ಮೂಲ ಲೇಖನ :ಲಿಂ. ಕುಮಾರ ಸ್ವಾಮಿಗಳು ಕಲ್ಮಠ ಸವದತ್ತಿಬಿದರಿ.

ಮಾಹಿತಿ ಸಹಾಯ : ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ

ನಮ್ಮೀ ಭಾರತಭೂಮಿಯಲ್ಲಿ ಅನೇಕ ಸಾಧು-ಸತ್ಪುರುಷರು, ಮಹಾಯೋಗಿಗಳು ಜನಿಸಿ ಜನಜೀವನವನ್ನು ಪಾವನಗೊಳಿಸಿರುವುದು ಸರ್ವವೇದ್ಯವಾದ ವಿಷಯ. ಕನ್ನಡನಾಡಂತೂ ಶತಶತಮಾನಗಳಿದ ಬಹುಜನ ಯೋಗಿಗಳಿಗೆ, ತ್ಯಾಗಿಗಳಿಗೆ, ವೀರರಿಗೆ ಕಲೆಗಾರರಿಗೆ ತವರುಮನೆಯಾಗಿದೆ. ಅವರೆಲ್ಲರು ಕಾಲಕಾಲಕ್ಕೆ ಅವತರಿಸಿ ಜನಮನದ ಮಾಲಿನ್ಯವನ್ನು ಕಳೆದು ಹೊಸ ಕಳೆಯನ್ನು ಶಿವಮಯ ಚೈತನ್ಯವನ್ನು ತುಂಬಿದ ಮಹಾಕಾರ್ಯವೆಸಗಿದ್ದಾರೆ. ಅಂತಹರಲ್ಲಿ ಬಸವಾದಿ ಪ್ರಮಥರು ಚಿರಸ್ಮರಣೀಯರು, ಹನ್ನೆರಡನೆಯ ಶತಮಾನದಲ್ಲಿ ಬಸವ, ಚೆನ್ನಬಸವ, ಪ್ರಭುದೇವ, ಅಕ್ಕಮಹಾದೇವ, ಸಿದ್ದರಾಮ ಮೊದಲಾದ ಜಗದ್ವಿಭೂತಿಗಳು ಉದಯಿಸಿ ಜನತೆಗೆ ವಚನಾಮೃತ ಸವಿಯನುಣಿಸಿದರು, ಜಗವನುದ್ಧರಿಸಿದರು. ಹದಿನಾಲ್ಕನೆಯ ಶತನಮಾನದಲ್ಲಿ ನೂರೊಂದು ವಿರಕ್ತರು ಧಮರ್ಜಾಗೃತಿಯನ್ನುಂಟು ಮಾಡಿದರು. ಹದಿನಾರನೆಯ ಶತಮಾನದಲ್ಲಿ ಎಡೆಯರೂ ಶ್ರೀ ತೋಂಟದ ಸಿದ್ದಲಿಂಗಯತಿವರೇಣ್ಯರು ಅವರ ಶಿಷ್ಯಕೋಟಿಯೂ ಅನೇಕ ಬಗೆಯಾಗಿ ಧರ್ಮ-ಸಾಹಿತ್ಯಗಳನ್ನು ಬೆಳಗಿಸಿದ ಮಹತ್ಕಾರ್ಯ ಮಾಡಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿಯೂ ಬಿದರಿಯ ಶ್ರೀ ಕುಮಾರ ಶಿವಯೋಗಿಗಳು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಬಿಳೂರ ಶ್ರೀಗುರುಬಸವ ಮಹಾಸ್ವಾಮಿಗಳು ಮೊದಲಾದ ಪೂಜ್ಯರು ತಮ್ಮ ತಪಃಸಾಮರ್ಥ್ಯದಿಂದ ಅನೇಕ ಬಗೆಯ ಲೋಕಹಿತದ ಮಹಾಕಾರ್ಯಗಳನ್ನು ಮಾಡಿರುವರು, ಸೊಲ್ಲಾಪೂರದ ಶ್ರೀ ವೀರೇಶ್ವರ ಶಿವಶರಣರೂ, ಸಿರಸಂಗಿಯ ಶ್ರೀ ಲಿಂಗರಾಜರಂಥ ಉದಾರಿ ದಾನಿಗಳೂ ಆಗಿ ಹೋಗಿದ್ದಾರೆ. ಪೂಜ್ಯ ಶಿವಯೋಗಿಗಳ ಮಾಲಿಕೆಯಲ್ಲಿ ಹಾವೇರಿಯ ಹುಕ್ಕೇರಿ ಮಠದ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳವರು ತಪೋನಿಷ್ಠರೂ, ವೈರಾಗ್ಯಸಂಪನ್ನರೂ. ಕರುಣಾಳುಗಳೂ ಆಗಿದ್ದು ಜಗದ್ವಂದ್ಯರಾಗಿದ್ದಾರೆ. ಅವರು ಶಿವಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾಶಿವಯೋಗಿಗಳಾದರು. ಅಷ್ಟೆ ಅಲ್ಲದೆ. ಶಿವಯೋಗದ ರಹಸ್ಯವನ್ನು ಸಾಧಕರಿಗೆ ಅರುಹಲು ಶಿವಯೋಗಮಂದಿರದಂಥ ಅಧ್ಯಾತ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಆ ಮಹಾಸಂಸ್ಥೆಯ ಅಂಗವಾಗಿ ಉದಯಿಸಿದ ಅನೇಕ ಶಾಖಾಮಂದಿರಗಳು ಹಾವೇರಿ ಶ್ರೀಗಳವರ ತಪಃ ಸಾಮರ್ಥ್ಯದ ಹೆಗ್ಗುರುತಾಗಿವೆ. ಅವರಲ್ಲಿದ್ದ ಸಮಾಜ ಕಲ್ಯಾಣ ಭಾವನೆ, ಅದಕ್ಕಾಗಿ ಅವರು ತೋರಿದ ವಿರತಿ, ವ್ಯಕ್ತಿಯ ಉದ್ಧಾರಕ್ಕಾಗಿಯೇ ಇದ್ದ ಅವರ ಕೃಪಾಬಲ, ಭಕ್ತವೃಂದದ ಮೇಲೆ ಅವರಿಟ್ಟ ಪ್ರೀತಿ ಮೊದಲಾದವು ಚಿರಸ್ಮರಣೀಯವಾದವು,

ಜನನ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಪ್ತಸಾಗರವೆಂಬ ಗ್ರಾಮ, ಅಲ್ಲಿಯ ಹಿರಿಯಮಠದ ಶಿವಗಂಗಮ್ಮ ಗಿರಿಮಲ್ಲಯ್ಯನವರೆಂಬ ಮಾಹೇಶ್ವರ ದಂಪತಿಗಳ ಪವಿತ್ರ ಉದರಾಂಬುಧಿಯಲ್ಲಿ ‘ಶಿವಬಸವ’ ಎಂಬ ಶಿಶುರತ್ನ ಕ್ರಿ.ಶ. 1857 ಆನಂದನಾಮ ಸಂವತ್ಸರ. ಮಾಘ ಬ. ೧4 ಶುಕ್ರವಾರ ಶಿವರಾತ್ರಿಯಂದು ಅಶ್ವಿನೀ ನಕ್ಷತ್ರ ಬೆಳಗುಜಾವದ ೪ ಘಂಟೆಗೆ ಉದಯಿಸಿತು. ಶಿವಪೂಜಾ ಪ್ರೇಮಿ ಶಿವಗಂಗವ್ವ ತಾಯಿಗೆ ಮೊದಲೇ ತಪಸ್ವಿ ಶಿವಯೋಗಿಯೊಬ್ಬರು ಜನಿಸುವ ಶಿಶು ಸಾಮಾನ್ಯ ಮಾನವನಾಗದೆ ‘ಪರಮವಿರಾಗಿ ಲೋಕೋದ್ಧಾರಿ ಶಿವಯೋಗಿ’ ಎಂದು ಭವಿಷ್ಯ ನುಡಿದಿದ್ದರಂತೆ. ಮಹಾತಾಯಿ ಈ ಲೋಕೋತ್ತರ ಶಿಶುವನ್ನು ಹೆಚ್ಚಿನ ಮಮತೆ ಮತ್ತು ಭಕ್ತಿಯಿಂದ ಸಲುಹಿದಳು. ಶಿವಬಸವೇಶನ ಬಾಲಲೀಲೆಗಳನ್ನು ಕಂಡು ಸಪ್ತಸಾಗರದ ಸಮಸ್ತ ಜನರೂ ಅಚ್ಚರಿ ಪಡುತ್ತಿದ್ದರು.

