ಮಹನೀಯರ ಹೃದ್ಗತ ಅಭಿಪ್ರಾಯಗಳು

ಪ್ರಸ್ತುತ ಕೃತಿಯನ್ನು ಸೀಮಿತ ಪುಟಗಳಲ್ಲಿ ರಚಿಸಬೇಕಾದ ಪ್ರಯುಕ್ತ ಶಿವಯೋಗ ಮಂದಿರ ಸಂಸ್ಥಾಪಕರ ದಿವ್ಯವ್ಯಕ್ತಿತ್ವವನ್ನು ಸಮಗ್ರವಾಗಿ ಬಿಂಬಿಸದೇ  ಸಾರವತ್ತಾಗಿ ಸಂಗ್ರಹಿಸಲಾಗಿದೆ. ಪೂಜ್ಯರನ್ನು ದರ್ಶನ ಮಾಡಿ ಅವರು ಕೈಗೊಂಡ ಮಣಿಹವನ್ನು

ಅವಲೋಕಿಸಿದ ಅನೇಕ ಗಣ್ಯರ ಅನಿಸಿಕೆಗಳನ್ನು ನಿರೂಪಿಸಲಾಗಿದೆ.

ಚಿತ್ರದುರ್ಗ ಬೃಹನ್ಮಠದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು

“ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರ ಪರಿಚಯವು ನಾವು ಕಾಶಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಉಂಟು. ಇವರು ದೂರದರ್ಶಿಗಳು. ಶಿವಾನುಭವಿಗಳು. ಅಧ್ಯಾತ್ಮಿಕ ವಿಚಾರದಲ್ಲಿ ಸುಜ್ಞರು ಮತ್ತು ಸಮಾಜದ ಹಿತಕ್ಕೋಸ್ಕರ ಅವಿಶ್ರಾಂತ ಶ್ರಮವನ್ನು ವಹಿಸಿ ಕಾರ್ಯನಿರ್ವಹಿಸುವುದರಲ್ಲಿ ಮೊದಲನೆಯವರು ಎಂದು ಶ್ಲಾಘಿಸಿಕೊಳ್ಳಲು ಅರ್ಹರಾಗಿದ್ದರು.

ಕಾಶಿಯಲ್ಲಿ ಅಭ್ಯಾಸ ಮಾಡುವಾಗ ನಮಗೂ, ಇನ್ನಿತರರಿಗೂ ಸಹಾಯ ಮಾಡಿದುದೇ ನಿದರ್ಶನವಾಗಿದೆ. ನಮ್ಮನ್ನು ಶ್ರೀ ೧೦೮ ಶ್ರೀ ಜಗದ್ಗುರು ಪೀಠಾಧಿಕಾರಕ್ಕೆ ಬರಮಾಡಿದವರು ಇವರೇ ಆಗಿದ್ದರು. ಹಾನಗಲ್ಲ ಶ್ರೀ ಕುಮಾರಸ್ವಾಮಿಗಳೇ ವೀರಶೈವ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ಮಹಾಸಭೆಯನ್ನು ಮಾಡಬೇಕೆಂದು ನಿರ್ಣಯ ಮಾಡಿಸಿದವರಾದುದರಿಂದ ಇವರೇ ವೀರಶೈವ ಮಹಾಸಭಾ ಸ್ಥಾಪಕರಾಗಿರುತ್ತಾರೆ. ‘ ತಮ್ಮ ಹೃದಯವಾಣಿಯನ್ನು ಸ್ಮಾರಕ ಚಂದ್ರಿಕೆ ಕೃತಿಗಾಗಿ ಹರಸಿದ್ದಾರೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಲಿಂ. ಶ್ರೀಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಹೀಗೆ ಸ್ಮರಿಸುತ್ತಾರೆ. ‘ಶಿವಯೋಗ ಮಂದಿರವೆಂಬ ಮಾತೃ ಮಂದಿರವು ನಮ್ಮ ತಂದೆ ತಾಯಿಗಳಿಗಿಂತ ಹೆಚ್ಚಿನದು. ಲೋಕದ ತಂದೆ ತಾಯಿಗಳು

ನಮ್ಮನ್ನು ಸಂಸಾರದಲ್ಲಿ ನೂಕುತ್ತಾರೆ. ಆದರೆ ಶಿವಯೋಗ ಮಂದಿರ ಸಂಸ್ಥೆಯೆಂಬ ಮಹಾತಾಯಿಯು ನಮಗೆ ಮುಕ್ತಿಯ ಮಾರ್ಗವನ್ನು ತೋರಿಸುತ್ತದೆ.

