ಡಾ|| ಬಸವರಾಜ ಸಬರದ

ಘನಮಠದಾರ್ಯ ಬಹುಮುಖ ವ್ಯಕ್ತಿತ್ವ ಹೊಂದಿದ ಶಿವಯೋಗಿ, ಈತ ಶರಣನಾಗಿ ತತ್ವಪದಕಾರನಾಗಿ, ನೇಗಿಲಯೋಗಿಯಾಗಿ ಅನುಭಾವಿಯಾಗಿ ಸಾಧಿಸಿದ ಕಾರ್ಯಗಳು ಇಂದಿಗೂ ಮುಖ್ಯವೆನಿಸುತ್ತವೆ. ಶಿವಯೋಗಿಯಾದವನಿಗೆ ಭಾಷೆ, ಪ್ರದೇಶ, ಜಾತಿ, ಲಿಂಗ, ಇವುಗಳ ಭೇದವಿರುವುದಿಲ್ಲವೆಂಬುದನ್ನು ಘನಮಠದಾರ್ಯ ತೋರಿಸಿಕೊಟ್ಟ. ಮಾನವೀಯತೆ ದೊಡ್ಡದೆಂಬುದನ್ನು ತಿಳಿಸಿಕೊಟ್ಟ.

ಕ್ರಿ.ಶ. ೧೮೨೮ರಲ್ಲಿ ಆಂಧ್ರಪ್ರದೇಶದ ಅತ್ರಾಫ್ ಜಿಲ್ಲಾ ಪಡ್ಲೂರ ತಾಲ್ಲೂಕಿನ ದೋರ್ವಾಡ ಗ್ರಾಮದಲ್ಲಿ ಈ ಘನಮಠದಾರ್ಯ ಜನಿಸಿದ. ನಾಗಭೂಷಣ ನೆಂಬುದು ಈತನ ಹೆಸರು. ವೀರಯ್ಯ ವೀರಾಂಬೆ ಈತನ ತಂದೆ-ತಾಯಿಗಳು. ಯೌವನಕ್ಕೆ ಬಂದಾಗ ಮದುವೆಯಾಯಿತು. ಒಂದು ಹೆಣ್ಣು ಮಗುವೂ ಹುಟ್ಟಿತು. ನಂತರ ಕೆಲದಿನಗಳಲ್ಲಿಯೇ ಜೀವನದಲ್ಲಿ ವೈರಾಗ್ಯ ತಾಳಿ ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ ತನ್ನ ಊರನ್ನೂ, ಸಂಸಾರವನ್ನೂ ತೊರೆದು ಕನ್ನಡ ನಾಡಿಗೆ ಬಂದ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅನೇಕ ಊರುಗಳಲ್ಲಿ ಸಂಚರಿಸಿದ. ಬಸವಕಲ್ಯಾಣದಲ್ಲಿ ಸಂಚರಿಸಿ ಶರಣರ ತತ್ವಗಳನ್ನು ತಿಳಿಯಬೇಕೆಂಬ ಉತ್ಸುಕತೆಯಿಂದ ಘನಮಠಸ್ವಾಮಿಗಳೆಂಬುವರ ಬಳಿ ಕನ್ನಡ ಕಲಿತ ಶರಣರ ತತ್ವಗಳನ್ನು ತಿಳಿದುಕೊಂಡು ಭಕ್ತಿತುಂಬಿ ಹಾಡಿದ. ಹಾಡುಗಳ ರಚಿಸಿದ. ಗುರುವಾದ. ಘನಮಠಾಧೀಶನ ಅಂಕಿತವನ್ನಿಟ್ಟುಕೊಂಡ. ತಾನೇಗುರುವಾದ.  ಘನಮಠದಾರ್ಯನಾದ. ಕ್ರಿ.ಶ. ೧೮೮೦ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ಸಂತೆ ಕಲ್ಲೂರಿನಲ್ಲಿ ಲಿಂಗೈಕ್ಯನಾದ.

ರಾಯಚೂರ ಜಿಲ್ಲೆಯೇ ಘನಮಠದಾರ್ಯನ ಕಾರ್ಯಕ್ಷೇತ್ರವಾಯಿತು. ದೇವದುರ್ಗ ತಾಲೂಕಿನ ಜಾಲಹಳ್ಳಿಯ ವೀರಭದ್ರಕವಿಗೆ, ಅರವತ್ತುಮೂರು ಪುರಾತನರ ಪುರಾಣವನ್ನು ವಾರ್ಧಕ ಷಟ್ಟದಿಯಲ್ಲಿ ಬರೆಯುವಂತೆ ಪ್ರೇರೇಪಿಸಿದ. ನಾರದಗಡ್ಡೆಯ ಚೆನ್ನಬಸವಸ್ವಾಮಿಗಳಿಗೂ ಘನಮಠದಾರ್ಯನಿಗೂ ಕರಣಪ್ರಸಾದದ ಬಗೆಗೆ ವಾದ ನಡೆದಿತ್ತೆಂದು ತಿಳಿದು ಬರುತ್ತದೆ. ವೀರಶೈವ ಸಿದ್ಧಾಂತ ಕುರಿತು, ಅಧ್ಯಾತ್ಮ ಕುರಿತು ಘನಮಠದಾರ್ಯ ಅಧ್ಯಯನ ಮಾಡಿದ, ಚರ್ಚಿಸಿದ, ತನ್ನ ಅನುಭವಕ್ಕೆ ಬಂದ ಸತ್ಯವನ್ನು ಕಂಡುಕೊಂಡ ದೊಡ್ಡ ಅನುಭಾವಿಯಾಗಿ ಬೆಳೆದು ನಿಂತ.

ಹನ್ನೆರಡನೆಯ ಶತಮಾನದ ವಚನಕಾರರ ವಿಚಾರಗಳನ್ನೇ ನಾಗಭೂಷಣ – ಪ್ರಚಾರಮಾಡತೊಡಗಿದ. ವಚನಕಾರರು ಮೂಢನಂಬಿಕೆಗಳ ವಿರುದ್ಧ, ಅಂಧಸಂಪ್ರದಾಯದ ವಿರುದ್ಧ ಹೋರಾಡಿದಂತೆ, ನಾಗಭೂಷಣನೂ ಕೂಡ ಇಂತಹ ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ, ಜನರನ್ನು ಜಾಗೃತಗೊಳಿಸಿದ. ಬಹುದೇವೋಪಾಸನೆಯನ್ನು ಅಲ್ಲಗಳೆದು ಗುಡಿಗುಂಡಾರಗಳಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸಿದ. ಇಷ್ಟಲಿಂಗಕ್ಕೆ ಪ್ರಾಧಾನ್ಯತೆಯನ್ನು ನೀಡಿ ಶಿವಯೋಗಿಯೆನಿಸಿಕೊಂಡ. ಮಠ-ಮಾನ್ಯಗಳ ವಿರೋಧಿಯಾದ. ತಾನು ಜೀವಂತವಿದ್ದಾಗ ಯಾವುದೇ ಮಠ ಮಾನ್ಯಗಳನ್ನು ಕಟ್ಟದೆ ಚಲಿಸುವ ಜಂಗಮನಾದ. ತಾನು ಸತ್ತನಂತರ ತನ್ನ ಸಮಾಧಿಯ ಮೇಲೆ ಯಾರಾದರೂ ಗದ್ದುಗೆ ಮಂಟಪವನ್ನು ಕಟ್ಟಿದರೆ ಅವರ ವಂಶ ನಿರ್ವಂಶವಾಗುವುದೆಂದು ಅಭಿಶಾಪವನ್ನಿತ್ತ. ಹೀಗೆ ಶರಣರ ತತ್ವಗಳಿಗೆ ಬದ್ಧನಾಗಿದ್ದ ನಾಗಭೂಷಣ ಬದುಕಿನಲ್ಲಿಯೂ ಅವುಗಳನ್ನು ಆಚರಣೆಗೆ ತಂದ,

ಹೊನ್ನು-ಹೆಣ್ಣು-ಮಣ್ಣುಗಳಿಗಾಗಿ ಪರಿತಪಿಸದೆ, ಜ್ಞಾನ, ಅನುಭಾವ, ಅಂತರಂಗಶುದ್ಧಿಯತ್ತ ಆಸಕ್ತನಾದ ನಾಗಭೂಷಣ ನಿಜವಾದ ಜಂಗಮನಾದ. ಡಂಭಾಚಾರವನ್ನು ಅಲ್ಲಗಳೆದು ಸರಳ ಭಕ್ತಿಯನ್ನು ತಿಳಿಸಿದ. ಭಕ್ತರಲ್ಲಿದ್ದ ಮೌಢ್ಯತೆಯನ್ನಳಿಸಿ, ವೈಚಾರಿಕತೆಯನ್ನು ಬೆಳೆಸಿದಾಗ ಜನಜೀವನದಲ್ಲಿ ಅನೇಕ ಬದಲಾವಣೆಗಳಾದವು. ಇವುಗಳನ್ನೇ ಭಕ್ತರು ಪವಾಡಗಳೆಂದು ಕರೆಯುತ್ತಾರೆ. ಇಂತಹ ಅನೇಕ ಪವಾಡಗಳನ್ನು ನಾಗಭೂಷಣ ಮಾಡಿರುವುದು ತಿಳಿದುಬರುತ್ತದೆ.

ಗುಡಿ ಗುಂಡಾರಗಳಲ್ಲಿ, ಮಠ-ಮಾನ್ಯಗಳಲ್ಲಿ ಕುಳಿತುಕೊಂಡು ದೇವರು-ಧರ್ಮಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ನೇರವಾಗಿ ವಿರೋಧಿಸಿದ. ನಾಗಭೂಷಣ ಕಾಯಕಕ್ಕೆ ಅತ್ಯಂತ ಪ್ರಾಧಾನ್ಯತೆಯನ್ನು ತಂದುಕೊಟ್ಟ. ದಾನದಂತಹ ಮೌಲ್ಯವನ್ನು ತಿರಸ್ಕರಿಸಿ ದಾಸೋಹದಂತಹ ಉದಾತ್ತ ಮೌಲ್ಯವನ್ನು ಪ್ರಸಾರ ಮಾಡಿದ. ಸದಾಚಾರ-ಸದುವಿನಯಗಳನ್ನು ಹೇಳಿಕೊಟ್ಟ, ನಾಗಭೂಷಣ ಅಹಂಕಾರ-ಅಹಂಭಾವಗಳನ್ನು ತೊರೆಯಲು ತಿಳಿಸಿದ. ಮಾನವನಲ್ಲಿರುವ ಪ್ರೀತಿ-ಅಂತಃಕರಣಗಳೇ ನಿಜವಾದ ಮೌಲ್ಯಗಳೆಂದು ಸಾರಿ ಹೇಳಿದ.

ನಾಗಭೂಷಣ ಕನ್ನಡ ನಾಡಿನ ಪ್ರಮುಖ ತತ್ವಪದಕಾರರಲ್ಲಿ ಒಬ್ಬನಾಗಿದ್ದಾನೆ. ‘ಭಕ್ತಿಸುಧಾಸಾರ’ ವೆಂಬ ಈತನ ಕೃತಿಯಲ್ಲಿ ೧೪೭ ಹಾಡುಗಳಿವೆ. ಈ ಹಾಡುಗಳನ್ನು “ತತ್ವಪದಗಳು” ಎಂಬ ಹೆಸರಿನಲ್ಲಿ ಕ್ರಿ.ಶ. ೧೯೭೦ರಲ್ಲಿ ಸಂತೆಕಲ್ಲೂರಿನ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮಿಗಳು ಪ್ರಕಟಪಡಿಸಿದ್ದಾರೆ.

ಕನ್ನಡದಲ್ಲಿ ತತ್ವಪದ ಸಾಹಿತ್ಯಕ್ಕೆ ದೀರ್ಘವಾದ ಪರಂಪರೆಯಿದೆ. ಈ ಪರಂಪರೆ ಹನ್ನೆರಡನೆಯ ಶತಮಾನದ ವಚನಕಾರರಿಂದ ಪ್ರಾರಂಭವಾಗುತ್ತದೆ. ಹನ್ನೆರಡನೆಯ ಶತಮಾನದ ವಚನಕಾರರು ಸಾವಿರಾರು ಸ್ವರವಚನಗಳನ್ನು ರಚಿಸಿದ್ದಾರೆ. ಇದೇ ಹಾಡುಗಬ್ಬವು ತತ್ವಪದವೆಂಬ ಹೆಸರಿನಲ್ಲಿ ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಗಳಿಂದ ಜನಪ್ರಿಯವಾಯಿತು. ಹೀಗಾಗಿ ಈ ತತ್ವಪದ ಸಾಹಿತ್ಯ ಪರಂಪರೆಯನ್ನು ಹುಟ್ಟುಹಾಕಿದವರಲ್ಲಿ ನಿಜಗುಣ ಶಿವಯೋಗಿಗಳು ಮೊದಲಿಗರಾಗುತ್ತಾರೆ.  ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ ಈ ಮುಂತಾದ ಶಿವಯೋಗಿಗಳ ಅನುಭಾವ ಪದಗಳು ಕನ್ನಡ ಸಾಹಿತ್ಯದ ಹೊಸ ಬೆಳವಣಿಗೆಯನ್ನು ತೋರಿಸುತ್ತವೆ.

ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ನಂತರ, ಅದೇ ಎತ್ತರದ ಸಾಧನೆ ಮಾಡಿದವರಲ್ಲಿ ನಾಗಭೂಷಣ ಘನಮಠ ಶಿವಯೋಗಿ ಮುಖ್ಯವಾಗುತ್ತಾನೆ. ಸರ್ಪಭೂಷಣ ಶಿವಯೋಗಿ ಬೆಂಗಳೂರು ಪ್ರದೇಶದಲ್ಲಿ ಹೊಸಬೆಳಕನ್ನು ಮೂಡಿಸಿದರೆ, ಈ ಘನಮಠ ಶಿವಯೋಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಯಚೂರ ಜಿಲ್ಲೆಯಲ್ಲಿ ತತ್ವಪದಗಳನ್ನು ಹಾಡಿ ಜನಮನದಲ್ಲಿ ಹಸಿರಾಗಿದ್ದಾನೆ.

ಅನೇಕ ಊರುಗಳನ್ನು ಸಂಚರಿಸಿದ ನಾಗಭೂಷಣ ಶಿವಯೋಗಿಯ ತತ್ವಪದಗಳಲ್ಲಿ ವೈವಿಧ್ಯತೆಯಿದೆ. ನೂತನಾಲ್ಲಮಪ್ರಭು ಎಂದೇ ಈತ ಹೆಸರಾಗಿದ್ದಾನೆ. ಪಾದಚಾರಿಯಾಗಿ ತಿರುಗುತ್ತಾ ಅಸಂಖ್ಯಾತ ಭಕ್ತರ ನೋವು-ನಲಿವುಗಳಿಗೆ ಸ್ಪಂದಿಸಿದ ಈ ಶಿವಯೋಗಿ, ಬದುಕಿನಲ್ಲಿ ಸಮಾಜದಲ್ಲಿ ಕಂಡದ್ದನ್ನೇ ತನ್ನ ತತ್ವಪದಗಳ ಮೂಲಕ ಪ್ರಕಟಿಸಿದ್ದಾನೆ. ಭಕ್ತಿ-ವೈರಾಗ್ಯ, ನಿಷ್ಠೆ, ಕಾಯಕ, ದಾಸೋಹ, ಸದಾಚಾರ, ಸದುವಿನಯ ಇಂತಹ ವಿಷಯಗಳನ್ನೇ ಅಭಿವ್ಯಕ್ತಿಸುವ ಈತನ ತತ್ವಪದಗಳಲ್ಲಿ ಅಲ್ಲಲ್ಲಿ ಸಾಮಾಜಿಕ ವಿಡಂಬನೆ ತೀವ್ರತರವಾಗಿದೆ.

ನನ್ನ ಪ್ರಕಾರ ತತ್ವಪದಕಾರರ ಬಹುಮುಖ್ಯವಾದ ಕೊಡುಗೆಯೆಂದರೆ, ವಸಾಹತುಶಾಹಿ ವಿರುದ್ಧ ನಡೆಸಿದ ಹೋರಾಟವಾಗಿದೆ. ಈ ತತ್ವಪದಕಾರರು ಸಾಮಾಜಿಕ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ತೋರಿಸಿದ್ದಾರೆ. ವಸಾಹತುಶಾಹಿಯೆಂಬುದನ್ನು ನಾನಿಲ್ಲಿ ಮೂರು ಹಂತಗಳಲ್ಲಿ ವಿಂಗಡಿಸಲಿಚ್ಛಿಸುತ್ತೇನೆ. ಮೊದಲನೆಯದು ಬ್ರಿಟಿಷರ ರಾಜಕೀಯ ವಸಾಹತುಶಾಹಿ, ಎರಡನೆಯದು ಸಾಂಸ್ಕೃತಿಕ ವಸಾಹತುಶಾಹಿ, ಮೂರನೆಯದು ಮನುಷ್ಯನ ಮನಸ್ಸಿನ ವಸಾಹತುಶಾಹಿ, ಕೈವಾರ ನಾರಾಯಣಪ್ಪ ,ಕಡಕೋಳ ಮಡಿವಾಳಪ್ಪ, ಬೈಲೂರ ಕೃಷ್ಣಪ್ಪನಂತಹ ತತ್ವಪದಕಾರರು ಬ್ರಿಟಿಷರ ರಾಜಕೀಯ ವಸಾಹತುಶಾಹಿಯ ವಿರುದ್ಧ ಇಲ್ಲಿಯ ಪಾಳೆಯಗಾರಿಕೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಸಾಂಸ್ಕೃತಿಕ ವಸಾಹತುಶಾಹಿಯೆಂಬುದು ಕೇವಲ ಬ್ರಿಟೀಷರ ಆಳ್ವಿಕೆಗೆ ಮಾತ್ರ ಸಂಬಂಧಿಸಿರದೆ, ನಮ್ಮ ದೇಶದ ಪುರೋಹಿತಶಾಹಿ ವ್ಯವಸ್ಥೆ ಸ್ಥಾಪಿಸಿದ ಚಾತುರ್ವರ್ಣ ಪದ್ಧತಿಯಾಗಿದೆ. ತತ್ವಪದಕಾರರು ಇಂತಹ ವರ್ಣವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಡಗಿರುವ ಸ್ವಾರ್ಥ, ಸಣ್ಣತನ, ದ್ವೇಷ, ಕಪಟತನ ಇವುಗಳು ಅತ್ಯಂತ ಅಪಾಯಕಾರಿಯಾದವುಗಳು. ತತ್ವಪದಕಾರರು ಇಂತಹ ಮನಸ್ಸಿನ ವಸಾಹತುಶಾಹಿ ವಿರುದ್ಧ ಹೋರಾಡಿದ್ದಾರೆ. ಹೀಗಾಗಿ ಇವರ ರಚನೆಗಳು ಇಂದಿಗೂ ಅಧ್ಯಯನ ಯೋಗ್ಯವಾಗುತ್ತವೆ.

ನಾಗಭೂಷಣನಂತಹ ತತ್ವಪದಕಾರರು ಮುಖ್ಯವಾಗಿ ಸಾಂಸ್ಕೃತಿಕ ವಸಾಹತುಶಾಹಿ ಹಾಗೂ ಮನಸ್ಸಿನ ವಸಾಹತುಶಾಹಿಗಳ ವಿರುದ್ಧ ದನಿಯೆತ್ತಿದ್ದಾರೆ. ವರ್ಣವ್ಯವಸ್ಥೆಯನ್ನು  ಗಟ್ಟಿಗೊಳಿಸುವಲ್ಲಿ ಅನೇಕ ವೇದ-ಶಾಸ್ತ್ರ-ಪುರಾಣಗಳು ಪರೋಕ್ಷವಾಗಿ ಕಾರಣವಾಗಿವೆ. ಅಂತೆಯೇ ಹನ್ನೆರಡನೆಯ ಶತಮಾನದ ವಚನಕಾರರು, ವೇದ ಶಾಸ್ತ್ರ ಪುರಾಣಗಳನ್ನು ಅಲ್ಲಗಳೆದರು.ಅವರ ಪರಂಪರೆಯಲ್ಲಿಯೇ ಮುಂದುವರೆದ ನಾಗಭೂಷಣ ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನಗಳನ್ನು ಬಯಲಿಗೆಳೆಯುವುದರ ಮೂಲಕ ಸಾಂಸ್ಕೃತಿಕ ವಸಾಹತುಶಾಹಿಯ ಕುತಂತ್ರಗಳನ್ನು ಸ್ಪಷ್ಟಪಡಿಸುತ್ತಾನೆ… ಈ ತತ್ವಪದಕಾರನ ಹಾಡೊಂದು ಈ ದಿಸೆಯಲ್ಲಿ ಗಮನಾರ್ಹವಾಗಿದೆ

“ವೇದಶಾಸ್ತ್ರ ಪುರಾಣಗಳೋದಿದ ವೇದಾದಿಗಳೆಲ್ಲ

ಭೇದವನರಿಯದೆ ಭಂಗಬಟ್ಟವರು, ಪೋದವು ನಿಜವಲ್ಲ!!

ಹಲವು ಶಾಸ್ತ್ರ ತಂತ್ರಗಳೋದಿ  ತ್ರೈಮಲವನು ಬಿಡಲಿಲ್ಲ!

ಫಲವೇನೈ ಗಿಳಿಯೋದಿ ಮಲವ ತಿಂದೊಲದಾಯ್ತಲ್ಲ!!

ವೇದಾಂತದೊಳುದ್ಭವಿಸಿದ ಜ್ಞಾನವದಾದಿ ವಿದ್ಯೆಯಲ್ಲ!

ಸಾಧಿಸಿ ಸುಜ್ಞಾನದಿ ಚರಿಸುವವನೇ ದೊರೆ ಜಗಕೆಲ್ಲ!!”

-ಶ್ರೀ ಘನಮಠೇಶ ತತ್ವಪದಗಳು : ಪುಟ ೨

ಎಂಬಂತಹ ನುಡಿಗಳಲ್ಲಿ ವೇದಶಾಸ್ತ್ರ ಪುರಾಣಗಳ ಮೂಲಕ ನಡೆದ ಶೋಷಣೆಯನ್ನು ಘನಮಠದಾರ್ಯ ಖಂಡಿಸಿದ್ದಾನೆ. ಪುರೋಹಿತಶಾಹಿಯೇ ಈ ದೇಶದ ಪ್ರಥಮ ವಸಾಹುತಶಾಹಿ. ಇಂತಹ ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ  ಘನಮಠದಾರ್ಯ ಅನೇಕ ತತ್ವಪದಗಳಲ್ಲಿ ಪ್ರತಿಕ್ರಿಯಿಸಿದ್ದಾನೆ.

ಡಾಂಭಿಕ ಭಕ್ತಿಯನ್ನು ಕುರಿತು ಈ ತತ್ವಪದಕಾರ ಬಹುವಿಧವಾಗಿ ವಿಡಂಬಿಸಿದ್ದಾನೆ.

ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ ಈ ಸೊಳೆಮಕ್ಕಳಿ

ಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ||

ಉಣುವ ಜಂಗಮದೇವರೈತಂದು|    ಹಸಿವೆನಲು ಮುಂದಿನ |

ಮನೆಗೆ ಹೋಗಿಲ್ಲೇಕೆ ನಿಂತೆಂದು   |ಪಳಿಯುತ್ತ ಸಕ್ಕರಿ  |

ಕಣಕ ಮುಂತಾದವನ್ನು ಬಲಿತಂದು  | ತೀರ್ಥಾರ್ಥಿಯೊಳು  ಧಾ |

ರುಣಿಯ ತಿರುಗುತ ಬಳಲಿ ತಾವಂದು| ಪರಿಭ್ರಮಿತರಾಗುತೆ |

ಕುಣಿ ತೆವರ್‌ ಮಣ್ಣುಳ್ಳ ಗರಿಕಾನನಗುಹಂಗಳನರಸಿ ಕಷ್ಟದಿ

ಉಣದ ಕಲ್ಲಿಗೆ ಅಟ್ಟು ನೀಡುವ ಬಣವ ಮಾನವ ಪಶುಗಳಿಗೆ

-(ಶ್ರೀಘನಮಠೇಶ ತತ್ವಪದಗಳ: ಪುಟ: ೭೬)

.

ಈ ನುಡಿಗಳಲ್ಲಿ, ಹನ್ನೆರಡನೆಯ ಶತಮಾನದ ವಚನಕಾರರ ನುಡಿಗಳ ಪ್ರೇರಣೆಯನ್ನು ಕಾಣಬಹುದಾಗಿದೆ. ಘನಮಠದಾರ್ಯ, ಬಸವಣ್ಣನನ್ನು ಆದರ್ಶವನ್ನಾಗಿಟ್ಟುಕೊಂಡ ತತ್ವಪದಕಾರ, ಬಸವನ ಭಕ್ತಿ ಹೀಗಾಗಿ ಬಸವಣ್ಣನ ವಚನಗಳು ನೇರ ಪ್ರಭಾವವನ್ನು  ಈತನ ಹಾಡುಗಳಲ್ಲಿ  ಕಾಣಬಹುದಾಗಿದೆ. ಉಣ್ಣುವ ಜಂಗಮಕ್ಕೆ ನಡೆಯೆಂಬರು,ʼʼ ಉಣ್ಣುವ ಜಂಗಮಕ್ಕೆ ನಡಿಯೆಂಬುವರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು” ಎಂಬ  ವಚನದ ಆಶಯವೇ ಘನಮಠದಾರ್ಯನಲ್ಲಿ ಹಾಡಿನ ಮೂಲಕ ಅಭಿವ್ಯಕ್ತವಾಗಿದೆ. : ಜಾತೀಯತೆಯನ್ನು ನೇರವಾಗಿ ವಿರೋಧಿಸಿದ ಈ ಶರಣ ಇಲ್ಲಿಯ, ಅಸಮಾನತೆಯ ಬದುಕಿಗೆ ಜಾತಿಯೇ ಮುಖ್ಯ ಕಾರಣವೆಂದು ಭಾವಿಸಿದ್ದಾನೆ. ಜಾತಿಗೋತ್ರವನ್ನು ಹಿಡಿದು, ತಾವು ಪ್ರಖ್ಯಾತರೆಂದು ತಿಳಿದುಕೊಂಡವರಿಗೆ  ಘನಮಠದಾರ್ಯ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾನೆ. ರೀತಿಯ ಹೆಸರಿನಲ್ಲಿ ಒಡೆದಾಳುವಂತಹ ಮನುಜರನ್ನು ಕಂಡು “ಮುಚ್ಚಿಕೊಳ್ಳಿರೊ’ ಎಂದು ಎಚ್ಚರಿಸಿದ್ದಾನೆ.

ಒಳ್ಳೆಯ ಮನುಷ್ಯರದೇ ನಿಜವಾದ ಕುಲ, ಅದೇ ಶಿವನ ಕುಲವೆಂದು ಹೇಳುತ್ತ:

ಕೆಸರೊಳ್ ಕಂಜವದು ಜನಿಸೆ | ಕೆಸರೆನಿಸದ ತೆರನು||

ಅಸಮಪುಣ್ಯದಿಂ ಪಶುಪತಿಭಕ್ತನೆನಿಸಿ ತಾನೆಲ್ಲುದಯಿಸಲಾತನ್‌ಸತ್

ಮುತ್ತುದಯಿಸಿ ಜಲದೊಳ್ ಜಲವದು ಮುತ್ತಾಗಿರದದರೋಳ್ |

ಮರ್ತ್ಯದೊಳಗೆ ತನುವೆತ್ತು ಪೂರ್ವಳಿದುತ್ತಮ ಗುರು

ಸತ್ಪುತ್ರನಾದವನು।।

ಶ್ರೀ ಘನಮಠೇಶ ತತ್ವಪದಗಳು: ಪು: ೮೯).

ಇಂತಹ ಅನೇಕ ನುಡಿಗಳಲ್ಲಿ ಈ ತತ್ವಪದಕಾರ, ಜಾತೀಯತೆಯನ್ನು ಖಂಡಿಸಿದ್ದಾನೆ. ಕೆಸರಿನಲ್ಲಿ ಕಮಲ ಹುಟ್ಟಿದಂತೆ, ಜಲದಲ್ಲಿ ಮುತ್ತು ಹುಟ್ಟಿದಂತೆ, ಹೊಲಗೇರಿಯಲ್ಲಿ ಹುಟ್ಟುವ ಮನುಷ್ಯನೂ ಪವಿತ್ರನೇ ಆಗಿದ್ದಾನೆಂದು ಸ್ಪಷ್ಟಪಡಿಸಿದ್ದಾನೆ.

“ಉಪ್ಪು ಹುಳಿಯ ಬಿಟ್ಟು ನಾನು ಸಪ್ಪೆಯನುಂಡೆನೆಂತೀದಿ

ಉಪ್ಪನರಿಯದ ನಾಯಿನರಿಗಳಿಗಪ್ಪುದೆ ಷಟ್‌ಸ್ಥಲದ ಹಾದಿ?”

