Uncategorized

ಲೇಖಕರು : ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮೋಟಗಿಮಠ, ಅಥಣಿ

ಶಿವಯೋಗಿಗಳ ಶಿವಾವತಾರ ಅದು ಮನುಕುಲ ಸೂರ್ಯನ ಅವತಾರ. ಬದುಕು ವಿರಕ್ತಿಯ ಸಂವಿಧಾನ; ಬಾಳು ಸಮತೆಯ ಸುವಿಧಾನ! ನೆನಹು ಶರಣ ಜೀವನ, ನಡೆ ಬಸವಭಾವ, ಹೊರಗೆ ಬಯಲಬಿಂಬ. ಒಳಗೆ ಲಿಂಗಾಂಗಯೋಗ. ಮಾತು ವಚನದ ಒಲವಿನೋಂಕಾರ! ಈ ಅವತಾರ ಅಲ್ಲಮನ ಪೂರ್ಣಾವತಾರ!! ಶಿವಯೋಗಿ ಎಂದರೆ ಶಿವಯೋಗ. ಶಿವಯೋಗ ಎಂದರೆ; ಅಥಣಿಯ ಮುರುಘೇಂದ್ರ ಶಿವಯೋಗಿ!!

                              ಧರ್ಮಗುರು ಬಸವಣ್ಣನವರು ಶರಣರನ್ನು ಅಪ್ಪ ಬೊಪ್ಪ-ಅಯ್ಯ ಎಂದು ಅಪ್ಪಿ ಒಪ್ಪಿಕೊಂಡರು. ಅಂತಹ ಶರಣರ ಸೇವೆಯನ್ನು ಪೂರೈಸುವುದೇ ನನ್ನ ಕಾಯಕವೆಂದು ಭಾವಿಸಿಕೊಂಡಿದ್ದರು ಶಿವಯೋಗಿಗಳವರು. ಹೀಗಾಗಿ ಅವರು ಪ್ರೀತಿ ಅಂತಃಕರಣದಿಂದ ಈ ಹಾಡು ಹಾಡುತ್ತ ತಮ್ಮ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರು.

ಶಿವಯೋಗ ಶಿವನಿಧಿ

               ಭಾರತದ ಋಷಿ-ಮುನಿಗಳ ಅನಂತಯೋಗ, ಅಲ್ಲಮನ ಅನಿಮಿಷಯೋಗ, ಅರವಿಂದರ ಪೂರ್ಣಯೋಗ, ರಮಣರ ಭಾವಯೋಗ, ಚಿನ್ಮಯಾನಂದರ ಧ್ಯಾನಯೋಗ, ನಾಥಪಂಥೀಯರ ಸಿದ್ಧಿಯೋಗ, ಸಿದ್ಧರ ಸಂತರ ಶಾಂಭವೀಯೋಗ, ತೋಂಟದ ಸಿದ್ಧಲಿಂಗರ ಮಹಾಲಿಂಗಯೋಗ, ಚಿತ್ತರಗಿ, ಮಲೆಯ ಮಹಾದೇಶ್ವರ, ಬಿದರಿ, ಬೀಳೂರು, ಹಾನಗಲ್ಲ ಯತಿವರ್ಯರ ಸಮಾಜಯೋಗ-ಹೀಗೆ ಎಲ್ಲ ಯೋಗಗಳ ಯೌಗಿಕ ಸತ್‍ಕ್ರಿಯೆಗಳ ಸಂಗಮವಾಗಿದ್ದರು ‘ಶಿವಯೋಗ’ ಶಿವನಿಧಿ ಶ್ರೀ ಮುರುಘೇಂದ್ರ ಶಿವಯೋಗಿಗಳು.

