ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಸೆಪ್ಟಂಬರ ೨೦೨೧ ರ ಸಂಚಿಕೆ
೫. ಸದ್ಗುರುವಿನ ಮಹಿಮಾತಿಶಯ
ಪರಕೆ ಪರವಾಗಿರ್ದ | ಪರತತ್ವ ಮೂರ್ತಿಯ ನಿಜ
ದಿರವೆ ರೂಪಾಗಿ ಧರೆಯೊಳಗೆ ಚರಿಸುತಿಹ
ಪರಮ ಶ್ರೀಗುರುವೆ ಕೃಪೆಯಾಗು || ೧೬ ||
ಗುರುಕೃಪೆಯ ಅವಶ್ಯಕತೆಯನ್ನು ನಿರೂಪಿಸಿ ಸಂತೃಪ್ತನಾಗದ ಶಿವಕವಿಯು ಸದ್ಗುರುವಿನ ಮಹಿಮಾತಿಶಯವನ್ನು ಹನ್ನೊಂದು ನುಡಿಗಳಲ್ಲಿ ವಿಶದೀಕರಿಸುತ್ತಾನೆ.
ಪರಶಬ್ದದ ಅರ್ಥ ಅನಂತ ಇವೆ. ಪರಶಬ್ದವು ವಿಶೇಷಣವಾಗಿ ನಾಮಪದವಾಗಿ, ಅವ್ಯಯವಾಗಿ ಪ್ರಯೋಗವಾಗಿ ವಿಭಿನ್ನ ಅರ್ಥಗಳನ್ನು ಕೊಡುತ್ತದೆ. ಇಲ್ಲಿ’ಪರ’ ಅಂದರೆ ದೂರದ, ಆಚೆಯ ಮೇಲಿನ ಎಂಬರ್ಥವನ್ನು ಮಾಡುವದೇ ವಿಹಿತ.
ಪರತತ್ವಮೂರ್ತಿಯು ಪರಕ್ಕೆ ಪರವಾಗಿದೆ. ಪರಮಾತ್ಮನು ಕಾಣದ ನಿರ್ಗುಣನು.ಪರತತ್ವಮೂರ್ತಿಯ ಇರುವಿಕೆಯನ್ನು ತಿಳಿಯುವದು ಸುಲಭವಲ್ಲ. ಅಂಥ ಪರ ವಸ್ತುವಿನ ಸ್ವರೂಪವನ್ನು ಕಠೋಪನಿಷತ್ತಿನಲ್ಲಿ ಯಮರಾಜನು ನಚಿಕೇತನಿಗೆ ಬೋಧಿಸಿದ್ದುಉಲ್ಲೇಖನೀಯವಾಗಿದೆ.
ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್
ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್ |
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||
ಹುಟ್ಟುವದು, ಸಾಯುವದು ಶರೀರವಲ್ಲದೆ; ನಿತ್ಯನೂ, ಪುರಾಣ ಪುರುಷನೂ,ಶಾಶ್ವತನೂ ಎಂದು ಪ್ರಸಿದ್ಧನಾದ ಆತ್ಮನಲ್ಲ. ಆತ್ಮವು ನಿತ್ಯವಾದ ವಸ್ತು . ಅದಕ್ಕೆಯಾವಾಗಲೂ ಮರಣವಿಲ್ಲ. ಮತ್ತು ಅವಸ್ಥಾಧಿಕೃತ ದೋಷಗಳು ಅದಕ್ಕೆ ಅಂಟುವದಿಲ್ಲ. ಅದು ನಮ್ಮ ಇಂದ್ರಿಯ, ಮನ, ಬುದ್ಧಿ, ಪ್ರಾಣಕ್ಕಿಂತಲೂ ಬೇರೆಯಾಗಿರುತ್ತದೆ. ಉಪನಿಷತ್ತುಗಳಲ್ಲಿ ಆತ್ಮತತ್ತ್ವವನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ.ನಮ್ಮ ಶರಣರು ಉಪನಿಷತ್ ವಿಚಾರಕ್ಕಿಂತಲೂ ಆತ್ಮವಸ್ತುವನ್ನು ಬಹು ಸೂಕ್ಷ್ಮವಾಗಿಯೂ, ವಿಚಾರಪೂರ್ವಕವಾಗಿಯೂ ಮಂಡಿಸಿದ್ದಾರೆ.
ಪ್ರಭುದೇವರು :
ಆದಿಯಾಧಾರವಿಲ್ಲದಂದು ಹಮ್ಮಬಿಮ್ಮುಗಳಿಲ್ಲದಂದು,
ಶೂನ್ಯನಿಶ್ಯೂನ್ಯವಿಲ್ಲದಂದು ಸುರಾಳ-ನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ
ಚನ್ನಬಸವಣ್ಣನವರು :
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೆ
ಸ್ವಯಂಭು ವಾಗಿರ್ದಿರಯ್ಯಾ !
ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ
ಅನಂತಕಾಲ ವಿರ್ದಿರಲ್ಲಾ!
ನಿಮ್ಮ ಆದ್ಯಂತವ ನೀವೆ ಅರಿವುತಿದ್ದಿರಲ್ಲಾ !
ನಿಮ್ಮ ನಿಜಭಾವವ ನೀವೆ ಬಲ್ಲಿರಿ
ಕೂಡಲ ಚನ್ನಸಂಗಮದೇವಾ.
ಮಡಿವಾಳ ಮಾಚರಸ :
ಆದಿಯನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು,
ಸಾಧ್ಯ ಅಸಾಧ್ಯವಿಲ್ಲದಂದು, ರೂಪು ನಿರೂಪಿಲ್ಲದಂದು
ಸ್ಕೂಲ-ಸೂಕ್ಷ್ಮವಿಲ್ಲದಂದು
ಸಾಕಾರ-ನಿರಾಕಾರವೆಂಬ ವಾಕು ಹುಟ್ಟದಂದು
ದ್ವ್ಯತಾದ್ವ್ಯೆತವಾಗದಂದು
ಶಂಕರ-ಶಶಿಧರ, ಈಶ್ವರರೆಂಬ ಗಣಾಧೀಶ್ವರರಿಲ್ಲದಂದು
ವರ್ತನೆ ನಿರ್ವತ್ರನೆಯಿಲ್ಲದಂದು,
ಉಮೆಯ ಕಲ್ಯಾಣವಾಗದಂದು
ಇವರಾರೂ ಒಬ್ಬರ ನಾಮ ಸೀಮೆಯಿಲ್ಲದಂದು
ನೀನು ಉಲುಹಡಗಿರ್ದೆಯಲ್ಲಾ
ಕಲಿದೇವರ ದೇವಯ್ಯಾ !
ಬಸವಣ್ಣನವರು :
ಅಮೂಲ್ಯನು, ಅಪ್ರಮಾಣನು, ಅಗೋಚರ ಲಿಂಗವು
ಆದಿ ಮಧ್ಯ, ಅಂತ್ಯವಿಲ್ಲದ ಲಿಂಗವು
ಸ್ವತಂತ್ರ ಲಿಂಗವು, ನಿತ್ಯನಿರ್ಮಲ ಲಿಂಗವು,
ಅಯೋನಿ ಸಂಭವನಯ್ಯಾ ನಮ್ಮ ಕೂಡಲಸಂಗಮದೇವಯ್ಯ
ಈ ಎಲ್ಲ ವಚನಗಳಿಂದ ಪರಕ್ಕೆ ಪರವಾದ ಪರವಸ್ತುವಿನ ನಿಜರೂಪವು ಗೋಚರಿಸದೆ ಇರದು. ಯಾವ ಲೀಲೆಯಿಲ್ಲದೆ ಸ್ವಯಂಭುವಾದುದೇ ಪರಾತ್ಪರ ಪರವಸ್ತು. ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ತಮ್ಮ ಅನುಭವ ಗೀತೆಯಲ್ಲಿ
ರೂಪು ರೂಪಿನೊಳಡಗಿ ರೂಪಿಸದೆ ನಿಂದ ನಿಜ
ರೂಪು ನಿಶ್ಚಲವಾಗಿ ಸಂಚಲಿಸದೆ |
ತಾ ಪರಾತ್ಪರವಾಗಿ ನಿಂದ ನಿಜಪದವು ಚಿ-
ದ್ರೂಪ ಕೂಡಲ ಚನ್ನ ಸಂಗಯ್ಯನು ||
ಪರಾತ್ಪರ ಪರವಸ್ತುವಿನ ಯಥಾರ್ಥರೂಪವನ್ನು ಚಿತ್ರಿಸಿದ್ದಾರೆ.
