ಲೇಖಕರು : ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ.
ಸಂಗ್ರಹ ಸಹಾಯ : ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ
ಸತ್ಯ-ಶುದ್ಧ-ಸಾಧನೆಯ ಸೂತ್ರವಿಡಿದು, ಪರಮಾರ್ಥದಲ್ಲಿ ಯಥಾರೀತಿಯಾಗಿ ನಡೆದು, ಷಟ್‌ಸ್ಥಲ ಸಿದ್ಧಿಯನ್ನು ಪಡೆದ, ಮಾನವತೆಯ ಪರಮಾವಧಿ ವಿಕ್ರಮದ ಮಹಾನುಭಾವರ ಮಾಲಿಕೆಯಲ್ಲಿ, ಮಹಾಮಹಿಮರಾದ ಶ್ರೀಮದಥಣಿ ತಪಸ್ವಿಗಳವರು
ಒಂದು ದಿವ್ಯ ತೇಜೋರತ್ನ! ಅವರ ಲೋಕೋತ್ತರ ವ್ಯಕ್ತಿತ್ವವು, ಅನೇಕ ವಿಧದಲ್ಲಿ ವ್ಯಕ್ತವಾಗಿ, ಮಾನವ ಕೋಟಿಯನ್ನು ಪಾವನಗೊಳಿಸಿದೆ. ಲೋಕ-ಲೌಕಿಕರ ಸಂಪರ್ಕವನ್ನು ಕೋರದೆ, ನಿರಾಭಾರಿ ಜೀವನದ ಏಕಾಂತದಲ್ಲಿ, ಆತ್ಮಸಾಧನೆಯ ಮುಖವಾಗಿ ಅವರು ಸಾಧಿಸಿದ ಲೋಕ ಸಾಧನೆಯು ಅನ್ಯಾದೃಶವಾಗಿದೆ; ಅಸದೃಶವಾಗಿದೆ. ಪರಮಾರ್ಥವೇ ಪ್ರಾಣವಾಗಿದ್ದ ಅವರು, ನೋಟದಲ್ಲಿ, ಮಾಟ-ಕೂಟದಲ್ಲಿ, ಪರಮಾರ್ಥವನ್ನೇ ತುಂಬಿಕೊಂಡರು; ಪರಮಾರ್ಥವನ್ನೇ ಪ್ರಸಾದವೆಂದು ನಂಬಿಕೊಂಡರು.
ಪ್ರಪಂಚದ ಯೋಗ-ಕ್ಷೇಮಗಳು, ಸುಖ-ಶಾಂತಿ-ಸಮೃದ್ಧಿಗಳು ಪರಮಾರ್ಥ ಪ್ರವಣತೆಯನ್ನೇ ಅವಲಂಬಿಸಿದೆ. ಪರಮಾರ್ಥವೆಂದರೆ ಪ್ರಪಂಚದ ತಿರುಳು. ಪ್ರಪಂಚ ಪ್ರೇಮಿಗಳು ಪರಮಾರ್ಥನಿಷ್ಠೆಯನ್ನು ಮರೆಯಲಾಗದು, ತೊರೆಯಲಾಗದು-ಎಂಬೀ ವಿಚಾರವನ್ನು ಅವರು ತಮ್ಮ ಸಹಜ ವರ್ತನೆಯಿಂದ ಜನತೆಗೆ ನಿರೂಪಿಸಿದರು. ಅವರ ಆತ್ಮಶಕ್ತಿಯನ್ನು, ಗುಣ-ಶೀಲ-ಸ್ವಭಾವಗಳನ್ನು ಬಲ್ಲವರು ಅವರನ್ನು ಶಿವಯೋಗಿಗಳೆಂದು ಕರೆದರು. ಅದು ಅವರಿಗೆ ಸಲ್ಲುವ ಹೆಸರಾಯಿತು; ಅವರ ಅಂತರಂಗವನ್ನು ಹೇಳುವ ಹೆಸರಾಯಿತು! ಸರ್ವರೂ ಅದನ್ನು ಶ್ರದ್ಧೆಯಿಂದ ಉಚ್ಚರಿಸಿದರು; ‘ಶಿವಯೋಗಿ ಕೃಪೆಮಾಡು’ ಎಂದು ಶಿರಬಾಗಿ, ಕರಮುಗಿದು ಕೋರಿದರು.
ಅಮೃತಾಂಕುರದ ಬೆಳಕು ಬೆಳವಣಿಗೆ :
ಮಾವಿನ ಸಸಿಯು ಮಾವಿನ ಮರವಾಗುವಂತೆ, ಬೇವಿನ ಸಸಿಯು ಮಾವಿನ ಮರವಾಗಲಾರದು. ರಸ-ರುಚಿಗಳಿಂದಾಗಿ ಹೀಚು ಹಣ್ಣೆನಿಸುವುದು. ಆದರೆ, ಹೀಚಿನಲ್ಲಿ ಹಣ್ಣಾಗುವ ಶಕ್ತಿ ಮೊದಲು ಅಗತ್ಯ. ಶಿವಯೋಗಿಗಳು ಬಾಲ್ಯದಲ್ಲಿಯೇ ಶಿವಶಕ್ತಿಯ
ಸಂಕೇತವಾಗಿದ್ದರು; ಪರಿಪೂರ್ಣತೆಯ ಸಂಕ್ಷೇಪವಾಗಿದ್ದರು.