ಗುರುಲಿಂಗದೇವ

               ಅಥಣಿ ತಾಲೂಕು ನದಿ ಇಂಗಳಗಾವಿ ಭಾಗೋಜಿಮಠದ ಆದರ್ಶ ಶರಣ ದಂಪತಿಗಳಾದ ಶ್ರೀ ರಾಚಯ್ಯನವರು ಮಾತೋಶ್ರೀ ನೀಲಮ್ಮತಾಯಿಯವರ ಪುಣ್ಯಗರ್ಭದಲ್ಲಿ(ಶಾ.ಶ. 1758 ದುರ್ಮುಖಿ ಸಂವತ್ಸರ ವೈಶಾಖಮಾಸ) ಕ್ರಿ.ಶ. 1836ರಂದು ಅಪ್ಪಗಳು ಜನ್ಮ ತಾಳಿದರು. ಶಿವಯೋಗಿಗಳ ಜನ್ಮದಾತೆ ನೀಲಮ್ಮನವರು ಮೈಗೂರು(ಜಮಖಂಡಿ ತಾಲೂಕು) ಹಿರೇಮಠದ ಮಗಳು (ಮೈಗೂರು ಹಿರೇಮಠ ನಾಡಿಗೆ ಅನೇಕ ಜನ ಸ್ವಾಮಿಗಳನ್ನು, ತಪಸ್ವಿಗಳನ್ನು ನೀಡಿದ ಒಂದು ಶ್ರೇಷ್ಠ ಮನೆತನವಾಗಿದೆ. ಈ ಮನೆತನದಲ್ಲಿ ಜನಿಸಿದ ಐದು ಜನರು ಮೋಟಗಿಮಠದ ಪೀಠಾಧಿಪತಿಗಳಾಗಿರುವುದು ವಿಶೇಷ). ರಾಚಯ್ಯನವರು ರಾಮದುರ್ಗ ತಾಲೂಕು ಭಾಗೋಜಿ ಊರಿನಿಂದ ಪಾದಯಾತ್ರೆಯ ಮೂಲಕ ಇಂಗಳಗಾವಿಗೆ ಆಗಮಿಸಿ, ಗ್ರಾಮಸ್ಥರಿಗೆ ಗುರುಗಳಾಗಿ ಇಂಗಳಗಾವಿಯಲ್ಲಿ ನೆಲೆ ನಿಂತರು. ಇಂತಹ ಆದರ್ಶ ದಂಪತಿಗಳ ಸತ್ಪುತ್ರರೇ ಈ ಯೋಗಿ. ಹುಟ್ಟಿದ ಮಗುವಿಗೆ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಇಂಗಳಗಾವಿ ಭಾಗೋಜಿಮಠದ ಪೂರ್ವಾಶ್ರಮ ಬಂಧುಗಳಾದ ಅಥಣಿ ಮೋಟಗಿಮಠದ ಯಜಮಾನರಾದ ಮುರುಘೇಂದ್ರ ಅಪ್ಪಗಳ ಹತ್ತಿರ ‘ಗುರುಲಿಂಗ ದೇವರ’ನ್ನು ಕರೆದುಕೊಂಡು ಬಂದರು. ಗುರುಗಳು ಗುರುಲಿಂಗಯ್ಯನನ್ನು ಹರಸಿ ಹಾರೈಸಿದರು. ಅವರ ಪ್ರೇರಣೆಯಂತೆ ಗಚ್ಚಿನಮಠದಲ್ಲಿ ಈರ್ವರು ಪೂಜ್ಯರು ಅದಾಗಲೆ ಅನೇಕ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಅಧ್ಯಾತ್ಮದ ಬಳ್ಳಿಯೊಳಗೆ ಸೇರಿಕೊಂಡ ಗುರುಲಿಂಗರು ಕೆಲವೇ ದಿನಗಳಲ್ಲಿ ಅಪರೂಪದ ಸಾಧಕರಾದರು.

               ತೆಲಸಂಗ ಪಟ್ಟದ್ದೇವರು, ಮಮದಾಪುರ ಶ್ರೀಗಳಿಂದ ಅಧ್ಯಯನ ಪೂರೈಸಿ ಗುರುಲಿಂಗಾರ್ಯರಾದರು. ಅಥಣಿ ಗಚ್ಚಿನಮಠದ ಶ್ರೀ ಮರುಳಶಂಕರ ಸ್ವಾಮಿಗಳು, ಶ್ರೀ ಗುರುಶಾಂತ ಮಹಾಸ್ವಾಮಿಗಳವರಿಂದ ಅನುಗ್ರಹ ಆಶೀರ್ವಾದ ಪಡೆದರು. ಮುಂದೆ ಶ್ರೀ ನಿರಂಜನಪ್ರಭು ಮುರುಘೇಂದ್ರ ಶಿವಯೋಗಿಗಳು ಎನ್ನುವ ನೂತನ ಅಭಿದಾನ ದಯಪಾಲಿಸಿದರು.

               1852ರಿಂದ ಶಿವಯೋಗದ ಅನುಸಂಧಾನ ಆರಂಭವಾಗಿ ಸತತ 20 ವರ್ಷಗಳ ಕಾಲ ಇಷ್ಟಲಿಂಗಯೋಗದ ಶಿವಯೋಗ ಸಾಧನೆ ಕೈಗೊಂಡರು. ಜಮಖಂಡಿ ತಾಲೂಕಿನ ಗುಹೇಶ್ವರ ಗಡ್ಡಿಯಲ್ಲಿ, ಯೋಗಮಂಟಪ, ಹಲವು ಕಡೆ ಏಕಾಂತ ಧ್ಯಾನ ಕೈಕೊಂಡು ಅಪ್ಪಗಳು ಸಿದ್ಧಿಯ ಶೃಂಗವನ್ನೇರಿದರು.

