ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ
ಶಶಿಸೂರ್ಯಬಿಂಬದಾ | ರಸಬಲಿದ ಪರ್ವತವ
ಶಿಶುವಾಗಿ ಹತ್ತಿ – ಪಶುವಾಗಿ ಸುಳಿದೆನೈ
ಅಸಮ ಶ್ರೀ ಗುರುವೆ ಕೃಪೆಯಾಗು||೫೧||
ಈ ದಾರ್ಶನಿಕ ಕವಿಯು ಶಿವಾಂಶಿಕನಾದ ಜೀವಾತ್ಮನು ಮಾಯ ಮೋಹಗಳ ತಮಂಧದಲ್ಲಿ ಮುಳುಗಿ ನಿವೃತ್ತಿಯನ್ನು ಅರಿಯದೆ ಪಶುವಾಗುವ ಪರಿಯನ್ನು ಇಲ್ಲಿ ಪ್ರದರ್ಶಿಸುತ್ತಾನೆ.
ಪರ್ವತಗಳಲ್ಲಿ ರಸಮೂಲಿಕೆಗಳು ಚಂದ್ರನ ಬೆಳದಿಂಗಳ ತಂಪನ್ನು ಸೂರ್ಯನ ಬಿಸಿಲಿನ ಶಾಖವನ್ನು ಹೊಂದಿ ಚೆನ್ನಾಗಿ ಬೆಳೆಯುತ್ತವೆ. ಗಿಡಮೂಲಿಕೆಗಳನ್ನು ಉಪಯೋಗಿಸುವ ಜ್ಞಾನವಿಲ್ಲದೆ ಜೀವಿಯು ಪಶ್ವತವನ್ನೆಲ್ಲ ಸುತ್ತಾಡಿ ಅಜ್ಞಪಶುವಿನಂತೆ
ತನ್ನ ಜೀವನವನ್ನೂ ಕಳೆದುಕೊಳ್ಳುತ್ತಾನೆ. ಸಂಜೀವಿನಿಯಿಂದ ಅಮರಕಾಯವನ್ನು ಪಡೆಯಬಹುದು. ಆದರೆ ತಜ್ಞರ ಮಾರ್ಗದರ್ಶನವಿಲ್ಲದೆ ಆ ಕಾಯಕಲ್ಪವನ್ನು ಕಲಿಯಲು ಸಾಧ್ಯವಾಗುವದಿಲ್ಲ. ಇದು ತ್ರಿಪದಿಯ ವಾಚ್ಯಾರ್ಥ.
ಮಾನವನ ದೇಹ ಪರ್ವತದಲ್ಲಿ ಶಸಿ ಸೂರ್ಯರೆಂದರೆ ಎಡಗಣ್ಣು ಮತ್ತು ಬಲಗಣ್ಣು ಅಥವಾ ಇಡಾ-ಪಿಂಗಳ ನಾಡಿಗಳು. ಎಡಗಣ್ಣಿಗೆ ಚಂದ್ರನೇತ್ರವೆಂತಲೂ, ಬಲಗಣ್ಣಿಗೆ ಸೂರ್ಯನೇತ್ರವೆಂತಲೂ ಕರೆಯುತ್ತಾರೆ. ಈ ಶರೀರದಲ್ಲಿ ಒಟ್ಟು ೭೨ ಸಾವಿರ ನಾಡಿಗಳಿರುತ್ತವೆಂದು ಚನ್ನಬಸವಣ್ಣನವರು “ಘಟಚಕ್ರದ”ಲ್ಲಿ ಪ್ರತಿಪಾದಿಸಿದ್ದಾರೆ.
ಈ ಮಾತನ್ನು ಇಂದಿನ ಶರೀರ ವಿಜ್ಞಾನವನ್ನು ಬಲ್ಲವರೂ ಒಪ್ಪುತ್ತಾರೆ. ಎಲ್ಲ ನಾಡಿಗಳಲ್ಲಿ ೧೫೦೦ ನಾಡಿಗಳು ಶರೀರಕ್ಕೆ ಕಾರಣವಾಗಿ ಕೆಲಸ ಮಾಡುತ್ತವೆ. ಅವುಗಳೊಳಗೆ ೭೦೦ ನಾಡಿಗಳು ಮುಖ್ಯವಾಗಿದ್ದು ಇವುಗಳಲ್ಲಿ ೧೦೦ ನಾಡಿಗಳು ಪ್ರಧಾನವಾಗಿರುತ್ತವೆ. ಮತ್ತೆ ಅವುಗಳಲ್ಲಿ ೨೮ ನಾಡಿಗಳು ಮಾತ್ರ ಅತ್ಯಂತ ಪ್ರಯೋಜನಕಾರಿಗಳಾಗಿರುತ್ತವೆ. ಈ ೨೮ ನಾಡಿಗಳಲ್ಲಿ ಪ್ರಾಣವಾಹಿನಿಯಾಗಿರುವ ಹತ್ತು ನಾಡಿಗಳು ಶರೀರದ ಎಲ್ಲ ಆಗು ಹೋಗುಗಳನ್ನು ಸೂಚಿಸಿ ನಿಯಂತ್ರಿಸುತ್ತವೆ. ಅತಿ ಮುಖ್ಯವೆನಿಸಿದ ಹತ್ತುವಿಧ-ಜೀವನಾಡಿಗಳಲ್ಲಿ ಇಡಾ-ಪಿಂಗಳಾ ಮತ್ತು ಸುಷುಮ್ಮಾ ಈ ಮೂರು ನಾಡಿಗಳು ಜೀವಾತ್ಮನ ಪ್ರಾಣ ಮಾರ್ಗದಲ್ಲಿರುತ್ತವೆ.
