ಲೇಖಕರು : ಜ.ಚ.ನಿ.

 

(ಜ.ಚ.ನಿ ಎಂತಲೇ ಪರಿಚಿತರಾಗಿರುವ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಸಾಹಿತ್ಯ ಕ್ಷೇತ್ರವೂ ಸೇರಿದಂತೆ ವಿಜ್ಞಾನ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ದುಡಿದವರು. 1909 ಅಕ್ಟೋಬರ್‌ 20 ರಂದು ಜನಿಸಿದ ಇವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಜನಿಸಿದರು. ತಂದೆ ದುಂಡಯ್ಯ, ತಾಯಿ ತಾಯವ್ವ. ನವಲಗುಂದದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಶಿವಮೊಗ್ಗದ ಶಿವಯೋಗ ಮಂದಿರದಲ್ಲಿ ಶಿವಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಬಾಲ್ಯದ ದಿನಗಳಲ್ಲಿಯೇ ಸುಕುಮಾರ ಪತ್ರಿಕೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಸಮಯದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜೀವನ ಸಿದ್ಧಾಂತ-ಆರು ಬೃಹತ್ ಸಂಪುಟಗಳು, ಶೂನ್ಯ ಸಂಪಾದನೆಯನ್ನಾಧರಿಸಿದ ಸಂಪಾದನೆಯ ಸೊಂಪು-4 ಸಂಪುಟಗಳು ‘ಪ್ರಾಚೀನ ಮಹಾ ವ್ಯಕ್ತಿತ್ವ’ಗಳು ‘ಶತಕ ತ್ರಯ ಪ್ರವಚನ’, ‘ಕೈವಲ್ಯ ಪದ್ಧತಿ’ ಇವರ ಪ್ರಮುಖ ಕೃತಿಗಳು )

ಸಂಗ್ರಹ ಸಹಾಯ : ಪೂಜ್ಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳು .

ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ  ನಿಡಸೋಸಿ.

ಯೋಗಿರಾಜ ಶ್ರೀ ಪ್ರಭು ಕುಮಾರ ಪಟ್ಟಾಧ್ಯಕ್ಷರು

ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಜೀವಿಗಳು, ಯೋಗಕ್ಕಾಗಿ ತಮ್ಮ ತ್ರಿಕರಣಗಳನ್ನು ಮೀಸಲಿಕ್ಕಿದವರು. ಅವರಿಗೆ ಯೋಗದ ಹೊರತು ಬೇರೊಂದು ಬದುಕಿಲ್ಲ; ಬೇರೊಂದು ಬಾಳಿಲ್ಲ.ಯೋಗನೆ ಅವರ ಜೀವನ ಸರ್ವಸ್ವ. ಯೋಗವೇ ಅವರ ಜೀವಿತ ಲಕ್ಷ. ಅವರು ಪರಮಯೋಗಿ;ಪರಮಾವತಾರಿ.ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶ್ರೀಗಳವರಿಗೆ ಯೋಗದಲ್ಲಿ ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಮುಖ ಶಿಷ್ಯರು. ಶ್ರೀಗಳವರ ಯೋಗಶಕ್ತಿ ಯೋಗಸಿದ್ಧಿ ಅವರಲ್ಲಿ ಸಂಪೂರ್ಣ ಕೂಡಿ ಬಂದಿತ್ತು; ಮೂಡಿ ನಿಂದಿತ್ತು.ಹಾನಗಲ್ಲ ಕುಮಾರಯೋಗಿಗಳ ಯೋಗವಿದ್ಯೆಯನ್ನೆಲ್ಲ ಆರ್ಜಿಸಿ ಅಧಿಕಗೊಳಿ ಸಿದ ಮಹನೀಯರು; ಮಹಿತಾತ್ಮರು, ಶಿವಯೋಗಮಂದಿರದಲ್ಲಿ ಯೋಗಕ್ಕೆ ಮೈಲುಗಲ್ಲಿನಂತಿದ್ದರು. ಶಿಷ್ಠಾದಿಚ್ಛೇತ್ ಪರಾಜಯಂ’ ಎಂಬ ಮಾತನ್ನು ಹಾನಗಲ್ಲಶ್ರೀಗಳವರು ಪ್ರಭುಕುಮಾರ ಪಟ್ಟಾಧ್ಯಕ್ಷರ ವಿಷಯದಲ್ಲಿ ಹೃದಯಾರೆ ಒಪ್ಪಿದ್ದರು; ಎದೆಯಾರೆ ಅಪ್ಪಿದ್ದರು. ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀಗಳವರ ಕೃಪೆಯಿಂದ ಯೋಗಾಚಾರ್ಯರಾಗಿದ್ದರು; ಯೋಗಿರಾಜರೆನಿಸಿದ್ದರು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಹಾನಗಲ್ಲ ಕುಮಾರಯೋಗಿಗಳ ಯೋಗ ವಿದ್ಯೆಯನ್ನು ನಿರ್ವಿಶೇಷವಾಗಿ ವ್ಯಾಸಂಗ ಮಾಡಿ ವಿಶಿಷ್ಟ ಶಕ್ತಿಯನ್ನುಸಂಪ್ರೀತಿಯನ್ನು ಸಂಗಳಿಸಿದ್ದರು. ಯೋಗಪ್ರವಾಹವು ಹಾನಗಲ್ಲ ಶ್ರೀಗಳವರಲ್ಲಿ ಹುಟ್ಟಿ ಹರಿದು ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸಂಗಮವಾಗಿತ್ತು.ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಸಾಗರವಾಗಿ ಉಕ್ಕಿದರು: ಉತ್ತೇಜಗೊಂಡರು.ಆ ಸಾಗರಗರ್ಭದಲ್ಲಿ ಅಮೋಘವಾದ ಯೋಗ-ನಿರಾಗ ರತ್ನಗಳಿದ್ದವು. ಶಮೆ ದಮೆ ಶಾಂತಿ ದಾಂತಿ ಮುಂತಾದ ಅನರ್ಘ್ಯ ಮುಕ್ತಾಫಲಗಳಿದ್ದವು. ಅವರೊಂದು ಸದ್ಗುಣ-ಸಂಪತ್‌ ಶಾಲಿಯಾದ  ಯೋಗ-ಸಾಗರ; ಸತ್ಯ ಸುಖದ ಆಗರ.

ಪ್ರಭುಕುಮಾರ ಪಟ್ಟಾಧ್ಯಕ್ಷರು ತಮ್ಮ ಯೋಗವಿದ್ಯೆಯನ್ನು ತಮ್ಮಲ್ಲಿಯೆ ಇರಿಸಿಕೊಂಡು ಕುಳಿತವರಲ್ಲ. ಸೂರ್ಯನು ತನ್ನ ಪ್ರಕಾಶವನ್ನು ಪ್ರಪಂಚಕ್ಕೆ ಹರಡುವಂತೆ, ಸಮುದ್ರವು ತನ್ನ ಜಲವನ್ನು ಮೇಘಗಳ ಮುಖಾಂತರ ಭೂವಲಯಕ್ಕೆ ಹಂಚುವಂತೆ ಅವರು ತಮ್ಮ ಯೋಗತೇಜವನ್ನು ಯೋಗ ಸಾರವನ್ನು ಬೆಳಗಿದರು, ಬೀರಿದರು. ನಾಡಿನಲ್ಲಿ ಅಲ್ಲಲ್ಲಿ ಪ್ರಾಯೋಗಿಕವಾಗಿ ಪ್ರಸಿದ್ಧಿಸಿದರು; ವ್ಯಾಪ್ತಿಗೊಳಿಸಿದರು. ಹಾನಗಲ್ಲ ಶ್ರೀಗಳ ಉತ್ಸವಮೂರ್ತಿಯಂತೆ ಯೋಗ ತೇಜದಿಂದ ಅಲ್ಲಲ್ಲಿ ಮೆರಿಸಿದರು, ಮೆರೆದರು. ಎಲ್ಲೆಡೆಯಲ್ಲಿಯೂ ಭಾರತದ ಪ್ರತಿಷ್ಠಿತ ಯೋಗಿಗಳಿಂದ ಅಹುದೆನಿಸಿಕೊಂಡರು.ಯೋಗಿಗಳ ಹೃದಯ ಕಮಲಗಳನ್ನು ಅರಳಿಸಿದರು. ಯೋಗವಿದ್ಯೆಯಲ್ಲಿ ಅವರದೇ ಒಂದು ವಿಶಿಷ್ಟ ಪ್ರತಿಭೆ. ಅವರದೇ ಒಂದು ಪ್ರಾಮುಖ್ಯತೆ. ಅವರು ಯೋಗವಿದ್ಯೆಯ ಪುನರುದ್ಧಾರಕ್ಕಾಗಿ ಅವತರಿಸಿದ ಪ್ರಭು; ಕುಮಾರ ಯೋಗಿ ಗಾಗಿ ಕುಮಾರನಾಗಿ ಅವತರಿಸಿದ ಶಿವಯೋಗಿ.

ಧ್ಯಾನ, ಧಾರಣ, ತಪಸ್ಸುಗಳೆಂದರೆ ಅವರ ಮನ ಉಲ್ಲಸಿತವಾಗುತ್ತಿತ್ತು.ಅವರ ಶಿವಪೂಜಾ ವ್ರತಗಳೆ ವ್ರತಗಳು. ದಿನಕ್ಕೆ ಮೂರು ವೇಳೆ ಪೂಜಿಸದೆ ಇರುತ್ತಿರಲಿಲ್ಲ. ಕುಳಿತು ಎಷ್ಟು ಹೊತ್ತಾದರೂ ಪೂಜಿಸುತ್ತಿದ್ದರು, ಕದಲದೆ ಜಪ-ಧ್ಯಾನಾಸಕ್ತರಾಗಿರುತ್ತಿದ್ದರು. ಅವರು ಪೂಜೆಯಲ್ಲಿ ಬೇಸರಿಸುತ್ತಿರಲಿಲ್ಲ;ಅವಸರಿಸುತ್ತಿರಲಿಲ್ಲ. ಯಥಾಕಾಲಕ್ಕೆ ಯಥಾವಿಧಿಯಾಗಿ ಪೂಜಿಸುತ್ತಿದ್ದರು.ಒಲಿದು ಪೂಜಿಸುತ್ತಿದ್ದರು. ಭಸ್ಮ, ರುದ್ರಾಕ್ಷಿಗಳಲ್ಲಿ ಅವರಿಗಿದ್ದ ನಿಷ್ಠೆ ಅಪಾರವಾಗಿತ್ತು. ಎರಡು ಮುಖದಿಂದ ಹದಿನಾಲ್ಕು ಮುಖದ ವರೆವಿಗೂ ಒ೦ದೊ೦ದು ರುದ್ರಾಕ್ಷಿಗಳನ್ನು ಕೂಡಿಸಿ ಪವಣಿಸಿ ಕಂಠದಲ್ಲಿ ಧರಿಸುತ್ತಿರುವುದು ಅವರದೇ ಒಂದು ಮಾರ್ಗ; ಅವರದೇ ಒಂದು ವೈಶಿಷ್ಟ್ಯ .ಸರಳ ಶರೀರಿಗಳಾಗಿ, ನಿರಾಳ ಮನಸ್ಸಿನವರಾಗಿ ಪೂಜಿಸುತ್ತಿದ್ದ ಅವರನ್ನು ನಿರೀಕ್ಷಿಸುವುದೇ ಕಣ್ಣಿಗೆ ಒಂದು ಹಬ್ಬ. ಅವರು ನಿಷ್ಠೆಯಿಂದ ನುಡಿವ ರುದ್ರಾಧ್ಯಯನದಲ್ಲಿ ನಾದಬ್ರಹ್ಮವು ಹೊರಹೊಮ್ಮಿ ಬರುವಂತಿರುತ್ತಿದ್ದಿತು. ಅವರು ಮಾಡುವ ರುದ್ರಾಭಿಷೇಕದಲ್ಲಿ ನಾದಬ್ರಹ್ಮವು ಮಿಂದು ಹಾಲಿನಂತೆ ಶುಭ್ರನಾಗಿ, ಮಧುಪರ್ಕದಂತೆ ಮಧುರನಾಗಿ, ಅರ್ಘ್ಯಾದಿಗಳಂತೆ ಸುವಾಸಿತನಾಗಿ, ನಾರಿಕೇಳದಂತೆ ಶಾಂತನಾಗಿ ಶೋಭಿಸುತ್ತಿದ್ದನು. ಅವರ ರೂಪದಲ್ಲಿ ಬಿಂದು ಕಲಾತ್ಮಕವಾಗಿ ಕಂಗೊಳಿಸುತ್ತಿದ್ದನು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಾಣಾಯಾಮವನ್ನು ಪೂರ್ಣವಾಗಿ ಮಾಡುತ್ತಿದ್ದರು. ಪ್ರಾಣವಾಯುಗಳನ್ನು ಮೂಲಾಧಾರದಿಂದ ಮೇಲಕೆತ್ತಿ ಸ್ವಾಧಿಷ್ಟಾನದಲ್ಲಿ ಸ್ವಲ್ಪ ಹೊತ್ತು ಇರಿಸಿ, ಮಣಿಪೂರಕದಲ್ಲಿ ತುಂಬಿ, ಅನಾಹತವನ್ನು ದಾಟಿಸಿ, ವಿಶುದ್ಧದಲ್ಲಿ ಶುದ್ಧಗೊಳಿಸಿ, ಆಜ್ಞಾ ಚಕ್ರದಲ್ಲಿ ಸ್ವಾಧೀನಪಡಿಸಿಕೊಂಡು, ಬ್ರಹ್ಮರಂಧ್ರದಲ್ಲಿ ನೆಲೆ ನಿಲ್ಲಿಸಿ, ಧ್ಯಾನಿಸಿ ತಲ್ಲೀನ ಗೊಳ್ಳುತಿದ್ದರು, ಅವರ ರುದ್ರಾಭಿಷೇಕದಲ್ಲಿ ಆಹತ ಬ್ರಹ್ಮೋಪಾಸನೆ ನಡೆದಂತೆ ಪ್ರಾಣಾಯಾಮದಲ್ಲಿ ಅನಾಹತ ಬ್ರಹ್ಮೋಪಾಸನೆ ನಡೆದಿರುತ್ತಿತ್ತು.

ಪೂಜೆಗೊಂಡ ಕರಸ್ಥಲದ ಲಿಂಗಮೂರ್ತಿಯನ್ನು ತಮ್ಮ ತೇಜಃಪುಂಜ ವಾದ ಕಣ್ಣುಗಳಿಂದ ನಿರೀಕ್ಷಿಸುತ್ತ ಜಪಯೋಗದಲ್ಲಿ ಗಂಟೆ ಗಂಟೆಗಳ ಕಾಲ ಮಗ್ನರಾಗಿರುತ್ತಿದ್ದರು. ಆಗ ಅವರು ಲಿಂಗದಲ್ಲಿ ದೃಷ್ಟಿಯಿಟ್ಟು, ದೃಷ್ಟಿಯಲ್ಲಿ ಮನವಿಟ್ಟು, ಮನದಲ್ಲಿ ಭಾವ ನಟ್ಟು, ತ್ರಿಪುಟಿಯಳಿಯುತ್ತಿದ್ದರು. ಲಿಂಗವೆ ತಾವಾಗಿರುತ್ತಿದ್ದರು. ಒಟ್ಟಿನಲ್ಲಿ ಅವರು ಮಾಡುವ ಪೂಜೆಯೇ ಪೂಜೆ, ಅದರಲ್ಲಿ ಅವರಿಗೆ ಅವಿರಳ ನಿಷ್ಠೆಯಿತ್ತು; ಅಪಾರ ಸಂತುಷ್ಟಿಯಿತ್ತು. ಅವರ ಪೂಜೆಗೆ ತುಂಬಿಯು ಹೂವಿದ್ದರೆ ಅವರ ಹೃದಯ ಲಿಂಗದಲ್ಲಿ ತುಂಬಿ ಹರಿಯುತ್ತಿತ್ತು. ನೆರೆ ನಂಬಿ ನಿಲ್ಲುತ್ತಿತ್ತು ,

ಪೂಜ್ಯ ರಾದ ಪ್ರಭುಕುಮಾರ ಪಟ್ಟಾಧ್ಯಕ್ಷರು ಹೆಸರಿಗೆ ತಕ್ಕ ಪಕ್ಷಿಗಳ ಅವರ ಹೆಸರು ಅವರನ್ನು ಆಶ್ರಯಿಸಿ ಸಾರ್ಥಕವಾಗಿತ್ತು. ಅವರು ಪ್ರಭುಗಳಿಗೆ ಪ್ರಭುವಾಗಿದ್ದರು.ಕುಮಾರರಿಗೆ ಕುಮಾರರಾಗಿದ್ದರು.ಯೋಗವಿದ್ಯೆಯಲ್ಲಿ ರೀತಿಯಲ್ಲಿ ಅವರನ್ನು ಳಿದರೆ ಪ್ರಭುಗಳಿರಲಿಲ್ಲ. ಮಾರ್ದವತೆಯಲ್ಲಿ ಸರಳತೆಯಲ್ಲಿ ಅವರು ಗುಣಕುಮಾರ; ಘನಕುಮಾರ. ಅವರದು ಮಕ್ಕಳಂತಹ ಮನಸು, ಮಕ್ಕಳೆಂದರೆ ಅವರಿಗೆ ಅತಿ ಹರುಷ.

ಕೌಮಾರಾವಸ್ಥೆಯಲ್ಲಿದ್ದ ವಟುಗಳ ಮನಸ್ಸನ್ನು ನಡೆ-ನುಡಿಗಳನ್ನು ತಿದ್ದು ವದರಲ್ಲಿ ಅವರನ್ನುಳಿದರೆ ಇನ್ನಿಲ್ಲ. ಕುಮಾರರಲ್ಲಿ ತಾವೂ ಕುಮಾರರಾಗಿ ಬೆರೆದು ಹಿತವನ್ನು ಬೋಧಿಸುತ್ತಿದ್ದರು. ಆಚಾರವನ್ನು ಅರುಹುತ್ತಿದ್ದರು.ಅವರದು ಮಧುರವಾದ ಮಾತು. ಮೇಣಿನಂತಹ ಮನಸ್ಸು, ಯಾವಾಗಲೂ ನಗೆಮೊಗ, ಸರಳ ಹೃದಯ, ಸೌಮ್ಯ ರೂಪು, ಸಹಜ ವರ್ತನೆ; ವಟುಗಳನ್ನು ಲಾಲಿಸುತ್ತಿದ್ದರು, ಪಾಲಿಸುತ್ತಿದ್ದರು. ತಮ್ಮ ನಡೆನುಡಿಗಳಿಂದ ನಲಿಸುತ್ತಿದ್ದರು. ಯೋಗತೇಜದಿಂದ ಆಕರ್ಷಿಸುತ್ತಿದ್ದರು. ನೀತಿನುಡಿಗಳಿಂದ ತಿದ್ದುತ್ತಿದ್ದರು. ವಟುಗಳಲ್ಲಿ ಸುಪ್ತವಾಗಿದ್ದ ಯೋಗಶಕ್ತಿಯನ್ನು ಹೊಮ್ಮಿಸುತ್ತಿದ್ದರು. ಆಸನಗಳನ್ನು ಹಾಕಿಸಿ, ಪಳಗಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳಿಂದ ಸುಧಾರಿಸುವುದು ಅವರಿಗೇ ಸೇರಿದ ಭಾಗ. ಅದರಲ್ಲಿ ಅವರದೇ ಒಂದು ಘನತೆ !

ಅವರ ಆ ತಿಳಿಯಾದ ನಗೆಯಲ್ಲಿ ಹೃದಯ ಪ್ರಚೋದಿಸುವ ಗುರುತರವಾದ ಗುಣವಿತ್ತು. ಅವರ ಕರುಣಾದ್ರವಾದ ಆ ನೋಟದಲ್ಲಿ ಪವಿತ್ರವಾದ ಪ್ರಭಾವವಿತ್ತು. ಅವರ ಆ ಅನುಭವದ ಅಮೃತೋಕ್ತಿಗಳಲ್ಲಿ ನಡೆ ಹೇಳುವ ಔದಾರ್ಯದ ಔಚಿತ್ಯವಿತ್ತು. ಅವರು ಸ್ಪರ್ಶಿಸುವ ಅಮೃತಹಸ್ತದಲ್ಲಿ ದೇಹವನ್ನೇ ಪಾವನಗೊಳಿಸುವ ದಿವ್ಯ ಸ್ಪರ್ಶ ಶಕ್ತಿಯಿತ್ತು.ಅವರ ಯೋಗ ತೇಜದಿಂದೊಡಗೂಡಿದ ಆ ಮುಖಮಂಡಲದಲ್ಲಿ ಮನ ಅರಳಿಸುವ ಪ್ರಶಾಂತಕಾಂತಿಯಿತ್ತು. ಅವರು ಆಚಲದೆ ಆತ್ಮಾನಂದದ ಅಮರಲೀಲೆಯಿಂದ ಮನಮುಟ್ಟಿ ಮಾಡುವ ಶಿವಯೋಗದಲ್ಲಿ ಸಮಾಧಿಗೊಳ್ಳುವ ಸುಖಸಂಪತ್ತಿಯಿತ್ತು.

ಶಿವಯೋಗಮಂದಿರದಲ್ಲಿ ಯೋಗದ ಕಲೆಯನ್ನು ಬೆಳಸಿ ಬೆಳಗಿಸಿದ ಶ್ರೇಯಸ್ಸು ಪ್ರಭುಕುಮಾರ ಪಟ್ಟಾಧ್ಯಕ್ಷರದು. ಯೋಗಶಿಕ್ಷಕರಾಗಿ ಬಹುದಿವಸ ಅವರು ಕೆಲಸ ಮಾಡಿದರು. ಪ್ರತಿ ಫಲಾಕಾಂಕ್ಷೆಯಿಲ್ಲದೆ ತ್ಯಾಗದಿಂದ ತಮ್ಮ ಸೇವೆಯನ್ನು ಸಂಸ್ಥೆಗೆ ಸಲ್ಲಿಸಿದರು. ವಟುಗಳಿಗೆ ಆಸನಗಳನ್ನು ಕಲಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳ ಮರ್ಮವನ್ನು ಹೇಳುತ್ತಿದ್ದರು.

ಮೇಲಿನ ಯೋಗಗಳನ್ನು ತಾವು ಮಾಡುತ್ತಿದ್ದರು. ಯೋಗವಿದ್ಯೆಯ ಶಿಕ್ಷಣದ ಹೆಚ್ಚಿನ ಹೊಣೆಗಾರಿಕೆ ಅವರದಾಗಿತ್ತು. ಅದನ್ನು ಅವರು ತೃಪ್ತಿಕರವಾಗಿ ನೆರವೇರಿಸುತ್ತಿದ್ದರು. ಆಸನಗಳಿಂದ ಆಶ್ರಮದಲ್ಲಿರುವವರ ಶರೀರವನ್ನು ಆರೋಗ್ಯವಾಗಿರಿಸುವ ಪ್ರಾಣಾಯಾಮದಿಂದ ಪ್ರಾಣಶಕ್ತಿಯನ್ನು ಹೆಚ್ಚಿಸುವಯೋಗದಿಂದ ಚಿತ್ತವೃತ್ತಿಗಳನ್ನು ನಿರೋಧಿಸುವ, ದೀಕ್ಷೆಯಿಂದ ಆತ್ಮವನ್ನು

ಅರಳಿಸುವ ಈ ಎಲ್ಲ ಸತ್ಕಾರ್ಯ ಗಳನ್ನು ಅವರೊಬ್ಬರು ಮಾಡಿ ನೆರವೇರಿಸುತ್ತಿದ್ದರೆಂದರೆ ಆ ಮಹಾವ್ಯಕ್ತಿಯ ಆ ಯೋಗಿರಾಜನ ವೈಶಿಷ್ಟ ಎಂತಹದೆಂಬುದನ್ನು ಓದುಗರೇ ಊಹಿಸಿಕೊಳ್ಳಬೇಕು.

ಯೋಗ-ಶಿವಯೋಗಗಳಿಂದ ಅವರು ಶ್ರೀಗುರುವಿನ ಶಕ್ತಿಯನ್ನುಸಂಗಳಿಸಿದ್ದರು. ಅವುಗಳ ಬಲದಿಂದ ಅನೇಕರಿಗೆ ಶಿವದೀಕ್ಷೆಯ ಮಾಡಿ,ಅವರ ಮಾಂಸಪಿಂಡಗಳನ್ನು ಕಳೆದು ಮಂತ್ರಪಿಂಡಿಗಳನ್ನಾಗಿ ಮಾಡಿ,ಶಿಷ್ಯ ಸಮುದಾಯವನ್ನು ಅಸಂಖ್ಯಾತವಾಗಿ ಸಂಪಾದಿಸಿದ ಭಾಗ್ಯ ಅವರದು. ಅವರ ಆ ಕೃಪೆಗೆ ಪಾತ್ರರಾದ ಸೌಭಾಗ್ಯ ಅವರ ಶಿಷ್ಯರದು. ಅವರ ಕರೆಕಂಜಾತರಿಗೆ ಲೆಕ್ಕವಿಲ್ಲ. ಅವರನ್ನು ಶಿಷ್ಯ ಸಂಪತ್ತನ್ನು ಗಳಿಸಿದವರು ಮತ್ತೊಬ್ಬರಿಲ್ಲ.ಬರೀ ಶಿವದೀಕ್ಷೆ ಒಂದರಿಂದಲ್ಲ ಯೋಗಶಿಕ್ಷಣ ದಿಂದಲೂ ಅವರಿಗೆ ಶಿಷ್ಯರಾಗದವರು ತೀರ ಅಪರೂಪ. ಇದರಿಂದಲೂ ಸಹ ಅವರದೇ ಪ್ರಭುರೂಪ; ಅವರೇ ಪ್ರಭುಕುಮಾರ !.

ಅವರು ಹೆಚ್ಚಾಗಿ ಓದಿದವರಲ್ಲ. ಓದಿದವರೆಲ್ಲರಿಂದಲೂ ಅಷ್ಟೊಂದು ಕಾರ್ಯಗಳಾಗುವದಿಲ್ಲ. ನಾವು ಬಲ್ಲವರೆಂಬ ಅಭಿಮಾನ ಮಾತ್ರ ತುಂಬಿಕೊಂಡಿರುತ್ತದೆ. ವಿನಯಾದಿಗಳಿಗೆ ಅಲ್ಲಿ ಅವಕಾಶವಿರುವುದು ತೀರ ಕಡಿಮೆ. ಓದಿದವರ ಬುದ್ದಿ ವಿಶಾಲವಾದುದರ ಫಲವೆಂದರೆ ಬುದ್ಧಿ ವಿಚಲವಾಗುವುದೆ ಸ್ಥಿತಪ್ರಜ್ಞರಾಗಿರುವವರು ತೀರ ವಿರಳ ! “ಓದಿ ಕೆಟ್ಟ ಕೂಚ ಭಟ್ಟ’ ಎಂಬಂತೆ ಅರಿತವರೆಂಬ ಹುಚ್ಚು ಹಿಡಿಯುವವರೆ ಹೆಚ್ಚು.ಅ೦ತಹ ಓದಿನಿಂದೇನು ? ಪರರ ಜೀವನಕ್ಕೆ ಜ್ವಲಂತವಾದ ಉಪಕಾರವನ್ನು ಸರ್ವತೋಮುಖವಾಗಿ ಮಾಡುವದಕ್ಕಿಂತಲೂ ಬೇರೆ ಓದಿಲ್ಲ. ಓದಿಗೆ ಇದುವೇ ಚರನು ಫಲ, ಈ ಗುಣವುಳ್ಳವರು ಓದಿದರೂ ಸರಿಯೆ ! ಓದದಿದ್ದರೂ ಸರಿಯೇ ! ಬರೀ ಒಂದು ಅಕ್ಷರಾಭ್ಯಾಸ ಮಾಡಿದರೆ ಹೆಚ್ಚಲ್ಲ. ‘ಸಾಕ್ಷರಾ ವಿಪರೀತಾಶ್ವೇತೆ ರಾಕ್ಷಸಾ ಏವ ಕೇವಲಂ’ ಎಂಬ ಮಾತು ತುಂಬಾ ಅನುಭವ ಪೂರ್ಣವಾದ ಮಾತು.ಇದಕ್ಕೆ ನಿದರ್ಶನವಾಗಿ ನೂರಕ್ಕೆ ಎಂಭತ್ತು ಸಿಕ್ಕುವಲ್ಲಿ ಸಂಶಯವಿಲ್ಲ.ಸ್ಥಿತಪ್ರಜ್ಞರಾಗಿರಲು ಹೆಚ್ಚು ಓದಿದವರೇ ಬೇಕೆಂಬ ನಿಯಮವೇನೂ ಇಲ್ಲ.ರಾಮಕೃಷ್ಣ ಪರಮಹಂಸರು ಅದೆಷ್ಟು ಓದಿದ್ದರು ? ಅವರ ಸ್ಥಿತ ಪ್ರಜ್ಞತೆ ಯೇನು ? ಅವರ ಶಕ್ತಿ ಸಾಕ್ಷಾತ್ಕಾರ ಸಂಪತ್ತಿಯೇನು ? ಅವರ ಶಿಷ್ಯೋದ್ಧಾರ ಪ್ರಭಾವವೇನು ? ವಿವೇಕಾನಂದರಂತಹ ವಿಚಾರಪರರೂ ಸಹ ಅವರ ಆತ್ಮಶಕ್ತಿಗೆ ಬಾಗಿ ಶಿಷ್ಯರಾಗಲಿಲ್ಲವೆ ? ಅದರಂತೆ ಶರೀರದಿಂದ ಆತ್ಮನವರೆವಿಗೂ ಯೋಗಶಿಕ್ಷಣಕೊಡುವ ಶಕ್ತಿಯುಳ್ಳ ಆ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಬೇರೆ ಪುಸ್ತಕಗಳ ಓದು ಬೇಕಾಗಿರಲಿಲ್ಲ. ಅವರ ಯೋಗಾನುಭವವೇ ಹಿರಿದಾದ ಓದಾಗಿತ್ತು. ಯೋಗದ ಸರ್ವಾಂಗ ಶಿಕ್ಷಣವೇ ಮಿಗಿಲಾದ ಶಿಕ್ಷಣ ವಾಗಿತ್ತು. ಶಾರೀರಿಕ ಮಾನಸಿಕ ಆಧ್ಯಾತ್ಮಿಕ-ಶಿಕ್ಷಣ ಅವರದು. ಇದರಿಂದ ಅವರ ಅದ್ವಿತೀಯ ಶಿಕ್ಷಕರಾಗಿದ್ದರೆಂದರೆ ಹೆಚ್ಚಲ್ಲ; ಔಚಿತ್ಯಕ್ಕೆ ಹೊರತಲ್ಲ.

ಓದಿದವರು ಬೌದ್ಧಿಕ ಶಿಕ್ಷಣವೊಂದನ್ನು ಮಾತ್ರ ಕೊಡಬಲ್ಲರು. ಹೆಚ್ಚಾದರೆ ಆರ್ಥಿಕ ಶಿಕ್ಷಣ ಕೊಡಬಲ್ಲರು.ನೈತಿಕ ಶಿಕ್ಷಣವೂ ಸಹ ಅವರಿಂದ ಸಾಧ್ಯವಿಲ್ಲೆಂಬುದಕ್ಕೆ ಇಂದಿನ ಶಿಕ್ಷಣವೇ ಸಾಕ್ಷಿ!

ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸರಳತೆ ಮನೆ ಮಾಡಿಕೊಂಡಿತ್ತು,ಹೆಚ್ಚು ಓದಿದವರಿಗೂ ಸರಳತೆಗೂ ಹಾವು ಮುಂಗಸಿಯ ಸ್ನೇಹ, ಪ್ರಭುಕುಮಾರ ಪಟ್ಟಾಧ್ಯಕ್ಷರು ಮಾತ್ರ ಹಾಗಿರಲಿಲ್ಲ.ಎಂತಹ ಕಷ್ಟ ಬಂದರೂ ಎಷ್ಟು ಮಂದಿ ಎದುರಾಳಿಗಳಾಗಿ ನಿಂತರೂ ಅವರು ತಮ್ಮ ಸರಳತೆಯನ್ನು ಬಿಟ್ಟು ಕೊಡುತ್ತಿರಲಿಲ್ಲ. ‘ಸರಸೋ ವಿಪರೀತಶ್ಚೇತ್ ಸರಸತ್ವಂ ನ ಮುಂಚತಿ’ ಎಂಬ ಮಾತಿಗೆ ಅವರು ಸತ್ಯ ಸಾಕ್ಷಿಯಾಗಿದ್ದರು.ಸರಳತೆ ಅವರ ರಕ್ತದ ಪ್ರತಿ ಕಣದಲ್ಲಿಯೂ ಬೆರತು ಹೆಪ್ಪುಗಟ್ಟಿತ್ತು. ಊಟ-ಉಡಿಗೆ, ಗುಣಸ್ವಭಾವ ಎಲ್ಲದರಲ್ಲಿಯೂ ಅವರಿಗೆ ಸರಳತೆಯಿತ್ತು. ಯತಿಯತ್ನ ಅವರ ಜೀವನೋದ್ಯಮ; ಯಥೋಚಿತವಾದ ಜೀವನಕ್ರಮ, ಯಥಾರ್ಥ, ಯಥಾಸ್ಥಿತಿ, ಯಥಾಶಕ್ತಿ- ಅವರ ಜೀವನ ಪಲ್ಲವಿ. ಯದೃಚ್ಛೆಯಾಗಿ ಅವರು ಎಂದೂ ವರ್ತಿಸಿದವರಲ್ಲ. ಮಾತಿನಲ್ಲಿ ಮತ್ತೊಂದರಲ್ಲಿ ಅವರು ತಮ್ಮ ಶಕ್ತಿಮೀರಿ ಹೋಗುವವರಲ್ಲ ಯಮ-ನಿಯಮಗಳಲ್ಲಿ ಅವರಿಗೆ ಅಪಾರ ಪ್ರೇಮ. ಆಸನ-ಪ್ರಾಣಾಯಾಮಗಳಲ್ಲಿ ಅವರಿಗೆ ಅತ್ಯಂತ ಆಸಕ್ತಿ.ಅವುಗಳಲ್ಲಿಯೇ ಅವರು ತಮ್ಮ ಕಾಲವನ್ನು ಕಳೆಯುತ್ತಿದ್ದರು. ಯಾವ ವೈಭವದಲ್ಲಿಯ ಯಾವ ಭೋಗಭಾಗ್ಯದಲ್ಲಿಯೂ ಅವರಿಗೆ ಆಶೆಯಿರಲಿಲ್ಲ. ಯಾವ ಸುಭೋಜನದಲ್ಲಿಯೂ ಅವರಿಗೆ ಬಯಕೆಯಿರಲಿಲ್ಲ. ಪೂಜಾಸಾಮಗ್ರಿ ಯೋಗಸಾಧನ ಸಾಹಿತ್ಯ ಇವುಗಳೇ ಅವರ ಸಂಪತ್ತು. ಹಸುವಿನ ಹಾಲು-ಅಂಜೂರಿಹಣ್ಣು ಇವೇ ಅವರ ಆಹಾರ. ಮತ್ತೊಂದನ್ನು ಅವರು ಸ್ವೀಕರಿಸುತಿರಲಿಲ್ಲ. ಹಾಲುಂಡೆ ಮಾಡಿದರೆ ಅಲ್ಲಿಗೆ ಹೆಚ್ಚು, ಬಿದರೆಯಲ್ಲಿ ಅವರ ಮಠವಿದ್ದರೂ ಅದರ ಆಗು ಹೋಗುಗಳನ್ನು ಅವರು ತಮ್ಮ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಅದಕ್ಕಾಗಿ ಶ್ರಮಿಸುತ್ತಿರಲಿಲ್ಲ ಶಿವಯೋಗಮಂದಿರವೇ ಅವರ ಮಠ, ಲತಾಮಂಟಪವೆ ಅವರ ವಾಸಸ್ಥಳ. ಊಟದಂತೆ ಉಡಿಗೆಯಲ್ಲಿಯೂ ಸಹ ಅವರು ತೀರ ಸರಳ. ತೊಡಲು ಒಂದು ಸಣ್ಣ ಅಂಗಿ, ಅದರ ಮೇಲೆ ಅಂಗದಟ್ಟು, ಕಟ್ಟ ಲು ಒಂದು ದೊಡ್ಡ ಪಂಜೆ. ಮಸ್ತಕಕ್ಕೆ ಸುತ್ತಲೂ ಒಂದು ಪೇಟ ಈ ಮೂರಾದರೆ ಅವರ ಉಡುಪು ಮುಗಿಯಿತು.ಹೆಚ್ಚಿನದನ್ನು ಅವರು ಅಪೇಕ್ಷಿಸುತ್ತಿರಲಿಲ್ಲ.

 ಉಡುಪಿನಲ್ಲಿ ಊಟದಲ್ಲಿ ಉತ್ತಮಿಕೆಯಲ್ಲಿ ಅವರದೇ ಒಂದು ಪೆಂಪು, ಅವರದೇ ಒಂದು ಮುಡಿಪು; ಅವರದೇ ಒಂದು ಮುನ್ನಡೆ..

ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಪ್ರೇಮಿ; ಆತ್ಮಸಂಯಮಿ, ಅವರು ಎಲ್ಲವನ್ನೂ ನಿರೋಧಿಸಿದ್ದರು ಅವರ ಅರ್ಪಿತ (ಊಟ) ಎಷ್ಟು   ಪರಿಮಿತವೋ ಅವರ ನಿದ್ರೆಯೂ ಅಷ್ಟೇ ಪರಿಮಿತ, ಶಿವಯೋಗಮಂದಿರದಲ್ಲಿ ಸಾಧಕರೆಲ್ಲರು ಮಲಗಿದ ಮೇಲೆ ಅವರು ಪವಡಿಸುತ್ತಿದ್ದರು. ಮರಳಿ ಬೆಳಗಿನ ಜಾವಕ್ಕೆ ಯಾರೂ ಏಳದ ಮೊದಲು ಅವರು ನಿತ್ಯದಲ್ಲಿ ಏಳುತ್ತಿದ್ದರು.ಎದ್ದು ತಾವೇ ಸ್ವತಃ ಉಳಿದವರೆಲ್ಲರನ್ನು ಎಬ್ಬಿಸುತ್ತಿದ್ದರು. ಅಹಂಕಾರ ಅವರಲ್ಲಿರಲಿಲ್ಲ. ಒಬ್ಬರಿಂದ ಮನ್ನಣೆಯನ್ನಾಗಲಿ ,ಬಣ್ಣನೆಯನ್ನಾಗಲಿ ಅವರುಎಂದಿಗೂ ಎಷ್ಟು ಮಾತ್ರಕ್ಕೂ ಅಪೇಕ್ಷಿಸಿದವರಲ್ಲ. ಯಾವ ವಿಧವಾದ ಜನ ಗುಣಗಳಿಗೆ ಜೋಲು ಬಿದ್ದವರಲ್ಲ.ಜೀವನ ಜಂಜಾಟಕ್ಕೆ ಸಿಕ್ಕುಬಿದ್ದವರಲ್ಲ.ಯಾವಜ್ಜೀವವೂ ಅವರು ಯೋಗ-ಶಿವಯೋಗಗಳಲ್ಲಿಯೇ ಪರವಶರಾದವರು.ಅವರ ನಿದ್ದೆಯ ಸಹ ತೀರ ಸೂಕ್ಷ್ಮ ವಾಗಿತ್ತು. ಸಾತ್ವಿಕಾಹಾರದಲ್ಲಿದ್ದ ಅವರ ನಿದ್ದೆ ಗಾಢವಾಗಿರಲು ಸಾಧ್ಯವಿಲ್ಲ; ಇರಲಿಲ್ಲ. ಸ್ವಲ್ಪ ಶಬ್ದವಾದರೆ ಎಚ್ಚರಾಗುತ್ತಿದ್ದರು. ಇರುಳೆಲ್ಲ ನಿದ್ದೆ ಮಾಡದಿದ್ದರೂ ಅವರ ಆರೋಗ್ಯ ಕೆಡುತ್ತಿರಲಿಲ್ಲ ಪರ್ವದಿನಗಳಲ್ಲಿ ಗ್ರಹಣ ದಿನಗಳಲ್ಲಿ ಅವರು ರಾತ್ರಿ ಮಲಗುತಿರಲಿಲ್ಲ. ಪರ್ವದಿನಗಳಲ್ಲಿ ಇರುಳೆಲ್ಲ ಪೂಜೆಯನ್ನೂ ಗ್ರಹಣ ದಿನಗಳಲ್ಲಿ ಆಸನ, ಜಲಸ್ತಂಭನ, ಧ್ಯಾನ ಮೊದಲಾದವುಗಳನ್ನು ಮಾಡುವದರಲ್ಲಿ ಮಗ್ನರಾಗಿರುತ್ತಿದ್ದರು , ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ “  ಎಂಬ ಗೀತೋಕ್ತಿ’ಯನ್ನು ಅವರು ಪರಿಪಾಲಿಸುತ್ತಿದ್ದರು.ಅದೇ ರೀತಿ ಅವರು ಅವರು ಇರುತ್ತಿದ್ದರು.ಆ ಗೀತಾವಾಣಿಯಲ್ಲಿ ಅವರಿಗೆ ಸಂಪೂರ್ಣ ಶ್ರದ್ಧೆಯಿತ್ತು. ಅದರ ಮುಂದಿನ ಪಂಕ್ತಿಯಲ್ಲಿ ಹೇಳಿದಂತೆ ಅವರಿಗೆ ಹಗಲು ರಾತ್ರಿಯಾಗಿ ಪರಿಣಮಿಸಿತ್ತು. ಅವರು ತಮ್ಮ ದೃಷ್ಟಿಯನ್ನು ಮನಸ್ಸನ್ನು ಸೃಷ್ಟಿಯಿಂದ- ಸೃಷ್ಟಿ ಸುಖದಿಂದ ಹಿಂದಕ್ಕೆ ಸೆಳೆದು ಆತ್ಮನಲ್ಲಿ ಅಳವಡಿಸಿದ್ದರು; ಆನಂದ ಪರವಶರಾಗಿದ್ದರು.

ಯೋಗಿರಾಜರಾದ ಅವರು ಯುಕ್ತಿ-ಕುಯುಕ್ತಿಗಳನ್ನು ಕಂಡವರಲ್ಲ;ಬಳಸಿದವರಲ್ಲ. ಜಾಗತಿಕ ಜೀವನದ-ಭೌತಿಕ ಭೋಗದ ಹಂಗಿದ್ದರಲ್ಲವೇ ಅವರು ಅವುಗಳಿಗೆ ಪಾಲು ಮಾರುವುದು? ಮೋಸ ಅವರ ಮುಂದೆ ಸುಳಿಯಬಾರದು.ಹಗೆತನ ಮಾಡಿದವರಲ್ಲ. ಮನ ನೋಯುವ ಮಾತು ಗಳನ್ನು ಆಡಿದವರಲ್ಲ. ಒಂದು ವೇಳೆ ತಮ್ಮ ಮೇಲೆ ಯಾರಾದರು ಅಸೂಯಾಂಧರು ಕಕ್ಷಿಗಳಾಗಿ ಏರ್ಪಟ್ಟರೆ ಅವರ ಮೇಲೆ ಪ್ರತಿಕಕ್ಷಿಗಳಾಗಿ ಹೋರಾಡುವವರಲ್ಲ. ಮೌನದಿಂದ ಮೈತ್ರಿಭಾವದಿಂದ ಹಗೆತನವನ್ನು ಜಯಿಸುತ್ತಿದ್ದರು. ಶತ್ರುಗಳನ್ನು ಮಿತ್ರರನ್ನಾಗಿಸುತ್ತಿದ್ದರು. ಕಪಟಾತ್ಮರು ಯಾರಾದರು ಹಾಗೆ ಮಿತ್ರರಾಗಿ ಮಾರ್ಪಡದಿದ್ದರೆ ಅವರ ವಿಷಯದಲ್ಲಿ ತಟಸ್ಥರಾಗಿರುತ್ತಿದ್ದರು. ಅವರ ವಿಷಯದಲ್ಲಿ ಅವರು ಅದೆಂದಿಗೂ ಪ್ರತೀಕಾರ ಪ್ರತಿಕ್ರಿಯೆಗಳನ್ನು ತೋರಿಸುವವರಲ್ಲ. ಪ್ರತಾಪ ಪ್ರತಿಭಟನೆ ಮಾಡುವವರಲ್ಲ.ಪ್ರತಿಷ್ಠೆ ಪ್ರತಿಷೇಧಗಳಿಗೆ ಹೋಗುವವರಲ್ಲ. ರಾಗದ್ವೇಷಗಳನ್ನು ಜಯಿಸಿದ ಯೋಗಿರಾಜರು ಅವರು.: ಮದ ಮತ್ಸರಗಳನ್ನು ಗೆದ್ದ ಗುರುವರ್ಯರು ಅವರು.

