ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
ಪ್ರತೀ ಜೀವಿಗೆ ಆಧಾರ ಭಗವಂತನಿಂದ ನಿರ್ಮಾಣವಾದ ಈ ಭೂಮಂಡಲ.ಇದು ಪಂಚಭೂತಗಳಿಂದ ಆವೃತವಾದದ್ದು.ಇಲ್ಲಿ ಜೀವಿಸುವ ಪ್ರತಿ ಜೀವಿಗೂ ಸುಖ – ದುಃಖ, ಆಸೆ – ನಿರಾಸೆ,ನೋವು – ನಲಿವು ಹೀಗೆ ಎಲ್ಲ ಅನುಭವಗಳು ಸಾಮಾನ್ಯವೇ.ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ತಮ್ಮ ಕುಂದು ಕೊರತೆಗಳನ್ನು,ಕಷ್ಟ ಸುಖಗಳನ್ನು ತಮ್ಮಷ್ಟಕ್ಕೆ ತಾವೇ ನಿಭಾಯಿಸಿಕೊಳ್ಳುತ್ತವೆ. ಸಮತೋಲನದಲ್ಲಿ ಬದುಕು ನಡೆಸುತ್ತವೆ.ಆದರೆ ಮಾನವ ಮಾತ್ರ ಇವುಗಳಿಗಿಂತ ಭಿನ್ನ.ಇವನು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವವ. ಅತೃಪ್ತ,ಸ್ವಾರ್ಥ ಪರತೆಯನ್ನು ತುಂಬಿಕೊಂಡು ನಡೆವವ.ಇವನಿಗೆ ಸುಖ – ದುಃಖ,ನೋವು – ನಲಿವು ,ಲಾಭ – ನಷ್ಟ ಬಂದೊದಗಿದಾಗ ಒಂದೊಂದು ತರಹದ ಮನೋಸ್ಥಿತಿ ಇವನು ಎದುರಿಸುತ್ತಾನೆ.ಇವನು ಭೂಮಿಗೆ ಬಂದ ಕಾರಣ,ಧೇಯೋದ್ದೇಶ,ಕಾರ್ಯ ಕಲ್ಪ ಎಲ್ಲವನ್ನೂ ಬದಿಗೊತ್ತಿ ಲೋಕದ ಮಾಯಾವಶನಾಗಿ ಭವದ ಚಕ್ರದಲ್ಲಿ ಬಿದ್ದು ಭಿನ್ನ ಭಿನ್ನ ರೀತಿಯ ಗುಣಗಳನ್ನು ಹೊಂದಿ ದುಃಖಿಯಾಗಿ ಕೊನೆಗೆ ತನ್ನ ಕೈಲಾಗದಿದ್ದ ಪಕ್ಷದಲ್ಲಿ ಭಗವಂತ ,ಆತ್ಮ ,ಪರಮಾತ್ಮ ಎಂಬುದರ ಕಡೆಗೆ ಚಿತ್ತೈಸುವ. ಈ ಲೋಕದ ವ್ಯವಸ್ಥೆಗೆ ಅಂಟಿಕೊಂಡು ಬದಲಾದ ಮನುಷ್ಯ ಮತ್ತೆ ಆ ಪರಮ ಸ್ವರೂಪ ಪಡೆಯಬೇಕಾದರೆ ಅದಕ್ಕೆ ಮೂಲ ಬೇರು ಈ ಅಂತರಾತ್ಮ ನ ಅರಿವನ್ನು ತಿಳಿಸುವ ಅಧ್ಯಾತ್ಮ. ಇದು ಅವನ ಪಾಪಯುಕ್ತ ದೇಹ,ಮನಸು ಬುದ್ಧಿಯನ್ನು ಪುಣ್ಯಯುಕ್ತವನ್ನಾಗಿ ಮಾಡಿ ಮುಕ್ತನನ್ನಾಗಿ ಮಾಡುತ್ತದೆ.ಆ ಅಧ್ಯಾತ್ಮವನ್ನು ಅರಿಯಲು ಅವನಿಗೆ ಕೆಲವೊಂದಿಷ್ಟು ಮಾರ್ಗಗಳು ಅವಶ್ಯ.ಅವುಗಳಲ್ಲಿ ನೂರಾರು ಮಾರ್ಗಗಳು ಉಂಟು.ಆ ನೂರಾರು ಮಾರ್ಗಗಳಲ್ಲಿ ಅತ್ಯಂತ ಸುಲಭ ಸೂಕ್ಷ್ಮ ಶಿಸ್ತಿನ ವಿದ್ಯೆಯೇ ಈ “ಧ್ಯಾನ ಮತ್ತು ಅನುಷ್ಠಾನ.”
ಧ್ಯಾನ ಮತ್ತು ಅನುಷ್ಠಾನ ಎಂದರೇನು ಅವುಗಳ ಕ್ರಮಗಳೇನು ಹೇಗೆ ಆಚರಿಸಬೇಕು ಎನ್ನುವ ಪರಿಯನ್ನು ಈ ಕೆಳಕಂಡಂತೆ ಅವಲೋಕಿಸೋಣ.
ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.
ಧ್ಯಾನ ಎಂದರೇನು?
ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.
*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.
*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.
*ಧ್ಯಾನ ಎಂದರೆ ತಲ್ಲೀನತೆ.
*ಅದು ಒಂದು ವಸ್ತುವನ್ನು ಕೇಂದ್ರವಾಗಿ ಇಟ್ಟುಕೊಂಡು ನಮ್ಮನ್ನು ಅದರೊಂದಿಗೆ ಅಳವಡಿಸಿಕೊಳ್ಳುವುದು.
ಧ್ಯಾನದಲ್ಲಿ ಎರಡು ಪ್ರಕಾರ
1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.
2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.
ಕಮಲ
ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.
ಧ್ಯಾನಕ್ಕೆ ಸಿದ್ಧತೆ
ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.
ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.
ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.
ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.
ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.
ಎಚ್ಚರಿಕೆ
*ಮನಸ್ಸು ಚಂಚಲ,ಉದ್ವೇಗ,ಚಿಂತೆ ಇವುಗಳಿಂದ ಆವೃತವಾದ ಸಮಯದಲ್ಲಿ ಮಾಡಬಾರದು.ಕೆಲವು ನಿಮಿಷ ದೀರ್ಘ ಉಸಿರಾಟ ಮಾಡಿ ಮುಂದುವರೆಯ ಬೇಕು.
* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.
* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.
ಪ್ರಯೋಜನಗಳು
* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.
* ದೇಹ, ಮನಸ್ಸಿನ ದ್ವಂದ್ವ ದೂರ.
* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.
* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.
* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.
* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.
* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.
* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.
* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.
* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.
* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.
* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.
* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.
*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.
ಅನುಷ್ಠಾನ.
ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸುವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ನಮ್ಮ ಒಳ ಅರಿವನ್ನು ಹೊರತೆಗೆಯಲು, ಪರಿಶುದ್ಧ ಪರಿಪಕ್ವ ಸ್ಥಿತಿಯನ್ನು ತಲುಪಲು,ಆತ್ಮಾನಂದವನ್ನು ಆನಂದಿಸಲು ಇರುವ ಏಕೈಕ ಮಾರ್ಗ ಎಂದರೆ ಅನುಷ್ಠಾನ.
*ನಮ್ಮ ಸಂಕಲ್ಪವನ್ನು ಈಡೇರಿಸಲು ಅಂದರೆ ಜಾರಿಗೆ ತರಲು ಇರುವ ಸೋಪಾನವೆ ಈ ಅನುಷ್ಠಾನ.
*ಯೋಗ ಸಾಧನೆಯಿಂದ ಯಾವ ಯಾವ ಸಾಧನೆಯನ್ನೂ ಸಿದ್ಧಿಯನ್ನು ಪಡೆಯಲಿಕ್ಕೆ ಸಾಧ್ಯವೋ ಅದನ್ನೆಲ್ಲ ಶಿವಯೋಗ ಆಚರಣೆಯ ಅನುಷ್ಠಾನದಿಂದ ಪಡೆಯಲು ಸಾಧ್ಯ.
*ಹೆಸರೇ ಹೇಳುವಂತೆ ಅನುಷ್ಠಾನ ಎಂದರೆ ಇದು ಕೇವಲ ಮೌಖಿಕವಾಗಿ ನುಡಿಯುವ ನುಡಿ ಅಲ್ಲ ಇದು ದೇಹ ಹಾಗೂ ಆತ್ಮ ವಿಜ್ಞಾನದ ಕ್ರಿಯೆಯಾಗಿದೆ.
*ನಿಗ್ರಹಾನುಗ್ರಹ ಶಕ್ತಿ ಪ್ರಾಪ್ತವಾಗಿ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಳು ಅನುಷ್ಠಾನ ಅವಶ್ಯಕ.
*ಅನುಷ್ಠಾನ ಮಾಡಿದ ಮಹನೀಯನಿಗೆ ಪಂಚ ಪರುಷ ಸಿದ್ಧಿಗಳು(ವಾಕ್,ದೃಷ್ಠಿ,ಹಸ್ತ,ಮನೋ,ಭಾವ) ಅವರ ವಶವಾಗಿ
ಅವರ ಬೌದ್ಧಿಕ,ಶಾರೀರಿಕ,ಮಾನಸಿಕ ಚಟುವಟಿಕೆಗಳೆಲ್ಲವೂ ಲೋಕೊದ್ಧಾರಕ್ಕಾಗಿ ಕಾರಣವಾಗುವವು.
*ಸಾಮಾನ್ಯರಂತೆ ಈ ಭೂಮಿಯಲ್ಲಿ ಜನಿಸಿದರೂ ಸಹ ಅನುಷ್ಠಾನ ಮಾತ್ರದಿಂದ ಅವರ ಅಂಗ ಗುಣಗಳೆಲ್ಲ ಶಿವಗುಣಗಳಾಗಿ ಅರಳಿ ನಿತ್ಯ ನಿರಂತರ
ಸುಗಂಧವನ್ನು ಬೀರುತ್ತಲೇ ಇರುತ್ತದೆ.
*ಅನುಷ್ಠಾನ ಎಂದರೆ ಏನೋ ಸಾಮಾನ್ಯ ಇಲ್ಲವೇ ವಿಶೇಷ ಪೂಜಾ ವಿಧಿ ಎಂದು ಯಾರೂ ಭಾವಿಸಬಾರದು.ಅನುಷ್ಠಾನ ಕಾಲದಲ್ಲಿ ಅಣು ಯುದ್ದ,ಪರಮಾಣು ಯುದ್ಧದಂತಹ ಪ್ರಸಂಗಗಳು ದೇಹದಲ್ಲಿ ಎದುರಿಸಬೇಕಾಗುತ್ತದೆ.ಸೃಷ್ಠಿಯ ಅಸುರೀ ಶಕ್ತಿಗಳನ್ನು ದಮನಮಾಡಿ ವಿಜಯ ಸಂಪಾದಿಸಬೇಕು. ಹೋರಾಟಕ್ಕಿಳಿದಾಗ ಘೋರರೂಪದಲ್ಲಿ ಮೇಲೇರಗುತ್ತವೆ ಅವುಗಳ ನಿಗ್ರಹ ಅಧ್ಯಾತ್ಮಿಕವಾಗಿ ಶಕ್ತಿಶಾಲಿಯಾದ ತಪಸ್ಸಿಗೆ ಮಾತ್ರ ಸಾಧ್ಯ. ಈ ಅನುಷ್ಠಾನ ಭೂಮಿಯು ದೇಹ ಮನಸ್ಸು ಹಾಗೂ ದಶೆಂದ್ರಿಯಗಳು,ಪಂಚ ತನ್ಮಾತ್ರಯಗಳು,ಪಂಚಭೂತಗಳು,ಮತ್ತು ಅಂತಃಕರಣ ಚತುಷ್ಟಯಗಳ ನಡುವಿನ ಮಹಾಯುದ್ಧದ ರಣರಂಗವಾಗಿದೆ.ಅದಕ್ಕಾಗಿಯೇ ಇದನ್ನು ಪಡೆಯಲು ಯೋಗ್ಯ ಗುರುವಿನ ಮಾರ್ಗದರ್ಶನ ಅವಶ್ಯಕ.
ಅನುಷ್ಠಾನ ವಿಧಗಳು.
ಇದರಲ್ಲಿ 3 ವಿಧಗಳು
1.ಸಾತ್ವಿಕ ಅನುಷ್ಠಾನ.
2.ರಾಜಸಿಕ ಅನುಷ್ಠಾನ.
3 ತಾಮಸಿಕ ಅನುಷ್ಠಾನ.
ಸಾತ್ವಿಕ ಅನುಷ್ಠಾನ:- ಇದು ಅಂತರಂಗದ ಅರಿವಿನ ಖನಿಯಾದ ಆತ್ಮವನ್ನು ಶಿವಯೋಗ ಮಾರ್ಗದ ಮೂಲಕ ಅಂದರೆ ಮೊದಮೊದಲು ಸ್ಥೂಲ ತನುವಿನೊಡಗೂಡಿ ಸ್ಥೂಲ ಗ್ರಾಹಿಯಾದ ಗುರು ಕೊಟ್ಟ ಇಷ್ಟಲಿಂಗದ ನಿರಿಕ್ಷಣೆಯ ಮೂಲಕ ಬಾಹ್ಯ ಇಂದ್ರಿಯಗಳ ಒಳಸೆಳೆತವನ್ನು ಮಾಡುತ್ತಾ ಸೂಕ್ಷ್ಮ ಶರೀರದ ಪ್ರಾಣಲಿಂಗವನ್ನು ಕಂಡುಕೊಳ್ಳುವುದು.ಇದು ಮನೋಗ್ರಾಹಿ.ಇಲ್ಲಿ ಮನೋನಿಗ್ರಹ ವೆ ಇದಕ್ಕೆ ತಾಯಿ ಬೇರು.ನಂತರ ಭಾವಲಿಂಗವನ್ನು ಅದರ ಅರಿವನ್ನು ಭಾವಗಾನುವುದು.ಇಲ್ಲಿ ಅಭ್ಯಂತರ ಸಾಧನೆಯ ಮೂಲಕ ಭಾವಗ್ರಾಹಿ ಆತ್ಮವನ್ನು ಕಾಣುವ ಸ್ಥಿತಿ. ಇದಕ್ಕೆ ಮೂಲ ಮಾರ್ಗವೇ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಮಾರ್ಗ.
ಇಲ್ಲಿ ಆತ್ಮನನ್ನು ಪ್ರಾಧಾನ್ಯವಾಗಿಟ್ಟುಕೊಂಡು ಮುನ್ನಡೆವ ಸಾಧಕನು ದೇಹದ ಸುಖ ದುಃಖಕ್ಕೆ ಬೆಲೆ ಕೊಡದೆ ಇರುತ್ತಾನೆ.ಹಾಗಾಗಿ ಸಾತ್ವಿಕ ಆಹಾರ ಸೇವನೆ,ಸಾತ್ವಿಕ ನಡೆ,ಸಾತ್ವಿಕ ನುಡಿ,ಸಾತ್ವಿಕ ವಾತಾವರಣ,ಸಾತ್ವಿಕ ವಿಚಾರಗಳು ಇದಕ್ಕೆ ಸಹಕಾರಿ.
ಇದನ್ನು ಬಸವಾದಿ ಪ್ರಮಥ ಶಿವಶರಣರು,ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಲಕಲ್ ವಿಜಯ ಮಹಾಂತ ಶಿವಯೋಗಿಗಳು,ಹಾನಗಲ್ಲ ಕುಮಾರ ಮಹಾ ಸ್ವಾಮಿಗಳು,ಹಾವೇರಿ ಶಿವಬಸವ ಮಹಾ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಶಿವಯೋಗಿಗಳು, ಒಳಬಳ್ಳಾರಿಯ ಚನ್ನಬಸವ ತಾತನವರು ಇನ್ನೂ ಹಲವಾರು ಶಿವಯೋಗಿಗಳು ಮಾಡಿದ್ದಾರೆ.
ರಾಜಸಿಕ ಅನುಷ್ಠಾನ:- ಇದು ಒಂದು ಲೌಕಿಕ ಅನುಷ್ಠಾನ ವೆ ಸರಿ.ಲೋಕಾನುಭವ ಇರುವ ವ್ಯಕ್ತಿ ಲೌಕಿಕ ವಸ್ತುವನ್ನು (ತನ್ನ ಹೊಲ, ಮನೆ, ಆಸ್ತಿ,ಪಾಸ್ತಿಗಳನ್ನು ಪಡೆಯಲು ತನ್ನ ಪ್ರತಿಷ್ಠೆಗಳು ,ಬಯಕೆಗಳನ್ನು ಪೂರೈಸಲು ಸಾಮಾನ್ಯವಾಗಿ ದೇವರಿಗೆ ಮೊರೆಹೋಗುತ್ತಾರೆ.ತಾತ್ಕಾಲಿಕ ಭಕ್ತಿ ಇಂದ ಮಾಡುವ ದೇವರ ಪ್ರಾರ್ಥನೆ ಇದು.ಇದು ಲೋಕಾಸಕ್ತ ಎಲ್ಲ ಜನರು ಮಾಡುತ್ತಾರೆ.
ತಾಮಸ ಅನುಷ್ಠಾನ:- ಇದು ಕಾಮಾದಿ ಅರಿಷಡ್ ವೈರಿಗಳನ್ನು ಜಾಗೃತಗೊಳಿಸಿ ದುಷ್ಟಶಕ್ತಿಗಳನ್ನು ವಶಮಾಡಿಕೊಂದು ತನ್ನ ಮನೋವಾಂಚೆಯನ್ನು, ಪ್ರಲೋಭನೆಗಳನ್ನು ಪೂರೈಸುವ ಅನುಷ್ಠಾನವಾಗಿದೆ. ಇದು ವಾಮಾಚಾರ ಬಾನಾಮತಿ ಇತ್ಯಾದಿ ವಿಧಿಗಳು ಇದರಲ್ಲಿವೆ.ಇದನ್ನು ವಾಮಮಾರ್ಗದ ಅಮಾನುಷ ಶಕ್ತಿ ಪಡೆಯಲು ಬಯಸುವವರು ಮಾಡುತ್ತಾರೆ.
ಉಪಸಂಹಾರ:-
ಹೀಗೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ ಆಗುವವು ಈ ಧ್ಯಾನ ಮತ್ತು ಅನುಷ್ಠಾನ.ಅವರವರ ಸಂಪ್ರದಾಯ ಮನೋಸ್ಥಿತಿ ಗೆ ತಕ್ಕಹಾಗೆ ಇವುಗಳು ಅವನ ರೂಢಿಗೆ ಬರುತ್ತವೆ.ಇವೆರಡರಲ್ಲಿ ಏನೇ ವ್ಯತ್ಯಾಸ ಗಣನೀಯವಾಗಿ ಕಂಡು ಬರದಿದ್ದರೂ ಮಾರ್ಗಗಳಲ್ಲಿ,ಅದಕ್ಕೆ ಉಪಯೋಗವಾಗುವ ವಸ್ತು ವ್ಯವಸ್ಥೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.ಏನೇ ಆಗಲಿ ಪಂಚಭೂತ ಗಳಿಂದ ನಿರ್ಮಾಣವಾದ ಈ ಶರೀರ ಲೋಕದ ಮಾಯೆಗೆ ಅಳವಟ್ಟಾಗಿ ದೇಹಸ್ಥಿತಿ ಪಂಚಭೂತಗಳು ವ್ಯತ್ಯಾಸ ವಾಗುತ್ತವೆ.ಅದನ್ನು ಗಮನಿಸಿ ಅವುಗಳನ್ನು ಸಮಸ್ಥಿತಿಯಲ್ಲಿ ಇಡಲು ಇವುಗಳು ಅತ್ಯವಶ್ಯ. ಬನ್ನಿ ಆಚರಿಸಿ ಆನಂದಿಸೋಣ.
ಪುಸ್ತಕದ ಹೆಸರು : ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ (ಕವಿರತ್ನ ದ್ಯಾಂಪುರ ಚೆನ್ನಕವಿ ಕೃತ) ವ್ಯಾಖ್ಯಾನ : ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಪ್ರಕಾಶಕರು : ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜಯಂತಿ ಸಮಿತಿ ಮುದ್ರಣ: ೨೦೨೨ ಪು. ೬೫೨ ಬೆಲೆ: ರೂ. ೧೫೦೦ ಸಂಪರ್ಕವಾಣಿ : ೮೩೧೦೨೭೬೪೪೨
ಪ್ರತಿಭೆ-ಪಾಂಡಿತ್ಯ-ವಿದ್ವತ್ತುಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದಲ್ಲಿರುವ ಕನ್ನಡಿಗರಿಗೆ ಅಲ್ಲೊಂದು ಇಲ್ಲೊಂದು ಆಶಾಕಿರಣಗಳು ಗೋಚರಿಸುತ್ತಿವೆ. ಕನ್ನಡ ಭಾಷೆ ಸಂಸ್ಕೃತಿಯ ಸಮೃದ್ಧಿಗಾಗಿ ಪರಿಶ್ರಮಿಸುವ ಯುವ ವಿದ್ವಾಂಸರ ಪಡೆ ಇಂದಿಗೂ ಕಾರ್ಯನಿರತವಾಗಿದೆ ಎಂಬುದಕ್ಕೆ ಪ್ರಸ್ತುತ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವ್ಯಾಖ್ಯಾನಿಸಿದ ‘ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ’ ಕೃತಿಯೇ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ ಸೂತ್ರರೂಪದಲ್ಲಿ ಕೃತಿಗಳನ್ನು ರಚಿಸುವುದು, ನಂತರ ಆ ಸೂತ್ರಗಳಿಗೆ ವ್ಯಾಖ್ಯಾನ ಬರೆಯುವ ಪದ್ಧತಿ ಬೆಳೆದು ಬಂದಿದೆ. ಕೇಶಿರಾಜನ ಶಬ್ದಮಣಿ ದರ್ಪಣ ಮೊದಲಗೊಂಡು ಕನ್ನಡದಲ್ಲಿ ಸೂತ್ರ ರೂಪದ ಕೃತಿಗಳು ನೂರಾರು ಬೆಳಕು ಕಂಡಿವೆ. ಅದರಲ್ಲೂ ಶರಣ ಸಾಹಿತ್ಯದಲ್ಲಿ ಈ ಬಗೆಯ ಕೃತಿಗಳ ಒಂದು ದೊಡ್ಡ ಪರಂಪರೆಯೇ ಇದೆ. ಪ್ರಾರಂಭದ ಘಟ್ಟದಲ್ಲಿ ಇಂಥ ಸೂತ್ರರೂಪದ ಕೃತಿಯ ಅರ್ಥ-ಭಾವ-ಉದ್ದೇಶಗಳನ್ನು ವಿವರಿಸಿ ಹೇಳುವುದಕ್ಕಾಗಿ ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅದಿಕರಣ, ಕೃತಕ, ತಾತ್ಪರ್ಯ ನಿರ್ಣಯಗಳೆಂಬ ವಿವಿಧ ಪ್ರಕಾರಗಳನ್ನು ರೂಪಿಸಲಾಗಿದೆ. ಆದರೆ ಕನ್ನಡ ಕೃತಿಗಳಿಗೆ ವ್ಯಾಖ್ಯಾನ ಬರೆದ ವೀರಶೈವ ಲಿಂಗಾಯತ ವ್ಯಾಖ್ಯಾನಕಾರರು ಇದಕ್ಕಾಗಿ ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿದ್ದರೂ ಇವೆಲ್ಲ ವಿವಿಧ ಪ್ರಕಾರಗಳಲ್ಲ, ‘ಟೀಕೆ’ಯನ್ನು ಸೂಚಿಸುವ ಪರ್ಯಾಯ ಪದಗಳು. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ ಅಥವಾ ‘ಟೀಕು’ ಪದವೇ ಅಧಿಕವಾಗಿ ಬಳಕೆಗೊಂಡಿರುವುದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜದ ಪ್ರಸಿದ್ಧ ದೊರೆ ಪ್ರೌಢದೇವರಾಯ ಕಾಲದಲ್ಲಿ ಈತನ ಮಂತ್ರಿಗಳಾದ ಲಕ್ಕಣ-ಜಕ್ಕಣರ ರಾಜರಕ್ಷೆ ಹಾಗೂ ನೂರೊಂದು ವಿರಕ್ತರ ಧರ್ಮರಕ್ಷೆಗಳಲ್ಲಿ ಈ ಕೆಲಸ ವ್ಯಾಪಕವಾಗಿ ಮುನ್ನಡೆಯುವಂತಾಯಿತು. ಆಮೇಲೆ ಏಳುನೂರೊಂದು ವಿರಕ್ತರ ಸಮಯದಲ್ಲಿ ಈ ವ್ಯಾಖ್ಯಾನ ಕಾರ್ಯಕ್ಕೆ ಪವನವೇಗ ಸಂಪ್ರಾಪ್ತವಾಯಿತು. ಏಳುನೂರೊಂದು ವಿರಕ್ತರ ಅಧಿಪತಿ ತೋಂಟದ ಸಿದ್ಧಲಿಂಗದೇವ, ಆತನ ಶಿಷ್ಯ-ಪ್ರಶಿಷ್ಯರಾದ ಚೆನ್ನದೇವ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಎಳಂದೂರು ಪರ್ವತ ಶಿವಯೋಗಿ, ಸೋಮಶೇಖರ ಶಿವಯೋಗಿ ಮೊದಲಾದವರು ಹಾಗೂ ಇತರರು ಈ ವ್ಯಾಖ್ಯಾನ ರಚನಾಕರ‍್ಯವನ್ನು ಮುಂದುವರಿಸಿ, ಅದನ್ನು `ಕಾಯಕ’ದ ಮಟ್ಟಕ್ಕೆ ಮುಟ್ಟಿಸಿದರು. ಇದಲ್ಲದೆ ವ್ಯಾಖ್ಯಾನ ಮಾಡುವುದನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡ `ಟೀಕಿನ ಗುರುಪಾದ ಸ್ವಾಮಿ’ಯಂಥವರಿಗೂ `ವ್ಯಾಖ್ಯಾನದ ಕರ‍್ಯಾಗಾರ’ಗಳೆನಿಸಿದ `ಟೀಕಿನಮಠ’ಗಳೂ ಈ ವ್ಯಾಖ್ಯಾನ ಸಾಹಿತ್ಯದ ಬೆಳವಣಿಗೆಗೆ ಬೆಂಬಲವಾಗಿ, ಬೆಳಕಾಗಿ ನಿಂತವು. ಇದು ವೀರಶೈವ ವ್ಯಾಖ್ಯಾನಗಳ ಸಹಾಯವಿಲ್ಲದೆ ಶಾಸ್ತç ಕೃತಿಗಳ ಅಧ್ಯಯನ ಬಹಳ ಕಷ್ಟವಾಗಿ ಪರಿಣಮಿಸಿದುದರಿಂದ ಇವುಗಳ (ವ್ಯಾಖ್ಯಾನದ) ರಚನಾಕರ‍್ಯ ಕಾಲದಿಂದ ಕಾಲಕ್ಕೆ ಅನಿವರ‍್ಯವಾಗಿ ಬೆಳೆಯುವಂತಾಯಿತು. ಈ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮುಂದುವರಿಸಿದ ಶ್ರೇಯಸ್ಸು ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳಿಗೆ ಸಲ್ಲುತ್ತದೆ. ಕಬ್ಬಿಣದ ಕಡಲೆಯಂತಿದ್ದ ಚೆನ್ನಕವಿಗಳ ಈ ಪುರಾಣಕ್ಕೆ ಸರಳವಾದ ಭಾಷ್ಯವನ್ನು ಶ್ರೀಗಳು ರಚಿಸಿದ್ದಾರೆ.
ಇಪ್ಪತ್ತನೆಯ ಶತಮಾನದ ಆರಂಭ ಘಟ್ಟದಲ್ಲಿ ಕನ್ನಡ ನಾಡಿನಲ್ಲಿ ಧರ್ಮ ಸಂಸ್ಕೃತಿಗಳ ಕುರಿತಾದ ಅರಿವು ಮೂಡಿರಲಿಲ್ಲ. ಪರಧರ್ಮೀಯರು ತಮ್ಮ ಧರ್ಮದ ಪ್ರಭಾವವನ್ನು ಬೀರಿ ಧರ್ಮಾಂತರ-ಮತಾಂತರದಂತಹ ಕಾರ್ಯದಲ್ಲಿ ತೊಡಗಿದ್ದರು. ಇದು ಮುಂದುವರೆದಿದ್ದರೆ, ಈ ನಾಡಿನಲ್ಲಿ ಹುಟ್ಟಿ ಬೆಳೆದ ಧರ್ಮ-ಪಂಥಗಳು ಗಂಡಾಂತರಕ್ಕೀಡಾಗುವ ಅಪಾಯವಿತ್ತು. ಇದಲ್ಲದೆ ಲಿಂಗಾಯತ ಸಮಾಜ ಬಾಂಧವರು ತಮ್ಮ ಧರ್ಮ ಸಂಸ್ಕೃತಿಯ ಆಚಾರ-ವಿಚಾರಗಳನ್ನು ತ್ಯಜಿಸಿ, ಇತರ ಸಂಪ್ರದಾಯದತ್ತ ವಾಲತೊಡಗಿದ್ದರು. ಈ ಉಭಯ ಸಂಕಟಗಳಿಂದ ಪಾರು ಮಾಡಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಗ್ರಗಣ್ಯರು. ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗಮಂದಿರದಂತಹ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಸಮಾಜ ಸಂಸ್ಕೃತಿಗಳನ್ನು ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂಥ ಮಹಾಮಹಿಮರ ಚರಿತೆಯನ್ನು ಕವಿರತ್ನ ದ್ಯಾಂಪುರ ಚೆನ್ನಕವಿಗಳು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವುದು ಗಮನಿಸುವ ಅಂಶ. ದ್ಯಾಂಪುರದ ಚೆನ್ನಕವಿಗಳು ಗದುಗಿನ ಸಮೀಪದ ದ್ಯಾಂಪುರದಲ್ಲಿ ಕ್ರಿ.ಶ. ೧೮೭೯ ರ ಸುಮಾರಿಗೆ ಜನಿಸಿದರು. ಕನ್ನಡದಲ್ಲಿ ಪ್ರಸಿದ್ಧ ಕಾವ್ಯಗಳಾದ ಶಬರಶಂಕರವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಮೊದಲಾದವುಗಳನ್ನು ಆಸ್ಥೆಯಿಂದ ಅಭ್ಯಾಸ ಮಾಡಿ, ಕಾವ್ಯ ಸಾಹಿತ್ಯದಲ್ಲಿ ಪರಿಣತೆಯನ್ನು ಪಡೆದರು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹದಿನಾರು ವರ್ಷ ಕೆಲಸ ಮಾಡಿದರು. ಆ ಸಮಯದಲ್ಲಿ ವೀರಶೈವ ಮಹಾಸಭೆ, ಶಿವಯೋಗಮಂದಿರ ಮೊದಲಾದ ಸಂಸ್ಥೆಗಳ ಆಧಾರಸ್ತಂಭರಾಗಿ ವೀರಶೈವರಲ್ಲಿ ಧರ್ಮ, ಆಚಾರ, ನೀತಿಗಳು ನೆಲೆಗೊಳ್ಳುವಂತೆ ಶ್ರೀ.ಮ.ನಿ.ಪ್ರ.ಹಾನಗಲ್ಲ ಕುಮಾರ ಸ್ವಾಮಿಗಳವರು ಅವಿಶ್ರಾಂತವಾಗಿ ಪರಿಶ್ರಮಪಡುತ್ತಲಿದ್ದರು. ಶ್ರೀಗಳವರ ಅಪ್ಪಣೆಯಂತೆ ಚೆನ್ನಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು. ಈ ಅವಧಿಯು ಅವರ ಕಾವ್ಯ ನಿರ್ಮಾಣಕ್ಕೆ ಹೆಚ್ಚು ಅನುಕೂಲತೆಯನ್ನೊದಗಿಸಿಕೊಟ್ಟಿತು. ಅವರ ಒಳ್ಳೆಯ ಕೃತಿಗಳೆಲ್ಲ ಈ ಕಾಲದಲ್ಲಿಯೇ ರಚಿತವಾದವು. ಇವುಗಳಲ್ಲಿ ಒಂಬತ್ತು ಪುರಾಣಗಳು ವಾರ್ಧಿಕ ಷಟ್ಪದಿಯಲ್ಲಿವೆ. ಉಳಿದ ಸುಮಾರು ಹನ್ನೆರಡು ಕೃತಿಗಳು ಶತಕ ಹಾಗೂ ಹಾಡು ಗಬ್ಬಗಳ ರೂಪದಲ್ಲಿ ರಚಿತವಾಗಿವೆ. ಚೆನ್ನಕವಿಗಳು ಹೆಮ್ಮರಡ್ಡಿ ಮಲ್ಲಮ್ಮನ ಪುರಾಣ, ಹುಚ್ಚೇಶ್ವರ ಪುರಾಣ, ಬಾಲಲೀಲಾ ಮಹಾಂತ ಶಿವಯೋಗಿ ಪುರಾಣಗಳನ್ನು ರಚಿಸಿದರು. ಆದರೆ ಮುಂದೆ ತಮ್ಮ ಸಮಕಾಲೀನ ಮಹಾತ್ಮರ ಚರಿತ್ರೆ ಬರೆಯಬೇಕೆಂಬ ಅಪೇಕ್ಷೆ ಅವರಲ್ಲಿ ಮೂಡಿತು. ನಾಲ್ವತ್ತವಾಡದ ವೀರೇಶ್ವರ ಶರಣರು, ಹಾನಗಲ್ಲ ಕುಮಾರ ಸ್ವಾಮಿಗಳು ಮೊದಲಾದವರನ್ನು ಪುರಾಣ ಕಾವ್ಯಗಳನ್ನು ರಚಿಸಿದರು. ತಮ್ಮ ನಡುವೆ ಇರುವ ಈ ಮಹಾತ್ಮರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಕಾವ್ಯಮಾಧ್ಯಮದಲ್ಲಿ ದಾಖಲಿಸಿದರೆ ಬಹುಕಾಲ ಉಳಿಯಬಲ್ಲದೆಂಬ ನಂಬಿಕೆ ಚೆನ್ನಕವಿಗಳಿಗಿತ್ತು.
ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ತಮ್ಮ ಪುರಾಣ ರಚನೆಯ ವಿಷಯ ತಿಳಿದಾಗ, ಚೆನ್ನಕವಿಗಳನ್ನು ಕರೆದು, ಮಹಾತ್ಮರ ಚರಿತ್ರೆಯನ್ನು ಬರೆಯುವಂತವನಾಗು, ನಮ್ಮಂತವರ ಬಗ್ಗೆ ಬರೆಯಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಿದ್ದೂ ಚೆನ್ನಕವಿಗಳು ಶ್ರೀಗಳು ಲಿಂಗೈಕ್ಯರಾದ ನಂತರ ಪುರಾಣ ರಚನೆಗೆ ತೊಡಗಿಕೊಂಡರು. ಆದರೆ ಪುರಾಣವನ್ನು ಪೂರ್ಣ ಮಾಡುವುದು ಅವರಿಂದ ಸಾಧ್ಯವಾಗಲಿಲ್ಲ. ಕೊನೆಯ ಎರಡು ಸಂಧಿಗಳಿರುವಾಗಲೇ ಲಿಂಗೈಕ್ಯರಾದರು. ಪುಟ್ಟರಾಜ ಕವಿ ಗವಾಯಿಗಳು ಮತ್ತು ಹುಕ್ಕೇರಿ ಸದಾಶಿವ ಶಾಸ್ತಿçಗಳು ಮತ್ತೆರೆಡು ಸಂಧಿಗಳನ್ನು ಬರೆದು, ಪುರಾಣವನ್ನು ಪೂರ್ಣಗೊಳಿಸಿದರು.
“ಚೆನ್ನಕವಿಗಳು ಮಹಾಸ್ವಾಮಿಗಳವರ ಜೀವನವನ್ನೂ ಅವರಿಂದಾದ ಮಹತ್ಕಾರ್ಯಗಳನ್ನೂ ವಾರ್ಧಕ ಷಟ್ಪದಿಯಲ್ಲಿ ವರ್ಣಿಸಿದ್ದಾರೆ. ಈ ಕಾವ್ಯದ ಪ್ರತಿಯೊಂದು ಸಂಧಿಯ ಆದಿಯಲ್ಲಿ ಬರುವ ಶಿವಸ್ತುತಿಪರವಾದ ಪದ್ಯಗಳು ಸುಂದರವಾಗಿವೆ. ಕಾವ್ಯ ಶೈಲಿ ಸರಳವೂ ಸ್ವಾಭಾವಿಕವೂ ಆಗಿದೆ. ಶ್ರೀಗಳವರ ಜೀವನವೆ ಒಂದು ಪವಾಡವಾಗಿದೆ. ಆದುದರಿಂದ ಉಳಿದ ಪುರಾಣಗಳಲ್ಲಿರುವಂತೆ ಈ ಪುರಾಣದಲ್ಲಿ ಕವಿಗಳು ಪವಾಡಗಳಿಗೆ ಆಸ್ಪದ ಕೊಟ್ಟಿಲ್ಲ. ಇಲ್ಲಿ ಶ್ರೀಗಳವರ ಜೀವನ ಸ್ಫುಟವಾಗಿ ಮೂಡಿದೆ. ಹದಿನೆಂಟು ವರ್ಣನೆಗಳಿಗೆ ಇಲ್ಲಿ ಸ್ಥಳವಿಲ್ಲ. ಕಥಾನಾಯಕನು ವೈರಾಗ್ಯಶೀಲನೂ, ಯೋಗಿಯೂ, ಮಹಾತಪಸ್ವಿಯೂ ಆಗಿರುವದರಿಂದ ಲೋಕಹಿತದ ಕಡೆಗೆ ಕವಿಯು ದೃಷ್ಟಿಯನ್ನು ಹೆಚ್ಚಾಗಿ ಹಾಕಿದ್ದಾನೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಭಕ್ತಿಯ ಪ್ರಭಾವವನ್ನು ಹೇಳಿ ಜನತೆಯನ್ನು ಭಕ್ತಿಮಾರ್ಗದ ಕಡೆಗೆ ಒಯ್ಯುವ ಸಂಪ್ರದಾಯವಿದೆ. ಆದರೆ ಈ ಪುರಾಣದಲ್ಲಿ ನಾಯಕನ ಕರ್ತೃತ್ವ ಶಕ್ತಿಯಿಂದ ಸಮಾಜಹಿತದ ಘನವಾದ ಕಾರ್ಯಗಳು ಜರುಗಿರುವದರಿಂದ ಶ್ರೋತೃಗಳ ದೃಷ್ಟಿಯು ವಿಶಾಲವಾಗಿ ಲೋಕಹಿತದ ಕಡೆಗೆ ಒಲಿಯುವಂತಿದೆ. ಇದು ಕವಿಯ ಕೊನೆಯ ಕೃತಿಯಾದುದರಿಂದ ಇದಕ್ಕೂ ಮೊದಲಿನ ಕೃತಿಗಳಿಗೂ ಮಹದಂತರವಿದೆ. ಈ ಕಾವ್ಯದಲ್ಲಿ ಕವಿಯು ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರಗಳಿಗೆ ಬಲೆಬೀಳದೆ ಉಪಮೆ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅರ್ಥಾಲಂಕಾರಗಳನ್ನು ಮಿತವಾಗಿ ಹಿತವಾಗಿ ಉಪಯೋಗಿಸಿದ್ದಾನೆ. ಇದು ಈ ಕಾವ್ಯದ ವೈಶಿಷ್ಟö್ಯ. ಈ ಕಾವ್ಯದ ಆರಂಭದಲ್ಲಿ
ಇದು ರಸಿಕಮಾದ ಕಾದಂಬರಿಯ ಕತೆಯಲ್ಲ ವಿದು ಕಲಿಗಳಿತಿಹಾಸಮಲ್ಲ ಕಲ್ಪಿತವಲ್ಲ ವಿದಿರೊಳಪ್ರಾಸಂಗಿಕಾಸAಭವಾಸತ್ಯದೋಷ ವಿಷಯಂಗಳಿಲ್ಲ ಪುದಿದ ಮಾಯಾ ಮೋಹ ಮೋಸದಿಂ ಕಂಗೆಟ್ಟು ಕುದಿವ ಮಾನವರನೆಚ್ಚರಿಸಿ ಪಾಲಿಸಲುಳ್ಳ ಸದಮಲ ಜ್ಞಾನ ವೈರಾಗ್ಯ ಭಕ್ತಿಗಳ ಸೊಂಪಿನ ಸುಗ್ಗಿ ಬಗೆಗೊಳಿಪುವು |೧| ಎಂದು ಹೇಳಿರುವನು. ಈ ಮಾತನ್ನು ಕವಿಯು ಅಕ್ಷರಶಃ ಪಾಲಿಸಿರುವನು.” ಎಂಬ ಖ್ಯಾತ ವಿದ್ವಾಂಸರಾದ ಡಾ. ಶಿ. ಚೆ. ನಂದೀಮಠ ಅವರ ನುಡಿ ಅಕ್ಷರಶಃ ನಿಜ. ಈ ಪುರಾಣದಲ್ಲಿ ಒಟ್ಟು ೨೨ ಸಂಧಿಗಳು, ೮೫೭ ಪದ್ಯಗಳಿವೆ. ರಾಘವಾಂಕನ ತರುವಾಯ ವಾರ್ಧಕ ಷಟ್ಪದಿಯನ್ನು ಪರಿಣಾಮಕಾರಿಯಾಗಿ ಬಳಸಿದ ಶ್ರೇಯಸ್ಸು ಚೆನ್ನಕವಿಗಳಿಗೆ ಸಲ್ಲುತ್ತದೆ. ಈ ಪುರಾಣವನ್ನು ಆಧುನಿಕ ಶಿಕ್ಷಣ ಪಡೆದವರು ಓದುವುದು ತುಂಬಾ ಕಷ್ಟಸಾಧ್ಯ. ಅದಕ್ಕಾಗಿ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಪ್ರತಿಪದಾರ್ಥ ಮತ್ತು ಭಾವಾರ್ಥಗಳೆರಡನ್ನೂ ನೀಡಿ ಓದುಗರ ಕೈಗೆ ನೀಡಿದ್ದಾರೆ. ಚೆನ್ನಕವಿಗಳ ಪಾಂಡಿತ್ಯಕ್ಕೆ ಸಮನಾದ ಸರಳಾನುವಾದವನ್ನು ಬರೆದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ಎಳೆಯ ವಯಸ್ಸಿನಲ್ಲಿಯೇ ಹಾನಗಲ್ಲ ಕುಮಾರೇಶ್ವರ ಪುರಾಣವನ್ನು ಪ್ರವಚನ ಮಾಡಿದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮಾಡಿರುವ ಅವರು ಹಾನಗಲ್ಲ ಕುಮಾರ ಶಿವಯೋಗಿಗಳವರನ್ನು ಕುರಿತು ಈಗಾಗಲೇ ಇಂಗ್ಲಿಷ್ ಭಾಷೆಯಲ್ಲೊಂದು ಕೃತಿರತ್ನವನ್ನು ರಚಿಸಿದ್ದಾರೆ. ಈಗ ಚೆನ್ನಕವಿಗಳ ವಾರ್ಧಕ ಷಟ್ಪದಿಯ ಮಹಾಕಾವ್ಯಕ್ಕೆ ಅತ್ಯಂತ ಹೃದ್ಯವಾದ ಶೈಲಿಯಲ್ಲಿ ಭಾವಾರ್ಥವನ್ನು ನೀಡಿದ್ದಾರೆ. ಚೆನ್ನಕವಿಗಳದು ಹರಿಹರ-ರಾಘವಾಂಕರ ಉದಿತೋದಿತ ಶೈಲಿ, ಈ ಶೈಲಿಗೆ ಪೂರಕವಾದ ಭಾಷೆಯನ್ನು ಬಳಸಿ, ಜನಸಾಮಾನ್ಯರಿಗೂ ಈ ಮಹಾಕಾವ್ಯ ಅರ್ಥವಾಗುವಂತೆ ಮಾಡುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ. ಪೂಜ್ಯರ ಸಾಹಿತ್ಯ ಪ್ರೀತಿ, ಲೋಕಾನುಭವ, ಅಸಂಖ್ಯ ಗ್ರಂಥಾವಲೋಕನ, ವಾಙ್ಮಯ ತಪಸ್ಸು, ಚಿಂತನ ಮಂಥನಗಳು ಇಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.
