಿದೇವರ ಕಾಲಿಗೆ ಬಾಯಿ ಹಾಕಿರುತ್ತೆ ಆ ನೋವಿನಿಂದ ಆ ದೇವರು ಚೀರುವರು ಆಗ ಅಲ್ಲಿಯೇ ಇದ್ದ ಗುರುಗಳು “ಅದು ನಮ್ಮ ವಸ್ತು ಬಿಡು”ಎಂದ ಕೂಡಲೇ ಆ ನರಿ ಬಿಟ್ಟು ಹೋಗುತ್ತೆ ಅವರನ್ನೇ ಶ್ರೀ ಚೆನ್ನವೀರ ಶಿವಯೋಗಿಗಳು ಮಠಕ್ಕೆ ಉತ್ತರಾಧಿಕಾರಗಳಾಗಿ ನೇಮಿಸುತ್ತಿದ್ದರು). ಆಗ ಗುರುಗಳು ಏನಪ್ಪಾ ಬಸಪ್ಪ ನೀನು ನಿಜವಾದ ತತ್ವವನ್ನು ಬಲ್ಲಿಲ್ಲವೇ  ಶರಣರು ಹೇಳಿರುವ ಮಾತು ನೆನಪಿಲ್ಲವೇಎಂದು –

ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.

ಸರ್ವಾಂಗ ಲಿಂಗಿಯಾದ ಇವರು ಅರ್ಹರಲ್ಲಾ ಎನ್ನುವೆ ಎಷ್ಟು ಸರಿ ಎಂದು ಕೋಪದಿಂದ “ನೀನು ಬಸಪ್ಪ ಅಲ್ಲಾ ಮುಶಪ್ಪ ಎಂದು ಬೈಯುತ್ತಾರೆ. ಹರ ಮುನಿದರೆ ಗುರು ಕಾಯುವನುಎಂಬ ಉಕ್ತಿಯಂತೆ. ಇಲ್ಲಿ ಗುರುಗಳು ಕೋಪದಿಂದ ಬೈದರು ಕೂಡ ಅವರು ಗುರುತಾಯಿಯಾಗಿ ನಮ್ಮೆಲ್ಲರನ್ನೂ ಸಲಹುವರು, ಮಗನು ತಪ್ಪು ಮಾಡಿದಾಗ ತಾಯಿ ಅವನನ್ನು ಏನೆಲ್ಲಾ ಬೈದರು ಅದೇ ಮಗನು ಹೊರಗೆ ಹೋಗುವಾಗ ಅವನು ಎಡವಿ ಬಿದ್ದು ಅವನ ರಕ್ತ ಕಂಡರೆ ಸಾಕು ಎಂಥಹ ಕಠೋರ ತಾಯಿಯಾದರು ಅವನನ್ನು ಮುದ್ದು ಮಾಡಿ ಅವನ ನೋವು ತನ್ನ ನೋವು ಎಂದು ಪ್ರೀತಿಯನ್ನು ಹಂಚಿಕೊಳ್ಳುವಳು ಅದೇ ರೀತಿ ಇಲ್ಲಿ ಶಿಷ್ಯನನ್ನು ಬೈದರು ಅವನ ತಪ್ಪುಗಳನ್ನು ಮನ್ನಿಸುವವರು ಒಬ್ಬ ಗುರುಗಳು. ಶಿಷ್ಯನಿಂದ ಸಮಾಜದಲ್ಲಿನ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು (ಲಾಭ-ನಷ್ಪ, ನೋವು-ನಲಿವು, ) ವಿಕ್ಷಿಸಿ ತಾನು ಅದರಲ್ಲಿ ಬಾಗಿಯಾಗುವವರು ನಿಜವಾದ ಗುರುಗಳು.

ಪುರಾಣ, ಇತಿಹಾಸದಲ್ಲಿ ಶಿಷ್ಯರುಗಳ ಉದ್ದಾರಕ್ಕೆ ಏನೆಲ್ಲಾ ತ್ಯಾಗವನ್ನು ಗುರುವಾದವನು ಮಾಡಿದ್ದಾನೆ ಎಂಬ ಉದಾಹರಣೆಗಳು ಬಹಳ, ಒಬ್ಬ ಬೇಟೆಯಾಡುವ ಹುಡುಗ ಎಂದು ಭೇಟಿಯಾಗದೇ ಇರುವ ಗುರುವನ್ನು ದೂರದಿಂದಲೇ ಅವನು ತನ್ನ ಶಿಷ್ಯರಿಗೆ ವಿದ್ಯೆಯನ್ನು ಕಲಿಸುವುದನ್ನು ನೋಡಿ ನಾನು ಇದೇ ರೀತಿ ಬಿಲ್ವಿದ್ಯೆಯನ್ನು ಇನ್ನಷ್ಟು ಕಲಿಯಬೇಕೆಂದುಕೊಂಡಿದ್ದನು ಏಕಲವ್ಯ, ಅವನು ದ್ರೋಣಾಚಾರ್ಯರನ್ನೇ ಗುರುಗಳನ್ನಾಗಿ ಸ್ವೀಕಾರ ಮಾಡಿ ಅವರ  ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ತಾನು ಗುರುವಿನ ಮುಂದೆ ವಿದ್ಯೆಯನ್ನು ಕಲಿಯಬೇಕು ಎಂದು ಅದರ ಮೂಲಕವೇ ತಾನು ಬಿಲ್ವಿದ್ಯೆಯನ್ನು, ಶಬ್ದವೇಧಿ ವಿದ್ಯೆಯನ್ನು ಕಲಿತವನು ಏಕಲವ್ಯ, ಅವನು ಬಿಟ್ಟ ಬಿಲ್ಲು ನೀರು ಕುಡಿಯುವ ಶ್ವಾನಕ್ಕೆ ಬೀಳುತ್ತೆ ಅದನ್ನು ನೋಡಿದ ದ್ರೋಣಾಚಾರ್ಯರ ಶಿಷ್ಯರು (ರಾಜಕುಮಾರರು) ಗುರುಗಳ ಬಳಿ ಬಂದು ನಡೆದ ಘಟನೆ ತಿಳಿಸಿ ಬಿಲ್ಲನ್ನು ಬಿಟ್ಟವನು ಯಾರು ಎಂದು ಕಂಡುಹಿಡಿದು, ಅವರೆಲ್ಲರೂ ಯಾರು ನೀನು? ನೀನು ಈ ವಿದ್ಯೆಯನ್ನು ಯಾರಿಂದ ಕಲಿತೇ? ನಿನ್ನ ವಿದ್ಯಾ ಗುರುಗಳು ಯಾರು? ‘ ಎಂದು ಕೇಳಿದಾಗ, ಏಕಲವ್ಯನು ತಾನು ದ್ರೋಣಾಚಾರ್ಯರಿಂದ ಈ ವಿದ್ಯೆಯನ್ನು ಕಲಿತೆ, ದ್ರೋಣಾಚಾರ್ಯರೇ ನನ್ನ ಗುರುಗಳು ಎಂದು ವಾದಮಾಡುವನು, ತಾನು ಯಾವ ವಿದ್ಯೆಯನ್ನು ಇವನಿಗೆ ಹೇಳಿಲ್ಲಾ,ಇವನಾರೂ ಎಂಬುದೇ ಗೊತ್ತಿರಲಿಲ್ಲ, ಆದರೂ ನನ್ನ ಹೆಸರನ್ನು ಹೇಳುತ್ತಿದ್ದಾನೆ, ಎಂದು ವಿಚಾರಿಸಿ, ಭವಿಷ್ಯದ ದೃಷ್ಟಿಯಿಂದ ಧರ್ಮದ ಉಳಿವಿಗಾಗಿ, ದ್ರೋಣಾಚಾರ್ಯರು ತನ್ನ ಉತ್ತಮ ಶಿಷ್ಯನಾದ ಅರ್ಜುನನಿಗೆ ಏಕಲವ್ಯನಿಂದ ಭವಿಷ್ಯದಲ್ಲಿ ಕಾಣುವ ತೊಂದರೆ ಆಗಬಾರದು ಎಂದು. ಅವನಿಂದ ಗುರುಕಾಣಿಕೆಯನ್ನು ಅವನ ಬಲಗೈಯ ಹೆಬ್ಬೆರಳು ಕೇಳುವರು, ಇಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕೇಳಿದ ಕಾಣಿಕೆ ಭೇಧ ಭಾವದ,ಸ್ವಾರ್ಥ ಉದ್ದೇಶಗಳ ಸಂಕೇತವಾದರೆ, ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಬಸವಲಿಂಗರ ಮೇಲಿನ ಸಿಟ್ಟು ಗುರುತಾಯಿಯಂತೆ, ಅವನಿಂದ ಧರ್ಮಕ್ಕೆ ಲಾಭದಿಂದಲೇ ಶಿಕ್ಷಕೊಟ್ಟಿದ್ದು ಅದರಿಂದಲೇ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯನ್ನು ರಚಿಸಿದ್ದು, ನಮ್ಮಿಂದ ಏನಾದರೂ ಕೆಲಸವಾಗಬೇಕಾದರೆ ಅದಕ್ಕೆ ಕಾರ್ಯ,ಕಾರಣ, ಸದ್ಭಾವ ಇದ್ದೆ ಇರುತ್ತದೆ, ಬಸವಲಿಂಗರ ಕೃತಿಗಳು ಸದ್ಭಾವದಿಂದಲೇ ರಚನೆಯಾದದ್ದು.

ಗುರುಗಳ ಆಜ್ಞೆಯಂತೆ ದಿನಗಳೆದಂತೆ ದಿನಗಳೆದಂತೆ ಬಸವಲಿಂಗ ಮುಖವು ಮುಶ್ಯದ ಹಾಗೆ (ಆ ಭಾಗದಲ್ಲಿ ಕಪ್ಪು ಬಣ್ಣದ ಮುಂಭಾಗಕ್ಕೆ ಮುಶ್ಯ ಎಂದು ಕರೆಯುವರು) ಕಪ್ಪು ಮುಖದ ಮಂಗನ ಹಾಗೆ ಬದಲಾಗುತ್ತೆ ಹೋಗುತ್ತೆ ಅದರ ತಪ್ಪಿಗಾಗಿ ವೀರಶೈವ ಧರ್ಮದ ಸಂಪೂರ್ಣ ತತ್ವವನ್ನು ಹೇಳುತ್ತಾ ಶಿಕ್ಷೆಯ ನಿವಾರಣೆಗೆ, ಗುರುವಿನ ಕರುಣೆಯನ್ನು ಪಡೆಯುವ ಸಲುವಾಗಿ ರಚಿಸಿದ್ದೆ – ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ). ಬಸವಲಿಂಗ ಶರಣರು ತಮ್ಮ ಅಮೋಘವಾದ ಜ್ಞಾನಬಂಡಾರದಿಂದ, ವಿದ್ವತ್ತು, ತೌಲನಿಕ, ಅನುಭವ ಸಂಪತ್ತಿನಿಂದ ಜ್ಞಾನದ ಹನಿಯನ್ನು ಉದಯಿಸಿ, ಏಕ ಕಾಲಕ್ಕೆ 333 ತ್ರಿಪದಿಯನ್ನು ರಚಿಸಿದರು. ಇದರಲ್ಲಿ ಸಮಗ್ರ ವೀರಶೈವ ಲಿಂಗಾಯತ ದಾರ್ಶನಿಕ ಸಿದ್ಧಾಂತವು ಒಳಗೊಂಡಿದೆ, ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಾಮುಖ್ಯತೆ ಇದರಲ್ಲಿ ಅಡಕವಾಗಿದೆ, ಒಂದಕ್ಕೊಂದು ಆಚರಣೆಗೆ ಹೇಗೆ ಸಮನ್ವಯಗೊಳ್ಳುತ್ತವೆ ಎಂಬುದನ್ನು ಈ ಎರಡು ಸಾಲಿನಲ್ಲಿಯೇ ಬಿತ್ತಿದ್ದಾರೆ, ಈ ತ್ರಿಪದಿಯಲ್ಲಿ ಪ್ರಯೋಗಿಸಲ್ಪಟ್ಟಾ ಯಾವ ಶಬ್ದವೂ ಅನಾವಶ್ಯಕವಾಗಿ ಪ್ರಯೋಗಿಸಿಲ್ಲಾ ಎಲ್ಲವೂ ಅರ್ಥಪೂರ್ಣವಾಗಿ ತನ್ನ ಸಿದ್ಧಾಂತವನ್ನು ತಿಳಿಸುತ್ತವೆ. ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಅದರಿಂದಲೇ  ಹೆಮ್ಮರವಾಗಿ ಬೆಳೆಯುವ ಹಾಗೆ ಈ ಚಿಕ್ಕ ತ್ರಿವಿಧಿಯನ್ನು ಅಖಂಡ ಸಿದ್ಧಾಂತವೇ ಅಡಕವಾಗಿದೆ.

ಗುರು ಕರುಣ ತ್ರಿವಿಧಿಯಲ್ಲಿ ಮೂರು ಮೂರು ಸಾಲಿನ 333 ತ್ರಿಪದಿಯ ಕೊನೆಯಲ್ಲಿ ಶ್ರೀ ಗುರುವೇ ಕೃಪೆಯಾಗು‘, ಎಂದು ಮುಕ್ತಾಯಗೊಳ್ಳುವುದರಿಂದ ಇದು ಕೇವಲ ಶ್ರೀಗುರು ಪ್ರಾರ್ಥನಾ ತ್ರಿಪಧಿಯಂದು ತಿಳಿಯುವರು ಅದರಲ್ಲಿ ವೀರಶೈವ ತತ್ವಸಿದ್ದಾಂತವನ್ನೊಳಗೊಂಡಿದೆ, ಮೇಲು ನೋಟಕ್ಕೆ ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ) ಅಷ್ಟಾವರಣ ಪ್ರತಿಪಾದಿಸುವ ಕೃತಿ ಎಂದು ಕಂಡರು ಒಳಹೊಕ್ಕು ನೋಡಿದಾಗ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಆಚರಣೆಗೆ ಪೂರಕವಾಗಿ ಸಮನ್ವಯಗೊಂಡಿರುವ ಮಾರ್ಗ, ಅಂಗ, ಪ್ರಾಣ, ಆತ್ಮಗಳಾದ ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಬಿಟ್ಟಿರಲಾರದಷ್ಟು ಜೀವರಸ ಒಂದೇ ಅದೇ ಲಿಂಗಾಂಗ ಸಾಮರಸ್ಯವೀರಶೈವರ ಕೊನೆಯಗುರಿಯೇ ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು, ಅಂಗನು ಲಿಂಗದಲ್ಲಿ ಬೆರೆತು ಲಿಂಗಾಂಗ ಸಾಮರಸ್ಯ ಪಡೆಯುವನು, ಇದೆ ಕೊನೆಯ ಅನುಭವ ಅಥವಾ ಈ ಅನುಭವವೇ ಕೊನೆಯದುಒಮ್ಮೆ ಉಂಟಾದ ಪರಶಿವನ ಅನುಭವವು ಕೊನೆಯ ತನಕ ಇಟ್ಟುಕೊಂಡು ಜೀವಿಸುವವನೇ ಶಿವಾನುಭವಿ ಎನ್ನಲಾಗುತ್ತದೆ, ವೀರಶೈವನ ಚರಮಗುರಿಯಾದ ಶಿವಾನುಭಾವ ಹಾಗೂ ಲಿಂಗಾಂಗ ಸಾಮರಸ್ಯವನ್ನು ಪಡೆಯಲು ಅಷ್ಟಾವರಣ ಪಂಚಾಚಾರದೊಂದಿಗೆ ಷಟಸ್ಥಲಾಚರಣೆಯೇ ಸರಿಯಾದ ಮಾರ್ಗವೆಂದು ಬಸವಲಿಂಗರ (ವೀರಶೈವರ) ನಂಬಿಗೆ ಇದನ್ನೇ ಬಸವಲಿಂಗ ಶರಣರು ತಮ್ಮ ಕೃತಿಗಳಲ್ಲಿ ಬಹಳ ವಿವರಗಳನ್ನು ಕೊಟ್ಟು  ವಿಸ್ತಾರವಾಗಿ ವಿಧವಿಧವಾಗಿ ಪ್ರತಿಪಾಸಿದ್ದಾರೆ. ಇದನ್ನೇ ತ್ರಿವಿಧಿಗಳು ಒಳಗೊಂಡಿರಬೇಕು ಒಂದನ್ನು ಬಿಟ್ಟು ಇನ್ನೊಂದು ಇದ್ದರೆ ಅದು ಚರಮಗುರಿಗೆ ಹೊರಗಾಗುತ್ತೇ, ಮೂರು ಕೂಡಿಯೇ ನಡೆಯಬೇಕು, ಯಾವಾಗಲೂ ಕೂಡಿಯೇ ಇರಬೇಕು ಅದರಲ್ಲಿ ದ್ವೈತದೃಷ್ಟಿಇರಬಾರದು ಶಿವಾದ್ವೈತದೃಷ್ಟಿರಬೇಕು, ಖಂಡದೃಷ್ಟಿಅಲ್ಲಾ ಅಖಂಡ ದೃಷ್ಟಿ, ಪರಿಪೂರ್ಣ ದೃಷ್ಟಿ. ಈ ಶಿವಾದ್ವೈತ ದೃಷ್ಟಿಗಳು ವೀರಶೈವ ಸಿದ್ಧಾಂತ ಸಂಸ್ಕೃತಿಯ ಪ್ರಧಾನಲಕ್ಷಣವೆಂದು ಅರಿತು ಶ್ರೀ ಮೈಲಾರ ಬಸವಲಿಂಗ ಶರಣರು ಅಷ್ಟಾವರಣಗಳಲ್ಲಿ ಪ್ರಥಮದಲ್ಲಿ ಬರುವ ಗುರುವನ್ನು ಶ್ರೀ ಗುರುವೇ ಕೃಪೆಯಾಗು‘ , ‘ಶ್ರೀ ಗುರುವೇ ಕೃಪೆಯಾಗುಎಂದು ಪ್ರಾರ್ಥಿಸುತ್ತಾ, ಷಡಚಕ್ರಗಳ ವಿವರಣೆಎಲ್ಲಾ ಯೋಗಗಳಲ್ಲಿ ಶಿವಯೋಗವೇ ಮಿಗಿಲು, ಅಷ್ಟಾವರಣಗಳಾದ ಗುರು, ಲಿಂಗ, ಜಂಗಮರ ಲಕ್ಷಣವನ್ನು, ಮಹಿಮೆಯನ್ನು, ವಿಭೂತಿ ರುದ್ರಾಕ್ಷಿಗಳನ್ನು ಯಾವ ರೀತಿ ಧರಿಸಬೇಕು, ಎಲ್ಲೆಲ್ಲಿ ಧರಿಸಬೇಕು, ಮಂತ್ರದ ವಿಶೇಷತೆ ಅದರಲ್ಲಿ ಯಾವ ಮಂತ್ರ ವೀರಶೈವರು  ಜಪಿಸಬೇಕು, ಹೇಗೆ ಇರಬೇಕು ಎಂಬುದನ್ನುಪಾದೋದಕ, ಪ್ರಸಾದಗಳಲ್ಲಿನ ವಿಧಗಳು, ಅದರ ಮಹತ್ವವನ್ನು, ಅಣಿಮಾಧಿಸಿದ್ದಿಗಳ  ವಿಶೇಷವಾಗಿ ವಿವರಣೆಯನ್ನು ನೀಡುತ್ತಾ ವೀರಶೈವ ಸಿದ್ದಾಂತವನ್ನೆ ಅತೀ ಕಡಿಮೆ ಅಕ್ಷರಗಳನ್ನು ವಿವರಿಸಿದ್ದಾರೆ,

