ಕನ್ನಡಕ್ಕೆ ಬಸವಣ್ಣನವರ ಕಾಣಿಕೆ

-ಡಾ. ಜಿ. ಎಸ್. ಶಿವರುದ್ರಪ್ಪ

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,

ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದ್ದಿತಯ್ಯಾ ಶಿವನ ಪ್ರಕಾಶ………’

ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತು, ಅವರ ಸಮಕಾಲೀನರಾದ ಶ್ರೀ ಅಲ್ಲಮ ಪ್ರಭುಗಳು ಮಾಡಿದ ವ್ಯಾಖ್ಯಾನ ರೂಪದ ವಚನ ಇದು. ದಿವ್ಯ ಅನುಭಾವಿಯೊಬ್ಬರು ಅಂದಿನ ಮಹಾ ಸಾಧಕರೊಬ್ಬರನ್ನು ಕುರಿತು ಆಡಿದ ಈ ರೂಪಕ ಬಸವಣ್ಣನವರ ವ್ಯಕ್ತಿತ್ವದ ಸಮಗ್ರ ಚಿತ್ರವನ್ನು ಕೊಡುವುದರ ಜೊತೆಗೆ, ಅಂದು ಶಿವಶರಣರಿಂದ ಪ್ರಚಲಿತವಾದ ವಚನವೆಂಬ ವಿಶಿಷ್ಟ ಸಾಹಿತ್ಯ ಪ್ರಕಾರದ ಸ್ವರೂಪ ಸ್ವಭಾವಗಳನ್ನೂ ಪರಿಚಯ ಮಾಡಿಕೊಡುತ್ತದೆ.

ಹೌದು; ಅಲ್ಲಮ ಪ್ರಭುಗಳು ಹೇಳುವಂತೆ ಬಸವಣ್ಣನವರು ಒಂದು ಜ್ಯೋತಿಯು; ಆದರೆ ಅದರಿಂದ ಬೆಳಗುತ್ತಿರುವುದು, ‘ಶಿವನ ಪ್ರತಾಪ’ ಅನುಭಾವದ ತೇಜಸ್ಸು. ಆ ಒಂದು ಜ್ಯೋತಿ ಹನ್ನೆರಡನೆಯ ಶತಮಾನದಂದು ತನ್ನ ದೀಪ್ತಿಯಿಂದ ಎಷ್ಟೊಂದು ದೀಪಗಳನ್ನು ಹತ್ತಿಸಿ ‘ತಮಂಧಘನ’ವಾದ ಅಂದಿನ ಆವರಣದಲ್ಲಿ ವಿನೂತನವಾದೊಂದು ಧಾರ್ಮಿಕ ಕ್ರಾಂತಿಯನ್ನೂ, ಅದರ ಪರಿಣಾಮರೂಪದ ಸಾಹಿತ್ಯ ಕ್ರಾಂತಿಯನ್ನೂ ಮಾಡಿ, ಪಂಪನ ನಂತರದ ಮತ್ತೊಂದು ನವೋದಯಕ್ಕೆ ಅಚಾರ್ಯಶಕ್ತಿಯಾಯಿತು. ಅಂತೆಯೇ ಅವರ ಬದುಕು ಎಷ್ಟೊಂದು ಕವಿಗಳ ಕಾವ್ಯಕ್ಕೆ ಪ್ರೇರಣೆಯನ್ನು ಸ್ಫೂರ್ತಿಯನ್ನು ನೀಡಿತು ! ಈ ದೃಷ್ಟಿಯಿಂದ ನೋಡಿದರೆ ಬಸವಣ್ಣನವರು ಕನ್ನಡ ಸಾಹಿತ್ಯದ ಪ್ರಯೋಗಶೀಲವಾದ ಕ್ರಾಂತಿ ಪ್ರವಾಹವೊಂದರ ದೊಡ್ಡ ತರಂಗವಾಗಿ ಗೋಚರಿಸುತ್ತಾರೆ.