ಎಂದು ಕೇಳಿದ ತತ್ವಪದಕಾರ,

“ಬೆಳ್ಳಿ ತಾಮ್ರದೇವರು ಬಹು ಸತ್ಯುಳ್ಳವೆಂದು ಕೂಗುವೆ

ಕಳ್ಳರು ಒಯ್ದು ಕಡಿದು ಕರಗಿದಡೆಲ್ಲಿಗೈದಿದವೋ?”

ಎಂದು ಪ್ರಶ್ನಿಸುತ್ತಾನೆ. ಸ್ಥಾವರವನ್ನು ವಿರೋಧಿಸಿದ ಈ ಅನುಭಾವಿ, ಉಪ್ಪು-ಹುಳಿ ಬಿಟ್ಟು ತಿರುಗುವ ಸಂನ್ಯಾಸಿಗಳನ್ನೂ ವಿಡಂಬಿಸುತ್ತಾನೆ. ವಚನಕಾರರ ಆಶಯಗಳನ್ನೇ ತನ್ನ ತತ್ವಪದಗಳಲ್ಲಿ ಹೇಳಿದ ಘನಮಠದಾರ್ಯನ ಅನುಭಾವ  ಎತ್ತರವಾದುದು. ನಿತ್ಯ ಬದುಕಿನ ನಡೆ-ನುಡಿಗಳಲ್ಲಿಯೇ ಅನುಭಾವವನ್ನು ಕಾಣುವ ಈತನ ತತ್ವಪದಗಳು ಜನಸಾಮಾನ್ಯರಿಗೂ ಅರ್ಥವಾಗುವ ಗೇಯಗೀತೆಗಳಾಗಿವೆ.

“ಹೊತ್ತಿರಲಿಕೆ ಊರಿಗೆ ಸೇರೋ | ದಾರಿ

ಕತ್ತಲೆಯೊಳಗರುಪುವರಾರೊ

ಬೀಜದ ನೆಲ್ಲು ಕುಟ್ಟಿಯು ಕೊಟ್ಟು | ಚಲ್ಲು

ತೋಜೆಯಿಂ  ಶುದ್ಧಭಾಂಡದೊಳಟ್ಟು ||

ಮಾಜದ ಜಂಗಮೇಶನಿಗೆ ಕೊಟ್ಟು | ಘನ

ತೇಜ ಪ್ರಸಾದವನುಂಡುಟ್ಟು ||

-ಶ್ರೀ ಘನಮಠೇಶ ತತ್ವಪದಗಳು: ಪುಟ: ೮೭)

 ಎಂಬಂತಹ ಅನೇಕ ನುಡಿಗಳು ನೀತಿವಿಚಾರವನ್ನು ತಿಳಿಸುತ್ತಲೇ ಅನುಭಾವದೆತ್ತರವನ್ನು ತಲುಪುತ್ತವೆ. ಮನಸರಳ ನಡೆ-ನುಡಿ ಪ್ರಾಮಾಣಿಕತೆ, ಸತ್ಯಶುದ್ಧ ಜೀವನ ಇಷ್ಟಾದರೆ ಸಾರ್ಥಕವೆಂದು ಹೇಳಿದ ಈ ತತ್ವಪದಕಾರ ಡಾಂಭಿಕತೆ, ಜಾತೀಯತೆಯನ್ನು ತಿರಸ್ಕರಿಸಿ ಅಂತಸ್ತು ಅಹಂಭಾವವನ್ನು ಅಲ್ಲಗಳೆದಿದ್ದಾನೆ.

ಮೇಲಿನ ನುಡಿಯಲ್ಲಿ ಬಂದಿರುವ ‘ಬೀಜದ ನೆಲ್ಲು’ ಎಂದರೆ ತೋರಿಕೆಯ ಅರ್ಥ’ಗಟ್ಟಿನೆಲ್ಲು ಯೆಂದಾದರೆ,  ಶಿವಬೀಜವನ್ನೊಳಗೊಂಡಿರುವ ಜೀವಾತ್ಮವೆಂಬುದು ಒಳ ಅರ್ಥವನ್ನು ಸೂಚಿಸುತ್ತದೆ. ಹೊಟ್ಟು’ ಎಂದರೆ ಜೀವಾತ್ಮವನ್ನು ಆವರಿಸಿರುವ ಮಲಾವರಣವೇ ಆಗಿದೆ. ಈ ಮಲಾವರಣವನ್ನು ತೆಗೆಯಲು ಗುರುವಿನ ಅಗತ್ಯವಿದೆಯೆಂದು ಘನಮಠದಾರ್ಯ ಇಲ್ಲಿ ವಿವರಿಸಿದ್ದಾನೆ. ‘ಮೂರು ಬೆಟ್ಟಗಳ ಯುಕ್ತಿಲಿ `ದಾಟೊ ಎಂಬ ನುಡಿ ಸ್ಥೂಲ-ಸೂಕ್ಷ್ಮಕಾರಣ ತನುಗಳನ್ನು ದಾಟುವ ಕ್ರಿಯೆಯೇ ಆಗಿದೆ. ಆಸೆ-ಆಮಿಷಗಳೆಂಬ ಹುಲಿಗಳನ್ನು ಕೊಂದು, ಅರಿಷಡ್ವರ್ಗಗಳೆಂಬ ಕಳ್ಳರಿಂದ ಪಾರಾಗಿ ಊರನ್ನು ಸೇರುವ ಬಗೆಯನ್ನು ತಿಳಿಸಿದ್ದಾನೆ. ಇಂತಹ ಅನೇಕ ಪದಗಳಲ್ಲಿ ಇಹದ ಮೂಲಕ ಪರವನ್ನು ಕಾಣುವ ಪ್ರಯತ್ನವಿದೆ.

ನಾಗಭೂಷಣ ಶಿವಯೋಗಿ ಮಹತ್ವದ ತತ್ವಪದಗಳನ್ನು ನೀಡಿರುವಂತೆ, ಕೃಷಿಗೆ ಸಂಬಂಧಿಸಿದ ‘ಕೃಷಿಜ್ಞಾನ ಪ್ರದೀಪಿಕೆ” ಯೆಂಬ ಕೃತಿಯನ್ನು ಕೊಟ್ಟಿದ್ದಾನೆ. ಹೀಗಾಗಿ ಈತ ಶಿವಯೋಗಿ ಆಗಿರುವುದರ ಜತೆಗೆ ನೇಗಿಲಯೋಗಿಯೂ ಆಗಿದ್ದಾನೆ. ಬಸವಣ್ಣ ಮುಂತಾದ ವಚನಕಾರರ ಕಾಯಕ ತತ್ವದಿಂದ ಪ್ರೇರಣೆ ಪಡೆದ ಈ ಶಿವಯೋಗಿ, ಮನುಷ್ಯರ ಮನದಲ್ಲಿ ಭಕ್ತಿಬೀಜಗಳನ್ನು ಬಿತ್ತುವುದರ ಜತೆಗೆ, ಭೂಮಿಯಲ್ಲಿ ವಿವಿಧ ಬೀಜಗಳನ್ನು ಬಿತ್ತಿ ಬೆಳೆ ತೆಗೆದಿದ್ದಾನೆ. ಹೊರಗಿನ ನೆಲವನ್ನು ಕೃಷಿ ಕಾಯಕದಿಂದ ಹಸಿರುಗೊಳಿಸುವುದರ ಜತೆಗೆ ಒಳಗಿನ ನೆಲವನ್ನು ಅಧ್ಯಾತ್ಮದ ಮೂಲಕ ಹಸಿರಾಗಿರಿಸಿದ್ದಾನೆ. ಹೀಗಾಗಿ ಕೃಷಿಕಾಯಕ ಈ ತತ್ವಪದಕಾರನಲ್ಲಿ ವಿವಿಧ ಅರ್ಥಗಳನ್ನು ಪಡೆದುಕೊಂಡಿದೆ.

“ಕೃಷಿ ಜ್ಞಾನ ಪ್ರದೀಪಿಕೆ” ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲನೆ ಭಾಗದಲ್ಲಿ ಭೂಮಿ, ಮಳೆ, ಬೆಳೆ ಈ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಿದ್ದರೆ, ಎರಡನೆಯ ಭಾಗದಲ್ಲಿ ವೀರಶೈವ ಧರ್ಮ-ತತ್ವಗಳಿಗೆ ಬಂಧಿಸಿದ ವಿಷಯವಿದೆ. ಭೂಮಿ ಹಾಗೂ ಅದರ ಮಹತ್ವ, ಸಾಗುವಳಿಗಾಗಿ ಸಿದ್ಧತೆಗಳು, ನಟ್ಟುಕಡಿಸುವುದು, ಗೊಬ್ಬರ ಹಾಕುವುದು, ಒಣ ಬೇಸಾಯ, ನೀರಾವರಿ ಬೇಸಾಯ ಈ ಎಲ್ಲ ವಿಷಯವನ್ನು ಕುರಿತಂತೆ ಈ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ. ಹಾಗೆಯೇ ಕೊನೆಯಲ್ಲಿ ಬರುವ ಪಾರಮಾರ್ಥ ಕೃಷಿಯ ಪ್ರತಿಪಾದನೆಯಿಂದ ಈ ಕೃತಿಗೆ ಮತ್ತೊಂದು ಹೊಸ ಆಯಾಮ ದೊರಕುತ್ತದೆ.

ಈ ಘನಮಠದಾರ್ಯ ವಿಶಿಷ್ಟ ತತ್ವಪದಕಾರನಾಗಿದ್ದಾನೆ. ಆಂಧ್ರಪ್ರದೇಶದಿಂದ ಬಂದ ಈತ ಕನ್ನಡ ನಾಡಿನಲ್ಲಿ ಸಂಚರಿಸಿ ಕನ್ನಡಿಗನಾದ, ತೆಲಗು-ಕನ್ನಡಗಳ ಭಾಷಾ ಬಾಂಧವ್ಯವನ್ನಿಲ್ಲಿ ಕಾಣಬಹುದಾಗಿದೆ. ನೆಲದ ಕೃಷಿ, ಮನದ ಕೃಷಿ ಹಾಗೂ ತನುವಿನ ಕೃಷಿಯನ್ನು ಹೇಳುವ ಈ ಅನುಭಾವಿಯ ರಚನೆಗಳಲ್ಲಿ ಬದುಕಿನ ಸಮನ್ವಯವನ್ನು ನೋಡಬಹುದಾಗಿದೆ.

ತತ್ವಪದಕಾರರಲ್ಲಿ ಕೆಲವರು ನೆಲ-ನೆಲೆಗಳನ್ನು ತೊರೆದು, ಸಂಸಾರ-ಸಂಬಂಧಗಳನ್ನು ಬಿಟ್ಟು ಮುಕ್ತಿಯೊಂದೇ ಪರಮ ಶ್ರೇಷ್ಠವೆಂದು ಅಲೆದಾಡಿದವರಿದ್ದಾರೆ. ವ್ಯವಸ್ಥೆ ಬಗೆಗೆ ಆಲೋಚಿಸಿದ, ವ್ಯವಸ್ಥೆಯ ಬದಲಾವಣೆಯ ಬಗೆಗೆ ಚಿಂತಿಸದೆ ಮನುಷ್ಯ ಮಾತ್ರ ಬದಲಾವಣೆ ಬೇಕೆಂದು ಹೇಳಿದವರಿದ್ದಾರೆ. ಇಂತಹ ಅನೇಕ ಹೇಳಿಕೆಗಳು, ಸ್ತ್ರೀಯರನ್ನು ಕುರಿತಂತೆ ಅವರು ತಾಳಿರುವ ನಂಬಿಕೆಗಳು, ಅಧ್ಯಾತ್ಮಿಕ ಹೆಸರಿನಲ್ಲಿ ಇಹದ ಬದುಕನ್ನು ನಿರಾಕರಿಸುವ ಅವರ ಧೋರಣೆಗಳು ನಮಗಿಂದು ಮಿತಿಗಳಾಗಿ ಕಾಣಬಹುದು. ಆದರೆ ಘನಮಠದಾರ್ಯನಂತಹ ತತ್ವಪದಕಾರರು ನೆಲ-ನೆಲೆಯ ಮೂಲಕವೇ ಪಾರಮಾರ್ಥವನ್ನು ಕಂಡುಕೊಂಡದ್ದು, ಸಂಸಾರದ ಸುಖವನ್ನು ಅನುಭವಿಸಿಯೂ ಅಧ್ಯಾತ್ಮದ ಸಾಧನೆ ಮಾಡಿದ್ದು ಮುಖ್ಯವಾಗುತ್ತದೆ. ವಚನಕಾರರಂತೆ ಇಹದ ಮೂಲಕವೇ ಪರವನ್ನು ಕಾಣುವ, ಇಲ್ಲಿ ಸಲ್ಲಿದಾಗಲೇ ಅಲ್ಲಿ ಸಲ್ಲುತ್ತದೆಂದು ಹೇಳುವ  ಸ್ತುನಿಷ್ಠತೆಯನ್ನು ಈ ತತ್ವಪದಕಾರನಲ್ಲಿ ಕಾಣಬಹುದಾಗಿದೆ. ಜನರ ಮೌಢ್ಯತೆಯನ್ನು ಹೋಗಲಾಡಿಸಿ, ಅಂಧಸಂಪ್ರದಾಯಗಳನ್ನು ತೊರೆದು, ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನವನ್ನು ಬಯಲಿಗೆಳೆದು ಮನುಷ್ಯರ ಪ್ರಯತ್ನಕ್ಕೆ ಕೃಷಿ ಕಾಯಕಕ್ಕೆ ಮಹತ್ವ ನೀಡಿದ  ಘನಮಠದಾರ್ಯ ಇಂದಿಗೂ ಪ್ರಸ್ತುತನಾಗಿದ್ದಾನೆ. ಈತನ ತತ್ವಪದಗಳನ್ನು, ಕೃಷಿಜ್ಞಾನ ಪ್ರದೀಪಿಕೆಯಂತಹ ಕೃತಿಗಳನ್ನು ಹೊಸ ನೆಲೆಗಳ ಮೂಲಕ ಚರ್ಚಿಸಬೇಕಾಗಿ ಬದುಕಿನ ವಾಸ್ತವತೆಯ ಹಿನ್ನೆಲೆಯಲ್ಲಿ ಚಿತ್ರಿಸಬೇಕಾಗಿದೆ.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

ಬಿ.ಮಹಾದೇವಪ್ಪ

ಕ್ರಿ.ಶ. ೧೭೮೦ರಿಂದ ೧೮೫೫ರವರೆಗೆ ಬಾಳಿ ಬದುಕಿದ ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಕ್ರಾಂತಿಕಾರಿ ಕವಿಗಳು, ಬಂಡಾಯ ಕವಿಗಳು ಮತ್ತು ಅನಿಷ್ಟಗಳು ಕಂಡಾಗಲೆಲ್ಲ ಖಂಡತುಂಡವಾಗಿ ಖಂಡಿಸಿದ ಪ್ರಚಂಡಕವಿಗಳು, ಕಲಬುರ್ಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಬಿದನೂರು ಗ್ರಾಮದ ವಿಧವೆ ಗಂಗಮ್ಮ ಮತ್ತು ಮಠದ ವಿರೂಪಾಕ್ಷ ಸ್ವಾಮಿಗಳ ಸಂಬಂಧದಿಂದ ಹುಟ್ಟಿದ ಶ್ರೀ ಮಡಿವಾಳಪ್ಪನವರನ್ನು ಸಮಾಜವು ತೀಕ್ಷ್ಣ ದೃಷ್ಟಿಯಿಂದ ನೋಡಿದಾಗ, ಶ್ರೀ ಮಡಿವಾಳಪ್ಪನವರು ಸಮಾಜವನ್ನು ಬಹಳ ತೀಕ್ಷ್ಣ ದೃಷ್ಟಿಯಿಂದ ಅವಲೋಕಿಸಿದರು. ಅವರ ವಿಧವೆಯ ಮಗನಾಗಿ ಎದುರಿಸಿದ ಹತ್ತು ಹಲವು ಕಹಿ ಅನುಭವಗಳೇ ಕಾವ್ಯಮಯವಾಗಿ ಹರಿದು ಬಂದವು. ವಿಧವೆಯ ಮಗನೆಂಬ ಕಾರಣದಿಂದ ಸಂಪ್ರದಾಯಪ್ರಿಯ ಜಂಗಮರಾರೂ ಬಾಲಕ ಮಡಿವಾಳಪ್ಪನವರ ಕೊರಳಿಗೆ ಇಷ್ಟಲಿಂಗ ಕಟ್ಟಲು ಮುಂದೆ ಬರದಿದ್ದಾಗ ಲಿಂಗವಿರಹದ ನೋವೇ ಭಕ್ತಿಯ ಪ್ರವಾಹವಾಗಿ ಹೊರಹೊಮ್ಮಿತು. ಮತ್ತು ಸಂಪ್ರದಾಯನಿಷ್ಠರ ಬಗೆಗಿನ ಕ್ರೋಧವೇ ಬಂಡಾಯಗಾರನಾಗಿ ಕಂಡರಿಸಿತು

.

“ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪೂಜಿಸಿ, ವಂದಿಸಿ, ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯʼʼ ಎಂದು ಅಣ್ಣ ಬಸವಣ್ಣನವರು ಹೇಳಿದಾಗ್ಯೂ ಇವರು ಕುಲಛಲದ ಮಾತನಾಡುವರಲ್ಲಾ ಎಂದು ಸಿಟ್ಟಿನಿಂದ ಮಾನವರ ಜನನ ರೀತಿಯನ್ನೆಲ್ಲ ತರ್ಕಬದ್ಧವಾಗಿ ಜಾಲಾಡಿದರು. ಅವರ ಒಂದು ಪದ್ಯ ಹೀಗೆ ಬರುತ್ತದೆ:

ಮುಡುಚೆಟ್ಟಿನೊಳು ಬಂದು ಮುಟ್ಟುತಟ್ಟು ಅನ್ನುತೀರಿ

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ಮುಟ್ಟಾದ ಮೂರುದಿನಕ ಹುಟ್ಟಿಬಂದಿರಿ ನೀವು

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ತೊಗಲೊಳು ತೊಗಲು ಹೊಕ್ಕು ತಗಲಿ ಬಂದೀರಿ. ನೀವು

ಅಗಲ ಮಾತಾಡುವುದೇನಣ್ಣ?

ಬಗೆಯ ತಿಳಿಯದೆ ಇದರ ಬಗದು ಮಾತಾಡಿದರೆ

ನಗೆಗೇಡಿಯಾಗುತಾದಣ್ಣ

ಎಲವಿನಾಲಯದೊಳು ಒಳಗ್ಹೊಕ್ಕು ನೀ ಕುಂತು

ಒಲಿದಂತೆ ಆಡಬೇಡಣ್ಣ

 ಎಲುವು ತೊಗಲು ಮಜ್ಜೆ ಮಲ ಮೂತ್ರ ಮಾಂಸವು

ನಿನ್ನೊಳಗೆ ಕಾಣುತಾದಣ್ಣ

ಹೀಗೆ ಶ್ರೀಮಡಿವಾಳಪ್ಪನವರು ಜಾತಿ ಪಾರಮ್ಯದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಮರವನ್ನೇ ಸಾರಬೇಕಾಗುತ್ತದೆ “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಂ ದ್ವಿಜಮುಚ್ಚತೇ’ʼ ಎಂಬ ಶಾಸ್ತ್ರೋಕ್ತ ಮಾತನ್ನು ಅಲಕ್ಷಿಸಿ ಉಚ್ಚ ನೀಚ ಎಂದು ಒಣ ಅಭಿಮಾನದಿಂದ ಬೀಗುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಅನೇಕ ಹಾಡುಗಳು ಉಪಲಬ್ದ ಇವೆ.

೧. “ಊಚದ್ಯಾವದೋ ಇದರೊಳು ನೀಚದಾವದೋ?

ನಾಚುವದ್ಯತಕೆ ಎನ್ನಮುಂದೆ ಭೂಚರ್ಯಕೆ ಬಂದಮೇಲೆ ||ಪ||

ತುಲ್ಲು ತುಣ್ಣಿಲಿಂದ ಹುಟ್ಟಿ, ಹೊಲ್ಲಹೊವೆಯ ದೇಹ ತೊಟ್ಟಿ

ಬಲ್ಲೆನಂತೊ ಬಿಂಕದಿಂದೆ, ವಳ್ಲಿವಳ್ಳಿ ಸುಳ್ಳೆ ಕೆಟ್ಟಿ ||೧||

೨.ದಾವದೋ, ಕುಲದಾವದೋ?

ಕುಲದ ವಿವರವ ತಿಳಿದ್ಹೇಳೆಲೋ    ಮೂಢ  || ಪ||

ಒಂಬತ್ತು ತಿಂಗಳು ತಾಯಿಯ ಹಾಟು

ತಂದಿದು ಒಂದಿಷ್ಟು ಅರಗದ್ಯಾಣದಷ್ಟು

ಅದರೊಳು ಕೂಡಿ ಬಂದಾದ ಜೀವ ಒಂದಿಷ್ಟು

ಮೂಬೆರಕಿ ಮೂಳ ನಿನಗ್ಯಾಗಿಷ್ಟು ನೇಟು ||೧||

೩. ಐತಾನದ್ಹಮ್ಮೇನೂ ಚುಮ್ಮಾ| ದೇಹ

ಮೈಥುನದಿಂದ ಆವದಿ ತಾಯಿ-ತುದಿಯ ಸೊಮ್ಮ

ಶ್ರೀ ಕಡಕೋಳ ಮಡಿವಾಳಪ್ಪನವರನ್ನು ಆ ಕಾಲದಲ್ಲಿ ಎಲ್ಲರೂ ತುಚ್ಛ ದೃಷ್ಟಿಯಿಂದಲೇ ನೋಡಲಿಲ್ಲ, ಹೊನ್ನನ್ನು ಚೆನ್ನಾಗಿ ಪರೀಕ್ಷಿಸುವ ಜನರು ಆ ಕಾಲದಲ್ಲಿಯೂ ಇದ್ದರು. ಬಿದನೂರಿನ ಶ್ರೀಮಲ್ಲಿಕಾರ್ಜುನಪ್ಪಗೌಡರು ತಾಯಿ ಗಂಗಮ್ಮ ಮತ್ತು ಮಗ ಮಡಿವಾಳನನ್ನು ಬಹಳ ಮಮತೆ ಕಕ್ಕುಲಾತಿಯಿಂದ ನೋಡಿಕೊಂಡರು. ಶ್ರೀ ಮಡಿವಾಳಪ್ಪನವರ ದೈವಭಕ್ತಿ ಮತ್ತು ಪರಮ ವಿರಕ್ತಿಯನ್ನು ಪರಿಶೀಲಿಸಿದ ಅರಳಗುಂಡಿಗೆ ಶ್ರೀ ಶರಣಬಸವೇಶ್ವರರು ತಮ್ಮ ಗುರು ಮರುಳಾರಾಧ್ಯರ ಮೂಲಕ ಅವರಿಗೆ ಇಷ್ಟಲಿಂಗ ಧಾರಣೆ ಮಾಡಿಸಿದರು. ಚಿಮಣಗೇರಿ ಗುಡ್ಡದ ಮಠಾಧೀಶರು ಅವರ ತಪೋನುಷ್ಠಾನ -ಶಿವಯೋಗ ಪರಾಕಾಷ್ಠೆಯನ್ನು ಅನುಲಕ್ಷಿಸಿ ಜಂಗಮದೀಕ್ಷೆ ನೀಡಿದರು. ಶ್ರೀ ಶರಣಬಸವೇಶ್ವರರ ಜೊತೆಗೆಯೇ ಜೀವನ ಸಾಗಿಸಬೇಕೆಂದಾಗ ಅರಳಗುಂಡಿಗೆಯ ಹಳೇಪ್ಯಾಟಿ ಬಸಯ್ಯನವರಂತಹ ಪಾಖಂಡಿಗಳು ಕುಲನೆಲಿ ಎತ್ತಿ  ಛೇಡಿಸುತ್ತಾ ಇಲ್ಲದ ಅಪವಾದವನ್ನು ಹೊರಿಸಿ ತೊಂದರೆ ಕೊಟ್ಟರು. ಶ್ರೀ ಶರಣಬಸವೇಶ್ವರರಿಗೆ ತೊಂದರೆಯಾಗಬಾರದೆಂದು ಅರಳಗುಂಡಿಗೆಯನ್ನು ತ್ಯಜಿಸಿ ಜಂಬೇರಾಳ ಎಂಬ ಗ್ರಾಮಕ್ಕೆ ಬಂದು, ಅಲ್ಲಿಂದಲೂ ನಿರ್ಗಮಿಸಿ, ಕೋಣ ಸಿರಸಿಗೆಗೆ ಬಂದು, ಅಲ್ಲಿಯೂ ಅಜ್ಞ ಜನರ ಉಪಟಳ ಜಾಸ್ತಿ ಆದಾಗ ಕಡಕೋಳ ಗ್ರಾಮಕ್ಕೆ ಬಂದು ಅಲ್ಲಿಯ ಆಹ್ಲಾದಕರ ಪರಿಸರಕ್ಕೆ ಮನಸೋತು ಒಂದು ಮಠ ಕಟ್ಟಿಕೊಂಡು ವಿರಕ್ತ  ಜಂಗಮರಾಗಿ ನೆಲೆನಿಂತರು. ಅದೇ ಅವರಿಗೆ ಕಡೆಯ ಕೊಳ್ಳವಾಯಿತು. ಅಲ್ಲಿಯೇ ಕ್ರಿ.ಶ. ೧೮೫೫ರಲ್ಲಿ ಸಜೀವ ಸಮಾಧಿ ಹೊಂದಿದರು.

ಮನುಷ್ಯ ಎಲ್ಲಿ ಹುಟ್ಟಿದ ಯಾರಿಗೆ ಹುಟ್ಟಿದ ಎಂಬವುಗಳು ಮುಖ್ಯವಾದವುಗಳು ಅಲ್ಲವೇ ಅಲ್ಲ, ಆತ ಹೇಗೆ ಬಾಳಿದ, ಪರರನ್ನು ಹೇಗೆ ಬಾಳಗೊಟ್ಟ ಎಂಬುವು ಮನುಷ್ಯ ಜೀವನದ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಶ್ರೀ ಮಡಿವಾಳಪ್ಪನವರು ಕಡಕೋಳದಲ್ಲಿ ನೆಲೆನಿಂತ ನಂತರ ತಾವು ನಂಬಿದ ತತ್ವಗಳಿಗೆ ಬದ್ಧರಾಗಿ, ಕಲ್ಯಾಣದ ಶಿವಶರಣರ ಆದರ್ಶ ಮಾರ್ಗ,  ಪಥಿಕರಾಗಿ, ಕಡಕೋಳದಲ್ಲಿಯೇ ಒಂದು ಆಧುನಿಕ ಅನುಭವ ಮಂಟಪ ರಚಿಸಿಕೊಂಡು ಭಕ್ತಿಪಕ್ಷ ರೂಪಿಸಿಕೊಳ್ಳುತ್ತಾರೆ.  ಹನ್ನೆರಡನೆಯಶತಮಾನದ ಅನುಭವ ಮಂಟಪಕ್ಕಾದರೋ ಇಷ್ಟಲಿಂಗ ಕಡ್ಡಾಯವಾಗಿತ್ತು. ಆದರೆ ೧೯ನೆಯ ಶತಮಾನದ ಕಡಕೋಳ ಅನುಭವ ಮಂಟಪದಲ್ಲಿ ಕಾಲಮಾನಕ್ಕನುಸರಿಸಿ ಇಷ್ಟಲಿಂಗ ಐಚ್ಛಿಕವೆನಿಸುತ್ತೆನಿಸುತ್ತದೆ. ಅವರ ಶಿಷ್ಯ ಬಳಗದಲ್ಲಿ ಬ್ರಾಹ್ಮಣ ಬೈನೂರು, ಕೃಷ್ಣಪ್ಪನವರು, ಕಬ್ಬಲಿಗರಜಾತಿಯ ಕಡ್ಲೆವಾಡದ ಸಿದ್ಧಪ್ಪನವರು, ಮುಸಲ್ಮಾನ ಜಾತಿಯ ಚೆನ್ನೂರ ಜಲಾಲ ಸಾಹೇಬರು, ಮೋಟನಹಳ್ಳಿಯ ಹಸನಸಾಹೇಬರು, ಶೀಲವಂತ ಹಂಗರಗಿ ಬಸವಲಿಂಗಪ್ಪನವರು, ರೆಡ್ಡಿಕುಲದ ಕೋಡಿ ರಾಮಲಿಂಗಾರೆಡ್ಡಿಯವರು-ಹೀಗೆ ಅಸಂಖ್ಯಾತ ಜನರು ಅವರ ಸುತ್ತಮುತ್ತ ನೆರೆದು ಅನುಭಾವದ ಅಡಿಗೆಯನ್ನು ಮಾಡಿ ಸವಿಯುತ್ತಿರುತ್ತಾರೆ. “ಎಂಥ ಮಾನವ ಜನ್ಮ ಇದು ಮಾಯಿಗೆ ಸೋತಾದ” ಎಂಬ ವಿಷಾದದೊಡನೆ ಮಾನವ ಜನ್ಮದ  ಸಾರ್ಥಕತೆಯ ಚಿಂತನೆಗಳು ಅಲ್ಲಿ ನಡೆಯುತ್ತವೆ. “ಮಚ್ಚಲಿ ಹೊಡಿರಿವಗ, ಕಚ್ಚೆಗಡುಕ ನಿಜದೆಚ್ಚರ ಅರಿಯದೆ ಹುಚ್ಚು  ನಾಯಾಂಗ ಮನಿ ಮನಿ ತಿರುಗವಗ” ಎಂಬ ರೊಚ್ಚಿನ ನಿರ್ಧಾರಗಳು ಅಲ್ಲಿ ಆಗುತ್ತವೆ. “ಏತರ ಕಟಿಪಿಟಿ ಒಂದಿನ ಹೋಗದು ಲಟಿಪಿಟಿ ಸಂಸಾರ ಮಾಡ್ತೀರಿ ಜಟಿಪಿಟಿ, ಆದರ ಭಕ್ತಿ ಮಾಡುದು ತುಟುಮಿಟಿ’ ಎಂಬಂತಹ ಅನಿತ್ಯ ಸಂಸಾರದ ಬೆತ್ತಲೆ ಚಿತ್ರಗಳು ಅಲ್ಲಿ ಮೂಡಿ ನಿಲ್ಲುತ್ತಿದ್ದವು.