ಬಾಲಕ ಗುರುಲಿಂಗದೇವ, ಗುರುಕೃಪೆಯಾಂತು, ಮುರುಘದೇವನಾಗಿ, ನಿಜಾಚರಣೆಯಿಂದ ಶಿವಯೋಗಿಯಾದುದು ಸರಿಯಷ್ಟೆ? ಗುರುಲಿಂಗದೇವನಿಗೆ,ತೆಲಸಂಗದ ಶಿವಬಸವದೇಶಿಕರು ವಿಶ್ವಾಸದಿಂದ ಅಕ್ಷರಾಭ್ಯಾಸವನ್ನು ಮಾಡಿಸಿ, ದುರ್ಧರವಾದ, ದುಃಸಾಧ್ಯವಾದ ತಮ್ಮ ಕುಷ್ಠರೋಗವನ್ನು ನೀಗಿದರು. ಗುರುಗಳ ಆರೋಗ್ಯ, ಶಿವಯೋಗಿಗಳ ಪವಾಡಗಳಿಗೆ ನಾಂದಿಯಾಯಿತು! ಮಹಾತ್ಮರು ಕರುಣಿಸುವ ಪ್ರತಿಫಲವು ಎಂತಹುದು ಎಂಬುದನ್ನು ನಾವು ಇಲ್ಲಿ ನೋಡಬಹುದು. ಶಿವಯೋಗಿಗಳು ಗುರುಗಳ ರೋಗವನ್ನು ಕಳೆದರು; ಅನೇಕರ ಮನದ ಮಲಿನತೆಯನ್ನು ತೊಳೆದರು.ಭವರೋಗ ವೈದ್ಯನಿಗೆ ಅಸಾಧ್ಯವೇನಿದೆ? ಅವರ ಪ್ರಸನ್ನತೆಯು, ಸಮಸ್ತ ಆಧಿ-ವ್ಯಾಧಿಗಳಿಗೆ ಸಿದ್ಧೌಷಧ! ಅವರು ಅಮೃತವಾಗಿ ಬೆಳೆದರು; ಸಂಜೀವನವಾಗಿ ಸಮಾಜವನ್ನು ಬೆಳೆಯಿಸಿದರು.
ಜಂಗಮದ ಸುಳಿವು ವಸಂತದ ತಂಗಾಳಿ:
ಶಿವಯೋಗಿಗಳಿಗೆ ೫ ವರ್ಷದ ಬಾಲ್ಯ, ತಾಯಿ ತಂದೆಗಳು ಅಥಣಿಗೆ ಬಂದು,ಮರುಳ ಶಂಕರಸ್ವಾಮಿಗಳಿಗೆ ಅವರನ್ನು ಒಪ್ಪಿಸಿದರು. ಅಂದು ಗಚ್ಚಿನಮಠದ ಭಾಗ್ಯೋದಯವಾಯಿತು! ಮುಂದೆ ಸುಮಾರು ೧೫ ವರುಷ, ಶಿವಯೋಗಿಗಳು ವಿದ್ಯಾಭ್ಯಾಸದಲ್ಲಿ ಕಳೆದರು. ವಿವಿಧ ದರ್ಶನಗಳನ್ನು, ಶಿವಾನುಭವ ಸಾಹಿತ್ಯವನ್ನು ಆಮೂಲವಾಗಿ ಪರಿಶೀಲಿಸಿದರು. ೨೦ನೆಯ ವರುಷದಲ್ಲಿ ಅನುಗ್ರಹಗುರುಗಳಾದ ಗುರುಶಾಂತಸ್ವಾಮಿಗಳವರಿಂದ ಅಪ್ಪಣೆ ಪಡೆದು, ದೇಶಾಟನೆಗೆ ಹೊರಟರು. ನಿಯತ-ಭಿಕ್ಷಾನ್ನದಿಂದ ೨೦ ವರುಷ, ಅವ್ಯಾಹತವಾಗಿ, ಪಾದಚಾರಿಯಾಗಿ ಸಂಚರಿಸಿದರು.ಆಧ್ಯಾತ್ಮಿಕ ಆರೋಗ್ಯ ಸಂವರ್ಧನೆಗಾಗಿ, ಹಲವು ತೀರ್ಥಕ್ಷೇತ್ರಗಳನ್ನು, ಶಿವಶರಣರ ನಿವಾಸಗಳನ್ನು, ನಿಸರ್ಗಸುಂದರ-ನಿವಾಹತ ಪ್ರದೇಶಗಳನ್ನು ನಿರೀಕ್ಷಿಸಿದರು; ಅಲ್ಲಿಯ ಪವಿತ್ರ, ಪರಮಾಣುಗಳನ್ನು, ಅನುಭವ ವಿಶೇಷಗಳನ್ನು, ವಿಪುಲವಾಗಿ ಹೃದಯದಲ್ಲಿ ಶೇಖರಿಸಿದರು.
ಶಿವಯೋಗಿಗಳು ದೇಶಸಂಚಾರವನ್ನು ಪೂರೈಸಿದಾಗ ನಲವತ್ತು ವರುಷದವರಾಗಿದ್ದರು. ಸಂಚಾರದಲ್ಲಿ ಚರಜಂಗಮದ ಆಚರಣೆಯನ್ನು, ಅವರು ಬಹು ಜಾಗರೂಕತೆಯಿಂದ ಸಾಗಿಸಿದರು. ತ್ರಿಕಾಲ ಲಿಂಗಪೂಜೆ, ಶಿವಭಕ್ತರ ಒಂದು ಮನೆಯ ಭಿಕ್ಷಾನ್ನ, ಒಂದು ಸಲ ಪ್ರಸಾದ, ಶಿವಾನುಭವ ಸಂಪಾದನೆ, ಜಿಜ್ಞಾಸುಗಳಿಗೆ ಮಾರ್ಗದರ್ಶನ ಸಾಮಾನ್ಯವಾಗಿ ಇದುವೇ ಶಿವಯೋಗಿಗಳ ದಿನಚರಿ, ಶಿವಯೋಗಿಗಳು,ದಾರಿಯಲ್ಲಿ ಭಕ್ತರು ನೀಡಬಯಸಿದ ಸುಖ-ಸೌಕರ್ಯಗಳನ್ನು, ಎಷ್ಟು ಪ್ರಾರ್ಥಿಸಿದರೂ ಸ್ವೀಕರಿಸಲಿಲ್ಲ. ತಾರುಣ್ಯದ ಭರದಲ್ಲಿ, ತನು-ಮನಗಳನ್ನು ತಣಿಸುವುದಾಗಲಿ,ಕೋಮಲಗೊಳಿಸುವುದಾಗಲಿ ಸ೦ಯಮಿಗಳಿಗೆ ಸೇರುವ ವಿಷಯವಲ್ಲ.ಶಿವಯೋಗಿಗಳು ನೆಟ್ಟನೆ ಜಂಗಮವಾಗಿ ಸುಳಿದರು; ಜನಜೀವನವು ಪರಿಮಳ ಪೂರ್ಣವಾಗಿ ಅರಳುವಂತೆ, ತಂಗಾಳಿಯಾಗಿ ತೀಡಿದರು.