ಮಹಾವ್ಯಕ್ತಿಗಳು ತಮ್ಮ ಬದುಕಿನ ಕಡಲನ್ನು ಕಡೆದು ಪಡೆದ ಭಾವ ಮೌಲ್ಯಗಳು ಅಂದಂದಿನ ಯುಗದ ಕವಿವಾಣಿಯ ಮೂಲಕ ಪ್ರಸಾರಗೊಳ್ಳುತ್ತವೆ. ಅಂತೆಯೇ ಬಸವಣ್ಣನವರ ಬದುಕು, ಹಾಗೂ ಅವರು ಮಥಿಸಿ ಬಾಳಿನಾಳದಿಂದ ತಂದ ಮೌಲ್ಯಗಳು, ಹರಿಹರ, ರಾಘವಾಂಕ ಮೊದಲಾದ ಕವಿಗಳ ಕಾವ್ಯದಲ್ಲಿ ಪುನಃ ಪ್ರಸಾರಿತವಾಗಿ ‘ಬಸವಯುಗ’ವೊಂದನ್ನು ಕನ್ನಡ ಸಾಹಿತ್ಯದಲ್ಲಿ ತೆರೆದಿವೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ’-ಎಂಬ ಅವರ ಸಂಸಾರ ಸೂತ್ರ; ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ’- ಎಂಬ ಮಾತಿನಿಂದ ಧ್ವನಿತವಾಗುವ ಚಾರಿತ್ರಶುದ್ಧಿಯ ಬೆಲೆ; ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನು ಒಂದೇ ಎಂಬೆ’ ಎನ್ನುವಲ್ಲಿ ಕಂಡು ಬರುವ ಸಮಾನತೆಯ ಆದರ್ಶ; ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ – ಎಂಬಲ್ಲಿ ಕಂಡು ಬರುವ ಆ ವಿನಯ, ‘ಮೃದು ವಚನವೇ ಸಕಲ ಜಪಂಗಳಯ್ಯ’- ಎಂಬ ಮಾತಿನಿಂದ ವ್ಯಕ್ತವಾಗುವ ಆ ಮಾರ್ದವತೆ; ‘ನುಡಿದರೆ ಮುತ್ತಿನ ಹಾರದಂತಿರಬೇಕು…. ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು’- ಎನ್ನುವಲ್ಲಿ ಮಾತಿನ ರೀತಿಯನ್ನು ಕುರಿತ ವಿವರಣೆ ಹಾಗೂ ಅದು ತಲುಪಬೇಕಾದ ನೆಲೆ; ‘ನಾಳೆಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು’ ಎನ್ನುವಲ್ಲಿ ಕಂಡು ಬರುವ ಶಿವಾರ್ಪಿತ ವ್ಯಕ್ತಿತ್ವದ ಮೃತ್ಯುಂಜಯ ಮನೋಭಾವ ಈ ಎಲ್ಲ ಭಾವಮೌಲ್ಯಗಳ ವಿಶಿಷ್ಟ ಸಮನ್ವಯ ಬಸವಣ್ಣನವರ ಜ್ಯೋತಿರ್ಮಯ ನಿರ್ಮಲಮುಗ್ಧ ಮನೋಹರ ಮೂರ್ತಿಯ ಚಿತ್ರವನ್ನು ಕನ್ನಡಕ್ಕೆ ನೀಡಿವೆ.

ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಬಸವಣ್ಣನವರ ವಚನಗಳು ಅಪೂರ್ವವಾದ ಕಾಣಿಕೆ ಎನ್ನಬಹುದು. ಬಸವಣ್ಣನವರಿಗಿಂತ ಹಿಂದೆಯೇ ಈ ವಚನವಾಯದ ತೊರೆ ಹರಿಯುತಿದ್ದಿತಾದರೂ, ಬಸವಣ್ಣನವರ ವ್ಯಕ್ತಿತ್ವದ ನೆರೆ ನುಗ್ಗಿ ಅದರ ಪಾತ್ರ ವಿಸ್ತಾರವಾಯಿತು. ತುಂಬಿ ಗಂಭೀರವಾಯಿತು. ಆದರೆ ಒಂದು ಮಾತು: ಬಸವಣ್ಣನವರು ಪ್ರಧಾನವಾಗಿ ಸಾಹಿತಿಯಲ್ಲ: ದೊಡ್ಡ ಆಚಾರ್ಯರು. ಎಂದರೆ ಅವರು ಸಾಹಿತಿಯ ಮನೋಭಾವದಿಂದ ವಚನ ರಚನೆಗೆ ಕೈಹಾಕಿದವರಲ್ಲ, ತಾವು ಆಡಿದ ಮಾತು ಕಾವ್ಯವಾಯಿತೇ ಇಲ್ಲವೇ ಎಂದು ಶಂಕಿಸಿದವರಲ್ಲ ; ತಾವು ಬರೆದದ್ದು ಕಾವ್ಯವಾಗಲಿಲ್ಲವೆಂದು ಕೊರಗಿದವರೂ ಅಲ್ಲ, ಏಕೆಂದರೆ ಅವರಿಗಿರಲಿಲ್ಲ ಆಸ್ಥಾನ ಕವಿಯಾಗಿ ಪಂಡಿತರನ್ನು ಮೆಚ್ಚಿಸಬೇಕೆಂಬ ಹಂಬಲ; ಅವರಿಗಿದ್ದುದು ಬದುಕು ಹಸನಾಗಬೇಕೆಂಬ ಹೆಬ್ಬಯಕೆ, ಆ ಸುಧಾರಣೆಯನ್ನು ಕುರಿತ ಹಂಬಲ, ತುಡಿತ, ತೊಳಲಾಟ ಹಾಗೂ ಇದರಲ್ಲಿ ಜೀವ ಏರಿದ ಎತ್ತರ ಇವು ಅವರಿಗೆ ಪ್ರಧಾನ. ಹೀಗಾಗಿ ಅವರು ಆಡಿದ ಮಾತು ಅವರಿಗರಿವಿಲ್ಲದಂತೆಯೇ ಕಾವ್ಯವಾಯಿತು; ವಚನವೆಂಬ ಹೊಸ ಸಾಹಿತ್ಯ ಪ್ರಕಾರವೊಂದು ಮೂಡಿ ಬೆಳೆಯಿತು. ಅಂದಂದಿನ ಅನುಭವಗಳನ್ನು ನೇರವಾಗಿ, ಸರಳವಾಗಿ, ನಿರೂಪಿಸುವ ಆತ್ಮಕಥನದ ರೀತಿಯೇ ಇವುಗಳ ಚೆಲುವು. ಅದುವರೆಗೂ ಹರಿದು ಬಂದ ವಸ್ತುನಿಷ್ಠ ಪುರಾಣ ಪದ್ಧತಿಯನ್ನು ತೆಗೆದೊಗೆದು, ತಮ್ಮ ಅನುಭವಗಳನ್ನು ವಯಕ್ತಿಕವಾಗಿ ಅಭಿವ್ಯಕ್ತಗೊಳಿಸುವ ವ್ಯಕ್ತಿನಿಷ್ಠ ವಿಧಾನವೊಂದು ಮೂಡಿದುದು ಅತ್ಯಂತ ಹರ್ಷದಾಯಕವಾದ ಸಂಗತಿ. ಈ ಬಗ್ಗೆ ಬಸವಣ್ಣನವರೆ ಒಂದೆಡೆ

ತಾಳ ಮಾನ ಸರಿಸವನರಿಯೆ,

 ಓಜೆ ಬಜಾವಣೆ ಲೆಕ್ಕವನರಿಯೆ.

ಅಮೃತಗಣ ದೇವಗಣವನರಿಯೆ !

ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.