ಮನುಷ್ಯ ಮಾಯೆಯ ಜ್ವಾಲೆಗೆ ಬೀಳುವದಾಗಲಿ, ಹಲವು ಹಗರಣಗಳನ್ನು ಮಾಡುವುದಾಗಲಿ ಸುಳ್ಳು, ಮೋಸ, ವಂಚನೆಗೆ ಒಳಗಾಗುವುದಾಗಲಿ, ರೂಪ ಮನುಷ್ಯನದಿದ್ದರೂ ನಾಯಿ, ಕೋತಿ, ಕತ್ತೆಗಳ ಹಾಗೆ ವರ್ತಿಸುವುದಾಗಲಿ, ಸೃಶ್ಯಾಸೃಶ್ಯ ಆಚರಿಸುವುದಾಗಲಿ ಜ್ಞಾನದ ಕೊರತೆಯೆಂಬ ನಿತ್ಯ ಸತ್ಯವನ್ನು ಕಂಡು ಕೊಂಡ  ಮಡಿವಾಳಪ್ಪನವರು ಮಾನವರ ಜ್ಞಾನಾರ್ಜನೆಗೆ ವಿಶೇಷ ಮಹತ್ವಕೊಟ್ಟರು. “ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ ವೇದ ಶಾಸ್ತ್ರ ಪುರಾಣಾಗಮಗಳೆಂಬ ನೇಣ ಕಟ್ಟಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ, ತೊಟ್ಟಿಲು ಮುರಿದು ನೇಣ ಹರಿದು, ಜೋಗುಳ ನಿಂದಲ್ಲದೆ ಗುಹೇಶ್ವರ ಲಿಂಗವ ಕಾಣಬಾರದು” ಎಂಬ ಅಲ್ಲಮ ಪ್ರಭುಗಳ ಮಾತನ್ನು ಎತ್ತಿ ಹಿಡಿದು ಶ್ರೀ ಮಡಿವಾಳಪ್ಪನವರು ತಮ್ಮ ಹತ್ತಿರ ಬಂದ ಮುಮುಕ್ಷುಗಳಿಗೆಲ್ಲ ಬ್ರಹ್ಮ ಜ್ಞಾನಿಗಳಾಗಬೇಕೆಂದೇ ಬೋಧಿಸುತ್ತಿದ್ದರು. ಜ್ಞಾನವನ್ನು ಆರಾಧಿಸುವದು, ಅಜ್ಞಾನವನ್ನು ನಿಯಂತ್ರಿಸುವದು ಅವರ ಪ್ರಮುಖ ಉಪದೇಶವಾಗಿರುತ್ತಿತ್ತು. ಈ ಕೆಳಗಿನ ಹಾಡಿನಲ್ಲಿ ಬಹಳ ಮಾರ್ಮಿಕವಾಗಿ ತಿಳಿಸಿದ್ದಾರೆ.

ಧನವ ಗಳಿಸಬೇಕು ಇಂಥಾದ್ದು| ಈ ಜನರಿಗೆ ತಿಳಿಯದಂಥಾದ್ದು

ಅನುದಿನ ಅಜಹರಿಮನುಮುನಿಗಳು ಎಲ್ಲ| ಹೌದು, ಹೌದು, ಹೌದೆಂಬಂಥದ್ದು

ಕೊಟ್ಟರೆ ಹೋಗದಂಥಾದ್ದು  |ಅದು ಇಟ್ಟರೆ ಕೊಳೆಯದಂಥಾದ್ದು

ಕಟ್ಟಿದ ಗಂಟು ಬಯಲೊಳಗಿಟ್ಟರೂ | ಮುಟ್ಟಲಿಬಾರದಂಥಾದ್ದು. 

ಜ್ಞಾನ ಸಂಪಾದನೆ ಜತೆಗೆ ಅಜ್ಞಾನದ ಹೋಗಲಾಡಿಸುವಿಕೆಯೂ ಅಷ್ಟೇ ಮಹತ್ವಪೂರ್ಣವಾದುದು. ಅಜ್ಞಾನ ಇರುವವರೆಗೆ ಜ್ಞಾನಕ್ಕೆ ಜಾಗ ಇರುವುದಿಲ್ಲ. ಅಜ್ಞಾನ ತನ್ನಿಂದ ತಾನೇ ಆವರಿಸಿಕೊಂಡು ಬರುವುದರಿಂದ ಅದರ ನಿಯಂತ್ರಣಕ್ಕೆ ನಾವು ಗುರು ಮತ್ತು ಪರಮಾತ್ಮನನ್ನು ಮೊರೆ ಹೋಗಬೇಕಾಗುತ್ತದೆ. ಈ ಕೆಳಗಿನ ಪದ್ಯದಲ್ಲಿ ಅವರು ಅದನ್ನೇ ಮಾಡಿದ್ದಾರೆ.

ನಾನಿತ್ತಲೆಳೆದರೆ ತಾನತ್ತಲೆಳೆಯುವದು! ಇನ್ನೇನಿನ್ನೇನೋ

ಅಜ್ಞಾನೆಂಬುವ ಕೋಣ ಸಾಧ್ಯವಾಗದು ನೋಡಾ| ಇನ್ನೇನಿನ್ನೇನೊ

ಹಸಿ ಹುಲ್ಲ ಕಂಡಲ್ಲಿ ಬಿಸಿಲೊಳು ಮೇಯುವುದು | ಇನ್ನೇನಿನ್ನೇನೊ

ಮುಂದೆ ಸಸಲ ಒಡೆದೀತೆಂದು ಕುಶಲ ತಿಳಿಯದು ಕೋಣ | ಇನ್ನೇನಿನ್ನೇನೂ

ಮುಪ್ಪುರಿಕೂಡಿಸಿಮುಗದಾತರ ಹಾಕಿದ್ದೆ. | ಇನ್ನೇನಿನ್ನೇನೋ

ಜಪ್ಪಿಸಿ ಹಿಡಿದರೆ ತಪ್ಪಿಸಿಕೊಂಡು ಹೋಯಿತು |. ಇನ್ನೇನಿನ್ನೇನೊ

ಮೂರಾರು ಕೋಣನೊಳು ತಾನೆ ತುಂಬಿತೋ ಕೋಣ  |ಇನ್ನೇನಿನ್ನೇನೊ,

ನಮ್ಮ ಧೀರ ಮಹಾಂತೇಶ ಗಮಾರಿಬಿಟ್ಟೆನು ಕೋಣ’ | ಇನ್ನೇನಿನ್ನೇನೊ

ಜನಪದರ ದೈನಂದಿನ ಜೀವನಕ್ಕೆ ಅನ್ವಯಿಸಿ ಅನೇಕ ಬೆಡಗಿನ ಹಾಡುಗಳನ್ನು ಶ್ರೀ ಮಡಿವಾಳಪ್ಪನವರು ಬಹಳ ಅರ್ಥಗರ್ಭಿತವಾಗಿಯೂ ಬಹಳ ತತ್ವಗರ್ಭಿತವಾಗಿಯೂ ಬರೆದಿದ್ದಾರೆ. ನೋಡಲಿಕ್ಕೆ ಅವು ಸಂಸಾರದ ತಾಪತ್ರಯಗಳನ್ನು  ಬಣ್ಣಿಸುವ ಹಾಡುಗಳೆನಿಸಿದರೂ ಗಾಢಾರ್ಥದಲ್ಲಿಯೂ ಗೂಢಾರ್ಥದಲ್ಲಿಯೂ ಅವು ಆಧ್ಯಾತ್ಮಿಕ ಒಲವಿನ ಹಾಡುಗಳಾಗಿರುತ್ತವೆ. ಒಲ್ಲೆನೆಪ್ಪೋ ಹೆಂಡಿರನೊಲ್ಲೆನಪ್ಪೋ! ಇಬ್ಬರ ಹೆಂಡಿರ ಕಾಟಿಗಾಗಿ ಮಗ್ಗದ ಕೋಣೆಯೊಳು ಡೊಗ್ಗದೆನಪ್ರೊ” ಎಂಬುದು ಐಹಿಕ ಮತ್ತು ಪಾರಮಾರ್ಥಿಕವನ್ನು ಸಮನಾಗಿ ತೂಗಿಸುವೆನೆಂಬುವವರ ಸುಂದರ ವಿಡಂಬನೆಯಾಗಿದೆ.

ʼʼ ಅತ್ತಿಯ ಮನಿಗ್ಹೋಗುವಲ್ಲಿ | ಊರಾಗ | ಮತ್ತ್ಯಾವ ನಿಟ್ಟಿದಿ ಇಲ್ಲಿ’ ಎಂಬುದು ಸಂಸಾರಕ್ಕೆ ಜೋತು ಬೀಳುವವರ ಅಪಹಾಸ್ಯವಾಗಿದೆ. ʼʼಮಗನೊಂದು ಹಡದೇನಲ್ಲ! ಮದವಿಗಂಡ ಮನಿಯಾಗಿಲ್ಲ. ಉಂಡು ಉಟ್ಟು ತಿರುಗಲಿಲ್ಲ, ಮಿಂಡಿ ನಾ ಬಸಿರಾಗಲಿಲ್ಲ ಎಂಬುದು ಇಷ್ಟಲಿಂಗವೆಂಬ ಮಗನ ಪಡೆದ ಸಂಕೇತವಾಗಿದೆ. ಹೀಗೆ ಇಂತಹ ನೂರಾರು ಹಾಡುಗಳು ಶ್ರೀ ಮಡಿವಾಳಪ್ಪನವರ ಸಾಹಿತ್ಯದಲ್ಲಿ ನಮಗೆ ದೊರೆಯುತ್ತವೆ.

ಹರಿಯ ಎದೆಯನ್ನು ಮೆಟ್ಟಿದೆನು, ಹರನ ಅರ್ಧಾಂಗದೊಳು ನೆರೆ, ಸುಟಿಗೆಯಾಡಿದೆನು ಬ್ರಹ್ಮನ ಬಾಯ ಮುದ್ರಿಸಿದೆಯೆಂದು ಮಾಯೆಯ ಪ್ರತಾಪವನ್ನು ಬಣ್ಣಿಸಿದ ಚಾಮರಸ ಕವಿಯ ರೀತಿಯಲ್ಲಿಯೇ ಶ್ರೀ ಮಡಿವಾಳಪ್ಪನವರು ಮಾಯೆ  ಎಂಥಾದೆಂಬುದನ್ನು ಗುಲ್ಬರ್ಗಾ ಜಿಲ್ಲೆಯ ಗ್ರಾಮ್ಯ ಭಾಷೆಯಲ್ಲಿ ಅದ್ಭುತವಾಗಿ ಬಣ್ಣಿಸಿದ್ದಾರೆ. ಮಾಯೆಯನ್ನು ಪೋರಿ ಎಂದು ಕರೆದ ಮಡಿವಾಳಪ್ಪನವರ ವೈಶಿಷ್ಟ್ಯವೇ ವೈಶಿಷ್ಟ್ಯ. ಆ ಹಾಡು ಹೀಗಿದೆ.

ಅಜೀಬ ತಮಾಷದ ಪೋರ್ಯಾಳೊ ಅಜಹರಿರುದ್ರಗ  ಮೀರ್ಯಾಳೋ

ಅಜಗಜಮಾತಿಗೆ ದೂರಾಳೊ |ನಿಜಮಹಾಜ್ಞಾನಕ ತೋರ್ಯಾಳೊ

ಪೋರಿ ನೋಡಿದರೆ ತುತ್ತಾಳೋ | ದಾರಿ ತೆಲಿಮ್ಯಾಲ ಹೊತ್ತಾ

ಸೀರಿನಿರಿಗಿ ಮ್ಯಾಲಕ್ಕೆತ್ಯಾಳೊ | ಮೂರೂ ಲೋಕ ಮುರಿದ್ತೊತ್ತ್ಯಾಳೊ

ಈ ಹೆಣ್ಣ ಯಾರಿಗಿ ಕಾಣ್ಯಾಳೊ | ಎಲ್ಲರ ಕಣ್ಣಗ ಹೂಣ್ಯಾಳೊ

ತುಣ್ಣಿಗೆ ಹುಟ್ಟಲ್ದ ಹೆಣ್ಣ ಹಾಳೊ  |ಕಣ್ಣ ಕಟ್ಟಿ ನೋಡಿದ್ರ ಕಾಣಸತಾಳೊ

ತೂಗಲಮ್ಯಾಲ ಬೆಳೆಸ್ಯಾಳಪ್ಪ | ಅವು ಮುಗಿಲಿಗಿ ಮುಟ್ಯಾವ ನೋಡಪ್ಪ

ಅಗಲಾಡಿತು. ಜಗ ಜನರಪ್ಪ | ಈ ಭುಗಲಿನೊಳಗೆ ಮಡಿವಾಳಪ್ಪನಪ್ಪ

ಶ್ರೀ ಮಡಿವಾಳಪ್ಪನವರು ಆಶು ಕವಿಗಳಾಗಿದ್ದರು. ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಸುರಿಸುತ್ತಿದ್ದವು. ಅವರ ವಿಶೇಷತೆಯೆಂದರೆ ಕಲ್ಬುರ್ಗಿ ಜಿಲ್ಲೆ ಕನ್ನಡ ಅಶುದ್ಧವಾಗಿದೆಯೆಂದು ಇತರರು ಜರಿಯುತ್ತಿದ್ದಾಗ ಈ ಅಶುದ್ಧ ಕನ್ನಡಕ್ಕೂ ಅಧ್ಯಾತ್ಮದ ಶಕ್ತಿಯಿದೆಯೆಂದು ತೋರಿಸಿಕೊಟ್ಟರು. ಜನವಾಣಿ ಅಷ್ಟೇ ಅಲ್ಲ ಜನಪದರ ಮಾತುಗಳಿಗೂ ದೈವಸಾಕ್ಷಾತ್ಕಾರದ ಶಕ್ತಿಯಿದೆಯೆಂಬುದನ್ನು ಮೊದಲಿಗರಾಗಿ ತೋರಿಸಿಕೊಟ್ಟರು.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

ಕವಿ ಸಿಂಗಿರಾಜರ ಕಾಲ: ಕ್ರಿ.ಶ.ಸು.೧೫೦೦, ವೀರಶೈವ ಕವಿಗಳು.
ಸಿಂಗಿರಾಜರು ವಾರ್ಧಕಷಟ್ಪದಿಯಲ್ಲಿ ‘ಬಸವಚಾರಿತ್ರ’ (ಸಿಂಗಿರಾಜಪುರಾಣ) ಎಂಬ ಕೃತಿ ರಚಿಸಿದ್ದಾರೆ.
ಈ ಕೃತಿಯು ಬಸವಣ್ಣನವರ ಚರಿತ್ರೆಯನ್ನು ಕುರಿತದ್ದಾಗಿದೆ ಮತ್ತು ಈ ಕೃತಿಯಲ್ಲಿ ಸಿಂಗಿರಾಜನು ಪುರಾಣಕ್ಕಿಂತ ವಾಸ್ತವಕ್ಕೆ ಹತ್ತಿರವಾಗುವಂತೆ ಬರೆದಿದ್ದಾರೆ.
ಬಸವಚಾರಿತ್ರದ ವಿಶೇಷತೆಗಳು:
೧) ದೇವಾಲಯದ ರಂಗ ಮಂಟಪದಲ್ಲಿರುವ ನಂದಿಕೋಡುಗಳ ಮೂಲಕ ಶಿವಲಿಂಗವನ್ನು ನೋಡುವ ವಿಧಾನ ಸಿಂಗಿರಾಜ ಪುರಾಣ ಮತ್ತು ರಾಘವಾಂಕ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
೨) ಚೆನ್ನಬಸವಣ್ಣನವರ ತಂದೆಯ ಹೆಸರನ್ನು `ಬಸವ ಚಾರಿತ್ರ್ಯ’ (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರು ಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.
೩) ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಈ ಕೃತಿಯಿಂದ ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ ರಲ್ಲಿ ರಚನೆಯಾದ ಸಿಂಗಿರಾಜರ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜರು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟರಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.
ಸಿಂಗಿರಾಜರ ಕಾವ್ಯದ ಕೆಲವು ಸಾಲುಗಳು

ಶ್ರೀ ಷಡ್ಗುಣೈಶ್ವರ್ಯಹಸಂಪನ್ನ ಬಸವ ಗುರು
ವೇಷಮಂ ಧರಿಸಿ ಮರ್ತ್ಯದಿ ಭಕ್ತರುಗಳನುಱೆ
ಪೋಷಿಸಿದ ಕಾರಣವ ಕೃತಿಮಾಳ್ಪೆ ಸದ್ಭಕ್ತಜನರಱಿವ ಮಾಳ್ಕೆಯಿಂದ

ಶ್ರೀಮದಮರೇಂದ್ರಾರ್ಚಿತಂ ಪರಾತ್ಪರಮನಿ
ಸ್ಸೀಮನದ್ವಯನತುಳನನಘ ನಿಗಮಾಗಮ
ಸ್ತೋಮ ಸಂಸ್ತುತ್ಯಗೋಚರ ನಿರಾಲಂಬ ನಿಶ್ಚಿಂತ ನಿಜ ನಿತ್ಯಮೂರ್ತಿ
ಪ್ರೇಮದಿಜನಾರ್ದನಜ ಮನುಮುನಿಪ ಯಕ್ಷ ಖಚ
ರಾಮರಮೇಶ್ವರರ್ಗಖಿಳಸಂಪದವಿತ್ತ
ಸ್ವಾಮಿ ಕಾಶೀಪುರಾಧಿಪ ವಿಶ್ವಪತಿ ಕೂರ್ತು ನೆಲಸೆನ್ನ ಹೃದಯದೊಳಗೆ ||೧||

ಆವುದಂತಸ್ಥವೀ ಕೃತಿಮೂಲವೃತ್ತಾಂತ
ಸಾವಯವೆನಲು ಭರ್ಗನೆರಡನೆಯ ಮೂರ್ತಿ ವೃಷ
ಭಾವತಾರನು ಬಸವನಾಮದಿಂ ಜನಿಸಿ ಸದ್ಭಕ್ತಿಪಥ ತೋಱಿ ಜಗವ
ಪಾವನವ ಮಾಡಿ ಪರವೆರಸಿದ ಮಹಾ ರಹ
ಸ್ಯಾವಳಿಯ ಗಣಕುಲಕೆ ನಂದಿಮಹಕಾಳರು
ದ್ರಾವರೇಣ್ಯನೊಡರ್ಚಿದೋಜೆ ಕಲ್ಪಿತ ರಸಾಯನಸಿದ್ಧಿ ಶರಣರ್ಗಿದು ||೯||

ನಕ್ರದಿಂದವಹಾರದಿಂ ಕಮಠದಿಂ ಕದುಳಿ
ಚಕ್ರದಿಂ ತಿಮಿ ತಿಮಿಂಗಿಲ ಪ್ರೋಷ್ಠದಿಂ ಕುಳಿರ
ವಕ್ರದಿಂ ಮದ್ಗುರವಮಕರದಿಂ ಕರಿಮಕರದಿಂ ಜಳೂಕದಿ ಪುಷ್ಕರ
ಚಕ್ರನಿಚಯದಿ ಶಾಲಿಹೋತ್ರಕುಲದಿಂ ದ್ವಿರದ
ಚಕ್ರವಾಳದಿ ಕರಭದಿಂ ಜೀವ
ವಿಕ್ರಮದಿ ಮನುಜಸಂಚಯದಿ ಪೊಂಪೊಗೆದು ವಾರಾಶಿ ಕಣ್ಗೆಸೆದಿರ್ದುದು ||೧೩||

ಲೀಲೆಯಿಂದಾ ಭದ್ರಸಿಂಹವಿಷ್ಟರದಿನೊ
ಡ್ಡೋಲಗಂಗೊಟ್ಟು ಕುಳ್ಳಿರ್ದ ಪರಶಕ್ತಿಯ ಸ
ಮೇಳದಿಂ ಸ್ಕಂದ ನಂದೀಶ್ವರ ಗಣಾಧೀಶ ವೀರಭದ್ರ ಪ್ರಮುಖರ
ಸಾಲುಸಂಗಡದ ರುದ್ರಾಳಿಗಳ ತ್ರೈಜಗ
ತ್ಪಾಲಸಂಖ್ಯಾತರ್ಪುರಾತನರ್ಮಾಹೇಶ
ಜಾಲ ಸಾನಂದಾದಿ ಸಾಮೀಪ್ಯರೊಗ್ಗಿನಿಂ ಬಳಸಿರ್ದುದುಮೆವರನನು ||೨೨||

ಲಾಲಿಸುತಲಖಿಳ ಸುಖಸಂಪದುತ್ತರಪರಮ
ಲೀಲೆಯಿಂದಿರೆ ಉಮಾವರನು ದಿವಿಜಾಳಿಗಳ
ಪಾಲಿಸುತಿರಲ್ಕೆಯಂತಾಸಮಯದೊಳು ಬಸವರಾಜ ಭೂವಳಯದಲ್ಲಿ
ಭಾಳಾಕ್ಷನಪರಾವತಾರ ತಾಂ ಸದ್ಗತಿಸ
ಮೇಳಗಳ ಭಕ್ತರ್ಗೆ ತೋಱಿ ಬಂದಾ ಶಿವನ
ಓಲಗದ ಮುಂದೆ ಪುಷ್ಪಕವನಿಳಿದಾಕಥಾವೃತ್ತಾಂತಮಂ ಪೇಳ್ವೆನು ||೩೭||

ಏಕ್ಷನೆಯ ಸಂಧಿ

ಸೂಚನೆ:-
ಈಶನಟ್ಟಿದ ಕಾರಣದ ಲಿಪಿಯ ಚಪ್ಪನ್ನ
ಭಾಷೆಯವರಱಿಯದಿರಲದ ನೋಡುತೋದಿ ಭೂ
ಮೀಶಂಗೆ ತಿಳುಪಿ ಭಂಡಾರದಧ್ಯಕ್ಷಮಂ ಪಡೆದ ಸಂಗನಬಸವನು

ಶ್ರೀಮದಖಿಳಾಗಮಾರ್ಣವ ಮಥನಗೈದು ನಿ
ಸ್ಸೀಮನಂದೀಶ ಪ್ರಮಥರ್ಗಮಲವಚನರಚ
ನಾ ಮಹಾವಸ್ತುವಿಸ್ತೀರ್ಣಮಂ ಸ್ಥಲವಿಟ್ಟನಾ ಮಂತ್ರರಹಸ್ಯಾದಿಯ
ಭೂಮಿಯ ಶಿವಾರ್ಚಕರ್ಗೊರೆದಬಸವೇಶ್ವರನ
ನಾಮಾಮೃತಾಕೃತಿಯ ವಿಶ್ವೇಶನಮಲಪದ
ತಾಮರಸಷಟ್ಚರಣಷಟ್ಪದೀಗಳಿಂ ಸಿಂಗಿರಾಜಾಂಕನೆನಲದೆಂತೊ ||೧||

ಮಕುಟವರ್ಧನರೆಂಟು ಸಾವಿಲಮವರೊಳಡಸಿ
ಸಕಲರಾಜರ ರಾಜಪುತ್ರ ಸಚಿವರ ಮಾನ್ಯ
ಪ್ರಕರ ಬಾಹತ್ತರ ನಿಯೋಗ ದಂಡಾಧೀಶರಖಿಳ ಭಾಷಾಯುಕ್ತರ
ನಿಕರ ಚೌಷಷ್ಠಿ ನಾನಾಕಳಾನ್ವಿತ ಪರೀ
ಕ್ಷಕರ ನಡುವೊಡ್ಡೋಲಗದೊಳೊಪ್ಪಿರಲ್ಕಾಕ
ಸ್ಮಿಕದ ಲಿಖಿತಂಬರದಿ ಭರದಿ ಬಿದ್ದಿತು ನೃಪನ ಎಸೆವ ಸಿಂಹಾಸನದೊಳು||೪||

ಆ ಲಿಖಿತವಂ ತೆಗೆದು ಚೋದ್ಯವೆಂದೇನುತ ಭೂ
ಲೋಲ ಮೂಗಿಂಗೆ ಕೈಯಿಟ್ಟು ತಾ ನೋಡೆ ಕಣು
ಕೀಲಿಸುವೊಲಾಗತಿ ಭೀತಿಯಿಂ ಸಚಿವರ್ಗಿತ್ತರವರದನು ನೋಡೆ
ಆಲಿ ಸಿಡಿವಂತಹುದು ತುಟಿಮಿಡುಕ ತೆಱಹಿಲ್ಲ
ನಾಲಿಗೆಗೆ ಬಿಯ್ಯಗಂ ಹೂಡಿದಂತಹುದದಱ
ಮೂಲ ಲಿಪಿ ಭಾಷೆ ತಿಳಿಯದೆ ಬಳಲಿ ಬಲ್ಲವರ್ಗಳೆಲ್ಲರಂ ಕರೆಸಿ ತೋಱೆ ||೫||

ಗಣಕರಂ ಹಳಿದು ಲಿಖಿತರ ಮೀಱಿ ಮುಹೂರ್ತಕರ
ಡೊಣದು ವಿದ್ವಾಂಸರಂ ವಿಧಿಗೊಳಿಸುತಾಗಮಿಕ
ರೆಣಿಕೆಗೊಳ್ಳದೆ ಕವಿಗಮಕಿವಾದಿವಾಗ್ಮಿಗಳ ಭ್ರಮೆಗೊಳಿಸಿ ಬಲ್ಲವರನು
ತೃಣಮಾಡಿ ಸಾಮರ್ಥ್ಯ ಸಟೆಯೆನಿಸಿ ತಾರ್ಕಿಕರ
ನಣೆದು ಗಣಿತಜ್ಞರಂ ಗುಣಗೆಡಿಸಿ ಲಿಪಿಯ ಲ
ಕ್ಷಣದಕ್ಷರಂದಿಳಿಯದೆಲ್ಲರಂ ಅಲ್ಲೆನಿಸಿ ಓಡಾಡಿತೇಂ ಪೊಗಳ್ವೆನು ||೬||

ಗಗನಲಿಪಿ ಧೂಮಲಿಪಿ ಜಲಲಿಪಿ ಪಿಶಾಚಲಿಪಿ
ಖಗಲಿಪಿ ಕದಂಬಲಿಪಿ ಕಲ್ಪಲಿಪಿ ಕಾಕಲಿಪಿ
ನಿಗಮಲಿಪಿ ನೀಲಲಿಪಿ ಚಕ್ರಲಿಪಿ ಲೆಖ್ಖಲಿಪಿ ಬಿಂದುಲಿಪಿ ದರ್ಪಣಲಿಪಿ
ಭೃಗುಲಿಪಿ ಪ್ರಬಂಧಲಿಪಿ ಶಸ್ತ್ರಲಿಪಿ ಚಿತ್ರಲಿಪಿ
ವಿಗತಲಿಪಿ ರಣಲಿಪಿ ಶಿಲಾಲಿಪಿ ಶಿರೋರ್ಲಿಪಾ
ದಗಣಿತ ಮಹಾಲಿಪಿಗಳೊಳಗಱಿದು ತಿಳಿಯದಳಲುತಲಿರ್ದು ಬಳಲಿ ಮತ್ತೆ ||೮||

ಹಲವನಾಡೆಹುದಿಲ್ಲ ಕಾರ್ಯ ಹೋ ಹೋ ಸಾಕು
ಗಲಭೆಯೇಕೀ ಲಿಪಿಯನೋದಿ ತಿಳಿಪಿದಡೆಮ್ಮ
ಬಲಕೆ ರಾಜ್ಯಕ್ಕೆ ರಣಭಂಡಾರವೆಲ್ಲವಕ್ಕಧಿಕತ್ವದೊಡೆತನಕ್ಕೆ
ಸಲುಗೆ ವೇಳ್ದಂಡಾಧಿನಾಥಪದಮಂ ಕೊಟ್ಟು
ಸಲಹುವೆನೆನಲ್ಸಾಧ್ಯವಲ್ಲೆಮಗೆ ಸಾಧಿಸೀ
ಫಲವ ಪಡೆಯಲು ಬಲ್ಲಗಲದೀ ಲಿಖಿತ ದೈವಿಕಮಾರ್ಗೆ ತಿಳಿಯದೆನಲು ||೧೦||