“ಇವುಗಳು ಅತ್ಯಂತ ಸೂಕ್ಷ್ಮವಾದ ಪಾರದರ್ಶಕವಾದ ದ್ರವ್ಯಗಳಿಂದ ನಿರ್ಮಾಣ ವಾಗಿದ್ದು ಆತ್ಮಶಕ್ತಿಯ ಸೂಕ್ಷ್ಮಪ್ರವಾಹಗಳನ್ನು ಒಯ್ಯುವ ಕಾಲುವೆಗಳಾಗಿವೆ”ಯೆಂದು ನವಕಲ್ಯಾಣಮಠದ ಶ್ರೀ ಕುಮಾರಸ್ವಾಮಿಗಳು ತಮ್ಮ ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ಬರೆದಿದ್ದಾರೆ. ಇಂಥಾ ಇಡಾ ಮತ್ತು ಪಿಂಗಳಗಳು ಭಾವಪ್ರೇರಕ ದ್ರವಗುಣಗಳನ್ನು ಹೊಂದಿರುವದರಿಂದ ಅದುವೆ ಬಿಂಬವೆನಿಸುವದು, ಈ ಬಿಂಬ ದಿಂದ ಬಲಗೊಂಡ ಪರ್ವತವೆಂದರೆ ಜ್ಞಾನವುಳ್ಳ ಮಸ್ತಕವು, ಮಸ್ತಕದ ಸಹಸ್ರಾರ
ಚಕ್ರದಲ್ಲಿ ಜ್ಞಾನಿಯಾದ ಯೋಗಿಯು ಅಮೃತ ಬಿಂದುವನ್ನು ಪಡೆಯುತ್ತಿರುತ್ತಾನೆ. ಅದರಂತೆ ತಾಯಿಯ ಗರ್ಭದಲ್ಲಿದ್ದ ಶಿಶುವು (ಜೀವಾತ್ಮನು) ಇಡಾ ಪಿಂಗಳ ನಾಡಿಗಳಿಂದ ಆತ್ಮ ಶಕ್ತಿಯ ಸೂಕ್ಷ್ಮ ಬಿಂದುವನ್ನು ಪಡೆದು ಪೂರ್ವಜನ್ಮದ ಅರಿವನ್ನು ಹೊಂದುತ್ತಾನೆ. ಇದು ಶಿವನ ಲೀಲೆ. ಆದರೆ ತಾಯಿಯ ಹೊಟ್ಟೆಯಲ್ಲಿ ಜ್ಞಾನ ಪಡೆದ ಶಿಶುವು ಪ್ರಸೂತಿ ಗಾಳಿಯಿಂದ ಹೊರಬರುತ್ತಲೇ ಪಶುವಿನಂತೆ ಜ್ಞಾನಶೂನ್ಯವಾಗಿ ಬಿಡುತ್ತದೆ. ಅರ್ಥಾತ್ ಗರ್ಭಾವಸ್ಥೆಯಲ್ಲಿದ್ದ ಜೀವಾತ್ಮನು ಇಡಾ ಪಿಂಗಳ ನಾಡಿಗಳಲ್ಲಿ ಸಂಚರಿಸುತ್ತಿದ್ದು ಜ್ಞಾನದ ಕೇಂದ್ರವಾದ ಮಸ್ತಕದಲ್ಲಿ ಜ್ಞಾನವನ್ನು ಪಡೆದಿರುತ್ತಾನೆ. ಅದಕ್ಕಾಗಿ ಹಿಂದಿನ ಜನ್ಮದ ಸ್ಮರಣೆ ಬಂದು- ‘ದೇವಾ ! ಪರಮಾತ್ಮಾ! ಇನ್ನು ಮುಂದೆ ನನ್ನನ್ನು ಈ ಭವದಲ್ಲಿ ನೂಕಬೇಡ. ಇನ್ನೆಂದೂ ನಿನ್ನನ್ನು ಮರೆಯುವದಿಲ್ಲ’ ವೆಂದು ಅನನ್ಯಭಾವದಿಂದ ಜೀವಾತ್ಮನು ಪ್ರಾರ್ಥಿಸುತ್ತಾನೆ. ಆದರೆ ಪ್ರಸೂತಿ ಕಾಲಕ್ಕೆ ವಿಷ್ಣುವಾಯುವು ಗರ್ಭಾಶಯದಿಂದ ಜೀವನನ್ನು ಹೊರನೂಕುತ್ತಿರಲು ಪೂರ್ವಜನ್ಮದ ಅರಿವೆಲ್ಲ ಹಾರಿಹೋಗಿ ಮಾಯಾಮೋಹಗಳಲ್ಲಿ ಸಿಲುಕುತ್ತಾನೆ.
ಇದು ಕಾರಣ ಶಿಶುವಿನ ಜನ್ಮವಾಗುವ ಮುಂಚೆಯೇ ಗರ್ಭಾಷ್ಟಮಿಯಲ್ಲಿ ಶಿವಲಿಂಗ ಸಂಸ್ಕಾರವನ್ನಿತ್ತು ಪೂರ್ವದ (ಗರ್ಭಾವಸ್ಥೆಯಲ್ಲಿ ಉಂಟಾದ) ಜ್ಞಾನವುಳಿಯುವಂತೆ ಮಾಡುವದೇ ವೀರಶೈವ ಸಿದ್ದಾಂತದ ಪ್ರಮುಖ ವೈಶಿಷ್ಟ್ಯವಾಗಿದೆ. ಈ
ಅಭಿಪ್ರಾಯವನ್ನೇ ಶಿವಕವಿಯು ಬಿತ್ತರಿಸಿದ್ದಾನೆ. ತಾಯಿಯ ಹೊಟ್ಟೆಯಲ್ಲಿ ಜ್ಞಾನೋದಯವಾದ ಶಿಶುವಿಗೆ ಆ ಜ್ಞಾನವು ಪುನಃ ಪ್ರಾದುರ್ಭಾವವಾಗಬೇಕಾದರೆ ಶ್ರೀಗುರುವಿನಿಂದ ಗರ್ಭದ ಎಂಟನೇ ತಿಂಗಳಲ್ಲಿ ಲಿಂಗಧಾರಣ ಸಂಸ್ಕಾರವನ್ನು
ಮಾಡಿಸಬೇಕು. ಗುರುದೇವನು ಇಂಥ ಅದ್ಭುತ ಸಂಸ್ಕಾರವನ್ನು ಕರುಣಿಸುವದರಿಂದಲೇ ಅಸಮನೆನಿಸುತ್ತಾನೆ.
“ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ||”
“ಹುಟ್ಟಿನಿಂದ ಶೂದ್ರನಾಗಿ ಸಂಸ್ಕಾರಬಲದಿಂದ ದ್ವಿಜನೆನಿಸುವನು” ಎಂಬ ಬ್ರಾಹ್ಮಣ್ಯ ವಾದವನ್ನು ತೆಗೆದು ಹಾಕುತ್ತಾನೆ ಶ್ರೀಗುರುವು, ಗರ್ಭದ ಎಂಟನೇ ತಿಂಗಳಲ್ಲಿ ಜ್ಞಾನೋದಯವಾದ ಶಿಶುವಿಗೆ ಲಿಂಗಸಂಸ್ಕಾರವನ್ನು ಕೊಡಿಸುವದರಿಂದ ಜನನವಾದ ಮೇಲೆ ಬರುವ ಶೂದ್ರತ್ವವಾಗಲಿ, ಪಶುತ್ವವಾಗಲಿ, ಉಳಿಯಲಾರದು. ಮಹಾಭಾರತ ದಲ್ಲಿ ಹೇಳಿದಂತೆ
ಸುಭದ್ರಾದೇವಿಯ ಗರ್ಭದಲ್ಲಿದ್ದ ವೀರ ಅಭಿಮನ್ಯುವು ಚಕ್ರವ್ಯೂಹವನ್ನು ಬೇಧಿಸುವ ಕಥೆಯನ್ನು ಮಾವನಾದ ಶ್ರೀಕೃಷ್ಣನಿಂದ (ತಾಯಿಯ ಮುಖಾಂತರ) ಕೇಳಿದ್ದನು. ಅಂತೆಯೇ ಮಹಾಭಾರತ ಸಂಗ್ರಾಮದ ಸಂದರ್ಭದಲ್ಲಿ ಆ ಜ್ಞಾನ ಸಂಸ್ಕಾರವು ಅವನಿಗೆ ಬೋಧಕವಾಯಿತು. ಸಹಾಯಕವಾಯಿತು. ಆದರೆ ಚಕ್ರವ್ಯೂಹವನ್ನು ಪ್ರವೇಶಿಸುವ ಕಥೆಯನ್ನು ಮಾತ್ರ ಕೇಳಿದ್ದರಿಂದ ಆ ವ್ಯೂಹದಿಂದ ಮರಳಿ ಬಾರದೇ ಅಲ್ಲೇ ವೀರಸ್ವರ್ಗವನ್ನು ಪಡೆದನೆಂಬ ಕಥಾನಕವು ಜನಜನಿತವಾಗಿದೆ.
