• ಬಿ. ಶಿವಮೂರ್ತಿ ಶಾಸ್ತ್ರಿ

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)

• ಪಂಡಿತ ನಾಗಭೂಷಣ ಶಾಸ್ತ್ರಿಗಳು

ಭಾರತ ದೇಶದ ಅದರಲ್ಲಿಯೂ ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಅನಾದಿ ಕಾಲದಿಂದಲೂ ಅಸಂಖ್ಯ ಮಹಾಪುರುಷರು ಮೇಲಿಂದ ಮೇಲೆ ಜನ್ಮವೆತ್ತುತ್ತಲೇ ಬಂದಿರುವರೆಂಬ ಬಗೆಗೆ ಪ್ರಾಜ್ಞಭಾರತೀಯರಿಗೆಲ್ಲ ವಿದಿತವಾದ ಸಂಗತಿಯೇ ಆಗಿದೆ. ಶಾಂತಸ್ವಭಾವದ ಆ ಮಹಾಪುರುಷರೆಲ್ಲರೂ ವಸಂತಮಾಸದಂತೆ ಲೋಕ ಹಿತವನ್ನು ಸಾಧಿಸುವಲ್ಲಿಯೇ ತಮ್ಮ  ಕೃತಕೃತ್ಯತೆಯನ್ನು ಕಂಡುಕೊಳ್ಳುವಂತಹ ನಿರ್ಮಲ ಹೃದಯದವರು. ಆತ್ಮವಿಸ್ಮೃತಿ ರೂಪ ಮರಣವನ್ನು ಹೊಂದಿದ ಜನಾಂಗದಲ್ಲಿ ಆತ್ಮ ಸಂಸ್ಕೃತಿರೂಪ ಜೀವ ಕಳೆಯನ್ನು ತುಂಬುವ ಮಹಾ ಕಾರ್ಯವು ಮಹಾಪುರುಷೇತರರಿಂದ ಎಂದೆಂದೂ ಸಾಧ್ಯವಾದದ್ದು. ಅವಿಚಾರದ ತಮಸ್ಸು ಮುಸುಕಿದ ಜನಾಂಗದ ಹೃದಯ ಪದ್ಯದಲ್ಲಿ ಸುವಿಚಾರದ ನಂದಾದೀಪವನ್ನು ಹಚ್ಚಿ ಬೆಳಗುವ ಪ್ರಯತ್ನ ಮಾಡುವ ಮಹಾಪುರುಷರ ಜೀವನ ಚರಿತ್ರೆಗಳು ಭಾರತೀಯ ಧಾರ್ಮಿಕೇತಿಹಾಸಗಳಲ್ಲಿ ತುಂಬ ಕಂಡು  ಬರುವವು. ನಿಜವಾಗಿಯೂ ಇಂತಹ ಮಹಾಪುರುಷರ ಇತಿಹಾಸಗಳೇ ಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯ ಹೆಚ್ಚಳವನ್ನು ನಿಚ್ಚಳವಾಗಿ ತೋರಿಸಿಕೊಡುವವು. ನಡೆಶುಚಿ, ನುಡಿಶುಚಿ, ಮನಶುಚಿ, ತನುಶುಚಿ, ಭಾವಶುಚಿ ಈ  ಪಂಚಶುಚಿಗಳನ್ನೊಳಗೊಂಡ ಮಹಾತ್ಮರಲ್ಲಿ ಕಂಡು ಬರುವ ಸಂಪತ್ತೆಂದರೆ ಪಾವಿತ್ರ್ಯ, ಪ್ರೇಮ, ತ್ಯಾಗ ಇಂಥವರ ಬಗೆಗೆ ಧಾರ್ಮಿಕ ಜನತೆ  ಇಟ್ಟುಕೊಂಡ ಪ್ರೇಮಾಭಿಮಾನ ಗೌರವಗಳು ಅಸದೃಶವಾದವು. ಕೇವಲ ಜಡಸಂಪತ್ತಿನ ವ್ಯಾಮೊಹದಲ್ಲಿ ಮಗ್ನರಾಗಿದ್ದ ಮಹಾ ಮಹಾ ಚಕ್ರವರ್ತಿಗಳ ಪಲ್ಲಕ್ಕಿಗಳನ್ನು ಹೊರುವ ಪ್ರಸಂಗ ಬಂದಾಗ ಪೂರ್ಣ ಹಿಂಜರಿಯುತ್ತಿದ್ದ ವ್ಯಕ್ತಿಗಳು ಸತ್ಪುರುಷರನ್ನು ಪಲ್ಲಕಿಯಲ್ಲಿ ಕೂಡ್ರಿಸಿ ಹೊತ್ತು ನಡೆಯುವ ಪ್ರಸಂಗವೊದಗಿ ಬಂದಾಗ ಅಹೋಭಾಗ್ಯವೆಂದು ಭಾವಿಸುತ್ತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಧಾವಿಸಿ ಬರುವ ದೃಶ್ಯವು ಅಚ್ಚರಿಯದೇನಲ್ಲ. ನಿಜವಾದ ಧಾರ್ಮಿಕ ಪ್ರಜ್ಞೆಯನ್ನು ಕಳಕೊಂಡು ಅಪಮಾರ್ಗದಲ್ಲಿ ಸಾಗಿ ತೀರ ಅವನತಿಯನ್ನು ಹೊಂದುತ್ತಿದ್ದ ವ್ಯಕ್ತಿಗಳನ್ನು ಕಣ್ಣಾರೆ ಕಂಡ ಮಹಾಪುರುಷರು ಸುಮ್ಮನೆ ಕಣ್ಣು ಬಡಿಯುತ್ತ ಕುಳಿತುಕೊಳ್ಳಲು ಎಂದೂ ಮನಸ್ಸು ಮಾಡರು. ಅವರ ನಿಜವಾದ  ಪೂಜೆಯೆಂಬುದು ಪರಹಿತಕಾರ್ಯವೇ ಆಗುವದು.

ಸಂತೋಷಂ ಜನಯೆತ್ ಪ್ರಾಜ್ಞಸ್ಥದೇವೇಶ್ವರ ಪೂಜನಂ ।

ಸಕರ್ಮಣಾ ತಮಭ್ಯರ್ಚ್ಯ ಸಿದ್ದಿಂ ವಿಂದತಿ ಮಾನವಃ

ಇವೇ ಮೊದಲಾದ ಸೂಕ್ತಿಗಳು ಸತ್ಪುರುಷರ ನೈಜ ಜೀವನದ ಪರಿಚಾಯಕವಾಗಿರುವವು.

ಇಂತಹ ಮಹಾಪುರುಷರ ಪಂಕ್ತಿಯಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸರ್ವಾತ್ಮನಾ ಪಡೆದುಕೊಂಡವರು. ಇವರು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಅನಾದಿ ಸಂಸಿದ್ಧವಾದ ವೀರಶೈವ ಧರ್ಮದ ಪುನರುತ್ಥಾನ ಮಹಾಕಾರ್ಯವು ನಡೆಯಬೇಕಾದಾಗ ಸಮರ್ಥ ಕಾರಣಿಕ ಮಹಾಪುರುಷ ರೂಪದಲ್ಲಿ ಕಾಣಿಸಿಕೊಂಡರು.

ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ನಡಬಿಗಿದು ನಿಂತುಕೊಂಡದ್ದಷ್ಟೇ ತಡ ಸಮಾಜದ ನಾಡಿನ ಜನರೆಲ್ಲರೂ ಶಿವಯೋಗಿಗಳಿಗೆ ತಮ್ಮ ಹಾರ್ದಿಕ ಭಕ್ತಿ ಭಾವಗಳನ್ನು ಸಮರ್ಪಿಸಲು ಮುಂದಾಗಿಯೇ ಬಿಟ್ಟರು. ಇಂಥ ಪ್ರಸಂಗದಲ್ಲಿಯೂ ಪೂಜ್ಯ ಶಿವಯೋಗಿಗಳು ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳುತ್ತ ಸ್ವಕರ್ತವ್ಯಗಳಲ್ಲಿಯೇ ತನ್ಮಯರಾಗಿ ಬಿಡುತ್ತಿದ್ದರಲ್ಲದೆ ಜನರಿಂದ ಬರುವ ಮಾನಮರ್ಯಾದೆಗಳ ಬಗ್ಗೆ ತಮ್ಮ ಚಿತ್ತವನ್ನು ಎಷ್ಟೋ ಹರಿಸುತ್ತಿರಲಿಲ್ಲ. ಇದು ಶಿವಯೋಗಿಗಳ ಮಹಾವ್ಯಕ್ತಿತ್ವವನ್ನು ಎತ್ತಿ ತೋರಿಸುವದಾಗಿತ್ತು. ಜನರು ನೀಡುವ ಮಾನಮಯ್ಯಾದೆಗಳತ್ತ ತಮ್ಮ ದೃಷ್ಟಿಯನ್ನು ಸದಾ ಹರಿಸುವ ವ್ಯಕ್ತಿಗಳು ಜನತೆಯ ಹಿತವನ್ನು ಸಾಧಿಸುವ ಸಾಮರ್ಥ್ಯವನ್ನು ಕಳೆದುಕೊಂಡವರೇ ಆಗುವರು, ಜನಸೇವೆಯನ್ನು ಜಗದೀಶನ ಸೇವೆಯೆಂದು ನಂಬಿದ್ದ ಬಸವಾದಿ ಪ್ರಮಥರು ಅನ್ಯರ ಹೊಗಳಿಕೆಯನ್ನು ಆತ್ಮಪ್ರಗತಿಯಲ್ಲಿ ದೊಡ್ಡ ವಿಘ್ನಕಾರಿಯೆಂದು ತಿಳಿಯುತ್ತಿದ್ದರೆಂಬುದನ್ನು ಅವರ ವಾಣಿಯಿಂದಲೇ ತಿಳಿದು ಬರುವದು. “ಎನ್ನವರೆನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕಿಕ್ಕಿದರು” ಎಂದು ಹೇಳುವ ಭಾವ ಎಷ್ಟು ಜನ ಪರಹಿತ ಸಾಧಕರೆಂಬವರಲ್ಲಿರುವದೋ ನೋಡಬೇಕು.

 ಅನಾದಿ ಸಂಸಿದ್ಧವಾದ ವೀರಶೈವ ಧರ್ಮವನ್ನು ಎತ್ತಿ ಹಿಡಿಯುವ ಮಹಾಕಾರ್ಯಗಳಲ್ಲಿ ತೊಡಗಿದ ಕುಮಾರ ಶಿವಯೋಗಿಗಳಿಗೆ ಸರ್ವಾತ್ಮಭಾವದಿಂದ ವರ್ತಿಸುವದಕ್ಕಿಂತ ಮತ್ತಾವುದೂ ಅವರಿಗೆ ಗೋಚರಿಸುತ್ತಿರಲಿಲ್ಲ. ಧರ್ಮ ಹಾಗೂ ಸಮಾಜದ ಪುನರುತ್ಥಾನ ಕಾರ್ಯದಲ್ಲಿ ಸಮಯ ಕಳೆಯುವಲ್ಲಿ ದೊರೆಯುವ ಆನಂದ ಅಪರಿಮಿತವಾದುದು.

ಪೂಜ್ಯ ಶಿವಯೋಗಿಗಳು ತಾವು ಕೈಕೊಂಡ ಕಾರ್ಯಗಳಲ್ಲಿ ಅತ್ಯಂತ ಮಹತ್ವ ಪಡೆದವೆರಡು. ಅವೇ ಅ – ಭಾ. ವೀರಶೈವ ಮಹಾಸಭೆ, ಮತ್ತು ಶಿವಯೋಗ ಮಂದಿರ, ಮೊದಲನೆಯದು ವೀರಶೈವ ಸಮಾಜ ಪುರುಷನ ಸರ್ವತೋಮುಖವಾದ ಬಾಹ್ಯ ಸುಧಾರಣೆಯ ಸಾಧನಗಳ ಬಗೆಗೆ ಕೂಲಂಕಷವಾಗಿ ವಿಚಾರಿಸಿ ನಿರ್ಣಯಿಸಲು ಉಪಾಯಪೂರಿತವಾಗಿತ್ತು. ಎರಡನೆಯದು ಸಮಾಜ ಪುರುಷನ ಅಂತರಂಗದ ಪಾವನತೆ ಹಾಗೂ ಸ್ಥಿರತೆಯನ್ನುಂಟು ಮಾಡಿ ಆತ್ಮಾನುಭೂತಿಯ ಮಹಾ ಬೆಳಕನ್ನು ಬೆಳಗಲು ಸಾಧನಭೂತವಾಗಿತ್ತು. ಇವೆರಡು ಮಹಾಕಾರ್ಯಗಳನ್ನು ವೀಕ್ಷಿಸುವವರಿಗೆ ಕುಮಾರ ಶಿವಯೋಗಿಗಳು ಎಂಥ ಕರ್ಮಕೌಶಲ್ಯ ಪಡೆದವರಾಗಿದ್ದರೆಂಬ ಕಲ್ಪನೆಯು  ಸಹಜವಾಗಿಯೇ ಮೂಡಿ ಬರದಿರಲಾರದು. ಇನ್ನೊಂದು ದೊಡ್ಡ ವ್ಯಕ್ತಿಗಳ ಬಗೆಗೆ ತಿಳಿದುಕೊಳ್ಳುವದು ಅತ್ಯವಶ್ಯವಾಗಿದೆ. ಅವರು ಹೊರಗೆ ನಿರ್ಧನಿಕರಾಗಿ ಕಂಡು ಬಂದರು ಅಂತಸ್ಸತ್ವದ ಬಲದಿಂದ ಎಂಥ ಕಠಿಣ ಕಾರ್ಯಗಳನ್ನೂ ಸುಲಭವಾಗಿಯೇ ಸಾಧಿಸಬಲ್ಲರೆಂಬುವದು.

ಕ್ರಿಯಾಸಿದ್ದಿಃ:ಸತ್ವೇ ಭವತಿ ಮಹಾತಾಂನೋಪಕರಣೇ”

ಎಂಬ ಸೂಕ್ತಿಯು ಮಹಾಪುರುಷರ ದಿವ್ಯವ್ಯಕ್ತಿತ್ವದ ಸುಂದರ ಶಬ್ದ ಚಿತ್ರವೇ ಆಗಿರುವದು. ಬೇಕಾದಷ್ಟು ಉಪಕರಣಗಳ ಅನುಕೂಲವಿದ್ದಾಗಲು ಯಾವ ಮಹಾಕಾರ್ಯವನ್ನು ಸಾಧಿಸದ, ಯಾವ ಉಪಕರಣಗಳ ಅನುಕೂಲವಿಲ್ಲದಿದ್ದಾಗಲೂ ಮಹಾ ಮಹಾ ಕಾರ್ಯಗಳನ್ನು ಸಾಧಿಸುವವರನ್ನು ನಾವು ಕಂಡದ್ದುಂಟು. ಇದಕ್ಕೆಲ್ಲ ಅಂತಸ್ಸತ್ವದ ಇರುವಿಕೆ ಕಾರಣ.

ಕುಮಾರ ಶಿವಯೋಗಿಗಳು ತಮ್ಮ ಅಂತಸ್ಸತ್ವದ ಪ್ರಭಾವದಿಂದಲೇ ಎಲ್ಲ ಮಹಾ ಕಾರ್ಯಗಳನ್ನು ಸುಲಭವಾಗಿಯೇ ನಿರ್ವಹಿಸುವವರಾಗಿದ್ದರು. ಇವತ್ತಿಗೂ ಅವರು ನಿರ್ಮಿಸಿದ ಉಭಯ ಸಂಸ್ಥೆಗಳು ಅವರ ಅಂತಸ್ಸತ್ವದ ಪ್ರತೀಕವಾಗಿ  ಉಳಿದುಕೊಂಡಿರುವವು

ಕುಮಾರ ಶಿವಯೋಗಿಗಳು ತಮಗಿಂತ ಪೂರ್ವದಲ್ಲಿ ಆಗಿ ಹೋದ ಬಸವಾದಿ ಪ್ರಮಥರು, ರೇಣುಕಾದ್ಯಾಚಾರ್ಯರು, ಪ್ರಭು ಮೊದಲಾದ ನಿರಂಜನ ಮೂರ್ತಿಗಳು ಯಾವ ಧರ್ಮದ ಏಳ್ಗೆಗಾಗಿ ಅನವರತ ಪ್ರಯತ್ನಿಸಿದರೊ ಅಂತಹ ವೀರಶೈವ ಧರ್ಮದ ರಕ್ಷಣೆಯೇ ಕುಮಾರ ಶಿವಯೋಗಿಗಳ ಜೀವನದ ಚರಮ-ಪರಮ ಗುರಿಯಾಗಿತ್ತು. ಸಮಾಜದಲ್ಲಿ ಮಠಗಳು, ಮಠಾಧಿಪತಿಗಳು ಇರುವದು ಜನಾಂಗದ ಕಲ್ಯಾಣೈಕ ದೃಷ್ಟಿಯಿಂದಲ್ಲವೇ ! ಅದು ಸಾಧ್ಯವಾಗಬೇಕಾದರೆ ಮಠಾಧಿಕಾರಿಗಳು ಸಚ್ಚರಿತ್ರರೂ, ತತ್ತ್ವವೇತ್ತರೂ ಕಾರ್ಯತತ್ಪರರೂ ಆಗಿರಲೇಬೇಕೆಂಬುದು ನಿರ್ವಿವಾದವಾಗಿರುವದು. ಇಂಥ ಮಹಾ ವ್ಯಕ್ತಿಗಳನ್ನು ಸಿದ್ಧಪಡಿಸುವದಕ್ಕಾಗಿ ಪ್ರಯತ್ನಿಸಿದ್ದು ಕುಮಾರ ಶಿವಯೋಗಿಗಳ ದೂರದರ್ಶಿತ್ವ ಹಾಗೂ ಕಾರಣಿಕ ಮಹಾಪುರುಷತ್ವದ ದ್ಯೋತಕವಲ್ಲದೆ ಮತ್ತೇನು !

 ಶಿವಯೋಗ ಮಂದಿರ ಸಂಸ್ಥೆಯು ಭಾರತದ ಅಧ್ಯಾತ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವದು. ಇಂತಹ ಸಂಸ್ಥೆಯನ್ನು ಕಟ್ಟಿದವರ ಬಗ್ಗೆ ಅವರ ಸಮಕಾಲೀನರಾದ ಅನೇಕ ಪೂಜ್ಯ ಮಹಾಸ್ವಾಮಿಗಳು ಕುಮಾರ ಶಿವಯೋಗಿಗಳ ಬಗೆಗೆ ಗೌರವ ಬುದ್ಧಿಯನ್ನಿಟ್ಟುಕೊಂಡದ್ದೇನೂ ಅಚ್ಚರಿ ಸಂಗತಿಯಲ್ಲ. ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು, ಇಲಕಲ್ಲ ವಿಜಯಮಹಾಂತ ಶಿವಯೋಗಿಗಳು, ಹಾಲಕೆರೆಯ ಶ್ರೀ ಅನ್ನದಾನ ಶಿವಯೋಗಿಗಳು ಮತ್ತು ಸೊಲ್ಲಾಪುರದ ಶ್ರೀ ವೀರೇಶ ಶಿವಶರಣರು ಮೊದಲಾದವರು ಕುಮಾರ ಶಿವಯೋಗಿಗಳ ಬಗೆಗೆ ಹಾರ್ದಿಕ ಪ್ರೇಮಾದರಗಳನ್ನು ತೋರಿಸುತ್ತಲಿದ್ದರೆಂಬುದನ್ನು ಪ್ರತ್ಯಕ್ಷ ನೋಡಿದವರು ಕೆಲವರಿನ್ನೂ ಬದುಕಿಕೊಂಡಿರುವರು.

  ನಾವು ೧೯೨೫ನೆಯ ಸಾಲಿನಲ್ಲಿ ಕಾಶೀಕ್ಷೇತ್ರಕ್ಕೆ ಉಚ್ಚ ಶಿಕ್ಷಣಕ್ಕಾಗಿ ಹೊರಡುವ ಪ್ರಸಂಗದಲ್ಲಿ ಹಾಲಕೆರೆಯ ಶ್ರೀಮದನ್ನದಾನಿಮಹಾಸ್ವಾಮಿಗಳು ನಮಗೆ ಅಪ್ಪಣೆಕೊಡಿಸಿದ್ದು ಹೀಗೆ –

 ‘ಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದೇ ನೀವು ಕಾಶೀ ಕ್ಷೇತ್ರಕ್ಕೆ ಹೊರಡಬೇಕು’ ಹಾಗೆ ಪೂಜ್ಯರ ಅಪ್ಪಣೆಯಾಗಬೇಕಾದರೆ ಹಾನಗಲ್ಲ ಪೂಜ್ಯ ಮಹಾಸ್ವಾಮಿಗಳಲ್ಲಿ ಅವರಿಗೆ ನಂಬಿಗೆಯಿದ್ದಿತೆಂಬುದು ವ್ಯಕ್ತವಾಗುವದು ಆದರೆ ನಮಗಾಗ ಅನುಕುಲವಾಗದ್ದಕ್ಕೆ ಹಾಗೇ ಹೊರಡುವ ಪ್ರಸಂಗ ಬಂತು. ಪುನಃ ಮಾರನೆಯ ವರ್ಷ ಕಾಶಿಯಿಂದ ಬಂದಾಗ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನ ಪಡೆದುಕೊಂಡದ್ದು ಇಲಕಲ್ಲ ಮಠಕ್ಕೆ ದೋಟ್ಯಾಳ ದೇವರನ್ನು ಅಧಿಕಾರಿಗಳನ್ನಾಗಿ ಮಾಡುವ ಶುಭಸನ್ನಿವೇಶದಲ್ಲಿ ಶಿವಯೋಗ ಮಂದಿರದಿಂದ ಒಂದೇ ವಾಹನದಲ್ಲಿ ಕುಮಾರ ಶಿವಯೋಗಿಗಳ ಅನ್ನದಾನಿ ಮಹಾಸ್ವಾಮಿಗಳ ಕೂಡ ಇಲಕಲ್ಲಿಗೆ ಹೋದದ್ದು ನನ್ನ ಅಹೋ ಭಾಗ್ಯವೆಂದು ಭಾವಿಸಿದೆ.

ಶ್ರೀ ಕುಮಾರ ಶಿವಯೋಗಿಗಳಂಥ ಮಹಾವ್ಯಕ್ತಿಗಳಿಗೆ ಜನ್ಮಕೊಡುವಂತಹ ಭಾಗ್ಯ ಪಡೆದ ಕನ್ನಡಮ್ಮನಿಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ! ಮತ್ತೊಮ್ಮೆ ಕುಮಾರಶಿವಯೋಗಿಗಳು ಮೈದೋರಿ ವೀರಶೈವ ಸಮಾಜವನ್ನು ಎತ್ತಿ ಹಿಡಿಯುವ ಮಹಾಕಾರ್ಯವನ್ನೆಸಗುವಂತೆ ಕರುಣಿಸಲೆಂದು ಅನನ್ಯಭಾವದಿಂದ ಜಗಚ್ಚಾಲಕನಾದ ಮಹಾದೇವನನ್ನು ಪ್ರಾರ್ಥಿಸಲಾಗುವದು

ಡಾ. ಬಸವರಾಜ ಜಗಜಂಪಿ

ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.

ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.

ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.

ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು

‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು. 

ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ  ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.

ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.

ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ  ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.

ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?

 ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.

ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.

ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.

ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ  ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.

ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.

 ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು  ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ  ಸ್ವಾಮಿಗಳೊಂದಿಗೆ ಚರ್ಚಿಸುತ್ತ  ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು.  , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ  ದೇಶಿಕರೆನಿಸಿದರು.

ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.

ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.

ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.

ಮಠಾಧಿಕಾರವನ್ನು ಅವರೆಂದೂ  ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ  ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.

ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.

 ಶ್ರೀಗಳ ದೂರದರ್ಶಿತ್ವ ತುಂಬ  ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ  ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು  ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ  ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು

. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.

ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.

ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.

ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ,  ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.

ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.

ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು,  ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:

೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.

• ಶ್ರೀ ಶಿ. ಫ. ಮರಡೂರ ಧಾರವಾಡ

ಸ್ವಾರ್ಥೋ ಯಸ್ಯ ಪರಾರ್ಥ ಏವ ಸಃ ಪುಮಾನ್ ಏಕಃ ಸತಾಂ ಅಗ್ರಣೀಃ ||

(ಅರ್ಥ : ಪರಹಿತವೇ ತನ್ನ ಹಿತವೆಂದು ತಿಳಿದು ಆಚರಿಸುವ ಮಹಾಪುರುಷನೇ ಸಜ್ಜನ (ಸಂತ) ರಲ್ಲಿ ಶ್ರೇಷ್ಠನು.)

ಶ್ರೀಗಳವರು ತಮ್ಮ ಮಾನವ ಜನ್ಮ ಯಾತ್ರೆಯನ್ನೆಲ್ಲ ಸಮಾಜ ಸೇವೆಯಲ್ಲಿಯೇ ಕಳೆದು ತಮ್ಮ ಅವತಾರ ಕೃತ್ಯವನ್ನು ಮುಗಿಸಿ, ಅಂತರ್ಧಾನರಾಗಿರುವರು. ಶ್ರೀಗಳವರ ಪರಶಿವ ಸಾಕ್ಷೀಭೂತವಾದ ಅವಿಶ್ರಾಂತಶ್ರಮದ ಕೃತ್ಯಗಳಿಂದ ಸಮಾಜದಲ್ಲಿ ವಿಚಿತ್ರವಾದ  ಜಾಗೃತಿಯು ಉತ್ಪನ್ನವಾಗಿರುವದು; ವೀರಶೈವ ಸಮಾಜದ ಎಲ್ಲೆಡೆಗಳಲ್ಲಿಯೂ ನವಚೈತನ್ಯವು ತಲೆದೋರಿರುವದು; ನಾವು ಯಾರು ? ನಮ್ಮ ಕರ್ತವ್ಯವೇನು ? ಎಂಬ ಅರಿವು ಸ್ವಾಮಿಗಳಲ್ಲಿಯೂ, ಶಿಷ್ಯರಲ್ಲಿಯೂ, ಅಶಿಕ್ಷಿತ ಸುಶಿಕ್ಷಿತರಲ್ಲಿಯೂ ಮೊಳೆಯೊಡೆ ದಿರುವದು; ವೀರಶೈವರೆಲ್ಲರು ತಮ್ಮ ಇರವನ್ನರಿತು ಅರಬಡಿಸಿ ತಿದ್ದಿಕೊಳ್ಳಹತ್ತಿರುವದು; ಶ್ರೀಗಳವರು ಲಿಂಗೈಕ್ಯರಾಗಿ ಹೋಗಿದ್ದರೂ ಕೂಡ, ಅವರಿಂದ ಸಮಾಜದಲ್ಲಿ ಉಂಟಾದ ಜಾಗೃತಿಯ ಪ್ರಕಾಶವು  ಝಗಝಗಿಸುತ್ತಿರುವದು; ಶ್ರೀಗಳಂಥ ವಿಭೂತಿಗಳ ದಿವ್ಯಲೀಲೆ (ಕೃತಿ)ಗಳ ರಹಸ್ಯದ ಸಿಂಹಾವಲೋಕನವನ್ನು ಆಗಾಗ್ಗೆ ಮಾಡುತ್ತ ನಮ್ಮ ಜೀವಿತದ ಕರ್ತವ್ಯಗಳ ಹಾದಿಯನ್ನು ಕಂಡು ಹಿಡಿಯುವದು ನಮ್ಮೆಲ್ಲರ ಕರ್ತವ್ಯವಾಗಿರುವದು. ಆದುದರಿಂದ, ಪ್ರಸ್ತುತ ಲೇಖದಲ್ಲಿ ಶ್ರೀಗಳವರಿಂದ ವೀರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವು ಹೇಗಾಯಿತೆಂಬುದರ ಸಂಕ್ಷಿಪ್ತ ಸಿಂಹಾವಲೋಕನವು ಮಾಡಲ್ಪಟ್ಟಿರುವುದು.

ಶ್ರೀಗಳವರಿಂದ ಸಮಾಜದಲ್ಲಿ ಶಿಕ್ಷಣದ ಪ್ರಸಾರವು ಹೇಗಾಯಿತೆಂಬುದರ ನಿಜವಾದ ಕಲ್ಪನೆಯಾಗಬೇಕಾದರೆ, ಶ್ರೀಗಳವರು ಸಮಾಜ ಸೇವೆಯ ಸೂತ್ರವನ್ನು ವಹಿಸಿ, ಕರ್ತವ್ಯ ರಂಗಸ್ಥಲದ ಮೇಲೆ ಸೂತ್ರಧಾರರಾಗಿ ನಿಂತ ಕಾಲಕ್ಕೆ ವೀರಶೈವ ಸಮಾಜದ ಸ್ಥಿತಿಯು ಹೇಗಿತ್ತೆಂಬ ಸಂಗತಿಯು ಗೊತ್ತಿರಲಿಕ್ಕೆ ಬೇಕಾಗುವದು. ಆದಕಾರಣ ಆಗಿನ ಆಂದರೆ ೩೦-೪೦ ವರ್ಷಗಳ ಹಿಂದಿನ ಸಮಾಜದ ಸ್ಥಿತಿಗತಿಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.

 ಒಂದಾನೊಂದು ಕಾಲದಲ್ಲಿ ನಮ್ಮ ಈ ವೀರಶೈವ ಸಮಾಜವು ಒಳ್ಳೆ ಸುವ್ಯವಸ್ಥಿತವಾದ ಸುಸ್ವರೂಪದಲ್ಲಿತ್ತೆಂಬುದಕ್ಕೆ ನಮ್ಮ ಸಮಾಜದ ಸರ್ವಾಂಗ ಸುಂದರವಾದ ರಚನೆಯೇ ಪ್ರತ್ಯಕ್ಷ ಸಾಕ್ಷಿಯಾಗಿರುವದು. ಈ ಸಮಾಜ ರಚನೆಯಲ್ಲಿ ವ್ಯಕ್ತಿಯ ಆಚಾರ ವಿಚಾರಗಳಿಗೆ ಮಹತ್ವವೇ ಇರುವದಿಲ್ಲ. ನಮ್ಮ ಸಮಾಜದಲ್ಲಿ ಪಂಚ ಧರ್ಮಪೀಠಗಳಿರುವವು. ಆ ಪೀಠಗಳು ಕಾಶಿ, ಹಿಮವತ್ಕೇದಾರ, ಶ್ರೀಶೈಲ, ರಂಭಾಪುರಿ, ಉಜ್ಜಯನಿ ಮೊದಲಾದ ಭರತಖಂಡದೊಳಗಿನ ಪುಣ್ಯಕ್ಷೇತ್ರಗಳಲ್ಲಿ ನೆಲೆಸಿ ಕಂಗೊಳಿಸುತ್ತಿರುವವು. ಈ ಪೀಠಾಚಾರ್ಯರು ದೇಶದಲ್ಲೆಲ್ಲ ಸಂಚರಿಸಿ, ಭಕ್ತವೃಂದದ ಅನುಮತಿಯಿಂದ ಸಮಾಜದಲ್ಲಿ ಧರ್ಮಚ್ಯುತಿಯಾಗದಂತೆ ವ್ಯವಸ್ಥೆಯನ್ನಿಡುವದೂ, ಭಕ್ತಕೋಟಿಯಿಂದ ದೊರೆತ ಕಾಣಿಕೆಯಿಂದ ಧರ್ಮೊತ್ಕರ್ಷದ ಕಾರ್ಯವನ್ನು ನೆರವೇರಿಸುವದೂ ಇವರ ಕರ್ತವ್ಯಗಳಾಗಿರುವವು. ಒಳನಾಡಿನಲ್ಲಿ ಪಟ್ಟದ ಸ್ವಾಮಿಗಳು ಹಾಗೂ ಚರಮೂರ್ತಿಗಳು ಎಂಬ ಪೀಠಾಚಾರ್ಯರ ಪ್ರತಿನಿಧಿಗಳಿರುವರು ಪೀಠಾಚಾರ್ಯರ ಅನುಜ್ಞೆಯಂತೆ ಸಮಾಜದ ಧಾರ್ಮಿಕ ಕಾರ್ಯಗಳನ್ನು ಮಾಡುವದೂ, ಭಕ್ತರಲ್ಲಿ ಶಿಕ್ಷಣ ಪ್ರಸಾರವಾಗುವ ಯೋಜನೆಯನ್ನು  ನಿಯೋಜಿಸುವದೂ ಭಕ್ತರಿಂದ ದೊರೆತ ಕಾಣಿಕೆಯಿಂದ ಅತಿಥಿ ಅಭ್ಯಾಗತರನ್ನು ಉಪಚರಿಸುವದೂ; ಇವರ ಕರ್ತವ್ಯಗಳು. ಇದಲ್ಲದೆ ಊರೂರಿಗೆ ಮಠದಯ್ಯನವರು, ಮಠಪತಿ,   ಗಣಾಚಾರಿ, ಸ್ಥಾವರ, ಕುಮಾರ ಎಂಬ ಹೆಸರಿನ ಉಪಾಚಾರ್ಯರಿರುವರು. ಗ್ರಾಮದೊಳಗಿನ ಶೆಟ್ಟಿ, ಬಣಕಾರ, ಗ್ರಾಮಾಧಿಕಾರಿಗಳು ಇವರೆಲ್ಲರ ಸಹಾಯದಿಂದ ಧರ್ಮದ ಕಾರ್ಯಗಳನ್ನು ನೆರವೇರಿಸುವದು ಇವರ ಕರ್ತವ್ಯವು. ಇದಲ್ಲದೆ, ಅಲ್ಲಲ್ಲಿಗೆ ವಿರಕ್ತ ಸ್ವಾಮಿಗಳಿರುವರು. ಇವರು ಕೇವಲ ಶಿವಯೋಗ ಸಂಪನ್ನರಾಗಿ ಭಕ್ತರಿಗೆ ಶಿವಾನುಭವದ ಉಪದೇಶವನ್ನು ಮಾಡತಕ್ಕದ್ದು. ಇವರೆಲ್ಲರಿಗೂ ಆಗಿನ ಕಾಲದ ಅರಸರಿಂದ ಸ್ವಾಸ್ತವೃತ್ತಿಗಳು ದೊರೆದಿರುವವು. ಈ  ಸಮಾಜದ ವ್ಯವಸ್ಥೆಯು ಅರಸರಿಗೂ ಪ್ರಜೆಗಳಿಗೂ ಕೂಡಿಯೇ ಹಿತಕರವಾದು ದರಿಂದಲೇ ಸ್ವಾಸ್ತವೃತ್ತಿಗಳ ಮಾನಮನ್ಯತೆಗಳು ದೊರೆದಿರಲಿಕ್ಕೆ ಬೇಕು. ಈ ಪ್ರಕಾರ ಸುಂದರವಾದ ಸಮಾಜ ವ್ಯವಸ್ಥೆಯು ಯಾವ ಕಾಲಕ್ಕೆ ಯಾರಿಂದ ಆಯಿತೆಂಬುದಕ್ಕೆ ಐತಿಹಾಸಿಕ ಪ್ರಮಾಣಗಳು ಇನ್ನೂ ಉಪಲಬ್ದವಾಗಿಲ್ಲ. ಆದರೆ ಸಮಾಜೋದ್ಧಾರ ಕರಾದ ಶ್ರೀ ಬಸವೇಶ್ವರರಿಂದ ಈ ಸಮಾಜ ವ್ಯವಸ್ಥೆಯು ಹೆಚ್ಚು ದೃಢವಾಯಿತು.

ಕಾಲಗತಿಯಿಂದ ಭರತಖಂಡಕ್ಕೆ ಹ್ರಾಸ ಕಾಲವು ಒದಗಲು ನಮ್ಮ ವೀರಶೈವ ಸಮಾಜವೂ ಅದಕ್ಕೆ ತುತ್ತಾಯಿತು. ಮುಸಲ್ಮಾನ ಬಾದಶಹರ ನೂಕುನುಗ್ಗಲಿನ ಆಳ್ವಿಕೆಯಿಂದಲೂ, ಪೇಶವೆಯರ ಪರಮತದ ಸಹಿಷ್ಣುತೆಯ ಒತ್ತಾಳಿಕೆಯಿಂದಲೂ ವೀರಶೈವ ಸಮಾಜದ ಬಂಧನಗಳು ಸಡಿಲಾಗಿ, ಸಮಾಜವು ಲಿಕಿ ಲಿಕಿಯಾಗಿ ಹೋಯಿತು. ದೊಡ್ಡ ದೊಡ್ಡ ಮಠದ ಸ್ವಾಮಿಗಳು ತಮ್ಮ ಕರ್ತವ್ಯಗಳನ್ನು ಮರೆತು ಹೊನ್ನು, ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲದ ಬಲೆಗೆ ಬಿದ್ದು ಸಾಮಾನ್ಯರಂತೆ ವರ್ತಿಸ ತೊಡಗಿದ್ದರು; ಉಳಿದವರು ಅಶಿಕ್ಷಿತರಾಗಿ ಕಾಡಾದಿಗಳನ್ನು  ಹೋಲಹತ್ತಿದ್ದರು: ವೀರಶೈವ ಧರ್ಮದ ಪ್ರಾಣವಾದ ಇಷ್ಟಲಿಂಗದ ಅರಿವು ಕೂಡ ಇಲ್ಲದಂತಾಗತೊಡಗಿತ್ತು . ವೀರಶೈವರ ಮದುವೆ ಮೊದಲಾದ ಧಾರ್ಮಿಕ ಕಾರ್ಯಗಳು – ಜೋಯಿಸರೆಂಬ ಪರಮತಿಯರ ಕೈಸೇರಿ ಹೋಗಿದ್ದವು; ವೀರಶೈವರ ಕೆಲ ಕೆಲವು ಪುಣ್ಯ ಕ್ಷೇತ್ರಗಳ  ಗಡಿಗುಂಡಾರಗಳು ಅನ್ಯರ ಪಾಲಾಗಿ ಹೋಗಿದ್ದುವು, ಒಟ್ಟಿಗೆ ವೀರಶೈವ ಸಮಾಜದ ಅಳಿಗಾಲವೆ ಬಂದು ಹೋಗಿತ್ತು.

ಮುಂದೆ ಬ್ರಿಟಿಷ್ ಸಾಮ್ರಾಜ್ಯದ ಸುಧಾರಣೆಗಳು ತಲೆಯೆತ್ತಿ ಶಿಕ್ಷಣ ಪ್ರಸಾರವು ಒತ್ತರದಿಂದ ಸಾಗತೊಡಗಿತು . ನಮ್ಮ ಸಮಾಜವು ವಿದ್ಯೆಯಲ್ಲಿ ತೀರಾ ಹಿಂದಿರುವದನ್ನು ಕಂಡು ಕೈ. ವಾ. ಡೆಪ್ಯುಟಿ ಚೆನ್ನಪ್ಪನವರು, ಕೈ.ವ. ಗಿಲಿಗಿಂಚಿ ಗುರುಸಿದ್ದಪ್ಪನವರು, ದಿ. ಬ. ಅರಟಾಳ ಸಾಹೇಬರು  ವೀರಶೈವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರವಾದ ಅನೇಕ ಪ್ರಯತ್ನಗಳನ್ನು ಮಾಡಿದರು. ಈ ಮಹಿನೀಯರಿಂದ ವೀರಶೈವ ಸಮಾಜವು ಬಹು ಉಪಕೃತವಾಗಿರುವರು

 ಇದೇ ಸಂದಿಗೆ ಶ್ರೀಗಳವರು ತಪಸ್ಸಿದ್ದ  ಶಿವಯೋಗಿಗಳಿಂದ ಪವಿತ್ರವಾದ ಹಾನಗಲ್ಲ ಮಠಕ್ಕೆ ಸ್ವಾಮಿಗಳಾದರು. ಶ್ರೀಗಳವರು ಹಾನಗಲ್ಲ ಮಠದ ಅಧಿಕಾರವನ್ನು ಕೈಕೊಳ್ಳುವದಕ್ಕಿಂತ ಮೊದಲೇ ದೇಶದಲ್ಲೆಲ್ಲ ಸಂಚರಿಸಿ ಸಮಾಜದ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡಿದ್ದರು. ಇಂಥ ಪತಿತ ಸಮಾಜದ ಸೇವೆಯನ್ನು ಮಾಡುವುದೇ ತಮ್ಮ ಜೀವಿತದ ಕರ್ತವ್ಯವೆಂತಲೂ, ಆತ್ಮಶಾಂತಿಯ ಸಾಧನವೆಂತಲೂ ಮೊದಲೇ ದೃಢ ಸಂಕಲ್ಪವನ್ನು ಮಾಡಿಕೊಂಡಂತೆ ತೋರುತ್ತದೆ. ಸ್ವಾಮಿತ್ವವನ್ನು ವಹಿಸಿದ ಕೂಡಲೆ ವೀರಶೈವ ಧರ್ಮದ ಜೀರ್ಣೋದ್ದಾರದ ಕಾರ್ಯವನ್ನು ಕೈಕೊಂಡು ಅದಕ್ಕನುಗುಣವಾದ ಲೋಕ ಶಿಕ್ಷಣ ಪ್ರಾರಂಭಿಸಿದರು.