ಬಾಲ್ಯ

ಐದು ವರ್ಷದ ಶಿವಬಸವೇಶನು ಕನ್ನಡ ಓದುಮಠದಲ್ಲಿ ಪ್ರವೇಶ ಪಡೆದನು. ಬಾಲಕ ಶಿವಬಸವೇಶನ ಬುದ್ಧಿ. ಜ್ಞಾಪಕಶಕ್ತಿಯನ್ನು ಗುರುಗಳು ಕಂಡು ಮೆಚ್ಚಿದರು. ಉಳಿದ ಬಾಲಕರಂತೆ ಅವನಿಗೆ ಸಲ್ಲದ ಆಟನೋಟಗಳಲ್ಲಿ ಆಸಕ್ತಿಯಿರಲಿಲ್ಲ. ಓದಿನಲ್ಲಿ ಮುಂದುವರಿದಂತೆ ಶಿವಬಸವೇಶನು ಶಾರೀರಿಕ ಚಟುವಟಿಕೆಗಳಲ್ಲಿಯೂ ಮೇಲಾಗಿದ್ದನು. ಸುಂದರವಾದ ಮೈಕಟ್ಟು ಗಟ್ಟಿಮುಟ್ಟಾದ ಆಳು, ಕುಸ್ತಿಯಾಡುವುದೆಂದರೆ ಶಿವಬಸವೇಶನಿಗೆ ಬಲು ಹಿಗ್ಗು. ತನಗಿಂತಲೂ ಮಿಗಿಲಾದ ಹುಡುಗರನ್ನು ಸ್ಪರ್ಧೆಯಲ್ಲಿ ಸೋಲಿಸದೆ ಬಿಡುತ್ತಿರಲಿಲ್ಲ. ಎಲ್ಲ ಸರಿಕರಲ್ಲಿ ಪ್ರಿತಿಯಿಂದ ವರ್ತಿಸುವುದು ಶಿವಬಸವೇಶನ ಗುರುಗಳಿಗೆ ಬಹಳ ಸಂತೋಷವನ್ನುಂಟು ಮಾಡಿತ್ತು. ವಿದ್ಯೆ, ಬುದ್ದಿ ಸದ್ಗುಣಗಳಿಂದ ಶೋಭಿಸುವ ಮಗುವನ್ನು ಕಂಡು ತಂದೆತಾಯಿಗಳಿಗೆ ಸಂತೋಷವಾಯಿತು, ಗ್ರಾಮಸ್ಥರಿಗೆ ಹೆಮ್ಮೆಯೆನಿಸಿತು, ಶಿವಬಸವೇಶ ಎಲ್ಲರ ಕಣ್ಮಣಿಯಾಗಿದ್ದ.

ಶಿಕ್ಷಣ

ಶಿವಬಸವೇಶ ಕುಲಕೋಟಿಯನ್ನು ಉದ್ಧಿರಿಸಲು ಅವತರಿಸಿದ ಮಹಾಪುರುಷನೆಂದು ಭಕ್ತರೆಲ್ಲ ಬಗೆದಿದ್ದರು. ಬಾಲ್ಯದಲ್ಲಿಯೇ ಅವನ ವಿಲಕ್ಷಣ ಲೀಲೆಗಳನ್ನು ಕಂಡು ಜನ ಅವನನ್ನು ಸಾಮಾನ್ಯ ಬಾಲಕನೆಂದು ಎಣಿಸಿರಲಿಲ್ಲ.

ಒಂದು ದಿನ ಪರಮ ಶಿವಯೋಗಿಗಳಾದ ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳವರು ಸಪ್ತಸಾಗರಕ್ಕೆ ದಯಮಾಡಿಸಿದರು, ಹಿರಿಯಮಠದಲ್ಲಿ ಶಿವಲಿಂಗಾರ್ಚನೆಗೆ ಗಿರಿಮಲ್ಲಯ್ಯನವರು ಎಲ್ಲವನ್ನು ಅಣಿ ಮಾಡಿದ್ದರು, ಅರ್ಚನೆ-ಅರ್ಪಣ-ಅನು ಭಾವಗಳನ್ನು ಮುಗಿಸಿ ಭಕ್ತರ ಕ್ಷೇಮವನ್ನು ವಿಚಾರಿಸುತ್ತಿರುವಾಗ ಮುಗ್ಧ ಬಾಲಕ ಶಿವಬಸವೇಶನ ಮೇಲೆ ಪೂಜ್ಯರ ದೃಷ್ಟಿಹರಿಯಿತು. ಅವನ ಮುದ್ದಾದ ಮಾತುಗಳು, ವಿನೀತ ನಡೆ ಶ್ರೀಗಳವರ ಮನವನ್ನು ಸೆಳೆದವು. ಆ ಬಾಲಕನಲ್ಲಿ ಶಿವಯೋಗಿಯಾಗುವ ಲಕ್ಷಣಗಳನ್ನು ದಿವ್ಯದೃಷ್ಟಿಯಿಂದ ತಿಳಿದ ಶ್ರೀಗಳವರು ಭಕ್ತರನ್ನು ತಂದೆ-ತಾಯಿಗಳನ್ನು ಒಪ್ಪಿಸಿ ಶಿವಬಸವೇಶನನ್ನು ಕರೆದುಕೊಂಡು ಅಥಣಿಗೆ ದಯಮಾಡಿಸಿದರು.

ಶ್ರೀ ಮರುಳಸಿದ್ದ ಶಿವಯೋಗಿಗಳೇ ಶಿವಬಸವೇಶನ ತಂದೆ-ತಾಯಿಯಾದರು, ಶಿವಬಸವೇಶನು ಗುರುವಿನ ಕೃಪಾಶ್ರಯದಲ್ಲಿ ಬೆಳೆಯಹತ್ತಿದ, ಗುರುಕುವರ ಶಿವಬಸವೇಶ ಕನ್ನಡ ಪ್ರಾಥಮಿಕ ಶಿಕ್ಷಣ ಪಡೆಯಹತ್ತಿದ, ಹತ್ತನೆಯ ವರ್ಷದಲ್ಲಿ  ಶ್ರೀಗಳವರು ಅಡಹಳ್ಳಿಯ ಹಿರಿಯಮಠದ ಗುರುಗಳಿಂದ ವಿಧಿಪ್ರಕಾರ ಲಿಂಗದೀಕ್ಷೆಯನ್ನು ಕೊಡಿಸಿದರು, ಬಿಳಿಯ ಟೊಪ್ಪಿಗೆ ಕಪನಿಗಳನ್ನು ಧರಿಸಿ ಶಿವಬಸವಾರ್ಯ ಗುರುವಿಗೆ ತಕ್ಕ ಶಿಷ್ಯನಾಗುವ ರೀತಿ-ನೀತಿಗಳನ್ನು ಕಲಿಯಹತ್ತಿದ, ತಪ್ಪದೆ ಶುಚಿಯಾಗಿ ಲಿಂಗಪೂಜೆಯನ್ನು ಮಾಡಿಕೊಳ್ಳುವುದು, ವಿನಯದಿಂದ ವರ್ತಿಸುವುದು, ಜೀವಿಗಳಲ್ಲಿ ದಯೆ ತೋರುವುದು, ಸತ್ಯ-ಕ್ಷಮೆ ದಯೆಗುಣಗಳನ್ನು ಒಂದೊಂದನ್ನಾಗಿಯೇ ಗುರೂಪದಿಷ್ಟ ರೀತಿಯಲ್ಲಿ ಸಾಧಿಸುವುದು ಹೀಗೆ ಶಿವಬಸವಾರ್ಯನ ಸಾಧನೆಯ ಮಾರ್ಗವಾಯಿತು.

ಶಿವಬಸವಾರ್ಯರಿಗೆ ದೈವದತ್ತವಾದ ಮಂಜುಳ ಕಂಠವಿತ್ತು, ಶಿವಪೂಜೆಯ ಕಾಲದಲ್ಲಿ, ಪ್ರತಿನಿತ್ಯ ಮುಂಜಾನೆ ಏಳುವಾಗಲೂ ಮಲಗುವಾಗಲೂ ಮಂಜುಳವಾಗಿ ನಿಜಗುಣ-ಸರ್ಪಭೂಷಣ-ಘನಮಠಾರ್ಯರ ಅನುಭವದ ಪದಗಳನ್ನು ಹಾಡುವುದು ಶಿವಬಸವಾರ್ಯರ ನಿಯಮವಾಗಿತ್ತು, ಮಠದಲ್ಲಿ ಇನ್ನು ಅನೇಕ ಶಿಷ್ಯರು, ವಟುಗಳು ಇದ್ದರು. ಅವರೆಲ್ಲರಲ್ಲಿ ಶಿವಬಸವಾರ್ಯರು ಹಿರಿಯ ಮಣಿಯಂತೆ ಬೆಳಗುತ್ತಿದ್ದರು. ಶ್ರೀಗಳವರ ನೆಚ್ಚಿನ ಗುರುಕರಜಾತರಾಗಿದ್ದರು.