ಲಿಂ. ಪರಮಪೂಜ್ಯ ಹಾನಗಲ್ಲ ಕುಮಾರಮಹಾಸ್ವಾಮಿಗಳವರು ನಮ್ಮ ನಾಡಿನ ಮಹಾತ್ಮರಲ್ಲಿ ಅಗ್ರಗಣ್ಯರಾಗಿ ಬಾಳಿದರು. ಅವರು ಸ್ಥಾಪಿಸಿದ ಈ ಮಹಾಸಂಸ್ಥೆಯು ಈ ಅರ್ಧ ಶತಮಾನದಲ್ಲಿ ನಾಡಿಗೆ ನಾನಾ ಮುಖವಾಗಿ ಬೆಳಕು ನೀಡಿದೆ. ಅದು ಸಂಸ್ಥಾಪಕರ ಮೂಲಭೂತ ಮಹೋದ್ದೇಶಗಳನ್ನು ಪೂರ್ಣಗೊಳಿಸಲು ಕಾರ್ಯಮುಖವಾಗಿದೆ. ಇನ್ನೂ ಬಹಳ ಕಾರ್ಯಗಳು ಜರುಗಬೇಕಾಗಿದೆ. ಈ ಸಂಸ್ಥೆ ಎಷ್ಟೋ ಕಾರ್ಯಗಳನ್ನು ಮಾಡಿದೆ. ಮಾಡುತ್ತಲಿದೆ. ನಾವು ಇಷ್ಟಕ್ಕೆ ಸಂತೋಷಪಡಬೇಕಾಗಿಲ್ಲ. ಉಳಿದ ಉದ್ದೇಶಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಬೇಕು, (‘ಬೆಳಕು’ ಸಂದೇಶದಿಂದ) ಎಂದು ನಿರೂಪಿಸುವರು.

ಶ್ರೀ ಜ.ಚ.ನಿಯವರು ತಮ್ಮ ಕರುಳಕರೆಯನ್ನು ಹೀಗೆ ವ್ಯಕ್ತ ಮಾಡಿದ್ದಾರೆ : ಓ ಕಾರಣಿಕ ಕುಮಾರ! ನೀನು ಅಂದು ಕೈಮುಟ್ಟಿ ಮನಮುಟ್ಟಿ ಕಟ್ಟಿದ ಹೆಂಪಿನ ಹೆಸರಿಟ್ಟ ಶಿವಯೋಗ ಮಂದಿರ ಇಂದು ಕನಕೋತ್ಸವವನ್ನು ಕಂಡಿದೆ. ಕಷ್ಟ ಕಾಲದಲ್ಲಿ ನಷ್ಟ  ದಿನಗಳಲ್ಲಿ ನೀನು ಇದನ್ನು ಕೈಬಿಡದೆ ಹಿಡಿದೆತ್ತಿದೆ. ನೀನು ಕಾಯದಿಂದ ಕಣ್ಮರೆಯಾಗಿದ್ದರೂ ಆತ್ಮ ಮಹಿಮೆಯಿಂದ  ಅಮರನಾಗಿರುವೆ. ಅನುದಿನ ನಿನ್ನ ಅನುರಾಗದ ಈ ಸಂಸ್ಥೆಯನ್ನು ಕೈ ಬಿಡದೆ ಕಾಪಾಡಿರುವೆ. ಸಾಧಕರಾದ ನಮ್ಮನ್ನು  ಸಲುಹಿರುವ ಈ ಸುವರ್ಣ ಉತ್ಸವದ ಸುದಿನದಲ್ಲಿ ನಿನ್ನ ನೆನೆದಿರುವುದೆಂತು ತಂದೆ ನಿನ್ನನ್ನು ಕರುಳಿನಿಂದ ಕರೆಯದಿರುವುದೆಂತು ಸ್ವಾಮಿ? ಸಮಾಜೋದ್ಧಾರಕನಾದ ನಿನ್ನನ್ನು ಸಮಾಜ ಇಂದು ಕರೆಯುತ್ತಿದೆ ದೇವ! ನಾಡಿನ