ನಿರಾಭಾರಿ ಗುರುವನ್ನು ಸ್ತುತಿಗೈದು ಸಾಬಾರಿ ಗುರುವಿನ ಸ್ವರೂಪ, ಮಹತ್ವ, ಅವನ ಅವಶ್ಯಕತೆ ಏನಿದೆ ಎಂದು ತಿಳಿಸಿದ್ದಾರೆ, ಗುರು ಕೃಪೆಯು ಆಗಬೇಕಾದರೆ ಗುರು ದೀಕ್ಷೆ ಪಡೆದು ಲೌಕಿಕ ತಂದೆ ತಾಯಿಯವರಾದ, ಬಂದು ಬಳಗವನ್ನು ತ್ಯಜಿಸಿ ಎಲ್ಲವನು ಗುರುವಿನಲ್ಲಿಯೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ, ಸದ್ಗುರುವೇ ಸರ್ವಸ್ವ ಎಂದು ಅವನನ್ನೇ ಆರಾದಿಸಿದಾಗ ಅವನು ಕೃಪೆಯು ಆಗುತ್ತದೆ ಎಂದು ತಿಳಿಸಿದ್ದಾರೆ. ಶಿಷ್ಯನ ಲಕ್ಷಣ ಹೇಗೆ ಗುರುವಿನಲ್ಲಿ ವರ್ತಿಸಬೇಕು, ಗುರುವಾದವನ ಲಕ್ಷಣ ಅವನ ಸ್ವರೂಪ ಗುರು ಶಿಷ್ಯರ ಸಂಬಂಧವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ, ಈ ಮಾನವ ಜೀವಿಯೂ ಹುಟ್ಟಿ ಎಡರು ಕಂಟಕಗಳಿಂದ ಸುಖಾಸುಮ್ಮನೆ ವ್ಯರ್ಥವಾಗಿ ಹೋಗುವುದನ್ನು, ಆಸೆಯಿಂದ ಮಾಯೆ ಬಂದು ಮಾಯೆಯ ಉಪಟಳಕ್ಕೆ ಈ ಶರೀರ ಹೋಗುವುದನ್ನು, ಪಂಚಭೂತಗಳ ಭಯವನ್ನು ಪಂಚಿಕರಣದಿಂದಲೇ ಶರೀರ ಆದದ್ದು, ಪಂಚಭೂತಮಯವಾದ ಶರೀರದ ಇಂದ್ರಿಯಗಳನ್ನು, ದೇಹವಿಕಾರದ ಅರಿವನ್ನು ಮಾರ್ಮಿಕವಾಗಿ ನುಡಿದಿದ್ದಾರೆ, ಅಷ್ಟಮಧಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವುದು ಗಾಳಿಗೆ ಇಕ್ಕಿದ ಸೋಡರು, ಜ್ಞಾನೇಂದ್ರಿಯಗಳ  ಪರಿಚಯವನ್ನು ಮಾಡುವಾಗ ಕೆಲವೊಂದು ತೀರ್ಥಕ್ಷೇತ್ರ ದರ್ಶನವನ್ನು ಮಾಡಿಸುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು, ಅಂತಃಕರಣ ಚತುಷ್ಟಯಗುಣತ್ರಯವನ್ನು ನೀಡಿದ್ದಾರೆ, ಸಂಸಾರ ಬಂಧನದಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ, ಸಂಸಾರಹೇಯ ಸ್ಥಲದ ತ್ರಿಪದಿಯನ್ನುವೀರಶೈವ ಸಿದ್ಧಾಂತ ತಿಳಿಸುವ ತ್ರಿಪದಿಗಳನ್ನು ಅದೆಷ್ಟೋ ಒಳಹೊಕ್ಕು ನೋಡಿದರು ಸಮುದ್ರದ ಆಳದಂತೆ ಕಾಣುತ್ತದೆ,

ಶ್ರೀ ಗುರುವೇ ಸತ್ಕ್ರಿಯೆಯಾಗರವೇ ಸುಜ್ಞಾನ

ಸಾಗರವೇ ಎನ್ನ ಮತಿಗೆ ಮಂಗಳವನಿತ್ತು

ರಾಗದಿಂ ಬೇಗ ಕೃಪೆಯಾಗು

       ಎಂದು ಗುರುಕೃಪೆಯನ್ನು ಬೇಡುತ್ತಾ .

ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.

       ದೇವನೊಲಿದರೆ  ಕಣ್ಣು ಇರಲಾರದವನಿಗೆ ಕಣ್ಣು ಬರುವಹಾಗೆ, ಕಿವಿಕೇಳಲಾರದವನಿಗೆ ಕಿವಿ ಕೇಳುವಹಾಗೆ, ವಿಷವೆಲ್ಲಾ ಅಮೃತ ಆಗುವಹಾಗೆ, ಆಸಾಧ್ಯವು ಸಾಧ್ಯವಾಗುವವು ಎನ್ನುವ ಬಸವವಾಣಿಯ ತಾತ್ಪರ್ಯವನ್ನೆ ಬಸವಲಿಂಗ ಶರಣರು ಚಿತ್ರಿಸಿದ್ದಾರೆ –

ಕೊರಡು ಕೊನರುವುದು ಬಲುಬರಡು ಹಯನಾಗುವುದು

ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ

ಎಂದರಿದೆನೈ ಗುರುವೇ ಕೃಪೆಯಾಗು.

ಮಾನಸವು ವಚನ ಸಂಧಾನವಾಗಿರ್ಪ ಮ

ಹಾನುಭಾವದ ಸುಜ್ಞಾನ ಮಂತ್ರದ ನಿಜವೇ

ನೀನೆಂದ  ಗುರುವೇ ಕೃಪೆಯಾಗು,

ಗುರು ಲಿಂಗ ಚರತೀರ್ಥ ಚಿರಶೇಷ ಭಸಿತಾಕ್ಷಿ

ವರಮಣಿಮಂತ್ರಾಷ್ಟವರಣ ನಿನ್ನಂಗವೆಂ

ದೊರದ ಶ್ರೀ ಗುರುವೇ ಕೃಪೆಯಾಗು

ಎನ್ನುತ್ತಾ

ಎಲ್ಲವನ್ನು ಒಳಗೊಂಡಿರುವ ಮದ್ಗುರುವೆ,

ನೀನು ಅಷ್ಟಾವರಣವೇ ಅಂಗವೆಂದು

ಹೇಳಿಕೊಟ್ಟ ಗುರುವೇ ಕೃಪೆಯಾಗು.

ಬಸವ ಬಾರೆಂದನೆಗೆ ಅಸಮಲಿಂಗವೆ ನೀನೆಂ

ದುಸುರಿದಬಳಿಕ ಬಸವಲಿಂಗನೆ ಎಂದು

ಪೆಸರಿಟ್ಟಾ ಗುರುವೇ ಕೃಪೆಯಾಗು

ಬಸವಪ್ಪ ಇದ್ದವಾ ನಾನು ನಿನ್ನ ಕೃಪಾದೃಷ್ಠಿಯಿಂದ ನೀನು ನನ್ನನ್ನು ಬಸವಲಿಂಗವೆಂದು ಹೆಸರನ್ನು ಇಟ್ಟಾ ಗುರುವೇ ಕೃಪೆಮಾಡು ಎಂದು ಬಿನ್ನವಿಸಿಕೊಂಡು,

ವೀರಶೈವರ ಪಂಚಾಚಾರ ಷಟಸ್ಥಲ ಮಾರ್ಗೋ

ದ್ದಾರ ನಿಜ‌ಸುಖದ ಸಾರ ನಡೆ ನುಡಿ ಚೆನ್ನ

ವೀರ ಮದ್ಗುರುವೆ ಕೃಪೆಯಾಗು.

ಎನ್ನುತ್ತಾ ಸಮಾಪ್ತಿಮಾಡುವರು.

ಬಾಹ್ಯಾರಚನೆಯ ಅಷ್ಟಾವರಣಗಿಂತ ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವವನಿಗೆ  ಶೂನ್ಯಸಂಪಾದನೆ ಆಗುವುದು ಎಂದು ಸಮರೋಪಗೊಳಿಸುವರು, ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಕೃಪೆಯಿಂದ ಶರಣನಾಗಿ ಗುರುಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೊಳಿಸುವುದರ ಮೂಲಕ ಗುರು ಕರುಣ ತ್ರಿವಿಧಿಯಲ್ಲಿ ಕ್ರಮಬದ್ಧವಾದ ವೀರಶೈವ ಸಿದ್ಧಾಂತ ತತ್ವವನ್ನು  ಪ್ರತಿಪಾದಿಸಿದ್ದಾರೆ, ಶೂನ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಸಾಧಕರಿಗೆ ಸ್ವಾನುಭಾವದಿಂದ ನಡೆಯುವವನಿಗೆ ಅತ್ಯುತ್ತಮ ಸಾಧನವಾಗಬಹುದಾಗಿದೆ.

ಶರಣನು ಗುರು ಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತ ಶಾಸ್ತ್ರವನ್ನು ಹೊತ್ತು ಸರಳವಾಗಿ ಪರಿಚಯಿಸುವ ಒಂದು ಗ್ರಂಥವಾಗಿದೆ, ತ್ರಿಪದಿಗಳನ್ನು ಬರೆದು ಸರ್ವಜ್ಞನು ತಾನು ವಚನಗಳನ್ನು ರಚಿಸಿ ಸಮಾಜದ ಎಲ್ಲಾ ಅಂಕುಡೊಂಕು, ತತ್ವ, ನೀತಿ ಧರ್ಮವನ್ನು ಹೇಳಿದ ಹಾಗೆ  ಶರಣರು ರಚಿಸಿದ ಮೂರು ಮೂರು ಸಾಲಿನ ಪದಗಳಿಂದ ಜೋಡಿಸಿ ಧರ್ಮತತ್ವವನ್ನು ನಡೆನುಡಿಯನ್ನು‌ ಏಕಿಕರಿಸಿಕೊಂಡು ಅವರು ತ್ರಿಪದಿಗಳನ್ನು ರಚಿಸಿದ್ದಾರೆ, ತ್ರಿವಿಧ ಎಂದರೆ ಮೂರು ವಿಧ ಎಂದರ್ಥ, ಇದರಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ವಿವರಣೆಯೊಂದಿಗೆ ಹೇಳಲ್ಪಟ್ಟಿದೆ, ಸಾಹಿತ್ಯದಲ್ಲಿ ತ್ರಿಪದಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದವುಗಳಾಗಿವೆ, 12ನೇಯ ಶತಮಾನದಲ್ಲಿ ಕೆಲವು ಶರಣ ಶರಣಿಯರು ತ್ರಿಪದಿಯಲ್ಲಿ ತಮ್ಮ ವಿಚಾರ ತತ್ವವನ್ನು ಹೇಳಿದ್ದಾರೆ, ಜಾನಪದ ಸಾಹಿತ್ಯವು, ಸರ್ವಜ್ಞನ ವಚನಗಳು ಹೀಗೆ ಹಲವು ಕವಿಗಳು ತ್ರಿಪದಿಯನ್ನು ರಚಿಸಿದ್ದಾರೆ ಮೈಲಾರದ ಬಸವಲಿಂಗ ಶರಣರು ಗುರು ಕರುಣ ತ್ರಿವಿದಿಯನ್ನು ರಚಿಸಿ ತತ್ವ ವಿಚಾರವನ್ನು ಮಂಡಿಸಿಕೊಟ್ಟು ಗುರುವಿನ ತಕ್ಕ ಶಿಷ್ಯನಾಗಿ ಗುರು ಸ್ತೋತ್ರ, ಗುರು ಮಹತ್ವವನ್ನು ತಿಳಿಸಿ ವೀರಶೈವ ಧರ್ಮದ ತತ್ವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ತಿಳಿಸಿ, ಪಾರಾಯಣ ರೂಪದಲ್ಲಿ ಕೃತಿಯನ್ನು ರಚಿಸಿದ್ದಾರೆ.

