ಲೇಖಕರು : ಪ್ರಕಾಶ ಗಿರಿಮಲ್ಲನವರ

ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ
ಹಡಪದಪ್ಪಣ್ಣಗಳ ಕ್ಷೌರವನು ನಾಗೈವೆ
ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡುವೆ
ವೀರ ಹರಳೇಶಂಗೆ ಜೋಡ ನಾ ಮಾಡಿಡುವೆ
ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ
ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ
ನುಲಿಯ ಚಂದಯ್ಯಗಳ ಹಗ್ಗ ಕಣಿಯಗೈವೆ
ಸಲೆ ಮಾದಾರ ಚೆನ್ನಂಗಳಂಬಲಿಯ ಮಾಡಿಡುವೆ
ಶಿವದಾಸಮಯ್ಯಗಳ ಬಟ್ಟೆಗಳ ನಾ ಮಾಳ್ಪೆ
ತವೆ ಶಂಕರಯ್ಯಗಳ ಕಪನಿಯನು ನಾ ಹೊಲಿವೆ
ಅಮುಗೆ ಸಿದ್ಧೇಶಂಗೆ ಪಾಕವನು ನಾಗೈವೆ
ಕುಂಬಾರ ಗುಂಡಯ್ಯ ನಾಂ ಮಡಿಕೆಯಂಗೈವೆ
ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ
ಆವಾವ ಕಾಯಕವ ಮಾಡಿದೊಡು ಬಸವೇಶ
ಆವಗಂ ಶರಣರು ಸೇವಿಪೆನು ಬಸವೇಶ
-ಅಥಣಿ ಶಿವಯೋಗಿಗಳು
ಇದು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳು ರಚಿಸಿದ ಪದ್ಯ. ಈ ಪದ್ಯವನ್ನು ಸಿದ್ಧಗಂಗಾಮಠದ ಲಿಂ. ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಪ್ರತಿನಿತ್ಯ ಬೆಳಗಿನ ಲಿಂಗಪೂಜಾ ಸಮಯದಲ್ಲಿ ಈ ಹಾಡನ್ನು ಹಾಡುತ್ತಿದ್ದರು. ತಮ್ಮ ಶ್ರೀಮಠದ ಸಿದ್ಧಗಂಗಾ ಮಾಸಪತ್ರಿಕೆಯ ಪ್ರಾರಂಭದ ಪುಟದಲ್ಲಿ ‘ಆವಾವ ಕಾಯಕವ ಮಾಡಿದಡೆಯೂ ಬಸವೇಶ | ಆವಗಂ ಶರಣರನು ಸೇವಿಪೆನು ಬಸವೇಶ’ ಎಂಬ ಶಿವಯೋಗಿಗಳ ಹಾಡಿನ ಸಾಲನ್ನು ಘೋಷವಾಕ್ಯವಾಗಿ ಪ್ರಕಟಿಸುತ್ತ ಬಂದಿರುವುದು ಗಮನಾರ್ಹ ಸಂಗತಿ.
12ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು, ಅವುಗಳಿಗೆ ಜೀವಂತಿಕೆ ಕೊಟ್ಟ ಪ್ರಾತಃಸ್ಮರಣೀಯರಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಗ್ರಗಣ್ಯರು. ಶಿವಯೋಗಿಗಳಿಂದ ಅಥಣಿ ಭೂಕೈಲಾಸವೆನಿಸಿತು, ತಪೋಭೂಮಿಯೆನಿಸಿತು. ಅಭಿನವ ಕಾಶಿ, ದಕ್ಷಿಣದ ಕಾಶಿ ಎನಿಸಿತು. ಶ್ರೀ ಮುರುಘೇಂದ್ರ ಶಿವಯೋಗಿಗಳು ನಡೆದಾಡುವ ದೇವರು, ಸುಳಿದಾಡುವ ಧರ್ಮ ಎಂದು ಜನಮಾನಸದಲ್ಲಿ ಖ್ಯಾತರಾಗಿದ್ದರು. ಇಂಥ ಶಿವಯೋಗಿಗಳನ್ನು ನೆನೆಯುವುದೇ ಈ ಸಮಾಜಕ್ಕೆ ಉದಯ, ಅವರನ್ನು ಮರೆಯುವುದೇ ಅಸ್ತಮಾನ!
ಅಥಣಿ ತಾಲೂಕಿನ ಕೃಷ್ಣಾನದಿ ತೀರದಲ್ಲಿರುವ ‘ಇಂಗಳಗಾಂವಿ’ ಗ್ರಾಮದ ಭಾಗೋಜಿಮಠದ ಶ್ರೀ ರಾಚಯ್ಯ-ನೀಲಮ್ಮ ದಂಪತಿಗಳ ಪುತ್ರರಾಗಿ ಮುರುಘೇಂದ್ರ ಶಿವಯೋಗಿಗಳು ಶಾಲಿವಾಹನ ಶಕೆ 1758 ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ 11ನೇ ಶುಭೋದಯದಂದು (ಕ್ರಿ.ಶ.1836) ಜನಿಸಿದರು. ರಾಚಯ್ಯನವರ ಧರ್ಮಪತ್ನಿ ನೀಲಮ್ಮನವರ ತವರು ಮನೆ ಜಮಖಂಡಿ ತಾಲೂಕಿನ ಮೈಗೂರು ಹಿರೇಮಠ. ಈ ಮೈಗೂರು ಹಿರೇಮಠದ ಮನೆತನದಲ್ಲಿ ಜನಿಸಿದ ಐದು ಜನ ವ್ಯಕ್ತಿಗಳು ಅಥಣಿ ಮೋಟಗಿಮಠದ ಅಧಿಪತಿಗಳಾಗಿದ್ದು ಒಂದು ಸುಯೋಗ. ರಾಚಯ್ಯ-ನೀಲಮ್ಮ ದಂಪತಿಗಳಿಗೆ ಒಟ್ಟು ಐದು ಜನ ಗಂಡು ಮಕ್ಕಳು. ಅವರಲ್ಲಿ ಮೂರನೆಯವರೇ ಶಿವಯೋಗಿಗಳು. ಹುಟ್ಟಿದಾಗ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಶಿವನ ತೇಜವೇ ಭೂಮಿಗಿಳಿದಂತಿದ್ದ ಗುರುಲಿಂಗಯ್ಯನವರು ಬಾಲ್ಯದಲ್ಲಿಯೇ ಧಾರ್ಮಿಕ ಸಂಸ್ಕಾರದ ಜಗತ್ತಿನಲ್ಲಿ ಬೆಳೆದರು.
