ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಲಿಂ. ಶಿವಬಸವ ಮಹಾಸ್ವಾಮಿಗಳರು ಹುಕ್ಕೇರಿಮಠ ಹಾವೇರಿ, ಅವರು ಪರಮ ಪೂಜ್ಯರಾದ ಲಿಂ. ಶ್ರೀ ಸದಾಶಿವ ಮಹಾ ಸ್ವಾಮಿಗಳು (ಕುಮಾರ ಸ್ವಾಮಿಗಳು) ಹಾನಗಲ್ಲ, ಅವರ ಪ್ರಥಮ ಪರಿಚಯ ಮಾಡಿಕೊಂಡ ಕಾಲದಿಂದಲೂ ನಾನು ಹಾವೇರಿ ಶ್ರೀಗಳವರ ಸಂಪರ್ಕದಲ್ಲಿದ್ದೆನು. ಉಭಯ ಶ್ರೀಗಳವರು ವೀರಶೈವ ಸಮಾಜ ಪುರುಷನ ಎಡಗೈ-ಬಲಗೈಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿರುವರು. ಪ್ರತಿಯೊಂದು ಕಾರ್ಯದಲ್ಲಿಯೂ ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರ ಅಭಿಪ್ರಾಯವನ್ನು ತೆಗೆದುಕೊಂಡು ಇಬ್ಬರೂ ಸೇರಿ ಕಾರ್ಯಗಳನ್ನು ಪ್ರಯತ್ನ ಪೂರ್ವಕವಾಗಿ ನಿರ್ವಹಿಸುತ್ತಿದ್ದರು.
ಹಾವೇರಿ ಶ್ರೀಗಳವರಲ್ಲಿ ಒಂದು ದಿವ್ಯ ತೇಜಸ್ಸಿದ್ದಿತು. ಅವರಿಗೆ ಶಿವ ಯೋಗವು ಸಂಪೂರ್ಣವಾಗಿ ಸಾಧಿಸಿದ್ದಿತು. ಅದರಲ್ಲಿ ಅವರು ಸಿದ್ಧಿ ಪಡೆದಿದ್ದರು. ಲಿಂಗಪೂಜೆಯನ್ನು ಮಾಡುವಾಗ ಯಾವ ಜನರು ಎಷ್ಟು ದೂರದಲ್ಲಿದ್ದರೂ, ಅವರನ್ನು ಲಿಂಗದಲ್ಲಿ ಕಂಡುದರ ವಿಚಾರವನ್ನು ಶ್ರೀಗಳವರು ಆ ಕೂಡಲೇ ಹೇಳಿ ಬಿಡುತಿದ್ದರು; ಮುಂದಿನ ಕೆಲಸಗಳ ಆಗುಹೋಗುಗಳನ್ನೂ ತಿಳಿಸುತ್ತಿದ್ದರು. ಈ ದಿವ್ಯ ದೃಷ್ಟಿಯಿಂದಲೂ ಶ್ರೀಗಳವರಲ್ಲಿ ಭಕ್ತರ ಭಕ್ತಿ-ವಿಶ್ವಾಸಗಳು ಬಹಳ ಹೆಚ್ಚಿದವು.
ಶ್ರೀಗಳವರು ನಡೆದ ಧರೆ ಪಾವನವಾಗುತ್ತಿತ್ತು; ಅವರು ನಿಂದ ನೆಲ ನಿಜ ಕ್ಷೇತ್ರವಾಗುತ್ತಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿವಯೋಗಾಶ್ರಮವು ಶಿವಪೂಜಾ ಪ್ರೇಮಿಗಳಾದ ಶ್ರೀಗಳವರ ಕೃಪೆಯಿಂದಲೇ ಮೊಟ್ಟ ಮೊದಲು ಸ್ಥಾಪಿತವಾಯಿತು. ಅವರು ಹಾನಗಲ್ಲ ಶ್ರೀಗಳವರೊಂದಿಗೆ ಸಂಚರಿಸಿ ಮಲೆನಾಡ ಪ್ರಾಂತದಲ್ಲಿ ಶಿವಧರ್ಮದ ಪ್ರಸಾರವನ್ನು ಮಾಡಿದರು. ಕಪನಳ್ಳಿಯ ಶಿವಯೋಗಾಶ್ರಮವು ಧರ್ಮಕಾರ್ಯಗಳ ಕೇಂದ್ರವಾಯಿತು. ಈಗ ಇಲ್ಲಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಭವ್ಯ ಭವನದ ನಿರ್ಮಾಣವಾಗಿದೆ; ಈಗ ಈ ಶಿವಯೋಗಾಶ್ರಮದ ಅಧ್ಯಕ್ಷರಾಗಿರುವ ಶ್ರೀ ನಿ. ಪ್ರ. ರುದ್ರಮುನಿಸ್ವಾಮಿಗಳವರು ಶ್ರೀಗಳವರ ಕೃಪಾ ವಲಯದಲ್ಲಿ ಬೆಳೆದು ಬಂದವರು. ಅವರು ಶಿವಯೋಗ ಮಂದಿರದ ಮಾದರಿಯಲ್ಲಿ ಈ ಆಶ್ರಮದ ಮುಖಾಂತರ ಅನೇಕ ಜನಹಿತದ ಕಾರ್ಯಗಳನ್ನು ಮಾಡುತ್ತ ಭಕ್ತರಿಗೆ ಪೂಜ್ಯರಾಗಿರುವರು. ಕೃಷಿ ಮತ್ತು ಗೋಸಂಗೋಪನ ಕಾರ್ಯದಲ್ಲಿ ಈ ಆಶ್ರಮ ಮಾದರಿಯ ಸೇವೆಯನ್ನು ಸಲ್ಲಿಸುತ್ತಿರುವುದು. ಈ ಆಶ್ರಮಕ್ಕೆ ಅನೇಕ ಭಕ್ತರು ಬಹು ಪ್ರಕಾರವಾಗಿ ಭಕ್ತಿ ಸಲ್ಲಿಸಿರುವರು. ಅವರಲ್ಲಿ ಹಳೇಪಟ್ಟಣದ ಶೆಟ್ಟರ ಹಾಲಪ್ಪನವರು ಅಗ್ರಗಣ್ಯರು. ಇವರು ಶ್ರೀಗಳವರಿಂದ ಅನುಗ್ರಹ ಪಡೆದು ಈಗಲೂ ಇಲ್ಲಿಯೇ ಶಿವಪೂಜಾನುಷ್ಠಾನ ಮತ್ತು ಸೇವೆಯನ್ನು ತ್ರಿಕರಣ ಪೂರ್ವಕ ಮಾಡುತ್ತ ಆದರ್ಶ ಶಿವಶರಣರೆನ್ನಿಸಿಕೊಂಡಿರುವರು.
ಪತ್ರಿಕೆ ಮತ್ತು ಗ್ರಂಥಗಳ ಪ್ರಕಟನೆಯ ರೂಪದಲ್ಲಿ ಧರ್ಮಕಾರ್ಯಗಳು ಸತತವಾಗಿ ನಡೆಯಬೇಕೆಂಬ ಮಹೋದ್ದೇಶ ಹಾವೇರಿ ಶ್ರೀಗಳವರದಾಗಿತ್ತು. ಅದರಂತೆ ಶ್ರೀಗಳವರು ಹಾವೇರಿಯಲ್ಲಿ ‘ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯ’ ವನ್ನು ಸ್ಥಾಪಿಸಿ ಅದನ್ನು ನನ್ನ ವಶಕ್ಕೆ ಕೊಟ್ಟರು. ‘ ಸದ್ದರ್ಮದೀಪಿಕೆ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವುದಕ್ಕೆ ಮತ್ತು ಅನೇಕ ಓಲೆಗರಿಯ ಗ್ರಂಥಗಳನ್ನು ಮುದ್ರಿಸಿ ಪ್ರಕಾಶಗೊಳಿಸುವುದಕ್ಕೂ ಈ ಮಹಾಸ್ವಾಮಿಗಳವರೇ ಮೂಲ ಕಾರಣ, ರೆಂದು ಹೇಳುವದು ಅತಿಶಯೋಕ್ತಿಯಲ್ಲ. ಒಮ್ಮೆ, ಚಿತ್ರದುರ್ಗದ ಬೃಹನ್ಮಠಾಧ್ಯಕ್ಷರಾದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾವೇರಿಗೆ ದಯಮಾಡಿಸಿದಾಗ ಶ್ರೀಗಳವರು ಜಗದ್ಗುರುಗಳ ಸನ್ನಿಧಿಯಲ್ಲಿ ಧರ್ಮ ಗ್ರಂಥಗಳ ಸಂಶೋಧನೆ ಮತ್ತು ಪ್ರಕಾಶನದ ಬಗೆಗೆ ಕಳಕಳಿಯಿಂದ ವಿಚಾರ ವಿನಿಮಯ ಮಾಡಿದ ಪ್ರಸಂಗ ನನಗೆ ಚೆನ್ನಾಗಿ ನೆನಪಿದೆ. ತಮ್ಮ ಮಠದ ಖರ್ಚಿನಲ್ಲಿ, ತಮ್ಮ ಸ್ವಂತದ ಅನುಕೂಲತೆಗಳಲ್ಲಿ ಏನಾದರೂ ಕೊರತೆ ಬಂದರೂ ಚಿಂತೆಯಿಲ್ಲ, ಧರ್ಮ ಪ್ರಸಾರವು ಮಾತ್ರ ಚೆನ್ನಾಗಿ ನಡೆಯಬೇಕೆಂದು ಶ್ರೀಗಳವರು ಹಂಬಲಿಸುತ್ತಿದ್ದರು. ಹಾವೇರಿಯಲ್ಲಿ ತಮ್ಮ ಮಠವನ್ನು ಕಲ್ಲುಮಠವನ್ನಾಗಿ ಮಾರ್ಪಡಿಸಿದ ಕೀರ್ತಿಯು ಶ್ರೀಗಳವರಿಗೆ ಸಲ್ಲುವಂತಾಗಿದ್ದರೂ, ಆ ಕಟ್ಟಡದ ನಿರ್ಮಾಣಕ್ಕೆ ದ್ರವ್ಯವು ಬೇಕಾಗಿದ್ದರೂ ಅದನ್ನು ಬದಿಗಿಟ್ಟು ಧರ್ಮಗ್ರಂಥಗಳ ಪ್ರಕಟನೆಯ ಕಾರ್ಯಕ್ಕೆ ಹೆಚ್ಚು ದ್ರವ್ಯವನ್ನು ವಿನಿಯೋಗಿಸುತ್ತಿದ್ದರು. ನನಗೆ ವರ್ಷ ಗಟ್ಟಲೆ ತಮ್ಮೊಡನೆ ಪೂಜೆ ಮತ್ತು ಪ್ರಸಾದಕ್ಕೂ ಅನುಕೂಲತೆಗಳನ್ನು ದಯಪಾಲಿಸಿದ ಶ್ರೀಗಳು ಎಂತಹ ಕೃಪಾಳುಗಳೆಂಬುದನ್ನು ಬೇರೆ ಹೇಳಬೇಕೆ ?
ಶ್ರೀಗಳವರು ಪದವೀಧರರಾಗ ಬಯಸಿದ ಅನೇಕ ಬಡ ವಿದ್ಯಾರ್ಥಿಗಳಿಗೂ ಮುಕ್ತಹಸ್ತದಿಂದ ಸಹಾಯ ನೀಡಿದರು. ಅವರ ಕೃಪೆಯಿಂದ ಅನೇಕರು ಪದವೀಧರರಾಗಿ ಉಚ್ಚ ಸ್ಥಾನಗಳನ್ನು ಪಡೆದಿರುವರು. ಪ್ರೊ ಎಸ್.ಎಸ್.ಭೂಸನೂರುಮಠ, ಶ್ರೀ ಅ. ಮ. ಪಾಟೀಲ ಮೊದಲಾದವರು ಶ್ರೀಗಳವರ ಕೃಪಾಶ್ರಯ ಪಡೆದು ವಿದ್ಯಾ ರ್ಜನೆ ಮಾಡಿದವರು. ಶ್ರೀಗಳವರಿಗೆ ಹಣವನ್ನು ಕೂಡಿಡಬೇಕೆಂಬ ಆಶೆಯಿರಲಿಲ್ಲ. ಭಕ್ತರಿಂದ ಕಾಣಿಕೆ ಬಂದುದೇ ತಡ ಆ ಕೂಡಲೇ ಅದು ಬಡವಿದ್ಯಾರ್ಥಿಗಳಿಗಾಗಿ ಯಥೇಚ್ಛವಾಗಿ ವಿನಿಯೋಗವಾಗುತ್ತಿತ್ತು. ಹಣ ಕೊಟ್ಟು ಅದಕ್ಕೆ ಪ್ರತಿಯಾಗಿ ಹೆಸರನ್ನು ಗಳಿಸಬೇಕೆಂದು ಶ್ರೀಗಳವರು ಕನಸು ಮನಸಿನಲ್ಲಿಯೂ ಬಗೆದವರಲ್ಲ.
ವೀರಶೈವರಲ್ಲಿ ಭಿಕ್ಷೆ ಬೇಡುವದು ಸಮಾಜಕ್ಕಾಗಿ ಎಂದಿರುವ ಧರ್ಮನಿಯಮವನ್ನು ಶ್ರೀಗಳವರು ಪಾಲಿಸಿ ಬಡವರಿಗೆ ಸಾವಿರಗಟ್ಟಲೆ ಧನಸಹಾಯ ಮಾಡಿ ಇತರ ಸ್ವಾಮಿಗಳಿಗೆ ಆದರ್ಶರಾಗಿದ್ದಾರೆ. ಶ್ರೀಗಳವರು ಅನೇಕ ಸಲ ವ್ಯಾಪಾರ ಮಾಡಿ ಹಾನಿಗೀಡಾದ ಭಕ್ತರಿಗೆ ಬಂಡವಾಳ ಕೊಟ್ಟಿದ್ದಾರೆ. ವ್ಯವಸಾಯದಲ್ಲಿ ಉತ್ಪತ್ತಿ ಕಡಿಮೆಯಾಗಿ ನಿರ್ಗತಿಕರಾದ ರೈತರಿಗೆ ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಕೆಲವರು ಶ್ರೀಗಳವರನ್ನು ಇನ್ನು ಹಾಡಿ ಹರಸುತ್ತಿದ್ದಾರೆ.
ಶಿವಯೋಗಮಂದಿರದಲ್ಲಿ ಹಾನಗಲ್ ಶ್ರೀಗಳವರೊಡನೆ ವಿಶೇಷ ಶ್ರದ್ಧೆಯಿಂದ ಕಾರ್ಯಮಾಡಿ ಶ್ರೀಗಳವರು ಮಂದಿರದ ಸಾಧಕರಿಗೆ, ವಟುಗಳಿಗೆ ಧರ್ಮ-ಯೋಗ ಆಚಾರ ಮುಂತಾದವುಗಳನ್ನು ಕಲಿಸಿ ಸಂಸ್ಥೆಯ ಉನ್ನತಿಗೆ ಕಾರಣರಾಗಿದ್ದಾರೆ. ಶ್ರೀಗಳ ತಪಃಪ್ರಭಾವದಿಂದಲೇ ಸಂಸ್ಥೆಯು ಇಂದಿನ ಯುಗದಲ್ಲಿ ಉಳಿದು ಬೆಳೆಯುತಿದೆ. ಹಾನಗಲ್ ಶ್ರೀಗಳವರು ಇವರ ಅಚ್ಚಳಿಯದ ಸಮಾಜ ಪ್ರೇಮ ಮತ್ತು ಧರ್ಮ ಕಾರ್ಯಕ್ಷಮತೆಯನ್ನು ಮನಗಂಡೇ ಇವರನ್ನು ಮಂದಿರದ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಶ್ರೀ ಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಮೇಲೆಯೂ ಶ್ರೀಗಳವರು ಧೈರ್ಯದಿಂದ ಸಂಸ್ಥೆಯ ಅಭಿವೃದ್ಧಿಯನ್ನು ಬಯಸಿ ಕಾರ್ಯ ಮಾಡಿದರು. ಕೆಲವರು ಹಾನಗಲ್ಲ ಪೂಜ್ಯರು ಲಿಂಗೈಕ್ಯರಾದ ಮೇಲೆ ಮಂದಿರವು ನಡೆಯಲಾರದು, ಅದನ್ನು ಒಂದು ವ್ಯವಸಾಯ ಕಾಲೇಜನ್ನಾಗಿ ಮಾರ್ಪಡಿಸಬೇಕೆಂಬ ವಿಚಾರವನ್ನು ಮುಂದು ಮಾಡಿದರು. ಆದರೆ ಶ್ರೀಗಳವರು ಮಂದಿರದಲ್ಲಿ ಧಾರ್ಮಿಕ ಶಿಕ್ಷಣವು ಆದರ್ಶವಾಗಿ ಎಂದಿನಂತೆ ನಡೆಯುವಂತೆ ಮಾಡಿ, ಸಂಸ್ಥೆಯು ಎಂದಿಗೂ ಅಳಿಯದಂತಹ ಧಾರ್ಮಿಕ ಅಡಿಪಾಯವನ್ನು ಹಾಕಿದರು; ಹಾನಗಲ್ ಶ್ರೀಗಳವರ ಧೈಯಧೋರಣೆಗಳನ್ನು ಉಳಿಯುವಂತೆ ಮಾಡಿದರು; ಕೆಲವು ಅಭಿಮಾನಿ ತರುಣ ಸ್ವಾಮಿಗಳನ್ನೂ ಉತ್ಸಾಹಿ ಭಕ್ತರನ್ನೂ ಮಂದಿರದ ಟ್ರಸ್ಟ ಕಮೀಟಿಯಲ್ಲಿ ತೆಗೆದುಕೊಂಡು ಸಂಸ್ಥೆಯ ಕಾರ್ಯಗಳು ಸುಗಮವಾಗಿ ನಡೆಯು ವಂತೆ ಯೋಜಿಸಿದರು. ಈ ವಿಷಮ ಕಾಲದಲ್ಲಿ ಶ್ರೀಗಳವರು ಪ್ರಯತ್ನಿಸಿರದಿದ್ದರೆ ಶಿವಯೋಗಮಂದಿರವೇ ಉಳಿಯುತ್ತಿರಲಿಲ್ಲ. ಶ್ರೀಗಳವರ ಉದ್ದೇಶವನ್ನು ಸಾಧಿಸಲು ಹಾಲಕೆರೆಯ ಶ್ರೀ ಅನ್ನದಾನ ಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಮತ್ತು ಉಳಿದವರೂ ಬಹು ಹೆಣಗಿದ್ದಾರೆ.
ಶ್ರೀಗಳವರು ಆಡಂಬರದ ಜೀವನದವರಲ್ಲ. ವೀರಶೈವ ಷಟ್‌ಸ್ಥಲಮಾರ್ಗದಲ್ಲಿ ಶ್ರೀಗಳವರು ಬಹು ನಿಷ್ಠೆಯಿಂದ ನಡೆದರು; ಉಳಿದವರಿಗೂ ಮಾರ್ಗ ತೋರಿದರು. ನೂತನ ಮಠಾಧಿಕಾರಿಗಳಿಗೆ ನಿರಂಜನ ಚರಪಟ್ಟಾಧಿಕಾರವನ್ನು ಶ್ರೀಗಳವರು ಹಾನಗಲ್ ಶ್ರೀಗಳವರ ಇಚ್ಛೆಯಂತೆ ಕೊಡುತ್ತಿದ್ದರು. ಶ್ರೀಗಳವರು ಅನೇಕ ಸ್ವಾಮಿಗಳಿಗೂ, ಗುರುಗಳಿಗೂ ಭಕ್ತರಿಗೂ ಅನುಗ್ರಹವನ್ನು ದಯಪಾಲಿಸಿರುವರು. ಅವರಿಂದ ಅನುಗ್ರಹ ಪಡೆದವರೆಲ್ಲರೂ ಸಮಾಜದಲ್ಲಿ ಸನ್ಮಾನ್ಯರಾಗಿ ಬಾಳಿದ್ದಾರೆ. ಅವರದು ಅಮೃತ ಹಸ್ತ. ಆ ಹಸ್ತ ಸ್ಪರ್ಶದಿಂದ ‘ ಗುರು ಮುಟ್ಟಿ ಗುರುವಾದರು’ ಎಂಬುದು ಸಿದ್ಧವಾಗುತ್ತಿತ್ತು. ಅಂತಹ ಆದರ್ಶ ಮಹಾಸ್ವಾಮಿಗಳ ಪರಮಾದರ್ಶದಲ್ಲಿ ಎಲ್ಲರೂ ನಡೆದರೆ ವೀರಶೈವ ಸಮಾಜವು ಅಮೃತಮಯ ವಾಗಿ ಬಾಳುವುದಲ್ಲವೆ ?.
ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟಿದ್ದು.
ಸಂಗ್ರಹ : ಪೂಜ್ಯ ನಾಗನಾಥ ದೇವರು ಸೋಮಸಮುದ್ರ
ನಿಚ್ಚಲುಂ ಶಿವರಾತ್ರಿಯಂ ಮಾ |
ಳ್ಪಚ್ಚರಿಯೆನಿಪ ಭಾಷೆ ಭಕ್ತರ |
ನಚ್ಚ ಶಿವನೆಂದಿರ್ಪ ಭಾಷೆ ಶಿವೈಕ್ಯರೆಗ್ಗುಗಳ ||
ಎಚ್ಚರಿಸದಿಹ ಭಾಷೆ ಶರಣರ |
ಹೆಚ್ಚು ಕುಂದುಗಳಂ ನುಡಿಯದಿಹ |
ಸಚ್ಚರಿತ್ರದ ಭಾಷೆ ಏನುವಂ ವಂಚಿಸದ ಭಾಷೆ. ||೧||
ಮೃಡನನಾದೊಡೆಯೊಂದು ಬಾರಿಗೆ |
ಕಡಗಿ ಬೇಡಡ ಭಾಷೆ ಏನಾ|
ದೊಡೆ ಬಯಸಿದೊಡವಿಗಳನಡಿಯಿಡದೀವುದದು ಭಾಷೆ ||
ನುಡಿದು ಪುಸಿಯದ ಭಾಷೆ ನೆನಪಿನ |
ಗಡಣೆಯಂತಂ ತೋರೆಯಿಲ್ಲದೆ |
ನುಡಿವ ಭಾಷೆಯು ನುಡಿದಹಗೆ ತಾಂ ನಡೆಸುವುದು ಭಾಷೆ. ||೨||
ಛಲವನಳಿಯದ ಭಾಷೆ ಭಕ್ತರ |
ಸಲುಗೆಯಂ ಸಲಿಸುವುದು ಭಾಷೆಯ |
ಚಲಿತ ದಾಸೋಹವನು ವಿರತಂ ಮಾಳ್ಪುದದು ಭಾಷೆ |
ನಲಿದು ಕನಸಿನೊಳುಂ ಪಿನಾಕಿಗೆ |
ಗೆಲವನೀಯದ ಭಾಷೆ ಭಕ್ತರು |
ಗಳಿಗೆ ಗೆಲವಂ ಕೊಟ್ಟು ತಾಂ ಶರಣೆಂಬುದದು ಭಾಷೆ. ||೩||
ಪರಸಮಯಿಗಳ ದರ್ಪಮಂ ಸಂ
ಹರಿಪ ಭಾಷೆ ಕುತರ್ಕದಿಂ ಮ |
ತ್ಸರಿಪ ಪರವಾದಿಗಳನೊಮ್ಮೆಗೆ ಸೋಲಿಸುವ ಭಾಷೆ ||
ಪರಮನಂ ನಿಂದಿಸುವವೊಂದಿರ |
ನೊರಸಿ ಕಳೆವುದು ಭಾಷೆ ಹರ ಭ|
ಕ್ತರನುದಾಸೀನದಿ ನುಡಿವ ನುಡಿಗೇಳದದು ಭಾಷೆ. ||೪||
ಹರ ಶರಣ ಪರತಂತ್ರ ಭಾವದೆ|
ಬೆರಸಿ ಚರಿಸುವ ಭಾಷೆ ಎಂದುಂ |
ಹರ ಗಣಾರ್ಪಿತವಾಗದಿನಿತುಂ ಮುಟ್ಟದಿಹ ಭಾಷೆ ||
ಶರಣರೇನೆಂದೊಡೆಯವರಿಗು |
ತ್ತರವನೀಯದ ಭಾಷೆ ಜಂಗಮ|
ವರರ ನೆಗಳು ಪ್ರಾಣಲಿಂಗವೆನಿಪ್ಪುದದು ಭಾಷೆ. ||೫||
ನರರುಮಂ ಯಾಚಿಸದ ಭಾಷೆ ಇ ]
ತರ ಜನಕೆ ಕೈ ಮುಗಿಯದದು ನಿ|
ರ್ಬರದ ಭಾಷೆ ಭವೌಘ ಬಾಧೆಗೆ ಸಿಲ್ಕದಿಹ ಭಾಷೆ ||
ಕರಣವಿಷಯಕ್ಕಿಂಬುಗುಡದ |
ಚ್ಚರಿಯ ಭಾಷೆ ಷಡರಿಗಳಂ ಪರಿ |
ಹರಿಪ ಭಾಷೆ ಶಿವೈಕ್ಯ ಭಕ್ತಿಯನಲರಿಸುವ ಭಾಷೆ. ||೬||
ನೆಟ್ಟ ನೀಶಾಚಾರಮಂ ಮುಂ |
ದಿಟ್ಟು ಬಳೆಯಿಪ ಭಾಷೆ ತಲೆ ಪರಿ |
ದಟ್ಟಿಯುಳಿದೊಡೆ ಶರಣೆನುತ್ತಿಹ ಭಾಷೆ ತಲೆಗಟ್ಟಿ ||
ಬಿಟ್ಟೊಡಂ ವಂದಿಸುವ ಭಾಷೆಯು |
ಮುಟ್ಟಿದೊಡೆ ಹಿಮ್ಮೆಟ್ಟದಗ್ಗದ |
ಗಟ್ಟಿ ಭಾಷೆ ಇವೆಲ್ಲವಂ ತುದಿ ಮುಟ್ಟಿಸುವ ಭಾಷೆ ||೭||
ದ್ವಿತೀಯ ಶಂಭುವೆನಿಸಿದ ನಂದಿಕೇಶ್ವರನು ಭೂಲೋಕದಲ್ಲಿ ಕಾರಣಿಕ ಪುರುಷನಾಗಿ ಬಸವನಾಮದಿಂದ ಅವತರಿಸಿ ಅನೇಕ ಪ್ರತಿಜ್ಞೆಗಳನ್ನು ಮಾಡಿ ಅದರಂತೆ ನಡೆದು ತೋರಿಸಿದುದು ಜಗತ್ಪಸಿದ್ಧವಾಗಿರುವುದು. ಭೀಮ ಕವಿಯು ತನ್ನಿಂದ ರಚಿಸಲ್ಪಟ್ಟ ಬಸವಪುರಾಣದ ಆರನೆಯ ಸಂಧಿಯ ಪ್ರಾರಂಭದಲ್ಲಿ ಆ ಅನೇಕ ಪ್ರತಿಜ್ಞೆಗಳಲ್ಲಿ ೩೪ ನ್ನು ಮಾತ್ರ ೭ ಪದ್ಯಗಳಲ್ಲಿ ಉಸುರಿರುವನು. ಅವುಗಳನ್ನೇ ಮೇಲೆ ಉದ್ಧರಿಸಲಾಗಿದೆ.
ಈ ೩೪ ಭಾಷೆಗಳಲ್ಲಿ ಮಾದರಿಗಾಗಿ ಒಂದನ್ನು ಮಾತ್ರ ಇಲ್ಲಿ ವಿಶದವಾಗಿ ವಿವರಿಸಿರುತ್ತೇವೆ. ಹೀಗೆಯೇ ಎಲ್ಲ ಭಾಷೆಗಳ ಅರ್ಥ-ತಾತ್ಪರ್ಯವನ್ನು ತಿಳಿಯಲು ಇಚ್ಛಿಸುವ ಓದುಗರು ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟು. ಶಿ. ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ ಇವರಿಂದ ಪ್ರಸಿದ್ಧಿಸಲ್ಪಟ್ಟ ‘ಬಸವ ಭಾಷೆ ‘ ಎಂಬ ಪುಸ್ತಕವನ್ನು ಅವಲೋಕಿಸ ಬೇಕಾಗಿ ಸೂಚನೆ.
ಮೊದಲನೆಯ ಭಾಷೆ : ನಿಚ್ಚಲುಂ ಶಿವರಾತ್ರಿಯಂ ಮಾಚ್ಚರಿಯೆನಿಪ ಭಾಷೆ
ವಿವರಣೆ :- ಶಿವರಾತ್ರಿ* ಇದು ವರ್ಷಕ್ಕೊಂದುಸಾರೆ ಮಾಘ ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಹಾ ಶಿವರಾತ್ರಿಯೆಂದೂ – ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಾಸ ಶಿವರಾತ್ರಿಯೆಂದೂ ಕರೆಯಲ್ಪಡುವುದು. ಶಿವಭಕ್ತರು ಈ ಎರಡೂ ಪ್ರಕಾರದ ಶಿವರಾತ್ರಿಗಳಲ್ಲಿಯೂ ಶಿವಸನ್ನಿಧಿಯನೈದು, ಕಾಮ – ನಿಷ್ಕಾಮವೆಂಬ ಉಭಯ ವಿಧಿಗಳಲ್ಲಿ, ತಮಗೆ ಬೇಕಾದ ವಿಧಿಯಿಂದ, ಶಿವಾರ್ಚನೆ, ಶಿವಕಥಾಶ್ರವಣ, ಜಾಗರಣ ಮೊದಲಾದ ಸತ್ಕ್ರಿಯೆಗಳನ್ನು ಮಾಡುವುದು ಪ್ರಸಿದ್ಧವಾಗಿರುವುದು.
ಶ್ರೋತ್ರಾದಿ ಜ್ಞಾನೇಂದ್ರಿಯಗಳೈದು, ವಾಗಾದಿ ಕರ್ಮೇಂದ್ರಿಯಗಳೈದು, ಮಾನಸಾದಿ ಅಂತಃಕರಣಗಳು ನಾಲ್ಕು – ಅಂತು ಹದಿನಾಲ್ಕು ಕರಣಗಳನ್ನು ಶಿವಲಿಂಗಕ್ಕರ್ಪಿಸಿದರೆ ( ಶಿವಧರ್ಮ ಕಾರ್ಯಗಳಲ್ಲಿ ಸವೆಸಿದರೆ) ಅದು ಚತುರ್ದಶಿ ಎನಿಸುವುದು. ಆ ಶಿವಲಿಂಗದ ನೆನಹಿನಲ್ಲಿ ಮನವು ಮಗ್ನವಾಗಿ ಹೋಗಲು ಅದು ಶಿವರಾತ್ರಿ ಎನಿಸುವುದು. ಆ ಶಿವಜ್ಞಾನದ ಎಚ್ಚರ ಕುಂದದಿರಲು ಜಾಗರಣವೆನಿಸುವುದು. ಇದೇ ವೀರಶೈವರು ಮುಖ್ಯವಾಗಿ ಪ್ರತಿ ದಿನದಲ್ಲಿ ಆಚರಿಸುವ ಆಶ್ಚರ್ಯಕರವಾದ ಶಿವರಾತ್ರಿಯು.** ಇದೇ ಶಿವಯೋಗವೆಂದು ಹೇಳಲ್ಪಡುತ್ತಿದೆ.
ಜ್ಞಾನ, ಭಕ್ತಿ, ಧ್ಯಾನ, ವೃತ, ಅರ್ಚನವೆಂಬ ಅಂಗಗಳುಳ್ಳ ಶಿವಯೋಗಕ್ಕೆ ಶಿವಜ್ಞಾನಾದಿ ನಾಲ್ಕು ಅಂಗಗಳು ಗರ್ಭೀಕರಿಸಿಕೊಂಡಿರುವುದರಿಂದ ಶಿವಾರ್ಚನೆಯೇ ಮುಖ್ಯವೆನಿಪ ಶಿವಯೋಗವೆಂಬುದಾಗಿ ಹೇಳಿರುವುದು. ಈ ಉಭಯ ಪಕ್ಷವನ್ನು ವಿಚಾರಿಸಿ ನೋಡಿದರೆ ಶಿವಾರ್ಚನೆಗಿಂತಲೂ ಮೊದಲೆ ಶಿವಜ್ಞಾನಾದಿ ನಾಲ್ಕು ಅಂಗಗಳನ್ನು ಸಾಮಾನ್ಯವಾಗಿ ಸಂಗ್ರಹಿಸಿ ಶಿವಾರ್ಚನೆಯ ಕಾಲಕ್ಕೆ ವಿಶೇಷ ರೂಪದಿಂದ ಕೂಡಿಕೊಂಡು ಆಚರಿಸತಕ್ಕದ್ದು ಎಂದು ಗೊತ್ತಾಗುವುದು. ಅನ್ಯ ಮತಜ್ಞಾನ ನಿಷೇಧವೂ ಅನ್ಯ ದೇವತಾ ನಿಷೇಧವೂ ಜ್ಞಾನ – ಭಕ್ತಿಗಳೆಂಬ ಎರಡು ಅಂಗ ಗಳಲ್ಲಿ ಉಕ್ತವಾಗಿರುವುದರಿಂದ ಈ ಎರಡನ್ನೂ ಪೂಜಾ ಕಾಲದಲ್ಲಿ ಆಚರಿಸಿದರೆ ಶಿವಯೋಗಕ್ಕೆ ಕೇವಲ ವಿರೋಧವೆನಿಸುವುದು. ಆದ್ದರಿಂದ ಶಿವಾರ್ಚನೆಯಲ್ಲಿ ಅನ್ಯ ಭಾವನೆಯಿಲ್ಲದೆ ಶಿವಾಕಾರ ವೃತ್ತಿಯುಳ್ಳ ಶಿವಜ್ಞಾನ, ಶಿವಭಕ್ತಿಗಳನ್ನು ಗುರುಮುಖದಿಂದರಿದು ವಿಶೇಷ ರೂಪದಿಂದ ಆಚರಿಸತಕ್ಕದ್ದು. ಮತ್ತು ಶಿವಧ್ಯಾನ, ಶಿವವೃತ ಈ ಎರಡು ಅಂಗಗಳನ್ನು ರುದ್ರರೂಪಿಯಾಗುವುದಕೋಸ್ಕರ ಪೂಜಾಸನದಲ್ಲಿ ಕುಳಿತನಂತರ ಸಾಮಾನ್ಯ ರೂಪದಿಂದ ಮಾಡತಕ್ಕದ್ದು. ಶಿವಾರ್ಚನೆಯ ಕಾಲದಲ್ಲಿ ಗುರು ನಿರೂಪಿಸಿದಂತೆ ವಿಶೇಷ ರೂಪವಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಅರ್ಚನೆಯನ್ನು ಆಚರಿಸತಕ್ಕದ್ದು. ಹೀಗೆ ಐದು ಅಂಗಗಳಿಂದ ಕೂಡಿದುದೇ ಶಿವಯೋಗವೆಂದು ಎನಿಸಿಕೊಳ್ಳುವುದು. ಇದೇ ವೀರಶೈವರ ಶಿವರಾತ್ರಿಯು, ಇಂತಹ ಶಿವರಾತ್ರಿಯನ್ನು ಪ್ರತಿದಿನವೂ ಮಾಡುವೆನೆಂಬುದು ಭಗವಾನ್ ಬಸವೇಶ್ವರನ ಮೊದಲನೆಯ ಪ್ರತಿಜ್ಞೆಯು.