ಶ್ರೀಗಳವರ ಅಪ್ಪಣೆಯಂತೆ ಶಿವಬಸವದೇವರು ಕೆಲವು ವರ್ಷ, ಮಿರಜಿಯಲ್ಲಿದ್ದು ಸಂಗೀತಶಾಸ್ತ್ರವನ್ನು ಕಲಿತರು ಪ್ರೌಢವಿದ್ಯೆಯ ವ್ಯಾಸಂಗಕ್ಕಾಗಿ ಬಳ್ಳಾರಿಯಲ್ಲಿಯ ಸಕ್ಕರಿ ಕರಡೆಪ್ಪ ಮಹಾಶಿವಶರಣರ ಸಂಸ್ಕೃತ ಪಾಠಶಾಲೆಗೆ ಬಂದರು, ಅಲ್ಲಿ ಕನ್ನಡ-ಸಂಸ್ಕೃತ ಕಾವ್ಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ 1900ರಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ವಿದ್ವತ್ತನ್ನು ಸಂಪಾದಿಸಲು ಕಾಶಿಗೆ ದಯಮಾಡಿಸದರು, ಭಕ್ತರು ತಮಗೆ ಕಳಿಸುತ್ತಿದ್ದ ಹಣದಲ್ಲಿ ಮಿತವಾಗಿ ಇದ್ದು, ಉಳಿದುದನ್ನು ಬಡವಿದ್ಯಾರ್ಥಿಗಳಿಗೆ ಕೊಟ್ಟು ಶಿವಬಸವದೇವರು ಕಾಶಿಯಲ್ಲಿ ಆದರ್ಶ ‘ಶಾಸ್ತ್ರಿ’ಗಳೆಂದು (ಕನ್ನಡ ನಾಡಿನಿಂದ ಕಾಶಿಗೆ ಸಂಸ್ಕೃತ ಶಾಸ್ತ್ರಾಭ್ಯಾಸ ಮಾಡಲು ಹೋದ ಮಠಾಧಿಪತಿ ವಿದ್ಯಾರ್ಥಿಗಳನ್ನು ಅಲ್ಲಿಯ ಜನರ ‘ಶಾಸ್ತ್ರಿ’ಗಳೆಂದು ಕರೆಯುವುದು ವಾಡಿಕೆ)ಹೆಸರಾಗಿದ್ದರು. ಶ್ರೀ ಶಿವಬಸವದೇವರು ಆರು ವರ್ಷಗಳವರೆಗೆ ಕಾಶಿಯಲ್ಲಿದ್ದು ವ್ಯಾಕರಣ ಅಲಂಕಾರ ಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ದೇಶಕ್ಕೆ ಮರಳಿದರು.

ಶ್ರೀಮರುಳಸಿದ್ದ ಶಿವಯೋಗಿಗಳು ತಮ್ಮ ನೆಚ್ಚಿನ ಶಿಷ್ಯನ ಬರುವನ್ನೆ ನಿರೀಕ್ಷಿಸಿದ್ದರು, ಅವರಿಗೆ ಆಗಲೆ ಮುಪ್ಪು ಆವರಿಸಿತ್ತು, ಶಾರೀರಿಕ ಬಲ ಉಡುಗಿತ್ತು, ಆಗ ಅವರ ಅನುಗ್ರಹವನ್ನು ಪಡೆದ ಬಿದರಿಯ ಶ್ರೀ ಕುಮಾರ ಮಹಾಸ್ವಾಮಿಗಳವರು ಅಥಣಿಗೆ ದಯಮಾಡಿಸಿದರು. ಗುರುವರ್ಯರ ಅನುಜ್ಞೆಯಂತೆ ಶಿವಬಸವ ದೇವರಿಗೆ ಅನುಗ್ರಹ-ಅಧಿಕಾರಗಳನ್ನು ಕೊಡುವ ಹೊಣೆಯನ್ನು ಹೊತ್ತರು. ಶ್ರೀ ಮರುಳಸಿದ್ಧ ಶಿವಯೋಗಿಗಳು ಲಿಂಗೈಕ್ಯವಾದರು. ಗುರುವಿನ ಕೃಪೆಗೆ ಪಾತ್ರರಾದ ಉಭಯ ಗುರುಕರಜಾತರೂ ಬಹುವಾಗಿ ಪರಿತಪಿಸಿದರು. ಗುರುವಿನ ಉಪದೇಶವನ್ನು ನೆನೆದು ಮುಂದಿನ ಸಾಧನೆಗೆ ಸನ್ನಧ್ಧರಾದರು. ಬಿದರಿ ಶ್ರೀಗಳವರು ಬಹುವಾಗಿ ಸಂತಯಿಸಿ ಶಿವಬಸವದೇವರ ದು: ಖವನ್ನು ಕಳೆದರು. ಕೆಲವು ಕಾಲ ಅಥಿಣಿಯಲ್ಲಿಯೇ ವಾಸವಾಗಿದ್ದರು.  ನಂತರ ಶಿವಬಸವ ದೇವರು ಬಿದರಿ ಶ್ರೀಗಳವರ ಸೇವೆಯಲ್ಲಿಯೇ ನಿಂತರು. ಗುರುವಿನ ಸೇವೆಯನ್ನು ಮನಮುಟ್ಟಿ ಮಾಡುತ್ತ ಬಿಡುವಿನ ವೇಳೆಯಲ್ಲಿ ಲಿಂಗಾಯತ ಸಿದ್ದಾಂತ ಮತ್ತು ಶಿವಾನುಭವಶಾಸ್ತ್ರವನ್ನು ಗುರುಮುಖವಾಗಿ ತಿಳಿದು ಆಚರಿಸಹತ್ತಿದರು.

ಬಿದರಿ ಶ್ರೀ ಕುಮಾರ ಮಹಾಸ್ವಾಮಿಗಳು ಸವದತ್ತಿ ಗ್ರಾಮದ ತಮ್ಮ ಮಠದಲ್ಲಿ ಭೀಮಕವಿಯ ಬಸವಪುರಾಣ ವನ್ನು ಪ್ರಾರಂಭಿಸಬೇಕೆಂದು ವಿಚಾರ ಮಾಡಿದರು. ಅದಕ್ಕೆ ಭಕ್ತರೆಲ್ಲ ಒಪ್ಪಿದರು. ಶ್ರೀಮಠದಲ್ಲಿ ವಿಶಾಲವಾದ ಮಂಟಪವನ್ನು ನಿರ್ಮಿಸಿದರು. ಪುರಾಣವನ್ನು ಶ್ರೀ ಶಿವಬಸವದೇವರೇ ಹೇಳಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು. ಕಾರ್ತಿಕ ಮಾಸದ ಶುದ್ಧ ಪ್ರತಿಪದೆಯಿಂದ ಪುರಾಣವು ಪ್ರಾರಂಭವಾಗಿ ಅಖಂಡ ಆರು ತಿಂಗಳು ನಡೆಯಿತು. ಶ್ರೀ ಶಿವಬಸವದೇವರ ಸಂಸ್ಕೃತ –ಕನ್ನಡ ಸಾಹಿತ್ಯಗಳ ಆಳವಾದ ಅಭ್ಯಾಸ, ಲಿಂಗಾಯತ ಸಿದ್ಧಾಂತಗಳ ಮನನ, ಸಂಗೀತದ ಮೇಳ ಎಲ್ಲವೂ ಅವರ ಪುರಾಣ ಹೇಳುವ ಕಲೆಗೆ ಬಹು ಮೆರಗನ್ನು ತಂದುಕೊಟ್ಟಿದ್ದವು. ಭಕ್ತರ ಆನಂದಕ್ಕೆ ಮೇರೆ ಇರಲಿಲ್ಲ

 ಶ್ರೀಗಳವರೂ ಪುರಾಣ ಸಮಾಪ್ತಿಯ ಕಾಲಕ್ಕೆ ಶಿವಬಸವದೇರಿಗೆ ಅನುಗ್ರಗವನ್ನು ಮಾಡಿ ನಿರಂಜನ ಚರಪಟ್ಟಾಧಿಕಾರವನ್ನು ಕೊಟ್ಟು ಲಿಂಗಾಗ ಸಾಮರಸ್ಯ ರಹಸ್ಯವನ್ನು ಸಕೀಲವಾಗಿ ಅರುಹಿದರು. ಶ್ರೀ ಶಿವಬಸವದೇವರು ಗುರುದೇವನ ಕರುಣೆಯಿಂದ ಗುರುಸ್ವರೂಪವೇ ಆದರು, ನಿರಂಜನ ಪ್ರಣವಸ್ವರೂಪಿಗಳಾದರು – ಶ್ರೀ ಶಿವಬಸವ ಸ್ವಾಮಿಗಳೆಂದು ಸಂಪೂಜ್ಯರಾದರು. ಯೋಗ್ಯ ಗುರುಗಳಿಗೆ ಯೋಗ್ಯಶಿಷ್ಯರು, ಕುಂದಣಕ್ಕೆ ಸುಗಂಧವಿಟ್ಟಂತೆ ಅಪೂರ್ವ ಕಳೆ ಬಂದಿತು. ಶ್ರೀ ಶಿವಬಸವ ಸ್ವಾಮಿಗಳವರ ವೀರ ವಿರತಿ, ಶಿವಲಿಂಗ ಪೂಜಾನುರಕ್ತಿ, ಭಕ್ತನುಗ್ರಹಶಕ್ತಿ ಮೊದಲಾದ ಸಾತ್ವಿಕ ಗುಣಗಳನ್ನು ಕಂಡು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೆಚ್ಚಿದರು, ತಮ್ಮ ಗುರುಗಳಿಗೆ ಯೋಗ್ಯತಾ ಸಂಪನ್ನರಾದ ಉತ್ತಮ ಶಿಷ್ಯರೆಂದು ಬಗೆದು ಶ್ರೀ ಶಿವಬಸವ ಸ್ವಾಮಿಗಳವರನ್ನು ಪೂಜ್ಯ ಗುರುಗಳ ಅಪ್ಪಣೆ ಪಡೆದು ಹಾನಗಲ್ಲ ಪ್ರಾಂತಕ್ಕೆ ಕರೆದುಕೊಂಡು ಬಂದರು. ಶ್ರೀ ಶಿವಬಸವ ಮಹಾಸ್ವಾಮಿಗಳವರ ಉಫದೇಶಾಮೃತವನ್ನು ಸವಿದು ಭಕ್ತರು ಸಂತಸಗೊಂಡರು