ಕಲ್ಲುಮಠದ ಪ್ರಭುದೇವರು ತಮ್ಮ ‘ಲಿಂಗಲೀಲಾ-ವಿಲಾಸಚಾರಿತ್ರ’ದಲ್ಲಿ ಈ ಪರವಸ್ತು ಅಥವಾ ನಿಷ್ಕಲ ಲಿಂಗದ ವಿಲಾಸವನ್ನು ಕುರಿತು ‘ವಾಙ್ಮನಕ್ಕೆ ಬಾರದ ಅಖಂಡಾದ್ವಯ ನಿತ್ಯ-ನಿರವಯ ಪರಿಪೂರ್ಣ ಚೈತನ್ಯಜ್ಞಾನಪ್ರಭಾ ಬೆಳಗಿ ನಿಂದೊಪ್ಪುತಿಪ್ಪುದು ನಿಷ್ಕಲ ಪರಶಿವಲಿಂಗವು…. ಸುಚಿತ್ರಾನಂದಮಯವಾಗಿ ತನ್ನ ಜ್ಞಾನವಿಲಾಸಾನಂದ ಲೀಲೆಯಿಂದ ಅಖಂಡ ತೇಜೋ ಮೂರ್ತಿಯಾದ ಮಹಾಲಿಂಗವಾಯಿತ್ತು’ ಎಂದು ವರ್ಣಿಸಿ ಈ ಮಹಾಲಿಂಗದ ಚಿದ್ವಿಲಾಸ ಲೀಲೆಯಿಂದಲೆ ಸಮಸ್ತ ಜಗತ್ತಿನ ಉದಯವಾಯಿತೆಂದು ವರ್ಣಿಸಿದ್ದಾರೆ. ಜೀವನಿಗೆ ದೇಹ ಧರ್ಮದ ಸಂಬಂಧವಾಗಿ ಅಹಂ ಮಮತೆಯಿಂದ ಅಜ್ಞಾನವು ಉದ್ಭವಿಸುವದು.
ಅಜ್ಞಾನವೆಂಬ ಕತ್ತಲೆಯಿಂದ ಪಾರಾಗದ ಜೀವನನ್ನು ಉದ್ಧರಿಸಲು ಆ ಪರಾತ್ಪರ ವಸ್ತುವೇ ಸದ್ಗುರುವಾಗಿ ಉದಯವಾಯಿತು. ಕಾಣದ ಕೇಳದ ಪರವಸ್ತುವಿನಿಂದ ಪ್ರಯೋಜನವಿಲ್ಲ. ಜಗತ್ತಿನ ಜನಗಳನ್ನು ಉದ್ಧರಿಸಲು ಸಾಕಾರ ಮೂರ್ತಿಯಾಗಿ ಉದ್ಭವಿಸಿ, ಅಲ್ಲಲ್ಲಿ ಸಂಚರಿಸುವ ಗುರುದೇವನು ಸಾಮಾನ್ಯನಲ್ಲ. ಈ ಬಗ್ಗೆ ವಚನಕಾರರ ವಚನಗಳು ವಿಪುಲವಾಗಿವೆ. ಸ್ವತಂತ್ರ ಸಿದ್ಧಲಿಂಗೇಶ್ವರರು –
ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ
ಅಂಧಕಾರದ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ
ಹೊಲಬುದಪ್ಪಿ ತಿಳವಿಲ್ಲದೆ ಕಳವಳಗೊಳ್ಳುತ್ತಿದ್ದರಯ್ಯ
ಅಡವಿಯ ಹೊಕ್ಕ ಶಿಶುವಿನಂತೆ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ !
ನಿಮ್ಮ ಕರುಣವಾಗದನ್ನಕ್ಕ ಬಳಲುತ್ತಿದ್ದರಯ್ಯಾ ಹೊಲಬನರಿಯದೆ
ಗುರು ಕರುಣೆಯಿಂದಲ್ಲದೆ ಜಗದ ಅಜ್ಞಾನ ಹರಿಯದು ಜೀವಿಗಳ ಬದ್ಧತನವಳಿಯದು. ಹೊಲಬು ದೊರೆಯದು. ಸದ್ಗುರುವೇ ದಾರಿತೋರುವವನು, ಸೂರ್ಯನು ಬ್ರಹ್ಮಾಂಡವನ್ನು ಬೆಳಗಿದರೆ ಗುರುವರನು ಪಿಂಡಾಂಡವನ್ನು ಬೆಳಗುವನು.
ಬ್ರಹ್ಮಾಂಡಗತ ಕತ್ತಲೆಯ ಕಳೆಯುವನು ದಿನಕರನು.
ಪಿಂಡಾಂಡಗತ ಕತ್ತಲೆಯ ಕಳೆಯುವನು ಗುರುವರನು.
ನಿರಾಕಾರ ಶಿವನು ಭಕ್ತನಿಗೆ ತೋರುವವನಲ್ಲ.
ಸಾಕಾರ ಗುರುದೇವ ಭಕ್ತಹಿತ ಕೋರುವನೆಂದ
ನಮ್ಮ ಮೃಡಗಿರಿಯ ಅನ್ನದಾನೀಶ (ವ. ವ. ೧೧)
ಭಕ್ತ ಹಿತಕ್ಕಾಗಿ ಬಾಳುವವನೇ ಪರಮ ಗುರು. ಇಂಥವನೆ ಜಗದ ಜೀವಿಗಳ ಜಂಜಡವನ್ನು ನೀಗಿಸಿ ಸನ್ಮಾರ್ಗವನ್ನು ತೋರಬಲ್ಲನು.
ಪಿಂಡವಧರಿಸಿ ಬ್ರ | ಹ್ಮಾಂಡವನೊಳಕೊಂಡು
ಪಿಂಡಬ್ರಹ್ಮಾಂಡ | ಪರಿಪೂರ್ಣವೆನಿಸಿದ್ದ (ಅ)
ಖಂಡ ಶ್ರೀಗುರುವೇ ಕೃಪೆಯಾಗು || ೧೭ ||
ಪರಿಶುದ್ಧವಾದ ಅಂತಃಕರುಣವುಳ್ಳ ಜೀವನಿರುವ ಈ ಶರೀರವು ಪಿಂಡವನಿಸುವದು. ಬ್ರಹ್ಮಾಂಡವೆಂದರೆ ಶಿವನ ಮಹಾಕಾರ್ಯ ; ಈ ಜಗತ್ತು. ಪಿಂಡವು ಬ್ರಹ್ಮಾಂಡದ ಒಂದಂಶ, ಬ್ರಹ್ಮಾಂಡವು ಅಸಂಖ್ಯ ಪಿಂಡಾಂಡಗಳ ಸಮೂಹ. ಪಿಂಡವು ವ್ಯಷ್ಟಿಯಾದರೆ ಬ್ರಹ್ಮಾಂಡವು ಸಮಷ್ಟಿಯಾಗಿದೆ. ಎಲ್ಲವುಗಳನ್ನು ಒಳಗೊಂಡಿದೆ.ಪಿಂಡಾಂಡ ಮತ್ತು ಬ್ರಹ್ಮಾಂಡಗಳು ಒಂದಕ್ಕೊಂದು ಬೀಜವೃಕ್ಷ ನ್ಯಾಯದಂತೆ ಅನ್ನೋನ್ಯ ಸಂಬಂಧವನ್ನು ಹೊಂದಿವೆ. ಬೀಜದಲ್ಲಿ ವೃಕ್ಷವಿರುವಂತೆ, ವೃಕ್ಷದಲ್ಲಿ ಬೀಜವಿರುವದು. ಹಾಗೇ ಶರೀರದಲ್ಲಿ ಶಿವನ ಚೈತನ್ಯವಿದೆ. ಶಿವನಲ್ಲಿ ಈ ಜಗವೆಲ್ಲ ಅಡಗಿದೆ. ಆ ಶಿವನು ನಿಷ್ಕಲನಾಗಿರುವದರಿಂದ ಕಣ್ಣಿಗೆ ಕಾಣುವದಿಲ್ಲ. ಗುರುವು ಸಕಲ ನಾಗಿ, ಕಾಯವನ್ನು ಧರಿಸಿ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾನೆ. ಅದಕ್ಕಾಗಿ ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಪರಿಪೂರ್ಣನಾಗಿದ್ದಾನೆ. ಅಖಂಡನೆನಿಸಿ ಮೆರೆಯುತ್ತಿದ್ದಾನೆ.
ಗುರುವರನು ವ್ಯಷ್ಟಿಗತನಾದ ಶಿಷ್ಯನ ಪಿಂಡಾಂಡವನ್ನು ಪರಿಶುದ್ಧ ಗೊಳಿಸುತಿದ್ದರೂ ಬ್ರಹ್ಮಾಂಡದ (ಜಗತ್ತಿನ) ಪರಿಶೋಧಕನೂ ಆಗಿದ್ದಾನೆ. ಅದಕ್ಕಾಗಿ ಅವನು ಪರಿಪೂರ್ಣ ಸ್ವರೂಪನೆನಿಸುವನು. ಯಾಕೆಂದರೆ ಛಾಂದೋಗ್ಯೂಪನಿಷತ್ತಿನಲ್ಲಿ ಪ್ರತಿಪಾದಿಸಿದಂತೆ “ಏಕೇನ ವಿಜ್ಞಾನೇನ ಸರ್ವ೦ ವಿಜ್ಞಾತಂ ಭವತಿ |’ ಏಕೈಕನಾದ ಪರಶಿವನ (ಪರವಸ್ತುವಿನ) ಜ್ಞಾನವನ್ನು ಪಡೆದರೆ ತನ್ಮಯವಾದ ಸಕಲ ಜಗತ್ತಿನ ಜ್ಞಾನವಾಗುವದು. ಸದ್ಗುರುನಾಥನು ಪರವಸ್ತುವನ್ನು ಅರಿತು ಪರವಸ್ತುವೇ ತಾನಾಗಿರುತ್ತಾನೆ. ಪರವಸ್ತು ಪರಿಪೂರ್ಣ ಮತ್ತು ಅಖಂಡ ಸ್ವರೂಪವಲ್ಲವೆ ?
