• ಡಾ. ಹಿರೇಮಲ್ಲೂರ ಈಶ್ವರನ್
(ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ. ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. ‘ಹರಿಹರ ಕವಿಯ ಕೃತಿಗಳು – ಒಂದು ಸಂಖ್ಯಾನಿರ್ಣಯ‘ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್ ನಲ್ಲಿ ನೆಲೆಸಿದರು. ಮನುಸ್ಮೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ಗ್ರಂಥಗಳ ಸಂಪಾದಕರಾಗಿದ್ದರು. ಎರಡು ದಶಕಗಳ ಕಾಲ ಮೂರು ಅಂತಾರಾಷ್ಟ್ರೀಯ ತ್ರೈಮಾಸಿಕಗಳನ್ನು ಪ್ರಕಟಿಸುತ್ತಿದ್ದರು. 1998ರ ಜೂನ್ 23 ರಂದು ಹಾಲೆಂಡ್ ನಲ್ಲೇ ನಿಧನರಾದರು.)
ಬಾದಾಮಿಯ ಚಾಲುಕ್ಯರ ನಾಡಿನಲ್ಲಿ ಗುಳೇದಗುಡ್ಡದ ಜಟಕಾಸಾಬಿಯ ಕುದುರೆಓಡುತ್ತಿತ್ತು. ಗುಳೇದಗುಡ್ಡದ ಗೆಳೆಯರ ಔದಾರೆ. ನಾಡಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಶಿವಯೋಗಮಂದಿರದ ಕಡೆಗೆ ಹೊರಟಿದ್ದೆವು. ದಾರಿಯಲ್ಲಿ ಹಂಸನೂರು, ದೇವದಾಸಿಯರ ಊರು ಅದು: ತೋಗಣಸಿ ಮಾಂತ್ರಿಕರ ವಾಸಸ್ಥಾನ. ಕೆಂದೂರು ಅಂದವಾದ ಹಳ್ಳಿ, ಕುಟುಗನ ಕೆರೆ ಬಂದಿತು, ಗೆಳೆಯರು ಒತ್ತಾಯ ಮಾಡಿದರು. ಗಾಡಿಯಿಂದಿಳಿದವು. ದಾರಿಯ ಹತ್ತಿರವೇ ಉಪಾಹಾರ ಮಂದಿರ.ಗಾಳಿಗೆ ಮೈಯೊಡ್ಡಿ ಕುಟುಗನ ಕೆರೆಯ ಆತಿಥ್ಯ ಪಡೆದು ಮುಂದೆ ಸಾಗಿದಾಗ ಸುಮಾರು ಹೊತ್ತೇರಿದ್ದಿತು.
ಲೈನದಾರಿಯ ಇಕ್ಕೆಲದಲ್ಲಿ ತರುಮರಾದಿಗಳು ಹಸಿರು ಮುಡಿದು ನಿಂತಿದ್ದವು. ಗಿಡಮರಗಳಿಂದಾಚೆಗೆ ಮೇರೆ ಮೀರಿ ಹಬ್ಬಿದ ಹೊಲಗದ್ದೆಗಳಲ್ಲಿ ಸಜ್ಜೆ ಜೋಳಗಳು ಚವರಿ ಬೀಸುತ್ತಿದ್ದವು. ಅಷ್ಟು ಬಿಸಿಲೂ ಅಲ್ಲ. ಅಷ್ಟು ನೆಳಲೂ ಅಲ್ಲ, ಅಂತಹ ಹೊತ್ತಿನಲ್ಲಿ ಗಾಳಿ ಸುಯ್ಕೆಂದು ಬೀಸಿ ಕಣ್ಮನಗಳಲ್ಲಿ ಕಾರ್ಯ ನಿಮಗ್ನರಾದ ರೈತಕುಲ, ದಾರಿಯಲ್ಲಿ ಅಡ್ಡಬರುವ ಜನ; ಈ ದೃಶ್ಯವನ್ನು, ಈ ನಾಡನ್ನು ಈ ಜನತೆಯನ್ನು ಎಲ್ಲಿಯೋ ಕಂಡ ನೆನಪು. ಇದಕ್ಕೂ ಮೊದಲು ಎಲ್ಲಿಯೋ ನೋಡಿದಂತೆ ಅನುಭವ.
ಹೌದೌದು. ಏಳನೆಯ ಶತಮಾನದಲ್ಲಿ ಇತ್ತ ಕಡೆ ಬಂದ ನೆನಪು. ಅದು ಎರಡನೆಯ ಪುಲಕೇಶಿಯ ಕಾಲ. ಹುವೆನ್ ಚಿಂಗನೊಡನೆ ಬಂದುದು ನಿಜ. ನಮ್ಮನಾಳುವ ದೊರೆ ಪುಲಕೇಶಿ, ಅವನ ಅಭಿಮಾನ ನಮ್ಮ ಅಭಿಮಾನ. ಅವನ ಕ್ಷಾತ್ರತೇಜ ಕನ್ನಡದ ಕ್ಷಾತ್ರತೇಜ, ಸ್ನೇಹ ಬೇಡಿದವರು ಧನ್ಯರು. ವೈರ ಬಗೆದವರು ಸತ್ತರು. ಛಲ ಛಲ, ಹಟ ಹಟ, ಪ್ರೇಮ ಪ್ರೇಮ. ಅರಸನಂತೆ ಪ್ರಜೆಗಳು. ಸುಭಟರ್ಕಳ್,ಕಲಿಗಳ, ಸುಪ್ರಭುಗಳ, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ ಗಂಭೀರಚಿತ್ತರ್, ವಿವೇಕಿಗಳೇ, ಇವರೇ ಹರ್ಷವರ್ಧನನನ್ನು ಸೋಲಿಸಿದವರು. ಹರವಾದ ಎದೆ. ನೀಳವಾದ ತೋಳು, ಹೊಳೆವ ಕಂಗಳು, ದುಂಡು ಮೊಗ, ನುಡಿದಂತೆ ನಡೆ. ವಿಚಾರದಂತೆ ಆಚಾರ.