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ಡಿಸೆಂಬರ ೨೦೨೧ ರ ಸಂಚಿಕೆ
ಶೈವಮಾರ್ಗದ ಭವದ ನೋವ ತಾರಿಸಿ ವೀರ-
ಶೈವಾಮೃತ ಮೊಲೆಯನುಣಿಸಿ ಪೊರೆದೆನ್ನ ಹೆ-
ತವ್ವ ಶ್ರೀಗುರುವೆ ಕೃಪೆಯಾಗು || ೩೨ ||
ಕವಿಯು ಹೆತ್ತವ್ವೆಯ ನೋವನ್ನು ನೆನಿಸುತ್ತಾನೆ ತಾಯಿಯು ಮಗುವನ್ನು ಹೆರಬೇಕಾದರೆ ಅನಂತ ಕಷ್ಟ-ನಷ್ಟಗಳನ್ನು ಅನುಭವಿಸಿ ಮೊಲೆಯುಣಿ’ಸಿ ಸಲಹುತ್ತಾಳೆ.ಮಗನ ನೋವನ್ನು ಸ್ಮರಿಸುವದಿಲ್ಲ. ನೋವು ನನಗಿರಲಿ, ಮಗನು ಸುಖವಾಗಿರಲೆಂದೇ ಬಯಸುತ್ತಾಳೆ. ಪೂಜ್ಯಗುರುವರರು ‘ಮಕ್ಕಳಿಗೆ ಕಷ್ಟ-ನಷ್ಟಗಳೆಷ್ಟೇ ಬಂದರೂ, ಎಡರು-ತೊಡರಗಳು ಬಂದರೂ ಅವೆಲ್ಲವುಗಳನ್ನು ನನಗೇ ತಾಯೆನ್ನುವವಳೇ ತಾಯಿ” ಎಂದು ತಾಯಿ ಶಬ್ದದ ಅರ್ಥವನ್ನು ಅಪ್ಪಣೆ ಮಾಡುತ್ತಿದ್ದರು.ಗುರುತಾಯಿಯೂ ಅಷ್ಟೇ ಭಕ್ತನ ಭವದ ನೋವನ್ನು ಸ್ಮರಿಸುವದಿಲ್ಲ. ಶೈವ ಮಾರ್ಗವು ಭವದ ಬೀಜವೆನಿಸಿದೆ. ಸ್ಥಾವರಲಿಂಗವನ್ನು ಆರಾಧಿಸುವವನು ಶೈವನೆನಿಸುವನು. ಶಿವನೂ ಸಹ ಲಿಂಗವಿಲ್ಲದೆ ಭವಿಯಾಗಿರುವದರಿಂದ ಭಕ್ತನನ್ನು ನಿಜ ಮುಕ್ತನನ್ನಾಗಿ ಮಾಡಲಾರನೆಂಬುದು ಶರಣರ ವಾದ, ಶಿವನು ಶೈವಭಕ್ತರಿಗೆ ಚತುರ್ವಿಧ ಮುಕ್ತಿಗಳನ್ನು ಕರುಣಿಸಿ ಅವರ ಪುಣ್ಯ ತೀರಿದ ಮೇಲೆ ಪುನಃ ಭವಕ್ಕೆ ನೂಕುವನು. ಭವದಲ್ಲಿ ಬರುವದರಿಂದ ಮಾಯಾ ಮೋಹದ ಬಂಧನವು ಜೀವಾತ್ಮನನ್ನು ದುಃಖಿ
ಯನ್ನಾಗಿ ಮಾಡುವದು. ಶೈವನಾದವನು ಶಿವನು ಬೇರೆ; ತಾನು ಬೇರೆಂದು ಭಾವಿಸುವನು ಅವನಲ್ಲಿ ಪೂಜ್ಯ ಪೂಜಕ ದ್ವಂದ್ವಭಾವ ಅಳಿಯುವದಿಲ್ಲ. ಕೈಲಾಸ ಬೇರೆ ಶಿವನು ಬೇರೆಯೆಂಬ ದ್ವಂದ್ವವನ್ನು ಕಳೆದುಕೊಳ್ಳಲಾರನು. ಈ ದ್ವಂದ್ವವಳಿಯದೇ ಭವದನೋವು ಇದೇ ವಿಷಯವನ್ನು ಬಸವಲಿಂಗಶರಣರು ತಮ್ಮ ಧರ್ಮಾಚಾರ ಪ್ರಕರಣದಲ್ಲಿ ಅಳಿಯದು.
ಶ್ರೀ ಮಹಾ ಸದ್ ಭಕ್ತನಂಗವೇ ಕೈಲಾಸ, ಲಿಂಗವ ಸಾಕ್ಷಾತ್ ಶಿವಂ |
ಎಂದು ಭವಿಗಳಿಗೆ ಭವದನೋವಲ್ಲದೆ ವೀರಶೈವನಿಗೆ (ಶರಣನಿಗೆ) ಭವವಿಲ್ಲೆಂದು ಖಂಡಿತವಾಗಿ ತಿಳಿಸಿದ್ದಾರೆ. ಸ್ವಾನುಭಾವದಿಂದ ಮುಪ್ಪುರಿಗೊಂಡ ವೀರಶೈವತತ್ವಾಚರಣೆಯು ಶ್ರೇಷ್ಠವಾಗಿದೆ. ಗುರುನಾಥನು ಶೈವಮಾರ್ಗವು ಭವದ ಬುನಾದಿ ಯೆಂದು ಅದನ್ನು ಹೋಗಲಾಡಿಸಿ ಕರುಣೆಯಿಂದ ವೀರಶೈವ ತತ್ವದ ಮಹತ್ವವನ್ನು ತಿಳಿಸುತ್ತಾನೆ. ವೀರಶೈವತತ್ತ್ವವು ಅಮೃತ ಸಮಾನವಾಗಿದೆ. ಶರಣತತ್ತ್ವವನ್ನುಅನುಸರಿಸಿದವನು ಅಮರನಾಗುತ್ತಾನೆಂದು ಗುರುಬೋಧಿಸಿ ಹೆತ್ತವ್ವೆಯಂತೆ ಶಿಷ್ಯನನ್ನು ಸಾಕಿಸಲಹುತ್ತಾನೆ. ತಾನೆಷ್ಟೇ ಕಷ್ಟಗಳನ್ನು ಪಟ್ಟರೂ ಶಿಷ್ಯನಿಗೆ ಸುಖವನ್ನೇ ಬಯಸುತ್ತಾನೆ. ಹೆತ್ತವ್ವೆಯ ಹೃದಯ ಹರವಾದುದು,
ಓ ಹೆತ್ತವೆಯೇ ! ಪಾದೋದಕ ಪ್ರಸಾದವೆಂಬ ಅಮೃತವನ್ನು ನಿತ್ಯದಲ್ಲಿತ್ತು
ಕಾಪಾಡು, ಪಾದೋದಕ ಪ್ರಸಾದಗಳು ಸವೆಯದಮೃತವಲ್ಲವೇ ?
ಉಪ್ಪುನೆಲ್ಲಿಯು ಕೂಡಿ | ಒಪ್ಪಿ ರುಚಿಗೊಡುವಂತೆ
ತಪ್ಪದೆಂದೆಂದು ಅಗಲಿಕೆಯಿಲ್ಲದೆ
ನ್ನಪ್ಪ ಶ್ರೀಗುರುವೆ ಕೃಪೆಯಾಗು || ೩೩||
ಶಿವಮಾರ್ಗದ ಜಾಡ್ಯವನ್ನು ಬಿಡಿಸಿ ವೀರಶೈವಾಮೃತವನ್ನು ಉಣಿಸಿ ಪೋಷಿಸಿದ ಶ್ರೀಗುರು ಹೆಮ್ಮೆಯಾದಂತೆ ಹೆತ್ತಪ್ಪನೂ ಆಗಿದ್ದಾನೆ. ಅಪ್ಪ ಮತ್ತು ಮಗನ ಸಂಬಂಧದ ಸ್ವಾರಸ್ಯವನ್ನು ಉತ್ತಮ ಉದಾಹರಣೆಯಿಂದ ಸಮರ್ಥಿಸುತ್ತಾನೆ. ಗುರುಶಿಷ್ಯರ ಸಂಬಂಧದ ಬಗ್ಗೆ ಅಲ್ಲಮ ಪ್ರಭುಗಳ ವಚನವೂ ಮನನೀಯವಾಗಿದೆ.
ಮಾವಿನಮರಕ್ಕೂ ಕೋಗಿಲೆಗೂ ಏನು ಸಂಬಂಧ ? ಮರ ಉಬ್ದಿಜ, ಕೋಗಿಲೆ ಅಂಡಜ ಒಂದಕ್ಕೊಂದು ಸಂಬಂಧವಿಲ್ಲ. ಆದರೂ ವಸಂತಕಾಲದಲ್ಲಿ ಮಾಮರ ಚಿಗುರಲು ಚಿಗುರೆಲೆಗಳನ್ನು ತಿಂದ ಕೋಗಿಲೆ ಇಂಪಾಗಿ ಕೂಜನಮಾಡುತ್ತದೆ. ಗುಡ್ಡ ಗಾಡಿನಲ್ಲಿ ಬೆಳೆದ ನೆಲ್ಲಿಕಾಯಿ, ಸಮುದ್ರದ ದಂಡೆಯಲ್ಲಿ ತಯಾರಾಗುವ ಉಪ್ಪಿಗೆ ಯಾವ ಸಂಬಂಧವಿಲ್ಲ. ಆದರೂ ಅವೆರಡರ ಸಂಗಮ ಆರೋಗ್ಯಕ್ಕೆ ಹಿತಕರ ರುಚಿಕವಾಗುತ್ತೆ. ಹಾಗೆ ಅಂಗಲಿಂಗಗಳ ಸಂಬಂಧವೂ ವಿಚಿತ್ರವಾಗಿದೆ. ಈ ಬಗ್ಗೆ ಲಿಂಗಲೀಲಾ ವಿಲಾಸಕಾರರ ಟೀಕೆ ಉಲ್ಲೇಖನೀಯವಾಗಿದೆ. “ಅಂಗಕ್ಕೆಯೂ ಲಿಂಗಕ್ಕೆಯೂ ಸಂಬಂಧವೇನೂ ಇಲ್ಲ, ಅದೇನು ಕಾರಣವೆಂದರೆ-ಅಂಗವೆ ಜಡ, ಲಿಂಗವೇ ಜಡಾಜಡ ರಹಿತನಾಗಿ; ಮನಕ್ಕೆಯೂ ಅರುವಿಂಗೆಯೂ ಸಂಬಂಧವಿಲ್ಲ. ಅದೇನುಕಾರಣವೆಂದರೆ- ಮನವ ಮರವ; ಅರಿವೆ ಬೆಳಗಾಗಿ ಇಂತಪ್ಪ ತನು-ಮನವಿಡಿದಾತಂಗೆ ಮಹಾಲಿಂಗ ಸಂಗ ಒಮ್ಮೆಯೂ ಇಲ್ಲದೆ ಇರುತ್ತಿರಲಾ ಗುರುಕರುಣದಿಂದ ತನುಧರ್ಮ ಮನಧರ್ಮವಳಿದು ಮಹಾಲಿಂಗವು ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದಿತು.” (ಪುಟ ೧೦೭) ಸಾಹಸಿ ವ್ಯಕ್ತಿಯುಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪನ್ನು ಕೂಡಿಸುವಂತೆ ಕರುಣಾಮಯನಾದ ಸದ್ಗುರುವು ಶಿವದೀಕ್ಷೆಮಾಡಿ ಜಡಶರೀರವನ್ನು ಶುದ್ಧಗೊಳಿಸಿ ಅಂಗವನ್ನಾಗಿಸಿ ಅರುಹಿನ ಕುರುಹನ್ನೇ ಲಿಂಗವನ್ನಾಗಿ ನನ್ನ ಕರಸ್ಥಲಕ್ಕೆ ಕರುಣಿಸುತ್ತಾನೆ. ಅಂಗದಲ್ಲಿಯ ಮಹಾಲಿಂಗದ ಚೈತನ್ಯವನ್ನು ಲಿಂಗವನ್ನಾಗಿ ಪರಿವರ್ತಿಸಿ ಈ ಅಂಗದಿಂದ ಎಂದೂ ಅಗಲಲಾರದಂತೆ ಇರಿಸುವನು ತಿಳಿಯದ ಅಜ್ಞಾನದಿಂದ ದೂರವಾದ ಅಂಗಲಿಂಗಗಳನ್ನು ಒಂದುಗೂಡಿಸಿ ಒಪ್ಪುವಂತೆ ಮಾಡುವನು. ತಂದೆಯು ಲೌಕಿಕ ಸತಿಪತಿಗಳನ್ನು ಒಂದುಗೂಡಿಸಿ ಸುಖಿಯಾಗಿರಿಸುವಂತೆ ; ಗುರುತಂದೆಯು ಶರಣ ಸತಿಯೊಡನೆ ಲಿಂಗಪತಿಯನ್ನು
ಸಮರಸಗೊಳಿಸುವನು. ಈ ಸತಿಪತಿ ಸಮರಸದ ಬಾಳುವೆಗೆ ಪ್ರತಿಯುಂಟೆ?” ಎಂದು ಬಾಲಲೀಲಾ ಮಹಾಂತರು ಹಾಡಿದ್ದು ಯಥೋಚಿತವಾಗಿದೆ. ಗುರುಪಿತನು ನನ್ನನ್ನು ಲಿಂಗಪತಿಯೊಡನೆ ಕೂಡಿಸಿ ಮಹದುಪಕಾರ ಮಾಡಿದ್ದಾನೆ. ಇಂಥ ಕರುಣಾಮಯನಾದ ಅಪ್ಪನು ಇನ್ನಾರುಂಟು ?
*
ಮಜ್ಜೀವ ನಿಮ್ಮ ಪಾ | ದಾಬ್ಜವನು ಭಜಿಸಿ ಹ –
ಸ್ತಾಜ್ಜದೂಳ್ಜನಿಸಿ-ಸಜ್ಜೀವವಾದುದೆ –
ಮಜ್ಜಯ್ಯ ಗುರುವೆ ಕೃಪೆಯಾಗು || ೩೪||
ಲೌಕಿಕ ತಂದೆಯ ತಂದೆಯು ಅಜ್ಜನಾಗುವಂತೆ ಗುರುನಾಥನೂ ಅಜ್ಜನಾಗುತಾನೆ. ಯಾಕೆಂದರೆ ಈ ಜೀವಾತ್ಮನು ಗುರುವಿನ ಪಾದಕಮಲದ ಸೇವೆ ಮಾಡಿ ಸಜೀವವಾಯಿತು. ಅಂದರೆ ಶಿವದೀಕ್ಷಾಸಂಸ್ಕಾರದಿಂದ ಎಲ್ಲ ಕ್ರಿಯೆಗಳು ಸತ್ ಕ್ರಿಯೆಗಳಾಗುವವು. ಜೀವನ ಜಡತ್ವವು ದೂರವಾಗುವದು. ಸಕಲಾಚಾರಗಳು ಸದಾಚಾರಗಳಾಗುವವು. ಗುರುನಾಥನ ಕೃಪೆಯಿಂದ ಅವನ ಹಸ್ತಕಮಲದಲ್ಲಿ ಶಿಷ್ಯನ ಲಿಂಗತಂದೆಯ ಜನನವಾಗುತ್ತದೆ. ಆ ಲಿಂಗತಂದೆಯನ್ನು ಹಡೆದ ತಂದೆ ಗುರುವರನಲ್ಲವೇ, ಹಾಗಾದರೆ ಗುರುವು ಅಜ್ಜನಲ್ಲದೆ ಮತ್ತೇನು ?
ಶಿವಕವಿಯು ಗುರುವಿನಲ್ಲಿ ವಿಭಿನ್ನ ಸ್ವರೂಪವನ್ನು ಕಂಡು ತಣಿದಿದ್ದಾನೆ. ಮನದುಂಬಿ ಹಾಡಿದ್ದಾನೆ. ಗುರುನಾಥನೆ ! ಲೌಕಿಕ ಅಜ್ಜನು ಮೊಮ್ಮಗನಿಗೆ ಸುಜ್ಞಾನವನ್ನು ಕಲಿಸುವಂತೆ, ನೀನು ಅಧ್ಯಾತ್ಮದ ಅಜ್ಜನು, ನಿನ್ನ ಕರುಣೆ ಅಗಾಧವಾದುದು. ನನ್ನ ಹೃದಯ ಕಮಲವನ್ನರಳಿಸಿ ಸುಜ್ಞಾನವನ್ನಿತ್ತು ಆತ್ಮೀಯ ಅಜ್ಜನಾಗಿರುವೆ. ನಿನಗಿಂತಲೂ ಆತ್ಮೀಯರುಂಟೆ ?
ಮತ್ತೆ ನಾ ನಿಮ್ಮ | ಸತ್ಪುತ್ರನಾತ್ಮಜನಣುಗ
ಪೆತ್ತವನ ಮಗನ ಭೃತ್ಯನೈ ನೀನೆನ್ನ
ಮುತ್ತಯ್ಯ ಗುರುವೆ ಕೃಪೆಯಾಗು || ೩೫ ||
ಲೌಕಿಕದಲ್ಲಿ ಅಜ್ಜಯ್ಯನಿಗೇನೇ ಮುತ್ತಯ್ಯನೆನ್ನುವದು ಪ್ರೀತಿಯ ಸಂಕೇತವಾಗಿದೆ. ಮೇಲೆ ವಿವರಿಸಿದುದನ್ನೇ ಒತ್ತಿ ಹೇಳುತ್ತಾನೆ.
ಗುರುವೆ ! ನಾನು ನಿಮ್ಮ ಮೊಮ್ಮಗನು. ನನ್ನ ಪೆತ್ತವನು (ಲಿಂಗವು) ನಿನ್ನ ಕರಕಮಲದಲ್ಲಿ ಹುಟ್ಟಿ ನಿನಗೆ ಸತ್ಪುತ್ರನಾದನು. ಅವನ ಅಣುಗ (ಮಗ)ನಾದವನು ನಾನು, ಎನ್ನ ಅಂಗದಿಂದ ಅಗಲದ ಅಧ್ಯಾತ್ಮಿಕ ಪಿತನು ಲಿಂಗದೇವನು. ಅವನು ನಿನ್ನಿಂದ ಬಂದವನು. ಆ ಲಿಂಗ ಪತಿಯ, ಲಿಂಗಪಿತನ ಸೇವೆಮಾಡಲು ಅಣಿಯಾದ ಮೊಮ್ಮಗನು ನಾನು. ಆದ್ದರಿಂದ ನೀನು ನನ್ನ ಮುತ್ತಯ್ಯನಲ್ಲವೆ ? ಇಂಥ ಅನನ್ಯ ಸಂಬಂಧವನ್ನು ಹೊಂದಿದ ನಾನೇ ಧನ್ಯನು.
ಸಂಪಾದಕರು : ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ -ವಿಜಯಪುರ
ಕಾಲ ಚಕ್ರದ ಕೊನೆ ಮೊದಲಂತೆ ಕಲಿಪುರುಷನ ಹಗಲಿರುಳಿನಂತೆ ಭಾರತಾಂಬೆಯ ಭಾಗ್ಯೋದಯದಿಂದ ಆಗಾಗ ಯುಗ ಯುಗಾಂತರದಿಂದಲೂ ಯುಗಪುರುಷರೂ, ಮಹಾ ತಪಸ್ವಿಗಳೂ, ಮಹಾ ಮಹಾ ಮಂತ್ರ ದ್ರಷ್ಟಾರರೂ, ಯೋಗಿ- ಶಿವಯೋಗಿಗಳೂ ಭಾರತ ಮಾತೆಯ ಪುಣ್ಯಗರ್ಭದಿಂದ ಉದಿಸಿ ಲೋಕವ ನಾಕಕ್ಕೆ ಹಿರಿದೆನ್ನುವಂತೆ ತೊಳಗಿ ಬೆಳಗಿ ಕೀರ್ತಿ ಜ್ಯೋತಿಗಳಾಗಿದ್ದಾರೆ. ಆಗುತ್ತಲಿದ್ದಾರೆ.
ಖಣಿಯಿಂದ ರತ್ನ, ಮೃಗದಿಂದ ಕಸ್ತೂರಿ, ಪುಷ್ಟದಿಂದ ಪರಿಮಳವು ಹೊರ ಹೊಮ್ಮುವಂತೆ ಮಹಾತ್ಮರ ಉದಯವು ಕಿರಿ ಹಳ್ಳಿಗಳಲ್ಲಿ ಮತ್ತು ಬಡತನದ ಮನೆತನದಲ್ಲಿ ಎಂಬುದು ಸರ್ವಶೃತ. ಅಂತೆಯೇ ಯುಗ ಪುರುಷ ಕಾರಣಿಕ ಪರಮ ಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀ ನಿ. ಪ್ರ. ಕುಮಾರ ಶಿವಯೋಗಿ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸರ್ವಮಾನ್ಯ ಸಂಚಾಲಕರೂ ಸೌಹಾರ್ದದಿಂದ ಪಾಲಕರೂ ಆಗಿರುವ ಹಾನಗಲ್ಲಿನ ವೀರ ವಿರಕ್ತಮಠಾಧೀಶರಾಗಿರುವ ಪರಮಪೂಜ್ಯ ಶ್ರೀ ನಿ. ಪ್ರ. ಸ್ವರೂಪಿ ಸದಾಶಿವ ಮಹಾಸ್ವಾಮಿಗಳವರ ಉದಯವು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಎಂಬ ಹಳ್ಳಿಯಲ್ಲಿ ಆಯಿತು. ಆ ಅರಳಿಕಟ್ಟಿ ಚಿಕ್ಕ ಗ್ರಾಮದಲ್ಲಿ ಸಧ್ಬಕ್ತಿ ಸದಾಚಾರ ಸಂಪನ್ನರೂ ಗುರು-ಲಿಂಗ-ಜಂಗಮ ಪ್ರಾಣಿಗಳೂ ಆದ ವೇ. ಶ್ರೀ ಗಂಗಯ್ಯನವರು ಅವರ ಧರ್ಮ ಪತ್ನಿಯಾದ ಸಾಧ್ವೀಶೀಲವತೀ ರಾಚಮ್ಮನವರ ಪವಿತ್ರ ಗರ್ಭ ಸುಧಾಂಬುಧಿಯಲ್ಲಿ ಇಶ್ವಿ ಸನ್ ಸಾವಿರದ ಒಂಬೈನೂರಾ ಆರ (1906) ರಲ್ಲಿ ಬಾಂದಳದಲ್ಲಿ ಬಿದಿಗೆಯ ಚಂದ್ರನು ಉದಿಸಿ ಬಂದಂತೆ ಜನ್ಮ ತಾಳಿದರು. ಇವರಿಗೆ ತಾಯ್ತುಂದೆಗಳು ಬಂಧು ಬಳಗದವರು ಮತ್ತು ಹಲವಾರು ಸುಮಂಗಲೆಯರು.
ಭವರೋಗ ಕಳಿಯಲ್ಕೆ ಶಿವಯೋಗ ಬೆಳಸಲ್ಕೆ ಶಿವನಿಳೆಗೆ ಬಂದೆ ಜೋ ಜೋ
ಕವಿದಿರ್ದ ಕತ್ತಲೆಯ ಶಿವತೇಜೋ ಬಲದಿಂದ ಬೆಳಗಿ ಕಳೆಯಲು ಬಂದೆ
ಎಂದು ಮುಂತಾಗಿ ಮುದ್ದಿಕ್ಕಿ ಜೋಗುಳ ಹಾಡಿ ಶ್ರೀ ಗುರುವಿನಿಂ ಲಘು ದೀಕ್ಷೆಗೈದ ಶಿಶುವಂ ಕಣ್ಮನದುಂಬಿ ನೋಡಿದ ಒಳಗಣ್ಣಿನ ಶ್ರೀ ಗುರುಗಳು ಹೊಂಬೆಳಗಿನ ಈ ಶಿಶುವಿಗೆ ಚಂದ್ರಶೇಖರ ಎಂದು ಬಳಗದಿಂದೊಡಗೂಡಿ ನಾಮಕರಣ ಮಾಡಿದರು. ಕೆಲವೇ ದಿನಗಳಲ್ಲಿ ದೇವರ ಕೋಣೆಯಲ್ಲಿ ಶಿವ ತೇಜೋಮೂರ್ತಿ ಯಾದ ಚಂದ್ರಶೇಖರಯ್ಯನ ತಲೆಯ ಮೇಲೆ ಘಣಿರಾಜನು (ನಾಗರಾಜ) ಹೆಡೆ ಎತ್ತಿ ಲೀಲಾಜಾಲವಾಗಿ ಆನಂದದಿಂದ ಆಡತೊಡಗಿತ್ತು. ಇದನ್ನು ಕಂಡು ಮಾತಾಪಿತರು ಆಶ್ಚರ್ಯಚಕಿತರಾಗಿ ಭಯಬೀತರಾಗಿ, ಶಿವಸಂಕೇತದಂತ 1907ರಲ್ಲಿ ಬಿಕ್ಷಾಟನೆಗಾಗಿ ದಯಮಾಡಿಸಿದ ಶ್ರೀ ಶಿವಯೋಗಮಂದಿರದ ಸಂಸ್ಥಾಪಕರೂ, ದೀಪಕರೂ, ಪರಮ ಪರಂಜ್ಯೋತಿ ಸ್ವರೂಪರೂ ಆದ ಪೂಜ್ಯ ಕಾರಣಿಕ ಶ್ರೀ ನಿ. ಪ್ರ. ಕುಮಾರ ಶಿವಯೋಗಿಗಳಿದ್ದೆಡೆಗೆ ಧಾವಿಸಿ ಬಂದು ಸನ್ನಿಧಿಯಲ್ಲಿ ನಡೆದ ಘಟನೆಯನ್ನು ಆರಿಕೆ ಮಾಡಿಕೊಳ್ಳಲು, ಶ್ರೀಗಳವರು ಥಟ್ಟನೆ ಆತನಿಂದ ಲೋಕೋಪಕಾರವಾಗಬೇಕಾಗಿದೆ. ಸಮಾಜ ಜೀವಿಯಾಗಬೇಕಾಗಿದೆ ಮತ್ತು ಆ ಕೂಸು ನಿಮ್ಮದಾಗದೆ. ಶ್ರೀಗುರುವಿನದಾಗುವದು, ಶ್ರೀ ಗುರುವಾಗುವದು. ಸಮಾಜಜೀವಿ, ಸಮಾಜೋದ್ಧಾರಕ ವಸ್ತುವಾಗುವುದು. ಆದ್ದರಿಂದ ಈ ಘಟನೆ ನಡೆದಿದೆ. ನೀವು ಅಂಜಬೇಡಿರಿ. ಅಂಥ ಪುಣ್ಯ ಪುರುಷನನ್ನು ಪಡೆದ ಗರ್ಭವೇ ಮಹಾ ಗರ್ಭ, ನೀವೇ ಭಾಗ್ಯಶಾಲಿಗಳು, ಧನ್ಯರು, ಎಂದು ಆನಂದದಿಂದ ಆಶೀರ್ವದಿಸಿದರು. ದಿವ್ಯಜ್ಞಾನಿಗಳಾದ ಶ್ರೀ ಕುಮಾರ ಶಿವಯೋಗಿಶ್ವರರ ಅಮರವಾಣಿ ಎಂದಾದರೂ ಸುಳ್ಳಾದೀತೆ ? ಅದೆಂದು ಸಾಧ್ಯ !
ಹತ್ತೊಂಬತ್ತು ನೂರಾ ಹದಿನೈದು (1915)ರಲ್ಲಿ ಅಲ್ಲಿಯ ಮಠದ ಶಿಷ್ಯ ಪ್ರಮುಖರು ಶ್ರೀ ಚಂದ್ರಶೇಖರನನ್ನುತಮ್ಮ ಊರ ಹಿರಿಯ ಮಠದ ಅಧಿಕಾರಿಯನ್ನಾಗಿಸಲು, ಹಾನಗಲ್ಲ ಕುಮಾರ ಶಿವಯೋಗಿಗಳವರ ಪಾದಾರವಿಂದಗಳಲ್ಲಿ ಅರ್ಪಿಸಿದರು. ಆಗ ಮಹಾಶಿವಯೋಗಿಗಳು ಆತನ ಪೂರ್ವಾಶ್ರಮದ ಹೆಸರಿನ ಸ್ಥಾನದಲ್ಲಿ ಶ್ರೀ ರೇಣುಕಾರ್ಯನೆಂದು ನೂತನ ಪುಣ್ಯ ನಾಮವನ್ನು ದಯಪಾಲಿಸಿ ಅವರಿಗೆ ಅಧ್ಯಯನ, ಅನುಷ್ಠಾನಾದಿಗಳಿಂದ ಸರ್ವ ಸೌಹಾರ್ದ ಸೌಕರ್ಯಗಳಿಂದ ತರಬೇತು ಕೊಡಿಸಿದರು. ತತ್ಪರಿಣಾಮವಾಗಿ ಕನ್ನಡ-ಸಂಸ್ಕೃತ ಘನ ವಿದ್ವಾಂಸರೂ, ಶಿವಾನುಭವಿಗಳೂ ಶಿವಯೋಗಿ ಸಿದ್ಧರೂ ಆದ ಶ್ರೀ ವ್ಯಕ್ರನಾಳ ಪಟ್ಟಾಧ್ಯಕ್ಷರಿಂದ ವೀರ ಮಾಹೇಶ್ವರ ದೀಕ್ಷೆ ಪಡೆದರು. ಗಣಿಯಿಂದ ಹೊರ ಹೊಮ್ಮಿ, ಶಿಲ್ಪಿಯಿಂದ ಸಂಸ್ಕರಿಸಿದ ರತ್ನದಂತೆ ಮೇಧಾವಿ (ಜಾಣ)ಯಾದ ಈ ವಟುವು ಕನ್ನಡ, ಸಂಸ್ಕೃತ, ಸಂಗೀತ, ಚಿತ್ರಕಲೆಗಳಲ್ಲಿ ಪರಿಣತೆಯಿಂದ ಪಳಗಿದನು. ಈತನಲ್ಲಿರುವ ಸಹಜ ಶೀಲ ಸೌಜನ್ಯ ಶಾಂತಿ-ದಾಕ್ಷಿಣ್ಯಾದಿ ಗುಣಗಳನ್ನು ಕ್ರಮೇಣ ನಿರೀಕ್ಷಿಸಿ ಶ್ರೀ ಕುಮಾರ ಪರಂಜ್ಯೋತಿಃ ಪ್ರಭಾ ಹೊಂಗಿರಣ (ತಪೋನಿಧಿಗಳ ಪ್ರೇಮಾಂತಃಕರಣ)ಗಳು ಶ್ರೀಗಳ ಪ್ರಜ್ಞಾಂತಃ ಪಟಲದ ಮೇಲೆ ಸಂಪೂರ್ಣ ಬಿದ್ದಂತೆ ಪ್ರಕಾಂಡ ಪಂಡಿತರಿಂದ, ಸೂಜ್ಞರಿಂದ ಪದವಾಕ್ಯ- -ಪ್ರಮಾಣಜ್ಞರೂ ಶಿವಾನುಭವಿಗಳೂ ಆದ ಇವರು ಶ್ರೀ ಶಿವಯೋಗಿಯ ಕರುಣೆಯ ಪಡೆದು ಚಿದ್ಗುರುವಿನಿಂದ ಅನುಗ್ರಹಿತರಾಗಿ ಶ್ರೀ ರೇಣುಕಾ ದೇಶಿಕ ರಾದರಲ್ಲದೆ ಅಧ್ಯಯನವನ್ನು ಪುಷ್ಪದೊಳಗಿನ ಮಧುವಿಗೆರಗುವ ತುಂಬಿಯಂತೆ ಸದ್ವಿದ್ಯಾ ವ್ಯಸನಿ-ವ್ಯಾಸಂಗವನ್ನು ಮುಂದುವರಿಸುವದರೊಂದಿಗೆ ಶ್ರೀ ಶಿವಯೋಗಮಂದಿರದ ಕಾರ್ಯಭಾರವು ಚರಿತ್ರ ನಾಯಕನ ದಾಯಿತು. ಯಾವಾಗಲೂ ಬೆಳೆಯುವ ಸಿರಿಯ ಮೊಳಕೆಯಲ್ಲಿ ನೋಡು ಎಂಬಂತೆ ಮಹಾತ್ಮರ ಜೀವನದ ಉಜ್ವಲತೆಯು ಜ್ಯೋತಿ ಸ್ವರೂಪವಾಗಿ ಪ್ರಜ್ವಲಿಸುತ್ತಿತ್ತು.
ಹಾನಗಲ್ಲ ಮಠದ ಪರಮ ಗುರು ಶ್ರೀ ಕುಮಾರ ಪರಂಜ್ಯೋತಿಯ ಬೆಳಗು, ಮಹಾ ಬೆಳಗಿನಲ್ಲಿ ಬೆರೆದ ಬಳಿಕ ಉತ್ತರಾಧಿಕಾರ ಸ್ಥಾನಾಪನ್ನರಾದ ಪರಮಪೂಜ್ಯ ಶ್ರೀ ನಿ. ಪ್ರ. ಮಹೇಶ್ವರ ಮಹಾಸ್ವಾಮಿಗಳು ತಮ್ಮ ಅಂಗಕರಣಂಗಳನ್ನು ಲಿಂಗಕಿರಣಂಗಳನ್ನಾಗಿಸಿದ ಬಳಿಕ (ಲಿಂಗರೂಪಿಗಳಾದ ಬಳಿಕ) ಹಲವಾರು ಗಣ್ಯ ಪೂಜ್ಯರು ವಿಚಾರಿಸಿ ಮಠಗಳು ಮಹದರುವಿನ ಚಿದ್ಬೆಳಕನ್ನೀಯುವ ಶಿವಾದ್ವೈತದ ಹೊಂಬೆಳಗಿನ ಹೊನಲನ್ನು ಹೊರಚಿಮ್ಮುವ ದೀಪಸ್ತಂಭಗಳು. ನಾಸ್ತಿಕರನ್ನು ಆಸ್ತಿಕರನ್ನಾಗಿ, ಮಾನವತೆಯಿಂದ ಮನಸ್ವಿಗಳನ್ನಾಗಿಸುವ, ಮಠದ ಪೀಠಗಳಿಗೆ ಯೋಗ್ಯತಾ ಸಂಪನ್ನರನ್ನೇ ಹುಡುಕುತ್ತಿರುವಾಗ ಶಿವಯೋಗ ಧಾಮದ ಶ್ರೀ ಶಿವಯೋಗ ಮಂದಿರದಲ್ಲಿ ಶಿವಯೋಗ ಸದಾಚಾರ ಸತತಾಭ್ಯಾಸದಲ್ಲಿ ಪಳಗಿದ ಕುಶಲ ಮತಿ-ಮೇಧಾವಿಗಳಾದ ಶ್ರೀ ರೇಣುಕ ದೇಶಿಕರನ್ನು ಆ ಮಠದ (ಹಾನಗಲ್ಲ ವಿರಕ್ತಮಠ) ಉತ್ತರಾಧಿಕಾರಿಗಳನ್ನಾಗಿ ಮಾಡಲು ಹುಬ್ಬಳ್ಳಿಯ ಮೂರು ಸಾವಿರಮಠದ ಅಂದಿನ ಜಗದ್ಗುರುಗಳಾದ ಲಿಂ. ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ನವಲಗುಂದದ ಲಿಂ. ಶ್ರೀ ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು, ಗುತ್ತಲದ ಲಿಂ. ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀಮಾನ್ ದೇವಿಹೊಸೂರ ಶೆಟ್ಟರು ಇನ್ನುಳಿದ ಪ್ರಮುಖ ಸದ್ಭಕ್ತರ ಬಯಕೆಯಂತೆ ಶ್ರೀ ರೇಣುಕ ದೇಶಿಕರನ್ನು ಹಾನಗಲ್ಲಿನ ವಿರಕ್ತ ಪೀಠಾಧಿಕಾರಿಗಳನ್ನಾಗಿ ಮಾಡಿದರು. ಜಡೆಮಠದ ಲಿಂ. ಶ್ರೀ ನಿ. ಪ್ರ. ಸಿದ್ದಬಸವ ಮಹಾಸ್ವಾಮಿಗಳವರಿಂದ ಅಧಿಕಾರ ಪಡೆದು. ಪಂ. ಸೋಮನಾಥ ಶಾಸ್ತ್ರಿಗಳು ಇಟಗಿ. ಗೊಗ್ಗೀಹಳ್ಳಿ ಸಂಸ್ಥಾನಮಠ ಅವರ ಪೌರೋಹಿತ್ಯದಲ್ಲಿ ಶೂನ್ಯ ಸಿಂಹಾನಾಧೀಶರಾದರು. ಕ್ರೀ. ಶ. 1936ರಲ್ಲಿ ಆ ಶುಭ ಮಂಗಲ ಸಮಯಕ್ಕೆ ಪರಮ ಗುರುವಿನ ಮೊದಲ ಪುಣ್ಯನಾಮವಾದ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳೆಂದು ಅಭಿನವ ಅಭಿದಾನವಾಯಿತು.
