ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ಶ್ರೀಗುರುವಿನ ನಗುವಿಗೆ ಕಾರಣವನ್ನು ಮಾನವನು ಮೂಢನಾಗುವ ಪರಿಯನ್ನು ಶಿವಕವಿಯು ಇನ್ನು ಮುಂದೆ ನಿರೂಪಿಸುತ್ತಾನೆ. ಕಾಲ-ಕರ್ಮ ಮಾಯೆಗಳ ಬಲೆಯಲ್ಲಿ ಜೀವಾತ್ಮನು ಹೇಗೆ ತತ್ತರಿಸುತ್ತಾನೆಂಬ ವಿಚಾರವನ್ನು ಕ್ರಮೇಣ ನೋಡಿ.
ನಡುಮಧ್ಯ ಮಾವುತನು | ಎಡಬಲದೆ ಆನೆಗಳು
ಒಡಗೂಡೆ ನೋಡಿ-ಎಡರು ಕಂಟಕ ಲಿಪಿಯ
ತೊಡೆಯಯ್ಯ ಗುರುವೆ ಕೃಪೆಯಾಗು
|| ೪೧ ||
ಸಂಸಾರಹೇಯ ಸ್ಥಲವನ್ನು ನಿರೂಪಿಸುವಾಗ ಹಿಂದಿನ ಅನುಭಾವಿಗಳು ಬೆಡಗಿನ ಮಾತುಗಳಲ್ಲಿ ಬೋಧಿಸುತ್ತ ಬಂದಿರುವರು. ಶರಣರ ವಚನಗಳಲ್ಲಿ ಬೆಡಗಿನ ವಚನಗಳು ಧಾರಾಳವಾಗಿ ಸಿಕ್ಕುತ್ತವೆ. ದಾಸರೂ ಈ ಮಾತನ್ನು ಅನುಸರಿಸದೇ ಬಿಟ್ಟಿಲ್ಲ. ಕನಕದಾಸರ ಮುಂಡಿಗೆಯೆಂದು ಪ್ರಸಿದ್ಧವಾಗಿದೆ. ನಮ್ಮ ಶಿವಕವಿಗಳೂ ಕಾಲ-ಕಾಮ-ಮಾಯೆ ಜಗದುತ್ಪತ್ತಿಯ ಪರಿಯನ್ನು ವಿವರಿಸುವಲ್ಲಿ ಬೆಡಗಿನ ಮಾತನ್ನೇ ಅನುಸರಿಸಿದ್ದಾರೆ. ಬೆಡಗಿನ ವಚನಗಳು ಸಾಧಕನಿಗೆ ಹೆಚ್ಚಿನ ಶ್ರಮವನ್ನು ಹಚ್ಚುತ್ತವೆ. ಅಲ್ಲದೇ ಹೆಚ್ಚು ಶ್ರಮವಹಿಸಿ ಮಾಡಿದ ಅಧ್ಯಯನ ಮನದಟ್ಟಾಗುತ್ತದೆ. ಮತ್ತು ವಿಷಯ ಗ್ರಹಿಕೆಯಾದ ಮೇಲೆ ಮರಹು ಆವರಿಸುವದಿಲ್ಲ. ಮಾಯಾ ಮೋಹಗಳು ಮಾನವನನ್ನು ಅತಿಯಾಗಿ ಆವರಿಸುವದರಿಂದ ಬೆಡಗಿನ ವಚನಗಳ ಪಾತ್ರ ಹಿರಿದಾಗಿ ಕೆಲಸ ಮಾಡುತ್ತದೆ. ಮತ್ತು ಗೌಪ್ಯವಾದ ಆಧ್ಯಾತ್ಮ ಶಾಸ್ತ್ರದ ಘನತೆಯನ್ನು ವ್ಯಕ್ತ ಮಾಡುವಲ್ಲಿಯೂ ಬೆಡಗಿನ ವಚನಗಳು ಬೆರಗುಗೊಳಿಸಿವೆ.
ಮಾನವ ಜೀವನದಲ್ಲಿ ಸಾಂಸಾರಿಕ ವಿಷಯಗಳು ಅನಿತ್ಯವಾಗಬಹುದು. ಆದರೆ ನಿತ್ಯ-ಸತ್ಯವಾಗಿ ಬರುವದು ಮರಣ ಮಾತ್ರ. ಮರಣದ ಭಯ ಬಹಳ. ಅದಕ್ಕಾಗಿ ಶರಣ ಕವಿಗಳು ಮರಣದ ಅಧಿದೇವತೆಯಾದ ಯಮನ ವಿಷಯವನ್ನು ಪ್ರಥಮತಃ ಪ್ರತಿಪಾದಿಸಿದ್ದಾರೆ.
ಆನೆ ನಡೆಸುವ ಮಾವುತನು ಒಂದಾನೆಯನ್ನು ತನ್ನ ವಶವರ್ತಿಯನ್ನಾಗಿ ಇರಿಸ ಬಹುದು. ತಾನೊಬ್ಬನಾಗಿ ಬಹಳ ಆನೆಗಳು ಸುತ್ತುವರಿದಾಗ ಮಾವುತನ ಗತಿ ದೇವರೇ ಬಲ್ಲ. ಸಿಟ್ಟಿಗೆದ್ದ ಮದಗಜವು ಸಿಕ್ಕವನನ್ನು ತುಳಿದು ಸೀಳಿ ಹಾಕುತ್ತದೆ. ಘೀಳಿಡುವ ಆನೆಗಳ ಮಧ್ಯದಲ್ಲಿ ಸಿಕ್ಕ ಮಾವುತನಾದರೂ ಮರಣವನ್ನಪ್ಪಬೇಕಾದೀತು. ಅವನು ತನ್ನ ಎಡಬಲದ ಆನೆಗಳು ಒಡಗೂಡು (ಒಂದುಗೂಡು) ವದನ್ನು ದೂರೀಕರಿಸುತ್ತ ತನ್ನ ಆನೆಯಿಂದಲೇ ಪಾರಾಗಬೇಕು. ಮದವೇರಿದ ಆನೆಗಳನ್ನು ಪಳಗಿಸಬಲ್ಲ ಮಾವುತನೇ ಜಾಣ್ಮೆಯಿಂದ ಎಡರು-ಕಂಟಕಗಳನ್ನು ಪರಿಹರಿಸಿಕೊಳ್ಳಬಲ್ಲನು.