ಗುರುಲಿಂಗಯ್ಯನವರು ಏಳುವರ್ಷದವರಿದ್ದಾಗ ಅಥಣಿ ಮೋಟಗಿಮಠದ ಶ್ರೀಗಳು ಇವರನ್ನು ಶ್ರೀಮಠಕ್ಕೆ ಒಪ್ಪಿಸಿರಿ ಎಂದು ರಾಚಯ್ಯನವರಿಗೆ ಹೇಳಿದರು. ಕ್ರಿ.ಶ. 1843 ರಲ್ಲಿ ಗುರುಲಿಂಗಯ್ಯನವರು ಅಥಣಿ ಗಚ್ಚಿನಮಠದ ಎರಡನೆಯ ಶ್ರೀ ಮರುಳಶಂಕರ ಮಹಾಸ್ವಾಮಿಗಳ ಸನ್ನಿಧಾನಕ್ಕೆ ಬಂದರು.
ಗಚ್ಚಿನಮಠದಲ್ಲಿಯೇ ಇದ್ದುಕೊಂಡು ಗುರುಲಿಂಗಯ್ಯನವರು ವಿದ್ಯಾರ್ಜನೆ ಮಾಡತೊಡಗಿದರು. ಮರುಳಶಂಕರ ಸ್ವಾಮಿಗಳು ಗುರುಲಿಂಗಯ್ಯನವರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶಕ್ಕಾಗಿ ಒಂದು ದಿನ ಕರೆದು ತೆಲಸಂಗಕ್ಕೆ ಹೋಗಿ ಅಲ್ಲಿಯ ಶಿವಬಸವ ದೇಶಿಕರ ಸೇವೆ ಮಾಡಲು ಅಪ್ಪಣೆ ನೀಡಿದರು. ತೆಲಸಂಗದ ಶಿವಬಸವ ದೇಶಿಕರು ಕುಷ್ಟರೋಗದಿಂದ ಬಳಲುತ್ತಿದ್ದರು. ಗುರುಲಿಂಗಯ್ಯನವರು ಗುರುಗಳ ಆಜ್ಞೆಯನ್ನು ಶಿರೋಧಾರೆಯೆಂದು ಭಾವಿಸಿ ತಕ್ಷಣ ತೆಲಸಂಗಕ್ಕೆ ಬಂದರು. ಕುಷ್ಟರೋಗದಿಂದ ಬಳಲುತ್ತಿದ್ದ ಗುರುಸ್ವರೂಪರಾದ ಶಿವಬಸವ ದೇಶಿಕರ ಸೇವೆಯನ್ನು ಮನಮುಟ್ಟಿ ಮಾಡಿದರು. ಅವರಿಗೆ ಸ್ನಾನಪೂಜಾದಿ ವ್ಯವಸ್ಥೆ ಜೊತೆಗೆ ಸರಿಯಾದ ಔಷಧೋಪಚಾರ ಮಾಡಿದರು. ಕೆಲವೇ ದಿನಗಳಲ್ಲಿ ಶಿವಬಸವ ದೇಶಿಕರ ಕುಷ್ಟರೋಗ ಕಡಿಮೆಯಾಗಿ ಮೊದಲಿನಂತಾದರು. ಈ ವಿಷಯ ತಿಳಿದ ಗಚ್ಚಿನಮಠದ ಮರುಳಶಂಕರ ಸ್ವಾಮಿಗಳು ಮನದಲ್ಲಿ ಸಂತೋಷಪಟ್ಟರು. ತಮ್ಮ ಶಿಷ್ಯ ಗುರುಲಿಂಗಯ್ಯ ‘ಸೇವಾಜೀವಿ’ ಎಂಬುದನ್ನು ಮನಗಂಡರು. ನಂತರ ಗುರುಲಿಂಗಯ್ಯನವರು ಇನ್ನಷ್ಟು ಅಧ್ಯಯನ ಮಾಡಬೇಕೆಂದು ಮಮದಾಪುರ ಗ್ರಾಮಕ್ಕೆ ಬಂದರು. ಅಷ್ಟರಲ್ಲಿ ಗುರುಗಳೂ ಮಾರ್ಗದರ್ಶಕರೂ ಆದ ಪೂಜ್ಯ ಶ್ರೀ ಮರುಳಶಂಕರ ಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ಅಥಣಿಗೆ ಧಾವಿಸಿ ಬಂದರು. ಗುರುಗಳನ್ನು ಸ್ಮರಿಸಿಕೊಂಡು ದುಃಖಿತರಾದರು. ಇದೇ ಸಂದರ್ಭದಲ್ಲಿ ಗಚ್ಚಿನಮಠದ ಪೀಠಾಧಿಪತಿಗಳಾಗಿ ಎರಡನೆಯ ಗುರುಶಾಂತ ಸ್ವಾಮಿಗಳು ಪೀಠಾರೋಹಣಗೈದರು. ಗುರುಲಿಂಗಯ್ಯನವರು ಗುರುಶಾಂತ ಶ್ರೀಗಳ ಹತ್ತಿರ ಬಂದು ತಮಗೆ ಅನುಗ್ರಹ ದೀಕ್ಷೆ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಗುರುಶಾಂತ ಸ್ವಾಮಿಗಳು ಗುರುಲಿಂಗಯ್ಯನವರಿಗೆ ನಿರಂಜನ ದೀಕ್ಷೆ ನೀಡಿ ಪರಶಿವನ ಮಗನಾದ ಮುರುಘನ್ ಹೆಸರಿನ ನೆನಪಿಗಾಗಿ ‘ಮುರುಘೇಂದ್ರ’ ಎಂದು ನಾಮಕರಣ ಮಾಡಿದರು. ಗುರುಲಿಂಗಯ್ಯ ಎಂಬ ಪೂರ್ವಾಶ್ರಮದ ಹೆಸರು ಮಾಯವಾಗಿ, ಈಗ ‘ಮುರುಘೇಂದ್ರ ಎಂಬ ನಾಮದಿಂದ ಬೆಳಗತೊಡಗಿದರು.