 ಶಿಕ್ಷಣ ಪ್ರಸಾರಕ್ಕೆ (೧) ಪಾಠಶಾಲೆಗಳು (೨) ವಾಚನ ಮಂದಿರಗಳು (2) ವ್ಯಾಖ್ಯಾನಗಳು, ಪುರಾಣಗಳು, ಶಿವಕೀರ್ತನೆಗಳು, ಪ್ರವಚನಗಳು (5) ವಾರಪತ್ರಿಕೆ ,ಮಾಸ ಪತ್ರಿಕೆಗಳು (5) ಗ್ರಂಥಗಳ ಸಂಶೋಧನವು ಹಾಗೂ ಗ್ರಂಥ ಪ್ರಸಾರವು ಇವೇ ಪ್ರಮುಖ ಸಾಧನಗಳಾಗಿರುವವು. ಶ್ರೀಗಳವರು ಎಲ್ಲ  ಸಾಧನಗಳಿಂದ ವಿರಶೈವ ಸಮಾಜದಲ್ಲಿ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು

೧. ಪಾಠಶಾಲೆಗಳು –  ಸರಕಾರದವರು ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು   ಸ್ಥಾಪಿಸಿ  ಶಕ್ಷಣವನ್ನು ಕೊಡಲಾರಂಭಿಸಿದ್ದರು .ಆದರೆ ಧಾರ್ಮಿಕ ಶಿಕ್ಷಣಕ್ಕೆ ಮೂಲಾಧಾರವಾದ ಸಂಸ್ಕೃತ ವಿದ್ಯಾಭ್ಯಾಸದ  ಸಂಸ್ಥೆಗಳು ಮಾತ್ರ ಅತಿ ವಿರಳವಾಗಿದ್ದು, ಎಲ್ಲಿಯಾದರೂ ಒಂದೆರಡು ಸಂಸ್ಥೆಗಳಿದ್ದರೆ ಅವುಗಳಲ್ಲಿ ವೀರಶೈವರಿಗೆ ಪ್ರವೇಶವೇ ಇದ್ದಿಲ್ಲ. ವೀರಶೈವರನ್ನು ಶೂದ್ರಕೋಟೆಯಲ್ಲಿ ಗಣಿಸಿ ಬಿಟ್ಟಿದ್ದರು. ಸಂಸ್ಕೃತ ವಿದ್ಯೆಯೇ ಇಲ್ಲದ್ದರಿಂದ ವೀರಶೈವರ ಧರ್ಮದ ಜ್ಞಾನವೂ ಲಯವಾಗುತ್ತ ನಡೆದಿತ್ತು. ಶ್ರೀಗಳವರು  ಈ ಶೋಚನೀಯ ಸ್ಥಿತಿಯನ್ನು ಅವಲೋಕಿಸಿ, ವೀರಶೈವ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸುವ ಪ್ರಯತ್ನವನ್ನು ಮೊದಲು ಕೈಕೊಂಡರು. ಇಂದಿಗೆ ೨೦-೩೦ ವರ್ಷಗಳ  ಹಿಂದೆ ವೀರಶೈವರಲ್ಲಿ ಸಂಸ್ಕೃತ ಪಾಠಶಾಲಾ ಸ್ಥಾಪನೆಯ ಒಂದು ಯುಗವು ಪ್ರಾರಂಭವಾಗಿತ್ತು. ಎಲ್ಲಿ ನೋಡಿದರೂ ಸಂಸ್ಕೃತ ಪಾಠಶಾಲೆಗಳೇ ತೋರುತ್ತಿದ್ದವು.ಈ ಚಲನವಲನಕ್ಕೆ ಶ್ರೀಗಳವರ ಪ್ರಯತ್ನವೇ ಕಾರಣವೆಂದು ಹೇಳಬಹುದು. ಪ್ರಾಕೃತಕ್ಕೆ ವೀರಶೈವರಲ್ಲಿ ನ್ಯಾಯ, ವ್ಯಾಕರಣ, ವೇದ, ವೇದಾಂತಗಳಲ್ಲಿ ಘನಪಂಡಿತರಾದ ಎಷ್ಟೋ ಜನ ಶಾಸ್ತ್ರಿಗಳು ಉದಯರಾಗಿರುವರು. ಕಾಶಿ, ಕಲಕತ್ತಾ ಮೊದಲಾದ ಕಡೆಯ ಸಂಸ್ಕೃತ ವಿದ್ಯಾಪೀಠಗಳಲ್ಲಿ ವೀರಶೈವ ವಿದ್ಯಾರ್ಥಿಗಳು ಕಂಗೊಳಿಸುತ್ತಿರುವರು. ಶ್ರೀಗಳವರಿಂದ ಪರಿಪೋಷಿತರಾದ ಎಷ್ಟೋ ಜನರು ಸಂಸ್ಕೃತದಲ್ಲಿ ಘನವಿದ್ವಾಂಸರಾಗಿರುವರು.

ವೀರಶೈವ ಧಾರ್ಮಿಕ ಕಾರ್ಯಗಳನ್ನು ಮಾಡಿಸುವ ಜ್ಞಾನವನ್ನು ಮಾಡಿ ಕೊಡುವದರ ಸಲುವಾಗಿ ಶ್ರೀಗಳವರು ವೀರಶೈವ ವೈದಿಕ  ಪಾಠಶಾಲೆಗಳನ್ನು ಏರ್ಪಡಿಸಿದರು. ಈ ಪ್ರಯತ್ನದಿಂದ ಗ್ರಾಮದ ಮಠಸ್ಥರು ತಮ್ಮ ವೈದಿಕ ಕಾರ್ಯಗಳೆಲ್ಲ ತಾವೇ ಸಾಗಿಸಹತ್ತಿದರು. ವೀರಶೈವರ ಧಾರ್ಮಿಕ ಕಾರ್ಯಗಳನ್ನು ಮಾಡುವದೂ ತಮ್ಮ ಹಕ್ಕೆಂದು ಅನ್ಯಾಯದಿಂದ  ಭಾವಿಸಿಕೊಂಡಿದ್ದ ಜೋಯಿಸರು ವೀರಶೈವರ ಈ ಪ್ರಗತಿಯನ್ನು ನೋಡಿ ಅಸೂಯೆಯಿಂದ ತಳಮಳಿಸಹತ್ತಿದರು. ತಡೆಯಲಾರದೆ “ವೀರಶೈವರು ತಮ್ಮ ಬಾಧ್ಯತೆಗೆ ಭಂಗವನ್ನುಂಟು ಮಾಡಿದರೆಂದುʼʼ ನ್ಯಾಯ ಸಭೆಯಲ್ಲಿ ದೂರಿಟ್ಟರು. ಶ್ರೀಗಳವರು ಇಂಥ ಜೊಳ್ಳು ಬೆದರಿಕೆಗಳಿಗೆ ಮಣಿಯದೆ, ಇಂಥ ಪ್ರಸಂಗಗಳು ಒದಗಿದಲ್ಲೆಲ್ಲ ತಾವೇ ಹೋಗಿ ನಿಂತು, ನ್ಯಾಯಾಧೀಶರಿಗೆ ವೀರಶೈವ ಧರ್ಮದ ನಿಜಸ್ಥಿತಿಯ ಜ್ಞಾನವನ್ನು ಪೂರೈಸಿಕೊಟ್ಟು, ಜೋಯಿಸರ ಹಕ್ಕುಗಳು ಪರಧರ್ಮದವರ ಮೇಲೆ ನಡೆಯುವದು ಎಂಥ ಭಯಂಕರ ಅನ್ಯಾಯ ವೆಂಬುದನ್ನು ಜನತೆಯ ಅನುಭವಕ್ಕೆ ತಂದುಕೊಟ್ಟರು. ಪ್ರಕೃತಕ್ಕೆ ವೀರಶೈವರ ಧರ್ಮ ಕಾರ್ಯಗಳಲ್ಲಿ ಹಣಿಕಿ ನೋಡುವ ಎದೆಯು ಸಹ ಪರಸಮಯದವರಲ್ಲಿ  ಇಲ್ಲದಂತಾಗಿರುವದು.

ವೈದಿಕ ಜ್ಞಾನದಂತೆ ವೀರಶೈವರಿಗೆ ಜ್ಯೋತಿಷ್ಯ ಜ್ಞಾನದ ಅವಶ್ಯಕತೆಯು ಉಂಟೆಂದು ತಿಳಿದು, ಜ್ಯೋತಿಷ್ಯ ಪಾಠಶಾಲೆಗಳನ್ನು ಏರ್ಪಡಿಸುವ ಉಪಕ್ರಮವೂ ಶ್ರೀಗಳವರಿಂದಲೇ ಪ್ರಾರಂಭವಾಯಿತು. ಈಗ ವೀರಶೈವ ಜ್ಯೋತಿಷ್ಯರನೇಕರು  ಪಂಚಾಂಗಗಳನ್ನು ಕೂಡ ಬರೆಯುತ್ತಿರುವರು. ಕೆಲ ಕೆಲವರು ಜ್ಯೋತಿರ್ಗಣಿತದಲ್ಲಿ ನಿಷ್ಣಾತರಾಗಿರುವರು.

ನಮ್ಮ ವೀರಶೈವ ಸಮಾಜದಲ್ಲಿ ವಿರಕ್ತ ಸ್ವಾಮಿಗಳೂ ಪಟ್ಟಚರಾಧಿಕಾರಿಗಳೂ ಹೇರಳವಾಗಿದ್ದಾರೆ. ಈ ಎಲ್ಲ ಸ್ವಾಮಿಗಳು ಆಜನ್ಮ ಬ್ರಹ್ಮಚಾರಿಗಳಾಗಿರಬೇಕೆಂದು ಧರ್ಮದ ಕಟ್ಟಪ್ಪಣೆಯೂ ಇರುವದು. ಪೂರ್ವ ವಯಸ್ಸಿನಲ್ಲಿ ಯೋಗ್ಯವಾದ ಶಿಕ್ಷಣವೂ, ಸಂಸ್ಕಾರವೂ ಇಲ್ಲದೆ, ಆಜನ್ಮ ಬ್ರಹ್ಮಚಾರಿಯಾಗಿರುವದು ದುಸ್ಸಾಧ್ಯವಾದ ಸಂಗತಿಯು. ಈ ಪ್ರಕಾರದ ಶಿಕ್ಷಣವೂ ಸಂಸ್ಕಾರ ಇಲ್ಲದುದರಿಂದ ಬಹು ಜನ  ಸ್ವಾಮಿಗಳು ಹೊನ್ನು, ಹೆಣ್ಣು ಮಣ್ಣಿನ ಮೋಹಪಾಶದಲ್ಲಿ ಸಿಕ್ಕು, ಪವಿತ್ರವಾದ ಆಶ್ರಮವನ್ನು ಅಪವಿತ್ರಗೊಳಿಸಿ ಬಿಟ್ಟಿದ್ದರು. ಪುಣ್ಯಕ್ಷೇತ್ರಗಳೆನಿಸಿಕೊಳ್ಳುವ ಮಠಗಳನ್ನು ಶಾಪದ ನೆಲೆವೀಡುಗಳನ್ನು ಮಾಡಿಬಿಟ್ಟಿದ್ದರು. ಸಮಾಜೋದ್ಧಾರಕರಾದ ಸ್ವಾಮಿಗಳು ಸಮಾಜ ವಿಧ್ವಂಸಕರಾಗಿ ಬಿಟ್ಟಿದ್ದರು. ಈ ಹೀನಾವಸ್ಥೆಯನ್ನು ಕಂಡು, ಪರಸಮಯ ದವರು ಚಪ್ಪಳೆಯನ್ನಿಕ್ಕಿ ನಗೆಯಾಡುತ್ತಿದ್ದರು. ಅತ್ಯಸಹ್ಯವಾದ ಸ್ಥಿತಿಯನ್ನು ನೋಡಿ ಶ್ರೀಗಳವರು ತಲ್ಲಣಗೊ೦ಡು,  ಗುರುವರ್ಗದವರಿಗೆ ಯೋಗ್ಯವಾದ ಶಿಕ್ಷಣವನ್ನು ಕೊಟ್ಟು ಸಂಸ್ಕೃತಿಗೊಳಿಸುವ ಗುರುಕುಲವೊಂದು ಇರಬೇಕೆಂದು ವೀರಶೈವ ಮಹಾಸಭೆಯಲ್ಲಿ ನಿರ್ಣಯವನ್ನು ಮಾಡಿಸಿಕೊಂಡು ಶಿವಯೋಗಮಂದಿರದ ಸ್ಥಾಪನೆಯನ್ನು ಮಾಡಿರುವರು. ಈ ಮಂದಿರದಲ್ಲಿ ಸುಸಂಸ್ಕೃತರಾದ ಎಷ್ಟೋಜನ ಸ್ವಾಮಿಗಳು ಸ್ವಾಮಿತ್ವಕ್ಕೆ ಸಲ್ಲುವಂತೆ ಸದಾಚಾರದಿಂದ ನಡೆದು, ಮಂದಿರದ ಬಿಳ್ಜಸ (ಧವಲ ಕೀರ್ತಿ)ವನ್ನು ನಾಲ್ದೆಶೆಗಳಲ್ಲಿ ಪಸರಿಸಹತ್ತಿರುವರು. ಮಂದಿರದ ಸ್ಥಾಪನೆಯ ಸಲುವಾಗಿ ಶ್ರೀಗಳವರು ಹಗಲಿರುಳೆನ್ನದೆ ದುಡಿಯಬೇಕಾಯಿತು. ‘ಶ್ರೇಯಾಂಸಿ ಬಹು ವಿಘ್ನಾʼನಿ ಎಂಬ ಉಕ್ತಿಯಂತೆ ಮಂದಿರ ಸ್ಥಾಪನೆಯ ಕಾರ್ಯದಲ್ಲಿ ಅಸಂಖ್ಯ ವಿಘ್ನಗಳು ಬಾಯ್ದೆರೆದು ನಿಂತವು. ಎಷ್ಟೋ ಜನ ಸುಶಿಕ್ಷಿತ ವೀರಶೈವರು ಕೂಡ ಒಂದಿಲ್ಲೊಂದು ತರದಿಂದ ಮಂದಿರ ಸ್ಥಾಪನೆಯ ಬಗ್ಗೆ ಜನತೆಯಲ್ಲಿ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರದರ್ಶಿಸುತ್ತಿದ್ದರು. ಸ್ವಾರ್ಥ ಪರಾಯಣರಾದ ಎಷ್ಟೋ ಜನ ಗುರುವರ್ಗದವರು ಈ ಕಾರ್ಯಕ್ಕೆ ಕಡುಹಗೆಗಳೇ ಆಗಿದ್ದರು. ಶ್ರೀಗಳವರು ಇಂಥ ಎಡರುಗಳಿಗೆ ಅಳುಕಲಿಲ್ಲ. ಕೈಕೊಂಡ ಕಾರ್ಯದಿಂದ ಹಿಂಜರಿಯಲಿಲ್ಲ. ಪರಶಿವನ ಮೇಲೆಯೂ ಗುರುವಾಕ್ಯದ ಮೇಲೆಯೂ ನಂಬಿಗೆಯನ್ನಿಟ್ಟು ತಮ್ಮ ಹುಟ್ಟು ಗುಣಕ್ಕನುಸರಿಸಿ ಪೆಟ್ಟುಗಳು ಬಡಿಬಡಿದಂತೆ ಶ್ರೀಗಳವರು ಹೆಚ್ಚು ಹೆಚ್ಚು ಗಟ್ಟಿಯಾಗಿ ಕೈಕೊಂಡ ಕಾರ್ಯವನ್ನು ಪೂರ್ಣ ಸಿದ್ಧಿಗೊಯ್ದರು.

ಅಡಿಯ ಮುಂದಿಡೆ ಸ್ವರ್ಗ |

ಅಡಿಯಹಿಂದಿಡೆ ನರಕ |

ಅಡಿಗಶ್ವ ಮೇಧ ಫಲ ಧರ್ಮ ಕಾರ್ಯಕ್ಕೆ 1

ಮಡಿಯಲೇ ಬೇಕು ಸರ್ವಜ್ಞ |

ಎ೦ಬ ಉಕ್ತಿಯನ್ನು ಆಗಾಗ್ಗೆ ಆಡಿ ತೋರಿಸಿ ಈ ಧರ್ಮ ಕಾರ್ಯವನ್ನು ನೇರವೇರಿಸಿದರು. ಈ ಕಾರ್ಯದಲ್ಲಿ ಶ್ರೀಗಳವರು ಪ್ರಕಟಗೊಳಿಸಿದ ದೃಢ ನಿಶ್ಚಯವೂ ಕ್ರಮ ಸಾಹಸಗಳೂ ಅವರ್ಣೀಯವಾಗಿರುವವು. ಶ್ರೀಗಳವರ ತಪಃ ಪ್ರಭಾವದಿಂದ ಹುಲಿಕರಡಿಗಳ ಆವಾಸಕ್ಕೆ ತಕ್ಕದಾದ ಆ ಕಾಡಡವಿಯು ಈಗ ಶಿವಯೋಗಿಗಳ ನೆಲವೀಡಿಕೆ ಸಲ್ಲುವಂಥ ಸೈಪಿನ (ಪುಣ್ಯದ) ಸೀಮೆಯಾಗಿರುವದು. ಶ್ರೀಗಳವರು ಶಿವಯೋಗಮಂದಿರದ ಕಾರ್ಯವು ಸುಲಲಿತವಾಗಿ ಸಾಗುವಂತೆ ಲಕ್ಷಾವಧಿ ರೂಪಾಯಿಗಳ ಬೆಲೆಯುಳ್ಳ ಆಸ್ತಿಯನ್ನು ಮಾಡಿಟ್ಟಿರುವರು. ಶ್ರೀಗಳಿರುವವರೆಗೆ  ಜನರು ಮಂದಿರದ ಬಗ್ಗೆ ಮನಸ್ಸು ಹಾಕದಿದ್ದರೂ ಸಾಗಿ ಹೋಯಿತು. ಇನ್ನು ಮೇಲೆ  ಪ್ರತ್ಯೇಕ ಸುಶಿಕ್ಷಿತ ವೀರಶೈವನು ಮಂದಿರದ ವಿಷಯಕ್ಕೆ ಆಲೋಚಿಸಲೇ ಬೇಕಾಗಿರುವದು. ಎಷ್ಟೋ ಜನ ಗುರುವರ್ಗದವರು ಸಂಕುಚಿತ ವಿಚಾರಗಳಿಂದ ಶಿವಯೋಗ ಮಂದಿರದ ಕಡೆಗೆ ಹೊರಳಿ ಕೂಡ ನೋಡಿರುವದಿಲ್ಲ. ಮಂದಿರವು ಶ್ರೀಗಳವರದಲ್ಲ, ವೀರಶೈವ ಸಮಾಜದ್ದು, ಅದು ಯಾವ ಸಮಯ ನಿದರ್ಶಕವಾದ ಮಠವಲ್ಲ ಗುರುಗಳಾಗತಕ್ಕವರಿಗೆ ಶಿಕ್ಷಣವನ್ನು ಕೊಡುವಂಥ ಒಂದು ಸಂಸ್ಥೆಯು, ಅಹಂಕಾರ ಮಮಕಾರಗಳನ್ನು ಮೆಟ್ಟಿ ನಿಂತಿದ್ದ ಶ್ರೀಗಳವರು ಮಂದಿರದಲ್ಲಿ ತಮ್ಮ ಸಂಬಂಧವನ್ನೇ ಇಟ್ಟುಕೊಂಡಿರುವದಿಲ್ಲ. ಯೋಗ್ಯ ಗುರುಗಳು ಮಂದಿರದಿಂದ ಸಿದ್ಧರಾಗಿ ಹೋದದ್ದನ್ನು ಕಣ್ಣಾರೆ ಕಂಡು ಧನ್ಯರಾಗಬೇಕೆಂಬುದೊಂದೇ ಸಂಬಂಧವನ್ನು ಶ್ರೀಗಳವರು ಇಟ್ಟುಕೊಂಡಿದ್ದರು. ಈ ಮನೋರಥವನ್ನು  ಸಫಲಗೊಳಿಸುವ ಭಾರವು ವೀರಶೈವ ಸಮಾಜದ ಮೇಲಿರುವದು.

ಶ್ರೀಗಳವರು ಸಂಸ್ಕೃತ ವಿದ್ಯಾಭ್ಯಾಸವೊಂದಕ್ಕೆ ಲಕ್ಷ್ಯವಿಟ್ಟು, ಉಳಿದ ವಿದ್ಯಾಭ್ಯಾಸಗಳನ್ನು ಅಲಕ್ಷಿಸಲಿಲ್ಲ. ಶ್ರೀಗಳವರಿಂದ ಆಶ್ರಯ ಹೊಂದಿದ ಎಷ್ಟೋ ಜನ ಆಂಗ್ಲ ವಿದ್ಯಾಭೂಷಿತರಾದ ಪದವೀಧರರಿರುವರು. ಇಂಗ್ಲೀಷವನ್ನು ಕಲಿತು ಅಪಕ್ವ ವಿಚಾರಗಳಿಂದ ಧರ್ಮ ಲಂಡರು ಮಾತ್ರ ಆಗಬಾರದೆಂದು ಶ್ರೀಗಳವರ ಆಗ್ರಹವಿತ್ತು ಧರ್ಮ ನಿಷ್ಠರಾದ ಪದವೀಧರರು ಉದಯರಾಗಿ, ದ್ವೀಪದ್ವೀಪಾಂತರ ಗಳಲ್ಲಿ ಸಂಚರಿಸಿ, ವೀರಶೈವರ ಇರವನ್ನು ಜಗತ್ತಿನ ನಿದರ್ಶನಕ್ಕೆ ತಂದು ಕೊಡಬೇಕೆಂದು ಶ್ರೀಗಳವರ ಮನೀಷೆಯು ಇತ್ತು. ವೀರಶೈವ ಧರ್ಮವು ರಾಷ್ಟ್ರ ಧರ್ಮವಾಗಲಿಕ್ಕೆ ತಕ್ಕ ಧರ್ಮವಿರುವದೆಂದು ಶ್ರೀಗಳವರ ನಿಶ್ಚಯವಿತ್ತು  ಕೈ. ವಾ. ವೀರಬಸವಶ್ರೇಷ್ಠಿಯವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಬೇಕೆಂದು ಶ್ರೀಗಳವರು ಪ್ರಯತ್ನಿಸಿದರು. ಕಾರಣಾಂತರಗಳಿಂದ ಶ್ರೀಗಳವರ ಈ ಕೋರಿಕೆಯು ಕೊನೆಗಾಣದೆ ಉಳಿಯಿತು.

ಶ್ರೀಗಳವರು ಪ್ರಾಥಮಿಕ ಶಿಕ್ಷಣವನ್ನಂತೂ ವಿಶೇಷವಾಗಿ ಪ್ರೀತಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣವೇ ಸಾಮಾನ್ಯ ಜನರನ್ನು ತಿದ್ದುವ ಸಾಧನವೆಂಬುದನ್ನು ಮರೆತು ಬಿಟ್ಟಿದ್ದಿಲ್ಲ. ಹಿಂದುಸ್ಥಾನದಲ್ಲಿ ಬ್ರಿಟಿಷ್ ಸರಕಾರದಿಂದ ಪ್ರಾಥಮಿಕ ಶಾಲೆಗಳು ಸ್ಥಾಪನ ವಾಗಿದ್ದರೂ ಶ್ರೀಗಳವರು ಹೋದ ಹೋದಲ್ಲಿ ವೀರಶೈವ ಶಿಕ್ಷಕರನ್ನು ಕರಿಸಿಕೊಂಡು ವೀರಶೈವ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುವಂತೆ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಹೇಗೆ ಕೊಡಬೇಕೆಂಬುದನ್ನು ಉಪದೇಶಿಸದೆ ಬಿಡಲಿಲ್ಲ. ಇಷ್ಟಕ್ಕೆ ಶ್ರೀಗಳವರಿಗೆ ತೃಪ್ತಿಯಾಗದೆ, ಶಿವಯೋಗಮಂದಿರದಲ್ಲಿ ವೀರಶೈವ ಶಿಕ್ಷಕ ಸಮ್ಮೇಲನವನ್ನು ಪ್ರತಿವರ್ಷ ಮಾಡುವ ಕಾರ್ಯವನ್ನು ಉಪಕ್ರಮಿಸಿದರು. ಒಂದು ವರ್ಷ ಅದರಂತ ಸಮ್ಮೇಲನ ಕಾರ್ಯವೂ ಕೊನೆಗೊಂಡಿತು. ದ್ರವ್ಯದ ಅಡಚಣಿಯಿಂದಲೂ, ವೀರಶೈವರಲ್ಲಿ ಸಮಾಜಾಭಿಮಾನದ ಅಂಕುರವೇ ಇಲ್ಲದೆ ಇರುವದರಿಂದಲೂ ಶ್ರೀಗಳವರು ಈ ಪ್ರಯತ್ನದಲ್ಲಿಯೂ ಸಂತೃಪ್ತರಾಗಲಿಲ್ಲ. ಆದರೂ, ಶ್ರೀಗಳವರು  ಇಷ್ಟಕ್ಕೆ ಹತಾಶರಾಗಿ ಕೂಡ್ರಲಿಲ್ಲ. ಮೊಗಲಾಯಿಯಲ್ಲಿ ಪ್ರಾಥಮಿಕ  ಶಾಲೆಗಳ ಪ್ರಸಾರವಿಲ್ಲದ್ದನ್ನು ಕಂಡು ಶಿವಯೋಗಮದಿರದಲ್ಲಿ ಶಿಕ್ಷಕರನ್ನು ತಯಾರಿಸಿ,, ಅಲ್ಲಲ್ಲಿಗೆ ಊರಮನೆ (ಗಾಂವಠಿ) ಶಾಲೆಗಳನ್ನು ನೆಲೆಗೊಳಿಸುವ ಉಪಕ್ರಮವನ್ನು ನಡೆಸಿದ್ದರು.ಉಂಡಮಾನನ್ನು ಗರು ಸಮಾಜ ಕಂಟಕರಾದ ಜನರಿಂದ ಈ ಕಾರ್ಯದಲ್ಲಿಯೂ  ಅಡ್ಡಿಗಳುಂಟಿದವು . ಕರ್ತವ್ಯ ದಕ್ಷರಾದ ವೀರಶೈವ ಶಿಕ್ಷಕರನ್ನು ಕಂಡ ಕೂಡಲೇ ಶ್ರೀಗಳವರು ಆನಂದ ಪರವಶರಾಗಿ ಹೋಗುತ್ತಿದ್ದರು. ಅಂಥವರ ಉತ್ಕರ್ಷದ ಚಿಂತನವನ್ನೇ ಮಾಡತೊಡಗುತ್ತಿದ್ದರು. ಇಂಥ ನಿಸ್ವಾರ್ಥ ಬುದ್ಧಿಯ ಸಮಾಜ ಸೇವಾ ತತ್ಪರ ಸ್ವಾಮಿಗಳು, ದೊರೆಯುವದು ಅತಿ ದುರ್ಲಭವು ! ಧನ್ಯಕುಮಾರ ಗುರುದೇವಾ ನೀನೇ ಧನ್ಯನು !!

ಮಾನವ ಪ್ರಾಣಿಗೆ ಅಗತ್ಯವಾದ ಅನುಕೂಲತೆಗಳೂ ಜಗತ್ತಿನ ಸರ್ವ ಸುಧಾರಣಾ ಕಾರ್ಯಗಳೂ ವೀರಶೈವ  ಸಮಾಜದಲ್ಲಿರಬೇಕೆಂದು ಶ್ರೀಗಳವರ ಉತ್ಕಟೇಚ್ಛೆಯಿತ್ತು. ಪಾಶ್ಚಾತ್ಯ ಔಷಧಿಗಳಲ್ಲಿ ನಿಷಿದ್ಧವಾದ ದ್ರವ್ಯಗಳಿರುತ್ತವೆ. ಹಾಗೂ ಕೇವಲ ಭಿನ್ನವಾಯುಗುಣದಲ್ಲಿ ಉತ್ಪನ್ನವಾದ ವನಸ್ಪತಿಗಳಿರುತ್ತವೆ. ಆದುದರಿಂದ, ನಮ್ಮ ದೇಶದ ರೋಗಪ್ರತೀಕಾರಕ್ಕೆ ಈ ಔಷಧಿಗಳು ಗ್ರಾಹ್ಯವಾದವುಗಳಲ್ಲವೆಂದು ಶ್ರೀಗಳವರ ವಿಚಾರಗಳಿದ್ದವು. ಈ ಕೊರತೆಯನ್ನು ನೀಗುವದಕ್ಕಾಗಿ ಶಿವಯೋಗ ಮಂದಿರದಲ್ಲಿ ಒಂದು ಆಯುರ್ವೇದ ಶಾಲೆಯನ್ನು ಏರ್ಪಡಿಯುವ ಪ್ರಯತ್ನವನ್ನು ಶ್ರೀಗಳವರು ನಡೆಸಿದರು. ದುಡ್ಡಿಲ್ಲದ್ದರಿಂದ ಈ ಕಾರ್ಯವೂ ಪೂರ್ಣ ಸಿದ್ದಿಸದೆ ಉಳಿಯಿತು. ಆದರೂ ಮಂದಿರದಲ್ಲಿ ದೇಶೀಯ ವೈದ್ಯದಲ್ಲಿ ತಜ್ಞರಾದ ವೈದ್ಯರನಿಟ್ಟು ಅವರಿಂದ ಶಿಕ್ಷಣವನ್ನು ಕೊಡಿಸುವ ಕಾರ್ಯವನ್ನು ಶ್ರೀಗಳವರು ಸಣ್ಣಪ್ರಮಾಣದಿಂದ ನಡಿಸದೆ ಬಿಡಲಿಲ್ಲ. ಇಂಥ ವೈದ್ಯರಿಗೆ ಸಹಾಯವನ್ನು ಒದಗಿಸಿಕೊಟ್ಟು ಅವರನ್ನು ಪ್ರೋತ್ಸಾಹಿಸುವದರಲ್ಲಿ ಶ್ರೀಗಳವರು ಹಿಂದೆ ಮುಂದೆ ನೋಡಲಿಲ್ಲ.

ಔದ್ಯೋಗಿಕ ಶಿಕ್ಷಣದ ಬಗ್ಗೆ ಪ್ರಯತ್ನಿಸುವದನ್ನು ಶ್ರೀಗಳವರು ಬಿಡಲಿಲ್ಲ ಶಿವಯೋಗ ಮಂದಿರದಲ್ಲಿ ಶಾಸ್ತ್ರೀಯ ಪದ್ಧತಿಯಂತೆ ಮಾದರಿಯ ಹೊಲವನ್ನು (ಫಾರ್ಮ) ಮಾಡಿಸುವ ಪ್ರಯತ್ನವನ್ನು ನಡಿಸಿದರು. ಗೋಶಾಲೆಗಳನ್ನು ಏರ್ಪಡಿಸಿದರು  ಬಾಗಲಕೋಟೆಯಲ್ಲಿ ಮಂದಿರದ ದ್ರವ್ಯದಿಂದ ಒಂದು ಜಿನಿಂಗ ಫ್ಯಾಕ್ಟರಿಯನ್ನು ನಿರ್ಮಾಣ ಮಾಡಿಸಿರುವರು. ಅದು ಅತ್ಯುತ್ತಮವಾಗಿ ಲಾಭದಾಯಕವೂ ವೀರಶೈವರಿಗೆ ಉದ್ಯೋಗ ಮಾರ್ಗದರ್ಶಕವೂ ಆದ ಸಂಸ್ಥೆಯಾಗಿ  ಕಂಗೊಳಿಸುತ್ತಿರುವದು. ಮೈಸೂರ ಸೀಮೆಯ ಕಪ್ಪನಹಳ್ಳಿ ಎಂಬ ಗ್ರಾಮದಲ್ಲಿ ಎಂಜಿನ್ನದ ಸಹಾಯದಿಂದ ನೀರನ್ನು ಹಾಯಿಸಿ, ಕಬ್ಬಿನ ಬೆಳೆಯನ್ನು ತೆಗೆದುಕೊಳ್ಳುವ ಕೆಲಸವನ್ನು ಶ್ರೀಗಳವರು ನಡಿಸಿದರು. ಈ ಕಾರ್ಯವೂ ಯಶಸ್ವಿಯಾಗಿರುವುದು. ಇಂಥ ಉದ್ಯೋಗಗಳಲ್ಲದೆ ವೀರಶೈವರಿಗೆ ಅತ್ಯಗತ್ಯವಾದ ಭಸ್ಮ, ಲಿಂಗಪೀಠ, ಶಿವದಾರ ಮೊದಲಾದ ಸಣ್ಣ ಪುಟ್ಟ ಉದ್ಯೋಗಗಳಿಗೂ ಶ್ರೀಗಳವರು ಬಹಳ ಉತ್ತೇಜನವನ್ನು ಕೊಟ್ಟರು.

ಶಿವಯೋಗಮಂದಿರದಲ್ಲಿ ಮಹಿಳಾ ಪರಿಷತ್ತನ್ನು ನೆರೆಯಿಸಿ, ಸ್ತ್ರೀ ಶಿಕ್ಷಣಕ್ಕೆ ಉತ್ತೇಜನವನ್ನು ಕೊಡುವ ಕಾರ್ಯಕ್ರಮವು ನಡದೇ  ಇರುವದು. ವೀರಶೈವರಲ್ಲಿ ಆದರ್ಶ ಸ್ತ್ರೀ ಪುರುಷರು ತಲೆದೋರುವದಕ್ಕೆ ಮಾಡತಕ್ಕ ಪ್ರಯತ್ನಗಳನ್ನೆಲ್ಲ ಶ್ರೀಗಳವರು ಮಾಡಿಬಿಟ್ಟರು. ಶ್ರೀಗಳವರಿಗೆ ಪರಶಿವನು ದಯಪಾಲಿಸಿದ ಮೇಧಾಶಕ್ತಿಗೂ, ನಿಸ್ಸ್ವಾ ರ್ಥಯುಕ್ತವಾದ ಪರೋಪಕಾರ ಬುದ್ದಿಗೂ, ಧನಸಹಾಯವೂ ಜನಸಹಾಯವೂ ಜೋಡಾಗಿದ್ದರೆ ವೀರಶೈವ ಸಮಾಜದಲ್ಲಿ ಕುಮಾರ ಸೃಷ್ಟಿಯೆಂಬ ಒಂದು ಸರ್ವಾಂಗ ಸುಂದರವಾದ ಹೊಸ ಸೃಷ್ಟಿಯ ಕಂಗೊಳಿಸುತ್ತಿತ್ತೆಂದು ಹೇಳಿದರೆ, ಅತಿಶಯೋಕ್ತಿಯಾಗಲಾರದು.

ವ್ಯಾಖ್ಯಾನಾದಿಗಳು : ಶ್ರೀಗಳವರು ಅನೇಕ ಪ್ರಕಾರದ ಸಭೆಗಳನ್ನು ಏರ್ಪಡಿಸಿ, ಅನುಭವಿಕರಾದ ವಿದ್ವಜ್ಜನರಿಂದ ವ್ಯಾಖ್ಯಾನ ಕೊಡಿಸಿ, ಒಳ್ಳೇ ಒತ್ತರದಿಂದ ಶಿಕ್ಷಣ ಪ್ರಸಾರವನ್ನು ಮಾಡಲಾರಂಭಿಸಿದರು. ವೀರಶೈವ ಮಹಾಸಭೆಯಾದರೂ ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಕೆಲವು ವರ್ಷ ಅತಿ ವೈಭವದಿಂದ ನಿರ್ವಿಘ್ನವಾಗಿ ನೆರವೇರಿತು. ಆ ಮಹಾಸಭೆಗೆ ಶ್ರೀಗಳವರ ಸಂಬಂಧ ತಪ್ಪಿದ ಕೂಡಲೇ ಕಲ್ಲಾಪಿಲ್ಲಿ ಯಾಗಿ ಕೂತಿರುವದು. ಶ್ರೀಗಳವರು ಸಭೆಗಳಲ್ಲಿ ಮಾತ್ರ ಕೆಲಸವನ್ನು ಮಾಡಿ ಉಳಿದ ವೇಳೆಯಲ್ಲಿ ಕೈಮುಚ್ಚಿಕೊಂಡು ಕೂಡುತಿದ್ದಿಲ್ಲ. ಸಭೆಗಳಲ್ಲಾದ ಗೊತ್ತುವಳಿಯನ್ನು ಬಳಿಕೆಯಲ್ಲಿ ತರತಕ್ಕ ಉಪಾಯಗಳನ್ನು ಆ ಕೂಡಲೇ ಆರಂಭಿಸುತ್ತಿದ್ದರು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಜನಸ್ತೋಮವು ಕೂಡಿಯೇ ಕೂಡುತ್ತಿತ್ತು. ಇಂಥ  ಸುಸಮಯವನ್ನು ಎಂದೂ ವ್ಯರ್ಥವಾಗಿ ಹೋಗಗೊಡುತ್ತಿದ್ದಿಲ್ಲ. ಆ ಕಾಲಕ್ಕೆ ಪುರಾಣ ಪ್ರವಚನಗಳಾಗಲಿ, ವ್ಯಾಖ್ಯಾನ ಕೀರ್ತನಗಳಾಗಲಿ ನಡದೇ ತೀರುತ್ತಿದ್ದವು. ಇದರಿಂದ ಜನರಿಗೆ ಅನೇಕ ವಿಷಯಗಳ ಶಿಕ್ಷಣವು ಸಹಜವಾಗಿಯೇ ದೊರೆಯುತ್ತಿತ್ತು.ʼʼ ಶ್ರೀಗಳಿದ್ದಲ್ಲಿ ಸಭೆಗಳು” ಎಂಬ ನಾಣ್ಣುಡಿಯೇ ಜನತೆಯಲ್ಲಿ ಉತ್ಪನ್ನವಾಗಿ ಹೋಗಿತ್ತು.

ಶಿವಕೀರ್ತನಗಳು : ವೀರಶೈವರಲ್ಲಿ ಕೀರ್ತನಕಾರರೇ ಇದ್ದಿದ್ದಿಲ್ಲ; ಲೋಕ ಶಿಕ್ಷಣಕ್ಕೆ ಶಿವಕೀರ್ತನಗಳೂ ಒಳ್ಳೇ ಸಹಾಯಕಾರಿಗಳಾದುದರಿಂದ ಶ್ರೀಗಳವರು ಕೀರ್ತನಗಳ ಪ್ರಸಾರವನ್ನು ಪ್ರಾರಂಭಿಸಿದರು. ಶಿವಯೋಗಮಂದಿರವು ಅಸ್ತಿತ್ವದಲ್ಲಿ ಬಂದ ಕೂಡಲೇ ಕೀರ್ತನಕಾರರಿಗೆ ಬೇಕಾದ ಅನುಕೂಲತೆಗಳನ್ನು ಶ್ರೀಗಳವರು ಒದಗಿಸಿಕೊಟ್ಟರು. ಗಾಯನ ಶಾಲೆಯನ್ನೇರ್ಪಡಿಸಿ, ಕೀರ್ತನಕಾರರಿಗೆ ಸಂಗೀತದ ಜ್ಞಾನವನ್ನು ಮಾಡಿಸಿ ಕೊಡಹತ್ತಿದರು. ವೀರಶೈವ ಧರ್ಮದ ಮರ್ಮವನ್ನು ತಾವೇ ಅವರಿಗೆ ಹೇಳುತ್ತಿದ್ದರು. ಕೀರ್ತನಗಳು ಸಮಾಜ ಸುಧಾರಣೆಗೆ ಅನುಕೂಲವಾಗುವಂತೆ ಯಾವ ಧೈಯದಿಂದ ಸಾಗತಕ್ಕದ್ದೆಂಬುದನ್ನು ವಾದಪ್ರವಾಹಗಳಿಂದ ಗೊತ್ತು ಮಾಡಿಕೊಟ್ಟರು. ಶ್ರೀಗಳವರ ಪ್ರಯತ್ನದಿಂದ ವೀರಶೈವರಲ್ಲಿ ಅಸಂಖ್ಯ ಶಿವಯೋಗ ಕೀರ್ತನಕಾರರು ಮುಂದುವರಿದರು. ಅವರಲ್ಲಿ ಕೆಲಕೆಲವರಂತೂ ಅದ್ವಿತೀಯ ಕೀರ್ತನಕಾರರೆನಿಸಿಕೊಂಡಿರುವರು. ಕೀರ್ತನಗಳ ಪ್ರಸಾರದಿಂದ ವೀರಶೈವರಲ್ಲಿ ಅನೇಕ ವಿಷಯಗಳ ಜ್ಞಾನವಾಗಿ ಜಾಗೃತಿಯು ನೆಲೆಗೊಂಡಿತು. ಶಿವಕೀರ್ತನವೆಂಬ ಶಬ್ದವು ಕನ್ನಡ ವಾಙ್ಮಯದಲ್ಲಿ ಶ್ರೀಗಳವರಿಂದಲೆ ಹೊಸದಾಗಿ ಸೇರಿತೆಂದು ಹೇಳಬಹುದು.

 ಉಪದೇಶಕರು : ಜನತೆಯಲ್ಲಿ ಶಿಕ್ಷಣ ಪ್ರಸಾರವಾಗಲಿಕ್ಕೆ ಕ್ರಿಶ್ಚಿನ್ ಮಿಶನರಿಗಳಂತ್ತೆ ಕಾರ್ಯಾರಂಭವನ್ನು ಮಾಡಿದರು.  ಉಪದೇಶಕರನ್ನು ನೇಮಿಸಬೇಕೆಂದು ಶ್ರೀಗಳವರ ವಿಚಾರವಿತ್ತು. ಅದರಂತೆ, ಕೈ.ವಾ. ವೀರಬಸವ ಶ್ರೇಷ್ಠಿಯವರು ಈ ಉಪದೇಶಕ ಕಾರ್ಯವನ್ನು ಶಿವಯೋಗಮಂದಿರದ ಪಕ್ಷದಿಂದಲೇ ಕೆಲವು ವರ್ಷ ಮಾಡಿದರು. ದುಡ್ಡಿನ ಅಡಚಣಿಯಿಂದ ಈ ಸ್ತುತ್ಯ ಕಾರ್ಯವು ಅಷ್ಟಕ್ಕೇ  ನಿಂತುಹೋಯಿತು.

ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು : ಶ್ರೀಗಳವರು ವೀರಶೈವರ ಶಿಕ್ಷಣ ಪ್ರಸಾರಕ್ಕೆ ವಾರ ಪತ್ರಿಕೆಗಳ ಹಾಗೂ ಮಾಸ ಪತ್ರಿಕೆಗಳ ಉಪಯೋಗವನ್ನು ಮಾಡಿಕೊಳ್ಳದೆ ಬಿಡಲಿಲ್ಲ. ಆರಂಭದಲ್ಲಿ ಮೈಸೂರ ಸ್ಟಾರ ಪತ್ರಿಕೆಯೊಂದೇ ನಮ್ಮ ಸಮಾಜದಲ್ಲಿ ಹೊರಡುತ್ತಿತ್ತು, ಉತ್ತರ ಕರ್ನಾಟಕದಲ್ಲಿ ಶ್ರೀಗಳವರ ಉಪದೇಶದಿಂದ ಆ ವಾರ ಪತ್ರಿಕೆಯ ಪ್ರಸಾರವು ಹೆಚ್ಚಾಯಿತು. ಧರ್ಮತರಂಗಿಣಿ ಎಂಬ ಮಾಸ ಪತ್ರಿಕೆಯು ಕೇವಲ ಶ್ರೀಗಳವರ ಕೃಪೆಯ ಬಲದಿಂದಲೇ ನಡೆದಿತ್ತು. ಕರ್ನಾಟಕದಲ್ಲಿ ಧರ್ಮತರಂಗಿಣಿಯು ಪ್ರವೇಶಿಸದ ವೀರಶೈವರ ಮನೆಗಳೇ ಇದ್ದಿಲ್ಲವೆಂದು ಹೇಳಬಹುದು. ಈ ಪತ್ರಿಕೆಗಳಿಗೆ ಸಮಾಜ ಹಿತವಾಗುವಂಥ ಸೂಚನೆಗಳನ್ನು ಶ್ರೀಗಳವರು ಸಕಾಲಕ್ಕೆ ತಿಳಿಸುತ್ತಲೇ ಇದ್ದರು.

ಪ್ರಾಚೀನ ಗ್ರಂಥಗಳ ಸಂಶೋಧನವೂ ಹೊಸ ಗ್ರಂಥಗಳ ಪ್ರಸಾರವೂ : ಲೋಕ ಶಿಕ್ಷಣಕ್ಕೆ ಗ್ರಂಥ ಭಾಂಡಾಗಾರವು ಒಳ್ಳೇ ಬಲವಾದ ಸಾಧನವಾಗಿರುವದು. ರಾಜಾಶ್ರಯವು ತಪ್ಪಿ ಹೋದುದರಿಂದಲೂ, ಪರಮತದವರ ಮತ್ಸರದಿಂದಲೂ ವೀರಶೈವ ಪ್ರಾಚೀನ ಗ್ರಂಥಗಳು ಉಪಲಬ್ಧವಿಲ್ಲದೆ ಹೋಗಿದ್ದವು. ಆದುದರಿಂದ ಪ್ರಾಚೀನ ಗ್ರಂಥಗಳ ಸಂಶೋಧನಕ್ಕಾಗಿ ಒಂದು ಮಂಡಲವನ್ನೇರ್ಪಡಿಸಬೇಕೆಂದು ಸ್ವಾಮಿಗಳು ಪ್ರಯತ್ನಿಸಿದರು. ಜನಸಹಾಯ ಧನಸಹಾಯಗಳು ದೊರೆಯದ್ದರಿಂದ ಈ ಕಾರ್ಯವು ಪೂರ್ಣಸಿದ್ಧಿಗೆ ಹೋಗಲಿಲ್ಲ. ಆದರೂ, ಶ್ರೀಗಳವರು ತ್ರಾವಣಕೋರ ಮೊದಲಾದ ಸ್ಥಲಗಳಿಗೆ ಶಾಸ್ತ್ರಿಗಳನ್ನು ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ, ಅವುಗಳ ಸಂಶೋಧವನ್ನು ಮಾಡಿಸಿರುವರು. ಶ್ರೀಗಳವರ ಪ್ರಯತ್ನದ ಪ್ರಭಾವದಿಂದಲೆ ಮೂಲಿಗುಂಪಾಗಿ ಹುಳದ ಬಾಯಿಗೆ ತುತ್ತಾಗಿ ಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಶಿವಯೋಗಮಂದಿರದಲ್ಲಿ ವಚನ ಗ್ರಂಥಗಳ ಭಂಡಾರವೇ ಏರ್ಪಟ್ಟಿರುವದು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತ ಹಸ್ತದಿಂದ ಸಹಾಯವನ್ನು ಮಾಡುತ್ತಿದ್ದರು. ಸಣ್ಣ ಸಣ್ಣ ಧರ್ಮಗ್ರಂಥಗಳನ್ನು ಮುದ್ರಿಸಿ, ಮಿಶನರಿಗಳಂತೆ ಒಂದೆರಡು ದುಡ್ಡುಗಳಿಗೆ ಅವು ದೊರೆಯುವಂತೆ ಮಾಡಬೇಕೆಂದು ಶ್ರೀಗಳವರ ವಿಚಾವಿತ್ತು ಆದರೆ ಮಾಡತಕ್ಕ ಕೆಲಸಗಳು ಹೆಚ್ಚಾಗಿ ದುಡ್ಡಿನ ಅಡಚಣಿಯು ಬೆಳೆದದ್ದರಿಂದ ಇಂಥ ಮಹತ್ತರ ಕಾರ್ಯಗಳು ಸಹ ನಿರುಪಾಯದಿಂದ ಅಷ್ಟಕ್ಕೆ ನಿಂತವು.

 ವಾಚನ ಮಂದಿರಗಳು : ಆರಂಭದಲ್ಲಿ ಶ್ರೀಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದವು.

 ನೈತಿಕ ಶಿಕ್ಷಣ : ನೈತಿಕ ಶಿಕ್ಷಣಕ್ಕೆ ಶ್ರೀಗಳವರು ಹೆಚ್ಚು ಮಹತ್ವವನ್ನು ಕೊಡುತ್ತಿದ್ದರು. ಎಂಥ ದೊಡ್ಡ ಸ್ವಾಮಿಯಾಗಿರಲಿ, ವಿದ್ವಾಂಸನಿರಲಿ, ಶ್ರೀಮಂತನಿರಲಿ, ಅಧಿಕಾರಿಯೇ ಇರಲಿ, ಅವರಲ್ಲಿ ಶೀಲ (ನೀತಿ) ಒಂದಿಲ್ಲದಿದ್ದರೆ ನಿರುಪಯುಕ್ತ ಮನುಷ್ಯನೆಂದೇ ಶ್ರೀಗಳವರು ತಿಳಿಯುತ್ತಿದ್ದರು. ಅಂಥ ಮನುಷ್ಯರಿಗೆ ಶ್ರೀಗಳವರಲ್ಲಿ ಬೆಲೆಯು ಬರುತ್ತಿದ್ದಿಲ್ಲ. ನೀತಿ ಶಿಕ್ಷಣದ ಪಾಠವನ್ನು ಪಡೆಯಲಿಕ್ಕೆ ಶ್ರೀಗಳವರೇ ಪ್ರತ್ಯಕ್ಷ ವಸ್ತುವಾಗಿದ್ದರು. ಶ್ರೀಗಳವರು ತಮ್ಮ ಪ್ರತ್ಯಕ್ಷವಾದ ಆಚರಣೆಯಿಂದ ನೀತಿಬೋಧದ ಪಾಠವನ್ನು ಎಲ್ಲರಿಗೂ ಅಪ್ರತ್ಯಕ್ಷವಾಗಿ ಬೋಧಿಸುತ್ತಿದ್ದರು. ಶ್ರೀಗಳವರು ನೀತಿಯ ಸಾಕಾರ ಮೂರ್ತಿಯೇ ಆಗಿದ್ದರೆಂದು ಹೇಳಿದರೆ ಅತಿಶಯೋಕ್ತಿಯಾಗದು. ಶ್ರೀಗಳಲ್ಲಿಯ ಧೈರ್ಯಸ್ಥೈರ್ಯಗಳು, ಪರೋಪಕಾರ ಪರಾಯಣತೆಯು, ವಿರತಿ ವಿತರಣೆಗಳು ನಿರಭಿಮಾನ ನಿಸ್ವಾರ್ಥತೆಗಳು, ಶಾಂತಿದಾಂತಿಗಳು ಭೂತದಯೇ, ಅತ್ಯುಜ್ವಲವಾದ ಬ್ರಹ್ಮಚರ್ಯ, ಇವೇ ಮೊದಲಾದ ಸದ್ಗುಣಗಳು ಲೋಕೋತ್ತರ ವಾಗಿದ್ದವು!! ಶ್ರೀಗಳಲ್ಲಿ ಸಹಜವಾಗಿಯೇ ವಾಸವಾಗಿರುತ್ತಿದ್ದ ಈ ಸದ್ಗುಣಗಳ ಸಮುಚ್ಚಯದಿಂದ ಉದ್ಭವಿಸಿದ ಗುಪ್ತ ಶಕ್ತಿಯು ಅಸಂಖ್ಯ ವೀರಶೈವರನ್ನು ಸನ್ಮಾರ್ಗ ಪ್ರವೃತ್ತರನ್ನು ಮಾಡದೆ ಬಿಡಲಿಲ್ಲ. ದುರುಳ ವೇದಾಂತಿಗಳಿಂದ ಸಮಾಜದಲ್ಲಿ ಆಗುತ್ತಿರುವ ಧರ್ಮಲೋಪವನ್ನು ನೀತಿ ಬಾಹ್ಯ ಆಚರಣೆಗಳನ್ನು ಶ್ರೀಗಳವರು ಯುಕ್ತಿ  ಪ್ರಯಕ್ತಿಗಳಿಂದಲೂ, ಶಾಸ್ತ್ರಾಧಾರದಿಂದಲೂ ಖಂಡಿಸಿ ಬಿಟ್ಟಿದ್ದರು. ದೇಶದಲ್ಲೆಲ್ಲ ಸಂಚರಿಸಿ, ಆ ದುರುಳರಿಂದ ಆಗುವ ಅನರ್ಥ ಪರಂಪರೆಗಳನ್ನು ಜನತೆಯ ನಿದರ್ಶನಕ್ಕೆ ತಂದು ಕೊಟ್ಟು, ದುರುಳರ ಬಗ್ಗೆ ಜನತೆಯಲ್ಲಿ ತಿರಸ್ಕಾರವನ್ನು ಕಂಡು ಶ್ರೀಗಳವರು ಮರಮರನೆ ಮರಗುತ್ತಿದ್ದರು. ಪ್ರಮರ್ಥವರ್ಗದ ನಿಂದೆಯನ್ನು ಕೇಳಿ ಉದ್ವೇಗ ಚಿತ್ತರಾಗಿ, ತಮ್ಮ ಶಕ್ತಿ ಸರ್ವಸ್ವವನ್ನೆಲ್ಲ ಧಾರೆಯೆರೆದು ಈ ಕಲಹವನ್ನು ಶಾಂತಿಗೊಳಿಸಬೇಕೆಂದು ಆತುರಪಡುತ್ತಿದ್ದರು. ದೊಡ್ಡದೊಂದು ಸಭೆಯನ್ನೇರ್ಪಡಿಸಿ, ಶಾಸ್ತ್ರಾಧಾರಗಳಿಂದ ಈ ಕಲಹದ ನಿರ್ಣಯವನ್ನು ಮಾಡಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು. ಆದರೆ ಸಮಾಜದ ದುರ್ದೈವವು ಶ್ರೀಗಳವರ ಈ ಕಾರ್ಯವನ್ನು ನೆರವೇರಗೊಡಲಿಲ್ಲ. ಶ್ರೀಗಳವರು ಈ ಮೇರೆಗೆ ಸಮಾಜದಲ್ಲಿ ನೀತಿಯ ಪ್ರಸಾರವನ್ನು ಮಾಡಲು ಪ್ರಯತ್ನಿಸಿದರು. 

ಪರಿಣಾಮ : ಶ್ರೀಗಳವರ ಪ್ರಯತ್ನದಿಂದ ವೀರಶೈವರೊಳಗಿನ ಹಲಕೆಲವು ಕೆಟ್ಟ ರೂಢಿಗಳು ಅಳಿದುಹೋದವು. ವೀರಶೈವ ಧರ್ಮವು ವೇದ ಸಮ್ಮತವಾದ ಸರ್ವೋತ್ಕೃಷ್ಟ ಧರ್ಮವೆಂದು ಪರಮತದವರಿಗೂ ಮನವರಿಕೆಯಾಯಿತು. ವೀರಶೈವರಂತೂ ತಮ್ಮ ಧರ್ಮದ ಉತ್ಕೃಷ್ಟತೆಯನ್ನು ನೆನೆಸಿ (ಸ್ಮರಿಸಿ) ಅಭಿಮಾನದಿಂದ ತಲೆಯೆತ್ತಿ ನಡೆಯುವಂತಾಯಿತು.  ವೀರಶೈವರಲ್ಲಿ ಜಾಗೃತಿಯು ಉತ್ಪನ್ನವಾಗಿ: ಧಾರ್ಮಿಕ ಸಾಮಾಜಿಕ ಸುಧಾರಣೆಗಳ ಕುರುಹುಗಳು  ತಲೆದೋರಹತ್ತಿರುವವು. (ಪರಶಿವನ ಕೃಪೆಯಿಂದ ಅವೆಲ್ಲವುಗಳ ಯೋಗ್ಯ ನಿರ್ಣಯವು ಬೇಗನೆ ಆಗಲಿಕ್ಕೆ ಬೇಕಾಗಿರುವದು.). ಸಮಾಜದಲ್ಲಿ ಧಾರ್ಮಿಕ ಬೌದ್ಧಿಕ, ಸಾಮಾಜಿಕ, ಔದ್ಯೋಗಿಕ ಶಿಕ್ಷಣಗಳ ಪ್ರಸಾರವಾಯಿತು

ಖಂಡಿಸದೆ ಕರಣವನು |

ದಂಡಿಸದೆ ದೇಹವನು |

ಉಂಡುಂಡು ಸ್ವರ್ಗಕೈದಲಿಕ್ಕದನೇನು |

ರಂಡೆಯಾಳುವಳೆ ಸರ್ವಜ್ಞ |

 ಎಂಬ ಸರ್ವಜ್ಞ ಕವಿಯ ವೀರವಾಣಿಯ ಸತ್ಯತೆಯನ್ನು ಶ್ರೀಗಳವರು ತಮ್ಮ ಆಚರಣೆಯಿಂದ ಜನತೆಯ ಅನುಭವಕ್ಕೆ ತಂದು ಕೊಟ್ಟರು. ಇಂದ್ರಿಯಗಳ ನಿಗ್ರಹವೂ ದೇಹ ದಂಡನೆಯೂ ಇಲ್ಲದೆ ಐಹಿಕ ಪಾರಲೋಕಿಕ ಕಾರ್ಯಗಳೆಂದೂ ಸಿದ್ಧವಾಗಲಾರ ವೆಂಬ ತಮ್ಮ ಪ್ರತ್ಯಕ್ಷ ಪ್ರಯೋಗವನ್ನು ಶ್ರೀಗಳವರು ಸಮಾಜದೆದುರಿಗಿಟ್ಟು ಹೋಗಿರುವರು. ಶ್ರೀಗಳವರ ಉದಾಹರಣೆಯಿಂದ ಸರ್ವಜ್ಞ ಕವಿಯ ಮೇಲಿನ ನೀತಿಯ ರಹಸ್ಯವನ್ನರಿತು ಶ್ರೀಗಳವರು ಒಡ್ಡಿದ ಅನೇಕ ಸಾಮಾಜಿಕ ಕಾರ್ಯಗಳನ್ನು ಪುರೋವೃದ್ಧಿಗೆ ಒಯ್ಯುವುದು ಪ್ರತ್ಯೇಕ ಸುಶಿಕ್ಷಿತ ವೀರಶೈವನ ಕರ್ತವ್ಯವಾಗಿರುವದು. ಇಂತಹ ಸದ್ಭುದ್ಧಿಯನ್ನು ಪರಮಾತ್ಮನು ದಯಪಾಲಿಸಲೆಂದೂ, ವೀರಶೈವ ಸಮಾಜವು ಅಂತಹ ಸುಯೋಗವನ್ನು ಕಣ್ಣಾರೆ ಕಂಡು ಅನಂದಿಸುವ ಸುಸಮಯವು ಬೇಗನೆ ಪ್ರಾಪ್ತವಾಗಲೆಂದು ಪರಶಿವನನ್ನು ಅನನ್ಯಭಾವದಿಂದ ಪ್ರಾರ್ಥಿಸಿ ,ಸಮಾಜ ಸೇವಾರೂಪ ತಪಸ್ಸಿನಿಂದ ಪರಮ ಪವಿತ್ರವಾದ ಶ್ರೀಗಳವರ ದಿವ್ಯ ಪಾದಾರವಿಂದಗಳಿಗೆ ಲೇಖನ ರೂಪವಾದ ಈ ಅನಂತ ಪ್ರಣಾಮಗಳನ್ನು ಸಮರ್ಪಿಸುವೆನು.

• ಶ್ರೀ ಆನೆಕೊಂಡದ ಮುಪ್ಪಣ್ಣನವರು, ಡಾವಣಗೆರೆ

ಜಗತ್ತಿನಲ್ಲಿ ಅನೇಕ ವಿಧವಾದ ಸತ್ಕಾರ್ಯಗಳನ್ನು ಮಾಡುತ್ತಿರುವರಾದಾಗ್ಯೂ ಭೂತ ದಯಾ ಪರರೂ, ಅಹಿಂಸಾಭಿಮಾನಿಗಳು ಆಗಿರುವುದು ಬಹು ಅಪರೂಪ ವಾಗಿದೆ. ಹೀಗೆಂದ ಮಾತ್ರಕ್ಕೆ ಪ್ರಾಣಿಗಳನ್ನು ಕೊಲ್ಲಲು ಅಥವಾ ಕೊಲ್ಲಿಸಲು ಸಹಾಯಕರಾಗಿರುವರೆಂದು ನನ್ನ ಅಭಿಪ್ರಾಯವಲ್ಲ. ಆದರೆ ಪ್ರಾಣಿಗಳಿಗೊದಗಿರುವ ಸಂಕಟವನ್ನು ಪರಿಹರಿಸಲು ಯತ್ನಿಸುವುದಿಲ್ಲ. ಈ ಕಾರಣದಿಂದಲೇ ವ್ಯವಸಾಯವೇ ಪ್ರಾಧಾನ್ಯವಾಗಿರುವ ಈ ನಮ್ಮ ಭರತಖಂಡದಲ್ಲಿ ವ್ಯವಸಾಯಕ್ಕೆ ಮುಖ್ಯಾಧಾರದ ಹೋರಿ, ಗೋವು ಮೊದಲಾದವುಗಳು ಬಹಳ ಕಡಿಮೆಯಾಗಿ ನಮ್ಮ ವ್ಯವಸಾಯವು ಕೇವಲ ನಿಕೃಷ್ಟ ಸ್ಥಿತಿಗೆ ಬಂದಿದೆ. ಇನ್ನೂ ಕೆಲವು ಕಾಲದವರೆಗೂ ದೇಶದಲ್ಲಿ ಗೋವಧೆಯು ನಿರ್ವಿಘ್ನವಾಗಿ ನಡೆದಲ್ಲಿ ಈಗಿರುವ ಅಲ್ಪಸ್ವಲ್ಪ ಪ್ರಾಣಿಗಳೂ ಸಹಕಟುಗರ ಪಾಲಾಗಿ ನಮ್ಮ ವ್ಯವಸಾಯಕ್ಕೆ ಬಹುತೊಂದರೆ ಬರುವ ಪ್ರಸಂಗವಿದೆ.

 ಯಾವ ನಮ್ಮ ಪೂರ್ವಿಕರು ಹಾಲು, ಮೊಸರು ಮತ್ತು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳ ಸೇವನೆಯಿಂದ ದೃಢಾಂಗರಾಗಿ ಹೆಚ್ಚು ಕಾಲ ಬದುಕುತ್ತಿದ್ದರೋ ಅದೇ ವಂಶದವರಾದ ನಾವು ಹಾಲು ತುಪ್ಪ ಮೊದಲಾದ ಪೌಷ್ಟಿಕ ಪದಾರ್ಥಗಳಿಲ್ಲದೆ ಸಚಿವ ಹೆಣಗಳಂತಾಗಿ ಅಕಾಲ ಮರಣವನ್ನು ಹೊಂದುತ್ತಿರುವವು, ಶಿಶುಗಳ ಮರಣ ಸಂಖ್ಯೆಯಂತೂ ಮಿತಿಮೀರಿತು. ಈಗ ದೊರೆಯುವ ಹಾಲೆಂದರೆ ಕಾಲುವಾಸಿ ಹಾಲಿಗೆ ಮುಕ್ಕಾಲುವಾಸಿ ನೀರನ್ನು ಬೆರೆಯಿಸಿದ ಹಾಲೇ! ದನಗಳು ಯಥೇಚ್ಛವಾಗಿದ್ದಾಗ ಹಾಲು ತುಪ್ಪಗಳಿಂದ ಕೈ ತೊಳೆಯುತ್ತಿದ್ದವರು ಈಗ ಎಳೆ ಮಕ್ಕಳಿಗೆ ಅಥವಾ ರೋಗಿಗಳಿಗೆ ಸ್ವಲ್ಪ ಹಾಲು ಬೇಕೆಂದರೂ ದೊರೆಯುವುದೇ ದುರ್ಲಭವಾಗಿದೆ. ಈಗ ನಮಗೆ ಹಾಲು ತುಪ್ಪಗಳೆಂದರೆ ಪರದೇಶಗಳಿಂದ ಪೆಟ್ಟಿಗೆಗಳಲ್ಲಿ ಪ್ಯಾಕಾಗಿ ಬರುವ Condensed milk (ಕಂಡೆನ್ಸ್ಡ ಹಾಲು) Vegetable ghee (ಸಸ್ಯಗಳಿಂದ ತಯಾರಿಸಿದ ತುಪ್ಪ) ಇವುಗಳೇ ಗತಿಯಾಗಿವೆ. ಇಂತಹ ದುಸ್ಥಿತಿಯು ನಮಗೆ ಬರಲು ಕಾರಣವೆಂದರೆ ನಾವು ದನಗಳ ವಿಷಯದಲ್ಲಿ ನಿರ್ದಯರಾಗಿ ಅವುಗಳನ್ನು ಕಟುಗರಿಗೆ ಕೊಡುವದ ಕಾರಣವಾಗಿದೆ.

ನಮ್ಮ ದೇಶಕ್ಕೊದಗಿರುವ ದನಗಳ ಸಂಹಾರವೆಂಬ ಮಹಾಮಾರಿಯನ್ನು ತಪ್ಪಿಸದ ಹೊರ್ತು ನಮ್ಮಗಳ ಏಳ್ಗೆಗಾಗಿ ದೇಶಾಭ್ಯುದಯಕ್ಕಾಗಲೀ ಮಾರ್ಗವೇ  ಇಲ್ಲದಂತಾಗಿದೆ. ದೇಶದಲ್ಲಿ ನಡೆದಿರುವ ಇಂತಹ ಅನ್ಯಾಯವನ್ನು   ನೋಡಿಯೂ ನೋಡದವರಂತೆ ಸುಮ್ಮನಿರುವುದೆಂದರೆ ನಮ್ಮ ಕಾಲಮೇಲೆ ನಾವೇ ಕಲ್ಲು ಹಾಕಿಕೊಂಡಂತೆಯೇ ಸರಿ. ದೇಶಾಭ್ಯುದಯಕ್ಕೆ ಮಹಾ ಅನರ್ಥಕಾರಿಯಾದ ಮೇಲ್ಕಂಡ ದುರಭ್ಯಾಸವನ್ನು ನಿಲ್ಲಿಸುವುದು ಪರಮ ಕರ್ತವ್ಯವಾಗಿದ್ದರೂ ಅನೇಕರು ಆ ಕಡೆಗೆ ಲಕ್ಷಕೊಡದಿರುವುದು ವಿಷಾದಕರವಾದ ಸಂಗತಿಯಾಗಿದೆ. ಕಾಯಿದೆ ಕೌನ್ಸಿಲ್‌ ಮೆಂಬರಗಳೂ ಸಭ್ಯ ಗೃಹಸ್ಥರೂ ಕೊಂಚ ಪ್ರಯತ್ನಪಟ್ಟು ಈ ಅನರ್ಥವನ್ನು ತಪ್ಪಿಸುವುದು ಅತ್ಯಾವಶ್ಯಕ. ಗುರುಗಳೆಂಬುವರೂ ಸಹ ಈ ವಿಷಯದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದಂತ್ತೆ ಭಕ್ತರಲ್ಲಿ ಜಾಗೃತಿಯನ್ನು ಉತ್ಪನ್ನ ಮಾಡಬೇಕು.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಭೂತ ದಯಾಪರರಾಗಿದ್ದರಲ್ಲದೆ ತಮ್ಮ ನಿತ್ಯ ಕರ್ಮಗಳ ಜೊತೆಗೆ ಪ್ರಾಣಿಗಳ ಸಂಕಟ ನಿವಾರಣೆ ಮಾಡುವ ವೃತ್ತಿಯನ್ನು ಕೈಕೊಂಡಿದ್ದರು. ಆಗಾಗ್ಗೆ ಶಿಷ್ಯರಿಗೆ ಪ್ರಾಣಿದಯೆಯ ವಿಷಯವಾಗಿ ಉಪದೇಶಿಸಿ ಯಾವ ಪ್ರಾಣಿಯೇ ಆಗಲಿ ಸಂಕಟದಿಂದ ಪರಿತಪಿಸುತ್ತಿದ್ದರೆ ಅದರ ಕಷ್ಟವನ್ನು ತಪ್ಪಿಸದೆ ಮುಂದಿನ ಕಾರ್ಯದಲ್ಲಿ ಉದ್ಯುಕ್ತರಾಗುತ್ತಿರಲಿಲ್ಲ. ಮೂಕ ಪ್ರಾಣಿಗಳ ವಿಷಯದಲ್ಲಿ ಬಹು ಕನಿಕರವುಳ್ಳವರಾಗಿದ್ದರು. ಅವುಗಳ ರಕ್ಷಣೆಗಾಗಿ ತಮ್ಮ ಕೈಯಿಂದ ಸಹಾಯವನ್ನೆಲ್ಲಾ ಮಾಡುತ್ತಿದ್ದರು. ಇವರು ಆಗಾಗ್ಗೆ ಅಹಿಂಸಾ ಬೋಧಕರನ್ನು ಕರೆಯಿಸಿ ಅವರಿಂದ ಜನಗಳಿಗೆ ಉಪದೇಶಿಸುತ್ತಿದ್ದರು. ಎಲ್ಲಿಯಾದರೂ ಅಹಿಂಸಾ ಬೋಧಕರು ಬಂದರೆ ಅವರನ್ನು ಕರೆಯಿಸಿ ಅವರಿಗೆ ಪ್ರೋತ್ಸಾಹಿಸುತ್ತಿದ್ದರು.

ನಮ್ಮ ಸಂಘದ ಪ್ರಚಾರಕರು ಯಮನೂರು ದೇವಿ ಜಾತ್ರೆಗೆ ಪ್ರಚಾರಕ್ಕೆ ಹೋದಾಗ ಅವರನ್ನು ಬರಮಾಡಿಕೊಂಡು ಅಹಿಂಸೆಯ ವಿಷಯವಾಗಿ ವ್ಯಾಖ್ಯಾನ ಮಾಡಿಸಿ ಪ್ರೋತ್ಸಾಹಾರ್ಥವಾಗಿ  ಧನಸಹಾಯ ಮಾಡಿದವರೂ ಈ ಮಹಾಸ್ವಾಮಿಗಳೇ. ಅನೇಕ ಕಡೆಯಲ್ಲಿ ನಡೆಯುತ್ತಿದ್ದ ಹಿಂಸಾಯುಕ್ತವಾದ ದೇವಿ ಜಾತ್ರೆಗಳಲ್ಲಿ ಹಿಂಸೆಯನ್ನು ತಪ್ಪಿಸಲು ಸಹಾಯಕಾರಿಗಳಾಗಿದ್ದರು. ಇವರು ತಮ್ಮ ಆಧಿಪತ್ಯದಲ್ಲಿ ಜರುಗುತ್ತಿದ್ದ ಮುದೇನೂರ ಜಾತ್ರೆಗೆ ನಮ್ಮ ಸಂಘದ ಪ್ರಚಾರಕರನ್ನು ಕರೆಯಿಸಿಕೊಂಡು ಜನಗಳಲ್ಲೆಲ್ಲಾ ಅಹಿಂಸಾ ತತ್ವವನ್ನು ಹರಡಲು ಏರ್ಪಾಟು ಮಾಡಿದ್ದರು. ಅಲ್ಲದೆ ಮುದೇನೂರಲ್ಲಿ ಸೇರುತ್ತಿದ್ದ ಜಾತ್ರೆಯಲ್ಲಿ ಉತ್ತಮವಾದ ಹೋರಿಗಳ ವಿನಹ ಕಟುಗರಿಗೆ ದೊರೆಯ ಬಹುದಾದ ಬಡಕು ಪ್ರಾಣಿಗಳು ಬಹಳ ಮಟ್ಟಿಗೂ ಬರದಂತೆ ಏರ್ಪಾಟು ಮಾಡಿದ್ದರು. ತಾವು ಶಿವೈಕ್ಯರಾಗುವ ೮-೧೦ ದಿವಸ ಮುಂಚಿತವಾಗಿ ಡಾವಣಗೆರೆಗೆ ದಯಮಾಡಿಸಿ, ಮುದೇನೂರಲ್ಲಿ ಸೇರುವ ದನದ ಜಾತ್ರೆಯಲ್ಲಿ ಪ್ರಚಾರದ ಕೆಲಸವನ್ನು ನಡೆಯಿಸಲು ನಮ್ಮ ಪ್ರಚಾರಕರನ್ನು ಸಂಗೀತ, ವ್ಯಾಖ್ಯಾನ, ಮ್ಯಾಜಿಕ್ ಲ್ಯಾಂಟರ್ನ ಮೊದಲಾದವುಗಳ ಮೂಲಕ ಅಹಿಂಸಾ ತತ್ವವನ್ನು ಪ್ರಸಾರಪಡಿಸಲು ವ್ಯವಸ್ಥೆ ಕರೆದುಕೊಂಡು ಹೋಗಿ ಮಾಡಿದವರೂ ಈ ಮಹಾಸ್ವಾಮಿಗಳೇ.

ಈ ಪ್ರಕಾರ ಈ ಮಹಾಸ್ವಾಮಿಗಳು ಅನೇಕ ರೀತಿಗಳಿಂದ ಪ್ರಾಣಿದಯೆ ವಿಷಯದಲ್ಲಿ ಸಹಾಯಕರಾಗಿದ್ದರಲ್ಲದೆ ಕೇವಲ ಭೂತ ದಯಾಪರರಾಗಿ ”ಅಹಿಂಸಾ ಪರಮೋಧರ್ಮ’ ಎಂಬ ತತ್ವವನ್ನು ಜನಸಾಮಾನ್ಯರಲ್ಲೆಲ್ಲಾ ಪ್ರಸಾರಗೊಳಿಸಿದರು. ಇವರ ಅಗಲುವಿಕೆಯಿಂದ ಮೂಕ ಪ್ರಾಣಿಗಳು ತಾಯಿಯನ್ನು ಕಳೆದುಕೊಂಡ ಕರುವಿನಂತೆ ವ್ಯಸನ ಪಡುತ್ತಿರುವುವು. ದಯಾಮಯನಾದ ಭಗವಂತನು ಸರ್ವರಿಗೂ ಸರ್ವ ಪ್ರಾಣಿಗಳನ್ನು ರಕ್ಷಿಸುವ ಸದ್ಭುದ್ಧಿಯನ್ನು ಕೊಟ್ಟು ಮಹಾಸ್ವಾಮಿಗಳವರು ಕೈಕೊಂಡಿದ್ದ ಕಾರ್ಯವು ಜಯಪ್ರದವಾಗುವಂತೆ ಕರುಣಿಸಲಿ !

* * *

• ಡಾ. ಗುರುದೇವಿ ಹುಲೆಪ್ಪನವರಮಠ

‘ಹೆಣ್ಣು ಮನುಕುಲಕ್ಕೆ ಕಕುಲಾತಿ ನೀಡಿರುವ ಮಧುರ ಹಣ್ಣು’ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಮುದ್ದಾಗಿ ಉದ್ಗರಿಸಿರುವಂತೆ ಹೆಣ್ಣು ತನ್ನ ಕೈಹಿಡಿದವರನ್ನು, ಒಡಲಕುಡಿಗಳನ್ನು, ಒಡಲು ನೀಡಿದವರನ್ನು ಅನುನಯದಿಂದ ಕಂಡು, ಅಂತಃಕರುಣೆ ಅನುಕಂಪದ ಸಿಂಚನೆ ಮಾಡಿಸುತ್ತ,  ಅವರ ನರಳಿಕೆಗೆ ಕೊರಳು ನೀಡಿ, ನೋವ ನೆವರಿಕೆಗೆ ಬೆರಳು ನೀಡಿ ತನ್ನೆಲ್ಲವನ್ನೂ ತ್ಯಾಗಮಾಡುವ ಕ್ಷಮಯಾಧರಿತ್ರಿ, ಮನುಕುಲದ ಕಕುಲಾತಿಯ ಸಾಂದ್ರ ಕೇಂದ್ರ, ಅವಳಿಲ್ಲದ ಜಗತ್ತು, ಜೀವನ ಅರ್ಥಹೀನ ಅಲ್ಲದೆ ಭಯಂಕರ. ಅದನ್ನೇ ಸರ್ವಜ್ಞ ಕವಿ ‘ಹೆಣ್ಣಿಲ್ಲದವನ ಸಂಸಾರ ಮಳಲೊಳಗೆ ಎಣ್ಣೆ ಹೊಯ್ದಂತೆ’ ಎಂದು ತೀರ್ಪು ನೀಡಿದ್ದುಂಟು.

ಈ ಭುವನದ ಸಮಸ್ತ ಬೆಳಕೇ ಆದ, ಭಾಗ್ಯವೇ ಆದ ಮಹಿಳೆಯನ್ನು ಕ್ರೈಸ್ತ ಧರ್ಮ ಈ ಭೂಮಿಗೆ ಪಾಪವನ್ನು ಹೊತ್ತು ತಂದವಳು ಎಂದು ಆರೋಪಿಸಿತು. ಶ್ರೇಷ್ಠ ತತ್ವಜ್ಞಾನಿ ಪ್ಲೇಟೋ ಒಂದು ಸಂದರ್ಭದಲ್ಲಿ ‘ಥ್ಯಾಂಕ ಗಾಡ್’ ನಾನು ಹೆಣ್ಣಾಗಿ ಹುಟ್ಟಲಿಲ್ಲ, ಎಂದುದ್ಧರಿಸಿ ತಾನು ಗಂಡಾಗಿ ಜನ್ಮತಳೆದದ್ದಕ್ಕೆ ಅಭಿಮಾನ ಆನಂದ ಪಟ್ಟ, ಭಗವಾನ್ ಬುದ್ಧ, ಮೊದಮೊದಲು ಮಹಿಳೆಯರನ್ನು ಬೌದ್ಧ ಸಂಘಗಳಿಗೆ ನಿರಾಕರಿಸಿ ಅವರು ಮೋಕ್ಷ ಸಾಧನೆಗೆ ತೊಡಕು ಸೇರಿಸಿಕೊಳ್ಳಲು ಎಂದು ಕಾರಣ ನೀಡಿ ತಾನೇ ಸ್ವತಃ ಮನೆ, ಮಡದಿ, ಮಗುವನ್ನು ತೊರೆದು ನಡೆದ. ಜೈನ ಧರ್ಮದ ನಯಸೇನ, ಕಾವ್ಯದಲ್ಲಿ ಬಳಸುವ ಭಾಷೆಯ ಬಗೆಗೆ ಕ್ರಾಂತಿಕಾರಿ ಮನೋಭಾವ ವ್ಯಕ್ತಪಡಿಸಿದವ ಸ್ತ್ರೀ ಕುರಿತು ತನ್ನ ಅಂದರೆ ಜೈನಧರ್ಮದ ನಿಲುವನ್ನು ಸ್ಪಷ್ಟ ಪಡಿಸುವಾಗ ಮಾತ್ರ ಮೂಢನಂತೆ.

ಎನಿಸುಜ್ವಳ ಮಾದೊಡೆಂ

ರವಿಯ ತೇಜಂ ಚಂದ್ರನ ಗೆಲ್ಲುಮೆ

ಪೆಣ್ಣಿನಿತೊಳ್ಳಿದಳಾದೊಡೆ ಪುರುಷನೊಳಾದ

ಮಹಾಗಣಂಗಳು ಸೋಲ್ತಪಳೆ?

ಗಂಡಾಗಿ ಹುಟ್ಟಿದಾಗಲೇ ಹೆಣ್ಣಿಗೆ ಮುಕ್ತಿ, ಅವಳೆಷ್ಟೇ ಒಳ್ಳೆಯವಳಾದರೂ ಪುರುಷನನ್ನು ಸರಿಗಟ್ಟಲಾರಳು ಎಂದೆಲ್ಲ ಸಾರಿದ.

 ‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಸ್ತ್ರೇಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಅವಳು ಯಾವಾಗಲೂ ಪುರುಷನ ಆಶ್ರಯದಲ್ಲೇ ಇರತಕ್ಕವಳು, ಧಾರ್ಮಿಕ ಸ್ವಾತಂತ್ರ್ಯವಂತೂ   ಮೊದಲು ಇಲ್ಲ ಎಂದು ಸಾರಿದ ಮನು-ಅತ್ರಿಯಂತಹ ಶಾಸ್ತ್ರಕಾರರು ವೈಷ್ಣವ ಧರ್ಮದ ನಿಲುವನ್ನು ಸ್ಪಷ್ಟಪಸಿದರು. ಹೆಣ್ಣಿನ ಮೇಲೆ ತನಗೆ ಜನ್ಮ ಜನ್ಮಾಂತರದ ದ್ವೇಷವಿರುವವರ ಹಾಗೆ ಮನು, ಪುರುಷ ಎದುರಿನಲ್ಲಿರುವಾಗ ಹೆಣ್ಣು ‘ಮಲಗಬಾರದು, ಆಕಳಿಸಬಾರದು, ನಗಬಾರದು ಮೈಮುರಿಯಬಾರದು, ಇತ್ಯಾದಿ ಪಟ್ಟಿಯನ್ನೆ ನೀಡಿ ಅವಳ ಪ್ರತಿಯೊಂದು ಚಲನವಲನಗಳನ್ನು ನಿಯಂತ್ರಿಸಿದ.

ಯಾರು ಧರ್ಮಗುರುಗಳ, ಸಮಾಜಸುಧಾರಕರ ಸ್ಥಾನದಲ್ಲಿದ್ದು ಜನರ ರೀತಿ ನಡವಳಿಕೆಗಳನ್ನು ತಿದ್ದಬೇಕಾಗಿತ್ತೋ, ಜನಮನದಲ್ಲಿ ಸ್ತ್ರೀ ಕುರಿತಾಗಿ ಗೌರವದ ಭಾವ ತುಂಬಬೇಕಾಗಿತ್ತೋ ಅಂಥವರೇ ಸ್ತ್ರೀ ಕುರಿತಾಗಿ ಇಂಥ ಅಸಂಬದ್ಧ, ಅನುಚಿತ ಹೇಳಿಕೆಗಳನ್ನು ನೀಡತೊಡಗಿದಾಗ ಅಂದಿನ ಸಮಾಜ ಮಹಿಳೆಯನ್ನು ಹೇಗೆ ನಡೆಸಿಕೊಂಡಿರಬೇಕು? ಧರೆಯೇ ಹತ್ತಿ ಉರಿಯತೊಡಗಿದಾಗ, ಕಾಪಾಡಬೇಕಾದ ಕೈಗಳೇ ಕೊಲ್ಲತೊಡಗಿದಾಗ ಅಮೃತವೇ ವಿಷವಾಗತೊಡಗಿದಾಗ ಮಹಿಳೆ ಎಷ್ಟು ಎಂಥ ನೋವನ್ನು ಅನುಭವಿಸರಬೇಡ? ಯಾವ ತಪ್ಪನ್ನೂ ಮಾಡದೇ ವಿನಾಕಾರಣ ಇಂಥ ಅಪವಾದ ಆರೋಪಗಳ ಪಟ್ಟಿಯನ್ನಂಟಿಸಿಕೊಂಡು ಗಾಸಿಗೊಂಡಿದ್ದು ಎಷ್ಟು ದುರದೃಷ್ಟಕರ!

ಮಹಿಳೆಯರ ಅಂತರಂಗದ ಈ ನೋವ ದನಿ ಕೇಳಿಸಿತೋ ಏನೋ, ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಪ್ರಮಥರು ಈ ನಾಡಿನಲ್ಲಿ ಅವತಾರವೆತ್ತಿದರು. ಅನೇಕ ಆರೋಪ, ಅಪವಾದಗಳ ಕೊಳೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಅವಳನ್ನು ಪ್ರೀತಿಯಿಂದ ಕೈ ಹಿಡಿದು ಮೇಲೆತ್ತಿ, ಅವಳಲ್ಲಿ ಸ್ವಾತಂತ್ರ್ಯ ಸಮಾನತೆಯ ಉಸಿರು ತುಂಬಿದರು. ಕಲ್ಯಾಣ ಪಟ್ಟಣದ ಅನುಭವ ಮಂಟಪದಲ್ಲಿ ತಮ್ಮ ಸರಿಸಮಾನ ಸ್ಥಾನಮಾನಗಳನ್ನು ನೀಡಿ, ಅವಳ ಸಾಧನೆಯನ್ನು ನಿಬ್ಬೆರಗಾಗಿ ನೋಡಿ ಮನವಾರೆ ಮೆಚ್ಚಿಕೊಂಡು, ಹೃದಯಾರೆ ಅಭಿಮಾನಪಟ್ಟು ಕೈಮುಗಿದರು. ಶರಣರ ಗುರುವಾಗಿದ್ದ ಅಲ್ಲಮಪ್ರಭುಗಳು ಸ್ತ್ರೀ ಕುಲವನ್ನು ಪ್ರತಿನಿಧಿಸಿದ ಮಹಾದೇವಿಯಕ್ಕನ ಪಾದಗಳಿಗೆ ನಮೋ ನಮೋ ಎಂದುದ್ಗರಿಸಿ ಗೌರವ ಸೂಚಿಸಿದರು. ಜೇಡರ  ದಾಸಿಮಯ್ಯನಂತಹ ಶರಣರು-

ಮೊಲೆ ಮುಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ

ಎಂದು ಸಾರಿ ವ್ಯಕ್ತಿಯ ಬಾಹ್ಯಸ್ವರೂಪಕ್ಕಾಗಲೀ, ಜಾತಿ ಲಿಂಗಗಳಿಗಾಗಲೀ ಮಹತ್ವವನ್ನಂಟಿಸದೇ ಆತ್ಮಿಕ ಅಸ್ತಿತ್ವಕ್ಕೆ ಸ್ಥಾನ ಮಾನ ನೀಡಿದರು. ಭಗವಂತನ ಮಹತ್ವದ ಸೃಷ್ಟಿಯಾದ ಮಹಿಳೆಯನ್ನು ಕಾಣುವ, ನಡೆಸಿಕೊಳ್ಳುವ ರೀತಿಗೆ, ನೀತಿಗೆ, ಜಗತ್ತಿಗೆ ಮಾದರಿಯಾದರು. ಮಹಿಳಾ ಕುಲದವರ ಗೌರವ ಕೃತಜ್ಞತೆಗಳಿಗೆ ನಿತ್ಯ ನಿರಂತರವೂ ಪಾತ್ರರಾದರು.