ದಾರಿ ದಾರಿಗುಂಟ ಭೀಕರವಾದ ಬಂಡೆಗಲ್ಲುಗಳು ಒಂದರಮೇಲೊಂದು ಒರಗಿಕೊಂಡಿದ್ದವು. ಕಾಲಕ್ಕೆ ಸಾಕ್ಷಿ ಹೇಳುತ್ತ ಮಲಗಿಕೊಂಡಂತೆ ತೋರುತ್ತಿದ್ದವು.ಶರಪಂಜರದ ಮೇಲೊರಗಿದ ಭೀಷ್ಮಾಚಾರ್ಯರಂತೆ ಎದೆಯೊಡ್ಡಿ ಮಲಗಿ ಕೊಂಡಿವೆ.ಎದೆಯ ಮೇಲೆ ಹದಿಮೂರುನೂರು ವರುಷ ಅಡ್ಡಾಡಿವೆ. ಹೆಜ್ಜೆ ಮೂಡಿವೆ. ಆದರೆ ಎದೆ ಹಣ್ಣಾಗಿಲ್ಲ. ಆತ್ಮಶ್ರೀ ಕಾಂತಿಗುಂದಿಲ್ಲ. ‘ಏನು ಬರುವುದೋ ಬರುವ ಕಾಲಕ್ಕೊಮ್ಮೆ ಬಂದು ಬಿಡಲಿ’ ಎಂದೆನ್ನುತ್ತ ಅಬ್ಬರದ ಆಶಾವಾದವನ್ನು ತಳೆದು ಇವು ಹೆಜ್ಜೆ ಕಿತ್ತಿಲ್ಲ ನಿಂತ ಜಾಗ ಬಿಟ್ಟಿಲ್ಲ. ಸ್ವಾಭಿಮಾನದ ವಜ್ರಕವಚ ಧರಿಸಿಕೊಂಡು ದಾರಿ ದಾರಿಗೆ ನಿಂತ ಶಿಲಾತಪಸ್ವಿಗಳಿಗೆ ಕೈಮುಗಿದು ಮುಂಬಂದರೆ ಮಹಾಕೂಟ, ದಕ್ಷಿಣ ಕಾಶಿ ಇದು, ಉತ್ತರ ಕಾಶಿ ಅದು, ಎರಡು ಸಾವಿರ ಲಿಂಗಗಳು ಮಹಾಕೂಟದ ಮಹೋನ್ನತಿಗೆಂದು ದಿವಾರಾತ್ರಿ ಕಾವಲುಗೆಯ್ಯುತ್ತಿವೆ. ಗರ್ಭಗುಡಿಯ ಶಿವಲಿಂಗದ ಎದುರು ಹಸಾದ ಬೇಡಿ ನಿಂತಿರುವ ಭಕ್ತಿ ಭಾಂಡಾರಿ ಬಸವಣ್ಣನಿಗೆ ನಮಸ್ಕಾರ ಮಾಡಿ ಎದುರಿನ ಮುಷ್ಕರಣಿಯ ತೀರ್ಥದ ಒಂದು ಹನಿ ಬಾಯಲ್ಲಿ ಹಾಕಿಕೊಂಡರೆ ಬದುಕೆಲ್ಲ ಅಮೃತ.
ಮುಂದೆ ಮೂರು ಮೈಲುಗಳ ದಾರಿ, ಶಿವಯೋಗ ಮಂದಿರದ ದಾರಿ. ದಾರಿಯುದ್ದಕ್ಕೂ ನಿಶ್ಚಲ ನೀರವತೆ. ಮಹಾಮೌನ, ತಪಸ್ವಿಗಳ ಕಡೆಗೆ ಹೋಗಬೇಕು. ಸಪ್ಪಳ ಮಾಡಿದರೆ ಶಿವಯೋಗಿಗಳ ನಿದ್ರಾಭಂಗವಾದೀತು. ಅವರು ಸಿಟ್ಟಾದರು. ಮುನಿಗಳ ಮುನಿಸು ಮೂಗುದುದಿಯೊಳಕ್ಕೆ! ಗಿಡ ಮರಗಳಿಗೂ ಈ ಮಾತು ತಿಳಿದಿದೆ.ಎಂತೆಯೇ ಗಾಳಿ ಬೀಸಿದರೂ ಎಲೆ ಅಲುಗಾಡದೆ ಹಾಗೆಯೇ ನಿಂತಿವೆ. ಪ್ರಕೃತಿ ಪ್ರೇಯಸಿ. ಆದರೂ ಹಕ್ಕಿ ಕಲರವಗೈಯದಿವೆ. ಈ ನಾಡಿನ ಅಣುರೇನು ತ್ರಣ ಕಾಷ್ಠ ಗಳಿಗೂ ಶಿವಯೋಗಮಂದಿರದ ಕತೆ ಗೊತ್ತಿದೆ. ಶಿವಯೋಗಮಂದಿರದ ಕತೆ…..?