ಪರಮಗುರು ಪರಮಾರಾಧ್ಯರಾದ ಶ್ರೀ ನಿ. ಪ್ರ. ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗ ಮಂದಿರದ ಶ್ರೇಯಸ್ಸಿಗಾಗಿ ತಮ್ಮ ಮಠವನ್ನು ಬದಿಗಿರಿಸಿ, ಲೋಕವೇ ನನ್ನ ಮಠ, ಮಾನವ ಕುಲಕೋಟಿಯ ಸರ್ವಾಂಗೀಣ ಶ್ರೇಯಸ್ಸೇ ನನ್ನ ಶ್ರೇಯಸ್ಸು, ಎಂದು ಭಾವಿಸಿ ಅಧ್ಯಾತ್ಮ ತತ್ವ್ತಾಮೃತ ಪಿಪಾಸುಗಳ ನೆಲೆವೀಡಾದ ಋಷಿಪುಂಗವರ, ಮಹಾ ಶಿವಯೋಗಿಗಳ ತಪೋ ಧನವನ್ನು ಮುಡುಪಿಟ್ಟ ಭಾರತ ಹೃದಯ ಪೀಠದಂತಿರುವ ಶ್ರೀ ಶಿವಯೋಗಮಂದಿರವೆ ಮಹಾ ಮಠವೆಂದು ಭಾವಿಸಿ ಶಿವಯೋಗ ನಿದ್ರೆಯಲ್ಲಿ ಕಾಲಕಳೆಯುತ್ತ ಪ್ರತಿಯೊಬ್ಬ ವ್ಯಕ್ತಿಯೂ ಶಿವ ಭಾವನೆಯಿಂದ, ವ್ಯಕ್ತಿ-ವ್ಯಕ್ತಿಯೂ ಶಿವಯೋಗಮಂದಿರವಾಗ ಬೇಕೆಂದು ಶ್ರೀ ಗುರು ಕುಮಾರೇಶನ ಹಿರಿಯಾಸೆಯಂತೆ ಅವರ ಆಶಯವೆಂಬ ದಾರಿ ದೀಪದ ಹೊಂಗಿರಣದ ಮುಂಬೆಳಗಿನಲ್ಲಿ ಸಹಜವಾಗಿ ಮುನ್ನಡೆಯುತ್ತ ಶಿವ- ಜೀವನದ ಹೂದೋಟದಲ್ಲಿ ಹೂಗಳಂತೆ ಅರಳುತ್ತಿರುವ ವಟು ಶಿವಯೋಗ ಸಾಧಕರಿಗೆ ಸಮಯೋಚಿತವಾಗಿ ಧರ್ಮದ ಸಮನ್ವಯದ ಸಾಹಿತ್ಯದ ತಿಳುವಳಿಕೆಯೊಂದಿಗೆ ಪಂಡಿತರಿಂದ ಕನ್ನಡ, ಸಾಹಿತ್ಯ ಸಂಗೀತ-ನ್ಯಾಯ-ವ್ಯಾಕರಣ ವಚನ ವಾಜ್ಮಯ ರೂಪಷಡ್ರಸಾನಿತ್ವ ಮೃಷ್ಟಾನ್ನವನ್ನು ಉಣಿಸಿ ತಣಿಸುತ್ತ, ತಮ್ಮ ಜೀವನವನ್ನೇ ಅವರ ಆತ್ಮೋನ್ನತಿಗೆ ಮೀಸಲಾಗಿರಿಸಿ ಸತ್ಕಾರ್ಯ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಮಾಜದ ಮೂಲ ಸ್ತಂಭಗಳಂತಿರುವ ಗುರು-ವಿರಕ್ತ ಮೂರ್ತಿಗಳನ್ನು ಭೇದ ಭಾವವಿಲ್ಲದೆ ಮಮತೆಯಿಂದ ತರಬೇತಿಗೊಳಿಸಿ, ಶಿವಯೋಗಿ, ವಟು, ಸಾಧಕರು ಆದರ್ಶ ಸಮಾಜ ಸುಧಾರಕರು, ಧರ್ಮ ಪ್ರಚಾರ ದುರಂಧರರು, ಶಿವಯೋಗದಲ್ಲಿ ಪಳಗಿದವರು (ಶಿವಯೋಗಿ ಸಿದ್ದರು) ಆಗಬೇಕೆಂಬ ಹಿರಿಯಾಸೆ ಶ್ರೀಗಳವರದು. ಆ ದಿಶೆಯಲ್ಲಿ (ವಟುಗಳ ಪುರೋಭಿವೃದ್ಧಿಗೆ) ತನು-ಮನ-ಧನವನ್ನೇ ಧಾರೆಯೆರೆದು ವಟು ಪಟುಗಳ ಮೂಲಕ ಶ್ರೀ ವೀರಶೈವ ಧರ್ಮವು ಅಷ್ಟೇ ಅಲ್ಲದೆ ಸರ್ವಧರ್ಮ ಸರ್ವಾಂಗ ಸುಂದರವಾಗಲಿ, ಮಾನವ ದೇವನಾಗಲಿ ಎಂಬ ಮಹದಾಶೆಯಿಂದ ಸತತವೂ ದುಡಿಯುತ್ತಿದ್ದಾರೆ. ಸಾಧಕರಿಗಾಗಿ ಆಗಾಗ ಪಾಕ್ಷಿಕ, ಮಾಸಿಕ, ವಾಕ್ ಸ್ಪಧೆರ್ಯನ್ನೇರ್ಪಡಿಸುತ್ತಿದ್ದಾರೆ.ಇದರಿಂದ ಆತ್ಮೋನ್ನತಿಗೆ ಅಧ್ಯಾತ್ಮ ತಾಯಿಯಂತೆ ವಟು ವಾತ್ಸಲ್ಯವು ಸಹಜವಾಗಿಯೇ ಎಷ್ಟಿದೆ ಎಂಬುದು ರವಿ ಪ್ರಕಾಶದಂತೆ ಸ್ಪಷ್ಟವಾಗುವುದು.
ಪರೋಪಕಾರವೇ ಮಹಾತ್ಮರ ಜನ್ಮ ಸಿದ್ಧ ಗುಣವಾಗಿರುವದು. ಅದು ನಿಜ ಅಂತೆಯೇ ಜನಸೇವೆಯೇ ಶಿವನ ಸೇವೆ, ದೇಶ ಸೇವೆಯೇ ಈಶ ಸೇವೆ, ಎಂಬುದನ್ನು ಮನಗಂಡು ತಮ್ಮ ಸರ್ವಸ್ವವನ್ನೆ ಪರರ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದಾರೆ. ಶ್ರೀಗಳು ಸಮಾಜದಲ್ಲಿ ನಡೆಯುತಕ್ಕ ಅನ್ಯಾಯ, ಅನಾಚಾರ, ಅತ್ಯಾಚಾರಗಳನ್ನು ಉಚ್ಛೃಂಖಲ ವಿಚಾರಗಳನ್ನು ಕಂಡು ಕನಿಕರಬಟ್ಟು ಸಮಾಜವನ್ನು ಚೇತರಿಸಲು ಎಚ್ಚರಿಸಲು ತಮ್ಮ ಅಮೋಘ ಜ್ಞಾನಜ್ಯೋತಿಯನ್ನು ಹೊರ ಹೊಮ್ಮಿಸಿ ಅವರಲ್ಲಿರುವ ಮೂಢ ನಂಬುಗೆಯ ಹೋಗಲಾಡಿಸಿ ಓಂಕಾರಸ್ವರೂಪವಾದ ಶಿವಾದ್ವೈತ, ಶಕ್ತಿವಿಶಿಷ್ಟಾದ್ವೈತ ರೂಪವಾದ ಷಡಕ್ಷರಿ ಮಹಾ ಮಂತ್ರರ್ಥರೂಪ ವಾದ ಇಷ್ಟಲಿಂಗ ವನ್ನು ಪೂಜಿಸಲು ಮೃದು ಮಧುರ ಸದುಕ್ತಿಗಳಿಂದ ಸಲಹೆ- ಸೂಚನೆಗಳನ್ನು ನೀಡಿ ಜನರನ್ನು ಎಚ್ಚರಿಸುತ್ತಾರೆ.
ಬಾಹ್ಯಾಚಾರಿ ಶ್ರೇಷ್ಠ ಲಿಂಗಾರ್ಚನಾರೂಪ ಕ್ರಿಯೆಗಳು ಅತ್ಯವಶ್ಯವು. ನಿಜವಾದ ಶಕ್ತಿಯ ಕೇಂದ್ರ ಸೂಕ್ಷ್ಮ-ಕಾರಣಗತ ಪ್ರಾಣ-ಭಾವಗಳೇ ಅಲ್ಲ ಸ್ಥೂಲಾಂಗಗತ ಇಷ್ಟಲಿಂಗ ವೂ ಅಹುದು. ಮನಸ್ಸು ಮೂರ್ತವಸ್ತು ನಿರಾಕಾರ ವಸ್ತುವನ್ನು ಗ್ರಹಿಸದು. ಸ್ಥೂಲೇಂದ್ರಿಯಗಳಿಗೆ ಗೋಚರ ಗ್ರಾಹ್ಯವಾಗಬೇಕಾದರೆ ಇಷ್ಟಲಿಂಗೋಪಾಸನೆ ಬೇಕೇ ಬೇಕು. ಹಾಲು ಹೆಪ್ಪು ಗಟ್ಟಿ ಸ್ಥೂಲವಾದಾಗ ಅದರ ಶಕ್ತಿ ಸಣ್ಣದೇ ? ಸಂಸ್ಕಾರದಿಂದ ಬೆಣ್ಣೆ ಸಂಸ್ಕಾರದಿಂದ ತುಪ್ಪ ಅದರ ಮಾಧುರ್ಯ ಸಾಲದೆ ಸಣ್ಣದೇ ? ಬೀಜ ಮೊಳೆತು ಬೆಳೆದು ಹಣ್ಣಾಗಿ ನಿಂತಾಗ ಕೇವಲ ಬೀಜಕ್ಕಿಂತ ಹಣ್ಣು ಕಡಿಮೆಯೇನು ? ಬೀಜ ಸೂಕ್ಷ್ಮವಿರಬಹುದು ಹಣ್ಣು ಸ್ಥೂಲವಿರಬಹುದು. ಆದರೆ ಹಣ್ಣಿನಲ್ಲಿ ಆ ಬೀಜವು ಇದ್ದು ಮಿಗಿಲಾಗಿ ಮಧುರ ರಸವೂ ಇರುತ್ತದೆ. ಈ ರಸ ಬೀಜದಲ್ಲಿ ಇದ್ದರೂ ಅಭಿವ್ಯಕ್ತವಾಗಿರದು. ಸವಿಯಲುಬಾರದು. ಈ ದೃಷ್ಟಿಯಿಂದ ಸ್ಥೂಲಕ್ಕೆ ಇರುವ ಕೊರತೆಯೇನು ? ಜೀವನ ಉಪಯುಕ್ತತೆಯ ಹಂತದಲ್ಲಿ ಬಾಹ್ಯೇಂದ್ರಿಯ ಹಾಗೂ ಮನೋಗ್ರಾಹ್ಯ ಇಷ್ಟಲಿಂಗ ಕ್ಕೆ ಶ್ರೇಷ್ಠತೆಯಿಲ್ಲದಿಲ್ಲ. ಅತ್ಯಾಧಿಕ್ಯತೆಯಿದೆ. ಸೂಕ್ಷ-ಸ್ಥೂಲಗಳೆರಡರ ಸಮಷ್ಟಿ ಸಹಕಾರವೇ ಜೀವನ, ಜೀವನ ನಾಣ್ಯದ ಎರಡು ಮಗ್ಗಲುಗಳು. ಈ ಮೂಲಕ ಶಕ್ತಿ ರಹಸ್ಯವನ್ನರಿಯಬೇಕು. ಅರಿತು ಅನುಭವಿಸಬೇಕು. ಅನುಭವಿಸಿ ಆನಂದಿಸಬೇಕು. ರೂಹಿಲ್ಲದ (ಕಣ್ಮನೋ ಗೋಚರ) ನೆನಹು ಅರಣ್ಯರೋಧನ. ಕನ್ನಡಿಯಿಲ್ಲದೆ ತನ್ನ ಮುಖವ ಕಾಣಬಹುದೆ ? ಭೂಮಿಯಿಲ್ಲದೆ ಬಂಡಿ ನಡೆಯಬಹುದೆ ? ಆಕಾಶದಲ್ಲಿ ಹಾರುವ ಪಟಕ್ಕಾದರೂ ಸೂತ್ರವಿರಬೇಕು. ದೇಹವಿಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಉಂಟೆ ? ಆತ್ಮನಿಗೆ ಆಶ್ರಯ ಉಂಟೆ ಬಯಲು ಬಮ್ಮವಾದಿಗಳಿಗೆ ನೆಲೆ ಕಲೆ ಉಂಟೆ ? ಮುಮುಕ್ಷುಗಳಿಗೆ ಇಷ್ಟಲಿಂಗದ ಅವಶ್ಯಕತೆಯಿದೆ. ಗರ್ಭದೊಳಿರುವ ಶಿಶುವಿನ ಕುರುಹು (ಗಂಡೋ ? ಹೆಣ್ಣೋ ? ಗುಣೀಯೋ ದುರ್ಗುಣಿಯೋ ಎಂದು) ಕಂಡು ಆನಂದಿಸಲು ಅಸಾಧ್ಯ. ಅಸಮಂಜಸ, ಅದೇ ಶಿಶು ಹೊರ ಬಂದ ಮೇಲೆ ಶಿಶುವನ್ನು ನೋಡಿ ಲಾಲಿಸಿ ಮುದ್ದಾಡುವ ತಾಯಿಗಾದ ಆನಂದಕ್ಕೆ ಮೇರೆಯು ಉಂಟೆ ? ಮೂರು ಅಂಗಗಳಿಗೆ ಮೂರು ಲಿಂಗ, ಸ್ಥೂಲ ಸೂಕ್ಷ್ಮಕಾರಣ ಶರೀರಗಳಿಗೆ ಕ್ರಮವಾಗಿ ಇಷ್ಟ, ಪ್ರಾಣ, ಬಾವವೆಂದು ಮೂರು ಲಿಂಗ ಸಂಬಂಧವನ್ನು ಶ್ರೀ ಗುರು ತನ್ನ ಜ್ಞಾನ ಕ್ರಿಯಾರೂಪ ಯೋಗಿಕ ಶಕ್ತಿಯಿಂದ ಕೇಂದ್ರೀಕರಿಸಿ ತನ್ನ ಶಿಷ್ಯನಾದ ಉಪಾಸಕನ ಸಹಸ್ರಾರದಲ್ಲಿರುವ ಚಿತ್ಕಲೆಯನೆ ಕರ ದಿಷ್ಟಲಿಂಗವ ನ್ನಾಗಿ ಕರುಣಿಸಿ ಸ್ಥೂಲ – ಸೂಕ್ಷ್ಮ – ಕಾರಣ ಮೂರು ಹಂತದ ಕಾಜಿನ ಪೆಟ್ಟಿಗೆ ಇದ್ದು ಅದರ ಮೇಲೆ ದೀಪವನ್ನಿಟ್ಟಂತೆ. ೧) ದೀಪ ೨) ದೀಪದ ಕಿರಣ ೩) ದೀಪ ಪ್ರಕಾಶವಿದ್ದಂತೆ ಕ್ರಮವಾಗಿ, ೧) ಇಷ್ಟ ೨) ಪ್ರಾಣ ೩) ಭಾವ ಲಿಂಗ ರೂಪಗಳು ಕಂಗೊಳಿಸುತ್ತಿದ್ದು ಆ ದೀಪವನ್ನೇ ತೆಗೆದು ಬಿಟ್ಟರೆ ದೀಪದ ಕಿರಣ ಪ್ರಕಾಶ ಎಲ್ಲವೂ ಇಲ್ಲವಾದಂತೆ. ಇಷ್ಟಲಿಂಗವು ಉಪಾಸಕನಿಗೆ ಅತ್ಯವಶ್ಯ. ಮನಸ್ಸು ಬಲು ಚಂಚಲ. ಇದಕ್ಕೆ ಏನಾದರೂ ಉದ್ಯೋಗಬೇಕು. ಯೋಗಃ ಚಿತ್ತವೃತ್ತಿ ನಿರೋಧಃ ಎಂದು ಅದರ ಹರಿದಾಡುವಿಕೆಯನ್ನು ಕೇವಲ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ ಮಹಾಪೂರಕ್ಕೆ ಆಣೆಕಟ್ಟು ಕಟ್ಟಿ ನಿಲ್ಲಿಸಿದರೆ ಆಗದು. ಆ ಪ್ರವಾಹಕ್ಕೆ ಸದುಪಯೋಗ ಭೂ ಸುಧಾರಣೆ ಬೆಳೆಸುವ ಮುಂತಾದವುಗಳಿಗೆ ಉಪಯೋಗಿಸುವಂತೆ ಗುರು-ಚರ-ಧ್ಯಾನ-ಪೂಜಾ ಸಕಲೇಷ್ಟವಾದ ವಾದ ಇಷ್ಟಲಿಂಗ ದ ನಿಷ್ಠೆಯ ಧ್ಯಾನ, ಜಪ, ತಪಃ ಪೂಜಾಧಿಗಳಲ್ಲಿ ಮನ ತೊಡಗಿದರೆ ಮನಸ್ಸಿನ ಸದುದ್ಯೋಗ ಸಾಥರ್ಕವಾಗುವದು.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ, ಎನ್ನಗುಳ್ಳದೊಂದು ಮನ, ಆ ಮನ ನಿಮ್ಮೊಳ ಒಡವೆರೆದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? ಎಂಬ ಮಹಾ ವೈರಾಗ್ಯ ಶಿರೋಮಣಿ, ಮಹಾ ಶಿವಶರಣೆ ಅಕ್ಕಮಹಾದೇವಿಯ ಅನುಭವದ ಅಮರ ವಾಣಿಯಂತೆ ಮನಸ್ಸನ್ನು ಮಹಾದೇವನಲ್ಲಿ ತೊಡಗಿಸಿದರೆ ಭವದ ಭೀತಿ ಇನ್ನಿಲ್ಲ, ನಿರ್ಭವ.
ಯಾವ ಪ್ರಕಾರವಾಗಿ ಬೀಜವು ಮೊಳೆತು ಪಲ್ಲವಿಸಿ ವೃಕ್ಷವಾಗುವದಕ್ಕೆ ಸ್ಥಲ, ಜಲ, ಕಾಲಾವಧಿಗಳು ಹೇಗೆ ಅವಶ್ಯವೋ ಹಾಗೆ ಶಿವನನ್ನು ಕಾಣಲು, ನೆಮ್ಮದಿಯಿಂದ ಸಾಕ್ಷತ್ಕಾರವಾಗಲು ಪ್ರತಿಯೊಬ್ಬ ಮಾನವನು ಅದರಲ್ಲೂ ವೀರಶೈವನು ಶಿವಾದ್ವೈತ ರೂಪವಾದ ಲಿಂಗಾಂಗ ಸಾಮರಸ್ಯ ರೂಪವಾದ ಶಿವದೀಕ್ಷೆ ವೀರ ಮಾಹೇಶ್ವರ ದೀಕ್ಷೆ ಯನ್ನು ಹೊಂದಲೇಬೇಕೆಂದೂ ಇದರಿಂದ ಮಾನವ ಕೋಟಿಗೆ ಜಯವಾಗುತ್ತದೆ. ನಿಜವಾದ ಸುಖ ಶಾಂತಿಯು ನೆಲೆಸುತ್ತದೆ. ಮತ್ತು ಭಾರತ ಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿ ಬಂದದ್ದು ಸಾರ್ಥಕವಾಗುತ್ತದೆ. ಎಂಬುದನ್ನು ನಿಃಸಂದೇಹವಾಗಿ ಹೇಳಬಹುದು ಎಂದು ಬಂದಂಥ ಸಕಲ ಭಕ್ತರಿಗೆ ಬೋಧೆ ಮಾಡುತ್ತಹೋದ ಹೋದಲ್ಲಿ, ಗ್ರಾಮ ಗ್ರಾಮಗಳಲ್ಲಿ, ಸೀಮೆ ಸೀಮೆಗಳಲ್ಲಿ ಸಂಚರಿಸಿ ಉಕ್ಕಿದ ಆನಂದದಿ ಭಕ್ತರ ಮೇಲಣ ವಾತ್ಸಲ್ಯದಿಂದ ತಾಯಿ ತನ್ನ ಭಾಗ್ಯದ ಮಗುವಿಗೆ ಮಮತೆಯಿಂದ, ನೇಹದಿಂದ ಹೇಳಿ ಸಂತೈಸುವಂತೆ ಮನಂಬುಗುವಂತೆ ಇಂಥ ಗಂಭೀರ ಅರ್ಥಗರ್ಭೀತ ಮಹತ್ವಪೂರ್ಣ ತತ್ತ್ವರೂಪ ಉಕ್ಕಿನ ಕಡಲೆಗಳನ್ನು ತಮ್ಮ ಅಮೋಘ ಅನುಭಾವಾಮೃತ ರಸಾಯನದಿಂದ ಪಂಚಪಕ್ವಾನ್ನವನ್ನೇ ಮಾಡಿ ಉಣಿಸಿ ತಣಿಸಿಂದತೆ ಬೋಧಿಸುತ್ತಾರೆ. ತತ್ ಪರಿಣಾಮವಾಗಿ ಸಂಸಾರದಂದುಗದಲ್ಲಿ ಬೆಂದು ಬೆಂಡಾಗಿ ಘಾಸಿಗೊಂಡು ದಿಕ್ಕು ತೋಚದೆ ಧಾವಿಸಿ ಬಂದ ಸಾವಿರಾರು ಜನ ನಿಜಸುಖಾಮೃತ ಪಿಪಾಸುಗಳಿಗೆ ಸಂದರ್ಶನ ಸದ್ಭೋಧೆಯಿತ್ತು ಸಂತೈಸುತ್ತಿರುವರು. ಇದು ಶ್ರೀಗಳವರ ಸತ್ಯ-ಶುಧ್ಧ ಕಾಯಕವಾಗಿ ಬಿಟ್ಟಿದೆ. ಇದನ್ನು ಅನುಲಕ್ಷಿಸಿ ಶ್ರೀಗಳು ವ್ಯಕ್ತಿ-ವ್ಯಕ್ತಿಗಳನ್ನು ಶೋಧಿಸಿ ತಮ್ಮ ಅಂತಃಕರಣ ತಪಃಕಿರಣಗಳಿಂದ ಪರಿಪೂತ ಗೊಳಿಸಿ, ಕರುಣಾಮೃತದಿಂದ ಪರಿಮಾರ್ಜಿಸಿ ಅಮರ ಶಕ್ತಿಗಳನ್ನಾಗಿಸಿ, ವ್ಯಕ್ತಿ ವ್ಯಕ್ತಿಯ ಶಕ್ತಿಯೆ ಸಮಷ್ಟಿ ಸಮಾಜ, ಉನ್ನತ, ಮಹಾ ಮೇರು, ಸರ್ವಾಂಗ ಸುಂದರ ಸಮಾಜ ನಿರ್ಮಾಣವೇ ಶ್ರೀಗಳ ಉದ್ದೇಶವಾಗಿದೆ. ಸಮಾಜದ ಹಿತ ಸಾಧನೆಯನ್ನೇ ಕುರಿತು ನಿತ್ಯವೂ ಅವರು ಚಿಂತಿಸುತ್ತಿದ್ದಾರೆ.
ಶ್ರೀ ಮದ್ವೀರಶೈವ ಶಿವಯೋಗಮಂದಿರದಲ್ಲಿ ಪ್ರಮಥರ ಹಸು ಮಕ್ಕಳಂತಿರುವ ಸಾಧಕರಿಗೆ ಶ್ರೀಗಳು ಅವರ ಪೋಷಣೆ ಪಾಲನೆಗಾಗಿ ಹಳ್ಳಿ ಹಳ್ಳಿಗೆ ಭಿಕ್ಷಾಟನೆಗೆಂದು ದಯ ಮಾಡಿಸಿದರೆ ಅಲ್ಲಲ್ಲಿ ಸದ್ಭಕ್ತರು ಆನಂದದ ಭರದಲ್ಲಿ ಧನ-ಧಾನ್ಯಗಳನ್ನು ಕೊಡುವ ಭಕ್ತರು ಹೆಚ್ಚು ಸಲ್ಲಿಸ ಹೋದರೆ, ಇಷ್ಟೇಕೆ ಅಪ್ಪಾ, ಇದಿಷ್ಟೇ ಸಾಕು, ಇದು ನಿನಗೆ ಆಶೀರ್ವಾದವಿರಲಿ, ಎಂದು ಕೆಲವೇ ಭಾಗವನ್ನು ಸ್ವೀಕರಿಸಿ ಹರಸುತ್ತಾರೆ. ಅದು ಸೂಕ್ತ ಭ್ರಮರವು ಪುಷ್ಪದೊಳಗಿನ ಮಧುವನ್ನು ಈಂಟುವಾಗ ಪಾನ ಮಾಡಲು ಹೂಗಳ ಮೇಲೆ ಕುಳಿತರೂ, ಹೂವಿಗೆ ಭಾರವಾಗದಂತೆ ವ್ಯವಹರಿಸುವಂತೆ ಶ್ರೀಗಳು ಯಾರಿಗೂ ಭಾರವಾಗದಂತೆ ಭಿಕ್ಷಾಟನೆ ಲೀಲೆಗೈಯುತ್ತಾರೆ. ಅಂತೆಯೇ ಅವರ ಭಿಕ್ಷೆಯು ಭಿ-ಕ್ಷಾ-ಭಯಂ ಸಂಸಾರ ತಾಪತ್ರಯೋದ್ಭೂತ ಭಯಂ, ಕ್ಷೀಯತೇ ಅನಯಾ – ಇತಿ –ಭಿಕ್ಷಾ ಎಂದೇ ಜನವು ಭಾವಿಸಿ ಕೃತಾರ್ಥರಾಗುತ್ತಲಿದ್ದಾರೆ. ಮಾನವದ ಕುಲ ಮೂಲ ಸಂಬಂಧದಂತಿರುವ ವಿದ್ಯಾರ್ಥಿಗಳ, ಅಲ್ಲದೆ ಅವಿಮುಕ್ತ ಕ್ಷೇತ್ರವಾಗಿರುವ ಶ್ರೀ ಶಿವಯೋಗಮಂದಿರದಲ್ಲಿ ಆ ಪರಂಜ್ಯೋತಿಯ ಕಿರಣಗಳಂತಿರುವ ಭಾವೀ ವೀರಶೈವ ಧರ್ಮ ಗುರುಗಳಾದ ಶ್ರೀ ಶಿವಯೋಗ ಸಾಧಕರ ಪೋಷಣೆಗಾಗಿ ಪಾಮರರನ್ನು ಪಾವನರನ್ನಾಗಿಸುವ ಭಿಕ್ಷಾಟನ ಲೀಲೆಯನ್ನು ಸಹಜ ಸೌಹಾರ್ದ ಸೌಜನ್ಯ ಭಾವದಿಂದಲೇ ಶ್ರೀಗಳು ನಡೆಸುತ್ತಿದ್ದಾರೆ. ಕೆಲ ಸಮಯ ಮಳೆ-ಬೆಳೆಗಳ ಕುಗ್ಗು-ನುಗ್ಗುಗಳನ್ನರಿತು ಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರೆ ಆ ಗ್ರಾಮದ ಭಕ್ತ ಪ್ರಮುಖರು ಬಂದು ಆಗ್ರಹದಿಂದ ಕರೆದದ್ದೂ, ಕರೆಯುವದೂ ಉಂಟು.
ಶಿವಯೋಗಮಂದಿರದಲ್ಲಿ ಪರಮಪೂಜ್ಯ ಶ್ರೀ ನಿ. ಪ್ರ. ಸದಾಶಿವ ಶಿವಯೋಗಿಗಳು –
ಸರ್ವಲೋಕೋಪಕಾರಾಯ ಯೋದೇವಃ ಪರಮೇಶ್ವರಃ
ಚರತ್ಯತಿಥಿರೂಪೇಣ ನಮಸ್ತೆ ಜಂಗಮಾತ್ಮನೇ
ಎಂಬಂತೆ ಅವತರಿಸಿ ಶಿವರೂಪಿ ಜಂಗಮಪುಂಗವರಾಗಿ ಕಂಗೊಳಿಸುತ್ತ ದಾಸೋಹಂ ಭಾವದಿ ನೆಲೆಸಿದ್ದಾರೆ. ಅವರ ಅಂತಃಕರಣ ಹೇಳಲಸಾಧ್ಯ; ಅದು ಅನುಪಮ ವಾದುದು. ವೀರ ವಿರಕ್ತ ಮಹಾಸ್ವಾಮಿಗಳ ಪ್ರಮಥರ ಸಮೂಹದಲ್ಲಿ ಅಗ್ರಗಣ್ಯರಾಗಿ ಜೀತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ಎಂಬಂತೆ ವಿರಾಗಿಗಳೂ, ಜಿತಾಕ್ಷರೂ, ತಪೋಧನರೂ, ತೇಜಸ್ವಿಗಳೂ ಆಗಿದ್ದಾರೆ.
(ಸುಕುಮಾರ ಬ್ಲಾಗ ನ ಮಾರ್ಗದರ್ಶಿಗಳು ,ಪ್ರೋತ್ಸಾಹಕರೂ ಆಗಿದ್ದ ಪರಮ ಪೂಜ್ಯ ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರಿಗೆ ಸುಕುಮಾರ ಬ್ಲಾಗನ ನುಡಿನಮನ )
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೇ
ಭವಬಂಧನವ ಬಿಡಿಸಿ ಪರಮಸುಖವ ತೊರಿದ ಗುರುವೇ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ ನಮೋ ನಮೋ
ಶರಣ ಬಂಧುಗಳೇ ಈ ನಾಡಿನಲ್ಲಿ ಹಲವಾರು ಸಾಧಕರು ತಮ್ಮ ಸಾಧನೆಯ ಮೂಲಕ ಸಿದ್ಧಿಯ ಶಿಖರವನ್ನು ತಲುಪಿದ್ದಾರೆ.ಆ ಸಿದ್ದಿಯ ಶಿಖರ ತಲುಪಲು ಮುಕ್ಯವಾಗಿ ಬೇಕಾಗಿರುವುದು ಗುರುವಿನ ಮಾರ್ಗ ದರ್ಶನ,ಈ ಬಾಳೆಂಬ ನೌಕೆಯನ್ನ ನಡೆಸುವ ಅಂಬಿಗನವನು,ನರಜನ್ಮ ದಿಂದ ಹರಜನ್ಮನೀಡಿ,ಭವಿತನದಿಂದ ಭಕ್ತನನ್ನ ಮಾಡಿ,ಭವಬಂಧನದಿಂದ ಪರಮಸುಖನೀಡಿ ,ಹೀಗೆ ಎಲ್ಲದರಿಂದಲು ಪಾರುಮಾಡುತ್ತಾ ಮುಕ್ತಿಯನ್ನ ನೀಡುವವನು ಗುರು.ಅದಕ್ಕಾಗಿಯೇ “ನ ಗುರೂರಧಿಕಂ” ಎನ್ನುವರು. ಬಂಧುಗಳೇ ಈ ಎಲ್ಲ ಮಾತುಗಳ ಹಿಂದೆ ಒಂದು ಅಮೋಘವಾದ ಶಕ್ತಿ ಇದೆ.
ಬಳಲಿ ಬೆಂಡಾಗಿ ಬರಡಾದ ಬದುಕಿಗೆ ಚೈತನ್ಯದ ಚಿತೂಹಾರಿಯಂತೆ, ಕಷ್ಟ-ಕಾರ್ಪಣ್ಯ ದಲ್ಲಿರುವ ಭಕ್ತರ ಬಾಳಿಗೆ ಬೆಳಕಾಗಿ, ನೆಲೆಯಾಗಿ, ಸ್ಪೂರ್ತಿಯಾಗಿ, ಕುಮಾರ ಶಿವಯೋಗಿಗಳ ತತ್ವ ನಿಷ್ಠರಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನೆ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು, ಎನ್ನಂತ ಹಲವಾರು ಸಾಧಕರ ಬಾಳ ಬೆಳಗುವ ನಂದಾದೀಪವಾಗಿ ಬೆಳಗುತ್ತಿರುವ ಪೂಜ್ಯ ಗುರುಗಳೇ ಜಗದ್ಗುರು ಸಂಗನಬಸವ ಮಹಾಶಿವಯೋಗಿಗಳು.
ಪೂಜ್ಯಗುರುಗಳು ಶಿವಯೋಗಮಂದಿರದ ಕುಮಾರೇಶ್ವರರ ಸನ್ನಿಧಾನದಲ್ಲಿ ಐದು ವರ್ಷಗಳವರೆಗೆ ಅಧ್ಯಯನ ನಡೆಸಿ ಅಧ್ಯಾತ್ಮ, ಶಿವಯೋಗ, ಲಿಂಗ ನಿಷ್ಠೆ, ಅನುಷ್ಠಾನ, ಯೋಗ, ಸಂಸ್ಕೃತ, ಹೀಗೆ ಎಲ್ಲದರ ಅಪಾರ ಅನುಭವವನ್ನು ಪಡೆದುಕೊಂಡು, ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಾ ತ್ರಿಕಾಲ ಲಿಂಗಪೂಜಕರಾಗಿ 85 ನೇ ವಯೋಮಾನದಲ್ಲಿಯೂ ಸಹಿತ ಸ್ನಾನ ಪೂಜಾದಿಗಳ ನಂತರವೇ ಪ್ರಸಾದ ಸ್ವೀಕರಿ ಕುಮಾರೇಶ್ವರರನ್ನ ಸಂಪೂರ್ಣ ನಂಬಿ ಬದುಕುತ್ತಿರುವ ಪೂಜ್ಯ ಗುರುಗಳು. ಹೊಸಪೇಟೆ- ಬಳ್ಳಾರಿ, ಹಾಲಕೆರೆಯ ಸಂಸ್ಥಾನಮಠದ ಹಾಗೂ ಶಿವಯೋಗ ಮಂದಿರದ ಸಂಸ್ಥೆಯ ಅಧ್ಯಕ್ಷರಾಗಿ ಸಮಾಜಸೇವೆಗೆ ಕಟಿಬದ್ಧರಾಗಿ ನಿಂತವರು.
2009 ಫೆಬ್ರುವರಿ ರಥಸಪ್ತಮಿಯಂದು ನಾನು ಶಿವಯೋಗ ಮಂದಿರದ ಕುಮಾರ ಶಿವಯೋಗಿಗಳ ಸನ್ನಿಧಾನಕ್ಕೆ ಅಧ್ಯಯನಕ್ಕೆಂದು ಹೋದೆ ಕುಮಾರ ಶಿವಯೋಗಿಗಳ ಗದ್ದುಗೆ ದರ್ಶನ ನಂತರ, ಪೂಜ್ಯ ಗುರು ಜಗದ್ಗುರು ಸನ್ನಿಧಿಯವರ ದರ್ಶನವನ್ನ ಪಡೆದುಕೊಂಡೆ ಅಳುತ್ತಿರುವ ಬಾಲಕನಿಗೆ ಕಲ್ಲುಸಕ್ಕರೆಯನ್ನನೀಡಿ ಆಶೀರ್ವದಿಸಿ ಇನ್ನ ಮುಂದೆ ನಿನ್ನ ಜೀವನದ ತಂದೆ- ತಾಯಿಯೆಂದರೆ ಕುಮಾರ ಶಿವಯೋಗಿಗಳೇ ಎಂದು ತಿಳುಹೇಳಿ ಮುದ ನೀಡಿದ ಮೊದಲ ಗುರುಗಳು.
ಸಮಾಜ ಸೇವೆಯೇ ಕುಮಾರ ಸೇವೆ
ಹೇಗೆ ಪೂಜ್ಯ ಕುಮಾರ ಶಿವಯೋಗಿಗಳು ಸಮಾಜದಲ್ಲಿ ಲಿಂಗವನ್ನ ಕಂಡು ಸಮಾಜಸೇವೆಯೇ ಲಿಂಗಪೂಜೆ ಎಂದು ಹೇಗೆ ಪೂಜಿಸಿದರು, ಹಾಗೆ ಪೂಜ್ಯ ಗುರುಗಳು ಅವರ ಸತ್ಪಥದಲ್ಲಿ ನಡೆದು ಸಮಾಜಸೇವೆಯೆ ಭಗವಂತನ ಸೇವೆ ಎಂದು ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯ ಗುರುಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ,ದೀನ-ದಲಿತ ಮಕ್ಕಳಿಗೆ, ಬಡಮಕ್ಕಳಿಗೆ, ನಿರಾಶ್ರಿತರಿಗೆ, ಅಷ್ಟೇ ಅಲ್ಲದೆ ಹಲವಾರು ಪ್ರತಿಭಾವಂತ ಮಕ್ಕಳಿಗಾಗಿ, ಹಲವಾರು ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಿ, ಉಚಿತ ಪ್ರಸಾದ ನಿಲಯಗಳನ್ನ ತೆರೆದು ಅನ್ನ ಅಕ್ಷರ ಅರಿವು ನೀಡುತ್ತಿರುವ ಮಾತೃ ಹೃದಯದ ಮಮತಾ ಮೂರ್ತಿಗಳು.
ಸರಳತೆಯ ಸೂತ್ರದಲಿ ಸುಖವ ಕಂಡವರು
ಪ್ರತಿಯೊಬ್ಬ ಸಾಧಕರ, ಸಂತರ, ಮಹಾತ್ಮರ ಜೀವನವನ್ನ ಅವರ ನಡತೆಯಿಂದ ಅಳೆಯಲಾಗುತ್ತದೆ. ಸಾಧನೆಯ ಸಿದ್ಧಿಯ ಶಿಖರ ತಲುಪಿದ ಮೇಲೆ ಅವರ ನಡತೆಯಲಿರುವ ವಿನಮ್ರತೆಯನ್ನ, ಮಾತಿನಲ್ಲಿರುವ ಮಧುರತೆಯನ್ನ, ಕಾರ್ಯದಲ್ಲಿರುವ ದಕ್ಷತೆಯನ್ನ, ನಿತ್ಯ ಜೀವನದಲ್ಲಿ ಸರಳತೆಯನ್ನ ಅಳವಡಿಸಿಕೊಂಡ ಸಾಧಕರನ್ನ ಪರಿಪೂರ್ಣ ಸಾಧಕರೆಂದು ಗುರುತಿಸುತ್ತಾರೆ. ಅಂತಹ ಮಹಾತ್ಮರ ಸಾಧಕರ ಸಾಲಿನಲ್ಲಿ ನಮ್ಮ ಗುರುಗಳು ಒಬ್ಬರೆಂದು ಹೇಳಲು ಅಭಿಮಾನ ನೂರ್ಮಡಿಯಾಗುತ್ತದೆ.