ಒಳಬಾಳಿನಲ್ಲಿ ಹಮ್ಮಿನ ಜೀವಾತ್ಮನೆಂಬ ಮಾವುತನು ಅಷ್ಟಮದಗಜಗಳಿಂದ ಪಾರಾಗುವದು ಸುಲಭ ಸಾಧ್ಯವಲ್ಲ. ಇದು ಗುರುಕೃಪೆಯಿಂದ ಮಾತ್ರ ಪರಿಹಾರ ವಾಗಬಹುದು. ಕುಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ಭಾರ್ಯಾಮದ, ಅಧಿಕಾರಮದ, ಹಾಗೂ ರಾಜ್ಯಮದಗಳೆಂಬ ಎಂಟು ಅಹಂಕಾರಗಳೇ ಅಷ್ಟಗಜಗಳೆನಿಸುವವು. ಆನೆಗೆ ಮದಬಂದರೆ ಹಿಡಿಯಲುಬಾರದು. ಅಹಂಕಾರ ರೂಪ ಆನೆಯು ಮದೋನ್ಮತ್ತವಾದರೆ ಹೇಳುವದೇನು ? ಎಡರು ಕಂಟಕಗಳು ಕೈಯಲ್ಲೇ ಇರುವವು. ಕಾಲ(ಯಮ)ನೆಂಬ ಕಂಟಕ ತೀವ್ರವಾಗಿ ಆವರಿಸುವನು. ಅಹಂಕಾರಿಯು ಯಮಪಾಶದಲ್ಲಿ ಸಿಕ್ಕು ರೌರವ ನರಕದಲ್ಲಿ ಕೊಳೆಯಬೇಕಾಗುವದು. ಈ ಕಾಲ ಕಂಟಕನ ಎಡರು-ಕಂಟಕ ಲಿಪಿಯನ್ನು ಕಳೆಯಬಲ್ಲವನು ಗುರುನಾಥ ನೊಬ್ಬನೇ. ಅವನೇ ಸಮರ್ಥ. ಅಂಥ ಸದ್ಗುರುವಿನಲ್ಲಿ ಶರಣಾಗತನಾಗಬೇಕು.
ನಾರಾಯಣನೆಂಬ ಹಿಂದೀ ಕವಿಯು ಜೀವನದಲ್ಲಿ ಮರೆಯದ ಎರಡು ಮಾತುಗಳನ್ನು ಹೇಳಿದ್ದಾನೆ. ಕೇಳಿ-
“ದೋ ಬಾತನ ಕೊ ಭೂಲ ಮತ, ಜೋ ಚಾಹೈ ಕಲ್ಯಾಣ |
ನಾರಾಯಣ ಇಕ ಮೌತ ದೂಜೇ ಶ್ರೀಭಗವಾನ ||”
ಕಲ್ಯಾಣವನ್ನು ಬಯಸುವ ಮಾನವನು ಈ ಎರಡು ಮಾತುಗಳನ್ನೆಂದೂ ಮರೆಯಕೂಡದು. ಒಂದನೆಯದು ಮರಣ, ಎರಡನೆಯದು ಮಹಾದೇವ. ಹುಟ್ಟಿದವನು ಮರಣವನ್ನಪ್ಪಲೇ ಬೇಕಾಗುವದು. ಜೈಮಿನಿಯು ತನ್ನ ಭಾರತ ಕಾವ್ಯದಲ್ಲಿ- ”ಮನುಜರ್ಗೆ ಮರಣಂ ಎಂದಿರ್ದೊಡಂ ತಪ್ಪದು” ಎಂದಿದ್ದಾನೆ. ಇದು ಕಾಲ ಚಕ್ರದ ನಿಯಮ. ಇದನ್ನು ಅರಿಯಲೇ ಬೇಕಾಗುವದು. ಮಾನವನು ನಾನು ನಿಶ್ಚಿತವಾಗಿ ಸಾಯುತ್ತೇನೆಂಬುದನ್ನು ಮರೆತು, ಇಳೆ-ಬೆಳೆ-ಮಳೆಗಳನ್ನಿತ್ತ ಮಹಾದೇವ ನನ್ನು ಮರೆತು ಎಲ್ಲವೂ ನಾನೇ, ನನ್ನಿಂದಲೇ ಎಲ್ಲ ನಡೆಯಬಲ್ಲುದು. ನಾನೇ ಎಲ್ಲವನ್ನು ಮಾಡುತ್ತೇನೆಂಬ ಅಹಂಕಾರದಿಂದ ಮುಂದುವರೆಯುತ್ತಾನೆ. ಸೊಕ್ಕಿದ ಆನೆಯು ವನಮಧ್ಯದ ಮರವನ್ನು ಕಿತ್ತಿಹಾಕುವಂತೆ, ಈ ಅತಿಯಾದ ಅಹಂಕಾರವು ಮಾನವನನ್ನು ಮುಗಿಸಿಬಿಡುತ್ತದೆ. ಬರುವಾಗ ಏನೂ ತರಲಿಲ್ಲ. ಹೋಗುವಾಗ ಏನೂ ಒಯ್ಯದೇ ಮರಳಬೇಕಾಗುವದು. ಕಾರಣ, ಮರಣ ಸನ್ನಿಹಿತವಾಗಿದೆಯೆಂದು ಸತ್ಕರ್ಮಗಳನ್ನು ತಪ್ಪದೇ ಮಾಡಬೇಕು. ಸದ್ಗುರುನಾಥನನ್ನು ಮೊರೆಹೊಕ್ಕು ಮಹಾ ದೇವನನ್ನು ಅರಿಯಬೇಕು.
ಗುರುವೆ ! ನಿನ್ನ ಕರುಣಾಮೃತ ಸಿಂಚನದಿಂದ ಜೀವಾತ್ಮನಾದ ನನ್ನ ಅಹಂಕಾರ ವನ್ನು ಕಳೆದು ಅದರಿಂದ ಬರುತ್ತಿದ್ದ ಎರಡು-ಕಂಟಕಗಳನ್ನು ತೊಡೆದು ಹಾಕು. ಬಾಗಿದ ಬೆತ್ತ ಪೂಜ್ಯರಿಗೆ ದಂಡಿಗೆಯಾಗುವಂತೆ ಮದವನ್ನು ಕಳೆದು ನಿನ್ನ ಪಾದತೊಡುಗೆಯನ್ನಾಗಿಸು. ಈ ಅಹಂಕಾರ ನಿರ್ಮೂಲವಾದಲ್ಲದೆ ಶರಣ ಮಾರ್ಗವು ಸಿಕ್ಕಲಾರದು. ಕರುಣಿಸು ನಿಮ್ಮ ಧರ್ಮ.
ದಾಕ್ಷಿಣ್ಯ ಪುರವರ್ಗ | ಮೋಕ್ಷಹೀನಾಚಾರ್ಯ
ಶಿಕ್ಷೆಗೊಳಗಾಗಿ ಈ ಕ್ಷಿತಿಗೆ ಬಂದನೈ
ಈ ಕ್ಷಣದಿ ಗುರುವೆ ಕೃಪೆಯಾಗು
|| ೪೨ ||
ತಾರಕಾಕ್ಷ, ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರು; ಲೋಹ, ಬೆಳ್ಳಿ, ಬಂಗಾರದ ಮೂರು ಪಟ್ಟಣಗಳನ್ನು ಕಟ್ಟಿಕೊಂಡಿದ್ದರೂ ಕೊನೆಗೊಮ್ಮೆ ಗುರಿಯನ್ನು ಕಾಣದೆ ನಾಶವಾದರು. ಜೀವಾತ್ಮನು ನಶ್ವರವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳನ್ನು ಹೊಂದಿದ್ದಾನೆ. ಈ ಶರೀರಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ವರ್ಗ ಅರ್ಥಾತ್ ಅನಿಮಿತ್ತ ವೈರಿಗಳೊಡನೆ ಒಡಂಬಡಿಸುವ ದಾಕ್ಷಿಣ್ಯಕ್ಕೆ ಒಳಗಾಗಿ ಅಹಂಕಾರ, ಮಮಕಾರಗಳಿಂದ ಬಂಧಿತವಾಗುತ್ತವೆ. ಆಗ ಬಂಧನದ ಆಚಾರ್ಯನಾದ ಯಮನ ಶಿಕ್ಷೆಗೆ ಒಳಪಟ್ಟು ಮೋಕ್ಷದಿಂದ ವಂಚಿತರಾಗಬೇಕಾಗುವದು. ಕಾಲನ ಕಠಿಣ ಶಿಕ್ಷೆಯನ್ನು ತಾಳಲಾರದೆ ಈ ಇಳೆಗೆ ಇಳಿದು ಬರಬೇಕಾಗುವದು. ಯಮಯಾತನೆಗೆ ಕೊನೆಯಿಲ್ಲ. ಇದರ ಕೊನೆ ಶ್ರೀಗುರು ಸನ್ನಿಧಿಯಿಂದ ಮಾತ್ರ ಸಾಧ್ಯವಾಗಬಹುದು.