ಶಿಷ್ಯ ವಾತ್ಸಲ್ಯ ಅವರಲ್ಲಿ ವಿಶೇಷವಾಗಿತ್ತು. ತಮ್ಮ ಶಿಷ್ಯರ ಸಾಧಕರ ಯೋಗಕ್ಷೇಮವನ್ನು ಹೃದಯಾರೆ ನೋಡಿಕೊಳ್ಳುತ್ತಿದ್ದರು. ಯಾರಾದರು ಕಾಯಿಲೆಯಿಂದ ಮಲಗಿದರೆ ಸ್ವತಃ ಉಪಚರಿಸುತ್ತಿದ್ದರು; ವಿಚಾರಿಸುತ್ತಿದ್ದರು. ತಾವೇ ನಿಂತು ಅವರ ಪಥ್ಯವನ್ನು ನೋಡಿಕೊಳ್ಳುತ್ತಿದ್ದರು. ರೋಗಿಗಳ ಎದುರಿನಲ್ಲಿಯೇ ಕುಳಿತು ಉಚಿತವಾದುದನ್ನೆ ಊಟ ಮಾಡಿಸುತ್ತಿದ್ದರು. ಮಿತಿಮೀರಿ ಉಣ್ಣು ವದು, ಅಗಿಯದೆ ಬೇಗ ಬೇಗ ಉಣ್ಣುವುದು ಅವರಿಗೆ ಆಗದ ವಿಷಯ.ಅಂಥವರನ್ನು ಲಕ್ಷಿಸಿ ನೋಡಿ ಅವರಿಗೆ ಬುದ್ದಿ ಹೇಳುತ್ತಿದ್ದರು. ಊಟಕ್ಕೆ ಮೊದಲೆ ಹೆಚ್ಚಾಗಿ ನೀರು ಕುಡಿಯಕೂಡದೆಂದು ಅದರಿಂದ ಜೀರ್ಣಶಕ್ತಿ ಕುಂದಿ ಪಿತ್ತ ಉದ್ರೇಕವಾಗುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು ಹಲ್ಲಲ್ಲಿ ಅಗಿದಷ್ಟೂ ಒಳಿತು,ಅದರಿಂದ ಲಾಲಾರಸ ಅನ್ನದಲ್ಲಿ ಸಮರಸವಾಗಿ ರುಚಿಯ ಜೀರ್ಣಶಕ್ತಿಯೂ ಹೆಚ್ಚುತ್ತದೆಯೆಂದು ತಿಳಿಹೇಳುತ್ತಿದ್ದರು,ಹತ್ತು ಮಂದಿ ಹೆಚ್ಚಾಗಿ ಕೂಡಿ ಉಂಬುವದನ್ನು ಕಂಡು ಹರಷಿಸುತ್ತಿದ್ದರು,ಪರ್ವ ದಿನಗಳಲ್ಲಿ ಹಬ್ಬದೌತಣವಾದರೆ ಆ ದಿನ ತಮ್ಮ ಪೂಜೆಯನ್ನಾದರು ನಿಯಮಿತವೇಳೆಗೆ ನಿಲ್ಲಿಸಿ ವಟುಗಳ ಪಂಕ್ತಿ ಆಗುವ ವರೆವಿಗೂ ಇದ್ದು, ಉಣ್ಣುವವರ ಪ್ರೀತಿಯನ್ನನುಸರಿಸಿ ಉಣ್ಣಿಸಿ ಉಲ್ಲಾಸಪಡುತ್ತಿದ್ದರು,ಇಲ್ಲದಿದ್ದರೆ ಮುಂದಾಗಿಯೇ ತಮ್ಮ ಪೂಜೆಯನ್ನು ಪೂರೈಸಿಕೊಂಡು ಬಂದು ಪಂಕ್ತಿಯ ಮೇಲಿರುತ್ತಿದ್ದರು. ಒಟ್ಟಿನಲ್ಲಿ ಆ ದಿನದ ಆ ಸಂದರ್ಭವನ್ನು ಅವರು ಕಳೆದು ಕೊಳ್ಳುತ್ತಿರಲಿಲ್ಲ, ಅದರಲ್ಲಿ ಅವರಿಗೆ ಅಷ್ಟೊಂದು ಪ್ರೇಮವಿತ್ತು.

ಬೈಗಿನಲ್ಲಿ ದೀಪಾರಾಧನೆಯಾದೊಡನೆ ಭಜನಾಸ್ಥಳಕ್ಕೆ ತಾವೇ ಮುಂದಾಗಿ ಆಗಮಿಸುತ್ತಿದ್ದರು. ಅವರನ್ನು ನೋಡಿ ಬಿಟ್ಟು ಉಳಿದ ವಟುಗಳೆಲ್ಲ ಬೇಗ ಬರುತ್ತಿದ್ದರು. ಅವರಿರುವಾಗ ಒಂದು ಕ್ರಮದಿಂದ ಭಕ್ತಿಭಾವದಿಂದ ಭಜನೆ ಸಾಗುತ್ತಿತ್ತು. ಮೊದಲು ಹಿರಿಯರು ಅವರ ಪಕ್ಕದಲ್ಲಿ ಕಿರಿಯರು ಹೀಗೆ ಪರಿವಿಡಿದು ಕುಳಿತುಕೊಳ್ಳಬೇಕು, ಪಂಕ್ತಿಯಾಗಿಯೋ ಮಂಡಲಾಕಾರ ವಾಗಿಯೋ ಸ್ವಸ್ತಿಕಾಸನ ಹಾಕಿ ಕುಳಿತು ಕೊಳ್ಳಬೇಕು. ಎಲ್ಲರೂ ಕೈಗಳನ್ನು ಎದೆಯಮೇಲೆ ಜೋಡಿಸಿರಬೇಕು, ಅತ್ತಿತ್ತ ನೋಡಕೂಡದು. ಎಲ್ಲರೂ ಸ್ತೋತ್ರವನ್ನು ತಪ್ಪದೇ ಹೇಳಬೇಕು. ಎಲ್ಲರ ಹಣೆಯಲ್ಲಿ ವಿಭೂತಿ ಧಾರಣವಿರಬೇಕು. ಒಂದೇ ಸ್ವರದಲ್ಲಿ ಪ್ರಾರ್ಥಿಸಬೇಕು. ಇದಿಷ್ಟು ಅವರಿರುವಾಗ ಚಾಚೂ ತಪ್ಪದೆ ನಡೆವ ಕ್ರಮ. ಈ ಕ್ರಮದಿಂದ ಮಾಡುವ ಪ್ರಾರ್ಥನೆಯನ್ನು ಹರ್ಷಚಿತ್ತದಿಂದ ಕೇಳುತ್ತಿದ್ದರು. ಏಕಾಗ್ರತೆಯನ್ನು ತಾಳುತ್ತಿದ್ದರು,

ಅನಂತರ ಅವರವರ ಅಭ್ಯಾಸವನ್ನು ಅವರವರು ಓದಿಕೊಳ್ಳ ಬೇಕು.ಚನ್ನಾಗಿ ಓದುವವರನ್ನು, ಓದಿ ಮುಂದುವರಿವವರನ್ನು ಕಂಡು ಅವರನ್ನು ಆದರಿಸುತ್ತಿದ್ದರು; ಪ್ರೋತ್ಸಾಹಿಸುತ್ತಿದ್ದರು. ಉಳಿದವರಿಗೆ ಅವರನ್ನು ಆದರ್ಶವನ್ನಾಗಿ ತೋರಿಸಿ ಅವರಂತೆ ಓದಲು ಬುದ್ದಿವಾದವನ್ನು ಹೇಳುತಿದ್ದರು. ಮನಸ್ಸಿಗೆ ಬಂದಂದು ಅವರವರು ಓದುತ್ತಿರುವ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಿದ್ದರು. ಸರಿಯಾಗಿ ಒಂದಕ್ಕೂ ಉತ್ತರ ಕೊಡದವರಿಗೆ ಬುದ್ಧಿವಂತರೆ, ಹೀಗೆ ಓದಿದರೆ ಹೇಗೆ ?” ಎಂದು ಮನ ಮುಟ್ಟುವಂತೆ ಆತ್ಮೀಯತೆಯಿಂದ ತಿಳಿ ಹೇಳುತ್ತಿದ್ದರು. ವಿದ್ಯೆಯಲ್ಲಿ ವಕ್ಷ್ಯತ್ವದಲ್ಲಿ ಕುಶಲರಾದವರನ್ನು ಕಂಡರೆ ಅವರಿಗೆ ತುಂಬಾ ಸಂತೋಷ.ಆಗಾಗ ಸಭೆಗಳನ್ನು ಕರೆದು ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಭಾಷಣದ ವಿಷಯವನ್ನು ತಾವೇ ಸೂಚಿಸುತ್ತಿದ್ದರು, ಆ ವಿಷಯದಲ್ಲಿ ಯಾರು ಚನ್ನಾಗಿ ಹೇಳುವರೋ ನೋಡಬೇಕೆಂಬುದೇ ಅವರ ಅಂತರಂಗದ ಆಕಾಂಕ್ಷೆ! ಚನ್ನಾಗಿ ಹೇಳಿದವರನ್ನು ತಮ್ಮ ಅಮರವಾಣಿಯಿಂದ ಹರಸಿ ಹುರುಪಿಸುತ್ತಿದ್ದರು. ತಪ್ಪು ಹೇಳಿದವರನ್ನು ತಿದ್ದುತ್ತಿದ್ದರು. ಪ್ರತಿ ದಿನವೂ ನಡೆಯುವ ಪುರಾಣಕ್ಕೆ ಬಿಡದೆ ದಯಮಾಡಿಸುತ್ತಿದ್ದರು. ಪುರಾಣ ಮುಗಿದ ಮೇಲೆ ಪುರಾಣದಲ್ಲಿ ಬಂದ ವಿಷಯದ ಸಾರಾಂಶವನ್ನು ಹೇಳಲು ತಮ್ಮ ಚಿತ್ತ ಬಂದವರಿಗೆ ಅಪ್ಪಣೆ ಮಾಡುತ್ತಿದ್ದರು. ಚಿತ್ರಗೊಟ್ಟು ಪುರಾಣವನ್ನು ಕೇಳುವರೋ ಇಲ್ಲೋ ಎಂಬುದನ್ನು ಅರಿಯುವುದೇ ಅವರ ಅಂತರಂಗ. ಅಷ್ಟು ದೂರದ ವರೆವಿಗೂ ವಟುಗಳ ಸಾಧಕರ ಜ್ಞಾನಾರ್ಜನೆಯ ಮುನ್ನಡೆಯಲ್ಲಿ ಅವರ ಅಭಿಲಾಷೆ;ಅವರ ಮುನ್ನಿರೀಕ್ಷಣೆ !

ಬೈಗಿನಲ್ಲಿ ಬಾಲಕರೆಲ್ಲ ಹೂವಿನ ಗಿಡಗಳಿಗೆ ನೀರು ಹಾಕಬೇಕು.ಹಾಕುವರೋ ಇಲ್ಲವೋ ಎಂದು ತಾವೇ ಆಗಮಿಸಿ ನಿರೀಕ್ಷಿಸುತ್ತಿದ್ದರು.ಕಡಿಮೆ ಹಾಕಿದರೂ ಅವರಿಗೆ ಆಗುತ್ತಿರಲಿಲ್ಲ. ಅವರಿಂದ ಮರಳಿ ಹಾಕಿಸುತ್ತಿದ್ದರು. ಒಬ್ಬೊಬ್ಬರಿಗೆ ಇಷ್ಟಿಷ್ಟು ಗಿಡಗಳೆಂದು ಹಂಚಿಕೊಡುತ್ತಿದ್ದರು.ಹೂವಿನ ಗಿಡಬಳ್ಳಿಗಳ ಮೇಲೆ ಅವರಿಗೆ ಮೀರಿದ ಪ್ರೇಮ. ಗಿಡಬಳ್ಳಿಗಳು ಹೂವು ಬಿಟ್ಟಂತೆ ಅವರ ಹೃದಯಕಮಲ ಅರಳುತ್ತಿತ್ತು. ಆಕಸ್ಮಿಕವಾಗಿ ಯಾರಾದರೂ ನೀರು ಹಾಕದೆ ಯಾವುದಾದರೂ ಗಿಡ ಬಾಡಿ ನಿಂತಿದ್ದರೆ ಅವರ ಮನಸ್ಸು ಮುಖಗಳೂ ಸಹ ಅಷ್ಟೆ ಬಾಡುತ್ತಿದ್ದವು. ತೊರೆಯನ್ನು ಕಂಡರೆ ಅವರಿಗೆ ತೀರದ ಆನಂದ. ಅದರ ತೀರದಲ್ಲಿಯೆ ಯಾವಾಗಲು ತಂಗಿರುತ್ತಿದ್ದರು. ತೊರೆಯ ನೀರಿನಲ್ಲಿಯೆ ಮಿಂದು ತೃಪ್ತಿ ಪಡುತ್ತಿದ್ದರು. ಈಜುವವರನ್ನು ಕಂಡರೆ ಅವರಿಗೆ  ತುಂಬಾ ಇಷ್ಟ.ಅದರಲ್ಲಿಯೂ ನೀರ ಮೇಲೆ ಪದ್ಮಾಸನ ಹಾಕಿ ತೇಲುವವರನ್ನು ಕಂಡು ಮತ್ತೂ ಸಂತೋಷಿಸುತ್ತಿದ್ದರು. ಅದರಂತೆ ಮಾಡಲು ಅನೇಕರಿಗೆ ಕಲಿಸಿದ್ದರು. ಕೊರಳುದ್ದ ನೀರಲ್ಲಿ ಅದೆಷ್ಟೋ ಗಂಟೆಗಳ ಕಾಲ ಕದಲದೆ ಸ್ವತಃ ನಿಲ್ಲುವ ಅಭ್ಯಾಸ ಅವರಿಗಿತ್ತು. ಜಲದ ಮೇಲೆ ಎಷ್ಟು ಹೊತ್ತಾದರೂ ಲೀಲಾಜಾಲ ವಾಗಿ ತೇಲುತ್ತಿದ್ದರು,

ರಾತ್ರಿ ಶಿವಪೂಜೆ ತೀರಿದ ಮೇಲೆ ಸಾಧಕರು ವಟುಗಳು ೧೦ ಗಂಟೆಯ ವರೆವಿಗೂ ಓದಬೇಕಾದ ನಿಯಮ. ತಾವೂ ಸಹ ಆ ವೇಳೆಯೊಳಗೆ ಪವಡಿಸುತ್ತಿರಲಿಲ್ಲ. ತಮ್ಮ ಮನಸ್ಸಿಗೆ ಬಂದವರನ್ನು ತಮ್ಮ ಬಳಿಗೆ ಕರೆಯಿಸಿಕೊಂಡು ಹಠಯೋಗ ಪ್ರದೀಪಿಕೆಯೋ ಯೋಗಸೂತ್ರವೋ ಇಲ್ಲವೆ ಇನ್ನಾವುದನ್ನಾದರೋ ಓದಿಸಿ ಅರ್ಥವನ್ನು ವಿವರಿಸಲು ಹೇಳುತ್ತಿದ್ದರು.ಅವರು ಸಂಸ್ಕೃತ  ಓದಿ ಬಲ್ಲವರಾಗದಿದ್ದರೂ ತಪ್ಪು ಹೇಳಿದ್ದನ್ನು ತಕ್ಷಣವೇ ಗುರುತಿಸುತ್ತಿದ್ದರು. ಆ ಶಬ್ದಕ್ಕೆ ಆ ಅರ್ಥ ಸರಿಯಾದುದಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. “ಓದು ಒಕ್ಕಾಲು, ಬುದ್ಧಿ ಮುಕ್ಕಾಲು”-ಎಂಬ ನಾಣ್ಣುಡಿ ಯನ್ನು ಅವರಲ್ಲಿ ಪ್ರತ್ಯಕ್ಷ ಮಾಡಿಕೊಂಡಿದ್ದೇವೆ. – ಯೋಗದಿಂದ ಅವರ ಬೌದ್ದಿಕ ಶಕ್ತಿ ಬಲಗೊಂಡಿತ್ತು.

ಯೋಗಾಸನಗಳನ್ನು ಹಾಕುವವರ ಮೇಲೆ, ಯೋಗಸಾಧನೆಯನ್ನು ಮಾಡುವವರ ಮೇಲೆ ಅವರ ಕೃಪಾದೃಷ್ಟಿಯು ಅಮೃತವನ್ನು ಸುರಿಯುತಿತ್ತು, ಯೋಗಾಭ್ಯಾಸದಲ್ಲಿ ಆಸಕ್ತರಾದವರನ್ನು ಕಂಡರೆ ಅವರಿಗೆ ಹಿಡಿಸಲಾರದ ಹರುಷ; ಹೇಳಬಾರದ ಸಂತೋಷ.

ಯೋಗಿರಾಜರಾದ ಅವರು ತಮ್ಮ ಜೀವಿತದಲ್ಲಿ ಅದೆಂದಿಗೂ ಯೋಚಿಸಿದವರಲ್ಲ; ಯಾಚಿಸಿದವರಲ್ಲ, ಅವನ್ನು ಅವರು ಮಾಡುವ ಪ್ರಮೇಯವಿರಲಿಲ್ಲ. ಪ್ರಮೇಯವನ್ನು ತಂದು ಕೊಂಡವರೂ ಅಲ್ಲ; ಕೊಳ್ಳುವವರೂ ಅಲ್ಲ.

ವಿಷಯ ಸುಖ ಬೇಕೆಂದು ಸಂಪತ್ತು ಬೇಕೆಂದು ಅವರೆಂದಿಗೂ ಆಶಿಸಿದವರಲ್ಲ. ಅವುಗಳ ವ್ಯಾಮೋಹಕ್ಕೆ ಅವರು ಒಳಗಾದವರಲ್ಲ.ಅವು ಅವರಿಗೆ ಬೇಕಾಗಿರಲಿಲ್ಲ. ಹಣ ಗಳಿಸಬೇಕೆಂದರೆ ಬೇಕಾದಷ್ಟು ಗಳಿಸಬಹುದಾಗಿತ್ತು.ಹಣ ಅವರಿಗೆ ತೃಣ. ಅದಕ್ಕಾಗಿ ಅವರು ಮನಸ್ಸು ಮಾಡಲಿಲ್ಲ. ಹಣವಂತರು ಅವರ ಯೋಗಕ್ಕೆ ಬೇಕಾದಷ್ಟು ಜನ ಒಲಿದಿದ್ದರು.ಬಿಡಿ ಕಾಸನ್ನೂ ಅಪೇಕ್ಷಿಸಿದವರಲ್ಲ. ಅಯಾಚಿತವಾಗಿ ಅವರಿಂದ ಬಂದುದನ್ನೂ ಸಹ ಅವರು ಮುಟ್ಟುತ್ತಿರಲಿಲ್ಲ. ಸಂಸ್ಥೆಗೋ ಶಿಷ್ಯರಿಗೋ ಕೊಟ್ಟು ಬಿಡುತ್ತಿದ್ದರು. ನಿಜವಾದ ವಿಷಯ ವಿರತಿ ಅವರಲ್ಲಿತ್ತು. ಅದರಿಂದಾಗಿ ಅವರಲ್ಲಿ ಆಶೆ ಆಸಕ್ತಿ ಮೋಹ ಮಮತೆಗಳು ಅವರಲ್ಲಿರಲಿಲ್ಲ. ತೇಜದ ಮುಂದೆ ಯೋಚನೆ ಯಾಚನೆಗಳೆಂಬ ಕಾಳ ತಲೆ ನಿಲ್ಲುವ ಬಗೆ ಹೇಗೆ? ನೀಲಾಕಾಶದಲ್ಲಿ ತೇಲುವ ಮೋಡವನ್ನು ಚಿಂತಾಕ್ರಾಂತರಾಗಿ ಅವರೆಂದಿಗೂ ನೋಡಿದವರಲ್ಲ. ಅವರ ಜೀವನ ಅದೊಂದು ಹೂವಿನ ಬಾಳು.ಹೂವು ದಿನಾಂತ್ಯದಲ್ಲಿ ಹಟಾತ್ತಾಗಿ ಬಾಡುವಂತೆ ಅವರು ಒಮ್ಮಿಗೆ ತಮ್ಮ ಜೀವನಾಂತ್ಯದಲ್ಲಿ ನಗುನಗುತ್ತ ಬಾಡಿದರು. ಮಧ್ಯದಲ್ಲಿ ಬಾಡಿದ ಜೀವನವಲ್ಲ. ಬೇಡಿಬಾಗಿದ ಜೀವನವಲ್ಲ.ಜೀವನಾಂತ್ಯದಲ್ಲಿ ಬಾಡಿದರೆಂಬುದೂ ಸಹ ನಮ್ಮ ದೃಷ್ಟಿಯಲ್ಲಿ; ನಮ್ಮ ದೈಹಿಕ ದೃಷ್ಟಿಯಲ್ಲಿ; ಭೌತಿಕ ಬಗೆಯಲ್ಲಿ.ಅವರ ದೃಷ್ಟಿಯಲ್ಲಿ ಅದೂ ಇಲ್ಲ. ಅದು ಕಂದದ ಹೂವು. ಅದು ತನಗಿರಬೇಕೆಂದು ಆ ಪರಮಾತ್ಮನು ಹೆಬ್ಬಯಕೆಯಿಂದ ಅದನ್ನು ಎತ್ತಿ ತನ್ನಲ್ಲಿರಿಸಿಕೊಂಡನು. ತನ್ನಂತರಂಗದಲ್ಲಿ ಧರಿಸಿಕೊಂಡನು.

ಯೋಗಶಕ್ತಿಯಿಂದ ರಾಜಿಸುವ ಅವರು ರೋಗ ರುಜಿನಗಳಿಂದ ಒಂದು ದಿನವೂ ಸಹ ನೆರಳಿದವರಲ್ಲ. ಯೋಗಿರಾಜರಾದ ಅವರ ಮುಂದೆ ರೋಗಮೃಗಗಳು ಸುಳಿಯುತ್ತಿರಲಿಲ್ಲ; ಸುಳಿಯಲಿಲ್ಲ. ಕೊನೆಯ ವರೆವಿಗೂ ಅವರು ಕಾಯಿಲೆ ಬಂದು ಮಲಗಿದವರಲ್ಲ. ರಸನೇಂದ್ರಿಯವನ್ನು ತಡೆದ ಅವರಿಗೆ ರೋಗಗಳ ಮಾತೆಲ್ಲಿ? ರುಚಿ ರೂಪುಗಳಿಗೆ ಅವರು ಅದೆಂದಿಗೂ ಬಾಯ್ನೀರು ಕರೆದವರಲ್ಲ; ಕಣ್ಣು ಬಿಟ್ಟವರಲ್ಲ. ರೋಗ ರುಜಿನಗಳನ್ನು ರಜೋಗುಣಗಳನ್ನು ಗೆದ್ದ ಋಷಿ ವರ್ಯರು ಅವರು.ರುಜುಕಾಯ ರುಜು ಮಾತುಗಳನ್ನು ಕಾಪಾಡಿದ ಯೋಗಿವರ್ಯರು ಅವರು.

ಕೀರ್ತಿವಾರ್ತೆಗಾಗಿ ಅವರು ಯೋಗಕಲೆಯನ್ನು ಅಭ್ಯಸಿಸಿದವರಲ್ಲ.ಕೀರ್ತಿಯ ಬೆನ್ನು ಬಿದ್ದು ಬಳಲಿದವರಲ್ಲ. ಕರ್ತವ್ಯವೆಂದು ಭಾವಿಸಿ ಅವರು ಯೋಗವನ್ನು ಅಳವಡಿಸಿಕೊಂಡರು. ಕೊನೆಯ ವರೆವಿಗೂ ಅವರು ಅದರಂತೆ ನಡೆದುಕೊಂಡು ಬಂದರು. ಕೀರ್ತಿಗಾಗಿ ಹೆಣಗಿದ್ದರೆ ಅವರು ಕರ್ನಾಟಕದಲ್ಲಿ ಅದ್ವಿತೀಯ ಯೋಗಿಗಳಾಗಿ ಹೆಸರುಗಳಿಸುತ್ತಿದ್ದರು; ಒಸಗೆ ಗೊಳ್ಳುತ್ತಿದ್ದರು.ತಾನಾಗಿಯೆ ತುಂಬಿಕೊಂಡು ಬಂದ ‘ಯೋಗಿರಾಜ” ಎಂಬ ಬಿರುದನ್ನು ಸಹ ಅವರು ಅದೆಂದೂ ಬಳಸಿದವರಲ್ಲ; ಬರೆದವರಲ್ಲ. ಕರ್ತವ್ಯಶೀಲರಾಗಿದ್ದರೆ ವಿನಹ ಕೀರ್ತಿಲೋಲರಾಗಿರಲಿಲ್ಲ. ಕೀರ್ತಿಕಾಂಕ್ಷೆ ಅವರಲ್ಲಿರಲಿಲ್ಲ. ಅವರೊಬ್ಬ ಈ ಕಾಲದ ಗುಪ್ತ ಯೋಗಿಗಳು: ನಿರ್ಲಪ್ತರಾಗಿಗಳು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಯಾವಾಗಲು ಯೋಗದಕ್ಷರು; ಭೋಗ ನಿರಪೇಕ್ಷರು. ಅವರ ಪುಣ್ಯ ಕಾರ್ಯದಲ್ಲಿ ಕರಣಗಳಲ್ಲಿ ಕಣ್ಣಲ್ಲಿ ಮೊಗದಲ್ಲಿ ಯೋಗದ ಯಥೇಷ್ಟ ಕಳೆ ತುಂಬಿ ತುಳುಕುತ್ತಿತ್ತು. ಯೋಗ ಯೋಗ್ಯವಾದ ಅಂಗರಚನೆ ಅವರದು. ಅವರ ಪ್ರತ್ಯಂಗದಲ್ಲಿಯು ಯೋಗಲಕ್ಷಣವಿತ್ತು;ಯೋಗ ತೇಜವಿತ್ತು. ಈ ಅವರ ಅಂಗದಲ್ಲಿ ಕಾಂತಿ, ಅಂತರಂಗದಲ್ಲಿ ಶಾಂತಿ ಮನೆ ಮಾಡಿದ್ದವು. ಹಟಯೋಗದಿಂದ ಅವರ ಅಂಗವೆಲ್ಲ ಸೌಷ್ಟವಗೊಂಡಿತ್ತು, ಸತ್ಯ ಸುಂದರವಾಗಿತ್ತು. ಅವರ ಹಸ್ತಗಳು ನೀಳವಾಗಿದ್ದವು ಹಣೆ ವಿಶಾಲವಾಗಿತ್ತು. ಎದೆ ಅಗಲಾಗಿತ್ತು. ಮುಖ ಚಂದ್ರಬಿಂಬದಂತಿತ್ತು. ನಿಲುವು ತೀರ ಎತ್ತರಲ್ಲ- ತೀರ ಕುಳ್ಳಾದುದಲ್ಲ. ಶರೀರಕ್ಕೆ ತಕ್ಕದಾಗಿತ್ತು. ಅವರ ಶರೀರ ಹಗುರಾಗಿ ಲವಲವಿಕೆಯಿಂದಿತ್ತು. ಅವರ ಶರೀರ ಅತಿ ಸ್ಥೂಲವಲ್ಲ-ಅತಿ ಕೃಶವಲ್ಲ. ಅವರ ಆ ಅಂಗರಚನೆ ಯೋಗಕ್ಕಾಗಿಯೇ ರಚಿತವಾದುದು. ಸೃಷ್ಟಿಕರ್ತನು ಆ ಮೂರ್ತಿಯ ಚಿತ್ರಣಕಲೆಯಲ್ಲಿ ತನ್ನ ಕುಶಲತೆಯನ್ನೆಲ್ಲ ಬಳಸಿ ಚಿತ್ರಕಲಾಯೋಗಿಯೆಂದೆನಿಸಿದನೆಂದರೆ ಅತಿಶಯೋಕ್ತಿಯಲ್ಲ. ಲಯ ಯೋಗದಿಂದ ಅವರ ಮನಸ್ಸು ಅಂತರಾತ್ಮನಲ್ಲಿ ಲಯವಾಗಿತ್ತು. ಸಂಕಲ್ಪ ವಿಕಲ್ಪ ವಿರಹಿತವಾಗಿತ್ತು. ವೃತ್ತಿ ಶೂನ್ಯವಾಗಿತ್ತು. ಪಂಚಕೋಶಗಳನ್ನು ಪರಿಹರಿಸಿತ್ತು.

ಮಂತ್ರಯೋಗದಿಂದ ಅವರ ಚಿತ್ತ ನಿಶ್ಚಂಚಲವಾಗಿತ್ತು. ಬುದ್ಧಿ ಸ್ಥಿರವಾಗಿತ್ತು. ಅರುವಿನ ಬೆಳಗನೊಳಗೊಂಡಿತ್ತು. ರಾಜಯೋಗದಿಂದ ಅವರ ಅಹಂಕಾರವಳಿದು ನಿರಹಂಕಾರ ನೆಲೆಗೊಂಡಿತು, ಜೀವಗುಣ, ಜೀವಭಾವಗಳು ಜಾರಿಹೋಗಿದ್ದವು. ಶಿವಯೋಗದಿಂದ ಅವರು ಶಿವಯೋಗಿಯೆ ಆಗಿದ್ದರು. ಶಿವಸ್ವರೂಪರೇ ಆಗಿದ್ದರು. ಜೀವಿಸಿಯೂ ಮುಕ್ತರಾಗಿದ್ದರು.ಲೋಕವಾರ್ತೆಯ ಲೋಕಕೀರ್ತಿಯ ಹಂಗು ಹರಿದಿದ್ದರು.ಲೋಕೋತ್ತರ ಲೀಲಾಮೂರ್ತಿಗಳಾಗಿದ್ದರು.

ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ

ಯೋಗ ಶಬ್ದವು ಯುಜ್ ಧಾತುವಿನಿಂದ ಹುಟ್ಟಿದ್ದು ಇದರ ಅರ್ಥವು ಜೋಡಿಸುವದು ಅಥವಾ  ಕೂಡಿಸುವದು ಎಂಬುದಾಗಿ ಆಗುವದು, ಯಾಜ್ಞವಲ್ಕ ಮಹರ್ಷಿಗಳು ”ಸಂಯೋಗೋ  ಗಯುತ್ಯುಕೋ ಜೀವಾತ್ಮ ಪರಮಾತ್ಮನೋಃ” ಎಂಬುದಾಗಿ ಹೇಳಿದ್ದಾರೆ. ಅಂದರೆ ಜೀವ ಶಿವರ ನಡುವಿರುವ ಅಜ್ಞಾನ ಪರದೆಯನ್ನು ಹರಿದು ಮಠಾಕಾಶದಲ್ಲಿ ಘಟವನೊಡಿದು ಘಟಾಕಾಶವನ್ನು ಕೂಡಿಸುವಂತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಬೆರೆಸುವದೇ ಯೋಗವೆಂದು ಹೇಳಿದ್ದಾರೆ. ಇದೇ ವಿಷಯವನ್ನೇ ವಿಶೇಷ ವಿವರಣೆಯಾಗಿ ಯೋಗಶಾಸ್ತ್ರದ ಆದ್ಯಪ್ರವರ್ತಕರಾದ ಪಾತಂಜಲಿ ಮಹರ್ಷಿಗಳು “ಯೋಗಶ್ಚಿತ್ತ ವೃತ್ತಿಃ ನಿರೋಧಃ’ ಎಂಬುದಾಗಿ ಹೇಳಿದ್ದಾರೆ. ಅಂದರೆ ಪ್ರಕ್ಷುಬ್ದ ಮತ್ತು ಮಲಿನವಾದಂಥ ಸರೋವರದಲ್ಲಿಯ ನೀರು ಶಾಂತವಾದುದಾಗಿ ಸ್ವಚ್ಛವಾದುದಾಗಿ ಸ್ಥಿರವಾದದ್ದಾದರೆ ಮಾತ್ರ ಅರ್ಥಾತ್ ಕ್ಷುಬ್ದಾವಸ್ಥೆಯು ನಷ್ಟವಾಗಿ ಶಾಂತತಾವಸ್ಥೆಯು ಪ್ರಾಪ್ತವಾದದ್ದಾದರೆ ಹೇಗೆ ಸರೋವರದ ತಳವು ಅಥವಾ ನೆಲೆಯು ಸ್ಪಷ್ಟವಾಗಿ ಕಾಣುತ್ತದೆಯೋ ಹಾಗೆಯೇ ಮನುಷ್ಯನ ಚಿತ್ತವೆಂಬ ಸರೋವರವು ಮನಸ್ಸಿನ ಆಲೋಚನೆಗಳೆಂಬ ತೆರೆಗಳಿಂದ ಮತ್ತು ವಿಷಯವಾಸನೆ ಯೆಂಬ ಮಲಿನದಿಂದ ಕೂಡಿದ್ದಾಗಿರುವದರಿಂದ ಚಿತ್ರದ ನೆಲೆಯು ಅಂದರೆ ಪರಮಾತ್ಮನ ಸ್ವರೂಪವು ಕಾಣುತ್ತಿರುವುದಿಲ್ಲ, ಆದ್ದರಿಂದ ಈ ಚಿತ್ರವೆಂಬ ಸರೋವರದಲ್ಲಿಯ ತೆರೆಗಳನ್ನು ಶಾಂತಮಾಡಿ ವಿಷಯವಾಸನೆಯೆಂಬ ಹೊಲಸನ್ನುದೂರಮಾಡಿ ಚಿತ್ತವನ್ನು ಸ್ಥಿರವಾಗಿಟ್ಟರೆ ಮಾತ್ರ ನೆಲೆಯು ಕಾಣುವದು. ಈ ನೆಲೆಯನ್ನುಅಥವಾ ಪರಮಾತ್ಮನನ್ನು ತೋರಿಸುವ ಸಾಧನೆಯು ಯಾವದುಂಟೋ, ಅದಕ್ಕೆ ಯೋಗವೆಂದು ಹೇಳಿದ್ದಾರೆ.

ಆದರೆ ಯೋಗವು ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ,ಶಿವಯೋಗವೆಂದು ಈ ತರಹವಾಗಿರುವದು. ಗುರೂಪದಿಷ್ಟವಾದ ಪ್ರಣವ, ಹಂಸ’ಪಂಚಾಕ್ಷರಿ, ಷಡಕ್ಷರಿ ಮೊದಲಾದ ಮಂತ್ರಗಳನ್ನು ಋಷಿ, ಛಂದಸ್ಸು, ದೇವತೆ,ಬೀಜ, ಕೀಲಕ ಮೊದಲಾದವುಗಳಿಂದ ೩೩ ದೋಷಗಳಿಲ್ಲದೆ ಸಂಖ್ಯಾಪೂರ್ವಕವಾಗಿ ಜಪಾನುಷ್ಠಾನಂಗೈಯುವದೇ ಮಂತ್ರಯೋಗವು.

ದಶವಿಧಾನುಸಂಧಾನದಲ್ಲಾಗಲಿ ಚಿದ್ಬಿಂದು,ವಿನ ಮನೋಹರವಾದ ನವರತ್ನಪ್ರಕಾಶದಲ್ಲಾಗಲಿ ಮನವನಡಗಿಸಿ ಭೇದವಳಿದಿರುವುದೇ ಲಯಯೋಗವೆನಿಸುವುದು.

ಶರೀರಕ್ಕೆ ಶ್ರಮಕೊಟ್ಟು ಮದೋನ್ನತವಾದ ಗಜದಂತಿರುವ ಬಲವಾದ ಇಂದ್ರಿಯಗಳನ್ನು ಪ್ರಾಣಾಯಾಮವೆಂಬ ಅಂಕುಶದಿಂದ ಸ್ವಾಧೀನಕ್ಕೆ ತರುವ ಯಾವ ಸಾಧನೆಯುಂಟೋ ಅದಕ್ಕೆ ಹಠಯೋಗವೆಂದೆನ್ನುವರು.  ಹಠ ಈ ಶಬ್ದದಲ್ಲಿ

ಹ ಕಾರವು ಸೂರ್ಯನ ಸಂಜ್ಞೆಯು ; ಠ ಕಾರವು ಚಂದ್ರನ ಸಂಖ್ಯೆಯು ಈ ಎರಡರ ಯೋಗವೆಂದರೆ ಐಶ್ವವು ಅರ್ಥಾತ್ ಪ್ರಾಣವಾಯು ಮತ್ತು ಅಪಾನವಾಯುಗಳ ಐಕ್ಯವೇ ಹಠಯೋಗವು

“ಸ ಯಥಾ ಶಕುನೀ ಸೂತ್ರೇಣ ಪ್ರಭುದ್ಧೋ  ದಿಶಾಂದಿಶಂ ಪತಿತ್ವಾನ್ಯತ್ರಾಯತನಂ ಲಬ್ಧ್ವಾ ನಂಧನಮೇವೋಪಶ್ಚಯತೆ  ಏವಮೇವ ಖಲು ಸೋಮ್ಯ ತನ್ಮನೋದಿಶಂದ  

ಶಾಂಪತಿತ್ಸಾ ನ್ಯತ್ರಾಯತನಂ ಲಬ್ಧ್ವಾ ಪ್ರಾಣಮೇವೋಪಶ್ಚಯತೆ ಪ್ರಾಣಬಂಧನಂ ಹಿ

ಸೋಮ್ಯಮಿಸವ ಇತಿ’

ಎಂಬ ಛಾಂದೋಗ್ಯೋಪನಿಷತ್ತಿನ ವಚನದಂತ ಸೂತ್ರದಿಂದ  ಬಂಧಿಸಲ್ಪಟ್ಟಂಥ ಪಕ್ಷಿಯು ಬೇರೆ ಬೇರೆ ದಿನ ಕಡೆಗೆ ಹಾರಿಹೋಗಲಿಕ್ಕೆ ಪ್ರಯತ್ನಮಾಡಿ ಕಡೆಗೆ ಎಲ್ಲಿ ಆಶ್ರಯ ದೊರೆಯದೆ ನಿರುಪಾಯದಿಂದ ಬಂಧನದ ಕಡೆಗೆ ಬರುವಂತೆ ಮನಸ್ಸು ಸಹ ಬೇರೆ ಬೇರೆ ವಿಷಯಗಳ ಕಡೆಗೆ ಹೋದರೂ ಕಡೆಗೆ ಬೇರೆ ಆಶ್ರಯ ದೊರೆಯದ್ದರಿಂದ ಪ್ರಾಣವನ್ನೇ ಆಶ್ರಯ ಮಾಡುತ್ತದೆ. ಆದಕಾರಣ ಪ್ರಾಣವೇ ಮನಸ್ಸಿನ ಬಂಧನವಾಗಿದೆ, ಆದರೆ ಈ ವಿಷಯವಾಗಿ ಎರಡು ವಿಧವಾದ ಮತಗಳಿವೆ.

ಹಠದಿಂದ ಪ್ರಾಣವಾಯುವನ್ನು ಸ್ವಾಧೀನ ತೆಗೆದುಕೊಂಡು ತನ್ಮೂಲಕ ಮನಸ್ಸನ್ನು ವಶಮಾಡಿಕೊಳ್ಳುವದು ಒಂದು ಮತ ಇಬ್ಬರ ಭಕ್ತಿಯಿಂದ ಮನಸ್ಸನ್ನುಸ್ವಾಧೀನ ಮಾಡಿಕೊಳ್ಳುವದು

‘ಮನೋ ಯತ್ರ ವಿಲೀಯತೇ ಪ್ರಾಣಸ್ತತ್ರ ವಿಲೀಯತೆ”

ಎಂಬ ವಚನದಂತೆ ಮನಸ್ಸಿನ  ಸ್ವಾಧೀನತೆಯಿಂದ ಪ್ರಾಣವು ತಾನಾಗಿಯೇ ಸ್ವಾಧೀನವಾಗುವದು. ಮನಸ್ಸು ಗಾಬರಿಯಾದರೆ ಪ್ರಾಣವು ಗಾಬರಿಯಾಗುವದು ಮನಸ್ಸು ನಿರ್ಭಯವಾದರೆ ಪ್ರಾಣವು ನಿರ್ಭಯವುಳ್ಳದ್ದಾಗುವದು. ಪ್ರಯುಕ್ತ ಮೊದಲು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಬೇಕು. ಆ ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳುವದಕ್ಕಾಗಿ ಕ್ರಿಯಾ ಯೋಗವನ್ನಾಚರಿಸಬೇಕು ‘ತಪಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾಯೋಗಃ’

ಅಂದರೆ ತಪಸ್ಸು, ಶಾಸ್ತ್ರ ಚಿಂತನೆ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡುವದೇ ಕ್ರಿಯಾಯೋಗವು ಈ ಸುಲಭೋಪಾಯದಿಂದಲೇ ಮನಸ್ಸಿನ ಸ್ವಾಧೀನತೆಯು ಉಂಟಾಗುವದು. ಇದು ಎರಡನೆಯ ಮತ .

ಪ್ರಾಣ ಮತ್ತು ಮನಸ್ಸು ಈ ಎರಡೂ ಸಮಾನವಾದಂಥ ಪ್ರೇಮ ಬಂಧುಗಳೆಂಬ ವಿಷಯವು ನಿಷ್ಚಯಾತ್ಮಕವಾದದ್ದಿದೆ  ಚಂಚಲವಾದ ಮನಸ್ಸನ್ನುಸ್ವಾಧೀನದಲ್ಲಿ ತೆಗೆದುಕೊಳ್ಳಬೇಕಾದರೆ ಮೊದಲು ಪ್ರಾಣವಾಯುವನ್ನು ಹಠದಿಂದ ಸ್ವಾಧೀನಪಡಿಸಿಕೊಳ್ಳುವದು ಅಗತ್ಯವಾಗಿದೆಯೆಂದು ಈ ಹಠಯೋಗ ಪ್ರವರ್ತಕರಾದ ಮತ್ಸೇಂದ್ರನಾಥ, ಗೋರಖನಾಥ, ಭರ್ತೃಲಹರಿ, ಗೋಪಿನಾಥ, ವಿರೂಪಾಕ್ಷನಾಥ, ವಿಲಯನಾಥ, ಜಲಂದರನಾಥ ಮೊದಲಾದ ನಾಥ ಪಂಥದೊಳಗಿನ ಜನರ ನಿಶ್ಚಯವು. ಇವರು ಪ್ರಾಣನಿರೋಧವೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಉಪಾಯವೆಂದು ಅಭಿಪ್ರಾಯಪಡುತ್ತಾರೆ. ಎರಡನೇ ಪಂಥದ ಪತಂಜಲಿ ಋಷಿ ಮೊದಲಾದವರು ಪರಮಾತ್ಮನ ಭಕ್ತಿಯೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಕಾರಣವೆಂದು ಅಭಿಪ್ರಾಯಪಡುತ್ತಾರೆ. ಹಠಯೋಗ ಮತ್ತು ರಾಜಯೋಗ ಇವುಗಳ ಧ್ಯೇಯವು ಸಮಾಧಿ ಪ್ರಾಪ್ತಿಯೇ ಆದರೂ ಮಾರ್ಗಗಳು ಮಾತ್ರ ಭಿನ್ನವಾಗಿವೆ.