               ಲೋಕಸಂಚಾರ ಕೈಗೊಂಡು ಮರಳಿ ಮಠಕ್ಕೆ ಬಂದರು. ಹಿರಿಯ ಗುರುಗಳು ಅಧಿಕಾರ ಸ್ವೀಕರಿಸಿಕೊಳ್ಳಲು ಹೇಳಿದಾಗ, ನನಗೆ ಯಾವ ಅಧಿಕಾರಿಗಳೂ ಬೇಡ. ನಾನು ಈ ಮಠದ ಸೇವಕ ಎಂದರು. ಮಠದೊಳಗಿದ್ದೂ ಮಠಾಧಿಪತಿಯಾಗಲಿಲ್ಲ. ಒಮ್ಮೆಯೂ ಪೀಠ-ಪಲ್ಲಕ್ಕಿ ಹತ್ತಲಿಲ್ಲ. ಬಂಗಾರ ಧರಿಸಲಿಲ್ಲ. ಬೇಕೆಂದು ಏನನ್ನೂ- ಯಾರನ್ನೂ ಕೈ ಒಡ್ಡಲಿಲ್ಲ. ಇದ್ದೂ ಇಲ್ಲದಂತೆ ಮೌನಿಯಾಗಿದ್ದರು ಶಿವಯೋಗಿಗಳು.

               ಶ್ರೀಮಠದ ಹಿರಿಯ ಗುರುಗಳಾದ ಗುರುಶಾಂತ ಮಹಾಸ್ವಾಮಿಗಳು ಇರುವಾಗಲೇ ಶಿವಯೋಗಿಗಳು ತಮ್ಮ ಉತ್ತರಾಧಿಕಾರಿಯನ್ನು ಬಹುಬೇಗನೇ ಸ್ವೀಕರಿಸಿದರು. ಅವರಿಗೆ ‘ಮಠಾಧಿಪತಿ ಆಗುವ ಅಂತಹ ಯಾವ ಕರ್ಮಠ ಮಠೀಯ ವ್ಯವಸ್ಥೆಯಲ್ಲಿ ಮುಂದುವರಿಯುವ ಆಸೆ ಇರಲೇ ಇಲ್ಲ. ಹೀಗಾಗಿ ಅಥಣಿಯ ಬಣಜಿಗ ಮನೆತನದ ‘ಸಿದ್ಧಲಿಂಗ ದೇವರ’ನ್ನು ಉತ್ತರಾಧಿಕಾರಿಯನ್ನು ಸ್ವೀಕರಿಸಿ ಅವರಿಗೆ ಎಲ್ಲ ಜವಾಬ್ದಾರಿ ವಹಿಸಿ ನಿರ್ಲಿಪ್ತರಾದರು.

ಬಂಗಾರದ ತಂಬಿಗೆ

               ಒಮ್ಮೆ ಶ್ರೀಮಂತ ವಾರದ ಮಲ್ಲಪ್ಪನವರು ಸೊಲ್ಲಾಪುರದಲ್ಲಿ ಬಂಗಾರದ ಬಿಂದಿಗೆ ಅರ್ಪಿಸಿದರು. ಆಗ ಶಿವಯೋಗಿಗಳು ಬೇಡ ಎಂದು ಅಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಅವರಿಗೆ ಗೊತ್ತಿಲ್ಲದಂತೆ ಸೇವಕರು ಅದನ್ನು ತೆಗೆದುಕೊಂಡು ಬಂದಿದ್ದರು. ಈ ವಿಷಯ ತಿಳಿದು ನಾಲ್ಕು ದಿನಗಳ ಕಾಲ ಪ್ರಸಾದ ಸ್ನಾನ ಎಲ್ಲವನ್ನೂ ಬಿಟ್ಟು ಮೌನಿಯಾಗಿದ್ದರು. ‘ಯಾಕ್ರೀ ಬುದ್ಧಿ ಹೀಗ್ಯಾಕ ಮಾಡತೀರಿ’ ಎಂದು ಸೇವಕರು ಕೇಳಿದಾಗ ‘ಮಲವು ಸಂಗಡವಿರಲು ಸ್ನಾನ ಯಾಕಯ್ಯಾ?’ ಎಂದರು. ಬಂಗಾರದ ತಂಬಿಗೆಯನ್ನು ಮರಳಿ ವಾರದ ಮಲ್ಲಪ್ಪನವರಿಗೆ ಕೊಟ್ಟು ಬಂದು ಸೇವಕ ತಪ್ಪಾಯಿತು, ಎಂದಾಗ ಮಾತ್ರ ಶಿವಯೋಗಿಗಳು ಸ್ನಾನ ಪೂಜೆ ಪೂರೈಸಿದರು.

               ಭಕ್ತರೋರ್ವರು ಮಠದ ಜಗುಲಿಗೆ(ಹೊರಸಕ್ಕೆ) ಬೆಳ್ಳಿನಾಣ್ಯ ಬಡಿದಾಗ ಯಾರೋ ಖುಷಿಯಿಂದ ಓಡಿ ಬಂದು ಹೇಳಿದರು. ಶಿವಯೋಗಿಗಳು ಸುಮ್ಮನಿದ್ದರು. ಮರಳಿ ಮರುದಿನ ಗಾಬರಿಯಿಂದ ಭಕ್ತನೋರ್ವ ‘ಅಪ್ಪಾವರೇ… ಬೆಳ್ಳಿ ನಾಣ್ಯ ಯಾರೋ ಕಿತಗೊಂಡ ಹೋಗ್ಯಾರೀ’ ಅಂದಾಗ ‘ಇದ್ದವನು ಬಡದ, ಇಲ್ಲದವನು ವೈದಾನ, ನೀ ಯಾಕ ಇಷ್ಟ ಚಿಂತಿ ಮಾಡಾಕಹತ್ತೀ’ ಅಂದರು.

ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ನಾನೊಬ್ಬ ದಾಸಿಪುತ್ರ. ನನಗೆ ಲಿಂಗದೀಕ್ಷೆ ನೀಡಿ ಅನುಗ್ರಹಿಸಬೇಕೆಂದು ಒಬ್ಬ ಸಮಾಜಸೇವಾಸಕ್ತ ವ್ಯಕ್ತಿ ಬಂದು ಕೇಳಿದಾಗ, ತುಂಬು ಅಂತಃಕರಣದಿಂದ ಯಾರೂ ಆ ನಿಟ್ಟಿನಲ್ಲಿ ಆಲೋಚಿಸದ ಸಂದರ್ಭದಲ್ಲಿ(1918ರಲ್ಲಿ) ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು. ‘ತಮ್ಮಾ ನೀನು ‘ಕರ್ನಾಟಕ ಗಾಂಧಿ’ ಆಗುತಿ’ ಎಂದು ಮನಸಾರೆ ಹಾರೈಸಿದರು. ಅವರು ಅದರಂತೆ ಕರ್ನಾಟಕ ಗಾಂಧಿಯಾಗಿ ಶರಣ ಶ್ರೇಷ್ಠರಾಗಿ ಬದುಕಿದರು, ಅವರೇ ‘ಹರ್ಡೇಕರ ಮಂಜಪ್ಪನವರು’. ಶಿವಯೋಗಿಗಳ ಮೇಲಿನ ಭಕ್ತಿ ಗೌರವಕ್ಕಾಗಿ ‘ಪ್ರಮಥಾಚಾರ ದೀಪಿಕೆ’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದರು. ಮುಂದೆ ಇದೇ ಮಂಜಪ್ಪನವರು 1911ರಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಥಮವಾಗಿ ಆಚರಿಸಿದ ಸತ್ಕೀರ್ತಿಗೆ ಭಾಜನರಾದರು.

ಲಿಂಗರಾಜರಿಗೆ ಮಾರ್ಗದರ್ಶನ

               ದಾನವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಶಿವಯೋಗಿಗಳ ಪದತಲಕ್ಕೆ ಅರ್ಪಿಸಲು ಬಂದಾಗ, ಶಿವಯೋಗಿಗಳು ‘ಇದನ್ನು ಸಮಾಜಕ್ಕೆ ಬಳಸಿರಿ, ನಿಮ್ಮ ಸಂಪತ್ತು ತೆಗೆದುಕೊಂಡು ನಾನೇನು ಮಾಡಲಿ’ ಎಂದು ಹೇಳಿ, ಲಿಂಗರಾಜರಿಗೆ ಮಾರ್ಗದರ್ಶನ ಮಾಡಿದರು. ಶಿವಯೋಗಿಗಳ ಆಶಯದಂತೆ  1906ರಲ್ಲಿ ಲಿಂಗರಾಜರು ತಮ್ಮ ಸಮಸ್ತ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿ, ಕರ್ನಾಟಕದ ತ್ಯಾಗವೀರ ಎಂಬ ಖ್ಯಾತಿಗೆ ಪಾತ್ರರಾದರು. ಲಿಂಗರಾಜರ ಉದಾರ ದಾನದ ಫಲವಾಗಿ ಶಿಕ್ಷಣ ವಂಚಿತರು ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡರು. 1916ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸಿತು. ಸಾವಿರಾರು ಕಲಿಕಾಸಕ್ತರಿಗೆ ಅದರಿಂದ ಅನುಕೂಲವಾಯಿತು.

ಲೋಕಮಾನ್ಯರೊಂದಿಗೆ

               5 ಜನವರಿ 1917ರಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ಅಥಣಿಗೆ ಬಂದು ಶಿವಯೋಗಿಗಳ ದರ್ಶನ ಪಡೆದರು, ‘ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಆಶೀರ್ವದಿಸಿರಿ’ ಎಂದು ಕೇಳಿಕೊಂಡರು. ಆಗ ಶಿವಯೋಗಿಗಳು ‘ಖಂಡಿತ ಸ್ವಾತಂತ್ರ್ಯ ಲಭಿಸುತ್ತದೆ, ಆದರೆ ಅದರ ಫಲವನ್ನು ನಾವು ನೀವು ಪಡೆಯುವುದಿಲ್ಲ, ಮುಂದಿನವರು ಶ್ರೀಫಲ ಪಡೆಯುತ್ತಾರೆ’ ಎಂದರು. ಶಿವಯೋಗಿಗಳ ತ್ಯಾಗ ಹಾಗು ಘನವ್ಯಕ್ತಿತ್ವದ ಕುರಿತು ಟಿಳಕರು ತಮ್ಮ ಚರಿತ್ರೆಯಲ್ಲಿ ಬರೆಯುತ್ತಾರೆ.

