ಲೇಖಕರು : ಪೂಜ್ಯ ವೀರಬಸವ ದೇವರು, ಆಸಂಗಿ
ಭಾರತ ಇತಿಹಾಸದಲ್ಲಿ ಯೋಗ ಒಂದು ದೊಡ್ಡ ವಿಜ್ಞಾನವೇ ಹೌದು. ಮನುಷ್ಯ ಯಾವಾಗಲೂ ನಿದ್ರೆ-ಕನಸುಗಳ ಹಿಂದೆ ಬಿದ್ದು ತನ್ನ ನಿಜ ಜೀವನವನ್ನು ಮರೆತು ಬದುಕುತ್ತಿರುವನು. ಆದರೆ ಯೋಗ ನಿಜವಾದ ಜೀವನವನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ.
ಯೋಗ ಎಂದರೆ? ತನ್ನನ್ನು ತಾನು ತಿಳಿಯುವ ಸ್ಥಿತಿಯೇ ಯೋಗ. ವಿಷಯೇಂದ್ರಿಗಳ ನಿವೃತ್ತಿಯೇ ಯೋಗ, ಅಂತರಂಗದ ಅರಿವೇ ಯೋಗ.

ಮನುಷ್ಯನು ತನ್ನ ದೀರ್ಘಾಯುಷ್ಯದಲ್ಲಿ ಅರ್ಧ ಆಯುಷ್ಯವನ್ನು ನಿದ್ರೆಗೆ, ವ್ಯಸನಕ್ಕೆ, ಹಗಲು ಕನಸುಗಳಿಗೆ ಕಳೆದು ತನ್ನ ತಾ ಮರೆತು ಹೋಗುತ್ತಾನೆ. ಆದರೆ ಯೋಗ ಸಾಧಕನನ್ನು ಈ ಸ್ಥಿತಿಯಿಂದ ಜಾಗೃತಗೊಳಿಸಿ ಸ್ಥಿರ ರೂಪವನ್ನಾಗಿಸಿ ಸಾಧನಾ ಪಥದತ್ತ ಕೊಂಡೊಯ್ಯುತ್ತದೆ. ಸಾಧಕನಲ್ಲಿ ಅಚಲವಾದ ಧೈರ್ಯ ವಿಚಲವಾಗದ ಬುದ್ಧಿ ಅರಿತುಕೊಳ್ಳುವ ಜ್ಞಾನ ಸ್ಥಿರವುಳ್ಳ ಮನಸ್ಸನ್ನು ಕೊಟ್ಟು ಸಾಧಕನನ್ನು ಯಾವಾಗಲೂ ಎಚ್ಚರದಿಂದಿರಿಸುತ್ತದೆ.

ಈಗಿನ ಯೋಗ ಬರಿ ವ್ಯಾಯಾಮವಲ್ಲ. ಶರೀರ ದಂಡನೆಯಲ್ಲಿ ಇದು ಜಾಗೃತಿಯ ದಾರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಪೂರ್ಣಗೊಳಿಸುವ ದಾರಿ. ಯೋಗ ಒಂದು ಶಕ್ತಿಯಾಗಿ ಸಾಧಕನ ದಾರಿಯನ್ನು ಸರಳಗೊಳಿಸುತ್ತದೆ.
ಒಂದೊಂದು ಯೋಗವೂ ಒಂದೊಂದು ರೀತಿಯಲ್ಲಿ ಸಾಧಕನ ಮೇಲೆ ಪ್ರಭಾವ ಬೀರುತ್ತದೆ. ಭಕ್ತಿ ಯೋಗ ಮನಸ್ಸಿಗೆ, ಜ್ಞಾನ ಯೋಗ ಬುದ್ಧಿಗೆ, ಕರ್ಮಯೋಗ ಇಂದ್ರಿಯಕ್ಕೆ, ಹಠ ಯೋಗ ಶರೀರಕ್ಕೆ ಹೀಗೆ ಯೋಗಗಳು ಸಾಧಕನ ಮೇಲೆ ಪ್ರಭಾವಿತಗೊಳಿಸಿ ಸಾಧಕನಲ್ಲಿ ಶಕ್ತಿಯನ್ನು ತುಂಬುತ್ತವೆ.
ಅಷ್ಟಾಂಗ ಯೋಗಗಳು ಸಾಧಕನಿಗೆ ಸೋಪಾನವಾಗಿವೆ. ಅಂದರೆ ಮೆಟ್ಟಿಲುಗಳಾಗಿವೆ. ಸಾಧನೆಯ ಪ್ರಾರಂಭ ಸ್ಥಿತಿ ಹೇಗಿರಬೇಕು, ಮಧ್ಯಮ ಸ್ಥಿತಿ ಹೇಗೆ, ಕೊನೆಯ ಸ್ಥಿತಿ ಯಾವುದು? ಎಂದು ಸೂಚಿಸುತ್ತವೆ. ಯಮ, ನಿಯಮ, ಆಸನ, ಪ್ರಾಣಾಯಾಮಗಳು ಆರಂಭ ಸ್ಥಿತಿಯಾಗಿ, ಪ್ರತ್ಯಾಹಾರ, ಧಾರಣಗಳು ಮಧ್ಯಮ ಸ್ಥಿತಿಯಾಗಿ, ಧ್ಯಾನ, ಸಮಾಧಿ, ಕೊನೆಯ ಸ್ಥಿತಿಯಾಗಿ ಸಾಧಕನಲ್ಲಿ ಬದಲಾವಣೆ ತರುತ್ತಾ ಹೋಗುತ್ತವೆ.