ನಾಥ ಪಂಥದೊಳಗಿನ ಗೋರಕ್ಷನಾಥ ಸ್ವಾಮಿ ಮೊದಲಾದವರು  ಸದೃಢವಾದ ಮಲರಹಿತವಾದ ನಿರೋಗವುಳ್ಳ ಶರೀರವೇ ಪ್ರಾಣಸಂಚಯಕ್ಕೆ ಯೋಗ್ಯವಾಗಿರುತ್ತದೆ. ಆ ಶರೀರದಲ್ಲಿ ಅಧಿಕವಾಗಿ ಪ್ರಾಣಶಕ್ತಿಯನ್ನು ಸಂಗ್ರಹಮಾಡಲಿಕ್ಕೆ ಬರುತ್ತದೆ. ಪ್ರಾಣಶಕ್ತಿಯ ಸಾಮರ್ಥ್ಯದ ಮೇಲೆಯೇ ಶರೀರಕ್ಕೆಲ್ಲ ಸ್ಥಿರತ್ವವನ್ನುಂಟುಮಾಡಲಿಕ್ಕೆ ಬರುತ್ತದೆ. ಆಮೇಲೆ ಸುಲಭೋಪಾಯದಿಂದ ತನ್ನಿಚ್ಛೆಯಂತೆ ಶರೀರವನ್ನು ನಡೆಸಿಕೊಳ್ಳಬಹುದು. ಶರೀರವನ್ನು ಮಲರಹಿತವಾದದ್ದನ್ನಾಗಿ ಮಾಡಿ ವಿಶೇಷ ಪ್ರಾಣ ಸಂಚಯವನ್ನು ಮಾಡದಿದ್ದರೆ ಆ ಶರೀರಕ್ಕೆ ಸ್ಥಿರತ್ವವುಂಟಾಗುವದು ಕಠಿಣವಾಗುತ್ತದೆ. ಅಸ್ಥಿರತೆಯಿಂದ ಜ್ಞಾನತಂತುಗಳು ಕ್ಷೋಭೆಯುಳ್ಳವುಗಳಾಗಿ ಯಾವ ವಸ್ತುವಿನ ಮೇಲೆಯೂ ಏಕಾಗ್ರತೆ ಮಾಡಲು ಶಕ್ಯವಾಗುವದಿಲ್ಲ. ಅನೇಕ ವಾಸನೆಗಳಿಂದ ಮನಸ್ಸು ತುಂಬಿಹೋಗುತ್ತದೆ. ಮನಸ್ಸು ವಾಸನೆಗಳಿಂದ ಪ್ರಾಣವು ಮನಸ್ಸಿನಿಂದ ಕುಣಿಯುತ್ತಿರುವದರಿಂದ ಪ್ರಾಣವನ್ನು ಸ್ವಾಧೀನಮಾಡಿಕೊಂಡಿದ್ದೇ ಆದರೆ ಮನಸ್ಸು ಸ್ವಾಧೀನವಾದಂತೆಯೇ ಸರಿ. ಮನಸ್ಸು ಪ್ರಾಣಶಕ್ತಿಯ ದಾಸನಂತಿದೆ. ಯಾರಿಗೆ ಪ್ರಾಣಶಕ್ತಿಯ ಉಪಯೋಗದ ಅಭ್ಯಾಸವುಂಟೋ ಅವರಿಗೆ ಮನಸ್ಸು ಕವಡಿಗಿಂತ ಕಡಿಮೆ ಬೆಲೆಯುಳ್ಳದ್ದಾಗಿದೆ. ಪ್ರಯುಕ್ತ ಹಠಯೋಗವು ಶರೀರ ಮತ್ತು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಲು ಅತಿ ಪ್ರಾಮುಖ್ಯವಾದ ಸಾಧನವೆಂಬುದಾಗಿ ಹೇಳುತ್ತಾರೆ.

ಮೂಲ ಪ್ರಣವ ಮೊದಲಾದ ಮಹಾಮಂತ್ರಗಳ ಜಪಾನುಷ್ಠಾನ ಅಥವಾ ಸ್ವಾಧ್ಯಾಯಸ್ತೋತ್ರ ಮೊದಲಾದ ಸಾಧನಗಳಿಂದ ಈಶ್ವರ ಭಕ್ತಿಯಲ್ಲಿ ನಾವು ಮನಃಪೂರ್ವಕ ತೊಡಗಿದ್ದಾದರೆ ನಮ್ಮ ಅಂತಃಕರಣವು ಆ ಭಕ್ತಿಯಲ್ಲಿ ತಲ್ಲೀನವಾಗಿ ಹೋಗುತ್ತದೆ. ಆಮೇಲೆ ಶರೀರದ ಪ್ರತಿಯೊಂದು ಭಾಗದ ದೇವತೆಯು ಸಂತುಷ್ಟಳಾಗಿ ಶರೀರದ ಪ್ರತ್ಯೇಕ ಭಾಗದ ಪರಮಾಣುಗಳು ಸ್ಥಿರವುಳ್ಳವುಗಳೂ ಶಾಂತಾದವುಗಳೂ ಆಗುತ್ತವೆ. ಆ ಕಾರಣದಿಂದ ಮನಸ್ಸಿಗೆ ಪ್ರಸನ್ನತೆಯುಂಟಾಗುತ್ತದೆ. ”ಪ್ರಸನ್ನ ಚೇತಸೋ ಹ್ಯಾಸು ಬುದ್ಧಿ: ಪಠ್ಯವತಿಷ್ಠತೆ’  ಎಂಬ ಭಗವದ್ಗೀತೋಕ್ತಿಯಂತೆ ಮನಸ್ಸಿಗೆ ಪ್ರಸನ್ನತಾ ಸ್ಥಿರತಾ ಏಕಾಗ್ರತಾ ಮೊದಲಾದವುಗಳುಂಟಾಗಿ ಮುಂದೆ ಸಹಜ ಸಮಾಧಿಯು ದೊರೆಯುತ್ತದೆ. ಆದ್ದರಿಂದ ರಾಜಯೋಗವೇ ಸರ್ವಯೋಗಗಳ ರಾಜನೆಂಬುದಾಗಿ ಋಷಿಪಂಥಿಗಳ ಅಭಿಪ್ರಾಯವಿರುತ್ತದೆ.

ಯೋಗಶಾಸ್ತ್ರ ಪ್ರವರ್ತಕರಾದ ಪತಂಜಲಿ ಮಹರ್ಷಿಗಳ ಕಾಲದಕಡಗೆ ಲಕ್ಷ್ಯಕೊಟ್ಟಿದ್ದಾದರೆ ಆ ಕಾಲದಲ್ಲಿ ಜನರು ಒಳ್ಳೇ ಬಲಶಾಲಿಗಳೂ ನಿರೋಗಿಗಳೂ,ವ್ಯಸನರಹಿತರೂ, ಮನೋಧೈರ್ಯ ಆತ್ಮವಿಶ್ವಾಸಿಗಳೂ ಆಗಿದ್ದುದರಿಂದ ಅವರಿಗೆ ಹಠಯೋಗದ ಅವಶ್ಯಕತೆಯೇ ಇರಲಿಕ್ಕಿಲ್ಲ. ಆದರೆ ಈಗಿನ ಪರಿಸ್ಥಿತಿಯಕಡೆಗೆ ನೋಡಿದರೆ ಜನರು ದುರ್ಬಲರೂ ಡಾಂಭಿಕರೂ ದುರ್ವ್ಯಸನಿಗಳೂ ಶಿಶ್ನೋದರ ಪರಾಯಣರೂ ಅವಿಶ್ವಾಸ ಅಸ್ಥಿರತೆಗಳಿಂದ ಕೂಡಿದವರಾಗಿರುವದರಿಂದ ಇವರಿಗೆ ಸುಲಭವಾಗಿ ಮನೋನಿಗ್ರಹವಾಗುವದು ಶಕ್ಯವಿಲ್ಲ. ಪ್ರಯುಕ್ತ ಹಠಯೋಗದ ಮೂಲಕವಾಗಿಯೇ ರಾಜಯೋಗವನ್ನು ಪ್ರಾಪ್ತಮಾಡಿಕೊಳ್ಳುವದು ಅವಶ್ಯವಾದ ಹಾಗೂ ಅಗತ್ಯವಾದ ಕರ್ತವ್ಯವಾಗಿದೆ.

ಹಠಯೋಗವು : ‘ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾದಯೋಷ್ಟಾಂಗಾನಿ’  ಅಂದರೆ ಯಮ, ನಿಯಮ, ಆಸನ,ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬುದಾಗಿ ಎಂಟು ಪ್ರಕಾರವಾಗಿದೆ. ಇವುಗಳಲ್ಲಿ ಯಮವು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಕ್ಷಮಾ, ಧೃತಿ, ದಯಾ, ಆರ್ಜವ, ಮಿತಾಹಾರ, ಶೌಚ ಎಂದು ಹತ್ತು ಪ್ರಕಾರದ್ದಾಗಿದೆ.

೧. ಕಾಯಾವಾಚಾ ಮನಸ್ಸುಗಳಿಂದ ಯಾವ ಪ್ರಾಣಿಗೂ ಯಾವ ಕಾಲದಲ್ಲಿಯೂ

ಹಿಂಸೆಯನ್ನು ಮಾಡದಿರುವದು ಅಹಿಂಸೆಯು,

೨. ‘ಯಥಾತಥ್ಯವಾಕ್ಯಂ ಸತ್ಯಂ’ ಅಂದರೆ ಇದ್ದುದನ್ನು ಇದ್ದಂತೆಯೇ ನುಡಿಯುವದೇ ಸತ್ಯವು ಅಥವಾ ಕಾಲಾನುಸಾರವಾಗಿ ಪ್ರಾಣಿಗೆ ಹಿತವಾಗುವಂತೆ ಮಾತಾಡುವದು ಸತ್ಯವು,

೩.ಪದಾರ್ಥವನ್ನೂ ಅಪಹರಿಸದಿರುವದು ಅಸ್ತೇಯವು,

೪, ‘ಬ್ರಹ್ಮಣೇ ವೇದವಿದ್ಯಾಯ್ಕೆ ಕಸ್ಯೈ ವಿದ್ಯಾಯ್ ವಾಚರ್ಯತೆ ಇತಿ ಬ್ರಹ್ಮಚರ್ಯಂ’ ಅಂದರೆ ವೇದವಿದ್ಯೆಯಾಗಲೀ ಅಥವಾ ಬೇರೊಂದು ವಿದ್ಯೆಯನ್ನಾಗಲೀ ಕಲಿಯುವದರ ಸಲುವಾಗಿ ಯಾವ ವ್ರತವನ್ನು ಧಾರಣ ಮಾಡಬೇಕಾಗುತ್ತದೆಯೋ ಆ ವ್ರತಕ್ಕೆ ಬ್ರಹ್ಮಚರ್ಯವೆಂದು ಹೇಳಲ್ಪಡುತ್ತದೆ.

ಶರೀರ ಸಂಪತ್ತನ್ನು ಮೇಧಾಶಕ್ತಿಯನ್ನು ಚನ್ನಾಗಿ ಇಡುವದರ ಸಲುವಾಗಿ ಶಾಸ್ತ್ರದಲ್ಲಿ ವೀರ್ಯ ನಿರೋಧದ ಸಂಬಂಧವಾಗಿ ಯಾವ ನಿಯಮವನ್ನು ಹಾಕಿಕೊಟ್ಟಿರುವರೋ ಅದನ್ನೇ ಕ್ರಮಬದ್ಧವಾಗಿ ಪಾಲನೆ ಮಾಡುವದೇ ಬ್ರಹ್ಮಚರ್ಯವ್ರತವು. ಸ್ಪಷ್ಟವಾಗಿ ‘ಗುಪ್ತೇಂದ್ರಿಯಸ್ಯೊಪಸ್ಥಸ್ಯ ಸಂಯಮಃ’ ಅಂದರೆ ಜನನೇಂದ್ರಿಯದ ದಮನವೇ ಬ್ರಹ್ಮಚರ್ಯ ವ್ರತದೊಳಗಿನ ಮುಖ್ಯ ವಿಷಯವಾಗಿರುತ್ತದೆ. ಕಂಬದ ಆಧಾರದ ಮೇಲಿಂದ ಮನೆಯು ಹ್ಯಾಗೆ ನಿಲ್ಲುವದೋ ಹಾಗೆಯೇ ಶರೀರದ ಸುಸ್ಥಿತಿಯು ಸ್ವಚ್ಛತೆ, ಹಿತಕಾರಕ ಅನ್ನ, ನಿಯಮಿತ ನಿದ್ರೆ, ದೃಢವಾದ ಬ್ರಹ್ಮಚರ್ಯ ಮೊದಲಾದವುಗಳನ್ನೇ ಅವಲಂಬಿಸಿರುತ್ತದೆ. ಬ್ರಹ್ಮಚರ್ಯವು ಸರ್ವ ಆಯಷ್ಯದ ಮತ್ತು ಪರುಷಾರ್ಥದ ತಳಹದಿಯಾಗಿರುತ್ತದೆ. ತಳಹದಿಯು ದೃಢವಾದದ್ದಿದ್ದರೆ ಮಾತ್ರ ಕಟ್ಟಡವು ಸಡಲುವುದಿಲ್ಲ. ಹಾಗೆಯೇ ಬ್ರಹ್ಮಚರ್ಯವೊಂದನ್ನು ಸಾಧಿಸಿದರೆ ಪುರುಷಾರ್ಥವು ಕೈ ಸೇರಲು ಅವಕಾಶವು ಇಲ್ಲದಿಲ್ಲ. ಆದ ಪ್ರಯುಕ್ತ ಬ್ರಹ್ಮಚರ್ಯದ ಅವಶ್ಯವು ಇಹಪರಗಳೆರಡಕ್ಕೂ ಮುಖ್ಯವಾಗಿದೆ.

ಅನ್ನದಿಂದ ರಕ್ತವಾಗುತ್ತಿದೆ. ಆ ರಕ್ತದಿಂದ ವೀರ್ಯವುಂಟಾಗುವದು. ಅನ್ನದಲ್ಲಿ ಯಾವ ಗುಣಧರ್ಮಗಳುಂಟೋ ಆ ಗುಣಧರ್ಮಗಳು ರಕ್ತದಲ್ಲಿ ಉಂಟಾಗುತ್ತವೆ. ರಕ್ತದಲ್ಲಿಯ ಗುಣಧರ್ಮಗಳು ವೀರ್ಯ ದಲ್ಲಿ ಉಂಟಾಗುತ್ತವೆ. “ಅನ್ನಮಯ ಹಿಸೋಮ್ಯರ್ಮಃ ಎಂಬ  ಶ್ರುತಿವಚನದಂತೆ ಅನ್ನದ ಸೂಕ್ಷಾ ೦ಶದಿಂದ ಮನಬುದ್ದಿಗಳು ಹುಟ್ಟುತ್ತಿರುವುದರಿಂದ ಉದ್ದೀಪಕ ಆಹಾರದಿಂದ ಮನಬುದ್ದಿಗಳು ಕೂಡ ಉದ್ದೀಪಕಗಳಾಗಿ ಕೆಟ್ಟ ಕೃತಿ ಉಂಟಾಗುವಂತೆ ಮಾಡುತ್ತವೆ. ಆದ್ದರಿಂದ ವೃತ್ತಿಗಳು ಸೌಮ್ಯವಾಗಿರಲಿಕ್ಕೆ ಬ್ರಹ್ಮಚರ್ಯವು ಸಂರಕ್ಷಣವಾಗಲಿಕ್ಕೆ ಯೋಗ್ಯವಾದಂಥ ಆಹಾರವನ್ನೇ ಬ್ರಹ್ಮಚಾರಿಯು ಸೇವಿಸಬೇಕು. ಯಾವ ಪ್ರಾಣಿಯು ಕೇವಲ ಮಾಂಸಾಹಾರವನ್ನೇ ಮಾಡುವದಾಗಿರುವದೋ ಆ ಪ್ರಾಣಿಯ ವೃತ್ತಿಯು ಯಾವಾಗಲೂ ಕ್ರೂರ ಹಾಗೂ ಅವಿಚಾರ ತರದ್ದಾಗಿರುತ್ತದೆ. ಯಾವ ಪ್ರಾಣಿಯು ಆಹಾರವು ಸಾತ್ವಿಕತೆಯುಳ್ಳದ್ದಾಗಿರುವದೋ ಆ ಪ್ರಾಣಿಯ ವೃತ್ತಿಯು ಸಾತ್ವಿಕತೆಯುಳ್ಳದ್ದಾಗಿರುತ್ತದೆ. ಉದಾಹರಣೆ ಸಿಂಹ, ಹುಲಿ, ಚಿರತೆ  ಮೊದಲಾದ ಹಿಂಸ್ರ ಪ್ರಾಣಿಗಳು ಕ್ರೂರ ವೃತ್ತಿಯುಳ್ಳವಾಗಿರುತ್ತವೆ. ಆನೆ, ಆಕಳು, ಹರಿಣ ಮೊದಲಾದ ವನಸ್ಪತ್ಯಾಹಾರ ಮಾಡುವ ಪ್ರಾಣಿಗಳು ಸಾತ್ವಿಕ ವೃತ್ತಿಯುಳ್ಳವುಗಳಾಗಿವೆ. ಯಾರ ವೃತ್ತಿಯು ಸಾತ್ವಿಕವಿಲ್ಲವೋ ಅವರ ಸ್ಫೂರ್ತಿಯು ಕೂಡ ಸಾತ್ವಿಕವಿರುವದಿಲ್ಲ. ಆಮೇಲೆ ಅವರ ಕೃತಿಯು ಸಾತ್ವಿಕವಿರುವದೆಂತು? ಸಾತ್ವಿಕ ಸ್ಫೂರ್ತಿ ಸಾತ್ವಿಕ ಕೃತಿಯು ಬ್ರಹ್ಮಚರ್ಯದ ಮುಖ್ಯಾಂಗವಾಗಿವೆ. ಆದ್ದರಿಂದ ಬ್ರಹ್ಮಚರ್ಯ  ವ್ರತ ಕಾಪಾಡಬೇಕೆಂಬುವವರ ಕಾಮೇಚ್ಛಾ ಉತ್ಪನ್ನ ಮಾಡತಕ್ಕಂಥಾ ಉತ್ತೇಜಕವಾದಂಥಾ ಆಹಾರವನ್ನು ತಕ್ಕೊಳ್ಳಬಾರದು. ಖಾರ, ಉಪ್ಪು, ಉರಳೀಗಡ್ಡೆ ಬೆಳ್ಳುಳ್ಳಿ, ಮಸಾಲೆ ಪದಾರ್ಥ ಕರಿದ ಪದಾರ್ಥ, ಮದ್ಯ,ಚಹಾ, ತಂಬಾಕು, ಕಾಫಿ ಮೊದಲಾದ ಮಾದಕ ಪದಾರ್ಥಗಳನ್ನು ಅವಶ್ಯವಾಗಿ ಬಿಡಲೇಬೇಕು. ಸಾರಾಂಶ ಮನಸ್ಸಿನಿಂದ ಮಾತಿನಿಂದ ಕೃತಿಯಿಂದ ವೀರ್ಯ ವನ್ನು ಸಂರಕ್ಷಿಸುವದೇ ಬ್ರಹ್ಮಚರ್ಯವು

೫. ಅನಿಷ್ಟವನ್ನುಂಟು ಮಾಡಿದವರಿಗೆ ತಾನು ಪ್ರತಿಯಾಗಿ ಅನಿಷ್ಟವನ್ನುಮಾಡುವ ಶಕ್ತಿಯಿದ್ದರೂ, ತಡೆಯುವದೇ ಕ್ಷಮೆಯು.

೬. ಸಂಕಟ ದುಃಖ ಮೊದಲಾದ ಪ್ರಸಂಗಗಳಲ್ಲಿ ಎದೆಗುಂದದೆ ಹಾಗೆಯೇ ತನ್ನಕಾರ್ಯವನ್ನು ನಡಿಸುವದೇ ಧೈರ್ಯವು,

೭. ಸರ್ವ ಪ್ರಾಣಿಗಳೂ ತನ್ನಂತೆಯೇ ಇವೆಯೆಂಬ ಬುದ್ದಿಯನ್ನಿಟ್ಟು ವರ್ತಿಸುವದೇ ದಯೆಯು.

೮. ಕುಟಿಲತನವಿಲ್ಲದೆ ಸರಳ ಹೃದಯನಾಗಿರುವದೇ ಅರ್ಜವವು.

೯. ಹಸಿವೆಯನ್ನಿಟ್ಟುಕೊಂಡೇ ಭೋಜನವನ್ನು ಪೂರೈಸುವದು ಮಿತಾಹಾರವು.

೧೦. ಅಂತರಂಗವನ್ನು ನೇತಿ, ಧೌತಿ, ಬಸ್ತಿ, ತ್ರಾಟಕ, ಕಪಾಲಭಾತಿ ಮೊದಲಾದವುಗಳಿಂದ ಶುದ್ಧ ಮಾಡುವದೂ ಬಹಿರಂಗವನ್ನು ಮಣ್ಣು ನೀರು ಮೊದಲಾದವುಗಳಿಂದ ಸ್ವಚ್ಛ ಮಾಡುವದಕ್ಕೆ ಶೌಚವು. ಈ ಪ್ರಕಾರವಾಗಿ ಯಮವು ಹತ್ತು ಅಂಗಗಳಿಂದ ಕೂಡಿದ್ದಾಗಿದೆ.

ನಿಯಮವು ತಪಸ್ಸು, ಸಂತೋಷ, ಆಸ್ತಿ, ದಾನ, ಈಶ್ವರಪೂಜನ, ಸಿದ್ಧಾಂತ

ವಾಕ್ಯಶ್ರವಣ, ಹ್ರೀ, ಮತಿ, ಜಪ, ಹುತ ಎಂದು ಹತ್ತು ಪ್ರಕಾರವದೆ.

೧. ‘ತಪ್ಯಂತೀತಿ ತಪಃ’ ಅಂದರೆ ಸ್ರಕ್ ಚಂದ್ರಾಯಣಾದಿ ವ್ರತಗಳಿಂದ ಶರೀರಕ್ಕೆ ಕಷ್ಟ ಕೊಡುವದು ತಪಸ್ಸು.

೨. ಇಷ್ಟಾನಿಷ್ಟ ಪ್ರಸಂಗಗಳೊದಗಿದರೂ ಆನಂದವಾಗಿರುವದು ಸಂತೋಷವು.

೩. ಧರ್ಮ, ಮೋಕ್ಷ, ಈಶ್ವರ ಮೊದಲಾದವುಗಳ ಕೃತಜ್ಞತೆಯುಳ್ಳವನಾಗಿ ಸದ್ಭಾವದಿಂದಿರುವದೇ ಆಸ್ತಿಕ್ಯವು.

೪. ಯೋಗ್ಯ ಕಾಲದಲ್ಲಿ ಸುಪಾತ್ರದಲ್ಲಿ ಯಥಾಶಕ್ತಿ ಸಹಾಯ ಮಾಡುವದೇ ದಾನವು.

೫. ಸದ್ಭಾವನೆಯಿಂದ ತನ್ನಿಷ್ಟ ದೇವತೆಯನ್ನು ಅರ್ಚಿಸುವುದೇ ಈಶ್ವರ ಪೂಜನವು.

೬. ಯಥಾರ್ಥವನ್ನು ಹೇಳುವ ಪುರುಷರ ಮತ್ತು ವೇದಾಂತ ಸಿದ್ಧಾಂತ ಶಾಸ್ತ್ರಗಳ ವಚನಗಳನ್ನು ಕೇಳುವದು ಸಿದ್ಧಾಂತ ವಾಕ್ಯಶ್ರವಣವು.

೭. ಧರ್ಮಾಚರಣೆಯ ವಿರುದ್ಧ ಪ್ರವೃತ್ತಿ ಉಂಟಾದುದಕ್ಕೆ ಲಜ್ಜೆ ಬರುವದು ಹ್ರೀ

೮. ದೃಢವಾದ ವಿಶ್ವಾಸವೇ ಮತಿಯು.

೯. ಕ್ರಮಪ್ರಕಾರವಾಗಿ ಈಶ್ವರನ ನಾಮೋಚ್ಛಾರಣೆ ಮಾಳ್ಪುದೇ ಜಪವು.

೧೦. ವೇದಾಜ್ಞೆಯ ಪ್ರಕಾರ ಹವನ ಮಾಡುವದೇ ಅರ್ಥಾತ್ ಸ್ವಾರ್ಥತ್ಯಾಗವೇ ಹುತವಹುದು.

 ಈ ಪ್ರಕಾರವಾಗಿ ನಿಯಮಾಂಗಳೂ ಈ ಯಮ ನಿಯಮಗಳೂ ನಡೆನುಡಿಗಳ ತಿದ್ದುಪಾಟವನ್ನು ಮಾಡಿ ಕೊಡುತ್ತವೆ. ಇವುಗಳ ಸಹಾಯವಿಲ್ಲದಿದ್ದರೆ ಯೋಗವು ಸಿದ್ಧಿಸುವದಿಲ್ಲ, ಆದ್ದರಿಂದ ಯೋಗಿಯಾಗಬೇಕೆಂಬುವವರು ಯಮ ನಿಯಮಗಳು ಅಳವಡವಂತೆ ಪ್ರಯತ್ನ ಮಾಡಬೇಕು.

ಯೋಗದ ಮೂರನೇ ಅಂಗವು ಆಸನವು ‘ಸುಖೇನ ಆಸ್ಯತೆ ಇತಿ ಆಸನಂ’ ಅಂದರೆ ತೊಂದರೆ ಪಡದೆ ಸುಖವಾಗಿ ಒಂದೇ ರೀತಿ ಕುಳಿತುಕೊಳ್ಳುವದಕ್ಕೆ ಆರೋಗ್ಯವೂ ಲಘುತ್ವವೂ ಪ್ರಾಪ್ತವಾಗಿ ಚಂಚಲತೆಯು ನಷ್ಟವಾಗುತ್ತದೆ. ಪ್ರಯುಕ್ತ ಅಭ್ಯಾಸಿಗೆ ಸ್ಥಿರವಾದ ಆಸನವನ್ನು ಸಾಧಿಸುವದು ಅಗತ್ಯವಾಗಿರುತ್ತದೆ. ಆಸನ ಜಯವಾದ ವಿನಹ ಪ್ರಾಣಾಯಾಮವೇ ಮೊದಲಾದ ಮುಂದಿನ ಯೋಗಾಂಗಗಳು  ಎಂದೂ ಸಾಧಿಸಲು ಶಕ್ಯವಿಲ್ಲ. ಒಂದು ತಾಸಿನಿಂದ ಮೂರು ತಾಸುಗಳವರೆಗೂ ಒಂದೇ ಸ್ಥಾನದಲ್ಲಿ ತನಗೆ ಸರಿದೋರಿದ ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳುವದೇ ಆಸನ ಜಯವು. ಇದರಿಂದ ತತೋ ದ್ವಂದ್ವಾನಭಿಘಾತ!’ ಅಂದರೆ ಶೀತೋಷ್ಣ ದ್ವಂದ್ವಗಳ ಬಾಧೆಯುಂಟಾಗುವದಿಲ್ಲ, ಆಸನಗಳನ್ನು ನಿತ್ಯಾನಿಯಮಿತ ಹಾಕುವುದರಿಂದ ಶರೀರದ ನಿರುಪಯೋಗಿ ಪರಮಾಣುಗಳು ಹೋಗಿ ಅವುಗಳ ಸ್ಥಾನದಲ್ಲಿ ಹೊಸ ಪರಮಾಣುಗಳು ವ್ಯಾಪಿಸುತ್ತವೆ.ಪ್ರಾಣಶಕ್ತಿಯನ್ನು ಹೆಚ್ಚಾಗಿ ಸಂಗ್ರಹಿಸಲಿಕ್ಕೆ ಯೋಗ್ಯತೆಯುಂಟಾಗುತ್ತದೆ. ಆಸನ ಹಾಕುವಾಗ ಶ್ವಾಸೋಚ್ಛಾಸವನ್ನು ಬಾಯಿಯಿಂದ ನಡಿಸದೆ ಮೂಗಿನಿಂದಲೇ ನಡಿಸಬೇಕು. ಈ ಜಗತ್ತಿನಲ್ಲಿ ಎಷ್ಟು ಜೀವರಾಶಿಗಳುಂಟೋ ಅಷ್ಟು ಪ್ರಕಾರದ ಆಸನಗಳುಂಟು. ಅವುಗಳಲ್ಲಿ ಎಂಬತ್ತುನಾಲ್ಕು ಆಸನಗಳು ಮುಖ್ಯವಾದವುಗಳೆಂದು ಘೇರಂಡ ಸಂಹಿತೆಯಲ್ಲಿ ಹೇಳಿರುತ್ತದೆ. ಅವುಗಳಲ್ಲಿಯೂ ಕೂಡ ಮೂವತ್ತೆರಡು ಆಸನಗಳು ಮುಖ್ಯಾದವುಗಳೆಂದೂ ಸಿದ್ಧಾಸನ ಪದ್ಮಾಸನ ಮತ್ತು ಸ್ವಸ್ತಿಕಾಸನಗಳೇ ಸರ್ವ ಸಿದ್ಧಿಗೂ ಮೋಕ್ಷಕ್ಕೂ ಸಾಧಕಗಳೆಂದು ಯೋಗಿಗಳ ಅಭಿಪ್ರಾಯವಿದೆ.

ಆಸನ ಜಯವಾದ ಮೇಲೆ ಮುಂದಿನ ಅಂಗವು ಪ್ರಾಣಾಯಾಮವು, ಯೋಗ ಸಾಧನದ ಅತ್ಯಂತ ಮಹತ್ವವಾದ ಅಂಗವೆಂದರೆ ಪ್ರಾಣಾಯಾಮವೇ ಸರಿ. ಪ್ರಾಣಾಯಾಮದಿಂದ ಮನಸ್ಸು ಇಂದ್ರಿಯಗಳು ಶುದ್ಧ ನಿರ್ದೋಷವುಳ್ಳವುಗಳಾಗಿ ಬಲವುಳ್ಳವುಗಳಾಗುವವು. ದೀರ್ಘಾಯುಷ್ಯ ಪ್ರಾಪ್ತವಾಗುವದರ ಸಲುವಾಗಿ ಅನೇಕ ಉಪಾಯಗಳೇನುಂಟೋ ಅವುಗಳಲ್ಲಿ ಪ್ರಾಣಾಯಾಮವು ಅತಿ ಶ್ರೇಷ್ಟವಾದ ಉಪಾಯವಾಗಿದೆ. ಪ್ರಾಣಾಯಾಮದಿಂದಲೇ ವೀರ್ಯವು ಸ್ಥಿರವುಳ್ಳದ್ದಾಗಿ ಮನುಷ್ಯನು ಊರ್ಧ್ವರೇತಸ್ಸುವುಳ್ಳವನಾಗುವನು. ಮನಸ್ಸಿನ ಸ್ಥಿರತ್ವ, ಧ್ಯಾನಸಿದ್ದಿ, ಸಮಾಧಿ ಪ್ರಾಪ್ತಿಗಳನ್ನುಂಟುಮಾಡುವ ಸಮಸ್ತ ಸಾಧನಗಳಲ್ಲಿ ಪ್ರಾಣಾಯಾಮವೇ ಅಗ್ರಪೀಠವನ್ನಲಂಕರಿಸಿದೆ. ಪ್ರಾಣಾಯಾಮವೆಂದರೆ ಪ್ರಾಣಶಕ್ತಿಯ ಜಯವು. ಈ ಜಯವುಂಟಾದವನ ಶರೀರದಲ್ಲಿ ಒಂದು ಪ್ರಕಾರದ ದೈವೀ ಶಕ್ತಿಯು ಸಂಚಾರ ಮಾಡುತ್ತದೆ.

ಕೇವಲ ಶ್ವಾಸವನ್ನು ಒಳಗೆ ಹಿಡಿಯುವದೇ ಪ್ರಾಣಾಯಾಮವೆಂದು ಕೆಲವರ ತರ್ಕವಿದೆ. ಶ್ವಾಸವನ್ನು ಒಳಗೆ ತೆಗೆದುಕೊಳ್ಳುವದು ಕೆಲವು ವೇಳೆ ಅಲ್ಲಿಯೇ ತಡೆಯುವದು ಆಮೇಲೆ ಹೊರಗೆ ಬಿಡುವದು ಇತ್ಯಾದಿ ಕ್ರಿಯೆಗಳನ್ನು ಪ್ರಾಣಾಯಾಮ ಮಾಡುವವರೇನೋ  ನಿಜ .ಆದರೆ ಕೇವಲ ವಾಯುವೇ ಪ್ರಾಣಾಯಾಮವಲ್ಲ. ಸೂರ್ಯನಿಂದ ವಾಯುನಲ್ಲಿರುವಂಥಾ ಪರಮಾತ್ಮನ ವಿಶ್ವವ್ಯಾಪಕ ಪ್ರಾಣಶಕ್ತಿಯನ್ನು ಶರೀರದಲ್ಲಿ ತೆಗೆದುಕೊಳ್ಳುವದೇ ಪ್ರಾಣಾಯಾಮದ ಮುಖ್ಯೋದ್ದೇಶವದೆ. ಈ ವಿಷಯದ ಜ್ಞಾನವು ಯಾರಿಗಿಲ್ಲವೋ ಅವರಿಗೆ ಪ್ರಾಣಾಯಾಮದಿಂದಾಗತಕ್ಕಷ್ಟು ಲಾಭವಾಗಲಿಕ್ಕಿಲ್ಲ, ಪ್ರಾಣಾಯಾಮ ಮಾಡುವವರು ಕೆಳಗಿನ ಭಾವನೆಯನ್ನು ಮನಸ್ಸಿನಲ್ಲಿ ಮಾಡಬೇಕು.

ವಿಶ್ವವ್ಯಾಪಕ ಪ್ರಾಣಶಕ್ತಿಯನ್ನುನಾನು ನನ್ನ ಶರೀರದಲ್ಲಿ ಧಾರಣ ಮಾಡಿದ್ದೇನೆ. ಸರ್ವಾವಯವಗಳಲ್ಲಿ ಆ ಶಕ್ತಿಯು ಮುಟ್ಟಿ ನವ ಚೈತನ್ಯವನ್ನುಂಟು ಮಾಡಿದೆ. ಆ ಶಕ್ತಿಯಿಂದ ನನ್ನ ಸರ್ವದೋಷಗಳು ನಷ್ಟವಾಗಿ ಪವಿತ್ರತೆಯುಂಟಾಗಿದೆ.

ಭಾವನೆಯನ್ನು ಮನಸ್ಸಿನಲ್ಲಿದೃಢಪಡಿಸಿದ್ದಾದರೆ ಪ್ರಾಣಾಯಾಮವು ವಿಶೇಷ ಫಲಕಾರಿಯಾಗುವದು.ಶ್ವಾಸತಕ್ಕೊಳ್ಳುವದು ಶ್ವಾಸ ತಡೆಯುವದು ಶ್ವಾಸವನ್ನು ಬಿಡುವದು ಹೀಗೆ ಪ್ರಾಣಾಯಾಮದ ಮೂರು ಭಾಗಗಳಿವೆ. ನಾಶಿಕವು ಪ್ರಾಣದ ಸ್ಥಾನವಿದ್ದದ್ದರಿಂದ ಶ್ವಾಸೋಚ್ಛಾಸದ ಕಾರ್ಯವನ್ನು ನಾಶೀಕದಿಂದಲೇ ಮಾಡಬೇಕು. ಪ್ರಮಾದದಿಂದಲೂ ಸಹ ಮುಖದಿಂದ ಮಾಡಬಾರದು. ಪ್ರಾಣಾಯಾಮದ ಕೆಲವು ನೇಮಗಳ ಹೊರ್ತು ಉಳಿದ ಸರ್ವಶ್ವಾಸೋಚ್ಛಾಸದ ಕರ್ಮವನ್ನು ನಾಶಕದಿಂದಲೇ ಮಾಡಬೇಕು. ಮೂಗಿನಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನೂ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಮುಖದಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನುಕ್ಷೀಣಮಾಡಿ ರೋಗಗಳನ್ನುಂಟು ಮಾಡುತ್ತದೆ. ಈ ಪ್ರಕಾರ ನಾಶಿಕವು ಮಹತ್ವದ ಇಂದ್ರಿಯವಿದ್ದು ಅದನ್ನು ನಿರ್ಮಲವಾಗಿಡುವದು ಯೋಗಾಭ್ಯಾಸಿಯ ಪ್ರಥಮ ಕರ್ತವ್ಯವಾಗಿರುತ್ತದೆ. ಅನೇಕ ಜನರು ಈ ವಿಷಯವಾಗಿ ತೆಗೆದುಕೊಳ್ಳಬೇಕಾದಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳುವದಿಲ್ಲ. ಕೆಲವು ಜನರ ನಾಶಿಕವಂತೂ ಹೊಲಸಿನಿಂದ ತುಂಬಿಹೋಗಿ ಶ್ವಾಸಕರವು ಮುಖದಿಂದಲೇ ನಡೆದಿರುತ್ತದೆ. ಈ ಕೆಟ್ಟ ಚಟವನ್ನುದೂರಮಾಡಲು ನಾಶಿಕವನ್ನು ಸ್ವಚ್ಛವಾಗಿಡುವದೇ ಕಾರಣವಾಗಿದೆ.

ಬಾವಿಯಲ್ಲಿಯ ಸ್ವಚ್ಛವಾದ ನೀರನ್ನು ತಂದು ಥಾಲಿಯಲ್ಲಿ ಸೋಸಿಟ್ಟುಕೊಂಡು ಮೂಗಿನ ಒಂದು ಹೊರಳೆಯನ್ನು ಮುಚ್ಚಿ ಎರಡನೇ ಹೊರಳಿಯಿಂದ ಸಾವಕಾಶವಾಗಿ ಆ ನೀರನ್ನು ಸೇದಬೇಕು. ಹೀಗೆ ಎರಡೂ ಹೊರಳಿಗಳಿಗೆ ಮಾಡುವದರಿಂದ ಮೂಗು ಸ್ವಚ್ಛವಾಗುವದು. ಆ ಥಾಲಿಯಲ್ಲಿಯ ಸ್ವಚ್ಛ ನೀರಿನಲ್ಲಿ ಉಪ್ಪು ಹಾಕಿ ಉಪಯೋಗ ಮಾಡಿದರಂತೂ ಅಧಿಕ ಗುಣಕಾರಿಯಾದದ್ದಾಗುತ್ತದೆ. ನೀರನ್ನು ಮಾತ್ರ ಬಹುವೇಗದಿಂದ ಎಳೆದುಕೊಳ್ಳಬಾರದು. ಹಾಗೆ ಮಾಡುವದರಿಂದ ಮಿದುಳುಗಳಿಗೆ ಅಪಾಯವಾಗುವ ಸಂಭವವಿರುತ್ತದೆ. ಈ ಪ್ರಯೋಗವು ಅತಿ ಸುಲಭವಾಗಿರುವದರಿಂದ ಸಣ್ಣ ಸಣ್ಣ ಬಾಲಕರು ಸಹ ಮಾಡಬಹುದು.

ಮೂಗಿನ ಸರ್ವ ವಿಕಾರದ ಮೇಲೆ ಈ ಜಲಪಾನವಿಧಿಯು ಅತ್ಯಂತ ಗುಣಕಾರಿಯಾಗಿದೆ. ಮೂಗಿನ ರಕ್ತ ಬೀಳುವದಕ್ಕೂ ಮೂಗಿನಿಂದ ಹುಟ್ಟುವ ಬೊಕ್ಕೆಗಳಿಗೂ ಮೂಗಿನ ದುರ್ಗಂಧ ನಿವಾರಣೆಗೂ ತಲೆನೋವಿಗೂ ಬದ್ದಕೋಷ್ಟತೆಗೂ ಮುಖರೋಗಕ್ಕೂ ಈ ಜಲನೇತಿವಿಧಿಯು ಅತಿ ಉಪಯೋಗವುಳ್ಳದ್ದಾಗಿದೆ.

ಪ್ರಾಣಾಯಾಮವನ್ನು ಮಾಡುವದಕ್ಕಾಗಿ ಸೂರ್ಯನ ಕೋಮಲ ಕಿರಣಗಳು ಎಷ್ಟು ಪ್ರಾಪ್ತವಾಗುತ್ತವೆಯೋ ಅಷ್ಟು ಉತ್ತಮವು ಯಾಕಂದರೆ ಈ ಮುಂಚೆಯೇ ಹೇಳಿದಂತೆ ಸೂರ್ಯನ ಕಿರಣಗಳಿಂದ ಪ್ರಾಣ ಶಕ್ತಿಯು ವಿಶೇಷ ದೊರೆಯುತ್ತದೆ. ಮುಂಜಾನೆ ಸ್ನಾನ ಮಾಡಿ ಎಳೆಬಿಸಿಲಿನಲ್ಲಿ, ಮಧ್ಯಾನಕ್ಕೆ ಊಟಕ್ಕಿಂತ ಮೊದಲು ಒಂದು ತಾಸು, ಸಾಯಂಕಾಲಕ್ಕೆ ಸೂರ್ಯಾಸ್ತಕ್ಕಿಂತ ಪೂರ್ವದಲ್ಲಿ ಪ್ರಾಣಾಯಾಮವನ್ನುಮಾಡಬೇಕು. ಪ್ರಾಣಾಯಾಮವನ್ನು ಮಾಡುವ ಸ್ಥಾನವನ್ನು ಶ್ರೀ ಸ್ವಾಮಿ ವಿವೇಕಾನಂದರು ಹೇಳುವಂತೆ ಒಂದು ಏಕಾಂತವಾಗಿರುವ ಕೋಣೆಯನ್ನು ಗೊತ್ತುಮಾಡಬೇಕು. ಆ ಕೋಣೆಯಲ್ಲಿ ಯಾರೂ ಮಲಗಬಾರದು. ಅದನ್ನು ಶುದ್ಧವಾಗಿಟ್ಟಿರಬೇಕು. ಸ್ನಾನಮಾಡದೆ ಅಲ್ಲಿಗೆ ಹೋಗಬಾರದು. ಆ ಕೋಣೆಯಲ್ಲಿ ಯಾವಾಗಲೂ ಸುಗಂಧಪುಷ್ಪಗಳನ್ನಿಟ್ಟಿರಬೇಕು ಮತ್ತು ಸಾಧು ಸತ್ಪುರುಷರ ಉತ್ತಮೋತ್ತಮ ಚಿತ್ರಗಳನ್ನು ಹಚ್ಚಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಸುಗಂಧ ರೂಪಗಳನ್ನು ಸುಡುತ್ತಿರಬೇಕು. ರಾಗದ್ವೇಷ ಮೊದಲಾದ ಹೊಲಸು ವಿಚಾರಗಳನ್ನು ಆ ಸ್ಥಾನದಲ್ಲಿದ್ದಾಗ್ಗೆ ಮನಸ್ಸಿನಲ್ಲಿ ಸಹ ತರಕೂಡದು. ಹೀಗೆ ಮಾಡೋಣದರಿಂದ ಕಾಲಾಂತರದಲ್ಲಿ ಅಲ್ಲಿಯ ವಾತಾವರಣವು ಪವಿತ್ರತೆಯುಳ್ಳದ್ದಾಗುವದು. ಯಾವಾಗ್ಗೆ ಮನಸ್ಸಿಗೆ ಉದಾಸೀನತೆ, ದುಃಖ ಸಂಶಯ, ಚಂಚಲತಾ ಮೊದಲಾದವುಗಳು ತೊರುತ್ತವೆಯೋ ಆವಾಗ್ಗೆ ಆ ಕೋಣೆಯಲ್ಲಿ ಸಹಜವಾಗಿ ಹೋಗೋಣದರಿಂದ ಮನಸ್ಸಿಗೆ ನಿಶ್ಚಯವಾಗಿ ಶಾಂತತೆ ದೊರೆಯುತ್ತದೆ. ಈ ಉದ್ದೇಶದಿಂದಲೇ ನಮ್ಮದೇಶದಲ್ಲಿ ದೇವರಮನೆಗಳೆಂದು, ಗುಡಿಗಳೆಂದು ಮಠಗಳೆಂದು ಉಂಟಾದದ್ದು.ಆದರೆ ಕಿವಿಯೊಳಗಿನ ಮುರು ಹೋಗಿ ಕೇವಲ ರಂಧ್ರವೇ ಉಳಿಯುವಂತೆ ಉದ್ದೇಶವು ನಷ್ಟವಾಗಿ ಅದರ ಕಾರ್ಯವು ಮಾತ್ರ ಈಗ ನಮ್ಮಲ್ಲಿ ಉಳಿದಿರುತ್ತದೆ.

