ಡಾ. ಸಿದ್ಧಯ್ಯ ಪುರಾಣಿಕ
(ಸಿದ್ಧಯ್ಯ ಪುರಾಣಿಕ (ಜೂನ್ ೧೮, ೧೯೧೮ – ಸೆಪ್ಟೆಂಬರ್ ೫, ೧೯೯೪) ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ.ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.
ಗುಲ್ಬರ್ಗದಲ್ಲಿ ನಡೆದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಿದ್ಧಯ್ಯ ಪುರಾಣಿಕರನ್ನು ಅರಸಿಬಂದಿವೆ.
ಸಿದ್ಧಯ್ಯ ಪುರಾಣಿಕರು ಉರ್ದು, ಇಂಗ್ಲಿಷ್, ಸಂಸ್ಕೃತಗಳಲ್ಲೂ ಪಾಂಡಿತ್ಯ ಹೊಂದಿದ್ದವರು. ಕನ್ನಡದಲ್ಲಂತೂ ಉದ್ಧಾಮ ವಾಗ್ಮಿಗಳು. ‘ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ’ ಎಂಬ ಅವರ ಆತ್ಮಕಥೆ ಅನೇಕ ಕಾರಣಗಳಿಗಾಗಿ ಪ್ರಮುಖವಾದ ಸಾಹಿತ್ಯಕ ದಾಖಲೆಯಾಗಿದೆ. ಕುವೆಂಪು ಅವರು ಸಿದ್ಧಯ್ಯ ಪುರಾಣಿಕರನ್ನು ಕುರಿತು ಹೇಳಿರುವ ಮಾತುಗಳನ್ನು ಗಮನಿಸಿ: “ಜ್ಞಾನ, ಅಧಿಕಾರ, ವಿನಯ, ಸೌಜನ್ಯ, ಸೃಜನಶೀಲತೆಗಳು ಏಕತ್ರ ಸಮಾವೇಶಗೊಳ್ಳುವುದು ತುಂಬಾ ಅಪರೂಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಇದಕ್ಕೆ ಅಪರೂಪವಾಗಿ ನಿಂತ ಪ್ರತಿಭಾಶೀಲ ಸತ್ಪುರುಷ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು)
ವಿರಾಗವಿಭು ಹಾನಗಲ್ಲ ಕುಮಾರ ಸ್ವಾಮಿಗಳವರು ರಾಣೇಬೆನ್ನೂರ ತಾಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಕ್ರಿ.ಶ. ೧೮೬೭ರಲ್ಲಿ ಜನ್ಮವೆತ್ತಿದರು. ತಂದೆ ತಾಯಿಗಳು ಬಸವಯ್ಯ-ನೀಲಮ್ಮನವರು, ಸುಶೀಲರು, ಸದಾಚಾರಿಗಳು, ಧರ್ಮ ಪರಾಯಣರು.ಆದರೆ ಬಡವರು. ಬಡತನದ ಮೂಲಕ ಶ್ರೀಗಳವರ ವಿದ್ಯಾಭ್ಯಾಸ ಸರಿಯಾಗಿ ಸಾಗಲಿಲ್ಲ.ಆದರೆ ಅವರ ಅದಮ್ಯವಾದ ಅರಿವಿನ ಹಂಬಲ ಆರಲಿಲ್ಲ. ಅವರು ಪ್ರಬುದ್ಧರಾದ ಮೇಲೆ ಸ್ವಾಧ್ಯಾಯದಿಂದಲೇ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡು ಮಹಾಶಿವಾನುಭವಿ ಗಳಾದರು, ತತ್ವವೇತ್ತರಾದರು.
ಅವರ ತೆಳುವಾದ, ಎತ್ತರವಾದ ಮೈಕಟ್ಟಿನಲ್ಲಿ ತಾರುಣ್ಯವು ತುಳುಕಿತು; ಅವರ ಹೊಳೆವ ಕಣ್ಣುಗಳು ಇನ್ನೂ ಪ್ರಕಾಶಪೂರ್ಣವಾಗಿ ಮಿಂಚಿದುವು; ಆದೇದೀಪ್ಯಮಾನ ಮುಖಮಂಡಲ ಇನ್ನೂ ತೇಜೋಮಯವಾಗಿ ರಾರಾಜಿಸಿತು. ಅವರ ತಾಯಿ ನೀಲಮ್ಮನವರಿಗೆ ಅವರಿಗೆ ಮದುವೆ ಮಾಡಬೇಕೆಂಬ ಮಾತೃಸಹಜವಾದ ಆಸೆ ಉದಿಸಿತು. ಆಗ ಲಿಂಗದಹಳ್ಳಿಯಲ್ಲಿ ಹಗಲು ಶಿಕ್ಷಕರಾಗಿ ಹಗಲಿರುಳೂ ಉಜ್ವಲ ವ್ಯಾಸಂಗಿಗಳಾಗಿ ಜೀವನರಥವನ್ನು ಶಿವಪಥದಲ್ಲಿ ನಡೆಸಿಕೊಂಡು ಹೊರಟಿದ್ದರು ಹಾಲಯ್ಯನವರು ಮುಂದೆ ಕುಮಾರ ಸ್ವಾಮಿಗಳಂದು ಅಮರರಾದ ಅಮೃತಪುತ್ರರು.ತಾಯಿಯು ಮದುವೆಯ ಮಾತೆತ್ತಲು ನಕ್ಕು ನುಡಿದರು, ‘ತಾಯೆ, ನಾನಿದಾಗಲೇ ಸಂಸಾರಿಯಾಗಿ ಬಿಟ್ಟಿದ್ದೇನೆ. ಆದರೆ ಈ ಸಂಸಾರದ ಪರಿಯೇ ಬೇರೆ. ಇದನ್ನು ನಿಜಗುಣ ಶಿವಯೋಗಿಗಳು ಇಂತು ಬಣ್ಣಿಸಿದ್ದಾರೆ:
ಯೋಗಿಗೆ ಸಕಲ ಸಂಸಾರ ಸಂಗವದಿಲ್ಲ
ವಾಗಿ ತಿಳಿವರದು ಮುಸಿನೋಡು ತಾಯೇ!
ವರವಿದ್ಯೆಯೆಂಬ ಕುಲವನಿತೆಯುಂಟು, ಅಗಲದ
ಪರಿತೋಷವೆಂಬ ಮೋಹದಣಗನುಂಟು
ವಿರತಿಯೆಂಬನುಕೂಲ ಜನಮುಂಟು, ಕ್ಷಮೆಯೆಂಬ
ಚರನುಂಟು, ಶಾಂತಿಯೆಂಬ ಸಖನ ಸರಸಮುಖ!!