ಪೂಜ್ಯ ಗುರುಗಳು 50 ವಸಂತಗಳಿಂದ ಮಠಗಳನ್ನ ಆಳುತ್ತಿದ್ದಾರೆ ಆದರೆ ತಮಗಾಗಿ ಎಂದೂ ಒಂದು ವಸತಿಯಕೊಠಡಿಯನ್ನ ಕಟ್ಟಿಸಿ ಕೊಂಡಿಲ್ಲ, ಬಳಲಿ ಬಂದ ಭಕ್ತರಿಗೆ ಕುಳಿತು ಆಶೀರ್ವಾದ ನೀಡುವ ಮುಂಭಾಗದ ಪಲ್ಲಂಗದ ಮೇಲೆ ಸುಖವಾದ ನಿದ್ರೆ, ತಮಗಿಂತಲೂ ವಯಸ್ಸಿನಲ್ಲಿ ಚಿಕ್ಕವರು, ಸ್ಥಾನದಲ್ಲಿ ಚಿಕ್ಕವರಾದವರು ನಮಸ್ಕರಿಸಿದರೆ ಮರಳಿ ಕೈಮುಗಿದು ಶರಣಾರ್ತಿಯನ್ನುವ ಧನ್ಯತೆಯ ಭಾವದ ಮಹಾಶಿವಯೋಗಿ. ವ್ಯಕ್ತಿ ತಪ್ಪುಮಾಡಿದಾಗ ಬೈದು,ತಿದ್ದಿ,ತಿಳಿಪಡಿಸಿ ನಂತರ ಆ ವ್ಯಕ್ತಿಯನ್ನ ಬೈದಿದ್ದಕ್ಕೆ ಮಮ್ಮಲನೆ ಮರಗಿ, ಮರಳಿ ಕರೆಯಿಸಿ ಪ್ರಸಾದ ತೆಗೆದುಕೋ ಎಂದು ಅಪ್ಪಣೆ ಪಡಿಸುವ ಪೂಜ್ಯರು. ಕ್ಷಣಕ್ಷಣಕ್ಕೂ ನಮ್ಮೆಲ್ಲ ತಪ್ಪುಗಳನ್ನು ತಿದ್ದುತ್ತ, ತಿಳಿಹೇಳಿ ಸತ್ಪಥದಲ್ಲಿ ನಡೆಸುತ್ತಿರುವವರು. ಅಂತಹ ಪೂಜ್ಯಗುರುಗಳ ಶಿಷ್ಯರಾಗಿದ್ದು ಏಳು ಜನ್ಮಗಳ ಪುಣ್ಯದ ಫಲವೇ ಆಗಿದೆ.
ಕ್ಷಣ ಕ್ಷಣಕ್ಕೂ ಕುಮಾರ ಯೋಗಿಯ ಧ್ಯಾನ
ಪೂಜ್ಯ ಗುರುಗಳು L L B ಓದಿ ವಕೀಲನಾಗುವ ಕನಸು ಕಂಡಿದ್ದರು,ಆದರೆ ಕುಮಾರ ಶಿವಯೋಗಿಗಳ ಧ್ಯಿವ್ಯ ಪುರಾಣ,ಶ್ರೀಗಳ ಪವಿತ್ರಜೀವನವನ್ನ ಒಳಗೂಂಡ ಕೃತಿಗಳನ್ನ ಓದಿ, ಯತಿಪುಂಗವರ ಅಪ್ಪಟ ಅಭಿಮಾನಿಗಳಾಗಿ, ಸ್ವಾಮಿತ್ವದ ದೀಕ್ಷೆಯತೂಟ್ಟು ಅವರ ತತ್ವಾದರ್ಶಗಳನ್ನ ಅಳವಡಿಸಿಕೊಂಡು ಪ್ರತಿದಿನ ಕುಮಾರೇಶನ ನೆನೆದು ಪ್ರಸಾದತೆಗೆದುಕುಂಡು ಜೀವಿಸುತ್ತಿರುವ ಶ್ರೀಗಳು. 2014ರಲ್ಲಿ ಪೂಜ್ಯ ಗುರುಗಳ ಹೃದಯಕ್ಕೆ (ಸ್ಟಂಟ್ )ನ್ನ ಅಳವಡಿಸಿದರು, ಮಧ್ಯರಾತ್ರಿ ವಿಪರೀತ ಎದೆನೂವು ಕಾಣಿಸಿ ಗುರುಗಳು ತಮ್ಮ ಆಪ್ತ ಶಿಷ್ಯನನ್ನ ಕರೆದು ಇಂದೆ ಭಗವಂತನೆಡೆಗೆ ನಮ್ಮಯಾತ್ರೆ ಎಂದು ಹೇಳಿ,ಮುಖಮಾರ್ಜನೆ ಮಾಡಿಕೂಂಡು ಕುಮಾರೇಶ್ವರ ಪುರಾಣ ಕೈಗೆತ್ತಿಕೊಂಡು ಒಂದೆರೆಡು ಸಂಧಿಯನ್ನ ಓದುವುದರೊಳಗೆ ಎಲ್ಲ ನೋವು ಮಾಯವಾಗಿ 5-6 ವರ್ಷಗಳವರೆಗೆ ಯಾವುದೇ ನೋವಿಲ್ಲದೆ ಜೀವನ ನೆಡೆಸಿದರು. ಇಂದಿಗೂ ಪೂಜ್ಯ ಗುರುಗಳು ಪ್ರತಿನಿತ್ಯ ಕುಮಾರ ಶಿವಯೋಗಿಗಳ ಪುರಾಣವನ್ನ ಪಾರಾಯಣ ಮಾಡುತ್ತಾರೆ. ವ್ಯಕ್ತಿ ಒಂದು ಸಮಾಜದ ಶಕ್ತಿಯನ್ನ ನಂಬಿ ಆ ಶಕ್ತಿಯನ್ನ ಪೂಜಿಸುವ, ಆರಾಧಿಸುವ ಫಲವನ್ನು ಪೂಜ್ಯ ಗುರುಗಳ ಈ ಒಂದು ಪವಾಡದ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ. ಹಾಗೆ ಪೂಜ್ಯ ಗುರುಗಳು ಸಹಿತ ನಮ್ಮೆಲ್ಲರಿಗೂ ಉಪದೇಶಿಸುವುದು ಏನೆಂದರೆ ಪ್ರತಿನಿತ್ಯ ಲಿಂಗಪೂಜೆಯನ್ನು ಮಾಡಿ, ಶಿವಯೋಗ ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸಿ, ಕುಮಾರೇಶ್ವರರ ಧ್ಯಾನವನ್ನ ಎಂದೂ ಮರೆಯಬೇಡಿ, ಇತ್ತೀಚಿಗಷ್ಟೇ ಪೂಜ್ಯ ಗುರುಗಳ ಆರೋಗ್ಯ ಅಶ್ವಸ್ಥವಾದಾಗ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ದರ್ಶನಕ್ಕೆ ಹೋದಾಗ
ನಮಗೆಲ್ಲರಿಗೂ ಆಶೀರ್ವದಿಸಿ ಹೇಳಿದ ಮಾತು ” ಪ್ರತಿನಿತ್ಯ ಪೂಜೆಯನ್ನ ಮಾಡಿ ಅದರಿಂದ ನಿಮಗೂ ನಮಗೂ ಒಳ್ಳೆದಾಗುತ್ತೆ”ಎಂಬ ಮಾತು ಅಕ್ಷರಶಹ ಸತ್ಯವಾದ ಮಾತು. ಹೀಗೆ ಪೂಜ್ಯ ಗುರುಗಳು ಕುಮಾರೇಶ್ವರರನ್ನ ಅಪಾರವಾಗಿ ನಂಬಿ, ಸೊಂಡೂರು ತಾಲೂಕಿನ ಯಶವಂತನಗರದ ಶ್ರೀಮಠದ ತೋಟದಲ್ಲಿ ಹಾಗೂ ಶಾಖಾ ಮಠವಾದ ಶ್ರೀಧರಗಡ್ಡೆ ಮಠದಲ್ಲಿ ಕುಮಾರೇಶ್ವರ ಶೀಲಾ ಮೂರ್ತಿಯನ್ನ ಪ್ರತಿಷ್ಠಾಪಿಸಿದರು. ಅಷ್ಟೇ ಅಲ್ಲದೆ 2010ನೇ ರಲ್ಲಿ ಶಿವಯೋಗಮಂದಿರ ಶತಮಾನೋತ್ಸವ ಸಂದರ್ಭದಲ್ಲಿ ಕುಮಾರೇಶ್ವರರ ಸನ್ನಿಧಾನಕ್ಕೆ 1.50ಕೊಟಿ ವೆಚ್ಚದಲ್ಲಿ ಬೃಹತ್ ರಥವನ್ನ ಗುರುಕಾಣಿಯಾಗಿ ನೀಡಿದರು. ಇಂದಿನ ಪರಿಸ್ಥಿತಿ ಅವಲೋಕಿಸಿದಾಗ ಜನ್ಮಕೂಟ್ಟತಂದೆ – ತಾಯಿಯನ್ನ, ಅಕ್ಷರ- ಅರಿವುಕೂಟ್ಟಗುರುವನ್ನ, ಕೊನೆಗೆ ಬಾಳುಕೊಟ್ಟ ಭಗವಂತನನ್ನೆ ಮರೆಯುವ ಇಂತಹ ಸಂದಿಗ್ದ ಸಮಯದಲ್ಲಿ ,
ಪೂಜ್ಯರು ಮಹಾಗುರುಗಳನ್ನ ನಂಬಿ ಅಪಾರ ಸೇವೆ ಸಲ್ಲಿಸಿ ಕುಮಾರೇಶ್ವರರ ಜೀವನ ಸಿದ್ಧಾಂತವನ್ನ ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತಂದವರು .
ಪ್ರಸಾದದಲ್ಲಿ ಪ್ರಸನ್ನತೆ
ಬಂಧುಗಳೇ ಶರಣವಾಣಿಯಾದ “ಸೋಹಂ ಎಂದೆನಿಸದೆ ದಾಸೋಹಂ ಎಂದೇನಿಸಯ್ಯ”ಎಂಬ ವಾಣಿಗೆ ವ್ಯಾಖ್ಯಾನವಾದವರು ಪೂಜ್ಯ ಗುರುಗಳು.ಗುರುಗಳ ಯಾವುದೇ ಮಠವನ್ನ ಅವಲೋಕಿಸಿ ಎಲ್ಲ ಮಠದಲ್ಲಿ ಪ್ರಸಾದದ ವ್ಯವಸ್ಥೆಇದೆ,ದಾಸೋಹ ಭವನನಿರ್ಮಿಸಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ ಎಲ್ಲಕ್ಕೂ ಬೇಕು ಬೇಕು ಎಂದು ಹಪಹಪಿಸುತ್ತಾನೆ, ಹಾತೊರೆಯುತ್ತಾನೆ, ಆದರೆ ಸಾಕೆನ್ನುವದು ಪ್ರಸಾದಕ್ಕೆ (ಊಟಕ್ಕೆ)ಮಾತ್ರ.ಅಲ್ಲಿ ತೃಪ್ತಿಯ ಭಾವ ಇದೆ,ಅದಕ್ಕಾಗಿ ಪೂಜ್ಯರು ಮಠಕ್ಕೆ ಯಾವ ಜನಾಂಗದವರೆಬರಲಿ,ಬೇರೆ ಧರ್ಮದವರೆಯಾಗಲಿ,ಬೇರೆ ಸಮಾಜದವರೇ ಯಾಗಲಿ ಹೀಗೆ ಯಾರೆ ಬರಲಿ, ಯಾರೂ ಹಾಗೆ ಹೂಗಬಾರದು ಎಲ್ಲರು ಮಠದಲ್ಲಿ ಪ್ರಸಾದ ತೆಗೆದುಕೊಂಡು ಪ್ರಸನ್ನರಾದಾಗ ಸಂತೋಷ ಪಡುವ ಹಿರಿಯಜೀವಿ ಪೂಜ್ಯ ಜಗದ್ಗುರು ಸಂಗನಬಸವ ಶಿವಯೋಗಿಗಳು. ಶ್ರೀಗಳು ಯಾದುದೇ ಮಠಕ್ಕೆ ಭೇಟಿ ನೀಡಿದರೂ ಸಹಿತ ಮೋದಲು ಕೇಳುವ ಮಾತು ದಾಸೋಹ ವ್ಯವಸ್ಥೆ ಇದೆಯೋ ಇಲ್ಲವೋ ಅಂತ ಕೇಳುವರು ಅಂದರೆ ಅಷ್ಟು ಭಕ್ತ ಪ್ರೇಮ,ಭಕ್ತ ವತ್ಸಲ,ಮಠಕ್ಕೆ ಬಂದ ಭಕ್ತರು ಯಾರೂ ಉಪವಾಸ ಹೋಗಬಾರದು ಎಂಬ ದೂರದೃಷ್ಟಿ ಹೊಂದಿದ ಭಕ್ತಾನುರಾಗಿ ಪೂಜ್ಯರು.
ಆದರ್ಶ ಕೃಷಿ ಕಾಯಕ ಯೋಗಿ
ಭಾರತ ದೇಶ ಕೃಷಿ ಪ್ರಧಾನವಾದ ದೇಶ. “ದುಡಿವ ರಟ್ಟೆಗೆ ಶರಣು, ಕೊಡುವ ಕೈ ಗಳಿಗೆ ಶರಣು” ದುಡಿಮೆ ಬೇಸರವೆಂದು ರೈತ ಮಲಗಿದರೆ ಇಡೀ ವಿಶ್ವವೇ ಉಪವಾಸವಿರಬೇಕಾಗುತ್ತದೆ.ಯಾರು ಭೂತಾಯಿಗೆ ಬೆವರನ್ನ ಸುರಿಸುತ್ತಾರೆ ಅಂಥವರನ್ನ ಭೂತಾಯಿ ಎಂದೂ ಮರೆಯುವುದಿಲ್ಲ.ಪೂಜ್ಯ ಗುರುಗಳೂ ಸಹಿತ ಅಷ್ಟು ಕೃಷಿಗೆ ಮಹತ್ವವನ್ನು ಕೊಟ್ಟರು. ಪೂಜ್ಯರು ಮಠಕ್ಕೆ ಆದನಂತರ ಮಠಗಳ ಎಲ್ಲ ಹೊಲವನ್ನ ಅವಲೋಕಿಸಿ ತಮ್ಮ ಶಿಷ್ಯರೊಂದಿಗೆ ತಾವೇ ಕೃಷಿ ಕಾಯಕವನ್ನ ಮಾಡುತ್ತಿದ್ದರು. ಭೂಮಿಯ ಜೈವಿಕ ಸತ್ವವನ್ನ ಉಳಿಸಲು ಪ್ರೇರಣೆ ನೀಡುತ್ತಾ ಹಾಗೂ ನಶಿಸಿ ಹೋಗುತ್ತಿರುವ ಸಾವಯವ ಕೃಷಿ ಪದ್ಧತಿಯನ್ನ ಜಾರಿಗೊಳಿಸಿದರು. 29ಅಗಷ್ಟ್1986ರಲ್ಲಿ ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕಿನ ಯಶವಂತ ನಗರದ ಮುಸ್ಲಿಮ್ ಬಾಂಧವರಾದ ಪಂಡಿತ್ ಹುಸೇನ್ ಸಾಬ್ ರಿಂದ 17 ಏಕರೆ 40 ಗುಂಟೆ ಜಮೀನನ್ನ 17000 ರೂ ಗಳಿಗೆ ಪಡೆದು ಕಲ್ಲು ಕಂಠಿಗಳ ಗುಡ್ಡವಾದ, ಕಾಡು ಪ್ರಾಣಿಗಳ ತಾಣವಾದ ಈ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು, ಹಗಲು-ರಾತ್ರಿಯೆನ್ನದೆ ಮುಂದೆ ನಿಂತು ಹೊಲವನ್ನ ಸಮಾನ ಮಾಡಿಸಿ, ಮಾವು, ತೆಂಗು, ಬೆಟ್ಟದ ನೆಲ್ಲಿಕಾಯಿ, ಚಿಕ್ಕು,ಹೀಗೆ ಹಲವಾರು ರೀತಿಯ ಮರಗಳನ್ನು ನೆಟ್ಟು ಅವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೆ, ಸಾವಯವ ಕೃಷಿಯ ಗೊಬ್ಬರವಾದ ಜೀವಾಮೃತವನ್ನ,ಬೇವಿನ ಎಣ್ಣೆ ಹಾಗೂ ಗೋ ಶಾಲೆಯನ್ನು ತೆರೆದು ಗೋ ಸಗಣಿಯ ಗೊಬ್ಬರವನ್ನ ಹೀಗೆ ಔಷಧಗಳನ್ನು ಉಪಯೋಗಿಸಿ ಬೆಳೆಸುತ್ತಾ ಬಂದಿದ್ದಾರೆ.ಇತ್ತೀಚೆಗೆ ಗೋಡಂಬಿ,ದಾಲ್ಚಿನ್ನಿ,ಮಹಾಘನಿ ಎಂತಹ ಬೆಲೆಬಾಳುವ ಸಸಿಗಳನ್ನು ನೆಟ್ಟು ಅವುಗಳಿಗೂ ಸಹಿತ ಇದೆ ಗೊಬ್ಬರವನ್ನ ಹಾಕಿ ಬೆಳೆಸಲಾಗುತ್ತದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ ಪೂಜ್ಯ ಗುರುಗಳ ಸೇವೆ ಅವಿಸ್ಮರಣೀಯ, ಅನುಪಮಾ. ಸ್ವಾಮಿ ಯಾಗುವವನಿಗೆ ಎಲ್ಲದರ ಅನುಭವ ವಿರಬೇಕೆಂದು ಪ್ರವಚನ, ಕೃಷಿ, ಅಧ್ಯಾತ್ಮ , ಶಿವಯೋಗ ಹೀಗೆ ಎಲ್ಲದರ ಅನುಭವವನ್ನು ನೀಡುತ್ತಾ ಸ್ವಾಮಿತ್ವದ ಪಟ್ಟಕ್ಕೆ ಸಮರ್ಥರನ್ನಾಗಿ ಮಾಡುತ್ತಿರುವ ಪೂಜ್ಯ ಗುರುಗಳಿಗೆ ಸಾವಿರದ ಒಂದನೇ.ಹೀಗೆ ಗುರುಗಳನ್ನ ಕುರಿತು ಬರೆಯುತ್ತಾ ಹೋದರೆ ಶಬ್ದಗಳು ಸಾಲದು, ಸಾವಿರ ಪುಟಗಳನ್ನೊಳಗೊಂಡ ಸುದೀರ್ಘ ಲೇಖನವೇ ಆಗುವದು.
ಇಂತಹ ಗುರುಗಳ ಕುರಿತು ಬರೆಯುವಷ್ಟು ಜ್ಞಾನಿ ನಾನಲ್ಲ, ಗುರುಗಳ ಶಿಷ್ಯನಾಗಿ ನಾ ಕಂಡಗುರುಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತ ರೀತಿಯಲ್ಲಿ ಬರೆದು ಓದುಗರಿಗೆ ನೀಡಬೇಕೆನ್ನುವ ಪುಟ್ಟ ಪ್ರಯತ್ನ ಈ ಲೇಖನವನ್ನ ಪೂಜ್ಯ ಗುರುಗಳ ಪಾದಕ್ಕೆ ಅರ್ಪಿಸುತ್ತೇನೆ.
ಲೇಖಕರು : ಪೂಜ್ಯ ಮ.ನಿ.ಪ್ರ.ಶಿವಬಸವಸ್ವಾಮಿಗಳು ವಿರಕ್ತಮಠ, ಅಕ್ಕಿಆಲೂರು
ಭರತ ಭೂಮಿಯಲ್ಲಿ ವಿಶ್ವಶಾಂತಿ ಸಾರಿದ ತೇಜೋಮೂರ್ತಿಗಳ ಭವ್ಯಪರಂಪರೆಯಿದೆ ಮಾನವ ಕುಲದ ಉದ್ಧಾರಕ್ಕಾಗಿ ಬುದ್ಧ, ಅಹಿಂಸೆಯ ಖಡ್ಗವಿಡಿದು, ಸಮಾನತೆ,ಕಾಯಕ, ದಾಸೋಹಗಳ ತ್ರಿವೇಣಿ ಸಂಗಮವಾಗಿ ಬಸವ, ಶರಣರ ಚಳುವಳಿಯ ನಿಜವಾರಸುದಾರರಾಗಿ ಯಡೆಯೂರು ಸಿದ್ಧಲಿಂಗ ಯತಿಗಳು, ಒಂದೊಂದು ಕ್ರಾಂತಿಯ ಬೀಜದೊಂದಿಗೆ ಬಂದವರು, ಹೆಮ್ಮರವಾಗಿ ಬೆಳೆದರು ನಿಜ, ಆದರೆ ೧೯ನೇ ಶತಮಾನ ವೀರಶೈವ-ಲಿಂಗಾಯತರ ಪಾಲಿಗೆ ಕತ್ತಲೆ, ಶಿಕ್ಷಣ ವಂಚಿತ ಸಮಾಜವನ್ನು ಅಂಧಶ್ರದ್ಧೆ ತನ್ನ ಭದ್ರಬಾಹುಗಳಿಂದ ಮತ್ತೆ ಬಂಧಿಸಿತ್ತು, ಆಗ ಮಾನವೀಯತೆ, ಸಮಾನತೆ, ಕಾಯಕ,
ದಾಸೋಹ, ಅಹಿಂಸೆ, ಸಾಹಿತ್ಯ ರಚನೆ, ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ವೈದ್ಯಭಾನುವಿನ ಉದಯವಾಯಿತು. ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿಯ ಸಾಲಿಮಠ ಕನ್ನಡ ಶಿಕ್ಷಣ ಪ್ರಸಾರಕ್ಕೆ ಹೆಸರಾದ ಕೇಂದ್ರಸ್ಥಾನ. ಸತಿ-ಪತಿ ಭಾವಕ್ಕೆ ಭಾಷ್ಯ ಬರೆದಂತಿದ್ದ ಬಸಯ್ಯ ಮತ್ತು ನೀಲಮ್ಮನವರ ಪವಿತ್ರ ಗರ್ಭದಲ್ಲಿ ಕ್ರಿ.ಶ. ೧೮೬೭ರ ಪ್ರಭವನಾಮ
ಸಂವತ್ಸರ ಭಾದ್ರಪದ ಶುಕ್ಲಪಕ್ಷ ತ್ರಯೋದಶಿಯ ಬುಧವಾರ ಬ್ರಾಹ್ಮಿಮುಹೂರ್ತದಲ್ಲಿ ಶ್ರೀಕುಮಾರ ಶಿವಯೋಗಿಗಳ ಜನನವಾಯಿತು. ಭಿಕ್ಷಾವೃತ್ತಿಗೆ ತಿಲಾಂಜಲಿ ಇತ್ತು ನಿಜಗುಣರ ಶಾಸ್ತ್ರವನ್ನು ಆಮೂಲಾಗ್ರವಾಗಿ ಅಧ್ಯಯನಗೈದರು. ಯಳಂದೂರಿನ ಬಸವಲಿಂಗ ಶಿವಯೋಗಿಗಳ ಜೊತೆಗೂಡಿ ಹನ್ನೊಂದು ಸಂವತ್ಸರ ಉಗ್ರ ತಪಸ್ಸನ್ನಾಚರಿಸಿ ಆಚಾರ ವಿಚಾರ ಸಂಪನ್ನರಾದರು. ಧಾರ್ಮಿಕ ಮಠಗಳನ್ನು ಸಮಾಜಮುಖಿಯಾಗಿ ಪರಿವರ್ತಿಸಿದರು. ಹಾನಗಲ್ಲ ವಿರಕ್ತಮಠದ ಪೀಠಾಧೀಶರಾಗಿ ಸಮಾಜ ಸೇವೆಗೆ ತೊಡಗಿದರು. ವೈರಾಗ್ಯ ಮಲ್ಲಣಾರ್ಯರ ಪ್ರಾಂಜಲ ಮನಸ್ಸಿನ ಸಾಮಾಜಿಕ ಕಳಕಳಿಗೆ ಕಿವಿಗೊಟ್ಟರು. ಜನಸೇವಾ ದೀಕ್ಷೆತೊಟ್ಟರು. ಕತ್ತಲುಂಡ ಸಮಾಜಕ್ಕೆ ಬೆಳಕಾಯಿತು. ಅಜ್ಞಾನ ಅಳಿದು ಆಚಾರ ಮೊಳಕೆಯೊಡೆಯಿತು. ಲಲಾಟದ ಮೇಲೆ ವಿಭೂತಿ ರಾರಾಜಿಸಿತು. ಅಂಗಕ್ಕೆ ಲಿಂಗಸ್ಪರ್ಶವಾಯಿತು. ಜಿಡ್ಡುಗಟ್ಟಿದ ಸಮಾಜ ಜಂಗಮರೂಪ ವಾಯಿತು. ಮಠಗಳು ಮಾನವೀಯತೆಯ ವಿಶ್ವವಿದ್ಯಾಲಯಗಳಾದವು, ಭಕ್ತರ ಮನೆಗಳೆಲ್ಲ ಕಲ್ಯಾಣದ ಮಹಾಮನೆಗಳಾದವು.
ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಕೈಗೊಂಡ ಕಾರ್ಯಗಳು ಒಂದೆರಡಲ್ಲ ಅನೇಕ. ಅಂತೆಯೇ ನಾಡಿನ ಗಣ್ಯ ಮಾನ್ಯರಾದ ವರಕವಿ ದ.ರಾ.ಬೇಂದ್ರೆ, ಹರ್ಡೆಕರ ಮಂಜಪ್ಪ, ಎಸ್.ಸಿ.ನಂದೀಮಠ, ಎಸ್.ಎಸ್.ಬಸವನಾಳ, ಡಾ. ಜಚನಿ ಹಾಗು ದ್ಯಾಂಪೂರ ಚನ್ನಕವಿಗಳು ‘ಯುಗಪುರುಷ’ ಹಾಗು ‘ಕಾರಣಿಕ ಶಿವಯೋಗಿ ಎಂದು ಉದ್ಗಾರವೆತ್ತಿದ್ದರು. ವಚನ ಸಾಹಿತ್ಯದ ಗಂಧ ಗಾಳಿಯು ಗೊತ್ತಿರದ ಸಮಾಜಕ್ಕೆ ವಕೀಲ ವೃತ್ತಿಯನ್ನು ಧಿಕ್ಕರಿಸಿ, ವಚನ ಸಾಹಿತ್ಯ ಸಂಶೋಧನೆಯಲ್ಲಿ ಮುಳುಗಿ ವಚನ ಸಾಹಿತ್ಯ ಸಾಗರ ಹರಿಸಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ‘ಶಿವಶರಣರ ವಚನಗಳನ್ನು ಮೊದಲು ಪ್ರಸಾರ ಮಾಡಿದವರು ಹಾನಗಲ್ಲಶ್ರೀ ಕುಮಾರ ಸ್ವಾಮಿಗಳೇ ಆಗಿದ್ದಾರೆ. ಅವರು ಹೋದಲ್ಲೆಲ್ಲಶಿವಶರಣರ ವಿಚಾರಗಳನ್ನು ತಮ್ಮ ವಾಣಿಯಿಂದ ಜನರ ಮುಂದೆ ಪ್ರಸ್ತಾಪಿಸಿ ಅವುಗಳನ್ನು ಮುಂದಕ್ಕೆ ತಂದರು. ಅಲ್ಲದೇ ಭಕ್ತರ ಮನೆಯ ಪೂಜಾಗದ್ದುಗೆಯಲ್ಲಿ ಪೂಜೆಗೊಳ್ಳುತ್ತಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ನನ್ನ ಸಂಶೋಧನೆಗೆ ನೆರವಾದರು’ ಮತ್ತು ‘ವಚನ ಶಾಸ್ತ್ರಸಾರ’ ಮೊದಲ ಗ್ರಂಥಕ್ಕೆ ಹಣದ ದಾಸೋಹ ನೀಡಿದರೆಂದು ಸ್ಮರಿಸಿದ್ದಾರೆ.
ವೀರಶೈವಮಹಾಸಭೆಯಜನ್ಮದಾತ
ವೀರಶೈವ-ಲಿಂಗಾಯತ ಸಮಾಜಕ್ಕೆ ಶಿಕ್ಷಣದ ಗಂಧ-ಗಾಳಿ ತಿಳಿದಿರಲಿಲ್ಲ, ವಿದ್ಯಾವಂತರಿಲ್ಲದ ವಿಷಮ ಪರಿಸ್ಥಿತಿ. ಮೊದಲಿನಿಂದಲೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಶೋಷಣೆಗೆ ಒಳಗಾದುದು ವೀರಶೈವ-ಲಿಂಗಾಯತ ಸಮಾಜ, ಅಂತೆಯೇ ಶ್ರೀ ಕುಮಾರ ಶಿವಯೋಗಿಗಳು ಸಮಾಜಸಂಘಟನೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ದಿಟ್ಟ ದೀಕ್ಷೆ ತೊಟ್ಟರು. ೧೯೦೪ನೇ ಇಸ್ವಿ ಧಾರವಾಡದಲ್ಲಿ ಅಖಂಡ ವೀರಶೈವ-ಲಿಂಗಾಯತ ಸಮಾಜವನ್ನು ಒಂದುಗೂಡಿಸಿದರು. ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನ ಶ್ರೀಮಂತ ಲಿಂಗರಾಜ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕರ್ನಾಟದಲ್ಲಿಯೇ ಯಾವ ವಿಧವಾದ ಸಾರ್ವಜನಿಕ ಸಮ್ಮೇಳನಗಳು ಜರುಗದಿದ್ದ ಕಾಲದಲ್ಲಿ ಜನಾಂಗವು ಗಾಢನಿದ್ರೆ ಹೋಗಿದ್ದ ಕಾಲದಲ್ಲಿ ಹಿಂದೂ ಮಹಾಸಭೆ ಸ್ಥಾಪನೆಯಾಗದ ಕಾಲದಲ್ಲಿ ವೀರಶೈವ ಮಹಾಸಭೆಯ ಅಧಿವೇಶನ ನಡೆಸಿದ್ದು ಶ್ರೀ ಕುಮಾರ ಶಿವಯೋಗಿಗಳ ಅದ್ವಿತೀಯವಾದ ಮುಂದಾಲೋಚನೆಯ ದ್ಯೋತಕವಾದುದು. ತಮ್ಮ ಜೀವಿತಾವಧಿಯಲ್ಲಿ ಹತ್ತು ಸಮ್ಮೇಳನಗಳು ನಡೆದರೂ ಎಂದೂ ಅಧ್ಯಕ್ಷರಾಗಬೇಕೆಂದು ಬಯಸಿದವರಲ್ಲ, ಬಸವಣ್ಣ ಅನುಭವ ಮಂಟಪಕ್ಕೆ ಅಲ್ಲಮಪ್ರಭುವನ್ನು ಕೂರಿಸಿದಂತೆ ವೀರಶೈವ- ಲಿಂಗಾಯತ ಸಮಾಜದ ಗಣ್ಯರನ್ನು ಕೂರಿಸಿ ಆನಂದ ಪಟ್ಟರು, ನಿಸ್ವಾರ್ಥ ಸೇವಾ ಧರ್ಮದ ದೃಷ್ಟಾರರು.
ವೀರಶೈವ-ಲಿಂಗಾಯತರ ಧರ್ಮಕ್ಷೇತ್ರ ಶಿವಯೋಗಮಂದಿರ
ಸಮಾಜವೆಂಬುದೆ ಮಂತ್ರ, ಸೇವಾಧರ್ಮವೇ ಶ್ರೀಕುಮಾರ ಶಿವಯೋಗಿಗಳ ಜೀವನ ಧರ್ಮ. ಶಿಕ್ಷಣ ಕ್ರಾಂತಿಯ ಕಹಳೆ ಮೊಳಗಿತು. ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನ ಆರಂಭಿಸಿದಂತೆ, ಅರವಿಂದರು ಅರವಿಂದಾಶ್ರಮ ಪ್ರಾರಂಭಿಸಿದಂತೆ,ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮ ನಿರ್ಮಿಸಿದಂತೆ, ಮನುಷ್ಯರನ್ನು ಮಹಾಂತರನ್ನಾಗಿ ಮಾಡಲು ಕುಮಾರ ಶಿವಯೋಗಿಗಳು ಶಿವಯೋಗಮಂದಿರವನ್ನು೬-೨.೧೯೦೯ ಮಾಘಮಾಸ ರಥಸಪ್ತಮಿ ದಿನ ಸ್ಥಾಪಿಸಿದರು. ಮಂದಿರದ ಮೊದಲ ಸಪ್ತಸಾಧಕರಾಗಿ ನವಿಲುಗುಂದದ ಶ್ರೀ ಬಸವಲಿಂಗದೇವರು, ಬಿದರಿಯ ಶ್ರೀ ಅಪ್ಪಯ್ಯ ದೇವರು, ಕಂಚುಗಲ್ಲಿನ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು, ಕುರವತ್ತಿ ಮಹಾದೇವ ದೇಶಿಕರು, ಬಾಗಲಕೋಟೆಯ ಶಿವಮೂರ್ತಿದೇವರು, ವ್ಯಾಕರಣಾಳದ ಸಿದ್ಧಲಿಂಗ ಪಟ್ಟದ್ದೇವರು, ಮಮದಾಪುರದ ಶ್ರೀ ಗುರುಸಿದ್ಧದೇವರು, ಶಿವಯೋಗ ಸಂಪನ್ನರಾಗಿ ಮೂಡಿಬಂದರು. ಗುರು-ವಿರಕ್ತರು ಸಮಾನರೆಂಬ ಅಂಶವು ಇಲ್ಲಿ ಎದ್ದು ಕಾಣುತ್ತಿದೆ. ಶ್ರೀ ಕುಮಾರ ಶಿವಯೋಗಿಗಳ ೬೩ರ ತುಂಬು ಜೀವನದಲ್ಲಿ ಅನೇಕ ಸ್ವಾಮಿಗಳು ಸಮಾಜ ಸೇವೆಗೆ ಸನ್ನದ್ಧರಾದರು. ಮುಂದೆ ಕರ್ನಾಟಕದಲ್ಲಿ ಸ್ಥಾಪನೆಯಾದ ‘ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ’ಗಳ ತಲಕಾವೇರಿಯಾಯಿತು ಶಿವಯೋಗಮಂದಿರ.
ಕವಿ,ಕಲಾವಿದರಕರುಣಾಳು
ಉಭಯಗಾನ ವಿಶಾರದ ಪಂ. ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಶಿಕ್ಷಣ ಕೊಡಿಸುವ ಮೂಲಕ ಗಾನಗಂಗೆಯನ್ನು ಹರಿಸಿದರು. ಸಂಗೀತಗಾರರು,ಕವಿ-ಕಲಾವಿದರು, ಕೀರ್ತನ ಪ್ರವಚನಕಾರರು, ಕಾಯಕ ಜೀವಿಗಳು, ಕಾಣಹತ್ತಿದರು. ಗೋಸಂರಕ್ಷಣೆ, ವಿಭೂತಿ ತಯಾರಿಕೆ, ಪಂಚಸೂತ್ರ ಲಿಂಗಗಳ ತಯಾರಿಕೆ, ಕೃಷಿ ಸಾಹಿತ್ಯ ಸಂರಕ್ಷಣೆ, ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡರು.ಅವರ ತಪದ ಮಹಾಮೌನವು ಮಥಿಸಿ ತಂದ ನವನೀತ! ಅದನ್ನು ಆಶ್ರಯಿಸಿದವರು; ಸೇವಿಸಿದವರು ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತಪುತ್ರರಾದರು. ಶ್ರೀಕುಮಾರ ಶಿವಯೋಗಿಗಳು ‘ಸಮಾಜ-ಸಮಾಜ’ವೆನ್ನುತಲೆ ೧೯.೦೨.೧೯೩೦ನೇ ಗುರುವಾರದಂದು ಲಿಂಗದಲ್ಲಿ ಸಮರಸವಾದರು
ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಕೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ,ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ.ಈ ಅನುಭವಗಳೆಲ್ಲ ಲೌಕಿಕವಾದವು,
ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ. ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ.ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು,ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.