ಹದಿನಾಲ್ಕು ಭುವನ ತುಂ | ಬಿದುದೊಂದು ಬ್ರಹ್ಮಾಂಡ
ವದರಂತೆ ತೋರ-ಅಗಣಿತ ಬ್ರಹ್ಮಾಂಡ
ಕ್ಕಧಿಕಾರಿ ಗುರುವೆ ಕೃಪೆಯಾಗು || ೧೮ ||
ಬೃಹತ್ತೆಂದರೆ ದೊಡ್ಡದು. ಬೃಹತ್ತತೆಯುಳ್ಳುದೆ ಬ್ರಹ್ಮ ಅಂಡವೆಂದರೆ ತತ್ತಿ.ಬ್ರಹ್ಮಾಂಡವು ದೊಡ್ಡ ತತ್ತಿಯಾಕಾರದ್ದೆಂದು ಅನುಭವಿಗಳು ಹೇಳುತ್ತಾರೆ. ಈ ಬ್ರಹ್ಮಾಂಡವು ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ, ಪಾತಾಳ (ಇವು ಏಳು ಕೆಳಗಿವೆ)
ಭೂಲೋಕ, ಭುವರ್ಲೋಕ, ಸುವರ್ಲೋಕ, ಸತ್ಯಲೋಕ, ಜನಲೋಕ, ತಪೋಲೋಕ,ಮಹಾಲೋಕ (ಇವು ಏಳು ಮೇಲಿನವು) ಹೀಗೆ ಹದಿನಾಲ್ಕು ಭುವನಗಳಿಂದ ತುಂಬಿದೆ. ಹದಿನಾಲ್ಕು ಲೋಕಗಳಿಂದ ತುಂಬಿದುದೇ ಬ್ರಹ್ಮಾಂಡವೆಂದು ಹೆಸರು.ಶಿವನ ಉದರದಲ್ಲಿ ಅಸಂಖ್ಯ ಲೋಕಗಳು ಇರುವದರಿಂದ ವಿಷಪಾನ ಮಾಡದೇ ವಿಷಕಂಠನೆನಿಸಿದ ಪೌರಾಣಿಕ ಕಥೆ ಪ್ರಸಿದ್ಧವಿದೆ.
ಬ್ರಹ್ಮಾಂಡದಂತೆ ತೋರುವ, ಲೆಖವಿಲ್ಲದ ಸಮಸ್ತ ಬ್ರಹ್ಮಾಂಡಗಳಿಗೂ ಒಡೆಯನಾದವನು ಗುರುದೇವನೆ. ಗುರುವಿಲ್ಲದೆ ಮಾರ್ಗದರ್ಶನ ದೊರೆಯದು. ಯಾವ ಲೋಕದಲ್ಲಿಯಾದರೂ ಸದ್ಗುರುವು ಮಾರ್ಗದರ್ಶನ ಮಾಡಿದ ನಿದರ್ಶನಗಳು ಸಿಕ್ಕುತ್ತಿವೆ. ದೇವತೆಗಳ ಲೋಕದಲ್ಲಿ ಬೃಹಸ್ಪತಿಯು ಗುರುವಾದರೆ ರಾಕ್ಷಸ ಲೋಕದಲ್ಲಿ ಶುಕ್ರಾಚಾರ್ಯನು ಗುರುವಾಗಿದ್ದಾನೆ.
“ವರ್ಣ ಮಾತ್ರಂ ಕಲಿಸಿದಾತಂ ಗುರು” ಎಂದು ಕನ್ನಡ ಗಾದೆ ಗುರುವಿನ ಗುರುತನ್ನು ಸಾರುತ್ತಿದೆ. ಗುರುವಿಲ್ಲದೆ ಯಾವ ಜ್ಞಾನ ಸಿಕ್ಕಲಾರದು. “ಆಚಾರ್ಯ ದೇವೋ ಭವ’ವೆಂದು ವೇದವು ಸದ್ಗುರುವಿನ ವಿಭುತ್ವವನ್ನು ಉದ್ಘೋಷಿಸಿದೆ. ಸಕಲ ಲೋಕಂಗಳಿಗೆ ಪ್ರಭುವಾದ ಗುರುವಿನ ಕೃಪೆಯಾದವನಿಗೆ ಯಾವ ಕೊರತೆಯೂ ಆಗಲಾರದೆಂಬುದೇ ಶಿವಕವಿಯ ಆಶಯವಾಗಿದೆ.
ನಾದ-ಬಿಂದುಗಳೇಕ | ವಾದ ವಸ್ತುವಿಗೆ ನೀ-
ನಾದಿ ಚೈತನ್ಯನಾಗಿ ಶೋಭಿಸುತಿಪ್ಪಾ
ನಾದಿ ಶ್ರೀಗುರುವೆ ಕೃಪೆಯಾಗು || ೧೯ ||
ಬಸವಲಿಂಗಶರಣರು ನಿಷ್ಕಲನಾದ ಪರಶಿವನ ನಾದಬಿಂದು-ಕಲಾರೂಪ ವಾದ ಸ್ವರೂಪ ಲಕ್ಷಣವನ್ನು ಶ್ರೀಗುರುವಿನಲ್ಲಿ ಸಮನ್ವಯಗೊಳಿಸಿದ್ದಾರೆ. ಅನುಭವಿಗಳು ಪರಶಿವನನ್ನು ಶೂನ್ಯ ಸ್ವರೂಪದಲ್ಲಿ ಕಂಡು ಶೂನ್ಯಕ್ಕೂ ಚೇತನವಾದ ನಿಶೂನ್ಯವನ್ನು ಪರಿಶೋಧಿಸಿರುವರು. ನಾದವೆಂದರೆ ಧ್ವನಿ ; ಪ್ರಣವನಾದ. ಬಿಂದುವೆಂದರೆ ಪ್ರಕಾಶ, ಕಲೆಯೆಂದರೆ ಚೈತನ್ಯ, ನಾದ ಹೊರಹೊಮ್ಮಿದಾಗ ಪ್ರಣವ ಸ್ವರೂಪವು ಪ್ರಕಾಶಗೊಳ್ಳುವದು.ಮುಂದೆ ಪ್ರಕಾಶಕ್ಕೆ ಚೈತನ್ಯ ತುಂಬಲು ಕಲೆಯಾಗಿ ವ್ಯಕ್ತವಾಗುವದು. ಅಂದರೆ ಓಂಕಾರದ ನಾದ ಪ್ರಾರಂಭವಾಗಲು ಅದನ್ನು ಪ್ರಕಾಶಗೊಳಿಸಲು ಕಲೆಯಾಗಿ ಅಭಿವ್ಯಕ್ತವಾಗುವದು. ಅದು ಅಕ್ಷರ ವ್ಯಕ್ತರೂಪವನ್ನು ಹೊಂದುವದು. ಈ ನಾದ-ಬಿಂದು-ಕಲೆಗಳು ಒಂದಾದ ಆದಿ ಪರವಸ್ತುವಿಗೆ (ಶೂನ್ಯ ಶಿವನಿಗೆ) ಅನಾದಿ ಚೈತನ್ಯನಾಗಿ ಪರಿಶೋಭಿಸುವವನು ಶ್ರೀಗುರುವು. ಗುರುವು ಪರಾತ್ಪರ ಪರವಸ್ತುವಿನ ಪ್ರತಿರೂಪ. ನಿಶೂನ್ಯದ ಪ್ರತೀಕ.
ಪರ ಶಬ್ದವು ಪರಜಂಗಮನ ಬೋಧಕವಾಗಿದೆ. ಅನಾದಿ ವಸ್ತುವೇ ಜಂಗಮ ತತ್ತ್ವವು. ಅಂಥ ಜಂಗಮನ ಅಥವಾ ನಿರಾಭಾರಿ ಗುರುವಿನ ಪರಮ ಗುರುತ್ವದ ಕಲ್ಪನೆ ಅನಾದಿಯಾಗಿದೆ. ಗುರುತ್ವವನ್ನು ನೀಡುವ ಚೇತನ ಮತ್ತೊಂದಿಲ್ಲ. ಅದು ಅನಾದಿ ಸಂಸಿದ್ಧವಾಗಿದೆ. ಸ್ವಯಂ ಚೇತನವಾಗಿದೆ. ಅಂಥ ಶ್ರೀಗುರುವೆ ! ನಿನ್ನ ಶಿಷ್ಯನಲ್ಲಿಯೂ ನಾದಬಿಂದು-ಕಲೆಗಳನ್ನು ಜಾಗೃತಗೊಳಿಸು.