ಕನ್ನಡ ತಾಯಿಯ ಪುಣ್ಯ ಗರ್ಭವು ಕಾಲ ಕಾಲಕ್ಕೆ ಮಹಾತ್ಮರನ್ನು, ಸಾಧು ಸಂತರನ್ನು, ಶಿವಯೋಗಿಗಳನ್ನು ನೀಡುತ್ತಾ ಬಂದಿದೆ. ಈ ಪುಣ್ಯ ನಾಡಿನಲ್ಲಿ ಚಾಮರಸ ಕವಿ ಹೇಳುವಂತೆ “ನೋಡಿ ಕೆಲರಂ, ಮಾತನಾಡಿ ಕೆಲರಂ, ಮುಟ್ಟಿ ಕೆಲರಂ, ಉದ್ಧರಿಸುವ ಮಹಾನುಭಾವರು ಉದಿಸಿ ಬಂದಿದ್ದಾರೆ.”
ಅಂಥವರ ಸಾಲಿನಲ್ಲಿ ಶ್ರೀ ಮ.ನೀ.ಪ್ರ ವಿಜಯ ಮಹಾಂತ ಶಿವಯೋಗಿಗಳು, ಚಿತ್ತರಗಿ ಇಳಕಲ್ ಸಂಸ್ಥಾನ ಮಠ, ಒಬ್ಬರು. ಕನ್ನಡ ನಾಡಿನಲ್ಲಿ ಚಿತ್ತರಗಿಯ ಹಿರಿಯ ಚೇತನ ಜಂಗಮ ಪುಂಗವರು. ನಾಡಿಗರ ಹೃನ್ಮನಗಳಲ್ಲಿ ನೆಲೆಸಿದವರು, ಜಂಗಮ ಮಹಾಂತರು.
ಬಸವಣ್ಣನವರು ಹೇಳುವಂತೆ,
“ವೀರನಾದೊಡೆ ವೈರಿ ಮೆಚ್ಚಬೇಕು,
ವ್ರತಿಯಾದೊಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದರೆ ಜಂಗಮ ಮೆಚ್ಚಬೇಕು,
ಹಾಗೆ ಜಂಗಮನಾದರೆ ಭಕ್ತ ಮೆಚ್ಚಬೇಕು”
ಹಾಗೆಯೇ ಭಕ್ತರು ಮೆಚ್ಚಿ, ಜಂಗಮರಾದವರು ಚಿತ್ತರಗಿಯ ಪೀಠಾಧಿಪತಿಗಳಾಧ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಸಹಜ ಯೋಗಿಗಳು, ತ್ಯಾಗಿಗಳು, ವೀರ ವೀರಾಗಿಗಳು, ಕರುಣಾ ಹೃದಯಿಗಳು, ನಿಜ ಶಿವಯೋಗಿಗಳು.
ಶ್ರೀ ವಿಜಯ ಮಹಾಂತ ಶಿವಯೋಗಿಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಒಂದು ಮಂಗಳ ಪದ್ಯದಲ್ಲಿ ವಿವರಿಸುವುದರಿಂದ ಪ್ರಾರಂಭಿಸಿ ಒಂದು ಪುರಾಣದವರೆಗೂ ವಿಸ್ತರಿಸಲು ಸಾಧ್ಯ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಬಹುದಾಗಿದೆ. ಅದು ಈಗಾಗಲೇ ಸಾಧ್ಯವೂ ಆಗಿದೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ವಾರ್ಧಕ ಷಟ್ಪದಿಯಲ್ಲಿ ಪುರಾಣ, ಭಾಮಿನಿ ಷಟ್ಪದಿಯಲ್ಲಿ ಪ್ರಬಂಧ, ಚರಿತ್ರೆ, ಲೀಲೆ, ಗಾನಸುಮನವಾಗಿ , ಕಥೆಯಾಗಿ ಹೊರಹೊಮ್ಮಿದೆ. ಅವುಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ .
೧) ದ್ಯಾಂಪುರ ಚನ್ನಕವಿ ಕೃತ ಶ್ರೀ ವಿಜಯ ಮಹಾಂತೇಶ್ವರ ಪುರಾಣ
೨) ಶ್ರೀ ವಿಜಯ ಮಹಾಂತೇಶ ಲೀಲಾಮೃತ. ಲೇಖಕ: ರಾಮರಾವ ಕುಲಕರ್ಣಿ
೩) ಶ್ರೀ ವಿಜಯ ಮಹಾಂತೇಶ್ವರ ಲೀಲೆ, ಕವಿಗಳು: ಕಲ್ಯಾಣಪ್ಪ ಬ್ಯಾಳಿ
೪) ಚಿತ್ತರಗಿ ಚಿಜ್ಯೋತಿ, ಮತ್ತು ಮಹಾತಪಸ್ವಿ ಮಹಾಂತ ಶಿವಯೋಗಿಗಳು, ಜಿ.ಎಚ್, ಹನ್ನೆರಡುಮಠ
೫) ಚಿತ್ತರಗಿಯ ಚಿನ್ಮಯಿ ವಿಜಯ ಮಹಾಂತ ಶಿವಯೋಗಿಗಳು, ಬಸವರಾಜ ಗವಿಮಠ
ಮಠಗಳು ವೈಭವದ ಅರಮನೆಗಳಾಗದೇ ಸಮಾಜದ ಧರ್ಮ ಸುಧಾರಣೆಯ ಕೇಂದ್ರಗಳಾಗಲು ಪೀಠದ ಅಧಿಪತಿಗಳಿಂದ ಮಾತ್ರ ಸಾಧ್ಯ ಎನ್ನುವುದನ್ನು ೧೯ ನೇ ಶತಮಾನದಲ್ಲಿ ಕನ್ನಡ ನಾಡಿನ ಅನೇಕ ಮಠಗಳ ಇತಿಹಾಸದಿಂದ ತಿಳಿಯುತ್ತದೆ. ಮಠಾಧಿಪತಿಗಳ ಸತತ ಸಮಾಜ ಮುಖಿ ಸುಧಾರಣೆಗಳನ್ನು ಒಪ್ಪಿ ತಮ್ಮ ಆಚರಣೆಯಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ. ತಮ್ಮ ಅರಿವು- ಆಚರಣೆ, ಅನುಭೂತಿಗಳಿಂದ ಸಮಾಜದ ಉನ್ನತಿಯನ್ನು ಹಾಗೂ ಶರಣ ಧರ್ಮ ಪರಂಪರೆಯನ್ನು ಉದ್ಧರಿಸಿದ್ದಾರೆ.
ಧರ್ಮ ಹಾಗೂ ಸಂಸ್ಕೃತಿ ದೃಷ್ಟಿನಿಂದ ಕನ್ನಡ ನಾಡು, ಭಾರತದಲ್ಲಿಯೇ ತನ್ನ ವೈಶಿಷ್ಟ್ಯವನ್ನು ಮೆರೆಯಿಸುತ್ತಾ ಬಂದಿದೆ. ೧೨ ನೇ ಶತಮಾನದ ಮಹಾತ್ಮಾ ಬಸವಣ್ಣನವರು ಶಾಂತವಾದ ಕ್ರಾಂತಿಯನ್ನು ಮಾಡಿ ವೀರಶೈವ ಧರ್ಮವನ್ನು ವಿಶ್ವಮಾನ್ಯವಾಗುವಂತೆ ಶ್ರಮಿಸಿ ಶರಣ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಸತ್ ಸಂಪ್ರದಾಯ ಜ್ಯೋತಿಯನ್ನು ಇಂದಿಗೂ ನಮ್ಮ ನಾಡಿನ ಅನೇಕ ಮಠಗಳು (ಅರಭಾವಿಯ ದುರುದುಂಡೇಶ್ವರ ಮಠ, ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ, ಗರಗದ ಮಡಿವಾಳೇಶ್ವರ ಮಠ, ಅಥಣಿಯ ಮುರುಘರಾಜೇಂದ್ರ ಮಠ, ಬಿದಿರಿ ಕುಮಾರೇಶ್ವರ ಮಠ, ಇಳಕಲ್ಲಿನ ವಿಜಯಮಹಾಂತೇಶ್ವರ ಮಠ, ಹಾಳಕೇರೆಯ ಅನ್ನದಾನೇಶ್ವರ ಮಠ, ಹಾನಗಲ್ಲಿನ ಕುಮಾರೇಶ್ವರ ಮಠ, ಹಾವೇರಿಯ ಶಿವಬಸವೇಶ್ವರ ಮಠ, ಧಾರವಾಡದ ಮೃತ್ಯುಂಜಯ ಅಪ್ಪುಗಳು, ಇನ್ನೂ ಅನೇಕ ಶಿವಯೋಗಿಗಳು ತಮ್ಮ ಪಾದ ಸ್ಪರ್ಶದಿಂದ ಕನ್ನಡ ನಾಡನ್ನು ಪವಿತ್ರಗೊಳಿಸಿದ್ದಾರೆ ) ಬೆಳಗಿಸುತ್ತ ಬಂದಿವೆ.
ಇಂತಹ ನಾಡಿನ ಮಠಗಳಲ್ಲಿ ಒಂದಾದ ಚಿತ್ತರಗಿ ಇಳಕಲ್ ಸಂಸ್ಥಾನ ಮಠವು ಒಂದು. ಈ ಮಠವು ಅನೇಕ ಪೀಠಾಧಿಪತಿಗಳನ್ನು ಹೊಂದಿದ ಪರಂಪರೆ ಇದೆ. ಅವರಲ್ಲಿ ೧೬ ನೇ ಪೀಠಾಧಿಪತಿಗಳಾಗಿ ಶ್ರೀ ವಿಜಯಮಹಾಂತ ಎಂಬ ಅಭಿದಾನದಿಂದ ನಿಯುಕ್ತಗೊಳ್ಳುತ್ತಾರೆ. ಇದು ಸಂಸ್ಥಾನ ಮಠವಾದ್ದರಿಂದ ಛತ್ರ, ಚಾಮರ, ಸಿಂಹಾಸನ, ಬೆಳ್ಳಿ ಪಲ್ಲಕ್ಕಿ, ಬೆಳ್ಳಿ ಬೆತ್ತ, ಜಾಗಟೆ, ಕುದುರೆ, ವಂದಿಮಾಗದರುಗಳನ್ನು ಹೊಂದಿರುತ್ತದೆ. ಈ ಪೀಠಕ್ಕೆ ಐವತ್ತಾರು ಶಾಖಾ ಮಠಗಳಿವೆ. ರಾಯಚೂರು, ಸುರುಪುರ, ಬೀದರ, ಯಲಬುರ್ಗಾ, ಲಿಂಗಸೂರು, ಸೊಲ್ಲಾಪುರ, ಕೂಡಲಸಂಗಮ, ಚಿತ್ತರಗಿ, ಕೊಪ್ಪ, ಇದ್ದಲಗಿ, ಬೆಳಗಲ್, ಹುನುಗುಂದ, ಕರಡಿ, ನಂದವಾಡಗಿ ಹಾಗೂ ಮುಂತಾದದ ಕಡೆಗಳಲ್ಲಿ ಶಾಖಾ ಮಠಗಳ ವ್ಯಾಪ್ತಿಯಿದೆ.
ನಿಜಾಮರ ಕಾಲಕ್ಕೆ ಕೊಡಮಾಡಿದ ಅನೇಕ ದತ್ತಿಗಳಿವೆ. ಇಂತಹ ವಿಶಾಲ ಪ್ರದೇಶದ ಜನತೆಯ ಕಣ್ಮಣಿಗಳಾಗಿ ವೀರಶೈವ ಧರ್ಮದ ಜಾಗೃತಿಯ ನೇತಾರರಾಗಿ ಈ ಪೀಠದ ಕಾರ್ಯಭಾರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಕೆಲ ಕಾಲ ಯೋಗ್ಯ ಪೀಠಾಧಿಕಾರಿ ದೊರೆಯದಿದ್ದಾಗ ಪೀಠವು ಶೂನ್ಯತೆಯನ್ನು ಪಡೆಯುತ್ತದೆ. ಅಂತಹ ಸಂದರ್ಭದಲ್ಲಿ ಪಟ್ಟವಿಲ್ಲದೆ ಮಠವನ್ನು ಸುಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಹೋದ ವಟು ದೇವರುಗಳ ಉದಾಹರಣೆಯು ಇದೆ.
೧೮೫೦ ರಿಂದ ೧೯೫೦ರ ಕಾಲವು ಭಾರತೀಯ ಇತಿಹಾಸದಲ್ಲಿ ಬದಲಾವಣೆಯ ಕಾಲಘಟ್ಟವಾಗಿದೆ. ಬದಲಾವಣೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ರಂಗಗಳಲ್ಲಿ ಕಂಡುಬರುತ್ತದೆ. ಸ್ವತಂತ್ರ ಆಂದೋಲನಗಳು ಹೋರಾಟ ರೂಪ ತಾಳಿದವು. ಹೋರಾಟಕ್ಕೆ ಸಂಘಟನೆಗಳು, ನೇತಾರರು, ಅವರ ವೈಚಾರಿಕ ನಡತೆಗಳು ಯಶಸ್ಸಿಗೆ ಕಾರಣವಾದವು. ಇಂತಹ ಕಾಲದಲ್ಲಿಯೇ ಮಠಾಧಿಪತಿಗಳು ಸ್ವತಂತ್ರದಕ್ಕಿಸಿಕೊಳ್ಳಲು ಸಮರ್ಥರಾದರು. ಧರ್ಮ ರಕ್ಷಣೆಗಾಗಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಕ್ಕಾಗಿ , ಶರಣ ಧರ್ಮದ ಸಂಸ್ಕೃತಿಯ ಏಳ್ಗೆಗಾಗಿ, ವೀರಶೈವ ಧರ್ಮದ ಉಳಿವಿಗಾಗಿ, ಹೊಸ ವೈಚಾರಿಕ ಸಮಾಜ ನಿರ್ಮಾಣ ಮಾಡಿದರು. ಸಮಾಜ ಉದ್ಧಾರ ಮಾಡಿದರು. ಅದಕ್ಕಾಗಿ ತಮ್ಮನ್ನು ತ್ಯಾಗ, ವೈರಾಗ್ಯಕ್ಕೆ ಅರ್ಪಿಸಿಕೊಂಡು ಕಾಯಕ ನೀತಿಯ ತಳಹದಿ ಮೇಲೆ ಸಮಾಜವನ್ನು ಕಟ್ಟಿದರು. ಇಷ್ಟಲಿಂಗಾರ್ಚನೆಯ ನಿಷ್ಠಾಭಕ್ತಿಯಿಂದ ಜ್ಞಾನ ದಾಸೋಹ, ಅನ್ನ ದಾಸೋಹ, ಅಕ್ಷರ ದಾಸೋಹದಿಂದ ಸಮಾಜವನ್ನು ಜಾಗೃತಗೊಳಿಸಿದರು. ಇದರಿಂದ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಮಠದ ಪರಿಶ್ರಮದಿಂದ ತಲೆಯೆತ್ತಿವೆ. ಶಿಶುವಿಹಾರದಿಂದ ಹಿಡಿದು ವಿಶ್ವವಿದ್ಯಾಲಗಳವರೆಗೂ ಬೆಳೆದು ಹೆಮ್ಮರಗಳಾಗಿವೆ.
ಜ್ಞಾನ ದಾಸೋಹಕ್ಕೆ ಬೇಕಾದ ಅನ್ನದಾಸೋಹ, ಆಶ್ರಯ ದಾಸೋಹಕ್ಕೆ ತಮ್ಮ ತನು ಮನ ಅರ್ಪಿಸಿ ಸಮಾಜಕ್ಕೆ ವೈಚಾರಿಕ ಹೊಸ ದಿಸೆಯನ್ನೇ ತೋರಿಸಿದ್ದಾರೆ. ವೈರಾಗ್ಯ, ತ್ಯಾಗ, ಆಚಾರ ವಿಚಾರ, ನೀತಿ ಶ್ರದ್ಧೆಗಳನ್ನು ಅನುಸರಿಸುವ ನವ ಸಮಾಜ ನಿರ್ಮಾಣವಾಯಿತು. ವೀರಶೈವ ಧರ್ಮ ಪರಂಪರೆಯ ಮಹಾಮಾನವತಾವಾದದ ಕೀರ್ತಿ ಪತಾಕೆಯನ್ನು ಹಾರಿಸುತ್ತ ಮುನ್ನಡೆದಿದೆ. ಇತಿಹಾಸದಲ್ಲಿ ನಾಡಿನ ಉದ್ದಗಲಕ್ಕೂ ಇಂತಹ ಅನೇಕ ಮಹಾತ್ಮರ ಹೆಸರುಗಳು ದೊರಕುತ್ತವೆ. ಅದರಲ್ಲಿ ಸಾಂದರ್ಭಿಕವಾಗಿ ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನೀ.ಪ್ರ. ಸ್ವರೂಪಿ ವಿಜಯ ಮಹಾಂತ ಶಿವಯೋಗಿಗಳು ಅಗ್ರ ಗಣ್ಯರು.
ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು ಒಂದು ಅಧ್ಯಾತ್ಮಿಕ ಶಾಲೆಯ ಸ್ಥಾಪನೆಯ ಸಂಕಲ್ಪ ಮಾಡಿದರು. ಆ ಅಧ್ಯಾತ್ಮಿಕ ಶಾಲೆ ಶಿವಯೋಗ ಮಂದಿರವಾಗಿ, ಎಲ್ಲಿ, ಹೇಗೆ ರೂಪಗೊಳ್ಳಬೇಕೆಂದು ನಿರ್ಣಯಗೊಳಿಸಲು ವಿಜಯ ಮಹಾಂತರಲ್ಲಿಗೆ ವಿನಂತಿಸಿದಾಗ, ಶ್ರೀ ವಿಜಯ ಮಹಾಂತೇಶ್ವರರ ನೇತೃತ್ವದಲ್ಲಿ ಶಿವಯೋಗ ಮಂದಿರ ಸ್ಥಾನವನ್ನು ಅರಸುತ್ತಾ ಬರುವ ಸನ್ನಿವೇಶ ರೋಮಾಂಚನಕಾರಿಯಾಗಿದೆ. ಒಂದು ವ್ಯಕ್ತಿ ಶಕ್ತಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂಬುದಕ್ಕೆ ಅವರ ಶ್ರದ್ದಾಪೂರ್ವಕ ಪ್ರಯತ್ನಗಳೇ ಸಾಕ್ಷಿಯಾಗಿವೆ.
ಜನನ- ಬಾಲ್ಯ
ಮೈಸೂರು ಪ್ರಾಂತದ ಹಾಸನ ಜಿಲ್ಲೆಯಲ್ಲಿ “ಸಸಿವಾಲ” ಎಂಬ ಪುಟ್ಟ ಗ್ರಾಮ. ಅಲ್ಲಿ ಜನರೆಲ್ಲರೂ ದೈವಭಕ್ತರು. ಸತ್ಯ, ಶುದ್ಧ,ಕಾಯಕದಿಂದ ಬಾಳುತ್ತಿದ್ದರು. ಅಲ್ಲಿ ಅನೇಕ ಜಂಗಮ ಕುಟುಂಬಗಳು ನೆಲೆಸಿದ್ದವು. ಆ ಗ್ರಾಮದಲ್ಲಿ ಕೊಳಗಲ್ಮಠದ ವೀರಯ್ಯ, ಗೌರಮ್ಮ ಎಂಬ ದಂಪತಿಗಳು ಇದ್ದರು. ಇವರ ಮನೆಗೆ ಆಗಾಗ ಹತ್ತಿರದಲ್ಲೇ ಇರುವ ಕಲ್ಲಬೆಟ್ಟದ ಶಿವಯೋಗಿಗಳು ದಯಮಾಡಿಸುತ್ತಿದ್ದರು. ಇವರ ಮಠ ದಾನ, ಧರ್ಮ, ಪೂಜೆ, ಜಂಗಮರಾಧನೆಗೆ ಹೆಸರಾಗಿತ್ತು. ಇವರ ಮಠದಲ್ಲಿ ಆಗಾಗ ಜಂಗಮ ಪಾದ ಪೂಜೆಗಳು ಜರಗುತ್ತಿದ್ದವು.
ಒಮ್ಮೆ ಕೊಳಗಲ್ಮಠಕ್ಕೆ, ನಿಡುವಳ್ಳಿಯ ಮರುಳಸಿದ್ಧ ಶಿವಯೋಗಿಗಳು ಆಗಮಿಸುತ್ತಾರೆ. ಅವರ ಚಿಕ್ಕ ಮನೆಯಲ್ಲಿಯೇ ದಂಪತಿಗಳು ಶ್ರದ್ಧಾ ಭಕ್ತಿಯಿಂದ ಅವರ ಪಾದ ಪೂಜೆಯನ್ನು, ಸಂಭ್ರಮದಿಂದ ಪೂರೈಸುತ್ತಾರೆ. ಪೂಜೆಯ ನಂತರ ಸಂತೃಪ್ತಗೊಂಡ ಶ್ರೀಗಳು ಸಂತಸದಿಂದ “ಇದು ಶಿವನು ಆರಿಸಿಕೊಂಡ ಮನೆ. ಮುಂದೆ ಅವನು ಇಲ್ಲಿಯೇ ಬರುವನು” ಎಂದು ತುಂಬು ಹೃದಯದಿಂದ ಹರಿಸಿ ನಡೆದರು. ಮುಂದೆ ಕೆಲವು ದಿನಗಳ ನಂತರ ಗೌರಮ್ಮ ಗರ್ಭಿಣಿಯಾದರು. ಮರುಳಸಿದ್ಧ ಶಿವಯೋಗಿಗಳ ಹರಕೆ ಕೈಗೂಡುವುದೆನ್ನುವಂತೆ ಎಂಟು ತಿಂಗಳಲ್ಲಿಯೇ ಗರ್ಭಕ್ಕೆ ಲಿಂಗಧಾರಣೆಯಾಯಿತು. ಮುಂದೆ ಶಿವನೇ ಶಿಶುರೂಪವಾಗಿ ಗಂಡು ಮಗು ಗೌರಮ್ಮನ ಮಡಿಲು ತುಂಬಿತು. ( ಶಾಲೆ ವಾಹನ ಶಖೆ ೧೭೭೨, ಸಾಧಾರಣ ನಾಮ ಸಂವತ್ಸರ ಭಾನುವಾರ. ಕ್ರಿಸ್ತ ಶಕ ೧೮೫೦ರಲ್ಲಿ).
ಮಗು ಜನಿಸಿದ ಹನ್ನೆರಡನೇ ದಿನಕ್ಕೆ, ಸುಮಂಗಲೆಯರು ಮಗುವಿಗೆ “ಮಳೆಯಪ್ಪಯ್ಯ” ಎಂದು ನಾಮಕರಣ ಮಾಡಿದರು. ಶಿಶು ಮಳೆಯಪ್ಪಯ್ಯನ ಬೆಳುವಣಿಗೆಯನ್ನು ಕಂಡಾಗಲೆಲ್ಲ ವೀರಯ್ಯ ಗೌರಮ್ಮ ದಂಪತಿಗಳಿಗೆ, ಮರುಳುಸಿದ್ಧಯ್ಯ ಶಿವಯೋಗಿಗಳ ಹರಕೆ ಕೈಗೂಡಿದಂತೆ ಭಾಸವಾಗುತ್ತಿತ್ತು.
ಮಗು ಬಾಲಕನಾಗಿ ಬೆಳೆಯುತ್ತಲೇ ತಂದೆಯ ನಿಷ್ಠಾಭಕ್ತಿ, ಆಚಾರ ವಿಚಾರ, ತಾಯಿಯ ವಾತ್ಸಲ್ಯ ಕರುಣೆ ಭಕ್ತಿಯನ್ನು ಒಡಗೂಡಿಸಿಕೊಂಡು ಎಂಟು ವರುಷದವನಾದಾಗ ಮರುಳುಸಿದ್ಧ ಶಿವಯೋಗಿಗಳ ಮಠದಲ್ಲಿ ದೀಕ್ಷಾ ಕಾರ್ಯ ನೆರವೇರಿ ಸ್ಥಾನಿಕ ವಿದ್ಯಾಭ್ಯಾಸ ಪ್ರಾರಂಭವಾಯಿತು. ಈತನಲ್ಲಿದ್ದ ವಿಶೇಷ ಗುಣಗಳನ್ನು ಗಮನಿಸಿದ ಶಿವಯೋಗಿಗಳು ಅವನನ್ನು ಸಂಸ್ಕೃತ ವೇದ ಪಾಠಶಾಲೆಗೆ ಕಳುಹಿಸಲು ಸೂಚಿಸಿದರು. ಬಾಲಕನಾದ ಮಳೆಯಪ್ಪಯ್ಯನಲ್ಲಿ ಬರು ಬರುತ್ತಾ ಅನೇಕ ಬದಲಾವಣೆಗಳಾಗತೊಡಗಿದವು. ಏಕಾಂತವಾಗಿರುವುದು, ಜಂಗಮ ಪಾದ ಪೂಜೆ ಪೂರೈಸುವುದು, ಲಿಂಗಧ್ಯಾನದಲ್ಲಿ ಮೈಮರೆಯುವುದು. ಮಿತಭಾಷೆಯಾಗಿರುವುದು,
ಮೌನವನ್ನೇ ಹೆಚ್ಚು ಪ್ರೀತಿಸುವುದು ಮುಂತಾದ ಗುಣಗಳು ಕಂಡುಬಂದವು. ಬಾಲಕನಿಗೆ ತಾಯಿ ಹೇಳಿದ ಶಿವಶರಣರ ಕಥೆಗಳಲ್ಲಿ ಬರುವ ಆಚಾರ ವಿಚಾರ ,ಜಪ ತಪ, ಲಿಂಗನಿಷ್ಠೆ, ಲಿಂಗನಿರೀಕ್ಷೆ ಕುರಿತು ಶ್ರದ್ದೆ ಮೂಡತೊಡಗಿತು. ತಾನು ಹಾಗೆ ಯಾಕೆ ಲಿಂಗಪೂಜಾನಿಷ್ಠನಾಗಿ ಜಪತಪಗಳಿಂದ ಶಿವನನ್ನು ಮೆಚ್ಚಿಸಬೇಕೆಂದು ಹಂಬಲಿಸುತ್ತಿದ್ದನು. ಆ ಸಂದರ್ಭದಲ್ಲಿ ತಾಯಿಯ ಸಲಹೆಯನ್ನು ಕೇಳಿ ಕಲ್ಲಬೆಟ್ಟಕ್ಕೆ ಹೋಗಿ ತಪಸ್ಸು ಮಾಡಿ ಯೋಗಿಯಾಗುವೆ ಎಂದು ಹಂಬಲಿಸುತ್ತಿದ್ದರು. ತಾಯಿ ಅದು ಬಹಳ ದುರ್ಗಮ ಸ್ಥಾನ ಎಂದು ನಿರ್ದೇಶಿಸಿದರೂ, ಹಲವು ಕ್ರೂರ ಪ್ರಾಣಿಗಳ ವಾಸತಾಣವೆಂದು, ಮನುಷ್ಯರು ಅಲ್ಲಿ ಹೋಗಬಾರದೆಂದರೂ, ತಾಯಿ ಪರಿ ಪರಿಯಾಗಿ ಹೇಳಿದರೂ, ಗಮನಿಸದೆ ಮಗು ಒಂದು ಸಲ ಸಸಿವಾಲಕ್ಕೆ ಬಂದ ಒಬ್ಬ ಶಿವಯೋಗಿಯ ಜೊತೆಗೆ ಕಲ್ಲಬೆಟ್ಟಕ್ಕೆ ನಡದೇಬಿಟ್ಟರು. ಅಲ್ಲಿಯೇ ಕೆಲ ಕಾಲ ಬಾಲಕ ತಪೋನಿರತನಾದನು.
ಬಡಕಲ ಶರೀರ, ಜಟಾಧಾರಿ, ಬಿಳಿಯ ಗಡ್ಡ, ಗುಳಿ ಬಿದ್ದ ಕಣ್ಣುಗಳು, ಬೆನ್ನಿಗೆ ಹತ್ತಿದ ಹೊಟ್ಟೆಯ ಅನೇಕ ಕಲ್ಲಬೆಟ್ಟ ಶಿವಯೋಗಿಗಳು ಮಳೆಯಪ್ಪಯ್ಯನನ್ನು ಆಕರ್ಷಿಸಿದರು. ಕಲ್ಲಬೆಟ್ಟ ವಾಸಿಯಾದ ಮಗುವನ್ನು ಕರೆತರಲು ತಂದೆತಾಯಿಗಳು ಎಷ್ಟೇ ಪ್ರಯತ್ನಿಸಿದರೂ ಕಣ್ಣೀರು ಕರೆದರೂ ಮಗ ಅಲ್ಲಿಯೇ ನೆಲೆ ನಿಂತನು. ದುಃಖತಪ್ತರಾದ ತಂದೆ ತಾಯಿಗಳಿಗೆ ಬಸವಲಿಂಗ ಸ್ವಾಮಿಗಳು ಸಾಂತ್ವನ ಹೇಳುತ್ತಾ ನಿಮ್ಮ ಮಗ ಯೋಗಿಯಾಗಲಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣನಾಗಲಿ ಎಂದು ಮಳೆಯಪ್ಪನನ್ನು ಹರಸಿ ತಂದೆ ತಾಯಿಗಳನ್ನು ಸಮಾಧಾನಪಡಿಸಿದರು. ಈ ಹರಕೆಯು ಮುಂದೆ ಸತ್ಯವಾಗಿ ಪರಿಣಮಿಸಿತು.
ಕಲ್ಲಬೆಟ್ಟದಲ್ಲಿ ಬಸವಲಿಂಗ ಸ್ವಾಮಿಗಳು ಮಳಿಯಪ್ಪಯ್ಯನನ್ನು ಕಂಡು ಕ್ಷೇಮ ಸಮಾಚಾರವನ್ನು ವಿಚಾರಿಸಿದಾಗ, ಸಂಸ್ಕೃತ ಅಧ್ಯಯನಕ್ಕಾಗಿ ತಾನು ಬೇರೆ ಕಡೆ ಹೋಗಲು ಸಾಧ್ಯವೇ ಎಂದು ಕೇಳಿದನು.
ಆತನ ಅಭ್ಯಾಸದ ಆಸಕ್ತಿಯನ್ನು ಕಂಡು ನೀನು ಬಳ್ಳಾರಿಯಲ್ಲಿರುವ ಸಕ್ರಿ ಕರಡೆಪ್ಪನವರ ವೇದ ಪಾಠ ಶಾಲೆಗೆ ಹೋಗುವುದು ಸೂಕ್ತ, ಅದು ಸಂಸ್ಕೃತ ಅಧ್ಯಯನಕ್ಕೆ ಯೋಗ್ಯವಾದುದು ಎಂದು ಸೂಚಿಸಿದರು.
ಬಳ್ಳಾರಿಯ ಸಕ್ರಿ ಕರಡೆಪ್ಪನವರು ಆಗರ್ಭ ಶ್ರೀಮಂತರು. ಗುರು ಲಿಂಗ ಜಂಗಮ ದಾಸೋಹಿಗಳು ಎಂದು ಪ್ರಸಿದ್ದರಾಗಿದ್ದರು. ಅವರು ಸಂಸ್ಕೃತ ವೇದ ಪಾಠ ಶಾಲೆಯನ್ನು ನಡೆಸುತ್ತಿದ್ದರು. ಆ ಭಾಗದಲ್ಲಿ ಸಂಸ್ಕೃತ ಅಧ್ಯಯನದ ಅವಶ್ಯಕತೆಗಳನ್ನು ಅರಿತು ಒಂದು ಸಂಸ್ಕೃತ ಪಾಠಶಾಲೆ ತೆರೆದು ವಿದ್ಯಾರ್ಥಿಗಳಿಗೆ ಅನ್ನ, ವಸತಿ, ಗ್ರಂಥಗಳನ್ನು ಒದಗಿಸುತ್ತಿದ್ದರಲ್ಲದೆ ಸಂಸ್ಕೃತ ಪಾಠಶಾಲೆಗೆ ಸೂಕ್ತ ಗುರುಗಳನ್ನು ನಿಯಮಿಸಿದ್ದರು. ಹೀಗಾಗಿ ಸಕ್ರಿ ಕರಡೆಪ್ಪನವರ ವೇದ ಪಾಠಶಾಲೆ, ಶ್ರೇಷ್ಠ ಪಾಠಶಾಲೆ ಎಂದು ಪ್ರಸಿದ್ದಿಯನ್ನು ಪಡೆದಿತ್ತು. ಇಲ್ಲದಿದ್ದರೆ ಅಂದಿನ ಕಾಲಕ್ಕೆ ಸಂಸ್ಕೃತ ಅಧ್ಯಯನಕ್ಕಾಗಿ ಕಾಶಿಗೆ ಹೋಗಬೇಕಾಗುತ್ತಿತ್ತು. ಇದು ಸಾಮಾನ್ಯರಿಗೆ ಅಸಾಧ್ಯವಾಗುತ್ತಿತ್ತು. ಗುರುಗಳ ಸಲಹೆಯಂತೆ ಮಳಿಯಪ್ಪನವರು ಸಂತೆ ಸಾರಿಗೆಯವರ ಜೊತೆಗೂಡಿ ಬರಿಗಾಲಲ್ಲಿ ನಡೆದು ಬಳ್ಳಾರಿಗೆ ಬಂದರು.
ಆಗ ಅವರು ೧೪-೧೫ರ ವರುಷದ ಬಾಲಕರಾಗಿದ್ದರು. ಬಳ್ಳಾರಿಗೆ ಬಂದು ನೇರವಾಗಿ ವೇದಶಾಲೆಯಲ್ಲಿ ಪ್ರವೇಶ ಪಡೆದು ಊರ ಹೊರಗಿನ ಒಂದು ತೋಟದಲ್ಲಿ ನೀರಿನ ಸೌಕರ್ಯವಿರುವ ಪರ್ಣಶಾಲೆಯನ್ನು ಕಟ್ಟಿಕೊಂಡು ವಾಸಿಸಿದರು. ಪ್ರಸಾದಕ್ಕಾಗಿ ಕಂತಿಭಿಕ್ಷೆಯನ್ನು ಅವಲಂಬಿಸಿದರು. ಆ ಶಾಲೆಯಲ್ಲಿ ಅನೇಕ ಪಂಡಿತರು ಗುರುಗಳಾಗಿದ್ದರು. ಅಲ್ಲಿ ವೇದಾಂತ, ವ್ಯಾಕರಣ, ತರ್ಕಶಾಸ್ತ್ರ, ಪುರಾತನರ ವಚನಗಳು, ಶಿವಶರಣ ವಚನ ಸಾಹಿತ್ಯ, ದ್ವೈತ, ಅದ್ವೈತ, ವೀರಶೈವ ಮುಂತಾದ ವಿಷಯಗಳ ಅಧ್ಯಯನ ಸಾಗುತ್ತಿತ್ತು. ಕೇವಲ ಸಾತ್ವಿಕ ವೃತ್ತಿಯಿಂದ ಪ್ರಪಂಚವನ್ನು ಮಾಡುತ್ತ ಗುರು ಲಿಂಗ ಜಂಗಮ ಆರಾಧನೆಯಲ್ಲಿ ತಮ್ಮ ಕಾಲವನ್ನು ಸವೆಸುತ್ತ ಸಕ್ರಿ ಕರಡೆಪ್ಪನವರು ದಾಸೋಹ ತೃಪ್ತರಾಗಿದ್ದರು. ಉದಾರ ವಿದ್ಯಾದಾನದಿಂದ ಶರಣ ಜೀವನವನ್ನು ಸಾಗಿಸುತ್ತಿದ್ದರು.
ಬಳ್ಳಾರಿಗೆ ಬಂದ ಮಳಿಯಪ್ಪಯ್ಯನವರು ಊರ ಹೊರಗಿನ ತೋಟದಲ್ಲಿ ವಾಸವಾಗಿದ್ದ ಸಂಗತಿ ಕರಡೆಪ್ಪನವರ ಗಮನಕ್ಕೆ ಬಂದಿತು. ಸ್ವತಃ ಅವರೇ ಮಳಿಯಪ್ಪಯ್ಯನವರ ಗುಡಿಸಲಕ್ಕೆ ಬಂದು ಏಕೆ ತಾವು ಅನ್ನ ಛತ್ರದಲ್ಲಿ, ವಸತಿ ಛತ್ರದಲ್ಲಿ ಇರಬಾರದು ಎಂದು ವಿಚಾರಿಸಿದಾಗ ಅಲ್ಲಿ ನನ್ನ ಲಿಂಗ ಪೂಜೆಗೆ ತೊಂದರೆಯಾಗಬಹುದು ಅದಕ್ಕಾಗಿ ನಾನು ಏಕಾಂತವನ್ನು ಬಯಸುತ್ತೇನೆ ಅಧ್ಯಯನಕ್ಕೂ ಇದು ಯೋಗ್ಯವಾದ ಸ್ಥಳವಾಗಿದೆ. ನನಗೆ ಗದ್ದಲ ಹಿಡಿಸುವುದಿಲ್ಲ. ಏಕಾಂತವನ್ನು ಬಯಸುತ್ತೇನೆ ಎಂದು ಸ್ಪಷ್ಟ ಪಡಿಸಿದಾಗ ನಾನು ನಮ್ಮ ಮನೆಯಲ್ಲಿಯೇ ತಮ್ಮ ಏಕಾಂತಕ್ಕೆ ವ್ಯವಸ್ಥೆ ಅಣಿಗೊಳಿಸುತ್ತೇನೆ. ಲಿಂಗ ಪೂಜೆ ನಿರಾಳವಾಗಿ ಸಾಗುತ್ತದೆ. ನಮ್ಮ ಮನೆಯಲ್ಲಿ ನಾನು ಪೂರೈಸಿಕೊಡುತ್ತೇನೆ ಎಂದು ವಿನಮ್ರವಾಗಿ ಭಿನ್ನಯಿಸಿದಾಗ ಅವರ ಮನೆಯ ವಾಸಕ್ಕೆ ಮಳಿಯಪ್ಪಯ್ಯನವರು ಒಪ್ಪಿಕೊಂಡು ಮನೆಗೆ ಬರುತ್ತಾರೆ. ತಮ್ಮ ಪಾದದ ಧೂಳಿನಿಂದ ಸತ್ಸಂಗದಿಂದ ನನ್ನ ಮನೆಯನ್ನು ಹಾಗೂ ನನ್ನನ್ನು ಪಾವನ ಮಾಡಬೇಕೆಂದು ಮಳಿಯಪ್ಪಯ್ಯನವರನ್ನು ಒಪ್ಪಿಸಿಕೊಂಡು ಮನೆಗೆ ಕರೆ ತಂದರು. ತ್ರಿಕಾಲ ಲಿಂಗಾರ್ಚನೆ, ಒಂದೇ ಸಲ ಪ್ರಸಾದ ಸ್ವೀಕರಿಸುತ್ತ ವೇದ ವೇದಾಂತ ಷಡ್ ದರ್ಶನ, ವ್ಯಾಕರಣ, ಅಲಂಕಾರ, ಸಂಸ್ಕೃತ ಕಾವ್ಯ, ಅದ್ವೈತ ಶಾಸ್ತ್ರ, ವಚನ ಸಾಹಿತ್ಯ ಎಲ್ಲ ವಿಷಯವನ್ನು ಗಾಢವಾಗಿ ಅಭ್ಯಸಿಸಿದರು. ಪಂಡಿತ ಮಾನ್ಯ ಜ್ಞಾನಿಗಳಾಗಿ ರೂಪಗೊಳ್ಳತೊಡಗಿದರು. ಅಪಾರ ಜ್ಞಾನಿಗಳು, ತ್ರಿಕಾಲ ಲಿಂಗ ಪೂಜೆ ನಿಷ್ಠರು, ಅಧ್ಯಾತ್ಮದ ಕಳೆ ಹೊತ್ತ ತರುಣ, ಯೋಗಿಯ ಕಳೆ, ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು.
ಚಿತ್ರ ಸಂಖ್ಯೆ ೧ ಶ್ರೀ ಸಕ್ಕರೆ ಕರಡೆಪ್ಪನವರು ಮತ್ತು ಅವರ ಸಂಸ್ಕೃತ ಪಾಠ ಶಾಲೆ ಬಳ್ಳಾರಿ.
ಒಮ್ಮೆ ಸಕ್ರಿ ಕರಡೆಪ್ಪನವರ ಮನೆಗೆ, ಅಮರಾವತಿಯ ರಾಮಪ್ಪ ದೇಸಾಯಿಯವರು ಭೇಟಿ ನೀಡಿದ್ದರು. ಅವರ ಮನೆಯ ಆದರ ಆತಿಥ್ಯವನ್ನು ಸ್ವೀಕರಿಸಿ ಕುಳಿತ್ತಿದ್ದಾಗ, ಮನೆಯಲ್ಲಿ ತಂಗಿದ್ದ ಯೋಗಿ ಕಳೆಯನ್ನು ಹೊತ್ತ ಮಳಿಯಪ್ಪಯ್ಯನವರನ್ನು ನೋಡಿ ಆಕರ್ಷಿತರಾಗುತ್ತಾರೆ. ಆಗ ಕರಡೆಪ್ಪನವರಿಗೆ ಚಿತ್ತರಗಿಯ ಪೀಠದ ಗುರುಗಳಾದ ಗುರುಮಹಾಂತ ಸ್ವಾಮಿಗಳು ಲಿಂಗೈಕ್ಕ್ಯರಾದರೆಂದು, ಪೀಠದ ಅಧಿಕಾರಕ್ಕೆ ಯೋಗ್ಯ ಪೀಠಾಧಿಕಾರಿಯನ್ನು ಅರಸುತ್ತಿದ್ದೇವೆ ತಾವು ತಮ್ಮ ಪಾಠಶಾಲೆಯ ವಟುದೇವರನ್ನು ಸೂಚಿಸಿದರೆ ಒಳ್ಳೆಯದು ಎಂದು ಕರಡೆಪ್ಪನವರಲ್ಲಿ ವಿನಂತಿಸಿಕೊಂಡರು. ಅದೇ ಹೊತ್ತಿಗೆ ಲಿಂಗ ಪೂಜೆ ಪೂರೈಸಿ ದೇಸಾಯಿಯರೊಡನೆ ಮಾತನಾಡುತ್ತಿದ್ದ ಸಕ್ರಿ ಕರಡೆಪ್ಪನವರು, ಮಳಿಯಪ್ಪಯ್ಯ ದೇವರೇ ಚಿತ್ತರಗಿ ಪೀಠದ ಅಧಿಕಾರಿಯಾಗಬಹುದಲ್ಲವೆ ಎಂದು ಕೇಳಿದಾಗ ದೇಸಾಯಿಯವರು ಆನಂದದಿಂದ ನೀವು ಸೂಚಿಸದವರನ್ನೇ ಪೀಠಾಧಿಕಾರಿಯಾಗಿ ಮಾಡಲು ಸಿದ್ಧ ಎಂದರು. ಆಗ ಕರಡೆಪ್ಪನವರು ಮಳಿಯಪ್ಪಯ್ಯ ದೇವರನ್ನು ಕರೆದು ಚಿತ್ತರಗಿ ಇಳಕಲ್ ಸಂಸ್ಥಾನ ಪೀಠದ ಅಧಿಕಾರವನ್ನು ನೀವು ಏಕೆ ವಹಿಸಿಕೊಳ್ಳಬಾರದು, ನಿಮ್ಮನ್ನು ಅರಸಿ ದೇಸಾಯಿಯವರು ಬಂದಿದ್ದಾರೆ. ಆ ಪೀಠವು ೫೬ ಶಾಖಾ ಮಠಗಳನ್ನು ಹೊಂದಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದೆ.
ಒಳ್ಳೆಯ ಸಂಪತ್ತನ್ನು ಹೊಂದಿದ ಮಠವಾಗಿದೆ. ಆ ಮಠದ ಅಧಿಕಾರವನ್ನು ತಾವು ವಹಿಸಿಕೊಂಡರೆ ಒಳ್ಳೆಯದು ಎಂದು ಬಿನ್ನವಿಸಿದಾಗ ಮಳಿಯಪ್ಪಯ್ಯ ದೇವರು ನನಗೆ ಯಾವ ಪೀಠಾಧಿಕಾರವು ಬೇಡ, ಸಂಪತ್ವೈಭವೂ ಬೇಡ, ಪ್ರಚಾರ ಪ್ರಸಿದ್ಧಿಯು ಬೇಡ ಎಂದು ಸಾರಸಗಟವಾಗಿ ನಿರಾಕರಿಸಿದರು. ದೇಸಾಯಿಯರು ನಿರಾಶದಿಂದ ಮರಳಿದರು.