ಸೃಷ್ಟಿಯಲ್ಲಿ ಕಂಡುದನ್ನು ದೃಷ್ಟಿಯಲ್ಲಿ ಉಂಡರು :
ಗುಹೇಶ್ವರನ ಗಡ್ಡೆ, ಪ್ರಶಾಂತ ವಾತಾವರಣದ ಒಂದು ಪರಮ ಪಾವನ ತಪೋವನ, ಶಿವಯೋಗಿಗಳು ಆತ್ಮಚಿಂತನೆಯ ವಿಶ್ರಾಂತಿಯ ಆತುರದಲ್ಲಿ ಅಲ್ಲಿಗೆ ದಯಮಾಡಿದರು. ಅಲ್ಲಿ ಅವರು ಬಹುಕಾಲ ಅಂತರ್ಮುಖವಾಗಿದ್ದು, ಶಿವಯೋಗ ಬಲದಿಂದ ಪಿಂಡದಲ್ಲಿ ಪರವಸ್ತುವನ್ನು ಕಂಡು, ಪ್ರಸಾದಪಿಂಡವಾದರು; ಪ್ರಕಾಶಪಿಂಡವಾದರು. ವಿಶ್ವಚೇತನವು ವ್ಯಕ್ತಿಯಲ್ಲಿ ಹೇಗೆ ಅನುಗತವಾಗಿದೆ ಅಂತರ್ಗತವಾಗಿದೆ ಎಂಬುದನ್ನು ಅವರು ಅನುಭವದಲ್ಲಿ ತಂದುಕೊಂಡರು. ಅವರ ದೃಷ್ಟಿ ಶಿವದೃಷ್ಟಿಯಾಯಿತು; ಶುಭದೃಷ್ಟಿಯಾಯಿತು.
ಇಂತು ಜಂಗಮ ಜ್ಯೋತಿಯಾಗಿ, ಪರತತ್ತ್ವದ ಅಧಿಕೃತ ಪ್ರತಿನಿಧಿಯಾಗಿ,೨೬ ವರುಷಗಳ ಸುದೀರ್ಘ ಪ್ರವಾಸ ಮತ್ತು ಏಕಾಂತವಾಸದಿಂದ ಮತ್ತೆ ಅಥಣಿಗೆಆಗಮಿಸಿದರು. ನಾಡಿನ ಸುಕೃತವೇ ನಡೆದು ಬಂದಿತೆಂದು ಜನರು ಕೊಂಡಾಡಿದರು.ಮೂರನೆಯ ಗುರುಗಳಾದ ಚೆನ್ನಬಸವಸ್ವಾಮಿಗಳಿಗೆ ಅತ್ಯಂತ ಸಂತೋಷವಾಯಿತು.ಗುರುಗಳು ತಮ್ಮ ಮನೋಗತವನ್ನು ವಿವರಿಸಿದರು. ಶಿವಯೋಗಿಗಳು ‘ಶಿವನಾಣತಿ’ಎಂದು ಇನ್ನು ಗಚ್ಚಿನಮಠದಲ್ಲಿಯೇ ನೆಲೆಸುವುದಾಗಿ ಆಶ್ವಾಸನವಿತ್ತರು. ಅಂದಿನಿಂದ ಗಚ್ಚಿನಮಠದ ಯೋಗಮಂಟಪದಲ್ಲಿ, ಕೇವಲ ನಿರ್ಲಿಪ್ತರಾಗಿ, ನಿಸ್ಪೃಹರಾಗಿ ಲಿಂಗ ಲೀಲಾವಿಲಾಸದಲ್ಲಿದ್ದು, ಲೋಕೋದ್ಧಾರದ ಅನೇಕ ಕಾರ್ಯಗಳನ್ನು ಜರುಗಿಸಿದರು.ನಡೆನುಡಿಗಳಲ್ಲಿ ಮೃಡನು, ಪವಾಡಗಳಿಗೆ ಒಡೆಯನು.
ಸಾತ್ವಿಕ-ತಾತ್ವಿಕ ವೃತ್ತಿಯ ಸಂಯಮಶೀಲರು, ಲೋಕೋದ್ಧಾರದ ಉದಾರ ಬುದ್ಧಿಯಿಂದ, ತಮ್ಮ ತಪಃಶಕ್ತಿಯನ್ನು ಪವಾಡಗಳ ರೂಪದಲ್ಲಿ ವ್ಯಕ್ತಗೊಳಿಸುವರು.ಪ್ರತಿಷ್ಠೆ, ಪೌರುಷ, ಪ್ರತಿಶೋಧ ಈ ಮೊದಲಾದ ವಿಕಾರಗಳಿಂದ ಕೂಡಿದ ಪವಾಡಗಳು,ಹಠಯೋಗದ ಚಮತ್ಕಾರಗಳಲ್ಲದೆ, ಶಿವಯೋಗದ ಸಿದ್ಧಿಗಳಲ್ಲ. ನಿರಹಂಭಾವ ನಿರೀಹಂಭಾವದ ಶಿವಯೋಗ ಸಿದ್ಧಿಗಳು, ಉಳಿದ ಸಿದ್ಧಿಗಳಂತೆ, ಆತ್ಮ ಸಾಕ್ಷಾತ್ಕಾರದಲ್ಲಿ ಬಾಧಕವಲ್ಲ; ಬಂಧನವಲ್ಲ.