ಯೋಗ ಸಾಧನೆಯಲ್ಲಿ ಸಾಧಕನ ಅವಸ್ಥೆಗಳು ಹೇಗಿರಬೇಕೆಂಬ ವಿಷಯದ ಕುರಿತು ಪತಂಜಲಿ ಯೋಗ ಸೂತ್ರಗಳಲ್ಲಿ ಬಹಳ ಅದ್ಭುತವಾಗಿ ತಿಳಿಸಿದ್ದಾರೆ. ಮಾನಸಿಕ ರೋಗಗಳಿಂದ ಹೇಗೆ ನಿವೃತ್ತಿ ಹೊಂದಬಹುದು ಎಂದು ಹೇಳಿದ್ದಾರೆ. ಪತಂಜಲಿಯ ಎರಡನೇ ಸೂತ್ರದಂತೆ “ಯೋಗಶ್ಚಿತ್ತವೃತ್ತಿ ನಿರೋಧಃ” ಎನ್ನುವಂತೆ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದೇ ಯೋಗವೆಂದು ಹೇಳುತ್ತಾರೆ. ಏಕೆಂದರೆ ಮನಸ್ಸು ಎಲ್ಲದಕ್ಕೂ ಕಾರಣವಾಗಿರುವುದರಿಂದ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ “ಮನೇವ ಮನುಷ್ಯಾನಂ ಕಾರಣಂ ಬಂಧ ಮೋಕ್ಷಯೋ” ಎನ್ನುವ ಹಾಗೆ ಮನಸ್ಸು ಸಾಧಕನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗಿರುವುದರಿಂದಲೇ ಪತಂಜಲಿ ಮಹರ್ಷಿಗಳು ಈ ಸೂತ್ರವನ್ನು ಹೇಳಿದ್ದಾರೆ.
ಸಾಧಕ ಯಾವಾಗಲೂ ಅಭ್ಯಾಸದಲ್ಲಿ ಇರಬೇಕು. ಅಭ್ಯಾಸ ಇರಬೇಕು. ಅಭ್ಯಾಸದಲ್ಲಿ ನಿರತನಾದ ಸಾಧಕ ಕ್ರಿಯಾಶೀಲತೆಯಿಂದ ಇರುತ್ತಾನೆ. ಅದಕ್ಕೆ ಪತಂಜಲಿ ಮಹರ್ಷಿಗಳು “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ” ನಿರಪೇಕ್ಷತವಾದ ಅಭ್ಯಾಸ ವಿರತವಾದ ಅಭ್ಯಾಸದಿಂದ ತನ್ನನ್ನು ತಾನು ಅರಿಯಲು ಸಾಧ್ಯ. ಅಪೇಕ್ಷೆಯಿಂದ ಮಾಡಿದ ಅಭ್ಯಾಸ ವ್ಯರ್ಥವಾದಲ್ಲಿ ಕೋಪ ಹುಟ್ಟುತ್ತದೆ. ಕೋಪದಿಂದ ಸಾಧಕನ ಮನ ವಿಚಲಿತವಾಗುತ್ತದೆ. ಅದಕ್ಕೆ ನಿರಪೇಕ್ಷಿತ ಅಭ್ಯಾಸ ಬಹಳ ಮುಖ್ಯವೆಂದು ತಿಳಿಸುತ್ತಾರೆ.
ಯೋಗವೆಂದರೆ ಕೂಡುವಿಕೆ, ಒಂದಾಗುವಿಕೆ. ಆತ್ಮ-ಪರಮಾತ್ಮನನ್ನು ಕೂಡುವುದು ಎಂದರ್ಥ. ಧ್ಯಾನದಿಂದ ತನ್ನೊಳಗೆ ಇರುವ ದೇವರನ್ನು ಕೂಡುವುದಾಗಿದೆ. ಇಂದ್ರಿಯಗಳನ್ನು ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನವನ್ನು ಹೊಂದಿ ಪರಮ ಮುಕ್ತಿಯನ್ನು ಹೊಂದುವ ದಾರಿ ಇದಾಗಿದೆ.
ಶರಣರೊಬ್ಬರು ಹೇಳಿರುವ ಹಾಗೆ,
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ಚಿತ್ತದಲ್ಲಿ ನಿರಪೇಕ್ಷೆ, ವಿಷಯಗಳಲ್ಲಿ ಉದಾಸಿನ
ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ
ನೆಲೆಗೊಂಡ ಬಳಿಕ ಸೌರಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೊ.