ನನ್ನ ಮನಸ್ಸು ಎಂಟು ವರುಷಗಳ ಹಿಂದೆ ಓಡಿತು. ಹಿರೇಮಲ್ಲೂರಿಗೆ ಹೊರಟು ಹೋಯಿತು. ಮುಚ್ಚಂಜೆಯಾಗಿದೆ. ನಮ್ಮ ಶಿವು ಪಾಠ ಓದುತ್ತಿದ್ದಾನೆ. ನಾನು ಇಲ್ಲಿ ಕುಳಿತಿದ್ದೇನೆ. ನನ್ನ ತಾಯಿ ಅಲ್ಲಿ ಇದ್ದಾಳೆ. ನಮ್ಮ ಶಂಕರಿ ಇನ್ನೂ ಸಣ್ಣವಳು. ಶಿವು ಓದುತ್ತಿರುವುದನ್ನು ತಾಯಿ ಮಕ್ಕಳು ಕೇಳುತ್ತಿದ್ದಾರೆ. ಶಿವುನ ವಾಚನ ನಡೆದಿದೆ.
ರಾಣೆಬೆನ್ನೂರು ತಾಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದೊಂದು ಊರು.ನೀಲಮ್ಮ ಬಸವಯ್ಯನವರಿಗೆ ಬಹಳ ದಿನದ ಮೇಲೆ ಗಂಡು ಮಗುವೊಂದು ಜನಿಸಿತು.ಜನನವಾದ ಮೇಲೆ ಮಗು ಎರಡು ದಿನಗಳವರೆಗೂ ತಾಯಿಯ ಎದೆಯ ಹಾಲನ್ನೇ ಉಣಲಿಲ್ಲ. ಎಲ್ಲರಿಗೂ ಅಚ್ಚರಿ. ಬಂಧು ಬಾಂಧವರಿಗೆ ಗಾಬರಿ. ಆದರೂ ಸಾಧ್ಯೆ ಶಿವನನ್ನು ಸ್ಮರಿಸಿ ಶಿಶುವಿಗೆ ಭಸಿತವನ್ನು ಪೂಸಿ ಮುದ್ದಿಟ್ಟಳು. ಶಿಶು ನಕ್ಕು ನಲಿದು ಹಾಲು ಕುಡಿಯಲು ಮೊದಲು ಮಾಡಿತು. ಅಂದು ನಾಮಕರಣದ ದಿನ; ಹಾಲಯ್ಯ ಎಂದು ಕೂಸಿಗೆ ಹೆಸರಿಟ್ಟು ಜೋಗುಳ ಹಾಡಿದರು. ಹೂ ಬೆಳೆದಂತೆ ಹಾಲಯ್ಯ ಬೆಳೆದನು. ಕೋಕಿಲ ಕುಕಿಲುವದ ಕಲಿವಂತೆ ಹಾಲಯ್ಯ ಪಾಠ ಕಲಿತ, ಸಾಲೆಯಿಂದೊಂದು ದಿನ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ತಾಯಿ ಕೊಟ್ಟ ರೊಟ್ಟಿಯನ್ನು ಮಗನು ತಿನ್ನುತ್ತಿರುವ ಹೊತ್ತಿನಲ್ಲಿ ಹೊಸ್ತಿಲದ ಬಳಿ ಭಿಕ್ಷುಕನೊಬ್ಬನು ನಿಂತು ‘ಅವ್ವಾ! ಹಸಿವೆ. ಒಂದು ತುತ್ತು ರೊಟ್ಟಿ ಕೊಡು’ ಎಂದು ಬೇಡಿದನು. ‘ಇಗೋ’ ಎಂದೆನ್ನುತ್ತ ಹಾಲಯ್ಯ ಕೈಯಲ್ಲಿಯ ರೊಟ್ಟಿಯನ್ನು ಭಿಕ್ಷುಕನಿಗೆ ಕೊಟ್ಟನು. ತಾಯಿ ಅದನ್ನೆಲ್ಲ ನೋಡಿ ಹರ್ಷಿತಳಾದಳು.