ಅಧ್ಯಾತ್ಮ ಭೂಮಿಕೆಯ ಹದಗೊಳಿಸಿದ ಪುಣ್ಯನೆ ಗಣ್ಯನೆ ನಾಡೇ ನಿನ್ನನು ನೆನೆಯುತಿದೆ ದೇವ!ನಾವೆಲ್ಲರೂ ನೆರೆದಿಂದು ನಿನ್ನ ನೆನೆವೆವು. ನುತಿಸುವೆವು ನಮಿಸುವೆವು” (ಅದೇ, ಬೆಳಗು ಸ್ಮಾರಕ ಸಂದೇಶದಿಂದ)

ಶ್ರೀ ಶಿವಯೋಗಮಂದಿರ ಸಂಸ್ಥೆಯು ಸ್ಥಾಪನೆಗೊಂಡು ಬಹುಮುಖ ಕಾರ್ಯಗಳನ್ನು ಕೈಗೊಂಡಿತು. ನಾಡಿನ ಜನತೆಯನ್ನು ಆಕರ್ಷಿಸಿತು. ದೇಶ-ವಿದೇಶಗಳ ಪ್ರವಾಸಿಗರು, ಸಾಹಿತಿಗಳು, ಸಚಿವರು, ಅಧಿಕಾರಿಗಳು, ಕಲಾವಿದರು, ಸದ್ಭಕ್ತರು ಸಂಸ್ಥೆಗೆ ಆಗಮಿಸಿ ಪ್ರಶಾಂತ ವಾತಾವರಣವನ್ನು, ಪ್ರಕೃತಿ ಸೌಂದರ್ಯವನ್ನು ಕಂಡು ಆನಂದಿತರಾಗಿ ವಟು ಸಾಧಕರ ಸಾಧನೆಯ ಚಟುವಟಿಕೆಗಳನ್ನು ನಿರೀಕ್ಷಿಸಿ ಹೃದಯ ತುಂಬಿದ ಹಾರೈಕೆಗಳನ್ನು ಬರೆದಿರುವರು. ಪ್ರಗತಿಗಾಗಿ ಸೂಚನೆಗಳನ್ನು ಸಹ ನೀಡಿರುವರು. ಕೆಲವನ್ನು ಮಾತ್ರ ನೀಡಲಾಗಿದೆ. ದಿ. ೧೨-೯-೧೯೫೧ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಒಡೆಯರು ಇಲ್ಲಿಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಸಂತಸದಿಂದ ನಾಡಿನಲ್ಲಿ ಧರ್ಮಗ್ಲಾನಿಯ ಕಾಲದಲ್ಲಿ ಶ್ರೀ ಕುಮಾರಮಹಾಸ್ವಾಮಿಗಳವರಿಂದ ಈ ಗುರುಕುಲದ ಸ್ಥಾಪನೆಯಾಯಿತು. ಇದರ ಅಭಿವೃದ್ಧಿಗಾಗಿ ಇಲ್ಲಿಯ ಶ್ರೀ ಸ್ವಾಮಿಗಳವರು ದುಡಿಯುತ್ತಿರುವುದು ಶ್ಲಾಘನೀಯವಾದ ವಿಷಯ. ಇಂತಹ ಪ್ರಶಾಂತ ಗುರುಕುಲಗಳ ಅವಶ್ಯಕತೆಯು ಇಂದು ನಮಗೆ ಬಹಳವಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮೊದಲು ಶ್ರೀ ಕೃಷ್ಣರಾಜೇಂದ್ರ ಒಡೆಯರ ಇವರೂ ಸಂದರ್ಶನ ಮಾಡಿದ್ದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಡಿ. ಜತ್ತಿ, ಶ್ರೀ ನಿಜಲಿಂಗಪ್ಪನವರು, ಶ್ರೀ ದೇವರಾಜ್ ಅರಸು, ಶ್ರೀ ಎಸ್.ಆರ್. ಕಂಠಿ ಇತ್ತೀಚೆಗೆ  ಶ್ರೀ ಎಚ್.ಡಿ. ಕುಮಾರಸ್ವಾಮಿ, ಶ್ರೀ ಯಡಿಯೂರಪ್ಪನವರು ಮೊದಲಾದವರು ಇತರ ಸಚಿವರೂ ಆಗಾಗ್ಗೆ ಆಗಮಿಸಿ ಶ್ರೀ ಮಹಾಸ್ವಾಮಿಯ ಗದ್ದುಗೆ ದರ್ಶನ ಪಡೆದಿರುವರು.