-ಜಿ. ಎಸ್. ಶಿವರುದ್ರಪ್ಪ

ದೇವಸ್ಥಾನಗಳು ಭಾರತೀಯರ ಸಾಮಾಜಿಕ-ಧಾರ್ಮಿಕ-ಅಧ್ಯಾತ್ಮಿಕ ಜೀವನದ ಕೇಂದ್ರವಾಗುತ್ತ, ಶತಶತಮಾನಗಳಿಂದ ವಿವಿಧ ಧರ್ಮಗಳವರ ಸಾಮುದಾಯಿಕ ಬದುಕನ್ನು ನಿಯಂತ್ರಿಸುವ ಹಾಗೂ ರೂಪಿಸುವ ಸತ್ವಗಳಂತೆ ವರ್ತಿಸಿವೆ. ಜತೆಗೆ, ಕಾವ್ಯ, ಚಿತ್ರ, ಶಿಲ್ಪ, ಸಂಗೀತ, ನೃತ್ಯ ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ನೆಲೆಯೂ ಆಗುತ್ತ ಸಂಸ್ಕೃತಿಯ ಸಂವರ್ಧನೆಯಲ್ಲಿ ಇವುಗಳು ವಹಿಸುತ್ತ ಬಂದಿರುವ ಪಾತ್ರವು ಗಣನೀಯವಾದದ್ದು. ಪ್ರಾಚೀನ ಕರ್ನಾಟಕದಲ್ಲಂತೂ ಇವುಗಳ ನಿಯೋಗವು ಬಹುಮುಖವಾದದ್ದು. ಕೆಲವು ವೇಳೆ ಯತಿಗಳ ಹಾಗೂ ಧರ್ಮ ಗುರುಗಳ ಮಠಗಳಾಗಿ ದ್ದವು. ಜನರ ಧಾರ್ಮಿಕ ಅನನ್ಯಕತೆಯ ಅರವಟ್ಟಿಗೆಗಳಾಗಿದ್ದವು. ಸಮಾಜದ ಸಂಸತ್ತಿನ ಸಂಚಯನ ಹಾಗೂ ವಿತರಣೆಯ ಭಾಂಡಾರಗಳಾಗಿದ್ದವು; ನ್ಯಾಯಾಲಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು . ವಿವಿಧ ಕಲಾ ಚಟುವಟಿಕೆಗಳ ಆಶ್ರಯ ಸ್ಥಾನವಾಗಿ

ದ್ದವು: ಬಹುಜನಕ್ಕೆ ಉದ್ಯೋಗವನ್ನು ಕಲ್ಪಿಸುವ ಸಾಧನಗಳೂ ಆಗಿದ್ದವು. ಇಂಥ ಮಹತ್ವದ ‘ಸಂಸ್ಥೆ’ಗಳನ್ನು, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ಪ್ರಕರ್ಷಗೊಂಡ “ವೀರಶೈವ’ವೆಂಬ ಸಾಮಾಜಿಕ-ಧಾರ್ಮಿಕ ಚಳುವಳಿ ಯೊಂದು ಮೊಟ್ಟ ಮೊದಲನೆ ಬಾರಿಗೆ ನಿರಾಕರಿಸಿತೆಂಬುದು ಅತ್ಯಂತ ಮಹತ್ವದ ಹಾಗೂ ಆಶ್ಚರ್ಯದ ಒಂದು ಘಟನೆಯಾಗಿದೆ. ಪರಂಪರಾಗತವಾಗಿ ಜನರ ಬದುಕಿನೊಂದಿಗೆ ಬೆಸೆದುಕೊಂಡು ಬಂದ ದೇವಸ್ಥಾನವೆಂಬ ಸಂಸ್ಥೆಯನ್ನು, ನಿಜವಾದ ದೈವ ಭಕ್ತರೂ, ಧರ್ಮಶ್ರದ್ಧೆಯುಳ್ಳವರೂ ಆದ ಈ ಶಿವಶರಣರು ಮೊಟ್ಟ ಮೊದಲು ವೈಚಾರಿಕ ಚಿಕಿತ್ಸೆಗೆ ಒಳಪಡಿಸಿ ಅದನ್ನು ಅಧ್ಯಾತ್ಮಿಕ ನೆಲೆಯಲ್ಲಿ ಪುನರ್‌ ವ್ಯಾಖ್ಯಾನಿಸಿದ ರೀತಿ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯಲ್ಲಿ ಇದು ಮೇಲು ನೋಟಕ್ಕೆ ದೇವರನ್ನು ಧರ್ಮವನ್ನು ಒಪ್ಪಿಕೊಂಡು ‘ದೇವಸ್ಥಾನ’ವನ್ನು ನಿರಾಕರಿಸುವ ನಿಲುವಿನಂತೆ ತೋರಿದರೂ, ಮೂಲತಃ ‘ದೇವಾಲಯ’ದ ಕಲ್ಪನೆಯನ್ನೆ ಈ ಶರಣ ಧರ್ಮ, ತಾನು ಕಟ್ಟಿದ ಹೊಸ ಧರ್ಮದ ತಾತ್ವಿಕ ನೆಲೆಯಲ್ಲಿ ಪುನಾರಚನೆಗೊಳಿಸಿದ

ಕ್ರಮ ಅತ್ಯಂತ ವೈಚಾರಿಕವಾದುದಾಗಿದೆ ಹಾಗೂ ಅದರ ಸಾಮಾಜಿಕ ಕ್ರಾಂತಿಯ ಆಶಯಕ್ಕೆ ಉಚಿತವಾದುದಾಗಿದೆ.

ಹಾಗೆ ನೋಡಿದರೆ ವಚನಕಾರರಿಗೆ ಹಿನ್ನೆಲೆಯಾದ ಭಾರತೀಯ ಶೈವ ಧರ್ಮವಾಗಲಿ ಅವರಿಗೆ ಮನೋಧರ್ಮದಲ್ಲಿ ಹತ್ತಿರವಾದ ತಮಿಳುನಾಡಿನ ಅರವತ್ತು ಮೂವರು ಪುರಾತನರ ನಿಲುವಾಗಲೀ ದೇವಸ್ಥಾನ ಕೇಂದ್ರಿತವಾದದ್ದು. ವಚನಕಾರರು ಅತ್ಯಂತ ಗೌರವದಿಂದ ಸ್ಮರಿಸುವ ತಮಿಳುನಾಡಿನ ಈ ಶಿವಭಕ್ತರು ಮುಖ್ಯವಾಗಿ ಸ್ಥಾವರ ಲಿಂಗದ ಆರಾಧಕರು. ಹೀಗಾಗಿ ಅವರ ಭಕ್ತ ಜೀವನಕ್ಕೆ ದೇವಸ್ಥಾನಗಳು ಅನಿವಾರ್ಯ ವಾದವುಗಳು – ಆದರೆ ವಚನಕಾರರು ಅಥವಾ ಶಿವಶರಣರು, ದೇವರನ್ನೂ, ಭಕ್ತಿ ಯನ್ನೂ ಒಪ್ಪಿಕೊಂಡು, ದೇವಸ್ಥಾನವನ್ನು ನಿರಾಕರಿಸಿದ್ದು ಯಾಕೆ? ಅದಕ್ಕೆ ಮುಖ್ಯವಾದ ಕಾರಣ, ಈಗಾಗಲೆ ಎಲ್ಲರೂ ಬಲ್ಲಂತ, ವೀರಶೈವವು ದೇವರ ಕಲ್ಪನೆಯನ್ನು ದೇವಸ್ಥಾನದಿಂದ ಮನುಷ್ಯನ ಶರೀರಕ್ಕೆ ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಸ್ಥಳಾಂತರಗೊಳಿಸಿದ್ದೇ ಆಗಿದೆ. ಇದು ನಿಜಕ್ಕೂ ಮಹತ್ವದ ಬದಲಾವಣೆಯೇ, ದೇವರು ಎಲ್ಲೆಲ್ಲಿಯ ಇದ್ದಾನೆ. ಆತ ಸರ್ವಾಂತರ್ಯಾಮಿ ಎಂಬ ಭಾವನೆಗೆ, ದೇವರು ದೇವಸ್ಥಾನದಲ್ಲಿ  ಇದ್ದಾನೆ ಎಂದು ತಿಳಿಯುವ ಹಾಗೂ ನಡೆದುಕೊಳ್ಳುವ ಕ್ರಮ ಒಂದು ವಿರೋಧಾಭಾಸ ದಂತೆ ತೋರಿರಬೇಕು. ಆದರೆ ಕೊಂಚ ವಿಚಾರಮಾಡಿ ನೋಡಿದರೆ, ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂಬ ಭಾವನೆಗೆ, ದೇವಸ್ಥಾನಗಳ ಅಸ್ತಿತ್ವ ಯಾವ ರೀತಿಯಲ್ಲಿಯ ಅಸಂಬದ್ಧವಾಗುವುದಿಲ್ಲ. ಯಾಕೆಂದರೆ ಎಲ್ಲೆಲ್ಲಿಯೂ ಇರುವ ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂದು ತರ್ಕಿಸಲು ಸಾಧ್ಯ. ಆದರೆ ‘ದೇವರು ಎಲ್ಲೆಲ್ಲಿಯೂ ಇದ್ದಾನೆ’ ಎಂಬ ಕಲ್ಪನೆ ಅಮೂರ್ತವಾದದ್ದು, ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂಬ ಕಲ್ಪನೆ ಮೂರ್ತಿವಾದದ್ದು, ದೇವರ ಅಮೂರ್ತಿವಾದ ಕಲ್ಪನೆ ಎಲ್ಲರಿಗೂ ಅನುಭವಕ್ಕೆ ಸುಲಭ ಸಾಧ್ಯವಲ್ಲದ ಕಾರಣ, ಸಾಮಾನ್ಯ ಬಹುಸಂಖ್ಯಾತರಿಗೆ ದೇವಸ್ಥಾನ ಅತ್ಯಂತ ಅಗತ್ಯವಾದವುಗಳು-ಅವರ ಧರ್ಮ ಶ್ರದ್ಧೆಗೆ, ನಿಜವಾದ ಅನುಭಾವಿಗಳು ದೇವರನ್ನು ಮೂರ್ತಿದಲ್ಲಿ ಎಂತೋ, ಹಾಗೆಯೇ ಅಮೂರ್ತದಲ್ಲೂ ಅನುಭವಿಸಬಲ್ಲರು. ಅವರ ಪಾಲಿಗೆ ದೇವರ ಆಕಾರ ಎಷ್ಟು ಸತ್ಯವೋ, ಅದರ ನಿರಾಕಾರವೂ ಅಷ್ಟೇ ಸತ್ಯ. ಇದನ್ನು ವಚನಕಾರರು ಬಲ್ಲರು. ಆದರೆ ಎಲ್ಲರೂ ಮೂರ್ತಾಮೂರ್ತಗಳ ನೆಲೆಯಲ್ಲಿ ಸಂಚರಿಸಬಲ್ಲ ಅನುಭಾವಿಗಳಲ್ಲ. ಕೇವಲ ಭಕ್ತಿಯ ನೆಲೆಯಲ್ಲಿ ಬದುಕುವ ಬಹುಸಂಖ್ಯಾತ ಭಕ್ತ ಜನರ ಪಾಲಿಗೆ, ತಮಗೆ ಇಷ್ಟ’ವಾದ ದೈವದ ಆಕಾರದಲ್ಲಿ ಪೂಜಿಸಲು ದೇವಸ್ಥಾನ ವೆಂಬ ಒಂದು ನೆಲೆ ಬೇಕೆ ಬೇಕು. ಆದರೆ ವಚನಕಾರರು ಮಾಡಿದ್ದೆಂದರೆ, ಬಹುಸಂಖ್ಯಾತರ ಭಕ್ತಿಗೆ, ಅದುವರೆಗೂ ಆಲಂಬನದ ನೆಲೆಯಾಗಿದ್ದ ದೇವಸ್ಥಾನವನ್ನು, ನಿರಾಕರಿಸಿ, ದೇವರ ಹಾಗೂ ದೇವಸ್ಥಾನದ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದ್ದಲ್ಲದೆ, ಅದನ್ನು ಒಪ್ಪಿಕೊಳ್ಳುವಂತಹ ಒಂದು ಮನಃಸ್ಥಿತಿಯನ್ನೂ ನಿರ್ಮಾಣ ಮಾಡಿದ್ದು.  

ವೀರಶೈವದ ‘ದೇವರ ಕಲ್ಪನೆ’ ಮೂಲತಃ ಪರಂಪರಾಗತವಾದ ‘ದೇವರ’ ಕಲ್ಪನೆಯಿಂದ ಭಿನ್ನವಾದದ್ದು. ಒಂದೆಡೆ ಪುರಾಣೋಕ್ತವಾದ ಶಿವನ ಮೂರ್ತಿ ಪೂಜೆ ಮತ್ತು ಶಿವನ ಸಂಕೇತವಾದ ಲಿಂಗ (ಸ್ಥಾನಕಲಿಂಗ) ಪೂಜೆ-ಈ ಎರಡು ರೂಪ ಗಳನ್ನು ದೇವಸ್ಥಾನ ಸಮೇತ ನಿರಾಕರಿಸಿ, ದೇವತ್ವ ಕಲ್ಪನೆಯ ಸಾಂಕೇತಿಕ ರೂಪವಾಗಿ ಇಷ್ಟಲಿಂಗವನ್ನು ಸ್ವೀಕರಿಸಿ ತಮ್ಮ ಕೊರಳಲ್ಲಿ ಕಟ್ಟಿಕೊಂಡರು . ಈ ಅರ್ಥದಲ್ಲಿ ಇಷ್ಟಲಿಂಗ, ರೂಪವೂ ಅಲ್ಲ, ಅರೂಪವೂ ಅಲ್ಲ. ಅದರ ಬದಲು ಅದು ನಿರಾಕಾರಕ್ಕೆ ಅತ್ಯಂತ ಸಮೀಪವಾದ ಒಂದು ಸಂಕೇತ ಮಾತ್ರ. ಹೀಗೆ ದೇವರ ಕಲ್ಪನೆಯನ್ನು ದೇವಾಲಯದಿಂದ ಮತ್ತು ಅದರ ಪೌರಾಣಿಕ ಹಿನ್ನೆಲೆಗಳಿಂದ ಬಿಡಿಸಿ ಮನುಷ್ಯನ  ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ ಮನುಷ್ಯನ ಶರೀರವನ್ನೇ ದೇವಸ್ಥಾನ ವನ್ನಾಗಿ ಮಾಡಿದ್ದಲ್ಲದೆ ಆ ಕಾರಣದಿಂದ ಮನುಷ್ಯತ್ವಕ್ಕೆ ಒಂದು ಘನತೆ-ಗೌರವವನ್ನು ವಚನಕಾರರು ತಂದುಕೊಟ್ಟರೆಂಬುದು ತೀರ ಮಹತ್ವದ ಸಂಗತಿಯಾಗಿದೆ.

ದೇಹವೇ ದೇವಾಲಯವೆಂಬ ಕಲ್ಪನೆಯನ್ನು ಹಾಗೂ ಇಷ್ಟಲಿಂಗ ನಿಷ್ಠೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ವಚನಕಾರರು, ದೇವಸ್ಥಾನಗಳನ್ನೂ, ಅದಕ್ಕೆ ಸಂಬಂಧಿಸಿದ ವಿವಿಧ ವಿಧಿಗಳನ್ನೂ, ಆಚರಣೆಗಳನ್ನೂ, ಅತ್ಯಂತ ತೀವ್ರವಾಗಿ ನಿರಾಕರಿಸಿದ್ದರ ಹಿಂದೆ  ಇರುವ ಉದ್ದೇಶಗಳೂ ಹಾಗೂ ಅದರ ಪರಿಣಾಮಗಳೂ ಬಹುಮುಖವಾದವುಗಳಾಗಿವೆ. ಮೊದಲನೆಯದಾಗಿ ಕರ್ನಾಟಕದ ಅಂದಿನ ಪರಿಸರದಲ್ಲಿ ಹಲವು ಧಾರ್ಮಿಕ ಸೆಳೆತಗಳೂ, ಬಹುದೇವತಾರಾಧನೆಯ ಪದ್ಧತಿಗಳೂ, ಸಾಮಾಜಿಕವಾದ ತರತಮಗಳೂ, ಜನರ ಬದುಕನ್ನು ಒಂದು ರೀತಿಯಲ್ಲಿ ವಿಘಟನೆಗೆ ಒಳಗೂಡಿಸಿದ ಸಂಗತಿಗಳಾಗಿದ್ದವು. ಹೀಗೆ ವಿಘಟನೆಗೊಂಡ ಬದುಕನ್ನೂ ಹಾಗೂ ಮನಃಸ್ಥಿತಿಯನ್ನು ಒಂದು ಸಂಘಟನೆಯ ಕೇಂದ್ರಕ್ಕೆ ತರುವ ಪ್ರಯತ್ನದಲ್ಲಿ ಬಹುದೇವತಾರಾಧನೆಯನ್ನೂ,