ಸಂಗಮದೊಳಿರ್ದು ಕಾರಣದಿಂದೆ ಬಂದು ಕರ
ಣಂಗಳಾಶ್ರಯದಲ್ಲಿ ಬರೆವುತಿಹ ಬಸವೇಶ್ವ
ರಂಗೆ ಭಾವದೊಳಿರ್ದು ಶರಣನಾಕಾರದಿಂದೆಂದುದಶರೀರವಾಕ್ಕು
ಲಿಂಗಜಂಗಮದಿರವ ನೀನಱಿದು ಮಾಳ್ಪ ಲೇ
ಸಿಂಗೆ ತಕ್ಕಧಿಕ ಫಲಬೇಕೆಂದು ಲಿಖಿತಮಂ
ಸಂಗಮೇಶ್ವರಲೀಲೆಯಿಂದಟ್ಟಿದೋಲೆಯಿದು ಸಾಧ್ಯ ನಿನಗೋದೆಂದನೆ||೧೧||

ರೂಢೀಶ ನಿಮ್ಮ ಬರವೇಳ್ದನೆನೆ ಎದ್ದು ನಿಲೆ
ನೋಡಿ ಬೆಱಗಾಯ್ತು ಸಭೆ ಏನಿವನ ಮರುಳುಮಾ
ತಾಡಿಸಿತೊ ಮೇಣ್ಬಲ್ಲನೋ ದೇವತಾಕರುಣವೋ ಕಾಕುವಗರಣವನು
ಆಡುವನೊ ಯೆನುತೆಲ್ಲರಲ್ಲಲ್ಲಿ ನಿಂದು ಮಾ
ತಾಡುತಿರಲಾ ಸಭಾಶಧಿಮಥನಕ್ಕೆ ಶಿವ
ನಾಡಿಸುವ ಮಂದರದೊಲೈತಂದಬಸವರಸ ಬಿಜ್ಜಳನ ಸಮ್ಮುಖಕ್ಕೆ|| ೧೯||

ವಿಷಮದೋಲಿದು ವಿರಾಜಿತ ರಾಜಶೇಖರನ
ವಿಷಯದಿನೊಗೆದುದಿದಱ ವೃತ್ತಾಂತಮಂ ದಿಟಂ
ಬೆಸಗೊಂಬೆಯಾದಡಾದಱಂತಸ್ಥವೆಲ್ಲವಂ ತಿಳಿವೆಯಾದೊಡೆ ಪೇಳ್ವೆನು
ವಸುಧೆಗಚ್ಚರಿ ನಿನನ ಪರಮ ಸಂಪದಲಕ್ಷ್ಮಿ
ಗೆಸಕವಿದು ಬಿಜ್ಜಳನರೇಂದ್ರಯೆನೆ ಹಾರವಿಸಿ
ಬಸವ ನಮ್ಮಯ್ಯ ಪೇಳೆಂತೆನಲ್ಕೋಲೆಯನೊಡರ್ಚೋದಲುಜ್ಜುಗಿಸಿದಂ ||೨೩||

ಸ್ವಸ್ತಿ ಶ್ರೀಮನ್ಮಹಾದೇವಾಧಿದೇವಸಂ
ಸ್ತುತ್ಯ ಸಂಗಮನಾಥನನುಮತಂ ಇದು ಮಿಕ್ಕಿ
ನ ಸ್ಥಿತಿಯದೇಶ ಗಾಧೆಯಕನ್ಯವಾದ ಸಿದ್ಧಾಂತ ಬದ್ಧಾಂತವಲ್ಲ
ವಸ್ತುವಱುವತ್ತಾಱು ಕೋಟಿಯಂ ತೋಱುವ ಸು
ವಸ್ತುವಂಜನ ದೇವಲಿಪಿ ನಿನ್ನ ಭಾಗ್ಯದ ಸ
ಮಸ್ತ ಸಾರೋದ್ಧಾರ ಶಾಸನವಿದೆಂದು ಬಸವೇಶನೋದಿದನೋಲೆಯ ||೨೪||

ಭಾಪುರೆಮ್ಮಯ್ಯ ಕಿಱಿದೆನಬಹುದೆ ಪರುಷಮಂ
ಭಾಪುವೆಮ್ಮಯ್ಯಬಾಯಿತ್ತ ಬಾಯೆಂದಪ್ಪಿ
ಭೂಪ ಸಿಂಹಾಸನದ ಬಲದ ಭಾಗದೊಳಿಂಬುಗೊಟ್ಟು ಕುಳ್ಳಿರಿಸಿಕೊಂಡು
ಕೂಪ ಸಚಿವರೊಳೆಂದ ನೋಡಿರೈ ಈ ಹಿರಿಯ
ಪಾಪಿಗಳೊಳಾರುವಱಿಯದ ಲಿಪಿಯನೋದಿದ ಮ
ಹಾಪರುಷ ಕಿಱಿದೆಯೆನೆನೆರವಿ ತಲೆಗುತ್ತಿ ನೆಲನಂ ಬರೆದುದೇಂ ಪೊಗಳ್ವೆನು ||೨೫||

ಇಟ್ಟಿಮುಱಿಯಿತ್ತು ತಾರ್ಕಿಕರೊಡಲ ಶೂಲದಿಂ
ದಿಟ್ಟಂತೆಯಾ ಪ್ರಭಾಕರರ್ಗಳೆದೆ ಚಾರ್ವಾಕ ನಾನಾಭಾಷೆ ದೇಶಿಕರ
ನೆಟ್ಟನುರಿಗುತ್ತಿದಂತಾರುಹತ ಬೌದ್ಧ ಬರುಬೋಧಕರ ಬದಿಯಲಲಗ
ಹೆಟ್ಟಿದಂತಾಯ್ತು ನಾನಾಭಾಷೆ ದೇಶಿಕರ
ಕಟ್ಟೂರಿಸಿತು ಸಿದ್ಧರದ್ವೈತ ಸಮಯಿಗಳ
ಮೆಟ್ಟಿ ಸೀಳಿತು ನಿಮ್ಮ ಬಸವಣ್ಣನೋದು ವಾದಿಗಳ ಮುಂಬಲ್ಗಳೆದುದು ||೨೬||

ಬಸಿರ ಕಿಚ್ಚಿಂಗೆ ಬಣಬೆಯಂ ಸುಡುವನಂತೆ ತಾ
ಮಸಿಗರಱಿಯರ್ಭೂಪ ನಿನ್ನ ಮಹದೈಶ್ವರ್ಯ
ವಸುಮತಿಯಱಿಯೆ ಪೆರ್ಚಲೆಂದು ಶಶಿಶೇಖರಾಜ್ಞಾನುಸಾರದಿ ಬಂದುದು
ಕುಶಲತೆಯು ನಿನಗೆ ಸಂತಸದೆಸಕ ಮುಂದೆನ
ಲ್ಬಸವೇಶನೆಡೆಗೆ ಬಂದಸಮಾನ ಲಿಪಿಯ ವಾ
ಚಿಸಿದ ತೆಱತದ್ದ್ರವ್ಯಮಿಹ ತಾಣಮಂ ತೋಱಿ ಪಾಲಿಸೆನಲರ್ತಿಯಿಂದ ||೨೬||

ಚಾಳುಕ್ಯಚಕ್ರೇಶನಿದು ನಿಜದ ನಿಱಿಗೆಯೆಂ
ದೇಳಲೊಡೆ ಮುಂಕೊಂಡು ಮುಂ ಧನವ ಬೈತಿಟ್ಟ
ಮೂಲಿಗನೊಲಮ್ಮಮ್ಮ ನಡೆದು ನಿಕ್ಷೇಪದೆಡೆಗೈದಿ ಹರಶರಣೆನುತ್ತ
ಭಾಳಲೋಚನ ಶರಣು ಭರ್ಗ ಶರಣುಗ್ರ ತ್ರಿ
ಶೂಲಿ ಶರಣಂಬಿಕಾಪತಿ ಶರಣು ದುರಿತರಿಪು
ನೀಲಕಂಠನೆ ಸಂಗಮೇಶ ಶರಣೆಂದು ನಿಧಿಯಂ ಮೆಟ್ಟಿ ನಿಂದಿರ್ದನು ||೩೦||

ಇದೆಯಿಲ್ಲಿ ದಾತಾ ಮಾತಾವಯಸ್ತಂಭವಾ
ಯಿದೆಯಿಲ್ಲಿ ಇಂದಿರಾನಂದಲಾವಣ್ಯರಸ
ಮಿದೆಯಿಲ್ಲಿ ಸಂಕ್ರಂದನ ಲೋಕವಾರೂಢ ಭೋಗ ಭಾಗ್ಯಾಗಂತುಕ
ಇದೆಯಿಲ್ಲಿ ಧನದನಾಪತ್ಕೋಶ ನಿತ್ಯನಿಧಿ
ಇದೆಯಿಲ್ಲಿ ಸಕಲಸಂಪತ್ಕರನಿಧಾನಫಲ
ಇದೆಯಿಲ್ಲಿ ಭೂಪ ತೆಗೆಸೈ ತೆಗೆಸು ಲಿಪಿಯಾರ್ಥದರ್ಥದೋಱುವೆನೆಂದೆನೆ ||೩೧||

ಹಾರೆಕಾಱರು ಸಲಿಕೆಕಾರ ಗುದ್ದಲಿಕಾಱ
ಗೋರಿಕಾಱರ್ಕವಿದು ಬಂದು ತನ್ಮುಖದಿ ಹೊಡೆ
ದಾರಿಯಗೆಯಲ್ಕೊಂದು ತೆಱದ ಭೈರವ ಭೂತ ಭೇತಾಳ ಪ್ರಳಯಗ್ರಹ
ತೋಱಿ ತವದಿರ ಕಣ್ಗೆ ಉರಗ ವ್ಯಾಘ್ರತಿಚಂಡ
ಘೋರ ಭಯ ಹೊಯ್ದು ಬೊಬ್ಬಿಡುತೋಡಲೇನದಱ
ಕಾರ್ಯ ಭಿಕ್ಷವನೊಲ್ಲೆನಾಯ ತೆಗೆಯೆಂಬವೊಲಾಯ್ತಾವುದಿದಕುಪಮಾನವು ||೩೨||

ಎನಲು ಪಂಚಾಕ್ಷರಿಯ ಜಪಿಸುತನಿತಗಲದೊಳು
ಘನತ್ರಿಪುಂಡ್ರಂದಳೆವುತೆನ್ನನೀಕ್ಷಿಸುತಗೆಯಿ
ರೆನುತಭಯವಿತ್ತೆಲ್ಲರಂ ಬರಿಸಿ ತಾ ನಿಂದು ಬಳಸಗೆಸಲೊಡನೆ ಮುಗುಳೆ
ಕನಕ ಕಣ್ದೆಱೆದುದೀತನ ಭಕ್ತಿಯುನ್ನತಿಯ
ದಿನಕರ ದೆಸೆಯ ಬೆಳಗುವಂತೆ ರಾಯನ ಭಾಗ್ಯ
ವನಿತೆಯಂ ಭೂಕಾಂತೆ ಪಡೆದಳೆನೆ ನಿಧಿನಿಧಾನಂ ರೂಪು ನಿಜದೋಱಿತು ||೩೩||

ರಾಜನುತ್ಸಹದಿಂದೆ ರಾಜಿಸುತಖಿಲ ಸಭಾ
ರಾಜರಾಹಾ ವಿರಾಜಿತ ಮೌಳಿದೂಗಿದರು
ಮೂಜಗದೊಳಿಲ್ಲದಚ್ಚರಿಯೆಂದು ವಿದ್ಯಾಧಿರಾಜ ಪ್ರಮುಖರೆಲ್ಲರು
ರಾಜನಂ ರಾಜರಾಜಾಧೀಶನಂ ಬಸವ
ರಾಜನಂಗವ ರಾಜಶೇಖರನೆ ಬಲ್ಲನೆಂ
ದಾ ಜನಂ ಕೈಯೆತ್ತಿ ಪೊಡವಡುತ್ತಿರ್ದರಪ್ರತಿಮನಪ್ರತಿಮನೆಂದು ||೩೪||

ಆವ ಕಡೆ ನೋಳ್ಪಡೊಡ್ಡೈಸೆ ಬಹ ಪುರಜನಗ
ಳಾವಕಡೆ ನೋಳ್ಪೊಡೊಡ್ಡೈಸಿ ಬಹ ನಾರಿಯರ
ದಾವಕಡೆ ನೋಳ್ಪೊಡೊಡ್ಡೈಸಿ ಬಹ ಪರಿವಾರ ಪಲತೆಱದ ವಾದ್ಯಂಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ತೇಜಿಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ರಥವಾಜಿ
ಆವಕಡೆ ನೋಳ್ಪೊಡೊಡ್ಡೈಸಿ ಬಹ ಗಜಘಟಾಳಿಗಳೆಲ್ಲಂ ಸಿಂಗರದೊಳು ||೩೯||

ಆ ಪುರದೊಳೆಲ್ಲ ಮೆಱೆಸುತ್ತ ತನ್ನರಮನೆಗೆ
ಭೂಪ ಬಿಜಯಂಗೆಯ್ಸಿಕೊಂಡು ಬಂದುನ್ನತಾ
ಳಾಪ ಪ್ರಧಾನ ಪಟ್ಟಂಗಟ್ಟಿದನು ರಾಷ್ಟ್ರಪುರಕೆ ಭಂಡಾರಕ್ಕೆಲ್ಲ
ಈ ಪುರೋಹಿತರಿಗೀ ಸಚಿವ ಕರಣಕ್ಕೆಲ್ಲ
ನೀ ಪರಮಪಾಲಕಾಗ್ರಣಿಯೆಂದು ವೊರೆದು ಮ
ದ್ರೂಪ ದಂಡಾಧೀಶ ಬಸವರಸರೆಂದೊಸಗೆವಱೆಗಳಂ ಮೊಳಗಿಸಿದನು ||೪೭||

ರಾಜೋಪಚಾರ ರಚನಾಳಾಪಕೇನುಳ್ಳ
ತೇಜಸಂಪದವಿತ್ತು ಬಹಳಪ್ರಯತ್ನದಿ ವಿ
ರಾಜಿಪುನ್ನತದ ಒಂದರಮನೆಯ ಕೊಟ್ಟು ತಾ ಗೃಹಪ್ರವೇಶಂಗೆಯಿಸಲು
ಮೂಜಗಂ ಮೋಹನಂಗೊಳಲು ಮಂಗಳಕುಳಸ
ಮಾಜಗಳ ಕೈಗೊಳಿಸಿ ಕಳುಪೆ ಪುರದೊಳು ಬಸವ
ರಾಜರಾಜಿತನು ಬಂದರಮನೆಯ ಹೊಕ್ಕು ಸಂಗಮನಾಥ ಶರಣೆನುತಲೆ ||೪೮||

ಆಗಣಸಮೇಳದೊಳು ಸುಖಮಿರುತೆ ರಾಜವಿನಿ
ಯೋಗದೊಳು ಮೈದೋಱಿರಲ್ಕೆ ವಿಶ್ವಾಸ ಸ್ವಯ
ಮಾಗಿ ಮನಬೇಱಿಲ್ಲದಿರಬೇಕೆನುತ್ತರಸ ನೆನೆದನೊಂದನುಬಂಧವ
ಆಗ ತಾತನ ಪಿಂತೆ ಸಂಗೀತಚೂಡಾಮ
ಣ್ಯಾಗಳಾ ಬಲ್ಲಹನೊಳೆಮ್ಮ ತಾಯ್ಸಹಗಮನ
ವಾಗಲಾ ದಿನಕೆಮ್ಮ ತಮ್ಮ ಕರ್ನಹದೇವ ಬಾಲನಿಗಿರಲಾತನ ||೫೨||

ಲೀಲೆಯಿಂ ಮೊಲೆಯೂಡಿ ಸಲಹಿದಳು ಮಂತ್ರಿಕುಲ
ಪಾಲ ಸಿದ್ಧರಸದಣ್ಣೌಯಕರರಸಿ ಪುಣ್ಯ
ಶೀಲದೇವತೆ ಪದ್ಮಗಂಧಿಯಾಕೆಯ ಉದರದಲಿ ಬಳಿಕ ಜನಿಸಿದಾಕೆ
ನೀಲಲೋಚನೆ ಯೆಮಗೆ ತಂಗಿಯಾಗಿಹಳಾಕೆಯನು
ನೀಲಲೋಚನ ಬಸವಗೀವೆನೆನುತುತ್ಸಾಹ
ದಾಳಾಪದಲಿ ಪಟ್ಟವಧುವೆಂದು ಮದುವೆಯಂ ಮಾಡಿದಂ ನೃಪ ಬಸವಗೆ||೫೩||

ಸಂಪಾದಕರು ಶ್ರೀ ಎಮ್.ಎಸ್.ಸುಂಕಾಪುರ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

‘ರಾಜೇಂದ್ರ ವಿಜಯ’ದ ಕಥಾಸಾರ

ಪುಣ್ಯಭೂಮಿಯೆನಿಸಿದ ಕರ್ನಾಟಕ ದೇಶದ ಮಧ್ಯದಲ್ಲಿ ಮಹಿಮೆಯ ನಾಡು, ಮಂಗಳದ ಬೀಡು, ಸೌಖ್ಯದ ಸದನ, ಭೂಮಿಯ ವದನ, ಸತ್ಯದ ನೆಲೆ, ನಿತ್ಯದ ನಿಜವಾಗಿ ರಾಜೇಂದ್ರನ ರಾಜ್ಯ ಮೆರೆಯುತ್ತಿದೆ. ಅವನ ರಾಜ್ಯದಲ್ಲಿ ಪ್ರಜೆಗಳು ನಿತ್ಯ ಸುಖಿಗಳಾಗಿ ಕುಂದದೆ ಕಂದದೆ ಬಾಳುತ್ತಾರೆ. ಲಕ್ಷ್ಮಿ ಬಂದು ಅಲ್ಲಿಯೆ ಸ್ಥಿರವಾಗಿ ನಿಂತಿದ್ದಾಳೆ. ಸಕಲೈಶ್ವರ್ಯದ ನೆಲೆ ವೀಡಾಗಿ ರಾಜ್ಯ ಕಂಗೊಳಿಸುತ್ತದೆ. ಅವನ ರಾಜ್ಯದಲ್ಲಿ ಜನಸುಖಕಾರಿ, ಕುತಾಪವಿದಾರಿ, ಸಮುದ್ರದದಾರಿ, ಪಾವನಸುಶೀಲಿ, ತರಂಗವಿಲೋಲಿಯಾಗಿ ಹರಿಯುವ ಮಲಪ್ರಭಾನದಿ ಕೃಷ್ಣಾ ನದಿಗೆ ಬಂದು ಕೂಡುತ್ತದೆ. ಅವೆರಡು ಹೊಳೆಗಳ ಮಧ್ಯದಲ್ಲಿ ಮಲಪ್ರಭಾನದಿಗೆ ಸಮೀಪವಾಗಿ ಪಟ್ಟಶಿಲಾಪುರ (ಪಟ್ಟದಕಲ್ಲು) ವು ಹಮ್ಮಿರಪುರವೆಂದು ಖ್ಯಾತಿವೆತ್ತು ಶೋಭ ಸುತ್ತವೆ. ಆ ನಗರವು ಕೋಟೆಕೊತ್ತಳಗಳಿಂದ ಕೂಡಿ ಗಂಭೀರವಾಗಿ ಮೆರೆಯುತ್ತದೆ. ನಿಗಮನೂ ನಿತ್ಯನೂ ಆದ ಲೋಕನಾಥನೇ ಅಲ್ಲಿಯ ಮುಖ್ಯ ದೇವತೆ, ಶ್ರೀ ರಾಮನಿಂದ ಹಾಳಾದ ಲಂಕೆಯನ್ನು, ನೀರಿನಿಂದ ಹಾಳಾದ ದ್ವಾರಕಾ ಪಟ್ಟಣವನ್ನು ಹಮ್ಮಿರಪುರಕ್ಕೆ ತೋಡೆಂದು ಹೇಳುವದ ಮೂಕ್ತಿಯೇ ಸರಿ. ಮನುರಾಜನು ನಂದೀಶ್ವರವಂಶಜನೆಂದು ತಿಳಿಸವಂತಿರುವ ಬಿಂಕದ ಬಿರುದಿನ ನಂದಿಧ್ವಜಗಳು ಆ ಪಟ್ಟಣದಲ್ಲಿ ಚೆಲುವಾಗಿ ನೆರೆಯುತ್ತವೆ. ಈ ಪರಿಯಾಗಿ ನಾನಾವಸ್ತುವಿನ ಕೋಶದಂತೆ, ಸೌಭಾಗೈದ ಸಾರದಂತೆ, ಮನೋಹರವಾಗಿ ತೋರುವ ಹಮ್ಮಿರಪುರದ ಸಿಂಗರದ ಸಿರಿಯರಮನೆಯೊಳ್ ತ್ರೈಲೋಕ್ಯ ಚೂಡಾಮಣಿ ರಾಜನು ಸಕಲೈಶ್ವರ್ಯ ದಿಂದ ಗೌರವಾಟೋಪ ಪ್ರತಾಪದಿಂದ ಒಪ್ಪುತ್ತಾನೆ.

ಆ ತ್ರೈಲೋಕ್ಯಚೂಡಾಮಣಿರಾಜನು ವಂಶೋದ್ಧಾರಕನಾದ ಮಗನು ತನ್ನ ಬಾಳಿನಲ್ಲಿ ಬೆಳಗಲಿಲ್ಲವೆಂದು ವ್ಯಥೆಪಡುತ್ತಾನೆ. ಅವನ ಪಟ್ಟದ ರಾಣಿಯಾದ ಮಹಾದೇವಿಗೆ ಅದಕ್ಕಿಂತಲೂ ಹೆಚ್ಚಾದ ಚಿಂತೆ. ಚಿಂತೆಯ ಕಾರ್ಮೋಡದಲ್ಲಿ ಒಮ್ಮಿಂದೊಮ್ಮೆಲೆ ಆಸೆಯ ಮಿಂಚೊಂದು ಹೊಳೆದು ಹೊಳೆದಲ್ಲಿಯೇ ಮಾಯವಾಗುತ್ತದೆ. ತಪಶ್ಚರ್ಯದಿಂದ ಶಿಲಾದನು ನಂದಿಯನ್ನು ಹಿಂದೆ ಪಡೆದನು; ಹಾಗೆ ಶಂಕರಯೋಗಧ್ಯಾನದಲ್ಲಿದ್ದರೆ ನಂದನಸಿದ್ಧಿಯಾಗುವದೆಂದು ರಾಜದಂಪತಿಗಳಿಗೆ ಹೊಳೆಯುತ್ತದೆ. ರಾಜನು ಋತುಕಾಲವನರಿತು ವಿಷಮ ತಪಗೆಯ್ಯುತ್ತಾನೆ; ಶಾಂತಶಿವನನ್ನು ತನ್ನ ಹೃದಯಕಮಲದಲ್ಲಿಟ್ಟು ನೆನೆಯುತ್ತಾನೆ. ಅವನ ಮಡದಿ ಮಹಾದೇವಿ ಶಿವಲಿಂಗಾರ್ಚನೆಗೆ ತೊಡಗುತ್ತಾಳೆ. ಶಿವಯೋಗದಲ್ಲಿ ನಿರತರಾದವರಿಗೆ ಶಿವನು ಒಲಿಯದಿದ್ದಾನೆ ? ರಾಜನಿಗೆ ಶಿವದರ್ಶನವಾಗುವದು ಯೋನಿಜನಲ್ಲದ ಸಕಲಕಲಾನಿಪುಣನಾದ ಪುತ್ರನಾಗಲೆಂದು ಶಿವನು ರಾಜನಿಗೆ ಹರಸುತ್ತಾನೆ. ರಾಣಿಗೆ ಶಿವಪ್ರಸನ್ನ ವರವು ದೊರೆಯುತ್ತದೆ. ಸತಿ-ಪತಿಗಳೀರ್ವರೂ ಒಂದು ದಿನ ಮಲಗಿದ ಸಮಯದಲ್ಲಿ, ಪ್ರಣವವೇ ಕರಚರಣಾದಿ ಅವಯವಗಳನ್ನು ಧರಿಸಿ ಮಗುವಾಗಿ ಮಗ್ಗುಲದಲ್ಲಾಡುವದನ್ನು ರಾಜರಾಣಿಯರು ಕಂಡು ಹರ್ಷಭರಿತರಾಗುತ್ತಾರೆ. ಇದು ಶಿವನ ಪ್ರಸಾದವೆಂದು ಅವರು ಕೊಂಡಾಡುವರು, ತಾವೇ ಭುವನದಲ್ಲಿ ಭಾಗ್ಯ ವಂತರೆಂದು ಭಾವಿಸುವರು. ದಿನಗಳೆದಂತೆ ಮಗು ಚಂದ್ರನಂತೆ ಹಿಗ್ಗಿ ಬಾಲಲೀಲೆಯನ್ನು ತೋರಿಸುತ್ತದೆ. ಶೈಶವ ಕಳೆದು ಹರೆಯ ಕಾಲಿದ್ದೊಡನೆ ಸಕಲ ಕಲೆಗಳು ರಾಜಕುಮಾರನ ಹಸ್ತಗತವಾಗುತ್ತವೆ. ವೀರವಿಜಯನಾದ ರಾಜಕುಮಾರನಿಗೆ ಮನುರಾಜ, ರಾಜೇಂದ್ರ, ಹಮ್ಮಿರ ಎಂದು ಅಸದೃಶವಾದ ಹೆಸರುಗಳೊಪ್ಪುತ್ತವೆ. ಅವನ ಹೆಸರುಗಳು ಅಂಕಿತ ನಾದರೂ ಅನ್ವರ್ಥಕವಾಗುತ್ತವೆ.

ತ್ರೈಲೋಕ್ಯ ಚೂಡಾಮಣಿರಾಜನು ಸುಕುಮಾರನಿಗೆ ಯುವರಾಜ ಪಟ್ಟವನ್ನು ಕಟ್ಟಿ, ತದನಂತರ ರೂಪವತಿಯಾದ ಸದ್ಗುಣ ಶೀಲೆಯಾದ ಕಾಂಭೋಜರಾಜನ ಪುತ್ರಿ ಗೌರೀದೇವಿಯನ್ನು ತಂದು ಹಮ್ಮಿರನಿಗೆ ಲಗ್ನ ಮಾಡಿ ಸಂತಸಪಡುತ್ತಾನೆ. ಅನುಕೂಲದ ನೂತನ ಸತಿಪತಿಗಳಿಗೆ ತನು ಬೇರೆಯಾಗಿದ್ದರೂ ಶಿವನಲ್ಲಿಟ್ಟಿದ್ದ ನೆನಹು ವಿಚ್ಛಿನ್ನವಾಗುತ್ತದೆ. ಸತಿಪತಿಗೆಳೊಂದಾದ ಭಕ್ತಿ ಬೆಳೆಯಲಾರಂಭಿಸುವದು. ರಾಜೇಂದ್ರನು ಹೊರಗೆ ಅರಿ ಕಂಟಕರನ್ನು ಮುರಿದು, ತನ್ನೊಳಗೆ ಆರು ವೈರಿಗಳನ್ನು ಗೆದ್ದು, ಎಲ್ಲೆಲ್ಲಿಯೂ ಶಾಂತಿ ಸಾಮ್ರಾಜ್ಯ ನೆಲೆಗೊಳ್ಳುವಂತೆ ಯತ್ನಿಸುತ್ತಾನೆ. ಪರಶಿವ ಚರಣಾರವಿಂದದಲ್ಲಿ ಭ್ರಮರವಾಗಿ ಝೇಂಕರಿಸುವನು. ಒಳಹೊರಗೊಂದಾದವರಿಗೆ ಇದ್ದುದೇ ಕೈಲಾಸವಲ್ಲವೆ ? ಹಮ್ಮಿರನನ್ನು ಜನ ಹೊಗಳುತ್ತದೆ, ‘ವೀರ ವಿತರಣ ವಿದ್ಯಾಭಿಲೋಲಂ ಶಿವಗುರುಚರಲಿಂಗ ಸದ್ಭಕ್ತಿ ಸಂಪದ್ಭಾಸುರಶೀಲಂ ಸಕಲಜನ ಪರಿಪಾಲನಾನುಕೂಲಂ ವಿಲಸಿತಕೀರ್ತಿ ವಿಶಾಲ ಸುಚರಿತ್ರಂ’ ಎಂದು. ಆದರೆ ಅರಸನು ಶಿವಯೋಗ ನಿದ್ರಾಮುದ್ರಿತ ಭದ್ರಾಂಗನಾಗಲು ಯತ್ನಿಸುತ್ತಾನೆ.