ಇಂಥ ಪವಿತ್ರವಾದ ಕೋಣೆಯಲ್ಲಿ ಒಂದು ಮೊಳ ಎತ್ತರ ಕಟ್ಟೆಯನ್ನು ಹಾಕಿ ಸಣ್ಣಕ್ರಿಮಿಗಳ ಹಾಗೂ ಸರ್ದಿಯ ಬಾಧೆಯಾಗದಂತೆ ವ್ಯವಸ್ಥೆ ಮಾಡಿ ಅದರ ಮೇಲೆ ದರ್ಭಾಸನ ಕಂಬಳಾಸನ ಮೊದಲಾದ ಆಸನಗಳನ್ನು ಹಾಕಿಕೊಂಡು ಸಮಕಾಯ ಶಿರೋಗ್ರೀವನಾಗಿ ಅದರ ಮೇಲೆ ಕುಳಿತು ಪ್ರಾಣಾಯಾಮವನ್ನು ಪ್ರಾರಂಭಿಸಬೇಕು.ಪ್ರಾಣಾಯಾಮವನ್ನು ಪ್ರಾರಂಭಿಸುವದಕ್ಕಿಂತ ಮೊದಲು ಪರಮಾತ್ಮನಿಗೂ ಸರ್ವಯೋಗಿಗಳಿಗೂ ಮನಃಪೂರ್ವಕವಾಗಿ ನಮಸ್ಕರಿಸಬೇಕು. ಗುರು ಮುಖದಿಂದ ತಿಳಿದು ಪ್ರಾಣಾಯಾವಯನ್ನು ನಿಯಮಬದ್ಧವಾಗಿ ರೇಚಕ ಪೂರಕ, ಕುಂಭಕಗಳನ್ನುಮಾಡಬೇಕು, ಅಂದರೆ ಪುಪ್ಪುಸದಲ್ಲಿ ಮೂಗಿನಿಂದ ಪೂರ್ಣವಾಗಿ ವಾಯುವನ್ನುತೆಗೆದುಕೊಳ್ಳುವದು ಪೂರಕವು, ತೆಗೆದುಕೊಂಡ ವಾಯುವನ್ನು ಕೆಲವು ಕಾಲ ಅಲ್ಲಿಯೇ ತಡಿಯುವದೇ ಕುಂಭಕವು. ಆ ತಡೆದ ವಾಯುವನ್ನು ಹೊರಗೆ ಬಿಡುವದೇ ರೇಚಕವು.ಈ ಪೂರಕ, ಕುಂಭಕ, ರೇಚಕಗಳ ಕಾಲ ಪ್ರಮಾಣವನ್ನು ಯೋಗಿಗಳು ನಿಶ್ಚಯ ಮಾಡಿರುತ್ತಾರೆ. ಪೂರಕವನ್ನು ಎಷ್ಟು ಕಾಲದವರೆಗೆ ಮಾಡುವರೋ ಅದರ ನಾಲ್ಕುಪಟ್ಟು ಕಾಲ ಕುಂಭಕವನ್ನು ಮಾಡಬೇಕು ಮತ್ತು ಪೂರಕದ ಎರಡು ಪಟ್ಟು ಕಾಲ ರೇಚಕವನ್ನು ಮಾಡಬೇಕು. ಅಂದರೆ ಎಂಟು ಅಂಕಿ ಪೂರಕ ಮಾಡಿದರೆ ಮೂವತ್ತೆರಡು ಅಂಕಿ ಕುಂಭಕ ಮಾಡಬೇಕು: ಹದಿನಾರು ಅಂಕಿ ರೇಚಕ ಮಾಡಬೇಕು.ಈ ಕ್ರಮಕ್ಕೆಯೇ ನಿಯಮ ಬದ್ಧಪೂರಕ, ಕುಂಭಕ, ರೇಚಕಗಳೆನ್ನುವರು. ಈ ಕ್ರಮಬದ್ದವಾದ ಪೂರಕ, ಕುಂಭಕ, ರೇಚಕದಿಂದ ಕೂಡಿದ ಪ್ರಾಣಾಯಮ ಸಂಖ್ಯೆಯನ್ನು ತಮಗೆ ಸಾಧ್ಯವಾದ ಮೇರೆಗೆ ಹೆಚ್ಚಿಸುತ್ತ ಹೋಗಬೇಕು.

ಪ್ರಾಣಾಯಾಮಾಭ್ಯಾಸಿಯು ನೆನಪಿಡತಕ್ಕ ಸಂಗತಿಗಳು

(೧) ಸಾಧಕನು ಅಗ್ನಿಸೇವನೆಯನ್ನು ಮಾಡಬಾರದು. ಯಾಕಂದರೆ ಅಗ್ನಿಯಿಂದ ಪ್ರಾಣಶಕ್ತಿಯು ನಷ್ಟವಾಗುತ್ತದೆ.

(೨) ಸಹಿಸುತ್ತಿದ್ದರೆ ಪ್ರಾತಃಕಾಲದಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡತಕ್ಕದ್ದು.

(೩) ಪ್ರಾಣಾಯಾಮ ಮಾಡುವಾಗ್ಗೆ ಗುಹ್ಯಸ್ಥಾನಕ್ಕೆ ಮತ್ತು ನಡುವಿಗೆ ಬಂಧನ ವಿರಬೇಕು. ಪ್ರಯುಕ್ತ ಲಂಗೋಟಿಯನ್ನು ಹಾಕಬೇಕು.

(೪) ಭೋಜನದಲ್ಲಿ ಸಾತ್ವಿಕ ಆಹಾರವಾದ ಹಾಲು ತುಪ್ಪ ಮೊದಲಾದ ಸ್ನಿಗ್ಧಪದಾರ್ಥಗಳನ್ನೂ, ಜವೆ ಗೋದಿ, ಹೆಸರು ಬೇಳೆ, ಅಕ್ಕಿ ಮೊದಲಾದವುಗಳನ್ನೂ ಉಪಯೋಗಿಸಬೇಕು. ಅಪಚನವಾಗುವವರೆಗೆ ಊಟಮಾಡಬಾರದು. ಹಸಿವೆ ಇಟ್ಟು ಕೊಂಡೇ ಊಟವನ್ನು ಮುಗಿಯಿಸಬೇಕು. ಹೊಟ್ಟೆಯು ಜಡವಿದ್ದಾಗ ಮತ್ತು ಊಟ ಮಾಡಿದಾಗ ಪ್ರಾಣಾಯಾಮವನ್ನು ಮಾಡಬಾರದು, ಅದರಂತೆ ಪ್ರಾಣಾಯಾಮವನ್ನು ಮಾಡಿದ ಕೂಡಲೇ ಭೋಜನವನ್ನು ಮಾಡಬಾರದು.

(೫) ಅತಿಶ್ರಮವನ್ನು ಎಂದೂ ಮಾಡಬಾರದು. ವಾರಕ್ಕೊಮ್ಮೆ ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ಹಾಗೆಯೇ ತಿಂಗಳಿಗೊಮ್ಮೆಪ್ರಖರವಾದ ಬಿಸಿಲಿನಲ್ಲಿ ಲಂಗೋಟಿಯನ್ನು ಹಾಕಿಕೊಂಡು ಮೂಗು, ಬಾಯಿ,ಮಸ್ತಕಗಳ ಮೇಲೆ ನಾಲ್ಕು ಪದರಿನ ವಸ್ತ್ರವನ್ನು ಹಾಕಿಕೊಂಡು ಸೂರ್ಯ ಕಿರಣ ಸ್ನಾನವನ್ನು ಮಾಡಿ ಬೆವರನ್ನು ತೆಗೆಯಬೇಕು.

ಪ್ರಾಣಾಯಾಮದ ಮುಂದಿನ ಅಂಗವು ಪ್ರತ್ಯಾಹಾರವು ಅಂದರೆ ಇಂದ್ರಿಯಗಳು ಮತ್ತು ಮನಸ್ಸು ಯಾವಾಗಲೂ ವಿಷಯಗಳಲ್ಲಿಯೇ ಸಂಬಂಧವಾಗಿರುತ್ತವೆ. ಆ ಸಂಬಂಧವಾದವುಗಳಲ್ಲಿ ಪ್ರತಿಬಂಧ ಮಾಡುವದೇ ಅರ್ಥಾತ್ ಬಹಿರ್ಮುಖವಾದ ಇಂದ್ರಿಯಗಳನ್ನು ಅಂತರ್ಮುಖ ಮಾಡುವದೇ ಪ್ರತ್ಯಾಹಾರವು. ಈ ಪ್ರತ್ಯಾಹಾರವು ಸಾಧಿಸಿದರೆ ಮನಸ್ಸು ಚಿತ್ತಾಕಾರವಾಗುತ್ತದೆ. ಆಮೇಲೆ ಇಂದ್ರಿಯಗಳ ನಿರೋಧವು ತಾನಾಗಿಯೇ ಪೂರ್ಣವಾಗುತ್ತದೆ. ಪ್ರತ್ಯಾಹಾರದ ಮುಂದಿನ ಅಂಗವು ಧಾರಣೆಯು. ದೇಹದ ಒಳಗಾಗಲೀ ಅಥವಾ ಹೊರಗಾಗಲೀ ಇಲ್ಲವೆ ಬೇರೆ ಯಾವುದಾದರೂ ಒಂದು ಪವಿತ್ರ ವಸ್ತುವಿನಲ್ಲಿ ಯಾಗಲೀ ಚಿತ್ರವನ್ನು ನಿಲ್ಲಿಸಲಿಕ್ಕೆ ಪ್ರಯತ್ನಿಸುವದೇ ಧಾರಣೆಯು, ಉದಾಹರಣೆ. ದೇಹದ ಒಳಗೆ ಅಂದರೆ ನವಚಕ್ರಗಳಲ್ಲಿರುವ ನವಲಿಂಗಗಳಲ್ಲಿ ಹೊರಗೆ ಅಂದರೆ, ಭೂಮಧ್ಯೆ, ನಾಶಿಕಾಗೋ, ಇಷ್ಟದೇವತೆ ಮೊದಲಾದವುಗಳು ಪವಿತ್ರವಾದ ಯಾವ ವಸ್ತುವಿನಲ್ಲಿಯಾದರೂ ಚಿತ್ತವನ್ನು ನಿಲ್ಲಿಸಲೆತ್ನಿಸುವದೇ ಧಾರಣೆಯು.  ಧಾರಣೆಯು ಸಿದ್ಧಿಸಿದ ಮೇಲೆ ಧ್ಯಾನವು, ಧಾರಣೆಯಲ್ಲಿ ಒಂದು ವಸ್ತುವಿನ ಮೇಲೆ ಇಟ್ಟ ಚಿತ್ರವು ಕ್ಷಣಕ್ಷಣಕ್ಕೆ ಚಂಚಲ ವಾಗಿರುತ್ತದೆ. ಆದರೆ ಯಾವಾಗ ಚಿತ್ತ ಚಂಚಲತೆಯನ್ನು ಬಿಟ್ಟು ತೈಲಧಾರೆಯಂತೆ ಒಂದೇ ಸವನೆ ಆ ವಸ್ತುವಿನಲ್ಲಿ ನಿಲ್ಲಲಿಕ್ಕೆ ಪ್ರಾರಂಭವಾಗುವದೋ ಆವಾಗ್ಗೆ ಅದಕ್ಕೆ ಧ್ಯಾನವೆನ್ನುತ್ತಾರೆ. ಒಂದೇ ವಿಷಯದ ಸಾಧನೆಗೆ ಧಾರಣೆ; ಸಾಧ್ಯಕ್ಕೆ ಧ್ಯಾನವೆನ್ನುವರು.

ಧ್ಯಾನವು ಸಿದ್ದಿದ ಮೇಲೆ ಪ್ರಾಪ್ತವಾಗುವ ಸ್ಥಿತಿಯೇ ಸಮಾಧಿಯು.

“ಸಮ್ಯಕ್ ಆಧೀಯತೇ ಮನಃ ಸಮಾಧಿಃ “ ಅಂದರೆ ಮನಸ್ಸಿನ ಆಚಂಚಲ ಸ್ಥಿತಿಯೇ ಸಮಾಧಿಯು, ಬಾಹ್ಯ ಸ್ವರೂಪವನ್ನು ಬಿಟ್ಟು ಅಂತಃ ಸ್ವರೂಪದಲ್ಲಿ ಮನಸ್ಸು ತದಾಕಾರವಾಗುವದೇ ಸಮಾಧಿಯು.

ಜ್ಞಾತಾ, ಜ್ಞಾನ, ಜ್ಙೇಯ ಅಂದರೆ ಧ್ಯಾನಿಸುವವನು, ಧ್ಯಾನಿಸುವ ಸಾಧನೆ, ಧ್ಯಾನಿಸುವ ವಸ್ತು ಇವುಗಳ ಜ್ಞಾನವಿರುವದೇ ಧ್ಯಾನವು. ಈ ತ್ರಿಪುಟಿಗಳ ಎಚ್ಚರಿಕೆ ಇಲ್ಲದಿರುವದೇ ಸಮಾಧಿಯು.

ತನ್ನನ್ನು ತಾನು ಮರೆತು ಚಿತ್ತವು ಪರಮಾತ್ಮನಲ್ಲಿ ಏಕಾಕಾರವಾಗುವದೇ ಸಮಾಧಿಯು, ಇಂಥ ಸಮಾಧಿ ಸ್ಥಿತಿಯನ್ನು ಅಥವಾ ಕೈವಲ್ಯವನ್ನು ಹೊಂದುವದೇ ಹಠಯೋಗಿಗಳ ಮತ್ತು ರಾಜಯೋಗಿಗಳ ಧೈಯವಾಗಿರುತ್ತದೆ.

ಇಲ್ಲಿಯವರೆಗೂ ಸಂಕ್ಷಿಪ್ತವಾಗಿ ವಿವರಿಸಿದ ಯೋಗಾಂಗಗಳಲ್ಲದೆ ಶಿವಲಿಂಗಪೂಜೆ, ಶಿವಾನುಸಂಧಾನ, ಶಿವಭಕ್ತಿ ವಿಜ್ಞಾನ, ಶಿವವ್ರತವೆಂಬೈದು ಹೆಚ್ಚಾದಂಗಗಳಿಂದ ಕೂಡಿ ಅಂಗತ್ರಯಗಳೆ ಲಿಂಗತ್ರಯ ಸಂಬಂಧಮಾಡಿ  ಲಿಂಗಭೋಗೋಪ ಭೋಗವುಳ್ಳ ತತ್ವವನ್ನೊಳಗೊಂಡ ಲಿಂಗಾಂಗ ಸಾಮರಸ್ಯ ಜ್ಞಾನವೇನುಂಟೋ ಅದುವೇ ಶಿವಯೋಗವು ಇಂಥ ಶಿವಯೋಗ ಸುಖವು ನಮ್ಮೆಲ್ಲರಿಗೂ ಸುಲಭವಾಗಿಸಾಧಿಸಲೆಂದೆಣಿಸಿ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನೇರ್ಪಡಿ: ಶಿವಯೋಗ ತತ್ವವನ್ನುರುಹಿ ಶಿವನೊಳ್ ಬೆರೆದ ಪರಮ ಶಿವಯೋಗಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ನನ್ನ ಅನೇಕ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ.

ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ

ಶರಣಾರ್ಥಿ ಶರಣಾರ್ಥಿ ಶರಣು ಶರಣಾರ್ಥಿ

ಎನ್ನಯ್ಯ ಗುರುರಾಯ ಗುರುದೇವ ಗುರುಕುಮಾರ

ನೀನೆನ್ನ ತಾಯ್ತಂದೆ ಗುರುದೈವ ಬಂಧುಬಳಗ

ನಿನ್ನರಸಿ ಬಂದೆನಿಲ್ಲಿಗೆ ದೇವಾ.

ಕುಲವುಳ್ಳ ನಾ ಕುಲರಹಿತ,

ಭವಿಗೇಡಿಯಾದೆನೆಲೆದೇವಾ……..೧

ಏನ ಹೇಳಲಿ ತಂದೆ ಈ ಧರೆಯ ಸೋಜಿಗವಾ!

ಎತ್ತರದ, ಬತ್ತಿರದ, ಸುತ್ತಿರದ ಈ ವನವು

ಮತ್ತಿರದ ಶಿವಯೋಗ ಮಂದಿರವು ಈ ಜಗವು.

ಮನ್ನಾಥ ಮದ್ಗುರುವು ಪರಂಜ್ಯೋತಿ ಸುಕುಮಾರ

ಜಗದಂತರಂಗ ಮಾನವನ ಹೃದಯದಲಿ ಬಿತ್ತಿದನು

ಲಿಂಗಾಂಗ ಸಂಯೋಗ ಕ್ರಿಯೆಯನು.

ಏನ ಹೇಳಲಿ ದೇವಾ ಬಯಲ ಸಡಗರವಾ!

ಕಣ್ಣಿಲ್ಲ ನೋಡಿ ಕಿವಿಯಿಲ್ಲ ಕೇಳಿ………೨

ನನ್ನವರು ನನ್ನೂರು ನನ್ನದು ನಾನೆಂಬ

ನನ್ನನ್ನು ನಾನಿನ್ನು ನನ್ನಿಂದ ಜಗವೆಂಬ

ಲೋಕದಾ ಮಾತನ್ನು ಹೊಸಕಿ ಕೊಂದಿಹಿರಿಲ್ಲಿ.

ಲೊಕದಾ ಮಾತೇನು? ಬಳುವಳಿಯ ಸೊತ್ತಿದು!

ಬಳಕುತಾ ಬಂದ ಬಳುವಳಿಯ ಕಿತ್ತ್ಹೊಸಕಿ

ಸಲುಹಿದಿರಿ ಗುರು ತಂದೆ.

ನಾ ಕಾಣೆ ಈ ಬೆಳಕಿನಾಟವನೆಂದು! …..೩

ಲೇಖಕರು : ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ

“ತತ್ವ” ಎಂಬ ಸಂಸ್ಕೃತ ಪದಕ್ಕೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತೇವೆ. ಉದಾಹರಣೆಗೆ ಸಾಂಖ್ಯರ ಪ್ರಕಾರ ತತ್ವ ಎಂದರೆ ಮನಸ್ಸು ಬುದ್ಧಿ ಮುಂತಾದ 25 ತತ್ವಗಳು. ವಿಶಿಷ್ಠಾದ್ವೈತದ ಪ್ರಕಾರ ತತ್ವಗಳು ಮೂರು (ತತ್ವತ್ತಯ) ಬ್ರಹ್ಮನ್, ಚಿತ್, ಮತ್ತು ಅಚಿತ್, ಹೀಗೆ ಭಾರತೀಯರ ಪ್ರಕಾರ ತತ್ವಜ್ಞಾನ ಅಥವಾ ತತ್ವಶಾಸ್ತ್ರವೆಂದರೆ ಅಂತಿಮ ತತ್ವಗಳ ಜ್ಞಾನ ಎಂದಾಗುತ್ತದೆ. ಪಾಶ್ಚಾತ್ಯ ತತ್ವಶಾಸ್ತ್ರಜ್ಞರು ಅಂಥ ತತ್ವಗಳ ಬಗ್ಗೆ ಚರ್ಚಿಸಿದರೂ, ಅವು ಇರಲು ಸಾಧ್ಯವೇ ಎಂದೂ, ಒಂದು ವೇಳೆ ಇದ್ದರೆ ಅವುಗಳನ್ನು ಕುರಿತು ಚರ್ಚಿಸುವುದು ವಿಜ್ಞಾನದ ಕರ್ತವ್ಯವೇ ಹೊರತು, ತತ್ವಶಾಸ್ತ್ರದ ಕರ್ತವ್ಯವಲ್ಲ ಎಂದು ಅಭಿಪ್ರಾಯಪಡುತ್ತಾರೆ. ಪಾಶ್ಚಾತ್ಯರಿಗೆ ತತ್ವಶಾಸ್ತ್ರ ಕೇವಲ ಒಂದು ಬೌದ್ಧಿಕ ಚಟುವಟಿಕೆಯೇ ಹೊರತು ಜೀವನವನ್ನು ರೂಪಿಸುವ ವಿದ್ಯೆಯಲ್ಲ, ಅದರ ಬಗ್ಗೆ ಚಿಂತಿಸಬಹುದು, ಅದರ ಬಗ್ಗೆ ವಿಫುಲವಾಗಿ ಬರೆಯಬಹುದು. ಆದರೆ ಭಾರತೀಯರ ಪ್ರಕಾರ ತತ್ವಶಾಸ್ತ್ರವು ನಮ್ಮ ಜೀವನವನ್ನು ರೂಪಿಸುವ ಮುಕ್ತಿಗೆ ಮಾರ್ಗದರ್ಶನ ನೀಡುವ ವಿದ್ಯೆ, ಅದು ಮೋಕ್ಷಶಾಸ್ತ್ರ ಅದಕ್ಕೂ ಸೈದ್ದಾಂತಿಕ (Theoretical) ಪ್ರಾಮುಖ್ಯವಿದೆ, ಆದರೆ ಅದಕ್ಕಿರುವ ಅನುಷ್ಠಾನಿಕ (Practical) ಪ್ರಾಮುಖ್ಯ ಹೆಚ್ಚು ಇದೆ. ತತ್ವಜ್ಞಾನವನ್ನು ಪಡೆಯುವುದು ಮುಕ್ತಿ ಪಡೆಯುವುದಕ್ಕೆ ಹೊರತು, ಕೇವಲ ಕುತೂಹಲವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಅಲ್ಲ.

“ತತ್ವಪದಗಳನ್ನು ಸ್ವರವಚನಗಳು ಎಂತಲೂ ಕರೆಯುತ್ತಾರೆ. ಈ ಸ್ವರವಚಗಳು 12ನೇಯ ಶತಮಾನದ ಶಿವಶರಣರ ಕಾಲಕ್ಕಿಂತಲೂ ಪೂರ್ವದಲ್ಲಿ ಇದ್ದಿರಬಹುದು ಎಂದು ಹೇಳಬಹುದು. ಅಕ್ಕ–ಅಲ್ಲಮ ಪ್ರಭುವಿನಂಥವರ ಹಾಡುಗಳನ್ನು ನೋಡುವಾಗ, ಇಂತ ಪ್ರಕಾರ ಒಮ್ಮಗೇ ಹುಟ್ಟಿಕೊಂಡಿತೇ? ಎಂಬ ಬೆರಗು ಮೂಡಿಸುತ್ತದೆ. ಬೆಡಗಿನ ಹಾಡುಗಳು ಹುದುಗಿಕೊಂಡಿರುವ ರಹಸ್ಯಾರ್ಥ, ಅವುಗಳ ಆಕರ್ಷಕ ಬರವಣಿಗೆ ಇವಕ್ಕೂ ಪೂರ್ವದಲ್ಲಿ ಇದ್ದಿರಬಹುದಾದ ಹಾಡುಗಳ ಸಾಧ್ಯತೆಯತ್ತ ಬೆರಳು ಮಾಡಿ ತೋರಿಸುತ್ತದೆ.”

ತತ್(ಪದ) ಎಂದರೆ- ಪರಮಾತ್ಮ, ‘ತ್ವ’ ಎಂದರೆ-ಜೀವಾತ್ಮ. ಜೀವಾತ್ಮ ಮತ್ತು ಪರಮಾತ್ಮಗಳ ತಾದ್ಯಾತ್ಮವೇ ‘ತತ್ವ’ವೆಂದು ಶರಣ ಉರಿಲಿಂಗಪೆದ್ದಿ ಹೇಳುತ್ತಾರೆ. ಮಾನವ ಚರಿತ್ರೆಯ ಉಗಮದ ಜೊತೆಗೆ ದೈವಿಕ ಭಾವನೆ ಕೂಡ ಕಾಣಿಸಿಕೊಂಡಿತೆನ್ನಬೇಕು. ಜಗತ್ತಿನಲ್ಲಿ ಮೊಟ್ಟ ಮೊದಲು ಆದಿತತ್ವ ಮೂಲವಾದ ‘ವಾಕ್’ ಹೊರಹೊಮ್ಮಿತು. ಈ ವಾಕ್‍ರೂಪಿಗಳು ಮಧುರವಾಗಿದ್ದರಿಂದ ಶ್ರುತಿಗಳು ಎನಿಸಿಕೊಂಡವು. ಇವು ಅಪೌರುಷೇಯವಾಗಿ ದೈವ, ಆತ್ಮ ಮುಂತಾದ ವಿಷಯಗಳಿಗೆ ಸಂಬಂಧಿತವಾದ ಈ ಅರಿವು ದರ್ಶಿತವಾದದ್ದು. ಈ ದೈವ ಆತ್ಮಗಳನ್ನು ಕುರಿತು ತಿಳಿಸಿಕೊಡುವ ತತ್ವಗಳೇ ವಚನಗಳು, ಹಾಗೂ ತತ್ವಪದಗಳಾಗಿ ರೂಡಿಯಾಗಿವೆ. ಇವುಗಳನ್ನು ಅರಿತುಕೊಂಡು ನಡೆಯುವುದೇ ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಮೋಕ್ಷ/ಮುಕ್ತಿ ದೊರೆಯಲು ಸಾಧ್ಯ. ಭರ್ತೃಹರಿ ಹೇಳಿದಂತೆ, ‘ಲೌಕಿಕ ಭೋಗಗಳು ಕಾಲಕ್ರಮೇಣ ನಮ್ಮನ್ನು ಬಿಟ್ಟು ಹೋಗುತ್ತವೆ. ಅವು ನಮ್ಮನ್ನು ತ್ಯಜಿಸಿದರೆ ನಮಗೆ ದುಃಖವಾಗುತ್ತದೆ. ನಾವೇ ಅವುಗಳನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.’ ಎಲ್ಲ ಬಗೆಯ ಭೋಗಗಳಿಂದ ಮುಕ್ತವಾದ, ಪರಿಶುದ್ಧವಾದ ನಿರ್ವಿಕಲ್ಪ ಸ್ಥಿತಿಯೇ ಮುಕ್ತಿ, ಶಿವಯೋಗ, ಲಿಂಗಾಂಗ ಸಾಮರಸ್ಯ, ಅನುಭಾವ, ಅದ್ವೈತ, ಕೈವಲ್ಯ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ಮುಕ್ತಿ ಸ್ಥಿತಿಯನ್ನು ಕುರಿತು ತತ್ವಪದ(ಸ್ವರವಚನ)ಗಳು ಹಾಗೂ ವಚನಗಳು ವಿಶಾಲಾರ್ಥದಲ್ಲಿ ಭಿನ್ನಭಿನ್ನವಾಗಿ ಹೇಳಿರುವುದನ್ನು ಕಾಣುತ್ತೇವೆ.

ಶರಣೆ ನೀಲಮ್ಮ ರಚಿಸಿದ ತತ್ವಭರಿತವಾದ ಜೋಗುಳು ಪದ್ಯದಲ್ಲಿ ಅಳಿಯನಾದ ಚನ್ನಬಸವಣ್ಣನ ಮೇಲೆ ಶಿಶುಗಳು ಸಾಕ್ಷತ್ ಶಿವನ ಸ್ವರೂಪದಲ್ಲಿರುವ ಪರಂಜ್ಯೋತಿಗಳು, ಮುಕ್ತಿಯನ್ನು ಹೊಂದಲು ಯೋಗದಲ್ಲಿ ಬರುವ ಕಂಡಲಿನಿ ಶಕ್ತಿಯನ್ನು ಜಾಗೃತ ಮಾಡಿಕೊಳ್ಳುವ ಬಗೆಯನ್ನು ಕುರಿತು ಹೇಳಿ, ಶಿಶುಗಳು ಯಾವುದನ್ನು ಅರಿಯದೇ ಮುಗ್ದತೆಯಿಂದ ಇರುವ ಹಾಗೆ ಮುಕ್ತಿಯನ್ನು ಪಡೆದವರು ಎಲ್ಲವನ್ನು ಅರಿತು ಅರಿಯದವರಂತೆ  ಇರುತ್ತಾರೆ. ಅಂತಹ ಅಳಿಯ ಶಿಶುವಿನ ಮೇಲೆ ಯೋಗದಿಂದ ಮುಕ್ತಿಯನ್ನು ಹೊಂದುವ ಕುರಿತು ರಚಿಸಿದ ಪದ್ಯ,

                              “ಜೋ ಜೋ ಎನ್ನ ಪರಮಹಂಸ

                              ಜೋ ಜೋ ಎನ್ನ ಪರಂಜ್ಯೋತಿ||ಪ||

                              ಗುದವ ಬಿಗಿದೊತ್ತಿ ಅನಲಜ್ವಾಲೆ ಪಲ್ಲವಿಸಿ

                              ಮುದುಡಿಕೊಂಡಿಹ ಸರ್ಪ ಹೆಡೆಯನೆತ್ತಿ

                              ಗದಗದಿಪ ಪವನ ಗ್ರಂತಿಯನೊಡೆದು ಪಶ್ಚಿಮದ

                              ಕದವ ತೆಗೆದೊಳಗೆ ಜ್ಯೋತಿಯ ಕಂಡ ಶಿಶುವೆ||1||”

               ಇಲ್ಲಿ ಯೋಗದಲ್ಲಿ ಬರುವ ಕುಂಡಲಿನ ಶಕ್ತಿಯನ್ನು ಜಾಗೃತ ಪಡಿಸಿಕೊಂಡ ಶಿಶುವಿನ ಕುರಿತು ಹೇಳಿದ ನುಡಿ. ಗುದವ ಬಿಗಿದೊತ್ತಿ ಸಿದ್ದಾಸನ ಹಾಕಿ, ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಿಕೊಂಡು, ವಾಯು ಕುಂಭಕವಾದಾಗ ಅನಲಜ್ವಾಲೆ ಅಂದರೆ ಬಿಸಿಯ ಅಗ್ನಿರೂಪದ ಗಾಳಿ ಮೇಲೆದ್ದಾಗ, ಸರ್ಪಾಕಾರದ ಕುಂಡಲಿನಿ ಜಾಗೃತವಾಗಿ ಸ್ವಾಧಿಷ್ಠಾನ, ಮನಿಪೂರಕ, ಅನಾಹತ, ವಿಶುದ್ಧಿ, ಆಜ್ಞೆಯ, ಬ್ರಹ್ಮರಂದ್ರ ಶಿಖಾಚಕ್ರ, ಪಶ್ಚಿಮ ಹೀಗೆ ಒಂಬತ್ತು ಚಕ್ರಗಳ ಮುಖಾಂತರ ವಾಯು ಎಲ್ಲ ಚಕ್ರಗಳಲ್ಲಿ ಹರಿದಾಡಿದಾಗ ಎಲ್ಲ ಗ್ರಂಥಿಗಳು ತೆಗೆದು ಪಶ್ಚಿಮ ಚಕ್ರದಲ್ಲಿರುವ ಜ್ಯೋತಿಯನ್ನು ಕಾಣುವುದಾಗಿದೆ. ಅಂದರೆ ಮನಸ್ಸನ್ನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಒಂದಾಗಿಸುವ ಶಿವಯೋಗದ ಸ್ಥಿತಿಯನ್ನು ಮುಕ್ತಿ ಎಂದು ಹೆಳುತ್ತಾರೆ. ಅಂತಹ ಮುಕ್ತಿಯನ್ನು ಕಂಡಿರುವ ಶಿಶುವೆ ಎಂದು ಹೇಳುತ್ತಿದ್ದಾಳೆ. ಈ ವಿಧಾನವು ಮುಕ್ತಿಯನ್ನು ಪಡೆಯುವಲ್ಲಿ ಯೋಗ ದರ್ಶನದಲ್ಲಿ ಹೇಳಿರುವ ಒಂದು ಕ್ರಿಯೆ ಎಂದು ಹೇಳಿದ್ದಾರೆ. ಮುಂದೆ ಈ ಯೋಗ ಜಾಗೃತಿಯ ಕುರಿತು ಹೇಳುತ್ತಿದ್ದಾರೆ.

                              “ಅಂಬೆಗಾಲಡಿಯಿಟ್ಟು ಆಧಾರಮಂ ಬಲಿದು

                              ಅಂಬುಜಾರ ತಾಣದಲ್ಲಿ ನಿಂದು

                              ಕಂಭವನೆ ದಾಟಿ ಮೇಲಣ ಬಾಗಿಲನೆ ಹಾಯ್ದು

                              ಕುಂಭಿನಿಯ ಮೊಲೆವಾಲನುಂಡು ದಣಿಯದ ಶಿಶುವೆ||2||

               ಮುಂದಿನ ನುಡಿಯಲ್ಲಿ ಮಗು ಹೇಗೆ ಅಂಬೆಗಾಲಡಿಯಿಟ್ಟು ನಡಿದಾಡುವಂತೆ ಮುಮುಕ್ಷು ಆಧಾರ ಚಕ್ರಕ್ಕೆ ಜಾಗೃತಗೊಳಿಸಿ, ಎಲ್ಲ ಚಕ್ರಗಳಲ್ಲಿ ಲಿಂಗವನ್ನು ನಿಲ್ಲಿಸುತ್ತ, ಮೇಲೆರಿ ಆಜ್ಞಾ ಚಕ್ರವೆಂಬ ಕಂಬವನ್ನು ದಾಟಿ, ಮೇಲಿನ ಬಾಗಿಲಿನಿಂದ ಅಂದರೆ ಬ್ರಹ್ಮರಂಧ್ರದಲ್ಲಿ ಹಾಯ್ದು ಈ ಬ್ರಹ್ಮರಂಧ್ರದಲ್ಲಿರುವ ಅಮೃತ ಸೇವನೆ ಮಾಡಿದರೆ ದಣಿವು, ಆಯಾಸ, ಹುಟ್ಟು-ಸಾವುಗಳನ್ನು ದೂರ ಮಾಡಿದ ಸ್ಥಿತಿಯನ್ನು  ಪಡೆದವನು ಚೆನ್ನಬಸವಣ್ಣ ಎಂದು ಶಿಶುವಿನ ಮೇಲೆ ಹೇಳಿದ್ದಾಳೆ. ಇಲ್ಲಿ ಕುಂಡಲಿನಿ ಶಕ್ತಿಯನ್ನು ಜಾಗೃತಿಗೊಳಿಸಿ ಮುಕ್ತಿಯನ್ನು ಪಡೆಯುವುದರ ಕುರಿತು ಹೇಳಿದರೆ, ಗುರುವಿನಿಂದ ಅನುಗ್ರಹ ಪಡೆದು ಇಷ್ಟಲಿಂಗಾರಾಧನೆಯ ಮುಂದೆ ಬೇರೆ ಯಾವ ಅಮೃತವು ಸಮಬಾರದೆಂದು ಉರಿಲಿಂಗಪೆದ್ದಿಯು ತಮ್ಮ ವಚನದಲ್ಲಿ,

“ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ?

               ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ?

               ಸದ್ಗುರು ಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ

               ಮಹಾ ಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ?

               ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ.

               ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ?

               ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.||”

               ಗುರುವಿನಿಂದ ಪಡೆದ ಇಷ್ಟಲಿಂಗ ಪೂಜೆಯೆ ಮುಕ್ತಿಯಾಗಿದೆ. ಈ ಮುಕ್ತಿಯನ್ನುವಂತಹ ಅಮೃತವನ್ನು ಸವಿದ ಮೇಲೆ ಬೇರೆ ಯಾವುದೆ ಮುಕ್ತಿಯ ಕುರಿತು ಬಯಸುವುದಿಲ್ಲ. ಗುರುವಿನಿಂದ ಜ್ಞಾನ ಪಡೆದ ಆ ಮಾರ್ಗದಲ್ಲಿ ನಡೆಯುವುದೇ ಮುಕ್ತಿ ಎಂದು ಉರಿಲಿಂಗಪೆದ್ದಿಗಳು ಅನೇಕ ರೂಪಕಗಳನ್ನು ಕೊಟ್ಟು  ಹೇಳಿದರೆ, ಅಲ್ಲಮಪ್ರಭುಗಳು ಜ್ಞಾನ ಸಂಪಾದನೆ ಮತ್ತು ಅದರ ರಕ್ಷಣೆ, ತತ್ವಜ್ಞಾನದ ಹಾಗೂ ಮುಕ್ತಿಯ ವಿವರಣೆಯನ್ನು ಕುರಿತು ತ್ರಿಕರಣಂಗಳು ಬಂಧನವನ್ನುಂಟುಮಾಡಬಲ್ಲವು. ಸಾಧಕನಾದವನು ಅವುಗಳಿಂದ ಮುಕ್ತನಾಗಬೇಕೆಂದು, ತಮ್ಮ ತತ್ವಪದದಲ್ಲಿ:

“ಅಲ್ಲೆ ಬಿದ್ದಿದೆ ಮೂಕುತಿ ಅದ

ಬಲ್ಲಡರಸಿ ತಾರೆ ನಲ್ಲರ ಜಾಣೆ||ಪ||”

ಈ ಪಲ್ಲವಿಯಲ್ಲಿ ಯೋಗಿಯಾದವನ ಅನುಭವ ಜ್ಞಾನದಿಂದ ಮೂಡಿ ಬಂದುದು. ಮೂಕುತಿ-ಮುಕುತಿ, ಮುಕ್ತಿಯೆಂಬ ಮಾನಿಕ್ಯವು ಶರೀರದಲ್ಲಿಯೆ ಇರಲು ಅಲ್ಲಿ ಇಲ್ಲಿ ಎಲ್ಲೆಲ್ಲಿ ಏಕೆ ಹುಡುಕುತ್ತಿರುವಿ. ಅಂಗದಲ್ಲಿಯೇ ಲಿಂಗದೇವನಿದ್ದಾನೆ. ಅರಸಿರಿ, ಹುಡುಕಿರಿ ಜ್ಞಾನಿಗಳ, ಗುರುವಿನ ಸಾನಿಧ್ಯದಿಂದ ಮಾರ್ಗದರ್ಶನ ಪಡೆದು ಮುಕ್ತಿ ಹೊಂದುವಂತವರಾಗಿರೆಂಬುದನ್ನು ಪಲ್ಲವಿ ಮಾತುಗಳು ಸೂಚಿಸುತ್ತವೆ. ಇದೇ ರೀತಿ ಬಸವಣ್ಣನವರು ಸಹ ಮುಕ್ತಿಯನ್ನು ಅರಿಸಿಕೊಂಡು ಬೇರೆ ಕಡೆ ಹೊಗಬೇಡಿ ನಿಮ್ಮಲ್ಲಿಯೇ ಇದೆ. ಎಂದು ತಮ್ಮ ಒಂದು ವಚನದಲ್ಲಿ,

“ಹೊಲಬುಗೊಂಡರಸಬೇಡ, ಬಲಿತು ತರಬೇಡ,

ಒಲಿದೊಮ್ಮೆ ಶಿವಶರಣೆನ್ನಿರಯ್ಯಾ

ಒಂದು ಸೊಲ್ಲಿಗೆ ಮುಕ್ತಿ ಸಿದ್ಧಿ,

ಕೂಡಲಸಂಗಮದೇವಾ ಭಕ್ತಿಲಂಪಟನಾಗಿ.”

ಕಾಯಾ-ವಾಚಾ-ಮನಸಾ ತ್ರಿಕರಣ ಶುದ್ಧಿಯಿಂದ, ಭಕ್ತಿಯಿಂದ ಶಿವನ ಕುರಿತು ಜ್ಞಾನ ಪಡೆದುಕೊಂಡು ಆ ಶಿವನಿಗೆ ಶರಣು ಹೇಳಿ ಶರಣಾದರೆ ಮುಕ್ತಿಯಾಗಲು ಸಾಧ್ಯ. ಈ ಸರಳ ಮಾರ್ಗವನ್ನು ಬಿಟ್ಟು ಮುಕ್ತಿಗಾಗಿ ಸುತ್ತಾಡದೆ, ಯೋಗ್ಯ ಗುರುವಿನ ಮಾರ್ಗದರ್ಶನವನ್ನು ಪಡೆದು ಮುಕ್ತಿಯನ್ನು ಪಡೆದುಕೊ ಎಂದು ‘ಜ್ಞಾನವೇ’ ಮುಕ್ತಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಮುಂದೆ ಅಲ್ಲಮಪ್ರಭುಗಳು ತಮ್ಮ ಸ್ವರವಚನದ ಒಂದನೆ ಚರಣದಲ್ಲಿಯು ಸಹ ಜ್ಞಾನದ ಬಗೆಯನ್ನು ಕುರಿತು, ಲಿಂಗವೇ ಜ್ಞಾನದ ಸಂಕೇತವಾಗಿ ಅದನ್ನು ಮಾನಿಕ್ಯವೆಂದು ರೂಪಕ ಕೊಟ್ಟು ಹೇಳುತ್ತಿದ್ದಾರೆ,

“ಕುಂಭದೊಳಗೊಂದು ಮಾಣಿಕ್ಯ

ಅದು ಬಲೆಯ ಬೀಸಿದಡೆ ಸಿಕ್ಕದು

ಕುಂಭ ಒಡೆಯಿತು, ಬಲೆ ಬರುದಾಯಿತು

ಮಾನಿಕ್ಯ ಗುಹೇಶ್ವರಂಗಾಯಿತಮ್ಮ||1||”

ಈ ಶರೀರ ಅಂಗ, ಇದು ದೇವನ ಅಂಗವೇ! ಅಂಗದೊಳಗೆ ಲಿಂಗವಿದೆ(ಮಾಣಿಕ್ಯವೆಂದರೆ ಲಿಂಗ). ಅದು ಬರಿ ಕ್ರಿಯೆಯಿಂದ ಸಿಗುವಂತಹದ್ದಲ್ಲ. ಅದಕ್ಕೆ ಸತತಾಭ್ಯಾಸ, ತತ್ವಗಳ ಅರಿವು, ಯೋಗಸಿದ್ಧಾಂತದ ತಿಳುವಳಿಕೆ ಸಾಧನೆ ಇವೆಲ್ಲವೂ ಅಂತರಂಗದಲ್ಲಿ ತಗ್ದತವಾಗಿರಬೇಕು. ಆಗ ಒಳಗಿರುವ ಲಿಂಗವು ಕಂಗೊಳಿಸುವುದು. ಮನಸ್ಸಿನ ಕಳವಳವ ನಿಲಿಸಿ ಕರಣಾದಿಗಳನ್ನು(ಕಾಯಾ-ವಾಚಾ-ಮನಸಾ) ವಿಕಾರಗಳೆಡೆಗೆ ಹರಿಯದಂತೆ ತಡೆದು, ಲಿಂಗಗುಣಗಳು ತುಂಬಿ ಕ್ರಿಯೆಯಲ್ಲಿ ತೊಡಗಬೇಕು. ಇಲ್ಲವಾದರೆ ಮಾಡಿದ ಕ್ರಿಯೆಯೇ ಹುಸಿಯಾಗಿ ಸಾಧಕನ ಸಾಧನೆ ವ್ಯರ್ಥವಾಗುತ್ತದೆಯೆನ್ನುತ್ತಾರೆ ಪ್ರಭುದೇವರು. ಸುಜ್ಞಾನವಿಡಿದು ಸತ್ಕ್ರೀಯನ್ನಾಚರಿಸಿದಾಗ ದೇಹಭಾವವಳಿದು, ದೇಹದಲ್ಲಿನ ಲಿಂಗಕಳೆ, ಮುಕ್ತಿ ಮಾಣಿಕ್ಯವಾಗಿ ತೋರುವುದು.

ಶರಣ ಸೊಡ್ಡಳ ಬಾಚರಸ ಮುಕ್ತಿ ದೊರೆಯಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು ಎಂಬುದರ ಕುರಿತು,

“ಚಿತ್ತದಲ್ಲಿ ನಿರ್ಮಲನಾಗಿಪ್ಪಡೆ

ಮುಕ್ತಿ ಬೇರುಂಟೇ ಹೇಳಾ?”