ಎನ್ನುತ್ತಾರೆ. ಈ ವಚನ ಅಂದು ಮೈಗೊಂಡ ವಚನ ರಚನಾ ಕ್ರಮವನ್ನು ಹೇಗೋ ಹಾಗೆಯೇ ಕವಿ ಮನೋಧರ್ಮವನ್ನೂ ಬಿಂಬಿಸುತ್ತದೆ. ಆನು ಒಲಿದಂತೆ ಹಾಡುವೆ’ – ಎಂಬ ವ್ಯಕ್ತಿ ಸ್ವಾತಂತ್ರದ ಧೈರ್ಯ ಬಹುಶಃ ಅಂದಿನ ತನಕ ಯಾವ ಕವಿಗೂ ಬಂದಂತೆ ತೋರುವದಿಲ್ಲ, ತಮ್ಮ ಆಶ್ರಯದಾತರ ಮನಸ್ಸಂತೋಷಕ್ಕೋ ಪಂಡಿತ ಪ್ರಶಸ್ತಿಗೋ “ಮನುಜರ ಮೇಲೆ, ಸಾವವರ ಮೇಲೆ’ ತಮ್ಮ ಕಾವ್ಯವನ್ನು ಪ್ರೌಢವಾದ ಭಾಷೆಯಲ್ಲಿ ಕಟ್ಟಿದ ಪುರಾಣ ಕವಿ ಪುಂಗವರ ಪದ್ಧತಿಯಲ್ಲಿ ಅಂದಂದಿನ ಅನುಭವವನ್ನು ತಮ್ಮದೇ ಆದ ಆಡುಮಾತಿನ ಜಾಡಿನಲ್ಲಿ ಹರಿಸಿ ‘ಅನು ಒಲಿದಂತೆ ಹಾಡುವೆ’ ಎಂದ ವ್ಯಕ್ತಿನಿಷ್ಠವಾದ ಭಾವಗೀತಾತ್ಮಕವಾದ ಈ ಪದ್ಧತಿಯಲ್ಲಿ ! ಅಚ್ಚುಕಟ್ಟಾಗಿ ಇಕ್ಕೆಲಗಳಲ್ಲಿಯೂ ಸಾಲುಮರಗಳನ್ನು ಬೆಳೆಯಿಸಿಕೊಂಡು, ಛತ್ರ ಚಾವಡಿಗಳನ್ನು ನಿರ್ಮಿಸಿಕೊಂಡು, ನಗರದಿಂದ ನಗರಕ್ಕೆ ಸಾಗುವ ರಾಜಮಾರ್ಗಗಳಲ್ಲಿ, ಕಾಡು ಮೇಡುಗಳ ನಡುವೆ ಏರಿಳಿದು, ಗಿರಿನೆತ್ತಿಯ ತೀರ್ಥಕ್ಷೇತ್ರಗಳೆಡೆಗೆ ನಡೆಯುವ ಹೆಜ್ಜೆ ಬರೆದ ಕಾಲು ಹಾದಿಗಳ ರೀತಿಯಲ್ಲಿ !

ಬಸವಣ್ಣನವರ ವಚನಗಳಲ್ಲಿ ಬೇರೆ ಯಾರ ವಚನಗಳಲ್ಲಿಯೂ ಕಾಣದ ಒಂದು ವಿಶಿಷ್ಟ ಗುಣವೆಂದರೆ, ಅಂತರಂಗದ ಅಂದಂದಿನ ತೊಳಲಾಟಗಳ ನಿರೂಪಣೆ, ಸತ್ಯದ ಹಾದಿ ನಡೆವ ಮಹಾಸಾಧಕನೊಬ್ಬ ತನ್ನ ಅಂತರಂಗ ಹಾಗೂ ಬಹಿರಂಗ ಜಗತ್ತಿನೊಡನೆ ನಡೆಸಿದ ನಿರಂತರ ಹೋರಾಟದ ಕ್ರಿಯೆ-ಪ್ರತಿಕ್ರಿಯೆಗಳ ಚಿತ್ರ ಇವುಗಳಲ್ಲಿದೆ, ಪ್ರಾಮಾಣಿಕವಾದ ಆತ್ಮ ಸಂಶೋಧಕರೊಬ್ಬರು ಅಪೂರ್ವ ದಿನಚರಿಯ ವಿಶಿಷ್ಟ ಮಾದರಿಗಳನ್ನು ಬಸವಣ್ಣನವರ ವಚನಗಳಲ್ಲಿ ನಾವು ಕಾಣಬಹುದು. ಉದಾಹರಣೆಗೆ ಅವರ ವಚನಗಳಿಂದ ಎತ್ತಿಕೊಂಡ ಈ ಹಲವು ಮಾತುಗಳನ್ನು ನೋಡಿ

‘ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ

ಎನ್ನುವನು ಕಾಯಯ್ಯಾ’

‘ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ’

“ಎನ್ನವರೊಲಿದು ಹೊನ್ನ ಶೂಲದಲಿಕ್ಕಿದರೆನ್ನ ಹೊಗಳಿ, ಹೊಗಳಿ

ನಾನೇನು ಪಾಪವ ಮಾಡಿದೆನೋ?