ಇದರಂತೆ ತಾಯಿಯ ಗರ್ಭಸ್ಥಶಿಶುವಿಗೆ ಎಂಟನೇ ತಿಂಗಳಲ್ಲಿ ಅವಶ್ಯವಾಗಿ ಶಿವ (ಲಿಂಗ) ಸಂಸ್ಕಾರವನ್ನು ಶ್ರೀಗುರುವಿನಿಂದ ಕೊಡಿಸಬೇಕು. ಇದರಿಂದ ಮಕ್ಕಳು ಶಿವ ಸಂಸ್ಕಾರಿಗಳೂ, ಆದರ್ಶರೂ, ಶರಣಮಾರ್ಗಾವಲಂಬಿಗಳೂ ಆಗುವಲ್ಲಿ ಸಂದೇಹವಿಲ್ಲ.
ಕರಿಯ ಬಣ್ಣದ ಪಕ್ಷಿ | ಗರಿಯ ಗಾಳಿಯ ಕೂಡಿ
ತಿರುಗಿ ನಾ ಸೋತು ಶಿರಬಾಗಿ ನಿಮ್ಮಂಘ್ರಿ
ಗೆರಗಿದೆನು ಗುರುವೆ ಕೃಪೆಯಾಗು||೫೨||
ಗರ್ಭಾಷ್ಟಮಿಯಲ್ಲಿ ಲಿಂಗಸಂಸ್ಕಾರವನ್ನು ಮಾಡಿಸದಿದ್ದರೆ, ಪಕ್ಷಿಯ ಗರಿಯಂತೆ ಜೀವಾತ್ಮನು ತಿರುಗುತ್ತಾನೆಂಬ ವಿಷಯವನ್ನು ಶಿವಕವಿಯು ವಿಶದಪಡಿಸಿದ್ದಾನೆ.
ಕಪ್ಪು ಬಣ್ಣದ ಪಕ್ಷಿಯ ಗರಿಯು ಸುಂಟರ ಗಾಳಿಯಲ್ಲಿ ಸಿಕ್ಕರೆ ಸುತ್ತಿ ಸುತ್ತಿ ಬರುತ್ತದೆ. ಕರಿಯಬಣ್ಣದ ಪಕ್ಷಿಯೆಂದರೆ ಅಜ್ಞಾನವು, ಅಜ್ಞಾನದಿಂದ ಸಂಬಂಧವಾಗುವ ಕುಕರ್ಮವೆಂಬ ರೆಕ್ಕೆಯು ಜೀವಾತ್ಮನಿಗೆ ಅಂಟುತ್ತದೆ. ಈ ದುರ್ವಾಸನೆಯ ಗಾಳಿಯಲ್ಲಿ
ಜೀವಾತ್ಮನು ಜನ್ಮ ಜನ್ಮಾಂತರಕ್ಕೆ ತಿರು ತಿರುಗಿ ಬರುತ್ತಾನೆ. ಇದರಿಂದ ಅವನು ಸೋಲನ್ನಪ್ಪಬೇಕಾಗುವದು.
ಗುರುವೆ ! ಈ ಸಾಂಸಾರಿಕ ದುರ್ವಾಸನೆಯ ಗಾಳಿಯಲ್ಲಿ ಹುಟ್ಟಿ ಬೇಸತ್ತಿರುವೆ. ನಿನ್ನ ಪದಕಮಲದಲ್ಲಿ ಶಿರಬಾಗಿಬೇಡುತ್ತೇನೆ, ಕರುಣಿಸು. ಸೋತವನಿಗೆ ಸಂತೈಸುವಲ್ಲಿ ಶ್ರೀಗುರುವೇ ಸಮರ್ಥನು. ಭೂಮಿಗೆ ಬರವಮುಂಚೆಯೇ ಶಿವಸಂಸ್ಕಾರವನ್ನಿತ್ತು
ಕರ್ಮದ ಗರಿಯನ್ನು ಕತ್ತರಿಸಿಹಾಕು, ಮಂತ್ರೋಪದೇಶಮಾಡಿ ಕಪ್ಪು ಪಕ್ಷಿಯನ್ನು ನನ್ನ ದೇಹದಿಂದ ಹಾರಿಸಿಬಿಡು. ಅರ್ಥಾತ್ ಅಜ್ಞಾನವನ್ನು ಹೋಗಲಾಡಿಸು.
ಶಿವದೀಕ್ಷಾ ಸಂಸ್ಕಾರದಿಂದ ಪಾಪ-ಕರ್ಮವೆಲ್ಲ ಕಪ್ಪು ಪಕ್ಷಿಗಳಾಗಿ ಹಾರಿ ಹೋದವೆಂದು “ಸ್ಕಂದ ಪುರಾಣ”ದ ಬ್ರಷ್ಟೋತ್ತರ ಖಂಡದಲ್ಲಿ ಉಲ್ಲೇಖನೀಯವಾಗಿದೆ.
ತನ್ಮಂತ್ರ ಧಾರಣಾದೇವ ತನ್ಮುನೇರ್ಹಸ್ತ ಸಂಗಮಾತ್ |
ನಿರ್ಯಯುಸ್ತಸ್ಯ ವಪುಷೋ ವಾಯಸಾಃ ಶತಕೋಟಯಃ || ೧.೫೮ ||
ತಾಯಿಗರ್ಭದ ಎಂಟನೇ ತಿಂಗಳಲ್ಲಿ ಶಿವಸಂಸ್ಕಾರವನ್ನು ಪಡೆದ ಶಿಶುವು ೮ನೇ ವರ್ಷದಲ್ಲಿ ಪುನಃ ಗುರು ಹಸ್ತಸ್ಪರ್ಶವನ್ನು ಹೊಂದಿ ಮಂತ್ರೋಪದೇಶವನ್ನು ಪಡೆಯಲೇಬೇಕು. ಗುರುವು ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿಟ್ಟು ಶರೀರ ಶುದ್ದಿಗೊಳಿಸುವನು. ಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಉಪದೇಶ ಮಾಡುವದರಿಂದ ಅವನ ಶರೀರದಲ್ಲಿಯ ಪಾಪಕರ್ಮವೆಂಬ ಶತಕೋಟಿ ಕಾಗೆಗಳು ಹಾರಿ ಹೋದವೆಂಬುದು ಮೇಲಿನ ಮಂತ್ರದಿಂದ ತಿಳಿದುಬರುತ್ತದೆ.