ಓಡಿ ಬಂದು ಮಗನನ್ನು ಮುದ್ದಿಟ್ಟು, ‘ದಯಾಳು ಹಾಲಯ್ಯ’ ಎಂದಳು.ಹಾಲಯ್ಯ ಹೀಗೆ ‘ದಯಾಳು ಹಾಲಯ್ಯ’ನಾದ, ಹಳ್ಳಿಯ ಜಂಗಮರಂತೆ ದಯಾಳು ಹಾಲಯ್ಯನಿಗೂ ‘ಭವತಿ ಭಿಕ್ಷಾಂ ದೇಹಿ’ ಕೋರಾನ್ನ ಬೇಡುವ ಸರತಿ ಬರದೇ ಇರಲಿಲ್ಲ. ಜೋಯಿಸರ ಹರಳಳ್ಳಿ ಒಂದೇ ಅಲ್ಲ, ಹತ್ತಿರದ ಹಳ್ಳಿಗಳಿಗೂ ಹೋಗುವ ರೂಢಿ, ಮೊದಲೇ ಬಡತನ, ತಾಯಿಯ ಅಪ್ಪಣೆ ದಯಾಳು ಹಾಲಯ್ಯನಿಗೆ ದೇವಾಜ್ಞೆ, ಅದೊಂದು ದಿನ ಮುಂಜಾವಿನಲ್ಲಿ ಹತ್ತಿರದ ಹಳ್ಳಿಯಲ್ಲಿ ಹಾಲಯ್ಯನ ಕೋರಾನ್ನ ಭಿಕ್ಷೆ ನಡೆದಿತ್ತು.
“ಅಯ್ಯಪ್ಪ, ಪರಾನ್ನಭುಂಜಿಸುವವನು ಇದ್ದರೂ ಸತ್ತಂತೆ! ಓದು, ಓದಿ ಬುದ್ಧಿವಂತನಾಗು, ಅನ್ನಸಂಪಾದನೆ ಮಾಡು’, ಎಂದು ಯಾರೋ ಅಂದರು.ಭಿಕ್ಷೆಗೆಂದು ಹೋದ ಹಾಲಯ್ಯ ಅಳುತ್ತ ಬಂದ. ತಾಯಿಗೆ ಕಾರಣ ತಿಳಿಯಲಿಲ್ಲ.ಓದಬೇಕು. ಬುದ್ಧಿವಂತನಾಗಬೇಕು. ಮನುಷ್ಯನಾಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಮಾಡಬೇಕು. ತಾಯಿಗೆ ಹೇಳಲಿಲ್ಲ. ತಂದೆಗೆ ಹೇಳಲಿಲ್ಲ. ಯಾರಿಗೂ ಹೇಳದೇ ಕೇಳದೇ ಮುದ್ದಿನ ಜೋಯಿಸರ ಹಳ್ಳಿಯ ಕಡೆಗೆ ಹನಿಗಣ್ಣಿನಿಂದ ನೋಡುತ್ತ,ಹರಳಳ್ಳಿಯ ತಾಯಿಗೊಂದು ನಮಸ್ಕಾರ ಮಾಡಿ ಹಾಲಯ್ಯನು ಮನೆ ಬಿಟ್ಟು ಹೊರಟನು,ತೊಡಲು ಅಂಗಿಯಿಲ್ಲ. ಉಡಲು ಬಟ್ಟೆಯಿಲ್ಲ. ಒಂದು ಕಾವೀ ರುಮಾಲು, ಎರಡು ಕಾವೀ ಧೋತರ, ಕಜ್ಜರಿಗೆ ಓಡಿಬಂದ. ಹಾಲಯ್ಯನ ಹತ್ತಿರ ಇರುವ ಸಂಪತ್ತು ಅಷ್ಟೆ ಮುಲಕೀ ಓದಿದ. ಧಾರವಾಡಕ್ಕೆ ಕಾಲುನಡಿಗೆಯಿಂದ ಹೋಗಿ ಮುಲಕೀ ಪರೀಕ್ಷೆಗೆ ಕೂತರೆ ನಪಾಸು! ದಯಾಳು ಹಾಲಯ್ಯ! ಮುಲಕೀ ಪಾಸಾಗಿ ಮಾಸ್ತರನಾಗಬೇಕೆ? ಕಾಲ ಬರೆದ ದೈವಲೀಲೆಯೇ ಬೇರೆಯಾಗಿತ್ತು. ಅಷ್ಟೊತ್ತಿಗೆ ಕನ್ನಡದ ಪ್ರತಿಭಾವಂತ ತತ್ವಜ್ಞಾನಿ, ದಾರ್ಶನಿಕ, ಕಾವ್ಯಯೋಗಿ ನಿಜಗುಣಾಢ್ಯರ ಯೋಗದ ಗರಡಿಮನೆಯಲ್ಲಿ ಹಾಲಯ್ಯನವರು ಇಳಿದಿದ್ದರು.
ಲಿಂಗದ ಹಳ್ಳಿ ಹಾಲಯ್ಯನ ತಾಯಿಯ ತವರೂರು. ಅಲ್ಲಿ ಬಂದು ಕನ್ನಡ ಶಾಲೆಯ ಶಿಕ್ಷಕರಾಗಿ ನಿಂತರು. ಹಾಲುಗಲ್ಲದ ಹುಡುಗರು. ಕುಸುಮ ಕೋಮಲ ಗುರು, ಓದು, ಬೋಧನೆ ಆವ್ಯಾಹತವಾಗಿ ನಡೆಯಿತು. ತಾಯಿಗೆ ಸುದ್ದಿ ಹತ್ತಿತು.ಹುಡುಕುತ್ತ ಬಂದರು. ‘ಹಾಲಯ್ಯ! ಮದುವೆ ಮಾಡಿಕೋ ಬಾ, ನಮ್ಮ ಮನೆಯ ದೀಪ ನೀನು’ ಎಂದಳು.’ಒಂದು ವರುಷ ಬಿಟ್ಟು ಉತ್ತರ ಹೇಳುತ್ತೇನೆ’ ಎಂದು ಮಗನ ಉತ್ತರ, ಒಂದುವರುಷದ ಮೇಲೆ ಮತ್ತೆ ತಾಯಿ ಬಂದಾಗ ಮುನ್ನೂರು ರೂಪಾಯಿಗಳನ್ನು ತಾಯಿಯ ಉಡಿಯಲ್ಲಿ ಹಾಕಿ, ‘ಇದು ಕಂದನ ಭಕ್ತಿ, ನನ್ನ ಆಶೆ ಬಿಡು’ ಎಂದು ದಯಾಳು ಹಾಲಯ್ಯ ಹೇಳಿ ತಾಯ ಹರಕೆ ಪಡೆದು ಲಿಂಗದ ಹಳ್ಳಿ ಬಿಟ್ಟರು.