೧. ಈ ಹೊತ್ತಿನ ದಿವಸ ಶ್ರೀಗಳ ಹಾಗೂ ಯೋಗಿಗಳ ದರ್ಶನಾರ್ಥವಾಗಿ ಬಂದು ನೋಡಲು ಬಹು ಸಂತೋಷವಾಯಿತು. ಈ ಸಂಸ್ಥೆಗೆ ದ್ರವ್ಯ ಸಹಾಯವು ಬಹಳ ಬೇಕು. ನಮ್ಮ ದೇಶ ಬಾಂಧವರು ವಿಶೇಷವಾಗಿ ಸಹಾಯ ಮಾಡತಕ್ಕದ್ದು. ಇಸ್ವಿ  ೧೯೧೨-

ಅಣ್ಣಾಜಿ ಕೇಶವರಾವ್ ಕುಲಕರ್ಣಿ ಬೆಳವಗಿ

೨. ಆರ್ಯ ಸಂಸ್ಕೃತಿಗೂ ಕರ್ನಾಟಕಕ್ಕೂ ಲಿಂಗಾಯಿತ ಧರ್ಮಕ್ಕೂ ಈ ಸಂಸ್ಥೆಯು ಅಮೂಲ್ಯ ಸಹಾಯವನ್ನು ಮಾಡಿತು. ಕರ್ನಾಟಕಕ್ಕೆ ಈಗ ಇದರ ಬೆಲೆ ತಿಳಿದು ಬರದಿದ್ದರೂ ಕೆಲ ಕಾಲದ ಮೇಲೆಯೂ ಭವಿಷ್ಯತ್ಕಾಲದಲ್ಲಿ ಇದರ ಅಪೂರ್ವ ಸೇವೆಯನ್ನು ನೆನಸಿ ಹಾಡಿ ಹರಸೀತು.

೨೫ನೇ ಡಿಸೆಂಬರ್ ೧೯೨೦- ದ.ರಾ.ಬೇಂದ್ರೆ -ಧಾರವಾಡ

೩. ಶಿವಯೋಗ ಮಂದಿರವು -ಪರಧರ್ಮ ಸಹಿಷ್ಣುತೆ ಮೊದಲಾದ ಅತ್ಯುಚ್ಚ ಕಲ್ಪನೆಗಳ ಮೂರ್ತ ಸ್ವರೂಪವಾಗಲು ಹವಣಿಸುತ್ತದೆ. ಅತ್ಯುತ್ತಮವಾದ ಸಾತ್ವಿಕ ಜ್ಞಾನಿಗಳನ್ನು ಹುಟ್ಟಿಸುವ ಕಾರ್ಖಾನೆಯು ವೀರಶೈವ ಧರ್ಮವನ್ನುದ್ಧರಿಸುವ ಮಹತ್ವಾಕಾಂಕ್ಷೆಯುಳ್ಳ ಸನ್ಯಾಸಿಗಳು ಮುಂದುವರಿಯಬೇಕೆಂದು ಅದರ ಉತ್ಪಾದಕರ ಆಕಾಂಕ್ಷೆ.

ಶಾಂತಿನಿಕೇತನದಲ್ಲಿ ಸೃಷ್ಟಿ ಸೌಂದರ್ಯ, ಲಲಿತಕಲೆ, ಏಕಾಂತ ಸ್ಥಳ ಇವುಗಳ ಯೋಗದಿಂದ ಮನುಷ್ಯನ ಅಧ್ಯಾತ್ಮ ಉನ್ನತಿಯನ್ನು ಬೆಳೆಸುವ ಪ್ರಯತ್ನ ನಡೆದಿದೆ. ಆದರೆ ಶಿವಯೋಗ ಮಂದಿರವು ವೀರಶೈವ ಧರ್ಮವನ್ನು ರಕ್ಷಿಸುವ ರಕ್ಷಾ ಭಂಡಾರವು.