ಶಿವಸಂಸ್ಕಾರದಿಂದ ಸ್ಥೂಲ-ಸೂಕ್ಷ ಕಾರಣ ತನುಗಳು ಶುದ್ಧವಾಗುವವು, ಅದು ಕಾರಣ ಶ್ರೀಗುರುಪಾದದಲ್ಲಿ ಬಾಗಬೇಕು. ನತಮಸ್ತಕನಾಗಬೇಕು. ಶಿಷ್ಯನ ಮಸ್ತಕಕ್ಕೆ ಗುರುಪಾದದಂಗುಷ್ಟದ ಸ್ಪರ್ಶವಾಗುವದರಿಂದ ಗುರುಕರುಣೆಯಾಗುವದಲ್ಲದೆ ಜ್ಞಾನದ ಬೆಳಕು ಹರಿದುಬರುತ್ತದೆ. ಬಾಗಿದ ಬೆತ್ತ ಬಹುಕಾಲ ಬಾಳುತ್ತದೆ. ಗುರುಹಿರಿಯರಿಗೆ ಬಾಗದವನು ಹಕ್ಕಿಯ ರೆಕ್ಕೆಯಂತೆ ಗಾಳಿಗೆ ಹಾರಿ ಹೋಗುವನು. ನಾಶವನ್ನು ಹೊಂದುವನು. ಆದ್ದರಿಂದ ಶ್ರೀಗುರುಕೃಪೆ ಪಡೆದು ಕರ್ಮಚ್ಛೇದವನ್ನು ಹೊಂದುವದೇ
ಜೀವಾತ್ಮನ ಗುರಿಯಾಗಿದೆ. ಇದನ್ನು ಮನನಮಾಡಿಕೊಂಡ ಶಿವಕವಿಯ ಸಾಂಸಾರಿಕ ವಾಸನೆಯ ಗಾಳಿಯಲ್ಲಿ ಬಳಲಿ ಬೆಂಡಾಗಿ ಶಕ್ತಿ ಗುಂದಿ ಶ್ರೀಗುರುವಿನ ಅಂಘ್ರಿಗೆರಗಿ ಕೃಪೆಬೇಡಿದ್ದಾನೆ. ಆಧ್ಯಾತ್ಮಿಕ ಸಾಧಕರಿಗೆ ಮಾರ್ಗದರ್ಶನ ಮಾಡಿದ್ದಾನೆ.
ಸರಿಬಿತ್ತಿ ಬೆಸನೊಗದ | ಮರದ ಶಾಖೆಯೊಳು ವಾ
ನರರಾಜ ಕುಳಿತು-ಧರೆ ಮೂರನಾಳ್ವನೆಂ
ದರಿದೆ ಶ್ರೀಗುರುವೆ ಕೃಪೆಯಾಗು||೫೩||
ಶಿವಕವಿಯ ಬೆಡಗಿನ ಮಾತುಗಳಿಂದ ತಾತ್ವಿಕ ವಿಚಾರವನ್ನು ಬಿತ್ತರಿಸುತ್ತಾನೆ. “ಸಂಗಾತ್ ಸಂಜಾಯತೇ ಜೀವಃ’. ಎಂಬ ಉಕ್ತಿಯಂತೆ ಎರಡು ವಸ್ತುಗಳ ಸಂಗದಿಂದ ಮತ್ತೊಂದು ವಸ್ತುವಿನ ಪ್ರಾಧುರ್ಭಾವವಾಗುವದು. ಅಂತೆಯೇ ಕೃಷಿ ಮಾಡಿದ
ಭೂಮಿಯಲ್ಲಿ ಬೀಜ ಮತ್ತು ನೀರನ್ನು ಹಾಕಿದರೆ ಸಸಿಯು ಹುಟ್ಟುತ್ತದೆ. ಆ ಸಸಿಯು ಬೆಳೆದು ದೊಡ್ಡದಾಗಿ ಮರವಾದರೆ ಅದರಲ್ಲಿ ಮಂಗಗಳು ವಾಸಮಾಡಬಲ್ಲವು. ಹಿರಿಯ ಮಂಗ ತನ್ನ ಹಿಂಡಿನೊಡನೆ ಮರದ ಶಾಖೆ ಶಾಖೆಗಳಲ್ಲಿ ಹಾರಾಡಿ ತಮ್ಮ ಚೇಷ್ಟೆಯನ್ನು ಮಾಡುವದು.