ಹಿರಣ್ಮಯೇನಪಾತ್ರೆನಸತ್ಯಸ್ಯಾಪಿಹಿತಂಮುಖಂ
ತತ್ವಂಪೂಷನ್ನಪಾವೃಣುಸತ್ಯಧರ್ಮಾಯದೃಷ್ಟಯೇ
ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ.ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ, ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು
ಹೇಳಿರುವುದು.
ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ, ಅನುಭಾವದಲ್ಲಿ ದೊರೆವ ಆನಂದವೇ
ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ. ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.
( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )
ನವ್ಹಂಬರ ೨೦೨೧ ರ ಸಂಚಿಕೆ
ಕಂದ ಬಾಯೆಂದು ದಯ | ದಿಂದ ನೀನೊಲಿದು ಕರೆ
ತಂದೆ ಬಸವಾದಿ ಪ್ರಮಥರ ಪಥಕೆನ್ನ
ತಂದೆ ಶ್ರೀಗುರುವೆ ಕೃಪೆಯಾಗು || ೨೯||
ತಾಯಿಯು ಮಗುವನ್ನು ಹೆತ್ತು ಹೊತ್ತು ಬೆಳಸಿ ದೊಡ್ಡವನನ್ನಾಗಿ ಮಾಡುವಳು . ಬೆಳೆಯುತ್ತಿರುವ ಕಂದನನ್ನು ತಂದೆಯು ಪ್ರೀತಿಯಿಂದ ತನ್ನತ್ತ ಬಾ ಎಂದು ಕರೆದು ತೊಡೆಯಮೇಲೆ ಕೂಡ್ರಿಸಿಕೊಂಡು ಶಿಕ್ಷಣ ಕೊಡಲು ಪ್ರಾರಂಭಿಸುವನು . ಬೆಳೆದು ಯೋಗ್ಯವಯಸ್ಸಿಗೆ ಬಂದ ಕಂದನನ್ನು ವಿದ್ಯಾ ಗುರುಗಳ ಬಳಿಗೊಯ್ದು ವಿದ್ಯೆಯನ್ನು ಕೊಡಿಸುವನು . ಸ್ವತಃ ತಾನು ಬುದ್ಧಿಯನ್ನು ಕಲಿಸಿ ಉತ್ತಮರ ನಡೆಯನ್ನು ತೋರಿಸು ವನು . ಇದು ಲೌಕಿಕ ತಂದೆಯ ಕರ್ತವ್ಯ . ಪಾರಮಾರ್ಥಿಕ ತಾಯಿಯು ಶಿಷ್ಯನನ್ನು ಗುರುಕರಜಾತನನ್ನಾಗಿ ಮಾಡಿದರೆ ಸಾಲದು . ತಂದೆಯ ಕರ್ತವ್ಯವನ್ನು ಪೂರೈಸೆಂದು ಗುರುವಿನಲ್ಲಿ ಕವಿ ಸೂಚಿಸಿದಂತಿದೆ . ಓ ಗುರುತಂದೆಯೇ ! ನಿನ್ನ ಕರಸಂಜಾತನಾದ ನನ್ನನ್ನು ಅಂತಃಕರಣದಿಂದ ನನ್ನ ಬಳಿ ಬಾ ‘ ‘ ಎಂದು ಕರೆದು ಧೈರ್ಯ , ವಿಶ್ವಾಸಗಳನ್ನು ತುಂಬಿ ಬಸವಾದಿಪ್ರಮಥರ ನಡೆನುಡಿಯನ್ನು ಚನ್ನಾಗಿ ಬೋಧಿಸಿ ಸತ್ಪಥವನ್ನು ತೋರಿಸು . ಶರಣರ ಮಾರ್ಗವೇ ನಿಜವಾದ ಜೀವನದ ಬಟ್ಟೆ , ಸಾವಿಲ್ಲದಿಹ ಮಾರ್ಗ , ಮುಕ್ತಿಯನ್ನು ತೋರಿಸುವ ದಾರಿಯಲ್ಲವೆ ? ಮೊಗ್ಗೆಯ ಮಾಯಿದೇವರೂ ಸಹ –
ಎಂದು ಶ್ರೀ ಗುರುವಿನಲ್ಲಿ ಬೇಡಿಕೊಂಡಿದ್ದಾರೆ . ಶರಣರ ಈ ಷಟ್‌ಸ್ಥಲ ಮಾರ್ಗವನ್ನು ತೋರಿ ಶರಣನಾಗಲು ಅನುವುಮಾಡಿಕೊಡು . ಇದು ಗುರು ತಂದೆಯ ಕರ್ತವ್ಯವೂ ಸರಿ .
ಜನಿಸಿದಾಕ್ಷಣವೆನಗೆ | ಕೆನೆವಾಲು ಸವಿಸಕ್ರೆ
ಎನೆತೀರ್ಥಶೇಷ ವನು ಊಡಿ ಪೊರೆದ ಮ
ಜ್ಜನನಿ ಶ್ರೀಗುರುವೆ ಕೃಪೆಯಾಗು || ೩೦ ||
ತಾಯಿತನದ ಸ್ನೇಹವನ್ನು ವ್ಯಕ್ತಗೊಳಿಸಿದ್ದಾನೆ . ಮಗನು ಜನಿಸಿದಾಗ ಜನನಿಯು ಶಿಶುವಿಗೆ ಮೊದಲು ಜೇನುತುಪ್ಪ ಮತ್ತು ಕೆನೆಯನ್ನು ನೆಕ್ಕಿಸುವಳು . ನಂತರವೇ ತನ್ನ ಮೊಲೆಯುಣಿಸುವಳು . ಕ್ರಮಕ್ರಮವಾಗಿ ಪ್ರಸಾದವನ್ನು ಸ್ವೀಕರಿಸುವಂತೆ ಪ್ರಯತ್ನಿಸು ವಳು . ಮಗನ ವಯೋಮಾನದಂತೆ ತಿಂಡಿ ತಿನಿಸುಗಳನಿತ್ತು ಸವಿಮಾತಿನಿಂದ ತಿನಿಸಿ ಬೆಳೆಸಿ ; ರಕ್ಷಿಸುವಳು .
ಶಿವದೀಕ್ಷೆಯಿಂದ ನನ್ನನ್ನು ನಿನ್ನ ಕರಗರ್ಭದಲ್ಲಿ ಪುನರ್ಜಾತನನ್ನಾಗಿ ಮಾಡಿದ ಮಜ್ಜನನಿಯೇ ! ಗುರುತಾಯಿಯೇ ! ನಾನು ನಿನ್ನ ಗುರುಪುತ್ರನಾಗುತ್ತಿರಲು ನೀನು ದಯೆಯಿಂದ ಎನಗೆ ಕೆನೆವಾಲೆಂಬ ಪಾದೋದಕವನ್ನು ಕರುಣಿಸುತ್ತಿ , ಪರಮಾರ್ಥ ರೂಪಸಕ್ಕರೆಯೆಂಬ ಶೇಷಪ್ರಸಾದವನ್ನು ಒದಗಿಸಿ ಉಣಿಸಿರುವಿ , ಪೋಷಿಸಿ ಉದ್ಧರಿಸಿ ರುವಿ . ಆದುಕಾರಣ ನೀನು ಮಜ್ಜನನಿ , ಎನ್ನ ಹೆತ್ತವ್ವೆ . ತಾಯಿಯ ಋಣ ಎಂದೂ ತೀರದು . “ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ‘ ‘ ಜನನಿ ಮತ್ತು ಜನ್ಮಭೂಮಿ ಗಳು ಸ್ವರ್ಗಕ್ಕಿಂತಲೂ ಮಿಗಿಲಾದವುಗಳೆಂದು ಮಹಾನುಭಾವಿಗಳು ಹಾಡಿಲ್ಲವೆ ?
ತಥ್ಯ – ಮಿಥ್ಯವನಳಿದ | ಸತ್ಯ ಶರಣರಿಗೆ ನೀ
ಭೃತ್ಯನಾಗೆಂದು- ಮರ್ತ್ಯಲೋಕದೊಳೆನ್ನ
ಪೆತ್ತಯ್ಯ ಗುರುವೆ ಕೃಪೆಯಾಗು || ೩೧ ||
ತಥ್ಯ ನಿಜ , ಮಿಥ್ಯ – ಸುಳ್ಳು ಬ್ರಹ್ಮಸತ್ಯಂ ಜಗನ್ಮಿಥ್ಯ ” ಬ್ರಹ್ಮವು ಸತ್ಯವಾದದ್ದು , ಜಗತ್ತು ಮಿಥ್ಯವಾದದ್ದು ಎಂಬ ಅಭಿಪ್ರಾಯವುಳ್ಳವರು ವೇದಾಂತಿಗಳು . ತಥ್ಯ ಮಿಥ್ಯವನಳಿದವರು ಶರಣರು . ತಥ್ಯ ಮತ್ತು ಮಿಥ್ಯಗಳೆಂಬ ದ್ವಂದ್ವವನ್ನು ಅಲ್ಲಗಳೆದು ಶರಣನಾಗುತ್ತಾನೆ . ಶರಣರು ಶಿವನನ್ನು ಮತ್ತು ಶಿವಮಯವಾದ ಜಗವನ್ನು ಸತ್ಯ ವೆಂದು ಭಾವಿಸುತ್ತಾರೆ . ಶಿವಶರಣರು ಮನೆಯಿಂದ ಬಡವರಾಗಿದ್ದರೂ ಮನದಿಂದ ಘನಮನ ಸಂಪನ್ನರಾಗಿ ಶೋಭಿಸುತ್ತಾರೆ . ಕಾಲಕರ್ಮರಹಿತರೂ , ಭವರಹಿತರೂ ಆದ ಶರಣರಿಗಿಂತ ಹಿರಿಯರಾರಿಲ್ಲವೆಂದು ಅಣ್ಣನವರು ಗೌರವಿಸಿದ್ದಾರೆ . ಶಿವಪುರಾಣ ದಲ್ಲಿ ಶಿವನೂ ಸಹಿತ
“ ಮಮ ಭಕ್ತೋ ಮಮಾಧಿಕಃ ”
ನನ್ನ ಭಕ್ತನು ನನಗಿಂತಲೂ ಮಿಗಿಲಾಗಿದ್ದಾನೆಂದು ಪಾರ್ವತಿಗೆ ಬೋಧಿಸಿದ್ದಾನೆ . ಇಂಥ ಶರಣರಿಗೆ ಭೃತ್ಯರಾಗುವದು ಸಾಮಾನ್ಯ ಕೆಲಸವಲ್ಲ . ಅದು ಎಲ್ಲರಿಗೆ ಸಾಧ್ಯವೂ ಇಲ್ಲ . ಗುರುವೆ ! ನೀನು ಈ ಮರ್ತ್ಯಲೋಕದಲ್ಲಿ ಪುನಃ ಈ ಶಿಷ್ಯನನ್ನು ಕರಗರ್ಭದಲ್ಲಿ ಪೆತ್ತರೆ ಮಾತ್ರ ಶರಣಸೇವೆ ದೊರೆಯಲು ಸಾಧ್ಯವಾಗುವದು . ಶಿವಭಕ್ತರಾದವರನ್ನೇ ಶರಣರು ತಮ್ಮೊಡನೆ ಕೂಡಿಸಿಕೊಳ್ಳುವರು ಗುರುವು ಶಿವಪಥವನ್ನು ತೋರಿದರೆ ಅಂಥ ಶರಣರ ಸೇವಕನಾಗುವದು ಶಿವಶರಣರು ಶಿವನನ್ನು ತೋರಿಸುವರು . ಗುರುಪುತ್ರನಿಗೆ ಸಾರ್ಥಕವಾಗಿದೆ . ಬಸವಣ್ಣನವರು –
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದಕ್ಕಿಂತ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರಲೇಸಯ್ಯಾ ‘
ಮತ್ತು
“ ಲಿಂಗಜಂಗಮಕ್ಕೆ ಮಾಡಿ ನೀಡುವ ಅಚ್ಚಶರಣರ
ಮನೆಯಲು ಭೃತೃನಾಗಿಪ್ಪೆನಯ್ಯಾ ‘ ( ೩೬೩ )
ಎಂದು ಮುಂತಾಗಿ ಭಕ್ತರ ಮನೆಯಲ್ಲಿ ಭೃತ್ಯನಾಗಿರಲು ಬೇಡಿಕೊಂಡಿದ್ದಾರೆ . “ ಎನಗಿಂತ ಕಿರಿಯರಿಲ್ಲವೆಂದು ತಮ್ಮ ಕಿಂಕರತನವನ್ನು ವ್ಯಕ್ತಗೊಳಿಸುವದಲ್ಲದೆ ಅದರಂತೆ ಕಿಂಕರತನವನ್ನು ವ್ಯಕ್ತಗೊಳಿಸುದಲ್ಲದೆ ಅದರಂತೆ ನಡೆದುಕೊಂಡರು.ಕಿಂಕರರಾಗಿ ಶಂಕರರೂಪಾದರು . ಹಾನಗಲ್ಲ ಕುಮಾರ ನಡೆದುಕೊಂಡರು . ಶಿವಯೋಗಿಗಳು.
“ಶಂಕರ ಕಾಯೋ ಸದಾ ಕಿಂಕರರನು ʼ
ಎಂದು ಹಾಡಿ ಕಿಂಕರತನದ ಮೇಲೆಯನ್ನು ವಿವರಿಸಿರುವರು .
ಓ ಎನ್ನ ಪೆತ್ತಯ್ಯ ಗುರುರಾಯ ! ನನ್ನನ್ನು ಶರಣರ ಭೃತ್ಯನನ್ನಾಗಿಸುವಂತೆ ಕರುಣಿಸು .
ಕನ್ನಡ ತಾಯಿಯ ಪುಣ್ಯ ಗರ್ಭವು ಕಾಲ ಕಾಲಕ್ಕೆ ಮಹಾತ್ಮರನ್ನು, ಸಾಧು ಸಂತರನ್ನು, ಶಿವಯೋಗಿಗಳನ್ನು ನೀಡುತ್ತಾ ಬಂದಿದೆ. ಈ ಪುಣ್ಯ ನಾಡಿನಲ್ಲಿ ಚಾಮರಸ ಕವಿ ಹೇಳುವಂತೆ “ನೋಡಿ ಕೆಲರಂ, ಮಾತನಾಡಿ ಕೆಲರಂ, ಮುಟ್ಟಿ ಕೆಲರಂ, ಉದ್ಧರಿಸುವ ಮಹಾನುಭಾವರು ಉದಿಸಿ ಬಂದಿದ್ದಾರೆ.”
ಅಂಥವರ ಸಾಲಿನಲ್ಲಿ ಶ್ರೀ ಮ.ನೀ.ಪ್ರ ವಿಜಯ ಮಹಾಂತ ಶಿವಯೋಗಿಗಳು, ಚಿತ್ತರಗಿ ಇಳಕಲ್ ಸಂಸ್ಥಾನ ಮಠ, ಒಬ್ಬರು. ಕನ್ನಡ ನಾಡಿನಲ್ಲಿ ಚಿತ್ತರಗಿಯ ಹಿರಿಯ ಚೇತನ ಜಂಗಮ ಪುಂಗವರು. ನಾಡಿಗರ ಹೃನ್ಮನಗಳಲ್ಲಿ ನೆಲೆಸಿದವರು, ಜಂಗಮ ಮಹಾಂತರು.
ಬಸವಣ್ಣನವರು ಹೇಳುವಂತೆ,
“ವೀರನಾದೊಡೆ ವೈರಿ ಮೆಚ್ಚಬೇಕು,
ವ್ರತಿಯಾದೊಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದರೆ ಜಂಗಮ ಮೆಚ್ಚಬೇಕು,
ಹಾಗೆ ಜಂಗಮನಾದರೆ ಭಕ್ತ ಮೆಚ್ಚಬೇಕು”
ಹಾಗೆಯೇ ಭಕ್ತರು ಮೆಚ್ಚಿ, ಜಂಗಮರಾದವರು ಚಿತ್ತರಗಿಯ ಪೀಠಾಧಿಪತಿಗಳಾಧ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಸಹಜ ಯೋಗಿಗಳು, ತ್ಯಾಗಿಗಳು, ವೀರ ವೀರಾಗಿಗಳು, ಕರುಣಾ ಹೃದಯಿಗಳು, ನಿಜ ಶಿವಯೋಗಿಗಳು.
ಶ್ರೀ ವಿಜಯ ಮಹಾಂತ ಶಿವಯೋಗಿಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಒಂದು ಮಂಗಳ ಪದ್ಯದಲ್ಲಿ ವಿವರಿಸುವುದರಿಂದ ಪ್ರಾರಂಭಿಸಿ ಒಂದು ಪುರಾಣದವರೆಗೂ ವಿಸ್ತರಿಸಲು ಸಾಧ್ಯ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಬಹುದಾಗಿದೆ. ಅದು ಈಗಾಗಲೇ ಸಾಧ್ಯವೂ ಆಗಿದೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ವಾರ್ಧಕ ಷಟ್ಪದಿಯಲ್ಲಿ ಪುರಾಣ, ಭಾಮಿನಿ ಷಟ್ಪದಿಯಲ್ಲಿ ಪ್ರಬಂಧ, ಚರಿತ್ರೆ, ಲೀಲೆ, ಗಾನಸುಮನವಾಗಿ , ಕಥೆಯಾಗಿ ಹೊರಹೊಮ್ಮಿದೆ. ಅವುಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ .
೧) ದ್ಯಾಂಪುರ ಚನ್ನಕವಿ ಕೃತ ಶ್ರೀ ವಿಜಯ ಮಹಾಂತೇಶ್ವರ ಪುರಾಣ
೨) ಶ್ರೀ ವಿಜಯ ಮಹಾಂತೇಶ ಲೀಲಾಮೃತ. ಲೇಖಕ: ರಾಮರಾವ ಕುಲಕರ್ಣಿ
೩) ಶ್ರೀ ವಿಜಯ ಮಹಾಂತೇಶ್ವರ ಲೀಲೆ, ಕವಿಗಳು: ಕಲ್ಯಾಣಪ್ಪ ಬ್ಯಾಳಿ
೪) ಚಿತ್ತರಗಿ ಚಿಜ್ಯೋತಿ, ಮತ್ತು ಮಹಾತಪಸ್ವಿ ಮಹಾಂತ ಶಿವಯೋಗಿಗಳು, ಜಿ.ಎಚ್, ಹನ್ನೆರಡುಮಠ
೫) ಚಿತ್ತರಗಿಯ ಚಿನ್ಮಯಿ ವಿಜಯ ಮಹಾಂತ ಶಿವಯೋಗಿಗಳು, ಬಸವರಾಜ ಗವಿಮಠ
ಮಠಗಳು ವೈಭವದ ಅರಮನೆಗಳಾಗದೇ ಸಮಾಜದ ಧರ್ಮ ಸುಧಾರಣೆಯ ಕೇಂದ್ರಗಳಾಗಲು ಪೀಠದ ಅಧಿಪತಿಗಳಿಂದ ಮಾತ್ರ ಸಾಧ್ಯ ಎನ್ನುವುದನ್ನು ೧೯ ನೇ ಶತಮಾನದಲ್ಲಿ ಕನ್ನಡ ನಾಡಿನ ಅನೇಕ ಮಠಗಳ ಇತಿಹಾಸದಿಂದ ತಿಳಿಯುತ್ತದೆ. ಮಠಾಧಿಪತಿಗಳ ಸತತ ಸಮಾಜ ಮುಖಿ ಸುಧಾರಣೆಗಳನ್ನು ಒಪ್ಪಿ ತಮ್ಮ ಆಚರಣೆಯಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ. ತಮ್ಮ ಅರಿವು- ಆಚರಣೆ, ಅನುಭೂತಿಗಳಿಂದ ಸಮಾಜದ ಉನ್ನತಿಯನ್ನು ಹಾಗೂ ಶರಣ ಧರ್ಮ ಪರಂಪರೆಯನ್ನು ಉದ್ಧರಿಸಿದ್ದಾರೆ.
ಧರ್ಮ ಹಾಗೂ ಸಂಸ್ಕೃತಿ ದೃಷ್ಟಿನಿಂದ ಕನ್ನಡ ನಾಡು, ಭಾರತದಲ್ಲಿಯೇ ತನ್ನ ವೈಶಿಷ್ಟ್ಯವನ್ನು ಮೆರೆಯಿಸುತ್ತಾ ಬಂದಿದೆ. ೧೨ ನೇ ಶತಮಾನದ ಮಹಾತ್ಮಾ ಬಸವಣ್ಣನವರು ಶಾಂತವಾದ ಕ್ರಾಂತಿಯನ್ನು ಮಾಡಿ ವೀರಶೈವ ಧರ್ಮವನ್ನು ವಿಶ್ವಮಾನ್ಯವಾಗುವಂತೆ ಶ್ರಮಿಸಿ ಶರಣ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಸತ್ ಸಂಪ್ರದಾಯ ಜ್ಯೋತಿಯನ್ನು ಇಂದಿಗೂ ನಮ್ಮ ನಾಡಿನ ಅನೇಕ ಮಠಗಳು (ಅರಭಾವಿಯ ದುರುದುಂಡೇಶ್ವರ ಮಠ, ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ, ಗರಗದ ಮಡಿವಾಳೇಶ್ವರ ಮಠ, ಅಥಣಿಯ ಮುರುಘರಾಜೇಂದ್ರ ಮಠ, ಬಿದಿರಿ ಕುಮಾರೇಶ್ವರ ಮಠ, ಇಳಕಲ್ಲಿನ ವಿಜಯಮಹಾಂತೇಶ್ವರ ಮಠ, ಹಾಳಕೇರೆಯ ಅನ್ನದಾನೇಶ್ವರ ಮಠ, ಹಾನಗಲ್ಲಿನ ಕುಮಾರೇಶ್ವರ ಮಠ, ಹಾವೇರಿಯ ಶಿವಬಸವೇಶ್ವರ ಮಠ, ಧಾರವಾಡದ ಮೃತ್ಯುಂಜಯ ಅಪ್ಪುಗಳು, ಇನ್ನೂ ಅನೇಕ ಶಿವಯೋಗಿಗಳು ತಮ್ಮ ಪಾದ ಸ್ಪರ್ಶದಿಂದ ಕನ್ನಡ ನಾಡನ್ನು ಪವಿತ್ರಗೊಳಿಸಿದ್ದಾರೆ ) ಬೆಳಗಿಸುತ್ತ ಬಂದಿವೆ.
ಇಂತಹ ನಾಡಿನ ಮಠಗಳಲ್ಲಿ ಒಂದಾದ ಚಿತ್ತರಗಿ ಇಳಕಲ್ ಸಂಸ್ಥಾನ ಮಠವು ಒಂದು. ಈ ಮಠವು ಅನೇಕ ಪೀಠಾಧಿಪತಿಗಳನ್ನು ಹೊಂದಿದ ಪರಂಪರೆ ಇದೆ. ಅವರಲ್ಲಿ ೧೬ ನೇ ಪೀಠಾಧಿಪತಿಗಳಾಗಿ ಶ್ರೀ ವಿಜಯಮಹಾಂತ ಎಂಬ ಅಭಿದಾನದಿಂದ ನಿಯುಕ್ತಗೊಳ್ಳುತ್ತಾರೆ. ಇದು ಸಂಸ್ಥಾನ ಮಠವಾದ್ದರಿಂದ ಛತ್ರ, ಚಾಮರ, ಸಿಂಹಾಸನ, ಬೆಳ್ಳಿ ಪಲ್ಲಕ್ಕಿ, ಬೆಳ್ಳಿ ಬೆತ್ತ, ಜಾಗಟೆ, ಕುದುರೆ, ವಂದಿಮಾಗದರುಗಳನ್ನು ಹೊಂದಿರುತ್ತದೆ. ಈ ಪೀಠಕ್ಕೆ ಐವತ್ತಾರು ಶಾಖಾ ಮಠಗಳಿವೆ. ರಾಯಚೂರು, ಸುರುಪುರ, ಬೀದರ, ಯಲಬುರ್ಗಾ, ಲಿಂಗಸೂರು, ಸೊಲ್ಲಾಪುರ, ಕೂಡಲಸಂಗಮ, ಚಿತ್ತರಗಿ, ಕೊಪ್ಪ, ಇದ್ದಲಗಿ, ಬೆಳಗಲ್, ಹುನುಗುಂದ, ಕರಡಿ, ನಂದವಾಡಗಿ ಹಾಗೂ ಮುಂತಾದದ ಕಡೆಗಳಲ್ಲಿ ಶಾಖಾ ಮಠಗಳ ವ್ಯಾಪ್ತಿಯಿದೆ.
ನಿಜಾಮರ ಕಾಲಕ್ಕೆ ಕೊಡಮಾಡಿದ ಅನೇಕ ದತ್ತಿಗಳಿವೆ. ಇಂತಹ ವಿಶಾಲ ಪ್ರದೇಶದ ಜನತೆಯ ಕಣ್ಮಣಿಗಳಾಗಿ ವೀರಶೈವ ಧರ್ಮದ ಜಾಗೃತಿಯ ನೇತಾರರಾಗಿ ಈ ಪೀಠದ ಕಾರ್ಯಭಾರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಕೆಲ ಕಾಲ ಯೋಗ್ಯ ಪೀಠಾಧಿಕಾರಿ ದೊರೆಯದಿದ್ದಾಗ ಪೀಠವು ಶೂನ್ಯತೆಯನ್ನು ಪಡೆಯುತ್ತದೆ. ಅಂತಹ ಸಂದರ್ಭದಲ್ಲಿ ಪಟ್ಟವಿಲ್ಲದೆ ಮಠವನ್ನು ಸುಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಹೋದ ವಟು ದೇವರುಗಳ ಉದಾಹರಣೆಯು ಇದೆ.
೧೮೫೦ ರಿಂದ ೧೯೫೦ರ ಕಾಲವು ಭಾರತೀಯ ಇತಿಹಾಸದಲ್ಲಿ ಬದಲಾವಣೆಯ ಕಾಲಘಟ್ಟವಾಗಿದೆ. ಬದಲಾವಣೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ರಂಗಗಳಲ್ಲಿ ಕಂಡುಬರುತ್ತದೆ. ಸ್ವತಂತ್ರ ಆಂದೋಲನಗಳು ಹೋರಾಟ ರೂಪ ತಾಳಿದವು. ಹೋರಾಟಕ್ಕೆ ಸಂಘಟನೆಗಳು, ನೇತಾರರು, ಅವರ ವೈಚಾರಿಕ ನಡತೆಗಳು ಯಶಸ್ಸಿಗೆ ಕಾರಣವಾದವು. ಇಂತಹ ಕಾಲದಲ್ಲಿಯೇ ಮಠಾಧಿಪತಿಗಳು ಸ್ವತಂತ್ರದಕ್ಕಿಸಿಕೊಳ್ಳಲು ಸಮರ್ಥರಾದರು. ಧರ್ಮ ರಕ್ಷಣೆಗಾಗಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಕ್ಕಾಗಿ , ಶರಣ ಧರ್ಮದ ಸಂಸ್ಕೃತಿಯ ಏಳ್ಗೆಗಾಗಿ, ವೀರಶೈವ ಧರ್ಮದ ಉಳಿವಿಗಾಗಿ, ಹೊಸ ವೈಚಾರಿಕ ಸಮಾಜ ನಿರ್ಮಾಣ ಮಾಡಿದರು. ಸಮಾಜ ಉದ್ಧಾರ ಮಾಡಿದರು. ಅದಕ್ಕಾಗಿ ತಮ್ಮನ್ನು ತ್ಯಾಗ, ವೈರಾಗ್ಯಕ್ಕೆ ಅರ್ಪಿಸಿಕೊಂಡು ಕಾಯಕ ನೀತಿಯ ತಳಹದಿ ಮೇಲೆ ಸಮಾಜವನ್ನು ಕಟ್ಟಿದರು. ಇಷ್ಟಲಿಂಗಾರ್ಚನೆಯ ನಿಷ್ಠಾಭಕ್ತಿಯಿಂದ ಜ್ಞಾನ ದಾಸೋಹ, ಅನ್ನ ದಾಸೋಹ, ಅಕ್ಷರ ದಾಸೋಹದಿಂದ ಸಮಾಜವನ್ನು ಜಾಗೃತಗೊಳಿಸಿದರು. ಇದರಿಂದ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಮಠದ ಪರಿಶ್ರಮದಿಂದ ತಲೆಯೆತ್ತಿವೆ. ಶಿಶುವಿಹಾರದಿಂದ ಹಿಡಿದು ವಿಶ್ವವಿದ್ಯಾಲಗಳವರೆಗೂ ಬೆಳೆದು ಹೆಮ್ಮರಗಳಾಗಿವೆ.
ಜ್ಞಾನ ದಾಸೋಹಕ್ಕೆ ಬೇಕಾದ ಅನ್ನದಾಸೋಹ, ಆಶ್ರಯ ದಾಸೋಹಕ್ಕೆ ತಮ್ಮ ತನು ಮನ ಅರ್ಪಿಸಿ ಸಮಾಜಕ್ಕೆ ವೈಚಾರಿಕ ಹೊಸ ದಿಸೆಯನ್ನೇ ತೋರಿಸಿದ್ದಾರೆ. ವೈರಾಗ್ಯ, ತ್ಯಾಗ, ಆಚಾರ ವಿಚಾರ, ನೀತಿ ಶ್ರದ್ಧೆಗಳನ್ನು ಅನುಸರಿಸುವ ನವ ಸಮಾಜ ನಿರ್ಮಾಣವಾಯಿತು. ವೀರಶೈವ ಧರ್ಮ ಪರಂಪರೆಯ ಮಹಾಮಾನವತಾವಾದದ ಕೀರ್ತಿ ಪತಾಕೆಯನ್ನು ಹಾರಿಸುತ್ತ ಮುನ್ನಡೆದಿದೆ. ಇತಿಹಾಸದಲ್ಲಿ ನಾಡಿನ ಉದ್ದಗಲಕ್ಕೂ ಇಂತಹ ಅನೇಕ ಮಹಾತ್ಮರ ಹೆಸರುಗಳು ದೊರಕುತ್ತವೆ. ಅದರಲ್ಲಿ ಸಾಂದರ್ಭಿಕವಾಗಿ ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನೀ.ಪ್ರ. ಸ್ವರೂಪಿ ವಿಜಯ ಮಹಾಂತ ಶಿವಯೋಗಿಗಳು ಅಗ್ರ ಗಣ್ಯರು.
ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು ಒಂದು ಅಧ್ಯಾತ್ಮಿಕ ಶಾಲೆಯ ಸ್ಥಾಪನೆಯ ಸಂಕಲ್ಪ ಮಾಡಿದರು. ಆ ಅಧ್ಯಾತ್ಮಿಕ ಶಾಲೆ ಶಿವಯೋಗ ಮಂದಿರವಾಗಿ, ಎಲ್ಲಿ, ಹೇಗೆ ರೂಪಗೊಳ್ಳಬೇಕೆಂದು ನಿರ್ಣಯಗೊಳಿಸಲು ವಿಜಯ ಮಹಾಂತರಲ್ಲಿಗೆ ವಿನಂತಿಸಿದಾಗ, ಶ್ರೀ ವಿಜಯ ಮಹಾಂತೇಶ್ವರರ ನೇತೃತ್ವದಲ್ಲಿ ಶಿವಯೋಗ ಮಂದಿರ ಸ್ಥಾನವನ್ನು ಅರಸುತ್ತಾ ಬರುವ ಸನ್ನಿವೇಶ ರೋಮಾಂಚನಕಾರಿಯಾಗಿದೆ. ಒಂದು ವ್ಯಕ್ತಿ ಶಕ್ತಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂಬುದಕ್ಕೆ ಅವರ ಶ್ರದ್ದಾಪೂರ್ವಕ ಪ್ರಯತ್ನಗಳೇ ಸಾಕ್ಷಿಯಾಗಿವೆ.
ಜನನ- ಬಾಲ್ಯ
ಮೈಸೂರು ಪ್ರಾಂತದ ಹಾಸನ ಜಿಲ್ಲೆಯಲ್ಲಿ “ಸಸಿವಾಲ” ಎಂಬ ಪುಟ್ಟ ಗ್ರಾಮ. ಅಲ್ಲಿ ಜನರೆಲ್ಲರೂ ದೈವಭಕ್ತರು. ಸತ್ಯ, ಶುದ್ಧ,ಕಾಯಕದಿಂದ ಬಾಳುತ್ತಿದ್ದರು. ಅಲ್ಲಿ ಅನೇಕ ಜಂಗಮ ಕುಟುಂಬಗಳು ನೆಲೆಸಿದ್ದವು. ಆ ಗ್ರಾಮದಲ್ಲಿ ಕೊಳಗಲ್ಮಠದ ವೀರಯ್ಯ, ಗೌರಮ್ಮ ಎಂಬ ದಂಪತಿಗಳು ಇದ್ದರು. ಇವರ ಮನೆಗೆ ಆಗಾಗ ಹತ್ತಿರದಲ್ಲೇ ಇರುವ ಕಲ್ಲಬೆಟ್ಟದ ಶಿವಯೋಗಿಗಳು ದಯಮಾಡಿಸುತ್ತಿದ್ದರು. ಇವರ ಮಠ ದಾನ, ಧರ್ಮ, ಪೂಜೆ, ಜಂಗಮರಾಧನೆಗೆ ಹೆಸರಾಗಿತ್ತು. ಇವರ ಮಠದಲ್ಲಿ ಆಗಾಗ ಜಂಗಮ ಪಾದ ಪೂಜೆಗಳು ಜರಗುತ್ತಿದ್ದವು.
ಒಮ್ಮೆ ಕೊಳಗಲ್ಮಠಕ್ಕೆ, ನಿಡುವಳ್ಳಿಯ ಮರುಳಸಿದ್ಧ ಶಿವಯೋಗಿಗಳು ಆಗಮಿಸುತ್ತಾರೆ. ಅವರ ಚಿಕ್ಕ ಮನೆಯಲ್ಲಿಯೇ ದಂಪತಿಗಳು ಶ್ರದ್ಧಾ ಭಕ್ತಿಯಿಂದ ಅವರ ಪಾದ ಪೂಜೆಯನ್ನು, ಸಂಭ್ರಮದಿಂದ ಪೂರೈಸುತ್ತಾರೆ. ಪೂಜೆಯ ನಂತರ ಸಂತೃಪ್ತಗೊಂಡ ಶ್ರೀಗಳು ಸಂತಸದಿಂದ “ಇದು ಶಿವನು ಆರಿಸಿಕೊಂಡ ಮನೆ. ಮುಂದೆ ಅವನು ಇಲ್ಲಿಯೇ ಬರುವನು” ಎಂದು ತುಂಬು ಹೃದಯದಿಂದ ಹರಿಸಿ ನಡೆದರು. ಮುಂದೆ ಕೆಲವು ದಿನಗಳ ನಂತರ ಗೌರಮ್ಮ ಗರ್ಭಿಣಿಯಾದರು. ಮರುಳಸಿದ್ಧ ಶಿವಯೋಗಿಗಳ ಹರಕೆ ಕೈಗೂಡುವುದೆನ್ನುವಂತೆ ಎಂಟು ತಿಂಗಳಲ್ಲಿಯೇ ಗರ್ಭಕ್ಕೆ ಲಿಂಗಧಾರಣೆಯಾಯಿತು. ಮುಂದೆ ಶಿವನೇ ಶಿಶುರೂಪವಾಗಿ ಗಂಡು ಮಗು ಗೌರಮ್ಮನ ಮಡಿಲು ತುಂಬಿತು. ( ಶಾಲೆ ವಾಹನ ಶಖೆ ೧೭೭೨, ಸಾಧಾರಣ ನಾಮ ಸಂವತ್ಸರ ಭಾನುವಾರ. ಕ್ರಿಸ್ತ ಶಕ ೧೮೫೦ರಲ್ಲಿ).
ಮಗು ಜನಿಸಿದ ಹನ್ನೆರಡನೇ ದಿನಕ್ಕೆ, ಸುಮಂಗಲೆಯರು ಮಗುವಿಗೆ “ಮಳೆಯಪ್ಪಯ್ಯ” ಎಂದು ನಾಮಕರಣ ಮಾಡಿದರು. ಶಿಶು ಮಳೆಯಪ್ಪಯ್ಯನ ಬೆಳುವಣಿಗೆಯನ್ನು ಕಂಡಾಗಲೆಲ್ಲ ವೀರಯ್ಯ ಗೌರಮ್ಮ ದಂಪತಿಗಳಿಗೆ, ಮರುಳುಸಿದ್ಧಯ್ಯ ಶಿವಯೋಗಿಗಳ ಹರಕೆ ಕೈಗೂಡಿದಂತೆ ಭಾಸವಾಗುತ್ತಿತ್ತು.