ಮನುರಾಜೇಂದ್ರನ ಕೀರ್ತಿ ದಶದಿಕ್ಕುಗಳಲ್ಲಿ ಪಸರಿಸುವದನ್ನು ಕ೦ಡು ಚಂಡಕೋದಂಡನು ಮನದಲ್ಲಿಯೇ ಮಾತ್ಸರ್ಯ ತಾಳಿ ಕುದಿಯುತ್ತಾನೆ. ಮನುರಾಜನ ಶೌಯ್ಯೋನ್ನತಿಯನ್ನು ಮುರಿಯುವದಕ್ಕಾಗಿ ಸೂಕ್ಷ್ಮ ಪಾಯ ಹುಡುಕುವನು; ಮರ್ಮಸ್ಥಾನಗಳನ್ನು ಹುಡುಕಿ ಬರಲು ಬೇಹಿಗರನ್ನು

ಕಳಿಸುವನು. ಸತ್ಯದ ಮುಂದೆ ಠಕ್ಕು ನಿಲ್ಲಬಲ್ಲುದೆ ? ಕಳ್ಳಬಂಟರು ಮನು ರಾಜನ ಸೆರೆಯಾಳಾಗುವರು. ಇದನ್ನು ತಿಳಿದ ಚಂಡಕೋದಂಡನು ತನ ಗೂಢಪುರುಷರನ್ನು ಬಿಡಿಸಿಕೊಳ್ಳುವದಕ್ಕಾಗಿ ಚಂದ್ರಬುದ್ಧನೆಂಬ ನಿಜ ಮಂತ್ರಿಯನ್ನು ಕಳಿಸುತ್ತಾನೆ. ಮಹೀಶ್ವರನ ಸಭೆಯನ್ನು ನೋಡಿ ಚಂದ್ರ ಬುದ್ಧ ಮಂತ್ರಿ ವಿಸ್ಮಿತನಾಗುವನು. ಬಂದ ಕಾರ್ಯ ಮಾತ್ರ ಸಫಲವಾಗುವದಿಲ್ಲ. ಚಂಡಕೋದಂಡನ ಮನವೆಂಬ ವಿಷಭೂಮಿಯಲ್ಲಿ ಯುದ್ದವೆಂಬ ಬೇವಿನ ಬೀಜ ಮೊಳಕೆಯೊಡೆಯುವದು. ದ್ರೋಣಸಿಂಧೂರ ನಗರಿಯ ರಣಭೀಮನನ್ನು, ಪಿಂಜಿರವಾಟಿಯ ವಿಜಯ ಚೂಡನನ್ನು, ಮಹೀಂದ್ರಾ ಕರದ ಮದನ ವಿಲಾಸನನ್ನು ಮತ್ತು ಅನೇಕ ಮಂಡಲೇಶ್ವರರನ್ನು ತನ್ನ ಸಹಾಯಕ್ಕೆ ತೆಗೆದುಕೊಂಡು ಮಹಾಸೈನ್ಯವನ್ನು ನಿರ್ಮಿಸಿ, ತನ್ನ ಸೇನಾ ಪತಿಯಾದ ವೀರಜಂಭರಾಜನೊಡನೆ ವೈರಿಯನ್ನು ಮುರಿಯುವದಕ್ಕಾಗಿ ಚಂಡಕೋದಂಡನು ಹೊರಡುತ್ತಾನೆ. ಹಮ್ಮಿರನಗರದೊಡೆಯನ ಹಮ್ಮನ್ನು ಮುರಿದಿಡಲು ಹೊರಟ ಸೈನ್ಯ ಭಯಂಕರವಾದುದು. ಸೈನ್ಯ ಬಂದುದೇ ತಡ, ಮನುರಾಜನ ರಾಜ್ಯವನ್ನೇ ಮುತ್ತುತ್ತದೆ. ಬಡಗಣ ದಿಕ್ಕಿನಲ್ಲಿರುವ ವಿಡೂರಿಗೆ, ಪಡುವಣ ದಿಕ್ಕಿನಲ್ಲಿರುವ ವಸಂತಪುರಿಗೆ, ತೆಂಕಣ ದಿಕ್ಕಿನಲ್ಲಿರುವ ಲೋಕಾಪುರಕ್ಕೆ ಮಧುರಂಗರಾಜನು ಒಮ್ಮೆಲೇ ಮುಮ್ಮೊಗವಾಗಿ ಮುತ್ತಿಗೆ ಹಾಕುತ್ತಾನೆ. ಶ್ರೀ ವೀರಭದ್ರಾವತಾರನಾದ ಹಮ್ಮೀರ ಕದನಕೋಳಾಹಳನ್ನು ಇದನ್ನು ಕಂಡು ಸುಮ್ಮನಾಗುವದು ಸಾಧ್ಯವೆ? ಏರಿ ಬಂದ ವೈರಿ ಸೈನ್ಯದ ಮೇಲೆ ಸಿಡಿಲಂತೆರಗಿ ಯುದ್ಧ ಮಾಡುತ್ತಾನೆ. ಚಂಡಕೋದಂಡನು ನರಿಯಂತೆ ಓಡಿಹೋಗುವನು.. ಆ ರಣದಲ್ಲಿ ರಣ ಭೀಮನು ಪೇಣನಾದ. ಮದನವಿಲಾಸನ್ನು ಕದನದೊಳಳಿದ. ವಿಜಯ ಚೂಡನು ವಿಕಟಾರಿಗನಾದ. ಕುಂತಳದರಸು ಮುಂದಲೆ ಕೊಯ್ದಿಕೊಂಡು ಅವಮಾನಿತನಾದ. ಹಮ್ಮಿರ ಭಾಸುರ ಧಿರೋತ್ತಮ ವೀರರಾಜ ವಿಜಯನು ಸಾಮಾನ್ಯನೇ ಯುದ್ಧದೊಳ್?

ಮನುರಾಜನ ರಾಜ್ಯ ವಿಕಾಸವಾದಂತೆ ಮನವೂ ವಿಲಾಸಗೊಳ್ಳವುದು. ವಿನೋದಕ್ಕಾಗಿ ಬೇಟೆಯಾಡಬೇಕೆಂದು ಒಂದು ದಿನ ರಾಜನವಸಂತಪುರದ ಸಮೀಪದಲ್ಲಿರುವ ಕಾನನಕ್ಕೆ ಬೇಡಪಡೆಯೊಂದಿಗೆ ನಡೆಯುವನು, ನಾನಾ ರೀತಿಯಿಂದ ಬೇಟೆ ಸಾಗುತ್ತದೆ. ಮಲಪ್ರಭಾನದಿಯ ತೀರದ ವನಾಂತರವೆಂದರೆ ವೃಕ್ಷಪಕ್ಷಿಗಳಿಗಾನಂದ ಸ್ಥಳ, ಅದೇ ವಸಂತಪುರ ಪ್ರಾಂತ ಅಲ್ಲಿ ರಾಜನು ವಿಶ್ರಮಿಸುತ್ತಾನೆ. ಬೇಟೆಯ ಬಳಲಿಕೆ ನೀಗುವದಕ್ಕಾಗಿ ನೀರು ಕುಡಿಯಬೇಕೆಂದು ರಾಜನಿಗೆ ಇಚ್ಛೆಯಾಗುತ್ತದೆ. ಆದರೇನು ? ತನಗೆ ಬೇಕಾದ ವಸ್ತುಗಳನ್ನು ಶಿವಲಿಂಗಕ್ಕೆ ಕೊಟ್ಟಿಲ್ಲದೆ ಕೊಳ್ಳಲಾಗದೆಂಬ ಶೀಲವುಳ್ಳ ಪರಮ ಶಿವಭಕ್ತ ಮನುರಾಜ, ಸಮೀಪದಲ್ಲಿ ಎಲ್ಲಿ ಯಾದರೂ ಶಿವಲಿಂಗಮೂರ್ತಿ ಇದ್ದರೆ ಕಾಣಬೇಕೆಂದು ಸೇವಕರನ್ನು ಕಳಿಸುತ್ತಾನೆ. ಯಾವ ದಿಕ್ಕಿನಲ್ಲಿ ಹುಡುಕಿದರೂ ಶಿವಲಿಂಗದರ್ಶನವಾಗಲಿಲ್ಲ. ಆದರೆ ಸಮೀಪದಲ್ಲಿಯೇ ಉತ್ತರದಿಕ್ಕಿನಲ್ಲಿ ಒಂದು ಗೂಳಿ ಮಲಗಿದ್ದು ದೇಹದ ಮೇಲೆ ಲಿಂಗಮುದ್ರೆಯಿದ್ದುದು ಕಂಡು ಬಂತು. ಮೂಣ ಮುಖವಾಗಿ ಮಲಗಿದ ಗೂಳಿಯ ವೃಷಭೇಶ್ವರ, ಸಾಮಾನ್ಯರಿಗೆ ಅದು ಹೇಗೆ ತಿಳಿಯಬೇಕು? ಕಣ್ಣರಿಯದಿದ್ದರೂ ಕರುಳರಿಯದೆ ?

ವಚನ-

ಇಂತು ವಂದನಂಗೆಯ್ವುತ್ತೆ ಸಮೀಪಕ್ಕೆ ಬರಲೊಡಂ ರೌದ್ರಸಂಚಲಂಗಳೇನು ಮಿಲ್ಲದೆ ಸುಸ್ಥಿರದಿಂದಿರ್ಪ ಭದ್ರೇಶ್ವರನಂ ನೋಡಿ ಹೃದಯೋಲ್ಲಾಸವಾಗಿ ದೇವರಂ ಪೂಜಿಸಲ್ ದೇವಾಲಯಮಂ ಪ್ರದಕ್ಷಿಣಂ ಮಳ್ಪಂತೆ ಲಿಂಗ ಮುದ್ರೆಯಂ ಭಜಿಸುವದಕ್ಕೆ ಲಿಂಗಮುದ್ರೆಗಾಧಾರವಾದ ಬಸವನಂ ಪ್ರದಕ್ಷಿಣ ಮಾಡುತ್ತೆ ಮುಂದಕ್ಕೆ ಬರ್ಪ ಸಮಯದೊಳಾತನ ಚಿತ್ಕಳೆಯಂ ಬರಸೆಳೆದು ತನ್ನ ರಸನಾಗ್ರದಲ್ಲಿ ಮೂರ್ತಿಗೊಳಿಸಿ ತಳೆದಿರ್ಪಿನಂ-

ವಚನ-

ವಿಮಳ ತರದಿಷ್ಟ ಲಿಂಗಮಂ ರಸನಾಗ್ರದಲ್ಲಿ ತೋಲಾಗಿ ನಾಲಗೆಯ ಕೆಳಗಣೆ ಹಸ್ತಮಂ ನೀಡಿ ವಿಡಿದಾಲಿಂಗಮುಂ ಚಿತ್ತವೃತ್ತಿಯಿಂದರ್ಚಿಸಿ ತತ್ ಸ್ವಷ್ಟಾಚಾರ ಕ್ರಿಯಾರ್ಪಣಾನಂತರದೊಳ್ ವೃಷಭೇಶ್ವರಂ ನಾಲಗೆಯೊಳ್ ಲಿಂಗವನೆಂತು ತೆಗೆದು ಕೊಳುತ್ತಿರಲೊಡನಂತು ಮೂರ್ಛೆಯಾಗುವ ಸದ್ಭಕ್ತನಂ ನೋಡಿ ಲಿಂಗ ಪ್ರಾಣತ್ವಂ ನೆಲೆಗೊಂಡುದೆಂದಾನಂದಿಸಿ ನಂದೀಶ್ವರಾವತಾರಮಂ ತಾಳು ಪ್ರಮಥಗಣ ಪರಿವೃತವಾಗಿದೆ ದೇವತತಿ ಪೂಮಳೆಗರೆಯೆ ಸಕಲ ವೈಭವದಿಂ ಸಮಸ್ತ ದೀಕ್ಷಾ ಪ್ರಧಾನ ಕ್ರಿಯಾನುಗೃಹಂಗೆಯು ಸ್ಥಳಕುಳ ಗುರುಲಿಂಗ ಜಂಗಮ ಸಗುಣ ನಿರ್ಗುಣ ತತ್ವ ಮಂತ್ರಮೂರ್ತಿ ನಾನಾವಿಧಾನವನಳವಡಿಸಿ ಸನತ್ಕುಮಾರ ಪ್ರಬೋಧ ಪ್ರಮಥೇಂದ್ರ ಪ್ರಭು ಗುರುಸ್ವಾಮಿ ಪೋಗಲೊಡನಾ  ಕಾಲದೊಳ್ ಶಿಷೋತ್ತಮಂ ಕೀರ್ತಿಸುತ್ತಿರ್ದಪಂ

ಮನುರಾಜನು, ಪುಣ್ಯದ ಪುಂಜದಂತೆ, ಶಿವನ ಸದ್ಗುಣ ರಾಶಿಯಂತೆ, ಭಕ್ತರ ಬೆಳ್ಜಸದಂತೆ, ಪರಶಿವನ ಸದ್ದರ್ಮ ಸತ್ಯಾನಂದ ವಿಮಳ ವಿಳಸಿತ ಧವಳಾತುಳಾಖಂಡ ಚಿತ್ಪಿಂಡ ವೃಷಭೇಶ್ವರನನ್ನು ಕಂಡು ವಂದಿಸುವನು. ಲಿಂಗಮುದ್ರೆಗೆ ಆಧಾರವಾದ ಬಸವನಿಗೆ ಪ್ರದಕ್ಷಿಣೆ ಹಾಕುವನು. ಮುಂದೆ ನಿಂದು ಶಿರಸಾ ವಹಿಸಿ ನಮಸ್ಕರಿಸುವಾಗ ನಂದಿಯ ರಸನಾಗ್ರದಲ್ಲಿ ಇಷ್ಟಲಿಂಗ ಕಾಣುತ್ತದೆ. ಮನುರಾಜನು ನಾಲಗೆಯ ಕೆಳಗಡೆಯಲ್ಲಿ ಕೈನೀಡಿ ಲಿಂಗವನ್ನು ಸ್ವೀಕರಿಸಿ, ಅದನ್ನು ಚಿತ್ತವೃತ್ತಿಯಿಂದ ಪೂಜಿಸುತ್ತಾನೆ. ಲಿಂಗಪ್ರಾಣತ್ವವು ಭಕ್ತನಲ್ಲಿ ನೆಲೆಗೊಳ್ಳುತ್ತದೆ. ಶಿಷೋತ್ತಮನಿಗೆ ಲಿಂಗ ನೀಡಿದ ನಂದಿ ಆನಂದದಿಂದ ಕೈಲಾಸಕ್ಕೆ ತೆರಳುವನು. ಮನುರಾಜನು ತನ್ನ ಗುರುವನ್ನೂ ಇಷ್ಟಲಿಂಗ ವನ್ನೂ ನಾನಾವಿಧವಾಗಿ ಹೊಗಳುತ್ತಾನೆ. ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗವನ್ನು ಅವನು ನೋಡುತ್ತಿದ್ದುದರಿಂದ, ಅಂದಿನಿಂದ ಅನಿಮಿಷದೇವ ನೆಂಬ ಅಸಾಧಾರಣವಾದ ಹೆಸರು ಅವನಿಗೆ ಬರುತ್ತದೆ. ಇಷ್ಟು ದಿವಸಗಳವರೆಗೆ ಶಿವಭಕ್ತನಾಗಿದ್ದ ಅರಸನ ತನು ಲಿಂಗದೀಕ್ಷೆಯಿಂದ ಲಿಂಗಮಯವಾಗುತ್ತದೆ.

ಅವನೇ ಲಿಂಗದೇವನಾಗುವನು; ಯೋಗೀಶ್ವರನಾಗುವನು,

ಶಿವಶರಣನಾದ ಅನಿಮಿಷದೇವನು ಸ್ವಲೀಲಾನಂದ ಪರಮ ಚರಿತ ನಾಗಿ ಇಹಪರದ ಹಂಗು, ಸುಖದುಃಖ, ಪುಣ್ಯ ಪಾಪ, ಧರ್ಮಕರ್ಮಗಳನ್ನೆಲ್ಲ ನೀಗಿ, ಶಿವಸಂಸ್ಕಾರದಿಂದ ಸಕಲ ಸುಖಭೋಗಗಳನ್ನನುಭವಿಸಿ ದೇಶ ಕೋಶ ಭಾಗ್ಯಗಳನ್ನು ಬಿಟ್ಟು, ಪರತರದಿಷ್ಟಲಿಂಗ ಧ್ಯಾನವಳವಟ್ಟು, ಸಕಳದೇವತಾ ಸಾರ್ವಭೌಮ ಸಾಂಬಬ್ರಹ್ಮ ಸದಾಶಿವನಲ್ಲಿ ಸಮರಸವಾಗುತ್ತಾನೆ ಶಿವಯೋಗಸಮಾಧಿಯಲ್ಲಿ ವೇಳೆ ಕಳೆಯುತ್ತಾನೆ. ಪರಮ ನಿರಂಜನ ಲೀಲೆಯೇ ಅವನ ಕಾಯಕವಾಗುತ್ತದೆ. ಅನಂತ ವೈಭವದಿಂದೊಡಗೂಡಿ – ಮೆರೆಯುವ ಅನಿಮಿಷಾರಣ್ಯವೇ ಅವನ ತಪೋಭೂಮಿಯಾಗುವದು.

ಆ ಸಮಯದಲ್ಲಿ ನಿರ್ಮಾಯ ಗಣೇಶ್ವರನು ನಿತ್ಯನಿರ್ಮಾಯನೆಂಬ ಬಿರುದನ್ನು ಧರಿಸಿ ಕೈಲಾಸದಿಂದ ಭೂಲೋಕಕ್ಕೆ ಬರುವನು. ಅವನೇ ಶ್ರೀ ಅಲ್ಲಮ ಪ್ರಭುದೇವನು; ಬನವಸೆಯಲ್ಲಿ ಮಮಕಾರ ಭೂಪಾಲ ಮೋಹಿನೀದೇವಿಯರಿಗೆ, ಮಧುಕೇಶ್ವರನ ಪ್ರಸಾದದಿಂದ ಪಾರ್ವತಿಯ ತಾಮಸರೂಪವೇ ಮೂರ್ತಿವೆತ್ತು ಮಾಯಾದೇವಿಯಾಗಿ ಜನಿಸುತ್ತದೆ. ಆ ಕನ್ನೆ ಭಾಸುರದ ಚನ್ನೆ; ನೋಡುವರ ಕಣ್ಣಿಗೆ ಮಂಗಳವಾಗಿ, ಕಾಲ ಕಳೆದಂತೆ ಶೃಂಗಾರಾಂಗದ ಸೊಬಗನ್ನು ಸೂಸುತ್ತಾಳೆ. ಪ್ರತಿನಿತ್ಯದಲ್ಲಿ ಮಧುಕೇಶ್ವರನನ್ನು ಪೂಜಿಸಿ, ನೃತ್ಯದಿಂದ ಶಿವನನ್ನು ತೃಪ್ತಿ ಬಡಿಸುತ್ತಾಳೆ. ಮಾಯೆ ಕುಣಿಯತೊಡಗಿದರೆ ಜಗದ ತಲ್ಲಣವನ್ನು ಬಣ್ಣಿಸಬಲ್ಲವರಾರು ಒಂದು ದಿವಸ ಎಂದಿನಂತೆ ಮಧುಕೇಶ್ವರನ ಮುಂದೆ ಮಾಯೆಯ ನೃತ್ಯ, ಲಿಂಗಲೀಲಾವಿಲಾಸದಲ್ಲಿ ಮೆರೆಯುವ ಪ್ರಭು ಮದ್ದಳಿಗನಾಗಿ ಶಿವಾಲಯದ ಹೊರಗಡೆಯಲ್ಲಿ ಸುಳಿಯುತ್ತಾನೆ; ಮದ್ದಳೆಯನ್ನು ದೃತ ಮಧ್ಯ ವಿಳಂಬಿತ ಗತಿಗಮಕದಿಂದ ಬಾರಿಸುತ್ತಾನೆ. ಅದೆಂತಹ ನಾದ! ಮಾಯಾದೇವಿಯು ಮೇಘನಾದಕ್ಕೆ ಲವಲವಿಸುವ ಸೋಗೆಯಂತೆ, ಮದ್ದಳೆಯ ನಾದಕ್ಕೆ ಹುಚ್ಚೆದ್ದು ಕುಣಿಯುತ್ತಾಳೆ. ಮದ್ದಳೆಯವನನ್ನು ನೋಡುವ ಕೂಡುವ ಮಾಯೆಯ ಬಯಕೆ ಕುಡಿವರಿಯುತ್ತದೆ. ಪ್ರಭು ನಟನಾಟಕದ ವಿಟವೇಷದ ರಸಿಕರದೇವ, ಅವನಲ್ಲಿ ಮುದ್ದು ಮೊಗವನ್ನು, ಸಿಂಗರದ ಸಿರಿಯನ್ನು : ಗಾಡಿಯ ಗಾಂಭೀರ್ಯನನ್ನು ಕಂಡ ಮಾಯೆ ಅಲ್ಲಮನನ್ನೇ ತನ್ನ ನಾಟ್ಯಾಚಾರ್ಯನನ್ನಾಗಿರಿಸಿಕೊಳ್ಳುವಳು, ಏಕಾಂತದ ನಾಟಕಶಾಲೆಯೊಳೊಂದುದಿನ ಮಾಯಾದೇವಿ ಅಲ್ಲಮನನ್ನು ಹಿಡಿಯ ಹೋಗಲು, ನಿರ್ಮಾಯನೆಂಬ ಬಿರುದನ್ನು ಪಡೆದ ಪ್ರಭು ಅವಳ ಕೈಗೆ ಸಿಲುಕದೆ ಬಯಲಾಗುತ್ತಾನೆ. ಮಾಯೆ ಭಂಗಿತಳಾಗುವಳು. ಮಾಯಾ ಕೋಳಾಹಳ ಲೀಲಾನಾಟಕ ನಟನೆಯ ಅಲ್ಲಮಪ್ರಭುವೇನು ಸಾಮಾನೆ ? ಮುಂದೆ ಅವನು ಭಕ್ತರ ಉದ್ಧಾರಕ್ಕಾಗಿ ಲೋಕಸಂಚಾರ ಕೈಕೊಳ್ಳುವನು.

ಗೊಗ್ಗಯ್ಯನು ತೋಟವನ್ನು ಮಾಡುವ ಕಾಯಕದಲ್ಲಿ ನಿರತನಾಗಿ ಪ್ರಖ್ಯಾತಿಪಡೆದ ವ್ಯಕ್ತಿ, ಸಾವನ್ನು ತಿಳಿಯದೆ ಬರಿ ಗಾವದಿಗೆಲಸಕ್ಕೆ ಯೋಗ್ಯನಾದ ಭಕ್ತ; ಜೀವಾನುಕಂಪಿಯಾಗದೆ ಧಾವತಿಗೊಳಗಾದ ಜೀವಿ, ಅಂತಹನನ್ನು ಕಂಡು ಪ್ರಭು ಮರುಗುತ್ತಾನೆ; ಗೊಗ್ಗಯ್ಯನಿಗೆ ಇಷ್ಟಲಿಂಗ ಮಹಿಮೆಯನ್ನು ತಿಳಿಸಿಹೇಳಿ, ಅದಿಲ್ಲದೆ ಭವರುಜೆಯಳಿದು ನಿಜಮುಕ್ತಿ ಯಾಗದೆಂದು ಸ್ಪಷ್ಟಗೊಳಿಸುತ್ತಾನೆ: ಮತ್ತು ಶಿಷ್ಯಕಾರಣವಾಗಿ ಶಿವಯೋಗ ಸಮಾಧಿಯೊಳಿದ್ದ ಗುರುವಾದ ಅನಿಮಿಷದೇವನನ್ನು ಸ್ವಾನುಭವ ಜ್ಞಾನದಿಂದ ತಿಳಿದು, ಗೊಗ್ಗಯ್ಯನ ತೋಟದಲ್ಲಿಯೇ ಒಂದು ಕಡೆಯಲ್ಲಿ ಭೂಮಿಯನ್ನು ಅಗಿಸುವನು; ಒಳಗೆ ಕನಕಕಳಸಪರಿಮಿಳಿತ ದಿವ್ಯ ಶಿವಾ ಲಯವನ್ನು ಕಂಡು ಗೊಗ್ಗಯ್ಯನು ವಿಸ್ಮಿತನಾಗುವನು. ಇದೇನು ಚಮತ್ಕಾರವೆಂದು ಅವನು ಕೇಳಲು, ಪ್ರಭುದೇವನು ಮದ್ಗುರು ಸ್ವಾಮಿಯ ನಿಮಿಷದೇವರೆಂದು ಹೇಳಿ, ದೇವಾಲಯದೊಳಗೆ ಹೊಕ್ಕು ಚೈತನ್ಯ ವಾಗಿ ಅಸ್ತಿಮಾತ್ರ ತನುವಿನಿಂದಿದ್ದ ಗುರುಮೂರ್ತಿಯನ್ನು ಕರೆದು, ಅವನ ಕರಕಂಬದಿಷ್ಟಲಿಂಗವನ್ನು ಗ್ರಹಿಸಿ, ಇಷ್ಟ ಬ್ರಹ್ಮಳಿಂಬಿಟ್ಟು ಕೊಳ್ಳುವನು. ಗೊಗ್ಗಯ್ಯನಿಗೆ ಪ್ರಭುದೇವನು ಈ ರೀತಿ ಮೊದಲು ಅರಸರಿದ್ದು ನಂತರ ಪರಮ ಶಿವೈಕ್ಯರಾದ ಹಲವಾರು ಶಿವಭಕ್ತರ ಕಥೆಗಳನ್ನು ಹೇಳುವನು. ಕಾಂಚೀಪುರಿಯ ರಾಜೇಂದ್ರ ಚೋಳ-ಪಿಣ್ಯಾಕ ಸಿದ್ಧನ ಕಥೆ

ವಿಸ್ತಾರವಾಗಿ ಬರುತ್ತದೆ. ಧ್ರುವ, ಪ್ರಹ್ಲಾದ, ವಿಭೀಷಣರು ಶಿವಭಕ್ತರಾದುದನ್ನು ಪ್ರಭು ಹೇಳುತ್ತಾನೆ. ಹರಿಯು ಹತ್ತು ಅವತಾರಗಳಲ್ಲಿ ಹುಟ್ಟಿ ಬಂದುದು, ಮೋಕ್ಷಪಡೆದುದು, ಹರನಿಂದ ಎಂಬುದನ್ನು ಶಾಸ್ತ್ರಸಮ್ಮತವಾಗಿ ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಶ್ರೀ ವೀರಭದ್ರನೇ ಮಾರುತಿಗೆ ಲಿಂಗಧಾರಣ ಮಾಡಿ ಮೋಕ್ಷ ಮಾರ್ಗ ತೋರಿಸಿದನೆಂದು ಹೇಳುವ ಸಂದರ್ಭ ಬರುತ್ತದೆ.

ಬೇಡರ ಸಂಕಣ್ಣನಾಯಕ, ಭದ್ರಾಯುಷ್ಯರಾಜನ ಕಥೆಗಳನ್ನು ಪ್ರಭು ಹೆಚ್ಚು ವಿಸ್ತಾರವಾಗಿ ಹೇಳಿ, ಭಕ್ತಿಯ ಪಾರಮ್ಯವನ್ನು ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಹೀಗೆ ಅನೇಕ ಶಿವಶರಣರ ಕಥೆಗಳನ್ನು ಹೇಳಿ ಗೊಗ್ಗಯ್ಯನಿಗೆ ಸನ್ಮಾರ್ಗ ತೋರಿಸಿ ಮುಂದೆ ಸಾಗುವನು. ಕಲ್ಯಾಣ ಪಟ್ಟಣಕ್ಕೆ ಹೋಗಿ ಭಕ್ತಿಭಂಡಾರಿ ಬಸವಣ್ಣನವರಿಗೆ ದರ್ಶನವಿತ್ತು ಸಿದ್ಧರಾಮ ಬಸವಣ್ಣನವರಿಗೆ ಅನಿಮಿಷದೇವನ ಕಥೆಯನ್ನು ತಾನೇ ಹೇಳುತ್ತಾನೆ.