ಇದರಂತೆ : ಸರಿಯಾದ ಎರಡಾದ ತಂದೆಯ ಶುಕ್ಲ ಮತ್ತು ತಾಯಿಯ ಶೋಣಿತದ ಸಮಾಗಮದಿಂದ ಬೆಸವೆನಿಸುವ (ಒಂದಾದ) ಶರೀರವು ಉತ್ಪನ್ನವಾಗುವದು. ಈ ಶರೀರವು ತಾರುಣ್ಯಕ್ಕೆ ಬರಲು, ಬೆಳೆದ ಮರನಂತಾಗುವದು. ಅಂದರೆ ದೇಹವು ವೃಕ್ಷ ; ಇದರ ಕರುಣೇಂದ್ರಿಯಗಳೇ ಶಾಖೆಗಳೆನಿಸುವವು. ಇಂದ್ರಿಯಗಳಿಗೆ ಚಾಲನೆ ಕೊಡುವ ಮನಸ್ಸೇ ಮಂಗ, ಅದನ್ನೇ ವಾನರ ರಾಜನೆಂದು ಶಿವಕವಿಯು ಬಣ್ಣಿಸಿದ್ದಾನೆ. ಈ ಮನವು ಹಿರಿಯ ಮಂಗನಂತೆ ಅತಿ ಚಂಚಲವೂ ಕುಚೇಷ್ಟೆಯುಳ್ಳುದೂ ಆಗಿದೆ. ಕಪಿಯು ಮರದ ಶಾಖೆ-ಶಾಖೆಗಳಿಗೆ ಹಾರಾಡಿ ಕಾಯಿಯನ್ನೋ ಹಣ್ಣನ್ನೋ ತಿನ್ನುವಂತೆ ಮನವೆಂಬ ಮಂಗನು ಶರೀರದ ಇಂದ್ರಿಯಗಳ ಮುಖಾಂತರ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳ ಭೋಗಕ್ಕೆ ಹಾತೊರೆದು ಪಾತಾಳ ಲೋಕ, ಭೂಲೋಕ, ಸ್ವರ್ಗಲೋಕಗಳೆಂಬ ಮೂರು ಮಂಡಲಗಳನ್ನು ಆಳಬಯಸುವದು. ಸುಖದ ಕಲ್ಪನೆ ಅನಂತ ಮುಖವಾಗಿ ಮೂರು ಲೋಕಗಳ ವ್ಯಾಪ್ತಿಯೂ ಮನವೆಂಬ ಕಪಿರಾಯನಿಗೆ ಸಾಕಾಗುವದಿಲ್ಲ. ಅನೇಕ ಸಾಧು ಸಂತರು ಮನಸ್ಸಿಗೆ ಮಂಗನ ಹೋಲುವಿಕೆ (ಉಪಮೆ)ಯನ್ನು ಕೊಟ್ಟಿದ್ದು ಅತ್ಯಂತ ಸಮೀಚೀನವಾಗಿದೆ. ಷಡಕ್ಷರ ಕವಿಗಳು –
“ಮನವೆಂಬ ಮರ್ಕಟನ ಚಪಲ ಚೇಷ್ಟೆಗಳನು
ಎಷ್ಟೊಂದು ಬಣ್ಣಿಸಲಿʼʼ
ಎಂದು ಹಾಡಿ ದಣಿದಿದ್ದಾರೆ. ಷಣ್ಮುಖ ಶಿವಯೋಗಿಗಳು-
“ ಮನವೆಂಬ ಮರ್ಕಟವು ತನುವೆಂಬ ವೃಕ್ಷವನೇರಿ,
ಇಂದ್ರಿಯಗಳಿಂಬ ಶಾಖ-ಶಾಖೆಗಳಿಗೆ ಹಾರಿ,
ವಿಷಯಗಳೆಂಬ ಫಲಗಳ ಗ್ರಹಿಸಿ
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ ಅಖಂಡೇಶ್ವರಾ’.
ಎಂದು ಮರ್ಕಟನ ಸುಂದರ ಸಾದೃಶ್ಯವನ್ನು ಕಂಡಿದ್ದಾರೆ. ಇದೇ ತೆರನಾಗಿ ಅಣ್ಣ ಬಸವಣ್ಣನವರೂ
“ಮರವನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದೆ;
ಬೆಂದ ಮನವ ನಾನೆಂತು ನಂಬುವೆನಯ್ಯ !
ಎಂತು ನಚ್ಚುವೆನಯ್ಯಾ ! ಎನ್ನ ತಂದೆ
ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯ !”
ಎಂದು ಮನಸ್ಸಿನ ಉಪಟಳವನ್ನು ಚಿತ್ರಿಸಿದ್ದಾರೆ ಮತ್ತು ಅನುಭವಿಗಳಾದ ಶಿಶುನಾಳ ಶರೀಫರ –
‘ʼಕಟ್ಟೋ ಮಂಗ್ಯಾನ್ನ ! ಬೇಡ್ತದ ಹಣ್ಣ!”
ಎಂಬ ಜಾನಪದ ಗೀತೆಯಲ್ಲಿಯೂ ಮೇಲಿನ ವಿಷಯ ಅಭಿವ್ಯಕ್ತವಾಗಿದೆ.
ʼ’ಮನ ಏವ ಮನುಷ್ಯಾಣಾಂ
ಕಾರಣಂ ಬಂಧ ಮೋಕ್ಷಯೋಃ |ʼʼ
ಮನಸ್ಸೇ ಭವಬಂಧನಗಳೆರಡಕ್ಕೂ ಅಲ್ಲದೆ ಮೋಕ್ಷಕ್ಕೂ ಕಾರಣವಾಗಿದೆಯೆಂದು ನೀತಿಕಾರರು ನಿರೂಪಿಸಿದ್ದಾರೆ.
ಮನವೆಂಬ ಮಂಗನು ಸ್ಥೂಲ-ಸೂಕ್ಷ್ಮಕಾರಣಗಳೆಂಬ ತನುತ್ರಯದಲ್ಲಿ ಜಾಗ್ರತ್ ಸ್ವಪ್ನ-ಸುಷುಪ್ತಿಯಲ್ಲಿಯೂ ಸಂಚರಿಸುತ್ತಾನೆ. ಹೀಗೆ ಒಳಹೊರಗಿನ ತ್ರಿಭುವನಗಳನ್ನು ಆಳಬಲ್ಲ ಮಾನವನ ಮನಸ್ಸನ್ನು ಸ್ಥಿರಗೊಳಿಸಬಲ್ಲಾತನು ಗುರು ದೇವನೊಬ್ಬನೆ.
ಹೇ ಗುರುವೆ ! ಎನ್ನ ಮನವೆಂಬ ಮಂಗನನ್ನು ಷಡಕ್ಷರ ಮಂತ್ರೋಪದೇಶದಿಂದ ಶಿಕ್ಷಿಸಿ ಮಂತ್ರ ಜಪವೆಂಬ ಹಗ್ಗದಿಂದ ಅದನ್ನು ಕಟ್ಟುವ ಸಾಮರ್ಥ್ಯವನ್ನು ಕೊಡು. ಇಂಥ ಸನ್ಮಾರ್ಗವನ್ನು ತೋರಿಸಿಕೊಟ್ಟ ಗುರುನಾಥ ! ಕೃಪೆಮಾಡಿ ಉದ್ದರಿಸು.
ಹಿಂದಿನ ತ್ರಿಪದಿಯಲ್ಲಿ ಗುರು ಕರ್ಮಚ್ಛೇದನಗೊಳಿಸಿ ಮಂತ್ರೋಪದೇಶ ಮಾಡಿದ ಮೇಲೆ ಮಂತ್ರದ ಅನುಸಂಧಾನ ಅಥವಾ ನಾಮಜಪದಿಂದ ಮನವೆಂಬ ಮಂಗನನ್ನು ಬಂಧಿಸಲು ಬರುತ್ತದೆಂಬುದೇ ಇದರ ತಿರುಳು.