ಗುರುವು ಮಂತ್ರೋಪದೇಶಮಾಡಿ ಪ್ರಣವ ಪಂಚಾಕ್ಷರಿಯನ್ನು ತುಂಬುವನು.ಅರ್ಥಾತ್ ಸರ್ವಾಂಗದಲ್ಲಿ ಮಂತ್ರನ್ಯಾಸಗೊಳಿಸುವನು. ಇಷ್ಟಲಿಂಗವನ್ನು ಕರುಣಿಸಿ ಬಿಂದುವನ್ನು ನಿಲ್ಲಿಸಲು ಕಲಿಸುವನು. ಶ್ರೀ ಜ.ಚ.ನಿ. ಯವರು ಬಿಂದುವೆಂದರೆ ರಸವೆಂದೂ ಅರ್ಥೈಸಿರುವರು. ಲಿಂಗ ಪೂಜೆಯ ಫಲವಾಗಿ ಗುರುಚರಣದ ಕರುಣ ರಸಾಸ್ವಾದವೂ ಒಂದಲ್ಲವೆ ! ಲಿಂಗದಲ್ಲಿ ಬಿಂದು ನಿಂದೊಡೆ ಚೈತನ್ಯ ಬೆಳಗುವದು. ಇದೆಲ್ಲದಕ್ಕೂ ಶ್ರೀಗುರುವೇ ಕಾರಣನು. ಆ ಗುರುಚೈತನ್ಯವೇ ಎಲ್ಲಕ್ಕೂ ಚೇತನವಾಗಿದೆ.
ವಸುಧಾಕೃತ್ಯವ ಮಾಳ್ವ | ಶಶಿಭಾನು ಜ್ಯೋತಿಯಿಂ
ದೆಸೆವ ಬೆಳಗಿಂಗೆ ಮೂಲಕಳೆಯಾಗಿ ಶೋ-
ಭಿಸುವ ಶ್ರೀಗುರುವೆ ಕೃಪೆಯಾಗು || ೨೦ ||
ಮೇಲೆ ಶ್ರೀಗುರು ನಾದ-ಬಿಂದು-ಕಲಾಸ್ವರೂಪನೆಂದು ಪ್ರತಿಪಾದಿಸಿ ಇಲ್ಲಿ ಸ್ವಯಂಜ್ಯೋತಿ ಸ್ವರೂಪನೆಂದು ನಿರೂಪಿಸಿದ್ದಾನೆ. ವೀರವಿರಾಗಿಣಿ, ಜ್ಞಾನದಖಣಿ ಅಕ್ಕಮಹಾದೇವಿಯ ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ” ಎನ್ನುವ ವಚನದಲ್ಲಿ ಲೋಕವ್ಯವಹಾರಕ್ಕೆ ಸೂರ್ಯಚಂದ್ರರ ಬೆಳಕೇ ಕಾರಣವಾಗಿದೆ. ಸೂರ್ಯನು ಉದಯಿಸಿದಾಗ ಜೀವಿಗಳಲ್ಲಿ ನವಚೈತನ್ಯ ಜಾಗ್ರತವಾಗುತ್ತದೆ. ದಿನವೆಲ್ಲ ದುಡಿದು ದಣಿದ ಮಾನವರಿಗೆ ಇರುಳಿನಲ್ಲಿ ಚಂದ್ರನು ತನ್ನ ಆಹ್ಲಾದಕರ ಕಿರಣಗಳಿಂದ ಸಂತೃಪ್ತಿಯನ್ನು ನೀಡುತ್ತಾನೆ. ಅಗ್ನಿಯು ಆಹಾರವನ್ನು ಬೇಯಿಸುವದು, ಕತ್ತಲೆಯಲ್ಲಿ ಬೆಳಕನ್ನು ನೀಡುವದು. ಈ ಅಗ್ನಿಯು ಉರುವಲದ ಸಹಾಯದಿಂದ ವ್ಯಕ್ತವಾದರೆ ಚಂದ್ರನು ಸೂರ್ಯನ ಪ್ರಕಾಶವನ್ನು ಪಡೆದುಕೊಂಡೇ ಬೆಳಕನ್ನು ಬೀರುವನು. ವಿಜ್ಞಾನಿಗಳು ಶಶಿಯನ್ನು ಪರಪ್ರಕಾಶಿಯೆಂದು ಕಂಡು ಹಿಡಿದಿರುವರು. ಚಂದ್ರನಿಗೆ ಪ್ರಕಾಶವನ್ನು ಕೊಡುವ ರವಿಯಾದರೂ ಸ್ವಯಂಪ್ರಕಾಶ ವುಳ್ಳವನಲ್ಲ, ಇವೆಲ್ಲ ಬೆಳಕುಗಳಿಗೆ ಮೂಲಕಳೆಯಾಗಿ, ಚೈತನ್ಯವಾಗಿ ಪರಿಶೋಭಿಸುವ ವಸ್ತು ಮತ್ತೊಂದಿದೆ. ಈ ಮಾತನ್ನು ಶ್ವೇತಾಶ್ವತರ ಕೃತಿಯು ವ್ಯಕ್ತಗೊಳಿಸಿದೆ.
‘ನ ತತ್ರ ಸೂರ್ಯೋ ಭಾತಿ, ನ ಚಂದ್ರ ತಾರಕಾಃ |
ನೇಮಾ ವಿದ್ಯುತೋ ಭಾತಿ, ಕುತೋಯಮಗ್ನಿ: ||
ತಮೇವ ಬಾಂತಮನುಭಾತಿ ಸರ್ವಂ |
ತಸ್ಯ ಭಾಸಾ ಸರ್ವಮಿದಂ ವಿಭಾತಿ ||
ಸ್ವಯಂಜ್ಯೋತಿ ಪರಶಿವನ ಪ್ರಕಾಶದಿಂದಲೇ ಸೂರ್ಯ, ಚಂದ್ರ, ನಕ್ಷತ್ರ, ವಿದ್ಯುತ್ ಮತ್ತು ಅಗ್ನಿ ಇವೆಲ್ಲವುಗಳು ಬೆಳಗುತ್ತವೆ. ಆದರೆ ಇವುಗಳು ಮಹಾಪ್ರಕಾಶದೆದುರು ಏನೂ ಅಲ್ಲ. ಆ ಸ್ವಯಂಜ್ಯೋತಿಯ ಪ್ರಕಾಶವನ್ನು ಪಡೆದುಕೊಂಡೇ ಸೂರ್ಯಾದಿ ಗ್ರಹಗಳು ಬೆಳಗುತ್ತವೆ. ಪರಶಿವನ ಪ್ರಕಾಶವೇ ಎಲ್ಲಕ್ಕೂ ಕಾರಣವಾಗಿದೆ.
ಸ್ವಯಂಜ್ಯೋತಿ ಸ್ವರೂಪನಾದ ಪರಶಿವನೇ ಭಕ್ತೋದ್ಧಾರಕ್ಕಾಗಿ ಸಕಲ ರೂಪನಾಗಿ ಮೆರೆಯುತ್ತಿರುವವನು ಗುರುವೆಂಬುದು ಸ್ಪಷ್ಟವಾಗಿದೆ. ಸದ್ಗುರುನಾಥನು ಸ್ವಯಂಜ್ಯೋತಿಸ್ವರೂಪನು. ಸದ್ಗುರುವಿನ ಸನ್ನಿಧಿಯನ್ನು ಪಡೆದುಕೊಂಡರೆ ಅಜ್ಞಾನಾಂಧಕಾರದ ಸುಳಿವೂ ತೋರಲಾರದು. ಅಂತೆಯೇ ಕವಿಗಳು ಸದ್ಗುರುವಿನ ಸನ್ನಿಧಿಯಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.
ಜಾತಿಭೇದವನಳಿದು | ನೀತಿಮಾರ್ಗವ ಪೇಳಿ
ಓತು ತ್ರೈಭುವನ-ದಾರಾಧ್ಯ ನೆನಿಸಿದ ಅ-
ಜಾತ ಶ್ರೀ ಗುರುವೆ ಕೃಪೆಯಾಗು || ೨೧ ||
“ಚಾತುರ್ವಣ್ಯ್ರಂ ಮಯಾ ಸೃಷ್ಟಂ
ಗುಣಕರ್ಮ ವಿಭಾಗಶಃ’ || ಭ. ಗೀತೆ ||
ಗುಣ ಮತ್ತು ಕರ್ಮಭೇದದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳು ನನ್ನಿಂದ ನಿರ್ಮಿತವಾಗಿವೆಯೆಂದು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ. ವೇದವನ್ನು ಓದಿ ಬ್ರಾಹ್ಮಣನಾದರೆ, ಕತ್ತಿ ಹಿಡಿದು ಯುದ್ಧಮಾಡಿ ರಾಜ್ಯಗಳಿಸಿ ಕ್ಷತ್ರಿಯನೆನಿಸುವನು. ವ್ಯಾಪಾರಮಾಡಿ ವೈಶ್ಯನಾಗಿದ್ದರೆ, ಸೇವೆಗೈದು ಶೂದ್ರನೆನಿಸಿರುವನು.
ಇಂದಿನ ವೈಜ್ಞಾನಿಕಯುಗದ ಮಾನವನು ಈ ಚಾತುರ್ವಣ್ಯ್ರವನ್ನು ಒಪ್ಪುವ ದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದ, ಸ್ವಾರ್ಥಪೂರ್ವಕವಾಗಿ ಮಾನವ ಸಮಾಜದಲ್ಲಿ ಜಾತಿಭೇದಗಳನ್ನು ಕಲ್ಪಿಸಿ ವಿಭಿನ್ನತೆಯನ್ನುಂಟುಮಾಡಲ್ಪಟ್ಟಿದೆ.
ವಸ್ತುತಃ ಮಾನವಕುಲವು ಸಮಾನವಾದುದು. ಮೂಲಭೂತ ಹಕ್ಕುಗಳು ಸಕಲರಿಗೂ ಸೇರಿವೆ. ಆದರೆ ಜಾತಿ ವರ್ಣಾಶ್ರಮಗಳ ಸಂಕೋಲೆಯು ಮಾನವ ಕುಲವನ್ನು ಛಿದ್ರ ಛಿದ್ರಗೊಳಿಸಿದೆ. ಕಾಯಕಗಳಿಂದ ಬೆಳೆದುಬಂದ ವರ್ಗಗಳು ಜಾತಿಗಳಾಗಿ ಪರಿಣಮಿಸಿವೆ. ಶಿಕ್ಷಣಶೂನ್ಯ ಜನತೆಯನ್ನು ಬುದ್ಧಿವಂತನಾದವನು ದೂರ ದೂರ ಸರಿಸಿದನು. ವೇದಗಳನ್ನು ಕಲಿತು ಬಲ್ಲಿದನಾದವನು ಬ್ರಾಹ್ಮಣ ನೆನಿಸಿದನು.
ಬ್ರಾಹ್ಮಣನಾದವನು ಬ್ರಹ್ಮಜ್ಞಾನಿಯಾಗಿ ಸಮದರ್ಶಿತ್ವವನ್ನು ಪಡೆಯದೆ, ವೈದಿಕ ವೃತ್ತಿಯನ್ನು ಕೈಕೊಂಡು ಸರ್ವರಿಗೂ ಅಧಿಕನೆಂದೇ ಸಾರಿದನು. “ರಾಜಾ ಪ್ರತ್ಯಕ್ಷ ದೇವತಾ”ಯೆಂದು ಹೊಗಳಿ ಶರೀರ ಬಲದಿಂದ ಸದೃಢರಾದವರನ್ನು ಮೇಲೆತ್ತಿದನು. ಈ ಬಾಹುಬಲವುಳ್ಳವರನ್ನು ಕ್ಷತ್ರಿಯರನ್ನಾಗಿಸಿದನು. ವ್ಯಾವಹಾರಿಕ ಬುದ್ಧಿಯುಳ್ಳವರನ್ನು ವೈಶ್ಯರನ್ನಾಗಿ ಪರಿಗಣಿಸಿದನು, ವ್ಯಾಪಾರದಿಂದ ಬಂದ ಲಾಭದಲ್ಲಿ ಭೂಸುರನೆನಿಸಿದ ಬ್ರಾಹ್ಮಣನ ಹೊಟ್ಟೆ ಸುಖವಾಗಿ ತುಂಬುತ್ತ ಬಂದಿತು. (ಮಾನವಧರ್ಮ ಪುಟ ೧೧೩ ರಲ್ಲಿ) ಒಟ್ಟಿನ ಮೇಲೆ ಸ್ವಾರ್ಥ ಸಾಧನೆಯಿಂದಲೇ ಮಾನವ ಸಮಾಜವು ಭಿನ್ನ ಭಿನ್ನವಾಯಿತು.
ಅಣ್ಣ ಬಸವಣ್ಣನವರು “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಅಕ್ಕಸಾಲಿಗನಾದ.” ಎಂದು ಮುಂತಾಗಿ ಕಟುವಾಗಿ ತಿಳಿಸಿ ಜಾತಿಯ ಜಾಡ್ಯವನ್ನು ದೂರಮಾಡಿದರು. ಜಾತಿ ಮಾನವ ನಿರ್ಮಿತವಾದುದು. ಕಾಯಕದಿಂದ ಬರುವ ಜಾತಿಗಳು ಮಹತ್ವದವುಗಳಲ್ಲ. ದೇವನಿರ್ಮಿತ ಮಾನವಕುಲವೊಂದೇ ವಿಶಿಷ್ಟವಾಗಿದೆ. ಮನುಷ್ಯನಿರ್ಮಿತ ಕಾಯಕಗತ ಜಾತಿಗಳು ಅನಂತನಾಗಿರಬಹುದು. ಮಾನವ ಜಾತಿಯು ನೀತಿ ಭರಿತವಾಗಬೇಕು. ದೇವನ ಕೃಪೆಗೆ ಕಾರಣವಾಗಬೇಕು. ಆಗ ದೇವನೊಲಿದಾತನೇ ನಿಜವಾದ ಜಾತನೆಂದು ಶಿವಶರಣರು ಸಿದ್ಧಮಾಡಿದರು. ಜ್ಞಾನಿ ಗಳಾದವರಿಗೆ ಯಾವ ಜಾತಿಯ ಸೋಂಕಿರುವದಿಲ್ಲ. ಜ್ಞಾನಿಗಳಾದ ಕಬೀರದಾಸರು –
ಜಾತಿ ನ ಪೂಛೋ ಸಾಧೂಕಿ, ಪೂಛ ಲೀಜೀಯೇ ಜ್ಞಾನ |
ಮೌಲ ಕರೋ ತಲವಾರಕೀ, ರಹನೇ ದೋ ಮ್ಯಾನ ||
ಸತ್ಪುರುಷರ ಜಾತಿಯನ್ನು ಕೇಳಬೇಡ, ಜ್ಞಾನವನ್ನು ಕೇಳಿ ತಿಳಿದುಕೊ ಯಾಕಂದರೆ (ಖಡ) ಕತ್ತಿಗೆ ಬೆಲೆಯನ್ನು ಕಟ್ಟುವರಲ್ಲದೆ, ಕತ್ತಿಯ ಮೇಲಿನ ಒರೆಗೆ ಯಾರೂ ಬೆಲೆ ಕಟ್ಟುವದಿಲ್ಲವೆಂದು ಜಾತಿಯ ಜಾಡ್ಯವನ್ನು ಖಂಡಿಸಿರುವರು.
ವೀರಶೈವ ಸಿದ್ಧಾಂತದಲ್ಲಿ ಸದ್ಗುರುನಾಥನು ಶಿವದೀಕ್ಷೆಗೈದನೆಂದರೆ ಶಿಷ್ಯನ ಪೂರ್ವಾಶ್ರಮ ನಿರಸನವಾಗುವದು. “ಜನ್ಮನಾ ಜಾಯತೇ ಶೂದ್ರ: ಕರ್ಮಣಾ ದ್ವಿಜ ಉಚ್ಯತೇ ।” ಬ್ರಾಹ್ಮಣನ ಹೊಟ್ಟೆಯಲ್ಲಿ ಹುಟ್ಟಿದ ಶಿಶುವಿಗಾದರೂ ಶೂದ್ರತ್ವ ಬಿಡುವ ದಿಲ್ಲ, ಉಪನಯನ ಸಂಸ್ಕಾರದಿಂದಲೇ ದ್ವಿಜತ್ವ (ಬ್ರಾಹ್ಮಣ್ಯತ್ವ)ವು ಪ್ರಾಪ್ತವಾಗುತ್ತದೆ. ವೀರಶೈವಧರ್ಮದಲ್ಲಿ ಜಾತಿಸೂತಕವಿಲ್ಲ. ಇದು ತಮ್ಮ ಸೂಚಕವಾಗಿದೆ. ವೀರಶೈವನು ಗರ್ಭಾಷ್ಟಮಿಯಲ್ಲಿಯೇ ಗುರುವಿನಿಂದ ಗರ್ಭಸ್ಥ ಶಿಶುವಿಗೆ ಲಿಂಗಸಂಸ್ಕಾರ ಮಾಡಿಸಿ ಶೂದ್ರತ್ವವನ್ನು ಕಳೆಯುತ್ತಾನೆ. ಇಲ್ಲಿ ಶೂದ್ರತ್ವಕ್ಕೆ ಅವಕಾಶವೇ ಇಲ್ಲ. ಸಾಮಾನ್ಯವಾಗಿ ಎಲ್ಲ ಧರ್ಮಿಯರಲ್ಲಿ ಸ್ತ್ರೀಯರಿಗೆ ಸಂಸ್ಕಾರಗಳಿಲ್ಲ. ಆದರೆ ವೀರಶೈವರಲ್ಲಿ ಸ್ತ್ರೀಪುರುಷರೆಂಬ ಭೇದವಿಲ್ಲದೆ ಧರ್ಮಸಂಸ್ಕಾರ ನಡೆಯುವದು.