ಬಸವ ಬೆಳಗು

               ಬಿದರಿ ಕುಮಾರ ಶ್ರೀಗಳು, ಬಿಳ್ಳೂರು ಗುರುಬಸವರು, ಬಂಥನಾಳ ಸಂಗನಬಸವರು, ಬಬಲೇಶ್ವರ ಶಾಂತವೀರರು, ಗರಗದ ಮಡಿವಾಳೇಶ್ವರರು, ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳು, ಮೋಟಗಿಮಠದ ಚನ್ನಬಸವರು, ಹಾವೇರಿ ಶಿವಬಸವ ಸ್ವಾಮಿಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು ಹೀಗೆ ಅನೇಕ ಯತಿಪುಂಗವರಿಗೆ ಶ್ರೀಹರಕೆ ನೀಡಿದರು. ಶಿವಯೋಗಿಗಳು ಎನ್ನುವ ಪರುಷ ಸೋಂಕಲು ಅಧ್ಯಾತ್ಮದ ಬಂಗಾರದ ಭುವಿಯು ತುಂಬಿತು.

ಪೊಡಮಡುವೆ

ಅಣ್ಣನ ಭಕ್ತಿ, ಅಕ್ಕನ ವಿರಕ್ತಿ, ಪ್ರಭುವಿನ ಪರಮಜ್ಞಾನ

ಸಂಗಮಿಸಿದುವಿಲ್ಲಿ ನಡೆಯಲ್ಲಿ ನುಡಿಯಲ್ಲಿ

ಇಡಿಯ ಬೆಳಕಿನ ಬಾಳಿನಲ್ಲಿ ದೃಷ್ಟಿ ಕೃಪಾದೃಷ್ಟಿ;

ವಾಣಿ ಶುಭಸೃಷ್ಟಿ; ಅಮೃತಸ್ಮಿತ, ಕಂಡವ ಪುನೀತ;

ಸರ್ವಾಂಗಲಿಂಗ ಮಂಗಲ ತರಂಗ; ಮಹಾಜೀವನ,

ಭುವನ ಪಾವನ, ನಿತ್ಯನೂತನ ಶಿವಚೇತನ;

ಅರ್ಚನವಾವುದೊ ಅರ್ಪಿತವಾವುದೊ ಎಲ್ಲ ಅನುಭಾವ

ಜಾಗೃತವಾವುದೊ ಸ್ವಪ್ನವಾವುದೊ ಎಲ್ಲ ತುರೀಯ

ಇಹವಾವುದೊ ಪರವಾವುದೊ ಎಲ್ಲ ಜೀವನ್ಮುಕ್ತಿ

ಜನನವಾವುದೊ ಮರಣವಾವುದೊ ಎಲ್ಲ ಶಿವಶಕ್ತಿ!