ಲೋಕಸಂಚಾರ
ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳಿಂದ ಶಿವಯೋಗದೀಕ್ಷೆ ಸಂಪಾದಿಸಿದ ಮುರುಘೇಂದ್ರ ಶ್ರೀಗಳು ಕ್ರಿ.ಶ. 1856ರಲ್ಲಿ ಲೋಕಸಂಚಾರ ಕೈಕೊಂಡರು. ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಲೋಕಾನುಭವ ಪಡೆಯಲು ಜಗವ ಸುತ್ತಲು ಪ್ರಾರಂಭಿಸಿದರು. ದೇಶದ ಪವಿತ್ರ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದರು. ಕೂಡಲಸಂಗಮ, ಹಂಪಿ, ಶ್ರೀಶೈಲ, ಕಾಳಹಸ್ತಿ, ಬಸವಕಲ್ಯಾಣ, ಸೊಲ್ಲಾಪುರ, ಹರಿಹರ, ದಾವಣೆಗೆರೆ, ಚಿತ್ರದುರ್ಗ, ಗವಿಪುರ, ಶಂಭುಲಿಂಗನ ಬೆಟ್ಟ, ತಲಕಾಡು, ಗೋಕರ್ಣ, ಉಳವಿ, ಬನವಾಸಿ, ಕಂಚಿ, ರಾಮೇಶ್ವರ ಮೊದಲಾದ ಕ್ಷೇತ್ರಗಳಲ್ಲಿ ಸತತ 12 ವರ್ಷಗಳ ಕಾಲ ಸಂಚರಿಸಿದರು. ಪೂಜ್ಯ ಶಿವಯೋಗಿಗಳು ಸಮಸ್ತ ದಕ್ಷಿಣ ಭಾರತವನ್ನು ಸುತ್ತಿದರು.
ಪೀಠತ್ಯಾಗ
ಶ್ರೀ ಮುರುಘೇಂದ್ರ ಶಿವಯೋಗಿಗಳು ಸತತ 12 ವರುಷಗಳ ಕಾಲ ಲೋಕಸಂಚಾರ ಮಾಡಿ ತಿರುಗಿ ಅಥಣಿ ಗಚ್ಚಿನಮಠಕ್ಕೆ ಬರುವಷ್ಟರಲ್ಲಿ ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾಗಿದ್ದರು. ಮೂರನೆಯ ಚನ್ನಬಸವ ಸ್ವಾಮಿಗಳು ಗಚ್ಚಿನಮಠದ ಅಧಿಕಾರ ಸೂತ್ರ ಹಿಡಿದುಕೊಂಡಿದ್ದರು. ಮುರುಘೇಂದ್ರ ಶ್ರೀಗಳು ಚನ್ನಬಸವ ಸ್ವಾಮಿಗಳನ್ನು ಭೇಟಿ ಮಾಡಿದರು. ಆಗಲೇ ವಯೋವೃದ್ಧರಾಗಿದ್ದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಮುರುಘೇಂದ್ರ ಶ್ರೀಗಳಿಗೆ ‘ನೀವು ಗಚ್ಚಿನಮಠದ ಪೀಠಾಧಿಪತ್ಯ ವಹಿಸಿಕೊಳ್ಳಬೇಕೆಂದು’ ಹೇಳಿದರು. ಆದರೆ ಮಠಾಧಿಪತ್ಯ ಸ್ವೀಕರಿಸುವ ಯಾವ ವಾಂಛೆಯು ಮುರುಘೇಂದ್ರ ಶ್ರೀಗಳಲ್ಲಿ ಇರಲಿಲ್ಲ. ಅದಕ್ಕಾಗಿ ಗುಹೇಶ್ವರ ಗುಹೆಯಲ್ಲಿ ತಪೋನುಷ್ಠಾನ ಮಾಡಲು ನಿರ್ಧರಿಸಿದರು. ನಲವತ್ತು ವಯಸ್ಸಿನ ಮುರುಘೇಂದ್ರ ಶ್ರೀಗಳಲ್ಲಿ ‘ಮಠಾಧಿಪತ್ಯ ಸ್ವೀಕರಿಸಲು’ ಮತ್ತೊಮ್ಮೆ ಚನ್ನಬಸವ ಸ್ವಾಮಿಗಳು ವಿನಂತಿಸಿಕೊಂಡರು. ಆದರೆ ಶಿವಯೋಗಾನಂದದಲ್ಲಿ ಸಮರಸ ಸ್ಥಿತಿಯನ್ನು ಅನುಭವಿಸುತ್ತಿದ್ದ ಮುರುಘೇಂದ್ರ ಶ್ರೀಗಳಿಗೆ ಪೀಠದ ಯಾವುದೇ ಅಧಿಕಾರ ಬೇಕಾಗಿರಲಿಲ್ಲ. ತಾವು ಇಷ್ಟಲಿಂಗಪೂಜೆ-ಶಿವಯೋಗ ಸಾಧನೆಯಲ್ಲಿ ಕಾಲಕಳೆಯುತ್ತೇವೆ. ನನ್ನ ಬದಲಾಗಿ ಸಿದ್ಧಲಿಂಗ ಚರವರೇಣ್ಯರನ್ನು ಮಠಾಧಿಕಾರಿಗಳನ್ನಾಗಿ ಮಾಡಿ ಎಂದು ಚನ್ನಬಸವ ಶ್ರೀಗಳಲ್ಲಿ ವಿನಂತಿಸಿಕೊಂಡರು. ಭಕ್ತ ಸಮುದಾಯದ ಶ್ರೀ ಸಿದ್ಧಲಿಂಗ ಚರವರೇಣ್ಯರು ಗಚ್ಚಿನಮಠದ ಅಧಿಪತಿಗಳಾಗಿ ನಿಯುಕ್ತಿಯಾದರು. ಶಿವಯೋಗಿಗಳು ನಿರಾಳರಾದರು.