ಕಾಲಗತಿಸಿದಂತೆ ಆ ಸಿಂಹಾಸನಕ್ಕೆ ಬೇಗನೆ ಒಬ್ಬ ಯೋಗ್ಯ ಪಟ್ಟಾಧಿಕಾರಿಯನ್ನು ತರಬೇಕೆಂದು ದೇಸಾಯಿಯವರಿಗೂ, ಭಕ್ತರಿಗೂ ಆತುರ ಹೆಚ್ಚಾಯಿತು. ಆದ್ದರಿಂದ ರಾಮಪ್ಪ ದೇಸಾಯಿಯವರು ಅನೇಕ ಮಠ ಮಾನ್ಯಗಳಿಗೆ ಸಂದೇಶವನ್ನು ರವಾನಿಸಿದರು. ಚಿತ್ತರಗಿ ಪೀಠಕ್ಕೆ ವಟುವನ್ನು ಹುಡುಕಲು ಅನೇಕ ಮಠ ಆಶ್ರಮಗಳಿಗೆ ಭೇಟಿ ಕೊಟ್ಟು ಅರಸಿದರೂ ಪ್ರಯತ್ನ ಫಲಕಾರಿಯಾಗಲಿಲ್ಲ. ಹೀಗಿರಲಾಗಿ ಕೆಲದಿನಗಳ ನಂತರ ಸಕ್ರಿ ಕರಡೆಪ್ಪನವರು ಶಿವಾಧೀನರಾದರು.
ಅದಾದ ನಂತರ ಪಾಠಶಾಲೆಯು ನಿಂತಿತು. ಪಾಠಶಾಲೆಯಲ್ಲಿ ಇದ್ದಂತ ವಟುಗುಳು ಬೇರೆ ಬೇರೆಕಡೆ ಚದುರಿದರು. ಅಲ್ಲಿ ಇರುವಂತಹ ಶಿಕ್ಷಕರು ತಮ್ಮ ತಮ್ಮ ನೆಲೆ ಅರೆಸಿಕೊಂಡು ಹೋದರು. ಆಗ ಮಳಿಯಪ್ಪಯ್ಯನವರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕರಡೆಪ್ಪನವರಿಗೂ ತಮಗೂ ಪೀಠದ ಅಧಿಕಾರದ ಬಗ್ಗೆ ಚರ್ಚಿಸುವಾಗ ಅಧಿಕಾರದ ಬಗ್ಗೆ ನೀರಾಕರಿಸಿದ್ದು ನೆನಪಿಗೆ ಬಂತು. ಕರಡೆಪ್ಪನವರ ಮಾತಿಗೆ ತಾವು ನನಗೆ ಲೋಕದ ಸಂಸಾರ ಬೇಡ, ಯಾವ ಅಧಿಕಾರವು ಬೇಡ, ಮೋಹವು ಬೇಡ, ಯಾವ ಪಟ್ಟಾಧಿಕಾರವು ಬೇಡ ಎಂದು ಖಡಾಖಂಡಿತವಾಗಿ ಕರಡೆಪ್ಪನವರಿಗೆ ಹೇಳಿದಾಗ “ನೀವು ಸನ್ಯಾಸಿಗಳಾದರು ಲೋಕದ ಸಂಸಾರಿಗಳು. ಲೋಕದ ಸೇವೆ ಮಾಡಲೇಬೇಕು” ಎಂದು ಅರುಹಿದ ಮಾತುಗಳು ಮರುಕಳಿಸಿದವು. ಅದೇ ಮಾತನ್ನು ಮೆಲಕು ಹಾಕುತ್ತ ವೇದ ಪಾಠಶಾಲೆ ಚದುರಿದಾಗ ಮುಂದೇನು ಎಂಬ ಶೂನ್ಯ ಮಳಿಯಪ್ಪಯ್ಯನವರಿಗೆ ಕಾಡಹತ್ತಿತು. ಅವರಿದ್ದರೆ ಬೇರೆ ಮಾತಾಗುತ್ತಿತ್ತು. ಅವರ ನಿಧನದ ನಂತರ ಲೋಕಸಂಚಾರಿಗಳಾಗಿ ತಮ್ಮ ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಭವಿಷ್ಯದ ಶೂನ್ಯತೆಯಲ್ಲಿ ಸಾಗಿದರು. ಆಗ ವೇದ ಪಾಠಶಾಲೆಯಲ್ಲಿ ಗುರುವನ್ನರಸಿ ನರೇಗಲ್ಲಿಗೇ ಬರುತ್ತಾರೆ. ಊರ ಹೊರಗಿನ ತೋಟದಲ್ಲಿ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಕಂತಿಭಿಕ್ಷೆಯಿಂದ ತಮ್ಮ ತ್ರಿಕಾಲ ಲಿಂಗಪೂಜೆ ನೆರವೇರಿಸಿಕೊಂಡು ಸಾಗುತ್ತಿರವಾಗಲೇ ಒಂದು ವಿಚಿತ್ರ ಜರುಗಿತು. ಅವರಿಗೆ ವಿಪರೀತ ಭೇದಿಯು ಶುರುವಾಯಿತು. ಪ್ರತಿಸಲ ಭೇದಿಗೆ ತೆರಳಿದಾಗ ಬಾವಿ ನೀರನ್ನು ಸೇದಿ ಸ್ನಾನ ಮಾಡುವುದು ಮತ್ತೆ ಭೇದಿಗೆ ಸಾಗುವುದು. ದಿನಕ್ಕೆ ನಲವತ್ತು-ಐವತ್ತು ಸಲ ಭೇದಿಯಾಗಿ, ದೇಹದ ಶಕ್ತಿಯಲ್ಲಾ ಉಡುಗಿ ತಮಗೆ ಸ್ನಾನ ಪೂಜೆ ಮಾಡಲು ಆಗದಂತೆ ಮೈಯಲ್ಲೆಲ್ಲಾ ಉರಿ ಹೊಕ್ಕಂತಾಗಿ ನಿತ್ರಾಣರಾದರು. ಯಾವ ಔಷದಿಯೂ ನಾಟಲಿಲ್ಲ. ಕೊನಗೆ ನಿತ್ರಾಣರಾಗಿ ಪೂಜೆ ಜಪ ತಪ ತಗ್ಗಿ ಕೈ ಕಾಲುಗಳೆಲ್ಲ ಶಕ್ತಿ ಉಡಗಿ ಮೂರ್ಚಿತರಾಗಿ ಬಾವಿಯ ದಡದಲ್ಲಿ ಕುಸಿದರು. ಆ ಸಂದರ್ಭದಲ್ಲಿಯೇ ಸಕ್ರಿ ಕರಡೆಪ್ಪನವರು ಬಂದು ಚಿತ್ತರಗಿ ಪೀಠಕ್ಕೆ ಸಿದ್ಧರಾಗಿರಿ ಎಂದಂತೆ ಭಾಸವಾಗಿತ್ತು. ಇದೆ ಪ್ರಕಾರ ಅಂದೇ ಅಮರಪ್ಪ ದೇಸಾಯಿಯವರ ಸ್ವಪ್ನದಲ್ಲಿ ಕರಡೆಪ್ಪನವರು ಬಂದು ಮಳಿಯಪ್ಪಯ್ಯನವರನ್ನು ಕರೆತರಲು ನರೇಗಲ್ಲಿಗೆ ಹೋಗಿರಿ ಎಂದು ಹೇಳಿದಂತಾಯಿತು. ಮರುದಿನವೇ ರಾಮಪ್ಪ ದೇಸಾಯಿಯವರು ನರೇಗಲ್ಲಿಗೆ ಬಂದು ಮಳಿಯಪ್ಪಯ್ಯನವರ ಸ್ಥಿತಿಯನ್ನು ಕಂಡು ಚಿಂತಾಕ್ರಾಂತರಾಗಿ ವೈದ್ಯರನ್ನು ಕರೆಯಿಸಿ ಔಷದ ಉಪಚಾರದಿಂದ ಉಪಚರಿಸಿದಾಗ ಕಣ್ಣು ಬಿಟ್ಟ ಮಳಿಯಪ್ಪಯ್ಯನವರು ದೇಸಾಯಿಯವರನ್ನು ಕಂಡು ಕರಡೆಪ್ಪನವರ ಅಪ್ಪಣೆ ಮೇಲೆ ಬಂದಿದ್ದಿರೋ ಎಂದು ಕೇಳಿ ಹೌದು ಎಂದಾಗ ನಾನು ಅವರ ಮಾತನ್ನು ಒಪ್ಪಿಕೊಂಡೆ ಹಾಗಾದರೆ ಚಿತ್ತರಗಿಯ ಕಡೆ ತಾವು ಚಿತ್ತಯಸಬೇಕೆಂದು, ಚಿತ್ತರಗಿಯ ಸಂಸ್ಥಾನದ ಪೀಠಾಧಿಕಾರಿಯಾಗಲು ಅನುನಯಸಿ ಒಪ್ಪಿಸಿದರು. ಅದರಂತೆ ದೇಸಾಯಿಯರು ಪಟ್ಟಾಧಿಕಾರದ ಮುಹೂರ್ತ ಹಾಗೂ ಸಮಾರಂಭದ ದಿನಾಂಕವನ್ನು ಭಕ್ತರೊಂದಿಗೆ ಸಮಾಲೋಚಿಸಿ ಪಟ್ಟಾಧಿಕಾರದ ತಯಾರಿಯನ್ನು ನಡೆಸಿದರು. ಅದರಂತೆ ಶಾಲಿವಾಹನ ಶಕೆ ೧೮೦೯ ಪ್ರಮೋಧಿನಾಮ ಸಂವತ್ಸರ, ವೈಶಾಖ ಶುಕ್ಲದ ಚತುರ್ದಶಿ ಸೋಮವಾರ ಪಟ್ಟಾಧಿಕಾರ ನಡೆಯಬೇಕೆಂದು ನಿಗದಿಯಾಯಿತು. ಅದು ಕ್ರಿಸ್ತ ಶತಕ ೧೮೭೯ ಆಗಿತ್ತು. ಅಂದು ಭಕ್ತರೆಲ್ಲ ಕೂಡಿಕೊಂಡು ಒಳ್ಳೆ ವಿಜೃಂಭಣೆಯಿಂದ ಪಟ್ಟಾಧಿಕಾರ ಸಮಾರಂಭ ಜರುಗಿಸಿ ಶ್ರೀ.ಮ.ನೀ.ಪ್ರ ವಿಜಯಮಹಾಂತ ಶಿವಯೋಗಿಗಳೆಂದು ಅಭಿದಾನ ಹೊಂದಿ ಚಿತ್ತರಗಿಯ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಮುಂದಿನ ಮೂವತ್ತೊಂದು ವರುಷದವರೆಗೆ ಪೀಠಾಧಿಕಾರದ ಹೊಣೆಯನ್ನು ಹೊತ್ತು, ಸಮಾಜೋದ್ಧಾರಕ ಕಾಯಕವನ್ನು ಹೊತ್ತು ತಮ್ಮ ತ್ರಿಕಾಲ ಪೂಜೆ ನಿಷ್ಠೆಯಿಂದ ಭಕ್ತರ ಹೃದಯ ಮಂದಿರದಲ್ಲಿ ನಡೆದಾಡುವ ದೇವರೆಂದೇ ಪರಿಗಣಿತರಾದರು. ಪಟ್ಟವಾದ ನಂತರ ಹನ್ನೆರಡು ವರುಷಗಳ ಕಾಲ ಮೌನಾನುಷ್ಠಾನ ಕೈಗೊಳ್ಳುತ್ತಾರೆ.
ಚಿತ್ರ ಸಂಖೈ೨ : ಚಿತ್ತರಗಿಯ ಮೂಲ ಮಠ
ಶ್ರೀ ವಿಜಯಮಹಾಂತೇಶರನ್ನು ಪಟ್ಟಕ್ಕೆ ಕುಳ್ಳಿರಿಸಿದ ನಾರದ ಗದ್ದೆಯ ತಾತನವರು ಗುರುವಾಗಿ ಎಲ್ಲ ಜನರು ಕೇಳುವಂತೆ ಮಂತ್ರೋಪದೇಶವನ್ನು ಮಾಡಿದರು. ತಾವು ಸಧ್ಭಕ್ತಿ, ಸದ್ವಿವೇಕ, ಸುವಿರಕ್ತಿಯಿಂದ ನಡೆದುದಾರರೇ ತಮಗೆ ಲೋಕದಲ್ಲಿ ಯಾವ ಭಯವು ಬಾರದು. ಶರಣ ಕರಡೀಶ್ವರನ ಪರತರದ ಗರಡಿಯಲ್ಲಿ ಪಳಗಿದ ತಮ್ಮಂಥ ಅಮೂಲ್ಯ ರತ್ನವನ್ನು ರಾಮಪ್ಪ ದೇಸಾಯಿಯವರು ದೊರಕಿಸಿ ತಂದಿರುವುದು ಇಳಕಲ್ ನಾಡಿನ ಮಹಾ ಪುಣ್ಯವೆಂದು ಭಾವಿಸಬೇಕಾಗಿದೆ. ಗುರುಮಹಾಂತೇಶನ ಅನುಕರಣೆ ಮಾಡುತ್ತಾ ಜೀವನವನ್ನು ಪವಿತ್ರವಾಗಿ ಮಾರ್ಪಡಿಸಿಕೊಳ್ಳಿರಿ ಎಂದು ಹೇಳಿ ವಿಜಯಮಹಾಂತೇಶನಿಗೆ “ಕರಣಹಸಿಗೆ, ಮಂತ್ರಗೌಪ್ಯ, ಶೂನ್ಯಸಂಪಾದನೆ, ಬಸವೇಶ್ವರನ ವಚನ ಹೊತ್ತಿಗೆ, ಶತಕ ತ್ರಯ” ಮೊದಲಾದ ಪವಿತ್ರ ಗ್ರಂಥಗಳನ್ನು, ಭಕ್ತಿ, ಕ್ರಿಯಾ, ಜ್ಞಾನಗಳನ್ನು ವಿಕಾಸ ಮಾಡಿಕೊಳ್ಳಲು ಆಶೀರ್ವದಿಸಿದರು. ವಿಜಯಮಹಾಂತೇಶರು ಆ ಗ್ರಂಥಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಗುರುಗಳ ಶ್ರೀಪಾದಕ್ಕೆ ಅಭಿವಂದಿಸಿದರು. ಮುಂದೆ ಹನ್ನೆರಡು ವರುಷ ಮೌನಾನುಷ್ಠಾನದಲ್ಲಿ ಇದ್ದಾಗ ಈ ಎಲ್ಲ ಗ್ರಂಥಗಳ ಅಧ್ಯಯನಕ್ಕೆ ತೊಡಗಲು ಅದರ ಜ್ಞಾನದಿಂದ ಅವರ ಆತ್ಮೋದ್ಧಾರ, ಸಮಾಜೋದ್ಧಾರ ಎರಡನ್ನು ನಿಭಾಯಿಸಲು ಸಾಧ್ಯವಾಯಿತು.
ಶ್ರೀ ವಿಜಯಮಹಾಂತೇಶರು ಮೃಷ್ಟಾನ್ನವನ್ನು ಬಯಸದವರು. ಪಲ್ಲಕ್ಕಿಯಲ್ಲಿ ಮೆರೆಯದವರು. ಅವರಿಗೆ ಗಾದಿ ತೆಕ್ಕೆ ತೂಗು ಮಂಚವು ಬೇಡವೇ ಬೇಡ. ಅವರು ದಿನಾಲೂ ಅನ್ನ, ಮುದ್ದೆ, ಬೇಳೆಸಾರು, ಪಲ್ಯ, ಆಕಳ ಹಾಲು ಇಷ್ಟೇ ಪ್ರಸಾದ ರೂಪದಿಂದ ಸೇವಿಸುತ್ತಿದ್ದರು.
ಚಿತ್ತರಗಿ ಇಳಕಲ್ ಮಠವು ಮೂಲ ಸಂಸ್ಥಾನ ಪೀಠವು ಅದಕ್ಕೆ ಛತ್ರ ಚಾಮರ ಪಲ್ಲಕ್ಕಿ ಕುದುರೆ ಸವಾರರು ವಂದಿಮಾಗಧರು ಮೊದಲಾದ ಸರಂಜಾಮು ಇದ್ದರೂ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಪೀಠದ ೫೬ ಶಾಖಾ ಮಠಗಳ ವ್ಯವಸ್ಥೆಯನ್ನು ನೋಡಲಿಕ್ಕೆ ಬೇರೆ ಊರುಗಳಿಗೆ ಹೋಗಬೇಕಾದಾಗ ಒಂದು ಬಿಳಿ ಕುದುರೆಯನ್ನು ಮಾತ್ರ ಏರಿ ಹೋಗುತ್ತಿದ್ದರು. ಅವರೇ ಪ್ರೀತಿಯಿಂದ ಸಾಕಿದ ಒಂದು ಗೋವಿಗೆ ಮಹಾಂತಮ್ಮನೆಂದು ಹೆಸರಿಟ್ಟಿದ್ದರು. ಆ ಮಹಾಗೋವಿಗೆ ಶ್ರೀಗಳು ತನ್ನ ಹೊಟ್ಟೆಯ ಮಗುವೊ ಎಂದು ವಾತ್ಸಲ್ಯವನ್ನು ತೋರಿಸುತ್ತಿದ್ದರು.
ಶಿವಯೋಗಮಂದಿರದ ನಿರ್ದೇಶನ
ಕ್ರಿಸ್ತ ಶಕೆ ೧೯೦೮ರಲ್ಲಿ ಬಾಗಲಕೋಟೆಯಲ್ಲಿ ನಾಲ್ಕನೆಯ ವೀರಶೈವ ಮಹಾಸಭೆ ಜರುಗಿತು. ಶ್ರೀಮಂತ ಒಂಟಮುರಿ ದೇಸಾಯಿಯವರ ಅಧ್ಯಕ್ಷತೆಯಲ್ಲಿ ತೆಂಗಿನಮಠದಲ್ಲಿ ನೆರೆವೇರಿತು. ಆ ಅಧಿವೇಶನದಲ್ಲಿ ಗುರು ವಿರಕ್ತಮಠದ ವಟುಗಳನ್ನು ತರಬೇತಿಗೊಳಿಸುವ ಒಂದು ಶಿವಯೋಗಾಶ್ರಮವನ್ನು ಸ್ಥಾಪಿಸಬೇಕೆಂಬ ಠರಾವು ಸರ್ವಾನುಮತದಿಂದ ಸ್ವೀಕೃತವಾಯಿತು. ಆ ಪ್ರಕಾರ ಅಧಿವೇಶನದ ಮರುದಿನವೇ ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಅಂತಹ ಪವಿತ್ರ ಸ್ಥಳವನ್ನು ಪರಮಪೂಜ್ಯರಾದ ಶ್ರೀ ಚಿತ್ತರಗಿ ವಿಜಯಮಹಾಂತ ಸ್ವಾಮಿಗಳು ಹುಡುಕಿ ಕೊಡಬೇಕೆಂದು ಅದಕ್ಕಾಗಿ ಪೂಜ್ಯಪಾದರಿಗೆ ಬಿನ್ನವಿಸಿಕೊಳ್ಳಲು ಶ್ರೀ ಹಾನಗಲ್ ಕುಮಾರ ಶಿವಯೋಗಿಗಳನ್ನು ಅಣಿಗೊಳ್ಳಬೇಕೆಂದು ನಿರ್ಧರಿಸಿದರು.
ಚಿತ್ರ ಸಂಖ್ಯೆ ೩ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳಲ್ಲಿ ಶಿವಯೋಗಮಂದಿರ ಸ್ಥಳ ಸೂಚನೆಗೆ ಅರಿಕೆ
ಆ ಪ್ರಕಾರ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು, ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳ ಬಳಿಗೆ ಬಂದು ನಮಸ್ಕರಿಸಿ ಪರಸ್ಪರ ಯೋಗಕ್ಷೇಮದ ಬಗ್ಗೆ ಮಾತಕತೆ ಆದ ಬಳಿಕ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು “ಪೂಜ್ಯರೇ, ಈಗ ವೀರಶೈವರು ಧರ್ಮಾಚಾರಣೆಯನ್ನು ಬಿಟ್ಟು ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿರುವರು. ಮಠದ ಪೀಠಾಧಿಕಾರಿಗಳು ಸ್ವತಃ ಷಟಸ್ಥಲ ಜ್ಞಾನವಿಲ್ಲದೆ ಮನಬಂದಂತೆ ಏನೋ ಸಂಪ್ರದಾಯದ ವಶದಿಂದ ಸ್ವಾಮಿಗಳಾಗಿ ನಿಜವಾದ ಯೋಗ್ಯತೆ ಇಲ್ಲದೇ ದರ್ಪದಿಂದ ನಡೆದು ಭಕ್ತರನ್ನು ಅಂಧಾನುಯಾಯಿಗಳಾಗಿ ಶೋಷಿಸುತ್ತಿದ್ದಾರೆ. ಮಠದ ಪೀಠಾಧಿಪತೆಗಳೇ ಅನಾಢ್ಯರಾಗಿರುವಾಗ ಶಿಷ್ಯಕೋಟಿಯು ಸುಧಾರಣೆಯಾಗುವುದು ಹೇಗೆ ಎಂದು ವಿಚಾರಿಸುತ್ತಿರುವಾಗ ಈಗಿನ ಮಠಾಧಿಪತಿಗಳಲ್ಲಿ ನಿಜವಾದ ಲಿಂಗ ನಿಷ್ಠೆ ಕಡಿಮೆ. ಶಾಸ್ತ್ರೋಕ್ತ ಪೂಜಾವಿಧಾನಗಳನ್ನರಿಯರು, ಯೋಗಾಭ್ಯಾಸ ವರ್ಜಿತರು. ಆದುದರಿಂದ ಅಂತಹವರಿಗೆ ತರಬೇತಿ ಕೊಟ್ಟು ಅರ್ಹರನ್ನಾಗಿ ಮಾಡುವ ಶಿವಯೋಗ ಆಶ್ರಮದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಆದರಿಂದ ಆ ಪೀಠಗಳಿಗೆ ಶಿವಕಳೆ ಕುಂದಿಹೋಗಿದೆ. ಕಾರಣ ತಾವು ಯಾವ ಸ್ಥಳವನ್ನು ಹುಡುಕಿ ನಮಗೆ ತೋರಿಸುವಿರೋ ಅಲ್ಲಿಯೇ ಶಿವಯೋಗಾಶ್ರಮವನ್ನು ರಚಿಸಬೇಕೆಂದು ನಿರ್ಣಯಸಿದ್ದೇವೆ” ಎಂದು ಹಾನಗಲ್ ಕುಮಾರ ಶಿವಯೋಗಿಗಳು ನುಡಿಯಲು ಶ್ರೀ ವಿಜಯಮಹಾಂತೇಶರು
“ಕುಮಾರ ಯೋಗಿಯೇ, ನೀನು ಬೇರಲ್ಲ, ಶಿವನು ಬೇರಲ್ಲ ನಮ್ಮ ಜನರು ಮಂದಭಾಗ್ಯರು, ಅಜ್ಞಾನ ಅಂಧಕಾರದಲ್ಲಿ ಮುಳುಗಿ ತೊಳಲುತ್ತಿರುವರು ತಮ್ಮಿಂದ ಜ್ಞಾನ ಜ್ಯೋತಿಯು ಬೆಳಗಬೇಕಾಗಿದೆ ನಿನ್ನಿಚ್ಛೆಯೇ ಶಿವನೇಚ್ಛೆಯೂ” ಅದಕ್ಕಾಗಿ ನೀವು ಒಳ್ಳೆಯ ಯೋಜನೆಯನ್ನೇ ಕೈಗೊಂಡಿರುವಿರಿ. ತಮ್ಮ ಕಾರ್ಯಕ್ಕೆ ಶೀಘ್ರವೇ ಯಶಸ್ಸು ದೊರಕುತ್ತದೆ. ನಾನು ಆ ಕಾರ್ಯಕ್ಕೆ ಸದಾ ಸಿದ್ದ. ಸದ್ಯ ಹೊರಡುವೆನು ನಡೆಯಿರಿ ಎಂದು ಹೇಳಿ ತಮ್ಮ ಕುದರೆಯನ್ನೇರಿ ಯೋಗ್ಯ ಸ್ಥಳ ಹುಡುಕಲು ಹೊರಟರು. ಹಾನಗಲ್ ಕುಮಾರ ಶಿವಯೋಗಿಗಳಿಗೆ ತಮ್ಮ ರಥದಲ್ಲಿ ಜೊತೆಗೆ ಬರಲು ತಿಳಿಸಿದರು. ಈ ಸುದ್ದಿ ಕೇಳಿ ದಾರಿಯುದ್ದಕ್ಕೂ ಹಲವಾರು ಜನ ಭಕ್ತರು, ಸ್ವಾಮಿಗಳು ಹಿಂಬಾಲಿಸಿ ಹೊರಟರು.
ಶ್ರೀಗಳಿಗೆ ದಾರಿಯುದ್ದಕ್ಕೂ ಜನರು ತಳಿರು ತೋರಣಗಳಿಂದ ಮಂಗಳ ವಾದ್ಯಗಳಿಂದ ಪ್ರಭುವಿಗೆ ದೀಪಾರುತಿಯನ್ನು ಬೆಳಗಿ ಭಜನಾ ಮೇಳಗಳು ಜನರ ಜೈಘೋಷದೊಡನೆ ಪ್ರತಿದ್ವನಿಯಾಯಿತು. ಮಲಪಹಾರಿಯ ಗುಂಟ ಹೋರಟ ಶ್ರೀಗಳು ಮೊದಲು ಐಹೊಳೆಗೆ ದಯಮಾಡಿಸಿದರು ಅಲ್ಲಿಯ ಅನೇಕ ಗವಿಗಳು ಸುಂದರ ಶಿಲಾ ಮೂರ್ತಿಗಳು ಮನೋಹರವಾದ ಸೃಷ್ಟಿ ಸೌಂದರ್ಯಕ್ಕೆ ಆಕರ್ಷಣೆಯಾಗಿ ಕೆಲವರು ಆ ಸ್ಥಳವು ಯೋಗ್ಯವೆಂದು ಪೂಜ್ಯರಿಗೆ ಅರಿಕೆ ಮಾಡಿಕೊಂಡರು ಅದಕ್ಕೆ ಶ್ರೀಗಳು ಇಲ್ಲಿ ರಾಮಲಿಂಗೇಶ್ವರ ಗುಡಿಯೂ ಇದೆ. ಪ್ರತಿ ನಿತ್ಯ ಇಲ್ಲಿ ಅನೇಕ ಪ್ರವಾಸಿಗಳು ಬಂದು ಹೋಗುವದರಿಂದ ಏಕಾಂತಕ್ಕೆ ಶಾಂತತೆಗೆ ಆಸ್ಪದ ಇಲ್ಲವಾದುದರಿಂದ ಈ ಸ್ಥಳ ನಿರಾಕರಿಸಿ ಮುಂದೆ ಪಟ್ಟದಕಲ್ಲಿಗೆ ಬರುತ್ತಾರೆ. ಅದು ಹಿಂದೆ ಚಾಲುಕ್ಯ ರಾಜರು ಪಟ್ಟಕ್ಕೆ ಕೂಡ್ರುವ ಸ್ಥಳವಾಗಿದ್ದಿತು. ಅಲ್ಲಿ ರಾಜಮನೆತನದ ಕುರುಹುಗಳು, ದೇವಾಲಯಗಳು ಇದ್ದುದನ್ನು ನೋಡಿ ಕೆಲವರು ಆ ಸ್ಥಾನವು ಏಕಾಂತಕ್ಕೆ ಹಾಗೂ ಶಾಂತತೆಗೆ ಯೋಗ್ಯ ಎಂದು ವಿಜ್ಞಾಪಿಸಿದಾಗ ಆಗ ಶ್ರೀಗಳು ಅತ್ತಿತ್ತ ನೋಡುವಷ್ಟರಲ್ಲಿ ಘಟಸರ್ಪವೊಂದು ಹೆಡೆಯೆತ್ತಿ ಆಡುವುದನ್ನು ಕಂಡು ಜನರಿಗೆ ಅತ್ತ ನೋಡಿರಿ ನಾಗೇಂದ್ರನು ಈ ಸ್ಥಳವು ಬೇಡೆಂದು ಹೆಡೆಯನ್ನು ಅಲ್ಲಾಡಿಸಿ ಹೇಳುತ್ತಿರುವಂತೆ ಭಾಸವಾಯಿತು. ತ್ಯಾಗಿಗಳಾದ ವಿರಕ್ತರಿಗೆ ಈ ಭೋಗದ ರಾಜ್ಯದ ತಾಣವೇ ಬೇಡೆಂದು ಹೇಳಿ ಮುಂದೆ ಸಾಗಿದರು. ಪಟ್ಟದಕಲ್ಲಿನಿಂದ ಕುಮಾರಶಿವಯೋಗಿಗಳ ನೇತೃತ್ವದಲ್ಲಿ ಒಂದು ತಂಡ ಮಹಾಕೂಟದ ಕಡೆಗೆ ಸಾಗುವಂತೆ ಶ್ರೀಗಳು ನಿರ್ದೇಶಿಸಿದರು. ನಾವು ಬಂದು ನಿಮ್ಮನ್ನು ಸೇರುತ್ತೇವೆ ಎಂದು ವಿಜಯಮಹಾಂತ ಶಿವಯೋಗಿಗಳು ಮಲಪಹಾರಿ ಬಲದಂಡೆ ನದಿಯಗುಂಟ ಶಿವಯೋಗ ಮಂದಿರದ ಸ್ಥಳ ಅರಸುತ್ತ ಹೊರಟರು ಜೊತೆಯಲ್ಲಿ ಅನೇಕ ಭಕ್ತರು ಗೋಮಾತೆ ಮಹಾಂತಮ್ಮಳು ಸಾಗಿದಳು.
ವಿಪರೀತವಾದ ಬಿಸಿಲು, ದಟ್ಟವಾದ ಮುಳ್ಳು ಕಂಟಿಗಳಿಂದ ಕೂಡಿದ ಕಾಡು ಪ್ರದೇಶವನ್ನು ದಾಟಿಕೊಂಡು ಬರುವಾಗ ʼನೆಲುವಿಗೆʼ ಎಂಬ ಗ್ರಾಮಕ್ಕೆ ಬಂದಾಗ ಕೃಷಿ ಕೆಲಸದಲ್ಲಿ ತೊಡಗಿದ ಒಬ್ಬ ವ್ಯಕ್ತಿಯನ್ನು ಇಲ್ಲಿ ಎಲ್ಲಿಯಾದರೂ ಪತ್ರಿವನವಿದೆಯೇ? ಎಂದು ಕೇಳಿದಾಗ , ಆ ವ್ಯಕ್ತಿಯು ಈ ಕುರುಚಲು ಕಾಡಿನ ದುರ್ಗಮ ದಾರಿಯಲ್ಲಿ ಇನ್ನು ಕ್ರಮಿಸಿದರೆ ಅಲ್ಲಿ ಪತ್ರಿ ಗಿಡಗಳ ವನವೇ ಇದೆ ಆದರೆ ದಾರಿಯಲ್ಲೆಲ್ಲ ವಿಪರೀತ ಡಬ್ಗಳ್ಳಿ ಕಂಟಿಗಳು ಇರುವುದರಿಂದ ಸುಲಭವಾಗಿ ಸಾಗುವುದು ಸುಲಭವಲ್ಲ ಎಂದಾಗ, ಅದೇನೇ ಆಗಲಿ, ಆ ಪತ್ರಿ ವನವನ್ನು ತೋರು ಬಾ ಎಂದು ಕರೆದಾಗ ಒಳ್ಳೆ ಹುಮ್ಮಸ್ಸಿನಿಂದ ದಾರಿಯಲ್ಲಿ ಇರುವ ಮುಳ್ಳು ಕಂಟಿಗಳನ್ನು ಸವರುತ್ತ ಸವರುತ್ತ ಮುಂದೆ ಸಾಗಿದಾಗ ದಟ್ಟವಾದ ಗಿಡಗಳ ಸಮೃದ್ಧಿಯಿಂದ ಕೂಡಿದ ಪ್ರದೇಶವು ಗೋಚರವಾಯಿತು. ಅದಕ್ಕೆ ಕೆಲವರು ಇಂತಹ ದುರ್ಗಮ ಪ್ರದೇಶದಲ್ಲಿ ಹಾಡು ಹಗಲೇ ಕೊಳ್ಳೆಹೊಡೆಯುವ ಕಳ್ಳರಿದ್ದಾರೆ ಇಲ್ಲೇಕೆ ಸ್ವಾಮಿ ಎನ್ನುವಂತಹ ಸಂಶಯವು ಕೆಲವರಲ್ಲಿ ಉದ್ಭವವಾಯಿತು. ಅಂತಹ ದುರ್ಗಮ ಪ್ರದೇಶವನ್ನು ದಾಟಿಕೊಂಡು, ಗುಂಪು ಗುಂಪಾಗಿ ಬೆಳೆದ ಪತ್ರಿ ವನವನ್ನು ಕಂಡರು. ಅಲ್ಲಿಯೇ ಪುಟ್ಟದಾದ ಪುರಾತನವಾದ ಕೊಟ್ಟೂರು ಬಸವೇಶ್ವರನ ದೇವಸ್ಥಾನ ಇದೆ ಎಂದು ಹೇಳಿ ನೆಲವಿಗೆಯ ಆ ವ್ಯಕ್ತಿಯು ನಾವು ಶ್ರಾವಣ ಮಾಸದಲ್ಲಿ ಇಲ್ಲೇ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಚಿತ್ರ ೪ : ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿ ಗಳಿಂದ ಶಿವಯೋಗಮಂದಿರದ ಸ್ಥಳ ಗುರುತು
ಅಲ್ಲಿಗೆ ಬಂದು ನಿಂತಾಗ ಪುರಾತನ ನಂದಿ ವಿಗ್ರಹವನ್ನು ಕಂಡು ಶ್ರೀಗಳು ನೀ ಕೊಟ್ಟರೂ ಬಸವೇಶ, ಕೊಡದಿದ್ದರೂ ಬಸವೇಶ, ನೀ ಕೊಟ್ಟೂರು ಬಸವೇಶ ಎಂದು ಸಂಭೋದಿಸಿ ಅಲ್ಲೇ ಮುಂದೆ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುತ್ತ ಮಹಾಂತಮ್ಮನನ್ನು ಮಂದಿರಕ್ಕೆ ಸರಿಯಾದ ಸ್ಥಳವೇನಮ್ಮಾ ಎಂದಾಗ ಒಳ್ಳೆಯದು ಎಂದು ಮೌನವಾಗಿ ಗೋಣು ಆಡಿಸಿತು. ಅದೇ ಮಹಾಂತಮ್ಮನ ಸಮ್ಮತಿಯೆಂದು, ಅದೇ ಸ್ಥಳ ಶಿವಯೋಗ ಮಂದಿರಕ್ಕೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಮಹಾಕೂಟದಲ್ಲಿ ಇದ್ದ ಹಾನಗಲ್ ಕುಮಾರಶಿವಯೋಗಿಗಳನ್ನು ಕರೆಯಿಸಿದಾಗ ಮಹಾಂತಪ್ಪಗಳು ಒಂದು ಕಲ್ಲು ಬಂಡೆಯ ಮೇಲೆ ಪ್ರಸನ್ನಚಿತ್ತರಾಗಿ ಕುಳಿತಿದ್ದನ್ನು ಕಂಡ ಕುಮಾರಶಿವಯೋಗಿಗಳು ಆನಂದಭರಿತರಾಗಿ ತಾವು ಯೋಗ್ಯವಾದ ಸ್ಥಳವನ್ನೇ ಆಯ್ಕೆ ಮಾಡಿರುವಿರಿ ಎಂದು ಆನಂದದಿಂದ ಕೊಂಡಾಡಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಇಲ್ಲಿಯೇ ಮಂದಿರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂದು ಒಪ್ಪಿಕೊಂಡರು. ಆಗ ಬಾಗಲಕೋಟೆಯ ಕೆಲ ಭಕ್ತರು ಇಂತಹ ಗಾಢವಾದ ಅರಣ್ಯದಲ್ಲಿ ಅನೇಕ ಕ್ರೂರ ಪ್ರಾಣಿಗಳಿರುತ್ತವೆ. ಮಂದಿರಕ್ಕೆ ಇದು ಸರಿಯಾದ ಸ್ಥಳವಲ್ಲ ಎಂದು ನಿರಾಕರಿಸಿದರೂ ಕುಮಾರ ಶಿವಯೋಗಿಗಳು ಇದೆ ಮಂದಿರ ಕಟ್ಟಲು ಪ್ರಶಸ್ತ ಮತ್ತು ಪ್ರಶಾಂತ ಸ್ಥಳವೆಂದು ಲಿಂಗ ಮುದ್ರೆಯನ್ನು ಹಾಕಿದರು. ಮುಂದೆ ಅಷ್ಟೇ ಸ್ಥಳ ಸಾಕಾಗದೆಂದು ನೆರೆಯ ಪ್ರದೇಶದ ಒಡೆಯರನ್ನು ಕರೆಯಿಸಿ ಯೋಗ್ಯ ಬೆಲೆಗೆ ಆ ಸ್ಥಳವನ್ನು ಕೊಂಡುಕೊಳ್ಳಲು ವಿಚಾರಾಸಿದಾಗ ೫೦೦ ರೂಪಾಯಿಗಳಿಗೆ ಕೊಡುತ್ತೇನೆ ಎಂದು ಹೇಳಿದಾಗ ೩೦೦ ರೂಪಾಯಿಗಳಿಗೆ ಕೊಡು ಎಂದು ಹೇಳಿದರು. ಆಗ ಆತನು ನಾನು ಹೊಲವನ್ನು ಮಾರುವುದೇ ಇಲ್ಲ ಎಂದನು ಆಗ ವಿಜಯಮಂಹಾಂತೇಶ ಶ್ರೀಗಳು ಆ ಹೊಲವನ್ನು ಆತನು ಕೊಡದಿದ್ದರೆ ಬಿಡಲಿ, ಲೀಲಾವಿನಲ್ಲಿ ಅದು ನಮಗೆ ಸಿಕ್ಕೇ ಸಿಗುತ್ತದೆ ಎಂದು ಭವಿಷ್ಯ ನುಡಿದರು ಆ ಪ್ರಕಾರ ಆ ಬ್ರಾಹ್ಮಣನು ತಾನು ಮಾಡಿದ ಸಾಲಕ್ಕಾಗಿ, ಆ ಹೊಲವನ್ನು ಸರಕಾರದವರು ಲೀಲಾವಿಗೆ ಹಚ್ಚಲಾಗಿ ೨೦೦ ರುಪಾಯಿಗೆ ಆ ಹೊಲ ಮಂದಿರಕ್ಕೆ ಸೇರ್ಪಡೆಯಾಯಿತು. ಇದಲ್ಲದೆ ಶ್ರೀ ಹಾನಗಲ್ ಸ್ವಾಮಿಗಳು ನೆರೆಯ ಮತ್ತೆರಡು ಹೊಲಗಳನ್ನು ಖರೀದಿಗೆ ತೆಗೆದುಕೊಂಡು ಅಲ್ಲಿ ಶಿವಯೋಗ ಮಂದಿರವನ್ನು ಸ್ಥಾಪನೆ ಮಾಡಿದರು. ಮುಂದೆ ಅನೇಕ ಮಠಪೀಠಗಳನ್ನು ಬೆಳಗುವ ಚಿಜ್ಯೋತಿಗಳು ಈ ಶಿವಯೋಗ ಮಂದಿರದಿಂದ ಹೊರಹೊಮ್ಮಿದವು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಹಾನಗಲ್ ಕುಮಾರ ಶಿವಯೋಗಿಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು. ಹೀಗೆ ೧೯೦೯ರಲ್ಲಿ ಆರಂಭಗೊಂಡ ಶಿವಯೋಗ ಮಂದಿರದ ಕಾರ್ಯ ನಾಲ್ಕೈದು ವರುಷಗಳ ಕಾಲ ಜರುಗಿತು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಶಕೆ ೧೮೩೩ ವಿರೋಧಿಕೃತ ನಾಮ ಸಂವತ್ಸರದ ಕಾರ್ತೀಕ ಶುದ್ಧ ಪಂಚಮಿಯಲ್ಲಿ ಲಿಂಗೈಕ್ಯರಾದರು ಅದು ಕ್ರೈಸ್ತ ಶಕ ೧೯೧೧ರ ಶುಕ್ರವಾರ ಆಗಿತ್ತು. ಅವರ ಸ್ಥೂಲ ದೇಹವು ನಶ್ವರವಾದರೂ ಅವರ ಚೈತನ್ಯವು ಗದ್ದುಗೆಯ ರೂಪದಿಂದ ಭಕ್ತರನ್ನು ಸದಾ ಕಾಯುತ್ತಲಿದೆ.
ಚಿತ್ರ ಸಂಖ್ಯೆ ೫ : ಶ್ರೀ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ
ಚಿತ್ರ ಸಂಖ್ಯೆ ೬ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು ಕಟ್ಟಿಸಿದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಅಕ್ಟೋಬರ ೨೦೨೧ ರ ಸಂಚಿಕೆ
ಶ್ರೀಗುರುವೆ ಸಕಲ ಬಂಧು-ಬಳಗ
ಎರವು ಮಾಡದೆ ನಿಮ್ಮ | ಗುರುಪುತ್ರರೊಳಗೆನ್ನ
ಕಿರಿಯ ಮಗನೆಂದು – ಗುರುವೆ ನೀ ಕರವಿಡಿದು
ಹರುಷದಿಂದೆನಗೆ ಕೃಪೆಯಾಗು || ೨೭ ||
ಶಿವಕವಿಯು ಗುರುವಿನಲ್ಲಿ ತಂದೆ-ತಾಯಿ, ಅಪ್ಪ-ಅಜ್ಜ, ಬಂಧು-ಬಳಗದ ಆರೋಪವನ್ನು ಮಾಡುತ್ತ ಸದ್ಗುರುವನ್ನು ಅತ್ಯಂತ ಆತ್ಮೀಯವಾಗಿ ಕಾಣುತ್ತಾನೆ. ಸುಮಾರು ಹದಿನಾಲ್ಕು ನುಡಿಗಳಲ್ಲಿ ಗುರುವೇ ಸಕಲ ಬಂಧು-ಬಳಗವೆಂಬುದನ್ನು ವ್ಯಕ್ತಗೊಳಿಸಿದ್ದಾನೆ. ಆತ್ಮೀಯರಲ್ಲಿ ತನ್ನ ಮನದಳಲನ್ನು ದೂರ ಮಾಡಿಕೊಳ್ಳುವಂತೆ ಈ ಶರಣ ಕವಿಯು ತನ್ನ ದುಗುಡದುಮ್ಮಾನವನ್ನು ಗುರುಬಂಧುವಿನಲ್ಲಿ ಬಿಡಿಸಿಕೊಂಡಿದ್ದಾನೆ.
ಎರವು ಮಾಡು= ಭೇದಭಾವ ಮಾಡು, ಭಿನ್ನವಾಗಿ ತಿಳಿ, ಗುರುವೆ ! ನಿಮ್ಮಹಿರಿಯರಾದ ಅನೇಕ ಗುರುಪುತ್ರರೊಳಗೆ ಎನ್ನನ್ನು ಭಿನ್ನವಾಗಿ ತಿಳಿಯಬೇಡ. ನನ್ನಲ್ಲಿಭೇದ ಭಾವವನ್ನು ಮಾಡಬೇಡ. ನಿನ್ನದು ವಿಶಾಲ ಮನೋಭಾವ.