ತೆರೆದೆದೆಗಳ ಸಿಂಪುಗಳಿಗೆ ಶಿವ-ಸ್ವಾತಿ

ಪರಂಜ್ಯೋತಿ ದಿವ್ಯ ಪ್ರೀತಿ ಆತ್ಮ ದಿಧೀತಿ

ಪೊಡಮಡುವೆನು ನಿನ್ನ ಅಡಿಗೆ ಅದರ ಹುಡಿಗೆ

ಧರ್ಮ ಮೂರುತಿ ದೇಹ ಧರಿಸಿ ಮೆರೆದ ಪರಮ ಶರಣ ಸಂಸ್ಕೃತಿ

                                             -ಡಾ. ಸಿದ್ಧಯ್ಯ ಪುರಾಣಿಕ

ಅಪ್ಪನ ವಚನಗಳು

               ಶಿವಯೋಗಿಗಳಿಗೆ ಬಸವಣ್ಣನವರು ಎಲ್ಲ ವಿಧದಲ್ಲಿಯೂ ಮೇಲ್ಪಂಕ್ತಿ ಆಗಿದ್ದರು. ಶರಣರ ವಿಚಾರಗಳನ್ನು ಹೇಳುವುದು ಸರಳ, ಆದರೆ ಆಚರಿಸುವುದು ಕಷ್ಟ. ಆದರೆ ಶಿವಯೋಗಿಗಳಿಗೆ ಬಸವತತ್ವ ಆಚರಣೆ ಕಷ್ಟವಾಗಿರಲಿಲ್ಲ. ಇಷ್ಟವಾಗಿತ್ತು. ಕಾಶಿಯಿಂದ ಬಂದ ಸಂಸ್ಕೃತ ಪಂಡಿತ ಬೃಹತ್ತಾದ ಸಂಸ್ಕೃತ ಗ್ರಂಥ ತಂದುಕೊಟ್ಟ. ತಾವು ಇದನ್ನು ಓದಬೇಕೆಂದು ಒತ್ತಾಯಿಸುತ್ತಾನೆ. ನಾನು ಈಗಾಗಲೇ ಒಂದು ಗ್ರಂಥ ಓದುತ್ತಿದ್ದೇನೆ. ನಿಮ್ಮ ಹತ್ತಿರವೇ ಇರಲಿ ಎಂದು ನಯವಾಗಿ ಗುರುಗಳು ನಿರಾಕರಿಸಿದರು. ಮತ್ತೆ ಆ ಪಂಡಿತ ಬುದ್ಧೀ ಅದು ಮುಗಿದ ಮೇಲಾದರೂ ಇದನ್ನು ಓದಲೇಬೇಕೆಂದು ಒತ್ತಾಯಿಸಿದಾಗ, ‘ಈ ಜನ್ಮ ಮುಗಿಯುವವರೆಗೆ ಅದು ಸಾಧ್ಯವಿಲ್ಲಪ್ಪಾ ಅದು ಮುಗಿಯದ ಮಾಣಿಕ್ಯದೀಪ್ತಿ’ ಎನ್ನುತ್ತಾರೆ. ಯಾವುದದು ಬುದ್ಧಿ ಎಂದ. ಅದು ಶರಣರ ‘ವಚನ ಸಾಹಿತ್ಯ ದರ್ಶನ’. ನಮಗೆಲ್ಲ ಅದೇ ದಾರಿದೀಪ ಶಾಸ್ತ್ರಿಗಳೆ ಎಂದು ವಚನಗಳ ಮನ್ನಣೆಯನ್ನು ಎತ್ತಿ ತೋರಿಸುತ್ತಾರೆ.

               ಮೈಸೂರಿನ ಕಡ್ಲಿಪುರಿ ನಂಜುಂಡಪ್ಪನವರು ಸೊಗಸಾದ ಮಂಚ ತಂದು, ಗಾದಿ-ಕುತನಿ ಅರಿವೆ ಹಾಸಿ, ಅಪ್ಪಾ„ ತಾವು ಇದರ ಮೇಲೆ ನಿತ್ಯವೂ ಪವಡಿಸಬೇಕು ಎಂದು ಪ್ರಾರ್ಥಿಸುತ್ತಾರೆ. ‘ಹೌದಪ್ಪಾ„„ ಇದು ನಮ್ಮ ಅಪ್ಪನ ವಚನಗಳು ಇರಬೇಕಾದ ಸ್ಥಳ’ ಎಂದು ಬಸವಣ್ಣನವರ ವಚನಗ್ರಂಥಗಳನ್ನು ಇಟ್ಟು ಸಾಷ್ಟಾಂಗವೆರಗುತ್ತಾರೆ. ಎಂತಹ ಸೇವಾಭಾವ ಶಿವಯೋಗಿಗಳದು.

               ‘ಈಶನ ಮೀಸಲಪ್ಪ ಭಕ್ತ’ ಎಂದು ಹರಿಹರ ಬಸವಣ್ಣನವರನ್ನು ಬಣ್ಣಿಸುತ್ತಾನೆ. ಅದರಂತೆ ಬಸವಣ್ಣನವರ ಮೀಸಲು ಭಕ್ತಿ ಶಿವಯೋಗಿಗಳದು. ಬಸವಣ್ಣನವರನ್ನು ಅಪ್ಪಾ ಎಂದೇ ಕರೆಯುತ್ತಿದ್ದರು. ಅಪ್ಪನ ವಚನಗಳು ಎಂದೇ ಸಂಬೋಧಿಸುತ್ತಿದ್ದರು. ಅವರಿಗೆ ವಚನಗಳೇ ಮಂತ್ರಗಳು, ಬಸವಣ್ಣನೇ ಬಾಳಜ್ಯೋತಿ, ಸಮತೆಯೇ ಕಂತೆ, ದಾಸೋಹವೇ ದೀಪ್ತಿ, ಸಹಜ-ಸರಳ ಜೀವನವೇ ಶಿವಯೋಗದ ಶಿವಸಿದ್ಧಿ ಯಾಗಿತ್ತು.

ಬದುಕು ಪವಾಡಗಳ ಪರುಷಮಣಿ!