ಹುಬ್ಬಳ್ಳಿಗೆ ಬಂದು ಆರೂಢರಲ್ಲಿ ನಿಂತರು. ಎಮ್ಮಿಗನೂರಿಗೆ ಹೋಗಿ ಜಡೆಯ ಸಿದ್ಧರನ್ನೊಲಯಿಸಿದರು. ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ತೆರಳಿ ಎಳಂದೂರು ಬಸವಲಿಂಗ ಸ್ವಾಮಿಗಳ ಸೇವಾನುರಾಗಕ್ಕೆಳಸಿದರು. ಅಲ್ಲಿಯ ತಪಸ್ಸು ಕಠೋರವಾದ ತಪಸ್ಸು! ಇಂದ್ರಿಯ ನಿಗ್ರಹ, ಒಡಲ ದಂಡನೆ, ಜ್ಞಾನ, ಕರ್ಮ, ಭಕ್ತಿಯೋಗಗಳು ಬದುಕಿನಲ್ಲಿ ಒಂದೆಡೆ ಸಂಚಯಿಸತೊಡಗಿದವು. ಬದುಕು ಪರಿಪಕ್ವತೆಯ ದಾರಿಯಲ್ಲಿ ನಡೆಯ ಹತ್ತಿತು!
ಅಷ್ಟೊತ್ತಿಗೆ ವಿರಾಟರಾಯನ ರಾಜಧಾನಿ ಹಾನಗಲ್ಲಿನಿಂದ ಶಂಭುಲಿಂಗನ ಬೆಟ್ಟಕ್ಕೆ ಪ್ರಾರ್ಥನೆಯೊಂದು ಹೋಯಿತು. ದಯಾಳು ಹಾಲಯ್ಯನವರು ಹಾನಗಲ್ಲಿನ ಮಠದ ಅಧಿಕಾರ ವಹಿಸಬೇಕು! ಅಧಿಕಾರ? ಆಸ್ತಿ? ಒಡೆತನ? ಸನ್ಯಾಸವಿತ್ತ,ವ್ಯಾಮೋಹವತ್ತ? ಬಂಧನವಿತ್ತ, ಬಿಡುಗಡೆಯತ್ತ? ಯೋಚಿಸಿದರು. ದೀರ್ಘಾಲೋಚನ ಮಾಡಿ ಅವರು ಬಂದರು. ಹಾನಗಲ್ಲಿನ ಕುಮಾರ ಸ್ವಾಮಿಗಳಾದರು. ಕುಮಾರಸ್ವಾಮಿಗಳನ್ನು ಮಠದ ಆಸ್ತಿ ವಂಚಿಸಲಿಲ್ಲ. ಇಲ್ಲಿ ಲಕ್ಷ್ಮೀ ಸೋತಳು. ಚಂಚಲೆಯ ಆಟ ಬೈರಾಗಿಯ ಮುಂದೆ ನಡೆಯಲಿಲ್ಲ.
ಜನ ಬದುಕಬೇಕು. ಬಿದ್ದ ಸಮಾಜ ಏಳಬೇಕು. ದಾರಿದ್ರ್ಯ ಅಳಿಯಬೇಕು,ಎಂತಹ ದಾರಿದ್ರ? ಅಂತಃಸತ್ವದ ದಾರಿದ್ರ, ಆತ್ಮಬಲವಿಲ್ಲದೆ ಸಮಾಜ ಕುರುಡಾಗಿ ಗಾಢಾಂಧತಮದತ್ತ ಬಟ್ಟೆದೋರದೆ ತಡಬಡಗೊಳ್ಳುತ್ತಿತ್ತು. ಅದರ ದಾರಿದ್ರವಳಿದು ದಾರಿದೋರಬೇಕಾದರೆ ಅಧ್ಯಾತ್ಮ ಶಿಕ್ಷಣ ಸಾರ್ವತ್ರಿಕವಾಗಿ ಒದಗಬೇಕು. ಅಂತಹ ಶಿಕ್ಷಣ ಸಂಸ್ಥೆ ನಾಡಿನಲ್ಲಿ ಮೂಡದೆ ಗತಿಯಿಲ್ಲವೆಂದು ಹಾನಗಲ್ ಕುಮಾರ ಸ್ವಾಮಿಗಳು ಯೋಚಿಸಿದರು. ಅವರ ಯೋಚನೆಯನ್ನು ಕಾರ್ಯರಂಗಕ್ಕಿಳಿಸುವಲ್ಲಿ ಶಿರಸಂಗಿಯಲ್ಲಿ ಲಿಂಗಪ್ಪನವರಿದ್ದರು, ಅರಟಾಳದಲ್ಲಿ ರುದ್ರಗೌಡರು, ಬಾಗಲಕೋಟೆಯಲ್ಲಿ ಮಲ್ಲಪ್ಪನವರು ಇದ್ದರು. ಮತ್ತೆ ಇಳಕಲ್ಲಿನ ಮಹಾಂತ ಶಿವಯೋಗಿಗಳ ಮಾರ್ಗದರ್ಶನ ಬೇರೆ?