ಶಿವಯೋಗಿಗಳು ಸಿದ್ಧಪುರುಷರು; ಶಿವಯೋಗಸಿದ್ಧರು. ಅವರ ಮಹಿಮೆಗಳು ಅನಂತ; ಅನುಪಮ, ಚರಿತ್ರೆಯಲ್ಲಿ ಸಂಕ್ಷೇಪವಾಗಿ ಕೆಲವು ಬಂದಿವೆ:
ಶಿವಯೋಗಿಗಳ ಸನ್ನಿಧಿಯಲ್ಲಿ ಸರ್ಪ ಸೌಮ್ಯವಾಯಿತು, ಹುಲಿಯು ಹುದ್ದೆಯಾಯಿತು, ಅವರು ಪಕ್ಷಿಗಳಲ್ಲಿ ಗುರುದರ್ಶನ ಮಾಡಿದರು, ಧಾರಾಕಾರವಾಗಿ ಸುರಿವ ಅಕಾಲ ವೃಷ್ಟಿಯನ್ನು ಪರುಷ ದೃಷ್ಟಿಯಿಂದ ತಡೆದು, ಗಣ ಸಂತರ್ಪಣವನ್ನು ಸಾಂಗಗೊಳಿಸಿದರು; ಸಂಗಮನಾಥನಿಗೆ ಇಚ್ಛಾಭೋಜನ ಮಾಡಿಸಿದರು; ಶರಣಾಗತರಿಗೆ,ಸಿದ್ಧಿಗಳು, ಶಿವಯೋಗಿಗಳ ಸಮೃದ್ಧ ಜೀವನದ ಸಂಕೇತಗಳಾಗಿವೆ.ಶ್ರದ್ಧಾಜೀವಿಗಳಿಗೆ ಅವರವರ ಬಯಕೆಗಳನ್ನು ದಯಪಾಲಿಸಿದರು. ಈ ತೆರನಾದ ಎಲ್ಲ ವಸ್ತುತಃ ಶಿವಯೋಗಿಗಳವರ ಜೀವನವೇ ಒಂದು ಮಹಾಸಿದ್ದಿ, ಶಿವಯೋಗಿಗಳ ಪವಾಡಗಳು; ಪವಾಡಗಳೇ ಶಿವಯೋಗಿಗಳಲ್ಲ! ಪವಾಡಗಳಿಂದಾಚೆ, ನಿತ್ಯ ಜೀವನದ ನಡೆನುಡಿಗಳಲ್ಲಿ, ಎಲ್ಲರಿಗೂ ಅರ್ಥವಾಗುವಂತೆ, ಶಿವಯೋಗಿಗಳ ವ್ಯಕ್ತಿತ್ವವು ಆದರ್ಶಪೂರ್ಣವಾಗಿ ವಿಜೃಂಭಿಸಿದೆ.
ವೀರವಿರತಿಯ ಮಹಂತ, ನೃತ್ಯಾಚಾರದ ಭಗವಂತ :
ಸಂಕಲ್ಪ-ವಿಕಲ್ಪಗಳ ಬಲೆಯಲ್ಲಿ ಬಿದ್ದವರನ್ನು, ಆಶೆ-ಆಮಿಷಗಳು, ಲಾಭ-ಲೋಭಗಳು, ಮಾನ-ಸನ್ಮಾನಗಳು, ಕೀರ್ತಿ-ವಾರ್ತೆಗಳು ಅತಿ ತೀವ್ರವಾಗಿ ಪರಾಧೀನಗೊಳಿಸುವವು. ಪರತಂತ್ರನಿಗೆ ಸತ್ಯವಿದೆಯೆ? ಶಾಂತಿಯಿದೆಯೆ? ಲೌಕಿಕ ರೀತಿ-ನೀತಿಯಾದರೂ ಇದೆಯೆ? ಅವನಿಗೆ ಏನೂ ಇಲ್ಲ; ತಾನೂ ಇಲ್ಲ! ಶಿವಯೋಗಿಗಳು ಸಂಕಲ್ಪ-ವಿಕಲ್ಪಶೂನ್ಯರು; ಸರ್ವಥಾ ಸಮರ್ಥರು; ಸ್ವತಂತ್ರರು.ಆಶೆಗೆ ದಾಸರಾಗಿ ಅವರು ಏನನ್ನೂ ಬೇಡಲಿಲ್ಲ; ಬಯಸಲಿಲ್ಲ, ಆಶೆಯೇ ದಾಸಿಯಾಗಿ ತಮ್ಮೆಡೆಗೆ ಬಂದರೂ ಅವಕಾಶನೀಡಲಿಲ್ಲ. ಹೊನ್ನು-ಹೆಣ್ಣು-ಮಣ್ಣುಗಳಿಗೆ ಎಂದೂ ಹಣ್ಣಾಗದ ನಿರ್ವಿಷಯ-ನಿರ್ವಿಕಾರ ಚಿತ್ತರು ಅವರು. ವಾಸನೆಗಳನ್ನೆಲ್ಲ ಸಮೂಲವಾಗಿ ನಾಶಗೊಳಿಸಿದ ವೈರಾಗ್ಯದ ಸೀಮಾಪುರುಷರು ಅವರು. ಅವರಿಗೆ ದೇಹಭಾವದ ಮಮತೆ-ಮೋಹಗಳಿಲ್ಲ; ಜೀವಭಾವದ ದುಃಖ-ದುಮ್ಮಾನಗಳಿಲ್ಲ. ಅವರ ವಿರಕ್ತಿಯ ದೇಹದಲ್ಲಿ ಭಕ್ತಿಯೇ ಪ್ರಾಣ, ಸೇವೆ-ಸದಾಚಾರಗಳೇ ಪಾದಗಳು, ನಿಗ್ರಹಾನುಗ್ರಹಗಳೇ ಹಸ್ತಗಳು, ಪ್ರಸನ್ನತೆ-ಪವಿತ್ರತೆಗಳೇ ನೇತ್ರಗಳು, ಇದು ಶಿವಯೋಗಿಗಳವರ ದಿವ್ಯ ದೇಹ! ನಿತ್ಯಾಚರಣೆಯಲ್ಲಿ ನೃತ್ಯಾಚಾರವನ್ನು ಪಾಲಿಸಿದ ಪರಮಾತ್ಮನ ಪುಣ್ಯರೂಪ! ವಿರಕ್ತಿಯ ಪೂರ್ಣರೂಪ!!!