ಹದ್ದು ಹಾವನು ಕಚ್ಚಿ | ಬದ್ದ ವಿಷ ತಲೆಗೇರಿ
ಬಿದ್ದುದೈ ನೆಲಕೆ – ಮದ್ದು ಮಂತ್ರವ ಬಲ್ಲ
ಸಿದ್ದ ಶ್ರೀಗುರುವೆ ಕೃಪೆಯಾಗು ||೫೪||
ಲೌಕಿಕ ವೈದ್ಯನು ಶಾರೀರಿಕ ರೋಗವನ್ನು ಕಳೆದರೆ ಗುರುಸ್ವಾಮಿಯು ಭವ ರೋಗವನ್ನು ನಿವಾರಿಸಬಲ್ಲ ಅಲೌಕಿಕ ವೈದ್ಯನು. ಈ ಭವರೋಗ ವೈದ್ಯನ ಘನತೆಯನ್ನು ಕವಿರತ್ನ ಚನ್ನಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ’ದಲ್ಲಿ ಸುಂದರವಾಗಿ ಬಣ್ಣಿಸಿದ್ದಾರೆ. ಶ್ರೀಗುರುನಾಥನನ್ನು ಮನದುಂಬಿ ನುತಿಸಿದ್ದಾರೆ.
“ಭವರೋಗಿಯಾದೆನೆಗೆ ಜ್ಞಾನ ಮೆಂಬೊಂದೌಷ-
ಧವನಿತ್ತು ಗುರುವೆಂಬ ವೈದ್ಯನಾ ಕಾಮಾದಿ
ವಿವಿಧ ವಿಷಯಂಗಳೆಂಬ ಪಥ್ಯಮಂ ಮಾಡಬೇಡೆಂದೊರೆದು ಕರುಣದಿಂದೆ |
ಶಿವಪೂಜೆಯೆಂಬ ಘನಪಥ್ಯಮಂ ಪಿಡಿಸಿದಂ
ಸುವಿರಕ್ತಿಯಿರದಾನಪಥ್ಯ ಸೇವನೆಯಿಂದ
ಭವರೋಗವಳಿಯದಳಲುವೆ ನನಗೆ ವೈರಾಗ್ಯಮಂ ಕೊಟ್ಟು ಸಲಹು ಶಿವನೆ ||”
ಮಾನವನು ಹುಟ್ಟುಸಾವೆಂಬ ಭವರೋಗದಲ್ಲಿ ಸಿಲುಕಿಕೊಂಡಿದ್ದಾನೆ. ಇಂಥ ರೋಗಿಗೆ ಶ್ರೀಗುರುವೇ ವೈದ್ಯನು. ಜ್ಞಾನೋಪದೇಶವೇ ಔಷಧ, ಔಷಧ ಕುಡಿದರೂ ಪಥ್ಯ ಮಾಡುವದು ರೋಗಿಯ ಕರ್ತವ್ಯ. ಆದರೆ ಕಾಮಾದಿ ವಿಷಯಗಳೆಂಬ ಅಪಥ್ಯ ಮಾಡಿದರೆ ಅವನ ಈ ಭವರೋಗವು ವಾಸಿಯಾಗಲಾರದು. ಅದಕ್ಕೋಸುಗ ಭವರೋಗ ವೈದ್ಯನು ಶಿವಪೂಜೆಯೆಂಬ ಘನವಾದ ಪಥ್ಯವನ್ನು ಮಾಡಹಚ್ಚಿ ವಿಷಯ ವೈರಾಗ್ಯವೆಂಬ ಅನುದಾನವನ್ನು ಕೊಟ್ಟರೆ ಭವರೋಗವು ನಿವಾರಣೆಯಾಗಬಲ್ಲದು. ಇದೇ ರೀತಿಯಾಗಿ ತ್ರಿಪದಿಯ ಕರ್ತನಾದ ಶಿವಕವಿಯು, ಗುರುವು ಮಹಾ ವೈದ್ಯನೆಂತಲೂ, ಮಂತ್ರವನ್ನರಿತ ಸಿದ್ಧಪುರುಷನೆಂತಲೂ ಪ್ರಸ್ತಾಪಿಸಿದ್ದಾನೆ.
ಮೊದಲು ಲೌಕಿಕ ದೃಷ್ಟಾಂತವನ್ನು ಹೇಳುತ್ತಾನೆ. ನೂರಾರು ಮೈಲುಗಳ ಮೇಲೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದು ಆಮಿಷವನ್ನು ಕಂಡು ಭೂಮಿಗೆ ಎರಗುತ್ತದೆ. ಆಗ ಅದಕ್ಕೆ ದೊರಕಿದುದು ವಿಷವುಳ್ಳ ಹಾವು. ಅದನ್ನು ಕಚ್ಚಿ ತಿಂದಾಗ ವಿಷ ತಲೆಗೇರಿ ನೆಲಕ್ಕೆ ಬಿದ್ದು ಮೂರ್ಛಹೊಂದುತ್ತದೆ. ಕೊನೆಯುಸಿರನ್ನೂ ಎಳೆಯಬಹುದು ಅದಕ್ಕೆ ಉಪಚರಿಸುವವರಾರು ?
ಇದರಂತೆ ಅಂತರಾರ್ಥವನ್ನು ಹಿಂಜಿನೋಡಲು; ಹದ್ದು = ಪ್ರಾಣವಾಯು; ಪ್ರಾಣಕ್ಕೆ ಅಂಟಿಕೊಂಡಿರುವ ವೈಷಯಿಕ ವ್ಯಸನವೇ ಹದ್ದು. ಹಾವು ಎಂದರೆ ಇಲ್ಲಿ ಹಾವಿನಂತೆ ಡೊಂಕಾದ ಮನವೆಂಬ ಕುಂಡಲಿನಿ, ವಿಷಯಗತವಾದ ಬಯಕೆಯು ಮನದಲ್ಲಿ ಮನೆಮಾಡಿಕೊಂಡಿರುವದೇ ಕಚ್ಚುವಿಕೆ. ಮನಸ್ಸು ವಿಷಯಗಳ ವ್ಯಾಮೋಹದಲ್ಲಿ ಬಹಿಮುರ್ಖವಾಗಿ ಸಂಚರಿಸುವದರಿಂದ ಶ್ರೀಕೃಷ್ಣನು ಹೇಳುವಂತೆ- (ಗೀತೆಯಲ್ಲಿ) ಸಂಗದಿಂದ ಕಾಮಹುಟ್ಟಿ; ಕಾಮ ಪೂರ್ತಿಯಾಗದಿದ್ದರೆ ಕ್ರೋಧವು; ಕ್ರೋಧದಿಂದ
ಸಂಮೋಹವು; ಇದರಿಂದ ಬುದ್ಧಿ ಭ್ರಮಣೆಯೂ ಆಗುವದು. ಅಂದರೆ ವಿಷಯದ ಸಂಗವೆಂಬ ಅಂಧಕಾರವು ಬುದ್ಧಿಯನ್ನು ಕೆಡಿಸಿ ಜೀವಾತ್ಮನನ್ನು ಅಧೋಗತಿಗೆ ನೂಕುತ್ತದೆ. ವಿಷಯ-ವ್ಯಸನವು ತಲೆಗೇರಿದಂಥವನು ಪುನಃ ಪುನಃ ಭವಕ್ಕೆ ಬರುತ್ತಾನೆ. ಜನ್ಮ ಕರ್ಮಗಳ ಬಂಧನದಲ್ಲಿ ಸಿಲುಕುತ್ತಾನೆ.