ನುತಭಕ್ತಿಯೆಂಬ ಮಾತೆಯುಂಟು, ಸುಚರಿತ್ರವೆಂಬ
ಪಿತನುಂಟು ಸತ್ಯವೆಂಬ ಕುವರಿಯುಂಟು
ಹಿತವಾದ ನಂಬಿಗೆಯೆಂಬಾಪ್ತ ಜನರ ಸೇವೆಯುಂಟು
ಮತಿಯೆಂಬ ಗೇಹ ಮುಂಟು, ಆಚಾರವೆಂಬ ಕ್ಷೇತ್ರಮುಂಟು!
ದಾಸಿಯುಂಟು ಅಹಿಂಸೆಯಂಬ, ದಾಸನುಂಟು ಅಸ್ತೇಯವೆಂಬ
ಲೇಸನೀವ ಮೈತ್ರಾದಿಯೆಂಬ ಪೌತ್ರರುಂಟು,
ಮುಕ್ತಿಯೆಂಬದೇಶಮುಂಟು, ಗುರು ಶಂಭುಲಿಂಗವೆಂಬ ಗುರುತನಗುಂಟು!
ಇಂಥ ಸಂಸಾರವನ್ನು ಇದಾಗಲೇ ಸ್ವೀಕರಿಸಿ ಬಿಟ್ಟಿರುವೆ ತಾಯೆ-ಮತ್ತೊಂದು ಸಂಸಾರವನ್ನು ಎಲ್ಲಿ ಕಟ್ಟಿಕೊಳ್ಳಲಿ? ಇದೊ, ನಾನು ಶಿಕ್ಷಕನಾಗಿ ಸಂಪಾದಿಸಿದ ಮುನ್ನೂರು ರೂಪಾಯಿಗಳಿವೆ. ಇವುಗಳನ್ನು ಮಗನ ಕಿರಿಯ ಕಾಣಿಕೆಯೆಂದು ಸ್ವೀಕರಿಸಿ ಸಂತುಷ್ಟಳಾಗಿ ಹೋಗು. ಇನ್ನು ಮುಂದೆ ಮಗನೆಂಬ ಮೋಹದಿಂದ ಮತ್ತೆ ನನ್ನ ಹತ್ತಿರ ಬರಬೇಡ!’
ನೀಲಮ್ಮನವರು ನಿರುಪಾಯರಾಗಿ ಹೊರಟು ಹೋದರು. ಹಾಲಯ್ಯನವರು ಜ್ಞಾನಭಿಕ್ಷುಗಳಾಗಿ ಹೊರಟರು. ಆಗ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರ ಯಶೋದುಂದುಭಿ ಮೊಳಗುತ್ತಿದ್ದಿತು. ಅಲ್ಲಿಗೆ ಹೋದರು. ಸಿದ್ಧಾರೂಢರ ಸನ್ನಿಧಿಯಲ್ಲಿ ತಮಗೆ ಅತ್ಯಂತ ಪ್ರಿಯವಾಗಿದ್ದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರಗಳ ಆಳವಾದ ಅಧ್ಯಯನ ನಡೆಸಿದರು. ಸಿದ್ಧಾರೂಢರ ವೇದಾಂತ ಪ್ರವಚನ ವೈಖರಿ ಅವರ ಚಿತ್ತವನ್ನು ಆಕರ್ಷಿಸಿತಾದರೂ ಅವರ ಇಷ್ಟಲಿಂಗ ತ್ಯಾಗವು ಇವರಿಗೆ ಒಪ್ಪಿಗೆಯಾಗಲಿಲ್ಲ.ಆದುದರಿಂದ ಅಲ್ಲಿಯ ರುದ್ರಾಕ್ಷಿಮಠದಲ್ಲಿ ಸ್ನಾನ ಲಿಂಗಾರ್ಚನಾದಿಗಳನ್ನು ಪೂರೈಸುತ್ತ, ಭಿಕ್ಷಾನ್ನದಿಂದ ಜೀವಿಸುತ್ತ, ಪಾಠ ಪ್ರವಚನಗಳಿಗಾಗಿ ಮಾತ್ರ ಸಿದ್ಧಾರೂಢರ ಮಠಕ್ಕೆ ಬರುತ್ತ ಕಾಲ ಕಳೆಯತೊಡಗಿದರು. ಹೀಗೆ ಬಾಳು ಸಾಗಿರಲು ಒಂದು ದುರ್ಘಟನೆ ನಡೆಯಿತು. ಎಂದಿನಂತೆ ಅವರು ಭಿಕ್ಷಾನ್ನಕ್ಕಾಗಿ ಭಕ್ತರ ಮನೆಗೆ ಹೋದಾಗ ಮನೆಯೊಂದರಲ್ಲಿ ಕಾಮಿನಿಯೊಬ್ಬಳು ಅವರ ಗಂಡುಗಾಡಿಯನ್ನು ಕಂಡು ಮನಸೋತು ಲಜ್ಜೆಗೆಟ್ಟು ಅವರ ಜೋಳಿಗೆಯನ್ನೇ ಹಿಡಿದು ಒಳಗೆಳೆದಳು. ಶ್ರೀಗಳವರು ಅವಳ ಕಾಮ ಪಿಪಾಸೆಗೆ ಹೇಸಿ ಆ ಜೋಳಿಗೆಯನ್ನು ಅವಳ ಕೈಯಲ್ಲಿಯೇ ಬಿಟ್ಟು ಹಿಂದಿರುಗಿದರು. ಅನಿರೀಕ್ಷಿತವಾಗಿ ನಡೆದ ಆ ಸತ್ವಪರೀಕ್ಷೆಯಲ್ಲಿ ತೇರ್ಗಡೆಯಾದರು, ವೈರಾಗ್ಯ ವಿಜಯವನ್ನು ಮೆರೆದರು.
ಮೊದಲೇ ಸಿದ್ಧಾರೂಢರ ಇಷ್ಟಲಿಂಗವಿರಹಿತ ಆಚರಣೆಯನ್ನು ಒಪ್ಪದೆ ಮನಸ್ಸಿಲ್ಲದ ಮನಸ್ಸಿನಿಂದ ಹುಬ್ಬಳ್ಳಿಯಲ್ಲಿದ್ದ ಅವರಿಗೆ ಈ ಘಟನೆಯಿಂದ ಇನ್ನೂಬೇಸರವೆನಿಸಿತು. ಅಲ್ಲಿಯ ಎರಡೆತ್ತಿನ ಮಠಾರ್ಯರ ಸಲಹೆಯ ಮೇರೆಗೆ ಆಗ ಶರಣವರೇಣ್ಯರೆಂದು ಹೆಸರಾಗಿದ್ದ ಎಮ್ಮಿಗನೂರ ಜಡೆಯಸಿದ್ಧರ ದರ್ಶನಕ್ಕೆ ಹೊರಟರು. ದಾರಿಯುದ್ದಕ್ಕೂ ಅವರ ಪಾವನಮೂರ್ತಿಯನ್ನು ಕಂಡು ಧನ್ಯರಾಗದವರಿಲ್ಲ.