“ಅಯಂ ನಿಜ: ಪರೋ ವೇತ್ತಿ ಗಣನಾ ಲಘುಚೇತಸಾಮ್ |
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ||
ಇವನು ನನ್ನವನು, ಅನ್ಯನೆಂದು ಭಾವಿಸುವದು ಸಣ್ಣ ಮನಸ್ಸಿನವನ ವ್ಯವಹಾರ.ಆದರೆ ಉದಾರ ಚರಿತ್ರವುಳ್ಳ, ವಿಶಾಲ ಹೃದಯವುಳ್ಳ ತಮಗೆ ಜಗತ್ತೇ ಕುಟುಂಬವಾಗಿದೆ. ನನ್ನನ್ನು ಎಲ್ಲರೊಳಗೆ ಚಿಕ್ಕಮಗನೆಂದು ಎಣಿಸು. ಚಿಕ್ಕವನು ಏನೇ ತಪ್ಪುಮಾಡಿದರೂ ಅದು ಕ್ಷಮ್ಯವಲ್ಲವೆ ? ಕ್ಷಮಿಸುವದು ತಂದೆಯ ಧರ್ಮ. ನನ್ನ ಕೈಹಿಡಿದು ಭವಸಾಗರದಿಂದ ಮೇಲೆತ್ತು. ಚಿಕ್ಕವನು ಕೈಹಿಡಿಯದೆ ನಡೆಗಲಿಯಲಾರ. ಬೀಳುತ್ತಿದ್ದರೂ ಹಿಡಿದೆತ್ತುವದು ಸದ್ಗುರುವಿನ ಕಾರ್ಯ. ನೀ ಕೈ ಬಿಟ್ಟರೆ ನಾನು ಭವಸಾಗರದಲ್ಲಿಮುಳುಗಿ ಹೋಗುವೆ. ಬೇಸರ ತಾಳದೆ ನನ್ನನ್ನು ಉದ್ಧರಿಸು. ಸಂತೋಷದಿಂದ ಕೃಪೆಮಾಡು.
ಮಾಯಾ ಪಾಶವ ಹರಿದು | ಕಾಯೋ ನೀನೆನ್ನುವನು.
ತಾಯಿ ಜನ್ಮದೊಳು-ಬೇಡಿದುದೀವ ಗುರು-
ತಾಯಿ ನೀನೆಗೆ ಕೃಪೆಯಾಗು || ೨೮ ||
ಜಗತ್ತಿನಲ್ಲಿ ತಾಯಿಗೆ ಅಗ್ರಸ್ಥಾನವಿದೆ. ‘ಮಾತೃ ದೇವೋಭವ’ವೆಂದು ವೇದವು ತಾಯಿಯನ್ನು ಗೌರವಿಸಿದೆ. ತಾಯಿ ಮೊದಲನೆಯ ದೇವರೆಂದು ಎಲ್ಲರೂ ಅದರ ಮಾಡಿದ್ದಾರೆ. ‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲವೆಂಬ ನಾಣ್ಣುಡಿಯನ್ನು ಬಲ್ಲ ಶಿವ ಕವಿಯು ಗುರುವಿನಲ್ಲಿ ಮೊದಲು ತಾಯಿತನವನ್ನು ಕಾಣುತ್ತಾನೆ.
ಮಾಯಾಕೋಲಾಹಲಿಗಳೆನಿಸಿದ ಅಲ್ಲಮ ಪ್ರಭುಗಳು ಮಾಯೆಯ ವ್ಯಾಖ್ಯೆ ಯನ್ನು ಮಾರ್ಮಿಕವಾಗಿ ಮಾಡಿದ್ದಾರೆ.
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.
ಹೊನ್ನು, ಹೆಣ್ಣು, ಮಣ್ಣುಗಳನ್ನು ವೇದಾಂತಿಗಳು ಮಾಯೆಯೆಂದು ಭಾವಿಸು ತ್ತಾರೆ. ಆದರೆ ಅವು ನಿಜವಾದ ಮಾಯೆಯಲ್ಲ. ಅವುಗಳೆಲ್ಲ ತನಗೇ ಬೇಕೆಂಬ ಮನದ ಅತಿಯಾಸೆಯೇ ಮಾಯೆಯಾಗಿದೆ. ಮನಸ್ಸಿನ ಕಾಮನೆಗಳೇ ಮಾಯೆಯಾಗಿ ಪರಿಣಮಿಸುತ್ತವೆ. ಮನ ಸುಮನವಾದರೆ ಆಶೆ ನಿರಾಶೆಯಾಗುವದು. ಮಾಯಾಪಾಶಹರಿಯುವದು. ಅಕ್ಕಮಹಾದೇವಿಯೂ ಕೂಡ ತೆರಣಿಯ ಹುಳದ ಉದಹಾರಣೆಯನ್ನು ಕೊಟ್ಟು ಮಾನವನು ಆಶಾ ಪಾಶದಿಂದ ಬಂಧಿತನಾಗಿ ಮನಬಂದಂತೆ ನಡೆಯುವನು. ಈ ಆಶೆಯನ್ನು ದೂರು ಮಾಡೆಂದು ಶ್ರೀ ಗುರುದೇವ ಚನ್ನಮಲ್ಲಿಕಾರ್ಜುನನಲ್ಲಿ ಬೇಡಿ ಕೊಂಡಿದ್ದಾಳೆ.
ಮಾಯೆಯೆಂದರೆ ಅಜ್ಞಾನವೆಂತಲೂ ಅರ್ಥ ಮಾಡಬಹುದು. ಅಜ್ಞಾನದಿಂದ ಪಾರಮಾರ್ಥವನ್ನು ಮರೆತು ಲೌಕಿಕ ವ್ಯವಹಾರದಲ್ಲಿ ಜೀವಾತ್ಮನು ಬಂಧಿತನಾಗುವನು. ಭವಚಕ್ರದಲ್ಲಿ ಸಿಲುಕುವನು.ಈ ಮಾಯಾಪಾಶದಿಂದ ಬಿಡುಗಡೆಯಾಗಬೇಕಾದರೆ ಗುರು ಕೃಪೆ ಮೂಲವಾಗಿದೆ. ಮಾನವನ ತಾಯಿಯ ಗರ್ಭದಲ್ಲಿರುವಾಗ ಈ ತಿಂಗಳಿಗೆ ಪೂರ್ವಜನ್ಮದ ಸ್ಮರಣೆಯಾಗುತ್ತದೆ. ಆಗ ಜೀವನು ತನ್ನ ತಪ್ಪಿನ ಅರಿವಾಗಿ ದೇವರಲ್ಲಿ ಪ್ರಾರ್ಥಿಸುತ್ತಾ… ದೇವಾ ! ಎನ್ನ ತಪ್ಪು ಅನಂತ ನಿನ್ನ ಸ್ಯೆರಣೆಗೆ ಲೆಕ್ಕವಿಲ್ಲ.
ಇನ್ನು ಮೇಲೆ ತಪ್ಪದಂತೆ ಇರಿಸು,ನಿನ್ನ ಸ್ಮರಣೆಯನ್ನು ಬಿಡುವುದಿಲ್ಲ. ಈ ಭವ ಬಂಧನವನ್ನು ಸಾಕುಮಾಡು ಮುಕ್ತನನ್ನಾಗಿಸು ಲಿಂಗವನ್ನು ಮರೆತ ಕಾರಣ ಪುನಪುನಃ ಹುಟ್ಟಬೇಕಾಯಿತು ಜಂಗಮನನ್ನು ಜರಿದವಾಗಿ ಮಾಯಾಪಾಶದಿಂದ ಬಂಧಿತನಾದೆ ಶಿವ ಶಿವಾ! ಶರಣ ಮಾರ್ಗವನ್ನು ಕರುಣಿಸಿ ಭವಬಂಧನದಿಂದ ದೂರ ಮಾಡೆಂದು ಬೇಡಿಕೂಳ್ಳುತ್ತಾರೆ.ಆದರೆ ಪ್ರಸೂತವಾಯು ತಾಯಿ ಗರ್ಭಕೋಶದಿಂದ ಹೊರನೂಕಿದಾಗ ಆ ಬೇಡಿಕೆ ,ಆ ಪ್ರಾರ್ಥನೆ ,ಆ ಪೂರ್ವಜನ್ಮದ ಸ್ಮರಣೆ ಮರೆತು ಬಿಡುತ್ತದೆ . ಜೀವಾತ್ಮನು ಮರೆತರೂ ಸುದ್ಗುರುನಾಥನು ಅದನ್ನೆಲ್ಲ ಕರುಣಿಸುತ್ತಾನೆ.ಜೀವದಾತೆಯಾದ ತಾಯಿಯು ಶಿಶುವಿಗೆ ಬೇಡಿದ್ದನ್ನ ಕೊಟ್ಟು ಸಂತೈಸುತ್ತಾಳೆ. ತಾಯಿ ಕೊಡುವದು ಶಕ್ತ್ಯಾನುಸಾರ ಅದು ಭೌತಿಕ ಬೇಡಿಕೆಗಳನ್ನು ಮಾತ್ರ .ಗುರು ತಾಯಿ ಕೊಡುವುದು ಅಲೌಕಿಕವಾದುದನ್ನು. ಗುರು ತಾಯಿ ಕೊಡುಗೆಗೆ ಯಾವುದೂ ಸಮಾನವಲ್ಲ.
ಓ ಗುರುವೆ! ಗುರು ತಾಯಿಯೆ ! ನೀ ಕರುಣಿಸು ನಾನು ನಿನ್ನ ಕಿರಿಯ ಕುವರ ಚಿಕ್ಕಮಗನು ತಾಯಿಗೆ ಬಲು ಪ್ರೀತಿಯಲ್ಲವೆ? ಕರುಣೆದೋರಿ ನನ್ನ ಮಾಯಾಪಾಶವನ್ನು ಹರಿದು ಹಾಕು. ಭೌತಿಕ ಬಯಕೆಯನ್ನು ಕಳೆದು ತಾಯಿಯ ಗರ್ಭದಲ್ಲಿ ಬೇಡಿದ ಬಯಕೆಗಳನ್ನು ಕೈಗೂಡಿಸು. ನಿನ್ನ ಕರಗರ್ಭದಲ್ಲಿ ನನ್ನನ್ನು ಪುನರ್ಜಾತನನ್ನಾಗಿ ಮಾಡು. ನಿನ್ನ ಕರಗರ್ಭದಲ್ಲಿ ಉದಯವಾಗುವದರಿಂದ ಸಂಸಾರ ಬಂಧನ ಬಿಡುವದು. ನನ್ನ ಮಲತ್ರಯಗಳನ್ನು ಕಳೆದು ಕರುಣಿಸು . ಮಗುಬೇಡಿದ್ದನೆಲ್ಲಾ ತಾಯಿ ಕೊಡುವಂತೆ ನನ್ನ ಈ ಬೇಡಿಕೆಯನ್ನು ಪೂರೈಸಿ ಗುರುತಾಯಿಯಾಗು . ನಿನ್ನ ಹೃದಯ ವಿಶಾಲವಾದುದು.ಅನುಪಮವಾದುದು. ಈ ಬಳಲುವ ಕಂದನ ಬಂಧನ ಬಿಡಿಸು .ಇದು ನಿಮ್ಮ ಧರ್ಮ.
ಶಿವಕವಿಯು ಹಿಂದೆ ತನ್ನನ್ನು ಕಿರಿಯ ಮಗನೆಂದು ಹೇಳಿಕೊಂಡು ಇಲ್ಲಿ ಗುರು ತಾಯಿಯ ಪ್ರಸ್ತಾಪ ಮಾಡುವದು ಅತ್ಯಂತ ಮಾರ್ಮಿಕವಾಗಿದೆ. ತಾಯಿಗೆ ಚಿಕ್ಕಮಗನ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ಇದು ಲೌಕಿಕ ಅನುಭವ . ಕವಿಯಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಅನುಭವ ಸಾಕಷ್ಟಿತ್ತೆಂಬುದು ವ್ಯಕ್ತವಾಗುತ್ತದೆ. ಮತ್ತು ಸದ್ಗುರು ನಾಥನು ತೀವ್ರವಾಗಿ ಕೃಪೆಯನ್ನುಂಟು ಮಾಡಲೆಂಬ ಜಾಣ್ಮೆಯೂ ಸ್ಪಷ್ಟವಾಗುತ್ತದ.
• ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)(ಈಶ್ವರ ಸಣಕಲ್ಲ ಇವರು ೧೯೦೬ ಡಿಸೆಂಬರ ೨೦ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡದಲ್ಲಿ ಜನಿಸಿದರು. ತಾಯಿ ನೀಲಾಂಬಿಕೆ ; ತಂದೆ ಮಹಾರುದ್ರಪ್ಪ. ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಅನುಭವಕ್ಕೆ ಅಭಿವ್ಯಕ್ತಿಯ ರೂಪುಕೊಟ್ಟರು. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.
ಇವರ ಬಟ್ಟೆ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಇವರು ೧೯೮೦ ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ ನೆಯ ಅಖಿಲ ಭಾರತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು. ಈಶ್ವರ ಸಣಕಲ್ಲರ ಉದಾತ್ತ ಆದರ್ಶವು ಅವರ ಕವನವೊಂದರಲ್ಲಿ ಬರುವ ಈ ಸಾಲುಗಳಿಂದ ವ್ಯಕ್ತವಾಗುತ್ತದೆ: “ ಜಗವೆಲ್ಲ ನಗುತಿರುಲಿ ; ಜಗದಳವು ನನಗಿರಲಿ ” ಈಶ್ವರ ಸಣಕಲ್ಲರು ೧೯೮೪ ಡಿಸೆಂಬರ ೩ರಂದು ತೀರಿಕೊಂಡರು.)
ಅನಾದ್ಯನಂತವಾಗಿ ಹಬ್ಬಿರುವ ಆಕಾಶದಗಲದ ಮಹಾಮೌನದಲ್ಲಿ ಅಖಂಡ ತೇಜಃಪುಂಜವಾದ,ಅವಿರತ ಜ್ಯೋತಿರ್ಮಯವಾದ, ಅಪ್ರತಿಮ ಪ್ರಕಾಶ ಪೂರ್ಣವಾದ ಅಸಂಖ್ಯ ಕೋಟಿ ಗ್ರಹನಕ್ಷತ್ರಗಳುಮೂಡಿ, ಲೀಲೆಯಲ್ಲಿ ಆಡಿ, ವೇಗದಲ್ಲಿ ಪರಿಭ್ರಮಿಸುತೋಡಿ, ನಿರ್ಧಿಷ್ಟ ದೇಹದಲ್ಲಿ ತೀಡಿ, ತಮ್ಮ ಆಯುವನ್ನು ದೂಡಿ, ಮೈದೋರಿ ಮೈಗರೆವ ಮಹಾಸ್ವಪ್ನದಂತೆ ಮರೆಯಾಗುತ್ತವೆ. ಅದೇ ಆಕಾಶದ ಅದೇ ಮೌನದಲ್ಲಿ ಈ ಜ್ಯೋತಿಷ್ಪ್ರಪಂಚದ ಆಚೆ ಆಚೆ, ಮೇಲೆ ಮೇಲೆ, ನಿಬಿಡತಮ ನೀಹಾರಿಕಾವಲಯವು ಮೇರೆ ಮೀರಿ ಹಬ್ಬಿ ಹಿಂಜಿದರಳಿಯ ರಾಶಿಯಂತೆ ರಂಜಿಸಿ, ಮತ್ತೆ, ಮೈದಳೆದ ಭಾವ ಮೈಯಳಿದು ಹೋಗುವಂತೆ, ಕರಗಿ ಹೋಗುತ್ತದೆ. ಅದೇ ಮುಗಿಲಗಲ ಅದೇ ಮೌನಸಾಮ್ರಾಜ್ಯದಲ್ಲಿ ಹಗಲಿರುಳು ಕಣ್ಣುಮುಚ್ಚಾಟ, ಮಳೆಗಾಲದ ಗುಡುಗು ಸಿಡಿಲು ಮಿಂಚು ಮಳೆಗಳ ಹುಚ್ಚಾಟ, ಕಟಗುಡುವ ಚಳಿಗಾಲದ ಕುಳಿರ್ಗಾಳಿಯ, ತೀಟದಲ್ಲಿ ತುಟಿಯ ಕಚ್ಚಾಟ, ಹಿಗ್ಗಿನ ಸುಗ್ಗಿಯ ಕಂಪಿನ, ಇಂಪಿನ, ಜೊಂಪಿನ, ಪೆಂಪಿನ ಬುಗ್ಗೆಯಲ್ಲಿ ಚಿಮ್ಮಿದ ಕಾಮನ ಬಿಲ್ಲಿನ ಸೊಲ್ಲಿನ ಮೆಚ್ಚಾಟ; ಬಲ್ವೇಸಗೆಯ ಬಿರುಬಿಸಿಲ ಬೇಗೆಯ ಕಿಚ್ಚಾಟ-ಇಂತು ಕ್ಷಣ, ದಿನ-ಮಾಸ-ಋತು-ವರ್ಷ-ಯುಗ ಕಲ್ಪಗಳ ಲೀಲಾತಲ್ಪದಲ್ಲಿ, ಕಲ್ಪನೆಯ ವಿವಿಧ ಭಂಗಿಯಲ್ಲಿ, ವಿವಿಧ ವರ್ಣವಿನ್ಯಾಸದಲ್ಲಿ ಲಾಸ್ಯವಾಡಿ, ಹೃನ್ಮಂದಿರದಲ್ಲಿ ಸೃತಿಯ ಮುದ್ರೆಯೊತ್ತಿ, ಮತ್ತೆ ಸರಿದು ಹೋಗುವಳು. ಇಂತು ವಿಶ್ವದ ಮಹಾಪ್ರಪಂಚದ, ಮಾಯಾ ಪ್ರಪಂಚದ, ದ್ವಂದ್ವ ಪ್ರಪಂಚದ ಅಸಂಖ್ಯ ಮುಖಲೀಲೆಗೆ ತನ್ನಲ್ಲಿ ಅವಕಾಶವನ್ನಿತ್ತಿದ್ದರೂ ಅದರಿಂದ ಆ ಆಕಾಶದ ಮಹಾಮೌನವು ಅತೀತ! ನಿರ್ಲಿಪ್ತ !.
ಅಂತೆ ಶ್ರೀ ಶ್ರೀ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಶ್ರೀ ನಾಗನೂರ ರುದ್ರಾಕ್ಷಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು! ಇವರಲ್ಲಿ ಕಲ್ಯಾಣ ದೃಷ್ಟಿಯ ಶಿವನೂ, ಕಾಯಕನಿಷ್ಠೆಯ ಬಸವನೂ ಸಂಗಮಿಸಿ, ಸಂಯಮಿಸಿ ಇವರು ಶ್ರೀ ಶಿವಬಸವ ಮಹಾಸ್ವಾಮಿಗಳಾಗಿಹರು! ಇವರ ದೇಹವು ಎಪ್ಪತ್ತರಾಚೆಗೆ ಸರಿದರೂ, ಇವರ ಉತ್ಸಾಹವು ಇನ್ನೂ ಇಪ್ಪತ್ತರ ಈಚೆಗೇನೇ ಉಳಿದಿದೆ! ಉರುಳುತಿರುವ ಸಂವತ್ಸರಗಳು ಇವರ ಮುಪ್ಪು ಸಾವುಗಳ ಲೆಕ್ಕ ಹಾಕುತ್ತಿದ್ದರೆ, ಅರಳುತ್ತಿರುವ ತಪಸ್ಚೈತನ್ಯವು ಇವರ ಪ್ರಾಯದ ಒಪ್ಪು-ಕಾವುಗಳ ಎಣಿಕೆ ಹಾಕುತ್ತಿದೆ. ಇಂತಹ ಇಳಿವಯಸ್ಸಿನಲ್ಲಿಯೂ ಬಾಗದ ಇವರ ನಡು ಇವರ ಪರಿಶುದ್ಧ ಚರಿತ್ರಕ್ಕೆ ಸಾಕ್ಷಿಯಾಗಿದೆ ! ಎತ್ತರದ ನಿಲವು ! ಭವ್ಯ ವ್ಯಕ್ತಿತ್ವ ಮಾತುಗಾರಿಕೆಯಿರಬಹುದು; ಆದರೆ ಮಾತು ತುಟಿ ಮೀರಿ ಬಂದುದೇ ವಿರಳ! ಜೀವನದ ಬಹುಭಾಗವೆಲ್ಲ ಮೌನ! ಮಹಾಮೌನ! ಆ ಮೌನದ ಸಂದು ಸಂದುಗಳಲ್ಲಿ, ಕೀಲುಕೀಲುಗಳಲ್ಲಿ ಕೃತಿಯ ಸ್ಪಂದನ! ಸತ್ಮತಿಯ ಸಂಸ್ಕೃತಿಯ ನಂದನ! ಶಿವಾಕೃತಿಯ ಚಂದನ !
ಸೇವಾಧರ್ಮವೇ ಇವರ ಜೀವನ ಮರ್ಮವು “ಮಾನವನ ಹೃದಯದಲ್ಲಿ ಗುಪ್ತವಾಗಿ ಹುದುಗಿರುವ ಪರಿಪೂರ್ಣತೆಯ ಆವಿಷ್ಕಾರವೇ ಶಿಕ್ಷಣವೆಂದು ಬಗೆದು ಅಂತಹ ಶಿಕ್ಷಣವನ್ನು ಪಡೆದು ಲೋಕವೆಲ್ಲಾ ಪರಿಪೂರ್ಣತೆಯ ಎಡೆಗೆ ಸಾಗಲೆಂದು ಯೋಚಿಸಿದರು. ಆ ಯೋಚನೆಗೆ ತಕ್ಕ ಯೋಜನೆ ಆವುದೆಂದು ತರ್ಕಿಸಿದರು. ಹೊಟ್ಟೆಗೆ ಗತಿಯಿಲ್ಲದೆ, ಶಿಕ್ಷಣ ಪಡೆಯಲು ತಕ್ಕ ಸೌಕರ್ಯವಿಲ್ಲದೆ, ಅಸಂಖ್ಯ ಅಸಹಾಯ ಪರಿಸ್ಥಿತಿಯಲ್ಲಿ ತೆವಳಿ ತೊಳಲಾಡುತ್ತಿರುವ ಬಡ ವಿದ್ಯಾರ್ಥಿ ಲೋಕದ ವಿದ್ಯಾರ್ಜನೆಗೆ, ಅಧ್ಯಯನ-ಅಭ್ಯಾಸಗಳಿಗೆ, ವಿವಿಧ ಬಗೆಯ ಶಿಕ್ಷಣ ಸಂಸ್ಥೆಗಳ ಕೇಂದ್ರವಾದ ಬೆಳಗಾವಿಯಂಥ ಪಟ್ಟಣದಲ್ಲಿ ಪ್ರಸಾದ ನಿಲಯ ಸ್ಥಾಪನೆಯೇ ಪರಮಸಾಧನವೆಂದು ನಿಶ್ಚಯಿಸಿದರು.
ಆ ನಿಶ್ಚಯದ ನಿರ್ಣಯವೇ ಇಂದು ಭವ್ಯ ಪ್ರಸಾದ ನಿಲಯವಾಗಿ ರೂಪುಗೊಂಡಿದೆ!ಇಂತು ಪ್ರಸಾದ ನಿಲಯದ ಮುಖಾಂತರವಾಗಿ ಅವರು ಕೈಕೊಂಡ ವಿದ್ಯಾರ್ಥಿಲೋಕಸೇವಾ ಧರ್ಮವೇ ಅವರಿಗೆ ಶಿವನ ಮರ್ಮವನ್ನು ಬಿತ್ತರಿಸಿತು! ಈ ಪ್ರಸಾದ ನಿಲಯದ ಯೋಜನೆಯು, ಅವರ ತಪದ ಮಹಾಮೌನವು ಮಥಿಸಿ ತಂದ ದಿವ್ಯ ನವನೀತ! ಇದನ್ನು ಆಶ್ರಯಿಸಿದವರು,ಸೇವಿಸಿದವರು, ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತ ಪುತ್ರರಾದರು!
ಈ ಮೊದಲು ಹೇಳಿದಂತೆ, ಆಕಾಶದ ಮಹಾಮೌನವು ವಿಶ್ವದ ಅನಂತ ನಿರಂತರ ವಿವಿಧ ಲೀಲೆಗಳನ್ನು ಒಳಗೊಂಡು ಅವುಗಳಿಂದ ಅತೀತವೂ, ನಿರ್ಲಿಪ್ತವೂ ಆಗಿರುವಂತೆ, ಈ ಮಹಾಸ್ವಾಮಿಗಳ ಮೌನಾಕಾಶವು ಲೋಕಕಲ್ಯಾಣದ ಇನಿತೆಲ್ಲ ಯೋಚನೆ, ಯೋಜನೆ, ಸತ್ಕೃತಿಗಳನ್ನು ಒಳಗೊಂಡಿದ್ದರೂ ಅವೆಲ್ಲವುಗಳಿಂದ ಅವರು ಅತೀತರು; ನಿರ್ಲಿಪ್ತರು!
ಈ ನಿಸ್ವಾರ್ಥ ಸೇವೆ, ನಿರ್ಲಿಪ್ತತೆ ಒಂದೇ ದಿನದ ಅನಾಯಾಸದ ಗೆಲುವಲ್ಲ! ಜನ್ಮಜನ್ಮಗಳ ತಪದ ಸಾಧನೆಯ ಬಲವು; ಜೊತೆಗೆ ಮಹಾಗುರುವಿನ ಮಹಾಕೃಪೆಯ ಮಹಾನುಗ್ರಹದ ಬಲವು! ಸತ್ ಶರಣರ, ಸಜ್ಜನರ, ಸತ್ಸಂಗದ ಸಹವಾಸದ ಫಲವು; ಸಮ್ಮತಿಗಾಗಿ, ಪರಹಿತ ಕಲ್ಯಾಣಕ್ಕಾಗಿ ಮೈದಳೆದ ಉತ್ಕಟ ಸತ್ಸಂಕಲ್ಪ ಶಕ್ತಿಯ ಫಲವು! ಲೋಕದ ಹೊಗಳಿಕೆ-ತೆಗಳಿಕೆ, ಹಿಗ್ಗು-ಕುಗ್ಗು, ಸೋಲು-ಗೆಲುವು, ಸುಖ-ದುಃಖ, ಮಾನ-ಅಪಮಾನ ಈ ಮೊದಲಾದ ದ್ವಂದ್ವಪ್ರಪಂಚವನ್ನು ಮೀರಿ ನಿಂತ ಸುಸ್ಥಿರ-ಸಹಜ ಸಮತೆಯ ನಿಲುವು! ಆನುವಂಶಿಕ ಸಂಸ್ಕಾರದಲ್ಲಿ ಬೆಳಗಿದ ಬೆಳಕಿನ ಹೊಳವು ದಾಸೋಹಂಭಾವದಲ್ಲಿ ಸೋಹಂಭಾವವಲಯಿಸಿ ವಿನಯವೇ ಮೂರ್ತಿವೆತ್ತಂತಿರುವ ಕೈಂಕರ್ಯದ ಸುಳುವು! ಇವೆಲ್ಲವೂ ಸಮನಿಸಿ ನಾಗನೂರು ಶ್ರೀ ಶಕ್ತಿಯಾಯಿತು! ಶಿವಬಸವ ನಿರಂಜನ ವ್ಯಕ್ತಿಯಾಯಿತು!
ಶಿವಯೋಗಮಂದಿರದ ಪುಣ್ಯಪರಿಸರದಲ್ಲಿ .
ಶಿವಯೋಗಮಂದಿರದಲ್ಲಿಯೂ ಅವರ ಮೊದಲಿನ ಜೀವನಕ್ರಮವೇ ಮುಂದುವರಿಯಿತು. ದಿನವೂ ಬ್ರಾಹ್ಮಿ ಮುಹೂರ್ತದಲ್ಲಿ ಶಿವಸ್ಮರಣೆಯೊಂದಿಗೆ ಏಳುವುದು, ಪ್ರಾತರ್ವಿಧಿಗಳನ್ನು ಮುಗಿಸುವುದು,ಸ್ನಾನ, ಶಿವಪೂಜೆ, ಸಂಸ್ಕೃತ ಪಾಠಶಾಲಾಧ್ಯಯನ ಇವುಗಳಲ್ಲಿಯೇ ಇವರ ಮನಸ್ಸು ತನ್ಮಯವಾಯಿತು; ತಲ್ಲೀನವಾಯಿತು. ಅವಿರಳ ಜ್ಞಾನಪಥವಾದ ಅಂತರ್ಮುಖತೆ ಇನ್ನೂ ಬೆಳೆಯಿತು.ಶಕ್ಯವಿದ್ದಷ್ಟೂ ಎಲ್ಲರ ಸಂಗವನ್ನೂ, ಸಂಪರ್ಕವನ್ನೂ ಕಡಿಮೆ ಮಾಡಿಕೊಂಡು, ಕಡಿದುಕೊಂಡು,ಏಕಾಂತ ಪ್ರಶಾಂತ ವಾತಾವರಣದಲ್ಲಿ ಅಧ್ಯಯನಲೀನರಾಗಿ, ಧ್ಯಾನಲೀನರಾಗಿ ಅಂತರ್ಮುಖತೆ-ಯಿಂದ ಅಂತಸ್ಸಮಾಧಿಗೆ ಒಳಗೆ ಒಳಗೆ, ಕೆಳಗೆ ಕೆಳಗೆ ಇಳಿಯತೊಡಗಿದರು. ಹೀಗಾಗಿ ಬಾಹ್ಯ ಪ್ರಪಂಚವು ದೂರವಾಗಿ, ಮರೆಯಾಗಿ ಅಂತಃಪ್ರಪಂಚದ ಬಿತ್ತರವೂ, ಎತ್ತರವೂ, ಆಳವೂ ಗೋಚರಿಸತೊಡಗಿದವು. ಇದರ ಮುಂದೆ ಬಾಹ್ಯ ಪ್ರಪಂಚವು ಅಲ್ಪವೂ, ಕ್ಷುದ್ರವೂ, ಸಂಕುಚಿತವೂ ಎನಿಸತೊಡಗಿತು. ಲೋಕದ ಸ್ಥಾನಮಾನ-ಅಧಿಕಾರ, ಕೀರ್ತಿ, ಕಾಂಚನ, ಪ್ರಶಂಸೆ, ನಿಂದೆ ಈ ಎಲ್ಲವುಗಳಿಂದಲೂ ದೂರವಾಗಿ ಲೋಕದ ದ್ವಂದ್ವದಿಂದ ಅತೀತರಾಗಿ ಇರಲು ಯತ್ನಿಸಿದರು. ಈ ಮೇರೆಗೆ ಒಂದು ದಿವ್ಯಾದರ್ಶವು ಶ್ರೀ ಶಿವಯೋಗಮಂದಿರದ ಪ್ರಶಾಂತವಾತಾವರಣದಲ್ಲಿ ಇವರ ಬಾಳನ್ನು ಇಂತು ರೂಪಿಸುತ್ತಲಿದ್ದಿತು.ಇವರ ಪರಿಶುದ್ಧ ಆಚಾರ, ಉಚ್ಚವಿಚಾರ, ಪವಿತ್ರ ಚಾರಿತ್ರ್ಯ, ಅನನ್ಯ ಭಕ್ತಿ, ಅಪ್ರತಿಮ ದಾಸೋಹಭಾವ, ಅನುಪಮ ಸೇವೆ, ಅವಿಚಲ ಕಾಯಕನಿಷ್ಠೆ, ಅಚಲ ಸಂಯಮಶೀಲ, ಸರ್ವಭೂತದಯಾದೃಷ್ಟಿ, ವಿಶ್ವಮಾನ್ಯಧರ್ಮದೃಷ್ಟಿ ಇವೆಲ್ಲವು ಗಳಿಂದ ಆಕರ್ಷಿತರಾದ ಶ್ರೀ ಶಿವಯೋಗಮಂದಿರ ಸಂಸ್ಥಾಪಕರಾದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಕೃಪಾದೃಷ್ಟಿಯು ಇವರ ಮೇಲೆ ಬಿದ್ದಿತು. ಪರಿಣಾಮವಾಗಿ ಇವರು ಅವರ ಪ್ರೀತಿಯ ಶಿಷ್ಯರಾಗಿ ಅನನ್ಯ ಭಾವದಿಂದ ಸೇವೆ ಸಲ್ಲಿಸತೊಡಗಿದರು. ಇವರ ದ್ವಾದಶ ವರ್ಷದ ದೀರ್ಘ ಅವಿರತ ಅವಿಚ್ಛಿನ್ನ ಸೇವೆಗೆ ಮೆಚ್ಚಿ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಇವರನ್ನು ಆಶೀರ್ವದಿಸಿದರು; ಅನುಗ್ರಹಿಸಿದರು. ಇಂತು ಎಲ್ಲರ ಮೆಚ್ಚಿಗೆಗೂ ಪಾತ್ರರಾದರು. ಇವರು ಮಂದಿರದಲ್ಲಿರುವಾಗ ಬೇರೆ ಬೇರೆ ಊರುಗಳ ಅಪಾರ ಉತ್ಪನ್ನವಿರುವ ಅದೆಷ್ಟೋ ಮಠಗಳ ಅಧಿಕಾರ ಸ್ವೀಕಾರಕ್ಕಾಗಿ ಆಯಾ ಊರವರು ಬಂದು ಬಂದು ಇವರನ್ನು ಪ್ರಾರ್ಥಿಸಿಕೊಂಡರು. ಹಾನಗಲ್ಲ ಊರವರೂ ಬಂದು ಬೇಡಿಕೊಂಡರಂತೆ; ಇವರು ಯಾವುದಕ್ಕೂ ಆಶಿಸಲಿಲ್ಲ; ಜಗ್ಗಲಿಲ್ಲ; ಯಾರ ಬೇಡಿಕೆಗೂ ಸೊಪ್ಪು ಹಾಕಲಿಲ್ಲ. ‘ಉತ್ಪನ್ನವಿಲ್ಲದಿದ್ದರೂ ಅಡ್ಡಿಯಿಲ್ಲ; ಚಿಕ್ಕದಿದ್ದರೂ ಚಿಂತೆಯಿಲ್ಲ; ನನ್ನ ಈಗಿನ ನಾಗನೂರ ಮಠವೇ ನನಗಿರಲಿ’ ಎಂದು ನಿರ್ಧಾರದ ಧ್ವನಿಯಲ್ಲಿ, ಸಂತೃಪ್ತ ಭಾವದಲ್ಲಿ ಉತ್ತರಿಸಿದರು. ಇದನ್ನು ಕಂಡ ಪೂಜ್ಯ ಶ್ರೀ ಕುಮಾರ ಸ್ವಾಮಿಗಳವರು “ಚಿಕ್ಕದಾಗಿ ಕಾಣುವ ಚಿಕ್ಕೆ ಕೋಟಿ ಕೋಟಿ ಯೋಜನೆಗಳಾಚೆಯಿಂದ ತನ್ನ ಥಳಥಳಿಸುವ ಬೆಳಕನ್ನು ಹರಡಿ ವಿಶ್ವದ ಅಂಧ ತಮಂಧವನ್ನು ಸೀಳುವುದು. ಅಂತೆಯೇ ಬಾಳು, ನಿನ್ನ ಮಠವು ಚಿಕ್ಕದಾಗಿದ್ದರೂ ಆ ಮಠದ ಮೂಲದಿಂದ ಅಖಂಡ ಅನಂತ ಪ್ರಕಾಶದ, ಕಣ್ಣು ಕೋರೈಸುವ ಲಕ್ಷೋಪಲಕ್ಷ ಉಜ್ವಲ ಅಕ್ಷಯ ದಿಧಿತಿಗಳು ಅಸಂಖ್ಯ ಹೃದಯಗಳನ್ನು ತಟ್ಟಿ ಮುಟ್ಟಿ, ಅಲ್ಲಿಯ ಕಾರ್ಗತ್ತಲೆಯನ್ನು ಮೆಟ್ಟಿ ಪ್ರಜ್ಞಾನ ಬ್ರಹ್ಮವಾಗಿ ತೊಳಗಿ ಬೆಳಗಬಲ್ಲವು. ಆ ದಿವ್ಯ ಪ್ರಕಾಶದ ಪೂತ ಧವಳ ಪುಣ್ಯ ಪ್ರವಾಹದಲ್ಲಿ ನೀನು ಮಿಂದು ಕರಗಿ ಹೋಗುವಿ, ಆ ಬೆಳಕಿನಲ್ಲಿ ಬೆಳಕಾಗಿ ಬೆಳೆದು ಹೋಗುವಿ! ನಿನ್ನ ಸೇವೆಯಲ್ಲಿಯೇ ಶಿವನ ಸಾಕ್ಷಾತ್ಕಾರವಾಗುವುದು. ನಿನ್ನ ಈ ಸೌಜನ್ಯದ ವಿನಯದ ಕೈಂಕರ್ಯದ ಶೀಲದಲ್ಲಿಯೇ ಜಗದೋದ್ಧಾರದ ಶೀಲವು ಕಾಣುವುದು. ಎಲ್ಲವನ್ನೂ ಪ್ರಸಾದ ಭಾವನೆಯಿಂದ ಕಾಣುವ ನಿನಗೆ ಪ್ರಸಾದವೇ ಪರಮ ಧೈಯವಾಗುವುದು. ಅನುಪಮ ಶ್ರೇಯವಾಗುವುದು. ನಿತ್ಯ ಪ್ರಕಾಶವಾಗುವುದು. ಸತ್ಯ ಪರಮಾತ್ಮವಾಗುವುದು. ಇದರಲ್ಲಿಯೇ ನಿನ್ನ ಜೀವನದ ಸುಳುಹೂ ಇದೆ ಹೊಳಹೂ ಇದೆ ನಿನಗೆ ಶುಭವಾಗಲಿ! ಮಂಗಳ ವಾಗಲಿ!! ಎಂದು ಹೃದಯ ತುಂಬಿ, ಕಂಠ ತುಂಬಿ, ಬಾಯಿತುಂಬಿ ಆಶೀರ್ವದಿಸಿದರು. ಇಂತು ನೀಡಿದ ಆಶೀರ್ವಾದವು ಗಟ್ಟಿಗೊಳ್ಳುವಂತೆ ಕೊಡಗಲಿ ಗವಿಯಲ್ಲಿ ಶ್ರೀ ಶಿವಬಸವ ಸ್ವಾಮಿಗಳನ್ನು ಅನುಷ್ಠಾನಕ್ಕೂ ಕೂಡಿಸಿದರು.
ಇಷ್ಟೇ ಅಲ್ಲ, ತಾವು ಲಿಂಗೈಕ್ಯವಾಗುವ ಕಾಲವನ್ನು ಅಂತರ್ಜ್ಞಾನದಿಂದ ಕಂಡು ಹಿಡಿದ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಅದಕ್ಕಿಂತ ಕೆಲದಿನಗಳ ಪೂರ್ವದಲ್ಲಿ ಈ ಶ್ರೀ ಶಿವಬಸವ ಸ್ವಾಮಿಗಳನ್ನು ಕರೆಯಿಸಿಕೊಂಡು ಇವರಿಗೆ ಶ್ರೀ ಹಾಲಕೆರೆ ಅನ್ನದಾನೀಶ್ವರ ಮಹಾಶಿವಯೋಗಿ ಗಳಿಂದ ಆಶ್ರಮ (ಸ್ಥಳ) ದೀಕ್ಷೆಯನ್ನು ಕೊಡಿಸಿದರು. ಒಂದು ದಿನ ಬಳಿಯಲ್ಲಿ ಕರೆದು “ನೀನು ಲೋಕೋಪಕಾರಿಯಾಗು! ಲೋಕೋದ್ಧಾರಕನಾಗು!” ಎಂದು ಆಶೀರ್ವದಿಸುತ್ತ ತಮ್ಮ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಯನ್ನು ಇವರ ಕೊರಳಿಗೆ ಹಾಕಿದರು. ಮತ್ತು ತಮ್ಮ ಪವಿತ್ರ ಹಸ್ತದಿಂದ ಆ ಪೂಜ್ಯ ಹಾನಗಲ್ಲ ಮಹಾಸ್ವಾಮಿಗಳು ಇವರಿಗೆ ಕರುಣಿಸಿದ ಭಸ್ಮದ ಘಟ್ಟಿಯೊಂದನ್ನು ಈ ರುದ್ರಾಕ್ಷಿ ಮಾಲೆಯನ್ನು ಈಗಲೂ ಈ ಶ್ರೀಗಳವರು ಗುರುಶಿಷ್ಯರ ಈ ಅನನ್ಯ ಅಭಿನ್ನ ಸಾಮರಸ್ಯದ ಸ್ಮಾರಕವಾಗಿ, ಗುರುವು ಶಿಷ್ಯನ ಮೇಲೆ ಗೆಯ್ದ ಮಹಾಕೃಪೆಯ ಪ್ರತೀಕವಾಗಿ, ಜತನದಿಂದ ಅಚ್ಚಳಿಯದಂತೆ ಕಾಯ್ದಿಟ್ಟಿರುವರು.
ಈ ಮೇರೆಗೆ ಶಿವಯೋಗಮಂದಿರದಲ್ಲಿ ಹನ್ನೆರಡು ವರ್ಷಗಳ ಹರಿಗಡಿಯದ ತಪಃಪ್ರಭಾವದಿಂದ ತಪಃಪ್ರಭೆಯಿಂದ ಆಂತರಿಕ ವಿಕಾಸವನ್ನೂ ಪ್ರಕಾಶವನ್ನೂ ಅಳವಡಿಸಿಕೊಂಡರು. ಅವರ ಬಾಳು ಕೊನರಿ ಚಿಗುರಿ ಹೂತು, ಕಾತು ಈ ತಪಸ್ತೇಜದಲ್ಲಿ ಹಣ್ಣು ಸಾರ್ಥಕತೆಯನ್ನು ಪಡೆಯಿತು. ಧನ್ಯತೆಯನ್ನು ಹೊಂದಿತು.
ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯು ಅನೇಕ ಐತಿಹಾಸಿಕ, ನೈಸರ್ಗಿಕ, ಸಾಂಸ್ಕೃತಿಕ ತಾಣಗಳಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕು ಅನೇಕ ವೈಶಿಷ್ಠತೆಯಗಳನ್ನು ಹೊಂದಿದೆ. ಚಾಲುಕ್ಯರ ರಾಜಧಾನಿಯಾಗಿ ಮೆರೆದ ಬಾದಾಮಿಯ ಪರಿಸರ ಅನೇಕ ಕೋಟೆ ಕೊತ್ತಳಗಳು, ಸುಂದರ ಶಿಲ್ಪದಿಂದ ಕೂಡಿದ ದೇವಾಲಯಗಳು, ಶಿಲ್ಪ ಕಲೆಗಾಗಿಯೇ ಪ್ರಸಿದ್ಧವಾದ ‘ಮೇಣ ಬಸದಿ’ ಎಂಬ ತೆರೆದ ಶಿಲ್ಪಕಲಾ ವಸ್ತು ಪ್ರದರ್ಶನದಂತಿರುವ ಗುಹೆಗಳಿಂದ ಕಂಗೊಳಿಸುತ್ತಿದೆ.
ಚಿತ್ರ ಸಂಖೈ ೧ : ಬದಾಮಿಯ ಗುಹೆಗಳು (ಮೇಣ ಬಸದಿಗಳು)
ಬಾದಾಮಿಯಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿರುವ-‘ಬನಶಂಕರಿ’- ಶ್ರೀ ಬನಶಂಕರಿ ದೇವಿಯ ಮಂದಿರ, ಜುಳು ಜುಳು ಹರಿಯುವ ಸರಸ್ವತಿ ಹಳ್ಳ, ದೇವಾಲಯದ ಎದುರಿಗಿರುವ ಬೃಹದಾಕಾರದ ಕಲ್ಯಾಣಿ, ಸುತ್ತಲೂ ತೋಟಗಳಿಂದ ತುಂಬಿದ ವನಸಿರಿ ಇದೆಲ್ಲ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಂದೇಹವಿಲ್ಲ.
ಎಡ ಬಲದಲ್ಲಿ ತೋಟಪಟ್ಟಿಗಳಿಂದ ಸುತ್ತುವರಿದ ಮಲಪ್ರಭಾ ನದಿಯ ಪರಿಸರ ಸದಾ ಹಸಿರಿನಿಂದ ತುಂಬಿದ ಐಸಿರಿ, ಇಂಥ ಪರಿಸರದ ಮಧ್ಯದಲ್ಲಿ ಅಲ್ಲಲ್ಲಿ ಈ ಪರಿಸರವನ್ನು ತಮ್ಮ ಕೃಷಿಯಿಂದಾಗಿ ಇನ್ನೂ ಸುಂದರಗೊಳಿಸುವ ನೇಗಿಲ-ಯೋಗಿಗಳಿಂದ ತುಂಬಿದ ಗ್ರಾಮಗಳು.
ಪೂರ್ವಕ್ಕೆ ಹನ್ನೆರಡು ಕಿ.ಮೀ. ಅಂತರದಲ್ಲಿ ‘ಪಟ್ಟದಕಲ್ಲು’-ಪ್ರಸಿದ್ಧ ಶಿಲ್ಪಕಲಾ ದೇಗುಲಗಳ ಕೇಂದ್ರ ಸ್ಥಾನ. ಇಂಥ ಸುಂದರ ಪರಿಸರದಲ್ಲಿ ಒಂದು ಸಣ್ಣ ಗ್ರಾಮ-“ಭದ್ರನಾಯಕನ ಜಾಲಿಹಾಳ”. ಅದು ಜನಪದರ ಬಾಯಲ್ಲಿ ‘ಬಾದನಾಕ ಜ್ಯಾಲ್ಯಾಳ’ ಎಂದಾಗಿದೆ.