ಮಲಾಪಹಾರೀ ನದಿಯ ದಂಡೆಯ ಮೇಲೆ ಸುಂದರವಾದ ಬಿಲ್ವವೃಕ್ಷದ ತೋಟ. ತಪಸ್ವಿಗಳು ಬಂದು ನಿಲ್ಲುವುದಕ್ಕೆ ತಕ್ಕ ಭೂಮಿ, ಮೀಸಲು ಭೂಮಿ, ಗಿಡಮರಗಳು,ಕಂಟಿಕಾವಲುಗಳು ಸುತ್ತಲೂ ನಿಂತು ಮನುಷ್ಯ ಸಂಚಾರಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ.ವನ್ಯಮೃಗಗಳು ದಿವಾರಾತ್ರಿ ಆ ಭೂಮಿಯ ನೈರ್ಮಲ್ಯವನ್ನು ರಕ್ಷಿಸುತ್ತಿದ್ದವು.
ಅಲ್ಲಿಗೆ ಕುಮಾರ ಸ್ವಾಮಿಗಳವರು ಬಂದು ಧರ್ಮದಂಡವನ್ನು ಊರಿದರು.ಪಾದರಕ್ಷೆ ಕಳೆದರು. ಪೇಳ ಬಯಲಾಯಿತು. ಆ ಭೂಮಿಯಲ್ಲಿ ಮಂದಿರವೊಂದು ಏರಿತು. ಶಿಕ್ಷಣಾಲಯವೊಂದರ ಸಂಸ್ಥಾಪನೆಯಾಯಿತು. ಆಚೆಗೆ ಐಹೊಳೆಯ ಆದರ್ಶ ಮಹಾವಿದ್ಯಾಲಯ, ಈಚೆಗೆ ಬದಾಮಿಯ ಮೇಣ ಬಸತಿಗಳು. ಅಲ್ಲಿ ಮಹಾಕೂಟ.ಇಲ್ಲಿ ಬನಶಂಕರಿ, ನಟ್ಟನಡುವೆ ಕುಮಾರ ಸ್ವಾಮಿಗಳ ಶಿಕ್ಷಣಾಲಯ!
ಅಲ್ಲಿ ಸತ್ಯದ ಪೂಜೆ, ಸೌಂದರದ ಶಿವನ ಪೂಜೆ, ಅಂತಹ ಪೂಜೆಯ “ಶಿವಯೋಗಮಂದಿರ’ವೆಂದು ನಾಮಕರಣ ಮಾಡಲಾಯಿತು.
ಶಿಕ್ಷಕರು ಬಂದರು. ವಿದ್ಯಾರ್ಥಿಗಳು ಬಂದು ನಿಂತರು. ನಾಡಿನ ತುಂಬ ಶಿವಯೋಗಮಂದಿರದ ಹೆಸರು ಸಂಚರಿಸಿ ಬಂದಿತು, ತಾಡವೋಲೆಗಳ ಸಂಪಾದನಾಕಾರ, ಚಿಂತನೆ, ಶಿಕ್ಷಣ ಪ್ರಸಾರ, ಸಮಾಜ ದರ್ಶನದ ಕಾರ್ಯ ಭರದಿಂದ ನಡೆದವು.ಶಿವಯೋಗಮಂದಿರದ ಆವರಣದಲ್ಲಿ ಬದ್ಧಪದ್ಮಾಸನರಾಗಿ ತದೇಕ ಚಿತ್ತದಿಂದ ಧ್ಯಾನಾಸಕ್ತರಾದ ಶಿವಯೋಗಿಗಳು ಜನಪದದ ಸ್ಫೂರ್ತಿಯಾದರು. ಗುಡಿಗುಡಾರಗಳಲ್ಲಿ,ದೇವಮಂದಿರಗಳಲ್ಲಿ ಹಾನಗಲ್ಲಿನ ಕುಮಾರ ಸ್ವಾಮಿಗಳು ಭಜನೆಯ ವಸ್ತುವಾದರು.ಪಠಣದ ಸಾಮಗ್ರಿಯಾದರು.