ಓ ಗುರುವೆ ! ಕಾಲನ ಕಠಿಣ ಶಿಕ್ಷೆಯಿಂದ ಬಳಲಿರುವೆ. ತಡಮಾಡದೆ ಈ ಕ್ಷಣದಲ್ಲೇ ನನ್ನನ್ನು ರಕ್ಷಿಸು. ಜನಿ ಮೃತಿಗಳಿಗೆ ಒಳಗಾಗದಂತೆ ಮಾಡು. ನೀನು ಪುರಹರನೂ, ಕಾಲಹರನೂ, ಮಾಯಾವಿದೂರನೂ ಆಗಿರುವೆ. ಕಾಲನ ಕಂಟಕವನ್ನು ಕಳೆಯಲು ನಿನ್ನಿಂದ ಮಾತ್ರ ಸಾಧ್ಯ. ನಿನ್ನ ಕೃಪಾಕಟಾಕ್ಷೇಕ್ಷಣವನ್ನು ಈ ಕ್ಷಣದಲ್ಲೇ ಬೀರು. ಈ ಕ್ಷಣದಿಂದ ನನ್ನ ಮೂರು ಶರೀರಗಳ ಜಾಡ್ಯತ್ವವು ಬಯಲಾಗಿ ಮಂತ್ರಮಯವಾಗುತ್ತದೆ. ತಂದೆಯೆ ! ತಳುವದೆ ಪರಶಿವಲಿಂಗವನ್ನು ಒಲಿಸಲು ಯೋಗ್ಯವಾದ ಪ್ರಸಾದ ಕಾಯವನ್ನಾಗಿ ಮಾಡು. ಅದರಿಂದ ಅಷ್ಟ ಮದಗಳ ಹಾಗೂ ಅರಿಷಡ್ ವೈರಿಗಳ ಉಪಟಳ ಇಲ್ಲವಾಗುತ್ತದೆ.
ಇಲ್ಲಿ ‘ಈಕ್ಷಣದಿ’ ಪದನಾಮವಾಗಿಯೂ, ಪ್ರಯೋಗಿಸಲ್ಪಟ್ಟು ಶ್ಲೇಷಾರ್ಥದ ವೈಶಿಷ್ಟ್ಯ ವ್ಯಕ್ತವಾಗಿದೆ. ಈಕ್ಷಣ (ದೃಷ್ಟಿ ಪಾತ)ವು ಈ ಕ್ಷಣದಿ (ತೀವ್ರವಾಗಿ) ಆದರೆ, ನನ್ನ ದೋಷಗಳು ದೂರವಾಗುತ್ತವೆಯೆಂದು ಅರ್ಥೈಸಿದ್ದಾನೆ.
ಧರ್ಮನಾಮವ ತಾಳಿ | ಎಮ್ಮೆ ಮಗನೊಯ್ಯಾಳಿ
ಕರ್ಮದ ಕೇಳಿಯಿಂ- ಮೆರೆವವನ ಉಪಟಳಕೆ
ಅಮ್ಮೆನೈ ಗುರುವೆ ಕೃಪೆಯಾಗು
|| 43 ||
ಶರಣಕವಿಯು ಕಾಲನ ಪೌರಾಣಿಕ ಸ್ವರೂಪ ಚಿತ್ರವನ್ನು ಶಬ್ದಗಳಿಂದ ಚಿತ್ರಿಸಿದ್ದಾನೆ. ಆತನಿಗೆ ಯಮಧರ್ಮ’ನೆಂಬ ನಾಮ. ಅವನ ಸಂಚಾರ ಎಮ್ಮೆಯ ಮಗನಾದ ಕೋಣನಮೇಲೆ, ಅವನ ಕಾರ್ಯ ಜೀವಿಗಳನ್ನು ಸಂಹಾರಮಾಡುವದು. ಈ ಸಂಹಾರ ಕರ್ಮದ ವಿಲಾಸದಿಂದ ಮೆರೆಯುತ್ತಿರುವ ಕಾಲನ ಉಪಟಳವು ಮಿತಿಮೀರಿದೆ. ಆದ್ದರಿಂದ ನಾನೂ ಅವನ ಬಾಧೆಯಿಂದ ಹೊರಗಾಗಿಲ್ಲ. ಈ ಬಾಧೆಯು ಸಹಿಸಲತಿಯಾಗಿದೆ. ಮೃತ್ಯುಂಜಯನಾದ ಸದ್ಗುರುವಿನ ಒಲುಮೆಯಿಂದ ಮೃತ್ಯುವಿನ ಬಾಧೆ ನೀಗಬಲ್ಲದು. ಮಾನವನಿಗೆ ಅತಿಭಯಾನಕವಾದುದದೆಂದರೆ ಸಾವೆ. ಈ ಸಾವಿಗೆ ಸಾವುಕೊಡುವವನು ಶಿವನು. ಶಿವರೂಪಿ ಗುರುವೆ | ಕೈಹಿಡಿದು ಕಾಪಾಡು.
ಯಮನು ಭಯಾನಕವಾಗಿದ್ದರೂ ಯಮಧರ್ಮನೆಂಬ ಹೆಸರನ್ನು ಪಡೆದಿದ್ದಾನೆ. ಅವನ ಕಾರ್ಯದಲ್ಲಿ ಧರ್ಮ ಹುದುಗಿಕೊಂಡಿದೆ. ಅವನು ಧರ್ಮವಂತರನ್ನು ದೇವರತ್ತ ಕಳಿಸುತ್ತಾನೆ. ಧರ್ಮವಂತನು ಜ್ಞಾನಿಯೂ ಆಗಿರಬೇಕು. ಅಜ್ಞಾನಿಗಳು ಧರ್ಮದ ಗುರಿಯನ್ನು ಗುರುತಿಸದೇ ಯಮನ ಭಾಧೆಗೆ ಒಳಗಾಗುವರು. ಅದಕ್ಕಾಗಿ ಕೋಣನ ವೈಹಾಳಿ ಪದವನ್ನು ಪ್ರಯೋಗಿಸಿ ಸಾಂಕೇತಿಕ ಅರ್ಥವನ್ನು ವ್ಯಕ್ತ ಮಾಡಿದ್ದಾನೆ. ಕೋಣ = ದಡ್ಡತನದ ಪ್ರತೀಕ. ಒಣಹೆಮ್ಮೆ ಹೋರಾಟಗಳ ಸಂಕೇತ. ಜ್ಞಾನವಿಲ್ಲದೆ ಹೆಮ್ಮೆಯಿಂದ ಮಾನವನು ಮೈಮರೆತು ಮರಣವನ್ನಪ್ಪುತ್ತಾನೆ. ಇಂಥ ಕೋಣನ ಸವಾರಿ ಮಾಡುವವರ ಮೇಲೆ ಕಾಲನು ಬಲು ಪ್ರೀತಿ, ಶಿವಕವಿ ಕ.ಬ. ಅಂಗಡಿಯವರು ಶ್ರೀಜಗದ್ಗುರು ಅನ್ನದಾನೀಶ್ವರ ಲೀಲಾಮೃತದಲ್ಲಿ –
“ಬುದ್ಧಿಹೀನರೆ ಕೋಣಮರಿಗಳು
ಶ್ರದ್ದೆಯಿಲ್ಲದವರು ಕುರಿಗಳೈ (೧೧-೧೪)
ಬುದ್ಧಿಹೀನರಿಗೆ ಕೋಣನೆಂದು ಅರ್ಥೈಸಿದ್ದು ಸಮಂಜಸವಾಗಿದೆ. ಡಾಂಭಿಕನು ಸುಜ್ಞಾನವಿಲ್ಲದೆ ಒಣಹೆಮ್ಮೆ ಹೋರಾಟಗಳ ಗೊಂದಲದಲ್ಲಿ ಯಮನ ಸನ್ನಿಧಿ ಸೇರುತ್ತಾನೆ. ಶ್ರದ್ದೆಯಿಲ್ಲದವರು ಕುರಿಗಳಂತೆ ಕಾಲನೆಂಬ ಕಟುಕರ ಕೈಯಲ್ಲಿ ಸಿಕ್ಕು ಮಣ್ಣು ಮುಕ್ಕುತ್ತಾರೆ.
ಶಿವಶರಣರು ಸಾವಿಗಂಜದೆ ಧೀರರಾದರು. ಮತ್ತು
“ನಾಳೆಬಪ್ಪುದು ನಮಗಿಂದೇ ಬರಲಿ,
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು ?
‘ಜಾತಸ್ಯ ಮರಣಂ ಧೃವಂ’ ಎಂದುದಾಗಿ
ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲಾ! ಬರುವ ಮರಣ ನಿಶ್ಚಿತ, ಅಂಜಿದರಾಗದು, ಅಳುಕಿದರಾಗದು. ಮರಣವನ್ನು ತಪ್ಪಿಸಲು ಹರಿಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲವೆಂದರಿದು –
”ಮರಣವೇ ಮಹಾನವಮಿ’ ಎಂದು
ಧೀರೋದಾತ್ತತೆಯಿಂದ ಆತ್ಮಸಾಕ್ಷಾತ್ಕಾರವನ್ನು ಹೊಂದಿದರು. ಲಿಂಗಾಂಗಸಾಮರಸ್ಯವು ಬಲಹೀನನಿಂದ ಸಾಧಿಸಲು ಸಾಧ್ಯವಿಲ್ಲ. ಆತ್ಮಬಲಬೇಕು. ಯಮ ಬಾಧೆಯನ್ನು ಗೆಲ್ಲಬೇಕು, ಸುಜ್ಞಾನವನ್ನು ಸಂಪಾದಿಸಬೇಕು. ಗುರುಕೃಪೆಯನ್ನು ಪಡೆಯಬೇಕು. ಅಂತಾದರೆ ಮಾನವ ಜನ್ಮ ಸಾರ್ಥಕವಾಗುವದು.
ಓ ಗುರುವೆ ! ಮೃತ್ಯುಂಜಯನೆ ! ಕಾಲದ ಉಪಟಳವನ್ನು ನೀಗಿಸಬಲ್ಲ ಧರ್ಮ ಧೀಮಂತನನ್ನಾಗಿಸು, ಧರ್ಮಭೀರುತನವನ್ನು ಹೋಗಲಾಡಿಸು. ಸುಜ್ಞಾನಿಯನ್ನಾಗಿ ರಕ್ಷಿಸು.
ಕರಿಯ ಕಬ್ಬಿನ ಬಿಲ್ಲು | ಅರಳು ಮಲ್ಲಿಗೆ ಬಾಣ
ನುರುವಣಿಗೆ ಲೋಕ-ಉರುಳಲ್ಕೆ ನಾ ನಿಮ್ಮ
ಮೊರೆ ಹೊಕ್ಕೆ ಗುರುವೆ ಕೃಪೆಯಾಗು
11 ೪೪ ||
ಮಾನವನಿಗೆ ಮರಣದ ಭಯವಿದ್ದರೂ ಕಾಮದ ಕೇಳಿಯಲ್ಲಿ ಮೈಮರೆಯುತ್ತಾನೆ. ಇದು ಪ್ರಕೃತಿಯ ನಿಯಮ. ಪ್ರಕೃತಿ ವಿಕೃತಿಯಾದರೆ ಕಾಮನ ಕೈಯಲ್ಲಿ ಉರುಳುವದು ಸಹಜ. ಸಂಸ್ಕೃತಿಯಿಲ್ಲದೆ ವಿಕೃತಿಗೊಂಡವರ ಮೇಲೆ ಕಾಮನ ಉಪಟಳ ಹೇಳತೀರದು. ಶಿವಕವಿಯು ಇದನ್ನೇ ನಿರೂಪಿಸುವವನಾಗಿ ಮೊದಲು ಕಾಲನ ಶಬ್ದ ಚಿತ್ರವನ್ನು ಚಿತ್ರಿಸಿದಂತೆ ಇಲ್ಲಿ ಕಾಮನ ಕಮನೀಯ ರೂಪವನ್ನು ಕಾಣಿಸುತ್ತಾನೆ.
ಕಾಮನು ಅನಂಗ, ಅವನಿಗೆ ಅವಯವಗಳಿಲ್ಲ. ಶಿವನು ಕಾಮನನ್ನು ದಹಿಸಿ ಬಿಟ್ಟಿದ್ದಾನೆ. ಆದರೆ ಮನಸಿಜನಾಗಿ ಮೈದೋರಲು ಹರಸಿದ್ದಾನೆ. ಅದು ಕಾರಣ ಪ್ರಕೃತಿಯ ಸೌಂದರ್ಯದಲ್ಲಿ ಕಾಮನು ಅವತರಿಸಿ ಬರುತ್ತಾನೆ. ಪ್ರೇಮಿಗಳ ಮನಸ್ಸಿನಲ್ಲಿ ಉದ್ಭವಿಸುತ್ತಾನೆ. ಕಾಮನು ಕಬ್ಬಿನ ಬಿಲ್ಲನ್ನು ಹೆದೆಏರಿಸುತ್ತಾನಂತೆ. ಅರಳಿದ ಮಲ್ಲಿಗೆಯ ಬಾಣಗಳನ್ನು ಬಿಡುತ್ತಾನಂತೆ. ಕೈ ಮೈ ಇಲ್ಲದವನಿಂದ ಬಿಟ್ಟ ಬಾಣದ ಉರುವಣಿಗೆಗೆ ಉರುಳದ ಮರುಳರಿಲ್ಲ. ಲೋಕವೆಲ್ಲ ತತ್ತರಿಸುತ್ತದೆ.