ಇಂಥ ಉದಾತ್ತ ಮನೋಸಂಸ್ಕೃತಿಯ ಶರಣರ ಮುಡಿಗೆ ಹೂ ತಂದ ಶ್ರೇಷ್ಠ ಸಂತತಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರು ಮಹಿಳೆಯರ ನೇರ ಮುಖಾವಲೋಕನ ಮಾಡಿರದಿದ್ದರೂ ತಮ್ಮ ಒಳಗಣ್ಣಿನಿಂದ ಅವರ ಬದುಕಿನ ಎಲ್ಲಾ ಮಗ್ಗಲುಗಳ ಸಮಸ್ಯೆ-ಚಿಂತೆಗಳನ್ನು ಅರಿತ ಪ್ರಜ್ಞಾವಂತ ಶಿವಯೋಗಿಗಳು. ಒಂದು ಜನಾಂಗದ ಮುಂದುವರಿಕೆಯಲ್ಲಿ, ಜನಾಂಗದುನ್ನತಿಯಲ್ಲಿ, ಕೌಟುಂಬಿಕ ಶಾಂತಿ, ಸುಖ, ನೆಮ್ಮದಿಯ ಸ್ಥಾಪನೆಯಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ, ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಪರಿಪೂರ್ಣ ಕಲ್ಪನೆ ಅವರಿಗಿತ್ತು. ಅವರ ಸಮಾಜೋನ್ನತಿ, ಜಾಗ್ರತಿಯ ಮಹಾಮಣಿಹದ ಹಿಂದೆ ಸಮಾಜದ ಒಂದು ಕಣ್ಣಾದ ಮಹಿಳೆಯ ಉದ್ಧಾರವೂ, ಜಾಗೃತಿಯೂ ಅಡಗಿತ್ತೆಂಬುದನ್ನು ಮರೆಯುವಂತಿಲ್ಲ.

ಸಮಾಜದ ನೆಮ್ಮದಿಗೆ ಕೌಟುಂಬಿಕ ನೆಮ್ಮದಿ ಅತ್ಯವಶ್ಯ-ಕೌಟುಂಬಿಕ ನೆಮ್ಮದಿಗೆ ಪತಿಪತ್ನಿಯರಿಬ್ಬರೂ ಅನ್ನೋನ್ಯವಾಗಿ, ಸಮರಸದಿಂದ ಇರಬೇಕಾದದ್ದು ಅನಿವಾರ್ಯ ಎಂದರಿತಿದ್ದ ಅವರು ತಾವು ವಾಯು ಸಂಚಾರದಲ್ಲಿದ್ದಾಗ ಯಾವುದಾದರೂ ಮನೆಯಿಂದ ಸ್ತ್ರೀಯ ಅಳುವ ನರಳುವ ದನಿ ಕೇಳಿ ಬಂದಿತೆಂದರೆ ಪುರುಷನ ದಬ್ಬಾಳಿಕೆ, ಕ್ರೌರ್ಯದ ನಡವಳಿಕೆಯ ಶಬ್ದ ಕೇಳಿತೆಂದರೆ ಕಂದನ ರಕ್ಷಣೆಗೆ ಧಾವಿಸುವ ತಾಯಿಯೋಪಾದಿಯಲ್ಲಿ ಅಂಥ ಮನೆಯೊಳಕ್ಕೆ ಧಾವಿಸಿ  ಸತಿಪತಿಗಳಿಬ್ಬರೂ ಹೀಗೆಲ್ಲ ಕಿತ್ತಾಡಬಾರದು, ಇಬ್ಬರೂ ಸಮರಸದಿಂದ ಇರ್ಬೇಕು.

ಕೇಳಿರಯ್ಯ ಮಾನವರ

ಗಂಡ ಹೆಂಡಿರ ಮನಸ್ಸು ಒಂದಾದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ

ಗಂಡ ಹೆಂಡಿರ ಮನಸ್ಸು ಬೇರಾದರೆ

ಗಂಜಳದೊಳಗೆ ಹಂದಿ ಹೊರಳಾಡಿ

ಒಂದರ ಮೇಲೊಂದು ಬಂದು ಮೂಸಿದ ಹಾಗೆ

ಎಂದು ನಮ್ಮ ಅಂಬಿಗರ ಚೌಡಯ್ಯನವರು ಅಪ್ಪಣೆ ಕೊಡಿಸಿದ್ದುಂಟು. ಪತ್ನಿ ಮಾಡಿದ ತಪ್ಪು ಮಾತ್ರ ತಪ್ಪೆ? ಅವಳಿಗೆ ಮಾತ್ರ ಶಿಕ್ಷೆಯೆ? ನೀನು ಮಾಡುವ ತಪ್ಪಿಗೆ ಶಿಕ್ಷೆ ಕೊಡುವವರು ಯಾರು?

ಸತಿಯ ಗುಣವ ಪತಿ ನೋಡಬೇಕಲ್ಲದೆ

ಪತಿಯ ಗುಣವ ಸತಿ ನೋಡಬಹುದೇ ಎಂಬರು

ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?

ಪತಿಯಿಂದ ಬಂದು ಸೋಂಕು ಸತಿಗೆ ಕೇಡಲ್ಲವೇ?

ಎಂದು ಢಕ್ಕೆಯ ಬೊಮ್ಮಯ್ಯನವರು ಬಹಳ ಹಿಂದೆಯೇ ಕೇಳಿದ್ದಾರೆ. ಪತ್ನಿ ಮಾಡುವ ತಪ್ಪನ್ನಷ್ಟೇ ನೋಡಿ ಶಿಕ್ಷಿಸುವುದು ಅನ್ಯಾಯ. ಯಾರೇ ತಪ್ಪ ಮಾಡಿದರೂ ಅದರಿಂದಾಗುವ ಕೆಡಕು ಇಬ್ಬರನ್ನೂ ತಟ್ಟುತ್ತದೆ. ಸತಿ ಮಾತ್ರ ತಪ್ಪ ಮಾಡದೇ ಪರಿಶುದ್ಧಳಾಗಿರಬೇಕು, ಪತಿ ಏನು ಮಾಡಿದರೂ ನಡೆಯುತ್ತದೆ. ಅವನು ಕೊಡುವ ಕಷ್ಟಗಳನ್ನೆಲ್ಲ ಆಕೆ ಸಹಿಸಿಕೊಂಡು ತೆಪ್ಪಗಿರಬೇಕು ಎನ್ನುವ ಸಂಪ್ರದಾಯವಾದಿ ನಿಲುವಿನ ವಿರೋಧಿಯಾಗಿದ್ದರು. ಪ್ರಗತಿಪರ ವಿಚಾರಧಾರೆಯ, ಮಹಿಳಾ ಕುಲ ಹಿತಚಿಂತಕರಾಗಿದ್ದ ಹಾನಗಲ್ಲ ಪೂಜ್ಯರು ಶರಣರಂತೆ ಸಮಾಜದಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸರಿ ಸಮಾನವಾದ ಸ್ಥಾನಮಾನಗಳಿರಬೇಕು. ಮಹಿಳೆಯ ಶೋಷಣೆ ಯಾರಿಂದಲೂ ನಡೆಯಬಾರದು ಅನ್ನುವ ಅಭೀಪ್ಸೆ ಹಾನಗಲ್ಲ ಶ್ರೀಗಳದಾಗಿತ್ತು.

ಅಂದಿನ ಸಮಾಜದಲ್ಲಿ ಹಳೆಯ ತಲೆಮಾರಿನ ಸಂಪ್ರದಾಯ ಶರಣರು ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯಕ್ಕೆ ಲಕ್ಷ ನೀಡಿರಲಿಲ್ಲ. ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳನ್ನು ಕಲ್ಪಿಸಿರಲಿಲ್ಲ. ಬಸವಾದಿ ಪ್ರಮಥರು ಧರ್ಮವನ್ನು ಒಳಗೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಪುರುಷನ ಸರಿಸಮಾನ ಸ್ಥಾನ ಮಾನ ನೀಡಿದ್ದನ್ನು ಮನಗಂಡ ಹಾನಗಲ್ಲ ಕುಮಾರೇಶ್ವರರು ೧೯೦೪ರಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಅಧ್ಯಕ್ಷತೆಯಲ್ಲಿ ಲಿಂಗಾಯತ ಸಮಾಜದ ಸಂಘಟನೆಗಾಗಿ “ಅಖಿಲ ಭಾರತ ವೀರಶೈವ ಮಹಾಸಭೆ’ಯನ್ನು ಒಂದು ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ‘ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿ ಮಹಾಸಭೆಯ ಅಂಗವಾಗಿ ಮಹಿಳೆಯ ಕಲ್ಯಾಣ ಸಾಧನೆಗೆ ‘ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತನ್ನು ಸ್ಥಾಪಿಸಿದರು. ಮಹಿಳೆ ಸಮಾಜದ ಒಂದು ಪ್ರಮುಖ ಘಟಕ. ಅವಳ ಕ್ಷೇಮಾಭಿವೃದ್ಧಿಯಲ್ಲಿ ಸಮಾಜದ ಕ್ಷೇಮಾಭಿವೃದ್ಧಿ ಅಡಗಿದೆ ಎನ್ನುವ ಮಹತ್ವದ ಅಂಶವನ್ನು ಮನಗಂಡ ಪೂಜ್ಯರು ಮಹಿಳೆಯರ ಶಿಕ್ಷಣಕ್ಕೂ ಏರ್ಪಾಡು ಮಾಡಿದರು.

ಶಿವಯೋಗಮಂದಿರದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅದ್ದೂರಿಯಿಂದ ಜರುಗುತ್ತಿದ್ದ ಯಾತ್ರಾ ಮಹೋತ್ಸವದ ಹಲವಾರು ಸಭೆಗಳಲ್ಲಿ ಪೂಜ್ಯರು ‘ಮಹಿಳಾ ಸಭೆ’ಗಳನ್ನು ಪ್ರತ್ಯೇಕವಾಗಿ ಏರ್ಪಡಿಸಿ ಸಮಾಜದ ಮಹಿಳೆಯರು ಭಾಗಿಗಳಾಗಲು ಅವಕಾಶ ಕಲ್ಪಿಸಿದರು. ಸಂಸ್ಥೆಯ ಪ್ರಶಾಂತವಾದ ತಪೋವನದಲ್ಲಿ ವರ್ಷದ ಹನ್ನೆರಡು ತಿಂಗಳುಗಳಲ್ಲಿ ತಮ್ಮ ಪಾಲಿಗೆ ಬಂದ ೨- ೩ ದಿನಗಳನ್ನು ಮಹಿಳೆಯರು ಅಂದು ವ್ಯರ್ಥವಾಗಿ ಕಳೆಯದೇ ಸಮಾಜದ ಉನ್ನತಿಯಲ್ಲಿ ಮಹಿಳೆ ಆಡಬಹುದಾದ ಪಾತ್ರದ ಕುರಿತು ಚರ್ಚೆ, ಗೋಷ್ಠಿ, ಭಾಷಣಗಳನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿದರು. ೧೯೧೪ರಲ್ಲಿ ಶ್ರೀಮತಿ ಶಾಂತಮ್ಮ ಕಣಬರಗಿಮಠ ಅನ್ನುವ ಶರಣೆಯರ ಅಧ್ಯಕ್ಷತೆಯಲ್ಲಿ ಲಿಂಗಾಯತ ಮಹಿಳಾ ಪರಿಷತ್ತು ಕೂಡಿತ್ತು ಇದರಲ್ಲಿ ಸುಮಾರು ೨೦೦ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

 ಆ ಸಂದರ್ಭದಲ್ಲಿ ಸೇರಿದ್ದ ಮಹಿಳೆಯರು ನಾಡಿನ ಧರ್ಮ, ಶಿಕ್ಷಣ, ಪಶುಸಂಗೋಪನ, ಕೃಷಿ ಮುಂತಾದ ವಿಷಯಗಳ ಕುರಿತು ಮಹಿಳೆ ಈ ಕ್ಷೇತ್ರಗಳಲ್ಲಿ ಆಡಬಹುದಾದ ಪಾತ್ರದ ಕುರಿತು ವ್ಯಾಪಕವಾಗಿ ಚರ್ಚಿಸಿದರು. ಯಾತ್ರಾ ಸಂದರ್ಭದಲ್ಲಿ ಏರ್ಪಡುತ್ತಿದ್ದ ಮಹಿಳಾ ಸಭೆಗಳು ವಿಶೇಷವಾಗಿ ಸೊಲ್ಲಾಪುರದ ಶ್ರೀಮತಿ ಭಾಗೀರಥಿಬಾಯಿ ಪಾಟೀಲ ಅವರ ನೇತೃತ್ವ, ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದವು. ಪ್ರತ್ಯೇಕವಾಗಿ ಮಹಿಳೆಯರಿಗೆ ಶಿವಭಜನೆ, ಶಿವಕೀರ್ತನೆಗಳ ಏರ್ಪಾಡೂ ಇರುತ್ತಿತ್ತು. ಮಹಿಳೆಯರ ಸಾಂಸ್ಕೃತಿಕ ಬೆಳವಣಿಗೆಗೆ ಇಲ್ಲಿ ವಿಶೇಷ ಪುರಸ್ಕಾರ ಇತ್ತು. ಇಂಥ ಸಭೆಗಳು ಮೂರ್ನಾಲ್ಕು ವರ್ಷ ಮಾತ್ರ ವ್ಯವಸ್ಥಿತವಾಗಿ ಜರುಗಿದರೂ ಸಮಾಜದಲ್ಲಿ ಸಾಕಷ್ಟು ಪ್ರಗತಿಯ ಚಿಹ್ನೆಗಳು ಕಾಣಿಸಿಕೊಂಡವು.

ಕಾವ್ಯದಲ್ಲಿ ನಾಟಕ ರಮ್ಯ ಎಂದುಸುರಿದ ಕಾಳಿದಾಸನ ವಾಣಿಯಂತೆ ರಮ್ಯ ಕಾವ್ಯವೆಂದು ಗುರುತಿಸಲ್ಪಡುವ ನಾಟಕ ಮಾಧ್ಯಮವನ್ನು ಜೀವನೋಪಾಯಕ್ಕಾಗಿ ಬಳಸದೇ ಜ್ಞಾನದಾಸೋಹ ಮಾದ್ಯಮವನ್ನಾಗಿ ಬಳಸಿದರೆ ಸಮಾಜ ಪರಿಶುದ್ಧವಾಗಬಲ್ಲುದು ಜಾಗೃತವಾಗಬಲ್ಲುದು ಎಂಬ ನಿಲುವು ಹಾನಗಲ್ಲ  ಪೂಜ್ಯರದಾಗಿದ್ದರಿಂದ ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆ’ ತಲೆಯೆತ್ತುವಂತೆ ಮಾಡಿದರು. ನಮ್ಮ ನಾಡಿನ ಮಹಿಳೆಯರಲ್ಲಿ ಬೋಧಕ ವರ್ಗ ತಯಾರಾಗಬೇಕು, ಮಹಿಳೆಯರು ಶರಣೆ ನೀಲಾಂಬಿಕೆ, ಲಕ್ಕಮ್ಮ, ಕಲ್ಯಾಣಮ್ಮ, ಗಂಗಾಂಬಿಕೆಯರ ಆದರ್ಶ ನಡೆ-ನುಡಿಗಳಿಂದ ಪ್ರಭಾವಿತರಾಗಬೇಕು. ಹೇಮರೆಡ್ಡಿ ಮಲ್ಲಮ್ಮನಂತೆ ಸತಿ ಸಾಧ್ವಿಯರಾಗಬೇಕು ಎಂಬ ಹಂಬಲದಿಂದ ಶರಣೆಯರ ಜೀವನ ಸಾಧನೆಗಳನ್ನಾಧರಿಸಿದ ಸಂಗೀತ ರೂಪಕ ನಾಟಕಗಳನ್ನು ಪ್ರದರ್ಶಿಸುವಂತೆ ಪಂ. ಪುಟ್ಟರಾಜ ಗವಾಯಿಗಳವರಿಗೆ ಪ್ರೇರಣೆ ನೀಡಿದರು. ಪುಟ್ಟರಾಜ ಗವಾಯಿಗಳು ಪೂಜ್ಯರ ಅಭೀಷ್ಟೆಯನ್ನು ಈಡೇರಿಸಿದರು.

ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ

ಕಾಮಿನಿ ನಿನ್ನವಳಲ್ಲ ಅವು ಜಗಕಿಕ್ಕಿದ ವಿಧಿ

ನಿನ್ನೊಡವೆಯೆಂಬುದು ಜ್ಞಾನರತ್ನ

ಎಂದ ಅಲ್ಲಮರ ವಾಣಿಯನ್ನು ಅಚ್ಚುಕಟ್ಟಾಗಿ ಆಚರಣೆಯಲ್ಲಿ ತಂದು ಆದರ್ಶ ಕಲ್ಪಿಸಿದವರು ಹಾನಗಲ್ಲ ಶ್ರೀಗಳು, ‘ಕಾಮವೇ ನಿಲ್ಲು, ಕ್ರೋಧವೇ ನಿಲ್ಲು ಚೆನ್ನಮಲ್ಲಿಕಾರ್ಜುನನ ಒಲುಮೆಯ ಸಂದೇಶ ಒಯ್ಯುತ್ತಿದ್ದೇನೆ’ ಎಂದಕ್ಕನಂತೆ ಪೂಜ್ಯರು ಲೌಕಿಕ ಆಕರ್ಷಣೆಗಳನ್ನೆಲ್ಲ ತಡೆದು ನಿಲ್ಲಿಸಿ, ಸಮಾಜೋದ್ಧಾರದಂತಹ ಪರಮ ಪವಿತ್ರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಸಮಷ್ಟಿ ಕಲ್ಯಾಣಕ್ಕೆ ಅರ್ಪಿಸಿಕೊಂಡವ, ವಿಶ್ವಕುಟುಂಬಿಯಾದವ, ಮನುಷ್ಯನನ್ನು ಸ್ವಾರ್ಥಿಯನ್ನಾಗಿ ಸಂಕುಚಿತ ಮತಿಯನ್ನಾಗಿ ಮಾಡುವ ವ್ಯಷ್ಟಿ ಸುಖದ ಮೂಲಗಳು ಲಕ್ಷ್ಯವೀಯಬಾರದು ಎನ್ನುವ ಉದಾತ್ತ ತಿಳಿವಳಿಕೆ ಅವರದಾಗಿತ್ತು. ವಿರಾಗದ ವಿಂದ್ಯರಾಗಿದ್ದ ಪೂಜ್ಯರು ‘ಹರಿವ ಹಾವಿಗಂಜೆ, ಉರಿವ ನಾಲಗೆಗಂಜೆ, ಒಂದಕ್ಕಂಜುವೆ ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬ ಜೀಜಿಗಂಜುವೆ’ ಎಂದ ಶರಣರ ವಾಣಿಯೇ ತಾವಾಗಿದ್ದರು, ಜನತಾ ಜನಾರ್ಧನನ ಸೇವೆಗೆ ತಮ್ಮನ್ನರ್ಪಿಸಿಕೊಂಡಿದ್ದ ಪೂಜ್ಯರು ಸಂಸಾರ ವಿಷಯಗಳಿಗೆ ಸಂಬಂಧಿಸಿದ ರೂಪ, ರಸ, ಗಂಧ ಸ್ಪರ್ಶಗಳಿಗೆ ಕಿವುಡರಾಗಿದ್ದರು. ಕುರುಡರಾಗಿದ್ದರು. ತಾವು ಆಯ್ದುಕೊಂಡ ಬದುಕಿನ ಬಟ್ಟೆಯ ದಾರಿಯ ಬಗೆಗೆ ಅವರಲ್ಲಿ ಅಪಾರ ನಿಷ್ಠೆ, ಪ್ರೀತಿ ಇತ್ತು.

ಸಮಷ್ಟಿ ಸುಖವನ್ನು ಸಾಧಿಸುವವ ಯಾವ ಸಂದರ್ಭದಲ್ಲಿಯೂ ವ್ಯಷ್ಟಿ ಸುಖದ ಮೂಲಗಳಿಗೆ ಮಾರುಹೋಗಬಾರದು ಎನ್ನುವ ಇಂಗಿತದ ಪೂಜ್ಯರು ಶಿವಯೋಗಮಂದಿರದಲ್ಲಿ ಸಾಧಕ ವಟುಗಳನ್ನು ಶಿಸ್ತು ಸಂಯಮದಿಂದ ಬೆಳೆಸಿದರು. ಒಮ್ಮೆ ಶಿವಯೋಗ ಮಂದಿರ ನೋಡಬಂದ ಸ್ತ್ರೀ ಸಮೂಹವನ್ನು ವಟುಗಳು ಸಾಧನೆ ಮಾಡುತ್ತಿದ್ದ ಕಟ್ಟಡದತ್ತ ಹೋಗಲು ಅವಕಾಶ ನೀಡಲಿಲ್ಲ. ವಟುಗಳ ಮನಸ್ಸು ವಿಚಲಿತರಾಗಿ ಅವರು ತಮ್ಮ ಘನಸಾಧನೆಯ ಪಥದಿಂದ ಹಿಂತೆಗೆಯಬಾರದು ಅವರ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಗೆ ಆಕರ್ಷಣೆಗಳು ಮಾರಕ ಎನ್ನುವ ತಿಳಿವಳಿಕೆ ಅವರದಾಗಿತ್ತು. ತಾವು ವಾಯು ಸಂಚಾರದಲ್ಲಿದ್ದಾಗ ಪತಿಪತ್ನಿಯರ ಜೋಡಿ ಕಣ್ಣಿಗೆ ಬಿದ್ದರೆ ಅವರು ಮರೆಯಾಗುವವರೆಗೆ ನಿಂತು ಮುಂದೆ ಸಾಗುತ್ತಿದ್ದರು. ಸರ್ವೇಂದ್ರಿಯ ವಿಜಯಿಯಾಗಿದ್ದರೂ ಪೂಜ್ಯರು ವ್ಯಕ್ತಿಗತ ಮೋಹ-ಮಾಯೆಗಳ ಎಳೆತ ಸೆಳೆತಗಳಿಂದ ದೂರವಿರುತ್ತಿದ್ದರು.

ಎಲ್ಲ ವಿಜಯಗಳಲ್ಲಿ ಶ್ರೇಷ್ಠವಾದ ವಿಜಯ, ಇಂದ್ರಿಯ ವಿಜಯ ಎಂದು ಬೈಬಲ್‌ನಲ್ಲಿ ಹೇಳಿರುವಂತೆ ‘ಇಂದ್ರ ವಿಜಯಿಗುಂ ಇಂದ್ರಿಯ ವಿಜಯಿ ಮೇಲಲ್ತೆ? ಎಂದು ಕೇಳಿದ ಮಹಾಪತಿವ್ರತೆ ಮಂಡೋದರಿಯ ಅನುಭವವಾಣಿಯಂತೆ ಪೂಜ್ಯರು ತಮ್ಮ ಇಂದ್ರಿಯಗಳ ಮೇಲೆ ಅತ್ಯದ್ಭುತ ವಿಜಯ ಸಾಧಿಸಿದ್ದರು. ಅಂತೆಯೇ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಳ್ಳುವುದು ಸಾಧ್ಯವಾಯಿತು.

ಅದಕ್ಕೇ ಬ್ರಹ್ಮಾಂಡ ಯುದ್ಧದಲ್ಲಿ ಗೆದ್ದ ವೀರರು ಅಧಿಕ ಆದರೆ ಪಿಂಡಾಂಡ ಯುದ್ಧದಲ್ಲಿ ಗೆದ್ದ ಕಡುಗಲಿಗಳು ಸಿಕ್ಕುವುದು ಅಪರೂಪ. ಸುತ್ತಲೂ ಅಬೇಧ್ಯವಾದ, ಅಜೇಯವಾದ ಸಂಯಮದ ಕೋಟೆಯನ್ನು ಕಟ್ಟಿಕೊಂಡು ಅನ್ವರ್ಥಕ ಬದುಕು ಬದುಕುವ ವೀರವಿರಾಗಿಗಳು ಕೈಬೆರಳಿನಿಂದ ಎಣಿಸುವಷ್ಟು ಅಂಥವರಲ್ಲಿ ಹಾನಗಲ್ಲ ಶ್ರೀಗಳು ಅದ್ವಿತೀಯರು.

ಎಳೆವಯದಲ್ಲೇ ತಾಯಿಯ ಮೋಹ ಮಮತೆಯನ್ನು, ಯೌವ್ವನದಲ್ಲಿ ಸಂಸಾರದ ಮಾಯೆಯನ್ನು ತಿರಸ್ಕಾರದಿಂದಲ್ಲ, ಆಳವಾದ ತಿಳುವಳಿಕೆಯಿಂದ, ಸಂಯಮದಿಂದ ಗೆದ್ದ ಹಾನಗಲ್ಲ ಕುಮಾರೇಶ್ವರರು ಅರಿಷಡ್ವರ್ಗಗಳನ್ನು ನಿಜವಾಗಿಯೂ ಸುಟ್ಟು ಕೆಂಡಮಾಡಿದ ಸಂಕೇತವಾಗಿ ಕಾವಿಯನ್ನು ಹೊದ್ದಿದ್ದರು. ಕಾವಿಯ ಬಟ್ಟೆಯ ಮೇಲ್ಮೆಯನ್ನು ಮೆರೆದವರು. ಸ್ತ್ರೀಯರಿಂದ ದೂರವಿದ್ದರೂ ಅವರ ಸರ್ವತೋಮುಖ ಕಲ್ಯಾಣದ ಕುರಿತು ಹಗಲಿರುಳು ಚಿಂತಿಸಿದರು. ಕ್ರಿಯಾತ್ಮಕವಾಗಿ ಶ್ರಮಿಸಿದರು. ಹೆಣ್ಣಿನಲ್ಲಿ ಹರನನ್ನು ಕಂಡು ಕೈ ಮುಗಿದರು. ಸಾಧಕ ವರ್ಗಕ್ಕೆ ಆದರ್ಶವನ್ನು ತೋರಿಸಿಕೊಟ್ಟವರು. ಮಹಿಳೆಯರ ಸರ್ವತೋಮುಖ ಉದ್ಧಾರಕ್ಕೆ ಚಿಂತಿಸಿದ ಕಳಕಳಿ ತೋರಿದ ಮಾಯೆಯನ್ನು ಗೆದ್ದ ಮಹೇಶ್ವರರು ಲಿಂ, ಹಾನಗಲ್ಲ ಕುಮಾರ ಮಹಾಸ್ವಾಮಿಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ ,

ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ  ನಿತ್ಯ ನೆನಹು ನಮಗೊಂದು ದಿವ್ಯ ಚೇತನ.

ನೀರು ಹರಿಯುತ್ತದೆ, ತನ್ನ ಸ್ವಾರ್ಥಕ್ಕಾಗಿ ಅಲ್ಲ .ಸರ್ವರ ತೃಷೆಯನ್ನು  ಹಿಂಗಿಸುವುದಕ್ಕಾಗಿ ಅದು ಗಿಡ ಮರಗಳನ್ನು ರಕ್ಷಿಸುತ್ತದೆ. ಜೀವಿಗಳಿಗೆ ಪ್ರಾಣಿಗಳಿಗೆ ಜೀವ ತುಂಬುತ್ತದೆ. ಹೂ ಅರಳಿಸುತ್ತದೆ. ಹಣ್ಣುಗಳಿಗೆ ಮಧುರತೆಯನ್ನು ತರುತ್ತದೆ,  ಹಾಗೆಯೆ ಪೂಜ್ಯರ ೬೩ ವರ್ಷಗಳ ಭೌತಿಕ ಬದುಕು ಸ್ವಾರ್ಥ ವಿಲ್ಲದ ತ್ಯಾಗದ ಬದುಕು .ಅವರ ತ್ಯಾಗದ ಫಲವಾಗಿಯೇ ಇಂದು ವೀರಶೈವ-ಲಿಂಗಾಯತ ಧರ್ಮೀಯರು ಗುಲಾಮಗಿರಿ ಮತ್ತು ಅನಕ್ಷರತೆಯಿಂದ ಹೊರಬಂದು ಸ್ವಾವಲಂಬನೆಯ ಮೂಲಕ ತಲೆಎತ್ತಿ ನಿಲ್ಲಲು ಸಾಧ್ಯವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

ಅಗಸ್ಟ ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಭೋದೇವ ಗಿರಿಜಾಧವ ಮುದವಿಲಸಿತ ಮದಹತ ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಸಿಂಗಿರಾಜ ಕವಿಕೃತ ಬಸವರಾಜ ಚಾರಿತ್ರ(  ಸಿಂಗಿರಾಜ ಪುರಾಣ )
  4. ಮುಪ್ಪಿನ ಷಡಕ್ಷರಿಗಳು : ಲೇಖಕರು :ಡಾ.ಚೆನ್ನಕ್ಕ ಪಾವಟೆ
  5. ಘನಮಠದಾರ್ಯ : ಲೇಖಕರು :ಡಾ|| ಬಸವರಾಜ ಸಬರದ
  6. ಕಡಕೋಳ ಮಡಿವಾಳಪ್ಪನವರು. : ಲೇಖಕರು :ಬಿ.ಮಹಾದೇವಪ್ಪ
  7. ಹಮ್ಮೀರ ಕಾವ್ಯ ಸಂಗ್ರಹ,ಸಂಪಾದಕರು ಶ್ರೀ ಎಮ್.ಎಸ್.ಸುಂಕಾಪುರ.ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
  8. ಆಡಿಯೋ ಬುಕ್‌ : Part 6A ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

  • ವಿಡಿಯೋ ೧ ಪಂಡಿತ ಕೈವಲ್ಯ ಕುಮಾರ ಗುರವ ಹಾಡಿರುವ ಪೂಜ್ಯ ಹಾನಗಲ್‌ ಶ್ರೀಕುಮಾರೇಶ್ವರರ ರಚನೆ
  • ವಿಡಿಯೋ ೨ ಶ್ರೀ ಸಿದ್ದೇಂದ್ರಕುಮಾರ ಹಿರೇಮಠ ತುಮುಕೂರು ಅವರು ಹಾಡಿದ ಪೂಜ್ಯ ಹಾನಗಲ್‌ ಶ್ರೀಕುಮಾರೇಶ್ವರರ ಕುರಿತು ಪದ್ಯ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಭೋದೇವ ಗಿರಿಜಾಧವ ಮುದವಿಲಸಿತ ಮದಹತ

(ರಾಗ – ಆನಂದಭೈರವಿ)

ಭೋಧೇವಗಿರಿಜಾಧವ | ಮುದವಿಲಸಿತ ಮದಹತ |

ಇಂದ್ರಿಯಜಿತ | ಸಾಧು ಚರಿತ ‘ಆ’ ಜಯ | || ಪ ||

ಸಂಪದಾಸುರದಿ ಚರಿಪ | ಪಾಪದಾಗರವಿಲೋಪ |

ಸುಪಥವೇ ಸುಪ್ರದೀಪ | ತಮರಜಗುಣವಿರಹಿತ |

ಸುಮನ ಸಹಿತ | ವಿಮಲರತ ‘ಆ’ ಭವ || 1 ||

ಸಂತರಾಚರಣ ಸುಖವ | ಚಿಂತಿಪಾತ್ಮರ ಸುಭಾವ |

ಸಂತತಾನಂದವೀವ | ವರಗುರುಚರಣ ಕಮಲ |

ದಿರವೆ ಸಕಲ | ಚರಲೀಲಾ ‘ಆ’ ಗತ || 2 ||

ಬಿಂದುನಾದ ಪರಯೋಗ | ದಿಂದಲಾದ ಶಿವಯೋಗಾ |

ನಂದದಾಚರಿಪ ಯೋಗ | ಜವದಿ ಕೊಡು ಪರಮೇಶ |

ಭವವಿನಾಶ | ಸುವಿಲಾಸ ‘ಆ’ ಶಿವ || 3 |

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪಂಚ ಮಹಾಭೂತಗಳ – ಪಂಚೀಕರಣ

ಭೂತ ಪಂಚಕ ಪಂಚ | ಭೂತ ತವೆ ಕೂಡಲ

ದ್ಭೂತಮಯವಾದ ಭೂತಳಕೆ ಕರ್ತ ಭೂ-

ನಾಥ ಶ್ರೀಗುರುವೆ ಕೃಪೆಯಾಗು      || ೬೧ ॥

ಪಂಚಮಹಾಭೂತಗಳ ಪ್ರತ್ಯೇಕವಾದ ವಿಷಯವನ್ನು ಪ್ರತಿಪಾದಿಸಿ ಅವುಗಳ ಪಂಚೀಕರಣವನ್ನು ಗ್ರಂರ್ಥಕರ್ತನು  ಪ್ರಸ್ತಾಪಿಸುತ್ತಾನೆ.

 ಮಹಾದೇವನಾದ ಪರಮಾತ್ಮನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯಗಳೆಂಬ ಐದು ಮುಖಗಳಿಂದ ನೆಲ,ಜಲ, ಅನಲ, ಅನಿಲ, ಆಕಾಶಗಳೆಂಬ ಸಮಷ್ಟಿರೂಪ ಪಂಚಭೂತಗಳು ಹುಟ್ಟಿದವು. ಅವು ಮುಂದೆ 

ʼ’ಪಂಚಮಹಾಭೂತಂಗಳ ಪಂಚಾಂಶಿಕಮಂ

 ಪಂಚೀಕೃತಿಯನೈದುತ್ತಿರಲು ದೇಹವಾಯ್ತು”

ಎಂದು ಚನ್ನಬಸವಣ್ಣನವರು ಕರಣಹಸಿಗೆಯಲ್ಲಿ’ ದೇಹದ ಉತ್ಪತ್ತಿಗೆ ಪಂಚ ಮಹಾಭೂತಗಳ ಪಂಚೀಕರಣವೇ ಕಾರಣವೆಂದು ತಿಳಿಸಿದ್ದಾರೆ. ಈ ಪಂಚೀಕರಣದ ವ್ಯಾಖ್ಯೆಯನ್ನು ವಿದ್ಯಾರಣ್ಯ ಮುನಿಗಳು ತಮ್ಮ ಪಂಚದಶಿ’ಯೆಂಬ ವೇದಾಂತ ಗ್ರಂಥದಲ್ಲಿ –

“ದ್ವಿಧಾ ವಿಧಾಯ ಚ ಏಕೈಕಂ

ಚತುರ್ಧಾ ಪ್ರಥಮಂ ಪುನಃ |

ಸ್ವಸ್ವೇತರ ದ್ವಿತೀಯಾಂಶೈಃ

ಯೋಜಯೇತ್ ಪಂಚ ಪಂಚತೇ || ೧ – ೨೬ ||

ಎಂಬುದಾಗಿ ಪ್ರತಿಪಾದಿಸಿದ್ದಾರೆ. ಇದಕ್ಕೆ ಸರಿಯಾದ ಅರ್ಥಬರುವಂತೆ ಕನ್ನಡ ಷಟ್‌ಶಾಸ್ತ್ರಗಳ ನಿರ್ಮಾಪಕರಾದ ನಿಜಗುಣಶಿವಯೋಗಿಗಳು ತಮ್ಮ ಪರಮಾರ್ಥ ಗೀತೆಯಲ್ಲಿ –

“ಆ ಭೇದದೊಳರಿ ಭೂತಮಿವೈದು |

ಶೋಭೆಯನೈದಿದ ವೊಂದೊಂದೈದು ||

ಸರಿಭಾಗದೊಳೊಂದೆರಡಾಗಿ |

ಎರಡರೊಳೊಂದಂಶವೆ ನೆಲೆಯಾಗಿ ||

ಉಳಿದರ್ಧಂಶಂಗಳೆ ನಾಲ್ಕಾಗಿ |

ತಿಳಿಭಾಗಂ ಬಡೆದವು ಸಮನಾಗಿ ||

ನೆಲೆಯಾಗಿರ್ಧಾಯಂಶಂಗಳೊಳು |

ಉಳಿದ ನಿಜಾಂಶವನಾ ಮಿಕ್ಕರೊಳು ||

ಬೆರಕೆಯನೈದಿದಮೊಂದೊಂದೈದು |

ವಿರಚಿಸಿ ತತ್ತ್ವಮಿವಿಪ್ಪತ್ತೈದು ||

ಈ ತತ್ತ್ವಸಮೇಷ್ಟಿಯೇ ತನುವಾಯ್ತು!

ಈ ತೆರನಿಂ ಪಂಚೀಕೃತವಾಯ್ತು | |೨ – ೨||

ಸಕಲರಿಗೂ ತಿಳಿಯುವಂತೆ ಪಂಚೀಕರಣವನ್ನು ವಿಶದಪಡಿಸಿದ್ದಾರೆ.

ಈ ಪಂಚೀಕರಣವನ್ನು ಸ್ಪಷ್ಟವಾಗಿ, ಸ್ಪುಟವಾಗಿ ತಿಳಿಯಲು ಬೆಳ್ಳಿ-ಬಂಗಾರ ತಾಮ್ರ-ಹಿತ್ತಾಳಿ ಮತ್ತು ಕಬ್ಬಿಣವೆಂದು ಪಂಚಲೋಹದ ನಾಣ್ಯಗಳನ್ನು ತೆಗೆದು ಕೊಂಡು ಐದರಲ್ಲಿಯೂ ಎರಡೆರಡು ಭಾಗಮಾಡಿ ಒಂದರ್ಧಭಾಗವನ್ನು ಹಾಗೇ ಇಟ್ಟು, ಉಳಿದರ್ಧ ಭಾಗಗಳಲ್ಲಿ ಪುನಃ ನಾಲ್ಕು ನಾಲ್ಕು ಭಾಗಗಳನ್ನು ಮಾಡಿ ಈ ನಾಲ್ಕು ಭಾಗಗಳ ವಿನಿಮಯವನ್ನು ಇತರ  ನಾಣ್ಯಗಳ ಭಾಗದೊಡನೆ ಮಾಡಿದರೆ, ಎಲ್ಲ ನಾಣ್ಯಗಳು ಪ್ರತಿಯೊಂದು ಲೋಹದ ಅಂಶವನ್ನು ಪಡೆದು, ತಾನು ಅರ್ಧ ಪ್ರಮಾಣ ದಲ್ಲಿ ಇರುವದರಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವದು. ಅಂದರೆ ಬಂಗಾರದ ನಾಣ್ಯವು ಅರ್ಧಭಾಗವಿದ್ದು ಉಳಿದ ಬೆಳ್ಳಿ, ತಾಮ್ರ, ಕಬ್ಬಿಣದ ಎರಡಾಣೆ (೧|೮ನೇ ಭಾಗ)ಯಷ್ಟನ್ನು ಪ್ರತಿಯೊಂದರಿಂದ ಪಡೆದು ತಾನು ಪೂರ್ಣವಾಗುವದು. ಇದರಂತೆ  ಪೃಥ್ವಿ, ಅಪ್, ತೇಜ, ವಾಯು, ಆಕಾಶಗಳನ್ನು ವಿಭಾಗಿಸಿ ವಿನಿಮಯ ಗೊಳಿಸುವದ ರಿಂದ ಅವು ತಮ್ಮ ಸ್ವಂತ ಅಸ್ತಿತ್ವವನ್ನು ಅರ್ಧ ಇಟ್ಟುಕೊಂಡು ಉಳಿದಭೂತಗಳ ೮ ನೆಯ ಭಾಗವನ್ನು ಪಡೆದುಕೊಳ್ಳುತ್ತವೆ. ಹೀಗೆ ಐದು ಭೂತಗಳೂ ಐದೈದಾಗಿ ಇಪ್ಪತ್ತೈದು ಭಾಗಗಳಾಗುತ್ತವೆ. ಅಲ್ಲದೆ ಇಪ್ಪತ್ತೈದು ತತ್ತ್ವಗಳೆನಿಸುತ್ತವೆ. ಪೃಥ್ವಿಯಲ್ಲಿ ತನ್ನ ಅಂಶವು  ಅರ್ಧವಾಗಿರುವದರಿಂದ ಹೆಚ್ಚು ಗುಣಧರ್ಮವು ಅದರದೇ ಆಗುವದು. ಉಳಿದ ಐದರ ಪ್ರಮಾಣವು ಅದರಲ್ಲಿ ಸಮಾವೇಶವಾಗಿರುತ್ತದೆ. ಶಾರೀರಿಕ ಗುಣಧರ್ಮವನ್ನು ವಿಂಗಡಿಸಿದರೆ ಪಂಚಭೂತಗಳ ಪಂಚೀಕರಣದ ಮರ್ಮವು ಸ್ಪಷ್ಟವಾಗುವದು.