ಈ ಭದ್ರನಾಯಕನ ಜಾಲಿಹಾಳದಲ್ಲಿ ‘ಮಡ್ಡೇನವರ’ ಎಂಬ ಕುಟುಂಬ. ಈ ಮನೆತನದ ಮರಿಬಸಪ್ಪ ಮತ್ತು ರುದ್ರವ್ವ ದಂಪತಿಗಳ ಮಗನಾಗಿ ಜನಿಸಿದವನೇ ‘ಮಲ್ಲಣ್ಣ’-‘ಮಲ್ಲಣಾರ‍್ಯ’.
ಚಿಕ್ಕದೊಂದು ಒಣಬೇಸಾಯದ ಭೂಮಿ ಇದ್ದರೂ ಅಲ್ಪ ಸ್ವಲ್ಪ ಕಾಳು-ಕಡಿ ಬರುತ್ತಿದ್ದವು ಅದರಿಂದಲೇ ಉಪಜೀವನ ಸಾಗುತ್ತಿತ್ತು ಪರಿಸ್ಥಿತಿ ಹದಗೆಟ್ಟಿದ್ದರಿಂದ ಇದ್ದ ಒಂದು ಹೊಲ ಮಾರಿದ-ಮರಿಬಸಪ್ಪ. ಬೇರೆಯವರ ಹೊಲದಲ್ಲಿ ಕೂಲಿಕುಂಬಳಿ ಮಾಡಿ ಜೀವನ ಸಾಗುತ್ತಿದ್ದರು.
ಇಂಥ ಬಡತನದ ಪರಿಸ್ಥಿತಿಯಲ್ಲಿಯೇ ಮರಿಬಸಪ್ಪ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ತೀರಿಕೊಂಡ. ರುದ್ರವ್ವ ಹೌಹಾರಿದಳು. ಮಗನಿಗಾಗಿ ಬದುಕಬೇಕಿತ್ತು, ಸಾವಿರ ನೋವನುಂಡು, ಮಗನನ್ನು ಸಲಹುವಲ್ಲಿ ಹೆಣಗಾಡ ತೊಡಗಿದಳು.
ಇದೇ ಸಮಯಕ್ಕೆ ಬರಗಾಲ ಕಾಣಿಸಿಕೊಂಡಿತು. ಮಳೆ ಬರಲಿಲ್ಲ, ನದೀ ಜಲಾಶಯಗಳು ಬತ್ತಿದವು, ಕುಡಿಯಲು ನೀರಿಲ್ಲ, ಹೊಲಗಳಲ್ಲಿ ಬೆಳೆಯಿಲ್ಲ, ತಿನ್ನಲು ಅನ್ನವಿಲ್ಲ, ಬದುಕು ದುರ್ಭರವಾಯಿತು. ಕಣ್ಣಿರೇ ಗತಿ. ಹಸಿವಿನಿಂದ ಜನ ದಾರಿ ದಾರಿಯಲ್ಲಿ ಸತ್ತರು. ಹೂಳುವವರಿಲ್ಲದೇ ಹೆಣಗಳು ಎಲ್ಲಿ ಬೇಕೆಂದರಲ್ಲಿ ಬಿದ್ದವು, ಪ್ರಾಣಿ ಪಕ್ಷಿಗಳು ದೇಹಗಳನ್ನು ತಿಂದು, ತಲೆಬುರುಡೆ ಎಲ್ಲೆಲ್ಲಿಯೂ ಕಂಡದ್ದರಿಂದ ಇದನ್ನು ‘ಡೋಗಿ ಬರ’ ಎಂದರು.
ಬಾಗಲಕೋಟೆ ನಗರದಲ್ಲಿ ಬರಗಾಲದ ಕಾಮಗಿರಿ ನಡೆದಿದ್ದವು, ರುದ್ರವ್ವ ಸಹ ಗುಳೇ ಹೋಗುವವರೊಂದಿಗೆ ಬಾಗಲಕೋಟೆಗೆ ಬಂದು ಡಾಂಬರ ರಸ್ತೆ ಮಾಡುವಲ್ಲಿ ಕೂಲಿ ಮಾಡ ಹತ್ತಿದಳು. ಜೊತೆಗೆ ಮಗ ಮಲ್ಲಣ್ಣ.
ಶ್ರಾವಣಮಾಸ ಬಂದಿತ್ತು. ಜನರು ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯʼನ ದರ್ಶನಕ್ಕೆ ನಾಲ್ಕೂ ಸೋಮವಾರ ನಡೆಯುತ್ತ ಹೋಗಿ ದರ್ಶನ ಪಡೆವ ಪ್ರತೀತಿ ಇದೆ.
ಚಿತ್ರ ಸಂಖ್ಯೆ ೨ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ
ಚಿತ್ರ ಸಂಖ್ಯೆ ೩ ಬಾಗಲಕೋಟೆಯ ಸಮೀಪದಲ್ಲಿರುವ ‘ಗುಡ್ಡದ ಮಲ್ಲಯ್ಯ ದೇವಸ್ಥಾನ
ಒಂದು ಸೋಮವಾರ ದಿನ ರುದ್ರವ್ವ ಮಗನೊಂದಿಗೆ ಮಲ್ಲಯ್ಯನ ಗುಡ್ಡ ಹತ್ತಿದಳು. ಹಸಿವಿನಿಂದ ಬಳಲಿ ಬೆಂಡಾದ ರುದ್ರವ್ವನಿಗೆ ಪೂಜಾರಿ ನೀಡಿದ ಎರಡು ಬಾಳೆಹಣ್ಣುಗಳು ಹೊಟ್ಟೆಗೆ ಶಾಂತಿ ನೀಡಿದವು. ಮಗನಿಗೆ ಬದುಕು ನೀಡೆಂದು ಗುಡ್ಡದ ಮಲ್ಲಯ್ಯನಲ್ಲಿ ಬೇಡಿಕೊಂಡಳು.
ಇಳಿ ಹೊತ್ತಾಗಿತ್ತು ಆ ಕಡೆಯಿಂದ ಒಬ್ಬ ಯಜಮಾನರು ತನ್ನ ಇಬ್ಬರು ಹೆಂಡಂದಿರೊಂದಿಗೆ ಬಂದು, ಮಲ್ಲಯ್ಯನ ದರ್ಶನಾಶೀರ್ವಾದ ಪಡೆದು, ದೇವಾಲಯದ ಹೊರಗಿದ್ದ ಕಲ್ಲು ಬಂಡೆಗಳ ಮೇಲೆ ಕುಳಿತು ತಂದ ಫಲಹಾರ ಸೇವನೆಗೆ ಮುಂದಾದಾಗ, ಈ ಮಗು ಮಲ್ಲಣ್ಣನು ಕಣ್ಣಿಗೆ ಬಿದ್ದ.
ಮಗುವನ್ನು ನೋಡಿ ಮನ ಮಿಡಿಯಿತು. ‘ಬಾ ಮಗು’ ಎಂದು ಕರೆದು ಮುದ್ದಾಡಿದರು. ಆ ಯಜಮಾನ ಸಾಲಿ ವಿರುಪಾಕ್ಷಯ್ಯನವರು, ಮನಗೂಳಿ. ಈರವ್ವ, ಮತ್ತು ಹುಚ್ಚವ್ವ ಅವರ ಇಬ್ಬರ ಹೆಂಡಂದಿರು. ಮಕ್ಕಳಾಗಿರಲಿಲ್ಲ ಮಗುವಿನ ಹಂಬಲ ಮೂವರನ್ನೂ ಕಾಡುತ್ತಿತ್ತು. ಈ ಮಗು ಮಲ್ಲಣ್ಣ ಅವರ ಮನಸೆಳೆದ.
ವಿರುಪಾಕ್ಷಯ್ಯನವರು ಮಗುವನ್ನು ತಮಗೆ ನೀಡಿದಲ್ಲಿ ಮಗನನ್ನಾಗಿ ಮಾಡಿಕೊಳ್ಳುತ್ತೇವೆ ಎಂದಾಗ, ತಾಯಿ ರುದ್ರಮ್ಮ ಅಳುತ್ತಲೇ ಮನಸಿಲ್ಲದ ಮನಸ್ಸಿನಿಂದ ಮಗನನ್ನು ಒಪ್ಪಿಸಿದಳು. ವಿರೂಪಾಕ್ಷಯ್ಯ ನೀಡಿದ ಎರಡು ರೂಪಾಯಿ ತೆಗೆದುಕೊಂಡು ಕಣ್ಣೀರಿಡುತ್ತ ರುದ್ರವ್ವ ಹೊರಟು ಹೋದಳು. ಗುಡ್ಡದ ಮಲ್ಲಯ್ಯನೇ ಕರುಣಿಸಿದ ಮಗು ಮಲ್ಲಣ್ಣನನ್ನು ವಿರೂಪಾಕ್ಷಯ್ಯ ಹಾಗೂ ದಂಪತಿಗಳು ಮಗನಾಗಿ ಪಡೆದುಕೊಂಡು, ಸಾಕಿ ಸಲುಹಿದರು.
ಚಿತ್ರ ಸಂಖ್ಯೆ ೪: ಬಾಗಲಕೋಟೆ ಯಲ್ಲಿನ ಬೆಳೆದು ಬಾಳಿದ ಶ್ರೀ ಮಲ್ಲಣರ‍್ಯರ ಮನೆ ಇಂದು ಬೇರೆಯವರ ಆಧೀನದಲ್ಲಿ ನವೀಕರಣಗೊಂಡಿದೆ
ಮಲ್ಲಣ್ಣ ಜಾಣನಾಗಿದ್ದ. ಶಾಲಾ ಶಿಕ್ಷಣವಲ್ಲದೇ ಆತನಿಗೆ ಸಂಗೀತದಲ್ಲಿ ಆಸಕ್ತಿ ಇತ್ತು. ಬಹಳ ಸುಂದರವಾದ ಕಂಠಸಿರಿಯಿತ್ತು. ವಿಭೂತಿ ಧರಿಸಿಕೊಂಡು ಹಾಡಲು ಶುರುಮಾಡಿದರೆ ಎಲ್ಲರೂ ಮನಸೋಲುವ ಗಾನ. ಮಲ್ಲಣ್ಣನು ಏಳನೇ ವರ್ಗವನ್ನು ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಕನ್ನಡ, ಸಂಸ್ಕೃತ ಎರಡೂ ಭಾಷೆಗಳು ಚೆನ್ನಾಗಿ ಬರುತ್ತಿದ್ದವು.
ವಿರುಪಾಕ್ಷಯ್ಯನವರು ಜಂಗಮ ದೀಕ್ಷೆ ಕೊಡಿಸಿ ಮಲ್ಲಣ್ಣನನ್ನು ಮಲ್ಲಯ್ಯನವರನ್ನಾಗಿ ಮಾಡಿದರು. ಬಸವ ಪುರಾಣ ಓದಿಕೊಂಡ ಮಲ್ಲಯ್ಯನವರಲ್ಲಿ ಹೊಸ ವಿಚಾರ ಕ್ರಾಂತಿಯಾಯಿತು. ವಚನಗಳನ್ನು ಸುಂದರವಾಗಿ ಹಾಡುತ್ತಿದ್ದರು. ಇದನ್ನರಿತು ವಿರುಪಾಕ್ಷಯ್ಯನವರ ಗೊತ್ತಿನವರೊಬ್ಬರು ಸಂಗೀತ ಕಲಿಯಲು ಅವರನ್ನ್ನು ಮೈಸೂರಿಗೆ ಕಳುಹಿಸಿದರು. ಅಲ್ಲಿ ಎರಡು ವರ್ಷ ಸಂಗೀತ ಅಭ್ಯಾಸವಾಯಿತು. ಅವರು ಬಸವ ಪುರಾಣ ಹೇಳುವ ಶೈಲಿಗೆ ಒಂದು ಹೊಸ ಮೆರಗು ಬಂತು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ವಿರುಪಾಕ್ಷಯ್ಯ ಸಾಲಿ, ಮನಗೂಳಿ ಸೇವೆಯಿಂದ ನಿವೃತ್ತರಾದರು. ಅವರ ಸ್ಥಾನದಲ್ಲಿಯೇ ಮಲ್ಲಿಕಾರ್ಜುನಯ್ಯ ವಿರುಪಾಕ್ಷಯ್ಯ ಮನಗೂಳಿ ಅವರಿಗೆ ಶಿಕ್ಷಕ ಹುದ್ದೆ ದೊರೆಯಿತು. ಹಿಂದುಸ್ತಾನಿ ಶಾಲೆಯಲ್ಲಿ ೨೧-೧೦-೧೮೯೩ ರಂದು ೭=೦೦ ರೂಪಾಯಿಗಳ ಪಗಾರದ ಮೇಲೆ ಶಿಕ್ಷಕರಾದರು. ಅಲ್ಲಿಯ ಉರ್ದು ಸಹ-ಶಿಕ್ಷಕರ ಸ್ನೇಹದಿಂದ ಉರ್ದು ಭಾಷೆಯನ್ನೂ ಕಲಿತುಕೊಂಡರು.
ತರುಣ ಮಲ್ಲಯ್ಯ ಎಲ್ಲರ ಮನ ಸೆಳೆವ ವ್ಯಕ್ತಿತ್ವ ಹೊಂದಿದ್ದರು. ಸಂಗೀತವನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುವ ಹಂಬಲವಿತ್ತು. ಅಂಥ ಸಮಯದಲ್ಲಿ ಶ್ರೀಮಂತರೊಬ್ಬರು ಮಲ್ಲಯ್ಯ ಮಾಸ್ತರನನ್ನು ಕರೆದುಕೊಂಡು ಹೋಗಿ ಒಬ್ಬ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಅವಳು ವೇಶ್ಯೆಯಾಗಿದ್ದಳು ಆದರೆ ಸಂಗೀತ ಕಲಿಯುವ ಹಂಬಲ ಬಲವಾಗಿತ್ತು. ಮಲ್ಲಿಕಾರ್ಜುನಯ್ಯನವರು ಯಾವ ಸಂಕೋಚವಿಲ್ಲದೆ ಗುರುಸ್ಥಾನದಲ್ಲಿ ನಿಂತು ಅವಳಿಗೆ ಸಂಗೀತ ಹೇಳಿದರು. ತಮ್ಮ ಮಗ ವಾರಾಂಗನೆಗೆ ಸಂಗೀತ ಹೇಳುವದು ವೃಧ್ಧ ತಂದೆ-ತಾಯಿಗಳಿಗೆ ನೋವನ್ನುಂಟುಮಾಡಿತು. ಹರೆಯದ ತರುಣ ಹರೆಯದ ಒಬ್ಬ ವೇಶ್ಯೆಗೆ ಸಂಗೀತ ಹೇಳಿಕೊಡುವ ಸಂಗತಿ ಯಾರಿಗೂ ಒಪ್ಪಿತವಾಗಿರಲಿಲ್ಲ. ಅದು ಚಿಂತೆಯ ವಿಷಯವೇ ಸರಿ.
ವಿರುಪಾಕ್ಷಯ್ಯನವರ ಆರೋಗ್ಯ ಹದಗೆಟ್ಟಿತು. ಮನೆಯಲ್ಲಿ ಮಲ್ಲಯ್ಯನವರ ವಿವಾಹ ಪ್ರಸ್ತಾಪವಾಯಿತು. ಮಲ್ಲಿಕಾರ್ಜುನಯ್ಯ ಅದಕ್ಕೆ ಕಿವಿಗೊಡದಾದರು. ತನಗೆ ವಿವಾಹ ಬೇಡ ಎಂದರು. ಜಡ್ಡು ಉಲ್ಬಣಿಸಿದ್ದ ವಿರುಪಾಕ್ಷಯ್ಯನವರು ಊರಿನ ಹಿರಿಯರೂ ಅಧ್ಯಾತ್ಮ ಜೀವಿಗಳೂ ಆಗಿದ್ದ ಶ್ರೀ ಕಿಣಗಿ ಬಸಲಿಂಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರನ್ನು ಕರೆಸಿ ಲಗ್ನವಾಗುವಂತೆ ಬುದ್ಧಿ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ‘ನನ್ನನ್ನು ಕ್ಷಮಿಸಿ, ನನ್ನ ಒಳದನಿ ಲಗ್ನವಾಗಲು ಒಪ್ಪುತ್ತಿಲ್ಲ’ ಎಂದು ಹೇಳಿದ ಮೇಲೆ ವಿರುಪಾಕ್ಷಯ್ಯನವರು ಆ ಮಾತುಗಳನ್ನು ಕೇಳಿ ಕೊನೆಯುಸಿರೆಳೆದರು.
ಅವರ ಸಂಸಾರ ಛಿದ್ರವಾಯಿತು. ಇಬ್ಬರೂ ತಾಯಂದಿರು ಬೇರೆ ಬೇರೆ ಇರಹತ್ತಿದರು. ಮಲ್ಲಿಕಾರ್ಜುನಯ್ಯನವರು ಮನೆಬಿಟ್ಟು ಬಾಗಲಕೋಟೆಯ ಬಸವಂತರಾಯ ಸಾಸನೂರ ಇವರ ವಖಾರದಲ್ಲಿಯೇ ಇರುತ್ತಿದ್ದರು. ಒಂದು ದಿನ ಇದ್ದ ನೌಕರಿಯನ್ನು ಬಿಟ್ಟರು.
ಶ್ರೀ ಕಿಣಗಿ ಬಸಲಿಂಗಪ್ಪನವರು ಮತ್ತು ಶ್ರೀ ಗುಡ್ಡದ ವೀರಸಂಗಪ್ಪನವರ ಹತ್ತಿರ ಅಧ್ಯಾತ್ಮಿಕ ಚರ್ಚೆ ಮಾಡುವಲ್ಲಿಯೇ ಹೆಚ್ಚು ಕಾಲ ಕಳೆದುಹೋಗುತ್ತಿತ್ತು.
ಶ್ರಾವಣಮಾಸದ ನಿಮಿತ್ಯ ಪುರಾಣ ಕೇಳುವ ಸಂಪ್ರದಾಯ ಬಾಗಲಕೋಟಯಲ್ಲಿ ಬಹುದಿನಗಳಿಂದ ಇದೆ. ಆ ವರ್ಷದಲ್ಲಿ ಹುನಗುಂದದ ಬಳಿಯಿರುವ ಕೊಡಗಲಿಯ ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳಿಂದ ಶ್ರೀ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರಾರಂಭವಾಗಿತ್ತು.
ಮಲ್ಲಿಕಾರ್ಜುನಯ್ಯನವರನ್ನು ನೋಡಿದ ಕೊಡಗಲಿ ಶ್ರೀಗಳು ‘ಧರ್ಮಕಾರ್ಯಕ್ಕಾಗಿ ಹುಟ್ಟಿ ಬಂದು, ವಾರಾಂಗನೆಯರಿಗೆ ಸಂಗೀತ ಹೇಳಿಕೊಡುತ್ತ ಕಾಲಹರಣ ಮಾಡುವದು ಸರಿಯಲ್ಲ’ ಎಂದರು. ಅವರ ಅಧ್ಯಾತ್ಮಿಕ ವಿಚಾರಗಳಿಂದ ಪ್ರೇರಿತನಾದ ಮಲ್ಲಿಕಾರ್ಜುನಯ್ಯನವರು ತಮ್ಮ ಬೆಲೆಬಾಳುವ ವಸ್ತು ಒಡವೆಗಳನ್ನು ಸುಟ್ಟು ಹಾಕಿ, ಕೌಪೀನ ಧರಿಸಿ, ಅವರಿಂದಲೇ ಜಂಗಮದೀಕ್ಷೆಯನ್ನು ಪಡೆದುಕೊಂಡು, ಕಪನಿ. ಬೆತ್ತ, ಜೋಳಿಗೆ, ತಂಬಿಗೆ ಹಿಡಿದುಕೊಂಡು ಜಂಗಮನಾಗಿ ಪರಿವರ್ತಿತರಾದರು. ಮಲ್ಲಿಕಾರ್ಜುನಯ್ಯನವರು “ಮಲ್ಲಣಾರ್ಯರಾಗಿ, ಸಂಗೀತಮಯ ಬಸವಪುರಾಣ ಹೇಳುತ್ತ ಧರ್ಮ ಜಾಗೃತಿಯ ಕಾರ್ಯದಲ್ಲಿ ತೊಡಗಿದರು.
ಇಲಕಲ್ಲಿನ ಪೂಜ್ಯ ಶ್ರೀ ಮಹಾಂತಪ್ಪಗಳಿಗೆ ಬಸವೇಶ್ವರರ ವಚನಗಳೆಂದರೆ ಎಲ್ಲಿಲ್ಲದ ಪ್ರೀತಿ. ‘ಅಪ್ಪನವರ ವಚನಗಳು’ ಎಂದು ಗೌರವದಿಂದ ಕರೆಯುತ್ತಿದ್ದರು. ತಮ್ಮಲ್ಲಿಗೆ ಬಂದ ಮಲ್ಲಣಾರ್ಯರಿಗೆ ವಚನಗಳನ್ನು ಹಾಡಲು ಮತ್ತು ವಿವರಿಸಲು ಶ್ರೀಗಳು ಕೇಳಿಕೊಂಡಾಗ ಅವರ ವೈಖರಿಯನ್ನು ಕಂಡ ಜನರೆಲ್ಲ ಬೆರಗಾದರು. ವೈರಾಗ್ಯದ ನಡೆ-ನುಡಿಗಳು ಜನಮನ ಸೂರೆಗೊಂಡವು.
ಪೂಜ್ಯ ಶ್ರೀ ವಿಜಯ ಮಹಾಂತೇಶ್ವರ ಸ್ವಾಮಿಗಳ ಅಪ್ಪಣೆಯಂತೆ ಮೂರು ತಿಂಗಳುಗಳ ಕಾಲ ಚಿತ್ತರಗಿಯಲ್ಲಿ ಬಸವ ಪುರಾಣ ನಡೆಯಿತು. ಮುಕ್ತಾಯ ಸಮಾರಂಭಕ್ಕೆ ಶ್ರೀ ವಿಜಯಮಹಾಂತೇಶ್ವರರು, ಶ್ರೀ ಘನಮಠದ ನಾಗಭೂಷಣ ಶಿವಯೋಗಿಗಳು ಮತ್ತು ಮಲ್ಲಣಾರ್ಯರು ಸಂಗಮಿಸಿ, ಮುಕ್ತಾಯ ಸಮಾರಂಭದ ನಂತರ ಹುನಗುಂದದಲ್ಲಿ ಶ್ರೀ ನಾಗರಾಳ ದೊಡ್ಡಪ್ಪನವರನ್ನು ಕಂಡು ಆಶೀರ್ವದಿಸಿದರು.
‘ಬಸವ ಪುರಾಣ ಕೇಳುವದಾದರೆ ಮಲ್ಲಣಾರ್ಯರರಿಂದಲೇ ಕೇಳಬೇಕು’ ಎಂಬ ಮಾತು ಜನಜನಿತವಾಯಿತು.
ವಿದ್ವಾಂಸರು, ಪಂಡಿತರು ಮಲ್ಲಣಾರ್ಯರ ಬೋಧನೆಗಳನ್ನು ಕೇಳಿ, ಅವರ ವೈರಾಗ್ಯದ ನಡೆನುಡಿಗಳನ್ನು ಕಂಡು ಬೆರಗಾದರು.
ಇಂಥ ವೈರಾಗ್ಯನಿಧಿ, ಸಾಮಾಜಿಕ ಕಳಕಳಿಯುಳ್ಳ ಮಲ್ಲಣಾರ್ಯರು ಹಾನಗಲ್ಲ ಮಠಕ್ಕೆ ಬಂದರು.
ಚಿತ್ರ ಸಂಖ್ಯೆ ೫: ಶ್ರೀ ಮಲ್ಲಣಾರ‍್ಯರು ಮತ್ತು ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ ಗಳ ಭೇಟಿಯಾದ ತೈಲ ಚಿತ್ರ ಕಲಾವಿದರು ನಾಡೋಜ ಶ್ರೀ ವಿ.ಟಿ.ಕಾಳೆ ಶಿವಯೋಗಮಂದಿರ ಚಿತ್ರ ಸಂಗ್ರಹಾಲಯ.
ಸಾಯಂಕಾಲದ ಸಮಯ, ಶ್ರೀ ಗುರು ಕುಮಾರ ಶಿವಯೋಗಿಗಳು ಮಠದಲ್ಲಿ ತೂಗು ಮಂಚದ ಮೇಲೆಕುಳಿತಿದ್ದರು. ಅದನ್ನು ಕಂಡ ಮಲ್ಲಣಾರ್ಯರು ಅಲ್ಲಿಯ ಸೇವಕನನ್ನು ಕುರಿತು, ಸ್ವಾಮಿಗಳಿಗೆ ಕೇಳಿಸುವಂತೆ ಉದ್ದೇಶ ಪೂರ್ವಕವಾಗಿ ‘ಇಲ್ಲಿ ಮಠದ ಸ್ವಾಮಿ ಯಾರಿದ್ದಾರೆ?’ ಎಂದು ಏರು ಧ್ವನಿಯಲ್ಲಿ ಕೇಳಿದರು. ಅದಕ್ಕೆ ಸೇವಕ ‘ಇಲ್ಲಿ ಕುಳಿತಿರುವವರೇ ಸ್ವಾಮಿಗಳು’ ಎಂದು ಮೆಲುದನಿಯಲ್ಲಿ ಹೇಳಿದ. ಮಲ್ಲಣಾರ್ಯ ‘ನೀವೇ ಏನು ಮಠದ ಸ್ವಾಮಿಗಳು?’ ಎಂದು ವಕ್ರವಾಗಿ ಕೇಳಿದಾಗ ‘ಜನ ಎನ್ನುತ್ತಾರೆ’ ಎಂದರು ಶ್ರೀಗಳು. ‘ಅವರು ಮೂರ್ಖರು, ಸಮಾಜ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ತನ್ನನ್ನು ತಾನು ಸಮಾಜಕ್ಕಾಗಿ ತೇದುಕೊಳ್ಳುವವನೇ ನಿಜವಾದ ಸ್ವಾಮಿ. ಮೃಷ್ಟಾನ್ನ ಭೋಜನ ಗೈದು ತೂಗು ಮಂಚದ ಮೇಲೆ ಕುಳಿತುಕೊಳ್ಳುವವರು ಸ್ವಾಮಿಗಳಲ್ಲ, ಎಂದು ಬಿರುಮಾತುಗಳನ್ನಾಡಿದಾಗ, ಹಾನಗಲ್ಲ ಕುಮಾರ ಶ್ರೀಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಯಿತು. ಅವರು ಮಲ್ಲಣಾರ್ಯರ ಮಾತಿಗೆ ಕೋಪಗೊಳ್ಳದೇ ಸತ್ಯ ಯಾವಾಗಲೂ ಕಠೋರ ಎಂಬುದನ್ನು ಅರ್ಥಮಾಡಿಕೊಂಡು, ಎದ್ದು ಬಂದು ಆ ಜಂಗಮ ಮೂರ್ತಿಯನ್ನು ಸಮಾಧಾನಪಡಿಸುತ್ತ, ‘ಇದಕ್ಕಾಗಿ ಮಠಾಧೀಶರು ಏನು ಮಾಡಬೇಕಾಗಿದೆ?’ ಎಂದು ಕೇಳಲಾಗಿ, ಮಲ್ಲಣಾರ್ಯರು ‘ಇಂದು ಸಮಾಜ ಇಂಗ್ಲೀಷ ಪ್ರಭಾವಕ್ಕೆ ಒಳಗಾಗಿ ತಮ್ಮ ಧರ್ಮವನ್ನು ಮರೆಯುತ್ತದೆ. ಇದರಿಂದಾಗಿ ಸಮಾಜ ಅಧೋಗತಿಗೆ ಇಳಿದಿದೆ. ಸಮಾಜ ತಿದ್ದುವದಕ್ಕಾಗಿ ಇಂದು ಸ್ವಾಮಿಗಳು ಮಠದಿಂದ ಹೊರಬರಬೇಕಾಗಿದೆ, ಬಸವಾದಿ ಪ್ರಮಥರು ಹಾಕಿಕೊಟ್ಟ ಮಾರ್ಗವನ್ನು ನೆನಪಿಸಿಕೊಡಬೇಕಾಗಿದೆ’ ಎಂದು ಆವೇಶದಿಂದ ಮಾತನಾಡಿದರು. ಇದರಿಂದ ಹಾನಗಲ್ಲ ಶ್ರೀಗಳು ಜಾಗೃತರಾದರು.
ಸಮಾಜಕ್ಕಾಗಿ ಜಂಗಮರನ್ನು, ಗುರುಗಳನ್ನು ಸಿದ್ಧಪಡಿಸುವ ಒಂದು ಧಾರ್ಮಿಕ ವಿದ್ಯಾಸಂಸ್ಥೆಯ ಅವಶ್ಯಕತೆಯಿದೆ, ಅಂಥ ಒಂದು ಸಂಸ್ಥೆಯನ್ನು ತೆರೆಯಬೇಕು ಎಂಬ ಮಾತನ್ನು ಹೇಳಿ ಹಾನಗಲ್ಲಿನಿಂದ ಮಲ್ಲಣಾರ್ಯರು ನಿರ್ಗಮಿಸಿದರು. ಈ ಮಾತುಗಳ ಪ್ರಭಾವ ಶ್ರೀ ಕುಮಾರ ಶಿವಯೋಗಿಗಳ ಮನದಲ್ಲಿ ಅಚ್ಚಳಿಯದೆ ಮೂಡಿನಿಂತಿತು.. ಈ ಮಹತ್ವದ ವಿಚಾರವೇ ನಂತರ ಬಾಗಲಕೋಟ ಜಿಲ್ಲೆಯ, ಬಾದಾಮಿ ತಾಲೂಕಿನಲ್ಲಿ ಶಿವಯೋಗ ಸಾಧಕರನ್ನು ತರಬೇತಿಗೊಳಿಸುವ ‘ಶಿವಯೋಗ ಮಂದಿರ’ದ ಸ್ಥಾಪನೆಗೆ ಕಾರಣವಾಯಿತು. ವೀರಶೈವ-ಲಿಂಗಾಯತ ಧರ್ಮದ ಬೀಜ-ರೂಪದ ಸಂಸ್ಥೆಯಾಯಿತು.
ಮಲ್ಲಣಾರ್ಯರು ಜಂಗಮನಾಗಿ ಬಿರುಗಾಳಿಯಂತೆ ನಾಡತುಂಬೆಲ ಸಂಚರಿಸುತ್ತ ಬಸವ ಪ್ರವಚನಗಳನ್ನು ನೀಡುತ್ತ ಜನಮನ ಶುದ್ಧೀಕರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಮಲ್ಲಣಾರ್ಯರು ಯಾವುದೇ ಮಠದಲ್ಲಿ ವಾಸವಿದ್ದರೂ ಆ ಮಠದಲ್ಲಿ ಸಿದ್ಧಪಡಿಸಿದ ಪ್ರಸಾದವನ್ನು ಸ್ವೀಕಾರ ಮಾಡುತ್ತಿರಲಿಲ್ಲ. ಬೆಳಿಗ್ಗೆ ಸ್ನಾನ, ಲಿಂಗ ಪೂಜೆಗಳನ್ನು ಮುಗಿಸಿಕೊಂಡು, ಐದು ಮನೆ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷೆಗೆಂದು ಬಾಗಿಲಿಗೆ ಬಂದು ನಿಂತ ತಕ್ಷಣ ಭಕ್ತರು ಭಿಕ್ಷೆ ಹಾಕಬೇಕು, ತಡಮಾಡಿದರೆ ಮುಂದೆ ಹೊರಡುತ್ತಿದ್ದರು. ಇಂಥ ಕಠಿಣ ಜಂಗಮ ವೃತ್ತಿ ಪಾಲಿಸಿದವರು. ಭಿಕ್ಷೆ ಬೇಡಿ ತಂದುದನ್ನು ಮಾತ್ರ ಪ್ರಸಾದವಾಗಿ ಸೇವಿಸುತ್ತಿದ್ದರು ಇದು ಜಂಗಮ ವೃತ್ತಿಯ ಮಾದರಿ.
ಮಲ್ಲಣಾರ್ಯರ ಈ ಬಗೆಯ ಧರ್ಮ ಸುಧಾರಣಾ ಕಾರ್ಯಕ್ಕೆ ಬೆಂಬಲವಾಗಿ ನಿಂತವರು- ಇಲಕಲ್ಲಿನ ಶ್ರೀ ವಿಜಯ ಮಹಾಂತ ಸ್ವಾಮಿಗಳು ಮತ್ತು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರು.
ಗಜೇಂದ್ರಗಡದ ವಿರಕ್ತಮಠಕ್ಕೆ ಮಲ್ಲಣಾರ್ಯ ಬಂದಾಗ ಅಲ್ಲಿಯ ಸ್ವಾಮಿಗಳು ಚಿಂತೆಗೊಳಗಾಗಿದ್ದರು. ಕಾರಣ ಕೇಳಿದಾಗ ಆ ಶ್ರೀಗಳು ತಮಗೆ ಶ್ರೀಮಂತ ಭಕ್ತರೊಬ್ಬರು ಸಾವಿರಾರು ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಬಟ್ಟಲು ಚೆರಿಗೆ ಮತ್ತು ವಾಟೆ ಕೊಟ್ಟಿದ್ದರು, ಅವುಗಳನ್ನು ಕಳ್ಳರು ತುಡುಗು ಮಾಡಿದ್ದಾರೆ ಎಂದು ಹೇಳಿದರು. ಮಲ್ಲಣಾರ್ಯರು ಇದನ್ನು ಕೇಳಿ ‘ಸ್ವಾಮಿಗಳೇ, ಅದು ತಾವೇನೂ ದುಡಿದು ತಂದದ್ದಲ್ಲ, ಇದ್ದವರು ಕೊಟ್ಟರು, ಇಲ್ಲದವರು ಒಯ್ದರು ಅದಕ್ಕೆ ನಿಮಗೇಕೆ ಚಿಂತೆ?’ ಎಂದು ತಿಳಿಹೇಳಿ, ಅವರು ಹೊಸ ವಿಚಾರಕ್ಕೆ ಬರುವಂತೆ ಮಾಡಲು ಬಸವೇಶ್ವರರ ಮನೆಗೆ ಕಳ್ಳ ಬಂದಾಗ ಬಸವಣ್ಣ ನಡೆದುಕೊಂಡ ರೀತಿಯನ್ನು ಹೇಳಿದಾಗ, ಅದನ್ನು ಕೇಳಿದ ಸ್ವಾಮಿಗಳ ಮನಸ್ಸು ನಿರ್ಮಲವಾಯಿತು.
ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು ಲಿಂಗ ಪೂಜಾ ನಿಷ್ಠರಾಗಿ, ಶಿವ ಸ್ವರೂಪಿಗಳಾಗಿದ್ದವರು. ಅಲ್ಲಿಗೆ ಮಲ್ಲಣಾರ್ಯರು ಬಂದು ‘ಬಸವ ಪ್ರವಚನ’ ಗೈದು ಶಿವಯೋಗಿಗಳಿಗೆ ಆನಂದ ನೀಡಿದರು. ಅವರ ವೈರಾಗ್ಯದ ಮಾತುಗಳು, ಧಾರ್ಮಿಕ ನಡೆ-ನುಡಿಯ ಸತ್ಯತೆಗಳು ಜನ ಮನವನ್ನು ಪರಿವರ್ತಿಸಿದವು. ಮುರುಘೇಂದ್ರ ಶಿವಯೋಗಿ ಗಳು ಮಲ್ಲಣಾರ್ಯರ ಬರುವನ್ನು ಯಾವಾಗಲೂ ಎದುರು ನೋಡುತ್ತಿದ್ದರು.
ಮಲ್ಲಣಾರ್ಯರ ಮಾತುಗಳಲ್ಲಿ ಹೇಳುವದಾದರೆ “ಅಥಣಿ ನನಗೆ ಕಾಶೀ, ಹಾಲಕೆರೆ ರಾಮೇಶ್ವರ, ಇವುಗಳ ದರ್ಶನವಿಲ್ಲದೆ ನನಗೆ ಬದುಕಿಲ್ಲ” ಎನ್ನುತ್ತಿದ್ದರು
ಬಾಗಲಕೋಟೆಯ ಟೀಕಿನಮಠದಲ್ಲಿ ಪ್ರವಚನ ನಡೆದಾಗ ಮಲ್ಲಣಾರ್ಯರು ಅಲ್ಲಿಗೆ ಬಂದರು. ಅಲ್ಲಿ ಅನೇಕ ಹರ ಗುರು ಚರಮೂರ್ತಿಗಳು ವಿರಾಜಮಾನರಾಗಿದ್ದರು. ಮಹಾ ವೈರಾಗ್ಯ ಮೂರ್ತಿಗಳಾಗಿದ್ದ ಬೀಳೂರ ಪೂಜ್ಯ ಶ್ರೀ ನಿ. ಪ್ರ. ಗುರುಬಸವ ಮಹಾಸ್ವಾಮಿಗಳೂ ಅವರ ಮಧ್ಯದಲ್ಲಿದ್ದರು. ‘ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ, ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆ ಮಾಯೆ ಎಂಬ ವಚನವನ್ನು ಪ್ರವಚನಕಾರರು ವಿವರಿಸಿದರು. ಪ್ರವಚನದ ನಂತರ ಮಾತನಾಡಿದ ಮಲ್ಲಣಾರ್ಯರು ಎದ್ದು ಮಾತನಾಡುತ್ತ, ‘ಬೀಳೂರಪ್ಪನವರು ಹೆಣ್ಣಿನ ಮೋಹ ಬಿಟ್ಟರೆ ಹೊರತು, ಮಣ್ಣಿನ ಮೋಹ ಅವರನ್ನು ಬಿಡಲಿಲ್ಲ ಎಂದರುʼ. ಅದಕ್ಕೆ ಶ್ರೀ ಬೀಳೂರ ಗುರುಬಸವ ಮಹಾಸ್ವಾಮಿಗಳು ಕೋಪಗೊಳ್ಳದೆ, ‘ಅದು ನಿಜ, ಆದರೆ ಸಮಾಜದ ಹಿತಕ್ಕಾಗಿ ಕಟ್ಟಡ ಕಾರ್ಯ ಅನಿವಾರ್ಯ’ ಎಂಬ ಮಾತನ್ನು ಹೇಳಿದಾಗ, ಮಲ್ಲಣಾರ್ಯರೂ ತಲೆ ದೂಗಿದರು, ಅವರ ಸಮಾಜ ಪ್ರೇಮವನ್ನು ಕೊಂಡಾಡಿದರು. ಹೀಗೆ ವೈರಾಗ್ಯವೇ ಮೈವೆತ್ತಿ ಬಂದಂತಿದ್ದರು-ಮಲ್ಲಣಾರ್ಯರು. ಜಂಗಮ ಪದಕ್ಕೆ ವ್ಯಾಖ್ಯೆ ಬರೆದಂತಿದ್ದಿತು ಅವರ ನಡೆ-ನುಡಿ, ದಿನಚರಿ,
ಸಾಮಾಜಿಕ, ಧಾರ್ಮಿಕ ಕಳಕಳಿಯ ಚಿಂತಕ ಮಲ್ಲಣಾರ್ಯರು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಲ್ಲಿಗೆ ಬಂದು ಹೊಸ ವಿಚಾರ ಸಾದರಪಡಿಸಿದರು. ಹಾನಗಲ್ಲಿನಲ್ಲಿ ಮತ್ತು ಅಬ್ಬಿಗೇರಿಯಲ್ಲಿ ಒಂದು ಸಂಸ್ಕೃತ ಪಾಠಶಾಲೆ ತೆಗೆಯುವ ವಿಚಾರವನ್ನು ಹೇಳಿ ಇಂದು ಜ್ಞಾನ ಕೆಲವೇ ಜನರ ಸೊತ್ತಾಗಿದೆ. ನಮ್ಮವರು ಜ್ಞಾನವಂತರಾಗುವ ಅವಶ್ಯಕತೆಯಿದೆ ಎಂಬ ವಿಚಾರ ತಿಳಿಸಿ, ಶ್ರೀಗಳನ್ನು ಕರೆದುಕೊಂಡು ಅಬ್ಬಿಗೇರಿಗೆ ಬಂದು, ಅಲ್ಲಿಯ ಊರಪ್ರಮುಖರ ಮುಂದೆ ವಿಚಾರವಿಟ್ಟಾಗ ಜನರು ಸಂತಸದಿಂದ ಭೂಮಿ ದಾನ, ಧನದಾನ ಮಾಡಿದರು. ಅಲ್ಲಿ ಸಂಸ್ಕೃತ ಪಾಠಶಾಲೆ ಪ್ರಾರಂಭಗೊಂಡು ೧೯೩೦ ರ ವರೆಗೆ ಉತ್ಕೃಷ್ಟವಾಗಿ ಕಾರ್ಯ ನಿರ್ವಹಿಸಿತು. ಶ್ರೀ ರಂಭಾಪುರಿ ಜಗದ್ಗುರುಗಳು, ಕೊಪ್ಪಳದ ಗವಿಸಿದ್ಧೇಶ್ವರರು, ಕೋಡಿಕೊಪ್ಪದ ಸ್ವಾಮಿಗಳು ಹೀಗೆ ಅನೇಕ ಶ್ರೀಗಳು ಅಬ್ಬಿಗೇರಿಯ ಸಂಸ್ಕೃತ ಪಾಠಶಾಲೆಯಲ್ಲಿಯೇ ಓದಿದವರು. ಹೀಗೆ ಮಲ್ಲಣಾರ್ಯ ಶುಷ್ಕ ಪ್ರವಚನಕಾರನಾಗಿರದೇ, ಕ್ರಿಯಾಶಿಲ ಜಂಗಮನಾಗಿದ್ದರು.
ಮಲ್ಲಣಾರ್ಯರು ನಿರ್ಭಿಡೆಯಿಂದ ಮಾತನಾಡುವ ವ್ಯಕ್ತಿ. ಇಂಥ ಮಾತುಗಳು ಅವರಿಗೆ ಅನೇಕ ಸಲ ಮುಳುವಾಗಿದ್ದುಂಟು. ಮುಂಡರಗಿಯಲ್ಲಿ ಪ್ರವಚನಗೈಯುತ್ತ, ಸ್ವಾಮಿಗಳು ಸಂಪತ್ತಿನ ಬೆನ್ನ ಹಿಂದೆ ಹೋಗಬಾರದು, ಆಡಂಬರದ ಬೆನ್ನು ಹತ್ತಬಾರದು ಎಂಬ ವಿಷಯವಾಗಿ ಬಿರುಸಿನ ಮಾತನಾಡಿದಾಗ ಅನೇಕ ಬಿಸಿ ರಕ್ತದ ಸ್ವಾಮಿಗಳು ಅವರನ್ನು ಥಳಿಸಿದರು, ಇದೇ ಸ್ಥಿತಿ ಅವರು ಗದುಗಿನದಲ್ಲಿಯೂ ಎದುರಿಸಬೇಕಾಯಿತು. ಅದಕ್ಕೆ ಅವರು ಹೆದರುತ್ತಿರಲಿಲ್ಲ, “ಕ್ವಾಟಿ ಮಲ್ಲ ಹಿಂಗ ಇದು, ಬಾಯಿಗೆ ಬಂದದ್ದನ್ನ ಬೊಗಳತೈತಿ, ಚೊಲೋತಂಗ ಹೊಡಿರಿ” ಎನ್ನುತ್ತಿದ್ದರು. ಆದರೆ ತನ್ನ ನಿಷ್ಠುರತನವನ್ನು ಎಂದೂ ಬಿಡಲಿಲ್ಲ. ‘ನ್ಯಾಯನಿಷ್ಠುರಿ ; ದಾಕ್ಷೀಣ್ಯಪರ ನಾನಲ್ಲ’ ಎಂಬ ದೃಢ ಭಾವ!