ಸಮಾಜ ಜೀವನದಲ್ಲಿ ಸಾಂಸ್ಕೃತಿಕ ನವಚೇತನ :
ಸಾಹಿತ್ಯ ಸಂಸ್ಕೃತಿಗಳ ಉದಾತ್ತ ಪರಂಪರೆಯ ಪರಿಚಯವಿಲ್ಲದ ಜನಾಂಗ ಸಮಾಜವಲ್ಲ; ಅದೊಂದು ಜನಜಂಗುಳಿ ಮಾತ್ರ ಸಾಹಿತ್ಯದ ಒಲವೂ, ಸಂಸ್ಕೃತಿಯ ನಿಲವೂ, ಸಮಾಜಜೀವನದಲ್ಲಿ ಅಗತ್ಯ. ಆ ದಿಶೆಯಲ್ಲಿ ಅಜ್ಞ ಜನತೆಯನ್ನು ರೂಪಿಸುವುದು ಮಹಾಪುರುಷರ ಆದ್ಯ ಕರ್ತವ್ಯ ಅವರ ಅವತಾರ ಕಾರ್ಯವೂ ಅದೇ.ಬಸವಾದಿ ಪ್ರಮಥರ ಜೀವನ ಸಾಹಿತ್ಯ ಸಂಸ್ಕೃತಿಯ ಕೋಶವಾಗಿದೆ.ಜೀವನಸಾಹಿತ್ಯವೆಂದರೆ ಸಾಮಾನ್ಯವಾಗಿ ವಚನ ಸಾಹಿತ್ಯ ಮತ್ತು ಪುರಾಣಸಾಹಿತ್ಯ ತನ್ಮೂಲಕ, ಸಂಸ್ಕೃತಿಯು ಸರ್ವರಿಗೂ ಸುಲಭ ಸಾಧ್ಯ. ಈ ಕಾರಣದಿಂದಲೇ ಪುರಾಣಪ್ರವಚನಗಳು ಇಂದಿಗೂ ನಡೆಯುತ್ತಲಿವೆ.
ಶಿವಯೋಗಿಗಳು ಅನುಭವದ ಅಕ್ಷಯನಿಧಿಯಾಗಿದ್ದರೂ, ಬಸವಣ್ಣನವರ ವಚನಗಳನ್ನು ನಿತ್ಯದಲ್ಲಿ ಓದುತ್ತಿದ್ದರು; ಬರೆಯುತ್ತಿದ್ದರು. ಅಪ್ಪನವರ ವಚನಗಳೆಂದರೆ ಅವರಿಗೆ ಅಚ್ಚುಮೆಚ್ಚು ಅನುಭವ ಸಂಪಾದನೆಯಲ್ಲಿ ‘ಸಾಕು’ ಎನ್ನುವ ಭಾವನೆ ಅವರಿಗೆ ಬರಲಿಲ್ಲ! ಅವರ ಸನ್ನಿಧಿಯಲ್ಲಿ ಪುರಾಣ, ಪ್ರವಚನ, ಕೀರ್ತನ, ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ತೆರಪಿಲ್ಲದೆ ಜರುಗುತ್ತಿದ್ದವು. ಅನುಭವದ ಅಮೃತಾನ್ನವು ಎಲ್ಲರಿಗೂ ಯಥೇಷ್ಟವಾಗಿ ದೊರೆಯುತ್ತಿದ್ದಿತು. ಅನುಭವಿಗಳು, ಶಾಸ್ತ್ರಜ್ಞರು, ಕುಶಲಕಲಾವಿದರು ಎಲ್ಲರೂ ಅಲ್ಲಿಗೆ ಬಂದು ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆ ಮಲ್ಲಣಾರ್ಯರು, ದಾವಣಗೆರೆ ಚಂದ್ರಶೇಖರಶಾಸ್ತ್ರಿಗಳು ಮೊದಲಾದವರು ಪುರಾಣಪ್ರವಚನಗಳನ್ನು ಒಳ್ಳೆ ಹೃದಯಂಗಮವಾಗಿ ಹೇಳಿದರು. ಗಚ್ಚಿನಮಠವು ಅನುಭವಮಂಟಪವಾಗಿ ಮಾರ್ಪಟ್ಟಿತು. ಅನ್ನದಾಸೋಹದ ಜೊತೆಯಲ್ಲಿ ಜ್ಞಾನದಾಸೋಹವೂ ತಪ್ಪದೆ ಅಲ್ಲಿ ನಡೆಯಿತು. ಬಸವಪುರಾಣಮಹೋತ್ಸವ, ಏಕಾದಶ ರುದ್ರ ಪೂಜೆ, ಅರವತ್ತುಮೂರು ಪುರಾತನರ ಪೂಜೆ ಇನ್ನೂ ಎಷ್ಟೋ ವಿಶಿಷ್ಟ ಸಮಾರಂಭಗಳು, ಅತ್ಯಂತ ಯಶಸ್ವಿಯಾಗಿ, ಅತೀವ ಆದರ್ಶವಾಗಿ ಜರುಗಿದವು. ಈ ಎಲ್ಲ ಸಮಾರಂಭಗಳ ಫಲವಾಗಿ ಭಕ್ತ ವೃಂದದಲ್ಲಿ ಒಂದು ಅಪೂರ್ವ ಚೇತನ ಜಾಗೃತವಾಯಿತು! ಸಮಾರಂಭದ ವಿತರಣ ವಿನಿಯೋಗದ ವಿಚಾರವಾಗಿ, ಯಾರೂ ಯಾರನ್ನೂ ಕಾಡಲಿಲ್ಲ; ಬೇಡಲಿಲ್ಲ. ಶಿವಯೋಗಿಯ ತಪಃಪ್ರಭಾವದಿಂದ, ಎಲ್ಲ ಅನುಕೂಲತೆಗಳು ಎಲ್ಲಿಂದಲೋ ಬಂದು, ಎಲ್ಲವೂ ಸರಾಗವಾಗಿ ಸಾಗುತ್ತಿದ್ದಿತು.ಸಂಕಲ್ಪಸಿದ್ಧಿ-ಸಂಕಲ್ಪಶುದ್ಧಿ-ಸಂಕಲ್ಪ ಶೂನ್ಯತೆಯಿದ್ದಲ್ಲಿ ಕೊರತೆಯೆಲ್ಲಿಯದು?
ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯಪ್ಪುದು :
ಶಿವಯೋಗಿಗಳ ವ್ಯಕ್ತಿತ್ವದಲ್ಲಿ, ಚುಂಬಕದ ಆಕರ್ಷಣ ಗುಣವೂ, ಪರುಷದ ಪರಿವರ್ತನಗುಣವೂ, ಪ್ರದೀಪದ ಸ್ವರೂಪ ನಿರ್ಮಾಣಗುಣವೂ ಮಿಲಿತವಾಗಿದ್ದವು.ಅವರು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು; ಪರುಷವಾಗಿ ಹಲವರನ್ನು ಪರಿವರ್ತನಗೊಳಿಸಿದರು; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು. ಅವರ ಪ್ರಸಾದವಾಣಿಯ ಪ್ರಭಾವದಿಂದ, ಆದರ್ಶಗುರುಗಳಾಗಿ ಅಪಾರಕೀರ್ತಿಯನ್ನು ಗಳಿಸಿದ,ಲಿಂಗೈಕ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು,ಒಂದು ಚಿರಸ್ಮರಣೀಯ ಇತಿಹಾಸವಾಗಿ ಪರಿಣಮಿಸಿದರು. ಅವರ ವಾತ್ಸಲ್ಯದಲ್ಲಿ ಬೆಳೆದ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಶಾಂತಮನೋವೃತ್ತಿಯ ಜನಪ್ರಿಯ ಜಗದ್ಗುರುಗಳಾಗಿ ಕಂಗೊಳಿಸುತ್ತಿರುವರು. ಅವರ ಕಾರುಣ್ಯದ ಮೂರ್ತಿ, ಪೂಜ್ಯಪಾದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು,ಶರಣಸಂಸ್ಕೃತಿಯ ಅಮೃತ ಕಿರಣವಾಗಿ ಸಮಾಜವನ್ನು ತಣಿಸುತ್ತಿರುವರು.
ಪ್ರಾತಃಸ್ಮರಣೀಯರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಹಾಗೂ ಬೀಳೂರು ಗುರುಬಸವಸ್ವಾಮಿಗಳು ಶಿವಯೋಗಿಗಳ ಅಧ್ಯಾತ್ಮ ಜೀವನದ ಬಾಹ್ಯರೂಪವಾಗಿದ್ದರು.ಪರಮಪೂಜ್ಯ ಬಿದರಿ ಕುಮಾರ ಸ್ವಾಮಿಗಳು ಮತ್ತು ಹಾನಗಲ್ಲ ಕುಮಾರಸ್ವಾಮಿಗಳು ಶಿವಯೋಗಿಗಳ ಜೀವನ ವೈಖರಿಯನ್ನು ನೋಡಿ, ಶಿವಯೋಗದ ಸ್ಫೂರ್ತಿಯನ್ನು ಪಡೆದರು. ಅಥಣಿ, ಐನಾಪುರ, ತೆಲಸಂಗ, ಕೋಹಳ್ಳಿ ಮೊದಲಾದ ಗ್ರಾಮದ ತತ್ವನಿಷ್ಠರಾದ ಪಟ್ಟಾಧ್ಯಕ್ಷರೆಲ್ಲರೂ ಶಿವಯೋಗಿಗಳಲ್ಲಿ ಕೇವಲ ವಿಶ್ವಾಸವುಳ್ಳವರಾಗಿದ್ದರು.
ಶಿವಯೋಗಿಗಳು, ಅನೇಕ ಜನ ಗುರು ವಿರಕ್ತಮೂರ್ತಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು; ಗುರು-ವಿರಕ್ತರಲ್ಲಿ, ವಿರಕ್ತ-ವಿರಕ್ತರಲ್ಲಿ ಪರಸ್ಪರ ಸಹಕಾರವನ್ನು ಕುದುರಿಸುವ, ಪಕ್ಷಾತೀತ ಪ್ರವೃತ್ತಿಯ ಮಹಾಚೇತನವಾಗಿದ್ದರು. ಅವರು ಪರಂಜ್ಯೋತಿಯಾಗಿ, ಅನೇಕ ಜ್ಯೋತಿಗಳನ್ನು ನಿರ್ಮಾಣ ಮಾಡಿದರು;ಮಹಾಸಿಂಧುವಾಗಿ, ಅನೇಕ ಜೀವನ ಬಿಂದುಗಳನ್ನು ನಿರ್ಮಾಣ ಮಾಡಿದರು!ಇಪ್ಪತ್ತನೆಯ ಶತಮಾನದ ಆದಿಭಾಗ, ಶಿವಯೋಗಿಗಳ ಸಹಸ್ರ ಕಿರಣಗಳಿಗೆ ಆಗರವಾಗಿದ್ದಿತು!
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು :
ಶಿವಯೋಗಿಗಳು, ಶಾಲಿವಾಹನ ಶಕ ೧೭೫೮ ರಲ್ಲಿ ಜನಿಸಿ, ೧೮೪೩ರ ವರೆಗೆ (ಕ್ರಿ. ಶ.೧೮೩೬-೧೯೨೧), ಅಂದರೆ ೮೫ ವರುಷ, ಮಿತವಾಗಿ, ಹಿತವಾಗಿ ಬಾಳಿದರು. ಈ ಅವಧಿಯಲ್ಲಿ ಅವರು ಏನು ಸಾಧಿಸಿದರು? ಎಂತು ಸಾಧಿಸಿದರು?ಎಷ್ಟು ಸಾಧಿಸಿದರು? ಎಂಬುದನ್ನು ಅವರ ಚರಿತ್ರೆಯಿಂದ ಚೆನ್ನಾಗಿ ಮನಗಾಣಬಹುದು.ಅವರು ಸಾಧನೆಯ ಬಲದಿಂದ, ತನು-ಮನ-ಭಾವಗಳಲ್ಲಿ ಲಿಂಗವಾಗಿದ್ದರು. ಅವರ ಕರಣಹರಣಗಳು ಲಿಂಗದ ಕಿರಣಗಳು. ಅವರ ಹೃದಯ ಅನುಭವದ ನಿಲಯ.ಅವರು ಪ್ರಭುವಿನ ಅಪರಾವತಾರ; ಪೂರ್ಣಾವತಾರ! ತಮ್ಮ ಅವತಾರ ಕಾರ್ಯವನ್ನು,ಅವರು ತಮ್ಮದೇ ಆದ ರೀತಿಯಲ್ಲಿ ಪೂರೈಸಿದರು.