ಬಸವಣ್ಣನವರು ಸಾಕ್ಷಾತ್ ನಂದಿಯ ಅವತಾರವೆಂದು ವೀರಶೈವರ ನಂಬಿಕೆ. ಕಲ್ಯಾಣಕ್ಕೆ ಬಂದಾಗ ಪ್ರಭುದೇವರು ಬಸವಣ್ಣನ ಮಹಿಮೆ ಯನ್ನು ಹೊಗಳುತ್ತಾರೆ. ಬಸವಣ್ಣ ಪ್ರಭುವಿಗೆ ಮಣಿಯುತ್ತಾನೆ. ಯಾಕಂದರೆ ನಂದಿ ಅನಿಮಿಷದೇವನಿಗೆ ಲಿಂಗಕೊಟ್ಟಿದ್ದರೆ, ಅನಿಮಿಷ ದೇವನು ಪ್ರಭುವಿಗೆ ಲಿಂಗ ನೀಡಿದ್ದಾನೆ. ಪ್ರಭು ಮೇಲಾಗಿ ಕಾರಣಿಕ ಪುರುಷ, ತಪ್ಪಿದವರನ್ನು ತಿದ್ದುವದಕ್ಕಾಗಿ ಲೋಕಸಂಚಾರ ಕೈಕೊಂಡ ಸಿದ್ಧ ವ್ಯಕ್ತಿ; ವೈರಾಗ್ಯಮೂರ್ತಿ, ಹೀಗಿರಲು ಗುರುವಾರು, ಶಿಷ್ಯನಾರು ಎಂದು ಕೇಳಲೇಕೆ? ಕೆಳಗಿನಂತಿದೆ ಬಸವಣ್ಣ ಪ್ರಭುವಿನ ಸಂಬಂಧ:

” ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ, ಆ ಲಿಂಗ ನಿನಗೆ ಸೇರಿತ್ತಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನೀನು. ಭಕ್ತಿ ದಳದುಳದಿಂದ ಚೆನ್ನ ಸಂಗಮನಾಥನೆಂಬ ಲಿಂಗವನನುಗ್ರಹಿಸಿ ಕೊಂಡೆನಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನಾನು

ಇಂತಿಬ್ಬರಿಗೂ ಒಂದು ಕುಲಸಲವಾದ ಕಾರಣ ಕೂಡಲ ಚೆನ್ನಸಂಗಯ್ಯ ನಲ್ಲಿ ಬಸವಣ್ಣನ ಮಹಮನೆಯ ಪ್ರಸಾದ ಇಬ್ಬರಿಗೂ ಒಂದೇ ಕಾಣಾ ಪ್ರಭುವೆ.” (ಶೂ. ಸಂ. ಪು. ೫೦) ಇದೇ ರಾಜೇಂದ್ರವಿಜಯದ ಸಂಕ್ಷಿಪ್ತ ಕಥಾವಸ್ತು.

ಅನಾದಿಗಣನಾಥನ ಶಿಷ್ಯನು ಆದಿಗಣನಾಥನು. ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು. ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು. ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು. ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು. ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು. ಇಂತು ಅನಾದಿವಿಡಿದು ಬಂದ ಅನುಪಮಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು, ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ ,

ಇಂದು ನನಗೆ ಚಲನಚಿತ್ರ ನಿರ್ದೇಶಕ ಮಿತ್ರರು ಹತ್ತು ಸಾಲು ಗಳಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆಗಳ ಸಾರಾಂಶ ನೀಡಲು ಕೇಳಿಕೊಂಡರು.

ಸಂಗ್ರಹಿಸಲು ಕುಳಿತುಕೊಂಡಿರುವೆ,ಎಲ್ಲಿಂದ ಪ್ರಾರಂಭ ಮಾಡಲಿ ,ಎಲ್ಲಿಗೆ ಕೊನೆಗೊಳಿಸಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.ಸಂಗ್ರಹದ ಪುಟ್ಟ ಪ್ರಯತ್ನದ ಸಾಲುಗಳು ಹೀಗಿವೆ

1.         ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.

2.        ಶ್ರೀ ಕುಮಾರ ಶಿವಯೋಗಿಗಳು  ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು.

3.        ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.

4.        ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು  ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾg ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದÀ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

5.        ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ  ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.

6.        ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ  ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.

7.         ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು.   ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .

8.        ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು.  ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.

9.        ಉದ್ಯಮ ಸೃಷ್ಟಿ : ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಪ್ರಸ್ತಾವನೆಗೆ ಹೆಚ್ಚು ಶ್ರಮಪಟ್ಟವರು, ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ, ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌  ಫ್ಯಾಕ್ಟರಿಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು, ಅದು ಶಿವಯೋಗಮಂದಿರ ಬೆನ್ನೆಲುವಿನಂತಿದೆ, ವಿರಕ್ತಸ್ವಾಮಿಗಳೊಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ ಅಪರಿಮಿತವಾಗಿದ್ದವು, ಆಸಾಧಾರಣವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯೇನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಮಾದರಿಯಾಯಿತು.

10.       ಬಾಗಲಕೋಟೆಯ ಶ್ರೀ ಗುರುಸಿದ್ದೇಶ್ವರ ಚಿತ್ರಮಂದಿರ:

ಶಿವಯೋಗಮಂದಿರ ಸಂಸ್ಥೆಯು ತನ್ನ ಕಾಲಮೇಲೆ ತಾನು ನಡೆಯುವಂತೆ ಮಾಡುವುದಕ್ಕಾಗಿ ಜಿನ್ನಿಂಗ್ ಫ್ಯಾಕ್ಟರಿ, ಕಬ್ಬಿಣ ವ್ಯಾಪಾರ ಕೇಂದ್ರ ಸ್ಥಾಪಿಸಿದರೆಂದು ಸ್ಪಷ್ಟ, ಬಾಗಲಕೋಟೆಯ ಶ್ರೀ ಶಿವಾನಂದ ಜೆನ್ನಿಂಗ್ ಫ್ಯಾಕ್ಟರಿಗೆ ಹೊಂದಿಕೊಂಡ ಪ್ರಾಯಶಃ ಶ್ರೀಗುರುಸಿದ್ಧೇಶ್ವರ ಚಿತ್ರಮಂದಿರವನ್ನು ೧೯೨೪ರ ವೇಳೆಗೆ ಸ್ಥಾಪನೆ ಮಾಡಿದರು.

ಈ ಕಾರ್ಯವನ್ನು ಸ್ವಾಮಿಗಳೇಕೆ ಕೈಕೊಂಡರು? ಎಂಬ ಪ್ರಶ್ನೆ ಉದ್ಭವಿಸುವುದು

ಸಹಜ. ಆದರೆ ಇದರ ಹಿಂದಿರುವ ಹಿನ್ನೆಲೆ ಉದ್ದೇಶ,ಕುಮಾರಶಿವಯೋಗಿಗಳ ಈ ಬಗೆಯ ಉದ್ದೇಶ ಮತ್ತು ದೂರದರ್ಶಿತ್ವವನ್ನು ಈ ಕೆಳಗಿನ

ಅಂಶಗಳಿಂದ ಮನವರಿಕೆ ಮಾಡಿಕೊಳ್ಳಬಹುದಾಗಿದೆ.

೧. ಕಲಾಕಾರರಿಗೆ ಪ್ರೋತ್ಸಾಹ.

೨. ರಂಗಕಲೆ, ಚಿತ್ರೋದ್ಯಮಕ್ಕೆ ಪ್ರೋತ್ಸಾಹ.

೩ ಸಂಗೀತ ವಾದನ ಕಲೆಗೆ, ಶಿವಧರ್ಮ ಪ್ರಚಾರಾದಿಗಳಿಗೆ ಪ್ರೋತ್ಸಾಹ.

ಈ ಮೂರು ಅವಶ್ಯಕತೆಗಳ ಜೊತೆಗೆ ಶಿವಯೋಗಮಂದಿರ ಸಂಸ್ಥೆಗೆ ಆರ್ಥಿಕ ಭದ್ರತೆ ಸರಿದೂಗಿಸಲು ಕೈಕೊಂಡ ಯೋಜನೆಯು.

ಒಂದು ಕಾಲಕ್ಕೆ ಬೇಕಾಗುವ ಅಗತ್ಯತೆಗಳನ್ನು ಗುರುತಿಸುವಲ್ಲಿ ಮತ್ತು ಅವುಗಳು ಸಾಕಾರಗೊಳ್ಳುವಲ್ಲಿ ಶ್ರೀ ಕುಮಾರಶಿವಯೋಗಿಗಳ ಕಾರ್ಯ ವೈಖರಿಯು ಮುಂದಿನವರಿಗೆ ಆದರ್ಶಪ್ರಾಯವಾಗಿ ಪರಿಣಮಿಸಿದೆ.

11.        ಭೂ ಅಭಿವೃದ್ಧಿ ಕಾರ್ಯ :

ಶಿವಯೋಗಮಂದಿರ ಸಂಸ್ಥೆಯು ಅಬಾಧಿತವಾಗಿ ಮುನ್ನಡೆಯಲೆಂಬ ಕಾರಣದಿಂದ ಶ್ರೀ ಕುಮಾರಶಿವಯೋಗಿಗಳು ನೂರಾರು ಎಕರೆ ಜಮೀನನ್ನು ಕೂಡಿಹಾಕಿದರು. ಅದರಲ್ಲಿ ನವೀನ ಮಾದರಿಯ ಕೃಷಿಯನ್ನು ಅಳವಡಿಸಿದರು. ಸ್ವತಃ ನೇಗಿಲು ಹಿಡಿದು ಉಳಿಮೆಯನ್ನು ಮಾಡಿದರು. ನೂರಾರು ಎತ್ತುಗಳನ್ನು, ಗೋವುಗಳನ್ನು ಸಾಕಿ ಸಲುಹಿದರು. ಸ್ವತಃ ಪರಿಸರ ಪ್ರೇಮಿಯಾಗಿದ್ದ ಶ್ರೀ ಕುಮಾರಶಿವಯೋಗಿಗಳು ಮಲಪ್ರಭಾ ನದಿಯಿಂದ ಭೂಮಿಗೆ ನೀರು ಒದಗಿಸಿ ಔಷಧೀಯ ಸಸ್ಯಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸಿದ್ದಾರೆ. ಶಿವಯೋಗಮಂದಿರದ ಸುತ್ತಮುತ್ತ ಹಸಿರನ್ನು ಸಮೃದ್ಧಗೊಳಿಸಿದ್ದಾರೆ. ಅವರು ಬೆಳೆಸಿದ ಲತಾಮಂಟಪ, ವೃಕ್ಷಮೂಹ, ಔಷಧೀಯ ಸಸ್ಯ ಇಂದಿಗೂ ಶಿವಯೋಗಮಂದಿರದಲ್ಲಿ ಸಾಕ್ಷಿಯಾಗಿ ಬದುಕಿವೆ.

12.       ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ  ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಹಾಗೆ ಆರಂಭಗೊಂಡ ಶಿಕ್ಷಣ ಸಂಸ್ಥೆ ಗಳು ನೂರಾರು ಅವುಗಳಲ್ಲಿ

ಬಳ್ಳಾರಿಯ ವೀರಶೈವ ವಿದ್ಯಾವರ್ದಕ ಸಂಘ

ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ದಕ ಸಂಘ

ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಂಸ್ಥೆ

ಪ್ರಮುಖವಾದುವು.

ಆರ್ಥಿಕ ಸಂಕಷ್ಠದಲ್ಲಿದ್ದ ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆ ಆರ್ಥಿಕ ಸಹಾಯ ಮಾಡಿದ್ದು ಚಿರಸ್ಮರಣೀಯ

ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಹೆಸರಿನಲ್ಲಿಯೇ ಆರಂಭಗೊಂಡ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಗಳು   ಗಡಿನಾಡ ಭಾಗಗಳಾದ ಬೆಳಗಾವಿ ಮತ್ತು ಬೀದರಿನ ಭಾಲ್ಕಿ ಗಳು ಬಹುದೊಡ್ಡ ಕ್ರಾಂತಿಯನ್ನು ಮಾಡಿದ್ದು ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು

ಜುಲೈ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ ದೇವ ಜೀವಗುಣವ ಜೀವದಿ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀಗಳವರ ಮಹತ್ಕಾರ್ಯಗಳು ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ
  4. ಯೋಗದ ಉಪಯೋಗವೇನು? ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)
  5. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-1 ಅರ್ಚನೆ :ಲೇಖಕರು : ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
  6. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೨ ಅರ್ಪಣ            ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇವರು ( ವಿಜಯ ಪ್ರಭು ದೇವರು) ಬೂದಗುಂಪ
  7. ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-೩ ಅನುಭಾವ ಲೇಖಕರು: ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
  8. ವಚನ ಸಂಪಾದನೆ ಪರಂಪರೆ ಲೇಖಕರು: ಡಾ|| ಬಿ. ನಂಜುಂಡಸ್ವಾಮಿ
  9. ಹಾನಗಲ್ಲ ದೈವ ಶ್ರೀಕುಮಾರಸ್ವಾಮಿ  ಲೇಖಕರು ಡಾ. ಕಿರಣ ಪೇಟಕರ
  10. ವಿಡಿಯೋ ೧ Shri Kumareshwara Life & Contributions  : Smt Supriya  Antin Kaddargi
  11. ವಿಡಿಯೋ ೨ Yuga Purusha Shri Hanagal Kumareshwara  (Hindi) by Smt Sapna Jain
  12. ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಸಿಂಧುರ)

ದೇವ, ದೇವ | ಜೀವಗುಣವ ಜವದಿ

ನಾಶಗೊಳಿಸಿ ಕಾಯೋ              || ಪ ||

ಘನಪಾಶವು ಮುಸುಕಿ | ನಿರ್ನಾಮನಾದೆ |

ಮನುಮುನಿವಂದ್ಯಾ           || 1 ||

ಮಮತಾ ವಿಷಯದೊಡನೆ | ಪ್ರಮಾದಗೊಳುವೆ |

ಸುಮನವನಿತ್ತು                 || 2 ||

ಶಿವಯೋಗದೊಳಿರಿಸಿ | ನಿರ್ವಾಣ ಸುಖವ

ತವೆ ಪಾಲಿಸುತೆ                                || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಗಾಳಿ ಗಾಳಿಯ ಕೂಡಿ | ಜಾಳಂದ್ರ ಗಿರಿಗಳನು

ದಾಳಿಯನು ಒಯ್ದು-ಆಳುವ ಬಗೆಯನು ನಾ

ಕೇಳಿದೆನು ಗುರುವೆ ಕೃಪೆಯಾಗು || ೫೯ ||

ಅನಲಭೂತವನ್ನು ವರ್ಣಿಸಲು ರಾಮಾಯಣ ಕಥೆಯನ್ನು ಪ್ರಸ್ತಾಪಿಸಿದ್ದರೆ ಅನಿಲ ಭೂತದ ಭಯಾನಕತೆಯನ್ನು ವ್ಯಕ್ತಗೊಳಿಸಲು ಪೌರಾಣಿಕ ಕಥೆಯ ಮಾಧ್ಯಮವನ್ನು ಗ್ರಹಿಸಿದ್ದಾನೆ. ಶಿವಕವಿಯು

ಹಿಂದೆ ಗಾಳಿಯಲ್ಲಿ ಪರ್ವತಗಳು ಪಕ್ಷಿಗಳಂತೆ ಹಾರಾಡಿ ಜನತೆಯನ್ನು ಉಧ್ವಸ್ಥ ಗೊಳಿಸುತ್ತಿದ್ದವಂತೆ. ದೇವತೆಗಳ ಮೊರೆ ಕೇಳಿ ಇಂದ್ರನು ತನ್ನ ವಜ್ರಾಯುಧದಿಂದ ಗಿರಿಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ಅಂದಿನಿಂದ ಪರ್ವತಗಳು ಕದಲುವದಿಲ್ಲ. ಹೀಗೆ ಇಂದ್ರನಿಂದ ಜಾಳಾದ (ಹಾಳಾದ) ಗಿರಿಗಳಲ್ಲಿ ಸಾಮಾನ್ಯ ಗಾಳಿಯು ಬಿರುಗಾಳಿಯೊಡನೆ ಕೂಡಿ ದಾಳಿಮಾಡಿ ಗಿಡ-ಬಳ್ಳಿಗಳನ್ನು ಹಾರಿಸಿಕೊಂಡು ಹೋಗಬಹುದು. ಆದರೆ ಆ ಗಾಳಿಯು ಪರ್ವತವನ್ನೇನೂ ಮಾಡಲಾರದು. ಇದೇ ಮಾತನ್ನು ಮಹಾಕವಿ ಕಾಳಿದಾಸನು ತನ್ನ ರಘುವಂಶ” ಕಾವ್ಯದಲ್ಲಿ

“ನ ಪಾದಪೋನ್ಮೂಲಶಕ್ತಿರಂಹಃ

ಶಿಲೋಚ್ಛಯೇ ಮೂರ್ಚ್ಛತಿ ಮಾರುತಸ್ಯ ‘

 ಮರಗಳನ್ನು ಕಿತ್ತುಹಾಕಬಲ್ಲ ಶಕ್ತಿಯುಳ್ಳ ಗಾಳಿಯು ಪರ್ವತವನ್ನು ಹಾರಿಸುವಲ್ಲಿ ಬಲಹೀನವಾಗಿದೆ. ಅಂದರೆ ಅದು ಗಿರಿಯನ್ನು ಏನೂ ಮಾಡಲಾರದೆಂದೇ ತಿಳಿಸಿದ್ದಾನೆ.

ಶರೀರದಲ್ಲಿ ವಾಯು ತತ್ತ್ವದ ಮನವೇ ಗಾಳಿಯೆನಿಸುವದು. ಈ ಗಾಳಿರೂಪಿ ಮನವು ಗಾಳಿಯ ಕೂಡಿ=ಪ್ರಾಣವಾಯುವನ್ನು ಬೆರೆತು ಸಂಚರಿಸುತ್ತದೆ. ಶರೀರದ ಸಂಚಲನೆಗೆ ಐದು ವಾಯುಗಳು ಮುಖ್ಯ. ಪ್ರಾಣ, ಅಪಾನ, ವ್ಯಾನ,   ದಾನ,ಸಮಾನಗಳೆಂದು.  ಇವಕ್ಕೇನೆ _ ಪ್ರಾಣಪಂಚಕವೆನ್ನುವರು ಅಮರಸಿಂಹನು ಅಮರಕೋಶ’ದಲ್ಲಿ –   |

“ಪ್ರಾಣೋSಪಾನಃ ಸಮಾನಶ್ಚೋದಾನವ್ಯಾನೌ ಚ ವಾಯವಃ !

ಹೃದಿ ಪಾಣೋ ಗುದೆ…ಪಾನಃ ಸಮಾನೋ ನಾಭಿಮಂಡಲೇ|

ಉದಾನಃ ಕಂಠದೇಶ ಸ್ಯಾತ್ ವ್ಯಾನಃ ಸರ್ವಶರೀರಗಃ ||

ಹೃದಯದಲ್ಲಿ ಪ್ರಾಣವಾಯು, ಗುದದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನ ವಾಯು, ಕಂಠದಲ್ಲಿ ಉದಾನವಾಯು ಮತ್ತು ಸಂಪೂರ್ಣಶರೀರದಲ್ಲಿ ವ್ಯಾನವಾಯು ವ್ಯಾಪಿಸಿರುತ್ತವೆಂದು ಈ ಐದು ವಾಯುಗಳು ಇರುವ ಸ್ಥಾನಗಳನ್ನು ನಿರ್ದೇಶಿಸಿದ್ದಾನೆ. ಈ ಐದಲ್ಲದೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ವೆಂದು ಮತ್ತೆ ಐದು ಉಪವಾಯುಗಳಿವೆ. ಇವುಗಳಿಗೆ  ನಾಗಪಂಚಕವೆನ್ನುತ್ತಾರೆ.

ಮಾನವನು ಅನ್ನ ನೀರುಗಳಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ ಗಾಳಿಯಿಲ್ಲದೆ ಬದುಕಲಾರನು. ವಾಯುಗಳು ಜೀವಾತ್ಮನಿಗೆ ಬಹುಮುಖ್ಯವಾಗಿವೆ. ಈ ವಿಷಯವನ್ನು ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರ ವಾಗಿ ತಿಳಿಪಡಿಸಿದ್ದಾರೆ. ಒಂದೊಂದೆ ವಾಯುವಿನ ಗುಣಧರ್ಮವನ್ನು ಪ್ರತ್ಯೇಕವಾಗಿ ವಿವೇಚಿಸಿದ್ದಾರೆ.

೧) ಪ್ರಾಣವಾಯು : ಇಂದ್ರ ನೀಲವರ್ಣ, ಹೃದಯಸ್ಥಾನದಲ್ಲಿರ್ದು, ಅಂಗುಷ್ಠ ತೊಡಗಿ ಘ್ರಾಣಾಗ್ರಪರಿಯಂತರ ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸನಂಗೈಸಿ ಅನ್ನಜೀರ್ಣಿಕರಣಮಂ ಮಾಡಿಸುತ್ತಿಹುದು.

೨) ಅಪಾನವಾಯು : ಹರಿತವರ್ಣ, ಗುದಸ್ಥಾನದಲ್ಲಿರ್ದು, ಮಲಮೂತ್ರಂಗಳ ವಿಸರ್ಜನವಂ ಮಾಡಿಸಿ ಅಧೋದ್ವಾರವಂ ಬಲಿದು ಅನ್ನರಸ ವ್ಯಾಪ್ತಿಯ ಮಾಡಿಸುತ್ತಿಹುದು.

೩) ವ್ಯಾನವಾಯು : ಗೋಕ್ಷೀರವರ್ಣ, ಸರ್ವಸಂಧಿಯಲ್ಲಿರ್ದು ನೀಡಿಕೊಂಡಿ ಹುದನು, ಮುದುಡಿಕೊಂಡಿಹುದನು ಅನುಮಾಡಿ ಅನ್ನಪಾನಮಂ ತುಂಬಿಸುತ್ತಿಹುದು.

೪) ಉದಾನವಾಯು : ಎಳೆಮಿಂಚಿನ ವರ್ಣ, ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸು ಕಾಣುವ, ಏಳಿಸುವ, ಛರ್ಧಿಸುವ (ವಮನ) ರೋದನಂಗಳ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು.

೫) ಸಮಾನವಾಯು : ನೀಲವರ್ಣ, ನಾಭಿಸ್ಥಾನದಲ್ಲಿರ್ದು ಅಪಾದಮಸ್ತಕ

ಪರಿಯಂತರ ಸಪ್ರಾಣಸಿಕೊಂಡ ಅನ್ನರಸಮಂ ಎಲ್ಲ ರೋಮನಾಳಂಗಳಿಗೆ ಹಂಚಿಕ್ಕುತ್ತಿಹುದು ” ಇವು ಪ್ರಾಣಪಂಚಕದ ಕೆಲಸಗಳು. ಇನ್ನು ನಾಗಪಂಚಕದ ಕಾರ್ಯವನ್ನು  ಸಂಕ್ಷಿಪ್ತದಲ್ಲಿ ನೋಡುವಾ

೬) ನಾಗವಾಯು : ಪೀತವರ್ಣ, ವಾಗಿಂದ್ರಿಯ (ಬಾಯಿ)ಕ್ಕೆ ಕಾರಣವಾಗಿ ಸುವಾಕ್ಯ ದುರ್ವಾಕ್ಯಗಳನ್ನು ನುಡಿಸುವದು.

೭) ಕೂರ್ಮವಾಯು : ಶ್ವೇತವರ್ಣ ಪಾಣೀಂದ್ರಿಯ (ಕೈ)ದಿಂದ ಆದಾನ- ಪ್ರದಾನಗಳನ್ನು ಮಾಡಿಸುತ್ತಿಹುದು.

೮) ಕೃಕರ ವಾಯು : ಅಂಜನವರ್ಣ ಪಾದೇಂದ್ರಿಯವು ಗಮನಾಗಮನಗಳನ್ನು ಹೊಂದುವದು.

೯) ದೇವದತ್ತ ವಾಯು : ಸ್ಪಟಿಕವರ್ಣ ಪಾಯ್ವಿಂದ್ರಿಯವು (ಗುಹ್ಯ) ಕುಳಿತಲ್ಲಿ ಮಲಗಿಸಿ, ಮಲಗಿದಲ್ಲಿ ಏಳಿಸಿ, ನಿಂದಿರಿಸಿ, ಚೇತರಿಸಿ, ಒರಲಿಸುತ್ತ ಸರ್ಜನ ವಿಸರ್ಜನ ಗಳನ್ನು ಮಾಡಿಸುವದು.

೧೦) ಧನಂಜಯ ವಾಯು : ನೀಲವರ್ಣ ಗುದೇಂದ್ರಿಯವು. ಆನಂದಾದಿ ವಿಷಯದ ಅನುಭವವನ್ನು ಹೊಂದುವದು. ಈ ವಾಯುವು ಕರ್ಣದಲ್ಲಿ ಸಮುದ್ರ ಘೋಷವನ್ನು ಘೋಷಿಸಿ ಮರಣಕಾಲಕ್ಕೆ ನಿರ್ಘೋಷವನ್ನು ಪಡೆಯುವದು. ಈ ಎಲ್ಲ ವಾಯುಗಳಲ್ಲಿ ಪ್ರಾಣವಾಯುವೇ ಶರೀರದ ಜೀವಾಳವಾಗಿದೆ. ಆದರೂ ಎಲ್ಲ ವಾಯುಗಳ ಸಂಚಲನವು ಕ್ರಮಬದ್ಧವಾಗಿದ್ದರೆ ಮಾತ್ರ ಶಾರೀರಿಕ ವ್ಯವಹಾರವು ಸುಗಮವೂ, ಸುಲಲಿತವೂ ಆಗುವದು. ಈ ಶರೀರದ ಸುಸ್ಥಿತಿಗೆ ದಶವಾಯುಗಳೂ ಅವಶ್ಯವೆಂದಂತಾಯಿತು. ಚನ್ನಬಸವಣ್ಣನವರು ವಿವರಿಸಿದ ದಶವಾಯುಗಳ ವಿಚಾರ ವನ್ನು ೮೪೪ ನೆಯ ವಚನದಿಂದಲೂ ಅರಿಯಬಹುದು.