ಈ ಪುಣ್ಯಪ್ರಭಾವರು (ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು) ಶಿವಯೋಗಮಂದಿರದ ಉತ್ಕರ್ಷವೇ ತಮ್ಮ ಜೀವಿತದ ಇತಿಕರ್ತವ್ಯವೆಂದು ಭಾವಿಸಿ, ನಿದ್ದೆ ನೀರಡಿಕೆಯಿಲ್ಲದೆ ಕನಸು ಮನಸಿನಲ್ಲಿ ಸಹ ಶಿವಯೋಗ ಮಂದಿರವನ್ನು ಧ್ಯಾನಿಸಿ ಅದನ್ನು ಈಗಿನ ಉಚ್ಛ ಸ್ಥಿತಿಗೆ ತಂದು ಮುಟ್ಟಿಸಿದ್ದಾರೆ. ಶಿಷ್ಯರನ್ನು ಕಲೆಹಾಕಿ ಜ್ಞಾನಾಮೃತಪಾನ ಮಾಡಿಸಹತ್ತಿದ್ದಾರೆ. ಈ ಸಂಸ್ಥೆಯಲ್ಲಿ ಸುಸಂಸ್ಕೃತರಾದ ಬಾಲಕರನ್ನು ಬೇರೆ ಬೇರೆ ಸ್ಥಳಗಳಲ್ಲಿರುವ ಲಿಂಗಾಯತ ಮಠಗಳ ಗುರುಗಳು ತಮ್ಮ ಮರಿಗಳನ್ನಾಗಿ ಒಯ್ಯಲಿಕ್ಕೆ ಹಂಬಲಿಸುತ್ತಾರೆ.

ಶ್ರೀ ವೆಂಕಟರಾವ್ ಆಲೂರ ಕ. ವಿದ್ಯಾವರ್ಧಕ ಸಂಘ ಧಾರವಾಡ

೪. ಈ ಮಂದಿರದ ಗ್ರಂಥ ಭಂಡಾರವನ್ನು ಆನರ್ಸ ಮತ್ತು ಎಂ. ಎ ತರಗತಿಗಳ ವಿದ್ಯಾರ್ಥಿಗೋಷ್ಠಿಯೊಡನೆ ಬಂದು ನೋಡಿ ಬಹಳ ಸಂತೋಷಪಟ್ಟಿದ್ದೇನೆ.

ಕ-ವೆಂ-ರಾಘವಾಚಾರ್,

(೨೫-೧೨-೧೯೪೯ )    ಮಹಾರಾಜಾ ಕಾಲೇಜು ಮೈಸೂರು

೫. ಶ್ರೀ ಶಿವಯೋಗ ಮಂದಿರವನ್ನು ನೋಡಿ ಶ್ರೀಗಳವರ ಸಂದರ್ಶನ ಮಾಡಿ ಬಹಳ ಸಂತೋಷವಾಯಿತು. ಇಲ್ಲಿ ಸಮಾಜದ ಉದ್ಧಾರಕ್ಕಾಗಿ ಸಮಾಜ ಸೇವಕರನ್ನು ಸುಸಜ್ಜಿತಗೊಳಿಸುವ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವುದು ಅತ್ಯಂತ ತೃಪ್ತಿಯ ವಿಚಾರ.

(೧೮-೧-೧೯೪೮ )    – ಎಸ್. ನಿಜಲಿಂಗಪ್ಪ

,

೬, ಸಮಾಜದಲ್ಲಿ ಕ್ರಾಂತಿ ಹುಟ್ಟಿಸುವ ಯೋಗ್ಯತೆಯುಳ್ಳವರು ಈ ಸಂಸ್ಥೆಯ ಚಾಲಕರಾಗಬೇಕು. ಈ ಸಂಸ್ಥೆಯು ಹಾನಗಲ್ಲ ಮಹಾಸ್ವಾಮಿಗಳ ಕನಸನ್ನು ನನಸು ಮಾಡಲಿ. ಇದೇ ನನ್ನ ಬಯಕೆ ಮತ್ತು ಹಾರೈಕೆ.