               ಜಮಖಂಡಿ ತಾಲೂಕಿನ ‘ಗುಹೇಶ್ವರಗವಿ’(ಗಡ್ಡಿ)ಯೊಳಗೆ ಅನುಷ್ಠಾನನಿರತರಾದ ಶಿವಯೋಗಿಗಳು ಹತ್ತು ವರುಷಗಳ ಕಾಲ ಏಕಾಂತದೊಳಗೆ ತಪಸ್ಸನ್ನಾಚರಿಸಿದರು. ನದಿ, ಪ್ರಕೃತಿ, ಬಿಲ್ವ-ಬನ್ನಿ, ಹೂವು ಮತ್ತು ಸಂಕುಲಜೀವಿಗಳೇ ಸಂಗಾತಿಗಳಾದವು. ನಾಗರಾಜ(ಸರ್ಪ)ವು ನಿತ್ಯವು ಗುರುಗಳ ಮಂಗಲದ ಸಂದರ್ಭ ಬಂದು ತಲೆದೂಗುತ್ತ ಇರುತ್ತಿದ್ದ. ಮುಂಗೂಸಿ ಕೂಡಾ ಮುಂದೆ ಕುಳಿತಿರುತ್ತಿತ್ತು.  ಪರಸ್ಪರ ದ್ವೇಷ ಸಾಧಿಸುವ ಪ್ರಾಣಿಗಳು ಒಂದಾಗಿರುತ್ತಿದ್ದವು.

               ಅಂಕಲಗಿಯ ಅಡವಿಸಿದ್ಧೇಶ್ವರರ ದರ್ಶನಕ್ಕೆ ಹೊರಟಾಗ ಕಾಡಿನೊಳಗೆ ಹುಲಿ ಬಂದು ಶರಣಾಯಿತು. ಅದಕ್ಕೆ ಉತ್ತತ್ತಿ ನೀಡಿದರು. ಕ್ರೂರ ಪ್ರಾಣಿ ಯೌಗಿಕ ಶಕ್ತಿಗೆ ತಲೆಬಾಗಿತು.

               ಅಥಣಿಯಲ್ಲಿರುವಾಗ ಲಿಂಗಾರ್ಚನೆ ಮುಗಿಸಿ ಬಕುಲವೃಕ್ಷದ ಮುಂದೆ ಬಂದು ಕುಳಿತಾಗ ನಿತ್ಯವೂ ಎರಡು ‘ಶ್ವೇತವರ್ಣದ ಪಕ್ಷಿಗಳು’ ಬಂದು ದರ್ಶನ ನೀಡುತ್ತಿದ್ದವು. ‘ಬುದ್ಧೀ, ಏನಿದರ ಅರ್ಥ’ ಎಂದು ಭಕ್ತರು ಕೇಳಿದಾಗ, ‘ನನ್ನ ಈರ್ವರು ಗುರುವರ್ಯರು ದರ್ಶನ ನೀಡುತ್ತಾರೆ’ ಎಂದರು. ಪ್ರತಿನಿತ್ಯ ಆ ಪಕ್ಷಿಗಳಿಗೆ ಮೌನಿಗಳಾಗಿ ಶರಣು ಸಲ್ಲಿಸುತ್ತಿದ್ದರು.

               ಸಕಲಜೀವ ಸಂಕುಲಗಳಲ್ಲಿ ಶಿವನಿದ್ದಾನೆ ಎಂದು ಪರಿಭಾವಿಸುತ್ತಿದ್ದ ಶಿವಯೋಗಿಗಳು, ಪತ್ರಿಯ ಗಿಡದಿಂದ ಒಂದು ದಿನವೂ ದಳಗಳನ್ನು ಹರಿಯದೆ ಕೆಳಗೆ ನೆಲವನ್ನು ಸಾರಣಿ ಮಾಡಿ, ಕೆಳಗೆ ಬಿದ್ದ ಪತ್ರಿಗಳನ್ನು ಲಿಂಗಕ್ಕೆ ಧರಿಸುತ್ತಿದ್ದರು.

               ಗುರುಗಳ ಬದುಕು ಮೌಲ್ಯಗಳ ಮುತ್ತಿನ ಹಾರವಾಗಿತ್ತು. ಹೆಜ್ಜೆ-ಹೆಜ್ಜೆಗೂ ನೂರೊಂದು ಪವಾಡಗಳು ಜರುಗುತ್ತವೆ. ಅವುಗಳೆಲ್ಲ ಸಹಜವಾಗಿ ಜರುಗಿದ ಲೀಲಾಯೋಗ!

ಶಿವಯೋಗಿ

               ಹುಬ್ಬಳ್ಳಿಯ ಕೈಲಾಸ ಮಂಟಪದಲ್ಲಿ ಕುಳಿತು ಜಗದ್ಗುರು ಸಿದ್ಧಾರೂಢರು ಭಕ್ತಿ, ಹಠ, ರಾಜ, ಮಂತ್ರಯೋಗಗಳ ಕುರಿತು ಪ್ರವಚನ ನೀಡುತ್ತಾರೆ. ಓರ್ವ ಭಕ್ತ ಕೇಳುತ್ತಾನೆ. ನಾಲ್ಕು ಯೋಗಗಳ ಕುರಿತು ಹೇಳಿದಿರಿ. ‘ಶಿವಯೋಗ’ ಕುರಿತು ತಾವು ಹೇಳಲೇ ಇಲ್ಲ ಎಂದರು. ಆಗ ಅವರು ‘ಅದನ್ನು ಹೇಳುವುದಲ್ಲ, ನೋಡಿ ತಿಳಿಯಬೇಕು, ಅರಿತು ಆಚರಿಸಬೇಕು. ಅದನ್ನು ನೋಡಲು ನೀವು ಅಥಣಿಗೆ ಹೋಗಿರಿ. ಅಲ್ಲಿ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳಿದ್ದಾರೆ. ಅವರ ‘ಶಿವಯೋಗ’ ಸಾಧನೆ ನೋಡಿದರೆ ಎಲ್ಲವನ್ನೂ ತಿಳಿದಂತೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅಂತಹ ಅಪರೂಪದ ‘ಶಿವಯೋಗ ಸಾಧನೆಯ’ ಸೀಮಾಪುರುಷರು ಶಿವಯೋಗಿಗಳು.

               ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಅಪ್ಪನ ವಚನಗಳೆಂದು ಅಪ್ಪಿ-ಒಪ್ಪಿ ಬಸವತತ್ವದಲ್ಲಿಯೇ ಬದುಕಿದರು. ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ ಎಂದು ಬಾಗಿದ ತಲೆ, ಮುಗಿದ ಕೈಯಾಗಿ ಬಾಳಿದ ಯುಗಪುರುಷರು. ಶಿವನ ಆಜ್ಞೆ ಆಗಿದೆ ನಾನು ಬರುತ್ತೇನೆ. ನೀವೆಲ್ಲ ಬಸವ ಭಕ್ತಿ ಮಾರ್ಗದಲ್ಲಿ ನಡೆಯಿರಿ ಎಂದು ಅಪ್ಪಣೆ ಮಾಡಿ 23-4-1921ರಂದು ಶನಿವಾರ ಶಿವಯೋಗದ ಬಯಲಿನಲ್ಲಿ ಬಯಲಾದರು.

ಲೇಖಕರು : ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

“…… ಈ ಮೊದಲು ಹೇಳಿದಂತೆ ನಾನು ನನ್ನ ತಂದೆತಾಯಿಗಳಿಗೆ ಮೊದಲನೆಯ ಮಗ , ನಾನು ನಮ್ಮ ಊರಲ್ಲಿಯೇ ಇರುವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ , ಆ ಕಾಲಕ್ಕೆ ನನ್ನ ತಂದೆ ವ್ಯಾಪಾರದ ಸಲುವಾಗಿ ಅಥಣಿಗೆ ಪದೇ ಪದೇ ಹೋಗುತ್ತಿದ್ದರು . ಅಲ್ಲಿಗೆ ಹೋದಾಗ ತಪ್ಪದೇ ಅಲ್ಲಿಯ ಗಚ್ಚಿನ ಮಠಕ್ಕೆ ಹೋಗಿ ಅಲ್ಲಿ ಇದ್ದ ಶಿವಯೋಗಿ  ಶ್ರೀ ಮುರುಘೇಂದ್ರ ಸ್ವಾಮಿಗಳ ದರ್ಶನ ತೆಗೆದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು . ಒಂದು ಸಲ ಶಿವಯೋಗಿಗಳು ಪೂಜಾವಿಧಿಗಳನ್ನು ಮುಗಿಸಿ ಕುಳಿತಿದ್ದರು . ಆಗ ಅವರು ನನ್ನ ತಂದೆಗೆ ಮಕ್ಕಳು ಎಷ್ಟು ? ಎಂದು ಕೇಳಿದರು . ಅದಕ್ಕೆ ನನ್ನ ತಂದೆಯವರು ಒಬ್ಬಾಕೆ ಮಗಳು , ಒಬ್ಬ ಮಗ ಎಂದು ಹೇಳಿದರು . ಆಗ ಶಿವಯೋಗಿಗಳು ಅವನ ಹೆಸರು ಏನು ? ಅವನು ಹೇಗಿದ್ದಾನೆ ? ಎಂದು ಕೇಳಿದುದ್ದಕ್ಕೆ ಅವನ ಹೆಸರು ಬಸಪ್ಪ , ಸ್ವಲ್ಪ ತುಂಟ , ಹಿಡಿಯುವುದು ಕಷ್ಟವಾಗಿದೆ ” ಎಂದು ಹೇಳಿದರು . ಅದಕ್ಕೆ ಶಿವಯೋಗಿಗಳು “ ಹಾಗೆ ಹೇಳಬೇಡಪ್ಪ , ಮುಂದೆ ಅವನು ರಾಜನಾಗುತ್ತಾನೆ ” ಎಂದು ಹೇಳಿದರು . ಇಷ್ಟು ಶಿವಯೋಗಿಗಳ ಆಶೀರ್ವಾದ ಕೇಳಿಕೊಂಡು ತಮ್ಮ ಕೆಲಸಕ್ಕೆ ತೆರಳಿದರು “

ಮಾನ್ಯ ಶ್ರೀ ಬಿ,ಡಿ,ಜತ್ತಿ ಪ್ರಮಾಣವಚನ

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.