ಆದಯ್ಯ ಶರಣರು ತನ್ನ ತಾನರಿದವನೆ ತಾನೆ ದೇವರಾಗುತ್ತಾನೆ. ಎಂಬುದನ್ನು ತಿಳಿಸಿದ್ದಾರೆ.
ಈಗಿನ ದಿನಮಾನದಲ್ಲಿ ಯೋಗವು ಬಹಳ ಮುಖ್ಯವಾದ ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕರೋನಾ ಎನ್ನುವ ರೋಗದಿಂದ ಬಾಧಿತನಾಗಿ ಖಿನ್ನನಾಗುತ್ತಿದ್ದಾನೆ. ಇಂತಹ ರೋಗಗಳಿಂದ ಮುಕ್ತವಾಗಲು ಆಸನ ಪ್ರಾಣಾಯಾಮಗಳು ಬಹಳ ಮುಖ್ಯವಾಗಿವೆ. ಜೊತೆಗೆ ಮಾನಸಿಕ ಸ್ಥೈರ್ಯ ಶಾರೀರಿಕ ಸದೃಢತೆಯನ್ನು ಯೋಗ ಕೊಡುತ್ತದೆ. ಆದಕಾರಣ ಪ್ರತಿಯೊಬ್ಬರೂ ಯೋಗ ಮಾಡಿರಿ ರೋಗ ದೂರ ಮಾಡಿರಿ ಎನ್ನುವುದೇ ನಮ್ಮ ಪ್ರಾರ್ಥನೆ.
ನಾನು ಶಿವಯೋಗಮಂದಿರದ ಒಬ್ಬ ಸಾಧಕನಾಗಿ ನನಗೆ ಯೋಗವನ್ನು ಅರಿಯಲು ಸಾಧ್ಯವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪೆಯಿಂದ ಕನ್ನಡ ನಾಡಿನಲ್ಲಿ ಯೋಗವನ್ನು ಮಹತ್ವವಾದ ಆರೋಗ್ಯ ನಿಧಿಯನ್ನು ಈ ನಾಡಿಗೆ ಪರಿಚಯಿಸಿದರು. ಶ್ರೀ ಶಿವಯೋಗಮಂದಿರದಲ್ಲಿ ಹಠಯೋಗ ಮತ್ತು ಶಿವಯೋಗವನ್ನು ಮತ್ತು ಷಟ್ ಕ್ರಿಯಾದಿಗಳನ್ನು ಹೇಳುವ ಮುಖಾಂತರ ಈ ನಾಡಿಗೆ ಅನೇಕ ಶಿವಯೋಗಿ ಸಾಧಕರನ್ನು ಕೊಟ್ಟ ಮಹಾಸಂಸ್ಥೆ ಶ್ರೀ ಶಿವಯೋಗಮಂದಿರ. ಈ ನಾಡಿಗೆ ಯೋಗವನ್ನು ಪರಿಚಯಿಸಿದ ಮಹಾ ಚೇತನಕ್ಕೆ ಅನಂತ ಅನಂತ ಶರಣುಗಳು.
ಶ್ರೀ ಶಿವಯೋಗಮಂದಿರದ ಯೋಗ ಸಾಧನೆಗೈದ ಶಿವಯೋಗ ಸಿದ್ಧರು.
ಹಠಯೋಗ – ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಕಂಚಗಲ್ ಬಿದರಿ
ರಾಜಯೋಗ – ಶ್ರೀ ಮ.ನಿ.ಪ್ರ ಲಿಂ. ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ
ಕರ್ಮಯೋಗ- ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು ಕಪನಳ್ಳಿ ಶಾಖಾ ಶಿವಯೋಗಮಂದಿರ
ಜ್ಞಾನಯೋಗ – ಪೂಜ್ಯ ಶ್ರೀ ಜ.ಚ.ನಿ. ಮತ್ತು ಗಿರಿಯಾಪುರದ ಪೂಜ್ಯ ಶ್ರೀ ಸದಾಶಿವ ಶಿವಾಚಾರ್ಯರು
ಶಿವಯೋಗ – ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠ ಹಾನಗಲ್ಲ
ಮತ್ತು ಶ್ರೀ ಮ.ನಿ.ಪ್ರ. ಅನ್ನದಾನ ಸ್ವಾಮಿಗಳು ಹಾಲಕೇರಿ
ಭಕ್ತಿಯೋಗ – ಪೂಜ್ಯ ಶ್ರೀ ನಾಲ್ವತವಾಡದ ವೀರೇಶ್ವರ ಶರಣರು ಸೋಲ್ಲಾಪೂರ
ನಾದಯೋಗ – ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು
ವೀರೇಶ್ವರ ಪುಣ್ಯಾಶ್ರಮ ಗದಗ
–