ಬಿಳಿಗಂಬಳಿಯ ಕೊಪ್ಪೆಯಿಂದ ಕೌಪೀನದಿಂ
ತಿಳಿಗಾವಿಯಂಗಿಯಿಂ ಶಾಟಿ ಪಾವುಟಗಳಿಂ
ಹೊಳೆವ ತಂಬಿಗೆಯಿಂದ ಭೂತಿರುದ್ರಾಕ್ಷಮಾಲೆಗಳಿಂದ ಬೆತ್ತದಿಂದ
ಬಲಿದ ತೋಳಾಧಾರದಿಂದ ರಾಜಿಸಿ ಪೋಪ
ಚೆಲುವ ಹರೆಯದ ಸತ್ಯಶೋಧಕನ ವೇಷಮಂ
ನೆಲದೊಳೀಕ್ಷಿಪರ ಕಂಗಳಣಿಯವೇ ಸತ್ವಭಾವವನವರ್ಮೊಂದರೇ?
(ಚೆನ್ನಕವಿ ಕೃತ ಹಾನಗಲ್ಲ ಕುಮಾರೇಶ್ವರ ಪುರಾಣ, ಸಂ. ೪, ಪ. ೨೦)
ಜಡೆಯಸಿದ್ಧರ ದರ್ಶನವಾಯಿತು. ಅವರ ನಿರಂಕುಶ ಸದ್ವೃತ್ತಿಯನ್ನೂ, ವಿಶೇಷ ವೈರಾಗ್ಯಮಯ ಲಕ್ಷಣಗಳನ್ನೂ, ಬಾಹ್ಯಕ್ರಿಯಾನಿವಹ ವಿಸ್ಕೃತಿಯನ್ನೂ ನಿಜಾನಂದಭಾವವನ್ನೂ ನೋಡಿ ಹಾಲಯ್ಯನವರ ಹರುಷ ಹಾಲುಗಡಲಾಗಿ ಉಕ್ಕಿ ಹರಿಯಿತು. ಅವರ ಅನುಗ್ರಹವನ್ನು ಪಡೆದು ಸಂಕೇತರೂಪವಾಗಿ ಸಂಶಯ ನಿವಾರಣೆಯನ್ನೂ ಪಡೆದರು. ತರುವಾಯ ಪರಮ ತಪಸ್ವಿಗಳೂ, ಶಿವಯೋಗಸಿದ್ಧರೂ ಶಿವಾನುಭವಸಾಗರರೂ ಆಗಿದ್ದ ಎಳಂದೂರಿನ ಬಸವಲಿಂಗ ಸ್ವಾಮಿಗಳವರ ಶಿಷ್ಯತ್ವವನ್ನು ವಹಿಸಿದರು. ಎಳಂದೂರ ಬಸವಲಿಂಗ ಸ್ವಾಮಿಗಳು ಮೊದಲು ಗದಗಿನ ಜಗದ್ಗುರು ಶ್ರೀ ತೋಂಟದಾರ್ಯಮಠದ ಮರಿದೇವರು. ವೈರಾಗ್ಯದ ಕರೆಗೆ ಓಗೊಟ್ಟು ಶ್ರೀ ನಿಜಗುಣ ಶಿವಯೋಗಿಗಳ ತಪೋಭೂಮಿಗೆ ಬಂದು ತಿರುಮಕೂಡಲ ನರಸೀಪುರದ ಕಪಿಲಾ-ಕಾವೇರಿ ಸಂಗಮದಲ್ಲಿ ಅನುಷ್ಠಾನ ಮಾಡಿದರು. ನಿಜಗುಣರ ಕೃತಿಗಳ ಆಳವಾದ ಅಭ್ಯಾಸ ಮಾಡಿದರು. ಅವುಗಳನ್ನು ಆಚರಣೆಯಲ್ಲಿ ತಂದು ಶಿವಯೋಗ ಸಿದ್ಧರಾದರು.
ಇಂಥ ಸದ್ಗುರು ಕುಮಾರೇಶನಂಥ ಶಿಷ್ಯರ ಸಮಾಗಮವಾದುದು ಕಬ್ಬಿಗೆ ಜೇನು ಇಟ್ಟಂತಾಯಿತು. ಗುರೂಪದೇಶವನ್ನು ಹೊಂದಿ ಕುಮಾರೇಶರು ಶಂಭುಲಿಂಗನಬೆಟ್ಟದ ನಿಜಗುಣರ ಗವಿಯಲ್ಲಿ ಅನುಷ್ಠಾನ ಮಾಡಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡರು.ಗುರು ಬಸವಲಿಂಗ ಸ್ವಾಮಿಗಳು ಶಿಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ನೋಡಿ ಹಿರಿಹಿರಿ ಹಿಗ್ಗಿ ಕ್ರಿಯೋಪದೇಶವನ್ನು ಮಾಡಿ ಲಿಂಗೈಕ್ಯರಾದರು. ಕುಮಾರೇಶರು ತಾಯಿಯಿಲ್ಲದ ತಬ್ಬಲಿಗಳಂತಾಗಿ ಸೊರಬ ಪ್ರಾಂತದಲ್ಲಿರುವ ಷಟ್‌ಕಾವ್ಯಕರ್ತೃ ಗುರುಬಸವ ಸ್ವಾಮಿಗಳವರ ಕ್ಯಾಸನೂರಲ್ಲಿರುವ ಗದ್ದಿಗೆಯ ಬಳಿ ಅನುಷ್ಠಾನ ಮಾಡುತ್ತ ಕುಳಿತರು.