ಈ ಜಾತಿ ಸೂತಕವನ್ನು ಕಳೆಯುವ ಸಾಮರ್ಥ್ಯ ಸದ್ಗುರುವಿನಲ್ಲಿದೆ. ಗುರುವರನು ದೀಕ್ಷಾಸಂಸ್ಕಾರಗಳಿಂದ ಶಿಷ್ಯರ ಜಾತಿಭೇದಗಳನ್ನೆಲ್ಲ ಕಳೆದುಹಾಕುತ್ತಾನೆ. ಮಹಾಮಾನವ ಧರ್ಮದ ನೀತಿಯನ್ನು ಪ್ರೀತಿಯಿಂದ ಕಲಿಸುತ್ತ ಶರಣಕುಲದವನನ್ನಾಗಿ ಮಾಡುವನು. ನಿಜಗುಣರು ಕೈವಲ್ಯ ಪದ್ಧತಿಯಲ್ಲಿ –
“ದುರಿತಕರ್ಮವನೊಲ್ಲದಿರು, ಪುಣ್ಯವನೆ ಮಾಡು |
ಹರನಡಿವಿಡಿ, ಶಾಂತರೊಡನಾಡು ||
ಕರುಣವಿರಲಿ ಜೀವರೂಳು, ನೀತಿವಿದನಾಗು |
ಪೊರೆ ಪೊರ್ದಿದರನೆಂದು ಬೆಸಸುವ ||
ನಿಂದಿಸಿ ನುಡಿಯದಿರಾರನು ಮನಸಿಗೆ
ಬಂದತೆ ನಡೆಯದಿರಿಹದಲ್ಲಿ ||
ಕುಂದುವಡೆಯದಿರು ಕಾಮಾದಿಗಳನು ಜಯಿ
ಸೆಂದು ಕೈವಿಡಿದನುಗ್ರಹಿಸುವ ||”
ಎಂದು ಗುರುಬೋಧಿಸುವ ನೀತಿಮಾರ್ಗವನ್ನು ಸುಂದರವಾಗಿ ತಿಳಿಸಿರುವರು.ಗುರುನಾಥನು ಶಾಂತಿ, ಸಮಾಧಾನ, ಶಮ, ದಮ, ಸತ್ಯ, ಶೌಚ, ಅಸ್ತೇಯ, ಅಕ್ರೋಧ ಸದ್ಭಕ್ತಿ ಮೊದಲಾದ ನೈತಿಕ ಉಪದೇಶಾಮೃತವನ್ನು ಪ್ರೀತಿಯಿಂದ ಶಿಷ್ಯನಿಗಿತ್ತು ಶರಣ ಮಾರ್ಗದಲ್ಲಿ ಮುನ್ನಡೆಯಿಸುವನು. ಆದುದರಿಂದಲೇ ಗುರುವು ಮೂರುಲೋಕಗಳಿಗೂ ಪೂಜ್ಯನೆನಿಸುವನು. ತಾನು ಎಲ್ಲಜಾತಿಯ ಸಂಕೋಲೆಯನ್ನು ಬಿಡಿಸುವದರಿಂದಲೇ ಅಜಾತನು. ಜಾತಿಯ ಸೋಂಕು ಸದ್ಗುರುವಿಗಿಲ್ಲ. ಮಾಂಸಮಯ ಶರೀರ ಗುರುವಿನದಲ್ಲ. ಮಂತ್ರ ಮೂರಿಯೆನಿಸಿರುವನು. ಅಂಥವನೇ ಅಜಾತನು.
ಶ್ರೀಗುರುವೇ ! ನೀನೊಲಿದು ಎನ್ನನ್ನು ಸುಜಾತನನ್ನಾಗಿ ಮಾಡು. ಶಿಷ್ಯನು ಗುರುಕರಜಾತನಾಗಬೇಕಾದುದೇ ಮುಖ್ಯಗುರಿ. “ಜಾತಿಮತಗಳೆಷ್ಟಾದರೇನು ? ಸದ್ಗುರುವಿನ ನೀತಿಯೊಂದಲ್ಲವೆ !”
ಜೀವಜಾಲಗಳೊಳಗೆ | ಅವನಾದರೂ ನೀನು
ಕೈವಿಡಿದವನೆ-ಪಾವನಾತ್ಮಕ, ಗುರು
ದೇವ ನೀನೆನಗೆ ಕೃಪೆಯಾಗು II ೨೨ II
ಸಕಲಜೀವಿಗಳಿಗೆ ಲೇಸನ್ನು ಬಯಸುವದೇ ಅಚಾತನ ಕರ್ತವ್ಯ, ಗುರುರಾಯನು ಎಲ್ಲ ಜೀವಿಗಳಿಗೂ ಅಂತಃಕರಣವನ್ನು ನೀಡುತ್ತಾನೆ. ಸ್ವರ್ಗ ಮರ್ತ್ಯ-ಪಾತಾಳಗಳಲ್ಲಿಯ ದೇವತೆಗಳಿಗೆ ಮಾನವರಿಗೆ, ದಾನವರಿಗೆ ಸನ್ಮಾರ್ಗವನ್ನು ತೋರುತ್ತಾನೆ. ದೇವತೆಗಳಲ್ಲಿ ವಿಷಯಲೋಲುಪತೆ ಅಧಿಕವಾಗುತ್ತದೆ. ಅದಕ್ಕೆ ಅವರಿಗೆ ಶಮೆದಮೆಯನ್ನು ತಿಳಿಸಿ ದೇವತ್ವವನ್ನು ಉಳಿಸುತ್ತಾನೆ. ಮಾನವರಲ್ಲಿ ಸಂಕೋಚ ಸ್ವಭಾವ ವನ್ನು ಕಳೆದು ಮಾನವೀಯತೆಯನ್ನು ತುಂಬುತ್ತಾನೆ. ಕ್ರೂರರಾದ ದಾನವರಿಗೆ ದಯಾ ಧರ್ಮವನ್ನು ತಿಳಿಸಿ ಉದ್ಧರಿಸುತ್ತಾನೆ. ಗುರುವಿನಲ್ಲಿ ಭೇದ ಭಾವವಿರದು. ಜೀವಿಗಳಲ್ಲಿ ಯಾವಪ್ರಾಣಿಯಾದರೂ ಗುರುಸಾನ್ನಿಧ್ಯವನ್ನು ಬಯಸಿದರೆ ಅದಕ್ಕೆ ಗುರುಕೃಪೆಯಾಗದೇ ಇರದು. ಗುರುಕೃಪೆಯಾಗದೇ ಯಾವನೂ ಪಾವನನಾಗಲಾರನು. ಅದು ಕಾರಣ ಸದ್ಗುರುದೇವನನ್ನು ಶರಣು ಹೋಗಬೇಕು. ಚನ್ನಾಗಿ ನೆರೆನಂಬಬೇಕು ನಮ್ಮ ವಚನವಲ್ಲರಿಯಲ್ಲಿ –
ಆವಲೋಹವಾದಡೇನು ಪರುಷಕ್ಕೆ ಸಮಭಾವ;
ಆವ ಕಟ್ಟಿಗೆಯಾದಡೇನು ಅನಲಕ್ಕೆ ಸಮಭಾವ;
ಆವ ಕುಲದವನಾದಡೇನು ಸದ್ಗುರುವಿಗೆ ಸಮಭಾವ;
ಸಂಸಾರಸಾಗರವ ದಾಟಿಸದೇ ಬಿಡನು
ಇಂಥವನೇ ಗುರುದೇವ, ಅವನ ನೀನಂಬೆಂದ
ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೭)
ಸದ್ಗುರುವಿನ ಸಮದೃಷ್ಟಿ ವ್ಯಕ್ತವಾಗಿದೆ. ಪರುಷಮಣಿ ಸಾಮೀಪ್ಯಕ್ಕೆ ಬಂದ ಲೋಹವಾದರೂ ಹೊನ್ನಾಗದೇ ಬಿಡದು. ಬೆಂಕಿಯಲ್ಲಿ ಬಿದ್ದ ಯಾವ ಕಟ್ಟಿಗೆ ಯಾದರೂ ತತ್ಸ್ವರೂಪವನ್ನೇ ಹೊಂದುವದು, ಸದ್ಗುರುವಿನ ಸಾನಿಧ್ಯ ಇವಕ್ಕಿಂತಲೂ ಮಿಗಿಲಾಗಿದೆ. ಗುರುವಿನ ಕೈ ಬರಿಗೈಯಲ್ಲ. ಅದು ಪರುಷ ಹಸ್ತ, ಅಲ್ಲಲ್ಲ ! ಪರುಷಮಣಿಯನ್ನೇ ನಿರ್ಮಿಸುವ ಅಮೃತ ಹಸ್ತ, ದೇವರದಾಸಿಮಾರ್ಯರು-
ಉರಿವ ಕೆಂಡದ ಮೇಲೆ ತೃಣವ ತಂದಿಡಲು
ತೃಣವನಾ ಕೆಂಡ ನುಂಗಿದಂತೆ
ಗುರುಚರಣದ ಮೇಲೆ ತನುವ ತಂದಿಡಲು
ಸರ್ವಾಂಗವೆಲ್ಲ ಲಿಂಗಕಾಣಾ ರಾಮನಾಥ,
ಎಂದು ಗುರುವಿನ ಹಸ್ತದಂತೆ ಚರಣದ ಮಹತ್ವವನ್ನು ಬಿತ್ತರಿಸಿದ್ದಾರೆ. ಗುರು ಕೃಪಾಸ್ಪರ್ಶದಿಂದ ಶಿಷ್ಯನೂ ಗುರುತ್ವವನ್ನು ಪಡೆಯುವನು. ಓಗುರುವೆ ! ಗುರುದೇವ ! ನೀನೆನಗೆ ತಡಮಾಡದೆ ಕೃಪೆ ಮಾಡು.