ಹಾವೇರಿಯಲ್ಲಿ ಹುಕ್ಕೇರಿ ವಿರಕ್ತಮಠವು ಬಹುಪ್ರಸಿದ್ಧವಾದ ವಿರಕ್ತಪೀಠ, ಅದಕ್ಕೆ ಬಹುವರ್ಷಗಳಿಂದ ಯೋಗ್ಯ ಅಧಿಕಾರಿಗಳಿರಲಿಲ್ಲ. ಶ್ರೀಮಠದ ಭಕ್ತರು ಬಹಳ ಚಿಂತೆಯಲ್ಲಿದ್ದರು. ಶ್ರೀಗಳವರ ಸಾತ್ವಿಕವೃತ್ತಿ ಮತ್ತು ಲಿಂಗಪೂಜಾನಿಷ್ಠೆಯ ಕೀರ್ತಿವಾರ್ತೆಯನ್ನು ಕೇಳಿದ ಹಾವೇರಿಯ ಸದ್ಭಕ್ತರೆಲ್ಲ ಹಾನಗಲ್ಲ ಶ್ರೀಗಳವರಲ್ಲಿ ವಿನಯದಿಂದ ಬಿನ್ನಯಿಸಿಕೊಂಡರು. ಭಕ್ತರ ಆಗ್ರಹಕ್ಕೆ ಮೆಚ್ಚಿ ಹಾನಗಲ್ಲ ಶ್ರೀಗಳವರು ಯಕ್ಕುಂಡಿಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರನ್ನು ಕರೆಯಿಸಿ ಅವರ ಸನ್ನಿಧಿಯಲ್ಲಿ ಹಾವೇರಿ ಹುಕ್ಕೇರಿಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವನ್ನು 1905ರಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸದರು; ಧರ್ಮೋತ್ತೇಜಕ ಸಭೆಯನ್ನು ಈ ಪ್ರಸಂಗದಲ್ಲಿ ಏರ್ಪಡಿಸಿ ಅದರ ಮುಖಾಂತರ ನೀತಿ ಮತ್ತು ಧರ್ಮಗಳ ಉಪದೇಶವು ಭಕ್ತರಿಗೆ ದೊರಕುವಂತೆ ಮಾಡಿದರು. ಶ್ರೀ ಶಿವಬಸವ ಸ್ವಾಮಿಗಳು ಅಧಿಕಾರದ ಉತ್ಸವದಲ್ಲಿ ಭಕ್ತರಿಂದ ಬಂದ ಕಾಣಿಕೆಯನ್ನು ಮಠದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಲು ವಿನಿಯೋಗಿಸಿದರು; ತಮ್ಮ ನೂತನ ಗುರುಗಳ ಉದಾರ ಹೃದಯವನ್ನು ಸಮಾಜ ಸೇವಾಭಾವವನ್ನು ಕಂಡು ಹಾವೇರಿಯ ಭಕ್ತರು ಬಹು ಹಿಗ್ಗಿದರು.

ಉಭಯ ಶ್ರೀಗಳವರು ನಾಡಿನ ತುಂಬೆಲ್ಲ ಸಂಚರಿಸಿ ಭಕ್ತರಲ್ಲಿ ಅರುವಿನ ಬೆಳಗನ್ನು ಮೂಡಿಸಿದರು; ಮಂದಿರದ ಅಭಿವೃದ್ದಿಗಾಗಿ ಧನವನ್ನು ಶೇಖರಿಸಿದರು. ಅಲ್ಲಲ್ಲಿ ಶಾಖಾಮಂದರಿಗಳನ್ನು ಸ್ಥಾಪಿಸಿ ಅವುಗಳ ಮುಖಾಂತರ ಧಾರ್ಮಿಕ ವಿಚಾರಗಳ ಪ್ರಚಾರವನ್ನು ಮಾಡಿದರು;

ಹಾನಗಲ್ಲ ಮತ್ತು ಹಾವೇರಿಯ ಉಭಯ ಶ್ರೀಗಳವರು ಒಂದು ಹೃದಯ, ಎರಡು ಶರೀರವಾಗಿದ್ದು. ಉಭಯ ಶ್ರೀಗಳವರು ಒಂದುಗೂಡಿ ಅನೇಕ ಸಮಾಜ ಕಾರ್ಯಗಳನ್ನು ನೆರವೇರಿಸಿದರು. ಈ ಕಾರ್ಯಗಳಲ್ಲಿ ಹಾವೇರಿಯ ಶ್ರೀಗಳವರು ಹಾನಗಲ್ಲ ಶ್ರೀಗಳವರಿಗೆ ಬಲಭುಜವಾಗಿದ್ದರು, ಈ ಮಹಾಕಾರ್ಯಗಳಲ್ಲಿ 1909ರಲ್ಲಿ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯು ಬಹುಮುಖ್ಯವಾದುದು, ಅದೇ ಸ್ಥಾಪಿತವಾಗಿದ್ದ ಶಿವಯೋಗಮಂದಿರವೆಂಬ ‘ಶಿಶು’ ವಿಗೆ ಹಾನಗಲ್ಲ ಶ್ರೀಗಳವರು ತಂದೆಯಾಗಿದ್ದರೆ ಹಾವೇರಿಯ ಶ್ರೀಗಳವರು ತಾಯಿಯಂತಿದ್ದರು. ಅವರೀರ್ವರ ಸತ್‌ಪ್ರಯತ್ನಗಳ ಪರಿಣಾಮವಾಗಿ ಆ ಸಂಸ್ಥೆಯು ಮಹೋದ್ದೇಶಗಳ ಸಾಧನೆಗಾಗಿ ವಿಶಾಲವಾಗಿ ಬೆಳೆಯಿತು.