ಶಾಲಿವಾಹನ ಶಕ ೧೮೪೨ನೆಯ (ಕ್ರಿ. ಶ. ೧೯೨೦) ರೌದ್ರಿ ಸಂವತ್ಸರದ ಕಾರ್ತಿಕ ಮಾಸ ಶಿವಯೋಗಿಗಳಿಗೆ ತುಂಬ ವೃದ್ಧಾಪ್ಯ. ಒಂದು ದಿನ ಪ್ರಾತಃಕಾಲ ಎಂದಿನಂತೆ ಅವರು, ಶಿವಾರ್ಚನೆಗೆ ಪುಷ್ಪಗಳನ್ನು ಮೆಲ್ಲನೆ ಎತ್ತುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಸ್ವಲ್ಪ ಜೋಲಿ ಹೋಯಿತು. ಅಂದಿನಿಂದ ಅವರು, ಶಿವನ ಕಡೆಗೆ ಇನ್ನೂ ವಿಶೇಷವಾಗಿ ವಾಲಿದರು. ‘ಶಿವನ ಅಪ್ಪಣೆಯಾಗಿದೆ; ಇನ್ನು ಆರು ತಿಂಗಳಿಗೆ ಮಹಾಪ್ರಯಾಣ’ ಎಂದು ನೆರೆಯವರಿಗೆ ತಿಳಿಸಿದರು. ಆ ಬಳಿಕ ಅವರ ತುರೀಯಾ ವಸ್ಥೆಯ ಪರಜಂಗಮಲೀಲೆಗಳು ಪ್ರಾರಂಭವಾದುವು. ಅವರು ಒಂದೊಂದು ಸಲ ಮಕ್ಕಳಂತೆ ಮುದ್ದುಮಾತುಗಳನ್ನಾಡುತ್ತ, ಬಾಲಲೀಲೆಗಳನ್ನು ಮಾಡುತ್ತಿದ್ದರು; ಮುಗ್ಧ ಮನೋವೃತ್ತಿಯನ್ನು ತಾಳುತ್ತಿದ್ದರು. ಕತ್ತಲೆ ಕವಿದ ರಾತ್ರಿಗಳಲ್ಲಿ, ಆ ಪರವಸ್ತುವಿನ ಪ್ರಕಾಶವನ್ನೇ ನೋಡುತ್ತ, ನಲಿಯುತ್ತ, ಏನು ಬೆಳಕು! ಏನು ಹೊಳಪು! ಎಷ್ಟು ಬೆಳ್ಳಗಿದೆ’ ಎಂದು ನುಡಿಯುತ್ತಿದ್ದರು. ಅರಳಿದ ಹೂಗಳನ್ನು ನೋಡಿದಾಗ, ಅವರ ಹೃದಯವೂ ಅರಳುತ್ತಿದ್ದಿತು; “ಆಹಾ! ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ’ ಎಂದು ಅವುಗಳಿಗೆ ಕೈ ನೀಡುತ್ತಿದ್ದರು. ಪರಿಚಿತರನ್ನು ಸಹ, ನೀವು ಯಾರು? ಎಲ್ಲಿಂದ ಬಂದಿರಿ? ಎಂದು ವಿಚಾರಿಸುತ್ತಿದ್ದರು. ತಮ್ಮ ಪೂಜಾಗೃಹವಾದ ಯೋಗ ಮಂಟಪವನ್ನು ನೋಡಿ, ಇದು ಯಾರ ಮನೆ? ಯೋಗಮಂಟಪ ಎಲ್ಲಿದೆ? ಎಂದು ಕೇಳುತ್ತಿದ್ದರು.ಈ ತೆರನಾದ ಸ್ಥಿತಿಯು ಯೋಗಿಗಳಿಗೆ ಅರ್ಧಪ್ರಜ್ಞಾವಸ್ಥೆಯಲ್ಲಿ ಬರುವುದುಂಟು.ಶಿವಯೋಗಿಗಳು, ಅಂತಃಪ್ರಜ್ಞಾವಸ್ಥೆಯ ನಿರ್ವಿಕಲ್ಪ ಸಮಾಧಿಯಿಂದ ಅರ್ಧ ಪ್ರಜ್ಞಾವಸ್ಥೆಗೆ ಬಂದು, ನಿಮಿಷಾರ್ಧದಲ್ಲಿ ಪ್ರಜ್ಞಾವಸ್ಥೆಗೆ ಬರುತ್ತಿದ್ದರು. ಅವರು ಪ್ರಜ್ಞಾವಸ್ಥೆಯಲ್ಲಿ ಸಹಜವಾಗಿಯೂ, ಅರ್ಧ ಪ್ರಜ್ಞಾವಸ್ಥೆಯಲ್ಲಿ ಲೋಕವಿಲಕ್ಷಣವಾಗಿಯೂ, ಅಂತಃಪ್ರಜ್ಞಾವಸ್ಥೆಯಲ್ಲಿ ನಿಸ್ತರಂಗ ಸಮುದ್ರದಂತೆ ನಿಶ್ಚಲವಾಗಿಯೂ ತೋರುತ್ತಿದ್ದರು.ಅವರ ಲಿಂಗಾನಂದದ ಕೊನೆಯ ದಿನಗಳನ್ನು ಶಬ್ದಗಳಿಂದ ತಿಳಿಯಲು ಸಾಧ್ಯವಿಲ್ಲ! ಅವರು ಕುಳಿತರೂ, ನಿಂತರೂ, ನಡೆದರೂ, ಮಲಗಿದರೂ ಯಾವಾಗಲೂ ಲಿಂಗಪೂಜೆಯ ವಿಚಾರದಲ್ಲಿರುತ್ತಿದ್ದರು. ‘ಲಿಂಗ ಪೂಜೆಗೆ ಹೊತ್ತಾಯಿತು, ಸ್ನಾನಕ್ಕೆ ಹೋಗಬೇಕು’ ಎನ್ನುತ್ತಿದ್ದರು. ಅವರ ಕ್ರಿಯೆಗಳೆಲ್ಲವೂ ಲಿಂಗದಲ್ಲಿ ಎರಕವಾಗಿದ್ದವು.ಬಲವತ್ತರವಾದ ಸಂಸ್ಕಾರವೇ ಪೂಜಾಪದಾರ್ಥವಾಗಿ, ಅವರ ಲಿಂಗಪೂಜೆ ನಿರಾತಂಕವಾಗಿ ನಡೆಯುತ್ತಿದ್ದಿತು. ಇಷ್ಟೊಂದು ಪರಿಪಕ್ವ ಸ್ಥಿತಿಯನ್ನು ಸಂಪಾದಿಸಿ,ಅವರ ಸಾಧನೆ ಸಫಲವಾಯಿತು. ಈಗ ಅವರು ಸದೇಹ ಮುಕ್ತಿಯಿಂದ ವಿದೇಹ ಮುಕ್ತಿಗೆ ಸಾಗಿದ್ದರು; ಪ್ರಕಾಶದಿಂದ ಲೋಕ ಚೇತನವನ್ನು ಜಾಗೃತಗೊಳಿಸಿ,ಅಸ್ತಂಗತನಾಗುವ ಸೂರ್ಯನಂತೆ, ತಮ್ಮ ಸ್ಥಾನವನ್ನು ಕುರಿತು ಪ್ರಯಾಣೋನ್ಮುಖ ರಾಗಿದ್ದರು.