ಶರೀರದಲ್ಲಿ ಕಾಣುವ ಪಂಚಕರ್ಮೇಂದ್ರಿಯಗಳು ಪೃಥ್ವಿಯ ಅಂಶಗಳು. ಅವು ಯಾವುಗಳೆಂದರೆ, ಗುದ, ಗುಹ್ಯ, ಪಾದ, ಪಾಣಿ, ಮುಖ (ಬಾಯಿ), ಪೃಥ್ವಿಯ ಅರ್ಧಭಾಗವೇ ಗುದೇಂದ್ರಿವು. ಪೃಥ್ವಿಯಲ್ಲಿ ಸೇರಿದ ಎಂಟನೇ ಭಾಗದ (೧|೮ನೇ ಭಾಗ) ಜಲವೇ ಗುಹ್ಯೆದ್ರಿಯವು. ಒಂದೆಂಟನೇ ಭಾಗದ ಅಗ್ನಿಯೇ ಪಾದವು. ಎಂಟನೇ ಭಾಗದ ವಾಯುವೇ ಪಾಣಿ (ಕೈ). ಅದರ ಎಂಟನೇ ಭಾಗದ ಆಕಾಶವೇ ಮುಖ (ಬಾಯಿ) ವೆನಿಸುವದು. ಗಂಧ, ರಸ, ರೂಪ, ಸ್ಪರ್ಶ, ಶಬ್ದಗಳೆಂಬ ಪಂಚತನ್ಮಾತ್ರೆಗಳೇ ಜಲದ ಅಂಶಗಳು. ಆ ಅಪ್ಪುವಿನ ಅರ್ಧಭಾಗವು ರಸವೆನಿಸುವದು. ಜಲದಲ್ಲಿ ಸೇರಿದ ಅಗ್ನಿಯ ಎಂಟನೇ ಭಾಗವು ರೂಪವಾಗುವದು. ವಾಯುವಿನ ಎಂಟನೇ ಭಾಗವು ಸ್ಪರ್ಶವಾಗುವದು. ಆಕಾಶದ ಎಂಟನೇ ಭಾಗವು ಶಬ್ದ, ಪೃಥ್ವಿಯ ಎಂಟನೇ ಭಾಗವೇ ಗಂಧವು.

 ಇನ್ನು ಅಗ್ನಿತತ್ತ್ವದಿಂದ ಹುಟ್ಟಿದವುಗಳು ನೇತ್ರ, ತ್ವಕ್, ಶ್ರೋತ್ರ, ಘ್ರಾಣ, ಜಿಹ್ವೆ. ಗಳೆಂಬ ಜ್ಞಾನೆಂದ್ರಿಯಗಳು, ಅಗ್ನಿಯ ಅರ್ಧಭಾಗವೇ ನೇತ್ರವು ಉಳಿದರ್ಧ ಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ ತ್ವಕ್ಕು; ಕಾಲುಭಾಗದ ಆಕಾಶವೇ ಶ್ರೋತ್ರವು. ಪೃಥ್ವಿಯ ಕಾಲುಭಾಗವೇ ಘ್ರಾಣವೆನಿಸುವದು. ಅಪ್ಪುವಿನ ಪಾದಾಂಶವೇ ಜಿಹ್ವೆ.ಯು.

ವಾಯು ಮಹಾಭೂತದಿಂದ ಉತ್ಪನ್ನವಾದವುಗಳು ವ್ಯಾನ, ಸಮಾನ, ಉದಾನ, ಅಪಾನ, ಪ್ರಾಣಗಳೆಂಬ ಪಂಚವಾಯುಗಳು, ವಾಯುವಿನ ಅರ್ಧಭಾಗವೇ ವ್ಯಾನವಾಯು, ಈ ವಾಯುವಿನ ಅರ್ಧಭಾಗದಲ್ಲಿ ಸೇರಿದ ಆಕಾಶದ ಪಾದಾಂಶವು ಸಮಾನವಾಗುವದು. ಅಗ್ನಿಯ ಕಾಲುಭಾಗವೇ ಉದಾನವಾಯು, ಕಾಲುಭಾಗವೇ ಅಪಾನವಾಯು. ಪೃಥ್ವಿಯ ಕಾಲುಭಾಗವೇ ಪ್ರಾಣವಾಯು. ಅಂತೇನೆ ಪೃಥ್ವಿಯನ್ನು ಬಿಟ್ಟು ಮೇಲಕ್ಕೆ ಹಾರಿದ ಮಾನವನಿಗೆ ಪ್ರಾಣವಾಯು ಸಿಕ್ಕುವದಿಲ್ಲ.

ಮನ-ಬುದ್ಧಿ-ಚಿತ್ತ ಅಹಂಕಾರಗಳೆಂಬ ಅಂತಃಕರಣ ಚತುಷ್ಟಯವು ಜಾತೃ ಅಥವಾ ಆತ್ಮನು ಹುಟ್ಟಿದ್ದು ಆಕಾಶ ಮಹಾಭೂತದಿಂದ. ಆಕಾಶದ ಅರ್ಧಭಾಗವೇ ಙ್ಞತೃ. ಆಕಾಶದ ಅರ್ಧಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ  ಮನವಾಗು ವದು. ಪಾದಾಂಶದ ಅಗ್ನಿಯೇ ಬುದ್ದಿಯು, ಅಪ್ಪುವಿನ ಪಾದಾಂಶವೇ ಚಿತ್ತ. ಪೃಥ್ವಿಯ ಪಾದಾಂಶವೇ ಅಹಂಕಾರ. ಹೀಗೆ ಇಪ್ಪತ್ತೈದು ತತ್ತ್ವಗಳು ಹುಟ್ಟಿದವು. ಪಂಚ ಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು, ಪಂಚವಾಯು ಗಳು, ಮತ್ತು ಅಂತಃಕರಣ ಚತುಷ್ಟಯದೊಡನೆ ಕೂಡಿದ ಆತ್ಮನು ಸೇರಿ ಇಪ್ಪತ್ತೈದು  ತತ್ತ್ವಗಳಾಗುತ್ತವೆ.*

ಈ ಇಪ್ಪತ್ತೈದು ತತ್ತ್ವಗಳಿಂದಲೇ ಭೌತಿಕ ಶರೀರದ ಉತ್ಪತ್ತಿಯಾಗುವದೆಂದು ವೇದಾಂತಿಗಳು ಪ್ರತಿಪಾದಿಸುತ್ತಾರೆ. ಶಿವಾದ್ವೈತಿಗಳಾದ ಶರಣರು ಶರೀರ ಉತ್ಪತ್ತಿಗೆ ಮೂವತ್ತಾರು (೩೬) ತತ್ತ್ವಗಳನ್ನು ಹೇಳುತ್ತಾರೆ.

“ಆತ್ಮ ತತ್ತ್ವ ಇಪ್ಪತ್ತೈದು ; ವಿದ್ಯಾತತ್ತ್ವ ಹತ್ತು ; ಶಿವತತ್ತ್ವ ಒಂದು

ಅದೆಂತೆಂದೊಡೆಃ ಭೂತಾದಿ ಪಂಚಕಂಗಳೈದು,

ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,

ಶಬ್ದಾದಿ ವಿಷಯಂಗಳೈದು,

ವಾಗಾದಿ ಕರ್ಮೇಂದ್ರಿಯಂಗಳೈದು

ಮನವಾದಿ ಪಂಚಕಂಗನೈದು; ಆತ್ಮತತ್ತ್ವ ಇಪ್ಪತ್ತೈದು

ಕರ್ಮಸಾದಾಖ್ಯ, ಕರ್ತೃಸಾದಾಖ್ಯ, ಮೂರ್ತಿಸಾದಾಖ್ಯ,

ಅಮೂರ್ತಿ ಸಾದಾಖ್ಯ, ಶಿವಸಾದಾಖ್ಯ,

 ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ

ಶಾಂತಿಕಲೆ, ಶಾಂತ್ಯತೀತಕಲೆ ಇಂತು ವಿದ್ಯಾತತ್ತ್ವಹತ್ತು

ಶಿವತತ್ತ್ವ ಒಂದು; ಇಂತು ಮೂವತ್ತಾರು ತತ್ತ್ವಂಗಳು

…………….ಅಪ್ರಮಾಣ ಕೂಡಲಸಂಗಮದೇವ.ʼʼ

ಜ.ಚ.ನಿ. ಯವರು ತಮ್ಮ ‘ಶಿವಾದೈತ ದರ್ಶನ’ ದಲ್ಲಿ (ಪುಟ ೩೧) “ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧವಿದ್ಯೆ, ಮಾಯೆ, ಕಲಾ, ಕಾಲ, ಅಶುದ್ಧವಿದ್ಯೆ, ನಿಯತಿ, ರಾಗ, ಪುರುಷ, ಪ್ರಕೃತಿ, ಬುದ್ಧಿ, ಅಹಂಕಾರ, ಮನಸ್ಸು, ಪಂಚಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ, ಪಂಚತನ್ಮಾತ್ರೆ, ಪಂಚಭೂತಂಗಳು” ಎಂದುದಾಗಿ ಮೂವತ್ತಾರು ತತ್ತ್ವಗಳನ್ನು ತಿಳಿಸಿದ್ದಾರೆ.

ಈ ಮೂವತ್ತಾರು ತತ್ತ್ವಗಳಲ್ಲಿ ಮೊದಲಿನವೈದು ಶುದ್ಧಾಧ್ವತತ್ತ್ವಗಳು. ಮಧ್ಯದವು ಎಂಟು ಮಿಶ್ರಾಧ್ವತತ್ತ್ವಗಳು, ಮುಂದಿನವು ಇಪ್ಪತ್ತು ಮೂರು ಅಶುದ್ಧಾದ್ವ ತತ್ತ್ವಗಳು. ಮೊದಲಿನವೈದು ಶುದ್ಧಾದ್ವತತ್ತ್ವಗಳು ಶಿವನಿಗೆ ಸಂಬಂಧಿಸಿದವು. ನಂತರ ಎಂಟು ಮಿಶ್ರಾಧ್ವತತ್ತ್ವಗಳು ಶಕ್ತಿಗೆ ಸಂಬಂಧವಾಗುತ್ತವೆ. ಇವರಿಬ್ಬರ ಸಂಯೋಗದಲ್ಲಿ ವ್ಯಕ್ತವಾಗುವ ಜೀವಾತ್ಮನು ಅಶುದ್ಧತತ್ತ್ವದಿಂದ ಉತ್ಪನ್ನವಾಗುವನು. ಹೀಗೆ ಮೂವತ್ತಾರು ತತ್ತ್ವಗಳಿಂದ ಜೀವಾತ್ಮನು ಜನಿಸುವನು.

ಪರಶಿವನು ೩೬ ತತ್ತ್ವಗಳ ತುತ್ತತುದಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಅವನ ಅಂಶನಾದ ಜೀವಾತ್ಮನು ೩೬ ತತ್ತ್ವಗಳಿಂದಲೇ ಹುಟ್ಟಿ ೨೧೬ ಸಕೀಲಗಳಲ್ಲಿ ಸಂಚರಿಸಿ ಶರಣನಾಗಿ ಪುನಃ ಮೂವತ್ತಾರು ತತ್ತ್ವವಿಶಿಷ್ಟ ಶಿವನಲ್ಲಿ ಲಿಂಗೈಕ್ಯನಾಗುವನು ಅಂತೆಯೇ ಆಚಾರ ಪರಿಪೂರ್ಣರಾದ ಶಿವಭಕ್ತರ ಮಹಾತ್ಮರ ಸಮಾಧಿಗಳನ್ನು ಸಹ ಈ ಮೇಲಿನ ತತ್ತ್ವದಂತೆ  ನಿರ್ಮಿಸಲಾಗುತ್ತಿದೆ. ೩೬ ತತ್ತ್ವದ ದ್ಯೋತಕವಾಗಿ ಅಂಗನ ಅಷ್ಟು ೩೬ ಘನಪಾದ ಪಾದದಳತೆಯ ಮೆಟ್ಟಿಲನ್ನಿಳಿದು ೨೧೬ ಪಾದದ ಕುಂಬ ದಲ್ಲಿ ಪರಿಪೂರ್ಣನಾಗಿ ೩೬ ಘನಪಾದದ ಕಿರಿಗುಣಿಯಲ್ಲಿ ಮುಹೂರ್ತಗೊಳ್ಳುವನು.

ಪರಶಿವನು ೩೬ ತತ್ತ್ವಾಗ್ರದಲ್ಲಿ ಪರಿಶೋಭಿಸುತ್ತಿರುತ್ತಾನೆಂಬುದನ್ನು ಕವಿರಹ ದ್ಯಾಂಪೂರ ‘ಚನ್ನಕವಿ”ಗಳು ‘ಹಾನಗಲ್ಲ ಕುಮಾರೇಶ್ವರ ಪುರಾಣ”ದ ಇಪ್ಪತ್ತನೆ ಸಂಧಿಯ ಪ್ರಾರಂಭದಲ್ಲಿ ಪ್ರಾರ್ಥನಾ ರೂಪವಾಗಿ ವರ್ಣನೆ ಮಾಡಿದ್ದು ಅತ್ಯಂತ ಸುಂದರವಾಗಿದೆ. ಹಾಗೂ ಮೂವತ್ತಾರು ತತ್ತ್ವಗಳನ್ನು ಅರಿತುಕೊಳ್ಳಲು ಈ ಪದ್ಯ ಸಹಾಯಕವೂ ಆಗಿದೆ –

”ವರಪಂಚಭೂತಗಳು ಪಂಚ ತನ್ಮಾತ್ರೆಗಳು

ನೆರೆದೈದು ಕರ್ಮೇಂದ್ರಿಯಂಗಳುಂ ಪಂಚ ಭಾ-

 ಸುರ ಚಿದಿಂದ್ರಿಯಗಳುಂ ಮಾನಸಾಹಂಕಾರ ಬುದ್ಧಿ, ಗುಣ, ರಾಗ, ವಿದ್ಯೆ

ಸುರುಚಿರ ನಿಯತಿ ಕಲಾ-ಕಾಲ ಪ್ರಕೃತಿಗಳುಂ

ಪುರುಷಮೀಶ್ವರ ಸದಾಶಿವಶಕ್ತಿಶಿವಗಳೆಂ

ಬುರುತರದೊಳೆಸೆವ ಮೂವತ್ತಾರು ತತ್ತ್ವಾಗ್ರದೊಳ್ಪೊಳೆವ

ಶಂಭು ಸಲಹು (೨೪ – ೧)

೩೬ ತತ್ತ್ವಗಳನ್ನು ಮೀರಿದಾತನು ಪರಶಿವನು. ತತ್ತ್ವಗಳ ಬಂಧನದಲ್ಲಿ ಮುಳುಗಿದವನು ಜೀವಾತ್ಮನು. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಭೂತ ಪಂಚಕವು ಪಂಚಭೂತವನ್ನು ತವೆ ಕೂಡಲು ಅದ್ಭುತಮಯವಾದ ಮಾನವ ತನುವು  ಉಂಟಾಗುವದೆಂಬುದನ್ನೇ ಪ್ರಸ್ತಾಪಿಸಿದ್ದಾನೆ. ಮತ್ತು ಈ ತನುಗುಣವನ್ನು ಕಳೆದುಕೊಳ್ಳಲು ಭೂತಳಕ್ಕೆ ಕರ್ತನಾದ, ತತ್ತ್ವಪರಿಪೂರ್ಣನಾಗಿ ಪರಿಶೋಭಿಸುವ, ಭೂನಾಥ ಶ್ರೀ ಗುರುವನ್ನು ಮೊರೆ ಹೋಗಬೇಕೆಂಬುದೇ ಶಿವಕವಿಯ ಅಭಿಪ್ರಾಯವು

.  ದೇಹಗತವಾದ ಭೂತ ಪಂಚಕಕ್ಕೆ ಆಧ್ಯಾತ್ಮಿಕ ಭೂತಗಳೆಂತಲೂ, ಸಮಷ್ಟಿ  ರೂಪಾದ ಮಹಾಭೂತ ಪಂಚಕವು ಆಧಿದೈವಿಕ ಭೂತವೆಂತಲೂ ಹೆಸರು. ಈ ಆಧ್ಯಾತ್ಮಿಕ ಪಂಚಭೂತಗಳು ಆಧಿ ದೈವಿಕ ಪಂಚಭೂತಗಳೊಡನೆ ಸೇರಿ ವ್ಯಾವಹಾರಿಕ ಜೀವನು ಪ್ರಾದುರ್ಭವಿಸುತ್ತಾನೆ. ಈ ಭೂಮಂಡಲದ ಕಾರ್ಯವು ಅದ್ಭುತಮಯ ವಾದುದು. ಇಲ್ಲಿಯ ವೈಚಿತ್ರ್ಯ ಹೇಳಲಸದಳವಾಗಿದೆ. ಜೀವಿಗಳು ಕೇವಲ ಭೂತ ಮಯವಾದರೆ ಭವ-ಬಂಧನ ತಪ್ಪುವದಿಲ್ಲ. ಭೂನಾಥನಾದ ಶ್ರೀ ಗುರುವಿಗೆ ಶರಣಾಗತರಾಗಬೇಕು. ದೇಹದ ಅಶುದ್ಧಭೂತ ತತ್ತ್ವಗಳನ್ನು ಪರಿಶೋಧಿಸಿ ಪಾವನಗೊಳಿಸಿ ಮಾಂಸಮಯ ಪಿಂಡವನ್ನು ಮಂತ್ರಪಿಂಡವನ್ನಾಗಿಸಿ ಇಂದ್ರಿಯ ಗಳಿಗೆಲ್ಲ ಲಿಂಗಸಂಬಂಧ ಮಾಡುವನು ಗುರುವರನು. ಅಲ್ಲದೆ ಪದಾರ್ಥಗಳನ್ನು ಪ್ರಸಾದವನ್ನಾಗಿ ಪರಿಣಮಿಸುವ ಸಾಮರ್ಥ್ಯವುಳ್ಳವನಾಗಿರುವದರಿಂದಲೇ ಭೂನಾಥ ನಾಗಿದ್ದಾನೆ. ಅಂಥ ಪರಮಗುರುವೆ ! ಕೃಪೆದೋರಿ ಎನ್ನ ಪಂಚಭೂತಮಯ ಶರೀರವನ್ನು ಶುದ್ಧಗೊಳಿಸಿ ಕಾಪಾಡು.

೧. ದೇಹ ವಿಕಾರ

ನಂದಿರ್ದ ಬೆಂಕಿ ಘನ | ಸಿಂಧುವನೆ ಆವರಿಸಿ

ನಿಂದುರಿವುತಿಹುದು ನಂದಿಪುದೇತರಲೈ?

ತಂದೆ ಶ್ರೀ ಗುರುವೆ ಕೃಪೆಯಾಗು   ||೬೩ ||

ಈ ಪಂಚಭೌತಿಕವಾದ ತನುವು ಅಜ್ಞಾನದಿಂದ ಅನೇಕ ವಿಕಾರಗಳನ್ನು ಹೊಂದುತ್ತದೆ. ಅನೇಕ ಯಾತನೆಗಳನ್ನು ಅನುಭವಿಸುತ್ತದೆ. ತಾಪತ್ರಯಗಳಲ್ಲಿ ಬಳಲುತ್ತದೆ. ಈ ದುಃಖತತಿಯನ್ನು ನಿವಾರಿಸಬಲ್ಲವನು ಪರಮ ಶ್ರೀ ಗುರುವೆಂಬುದನ್ನು ಇಲ್ಲಿ    ಶರಣಕವಿಯು ನಿರೂಪಿಸುತ್ತಾನೆ.

ಪ್ರಜ್ವಲಿಸುವ ಅಗ್ನಿಯನ್ನು ಕಂಡು ದೂರವಿರಬಹುದು; ಆದರೆ ನಂದಿ (ಆರಿದಂತೆ)ದಂತೆ ಕಾಣುವ ಬೂದಿ ಮುಚ್ಚಿದ ಅಗ್ನಿಯು ಅಪಾಯಕ್ಕೆ ಕಾರಣ ವಾಗುವದು. ಈ ಬೆಂಕಿಯು ಭೂಮಿಯ ಮೇಲೆ ಇರುವಂತೆ ನೀರಿನಲ್ಲಿಯು ಇರುತ್ತದೆ. ಅದಕ್ಕೆʼʼ ವಡವಾನಲ’ʼಎಂದು ಶಾಸ್ತ್ರಕಾರರು ಕರೆದಿರುವರು. ಇದು ಕಣ್ಣಿಗೆ ಕಾಣುವದಿಲ್ಲ. ಈ ಮಾತನ್ನು ಶರಣರೂ ಪಡಿನುಡಿದಿದ್ದಾರೆ.

“ಉದಕದೊಳಗೆ ಬೈಚಿಟ್ಟ ಬೇಗೆಯ ಕಿಚ್ಚಿನಂತಿದ್ದು

ಎಂದು ಅಣ್ಣನವರು ವಿವರಿಸಿದ್ದರೆ; ಸರ್ವಜ್ಞನು

ಕ್ಷೀರದಲ್ಲಿ ಘೃತ, ವಿಮಲ ನೀರಿನೊಳು ಶಿಖಿಯಿದ್ದು

ಆರಿಗೂ ತೋರದದು…… ಎಂದಿದ್ದಾನೆ.

“ಉದಕದೊಳಗೆ ಕಿಚ್ಚು ಹುಟ್ಟಿ ಸುಡುತ್ತಿದ್ದುದ ಕಂಡೆ’

ಮತ್ತು- ನೀರುಗಿಚ್ಚೆದ್ದರೆ ಸಮುದ್ರವೆ ಗುರಿ

ಒಡಲುಗಿಚ್ಚೆದ್ದರೆ ಆ ತನುವೇ ಗುರಿ,

ಎಂದುದಾಗಿ ಮಹಾಜ್ಞಾನಿ ಅಲ್ಲಮಪ್ರಭುಗಳು ವಿವೇಚಿಸಿದ್ದಾರೆ.

ಆದರೆ ಇಂದಿನ ಮುಂದುವರೆದ ವಿಜ್ಞಾನಿಯು ಇಂಥ ವಡವಾನಲದ ಶಕ್ತಿಯನ್ನು ಇನ್ನೂ ಉಪಯೋಗಿಸಿಕೊಂಡಂತೆ ತೋರುವದಿಲ್ಲ. ನೀರಿನ ಒತ್ತಡದಿಂದ ಕೇವಲ ವಿದ್ಯುತ್ತನ್ನು ತಯಾರಿಸಲಾಗುತ್ತಿದೆ. ಈ ವಿದ್ಯುತ್ತು ನೀರಿನ ತೇವಾಂಶದಲ್ಲಿ ಹಾಗೂ ದ್ರವಪದಾರ್ಥಗಳಲ್ಲಿ ಪಸರಿಸುವ ಪರಿಯನ್ನು ಕಾಣುತ್ತೇವೆ. ಒಣ ಪದಾರ್ಥಗಳಲ್ಲಿ ಅದರ ಪ್ರವಾಹ ಹರಿದು ಬರುವದಿಲ್ಲ. ಅದಕ್ಕಾಗಿಯೇ ವಿದ್ಯುತ್ತಿನ ರಿಪೇರಿ ಕೆಲಸ ಮಾಡುವಾಗ ಒಣಕಟ್ಟಿಗೆ ತುಂಡನ್ನು ಕಾಲಿನಕೆಳಗೆ ಇಟ್ಟುಕೊಳ್ಳುತ್ತಾರೆ.

ಮಹಾನುಭಾವಿಗಳು ಮೇಲೆ ತಿಳಿಸಿದಂತೆ ವಡವಾನಲವು ಘನತರವಾದ ಸಮುದ್ರದಲ್ಲಿ ವ್ಯಾಪಿಸಿಕೊಂಡು ಅಲ್ಲಿಯೇ ಸ್ಥಿರವಾಗಿ ನಿಂತು ಉರಿಯುತ್ತಿದೆ. ಅದನ್ನು ಯಾರೂ ಅರಿಸಲಾರರು. ಆದರೆ ಪಂಚಭೂತಗಳ ಶಕ್ತಿಯನ್ನು ನಿಯಂತ್ರಿಸಬಲ್ಲ ಆತ್ಮಜ್ಞಾನಿಯು ವಡವಾನಲವನ್ನು ಆರಿಸಬಹುದು; ನಿಶ್ಚಿತವಾಗಿ ಆರಿಸುತ್ತಾನೆ.

ಸಂಸಾರಸಾಗರದಲ್ಲಿ ಬೆಂಕಿಯಂತಿರುವ ಆತ್ಮಜ್ಞಾನವು ನಂದಿಹೋದರೆ ಅಜ್ಞಾನವು ಜೀವಾತ್ಮನನ್ನು ಆವರಿಸುವದು. ಬೂದಿಮುಚ್ಚಿದ ಕೆಂಡದಂತೆ ಅಜ್ಞಾನವು ಇವನನ್ನು ಒಳಗೊಳಗೆ (ಶರೀರದಲ್ಲಿ) ಬೇಯಿಸುತ್ತದೆ. ಅಲ್ಲದರಲ್ಲಿ ಅಹುದೆಂಬ  ಬುದ್ಧಿಯು ಅಜ್ಞಾನಕ್ಕೆ ಕಾರಣ. ಜೀವಾತ್ಮನು ದೇಹವೇ ತಾನು, ದೇಹಸುಖವೇ ನಿಜಸುಖವೆಂದು ಸಾಂಸಾರಿಕ ವ್ಯಾಮೋಹದಲ್ಲಿ ಸಿಲುಕುತ್ತಾನೆ. ಸುಖ-ಸಂತೃಪ್ತಿಗಳು ದೊರೆಯದಿದ್ದಾಗ ನೊಂದುಕೊಳ್ಳುವನು;ದುಃಖಿತನಾಗುವನು.ಈ ಅಙ್ಞನದಿಂದ ಉಂಟಾಗುವ ನೋವು ಬಾಳ-ಸಮುದ್ರವನ್ನು ವ್ಯಾಪಿಸಿ ಎಡಬಿಡದೆ ದಹಿಸುತ್ತದೆ, ಈ ನೋವು ಆರದ ನೋವಾಗಿದೆ. ಇದರಿಂದ ಜೀವನವು ಬರಡಾಗುತ್ತದೆ. ಇದನ್ನು ನಿವಾರಿಸುವ ಸಾಮರ್ಥ್ಯ ಶ್ರೀ ಗುರುವಿನಲ್ಲಿದೆ. ಗುರುವೆ ! ನಿನ್ನ ಜ್ಞಾನಬೋಧೆಯಿಂದ ಎನ್ನಲ್ಲಿಯ ಅಜ್ಞಾನದ ಬೇಗೆಯನ್ನು, ಹೊಗೆಯನ್ನು ಹೋಗಲಾಡಿಸಿ ಆತ್ಮಜ್ಞಾನಾಗ್ನಿಯನ್ನು ಬೆಳಗಿಸಿ ಕಾಪಾಡು.

ಅಜ್ಞಾನದಿಂದ ತನುವಿನಲ್ಲಿ, ಕರುಣೇಂದ್ರಿಯಗಳಲ್ಲಿ ತಾಮಸೀತನ ಬೆಳೆಯುತ್ತದೆ. ತಾಮಸಗುಣವು ಜೀವಾತ್ಮನನ್ನು ದುಃಖಿಯನ್ನಾಗಿಸುತ್ತದೆ. ಈ ಮಾತನ್ನು ನಿಜ ಗುಣರು “ಕೈವಲ್ಯ ಪದ್ಧತಿ’ಯಲ್ಲಿ ತಿಳಿಸುತ್ತಾರೆ.

“ಒಡಲು ತಾನೆಂದರಿವುದೇ ಮಂದಮತಿ ಮೋಸ |

ಜಡಭಾವ ನಿದ್ರೆ ನಿಷೇಧ ಕಾರ್ಮಾಳಿ |

ಬಿಡದಲಸತೆ ಚಪಲು ವಿಡಿದು ವೃಥಾ |

ಕೆಡುವ ತನುವನ ಕೂಡಿಹುದು ತಾಮಸಗುಣ’

ಶರೀರವೇ ನಾನೆಂಬ ವ್ಯರ್ಥವಾದ ಮಂದಬುದ್ಧಿಯಿಂದ ಮೋಸ, ಅಲಸ್ಯ, ನಿದ್ರೆ, ದುಷ್ಕರಗಳನ್ನು ಬಿಡದೆ ಚಾಪಲ್ಯತನದಿಂದ ವ್ಯರ್ಥಕೆಡಿಸುವ ದೇಹಾಭಿಮಾನವೇ ತಾಮಸಗುಣವೆನಿಸುವದು. ಈ ತಾಮಸಗುಣವೇ ಬಾಳಸಮುದ್ರದಲ್ಲಿ ನೋವನ್ನುಂಟು ಮಾಡುವ ಅರದ (ನಂದದ) ಬೆಂಕಿಯಾಗಿದೆ. ಕಾರಣ ಗುರೂಪದೇಶದಿಂದ ತಾಮಸೀ ತನವು ದೂರವಾಗುವದು. ಅದಕ್ಕಾಗಿ ಗುರುಕರುಣೆ ಗುರೂಪದೇಶಗಳು ಅವಶ್ಯಬೇಕು.

ತಲೆಯಿಲ್ಲದಂಗನೆಯ | ಮೊಲೆಯೇಳು ತೊರೆತಿರಲು

ತಲೆಯೆಂಟರಿಂದ ಮೊಲೆಯನುಂಬುದ ಕಂಡಾ.

ನಲಸಿದೆನು ಗುರುವೆ ಕೃಪೆಯಾಗು     || ೬೩ ||

ಅಜ್ಞಾನದಿಂದ ಬೆಂದ ನೊಂದ ಜೀವಾತ್ಮನು ಸಪ್ತವ್ಯಸನಗಳನ್ನು ಅಷ್ಟಮದ ಗಳಿಂದ ಸೇವಿಸಲು ಆತುರಪಡುತ್ತಾನೆಂಬ ವಿಷಯವನ್ನು ಬಹುಮಾರ್ಮಿಕವಾಗಿ ಇಲ್ಲಿ ಚಿತ್ರಿಸಿದ್ದಾನೆ.

‘ಸರ್ವೆಷು ಗಾತ್ರೇಷು ಶಿರಃ ಪ್ರಧಾನಮ್ |’

ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ದೇಹದಲ್ಲಿ ತಲೆ ಮತ್ತು ಒಡಲು ಎಂಬೆರಡು ಪ್ರಧಾನ ಅಂಗಗಳು, ಶಿರದಿಂದಲೇ ಒಡಲಿಗೆ ಮನ್ನಣೆಯಿದೆ. ಒಡಲಿಗೆ ಅನ್ನವೇ ಆಹಾರವಾದರೆ ಮುಡಿ (ತಲೆ)ಗೆ ಜ್ಞಾನವೇ ಆಹಾರ, ಜ್ಞಾನವಿಲ್ಲದ ತಲೆ ಬರಿದಲೆಯೆನಿಸುವದು. ಅದು ಕೇವಲ ರುಂಡ, ರುಂಡವಿಲ್ಲದ್ದು ಮುಂಡವಾಗುವದು. ಅದಕ್ಕಾಗಿಯೇ ಲೌಕಿಕದಲ್ಲಿ ಅಜ್ಞಾನಿಗೆ ತಲೆಯಿಲ್ಲದವನೆನ್ನುವದು ರೂಢಿಯಾಗಿದೆ. ಇದೇ ಮಾತನ್ನು ಇಲ್ಲಿ ಶಿವಕವಿಯು ವ್ಯಂಜನಗೊಳಿಸಿದ್ದಾನೆ

 ತಲೆಯಿಲ್ಲದಂಗನೆಯು ಅಲ್ಪ ಸುಖಕ್ಕಾಗಿ ಜೀವಿಯನ್ನು ನೋಯಿಸುತ್ತಾಳೆ ಬೇಯಿಸುತ್ತಾಳೆ. . ಈ ಅಂಗನೆಯ ಶಕ್ತಿ ಅಪರಿಮಿತವಾದುದು  ಅಸಾಧ್ಯವಾದುದು. ಅಲ್ಲಮಪ್ರಭುಗಳೂ ಸಹ ಈಕೆಯ ಶಕ್ತಿಗೆ ಬೆರಗಾಗಿದ್ದಾರೆ –

ʼʼ….ಆ ಮರೆವೆಯೆಂಬ ಮಹಾಮಾಯೆ

ವಿಶ್ವದ ಮುಸುಕಿನಲ್ಲಿ; ನಾಬಲ್ಲೆ ಬಲ್ಲಿದರೆಂಬ

ಅರುಹಿರಿಯರೆಲ್ಲ ತಾಮಸಕ್ಕೊಳಗಾಗಿ

ಮೀನಕೇತನ ಬಲೆಗೆ ಸಿಕ್ಕು ; ಮಾಯೆಯ

ಬಾಯತುತ್ತಾದರಲ್ಲಾ ಗುಹೇಶ್ವರಾ !”

‘ಮರವೆ’ ಯೆಂದರೆ ಅಜ್ಞಾನವೆಂದೇ ಅರ್ಥವಾಗುವದು. ವೇದಾಂತಿಗಳು ಅಜ್ಞಾನಕ್ಕೆ ಮಾಯೆಯೆನ್ನುವ ವಿಚಾರವನ್ನು ಈಗಾಗಲೇ ತಿಳಿಸಿದ್ದಾಗಿದೆ. ಈ ಮಾಯೆಯು ಬಲ್ಲೆ, ಬಲ್ಲಿದೆನೆನ್ನುವ ಹಿರಿಯರನ್ನು ಸಹ ತಾಮಸೀ ಗುಣಿಗಳನ್ನಾಗಿ ಮಾಡಿ ಕಾಮನ ಬಲೆಗೆ ಸಿಕ್ಕಿಸಿ ತನ್ನ ಬಾಯತುತ್ತನ್ನಾಗಿಸಿ ನುಂಗುತ್ತಾಳೆ. ಇದು ಭಯಾನಕವೇ ಆಗಿದೆ. ಅಂದ ಮೇಲೆ ಸಾಮಾನ್ಯವಾದ ಅಜ್ಞ ಜೀವಿಯು ಮಾಯಾಂಗನೆಯ ವಶವಾಗುವದರಲ್ಲೇನು ಆಶ್ಚರ್ಯಕರವಾಗಿದೆ ?

ರಸ, ರುಧಿರ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಞಾ, ಶುಕ್ಲಗಳೆಂಬ ಸಪ್ತಧಾತು ಗಳಿಂದ ಹುಟ್ಟಿದ ಜೀವಾತ್ಮನ ದೇಹವು ಮಾಯಾಂಗನೆಯ ಸಪ್ತವಿಧವಾದ ಮೊಲೆಗಳಿಗೆ ಆಶಿಸುವುದು ಸ್ವಾಭಾವಿಕ. ಇವಕ್ಕೆ ಸಪ್ತವ್ಯಸನಗಳೆಂತಲೂ ಕರೆಯುತ್ತಾರೆ. ೧. ಅಭಕ್ಷ್ಯ ಭಕ್ಷಣ, ೨. ಅಪೇಯಪಾನ, ೩, ದ್ಯೂತ, ೪, ವೇಶ್ಯಾಗಮನ, ೫, ವಾಕ್ಪಾರುಷ್ಯ, ೬. ಮೃಗಯಾವಿಹಾರ, ೭. ಚೌರ್ಯ ಇವು ಮಾಯಾಂಗನೆಯ ತೊರೆಬಿಟ್ಟ ಮೊಲೆಗಳು. ಜೀವಾತ್ಮನು ನಿಷಿದ್ಧ ವಸ್ತುಗಳಲ್ಲೇ ಹೆಚ್ಚು ಆಸಕ್ತಿಯುಳ್ಳವನಾಗಿರುತ್ತಾನೆ. ೧)ತಿನ್ನಬಾರದ (ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಭಕ್ಷಿಸುವದು.೨) ಕುಡಿಯಲು ನಿಷೇಧಿಸಿದ ಮದ್ಯಾದಿ ಪೇಯವನ್ನು ಕುಡಿಯುವದು.೩) ಜೂಜಾಡುವದು. ೪) ಪರಸ್ತ್ರೀಗಮನ ಮಾಡುವದು. ೫) ಅವಾಚ್ಯ ಮತ್ತು ಕರ್ಕಶ ಶಬ್ದಗಳನ್ನು ಮಾತಾಡುವದು. ೬) ಬೇಟೆಯಾಡಿ ಪ್ರಾಣಿ ಹಿಂಸೆ ಮಾಡುವದು. ೭) ಪರರದ್ರವ್ಯವನ್ನು ಅಪಹರಣ ಮಾಡುವದು.

ಡಾ. ಫ.ಗು. ಹಳಕಟ್ಟಿಯವರು ವಚನಶಾಸ್ತ್ರಸಾರದ ೨ನೆಯ ಭಾಗದ ೧೨೪ನೇ ಪುಟದಲ್ಲಿ ʼʼತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ ಇಂತಿವು ಸಪ್ತವ್ಯಸನ’ʼ ಗಳೆಂದು ಶರಣ ಸಾಹಿತ್ಯದಿಂದ ಸಂಗ್ರಹಿಸಿದ್ದಾರೆ. ಎರಡೂ ವಿಧಗಳನ್ನು ಪರಿಶೀಲಿಸಿದರೂ ಮನುಷ್ಯನ ಅಧೋಗತಿಗೆ ಕಾರಣವಾದವುಗಳೇ ಇರುತ್ತವೆ. ಇಂಥ ಸಪ್ತವ್ಯಸನಗಳೆಂಬ ಮೊಲೆಯುಣ್ಣಲು ಜೀವನಿಗೆ ಎಂಟು ತಲೆಗಳಾಗುತ್ತವೆ. ಏಳನ್ನು ಎಂಟು ತಿನ್ನುವಾಗ ಆತುರತೆ ಹೆಚ್ಚಾಗುತ್ತದೆ. ಹಾಗಾದರೆ ಎಂಟು ತಲೆಗಳು ಯಾವುವೆಂಬುದನ್ನು ಅನುಭವಿಗಳು –

ʼʼ ಕುಲಂ ಛಲಂ ಧನಂ ಚೈವ

ರೂಪ ಯೌವನಮೇವಚ ।

ವಿದ್ಯಾ ರಾಜ್ಯಂ ತಪಶ್ಚೈವ

ಏತೇ ಚಾಷ್ಟಮದಾಃ ಸ್ಮೃತಾಃ ||

೧. ಕುಲಮದ,೨. ಛಲಮದ, ೩. ಧನಮದ, ೪, ರೂಪಮದ, ೫. ಯೌವನಮದ, ೬. ವಿದ್ಯಾನದ, ೩. ರಾಜ್ಯಮದ ಹಾಗೂ ೮.ತಪೋಮದಗಳೆಂದು ಅಷ್ಟಮದಗಳನ್ನು ವಿಂಗಡಿಸಿದ್ದಾರೆ. ಈ ಸಪ್ತವ್ಯಸನಗಳು ತಾಮಸೀಗುಣವುಳ್ಳವುಗಳಾದರೆ  ಅಷ್ಟಮದಗಳು ರಾಜಸೀಗುಣಭರಿತವಾಗಿವೆ. ಸಪ್ತವ್ಯಸನಗಳೆಂಬ ಮೊಲೆಗಳನ್ನು ಅಷ್ಟಮದಗಳೆಂಬ ತಲೆಗಳಿಂದ ಭೋಗಿಸುವ ಜೀವನಿಗೆ ತೃಪ್ತಿಯಲ್ಲಿದೆ ? ತುಷ್ಟಿ ದೊರೆಯದಿದ್ದರೂ ಪುನಃಪುನಃ ಅವುಗಳಿಗಾಗಿ ಹಾತೊರೆಯುವ ಜೀವಾತ್ಮನ ಸ್ಥಿತಿಯನ್ನು ಲಕ್ಷಿಸುವವನಿಗೆ ಅಲಸಿಕೆ (ಜುಗುಪ್ಸೆ) ಬರುವದು ಸಹಜ. ಆ ಅಲಸಿಕೆ ಅರ್ಥಾತ್ ಜುಗುಪ್ಸೆಯು ಜ್ಞಾನಿಗೆ ಮಾತ್ರ ಬರಲು ಸಾಧ್ಯ.

ಗುರುವೆ ! ಜ್ಞಾನನಿಧಿಯೇ ನನ್ನ ವೈಷಯಿಕ ಸ್ಥಿತಿಯನ್ನು ನೋಡಿ ಅಲಸಿಕೆ ಪಡಬೇಡ, ಬೇಜಾರು ಮಾಡಿಕೊಳ್ಳದೆ ರಕ್ಷಿಸು. ನಿಜವಾದ ಸುಜ್ಞಾನವಿಲ್ಲದ್ದಕ್ಕಾಗಿ ಹೀಗಾಗಿರುವ ಕೃಪೆಮಾಡು, ಯಾಕೆಂದರೆ –

ʼʼ………….ಜ್ಞಾನಜ್ಯೋತಿ ಕೆಡಲೊಡನೆ

ನಾಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ

ತಾಮಸಕ್ಕೊಳಗಾಗಿ ಸೀಮೆ ತಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’

ಎಂದು ಅಲ್ಲಮಪ್ರಭುಗಳು ಜ್ಞಾನ ಹೀನವಾದಾಗ ಬಲ್ಲಿದಜ್ಞಾನಿಯೂ ತಾಮಸಕ್ಕೊಳ ಗಾಗಿ ಕೆಡುವರೆಂಬ ಮಾತನ್ನು ಬಿತ್ತರಿಸಿದ್ದಾರೆ. ಕಾರಣ ಅಜ್ಞಾನದಿಂದ ಆವರಿಸುವ ಸಪ್ತವ್ಯಸನಗಳನ್ನು ನಿವಾರಿಸಿ ಶರಣರು ನಿರೂಪಿಸುವ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವ ಸಪ್ತ ಸೂತ್ರಗಳನ್ನು ಬಾಳಿನಲ್ಲಿ ಒಡಮೂಡಿಸಿಕೊಳ್ಳಬೇಕು.