ತಮ್ಮ ಕಟು ಮಾತುಗಳನ್ನು ತುಂಬಿದ ಸಭೆಯಲ್ಲಿ ಅಂಜಿಕೆಯಿಲ್ಲದೇ ಆಡುತ್ತಿದ್ದರು. ಇದರಿಂದ ಅನೇಕ ಪರಿವರ್ತನೆಗಳೂ ಆದವು. ಲಂಚಕೋರ ತಹಶಿಲ್ದಾರನೊಬ್ಬ ಇವರ ಪ್ರವಚನ ಕೇಳುತ್ತ ಕೇಳುತ್ತ, ಎಲ್ಲರೆದುರಿಗೆ ಪರಿವರ್ತಿತನಾಗಿ, ಇನ್ನು ಲಂಚ ಸ್ವೀಕರಿಸುವದಿಲ್ಲ ಎಂದು ಪ್ರತಿಜ್ಞೆಗೈದ ಘಟನೆಯೂ ಇದೆ.
ಕಾಯಾ ವಾಚಾ ಮನಸಾ ಪರಿಶುದ್ಧರಾಗಿದ್ದ ಮಲ್ಲಣಾರ್ಯರಿಗೆ ಪಂಚಪರುಷ ಸಿದ್ಧಿ ತಾನಾಗಿಯೇ ಲಭಿಸಿತ್ತು. ಅಬ್ಬಿಗೇರಿಯಲ್ಲಿ ಒಬ್ಬ ಮುದುಕಿ ತನಗೆಲ್ಲ ಸಂತಸದ ಬದುಕಿದೆ, ಇನ್ನು ದೇವರಪಾದ ಸೇರಬೇಕಾಗಿದೆ, ಕರುಣಿಸು ಎಂದಾಗ , ಮಲ್ಲಣಾರ್ಯರು “ಮುಂದಿನ ಸೋಮವಾರ ಚೆನ್ನಾಗಿದೆ” ಎಂದರು. ಆ ಮುದುಕಿಗೆ ಹೇಳಿದ ಸೋಮವಾರದಿನದಂದು ಮುಕ್ತಿಯಾದ ಉದಾಹರಣೆಯಿದೆ.
ಹುಬ್ಬಳ್ಳಿಯ ಶ್ರೀ ಸಿದ್ಧರೂಢರು ಮತ್ತು ಎಮ್ಮಿಗನೂರ ಶ್ರೀ ಜಡೆ ಸಿದ್ಧೇಶ್ವರರೊಂದಿಗೆ ದ್ವೈತ ಅದ್ವೈತ ವಿಚಾರವಾಗಿ ವಾದ ಮಾಡಿದ್ದುಂಟು. ಬಸವಮಾರ್ಗಾನುಯಾಯಿಯಾಗಿದ್ದ ಮಲ್ಲಣಾರ್ಯರಿಗೆ ಎಲ್ಲ ವಾದ ಪ್ರತಿವಾದಗಳಲ್ಲಿ ಹುರುಳಿಲ್ಲ ಎನ್ನಿಸಿದ್ದು ಅಚ್ಚರಿಯೇನಲ್ಲ.
ಮಲ್ಲಣಾರ್ಯರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಹಾನಗಲ್ಲಿಗೆ ಹೋದಾಗ ಶ್ರೀ ಕುಮಾರ ಶಿವಯೋಗಿಗಳಿಗೆ ಇದು ಕೊನೆಯ ಭೇಟಿ ಎಂದು ಹೇಳಿದಾಗ, ಶ್ರೀಗಳ ಕಣ್ಣಂಚಲ್ಲಿ ನೀರು ಹನಿಯಿತು. ಅದೇ ರೀತಿಯಾಗಿ ಕೊನೆಯ ಬಾರಿಗೆ ಎಂಬಂತೆ ಅಥಣಿಯ ಮಠದಲ್ಲಿ ಬಸವ ಪುರಾಣ ಪ್ರವಚನ ಮಾಡಿ, ಇದು ಕೊನೆಯ ಭೇಟಿ ಎಂದು ಶಿವಯೋಗಿಗಳ ಅಪ್ಪಣೆಯನ್ನೂ ಪಡೆದರು.
ಚಿತ್ರ ಸಂಖೈ ೬ : ಪೂಜ್ಯ ಲಿಂ.ಅನ್ನದಾನೇಶ್ವರ ಮಹಾಸ್ಡಾಮಿಗಳು ಹಾಲಕೆರಿ
ಬಾಗಲಕೋಟೆಗೆ ಬಂದ ನಂತರ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಟ್ಟಿತು. ರಾಚಪ್ಪ ಬಣಗಾರ ಇವರ ವಖಾರದಲ್ಲಿ ಮಲಗಿಕೊಂಡಿದ್ದರು. ಅವರನ್ನು ಭೇಟಿಯಾಗಲು, ಕಿಣಗಿ ಬಸಲಿಂಗಪ್ಪನವರು, ಗುಡ್ಡದ ವೀರಸಂಗಪ್ಪನವರು, ಬಸವಂತಪ್ಪನವರು ಸಾಸನೂರ, ರಾಜಪ್ಪ ರಾಜೂರ, ನಾಶಿ ವೀರಯ್ಯ, ಮೊದಲಾದ ಅನೇಕ ಗಣ್ಯರು ಸೇರಿದ್ದರು. “ಶ್ರೀ ಹಾಲಕೆರೆ ಅನ್ನದಾನೇಶ್ವರ ಸ್ವಾಮಿಗಳ ಪದತಲದಲ್ಲಿ ಪ್ರಾಣಾರ್ಪಣೆಯಾಗಿ, ಮುಕ್ತಿ ಪಡೆಯಬೇಕೆಂಬುದು ಅವರ ಕೊನೆ ಆಶಯವಾಗಿತ್ತು ಅದು ಅಸಾಧ್ಯವೆಂದು ಗಮನಿಸಿದ ಗುಡ್ಡದ ವೀರಸಂಗಪ್ಪನವರು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯ ಸಹಾಯದಿಂದ ಪೂಜ್ಯ ಶ್ರೀ ಹಾಲಕೆರೆ ಅನ್ನದಾನೇಶ್ವರರನ್ನು ನೆನೆ ನೆನೆದು ತಾವು ಮುಕ್ತಾರಾಗಬಹುದೆಂಬ ಉಪಾಯ ಹೇಳಿದಾಗ ಮಲ್ಲಣಾರ್ಯರು ಒಪ್ಪಿ, ದಿನಾಂಕ : ೫-೧೦-೧೯೦೩, ಸೋಮವಾರ ಬೆಳಗಿನ ೫ ಗಂಟೆಗೆ ಲಿಂಗೈಕ್ಯರಾಗಿ ಬಯಲಲ್ಲಿ ಬಯಲಾದರು. ಬಸವ ಬೆಳಗಿನಲ್ಲಿ ಒಂದಾದರು.
ವೈರಾಗ್ಯನಿಧಿ ಮಲ್ಲಣಾರ್ಯರ ಅಂತಿಮ ಯಾತ್ರೆ ಜರುಗಿತು. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಕಣ್ಣೀರು ಗರೆದುದಲ್ಲದೆ ತಮ್ಮ ಪದ್ಯ ರೂಪದ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಅಂತಿಮಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕೊನೆಗೆ ಬಾಗಲಕೋಟೆಯ ಹೊರಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಶ್ರೀ ಅಡವೀಸ್ವಾಮಿ ಮಠದ ಆವರಣದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು. ನಂತರ ಗದ್ದುಗೆಯನ್ನು ನಿರ್ಮಾಣ ಮಾಡಲಾಯಿತು.
ಚಿತ್ರ ಸಂಖ್ಯೆ ೭ : ಶ್ರೀ ಮಲ್ಲಣಾರ್ಯರ ಗದ್ದುಗೆಯು ಅಡವಿಮಠ ಬಾಗಲಕೋಟೆ (ಸದ್ಯ ಮುಳುಗಡೆ ಪ್ರದೇಶದಲ್ಲಿದೆ)
ಮಲ್ಲಣಾರ್ಯರ ಗದ್ದುಗೆಯ ಪ್ರಭಾವಕಂಡವರು ಅನೇಕ ಜನರಿದ್ದಾರೆ. ಮಲ್ಲಣಾರ್ಯರ ಪ್ರಸ್ತಾಪವು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಪುರಾಣ, ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಪುರಾಣ, ಶ್ರೀ ಫಲಹಾರೇಶ್ವರ ಪುರಾಣ, ಪೂಜ್ಯ ಶ್ರೀ ಬಿದರಿ ಕುಮಾರ ಸ್ವಾಮಿಗಳ ಪುರಾಣಗಳಲ್ಲಿ, ಮತ್ತು ಶಿವಯೋಗ ಮಂದಿರ ಸ್ಥಾಪನಾ ವರದಿಯಲ್ಲಿ, ಅನೇಕ ಜಾನಪದ ಗೀತೆಗಳಲ್ಲಿ ಕಂಡುಬರುತ್ತದೆ.
ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಸಮಾಜೋಧಾರ್ಮಿಕ ಪರಿವರ್ತನೆಯಲ್ಲಿ ಮಹತ್ವದ ಪಾತ್ರವಾಡಿದ್ದು ಒಂದು ಐತಿಹಾಸಿಕ ದಾಖಲೆಯೇ ಸರಿ. ತಮ್ಮ ನಿಷ್ಠುರ ನಡೆ-ನುಡಿಗೆ ಹೆಸರಾದ ಜಂಗಮ ಪುಂಗವರಾಗಿ ಧ್ರುವ ನಕ್ಷತ್ರದಂತೆ ಚಿರಸ್ಥಾಯಿಯಾಗಿ ಎಂದಿಗೂ ವೀರಶೈವ-ಲಿಂಗಾಯತ ಧರ್ಮಾಕಾಶದಲ್ಲಿ ಮಿನುಗುತ್ತಿರುವರು.
(ಶಿಕ್ಷಣ ಕ್ಷೇತ್ರದ ದಕ್ಷ, ಪ್ರಾಮಾಣಿಕ ಆಡಳಿತಾಕಾರಿ, ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ, ಸದಾಶಿವ ಒಡೆಯರರವರು ಹುಟ್ಟಿದ್ದು ಧಾರವಾಡದ ಮರೇವಾಡ ಗ್ರಾಮದಲ್ಲಿ. ತಂದೆ ಶಿವದೇವ ಒಡೆಯರ, ತಾಯಿ ಗಿರಿಜಾದೇವಿ. ಪ್ರಾರಂಭಿಕ ಶಿಕ್ಷಣ ಹಾವೇರಿ. ಆಟದಲ್ಲಿ ಸದಾಮುಂದು. ಬ್ಯಾಡಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳು. ಕಾಲೇಜು ವಿದ್ಯಾಭ್ಯಾಸ ಧಾರವಾಡ. ೧೯೪೫ರಲ್ಲಿ ಬಿ.ಎ. (ಆನರ್ಸ್) ಪದವಿ. ೧೯೪೭ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ. ೧೯೪೮ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಎರಡು ವರ್ಷ ಸೇವೆ. ೧೯೪೯ರಲ್ಲಿ ಸ್ಥಾಪಿತವಾದ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರರ್ ಆಗಿ ನೇಮಕ. ೧೯೫೧ರಲ್ಲಿ ಸಹಾಯಕ ಕುಲಸಚಿವ, ೧೯೫೭ರಲ್ಲಿ ಕುಲಸಚಿವರ ಹುದ್ದೆ. ೧೯೬೭-೬೮ರಲ್ಲಿ ಉಪಕುಲಪತಿಗಳಾಗಿ ಕಾರ‍್ಯನಿರ್ವಹಣೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಮೇಲೆ ಅಮೆರಿಕಾ ಸರಕಾರದ ಆಹ್ವಾನದ ಮೇರೆಗೆ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳ ಭೇಟಿ. ಬ್ರಿಟಿಷ್ ಕೌನ್ಸಿಲ್ ಆಹ್ವಾನದ ಮೇರೆಗೆ ಇಂಗ್ಲೆಂಡ್ ಭೇಟಿ. ಇದಲ್ಲದೆ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಈಜಿಪ್ಟ್ ದೇಶಗಳಿಗೂ ಭೇಟಿ. ಅಲ್ಲಿನ ಆಡಳಿತ ಪದ್ಧತಿ, ವಿಧಾನಗಳ ಅಳವಡಿಕೆ. ವಿಶ್ವವಿದ್ಯಾಲಯದ ಉನ್ನತಿಗೆ ಪಟ್ಟ ಶ್ರಮ. ಆಡಳಿತ ಮಧ್ಯೆ ರಚಿಸಿದ ಕೆಲವು ಕೃತಿಗಳು. ‘ಜೀವನ ಕಲೆ’ ಪ್ರಬಂಧ ಸಂಕಲನ, ರವೀಂದ್ರ ದರ್ಶನ, ಇದು ಜೀವನ ಮತ್ತೆರಡು ಚಿಂತನ ಶೀಲ ಸಂಕಲನಗಳಿಂದ ಬರವಣಿಗೆಗೆ ತಂದ ಕಾಂತಿ. ನಾಟಕಗಳು-ಜೋನ್ ಆಫ್ ಆರ್ಕ್ ಮತ್ತು ಇತರ ನಾಟಕಗಳು. ಇಂಗ್ಲಿಷ್‌ನಲ್ಲಿ THE LIGHT OF OTHER DAYS, TRAILING CLOUD. ಸಂಪಾದಿತ- BASAVESHWARA COMMEMORATION VOLUME. ರವೀಂದ್ರ ದರ್ಶನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಐವತ್ತನೇ ಹುಟ್ಟುಹಬ್ಬಕ್ಕೆ ಹಿತೈಷಿಗಳು ಅರ್ಪಿಸಿದ ಗೌರವಗ್ರಂಥ ‘ಸವಿಸಂಚಯ.’)
ಕ್ರಿ. ಶ. ೧೨ನೇ ಶತಮಾನದಲ್ಲಿ ಕನ್ನಡನಾಡು ಒಂದು ಅಭೂತಪೂರ್ವ ಕ್ರಾಂತಿಯ ಬೆಳಕನ್ನು ಕಂಡಿತು. ಮಹಾತ್ಮಾ ಬಸವೇಶ್ವರ, ಪ್ರಭುದೇವ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ದರಾಮರಂಥ ಮಹಾಶರಣ ಶರಣೆಯರು ಈ ನಾಡಿನಲ್ಲಿ ಬದುಕಿದ ಕಾಲ ಅದು. ಸಕಲ ಜೀವಿಗಳ ಕಲ್ಯಾಣಕ್ಕಾಗಿ ಅನವರತ ಚಿಂತಿಸಿದ ಈ ಧರ್ಮ ಜಿಜ್ಞಾಸುಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಚರ್ಚಿಸಿ ನಿಷ್ಕರ್ಷಿಸಲು ಅನುಭವಮಂಟಪದಂಥ ಮಹಾಸಂಸ್ಥೆಯನ್ನು ಕಟ್ಟಿ, ತಮ್ಮ ಅನುಭವಜನ್ಯವಾದ ಅನಿಸಿಕೆಗಳನ್ನು ಸುಲಭ ಹಾಗೂ ಲಲಿತವಾದ ಕನ್ನಡದಲ್ಲಿ ವಚನರೂಪದಲ್ಲಿ ಬರೆದಿಟ್ಟು, ಮುಂದಿನ ಜನಾಂಗಗಳಿಗೆ ದಾರಿದೀಪವಾಗುವಂಥ ಸೂತ್ರಗಳನ್ನು ಒದಗಿಸಿದ ಪುಣ್ಯಜೀವಿಗಳು ಬದುಕಿದ ಕಾಲವದು. ಆ ಉದಾತ್ತ ಪರಂಪರೆಯಲ್ಲಿ ನಾಡಿನಾದ್ಯಂತ ಅನೇಕ ಮಠಮಾನ್ಯಗಳು ಕಾರ್ಯಮಾಡಲು ಆರಂಭಿಸಿದವು. ಇದೇ ಪರಂಪರೆಯ ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗದ ಈ ಪರಂಪರೆ ವಿಜಯಮಹಾಂತೇಶ ನಿಂದ ಮುಂದುವರಿದು ಅನ್ನದಾನೇಶ, ಕೊಟ್ಟೂರೇಶ ಎಂಬ ಶಿಷ್ಯರ ಮೂಲಕ ಪ್ರವಹಿಸಿ ಬಂದಿತು. ಅವರಲ್ಲಿ ಶ್ರೀ ಅನ್ನದಾನೇಶರು ಹಾಲಕೆರೆಯಲ್ಲಿ ನೆಲೆನಿಂತು ಧರ್ಮಪ್ರಸಾರದ ಕಾರ್ಯಕೈಕೊಂಡರು. ಇವರಿಂದ ಮುಂದೆ ಕರಿಸಿದ್ಧಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿ, ಅನ್ನದಾನ ಸ್ವಾಮಿ, ಕಿರಿಯ ಮುಪ್ಪಿನ ಬಸವಲಿಂಗಸ್ವಾಮಿ, ಹಿರಿಯ ಅನ್ನದಾನೀಶ್ವರ, ಗುರು ಅನ್ನದಾನೀಶ್ವರಸ್ವಾಮಿ, ಮುಪ್ಪಿನ ಬಸವಲಿಂಗಸ್ವಾಮಿಗಳು ಇವರುಗಳ ಮುಖಾಂತರ ಈ ಪರಂಪರೆ ಹರಿದುಬಂದಿತು. ಮುಪ್ಪಿನ ಬಸವಲಿಂಗಸ್ವಾಮಿಗಳ ಕರಸಂಜಾತರಾಗಿ ಮೂಡಿಬಂದವರು ೧ನೇ ಶ್ರೀ ಅನ್ನದಾನ ಮಹಾಸ್ವಾಮಿಗಳವರು. ಈ ಶ್ರೀಗಳವರು ದೀರ್ಘವೂ ಪರಿಪೂರ್ಣವೂ ಆದ ೧೦೨ ವರ್ಷಗಳ ಆಯುಷ್ಯವನ್ನು ಕಳೆದು ಕ್ರಿ.ಶ.೧೯೧೨ರಲ್ಲಿ ಹಾಲಕೆರೆಯಲ್ಲಿ ಲಿಂಗೈಕ್ಯರಾದರು. ಬರ ಕಾಲದಲ್ಲಿಯೇ ಮಠದ ಕೀರ್ತಿ ಬಹುದೂರದವರೆಗೆ ಹರಡಿತ್ತು
.ಕ್ರಿ.ಶ.೧೯೧೦ರಲ್ಲಿ ನಡೆದ ಇವರ ಪಟ್ಟಾಭಿಷೇಕಕ್ಕೆ ಆಗಮಿಸಿದ ಅನೇಕ ಹರ ಗುರು ಚರಮೂರ್ತಿಗಳಲ್ಲಿ, ವೀರಶೈವರಿಗೆಲ್ಲ ಪ್ರಾತಃಸ್ಮರಣೀಯರಾದ ಹಾನಗಲ್ಲ ಕುಮಾರಸ್ವಾಮಿಗಳೂ ಹಾಗೂ ಹಾವೇರಿಯ ಶಿವಬಸವಸ್ವಾಮಿಗಳೂ ಪ್ರಮುಖರು. ಹಾನಗಲ್ಲ ಕುಮಾರಸ್ವಾಮಿಗಳ ಒಡನಾಟದ ಕಾರಣದಿಂದ, ಅನ್ನದಾನಸ್ವಾಮಿಗಳು ಅವರ ಉದಾತ್ತ ವಿಚಾರ, ದೂರದೃಷ್ಟಿ ಹಾಗೂ ಸಮಾಜಕಲ್ಯಾಣ ಕಾರ್ಯಗಳಿಂದ ಅತ್ಯಂತ ಪ್ರಭಾವಿತರಾದರು. ಅವರು ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ನೆರವಾಗತೊಡಗಿದರು. ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗಮಂದಿರ ಇವರಿಗೆ ಅತಿ ಮೆಚ್ಚಿನ ಸಂಸ್ಥೆಯಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಮಾಡಿದ ಅನೇಕ ಸಮಾಜಕಲ್ಯಾಣ ಕಾರ್ಯಗಳಲ್ಲಿ ಅತ್ಯಂತ ಮಹತ್ವವಾದದ್ದು ಶಿವಯೋಗ ಮಂದಿರದ ಸ್ಥಾಪನೆ. ಎಂದಿನಿಂದಲೂ ವೀರಶೈವ ಧರ್ಮವನ್ನು ರಕ್ಷಿಸುತ್ತ, ಸಮಾಜದ ಜನತೆಯಲ್ಲಿ ದೈವಭಕ್ತಿ, ಧರ್ಮಪ್ರಜ್ಞೆ ಹಾಗೂ ನೀತಿಯುತ ನಡೆ-ನುಡಿಗಳನ್ನು ಪೋಷಿಸಿಕೊಂಡು ಬಂದ ಸಂಸ್ಥೆಗಳೆಂದರೆ ಮಠಗಳು. ಈ ಮಠಗಳಿಗೆ ಯೋಗ್ಯ ಮರಿಗಳನ್ನು ಆರಿಸಿ ಅವರಿಗೆ ಅವಶ್ಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಹಿತ್ಯಕ ತರಬೇತಿಯನ್ನು ಪವಿತ್ರವಾದ ಪರಿಸರದಲ್ಲಿ ಒದಗಿಸಿ, ಅವರನ್ನು ಒಳ್ಳೆ ಸ್ವಾಮಿಗಳಾಗು ವಂತೆ ತರಬೇತಿಗೊಳಿಸಲು ಅವಶ್ಯವಾದ ಸೂಕ್ತಶಿಕ್ಷಣ ಕೊಡುವಂಥ ಸಂಸ್ಥೆ ಸಮಾಜಕ್ಕೆ ಅವಶ್ಯವಾಗಿ ಬೇಕಾಗಿತ್ತು ಇದರ ಬಗ್ಗೆ ಬಹಳ ಮುಂದಾಲೋಚನೆಯಿಂದ ವಿಚಾರ ಮಾಡಿ, ಅತ್ಯಂತ ಪರಿಶ್ರಮದಿಂದ ಅದಕ್ಕೆ ಸೂಕ್ತವಾದ ನದಿಯ ದಂಡೆಯಲ್ಲಿಯ ಸುಂದರ ನಿವೇಶನವನ್ನು ಆರಿಸಿ, ಶಿವಯೋಗಮಂದಿರವೆಂಬ ಮಹಾಸಂಸ್ಥೆಯನ್ನು ಹಾನಗಲ್ಲ ಕುಮಾರಸ್ವಾಮಿಗಳು ಆರಂಭಿಸಿ ಸಮಾಜಕ್ಕೆ ಮಹದುಪಕಾರ ಮಾಡಿದರು. ಕ್ರಿ.ಶ.೧೯೪೨ರಲ್ಲಿ ಈ ಭಾಗದಲ್ಲಿ ವ್ಯಾಪಿಸಿದ ಭೀಕರ ಕ್ಷಾಮದ ಪರಿಣಾಮ ಒದಗಿದ ಆರ್ಥಿಕ ತೊಂದರೆಯಿಂದಾಗಿ ಶಿವಯೋಗಮಂದಿರವು ಮುಂದುವರೆಯದ ಸಂಧಿಗ್ಧ ಪರಿಸ್ಥಿತಿಯಲ್ಲಿತ್ತು. ಆಗ ಅನ್ನದಾನಸ್ವಾಮಿಗಳು ಅದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡು, ೫-೬ ವರ್ಷಗಳಲ್ಲಿ ಸುಮಾರು ೮೦ ಸಾವಿರ ರೂಪಾಯಿಗಳ ವಿನಿಯೋಗದಿಂದ ಬಂದಂತಹ ಆರ್ಥಿಕ ಸಂಕಷ್ಟವನ್ನು ದೂರಿಕರಿಸಿ ಮುಂದುವರೆಸಿದರು. ಶಿವಯೋಗ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೭ನೇ ಅಧಿವೇಶನ ಜರುಗಿದಾಗ ಅನ್ನದಾನಸ್ವಾಮಿಗಳು ೪೦೦ ಚೀಲ ಅಕ್ಕಿಯನ್ನು ಮಂದಿರದ ದಾಸೋಹಕ್ಕೆ ಸಲ್ಲಿಸಿದ್ದಲ್ಲದೇ ಪ್ರಸಾದ ವಿನಿಯೋಗ ಕಾರ್ಯವನ್ನು ಶ್ರೀಗಳು ಒಬ್ಬರೇ ವಹಿಸಿಕೊಂಡಿದ್ದರು. ಈ ಕಾರ್ಯ ಲಕ್ಷಾಂತರ ಜನರನ್ನು ಬೆರಗುಗೊಳಿಸುವಂತೆ ಮಾಡಿತು.
ಶಿಕ್ಷಣದಲ್ಲಿ ಶ್ರೀಗಳಿಗೆ ಎಂದಿನಿಂದಲೂ ವಿಶೇಷ ಆಸಕ್ತಿಇದ್ದಿತ್ತು. ಹಾಗಾಗಿ ಹಾಲಕೆರೆಗೆ ಸಮೀಪದ ನಗರವಾದ ನರೇಗಲ್ಲಿನಲ್ಲಿ ಒಳ್ಳೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ಗಂಡುಮಕ್ಕಳ ಮಾಧ್ಯಮಿಕ ಶಾಲೆ’ಯು ಈ ಭಾಗದ ವಿದ್ಯಾಸಂಸ್ಥೆಗಳಲ್ಲಿ ಮಾತೃಸ್ಥಾನದಲ್ಲಿರುವ ಸಂಸ್ಥೆಯಾಗಿದೆ. ಕ್ರಿ.ಶ.೧೯೧೯ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಕ್ರಿ.ಶ.೧೯೪೬ರಲ್ಲಿ ಸರಕಾರದಿಂದ ಮನ್ನಣೆ ಪಡೆಯಿತು. ಮೊದಮೊದಲು ಗ್ರಾಮಸ್ಥರ ಆಡಳಿತದಲ್ಲಿದ್ದ ಈ ಶಾಲೆ ಕೆಲವೊಂದು ತಾಪತ್ರಯಗಳಿಂದ ಕ್ರಿ.ಶ.೧೯೫೫ ರಲ್ಲಿ ಶ್ರೀಗಳವರ ಕೈಸೇರಿತು. ಶ್ರೀಗಳ ಪರುಷ ಹಸ್ತಸ್ಪರ್ಶದಿಂದ ಈ ಸಂಸ್ಥೆಯು ಮುಂದೆ ಉಜ್ವಲವಾಗಿ ಬೆಳೆಯಿತು. ಈಗ ಈ ಸಂಸ್ಥೆ ಅತ್ಯಂತ ಗುನಮಟ್ಟದ ಶಿಕ್ಷಣ ನೀಡುವಲ್ಲಿ ನಾಡಿನ ಪ್ರಮುಖ ವಿದ್ಯಾಸಂಸ್ಥೆಯಾಗಿ ಕಾರ್ಯಮಾಡುತ್ತಿದೆ. ಸುಮಾರು ಮೂರುಲಕ್ಷ ರೂ.ಗಳ ಖರ್ಚಿನಿಂದ ಕಟ್ಟಿಸಿದ ಕಟ್ಟಡವನ್ನು ಶಾಲೆ ಪಡೆದುಕೊಂಡಿದೆ.
ಸಂಸ್ಕೃತ ಭಾಷೆ ಭಾರತದ ಜ್ಞಾನನಿಧಿಯ ಅಕ್ಷಯ ಭಾಂಡಾರ. ಅದು ನಮ್ಮ ಸಂಸ್ಕ್ರತಿಯ ಉಗಮದ ಸೆಲೆಯಾಗಿದೆ.. ನಮ್ಮ ತತ್ವಜ್ಞಾನ, ಧರ್ಮದ ವಿಚಾರಗಳನ್ನು ಅರಿಯಬೇಕಾದರೆ ಅದರ ಜ್ಞಾನ ನಮಗೆ ಅತ್ಯಂತ ಅವಶ್ಯವಾದದ್ದೆಂದು ಅರಿತ ಶ್ರೀಗಳವರು ಕ್ರಿ.ಶ.೧೯೬೨ನೇ ಇಸ್ವಿಯಲ್ಲಿಯೇ ನರೇಗಲ್ಲಿನಲ್ಲಿ ‘ಮಲ್ಹಣಾರ್ಯ ಸಂಸ್ಕೃತ ಪಾಠಶಾಲೆ’ ಯನ್ನು ಆರಂಭಿಸಿದರು. ಇಲ್ಲಿ ಅನೇಕ ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸಮಾಡಿ ನಾಡಿನ ತುಂಬೆಲ್ಲ ತಮ್ಮ ವಿದ್ವತ್ ಪ್ರದರ್ಶನ ಮಾಡುತ್ತ ಖ್ಯಾತರಾಗಿದ್ದಾರೆ.
ಈ ಭಾಗದಲ್ಲಿ ಉಚ್ಚ ಶಿಕ್ಷಣ ಸಂಸ್ಥೆಗಳ ಅಭಾವವು ಶ್ರೀಗಳನ್ನು ವಿವಂಚನೆಗೆ ಈಡು ಮಾಡಿದ್ದಿತು. ಅದಕ್ಕಾಗಿ ಈ ಭಾಗದ ಜನತೆಯಲ್ಲಿ ಇಂಥ ಸಂಸ್ಥೆಗಳ ಅವಶ್ಯಕತೆಯ ಬಗ್ಗೆ ಜಾಗೃತಿಯನ್ನುಂಟುಮಾಡಿ ಗಜೇಂದ್ರಗಡ, ರೋಣ, ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಸಂಚಾರ ಕೈಕೊಂಡು, ಹಣ ಸಂಗ್ರಹಿಸಿ ನರೇಗಲ್ಲಿನಲ್ಲಿ ಕಾಲೇಜನ್ನು ಆರಂಭಿಸಿದರು. ‘ಅನ್ನದಾನೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ’ ಎಂಬ ಅಭಿದಾನವನ್ನು ಪಡೆದ ಈ ಕಾಲೇಜು, ದಿನಾಂಕ ೨೦-೯-೧೯೬೭ ರಂದು ಆರಂಭ ವಾಯಿತು. ಇದರ ಪ್ರಾರಂಭೋತ್ಸವವು ಅಂದಿನ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಹಳ್ಳಿಕೇರಿ ಗುದ್ದೆಪ್ಪನವರ ಅಧ್ಯಕ್ಷತೆಯಲ್ಲಿ, ಕರ್ನಾಟಕವಿಶ್ವವಿದ್ಯಾಲಯದ ಅಂದಿನ ಧೀಮಂತ ಕುಲಪತಿಗಳಾಗಿದ್ದ ಮಹಾಮೇಧಾವಿ ಡಾ.ಡಿ.ಸಿ. ಪಾವಟೆ ಯವರಿಂದ ನೆರವೇರಿಸಲ್ಪಟ್ಟಿತು. ಹಳ್ಳಿಗಾಡಿನ ಜನರು ಮಕ್ಕಳ ವಿದ್ಯಾಭ್ಯಾಸಕ್ಕೆಂದು ದೊಡ್ಡ ಊರುಗಳಿಗೆ ವಲಸೆಹೋಗುತ್ತಿದ್ದರು. ಮತ್ತು ಅನೇಕ ಅನಾನುಕೂಲತೆಗಳನ್ನು ಮತ್ತು ತೊಂದರೆಗಳನ್ನು ಅನುಭವಿಸಿ ಮಕ್ಕಳನ್ನು ದೊಡ್ಡ ಊರಿನಲ್ಲಿ ಇಟ್ಟು ವಿದ್ಯಾಭ್ಯಾಸಮಾಡಿಸುತ್ತಿದ್ದರು. ಇವುಗಳನ್ನು ಕಂಡ ಶ್ರೀಗಳು ಹಳ್ಳಿಗಾಡಿನಲ್ಲಿಯೇ ಇಂಥ ಸಂಸ್ಥೆಯನ್ನು ನಿರ್ಮಿಸಬೇಕೆಂದು ಶ್ರಮಿಸಿದರು. ಇಂದು ಈ ಕಾಲೇಜು ಸುಮಾರು ನಾಲ್ಕುಲಕ್ಷ ರೂಪಾಯಿ ಖರ್ಚಿನಿಂದ ಕಟ್ಟಿಸಲ್ಪಟ್ಟ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ನಕ್ಷೆಯನ್ನು ಪೂಜ್ಯ ಶ್ರೀಗಳೇ ಸ್ವತಃ ತಮ್ಮ ಬೆತ್ತದಿಂದ ತಯಾರಿಸಿದರು. ಶಿಲ್ಪಶಾಸ್ತ್ರದಲ್ಲಿ ಅವರಿಗೆ ವಿಶೇಷವಾದ ಗತಿಯಿದ್ದಿತು. ಲಕ್ಷಣವಾದ ವಿನ್ಯಾಸವನ್ನು ಹೊಂದಿದ ಕಟ್ಟಡವನ್ನು ನೋಡಿದಾಗ ಶ್ರೀಗಳ ಶಿಲ್ಪಶಾಸ್ತ್ರಜ್ಞಾನ ಹಾಗೂ ಸೌಂದರ್ಯಪ್ರಜೆಯ ಕಲ್ಪನೆಯು ನಮ್ಮೆದುರಿಗೆ ಮೂಡುತ್ತದೆ. ಈ ಕಾಲೇಜು ಸುಮಾರು ೩ ಲಕ್ಷ ಕಿಮ್ಮತ್ತಿನ ವಸತಿಗೃಹವನ್ನೂ ಹೊಂದಿವೆ. ಈ ಕಾಲೇಜು ಶ್ರೀ ಟಿ.ಕೆ.ಪಾಟೀಲ, ಎಂ.ಎ (ಲಂಡನ್) ಹಾಗೂ ಡಾ.ಡಿ.ಎಸ್. ಕರ್ಕಿಯವರಂಥ ಅನುಭವಿ ಹಾಗೂ ಸಮರ್ಥ ಹಾಲಕೆರೆ ಸನ್ನಿಧಾನ ಪ್ರಿನ್ಸಿಪಾಲರನ್ನು ಪಡೆದುಕೊಂಡಿತ್ತು. ಶ್ರೀ.ಟಿ.ಕೆ.ಪಾಟೀಲರು ಪ್ರಿನ್ಸಿಪಾಲರಾಗಿದ್ದಾಗ, ಕರ್ನಾಟಕ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಗಣನೀಯ ಸೇವೆ ಸಲ್ಲಿಸಿದರು. ಡಾ.ಕರ್ಕಿಯವರು ಉದ್ಧಾಮ ಕವಿಗಳೂ ಭಾಷಾವಿಜ್ಞಾನ ಪಂಡಿತರೂ ಆಗಿದ್ದರು. ಕಾಲೇಜಿನ ಆರಂಭದ ದಿನಮಾನಗಳಲ್ಲಿ ಅವರು ಉತ್ತಮ ಕಕ್ಷೆಯಲ್ಲಿಯ ಪರಂಪರೆಗಳನ್ನು ಹಾಕಿಕೊಟ್ಟರು. ಇಂದು ನರೇಗಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ ಗ್ರಾಮೀಣಮಟ್ಟದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಶ್ರೀಗಳು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು. ಆದ್ದರಿಂದಲೇ ಅವರು ಕ್ರಿ.ಶ.೧೯೭೧ರಲ್ಲಿ ನರೇಗಲ್ಲಿನಲ್ಲಿ ಶ್ರೀ ಅನ್ನದಾನ ವಿಜಯ ಮಾಧ್ಯಮಿಕ ಬಾಲಿಕೆಯರ ಶಾಲೆ’ಯನ್ನು ಆರಂಭಿಸಿದರು. ಈ ಶಾಲೆಯಲ್ಲಿ ಈಗ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾದ್ಯಯನ ಮಾಡಿ ಸುಶಿಕ್ಷಿತೆಯರಾಗಿದ್ದಾರೆ.
ಇದಲ್ಲದೆ ನಿಡಗುಂದಿಯಲ್ಲಿ ‘ಶ್ರೀ ಅನ್ನದಾನೇಶ್ವರ ಮಾಧ್ಯಮಿಕ ಶಾಲೆ ನಿಡಗುಂದಿ’ ಎಂಬ ಹೆಸರಿನ ಶಾಲೆಯನ್ನು ಶ್ರೀಗಳು ಕ್ರಿ.ಶ.೧೯೬೭ರಲ್ಲಿ ಆರಂಭಿಸಿದರು. ಈಗ ಈ ಶಾಲೆಯಲ್ಲಿ ಸುಮಾರು ೧೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿ ಪ್ರಸಾದನಿಲಯದ ಏರ್ಪಾಟನ್ನೂ ಮಾಡಿದ್ದಾರೆ. ಇದರ ಬೃಹತ್ ಕಟ್ಟಡವೂ ನಿರ್ಮಾಣ ಹಂತದಲ್ಲಿದೆ.
ಹಾಗೆಯೇ ಅಬ್ಬಿಗೇರಿಯಲ್ಲಿ ಶ್ರೀ ಅನ್ನದಾನೀಶ್ವರ ಮಾಧ್ಯಮಿಕ ಶಾಲೆ, ಅಬ್ಬಿಗೇರಿ’, ಎಂಬ ಹೆಸರಿನ ಶಾಲೆಯನ್ನು ಕ್ರಿ.ಶ.೧೯೭೨ರಲ್ಲಿ ಆರಂಭಿಸಿದರು. ಇಲ್ಲಿ ಈಗ ಸುಮಾರು ೧೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಮಠದ ಉಚ್ಚ ಪರಂಪರೆಯನ್ವಯ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜೊತೆಗೆ ವಸತಿ ಹಾಗೂ ಅನ್ನದಾನದ ವ್ಯವಸ್ಥೆಯಾಗಬೇಕೆಂಬುದನ್ನು ಸ್ವಾಮಿಗಳು ಚೆನ್ನಾಗಿ ಅರಿತಿದ್ದರು. ಅದಕ್ಕಾಗಿಯೇ ನರೇಗಲ್ಲಿನಲ್ಲಿ ೫೨ ಕೋಣೆಗಳುಳ್ಳ ಶ್ರೀ ಅನ್ನದಾನ ವಿಜಯ ವಿದ್ಯಾರ್ಥಿಗಳ ವಸತಿಗೃಹ’ ವನ್ನು ಶ್ರೀಗಳು ಕ್ರಿ.ಶ.೧೯೬೫ರಲ್ಲಿ ನರೇಗಲ್ಲಿನಲ್ಲಿ ಸ್ಥಾಪಿಸಿದರು. ಈ ವಸತಿಗೃಹದ ಉದ್ಘಾಟನೆಯನ್ನು ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರು ೩೦-೬-೧೯೬೫ರಂದು ನೆರವೇರಿಸಿದರು.
ಅನ್ನದಾಸೋಹಕ್ಕಾಗಿ ನರೇಗಲ್ಲಿನಲ್ಲಿ ಶ್ರೀ ಕೋಡೀಕೊಪ್ಪದ ವೀರಪ್ಪಜ್ಜನವರ ಬಾಗಲಕೋಟ ಶ್ರೀ ಮಲ್ಲಣಾರ್ಯರ ಉಚಿತ ಪ್ರಸಾದ ನಿಲಯ’ವೆಂಬ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ, ಸುಮಾರು ೫೦೦ ವಿದ್ಯಾರ್ಥಿಗಳಿಗೆ ಪ್ರಸಾದದ ಅನುಕೂಲತೆಯನ್ನು ಶ್ರೀಗಳು ಒದಗಿಸಿದರು. ಮರಣ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಶೋಧನೆಗಾಗಿ ಬಸವರಾಜಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯಂತೆ ಧರ್ಮಗ್ರಂಥಗಳ ಪರಿಷ್ಕರಣ ಹಾಗೂ ಅವುಗಳಿಗೆ ಸಂಬಂಧಿಸಿದ ಆಕರಗಳ ಅನುಕೂಲತೆಗಳನ್ನು ಒದಗಿಸಿದರು.
ಧರ್ಮಗ್ರಂಥಗಳ ಪರಿಶೋಧನೆಗಾಗಿ ಪಂಡಿತರನ್ನು ಬೇರೆ ಬೇರೆ ಸ್ಥಳಗಳಿಗೆ ಕಳಿಸಿ ಪರಿಷ್ಕರಿಸಲ್ಪಟ್ಟು ಹಲವಾರು ಗ್ರಂಥಗಳನ್ನು ಶ್ರೀಮಠವು ಪ್ರಕಾಶನ ಗೊಳಿಸಿದೆ 6-1-1925 ರಂದು ಪಂಡಿತ್ ಬಸವರಾಜ ಶಾಸ್ತ್ರಿಗಳು ಸನ್ನಿಧಿಯ ಅಪ್ಪಣೆಯ ಮೇರೆಗೆ ಮದ್ರಾಸಿಗೆ ಹೋಗಿ ಅಲ್ಲಿ 5 ತಿಂಗಳವರೆಗೆ ಇದ್ದು ಕೆಲವು ಧರ್ಮಗ್ರಂಥಗಳನ್ನು ಶೋಧಿಸಿ ಹಾಲಕೆರೆ ಮಠದಲ್ಲಿ ಅವುಗಳ ಪರಿಷ್ಕಾರ ಕಾರ್ಯವನ್ನು ಕೈಕೊಂಡರು ಸ್ವಾಮಿಗಳ ಆಶ್ರಯದಲ್ಲಿ ಇಂಥ ಬೇರೆಬೇರೆ ಪಂಡಿತರಿಂದ ಬೆಳಕು ಕಂಡ ಕೃತಿಗಳೆಂದರೆ 1) ಶಂಕರಲಿಂಗ ಶತಕ
2) ಕ್ಷಮಾಪರಾಧ ಸ್ತೋತ್ರ 3) ಯೋಗಿರಾಜ ವಿಜಯ 4) ಶ್ರೀ ಅನ್ನಧಾನ ಮಹಾಸ್ವಾಮಿಗಳ ಪುರಾಣ
, ಹೀಗೆ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಸಾದ ನಿಲಯಗಳನ್ನು ನಡೆಯಿಸುವದು, ಇಂಥ ಉಳಿದ ಸಂಸ್ಥೆಗಳಿಗೆ ನೆರವಾಗುವುದು, ಸಂಶೋಧನೆ ಹಾಗೂ ಧರ್ಮ ಗ್ರಂಥಗಳ ಪ್ರಕಟನೆ ಕೈಕೊಳ್ಳುವುದರ ಮುಖಾಂತರ ಶ್ರೀಗಳು ವಿದ್ಯಾಕ್ಷೇತ್ರದಲ್ಲಿ ಬಹಳ ಉಪಯುಕ್ತವಾದ ಸೇವೆ ಸಲ್ಲಿಸಿದರು. ಹಲವಾರು ಪ್ರಸಂಗಗಳಲ್ಲಿ ನಾನು ಶ್ರೀಗಳ ದರ್ಶನ ಪಡೆಯುವ ಅವಕಾಶ ದೊರೆಯಿತು. ಆಗ ಅವರಿಗೆ ಆಗಲೇ ಬಹಳ ವಯಸ್ಸಾಗಿತ್ತು ಮೈತುಂಬ ಕ್ಯಾವಿಯ ಬಟ್ಟೆ, ದೊಡ್ಡ ಕೋಲು, ಮೈಮೇಲೆ ದೊಡ್ಡ ದೊಡ್ಡ ರುದ್ರಾಕ್ಷಿಗಳ ದೊಡ್ಡ ಸರ, ವಿಶಾಲವಾದ ಮುಖದ ಹಣೆಯ ತುಂಬ ಢಾಳವಾಗಿ ಧರಿಸಿದ ವಿಭೂತಿ ಇವುಗಳು ಅವರ ದರ್ಶನವನ್ನು ಅವಿಸ್ಮರಣೀಯವಾಗಿ ಮಾಡುತ್ತಿದ್ದವು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಎಸಗಿದ ಕಾರ್ಯ ಎಷ್ಟು ಮಹತ್ತರವಾಗಿತ್ತೋ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಷ್ಟೇ ಮಹತ್ವದ್ದಾಗಿತ್ತು ಶಿಕ್ಷಣ ಕ್ಷೇತ್ರದಲ್ಲಿ ಪೂಜ್ಯ ಶ್ರೀಗಳು ಮಾಡಿದ ಪ್ರಮುಖ ಕಾರ್ಯಗಳನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಅವುಗಳನ್ನು ಹೀಗೆ ವಿಂಗಡಿಸಿ ಎತ್ತಿ ಹೇಳಬಹುದು : ೧)ಹಳ್ಳಿಗಾಡಿನಲ್ಲಿ ಅಲ್ಲಿಯ ಜನತೆಯ ಸಲುವಾಗಿ, ಅದರಲ್ಲಿಯೂ ಬಡವರ ಅನುಕೂಲಕ್ಕಾಗಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಅವರಲ್ಲಿ ವಿದ್ಯಾಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದು. ೨) ಹಳ್ಳಿಗಾಡಿನ ಹಾಗೂ ದೀನದಲಿತರ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿ ಅವರಿಗೆ ಬಿಸಿಊಟದ ಅನುಕೂಲತೆಗಳನ್ನು ಒದಗಿಸಿದ್ದು, ೩) ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಅಭ್ಯಾಸದ ಮಹತಿಯನ್ನು ಗುರುತಿಸಿ ಅದರ ಅಗತ್ಯ ಜ್ಞಾನವನ್ನುಪ್ರಸುರಪಡಿಸಿದ್ದು, ೪) ಹೆಣ್ಣು ಮಕ್ಕಳ ಶಿಕ್ಷಣ ಅವಶ್ಯಕತೆಯನ್ನು ಮನಗಂಡು ಅವರಿಗಾಗಿ ವಿದ್ಯಾಸಂಸ್ಥೆ ಆರಂಭಿಸಿದ್ದು, ೫) ಧರ್ಮ ಗ್ರಂಥಗಳ ಪರಿಷ್ಕರಣೆ, ಸಂಶೋಧನೆ ಹಾಗೂ ಅವುಗಳ ಪ್ರಕಟನೆಗೆ ಅವಕಾಶ ಕಲ್ಪಿಸಿದ್ದು. ೬) ವ್ಯಾಸ ಕ್ರಮದಲ್ಲಿ ಯೋಗ ಶಿಕ್ಷಣದ ಮಹತಿಯನ್ನರಿತು ಅದನ್ನು ವಿದ್ಯಾಭ್ಯಾಸ ಕ್ರಮದಲ್ಲಿ ಸೇರಿಸಿ ಅದರ ಅಭ್ಯಾಸದ ಅನುಕೂಲತೆಗಳನ್ನು ಎಡೆಮಾಡಿಕೊಟ್ಟಿದ್ದು. ೬)ಇವೆಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಉಳಿವಿಗೆ ಅತಿ ಅವಶ್ಯವಾದ ಶಿವಯೋಗ ಮಂದಿರದಂಥ ಉದಾತ್ತ ವಿದ್ಯಾಸಂಸ್ಥೆಗೆ ಅನೇಕ ರೀತಿಯಿಂದ ನೆರವಾದದ್ದು. ಇವೆಲ್ಲವುಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಅನ್ನದಾನ ಸ್ವಾಮಿಗಳು ಶಿಕ್ಷಣ ಕ್ಷೇತ್ರಕ್ಕೆ ಅಮೋಘವಾದ ಸೇವೆ ಸಲ್ಲಿಸಿದರೆಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು.