“ಎನ್ನಲ್ಲಿ ಭಕ್ತಿ ಸಾಸವೆಯ ಪಡಾಗದನಿತಿಲ್ಲ:

ಎನ್ನ ಭಕ್ತನೆಂಬರು, ಸಮಯಾಚಾರಿಯೆಂಬರು |

ನಾನೇನು ಪಾಪವು ಮಾಡಿದ್ದೇನೋ’

 ‘ಬೆರಣಿಯನಾಯಲೊಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ

ನೀ ಕರುಣಿಸಾ ಕೂಡಲ ಸಂಗಮದೇವಾ’.

ಇಂತಹ ಮಾತುಗಳು ಅವರ ಮಾನಸಿಕ ಹೋರಾಟದ ವ್ಯಥೆಯ ಕಥೆಯನ್ನೂ, ಅಂತೆಯೇ ಅವರು ಏರಿದ ನಿಲುವನ್ನೂ ಸೂಚಿಸುತ್ತವೆ.

ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮತ್ತೊಂದು ಗುಣವೆಂದರೆ, ಅವರ ರೂಪಕ ವೈಭವ, ಬಸವಣ್ಣನವರ ವಚನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ, ನಾರಣಪ್ಪ, ಬಸವೇಶ್ವರ ಇವರಿಬ್ಬರ ಹಾಗೆ ಭಾಷೆಯ ಸಾಧ್ಯತೆಯನ್ನು ಸೂರೆಮಾಡಿದವರು ಹಾಗೂ ರೂಪಕ ನಿರ್ಮಾಣ ಮಾಡಿದವರು ವಿರಳವೆಂದೇ ಹೇಳಬೇಕು. ಒಂದು ಪಂಕ್ತಿಯಲ್ಲಿ ಒಂದೇ ಒಂದು ಚಿತ್ರ ಮಿನುಗುತ್ತಾ ನಿಲ್ಲುವುದುಂಟು- ‘ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಆಯಿತಯ್ಯಾ’ ಎಂಬಲ್ಲಿಯಂತೆ; ಕೆಲವೆಡೆ ಒಂದೇ ವಚನದಲ್ಲಿ ಮೂರು, ನಾಲ್ಕು ಶಬ್ದ ಚಿತ್ರಗಳೂ ಬರುವುದುಂಟು

‘ಬೆಲ್ಲವ ತಿಂದ ಕೋಡಗನಂತೆ ಸಿಹಿಯನರಸದಿರಾ ಮನವೇ,

ಕಬ್ಬುತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೇ,

 ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೇ…..

ಹೀಗೆ ‘ಬೆಲ್ಲವ ತಿಂದ ಕೋಡಗ’ ‘ಕಬ್ಬು ತಿಂದ ನರಿ’ ‘ಗಗನವನಡರಿದ ಕಾಗೆ’- ಈ ಮೂರು ಚಿತ್ರಗಳೂ ಚಂಚಲ ಮನಸ್ಸಿನ ಸ್ವಭಾವದ ಪ್ರತಿಮೆಗಳಾಗಿವೆ. ಮತ್ತೆ ಕೆಲವೆಡೆ ಒಂದೇ ಪ್ರತಿಮೆ ಒಂದು ವಚನದ ತುಂಬ ತುಂಬಿ ಥಳಥಳಿಸುವುದೂ ಉಂಟು

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?

 ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ,

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ?

ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ.