ಬಸವ ಪ್ರಜ್ಞೆಯ ಸಾಕಾರ ಮೂರ್ತಿ
ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಪ್ರತಿನಿತ್ಯ ಚಿಂತನೆಗೈಯುತ್ತಿದ್ದರು. ‘ಅಪ್ಪನ ವಚನಗಳೆಂದು’ ಗೌರವದಿಂದ ಕಾಣುತ್ತಿದ್ದರು. ಸದಾಕಾಲ ತಮ್ಮ ಜೊತೆಯಲ್ಲಿ ವಚನ ಕಟ್ಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಒಬ್ಬ ಕಾಶಿ ಪಂಡಿತ ಶಿವಯೋಗಿಗಳ ಹತ್ತಿರ ಬಂದು ‘ತಾನೊಂದು ಬೃಹತ್ ಧಾರ್ಮಿಕ ಗ್ರಂಥ ರಚಿಸಿರುವೆ, ಅದನ್ನು ತಾವು ಓದಬೇಕೆಂದು’ ಶಿವಯೋಗಿಗಳಲ್ಲಿ ವಿನಂತಿಸಿಕೊಂಡ. ಆಗ ಶಿವಯೋಗಿಗಳು ತಾವು ಈಗಾಗಲೇ ಒಂದು ಗ್ರಂಥವನ್ನು ಓದುತ್ತಿರುವೆ ಅದಕ್ಕಾಗಿ ನಿಮ್ಮ ಗ್ರಂಥ ಓದಲು ಸಮಯವಿಲ್ಲ ಎನ್ನುತ್ತಾರೆ. ಆಗ ಆ ಪಂಡಿತ, ಇದನ್ನು ನಿಮ್ಮ ಹತ್ತಿರವೇ ಇಟ್ಟು ಹೋಗುವೆ, ತಾವು ಆ ಗ್ರಂಥ ಓದಿ ಮುಗಿಸಿದ ನಂತರ ಓದಿರಿ ಎನ್ನುತ್ತಾನೆ. ಆಗ ಶಿವಯೋಗಿಗಳು ‘ಅದು ಜೀವನಪರ್ಯಂತ ಓದುವ ಪುಸ್ತಕ’ ಎನ್ನುತ್ತಾರೆ. ಅಂಥ ಕೃತಿ ಯಾವುದು? ಎಂದು ಪಂಡಿತ ಆಶ್ಚರ್ಯದಿಂದ ಕೇಳುತ್ತಾನೆ. ಆಗ ಶಿವಯೋಗಿಗಳು ‘ಅದು ಅಪ್ಪನ ವಚನಗಳ ಕಟ್ಟು. ಬಸವಣ್ಣನವರ ವಚನಗಳ ಕಟ್ಟು. ಅವುಗಳನ್ನು ಓದುವುದೇ ನಮ್ಮ ಬದುಕಿನ ಬಹುದೊಡ್ಡ ಕರ್ತವ್ಯ. ಅದನ್ನು ಓದಿ ಅದರಲ್ಲಿಯ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಕ್ಷರಶಃ ಅನುಷ್ಠಾನಕ್ಕೆ ತಂದು, ಆಚರಿಸಲು ಈ ಜನ್ಮ ಸಾಕಾಗಲ್ಲ, ಅದಕ್ಕಾಗಿ ನಿಮ್ಮ ಕೃತಿ ಓದಲು ನಮಗೆ ಸಮಯವಿಲ್ಲ, ದಯವಿಟ್ಟು ತೆಗೆದುಕೊಂಡು ಹೋಗಿ’ ಎಂದು ಹೇಳುತ್ತಾರೆ. ಬಸವಣ್ಣನವರ ವಚನಗಳೆಂದರೆ ತಮ್ಮ ಪ್ರಾಣವೆಂದು ಶಿವಯೋಗಿಗಳು ಭಾವಿಸುತ್ತಾರೆ.
ಹಳ್ಳಿ ಜನರಲ್ಲಿ ಆಗ ಇನ್ನೂ ವಚನಗಳು ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಆದರೆ ಅವರಲ್ಲಿ ಬಸವಣ್ಣನವರ ಕುರಿತು ಭಕ್ತಿ ಭಾವ ಮೂಡಿಸಬೇಕೆಂದು ಶಿವಯೋಗಿಗಳು ನೂರಾರು ಹಳ್ಳಿಗಳಲ್ಲಿ ‘ಬಸವ ಪುರಾಣ’ ಏರ್ಪಡಿಸುತ್ತಾರೆ. 1884ರಲ್ಲಿ ಒಮ್ಮೆ ತೇರದಾಳದ ಪ್ರಭುದೇವರ ದೇವಸ್ಥಾನದಲ್ಲಿ ಒಂಬತ್ತು ತಿಂಗಳವರೆಗೆ ಬಸವಪುರಾಣ ಆಯೋಜಿಸುತ್ತಾರೆ. ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಬಸವ ಪುರಾಣ ಹೇಳುವಲ್ಲಿ ಅಪ್ರತಿಮ ಪಾಂಡಿತ್ಯವುಳ್ಳವರು. ಅವರನ್ನು ಅಥಣಿಗೆ ಕರೆಯಿಸಿಕೊಂಡು, ಅವರಿಂದ ಅನೇಕ ಕಡೆ ಬಸವ ಪುರಾಣ ನೆರವೇರುವಂತೆ ಮಾಡುತ್ತಾರೆ. ಇದು ಸಾಮಾನ್ಯ ಜನರಲ್ಲಿ ಬಸವ ಪ್ರಜ್ಞೆಯನ್ನು ಶಿವಯೋಗಿಗಳು ಜಾಗೃತಗೊಳಿಸಿದ ಪರಿ.
ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಗೆ ಪ್ರೇರಣೆ
ಕ್ರಿ.ಶ. 1903ರಲ್ಲಿ ಸವದತ್ತಿಯಲ್ಲಿ ಮೂರು ತಿಂಗಳ ಕಾಲ ಬಸವ ಪುರಾಣ ನೆರವೇರಿತು. ಈ ಪುರಾಣ ಮಂಗಲೋತ್ಸವಕ್ಕೆ ಅಥಣಿ ಶಿವಯೋಗಿಗಳು ದಯಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಅನೇಕ ಹರಗುರು ಚರಮೂರ್ತಿಗಳು ಆಗಮಿಸಿದ್ದರು. ಅವರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಒಬ್ಬರು. ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಈ ಸಮಾಜವನ್ನು ಹೇಗಾದರೂ ಮುಂದೆ ತರಬೇಕೆಂಬ ಬಲವಾದ ಬಯಕೆ. ಈ ಬಯಕೆಯನ್ನು ಶಿವಯೋಗಿಗಳಲ್ಲಿ ವಿನಂತಿಸಿಕೊಂಡರು. ಆ ಕಾಲದಲ್ಲಿದ್ದ ಸಮಯಭೇದಗಳು ಅಳಿಯಬೇಕು. ಸ್ವಾಮಿಗಳಲ್ಲಿ ಮೊದಲು ಏಕತೆ ಮೂಡಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ವಿನಂತಿಸಿಕೊಂಡರು. ಅಖಿಲ ಭಾರತ ವೀರಶೈವ ಮಹಾಸಭೆ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಆಲೋಚನೆಯೂ ಈ ಸಂದರ್ಭದಲ್ಲಿ ಮೂಡಿತು ಎನ್ನುವುದು ಸಮಸ್ತ ಸಮಾಜ ಬಾಂಧವರು ಅಭಿಮಾನ ಪಡುವ ಸಂಗತಿಯಾಗಿದೆ. ಅಥಣಿ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳು ಮಹಾಸಭೆಯ ಸ್ಥಾಪನೆಗೆ ರೂಪರೇಷೆಗಳನ್ನು ಸಿದ್ಧಪಡಿಸಿದರು. ಸಮಯಭೇದ ನಿವಾರಣೆಯಲ್ಲಿ ಉಭಯ ಪೂಜ್ಯರು ಅಹರ್ನಿಶಿ ಶ್ರಮಿಸಿದರು. ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಶ್ರೀ ಕುಮಾರ ಶಿವಯೋಗಿಗಳು ಅಥಣಿಗೆ ಧಾವಿಸಿ ಬಂದರು. ಶಿವಯೋಗಿಗಳ ಕರ್ತೃಗದ್ದುಗೆ ಮುಂದೆ ನಿಂತು ಭಾವಪರವಶರಾಗಿ ಮಂಗಳಾರತಿ ಹಾಡಿದರು. ಸ್ವತಃ ಕುಮಾರ ಶಿವಯೋಗಿಗಳೇ ರಚಿಸಿದ ಆ ಪದ್ಯ ಹೃದಯಸ್ಪರ್ಶಿಯಾಗಿದೆ.
ಮಂಗಳಾರತಿ ದೇವಗೆ ಶಿವಯೋಗಿಗೆ
ಕಂಗಳಾಲಯ ಸಂಗಗೆ
ಜಂಗಮ ಲಿಂಗ ಭೇದದ ಸ್ವಯಚರಪರ
ದಿಂಗಿತವರುಪಿದಂತಾಚರಿಸಿದ ಮಹಿಮಗೆ ||ಪ||
ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ
ಬಂದ ಬಂದವರನು ಬೋಧಿಸಿ
ನಿಂದು ಏಕಾಂತದಾನಂದದ ಯೋಗದ
ಚೆಂದವನರಿದನುಷ್ಠಾನಿಪ ಶಿವಸ್ವಯಗೆ ||1||
ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ
ಭರದಿ ಪರತರ ಬೋಧೆಯ-
ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ
ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ ||2||
ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ
ಕೋಪಾದಿ ಗುಣವ ತೂರಿ
ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ
ಕಾಪಟ್ಯವಳಿದು ಶಿವ ತಾನಹ ಪರತರಗೆ ||3||
ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ
ಶಿಷ್ಟ ಚರವರನೆನಿಸಿ
ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ
ಕಷ್ಟತರದ ಮಾಯೆಯನು ಗೆಲಿದ ಯತಿವರಗೆ ||4||
ಸಚ್ಚಿದಾನಂದವೆನಿಪ ಅಥಣೀಪುರಿ
ಗಚ್ಚಿನಮಠ ಮಂಟಪ
ಅಚ್ಚರಿಗೊಳಿಪ ಷಟ್‍ಸ್ಥಲ ಬ್ರಹ್ಮಿವಾಸದಿಂ
ಬಿಚ್ಚಿ ಬೇರೆನಿಸದ ಮುರುಘ ಶಿವಯೋಗಿಗೆ ||5||
ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ ದೃಷ್ಟಿಯಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಸ್ವಯ ಜಂಗಮ, ಚರ ಜಂಗಮ, ಪರ ಜಂಗಮ ಮೂರೂ ಬಗೆಯ ಜಂಗಮ ಅವಸ್ಥೆಯನ್ನು ತಲುಪಿದ ಮಹಾ ಶಿವಯೋಗಿಗಳು ಎಂಬುದನ್ನು ಮೇಲಿನ ಮಂಗಳಾರತಿ ಪದ್ಯದಲ್ಲಿ ಕಾಣಬಹುದಾಗಿದೆ.