ಶಿವಯೋಗಿಗಳು ಲಿಂಗೈಕ್ಯರಾಗುವ ಸಮಯ ಸನ್ನಿಹಿತವಾಯಿತು. ಮಠದ ಮೂರ್ತಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳಿಗೆ, ದಾಸೋಹಂಭಾವದ ಕೊನೆಯ ಸಂದೇಶವನ್ನು ದಯಪಾಲಿಸಿದರು ಮತ್ತು ತಮ್ಮ ಉತ್ತರಕ್ರಿಯೆಗಳನ್ನು ನಿರಾಡಂಬರವಾಗಿ,ಯಥಾರೀತಿ ಜರುಗಿಸಬೇಕೆಂದು ಕಟ್ಟಪ್ಪಣೆ ಮಾಡಿದರು. ಶಾ.ಶ.೧೮೪೩ನೆಯ (ಕ್ರಿ.ಶ. ೧೯೨೧) ದುರ್ಮತಿ ಸಂವತ್ಸರದ ಚೈತ್ರ ಬಹುಳ ಪಾಡ್ಯ ಶನಿವಾರ ಸಂಜೆ ೪ ಘಂಟೆಗೆ, ಶಿವಯೋಗಿಗಳು ಕೊನೆಯ ಸಾರೆ ಶಿವಾರ್ಚನೆಗೆಂದು ಸ್ನಾನ ಮಾಡಿದರು;ಪೂಜಾಗೃಹಕ್ಕೆ ಬಂದರು; ಲಿಂಗಪೂಜೆಗೆ ಕುಳಿತರು; ಪದ್ಧತಿಯಂತೆ ಲಿಂಗಪೂಜೆಯನ್ನುಮಾಡಿದರು; ಕಣ್ತುಂಬ ಲಿಂಗವನ್ನು ನೋಡಿದರು; ಲಿಂಗದಲ್ಲಿ ಕೂಡಿದರು; ಲಿಂಗವಾದರು!ಬ್ರಹ್ಮರಂಧ್ರದ ಊರ್ಧ್ವಮಾರ್ಗದಿಂದ, ಅವರ ದಿವ್ಯಾತ್ಮವು ಪರಮಾತ್ಮನನ್ನು ಸೇರಿ ಸಮರಸವಾಯಿತು. ಒಡಲುಗೊಂಡು, ಒಡಲುವಿಡಿಯದೆ, ಒಡಲಿಲ್ಲದ ನಿಜವ ಬೆರಸಿ ಅವರು ಬಯಲಾದರು! ನಿಜವನರಿದ ನಿಶ್ಚಿಂತನೂ, ಮರಣವ ಗೆಲಿದ ಮಹಂತನೂ, ಘನವ ಕಂಡ ಮಹಿಮನೂ, ಪರವನೊಳಕೊಂಡ ಪರಿಣಾಮಿಯೂ, ಬಯಲ ಒದಗಿದ ಭರಿತನೂ, ನಿರಾಳವನೊಳಕೊಂಡ ಸಹಜನೂ ಆದ ಮುರುಘ ಮಹಾಶಿವಯೋಗಿಯು ಬಯಲಾದನು! ಭರಿತನಾದನು!! ಆ ಮಹಾವಿಭೂತಿಯ ಅಸಾಧಾರಣ ಸತ್ವವನ್ನು ನೋಡಿ ಕೃತಾರ್ಥನಾದ ಸೂರ್ಯದೇವನು, ಅಸ್ತಾಚಲಕ್ಕೆ ನಡೆದನು .
ಶಿವಯೋಗಿಗಳ ಚರಿತ್ರೆ, ಕಲ್ಪನಾ ವಿಲಾಸದ ಕಟ್ಟು ಕತೆಯಲ್ಲ; ಅದೊಂದು ಪರಿಪೂರ್ಣಜೀವನದ ಬೃಹದ್ದರ್ಶನ, ಪ್ರತ್ಯಕ್ಷದರ್ಶನ. ಅದನ್ನು, ಎಲ್ಲರೂ ತಮ್ಮ ತಮ್ಮ ಅಂತರಂಗದ ಆರೋಗ್ಯವನ್ನು ಸರಿಗೊಳಿಸಲು ಓದುವುದು ಅವಶ್ಯವಿದೆ. ಮಹಾತ್ಮರ ಚರಿತ್ರೆಗಳು, ಮಾನವನ ಅಂತರಂಗವನ್ನು ತಿದ್ದಿ, ಆರೋಗ್ಯವೃದ್ಧಿಯನ್ನುಂಟು ಮಾಡುವ ಅಮೂಲ್ಯ ಸಾಧನಗಳು, ಅಂತರಂಗದಲ್ಲಿ ಆರೋಗ್ಯವಿಲ್ಲದ ನರನು ಪಶುಪ್ರಾಣಿ.ಅಂತರಂಗದ ಆರೋಗ್ಯವೇ ಅಂತರಂಗದ ಕಾಂತಿ ಮತ್ತು ಶಾಂತಿ. .