ವಾಯುತತ್ತ್ವದ ಮನವು ಪ್ರಾಣವಾಯುವಿನ ಸಂಚಲನೆಯಿಂದ ಶರೀರದಲ್ಲಿ ಚಂಚಲತನವನ್ನು ಹೊಂದುತ್ತದೆ. ಅಷ್ಟೇ ಅಲ್ಲದೆ ಗಾಳಿಯು ಜಾಳಂದ್ರ ಗಿರಿಗಳ ಮೇಲೆ ದಾಳಿಮಾಡಿ ದೇಹವನ್ನು ದಣಿಸಿ ಆಳುವ ರೀತಿಯನ್ನು ಕೇಳಿದೆನೆಂದು ಕವಿಯು ಚಕಿತನಾಗಿ ಶ್ರೀಗುರುಕೃಪೆಯನ್ನು ಯಾಚಿಸಿದ್ದಾನೆ. ಈ ಗಾಳಿಯ ದಾಳಿಯು ಪ್ರತ್ಯಕ್ಷವಾಗಿಯೂ ಕಾಣಬರುತ್ತದೆ. ಇಲ್ಲಿ ಜಾಳಂದ್ರ ಗಿರಿಗಳೆಂದರೆ ಕೆಲವರು ಈಡಾ- ಪಿಂಗಳ ನಾಡಿಗಳೆಂತಲೂ, ಎರಡೂ ಕಣ್ಣುಗಳೆಂತಲೂ ಅರ್ಥೈಸುತ್ತಾರೆ. ಪ್ರಾಣವಾಯು ಸೂರ್ಯನಾಡಿಯಾದ ಪಿಂಗಳೆಯ (ಮೂಗಿನ ಬಲರಂಧ್ರದ) ಲ್ಲಿ ಹಾಗೂ ಚಂದ್ರನಾಡಿ ಯಾದ ಈಡೆಯ (ಎಡರಂಧ್ರದ) ಲ್ಲಿ ಸಂಚರಿಸುತ್ತ ಅಂಗುಷ್ಠದಿಂದ ನೇತ್ರದವರೆಗೆ ಹರಿದಾಡುತ್ತದೆ. ಮತ್ತು ಎಲ್ಲ ವಾಯುಗಳಿಗೆ ಚೇತನವನ್ನು ಕೊಡುತ್ತದೆ. ಈ ಗಾಳಿಯ ಹರಿದಾಡುವಿಕೆಯು ಸಕ್ರಮವಾಗಿದ್ದರೆ ದೇಹಕ್ಕೆ ತೊಂದರೆಯಾಗುವದಿಲ್ಲ. ಶರೀರದಲ್ಲಿ   ಜಾಲದಂತೆ ಹಬ್ಬಿರುವ ನರಗಳಲ್ಲಿ ಮತ್ತು ಸಂಧಿ ಸ್ಥಾನಗಳಲ್ಲಿ ವಾಯುವಿಕಾರವಾದರೆ ಆಯಾಸವಾಗುವದು. ಅದಕ್ಕೋಸುಗ ಜಾಳಂದ್ರಗಿರಿಗಳೆಂದರೆ ನರಗಳ ಕೂಡುವಿಕೆ ಹಾಗೂ ಸಂಧಿಸ್ಥಾನಗಳೆಂದು ಭಾವಿಸಬಹುದು. ಈ ಜಾಳಂದ್ರಗಿರಿಗಳಲ್ಲಿ ದಾಳಿಮಾಡಿ ವಾಯು ತನ್ನ ಶಕ್ತಿಯನ್ನು ತೋರಿಸಿ ಶರೀರವನ್ನು ಆಳತಕ್ಕ ರೀತಿಯು ಕಂಡುಬರುತ್ತದೆ. ಕಾರಣ ವಾಯುವಿನ ಅಭಿಮಾನವನ್ನು ಕಳೆದುಕೊಂಡಾಗ ಶರೀರಕ್ಕೆ ಬಾಧಕವಾಗು ವದಿಲ್ಲ. ವಾಯುವಿಕಾರದ ರೀತಿಯನ್ನು ಅರಿಯದಿದ್ದರೆ ವಾಯುಮಯ ಮನಸ್ಸಿನ ಹರಿದಾಟವೂ ನಿಲ್ಲುವದಿಲ್ಲ. ಅದಕ್ಕಾಗಿ ಮನವನ್ನು ನಿಲ್ಲಿಸುವದಕ್ಕಾಗಿ ಪ್ರಾಣಾಯಾಮ ದಿಂದ ವಾಯು ಶುದ್ಧಿಯನ್ನು ಮಾಡುವರು. ಶಿವಪೂಜೆಯನ್ನು ಪ್ರಾರಂಭಿಸುತ್ತಿರಲು ರೇಚಕ ಪೂರಕ ಕುಂಭಕಗಳಿಂದ ವಾಯುವಿನ ಪರಿಶುದ್ಧತೆ ಹಾಗೂ ಚಲನೆಯನ್ನು ಸ್ಥಿರಗೊಳಿಸುವರು. ಇದರಿಂದ ಮನಸ್ಸಿನ ಸ್ಥಿರತೆಯುಂಟಾಗುವದು. ಈ ವಿಚಾರವನ್ನು ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಮಾಯಾಕೋಲಾಹಲ ಅಲ್ಲಮ ಪ್ರಭುದೇವರು (ಸಾಧಕರಿಗಾಗಿ) ಬಸವಣ್ಣನವರಿಗೆ ಬೋಧಿಸಿದ್ದಾರೆ (ಸಾಧಕಾಂಗ ಗತಿಯಲ್ಲಿ)

“ಮಾಯೆಯೆಂಬುದು ಮನವು ಮನವೇ

ವಾಯುವಾಗಿಹುದಾ ಮನಸ್ಸೇ

ವಾಯುರೂಪಾಗಿರುತಲಿಹುದಾ ವಾಯು ಹರಿದಾಡಿ |

ಕಾಯವನು ಕಂಗೆಡಿಸಿ ಭಕ್ತಿಯ

ಬಾಯ ಕಾಣಿಸಲೀಯದಂತಾ

ವಾಯುವನೆ ಗೆಲುವವನೆ ಭಕ್ತನು ಬಸವ ಕೇಳೆಂದ” || ೨೦ ||

“ಮನದ ಮುಂದಣ-ಬಯಕೆಯೇ ಮಾಯೆಯಾಗಿರುವದು. ಅಂಥಾ ಮಾಯಾಮಯ ಮನವು ವಾಯುಮಯವಾಗಿದೆ. ವಾಯುವು ಶರೀರದಲ್ಲಿ ಸಂಚರಿಸಿ ಭಕ್ತಿಯ ಬಟ್ಟೆಯನ್ನು ಕಂಗೆಡಿಸುತ್ತದೆ. ಆದ್ದರಿಂದ ಈ ವಾಯುವನ್ನು ಗೆಲ್ಲಬಲ್ಲವನೇ ಭಕ್ತನು’ ಎಂದು ಹೇಳಿ ವಾಯುವನ್ನು ನಿಲ್ಲಿಸುವ ಪರಿಯನ್ನು ಮುಂದಿನ ಮಾತಿನಲ್ಲಿ ತಿಳಿಸುತ್ತಾರೆ, ಪ್ರಭುಗಳು –

ಆಲಿ ನಿಂದೊಡೆ ಸುಳಿದು ಸೂಸುವ

ಗಾಳಿ ನಿಲುವುದು ಗಾಳಿ ನಿಲೆ ಮನ

ಮೇಲೆ ನಿಲುವುದು ಮನವು ನಿಂದೊಡೆ ಬಿಂದು ನಿಂದಿಹುದು |

ಲೀಲೆಯಿಂದಾ ಬಂದು ನಿಂದೊಡೆ

ಕಾಲ ಕರ್ಮವ ಗೆದ್ದು ಮಾಯೆಯ

ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ || ೨೨ ||

ಕಣ್ಣಿನ ರೆಪ್ಪೆಯ ಬಡಿದಾಟ ನಿಂತರೆ ಗಾಳಿನಿಲ್ಲುವದು. ಅಂದರೆ ಲಿಂಗದಲ್ಲಿ ಆನಿಮಿಷ ದೃಷ್ಟಿಯನ್ನು ನಿಲ್ಲಿಸಿ ದೃಷ್ಟಿಯೋಗವನ್ನು ಸಾಧಿಸಬೇಕು. ಆಗ ವಾಯುವಿನ ಸಂಚಾರ ಸ್ಥಿರಗೊಂಡು ಮನಸ್ಸು ನಿಲ್ಲುವದು. ಮನವು ನಿಶ್ಚಂಚಲವಾದರೆ ಲಿಂಗದಲ್ಲಿ  ಬಿಂದುವನ್ನು ಕಾಣುತ್ತೇವೆ. ಬಿಂದು (ಪ್ರಕಾಶ)ವನ್ನು ನಿಲ್ಲಿಸುತ್ತಿರಲು ಕಾಲ-ಕರ್ಮ- ಮಾಯೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಬಹುದು.. ಹೀಗೆ ವಾಯುವನ್ನು ಹಿಡಿತದಲ್ಲಿ ತಂದರೆ ಅದರ ದಾಳಿಯು ನಿಲ್ಲುವದು

 ಪ್ರಾಣವಾಯುವನ್ನು ಶರೀರದಲ್ಲಿ ತೆಗೆದುಕೊಳ್ಳುವುದಕ್ಕೆ ಶ್ವಾಸವೆಂತಲೂ, ಹೊರಕ್ಕೆ ಬಿಡುವದಕ್ಕೆ ನಿಃಶ್ವಾಸವೆಂತಲೂ ಕರೆಯುವರು. ಈ ಶ್ವಾಸ-ವಿಶ್ವಾಸಗಳು ಒಂದು ನಿಮಿಷಕ್ಕೆ ೧೫ ಸಲ ಜರುಗುವವು. ಅಷ್ಟೇ ಸಲ ನಡೆಯಬೇಕು. ಅಂದರೆ ಅದು ಕ್ರಮಬದ್ಧವಾದುದು. ಅವು ಒಂದು ತಾಸಿಗೆ ೯೦೦ ಆಗುತ್ತವೆ. ೨೪ ತಾಸು (ಒಂದು ದಿನ)ಗಳಲ್ಲಿ ೨೧,೬೦೦ ಶ್ವಾಸ ನಿಃಶ್ವಾಸಗಳು ಉಂಟಾಗುತ್ತವೆಂದು  ಶಿವಾನುಭವಿಗಳು ಹೇಳುತ್ತಾರೆ. ಈ ಸಂಖ್ಯೆಗೆ ಅನುಗುಣವಾಗಿ ಶ್ವಾಸ ನಿಶ್ವಾಸದಲ್ಲಿ ಪ್ರಣವ ಪಂಚಾಕ್ಷರಿ ಯನ್ನು ತುಂಬಬೇಕು. ವಾಯು ಪ್ರಣವನಾದದೊಡನೆ ಬೆರೆಯಬೇಕು. ಆಗ ಮನ ಘನವಾಗುವದು. ಇದನ್ನು ಶಿಕ್ಷಿಸಬಲ್ಲವನು ಗುರುವು

. ಓ ಮಹಾಗುರುವೆ ! ಎನ್ನ ಮನವನ್ನು ಶಿಕ್ಷಿಸಿ ಘನ-ಮನವಾಗುವಂತೆ ಮಾಡು. ಪ್ರಾಣವು ಪ್ರಣವ ನಾದದಲ್ಲಿ ಬೆರೆಯುವಂತೆ ಕೃಪೆಮಾಡು. ಇದರಿಂದ ವಾಯು ವಿಕಾರದ ಭಯಾನಕತೆ ದೂರವಾಗಿ ಕಾಯವು ಪ್ರಸಾದಕಾಯವಾಗುವದು. ಇಂಥ ಸದ್ಭಕ್ತನಿಗೆ ಮಾತ್ರ ವಾಯುವು ಏನನ್ನೂ ಮಾಡಲಾರದು.

ಬಯಲೊಳಗೆ ಬಯಲೊಗೆದು | ಬಯಲೊಳಗೆ ಸಂಚರಿಸಿ

ಬಯಲೊಳಗೆ ಬಯಲು-ಲಯವಾಗುತಿರೆ ಕಂಡು

ಭಯಗೊಂಡೆ ಗುರುವೆ ಕೃಪೆಯಾಗು | ೬೦ |

ಪಂಚ ಮಹಾಭೂತಗಳಲ್ಲಿ ನೆಲ-ಜಲ-ಅನಲ ಅನಿಲ ನಾಲ್ಕನ್ನು ಪ್ರತಿಪಾದಿಸಿ  ಐದನೆಯ ಆಕಾಶದ ಇರುವನ್ನು ಬಿತ್ತರಿಸುತ್ತಾನೆ.  

 ಸಾಮಾನ್ಯವಾಗಿ ತೋರುವ ಈ ಮಹಾಬಯಲೊಳಗೆ ಒಂದು ಮನೆಯು ನಿರ್ಮಾಣವಾದರೆ ಅದಕ್ಕೆ ಮನೆಯ ಬಯಲೆನ್ನುವರು. ಅಂದರೆ ವಿಸ್ತಾರವಾದ ಬಯಲಿನಲ್ಲಿ ಮನೆಯಷ್ಟೇ ವಿಸ್ತಾರವಾದ ಸೀಮಿತವಾದ ಅವಕಾಶ ಕಂಡು ಬರುವದು. ಅರ್ಥಾತ್ ಹಿರಿದಾದುದು ಕಿರಿದಾಗುವದು. ಇಂಥ ಮನೆಯ ಒಳಬಯಲು ಹಾಗೂ ಹೊರ ಬಯಲುಗಳಲ್ಲಿ ಜೀವಾತ್ಮನು  ಸಂಚರಿಸುತ್ತಾನೆ. ಕಾಲಾಂತರದಲ್ಲಿ ಆ ಮನೆಯು  ನಾದುರಸ್ಥವಾಗಿ ಬಿದ್ದರೆ ಅದರ ಬಯಲು ಪುನಃ ಮೊದಲಿನ ಮಹಾ ಬಯಲಿನಲ್ಲಿ ಸೇರುತ್ತದೆ .ಜೀವಾತ್ಮನು ನಾಶವಾಗುವನು. ಆಗ ಎಲ್ಲವು ಮಹಾ ಬಯಲೇ ಆಗುವದು .ಇದು ಜಗದ ವಿಚಿತ್ರ ಗತಿಯಾಗಿದೆ.

 ಅಧ್ಯಾತ್ಮ ವಿಚಾರದಲ್ಲಿ ಬಯಲೆಂದರೆ ಮಹಾ ಚೈತನ್ಯಮಯವಾದ ಪರಾತ್ಪರ ವಸ್ತು.

 “ಯತೋ ವಾ ಇಮಾನಿ ಭೂತಾನಿ ಜಾಯಂತೇ

 ಯೇನ ಜಾತಾನಿ ಜೀವಂತಿ ಯತ್ ಪ್ರಯಂತ್ಯಭಿಸಂವಿಶಂತಿ |

ತೈತ್ತರೀಯೋಪನಿಷತ್ತು || ೩-೧

ಎಂಬುವ ಶೃತಿಯಂತೆ ಆ ಪರವಸ್ತುವಿನಿಂದ ಹುಟ್ಟಿದ ಭೂತಗಳು (ಪ್ರಾಣಿಗಳು) ಬದುಕುತ್ತವೆ. ಕೊನೆಗೊಮ್ಮೆ ಸಾಯುತ್ತವೆ. ಬ್ರಹ್ಮಾಂಡ ಬಯಲು ರೂಪಿನ ಶಿವನಿಂದ ಪಿಂಡಾಂಡ ಬಯಲನ್ನು ಹೊಂದಿದ ಜೀವನು ಸಂಜನಿಸಿ ನವದ್ವಾರಮಯವಾದ ದೇಹವೆಂಬ ಬಯಲಿನಲ್ಲಿ ಹಾಗೂ ಹೊರ ಬಯಲಿನಲ್ಲಿ ಸಂಚರಿಸುತ್ತಾನೆ. ಕೊನೆಗೆ ಶರೀರವು ನಾಶವಾಗಲು ಅದರ ನವದ್ವಾರಗಳೂ ಮಹಾ ಬಯಲಿನಲ್ಲಿ ಕೂಡಿ ಜೀವಾತ್ಮನೂ ಕಾಣದಂತಾಗುವನು. ಈ ಎಲ್ಲದರ ವೈಚಿತ್ರ್ಯತೆಯನ್ನು ಕಾಣುತ್ತಿರಲು ಭಯ ಬರುವದು ಸಹಜ. ಜೀವನದ ಆಶಾಪಾಶಗಳಲ್ಲಿ ಬಿದ್ದ ಜೀವನಿಗೆ ಸಾಯುವದೆಂದರೆ ಬಲುಕಷ್ಟ. ಈ ಸಾವನ್ನು ಗೆಲ್ಲಬೇಕಾದರೆ ಬಯಲಾತ್ಮನಾದ ಶಿವನನ್ನು ಅರಿಯಲೇಬೇಕು. ಶಿವನೇ ತಾನಾಗಿ ಶಿವನಲ್ಲಿ ಬೆರೆತರೆ ಭಯ ದುಃಖಗಳು ಹುಟ್ಟಲಾರವು. ಸಕಲ ಶಾರೀರಿಕ ಉಪಾಧಿಗಳು ಬಿಟ್ಟು ಹೋಗುತ್ತವೆ.

 ಶರಣರ ಸಾಧನೆಯಾದರೂ ಬಯಲುಗಳಿಕೆಯಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಶೂನ್ಯ ಸಂಪಾದನೆಯು ಶರಣತತ್ತ್ವದ ಮಹಾಮಣಿಹ. ಅದಕ್ಕಾಗಿ ಎಲ್ಲ ಶಿವಶರಣರು ಬಯಲು ಗಳಿಕೆಯ ಪರಿಯನ್ನು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಬಯಲು ಗಳಿಕೆಯೇ  ಐಕ್ಯಸ್ಥಿತಿಯೆನಿಸಿರುವದು. ಈ ಬಯಲುಗಳಿಕೆಯ ಸುಲಭ ಮಾರ್ಗವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು –

“ವೇದಶಾಸ್ತ್ರಾಗಮಂಗಳೆಂಬ ಕೊಟ್ಟಣವ ಕುಟ್ಟುತ್ತ

ನುಚ್ಚು ತೌಡು ಕಾಣಿಭೋ ! ಇವ ಕುಟ್ಟಲೇಕೋ ?

ಅತ್ತಲಿತ್ತ ಹರಿವ ಮನದ ಶಿರವನರಿಯಬಲ್ಲಡೆ

ಬಟ್ಟಬಯಲು ಕಾಣಾ ಚೆನ್ನಮಲ್ಲಿಕಾರ್ಜುನಾ !”

ಎಂದು ಸೂತ್ರರೂಪವಾಗಿ ಮಹದರ್ಥವನ್ನು ತಿಳಿಸಿದ್ದಾಳೆ. ವೇದಶಾಸ್ತ್ರ ಆಗಮಂಗಳವಾದ-ವಿವಾದ-ಜಂಜಾಟದಿಂದ ಬಯಲಾತ್ಮನನ್ನು ಕಾಣಲು ಸಾಧ್ಯವಿಲ್ಲ. ಅತ್ತಲಿತ್ತ ಹರಿವ ಚಂಚಲ ಮನಸ್ಸಿನ ಜುಟ್ಟವನ್ನು ಹಿಡಿದರೆ ಬಟ್ಟ ಬಯಲು ದೊರಕೊಳ್ಳುವದು. ಪ್ರಭುದೇವರೂ ಸಹ –

“ಬಯಲು ಬಯಲನೆ ಬಿತ್ತಿ,

ಬಯಲು ಬಯಲನೆ ಬೆಳೆದು ;

ಬಯಲು ಬಯಲಾಯಿತ್ತಯ್ಯಾ ;

 ಬಯಲು ಜೀವನ-ಬಯಲಭಾವನೆ,

ಬಯಲು ಬಯಲಾಗಿ ಬಯಲಾಯಿತ್ತಯ್ಯ.

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ !’

ಬಯಲಿನಲ್ಲಿ ಬಯಲನ್ನು ಬಿತ್ತಿ, ಅದನ್ನೇ ಬೆಳೆದು ಅದರಲ್ಲಿಯೇ ಜೀವನ ಸಾಗಿಸಿ ಕೊನೆಗೊಮ್ಮೆಆ ಬಯಲಿನಲ್ಲಿ ಬೆರೆಯಬೇಕಾದರೆ ಗುಹೇಶ್ವರನ ಪೂಜೆ ಅವಶ್ಯವೆಂದು ನಾನೂ ಆ ರೀತಿ ಆತನನ್ನು ಪೂಜಿಸಿ ಬಯಲಾಗಿದ್ದೇನೆಂದು ತಿಳಿಸಿದ್ದಾರೆ. ಈ ಬಯಲ ತತ್ತ್ವವನ್ನರಿಯಬೇಕಾದರೆ ಗುರುಕರುಣೆ ಅತ್ಯವಶ್ಯ. ಗುರುಕೃಪೆಯಿಂದ ಇಷ್ಟಲಿಂಗವನ್ನು ಪಡೆದು ಲಿಂಗಪ್ರಾಣಿಯಾಗಿ ಸರ್ವಾಂಗ-ಲಿಂಗಮಯನಾದವನು ಬಯಲಾಗುವನು. ಇಥವರಿಗೆ ಭಯವೆಂಬುದೇ ಇಲ್ಲ. ಈ ವಿಷಯವನ್ನು ಮಹಾ ಶರಣ ಹಡಪದಪ್ಪಣ್ಣಗಳು-

ಬಯಲಿಂದಲೇ ಹುಟ್ಟಿ ಬಯಲಿಂದಲೇ ಬೆಳೆದು,

ಬಯಲಾಮೃತವನೆ ಉಂಡು ಬಯಲನೆ ಉಟ್ಟು

ಬಯಲನೆ ತೊಟ್ಟು ಬಯಲು ಬಯಲೊಳಗೆ ಬೆರೆದ ಭೇದವ

ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು

ಭವವಿರಹಿತ ಶರಣರ ನಿಲವ ?

ಬಸವಪ್ರಿಯ ಕೂಡಲಚೆನ್ನಬಸವಣ್ಣ (೧೧೭ ವ.ಸಾ.ಸಂ.)

ಬಯಲಾತ್ಮರಾದ ಭವಭಯವಿರಹಿತ ಶರಣರ ನಿಲುವನ್ನು ಭವಭಾರಿಗಳು ಎಂದೂ ತಿಳಿಯಲಾರರೆಂದು ತಿಳಿಸಿದ್ದಾರೆ.

ಜಾನಪದ ಕವಿ ಹಾಗೂ ಸಂತ ಶಿಶುನಾಳ ಶರೀಫ ಸಾಹೇಬರು ಸಹ ಬಯಲು ತತ್ತ್ವವನ್ನು ಕುರಿತು ಸುಂದರವಾಗಿ ಹಾಡಿದ್ದಾರೆ.

ಬಯಲೊಳು ಬಯಲು ಪುಟ್ಟಿಸಿದಾ ನಿ-

ರ್ಭಯಲಿನೊಳಗೆ ತನ್ನ ಆಲಯವ ಕಟ್ಟಿಸಿದ !

ಭವನಿವಾರಣ ಭಕ್ತರಕ್ಷಕ ಹೌದೆನುತ ನಿಶ್ಚಯಿಸಿ ಮನದೊಳು |

ತವಕ ತೂರ್ಯದಿಂದ ಲಕ್ಷಿಸಿ ಭವ ಸಮುದ್ರವ ದಾಂಟು, ದಾಂಟುತ |

ನಡೆಯೋ ಖಾದರಲಿಂಗ ನೆಲಸಿರ್ಪ ಗುಡಿಗೆ ನಡಿಯೋ ದೇವರ ಚಾಕರಿಗೆ II

ಖಾದರಲಿಂಗನೂ ಬಯಲಾತ್ಮನೇ, ಭವಸಮುದ್ರವನ್ನು ದಾಟಲು ಬಯಲಾಗಿ ಬಯಲಾತ್ಮನನ್ನು ಪೂಜಿಸಬೇಕು.

ಅಭಯಸ್ವರೂಪಿಯಾದ ಸದ್ಗುರುವೆ ! ಈ ಭವದ ಭಯವನ್ನು ನೀಗಿಸಲು ಶರಣರ ಪರಿಯನ್ನು ತಿಳಿಸು. ಶೂನ್ಯ ಸಂಪಾದನೆಯನ್ನು ಮಾಡುವ ಸುಜ್ಞಾನವನ್ನಿತ್ತು ಕರುಣಿಸಿ ಕಾಪಾಡು. ಅಂದರೆ ಬಯಲುಗಳಿಕೆಯನ್ನು ಸಾಧಿಸಬಲ್ಲೆನು.

ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.

ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.

೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.

೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :

(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;

(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು; 

(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;

(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.

(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.

೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.

೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.

೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.

೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್‌ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.

ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.

ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)

                                 ( ಪರಂಜ್ಯೊತಿ ಪತ್ರಿಕೆಯಿಂದ)

ಸಂಗ್ರಹ : ಶ್ರೀ ಕೆ.ಹೆಚ್.ಮಲ್ಲನಗೌಡರು ಗದಗ

“ಯೋಗಶ್ಚಿತ್ ವೃತ್ತಿ ನಿರೋಧಃ”योग श्चित्तवृत्ति निरोधः   ಇದು ಪಾತಂಜಲಿ ಋಷಿಯ ವಾಣಿ.  ಈ ವಾಣಿ ಯೋಗಾಭ್ಯಾಸಗಳಿಗೆ ಧೈರ್ಯ ಹಾಗೂ ಉತ್ಸಾಹವನ್ನುಂಟು ಮಾಡುತ್ತದೆ. ಯೋಗಾಭ್ಯಾಸದಿಂದ (ಯೋಗಾಸನಗಳನ್ನು ಹಾಕುನದರಿಂದ) ನಮಗುಂಟಾಗುವ ಲಾಭವೇನು? ಅದರ ಪ್ರಯೋಜನವೇನು? ಏಕೆ ಹಾಕಬೇಕು? ಹೀಗೆ ಹಲವಾರು ರೀತಿಯಿಂದ ಪ್ರಶ್ನೆಗಳ ಸುರಿಮಳೆಯೇ ಈ ವೈಜ್ಞಾನಿಕ ಯುಗದಲ್ಲಿ ಪ್ರಾರಂಭವಾಗುತ್ತವೆ. ಈ ಪ್ರಶ್ನೆಗಳ ಸುರಿಮಳೆಗೆ ಉತ್ತರವಾಗಿ ಯೋಗಾಸನಗಳಿಂದ ಆರೋಗ್ಯ ಸಂಪತ್ತು ಹೆಚ್ಚುತ್ತದೆ ಈ ಸಂಪತ್ತಿಗಿಂತಲೂ ಹೆಚ್ಚಿನ ಸಂಪತ್ತು ಜಗತ್ತಿನಲ್ಲಿ ಯಾವದೂ ಇಲ್ಲ, ಅಲ್ಲದೇ ಆರೋಗ್ಯದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ ಎಂಬುದಾಗಿ ಹೇಳಿದರೂ ಅದು ಸಮಾಧಾನವಾಗಲಾರದು ಮತ್ತೆ ಶುಷ್ಕವಾದವೇ ವಾಗುತ್ತದೆ. ಕೊನೆಯದಾಗಿ ಉತ್ತರ ಹೇಳಬೇಕೆಂದರೆ ಮೇಲ್ಕಾಣಿಸಿದ ಪಾತಂಜಲಿ ಋಷಿಯ ಸೂತ್ರವೇ ಪ್ರತ್ಯುತ್ತರವಾಗಿ ನನಗೆ ತೋರುತ್ತದೆ.

ಈ ಸೂತ್ರಾಧಾರದಂತೆ ಎಷ್ಟುಜನ ಯೋಗಾಭ್ಯಾಸಿಗಳು ಯೋಗಸಾಧನೆ ಮಾಡಿ ಈ ಕಾಲದಲ್ಲಿ ಚಿತ್‌ ವೃತ್ತಿಯನ್ನು ವಿರೋಧಿಸಿದ್ದಾರೆ? ಬೆರಳಿನಲ್ಲಿ ಎಣಿಸುವಷ್ಟು ಜನರೆಂದರೆ ಮಾತ್ರ ತಪ್ಪಾಗಲಾರದು. ಯೋಗಾಭ್ಯಾಸದಿಂದ ಚಿತ್ (ಮನಸ್ಸಿನ) ವೃತ್ತಿ (ಚಂಚಲತೆ) ನಿರೋಧ (ನಿಲ್ಲುವದು ಹೇಗೆ? ಇದು ಎಷ್ಟೋಜನ ಯೋಗಾಭ್ಯಾಸಿಗಳಿಗೆ ಬಿಡಿಸಲಾರದ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಪರಿಹಾರದ ದಾರಿಯೇ ಕಾಣದಾಗಿದೆ. ಇದರ ಪರಿಹಾರದ ಉಪಾಯ ಕಾಣಬೇಕಾದರೆ ಯೋಗವನ್ನು ಆಳವಾಗಿ ಅಭ್ಯಾಸಿಸಬೇಕು. ವಿಜಯಶಾಲಿ ಯಾಗಬಯಸುವ ಸೈನಿಕರು ಸೈನಿಕ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮರೀತಿಯ ಶಿಕ್ಷಣ ಪಡೆದ ಮಾತ್ರಕ್ಕೆ ಆತ ವಿಜಯಶಾಲಿಯಾಗಲಾರ ವಿಜಯಶಾಲಿಯಾಗಬೇಕಾದರೆ ರಣಾಂಗಣ (ಯುದ್ಧರಂಗ) ಕ್ಕೆ ಹೋಗಿ ಎದುರಾಳಿಯೊಡನೆ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳೆನ್ನದೇ ಹೋರಾಡಿದಾಗ ಮಾತ್ರ ವಿಜಯಶಾಲಿಯಾಗಬಹುದು ಅದರಂತೆ ಅಭ್ಯಾಸಿಸಿದ ಯೋಗದಿಂದ ಚಿತ್ತಚಂಚಲತೆ ದೂರಾಗದು. ಅಭ್ಯಸಿಸಿದುದನ್ನು ಚೆನ್ನಾಗಿ ಅನುಭವಿಸಕೊಳ್ಳಬೇಕು. ಕೆಲವೊಂದು ಆಸನಗಳನ್ನು ಹಾಕುವ ದನ್ನು ಕಲಿತು, ಇಂತಿಂಥ ಆಸನದಿಂದ ಇಂತಿಂಥ ರೋಗಗಳು ಹೋಗುತ್ತವೆಯಂತೆ ಎಂದು ಯಾವಕಾಲದಲ್ಲೋ ಯಾರೋ ಹೇಳಿದ ಮಾತನ್ನೇ ಹೇಳುತ್ತಾ ಹೋಗುವದು ಈಗಿನ ಹಲವಾರುಜನ ಯೋಗಾಭ್ಯಾಸಿಗಳ ಕರ್ತವ್ಯವಾಗಿದೆ. ಉದಾ! ಮಯೂರಾಸನದಿಂದ ಗುಮ್ಮಿಸಂಬಂಧವಾದ ಮತ್ತು ಅಗ್ನಿ ಮಾಂದ್ಯ ಮುಂತಾದ ರೋಗಗಳು ನಿವಾರಣೆಯಾಗುತ್ತದೆಂಬ ಮಾತನ್ನು ಯಾವ ಕಾಲದಿಂದಲೋ ಕೇಳುತ್ತಾ ಬಂದಿದ್ದೇವೆ. ಆದರೆ ಪ್ರತಿನಿತ್ಯ ಯೋಗಾಸನಗಳನ್ನು ಹಾಕುವ ಎಷ್ಟೋಜನ ಯೋಗಾಭ್ಯಾಸಿಗಳು ಬೆಳಗಾದಾಕ್ಷಣ ಹೊಟ್ಟೆ ಹಿಡಿದಿದೆ ಎಂಬ ನರಳುವಿಕೆಯನ್ನು ಕೇಳುತ್ತಲಿದ್ದೇವೆ.