ಅತ್ತ ಹಾನಗಲ್ಲಿನ ವಿಖ್ಯಾತ ವಿರಕ್ತಾಶ್ರಮವಾದ ಕುಮಾರ ಸ್ವಾಮಿಗಳ ಮಠದಲ್ಲಿದ್ದ ಶ್ರೀ ಫಕೀರಸ್ವಾಮಿಗಳು ತಪೋನಿಷ್ಠರೂ ವಾಕ್ಸಿದ್ಧಿಯುಳ್ಳವರೂ ಎನಿಸಿ ಅನೇಕರ ಉದ್ಧಾರ ಮಾಡಿ ವೃದ್ಧಾಪ್ಯ ಆವರಿಸಲು ಒಬ್ಬ ಯೋಗ್ಯ ಉತ್ತರಾಧಿಕಾರಿಯ ಶೋಧನೆಯಲ್ಲಿದ್ದರು. ಶ್ರೀ ಕುಮಾರೇಶನ ಕೀರ್ತಿಯನ್ನು ಸೊರಬ ಪ್ರಾಂತದ ಸದ್ಭಕ್ತರಿಂದ ತಿಳಿದು ಕುಮಾರೇಶರನ್ನು ಕರೆಸಿಕೊಂಡು ತಮ್ಮ ಉತ್ತರಾಧಿಕಾರಿಗಳಾಗಲು ಒಡಂಬಡಿಸಿದರು. ಶ್ರೀ ಫಕೀರಸ್ವಾಮಿಗಳವರು ಲಿಂಗೈಕ್ಯರಾಗಲು ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಯ ತೀರದಲ್ಲಿರುವ ಬಿದರಿಯ ಮುಧೋಳ ಮಠದ ಚೆನ್ನಬಸವಯ್ಯ-ಶಿವಲಿಂಗಮ್ಮನವರಿಗೆ ಪುತ್ರರಾಗಿ ಜನಿಸಿ, ಸವದತ್ತಿಯ ಚೌಕೀಮಠದ ಶ್ರೀ ಶಿವಲಿಂಗ ಸ್ವಾಮಿಗಳವರ ಕೃಪಾದೃಷ್ಟಿಗೆ ಪಾತ್ರರಾಗಿ, ಬಂದರದ ರುದ್ರಪ್ಪನವರಲ್ಲಿ ಶಿವಾನುಭವಶಾಸ್ತ್ರ ನಿಷ್ಣಾತರಾಗಿ, ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧಶಿವಯೋಗಿಗಳಿಂದ ಅನುಗ್ರಹ ಅಧಿಕಾರ ಪಡೆದು, ನವಿಲುತೀರ್ಥದಲ್ಲಿ ತಪಸ್ಸು ಮಾಡಿಪರಮ ತಪಸ್ವಿಗಳಾಗಿ ಅಥಣಿ ಶಿವಯೋಗಿಗಳ ವಿಶ್ವಾಸದ ಸಂಗಡಿಗರಾಗಿ ವಿಖ್ಯಾತರಾಗಿದ್ದ ಬಿದರಿ ಕುಮಾರ ಸ್ವಾಮಿಗಳಿಂದ ಕುಮಾರೇಶರಿಗೆ ಹಾನಗಲ್ಲ ಮಠದ ಅಧಿಕಾರ ಪ್ರಧಾನ ಜರುಗಿತು. ಆಗ ಸದಾಶಿವಸ್ವಾಮಿಗಳೆಂಬ ಅಭಿದಾನ ಪ್ರಾಪ್ತವಾದರೂ ಹಾನಗಲ್ಲ ಕುಮಾರ ಸ್ವಾಮಿಗಳೆಂಬ ಹೆಸರೇ ಕೊನೆಯವರೆಗೆ ಜನರ ರಸನೆಯಲ್ಲಿ ಉಳಿಯಿತು.
ಶ್ರೀಗಳವರ ಅಂತವಿಲ್ಲದ ಕರ್ತೃತ್ವಶಕ್ತಿಗೆ ಮಹಾಪೂರ ಬಂದಿತು. ಮೊದಲು ಹಾನಗಲ್ಲ ಮಠದಲ್ಲಿಯೇ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ೧೯೦೪ರಲ್ಲಿ ಅವರ ದೂರದರ್ಶಿತ್ವ ಹಾಗೂ ಅದ್ವಿತೀಯ ಕರ್ತೃತ್ವಗಳಿಂದ ಧಾರವಾಡದಲ್ಲಿ ವೀರಶೈವ ಮಹಾಸಭೆ ತ್ಯಾಗವೀರ ಲಿಂಗರಾಜ ಸಿರಸಂಗಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.ಅಲ್ಲಲ್ಲಿ ವಿದ್ಯಾಸಂಸ್ಥೆಗಳೂ, ವೀರಸನ್ಯಾಸಿಗಳೂ, ಸಮಾಜ ಸಂಸ್ಕರಣ ಕಾರ್ಯಗಳೂ ಅತ್ಯಂತ ಉತ್ಸಾಹದಿಂದ ಉದಯವಾದವು. ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡಿಪಾಗಿಡಬಲ್ಲ ಶಿವಯೋಗಸಿದ್ಧರ ಸಮೂಹ ವೊಂದು ಸಿದ್ಧವಾಗುವವರೆಗೆ ಸಮಾಜದ ಉದ್ಧಾರ ಸಾಧ್ಯವಿಲ್ಲವೆಂಬುದನ್ನು ಮನಗಂಡ ಕುಮಾರೇಶರು ಅಂಥ ಸಾಧಕರನ್ನು ಸಿದ್ಧಗೊಳಿಸುವ ಸಂಸ್ಥೆಯೊಂದನ್ನು ಸ್ಥಾಪಿಸಲು ಮನಸ್ಸು ಮಾಡಿದರು.ಪಟ್ಟದಕಲ್ಲಿನ ಹತ್ತಿರ ಭದ್ರನಾಯಕನ ಜಾಲಿಹಾಳೆಂಬ ಸಣ್ಣ ಗ್ರಾಮದಲ್ಲಿ ಬಡ ಭಕ್ತನೊಬ್ಬನ ಮಗನಾಗಿ ಹುಟ್ಟಿ, ಬಾಗಲಕೋಟೆಯ ಮನಗೂಳಿ ವಿರೂಪಾಕ್ಷಯ್ಯನವರ ಸಾಕುಮಗನಾಗಿ ಬೆಳೆದು, ಅಲ್ಲಿಯ ಪ್ರಸಿದ್ಧ ಶಿವಾನುಭವಿಗಳಾಗಿದ್ದ ಕಿಣಗಿ ಬಸವಲಿಂಗಪ್ಪನವರ ಪ್ರಭಾವದಿಂದ ಅಧ್ಯಾತ್ಮದತ್ತ ಒಲಿದು, ಇಳಕಲ್ಲ ಹತ್ತಿರದ ಕೊಡಗಲಿಯ ವಿರಕ್ತಮಠದಲ್ಲಿದ್ದ ಮಹಾತಪಸ್ವಿ ಮಹಾಲಿಂಗ ಸ್ವಾಮಿಗಳವರಿಂದ ಉಪದೇಶ ಪಡೆದು, ನಾಡಿನಲ್ಲಿ ಸಂಚರಿಸಿ ತಮ್ಮ ಅಸ್ಖಲಿತ ವಾಣಿಯಿಂದ ಅದ್ಭುತವಾದ ಪುರಾಣ ಪ್ರವಚನ ಕೀರ್ತನ ಕಲೆಯಿಂದ ಸ್ವಮತ ಪರಮತಗಳ ಆಸ್ತಿಕರೆಲ್ಲ ಆದರಕ್ಕೆ ಪಾತ್ರರಾಗಿ ವಿರಾಗವಿಭುವೆಂದು ಹೆಸರಾಗಿದ್ದ ವೈರಾಗ್ಯದ ಮಲ್ಲಣಾರ್ಯರಿಂದ ಶ್ರೀಗಳವರ ಈ ಯೋಜನೆಗೆ ಬೆಂಬಲ ಸಿಕ್ಕಿತು. ೧೯೦೮ರಲ್ಲಿ ಬಾಗಲಕೋಟೆಯಲ್ಲಿ ಕೀರ್ತಿಶೇಷ ರಾಜಾ ಲಖಮನಗೌಡಾ ಬಸವಪ್ರಭು ಸರದೇಸಾಯಿ ಒಂಟಮುರಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ನಾಲ್ಕನೆಯ ವೀರಶೈವ ಮಹಾಸಭಾಧಿವೇಶನದ ಕಾಲಕ್ಕೆ ಧರ್ಮಾವತಾರಿಗಳಾದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಆಲೋಚನಾ ಸಭೆ ಸೇರಿ ಆ ಬಗ್ಗೆ ಅಂತಿಮ ನಿರ್ಣಯವನ್ನು ಅಂಗೀಕರಿಸಲಾಯಿತು. ಆಗ ಮಹಾತಪಸ್ವಿಗಳೆನಿಸಿದ್ದ ಇಳಕಲ್ಲ ಮಹಾಂತ ಸ್ವಾಮಿಗಳವರು ತೋರಿಸಿದ ಸ್ಥಳದಲ್ಲಿ “ಶಿವಯೋಗಮಂದಿರ’ವೆಂಬ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ನಿರ್ಣಯವಾಯಿತು.