(೪-೪-೧೯೪೯)- ಗುದ್ಲೆಪ್ಪ ಹಳ್ಳಿಕೇರಿ

೭. ಪುಣ್ಯಭೂಮಿಯಾದ ನಮ್ಮ ಆರ್ಯವರ್ತ ತನ್ನ ಅನೂಚಾನವಾದ ಅಧ್ಯಾತ್ಮ ಸಂಪತ್ತನ್ನು ಕಳೆದುಕೊಳ್ಳದೆ, ಅದನ್ನು ಉಳಿಸಿ ಬೆಳಸಿ ಜಗತ್ತಿಗೆ ಮತ್ತೆ ಮಾರ್ಗದರ್ಶಕವಾಗುತ್ತದೆ ಎಂಬ ಭರವಸೆಯನ್ನು ಎಲ್ಲರಿಗೂ ಈ ಸಂಸ್ಥೆ ಕೊಡುತ್ತದೆ. ಇದನ್ನು ನಡೆಸುತ್ತಿರುವ ಶ್ರೀಶ್ರೀಗಳವರು ನಿಜಕ್ಕೂ ನಮ್ಮ ನಾಡಿನ ನಿರ್ಮಾಪಕರು. ಅವರ ಈ ಮಹತ್ವದ ಕೆಲಸದಿಂದ ನನಗೂ ನನ್ನ ಮಿತ್ರರಿಗೂ ಮಹದಾನಂದವಾಗಿದೆ.

(೧೨-೧೦-೧೯೫೧) – ನಾ. ಕಸ್ತೂರಿ  .

೮. ಉತ್ತರ ಪ್ರದೇಶದ ಒಬ್ಬ ಸಂನ್ಯಾಸಿಗಳೊಡನೆ ನಾನು ಶಿವಯೋಗಮಂದಿರದ ಗುರುಕುಲಕ್ಕೆ ಭೇಟಿಕೊಟ್ಟಿದ್ದೆ. ನನ್ನ ಸಹಚಾರಿಯಾಗಿದ್ದವರು ಮಂದಿರದ ಬಗ್ಗೆ ಉತ್ತಮ ಭವಿಷ್ಯವನ್ನು ಪ್ರತೀಕ್ಷಿಸಿದರು. ನನಗಂತೂ ಅಲ್ಲಿಯ ನಿತ್ಯ  ಕಾರ್ಯಕ್ರಮಗಳನ್ನು ನಿರೀಕ್ಷಿಸಿ ಬಹಳ ಆನಂದವಾಯಿತು. ಇದಕ್ಕೆ ಅಮರವಾದ ಯಶಸ್ಸನ್ನು ಕೋರುವ ಯೋಗ್ಯತೆ

ನಮಗೆಲ್ಲಿಯದು ಎನ್ನಿಸಿದರೂ ಅದನ್ನು ನಿರೀಕ್ಷಿಸುವ ಭಾಗ್ಯ ನಮಗೆ ಆ ಶಿವಯೋಗಿಯು ಕರುಣಿಸಲೆಂದು ಬೇಡುತ್ತೇನೆ 

– ಎಂ. ಶಿವಕುಮಾರಸ್ವಾಮಿ (೨೯-೧೨-೧೯೫೯)

ಸಂಸ್ಕೃತ ಉಪನ್ಯಾಸಕ, ಬಸವೇಶ್ವರ ಕಾಲೇಜು-ಬಾಗಲಕೋಟೆ

೯. ಶ್ರೀಮದ್ವೀರಶೈವ ಶಿವಯೋಗ ಮಂದಿರವನ್ನು ಈ ಹೊತ್ತು ಕಣ್ಣಾರೆಯೊಬ್ಬ ವೀರಶೈವನಿಗೆ ಕೈವಲ್ಯಧಾಮವೂ ಇಲ್ಲಿಯ ದಾಸೋಹ, ಗೋಶಾಲೆ, ಪಾಠಶಾಲೆ, ವಟುಗಳ ಯೋಗಾಭ್ಯಾಸ ಇವೆಲ್ಲವೂ ಎಂತಹರನ್ನು ಮುಗ್ಧರನ್ನಾಗಿ ಮಾಡದಿರಲಾರವು.

– ಡಾ. ಶಿ. ಚ ನಂದಿಮರ( ೧-೧೯೪೫)   –

ಈ ಸಂದೇಶಗಳು ಶಿವಯೋಗ ಮಂದಿರ’ಬೆಳಗು’ ಸ್ಮಾರಕ ಗ್ರಂಥದಿಂದ ಆಯ್ಕೆ ಮಾಡಿದೆ.

Related Posts