ಹಾಗೂ ದೇವಸ್ಥಾನಗಳನ್ನೂ ನಿರಾಕರಿಸುವುದು ಹೊಸ ಶರಣ ಧರ್ಮದ ಅವಶ್ಯಕತೆಯಾಗಿತ್ತು. ಆದಕಾರಣ ವಚನಕಾರರು ‘ಹಾಳುಮೊರಡಿಗಳಲ್ಲಿ, ಊರದಾರಿಗಳಲ್ಲಿ ಕೆರೆ ಬಾವಿ ಹೊಗಿದು ಮರಂಗಳಲ್ಲಿ, ಗ್ರಾಮ ಮಧ್ಯಗಳಲ್ಲಿ, ಚಾಸಧ ಪಟ್ಟಣ ಪ್ರದೇಶಗಳಲ್ಲಿ  ಹಿರಿಯಾಲದ ಮರದಲ್ಲಿ ಮನೆಯಮಾಡಿ’ (ವ ೫೫ ಬಸವಣ್ಣ ) ಜನರ ನಂಬಿಕೆಗಳನ್ನು ಹಿಡಿದು ಪೂಜೆಗೊಳ್ಳುತಿದ್ದ ಬಹು ಸಂಖ್ಯಾತ ಕ್ಷುದ್ರ ದೇವತೆಗಳನ್ನು “ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ” (ವ ೫೬೧ ಬಸವನಾಳ) ಎಂದು ಪೂಜಿಸುವ ಪ್ರವೃತ್ತಿಗಳನ್ನೂ, ಆಗಲೇ ನೆಲೆನಿಂತ ದೇವಾಲಯಗಳಿಗೆ ದಾನ-ದತ್ತಿಗಳನ್ನು ಬಿಡುವ, ಹೊಸ ದೇವಸ್ಥಾನಗಳನ್ನು ಕಟ್ಟಿಸಿ ಲಿಂಗ ಪ್ರತಿಷ್ಠೆ ಮಾಡಿಸುವ ʼಉಳ್ಳವರʼ ಧಾರ್ಮಿಕ ಕಾರ್ಯಗಳನ್ನು ಖಂಡಿಸಿ ಸಮಾಜದ ಮನಸ್ಸನ್ನು ‘ಏಕದೈವ’ ಕೇಂದ್ರಕ್ಕೆ ತಂದ್ದದೆಂಬುದು, ಸಾಮಾಜಿಕವಾಗಿ ಕೂಡಾ ಮಾತ್ರವಲ್ಲ ಧಾರ್ಮಿಕವಾಗಿಯೂ ಸಂಘಟನೆ’ಯ ದೃಷ್ಟಿಯಿಂದ ಬಹುಮುಖ್ಯವಾದ ಹೆಜ್ಜೆಯಾಗಿದೆ ಮತ್ತು ಏಕದೈವವಾದ ಶಿವ.. ಇಷ್ಟಲಿಂಗ’ ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೆ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ. ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡ ತಾವೆಲ್ಲರೂ ವರ್ಣವರ್ಗಗಳ ತರತಮವಿಲ್ಲದೆ ಅಧ್ಯಾತ್ಮಿಕವಾಗಿ ಸಮಾನರು…ಎಂಬ ಧರ್ಮಶ್ರದ್ಧೆ ಹಾಗೂ ಸಮಾನತೆಯ ಭಾವನೆಯನ್ನು ಮತ್ತು ಆತ್ಮಪ್ರತ್ಯಯವನ್ನು ಮೂಡಿಸಿದ್ದು ದೇವಾಲಯ ನಿರಾಕರಣೆಯ ನಿಲುವಿನ ಪರಿಣಾಮವಾಗಿದೆ. ದೇವಾಲಯ ನಿರಾಕರಣೆಯಿಂದ ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ ಈ ವಿಧಾನದಿಂದ, ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ‘ಪೂಜಾರಿ’ಯ ಮಾಧ್ಯಮನನ್ನು ನಿರಾಕರಿಸಿ, ಭಕ್ತಿ ಎನ್ನುವುದು ಭಕ್ತ ಹಾಗೂ ಭಗವಂತನ ನಡುವಣ ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನ- ಎನ್ನುವ ಭಾವನೆಯನ್ನು ಪ್ರತಿಪಾದಿಸುತ್ತದೆ.

 ಎರಡನೆಯದಾಗಿ, ಶರಣ ಧರ್ಮದ ಪರಿಸರದಲ್ಲಿ ಆಗಲೇ ನೆಲೆನಿಂತ ದೇವಾಲಯ ಸಂಸ್ಕೃತಿ ಮುಖ್ಯವಾಗಿ ʼಉಳ್ಳವರ’ ಹಾಗೂ ಉಚ್ಚವರ್ಗದವರ ಸ್ವತ್ತಾಗಿದ್ದು ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅವರನ್ನು ಶೋಷಣೆಗೆ ಗುರಿಪಡಿಸುವ ಸಾಧನವಾಗಿತ್ತು. ಅದಕ್ಕೂ ಮಿಗಿಲಾಗಿ ಸಮಾಜದ ಕೆಳವರ್ಗದ ಬಹು ಸಂಖ್ಯಾತರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಲಾಗಿತ್ತು. ವಚನಕಾರರು ಈ ಪ್ರವೃತ್ತಿಯನ್ನು ‘ದೇವಾಲಯ ನಿರಾಕರಣೆ’ಯ ಮೂಲಕ ಪ್ರತಿಭಟಿಸಿದ ಕ್ರಮ ತೀರಾ ವಿಶಿಷ್ಟವಾಗಿದೆ. ಈ ಹೊತ್ತು ಕೆಲವರಿಗೆ ಅನ್ನಿಸಬಹುದು ಹೀಗೆ ದೇವಾಲಯವನ್ನು ನಿರಾಕರಣೆ ಮಾಡದೆ ವಚನಕಾರರು, ಸಂಘಟಿತವಾಗಿ ದೇವಾಲಯ ಪ್ರವೇಶವನ್ನೆ ಒಂದ ಚಳುವಳಿಯನ್ನಾಗಿ ಮಾಡಿಕೊಂಡು ಅದರ ಮೂಲ ಒಂದು ಸಾಮಾಜಿಕ  ಕ್ರಾಂತಿಯನ್ನೆ ಮಾಡಬಹುದಾಗಿತ್ತಿಲ್ಲ ಎಂದು.  ಆದರೆ ಕೊಂಚ ವಿಚಾರ ಮಾಡಿ ನೋಡಿದರೆ, ದೇವಾಲಯ ಪ್ರವೇಶಕ್ಕೆ ಚಳುವಳಿ ಮಾಡುವುದಕ್ಕಿಂತ, ದೇವಾಲಯವನ್ನು ನಿರಾಕರಿಸುವುದು ಹೆಚ್ಚು ದಿಟ್ಟತನದ ಹಾಗೂ ವೈಚಾರಿಕ ನಿಲುವಿನ ಕ್ರಾಂತಿಯಾಗಿದೆ ಮತ್ತು ಈ ಹೊತ್ತಿಗೂ ಇದು ಅತ್ಯಂತ ಪ್ರಸ್ತುತವಾದ ಸಂಗತಿಯಾಗಿದೆ. ಯಾಕೆಂದರೆ ದೇವಾಲಯ  ಪ್ರವೇಶಕ್ಕೆ ಹೊಡೆದಾಡಿ ಪ್ರವೇಶ ಗಿಟ್ಟಿಸುವುದರಿಂದಾಗುವ ಪರಿಣಾಮಗಳಿಗಿಂತ, ದೇವಸ್ಥಾನವನ್ನೇ ನಿರಾಕರಿಸುವುದರಿಂದ ಆಗುವ ಪರಿಣಾಮಗಳು ತೀರಾ ವ್ಯಾಪಕವೂ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಕವೂ ಆಗಿವೆ ಮತ್ತು ಆಗುತ್ತಿವೆ ಎಂಬುದನ್ನು ಗುರುತಿಸಿ ಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಿಂದ ನೋಡಿದರೆ ‘ದೇವಸ್ಥಾನ ನಿರಾಕರಣೆ’ ಮುಖ್ಯವಾಗಿ ಪುರೋಹಿತ ಷಾಹೀ ಪ್ರವೃತ್ತಿಗೆ ಹಾಗೂ ಅಧಿಕಾರ ಷಾಹೀ ವ್ಯವಸ್ಥೆಗೆ ತೋರಿದ ಮೊದಲ ಪ್ರತಿಕ್ರಿಯೆಗಳಾಗಿವೆ. ಹಾಗೆ ನೋಡಿದರೆ ಈ ದೇಶದ ಚರಿತ್ರೆಯಲ್ಲಿ ಪುರೋಹಿತರು ಮತ್ತು ಅಧಿಕಾರಷಾಹಿಗಳನ್ನು ಬೇರ್ಪಡಿಸಿ ನೋಡುವುದು ಕಷ್ಟ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳೂ, ಒಂದೇ ಖಡ್ಗದ ಎರಡು ಭಾಯಿಗಳೊ ಎಂದು ಹೇಳಬಹುದು. ದೇವಸ್ಥಾನ ಮಠ ಹಾಗೂ ಅರಮನೆಗಳು ಇರವುಗಳ ಕೇಂದ್ರಗಳು. ವಾಸ್ತವವಾಗಿ ದೇವಾಲಯಗಳು ಅಭಿವೃದ್ಧಿ ಹೊಂದಿದ್ದು ಬ್ರಾಹ್ಮಣ ಕ್ಷತ್ರಿಯ, ಪುರೋಹಿತಷಾಹಿ ಹಾಗೂ ರಾಜರ ಪರಸ್ಪರ ಸಹಕಾರ ಸಹಯೋಗಗಳಿಂದ ಮತ್ತು ಈ ವರ್ಗದವರ ರುಚಿ ಅಭಿರುಚಿಗಳೇ ದೇವಾಲಯಗಳ ವ್ಯವಸ್ಥೆಯನ್ನೂ ರಚನೆಯನ್ನೂ ನಿಯಂತ್ರಿಸಿದವುಗಳು. ದೇವಾಲಯಗಳ ಪ್ರತಿಮಾ ವಿಧಾನವು ಮಧ್ಯ ಕಾಲೀನ ರಾಜರ ಅರಮನೆಗಳ ಜೀವನ ವಿಧಾನದ ಮಾದರಿಗಳ ಮೇಲೆ ರೂಪುಗೊಂಡದ್ದಾಗಿದೆ. ದಕ್ಷಿಣ ಭಾರತದ ಹಲವು ದೇವಾಲಯಗಳಂತೂ ಅವುಗಳ ವಿಸ್ತಾರ ವೈಭವಗಳಲ್ಲಿ ಆರಮನೆಗಳನ್ನು ನೆನಪಿಗೆ ತರುವಂತಿವೆ. ದೇವಾಲಯದ ಗೋಪುರವು ರಾಜತ್ವದ ಶಕ್ತಿಯ ಪ್ರತೀಕವಾಗಿದೆ. ದೇವಾಸ್ಥಾನಗಳು ಒಂದು ರೀತಿಯಲ್ಲಿ ನಾಟ್ಯಶಾಲೆಗಳಂತೆ ಭಾಸವಾಗುತ್ತವೆ. ದೇವತಾ ವಿಗ್ರಹಗಳೂ ಹಾರ-ಕಿರೀಟಕುಂಡಲಾದಿ ರಾಜೋಚಿತ ವೇಷಭೂಷಣಗಳಿಂದ ರಾಜಿಸುತ್ತವೆ. ದೇವಸ್ಥಾನಗಳ ಶಿಲ್ಪಗಳೂ, ರಾಜರ ವಿರಾಮದ ವೇಳೆಯ ಚಟುವಟಿಕೆಗಳಾದ, ಗಾಯನ, ನರ್ತನ, ಮಲ್ಲಯುದ್ಧ, ಕುದುರೆ ಸವಾರಿ, ಶೃಂಗಾರ- ಇತ್ಯಾದಿಗಳನ್ನು ಬಿಂಬಿಸುತ್ತವೆ. ಈ ಎಲ್ಲವೂ ದೇವಸ್ಥಾನಗಳು ಹೇಗೆ ಆಳುವ ವರ್ಗದ ಅಭಿರುಚಿಯಿಂದ ನಿಯಂತ್ರಿತವಾಗಿವೆ ಎಂಬುದನ್ನು ಸೂಚಿಸುತ್ತವೆ. ಇದು ದೇವಸ್ಥಾನದ ಒಂದು ಮುಖವಾದರೆ, ಅದರ ಇನ್ನೊಂದು ಮುಖ ಅದರ ಒಳಗಿನ ವ್ಯವಸ್ಥೆಗೆ ಸಂಬಂಧಪಟ್ಟದ್ದು, ಇದರ ಸಂಪೂರ್ಣ ನಿಯಂತ್ರಣ ಪುರೋಹಿತಷಾಹಿಯದು. ಅದರಲ್ಲಿಯೂ ಮುಖ್ಯವಾಗಿ ಬ್ರಾಹ್ಮಣವರ್ಗದ್ದು, ಅರ್ಚನೆ ಉತ್ಸವ-ದಾನ-ದಕ್ಷಿಣೆ-ವ್ರತ-ಸೀಮ ಇತ್ಯಾದಿಗಳ ಹೆಸರಿನಲ್ಲಿ ಜನರ ಧರ್ಮ ಶ್ರದ್ಧೆಯ ಉಪಯೋಗಗಳನ್ನು ಬಲ್ಲವರು ಇವರು. ಇವರ ಜತೆಗೆ “ಉಳ್ಳವರು’ ಹಣ ಉಳ್ಳ ಶ್ರೀಮಂತರು, ದೇವಾಲಯಾದಿ ನಿರ್ಮಾಣ ಕಾರ್ಯಗಳನ್ನು ಒಂದು ಪುಣ್ಯ ಕರ್ಮವೆಂದುಭಾವಿಸಿದವರು. ದೇವಸ್ಥಾನಗಳಿಗೆ ದಾನ-ದತ್ತಿಗಳನ್ನು ಬಿಟ್ಟು ಶಾಸನಗಳನ್ನು ಬರೆಯಿಸಿದವರು. (ಈ ಪಟ್ಟಿಗೆ ರಾಜರೂ ಸೇರುತ್ತಾರೆ. ತಮ್ಮ ಸಂಪತ್ತಿನ ಒಂದಷ್ಟು ಭಾಗ ದೇವಕಾರ್ಯಕ್ಕೆ ವಿನಿಯೋಗವಾಗಲಿ ಎಂಬ ಶ್ರದ್ಧೆಯುಳ್ಳವರು ಮತ್ತು ತಮ್ಮ ಸಂಪತ್ತಿನ ಗಳಿಕೆಯ ಪಾಪ ಪ್ರಜ್ಞೆಯನ್ನು ಈ ಪುಣ್ಯ ಕಾರ್ಯಗಳ ಮೂಲಕ ತೊಳೆದುಕೊಳ್ಳಲು ಬಯಸುವವರು. ಈ ಎಲ್ಲ ಕಾರಣಗಳಿಂದ ವಚನ ಚಳುವಳಿಗೆ ಹಿನ್ನೆಲೆಯಾದ ಅಂದಿನ ಕರ್ನಾಟಕದ ಪರಿಸರದಲ್ಲಿ ಲಕುಲೀಶ ಪಾಶುಪತ ಸಂಪ್ರದಾಯದ ಶೈವರಿಂದ ಬಹುಸಂಖ್ಯೆಯ ದೇವಾಲಯಗಳು ನಿರ್ಮಾಣಗೊಂಡಿದ್ದವು. “ಮಧ್ಯಕಾಲೀನ ಯುಗದ ದಕ್ಷಿಣದ ತಪ್ಪಲಿನ ಭೂಮಿಯಲ್ಲಿ ದೇವ ಮಂದಿರಗಳ ನಿರ್ಮಾಣಕ್ಕೆ ಉಕ್ಕುಬಂದ ಕಾಲ, ಐದರಿಂದ ಏಳನೆಯ ಶತಮಾನಗಳ ಅವಧಿಯಲ್ಲಿ ಬಾದಾಮಿಯ ಚಾಳುಕ್ಯರು ತಮ್ಮರಾಜಧಾನಿಯಾದ ಐಹೊಳೆ ಒಂದರಲ್ಲಿಯೇ ಎಪ್ಪತ್ತರಷ್ಟು ದೇವಾಲಯಗಳನ್ನು ಕಟ್ಟಿಸಿದ್ದಾರೆ. ಎರಡನೆಯ ಚಾಳುಕ್ಯ ವಿಕ್ರಮಾದಿತ್ಯನು ಎಂಟನೆಯ ಶತಮಾನದಲ್ಲಿ ಈಗಿನ ವಿಜಾಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತನ್ನ ರಾಜ ವೈಭವವನ್ನು ವ್ಯಕ್ತಪಡಿಸುವುದಕ್ಕೆ ಮೂರು ಬೃಹದ್ ದೇವಸ್ಥಾನಗಳನ್ನು ಕಟ್ಟಿಸಿದನು…….ಕ್ರಿ. ಶ. ೧೧೫೦ ರಿಂದ ೧೩೫೦ರ ವರೆಗಿನ ಎರಡುನೂರು ವರ್ಷಗಳಲ್ಲಿ ಶೈವರು ಏನಿಲ್ಲೆಂದರೂ ನಾನೂರು ಐವತ್ತು ಶಿವದೇವಾಲಯಗಳನ್ನೂ, ವೈಷ್ಣವರು ಒಂದುನೂರು ದೇವಾಲಯಗಳನ್ನೂ, ಕಟ್ಟಿರುವುದು ಆ ಕಾಲದಲ್ಲಿ ದೇವ ಮಂದಿರಗಳ ನಿರ್ಮಾಣ ಕಾರ್ಯದಲ್ಲಿ ಧರ್ಮಗಳು ಸ್ಪರ್ಧೆಯ ದ್ಯೋತಕಗಳಾಗಿವೆ. ಇಂಥ ಪರಿಸರದಲ್ಲಿ ದೇವಾಲಯಗಳನ್ನು ನಿರಾಕರಿಸುವುದರ ಮೂಲಕ ಸೂಕ್ಷ್ಮವಾಗಿ ರಾಜಷಾಹಿಯನ್ನೂ, ಸ್ಪಷ್ಟವಾಗಿ ಪುರೋಹಿತಷಾಹಿಯನ್ನೂ ವಿರೋಧಿಸಿದ ಶರಣ ಧರ್ಮದ ವೈಚಾರಿಕತೆಯನ್ನೂ ಕ್ರಿಯಾಶೀಲತೆಯನ್ನೂ ಅರ್ಥಮಾಡಿಕೊಳ್ಳಬಹುದು.