ಆಧಾರ ಗ್ರಂಥಗಳು : ೧. ‘ಶ್ರೀ ಗುರು ಅನ್ನದಾನೇಶ್ವರ ಚರಿತಾಮೃತ” – ವೇ.ಪಂ.ಜಿ.ಎಂ.ಚಂದ್ರಶೇಖರ
ಶಾಸ್ತ್ರಿಗಳು ಇಜಾರಿ ಲಕಮಾಪುರ (ಹಾವೇರಿ). ೨. “ಹಾಲಕೆರೆಯ ಶ್ರೀ ಅನ್ನದಾನ ಮಹಾಸ್ವಾಮಿದ್ವಯರು ” – ಡಾ. ಬಿ. ವಿ.
ನಾಗನೂರು ರುದ್ರಾಕ್ಷಿಮಠದ ೭ನೆಯ ಅಧಿಪತಿಗಳಾಗಿ ಬಂದ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳ ಕಾಲ ಸುವರ್ಣಕಾಲವೆಂದೇ ಹೇಳಬೇಕು. ಗಡಿಭಾಗದಲ್ಲಿ ಶ್ರೀಗಳು ಮಾಡಿದ ಧಾರ್ಮಿಕ-ಶೈಕ್ಷಣಿಕ ಕ್ರಾಂತಿ ಅಭೂತಪೂರ್ವವಾದುದು. ೧೯೨೨ ರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ ಆಶೀರ್ವಾದದಿಂದ ಶ್ರೀಮಠದ ಕರ್ಣಧಾರತ್ವವನ್ನು ವಹಿಸಿಕೊಂಡು ಪೂಜ್ಯರು “ಶಿಕ್ಷಣವೇ ಶಕ್ತಿ” ಎಂಬುದನ್ನರಿತು ಶೈಕ್ಷಣಿಕ ಸಂಸ್ಥೆಗಳ ಮೂಲಕ ನಮ್ಮ ನಾಡವರ ಬಡತನ ಹಾಗು ಅಜ್ಞಾನ ನಿವಾರಣೆಗೆ ಹಗಲಿರುಳೂ ಶ್ರಮಿಸಿದವರು ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು.
ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಶೈಕ್ಷಣಿಕ ಕ್ರಾಂತಿ:
ಕ್ರಿ.ಶ. ೧೯೩೨ರಲ್ಲಿಯೇ ಪ್ರಸಾದ ನಿಲಯ ಸ್ಥಾಪಿಸಿ ಜಾತಿ ಮತ ಪಂಥಗಳ ಭೇದವಿಲ್ಲದೆ ನಾಡ ಬಡಮಕ್ಕಳಿಗೆ ಅನ್ನ-ಆಶ್ರಯಗಳನ್ನಿತ್ತು ಸಲುಹಿದ ಅವರು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯನ್ನು ಕ್ರಿ.ಶ. ೧೯೭೫ ರಲ್ಲಿ ಸ್ಥಾಪಿಸುವ ಮೂಲಕ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹದ ಕೈಂಕರ್ಯವನ್ನು ಪ್ರಾರಂಭಿಸಿದರು. ಅವರು ಸ್ಥಾಪಿಸಿದ ಪ್ರಸಾದ ನಿಲಯವು ಸಾರ್ಥಕ ೭೮ ವಸಂತಗಳನ್ನು ಪೂರೈಸಿದೆ. ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ಕಳೆದ ಮೂರು ದಶಕಗಳ ಅವಧಿಯಲ್ಲಿ ಹಲವಾರು ಅಂಗಸಂಸ್ಥೆಗಳನ್ನು ಹೊಂದಿ ಹೂವು-ಹಣ್ಣುಗಳಿಂದ ಕೂಡಿದ ಸುಂದರ ವೃಕ್ಷದಂತೆ ಕಂಗೊಳಿಸುತ್ತಿದೆ.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಿತ್ಯ ೫-೬ ಸಾವಿರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಬೀದರ, ಗುಲಬರ್ಗಾ, ರಾಯಚೂರು, ಬಳ್ಳಾರಿ, ವಿಜಾಪುರ ಮುಂತಾದ ಜಿಲ್ಲೆಗಳ ಗ್ರಾಮಾಂತರ ಪ್ರದೇಶದ ಸಾವಿರಾರು ಬಡಮಕ್ಕಳು ಪ್ರಸಾದದ ಜೊತೆಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ಪಡೆದು ನಾಡು-ನುಡಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ನಗರ ಮಧ್ಯದಲ್ಲಿ ೧೬ ಎಕರೆ ವಿಸ್ತಾರದ ಪ್ರಶಾಂತ, ಸುಂದರ ಹಾಗು ಅಧ್ಯಾತ್ಮಿಕ ಪರಿಸರದಲ್ಲಿ ಪ್ರಾಚೀನ ಆದರ್ಶಗಳ ಜೊತೆಗೆ ಆಧುನಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಶಿಸ್ತು, ಸಹನೆ, ಧೈರ್ಯ, ಸಾಹಸ ಮತ್ತು ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಹಲವಾರು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯ, ಡಿ.ಇಡಿ; ಬಿ.ಇಡಿ ಮಹಾವಿದ್ಯಾಲಯ, ತಾಂತ್ರಿಕ ವಿದ್ಯಾಲಯ ಹಾಗು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯು ವಿಜ್ಞಾನ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ವಿಪುಲ ಗ್ರಂಥಗಳು, ವಿಶ್ವಕೋಶಗಳು, ಪತ್ರಿಕೆಗಳಿಂದ ಸಮೃದ್ಧವಾದ ಗ್ರಂಥಾಲಯ, ಸಮರ್ಥ ಹಾಗು ಸಮರ್ಪಿತ ಸಿಬ್ಬಂದಿ, ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿ ಶ್ರೀಸಾಮಾನ್ಯನಿಗೂ ಉನ್ನತ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಆದರ್ಶ ಸಂಸ್ಥೆಯಾಗಿದೆ. ಶಿಕ್ಷಣ ಪ್ರಸಾರದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿರುವ ಈ ಸಂಸ್ಥೆ ಗಡಿಕನ್ನಡಿಗರಿಗೆ ವರದಾನವಾಗಿದೆ.
ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶ್ರೀಗಳ ಪಾತ್ರ:
ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶಿವಬಸವ ಸ್ವಾಮಿಗಳವರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯವಾದುದು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನಿರಂತರ ಅನ್ನ ಆಶ್ರಯಗಳನ್ನು ಕಲ್ಪಿಸಿದ್ದ ಶ್ರೀಗಳು ಕೆಲವು ಕಾಲ ಭೂಗತರಾಗುವ ಸಂದರ್ಭವೂ ಉಂಟಾಗಿತ್ತು. ೧೯೩೭ರಲ್ಲಿ ಗಾಂಧೀಜಿ ಬೆಳಗಾವಿ-ಹುದಲಿ ಗ್ರಾಮಗಳಿಗೆ ಬಂದ ಸಂದರ್ಭದಲ್ಲಿ ಶ್ರೀಗಳು ಅವರನ್ನು ಕಂಡು ಮಾತನಾಡಿದರು. ಗಾಂಧೀಜಿಯವರ ಆದರ್ಶ-ಹೋರಾಟದ ಬದುಕು ಶ್ರೀಗಳಿಗೆ ಹಿಡಿಸಿತು. ಗಾಂಧೀಜಿಯವರಿಂದಲೇ ಶ್ರೀಗಳು ಖಾದಿ ದೀಕ್ಷೆ ಪಡೆದರು. ಅಂದಿನಿಂದ ಬದುಕಿನ ಕೊನೆಯುಸಿರುವರೆಗೂ ಖಾದಿಧಾರಿಗಳಾಗಿದ್ದರು. ಬೆಳಗಾವಿ ಗಡಿ ಸಮಸ್ಯೆ ಕುರಿತು ಸಮೀಕ್ಷೆಗಾಗಿ ಬಂದ ಫಜಲಿ ಆಯೋಗ, ಮಹಾಜನ ಆಯೋಗಗಳ ಮುಂದೆ ಶ್ರೀಗಳು ಬೆಳಗಾವಿ ಎಂದೆಂದೂ ಕರ್ನಾಟಕದ್ದು ಎಂದು ಬಲವಾಗಿ ಪ್ರತಿಪಾದಿಸಿದರು. ಅವರ ಅವಿಶ್ರಾಂತ ಹೋರಾಟ ಮತ್ತು ಕನ್ನಡ ಕಟ್ಟುವ ಕಾರ್ಯಗಳಿಂದಾಗಿ ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.
ಗೌರವ ಸಮ್ಮಾನಗಳು :
ಸುಮಾರು ಏಳು ದಶಕಗಳ ಕಾಲ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಪೂಜ್ಯ ಶ್ರೀಗಳು ಭಿಕ್ಷೆ ಬೇಡಿ, ನಾಡಿನ ಅಸಂಖ್ಯಾತ ಬಡಮಕ್ಕಳಿಗೆ ಅನ್ನ-ಆಶ್ರಯ ನೀಡಿ ಅವರ ಬಾಳಿಗೆ ಬೆಳಕು ನೀಡಿದ್ದು ಯಾವ ಸ್ವಾರ್ಥಕ್ಕಾಗಿ. ಅವರೆಂದೂ ಪದವಿ-ಪ್ರಶಸ್ತಿಗಳು ದೊರೆಯುತ್ತವೆ ಎಂದು ಆಶೆಗಾಗಿ ಯಾವ ಕಾರ್ಯವನ್ನೂ ಮಾಡಿದವರಲ್ಲ. ಪೂಜ್ಯಶ್ರೀಗಳ ಈ ಬಹುಮುಖ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗಮನಿಸಿದ ಕರ್ನಾಟಕ ವಿಶ್ವವಿದ್ಯಾಲಯ ೧೯೮೯ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಆದರೆ ಗೌರವ ಡಾಕ್ಟರೇಟ ಎಂಬ ಪದವಿ ಎಂದರೇನು ಎಂಬುದೇ ಶ್ರೀಗಳಿಗೆ ಗೊತ್ತಿರಲಿಲ್ಲ. ವೇದಿಕೆ ಮೇಲೆ ರಾಜ್ಯಪಾಲರು ಕೊಡಮಾಡುವ ಪ್ರಶಸ್ತಿಯನ್ನು ಕರಿಕೋಟು ಹಾಕಿಕೊಂಡು ಸ್ವೀಕರಿಸುವುದು ಅವರಿಗೆ ಬೇಡವಾಗಿತ್ತು. ನೂರು ವರ್ಷದ ಸಂಭ್ರಮದಲ್ಲಿದಾಗ ಈ ಗೌರವ ಡಾಕ್ಟರೇಟ ಪೂಜ್ಯರಿಗೆ ಬಂದಿತ್ತು. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಾಧೀಶರೊಬ್ಬರು ಈ ಪದವಿಗಾಗಿ ವಿಪರೀತ ಲಾಭಿ ನಡೆಸಿದ್ದರು. ಅವರಿಗೆ ದೊರೆಯದ ಪ್ರಶಸ್ತಿ ಯಾವುದಕ್ಕೂ ಆಸೆಪಡದ ಶಿವಬಸವ ಸ್ವಾಮಿಗಳ ಪದತಲಕ್ಕೆ ಬಂದಿತ್ತು. ಆಗ ಶಿವಬಸವ ಸ್ವಾಮಿಗಳು ಸಹಜವಾಗಿಯೇ ಬಂದ ಭಕ್ತರೆದುರು ‘ನಮಗೇಕೆ ಈ ಪ್ರಶಸ್ತಿ ಕೊಡುತ್ತಾರೋ, ತಿಳಿಯದು, ಬೇಡುವವರಿಗೆ ಈ ಪ್ರಶಸ್ತಿ ಕೊಡಬೇಕಾಗಿತ್ತು’ ಎಂದು ಹೇಳಿದ್ದರು.
೧೯೯೨ರಲ್ಲಿ ಕರ್ನಾಟಕ ಘನ ಸರಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಪೂಜ್ಯರ ಮಡಿಲಿಗೆ ಬಂದಿತು. ಆದರೆ ಸ್ವೀಕರಿಸಲು ಅವರು ಬೆಂಗಳೂರಿಗೆ ಹೋಗಲಿಲ್ಲ. ಕೊನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಬೆಳಗಾವಿಯಲ್ಲಿ ಒಂದು ಅದ್ದೂರಿ ಸಮಾರಂಭ ನೆರವೇರಿಸಿ, ಪ್ರಶಸ್ತಿ ಕೊಡಮಾಡಿದರು. ಪ್ರಶಸ್ತಿಯನ್ನು ಸ್ವೀಕರಿಸುವಾಗ ಶ್ರೀಗಳ ಮುಖದಲ್ಲಿ ಯಾವ ಬದಲಾವಣೆಗಳು ಆಗಿರಲಿಲ್ಲ. ಪ್ರಶಸ್ತಿ ಬಂದಿತ್ತೆಂಬ ಮಮಕಾರ ಅವರಲ್ಲಿರಲಿಲ್ಲ, ಅಷ್ಟು ನಿರ್ಲಿಪ್ತರಾಗಿ ಪ್ರಶಸ್ತಿಯನ್ನು ತಗೆದುಕೊಂಡರು.
ಜನ್ಮ ಶತಮಾನೋತ್ಸವ
ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರಿಗೆ ೧೯೮೯ರಲ್ಲಿ ನೂರು ವರ್ಷಗಳು ತುಂಬಿದವು. ಅವರ ಅಸಂಖ್ಯಾತ ಭಕ್ತಸಮೂಹ ಜನ್ಮಶತಮಾನೋತ್ಸವವನ್ನು ಅದ್ದೂರಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದರು.
ಹೊಸಪೇಟೆ ಕೊಟ್ಟೂರುಸ್ವಾಮಿಮಠದ ಪೂಜ್ಯ ಜಗದ್ಗುರು ಸಂಗನಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಯಿತು. ಅನೇಕ ಸಮಿತಿ-ಉಪಸಮಿತಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡವು. ನಾಗನೂರಿನಲ್ಲಿ ಮೂರುದಿನಗಳ ಕಾಲ ಶತಮಾನೋತ್ಸವ ಸಮಾರಂಭ ನಾಡಿನ ಅನೇಕ ಗಣ್ಯರ-ಮಠಾಧಿಪತಿಗಳ ಸಮ್ಮುಖದಲ್ಲಿ ಸಾಂಗವಾಗಿ ಜರುಗಿತು. ಈ ಸಂದರ್ಭದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥ ಗ್ರಂಥಗಳ ಲೋಕಾರ್ಪಣೆಗೊಂಡುದು ವಿಶೇಷವೆನಿಸಿತು. ಗುಬ್ಬಿಯ ಮಲ್ಲಾಣಾರ್ಯ ರಚಿತ ವೀರಶೈವಾಮೃತ ಮಹಾಪುರಾಣ, ಬಸವಣ್ಣನವರ ವಚನಗಳ ಮರಾಠಿ ಅನುವಾದ, ಮತ್ತು ‘ಶಿವದೀಪ್ತಿ’ ಶಿವಬಸವ ಸ್ವಾಮಿಗಳ ಶತಮಾನೋತ್ಸವ ಅಭಿನಂದನ ಗ್ರಂಥಗಳು ಬಿಡಗಡೆಯಾದವು. ಬೆಳಗಾವಿ ಭಕ್ತರಿಗೆ ಪ್ರತ್ಯೇಕ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕೆಂದು ನಿರ್ಧರಿಸಿ, ಬೆಳಗಾವಿಯಲ್ಲಿಯೂ ಫೆಬ್ರವರಿ ೧೯೯೦ ರಲ್ಲಿ ಅದ್ದೂರಿಯಿಂದ ಶತಮಾನೋತ್ಸವ ಸಮಾರಂಭ ಆಚರಿಸಿದರು.
ಕನ್ನಡದ ಶಕ್ತಿಕೇಂದ್ರ
ಅಖಿಲ ಭಾರತ ಶಿವಾನುಭವ ಸಮ್ಮೇಳನದ ೧೭ನೇ ಅಧಿವೇಶನವನ್ನು ದಿನಾಂಕ ೬,೭ ನವೆಂಬರ್ ೬೩ ರಂದು ಬೆಳಗಾವಿ ಶಹಪೂರ ಭಕ್ತ ಜನರು ಶ್ರೀ ಮಹಾಸ್ವಾಮಿಗಳನ್ನು ಮುಂದೆ ಮಾಡಿಕೊಂಡು ಬೆಳಗಾವಿ ಲಿಂಗರಾಜ ಕಾಲೇಜಿನ ಭವ್ಯ ಮಂಟಪದಲ್ಲಿ ಶ್ರೀ ಸಿದ್ಧಗಂಗಾಮಠಾಧ್ಯಕ್ಷರಾದ ಶ್ರೀ ಶಿವಕುಮಾರ ಸ್ವಾಮಿಗಳವರ ಘನ ಅಧ್ಯಕ್ಷತೆಯಲ್ಲಿ ಧಾರವಾಡದ ಮುರುಘಾಮಠದ ತ್ರಿವಿಧ ದಾಸೋಹ ಮೂರ್ತಿಗಳಾದ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳ ಸಮರ್ಥ ನೇತೃತ್ವದಲ್ಲಿ ಏರ್ಪಡಿಸಿದರು. ಬೆಳಗಾವಿಯ ಸಾಮಾಜಿಕ ಇತಿಹಾಸದಲ್ಲಿ ಈ ಸಮಾರಂಭವು ಒಂದು ಸ್ಮರಣಾರ್ಹವಾದ ಘಟನೆಯಾಗಿದೆ. ಇದರಿಂದ ಬೆಳಗಾವಿಯಲ್ಲಿ ನಮ್ಮ ಸಮಾಜದ ಸಂಘಟನೆ ಹಾಗು ಸ್ಥಾನಮಾನಗಳ ಅರಿವು ಸಾರ್ವಜನಿಕರಿಗಾಯಿತು.
ಪ್ರತಿವರ್ಷವೂ ಗಣೇಶಚವತಿ, (ಗಣೇಶ ಚವತಿ ಎಂದೇ ನಾಗನೂರು ರುದ್ರಾಕ್ಷಿಮಠದಲ್ಲಿ ಸಿದ್ಧರಾಮೇಶ್ವರ ರಥೋತ್ಸವ ಜರುಗುವುದು. ಅಂದೇ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರು ಅಂದೇ ಲಿಂಗೈಕ್ಯರಾದುದರಿಂದ ಅವರ ಪುಣ್ಯಸ್ಮರಣೆಯು ಜರುಗುವುದು ಒಂದು ಯೋಗಾಯೋಗ) ನಾಡಹಬ್ಬ ಈ ಮೊದಲಾದ ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯ ಸಾಂಸ್ಕೃತಿಕ ಮನೋರಂಜಕ ಕಾರ್ಯಕ್ರಮಗಳನ್ನು ಹಮ್ಮಿ ಆಯಾ ವಿಷಯತಜ್ಞರ ವ್ಯಾಖ್ಯಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಜಾಗೃತಿಯನ್ನೂ ನವಚೈತನ್ಯವನ್ನೂ ಹುಟ್ಟಿಸಿ ಅವರಿಗೆಲ್ಲ ಈ ಉತ್ಸವಗಳ ಮೂಲಕ ಜ್ಞಾನ ಪ್ರಸಾದವನ್ನು ಹಂಚುತ್ತ ಕನ್ನಡ ನಾಡನುಡಿಗಳ ಸೇವೆಗೆ ಶ್ರೀಮಠ ಕೇಂದ್ರಶಕ್ತಿಯಾಗಿದೆ.
ಒಬ್ಬ ಮಹಾತ್ಮರ ಜೀವನ ಚರಿತ್ರೆಯನ್ನು ವೀಕ್ಷಿಸಿದರೆ ನಮ್ಮ ಅಂತರಂಗದ ವಿಕಾಸದ, ಅವರ ವ್ಯಕ್ತಿತ್ವ ಸಮಾಜದ ಮೇಲೆ ಪ್ರಭಾವ ಬೀರುವ ಘಟನೆಯನ್ನು ಚರಿತ್ರೆಯಲ್ಲಿ ಕಾಣುತ್ತೇವೆ.
ಶ್ರೀ ಗುರು ಕುಮಾರೇಶ್ವರರ ಜೀವನವನ್ನು ವೀಕ್ಷಿಸಿದಾಗ ನಮ್ಮ ಅಂತರಂಗ ಶುದ್ಧವಾಗಲು ಶ್ರೀ ಶಿವಯೋಗ ಮಂದಿರ, ಬಹಿರಂಗದ ಸಮಾಜ ಶುದ್ಧಿಗೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ನಿರ್ಮಿಸಿ ಇಡೀ ಭರತ ಖಂಡಕ್ಕೆ ಭವ್ಯ ಕಾಣಿಕೆಯನ್ನು ನೀಡಿರುವರು.
• ನಾಡಿನ ಹಲವಾರು ಮಠಗಳು ಅಸ್ತಿತ್ವ ಕಳೆದುಕೊಂಡು ಅವುಗಳೆಲ್ಲಾ ಸಂಸಾರಿಗಳ ಛತ್ರಗಳಾದ ಸಂದರ್ಭದಲ್ಲಿ,
• ಗುರುಗಳಾದವರು ತಮ್ಮ ತಮ್ಮ ಧರ್ಮದ ತಿಳುವಳಿಕೆ ಆಚಾರ ವಿಚಾರಗಳ ನೀತಿ ನಿಯಮಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ,
• ಷಟ್ಸ್ಥಲಗಳು, ಪಂಚಾಚಾರಗಳು ಏನು? ಯಾವುವು? ಎಂಬುವುದನ್ನು ಮರೆಯುತ್ತಿರುವ ಸಂದರ್ಭದಲ್ಲಿ ಜನಿಸಿದವರು, ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.
ಎಲ್ಲ ಧರ್ಮಗಳಲ್ಲಿ ಎರಡು ಕವಲುಗಳಿವೆ, ಜೈನ ಧರ್ಮದಲ್ಲಿ ದಿಗಂಬರ- ಶ್ವೇತಾಂಬರ. ಕ್ರೈಸ್ತ ಧರ್ಮದಲ್ಲಿ ಪ್ರಾಟೆಸ್ಟೆಂಟ್- ಕ್ಯಾಥೋಲಿಕ್. ಬೌದ್ಧಧರ್ಮದಲ್ಲಿ ಹೀನಾಯಾನ-ಮಹಾಯಾನ. ಇಸ್ಲಾಂ ಧರ್ಮದಲ್ಲಿ ಸೂಯಾ- ಸೂನ್ನಿ, ಕವಲುಗಳಿರುವ ಹಾಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು-ವಿರಕ್ತ ಪಂಥಗಳಿವೆ ಆದರೆ ಅವೆರಡು ಒಂದೆ ಎಂದು ಬೋಧಿಸಿದವರು ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.
‘ಅತ್ಕೇ ಚೇತನ್ ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್’.
ಸಮೀಪದಲ್ಲಿ ಜೇನುತುಪ್ಪ ಸಿಗುವದಾದರೇ ಪರ್ವತದವರೆಗೆ ಏಕೆ ಹೋಗಬೇಕು. ಎಂಬ ನ್ಯಾಯದಂತೆ.
ಶಿವಯೋಗ ಮಂದಿರದ ಎಲ್ಲಾ ಮಹಾ ಮಹಾಸ್ವಾಮಿಗಳು, ಶಿವಯೋಗಿಗಳು ಅವರ ವಿದ್ಯೆಯನ್ನು ಶಿವಯೋಗ ಮಂದಿರದಲ್ಲಿಯೇ ಕಲಿತರೇ ವಿನಃ ಮತ್ತೆ ಯಾವ ಕ್ಷೇತ್ರಕ್ಕೆ ಹೋಗಲಿಲ್ಲಾ. ಆ ಶಿವಯೋಗ ಮಂದಿರದಲ್ಲಿ ತಮ್ಮ ಜೀವನದಲ್ಲಿ ಸಾಧಿಸಿರುವ ಸಾಧನೆಯ ಕೆಲವೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಾಶಿವಯೋಗಿಗಳನ್ನು ಈ ಕೆಳಗೆ ತಿಳಿಸಿದೆ.
1 ವಿದ್ವತ್ ಮತ್ತು. ಲೇಖನಕಲೆಯ ಪ್ರತಿಭಾವಂತರು – ಶ್ರೀ ಜ.ಚ.ನಿಯವರು.
2 ಶಿವಯೋಗ ಮತ್ತು ಕೃಷಿಯಲ್ಲಿ ಬಲ್ಲಿದವರು – ಶ್ರೀ ರುದ್ರಮುನಿ ಶಿವಯೋಗಿಗಳು.
3 ಆಯುರ್ವೇದ ಹಾಗೂ ಭಕ್ತರ ಭವರೋಗನಿವಾರಣೆಯಲ್ಲಿ ತೊಡಗಿದವರು – ಶ್ರೀ ಚನ್ನಬಸವ ಮಹಾಸ್ವಾಮಿಗಳು.
4 ಕನ್ನಡದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಣಕ್ಕೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಆಧ್ಯತೆ ಕೊಟ್ಟವರು -ಡಾ. ಶ್ರೀ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು.
1) ಬೈಲಹೊಂಗಲ ತಾಲೂಕಿನ ಅಂಬರಗದ್ದೆಯ ಶಿವಭಕ್ತರಾದ ಹಿರೇಮಠ ಮನೆತನದಲ್ಲಿ ಜನಿಸಿದ ಕೂಸು, ಹನ್ನೆರಡನೆಯ ವಯಸ್ಸಿಗೆ ಶಿವಯೋಗ ಮಂದಿರಕ್ಕೆ ಸೇರಿ ಅಲ್ಲಿನ ನಿಯಮಪಾಲನೆ ಮಾಡುತ್ತಾ , ಪೂಜೆ, ಯೋಗ, ಸಾಹಿತ್ಯ, ವೇದಾಂತ, ಶಿವಯೋಗ, ಅಧ್ಯಾತ್ಮವಿದ್ಯೆಯಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದು ಶ್ರೇಷ್ಠ ಜ್ಞಾನಿಗಳಾದರು. ಒಮ್ಮೆ ಮಹಾಶಿವಯೋಗಿಗಳು ” ನೀನು ವಿದ್ವತ್ತಿನಲ್ಲಿ ಪ್ರಾವಿಣ್ಯತೆ ಪಡೆದು ಉತ್ತಮ ಲೇಖನ ಕಾರ್ಯ ನಡೆಸುವೆ” ಎಂದು ಆಶೀರ್ವಾದ ಮಾಡಿದ್ದರು. ಅದೇ ರೀತಿಯಲ್ಲಿ ಶಿವಯೋಗ ಮಂದಿರದಲ್ಲಿ ಪ್ರಥಮ ಬಾರಿಗೆ ‘ಸುಕುಮಾರ’ ಪತ್ರಿಕೆಯನ್ನು ಪ್ರಾರಂಭಿಸಿ ಉತ್ತಮ ಲೇಖಕರಾಗಿ ಶಿವಯೋಗ ಮಂದಿರದಿಂದ ಹೊರಬಂದಿರುವರು. ನಿಡುಮಾಮಿಡಿ ಪೀಠದ ಅಧಿಕಾರ ಸ್ವಿಕರಿಸಿ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ಎಂಬ ಹೆಸರನ್ನು ಪಡೆದರು ಮುಂದೆ ಜ.ಚ.ನಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿವರು. ತಾವೇ ಸ್ವತಃ ಪ್ರಬುದ್ಧ ಲೇಖಕರಾದ ಕಾರಣ ಸಾವಿರಾರು ಪುಸ್ತಕಗಳನ್ನು ಹೊರತಂದಿರುವರು. ವೀರಶೈವರ ಆತ್ಮ ಆಗಿರುವ ಷಟ್ಸ್ಥಲದ ಬಗ್ಗೆ ಜೀವನ ಸಿದ್ಧಾಂತ ಎಂಬ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಅಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜ.ಚ.ನಿಯವರು ಸಾವಿರಾರು ವಚನಗಳನ್ನು ಸಹ ಬರೆದಿದ್ದಾರೆ. ವಿದ್ವತ್ ಲೋಕದಲ್ಲಿ ಸೈ ಎನ್ನುವ ಹಾಗೆ ಕೆಲಸ ಮಾಡಿರುವ ಲೇಖಕರಲ್ಲಿ ಪ್ರಬುದ್ಧತೆಯೊಂದಿಗೆ ಶಿವಯೋಗ ಮಂದಿರದಿಂದ ಹೊರಹೊಮ್ಮಿದವರು ಶ್ರೀ. ಜ.ಚ.ನಿಯವರು ಕೂಡಾ ಒಬ್ಬರು.
2) ಮಹಾಗುರುಗಳಿಂದ ‘ಖರೆಮರಿ’ ಎಂದು ಕರೆಸಿಕೊಂಡಿದ್ದ ರುದ್ರಮುನಿ ಸ್ವಾಮಿಗಳು.
ಹಾವೇರಿ ಜಿಲ್ಲಾ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಎಣ್ಣೆ ಮನೆತನದ ನೀಲಮ್ಮ ಮತ್ತು ವೀರಪ್ಪ ಶಿವಭಕ್ತರ ಮಗು, ಶಿವಯೋಗ ಮಂದಿರದಲ್ಲಿ ಕಲಿಯಲು ಬಂದಾಗ ಟ್ರಸ್ಟ್ ಬೋರ್ಡಿನ ಆಯ್ಕೆಯಲ್ಲಿ ಬರದಿದ್ದರೂ ಶ್ರೀ ಕುಮಾರ ಶಿವಯೋಗಿಗಳು ಹಾನಗಲ್ಲ ವಿರಕ್ತಮಠದ ವೆಚ್ಚದಿಂದ ವಟುವಿನ ಅಭ್ಯಾಸಕ್ಕೆ ಅನುವು ಮಾಡುವರು, ಮಂದಿರದ ಗುರುಕುಲ ಶಿಕ್ಷಣದೊಂದಿಗೆ ಸರ್ವಜೀವಿಯಲ್ಲಿ ದಯೆ, ಗೋಪಾಲನೆ ಅಲ್ಲದೆ ಆಚಾರ-ವಿಚಾರದಲ್ಲಿ ಬಲ್ಲಿದರಾಗಿ, ಕೃಷಿ, ಕಾಯಕದಲ್ಲಿ, ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕನನ್ನು, ನಯಾ-ವಿನಯದಲ್ಲಿ ಉತ್ತಮಗತಿಯನ್ನು ಪಡೆದ ರುದ್ರಮುನಿ ದೇವರನ್ನು ಶಿಕಾರಿಪುರ ಸಮೀಪದ ಕಪನಳ್ಳಿ ಶಾಖಾ ಮಂದಿರಕ್ಕೆ ತಕ್ಕವನೆಂದು ಶಿವಯೋಗಿಗಳು ತಿಳಿದಿದ್ದರು. ಅದೇ ಸಮಯಕ್ಕೆ ಆ ಭಾಗದ ಭಕ್ತಮಹಾಶಯರು ನಮ್ಮಲ್ಲಿ ಒಬ್ಬ ಶಿವಯೋಗಿಯನ್ನು ಕಳುಹಿಸಿಕೊಡಿ ಎಂದು ಶಿವಯೋಗಿಗಳಲ್ಲಿ ಭಿನ್ನವಿಸಿದಾಗ, ರುದ್ರಮುನಿ ದೇವರನ್ನು ಸೂಚಿಸಿ ಅವರ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ. “ನಿನ್ನಿಂದ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ, ಕಾಯಕದೊಂದಿಗೆ ಅಲ್ಲಿ ಸೇವೆ ಮಾಡಿಕೊಂಡಿರು”. ಎಂದು ಶಿವಯೋಗಿಗಳು ಆಶೀರ್ವಾದ ಮಾಡುದರು. ಕಾಡಿನ ಮಧ್ಯದಲ್ಲಿ ಶಿವಯೋಗ ಸಾಧನೆಯ ಮೂಲಕ ಕಾಯಕವನ್ನು ನಡೆಸಿದರು. ಪಂಚಸಿದ್ಧಿಗೊಂಡ ಶಿವಯೋಗಿಗಳು ಸುತ್ತಲಿನ ಭಕ್ತಜನರಿಗೆ ತಮ್ಮ ತಪೋಶಕ್ತಿಯನ್ನು ಧಾರೆ ಎರೆಯುತ್ತಾ ಬಂದರು. ಮಂದಿರದ ಆಚಾರವನ್ನು ಬಿಡದೆ ಶೀಲಾ ಬಳಕೆಯ ಪಕ್ಕಾ ಮಡಿಯನ್ನು ಅಂತ್ಯದವರೆಗೂ ನಡೆಸಿದರು. ಮಹಾಶಿವಯೋಗಿಗಳ ಆಶೀರ್ವಾದದ ಹಾಗೆ ಕಾಯಕ ಯೋಗಿಯಾಗಿ ಶತಾಯುಷಿಗಳಾದರು. ಹಲವಾರು ಪೂಜ್ಯರಿಗೆ ಚಿನ್ಮಯ ದೀಕ್ಷೆ ಹಾಗೂ ನಿರಂಜನ ದೀಕ್ಷೆಯನ್ನು ಕರುಣಿಸಿರುವ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಎಲ್ಲಾ ಭಕ್ತರ ಮನೆ ಮನದಲ್ಲಿ ಪೂಜ್ಯ ಭಾವದಿಂದ ಇರುವವರು.
3) ಶಾಖ ಶಿವಯೋಗ ಮಂದಿರದ ಆಯುರ್ವೇದದ ಖಣಿ.
ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರದಲ್ಲಿ ಜನಿಸಿದ ಆರ್ಯ, ಶಿವಯೋಗ ಮಂದಿರಕ್ಕೆ ಬಂದು ಯೋಗ, ಶಿವಯೋಗ, ಅಧ್ಯಾತ್ಮವಿದ್ಯೆ, ಸೇವಾಕಾರ್ಯ, ಆಯುರ್ವೇದದ ಔಷಧಿ, ಕೃಷಿ-ಕಾಯಕ, ದಾಸೋಹದ ಬಗ್ಗೆ ತಿಳಿದುಕೊಂಡಿರುವ ದೇವರು ನಂತರದ ದಿನಗಳಲ್ಲಿ ನಿಡಗುಂದಿ ಕೊಪ್ಪಕ್ಕೆ ಶ್ರೀ ಚೆನ್ನಬಸವ ಮಹಾಸ್ವಾಮಿಗಳಾಗುವರು. ಅವರ ಹತ್ತಿರ ಎಂಥಹ ರೋಗಿಗಳು ಬರುತ್ತಿದ್ದರು ಅಂದರೇ ದೊಡ್ಡ ದೊಡ್ಡ ವೈದ್ಯರು ನಮ್ಮ ಕೈಯಲ್ಲಿ ಈ ರೋಗ ಅಸಾಧ್ಯವೆಂದು ವೈದ್ಯರು ಕೈಚೆಲ್ಲಿದಾಗ , ಕೊನೆಗೆ ಇವರ ಹತ್ತಿರ ರೋಗಿಗಳು ಬರುತ್ತಿದ್ದರು ಅಂಥಾ ರೋಗವನ್ನು ಇವರು ನಿವಾರಣೆಮಾಡುತ್ತಿದ್ದರು, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಇರುವ ರೋಗವನ್ನು ಇವರು ನಿವಾರಿಸುತ್ತಿದ್ದರು, ಇವರು ಕೇವಲ ಶ್ರೀ ಗುರು ಕುಮಾರೇಶ್ವರರನ್ನು ನೆನೆದು ಶಿವಯೋಗಿಗಳ ಭಾವಚಿತ್ರವನ್ನು ನೋಡುತ್ತಾ ಕೊಡುತ್ತಿದ್ದ ಚೂರ್ಣವು ಕುಷ್ಠರೋಗ-ಕ್ಷಯರೋಗ, ನಾನಾ ವಿಧ ಕಷ್ಟಗಳನ್ನು ಗುಣಪಡಿಸುವ ಶಕ್ತಿ ಇವರದ್ದಾಗಿತ್ತು. ಶ್ರೀ ಗುರು ಕುಮಾರೇಶ್ವರರು ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಿದ್ದ ಮಹಾಸ್ವಾಮಿಗಳು ಎಂಥ ಭಕ್ತರ ಸಮಸ್ಯೆಗಳಿದ್ದರು ಮಹಾಶಿವಯೋಗಿಗಳನ್ನು ನೆನೆಸಿ ಭಕ್ತರ ನೋವಿನ ಮನವನ್ನು ಅವರು ಶಾಂತಚಿತ್ತದಿಂದ ಪ್ರಪುಲ್ಲಗೊಳಿಸುತ್ತಿದ್ದರು. ಆಯುರ್ವೇದದ ಜೊತೆಗೆ ಕೃಷಿ ಕಾಯಕದಲ್ಲಿ ನಿರತರಾಗಿ ಸ್ವತಃ ತಾವೇ ಕಾಯಕಮಾಡುತ್ತಿದ್ದರು. ಸಂಗೀತ, ಶಿವಾನುಭವ ಕಾರ್ಯಕ್ರಮವನ್ನು ಮತ್ತು ಮಹಾದಾಸೋಹವನ್ನು ನಿರಂತರವಾಗಿ ಸಾಗಿಸಿ ಬಂದಿರುವ ಮಠವಾಗಿದೆ. ಈಗಲೂ ಸಹ ಆಯುರ್ವೇದದ ಮೂಲಕ ಭಕ್ತರ ಕಷ್ಟ ಪರಿಹರಿಸುವರು. ಭಕ್ತರ ಆಯುರ್ವೇದ ದಾಸೋಹಿಮೂರ್ತಿಗಳಾಗಿದ್ದವರು ಶ್ರೀ ಚನ್ನಬಸವ ಮಹಾಸ್ವಾಮಿಗಳು.
4) ನಾಗನೂರಿನಲ್ಲಿ ಜನಿಸಿದ ಶಿವಬಸವ ಆರ್ಯರು ನಾಗನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹನ್ನೆರಡನೇ ವಯಸ್ಸಿಗೆ ಮಂದಿರಕ್ಕೆ ಬಂದು. ಮಂದಿರದ ಆಚಾರ ವಿಚಾರಗಳನ್ನು, ಕನ್ನಡ – ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಂಡು, ತ್ರಿಕಾಲ ಲಿಂಗಪೂಜೆಯೊಂದಿಗೆ ಶಿವಯೋಗದೊಳಗಿನ ತತ್ವವನ್ನು ಅರಗಿಸಿ ದೇವರಾದರು. ಮುಂದೆ ಶ್ರೀ ಗುರು ಕುಮಾರ ಶಿವಯೋಗಿಗಳ ಸೇವಾ ಕಾರ್ಯಗಳಲ್ಲಿ ಬಹಳ ಕಾಲ ಇರುತ್ತಿದ್ದರಿಂದ “ಮಾನವ ಹುಟ್ಟಿನ ಅರ್ಥವು ಅಧ್ಯಾತ್ಮದಲ್ಲಿ ಮಾತ್ರಾ ತಿಳಿಯುತ್ತೇ, ದೇಹ ಅಳಿದರೂ ಆತ್ಮದ ಆಧಾರದಲ್ಲಿ ನೆಲೆಗೊಳ್ಳುವುದೇ ನಿಜವಾದ ಅಧ್ಯಾತ್ಮ”. ಎಂದು ಬೋಧಿಸುತ್ತಿದ್ದ ಶ್ರೀ ಕುಮಾರ ಶಿವಯೋಗಿಗಳ ವಿಶೇಷ ವ್ಯಕ್ತಿತ್ವ ಹೊಂದಿರುವ ಶಿವಬಸವ ದೇವರಲ್ಲಿ ಮಹತ್ವದ ಕಾಳಜಿ ವಹಿಸಿದ್ದರು, ಮಹಾಗುರುಗಳು ಹೇಳುವ ಯಾವ ಮಾತನ್ನು ಯಾವ ಕಾಲದಲ್ಲಿಯೂ ತಪ್ಪುತ್ತಿರಲಿಲ್ಲಾ. ನಂತರದ ಕಾಲದಲ್ಲಿ ಬೆಳಗಾವಿ ನಾಗನೂರ ಮಠದ ಅಧಿಕಾರವನ್ನು ವಹಿಸಿಕೊಂಡು ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡಿ, ಗಡಿಭಾಗದಲ್ಲಿ ನಶಿಸಿ ಹೋಗುತ್ತಿದ್ದ ಕನ್ನಡಸಂಸ್ಕೃತಿಯನ್ನು ಪುನಃಶ್ಚೇತನ ಮಾಡಿ ಧಾರ್ಮಿಕ ಕಾರ್ಯಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಂಡು ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಾಗೇ ವಿದ್ಯಾರ್ಥಿನಿಲಯ ಸ್ಥಾಪಿಸಿದ್ದಾರೆ. ಮಹತ್ವಪೂರ್ಣ ಗ್ರಂಥಗಳ, ವೀರಶೈವ ಧರ್ಮದ ತಾಡೆಯೋಲೆ – ಕೈಬರಹ ಮೊದಲಾದ ಅಮೂಲ್ಯ ಕೃತಿಗಳನ್ನು ಸಂಗ್ರಹಿಸಿ ಶ್ರೀ ಫ.ಗು.ಹಳಕಟ್ಟಿಯಂತಹ ದೊಡ್ಡ ದೊಡ್ಡ ಸಾಹಿತಿಗಳಿಗೆ, ಲೇಖಕರಿಗೆ, ಸಾಹಿತ್ಯಕ್ಕೆ ನೆರವಾಗಿ ಗ್ರಂಥಾಲಯದ ಮೂಲಕ ಸಹಾಯಹಸ್ತ ನೀಡಿದ್ದಾರೆ. ತಮ್ಮದೇ ಪ್ರಕಟನೆಯಲ್ಲಿ ನೂರಾರು ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ. ಶ್ರೀ ಗುರು ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರದ ಎಲ್ಲ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿ ಸುಧೀರ್ಘ ಅಧ್ಯಕ್ಷರಾಗಿದ್ದಾರೆ. ಪೂಜ್ಯ ಶ್ರೀ ಡಾ.ಶಿವಬಸವ ಮಹಾಸ್ವಾಮಿಗಳು ಶತಾಯುಷಿಗಳಾಗಿ ಮಂದಿರದ ಮೇಲೆ ಅತ್ಯಂತ ನಿಷ್ಠಾವಂತರಾಗಿ ಸೇವಾ ಕೈಂಕರ್ಯ ಪೋರೈಸಿದ್ದಾರೆ.