ಮೃತ್ಯುಂಜಯ ಅಪ್ಪಗಳಿಗೆ ಮಾರ್ಗದರ್ಶನ
ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಆಶೀರ್ವಾದಿಂದ ಬೆಳೆದವರು. ಬಾಲ್ಯದಲ್ಲಿ ಒಮ್ಮೆ ಅಂಕಲಗಿ ಅಡವಿ ಸ್ವಾಮಿಗಳ ಹತ್ತಿರ ಬಂದು ‘ತಾವು ಹೆಚ್ಚಿನ ಅಧ್ಯಯನಕ್ಕೆ ಕಾಶಿಗೆ ಹೋಗಬೇಕು, ಆಶೀರ್ವದಿಸಿ’ ಎಂದು ಕೇಳಿಕೊಂಡರು. ಆಗ ಅಂಕಲಗಿ ಅಡವಿ ಸ್ವಾಮಿಗಳು ‘ನಿನಗೆ ಮಾತನಾಡುವ ಕಾಶಿ ವಿಶ್ವನಾಥ ಬೇಕೋ, ಮಾತನಾಡದ ವಿಶ್ವನಾಥ ಬೇಕೋ?’ ಎಂದು ಕೇಳಿದರು. ಆಗ ಮೃತ್ಯುಂಜಯ ಅಪ್ಪಗಳು ‘ನನಗೆ ಮಾತನಾಡುವ ದೇವರು ಬೇಕು’ ಎಂದರು. ಅಂಕಲಗಿ ಅಡಿವೆಪ್ಪನವರು ‘ನೀನು ಕಾಶಿಗೆ ಹೋಗುವ ಬದಲು, ಅಥಣಿಗೆ ಹೋಗು, ಅಲ್ಲಿ ಮುರುಘೇಂದ್ರ ಶಿವಯೋಗಿಗಳು ಕಾಶಿ ವಿಶ್ವನಾಥನ ಪ್ರತಿರೂಪವೇ ಆಗಿದ್ದಾರೆ. ಅವರ ಆಶೀರ್ವಾದ ಪಡೆದುಕೊ’ ಎಂದು ಹೇಳಿದರು. ಮೃತ್ಯುಂಜಯ ಅಪ್ಪಗಳು ನೇರವಾಗಿ ಅಥಣಿಗೆ ಬಂದು, ಗಚ್ಚಿನಮಠದಲ್ಲಿ ಸೇವೆ ಮಾಡತೊಡಗಿದರು. ಇವರ ಸೇವೆಯನ್ನು ಮೆಚ್ಚಿ ಶಿವಯೋಗಿಗಳು ತಮ್ಮ ಆಪ್ತ ವಲಯದಲ್ಲಿ ಸೇರಿಸಿಕೊಂಡರು. ಒಂದು ದಿನ ಮೃತ್ಯುಂಜಯ ಅಪ್ಪಗಳು ಒಂದು ರೂಪಾಯಿ ನಾಣ್ಯವನ್ನು ಶಿವಯೋಗಿಗಳು ಕೂಡ್ರುವ ಸ್ಥಾನದಲ್ಲಿ ಇಟ್ಟಿದ್ದರು. ಇದನ್ನು ಕಂಡು ಶಿವಯೋಗಿಗಳು ‘ಚೇಳು ಚೇಳು’ ಎಂದು ಕೂಗಿದರು. ಮೃತ್ಯುಂಜಯಪ್ಪಗಳು ಓಡಿ ಬಂದು, ಎಲ್ಲಿ ಚೇಳು ಎಂದು ಕೇಳಿದರು. ಆಗ ಶಿವಯೋಗಿಗಳು ಒಂದು ರೂಪಾಯಿ ನಾಣ್ಯ ತೋರಿಸಿ ಅದೇ ಚೇಳು ಎಂದರು. ಈ ಘಟನೆಯಿಂದ ವಿರಕ್ತನಾದವನು ಯಾವುದೇ ವಸ್ತು ವಿಷಯಗಳಿಗೆ ವ್ಯಾಮೋಹಗೊಳ್ಳಬಾರದೆಂದು ಮೃತ್ಯುಂಜಯ ಅಪ್ಪಗಳು ಅರಿತುಕೊಂಡರು. ನಂತರ ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿ ಬಂದರು. ಮುರುಘಾಮಠದಿಂದ ಸಾಹಿತ್ಯ ಪ್ರಕಟಿಸುವ ಸಲುವಾಗಿ ಬಾಲಲೀಲಾ ಮಹಾಂತ ಶಿವಯೋಗಿ ಗ್ರಂಥಮಾಲೆ ಪ್ರಾರಂಭಿಸಿದರು. ಮುರುಘಾಮಠದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಅರ್ಪಿಸಿದರು. ‘ತಾನು ಭೂಮಿಗವಸಾನಂ, ಭೂಮಿತನಗವಸಾನಂ ಎಂಬಂತೆ ಬಾಳಿ ಬದುಕಿದ ಮುರುಘೇಂದ್ರ ಶಿವಯೋಗಿಗಳ ಸನ್ನಿಧಾನಕ್ಕೆ’ ಎಂಬ ವಾಕ್ಯವನ್ನು ಪ್ರತಿ ಪುಸ್ತಕದಲ್ಲಿ ಮುದ್ರಿಸಿದರು. ಇದು ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಮೇಲಿಟ್ಟ ಭಕ್ತಿ ಶ್ರದ್ಧೆಗೆ ನಿದರ್ಶನ.
ಲೋಕಮಾನ್ಯರೊಂದಿಗೆ ಶಿವಯೋಗಿಗಳು
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಕೇಸರಿ ಪತ್ರಿಕೆ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುತ್ತಿದ್ದರು. ಅವರೊಮ್ಮೆ ಶಿವಯೋಗಿಗಳ ದರ್ಶನ ಪಡೆಯಲು ಬಯಸಿದರು. ದಿನಾಂಕ 15-11-1917ರಂದು ಕಾರ್ತಿಕ ಮಾಸದ ಗುರುವಾರ ದಿನ ತಿಲಕರು ಅಥಣಿಗೆ ಆಗಮಿಸಿದರು. ವಿಭೂತಿ ಗಟ್ಟಿ, ಗಂಧದ ಕೊರಡು, ರುದ್ರಾಕ್ಷಿಮಾಲೆ ಮತ್ತು ಹಣ್ಣು ಹಂಪಲಗಳನ್ನು ಕಾಣಿಕೆಯಾಗಿ ಶಿವಯೋಗಿಗಳಿಗೆ ಅರ್ಪಿಸಿ, ಶಿರಬಾಗಿ ನಮಸ್ಕರಿಸಿದರು. ಉಭಯ ಮಹಾನುಭಾವರು ದೇಶದ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ತಿಲಕರು ನಮಗೆ ಸ್ವಾತಂತ್ರ್ಯ ದೊರೆಯುವುದು ಯಾವಾಗ ಎಂದು ಕೇಳಿದರು. ಆಗ ಶಿವಯೋಗಿಗಳು ‘ಸ್ವಾತಂತ್ರ್ಯದ ಫಲವನ್ನು ಅನುಭವಿಸಲು ನಾವು ನೀವು ಇರುವುದಿಲ್ಲ. ನಾವು ಹಚ್ಚಿಟ್ಟ ಮರಗಳ ಫಲವನ್ನು ಮುಂದಿನ ಪೀಳಿಗೆಯವರು ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು. ಮುಂದೆ ಶಿವಯೋಗಿಗಳ ಕೃಪಾಶೀರ್ವಾದದಂತೆ ದಿ. 