 ಹಾಗೆ ನೋಡಿದರೆ ಶರಣರ ದೇವಾಲಯ ವಿರೋಧ ದೇವಸ್ಥಾನಗಳನ್ನು ಕುರಿತ ಅಗೌರವದಿಂದ ಹುಟ್ಟಿಕೊಂಡ ಕ್ರಿಯೆ ಅಲ್ಲ. ವಾಸ್ತವವಾಗಿ ಈ ಶರಣ ಚಳುವಳಿಯ ಮುಖ್ಯ ವಚನಕಾರರು ಒಂದಲ್ಲ ಒಂದು ರೀತಿಯಲ್ಲಿ ದೇವಾಲಯಗೋತ್ರ’ಕ್ಕೆ ಸೇರಿ ದವರೇ. ಅವರವರ ಅಂಕಿತಗಳಂತೂ ಸ್ಪಷ್ಟವಾಗಿ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸೂಚಿಸುತ್ತವೆ. ಬಸವಣ್ಣನವರ ಅಂಕಿತವಾದ ‘ಕೂಡಲಸಂಗಮದೇವ’ ಈ ಹೊತ್ತಿಗೂ ಇರುವ ಕೂಡಲಸಂಗಮದ ದೇವಸ್ಥಾನವನ್ನು, ಅಕ್ಕಮಹಾದೇವಿ ಹಾಗೂ ಸಿದ್ಧರಾಮನ ಅಂಕಿತಗಳು ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನವನ್ನೂ, ಅಲ್ಲಮಪ್ರಭುವಿನ ʼಗುಹೇಶ್ವರ’ ಎನ್ನುವುದು ಬಳ್ಳಿಗಾವೆಯಗೂಗೇಶ್ವರ ದೇವಾಲಯವನ್ನೂ ಹೀಗೆ ಇನ್ನೂ ಕೆಲವು ವಚನಕಾರರ ಅಂಕಿತಗಳು ಅವರವರು ಬಂದ ಪರಿಸರದ ದೇವಾಲಯಗಳನ್ನು ಬೆರಳಿಟ್ಟು ತೋರಿಸುತ್ತವೆ. ಈ ಶರಣರಲ್ಲಿ, ಮುಖ್ಯವಾಗಿ ಸಿದ್ಧರಾಮನು ದೇವಾಲಯ ನಿರ್ಮಾಣದ ವಿಚಾರದಲ್ಲಿ ವಿಶೇಷವಾದ ಕಾಳಜಿ ವಹಿಸಿದವನು. ಅವನ ಲೋಕಕಲ್ಯಾಣ ರೂಪವಾದ ಸಾಧನೆಯಲ್ಲಿ ಕೆರೆ ಬಾವಿ ದೇವಾಲಯಗಳ ನಿರ್ಮಾಣವೂ ಸೇರುತ್ತದೆ. ಈ ಕೆಲವು ಶರಣರ .ಅಂಕಿತಗಳ ನಡುವೆ, ಅಲ್ಲಮಪ್ರಭುವಿನ ಅಂಕಿತ ಈ ಗುಗ್ಗೇಶ್ವರನನ್ನು ಸೂಚಿಸಿದರೂ, ‘ಗುಹೇಶ್ವರ’ ಎಂಬ ಬಳ್ಳಿಗಾವೆಯ ಅಂಕಿತವು ದೇವಾಲಯ ಸಂಸ್ಕೃತಿಯ ಇತಿಹಾಸದಲ್ಲಿ ದೇವಾಲಯ ರಚನೆಗಳ ಪೂರ್ವಾವಸ್ಥೆಯಾದ ‘ಗುಹೆ’ ಯನ್ನು ಅಥವಾ ಗುಹಾಲಯ ಶಿಲ್ಪಗಳ ಪರಂಪರೆಯನ್ನು ಸೂಚಿಸುವಂತೆ ತೋರುತ್ತದೆ. ಯಾಕೆಂದರೆ “ದೇವಸ್ಥಾನಗಳ ಬೆಳವಣಿಗೆಯ ಚರಿತ್ರೆಯಲ್ಲಿ ಗುಹಾಲಯಗಳ ನಿರ್ಮಿತಿಯ ಅತ್ಯಂತ ಪ್ರಾಚೀನವಾದದ್ದು. ಭಾರತೀಯ ವಾಸ್ತುಶಿಲ್ಪದ ಸುಮಾರು ಒಂದು ಸಾವಿರ ವರ್ಷಗಳ ಕಾಲಮಾನದಲ್ಲಿ ನಿಜವಾದ ಸ್ಮಾರಕಗಳೆಂದರೆ ಗುಹಾಲಯಗಳೇ. ಭಾರತದ ದೇವಾಲಯ ಶಿಲ್ಪಕ್ಕೆ ಇದು ವಿಶಿಷ್ಟವಾದ ಲಕ್ಷಣವಾಗಿದೆ.  ಕ್ರಿ. ಪೂ. ೩ನೆ ಶತಮಾನದಿಂದ ಕ್ರಿ.ಶ, ೧೦ನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡ ಗುಹಾಲಯಗಳ ಸಂಖ್ಯೆ ಒಂದು ಸಾವಿರದ ಇನ್ನೂರಕ್ಕೂ ಮಿಗಿಲಾಗಿವೆ.  ಉಪನಿಷತ್ತುಗಳಲ್ಲಾಗಲೀ ಧರ್ಮಶಾಸ್ತ್ರಗಳಲ್ಲಾಗಲಿ ದೇವಸ್ಥಾನಗಳ ವಿಷಯವು ಪ್ರಸ್ತಾಪಿತವಾದಂತೆ ತೋರುವುದಿಲ್ಲ. ಆಗ ಅರಣ್ಯದ ಏಕಾಂತಕ್ಕೆ ಸರಿದು ಗುರುವಿನ ಮಾರ್ಗದರ್ಶನದಲ್ಲಿ ಸಾಧಕನು ಜಿಜ್ಞಾ ಸೆಗೆ ತೊಡಗುವುದು ಮುಖ್ಯವಾಗಿತ್ತು. “ದಟ್ಟವಾದ ಕಾಡಿನ ಕತ್ತಲೆಯನ್ನು ಪ್ರವೇಶಿಸುವಸಾಧಕನ ಕ್ರಿಯೆ; ಅಂತರಂಗವನ್ನು ಧ್ಯಾನದ ಮೂಲಕ ಪ್ರವೇಶಿಸುವುದರ ಸಂಕೇತವಾಗಿದೆ. ಮುಂದಿನ ಹಂತವಾದ ಗುಹಾಲಯಗಳು ಈ ಸಂಕೇತದ ಸಮರ್ಥನೆಯಾಗಿವೆ. ಜೈನ, ಬೌದ್ಧ ಹಿಂದೂ ಗುಹಾಲಯಗಳೂ ಏಕಾಂತಕ್ಕೆ ಹಿಂದಿರುಗುವ ಸಾಧಕನ ಮನಃಸ್ಥಿತಿಯ ಹಳಹಳಿಕೆ ಯನ್ನು ಸೂಚಿಸುತ್ತವೆ,” ಸಾಧುಸನ್ಯಾಸಿಗಳಿಗೆ ಹಾಗೂ ಅಧ್ಯಾತ್ಮಸಾಧಕರಿಗೆ ಮತ್ತು ಅದೇ ಬಗೆಯ ಪ್ರವೃತ್ತಿಯವರಿಗೆ ಗುಹೆಗಳು ಏಕಾಂತದ ಧ್ಯಾನಕ್ಕೆ ಅನುಕೂಲವಾದ ನೆಲೆಗಳಾಗಿದ್ದುದೇನೋ ನಿಜ ಆದರೆ ಭಕ್ತರಿಗೆ ದೇವಸ್ಥಾನಗಳು ಬೇಕಾದವು, ಯಾವಾಗ ಶಿವ, ವಿಷ್ಣು, ರಾಮ, ಕೃಷ್ಣ ಪಂಥಗಳು ವ್ಯಾಪಕವಾದುವೋ ಆಗ ಮತ್ತು ಭಕ್ತ ಪಂಥದ ಪ್ರಭಾವದಿಂದ, ದೇವಾಲಯಗಳ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಿತೆಂದು ತೋರುತ್ತದೆ. ಹೀಗಾಗಿ ದೇವಾಲಯ ನಿರ್ಮಿತಿ ಒಂದು ಪರಂಪರೆಯಾಗಿ ರೂಪುಗೊಂಡಿತು . ಅಲ್ಲಮನ ಅಂಕಿತವಾದ ‘ಗುಹೇಶ್ವರ’ ಎನ್ನುವುದು, ದೇವಾಲಯ ನಿರ್ಮಿತಿಯ ಪ್ರಾಚೀನ ರೂಪವನ್ನು ಸೂಚಿಸಿದರೆ, ಇತರ ಕೆಲವು ವಚನಕಾರರ ಅಂಕಿತಗಳು ದೇವಾಲಯಗಳನ್ನು ಸೂಚಿಸುತ್ತವೆ ಮತ್ತು ಎಲ್ಲ ವಚನಕಾರರ ಧೋರಣೆ ಮತ್ತೆ ದೇವಾಲಯವನ್ನು ನಿರಾಕರಿಸುವ ಹಾಗೂ ಮೀರುವ ನೆಲೆಯನ್ನು ನಿರ್ದೇಶಿಸುತ್ತವೆ. ಹಾಗೆ ನಿರಾಕರಿಸುವ ಮತ್ತು ಮೀರುವ ಮನಃಸ್ಥಿತಿಯ ಮೂಲಕ, ವಚನಕಾರರು ದೇವಾಲಯದ ಪ್ರಾಚೀನ ಮಾದರಿಗೆ, ಅಂದರೆ ‘ದೇಹವೇ ದೇವಾಲಯ’ ಎಂಬ ಕಲ್ಪನೆಗೆ ಹಿಂದಿರುಗುತ್ತಾರೆ. ಈ ಪ್ರಾಚೀನ ಮಾದರಿ, ದೇವಸ್ಥಾನಗಳ ಎಲ್ಲ ಬಗೆಯ ʼಮೂರ್ತಿʼ ರೂಪಗಳಿಗೂ ಬಹುಶಃ ಮೊದಲನೆಯದು.

ದೇವಾಲಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಮಾಜದ ಮನಸ್ಸಿಗೆ, ದೇವಾಲಯದ ನಿರಾಕರಣೆಯಿಂದ ಉಂಟಾಗುವ ಶೂನ್ಯವನ್ನು ತುಂಬಲು ‘ದೇಹವೇ ದೇವಾಲಯ’ ಎಂಬ  ಪರ್ಯಾಯವನ್ನು ವಚನಕಾರರು ಸೂಚಿಸಿದರಷ್ಟೆ? ಹಾಗೆ ನೋಡಿದರೆ, ಈ ಸೂಚನೆಯೂ ಹೊಸದೇನಲ್ಲ. ‘ದೇಹೋ ಜೀವಾಲಯಃ ಪ್ರೋಕ್ತಃ ಜೀವೋ ಜೀವಃ ಸನಾತನಃ” ಎಂಬ ಉಕ್ತಿಯೊಂದಿದೆ. ಇದು ಎಷ್ಟು ಪ್ರಾಚೀನವೋ, ತಿಳಿಯದು. ಆದರೂ ಅದು ಕೇವಲ ಒಂದು ಕಲ್ಪನೆಯೋ, ಆಶಯವೋ ಆಗಿದೆಯೇ ಹೊರತು ಶಿವಶರಣರಲ್ಲಿಯಂತ ಒಂದು ಪ್ರಾಯೋಗಿಕ ತಾತ್ವಿಕ ನಿಲುವಾಗಿ ಎಂದಾದರೂ ಅನುಭೂತವಾಗಿತ್ತೆಂದು ಹೇಳಲು ಬಾರದು. ಆದರೆ ಭಾರತೀಯ ವಾಸ್ತುಶಿಲ್ಪದ ಪ್ರಕಾರ ದೇಹಕ್ಕೂ ದೇವಾಲಯಕ್ಕೂ ಇರುವ ಸಂಬಂಧ ಅತ್ಯಂತ ಅರ್ಥಪೂರ್ಣವಾದುದಾಗಿದೆ. ಸಾಮಾನ್ಯವಾಗಿ ಭಾರತೀಯದೇವಸ್ಥಾನಗಳು ಮನುಷ್ಯ ಶರೀರದ ನೀಲನಕ್ಷೆಯನ್ನೇ ಅವಲಂಬಿಸಿ ರಚಿತವಾಗಿವೆ. ಗುಡಿಯನ್ನು ಕಟ್ಟುವ ಮೊದಲು ‘ಗರ್ಭ’ವಿನ್ಯಾಸ’ ಎಂಬ ವಿಧಿಯನ್ನು, ನೆರವೇರಿಸುವುದರ ಮೂಲಕ, ದೇವಸ್ಥಾನವು, ಭ್ರೂಣದಿಂದ ಶರೀರವು ರೂಪುತಾಳುವಂತೆ ಏಳುವುದೆಂದು ಕಲ್ಪಿಸಿಕೊಳ್ಳಲಾಗಿದೆ ಮತ್ತು ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯ ಶರೀರದ ಇತರ ಅವಯವಗಳೊಂದಿಗೆ ಸಮೀಕರಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ದೇವಾಲಯದ ಎರಡೂ ಬದಿಗಳನ್ನು ಹಸ್ತ ಅಥವಾ ಪಾರ್ಶ್ವವೆಂದೂ ಕಂಬಗಳನ್ನು ಪಾದಗಳೆಂದೂ, ಗೋಪುರವನ್ನು ಶಿಖರ ಅಥವಾ ಶಿರಸ್ಸೆಂದೂ, ಮೂರ್ತಿಯನ್ನು ಒಳಗೊಳ್ಳುವ ಭಾಗಕ್ಕೆ ಗರ್ಭಗುಡಿಯಂದೂ ಹೇಳಲಾಗಿದೆ. ಹೀಗೆ ಮೂಲತಃ ದೇವಸ್ಥಾನವೇ ಮನುಷ್ಯ ಶರೀರ, ಮನುಷ್ಯ ಶರೀರವ ದೇವಸ್ಥಾನ ಎಂಬ ಸಮೀಕರಣವೊಂದು ಸಾಧಿತವಾಗಿದೆ. ಬಸವಣ್ಣನವರ ಸುಪ್ರಸಿದ್ಧವಾದ