ಶ್ರೀಗಳವರಲ್ಲಿ ಹಾನಗಲ್ಲ ಪೂಜ್ಯರ ಬಗೆಗೆ ಅಪಾರವಾದ ಪ್ರೀತಿ ವಿಶ್ವಾಸಗಳಿದ್ದವು. ಉಭಯ ಶ್ರೀಗಳವರು ಪರಸ್ಪರಂ ಭಾವಯಂತಃ ಪರಮ ಶ್ರೇಯಸ್ಸನ್ನು ಪಡೆದವರು. ಹಾನಗಲ್ಲ ಶ್ರೀಗಳವರೂ ಹಾವೇರಿ ಶ್ರೀಗಳವರ ಇಚ್ಛೇಗೆ ತಪಸ್ಸಿಗೆ ಯಾವ ಆತಂಕವೂ ಬಾರದಂತೆ ವ್ಯವಹರಿಸುತ್ತಿದ್ದರು. ಯಾವ ಕಾರ್ಯಕ್ಕೂ ಹಾವೇರಿ ಶ್ರೀಗಳವರ ಅನುಮತಿಯಿಲ್ಲದೆ ಕೈಹಾಕುತ್ತಿರಲಿಲ್ಲ. ಉಭಯ ಶ್ರೀಗಳವರು ಶಿವಯೋಗಮಂದಿರ ಪುರುಷನ ಎರಡು ಕಣ್ಣುಗಳಂತೆ ಅಗಲದೆ ಇದ್ದು ಸಮಾಜದ ಆಗು-ಹೋಗುಗಳನ್ನು ಅರ್ಥೈಸಿ ಉಪಾಯಗಳನ್ನು ಕಂಡು ಹಿಡಿದರು. ಸಾಧಕರ ಅಧಿಕಾರ-ಅನುಗ್ರಹ ಕಾರ್ಯಗಳನ್ನು ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರಿಗೇ ಒಪ್ಪಿಸಿ ಬಿಡುವರು. ನವಿಲುಗುಂದ ಶ್ರೀಗಳ ಮತ್ತು ಶ್ರೀ ಅಪ್ಪಯ್ಯ ಸ್ವಾಮಿಗಳ ಅನುಗ್ರಹ ಕಾರ್ಯ ಹಾವೇರಿ ಶ್ರೀಗಳವರಿಂದ ಹಾನಗಲ್ಲ ಶ್ರೀಗಳವರ ಪ್ರೇರಣೆಯಿಂದ ನೆರವೇರಿತು. ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಸಮಾಜ ಸೇವೆಯನ್ನುಮಾಡಿ ಬಳಲಿದ್ದರು. ಮುದೇನೂರಿನಿಂದ ಕಾಯಿಲೆಯಾಗಿ ಶ್ರೀಗಳವರು ಹಾವೇರಿಗೆ ದಯಮಾಡಿಸಿದರು. ಆಗ ಹಾವೇರಿ ಶ್ರೀಗಳವರು ಹಾನಗಲ್ಲ ಶ್ರೀಗಳವರ ಶುಶ್ರೂಷೆಯನ್ನು ಬಹುವಾಗಿ ನಿರ್ವಹಿಸಿದರು. ಸಮಾಜದ ಉದ್ಧಾರಕ ಮಹಾವಿಭೂತಿಯು ಇನ್ನು ಅಪೂರ್ಣವಾಗಿ ಉಳಿದ ಮಹತ್ಕಾರ್ಯಗಳ ಸಂಪೂರ್ತಿಗಾಗಿ ಉಳಿಯಬೇಕೆಂದು ಬಗೆದು ಶ್ರೀಗಳವರು ಸರ್ವಪ್ರಯತ್ನಗಳನ್ನು ಮಾಡಿದರು. ಎಲ್ಲ ಸಾತ್ವಿಕ ಔಷಧೋಪಚಾರಗಳನ್ನು ಮಾಡಿಸಿದರು. ಆದರೆ ಶ್ರೀಗಳವರ ಪ್ರಕೃತಿ ಗುಣಮುಖವಾಗಲಿಲ್ಲ. ಹಾನಗಲ್ಲ ಶ್ರೀಗಳವರಿಗೆ ತಮ್ಮ ದೇಹಾಲಸ್ಯದ ಯೋಚನೆಯಿರಲಿಲ್ಲ. ಸಮಾಜದ ಉದ್ಧಾರವಾಗುವ ಬಗೆಗೆ ಸಮಾಜದಲ್ಲಿ ಪರಸ್ಪರ ತಿಳಿವಳಿಕೆ ಐಕ್ಯಭಾವ ಮೂಡಿ ಬರುವ ಬಗೆಗೆ ಬಹು ಯೋಚನೆಯಲ್ಲಿದ್ದರು ಆಗ ಹಾವೇರಿ ಶ್ರೀಗಳವರು ಸಾಧ್ಯವಿದ್ದ ಮಟ್ಟಿಗೂ ಅವರ ಮಹಾಕಾರ್ಯಗಳನ್ನು ಕೈಗೂಡಿಸಲು ಪ್ರಯತ್ನಿಸುವುದಾಗಿಯೂ ಶಿವಯೋಗಮಂದಿರದ ಭಾರವನ್ನು ನಿರ್ವಹಿಸುವುದಾಗಿಯೂ ಭರವಸೆಯಿತ್ತು ಹಾನಗಲ್ಲ ಶ್ರೀಗಳವರ ಕೊನೆಯ ಇಚ್ಛೆಯಂತೆ ಅವರನ್ನು ಶಿವಯೋಗಮಂದಿರಕ್ಕೆ ಕಾರಿನಲ್ಲಿ ಕರೆತಂದರು ಶ್ರೀಗಳವರ ಶೀಲಾಚರಣೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ಅಂತ್ಯವಿಧಿಗಳನ್ನು ಮಾಡಿಸಿದರು;  ಶ್ರೀಗಳವರು ಲಿಂಗೈಕ್ಯರಾದುದಕ್ಕೆ ಶರೀರರೂಪದಿಂದ ಅಗಲಿದುದಕ್ಕೆ ಸಮಾಧಿಯ ಗುದ್ದಲಿಯನ್ನು ಎತ್ತಿದಾಗ ನನ್ನ ಬಲಗೈ ಹೋಯಿತೆಂದು ಬಹುವಾಗಿ ಪರಿತಪಿಸಿದರು; ಆದರೂ ಧೈರ್ಯ ತಂದುಕೊಂಡು ಮಂದಿರದ ಅಭ್ಯುದಯವನ್ನು ತನ್ಮೂಲಕ ಸಮಾಜದ ಹಿತವನ್ನುಮಾಡಿ ಶ್ರೀಗಳವರ ಧ್ಯೇಯಗಳನ್ನು ಸಾಧಿಸಲು ಪ್ರಯತ್ನಿಸಿದರು

ಶತಮಾನಗಳಿಂದ ಸಮಾಜದಲ್ಲಿ ಕವಿದ ಮೌಢ್ಯದ ಮಬ್ಬನ್ನು ಕರಗಿಸಲು ಜ್ಞಾನದ ತಿಳಿಬೆಳಗು ಮೂಡುವಂತಾಯಿತು. 1930ರಲ್ಲಿ ಹಾನಗಲ್ಲ ಶ್ರೀ ಕುಮಾರ ಮಾಹಾಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಭಾರವೆಲ್ಲ ಹಾವೇರಿ ಶ್ರೀಗಳವರ ಮೇಲೆ ಬಿದ್ದಿತು.  ಹಾನಗಲ್ಲ ಶ್ರೀಗಳವರ ಇಚ್ಚೆಯಂತೆ ಅವರೇ ಆ ಸಂಸ್ಥೆಯ ಆಜೀವ ಅಧ್ಯಕ್ಷರಾಗಿದ್ದು ಬಿಕ್ಕಟ್ಟಿನ ಪ್ರಸಂಗಗಳಲ್ಲಿಯೂ ಸಂಸ್ಥೆಗೆ ಯಾವ ಕೊರತೆಯೂ ಬಾರದಂತೆ ನಡೆಯಿಸಿಕೊಂಡು ಬಂದರು.

 ಪ್ರಾರಂಭದಲ್ಲಿ ಏಳು ಜನ ಸಾಧಕರಿದ್ದರು. (೧. ವ್ಯಾಕರಣಾಳ ಸಿದ್ಧಲಿಂಗ ಪಟ್ಟಾಧ್ಯಕ್ಷರು; ೨. ಸವದತ್ತಿ ಅಪ್ಪಯ್ಯದೇವರು ;  ೩ ಕಂಚಗಲ್ಲ ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ೪. ಮಹಾದೇವ ದೇಶಿಕರು (ಕುರುವತ್ತಿ ಶ್ರೀಗಳು) .೫. ಮಮದಾಪುರದ ಗುರುಸಿದ್ದದೇವರು ೬. ಬಸವಲಿಂಗದೇವರು ನವಿಲಗುಂದ ೭. ಶಿವಮೂರ್ತಿದೇವರು ಚರಂತಿಮಠ ಬಾಗಲಕೋಟಿ) ಹಾವೇರಿ ಶ್ರೀಗಳವರೇ ಇವರೆಲ್ಲರ ಯೋಗಕ್ಷಮವನ್ನು ವಹಿಸಿದ್ದರು. ನಿಬಿಡವಾದ ಕಾಡಿನಲ್ಲಿ ಕಲ್ಲು-ಮುಳ್ಳುಗಳನ್ನು ತೆಗೆದು ಪರ್ಣಕುಟೀರಗಳನ್ನು ನಿರ್ಮಿಸಿ ಸಾಧಕರಿಗೆ ಯಾವ ತೆರನಾದ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಿದ್ದರು. ಹಾನಗಲ್ಲ  ಶ್ರೀಗಳವರು ತಂದೆಯಂತೆ ನಾಡಿನ ಮೂಲೆಮೂಲೆಯಲ್ಲಿ ಸಂಚರಿಸಿ ಧರ್ಮಜಾಗೃತಿಯೊಂದಿಗೆ ಮಂದಿರಕ್ಕಾಗಿ ಭಿಕ್ಷೆಯನ್ನು ಮಾಡಿದರು.

ಹಾವೇರಿ ಶ್ರೀಗಳವರು ತಾಯಿಯಂತೆ ಪ್ರೀತಿಯಿಂದ ಮಂದಿರದ ವಟುಗಳನ್ನು ಸಾಧಕರನ್ನು ಸಲಹಿದರು ಮೊದಮೊದಲು ಮಂದಿರದಲ್ಲಿ ಕಟ್ಟಡಗಳಿಗಾಗಿ ಗುಡ್ಡದಿಂದ ಕಲ್ಲು-ಕಟ್ಟಿಗೆಗಳನ್ನು ತಾವೇ ಸ್ವತಃ ಸಾಧಕರೊಂದಿಗೆ ಹೊತ್ತು ತಂದರು. ಗ್ರಂಥ ಸಂಗ್ರಹ, ಕೀರ್ತನಕಾರರು ಮತ್ತು ಗವಾಯಿಗಳ ಶಿಕ್ಷಣ ಮುಂತಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದರು; ತಂದೆ ತಾಯಂದಿರನ್ನು ಅಗಲಿದ ಚಿಕ್ಕ ಚಿಕ್ಕ ವಟುಗಳ ಮನವು ಮನೆಯತ್ತ ವಿಹಾರದೊಂದಿಗೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಸಮಾಧಿಯೆಂಬ ಅಷ್ಟಾಂಗಯೋಗದ ಸಾಧನೆಯೊಂದಿಗೆ ದೃಷ್ಟಿಯೋಗವನ್ನು ಸಾಧಿಸಿ ಶಿವಯೋಗದಲ್ಲಿ ಪರಿಣಿತರಾಗುವಂತೆ ಶ್ರೀಗಳವರು ಯೋಜಿಸಿದರು. ಶ್ರೀಗಳವರ ಪ್ರಯತ್ನಗಳಿಂದಾಗಿ ಮಂದಿರವು ಪ್ರಶಾಂತವಾದ ಆಶ್ರಮವಾಗಿ, ಆದರ್ಶ ಧಾರ್ಮಿಕ ವಿದ್ಯಾಕೇಂದ್ರವಾಗಿ ರೂಪುಗೊಂಡಿತು. ಶ್ರೀಗಳವರ ಕಾರ್ಯಕ್ಷಮತೆಯನ್ನು ಕಂಡೇ ಹಾನಗಲ್ಲ ಪೂಜ್ಯರು ಇವರನ್ನು ಅಜೀವ ಅಧ್ಯಕ್ಷರನ್ನಾಗಿ ಮಾಡಿದ್ದರು.) ಹಾನಗಲ್ಲ ಶ್ರೀಗಳವರು ಲಿಂಗೈಕ್ಯರಾದ ಮೇಲೆ ಶ್ರೀಗಳವರು ಸ್ವತಃ ಬಿಕ್ಷೆ ಮಾಡಿ ಶಿವಯೋಗಮಂದಿರದ ಸರ್ವತೋಮುಖ ಅಭಿವೃದ್ಧಿಯನ್ನು ಲಿಂಗೈಕ್ಯರಾಗುವವರೆಗೂ ಸಾಧಿಸಿದರು.