ಮಗು ಬಾಲಕನಾಗಿ ಬೆಳೆಯುತ್ತಲೇ ತಂದೆಯ ನಿಷ್ಠಾಭಕ್ತಿ, ಆಚಾರ ವಿಚಾರ, ತಾಯಿಯ ವಾತ್ಸಲ್ಯ ಕರುಣೆ ಭಕ್ತಿಯನ್ನು ಒಡಗೂಡಿಸಿಕೊಂಡು ಎಂಟು ವರುಷದವನಾದಾಗ ಮರುಳುಸಿದ್ಧ ಶಿವಯೋಗಿಗಳ ಮಠದಲ್ಲಿ ದೀಕ್ಷಾ ಕಾರ್ಯ ನೆರವೇರಿ ಸ್ಥಾನಿಕ ವಿದ್ಯಾಭ್ಯಾಸ ಪ್ರಾರಂಭವಾಯಿತು. ಈತನಲ್ಲಿದ್ದ ವಿಶೇಷ ಗುಣಗಳನ್ನು ಗಮನಿಸಿದ ಶಿವಯೋಗಿಗಳು ಅವನನ್ನು ಸಂಸ್ಕೃತ ವೇದ ಪಾಠಶಾಲೆಗೆ ಕಳುಹಿಸಲು ಸೂಚಿಸಿದರು. ಬಾಲಕನಾದ ಮಳೆಯಪ್ಪಯ್ಯನಲ್ಲಿ ಬರು ಬರುತ್ತಾ ಅನೇಕ ಬದಲಾವಣೆಗಳಾಗತೊಡಗಿದವು. ಏಕಾಂತವಾಗಿರುವುದು, ಜಂಗಮ ಪಾದ ಪೂಜೆ ಪೂರೈಸುವುದು, ಲಿಂಗಧ್ಯಾನದಲ್ಲಿ ಮೈಮರೆಯುವುದು. ಮಿತಭಾಷೆಯಾಗಿರುವುದು,
ಮೌನವನ್ನೇ ಹೆಚ್ಚು ಪ್ರೀತಿಸುವುದು ಮುಂತಾದ ಗುಣಗಳು ಕಂಡುಬಂದವು. ಬಾಲಕನಿಗೆ ತಾಯಿ ಹೇಳಿದ ಶಿವಶರಣರ ಕಥೆಗಳಲ್ಲಿ ಬರುವ ಆಚಾರ ವಿಚಾರ ,ಜಪ ತಪ, ಲಿಂಗನಿಷ್ಠೆ, ಲಿಂಗನಿರೀಕ್ಷೆ ಕುರಿತು ಶ್ರದ್ದೆ ಮೂಡತೊಡಗಿತು. ತಾನು ಹಾಗೆ ಯಾಕೆ ಲಿಂಗಪೂಜಾನಿಷ್ಠನಾಗಿ ಜಪತಪಗಳಿಂದ ಶಿವನನ್ನು ಮೆಚ್ಚಿಸಬೇಕೆಂದು ಹಂಬಲಿಸುತ್ತಿದ್ದನು. ಆ ಸಂದರ್ಭದಲ್ಲಿ ತಾಯಿಯ ಸಲಹೆಯನ್ನು ಕೇಳಿ ಕಲ್ಲಬೆಟ್ಟಕ್ಕೆ ಹೋಗಿ ತಪಸ್ಸು ಮಾಡಿ ಯೋಗಿಯಾಗುವೆ ಎಂದು ಹಂಬಲಿಸುತ್ತಿದ್ದರು. ತಾಯಿ ಅದು ಬಹಳ ದುರ್ಗಮ ಸ್ಥಾನ ಎಂದು ನಿರ್ದೇಶಿಸಿದರೂ, ಹಲವು ಕ್ರೂರ ಪ್ರಾಣಿಗಳ ವಾಸತಾಣವೆಂದು, ಮನುಷ್ಯರು ಅಲ್ಲಿ ಹೋಗಬಾರದೆಂದರೂ, ತಾಯಿ ಪರಿ ಪರಿಯಾಗಿ ಹೇಳಿದರೂ, ಗಮನಿಸದೆ ಮಗು ಒಂದು ಸಲ ಸಸಿವಾಲಕ್ಕೆ ಬಂದ ಒಬ್ಬ ಶಿವಯೋಗಿಯ ಜೊತೆಗೆ ಕಲ್ಲಬೆಟ್ಟಕ್ಕೆ ನಡದೇಬಿಟ್ಟರು. ಅಲ್ಲಿಯೇ ಕೆಲ ಕಾಲ ಬಾಲಕ ತಪೋನಿರತನಾದನು.
ಬಡಕಲ ಶರೀರ, ಜಟಾಧಾರಿ, ಬಿಳಿಯ ಗಡ್ಡ, ಗುಳಿ ಬಿದ್ದ ಕಣ್ಣುಗಳು, ಬೆನ್ನಿಗೆ ಹತ್ತಿದ ಹೊಟ್ಟೆಯ ಅನೇಕ ಕಲ್ಲಬೆಟ್ಟ ಶಿವಯೋಗಿಗಳು ಮಳೆಯಪ್ಪಯ್ಯನನ್ನು ಆಕರ್ಷಿಸಿದರು. ಕಲ್ಲಬೆಟ್ಟ ವಾಸಿಯಾದ ಮಗುವನ್ನು ಕರೆತರಲು ತಂದೆತಾಯಿಗಳು ಎಷ್ಟೇ ಪ್ರಯತ್ನಿಸಿದರೂ ಕಣ್ಣೀರು ಕರೆದರೂ ಮಗ ಅಲ್ಲಿಯೇ ನೆಲೆ ನಿಂತನು. ದುಃಖತಪ್ತರಾದ ತಂದೆ ತಾಯಿಗಳಿಗೆ ಬಸವಲಿಂಗ ಸ್ವಾಮಿಗಳು ಸಾಂತ್ವನ ಹೇಳುತ್ತಾ ನಿಮ್ಮ ಮಗ ಯೋಗಿಯಾಗಲಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣನಾಗಲಿ ಎಂದು ಮಳೆಯಪ್ಪನನ್ನು ಹರಸಿ ತಂದೆ ತಾಯಿಗಳನ್ನು ಸಮಾಧಾನಪಡಿಸಿದರು. ಈ ಹರಕೆಯು ಮುಂದೆ ಸತ್ಯವಾಗಿ ಪರಿಣಮಿಸಿತು.
ಕಲ್ಲಬೆಟ್ಟದಲ್ಲಿ ಬಸವಲಿಂಗ ಸ್ವಾಮಿಗಳು ಮಳಿಯಪ್ಪಯ್ಯನನ್ನು ಕಂಡು ಕ್ಷೇಮ ಸಮಾಚಾರವನ್ನು ವಿಚಾರಿಸಿದಾಗ, ಸಂಸ್ಕೃತ ಅಧ್ಯಯನಕ್ಕಾಗಿ ತಾನು ಬೇರೆ ಕಡೆ ಹೋಗಲು ಸಾಧ್ಯವೇ ಎಂದು ಕೇಳಿದನು.
ಆತನ ಅಭ್ಯಾಸದ ಆಸಕ್ತಿಯನ್ನು ಕಂಡು ನೀನು ಬಳ್ಳಾರಿಯಲ್ಲಿರುವ ಸಕ್ರಿ ಕರಡೆಪ್ಪನವರ ವೇದ ಪಾಠ ಶಾಲೆಗೆ ಹೋಗುವುದು ಸೂಕ್ತ, ಅದು ಸಂಸ್ಕೃತ ಅಧ್ಯಯನಕ್ಕೆ ಯೋಗ್ಯವಾದುದು ಎಂದು ಸೂಚಿಸಿದರು.
ಬಳ್ಳಾರಿಯ ಸಕ್ರಿ ಕರಡೆಪ್ಪನವರು ಆಗರ್ಭ ಶ್ರೀಮಂತರು. ಗುರು ಲಿಂಗ ಜಂಗಮ ದಾಸೋಹಿಗಳು ಎಂದು ಪ್ರಸಿದ್ದರಾಗಿದ್ದರು. ಅವರು ಸಂಸ್ಕೃತ ವೇದ ಪಾಠ ಶಾಲೆಯನ್ನು ನಡೆಸುತ್ತಿದ್ದರು. ಆ ಭಾಗದಲ್ಲಿ ಸಂಸ್ಕೃತ ಅಧ್ಯಯನದ ಅವಶ್ಯಕತೆಗಳನ್ನು ಅರಿತು ಒಂದು ಸಂಸ್ಕೃತ ಪಾಠಶಾಲೆ ತೆರೆದು ವಿದ್ಯಾರ್ಥಿಗಳಿಗೆ ಅನ್ನ, ವಸತಿ, ಗ್ರಂಥಗಳನ್ನು ಒದಗಿಸುತ್ತಿದ್ದರಲ್ಲದೆ ಸಂಸ್ಕೃತ ಪಾಠಶಾಲೆಗೆ ಸೂಕ್ತ ಗುರುಗಳನ್ನು ನಿಯಮಿಸಿದ್ದರು. ಹೀಗಾಗಿ ಸಕ್ರಿ ಕರಡೆಪ್ಪನವರ ವೇದ ಪಾಠಶಾಲೆ, ಶ್ರೇಷ್ಠ ಪಾಠಶಾಲೆ ಎಂದು ಪ್ರಸಿದ್ದಿಯನ್ನು ಪಡೆದಿತ್ತು. ಇಲ್ಲದಿದ್ದರೆ ಅಂದಿನ ಕಾಲಕ್ಕೆ ಸಂಸ್ಕೃತ ಅಧ್ಯಯನಕ್ಕಾಗಿ ಕಾಶಿಗೆ ಹೋಗಬೇಕಾಗುತ್ತಿತ್ತು. ಇದು ಸಾಮಾನ್ಯರಿಗೆ ಅಸಾಧ್ಯವಾಗುತ್ತಿತ್ತು. ಗುರುಗಳ ಸಲಹೆಯಂತೆ ಮಳಿಯಪ್ಪನವರು ಸಂತೆ ಸಾರಿಗೆಯವರ ಜೊತೆಗೂಡಿ ಬರಿಗಾಲಲ್ಲಿ ನಡೆದು ಬಳ್ಳಾರಿಗೆ ಬಂದರು.
ಆಗ ಅವರು ೧೪-೧೫ರ ವರುಷದ ಬಾಲಕರಾಗಿದ್ದರು. ಬಳ್ಳಾರಿಗೆ ಬಂದು ನೇರವಾಗಿ ವೇದಶಾಲೆಯಲ್ಲಿ ಪ್ರವೇಶ ಪಡೆದು ಊರ ಹೊರಗಿನ ಒಂದು ತೋಟದಲ್ಲಿ ನೀರಿನ ಸೌಕರ್ಯವಿರುವ ಪರ್ಣಶಾಲೆಯನ್ನು ಕಟ್ಟಿಕೊಂಡು ವಾಸಿಸಿದರು. ಪ್ರಸಾದಕ್ಕಾಗಿ ಕಂತಿಭಿಕ್ಷೆಯನ್ನು ಅವಲಂಬಿಸಿದರು. ಆ ಶಾಲೆಯಲ್ಲಿ ಅನೇಕ ಪಂಡಿತರು ಗುರುಗಳಾಗಿದ್ದರು. ಅಲ್ಲಿ ವೇದಾಂತ, ವ್ಯಾಕರಣ, ತರ್ಕಶಾಸ್ತ್ರ, ಪುರಾತನರ ವಚನಗಳು, ಶಿವಶರಣ ವಚನ ಸಾಹಿತ್ಯ, ದ್ವೈತ, ಅದ್ವೈತ, ವೀರಶೈವ ಮುಂತಾದ ವಿಷಯಗಳ ಅಧ್ಯಯನ ಸಾಗುತ್ತಿತ್ತು. ಕೇವಲ ಸಾತ್ವಿಕ ವೃತ್ತಿಯಿಂದ ಪ್ರಪಂಚವನ್ನು ಮಾಡುತ್ತ ಗುರು ಲಿಂಗ ಜಂಗಮ ಆರಾಧನೆಯಲ್ಲಿ ತಮ್ಮ ಕಾಲವನ್ನು ಸವೆಸುತ್ತ ಸಕ್ರಿ ಕರಡೆಪ್ಪನವರು ದಾಸೋಹ ತೃಪ್ತರಾಗಿದ್ದರು. ಉದಾರ ವಿದ್ಯಾದಾನದಿಂದ ಶರಣ ಜೀವನವನ್ನು ಸಾಗಿಸುತ್ತಿದ್ದರು.
ಬಳ್ಳಾರಿಗೆ ಬಂದ ಮಳಿಯಪ್ಪಯ್ಯನವರು ಊರ ಹೊರಗಿನ ತೋಟದಲ್ಲಿ ವಾಸವಾಗಿದ್ದ ಸಂಗತಿ ಕರಡೆಪ್ಪನವರ ಗಮನಕ್ಕೆ ಬಂದಿತು. ಸ್ವತಃ ಅವರೇ ಮಳಿಯಪ್ಪಯ್ಯನವರ ಗುಡಿಸಲಕ್ಕೆ ಬಂದು ಏಕೆ ತಾವು ಅನ್ನ ಛತ್ರದಲ್ಲಿ, ವಸತಿ ಛತ್ರದಲ್ಲಿ ಇರಬಾರದು ಎಂದು ವಿಚಾರಿಸಿದಾಗ ಅಲ್ಲಿ ನನ್ನ ಲಿಂಗ ಪೂಜೆಗೆ ತೊಂದರೆಯಾಗಬಹುದು ಅದಕ್ಕಾಗಿ ನಾನು ಏಕಾಂತವನ್ನು ಬಯಸುತ್ತೇನೆ ಅಧ್ಯಯನಕ್ಕೂ ಇದು ಯೋಗ್ಯವಾದ ಸ್ಥಳವಾಗಿದೆ. ನನಗೆ ಗದ್ದಲ ಹಿಡಿಸುವುದಿಲ್ಲ. ಏಕಾಂತವನ್ನು ಬಯಸುತ್ತೇನೆ ಎಂದು ಸ್ಪಷ್ಟ ಪಡಿಸಿದಾಗ ನಾನು ನಮ್ಮ ಮನೆಯಲ್ಲಿಯೇ ತಮ್ಮ ಏಕಾಂತಕ್ಕೆ ವ್ಯವಸ್ಥೆ ಅಣಿಗೊಳಿಸುತ್ತೇನೆ. ಲಿಂಗ ಪೂಜೆ ನಿರಾಳವಾಗಿ ಸಾಗುತ್ತದೆ. ನಮ್ಮ ಮನೆಯಲ್ಲಿ ನಾನು ಪೂರೈಸಿಕೊಡುತ್ತೇನೆ ಎಂದು ವಿನಮ್ರವಾಗಿ ಭಿನ್ನಯಿಸಿದಾಗ ಅವರ ಮನೆಯ ವಾಸಕ್ಕೆ ಮಳಿಯಪ್ಪಯ್ಯನವರು ಒಪ್ಪಿಕೊಂಡು ಮನೆಗೆ ಬರುತ್ತಾರೆ. ತಮ್ಮ ಪಾದದ ಧೂಳಿನಿಂದ ಸತ್ಸಂಗದಿಂದ ನನ್ನ ಮನೆಯನ್ನು ಹಾಗೂ ನನ್ನನ್ನು ಪಾವನ ಮಾಡಬೇಕೆಂದು ಮಳಿಯಪ್ಪಯ್ಯನವರನ್ನು ಒಪ್ಪಿಸಿಕೊಂಡು ಮನೆಗೆ ಕರೆ ತಂದರು. ತ್ರಿಕಾಲ ಲಿಂಗಾರ್ಚನೆ, ಒಂದೇ ಸಲ ಪ್ರಸಾದ ಸ್ವೀಕರಿಸುತ್ತ ವೇದ ವೇದಾಂತ ಷಡ್ ದರ್ಶನ, ವ್ಯಾಕರಣ, ಅಲಂಕಾರ, ಸಂಸ್ಕೃತ ಕಾವ್ಯ, ಅದ್ವೈತ ಶಾಸ್ತ್ರ, ವಚನ ಸಾಹಿತ್ಯ ಎಲ್ಲ ವಿಷಯವನ್ನು ಗಾಢವಾಗಿ ಅಭ್ಯಸಿಸಿದರು. ಪಂಡಿತ ಮಾನ್ಯ ಜ್ಞಾನಿಗಳಾಗಿ ರೂಪಗೊಳ್ಳತೊಡಗಿದರು. ಅಪಾರ ಜ್ಞಾನಿಗಳು, ತ್ರಿಕಾಲ ಲಿಂಗ ಪೂಜೆ ನಿಷ್ಠರು, ಅಧ್ಯಾತ್ಮದ ಕಳೆ ಹೊತ್ತ ತರುಣ, ಯೋಗಿಯ ಕಳೆ, ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು.
ಚಿತ್ರ ಸಂಖ್ಯೆ ೧ ಶ್ರೀ ಸಕ್ಕರೆ ಕರಡೆಪ್ಪನವರು ಮತ್ತು ಅವರ ಸಂಸ್ಕೃತ ಪಾಠ ಶಾಲೆ ಬಳ್ಳಾರಿ.
ಒಮ್ಮೆ ಸಕ್ರಿ ಕರಡೆಪ್ಪನವರ ಮನೆಗೆ, ಅಮರಾವತಿಯ ರಾಮಪ್ಪ ದೇಸಾಯಿಯವರು ಭೇಟಿ ನೀಡಿದ್ದರು. ಅವರ ಮನೆಯ ಆದರ ಆತಿಥ್ಯವನ್ನು ಸ್ವೀಕರಿಸಿ ಕುಳಿತ್ತಿದ್ದಾಗ, ಮನೆಯಲ್ಲಿ ತಂಗಿದ್ದ ಯೋಗಿ ಕಳೆಯನ್ನು ಹೊತ್ತ ಮಳಿಯಪ್ಪಯ್ಯನವರನ್ನು ನೋಡಿ ಆಕರ್ಷಿತರಾಗುತ್ತಾರೆ. ಆಗ ಕರಡೆಪ್ಪನವರಿಗೆ ಚಿತ್ತರಗಿಯ ಪೀಠದ ಗುರುಗಳಾದ ಗುರುಮಹಾಂತ ಸ್ವಾಮಿಗಳು ಲಿಂಗೈಕ್ಕ್ಯರಾದರೆಂದು, ಪೀಠದ ಅಧಿಕಾರಕ್ಕೆ ಯೋಗ್ಯ ಪೀಠಾಧಿಕಾರಿಯನ್ನು ಅರಸುತ್ತಿದ್ದೇವೆ ತಾವು ತಮ್ಮ ಪಾಠಶಾಲೆಯ ವಟುದೇವರನ್ನು ಸೂಚಿಸಿದರೆ ಒಳ್ಳೆಯದು ಎಂದು ಕರಡೆಪ್ಪನವರಲ್ಲಿ ವಿನಂತಿಸಿಕೊಂಡರು. ಅದೇ ಹೊತ್ತಿಗೆ ಲಿಂಗ ಪೂಜೆ ಪೂರೈಸಿ ದೇಸಾಯಿಯರೊಡನೆ ಮಾತನಾಡುತ್ತಿದ್ದ ಸಕ್ರಿ ಕರಡೆಪ್ಪನವರು, ಮಳಿಯಪ್ಪಯ್ಯ ದೇವರೇ ಚಿತ್ತರಗಿ ಪೀಠದ ಅಧಿಕಾರಿಯಾಗಬಹುದಲ್ಲವೆ ಎಂದು ಕೇಳಿದಾಗ ದೇಸಾಯಿಯವರು ಆನಂದದಿಂದ ನೀವು ಸೂಚಿಸದವರನ್ನೇ ಪೀಠಾಧಿಕಾರಿಯಾಗಿ ಮಾಡಲು ಸಿದ್ಧ ಎಂದರು. ಆಗ ಕರಡೆಪ್ಪನವರು ಮಳಿಯಪ್ಪಯ್ಯ ದೇವರನ್ನು ಕರೆದು ಚಿತ್ತರಗಿ ಇಳಕಲ್ ಸಂಸ್ಥಾನ ಪೀಠದ ಅಧಿಕಾರವನ್ನು ನೀವು ಏಕೆ ವಹಿಸಿಕೊಳ್ಳಬಾರದು, ನಿಮ್ಮನ್ನು ಅರಸಿ ದೇಸಾಯಿಯವರು ಬಂದಿದ್ದಾರೆ. ಆ ಪೀಠವು ೫೬ ಶಾಖಾ ಮಠಗಳನ್ನು ಹೊಂದಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದೆ.
ಒಳ್ಳೆಯ ಸಂಪತ್ತನ್ನು ಹೊಂದಿದ ಮಠವಾಗಿದೆ. ಆ ಮಠದ ಅಧಿಕಾರವನ್ನು ತಾವು ವಹಿಸಿಕೊಂಡರೆ ಒಳ್ಳೆಯದು ಎಂದು ಬಿನ್ನವಿಸಿದಾಗ ಮಳಿಯಪ್ಪಯ್ಯ ದೇವರು ನನಗೆ ಯಾವ ಪೀಠಾಧಿಕಾರವು ಬೇಡ, ಸಂಪತ್ವೈಭವೂ ಬೇಡ, ಪ್ರಚಾರ ಪ್ರಸಿದ್ಧಿಯು ಬೇಡ ಎಂದು ಸಾರಸಗಟವಾಗಿ ನಿರಾಕರಿಸಿದರು. ದೇಸಾಯಿಯರು ನಿರಾಶದಿಂದ ಮರಳಿದರು.
ಕಾಲಗತಿಸಿದಂತೆ ಆ ಸಿಂಹಾಸನಕ್ಕೆ ಬೇಗನೆ ಒಬ್ಬ ಯೋಗ್ಯ ಪಟ್ಟಾಧಿಕಾರಿಯನ್ನು ತರಬೇಕೆಂದು ದೇಸಾಯಿಯವರಿಗೂ, ಭಕ್ತರಿಗೂ ಆತುರ ಹೆಚ್ಚಾಯಿತು. ಆದ್ದರಿಂದ ರಾಮಪ್ಪ ದೇಸಾಯಿಯವರು ಅನೇಕ ಮಠ ಮಾನ್ಯಗಳಿಗೆ ಸಂದೇಶವನ್ನು ರವಾನಿಸಿದರು. ಚಿತ್ತರಗಿ ಪೀಠಕ್ಕೆ ವಟುವನ್ನು ಹುಡುಕಲು ಅನೇಕ ಮಠ ಆಶ್ರಮಗಳಿಗೆ ಭೇಟಿ ಕೊಟ್ಟು ಅರಸಿದರೂ ಪ್ರಯತ್ನ ಫಲಕಾರಿಯಾಗಲಿಲ್ಲ. ಹೀಗಿರಲಾಗಿ ಕೆಲದಿನಗಳ ನಂತರ ಸಕ್ರಿ ಕರಡೆಪ್ಪನವರು ಶಿವಾಧೀನರಾದರು.
ಅದಾದ ನಂತರ ಪಾಠಶಾಲೆಯು ನಿಂತಿತು. ಪಾಠಶಾಲೆಯಲ್ಲಿ ಇದ್ದಂತ ವಟುಗುಳು ಬೇರೆ ಬೇರೆಕಡೆ ಚದುರಿದರು. ಅಲ್ಲಿ ಇರುವಂತಹ ಶಿಕ್ಷಕರು ತಮ್ಮ ತಮ್ಮ ನೆಲೆ ಅರೆಸಿಕೊಂಡು ಹೋದರು. ಆಗ ಮಳಿಯಪ್ಪಯ್ಯನವರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕರಡೆಪ್ಪನವರಿಗೂ ತಮಗೂ ಪೀಠದ ಅಧಿಕಾರದ ಬಗ್ಗೆ ಚರ್ಚಿಸುವಾಗ ಅಧಿಕಾರದ ಬಗ್ಗೆ ನೀರಾಕರಿಸಿದ್ದು ನೆನಪಿಗೆ ಬಂತು. ಕರಡೆಪ್ಪನವರ ಮಾತಿಗೆ ತಾವು ನನಗೆ ಲೋಕದ ಸಂಸಾರ ಬೇಡ, ಯಾವ ಅಧಿಕಾರವು ಬೇಡ, ಮೋಹವು ಬೇಡ, ಯಾವ ಪಟ್ಟಾಧಿಕಾರವು ಬೇಡ ಎಂದು ಖಡಾಖಂಡಿತವಾಗಿ ಕರಡೆಪ್ಪನವರಿಗೆ ಹೇಳಿದಾಗ “ನೀವು ಸನ್ಯಾಸಿಗಳಾದರು ಲೋಕದ ಸಂಸಾರಿಗಳು. ಲೋಕದ ಸೇವೆ ಮಾಡಲೇಬೇಕು” ಎಂದು ಅರುಹಿದ ಮಾತುಗಳು ಮರುಕಳಿಸಿದವು. ಅದೇ ಮಾತನ್ನು ಮೆಲಕು ಹಾಕುತ್ತ ವೇದ ಪಾಠಶಾಲೆ ಚದುರಿದಾಗ ಮುಂದೇನು ಎಂಬ ಶೂನ್ಯ ಮಳಿಯಪ್ಪಯ್ಯನವರಿಗೆ ಕಾಡಹತ್ತಿತು. ಅವರಿದ್ದರೆ ಬೇರೆ ಮಾತಾಗುತ್ತಿತ್ತು. ಅವರ ನಿಧನದ ನಂತರ ಲೋಕಸಂಚಾರಿಗಳಾಗಿ ತಮ್ಮ ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಭವಿಷ್ಯದ ಶೂನ್ಯತೆಯಲ್ಲಿ ಸಾಗಿದರು. ಆಗ ವೇದ ಪಾಠಶಾಲೆಯಲ್ಲಿ ಗುರುವನ್ನರಸಿ ನರೇಗಲ್ಲಿಗೇ ಬರುತ್ತಾರೆ. ಊರ ಹೊರಗಿನ ತೋಟದಲ್ಲಿ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಕಂತಿಭಿಕ್ಷೆಯಿಂದ ತಮ್ಮ ತ್ರಿಕಾಲ ಲಿಂಗಪೂಜೆ ನೆರವೇರಿಸಿಕೊಂಡು ಸಾಗುತ್ತಿರವಾಗಲೇ ಒಂದು ವಿಚಿತ್ರ ಜರುಗಿತು. ಅವರಿಗೆ ವಿಪರೀತ ಭೇದಿಯು ಶುರುವಾಯಿತು. ಪ್ರತಿಸಲ ಭೇದಿಗೆ ತೆರಳಿದಾಗ ಬಾವಿ ನೀರನ್ನು ಸೇದಿ ಸ್ನಾನ ಮಾಡುವುದು ಮತ್ತೆ ಭೇದಿಗೆ ಸಾಗುವುದು. ದಿನಕ್ಕೆ ನಲವತ್ತು-ಐವತ್ತು ಸಲ ಭೇದಿಯಾಗಿ, ದೇಹದ ಶಕ್ತಿಯಲ್ಲಾ ಉಡುಗಿ ತಮಗೆ ಸ್ನಾನ ಪೂಜೆ ಮಾಡಲು ಆಗದಂತೆ ಮೈಯಲ್ಲೆಲ್ಲಾ ಉರಿ ಹೊಕ್ಕಂತಾಗಿ ನಿತ್ರಾಣರಾದರು. ಯಾವ ಔಷದಿಯೂ ನಾಟಲಿಲ್ಲ. ಕೊನಗೆ ನಿತ್ರಾಣರಾಗಿ ಪೂಜೆ ಜಪ ತಪ ತಗ್ಗಿ ಕೈ ಕಾಲುಗಳೆಲ್ಲ ಶಕ್ತಿ ಉಡಗಿ ಮೂರ್ಚಿತರಾಗಿ ಬಾವಿಯ ದಡದಲ್ಲಿ ಕುಸಿದರು. ಆ ಸಂದರ್ಭದಲ್ಲಿಯೇ ಸಕ್ರಿ ಕರಡೆಪ್ಪನವರು ಬಂದು ಚಿತ್ತರಗಿ ಪೀಠಕ್ಕೆ ಸಿದ್ಧರಾಗಿರಿ ಎಂದಂತೆ ಭಾಸವಾಗಿತ್ತು. ಇದೆ ಪ್ರಕಾರ ಅಂದೇ ಅಮರಪ್ಪ ದೇಸಾಯಿಯವರ ಸ್ವಪ್ನದಲ್ಲಿ ಕರಡೆಪ್ಪನವರು ಬಂದು ಮಳಿಯಪ್ಪಯ್ಯನವರನ್ನು ಕರೆತರಲು ನರೇಗಲ್ಲಿಗೆ ಹೋಗಿರಿ ಎಂದು ಹೇಳಿದಂತಾಯಿತು. ಮರುದಿನವೇ ರಾಮಪ್ಪ ದೇಸಾಯಿಯವರು ನರೇಗಲ್ಲಿಗೆ ಬಂದು ಮಳಿಯಪ್ಪಯ್ಯನವರ ಸ್ಥಿತಿಯನ್ನು ಕಂಡು ಚಿಂತಾಕ್ರಾಂತರಾಗಿ ವೈದ್ಯರನ್ನು ಕರೆಯಿಸಿ ಔಷದ ಉಪಚಾರದಿಂದ ಉಪಚರಿಸಿದಾಗ ಕಣ್ಣು ಬಿಟ್ಟ ಮಳಿಯಪ್ಪಯ್ಯನವರು ದೇಸಾಯಿಯವರನ್ನು ಕಂಡು ಕರಡೆಪ್ಪನವರ ಅಪ್ಪಣೆ ಮೇಲೆ ಬಂದಿದ್ದಿರೋ ಎಂದು ಕೇಳಿ ಹೌದು ಎಂದಾಗ ನಾನು ಅವರ ಮಾತನ್ನು ಒಪ್ಪಿಕೊಂಡೆ ಹಾಗಾದರೆ ಚಿತ್ತರಗಿಯ ಕಡೆ ತಾವು ಚಿತ್ತಯಸಬೇಕೆಂದು, ಚಿತ್ತರಗಿಯ ಸಂಸ್ಥಾನದ ಪೀಠಾಧಿಕಾರಿಯಾಗಲು ಅನುನಯಸಿ ಒಪ್ಪಿಸಿದರು. ಅದರಂತೆ ದೇಸಾಯಿಯರು ಪಟ್ಟಾಧಿಕಾರದ ಮುಹೂರ್ತ ಹಾಗೂ ಸಮಾರಂಭದ ದಿನಾಂಕವನ್ನು ಭಕ್ತರೊಂದಿಗೆ ಸಮಾಲೋಚಿಸಿ ಪಟ್ಟಾಧಿಕಾರದ ತಯಾರಿಯನ್ನು ನಡೆಸಿದರು. ಅದರಂತೆ ಶಾಲಿವಾಹನ ಶಕೆ ೧೮೦೯ ಪ್ರಮೋಧಿನಾಮ ಸಂವತ್ಸರ, ವೈಶಾಖ ಶುಕ್ಲದ ಚತುರ್ದಶಿ ಸೋಮವಾರ ಪಟ್ಟಾಧಿಕಾರ ನಡೆಯಬೇಕೆಂದು ನಿಗದಿಯಾಯಿತು. ಅದು ಕ್ರಿಸ್ತ ಶತಕ ೧೮೭೯ ಆಗಿತ್ತು. ಅಂದು ಭಕ್ತರೆಲ್ಲ ಕೂಡಿಕೊಂಡು ಒಳ್ಳೆ ವಿಜೃಂಭಣೆಯಿಂದ ಪಟ್ಟಾಧಿಕಾರ ಸಮಾರಂಭ ಜರುಗಿಸಿ ಶ್ರೀ.ಮ.ನೀ.ಪ್ರ ವಿಜಯಮಹಾಂತ ಶಿವಯೋಗಿಗಳೆಂದು ಅಭಿದಾನ ಹೊಂದಿ ಚಿತ್ತರಗಿಯ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಮುಂದಿನ ಮೂವತ್ತೊಂದು ವರುಷದವರೆಗೆ ಪೀಠಾಧಿಕಾರದ ಹೊಣೆಯನ್ನು ಹೊತ್ತು, ಸಮಾಜೋದ್ಧಾರಕ ಕಾಯಕವನ್ನು ಹೊತ್ತು ತಮ್ಮ ತ್ರಿಕಾಲ ಪೂಜೆ ನಿಷ್ಠೆಯಿಂದ ಭಕ್ತರ ಹೃದಯ ಮಂದಿರದಲ್ಲಿ ನಡೆದಾಡುವ ದೇವರೆಂದೇ ಪರಿಗಣಿತರಾದರು. ಪಟ್ಟವಾದ ನಂತರ ಹನ್ನೆರಡು ವರುಷಗಳ ಕಾಲ ಮೌನಾನುಷ್ಠಾನ ಕೈಗೊಳ್ಳುತ್ತಾರೆ.
ಚಿತ್ರ ಸಂಖೈ೨ : ಚಿತ್ತರಗಿಯ ಮೂಲ ಮಠ
ಶ್ರೀ ವಿಜಯಮಹಾಂತೇಶರನ್ನು ಪಟ್ಟಕ್ಕೆ ಕುಳ್ಳಿರಿಸಿದ ನಾರದ ಗದ್ದೆಯ ತಾತನವರು ಗುರುವಾಗಿ ಎಲ್ಲ ಜನರು ಕೇಳುವಂತೆ ಮಂತ್ರೋಪದೇಶವನ್ನು ಮಾಡಿದರು. ತಾವು ಸಧ್ಭಕ್ತಿ, ಸದ್ವಿವೇಕ, ಸುವಿರಕ್ತಿಯಿಂದ ನಡೆದುದಾರರೇ ತಮಗೆ ಲೋಕದಲ್ಲಿ ಯಾವ ಭಯವು ಬಾರದು. ಶರಣ ಕರಡೀಶ್ವರನ ಪರತರದ ಗರಡಿಯಲ್ಲಿ ಪಳಗಿದ ತಮ್ಮಂಥ ಅಮೂಲ್ಯ ರತ್ನವನ್ನು ರಾಮಪ್ಪ ದೇಸಾಯಿಯವರು ದೊರಕಿಸಿ ತಂದಿರುವುದು ಇಳಕಲ್ ನಾಡಿನ ಮಹಾ ಪುಣ್ಯವೆಂದು ಭಾವಿಸಬೇಕಾಗಿದೆ. ಗುರುಮಹಾಂತೇಶನ ಅನುಕರಣೆ ಮಾಡುತ್ತಾ ಜೀವನವನ್ನು ಪವಿತ್ರವಾಗಿ ಮಾರ್ಪಡಿಸಿಕೊಳ್ಳಿರಿ ಎಂದು ಹೇಳಿ ವಿಜಯಮಹಾಂತೇಶನಿಗೆ “ಕರಣಹಸಿಗೆ, ಮಂತ್ರಗೌಪ್ಯ, ಶೂನ್ಯಸಂಪಾದನೆ, ಬಸವೇಶ್ವರನ ವಚನ ಹೊತ್ತಿಗೆ, ಶತಕ ತ್ರಯ” ಮೊದಲಾದ ಪವಿತ್ರ ಗ್ರಂಥಗಳನ್ನು, ಭಕ್ತಿ, ಕ್ರಿಯಾ, ಜ್ಞಾನಗಳನ್ನು ವಿಕಾಸ ಮಾಡಿಕೊಳ್ಳಲು ಆಶೀರ್ವದಿಸಿದರು. ವಿಜಯಮಹಾಂತೇಶರು ಆ ಗ್ರಂಥಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಗುರುಗಳ ಶ್ರೀಪಾದಕ್ಕೆ ಅಭಿವಂದಿಸಿದರು. ಮುಂದೆ ಹನ್ನೆರಡು ವರುಷ ಮೌನಾನುಷ್ಠಾನದಲ್ಲಿ ಇದ್ದಾಗ ಈ ಎಲ್ಲ ಗ್ರಂಥಗಳ ಅಧ್ಯಯನಕ್ಕೆ ತೊಡಗಲು ಅದರ ಜ್ಞಾನದಿಂದ ಅವರ ಆತ್ಮೋದ್ಧಾರ, ಸಮಾಜೋದ್ಧಾರ ಎರಡನ್ನು ನಿಭಾಯಿಸಲು ಸಾಧ್ಯವಾಯಿತು.
ಶ್ರೀ ವಿಜಯಮಹಾಂತೇಶರು ಮೃಷ್ಟಾನ್ನವನ್ನು ಬಯಸದವರು. ಪಲ್ಲಕ್ಕಿಯಲ್ಲಿ ಮೆರೆಯದವರು. ಅವರಿಗೆ ಗಾದಿ ತೆಕ್ಕೆ ತೂಗು ಮಂಚವು ಬೇಡವೇ ಬೇಡ. ಅವರು ದಿನಾಲೂ ಅನ್ನ, ಮುದ್ದೆ, ಬೇಳೆಸಾರು, ಪಲ್ಯ, ಆಕಳ ಹಾಲು ಇಷ್ಟೇ ಪ್ರಸಾದ ರೂಪದಿಂದ ಸೇವಿಸುತ್ತಿದ್ದರು.
ಚಿತ್ತರಗಿ ಇಳಕಲ್ ಮಠವು ಮೂಲ ಸಂಸ್ಥಾನ ಪೀಠವು ಅದಕ್ಕೆ ಛತ್ರ ಚಾಮರ ಪಲ್ಲಕ್ಕಿ ಕುದುರೆ ಸವಾರರು ವಂದಿಮಾಗಧರು ಮೊದಲಾದ ಸರಂಜಾಮು ಇದ್ದರೂ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಪೀಠದ ೫೬ ಶಾಖಾ ಮಠಗಳ ವ್ಯವಸ್ಥೆಯನ್ನು ನೋಡಲಿಕ್ಕೆ ಬೇರೆ ಊರುಗಳಿಗೆ ಹೋಗಬೇಕಾದಾಗ ಒಂದು ಬಿಳಿ ಕುದುರೆಯನ್ನು ಮಾತ್ರ ಏರಿ ಹೋಗುತ್ತಿದ್ದರು. ಅವರೇ ಪ್ರೀತಿಯಿಂದ ಸಾಕಿದ ಒಂದು ಗೋವಿಗೆ ಮಹಾಂತಮ್ಮನೆಂದು ಹೆಸರಿಟ್ಟಿದ್ದರು. ಆ ಮಹಾಗೋವಿಗೆ ಶ್ರೀಗಳು ತನ್ನ ಹೊಟ್ಟೆಯ ಮಗುವೊ ಎಂದು ವಾತ್ಸಲ್ಯವನ್ನು ತೋರಿಸುತ್ತಿದ್ದರು.
ಶಿವಯೋಗಮಂದಿರದ ನಿರ್ದೇಶನ
ಕ್ರಿಸ್ತ ಶಕೆ ೧೯೦೮ರಲ್ಲಿ ಬಾಗಲಕೋಟೆಯಲ್ಲಿ ನಾಲ್ಕನೆಯ ವೀರಶೈವ ಮಹಾಸಭೆ ಜರುಗಿತು. ಶ್ರೀಮಂತ ಒಂಟಮುರಿ ದೇಸಾಯಿಯವರ ಅಧ್ಯಕ್ಷತೆಯಲ್ಲಿ ತೆಂಗಿನಮಠದಲ್ಲಿ ನೆರೆವೇರಿತು. ಆ ಅಧಿವೇಶನದಲ್ಲಿ ಗುರು ವಿರಕ್ತಮಠದ ವಟುಗಳನ್ನು ತರಬೇತಿಗೊಳಿಸುವ ಒಂದು ಶಿವಯೋಗಾಶ್ರಮವನ್ನು ಸ್ಥಾಪಿಸಬೇಕೆಂಬ ಠರಾವು ಸರ್ವಾನುಮತದಿಂದ ಸ್ವೀಕೃತವಾಯಿತು. ಆ ಪ್ರಕಾರ ಅಧಿವೇಶನದ ಮರುದಿನವೇ ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಅಂತಹ ಪವಿತ್ರ ಸ್ಥಳವನ್ನು ಪರಮಪೂಜ್ಯರಾದ ಶ್ರೀ ಚಿತ್ತರಗಿ ವಿಜಯಮಹಾಂತ ಸ್ವಾಮಿಗಳು ಹುಡುಕಿ ಕೊಡಬೇಕೆಂದು ಅದಕ್ಕಾಗಿ ಪೂಜ್ಯಪಾದರಿಗೆ ಬಿನ್ನವಿಸಿಕೊಳ್ಳಲು ಶ್ರೀ ಹಾನಗಲ್ ಕುಮಾರ ಶಿವಯೋಗಿಗಳನ್ನು ಅಣಿಗೊಳ್ಳಬೇಕೆಂದು ನಿರ್ಧರಿಸಿದರು.
ಚಿತ್ರ ಸಂಖ್ಯೆ ೩ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳಲ್ಲಿ ಶಿವಯೋಗಮಂದಿರ ಸ್ಥಳ ಸೂಚನೆಗೆ ಅರಿಕೆ
ಆ ಪ್ರಕಾರ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು, ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳ ಬಳಿಗೆ ಬಂದು ನಮಸ್ಕರಿಸಿ ಪರಸ್ಪರ ಯೋಗಕ್ಷೇಮದ ಬಗ್ಗೆ ಮಾತಕತೆ ಆದ ಬಳಿಕ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು “ಪೂಜ್ಯರೇ, ಈಗ ವೀರಶೈವರು ಧರ್ಮಾಚಾರಣೆಯನ್ನು ಬಿಟ್ಟು ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿರುವರು. ಮಠದ ಪೀಠಾಧಿಕಾರಿಗಳು ಸ್ವತಃ ಷಟಸ್ಥಲ ಜ್ಞಾನವಿಲ್ಲದೆ ಮನಬಂದಂತೆ ಏನೋ ಸಂಪ್ರದಾಯದ ವಶದಿಂದ ಸ್ವಾಮಿಗಳಾಗಿ ನಿಜವಾದ ಯೋಗ್ಯತೆ ಇಲ್ಲದೇ ದರ್ಪದಿಂದ ನಡೆದು ಭಕ್ತರನ್ನು ಅಂಧಾನುಯಾಯಿಗಳಾಗಿ ಶೋಷಿಸುತ್ತಿದ್ದಾರೆ. ಮಠದ ಪೀಠಾಧಿಪತೆಗಳೇ ಅನಾಢ್ಯರಾಗಿರುವಾಗ ಶಿಷ್ಯಕೋಟಿಯು ಸುಧಾರಣೆಯಾಗುವುದು ಹೇಗೆ ಎಂದು ವಿಚಾರಿಸುತ್ತಿರುವಾಗ ಈಗಿನ ಮಠಾಧಿಪತಿಗಳಲ್ಲಿ ನಿಜವಾದ ಲಿಂಗ ನಿಷ್ಠೆ ಕಡಿಮೆ. ಶಾಸ್ತ್ರೋಕ್ತ ಪೂಜಾವಿಧಾನಗಳನ್ನರಿಯರು, ಯೋಗಾಭ್ಯಾಸ ವರ್ಜಿತರು. ಆದುದರಿಂದ ಅಂತಹವರಿಗೆ ತರಬೇತಿ ಕೊಟ್ಟು ಅರ್ಹರನ್ನಾಗಿ ಮಾಡುವ ಶಿವಯೋಗ ಆಶ್ರಮದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಆದರಿಂದ ಆ ಪೀಠಗಳಿಗೆ ಶಿವಕಳೆ ಕುಂದಿಹೋಗಿದೆ. ಕಾರಣ ತಾವು ಯಾವ ಸ್ಥಳವನ್ನು ಹುಡುಕಿ ನಮಗೆ ತೋರಿಸುವಿರೋ ಅಲ್ಲಿಯೇ ಶಿವಯೋಗಾಶ್ರಮವನ್ನು ರಚಿಸಬೇಕೆಂದು ನಿರ್ಣಯಸಿದ್ದೇವೆ” ಎಂದು ಹಾನಗಲ್ ಕುಮಾರ ಶಿವಯೋಗಿಗಳು ನುಡಿಯಲು ಶ್ರೀ ವಿಜಯಮಹಾಂತೇಶರು
“ಕುಮಾರ ಯೋಗಿಯೇ, ನೀನು ಬೇರಲ್ಲ, ಶಿವನು ಬೇರಲ್ಲ ನಮ್ಮ ಜನರು ಮಂದಭಾಗ್ಯರು, ಅಜ್ಞಾನ ಅಂಧಕಾರದಲ್ಲಿ ಮುಳುಗಿ ತೊಳಲುತ್ತಿರುವರು ತಮ್ಮಿಂದ ಜ್ಞಾನ ಜ್ಯೋತಿಯು ಬೆಳಗಬೇಕಾಗಿದೆ ನಿನ್ನಿಚ್ಛೆಯೇ ಶಿವನೇಚ್ಛೆಯೂ” ಅದಕ್ಕಾಗಿ ನೀವು ಒಳ್ಳೆಯ ಯೋಜನೆಯನ್ನೇ ಕೈಗೊಂಡಿರುವಿರಿ. ತಮ್ಮ ಕಾರ್ಯಕ್ಕೆ ಶೀಘ್ರವೇ ಯಶಸ್ಸು ದೊರಕುತ್ತದೆ. ನಾನು ಆ ಕಾರ್ಯಕ್ಕೆ ಸದಾ ಸಿದ್ದ. ಸದ್ಯ ಹೊರಡುವೆನು ನಡೆಯಿರಿ ಎಂದು ಹೇಳಿ ತಮ್ಮ ಕುದರೆಯನ್ನೇರಿ ಯೋಗ್ಯ ಸ್ಥಳ ಹುಡುಕಲು ಹೊರಟರು. ಹಾನಗಲ್ ಕುಮಾರ ಶಿವಯೋಗಿಗಳಿಗೆ ತಮ್ಮ ರಥದಲ್ಲಿ ಜೊತೆಗೆ ಬರಲು ತಿಳಿಸಿದರು. ಈ ಸುದ್ದಿ ಕೇಳಿ ದಾರಿಯುದ್ದಕ್ಕೂ ಹಲವಾರು ಜನ ಭಕ್ತರು, ಸ್ವಾಮಿಗಳು ಹಿಂಬಾಲಿಸಿ ಹೊರಟರು.
ಶ್ರೀಗಳಿಗೆ ದಾರಿಯುದ್ದಕ್ಕೂ ಜನರು ತಳಿರು ತೋರಣಗಳಿಂದ ಮಂಗಳ ವಾದ್ಯಗಳಿಂದ ಪ್ರಭುವಿಗೆ ದೀಪಾರುತಿಯನ್ನು ಬೆಳಗಿ ಭಜನಾ ಮೇಳಗಳು ಜನರ ಜೈಘೋಷದೊಡನೆ ಪ್ರತಿದ್ವನಿಯಾಯಿತು. ಮಲಪಹಾರಿಯ ಗುಂಟ ಹೋರಟ ಶ್ರೀಗಳು ಮೊದಲು ಐಹೊಳೆಗೆ ದಯಮಾಡಿಸಿದರು ಅಲ್ಲಿಯ ಅನೇಕ ಗವಿಗಳು ಸುಂದರ ಶಿಲಾ ಮೂರ್ತಿಗಳು ಮನೋಹರವಾದ ಸೃಷ್ಟಿ ಸೌಂದರ್ಯಕ್ಕೆ ಆಕರ್ಷಣೆಯಾಗಿ ಕೆಲವರು ಆ ಸ್ಥಳವು ಯೋಗ್ಯವೆಂದು ಪೂಜ್ಯರಿಗೆ ಅರಿಕೆ ಮಾಡಿಕೊಂಡರು ಅದಕ್ಕೆ ಶ್ರೀಗಳು ಇಲ್ಲಿ ರಾಮಲಿಂಗೇಶ್ವರ ಗುಡಿಯೂ ಇದೆ. ಪ್ರತಿ ನಿತ್ಯ ಇಲ್ಲಿ ಅನೇಕ ಪ್ರವಾಸಿಗಳು ಬಂದು ಹೋಗುವದರಿಂದ ಏಕಾಂತಕ್ಕೆ ಶಾಂತತೆಗೆ ಆಸ್ಪದ ಇಲ್ಲವಾದುದರಿಂದ ಈ ಸ್ಥಳ ನಿರಾಕರಿಸಿ ಮುಂದೆ ಪಟ್ಟದಕಲ್ಲಿಗೆ ಬರುತ್ತಾರೆ. ಅದು ಹಿಂದೆ ಚಾಲುಕ್ಯ ರಾಜರು ಪಟ್ಟಕ್ಕೆ ಕೂಡ್ರುವ ಸ್ಥಳವಾಗಿದ್ದಿತು. ಅಲ್ಲಿ ರಾಜಮನೆತನದ ಕುರುಹುಗಳು, ದೇವಾಲಯಗಳು ಇದ್ದುದನ್ನು ನೋಡಿ ಕೆಲವರು ಆ ಸ್ಥಾನವು ಏಕಾಂತಕ್ಕೆ ಹಾಗೂ ಶಾಂತತೆಗೆ ಯೋಗ್ಯ ಎಂದು ವಿಜ್ಞಾಪಿಸಿದಾಗ ಆಗ ಶ್ರೀಗಳು ಅತ್ತಿತ್ತ ನೋಡುವಷ್ಟರಲ್ಲಿ ಘಟಸರ್ಪವೊಂದು ಹೆಡೆಯೆತ್ತಿ ಆಡುವುದನ್ನು ಕಂಡು ಜನರಿಗೆ ಅತ್ತ ನೋಡಿರಿ ನಾಗೇಂದ್ರನು ಈ ಸ್ಥಳವು ಬೇಡೆಂದು ಹೆಡೆಯನ್ನು ಅಲ್ಲಾಡಿಸಿ ಹೇಳುತ್ತಿರುವಂತೆ ಭಾಸವಾಯಿತು. ತ್ಯಾಗಿಗಳಾದ ವಿರಕ್ತರಿಗೆ ಈ ಭೋಗದ ರಾಜ್ಯದ ತಾಣವೇ ಬೇಡೆಂದು ಹೇಳಿ ಮುಂದೆ ಸಾಗಿದರು. ಪಟ್ಟದಕಲ್ಲಿನಿಂದ ಕುಮಾರಶಿವಯೋಗಿಗಳ ನೇತೃತ್ವದಲ್ಲಿ ಒಂದು ತಂಡ ಮಹಾಕೂಟದ ಕಡೆಗೆ ಸಾಗುವಂತೆ ಶ್ರೀಗಳು ನಿರ್ದೇಶಿಸಿದರು. ನಾವು ಬಂದು ನಿಮ್ಮನ್ನು ಸೇರುತ್ತೇವೆ ಎಂದು ವಿಜಯಮಹಾಂತ ಶಿವಯೋಗಿಗಳು ಮಲಪಹಾರಿ ಬಲದಂಡೆ ನದಿಯಗುಂಟ ಶಿವಯೋಗ ಮಂದಿರದ ಸ್ಥಳ ಅರಸುತ್ತ ಹೊರಟರು ಜೊತೆಯಲ್ಲಿ ಅನೇಕ ಭಕ್ತರು ಗೋಮಾತೆ ಮಹಾಂತಮ್ಮಳು ಸಾಗಿದಳು.
ವಿಪರೀತವಾದ ಬಿಸಿಲು, ದಟ್ಟವಾದ ಮುಳ್ಳು ಕಂಟಿಗಳಿಂದ ಕೂಡಿದ ಕಾಡು ಪ್ರದೇಶವನ್ನು ದಾಟಿಕೊಂಡು ಬರುವಾಗ ʼನೆಲುವಿಗೆʼ ಎಂಬ ಗ್ರಾಮಕ್ಕೆ ಬಂದಾಗ ಕೃಷಿ ಕೆಲಸದಲ್ಲಿ ತೊಡಗಿದ ಒಬ್ಬ ವ್ಯಕ್ತಿಯನ್ನು ಇಲ್ಲಿ ಎಲ್ಲಿಯಾದರೂ ಪತ್ರಿವನವಿದೆಯೇ? ಎಂದು ಕೇಳಿದಾಗ , ಆ ವ್ಯಕ್ತಿಯು ಈ ಕುರುಚಲು ಕಾಡಿನ ದುರ್ಗಮ ದಾರಿಯಲ್ಲಿ ಇನ್ನು ಕ್ರಮಿಸಿದರೆ ಅಲ್ಲಿ ಪತ್ರಿ ಗಿಡಗಳ ವನವೇ ಇದೆ ಆದರೆ ದಾರಿಯಲ್ಲೆಲ್ಲ ವಿಪರೀತ ಡಬ್ಗಳ್ಳಿ ಕಂಟಿಗಳು ಇರುವುದರಿಂದ ಸುಲಭವಾಗಿ ಸಾಗುವುದು ಸುಲಭವಲ್ಲ ಎಂದಾಗ, ಅದೇನೇ ಆಗಲಿ, ಆ ಪತ್ರಿ ವನವನ್ನು ತೋರು ಬಾ ಎಂದು ಕರೆದಾಗ ಒಳ್ಳೆ ಹುಮ್ಮಸ್ಸಿನಿಂದ ದಾರಿಯಲ್ಲಿ ಇರುವ ಮುಳ್ಳು ಕಂಟಿಗಳನ್ನು ಸವರುತ್ತ ಸವರುತ್ತ ಮುಂದೆ ಸಾಗಿದಾಗ ದಟ್ಟವಾದ ಗಿಡಗಳ ಸಮೃದ್ಧಿಯಿಂದ ಕೂಡಿದ ಪ್ರದೇಶವು ಗೋಚರವಾಯಿತು. ಅದಕ್ಕೆ ಕೆಲವರು ಇಂತಹ ದುರ್ಗಮ ಪ್ರದೇಶದಲ್ಲಿ ಹಾಡು ಹಗಲೇ ಕೊಳ್ಳೆಹೊಡೆಯುವ ಕಳ್ಳರಿದ್ದಾರೆ ಇಲ್ಲೇಕೆ ಸ್ವಾಮಿ ಎನ್ನುವಂತಹ ಸಂಶಯವು ಕೆಲವರಲ್ಲಿ ಉದ್ಭವವಾಯಿತು. ಅಂತಹ ದುರ್ಗಮ ಪ್ರದೇಶವನ್ನು ದಾಟಿಕೊಂಡು, ಗುಂಪು ಗುಂಪಾಗಿ ಬೆಳೆದ ಪತ್ರಿ ವನವನ್ನು ಕಂಡರು. ಅಲ್ಲಿಯೇ ಪುಟ್ಟದಾದ ಪುರಾತನವಾದ ಕೊಟ್ಟೂರು ಬಸವೇಶ್ವರನ ದೇವಸ್ಥಾನ ಇದೆ ಎಂದು ಹೇಳಿ ನೆಲವಿಗೆಯ ಆ ವ್ಯಕ್ತಿಯು ನಾವು ಶ್ರಾವಣ ಮಾಸದಲ್ಲಿ ಇಲ್ಲೇ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಚಿತ್ರ ೪ : ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿ ಗಳಿಂದ ಶಿವಯೋಗಮಂದಿರದ ಸ್ಥಳ ಗುರುತು
ಅಲ್ಲಿಗೆ ಬಂದು ನಿಂತಾಗ ಪುರಾತನ ನಂದಿ ವಿಗ್ರಹವನ್ನು ಕಂಡು ಶ್ರೀಗಳು ನೀ ಕೊಟ್ಟರೂ ಬಸವೇಶ, ಕೊಡದಿದ್ದರೂ ಬಸವೇಶ, ನೀ ಕೊಟ್ಟೂರು ಬಸವೇಶ ಎಂದು ಸಂಭೋದಿಸಿ ಅಲ್ಲೇ ಮುಂದೆ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುತ್ತ ಮಹಾಂತಮ್ಮನನ್ನು ಮಂದಿರಕ್ಕೆ ಸರಿಯಾದ ಸ್ಥಳವೇನಮ್ಮಾ ಎಂದಾಗ ಒಳ್ಳೆಯದು ಎಂದು ಮೌನವಾಗಿ ಗೋಣು ಆಡಿಸಿತು. ಅದೇ ಮಹಾಂತಮ್ಮನ ಸಮ್ಮತಿಯೆಂದು, ಅದೇ ಸ್ಥಳ ಶಿವಯೋಗ ಮಂದಿರಕ್ಕೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಮಹಾಕೂಟದಲ್ಲಿ ಇದ್ದ ಹಾನಗಲ್ ಕುಮಾರಶಿವಯೋಗಿಗಳನ್ನು ಕರೆಯಿಸಿದಾಗ ಮಹಾಂತಪ್ಪಗಳು ಒಂದು ಕಲ್ಲು ಬಂಡೆಯ ಮೇಲೆ ಪ್ರಸನ್ನಚಿತ್ತರಾಗಿ ಕುಳಿತಿದ್ದನ್ನು ಕಂಡ ಕುಮಾರಶಿವಯೋಗಿಗಳು ಆನಂದಭರಿತರಾಗಿ ತಾವು ಯೋಗ್ಯವಾದ ಸ್ಥಳವನ್ನೇ ಆಯ್ಕೆ ಮಾಡಿರುವಿರಿ ಎಂದು ಆನಂದದಿಂದ ಕೊಂಡಾಡಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಇಲ್ಲಿಯೇ ಮಂದಿರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂದು ಒಪ್ಪಿಕೊಂಡರು. ಆಗ ಬಾಗಲಕೋಟೆಯ ಕೆಲ ಭಕ್ತರು ಇಂತಹ ಗಾಢವಾದ ಅರಣ್ಯದಲ್ಲಿ ಅನೇಕ ಕ್ರೂರ ಪ್ರಾಣಿಗಳಿರುತ್ತವೆ. ಮಂದಿರಕ್ಕೆ ಇದು ಸರಿಯಾದ ಸ್ಥಳವಲ್ಲ ಎಂದು ನಿರಾಕರಿಸಿದರೂ ಕುಮಾರ ಶಿವಯೋಗಿಗಳು ಇದೆ ಮಂದಿರ ಕಟ್ಟಲು ಪ್ರಶಸ್ತ ಮತ್ತು ಪ್ರಶಾಂತ ಸ್ಥಳವೆಂದು ಲಿಂಗ ಮುದ್ರೆಯನ್ನು ಹಾಕಿದರು. ಮುಂದೆ ಅಷ್ಟೇ ಸ್ಥಳ ಸಾಕಾಗದೆಂದು ನೆರೆಯ ಪ್ರದೇಶದ ಒಡೆಯರನ್ನು ಕರೆಯಿಸಿ ಯೋಗ್ಯ ಬೆಲೆಗೆ ಆ ಸ್ಥಳವನ್ನು ಕೊಂಡುಕೊಳ್ಳಲು ವಿಚಾರಾಸಿದಾಗ ೫೦೦ ರೂಪಾಯಿಗಳಿಗೆ ಕೊಡುತ್ತೇನೆ ಎಂದು ಹೇಳಿದಾಗ ೩೦೦ ರೂಪಾಯಿಗಳಿಗೆ ಕೊಡು ಎಂದು ಹೇಳಿದರು. ಆಗ ಆತನು ನಾನು ಹೊಲವನ್ನು ಮಾರುವುದೇ ಇಲ್ಲ ಎಂದನು ಆಗ ವಿಜಯಮಂಹಾಂತೇಶ ಶ್ರೀಗಳು ಆ ಹೊಲವನ್ನು ಆತನು ಕೊಡದಿದ್ದರೆ ಬಿಡಲಿ, ಲೀಲಾವಿನಲ್ಲಿ ಅದು ನಮಗೆ ಸಿಕ್ಕೇ ಸಿಗುತ್ತದೆ ಎಂದು ಭವಿಷ್ಯ ನುಡಿದರು ಆ ಪ್ರಕಾರ ಆ ಬ್ರಾಹ್ಮಣನು ತಾನು ಮಾಡಿದ ಸಾಲಕ್ಕಾಗಿ, ಆ ಹೊಲವನ್ನು ಸರಕಾರದವರು ಲೀಲಾವಿಗೆ ಹಚ್ಚಲಾಗಿ ೨೦೦ ರುಪಾಯಿಗೆ ಆ ಹೊಲ ಮಂದಿರಕ್ಕೆ ಸೇರ್ಪಡೆಯಾಯಿತು. ಇದಲ್ಲದೆ ಶ್ರೀ ಹಾನಗಲ್ ಸ್ವಾಮಿಗಳು ನೆರೆಯ ಮತ್ತೆರಡು ಹೊಲಗಳನ್ನು ಖರೀದಿಗೆ ತೆಗೆದುಕೊಂಡು ಅಲ್ಲಿ ಶಿವಯೋಗ ಮಂದಿರವನ್ನು ಸ್ಥಾಪನೆ ಮಾಡಿದರು. ಮುಂದೆ ಅನೇಕ ಮಠಪೀಠಗಳನ್ನು ಬೆಳಗುವ ಚಿಜ್ಯೋತಿಗಳು ಈ ಶಿವಯೋಗ ಮಂದಿರದಿಂದ ಹೊರಹೊಮ್ಮಿದವು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಹಾನಗಲ್ ಕುಮಾರ ಶಿವಯೋಗಿಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು. ಹೀಗೆ ೧೯೦೯ರಲ್ಲಿ ಆರಂಭಗೊಂಡ ಶಿವಯೋಗ ಮಂದಿರದ ಕಾರ್ಯ ನಾಲ್ಕೈದು ವರುಷಗಳ ಕಾಲ ಜರುಗಿತು.
ಶ್ರೀ ವಿಜಯಮಹಾಂತ ಶಿವಯೋಗಿಗಳು ಶಕೆ ೧೮೩೩ ವಿರೋಧಿಕೃತ ನಾಮ ಸಂವತ್ಸರದ ಕಾರ್ತೀಕ ಶುದ್ಧ ಪಂಚಮಿಯಲ್ಲಿ ಲಿಂಗೈಕ್ಯರಾದರು ಅದು ಕ್ರೈಸ್ತ ಶಕ ೧೯೧೧ರ ಶುಕ್ರವಾರ ಆಗಿತ್ತು. ಅವರ ಸ್ಥೂಲ ದೇಹವು ನಶ್ವರವಾದರೂ ಅವರ ಚೈತನ್ಯವು ಗದ್ದುಗೆಯ ರೂಪದಿಂದ ಭಕ್ತರನ್ನು ಸದಾ ಕಾಯುತ್ತಲಿದೆ.
ಚಿತ್ರ ಸಂಖ್ಯೆ ೫ : ಶ್ರೀ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ
ಚಿತ್ರ ಸಂಖ್ಯೆ ೬ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು ಕಟ್ಟಿಸಿದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ
ಕನ್ನಡಭಾಷಾಂತರ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,
ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
ಶ್ರದ್ಧೆ ಭಕ್ತಿ ಮತ್ತು ಶ್ರದ್ಧೆಗಳಲ್ಲಿ ವ್ಯತ್ಯಾಸವಿದೆ . ದೇವಸ್ಥಾನದ ಮೂರ್ತಿಯಲ್ಲಿರುವ ಆಸಕ್ತಿಯು ಭಕ್ತಿಯಲ್ಲ , ಅದು ಶ್ರದ್ಧೆ ಎನಿಸುತ್ತದೆ . ಶ್ರದ್ಧೆಯು ಭಕ್ತಿಯಲ್ಲ . ಅದು ನಿಶ್ಚಿತವಾಗಿಯೂ ಭಕ್ತಿಯಮಾರ್ಗ , ಶ್ರದ್ಧೆ ಇರುವುದೇನೂ ಮಹತ್ವದ ಸಂಗತಿಯಲ್ಲ ಆದರೆ ಶ್ರದ್ಧೆ ಇಲ್ಲದೇ ಇರುವುದು ತುಂಬಾ ಮಹತ್ವದ ಸಂಗತಿ ಎನಿಸುತ್ತದೆ . ಉದಾಹರಣೆಗೆ ನಮಗೆ ಅಕ್ಷರಜ್ಞಾನವಿದ್ದರೆ ಅದರಲ್ಲಿ ವಿಶೇಷವೇನೂ ಅನಿಸುವುದಿಲ್ಲ . ಆದರೆ ಅಕ್ಷರಜ್ಞಾನವೇ ಇಲ್ಲದಿದ್ದರೆ ಹೆಚ್ಚಿನ ಜ್ಞಾನವನ್ನು ಪಡೆಯುವುದು ಅಸಂಭವವೇ ಸರಿ . ಈ ದೃಷ್ಟಿಯಿಂದ ನಮ್ಮಲ್ಲಿ ಶ್ರದ್ಧೆಯೇ ಇಲ್ಲದಿದ್ದರೆ ಭಕ್ತಿಯು ಬರಲು ಸಾಧ್ಯವೇ ಇಲ್ಲ . ನಾನು – ನನ್ನದು ಎಂಬ ಅಹಂಕಾರ ಮಮಕಾರಗಳಿಂದ ಮುಕ್ತವಾಗುವುದೇ ನಿಜಾರ್ಥದಲ್ಲಿ ಭಕ್ತಿ ಎನಿಸುವದು . ಭಾರತದೇಶದೆಲ್ಲೆಡೆ ಭಕ್ತಿಭಾವವು ಓತಪ್ರೋತವಾಗಿದೆ . ಆದರೆ ಅದು ಸಾಮಾನ್ಯವಾದ ಶ್ರದ್ಧೆಯಾಗಿದೆ . ಶ್ರದ್ಧೆಯು ಬಾಲಭಾವ ( ಮಕ್ಕಳ ಭಾವ ) ಎನಿಸುತ್ತದೆ . ಇತ್ತ ಜ್ಞಾನವೂ ಇಲ್ಲ , ಅತ್ತ ಶ್ರದ್ಧೆಯೂ ಇಲ್ಲದ ಸಂದೇಹವುಳ್ಳ ಜನರಿಂದ ಏನೂ ಸಾಧಿತವಾಗುವುದಿಲ್ಲ . ಅಂಥವರಿಗೆ ಯಾವ ವಸ್ತುವೂ ದಕ್ಕುವುದು ಸಾಧ್ಯವಿಲ್ಲ . ಅಕಸ್ಮಾತ್ ಏನಾದರೂ ದಕ್ಕಿದರೆ ಅದರ ವಿಷಯದಲ್ಲಿಯೂ ಅವರಿಗೆ ಸಂಶಯ ಹುಟ್ಟುವುದು . ಜ್ಞಾನವೂ ಇಲ್ಲ , ಜ್ಞಾನದ ಸಾಧನವಾದ ಶ್ರದ್ಧೆಯೂ ಇಲ್ಲವಾದರೆ ಉಳಿಯುವುದೊಂದೇ ಸಂಶಯಮಾತ್ರ ಇಂಥ ಸಂಶಯಿ ಸಂಪೂರ್ಣವಾಗಿ ನಾಶವಾಗುತ್ತಾನೆ . ( ಸಂಶಯಾತ್ಮಾ ವಿನಶ್ಯತಿ ) ಆದರೆ ಸಾಮಾನ್ಯವಾಗಿ ಜನರಲ್ಲಿ ಜ್ಞಾನವಿಲ್ಲದಿದ್ದರೂ ಶ್ರದ್ಧೆಯಂತೂ ಇದ್ದೇ ಇರುತ್ತದೆ . ಇಂತಹ ಪ್ರಾಮಾಣಿಕ ಮತ್ತು ಮೂಲಭೂತವಾದ ಶ್ರದ್ಧೆ ಇಲ್ಲದಿದ್ದರೆ ಜೀವನ ನಡೆಯುವುದೇ ಕಷ್ಟವಾಗುತ್ತದೆ . ಸಾಮಾನ್ಯ ಜನರು ‘ ರಾಮ – ಕೃಷ್ಣ – ಹರಿ ಎನ್ನುತ್ತಾರೆ . ಹಾಗೆಯೇ ಚೈತನ್ಯ ಮಹಾಪ್ರಭುಗಳೂ ಕೂಡ ‘ ರಾಮ – ಕೃಷ್ಣ – ಹರಿ ‘ ಎನ್ನುತ್ತಿದ್ದರು . ಇವೆರಡರಲ್ಲಿಯೂ ಇರುವ ವ್ಯತ್ಯಾಸವೇನು ? ಸಾಮಾನ್ಯ ಜನರು ಹಾಗೆ ಅನ್ನುವಲ್ಲಿ ಶ್ರದ್ಧೆ ಇದೆ . ಹರಿನಾಮ ಸ್ಮರಣೆ ಏನೋ ನಡಿಯುತ್ತದೆ . ಆದರೆ ಅದಕ್ಕೆ ತಕ್ಕ ಆಚರಣೆ ಇಲ್ಲವಾದರೆ ಅದು ಡಂಭಾಚಾರವಲ್ಲವೆ ? ಖಂಡಿತವಾಗಿಯೂ ಅದು ಡಂಭಾಚಾರವಲ್ಲ . ಒಂದಿಬ್ಬರು ಡಂಭಾಚಾರಿಗಳಿದ್ದರೂ ಇರಬಹುದು . ಆದರೆ ಲಕ್ಷ – ಕೋಟಿ ಸಂಖ್ಯೆಯ ಜನ ಹರಿನಾಮ ಸ್ಮರಣೆ ಮಾಡುತ್ತಾರೆ . ಅದು ಡೋಂಗಿ ಅಲ್ಲ , ಶ್ರದ್ಧೆಯಾಗಿದೆ . ಆದರೆ ಶ್ರದ್ಧೆ ಮತ್ತು ಭಕ್ತಿಗಳಲ್ಲಿರುವ ವ್ಯತ್ಯಾಸವನ್ನು ನಾವು ಅರಿಯದಿದ್ದರೆ ಅದು ಭಕ್ತಿಯ ಅನುಕರಣ ಮಾತ್ರ ಎನಿಸುವುದು . ಹರಿನಾಮ ಸ್ಮರಣೆ ಮಾಡುವ ಸಂದರ್ಭದಲ್ಲಿ ಚೈತನ್ಯ ಮಹಾಪ್ರಭುಗಳು ಕುಣಿಯುತ್ತಿದ್ದರು . ಅವರಂತೆ ಯಾರಾದರೂ ನಾಮಸ್ಮರಣೆ ಮಾಡುವಾಗ ಕುಣಿದರೆ ಅವರಿಗೆ ಚೈತನ್ಯ ಮಹಾಪ್ರಭುಗಳಿಗಾದ ಅನುಭೂತಿ ಉಂಟಾಗಬಹುದೆ ? ಶ್ರದ್ಧೆಯೊಡನೆ ನಿಷ್ಠೆಯೂ ಮೇಳೈಸಿದಾಗ ಭಕ್ತಿಯ ರೂಪ ಪ್ರಕಟಗೊಳ್ಳುವುದು . ಉಪಾಸನೆಯಲ್ಲಿ ಜ್ಞಾನವು ಅಪೇಕ್ಷಿತವಲ್ಲ . ಆದರೆ ಶ್ರದ್ಧೆಯು ಅಪೇಕ್ಷಿತವಾಗಿದೆ . ಶ್ರದ್ಧೆಯು ಉಪಾಸನೆಯ ಪ್ರಾಣತತ್ವವಾಗಿದೆ . ಶ್ರದ್ಧೆ ಇಲ್ಲದ ಸಾಧನೆಯು ವ್ಯರ್ಥವಾದುದು . ಮನುಷ್ಯನಲ್ಲಿ ಪ್ರಾಣವಿರುವಷ್ಟು ಶ್ರದ್ಧೆಯೂ ಇರುತ್ತದೆ . ಪ್ರಾಣಶಕ್ತಿಯಷ್ಟೇ ಶ್ರದ್ಧಾಶಕ್ತಿಯೂ ಜಾಗೃತವಾಗುತ್ತದೆ . ಪ್ರತಿಯೊಬ್ಬ ಮನುಷ್ಯನಲ್ಲಿ ಸ್ವಲ್ಪಾದರು ಬುದ್ಧಿಶಕ್ತಿ ಇರುವಂತೆ ಶ್ರದ್ಧೆಯೂ ಇರುತ್ತದೆ . ಬುದ್ಧಿಯು ಜ್ಞಾನದ ಬಗ್ಗೆ ತಿಳಿಸಿದರೆ ಶ್ರದ್ಧೆಯು ಆ ಜ್ಞಾನದಲ್ಲಿ ಮನುಷ್ಯನನ್ನು ಸ್ಥಿರಗೊಳಿಸುವುದು . ಶ್ರದ್ಧೆ ಇಲ್ಲದೆ ಮನುಷ್ಯನು ತಾನು ತಿಳಿದ ತತ್ವ ಸಿದ್ಧಾಂತಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಾಧ್ಯವಾಗುವುದಿಲ್ಲ . ಶ್ರದ್ಧೆಯಲ್ಲಿ ಸಾತ್ವಿಕ , ರಾಜಸ ಮತ್ತು ತಾಮಸವೆಂದು ಮೂರು ಪ್ರಕಾರಗಳು , ಜ್ಞಾನರಹಿತ ಮತ್ತು ಅಶಾಸ್ತ್ರೀಯವಾದ ಶ್ರದ್ಧೆಯು ಪ್ರಗತಿಪಥದತ್ತ ಮುನ್ನಡೆಸದು . ಕೇವಲ ಸಾತ್ವಿಕ ಮತ್ತು ಶಾಸ್ತ್ರೀಯವಾದ ಶ್ರದ್ಧೆ ಮಾತ್ರ ನಮ್ಮನ್ನು ಪಾರುಗೊಳಿಸುತ್ತದೆ . ಜ್ಞಾನವು ಮೂಲಭೂತವಾಗಿ ಸಾತ್ವಿಕವಾಗಿದ್ದರೂ ಸತ್ವ ರಜ – ತಮ ಎಂಬ ಮೂರು ಪ್ರಕಾರವಾಗಿರುವಂತೆ , ಕರ್ಮವು ಮೂಲದಲ್ಲಿ ರಾಜಸವಾಗಿದ್ದರೂ ಸತ್ವ – ರಜ – ತಮ ಎಂದು ಮೂರು ಪ್ರಕಾರವಾಗಿರುವಂತೆ , ಶ್ರದ್ಧೆಯೂ ಕೂಡ ಮೂಲತಃ ಸಾತ್ವಿಕವಾಗಿದ್ದರೂ ಸತ್ವ – ರಜ – ತಮ ಎಂಬ ಮೂರು ಪ್ರಕಾರಗಳಿಂದ ಕೂಡಿದೆ . ಶ್ರದ್ಧೆಯು ಸಾತ್ವಿಕವಾಗಿದ್ದರೆ ಅದರ ಸಹಾಯದಿಂದ ನಡೆಯುವ ವ್ಯಕ್ತಿಗೆ ಯಾವುದೇ ರೀತಿಯ ಅಪಾಯಗಳಿಲ್ಲ . ಆದರೆ ಶ್ರದ್ಧೆಯು ಸಾತ್ವಿಕವಾಗಿದೆ , ರಾಜಸ ಅಥವಾ ತಾಮಸವಾಗಿದೆ ಎಂದು ತಿಳಿಯುವುದು ಹೇಗೆ ? ಸಾತ್ವಿಕ ಮನುಷ್ಯರು ದೇವತೆಗಳ , ರಾಜಸ ವ್ಯಕ್ತಿಗಳು ಯಕ್ಷ ಮತ್ತು ರಾಕ್ಷಸರ , ಹಾಗೆಯೇ ತಾಮಸದಿಂದ ಕೂಡಿದವರು ಪ್ರೇತ – ಭೂತ ಪಿಶಾಚಿಗಳ ಉಪಾಸನೆ ಮಾಡುತ್ತಾರೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ . ಪ್ರೇತೋಪಾಸನೆಯು ಸಂಹಾರಶಕ್ತಿಯನ್ನು ಪಡೆಯಲು ಮತ್ತು ಭೂತ ಪಿಶಾಚಿಗಳ ಉಪಾಸನೆಯು ವಶೀಕರಣ ಶಕ್ತಿಗಾಗಿ ಮಾಡಲ್ಪಡುತ್ತದೆ . ಆದರೆ ಶ್ರದ್ಧೆಯು ಸಾತ್ವಿಕವೇ ಆಗಿರಲಿ , ರಾಜಸ ಅಥವಾ ತಾಮಸವೇ ಆಗಿರಲಿ ಇದರ ನಿರ್ಣಯ ಮಾತ್ರ ಶಾಸ್ತ್ರಗಳಿಂದಲೇ ಮಾಡಲಾಗುತ್ತದೆ . ಶಾಸ್ತ್ರ ಮತ್ತು ಶ್ರದ್ಧೆಗಳು ಕೂಡಿದರೆ ಅಲ್ಲಿ ಯಾವುದೇ ರೀತಿಯ ಅಪಾಯವಿಲ್ಲ . ಶ್ರದ್ಧೆಯು ಜೀವನದ ಮೂಲಾಧಾರವಾಗಿದ್ದರೂ ಅದು ಶಾಸ್ತ್ರೀಯ ಮತ್ತು ಸಾತ್ವಿಕವಾಗಿರಬೇಕಾದುದು ಅತ್ಯವಶ್ಯ . ಶ್ರದ್ಧೆಯು ಕರ್ಮಶಕ್ತಿಯಾಗಿದೆ . ಶ್ರದ್ಧೆಯನ್ನು ಹಾಳುಮಾಡಿದರೆ ಕರ್ಮಶಕ್ತಿಯೂ ಕ್ಷೀಣಿಸುತ್ತದೆ ಮತ್ತು ಅಪೂರ್ಣ ಶ್ರದ್ಧೆಯಿಂದ ಕಾರ್ಯಗಳೂ ಅಪೂರ್ಣವಾಗುತ್ತವೆ . ಆದ್ದರಿಂದ ಶ್ರದ್ಧೆಯು ಇರಲೇಬೇಕು . ಹಾಗೆಯೇ ಅದು ಸಾತ್ವಿಕವಾದುದಾಗಿರಲೇಬೇಕು .