ಐಹೊಳೆಯ ದಾರಿಯಲ್ಲಿ, ನಳಂದಾ ತಕ್ಷಶಿಲೆಯ ದಾರಿಯಲ್ಲಿ ಶಿವಯೋಗ ಮಂದಿರವು ಹೆಜ್ಜೆ ಇಡುತ್ತಿರುವ ಕಾಲದಲ್ಲಿ ಶಿವಯೋಗಿಗಳು ಕುಳಿತಲ್ಲಿಂದಲೇ ಜೋಯಿಸರ ಹರಳಳ್ಳಿಯ ಕಡೆಗೊಮ್ಮೆ ನೋಡಿದರು. ಲಿಂಗದಹಳ್ಳಿಯ ಕಡೆಗೊಮ್ಮೆ ದಿಟ್ಟಿಸಿದರು. ಜೀವನದ ಮಾಯೆಯನ್ನು ಗೆಲಿದ ಶಿವಯೋಗಿಯ ಕಂಗಳು ಲಿಂಗದಲ್ಲಿ ನಟ್ಟು ನಿಬ್ಬೆರಗಾದವು, ಎಲ್ಲವೂ ಬಯಲು.
ನೆನಹು ಸತ್ತಿತ್ತು. ಭ್ರಾಂತಿ ಬೆಂದಿತು. ಅರಿವು ಮರೆಯಿತ್ತು.
ಕುರುಹುಗೆಟ್ಟಿತು. ಗತಿಯನರಸಲುಂಟೆ? ಮತಿಯರನಸಲುಂಟೆ?
ಅಂಗವೆಲ್ಲ ನಷ್ಟವಾಗಿ ಲಿಂಗಹೀನವಾಯಿತ್ತು
ಕಂಗಳದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ
ಅಲ್ಲಿಗೆ ಶಿವುನ ವಾಚನ ಮುಗಿಯಿತು. ಎಂಟು ವರುಷಗಳ ಹಿಂದೆ ಶಿವು ಓದುನಿಲ್ಲಿಸಿದ. ಪುನಃ ಆ ಪಾಠ ಓದಲಿಲ್ಲ. ಮನೆ ಬಿಟ್ಟು ಹೊರಟನು. ‘ನನ್ನ ಆಶೆ ಬಿಡು’ಎಂದು ತಾಯಿಗೆ ಹೇಳಿ ಶಿವು ‘ಶಿವಯೋಗಮಂದಿರ’ಕ್ಕೆ ಹೊರಟು ಹೋದನು.
ಹತ್ತಿರ ಹತ್ತಿರ ಶಿವಯೋಗಮಂದಿರವು ಬರುತ್ತಿದ್ದಿತು. ಗಿಡಮರಗಳ ನಡುವೆ,ಹಚ್ಚ ಹಸುರಿನ ಮಧ್ಯೆ, ಪ್ರಶಾಂತ ವಾತಾವರಣದ ನಟ್ಟನಡುವೆ ಅಡಗಿಸಿಕೊಂಡ ಶಿವಯೋಗಮಂದಿರವು ನೋಟಕ್ಕೆ ಸಮೀಪಿಸುತ್ತಿದ್ದಿತು.
“ಗುಹೇಶ್ವರಾ’ ಎಂದು ಹಕ್ಕಿಯೊಂದು ಹಾಡಿದಂತಾಯಿತು. ನಿಜ.ಶಿವಯೋಗಮಂದಿರವು ಬಂದುದೇ ನಿಜ!
ಗಾಡಿಯಿಂದಿಳಿದು ನೆಲದ ಮೇಲೆ ಕಾಲಿಟ್ಟಾಗ ಮೈಯಲ್ಲಿ ಮಿಂಚಿನ ಹೊಳೆ ತುಳುಕಾಡುತ್ತಿದ್ದಿತು. ಇಲ್ಲಿ ನಮ್ಮ ಶಿವು ಇರಬೇಕು. ಶಿವಯೋಗಿಯ ಸನ್ನಿಧಿಯ ಬಳಿ ನಮ್ಮ ಶಿವು ಇರಬೇಕು, ಸಿರಿಬಡತನಗಳ ಮಧ್ಯದಲ್ಲಿ ಸ್ಥಿತಪ್ರಜ್ಞನಾಗಿ ನಿಂತುಕೊಂಡು ಲೋಕಸಂಗ್ರಹಕ್ಕಾಗಿ ಬಾಳನ್ನೇ ಮೀಸಲಾಗಿರಿಸಿದ ಕಾರುಣ್ಯಮೂರ್ತಿಯ ಹತ್ತಿರ ನಮ್ಮಶಿವು ಇದ್ದಿರಬೇಕು ಎಂದೆನ್ನುತ್ತ ಶಿವಯೋಗಮಂದಿರದ ಆಶ್ರಯದಲ್ಲಿ ಕಾಲಿರಿಸಿದಾಗ ಕಂಡ ನೋಟ ಇನ್ನೂ ಅಚ್ಚಳಿಯದಿದೆ.ವಾಚನಾಲಯ, ತಾಡವೋಲೆಗಳ ಸಂಗ್ರಹಾಲಯಗಳನ್ನು ಸಂದರ್ಶಿಸಿ,
ಯೋಗಸಾಧನಯ ನೆಲೆಮನೆಯನ್ನು ಕಂಡು ಶಿವಯೋಗಿಗಳ ಸಮಾಧಿಯ ಹತ್ತಿರ ಬಂದಾಗ ಜೋಯಿಸರ ಹರಳಳ್ಳಿಯ ಹಾಲಯ್ಯನ ಚಿತ್ರ ಕಣ್ಮುಂದೆ ನಿಂತಿತ್ತು!