ಅರಸೀಕೆರೆ ತಾಲೂಕಿನ ಸಸಿವಾಳ ಗ್ರಾಮದಲ್ಲಿ ಹಿರಿಯಮಠದ ವೀರಯ್ಯ-ಗೌರಮ್ಮರಿಗೆ ಮಳೆಯಪ್ಪಾರ್ಯನೆಂಬ ನಾಮದಿಂದ ಮಗನಾಗಿ ಶಾ.ಶ. ೧೭೭೨ರಲ್ಲಿ ಜನಿಸಿ, ಬಳ್ಳಾರಿಯ ಸಕ್ಕರಿ ಕರಡೆಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ, ಹುನಗುಂದ ತಾಲೂಕಿನ ಚಿತ್ತರಗಿಯ ಶಿವಯೋಗ ಪೀಠವನ್ನೇರಿ ವಿಜಯಮಹಾಂತ ಶಿವಯೋಗಿಗಳಾಗಿ ಮಹಾತ್ಮರಾದವರು ಇಳಕಲ್ಲ ಮಹಾಂತ ಸ್ವಾಮಿಗಳವರು. ‘ಶಮೆ, ದಯೆ, ವಿವೇಕ, ವೈರಾಗ್ಯ, ಪರಿಪೂರ್ಣ ಭಾವ, ಶಾಂತಿ,ಕಾರುಣ್ಯ, ಶ್ರದ್ಧೆ, ಸತ್ಯ, ಸದ್ಭಕ್ತಿ, ಶಿವಜ್ಞಾನ, ಶಿವಾನಂದ’ಗಳೇ ಸಾಕಾರವಾಗಿದ್ದ ಮಹಾತ್ಮರವರು. ಮಠದ ಆಳುಗಳು ಪ್ರಮಾದವಶದಿಂದ ಸರಕಾರದ ಮರಗಳನ್ನು ಕಡಿದು ದಂಡನೆಗೆ ಗುರಿಯಾಗುವ ಪರಿಸ್ಥಿತಿಯಲ್ಲಿರುವಾಗ ತಾವೇ ತಾಲೂಕು ಆಫೀಸಿಗೆ ಹೋಗಿ ತಮ್ಮ ತಮ್ಮದೇ, ಶಿಕ್ಷೆ ತಮಗೆ ವಿಧಿಸಬೇಕೆಂದು’ ಹೇಳಿದ ಮಹಾನುಭಾವರವರು.
ವಾರದ ಮಲ್ಲಪ್ಪನವರು ಕಾಣಿಕೆಯೆಂದು ಹಣತುಂಬಿದ ತಾಟನ್ನು ಎದುರಿಗಿರಿಸಿದಾಗ ಹಣವನ್ನು ತೃಣವೆಂದು ಕಂಡು, `ಬಸವಣ್ಣನವರ ವಚನಗಳ ತಿರುಳನ್ನು ತಿಳಿದು ನಡೆಯುತ್ತೇನೆ’ ಎಂಬ ವಚನಭಿಕ್ಷೆಯನ್ನು ನೀಡೆಂದು ಅವರನ್ನು ಕೇಳಿದ ಆಶಾರಹಿತ ಅಧ್ಯಾತ್ಮವೀರರವರು. ಸರ್ವಧರ್ಮ ಸಮನ್ವಯ ದೃಷ್ಟಿಯನ್ನಿರಿಸಿಕೊಂಡು ಸಕಲ ಮತದವರಿಗೂ ಶ್ರೇಯ ಪ್ರೇಯಗಳನ್ನು ಅನುಗ್ರಹಿಸಿ ಅಮರರಾದ ಅನುಭಾವಿಗಳವರು.ಅಂಥ ಮಹಾತ್ಮರು ತೋರಿಸಿದ, ಹಿಂದೆ ಮಹಾಮಹಿಮ ಕೊಟ್ಟೂರು ಬಸವೇಶ್ವರರ ತಪೋವನವಾಗಿದ್ದ, ಇಂದು ಬನಶಂಕರಿನಾಗನಾಥ ಮಹಾಕೂಟ, ವಾತಾಪಿಪುರ (ಬಾದಾಮಿ) ಪಟ್ಟದಕಲ್ಲು ಮತ್ತು ಐಹೊಳೆಗಳ ಮಧ್ಯದಲ್ಲಿರುವ ಪವಿತ್ರ ಸ್ಥಾನದಲ್ಲಿ ಶಿವಯೋಗಮಂದಿರ ಸಂಸ್ಥೆಯು ಕ್ರಿ.ಶ. ೧೯೦೯ರಲ್ಲಿ ಸ್ಥಾಪಿತವಾಯಿತು.ಸ್ವತಃ ಇಳಕಲ್ಲ ಮಹಾಂತ ಸ್ವಾಮಿಗಳವರೇ ವೈ, ಶು. ೭ಗೆ ಲಿಂಗಮುದ್ರೆಗಳನ್ನು ಸ್ಥಾಪಿಸಿದರು. ವಟುಗಳು ಬಂದರು. ಯೋಗಪಟು ಗಳಾಗತೊಡಗಿದರು. ಶಾಸ್ತ್ರಕಾರರು,ಕಲೆಗಾರರು, ಕವಿಗಳು, ವೈದ್ಯರು, ಸಿದ್ಧರು, ಸಾಧಕರು, ಭಕ್ತರು, ಮುಕ್ತರು ಸಾಲುಸಾಲಾಗಿ ಶಿವಯೋಗಮಂದಿರಕ್ಕೆ ಬರತೊಡಗಿದರು. ಶಿವಯೋಗ ಮಂದಿರವು ಶಿವಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಗ್ರಂಥಸಂಗ್ರಹ-ಸಂಶೋಧನ-ಪ್ರಕಾಶನ ಕಾರ್ಯ ನಡೆಯಿತು; ಉಪದೇಶಕರು, ಸಂಗೀತಕಾರರು, ಕವಿಗಳು, ಕೀರ್ತನಕಾರರು ಸಿದ್ಧರಾಗತೊಡಗಿದರು. ಸಮಾಜ ಜಾಗೃತಿಗಾಗಿ, ಪುನರುಜೀವನಕ್ಕಾಗಿ, ವೈದ್ಯಶಾಸ್ತ್ರದ ವ್ಯಾಸಂಗ ಸಂಶೋಧನೆಗಳು ನಡೆದುವು; ಭಸ್ಮ-ಲಿಂಗಗಳ ನಿರ್ಮಾಣ, ಕೃಷಿ ಸಂವರ್ಧನ,ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಗೋಸಂವರ್ಧನ, ಖಾದಿ ಪ್ರೋತ್ಸಾಹನ-ಹೀಗೆ ಹಲವು ಮುಖವಾಗಿ ರಾಷ್ಟ್ರ ನಿರ್ಮಾಣಕಾರ್ಯ ಭರದಿಂದ ಸಾಗಿತು; ಶಿಕ್ಷಣ ಪ್ರಸಾರ, ಸಾಹಿತ್ಯ ಪ್ರಚಾರಗಳಿಗೆ ನರೆಬಂದಿತು; ವಾಣಿಜ್ಯ ವ್ಯಾಪಾರಗಳಿಗೂ ಉತ್ತೇಜನ ದೊರೆಯಿತು. ಪತ್ರಿಕೆಗಳೂ ಪ್ರಕಟವಾಗತೊಡಗಿದವು.ಒಟ್ಟಿನಲ್ಲಿ ಹೊಸ ಹುಟ್ಟೊಂದು ತಲೆದೋರಿತು.
