.* ಪ್ರೋ. ಎಸ್, ಡಿ, ಇಂಚಲ
ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ಗತಿಹೀನರಾದ ಮತಿಹೀನರಾದ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ. ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ. ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ. ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ ಚೇತನಕಾರಿಯಾಗಿ ತೂರಿ ಬರುತ್ತದೆ. ಅದರ ಶುಭ್ರವಾದ ಪವಿತ್ರ ಪ್ರವಾಹದಲ್ಲಿ ನಮ್ಮ ಮೈಮನಗಳನ್ನು ತೇಲುಬಿಟ್ಟು ನಮ್ಮ ಬಾಳಿನ ಮುಂಗೆಲಸಕ್ಕೆ ಮಂಗಳವನ್ನು ಹಾಡೋಣ. ಕಾರ್ಯಕ್ಷೇತ್ರದಲ್ಲಿ ಭಕ್ತಿ ವಿಶ್ವಾಸಗಳಿಂದ ಕಂಕಣ ಬದ್ಧರಾಗಿ ಇಳಿಯೋಣ.
ಕಾರಣಿಕ ಶ್ರೀ ಕುಮಾರಯೋಗಿಯ ಪಾವನತರವಾದ ಈ ಜೀವನ ಪ್ರವಾಹವು ಅನಂತಮುಖವಾಗಿ ಹರಿದು, ಕಾಡಾದ ಕನ್ನಡವನ್ನು ತನ್ನ ತ್ಯಾಗ ಸಾಹಸಗಳ ನಂದನವನವನ್ನಾಗಿ ಮಾಡುವ ಮಹತ್ಕಾರ್ಯದಲ್ಲಿ ಬಿಡುಗಡೆಯನ್ನು ಹೊಂದಿ ಬಯಲನ್ನೇ ಬೆಳಗಿ ಹೋಗಿದೆ. ಅದೊಂದು ಮಹಾತ್ಮನ ಪೂರ್ಣ ಚಿತ್ರವಾಗಿದೆ. ಸತ್ಯ ಸೌಂದರ್ಯದ ಸಂಗೀತದಿಂದೊಡಗೂಡಿದ ಮಹಾಕಾವ್ಯವಾಗಿದೆ. ಶ್ರೀಗಳ ಬದುಕು ಅವರ ಆತ್ಮ ಸಾಕ್ಷಾತ್ಕಾರದ ಪ್ರತಿಬಿಂಬ; ಮಾನವ ಕಲ್ಯಾಣ ಸಾಧನೆಯ ಅಮೃತ ಸಿದ್ದಿ! ಸಮಾಜ-ಸಂಸ್ಕೃತಿ, ಸಾಹಿತ್ಯ-ಸಂಸ್ಕಾರದ ನಂದಾದೀಪ! ಕ್ರಾಂತಿಯ ಸ್ಟುರಣ! ಶಾಂತಿಯ ಸದನ! ದೀನ ದುರ್ಬಲರ ಅನವರತ ಆಧಾರ! ಹೀಗೆ. ನಾನಾ ಮುಖವಾದ ಶ್ರೀಗಳ ಜೀವನವು ಕನ್ನಡಿಗರ ಅಕ್ಷಯ ನಿಧಿಯಾಗಿದೆ. ತ್ಯಾಗ ಪ್ರೇಮ, ಸೇವೆಗಳ ಸಾರ ಸರ್ವಸ್ವವಾಗಿದೆ. ಅವರದು ಕೇವಲ ಆತ್ಮ ಕಲ್ಯಾಣಕ್ಕಾಗಿ ದಲಿತ ದರಿದ್ರರ ಏಳ್ಗೆಗಾಗಿ ಪರಿತಪಿಸಿದ ಕೃಷಿ ಜೀವನವಾಗಿದೆ. ಅಂತೆಯೇ ಅವರು ಮೆಟ್ಟಿದ ನೆಲ ಪುಣ್ಯಕ್ಷೇತ್ರವಾಯಿತು. ಅವರು