ಎಂದು ಪ್ರಶ್ನೆಯನ್ನು ಕೇಳುವುದರ ಮುಖಾಂತ ಬುದ್ಧಿಯಲ್ಲಿ, ಮನಸ್ಸಿನಲ್ಲಿ ನಿರ್ಮಲವಾಗಿದ್ದರೇನೇ ಮುಕ್ತಿ. ಮತ್ತೊಂದು ’ಮುಕ್ತಿ’ ಬೇರೆ ಇಲ್ಲವೇ ಇಲ್ಲ ಎನ್ನುತ್ತಾನೆ. ಚಿತ್ತವನ್ನು ನಿರ್ಮಲವಾಗಿಟ್ಟುಕೊಳ್ಳುವುದೆಂದರೆ ಹೇಗೆ? ಅಂತರಂಗ ಬಹಿರಂಗಗಳೆರಡೂ ನಿರ್ಮಲವಾಗಿರಬೇಕು. ಬಹಿರಂಗವನ್ನು ನಿರ್ಮಲವಾಗಿಟ್ಟುಕೊಳ್ಳುವುದು ಸರಳ, ಹೊರಗಿನ ದೇಹದ ಮಲವ ತೊಳೆಯಬಹುದಲ್ಲದೆ ಮನವ ತೊಳೆಯಬಹುದೇ ಒಳಗಿನ ಮನಸ್ಸಿನ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳವುದು ಹೇಗೆ? ಹೇಳುವ  ಎಲ್ಲ ಆಚಾರಗಳನ್ನು ಗುರುಕೃಪಾಮುಖದಿಂದ ಅಷ್ಟಾವರಣಗಳನ್ನು(ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ)ಗಳನ್ನಾಗಿ, ಪಂಚಾಚಾರಗಳನ್ನು(ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರ)ವನ್ನಾಗಿಯೂ ಷಟ್‍ಸ್ಥಲವನ್ನು (ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯಸ್ಥಲ)ವನ್ನಾಗಿಯೂ ಮಾಡಿಕೊಂಡು ಆಚರಣೆಯಲ್ಲಿ ತರುವುದು. ಇನ್ನೂ ಸರಳವಾಗಿ ಪ್ರಯೋಗದ ಮೂಲಕ ಹೇಳುವುದಾದರೆ- ಒಂದು ಬಾಟಲಿ(ದೇಹ)ಯಲ್ಲಿ ಮಸಿ(ಹೊಲಸು)ತುಂಬಿದೆ. ಆ ಬಾಟಲಿಯಲ್ಲಿ ಮಸಿಯನ್ನು ತೆಗೆದು ಶುದ್ಧ ನೀರನ್ನು ತುಂಬಬೇಕಾಗಿದೆ, ನಳದ ಮುಖಾಂತರ ನೀರಿನ ಧರೆಯನ್ನು ಹರಿಸುವುದು. ಮಸಿಯೆಲ್ಲ ಹೊರಹೋಗುತ್ತದೆ. ಹೀಗೆಯೇ ನೀರಿನ ಧಾರೆ ಹೆಚ್ಚಾದಂತೆ- ಮಸಿಯೆಲ್ಲ ಹೊರಹೋಗಿ ಶುದ್ಧ ನೀರಿನಿಂದ ತುಂಬುತ್ತದೆ. ಹೀಗೆಯೇ ಗುರುವಿನ ಜ್ಞಾನ(ಅರಿವಿನ)ದ ಧಾರೆಯೇ ಶುದ್ಧನೀರು. ಮನಸ್ಸಿನ (ಅಂತರಂಗದ ಕಲ್ಮಶ) ಅಶುದ್ಧತೆಯೆಲ್ಲ ಹೊರಹೋಗಿ ಚಿತ್ತ ಶುದ್ಧಿಯಾಗುತ್ತದೆ. ಅದಕ್ಕೆ ಈ ಜ್ಞಾನವನ್ನು ದೊರಕಿಸುವ ಮೂಲ ವ್ಯಕ್ತಿಯಾದ ಗುರುವಿನ ಸೇವೆ ಮಾಡಬೇಕು ಎಂದು ಮುಕ್ತಾಯಕ್ಕನ ವಚನ,

“ಜ್ಞಾನಮೂಲ ಗುರುಸೇವೆ ಎಂಬೆನು.

ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು.

ಮೋಕ್ಷ ಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣ ಲಿಂಗವೆ.”

ಈ ಮೇಲೆ ತಿಳಿಸಿದ ಸೊಡ್ಡಳ ಬಾಚರಸನ ಸ್ವರವಚನದಂತೆ ಮುಕ್ತಿ ದೊರೆಯಲು ಚಿತ್ತ ಶುದ್ಧವಾಗಿರಬೇಕು. ಆ ಚಿತ್ತ ಶುದ್ಧವಾಗಿರಬೇಕೆಂದರೆ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಅದಕ್ಕೆ ಜ್ಞಾನದ ಅವಶ್ಯಕತೆ ಇದೆ. ಈ ಜ್ಞಾನವನ್ನು ಕೊಡುವ ಗುರುವಿನ ಸೇವೆಯನ್ನು ಕಾಯಾ, ವಾಚಾ, ಮನಸಾ ಮಾಡಿದಾಗ ಮಾತ್ರ ಜ್ಞಾನದ ಕುರುಹು ಆಗಿರುವ ಇಷ್ಟಲಿಂಗವನ್ನು ಕರುಣಿಸುವನು. ಆ ಇಷ್ಟಲಿಂದ ಅರ್ಚನೆಯಿಂದ ದೈಹಿಕವಾಗಿ, ಮಾನಸಿಕವಾಗಿ ಐಶ್ವರ್ಯ ವೆಂಬ ಆರೋಗ್ಯ ಶಾಂತಿ ಸಿಗುವುದು. ಇದುವೇ ಮೋಕ್ಷ/ಮುಕ್ತಿ ಎಂದು ಮುಕ್ತಾಯಕ್ಕ ಹೇಳುತ್ತದ್ದಾಳೆ.

ಈ ಮುಕ್ತಿ ದೊರೆಯಬೇಕಾದರೆ ಸದಾವಕಾಲ ಭಗವಂತನ ನಾಮಸ್ಮರಣೆ ಮಾಡುತ್ತ ಸ್ವತಃ ಭಗವಂತನಾಗುವನು ಎಂದು ಅಲ್ಲಮಪ್ರಭುಗಳು ತಮ್ಮ ಒಂದು ತತ್ವಪದದಲ್ಲಿ,

“ಭೂತದ ಕೈಯಲೊಂದರುವೆ! ಅದು

ವೇತಾಳನುದ್ದಕ್ಕೆ ನಿಂದಿತು!

ಭೂತ ಸತ್ತಿತು ವೇತಾಳನತ್ತಿತ್ತು!!

ಅರುವೆ ಗುಹೇಶ್ವರನೊಳಗಾಯಿತಮ್ಮ|”

ಇಲ್ಲಿ ಬರುವ ಭೂತ ಪದವೆಂದರೆ ಆತ್ಮ(ದೆವ್ವವಲ್ಲ) ವೆಂದರ್ಥ! ಆತ್ಮವೇ ಪರಮಾತ್ಮ!. ಪರಮಾತ್ಮನ ಭಾವವನ್ನು ಮನದಲ್ಲಿ ಮೂಡಿಸಿಕೊಂಡಲ್ಲಿ ಪರಮಾತ್ಮನ ಭಾವವೇ ತೋರುವುದು. ಕನಸಿನಲ್ಲೂ ಮನಸ್ಸಿನಲ್ಲೂ ಆತನ ನಾಮಸ್ಮರಣೆ ಮಾಡುತ್ತಿದ್ದರೆ, ಆತನ ಗುಣಗಾನ ಮಾಡುತ್ತಿದ್ದರೆ ಸಾಕ್ಷಾತ ಶಿವನೇ ಪ್ರತ್ಯಕ್ಷನಾಗುತ್ತಾನೆ. ‘ಯದ್ಭಾವಂ ತದ್ಭವತಿ’ ಎಂಬಂತೆ ನಾವು ಯಾವ ರೀತಿಯಲ್ಲಿ ವಿಚಾರ ಮಾಡುತ್ತೇವೆಯೋ ಆ ರೀತಿ ನಾವಾಗುತ್ತೇವೆ. ‘ವಿಚಾರ’ ಮತ್ತು ‘ಆಚಾರ’ ಒಂದಾಗಿರುವುದೇ ಲಿಂಗಧಾರಿಯಾದವನ ನಿಜ ನಡವಳಿಕೆ. ನಿರ್ಮಲ ಮನಸ್ಸಿನಿಂದ ಆತನನ್ನು ನೆನೆದರೆ ಆತ ನಮ್ಮನ್ನೆತ್ತಿಕೊಳ್ಳಬಲ್ಲ. ಜೀವಭಾವ ಅಳಿದಾಗ ಪರಮಾತ್ಮನುಳಿಯುತ್ತಾನೆ. ಪರಮಾತ್ಮನೆಂದರೆ ಅರಿವು, ಸುಜ್ಞಾನ, ತತ್ವಜ್ಞಾನದ ಪ್ರತೀಕ. ಇದುವೇ ಒಂದರ್ಥದಲ್ಲಿ ಪರತತ್ವವು. ಇದನ್ನೇ ಅಲ್ಲಮನು ವೇತಾಳ(ಪರಮಾತ್ಮ) ಅಥವಾ ಪರಮಾತ್ಮ ಶಾಶ್ವತನು. ಆತ್ಮ ಬೇರೆಯಲ್ಲ, ಪರಮಾತ್ಮ ಬೇರೆಯಲ್ಲ, ಎಂಬ ಅರಿವೇ ಗುರುವಾಗಿದ್ದಾನೆ. ಆ ಅರಿವೇ ಗುಹೇಶ್ವರನೊಳಗಾಯಿತ್ತೆಂಬುದೆ ಮುಕ್ತಿ ಸ್ಥಿತಿಯಾಗಿದೆ.

ಇದೇ ರೀತಿ ವೈರಾಗ್ಯದ ನಿಧಿ ಅಕ್ಕ ಮಹಾದೇವಿಯು ಪರಮಾತ್ಮನ ನಾಮಸ್ಮರಣೆ ಮಾಡಿದವರೆಲ್ಲರೂ ಮುಕ್ತಿ ಹೊಂದಿದರು ಎನ್ನುವುದಕ್ಕೆ, ವಚನ:

“ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,

ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ

ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ.

ಚನ್ನಮಲ್ಲಿಕಾರ್ಜುನದೇವರದೇವನ ನೆನೆದು

ಪಂಚಮಹಾಪಾತಕರೆಲ್ಲರು ಮುಕ್ತಿವಡೆದರೆಂದು !”

ಎಷ್ಟೋ ಜನ್ಮದ ಪುಣ್ಯದ ಫಲದಿಂದ ಮಾನವ ಜನ್ಮಕ್ಕೆ ಬಂದಿದ್ದೇವೆ, ಅಕ್ಕ ಹೇಳುವ ಹಾಗೆ 84 ಲಕ್ಷ ಯೋನಿಗಳಲ್ಲಿ ಹುಟ್ಟಿ, ಸತ್ತು, ಹುಟ್ಟಿ ಶ್ರೇಷ್ಟವಾದ ಮಾನವ ಜನ್ಮ ಇದಾಗಿದೆ. ಆದ್ದರಿಂದ ಶಿವನಾಮಸ್ಮರಣೆಯನ್ನು ನೆನೆಯುವುದರಿಂದ ಎಷ್ಟೋ ಜನ ಮುಕ್ತಿಯನ್ನು ಪಡೆದಿದ್ದಾರೆ. ಆದ್ದರಿಂದ ಶಿವನ ಕುರಿತು ನೆನೆಯಿರಿ, ಎಂದು ಅದನ್ನು ಬಿಟ್ಟು ಹಗಲು ರಾತ್ರಿಯನ್ನದೆ ಹಲವು ಚಿಂತೆಗಳಲ್ಲಿ ಕಳೆದರೆ ಜೀವನ ವ್ಯರ್ಥವಾಗಿ ಹೋಗುವುದು ಎಂದು  ಆಯುಷ್ಯ ತೀರುವ ಮುನ್ನ ಶಿವನಾಮಸ್ಮರಣೆ ಎಂಬ ಬುತ್ತಿ ಕಟ್ಟಿಕೊಂಡು ಇರುವ ಜೀವಿತಾವಧಿಯಲ್ಲಿಯೇ ಮುಕ್ತಿಯನ್ನು ಸಾಧಿಸುವುದಾಗಿದೆ.

ಮುಕ್ತಿಯನ್ನು ಶಿವಯೋಗವೆಂತಲು ಕರೆಯುತ್ತಾರೆ, ಈ ಶಿವಯೋಗದ ಕುರಿತು 14-15ನೇ ಶತಮಾನದ ಶ್ರೀ ಮನ್ ನಿಜಗುಣಶಿವಯೋಗಿಗಳು ಸಹ ಕೈವಲ್ಯ ಪದ್ಧತಿಯ “ಯೋಗ ಪ್ರತಿಪಾದನ ಸ್ಥಲ”ದ ಕೊನೆಯ ಭಾಗದಲ್ಲಿ ಹೇಳಿದ “ಶಿವಯೋಗ” ವಿಷಯಕ ಪದ್ಯಗಳಲ್ಲಿ ಕ್ರಮವಾಗಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಪೂಜಾಕ್ರಮಗಳನ್ನೇ ಮೂರು ಹಾಡುಗಳಲ್ಲಿ ಹೇಳಲಾಗಿದೆ.

“ಪರತರ ಶಿವಲಿಂಗವೆಳಸಿ ನಿನಗಾಗಿ |

ಕರಕಂಜದೊಳು ಕಾಣಿಸಿತು ಯೋಗಿ ಯುಜಿಸು||ಪ||”

ನಿನ್ನ ಉದ್ಧಾರಕ್ಕಾಗಿ ಗುರುಕಾರುಣ್ಯದಿಂದ ಪರತರವಾದ ಶಿವಲಿಂಗವು ಬಯಸಿ ನಿನಗಾಗಿ ಹಸ್ತಾರವಿಂದದಲ್ಲಿ ಕಾಣಿಸಿರುವುದು ಅರ್ಚಿಸಿ, ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಹೊಂದು ಎಂದು ಶಿವಯೋಗಿಗಳು ಶಿವಯೋಗ(ಮುಕ್ತಿ)ದ ಸ್ಥಿತಿಯನ್ನು ಕುರಿತು ಹೇಳಿದ್ದಾರೆ. ಮುಂದಿನ ಪದ್ಯದಲ್ಲಿ,

“ಪ್ರಾಣಲಿಂಗವಿದನು ಗುರುವಿ | ನಾಣತಿಯೊಳು ಕೇಳಿ ನೋಡಿ |

ಮಾಣದೇಕ ಚಿತ್ತದಿಂದ ಧ್ಯಾನಿಪನೆ ಕೃತಾರ್ಥನು||ಪ||”

ಸದೃಪು ಇಷ್ಟ(ಕ್ರೀಯಾ) ಲಿಂಗವಾದರೆ, ಚಿದೃಪವು ಪ್ರಾಣ(ಜ್ಞಾನ) ಲಿಂಗ. ಇಷ್ಟಲಿಂಗವನ್ನಿತ್ತ ದೀಕ್ಷಾಗುರುವೆ ಶಿಕ್ಷಾಗುರುವಾಗಿ ಪ್ರಾಣಲಿಂಗವನ್ನು ಕರುಣಿಸುತ್ತಾನೆ. ಇದರಿಂದಾಗಿ ಗುರುವಿನ ಆಜ್ಞೆಗೆ ಲಿಂಗಾರಾಧಕನು ಬದ್ಧನಾಗಿರಬೇಕು. ಇಲ್ಲವಾದರೆ ಪ್ರಾಣಲಿಂಗದ ನೆಲೆಕಲೆಗಳು ತಿಳಿಯವು.

“ಭಾವಲಿಂಗವನೆ ಬಿಡದೆ ನೀನು ಪರಿ

ಭಾವಿಸು ಭೇದವಿಲ್ಲದೆ ಯೋಗಿ||ಪ||”

ಶ್ರೀ ಗುರು ತನ್ನ ವೇಧಾ ದೀಕ್ಷೆಯಿಂದ ಕರುಣಿಸಿದ ಭಾವ(ತೃಪ್ತಿ) ಲಿಂಗವನ್ನು ತಪ್ಪದೆ ನಿತ್ಯತೃಪ್ತನಾದ ನಿಜಗುರುದೇವನಲ್ಲಿ ಸಹಜಸಿದ್ಧವಾಗಿದ್ದ ಪರಮಾನಂದ ಸ್ವರೂಪ ಭಾವಲಿಂಗವು. ಹಸ್ತಮಸ್ತಕ ಸಂಯೋಗ ಮಾತ್ರದಿಂದ ತಾನೆ ತಾನಾಗಿ ಪ್ರಾಣಲಿಂಗಯೋಗಿಯಾಗಿ ಆವಿಷ್ಕರಿಸುತ್ತದೆ. ಅದನ್ನು ಪರಿಭಾವಿಸುವುದೆ ಪ್ರಾಣಲಿಂಗಯೋಗಿಯ ಕರ್ತವ್ಯವಾಗಿದೆ. ಮುಂದೆ 38ನೆಯ ಪದ್ಯದಲ್ಲಿ “ಶರಣಸ್ಥಲ”ದ ವರ್ಣನೆಯು ಸ್ಪಷ್ಟವಾಗಿ ಬಂದಿದೆ.

“ಸತಿಪತಿಗಳೀವರ ಸಮರತಿ ಸುಖದ ಬಾಳುವೆಗೆ|

ಪ್ರತಿಯುಂಟೆ ಲೋಕದೊಳು ನೋಡೆ ಲಲಿತಾಂಗಿ||ಪ||

ಬೆರಸಿ ಬೇರೆನಿಸದೆರಡಾಲಿ ಕಲ್ಲುಗಳೇಕ|

ಸುರಸವಾದಂತೆ ಪತಿ ಶಂಭುಲಿಂಗ||

ಶರಣ ಸತಿಯ ಕೂಡಿ ಪರತರಾನಂದದೊಳು|

ಪರವಶನೈದಿಹುದನುಪಮಿಸಲು ಬಹುದೆ?||3||”

ಸತಿಪತಿಗಳಿವರ ಸಮಪ್ರೀತಿಯ ಕೂಟದ ಆನಂದದ ಬಾಳಿಗೆ ಜಗತ್ತಿನಲ್ಲಿ ಹೋಲಿಕೆಯಿರುವುದೇ? ಹಾಗೆ ಆಧ್ಯಾತ್ಮದಲ್ಲಿ ಅಂಗಸತಿ ಲಿಂಗಪತಿ ಎಂಬ ಇವರಿಬ್ಬರ ಸುಖಕ್ಕಿಂತ ಬೇರೆ ಸುಖ ಇನ್ನಾವುದು. ಎಂದು ಪ್ರಶ್ನಿಸಿ ವಿಚಾರಿಸು. ಎಂದು ಶಿವಸುಂದರಾಂಗಿಯಾದ ಸಂವಿತ್ ಶಕ್ತಿಯನ್ನು ಕೇಳುತ್ತಿದ್ದಾರೆ. ಮುಂದೆ ಕೊನೆಯ ನುಡಿಯಲ್ಲಿ  ಎರಡು ಆಲಿಕಲ್ಲುಗಳು ಕರಗಿ ಏಕವಾದಂತೆ ಬೆರಸಿ ಬೇರಾಗದಂತಿರುವ ಪತಿ ಶಂಭುಲಿಂಗನು, ಸತಿ ಶರಣಾಂಗನು ಕೂಡಿ ಅಂದರೆ ಏಕರಸವಾಗಿ ಪರಮ ಪರಿಣಾಮದಲ್ಲಿ ಪರವಶರಾಗುವರು. ಇದುವೆ ಶಿವಯೋಗ(ಮುಕ್ತಿ)ವಾಗಿದೆ. ಅದನ್ನೆ ಬೇರೊಂದಕ್ಕೆ ಉಪಮಿಸಿ ಹೇಳಲು ಸಾಧ್ಯವಿಲ್ಲ.

ಇದೆಲ್ಲದರ ಮೇಲಿಂದ ಶ್ರೀಮನ್ನಿಜಗುಣ ಶಿವಯೋಗಿಗಳ “ಕೈವಲ್ಯ ಪದ್ಧತಿ”ಯೆಂಬ ಉದ್ಗ್ರಂಥದಲ್ಲಿ ಹೇಳಿದ “ಶಿವಯೋಗವು” ಶಿವಶರಣರ “ಷಟ್‍ಸ್ಥಲ” ಮಾರ್ಗವೇ ಅಹುದೆಂದು ಸಿದ್ಧವಾಗುವುದು. ಆದರೆ ಶಿವಯೋಗಕ್ಕೂ ಇನ್ನುಳಿದ ಬೇರೆ ಯೋಗಗಳಿಗೂ ಭೇದವೇನು? ಎಂಬ ಪ್ರಶ್ನೆಯು ಮನದಲ್ಲೇಳುವುದ ಸಹಜ. ಮಾನವ ದೇಹದೊಳಗಿರುವ ಆತ್ಮವನ್ನು ಒಂದಿಲ್ಲೊಂದು ಬಗೆಯಿಂದ ಪ್ರಕಟಿಸಿಕೊಳ್ಳವುದೇ ಪ್ರತಿಯೊಂದು ಯೋಗದ ಉದ್ದೇಶವಾಗಿದೆ. ಆದರೆ ಆ ಆತ್ಮನು ಪರಮಾತ್ಮನದೇ ಒಂದು ಅಂಶವಾಗಿದ್ದಾನೆಂದು, ಅಥವಾ ಪರಮಾತ್ಮನೇ ಪ್ರಾಣಿಗಳ ಹೃದಯದಲ್ಲಿ ಆತ್ಮರೂಪದಿಂದ ಕುಳಿತಿದ್ದಾನೆಂದು ತಿಳಿದು ಆತ್ಮನಲ್ಲಿ ಪರಮಾತ್ಮನನ್ನು ಭಾವಿಸಿ ಧ್ಯಾನಿಸುವದೇ “ಶಿವಯೋಗ”ದ ಮುಖ್ಯ ರಹಸ್ಯವಾಗಿದೆ. ಹೀಗೆ ಶಿವಯೋಗ(ಮುಕ್ತಿ)ವು ಮುಖ್ಯವಾಗಿ ಸಗುಣ-ನಿರ್ಗುಣ ತತ್ವಗಳೆರಡರ ಸಮನ್ವಯವನ್ನು ಸಾಧಿಸುತ್ತದೆ.

               ನೇತ್ರ, ಶ್ರೋತ್ರ, ಘ್ರಾಣ, ಜಿಹ್ವೆ, ಸ್ಪರ್ಶನಗಳು ಲಿಂಗಮುಖವಾಗಿ, ಲಿಂಗತನುಗಳಾಗಿ ಅಂಗನಲ್ಲಿ ಲಿಂಗ ಸನ್ನಿಹಿತವಾಗಿ ಲಿಂಗದಲ್ಲಿ ಅಂಗವಾಗಿರ್ದ ಪ್ರಾಣಲಿಂಗಿ ಪರಮ ಸುಖಿಯೆಂದು ವಚನಿಸಿದ ಚೆನ್ನಬಸವಣ್ಣನವರ ವಚನ-

                              ‘’ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖಿ

                              ಅಂಗಲಿಂಗ ಸಂಗದಿಂದ ಪರಮಸುಖ ನೋಡಯ್ಯಾ

                              ಅಂಗಲಿಂಗ ಸಂಗ ಸುಖವನೂ

                              ಕೂಡಲಚನ್ನಸಂಗಯ್ಯಲ್ಲಿ ಲಿಂಗೈಕ್ಯನೆ ಬಲ್ಲ||”

ಪರಮಪಾವನವಾದ ಪ್ರಾಣಲಿಂಗವು, ಪರಬ್ರಹ್ಮವು ಮುಕ್ತಿದಾಯಕವು, ಜಗದಾಧಾರವು, ಅನಾಧಿ, ಅನಂತ ಅಖಂಡ ಸೃಷ್ಟಿಗೆ ಕಾರಣವೆಂಬುದನ್ನು ಅರಿತು. ಗುರುಕರುಣೆ ಸಾಧನೆಯಿಂದ ಸಾಕ್ಷಾತ್ಕರಿಸಿಕೊಂಡು ಸದ್ಭಾವದಿಂದ ಪೂಜಿಸುವವನು ಪ್ರಾಣಲಿಂಗಿಯು ಅವನೇ ಅಂಗಲಿಂಗಿಯು. ಅದುವೇ ಮುಕ್ತಿಸ್ಥಿತಿಯಾಗುವುದು.

—–

ಪರಾಮರ್ಶನ ಗ್ರಂಥಗಳು

•             ಡಾ.ಎಲ್.ಬಸವರಾಜು. ‘ಶಿವದಾಸ ಗೀತಾಂಜಲಿ’ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.1990

•             ಡಾ.ವೀರಣ್ಣ. ರಾಜೂರ(ಸಂ), ‘ಶಿವಶರಣೆಯರ ವಚನ ಸಂಪುಟ’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993, ಪು-30. ವ.82

•             ಡಾ.ವೀರಣ್ಣ ರಾಜೂರ(ಸಂ) ‘ಕೈವಲ್ಯ ಸಾಹಿತ್ಯ ಸಂಪುಟ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019

•             ಡಾ. ವೀರಣ್ಣ ರಾಜೂರ(ಸಂ), ‘ಸ್ವರವಚನ ನಿರ್ವಚನ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019

•             ಡಾ.ಎಂ.ಎಂ.ಕಲಬುರ್ಗಿ, ‘ಸಂಕೀರ್ಣ ವಚನ ಸಂಪುಟ-1’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993.

•             ಡಾ. ವೀರಣ್ಣ ರಾಜೂರ ‘ಶಿವಯೋಗ ಪ್ರಥೀಪಿಕೆ: ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ 1981,

•             ಡಾ.ಎಸ್.ಆರ್. ಚೆನ್ನವೀರಪ್ಪ, ‘ಮುಕ್ತಿಯ ಪರಿಕಲ್ಪನೆ’ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ -2006

•             ತಿ.ಸ್ವಾಮಿ ಹರ್ಷಾನಂದ, ‘ಜೀವನ್ಮುಕ್ತಿ ವಿವೇಕ’, ಶ್ರೀ ರಾಮಕೃಷ್ಣಾಶ್ರಮ, ಮೈಸೂರು-1980

•             ಲಿಂಗರಾಜು(ಸಂ), ‘ಅನಾದಿಯ ಅನುಭಾವದ ಸೆಲೆ’, ತತ್ವಪದ ಪ್ರವೇಶಿಕೆ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯಮಾಲೆ ಸಂ-01, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.2017

ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ

(ಲೇಖಕರ ಕುರಿತು……..

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು )

“Each soul is potentially divine. The goal is to manifest this divine within, by controlling nature, external and internal. Do this either by work, or worship, or psychic control, or by philosophy, or by one, or more, or all of these-and be free.”  – Swami Vivekananda

ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲಿ ಯೋಗವು ಒಂದು. ಯೋಗಶಬ್ದದ ವ್ಯಾಖ್ಯೆಯನ್ನು ಬೇರೆ ಬೇರೆ ಜನರು ಬೇರೆ ಬೇರೆ ಪ್ರಕಾರ ಮಾಡಿರುವರು. ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಅದನ್ನು ಸ್ಥಿರಪಡಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತುಬಿಡುವುದೂ ಮತ್ತು ಧ್ಯಾನವನ್ನೂ ವಿಷಯ ತನ್ಮಯತೆಯನ್ನೂ ಬಲಿಸುವುದಕ್ಕಾಗಿ ಕುಂಭಕ, ಪೂರಕ, ರೇಚಕಗಳ ದ್ವಾರಾ ಸ್ಥೂಲ ಶರೀರದೊಳಗಿನ ಮಲಿನತೆಯನ್ನು ನಾಶಮಾಡಿ ವ್ಯಾಧಿಗಳನ್ನು ಗೆಲಿಯುವುದೂ ಯೋಗದ ಉದ್ದೇಶಗಳು. ಮೇಲಾಗಿ ಯೋಗದಿಂದ ಅಂತರಂಗ ಬಹಿರಂಗಗಳ ಶುದ್ಧಿಯಾಗುವದಲ್ಲದೆ ಈಶ್ವರ ಧ್ಯಾನವು ಬಲಪಡುವುದು.

ಆವಕಾಲದಲ್ಲಿ ಯೋಗವು ಉದ್ಭವಿಸಿತೆಂಬುದನ್ನು ಅದರ ಉತ್ಪಾದಕ ರಾರೆಂಬುದನ್ನು ಖಂಡಿತವಾಗಿ ಈಗ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಅಲ್ಲಲ್ಲಿ ಯೋಗಕ್ಕೆ  ಸಂಬಂಧಿಸಿದ ವಾಕ್ಯಗಳು ಕಂಡುಬರುವವು. ಬೌದ್ಧರ ಪ್ರಾಚೀನ ಮತ್ತು ಪವಿತ್ರವಾದ ಪುಸ್ತಕಗಳಲ್ಲಿ ಅನೇಕ ಕಡೆಗೆ ಯೋಗಶಾಸ್ತ್ರದ ವರ್ಚಸ್ವವೂ ಅನುಕರಣೆಯೂ ಕಂಡುಬರುವವು .ಭಗವಾನ್ ಬುದ್ಧದೇವನು ಪೂರ್ವಾಶ್ರಮದಲ್ಲಿ ಅತಿ ಕಠೋರವಾದ ಯೋಗಸಾಧನೆಯನ್ನೇ ಮಾಡಿದನೆಂದು ಪ್ರತೀತಿಯಿದೆ. ಇಷ್ಟೇ ಅಲ್ಲ ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ,ಕೇವಲ ಅಸ್ತಿಪಂಜರಮಯವೂ   ಆದ ಆತನ ಶಿಲಾ ಪ್ರತಿಮೆಗಳೂ ಇನ್ನೂ ಅನೇಕ ಕಡೆಗೆ ದೊರೆಯುವವು.’ ಗ್ರೀಕ ಅರಸನಾದ ಅಲೆಕ್ಸಾಂಡರನು ಸಮಗ್ರ ದೃಷ್ಟಿಯನ್ನು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಕ್ರಿ.ಶ.ಪೂ. ೩.೨೬ರಲ್ಲಿ ನಮ್ಮ ದೇಶವನ್ನೊಳ ನುಗ್ಗಿದಾಗ ಅನೇಕ ಯೋಗಿಗಳನ್ನು ಕಂಡಿದ್ದನಂತೆ. ಇವೆಲ್ಲ ಕಾರಣಗಳಿಂದ ಯೋಗವು ಪ್ರಾಚೀನತಮವೆಂಬುದು ನಿರ್ವಿವಾದವಾದ ಮಾತು.

ಆದರೂ ಆಯಾ ಕಾಲಗಳಲ್ಲಿ ಅಂದರೆ ಉಪನಿಷತ್ ಮತ್ತು ಬೌದ್ಧಕಾಲಗಳಲ್ಲಿಯೋಗವು ಅಸ್ತಿತ್ವದಲ್ಲಿದ್ದರೂ ಅನಿಶ್ಚಿತ ಸ್ವರೂಪ (Unsystematised form) ದಲ್ಲಿಯೇ ಇತ್ತೆಂದೂ, ಅದಕ್ಕೆ ನಿಶ್ಚಿತಸ್ವರೂಪವನ್ನು ಕೊಟ್ಟು, ಷಡ್‌ದರ್ಶನಗಳಲ್ಲೊಂದಾಗುವಂತೆ ಮಾಡಲು ಯತ್ನಿಸಿದವರಲ್ಲಿ ಯೋಗ ಸೂತ್ರಕಾರರೇ ಮೊದಲನೆಯವರೆಂದೂ ಕೆಲವು ವಿದ್ವಾಂಸರ ಮತವು. ಯೋಗಸೂತ್ರಕ್ಕೂ ಮೊದಲಿನವೆಂದು ಗಣಿಸಲ್ಪಡುವ ಗ್ರಂಥಗಳಲ್ಲಿ ಯೋಗ ಶಬ್ದವನ್ನು ನಿಯಮಿತವಾದ ಒಂದೇ ಅರ್ಥದಲ್ಲಿ ಉಪಯೋಗಿಸಿಲ್ಲವೆಂದೂ, ಯೋಗವು ಷಡ್‌ದರ್ಶನಗಳಲ್ಲೊಂದು ಮಹತ್ವದ ಸ್ಥಾನವನ್ನಾಕ್ರಮಿಸಿದ ನಂತರವೇ “ಯೋಗಶ್ಚಿತ್ತವೃತ್ತಿ ನಿರೋಧಃ’ ಎಂಬ ವ್ಯಾಖ್ಯೆಯು ಸರ್ವತ್ರ ಪ್ರಚಲಿತವಾಯಿತೆಂದೂ ಅವರ ಹೇಳಿಕೆಯು, ಪ್ರಸ್ಥಾನತ್ರಯಗಳಲ್ಲೊಂದಾದ ಭಗವದ್ಗೀತೆ ಯಲ್ಲಿಯೂ ಕೂಡ ಯೋಗ ಶಬ್ದವನ್ನು ಭಕ್ತಿ, ಜ್ಞಾನ, ಕರ್ಮ ಮೊದಲಾದ ಶಬ್ದಗಳೊಡನೆ ಜೋಡಿಸಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗವೆಂಬುದಾಗಿ ಉಪಯೋಗಿಸಿರುವುದು ಅರಿದಾದ ಮಾತಲ್ಲ.” ಯೋಗದರ್ಶನದ ಅನೇಕಾಂಶಗಳು ಭಗವದ್ಗೀತಾಕಾರರಿಗೆ ಗೊತ್ತಿದ್ದವೆಂಬುದು ನಿಜವು; ಆದುದರಿಂದ ಮೇಲೆ ಸೂಚಿಸಿದ ಕೆಲವು ವಿದ್ವಾಂಸರ ಮತವು ತೀರ ಅನಾದರಣೀಯವಲ್ಲ.

ಯೋಗ ದರ್ಶನದ ಪಿತರೆಂದು ಹೆಸರಾದ ಪತಂಜಲ ಮಹರ್ಷಿಗಳಿಂದತ್ತಿತ್ತಲಾಗಿ ಯೋಗಶಾಸ್ತ್ರವು ಬಲು ವಿಪುಲವಾಗಿ ಬೆಳೆದು, ಅಣಿಮಾ, ಗರಿಮಾ,ಲಘಿಮಾ, ಮಹಿಮಾ ಮೊದಲಾದ ಅಷ್ಟಸಿದ್ಧಿಗಳನ್ನು ಸಂಪಾದಿಸುವ ವಿದ್ಯೆಯೆಂದೂ, ಸಿದ್ದಿಗಳನ್ನು ತಿರಸ್ಕರಿಸಿದರೆ ಈಶ್ವರ ಸಿದ್ಧಿಯ ಮಾರ್ಗವೆಂದೂ ಗಣಿಸಲ್ಪಡಹತ್ತಿತ್ತು. ಅದರ ಓಘವು ಇಷ್ಟಕ್ಕೆ ನಿಲ್ಲಲಿಲ್ಲ ಅನುಭವದಿಂದ ಕಂಡುಹಿಡಿಯಲಸಾಧ್ಯವಾದ

ಅನೇಕ ವಿಷಯಗಳು ಬರಬರುತ್ತ ಅದರಲ್ಲಿ ಸೇರಿ ಯೋಗವೆಂದರೆ ಆರಿಗೂ ತಿಳಿಯದಂಥ ಮತ್ತು ತಿಳಿಹೇಳದಂಥ ಒಂದು ವಿದ್ಯೆ (Mysticism)ಯಾಯಿತು. ಇತ್ತಿತ್ತಲಾಗಿ ಆಗಿ ಹೋದ ಗ್ರಂಥಕಾರರಂತೂ ತಮ್ಮ ಅಸಂಗತ ಮತ್ತು ಅಸಂದಿಗ್ಧವಾದ ಬರಹಗಳಿಂದ ಯೋಗ ವಿದ್ಯೆಯಲ್ಲಿದ್ದ ಅಲ್ಪ ಸ್ವಲ್ಪ ನಿಷ್ಠೆಯನ್ನೂ ನಂಬುಗೆಯನ್ನೂ ಕಳೆದುಬಿಟ್ಟಿರುವರು. ಸ್ವಾಮಿ ವಿವೇಕಾನಂದರ ಆರೋಪವಾದರೂ ಹೀಗೆ ಇರುವುದು. ಗ್ರಂಥಕಾರರು ಹೆಚ್ಚು ಹಳಬರಿದ್ದಷ್ಟು ಹೆಚ್ಚು ತಥ್ಯಾಂಶಗಳು ಅವರ ಗ್ರಂಥಗಳಲ್ಲಿ ಕಂಡುಬರುವವು.

ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ,ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಗಳೆಂದು ಎಂಟು ಅಂಗಗಳಿರುವವು. ಇವುಗಳಲ್ಲಿ ಮೊದಲಿನವೆರಡು ಸದಾಚಾರ ಮತ್ತು ನೀತಿಯನ್ನು ಬೆಳೆಯಿಸುವ ಮಾರ್ಗಗಳು. ಅಧ್ಯಾತ್ಮಿಕೋನ್ನತಿಗೆ ನೀತಿಯೇ ತಳಹದಿಯು, ನಮ್ಮಭೌತಿಕ ವ್ಯವಹಾರದಲ್ಲಿಯೂ ಕೂಡ ನೀತಿಯನ್ನು ಬಿಟ್ಟರೆ ಬಾಳುವೆಯೇ ಹಾಳು. ಮೂರನೆಯಾದದ ಆಸನವು ಶಾರೀರಿಕ ಮತ್ತು ಮಾನಸಿಕ ಚಲನವಲನಗಳನ್ನು ಸರಿಯಾಗಿ ಕಾಯ್ದಿಡಲು ಅನುಕೂಲವಾಗುವುದು. ಯೋಗವನ್ನು ಬಲಿಸುತ್ತಹೋದಂತೆ ಸಾಕಷ್ಟು ಕಾಲ ಪರಿಶ್ರಮವಿಲ್ಲದೆ ಒಂದೇ ಸ್ಥಿತಿಯಲ್ಲಿರುವುದಕ್ಕೋಸುಗ ಇದರ ಉಪಯೋಗವು ಪ್ರಾಣಾಯಾಮದಿಂದ ಶರೀರದೊಳಗಿನ ಮಲಿನತೆಯನ್ನು ಶ್ವಾಸೋಚ್ಛಾಸದ ದ್ವಾರಾ ಹೊರಗೆ ಹಾಕಲು ಸಹಾಯವಾಗುವುದು. ಶರೀರದಲ್ಲಿ ಮಲಿನತೆಯನ್ನಿರಗೊಟ್ಟರೆ ವ್ಯಾಧಿಗಳಿಗೀಡಾಗುವದಲ್ಲದೆ ಮನಸ್ಸು ಮಲಿನವಾಗುವುದು. ಮನಸ್ಸು ಮಲಿನವಾಗಿದ್ದರೆ ಯೋಗವು ಎಂದಿಗೂ ಸಾಧ್ಯವಾಗಲಾರದು. ಪ್ರತ್ಯಾಹಾರ ದಿಂದ ಶರೀರವು ಬಲು ಸ್ಥೂಲವಾಗದಂತೆಯೂ ಬಲು ಕ್ಷೀಣವಾಗದಂತೆಯೂ ಇಡಲು ಬರುವುದು. ಉಳಿದ ಅಂಗಗಳಾದ ಧಾರಣ, ಧ್ಯಾನ, ಸಮಾಧಿಗಳು ಮನಸ್ಸಿಗೆ ಹೆಚ್ಚಾಗಿ ಸಂಬಂಧಿಸಿರುವವು. ಯೋಗ ಶಾಸ್ತ್ರಜ್ಞರು ಅಷ್ಟಾಂಗಗಳಲ್ಲಿ ಅನೇಕ ಭಾಗಗಳನ್ನು ಮಾಡಿ ಯೋಗದರ್ಶನವನ್ನು ಅತಿ ವಿಸ್ತಾರವಾದ ಶಾಸ್ತ್ರಗಳ ಲ್ಲೊಂದನ್ನಾಗಿ ಮಾಡಿರುವರು. ಪತಂಜಲ ಮಹರ್ಷಿಗಳು ಇವುಗಳ ವ್ಯಾಖ್ಯೆಯನ್ನುಹೇಗೆ ಮಾಡಿರುವರೆಂಬುದನ್ನು ಕೆಳಗಿನ ಟಿಪ್ಪಣಿಗಳಿಂದ ಕಂಡುಕೊಳ್ಳಬಹುದು. ಈ ಎಂಟು ಅಂಗಗಳು ಅತಿ ಮಹತ್ವವಾದವು. ಇವು ಯೋಗ ಸಾಧನೆಯ ಎಂಟು ಪಾವಟಿಗೆಗಳೆಂದರೂ ಅಡ್ಡಿಯಿಲ್ಲ. ಇವುಗಳ ಸಿದ್ದಿಯಿಂದಲೇ ಶಾರೀರಕ ಮತ್ತು ಮಾನಸಿಕ ವೃತ್ತಿಗಳನ್ನು ಸ್ವಾಧಿನದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಯೋಗವೇತೃಗಳು ಯೋಗವನ್ನು ಮಂತ್ರಯೋಗವೆಂದೂ ಲಯಯೋಗ ವೆಂದೂ, ಹಠಯೋಗವೆಂದೂ, ರಾಜಯೋಗವೆಂದೂ ನಾಲ್ಕು ವಿಧವಾಗಿ ಹೇಳುವರು. ಓಂಕಾರ ಮೊದಾಲದ ಮಂತ್ರಗಳನ್ನು ಜಪಿಸುವವರು ಮಂತ್ರಯೋಗಿಗಳೆಂದೂ, ಮನೋಮಾರುತನೊಡನೆ ಕೂಡಿದ ಚಿತ್ರವನ್ನು ಆತ್ಮಧೇಯದಲ್ಲಾಗಲೀ ಅಥವಾ ನಾದದಲ್ಲಾಗಲೀ ತಲ್ಲೀನವನ್ನಾಗಿ ಮಾಡುವವರು  ಲಯಯೋಗಿಗಳೆಂದೂ, ಅಷ್ಟಾಂಗ ಮಾರ್ಗಗಳಿಂದಲೂ, ಮುದ್ರಾಕರಣ ಬಂಧುಗಳಿಂದ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿ ಗಳೆಂದೂ, ಮನೋವೃತ್ತಿಯಿಲ್ಲದವರೂ ಜ್ಞಾನದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದವರೂ ರಾಜಯೋಗಿಗಳೆಂದೂಸಿ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ರಾಜಯೋಗವೇ ಮಿಗಿಲಾದುದೆಂದು ಎಲ್ಲರ ಮತವು. ಎಲ್ಲದರ್ಶನಗಳು ಅಂತಿಮ ಧೈಯವಾದ ಸತುವನ್ನು ಕಂಡು ಹಿಡಿಯಲು ಸರಿಯಾದ ಮತ್ತು ಸುಲಭಸಾಧ್ಯವಾದ ಮಾರ್ಗವನ್ನೂ ಮತ್ತು ಜೀವಿಯ ಅಂತರಂಗದ ಪರೀಸ್ಥಿತಿಯನ್ನೂ, ಮತ್ತು ಅಂತಃ ಕರಣಗಳನ್ನೂ ಪರಿಶೋಧಿಸುವ ಹಾದಿಯನ್ನೂರಾಜಯೋಗವು ತೋರಿಸುವುದು, ಲಯ, ಹಠ ಮೊದಲಾದವುಗಳಂತೆ ಶರೀರವನ್ನು ವಿಶೇಷವಾಗಿ ಸಣ್ಣಿಸದೆ ಮನೋವೃತ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದೇ ರಾಜಯೋಗದ ಬೀಗದ ಕೈಯು, ಮನಸ್ಸೇ ಮನುಷ್ಯನ ಬಂಧಕ್ಕೂ ಮೋಕ್ಷಕ್ಕೂ ಕಾರಣವಾದುದರಿಂದ ಅದನ್ನು ಆಧೀನದಲ್ಲಿಟ್ಟು ಕೊಳ್ಳುವುದರಿಂದಲೇ ರಾಜಯೋಗದ ಹೆಚ್ಚಳವು. ರಾಜಯೋಗದಲ್ಲಿ ಸಾಂಖ್ಯ, ತಾರಕ, ಮತ್ತು ಅಮನಸ್ಕಗಳೆಂದು ಮೂರು ಭಾಗಗಳು.