ಎಂಥ ಹೊಸಹುಟ್ಟದು! ಎಳಂದೂರ ಬಸವಲಿಂಗ ಸ್ವಾಮಿಗಳು, ಬಿದರಿ ಕುಮಾರ ಸ್ವಾಮಿಗಳು, ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು, ಚಿತ್ತರಗಿಯ ಮಹಾಂತಶಿವಯೋಗಿಗಳು, ಮಲ್ಲನಕೆರೆಯ ಚನ್ನಬಸವ ಸ್ವಾಮಿಗಳು, ಹುಬ್ಬಳ್ಳಿಯ ಮೂರುಸಾವಿರಮಠದ ಗಂಗಾಧರ ಮಹಾಸ್ವಾಮಿಗಳವರು, ಅನಂತಪುರದ ಜಗದ್ಗುರು ಗುರುಬಸವ ಮಹಾಸ್ವಾಮಿಗಳು ಮತ್ತು ಜ. ಲಿಂಗ ಮಹಾಸ್ವಾಮಿಗಳು, ಗದಗಿನ ತೋಂಟದಾರ್ಯ ಮಠದ ಜ. ಸಿದ್ದೇಶ್ವರ ಸ್ವಾಮಿಗಳು, ಹಾವೇರಿಯ ಹುಕ್ಕೇರಿಮಠದ
ಶಿವಬಸವ ಮಹಾಸ್ವಾಮಿಗಳು, ಶಾಂತವೀರ ಸ್ವಾಮಿಗಳು ಕರವೀರಮಠ ಬಾಗಲಕೋಟೆ. ಕೆಳದಿಯ ಹಿರಿಯಮಠದ ರೇವಣಸಿದ್ಧ ಪಟ್ಟಾಧ್ಯಕ್ಷರು, ಸೊಲ್ಲಾಪುರದ ವೀರೇಶ್ವರ ಶರಣರು, ಕಲ್ಲೂರ ಶರಣರು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಗುತ್ತಲದ ರುದ್ರಸ್ವಾಮಿಗಳು, ಸೂಡಿಯ ಪಟ್ಟಾಧ್ಯಕ್ಷರು ಮೊದಲಾದ ಶರಣ ಕುಲದೀಪಕರ ಸಂಯುಕ್ತ ಪ್ರಭಾವಲಯದಲ್ಲಿ ಉದ್ಭವಿಸಿ ಕುಮಾರ ಸ್ವಾಮಿಗಳ ಆತ್ಮತೇಜದಲ್ಲಿ ತೊಳಗಿ ಬೆಳಗಿದ ಆ ಹೊಸಹುಟ್ಟು ಅವಿಸ್ಮರಣೀಯವಾದುದು. ಅದು ಇತ್ತ ಅಮೃತ ಫಲಗಳಾದರೂ ಎಂಥವು! ಬಾಗಲಕೋಟೆಯ ಶಿವಮೂರ್ತಿ ಸ್ವಾಮಿಗಳು, ಕಂಚುಕಲ್ಲ.ಬಿದರೆ ‘ಯೋಗಿರಾಜ’ ಪ್ರಭುಕುಮಾರ ಪಟ್ಟಾಧ್ಯಕ್ಷರು, ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು, ನವಿಲುಗುಂದದ ಗವಿಮಠದ ಬಸವಲಿಂಗ ಶಿವಯೋಗಿಗಳು.ನಿಡುಮಾಮಿಡಿ ಜಗದ್ಗುರುಗಳು (ಜ.ಚ.ನಿ), ಬಂಥನಾಳ ಶಿವಯೋಗಿಗಳು,ಕುರವತ್ತಿಯ ತೋಂಟದಾರ್ಯ (ಮಹಾದೇವ) ಸ್ವಾಮಿಗಳು, ಐಹೊಳೆಯ ಸದಾಶಿವದೇವರು, ಚಿತ್ತರಗಿ ಇಳಕಲ್ಲ ಪೀಠದ ಗುರು ಮಹಾಂತ ಸ್ವಾಮಿಗಳು,ಸಂಪಗಾವಿಯ ನೀಲಕಂಠ ಶಿವಾಚಾರ್ಯರು, ಹಾನಗಲ್ಲ ಮಹೇಶ್ವರ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಜಡೆಯ ಸಿದ್ಧಬಸವ ಸ್ವಾಮಿಗಳು, ಕಲ್ಯಾಣದ ಸಿದ್ಧಲಿಂಗ ಸ್ವಾಮಿಗಳು, ಬನವಾಸಿಯ ಸಿದ್ಧವೀರ ಸ್ವಾಮಿಗಳು, ಕುಷ್ಟಗಿಯ ಪಟ್ಟದ ಕರಿಬಸವ ಶಿವಾಚಾರ್ಯರು, ಸಖರಾಯಪಟ್ಟಣದ ಸದಾಶಿವ ಪಟ್ಟಾಧ್ಯಕ್ಷರು,ಹುಬ್ಬಳ್ಳಿಯ ಮೂರುಸಾವಿರಮಠದ ಹಿಂದಿನ ಜಗದ್ಗುರುಗಳವರು, ಅನಂತಪುರದ ಜ, ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು, ಹಾನಗಲ್ಲ ಸದಾಶಿವ ಸ್ವಾಮಿಗಳು,ಅಂಕಲಗಿಯ ಸಿದ್ಧರಾಮ ಸ್ವಾಮಿಗಳು, ಮುಂಡರಗಿಯ ಅನ್ನದಾನ ಸ್ವಾಮಿಗಳು, ಹಾರಹಳ್ಳಿ, ತಾವಕೆರೆ, ತೆಲಸಂಗ, ಬೇವಿನಕಟ್ಟೆ, ಖೆಳಗಿ, ನಿಡಗುಂದಿಕೊಪ್ಪ, ಮೊರಬ,ಕಪನಳ್ಳಿ, ನಾಗನೂರು, ಕೆರೂರು, ರಾವೂರು, ಗುಳೇದಗುಡ್ಡ, ಸಾಲೂರು, ಭಾಲ್ಕಿ,ಬಾರಂಗಿ ಕೂಡ್ಲಿ, ಮುಳ್ಳಳ್ಳಿ, ಕಡಕೋಳ, ಹೊಸಳ್ಳಿ, ಅಮೀನಗಡ, ಸಿಂದಗಿ, ಶಿರ್ಶಿ,ನೀಲಗುಂದ, ಹಾಸನ, ಸವದತ್ತಿ, ಪಡುಸಲಗಿ, ಗುಡಗೇರಿ, ಚಿಕ್ಕಸುಗೂರ, ತುಪ್ಪದ ಕುರಹಟ್ಟಿ, ಕನ್ನೂರು, ಚಿಂಚಣಿ, ಗುಳೇದಗುಡ್ಡ, ಗೊಗ್ಗಿಹಳ್ಳಿ, ಕಾಪನಹಳ್ಳಿ, ಬೇನಾಳ,ರಾಮಗಡ್ಡಿ, ಬಾಣಾವರ, ಬೀಳಗಿ, ದೊಡ್ಡಮೇಟಿ ಕುರಿಕೆ, ಹಾಲ್ಟಿ, ಗೌರಿಕೆರೆ, ಬಬಲೇಶ್ವರ.ಸವಣೂರು, ತಡಸ ಮೊದಲಾದ ಸ್ಥಳಗಳ ಶ್ರೀಗಳವರು, ಉಭಯಗಾನವಿಶಾರದ ಪಂಚಾಕ್ಷರ ಗವಾಯಿಗಳು ಅವರ ಪಟ್ಟಶಿಷ್ಯರಾದ ಪುಟ್ಟಯ್ಯನವರು, ಸಂಗೀತ ಸುಧಾಕರ ಬಸವರಾಜ ರಾಜಗುರು, ಸಂಗೀತ ವಿದ್ವಾನ್ ಕರೂರು ಗುರುಬಸವಾರ್ಯ ಹಿರೇಮಠರು, ಸಂಗೀತ ಸುಧಾಕರ ಸಿದ್ಧರಾಮ ಜಂಬಲದಿನ್ನಿ ಮೊದಲಾದ ಸಂಗೀತವಿದ್ವಾಂಸರು, ಕವಿರತ್ನ ಚೆನ್ನಕವಿಗಳು ದ್ಯಾಂಪುರ, ಪಂ. ಕಲ್ಲಿನಾಥ ಶಾಸ್ತ್ರಿಗಳು ಪುರಾಣಿಕ, ಮಹಾಲಿಂಗ ವೀರಾರ್ಯ ಹಿರೇಮಠ ದ್ಯಾಂಪುರ, ಗಂಗಾಧರ ಶಾಸ್ತ್ರಿಗಳು ಚಿತ್ತರಗಿ, ಬಸವಲಿಂಗ ಶಾಸ್ತಿಗಳಂಥ ಕೀರ್ತನಾಚಾರ್ಯರು-ಹೀಗೆ ಎಣಿಕೆಗೆ ಎಟುಕದಷ್ಟು ಅಮೃತಫಲಗಳನ್ನು ಕೊಟ್ಟಿತು ಕುಮಾರೇಶನು ತಂದ ಹೊಸಹುಟ್ಟು,
ವೀರವೈರಾಗ್ಯವನ್ನಪ್ಪಿದರೂ ಕುಮಾರೇಶರು ಕರುಣರಸಭರಿತರು, ಉದಾರ ಚರಿತರು. ಅವರ ವಟುವಾತ್ಸಲ್ಯ, ದೀನಬಂಧುತ್ವ, ಸರ್ವಧರ್ಮ ಸಮನ್ವಯ ದೃಷ್ಟಿ,“ಸರ್ವೇಜನಾಸ್ಸುಖಿನೋ ಭವಂತು’ ಎಂಬ ವಿಶ್ವವಿಶಾಲ ಹೃದಯ ಇತ್ಯಾದಿಗಳು ಅವರ್ಣನೀಯವಾದವುಗಳು. ಶಿವಯೋಗ ಮಂದಿರದಲ್ಲಿ ಒಮ್ಮೆ ನವಿಲುಗುಂದದ ಬಸವಲಿಂಗ ಸ್ವಾಮಿಗಳವರು ಭಾಷಣ ಮಾಡುತ್ತ ‘ಜಗತ್ತಿನಲ್ಲಿ ವೀರಶೈವ ಮತವೇ ಶ್ರೇಷ್ಠ’ವೆಂದು ಸಾರಲು ಶ್ರೀ ಕುಮಾರ ಯೋಗಿಗಳು ಅವರನ್ನು ‘ಜಗತ್ತಿನ ಯಾವ ಯಾವ ಧರ್ಮಗಳ ಬಗೆಗೆ ಓದಿಕೊಂಡಿರುವೆ?’ ಎಂದು ಕೇಳಿದರಂತೆ. ಬಸವಲಿಂಗ ಸ್ವಾಮಿಗಳವರಿಂದ ‘ಇಲ್ಲ’ವೆಂಬ ಉತ್ತರಬರಲು, ‘ಕೇವಲ ನಿನ್ನ ಧರ್ಮದ ಬಗ್ಗೆ ಮಾತ್ರ ಓದಿಕೊಂಡು ಜಗತ್ತಿನ ಎಲ್ಲ ಧರ್ಮಗಳಿಗಿಂತ ನಿನ್ನ ಧರ್ಮವೇ ಶ್ರೇಷ್ಠವಾದುದೆಂದು ಹೇಗೆ ಹೇಳಿದೆ? ಅದಕ್ಕೆ ಆಧಾರವೇನು? ಎಲ್ಲರಿಗೂ ತಮ್ಮ ಧರ್ಮ ಪ್ರಿಯವಾಗುತ್ತದೆ. ನಮ್ಮ ಧರ್ಮವೇ ಶ್ರೇಷ್ಠವೆಂದು ಸಾರಿ ಅನ್ಯರ ಮನ ನೋಯಿಸುವುದು ಉಚಿತವೆ? ಎಲ್ಲ ಧರ್ಮಗಳನ್ನೂ ತುಲನಾತ್ಮಕ ದೃಷ್ಟಿಯಿಂದ ಅರಿತುಕೊಳ್ಳಬೇಕು.ಎಲ್ಲ ಧರ್ಮಗಳ ಬಗೆಗೂ ಸಹಿಷ್ಣುತೆ ಇರಬೇಕು. ಸ್ವಮತ ಶ್ರದ್ಧೆಯು ಅನ್ಯಮತಗಳ ಅವಹೇಳನೆಗೆ ಆಸ್ಪದವೀಯ ಬಾರದು!’ ಎಂದು ಶ್ರೀಗಳವರ ಉದಾರವಾಣಿ ವಚಿಸಿತಂತೆ. ಅವರ ಪ್ರಭಾವದಿಂದಲೇ ಇಂದಿಗೂ ನವಿಲುಗುಂದದ ಗವಿಮಠದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿದೆ.