 ಉಳ್ಳವರು ಶಿವಾಲಯ ಮಾಡುವರಯ್ಯ

 ನಾನೇನ ಮಾಡುವ ಬಡವನಯ್ಯ

 ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೆ ಹೊನ್ನ ಕಳಸವಯ್ಯ

ಕೂಡಲ ಸಂಗಮದೇವ ಕೇಳಯ್ಯ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

 ಎಂಬ ವಚನ, ಈಗ ಉಲ್ಲೇಖಿಸಿದ ವಾಸ್ತುಶಾಸ್ತ್ರದ ನೆನಪನ್ನು ತರುವುದಲ್ಲದೆ, ಶರಣರ ದೇವಾಲಯದ ಪರಿಕಲ್ಪನೆಯನ್ನು ಕುರಿತ ಅತ್ಯುತ್ತಮ ವ್ಯಾಖ್ಯಾನವೂ ಆಗಿದೆ. ಉಳ್ಳವರು ಮಾಡುವ ದೇವಸ್ಥಾನದೊಂದಿಗೆ ಬಸವನಾದ ತಾನು ಮಾಡುವ ದೇವಸ್ಥಾನವನ್ನು ಮುಖಾಮುಖಿಯಾಗಿರಿಸಿ, ಹೇಗೆ ಒಂದು ಕಾಲಕ್ಕೆ ಸಾಂಸ್ಕೃತಿಕವಾಗಿ ಅರ್ಥಪೂರ್ಣವಾಗಿದ್ದ ದೇವಾಲಯ, ಈಗ ಅರ್ಥವನ್ನು ಕಳೆದುಕೊಂಡು `ಸ್ಥಾವರ’ವಾಗಿದೆ ಎಂಬುದನ್ನು ಸೂಚಿಸುತ್ತ, ಮತ್ತೆ ಪರ್ಯಯವಾಗಿ ‘ದೇಹವೇ ದೇಗುಲ’ವೆಂಬ ‘ಜಂಗಮ’ ಅಥವಾ ಚಲನಶೀಲ ಸ್ಥಿತಿಗೆ ಹಿಂದಿರುಗುವ ಆಶಯವನ್ನು ಅಭಿವ್ಯಕ್ತಪಡಿಸುವ ಕ್ರಮ ಅನನ್ಯವಾಗಿದೆ. ಈ ವಚನ ಮುಖ್ಯವಾಗಿ ಪ್ರತಿಪಾದಿಸುವುದು ಶಿವಾಲಯವನ್ನು ಮಾಡುವ ಕ್ರಿಯೆಯನ್ನಲ್ಲ, ವ್ಯಕ್ತಿ ತಾನೇ ಶಿವಾಲಯ “ಆಗುವ” ಕ್ರಿಯೆಯನ್ನು .

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಶ್ರೀ ಡಿ.ಎಸ್‌ ಕರ್ಕಿಯವರ  ಶಿವಯೋಗಮಂದಿರ ಕುಇತು ಬರೆದ ಲೇಖನದ  ಸಾಲುಗಳು ಅತ್ಯಂತ ಅರ್ಥಪೂರ್ಣ ಮತ್ತು ಸುಂದರವಾಗಿವೆ

ಇದೋ ಮಂದಿರ ಶಿವಮಂದಿರ

ಶಿವಯೋಗದ ಮಂದಿರ

ಪ್ರಕೃತಿಯ ಪರಮಾನಂದದ

ಸುಧೆ ಸೂಸುವ ಚಂದಿರ

…….

ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.

ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ. 

ಸೌಂದರ್ಯರ್ಯಾನುಭವವನ್ನು ಶಿವಾನುಭವವನ್ನು ತನ್ನಲ್ಲಿ ಸಮರಸಗೊಳಿಸಿಕೊಂಡ ಪ್ರತಿಭೆಯದು. ಅದು  ಹಾನಗಲ್ಲ ಕುಮಾರ ಸ್ವಾಮಿಗಳಮಹಾ ವ್ಯಕ್ತಿತ್ವವನ್ನು ಬೆಳಗಿದ ಪ್ರತಿಭೆ……

ಶ್ರೀಕುಮಾರ ತರಂಗಿಣಿ  ೨೦೨೩ ಜೂನಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ಬೋಧವ ಕೊಡು ದೇವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-25 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3 ಉದಂತ ಉದಯ, ಉಜ್ವಲಂತ ಉತ್ಕ್ರಮಣ: ಲೇಖಕರು: ಪೂಜ್ಯ ಜ.ಚ.ನಿ
  4. ನೇಮ-ನಿತ್ಯ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಸುಕುಮಾರ ಗುರುಕುಮಾರ ನಿವೇದನ ಕಾವ್ಯ : ರಚನೆ: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ.
  6. ಧ್ಯಾನ ಮತ್ತು ಅನುಷ್ಠಾನ : ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
  7. ದಯಾನಿಧಿ ಹಾನಗಲ್ಲ ಶ್ರೀ ಕುಮಾರೇಶ : ಲೇಖಕರು: ಚಿಂದೋಡಿ ಬಂಗಾರೇಶ.ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು
  8. ಆಡಿಯೋ೧ :
  9. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಸವಿನೆನಪಿಗೆ ಲೋಕಾರ್ಪಣೆಯ ಸವಿನೆನಪು
  10. ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ
  11. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  12. ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
  13. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
  14. ಪೂಜ್ಯರ ಆಶೀರ್ವಚನ ೧೪-೦೫-೨೦೨೧
  15. ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು” 

               ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ  ಮಹಾಸ್ವಾಮಿಗಳಿಂದ  ಶಾಂತಾಶ್ರಮ ಹುಬ್ಬಳ್ಳಿ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಾಗ – ಭೀಮಪಲಾಸ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಈ ಲಿಂಗದೊಡಲೊಳಗೆ | ಮೂಲೋಕವಡಗಿಹುದು

ಮೂಲೋಕದೊಳಗೆ – ಈ ಲಿಂಗ ಸಂಚರವ

ಪಾಲಿಸಿದೆ ಗುರುವೆ ಕೃಪೆಯಾಗು     ||೧೧೧ ||

ಲಿಂಗಾಂಗಯೋಗವನ್ನು ವಿವರಿಸಿ ಆ ಲಿಂಗದ ಆದ್ಯಂತವನ್ನು ಅರುಹುತ್ತಾನೆ. ಗುರುಕರುಣಿಸಿದ ಲಿಂಗವು ಶಿಷ್ಯನ  ಚಿತ್ಕಳೆಯೆಂಬುದನ್ನು ತಿಳಿದಿದ್ದೇವೆ. ಚಿತ್ಕಳೆಯೇ ಚುಳುಕಾಗಿ ಕರಕಮಲಕ್ಕೆ ಬಂದ ಇಷ್ಟಲಿಂಗ ಚಿಕ್ಕದಲ್ಲ.  ಆಲದ ಬೀಜವು ಅತಿಚಿಕ್ಕದಾಗಿದ್ದರೂ ಅದರಲ್ಲಡಗಿದ ಮರದ ಧರ್ಮ ವ್ಯಾಪಕವಾಗಿದೆ. ಸಣ್ಣ ಬೀಜದಿಂದಲೇ ಬೃಹತ್ತಾದ ಗಿಡವು ಪ್ರಾದುರ್ಭವಿಸುತ್ತದೆ. ಅದರಂತೆ ಈ ಲಿಂಗದೊಡಲೊಳಗೆ  ಸ್ವರ್ಗ ಮರ್ತ್ಯ-ಪಾತಾಳವೆಂಬ ಮೂರು ಲೋಕಂಗಳು ಅಡಗಿದ್ದಾವೆ. ಲಿಂಗದಲ್ಲಿ ತ್ರಿಲೋಕಗಳ ವ್ಯಾಪಕತೆಯಿರುವಂತೆ ಮೂರು ಲೋಕಂಗಳಲ್ಲಿ ಲಿಂಗದ ಸಂಚಾರ (ವ್ಯಾಪಕತೆ) ಪಸರಿಸಿದೆ. ಲಿಂಗವಿಲ್ಲದ ಸ್ಥಾನವೇ ಇಲ್ಲ. ಈ ಮಾತನ್ನು ಸರ್ವಜ್ಞನು ಸುಂದರವಾಗಿ ಹಾಡಿದ್ದಾನೆ.

ಲಿಂಗಕ್ಕೆ ಕಡೆಯಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?

ಲಿಂಗದೊಳು ಜಗವು ಅಡಗಿಹುದು, ಲಿಂಗವನು

ಹಿಂಗಿದವರುಂಟೆ ಸರ್ವಜ್ಞ

ಲಿಂಗಕ್ಕೆ ಕಡೆ-ಮೊದಲಿಲ್ಲ, ಲಿಂಗವು ಸರ್ವತ್ರ ವ್ಯಾಪಿಸಿದೆ. ಅದುಕಾರಣ ಇದನ್ನು ಸಕಲರೂ ಗೌರವಿಸಲೇಬೇಕಾಗುವದು.

ವೀರಶೈವ ಚಿಂತಾಮಣಿಕಾರರು-

ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯತೇ ||

ʼʼಲಿಂಗ ಮಧ್ಯದಲ್ಲಿ ಮೂರು ಲೋಕದ ಸಚರಾಚರ ಜಗತ್ತು ಅಡಕವಾಗಿದ್ದು ಆ ಲಿಂಗಕ್ಕಿಂತ ಭಿನ್ನವಾದ ವಸ್ತು ಯಾವುದೂ ಇಲ್ಲ, ಇಂಥ ಲಿಂಗಪೂಜೆ ಅವಶ್ಯ” ವೆಂದು ಪ್ರತಿಪಾದಿಸಿದ್ದಾರೆ.

ಲಿಂಗದಲ್ಲಿ ಸಕಲವೂ ವ್ಯಾಪಿಸಿದೆ. ಲಿಂಗವು ಕರದ ವರರತ್ನ. ಅಂತೆಯೇ-

ಏಕೇನ ವಿಜ್ಞಾತೇನ ಸರ್ವ೦ ವಿಜ್ಞಾತಂ ಭವತಿ | ತದ್ಬ್ರಹ್ಮ||ʼʼ

ಪರಾತ್ಪರವೆನಿಸಿದ ಏಕಮೇವ ವಸ್ತುವಿನ ಸಾಕ್ಷಾತ್ಕಾರದಿಂದ ಸಕಲ ವಸ್ತುಗಳ ಜ್ಞಾನ-ವಿಜ್ಞಾನಗಳು ತಿಳಿಯುವವು. ಅದುವೇ ಬ್ರಹ್ಮ (ಪರಬ್ರಹ್ಮ) ಎಂದು ಉದ್ಧಾಲಕ ಮುನಿಯು ದ್ವಾದಶವರ್ಷ ಅಧ್ಯಯನ ಮಾಡಿ ಮರಳಿದ, ಅಭಿಮಾನಿಯೆನಿಸಿದ. (ಪುತ್ರ) ಶ್ವೇತ ಕೇತುವಿಗೆ ತಿಳಿಯಪಡಿಸಿದಂತೆ ಈ ಲಿಂಗದ ವಿಜ್ಞಾನವನ್ನು ಅವಗತ ಮಾಡಿಕೊಂಡ ಭಕ್ತನು ಯಾವುದರ ಗೊಂದಲಕ್ಕೆ ಅವಕಾಶವೀಯುವುದಿಲ್ಲ. ಆ ಕರದಿಷ್ಟ ಲಿಂಗದಲ್ಲಿಯೇ ಸಕಲ ಸೌಭಾಗ್ಯ ಸನ್ನಿಹಿತವಾಗಿರುತ್ತದೆ.

 ಆನು ಕಾಮಿಸುತಿಪ್ಪ ಸಾಲೋಕ್ಯವಿದೆ.

 ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.

ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,

ಎನ್ನ ಧ್ಯಾನದ ಜಪ-ತಪದಿಂದಲೇ ಸಿದ್ಧಿಯಪ್ಪ ಮಹಾಸಿದ್ಧಿಯಿದೆ,

ಆನೇನ ಇಚ್ಛೈಸುವ ಎಲ್ಲವೂ ಇದೆ ನೋಡಾ !

ಶ್ರೀಗುರು ಕಾರುಣ್ಯದಿಂದ ಮಹಾವಸ್ತು

ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ !

ಇನ್ನು ಬಯಲಭ್ರಮೆಯೊಳಗೆ ಹೊಗಿಸದಿರಯ್ಯಾ

ನಿಮ್ಮ ಬೇಡಿಕೊಂಬೆನು ನಿಮಗೆ ಎನ್ನಾಣೆ

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ

ಚತುರ್ವಿಧ ಮುಕ್ತಿಗಳು ಚತುರ್ವಿಧ ಪುರುಷಾರ್ಥಗಳು, ಶಿವಭಕ್ತರು ಬಯಸುವ ಸಕಲ ಪಡಿಪದಾರ್ಥಗಳು ಸಂಕಲ್ಪಗಳು ಕರದಿಷ್ಟಲಿಂಗದ ಧ್ಯಾನ ತಪಾದಿಗಳಿಂದ ಸುಲಭವಾಗಿ ಸಿದ್ಧಿಸುತ್ತವೆಂದ ಬಳಿಕ ಬಯಲು ಭ್ರಮೆಯಲ್ಲಿ ಮನ ಚಲಿಸದಂತಿರಿಸೆಂದು ಆಣೆಯಿಟ್ಟು ಬೇಡಿದ ಉರಿಲಿಂಗ ಪೆದ್ದಣ್ಣನ ಮಾತು ಮನನೀಯ ವಾಗಿದೆ.

ಈಶಾವಾಸ್ಯೋಪನಿಷತ್ತು ಲಿಂಗದ ಪರಿಪೂರ್ಣತೆಯನ್ನು ಉದ್ಘೋಶಿಸಿದೆ

ಓಂ ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮುದಚ್ಯತೇ ।

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಮೇವಾವ ಶಿಷ್ಯತೇ ।।

ಓಂಕಾರರೂಪದ ಮಹಾಲಿಂಗವು ಪೂರ್ಣವಾಗಿದೆ. ಅದರಿಂದಾದ ಈ ಜಗವೂ ಪರಿಪೂರ್ಣವೇ ಆಗಿದೆ. ಪೂರ್ಣದಲ್ಲಿ ಪೂರ್ಣವನ್ನು ಬೆರೆತರೆ ಪೂರ್ಣವೇ ತಾನೇ ಉಳಿಯುವಂತೆ ಮಹಾಲಿಂಗ ಹಾಗೂ ಇಷ್ಟಲಿಂಗಕ್ಕೂ ಅಂತರವಿಲ್ಲ, ಆಚಾರಾದಿ ಲಿಂಗಗಳ ಆರಾಧನೆಯಿಂದ ಮಹಾಲಿಂಗದಲ್ಲಿ ಕೂಡಿ ಮಹಾಲಿಂಗವೇ ತಾನಾದ ಶರಣನು ಪೂರ್ಣನೆನಿಸುವನು.

 ಜಗತ್ತಿನಲ್ಲಿ ಕಾಣಬರುವ ಲಿಂಗಗಳಿಂದ ಈ ಲಿಂಗ ತತ್ತ್ವದ ವ್ಯಾಪಕತೆ ವೇದ್ಯವಾಗುವದು. ಕಾಶಿಯ ಶ್ರೀಬಾಬು ಶಿವಪ್ರಸಾದರು- “ಪೃಥ್ವಿ ಪ್ರದಕ್ಷಿಣೆ’ ಎಂಬ ಗ್ರಂಥದಲ್ಲಿ – ಮಿಸರದೇಶದಲ್ಲಿ ”ಅಸಿರಿಸ್” ಮತ್ತು ‘ಆಯಿಸಿಸ್” ಎಂಬ ಲಿಂಗವನ್ನೂ, ಗ್ರೀಸ್ ದೇಶದಲ್ಲಿ ಬೆಸಕ್’ ಮತ್ತು ‘ಪಿಯಸಸ್’ ಎಂಬ ಲಿಂಗವನ್ನೂ, ಸ್ಕಾಟಲೆಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣವಿಶಿಷ್ಟ ಲಿಂಗವನ್ನೂ, ಆಸ್ಟ್ರಿಯಾ, ಹಂಗೇರಿಯಲ್ಲಿ ತಂತ್ರಿಸ್ಟಕ ಎಂಬ ಲಿಂಗವನ್ನು, ಅಸೀರಿಯಾ ದೇಶದ ಬಿಲಸನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವನ್ನೂ, ಅರಬಸ್ತಾನದಲ್ಲಿ ‘ಸಗೆ ಅನಬದ್’ ಅಂದರೆ ಮಕ್ಕೇಶ್ವರ ಲಿಂಗ (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕ ಚುಂಬನ ಕೊಡುತ್ತಾರೆ). ವನ್ನೂ, ಇರಾಣದಲ್ಲಿ ಜ್ವಾಲಾಮಯ ಲಿಂಗವನ್ನೂ, ಪೆರುದೇಶದಲ್ಲಿ ‘ಪಾರ್ಥಿವೇಶ್ವರ” ಲಿಂಗವನ್ನೂ, ಅಮೇರಿಕೆಯ ಪೆಂಬ್ರುಕೋ ಪಟ್ಟಣದಲ್ಲಿ “ದ್ವಿಮುಖ” ಲಿಂಗವನ್ನೂ, ಅಮೇರಿಕೆಯ ಟೆನ್ನಿ ಪಟ್ಟಣದಲ್ಲಿ ಘನಲಿಂಗವನ್ನೂ, ಇಂದಿಗೂ ಆ ಭಾಗದ ಜನರು ಪೂಜಿಸುತ್ತಿದ್ದಾರೆ” ಎಂದು ಲಿಂಗಪೂಜೆಯ ವಿಶ್ವವ್ಯಾಪಕತೆಯನ್ನು ವಿವರಿಸಿದ್ದಾರೆ.

 ಉತ್ತರ ಪ್ರದೇಶದ ಗೋರಖಪುರದಿಂದ ಪ್ರಕಟವಾಗುವ ‘ಕಲ್ಯಾಣ’ ಮಾಸ ಪತ್ರಿಕೆಯ ‘ಶ್ರೀ ಶಿವಾಂಕ” ವೆಂಬ ವಿಶೇಷಾಂಕವನ್ನು ಸನ್ ೧೯೩೩ ರಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಲಿಂಗತತ್ತ್ವದ ಪುರಾತನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ಅವಲೋಕಿಸಬಹುದು. ಭಾರತೀಯ ಇತಿಹಾಸಕಾರರು ಮತ್ತು ಪುರಾತತ್ತ್ವ ಸಂಶೋಧಕರು ಸಂಗ್ರಹಿಸಿದ ಸಿಂಧೂ ನದಿಯ ಹರಪ್ಪಾ ಮತ್ತು ಮೆಹಂಜೋದಾರದ ಅವಶೇಷಗಳಲ್ಲಿ ಉಪಲಬ್ಧವಾದ ಲಿಂಗಗಳಿಂದ ಲಿಂಗ ಸಂಸ್ಕೃತಿಯ ೪-೫ ಸಾವಿರ ವರುಷ ಪೂರ್ವದ್ದೆಂದು ತಿಳಿದು ಬರುತ್ತದೆ.

ಮೇಲಿನ ಇತಿಹಾಸ ಸ್ಥಾವರ ಲಿಂಗಕ್ಕೆ ಸೀಮಿತವಾದುದು. ಸಿಂಧೂ ಸಂಸ್ಕೃತಿ ಯಲ್ಲಿ ಮಾತ್ರ ಇಷ್ಟಲಿಂಗದ ಅವಶೇಷ ಸಿಕ್ಕುತ್ತದೆ. ಬೃಹತ್ತಾದ, ಹಾಗೂ ಸ್ಥಾವರತ್ವವನ್ನು ಹೊಂದಿದ ಲಿಂಗವನ್ನು ಅಧ್ಯಾತ್ಮಿಕವಾಗಿ ಇಷ್ಟಲಿಂಗವನ್ನಾಗಿ ಅಳವಡಿಸಿಕೊಡುವ ಸದ್ಗುರುವು ಸಾಮಾನ್ಯನಲ್ಲ.  ಅಂತರಂಗದ ಅರುಹಿನ ಕುರುಹೆನಿಸಿದ ಕರದಿಷ್ಟ ಲಿಂಗವನ್ನು ಶರೀರದಿಂದ ಅಗಲದಂತಿರಿಸಬೇಕು. ಅಂದರೆ ಸದಾ ಲಿಂಗದೇವನ ಸಹವಾಸದಲ್ಲಿ ಲಿಂಗಗುಣಗಳು ಮೈಗೂಡುತ್ತವೆ.

ಇಷ್ಟ-ಪ್ರಾಣ-ಭಾವಲಿಂಗಗಳನ್ನು ಸತ್ಕ್ರಿಯಾ-ಸುಜ್ಞಾನ ಪೂರ್ವಕ ಸಂಪೂಜಿಸಿ ಸ್ಥೂಲ-ಸೂಕ್ಷ್ಮ-ಕಾರಣವೆಂಬ ಶರೀರತ್ರಯ ರೂಪ ತ್ರಿವಿಧ ಲೋಕದಲ್ಲಿಯೂ ಆ ಲಿಂಗಗಳು ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಅರ್ಥಾತ್, ತ್ರಿವಿಧ ತನುಗಳಿಗೆ ಸಂಬಂಧಿಸಿದ ತ್ರಿವಿಧ ಲಿಂಗಗಳ ಅನುಸಂಧಾನವನ್ನು ಸಾಧಿಸಿ ಲಿಂಗಸ್ವರೂಪನೇ ತಾನಾಗಬೇಕು. ಇದುವೇ ಶ್ರೀಗುರುವಿನ ಕೃಪೆಯ ಸತ್ಪಲವೆನಿಸುವದು.

ಆದಿ ಪೀಠವೆ ಗುರು ಮೇ | ಲಾದ ಪೀಠವೆ ಲಿಂಗ ಅ-

ನಾದಿ ಗೋಮುಖವೆ-ಮೋದ ಜಂಗಮವೆಂದು

ಭೋಧಿಸಿದ ಗುರುವೆ ಕೃಪೆಯಾಗು      || ೧೧೨ ॥

ಪರಶಿವನ ಸಾಕ್ಷಾತ್ ಸ್ವರೂಪವೇ ಲಿಂಗವಾಗಿರವುದೆಂಬುದನ್ನು ಅರಿತಾಯಿತು. ಪರಶಿವನು ನಿಷ್ಕಲನು; ನಿರ್ಗುಣನು. ಲಿಂಗದಲ್ಲಿ ಸಕಲ ನಿಷ್ಕಲತೆಯಿದೆ. ಸಗುಣ ನಿರ್ಗುಣತ್ವವಿದೆ. ಶಿವನು ಭಕ್ತೋದ್ಧಾರಕ್ಕಾಗಿ ತ್ರಿವಿಧ ರೂಪವನ್ನು ಧರಿಸಿದ್ದಾನೆ. ಗುರು-ಲಿಂಗ-ಜಂಗಮರೇ ತ್ರಿಮೂರ್ತಿಗಳು. ವೀರಶೈವರಿಗೆ ಇವು ಪರಮ ಪೂಜನೀಯ ವಸ್ತುಗಳು. ಇವರನ್ನು ಬಿಟ್ಟು ಬೇರೆ ಪೂಜ್ಯರಿಲ್ಲ ವೀರಶೈವರಿಗೆ ಅದು ಕಾರಣ ತನ್ನಂಗೈಯಲ್ಲಿ ಕಾಣುವ ಲಿಂಗದಲ್ಲಿಯೂ ಗುರು-ಜಂಗಮರ ಸ್ವರೂಪವು ಸುಪ್ತವಾಗಿರುತ್ತದೆ.

 “ಸಚ್ಛಿದಾನಂದಂ ಬ್ರಹ್ಮ’ ” ಸತ್ ಚಿತ್ ಆನಂದವೇ ಬ್ರಹ್ಮವೆಂಬ ಶೃತಿ ವಾಕ್ಯದಂತೆ ಲಿಂಗದ ಆದಿ ಪೀಠವು ಅಂದರೆ ಲಿಂಗದ ಕೆಳಗಿನ ಭಾಗವು ಸತ್ ಸ್ವರೂಪನಾದ ಗುರು ರೂಪವಾಗಿದೆ. ಅರ್ಥಾತ್ ಗುರುವು ಲಿಂಗವನ್ನು ಸೃಷ್ಟಿಸುವವನು. ಗುರು ಲಿಂಗಕ್ಕೆ

ಆಧಾರನಾಗಿದ್ದಾನೆ. (ಲಿಂಗದ) ಮೇಲಿರುವ ಬಾಣವು ಅಥವಾ ಲಿಂಗವು ಚಿತ್ ಸ್ವರೂಪವಾಗಿದೆ. ಅನಾದಿ ಗೋಮುಖವು ಆನಂದದಾಯಕನಾದ ಜಂಗಮ ಸ್ವರೂಪವೆನಿಸಿದೆಯೆಂದು ಗುರುವರನು ಬೋಧಿಸುತ್ತಾನೆ.   

ಈ ಕೃತಿಕರ್ತರ ಸಮಕಾಲೀನರೂ, ಶರಣ ಸಹೋದ್ಯೋಗಿಗಳೂ ಚನ್ನ ವೀರೇಶ್ವರ ಯತಿಗಳ ಪರಮ ಶಿಷ್ಯರೂ ಆದ ಬನ್ನಿಮಟ್ಟಿ ಚನ್ನಪ್ಪನವರು ತಮ್ಮ’ಶಿವಾನುಭವ ದೀಪಿಕೆ” ಯಲ್ಲಿ ಇದೇ ಅರ್ಥವನ್ನು,

ಲಿಂಗದಡಿ ಪೀಠ ಶ್ರೀಗುರು |

ಲಿಂಗದ ಮೇಲೂರ್ಧ್ವಪೀಠ ಚಿದ್ಘನಲಿಂಗ ||

ಲಿಂಗದ ಗೋಮುಖ ಜಂಗಮ |

ಲಿಂಗವೆ ಕೂಡಲ ಸಂಗಂ ಬಸವ ಪ್ರಭುವೆ || ೨೮೯ |

ಎಂದು ಪುಷ್ಟಿಕರಿಸುವಂತೆ ಬಣ್ಣಿಸಿರುತ್ತಾರೆ.

ಗುರು-ಜಂಗಮರ ಸಾನಿಧ್ಯವಿಲ್ಲದ ಸಮಯಕ್ಕೆ ಕೇವಲ ಕರದಿಷ್ಟಲಿಂಗವನ್ನು ಪೂಜಿಸಿದರೂ ತ್ರಿವಿಧ ಪೂಜ್ಯರ ಪೂಜೆ ಪೂರೈಸಿದಂತಾಗುವದು. ಈ ತ್ರಿವಿಧ ಪೂಜ್ಯ ವಸ್ತುಗಳು ಅವಿಭಾಜ್ಯ ಅಂಗಗಳು. ಇವು ಒಂದಕ್ಕೊಂದು ಆಶ್ರಯಿಸಿವೆ. ಅದು ಕಾರಣ ಈ ಬೋಧೆಯನ್ನು ಮನದಲ್ಲಿ ಅಳವಡಿಸಿಕೊಂಡು ತ್ರಿವಿಧ ಪೂಜ್ಯ ವಸ್ತುಗಳ ಪೂಜೆ ಮಾಡಿದ ಆನಂದವನ್ನು ಹೊಂದಬೇಕು. ಅಂದರೆ ಮಾತ್ರ ಗುರುಬೋಧೆ ಯಥಾರ್ಥ ವಾಗುವದು

ಅಡಿಯ ಪೀಠವೆ ಇಷ್ಟ | ಮುಡಿಯ ಪೀಠವೆ ಪ್ರಾಣ

ನಡುವಣ ಗೋಮುಖ-ದೃಢ ಭಾವ ಲಿಂಗವೆಂ-

ದೊಡನುಸಿರ್ದ ಗುರುವೆ ಕೃಪೆಯಾಗು     II ೧೧೩ II

ಲಿಂಗದ ಅಡಿಯು ಪೀಠವು, (ಕೆಳಭಾಗ) ಇದು ಲಿಂಗಕ್ಕೆ ಪಾದವಾಗಿದೆ. ಲಿಂಗದ ಪಾದವು ಕ್ರಿಯಾಸ್ವರೂಪವು. ಲಿಂಗದ ಮೇಲಿನ ಪೀಠವು ಮುಡಿಯು ಅಂದರೆ ಮಸ್ತಕವು. ಇದು ಜ್ಞಾನದ ಸಂಕೇತವು. ಜ್ಞಾನವು ಮಸ್ತಕದಲ್ಲಿರುವದು ಸರ್ವರಿಗೂ ಅರಿತ ವಿಷಯ. ಜ್ಞಾನ ಕ್ರಿಯೆಗಳ ವ್ಯಾಖ್ಯಾನದಲ್ಲಿ ಪಾದಕ್ಕೆ ಕ್ರಿಯೆಯ ಉಪಮೆಯನ್ನು ಜ್ಞಾನಕ್ಕೆ ಮುಡಿಯ ಮಾತನ್ನು ಮಹಾನುಭಾವಿಗಳು ಮಾರ್ನುಡಿದಿದ್ದಾರೆ. ಕ್ರಿಯೆಗೆ ಜ್ಞಾನವೇ ಪ್ರಾಣವು. ಪ್ರಾಣವಿಲ್ಲದ ಶರೀರ ಶವವಾಗುವಂತೆ; ಜ್ಞಾನಶೂನ್ಯವಾದ ಕ್ರಿಯೆಯು ಜಡವಾಗುತ್ತದೆ. ಕ್ರಿಯಾ-ಜ್ಞಾನಗಳ ಸಮನ್ವಯದಲ್ಲಿ ಭಾವ ಅಥವಾ ಅನುಭಾವ ಅನುಗೂಡುತ್ತದೆ. ಆದ್ದರಿಂದ ಅಡಿಪೀಠ  ಇಷ್ಟಲಿಂಗವಾದರೆ ಮುಡಿಪೀಠ ಪ್ರಾಣಲಿಂಗವಾಗುತ್ತದೆ. ನಡುವಿನ ಗೋಮುಖವು ದೃಢತರವಾದ ಭಾವ ಲಿಂಗವಾಗಿ ಪರಿಣಮಿಸುವದು.

ಕ್ರಿಯಾ ಜ್ಞಾನಗಳ ಸಮ-ಸಮುಚ್ಚಯದಲ್ಲಿ ಅನುಭಾವ ಬೆಳೆಯುವದು. ಈ ರೀತಿಯಾಗಿ ಕರದಿಷ್ಟಲಿಂಗದಲ್ಲಿ ಪ್ರಾಣ-ಭಾವಲಿಂಗಗಳು ಸೇರಿ ತ್ರಿವಿಧ ಬಗೆಯಾಗಿದ್ದ ಪರಿಯನ್ನು ಶ್ರೀಗುರುವರನು ಉಸುರುತ್ತಾನೆ. ಕ್ರಿಯಾಜ್ಞಾನಗಳು ಸಂಬಂಧವಾಗಿ ಆಚರಣೆಯಲ್ಲಿ ಅಳವಟ್ಟರೆ ಭಾವಬಲಿಯುವದು. ಭಾವ ದೃಢವಾದರೆ ಆ ಕ್ರಿಯಾಲಿಂಗ (ಇಷ್ಟಲಿಂಗ) ಹಾಗೂ ಜ್ಞಾನ (ಪ್ರಾಣ) ಲಿಂಗಗಳು ಭಾವ ಲಿಂಗದಲ್ಲಿ ಒಂದುಗೂಡುವವು. ಅದು ಕಾರಣವೇ ಶಿವಕವಿಯು ಭಾವಕ್ಕೆ ದೃಢ ಭಾವವೆಂದು ಸ್ಪಷ್ಟಪಡಿಸಿರುವನು. “ಭಾವದಲ್ಲಿ ಬ್ರಹ್ಮವೆಂಬ ಮಾತನ್ನು ಅನುಭಾವಿಗಳೂ ಹೇಳಿದ್ದುಂಟು. “ಯಥಾ ಭಾವಸ್ತಥಾ ಸಿದ್ಧಿರ್ಭವತಿ”, ಶುದ್ಧಭಾವದಂತೆ ಸಿದ್ಧಿಯು ಸಂಭವಿಸುವದೆಂದು ಜ್ಞಾನಿಗಳೂ ಪ್ರತಿಪಾದಿಸಿರುವರು.