 ಅಂದಮೇಲೆ ಇಷ್ಟಕ್ಕೆ ಹೀಗಾದರೆ ಇನ್ನು ಯೋಗಾಭ್ಯಾಸದಿಂದ ಚಿತ್ರ ಚಾಂಚಲ್ಯತೆ ಎಷ್ಟರಮಟ್ಟಿಗೆ ನಿಲ್ಲುವದೆಂಬ ವಿಷಯ ಜನಸಾಮಾನ್ಯರಿಗೂ ಗೊತ್ತಾಗುತ್ತದೆ. ಪಾತಂಜಲಿ ಋಷಿಯ ಸೂತ್ರ ಕೇವಲ ಬಾಯಾತಾಗಿ ನಿಂತಿದೆಯೇ ವಿನಃ ಅದರ ಅನುಭವ ನಮಗಿಂದು ಇಲ್ಲದಾಗಿದೆ. ಅಭ್ಯಸಿಸಿದುದನ್ನು ಅನುಭವಿಸಬೇಕಾದರೆ ಅವಿರತವಾಗಿ ಅನುಷ್ಠಾನ ಗೈಯಬೇಕು ಆಗ ಅದರ ಅನುಭವ ವುಂಟಾಗುತ್ತದೆ. ಪೂರ್ವಜರು ಹೇಳಿದ ಮಾತುಗಳನ್ನು ಇಂದು ನಾವು ಪುನಃ ವಿಮರ್ಶಿಸಬೇಕಾಗಿದೆ. ಆ ಬುದ್ಧಿ ಆಶಕ್ತಿ ನಮ್ಮಲ್ಲಿದೆ. ಅವುಗಳನ್ನು ಅಲ್ಲಗಳೆಯುವದರಲ್ಲಿಅರ್ಥವಿಲ್ಲ. ಅಲ್ಲಗಳೆದವರು ಅಧ: ಪತನ ವಾಗುವಲ್ಲಿ ಸಂದೇಹವಿಲ್ಲ. ಪೂರ್ವಾಚರಣೆಗಳನ್ನು ಪುನರ್ವಿಮರ್ಶೆ ಮಾಡಿ ಅವುಗಳಿಗೊಂದು ಹೊಸತನವನ್ನು ಕೊಟ್ಟು ಸರಿಯಾದ ರೀತಿ ನೀತಿಯಿಂದ ಕಾಲಕ್ಕೆ ಹೊಂದಾಣಿಕೆ ಮಾಡಿಕೊಂಡಾಗ ಅವುಗಳ ಪರಿಣಾಮ ಆಗ ಆರ್ಯ ಸಂಸ್ಕೃತಿ ಉಳಿಯುತ್ತದೆ, ಬೆಳೆಯುತ್ತದೆ. ಅಲ್ಲದೆ ಆಧುನಿಕ ಕಾಲದಲ್ಲಿ ಯೋಗಾಭ್ಯಾಸಕ್ಕೊಂದು ಹೊಸಕಳೆ ಬರುತ್ತದೆ. ಬೆಲೆ ಬಾಳುತ್ತದೆ. ಯೋಗಾಭ್ಯಾಸ ಸರ್ವಾದರಣೀಯವಾಗುತ್ತವೆ. ಇದು ನಿಸ್ಸಂದೇಹ

“ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಇದು ವೈರಾಗ್ಯ ಶಿಖರದ ತುತ್ತುದಿಯ ಮೇಲೇರಿದ ಮಹಾದೇವಿಯಕ್ಕನ ಮಹಾವಾಣಿ. ಇದು ಸಮಂಜಸವಾದುದು, ಸತ್ಯವಾದುದು. ಜನಸಾಮಾನ್ಯರಿಗೂ ತಿಳಿಯುತ್ತದೆ. ಕಾಯದಲ್ಲಿರುವ ಕರಣಂಗಳ ಚೇಷ್ಟೆಗೆ ಮನವೇ ಮೂಲಕಾರಣ. ಆ ಮನದ ಚೇಷ್ಟೆಗೆ ಪ್ರಾಯೋದಾನವೇ ಕಾರಣ. ಈ ಉದಾನವಾಯು ಮಾನವನ ಶರೀರದಲ್ಲಿ ಉಂಟಾಗುವ ಬಗೆ ಹೇಗೆಂದರೆ ಪ್ರತಿಯೊಬ್ಬ ಮಾನವನ ಶರೀರದಲ್ಲಿ ೭೨ ಕೋಟಿ ೭೨ ಲಕ್ಷ ೧೦ ಸಾವಿರ ೨೦೧ ನಾಡಿಗಳುಂಟು. ಈ ಎಲ್ಲ ನಾಡಿಗಳಲ್ಲಿ ಶ್ರೇಷ್ಠವಾದುದು ಸುಷುಮ್ಮೆ ನಾಡಿ ಈ ನಾಡಿಯಲ್ಲಿ ಹರಿದಾಡುವದು ಉದಾನವಾಯು. ಊರ್ಧ್ವನವಾಗಿ ಹರಿದಾಡುವದರಿಂದ ಉದಾನವಾಯು ಎಂದು ಹೆಸರು.

ತೇಜೋ ರೂಪವೇ ಉದಾನವಾಯು ಆ ತೇಜೋರೂಪ ಉದಾನವು ತಣ್ಣಗಾದಲ್ಲಿಮರಣ ವೊದಗಿ ಮರಣ ಹುಟ್ಟು ಒದಗುವದು. ಇದು ಕಾರಣ ಮೈ ಬಿಸಿಯೇ ಉದಾನ ಪ್ರಾಣ ಕಾಣಾ” ಎಂಬುದಾಗಿ ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುತ್ತದೆ. ಇದಲ್ಲದೆ “ಪ್ರಾಣಾ ಪಾನಾದಿಗಳಿಂದ ವೃತ್ತಿ, ಸಮಾನ ವ್ಯಾನಗಳಿಂದ ಶಾಂತಿ, ಉದಾನೋಪಾಸನೆ ಯಿಂದ ಉತ್ಕಾಂತಿ, ಉದಾನ ಸಾಕ್ಷಾತ್ಕಾರದಿಂದ ಅವಿಚ್ಛತ್ತಿ ಅಮೃತೋತ್ಪತ್ತಿ.”

ಎಂಥ ಸುಂದರವಾಣಿ ಅಭಯವಾಗಿದೆ ಉದಾನವಾಯುವಿನ ಕೇವಲ ಉಪಾಸನೆ ಮಾತ್ರದಿಂದ ಉತ್ಕಾಂತಿಯಂತೆ ಅದರ ಸಾಕ್ಷಾತ್ಕಾರದಿಂದ ಅವಿಚ್ಚೆತ್ತಿ ಅಷ್ಟೆ ಅಲ್ಲ ಅಮೃತದ ಉತ್ಪತ್ತಿಯಂತೆ ಈ ಅಮೃತದ ಉತ್ಪತ್ತಿಗೆ ಕಾರಣವಾದ ಉದಾನ ವಾಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ಸುಷುಮ್ಮೆಯಿಂದ ಕಾರ್ಯ ನಡೆಯಬೇಕು. ಈ ಸುಷುಮ್ಮೆ ಕಾರ್ಯ ನಡೆಯಬೇಕಾದರೆ, ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನ” ವನ್ನು ಸತತವಾಗಿ ನಿಯಮಿತ ತನದಿಂದ ಶ್ರಮವರಿತು (ಪ್ರತಿನಿತ್ಯ) ಸಾಧಿಸುವದರಿಂದ ಸುಷುಮ್ಮೆ (ಉದಾನವಾಯು) ಕಾರ್ಯ ಪ್ರಾರಂಭವಾಗುತ್ತದೆ ಕ್ರಮೇಣ ಸಾಕ್ಷಾತ್ಕರಿಸಿಕೊಂಡಾಗ ನಿಜವಾಗಿ ಅಮೃತೋತ್ಪತ್ತಿಯಾಗುವಲ್ಲಿ ಸಂದೇಹವಿಲ್ಲ.

ಕನಸಿನಲ್ಲಿ ಕಾಯಕರಣಗಳು ನಿದ್ರಿಸುತ್ತಿದ್ದರೂ, ಮನ ಪ್ರಾಣಗಳು ಎದ್ದಿರುತ್ತವೆ.ಅಂದಿನ ಇಂದಿನ ಹಿಂದಿನ ಜನ್ಮ ಜನ್ಮಾಂತರದ ಸಂಸಾರಗಳು ವಾಸನೆಗಳು ಮನದಮೇಲೆ ಮೂಡುತ್ತವೆ. ಆದರೆ ಸುಷುಮ್ಮೆ ಕಾರ್ಯ ನಡೆದಾಗ ಮನಸ್ಸಿನ ಓಡಾಟಕ್ಕೆ ಎಡೆಯಿಲ್ಲ.ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುವಂತೆ,

“ಸುಷುಪ್ತಿಯಲ್ಲಿ ಮನಸ್ಸು ಮಲಗುತ್ತದೆ. ಪಿತ್ತದ ಪ್ರಭೆಯು ಆತ್ಮನ ಎಲ್ಲಾ ನಾಡಿ ಗಳನ್ನು ಮುಚ್ಚುತ್ತದೆ. ಆಗ ಮನದ ಕಿರಣಗಳು ಕರಣಗಳೊಡನೆ ಹೃದಯದಲ್ಲಿ ಹುದುಗುತ್ತವೆ. ಆಗ ವಿಜ್ಞಾನಾತ್ಮನು ಮಾತ್ರ ತುಂಬಾ ಎಚ್ಚೆತ್ತಿರುತ್ತಾನೆ. ತನು ಮನ ಗಳಿರುವದಿಲ್ಲ. ಕರಣಂಗಳಿರುವದಿಲ್ಲ. ವಾಸನಾದಿಗಳಿರುವದಿಲ್ಲ. ದರ್ಶನಾದಿ ಕಾರ್ಯಗಳಿರುವದಿಲ್ಲ.ಎಲ್ಲೆಲ್ಲಿಯೂ ಸುಪ್ತಸುಖ, ಪ್ರಸನ್ನ ಭಾವಗಳು ಮಾತ್ರ ಇರುತ್ತವೆ. ಹಗಲು ಮುಳಗಲು ಹಕ್ಕಿಗಳು ಹೇಗೆ ಗೂಡು ಸೇರುತ್ತವೆಯೋ ಹಾಗೆ ತನು, ಮನ, ಕರಣ, ಹರಣಾದಿಗಳೆಲ್ಲವೂ ಆ ಆತ್ಮನಲ್ಲಿ ಸೇರಿಕೊಳ್ಳುತ್ತವೆ. ಸುಪ್ತವಾಗುತ್ತವೆ.”

ಅಂದಮೇಲೆ ಯೋಗಾಸನಗಳಲ್ಲಿಯ ಒಂದು ಆಸನವನ್ನು ಸಾಧಿಸುವದರಿಂದ ತನು, ಮನ,ಕರಣಾದಿ ಕ್ರೀಯೆಗಳೆಲ್ಲವೂ ಹೇಳ ಹೆಸರಿಲ್ಲದಂತಾಗಿ, ಅಮೃತೋತ್ಪತ್ತಿ ಯಾಗುತ್ತದೆಂದಮೇಲೆ ಪರಿಪೂರ್ಣವಾದ ಯೋಗಾಭ್ಯಾಸ ಸಾಧನೆಯಿಂದ ಮನಸ್ಸಿನ ಚಂಚಲತೆಯನ್ನು ನಿಲ್ಲಿಸುವದಷ್ಟೇ ಅಲ್ಲ; ಸಾಕ್ಷಾತ್ ಪರಮಾತ್ಮನ ಸ್ವರೂಪರಾಗಲೂ ಕೂಡ ಸಾಧ್ಯವಾಗುತ್ತದೆಂದು ನಿಸ್ಸಂದೇಹವಾಗಿ ಹೇಳಬಹುದು.

ಆದ್ದರಿಂದ ಈಗ ಯೋಗಾಭ್ಯಾಸವೆಂದರೆ ನಿರುದ್ಯೋಗಿಗಳಾದವರು ಮಾಡುವಂಥ ಕೆಲಸ ಉದರ ಪೋಷಣೆಗಾಗಿ ಹಾಕುವಂಥ ವೇಷ ಎಂಬ ದುರ್ಭಾವನೆ ಸಾಮಾನ್ಯ ಜನರಲ್ಲಿಯೂ,ಬೇರೂರಿದೆ. ಕಾರಣ ಯೋಗಾಭ್ಯಾಸಿಗಳು. ಇದನರಿತು ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾದರೆ ಈ ಯೋಗಾಭ್ಯಾಸಕ್ಕಂಟಿರುವ ಕಲಂಕಹೋಗಿ, ಜನತೆಯಲ್ಲಿ ಉಂಟಾಗಿರುವ ದುರ್ಭಾವನೆ ದೂರಾಗಿ ಹೊಸಕಳೆ ಬರುತ್ತದೆ. ಅಲ್ಲಗಳೆಯುವವರ ಮೇಲೂ ಕೂಡ ಹೊಸ ಬೆಳಕನ್ನುಬೀರುವದರಲ್ಲಿ ಸಂದೇಹವಿಲ್ಲ.

ಲೇಖಕರು : ಪೂಜ್ಯಶ್ರೀಮರಿಕೊಟ್ಟೂರುದೇವರು, ಶ್ರೀಜಗದ್ಗುರುಕೊಟ್ಟೂರುಸ್ವಾಮಿಶಾಖಾಮಠ, ಶ್ರೀಧರಗಡ್ಡೆ

 “मनुष्याणां सहस्रेषु कश्चिद्यतति सिद्धये, यततानामपि सिद्धानां कश्चिन् मांम् वेत्ति तत्त्वतः”

                   (ಸಾವಿರಾರು ಜನರಲ್ಲಿ ಎಲ್ಲೋ ಒಬ್ಬರು ಆತ್ಮ ಸಿದ್ಧಿಗಾಗಿ ಶ್ರಮಿಸುತ್ತಾರೆ. ಹೀಗೆ ಆತ್ಮಸಿದ್ಧಿಗಾಗಿ ಶ್ರಮಿಸುವವ ರಲ್ಲಿ ಯಾರೋ ಒಬ್ಬರು ಮಾತ್ರ ತತ್ವತಃ ನನ್ನನ್ನು ತಿಳಿಯುತ್ತಾರೆ ಮತ್ತು ಹೊಂದುತ್ತಾರೆ). = Gita.

                12ನೇ ಶತಮಾನದ ಬದಲಾವಣೆಯು  ಮಾನವ ಇತಿಹಾಸದಲ್ಲಿಯೇ ಮಹತ್ವದ ಘಟ್ಟವಾಗಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು  ತಾತ್ವಿಕವಾಗಿ ಜನಸಾಮಾನ್ಯರಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರಿದೆ. ಶರಣರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು ಅಗೆದಷ್ಟು ಆಳ, ತರ್ಕಿಸಿದಷ್ಟು ಘಹನ ಮತ್ತು ಉಹೆಗೆ ನಿಲುಕದಷ್ಟು ವಿಶಾಲವಾಗಿವೆ. ಶರಣರೆಲ್ಲರೂ ಶರಣಾಗತಿಯ ಭಾವದಿಂದ ಭಗವಂತನನ್ನು ಆರಾಧಿಸಿ, ಅರ್ಚಿಸಿ ಮಾನವನು ಭಗವಂತನಲ್ಲಿ ಒಂದಾಗುವ ಪ್ರಕ್ರಿಯೆಯನ್ನು ಲೋಕಕ್ಕೆ ಅರುಹಿದರು.

                   ಕಾಯದ ಪರಿಶುದ್ಧತೆಗಾಗಿ ಕಾಯಕವನ್ನು ಕಲಿಸಿ, ಧನದ ಪರಿಶುದ್ಧತೆಗಾಗಿ ದಾಸೋಹವನ್ನು ನೀಡಿ, ಆತ್ಮದ ಪರಿಶುದ್ಧತೆಗಾಗಿ ಶಿವಯೋಗವನ್ನು ಕಲಿಸಿ,  ಜಾತಿ-ಮತ- ಪಂಥ ಗಳೆನ್ನದೆ ಎಲ್ಲರ ಮನೆ-ಮನಗಳಲ್ಲಿ  ಶಿವಯೋಗದ ಜ್ಯೋತಿಯನ್ನು ಬೆಳಗಿದವರು ಬಸವಾದಿ ಪ್ರಮಥರು.

                        ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣಗಳು – ಅರ್ಚನೆ, ಅರ್ಪಣೆ ಮತ್ತು ಅನುಭಾವ. ಈ ಮೂರು ಪ್ರಕ್ರಿಯೆ ಗಳು ಸಾಧಕನಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರುತ್ತವೆ. ಮೊದಲು ಭಗವಂತನನ್ನು ಪರಿಶುದ್ಧ ಭಾವದಿಂದ ಪೂಜಿಸುವುದು. ಆ ಭಗವಂತನಿಂದ ಬಂದ ಪದಾರ್ಥಗಳನ್ನು ಭಗವತ್ ಪ್ರಸಾದವೆಂದು ಸ್ವೀಕರಿಸುವುದು ಮತ್ತು ಭಗವಂತನನ್ನು ಕುರಿತು ಚಿಂತನೆಗೈಯುವದು. ಭೂಟಾಟಿಕೆಗಾಗಿ, ತೋರಿಕೆಯಾಗಿ ಮಾಡುವ ಭಕ್ತಿ ಕಲ್ಮಶಯುಕ್ತ ವಾದದ್ದು, ಇದರಿಂದ ಯಾವ ಪ್ರಯೋಜನವೂ ಇಲ್ಲ ಅಂತರಂಗದಲ್ಲಿ ಆತನನ್ನು ಅರ್ಚಿಸಬೇಕು ಎಂಬುವುದನ್ನು ಮೋಳಿಗೆ ಮಾರಯ್ಯನವರು ತಮ್ಮ ನುಡಿಗಳಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

        ನಿನಗೆ ಮಜ್ಜನವ ಮಾಡುವಲ್ಲಿ ನಾ ಮಲದೇಹಿ

        ನೀ ನಿರ್ಮಲದೇಹಿ.

        ನಿನಗೆ ಪೂಜೆಯ ಮಾಡುವಲ್ಲಿ ನಾ ಕರ್ಮಜೀವಿ

        ನೀ ಪುಣ್ಯಜೀವಿ.

        ನಿನಗೆ ಗಂಧವ ಪೂಸುವಲ್ಲಿ ನಾನು ದುರ್ಗಂಧಜೀವಿ

        ನೀನು ಸುಗಂಧಜೀವಿ.

        ನಿನಗೆ ಅಕ್ಷತೆಯ ನಿಕ್ಕುವಲ್ಲಿ ನಾ ಲಕ್ಷಿತ

        ನೀ ಅಲಕ್ಷಿತ.

        ನಿನಗೆ ಧೂಪವನಿಕ್ಕುವಲ್ಲಿ ನಾ ಭಾವಿತ

        ನೀ ನೀರ್ಭಾವಿತ

        ನಿನಗೆ ದೀಪವನ್ನೆತ್ತುವಲ್ಲಿ ನಾ ಜ್ಯೋತಿ

        ನೀ ಬೆಳಗು

        ಇಂತಿ ಭಾವಂಗಳಲ್ಲಿ ಭಾವಿಸಿ ಕಂಡಿಹೆನೆಂದಡೆ ನೀ

        ಭಾವಕೆ ಅಗೋಚರನಾಗಿಪ್ಪೆ.

 ನಿನ್ನನ್ನರಿವುದಕ್ಕೆ ತೆರನಾವುದೆಂದಡೆ ಗುರುವಿಂಗೆ ತನು,

ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು ದಗ್ದಪಟದಂತೆ ರೂಪಿಂಗೆ ಹೊದ್ದಿಗೆಯಾಗಿದ್ದ ಭಕ್ತನಲ್ಲಿ ತಪ್ಪದೇ ಇಪ್ಪೆಯಯ್ಯಾ ನಿಃಕಳಂಕ ಮಲ್ಲಿಕಾರ್ಜುನ..

          ದೇವರ ಪೂಜೆಯನ್ನು ಮಾಡಲು ಭಕ್ತನು ದೇವರಿಗೆ ಮಜ್ಜನ ಮಾಡಿಸುವುದು ಅವಶ್ಯಕವೇ? ಮಜ್ಜನ ಮಾಡಲು ಅವನೇನು ಮೈಲಿಗೆಯಾಗಿರುವನೇ? ಎಂದು ಕೇಳುತ್ತಾ ಕಲ್ಮಶ ಹೊಂದಿದ ಮನುಷ್ಯನು ಮೊದಲು ತನ್ನ ಮನಸ್ಸನ್ನು ತೊಳೆದುಕೊಳ್ಳಬೇಕು. ದೇವರ ಪೂಜೆಯಿಂದ ತನ್ನ ಕರ್ಮವನ್ನು ಮರೆತು ಬಿಟ್ಟರೆ ಪುಣ್ಯಜೀವಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ದುರ್ಗಂಧ ವಾಸನೆ ಹೋಗಿಸಲು ದೇವರ ಹೆಸರಿನಲ್ಲಿ ಧೂಪವನ್ನು ಹಾಕುವದಕ್ಕಿಂತ ತನ್ನಲ್ಲಿರುವ ದುರ್ಗಂಧ ತನುವನ್ನು ತೊಳೆದುಕೊಳ್ಳಬೇಕೆ ವಿನಃ ದೇವರಿಗಾಗಿ ಸುಗಂಧವನ್ನು ಲೇಪಿಸುವುದಲ್ಲ. ಅರ್ಚನೆ ಅಕ್ಷತೆಯನ್ನು ಹಾಕುತ್ತಾ ನೇಮವನ್ನು ಮಾಡುತ್ತಾನೆ ಹೊರತು ತಾನು ನಿಯಮಗಳನ್ನು ಪಾಲಿಸುವುದಿಲ್ಲ. ಜಗತ್ತಿಗೆ ಬೆಳಕನ್ನು ಕೊಡುವ ದೇವರಿಗೆ ದೀಪ ಹಚ್ಚುವ ಮನುಜ ಮೊದಲು ತನ್ನ ಅಂಧಕಾರವನ್ನು ಕಳೆದುಕೊಳ್ಳಬೇಕು. ಇದನ್ನು ಬಿಟ್ಟು ಕೇವಲ  ಭೂಟಾಟಿಕೆಗಾಗಿ ಡಂಬಾಚಾರಗಳಿಂದ ದೇವನನ್ನು ಅರ್ಚಿಸುವುದು ವ್ಯರ್ಥವೇ ಸರಿ. ಅವನನ್ನು ಪಡೆದುಕೊಳ್ಳಬೇಕಾದರೆ ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವನ್ನು ಅರ್ಪಿಸುವುದರ ಮೂಲಕ ತನ್ನನ್ನು ತಾನು ಸಮರ್ಪಿಸಿ ಕೊಂಡಾಗ ಮಾತ್ರ ದೇವರ ಇರುವಿಕೆ ಅರಿಯಲು ಸಾಧ್ಯವೆಂಬುದನ್ನು ತಿಳಿಸುತ್ತಾ ಅಂತರಂಗದ ಪೂಜೆಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

     “”ಸುಪ್ರಭಾತ ಸಮಯದ ಅರ್ತಿಯಲ್ಲಿ ಲಿಂಗವ ನೆನೆದರ

       ತಪ್ಪುವವಯ್ಯ ಅಪಮೃತ್ಯು ಕಾಲಕರ್ಮಂಗಳು””-

              ಎಂಬ ಬಸವ ವಾಣಿಯಂತೆ ಬಾಳಿ ಬದುಕಿರುವವರು ನಮ್ಮ ನಾಡಿನ ಸಂತರು ಶರಣರು. ಈ ನಾಡಿನಲ್ಲಿ ಆಗಿಹೋದ ಸಿದ್ದರು ಸಾಧಕರು ಬೈರಾಗಿಗಳು ಶರಣರು ತಾಂತ್ರಿಕರು ತಮ್ಮ ತಮ್ಮದೇ ಆದ ವಿಶಿಷ್ಟ ಮಾರ್ಗಗಳಿಂದ ದಿವ್ಯತೆಯನ್ನು ಹೊಂದಿದರು. ಪ್ರಾಣದ ಚಲನೆಯನ್ನು ನಿರ್ದಿಷ್ಟ ಗೊಳಿಸಿ, ಅದರ ಓಡಾಟದಿಂದ ಆತ್ಮನ ನೆಲೆ ಸೇರುವ ಸೂಕ್ಷ್ಮ ದಾರಿಯನ್ನು ಕಂಡುಕೊಂಡರು. ವೇದ ಉಪನಿಷತ್ತುಗಳ ಕಾಲದಲ್ಲಿ ನಮ್ಮ ಋಷಿಮುನಿಗಳಿಗೆ ತಿಳಿದಿದ್ದ ಈ ಉಪಾಸನಾ ಮಾರ್ಗ ಬಹುದಿನಗಳವರೆಗೆ ಮಾಯವಾಗಿ ಈಚೆಗೆ 12ನೇ ಶತಮಾನದಲ್ಲಿ ತನ್ನ ದಿಟ್ಟ ನೆಲೆಯೂರಿತು. ನಂತರದ ಕಾಲದಲ್ಲಿ 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗೇಶ್ವರ, ಪ್ರೌಢದೇವರಾಯನ ಕಾಲದಲ್ಲಿ ಮತ್ತು 19ನೇ ಶತಮಾನದಲ್ಲಿ ಅಥಣಿ ಮುರಿಗೇಂದ್ರ ಶಿವಯೋಗಿಗಳ ಹಾನಗಲ್ ಕುಮಾರ ಶಿವಯೋಗಿಗಳ ಕಾಲದಲ್ಲಿ ತನ್ನ ಅಸ್ತಿತ್ವ ಪಡೆಯಿತು. ಎಳಂದೂರು ಬಸವಲಿಂಗ ಶಿವಯೋಗಿಗಳ ತಪೋ ಶಕ್ತಿಯಲ್ಲಿ ಮಿಂದ ಶ್ರೀಕುಮಾರ ಮಹಾಶಿವಯೋಗಿಗಳು ಗುರುಗಳ ಆಣತಿಯಂತೆ ಅನುಷ್ಠಾನವನ್ನು ಕೈಗೊಂಡರು ಆತ್ಮಶಕ್ತಿಯನ್ನು ಸಾಧಿಸಿದರು

        “ಸಮಾಜ ಸೇವೆಗಿಂತ ಅಧಿಕ ತಪವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಯೋಗವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಪುಣ್ಯವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಆನಂದವಿಲ್ಲ” ಇದು ಕಾರಣ “ಜನಸೇವೆಯೇ ಜನಾರ್ದನ ಸೇವೆ” ಎಂದು ನಂಬಿ ಒಂದು ಕೈಯಲ್ಲಿ ಲಿಂಗಪೂಜೆ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಯನ್ನು ಕೈಗೊಂಡು ತಮ್ಮ ಜೀವನದುದ್ದಕ್ಕೂ ಅರ್ಚನೆ ಅರ್ಪಣೆ ಮತ್ತು ಅನುಭಾವಗಳ ಸಮ್ಮಿಶ್ರಣವಾದ ಬದುಕನ್ನು ಬಾಳುತ್ತಾ ನಿಜ ಚರಜಂಗಮರಾಗಿ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬ ತತ್ವದಡಿಯಲ್ಲಿ ನಿರಂತರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಶಿವಯೋಗದ ಶಕ್ತಿಯನ್ನು ಧಾರೆ ಎರೆದರು.   ಈ  ಶಿವಯೋಗದ ಶೆಲೆ ನಾಡಿನಲ್ಲಿ ಎಂದೂ ಬತ್ತದ ಶೆಲೆಯಾಗಿ ತನ್ನ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳು ಶಿವಯೋಗಮಂದಿರವೆಂಬ ಮಹಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ತಪಃಶಕ್ತಿಯನ್ನು ಸಮಾಜಕ್ಕೆ ನಿರಂತರವಾಗಿ ನೀಡುತ್ತಿದ್ದಾರೆ. ನಾವೆಲ್ಲರೂ ಸಹ ಈ ಪುಣ್ಯಮಯ ಪರಿಸರದಲ್ಲಿ ಒಂದಾಗಿ ಅದರ ಸವಿಯನ್ನು ಸವಿಯೋಣ.

                 ಹೀಗೆ ಎಲ್ಲದಕ್ಕೂ ಮೂಲ ಭಗವದನುಗ್ರಹ. ಇದನ್ನು ಪಡೆಯಲು ಮಾರ್ಗಗಳು ಹಲವಾರು, ಹತ್ತಾರು ಆದರೆ ಆತ್ಯಂತಿಕ ಗುರಿ ಮಾತ್ರ ಒಂದೇ.ಆ ದಿವ್ಯತೆಯನ್ನು ಕಂಡುಕೊಳ್ಳುವ ಶಕ್ತಿಯನ್ನು ಮಹಾಗುರುಗಳು ನಮಗೆಲ್ಲರಿಗೂ ದಯಪಾಲಿಸಲಿ ಎಂಬ ಪ್ರಾರ್ಥನೆಯೊಂದಿಗೆ ನನ್ನ ಅನಿಸಿಕೆಗಳು ಗುರು ಪಾದಂಗಳಿಗೆ ಸಮರ್ಪಣೆ, ತಮಗೆಲ್ಲರಿಗೂ ಶರಣು ಶರಣಾರ್ಥಿಗಳು..

 ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು  ನಿಂದಾತನೆ ಸುಖಿ, ಪಂಚೇಂದ್ರಿಯಗಳಿಚ್ಚೆಯಲ್ಲಿ ಕೀಳು ಮನಂಗೊಟ್ಟು ಸುಳಿವಾತನೆ ದುಃಖಿ, ಮನವು ಬಹಿರ್ಮುಖ ವಾಗಲು ಮಾಯಾ ಪ್ರಪಂಚಿ, ಮನವು ಅಂತರ್ಮುಖವಾದೊಡೆ ಅವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಿರಲಾತ ಮುಕ್ತನು, ಮನೋರ್ಲಯವಾದೊಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.