ಹಲವು ಮಾತೇನು ನೀ | ನೊಲಿದು ಪಾದವನಿಟ್ಟ
ನೆಲವೆ ಸುಕ್ಷೇತ್ರ-ಜಲವೆ ಪಾವನ ತೀರ್ಥ
ಸುಲಭ ಶ್ರೀ ಗುರುವೆ ಕೃಪೆಯಾಗು || ೨೩ ||
ಶಿವಕವಿಗಳು ಗುರುಹಸ್ತ ಸ್ಪರ್ಶಪಡೆದ ಜೀವಿಯು ಪಾವನವಾಗುವಂತೆ ಗುರುಪಾದಸ್ಪರ್ಶಪಡೆದ ನೆಲ-ಜಲಗಳೂ ಕ್ಷೇತ್ರತೀರ್ಥಗಳಾಗುವವೆಂದು ಪ್ರತಿಪಾದಿಸಿದ್ದಾರೆ. ಗುರುಪಾದಸ್ಪರ್ಶದಿಂದ ಜಡವೂ ಚೈತನ್ಯಮಯವಾಗುವದೆಂಬುದನ್ನು ತಿಳಿಸಿದ್ದಾರೆ.
ಹಲವು ಗೊಳ್ಳು ಮಾತುಗಳಿಂದೇನು ? ಎಂದು ಅನುಭವಿಗಳಾದ ಶರಣರು ತಾವೇ ಪ್ರಶ್ನಿಸಿ ಉತ್ತರಿಸುತ್ತಾರೆ. ಗುರುವೆ ! ನೀನು ಕರುಣೆಯಿಂದ ಒಲಿದು ಪಾದವಿಟ್ಟ ಭೂಮಿಯು ಪರಮಕ್ಷೇತ್ರವಾಗುವದು. ನೀ ನಿಂದ, ಮಿಂದ ಜಲ ಪರಮ ಪಾವನ ತೀರ್ಥವಾಗುವದು. ಇಂಥ ಉದಹಾರಣೆಗಳು ಅನಂತವಾಗಿ ಕಾಣಬರುತ್ತಿವೆ. ಇದೇ ಮಾತನ್ನು ಮೊಗ್ಗೆಯ ಮಾಯಿದೇವರು ತಮ್ಮ ಶತಕತ್ರಯದಲ್ಲಿ
ಶರಣಂ ಶಾಂಭವಯೋಗಿ ಇದ್ದ ನೆಲನೇ ಕ್ಷೇತ್ರಂ ಪವಿತ್ರಂ ಪರಂ |
……ಡಿಸಲೆಂದು ಪೊಕ್ಕ ಜಲಮೇ ತೀರ್ಥಂ ಮಹಾಪಾವನಂ || ೧೮ ||
ಎಂದು ಶಿವಯೋಗಿ ಮೆಟ್ಟಿದ ನೆಲ, ಪೊಕ್ಕ ಜಲ ಪಾವನವಾಗುವವೆಂದು ತಿಳಿಸಿದ್ದಾರೆ. ಹೀಗೆ ಜಡವಾದ ನೆಲ-ಜಲಗಳನ್ನು ಸುಲಭವಾಗಿ ಪವಿತ್ರಗೊಳಿಸುವ ಶಕ್ತಿಯನ್ನು ಹೊಂದಿದ ಸದ್ಗುರುವೇ ನನ್ನನ್ನು ಪುನೀತನನ್ನಾಗಿ ಮಾಡೆಂದು ಬೇಡಿಕೊಂಡಿದ್ದಾರೆ.
ಇನ್ನುಳಿದ ಮಾತೇನು | ಮುನ್ನನೀನೊಲಿದು ನೀ-
ಮನ್ನಿಸಿದವನ-ಧನ್ಯನಾಗುವನು ಪ್ರ-
ಸನ್ನ ಶ್ರೀಗುರುವೆ ಕೃಪೆಯಾಗು || ೨೪ ||
ಸದ್ಗುರುವಿನ ಮಹಿಮಾತಿಶಯವನ್ನು ಮತ್ತೆ ಮತ್ತೆ ಎತ್ತಿ ತೋರಿಸಿದ್ದಾರೆ. ಬೇರೆ ಉದಾಹರಣೆಗಳನ್ನು ಉದಹರಿಸಿ ಪ್ರಯೋಜನವಿಲ್ಲ. ಗುರು ಕೃಪೆಗೆ ಯಾವ ದೃಷ್ಟಾಂತವೂ ಸರಿಬಾರದು. ಗುರುಕರುಣೆ ಸಣ್ಣದಲ್ಲ. ಗುರುಕರುಣೆಗೆ ಯಾವುದೂ ಸಮವಾಗದು. ಅದಕ್ಕಾಗಿ ಇನ್ನುಳಿದ ಮಾತೇನು” ಎಂದು ಪ್ರಸ್ತಾಪ ಮಾಡಿದ್ದಾರೆ.
ಗುರುಪ್ರಸನ್ನತೆ ಪ್ರಾಮುಖ್ಯ, ಸದ್ಗುರುವು ಸದಾಕಾಲವೂ ಪ್ರಸನ್ನನಾಗಿದ್ದರೂ ಶಿಷ್ಯನೂ ಸೇವೆಯನ್ನು ಸಲ್ಲಿಸಬೇಕಾಗುವದು. ಗೀತೆಯು ‘ಗುರು ಶುಶ್ರೂಷಯಾ ವಿದ್ಯಾ.” ಗುರುಸೇವೆಯ ಬಲದಿಂದಲೇ ಆತ್ಮವಿದ್ಯೆಯು ಲಭ್ಯವಾಗುವದು. ಸೇವೆ ಗುರುವಿನನ್ನು ತೀವ್ರವಾಗಿ ಪ್ರಸನ್ನನನ್ನಾಗಿಸುತ್ತದೆ. ಗುರು ಪ್ರಸನ್ನನಾಗಿ ಕರುಣೆ ದೋರಿದರೆ ಆ ಶಿಷ್ಯನು ಧನ್ಯನಾಗುವನು. ಗುರುಮನ್ನಣೆಗಿಂತ ಇನ್ನಾವ ಪದವಿಯಿದೆ?
ಗುರುಪಾದ ಸೇವೆ ಮಾಡುವ ಭಾಗ್ಯವನ್ನು ಬೇಡಿದ ಮಹಾನುಭಾವಿಗಳ ಉದಾಹರಣೆ ಗಳು ಅನಂತವಾಗಿವೆ. ಗುರು ಮನ್ನಣೆಯಲ್ಲಿ ಎಲ್ಲ ಗೌರವಗಳುಂಟು. ಗುರುವಿನ ಅನುಗ್ರಹವು ಭಕ್ತಿಯಿಂದಲ್ಲದೇ ಬೇರೆ ಯಾವ ಪ್ರಭಾವದಿಂದಲೂ ದೊರೆಯಲಾರದು. ಶಿಷ್ಯನ ಪರಿಶುದ್ಧ ಹೃದಯಕ್ಕೆ, ನಿರ್ಮಲಭಾವಕ್ಕೆ, ನಿಷ್ಕಾಮ ಭಕ್ತಿಗೆ ಗುರು ಕರುಣೆ ಕರಗಿ ಹರಿದುಬರುತ್ತದೆ. ಅಂತೆಯೇ ಶರಣರು ಯಾವ ಪದವಿಗೂ ಆಶೆಮಾಡದೇ ಗುರುಪಾದ ಸೇವೆಯನ್ನು ಬಯಸಿದರು. ಹಾವಿನಾಳ ಕಲ್ಲಯ್ಯ ಶರಣನು –
ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮ ಪದವಿಯ ನಿಮ್ಮೆದೆಯಲ್ಲಿ ಇರಿದುಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು.
ಮಹಾಲಿಂಗ ಕಲ್ಲೇಶ್ವರ ದೇವಾ,
ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿ ಸತಿಶಿರೋಮಣಿ ಲಕ್ಕಮ್ಮನು-
ಮಾಡುವ ಮಾಟವುಳ್ಳನ್ನಕ್ಕ ಬೇರೊಂದು
ಪದವನರಸಲೇತಕ್ಕೆ ?
ದಾಸೋಹವೆಂಬ ಸೇವೆಯ ಬಿಟ್ಟು
ನೀಸಲಾರದೆ ಕೈಲಾಸವೆಂಬ ಆಸೆಬೇಡ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವ ಕೈಲಾಸ
ಜಗದಣ್ಣ ಬಸವಣ್ಣನವರು –
ಬ್ರಹ್ಮಪದವಿಯನೊಲ್ಲೆ
ವಿಷ್ಣು ಪದವಿಯನೊಲ್ಲೆ
ರುದ್ರ ಪದವಿಯನೊಲ್ಲೆ
ಮತ್ತಾವ ಪದವಿಯನೊಲ್ಲೆನಯ್ಯಾ !