ಸಪ್ತ ಪದವು ಬಹಳ ಮಾರ್ಮಿಕವಾಗಿದೆ. ಸಪ್ತವ್ಯಸನಗಳನ್ನು ಪ್ರತಿಪಾದಿಸುವಂತೆ ; ಸಪ್ತಪದದಿಂದ ಉತ್ತಮ ಮಾರ್ಗದರ್ಶನವೂ ಸಿಕ್ಕುತ್ತದೆ. ಆದರೆ ಏಳು ಅಂಕೆಯನ್ನು ಕೆಲವರು ಅವಲಕ್ಷಣವೆಂದು ತಿಳಿಯುತ್ತಾರೆ.ʼʼ ಏಳು ಬೀಳುʼʼಎನ್ನುವರು. ಅದು ಸರಿಯಲ್ಲ. ಬಹುವಿಷಯಗಳನ್ನೊಳಗೊಂಡ ಈ ಸಪ್ತಪದವು ಮಹತ್ವದ್ದಿದ್ದು ಪವಿತ್ರವೂ ಆಗಿದೆ  ವೇದಲ್ಲಿಯೂ ಏಳರ ಮಹತ್ವ ಇಂತಿದೆ.

ಸಪ್ತ ಪ್ರಾಣಾಃ ಪ್ರಭವಂತಿ ತಸ್ಮಾತ್ಸಪ್ತಾರ್ಚಿಷಃ |

ಸಮಿಧಸಪ್ತ ಜಿಹ್ವಾಃ  ಸಪ್ತ ಇಮೇ ಲೊಕಾ ||

ಯೇಷು ಚರಂತಿ ಪ್ರಾಣಾ ಗುಹಾಶಯಾನ್ನಿಹಿತಾ

ಸ್ಸಪ್ತಸಪ್ತ ಅತಸ್ಸಮುದ್ರಾಗಿರಯಶ್ಚ ಸರ್ವೇ

 ಸ್ಮಾತ್ಸ್ಯೆಂದಂತೆ ಸಿಂಧವ ಸ್ವರೂಪಾಃ ಅತಶ್ಚ ವಿಶ್ವಾ

ಓಷಧಯೋ ರಸಾಶ್ಚಯೇ ನೈಷ ಭೂತಸ್ತಿಷ್ಠತ್ಯಂತರಾತ್ಮಾ ||

ಹೀಗೆ-ಸಪ್ತ ಪದವು ಸಪ್ತ ಋಷಿಗಳನ್ನು, ಸಪ್ತ ಮಾತೃಕೆಯರನ್ನು, ಏಳಗ್ನಿಯನ್ನು ಏಳು ಸಮುದ್ರ, ಏಳುಗಿರಿಗಳನ್ನು ಮತ್ತು ವೇದಾಂತವನ್ನು ಭೋಧಿಸುವಾಗ ಶಿಷ್ಯನಿಗೆ ಸಪ್ತ ಭೂಮಿಕೆಗಳನ್ನು ಮತ್ತು ಲಗ್ನ ಸಮಾರಂಭದಲ್ಲಿ ಅಗ್ನಿ ಸಾಕ್ಷಿಯಾಗಿ ಸಪ್ತಪದಿಯನ್ನು ಮಾಡಿಸುವದನ್ನೂ ಸೂಚಿಸುತ್ತದೆ. ಭಕ್ತಿ ಭಾಂಡಾರಿ ಬಸವಣ್ಣನವರು ಸಕಲರ ಲೇಸಿಗಾಗಿ ಅಂತರಂಗ ಬಹಿರಂಗ ಶುದ್ಧಿಗಾಗಿ ಸಪ್ತಸೂತ್ರಗಳನ್ನೇ ಪ್ರತಿಪಾದಿಸಿದ್ದಾರೆ.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ,

ಮುನಿಯಬೇಡ, ತನ್ನ ಬಣ್ಣಿಸಬೇಡ,

ಅನ್ಯರಿಗೆ ಅಸಹ್ಯಪಡಬೇಡ, ಇದಿರು ಹಳಿಯಲುಬೇಡ,

ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ;

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿʼʼ

ಇದೇ ತೆರನಾಗಿ ಮಹಾದೇವನೇ ತಾನಾಗುವ ಸಪ್ತ ಸಾಧನಗಳನ್ನು ಆದಯ್ಯ ಶರಣರು ಬಹು ಮಾರ್ಮಿಕವಾಗಿ ಬೋಧಿಸಿದ್ದಾರೆ.

“ತನುವಿನಲ್ಲಿ ನಿರ್ಮೊಹ, ಮನದಲ್ಲಿ ನಿರಹಂಕಾರ

ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ

ವಿಷಯದಲ್ಲಿ ಉದಾಶೀನ, ಭಾವದಲ್ಲಿ ದಿಗಂಬರ

ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ

ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ”

ಇಂಥ ಸಪ್ತ ಸಾಧನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಪ್ತವ್ಯಸನಗಳನ್ನು ಅವಶ್ಯವಾಗಿ ದೂರೀಕರಿಸಲು ಶಕ್ತರಾಗುತ್ತೇವೆ. ಅಲ್ಲದೆ ಅಷ್ಟಾವರಣದ ಸಾಕ್ಷಾತ್ಕಾರ ದಿಂದ ಅಷ್ಟಮದಗಳನ್ನು ನಿವಾರಿಸಿಕೊಳ್ಳಲು  ಸಮರ್ಥರಾಗುತ್ತೇವೆಂಬುದನ್ನು ಶರಣ ಕವಿಯು ಈ ತ್ರಿಪದಿಯಲ್ಲಿ ಅಭಿವ್ಯಂಜನಗೊಳಿಸಿದ್ದಾನೆ.

ಸಪ್ತವ್ಯಸನಗಳನ್ನು ಅಷ್ಟಮದಗಳನ್ನು ಪರಿಹರಿಸಿಕೊಳ್ಳದಿದ್ದರೆ ತಲೆಯಿಲ್ಲದವರಾಗಿ ಮಾಯಾಂಗನೆಯ ಬಲೆಯಲ್ಲಿ ಬಿದ್ದು ಬಳಲಬೇಕಾಗುವದು. ಅದುಕಾರಣ ಅಷ್ಟಾವರಣದ ರಕ್ಷಾಕವಚದಿಂದ ಅಷ್ಟಮದಗಳನ್ನು ಧಿಃಕರಿಸಿ ಸಪ್ತ ಸಾಧನೆಗಳಿಂದ ಸಪ್ತವ್ಯಸನಗಳನ್ನು ನಾಶಮಾಡಿಕೊಂಡರೆ ಪರಿಶುದ್ಧನಾದ ಅಂಗವಾಗಿ ಭಕ್ತನಾಗುವ ಸೌಖ್ಯ ಸಿಕ್ಕುವದರಲ್ಲಿ ಯಾವ ಸಂದೇಹವಿಲ್ಲ. ಇದೆಲ್ಲದಕ್ಕೂ ಸದ್ಗುರುವಿನ ಕರಣೆಯೆಂಬುದು ಮೂಲವಾಗಿದೆ

 ರಂಭೆ ತಾಂ ತರುತಿರ್ಪ * | ಒಂಬತ್ತು ತೂತಿನಾ

ಕುಂಭದೊಳ್ನೀರು – ತುಂಬಿಕೊಂಡಿರ್ದುದೇ

ನೆಂಬೆನೈ ಗುರುವೆ ಕೃಪೆಯಾಗು    ||೬೪ ||

ಜೀವಾತ್ಮನು ಜ್ಞಾನವನ್ನು ಕಳೆದುಕೊಳ್ಳುವದಕ್ಕೆ ಕಾರಣವನ್ನು ಇಲ್ಲಿ ಸೂಚ್ಯವಾಗಿ ವಿವರಿಸುತ್ತಾನೆ. ಶಿವಕವಿಯ ದೃಷ್ಟಿಯಲ್ಲಿ ಸೌಂದರ್ಯಭಾವವೂ ತುಂಬಿ ಹೊರಸೂಸಿದೆ.

ಲೋಕ ವ್ಯವಹಾರದಲ್ಲಿ ನೀರು ತರುವ ನಾರಿಯರ ದೃಶ್ಯ ಸುಂದರವಾದುದು. ಕಮನೀಯವಾದುದು. ಆ ಸನ್ನಿವೇಶವನ್ನು ಮನೋಹರವಾಗಿ ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೊಡಹೊತ್ತವಳು ಸಾಮಾನ್ಯಳಲ್ಲ; ಅವಳು ರಂಭೆ, ಪದಪ್ರಯೋಗ ದಲ್ಲಿಯೂ ಆಕರ್ಷಣೆಯಿದೆ. ಅಮರಸಿಂಹನು ತನ್ನ ಅಮರಕೋಶ”ದಲ್ಲಿ –

“ಘೃತಾಚೀ ಮೇನಕಾ ರಂಭಾ ಊರ್ವಶೀ ಚ ತಿಲೋತ್ತಮಾ ।”

ಎಂದು ದೇವಲೋಕದ ಅಪ್ಸರೆಯರ ಹೆಸರನ್ನು ಹೇಳಿದ್ದಾನೆ. ಕಾರಣ ಈ ಮಾಯಾಂಗನೆಯಾದ ರಂಭೆಯು ಸ್ವರ್ಗಲೋಕದ ಅಪ್ಸರೆಯಂತೆ ಮತ್ತಷ್ಟು ಮೋಹಿನಿ ಯಾಗಿದ್ದಾಳೆ. ಇವಳು ಹೊತ್ತ ಕುಂಭ (ಕೊಡ) ಒಂಬತ್ತು ತೂತುಗಳಿಂದ ಕೂಡಿದೆ. ರಂಧ್ರಗಳು ಒಂಬತ್ತಿದ್ದರೂ ಒಳಗಿನ ನೀರು ಮಾತ್ರ ಹರಿದು ಹೋಗುವದಿಲ್ಲ. ಈ ವೈಚಿತ್ರಕ್ಕೆ ಏನೆಂಬೆನೆಂದು ಸ್ವತಃ ಶಿವಕವಿಯು ಅಚ್ಚರಿಪಟ್ಟಿದ್ದಾನೆ. ಇದು ಆಶ್ಚರ್ಯಕರ ಘಟನೆಯಲ್ಲದೆ ಮತ್ತೇನು ?

ದೇಹಾಭಿಮಾನಿಯಾಗಿರುವ ಜೀವನು ಮಾಯಾಮಯನಾಗಿರುವದರಿಂದ ಅವನು ಹೊತ್ತಕಾಯವೇ ಘಟವು. ಈ ಶರೀರ ಕೊಡಕ್ಕೆ ಎರಡು ಕಿವಿ, ಎರಡು ಕಣ್ಣು, ಎರಡು ಮೂಗಿನ ಹೊರಳೆಗಳು, ಒಂದು ಬಾಯಿ, ಒಂದು ಗುಹ್ಯ, ಇನ್ನೊಂದು ಗುದ  ಹೀಗೆ ಒಂಬತ್ತು ರಂಧ್ರಗಳಿವೆ. ಈ ಭೌತಿಕ ದೇಹವು ಒಂಬತ್ತು ಛಿದ್ರಗಳಿಂದ ತುಂಬಿದೆ. ಇಷ್ಟು ತೂತುಗಳಿದ್ದ ಕೊಡದಲ್ಲಿ ನೀರಿನಂತೆ ಚಂಚಲವಾದ ವಾಯುತತ್ತ್ವದ ಮನಸ್ಸು ಸೋರಿ ಹೋಗುವದಿಲ್ಲ. ಆದರೆ ಇಂದ್ರಿಯಗಳ ಮುಖಾಂತರ ತನ್ನ ಬಯಕೆಯ ಆಟವನ್ನು ಆಡುತ್ತಿದೆ. ಆದ್ದರಿಂದ ಹೊರಗಿನ ಬಹಿರ್ಮುಖಗಳಾದ ರಂಧ್ರಗಳನ್ನು ವಿಷಯಾದಿಗಳತ್ತ ಹರಿಬಿಟ್ಟಿರುವದರಿಂದ ಅವನು ಆಜ್ಞಾನಿಯಾಗಿದ್ದಾನೆ. ಇದನ್ನರಿತ ಅಣ್ಣನವರು –

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ !

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ !

 ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ !

 ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ

ಇರಿಸು ಕೂಡಲಸಂಗಮದೇವಾ !

ಎಂದು ಕಾಲು, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳು ಶಿವಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸೆಂದು ಶಿವನನ್ನು ಪ್ರಾರ್ಥಿಸಿದ್ದಾರೆ. ಶಿವನಲ್ಲಿ, ಶಿವಲಿಂಗ. ಧ್ಯಾನದಲ್ಲಿ, ಶಿವವಿಷಯಕಜ್ಞಾನದಲ್ಲಿ  ಏಕನಿಷ್ಠಾಪರನಾಗುವದರಿಂದ ಚಂಚಲವಾದ ಮನಸ್ಸುಸ್ಥಿರವಾಗುವದು

 ಜಮದಗ್ನಿಯ ಸತಿಯಾದ ರೇಣುಕಾ ಎಲ್ಲಮ್ಮನು ತನ್ನ ಪತಿಪೂಜೆಗಾಗಿ ಪ್ರತಿನಿತ್ಯ ಉಸುಗಿನ ಕೊಡದಲ್ಲಿ ಮಡಿ ನೀರನ್ನು ತುಂಬಿಕೊಂಡು ಸರ್ಪನ ಸಿಂಬಿಯ ಮೇಲಿಟ್ಟು ಕೊಂಡು ಬರುತ್ತಿದ್ದಳೆಂಬುದು ಪೌರಾಣಿಕ ಕಥೆಯು, ಅವಳು ತನ್ನ  ಪಾತಿವ್ರತ್ಯಧರ್ಮ ದಿಂದ ಇಂಥ ಅಘಟಿತ ಘಟನೆಯನ್ನು ಮಾಡುತ್ತಿದ್ದಳು.

ಇದರಂತೆ ಜೀವಾತ್ಮನು ಗುರುಕರುಣೆಯಿಂದ ಕಾಯ-ಘಟವನ್ನು ದೀಕ್ಷಾಗ್ನಿ ಯಲ್ಲಿ ಸುಡಿಸಿಕೊಂಡು ನವರಂಧ್ರಗಳಲ್ಲಿ ನವಲಿಂಗಗಳನ್ನು ತುಂಬಿಸಿಕೊಳ್ಳಬೇಕು. ಅದರಿಂದ ಈ ಕಾಯಘಟವು ಭದ್ರವಾಗುವದು. ಇಂಥ ಕೊಡದಲ್ಲಿ ಭಕ್ತಿರಸವು ತುಂಬಿ ಅಂಗನಿಗೆ ಆನಂದದಾಯಕವಾಗಬಲ್ಲುದು. ಹರಿದಾಡುವ ಮನವೂ ಇಂದ್ರಿಯ ಲಿಂಗಗಳಿಂದ ಕಾಣುವ ಪದಾರ್ಥಗಳ ಭೌತಿಕ ಗುಣವನ್ನು ನಿವಾರಿಸಿ ಪ್ರಸಾದಗಳನ್ನಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಪಡೆಯುವದು. ಮತ್ತು ಆತ್ಮವೂ  ಸಂತೃಪ್ತನಾಗುವನು. ಅಂಗನು ಸುಜ್ಞಾನ ಭರಿತ ಕ್ರಿಯೆಗಳಿಂದ ಲಿಂಗಾಂಗ ಸಾಮರಸ್ಯದ ಸುಖವನ್ನು ಸಾಧಿಸುವಂತಾಗುವನು.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಭವಿಗಳು ಧರ್ಮಸಾಧನೆಗೆ ಕಾರಣವಾದ ಶರೀರಕ್ಕೆ ಅನೇಕ ಉಪಮೆಗಳನ್ನು ಕೊಟ್ಟಿದ್ದಾರೆ. ಇಲ್ಲಿ ಘಟವೆಂದು ವರ್ಣಿಸಿದಂತೆ ಹಲಕೆಲವರು ಶರೀರವನ್ನು ಹುತ್ತವನ್ನಾಗಿ, ಕ್ಷೇತ್ರವನ್ನಾಗಿ, ಕಾಂತಾರವನ್ನಾಗಿ, ತೋಟವನ್ನಾಗಿ, ಕೆರೆಯನ್ನಾಗಿ, ದೇವಾಲಯವನ್ನಾಗಿ ಉಪಮಿಸಿದ್ದಾರೆ. ಪ್ರಾಸಂಗಿಕವಾಗಿ ಈ ವಚನಗಳು ಮನನೀಯವಾಗಿವೆ ತೋಂಟದ ಸಿದ್ಧಲಿಂಗಯತಿಗಳು –

“ತನುವೆಂಬುದುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು;

ತಾಮಸವೆಂಬ ಸರ್ಪಂಗೆ ತಲೆ ಹದಿನಾಲ್ಕು, ಒಡಲಾರು,

ಬಾಲನ ಬ್ರಹ್ಮಲೋಕಕ್ಕೆ ಇಟ್ಟು ಶಿರವ ಹರಿದ್ವಾರದಲ್ಲಿರಿಸಿ

ಕರಣೇಂದ್ರಿಯಂಗಳೆಂಬ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ |

ಆ ವಿಷವು ಶಿವಶರಣರಲ್ಲದವರನೆಲ್ಲರ ಸುಡುವುದ ಕಂಡೆನು

ಕಾಣಾ ಮಹಾಲಿಂಗ ಗುರುಶಿವಸಿದ್ದೇಶ್ವರ ಪ್ರಭುವೆ”

ಎಂದಿದ್ದರೆ – ಮಹಾ ಶಿವಶರಣೆ ಲಿಂಗಮ್ಮನು  

ʼʼತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ

ಹೆಡೆ ಎತ್ತಿ ಆಡುತ್ತಿರಲು, ಆ ಸರ್ಪನ ಕಂಡು

ನಾ ಹೆದರಿಕೊಂಡು ಗುರುಕರುಣವೆಂಬ ಪರುಷವ

ತಂದು ಮುಟ್ಟಿಸಲು ನೋಟ ನಿಂದಿತ್ತು;

ಹೆಡೆ ಅಡಗಿತ್ತು, ಗುರುಕರುಣವೆಂಬ ಪರುಷವೆ ನಿಂದಿತ್ತು.

ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ

ಶರಣರ ಪಾದವ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯ

ಅಪ್ಪಣ್ಣಪ್ರಿಯ ಚನ್ನಬಸವಣ್ಣಾ !’

ತನುವನ್ನು ಹುತ್ತನ್ನಾಗಿಯೂ, ಮನವನ್ನು ಸರ್ಪವನ್ನಾಗಿ ಕಂಡಿದ್ದಾರೆ. ತನು- ಹುತ್ತಿನ, ಮನ-ಸರ್ಪನ ವೈಷಯಿಕ ವಿಷವು ಗುರುಕರುಣದಿಂದ ದೂರವಾಗುವದರಲ್ಲಿ ಸಂಶಯವಿಲ್ಲ. ಶಿವಶರಣರಾದವರಿಗೆ ಈ ವಿಷ ಅಮೃತವಾಗುತ್ತದೆ. ಕಾರಣ  ಸದ್ಗುರುವಿ ನಲ್ಲಿ ಶರಣಾಗತನಾಗಿ ಕಾಯವನ್ನು ಪಾವನವನ್ನಾಗಿಸಿ ಕೊಳ್ಳುವದು ಶಿಷ್ಯನ ಧರ್ಮವಾಗಿದೆ

ಗಾಳಿಗಿಕ್ಕಿದ ಸೊಡರಿ | ನೇಳಿಗೆಯನೇನೆಂಬೆ

ಬಾಳ್ವ ಧನಿಕರನು – ಗೀಳು ಮಾಡುವದೈ  ಕೃ –

ಪಾಳು ಶ್ರೀ ಗುರುವೆ ಕೃಪೆಯಾಗು     [೬೫ |

ಇನ್ನು ಗುರುಕರರುಣೆಯನ್ನು ಪಡೆಯದ ಕಾಯವು ಗಾಳಿಗಿಕ್ಕಿದ ಸೊಡರಿನಂತೆ ತೀವ್ರನಾಶವಾಗಿ ಹೋಗುವದೆಂಬುದನ್ನು ಸೋದಾಹರಣಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.

ಮಾನವಜನ್ಮವು ಬಹು ಪುಣ್ಯಪ್ರದವಾದುದು. ಬಹುಜನ್ಮದ ಪುಣ್ಯದ ಫಲದಿಂದ ಮಾನವ ಶರೀರ ಲಭ್ಯವಾಗುತ್ತದೆ. ಅದರ ಮಹತ್ವವನ್ನರಿತು ಸಾರ್ಥಕ ಮಾಡಿಕೊಳ್ಳು ವದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ನೀತಿಕಾರರು –

“ಮಹತಾ ಪಣ್ಯ ಪಣ್ಯೇನ

ಕ್ರೀತೇಯಂ ಕಾಯನೌಸ್ತ್ವಯಾ |

ಪಾರಂ ದುಃಖೋದಧೇರ್ಗಂತುಂ

ತರ ಯಾವನ್ನ ಭಿದ್ಯತೇ ॥”

ಶರೀರವೆಂಬ ನೌಕೆಯನ್ನು ಮಹತ್ತರವಾದ ಪುಣ್ಯಫಲದಿಂದ ಖರೀದಿ ಮಾಡಿದ್ದೇವೆ. ಈ ನಾವೆಯಿಂದ ದುಃಖಮಯವಾದ ಸಂಸಾರಸಾಗರವನ್ನು ತೀವ್ರವಾಗಿಯೇ ದಾಟಬೇಕು. ಯಾಕೆಂದರೆ ಯಾವಾಗ ಈ ನೌಕೆಯು ಒಡೆದು ಹೋದೀತೆಂಬುದು  . ಗೊತ್ತಿಲ್ಲವೆಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಮಾನವ ಜನ್ಮವೇ ಸಕಲ ಜೀವ ಜಂತುಗಳಲ್ಲಿ ಮಿಗಿಲಾಗಿದೆ

ಕ್ರಿಮಿ ಕೀಟ-ಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ |

ಪಶುಭೋSಪಿ ನರಾಃ ಶ್ರೇಷ್ಮಾ………..!!?

ಕ್ರಿಮಿ, ಕೀಟ, ಪತಂಗಗಳಿಗಿಂತಲೂ ಪಶುಗಳು ತಿಳುವಳಿಕೆಯುಳ್ಳವುಗಳಾಗಿರುತ್ತವೆ. ಅವುಗಳಿಗಿಂತ ಮಾನವನು ಶ್ರೇಷ್ಠನಾಗಿದ್ದಾನೆಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಮಾನವ ಜನ್ಮದ ಅಧಿಕ್ಯತೆಯನ್ನು ಪ್ರತಿಪಾದಿಸಿದ್ದಾರೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ –

”ದುರ್ಲಭಂ ಮಾನುಷಂ ಪ್ರಾಪ್ಯ

ಜನನಂ ಜ್ಞಾನ-ಸಾಧನಮ್ |

ಯೇ ನ ಜಾನಂತಿ ದೇವೇಶಂ

ತೇಷಾಮಾತ್ಮಾ ನಿರರ್ಥಕಃ” ॥ ೧೧.೬೩ ||

ದುರ್ಲಭವಾದ, ಜ್ಞಾನಕ್ಕೆ ಸಾಧನವಾದ ಮಾನುಷ ಜನ್ಮವನ್ನು ಪಡೆದೂ ಪರಮಾತ್ಮನನ್ನು ಯಾರು ತಿಳಿಯುವದಿಲ್ಲವೋ ಅವರ ಆತ್ಮವು ನಿರರ್ಥಕವಾದುದೆಂದು ಬೋಧಿಸಿದ್ದಾರೆ. ಆತ್ಮತತ್ತ್ವವನ್ನು ತಿಳಿಯಬೇಕಾದದ್ದು ಮಾನವ ಜನ್ಮದ ಮಹಾಮಣಿಹ. ಅದುವೇ ಮನುಷ್ಯನ ಕರ್ತವ್ಯವೂ ಆಗಿದೆ. ಕರ್ತವ್ಯವನ್ನು ಮರೆತರೆ ಕಾಯದ ಫಲ ದಕ್ಕುವದಿಲ್ಲ. ಅದು ನಿರರ್ಥಕವಾಗಿ ಹೋಗುವದು.

ಕರ್ತವ್ಯ ಚ್ಯುತಿಯಾದರೆ ವಾಸನಾ ಬಲವು ಬಲಿಯುವದು. ಈ ವಾಸನಾ ಗಾಳಿಯು ಜನ್ಮ-ಜನ್ಮಾಂತರದಲ್ಲಿ ಪವಿತ್ರ ಮಾನವ ಶರೀರವನ್ನು ಹಾಳು ಮಾಡಿ ಬಿಡುತ್ತದೆ. ಗಾಳಿಯಲ್ಲಿ ಇರಿಸಿದ ದೀಪಕ್ಕೆ ಏಳಿಗೆಯಾಗುವದಿಲ್ಲವೆಂಬುದು ಬಾಲಕನಿಗೂ ಸಹ ತಿಳಿದ ವಿಷಯ. ಈ ದೀಪಕ್ಕೆ ಪ್ರಾಣವಾಯು ಬೇಕು. ಅದು ಅತಿಯಾಗಬಾರದು. ಮಿತವಾದ, ಗಾಳಿಯಿಂದ ಜ್ಯೋತಿಯು ಶಾಂತವಾಗಿ ಬೆಳಗಿ ಪ್ರಕಾಶವನ್ನು ಕೊಡಬಲ್ಲುದು. ಇದರಂತೆ ಶರೀರವೆಂಬ ಪ್ರಣತಿಯಲ್ಲಿ ಜ್ಞಾನಜ್ಯೋತಿಯು  ಪ್ರಾಣವಾಯುವಿನಿಂದಲೇ ಪ್ರಜ್ವಲಿಸುತ್ತದೆ. ಪ್ರಾಣವಾಯುವು ವಿಷಯವಾಸನಾ ರೂಪವನ್ನು ತಾಳಿದರೆ ಜ್ಞಾನ ಜ್ಯೋತಿಗೆ ಮಂಕುಬರುವದು. ಪ್ರಕಾಶ ಪಸರಿಸದು. ಅಂದರೆ ಶಾರೀರಿಕ ವ್ಯಾಮೋಹವು ಸುಜ್ಞಾನಕ್ಕೆ ಅಡ್ಡಿಯಾಗುವದು. ಅದು ಬಲು ಬಲವತ್ತರವಾದುದು. ಶಾರೀರಿಕ ವ್ಯಾಮೋಹದಿಂದ ವೈಷಯಿಕ ಗಾಳಿಯು ಬಲ್ಲಿದೆನೆನ್ನುವ ಜ್ಞಾನಧನಿಕರ ಜ್ಞಾನಜ್ಯೋತಿ ಯನ್ನು ನಷ್ಟಗೊಳಿಸಿ ಜೀವನವನ್ನೇ ಗೀಳು ಮಾಡಿ (ಹಾಳು ಮಾಡಿ) ಬಿಡುವದು. ಇಲ್ಲಿ “ಬಾಳ್ವ’ ಪದಕ್ಕಿಂತಲೂ ಬಲ್ಲ’ ಪದ ಪ್ರಯೋಗವು  ಸಾರ್ಥಕವೆನಿಸುತ್ತದೆ

 ಶರೀರವು ಸುಖಕ್ಕೂ, ಮತ್ತು ದುಃಖಕ್ಕೂ ಕಾರಣವಾಗಿದೆ. ವಿಷಯ ಗಾಳಿಯನ್ನು ದೂರಮಾಡಿ ಸತ್ಕರ್ಮಯುತವಾದರೆ ಅದು ಸುಖಕ್ಕೆ ಸಾಧನವಾಗುವದು, ವಾಸನಾಗಾಳಿ ಬಲಿಷ್ಠವಾದರೆ ದುಖಿಯೂ ಆಗುವದು. ಇದೇ ಮಾತನ್ನು ಮಹಾಭಾರತದಲ್ಲಿ

‘ಶರೀರಮೇವಾಯತನಂ ಸುಖಸ್ಯ

ದುಖಸ್ಯ ಚಾಪ್ಯಾಯತನಂ ಶರೀರಮ್ |

ಯದ್ಯಚ್ಛರೀರೇಣ ಕರೋತಿ ಕರ್ಮ

ತೇನೈವ ದೇಹೀ ಸಮುಪಾಶ್ನುತೆ ತತ್ ||

ʼʼಸುಖಕ್ಕೂ ಹಾಗೂ ದುಃಖಕ್ಕೂ ಶರೀರವೇ ಸದನ (ಮನೆ)ವಾಗಿದೆ. ಈ ಶರೀರದಿಂದ ಯಾವ ಪ್ರಕಾರದ ಕರ್ಮಮಾಡುವನೋ ಅಂಥ ಫಲವನ್ನು ಪಡೆಯುವನೆಂದು” ವ್ಯಾಸರು ನಿರೂಪಿಸಿದ್ದು ಸಮೀಚೀನವೇ ಆಗಿದೆ.

ಜ್ಞಾನಿಯೂ ಸಹ ಒಮ್ಮೊಮ್ಮೆ ವಾಸನಾಬಲದಿಂದ ದುಷ್ಕರ್ಮವನ್ನೇ ಮಾಡತೊಡಗುವನು. ಅಂಥ ಸಂದರ್ಭದಲ್ಲಿ –

ಕಾಮಾರ್ತಾ ಹಿಂ ಪ್ರಕೃತಿಕೃಪಣಾಃ :

ಚೇತನಾ…ಚೇತನೇಷು (ಮೇಘದೂತ)

ವಿಷಯ ವಾಸನಾಯುಕ್ತರಾದ ಕಾಮುಕರು ಚೇತನ ಮತ್ತು ಆಚೇತನ ವಸ್ತುಗಳಲ್ಲಿ ಸಹ ಸ್ವಭಾವತಃ ದೀನರಾಗುವರೆಂಬ ಕಾಲಿದಾಸನ ಮಾತು ಸತ್ಯವೆನಿಸುವದು. ಭಾರವಿಕವಿಯ “ಕಿರಾತಾರ್ಜುನೀಯ” ಕಾವ್ಯದಲ್ಲಿ,

ʼ’ಆಪಾತರಮ್ಯಾಃ ವಿಷಯಾಃ ಪರ್ಯಂತಪರಿತಾಪಿನಃ |

ʼʼಪ್ರಾರಂಭದಲ್ಲಿ ಶಬ್ದಾದಿ ವಿಷಯಗಳು ರಮ್ಯವೆನಿಸಿ ಅಂತ್ಯದಲ್ಲಿ ದುಃಖವನ್ನೇ ಕೊಡತಕ್ಕವುಗಳೆಂದೂ” ಪ್ರತಿಪಾದಿಸಿದ್ದಾನೆ. ಇಂಥ ವಿಷಯವಾಸನೆಯಿಂದ ಜೀವನು ಅನಂತ ಬಾಧೆಗಳನ್ನು ಅನುಭವಿಸಿ ಹುಟ್ಟು-ಸಾವುಗಳಿಗೆ ಒಳಗಾಗುವನು. ಇದನ್ನರಿತ ನಿಜಗುಣರು ದಯಾಮಯನಾದ ಶಂಕರನಲ್ಲಿ ಅನನ್ಯವಾಗಿ ಬೇಡಿಕೊಂಡದ್ದು ಯೋಗ್ಯವೆನಿಸಿದೆ.

ಶಂಕರಾ ! ನೋಡು ನೀನೆನ್ನ ಪರಿಭವದ ಬಾಧೆಯನು ಕೃಪೆ

ಮಾಡು ಬೇಗದೊಳಗಭಯವಿತ್ತು | ಶಂಕರಾ ।। ಪ ।।

ಮಾಯ ಕರ್ಮದ ಭಾಧೆ, ಕಾಯಕರಣದ ಬಾಧೆ |

ವಾಯು ವಿಷಯೇಂದ್ರಿಯದ ಬಾಧೆ | ಶಂಕರಾ ।।

ಹೇಯವಹ ಜನನ ಮರಣದ ಬಾಧೆ ತಾಪ- ಸಮು

ದಾಯದತಿಬಾಧೆ ಬಲುಹೆನಗೆ | ಶಂಕರಾ || ॥ ೧ ॥

 ಹಸಿವು ತೃಷೆಗಳ ಬಾಧೆ ವ್ಯಸನವೇಳರ ಬಾಧೆ |

ದೆಸೆಗೆಡಿಸುವರಿಕುಳದ ಬಾಧೆ | ಶಂಕರಾ ||

ಕುಸುಮ ಬಾಣನ ಬಾಧೆ ಮದಶೋಕ ಮೋಹರತಿ

ವಿಸರದುರುಬಾಧೆ ಘನವೆನಗೆ | ಶಂಕರಾ ||

(ಕೈವಲ್ಯ ಪದ್ಧತಿ)

ದೇಹಧಾರಿಗೆ ಎನಿತೆನಿತು ಬಾಧೆಗಳಿವೆಯೆಂಬುದು ಈ ಪದ್ಯದಿಂದ ವೇದ್ಯವಾಗದೆ ಇರದು. ಇಷ್ಟು ಬಾಧೆಗಳನ್ನು ಸಹಿಸಿಯೂ ತೀವ್ರ ಶಿವನತ್ತ ಮನಹರಿದರೆ ಜೀವಾತ್ಮನ ತನು ಸಾರ್ಥಕವಾಗುವದು. ಶರೀರವು ಬಾಧೆಗಳಿಂದ ಲಘುತ್ವವನ್ನು ಹಾಗೂ ಆ ಕಷ್ಟಗಳನ್ನು ಪರಿಹರಿಸುವ ಪರಮಗುರುವಿನಲ್ಲಿ ಮೊರೆ ಹೊಕ್ಕರೆ ಸಾಫಲ್ಯತೆಯನ್ನು ಶಿವಯೋಗಿಗಳು ಪಡೆಯುವದು. ಆದ್ದರಿಂದ ಗುರುದೀಕ್ಷೆಯನ್ನು ಹೊಂದಿ ಶಿವಲಿಂಗಾರಾಧನೆಯಿಂದ ಕಾಯವನ್ನು ಕೀರ್ತಿಮಯಗೊಳಿಸಿಕೊಳ್ಳಬೇಕು. ಮತ್ತೊಂದೆಡೆಯಲ್ಲಿ ನಿಜಗುಣ ಶಿವಯೋಗಿಗಳು-

 “ನರಜನ್ಮದಿಂದಿಹದೊಳು ಮಿಗಿಲುಂಟೆ?

ಎಂದು ಹಾಡಿಹರಿಸಿದ್ದಾರೆ.  ನರಜನ್ಮಮಿಗಿಲಾಗಿದ್ದರೂ ಈ ಕಾಯದ ಇರುವಿಕೆಯು ಅನಿಶ್ಚಿತವಾದುದು ಅದನ್ನರಿತು ತೀವ್ರವಾಗಿ ಪರಶಿವನನ್ನು ಆರಾಧಿಸಬೇಕು. ಅಣ್ಣನವರು.

|| ೨ ||

ನೆರೆ ಕೆನ್ನಗೆ, ತೆರೆ ಗಲಕ್ಕೆ, ಶರೀರಗೂಡು ವೋಗದ ಮುನ್ನ,

ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕೈಯ್ಯನೂರಿ ಕೋಲು ಹಿಡಿಯದ ಮುನ್ನ,

ಮುಪ್ಪಿಂದೊಪ್ಪುವಳಿಯದ ಮುನ್ನ,

ಮೃತ್ಯು ಮುಟ್ಟದ ಮುನ್ನ,

ಪೂಜಿಸು ನಮ್ಮ ಕೂಡಲ ಸಂಗಮದೇವನ.

 ಮತ್ತು   

“ನೀರಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು

ಸುರಕ್ಷಿತವ ಮಾಡುವ ಭರವನೋಡಾ !

ಮಹಾದಾನಿ ಕೂಡಲ ಸಂಗಮದೇವನ

ಭಜಿಸಿ ಬದುಕೋ ಕಾಯವ ನಿಶ್ಚಯಿಸದೆ.”

ಮುಂತಾಗಿ ಶರೀರದ ಯಥಾರ್ಥ ಚಿತ್ರವನ್ನು ಚಿತ್ರಿಸಿದ್ದಾರೆ. ಸ್ವಭಾವತಃ ಶರೀರವು ಜೀರ್ಣವಾಗುವಂಥಹದು. ಅಂತೆಯೇ ವ್ಯಾಕರಣಕಾರರು

ʼʼಶೀರ್ಯತ ಇತಿ ಶರೀರಮ್ʼʼ

ʼʼಜೀರ್ಣವಾಗಿ ಹೋಗುವದೆಂಬುದಾಗಿಯೇ ಇದಕ್ಕೆ ಶರೀರವೆಂದು ಹೆಸರು ಬಂದಿದೆ.” ಯೆಂದು ವ್ಯಾಖ್ಯೆಯನ್ನು ಮಾಡಿದ್ದಾರೆ. ಶರೀರವು ನೀರಗುರುಳ್ಳಿಯಂತೆ ನಶ್ವರವಾಗಿದ್ದು ಅದನ್ನೇ ಮೆಚ್ಚಿ ಸಮಯವನ್ನು ಕಳೆಯುವದಕ್ಕಿಂತ ಆದರಿಂದ ಸದ್ಧರ್ಮವನ್ನು ಸಾಧಿಸು ವದು ಮೇಲು. ಸ್ಕೂಲ ಶರೀರನಾಶವಾದರೂ ಕಾರಣಗತ ಸದ್ಗುಣಗಳು ಶಾಶ್ವತವಾಗಿ ಉಳಿಯುತ್ತವೆ. ಅಂತೆಯೆ ಹಿತೋಪದೇಶ”ದಲ್ಲಿ ಪಂಡಿತ ವಿಷ್ಣು ಶರ್ಮನು –

“ಶರೀರಂ ಕ್ಷಣವಿಧ್ವಂಸಿ ಕಲ್ಪಾಂತರ ಸ್ಥಾಯಿನೋ ಗುಣಾಃ |’

ಶರೀರವು ಕ್ಷಣಭಂಗುರವಾದರೆ, ತನುವಿನಿಂದ ಸಂಪಾದಿತವಾದ ಗುಣಗಳು ಯುಗ ಯುಗಾಂತರದಲ್ಲಿ ಅಮರವಾಗಿ ಉಳಿಯುತ್ತವೆ”ಯೆಂದು ಶರೀರದ ಸಾರ್ಥಕತೆಯ ಮಹತ್ವವನ್ನು ಬಿತ್ತರಿಸಿದ್ದಾನೆ.

ಪರಶಿವನನ್ನು ಕಾಣುವ ಪರಮಸಾಧನವೂ ಕಾಯ”ವೆಂದು ಮಹಾಜ್ಞಾನಿ ಚನ್ನಬಸವಣ್ಣನವರು ಕೆಳಗಿನಂತೆ ತಿಳಿಸಿದ್ದಾರೆ.

“ಕಾಯದಿಂದ ಲಿಂಗದರುಶನ,

ಕಾಯದಿಂದ ಜಂಗಮದರುಶನ,

ಕಾಯದಿಂದ ಪ್ರಸಾದ ಸಂಪತ್ತು,

ಕೂಡಲ ಚನ್ನಸಂಗಯ್ಯ ಈ ಕಾಯದಿಂದ ನಿಮ್ಮ ಕಂಡೆನಯ್ಯಾ !

ತನುವಿನಿಂದಲೇ ಲಿಂಗ-ಜಂಗಮ ದರ್ಶನವಾಗುವದು. ಅದರಿಂದಲೇ ಪರಮ ಪ್ರಸಾದ ಸಂಪತ್ತು ಲಭ್ಯವಾಗುವದು.

ಅದುಕಾರಣ ವಾಸನಾಗಾಳಿಯ ಸೆಳೆತಕ್ಕೆ ಸಿಕ್ಕು ನಾಶಹೊಂದುವ ಶರೀರವನ್ನು ಮತ್ತು ಅದರೊಳಗಿರುವ ಜ್ಞಾನ ಜ್ಯೋತಿಯನ್ನು ಶ್ರೀ ಗುರುಕರುಣೆಯಿಂದ ಬೆಳಗಿಸಿಕೊಳ್ಳಬೇಕು. ಕಾಯದ ಸಾಫಲ್ಯತೆಯನ್ನು ಪಡೆಯಬೇಕು. ಆತ್ಮಜ್ಞಾನದ ಸೊಬಗನ್ನು ಸಾಧಿಸಬೇಕು. ಅದುವೆ ಮಾನವ ಜೀವನದ ಮುಖ್ಯ ಗುರಿ, ಮೇರುಸಿರಿ, ಓ ಗುರುವೇ ಅಂಥ ಜ್ಞಾನ ಬೆಳಕನ್ನು ನೀಡಿ ಕೃಪೆಮಾಡಿ ಕಾಪಾಡು.

ಶಿವಕವಿಯು ಪಂಚಮಹಾಭೂತಗಳ ವಿಷಯವನ್ನು ತಿಳಿಸಿದ ಮೇಲೆ ದೇಹ ವಿಕಾರವನ್ನು ಪ್ರತಿಪಾದಿಸಿರುವದರಿಂದ ಅಧ್ಯಾತ್ಮಿಕ ಅಧಿಕಾರಿಗೆ ಶರೀರ ಮತ್ತು ಜೀವನದ ನೈಜವಿಚಾರಗಳನ್ನು ತಿಳಿಯುವಲ್ಲಿ ಸುಲಭವಾಗಿದೆ. ಸಾಂಸಾರಿಕ ಹೇಯವನ್ನು ಮನಗಾಣುವಲ್ಲಿ ಕ್ರಮಬದ್ಧವಾಗಿದೆ. ಕಾಲ-ಕಾಮ ಮಾಯೆಗಳ ಕಾಟವು ದೇಹವನ್ನು ಮುತ್ತಿ ದಹಿಸುತ್ತದೆ. ನಾಶಮಾಡುತ್ತದೆ. ಇದನ್ನರಿತು ಸದ್ಗುರು ಕರುಣೆಯನ್ನು ಶೀಘ್ರವಾಗಿ ಪಡೆಯಬೇಕಾದುದು ಮುಖ್ಯ ಧೈಯವೆಂಬ ಮಾತು ಸುಸ್ಪಷ್ಟವಾಗಿದೆ.