ಗಂಡು ಹೆಣ್ಣುಗಳ ನೋಟದಲ್ಲಿ ಕಾಮ ಕಾಣಿಸಿಕೊಳ್ಳುವನು. ತನ್ನ ಚೇಷ್ಟೆಯನ್ನು ಪ್ರಾರಂಭಿಸುವನು. ಸ್ತ್ರೀಯಳ ಹುಬ್ಬೆಂಬ ಕರಿಯ ಬಿಲ್ಲಿನಿಂದ ಅಪಾಂಗ ನೋಟವೆಂಬ ಅರಳು ಮಲ್ಲಿಗೆಯ ಬಾಣವು ಪುರುಷನ ಮನಸ್ಸನ್ನು ತಲ್ಲಣಿಸುತ್ತದೆ. ಕಣ್ಣಿಗೆ ಕಾಣದ ಕಾಮನ ಬಾಣಗಳು ಅರವಿಂದ, ಆಶೋಕ, ಮಾವು, ಅರಳುಮಲ್ಲಿಗೆ ಮತ್ತು ಕನ್ನೈ ದಿಲೆಗಳೆಂದು ಐದಾಗಿವೆ ಎಂದು ಅಮರಕೋಶಕಾರನು ಬರೆದಿದ್ದಾನೆ. ಸ್ತ್ರೀಯಳ ಜೀವನದ ಮುಖವೇ ಅರವಿಂದ. ಹರ್ಷಚಿತ್ತವೇ ಅಶೋಕ, ಕೆಂದುಟಿಯೇ ಮಾವಿನಚಿಗುರು, ನಗೆಯೇ ಅರಳು ಮಲ್ಲಿಗೆ, ವಿಶಾಲ ನೀಲನೇತ್ರಗಳೇ ಕನ್ನೈದಿಲೆಗಳು. ಈ ಪಂಚಬಾಣಗಳು ಎಂಥ ಧೀರನನ್ನೂ ಚಂಚಲ ಗೊಳಿಸದೇ ಇರವು. ವಸಂತಕಾಲವು ಕಾಮನಿಗೆ ಮಂತ್ರಿಯಂತೆ ಸಹಾಯಕನಾದರೆ, ಕೋಗಿಲೆಯು ಅವನ ಜಯಗಾನವನ್ನು ಹಾಡುತ್ತಿದೆ. ವಿರಹಿಗಳ ಮನವನ್ನು ಕಲಕುತ್ತಿದೆ. ಆಗ ಕಾಮನ ಆಟವು ನಡೆಯುವದೆಂದು ಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ರಾಜನಿಂದ ರಂಕನ ವರೆಗೆ ಎಲ್ಲರಲ್ಲಿಯೂ ಕಾಮನ ಚೇಷ್ಟೆ. ಕೇವಲ ಮಾನವರಲ್ಲಿ ಮಾತ್ರವಲ್ಲ. ಪಶುಪಕ್ಷಿಗಳಲ್ಲಿಯೂ ಕಾಮಚೇಷ್ಟೆ ಕಾಣುತ್ತಿದೆ. ನೀತಿಕಾರರೂ –
“ಆಹಾರ-ನಿದ್ರಾ ಭಯ-ಮೈಥುನಾನಿ
ಸಾಮಾನ್ಯಮೇತತ್ ಪಶುಭಿರ್ನರಾಣಾಮ್” ||
ಆಹಾರ-ನಿದ್ರೆ ಹಾಗೂ ಭಯಗಳಂತೆ ಮೈಥುನವೂ ಪಶು ಮತ್ತು ಮಾನವರಲ್ಲಿ ಸಾಮಾನ್ಯವಾಗಿದೆಯೆಂದು ವಿಶದಪಡಿಸಿದ್ದಾರೆ. ಕಾಮನು ಅನಂಗನಾಗಿ ಇಂಥ ಅದ್ಭುತ ಕಾರ್ಯವನ್ನೆಸಗುತ್ತಿರುವದು ಪ್ರಕೃತಿಯ ಕೊಡುಗೆ. ವಯಸ್ಸಿಗೆ ಬಂದ ಗಂಡು-ಹೆಣ್ಣು
ಜೀವಿಗಳಲ್ಲಿ ಕಾಮನ ಮಧ್ಯಸ್ಥಿಕೆಯಿಲ್ಲದಿದ್ದರೆ, ಜಗತ್ತು ವಿಸ್ತಾರಗೊಳ್ಳುತ್ತಿರಲಿಲ್ಲ. ಇಂದ್ರಿಯಗಳು ಬಹಿರ್ಮುಖವಾಗಿ ಹರಿಯುತ್ತಿರುವದು ಬ್ರಹ್ಮನ ರಚನೆಯಾಗಿದೆ. ಉಪನಿಷತ್ಕಾರರು-
”ಪರಾಂಚಿಖಾನಿ ವ್ಯತೃಣತ್ ಸ್ವಯಂಭೂ: ಪರಾಜ್ ಪಶ್ಯತಿ” | ಪರಮಾತ್ಮನು ಜೀವಾತ್ಮರ ಇಂದ್ರಿಯಗಳನ್ನು ಬಹಿರ್ಮುಖವಾಗಿ ಸೃಷ್ಟಿಸಿದ್ದರಿಂದ ಅವು ಬಹಿರ್ವಿಷಯ ಗಳನ್ನು ಗ್ರಹಿಸಲು ಹಾತೊರೆಯುತ್ತವೆಯೆಂದು ನಿರೂಪಿಸಿದ್ದಾರೆ. ಇಳುಕಲು ಮುಖವಾದ ನೀರು ತೀವ್ರವಾಗಿ ಹರಿಯುವಂತೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚ ವಿಷಯಗಳೇ ಲಕ್ಷ್ಯವಾಗಿಯುಳ್ಳ ಕಿವಿ, ತ್ವಕ್ಕು, ನೇತ್ರ, ನಾಲಿಗೆ, ಮೂಗು ಐದಿಂದ್ರಿಯಗಳು ಆ ವಿಷಯ ಸಂಪರ್ಕವಾಗುತ್ತಲೇ ಗ್ರಹಿಸುತ್ತವೆ. ಇಂದ್ರಿಯ ಗ್ರಹಿಕೆ ಬಲವತ್ತರವಾಗಿದೆ.