5) ಬೀದರ್ ಜಿಲ್ಲೆಯ ಕಮಲಾನಗರದಲ್ಲಿ ಜನಿಸಿದ ಚೆನ್ನಬಸವ ವಟು ಶಿವಯೋಗ ಮಂದಿರಕ್ಕೆ ಬಂದು ಅಲ್ಲಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕನ್ನಡ ಮತ್ತು ಸಂಸ್ಕೃತ ಅಧ್ಯಯನ, ಯೋಗ, ಶಿವಾನುಭವ ಅಭ್ಯಾಸ ಮಾಡಿರುವ ಚೆನ್ನಬಸವ ದೇವರು. ಕೆಲವು ವರ್ಷಗಳ ಕಾಲ ಶಿವಯೋಗಿಗಳ ಸೇವೆಯನ್ನು ಮಾಡುವರು, ಶಿವಯೋಗಿಗಳು ಬಿಡುವಿನಲ್ಲಿ ಪಾಠದ ಜೊತೆ ಅನುಭವ ಹೇಳುತ್ತಿದ್ದರು. “ಗುರು ಮತ್ತು ವಿರಕ್ತರು ಸಮಾಜದ ಎರಡು ಕಣ್ಣುಗಳು ಅವರಲ್ಲಿ ಮನಸ್ತಾಪಗಳು ಬರಬಾರದು ಅವರೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ತಿದ್ದುವ, ನಮ್ಮ ಧರ್ಮವನ್ನು ಆಚರಿಸಿ ತಿಳಿಹೇಳುವ, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು” ಎಂದು ತಿಳಿಸುತ್ತಿದ್ದರು. ಅದನೆಲ್ಲಾ ಆಲಿಸಿ, ತಿಳಿದು ಅದರ ಹಾಗೆ ಆಚರಿಸಬೇಕು ಎಂಬ ಹಂಬಲದಿಂದ ಇರುತ್ತಿದ್ದ ಚೆನ್ನಬಸವ ದೇವರು, ಕನ್ನಡದ ಗಡಿಭಾಗದ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ ಕ್ರಿ.ಶ. ೧೯೨೪ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಚೆನ್ನಬಸವ ಪಟ್ಟಾಧ್ಯಕ್ಷರಾದರೂ. ಅದು ಗುರುಪರಂಪರೆ ಮಠವಾದರೂ ಅಲ್ಲಿ ಬಸವಾದಿ ಶರಣರ ಸಂಸ್ಕ್ರತಿಯನ್ನು, ವಚನಶಾಸ್ತ್ರವನ್ನು ಬಿತ್ತರಿಸಿದರು. ಗಡಿಭಾಗದಲ್ಲಿ ಕನ್ನಡ ಸಂಸ್ಕೃತಿ ಕಡಿಮೆಯಾಗುವ ಅಂಚಿನಲ್ಲಿ ಇದ್ದಾಗ ಹೊರಗಡೆ ಉರ್ದು ಭಾಷೆಯ ಫಲಕಹಾಕಿ ಒಳಗಡೆ ಕನ್ನಡ ಭಾಷೆಯನ್ನು ಬೋಧಿಸಿ ಕನ್ನಡವನ್ನು ಉಳಿಸಿದರು. ಅನೇಕ ಕಡೆ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಒಂದು ಕೊಡುಗೆಯನ್ನು ನೀಡಿದ್ದಾರೆ. ಅದರ ಜೊತೆಗೆ ಬಸವಾದಿ ಶರಣರ ತತ್ವದ ದಾಸೋಹ ನಿಲಯವನ್ನು ಸ್ಥಾಪಿಸಿದ್ದಾರೆ. ಶ್ರೀ ಮಠದ ಜೀರ್ಣೋದ್ಧಾರದೊಂದಿಗೆ ಮಠವನ್ನು ಸುಸ್ಥಿತಿಗೆ ತಂದಿರುವ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು ಗಡಿಭಾಗದ ದೇವರಾಗಿ ಶಿವಯೋಗ ಮಂದಿರಕ್ಕೆ ಗೌರವದಿಂದ ಬಾಳುತ್ತಿದ್ದ ಮಹಾತ್ಮರು.
6) ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮಕ್ಕೆ ಮಹಾಶಿವಯೋಗಿಗಳು ಮಂದಿರದ ಭಿಕ್ಷೆಗೆ ದಯಾಮಾಡಿಸಿದಾಗ. ಶ್ರೀಗಳ ಸಮಾಜಸೇವಾಕಾರ್ಯ, ಗುರುಗಳು ದೂರದೃಷ್ಟಿಯುಳ್ಳವರು ಎಂದು ತಿಳಿದಿದ್ದ, ಕಳಕೆ ಒಡೆಯರ್ ಮಠದ ಚನ್ನಯ್ಯನವರು (ಚನ್ನಕವಿ) ಪೂಜ್ಯರನ್ನು ತಮ್ಮ ಮನೆಗೆ ಬರಮಾಡಿಕೊಂಡು ಪಾದಪೂಜೆಯನ್ನು ಮಾಡಿ ಮಂಗಳಾರತಿಯನ್ನು ಹೇಳುವ ಸಂದರ್ಭದಲ್ಲಿ ಅವರೇ ಸ್ವತಃ ಶಿವಯೋಗಿಗಳ ಮೇಲೆ ರಚಿಸಿರುವ ಪದವನ್ನು ಹೇಳಿದಾಗ, ಆಗ ಪೂಜ್ಯ ಶಿವಯೋಗಿಗಳು ಕೋಪದಿಂದ ” ನಮ್ಮನ್ನು ಹೊಗಳುವಿರಾ ನಾವೇನು ಬಸವಾಲ್ಲಮರಂತೆ ಘನವಂತರೆ? ಅಥಣಿ ಶಿವಯೋಗಿಗಳಂತೇ ತಪೋನಿಧಿಗಳೇ? ವಿಜಯ ಮಹಾಂತ ಯತಿಗಳ, ಅನಂತಪುರದ ಗುರುಬಸವ ಶಿವಯೋಗಿಗಳ ಸುಚರಿತ್ರೆಗಳನ್ನು ಬರೆಯಿರಿ, ಬಿಡದೆ ಬರೆಯಿರಿ” ಎಂದು ನಮ್ಮ ನಾಡಿನಲ್ಲಿ ಅನೇಕ ಮಹಾಶಿವಯೋಗಿಗಳು ಆಗಿಹೋಗಿದ್ದಾರೆ ಅವರ ಪುರಾಣವನ್ನು ರಚಿಸಿ ಎಂದು ಅಪ್ಪಣೆ ಮಾಡಿದರು.
ಶಿವಯೋಗಿಗಳ ಸತ್ಯ ಸಂಕಲ್ಪದಂತೆ ಚನ್ನಕವಿಗಳು ಒಂಭತ್ತು ಪುರಾಣವನ್ನು ರಚಿಸಿದರು.
1- ಹಾಲಕೇರಿ ಅನ್ನದಾನಿಶ್ವರ ಪುರಾಣ.
2- ಹೇಮರೆಡ್ಡಿ ಮಲ್ಲಮ್ಮನ ಪುರಾಣ.
3-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಪುರಾಣ.
4-ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಚರಿತ್ರೆ.
5-ನಾಲವತ್ವಾಡ ಶ್ರೀ ವೀರೇಶ್ವರ ಪುರಾಣ.
6-ಕಂಬಳಿಹಾಳ ಶ್ರೀ ದೊಡ್ಡ ಬಸವೇಶ್ವರ ಪುರಾಣ.
7-ಬಾಲಲೀಲ ಮಹಾಂತ ಸ್ವಾಮಿಗಳ ಪುರಾಣ.
8-ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ.
9- ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ.
ಒಮ್ಮೆ ಮಹಾ ಶಿವಯೋಗಿಗಳು ” ಜನನಾದಿಯಿಂದ ಲಿಂಗೈಕ್ಯಾಂತಮಾಗಿ ಸಮಸ್ತ ವೀರಶೈವರಿಗೆ ಬೇಕಾಗುವ ಸಂಸ್ಕಾರ, ಆಚಾರ, ಷಟಸ್ಥಲ ವಿಚಾರಕ್ರಮಗಳೆಲ್ಲ ಸಪ್ರಮಾಣವಾಗಿ ಬೇರೆ ಗ್ರಂಥಗಳನ್ನು ನೋಡುವ ಅವಶ್ಯವಿಲ್ಲದೇ ಇದೇ ಪುರಾಣದಲ್ಲಿ ಬರುವಂತೆ ಮಾಡಿದರೇ ಇದೊಂದು ದೊಡ್ಡಕೆಲಸವೆನಿಸುವುದು. ಆದ್ದರಿಂದ ನಾವು ಶಿವಮಂದಿರದಲ್ಲಿದ್ದಾಗ ನೀನು ಬಂದು ಕೆಲವು ದಿವಸದಲ್ಲಿ ನಿಂತು, ತಕ್ಕ ಪ್ರಮಾಣಗಳನ್ನು ಸೋಮನಾಥ ಶಾಸ್ತ್ರಿಗಳ ಸಹಾಯದಿಂದ ಹುಡುಕಿಕೊಂಡು ಬರೆ” ಎಂದಿರುವುನ್ನು ಚನ್ನಕವಿಗಳೂ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಪುರಾಣದ ಮುನ್ನುಡಿಯಲ್ಲಿ ಸ್ಮರಿಸಿದ್ದಾರೆ. ಹೀಗೆ ಶಿವಯೋಗಿಗಳು ಚನ್ನಕವಿಗಳ ಕವಿತ್ವವನ್ನು ಕಂಡು ಉನ್ನತ ಮಟ್ಟಕ್ಕೆ ಏರಲು ಪ್ರೇರಣಾದಾಯಕವಾಗಿ ಆಶೀರ್ವದಿಸಿರುವರು.
ಈಗಿನ ಕಾಲದಲ್ಲಿ ಪುರಾಣ ಪ್ರವಚನಗಳಿಗೆ ಆಧಾರವೆಂದರೆ ಚನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳೇ ಎಲ್ಲಕ್ಕೂ ಮೂಲಗಳು ಎಂದರೇ ಅತಿಶಯೋಕ್ತಿಯಲ್ಲ ಎನಿಸುತ್ತದೆ ಅಂತಾ ಮೌಲ್ಯಯುತವಾದ ಪುರಾಣಗಳನ್ನು ಶಿವಯೋಗಿಗಳ ಆಶೀರ್ವಾದದಿಂದ ರಚಿಸಿರುವವರು ಚೆನ್ನಕವಿಗಳು.
7) ಸಂಗೀತದ ದೇವರ ಪುರುಷರು.
ಕಾಡಶೆಟ್ಟಿಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಕ್ಕಲ ಬಸವೇಶ್ವರರ ಜಾತ್ರೆಗೆ ದಯಮಾಡಿಸಿದಾಗ ಅಲ್ಲಿ ಎಳೆಯ ಕಂಠದಿಂದ ಹಾಡುತ್ತಿದ್ದ ಎರಡು ಅಂಧ ಮಕ್ಕಳನ್ನು ದತ್ತು ಪಡೆದು ಹಾನಗಲ್ಲಿನಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಕೊಡಿಸಿ. ಕೆಲ ವರ್ಷಗಳ ನಂತರ ಇವರನ್ನು ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿಗೆ ಕಳುಹಿಸಬೇಕು ಎಂದು ಯೋಚಿಸುತ್ತಿರುವಾಗ ಕಾಲರಾ ರೋಗ ಬಂದು ಹಿರಿಯ ಗುರುಬಸಯ್ಯ ತೀರಿಕೊಳ್ಳುವನು, ಗದುಗಯ್ಯನನ್ನು ಸಮಾಧಾನಿಸಿ ಮೈಸೂರಿಗೆ ಕಳುಹಿಸಿ ಸಂಗೀತ ಶಿಕ್ಷಣ ಕೊಡಿಸುವರು, ಅದರ ಜೊತೆ ದೇಶದ ಹಿರಿಯ ಸಂಗೀತಗಾರರಿಂದ ಕರ್ನಾಟಕ ಸಂಗೀತ ಹಾಗೂ ಲಾಹೋರ್ ನ ಉಸ್ತಾದ ವಹೀದಖಾನರಿಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಂಭಾವನೆ ಕೊಟ್ಟು ಹಿಂದೂಸ್ತಾನಿ ಸಂಗೀತ, ಪಿಟೀಲು, ವಿಶೇಷವಾಗಿ ಬಲಗೈಯಿಂದ ಡಗ್ಗಾ ಎಡಗೈಯಿಂದ ತಬಲಾ ಬಾರಿಸುವುದು, ಸಾರಂಗಿ, ಕೊಳಲು, ಹಾರ್ಮೋನಿಯಂ, ಶಹನಾಯಿ ಹೀಗೆ ಹಲವು ವಾದ್ಯಗಳ ವಿದ್ಯೆಯನ್ನು ಕೊಡಿಸಿದರು. ಮುಂದೆ ಇವರು ಪಂಚಾಕ್ಷರಿಗವಾಯಿ ಎಂಬ ಹೆಸರನ್ನು ಪಡೆಯುವರು. ಬಾಗಲಕೋಟೆಯಲ್ಲಿ ನಡೆದ ಮಹಾಸಭೆಯಲ್ಲಿ ತಮ್ಮ ಸುಮಧುರವಾದ ಸಿರಿಕಂಠದಿಂದ ಸಂಗೀತವನ್ನು ನುಡಿದು ಪಂಚಾಕ್ಷರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಾಗೆ ಅವರು ಎಂದೂ ತ್ರಿಕಾಲ ಲಿಂಗಪೂಜೆ ಬಿಡುತ್ತಿರಲಿಲ್ಲ.
ಮುಂದೆ ಮಂದಿರವು ಸ್ಥಾಪನೆ ಆದ ನಂತರ, ಶಿವಯೋಗಿಗಳು “ಪಂಚಾಕ್ಷರಿ, ನಿನ್ನ ಶಿಷ್ಯರೊಂದಿಗೆ ಸಂಗೀತಯಾತ್ರೆ ಆರಂಭಿಸು . ನಿನ್ನ ಸಂಗೀತ ಹಾಗೂ ಸಂಗೀತ ಶಿಕ್ಷಣ ಲೋಕಾರ್ಪಣೆಯಾಗಲಿ. ಯಾವುದಕ್ಕೂ ಧೃತಿಗೆಡದೆ ಸಂಚಾರಿಶಾಲೆಯಾಗಿ ಸಂಗೀತ ಶಿಕ್ಷಣ ಮುನ್ನೆಡೆಸು. ನಿನ್ನ ಶಾಲೆಯ ಕೀರ್ತಿ ನಾಡಿನಲ್ಲೆಲ್ಲಾ ಹರಡಲಿ, ಶಿವ ಕೃಪೆಯಿಂದ ಎಲ್ಲವೂ ಸೌಖ್ಯವಾಗುವುದು.” ಎಂದು ಶ್ರೀ ಗುರು ಕುಮಾರ ಶಿವಯೋಗಿಗಳು ಆಶೀರ್ವದಿಸುವರು. ಅಲ್ಲಲ್ಲಿ ಸಂಗೀತ ಶಿಕ್ಷಣ, ಭಜನೆ, ಕೀರ್ತನೆ ನಡೆಸುತ್ತಾ, ಶ್ರೀ ಸಿದ್ಧರಾಮೇಶ್ವರ – ಶ್ರೀ ಹೇಮರೆಡ್ಡಿ ಮಲ್ಲಮ್ಮನ ನಾಟಕವನ್ನು ಪ್ರದರ್ಶಿಸುತ್ತಾ ಗದುಗಿಗೆ ಬಂದು ಶ್ರೀ ಕುಮಾರ ಶಿವಯೋಗಿಗಳ ಸದಿಚ್ಛೆಯಂತೆ ಬಸರೀಗಿಡದ ವೀರಪ್ಪನವರ ಸಹಕಾರದಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿದರು. ಮುಂದೆ ಇದು ದೇಶದ ಅಪರೂಪದ ಸಂಗೀತ ಗುರುಕುಲವಾಗಿ ಬೆಳೆಯಿತು. ಜಾತಿ – ಕುಲರಹಿತ ಶಿಕ್ಷಣದಿಂದ ಸಾವಿರಾರು ಸಂಗೀತಗಾರರು, ಕೀರ್ತನಕಾರರು, ದೇಶದಾದ್ಯಂತ ಬೆಳೆದಿರುವರು. ಹೀಗೆ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿ ಪಂಚಾಕ್ಷರಿ ಗವಾಯಿಗಳು ಖ್ಯಾತಿ ಪಡೆಯುವಲ್ಲಿ ಶ್ರೀ ಕುಮಾರ ಶಿವಯೋಗಿಗಳು ವಹಿಸಿದ ಕಾರ್ಯ ಅವಿಸ್ಮರಣೀಯವಾದುದು.
ಶ್ರೀಗಂಧದ ಸಂಪರ್ಕದಲ್ಲಿ ಇರುವ ಸಾಣಿಕಲ್ಲು ಸದಾ ಸುಗಂಧಯುಕ್ತವಾದಂತೇ ಶ್ರೀ ಗುರು ಕುಮಾರ ಮಹಾಶಿವಯೋಗಿಗಳ ಸಾಮಿಪ್ಯದಲ್ಲಿ ಇರುತಿದ್ದ ಮಹಾ ಸಾಧಕರು ತಮ್ಮ ಬದುಕನ್ನು ಸವಿಸಿ ಶಿವಯೋಗಿಗಳಾದರು.
ಕಲ್ಲು, ಕಂಬವೇ ದೇವರೆಂದು ಪೂಜಿಸುವ ಮುಗ್ಧ ಭಕ್ತರಿಗೆ ನಡೆದಾಡುತ್ತಾ ಮಾತನಾಡುವ ದೇವರನ್ನು ತೋರಿಸಿರುವವರು. ಸಮಾಜದಲ್ಲಿ ಕುದೃಷ್ಟಿಗೆ ಗುರಿಯಾಗಿದ್ದ ಅಂಧರು-ಅನಾಥರು ಸಂಗೀತದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವವರು. ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಹಾಯಹಸ್ತನೀಡಿ ಪ್ರೇರೇಪಿಸಿದವರು. ಸಂಶೋಧನಾ ಕಾರ್ಯದಲ್ಲಿ ಮಹಾನುಭಾವಿ ಚೆನ್ನಮಲ್ಲಿಕಾರ್ಜುನನವರಿಗೆ ಅನುಗ್ರಹ ನೀಡಿರುವವರು. ಶಿರಸಂಗಿ ಲಿಂಗರಾಜರಿಗೆ ಆಶೀರ್ವದಿಸಿ ಕೆ.ಎಲ್.ಇ. ಸಂಸ್ಥೆಗೆ ಪ್ರೇರಣೆಯಿತ್ತವರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿರುವರು. ವಿಜಯಪುರದ ಬಿ.ಎಲ್.ಡಿ. ಸಂಸ್ಥೆಗೆ ಪ್ರೇರಣೆಯಿತ್ತವರು. ಸಾಹಿತ್ಯದಲ್ಲಿ ಜ.ಚ.ನಿಯವರನ್ನು, ಯೋಗದಲ್ಲಿ ಕಂಚುಗಲ್ಲ ಬಿದರಿ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು, ವಿದ್ವತ್-ಭಾಷಣದಲ್ಲಿ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು, ಕಾಯಕದಲ್ಲಿ ಕಪನಳ್ಳಿ ರುದ್ರಮುನಿ ಶಿವಯೋಗಿಗಳನ್ನು, ವೈದಿಕ ಶಿವಪೂಜೆಯಲ್ಲಿ ಸಿಂಧಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಭಾಷ್ಯಕಾರರಾದ ಸಖರಾಯಪಟ್ಟಣದ ಶ್ರೀ ಸದಾಶಿವ ಶಿವಾಚಾರ್ಯರನ್ನು, ಆಯುರ್ವೇದದಲ್ಲಿ ತುಪ್ಪದ ಕುರಹಟ್ಟಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರನ್ನು ಮತ್ತು ನಿಡಗುಂದಿ ಕೊಪ್ಪದ ಶ್ರೀ ಚೆನ್ನಬಸವ ಮಹಾಸ್ವಾಮಿಗಳನ್ನು, ಶಿಕ್ಷಣ ವಿದ್ಯಾಸಂಸ್ಥೆ-ಮಹಾದಾಸೋಹದಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾಗೂ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರನ್ನು, ಸಂಗೀತ ಕ್ಷೇತ್ರದಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಗವಾಯಿಗಳನ್ನು, ಹೀಗೆ ವಾಕ್ ಸಿದ್ಧಿ, ಹಸ್ತಶುದ್ಧಿ, ಮನಶುದ್ಧಿ, ಭಾವಶುದ್ಧಿ, ದೃಷ್ಟಿಶುದ್ಧಿ ಇಂತಿ ಸಮಾಜ ಸೇವಾ ಸಮೂಹವನ್ನು, ಮಹಿಳೆಯರ ವಿದ್ಯಾಭ್ಯಾಸಕ್ಕೆ ಪಾಠ ಶಾಲೆಯನ್ನು, ದೇಶಿಗೋವುಗಳನ್ನು ಸಂರಕ್ಷಿಸಿದವರು ಅದರ ಗೋಮಯದಿಂದ ಪರಿಶುದ್ಧ ವಿಭೂತಿಯನ್ನು ತಯಾರಿಸಲು ಕಲಿಸಿದವರು. ಹೀಗೆ ಸರ್ವ ಕಾರ್ಯಗಳಲ್ಲಿಯು ಸಮಾಜಕ್ಕೆ ಕೊಟ್ಟ ಕಾಣಿಕೆಯನ್ನು ನೀಡಿರುವ ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳನ್ನು ನಮ್ಮ ಸಮಾಜವು ಸದಾ ಸ್ಮರಿಸಬೇಕು.
ಶಂಕರದೇವಕವಿಯ ಈ ಉಕ್ತಿ ಜೀವಭಾವವಳಿದು ಶಿವಭಾವವಾಗಿ ಪರಿಣಮಿಸಿ ಲಿಂಗಭೋಗೋಪಭೋಗಿಯಾಗಿರುವ ಶಿವಯೋಗಿಯ ಮಹತಿಯನ್ನು ಸಾರಿ ಹೇಳುತ್ತದೆ. ಭಾರತೀಯ ಯೋಗಪರಂಪರೆಯಲ್ಲಿ ಶಿವಯೋಗಕ್ಕೆ ಅಗ್ರಪಟ್ಟ. ಇದು ಮಂತ್ರ, ಲಯ,. ಹಠ ಮತ್ತು ರಾಜಯೋಗಗಳಿಗಿಂತಲೂ ಅತ್ಯಂತ ಪ್ರಗತಿಪರ. ಸಂಸಾರಿಗಳಿಗೂ ಸುಲಭಸಾಧ್ಯ. ಈ ಅಪೂರ್ವ ಯೋಗವನ್ನು ಉಳಿಸಿ ಬೆಳಿಸಿಕೊಂಡು ಬಂದವರು ನಾಡಿನ ಹಲವಾರು ಶರಣರು ಹಾಗೂ ಶಿವಯೋಗಿಗಳು. ಶಿವಯೋಗ ಸಾಧನೆಗಾಗಿ ಶಿವಯೋಗಮಂದಿರವನ್ನು ಸ್ಥಾಪಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರಲ್ಲಿ ಅಗ್ರಗಣ್ಯರು. ಶಿವಯೋಗವನ್ನಾಚರಿಸಿ ಶಿವಸ್ವರೂಪಿಗಳಾದವರು. ಶಿವಯೋಗದ ತುತ್ತತುದಿಯನ್ನೇರಿ ನಿಜಾನಂದಲೋಲರಾಗಿಯೂ ಸಮಾಜದತ್ತ ಲಕ್ಷ್ಯ ಪೂರೈಸಿ ಅದರ ಶ್ರೇಯೋಭಿವೃದ್ದಿಗೆ ನಿರಂತರ ಪರಿಶ್ರಮಿಸಿದ ಪುಣ್ಯಪುರುಷರು. ಇಂಥ ಮಹಾನ್ ಶಿವಯೋಗಿಯ ಆದರ್ಶ ಕ್ರಿಯಾಶೀಲತೆಯಲ್ಲಿ ಭಾಗವಹಿಸುತ್ತ ತಮ್ಮದೇ ಆದ ಸ್ವಂತ ವ್ಯಕ್ತಿತ್ವದಿಂದ ಬಾಳಿಬೆಳಗಿದ ವಿರಳ ಸ್ವಾಮಿಗಳಲ್ಲಿ ಹಾಲಕೆರೆಯ ಪೂಜ್ಯ ಶ್ರೀ ಅನ್ನದಾನ ಮಹಾಸ್ವಾಮಿಗಳವರೂ ಒಬ್ಬರು.
ಎತ್ತರದ ನಿಲವಿನ, ಭಸ್ಮಭರಿತ ನಗೆಮುಖದ, ಪ್ರಸನ್ನ ಹೃದಯದ ಪರಮ ಪೂಜ್ಯ ಅನ್ನದಾನಶಿವಯೋಗಿಗಳು ಪರಿಶುದ್ದಶೀಲದ ಘನವಿರಕ್ತರು. ಅವರ ಹಸ್ತ, ನೇತ್ರ, ವಾಕ್‌ಗಳೆಲ್ಲವೂ ಪರುಷಮಯ. ಅವರು ನಡೆದರೆ ಭೂಮಿ ಪಾವನ; ಸಹಜವಾಗಿ ನುಡಿದರೆ ಸರ್ವಜೀವಿಗಳ ದುಃಖನಿವಾರಣ. ಕಣ್ತೆರೆದು ನೋಡಿದರೆ ಜನಮನ ಬೆಳಗುವ ಶಿವಬೆಳಕೇ ಹೊರಸೂಸಿದಂತಾಗುತ್ತಿತ್ತು. ಪೂಜೆ, ಜಪ-ತಪಾದಿಗಳಲ್ಲಿ ಅವರಿಗೆ ಅಚಲವಾದ ನಿಷ್ಠೆ. ಅನವರತ ಸಾಧನೆಯಿಂದ ದೇವಮಾನವರಾಗಿ ನಾಡವರನ್ನುದ್ಧರಿಸಿದ ಅವರು ಆಚಾರ-ವಿಚಾರಗಳ ಸಮನ್ವಯಮೂರ್ತಿ. ಶಿವಯೋಗ ಸಾಧನೆಯಿಂದ ಸಿದ್ಧಿಸಿದ ಆತ್ಮಶಕ್ತಿಯೇ ಅವರಲ್ಲಿತ್ತು, ತಮ್ಮ ಜೀವನದುದ್ದಕ್ಕೂ ಆತ್ಮವಿಕಾಸದ ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮುಂದುವರೆಸಿ ಲೋಕಕಲ್ಯಾಣಗೈದವರು. ಸಮಸ್ತ ಮಾನವ ಜನಾಂಗದ ತಾತ್ವಿಕ ಮತ್ತು ನೈತಿಕಮಟ್ಟವನ್ನು ಮೇಲೆತ್ತಲು ಜೀವವನ್ನೇ ಸವೆಸಿದ ಅಪೂರ್ವ ತ್ಯಾಗಿಗಳು. ಅವರ ದಿವ್ಯ ಸಂರ್ಪಕದಿಂದ ತಮ್ಮ ಬಾಳು ಬೆಳಗಿಸಿಕೊಂಡವರು ಸಾವಿರಾರು ಜನ. ಆದ್ಯಾತ್ಮೀಕ ರಂಗದಲ್ಲಿ ವ್ಯಕ್ತಿಯೊಬ್ಬರ ಸಾಧನೆ ಎಂತಹ ಲೋಕಜಾಗೃತಿಯನ್ನು ಸಾಧಿಸಬಹುದೆಂದುದಕ್ಕೆ ಪರಮಪೂಜ್ಯರ ಜೀವನವೇ ಒಂದು ನಿದರ್ಶನ. ಅಹಂಕಾರದ ಲವಲೇಶವೂ ಇಲ್ಲದ ಅವರ ಸರಳ ನಡೆ, ಸರಳ ನುಡಿ, ನಿರಾಡಂಬರ ಜೀವನ ನಿಜಕ್ಕೂ ಅನುಕರಣೀಯವಾದುದು.
ಕಾರಣಿಕ ದಿವ್ಯಪುರುಷ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳೆಂದರೆ ಪೂಜ್ಯ ಶ್ರೀ ಅನ್ನದಾನಸ್ವಾಮಿಗಳವರಿಗೆ ಎಲ್ಲಿಲ್ಲದ ಭಕ್ತಿ. ಅವರ ಪಡಿನೆಳಲಾಗಿ ಲಿಂಗಾನು ಸಂಧಾನ ಸಾಧಕರಾಗಿ ಜೀವನ ಸಾಗಿಸುತ್ತಿದ್ದರು. ಒಮ್ಮೆ ಶ್ರೀ ಕುಮಾರಶಿವಯೋಗಿಗಳು ಪ್ರೀತಿಯಿಂದ ಶ್ರೀಗಳ ಮೈದಡವಿ ತೆಲೆಯಮೇಲೆ ಹಸ್ತವನ್ನಿಟ್ಟು ಆತ್ಮೀಯವಾಗಿ ಆಶೀರ್ವದಿಸುತ್ತ ಮೂರು ವರ್ಷಗಳವರೆಗೆ ಅನುಷ್ಠಾನಗೈಯಲು ಅಪ್ಪಣೆ ಕೊಡಿಸಿದರು. ಅನ್ನದಾನಶ್ರೀಗಳು ಅವರ ಕೃಪಾಶೀರ್ವಾದವನ್ನೇ ಶಿರೋಧಾರ್ಯವಾಗಿಸಿ ಕೊಂಡು ನರೇಗಲ್ಲದಲ್ಲಿ ಮೂರು ವರ್ಷಗಳವರೆಗೆ ಕಠಿಣ ತಪವನ್ನಾಚರಿಸಿದರು. ಪೂಜ್ಯರ ಜೊತೆಗಿರಲು ಹಾನಗಲ್ಲ ಶ್ರೀಗಳು ನಮ್ಮನ್ನೇ ಕಳುಹಿಸಿದ್ದರು. ಮತ್ತು ತಾವು ಸ್ವತಃ ಆಗಾಗ್ಗೆ ನರೇಗಲ್ಲಿಗೆ ದಯಮಾಡಿಸಿ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅನ್ನದಾನ ಶ್ರೀಗಳು ಅವರ ಅಪ್ಪಣೆಯನ್ನು ಎಳ್ಳಷ್ಟೂ ಅತಿಕ್ರಮಿಸುವವರಲ್ಲ. ಅವರು ವಿಧಿಸಿದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅವರ ಆಜ್ಞೆಯನ್ನು ಮೈಮನಗಳಲ್ಲಿ ತುಂಬಿಕೊಂಡು ಜೀವನ ಸಾಧನೆ ಮಾಡುತ್ತಿದ್ದ ಶ್ರೀಗಳ ಶ್ರದ್ಧೆ ಅಪೂರ್ವವಾದುದು. ಮನೋನಿಗ್ರಹ, ಸಂಯಮನ ಶಕ್ತಿಗಳಿಂದೊಡಗೂಡಿದ ಪೂಜ್ಯ ಅನ್ನದಾನಶ್ರೀಗಳ ತಪೋಜೀವನ ಅದ್ಭುತವಾಗಿತ್ತು. ಇವರ ಶುದ್ಧ ಮನಸ್ಕತೆ, ಸತ್‌ಸಂಕಲ್ಪ, ಶ್ರಧ್ಧಾನ್ವಿತ ಜೀವನವನ್ನು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಬಹುವಾಗಿ ಮೆಚ್ಚಿ ಕೊಂಡಿದ್ದರು. ಹಾನಗಲ್ಲ ಶ್ರೀಗಳ ಮೆಚ್ಚುಗೆಯನ್ನು ಪಡೆಯುವುದು ಎಲ್ಲರಿಗೂ ಸಾಧ್ಯವಿರಲಿಲ್ಲ ಎಂಬುದು ಅವರ ಸಮಕಾಲೀನರಿಗೆಲ್ಲಾ ಗೊತ್ತು ಅವರ ಪ್ರೇರಣೆ ಯಂತೆಯೇ ಈಗಿರುವ ಹಾಲಕೆರೆಯ ಮಠವನ್ನು ಪೂಜ್ಯ ಶ್ರೀಗಳು ಕಟ್ಟಿಸಿ ಆಧ್ಯಾತ್ಮ ಕೇಂದ್ರವನ್ನಾಗಿಸಿದರು. ಪೂಜ್ಯರ ಪವಿತ್ರ ಪಾದಸ್ಪರ್ಶದಿಂದ ಹಾಳಕೇರಿಯೊಂದು ಹಾಲಕರೆಯಾಗಿ ಪರಿವರ್ತಿತವಾದುದು ಅದ್ಭುತ ಪವಾಡವೇ ಸರಿ. ಸಾರ್ವಜನಿಕರ ಪ್ರೀತಿ-ವಿಶ್ವಾಸ, ಸಹಾಯ- ಸಹಕಾರಗಳನ್ನು ಪಡೆದು ಉಚಿತ ಪ್ರಸಾದನಿಲಯ, ಶಾಲೆ – ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿದರು; ಸಾವಿರಾರು ಬಡ ಮಕ್ಕಳಿಗೆ ತಾಯಿ ತಂದೆಯಾದರು.
ಶಿವಯೋಗಮಂದಿರ ಆದರ್ಶ ಧರ್ಮಗುರುಗಳನ್ನು ಸಮಾಜ ಸೇವೆಗೆ ಸಿದ್ದಗೊಳಿಸುವ ವಿನೂತನ ಸಂಸ್ಥೆ. ಅದೊಂದು ಶುದ್ಧ ಆಧ್ಯಾತ್ಮಿಕ ಕೇಂದ್ರ. ಭಕ್ತಜನಕೋಟಿಗೆ ಹಾನಗಲ್ಲ ಶ್ರೀಗಳು ದಯಪಾಲಿಸಿದ ಅನುಪಮ ಕಾಣಿಕೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ತನ್ಮೂಲಕ ನಾಡಿಗೆ ಸತ್ಪಲಗಳನ್ನು ನೀಡುವಂತಾಗಬೇಕೆಂದು ಪೂಜ್ಯ ಶ್ರೀ ಅನ್ನದಾನಶ್ರೀಗಳವರು ಸದಾ ಚಿಂತಿಸುತ್ತಿದ್ದರು. ಹಾವೇರಿಯ ಪೂಜ್ಯರಾದ ಶ್ರೀ ಶಿವಬಸವಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಅನಾಥವಾಗಿದ್ದ ಶಿವಯೋಗಮಂದಿರಕ್ಕೆ ಶ್ರೀರಕ್ಷೆಯನ್ನೊದಗಿಸಿದರು. ಮಂದಿರದ ವಟುಸಾಧಕರಿಗೆ ತಾಯಿಯಾಗಿ ನಿಂತರು. ವಾತ್ಸಲ್ಯವನ್ನು ಧಾರೆಯೆರೆದರು. ಅವರಿಗೆ ನಡೆ-ನುಡಿಗಳನ್ನು ಕಲಿಸಿದರು. ಅವರವರ ಕರ್ತವ್ಯಗಳ ಬಗ್ಗೆ ನಿಷ್ಠುರವಾಗಿ ತಿಳಿಹೇಳಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಅನುವು ಮಾಡಿಕೊಡುತ್ತಿದ್ದರು. ಅಂತಃ ಕರುಣದಿಂದ ಬಂದ ಅವರ ಮಾತುಗಳು ವಟುಸಾಧಕರ ಹೃದಯಕ್ಕೆ ಸ್ಪಂದಿಸುತ್ತಿದ್ದವು. ಮಂದಿರದ ಸಾಧಕರು ತಮ್ಮೆಲ್ಲ ದೌರ್ಬಲ್ಯಗಳನ್ನು ಕಳೆದುಕೊಂಡು ಶಕ್ತಿಸಂಪನ್ನರಾಗಿ ತೇಜೋವಂತರಾಗಿ ಹೊರಬರಬೇಕು; ತಪೋನಿಷ್ಠರೂ ಜ್ಞಾನಿಗಳೂ ಆಗಿರಬೇಕು; ಅವರು ಅಲಂಕರಿಸುವ ಗುರುಪೀಠಗಳು ಪರಿಶುದ್ಧವಾಗಿರಬೇಕು; ತಪೋಭೂಮಿಗಳಾಗಿರಬೇಕು ಎಂಬುದು ಶ್ರೀ ಅನ್ನವಾನ ಶ್ರೀಗಳ ಮನೀಷೆಯಾಗಿತ್ತು ನೈತಿಕ ಅದಃಪತನದಿಂದ, ಜಾತೀಯ ಭಾವನೆಗಳಿಂದ, ಬಡತನ ಅನಕ್ಷರತೆಯ ರೋಗರುಜಿನಗಳಿಂದ ಪರಿತಪಿಸುತ್ತಿರುವ ಇಂದಿನ ಸಮಾಜಕ್ಕೆ ಮಂದಿರದ ಸಾಧಕರು ಹೊಸ ಚೇತನ, ಹೊಸ ಆಯಾಮಗಳನ್ನುಕಲ್ಲಿಸಿಕೊಡಬಲ್ಲರೆಂದು ಅವರ ದೃಢವಾದ ನಂಬಿಕೆಯಾಗಿತ್ತು, ಹಸಿದ, ಅಜ್ಞಾನದಲ್ಲಿ ಬಳಲುತ್ತಿರುವ ಜನರ ಸೇವೆಗೆ ವಟು-ಸಾಧಕರನ್ನು ಸಿದ್ಧಗೊಳಿಸಲು ಅವರಲ್ಲಿ ವೀರಚೇತನವನ್ನು ತುಂಬಿದರು. ಅವರ ಹೃದಯ ಮನಸ್ಸುಗಳನ್ನು ಹದಗೊಳಿಸಿ ಅಲ್ಲಿ ಹೊಂಬೆಳಕಿನ ಹಣತೆಯನ್ನು ಹೊತ್ತಿಸಿದರು. ಪೂಜ್ಯ ಶ್ರೀಗಳ ಉನ್ನತ ದೃಷ್ಟಿ, ವಿಶಾಲ ಮನೋಭಾವನೆ, ಕಠೋರ ಬ್ರಹ್ಮಚರ್ಯ, ಪರಿಶುದ್ಧ ಶೀಲಗಳೆಲ್ಲವೂ ಮಂದಿರದ ಸಾಧಕರಿಗೆ ಮಾರ್ಗದರ್ಶೀಯಾಗಿದ್ದವು. ಹಾನಗಲ್ಲ ಶ್ರೀಗುರುಕುಮಾರನ ಕೃಪೆ ಅನ್ನದಾನ ಶ್ರೀಗಳ ಮೂಲಕ ಮಂದಿರದ ಸೇವೆಗಾಗಿ ಹರಿದುಬರುತ್ತಿರುವಂತೆ ನಮಗೆಲ್ಲಾ ಅನಿಸುತ್ತಿತ್ತು. ಶಿವಯೋಗಮಂದಿರದ ಆರ್ಥಿಕ ದುಸ್ಥಿತಿಯಲ್ಲಿದ್ದಾಗ ಶ್ರೀಗಳೆಂದೂ ಕುಗ್ಗಲಿಲ್ಲ. ಅವರ ಜೀವನೋತ್ಸಾಹ ಕಡಿಮೆಯಾಗಲಿಲ್ಲ. ಬದಲಾಗಿ ಅದರ ಅಭ್ಯುದಯಕ್ಕಾಗಿ ಹಗಲಿರುಳೂ ಶ್ರಮಿಸಿದರು.ಶಿವಯೋಗಮಂದಿರದ ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ವ್ಯಾಜ್ಯ ಕೋರ್ಟಿಗೆ ಹೋದಾಗ ಶ್ರೀಗಳು ಮೂರುವರ್ಷ ಅಲ್ಲಿಗೆ ಹೋಗಲೇಯಿಲ್ಲ. ವ್ಯಾಜ್ಯ ಮುಗಿದ ನಂತರ ಶ್ರಾವಣ ಮಾಸದಲ್ಲಿ ಶಿವಯೋಗಮಂದಿರಕ್ಕೆ ದಯಮಾಡಿಸಿ ಪ್ರತಿನಿತ್ಯ ಗಣಾರಾಧನೆಯನ್ನು ನೆರವೇರಿಸಿದರು. ಜೋಳ, ಗೋಧಿ ಅಕ್ಕಿ, ಮೆಣಸಿನಕಾಯಿ ಮೊದಲಾದವುಗಳನ್ನೆಲ್ಲಾ ಭಿಕ್ಷೆ ಮಾಡಿ ಮಂದಿರಕ್ಕೆ ಕಳುಹಿಸಿಕೊಡುತ್ತಿದ್ದರು. ಮಂದಿರದಲ್ಲಿ ಶಿವಯೋಗ ಸಾಧಕರ, ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದರು. ಇನ್ನೂ ಹಲವಾರು ಕಟ್ಟಡಗಳನ್ನು ಕಟ್ಟಿಸುವ ಇಚ್ಛೆ ಅವರಿಗಿತ್ತು. ಆದರೆ ಅವರ ಕರ್ತೃತ್ವ ಶಕ್ತಿಗೆ ತಕ್ಕ ಪರಿಸರ ಅಲ್ಲಿ ಸಿಕ್ಕದೇ ಹೋದುದು ಸಮಾಜದ ದುರ್ದವ್ಯವೆಂದೇ ಹೇಳಬೇಕು.
ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ; “ಆತ್ಮನೋ ಮೋಕ್ಷಾರ್ಥಂ ಜಗದ್ದಿ ತಾಯ ಚ’’ ಎಂಬಂತೆ ಸರ್ವವನ್ನು ಲೋಕಕಲ್ಯಾಣಕ್ಕಾಗಿ ತ್ಯಾಗ ಮಾಡಿದ; ಧರ್ಮಾಚರಣೆ, ಸಾದಾ ಜೀವನ, ಉದಾತ್ತವಿಚಾರ ಸರಣಿಗಳನ್ನು ಮೈಗೂಡಿಸಿಕೊಂಡಿದ್ದ ಪೂಜ್ಯ ಅನ್ನದಾನ ಶ್ರೀಗಳಂತಹ ಜಗತ್ ಪೂಜ್ಯರು ಲೋಕದಲ್ಲಿ ಹುಟ್ಟುವುದು ತುಂಬಾ ವಿರಳ. ಮರ್ತ್ಯಲೋಕದ ಮಹಂತರಾಗಿ, ವಿಷಯ ವಿರಾಗಿಯಾಗಿ ಮಾನವತೆಯ ಮೇಲ್ಮೆಯನ್ನು ಮೆರೆದ ಶ್ರೀಗಳು ತಮ್ಮ ಜೀವಾನಾಂತ್ಯದವರೆಗೂ ಶಿವಯೋಗ ಮಂದಿರದ ಅಭ್ಯುದಯವನ್ನೇ ಬಯಸಿದರು. ಇಂದು ಮಂದಿರದ ಕಲ್ಲು ಕಂಬ, ಗಿಡ-ಮರ-ಬಳ್ಳಿಗಳೆಲ್ಲ ಅನ್ನದಾನ ಶ್ರೀಗಳ ಪ್ರಾಮಾಣಿಕ ಸೇವೆಯನ್ನು ಮಂದಿರದ ಏಳ್ಗೆಗಾಗಿ ಅವರು ವಹಿಸಿದ ಶ್ರಮವನ್ನು ಸುರಿಸಿದ ಬೆವರನ್ನು ಪಟ್ಟ ಪಾಡನ್ನು ಸಹೃದಯರಲ್ಲಿ ತೋಡಿಕೊಳ್ಳುತ್ತಿವೆ. ಅವು ತಮ್ಮ ತಂದೆ ನಿಜವಾದ ಅನ್ನದಾನಿ ಯಾವಾಗ ಬಂದಾನೆಂದು ಮಾರ್ಗನಿರೀಕ್ಷಣೆಯಲ್ಲಿದ್ದಂತೆ ಸಹೃದಯರಿಗೆ ಭಾಸವಾಗದೇ ಇರದು.