ಪಂಚೇಂದ್ರಿಯವೆಂಬ ಹೆಡೆಯನುಳ್ಳ
ಸಂಸಾರಸರ್ಪ ದಷ್ಟವಾಗಲು;
ಪಂಚ ವಿಷಯವೆಂಬ ವಿಷಹತ್ತಿ ಮೂರ್ಛಿತರಾದರೆಲ್ಲ ಲೋಕವೆಲ್ಲ
ಸರ್ವರ ಕಚ್ಚಿ ಕೂಡಿಯಾಡುವ ಸರ್ಪನ
ಬಾಯ ಕಟ್ಟಲರಿಯದೆ ಮರಣವಾದರಲ್ಲಿ ;
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನನರಿಯದವರಿಲ್ಲ.
ಎಂಬ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನವು ಈ ತ್ರಿಪದಿಯ ಅರ್ಥವನ್ನೇ ಪುಷ್ಟಿಕರಿಸಿದೆ ; ಸ್ಪಷ್ಟಗೊಳಿಸಿದೆ.
ಈ ಭವಬಂಧನವನ್ನು ಬಿಡಸಬಲ್ಲ ವೈದ್ಯನು ಗುರುದೇವನು. ಅವನಿಗೇನೇ ಮದ್ದು ಗೊತ್ತು; ಮಂತ್ರ ಗೊತ್ತು. ಗುರುವು ದೀಕ್ಷೆಯನ್ನಿತ್ತು ಮೂಮಲಗಳನ್ನು ಕಳೆದು ಮಾಂಸಮಯ ಶರೀರವನ್ನು ಮಂತ್ರಮಯವನ್ನಾಗಿಸಿ ಷಡಕ್ಷರ ಮಂತ್ರವನ್ನು ಬೋಧಿಸಿ ಮನವು ಮಹಾಲಿಂಗದಲ್ಲಿ ಕೂಡುವ ಸಾಧ್ಯತೆಯನ್ನು ಕರುಣಿಸುತ್ತಾನೆ. ಅಂತೆಯೇ ಆತನು ಸಿದ್ಧಪುರುಷನು, ವೈಷಯಿಕ ಮದ್ದು ಹಾವಿನಂತಿರುವ ಮನವನ್ನು ಕಚ್ಚಿ ನೆಲಕ್ಕೆ (ಭವಕ್ಕೆ) ಬೀಳಿಸುವದನ್ನು ತಡೆಯಬಲ್ಲವನು. ಮದ್ದು ಮಂತ್ರಗಳನ್ನಿತ್ತು ರಕ್ಷಿಸಬಲ್ಲವನೇ ಸಿದ್ಧ ಶ್ರೀಗುರು. ಆತನ ಕರುಣೆ ಅತ್ಯವಶ್ಯವಾಗಿದೆ. ಗುರುಪುತ್ರನಾಗಿ ಶಿವಪೂಜೆಯೆಂಬ ಪಥ್ಯವನ್ನು ಹಿಡಿದು ವೈರಾಗ್ಯ-ಸಾಧನೆಯಿಂದ ಮಂತ್ರ ಜಪಾನುಷ್ಠಾನದಿಂದ ಮನವನ್ನು ಮಹಾಲಿಂಗದಲ್ಲಿ ಬೆರೆಯಿಸುವ ಶಕ್ತಿಯನ್ನು ಪಡೆಯಬಹುದು
ಸುರಲೋಕದರಸು | ನರಲೋಕವಾಳಲ್ಕೆ
ಸುರಲೋಕವೆಲ್ಲ ನರಲೋಕದೊಳಗಾದ
ಪರಿಗಂಡೆ ಗುರುವೆ ಕೃಪೆಯಾಗು ||೫೫||
“ಸರ್ವಂ ಶಿವಮಯಂ ಜಗತ್ʼʼ ಸಕಲ ಜಗತ್ತು ಶಿವಮಯವಾಗಿದೆಯೆಂದು ಶಾಸ್ತ್ರಕಾರರು ಸಾರಿದ್ದಾರೆ. ಶಿವನಿಂದ ಉತ್ಪನ್ನವಾದ ಈ ಜಗವೆಲ್ಲವೂ ಶಿವನ ಒಂದು ಅಂಶವೆ. ಅಂದಮೇಲೆ ಮಾನವನು ಆತನ ಅಂಶನು ಅಥವಾ ಅಂಗನು, ಮಾನವನು ಪುಣ್ಯಮಯವಾದ ಶರೀರದಿಂದ ಮಹಾದೇವನನ್ನು ಕಾಣಬಲ್ಲನು. ಕೊನೆಗೆ ಅವನೇ ತಾನಾಗಬಲ್ಲನು. ಮಹಾಕವಿ
ಕಾಳಿದಾಸನು ತನ್ನ ಕುಮಾರ ಸಂಭವ’? ಮಹಾಕಾವ್ಯದಲ್ಲಿ –
ಶರೀರಮಾದ್ಯಂ ಖಲು ಧರ್ಮಸಾಧನಮ್ ||
ಶರೀರವೇ ಧರ್ಮಾಚರಣೆಗೆ ಪ್ರಥಮ ಸಾಧನವೆಂದು ಹೇಳಿದ್ದರೆ, ಕನ್ನಡದ ಶಿವಕವಿ-ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಪರಮೇಶ್ವರನು-
“ಯೋಗ ಯೋಗ್ಯರು ಯೋಚಿಸುತ ಭೂ-
ಭಾಗದಲ್ಲಿ ಮಾನವ ಶರೀರಿಗ-
ಳಾಗಿ ಸಾಧಿಸಿ ನಿಜವನರಿವರು ಗಿರಿಜೆ ಕೇಳೆಂದ || ೩೪ ||
ಎಂದು ಪಾರ್ವತಿಗೆ ‘ಯೋಗವನ್ನು ಬಲ್ಲಿದ ಯೋಗಿಗಳು ಸಹ ಭೂವಲಯದಲ್ಲಿ ಮಾನವಶರೀರದಿಂದಲೇ ಭಕ್ತಿಮಾರ್ಗವನ್ನು ಸಾಧಿಸಿ ನಿಜವನ್ನು ಅರಿಯುತ್ತಾರೆಂದು” ತಿಳಿಸಿದ್ದಾನೆ. ಸಕಲ ಜೀವರಾಶಿಗಳಿಗೆ ದುರ್ಲಭವಾದ ಮಾನವ ಶರೀರವನ್ನು ಪಡೆದ
ಮೇಲೆ ಸನ್ಮಾರ್ಗದಲ್ಲಿ ನಡೆದು ಯೋಗ್ಯನಾಗಬೇಕು.