ಆದಿಯಿಂದಲೂ ಶೈವಶಾಸ್ತ್ರಗಳು ಯೋಗಕ್ಕೆ ಅತಿಮಹತ್ವದ ಸ್ಥಾನವನ್ನು ಕೊಟ್ಟಿರುವವು. ಯೋಗ ಸೂತ್ರಕಾರರಾದ ಪತಂಜಲ ಮಹರ್ಷಿಗಳು ಶೈವರೇ ಇದ್ದರೆಂದು ಪ್ರತೀತಿ. ಹಾಗಿದ್ದ ಪಕ್ಷದಲ್ಲಿ ಯೋಗದರ್ಶನದ ವರ್ಚಸ್ವವು, ಶೈವರ ಮೇಲಾದುದು ಅರಿದಲ್ಲ, ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ ಮತ್ತು ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಬರುತ್ತದೆ. ದುರ್ದೈವದಿಂದ ಮಹತ್ವದ ಶೈವಾಮಗಮಗಳ ಅಭಾವದ ಮೂಲಕ ಶೈವಾಗಮಗಳಲ್ಲಿ ಪ್ರತಿಪಾದಿತವಾದ ಯೋಗಕ್ಕೂ ಯೋಗದರ್ಶನಕ್ಕೂ ಇರುವ ಸಾಮ್ಯವೈಷಮ್ಯಗಳನ್ನು ಕಂಡುಹಿಡಿಯುವುದು ಈಗ ಸಾಧ್ಯವಿಲ್ಲದಿದ್ದರೂ ಈಗ ದೊರೆಯುವ ಆಗಮಗಳ ತುಂಡುಗಳಿಂದ ಅವುಗಳಲ್ಲಿ ಯೋಗಕ್ಕಿರುವ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಸುಪ್ರಭೇದಾಗಮ ಮತ್ತು ಈಶಾನ-ಶಿವಯೋಗಿಗಳ “ಈಶಾನ ಶಿವ ಗುರುದೇವ ಪದ್ಧತಿ’ ಗಳಲ್ಲಿ ವರ್ಣಿತವಾದ ಯೋಗವು ಯೋಗದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ, ಆದರೂ ಸ್ವಲ್ಪ ಪ್ರಮಾಣದಿಂದಾದರೂ ವ್ಯತ್ಯಾಸವಿಲ್ಲದೆ ಇಲ್ಲ, ಈಶ್ವರನ ಪ್ರತಿಬಿಂಬವ (ಮೂರ್ತಿಯನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರಿಕರಿಸಿ, ಧ್ಯಾನವನ್ನು ಬಲಿಸಿ, ಸಮಾಧಿಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುವುದು. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವುದೊಂದು ಅದರ ವೈಶಿಷ್ಟ

ವೀರಶೈವರಿಗೂ ಯೋಗಕ್ಕೂ ಅತಿನಿಕಟ ಸಂಬಂಧವಿದೆಯೆಂಬುದನ್ನು ವೀರಶೈವರಲ್ಲಿಈಗಲೂ ರೂಢಿಯಲ್ಲಿರುವ ಅನೇಕ ವಿಷಯಗಳಿಂದ ಕಂಡುಕೊಳ್ಳಬಹುದು.ವೀರಶೈವರ ತತ್ವಜ್ಞಾನ (Philosophy) ದಲ್ಲಿ ಷಟಸ್ಥಲ ಸಿದ್ದಾಂತವು ಅತಿ ಮಹತ್ವವಾದುದೆಂಬುದು ವೀರಶೈವ ತತ್ವಾದ್ವೇಷಿಗಳಿಗೆ ಅರಿದಾದ ಮಾತಲ್ಲ. ಅದರಲ್ಲಿ ಹೆಜ್ಜೆ ಹೆಜ್ಜೆಗೂ ಯೋಗದ ತತ್ವಗಳು ಅಡಕವಾಗಿವೆ. ವೀರಶೈವ ಧಾರ್ಮಿಕ ವಾಙ್ಮಯದಲ್ಲಿ ಅತಿ ಮಹತ್ವವಾದುವು ವಚನಶಾಸ್ತ್ರಗಳು, ಅವುಗಳಲ್ಲಿ ಯೋಗಾಂಗಗಳ ವರ್ಣನೆಯು ವೀರಶೈವ ಪರವಾಗಿ ವಿಪುಲವಾಗಿರುವುದು. ಪ್ರಾಣಲಿಂಗಿಸ್ಥಲದ ವಚನಗಳೆಲ್ಲವೂ ಯೋಗಮಯವಾಗಿವೆಯೆಂದರೂ ಅಡ್ಡಿಯಿಲ್ಲ. ಆದರೂ ಕೆಲವು ಕಡೆಗೆ ಯೋಗದ ಮೇಲೆ ಕಟುತರವಾದ ಟೀಕೆಯು ಕಂಡು ಬರುವುದು. ಇಂಥವುಗಳ ಆಧಾರದಿಂದ ವಚನಶಾಸ್ತ್ರಕಾರರು ಯೋಗ ವಿರೋಧಿಗಳೆಂದು ಮಾತ್ರ ಕಲ್ಪಿಸಬಾರದು. ಅವರ ಟೀಕೆಯು ಯೋಗದ ಮುಖ್ಯಧೈಯವಾದ ಅಂತರಂಗ ಶುದ್ಧಿಯನ್ನೂ ಈಶ್ವರ ಸಿದ್ಧಿಯನ್ನೂ ಮರೆತು ಕೇವಲ ಬಾಹ್ಯ ಶರೀರ ಚಮತ್ಕಾರ (Feats) ಗಳನ್ನು ಸಾಧಿಸಿದ ಹಠಯೋಗಿಗಳನ್ನುದ್ದೇಶಿಸಿ ಮಾಡಲ್ಪಟ್ಟಿದೆಯೆಂಬುದನ್ನು ಲಕ್ಷ್ಯದಲ್ಲಿಡಬೇಕು. ಶಿವಶರಣರು ಅಡ್ಡಮಾರ್ಗದಿಂದ ಹೋಗುವವರನ್ನು ಹಾದಿಗೆ ತರಲು ಹಿಂದೆಮುಂದೆ ನೋಡುವವರಲ್ಲ, ಅರಿಯದೆ ಶಿವಪೂಜೆ ಮಾಡುವವರನ್ನು ಹೀಗೆ ಬಯ್ದಿರುವರು.

ನಮ್ಮ ವೀರಶೈವ ಗುರುಗಳು ಯೋಗ ವಿದ್ಯೆಯಲ್ಲಿ ಒಳ್ಳೆ ನಿಪುಣರಾಗಿದ್ದರು. ಯೋಗದ ಗುಟ್ಟನ್ನು ಕಂಡು ಹಿಡಿದು ಅದು ಸರ್ವರಿಗೂ ಸಾಧ್ಯವಾಗುವಂತೆ ತಮ್ಮ ಸ್ವಾನುಭವದಿಂದ ಅದರಲ್ಲಿ ತಿದ್ದುಪಡೆಯನ್ನು ಮಾಡಿ ಅದಕ್ಕೆ ಶಿವಯೋಗವೆಂದು ಹೆಸರಿಟ್ಟರು. ಶಿವಯೋಗವನ್ನು ತಿಳಿದು ಆಚರಿಸುವವರಿಗೆ ಶಿವಯೋಗಿಗಳೆಂದು ಹೆಸರು. ಶಿವಯೋಗದ ಸ್ವರೂಪವನ್ನು ವಚನಕಾರರು ವಿಪುಲವಾಗಿ ತಮ್ಮ ವಚನಗಳಲ್ಲಿಯೂ, ಚನ್ನ ಸದಾಶಿವಯೋಗಿಗಳು ತಮ್ಮ ಶಿವಯೋಗಪ್ರದೀಪಿಕೆ’ ಯಲ್ಲಿಯೂ ವರ್ಣಿಸಿರುವರು. ಇವೆಲ್ಲವುಗಳ ಮಥಿತಾರ್ಥವು ತೋಂಟದ ಸಿದ್ಧಲಿಂಗ ಯತಿಗಳ ಒಂದೇ ವಚನದಲ್ಲಿ ಬಂದಿದೆಯೆಂದರೆ ವಿಶೇಷ ತಪ್ಪಾಗದು. ಅವರು ಯೋಗದ ಅಷ್ಟಾಂಗಗಳನ್ನು ಶಿವಯೋಗಕ್ಕನುಸರಿಸಿ ಹೇಳಿ, ಶಿವಯೋಗದಲ್ಲಿ ಹೆಜ್ಜೆ ಹೆಜ್ಜೆಗೂ ಲಿಂಗದ ಅವಶ್ಯಕತೆಯಿದೆಯೆಂದು, ಲಿಂಗಾಂಗ ಯೋಗದ ಧ್ಯಯವು ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೆಂದೂ ಅಭಿಪ್ರಾಯ ಪಟ್ಟಿದ್ದಾರೆ. ನಂತರ

‘ಇನ್ನು ವೀರಮಾಹೇಶ್ವರರುಗಳ ಲಿಂಗಾನುಸಂಧಾನವೆಂತೆಂದೊಡೆ ಬ್ರಹ್ಮರಂಧ್ರದಲ್ಲಿಪ್ಪ ಚೈತನ್ಯವಪ್ಪ ಪರಮ ಚಿತ್ಕಳೆಯೇ ಭಾವಮನಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದವನಾಗಿ, ಭಾವವಲ್ಲಿ ಸತ್ಸ್ವ ರೂಪವಪ್ಪಇಷ್ಟಲಿಂಗವೆಂದೆನಿಸಿ, ಒಂದೇ ವಸ್ತು ತನು ಮನ ಭಾವಂಗಳಲ್ಲಿ ಇಷ್ಟಪ್ರಾಣ ಭಾವವಾದ ಭೇದವನರಿಯದೆ, ಒ೦ ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ, ತೃಪ್ತಿ ಲಿಂಗವ ಭಾವಜ್ಞಾನದಿಂದ ಗ್ರಹಿಸಿ, ಈ ಲಿಂಗತ್ರಯವಿಡಿದು ಆಚರಿಸಿ, ಲಿಂಗದೊಡನೆ ಕೂಡಿ, ಲಿಂಗವೇ ತಾನು ತಾನಾಗಿ, ವಿರಾಜಿಸುತಿರ್ಪುದೀಗ ಶಿವಯೋಗ ನೋಡಾ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ “ ಎಂದು ಶಿವಯೋಗವನ್ನು ವರ್ಣಿಸಿರುವರು. ಅವರ ಈ ವಾಕ್ಯವನ್ನುಸ್ವಲ್ಪ ವಿವೇಚಿಸಿದರೆ ಕೆಳಗಿನಂತೆ ಅದರ ಅರ್ಥವು ಹೊರಡುವುದು.

ಜೀವಿಗಳಿಗೆ ಸ್ಥೂಲ, ಸೂಕ್ಷ್ಮ ಕಾರಣಗಳೆಂದು ಮೂರು ಶರೀರಗಳು, ಒಂದರೊಳಗೊಂದು ಅಡಕವಾಗಿರುವುವೆಂದೂ, ಮೂರು ಶರೀರಗಳಲ್ಲಿರುವ ಮಲಿನತೆಯು ಹೋದಾಗಲೇ ಜೀವಿಯು ಶುದ್ದನಾಗುವನೆಂದೂ ವೀರಶೈವರ ನಂಬುಗೆ, ಯೋಗದ ಮುಖ್ಯ ಧೈಯವು ಬಾಹ್ಯಾಭ್ಯಂತರ ಶುದ್ಧಿಯೆಂಬುದನ್ನು ಮೇಲೆಯೇ ಸೂಚಿಸಿರುವುದಷ್ಟೇ. ಅದಕ್ಕೋಸುಗ ಗುರುವು ದೀಕ್ಷಾಕಾಲದಲ್ಲಿ ತನ್ನ ಯೋಗಬಲದಿಂದ ಶಿಷ್ಯನ ಚೈತನ್ಯವನ್ನು ಗಟ್ಟಿಗೊಳಿಸಿ ಹೊರಗೆ ಇಷ್ಟಲಿಂಗವೆಂದೂ ಸ್ಥೂಲಶರೀರಕ್ಕೂ, ಒಳಗೆ ಪ್ರಾಣಲಿಂಗವೆಂದು ಸೂಕ್ಷ್ಮ ಶರೀರಕ್ಕೂ, ಭಾವಲಿಂಗವೆಂದು ಕಾರಣ ಶರೀರಕ್ಕೂ ಜೋಡಿಸಿ, ಅವುಗಳ ಅನುಸಂಧಾನ ಕ್ರಮವನ್ನು ತೋರಿಸಿಕೊಡುವನು. ಅದೇ ಮಾರ್ಗದಿಂದ ಶಿಷ್ಯನು ತನ್ನ ಎಡ ಹಸ್ತದ ಅಂಗೈಯೊಳಗೆ ಇಷ್ಟಲಿಂಗವನ್ನು ಭದ್ರಪಡಿಸಿ, ಉಳಿದ ಅವಯವಗಳ ವ್ಯಾಪಾರವನ್ನು ತಡೆದು, ಪ್ರಾಣಾಯಾಮದಿಂದ ಶ್ವಾಸೋಚ್ಛಾಸವನ್ನು ಸರಿಪಡಿಸಿ, ಮನಸ್ಸಿನ ಚಲನವಲನವನ್ನು ತಡೆದು, ಸ್ಥೂಲ ದೃಷ್ಠಿ ಯನ್ನು ಇಷ್ಟಲಿಂಗದ ಮೇಲೂ, ಸೂಕ್ಷ್ಮ ದೃಷ್ಟಿಯನ್ನು ಪ್ರಾಣಲಿಂಗದಮೇಲೂ, ಭಾವದೃಷ್ಟಿಯನ್ನು ಭಾವಲಿಂಗದ ಮೇಲೂ ಚಲ್ಲಿ ಲಿಂಗದೊಡನೆ ಕೂಡಿ ಲಿಂಗತ್ರಯವನ್ನು ಏಕಾಕಾರಮಾಡಿ, ಲಿಂಗವೇ ತಾನಾಗಿರುವನು. ಇದೇ ಶಿವಯೋಗ,ಈ ವಚನದಮೇಲಿಂದಲೂ ಮತ್ತು ಇಂಥ ಅನೇಕ ವಚನಗಳಿಂದಲೂ ಶಿವಯೋಗದ ತತ್ವವು ಲಿಂಗ ಪೂಜೆಯಲ್ಲಿ ಅಡಕವಾಗಿರಬೇಕಿಷ್ಟೇ ಅಲ್ಲ ಲಿಂಗಪೂಜೆಯು ಶಿವಯೋಗದ ಮುಖ್ಯಾಂಗವಾಗಿರ ಬೇಕೆಂದು ಊಹಿಸಲವಕಾಶವಿದೆ.

ವೀರಶೈವನಾಗಿರತಕ್ಕ ಪ್ರತಿಯೊಬ್ಬ ವ್ಯಕ್ತಿಯು ಶಿವಯೋಗಸಾಧಕನಾಗಿರಬೇಕೆಂದು ವೀರಶೈವ ಮತಸ್ಥಾಪಕರ ಅಪೇಕ್ಷೆ. ಅಂತೇ ಅವರು ಶಿವಯೋಗಸಾಧನೆಯನ್ನು ಅಷ್ಟು ಸುಲಭವಾಗಿ ಸರ್ವರಿಗೂ ಸಾಧ್ಯವಾಗುವಂತೆ ಮಾಡಿರಲೇಬೇಕು. ಮೇಲೆ ಯೋಗದ ಒಳಭೇದಗಳನ್ನು ಹೇಳುವಾಗ ರಾಜಯೋಗವು ಉತ್ಕೃಷ್ಟವಾದುದೆಂದು ಸೂಚಿಸಿರುವುದಷ್ಟೇ. ಅಂಥ ರಾಜಯೋಗಕ್ಕೂ ಶಿವಯೋಗಕ್ಕೂನಿಜವಾಗಿ ಭೇದವಿಲ್ಲವೆಂದೂ ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಗಾಗಿ ಭೇದವು ಹೇಳಲ್ಪಟ್ಟಿದೆಯೆಂದೂ ಚನ್ನ ಸದಾಶಿವಯೋಗಿಗಳ ಮತ ಸೂಕ್ಷ್ಮ ವಾಗಿ ವಿಚಾರಿಸಿದರೆ ರಾಜಯೋಗಕ್ಕೂ ಶಿವಯೋಗಕ್ಕೂ ಭೇದವಿಲ್ಲೆಂಬುದು ನಿಜ; ಆದರೆ ಸ್ವಲ್ಪ ಸ್ಥೂಲ ಮಾನದಿಂದ ನೋಡಿದರೆ ಶಿವಯೋಗದಲ್ಲಿ ರಾಜಯೋಗದಲ್ಲಿಲ್ಲದ ಒಂದು ವೈಶಿಷ್ಟ್ಯ ವುಂಟೆಂಬುದೂ, ಆ ವೈಶಿಷ್ಟ್ಯವು ಇಷ್ಟಲಿಂಗದ ಅವಶ್ಯಕತೆ ಯೆಂಬುದೂ ಮೇಲಿನ ವಚನಗಳಿಂದ ಸ್ಪಷ್ಟವಾಗುವುದು. ಇನ್ನು ವೀರಶೈವ ಗುರುಗಳು ಇಷ್ಟಲಿಂಗದ ಅವಶ್ಯಕತೆಯನ್ನು ಸಾರಲು ಕಾರಣವೇನೆಂಬುದನ್ನು ಹುಡುಕಲು ನಾವು ದೂರಹೋಗುವ ಕಾರಣವಿಲ್ಲ,

ಈಶ್ವರ ಧ್ಯಾನವನ್ನು ಬಲಪಡಿಸಲಿಕ್ಕೂ ಮನಸ್ಸಿನ ಚಲನವಲನವನ್ನು ತಡೆದು ಈಶ್ವರಮಯವಾಗಿ ಮಾಡುವುದಕ್ಕೂ ಬಾಹ್ಯದಲ್ಲಿ ಈಶ್ವರ ಪ್ರತಿಬಿಂಬವು ಬೇಕೆಂದು ಶೈವಾಗಮಗಳು ಸಾರುವುದೆಂದು ಮೇಲೆ ಸೂಚಿಸಿದೆಯಷ್ಟೇ. ಅದರ ಗುಟ್ಟನ್ನುನಮ್ಮಾದ್ಯರಾದ ವೀರಶೈವ ಮತಸ್ಥಾಪಕರು ಅರಿತಿದ್ದರು. ಆದರೂ ಅವರು ಮೂರ್ತಿ ಪೂಜಕರಲ್ಲ ಮೂರ್ತಿ ಪೂಜೆಯನ್ನು ಅತಿ ಕಠೋರವಚನಗಳಿಂದ ವಚನಶಾಸ್ತ್ರಕಾರರು ನಿರಾಕರಿಸಿರುವರು.* ಸ್ವಪ್ರತಿಬಿಂಬವನ್ನು ಕಾಣಲು ದರ್ಪಣವು ಹೇಗೆ ಅಗತ್ಯವಿದೆಯೋ ಹಾಗೆ ಮನಸ್ಸಿನ ಚಲನವಲನವನ್ನು ತಡೆದು ಒಂದೇ ವಸ್ತುವಿನ ಮೇಲೆ ಅದನ್ನು ಕೇಂದ್ರಿಕರಿಸಿ, ನಿಜಾತ್ಮನ ಪ್ರತಿಬಿಂಬವನ್ನು ಕಾಣಲು ದರ್ಪಣದಂಥ ಒಂದು ವಸ್ತುವನ್ನು ಅವರು ಸ್ವೀಕರಿಸಲೇಬೇಕಾಗಿತ್ತು ಅಂತೆಯೇ ಸ್ಥಾವರಮೂರ್ತಿಗಳಿಗೆ ಬದಲಾಗಿ ಈ ಉದ್ದೇಶವನ್ನಿಡೇರಿಸುವಂಥ ಅತಿ ಪ್ರಾಚೀನವಾದ ಶಿವಲಿಂಗವನ್ನು ಧರಿಸಲು ಪ್ರೇರೇಪಿಸಿರಬಹುದೆಂದು ತೋರುವುದು. ಮಗ್ಗೆಯ ಮಾಯಿದೇವರು ತಮ್ಮೊಂದು ಪದ್ಯದಲ್ಲಿ ಶರಣನು ಲಿಂಗವೆಂಬ ದರ್ಪಣದಲ್ಲಿ ಸ್ವಸ್ವರೂಪವನ್ನೇ ನೋಡುವನೆಂದು ಹೇಳಿದ್ದಾರೆ. ಬೌದ್ಧ ಭಿಕ್ಷುಗಳೂ ಕೂಡ ಧ್ಯಾನದಲ್ಲಿ ತಮ್ಮ ದೇಹಾಕೃತಿಯನ್ನು ಮನದೊಳಗೆ ಗುರಿಯಾಗಿಟ್ಟುಕೊಳ್ಳುತ್ತಿದ್ದರೆಂದೂ ಮತ್ತು ನೀಲಿ, ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳ ದ್ವಾರಾ ಧ್ಯಾನಿಸುತ್ತಿದ್ದರೆಂದೂ ಪ್ರತೀತಿಯಿದೆ. ಬಾಹ್ಯ ಪ್ರಪಂಚವನ್ನೂ ತನ್ನನ್ನೂ ಮರೆದು ಸಮಾಧಿಯನ್ನು ಹೊಂದಲು ಬಾಹ್ಯ ವಸ್ತುವಿನ ಅಗತ್ಯವಿದೆಯೆಂದು ಪಾಶ್ಚಾತ್ಯರಲ್ಲನೇಕ ಮಾನಸಶಾಸ್ತ್ರವೇತ್ತರು (Psychologists) ಅಭಿಪ್ರಾಯಪಡುವರು. ಇವೆಲ್ಲ ಕಾರಣಗಳಿಂದ ಲಿಂಗವು ಧ್ಯಾನವನ್ನು ಬಲಿಸಲು ಕರಣವೂ ಸಮಾಧಿಯನ್ನು ಸಾಧಿಸಲು ಸಾಧನವೂ ಆಗಿರುವದೆಂದು ತೋರುವುದು.ಆದುದರಿಂದ ವೀರಶೈವ ಗುರುಗಳು ಇಷ್ಟಲಿಂಗದ ಅಗತ್ಯವನ್ನು ಸಾರಿರಬಹುದು.

ಇನ್ನು ಯೋಗದ ತತ್ವಗಳನ್ನು ಅನುಭವಕ್ಕನುಸರಿಸಿ ವಿವೇಚಿಸಲು ಅವು ಸರ್ವರಿಗೂ  ಸಾಧ್ಯವಿರುವುದೆಂದೂ, ಸರ್ವರೂ ಸಾಧಿಸಿ ಇಹದಲ್ಲಿಯೇ ಪರದ ಸುಖವನ್ನನುಭವಿಸಬೇಕೆಂದು ಮಾಡಲ್ಪಟ್ಟಿರುವುವೆಂದೂ ಕಂಡು ಬರುವುದು. ಅದು ಹೇಗೆಂಬುದನ್ನು ನೋಡುವಾ-

ಇನ್ನು ಬಾಹ್ಯ ಶರೀರ ಶುದ್ಧಿಗಾಗಿ ಸ್ನಾನವನ್ನು ಮಾಡಬೇಕೆಂಬುದೂ,ಶರೀರದೊಳಗಿನ ರಕ್ತ ಮೊದಲಾದ ಧಾತುಗಳಲ್ಲಿ ಮಲಿನತೆಯಿದ್ದರೆ ಶರೀರದ ಮೇಲ್ಬಾಗವಾದ ತ್ವಚವನ್ನು ಎಷ್ಟು ತೊಳೆದರೂ ಶುದ್ಧಿಯಾಗಿ ಮನುಷ್ಯನು ನಿರೋಗಿಯಾಗಿರಲಾರನೆಂದೂ ಸರ್ವರಿಗೂ ಗೊತ್ತಿದ್ದ ಮಾತೇ. ಹೊರಗಿನ ಮಲಿನತೆಯನ್ನು ಸ್ನಾನದಿಂದ ತೊಳೆಯುವಂತೆ ಒಳಗಿನ ಮಲಿನತೆಯನ್ನು ಸರಿಯಾದ ಆಹಾರವಿಹಾರದಿಂದಲೂ ವ್ಯಾಯಾಮಾದಿ ಪರಿಶ್ರಮಗಳಿಂದಲೂ ತೊಳೆಯಲು ಬರುವುದೆಂಬುದು ಅನುಭವಸಿದ್ಧವಾದ ಮಾತು. ಯೋಗಶಾಸ್ತ್ರಜ್ಞರಾದ ಪೂರ್ವದ ಮಹರ್ಷಿಗಳು ಶರೀರದೊಳಗಿನ ಮಲಿನತೆಯನ್ನು ತೊಳೆಯಲು ಯಮ, ನಿಯಮ,ಆಸನ, ಪ್ರಾಣಾಯಾಮ ಪ್ರತ್ಯಾಹಾರಗಳೆಂಬ ಯೋಗಾಂಗಗಳನ್ನು ಮಾಡಿ ಅದಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿರುವರು. ಶರೀರದಲ್ಲಿಯ ಸರ್ವ ವ್ಯಾಧಿಗಳನ್ನು ಹೊರದೂಡಿ ಅದನ್ನು ಬಹುಕಾಲ ಆರೋಗ್ಯದಿಂದಿಡಬೇಕಾದರೆ ಈ ಯೋಗಾಂಗ ಗಳನ್ನು ಸಾಧಿಸುವುದು ಬಲು ನೆಟ್ಟಗೆ, ಇವು ಮುಖ್ಯವಾಗಿ ಆರೋಗ್ಯದೃಷ್ಟಿಯಿಂದ (from hyginic point of view) ಬಲು ಉಪಯುಕ್ತವಾದವುಗಳು. ಒರೆಗೆ ಹಚ್ಚಿನೋಡಬೇಕೆನ್ನುವರು ಅಭ್ಯಾಸಮಾಡಿ ಅನುಭವ ಪಡೆದುಕೊಳ್ಳಬಹುದು. ಇನ್ನುಶರೀರದ ಒಳಹೊರಗಿನ ಭಾಗಗಳು ಶುದ್ಧವಾದವುಗಳೆಂದೂ, ಸರ್ವ ರೋಗಾದಿಗಳು ಹೇಳ ಹೆಸರಿಲ್ಲದಂತಾದವೆಂದೂ ಗ್ರಹಿಸುವಾ ! ಆದರೂ ಇಷ್ಟರಿಂದಲೇ ಮನುಷ್ಯನು ಶುದ್ದನಾದನೆಂದು ಹೇಳಲಾಗದು. ಏಕೆಂದರೆ ಬರೇ ಶರೀರವೇ ಮನುಷ್ಯನಲ್ಲ.ಚೈತನ್ಯದಿಂದೊಡಗೂಡಿದ ಶರೀರಕ್ಕೆ ಮನುಷ್ಯನೆನ್ನಬಹುದು. ಚೈತನ್ಯಮಯನೇ ಆತ್ಮನು. ಆತ್ಮನಿಗೆ ಬುದ್ದಿ, ಮನಸ್ಸು, ಅಹಂಕಾರಾದಿ ಅಂತಃಕರಣಗಳುಂಟು. ಅವುಗಳ ಶುದ್ಧಿಯಾಗದ ವಿನಾ ಮನುಷ್ಯನು ಶುದ್ಧನಾಗಲಾರನು. ಬುದ್ಧಿ, ಮನಸ್ಸು,ಅಹಂಕಾರಾದಿಗಳ ಶುದ್ಧಿಗಾಗಿ ಧಾರಣ, ಧ್ಯಾನ, ಸಮಾಧಿಗಳೆಂಬ ಯೋಗಾಂಗಗಳ ಅಗತ್ಯ, ತತ್ವಶಾಸ್ತ್ರಜ್ಞರು ಸೂಕ್ಷ್ಮ ದೃಷ್ಟಿಯಿಂದ ಅಂತರಂಗದ ವೃತ್ತಿಗಳನ್ನು ವಿಭಾಗಿಸಿ ಪ್ರತಿಯೊಂದು ವೃತ್ತಿಯನ್ನೇ ನಡೆಯಿಸುವುದಕ್ಕದೊಂದು ಕರಣವನ್ನು ನಿರ್ಮಿಸಿರುವರು.ತಾತ್ಮಕ ದೃಷ್ಟಿಯಿಂದ ಅಷ್ಟೇನೂ ಸರಿಯಾಗಿಲ್ಲದಿದ್ದರೂ ನಮ್ಮ ಅನುಕೂಲತೆಗಾಗಿ ಸ್ಥೂಲಮಾನದಿಂದ ಆ ಎಲ್ಲ ವೃತ್ತಿಗಳನ್ನು ಮನಸ್ಸೆಂಬ ಶಬ್ದದಲ್ಲಿ ಸಮಾವೇಶ ಮಾಡುವಾ, ಮೇಲಿನ ವಿಷಯವನ್ನೇ ಸ್ವಲ್ಪದರಲ್ಲಿ ಹೇಳುವುದಾದರೆ ಮನಸ್ಸು ಶುದ್ಧಿಯಾಗದ ಹೊರತು ಶರೀರವು  ಶುದ್ದಿಯಾಗಲಾರದೆಂದೂ, ಮನಶುದ್ಧಿಗಾಗಿಯೇ ಕಡೆಯ ಮೂರು ಯೋಗಾಂಗಗಳು ನಿರ್ಮಿಸಲ್ಪಟ್ಟಿರುವವೆಂದೂ ಹೇಳಬಹುದು. ಮನಶುದ್ಧಿಯನ್ನು ಮಾಡಬೇಕಾದರೆ ಬಾಹ್ಯವಸ್ತುವಾದ ಶರೀರ ಶುದ್ಧಿಯು ಮೊದಲು ಬೇಕೆಂದು ಪತಂಜಲ ಮಹರ್ಷಿಗಳಂಥ ಯೋಗಶಾಸ್ತ್ರಜ್ಞರ ಮತವು. ಇದು ಒಂದು ಪಕ್ಷ, ಮನಶುದ್ಧಿಗಾಗಿ ಬಾಹ್ಯ ಶರೀರ ಶುದ್ಧಿಯಿಂದ ಹೊರಡುವ ಕಾರಣವಿಲ್ಲೆಂದೂ, ಮನಶುದ್ದಿಯನ್ನು ಮನಸ್ಸಿನಿಂದಲೇ ಮಾಡುವುದು ಸಾಧ್ಯವಿದೆಯೆಂದೂ,ಮನಸೊಂದು ಶುದ್ಧಿಯಾದರೆ ಸರ್ವವೂ ತಮ್ಮಿಂದ ತಾವೇ ಶುದ್ಧಿಯಾಗುವುವೆಂದೂ ಕೆಲವರ ಮತ. ಇದು ಮತ್ತೊಂದು ಪಕ್ಷ ಅರ್ವಾಚೀನ ಸಾಧುಗಳಾದ ರಾಮಕೃಷ್ಣಪರಮಹಂಸ ಮತ್ತು ಅರವಿಂದ ಘೋಷ ಮೊದಲಾದವರು ಎರಡನೆಯ ಪಕ್ಷಕ್ಕೆ ಸೇರಿದವರು. ನಮ್ಮ ವೀರಶೈವ ಗುರುಗಳಾದರೂ ದ್ವಿತೀಯ ಪಕ್ಷವನ್ನವಲಂಬಿಸಿದವರೆಂದು ನಿರ್ಧರಿಸಲು ಸಾಕಷ್ಟು ಸಾಧನಗಳಿವೆ. ಶಿವಯೋಗದ ವಿವರಣೆಯೂ ಲಿಂಗಪೂಜೆಯ ಅಗತ್ಯವೂ ನಮ್ಮಿ ಅಭಿಪ್ರಾಯವನ್ನು ಬಲಪಡಿಸುವವು.

ಶುದ್ಧ ವಾತಾವರಣದಲ್ಲಿ ಕುಳಿತು ಮನಸ್ಸಿನ ಸಾಂಸಾರಿಕ ಮಂಡಿಗೆಗಳನ್ನೆಲ್ಲ ಮರೆತು  ಕೆಲಕಾಲವಾದರೂ ನಿಶ್ಚಿಂತ ಮನಸ್ಕರಾಗುವುದು ಅಧ್ಯಾತ್ಮಿಕ ದೃಷ್ಟಿಯಿಂದ ಉತ್ತಮವೆಂದು ಬಲ್ಲವರ ನಂಬುಗೆ .ವೀರಶೈವರಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿವಪೂಜಾಗೃಹ ಅಥವಾ ದೇವರ ಮನೆಯೆಂದು ಕೋಣೆಗಳಿರುವವು. ಅವುಗಳನ್ನು ರೂಢಿಯಲ್ಲಿ ತಂದವರ ಉದ್ದೇಶವು ಸ್ವಾಮೀಜಿಯವರ ಮೇಲೆ ಹೇಳಿದ ಉದ್ದೇಶದಂತಿರಬಹುದೇನು?. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ವಿಶ್ರಾಂತಿಯು ಬೇಕೆ ಬೇಕು. ಅದರಂತೆ ಮನಸ್ಸಿಗಾದರೂ ವಿಶ್ರಾಂತಿಯ ಅಗತ್ಯವಿದೆ; ಆದುದರಿಂದಲೇ ಶರೀರದ ಮತ್ತು ಮನಸ್ಸಿನ ವಿಶ್ರಾಂತಿಗಾಗಿ ನಿದ್ರೆಯು ಸ್ವಾಭಾವಿಕವಾಗಿ ಕಲ್ಪಿಸಲ್ಪಟ್ಟಿದೆ. ಆದರೂ ನಮ್ಮೆಲ್ಲನೇಕರಿಗೆ ನಿದ್ರೆಯಲ್ಲೂ ಕೂಡ ಮನಸ್ಸಿಗೆ ವಿಶ್ರಾಂತಿ (Sub-consious state) ಕೊಡಲು ಬರುವುದೆಂದು ಯೋಗವೂ ಮತ್ತು ಅನುಭವಿಕರಾದ ಮಾನಸ ಶಾಸ್ತ್ರಜ್ಞರೂ ತೋರಿಸಿಕೊಡುವರು. ಇತ್ತಿತ್ತಲಾಗಿ ಪಾಶ್ಚಾತ್ಯ ದೇಶಗಳಲ್ಲಿ ಮಾನಸ ಶಾಸ್ತ್ರಕ್ಕೆ ಬಲು ಮಹತ್ವ ಕೊಡಹತ್ತಿರುವರು. ಅದರ ಅಭ್ಯಾಸವು ಒಳ್ಳೆ ಸರಿಯಾಗಿ ನಡೆದಿದೆಯೆಂಬುದಕ್ಕೆ ಇತ್ತಿತ್ತಲಾಗಿ ಬೈಲಿಗೆ ಬರಹತ್ತಿದ ಅಂಗಗಳಾದ Psycho-analysis, Hypnotism, Mesmerism ಮೊದಲಾದವುಗಳೇ ಸಾಕ್ಷಿ, ‘ಮೆಸ್ಮೇರಿಝಮ್’ವೆಂಬ ವಿದ್ಯೆಯಿಂದ ಅನ್ಯರ ಮಾನಸ ವ್ಯವಹಾರವನ್ನು ತಡೆದು ಅವರನ್ನು ನಮ್ಮಂತೆಯೇ ಕಾಯಾ ವಾಚಾ ಮನಸ್ಸಿನಿಂದ ನಡೆಯ ಹಚ್ಚಲು ಬರುವುದೆಂದು ಪ್ರಯೋಗದಿಂದ ಸಿದ್ಧಮಾಡಲ್ಪಟ್ಟಿದೆ. ಈ ವಿದ್ಯೆಯ ಸ್ವರೂಪವು ಬೇರೆ ರೀತಿಯಿಂದಾದರೂ ನಮ್ಮ ಪೂರ್ವಜರಿಗೆ ಗೊತ್ತಿತ್ತೆಂಬಂತೆ ತೋರುವುದು. ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುವಂತೆ ಒಬ್ಬ ವ್ಯಕ್ತಿಯಲ್ಲಿಯು ಕೂಡ ಬೇರೆ ಬೇರೆ ಅಸಂಗತ ವಿಚಾರಗಳು ಉದ್ಭವಿಸುವುದುಂಟು. ಮಾನವಲ್ಲಿ ಪುಣ್ಯ ಮತ್ತು ಪಾಪ (good and evil) ಇವುಗಳ ನಡುವೆ ಸತತ ಕದನವು ನಡೆದೇ ಇರುವುದು. ಮೆಸ್ಮೇರಿಝಮ್ ಪ್ರಯೋಗದಿಂದ ಅನ್ಯರನ್ನು ನಮ್ಮಂತೆ ಮಾಡಿಕೊಳ್ಳಲು ಹೇಗೆ ಬರುವುದೋ ಹಾಗೇ ಅಂಥದೊಂದು ವಿದ್ಯೆಯ ಪ್ರಯೋಗವನ್ನು ಪುಣ್ಯಮಯವಾದ ವಿಚಾರಗಳ ಪರವಾಗಿ ನಮ್ಮ ಮೇಲೆಯೇ ಮಾಡಿಕೊಳ್ಳುವುದರಿಂದ ನಮ್ಮಲ್ಲಿರುವ ಪಾಪಮಯವಾದ ವಿಚಾರಗಳು ಪುಣ್ಯಮಯ ವಾದವುಗಳಾಗುವವೆಂದು ನಮ್ಮ ಪೂರ್ವಜರಿಗೆ ಗೊತ್ತಿದ್ದಂತೆ ತೋರುವುದು. ಆದುದರಿಂದಲೇ ಪವಿತ್ರ ಮಂತ್ರಗಳ ಜಪವನ್ನಾಗಲೀ ಈಶ್ವರ ಧ್ಯಾನವನ್ನಾಗಲೀ ಮಾಡಲು ಅವರು ಪ್ರೇರೇಪಿಸಿರಬಹುದು. ಇಷ್ಟಲಿಂಗ ಪೂಜೆಯಲ್ಲಿ ಈ ತತ್ವಗಳು ಅಡಗಿರುವುದರಿಂದಲೂ ಇಷ್ಟಲಿಂಗವು ಪಾಪಗಳನ್ನು ತೊಳೆಯುವುದೆಂದು ಈಗಲೂ ವೀರಶೈವರು ಶ್ರದ್ಧೆಯಿಂದ ನಂಬುವುದರಿಂದಲೂ ಇಷ್ಟಲಿಂಗವು ಇಂಥದೊಂದು ವಿದ್ಯೆಯನ್ನು ಸಾಧಿಸುವ ಕರಣವೆಂದೂ ಶಿವಪೂಜೆಯು ಅಂಥ ವಿದ್ಯೆಯ ಸಾಧನ ಮಾರ್ಗವೆಂದೂ ಊಹಿಸಲವಕಾಶವಿದೆ. ಆದುದರಿಂದ ವೀರಶೈವ ಶರಣರು ತಮ್ಮ ಆಧ್ಯಾತ್ಮಿಕೋನ್ನತಿಯನ್ನು ಅನುಭವದಿಂದಲೇ ಸಾಧಿಸುತ್ತಿದ್ದರೆಂದು ತರ್ಕಿಸಬಹುದು.

ಇಂಥ ಅಧ್ಯಾತ್ಮಿಕೋನ್ನತಿಯನ್ನು ‘ಶಿವಯೋಗ’ ದಿಂದ ಸಾಧಿಸಲು ಸಾಧ್ಯವಾಗಲೆಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರವನ್ನು ಸಂಸ್ಥಾಪಿಸಿದ್ದು ಸ್ಮರಣೀಯವಾಗಿದೆ.

.

ಲೇಖಕರು : ಪೂಜ್ಯ  ವೀರಬಸವ ದೇವರುಆಸಂಗಿ

ಭಾರತ ಇತಿಹಾಸದಲ್ಲಿ ಯೋಗ ಒಂದು ದೊಡ್ಡ ವಿಜ್ಞಾನವೇ ಹೌದು. ಮನುಷ್ಯ ಯಾವಾಗಲೂ ನಿದ್ರೆ-ಕನಸುಗಳ ಹಿಂದೆ ಬಿದ್ದು ತನ್ನ ನಿಜ ಜೀವನವನ್ನು ಮರೆತು ಬದುಕುತ್ತಿರುವನು. ಆದರೆ ಯೋಗ ನಿಜವಾದ ಜೀವನವನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ.

ಯೋಗ ಎಂದರೆ? ತನ್ನನ್ನು ತಾನು ತಿಳಿಯುವ ಸ್ಥಿತಿಯೇ ಯೋಗ. ವಿಷಯೇಂದ್ರಿಗಳ ನಿವೃತ್ತಿಯೇ ಯೋಗ, ಅಂತರಂಗದ ಅರಿವೇ ಯೋಗ.

ಮನುಷ್ಯನು ತನ್ನ ದೀರ್ಘಾಯುಷ್ಯದಲ್ಲಿ ಅರ್ಧ ಆಯುಷ್ಯವನ್ನು ನಿದ್ರೆಗೆ, ವ್ಯಸನಕ್ಕೆ, ಹಗಲು ಕನಸುಗಳಿಗೆ ಕಳೆದು ತನ್ನ ತಾ ಮರೆತು ಹೋಗುತ್ತಾನೆ. ಆದರೆ ಯೋಗ ಸಾಧಕನನ್ನು ಈ ಸ್ಥಿತಿಯಿಂದ ಜಾಗೃತಗೊಳಿಸಿ ಸ್ಥಿರ ರೂಪವನ್ನಾಗಿಸಿ ಸಾಧನಾ ಪಥದತ್ತ ಕೊಂಡೊಯ್ಯುತ್ತದೆ. ಸಾಧಕನಲ್ಲಿ ಅಚಲವಾದ ಧೈರ್ಯ ವಿಚಲವಾಗದ ಬುದ್ಧಿ ಅರಿತುಕೊಳ್ಳುವ ಜ್ಞಾನ ಸ್ಥಿರವುಳ್ಳ ಮನಸ್ಸನ್ನು ಕೊಟ್ಟು ಸಾಧಕನನ್ನು ಯಾವಾಗಲೂ ಎಚ್ಚರದಿಂದಿರಿಸುತ್ತದೆ.

ಈಗಿನ ಯೋಗ ಬರಿ ವ್ಯಾಯಾಮವಲ್ಲ. ಶರೀರ ದಂಡನೆಯಲ್ಲಿ ಇದು ಜಾಗೃತಿಯ ದಾರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಪೂರ್ಣಗೊಳಿಸುವ ದಾರಿ. ಯೋಗ ಒಂದು ಶಕ್ತಿಯಾಗಿ ಸಾಧಕನ ದಾರಿಯನ್ನು ಸರಳಗೊಳಿಸುತ್ತದೆ.

ಒಂದೊಂದು ಯೋಗವೂ ಒಂದೊಂದು ರೀತಿಯಲ್ಲಿ ಸಾಧಕನ ಮೇಲೆ ಪ್ರಭಾವ ಬೀರುತ್ತದೆ. ಭಕ್ತಿ ಯೋಗ ಮನಸ್ಸಿಗೆ, ಜ್ಞಾನ ಯೋಗ ಬುದ್ಧಿಗೆ, ಕರ್ಮಯೋಗ ಇಂದ್ರಿಯಕ್ಕೆ, ಹಠ ಯೋಗ ಶರೀರಕ್ಕೆ ಹೀಗೆ ಯೋಗಗಳು ಸಾಧಕನ ಮೇಲೆ ಪ್ರಭಾವಿತಗೊಳಿಸಿ ಸಾಧಕನಲ್ಲಿ ಶಕ್ತಿಯನ್ನು ತುಂಬುತ್ತವೆ.

ಅಷ್ಟಾಂಗ ಯೋಗಗಳು ಸಾಧಕನಿಗೆ ಸೋಪಾನವಾಗಿವೆ. ಅಂದರೆ ಮೆಟ್ಟಿಲುಗಳಾಗಿವೆ. ಸಾಧನೆಯ ಪ್ರಾರಂಭ ಸ್ಥಿತಿ ಹೇಗಿರಬೇಕು, ಮಧ್ಯಮ ಸ್ಥಿತಿ ಹೇಗೆ, ಕೊನೆಯ ಸ್ಥಿತಿ ಯಾವುದು? ಎಂದು ಸೂಚಿಸುತ್ತವೆ. ಯಮ, ನಿಯಮ, ಆಸನ, ಪ್ರಾಣಾಯಾಮಗಳು ಆರಂಭ ಸ್ಥಿತಿಯಾಗಿ, ಪ್ರತ್ಯಾಹಾರ, ಧಾರಣಗಳು ಮಧ್ಯಮ ಸ್ಥಿತಿಯಾಗಿ, ಧ್ಯಾನ, ಸಮಾಧಿ, ಕೊನೆಯ ಸ್ಥಿತಿಯಾಗಿ ಸಾಧಕನಲ್ಲಿ ಬದಲಾವಣೆ ತರುತ್ತಾ ಹೋಗುತ್ತವೆ.

ಯೋಗ ಸಾಧನೆಯಲ್ಲಿ ಸಾಧಕನ ಅವಸ್ಥೆಗಳು ಹೇಗಿರಬೇಕೆಂಬ ವಿಷಯದ ಕುರಿತು ಪತಂಜಲಿ ಯೋಗ ಸೂತ್ರಗಳಲ್ಲಿ ಬಹಳ ಅದ್ಭುತವಾಗಿ ತಿಳಿಸಿದ್ದಾರೆ. ಮಾನಸಿಕ ರೋಗಗಳಿಂದ ಹೇಗೆ ನಿವೃತ್ತಿ ಹೊಂದಬಹುದು ಎಂದು ಹೇಳಿದ್ದಾರೆ. ಪತಂಜಲಿಯ ಎರಡನೇ ಸೂತ್ರದಂತೆ “ಯೋಗಶ್ಚಿತ್ತವೃತ್ತಿ ನಿರೋಧಃ” ಎನ್ನುವಂತೆ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದೇ ಯೋಗವೆಂದು ಹೇಳುತ್ತಾರೆ. ಏಕೆಂದರೆ ಮನಸ್ಸು ಎಲ್ಲದಕ್ಕೂ ಕಾರಣವಾಗಿರುವುದರಿಂದ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ “ಮನೇವ ಮನುಷ್ಯಾನಂ ಕಾರಣಂ ಬಂಧ ಮೋಕ್ಷಯೋ” ಎನ್ನುವ ಹಾಗೆ ಮನಸ್ಸು ಸಾಧಕನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗಿರುವುದರಿಂದಲೇ ಪತಂಜಲಿ ಮಹರ್ಷಿಗಳು ಈ ಸೂತ್ರವನ್ನು ಹೇಳಿದ್ದಾರೆ.