ವಟುವಾತ್ಸಲ್ಯ

ಶ್ರೀಗಳವರದು ಮಾತೃಹೃದಯ. ಮಂದಿರದ ವಟುಗಳನ್ನು ಸಾಧಕರನ್ನು ಬಹುಪ್ರೀತಿಯಿಂದ ಸಾಕಿ ಸಲುಹಿದರು. ವಟುಗಳ ಸಾಧಕರ ಶಾರೀರಿಕ ಪೋಷಣೆಯೊಂದಿಗೆ ಅವರ ಭೌದ್ಧಿಕ ಮತ್ತು ಆಧ್ಯಾತ್ಮ ವಿಕಾಸಕ್ಕೂ ಅವರು ಕಾರಣರಾದರು. ತಪ್ಪಿದಾಗ ಒಮ್ಮೊಮ್ಮೆ ಸಿಟ್ಟು ಮಾಡಿದರೂ. ಅವರ ಸ್ವಭಾವ ಕುಸುಮಾದಪಿ ಮೃದುವಾಗಿತ್ತು. ಉಷ್ಣತ್ವಮಗ್ನ್ಯಾತಪ ಸಂಪ್ರಯೋಗಾತ್‌ ಶೈತ್ಯಂ ಹಿಯತ್‌ ಸಾ ಪ್ರಕೃತಿರ್ಜಲಸ್ಯ ಎಂದು ಮಹಾಕವಿ ಕಾಳಿದಾಸು ಹೇಳುವಂತೆ ಶ್ರೀಗಳವರ ಸ್ವಭಾವ ಬೆಂಕಿ-ಬಿಸಿಲುಗಳ ಸಂಪರ್ಕದಿಂದ ನೀರು ಕೆಲವು ಕ್ಷಣ ಕಾದರೂ ಅದು ಆರಿ ತನ್ನ ಸಹಜ ಗುಣದಂತೆ ತಣ್ಣಗಾಗುವ ಹಾಗೆ ದಯಾರ್ದ್ರವಾಗಿದ್ದಿತು. ಸಾಧಕರಿಗೆ ತಮ್ಮ ಕಟು ಅನುಭವಗಳನ್ನು ವಿವರಿಸಿ, ಹೇಗೆ ಇಂದ್ರಿಯನಿಗ್ರಹವನ್ನು ಸಾಧಿಸಬೇಕು, ಶಿವಯೋಗಾನುಷ್ಠಾನವನ್ನು ಮಾಡಬೇಕೆನ್ನುವುದನ್ನು ಹೃದಯಕ್ಕೆ ತಾಕುವಂತೆ ಆತ್ಮೀಯತೆಯಿಂದ  ತಿಳಿಸಿ ಹೇಳುತ್ತಿದ್ದರು. ಅದೆಷ್ಟೋ ಶಿವಯೋಗ ಸಾಧಕರು ಶ್ರೀಗಳವರಿಂದ ಸ್ಪೂರ್ತಿ ಪಡೆದು ಶಿವಯೋಗದ ಸಾಧನೆಯಲ್ಲಿ ತೊಡಗಿ ಸಿದ್ಧಿ ಪಡೆದರು.

ಲಿಂಗಪೂಜಾನಿಷ್ಠೆ

ಶ್ರೀಗಳವರಿಗೆ ಲಿಂಗಪೂಜೆಯೆಂದರೆ ಮಹದಾನಂದ, ಬಿಲ್ಪಪತ್ರಿ ಪುಷ್ಪಗಳ ಬನ, ನದಿ-ಜರಿಗಳ ಸೊಂಪಾದ ತಾಣಗಳನ್ನು ಕಂಡು ಶ್ರೀಗಳರವರ ಅನುಷ್ಠಾನ ಮಾಡುವ ಲವಲವಿಕೆ ಹೆಚ್ಚುತ್ತಿತ್ತು. ಅಲ್ಲಿಯೇ ಒಂದು ಪರ್ಣಕುಟಿಯನ್ನು ಕಟ್ಟಿ ಶಿವಯೋಗಾನಂದದಲ್ಲಿ ತಲ್ಲೀನರಾಗಿ ಬಿಡುವರು. ಎಂತಹ ರೋಗ ಬಂದರೂ ಜಾಡ್ಯ ಬಂದರೂ ಅವರು ಲಿಂಗಪೂಜೆಯನ್ನು ಬಿಡುತ್ತಿರಲ್ಲಿಲ್ಲ. ಅವರು ಪೂಜೆಯಲ್ಲಿ ಅಂಗೈಯೊಳಗಣ ಲಿಂಗಯ್ಯನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ಗಂಟೆಗಟ್ಟೆಲೆ ನಿಶ್ಚಲವಾಗಿ ಬಿಡುತ್ತಿದ್ದರು. ದೃಷ್ಟಿಯೋಗದಲ್ಲಿ ಅವರು ಸಿದ್ದಿಯನ್ನು ಪಡೆದಿದ್ದರು. ಶಿವಯೋಗ ಸಿದ್ದಿಗೆ ದೃಷ್ಟಿಯೋಗ ತಳಹದಿಯೆಂದು ಅವರು ಮಂದಿರದ ಸಾಧಕರಿಗೆ ಪದೇ ಪದೇ ಅಪ್ಪಣೆಕೊಡಿಸುತ್ತಿದ್ದರು. ಎಲ್ಲಿಯಾದರೂ ಪ್ರಯಾಣ ಮಾಡುವಾಗ ಮಾರ್ಗದಲ್ಲಿ ಜಲ ಪತ್ರಿ-ಪುಷ್ಪಗಳಿಂದ ಸಮೃದ್ಧವಾದ ನಿಸರ್ಗವನ್ನು ಕಂಡರೆ ಸಾಕು, ಅಲ್ಲಿಯೇ ಉಳಿದು ಶಿವಾರ್ಚನೆಯನ್ನು ಮನದುಂಬಿ ಮುಗಿಸಿ ಮುಂದೆ ಪ್ರಯಾಣ ಬೆಳೆಸುವದು ಶ್ರೀಗಳವರ ಸ್ವಭಾವವಾಗಿದ್ದತು,

ಒಂದು ಸಲ ಶಿವಯೋಗಮಂದಿರದಲ್ಲಿ ಬೆಳಗು ಮುಂಜಾನೆ ಮಹಾಕೂಟದ ಕಡೆ ಸಂಚಾರಕ್ಕೆ ಹೊರಟಾಗ, ಅಲ್ಲಿಯ ಪ್ರಶಾಂತ ಸ್ಥಾನವನ್ನು ಕಂಡು ಶಿವಾರ್ಚನೆಯನ್ನು ಮಾಡಬೇಕೆಂದು ಬಯಸಿದರು; ಅಂದವಾದ ಸುಗಂಧಮಯ ಪುಷ್ಪಗಳು, ಕೋಮಲವಾದ ಬಿಲ್ವದಳಗಳು, ಜುಳುಜುಳು ಹರಿಯುವ ನಿರ್ಮಲ ಜಲಧಾರೆ-ಮತ್ತೇನು ಬೇಕು ಶಿವನಿಗೆ? ಸ್ನಾನ ಮಾಡಿ ಅಲ್ಲಿಯೇ ಒಂದು ಮರದಡಿ ಶಿವಪೂಜೆಯನ್ನು ಮನದಣಿ ಮಾಡಿದರು. ಅಷ್ಟರಲ್ಲಿ ಅವರ ಲಿಂಗನಿಷ್ಠೆಯಿಂದ ಬಂದ ಶಿವಪ್ರಸಾದವನ್ನು ಸೇವಿಸಿ ಮಂದಿರಕ್ಕೆ ದಯಮಾಡಿಸಿದರು. ಅವರ ಲಿಂಗಪೂಜೆಯ ಪ್ರಭಾವದಿಂದಲೇ ಕಪನಳ್ಳಿಯ ಶಿವಯೋಗಾಶ್ರಮ, ಕೊಪ್ಪದ ಶಾಖಾ ಶಿವಯೋಗಮಂದಿರ, ಹಿರೇಹಾಳ-ಬದಾಮಿಯ ಶಾಖಾಮಂದಿರಗಳು, ತೊದಲಬಗಿ ಹಳ್ಳದ ದಂಡೆಯ ಆಶ್ರಮ ಮೊದಲಾದವು ಶಿವಯೋಗಿಯಿರ್ದ ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸಿವೆ.