ಡಾ.ಚೆನ್ನಕ್ಕ ಪಾವಟೆ

ಪ್ರಸ್ತಾವನೆ: ಕೈವಲ್ಯ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಕಾರದ ತತ್ವಸಾಹಿತ್ಯ ಅನುಭಾವಿಗಳ ಅನುಭವವಾಣಿಯಾಗಿ ಮಾನವಜೀವನದ ಯೋಗಕ್ಷೇಮಕ್ಕಾಗಿ ಹೊರಹೊಮ್ಮಿದವು ಕೈವಲ್ಯತತ್ವಗಳು. ಸಕಲಜೀವಾತ್ಮರಿಗೆ ಲೇಸನೇ ಬಯಸುವ ಮಣಿಹ ಹೊತ್ತು, ಅವರ ಜೀವನಕ್ಕೆ ಸ್ಪಂದಿಸಿ ಹಸನುಗೊಳಿಸಲು ರೂಪಿತಗೊಂಡ ಸುವರ್ಣಮಾಧ್ಯಮಗಳು. ಗೇಯಪ್ರಧಾನ, ಸ್ವರಪ್ರಧಾನ ಮಾಧ್ಯಮವಾದ ಈ ಕಾವ್ಯಪ್ರಕಾರವನ್ನು ಅನುಭಾವಿಗಳು ತತ್ವಪದಗಳೆಂದು ಕರೆದಿರುವರು. ವಿಭಿನ್ನ  ಮಟ್ಟಗಳಲ್ಲಿ ತಾಳ ಲಯ ಭಾವ ಪ್ರಧಾನವಾಗಿ, ಹಾಡಲು ಸರಳವಾಗುವಂತೆ ಜನಸಾಮಾನ್ಯರಿಗೆ ಮನಮುಟ್ಟುವ ನೇರಭಾಷೆಯಲ್ಲಿ ಈ ಹಾಡುಗಬ್ಬಗಳನ್ನು ರಚಿಸಿರುವರು. ಸಂಗೀತ ಸಾಹಿತ್ಯ ಅಧ್ಯಾತ್ಮ ಈ ಮೂರು ದೃಷ್ಟಿಗಳನ್ನೊಳಗೊಂಡ ಮುಪ್ಪುರಿಯ ಪ್ರಕಾರದ ವಿಶಿಷ್ಟ ಸಾಧನ ಇದು. ಶರಣರ ಬದುಕಿನ ಮೌಲ್ಯಗಳನ್ನು ಲೋಕಕ್ಕೆ ಅರುಹಲು ಸಾರ್ಥಕ ಬದುಕಿನ ನಿರ್ಮಾಣಕ್ಕೆ ಅನುಭಾವ ಪದಗಳು ದಾರಿದೀಪವಾಗಿವೆ.

ಶರಣರ ಗದ್ಯಾತ್ಮಕ ಬರವಣಿಗೆಗೂ ಸರ್ವಜ್ಞನ ಪದ್ಯಾತ್ಮಕ ಬರವಣಿಗೆಗೂ ನಾವು ‘ವಚನ’ ವೆಂಬ ಪದವನ್ನು ಬಳಸುತ್ತೇವೆ. ಇದನ್ನು ಗಮನಿಸಿದರೆ ‘ವಚನ’ ವೆಂಬ ಪದ ಗದ್ಯ ಆಕೃತಿಯನ್ನು ಸೂಚಿಸುವದಿಲ್ಲ; ಪದ್ಯ ಆಕೃತಿಯನ್ನೂ ಸೂಚಿಸುವದಿಲ್ಲ, ‘ಪ್ರಾಮಾಣಿಕತೆ’ ಎಂಬ ಆಶಯವನ್ನು ಸೂಚಿಸುತ್ತಿರಬಹುದೆನಿಸುತ್ತದೆ. ಪ್ರಾಮಾಣಿಕತೆ ಅಥವಾ ಪ್ರಮಾಣ ಮಾಡಿ ಹೇಳುವಿಕೆಗೆ ನಾವು ‘ವಚನ’ (Promise) ಎನ್ನುವುದನ್ನು ಇಲ್ಲಿ ನೆನೆಯಬಹುದು. ಆದುದರಿಂದ ವಚನವೆನ್ನುವುದು ಆತ್ಮದೇವತೆಯ ಮೇಲೆ ಆಣೆ ಇಟ್ಟು ಗದ್ಯರೂಪದಲ್ಲಿಯೋ ಪದ್ಯರೂಪದಲ್ಲಿಯೋ ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದುದು ಎನ್ನಬೇಕಾಗುತ್ತದೆ.

ಸ್ವರವಚನವೆಂಬುದು ವೀರಶೈವರು ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ. ಸ್ವರವಚನ, ಸ್ವರಪದ ಸ್ಥೂಲಅರ್ಥದಲ್ಲಿ ಇದು ಹಾಡುಗಬ್ಬ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಪಲ್ಲವಿ-ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ, ಇದು ಸ್ವರವಚನದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಅನುಭಾವ ಪದಗಳ ತಲೆಯ ಮೇಲೆ ರಾಗಗಳ, ಕೆಲವೊಮ್ಮೆ ತಾಳಗಳ ನಿರ್ದೇಶನವಿರುತ್ತಿದ್ದು, ಇದು ಅನುಭಾವಿಗಳ ಸಂಗೀತ ಜ್ಞಾನಕ್ಕೆ ಸೂಚನೆ ಎನಿಸಿವೆ. ವೀರಶೈವತತ್ವ, ಲೋಕನೀತಿ ಇದರ ವಸ್ತುಸಂಪತ್ತು.

ಕನ್ನಡ ಅನುಭಾವ ಪದಗಳ ಪರಂಪರೆ ಶಿವಶರಣರಷ್ಟೇ ಪ್ರಾಚೀನವಾದುದು. ಬಸವಾದಿ ಪ್ರಮಥರ ವಚನಮಾಲಿಕೆಯಲ್ಲಿ ನಡೆದು ಬಂದ ಚನ್ನಬಸವಣ್ಣನವರ ‘ಪದಮಂತ್ರಗೋಪ್ಯ’, ಮಹಾದೇವಿಯಕ್ಕನ ಯೋಗಾಂಗತ್ರಿವಿಧಿ’, ಶಿವಯೋಗಿ ಸಿದ್ಧರಾಮನ ‘ಬಸವ ತ್ರಿವಿಧಿ’ಗಳನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ವಚನಕಾರರು ‘ಮರ್ತ್ಯಲೋಕವನ್ನು ಕರ್ತಾರನ ಕಮ್ಮಟ’ವಾಗಿಸುವ ಅನುಭಾವಿಗಳೂ, ಶಿವಾನುಭಾವಿಗಳೂ ವಾಗ್ಗೇಯಕಾರರೂ ಆಗಿದ್ದರೆಂದು ಹೇಳಬೇಕು.

ಕರ್ನಾಟಕದ ಅಧ್ಯಾತ್ಮಿಕ ಚರಿತ್ರೆಯಲ್ಲಿ ಶರಣರ ಬಳಿವಿಡಿದು ಬಂದ ಅನುಭಾವಿಗಳ ಪರಂಪರೆ ತುಂಬ ದೊಡ್ಡದು. ಷಟ್‌ಶಾಸ್ತ್ರಗಳ ರಚನಕಾರರಾಗಿ, ತತ್ವಜ್ಞಾನದ ಮೇರು ಶಿಖರವನ್ನೇರಿದ ನಿಜಗುಣ ಶಿವಯೋಗಿಗಳು ಈ ಪರಂಪರೆಯಲ್ಲಿ ಮೊದಲಿಗರು. ಅವರು ಬಾಳಿ ಬದುಕಿದುದು ಹದಿನೈದನೆಯ ಶತಮಾನದಲ್ಲಿ, ತತ್ವಪದ, ಹಾಡುಗಬ್ಬ ಹಾಗೂ ಅನುಭಾವಗೀತೆಗಳು-ಒಟ್ಟಾರೆ ಕೈವಲ್ಯಸಾಹಿತ್ಯಕ್ಕೆ ಇವರನ್ನು ಆದ್ಯ ಪ್ರವರ್ತಕರೆಂದು ವಿದ್ವಾಂಸರು ಗುರುತಿಸಿದ್ದಾರೆ.

ಇವರ ಸಮಕಾಲೀನರೆಂದು ಸಾರುವ ಮುಪ್ಪಿನ ಷಡಕ್ಷರಿಗಳು, ಸರ್ಪಭೂಷಣ ಶಿವಯೋಗಿಗಳು, ಘನಮಠಾರ್ಯರು, ಬಸವಲಿಂಗಶರಣರು, ಬಾಲಲೀಲಾಮಹಂತ ಶಿವಯೋಗಿಗಳು, ಕಡಕೋಳದ ಮಡಿವಾಳೇಶ್ವರರು, ಶಾಲ್ಯದ ಅರಸರು, ಕರಿಬಸವಸ್ವಾಮಿಗಳು, ಶಂಕರಾನಂದ ನಿಂಬರಗಿ ಮಹಾರಾಜ, ಮತಕೂರು ನಂಜುಡಸ್ವಾಮಿಗಳು ಮೊದಲಾದವರು ಅನುಭಾವ ಪದಗಳ ಪರಂಪರೆಯಲ್ಲಿ ಮಿನುಗಿದ ಅನುಭಾವಿರತ್ನಗಳು.

ಮುಪ್ಪಿನ ಷಡಕ್ಷರಿಗಳ ನೆಲೆ-ಬೆಲೆ:

ಕನ್ನಡ ಅನುಭಾವ ಸಾಹಿತ್ಯ ಕ್ಷೇತ್ರದಲ್ಲಿ ಮುಪ್ಪಿನ ಷಡಕ್ಷರಿಗಳದ್ದು ವಿಶಿಷ್ಟವಾದ ಸ್ಥಾನಮಾನ, ಅಂತರಂಗ ಸಾಧನೆಯ ಆತ್ಮಕಥೆಯನ್ನು ಬಿಂಬಿಸುವ ಸಾಹಿತ್ಯ ಅವರದು. ಭಕ್ತಿಯೆ ಮೈವೆತ್ತು ಬಂದ ಭಾವುಕ ಹೃದಯದ ವ್ಯಕ್ತಿತ್ವ ಷಡಕ್ಷರಿಗಳದು. ಅವರ ಹಾಡುಗಳಲ್ಲಿ ತಾತ್ವಿಕ ಸಿದ್ಧಾಂತ, ಆಚರಣೆಯ ಮಾರ್ಗಗಳೆರಡರ ಸುಂದರ ಸಮನ್ವಯ ಸಾಧಿಸಿದೆ. ಸಾಧಕನ ಅಧ್ಯಾತ್ಮಿಕ ವಿಕಾಸದ ತಳಹದಿಯನ್ನು ವ್ಯಕ್ತಪಡಿಸುವ ಷಟ್‌ಸ್ಥಲ ವೀರಶೈವ ಸಾರಸರ್ವಸ್ವವನ್ನು ಒಳಗೊಂಡಿವೆ. ಶಿವಶರಣರ ಸತಿಪತಿಭಾವದ ಮಧುರಭಕ್ತಿಯ ಪರಾಕಾಷ್ಠೆ ಮಡುಗಟ್ಟಿ ನಿಂತಿದೆ. ಶರಣರ ಆಚಾರ ವಿಚಾರ ಸಂಸ್ಕೃತಿಗಳ ಪ್ರಭಾವ ಪರಿಣಾಮ ಅಚ್ಚಳಿಯದೆ ಅಚ್ಚೊತ್ತಿವೆ.

ಮುಪ್ಪಿನ ಷಡಕ್ಷರಿಗಳ ಜೀವನ ಸಾಧನೆಗಳ ವಿಚಾರವಾಗಿ ಖಚಿತವಾಗಿ ತಿಳಿಯುವ ಆಧಾರಗಳು ಕಡಿಮೆ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು, ಅವರು ತಪಸ್ಸುಗೈದ ಶಂಭುಲಿಂಗನ ಬೆಟ್ಟದಲ್ಲಿಯೆ ಸ್ವಲ್ಪಕಾಲ ವಾಸವಾಗಿದ್ದರು ಎನ್ನುವ ವಿಚಾರವೂ ಇದೆ. ಹೈದರಅಲಿ ಶಾಸನ ಹಾಗೂ ಮಾದೇಶ್ವರ ಸಾಂಗತ್ಯ ಕೃತಿಯ ಮೂಲಕ ತಿಳಿದುಬರುವಂತೆ ಸುತ್ತೂರು, ವಂಡರಬಾಳು, ಕುಂತೂರು, ನಂಜನಗೂಡು ಹಾಗೂ ಎರೆಗಂಬಳಿ ಈ ಐದು ಊರುಗಳಲ್ಲಿ ಇದ್ದ ಐದುಮಠಗಳು ಪಂಚಮಠಗಳೆಂದು ಪ್ರಸಿದ್ಧಿ ಪಡೆದಿದ್ದವು. ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಮಠದವರೆಂದು ದಿ|| ಬಿ. ಶಿವಮೂರ್ತಿ ಶಾಸ್ತ್ರಿಗಳು ಸೂಚಿಸಿರುವರು.

ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಕ್ರಿಯಾಪುರುಷರು. ಲಿಂಗಭೋಗೋಪ ಭೋಗಿಗಳು. ಹಿಂದೆ ಒಂದು ಬಾರಿ ೧೨ವರ್ಷ ಅನಾವೃಷ್ಟಿಯಿಂದ ಬರಗಾಲ ಎದುರಿಸಬೇಕಾದ ಸಂದರ್ಭ ಬಂದಾಗ ಸಿದ್ದಲಿಂಗ ಶಿವಯೋಗಿಗಳು ತಮ್ಮ ತಪೋಬಲದಿಂದ ಕರಿಯ ಕಂಬಳಿ ಬೀಸಿ ಮಳೆ ತರಿಸಿ ಊರನ್ನು ಸಂತೃಪ್ತಗೊಳಿಸಿದ್ದರಿಂದ ಅವರಿಗೆ ಕರಿಯ ಕಂಬಳಿ > ಎರೆಗಂಬಳಿ ಹೆಸರು ಬಂದುದನ್ನು ಡಾ. ಗದ್ದಗಿಮಠರು ತಮ್ಮ ‘ಜಾನಪದ ಗೀತೆಗಳು’ ಕೃತಿಯಲ್ಲಿ ತಿಳಿಸಿರುವರು. ಆ ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಮುಪ್ಪಿನ ಷಡಕ್ಷರಿಗಳ ದೀಕ್ಷಾಗುರುಗಳು. ತಮ್ಮ ವೈಯಕ್ತಿಕದ ಹಾಗೂ ತಂದೆ ತಾಯಿಗಳ ಪ್ರಸ್ತಾಪ ಮಾಡದ ಷಡಕ್ಷರಿಗಳು ತಮ್ಮ ಒಂದು ಹಾಡಿನಲ್ಲಿ ಗುರು ಸಿದ್ಧಲಿಂಗ ಶಿವಯೋಗಿಗಳವರನ್ನು ಮನದುಂಬಿ ಕೊಂಡಾಡಿರುವರು:

ಎರೆಗಂಬಳಿಯ ಸಿದ್ಧ

ವರಲಿಂಗ ನಾಮದಿಂ

ಹರಣೆ ನೀನೆನಗೆ ದೀಕ್ಷೆಯ ಮಾಡಿದೆ

ವರ ಷಡಕ್ಷರಿಯ ದೇ

ವರ ನಾಮದಿಂದೆನಗೆ

ಅರುಹಿದಿರಿ ಶಿವಶಾಸ್ತ್ರದನುಭವವನು|

ಪ್ರಸ್ತುತ ಪದ್ಯ ಗುರುಶಿಷ್ಯರ ನೇರ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸಿದೆ. “ಷಡಕ್ಷರಿಯ ದೇವರ ನಾಮದಿಂದೆನಗೆ ಅರುಹಿದಿರಿ” ಎಂದು ಹೇಳಿರುವದನ್ನು ನೋಡಿದರೆ ಇವರ ಮೊದಲ ಹೆಸರು ಬೇರೆ ಇದ್ದಿರಬೇಕೆಂದೂ ಗುರುಕರುಣೆಯ ನಂತರ ಷಡಕ್ಷರಿ ಎಂಬ ಹೆಸರನ್ನು ಪಡೆದಿರಬೇಕೆಂದೂ ಹೇಳಲು ಅವಕಾಶವಿದೆ.

ಕಾಲಾಂತರದಲ್ಲಿ ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಯ ಮಠಕ್ಕೆ ಅಧಿಪತಿಗಳಾಗಿದ್ದರೆಂದು ತೋರುತ್ತದೆ. ಎರೆಗಂಬಳಿ ಗ್ರಾಮ ಮೈಸೂರುಜಿಲ್ಲೆ ಯಳಂದೂರು ತಾಲೂಕಿನಲ್ಲಿದೆ. ಇಂದಿಗೂ ಅಲ್ಲಿ ಷಡಕ್ಷರಿಗಳ ಗದ್ದುಗೆ ಇದ್ದು ಭಕ್ತಾದಿಗಳಿಗೆ ಜಾಗ್ರತಸ್ಥಾನವಾಗಿದೆ. ಇದಕ್ಕೆ ತುಸುದೂರದಲ್ಲಿ ಶಂಭುಲಿಂಗನ ಬೆಟ್ಟವಿದೆ. ಇದು ನಿಜಗುಣ ಶಿವಯೋಗಿಗಳು ತಪೋನುಷ್ಠಾನಗೈದ ಪವಿತ್ರಕ್ಷೇತ್ರ. ಮುಪ್ಪಿನ ಷಡಕ್ಷರಿಗಳು ತಪಸ್ಸು ಕೈಕೊಂಡ ಒಂದು ಗವಿ ಅಲ್ಲಿದ್ದು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ತಮ್ಮ ಕೃತಿಗಳಲ್ಲಿ ಹೆಸರಿಸದೆ ಹೋಗಿದ್ದು ಸಂಶಯಕ್ಕೆ ಅವಕಾಶವನ್ನುಂಟು ಮಾಡಿವೆ.

ಮುಪ್ಪಿನ ಷಡಕ್ಷರಿಗಳ ಕಾವ್ಯ ‘ಷಡಕ್ಷರಿಲಿಂಗ’ ಅಂಕಿತದಲ್ಲಿ ಹಾಡಿರುವ ಅನುಭಾವದ ಪದಗಳು ಶಿವಾಷ್ಟಕ, ಶಿವಯೋಗಾಷ್ಟಕಗಳು ಕ್ರಮವಾಗಿ ಶಿವಪೂಜಾ ವೈಭವ, ಶಿವಯೋಗದ  ಐಸಿರಿಗಳನ್ನು ವರ್ಣಿಸುವ ಅಷ್ಟಕಗಳಾಗಿವೆ. ಇವೆಲ್ಲ ಮೂಲತಃ ತತ್ವಪದಗಳೇ ಆಗಿದ್ದು ಒಂದೆಡೆ ಸಂಗ್ರಹಿಸಿರುವ ಸಂಗ್ರಹಕಾರರು ‘ಸುಬೋಧಸಾರ’ ಎಂದು ಹೆಸರಿಸಿರುವರು. ತಾಳೇಗರಿಯ ಪ್ರತಿಗಳಲ್ಲಿ ಮುಪ್ಪಿನ ಷಡಕ್ಷರಿಸ್ವಾಮಿಗಳವರ ‘ಸ್ವರವಚನಗಳು’ ಮುಪ್ಪಿನ ಷಡಕ್ಷರಿಗಳ ‘ಕೈವಲ್ಯಪದಗಳು’ ಎಂದು ಇವೆ.

ಮುಪ್ಪಿನ ಷಡಕ್ಷರಿಗಳವರ ತಾತ್ವಿಕ ಪದಗಳ ಸಂಗ್ರಹವನ್ನು ೧೯೪೦ರಲ್ಲಿ ಹರ್ಡೆಕರ ಮಂಜಪ್ಪನವರ ಪ್ರಾಮಾಣಿಕ ಪ್ರಯತ್ನದಿಂದಾಗಿ ‘ಸುಬೋಧಸಾರ’ ಎಂಬ ಗ್ರಂಥದಲ್ಲಿ ಸಮಗ್ರ ಸಂಗ್ರಹರೂಪದಲ್ಲಿ ಪ್ರಕಟಿಸಿದರು. ಇತ್ತೀಚೆಗೆ ೧೯೮೭ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಮೈಸೂರಿನಿಂದ ‘ಮುಪ್ಪಿನ ಷಡಕ್ಷರಿಗಳ ಕೈವಲ್ಯಪದ (ಸುಬೋಧಸಾರ)’ ಎಂಬ ಹೆಸರಿನಿಂದ ಶಾಸ್ತ್ರಶುದ್ಧವಾದ ೮೭ ಪದಗಳ ಸಂಗ್ರಹದೊಂದಿಗೆ ಪ್ರಕಟಿಸಿದೆ. ಧಾರವಾಡದ ಮುರುಘಾಮಠದವರು ಈ ಕೃತಿಯನ್ನು ಹೆಚ್ಚಿನ ಬದಲಾವಣೆ ಇಲ್ಲದೆ ಅಷ್ಟೇ ಪದಗಳಿಂದ ಮತ್ತೊಮ್ಮೆ ಮುದ್ರಿಸಿರುವರು.

ನಿಜಗುಣರದ್ದು ಅದೈತಪ್ರಧಾನ ಜ್ಞಾನಮಾರ್ಗವಾಗಿದ್ದರೆ, ಷಡಕ್ಷರಿಗಳದ್ದು ಶರಣಸತಿ ಲಿಂಗಪತಿ ಭಾವ ಪ್ರಧಾನವಾದ ಭಕ್ತಿಮಾರ್ಗ, ನಿಜಗುಣರ ಹಾಡು ಉಪನಿಷತ್ತು ಆಗಮಾದಿಗಳ ಪ್ರಭಾವದಿಂದ ಕೂಡಿದ್ದು ಸಾಧಕ ಚೇತನವೊಂದರ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸಿಕೊಡುತ್ತವೆ. ನಿಜಗುಣರದು ಮುಖ್ಯವಾಗಿ ವೇದಾಂತದರ್ಶನ. ಆದರೆ ಮುಪ್ಪಿನ ಷಡಕ್ಷರಿಗಳದು ಲಿಂಗನಿಷ್ಠೆಯಿಂದ ಒಡಗೂಡಿದ ಅದಮ್ಯ ಚೇತನ, ಗಂಭೀರ ತತ್ವಗಳನ್ನೊಳಗೊಂಡ ಷಡಕ್ಷರಿಯ ಪದಗಳು ಅತ್ಯಂತ ಸುಲಭ, ಸರಳ, ಸುಲಲಿತ ಶೈಲಿಯಿಂದೊಡಗೂಡಿದ ಅನುಭಾವಬಂಧ. ಮಾನವೀಯತೆ, ಅನುಕಂಪ,  ಮಾನವಧರ್ಮದ ಹೆಚ್ಚುಗಾರಿಕೆ ಸಾರುವ, ವೈರಾಗ್ಯ ಬೋಧನೆಯಿಂದೊಡಗೂಡಿದ ಮಾನವ ಜೀವಿತ ರಹಸ್ಯ ಚಿಂತನೆಯಂತಹ  ಗಹನವಿಷಯಗಳ ಪ್ರಸ್ತಾಪ ಅತ್ಯಂತ ಸುಲಲಿತವಾಗಿ ಹಾಡುಗಳಲ್ಲಿ ಒಡಮೂಡಿ ಬಂದಿವೆ.

ಷಡಕ್ಷರಿಯ ಹಾಡುಗಳಲ್ಲಿ ಅಧ್ಯಾತ್ಮಿಕ ಸೌಂದರ್ಯ:

ಆಡುವುದು ಶಿವರೂಪ

ಹಾಡುವುದು ಶಿವನುಡಿಯು

ಮಾಡುವುದು ನಿತ್ಯ ಶಿವಪೂಜೆ

ಶರಣರಿಗೆ ಈಡು ಜಗದೊಳಗೆ

ಏನುಂಟು ದೊರೆಯೆ?

ಬಹುರೂಪಿ ಚೌಡಯ್ಯಗಳ ಶಿವನುಡಿಯಂತೆ ತಮ್ಮ ಜೀವನವನ್ನು ಅಳವಡಿಸಿಕೊಂಡವರು ಮುಪ್ಪಿನ ಷಡಕ್ಷರಿಗಳು. ಶಿವಾನುಭವಿಗಳು. ಲಿಂಗಾಸಕ್ತರು. ಅವರ ಹಾಡುಗಳ ಗುಣಲಕ್ಷಣವನ್ನು ಗಣನೆಗೆ ತೆಗೆದುಕೊಂಡರೆ ಸಿದ್ಧಯ್ಯ ಪುರಾಣಿಕರು ಮುನ್ನುಡಿಯಲ್ಲಿ ವ್ಯಕ್ತಪಡಿಸಿದಂತೆ ‘ತಾದಾತ್ಮ್ಯ ತನ್ಮಯತೆ, ಪರವಶತೆ, ವಿರಳತೆ ಭಕ್ತಿಯ ಆವೇಶ, ಅತಿಸಲುಗೆ, ಸಮರಸಭಾವ, ಅನನ್ಯಶರಣತೆ, ವೈರಾಗ್ಯದ ಉಜ್ವಲತೆ, ಇವೇ  ಮುಪ್ಪಿನಾರ್ಯರ ಹಾಡುಗಳ ಹೆಗ್ಗುರುತು ಹಾಗೂ ವೈಶಿಷ್ಟ್ಯಗಳೆನ್ನಬೇಕು.  ಸರಳತೆ, ಸಂಕ್ಷಿಪ್ತತೆ, ತಾತ್ವಿಕದರ್ಶನದಿಂದ ಪ್ರತಿಯೊಬ್ಬ ವ್ಯಕ್ತಿಯ ಹೃದಯ ತಟ್ಟುವ ಮುಟ್ಟುವ ಅವರ ಮನವನ್ನು ಬೆಳಗಿಸುವ ಅಂಶಗಳು ಕಂಡುಬರುತ್ತವೆ. ಸಾಧಕರ ಹೃದಯದ ಶಿವಭಾವದ ಬೆಸುಗೆಯಲ್ಲಿ ಆತ್ಮಾನುಭವದ ರಸವನ್ನು ಉಸಿರಿಸಿದವರು  ಮುಪ್ಪಿನ ಷಡಕ್ಷರಿಗಳು.

ಪ್ರಸ್ತುತ ಲೇಖನದ ಪರಿಮಿತಿಯನ್ನು ಗಮಿನಿಸಿ ಕೆಲವು ಹಾಡುಗಳ ಸಮಾಲೋಚನೆಯ ಮೂಲಕ ಷಡಕ್ಷರಿಗಳ ಜೀವನ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಗುರುತಿಸಬಹುದಾಗಿದೆ. ಅವರ ದಿವ್ಯತತ್ವವನ್ನು ಅರುಹುವ ಒಂದು ಹಾಡು:

ಅವರವರ ದರುಶನಕ

ಅವರವರ ವೇಷದಲ್ಲಿ

ಅವರವರಿಗೆಲ್ಲ ಗುರು ನೀನೊಬ್ಬನೆ

ಅವರವರ ಭಾವಕ್ಕೆ

ಅವರವರ ಪೂಜೆಗಂ

ಅವರವರಿಗೆಲ್ಲ ಶಿವ ನೀನೊಬ್ಬನೆ||

ಹೋರಾಟವಿಕ್ಕಿಸಲು

ಬೇರಾದೆಯಲ್ಲದೆ

ಬೇರುಂಟೆ ಜಗದೊಳಗೆ ನೀನಲ್ಲದೆ

ಆರು ಅರಿಯರು ನೀನು

ಬೇರಾದ ಪರಿಗಳನ್ನು

ಮಾರಾರಿ ಶಿವ ಷಡಕ್ಷರಿಲಿಂಗವೆ||

ಸಕಲ ಜನಮನವನ್ನು ಮುಟ್ಟಿ ಸ್ಪಂದಿಸಬಲ್ಲ ದೈವೀಗುಣ ಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿವೆ. ಭಾವ ತುಂಬಿ ತುಳುಕುವ ಸರಳ ಸುಂದರ ಅಭಿವ್ಯಕ್ತಿ ಇಲ್ಲಿ ನೆಲೆನಿಂತಿದೆ ಶಿವಕಾರುಣ್ಯಕ್ಕಾಗಿ ಹಂಬಲಿಸಿ ಸಂಸಾರದ ನಶ್ವರತೆಯಲ್ಲಿ ಶಾಶ್ವತವಾದುದನ್ನು ಕಂಡುಕೊಳ್ಳುವ ಸಾಧಕನ ಜೀವ ಎಚ್ಚರಿಕೆಯ ಕಡೆಗೆ ತಿರುಗುವ ಸೂಕ್ಷ್ಮ ದೃಷ್ಟಿಕೋನ ಇಲ್ಲಿ ಒಡಮೂಡಿದೆ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದುದು ಅವರ ಆತ್ಮಶೋಧನೆ, ಮಾನಸಿಕ ಚಿಂತನೆ, ಸ್ವಾಭಿಮಾನ, ವಚನಕಾರರದು ಈ ನಿಟ್ಟಿನಲ್ಲಿ ನವ್ಯಪ್ರಜ್ಞೆ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ಅವರವರ ದರುಶನ, ವೇಷ,ಭಾವ, ಪೂಜೆಗೆ ಒಲಿಯುವಂತೆ  ಎರಡಳಿದು ಒಂದಾದಲ್ಲಿ ಅವನ ದರ್ಶನವೆಂಬ ಸೂಕ್ಷ್ಮ ನುಡಿಮುತ್ತನ್ನು ವ್ಯಕ್ತಪಡಿಸಿರುವರು. ಶರಣರು ತಮ್ಮ ಸಾಧನೆಯ ಮಾರ್ಗದಲ್ಲಿ ಅವಲಂಬಿಸಿದುದು ತಾತ್ವಿಕ ಹಿನ್ನೆಲೆಯನ್ನು ಅದನ್ನು ತಾತ್ವಿಕ ಜಿಜ್ಞಾಸೆಯ ಮಟ್ಟದಲ್ಲಿ ನಿಲ್ಲಿಸದೆ ಅನುಭಾವದಿಂದ ಆನಂದದತ್ತ ಮುನ್ನಡೆಸಿದರು. ಪ್ರಧಾನವಾಗಿ ಅವರು ಅನುಸರಿಸಿದುದು ಅನುಭಾವಮಾರ್ಗ, ಅದರ ಅವಲಂಬನೆಗೆ ಹಂದರವಾಗಿ ವೀರಶೈವ ಸಿದ್ಧಾಂತ ಪರಿಣಮಿಸಿತು. ಅದರಲ್ಲೂ ವೀರಶೈವರ ಷಟ್‌ಸ್ಥಲಮಾರ್ಗ ಅವರಿಗೆ ಹೆಚ್ಚಾಗಿ ಹಿಡಿಸಿತು. ಭಕ್ತಿ ಜ್ಞಾನ ಕ್ರಿಯೆಗಳು ಇಲ್ಲಿ ಮುಪ್ಪುರಿಗೊಂಡು  ಸಾಮರಸ್ಯಕ್ಕೇರಿಸುವ ನಿಚ್ಚಣಿಕೆಗಳನ್ನು ನಿರ್ಮಿಸಿವೆ. ಶರಣರ ಸಾಧನೆಯಿಂದ ಷಟ್‌ಸ್ಥಲ ಪರಿಪೂರ್ಣತೆಯೊಂದಿಗೆ ಹೊಸಕ್ರಾಂತಿಯನ್ನು ಪಡೆಯಿತು. ಈ ಚೌಕಟ್ಟಿನಲ್ಲಿ ಮುಪ್ಪಿನ ಷಡಕ್ಷರಿಗಳ ಅನುಭಾವ ಪದಗಳ ಅಧ್ಯಯನ ಇನ್ನೂ ವ್ಯವಸ್ಥಿತವಾಗಿ ನಡೆಯಬೇಕಿದೆ.

ಆರ್ತಭಾವ ಸಾಧಕನ ಆರಂಭದ ಒಂದು ಸ್ಥಿತಿಯೆಂಬುದನ್ನು ಒಂದಲ್ಲ ಒಂದು ರೂಪದಲ್ಲಿ ಜಗತ್ತಿನ ಎಲ್ಲ ಸಾಧಕರ ಜೀವನದಲ್ಲಿಯೂ ಕಾಣಬಹುದು. ಬಸವಣ್ಣನವರ “ಅಯ್ಯಾ ಅಯ್ಯಾ ಎಂದು ಕರೆಯುತ್ತಲಿದ್ದೇನೆ, ಓ ಎನ್ನಲಾಗದೇ ಅಯ್ಯ, ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನ’ ಎಂದು ಮನದ ಹಂಬಲವನ್ನು ವ್ಯಕ್ತಪಡಿಸಿದ್ದು ಇದೇ ಮನಸ್ಥಿತಿಯಲ್ಲಿ, ನಡೆ ಮತ್ತು ನುಡಿಗಳ ಸಮನ್ವಯಕ್ಕೆ ಅನುಭಾವಿಗಳಿತ್ತ ಮಹತ್ವ ಹೆಚ್ಚಿನದು. ನುಡಿದಂತೆ ನಡೆವುದನ್ನೆ ಅವರು ತಮ್ಮ  ಬದುಕಿನಲ್ಲಿ ರೂಢಿಸಿಕೊಂಡು ಬಂದವರು. ದಿಟವ ನುಡಿವುದು ನುಡಿದಂತೆ ನಡೆವುದು’ ಈ ಪರಿಶುದ್ಧ ಸಾಧನೆಗೆ ನೈತಿಕ ನಿಷ್ಠೆಬೇಕು. ಅಂತರಂಗದ ಅರಿವು ಬಹಿರಂಗದ ವ್ಯಾಪಾರಕ್ಕೆ ಕಡಿವಾಣ ಹಾಕುವ ಯಂತ್ರ, ಅಂತರಂಗದ ಆತಶುದ್ಧಿ ಅವರ ಅರಿವಿಗೆ ಪೂರಕವೆನಿಸಿತ್ತು.

ಇಂಥ ಸಂದರ್ಭದಲ್ಲಿ ಸಾಧಕನಿಗೆ ಆತ್ಮಜಾಗೃತಿ ತುಂಬ ಮುಖ್ಯ. ವಿಶ್ವಾಸ ಮತ್ತು ಕ್ರಿಯೆಗಳು ಭಕ್ತಸ್ಥಲದ ಮುಖ್ಯ ಲಕ್ಷಣಗಳು, ಪಾಪಸಮೂಹವನ್ನು ಕಳೆದುಕೊಂಡು ಶುದ್ಧಾಂತಃಕರಣನಾದವನು ಪಿಂಡಸ್ಥಲಯೋಗ್ಯನಾಗುತ್ತಾನೆ. ಅವನಲ್ಲಿ ಶಿವತತ್ವ   ಸುಪ್ತವಾಗಿ ಅಡಗಿರುತ್ತದೆ. ತಾನು ಶಿವಸ್ವರೂಪನೆಂದು ಶಿವನಾಗಿಯೆ ಶಿವನನ್ನು ಪೂಜಿಸುವುದು. ಹೀಗೆ ತನ್ನ ಸ್ವಸ್ವರೂಪವನ್ನು ತತ್ವತಃ ತಿಳಿದ ಭಕ್ತನಿಗೆ ವಿಸೃಮತಿಯೊಂದು ಈ ಮರೆವೆಗೆ ಕಾರಣವಾಗಿ ಸಂಸಾರದ ವಿಷಯದಲ್ಲಿ ಜಿಹಾಸೆ ಸಹಜವಾಗಿಯೇ ಹುಟ್ಟುತ್ತದೆ. ಇದರ ಒಂದು ಹಂತವನ್ನು ‘ಸಂಸಾರಹೇಯಸ್ಥಲ’ ಎಂದು ಕರೆದರು ಶರಣರು.ಇದು ಕೇವಲ ತಿರಸ್ಕಾರದ ಮಾರ್ಗವಲ್ಲ: ಹೇಯವಾದ ಸಂಸಾರವನ್ನು ಉಪಾದೇಯವಾಗಿಸಬಹುದಾದ ಜೀವನ ಕೌಶಲವನ್ನು ಕಂಡುಕೊಳ್ಳುವ ಮಾರ್ಗವೂ ಹೌದು, ಶಿವಭಾವವನ್ನು ಆಹ್ವಾನಿಸುತ್ತ ಮನಸ್ಸನ್ನು ಆ ದೈವೀನಿಲುವಿಗೆ ತಂದುಕೊಳ್ಳಬೇಕೆಂಬುದನ್ನು ಹೇಳುವ ಕಳಕಳಿಯ ಅಭಿವ್ಯಕ್ತಿ ಮುಪ್ಪಿನ ಷಡಕ್ಷರಿಗಳದು.

ಹುಟ್ಟು ಸಾವುಗಳ ಭವಚಕ್ರದಲ್ಲಿ ಸಿಲುಕಿಕೊಳ್ಳದೆ ಅದರಿಂದ ಪಾರುಗಾಣುವಲ್ಲಿ

‘ಧರೆಯತ್ತಲೆನ್ನನ್ನು ಬರಿಸದಿರು ಸದ್ಗುರುವೆ ಧರೆಯ ಪಾಪದೊಳು ನಾ ಜನಿಸಲಾರೆ’

ಎಂದು ಸಂಸಾರದ ಜಂಜಡದ ಬಗ್ಗೆ ಜಿಗುಪ್ಸೆ ಪಡುವ ಸಾಧಕ ಇದನ್ನು ಬಿಟ್ಟು ಓಡಿಹೋಗಬೇಕೆಂಬುದಿಲ್ಲ. ಮನುಷ್ಯ ಜೀವನಕ್ಕೆ ಇದು ತ್ಯಾಜ್ಯವೆಂಬ ಭಾವವಲ್ಲ ಇದನ್ನು ಮೀರಿ ಮುನ್ನಡೆಯಬೇಕಾದರೆ ನಿರ್ಲಿಪ್ತ ಮನೋಭಾವ ಅಷ್ಟೇ ಅವಶ್ಯಕ. ಪರಮಾತ್ಮನ ಕಾರುಣ್ಯ ಪಡೆಯುವ ಮಾರ್ಗದಲ್ಲಿ ಮುನ್ನಡೆಯುವಾಗ ಆತ್ಮವೀಕ್ಷಣೆ ಅದರ ಮೊದಲ ಮೆಟ್ಟಿಲು, ಸಾಧಕಲೋಕದ ಆಕರ್ಷಣೆಯಿಂದ ವಿಮುಖವಾಗಿ ಅಂತರ್ ನಿರೀಕ್ಷಣೆಯ ನಿಷ್ಠೆಯನ್ನು ಕೈಗೊಳ್ಳಬೇಕಾಗುತ್ತದೆ

ʼʼ ಮಾಯೆ ನೀನು ಚಲುವೆ, ಕಾಯ ಮುನ್ನವೆ ಚೆಲುವು,

ಹೇಯವಾಯಿತು. ಒಳಗನರಿತ ಬಳಿಕʼʼ

ಎಂದು ಮಾಯೆಯನ್ನು ಕುರಿತು ಚಿಂತಿಸಿ ಅದರ ಹೇಯತನಕ್ಕೆ ನಾಚಿ ಹಿಂದೆ ಸರಿದಿದ್ದಾರೆ. ನಶ್ವರವಾದ ಮೌಲ್ಯಗಳ ತಾತ್ಕಾಲಿಕ ದೃಷ್ಟಿಯಿಂದ ಪರಿಮಿತಗೊಳ್ಳದೆ, ಶಾಶ್ವತ, ಚಿರಕಾಲ ಬಾಳುವ ಮೌಲ್ಯಗಳ ಅದಮ್ಯ ಅಭೀಪ್ಸೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ಮಾಡಿದ್ದೂ ಉಂಟು. ಇದಕ್ಕೆ ಪ್ರೇರಣೆ ಈ ಲೌಕಿಕಸುಖವನ್ನು ಕುರಿತ ಅತೃಪ್ತ ಮನೋಭಾವ. ಇಲ್ಲಿನ ಸುಖಸಾಧನಗಳ ವಿಚಾರದಲ್ಲಿ ಅತೃಪ್ತಿ ಮೂಡದ ಹೊರತು ಇವುಗಳಾಚೆಯ ಸುಖದ ಅಭೀಪ್ಸೆ ತೀವ್ರವಾಗುವುದಿಲ್ಲ. ಆದುದರಿಂದ ಇವುಗಳ ವಿಚಾರದಲ್ಲಿ ಅತೃಪ್ತಿಯನ್ನು ಕಂಡುಕೊಳ್ಳುವಂತಹ ಆತ್ಮಜಾಗೃತಿಯನ್ನು ಪ್ರತಿಜೀವಿಗಳಿಗೆ ಬೋಧಿಸುವ ಪ್ರತಿಜ್ಞೆ ಷಡಕ್ಷರಿಗಳವರ ವಚನಗಳಲ್ಲಿ ನೆಲೆನಿಂತಿವೆ.

ತನ್ನ ಕಾಯವನ್ನೇ ಶಿವನ ಉನ್ನತಾಲಯ ಮಾಡಿ ತನ್ನ ಸರ್ವಾಂಗಗಳನ್ನು ಮನಪ್ರಾಣಗಳನ್ನು ಚನ್ನ ಷಡಕ್ಷರಿಗೆ ಸಮರ್ಪಿಸಿದೆ:

ಎನ್ನ ಕಾಲುಗಳೆರಡು ಉನ್ನತ ಕಂಭವೈ

ಎನ್ನ ಒಡಲೇ ನಿನಗೆ ಶಿವಾಲಯ, ಎನ್ನ ತೋಳುಗಳೆರಡು

ಉನ್ನತದ ವದನಕ್ಕೆ ಎನ್ನ ಶಿರ ಸೌವರ್ಣ ಕಲಶವಯ್ಯ

ಎನ್ನ ಸರ್ವಾಂಗವೆನ್ನ ನಿನ್ನ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ ಲಿಂಗವೆʼ

ತನ್ನ ದೇಹವನ್ನೇ ಇಷ್ಟಲಿಂಗಕ್ಕೆ ಎಡೆಮಾಡುವ ಸರ್ವಸಮರ್ಪಣಾಭಾವ ಇಲ್ಲಿ ಸುವ್ಯಕ್ತವಾಗಿದೆ.