ಕೂಡಲಸಂಗಮದೇವಾ ! ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ
ಎಂದು ಮುಂತಾಗಿ ಶರಣರು ಸೇವಾಭಾವನೆಯಲ್ಲಿಯೇ ಶಿವನನ್ನು ಕಂಡಿದ್ದಾರೆ. ಗುರು ಪಾದ ಸೇವೆಯೇ ಸಾರ ಸರ್ವಸ್ವವಾಗಿದೆ. ಸದ್ಗುರು ಮನ್ನಣೆಯೇ ಜೀವನದ ಧೈಯವಾಗಿದೆ.
ದೊರೆಯೊಲಿದ ಬಡವಂಗೆ | ಧರೆಯ ಮನ್ನಣೆಯುಂಟು
ಗುರುವೆ ನೀನೊಲಿದ – ಶರಣಂಗೆ ಸರಿಯುಂಟೆ
ಕರುಣಿ ಶ್ರೀಗುರುವೆ ಕೃಪೆಯಾಗು || ೨೫ ||
ಮೇಲೆ ವಿವರಿಸಿದ ಗುರು ಮನ್ನಣೆಯ ಭಾಗ್ಯವನ್ನು ಲೌಕಿಕ ಉದಾಹರಣೆ ಯಿಂದ ಶಿವಕವಿಯು ಪುಷ್ಟಿಕರಿಸುತ್ತಾನೆ. ದೊರೆಯು ಧರೆಯ ಪಾಲಕ, ದೀನದಲಿತ ರಕ್ಷಕ. ನಿಷ್ಠಾವಂತ ಸೇವಕನು ಅರಸನ ಒಲುಮೆಯನ್ನು ಪಡೆದರೆ ರಾಜ್ಯದ ಜನರೆಲ್ಲ ಸೇವಕನಿಗೆ ಗೌರವ ನೀಡುತ್ತಾರೆ. ಅಂತೆಯೇ “ಅರಸು ಒಲಿದರೆ ಅರ್ಧರಾಜ್ಯ” ವೆಂಬ ನಾಣ್ಣುಡಿಯು ಪ್ರಸಿದ್ಧವಾಗಿದೆ. ಅರಸು ಕೆಲವು ಸ್ಥಾನಗಳ ಒಡೆಯ. ತನ್ನ ಪ್ರದೇಶದ ಅಧಿಕಾರಿಯು, ಆತನ ಒಲುಮೆಗೆ ಪಾತ್ರನಾದವನು ಸೀಮಿತ ಗೌರವ ಪಡೆಯಬಲ್ಲನು. ಆದರೆ-ಗುರುರಾಯ ತ್ರಿಲೋಕದೊಡೆಯ. ಜಗತ್ತಿಗೆಲ್ಲ ಗುರು, ಜಗದ್ಗುರುವೆನಿಸಿದ್ದಾನೆ. ಅವನು ಬ್ರಹ್ಮಾಂಡ ನಾಯಕನೆಂದು ಈ ಹಿಂದೆ ಹೊಗಳಿಸಿಕೊಂಡಿದ್ದಾನೆ. ಅಂಥ ಗುರುವಿನ ಕೃಪೆಗೆ ಒಳಗಾದ ಶರಣನಿಗೆ ಯಾರು ಸರಿಯಾಗಬಹುದು? ನೀತಿಕಾರರು.
“ಗುರುತ್ವಂ ನೃಪತ್ವಂ ಚ ನೈವ ತುಲ್ಯಂ ಕದಾಚನ |
ಸ್ವದೇಶೇ ಪೂಜ್ಯತೇ ರಾಜಾ ಗುರುಃ ಸರ್ವತ್ರ ಪೂಜ್ಯತೇ ||’
ಗುರುತ್ವವು ಮತ್ತು ನೃಪತ್ವವು ಎಂದೂ ಸರಿಬರಲಾರವು. ನೃಪನಾದರೂ ಗುರುವಿಗೆ ಮನ್ನಣೆ ನೀಡುತ್ತಾನೆ; ನೀಡಲೇಬೇಕು. ತನ್ನ ರಾಜ್ಯದಲ್ಲಿ ರಾಜನು ಗೌರವ ಪಡೆದರೆ ಜಗತ್ತಿನಲ್ಲೆಲ್ಲ ಗುರುರಾಯನು ಗೌರವ ಹೊಂದುತ್ತಾನೆಂದು ತಿಳಿಸಿದ್ದಾರೆ.ಅಸದೃಶನಾದ ಕರುಣಾಮಯ ಗುರುವೆ ! ನೀನೊಲಿದು ಗೌರವಕ್ಕೆ ಯೋಗ್ಯನನ್ನಾಗಿಸು.
ಕೊರಡು ಕೊನರುವದು ಬಲು | ಬರಡು ಹಯನಾಗುವದು
ಕುರುಡಂಗೆ ಕಣ್ಣು ಬಹುದು, ನಿನ್ನೊಲುಮೆ ಎಂ-
ದರಿದೆನೈ ಗುರುವೇ ಕೃಪೆಯಾಗು || ೨೬ ||
ಗುರುದೇವ ! ನಿನ್ನ ಒಲುಮೆಯ ಮಹತ್ವವು ಅನುಪಮವಾಗಿದೆ. ಅಸದೃಶವಾಗಿದೆ. ಮಾತಿಗೆ ಮೀರಿದೆ. ವರ್ಣನೆಗೆ ನಿಲುಕದಾಗಿದೆ. ನಿನ್ನ ಅಂತಃಕರುಣದ ಒಲುಮೆಯೆಂಬ ಅಮೃತ ಸಿಂಚನದಿಂದ ಒಣಗಿದ ಮರದ ತುಂಡು ಚಿಗುರುತ್ತದೆ.ಗೊಡ್ಡಾಕಳು ಚನ್ನಾಗಿ ಹಾಲು ಕರೆಯಬಲ್ಲುದು. ಕಣ್ಣಿಲ್ಲದ ಕುರುಡನು ಎಲ್ಲವನ್ನು ನೋಡಬಹುದು. ಎಲ್ಲದಕ್ಕೂ ನಿನ್ನ ಒಲುಮೆಯೆ ಮೂಲ ಕಾರಣವಾಗಿದೆ. ಹಾಲಕೆರೆ ಅನ್ನದಾನ ಸ್ವಾಮಿಗಳು ಹಿಮಾಲಯಕ್ಕೆ ಪ್ರಯಾಣ ಬೆಳಸಿದಾಗ ಅವರಪ್ಪಣೆಯಂತೆ ಪುರಾಣ ಶ್ರವಣಕ್ಕಾಗಿ ಹಾಕಿದ ಹಂದರ ಕಟ್ಟಿಗೆಗಳು ಚಿಗುರಿದ ಘಟನೆ ಅವರ ಪುರಾಣದಿಂದ ತಿಳಿದು ಬರುತ್ತದೆ. ಹಾವೇರಿ ಶಿವಬಸವ ಶ್ರೀಗಳ ಪುರಾಣ ಹಾಗೂ ಮೃಡಗಿರಿ ಅನ್ನದಾನೀಶ್ವರ ಲೀಲಾಮೃತಗಳಲ್ಲಿ ಆ ಪೂಜ್ಯರ ಕೃಪಾಶೀರ್ವಾದದಿಂದ ಬರಡಾಕಳುಗಳು ಹಾಲು ಕರೆದ ಸಂಗತಿಯು ವೇದ್ಯವಾಗುತ್ತದೆ. ಹಾನಗಲ್ಲ ಕುಮಾರ ಮಹಶಿವಯೋಗಿಯ ಧ್ಯಾನದಿಂದ ಕಣ್ಣಿಲ್ಲದ ಮುದಕಿಯು ಕಣ್ಣು ಪಡೆದ ಪವಾಡ ಬಹಳ ಹಿಂದಿನದಲ್ಲ.
ನೀನೊಲಿದರೆ ಕೊರಡು ಕೊನರುವದಯ್ಯಾ
ನೀನೊಲಿದರೆ ಬರಡು ಹಯನಹುದಯ್ಯಾ
ನೀನೊಲಿದರೆ ವಿಷವೆಲ್ಲ ಅಮೃತವಹುದಯ್ಯಾ
ನೀನೊಲಿದರೆ ಸಕಲ ಪಡಿ ಪದಾರ್ಥಗಳು
ಇದರಲ್ಲಿರ್ಪ್ಪವು ಕೂಡಲಸಂಗಮದೇವಾ !
ಎಂದು ಅಣ್ಣನವರು ಗುರುಸಂಗಮನಾಥನ ಒಲುಮೆಯ ಗರಿಮೆಯನ್ನು ಗುರುತಿಸಿದ್ದಾರೆ.
ಗುರುವೇ ! ಏನೆಲ್ಲವನ್ನು ಕೊಡಬಲ್ಲೆ. ನಿನ್ನ ಒಲುಮೆ ಎನ್ನ ಮೇಲಾಗಲಿ, ಎನ್ನಮತಿಯ ಅಮಂಗಲವು ದೂರಾಗಲಿ ಎಂಬ ಶಿವಕವಿಯ ಹೃದಯ ಧ್ವನಿ ಇಲ್ಲಿ ವ್ಯಕ್ತವಾಗುತ್ತದೆ. ಈ ರೀತಿ ಗುರುವಿನ ಮಹಿಮಾತಿಶಯನ್ನು ಪರಿಪರಿಯಾಗಿ ವರ್ಣಿಸುತ್ತಾನೆ.