“ಮಾತ್ರಾ ಶ್ವಸ್ರಾ, ದುಹಿತ್ರಾ ವಾ ನೈಕಶಯ್ಯಾಸನೋ ಭೂತ್ |
ಬಲವಾನಿಂದ್ರಿಯ ಗ್ರಾಮೋ ವಿದ್ವಾಂಸಮಪಿ ಕರ್ಷತಿ ||”
ತಾಯಿ, ಅತ್ತೆ, ಸೊಸೆ, ಮಗಳು ಯಾರೇ ಇರಲಿ, ಏಕಾಂತದಲ್ಲಿ ವಯಸ್ಕರಾದ ಹೆಣ್ಣು ಮಕ್ಕಳೊಡನೆ ಏಕಾಸನನಾಗಿ ಕುಳಿತುಕೊಳ್ಳಬಾರದು. ಯಾಕೆಂದರೆ ಇಂದ್ರಿಯಗಳ ಶಕ್ತಿಯು ಅದ್ಭುತವಾಗಿದೆ. ಪಂಡಿತನನ್ನು ಸಹ ವಿಷಯದತ್ತ ಹರಿಸುವದು. ಈ ಅಭಿಪ್ರಾಯವನ್ನು ಓದಿದ ವ್ಯಾಸರ ಶಿಷ್ಯನಾದ ಜೈಮಿನಿಯು ಶ್ಲೋಕದ ನಾಲ್ಕನೆಯ ಚರಣದಲ್ಲಿ ವಿದ್ವಾಂಸಂ ನಾಪಕರ್ಷತಿ ವಿದ್ಯಾವಂತನನ್ನು ವಿಷಯವು ಎಳಸುವದಿಲ್ಲ ವೆಂದು ತಿದ್ದುವನು. ಅದನ್ನರಿತ ಗುರುಗಳು ನಾರದನನ್ನು ಕರೆಯಿಸಿ ಜೈಮಿನಿಯ
ಸತ್ಯಪರೀಕ್ಷೆಯನ್ನು ಮಾಡಲು ತಿಳಿಸುವರು. ನಾರದನ ಅಪ್ಪಣೆಯಂತೆ ಕಾಮದೇವನು ಕುದುರೆ ಸವಾರನಾಗಿ ಬಂದು ಜೈಮಿನಿಯನ್ನು ಕಂಡು ಕೆಲವು ಕ್ಷಣಗಳ ನಂತರ ಸುಂದರ ಸ್ತ್ರೀಯಾಗುತ್ತಾನೆ. ಅವನ ಆಶ್ರಮದ ಸಮೀಪಕ್ಕೆ ಬರುವನು. ಹೆಣ್ಣಿನ ಕೋಮಲ ಧ್ವನಿಯನ್ನು ಆಲಿಸಿದ ಮುನಿಯು ಹೊರಬಂದು ತೊಯ್ಸಿಸಿಕೊಳ್ಳುತ್ತಿರುವದನ್ನು ಕಾಣುತ್ತಾನೆ. ರಾಜಕುಮಾರಿಯಂತಹ ಸೌಂದರ್ಯ ವನ್ನು ಕಂಡು ಬೆರಗಾಗುತ್ತಾನೆ.
ಆಶ್ರಮದೊಳಗೆ ಕರೆಯುವನು. ಏಕಾಂತದ ವಾತಾವರಣದಲ್ಲಿ ಅವಳ ಮೋಹಕ ರೂಪವು ಮುನಿಯ ಮನವನ್ನು ಚಂಚಲಗೊಳಿಸುವದು. ಕುಮಾರಿಯ ವೃತ್ತಾಂತವನ್ನರಿತು ಲಗ್ನದ ಸಮಾಚಾರಕ್ಕೆ ಬರುವನು. ಅವಳ ಕರಾರಿನಂತೆ ಜೈಮಿನಿಯು ಆಕೆಯನ್ನು ಹೆಗಲಮೇಲೆ ಹೊತ್ತುಕೊಂಡು ಸಮೀಪದ ಅಶ್ವತ್ಥ ವೃಕ್ಷವನ್ನು ಮೂರು ಸುತ್ತು ಸುತ್ತಹೋಗುವನು. ಒಂದೆರಡು ಸುತ್ತಿನಲ್ಲಿ ಭಾರವಾಗಿ ಮೇಲೆ ನೋಡಲು, ಕನೈಯಾಗದೆ ಕುದುರೆ ಸವಾರನ ದೃಶ್ಯಕಾಣುವದು. ಆಗ ಮುನಿಯ ಮನ ನಾಚುತ್ತದೆ. ಕ್ಷಮೆ ಕೇಳಲು ಕಾಮದೇವನು ಮರದ ಮೇಲಿನ ವ್ಯಾಸರನ್ನು ತೋರಿಸುವನು. ಗುರುಗಳು ವಿದ್ವಾಂಸನಾದ ಶಿಷ್ಯನ ಹೀನಸ್ಥಿತಿಗಾಗಿ ನಗುವರು. ಗರ್ವವೆಲ್ಲ ದೂರವಾಯಿತೆಂದು ಕ್ಷಮೆಕೇಳುವನು. ವ್ಯಾಸರು ಜೈಮಿನಿಗೆ ಇಂದ್ರಿಯ ಶಕ್ತಿಯ ಸ್ವರೂಪವನ್ನು ಯಥೋಚಿತವಾಗಿ ತಿಳಿಸುವರು. (ಮಾನವ ಧರ್ಮ ಪುಟ ೬೮೯)
ಕೇವಲ ಗಾಳಿ, ನೀರು, ಒಣಗಿದ ಎಲೆಗಳನ್ನು ತಿಂದು ತಪಗೈದ ವಿಶ್ವಾಮಿತ್ರ ಪರಾಶರ-ಶಾಂಡಿಲ್ಯ ಮೊದಲಾದ ಋಷಿಗಳೂ ಸಹ ಮೇನಕಾ, ರಂಭಾ, ಸತ್ಯವತಿ ಮೊದಲಾದ ದೇವಲೋಕದ ಸುಂದರಿಯರನ್ನು ಕಂಡು ಮೋಹಿತರಾದರು. ಅಂದಮೇಲೆ ಪ್ರತಿನಿತ್ಯ ಹಾಲು-ತುಪ್ಪ ಮೊಸರು ಯುಕ್ತವಾದ ಮೃಷ್ಟಾನ್ನವನ್ನು ಉಣ್ಣುವ ಮಾನವರಿಂದ ಇಂದ್ರಿಯ ನಿಗ್ರಹಮಾಡುವದು ದುಸ್ಸಾಧ್ಯವೇ ಆಗಿದೆ. ವಿಷಯಗಳಲ್ಲಿ ಇಂದ್ರಿಯಗಳನ್ನು ಆಕರ್ಷಿಸುವ ಬಲವಿದೆ. ಅದಕ್ಕಾಗಿ ಆಕರ್ಷಣ ಶಕ್ತಿಯುಳ್ಳ ಇಂದ್ರಿಯಗಳ ಗ್ರಹಿಕೆಯು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಧಾರ್ಮಿಕವಾಗಿ ಯಥೋಚಿತವಾಗಬೇಕು. ಅಂದರೆ ಯೋಗ್ಯ. ಇಲ್ಲವಾದರೆ ಜೀವಾತ್ಮನು ಭವಭಂಧನಕ್ಕೊಳಗಾಗುವನು. ಕಮಲದ ಎಲೆಯಂತೆ ನೀರಿನ ಲೇಪವಿಲ್ಲದೆ ಇರುವ ಹಾಗೆ, ಜ್ಞಾನಿಯು ಮಾತ್ರ ವಿಷಯವನ್ನು ಭೋಗಿಸಿಯೂ ಆದರಿಂದ ನಿರ್ಲಿಪ್ತನಾಗುತ್ತಾನೆ. ಆದರೆ ವಿಷಯವು ಕೇವಲ ಭೋಗದಿಂದ ಶಾಂತವಾಗಲಾರದು.
ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ||
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||
ತುಪ್ಪದಿಂದ ಬೆಂಕಿಯು ಪುನಃ ಪುನಃ ಪ್ರಜ್ವಲಿಸುವಂತೆ ವಿಷಯೋಪಭೋಗವೆಂಬ ಕಾಮವನ್ನು ಭೋಗದಿಂದ ತೃಪ್ತಿಗೊಳಿಸುವದು ಎಂದೂ ಸಾಧ್ಯವಿಲ್ಲೆಂದು ಶಾಸ್ತ್ರಕಾರರು ಸಾರಿದ್ದಾರೆ.
ಭಾರತೀಯ ದಾರ್ಶನಿಕರು ಕಾಮವನ್ನು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಸೇರಿಸಿದ್ದಾರೆ. ಕಾಮವೆಂದರೆ, ಬಯಕೆ ಅಪೇಕ್ಷೆ ಅಥವಾ ಮನದ ಮುಂದಣ ಆಶೆ, ಅದು ಧರ್ಮದಿಂದ ಸಂಗ್ರಹಿಸಿದ ಧನದಿಂದ ಪೂರೈಸುವ ಅಪೇಕ್ಷೆಯಾಗಬೇಕು. ಆಗ ಕಾಮವೂ ಒಂದು ಪುರುಷಾರ್ಥವಾಗಬಹುದು. ಕಾಮವು ಕೇವಲ ಸ್ವಾರ್ಥಪರವಾದರೆ ವಾಸನೆಯೆನಿಸುವದು. ವಾಸನೆಯನ್ನು ನಿವಾರಿಸುವದು ಬಲುಕಷ್ಟ, ಧರ್ಮ ಮತ್ತು ಅರ್ಥಗಳನ್ನು ಅನುಸರಿಸಿದ ಕಾಮನೆಯಲ್ಲಿ ಪರಿಶುದ್ಧತೆ ಹಾಗೂ ಪರಿಪಕ್ವತೆಗಳು ಕಾಣುತ್ತವೆ. ಅಪಕ್ವವಾದ ಕಾಮವು ಮೋಹಕವಾಗಿ ಬಂಧನಕಾರಿಯಾಗುವುದು.
ಮನೋವಿಜ್ಞಾನಿಗಳು ಅತೃಪ್ತ ಕಾಮನೆಯಿಂದ ಮನಸ್ಸು ಮಲಿನವಾಗುವದು. ಅದು ವಿಕೃತಗೊಳ್ಳಲು ಅವಕಾಶಹೊಂದುವದು, ಆದ್ದರಿಂದ ಕಾಮನೆಯನ್ನು ಅತೃಪ್ತ (ಮೊಟಕು)ಗೊಳಿಸಬಾರದು. ಅರ್ಥಾತ್ ಇಂದ್ರಿಯಗಳನ್ನು ನಿಗ್ರಹಿಸಬಾರದು. ಎಂದು ಅಭಿಪ್ರಾಯ ಪಡುತ್ತಾರೆ. ಶಿವಶರಣರು –
”ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು’
ಎಂದು ಮನೋವಿಜ್ಞಾನಿಗಳ ಅರ್ಥವನ್ನೇ ಅನುಸರಿಸಿದ್ದರೂ ಇಲ್ಲಿ ಕಾಮನೆಗಳನ್ನು ಪ್ರಸಾದಗೊಳಿಸಿ ಲಿಂಗೋಪಭೋಗಿಯಾಗಿ ಸ್ವೀಕರಿಸುವ ಕಲೆಯನ್ನು ಕಂಡಿದ್ದಾರೆ. ಕಾಮನೆಯಲ್ಲಿ ಭಾವ ಪರಿಶುದ್ಧವಾಗಬೇಕು. ಪರಧನ ಪರಸ್ತ್ರೀಯರಲ್ಲಿ ಕಾಮ ಬೇಡವೆಂದೂ, ಪರಸ್ತ್ರೀಯೆಂಬ ಜೂಬಿಗಂಜುವೆವೆಂದೂ ಶರಣರು ನೈತಿಕ ಹೊಣೆಯನ್ನು ಹೊತ್ತು ನಡೆದರು. ಪರಸ್ತ್ರೀಯನ್ನು ಮಹಾದೇವಿಯನ್ನಾಗಿ ಕಂಡರು. ಏಕಪತ್ನಿ ವ್ರತಸ್ಥರಾಗಿ ಪುರುಷ ಬಾಳಿದರೆ ಪ್ರತಿವೃತೆಯರಾಗಿ ಸ್ತ್ರೀಯರು ಬಾಳುವರು. ಹೀಗೆ ತನ್ನ ವಸ್ತುವಿನಲ್ಲಿ ಕಾಣುವ ಕಾಮನೆ ಪುರುಷಾರ್ಥವಾಗುವದು. ಅದರಿಂದ ಮೋಕ್ಷ ದೊರೆಯುವದು.
ಗುರುವೇ ! ಕಾಮಾರಿಯೇ ! ಇಂಥ ಕಾಮನ ಉರುವಣಿಗೆಯನ್ನು ನಿವಾರಿಸುವ ಶಕ್ತಿ ನಿನ್ನಲಿದೆ. ನಿನ್ನ ಕೃಪೆಯಲ್ಲಿದೆ. ನಾನು ನಿನ್ನ ಮೊರೆಹೊಕ್ಕಿರುವೆ. ಮನವನ್ನು ಸುಮನವನ್ನಾಗಿಸಿ ವಿಷಯಗಳನ್ನು ಶಿವಪ್ರಸಾದವನ್ನಾಗಿ ಕಾಣುವ ಕಂಗಳನ್ನಿತ್ತು ಕಾಮನಕಾಟವನ್ನು ಕಳೆ. ನೀನಲ್ಲದೆ ಎನಗೆ ಇನ್ನಾರು ರಕ್ಷಕರು
ಬೀಸಿರ್ದ ಬಲೆಯೊಳಗೆ | ಕಾಸಿ ಮೀಸೆಯ ಮೃಗವು .
ತಾಸೋತು ಬಿದ್ದು ಘಾಸಿಯಾಗಲು ನಿಮ್ಮ
ನಾಶ್ರೈಸಿದೆ ಗುರುವೆ ಕೃಪೆಯಾಗು
||45||
ಬೇಟೆಗಾರನ ಬಲೆಯೊಳಗೆ ಉದ್ದಮೀಸೆಯುಳ್ಳ ಮೊಲವು ಸಿಕ್ಕು ನಾಶವಾಗು ವಂತೆ; ಮಾನವನ ಮನಸ್ಸನ್ನು ಮಥಿಸುವ ಮನ್ಮಥನು ಬೀಸಿದ ಮಾಯಾಬಲೆಯೊಳಗೆ ಅಹಂಕಾರವುಳ್ಳ ಜೀವನು ಸಿಕ್ಕು ಶರೀರದ ಶಕ್ತಿಯೆಲ್ಲ ಹ್ರಾಸವಾಗಿ ಘಾಸಿಯಾಗುವನು. ಕಾಮನ ಬಲೆ ಭದ್ರವಾದುದು. ಜೀವಾತ್ಮನು ಆ ಬಲೆಯಿಂದ ಬಿಡಿಸಿಕೊಳ್ಳಲಾರದೇ ಬಳಲಬೇಕಾಗುವದು. ಷಣ್ಮುಖಶಿವಯೋಗಿಗಳು –
‘ಕಾಮವೆಂಬ ಬೇಟೆಗಾರನು ಕಂಗಳಲೋಹಿನಿಂದ ನಿಂದು
ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ
ಸಕಲ ಪ್ರಾಣಿಗಳ ಕೆಡಹಿಕೊಂಡು ಕೊಲ್ಲುತ್ತಿದ್ದಾನೆ” ಎಂದು.