1-8-1920ರಂದು ತಿಲಕರು ಮುಂಬೈಯಲ್ಲಿ ಪರಂಧಾಮ ಪಡೆದರು. ಶಿವಯೋಗಿಗಳ ವಾಣಿ ಸತ್ಯವಾಯಿತು. ಒಬ್ಬರು ರಾಜಕೀಯ ಪಟು, ಇನ್ನೊಬ್ಬರು ಅಧ್ಯಾತ್ಮದ ಮೇರು. ಇವರಿಬ್ಬರ ಸಮಾಗಮದಲ್ಲಿ ಭಾರತದ ಭವಿಷ್ಯವಾಣಿ ಅಡಗಿತ್ತು. ಶ್ರೀ ಶಿವಯೋಗಿಗಳ ಘನವ್ಯಕ್ತಿತ್ವವನ್ನು ಕುರಿತು ತಿಲಕರು ಗೀತೆಯೊಂದನ್ನು ಮರಾಠಿಯಲ್ಲಿ ರಚಿಸಿದರು. ಅದನ್ನು ನಲವಡಿ ಶ್ರೀಕಂಠಶಾಸ್ತ್ರಿಗಳು ಅನುವಾದಿಸಿದರು. ಪದ್ಯ ಹೀಗಿದೆ:
ನೋಡಿ ಧನ್ಯನಾದೆ ನಾನೀಗ
ನೋಡಿ ಪಾದವ ಮಾಡಿ ಸ್ತೋತ್ರವ
ಕೂಡಿ ಧ್ಯಾನದಿಂ ಬೇಡಿ ಮೋಕ್ಷವ ||1||
ತೂರಿ ಮಾಯಾ ಜಾಲವನ್ನು
ಹಾರಿ ನಿತ್ಯ ತತ್ವ ಸುಖಕ್ಕೆ
ಸೇರಿ ಬ್ರಹ್ಮವನ್ನು ಮೀರಿ ರಾರಾಜಿಪುದರಿಂದ ||2||
ಭಾಸುರ ತನಯ ನಾಮ ಪತ್ತಣ
ವಾಸ ರುಚಿರ ಗಚ್ಚಿನಮಠ
ದೀಶ ಮುಕ್ತಿಕೋಶ ಮುರುಘೇಶನೆಂದು
ನೋಡಿ ಧನ್ಯನಾದೆ ನಾನೀಗ ||3||
ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ
ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರು ಕನ್ನಡದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಒಬ್ಬರು. ಅವರು ದೇವದಾಸಿ ಮಗ ಎನ್ನುವ ಕಾರಣಕ್ಕೆ ಯಾರೂ ಲಿಂಗದೀಕ್ಷೆಯನ್ನು ಅವರಿಗೆ ನೀಡಿರಲಿಲ್ಲ. ಮಂಜಪ್ಪನವರು ಕೊನೆಗೆ ಅಥಣಿ ಶಿವಯೋಗಿಗಳಲ್ಲಿ ದೀಕ್ಷೆ ನೀಡಲು ವಿನಂತಿಸಿಕೊಂಡರು. ಬಸವಣ್ಣನವರ ವಚನಗಳನ್ನು ನಿತ್ಯ ಪಾರಾಯಣ ಮಾಡುತ್ತಿದ್ದ ಶಿವಯೋಗಿಗಳಿಗೆ ‘ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪರಿಭಾವಿಸಬೇಕು’ ಎಂಬ ನುಡಿ ನೆನಪಿಗೆ ಬಂದಿತು. ಪ್ರೀತಿಯಿಂದ ಕರೆದು ಗಚ್ಚಿನಮಠದಲ್ಲಿ ಲಿಂಗದೀಕ್ಷೆಯನ್ನು ದಯಪಾಲಿಸಿದರು. ಮಂಜಪ್ಪನವರು ಶಿವಯೋಗಿಗಳಿಂದ ತುಂಬ ಪ್ರಭಾವಿತರಾಗಿ, ಶಿವಯೋಗಿಗಳನ್ನು ಕುರಿತು ‘ಪ್ರಥಮಾಚಾರ ದೀಪಿಕೆ’ ಎಂಬ ಪುಸ್ತಕವನ್ನು ರಚಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ.
ದಾನವೀರ ಶಿರಸಂಗಿ ಲಿಂಗರಾಜರಿಗೆ ಮಾರ್ಗದರ್ಶನ
ಲಿಂಗಾಯತ ಸಮಾಜದಲ್ಲಿ ತ್ಯಾಗವೀರ ಎನಿಸಿಕೊಂಡ ಶಿರಸಂಗಿ ಲಿಂಗರಾಜರು ದೊಡ್ಡ ಸಂಸ್ಥಾನಿಕರು. ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಮಾನಸಿಕವಾಗಿ ಬಹಳ ನೊಂದುಕೊಂಡರು. ಆಗ ಶಿವಯೋಗಿಗಳು ಲಿಂಗರಾಜರಿಗೆ ದರ್ಶನ ನೀಡಿ, ಮಕ್ಕಳಿಲ್ಲವೆಂದು ಕೊರಗದಿರಿ. ಸಮಾಜದ ಮಕ್ಕಳನ್ನೇ ನಿಮ್ಮ ಮಕ್ಕಳೆಂದು ಭಾವಿಸಿ, ಅವರ ಶಿಕ್ಷಣಕ್ಕಾಗಿ ನಿಮ್ಮ ಸಂಸ್ಥಾನ ಸದುಪಯೋಗವಾಗಲಿ ಎಂದು ಆಶೀರ್ವದಿಸಿದರು. ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಸಮಾಜಕ್ಕೆ ಮೀಸಲಿಟ್ಟರು ಎಂಬುದು ಈಗ ಇತಿಹಾಸ.