ಶಿವಲಿಂಗ ಪೂಜೆಯು ಭವರೋಗಕ್ಕೆ ಸಿದ್ಧೌಷದಿಯೆಂದು ಶ್ರೀಗಳವರು ಅಪ್ಪಣೆ ಕೊಡಿಸುತ್ತಿದ್ದರು. ಅನುವು ಆಪತ್ತುಗಳಿಂದ ಬಳಲಿ ಬಂದ ಭಕ್ತರಿಗೆ ಲಿಂಗಪೂಜೆ ಮಾಡಿರಪ್ಪ! ನಿಮ್ಮ ಕಷ್ಟ ಪರಿಹಾರವಾಗುವುದು’ ಎಂದು ಕೃಪಾದೃಷ್ಟಿ ಬೀರಿ ಸಂತೈಸುತ್ತಿದ್ದರು.

. ಮಣ್ಣನ್ನು ಅವರು ಕೈಯಿಂದ ಮುಟ್ಟಿದವರಲ್ಲ. ಯಾವ ಆಸ್ತಿ-ಪಾಸ್ತಿಗಳಿಗೂ ಮನಸ್ಸು ಮಾಡಿದವರಲ್ಲ; ಅವರೆಲ್ಲಿಯೂ ಬಹಳ ದಿನವಿರುತ್ತಿರಲಿಲ್ಲ. ಭಕ್ತರನ್ನು ಉದ್ಧರಿಸುತ್ತ ಸಂಚರಿಸುವುದೇ ಲೇಸೆಂದು ಅವರು ಬಗೆದಿದ್ದರು. ಜಂಗಮರೂಪದಲ್ಲಿ ಪರಶಿವನು ಸಾಕಾರನಾಗಿ ಅತಿಥಿರೂಪದಲ್ಲಿ ಸಂಚರಿಸುವನೆಂದು ಹೇಳುವರು. ಅಂತಹ ನಿರಾಭಾರ ಜಂಗಮತ್ವವನ್ನು ಶ್ರೀಗಳವರು ಪಡೆದಿದ್ದರು. ಸರ್ವಜನ ಸಂಪೂಜ್ಯರಾಗಿದ್ದರು. ಮಠವನ್ನು ಹಿಡಿದು ಕುಳಿತವರಲ್ಲ. ಸ್ವಂತ ಮಠದ ಏಳ್ಗೆಗಾಗಿಯಲ್ಲ. ಸಮಾಜವೆಂಬ ಸದೃಢವಾದ ಮಹಾಮಠವನ್ನುಕಟ್ಟಲು ಹೆಣಗಿದರು. ಹಾವೇರಿಯ ನೂತನ ಮಠವನ್ನು ಬಿಕ್ಷೆ ಬೇಡಿ ದುಡ್ಡು ತಂದು ಕಟ್ಟಿಸಲಿಲ್ಲ. ಅದನ್ನು ಶಿವನೇ ಭಕ್ತರ ರೂಪದಲ್ಲಿ ಬಂದು ಕಟ್ಟಿರಬೇಕು. ಕಷ್ಟದಲ್ಲಿ ಬಿದ್ದ ಪ್ರತಿಯೊಂದು ಪ್ರಾಣಿಯಲ್ಲಿ ಶ್ರೀಗಳವರು ದಯಾರ್ದ್ರ ಭಾವನೆಯುಳ್ಳವರಾಗಿದ್ದರು. ಮೌನಿಯೂ ಭೂತ ದಯಾಯುಕ್ತನೂ ಆದ ನಿರಾಭಾರನೇ ನಿಜ ಜಂಗಮನೆಂಬ ವಚನೋಕ್ತಿಗೆ ಶ್ರೀಗಳವರ ದಯಾಳು ಭಾವ ಸರಿದೂಗುವಂತಿತ್ತು. ಬಡವರಿಗೆ ಆರ್ತರಿಗೆ ಕೈಲಾದ ಮಟ್ಟಿಗೆ ಸಹಾಯ ನೀಡುವುದು ಶ್ರೀಗಳವರ ಸ್ವಭಾವವಾಗಿದ್ದಿತು. ಶ್ರೀಗಳವರ ಉದಾರತೆಯಿಂದ ಕೃತಾರ್ಥರಾದ ಶಾಸ್ತ್ರೀಗಳೆಷ್ಟೋ? ಭಕ್ತರೆಷ್ಟೋ? ದೀನ-ದರಿದ್ರರೆಷ್ಟು ಜನರೋ? ಅಗಣಿತವಾದುದು.

ಶ್ರೀಗಳವರು ಶಿವಯೋಗಮಂದಿರದ ಸ್ಥಾಪನೆಯ ಕಾಲದಲ್ಲಿ ಸಂಸ್ಥೆಯ ಆಕಳು – ದನ – ಕರುಗಳನ್ನು ತಾವೇ ಸ್ವತಃ ಮೇಯಿಸಿ ಜೋಪಾನ ಮಾಡಿದ್ದು ಅವರ ಪ್ರಾಣಿ ದಯಾಪರತೆಯ ಕುರುಹಾಗಿದೆ. ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರು ಹೇಳಿದ ತತ್ವದ ಮರ್ಮವನ್ನು ಅರಿತು ಶ್ರೀಗಳವರು ಆದರ್ಶ ದಯಾಳುವಾಗಿ ಬಾಳಿ ಬೆಳಗಿದರು.

ತಪೋಜೀವನ                                                                                    

ಮಾಡಲಿಲ್ಲವೆ ತಪವ ಮಾಡಲಿಲ್ಲವೆ                                          

ಕೂಡೆ ಸುಗುಣದೊಡನೆ ತಿಳಿದು ನೋಡಿ ತ್ರಿವಿಧ ಕರಣ ದಲ್ಲಿ                                 ||ಪ||    

ಗುರುಭಜನೆ ಸುಕರ್ಮವೃತ್ತಿ

ಹರನ ಪೂಜೆ ಶರಣ ಸೇವೆ

ಪರಮ ಸಾತ್ವಿಕಂಗಳೆಂಟು ನೆರೆದು ನೆಲಸಿ ತನುವಿನಲ್ಲಿ                                      ||ಪ||

ವಿನಯವನ್ಯಹಿತವತರ್ಕ

ವನಪಶಬ್ಧವಚಲಿತಾರ್ಥ

ವನಘಮಂತ್ರವಾಗಮಂಗಳಿನಿತುವಿಡಿದು ವಚನದಲ್ಲಿ                                         ||ಪ||

ಶಮೆ ವಿವೇಕವಾತ್ಮವಿದ್ಯೆ

ದಮೆ ದಯಾವಿರಕ್ತಿಯೋಗ

ವಮರರೂಪು ಶಂಭುಲಿಂಗವಮರ್ದು ತೋರಿ ಸಮನದಲ್ಲಿ                                     ||ಪ||

ಎಂದು ನಿಜಗುಣ ಶಿವಯೋಗಿಗಗಳು ಅಪ್ಪಣೆ ಕೊಡಿಸಿದಂತೆ ಶ್ರೀಗಳವರು ಪ್ರತನಿತ್ಯ ಪ್ರಾತಃಕಾಲ ಎದ್ದು ಗುರುಸೋತ್ರವನ್ನು ಮಧುರ ಕಂಠದಿಂದ ಭಕ್ತಿಭಾವದಿಂದ ಹಾಡುತ್ತಿದ್ದರು ಗುರುಸೇವೆ ಮೊದಲಾದ ಸಾತ್ವಿಕಾಚರಣೆಯಲ್ಲಿ ನಿಷ್ಠೆಯುಳ್ಳವರು ಲಿಂಗಪೂಜೆಯನ್ನು ಜೀವನದ ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡವರು; ಅಥಣಿಯ ಶ್ರೀ ಮರುಳಸಿದ್ಧ ಶಿವಯೋಗಿಗಳು ಮತ್ತು ಬಿದರಿಯ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸೇವೆಯನ್ನು ಭಕ್ತಿಪೂರ್ವಕವಾಗಿ ಮಾಡಿ ತನು ತಪಸ್ಸನ್ನು ಸಾಧಿಸಿದರು; ವಿನಯಶೀಲರು ಮತ್ತು ಪರೋಪಕಾರಿಗಳೂ ಆಗಿದ್ದು ಯಾರ ಮನವನ್ನೂ ಬಿರುನುಡಿಗಳಿಂದ ನೋಯಿಸದೆ, ಷಡಕ್ಷರ ಮಂತ್ರಾನುರಾಗಿಗಳಾಗಿ, ಆದ್ಯರ ವಚನಗಳನ್ನು ಹೇಳುವಲ್ಲಿ ಕೇಳುವಲ್ಲಿ ಅನುರಕ್ತಿಯುಳ್ಳವರಾಗಿದ್ದು ವಾಚಿಕ ತಪವನ್ನು ಮಾಡಿದರು; ಅಂತರ್ಬಹಿರಿಂದ್ರಿಯ ನಿಗ್ರಹವನ್ನು ಸಾಧಿಸಿ, ಸ್ವಸ್ವರೂಪಜ್ಞಾನ-ದಯೆ-ಅಪರಿಗ್ರಹ-ಶಿವಯೋಗ ಮೊದಲಾದ ಸದ್ಗುಣಗಳನ್ನು ಪಡೆದು ಮಾನಸತಪವನ್ನು ಮಾಡಿದರು.