ಶ್ರದ್ಧೆ ಇಲ್ಲದೆ ಯಾವ ಕಾರ್ಯವೂ ಸಾಧಿತವಾಗಲಾರದು . ಶ್ರದ್ಧೆಯಿಂದಲೇ ಕೃತಿಗೆ ಮೊದಲಾಗುತ್ತದೆ . ನಂತರ ಅದು ನಿಷ್ಠೆಯಲ್ಲಿ ಪರ್ಯವಸಾನಗೊಳ್ಳುತ್ತದೆ . ನಿಷ್ಠೆಯನ್ನು ಹೊಂದುವ ಮೊದಲು ಮನುಷ್ಯನು ಶ್ರದ್ಧೆಯಿಂದ ಕಾರ್ಯವನ್ನು ಮಾಡಬಲ್ಲ . ನಿಷ್ಠೆಯು ಅನುಭವಜನ್ಯವಾದುದು . ಅಂತೆಯೇ ಅದರ ಸ್ಥಾನ ನಂತರದ್ದು , ಆದರೆ ಶ್ರದ್ಧೆ ಮಾತ್ರ ಆರಂಭದಿಂದಲೇ ಇರಬೇಕಾಗುತ್ತದೆ . ಶ್ರದ್ಧೆಯು ಗೋಡೆಯಂತೆ ಗಟ್ಟಿಯಾಗಿ ನಿಲ್ಲುತ್ತದೆ ಹೊರತು ಪರದೆಯಂತೆ ಜೋತಾಡುವುದಿಲ್ಲ . ಅದು ಗಟ್ಟಿಯಾಗಿ ನಿಲ್ಲುತ್ತದೆ ಅಥವಾ ಬಿದ್ದು ಹೋಗುತ್ತದೆ . ಅದು ಎಂಟಾಣೆ , ನಾಲ್ಕಾಣೆ ಪ್ರಮಾಣದಲ್ಲಿ ಆಂಶಿಕವಾಗಿ ನಿಲ್ಲುವುದಿಲ್ಲ . ಇದ್ದರೆ ಪೂರ್ಣ ಪ್ರಮಾಣದಲ್ಲಿರುತ್ತದೆ , ಇಲ್ಲದಿದ್ದರೆ ಇಲ್ಲವೇ ಇಲ್ಲ . ಎಲ್ಲಿಯವರೆಗೆ ಶ್ರದ್ಧೆಯು ನಿಷ್ಠೆಯ ರೂಪವನ್ನು ಪಡೆಯುವುದಿಲ್ಲವೋ ಮತ್ತು ಜೀವನದ ಧೈಯ ನಿರ್ಧಾರಿತವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜೀವನವು ತತ್ವಾನುಸಾರ ನಡೆಯುವುದಿಲ್ಲ . ಯಾವಾಗ ನಮ್ಮಂತರಂಗದಲ್ಲಿ ನಿಷ್ಠೆಯು ಹುಟ್ಟಿ ಕೊಳ್ಳುವುದೋ ಆಗಲೇ ಭಕ್ತಿಯು ಆರಂಭವಾಯಿತೆಂದರಿಯಬೇಕು . ನಿರಂತರತೆಯೇ ನಿಷ್ಠೆಯ ಲಕ್ಷಣ . ನಿಷ್ಠೆಯುಳ್ಳ ಮನುಷ್ಯನು ನಿರಂತರ ಒಂದೇ ಮಾರ್ಗವನ್ನು ಅನುಸರಿಸುತ್ತಾನೆ . ಅವನಿಗೆ ಹಾಗೆ ಮಾಡುವುದರಿಂದ ದಣಿವು ಉಂಟಾಗುವುದಿಲ್ಲ ಮತ್ತು ಭಾರವೂ ಅನಿಸುವುದಿಲ್ಲ . ಅದು ಅವನಿಗೆ ಅತ್ಯಂತ ಸಹಜವಾದ , ಸ್ವಾಭಾವಿಕವಾದ ಕ್ರಿಯೆ ಎನಿಸುತ್ತದೆ . ನಾವು ಶ್ರದ್ಧೆಯಿಂದ ಕಾರ್ಯಾರಂಭವೇನೋ ಮಾಡುತ್ತೇವೆ , ಮಾಡುತ್ತ ಮಾಡುತ್ತ ಅದು ಸೇವೆಯಾಗುತ್ತದೆ . ನಂತರ ಅನುಭವ ಉಂಟಾಗುತ್ತದೆ . ಅದರಿಂದ ಮತ್ತೆ ನಿಷ್ಠೆಯು ಹುಟ್ಟಿಕೊಳ್ಳುತ್ತದೆ ಮತ್ತು ಆ ನಿಷ್ಠೆಯಿಂದಲೇ ನಮಗೆ ಆಂತರಿಕ ಸಮಾಧಾನವೂ ಪ್ರಾಪ್ತವಾಗುತ್ತದೆ . ಅಂತಃಸಮಾಧಾನ ಇರುವಲ್ಲಿ ಆನಂದವು ಇದ್ದೇ ಇರುತ್ತದೆ . ಆದ್ದರಿಂದ ಮೊದಲು ಶ್ರದ್ಧೆಯುಳ್ಳವರಾಗಬೇಕು . ಆಮೇಲೆ ಅನುಭವವೂ , ಅನುಭವದ ನಂತರ ಅದರ ನಿಷ್ಠೆಯು ಗಟ್ಟಿಗೊಳ್ಳುವುದು . ಶ್ರದ್ಧೆಯು ಆರಂಭದ ಸ್ಥಿತಿಯಾದರೆ , ನಿಷ್ಠೆಯು ಅಂತಿಮವಾದುದಾಗಿರುತ್ತದೆ . ಪ್ರತ್ಯಕ್ಷಾನುಭೂತಿ ಉಂಟಾಗುವವರೆಗೆ ಶ್ರದ್ಧೆಯನ್ನೇ ನಾವು ನಂಬಿಕೊಳ್ಳಬೇಕು . ಶ್ರದ್ಧೆಯು ಪ್ರಾಥಮಿಕ ಅವಸ್ಥೆಯಾಗಿದೆ . ಅದು ಪರಿಪಕ್ವವಾದಾಗ ನಿಷ್ಠೆ ಎನಿಸುತ್ತದೆ . ನಿಷ್ಠೆ ಅರ್ಥಾತ್ Conviction , ಶ್ರದ್ಧೆ ಅರ್ಥಾತ್ Faith , ನಿಷ್ಠೆ ಅರ್ಥಾತ್ ಪರಮೇಶ್ವರನಲ್ಲಿ ಅಚಲವಾದ ನಂಬಿಗೆ , ಅದಿಲ್ಲದೇ ಭಕ್ತಿ ಸಾಧ್ಯವಿಲ್ಲ . ನಮ್ಮ ಬದುಕು – ಸಾವು ಎಲ್ಲವೂ ಪರಮಾತ್ಮನಿಗಾಗಿಯೇ ಮೀಸಲು , ಭಗವಂತನಲ್ಲಿ ಸಂಪೂರ್ಣ ಶರಣಾಗತಿಯೇ ನಿಷ್ಠೆ ಎಂಬ ಮಾತಿದೆ . ಕುರಾನನಲ್ಲಿಯೂ ‘ ನಾನು ನಾಳೆ ಇದನ್ನು ಮಾಡುವೆ ‘ ಎಂದು ಅನ್ನಬಾರದು , ‘ ಈಶ್ವರೇಚ್ಛೆ ಇದ್ದರೆ ನಾಳೆ ಇದು ಆಗಬಹುದು ‘ ಎಂದು ಅನ್ನಬೇಕೆಂದು ಹೇಳಲಾಗಿದೆ ಇನ್ಯಾ ಅಲ್ಲಾಹ
ಜಗತ್ತಿನಲ್ಲಿ ಬಹಳ ಕಡಿಮೆ ಜನರಿಗೆ ಆತ್ಮಜ್ಞಾನ ಉಂಟಾಗುತ್ತದೆ . ಜ್ಞಾನವಾಗ ದಿದ್ದರೂ ನಡೆದೀತು . ಆದರೆ ಶ್ರದ್ಧೆಯಾದರೋ ಅವಶ್ಯವಾಗಿ ಇರಲೇಬೇಕು ಶ್ರದ್ಧಾವಾನ್ ಲಭತೇ ಜ್ಞಾನಮ್ , ಶ್ರದ್ಧೆ ಇಲ್ಲದಿದ್ದರೆ ನಡೆಯದು . ಶ್ರದ್ಧೆಯ ವಿಷಯದಲ್ಲಿ ಅನೇಕ ತಪ್ಪುಕಲ್ಪನೆಗಳೂ ಇವೆ . ಶ್ರದ್ದೆ ಕುರುಡಾಗಿರುತ್ತದೆ . ಬುದ್ಧಿ ಮತ್ತು ಶ್ರದ್ಧೆಗಳು ವ್ಯತ್ಯಾಸವೇನೋ ಇದೆ . ಆದರೆ ಅವುಗಳಲ್ಲಿ ಯಾವುದೇ ವಿರೋಧವಿಲ್ಲ . ಅವೆರಡರ ಪರಸ್ಪರ ವಿರೋಧಿಯಾಗಿವೆ ಎಂದು ಜನರು ಹೇಳುತ್ತಿರುತ್ತಾರೆ . ಶ್ರದ್ಧೆ ಮತ್ತು ಬುದ್ಧಿಯಲ್ಲಿ ಜನನದ ಸ್ಥಾನ ಬೇರೆ ಬೇರೆಯಾಗಿದೆ . ವಿಚಾರಶಕ್ತಿಯಿಂದ ಬುದ್ಧಿಯ ಉಗಮವಾದರೆ ಪ್ರಾಣಶಕ್ತಿಯಿಂದ ಶ್ರದ್ಧೆಯ ಉಗಮವಾಗುತ್ತದೆ . ಶ್ರದ್ಧೆಯೊಂದನ್ನೇ ನನ್ನಲ್ಲಿಡು ಅದರ ಮುಂದೆ ಜ್ಞಾನ ಯಾವ ಲೆಕ್ಕದ್ದು ‘ ಎಂದು ಭಗವಂತನೇ ಹೇಳಿದ್ದಾನೆ . ಅಸ್ತೀವೋಪಲಬ್ಧವ್ಯ : ಅಂದರೆ ‘ ಅವನಿದ್ದಾನೆ ‘ ಎಂಬ ಗಟ್ಟಿ ವಿಶ್ವಾಸವಿರಲಿ , ಜ್ಞಾನ ತಾನಾಗಿಯೇ ಲಭ್ಯವಾಗುತ್ತದೆ ಎಂದು ಉಪನಿಷತ್ತು ಕೂಡ ಹೇಳುತ್ತದೆ . ಈ ಧ್ವನಿ ಹೃದಯದಿಂದ ಹೊರ ಹೊಮ್ಮಬೇಕು , ಅನ್ಯತಾ ವಿನಾಶವೇ ಗತಿಯಾಗುವುದು . ‘ ಸಂಶಯಾತ್ಮಾ ವಿನಶ್ಯತಿ ‘ ಎಂದು ಭಗವದ್ಗೀತೆಯಲ್ಲಿಯೂ ಇದನ್ನೇ ಹೇಳಲಾಗಿದೆ . ಬುದ್ಧಿಯ ಕೆಲಸ ನಡೆಯುವ ವರೆಗೆ ಅದನ್ನು ಉಪಯೋಗಿಸಿಕೊಳ್ಳಬೇಕು . ಯಾವಾಗ ಬುದ್ಧಿಯ ಕಾರ್ಯ ಸ್ಥಗಿತವಾಗುವುದೋ ಆಗ ಶ್ರದ್ಧೆಯಿಂದ ಆ ಕಾರ್ಯವನ್ನು ಮುಂದುವರಿಸಬೇಕು . ಆದರೆ ಅದು ಬುದ್ಧಿಯ ನಿರ್ದೇಶನದಂತೆಯೇ ಮುಂದುವರಿಯಬೇಕು . ಬುದ್ಧಿಯು ಅಲ್ಲಗಳೆಯುವುದನ್ನು ಸ್ವೀಕರಿಸಬೇಕೆಂದು ದೇವರು ಹೇಳುವುದಿಲ್ಲ . ಆದರೆ ಯಾವುದನ್ನು ಬುದ್ಧಿಯು ಖಂಡಿಸುವುದಿಲ್ಲವೋ , ಎಲ್ಲಿ ಬುದ್ಧಿ ತಲುಪಲು ಸಾಧ್ಯವಾಗುವುದಿಲ್ಲವೋ ಅಂಥ ಸಂದರ್ಭದಲ್ಲಿ ಶ್ರದ್ಧೆಯ ಮೂಲಕ ಕಾರ್ಯ ನಿರ್ವಹಿಸಬೇಕು . ಆತ್ಮಜ್ಞಾನವಾಗಿಯೇ ತೀರುತ್ತದೆ ಎಂಬ ನಿಷ್ಕರ್ಷಕ್ಕೆ ಬುದ್ಧಿಯು ಬಂದಿದ್ದರೂ ಶ್ರದ್ಧೆಯಿಂದಲೇ ಮುಂದುವರಿಯಬೇಕು . ಯಾವನೋ ಶ್ರದ್ಧಾವಂತನಿರುತ್ತಾನೆ , ಇನ್ನಾವನೋ ಬುದ್ಧಿವಂತನಿರುತ್ತಾನೆ . ಅಂದರೆ ಒಬ್ಬ ಶ್ರದ್ಧಾವಾದಿಯಾಗಿದ್ದರೆ ಮತ್ತೊಬ್ಬ ಬುದ್ಧಿವಾದಿಯಾಗಿರುತ್ತಾನೆ ಹೀಗಿರುವಾಗ ಇವರಿಬ್ಬರಲ್ಲಿ ಭೇದವೆಣಿಸುವುದು ಬಹಳ ತಪ್ಪಾಗುತ್ತದೆ ಎಂದು ಕೆಲವರು ಹೇಳುತ್ತಾರೆ . ವಾಸ್ತವವಾಗಿ ಶ್ರದ್ಧೆ ಮತ್ತು ಬುದ್ಧಿ ಪರಿಪೂರ್ಣವಾಗಿ ಒಂದೇ ಸ್ಥಾನದಲ್ಲಿ ಇರಬಹುದಾಗಿದೆ . ಬುದ್ಧಿ ಮತ್ತು ಶ್ರದ್ಧೆ ಇವುಗಳಲ್ಲಿ ಯಾವುದೇ ವಿರೋಧವಿಲ್ಲ . ಬುದ್ಧಿಗೇಡಿಯೊಬ್ಬ ಶ್ರದ್ಧೆ ಇಲ್ಲದವನಾಗಿರಬಹುದು . ಹಾಗೆಯೇ ಅತ್ಯಂತ ಬುದ್ಧಿವಂತ ವ್ಯಕ್ತಿಯು ಶ್ರದ್ಧೆಯುಳ್ಳವನೂ ಆಗಿರಬಹುದು . ಬುದ್ಧಿ ಮತ್ತು ಶ್ರದ್ಧೆ ಇವೆರಡರಲ್ಲಿ ವಿರೋಧವನ್ನು ಕಲ್ಪಿಸುವುದು ತೀರ ತಪ್ಪಾಗುತ್ತದೆ . ಏಕೆಂದರೆ ಅವೆರಡರ ವಿಷಯಗಳೂ ಕಿವಿ ಮತ್ತು ಕಣ್ಣುಗಳ ವಿಷಯ ಬೇರೆ ಬೇರೆಯಾಗಿರುವಂತೆ , ವಿಭಿನ್ನವಾಗಿವೆ . ಸುಶ್ರಾವ್ಯವಾದ ಸಂಗೀತ ಕೇಳುತ್ತಿದ್ದರೆ ಕಿವಿ ಅದರ ವಿಷಯದಲ್ಲಿ ತನ್ನ ನಿರ್ಣಯವನ್ನು ಬೇಗನೆ ವ್ಯಕ್ತಮಾಡುತ್ತದೆ . ಆದರೆ ಕಣ್ಣು ಸುಮ್ಮನಿರುತ್ತದೆ . ಏಕೆಂದರೆ ಸಂಗೀತದ ವಿಷಯದಲ್ಲಿ ಪರ ಮತ್ತು ವಿರೋಧಾಭಿಪ್ರಾಯ ವ್ಯಕ್ತಪಡಿಸುವುದು ಕಣ್ಣಿನ ಕೆಲಸ ಅಲ್ಲ . ಅಂದ ಮಾತ್ರಕ್ಕೆ ಕಿವಿ ಮತ್ತು ಕಣ್ಣುಗಳಲ್ಲಿ ಯಾವುದೋ ವಿರೋಧವಿದೆ ಎಂದು ಭಾವಿಸಬೇಕಿಲ್ಲ ; ಅದೇ ರೀತಿ ಶ್ರದ್ಧೆ ಮತ್ತು ಬುದ್ಧಿಯ ಕ್ಷೇತ್ರಗಳೂ ಬೇರೆ ಬೇರೆಯಾಗಿವೆ . ಶ್ರದ್ಧೆಯಿಂದ ಕರ್ಮಶಕ್ತಿಯೂ , ಬುದ್ಧಿಯಿಂದ ಜ್ಞಾನಶಕ್ತಿಯೂ ಪ್ರಾದುರ್ಭವಿಸುತ್ತದೆ . ಮೋಟಾರು ವಾಹನದಲ್ಲಿ ಒಂದು ಮಾರ್ಗ ಸೂಚಿಸುವ , ಮತ್ತೊಂದು ವೇಗವನ್ನು ವರ್ಧಿಸುವ ಇಂಜಿನ್ನುಗಳಿದ್ದರೂ ಅವೆರಡರಲ್ಲಿ ಯಾವುದೇ ವಿರೋಧವಿಲ್ಲ . ಅವೆರಡು ಕೂಡಿಯೇ ವಾಹನವನ್ನು ಮುನ್ನಡೆಸುತ್ತವೆ . ಮಾರ್ಗಸೂಚಿಸುವ ( ದಿಶಾಸೂಚಕ ) ಯಂತ್ರವಿಲ್ಲದಿದ್ದರೆ ವಾಹನವು ಎಲ್ಲಿಯಾದರೂ ಡಿಕ್ಕಿ ಹೊಡೆಯಬಹುದು . ಹಾಗೆಯೇ ವೇಗವರ್ಧಕ ಯಂತ್ರವಿಲ್ಲದಿದ್ದರೆ ವಾಹನವು ಚಲಿಸುವುದೇ ಇಲ್ಲ . ಅದೇ ರೀತಿ ಶ್ರದ್ಧೆ ಇಲ್ಲದಿದ್ದರೆ ಕರ್ಮ ( ಕ್ರಿಯಾಶಕ್ತಿ ಬರದು , ಬುದ್ಧಿ ಇಲ್ಲದಿದ್ದರೆ ಯಾವ ವಸ್ತುವಿನ ಕಡೆಗೆ ಲಕ್ಷ್ಯವಹಿಸಬೇಕೆಂಬುದೇ ತಿಳಿಯುವುದಿಲ್ಲ . ಬುದ್ಧಿಯು ಮಾರ್ಗ ತೋರಿಸುತ್ತದೆ . ಶ್ರದ್ಧೆಯು ಅದನ್ನು ಕಾರ್ಯರೂಪಕ್ಕೆ ತರುತ್ತದೆ . ಕಾರ್ಯರೂಪಕ್ಕೆ ತರುವ ಅಧಿಕಾರ ಶ್ರದ್ಧೆಯದಾದರೆ ವಿಚಾರಗಳ ಒಡೆಯ ಬುದ್ಧಿಯಾಗಿರುತ್ತದೆ . ಇವೆರಡರ ಸಹಾಯ ಸಹಕಾರಗಳಿಂದಲೇ ಜೀವನವು ಪರಿಪೂರ್ಣವಾಗುತ್ತದೆ . ಶ್ರದ್ಧೆ ಶಕ್ತಿಶಾಲಿಯಾಗಿರುವಷ್ಟು ಬುದ್ಧಿಯು ಶಕ್ತಿಶಾಲಿಯಲ್ಲ . ಹಾಗೆಯೇ ಶ್ರದ್ಧೆಯು ದುರ್ಬಲವಾಗುವಷ್ಟು ಬುದ್ಧಿಯು ದುರ್ಬಲವಾಗುವುದಿಲ್ಲ . ಶ್ರದ್ಧೆಯು ಒಂದು ನಿರ್ದಿಷ್ಟ ಹಂತವನ್ನು ಮೀರಿ ದೂರಕ್ಕೆ ಸಾಗಲಾರದು . ಬುದ್ಧಿಯು ದೂರವನ್ನು ಕ್ರಮಿಸುತ್ತದೆ . ಅಂತೆಯೇ ಅದು ಬಲಶಾಲಿಯಾಗಿದೆ . ಇದಕ್ಕೆ ಭಿನ್ನವಾಗಿ ಶ್ರದ್ಧೆಯು ಆರಂಭದಲ್ಲಿ ಬುದ್ಧಿಗಿಂತಲೂ ಬಲಶಾಲಿಯಾಗಿರುತ್ತದೆ . ಕೊನೆಯಲ್ಲಿ ಬುದ್ಧಿಯು ಬಲಶಾಲಿ ಯಾಗಿರುತ್ತದೆಯೇ ವಿನಾ ಶ್ರದ್ಧೆಯಲ್ಲ . ನನ್ನ ದೃಷ್ಟಿಯಲ್ಲಿ ತತ್ವಶಾಸ್ತ್ರದ ಸಂಬಂಧವು ತರ್ಕ ಅಥವಾ ಬುದ್ಧಿಯ ಜೊತೆಗೆ ಇರದೇ ಭಾವನೆ , ಹೃದಯ ಮತ್ತು ಶ್ರದ್ಧೆಯ ಜೊತೆಗಿದೆ . ‘ ನಾಯಮಾತ್ಮಾ ಪ್ರವಚನೇನ ಲಭ್ಯ : | ನ ಮೇಧಯಾ ನ ಬಹುನಾ ಶ್ರುತೇನ- ‘ ಈ ಆತ್ಮವು ಪ್ರವಚನ , ಬುದ್ಧಿ ಮತ್ತು ಬಹುಶ್ರುತವಾಗುವಿಕೆಯಿಂದ ಲಭ್ಯವಾಗುವುದಿಲ್ಲ ‘ ಎಂದು ಉಪನಿಷತ್ಕಾರನು ಈ ವಾಕ್ಯದಲ್ಲಿ ಸ್ಪಷ್ಟಪಡಿಸಿದ್ದಾನೆ . ಏಸುಕ್ರಿಸ್ತನ ಅನುಯಾಯಿಗಳಲ್ಲಿ ಸೌಭಾಗ್ಯದಿಂದ ವಿದ್ವಾಂಸರ ಒಂದು ವರ್ಗವೇ ಇತ್ತು . ಅವರಲ್ಲಿ ಬೆಸ್ತ , ಚಮ್ಮಾರ ಮತ್ತು ಬಡಿಗರೂ ಇದ್ದರು . ನರಸಿಂಹ ಮೆಹತಾನನ್ನು ವಿದ್ವತ್ ಗೋಷ್ಠಿಯಲ್ಲಿ ಕರೆದುಕೊಂಡು ಹೋದರೆ ಅಲ್ಲಿ ಅವನು ನಿರುಪಯುಕ್ತನೆನಿಸುವನು . ತತ್ವಶಾಸ್ತ್ರದ ಚರ್ಚೆಯನ್ನು ವಿದ್ವದ್ವರ್ಗ ಮಾಡುತ್ತದೆ . ಆದರೆ ಅದರ ಆಚರಣೆಯನ್ನು ಅವಿದ್ಯಾವಂತರಾಗಿದ್ದೂ ಭಾವಜೀವಿ , ಶ್ರದ್ಧಾಳುಗಳಾದ ನರಸಿಂಹ ಮೆಹತಾ ಮತ್ತು ಮೀರಾಬಾಯಿ ಮಾತ್ರ ಮಾಡಬಲ್ಲರು .
ಬುದ್ದಿಯ ಜೊತೆಗೆ ತತ್ವಶಾಸ್ತ್ರದ ಸಂಬಂಧವಿಲ್ಲ ಹಾಗೆಂದ ಮಾತ್ರಕ್ಕೆ ಬುದ್ಧಿಯ ಅವಶ್ಯಕತೆಯೇ ಇಲ್ಲ ಅಥವಾ ಅದರ ಉಪಯೋಗವೇ ಇಲ್ಲ ಎಂದು ಇದರರ್ಥವಲ್ಲ . ಬುದ್ಧಿಯ ಉಪಯೋಗವೇ ಸಾಕಷ್ಟಿರುವಾಗ ತತ್ವಶಾಸ್ತ್ರದ ಬಗೆಗಂತೂ ಕೇಳುವುದೇ ಬೇಡ , ಸಾಮಾನ್ಯ ಕೂಲಿ ಕೆಲಸದಲ್ಲಿಯೂ ಬುದ್ಧಿಯ ಅವಶ್ಯಕತೆ ಇರುತ್ತದೆ ಮತ್ತು ಅದನ್ನು ಉಪಯೋಗಿಸಲೇ ಬೇಕಾಗುತ್ತದೆ . ಯಾವುದೋ ಒಂದು ಮನೆಯ ಸಾಧನ ಸಾಮಗ್ರಿಗಳ ಬಗ್ಗೆ ಹೇಳುವಾಗ ನಾವು ಆ ಸಾಮಗ್ರಿಗಳಲ್ಲಿ ಆಕಾಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ . ಏಕೆಂದರೆ ಆಕಾಶವು ಸರ್ವಸಾಮಾನ್ಯವಾದ ವಸ್ತುವಾಗಿದೆ . ಹಾಗೆಯೇ ಬುದ್ಧಿಯೂ ಕೂಡ ಸರ್ವಸಾಮಾನ್ಯವಾದುದು . ತತ್ತ್ವಶಾಸ್ತ್ರದ ಜೊತೆಗೆ ಬುದ್ಧಿಯ ಸಂಬಂಧವು ಸಾಮಾನ್ಯವಾಗಿದ್ದರೆ ಶ್ರದ್ಧೆಯು ತತ್ತ್ವಶಾಸ್ತ್ರದ ವಿಶಿಷ್ಟ ತತ್ವವೆನಿಸುತ್ತದೆ . ತರ್ಕ ಮತ್ತು ತತ್ತ್ವಶಾಸ್ತ್ರಗಳಿಗಿಂತಲೂ ಶ್ರದ್ಧೆ ಮತ್ತು ತತ್ವವಿಷಯ ಅತ್ಯಂತ ಅಧ್ಯಯನಯೋಗ್ಯವೆಂದು ತಿಳಿಯಲ್ಪಡುತ್ತದೆ . ಹೃತೂರ್ವಕವಾಗಿ ತತ್ತ್ವಶಾಸ್ತ್ರವನ್ನು ಗ್ರಹಿಸಬೇಕು . ಹೃತ್ಪೂರ್ವಕವಾದಾಗಲೇ ಅದರ ಗ್ರಹಣ ಸಾಧ್ಯ . ಆದ್ದರಿಂದ ಶ್ರದ್ಧಾವಾನ್ ಲಭತೇ ಜ್ಞಾನಮ್ – ಶ್ರದ್ಧಾವಂತನೇ ಜ್ಞಾನವನ್ನು ಪಡೆಯುತ್ತಾನೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳುತ್ತ ಶ್ರದ್ಧೆಯ ಜೊತೆಗೆ ಜ್ಞಾನದ ಪ್ರತ್ಯಕ್ಷ ಸಂಬಂಧವಿರುವುದನ್ನು ಸ್ಪಷ್ಟ ಪಡಿಸಿದ್ದಾನೆ . ಶ್ರದ್ಧೆ , ಸಂಯಮ ಮತ್ತು ಸಾವಧಾನಗಳು ಜ್ಞಾನಪ್ರಾಪ್ತಿಯ ಅಂತರಂಗದ ಸಾಧನಗಳಾಗಿವೆ .
ಶ್ರದ್ಧಾವಂತನಿಗೆ ಮಾತ್ರ ಪುರುಷಾರ್ಥ ಸಿದ್ಧಿಸುವುದು , ಇತರರಿಗಲ್ಲ ಎಂದು ಶಂಕರಾಚಾರ್ಯರು ಹೇಳುತ್ತಾರೆ . ಪಾರಮಾರ್ಥಿಕ ತತ್ವವು ಬಹಳ ಸೂಕ್ಷ್ಮವಾಗಿದೆ . ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಥೆ ಇದೆ . ಶ್ವೇತಕೇತುವನ್ನು ಅವನ ತಂದೆಯು ಕರೆದು- ` ಮಗನೆ , ಎದುರಿಗಿರುವ ಅರಳಿವೃಕ್ಷದ ಹಣ್ಣು ತೆಗೆದುಕೊಂಡು ಬಾ ‘ ಎಂದು ಹೇಳುತ್ತಾನೆ . ಮಗನು ಹಣ್ಣು ತಂದ ಮೇಲೆ ಅದನ್ನು ತುಂಡಾಗಿಸಲು ತಂದೆ ಹೇಳುತ್ತಾನೆ . ಶ್ವೇತಕೇತು ಅದನ್ನು ತುಂಡು ತುಂಡು ಮಾಡಿದ ಮೇಲೆ ಇದರೊಳಗೆ ನಿನಗೇನು ಕಾಣುತ್ತದೆ ಎಂದು ತಂದೆ ಪ್ರಶ್ನಿಸುತ್ತಾನೆ . ಬೀಜ ಕಾಣುತ್ತದೆ ಎಂದು ಶ್ವೇತಕೇತು ಉತ್ತರಿಸಿದಾಗ ತಂದೆಯು ಅದನ್ನೂ ತುಂಡಾಗಿಸಲು ಹೇಳುತ್ತಾನೆ . ಮಗನು ಬೀಜವನ್ನು ತುಂಡರಿಸಿದಾಗ , ತಂದೆಯು ಈಗ ಅದರಲ್ಲಿ ಏನು ಕಾಣುತ್ತಿದೆ ಎಂದು ಕೇಳುತ್ತಾನೆ . ಆಗ ಶ್ವೇತಕೇತುವು ಏನೂ ಕಾಣುವುದಿಲ್ಲ ಎನ್ನುತ್ತಾನೆ . ಆಗ ಈ ಎನೂ ಇಲ್ಲ ಎನ್ನುವುದು ಇದೆಯಲ್ಲ ಅದರೊಳಗಿಂದಲೇ ಈ ವಿಶಾಲವಾದ ಅರಳಿವೃಕ್ಷ ಹುಟ್ಟಿದೆ ತಂದೆಯು ಹೇಳುತ್ತ ಆತ್ಮತತ್ವವೂ ಅತ್ಯಂತ ಸೂಕ್ಷ್ಮವಾಗಿದೆ . ಅದರಿಂದಲೇ ಈ ವಿಶ್ವದ ಸೃಷ್ಟಿಯಾಗಿದೆ – ಆದ್ದರಿಂದ ಮಗನೆ ! ಶ್ರದ್ಧೆಯನ್ನಿಡು ! ಶ್ರದ್ಧತ್ವ !
ಶ್ರುತ್ವಾ ಅನೇಭ್ಯಃ ಉಪಾಸತೇ ! -ಇನ್ನೊಬ್ಬರಿಂದ ಕೇಳಿ ಉಪಾಸನೆ ಮಾಡುವವನಿಗೆ ಶ್ರುತಿಪರಾಯಣನೆಂದು ಗೀತೆ ಹೇಳುತ್ತದೆ . ಶ್ರುತಿಪರಾಯಣ ಎಂದರೆ ಶ್ರದ್ಧಾಪರಾಯಣ ಗುರುವಿನಿಂದ ಶ್ರವಣ ಮಾಡಿದವನು . ಅದರಲ್ಲಿ ಶ್ರದ್ಧೆ ಇಡುವುದು ಮತ್ತು ಯಾವ ರೀತಿಯಲ್ಲೂ ವಿಚಲಿತನಾಗದೆ ಅದರಂತೆಯೇ ವರ್ತಿಸುವುದು . ಆ ಪ್ರಯತ್ನದಲ್ಲಿ ತಪ್ಪು ತಡೆ ಉಂಟಾಗಬಹುದು ಆದರೆ ಪ್ರಯತ್ನ ಬಿಡುವಂತಿಲ್ಲ . ಪ್ರಯತ್ನವೇ ಶ್ರದ್ಧೆಗೆ ಇರುವ ಪ್ರಮಾಣ . ಆಚರಣೆಯು ಪೂರ್ಣಗೊಂಡರೆ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ . ಋಗ್ವೇದದಲ್ಲಿ ಶ್ರದ್ಧಾಸೂಕ್ತವೊಂದಿದೆ . ಅದರಲ್ಲಿ ಋಷಿಯು ಶ್ರದ್ಧಾಂ ಭಗಸ್ಯ ಮೂರ್ಧನಿ- ನಾವು ಶ್ರದ್ಧೆಯನ್ನು ಭಗವಂತನ ತಲೆಯ ಮೇಲಿಡುತ್ತೇವೆ . ಮತ್ತೆ ಮುಂದೆ ಹೇಳುವುದೇನಂದರೆ