ಅಸ್ಪೃಶ್ಯತೆಯ ನಿವಾರಣೆಗಾಗಿ ಹೆಣಗಿದರವರು. ಶ್ರೀಮಂತರ ಸೌಧಗಳಿಗೆ ಹೋಗುವುದನ್ನು ಬಿಟ್ಟಾದರೂ ಬಡವರ ಮನೆಗಳಿಗೆ ಹೋಗುತ್ತಿದ್ದರವರು. ಸರಳ ಜೀವನ ಉನ್ನತ ಆದರ್ಶಗಳೇ ಉಸಿರಾಗಿದ್ದವರವರು. ಖಾದಿಗೆ ಪ್ರೋತ್ಸಾಹವನ್ನಿತ್ತರವರು. ಅನೇಕ ಹೃದಯಸ್ಪರ್ಶಿಯಾದ ಭಾವಗೀತೆಗಳನ್ನು ರಚಿಸಿ ನವೀನ ನಿಜಭಕ್ತಿ ತರಂಗಿಣಿಯನ್ನು ಹರಿಸಿದವರು ಅವರು. ಶುದ್ಧ ಭಕ್ತಿಯಿಂದ ಬಡ ಕುರಬನೊಬ್ಬನು ತಂದಿದ್ದ ಹಾಲನ್ನು ಸ್ವೀಕರಿಸುವುದೋ ಬಿಡುವುದೋ ಎಂದು ಉಳಿದವರು ವಿವೇಚನೆಗೆ ಒಳಗಾಗಿದ್ದಾಗ ನಿಜಭಕ್ತಿ ಬೆರೆತ ಆ ಹಾಲೇ ಅಮೃತವೆಂದು ಅದನ್ನು ಸ್ವೀಕರಿಸಿದವರು ಆ ಮಹಾತ್ಮರು. ಸೊಲ್ಲಾಪುರದ ವೀರೇಶ್ವರ ಶಿವಶರಣರು ಲಿಂಗೈಕ್ಯರಾಗಲಿರುವರೆಂಬ ಸುದ್ದಿ ತಿಳಿಯುತ್ತಲೆ ವ್ರತಭಂಗವನ್ನೂ ಗಮನಿಸದೆ ಉಗಿಬಂಡಿಯಲ್ಲಿ ಪ್ರವಾಸ ಮಾಡಿದವರು ಆ ಕೃಪಾಸಿಂಧುಗಳು. ಅವರು ಏನು ಅಹುದು? ಏನು ಅಲ್ಲ?
ಭಕ್ತಿಯಲ್ಲಿ ಬಸವ ನೀನಯ್ಯ ಜ್ಞಾನದಲ್ಲಿ ಚನ್ನಬಸವ ನೀನಯ್ಯ!
ವಿರತಿಯಲ್ಲಿ ಅಲ್ಲಮಪ್ರಭು ನೀನಯ್ಯ! ಶಿವಯೋಗದಲ್ಲಿ ಸಿದ್ಧರಾಮ ನೀನಯ್ಯ!
ಐಕ್ಯದಲ್ಲಿ ಅಜಗಣ್ಣ ನೀನಯ್ಯ! ಉಳಿದ ಕಾಯಕಂಗಳಲ್ಲಿ
ಎಲ್ಲ ಶಿವಶರಣರಂಶ ನೀನಯ್ಯ! ಶ್ರೀ ನಿಡುಮಾಮಿಡಿ ಶ್ರೀಗಿರಿ
ಸೂರ್ಯ ಸಿಂಹಾಸನಾಧೀಶವಾಸ ಕುಮಾರೇಶ್ವರ
ಜಚನಿ
ಕಾಯವಿಕಾರವಿಲ್ಲ ಮನದುಣಮಿಲ್ಲ ಮದಾಳಿಯಿಲ್ಲವಾ
ವಾಯು ಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲ ವಾನಗಂ
ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ
ಪಾಯಮದಿಲ್ಲ ನಿನ್ನೊಳ ಮಹಾ ಪ್ರಭುಲಿಂಗ ಕುಮಾರಯೋಗಿಯೆ||
ಲಿಂ, ಕವಿರತ್ನ ಚೆನ್ನಕವಿಗಳು
ಎಂಬ ಜ.ಚ.ನಿಯವರ ವಚನ ರತ್ನವನ್ನು ಮತ್ತು ಕವಿರತ್ನ ಚೆನ್ನಕವಿಗಳ ನುಡಿಯೊಂದನ್ನು ಉದ್ಧರಿಸಿಬಿಟ್ಟರೆ ಸಾಕೆಂದು ತೋರುತ್ತದೆ.
( ಆಕರ : ಸಿದ್ಧಯ್ಯ ಪುರಾಣಿಕರ ‘ಶರಣ ಚರಿತಾಮೃತ’ ಪು. ೮೨೧-೮೩೨)