ಕೊಟ್ಟ ಆ ದೃಷ್ಟಿಯಿಂದ ಜನಾಂಗದಲ್ಲಿ ಒಂದು ನವೀನ ಸೃಷ್ಟಿಯೇ ಧರೆಗಿಳಿಯಿತು. ಆಗ ಕನ್ನಡ ನಾಡು ಧನ್ಯವಾಗಿ ನಮ್ಮ ಸಮಾಜ ಚೇತರಿಸಿಕೊಂಡಿತು. ಬೀಡು ಬಿಟ್ಟು ಅಂಧಕಾರವು ಕರಗಿ ಜ್ಞಾನಸೂರ್ಯ ಹೊಂಗಿರಣಗಳು ಬಾಳನ್ನು ಬೆಳಗಿದವು ಜನಜೀವನದಲ್ಲಿ ಧರ್ಮ, ನೀತಿ, ದಾನ ದುಡಿಮೆಗಳು ರೂಪಗೊಂಡು ಸತ್ವಯುತವಾದ ಸಮಾಜದ ಉದಯವಾಯಿತು . ಜನ ಸಾಮಾನ್ಯರ ಬದುಕು ಕೊಳೆಯನ್ನು ಕಳೆದು ಹಸನಾಯಿತು. ಕಷ್ಟಕಾರ್ಪಣ್ಯ ಗಳನ್ನಳಿದು ಹಗುರಾಯಿತು. ಕಸಬು ಕಾಯಕಗಳನ್ನು ಕೈಕೊಂಡು ಸ್ವಾವಲಂಬಿಯಾಗಿ ಸಮರ್ಥವಾಯಿತು. ಇದು ಅಮೋಘವಾದ ಕ್ರಾಂತಿ. ಈ ಬಗೆಯಾಗಿ ರಕ್ತರಹಿತ ಕ್ರಾಂತಿಯನ್ನೆಸಗಿದ ಅಮೋಘ ಶಕ್ತಿಯಾದ ಶಾಂತಿದೂತನಾದ ಕರ್ಮಯೋಗಿ ಕುಮಾರನ ಜೀವನವು ಅಸಾಮಾನ್ಯವಾದುದು ಎಂದು ಬೇರೆ ಹೇಳಬೇಕಾಗಿಲ್ಲ.
ಶ್ರೀಗಳ ವ್ಯಕ್ತಿತ್ವ ವೈವಿಧ್ಯಪೂರ್ಣವಾಗಿ ಉಜ್ವಲವಾದುದು. ವಿಶಾಲವಾದ ವೈರಾಗ್ಯ, ಮನನೀಯವಾದ ವಿಚಾರ ಸ್ವಾತಂತ್ರ್ಯ, ಆರ್ತರ ಬಗೆಗಿರುವ ಅಪಾರವಾದ ಅನುಕಂಪ, ಅಜ್ಞ ಸಮಾಜದ ಏಳೆಗೆ ತೋರಿದ ಅತುಲವಾದ ಕಳಕಳಿ, ಸಾಹಿತ್ಯ ಸಂಸ್ಕೃತಿಗಳ ಅಭಿಮಾನ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ ಕಾರ್ಯ ಕುಶಲತೆ ಧರ್ಮ ಸಹಿಷ್ಣುತೆ, ಹಿಡಿದುದನ್ನು ಕೈಗೂಡಿಸಿಯೇ ಬಿಡುವ ದೃಢಸಂಕಲ್ಪ. ಸಂಗೀತ, ಚಿತ್ರ ಮೊದಲಾದ ಲಲಿತ ಕಲೆಗಳ ಬಗೆಗಿರುವ ಕಲಾಪ್ರೇಮ ಎಲ್ಲಕ್ಕೂ ಹೆಚ್ಚಾಗಿ ಮಾನವ ಕಲ್ಯಾಣ ಚಿಂತನೆ. ಇವೇ ಮೊದಲಾದ ಎಷ್ಟೋ ಸದ್ಗುಣಗಳಿಂದ ಮಂಡಿತವಾದ ಅವರ ಮೂರ್ತಿ ಪ್ರಭೆಯು ಪ್ರಕಾಂಡ ಪ್ರಭಾವವುಳ್ಳದ್ದಾಗಿತ್ತು. ತ್ಯಾಗ ಧೈರ್ಯ ಸಾಹಸಗಳಲ್ಲಿ ಶ್ರೀಗಳು ಅಸದೃಶರಾಗಿದ್ದು ಅದು ಸದಾ ಕಾಲವೂ ಸತ್ಯಕ್ಕಾಗಿ ಸತ್ಯದರ್ಶನಕ್ಕಾಗಿ ಜನತೆಯ ಸೌಭಾಗ್ಯಕ್ಕಾಗಿ ತಮ್ಮದಾದ ಎಂಥದನ್ನೂ ತ್ಯಾಗ ಮಾಡುವ ಮನೋನಿರ್ಧಾರ ಶ್ರೀಗಳ ವ್ಯಕ್ತಿತ್ವದಲ್ಲಿ ಮೂರ್ತಿ ಮುಂತಾಗಿತ್ತು. ನಮ್ಮ ನಾಡಿನಲ್ಲಿ ಯೋಗಿಯಾಗಿ ಬೈರಾಗಿಯಾಗಿ ಅವರ ಸ್ಥಾನ ಉನ್ನತವಾಗಿದೆ. ಸಾಹಿತ್ಯ ಶಿಕ್ಷಣ ಸಂಶೋಧಕರಾಗಿ ಸಂಗ್ರಾಹಕರಾಗಿ ಅವರ ಸ್ಥಾನ ಮಹಾ ಮಹೋನ್ನತವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಬಡವರ ಮಗುವಾಗಿ ಹುಟ್ಟಿ ಬಡತನದ ಬವಣೆಯಲ್ಲಿ ಬಳಲಿ ವಿದ್ಯಾರ್ಜನೆಗಾಗಿ ಹುಲುಬಿ ಹಂಬಲಿಸಿ ಆತ್ಮಶಕ್ತಿಯಿಂದ ನಿದಿಧ್ಯಾಸ ಅಭ್ಯಾಸಗಳ ಬಲದಿಂದ ಗುರುವಿನ ಅನುಗ್ರಹದಿಂದ ಮಾನವ ಜೀವನದ ಅಗ್ನಿ ಪರೀಕ್ಷೆಯಲ್ಲಿ ಬಿದ್ದು ಒರೆಗೆ ಬಂಗಾರದಂತೆ ಬೆಳಗಿ ಹೋದ ಕಾರಣಿಕ ಶಿವಯೋಗಿಯು ಕನ್ನಡ ತಾಯಿಯ ಅಮೃತ ಕುವರನಾದುದು ಗಮನಿಸತಕ್ಕ ಮಾತಾಗಿದೆ. ಶಿವನೇ ಸೃಷ್ಟಿಯಲ್ಲಿ ಹುಟ್ಟಿ ಸಾಮಾನ್ಯರ ಸೇವೆಗೈದು ತನ್ಮೂಲಕ ಶಿವಾನುಭವದ ಶಿಖರವನ್ನೇರುವುದಕ್ಕೆ ಕುಮಾರನ ಕಥೆಯು ಅಮರವಾದ ಉಪಮೆಯಾಗಿದೆ. ಕನ್ನಡಿಗರ ಸಾತ್ವಿಕ ಜೀವನದ ಬೃಹತ್ ಶೈಲಕ್ಕೆ ಗೌರೀಶಂಕರವಾಗಿದೆ. ಶಾಂತಿ ಕಿರಣಗಳನ್ನು ಸೂಸುವ ದೀಪಸ್ತಂಭವಾಗಿದೆ.
ಶ್ರೀಗಳ ಕೀರ್ತಿಯನ್ನು ಕಾರ್ಯದಕ್ಷತೆಯನ್ನೂ ಸಮಾಜೋದ್ಧಾರವನ್ನೂ ಎತ್ತಿ ತೋರಿಸುವ ಜೀವಂತ ಕುರುಹುಗಳು ನಮ್ಮ ನಾಡಿನಲ್ಲಿ ಇನ್ನೂ ಮೌನ ಗಂಭೀರವಾಗಿ ನಿಂತಿವೆ. ಶಿವಯೋಗ ಮಂದಿರವು ಅಂಥದೊಂದು ಸಜೀವ ಸಂಸ್ಥೆ, ಅದರ ಸಂಸ್ಥಾಪನೆಯ ಕಥನ ಗೀತೆಯನ್ನೂ ಮಹಿಮೆಯನ್ನೂ ಪವಿತ್ರಳಾದ ಮಲಪಹಾರಿಣಿಯು ಅಂದಿನಿಂದ ಇಂದಿನವರೆಗೆ ತನ್ನ ತರಂಗ ತರಂಗವಾದ ಜಲತರಂಗದ ಸಂಗೀತದೊಂದಿಗೆ ಮೌನವಾಗಿ ಜೋಗುಳಗರೆಯುತ್ತಿದ್ದಾಳೆ. ಕರ್ನಾಟಕದ ಆತ್ಮಾನುಭೂತಿಯ ಅಧ್ಯಾತ್ಮ ಕೇಂದ್ರವಾಗಿರುವ ಶ್ರೀಗಳ ಪಾದಧೂಳಿಯಿಂದ ಪಾವನವಾದ ಶಿವಯೋಗ ಮಂದಿರದ ಅಡಿದಾವರೆಗಳನ್ನು ತೊಳೆಯುವ ಚಿರಂತನ ಸೇವೆಯಲ್ಲಿ ನಿರತಳಾಗಿದ್ದಾಳೆ. ಸಮಾಜದ ತಾಯಿಯಾದ ಭಕ್ತಿಜ್ಞಾನ ವೈರಾಗ್ಯಗಳ ಸಂಗಮ ಕೇಂದ್ರವಾದ ನಮ್ಮ ಸಮಾಜದ ಗುರು ವರ್ಗವನ್ನು ತರಬೇತಿಗೊಳಿಸುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಮಹತ್ತರವಾದದ್ದೆಂದು ಕಂಡು ಹಿಡಿದ ಶ್ರೀಗಳು ಶಿವಯೋಗ ಸಾಧನೆಯ ಗರಡಿಯಂತಿದ್ದ ಈ ಮಂದಿರವನ್ನು ಸ್ಥಾಪಿಸಿದರು. ನವೋ ನವವಾಗುತ್ತಿರುವ ನಮ್ಮ ಸಮಾಜದ ಹಿತಸಂಬಂಧಗಳನ್ನು ಉಳಿಸಿ ಬೆಳಿಸಿ ಬೆಳಗಿಸಿಕೊಂಡು ಹೋಗುತ್ತಿರುವ ಗುರುವೃಂದವು ಇಲ್ಲಿಯ ಪವಿತ್ರ ವಾತಾವರಣದಲ್ಲಿ ತರಬೇತಿ ಹೊಂದುತ್ತಿರುವುದು ಅತ್ಯಂತ ಮಹತ್ವದ್ದು, ಈ ಮಂದಿರದ ಆಂತರ್ಯದಲ್ಲಿ ಅದರ ಸುತ್ತಲಿನ ತರಮರಾದಿಗಳಲ್ಲಿ ಖಗ ಮೃಗಾದಿಗಳಲ್ಲಿ ಶ್ರೀಗಳ ಅಧ್ಯಾತ್ಮ ಜ್ಯೋತಿಯು ಬೆಳಗುತ್ತಿರುವುದರಿಂದಲೇ ಮಂದಿರವು ಸಮಾಜಕ್ಕೆ ಸ್ಫೂರ್ತಿಯನ್ನು ನೀಡಲು ಶಕ್ತವಾಗಿದೆ . ಸಮಾಜದ ಆಗು ಹೋಗುಗಳ ಸೂತ್ರಗಳನ್ನು ಹಿಡಿದು ಮುನ್ನಡೆಯಿಸುವುದೆ ಈ ಮಂದಿರದ ಘನವಾದ ಉದ್ದೇಶವು , ಈ ಚೇತನಶಕ್ತಿ ನೈತಿಕ ಬಲ ಶ್ರೀಗಳ ಒಲವಿನಿಂದಧಿಕವಾಗಿ ಮಂದಿರದ ಮುಂದಿರುವ ಆಶಯವು ಹಣ್ಣಿಸುವಂತೆ ನಮ್ಮ ಸಮಾಜದ ಮುಂದಾದುಗಳು ಗುರುಗಳು ಯತ್ನಿಸುವರಾಗಿ ಆಶಿಸುತ್ತೇವೆ.
ಹೀಗೆ ಶ್ರೀಗಳು ಕೇವಲ ತತ್ವಬೋಧನೆಗೆಂದು ನಿಂತ ವಚನ ವೀರರಾಗಿರದೆ ತತ್ವಸಾಧನೆಯ ಸತ್ವಯುತವಾದ ಮುಂದಾಳುಗಳೂ ಕ್ರಿಯಾಶಿಲ್ಪಿಗಳೂ ಆಗಿದ್ದರು. ಆದುದರಿಂದಲೇ ಸಮಾಜ ಜಾಗೃತಿಯ ಬಗ್ಗೆ ತಾವು ಕಂಡ ಎಷ್ಟೋ ಕನಸುಗಳನ್ನು ನನಸಾಗಿಸಲು ತಮ್ಮ ಜೀವಮಾನದಲ್ಲೆಲ್ಲ ಹಸಿವು ನೀರಡಿಕೆಗಳಿಲ್ಲದೆ ಯತ್ನಿಸಿದ ರೆಂಬುದು ಗಮನಿಸತಕ್ಕ ಸಂಗತಿಯಾಗಿದೆ. ಲಿಂಗಾಯತ ಸಮಾಜದ ಸಂಘಟನೆಗಾಗಿ ಮಹಾಸಭೆಯೊಂದನ್ನು ೧೯೦೪ರಲ್ಲಿ ಸರದೇಸಾಯಿ ಶಿರಸಂಗಿಯವರ ಅಧ್ಯಕ್ಷತೆಯಲ್ಲಿ ಸಂಸ್ಥಾಪಿಸಿದರು. ಅದರ ನೇತೃತ್ವದಲ್ಲಿ ಸಮಾಜದಲ್ಲಿ ಕ್ರಾಂತಿಯಾಯಿತು. ಸಾಮಾಜಿಕ ಶೈಕ್ಷಣಿಕ ಸಾಂಪತ್ತಿಕ ಸಾಹಿತ್ಯಕ ಮತ್ತು ಔದ್ಯೋಗಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಯು ಅಖಂಡವಾಗಿ ಸಾಗಿತ್ತು. ಅಲ್ಲಿಗೆ ತಮ್ಮ ದೀರ್ಘವಾದ ಸಾಹಸದಿಂದ ಒಂದು ಲಕ್ಷದ ವರೆಗೆ ಹಣ ಶೇಖರಿಸಿ ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿದರು. ಸಮಾಜ ಜಾಗ್ರತೆಯ ಚಟುವಟಿಕೆಗಳೆಂದು ವೀರಶೈವ ಮಹಾಸಭೆಯ ಜೊತೆಯಲ್ಲಿಯೇ ಅದಕ್ಕೆ ಅಂಗವಾಗಿ ಲಿಂಗಾಯತ ಮಹಿಳಾ ಪರಿಷತ್ತು, ಲಿಂಗಾಯತ ತರುಣ ಸಂಘ, ಶಿಕ್ಷಣ ಸಮ್ಮೇಲನ, ವೈದ್ಯಕೀಯ ಸಮ್ಮೇಲನ ಮೊದಲಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರು. ಅದುದರಿಂದಲೇ ಅವರ ಜೀವಮಾನದ ಕಾಲವು ನಮ್ಮ ಸಮಾಜದ ಉತ್ಕ್ರಾಂತಿಯ ಕಾಲವಾಯಿತು.
ಈ ರೀತಿಯಿಂದ ಶ್ರೀಗಳವರ ಜೀವನವು ಗುಣಧರ್ಮಗಳಿಗೆ ನಿಧಿಯಾಗಿ, ಸತ್ಕರ್ಮಗಳ ಶಾಂತಿಯ ಆಗರವಾಗಿ ಮಾನವ ಕಲ್ಯಾಣಕ್ಕೆ ಉತ್ತುಂಗ ಶಿಖರವಾಗಿ ಗಂಭೀರವಾಯಿತು. ವ್ಯಕ್ತಿ ಮತ್ತು ಸಮಾಜಗಳ ಅನ್ನೋನ್ಯವಾದ ವಿಕಾಸದ ಸಂದರ್ಭದಲ್ಲಿ ಎದುರಾಗಿ ಬಂದ ಅನೇಕ ವಿಷಮ ಸನ್ನಿವೇಶಗಳನ್ನು ಸಹಿಸಿ ಉದಾರ ಭಾವನೆಯಿಂದ ವಿಶಾಲ ಹೃದಯದಿಂದ, ನಮ್ಮ ಜನಕ್ಕೆ ಆದರ್ಶ ವ್ಯಕ್ತಿಯಾಗಿ ನಮ್ಮವರ ಅಮೋಘ ಶಕ್ತಿಯಾಗಿ ಬಾಳಿದರು. ಜೀವನದ ಆಳಕ್ಕೆ ಇಂದು, ಮಾನವ ಕಲ್ಯಾಣದ ಎತ್ತರಕ್ಕೆ ಹಾರಿ ಜಗದಲವೂ ವಿಶಾಲವಾಗಿ ನಿಲ್ಲಲು ಸಮರ್ಥರಾದರು ಶ್ರೀಗಳು. ಅವರ ಆ ವ್ಯಕ್ತಿದೀಪ ನಮ್ಮೆಲ್ಲರ ಗರ್ಭಗುಡಿಯಲ್ಲಿ ನಂದಾದೀಪವಾಗಿ ಬೆಳಗುತ್ತಲಿದೆ, ಆ ಕರುಣಾಮಯ ಬೆಳಕು ಬರಡಾದ ನಮ್ಮ ಬಾಳಂಚಿನಲ್ಲಿ ಮತ್ತೊಮ್ಮೆ ಮೂಡಿ ಬೆಳಗಲೆಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸುವೆವು.
(ಆಕರ : ಸುಕುಮಾರ ಸಂ: ೪ 1956)