ಮನಸ್ಸಿನ ರಿಕ್ತ ಸ್ಥಿತಿಯ ಸೊಗಸಾದ ಪ್ರತಿಮೆ, ‘ಮನೆಯೊಳಗೆ ಮನೆಯೊಡೆಯನಿಲ್ಲದ ಈ ಮನೆಯ ಚಿತ್ರ. ಮತ್ತೆ ಒಂದೊಂದು ಸಲ ಒಂದೇ ಒಂದು ಚಿತ್ರ ಮೂರು ನಾಲ್ಕು ವಚನಗಳಲ್ಲಿ ವಿಸ್ತರಿಸಿ ಸೊಗಸುವುದೂ ಉಂಟು ವಿಷಯವೆಂಬ ಹಸುರನನ್ನ ಮುಂದೆ ತಂದು ಪಸರಿಸದೆಯಯ್ಯಾ; ಹಸುವೇನ ಬಲ್ಲದು? ಹಸುರೆಂದೆಳಸುವುದು’ ಎಂದು ಮೊದಲಾಗುವ ಹಸುವಿನ ಚಿತ್ರ, ಇನ್ನೊಂದು ವಚನದಲ್ಲಿ, “ಕೆಸರಲ್ಲಿ ಬಿದ್ದ ಪಶುವಿನಂತಾನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ” ಎಂದು ಮುಂದುವರಿದು, ಮತ್ತೊಂದು ವಚನದಲ್ಲಿ “ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ ಅಂಬೇ ಅಂಬೇ’ ಎಂದು ಒರಲುತ್ತಲಿದ್ದೇನೆ’ ಎಂದು ಮುಂದು ವರಿಯುತ್ತದೆ. ಹೀಗೆ ಈ ವಚನಗಳ ತುಂಬ ಇಂಥ ಚಿತ್ರಪರಂಪರೆ ಯಾರನ್ನಾದರೂ ಬೆರಗಾಗಿಸುತ್ತದೆ. ಅಂದಣವನೇರಿದ ಸೊಣಗ” ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗ” ““ಹಡಿಕೆಗೆ ಮೆಚ್ಚದ ಸೊಣಗ

“ಕೆಸರಲ್ಲಿ ಬಿದ್ದ ಪಶು” “ಮರವನೇರಿದ ಮರ್ಕಟ” ‘ಸಲುಗೆಗೆ ಸಲ್ಲದ ಕಳ್ಳ ನಾಣ್ಯ, – ಇತ್ಯಾದಿ ಚಿತ್ರಗಳು ಮಾನಸಿಕ ಅಪಕ್ವತೆ ಹಾಗೂ ಅವ್ಯವಸ್ಥೆಗೊಡ್ಡಿದ ಪ್ರತಿಮೆಗಳಾದರೆ, ‘ಅರಿಸಿನವನೆ ಮಿಂದು ಹೊಂದೊಡಿಗೆಮನೆ ತೊಟ್ಟು ಪುರುಷನ ಬಲವಿಲ್ಲದ ಲಲನೆಯಂತೆ” ಕಾಯುವ ಹೆಣ್ಣು ‘ಗಿಳಿಯ ಹಂಜರವಿಕ್ಕಿ ಸೊಡರಿಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರುವ ಹಾರುವ’ ವಧು- ದೇವಪತಿಗಾಗಿ ಹಾರೈಸಿ ನಿಂತ ಜೀವಸತಿಯ ಚಿತ್ರವನ್ನು ಕೊಡುತ್ತದೆ. ಇಂತಹ ಎಷ್ಟೋ ಚಿತ್ರಗಳಿಂದ ಈ ವಚನಗಳು ಅಪೂರ್ವ ತೇಜಸ್ಸಿನಿಂದ ಮಿನುಗುತ್ತವೆ.