ಕಾಮನ ಕಠೋರ ಕರ್ಮವನ್ನು ವರ್ಣಿಸಿದ್ದಾರೆ. ಅಜ್ಞಜೀವಿಯು ವಿಷಯವೆಂಬ ಸುಖಕ್ಕಾಗಿ ಆಶಿಸುತ್ತದೆ. ವಿಷಕ್ಕಿಂತಲೂ ಈ ವಿಷಯವು ಘೋರವಾದುದೆಂದು ಅನುಭವಿಗಳು ಬೋಧಿಸಿದ್ದಾರೆ. ವಿಷವು ಒಂದು ಜನ್ಮವನ್ನು ಹರಣಮಾಡಿದರೆ; ವಿಷಯವಾಸನೆಯು ಜನ್ಮ ಜನ್ಮಾಂತರದಲ್ಲಿಯೂ ಕಾಡುವದು. ವಿಷಯರಹಿತನಾಗ ಬೇಕಾದರೆ ಗುರುಕಾರುಣ್ಯವೇಬೇಕು. ಅದುವೇ ಮುಖ್ಯ ಸಾಧನವಾಗಿದೆ. ಈ ಮಾತನ್ನು ಅಣ್ಣ ಬಸವಣ್ಣನವರು –
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ !
ಪಶುವೇನು ಬಲ್ಲುದು, ಹಸುರೆಂದೆಳಸುವದು.
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯಾ
ಕೂಡಲಸಂಗಮದೇವಾ !
ಎಂದು ದೃಷ್ಟಾಂತ ಪೂರ್ವಕವಾಗಿ ತಿಳಿಸಿದ್ದಾರೆ. ಗುರುವಿನಲ್ಲಿ ವಿಷಯರಾಹಿತ್ಯವನ್ನು ಕರುಣಿಸುವ ಸುಬುದ್ಧಿಯನ್ನು ಬೇಡಿದ್ದಾರೆ. ಪಶುವು ಹಸಿಹುಲ್ಲಿಗಾಗಿ ಆಶೆ ಪಡುವಂತೆ ಜೀವಾತ್ಮನು ತನ್ನ ಸುತ್ತ ಹರಡಿದ ವಿಷಯ ಸುಖಕ್ಕಾಗಿ ಹಲುಬುತ್ತಿದ್ದಾನೆ. ಪ್ರಾಣಿಗಳು
ಕೇವಲ ಒಂದೊಂದು ವಿಷಯಕ್ಕಾಗಿ ಆಶಿಸಿ ಸಾಯುತ್ತವೆ. ಘ್ರಾಣೇಂದ್ರಿಯ ವಿಷಯವಾದ (ಸಂಪಿಗೆಯ) ಸುಗಂಧಕ್ಕಾಗಿ ಭ್ರಮರವು ಕೆಟ್ಟರೆ, ರಸನೇಂದ್ರಿಯ ವಿಷಯವಾದ ರಸಪದಾರ್ಥ (ಮೀನದ ಗಾಳಕ್ಕೆ ಹಚ್ಚಿದ್ದು)ದ ಆಶೆಗಾಗಿ ಮೀನವು ಮೀನಗಾರನ ಬಲ್ಲೆಯಲ್ಲಿ ಬಿದ್ದು ಸಾಯುತ್ತದೆ. ನಯನೇಂದ್ರಿಯ ವಿಷಯವಾದ ರೂಪವನ್ನು ಮೋಹಿಸಿ ಪತಂಗವು ದೀಪದ ಜ್ವಾಲೆಯಿಂದ ಸತ್ತರೆ, ತ್ವಗಿಂದ್ರಿಯ ವಿಷಯವಾದ ಸ್ಪರ್ಶಸುಖವನ್ನು ಬಯಸಿ ರಾಜರ ಕೃತಕದಲ್ಲಿ ಆನೆಯು ಕೆಡುವದು ಶ್ರವಣೇಂದ್ರಿಯ ವಿಷಯವಾದ ಸುಶ್ರಾವ್ಯ ಶಬ್ದವನ್ನು ಮೋಹಿಸಿ ಚಿಗುರೆಯು ಬೇಟೆಗಾರನ ಬಾಣಕ್ಕೆ ಬಲಿಯಾಗುವದು. ಆದರೆ ಪಂಚೇಂದ್ರಿಯಗಳಿಂದ ಪಂಚ ವಿಷಯಗಳನ್ನು ಊಹಿಸಲುಬಾರದು. *ವಿನಾಶ ನಿಶ್ಚಿತವೆಂಬುದು ಪ್ರತ್ಯಕ್ಷವಿದೆ.
ಗುರುವೆ ! ಈ ಕಾಮನ ಬಲೆಯಿಂದ ಪಾರಾಗುವ ಸುಬುದ್ಧಿಯನ್ನು ಕರುಣಿಸಿ ಕಾಪಾಡು. ನಿನ್ನನ್ನೇ ಆಶ್ರಯಿಸಿರುವೆ.
ಶಿವಕವಿಯ ಒಂದೊಂದು ಪದಪ್ರಯೋಗದಲ್ಲಿಯೂ ಸಾರ್ಥಕತೆಯಿದೆ, ಅರ್ಥ ಪೂರ್ಣವಾಗಿದೆ. ಕಾಸಿಮೀಸೆಯ ಮೃಗವೆಂದರೆ ಮೊಲ ಮತ್ತು ಹಮ್ಮಿನಜೀವನೆಂದೂ ಅರ್ಥೈಸಿದ್ದೇವೆ. ಮೊಲದಂತೆ ಜೀವಾತ್ಮನ ಶಕ್ತಿಯೂ ಚಿಕ್ಕದು. ಆದರೆ ಅವನಿಗೆ ಅಂಟಿರುವ ಅಜ್ಞಾನ ಮತ್ತು ಅಹಂಕಾರಗಳು ಮೀಸೆಯಂತೆ ದೊಡ್ಡದಾಗಿ ಬೆಳೆದಿವೆ. ಆಜ್ಞಾನ ಹಾಗೂ ಅಹಂಕಾರವುಳ್ಳ ಜೀವಿಯು ಕಾಮನಬಲೆಯಲ್ಲಿ ಸಿಕ್ಕು ಸೋತು ಪಾರಾಗದೆ ಘಾಸಿಯಾಗುವದು. ಕೊನೆಗೆ ಸಾಕುಸಾಕಾಗಿ ಶ್ರೀಗುರುವಿನ ಪಾದಕಮಲ ವನ್ನು ಆಶ್ರಯಿಸದೇ ಶಾಂತಿಯಿಲ್ಲವೆಂಬುದು ಈ ಶರಣನ ಬಯಕೆಯಾಗಿದೆ.