 ಮೂಢ ಮನುಷ್ಯನ ಭಾವದಲ್ಲಿ ದೃಢತೆಯಿರುತ್ತದೆ. ಗುರುವಾಕ್ಯದಲ್ಲಿ ಶ್ರದ್ಧೆ- ವಿಶ್ವಾಸಗಳು ಘಟ್ಟಿಗೊಂಡಿರುತ್ತವೆ. ಅಂತೆಯೇ ಮುಗ್ಧ ಭಕ್ತನು ಕಲ್ಲನ್ನೂ ದೇವನನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ವಿಪುಲವಾಗಿವೆ. ಹಾಲುಮತದ ಗೊಲ್ಲಾಳನು ಕುರಿಯ ಹಿಕ್ಕಿಯಲ್ಲಿ ಶಿವಲಿಂಗವನ್ನು ಕಂಡನು. ಬೇಡರ ಕಣ್ಣಪ್ಪನ ದೃಢ ಭಾವಕ್ಕೆ ಶಿವನು ದೃಢತರ ಪದವಿಯನ್ನಿತ್ತನು. ಅರವತ್ತುಮೂರು ಪುರಾತನರ ಚರಿತ್ರೆಗಳಲ್ಲಿ ಭಾವದೃಢತೆಯೂ ಮತ್ತು ಆತ್ಮಸಮರ್ಪಣೆಯೂ ಪ್ರಮುಖವಾಗಿದೆ. ಭಾವಜೀವಿಯು ಆನಂದಮಯನಾಗಿರುತ್ತಾನೆ. ವಿಮರ್ಶಕನ ಭಾವದಲ್ಲಿ ದೃಢತೆಯಿರುವದಿಲ್ಲ. ಅವನಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಚಿಕಿತ್ಸಕ ಬುದ್ಧಿ-ಭಾವಗಳು ನೆಲಸಿರುತ್ತವೆ.

 ಶರಣರು ಕೇವಲ ಭಾವ ಜೀವಿಗಳಲ್ಲ, ಕೇವಲ ಜ್ಞಾನಿಗಳಲ್ಲ. ಕರ್ಮಠರೂ ಅವರಲ್ಲ, ಅವರು ಕ್ರಿಯಾ-ಜ್ಞಾನಗಳ ಸಮ್ಮಿಲನದಲ್ಲಿ ಸಮರಸಾನಂದದ ಸವಿಯುಂಡರು ಸಂತಸಪಟ್ಟರು. ಇದುವೇ ಲಿಂಗಾನುಸಂಧಾನದ ಅರಿವು, ಅನುಭಾವದ ಕುರುಹು.

 ಇಂಥ ಕ್ರಿಯಾ-ಜ್ಞಾನ-ಭಾವಗಳ ಮುಪ್ಪುರಿಯೇ ಈ ದೃಷ್ಟಿಲಿಂಗವೆಂದು ಬೋಧಿಸಿದ ಸದ್ಗುರುವೆ ! ಅದರಂತಜ್ಞಾನಸವಿಯನ್ನು ಸವಿಯುವ ಸೌಭಾಗ್ಯವನ್ನು ಸಮನಿಸು.

ಮೊದಲ ಪೀಠವೆ ಸ್ವಯ | ತುದಿಯ ಪೀಠವೆ ಚರ ಮ-

ಧ್ಯದ ಗೋಮುಖ ಪರತತ್ತ್ವ ಜಂಗಮವು ಎಂ

ಬುದ ಪೇಳ್ದ ಗುರುವೆ ಕೃಪೆಯಾಗು     ||೧೪  ||

ಲಿಂಗವು ಇಷ್ಟ-ಪ್ರಾಣ-ಭಾವವೆಂದು ತ್ರಿವಿಧವಾಗಿರುವಂತೆ ಲಿಂಗದ ಹರಣ ವಾದ ಜಂಗಮವೂ ಮೂಬಗೆಯಾಗಿದೆ. ಜಂಗಮದಲ್ಲಿ ಸ್ವಯಜಂಗಮನೆಂತಲೂ ಚರಜಂಗಮನೆಂತಲೂ, ಪರಜಂಗಮನೆಂತಲೂ, ಮೂರು ವಿಧ. ಈ ಮೂವರ ಸ್ವಸ್ವರೂಪ ಲಕ್ಷಣವನ್ನು ಶಿವಕವಿಯು ಮುಂದೆ ಜಂಗಮತತ್ತ್ವವನ್ನು ಪ್ರತಿಪಾದಿಸುವ ಅವಸರದಲ್ಲಿ ವರ್ಣಿಸಿದ್ದಾನೆ. ಲಿಂಗಪೂಜೆಯ ಫಲ ಜಂಗಮನ ಸಾಕ್ಷಾತ್ಕಾರ; ಹಾಗೂ ಪಾದೋದಕ-ಪ್ರಸಾದಗಳು.

  ಸಾಮಾನ್ಯವಾಗಿ ಯಾವುದೊಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ಅರಿಯುವಾಗ ಆದ್ಯಂತಗಳನ್ನು ಅವಲೋಕಿಸುತ್ತೇವೆ. ಕೆಳಗೆ ಮತ್ತು ಮೇಲೆ ನೋಡುತ್ತೇವೆ. ಅದರೊಳಗಿನ ಗುಣವನ್ನು ಪರೀಕ್ಷಿಸಬೇಕಾಗುವದು. ಕಾರಣ ಪೃಥ್ವಿಯಲ್ಲಿ ಸ್ಥೂಲವಾಗಿ ವ್ಯಾಪಿಸಿರುವದನ್ನು ನೋಡುತ್ತೇವೆ. ಆ ಮೇಲೆ ಅದು ಏನೆಂಬುದನ್ನು ವಿಚಾರಿಸಲು ಮೇಲೆ ನೋಡುತ್ತೇವೆ. ಉದಾಹರಣೆಗಾಗಿ ಒಂದು ವನವನ್ನು ಪ್ರವೇಶಿಸುತ್ತ ಗಿಡಗಳ ಬೊಡ್ಡೆಗಳನ್ನು ಕಾಣುತ್ತೇವೆ. ಇದು ಯಾವ ಮರವೆಂಬ ವಿಚಾರ ಸುಳಿಯುತ್ತಲೇ ಮೇಲೆ ಅವಲೋಕಿಸಿ ಅರ್ಥೈಸಿಕೊಳ್ಳುತ್ತೇವೆ. ಇನ್ನು ಮಧ್ಯಭಾಗವು ಎರಡನ್ನು ಸಮನ್ವಯಗೊಳಿಸುವದು. ಹಾಗೆ, ಲಿಂಗದಲ್ಲಿ ಮೊದಲ ಪೀಠವು ಸ್ಥಾಯಿಯಾಗಿ (ಮೇಲಿನ ಬಾಣಕ್ಕೆ ಆಧಾರವಾಗಿ) ರುವದರಿಂದ ಅದು ಸ್ವಯ ಜಂಗಮವೆನಿಸುವದು. ಲಿಂಗಭಕ್ತನು ಲಿಂಗಪೂಜೆಯಲ್ಲಿ ತನ್ನ ದೃಷ್ಟಿ ಮನಗಳನ್ನು ಲಿಂಗದ ತುದಿಯ ಮೇಲಿರಿಸುವದರಿಂದ ಅದು ಚರಜಂಗಮವೆನಿಸುವದು. ಯಾಕಂದರೆ ಲಿಂಗದಲ್ಲಿ ದೃಷ್ಟಿ-ಮನಗಳು ಸಂಚಲನೆಗೊಳ್ಳುತ್ತಿರುವದರಿಂದ ಅದು ಚರಜಂಗಮವಾಗಿದೆ. ಮೊದಲ ಭಾಗ ಹಾಗೂ ತುದಿಗಳ ಅವಲೋಕನಯಲ್ಲಿ ಮಧ್ಯದ ಗೋಮುಖವು. ಮೇಲಿನವೆರಡೂ ಕ್ರಿಯೆಗಳಿಗೆ ಸಮನ್ವಯಗೊಂಡು ಪರವಾಗಿರುವುದರಿಂದ ಅದು ಪರಜಂಗಮವೆನಿಸುವದು. ಪರಜಂಗಮನು ಸ್ವಯ ಚರಜಂಗಮತ್ವದ ಕ್ರಿಯೆಗಳನ್ನು ಆಚರಿಸಿ ಮುಕ್ತನೆನಿಸುವನು. ತನ್ನ ಲಿಂಗಾನಂದದಲ್ಲಿಯೇ ತಲ್ಲೀನನಾಗಿರುವನು. ಅದು ಕಾರಣ ಪರತರವಾದ ಈ ಇಷ್ಟಲಿಂಗದಲ್ಲಿ ಲಿಂಗದ ಪ್ರಾಣವೆನಿಸಿದ ಜಂಗಮವು ಸ್ವಯ-ಚರ-ಪರವೆಂದು ಮೂಬಗೆಯಾಗಿ ಅಡಕವಾಗಿದೆಯೆಂಬ ತತ್ತ್ವವನ್ನು ಗುರುನಾಥನು ತಿಳಿಸಿಕೊಡುತ್ತಾನೆ.

ಗುರು-ಲಿಂಗ-ಜಂಗಮವು | ವರಭಾವ ಪ್ರಾಣೇಷ್ಟ

ಸ್ಥಿರ-ಚರ-ಪರ ಮೂರು-ಕರದಿಷ್ಟಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೫ ||

ಬಸವಲಿಂಗ ಶರಣರು ಶ್ರೇಷ್ಠದಾರ್ಶನಿಕರು, ಹಾಗೂ ಅನುಭಾವಿ ಕವಿಗಳು. ಅಂತೆಯೇ ಶಿವಾನುಭವವನ್ನು ತಿಳಿಯಲಿಚ್ಛಿಸುವ ಜಿಜ್ಞಾಸುವಿಗೆ ಪ್ರತಿಯೊಂದು ವಿಷಯವನ್ನು ಹಿಂಜಿ-ಹಿಂಜುವ ಜೊತೆಗೆ ಸಿಂಹಾವಲೋಕನವನ್ನು ಆಗಾಗ್ಗೆ ಮಾಡಿಸುತ್ತಾರೆ. ವನರಾಜನಾದ ಸಿಂಹವು ತಾನು ನಿಂತಲ್ಲಿಂದಲೇ ಹಿಂದಿನದನ್ನು ಮುಂದಿನದನ್ನೂ ಅವಲೋಕಿಸುತ್ತದೆ. ಧೀರನಾದವನು ಹಿಂದೆ ಅನುಭವಿಸಿದ ಅನುಭವವನ್ನು ಮೆಲುಕು ಹಾಕುತ್ತ ಮುಂದೆ ಸಾಧಿಸಬೇಕಾದುದನ್ನು ಆಲೋಚಿ ಸುತ್ತಾನೆ. ಹಿಂದಿನ ಅನುಭವವನ್ನು ಸಿಂಹಾವಲೋಕನಗೈಯುತ್ತಾನೆ. ಮೇಲಿನ ಕ್ಲಾಸಿಗೆ ಮುಂದು ವರೆಯುವ ವಿದ್ಯಾರ್ಥಿಯು ಹಿಂದಿನ ಅಭ್ಯಾಸವನ್ನು ಅವಲೋಕಿಸುತ್ತಿರ ಬೇಕು. ಬುನಾದಿ ಭದ್ರವಾಗಿದ್ದರೆ ಭವನವು ಭದ್ರವಾಗುವದು. ಕಾರಣ ಸಾಧಕನು ಮುಂದುವರಿಯಲು ಹಿಂದಿನ ಸತ್ಕ್ರಿಯೆಗಳನ್ನು ಬಿಡದಂತೆ ಆಚರಿಸುತ್ತಿರಬೇಕು. ಮತ್ತು ಪೂರ್ವದ ಶಾಸ್ತ್ರ ಶ್ರವಣವನ್ನು (ಹಿಂದಿನ ಪ್ರಕ್ರಿಯೆಯನ್ನು ಮನದಲ್ಲಿಟ್ಟುಕೊಂಡರೆ ಮುಂದಣ ಅನುಭವವು ಗಮ್ಯವಾಗುವದು.

 ಶಿವಕವಿಯು ಆಗಾಗ್ಗೆ ಹಿಂದೆ ಹೇಳಿದ ವಿಷಯವನ್ನು ಅಲ್ಲಲ್ಲಿ ಸಮಾಹಾರ ಮಾಡುತ್ತಾನೆ. ಲಿಂಗದಲ್ಲಿ ಗುರು-ಲಿಂಗ-ಜಂಗಮವೆಂಬ ತ್ರಿವಿಧ ಪೂಜ್ಯವಸ್ತುಗಳು ವ್ಯಾಪಿಸಿರುವಂತೆ ಭಾವಲಿಂಗ-ಪ್ರಾಣಲಿಂಗ ಇಷ್ಟಲಿಂಗಗಳು ಒಂದಕ್ಕೊಂದು ಹೊಂದಿಕೊಂಡಿವೆ. ಜೊತೆಗೆ ಲಿಂಗದ ಚಿತ್ಕಳೆಯೆನಿಸಿದ ಸ್ವಯಜಂಗಮ, ಚರಜಂಗಮ, ಪರಜಂಗಮದ ಭಾವ ಭರಿತವಾಗಿದೆ.

 ಬ್ರಹ್ಮಾಂಡಗಳ ಮಹಾಲಿಂಗದಲ್ಲಿ ಹುದುಗಿಕೊಂಡಿದ್ದ ಶಕ್ತಿ ಚಿತ್ಕಳಾರೂಪ ಕರದಿಷ್ಟ ಲಿಂಗದಲ್ಲಿ ಅಡಗಿದೆ. ಲಿಂಗದೊಳಗೆ ಎಲ್ಲವೂ ಅಡಗಿದ್ದು ಸಕಲರಲ್ಲಿ ಲಿಂಗದ ವ್ಯಾಪಕತೆಯಿರುವಂತೆ, ಇಷ್ಟಲಿಂಗದಲ್ಲಿ ಶಿಷ್ಯನ ಸಕಲ ಚೈತನ್ಯವು ಹುದುಗಿಕೊಂಡು ಶಿಷ್ಯನಲ್ಲಿ ಪರಿಪೂರ್ಣವಾಗಿ ಲಿಂಗದ ಚೇತನ ಪಸರಿಸಿಕೊಂಡಿರುತ್ತದೆ. ಇಂಥ ಲಿಂಗದಲ್ಲಿ ಪೂಜ್ಯ ವಸ್ತುಗಳ ಸಮಾವೇಶ ಸಮನಿಸಿದೆ. ಯಾಕೆಂದರೆ ಪರಾತ್ಪರ ಪರವಸ್ತುವೇ ಸಕಲನೆನಿಸಿ ಗುರುವಾಗಿ ಲಿಂಗವನ್ನೀಯುತ್ತಾನೆ. ಅರುಹಿನ ಕುರುಹಾಗಿ ಚಿಚ್ಚೈತನ್ಯವೆನಿಸಿದ ಲಿಂಗವು ಪೂಜೆಗೊಳ್ಳುತ್ತದೆ. ಲಿಂಗಕ್ಕೇನೆ ಚೇತನವೆನಿಸಿದ ಜಂಗಮನ ಕೃಪೆಯೂ ಅತ್ಯವಶ್ಯ. ಆದುದರಿಂದ ಲಿಂಗದಲ್ಲಿ ತ್ರಿವಿಧ ವಸ್ತುಗಳ ಅಭಿನ್ನತೆಯಿದೆ. ಲಿಂಗಭಕ್ತನು ಈ ತ್ರಿವಿಧ ಪೂಜ್ಯರನ್ನು ಭಿನ್ನವಾಗಿ ಕಾಣಬಾರದು. ಅದರಲ್ಲೂ ಲಿಂಗದ ಚೈತನ್ಯನೆನಿಸಿದ ಜಂಗಮನ ತ್ರಿವಿಧ ರೂಪಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಇಂಥ ಅಪ್ರತಿಮ ಸ್ವರೂಪದ ಲಿಂಗವು ಅಸದೃಶವಾದುದು. ಅನುಪಮವಾದುದು.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3

ಜ.ಚ.ನಿ

ಹಿನ್ನೆಲೆ

ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ

ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು

ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು

ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ  ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.

 ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.

ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!

 ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.

 ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.

ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.

 ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.

 ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ  ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು.     ಸಮಾಜಸೂರ್ಯೋದಯವಾಯಿತು.

ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು

ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.

ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !

ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!

 ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?

 ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.

ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?

ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.

ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.

ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.

ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.

ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು.   ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.

ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.