“ಸತ್ಯವ ನುಡಿವುದೇ ದೇವಲೋಕ;
ಮಿಥ್ಯವ ನುಡಿವುದೇ ಮರ್ತ್ಯಲೋಕ;’
ಎಂದು ಅಣ್ಣಬಸವಣ್ಣನವರು ತಿಳಿಸಿದಂತೆ ನಡೆ ನುಡಿಗಳೊಂದಾದರೆ ಸುರಲೋಕವು ಭೂಲೋಕದೊಳಗೇ ಇರುವದು. ದೇವಲೋಕದ ಶಿವನ ಅಂಶನಾದ ಮಾನವನು ಸನ್ಮಾರ್ಗದಲ್ಲಿ ಶಾಂತರೊಸೆದಹುದೆಂದು ಬಣ್ಣಿಸುವ ಮಾರ್ಗದಲ್ಲಿ
ನಡೆದರೆ ಅವನೇ ದೇವನಾಗುವನು. ಅವನಿರುವ ಈ ನರಲೋಕವು ಸುರಲೋಕವಾಗುವದು. ಗುರುಕರುಣೆಯನ್ನು ಪಡೆದ ಈ ದೇಹವು ಸುಂದರ ನಡೆಯಿಂದ ಸುರಲೋಕ ವೆನಿಸುವದು. ಅದರ ಒಡೆಯನಾದ ಜೀವಾತ್ಮನು ಅಥವಾ ಅಂಗನು, ಅವನೇ
ಅರಸನು, ತನ್ನ ಬಹಿರ್ಮುಖಗಳಾದ ನರಲೋಕರೂಪ ಇಂದ್ರಿಯಗಳನ್ನು ಲಿಂಗಗಳನ್ನಾಗಿ ಪರಿವರ್ತಿಸಿ ಅವನ್ನು ತನ್ನ ವಶದಲ್ಲಿಟ್ಟುಕೊಂಡನಾದರೆ ಸುರಲೋಕವಾಗುವದು. ಸುಂದರವಾಗುವುದು. ಸಜೀವನಾಗಿ ಶಿವಭಾವನೆಯಿಂದ ಇಂದ್ರಿಯ ಲೋಕವನ್ನೆಲ್ಲ ಸೌಂದರ್ಯವುಳ್ಳವುಗಳನ್ನಾಗಿ ಮಾಡಿದರೆ –
“ಸತ್ಯಂ ಶಿವಂ ಸುಂದರಂ”
ಎಂಬ ತತ್ತ್ವಯುಕ್ತನಾಗುವದರಲ್ಲಿ ಸಂದೇಹವಿಲ್ಲ. ಅದುಕಾರಣ ಸದಾಚಾರ ಸನ್ಮಾರ್ಗದಿಂದ ನಡೆದು ಈ ಮಾನವಜೀವನದಲ್ಲಿ ಕಾಣದ ಸುರಲೋಕವನ್ನು ಅಳವಡಿಸಿಕೊಂಡು ದೇವನಾಗಬಹುದು. ಯಾವ ಮಹಾತ್ಮನಾದರೂ ದೇವಲೋಕವನ್ನು ತರುವದಿಲ್ಲ. ಈ ಲೋಕವನ್ನೇ ತಮ್ಮ ಆದರ್ಶದಿಂದ ಉಪದೇಶದಿಂದ ಸನ್ಮಾರ್ಗ ತೋರಿ ಸ್ವರ್ಗಸದೃಶ್ಯವನ್ನಾಗಿ ಮಾಡುತ್ತಾರೆ. ಹಿಂದೀ ಸಾಹಿತ್ಯದ ಕ್ರಾಂತಿಕಾರಿ ಕವಿಯಾದ ಮೈಥಿಲಿ ಶರಣ ಗುಪ್ತನು ತನ್ನ ‘ಸಾಕೇತ’ವೆಂಬ ಮಹಾಕಾವ್ಯದಲ್ಲಿ
ಪುರುಷೋತ್ತಮ ರಾಮಚಂದ್ರನ ಜೀವನ ಚಿತ್ರಣವನ್ನು ಮಾಡುತ್ತ ಅವನ ಮುಖದಿಂದ ನುಡಿಸಿದ ಈ ಕೆಳಗಿನ ವಚನಗಳು ಮನನೀಯವಾಗಿವೆ-
“ಮೈಂ ಆರ್ಯೊಂಕಾ ಆದರ್ಶ ಬತಾನೆ ಆಯಾ |
ಭವಮೇಂ ನವ ವೈಭವ ವ್ಯಾಪ್ತ ಕರಾನೆ ಆಯಾ |
ನರ ಕೋ ಈಶ್ವರತಾ ಪ್ರಾಪ್ತ ಕರಾನೆ ಆಯಾ |
ಸಂದೇಶ ಯಹಾಂ ಮೈಂ ನಹೀಂ ಸ್ವರ್ಗ ಕಾ ಲಾಯಾ |
ಇಸ ಭೂತಲಕೋ ಹೀ ಸ್ವರ್ಗ ಬನಾನೆ ಆಯಾ || ಪುಟ ೨೩೪-೩೩.೫
“ನಾನು ಆರ್ಯರ (ಹಿರಿಯರ) ಅಥವಾ ಪೂರ್ವಜರ ಆದರ್ಶವನ್ನು ಹೇಳಲು ಬಂದಿದ್ದೇನೆ. ಈ ಭವದಲ್ಲಿ ನೂತನವಾದ ವೈಭವವನ್ನು ತುಂಬಲು ಬಂದಿದ್ದೇನೆ. ಮಾನವನಿಗೆ ಈಶ್ವರತ್ವದ ಪ್ರಾಪ್ತಿಯನ್ನುಂಟು ಮಾಡಿಸಲು ನನ್ನ ಆಗಮನವಾಗಿದೆ.
ಆದರೆ ನಾನು ಸ್ವರ್ಗದಿಂದ ಯಾವ ಸಂದೇಶವನ್ನು ಮಾತ್ರ ತಂದಿಲ್ಲ. ಈ ಭೂಮಂಡಲವನ್ನೇ ಸ್ವರ್ಗ (ಸದೃಶ) ವನ್ನಾಗಿ ಪರಿವರ್ತಿಸಲು ಬಂದಿದ್ದೇನೆ.”
ಪುಣ್ಯಪುರುಷರ ಜೀವನದ ಆದರ್ಶವನ್ನು ಅನುಸರಿಸಿ ನಡೆದರೆ ಅವನ ಜೀವನ ಸುರಲೋಕದಂತಾಗುವದು. ಗುರುವೆ ! ನಿಮ್ಮ ನಡೆ-ನುಡಿಯ ಆದರ್ಶದಿಂದ ನಿತ್ಯವಾದ ಸ್ವರ್ಗಸುಖವನ್ನು ಕಾಣುವ ಪರಿಯನ್ನು ತೋರಿ ರಕ್ಷಿಸು.