ಶಿವಭಾವ ನೆಲೆಗೊಂಡ ಬಳಿಕ:

ಶಿವಭಾವದ ನೆಲೆಯನ್ನು ಸಾಧಿಸಲು ತಾರುಣ್ಯದಲ್ಲಿಯೆ ತೀವ್ರ ವೈರಾಗ್ಯದಿಂದ ವಿರಕ್ತಾಶ್ರಮ ತಳೆದು ಯೋಗಸಾಧನೆಯಲ್ಲಿ ತೊಡಗಿದವರು ಷಡಕ್ಷರಿಗಳು. ಆಧ್ಯಾತ್ಮದ ಸಕಲ ಹಂತಗಳನ್ನು ಏರಿ ಪ್ರತ್ಯಕ್ಷಾನುಭವವನ್ನು ಪಡೆದವರು. ಆಂತರಿಕ ಸಾಧನೆಯ ಆಧ್ಯಾತ್ಮಿಕ ಬೆಳಸಿನ ಅನುಭಾವದೊಂದಿಗೆ ಸಂಗತಗೊಂಡವರು, ಕುಡಿಯೊಡೆದು ಬೆಳೆಯುವ ಪೈರಿನಂತೆ ಸಹಜವಾಗಿಯೆ ಮೂಡಿ ಬಂದುದು ಅವರ ತತ್ವವಲ್ಲರಿ:

‘ಧರೆಯ ಸುಖದ ಭೋಗವೆನಗೆ ಹರಿದು ಹೋಗಲಿ, ಒಡೆದ ಗಡಿಗೆ

 ಹರಕು ಜೋಳಿ ಎಡದ ಕೈಯೊಳು ಮುರಿದ ಕೋಲು ಇಷ್ಟೇ ಸಾಕು’

ಎಂಬ ಅವರ ಒಂದು ಹಾಡು ಷಡಕ್ಷರಿಗಳ ಅಸೀಮ ವೈರಾಗ್ಯಭಾವವನ್ನು ಬಿಂಬಿಸಿದೆ. ಇಲ್ಲಿ ಮುಖ್ಯವಾಗಿ ಕಾಣುವುದು ಅವರ ವೈರಾಗ್ಯದತ್ತ ಒಲಿದ ತೀವ್ರವಾದ ಒಲವು, ಸಾಧನೆಯ ಎಲ್ಲ ಹಂತಗಳಲ್ಲಿ ಇದು ತುಂಬ ಅವಶ್ಯಕ. ‘ತ್ಯಾಗಭೋಗ ಸಮನ್ವಯ’ ಅಥವಾ ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂಬ ಘೋಷಣೆಗಳು ದೇಹ ದಂಡನೆಯ ತೀವ್ರ ಸಂಯಮ  ನಿಯಮನಿಷ್ಠೆಗಳು ಅಗತ್ಯ.

 ದಂಡಿಸದೆ ದೇಹವನು ಖಂಡಿಸದೆ ಕರಣವನು ಉಂಡುಡು ಸ್ವರ್ಗಕೈದಲ್ಕೆ ಅದನೇನು ರಂಡೆಯಾಳುವಳೇ ? ಎಂದು ಸರ್ವಜ್ಞ ಹೇಳಿದ್ದು ಇದೇ ಅರ್ಥದಲ್ಲಿಯೆ. ಶರಣರ ತ್ಯಾಗಭೋಗ ಸಮನ್ವಯ ಸಂಯಮರಹಿತವಾದುದಲ್ಲ, ಆದರೆ ಈ ಸಂಯಮ ಕೃತಕವಾಗದೆ ಅಂತರಂಗದ ಅರಿವಿನಿಂದ ಉಂಟಾದ ಚಿತ್ತಶುದ್ಧಿಯಿಂದ ಬಂದುದು. ಇಲ್ಲಿ ಷಡಕ್ಷರಿಗಳು ಹೇಳುವ ವೈರಾಗ್ಯವೂ ಜೀವನವನ್ನು ಅರಿವಿನತ್ತ ತಿರುಗಿಸುವ ಎಚ್ಚರಿಕೆಯಿಂದ ಕೂಡಿದ್ದು, ಇಡೀ ಸೃಷ್ಟಿವಿನ್ಯಾಸವನ್ನೇ ದೂರದಿಂದ ನಿಂತು ನೋಡುವ ಸಾಕ್ಷಿಪ್ರಜ್ಞೆ ಇಲ್ಲಿ ಎಚ್ಚರಿಕೆಯಿಂದ ಕಾರ್ಯಮಾಡಿದೆ.

“ನಿನ್ನೊಳಗೆ ಕಾಲನಿಹ, ನಿನ್ನೊಳಗೆ ನೇಣು ಕತ್ತರಿಗಳಿಹವು, ನಿನ್ನೊಳಗೆ ವಿಷವಿಹುದು, ನಿನ್ನೊಳಗೆ ನರಕಗಳುಂಟು. ಛೀ ಮಾರಿ ಹೋಗತ್ತ’ ಎಂದು ಸಂಸಾರದ ಮೋಹ ಮಾಯೆಗಳನ್ನು ಹೀಗಳೆದು ಒಳಗನ್ನು ಅರಿಯುವ ಅಂತರ್ದೃಷ್ಟಿಯನ್ನು  ತೆರೆಯಬೇಕೆಂದು ಆ ದೇವದೇವನಲ್ಲಿ ಬಿನ್ನವಿಸಿಕೊಂಡಿರುವರು. ಈ ಲೋಕದ ನಾಮರೂಪ ಕ್ರಿಯಾತ್ಮಕವಾದ ಅರ್ಥವತ್ತಾದ ಚಿತ್ರವಿದು. ಇದನ್ನು ಎದುರಿಸುವಲ್ಲಿ ಅನೇಕ ವಿಫಲತೆಗಳನ್ನು ಮನಗಂಡಿದ್ದರೂ ಅದು ನಿರಾಶೆಯಿಂದ ಪ್ರೇರಿತವಾದ ನಿರಸನವಾಗಿರದೆ ಮಹದಾಶೆಯಿಂದ ಕೂಡಿದ ಆತ್ಮಜಾಗೃತಿಯಾಗಿದೆ.

ಸಾಧನೆ ದೃಢಗೊಂಡ ಬಳಿಕ ಒಂದು ನೈತಿಕ ನೆಲೆಗಟ್ಟಿನ ಮೇಲೆ ಅದು ಬೆಳೆಯುತ್ತದೆ. ಹಿಂದಿನ ಎರಡೂ ಸ್ಥಲಗಳಲ್ಲಿ ಕಾಣುವ ತಳಮಳ ಹಂಬಲ ಹಾರೈಕೆಗಳನ್ನು ದಾಟಿ ಗುರಿಯತ್ತ ಮುನ್ನಡೆಯುವ ನೈತಿಕನಿಷ್ಠೆ ಇಲ್ಲಿ ಕಾಣುತ್ತದೆ. ವೈರಾಗ್ಯವೆನ್ನುವುದು ಜೀವನವನ್ನು ಸಾಗಿಸುವ ಹೇಡಿಗಳ ಮುಖವಾಡವಾಗಬಾರದೆನ್ನುವ ಅಭಿಪ್ರಾಯ ಇಲ್ಲಿಯ ಅನೇಕ ಹಾಡುಗಳಲ್ಲಿ ಒಡಮೂಡಿವೆ. ಭಕ್ತಿ ಪರಮಪ್ರೇಮವಾದ ತುಂಬು ಹೃದಯದ ಪ್ರಾರ್ಥನೆಯಿಂದ ಮೊದಲ್ಗೊಂಡು ತತ್ವಚಿಂತನೆಯ ಅಂತರ್ ದೃಷ್ಟಿಯಿಂದ ದೀಪ್ತವಾದ ದರ್ಶನದವರೆಗೂ ಬೆಳೆಯಬೇಕು. ಪೂರ್ಣವಿಕಾಸದೃಷ್ಟಿಯನ್ನು ಪಡೆಯಬೇಕು. ಭಕ್ತಿಯ ಅಭಿವ್ಯಕ್ತಿ ಮೊದಲು ತನುವಿನಲ್ಲಿ, ಅನಂತರ ವಚನದಲ್ಲಿ ಈ ಎರಡಕ್ಕೂ ಹಿನ್ನೆಲೆಯಾಗಿದ್ದ ಮನದಲ್ಲಿಯೆ ಗಟ್ಟಿಗೊಂಡು ಬೆಳೆಯಬೇಕು. ಲಿಂಗಪೂಜೆಯಲ್ಲಿ ಅದು ಸಾಕ್ಷಾತ್ಕಾರಗೊಳ್ಳಬೇಕು:

ಎನ್ನ ಸಮತೆಯ ಜಲವು

ಎನ್ನ ಸದ್ಗುಣ ಗಂಧ

ಎನ್ನ ನಿತ್ಯತ್ವವೇ ಅಕ್ಷತೆಗಳು

ಎನ್ನ ಜ್ಞಾನವೆ ಪುಷ್ಪ

ಎನ್ನ ಭಕ್ತಿಯ ಬೋನ

ಎನ್ನ ಮನವೇ ನಿಮಗೆ ಪೂಜಾರಿಯು||

ಜೀವಭಾವವಳಿದು ಶಿವಭಾವ ನೆಲೆಗೊಂಡು ಶಿವಾನುಭವದ ನಿಲುವಿಗೇರುವ ಅಂತರಂಗದ ದಿವ್ಯಮಾರ್ಗವನ್ನು ಷಡಕ್ಷರಿ ಸಾಧಕರಿಗೆ ತಿಳಿಸಿರುವರು. ಚಿತ್ತಸಮತೆ ಎಂಬ ಜಲ, ಸದ್ಗುಣವೆಂಬ ಗಂಧ, ನಿತ್ಯತ್ವವೆಂಬ ಅಕ್ಷತೆಗಳು, ಜ್ಞಾನವೆಂಬ ಪುಷ್ಪ, ಭಕ್ತಿ ಎಂಬ ಬೋನ, ಮನಸ್ಸೆಂಬ ಪೂಜಾರಿಯಿಂದ ನೈವೇದ್ಯ ಮಾಡಿಸುವ ಶಿವಮಾನಸಪೂಜೆ. ಎಷ್ಟು ಅರ್ಥಪೂರ್ಣವಾಗಿದೆ ಈ ಶಿವಪೂಜೆ!

ಸಾಧಕನಿಗೆ ಶರಣಸ್ಥಲದಲ್ಲಿ ಆನಂದಭಕ್ತಿಯ ಆಚರಣೆಯಿಂದ ಪರಮಾತ್ಮನಲ್ಲಿನಿಶ್ಚಲಭಾವ, ಸತಿಪತಿಭಾವ ನೆಲೆಗೊಂಡು ಶಾಶ್ವತಸ್ಥಿತಿಯ ನಿಲವು ಮೂಡುತ್ತದೆ. ಅಧ್ಯಾತ್ಮಪಥದಲ್ಲಿ ನಡೆವ ಯಾತ್ರಿಕನ ಮನಸ್ಸಿನ ಹೊಯ್ದಾಟದ ಪ್ರತಿಯೊಂದು ನೆಲೆಯು ಇಲ್ಲಿ ಪ್ರಾಮಾಣಿಕ ಅನಿಸಿಕೆಗಳೆಂಬಂತೆ ಚಿತ್ರಿತವಾದುದೂ ಒಂದು ವಿಶೇಷವೆಂದೇ ಹೇಳಬೇಕು. ಮುಪ್ಪಿನ ಷಡಕ್ಷರಿಗಳ ಅಧ್ಯಾತ್ಮಿಕ ಕವನಗಳು ಶಿವಭಾವ ನೆಲೆಗೊಳ್ಳುವ ಸಂದರ್ಭದಲ್ಲಿ ಹೊರಹೊಮ್ಮಿದವು. ಹೀಗಾಗಿ ಮಾನವನ ಮನವನ್ನು ಮಹತ್ತಿಗೆ ತಿರುಗಿಸುವ ಅಲೌಕಿಕ ಸೌಂದರ್ಯ ಪಡೆದವು. ಶಿವಕಾರುಣ್ಯ ಪಡೆದು ನಿರಂತರ ಜಾಗೃತಿಯ ನೈತಿಕಸಾಧನೆಯಿಂದ ಹದಗೊಂಡು ಅಂತರ್ಮುಖ ಯೋಗಸಾಧನೆಯಲ್ಲಿ ಮುಂದುವರೆದಿವೆ. ಇಂಥ ದೃಢವಾದ ಸಾಧನೆ ಇಲ್ಲದೆ ಸಹಜವೈರಾಗ್ಯ ಸಾಧಿಸದೆ ಯಾವುದೋ ಆವೇಶದ ಕ್ಷಣದಲ್ಲಿ ಮೂಡಿ ಮರೆಯಾದರೆ ಅಂಥ ‘ವೈರಾಗ್ಯ ಇಲಿಯನ್ನು ಕಂಡು ಬೆಕ್ಕು ಪುಟನೆಗೆದಂತೆ’. ಇಂಥ ಅಲ್ಪ ಕ್ಷಣಿಕ ವೈರಾಗ್ಯವನ್ನು ಪ್ರಸೂತಿ ವೈರಾಗ್ಯ, ಪುರಾಣವೈರಾಗ್ಯ ಮತ್ತು  ಸ್ಮಶಾನವೈರಾಗ್ಯವೆಂದು ಹೇಳಿದವರು ಅನುಭಾವಿ ಸರ್ಪಭೂಷಣ ಶಿವಯೋಗಿಗಳವರು.

ಅವರ ದೃಷ್ಟಿಯಲ್ಲಿ ಭೋಗಜೀವನ ನಶ್ವರ, ಭೋಗಜೀವನದ ಬಿಡುಗಡೆ ಬಯಸಿ ತ್ಯಾಗಮಾರ್ಗದಲ್ಲಿ ಯೋಗ ಸಾಧನೆ ಕೈಕೊಂಡು ಮುಂದುವರೆಯಲು ತಿಳಿಸಿರುವರು:

ಧರೆಯ ಸುಖದ ಭೋಗವೆನಗೆ

ಹರಿದು ಹೋಗಲಯ್ಯ ನಿಮ್ಮ

ಚರಣಕಮಲದಲ್ಲಿ ಮನವು ಮಗ್ನವಾಗಲಿ||

ಎಂದು ಸಾರಿದ ಮುಪ್ಪಿನ ಷಡಕ್ಷರಿಗಳು ಅಲೌಕಿಕ ಪ್ರೇಮಕ್ಕೆ ಮನ `ಮಾರಿ ಕೊಂಡಿರುವರು. ಅಧ್ಯಾತ್ಮಪಥಿಕರಾಗಿ, ಸತ್ಯ ಸಂಶೋಧಕರಾಗಿ ಭೋಗ ಜೀವನ ಅಳಿಸಿ ಸದಾ ಪರಮಾತ್ಮನ ಪಾದಕಮಲದಲ್ಲಿ ಮನವನ್ನು ಮುಡಿಪಾಗಿರಿಸಿ ತಮ್ಮ ಬದುಕನ್ನೇ ಒಂದು ಸಂದೇಶವನ್ನಾಗಿರಿಸಿದ್ದಾರೆ.

 ಷಡಕ್ಷರಿಗಳದು ಶಿವಶರಣರ ಸತ್ಯಶುದ್ಧ ಆಚರಣೆಯಲ್ಲಿ ದೃಢನಂಬುಗೆ. ಆ ವಿಶ್ವಾಸವನ್ನು ಯಾರೂ ಅಲುಗಿಸುವಂತಿಲ್ಲ, ಶಿವಶರಣರೇ ಅವರಿಗೆ ತಂದೆತಾಯಿಗಳು, ಅವರೇ ಬಂಧುಬಳಗ, ತವರಿನ ಮಮತೆಯ ಕಣ್ಮಣಿಗಳು. ಆ ಮನೆತನದಲ್ಲಿ ಹುಟ್ಟಿದ ಹಿರಿಯಮಗಳು ತಾನು ಅಮಾವಾಸೆ ಕಳೆದು ಹುಣ್ಣಿಮೆ ಹತ್ತಿರ ಬಂದರೂ ಅವರು ತನ್ನನ್ನು ಕರೆಯ ಬರುವುದು ಬೇಡವೇ ? ಹೆಣ್ಣಿಗೆ ಹೆತ್ತ ತಾಯಿಯ ಮುಂದೆ ತನ್ನ ಸುಖ ದುಃಖಗಳನ್ನು ಹಂಚಿಕೊಳ್ಳುವ ಹೆಬ್ಬಯಕೆಯಂತೆ, ಪರಮಾತ್ಮನೆಂಬ ಮಾತೃಹೃದಯದ ದೇವತೆಯ ಮುಂದೆ ತನ್ನ ಲೌಕಿಕದ ಗಂಟನ್ನು ಬಿಚ್ಚಿಕೊಳ್ಳಬೇಕೆಂಬ ಕಳವಳ ಕಾತುರ ಮಡುಗಟ್ಟಿ ನಿಂತಿವೆ. ಇದೇ ಲೌಕಿಕ ಭಾವನೆ ವಿಕಸಿತಗೊಂಡು ಅಲೌಕಿಕಕ್ಕೆ ಉದಾತ್ತೀಕರಣಗೊಳ್ಳುವಂತೆ  ಲೌಕಿಕದಿಂದಲ್ಲವೇ ಪಾರಮಾರ್ಥಿಕ ಸುಖವನ್ನು ಮನಗಾಣುವುದು. ಇದನ್ನೇ ಶರಣರು  ಕರೆದುದು ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ವೆಂದು. ಈ ಕಮ್ಮಟದ ಸಾಧನೆಗೆ ಅವರು ಕೈಕೊಂಡ ಅತ್ಯಂತ ಸರಳ ಸಹಜ ಮಾರ್ಗ ಏನಿರಬಹುದೆಂದು ಗಮನಿಸೋಣವೇ ?

“ಅಕ್ಕನಾಗಮ್ಮ ಸತ್ಯಚಂಗಳೆ ಚಲ್ವೆ, ಅಕ್ಕರೆಯ ಮಹಾದೇವಿ ಸುಗ್ಗವ್ವೆಯ ಚಿಕ್ಕಕೊಡಗೂಸಿನವರಕ್ಕರೆಯ ತೊತ್ತಿನ ಮಗ ತಾನೆಂದು ತಿಳಿದು ಅವರು ತಿಂದುಂಡು ಬಿಟ್ಟುದನು ತಿಂದು ಅವರಂಗಳವ ಗುಡಿಸಿ ಬಾಗಿಲ ಕಾಯ್ವೆ’ ಎಂದು ಹೇಳುವಲ್ಲಿ ಆ ತವರುಮನೆಯವರಲ್ಲಿ ಅವರಿಟ್ಟ ಪ್ರೇಮ ಮಮತೆ, ಅತ್ಮೀಯತೆ ಭಾವೈಕ್ಯತೆ, ಪ್ರಾಮಾಣಿಕ ನಿರ್ಮಲ ಅನಿಸಿಕೆ ವ್ಯಕ್ತವಾಗದೇ ಇರದು.

ಶಿವಶರಣರಲ್ಲಿ ಅವರಿಗೆ ಬೆಳೆದ ತಾದಾತ್ಮ್ಯತೆ ಹತ್ತು ಹಲವಾರು ಮುಖಗಳಲ್ಲಿ ಕಾವ್ಯವಾಹಿನಿಯಾಗಿ ಹರಿದು ಬಂದಿದೆ. ಮುಪ್ಪಿನ ಷಡಕ್ಷರಿಗಳವರ ಒಂದು ಹಾಡು ‘ಮಗಳೆ ಎನ್ನಯ ಮಾತು ಕೇಳು’ ಎಂದು ಆರಂಭಗೊಳ್ಳುವಂತಹುದು. ಹೆತ್ತವರು ಪತಿಗೃಹಕ್ಕೆ ತೆರಳುತ್ತಿರುವ ಮಗಳಿಗೆ ಮಾಡುವ ಉಪದೇಶದ ಒಂದು ಸಂದರ್ಭವನ್ನು ನೆನಪಿಗೆ ತಂದು ಕೊಡುವ, ಜೊತೆಗೆ ಅಲೌಕಿಕ ಅಧ್ಯಾತ್ಮ ಸನ್ನಿವೇಶದ ಒಂದು ಚಿತ್ರ ಓದುಗರ ಕಣ್ಮುಂದೆ ಕಟ್ಟುತ್ತದೆ.

ಅಧ್ಯಾತ್ಮಪರ ಸಾಧಕರೆಲ್ಲ ಮನಸ್ಸೆಂಬ ಮಗಳಿಗೆ ಹೇಳುವ ತಿಳಿವು, ಅರಿವು ಶಂಭುಲಿಂಗದ ಬೆಟ್ಟವೇ ಅವರಿಗೆ ಸಿಂಹಾಸನವಾಗಿ, ಸಮಸ್ತ ಲೋಕದ ಜನತೆಗೆ ‘ಶರಣಸತಿ ಲಿಂಗಪತಿ’ ಭಾವದ ತತ್ವವನ್ನು ಧಾರೆಯೆರೆಯುವದನ್ನು ಗಮನಿಸಬೇಕು. ಹಾಡಿನ ಮುಖ್ಯಾಂಶಗಳನ್ನು ಗ್ರಹಿಸುವದಾದರೆ,

“ಮಗಳೆ ಪರಮಾತ್ಮನು (ಇಷ್ಟಲಿಂಗ) ನಿನ್ನ ಪತಿ.

ಅವನಿಗೆ ನಿನ್ನ ಅಂಗಗುಣಗಳನ್ನೆಲ್ಲ ಎಡೆಮಾಡು.

ವಿಷಯಸುಖದ ಕಡೆಗೆ ಮನಸ್ಸನ್ನು ಕೊಡಬೇಡ.

ಪ್ರಾತಃಕಾಲದಲ್ಲಿ ಮನೆಯ (ಮನ) ಕಸವನ್ನು ತೆಗೆದು ಪೂಜೆಗೆ ತೊಡಗು.

ಮನೆಯಲ್ಲಿ (ಮನಸ್ಸಿನಲ್ಲಿ ಕತ್ತಲೆ ಬೀಳದಂತೆ ನೋಡಿಕೋ,

ಮತಿ ಮಸುಳದಂತಿರು; ಉತ್ತಮರ ಸಹವಾಸಮಾಡು.

ಪತಿಯು ಕೋಪಗೊಳ್ಳಲು ಅವಕಾಶ ಕೊಡಬೇಡ.

ಹಗಲು ರಾತ್ರಿ ಅವನ ಧ್ಯಾನದಲ್ಲಿರು; ಬೇಸರ ಪಡಬೇಡ.

ನಿನ್ನ ಪತಿ ಕಾಮಜಿತ; ನೀನು ಅತಿಕಾಮಿ, ಮನಶುದ್ಧಿಯಿಂದಿರು.

ಘನಭೋನವನ್ನು ಇನಿಯಂಗೆ ಎಡೆ ಮಾಡು;

ನೀನು ತಪ್ಪು ಮಾಡಿ ಕಾಲು ಪಿಡಿವಡೆ ಅವನಿಗೆ ಕಾಲಿಲ್ಲ

ನೀ ಹಿಡಿವಡೆ ಅವನಿಗೊಡಲಿಲ್ಲ.

ಎಂದು ಪತಿದೇವನ ಅಲೌಕಿಕ ಸ್ವರೂಪವನ್ನು ಮಗಳಿಗೆ ಸೂಕ್ಷ್ಮವಾಗಿ ಮನದಟ್ಟು ಮಾಡಿಕೊಟ್ಟು ಅವನತ್ತಲೇ ಮನಸ್ಸನ್ನು ಕೇಂದ್ರೀಕರಿಸುವ ಸಾಧನೆಯ ಪರಿಯನ್ನು ಅರುಹುತ್ತಾರೆ.

‘ಮೂರು ಕೋಣೆಗಳೊಳಗೆ (ಸ್ಥೂಲ, ಸೂಕ್ಷ್ಮ, ಕಾರಣತನುಗಳು)ಮೂರು ಜ್ಯೋತಿಯ ಬೆಳಗು (ಇಷ್ಟ ಪ್ರಾಣ ಭಾವಲಿಂಗ ಪೂಜೆ)ಆರೈದು ಇಹವ ಪರವರಿಯದೆ ಮಧ್ಯೆ ಕೋಣೆಯ ಮನೆಯೊಳು ಮಾರಾರಿಯನ್ನು (ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗೋಪಾಸನೆ) ನೀನಪಾರ ಸುಖದೊಳು ಹೊಂದಿ ,ನಾರಿ ನೀನಿರುʼ ಎಂದು  ಅನುಭಾವದ ದೈವೀಸಾಧನೆಯ ನೆಲೆಬೆಲೆಯನ್ನು ವಿವರಿಸಿ,

“ನಿನ್ನವನು ತನ್ನಂತೆ ಮಾಡುವನೊಲಿದು

ಎಂದು ಕೈಕೊಂಡ ದಿವ್ಯಸಾಧನೆಗೆ ಅನುಪಮ ಅಮೂಲ್ಯ ಸತ್ಫಲವನ್ನು ಸೂಚಿಸಿರುವರು. ಇಡೀ ಪದ್ಯ ಷಟ್‌ಸ್ಥಲಸಾಧನೆಯ ಮಾರ್ಗದುದ್ದಕ್ಕೂ ಸಾಧಕನಾದವನು ಭಕ್ತ ಮಹೇಶ್ವರ ಸ್ಥಲದ ಶ್ರದ್ಧಾಭಕ್ತಿ ನೈಷ್ಠಿಕಭಕ್ತಿ ಪ್ರಸಾದಿ-ಪ್ರಾಣಲಿಂಗಿಸ್ಥಲದ ಅವಧಾನಭಕ್ತಿ, ಅನುಭಾವಭಕ್ತಿ, ಶರಣ ಸ್ಥಲದ ಆನಂದಭಕ್ತಿ, ಐಕ್ಯಸ್ಥಲದಲ್ಲಿ ಸಮರಸಗೊಳ್ಳುವಿಕೆಯನ್ನು ಸೂಚಿಸಿದೆ. ಶರಣ ಸ್ಥಲದಲ್ಲಿ ಇಷ್ಟಲಿಂಗವೇ ಪತಿ ತಾನೇ ಸತಿಯಾಗಿ ಸಾಧನೆ ಮಾಡುತ್ತ ಸಾಮರಸ್ಯ ಹೊಂದುವ ನಿಲುವನ್ನು  ಷಡಕ್ಷರಿಶಿವಯೋಗಿಗಳು ಸಾಧಕರಿಗೆ, ತಂದೆ ತಾಯಿಗಳು ಮಗಳಿಗೆ ನೀಡುವ ಶಿವಾನುಭವದ ಉಪದೇಶರೂಪದ ಈ ರೂಪಕಪದ್ಯ ಅಧ್ಯಾತ್ಮ  ಸಾಧಕರಿಗೆ ಬೆಳಕಿನ ಕಿರಣವಾಗಿದೆ.

ಹೀಗೆ ಸಮಾಜದರ್ಶನದ ಯಾವದೇ ವಿಷಯವನ್ನು ಕೈಗೊಂಡಿರಲಿ, ಅದರಲ್ಲಿ ವಸ್ತುನಿಷ್ಠವಾದ ಆತ್ಮೀಯವಾದ ವಿಚಾರವಿನಿಮಯ ಕೈಗೊಳ್ಳದೆ, ಸಮಾಜಕ್ಕೆ ದಾರಿದೀಪವಾದ ತಾತ್ವಿಕ ತಿಳಿವಳಿಕೆ ಮಾಡಿಕೊಡದೆ, ಮುಪ್ಪಿನ ಷಡಕ್ಷರಿಗಳು ಮುಂದೆ ಹೋದುದೇ ಇಲ್ಲ, ಇಂಥ ಉನ್ನತಮಟ್ಟದ ಅಧ್ಯಾತ್ಮಪರ ಮನೋಭಾವನೆ ಸಮಾಜ ಜಾಗ್ರತಿಯನ್ನುಂಟು ಮಾಡುವ ಧರ್ಮದರ್ಶಿ ಬಸವ ನೇತಾರ, ಅನುಭಾವಿ ಮುಪ್ಪಿನ ಷಡಕ್ಷರಿಗಳಂತಹ ಮಹಾನುಭಾವರು ನಮಗೆ ಇಪ್ಪತ್ತೊಂದನೆಯ ಶತಮಾನಕ್ಕೂ ಪ್ರಸ್ತುತ, ಈ ಲೋಕ ಶಾಶ್ವತವಿರುವವರೆಗೂ ಅವರ ತತ್ವಗಳು ನಮಗೆ ಪ್ರಸ್ತುತ

ಕೈವಲ್ಯ ಪದಗಳ ರಮಸತ್ಯ:

ಹುಟ್ಟು ಸಾವಿನ ಭವಚಕ್ರಗಳ ಮಧ್ಯೆ ಸಿಲುಕಿರುವ ಮಾನವ ಬದುಕಿದಷ್ಟು ಕಾಲ ಆತ್ಮತೃಪ್ತನಾಗಿರಬೇಕು. ಸಾರ್ಥಕ ಬದುಕು ಅವನದಾಗಬೇಕು. ‘ಲಿಂಗವಾಗಿ ಲಿಂಗಪೂಜಿಸಬೇಕು; ಲಿಂಗಪೂಜಿಸಿ ಲಿಂಗವೇ ಆಗಬೇಕು’ ಎಂಬುದು ಮುಪ್ಪಿನ  ಷಡಕ್ಷರಿಗಳಂತಹ ಅನುಭಾವಿಗಳು ರಚಿಸಿದ ಕೈವಲ್ಯಪದಗಳ ಚರಮಸತ್ಯ; ಅಂತಿಮಸತ್ಯ. ಮುಪ್ಪಿನ ಷಡಕ್ಷರಿಗಳ ಬದುಕಿನ ಪುಟಗಳನ್ನು ಹೊರಳಿಸಿ ನೋಡಿದಾಗ ಷಟ್ಟದಿಯ ಝೇಂಕಾರದ ಓಂಕಾರ ನಿನಾದದಲ್ಲಿ ತನ್ಮಯಗೊಂಡಿರುವುದು ಮನವೇದ್ಯವಾಗುತ್ತದೆ.

ಮುಪ್ಪಿನ ಷಡಕ್ಷರಿಗಳ ಅನುಭಾವ ಪದ್ಯಗಳು ಶ್ರೇಷ್ಠಕಾವ್ಯದ ಸ್ಥಾನವನ್ನು ತುಂಬಬಲ್ಲವು ಅಧ್ಯಾತ್ಮಪಥಿಕನಿಗೆ ಮಹಾತತ್ವದೆಡೆಗೆ ದಿವ್ಯಧ್ವನಿಯಾಗಿ ಸೂಕ್ತ ಮಾರ್ಗದರ್ಶನ ಮಾಡಬಲ್ಲವು. ಛಂದೋಬದ್ಧ ಸಂಗೀತಬದ್ಧ ರಾಗತಾಳರೂಪಬದ್ಧ ವೈಶಿಷ್ಟ್ಯಗಳನ್ನು ಹೊಂದಿ ಓದುಗರ ಮನಸ್ಸನ್ನು ಹಸನುಗೊಳಿಸಿ ಅರಳಿಸಬಲ್ಲವು.

ಪ್ರತಿಪದ್ಯ ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಟದಿಗಳಲ್ಲಿ ರಚಿತಗೊಂಡವು. ಷಟ್ಟದಿಯ ಪ್ರಮುಖ ಲಕ್ಷಣ ಮಾತ್ರಾಗಣಕ್ಕೆ ತಿರುಗಿದಾಗ ಓದುಗಬ್ಬದ ವಿಸ್ತಾರಕ್ಕೆ ಅಧಿಕ ಪ್ರಾಶಸ್ತ್ಯ ಶೃತಿ, ತಾಳ, ಲಯಬದ್ಧ ಛಂದಸ್ಸು, ರೂಪಕ,  ದೃಷ್ಟಾಂತ, ಉಪಮಾನ ಶ್ಲೇಷೆ ಅಲಂಕಾರಗಳ ತೊಡುಗೆ, ಹದವರಿತ ಭಾಷೆ, ಮಧುರಭಕ್ತಿಯ ಕಾವ್ಯದ ಅರ್ಥಗೌರವವನ್ನು ಅಧಿಕಗೊಳಿಸಿವೆ.,

 ಅನುಭಾವಸತ್ವ ಅಂತರಂಗದ ಕದ ತಟ್ಟುತ್ತದೆ. ಸತಿಪತಿಭಾವ ಬೆಸೆಯುತ್ತದೆ. ಲೌಕಿಕ ಅಲೌಕಿಕಗಳು ಬೆರೆತು ಬೇರಾಗದ, ಒಡವೆರೆದು ಒಂದಾದ ಸಾಮರಸ್ಯ ಹೊಂದುತ್ತವೆ. ನವನವೀನ ಭಾವಗಳ ಆವಿಷ್ಕಾರ, ಆತ್ಮಾನಂದ, ತನ್ಮೂಲಕ ಅನುಭವಾನಂದ ‘ಶಿವೇತರಕ್ಷತೆಯೆ ಮುಖ್ಯ ಗುರಿಯಾಗುತ್ತದೆ. ಪ್ರತಿಪದ್ಯಗಳ ಮೇಲಿನ ಪೂರ್ವಿ, ಸುರುಟಿ, ಲಹರಿ, ಮಲಹರಿ, ವಸಂತ, ಸಾರಂಗ, ಧನ್ಯಾಸಿ ರಾಗಗಳು ಮುಪ್ಪಿನ ಷಡಕ್ಷರಿಗಳ ರಾಗಜ್ಞಾನವನ್ನು ಸಾರಿ ಸಾರಿ ಹೇಳಿವೆ. ‘ಷಡಕ್ಷರಿಲಿಂಗ’ ಸ್ವರವಚನದ ರೂಪ ಮುದ್ರೆ ಷಡಕ್ಷರಿಗಳನ್ನು ಅನುಭಾವಿ ಸ್ವರವಚನಕಾರರ ಮಾಲಿಕೆಗೆ ಸೇರಿಸಿವೆ. ವೀರಶೈವ ತತ್ವ, ಲೋಕನೀತಿಸಾರಗಳನ್ನು ಬಿತ್ತರಿಸಿವೆ. ‘ಶಿವತತ್ವಗೀತವ ಹಾಡುವುದು ಶಿವನ ಮುಂದೆ ನಲಿನಲಿದಾಡುವುದು ಷಡಕ್ಷರಿಗಳ ಅಂತರಂಗದ ಘನ ಉದ್ದೇಶ. ಇಂಥವರ ದಿವ್ಯವಚನಾಮೃತ ಪ್ರಪಂಚವನ್ನು ಪಾರಮಾರ್ಥಿಕದೆಡೆಗೆ, ಅನುಭಾವದ ಉನ್ನತ ನಿಲುವಿಗೆ ಬೆಸೆಯುತ್ತವೆ.

ಆಧುನಿಕರ ದೃಷ್ಟಿಯಲ್ಲಿ ಮುಪ್ಪಿನ ಷಡಕ್ಷರಿಗಳು:

ಅನುಭಾವಿ ಶಿವಶರಣರ ಬಗ್ಗೆ ಆಳವಾದ ಅಧ್ಯಯನ ಕೈಗೊಂಡ ಕನ್ನಡದ ಖ್ಯಾತ ಸಾಹಿತಿ ತಿಪ್ಪೇರುದ್ರಸ್ವಾಮಿಗಳವರ ಅಭಿಪ್ರಾಯದಲ್ಲಿ,

ʼʼಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿ ಕಾಣುವುದು ಶಿವನಿಷ್ಠೆಯಿಂದ ಮುಂದುವರೆಯುವ ಸಾಧಕ ಚೇತನವೊಂದರ ಪರಿಶುದ್ಧ ಜೀವನದ ಪ್ರಾಮಾಣಿಕ ಉದ್ಗಾರ. ನಿಜಗುಣರಲ್ಲಿ ಕಾಣುವಂತಹ ಯೌಗಿಕ ತೇಜಸ್ಸಿನ ಸೂರ್ಯಪ್ರಭೆಯನ್ನು ಇಲ್ಲಿ ಕಾಣುವದಿಲ್ಲವಾದರೂ, ಶಾಂತಭಕ್ತಿಯ ತಂಪುಬೆಳಕನ್ನು ಇಲ್ಲಿ ಪಡೆಯಬಹುದಾಗಿದೆ. ನಿಜಗುಣರ ಬಹುಮುಖ ಅನುಭವ ಪಾಂಡಿತ್ಯಗಳಾಗಲೀ, ಅಭಿವ್ಯಕ್ತಿಯ ವೈವಿಧ್ಯವಾಗಲೀ, ಇವರಲಿಲ್ಲ, ಇವರ ಹಾಡುಗಳಲ್ಲಿ ಬಹುಪಾಲು ಶರ ಇಲ್ಲವೆ ಭೋಗ ಷಟ್ಟದಿಗಳಲ್ಲಿ ರಚಿತವಾದವು; ಬಹುಮಟ್ಟಿಗೆ ಏಕಮುಖವಾದವು. ಕೈವಲ್ಯಪದ್ಧತಿಯ ವಿಸ್ತಾರ ಹಿನ್ನೆಲೆಗಳನ್ನಾಗಲಿ ಎತ್ತರ ಬಿತ್ತರಗಳನ್ನಾಗಲೀ ‘ಸುಬೋಧಸಾರ’ದಲ್ಲಿ ನಿರೀಕ್ಷಿಸಲಾಗದು. ಇಲ್ಲಿನ ಹಾಡುಗಳು ತಿಳಿಯಾದ ಮಾಧುರ್ಯ ಮತ್ತು ಆತ್ಮೀಯತೆಗಳಿಂದ ಆಸ್ವಾದವಾಗುತ್ತವೆ. ತಮ್ಮ ಕುಸುಮಕೋಮಲ ದಳಗಳನ್ನು ಅರಳಿಸಿ ನರುಗಂಪನ್ನು ಸೂಸುತ್ತವೆ. ಈ ದೃಷ್ಟಿಯಿಂದ ಕೈವಲ್ಯ ಸಾಹಿತ್ಯದಲ್ಲಿ ಇವುಗಳ ಸ್ಥಾನ ಗಣನೀಯವಾಗಿದೆ. (ಕನ್ನಡದಲ್ಲಿ ಕೈವಲ್ಯ ಸಾಹಿತ್ಯ  ಪು.೪೫)

ಕನ್ನಡದ ಹಿರಿಯ ಕವಿ ಚನ್ನವೀರ ಕಣವಿಯವರು,

“ಮುಪ್ಪಿನಾರ್ಯರ ಹಾಡುಗಳಲ್ಲಿ ಹೃದಯಂಗಮ ವರ್ಣನೆ,ವಿಶಾಲ ದರ್ಶನವಿರುವಂತೆಯೇ ನವನವೀನಭಾವಗಳ ಆವಿಷ್ಕಾರವಿದೆ. ಅವು ಅತ್ಯಂತ ಮಧುರವಾಗಿ ನಿರಾಯಾಸವಾಗಿ, ಗಿಡದಿಂದ ಹೂ ಚಿಗುರು ಹೊಮ್ಮುವಂತೆ ಸಹಜವಾಗಿ  ಹೊರಹೊಮ್ಮುತ್ತವೆ. (ವೈರಾಗ್ಯದಲರು, ಪು.೨೦೮)

ಮೇಲಿನ ವಿದ್ವಾಂಸರ ವಿಚಾರಗಳನ್ನು ಗಮನಿಸಿದಾಗ ಮುಪ್ಪಿನ ಷಡಕ್ಷರಿಗಳು ವೀರಶೈವ ತತ್ವಪದಗಳ ಮತ್ತು ಹಾಡುಗಬ್ಬಗಳ ಪ್ರಕಾರಕ್ಕೆ ಕೊಟ್ಟ ಅಪಾರ ಅಮೂಲ್ಯ ಕೊಡುಗೆ ವಿದಿತವಾಗುತ್ತವೆ. ಇಂತಹ ಅನುಪಮ ಕೊಡುಗೆ ಅವರ ಎತ್ತರ ಬಿತ್ತರಗಳನ್ನು ಇನ್ನಷ್ಟು ಹೆಚ್ಚಿಸಿವೆಯೆಂದೇ ಹೇಳಬೇಕು.

ವೀರಶೈವ ಅನುಭಾವ ಸಾಹಿತ್ಯ ವಾಹಿನಿಯಲ್ಲಿ ಧಾರ್ಮಿಕ ತಾತ್ವಿಕ ನೈತಿಕ ನೆಲೆಯನ್ನು ಗಟ್ಟಿಗೊಳಿಸಿ ಮುಮುಕ್ಷುಗಳಿಗೆ ವೈರಾಗ್ಯಪರರಿಗೆ, ಶಿವಕಾರುಣ್ಯ, ಅರ್ಚನ, ಪೂಜನೋತ್ಪಾದ ನೀತಿನಿಯಮಾಚಾರ, ಹರಗುರು ಚರಮೂರ್ತಿಗಳಿಗೆ ಸನ್ಮಾರ್ಗದರ್ಶನ ಮಾಡಿಕೊಟ್ಟಿವೆ.ಸಾಹಿತ್ಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮುಪ್ಪಿನ ಷಡಕ್ಷರಿಗಳನ್ನು ಅನುಭಾವ ಸಾಹಿತ್ಯ ಪಥದಲ್ಲಿ ಚಿರಂತನಗೊಳಿಸಿವೆ.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)