ಅವರು ಯಾವಾಗಲೂ ಒಮ್ಮೊಮ್ಮೆ ಬರುತ್ತಾರೆ. ಅಂತಹ ಕಾಲ ನೆಲದ ಪುಣ್ಯದಿಂದ ಬರುತ್ತದೆ. ನಮ್ಮ ಜೈನ ದಾರ್ಶನಿಕರು, ಲಿಂಗಾಯತ ದಾರ್ಶನಿಕರು. ವೈಷ್ಣವ ಭಕ್ತರು ಅವರದೊಂದು ಕಾಲ. ಆ ಕಾಲ ತಿರುಗಿ ಹೋಯಿತು. ಇನ್ನು ಅವರು ತಿರುಗಿ ಬಾರದೇ? ಎಂದು ಈ ನಮ್ಮ ಹೊಸಗಾಲದ ಜನತೆ ಹಾರಯಿಸಿ ನಿಂತ ಹೊತ್ತಿನಲ್ಲಿ ಯಾರಿಗೂ ತಿಳಿಯಗೊಡದಂತೆ ಅವರು ಬಂದರು, ಹೋದರು. ನಾವು ಗುರುತಿಸದಿದ್ದರೆ ಅದು ಯಾರ ತಪ್ಪು?
ಶಿವಯೋಗಿಗಳ ಸನ್ನಿಧಿಯಲ್ಲಿ ನಿಂತು ಹರಕೆ ಬೇಡಿ ಮಲಾಪಹಾರಿಯ ಕಡೆಗೆ ತಿರುಗಿದಂದು ಹತ್ತಿರದಲ್ಲೇ ಒಂದು ಬಾವಿ, ಬಾವಿಯ ಕಟ್ಟೆಯ ಮೇಲೆ ಯಾರೋ ನಿಂತಂತೆ ತೋರಿತು. ಗೆಳೆಯರನ್ನು ಹಿಂದೆ ಬಿಟ್ಟು ಮುಂದಕ್ಕೆ ಹೋಗಿ ನೋಡಿದಾಗ ಕಂಡವು ಇಬ್ಬರಲ್ಲಿ ಒಬ್ಬ ಹುಡುಗ, ಇನ್ನೊಬ್ಬ ಮುದುಕ.
ಹುಡುಗ ಅದೇ ಮುಖ, ಅದೇ ನಿಲುವು, ಅದೇ ಆಕಾರ, ಅದೇ ರೂಪ ಕಿವಿ ಟೊಪ್ಪಿಗೆ ಹಾಕಿಕೊಂಡಿದ್ದಾನೆ. ನಿಲುವಂಗಿ ತೊಟ್ಟಿದ್ದಾನೆ. ಬರಿಗಾಲು ನೊಂದಿಲ್ಲ,ಬೆಂದಿಲ್ಲ. ಆದರ್ಶದ ಕನಸ ಕನಸು; ಬದುಕ ಬದುಕು, ನಮ್ಮ ಶಿವು!
ಮುದುಕ ತಪಸ್ಸಿನ ಅಗ್ನಿಯಲ್ಲಿ ಬೆಂದ ಜೀವ, ಅಪ್ಪಟ ಚಿನ್ನ, ಹೊಳೆವ ಕಂಗಳು.ಮೊಗದ ತೇಜ, ಕಂಗಳ ನಿಶ್ಚಲ ನೋಟ, ಶಿವಯೋಗ ನಿದ್ರೆಯಲ್ಲಿ ನಿರತರಾಗಿರುವರೋ ಎಂಬ ಆಕೃತಿ, ಹಾನಗಲ್ಲ ಕುಮಾರ ಸ್ವಾಮಿಗಳು!
ಹಿರೇಮಲ್ಲೂರಿನ ಶಿವು ಶಿವಯೋಗಮಂದಿರದ ಶಿವಯೋಗಿಗಳ ಸನ್ನಿಧಿಯಲ್ಲಿ ಬಂದು ನಿಂತಿದ್ದಾನೆ.
ಮಲಪ್ರಭಾ ಪಕ್ಕದಲ್ಲಿ ವಿಶಾಲವಾದ ನದಿಯ ಹರವು. ಒಮ್ಮೆ ದುಡುಕು.ಇನ್ನೊಮ್ಮೆ ತಾಳ್ಮೆ. ಅಲ್ಲಿ ಏಳು, ಇಲ್ಲಿ ಬೀಳು. ಆ ಮೇಲೆ ಎಲ್ಲವೂ ಮೌನ, ಸಲಿಲವಾಗಿ,ಪ್ರಶಾಂತವಾಗಿ, ಮನೋಹರವಾಗಿ ಮಲಪ್ರಭೆ ಸನಿಹದಲ್ಲಿಯೇ ಹರಿಯುತ್ತಿದ್ದಳು.
ನಾನು ಹಾಗೆಯೇ ನಿಂತಿದ್ದೆ. ದಾರ್ಶನಿಕ ಕಂಡ ಆ ನಾಡಿನಲ್ಲಿ ನಾನು ಈಗಲೂ ಎವಯಿಕ್ಕದ ಹಾಗೆಯೆ ನಿಂತಿದ್ದೇನೆ.
ಆಕರ: ಹಿರೇಮಲ್ಲೂರ ಈಶ್ವರನ್ ಅವರ ಕವಿಕಂಡ ನಾಡು ಕೃತಿಯಿಂದ