ಜಗದ್ಗುರುಗಳಿಗೆ ಆಶೀರ್ವಾದ
ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಯಾವುದೇ ಮಠದ ಅಧಿಪತಿಯಾಗಲಿಲ್ಲ. ಆದರೆ ಯೋಗ್ಯಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬರಬೇಕೆಂಬ ಕಳಕಳಿ ಅವರಲ್ಲಿತ್ತು. 1903ರಲ್ಲಿ ಸವದತ್ತಿಯಲ್ಲಿ ಜರುಗಿದ ಬಸವ ಪುರಾಣ ಕಾರ್ಯಕ್ರಮಕ್ಕೆ ಸಹಜವಾಗಿ ಜಯದೇವ ಪಂಡಿತರು ಆಗಮಿಸಿದ್ದರು. ಅದೇ ಆಗ ಕಾಶಿಯಿಂದ ಪಂಡಿತ ಪದವಿಯಿಂದ ವಿಭೂಷಿತರಾಗಿ ಬಂದಿದ್ದ ಜಯದೇವ ಪಂಡಿತರನ್ನು ಶಿವಯೋಗಿಗಳು ಕಾರುಣ್ಯದೃಷ್ಟಿಯಿಂದ ನೋಡಿದರು. ಜಯದೇವ ಪಂಡಿತರಲ್ಲಿ ಸಮಾಜವನ್ನು ಮುನ್ನಡೆಸುವ ಅತುಲ ಸಾಮರ್ಥ್ಯವಿರುವುದನ್ನು ಗಮನಿಸಿದರು. ಇವರು ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿಗಳಾಗಲಿ ಎಂದು ಆಶೀರ್ವದಿಸಿದರು. ಜಯದೇವ ಜಗದ್ಗುರುಗಳು ಮಾಡಿದ ಸೇವೆ ನಾಡವರಿಗೆ ವೇದ್ಯವಾಗಿರುವುದನ್ನು ಮತ್ತೆ ಹೇಳಬೇಕಾಗಿಲ್ಲ.
ಹಾಗೆಯೇ ಗಚ್ಚಿನಮಠದಲ್ಲಿ ವಾಗೀಶ ಎಂಬ ಸಾಧಕರು ಶಿವಯೋಗಿಗಳವರ ಸೇವೆಯನ್ನು ಮನಮುಟ್ಟಿ ಮಾಡುತ್ತಿದ್ದರು. ಒಂದು ದಿನ ಶಿವಯೋಗಿಗಳ ಲಿಂಗಪೂಜೆಗೆ ಬಿಲ್ವ ಸಂಗ್ರಹಿಸಲು ಹೋದಾಗ ಬಿಲ್ವಪತ್ರೆಯೊಂದು ಸಾಧಕರ ತಲೆ ಮೇಲೆ ಬಿತ್ತು. ಅದನ್ನು ಗಮನಿಸಿದ ಶಿವಯೋಗಿಗಳು ‘ನೀನು ಪರ್ವತಪೀಠದ ಒಡೆಯನಾಗುವಿ’ ಎಂದು ಆಶೀರ್ವದಿಸಿದರು. ಶಿವಯೋಗಿಗಳ ವಾಣಿಯಂತೆ 1941ರಲ್ಲಿ ವಾಗೀಶ ಪಂಡಿತಾರಾಧ್ಯರು ‘ಶ್ರೀಶೈಲ ಪೀಠ’ದ ಜಗದ್ಗುರುಗಳಾದರು.
ಬಂಥನಾಳ ಶಿವಯೋಗಿಗಳು, ಬೀಳೂರು ಗುರುಬಸವ ಸ್ವಾಮಿಗಳು ಮೊದಲಾದ ಸಮಾಜಸೇವಾಸಕ್ತ ಶ್ರೀಗಳಿಗೆ ಮುರುಘೇಂದ್ರ ಶಿವಯೋಗಿಗಳು ಮಾರ್ಗದರ್ಶಕರಾಗಿದ್ದರು. ಜಾತಿಮತ ಪಂಥಗಳನ್ನು ಮೀರಿದ್ದ ಶಿವಯೋಗಿಗಳು ಭಕ್ತವರ್ಗದ ಅನೇಕ ಸಾಧಕರನ್ನು ವಿರಕ್ತಮಠಗಳಿಗೆ ಸ್ವಾಮಿಗಳನ್ನಾಗಿ ಮಾಡುವಲ್ಲಿ ಪ್ರಯತ್ನಿಸಿದ್ದರು. ಇಂದು ನಾವೆಲ್ಲ ಜಾತಿ ಜಾತಿಗಳ ನಡುವೆ ಗೋಡೆ ಕಟ್ಟಿಕೊಂಡಿರುವಂಥ ಸಂದರ್ಭದಲ್ಲಿ ಅಂದು ಶಿವಯೋಗಿಗಳು ಅದೆಲ್ಲವನ್ನು ಮೀರಿ ನಿಂತಿದ್ದರು. ತಮ್ಮ ಗಚ್ಚಿನಮಠಕ್ಕೆ ಭಕ್ತವರ್ಗದ ಸಿದ್ಧಲಿಂಗ ಸ್ವಾಮಿಗಳನ್ನು ಅಧಿಪತಿಗಳನ್ನಾಗಿ ಮಾಡಿದರು. ಬೀಳೂರು ಗುರುಬಸವ ಸ್ವಾಮಿಗಳು ಭಕ್ತವರ್ಗದವರು. ಹೀಗೆ ಅನೇಕ ಶ್ರೀಗಳನ್ನು ಶಿವಯೋಗಿಗಳು ಸಮಾಜಸೇವೆಗೆ ಸಿದ್ಧಗೊಳಿಸಿದ್ದರು.
ಲಿಂಗೈಕ್ಯ
ಲಿಂಗವಿಡಿದು ಲಿಂಗಸಿದ್ಧಿಯ ಬದುಕು ಬದುಕಿದ ಶಿವಯೋಗಿಗಳು ತಮ್ಮ 85ನೇ ವಯಸ್ಸಿನಲ್ಲಿ ದಿನಾಂಕ 23-4-1921ರಂದು ಲಿಂಗೈಕ್ಯರಾದರು. ಶಿವಯೋಗ ಚೇತನವೊಂದರ ದಿವ್ಯ ಅಧ್ಯಾಯ ಮುಕ್ತಾಯವಾದಂತಾಯಿತು.