ಸಾಧಕ ಯಾವಾಗಲೂ ಅಭ್ಯಾಸದಲ್ಲಿ ಇರಬೇಕು. ಅಭ್ಯಾಸ ಇರಬೇಕು. ಅಭ್ಯಾಸದಲ್ಲಿ ನಿರತನಾದ ಸಾಧಕ ಕ್ರಿಯಾಶೀಲತೆಯಿಂದ ಇರುತ್ತಾನೆ. ಅದಕ್ಕೆ ಪತಂಜಲಿ ಮಹರ್ಷಿಗಳು “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ” ನಿರಪೇಕ್ಷತವಾದ ಅಭ್ಯಾಸ ವಿರತವಾದ ಅಭ್ಯಾಸದಿಂದ ತನ್ನನ್ನು ತಾನು ಅರಿಯಲು ಸಾಧ್ಯ. ಅಪೇಕ್ಷೆಯಿಂದ ಮಾಡಿದ ಅಭ್ಯಾಸ ವ್ಯರ್ಥವಾದಲ್ಲಿ ಕೋಪ ಹುಟ್ಟುತ್ತದೆ. ಕೋಪದಿಂದ ಸಾಧಕನ ಮನ ವಿಚಲಿತವಾಗುತ್ತದೆ. ಅದಕ್ಕೆ ನಿರಪೇಕ್ಷಿತ ಅಭ್ಯಾಸ ಬಹಳ ಮುಖ್ಯವೆಂದು ತಿಳಿಸುತ್ತಾರೆ.

ಯೋಗವೆಂದರೆ ಕೂಡುವಿಕೆ, ಒಂದಾಗುವಿಕೆ. ಆತ್ಮ-ಪರಮಾತ್ಮನನ್ನು ಕೂಡುವುದು ಎಂದರ್ಥ. ಧ್ಯಾನದಿಂದ ತನ್ನೊಳಗೆ ಇರುವ ದೇವರನ್ನು ಕೂಡುವುದಾಗಿದೆ. ಇಂದ್ರಿಯಗಳನ್ನು ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನವನ್ನು ಹೊಂದಿ ಪರಮ ಮುಕ್ತಿಯನ್ನು ಹೊಂದುವ ದಾರಿ ಇದಾಗಿದೆ.

   ಶರಣರೊಬ್ಬರು ಹೇಳಿರುವ ಹಾಗೆ,

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಚಿತ್ತದಲ್ಲಿ ನಿರಪೇಕ್ಷೆ, ವಿಷಯಗಳಲ್ಲಿ ಉದಾಸಿನ

ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ

ನೆಲೆಗೊಂಡ ಬಳಿಕ ಸೌರಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೊ.

ಆದಯ್ಯ ಶರಣರು ತನ್ನ ತಾನರಿದವನೆ ತಾನೆ ದೇವರಾಗುತ್ತಾನೆ. ಎಂಬುದನ್ನು ತಿಳಿಸಿದ್ದಾರೆ.

ಈಗಿನ ದಿನಮಾನದಲ್ಲಿ ಯೋಗವು ಬಹಳ ಮುಖ್ಯವಾದ ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕರೋನಾ ಎನ್ನುವ ರೋಗದಿಂದ ಬಾಧಿತನಾಗಿ ಖಿನ್ನನಾಗುತ್ತಿದ್ದಾನೆ. ಇಂತಹ ರೋಗಗಳಿಂದ ಮುಕ್ತವಾಗಲು ಆಸನ ಪ್ರಾಣಾಯಾಮಗಳು ಬಹಳ ಮುಖ್ಯವಾಗಿವೆ. ಜೊತೆಗೆ ಮಾನಸಿಕ ಸ್ಥೈರ್ಯ ಶಾರೀರಿಕ ಸದೃಢತೆಯನ್ನು ಯೋಗ ಕೊಡುತ್ತದೆ. ಆದಕಾರಣ ಪ್ರತಿಯೊಬ್ಬರೂ ಯೋಗ ಮಾಡಿರಿ ರೋಗ ದೂರ ಮಾಡಿರಿ ಎನ್ನುವುದೇ ನಮ್ಮ ಪ್ರಾರ್ಥನೆ.

ನಾನು ಶಿವಯೋಗಮಂದಿರದ ಒಬ್ಬ ಸಾಧಕನಾಗಿ ನನಗೆ ಯೋಗವನ್ನು ಅರಿಯಲು ಸಾಧ್ಯವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪೆಯಿಂದ ಕನ್ನಡ ನಾಡಿನಲ್ಲಿ ಯೋಗವನ್ನು ಮಹತ್ವವಾದ ಆರೋಗ್ಯ ನಿಧಿಯನ್ನು ಈ ನಾಡಿಗೆ ಪರಿಚಯಿಸಿದರು. ಶ್ರೀ ಶಿವಯೋಗಮಂದಿರದಲ್ಲಿ ಹಠಯೋಗ ಮತ್ತು ಶಿವಯೋಗವನ್ನು ಮತ್ತು ಷಟ್ ಕ್ರಿಯಾದಿಗಳನ್ನು ಹೇಳುವ ಮುಖಾಂತರ ಈ ನಾಡಿಗೆ ಅನೇಕ ಶಿವಯೋಗಿ ಸಾಧಕರನ್ನು ಕೊಟ್ಟ ಮಹಾಸಂಸ್ಥೆ ಶ್ರೀ ಶಿವಯೋಗಮಂದಿರ. ಈ ನಾಡಿಗೆ ಯೋಗವನ್ನು ಪರಿಚಯಿಸಿದ ಮಹಾ ಚೇತನಕ್ಕೆ ಅನಂತ ಅನಂತ ಶರಣುಗಳು.

ಶ್ರೀ ಶಿವಯೋಗಮಂದಿರದ ಯೋಗ ಸಾಧನೆಗೈದ ಶಿವಯೋಗ ಸಿದ್ಧರು.

ಹಠಯೋಗ         –         ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು  ಕಂಚಗಲ್ ಬಿದರಿ

ರಾಜಯೋಗ       –         ಶ್ರೀ ಮ.ನಿ.ಪ್ರ ಲಿಂ. ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ                                   

ಕರ್ಮಯೋಗ-                 ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು   ಕಪನಳ್ಳಿ  ಶಾಖಾ ಶಿವಯೋಗಮಂದಿರ

ಜ್ಞಾನಯೋಗ       –         ಪೂಜ್ಯ ಶ್ರೀ ಜ.ಚ.ನಿ. ಮತ್ತು ಗಿರಿಯಾಪುರದ ಪೂಜ್ಯ ಶ್ರೀ ಸದಾಶಿವ ಶಿವಾಚಾರ್ಯರು

ಶಿವಯೋಗ         –         ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠ ಹಾನಗಲ್ಲ

                                         ಮತ್ತು  ಶ್ರೀ ಮ.ನಿ.ಪ್ರ.  ಅನ್ನದಾನ ಸ್ವಾಮಿಗಳು ಹಾಲಕೇರಿ

ಭಕ್ತಿಯೋಗ         –         ಪೂಜ್ಯ ಶ್ರೀ ನಾಲ್ವತವಾಡದ ವೀರೇಶ್ವರ ಶರಣರು ಸೋಲ್ಲಾಪೂರ

ನಾದಯೋಗ       –         ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು

                                      ವೀರೇಶ್ವರ ಪುಣ್ಯಾಶ್ರಮ ಗದಗ

                              –             

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರ ಹಸ್ತಾಕ್ಷರ ದಲ್ಲಿ ಔಷಧಿ

ಮುಂದೆ ತಿಂಗಳಿಗೆ ಕಣ್ಣು ನಿಚ್ಚಳವಾಗಿ ಕಾಣತೊಡಗಿತು. 1969ನೆಯ ಇಸ್ವಿ, ಹಾವೇರಿಯ ದ್ಯಾವಪ್ಪಶೆಟ್ಟರ ಮನೆಯಲ್ಲಿ ಶ್ರೀಗಳ ಪೂಜೆ. ಆ ಮನೆಯ ತಾಯಿಗೆ ಸಂಕಟ. ಆಕೆಯ ಕೂಸಿಗೆ ಆರೋಗ್ಯ ಸರಿಯಿರಲಿಲ್ಲ. ಸ್ವಾಮಿಗಳು ಆ ಮಗುವನ್ನು ಕರೆಸಿದರು. ಅದು ಶವದಂತೆ ಇತ್ತು. ಎಲ್ಲರನ್ನೂ ಹೊರಗೆ ಕಳುಹಿಸಿದರು. ಸ್ವಾಮಿಗಳು ಅದೇನು ವೈದ್ಯ ಮಾಡಿದರೆ ಮಗು ಕಿಲಕಿಲನೆ ನಗುತ್ತಿತ್ತು. ಇಂಥ ಘಟನೆಗಳು ಸಹಸ್ರಾರು. ಒಮ್ಮೆ ಗದುಗಿನ ಪುಟ್ಟರಾಜ ಗವಾಯಿಗಳೊಂದಿಗೆ ಸ್ವಾಮಿಗಳು ಮದರಾಸಿಗೆ ಹೋಗಿದ್ದರು.

ನಟಸಾರ್ವಭೌಮ ರಾಜಕುಮಾರರಿಗೆ ಪುಟ್ಟರಾಜ ಗವಾಯಿಗಳಲ್ಲಿ ಅಪರಿಮಿತ ಭಕ್ತಿ, ರಾಜಕುಮಾರ್ ಲಿಂಗಪೂಜೆ ನೋಡಬೇಕೆಂದು ಅಪೇಕ್ಷೆಪಟ್ಟರು. ಆದರೆ,ಲಿಂಗದೀಕ್ಷೆಯಿಲ್ಲದವರಿಗೆ ಅದು ಸಾಧ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಲೇಖಕರು : ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ

 

Rtd. Professor and Chairman Institute of Kannada Studies and

Former Hon. Professor Institute of Yoga Studies

Karnatak University, Dharwad

ಪ್ರಾಚೀನ ಕಾಲದಿಂದಲೂ ಭಾರತ ದೇಶವು ಅನೇಕ ಸಾಧು, ಸತ್ಪುರುಷರ ಜನ್ಮಭೂಮಿಯಾಗಿದೆ. ಜ್ಯೋತಿಯು ಸುತ್ತಲಿನ ಕತ್ತಲೆಯನ್ನೊಡಿಸಿ ಬೆಳಕನ್ನುಬೀರುವಂತೆ ಅವರು ತಮ್ಮ ದಿವ್ಯ ಜ್ಞಾನ ಬಲದಿಂದ ತಮ್ಮ ಸುತ್ತಮುತ್ತಲಿನಜನರಿಗೆಲ್ಲ ಜ್ಞಾನೋಪದೇಶ ನೀಡಿ ಅಜ್ಞಾನವನ್ನು ಕಳೆದು ಅವರನ್ನು ಉದ್ಧಾರ ಮಾಡಿದರು. ಇಂಥ ಪುಣ್ಯ ಪುರುಷರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೂ ಒಬ್ಬರು. ಅವರು ಮಾನವನ ವ್ಯಕ್ತಿತ್ವದ ಸರ್ವಾಂಗ ಉನ್ನತಿಗೆ ಸಹಕಾರವಾಗುವ ಸರ್ವಕ್ಷೇತ್ರಗಳನ್ನೂ ಸುಧಾರಿಸಿದರು. ಅದರಲ್ಲಿಯ ಶ್ರೀಗಳವರು ಭಾರತದ ಸರ್ವ ಶಾಸ್ತ್ರಗಳು ಬೋಧಿಸುವ ಆತ್ಮೋನ್ನತಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಅದಕ್ಕೆ ಸಾಧನೆಯಾದ ಯೋಗಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟರು. ಸರ್ವರು ಶಿವಯೋಗಿ

ಗಳಾಗಬೇಕೆಂಬುದು ಅವರ ಹಂಬಲವಾಗಿತ್ತು.

ಶ್ರೀಗಳವರು ಸ್ವತಃ ಮೊದಲು ತಾವು ಶಿವಯೋಗಿಗಳಾಗಿದ್ದು, ಉಳಿದವರನ್ನು ಶಿವಯೋಗದ ದಿವ್ಯಾನಂದದತ್ತ ಒಯ್ಯಲು ಸಾಕಷ್ಟು ಶ್ರಮಿಸಿ ಯಶಸ್ವಿಯಾದರು.ಸಮಾಜ ಸೇವೆಯಲ್ಲಿ ಅಪಾರ ನಿಷ್ಠೆಯುಳ್ಳ ಶಿವಾನುಭವಿಗಳನ್ನೂ, ಯೋಗ್ಯಧರ್ಮಗುರುಗಳನ್ನೂ, ಪ್ರತಿಭಾಶಾಲಿ ಪಂಡಿತರನ್ನೂ, ಭಕ್ತರನ್ನು ಬೆಳೆಯಿಸಲು ಒಂದು ಯೋಗ ಸಂಸ್ಥೆಯ ಅವಶ್ಯಕತೆಯನ್ನರಿತ ಶ್ರೀಗಳವರು ಶಿವಯೋಗವನ್ನು ಸರ್ವರೂ ಸಾಧಿಸಲೆಂದು ಅದೇ ಹೆಸರಿನಿಂದ ಶಿವಯೋಗ ಮಂದಿರವನ್ನು ೧೯೦೯ ನೇ ಇಸ್ವಿಯಲ್ಲಿ ಸ್ಥಾಪಿಸಿದರು. ಈ ಶಿವಯೋಗದ ತಳಹದಿ ಮತ್ತು ಮನೋನಿಗ್ರಹ ಸಾಧನವಾದ ಹಠಯೋಗಕ್ಕೂ ಶ್ರೀಗಳವರು ಶಿವಯೋಗದಷ್ಟೇ ಪ್ರಾಮುಖ್ಯತೆ-ಯನ್ನು ಕೊಟ್ಟಿದ್ದರು. ಕಾರಣ ಶ್ರೀಗಳವರು ಹಠಯೋಗವನ್ನು ತಾವು ಯಾವ ರೀತಿ ಸಾಧಿಸಿ ತಮ್ಮ ಶಿಷ್ಯ ಬಳಗಕ್ಕೆ ಬೋಧಿಸಿದರೆಂಬುದನ್ನು ತಿಳಿಯೋಣ.

ಪರಮಪೂಜ್ಯ ಲಿಂ . ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು

ಶ್ರೀಗಳವರ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು ವೀರಶೈವ ತತ್ತ್ವಜ್ಞರೂ, ಆಚಾರ-ವಿಚಾರನಿಷ್ಠರೂ, ಯೋಗಪಿತಾಮಹರೂ, ಮಹಾತಪಸ್ವಿಗಳೂ ಆಗಿದ್ದರು, ಅವರು ಬಹುಕಾಲ ಪರಂಪರೆಯಿಂದ ಬಂದ ಶಿವಯೋಗ ಸಂಪತ್ತನ್ನುಳಿಸಲು ತಕ್ಕ ಅಧಿಕಾರಿಯನ್ನು ಹುಡುಕಾಡುತ್ತಿದ್ದಾಗ ಪಾರಮಾರ್ಥ ವಿದ್ಯೆಯ ಭಿಕ್ಷುಕನಾಗಿ ಬಂದ ಈ ಹಾನಗಲ್ಲ ಸದಾಶಿವ(ಶ್ರೀಗಳವರ ಬಾಲ್ಯದ ಹೆಸರು ) ನನ್ನು ನೋಡಿ ಆನಂದಪಟ್ಟರು. ಅವರು ಶ್ರೀ ನಿಜಗುಣರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸಮಾಡಿ, ಹಠಯೋಗ ಸಿದ್ದಿಯನ್ನು ಪಡೆದಿದ್ದರು. ಪಾತಂಜಲ ಯೋಗವು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಬಲ್ಲದೆಂಬುದನ್ನು ಆಚರಣೆಯಲ್ಲಿ ತಂದುಕೊಂಡು ಮಹಾಶಿವಯೋಗಿಗಳಾಗಿದ್ದರು. ತಮ್ಮ ಅನುಭವವನ್ನು ಯೋಗ ವಿದ್ಯೆಯನ್ನು ಪಡೆದು ಸಾರ್ಥಕಗೊಳಿಸಬಲ್ಲ ಸಮರ್ಥ ಶಿಷ್ಯನ ಶೋಧನೆಯಲ್ಲಿದ್ದಾಗ ಅವರಿಗೆ ಹಾನಗಲ್ಲ ಶ್ರೀಗಳವರು ಯೋಗ್ಯವಾಗಿ ಕಂಡರು.

ನಂತರ, ಪರಮಯೋಗಿ ಯಳಂದೂರ ಶ್ರೀಗಳವರ ಕೃಪೆಗೆ ಹಾನಗಲ್ಲ ಶ್ರೀಗಳವರು ಪಾತ್ರರಾಗಿ ಶಿವಯೋಗ ದೀಕ್ಷೆಯನ್ನು ಪಡೆದು, ಶಿವಯೋಗದ ನಿಜಸ್ವರೂಪ ವನ್ನರಿತುಕೊಂಡು ಹಠಯೋಗ ವಿದ್ಯೆಯನ್ನು ಪಡೆದರು. ಈ ಗುರುವರ್ಯರ ಪ್ರೇರಣೆಯಿಂದಲೇ ಶ್ರೀಗಳವರು ಹನ್ನೆರಡು ವರ್ಷಗಳವರೆಗೆ ನೈಷ್ಠಿಕ ತಪವನ್ನು ಅವರ ಅನುಜ್ಞೆಯಂತೆ ಶೀಲಾಚರಣೆಯೊಂದಿಗೆ ಆಚರಿಸಿ ಯೋಗಸಿದ್ಧಿಯನ್ನು, ಆತ್ಮಬಲವನ್ನು ಸಂಪಾದಿಸಿದರು. ನಂತರ ಆಜನ್ಮ ಸನ್ಯಾಸ, ಬ್ರಹ್ಮಚಚರ್ಯ ವ್ರತವನ್ನು ಕೈಗೊಂಡರು. ಹಲವು ವರ್ಷಗಳ ತರುವಾಯ ಗುರುಗಳು ಶಿವಸಾಯುಜ್ಯವನೈದುವ ಪ್ರಸಂಗ ಬಂದಾಗ ಇವರನ್ನು ಹತ್ತಿರದಲ್ಲಿ ಕರೆದು ಮಸ್ತಕದ ಮೇಲೆ ಹಸ್ತ ವನ್ನಿಟ್ಟು “ಕುಮಾರ ಮುಂದೆ ನೀನು ಕುಮಾರನೇ ಆಗುವೆ. ಆದರ್ಶ’ ವಿರತಿಯನ್ನು ತಳಿಯುವೆ. ಶಿವಯೋಗಿ ಕುಲತಿಲಕನಾಗುವೆ. ವತ್ಸ, ಶಿವಯೋಗ ವಿದ್ಯಾ ಪಾರಂಪರ್ಯವನ್ನು ಜಗತ್ತಿನಲ್ಲಿ ಬಿತ್ತಿ, ಬೆಳೆಯಿಸಿ ಧನ್ಯನಾಗು ಎಂದು ತಮ್ಮ ಯೋಗ ದಂಡವನ್ನು, ಯೋಗಸಾಧನ ಸಾಮಗ್ರಿಗಳನ್ನು ನೀಡಿ ಆಶೀರ್ವದಿಸಿದರು.

ಆ ಕ್ಷಣದಲ್ಲಿಯೇ ಸದಾಶಿವಯತಿಯು ಶ್ರೀ ಗುರುವಿನ ಮನದಾಸೆಯಂತೆ ಶಿವಯೋಗಾಲಯದ ಮಂದಿರವನ್ನು ತನ್ನ ಮನೋಭೂಮಿಯಲ್ಲೇ ಕಟ್ಟಿಸಿದನು.ಕಲ್ಪನೆಯ ಸೃಷ್ಟಿಯಲ್ಲಿ ಬಂದದ್ದು ಕಾರ್ಯಸೃಷ್ಟಿಯಲ್ಲಿ ಬರಬೇಕಾದರೆ ಅನುಕೂಲ ಪರಿಸ್ಥಿತಿಯಲ್ಲಿ ಒದಗಿ ಬರಬೇಕು. ಅದನ್ನು ತಂದುಕೊಳ್ಳುವದಕ್ಕಾಗಿ ಹಾನಗಲ್ಲ ಶ್ರೀಗಳವರು ಸ್ವಯೋಗಸಾಧನಕ್ಕೆ ಯೋಗ್ಯವಾದ ಏಕಾಂತ ಸ್ಥಾನವನ್ನು ಸಂಶೋಧಿಸುತ್ತ ಕಡೆಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ, ಅಲ್ಲೇ ಯೋಗಾಭ್ಯಾಸವನ್ನು ಮಾಡಿ-“ಉದಾರ ಚರಿತಾನಾಂತು ವಸುದೈವ ಕುಟುಂಬಕಮ್ ” ಎಂಬ ಉಕ್ತಿಯಂತೆ ಸದಾಶಿವಯೋಗಿಯು ಸದಾಕಾಲ ಯೋಗಾನಂದವನ್ನು ಅನುಭವಿಸದೆ ವೀರಶೈವರಿಗೆ ಶಿವಯೋಗವನ್ನು ಮತ್ತು ಇತರರಿಗೆ ಅಷ್ಟಾಂಗಯೋಗವನ್ನು ಬೋಧಿಸಬೇಕೆಂದು ಶಂಭುಲಿಂಗನ ಬೆಟ್ಟದಿಂದ ಪುನಃ ಸಂಚಾರಕ್ಕೆ ಹೊರಟರು. ನಾಡಿನಲ್ಲೆಲ್ಲ ಸಂಚರಿಸಿ ಮಹಾತ್ಮರನ್ನು, ಅನುಭವಿಗಳನ್ನೂ ಸಂದರ್ಶಿಸಿ ಶಿವಯೋಗಾಚರಣೆಯ ಅನುಭವವನ್ನು ಪಡೆದುಕೊಂಡರು, ಶಿವತತ್ತ್ವವೇತ್ತರಾದರು.

ಚಂಚಲ ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರಿಕರಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತು ಬಿಡುವುದು ಯೋಗಸಾಧನೆಯಿಂದ ಸಾಧ್ಯ, ಪ್ರಾಣಾಯಾಮದ ಅಂಗಗಳಾದ ಪೂರಕ, ಕುಂಭಕ, ರೇಚಕಗಳ ಸ್ಥೂಲ ಶರೀರದ ವ್ಯಾಧಿ-ಗಳನ್ನು ನಾಶಮಾಡಿ, ಚಿತ್ತಸ್ಥಿರತೆ ಮತ್ತು ಧ್ಯಾನವನ್ನು ಬಲಿಸುತ್ತವೆ. ಯೋಗದಿಂದ ಅಂತರಂಗ ಬಹಿರಂಗಗಳ ಶುದ್ದಿ ಯಾಗುವುದು, ಅಂತೆಯೇ ಯಮ, ನಿಯಮ,ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳಾದ ಅಷ್ಟಾಂಗಯೋಗದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರು ನಿಶ್ಚಲವಾದ ನಂಬಿಕೆಯನ್ನಿಟ್ಟಿದ್ದರು.

ಹಾನಗಲ್ಲ ಶ್ರೀಗಳವರ ಕರ್ಮೇಂದ್ರಿಯಗಳ ಶೀಲಾಚರಣೆಯು ಶಾಸ್ತ್ರದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಯಮಾಂಗದ ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚ ಸದ್ವೃತ್ತಿಗಗಳನ್ನುಳ್ಳದ್ದು.ಶ್ರೀಗಳವರ ಜ್ಞಾನೇಂದ್ರಿಯಗಳಿಗೆ ನಿಯಮಾದಿಗಳು ನಿಷ್ಠುರ ಶೀಲಾಚರಣೆಗಳಾಗಿದ್ದವು. ದಶೇಂದ್ರಿಯಗಳನ್ನೊಳಗೊಂಡ ಅವರ ಅಂಗವು ಆಸನರೂಪ ಅಪ್ಪುವಿನಲ್ಲಿ ಮಿಂದು ಸ್ವಚ್ಛವೂ ಸರಳವೂ ಆಗಿತ್ತು. ಅವರು ಸಿದ್ಧಾಸನ-ಸುಖಾಸನಗಳನ್ನು ಹಾಕಿಕೊಂಡು ಅದೆಷ್ಟು ಹೊತ್ತಾದರೂ ಸ್ಥಿರವಾಗಿ ಸುಖಿಯಾಗಿ, ರುಜುವಾಗಿ ಕುಳಿತುಕೊಳ್ಳುತ್ತಿದ್ದರು. ಅಂಗ ಚಲನವೇ ಅರುಚಿ, ಅಂಗ ಅಚಲವಾಗುವದೇ ಶುಚಿ,

ಇದುವೇ ಶ್ರೀಗಳವರ ಶೀಲಾಚರಣೆ. ದೇಹಾಂತರ್ಗತವಾಯು ದೋಷಯುಕ್ತವಾಗಿರುತ್ತದೆ. ಈ ದೋಷವನ್ನು ಪ್ರಾಣಾಯಾಮ ಮೂಲಕ ಕಳೆಯಲು ಸಾಧ್ಯ.

ರೇಚಕ, ಪೂರಕ, ಕುಂಭಕ ಪ್ರಾಣಾಯಾಮಗಳಿಂದ ಪ್ರಾಣಾದಿ-ವಾಯುಗಳು ಪರಿಶುದ್ಧವಾಗುತ್ತವೆ. ಪ್ರಾಣಾದಿ-ವಾಯು ವಿರುದ್ದಿ ಯಿಂದ ಅಂತರ್ಗತ ಚಕ್ರಗಳು ಜಾಗ್ರತವಾಗುತ್ತವೆ. ಶ್ರೀಗಳವರು ಇವನ್ನೆಲ್ಲ ರೂಢಿಸಿಕೊಂಡಿದ್ದರು. ಇದು ಅವರ ಬಾಹ್ಯಶೀಲಾಚರಣೆಯಾದರೆ ಆಂತರಿಕ ಶೀಲಾಚರಣೆಯ ರೀತಿ ಇಂತಿದೆ ಅಂತರಿಂದ್ರಿಯಗಳ , ಸಂಯಮವೆ ಆಂತರಿಕ ಶೌಚ, ಚಿತ್, ಮನ, ಬುದ್ದಿ,ಅಹಂಕಾರಗಳೆಂಬ ಅಂತರಿಂದ್ರಿಯಗಳನ್ನು ಕ್ರಮವಾಗಿ ಪ್ರತ್ಯಾಹಾರ ಧಾರಣ,ಧ್ಯಾನ, ಸಮಾಧಿಗಳು ಶುಚಿಗೊಳಿಸಬಲ್ಲವು. ಚಿತ್ತವನ್ನು ವೃತ್ತಿಗಳಿಂದ ಹಿಂದಿರುಗಿಸುವುದೆ ಪ್ರತ್ಯಾಹಾರ, ಚಲಿಸುವ ಮನವನ್ನು ಆತ್ಮವೊಂದರಲ್ಲಿ ನೆಲೆನಿಲ್ಲಿಸುವುದೇ ಧಾರಣ, ಮತಿಯ ಮತ್ತೊಂದನ್ನು ಚಿಂತಿಸದೆ ಸೂಕ್ಷಾಹಂಕಾರಗಳನ್ನು ಬಿಟ್ಟು ಚಿದಹಂಭಾವದಲ್ಲಿ ಮಿಂದು ಮಡಿಯಾಗುವುದೇ ಸಮಾಧಿ. ಇವೆಲ್ಲವನ್ನು ಶ್ರೀಗಳವರು ಸಂಪಾದಿಸಿಕೊಂಡಿದ್ದರು,

ಹಠಯೋಗ (ಮನೋನಿಗ್ರಹ ಸಾಧನ) ವು ಶಿವಯೋಗಕ್ಕೆ ಸಹಕಾರಿಯೆಂದರಿತ ಪರಮಪೂಜ್ಯ ಲಿಂ. ಹಾನಗಲ್ಲ ಶ್ರೀಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮಗಳಲ್ಲಿ ಯೋಗಾಸನಗಳಿಗೆ ಪ್ರಥಮಸ್ಥಾನವನ್ನು ಕಲ್ಪಿಸಿದರು. ಆಸನಗಳನ್ನು ಕ್ರಮಬದ್ಧವಾಗಿ ಸಾಧನೆ ಮಾಡಿಸುವ ಯೋಜನೆಯನ್ನೂ ಮಾಡಿರುವರು. ಆದ್ದರಿಂದ ಮಂದಿರದಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಹಾಕಿಯೇ ಮುಂದಿನ ಪಾಠ ಪ್ರವಚನಾದಿ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.

ಶ್ರೀಗಳವರು ಸಾಧಕರನ್ನು ಮೊದಲು ಹಠಯೋಗ ಮಾರ್ಗದಲ್ಲಿ ಪಳಗಿಸುತಿದ್ದರು. ಅಷ್ಟಾಂಗಯೋಗದ ಮಹತ್ವವನ್ನೂ ಅವರಿಗೆ ಮನವರಿಕೆಯಾಗುವಂತೆ ಹೇಳಿಕೊಡುತ್ತಿದ್ದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇವು ಐದು ಬಾಹ್ಯಾಂಗಗಳು.ಧಾರಣ, ಧ್ಯಾನ, ಸಮಾಧಿ ಇವು ಮೂರು ಅಂತರಂಗಗಳು. ಈ ಹಠಯೋಗದಿಂದ ಸಾಧಕನ ಮೈ-ಮನ ಪ್ರಾಣಗಳ ಶುದ್ದಿಯಾಗುತ್ತದೆ. ನಿರೋಗವಾದ ಶರೀರವೇ ಧರ್ಮಕ್ಕೆ ಮೊದಲ ಸಾಧನ, ರೋಗದಿಂದ ಚಿತ್ತವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವಾಗಿಡಲು ಯೋಗಾಸನಗಳು ಪರಮೋಪಾಯ. ಆಸನಗಳು ಸಾತ್ವಿಕ ಅಂಗಸಾಧನೆಗಳು.

ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತವೆ, ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ. ಹಸಿವೆ ಸರಿಯಾಗಿ ಆಗಿ, ಲವಲವಿಕೆ ಮೂಡಿ ಜಾಡ್ಯವು ದೂರಾಗುತ್ತದೆ. ಆದ್ದರಿಂದ ಶ್ರೀಗಳವರು ಸಾಧಕರಿಗೆ ಈ ಹಠಯೋಗವನ್ನು ಶಿವಯೋಗಕ್ಕೆ ಪೂರಕವಾಗಿ ಯೋಜಿಸಿರುವರು.ಶಿವಯೋಗ ಮಂದಿರದಲ್ಲಿ ಮುಂಜಾನೆ ೬ಗಂಟೆಗೆ ಪ್ರಾರ್ಥನೆಯ ನಂತರ ಯೋಗಾಸನಗಳು ಆರಂಭವಾಗುತ್ತವೆ, ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನ-ಯೋಗ ಸಾಧನೆಯ ಹಾಸಿಗೆಗಳೊಂದಿಗೆ ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗಮಂದಿರದ ಗೀತೆಗಳನ್ನು ಹಾಡಿದ ಮೇಲೆ

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವ

ಗುರುದೇವಾತ್ಪರಂ ನಾಸ್ತಿ ತಸ್ಮಿ ಶ್ರೀ ಗುರುವೇನಮಃ

ಎಂದು ಶ್ರೀ ಸದಾಶಿವ ಗುರುದೇವನನ್ನು ಭಕ್ತಿಭಾವದಿಂದ ಸ್ಮರಿಸಿ ಹಿರಿಯಸಾಧಕರೊಬ್ಬರ ನೇತೃತ್ವದಲ್ಲಿ ಯೋಗಾಸನಗಳನ್ನು ಹಾಕಲಾರಂಭಿಸುವರು.

ಅರಂಭದಲ್ಲಿ ಶ್ರೀಗಳವರು, ಯೋಗಾಸನಗಳನ್ನು ಮಾಡುವ ವಿಧಾನವನ್ನು ಸಾಧಕರಿಗೆ ತೋರಿಸಿಕೊಡುತ್ತಿದ್ದರು. ಆಸನಗಳೊಂದಿಗೆ ಬಂಧ ಮುದ್ರೆ, ದೃಷ್ಟಿಗಳನ್ನೂ ತೋರಿಸಿ ಅವುಗಳ ಮಹತ್ವವನ್ನು ಸಾಧಕರಿಗೆ ಮನದಟ್ಟಾಗುವಂತೆ ವಿವರಿಸುತ್ತಿದ್ದರು. ಯೋಗಾಸನಗಳಲ್ಲಿ ಅವರು ಹೊಸ ಪ್ರಯೋಗಗಳನ್ನು ಮಾಡಿದರು. ಅವರು ಹೊಸ ಉತ್ತಮ ಆಸನಗಳನ್ನು ಕಲ್ಪಿಸಿ ಯೋಗಾಸನಗಳ ಸಂಖ್ಯೆಯನ್ನು ನೂರೆಂಟಕ್ಕೆ ಮುಟ್ಟಿಸಿದರು. ಇವುಗಳಲ್ಲಿ ಸಿದ್ಧಾಸನ ಸರ್ವಶ್ರೇಷ್ಠ ವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ.ಆಸನಗಳಿಂದ ಕೆಲವು ರೋಗಗಳು ಗುಣಹೊಂದುತ್ತವೆ. ಶೀರ್ಷಾಸನವು ತಲೆನೋವು,ದೃಷ್ಟಿಮಾಂದ್ಯವನ್ನು ದೂರಗೊಳಿಸಿದರೆ, ಮಯೂರಾಸನ ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆಂಬುದು ಶ್ರೀಗಳವರ ಸಂಶೋಧನೆಯಾಗಿತ್ತು.ಅವರು ಯಾವ ಆಸನಗಳಿಗೂ ತಮ್ಮ ಸಂಕೇತವನ್ನಿಡಲಿಲ್ಲ. ಅದೆಲ್ಲ ಗುರುವಿನ ಕೃಪೆ ಎಂದು ಹೇಳುತ್ತಿದ್ದರು.

ಒಮ್ಮೆ ಶಿವಯೋಗ ಮಂದಿರದಲ್ಲಿಯ ವಟುಗಳು ಗೋಲಿಯಾಟ ಆಡುತಿದ್ದಾಗ, ಶ್ರೀಗಳವರು ಅಲ್ಲಿಗೆ ಬಂದು ವಟುಗಳಿಗೆ “ಗುರಿ ತಪ್ಪದೆ ಗೋಲಿ ಹೊಡೆಯಿರಿ” ಎಂದರು. ಆಗ ವಟುವೊಬ್ಬ ಗುರಿ ತಪ್ಪದೆ ಹೊಡೆಯುವುದರಿಂದ ಏನು ಒಳ್ಳೆಯದಾಗುವುದೆಂದು ಕೇಳಿದ್ದಕ್ಕೆ ಶ್ರೀಗಳವರು “ ಗುರಿಯಿಟ್ಟು ಹೊಡೆಯುವುದರಿಂದ ದೃಷ್ಟಿ ಒಂದೇ ಕಡೆಗೆ ನಿಲ್ಲುವುದು. ಇದು ಯೋಗಸಾಧನೆಗೆ ಅತ್ಯವಶ್ಯವಾದುದು. ಗೊಲಿಯನ್ನು ಎದುರಿಟ್ಟು ನೋಡುತ್ತ, ನೋಡುತ್ತ ದೃಷ್ಟಿಯನ್ನು ಅನಿಮಿಷವಾಗಿ ನಿಲ್ಲಿಸಬೇಕು. ಇದು ಮನದ ಚಂಚಲತೆಯನ್ನು ಕಳೆಯುವ ಪರಮೋಪಾಯವಾಗಿದೆ” ಎಂದು ವಿವರಣೆಯಿತ್ತು ಅವರು ಮಕ್ಕಳ ಆಟವು ಯೋಗಕ್ಕೆ ಹೇಗೆ ಪರೋಕ್ಷವಾಗಿ ಸಹಾಯವಾಗುತ್ತದೆಂಬುದನ್ನು ತೋರಿಸಿಕೊಟ್ಟರು.

ಶಿವಯೋಗಮಂದಿರಕ್ಕೆ ಡೊಂಬರು ಬಂದಾಗ ಅವರ ಆಟವನ್ನು ಶ್ರೀಗಳ ವರು ವಟುಗಳಿಗೆ ತಪ್ಪದೆ ತೋರಿಸುತ್ತಿದ್ದರು. ಅದರಿಂದ ಅವರಿಗೆ ಮನೋರಂಜನೆ ಯಾಗಲಿ ಎಂದಲ್ಲ, ವಟುಗಳಿಗೆ ಆಸನಗಳನ್ನು ಹಾಕುವ ಅಭಿರುಚಿ ಬೆಳೆಯಲೆಂದು ಮತ್ತು ಸಾಧಕರು ತಮ್ಮ ಯೋಗಾಸನಗಳ ಹಾಗೂ ಡೊಂಬರ ಮೈ ಮಣಿತಗಳಲ್ಲಿಯ ವ್ಯತ್ಯಾಸವನ್ನು ಕಂಡುಕೊಳ್ಳಲೆಂದು. ಯೋಗಾಸನಗಳನ್ನು ದೃಷ್ಟಿ, ಬಂಧ ಮುದ್ರೆ-ಗಳಿಲ್ಲದೆ ಹಾಕಿದರೆ ಅವು ಡೊಂಬರಾಟವಾಗಿಯೇ ಉಳಿಯುವವು ಎಂದು ಸಾಧಕರ ಮನದಲ್ಲಿ ನಾಟುವಂತೆ ಹೇಳುತ್ತಿದ್ದರು. ನೇತಿ, ದೌತಿ, ಬಸ್ತಿ ಮುಂತಾದ ಷಟ್ಕರ್ಮಗಳ ಪ್ರಯೋಗ ಸಾಧನೆಯನ್ನು ಶ್ರೀಗಳವರು ಕೆಲವು ಸಾಧಕರಿಗೆ ಕಲಿಸಿ

ಅವರನ್ನು ನಿಪುಣರನ್ನಾಗಿ ಮಾಡಿದರು.

ಈ ರೀತಿ ಶ್ರೀಗಳವರು ವಟುಗಳಿಗೆ, ಸಾಧಕರಿಗೆ ಯೋಗಾಸನಗಳನ್ನು ತಾವೇಹಾಕಿಸಿ, ಅವರ ಮೈಮಣಿತವನ್ನು ಕಂಡು ಸಂತಸಪಟ್ಟ ಮೇಲೆ ಹಸುವಿನ ನೊರೆ ಹಾಲನ್ನು ಅವರಿಗೆ ಕುಡಿಯಲು ಕೊಡುತ್ತಿದ್ದರು ಆಹಾರ ಶುದ್ಧಿಯಿಂದ ಸ್ವಭಾವ ಶುದ್ದಿ ಯಾಗುವದೆಂದರಿತ ಶ್ರೀಗಳವರು ತಮ್ಮ ಶಿವಯೋಗ ಸಾಧಕರಿಗೆ ಸತ್ವಾಹಾರದ ಮಹತ್ವವನ್ನು ತಾವು ಸ್ವತಃ ಆಚರಿಸಿ ತೋರಿಸಿಕೊಡುತ್ತಿದ್ದರು. ಹೀಗೆ ಶ್ರೀಗಳವರು ಹಠಯೋಗಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಸಾಧಕರಿಗೆ ಆಸಕ್ತಿಯಿಂದ ಬೋಧಿಸು

ತಿದ್ದುದನ್ನು ಕಂಡು ಆಗಿನ ಕೆಲವು ಮಂದಮತಿಗಳು “ ವಚನಕಾರರು ಶಿವಯೋಗಕ್ಕೆ ಹಠಯೋಗ ಅವಶ್ಯವಿಲ್ಲ. ಪ್ರಮಥರು ವಚನಗಳಲ್ಲಿ ಹಠಯೋಗವನ್ನು ಕಟುವಾಗಿ ಟೀಕಿಸಿ, ವೀರಶೈವರಿಗೆ ಆ ಯೋಗವು ಬೇಕಿಲ್ಲವೆಂದು ಅವರು ಹೇಳಿರುವಾಗ, ಈ

ಹಠಯೋಗ ಶಿಕ್ಷಣ ನಮಗೇಕೆ ಬೇಕು? ಮುಂದೆ ಶಿವಯೋಗಿಗಳಾಗುವವರಿಗೆ ಶಾಲೆಯನ್ನಿಟ್ಟು ಕಲಿಸಿದರೆ ಮಾತ್ರ ಶಿವಯೋಗಿಗಳಾಗುವರೆ ? ಆಗುವುವದಿದ್ದರೆ ಸಹಜವಾಗಿ ತಾವೇ ಅವರು ಆಗುವರು ಎಂದು ತಟ್ಟನೆ ನುಡಿದರಲ್ಲದೆ”. ವಚನದಲ್ಲಿ ಎಂಥ ಯೋಗವು ಅನಾದರಣೀಯವಾಗಿದೆ. ಯಾವುದು ಎಷ್ಟು ಅವಶ್ಯವಾಗಿದೆ ಎಂಬುದನ್ನು ಕರೆದು ನೋಡಲಿಲ್ಲ. ಈ ಆಕ್ಷೇಪಣಿಯರಿಗೆ ಶ್ರೀಗಳವರು ಮಂತ್ರಯೋಗ, ಹಠಯೋಗ ಮುಂತಾದ ಯೋಗಗಳು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಿವೆಯೆಂಬುದನ್ನು ವಿವರಿಸಿ, ಶಿವಯೋಗದ ಗುರಿಯಿಲ್ಲದ ಹಠಯೋಗ ಮಾತ್ರ ಶುಷ್ಕವಾದುದು,ನಿಷ್ಟ್ರಯೋಜಕವಾದುದು ಎಂಬ ಹೇಳಿಕೆಯನ್ನು ಕೊಟ್ಟರು.

ಒಮ್ಮೆ ಪರಮ ವೈರಾಗ್ಯಶಾಲಿಗಳಾದ ಬಾಗಲಕೋಟೆಯ ಶ್ರೀ ಮಲ್ಲಣಾರ್ಯರು ಯೋಗವಿದ್ಯಾನ್ವೇಷಣ ಮಾಡುತ್ತ ಬಂದು ಹಾನಗಲ್ಲ ಶ್ರೀಗಳವರನ್ನು ಭೆಟ್ಟಿಯಾಗಿ ಯೋಗ ವಿಷಯ ಕುರಿತು ಚರ್ಚೆ ನಡೆಸಿದರು. ಶ್ರೀಗಳವರು ಮಲ್ಲಣಾರ್ಯರಿಗೆ ಯೋಗದ ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಾಗ ಮಲ್ಲಣಾರ್ಯರು ಯೋಗ ಸಾಧನವನ್ನು ಮಾಡಿ, ಅದರ ಮಹಿಮೆಯನ್ನು ಮನ

ಗಂಡರು. ಮತ್ತೊಮ್ಮೆ, ಸರ್ವಜ್ಞ ಮೂರ್ತಿಯ ವಚನಗಳನ್ನು ಸಂಶೋಧಿಸಿ ಪ್ರಕಟಸಿದ ಶ್ರೀ ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನ ಗಡುಚಾದ ಯೋಗಪರಬೆಡಗಿನ ವಚನಗಳ ಅರ್ಥವನ್ನು ಅನುಭವದೊಂದಿಗೆ ಶ್ರೀಗಳವರಿಂದಲೇ ಅರಿತುಕೊಂಡರು. ಹೀಗೆ ಶ್ರೀಗಳು ಶಿವಯೋಗಮಂದಿರದಲ್ಲಿ ಮುಕ್ತಿಗಾಮಿಗಳಾದ ಗೃಹಸ್ಥರಿಗೂ ಸಮಾನವಾದ ಯೋಗ ಶಿಕ್ಷಣವನ್ನು ಪಡೆಯಲು ಸದಾವಕಾಶ ದೊರಕಿಸಿಕೊಟ್ಟರು,

ಹಾನಗಲ್ಲ ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಸ್ವಾಮಿಗಳಂತೆ ಶ್ರೀ ನಿಜಗುಣ ಶಿವಯೋಗಿಗಳಲ್ಲಿ ಅಪಾರವಾದ ಶ್ರದ್ಧೆಯನ್ನಿಟ್ಟು,ಅವರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ನಿಜಗುಣರ ‘ಪಾರಮಾರ್ಥ ಪ್ರಕಾಶಿಕೆ’ಯನ್ನು ಶ್ರೀಗಳವರು ‘ ಶಿವಯೋಗದ ಕೈಪಿಡಿ ‘ ಎಂದು ಭಾವಿಸಿದ್ದರು. ‘ಪಾರಮಾರ್ಥ ಪ್ರಕಾಶಿಕೆ’ಯಲ್ಲಿ ತಿಳಿಸಿರುವಂತೆ ಶ್ರೀಗಳವರು ಶಿವಯೋಗಸಾಧನೆಗೆ ಪವಿತ್ರ ಪ್ರಶಾಂತ ನದಿಯ ವನಪ್ರದೇಶದಲ್ಲಿ ಯೋಗ-ಮಂದಿರವನ್ನುಕಟ್ಟಿಸಿದರು.

ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲೆ ಶ್ರೀ ಶಿವಯೋಗಮಂದಿರ ಸ್ಥಾಪನೆ

ಶಿವಯೋಗಮಂದಿರದ ವಟುಗಳು ಮತ್ತು ಸಾಧಕರ ಶರೀರ ಶುದ್ಧಿಗಾಗಿ ಯೋಗಾಸನ, ಪ್ರಾಣಾಯಾಮ ಮತ್ತು ಷಟ್ಕರ್ಮಗಳನ್ನು ಕಲಿಸಿದರು. ಒಟ್ಟಿನಲ್ಲಿ ಶ್ರೀಗಳವರು ನಿಜಗುಣರ ಯೋಗದ ಬಗೆಗಿನ ಸರ್ವ ಆದರ್ಶವನ್ನು ಚಾಚೂ ತಪ್ಪದೆ ನಡೆಯಿಸಿಕೊಂಡು ಬಂದರು, ಮತ್ತು ಅವರ ಶಿವರಾತ್ರಿಯ ಉತ್ಸವ ಕಾಲದಲ್ಲಿ ಸಾಧಕರಿಗಾಗಿ ಧರ್ಮ ಮತ್ತು ಯೋಗಗಳ ಬಗೆಗೆ ವ್ಯಾಖ್ಯಾನವನ್ನು ನಡೆಸುತ್ತಿದ್ದರು.ಈ ಪರಂಪರೆ ಇಂದಿನವರೆಗೂ ಅಲ್ಲಿ ನಡೆದುಕೊಂಡು ಬಂದಿದೆ.

ಇನ್ನು ಶಿವಯೋಗ ಮಂದಿರದಲ್ಲಿ ಶ್ರೀಗಳವರ ನೇತೃತ್ವದಲ್ಲಿ ಯೋಗ ವಿದ್ಯೆಯನ್ನು ಪಡೆದು ಶಿವಯೋಗಿಗಳಾದ ಅನೇಕ ಶಿಷ್ಯರಲ್ಲಿ ಕೆಲವರ ಪರಿಚಯ ಹೀಗಿದೆ

“ಯೋಗಿರಾಜ” ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಗುರುವರ್ಯರಿಂದ ಪಡೆದ ಹಠಯೋಗ ವಿದ್ಯೆಯನ್ನೆಲ್ಲ ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಕೊಟ್ಟು ಅವರನ್ನು ಆದರ್ಶ ಹಠಯೋಗಿಗಳನ್ನಾಗಿ ಮಾಡಿದರು.ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಷಟ್ಕರ್ಮಗಳಲ್ಲಿ ನಿಪುಣರಾಗಿ, ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ನೇ ಇಸ್ವಿಯಲ್ಲಿ ನಾಸಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ಥಾನದ ಯೋಗಿಗಳೆಲ್ಲ ಸೇರಿದ್ದರು.ಶ್ರೀಗಳವರು ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ದಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾಗಿ, ಅವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು. ಅವರಯೋಗದ ವಿಶೇಷ ಸಾಧನೆಗಳನ್ನು ಕಂಡು ‘ಯೋಗಿರಾಜ’ ಎಂಬ ಬಿರುದನ್ನು ಅವರಿಗೆ

ಕೊಟ್ಟು ಮನ್ನಿಸಿದರು. ಶಿವಯೋಗ ಮಂದಿರದ ಸಾಧಕರು ಯೋಗಸಿದ್ಧ ರಾಗ ಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲುವುದು, ಬಿದರಿ ಪಟ್ಟಾಧ್ಯಕ್ಷರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಸಹ ಆಶ್ಚರ್ಯಪಡುತ್ತಿದ್ದರು. ಬಿದರಿ ಪಟ್ಟಾಧ್ಯಕ್ಷರು ಶಿವಯೋಗದಲ್ಲಿಯೂ ಸಿದ್ಧಿ ಪಡೆದಿದ್ದರು.

ಮತ್ತೊಬ್ಬ ಶಿಷ್ಯರಾದ ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಯೋಗ ಸಾಧನೆಯಲ್ಲಿ ಪರಿಣಿತರಾಗಿದ್ದು, ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯರಿಗೆ ಯೋಗಸಾಧನೆಯನ್ನು ಬೋಧಿಸುವಷ್ಟು ದಕ್ಷರಾಗಿದ್ದರು.

ಅಲ್ಲದೆ ಸಂಪಗಾವಿಯ ಶ್ರೀ ಶಿವಾಚಾರ್ಯ ಚರಮೂರ್ತಿಗಳು, ಬನವಾಸಿಯ ಶ್ರೀ.ಮ. ನಿ: ಪ್ರ. ಸಿದ್ಧ ವೀರಸ್ವಾಮಿಗಳು, ಶ್ರೀ ಮನ್ಮಹಾರಾಜ ನಿರಂಜನ ಜಗದ್ಗು ರು ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೋಡಿಮಠದ ಅಧಿಪತಿಗಳಾದ ಹಾರಹಳ್ಳಿಯ ಶ್ರೀ.ಮ. ನಿ. ಪ್ರ. ಗುರುಲಿಂಗ ಸ್ವಾಮಿಗಳು, ಕಪನಹಳ್ಳಿಯ ಶ್ರೀ ನಿ. ಪ್ರ.ರುದ್ರವುನಿ ಸ್ವಾಮಿಗಳು, ವಿರಕ್ತಮಠದ ಅಧಿಕಾರಿ ಹಾನಗಲ್ಲ ಶ್ರೀ.ಮ. ನಿ. ಪ್ರ. ಸದಾಶಿವ ಸ್ವಾಮಿಗಳು, ಶಾಖಾ ಶಿವಯೋಗ ಮಂದಿರದ ಅಧಿಕಾರಿ ನಿಡಗುಂದಿ-ಕೊಪ್ಪದ ಶ್ರೀ.ಮ. ನಿ.ಪ್ರ. ಚೆನ್ನಬಸವ ಸ್ವಾಮಿಗಳು, ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಹಾರಹಳ್ಳಿಯ ನೀಲಲೋಚನ ಸ್ವಾಮಿಗಳು, ಸಾಲೂರ ಶ್ರೀ ಘ.ಚ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಭಾಲ್ಕಿ ಶ್ರೀ ಘ, ಚ, ಚನ್ನಬಸವ ಸ್ವಾಮಿ ಪಟ್ಟದ್ದೇವರು, ಬಾರಂಗಿ ಕೂಡ್ತಿ ಯ  ಶ್ರೀ.ಮ. ನಿ. ಪ್ರ, ಸದಾನಂದ ಸ್ವಾಮಿಗಳು,ಸಿಂದಗಿಯ ಶ್ರೀ ಘ, ಚ, ಶಾಂತವೀರ ಪಟ್ಟಾಧ್ಯಕ್ಷರು, ನೀಲಗುಂದ ಶ್ರೀ ಘ, ಚ,

ವಿರುಪಾಕ್ಷ ಶಿವಾಚಾರ್ಯರು, ಸವದತ್ತಿಯ ಶ್ರೀ.ಮ.ನಿ.ಪ್ರ. ಕುಮಾರ ಸ್ವಾಮಿಗಳು, ಈ ಎಲ್ಲ ಧರ್ಮ ಗುರುಗಳು ಹಾನಗಲ್ಲ ಶ್ರೀಗಳವರು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಯೋಗಾಸನ, ಯೋಗಕ್ರಿಯೆಗಳು ಸಾಧನೆಯಲ್ಲಿ ಹಾಗೂ ನಿಷ್ಣಾತರಾದರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಮೂರುಸಾವಿರಮಠ, ಹುಬ್ಬಳ್ಳಿ ಇವರು ಸಹ ಬಾಲ್ಯದಲ್ಲಿಯೇ ಪವಿತ್ರಾಶ್ರಮವಾದ ಶಿವಯೋಗ ಮಂದಿರಕ್ಕೆ ಆಗಮಿಸಿ ವಿದ್ಯಾಭ್ಯಾಸ ಮತ್ತು ಯೋಗಾಭ್ಯಾಸವನ್ನು ಪ್ರಾರಂಭಿಸಿದರು. ಒಟ್ಟಿನಲ್ಲಿ ಶ್ರೀಗಳವರು, ಮತ್ತು ಅವರ ಶಿಷ್ಯರು ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ.

ವಿಶಾಲಬುದ್ದಿ , ಬ್ರಹ್ಮ-ತೇಜೋವೃದ್ಧಿ ಮುಂತಾದ ಬಗೆಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿದ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಲೋಕದ ಬಂಧನ ಮಾಯೆಯನ್ನು ಒದ್ದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸಿದರು.

ಈ ರೀತಿ ಹಾನಗಲ್ಲ ಶ್ರೀಗಳವರು ಸ್ವತಃ ಯೋಗಸಾಧಕರಾಗಿ ಮತ್ತು ಇನ್ನುಳಿದ ಯೋಗಸಾಧಕರಿಗೆ ಬೋಧಕರಾಗಿ ಅವರನ್ನು ಸಮಾಜದ ಸಮರ್ಥ ಧರ್ಮಗುರುಗಳನ್ನಾಗಿ ಮಾಡಿದರು. ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲೊಂದಾದ ಯೋಗಶಾಸ್ತ್ರವನ್ನು ಬೆಳಕಿಗೆ ತಂದರು, ಹೀಗೆ ಶ್ರೀಗಂಧದಂತೆ ಜೀವನವನ್ನು ಸವೆಸಿ ವಿಶ್ವ ಕುಟುಂಬಿಗಳಾದ ಹಾನಗಲ್ಲ ಶ್ರೀಗಳವರ ಪುಣ್ಯಶರೀರದಲ್ಲಿಯೇ ಇದ್ದಕ್ಕಿದ್ದಂತೆ ಒಂದುದಿನ ಅಸ್ವಸ್ಥತೆ ಆವಿರ್ಭವಿಸಿ, ಅತಿಶಯಕ್ಕಿಟ್ಟಿತು  ಆ ಕ್ಷಣದಲ್ಲಿಯೂ ಅವರು ಸಮಾಜದೇಳ್ಗೆಗಾಗಿ, ಸಮಾಜದ ಐಕ್ಯತೆಗಾಗಿ ಚಿಂತಿಸುತ್ತಿದ್ದರು. ಕೊನೆಗೆ ಅವರು ಮಾಘ ಬಹುಳ ಸಪ್ತಮಿ ೧೯೩೦ ನೇ ಇಸ್ವಿಯ

ಗುರುವಾರ ಸಂಜೆಯ ಹೊತ್ತಿಗೆ ಶಿವೈಕ್ಯರಾಗಿ, ತಮ್ಮ ಬಳಗವನ್ನೆಲ್ಲಾ ತಬ್ಬಲಿಯಾಗಿ ಮಾಡಿದರು. ಇಂತಹ ಮಹಾಶಿವಯೋಗಿಗಳು ಇನ್ನೊಮ್ಮೆ ಇಳೆಗೆ ಅವತರಿಸಿ ಬರಲೆಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.

 (ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

ಲೇಖಕರು ; ಕೆ. ಎಸ್. ಪಲ್ಲೇದ

ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗವು ವಿಶ್ವಕಲ್ಯಾಣಕ್ಕಾಗಿ ಮತ್ತು ಮಾನವನ ಶ್ರೇಯೋಭಿವೃದ್ಧಿಗಾಗಿ ನಮ್ಮ ಪೂರ್ವಜರು ನೀಡಿದ ಮಹಾನ್ ಕೊಡುಗೆಯಾಗಿದೆ. ಈ ಕೊಡುಗೆಯನ್ನು ಆದಿಶಿವನಿಂದ ಮೊದಲ್ಗೊಂಡು ವಶಿಷ್ಠ, ಪತಂಜಲಿ, ಸ್ವಾತ್ಮಾರಾಮ ಇನ್ನಿತರೆ ಋಷಿಮುನಿಗಳಾದಿಯಾಗಿ, ಅಲ್ಲಮ, ಬಸವಾದಿ ಶಿವಶರಣರು ಮನುಕುಲಕ್ಕೆ ಕರುಣಿಸಿದ ವರಪ್ರಸಾದವಾಗಿದೆ. ಮುಖ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

ಇತ್ತೀಚೆಗೆ ವಿಶ್ವಸಂಸ್ಥೆಯು “ಜೂನ್ 21 ಅಂತರಾಷ್ಟ್ರೀಯ ಯೋಗ ದಿನ” ಎಂದು ಘೋಷಿಸಿದ ಮೇಲಂತೂ “ಯೋಗ ಎಲ್ಲರಿಗಾಗಿ, ಎಲ್ಲರೂ ಯೋಗಕ್ಕಾಗಿ, ಯೋಗದಲ್ಲಿ ಎಲ್ಲಾ ಐತಿ “ ಎಂಬ ಹೆಗ್ಗಳಿಕೆಯಿಂದ ಯೋಗವು ಜಗತ್ಪ್ರಸಿದ್ಧಿಯಾಗಿದೆ. ಅಂದು ಅಧ್ಯಾತ್ಮ ಸಾಧನೆಗೆ ಮೋಕ್ಷ ಸಂಪಾದನೆಗೆ ಸೀಮಿತವಾಗಿದ್ದ ಯೋಗ ಇಂದು ಕೊರೋನಾ ಕಾಯಿಲೆಯಂತ ಮಾರಕ ಕಾಯಿಲೆಗಳಿಗೆ ಮಹಾಮದ್ದಾಗಿ ಮಾನವನ ನೆಮ್ಮದಿಯ ಬದುಕಿಕೊಂದು ಆಧಾರಸ್ತಂಭವಾಗಿದೆ. ವಿಶ್ವಶಾಂತಿ ಸ್ಥಾಪನೆಗೆ ಅಡಿಪಾಯವಾಗಿದೆ. ಹಾಗೆಯೇ ಯೋಗವು ಒಂದು ವಿಸ್ಮಯ ವಿಜ್ಞಾನವೂ ಆಗಿದ್ದು, ಪ್ರಸ್ತುತ ದಿನಮಾನಕ್ಕೆ ಕಾಮಧೇನು, ಕಲ್ಪವೃಕ್ಷ ಸ್ವರೂಪದಲ್ಲಿದೆ.

ಇಷ್ಟೆಲ್ಲ ಶ್ರೇಷ್ಠತೆ ಹೊಂದಿರುವ ಯೋಗವು ಋಷಿಮುನಿಗಳಿಂದ ಪರಂಪರಾಗತವಾಗಿ ಗುರು-ಶಿಷ್ಯ ಬಳಗದಿಂದ ಬೆಳೆದು ಬಂದಿದೆ. ಈಗ ಬಾಬಾ ರಾಮದೇವ, ರವಿಶಂಕರ ಗುರೂಜಿ ಮತ್ತು ಅನೇಕ ಯೋಗ ಕೇಂದ್ರಗಳು ಯೋಗ ಪ್ರಸಾರ ಸೇವೆಯಲ್ಲಿ ಇರುವರು. ಈ ನಿಟ್ಟಿನಲ್ಲಿ ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ ವಿಶಿಷ್ಟ ರೀತಿಯಲ್ಲಿ ನಿರತವಾಗಿರುವುದು.

ಪೂರ್ವ ಕಾಲದಿಂದಲೂ ಮಠಗಳು ಅನ್ನ, ಆಶ್ರಯಗಳಿಗೆ ಹೆಸರುವಾಸಿಯಾಗಿದ್ದರೆ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠವು ಅನ್ನ, ಅಕ್ಷರ, ಆರೋಗ್ಯ ಸೇವೆಗಳಿಗೆ ಪ್ರಸಿದ್ಧಿಯಾಗಿದೆ. ಆರೋಗ್ಯ ಸೇವೆಗಾಗಿಯೇ ಈ ಮಠದ 19 ನೆಯ ಪೀಠಾಧಿಪತಿಗಳಾದ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಎಂಬ ನಾಮೆಯಿಂದ ಯೋಗ ಪಾಠಶಾಲೆ ಸ್ಥಾಪಿಸಿದರು (19-05-1975). ಯೋಗ ಶಬ್ದವೇ ಕೇಳರಿಯದ ವಾತಾವರಣವಿದ್ದಾಗ ಗದುಗಿನ ಯೋಗ ಪಾಠಶಾಲೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಉದಯವಾಗಿರುವದು ಸೋಜಿಗ ಮತ್ತು ನಮ್ಮ ಸೌಭಾಗ್ಯವಾಗಿದೆ. ಈಗ ಇದು ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆ ಎಂದು ಪ್ರಚಲಿತದಲ್ಲಿದೆ.

ಯೋಗ ಪಾಠಶಾಲೆ ಯೋಗ ಪ್ರಸಾರ ಸೇವೆಗಾಗಿ ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ವ್ಯಕ್ತಿಯ ಆರೋಗ್ಯ ಮತ್ತು ಸಮಾಜ ಸ್ವಾಸ್ಥ್ಯಯ ಸಂರಕ್ಷಣೆ ಪ್ರಮುಖವಾಗಿದ್ದು, ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ, ಆರೋಗ್ಯವಂತನಾಗಿರುವುದೇ ಆರೋಗ್ಯ. ಈ ಆರೋಗ್ಯ ಶ್ರೀಸಾಮಾನ್ಯರೆಲ್ಲರಿಗೂ ದೊರೆಯಬೇಕೆಂಬುದು ಮೂಲ ಧ್ಯೇಯವಾಗಿದೆ. ಅಂತೆಯೇ ಯೋಗ ಪಾಠಶಾಲೆಯು ಸ್ಥಾಪನೆಯಾದಂದಿನಿಂದ ಈ ತನಕ ಯೋಗದ ಮುಂಚೂಣಿಯಲ್ಲಿ ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ, ರಾಷ್ಟ್ರ ಸೇವಾ ಕಾರ್ಯಗಳಲ್ಲಿ ನಿರತವಾಗಿರುವುದು.

ಆರೋಗ್ಯ ಸೇವೆ : “ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಸಾಮಾಜಿಕ ಮತ್ತು ಅಧ್ಯಾತ್ಮಿಕ ಯೋಗ ಕ್ಷೇಮದ ಸ್ಥಿತಿಯಾಗಿದೆ ಹಾಗೂ ಕೇವಲ ರೋಗ ಅಥವಾ ದುರ್ಬಲತೆಯ ಅನುಪ ಸ್ಥಿತಿಯಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಆರೋಗ್ಯವೇ ನಮ್ಮೆಲ್ಲರಿಗೆ ಭಾಗ್ಯವಾಗಿದೆ. ನಾವೆಲ್ಲ ಆರೋಗ್ಯವಾಗಿದ್ದರೆ ಮಾತ್ರ ನಮಗೆ ಎಲ್ಲ ಭಾಗ್ಯ (ಸಂಪತ್ತು) ಗಳು ದೊರೆಯುವವು. ಆರೋಗ್ಯವಿಲ್ಲದ ಬಾಳು ಬರಿಗೋಳು. ಪ್ರಸ್ತುತದಲ್ಲಿ ಕೊರೋನಾ ಕಾಯಿಲೆಯಿಂದ, ವೈಯ್ಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಇನ್ನಿತರೆ ಸರ್ವ ಕ್ಷೇತ್ರಗಳಲ್ಲಿ ಅನಾರೋಗ್ಯ, ಅವ್ಯವಸ್ಥೆಗಳಿಂದ ಜನತೆ ನಾನಾ ಸಂಕಷ್ಟಗಳಿಗೆ ಬಲಿಯಾಗಿದ್ದಾರೆ. ವ್ಯಕ್ತಿ ಆರೋಗ್ಯವಂತನಾಗಿದ್ದರೆ ಇವೆಲ್ಲ ಸಂಕಷ್ಟಗಳು ಇಲ್ಲದಾಗುವವು. ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪರಿಣಾಮಕಾರಿ ಸಾಧನೆ ಮಾರ್ಗವಾಗಿದೆ. ಆದ್ದರಿಂದಲೇ ಯೋಗ ಪಾಠಶಾಲೆಯು ಪ್ರತಿದಿನ ಬೆಳಿಗ್ಗೆ ಜಾತಿ, ಮತ, ಪಂಥ, ಸ್ತ್ರೀ-ಪುರುಷ ವಯೋಮಿತಿಗಳ ಭೇದವಿಲ್ಲದೆ ಆಸಕ್ತರಿಗೆ ಯೋಗ ಸಾಧನೆ, ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಹಾಗೆಯೇ ಸಾಯಂಕಾಲ ಮಹಿಳಾ ಶಿಕ್ಷಕಿಯರಿಂದ ಮಹಿಳೆಯರಿಗಾಗಿ ಯೋಗ ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಇದಲ್ಲದೆ ದಸರಾ ಬೇಸಿಗೆ ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಬೇಡಿಕೆ ಇದ್ದಲ್ಲಿ ಸಾರ್ವಜನಿಕವಾಗಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿ ಜನತೆಯಲ್ಲಿ ಆರೋಗ್ಯ ಯೋಗದ ಅರಿವು ಮೂಡಿಸುತ್ತಿದೆ. ಜನತೆಯ ಆರೋಗ್ಯ ಭಾಗ್ಯವೇ ದೇಶದ ನಿಜವಾದ ಸಂಪತ್ತಾಗಿದೆ.

ಶಿಕ್ಷಣ ಸೇವೆ : ಶಕ್ತಿಗಳಲ್ಲಿ ಯಾಂತ್ರಿಕ ಶಕ್ತಿ, ವಿದ್ಯುತ್ ಶಕ್ತಿ, ಸಂಘಟನಾ ಶಕ್ತಿ, ದೈವ ಶಕ್ತಿ ಮುಂತಾದ ಶಕ್ತಿಗಳಿಗಿಂತ ಯೋಗ ಶಿಕ್ಷಣ ಶಕ್ತಿ ಹೆಚ್ಚಿನದಾಗಿದೆ. ಕಾರಣ ಯೋಗ ಶಿಕ್ಷಣ ಶಕ್ತಿಯಿಂದ ನಾವು ಇನ್ನುಳಿದ ಸರ್ವ ಶಕ್ತಿಗಳನ್ನು ಪಡೆಯಬಹುದು. ಇಂದು ದೇಶಕ್ಕೆ ಬೇಕಾಗಿರುವುದು ಯುವಶಕ್ತಿ. ಈ ಯುವಶಕ್ತಿ ಬಲಗೊಳಿಸಲು ಮತ್ತು ಯುವಕರಲ್ಲಿ ಯೋಗಾಸಕ್ತಿ ಬೆಳೆಸಲು ಯೋಗ ಪಾಠಶಾಲೆಯು ತನ್ನ ಅಂಗ ಸಂಸ್ಥೆಯಾದ ಬಸವ ಯೋಗ ಕೇಂದ್ರದಿಂದ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಜ್ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಜ್ ಕೋರ್ಸ್‍ಗಳನ್ನು ನಡೆಸುತ್ತಿದೆ. ಪ್ರತಿವರ್ಷ 50-60 ವಿದ್ಯಾರ್ಥಿಗಳು ಯೋಗ ಪದವಿ ಪಡದು ಯೋಗ ಶಿಕ್ಷಣ ಪ್ರಸಾರಕ್ಕೆ ಸಿದ್ಧರಾಗುತ್ತಿದ್ದಾರೆ. ಯೋಗ ವಿಷಯವಾಗಿ ಉಪನ್ಯಾಸ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಯೋಗ ಶಿಕ್ಷಣ ಸೇವೆ ಸಲ್ಲಿಸುತ್ತಿದೆ.

ಸಾಂಸ್ಕೃತಿಕ ಸೇವೆ : ಇಂದು ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮರುಳಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರಿಯಬಾರದೆಂಬ ಅಭಿಲಾಷೆಯಿಂದ ಯೋಗ ಪಾಠಶಾಲೆಯು ಸಾಂದರ್ಭಿಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನತೆಯ ಮನ ಪರಿವರ್ತನಗೊಳಿಸುತ್ತಲಿದೆ. ಉದಾಹರಣೆಯಾಗಿ ಹೇಳುವುದಾದರೆ-

ದಸರಾ, ಬೇಸಿಗೆ ರಜಾ ದಿನಗಳಲ್ಲಿ ಪ್ರತಿವರ್ಷ ಶಾಲಾ ಮಕ್ಕಳಿಗಾಗಿ “ ಸಂಸ್ಕೃತಿ -ಸಂಸ್ಕಾರ” ಶಿಬಿರ ನಡೆಸುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಭಾರತೀಯ ಕ್ರೀಡೆ, ಕಲೆ, ಸಾಹಿತ್ಯ, ಆದರ್ಶ ಮಹಾತ್ಮರ ಪರಿಚಯ, ಪರಂಪರೆ, ಸಂಸ್ಕಾರಗಳ ತರಬೇತಿ ನೀಡಲಾಗುತ್ತಿದೆ. ಇವುಗಳ ಜೊತೆಯಲ್ಲಿ ನೀಡುವ ಯೋಗ ತರಬೇತಿಯು ಮಕ್ಕಳಲ್ಲಿ ಆತ್ಮಸ್ಥೈರ್ಯ, ನೈತಿಕ ಬಲಗಳನ್ನು ಹೆಚ್ಚಿಸಿ ಅವರು ಸುಸಂಸ್ಕೃತರಾಗಿ ಬೆಳೆಯಲು ಸಹಾಯಕವಾಗುತ್ತದೆ. ಹೀಗೆ ಯೋಗ ಪಾಠಶಾಲೆಯು ಸಾಂಸ್ಕೃತಿಕವಾಗಿ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೋಳಿಸುತ್ತಿದೆ.

ಧ್ಯಾತ್ಮ ಸೇವೆ : ಇಂದು ನಾವು ವೈಜ್ಞಾನಿಕವಾಗಿ ಮುಂದುವರೆದು ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದರೂ ಅಧ್ಯಾತ್ಮ ಕೊರತೆಯಿಂದ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ. ಆಧ್ಯಾತ್ಮ ಎಂದರೆ ನಂಬಿಗೆ, ಒಳ್ಳೆಯದು ಎಂದು ಅರ್ಥೈಸಬಹುದು. ವ್ಯಕ್ತಿಯಲ್ಲಿ ವಿಶ್ವಾಸ ಮತ್ತು ಒಳ್ಳೆಯದನ್ನು ಗುರುತಿಸುವ ಮನೋಭಾವ ಹೆಚ್ಚಿಸಲು ಯೋಗ ಪಾಠಶಾಲೆಯು ತನ್ನ ಸಮೂಹ ಸಂಸ್ಥೆಗಳ ಜೊತೆಯಲ್ಲಿ ಪ್ರತಿ ತಿಂಗಳಿನ ಕೊನೆಯ ಬುಧವಾರದಂದು “ಮಾಸಿಕ ವಚನ ಶ್ರವಣ” ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಶಿವಶರಣರ ವಚನ ಮತ್ತು ಮಹಾತ್ಮರು, ಸಾಧು ಸತ್ಪುರುಷರು ತಿಳಿಸಿದ ಮಾತುಗಳ ಕುರಿತು ಅನುಭವಿಕರು ಉಪನ್ಯಾಸ ನೀಡುತ್ತಾರೆ. ಈಗಾಗಲೇ 47 ಮಾಸಿಕ ವಚನ ಶ್ರವಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೇಯೆ ಧರ್ಮ ಭಾವ ಬೆಳೆಸಲು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ವಾರ ಕಾಲ “ಸಾಪ್ತಾಹಿಕ ವಚನ ಶ್ರಾವಣ” (ವಚನ ಸಪ್ತಾಹ) ಕಾರ್ಯಕ್ರಮ ನಡೆಸಿ ಆ ಕಾರ್ಯಕ್ರಮದಲ್ಲಿ ಒಂದು ವಾರ ಕಾಲ ದಿನಕ್ಕೊಂದು ವಚನ ವಿಶ್ಲೇಷಣೆಯನ್ನು ಬಲ್ಲಿದವರಿಂದ ತಿಳಿಸಲಾಗುತ್ತದೆ ಇಂತಹ ಕಾರ್ಯಕ್ರಮಗಳಿಂದ ವ್ಯಕ್ತಿಯಲ್ಲಿ `ಸ್ವಧರ್ಮ ರಕ್ಷಣೆ ಪರಧರ್ಮ ಸಂಹಿಷ್ಣುತೆ’ ಭಾವ ಮೂಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು.

ರಾಷ್ಟ್ರ ಸೇವೆ : ರಾಷ್ಟ್ರ ಸೇವೆ ಎಂದರೆ ರಾಷ್ಟ್ರೋನ್ನತಿಗಾಗಿ ಸಮಾಜ ಅಭಿವೃದ್ಧಿಗಾಗಿ ಸರಕಾರ ಕೈಕೊಂಡ ಯೋಜನೆ ಯೋಚನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು. ಇಲ್ಲವೆ ಸ್ವತಃ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವದು ರಾಷ್ಟ್ರ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪಾಠಶಾಲೆಯು ರಾಷ್ಟ್ರ ಪ್ರಗತಿಗಾಗಿ ಪೂರಕವಾಗುವ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ರಾಷ್ಟ್ರೀಯ ಹಬ್ಬ, ನಾಡ ಹಬ್ಬ, ದಿನಾಚರಣೆ, ಜಯಂತ್ಯೋತ್ಸವ,  ಸ್ಮರಣೋತ್ಸವ, ಮುಂತಾದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾರ್ಯಗತಗೊಳಿಸುವದು ಉದಾಹರಣೆಗಾಗಿ ಹೊಸ ವರ್ಷಾಚರಣೆಯನ್ನು ಹರ್ಷೋತ್ಸವ ಎಂದು, ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಸಂಭ್ರಮ ಎಂದು ವಿಶ್ವ ಪರಿಸರ ದಿನದಂದು ವನಮಹೋತ್ಸವ ಆಚರಿಸುವುದು. ಅಂತರಾಷ್ಟ್ರೀಯ ಯೋಗ ದಿನ ನಿಮಿತ್ತ ಯೋಗ ಸಪ್ತಾಹ ಕಾರ್ಯಕ್ರಮ ಆಚರಿಸುವುದು ಶಿಕ್ಷಕರ ದಿನಾಚರಣೆ ದಿನ ಯೋಗ ಕೋರ್ಸ್, ವರ್ಗಗಳ ಪ್ರಾರಂಭೋತ್ಸವ, ಪ್ರಕೃತಿ ಚಿಕಿತ್ಸಾ ದಿನಾಚರಣೆ ಮುಂತಾದವುಗಳು.

ವಿಶೇಷವಾಗಿ ರಾಷ್ಟ್ರ ಸೇವೆ ಸಲ್ಲಿಸುವುದಕ್ಕೋಸ್ಕರ ಪ್ರತಿ ತಿಂಗಳಿನ ಪ್ರತಿ ರವಿವಾರ ದಿನ ಯೋಗ ತರಬೇತಿ ನಂತರ “ಅನ್ವೇಷಣೆ” ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಚಲಿತ ವಿಷಯ, ಸಮಸ್ಯೆ-ಸಮಾಧಾನಗಳ ಕುರಿತು ಚರ್ಚೆ ಮಾಡಲಾಗುವುದು. ಅಂದರೆ 12 ನೇ ಶತಮಾನದ ಅನುಭವ ಮಂಟಪ ಮಾದರಿಯಲ್ಲಿ `ಅನ್ವೇಷಣ’ ಕಾರ್ಯಕ್ರಮ ನಡೆಸುವುದು. ಈಗಾಗಲೆ 381 “ಅನ್ವೇಷಣೆ” ಕಾರ್ಯಕ್ರಮಗಳು ನಡೆದಿವೆ.

ಇಷ್ಟೆಲ್ಲ ಸೇವೆಗಳ ಸಫಲತೆಗೆ ಯೋಗ ಪಾಠಶಾಲೆಯ ಸಮೂಹ ಸಂಸ್ಥೆಗಳಾದ ಬಸವ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಬಸವ ಯೋಗ ಚಿಂತನ ಕೂಟ, ಕುಮಾರೇಶ್ವರ ಯೋಗ ಜಿಮ್, ಹಳೆಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಕಾರ ಮತ್ತು ಪ್ರಸ್ತುತ ಶ್ರೀಮಠದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳವರ ಕೃಪಾಶೀರ್ವಾದ, ಸಾರ್ವಜನಿಕರ ಪ್ರೋತ್ಸಾಹಗಳು ಯೋಗ ಪಾಠಶಾಲೆಗೆ ಮೂಲ ಬಂಡವಾಳಗಳಾಗಿವೆ. ಇನ್ನೂ ತನಕ ಸರಕಾರದಿಂದ ಯಾವದೇ ರೀತಿಯ ಅನುದಾನ ಮೊತ್ತವನ್ನು ಪಡೆಯದಿರುವುದು ವಿಶೇಷವಾಗಿದೆ.

ಯೋಗ ಪಾಠಶಾಲೆಯು ಮುಂಬರುವ 2025 ಕ್ಕೆ ತನ್ನ ಸುವರ್ಣೋತ್ಸವ (1975-2025) ಆಚರಣೆಯ ಸವಿನೆನಪಿಗಾಗಿ ಸುಸಜ್ಜಿತ ಯೋಗ ಮಂದಿರ, ಯೋಗ ಗ್ರಂಥಾಲಯ, ಯೋಗ ವಸ್ತು ಸಂಗ್ರಹಾಲಯ, ಯೋಗ ಉದ್ಯಾನವನ, ಯೋಗ ಚಿಕಿತ್ಸಾಲಯ ಯೋಗ ಸಂಶೋಧನಾಲಯಗಳನ್ನು ನಿರ್ಮಿಸುವ ಯೋಜನೆಗಳ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆಯ ಅಭಿವೃದ್ಧಿ ಸೇವಾ ಸಮಿತಿ ಸ್ಥಾಪಿಸಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯು ಯೋಗ ಪ್ರಸಾರ ಸೇವೆಯನ್ನು ಯೋಗ ಶಿಬಿರ, ಸ್ಪರ್ಧೆ, ತರಬೇತಿವರ್ಗ, ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನ, ಉತ್ಸವಗಳ ಮೂಲಕ ಕಳೆದ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಉಚಿತವಾಗಿ ನಿತ್ಯ ನಿರಂತರವಾಗಿ ಎಲೆಮರೆಯ ಕಾಯಿಯಂತೆ ಯೋಗ ಪ್ರಸಾರ ಸೇವೆಯಲ್ಲಿ ನಿರತವಾಗಿರುವದು ಶ್ಲಾಘನೀಯ ವಿಷಯವಾಗಿದೆ.

ಯೋಗ ಪ್ರಸಾರ ಸೇವೆಗೆ ಸರಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದೊರೆತರೆ ಸದೃಢ, ಸಮೃದ್ಧ ಭಾರತ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಈ ಕಾರ್ಯ ಯಶಸ್ಸಿಗೆ ನಾವೆಲ್ಲರೂ ಕೈಜೋಡಿಸೋಣ. ಯೋಗ ಕಲಿಯೋಣ-ಕಲಿಸೋಣ. `ಯೋಗದಿಂದ ಆರೋಗ್ಯ-ಆರೋಗ್ಯದಿಂದ ಅಭಿವೃದ್ಧಿ’ ವಾಣಿ ಸಾರ್ಥಕಗೊಳಿಸೋಣ.

ಶ್ರೀಕಂಠ.ಚೌಕೀಮಠ.ವ್ಯವಸ್ಥಾಪಕ -ಸಂಪಾದಕ.

ಸಹೃದಯರಿಗೆ ನನ್ನ ನಮಸ್ಕಾರಗಳು.

ಬಸವ ಜಯಂತಿಯ ಪವಿತ್ರ ದಿನದಂದು (೧೪ -೦೫-೨೦೨೧) “ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ , ಅಂತರ್ಜಾಲದ ಮೂಲಕ ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.

“ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ ನ್ನು ಅಂತರ್ಜಾಲದ ಮೂಲಕಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.
ಅಪೂರ್ವ ಸಂದರ್ಭದಲ್ಲಿ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ , ಪೂಜ್ಯ ಕೊಟ್ಟೂರು ದೇಶಿಕರು ದರೂರ, ಪೂಜ್ಯ ನಾಗಭೂಷಣ ದೇವರು ಅಡವಿಅಮರೇಶ್ವರ ಪೂಜ್ಯರು ಉಪಸ್ಥಿತರಿದ್ದರು .

 

ಸುಕುಮಾರ ಬ್ಲಾಗ್‌ ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿ ,ಸಲಹೆ ,ಪ್ರತಿಕ್ರಿಯೆ ,ಪ್ರಶಂಸೆ ಮತ್ತು ಪ್ರೋತ್ಸಾಹದಾಯಕ ಸಂದೇಶಗಳ ಮಹಾಪೂರದಲ್ಲಿ ಮಿಂದೆದ್ದು,ತಪ್ಪುಗಳನ್ನುತಿದ್ದಿಕೊಳ್ಳುತ್ತ ,ಹೊಸ ರೂಪದ ಸುಕುಮಾರ ಬ್ಲಾಗ್‌ ನ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇನೆ.

ಪ್ರಸ್ತುತ ೨೦೨೧ನೇ ವರ್ಷ, ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಶತಮಾನೋತ್ಸವ .ತಮ್ಮ ಭೌತಿಕ ಶರೀರದ ಅಂತಿಮ ದಿನವನ್ನು “ಶಿವರಾತ್ರಿ” ಎಂದು ಸ್ವತಃ ಶಿವಯೋಗಿಗಳೇ ಮುನ್ಸೂಚನೆ ನೀಡಿದ ಪವಿತ್ರ ದಿನ ಕ್ಕೆ ನೂರು ವಸಂತಗಳ ಸಂಸ್ಮರಣೆ ಯಾಗಿರುತ್ತದೆ.

ಪೂಜ್ಯರ ಸ್ಮರಣೆ  ಮತ್ತು ಸುಕುಮಾರ ಬ್ಲಾಗ್‌ ನ ವಿಶೇಷ ಸಂಚಿಕೆಯ ಅರ್ಪಣೆ  ಪೂಜ್ಯದ್ವಯರ ಅವಿನಾಭಾವ ಸಂಬಂಧದ ಫಲಶೃತಿಗಳು.

ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳು ,ಪೂಜ್ಯ ಹಾನಗಲ್ಲ ಕುಮಾರಶಿವಯೋಗಿಗಳಿಗೆ  ಆದರ್ಶಪ್ರಾಯವಾದವರು . ಅಥಣಿ ಶಿವಯೋಗಿಗಳ ಮೇಲಿನ ಶ್ರೀ ಕುಮಾರ ಶಿವಯೋಗಿಗಳ ಗೌರವಕ್ಕೆ ಒಂದು ಘಟನೆಯನ್ನು  ಸ್ಮರಿಸಿಕೊಳ್ಳುತ್ತೇನೆ. ಕವಿರತ್ನ ದ್ಯಾಂಪುರ ಚೆನ್ನ ಕವಿಗಳು ಒಂದೊಮ್ಮೆ ಶ್ರೀ ಕುಮಾರ ಶಿವಯೋಗಿಗಳನ್ನು ಹೊಗಳಿ ಬರೆದ ಪದ್ಯವನ್ನು ಶ್ರೀ ಕುಮಾರ ಶಿವಯೋಗಿಗಳ ಮುಂದೆ ವಾಚನ ಮಾಡಿದರು.ಹೊಗಳಿಕೆಯ ಹಾಡನ್ನು ಕೇಳಿ ಪ್ರಚಾರ ಪ್ರಿಯರಲ್ಲದ ಶ್ರೀ ಕುಮಾರ ಶಿವಯೋಗಿಗಳು ಕೋಪಿಸಿಕೊಂಡು “ಚೆನ್ನಯ್ಯ !! ಇದೇ ಎನು ನಿನ್ನ ಕವಿತ್ವದ ಸದುಪಯೋಗ ? ಸಾಮಾನ್ಯ ವ್ಯಕ್ತಿಯನ್ನು ಹೊಗುಳುವುದೆ? ಕೀರ್ತಿಸಲು ನಿನಗೆ ಶಿವಶರಣರಿಲ್ಲವೆ ? ಅಥಣಿ ಶಿವಯೋಗಿಗಳಂತಃ ಮಹಾತ್ಮರಿಲ್ಲವೆ ?  ಎಂದು ನುಡಿದ ಸನ್ನಿವೇಶ .ಕವಿಗಳು “ಎನ್ನೊಡೆಯ ತಪ್ಪಾಯ್ತು ಮನ್ನಿಸಬೇಕೆಂದು ಎಂದು ಕ್ಷಮೆಯಾಚಿಸಿದ ಪ್ರಸಂಗ ವನ್ನು ಸ್ವತಃ ದ್ಯಾಂಪುರ ಚೆನ್ನ ಕವಿಗಳು ೫-೩-೧೯೪೬ರಂದು ಶಿವಯೋಗಮಂದಿರದ ಜಾತ್ರೆಯ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ  ಪ್ರಾಣ ಬಿಡುವ ಕೊನೆಯ ಕ್ಷಣದಲ್ಲಿ ಹೇಳಿದ ಮಾತುಗಳು.

ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ .

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶಿವಯೋಗಿಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

 

( ಧಾರವಾಡ ಮುರುಘಾಮಠದಲ್ಲಿರುವ  ಪೂಜ್ಯ  ಅಥಣಿಯ ಶಿವಯೋಗಿಗಳ ಶಿಲಾಮೂರ್ತಿ )

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶಿವಯೋಗಿಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ

 

.

(ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳು)

ಪೂಜ್ಯ ಅಥಣಿ ಶಿವಯೋಗಿಗಳ ಸ್ಮರಣೋತ್ಸವ ವಿಶೇಷ ಸಂಚಿಕೆಗೆ ತಮ್ಮ ಅಮೂಲ್ಯ ಲೇಖನಗಳನ್ನು ಕೊಟ್ಟ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ (ಸಂಗ್ರಹ ಸಹಾಯ: ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ ಲೇಖನ).

ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

ಶ್ರೀ  ಡಾ.ಪಂಚಾಕ್ಷರಿ ಹಿರೇಮಠ  (ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಶ್ರೀ ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

ಶ್ರೀ ಡಾ . ಬಿ . ಆರ್ . ಹಿರೇಮಠ (ಸುಕುಮಾರ : ಅಗಸ್ಟ ೨೦೦೨)

ಶ್ರೀ  ಡಾ . ಸಿದ್ದಣ್ಣ .ಬ . ಉತ್ನಾಳ (ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಶ್ರೀ ಪ್ರಕಾಶ ಗಿರಿಮಲ್ಲನವರ,

ಭಕ್ತಿಗೀತೆಯನ್ನು ಸಮರ್ಪಿಸಿದ ಚಿತ್ರದುರ್ಗದ ಕುಮಾರಿ ಚಿನ್ಮಯಿ ರೇವಣಸಿದ್ದಪ್ಪ ಹೆಗಡಾಳ ಹಾಗು ಮಂಗಳಾರತಿ ಯನ್ನು ಸಮರ್ಪಿಸಿದ ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ ತುಮುಕೂರ ಅವರಿಗೆ,

ಪೂಜ್ಯರಿಗೆ ಮತ್ತು ಮಹನಿಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