ಬಸವಣ್ಣನವರ ವಚನಗಳಲ್ಲಿ ಈ ಬಗೆಯ ರೂಪಕ ಭಾಷೆ, ಅಂತರಂಗದ ತೀವ್ರ ತುಮುಲಗಳನ್ನು ನಿರೂಪಿಸಿ ದಂತೆ, ಅವರ ಸೂಕ್ತಿ ಸದೃಶವಾದ, ಸರಳವಾದ, ನಿರಾಲಂಕಾರವೆಂಬಂತಹ ಮಾತುಗಳೂ, ದೊರೆಯುತ್ತವೆ. ಅವರು ಅಂದಿನ ಸಮಾಜದ ನಡೆವಳಿಕೆಗಳನ್ನು ಕುರಿತು ಆಡಿದ ವಚನಗಳಲ್ಲಿ, ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ‘ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯಾ’ ‘ಅಯ್ಯಾ ಎಂದೊಡೆ ಸ್ವರ್ಗ, ಎಲವೊ ಎಂದೊಡೆ ನರಕ’ ‘ದೇವನೊಬ್ಬ ನಾಮ ಹಲವು’ – ಇಂತಹ ಮಾತುಗಳಲ್ಲಿ ಭಾಷೆಯನ್ನು ಅವರು ಬಳಸಿಕೊಂಡ ರೀತಿ ಸೊಗಸಾಗಿದೆ. ವಾಸ್ತವವಾಗಿ ಜನಭಾಷೆಯನ್ನು ವಚನ ರಚನೆಗೆ ಬಳಸಿಕೊಂಡು ಬಸವಣ್ಣನವರು ‘ಕನ್ನಡ ಮಾಧ್ಯಮ’ದ ಮಹತ್ತನ್ನು ಎತ್ತಿ ತೋರಿಸಿದ್ದಾರೆ. ಭಾಷೆ-ಛಂದಸ್ಸಿನ ದೃಷ್ಟಿಯಿಂದಲೂ ಅವರ ಸಾಧನೆ ಸಾಮಾನ್ಯವಾದುದೇನಲ್ಲ, ವಚನ ಶೈಲಿಯ ಈ ಮುಕ್ತಗಮನವನ್ನು ನೋಡಿ

ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರಗೂಡುವೋಗದ ಮುನ್ನ,

 ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕಯ್ಯನೂರಿ ಕೋಲ ಹಿಡಿಯದ ಮುನ್ನ

ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ

ಪೂಜಿಸು ನಮ್ಮ ಕೂಡಲ ಸಂಗಮದೇವನ

ಈ ಅಪೂರ್ವವಾದ ಧಾಟಿ, ಅಂದಿನ ಕಾಲಕ್ಕಾದರೂ ಸಂಪ್ರದಾಯದ ಪಾಚಿಯನ್ನು ಸರಿಸಿ ಸಾಮಾನ್ಯ ಭಾಷೆಯ ಸರಳ ಸೌಂದರ್ಯದ ಪರಿಚಯ ಮಾಡಿಕೊಡುತ್ತದೆ. ಇಲ್ಲಿನ ಮನೋಧರ್ಮ ಭಾವಗೀತೆಯ ಕವಿಯದು; ಇವುಗಳ ಭಾಷೆ ಜನಸಾಮಾನ್ಯದ ಆಡುಮಾತಿನ ಭಾಷೆ; ಇಲ್ಲಿನ ಶೈಲಿ ಸ್ವಚ್ಛಂದ, ಒಂದು ಮಾತಿನಲ್ಲಿ ಹೇಳುವುದಾದರೆ ಭಾವಗೀತಾತ್ಮಕವಾದ ಮುಕ್ತಛಂದದ ಮುಕ್ತಕಗಳು ಈ ವಚನಗಳು ಇವುಗಳಲ್ಲಿ ತೊಳಗಿ ಬೆಳಗುತ್ತಿರುವುದು ಶಿವನ ಸೋಪಾನವನ್ನೇರಿ ಹೊರಟ ಆತ್ಮಸಾಧಕರ ಮಿಂಚಿನ ಹೆಜ್ಜೆಗಳ ಗುರುತು. ಬಸವಣ್ಣನವರ ಮಾತಿನಲ್ಲಿಯೇ ಹೇಳುವುದಾದರೆ

ಕೆರೆ ಹಳ್ಳ ಬಾವಿಗಳು ಮೈದೆಗೆದರೆ

ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು;

 ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು,

ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ,

ಲಿಂಗವೆ ಕಾಣಬಹುದು.

 ಹೌದು; ಕೂಡಲಸಂಗನ ಶರಣರಾದ ಬಸವಣ್ಣನವರು ಮನದೆರೆದು ಮಾತಾಡಿದ್ದರಿಂದ ಕನ್ನಡ ಸಾಹಿತ್ಯಕ್ಕೆ ಲಭಿಸಿತು ಈ ವಚನ ದೃಷ್ಟಿ; ಇವುಗಳಲ್ಲಿ ತೊಳಗಿ ಬೆಳಗುತ್ತಿದೆ ಲಿಂಗಾನುಭಾವದ ದೃಷ್ಟಿ,

——————————————————————————-

Article collected by ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

Related Posts