ಭಕ್ತ ವಾತ್ಸಲ್ಯ

ಶ್ರೀಗಳವರ ದರ್ಶನಕ್ಕೆ ಅನೇಕ ಭಕ್ತರು ಬರುತ್ತಿದ್ದರು. ಬಂದವರ ಯೋಗಕ್ಷೇಮವನ್ನು ಕೇಳಿ ಅವರಿಗೆ ಬಂದಿರುವ ಕಷ್ಟಗಳ ಪರಿಹಾರವನ್ನು ಹೇಳುತ್ತಿದ್ದರು. ಅವರ ನುಡಿ, ಅವರ ಕರುಣಾಕಟಾಕ್ಷ, ಅವರ ಸ್ಪರ್ಶನ-ದರ್ಶನ ಮಾತ್ರದಿಂದಲೇ ಎಷ್ಟೋ ಜನರ ತಾಪತ್ರಯಗಳು ತೊಲಗುತ್ತಿದ್ದವು ಯಾರಾದರೂ ಭಕ್ತರು ಆಕಸ್ಮಾತ್ತಾಗಿ ಬಹುದಿನಗಳ ಮೇಲೆ ಬೇಟಿಯಾದರೆ ಅವರ ಅಜ್ಜ- ಮುತ್ತಜ್ಜಂದಿರ ಇಡಿಯ ಪರಿಚಯವನ್ನೇ ಹೇಳಿ ಬಿಡುವರು. ಕೇಡು ಬಗೆದವರಿಗೂ ಪ್ರೀತಿಯಿಂದ ಕರೆದು ಪ್ರಸಾದ ಕರುಣಿಸಿ ಕಳಿಸುವರು. ಉದಾರಚರಿತಾನಾಂ ತು ವಸುದೈವ ಕುಟುಂಬಕಂ ಎಂಬಂತೆ ಶ್ರೀಗಳವರು ಲೋಕೋತ್ತರ ಚರಿತರು. ಅವರ ಹೃದಯ ಶುದ್ಧ ಹಾಲಿನಂತಹದು; ಅವರೊಬ್ಬ ಪತಿತ ಪಾವನರಾದ ಮಹಾಸಂತರಾಗಿದ್ದರು.

ಶ್ರೀಗಳವರು ಭಕ್ತರ ಮನೋಭಿಷ್ಟಗಳನ್ನು ಪೂರೈಸುತ್ತ ಅಲ್ಲಲ್ಲಿ ಪ್ರಶಾಂತವಾದ ಸ್ಥಾನಗಳಲ್ಲಿ ಅನುಷ್ಠಾನ ಮಾಡಿ ಅನೇಕ ಶಾಖಾ ಶಿವಯೋಗಮಂದಿರಗಳು ತಾವಾಗಿಯೇ ಬೆಳೆದು ಬರುವಂತೆ ಅನುಗ್ರಹಿಸಿದರು; ಆ ಪುಣ್ಯಾಶ್ರಮಗಳಲ್ಲಿ ಅನೇಕರು ಶಿವಯೋಗ ಸಾಧನೆ ಮಾಡಿ ಸಿದ್ಧಿಪಡೆದರು; ತಮ್ಮ ಕೊನೆಯುಸಿರಿರುವರೆಗೂ ಅವರು ಭಕ್ತರ ಹಿತಕ್ಕಾಗಿ, ಶಿವಯೋಗಮಂದಿರದ ಶ್ರೇಯಸ್ಸಿಗಾಗಿ ಹೆಣಗಿದರು, ಲಿಂಗಪೂಜೆಯೇ ಅಧ್ಯಾತ್ಮಸಾಧನೆಯೇ ಜೀವನದ ಸಾರಸರ್ವಸ್ವವೆಂದು ಜನರಿಗೆ ತೋರಿದ ಮಹಾಮಹಿಮರವರು. ಶ್ರೀಗಳವರು ತಮ್ಮ 89ನೇಯ ವಯೋಮಾನದಲ್ಲಿ ಶಾ. ಶಕ 1868 ಪುಷ್ಯ ಶು. 11   13-1-1946 ರಂದು ಹಾವೇರಿಯ ಹುಕ್ಕೇರಿಮಠದಲ್ಲಿ ಉರಿಯೊಳಗೈದ ಕರ್ಪೂರದಂತೆ ಲಿಂಗದೊಳೈಕ್ಯವಾದರು.

 

ಲೇಖಕರು : ಲಿಂ.ಶ್ರೀ ಚೆನ್ನಮಲ್ಲಿಕಾರ್ಜುನ, ಮೈಸೂರು,

ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಲಿಂ. ಶಿವಬಸವ ಮಹಾಸ್ವಾಮಿಗಳರು ಹುಕ್ಕೇರಿಮಠ ಹಾವೇರಿ, ಅವರು ಪರಮ ಪೂಜ್ಯರಾದ ಲಿಂ. ಶ್ರೀ ಸದಾಶಿವ ಮಹಾ ಸ್ವಾಮಿಗಳು (ಕುಮಾರ ಸ್ವಾಮಿಗಳು) ಹಾನಗಲ್ಲ, ಅವರ ಪ್ರಥಮ ಪರಿಚಯ ಮಾಡಿಕೊಂಡ ಕಾಲದಿಂದಲೂ ನಾನು ಹಾವೇರಿ ಶ್ರೀಗಳವರ ಸಂಪರ್ಕದಲ್ಲಿದ್ದೆನು. ಉಭಯ ಶ್ರೀಗಳವರು ವೀರಶೈವ ಸಮಾಜ ಪುರುಷನ ಎಡಗೈ-ಬಲಗೈಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿರುವರು. ಪ್ರತಿಯೊಂದು ಕಾರ್ಯದಲ್ಲಿಯೂ ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರ ಅಭಿಪ್ರಾಯವನ್ನು ತೆಗೆದುಕೊಂಡು ಇಬ್ಬರೂ ಸೇರಿ ಕಾರ್ಯಗಳನ್ನು ಪ್ರಯತ್ನ ಪೂರ್ವಕವಾಗಿ ನಿರ್ವಹಿಸುತ್ತಿದ್ದರು.

ಹಾವೇರಿ ಶ್ರೀಗಳವರಲ್ಲಿ ಒಂದು ದಿವ್ಯ ತೇಜಸ್ಸಿದ್ದಿತು. ಅವರಿಗೆ ಶಿವ ಯೋಗವು ಸಂಪೂರ್ಣವಾಗಿ ಸಾಧಿಸಿದ್ದಿತು. ಅದರಲ್ಲಿ ಅವರು ಸಿದ್ಧಿ ಪಡೆದಿದ್ದರು. ಲಿಂಗಪೂಜೆಯನ್ನು ಮಾಡುವಾಗ ಯಾವ ಜನರು ಎಷ್ಟು ದೂರದಲ್ಲಿದ್ದರೂ, ಅವರನ್ನು ಲಿಂಗದಲ್ಲಿ ಕಂಡುದರ ವಿಚಾರವನ್ನು ಶ್ರೀಗಳವರು ಆ ಕೂಡಲೇ ಹೇಳಿ ಬಿಡುತಿದ್ದರು; ಮುಂದಿನ ಕೆಲಸಗಳ ಆಗುಹೋಗುಗಳನ್ನೂ ತಿಳಿಸುತ್ತಿದ್ದರು. ಈ ದಿವ್ಯ ದೃಷ್ಟಿಯಿಂದಲೂ ಶ್ರೀಗಳವರಲ್ಲಿ ಭಕ್ತರ ಭಕ್ತಿ-ವಿಶ್ವಾಸಗಳು ಬಹಳ ಹೆಚ್ಚಿದವು.

ಶ್ರೀಗಳವರು ನಡೆದ ಧರೆ ಪಾವನವಾಗುತ್ತಿತ್ತು; ಅವರು ನಿಂದ ನೆಲ ನಿಜ ಕ್ಷೇತ್ರವಾಗುತ್ತಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿವಯೋಗಾಶ್ರಮವು ಶಿವಪೂಜಾ ಪ್ರೇಮಿಗಳಾದ ಶ್ರೀಗಳವರ ಕೃಪೆಯಿಂದಲೇ ಮೊಟ್ಟ ಮೊದಲು ಸ್ಥಾಪಿತವಾಯಿತು. ಅವರು ಹಾನಗಲ್ಲ ಶ್ರೀಗಳವರೊಂದಿಗೆ ಸಂಚರಿಸಿ ಮಲೆನಾಡ ಪ್ರಾಂತದಲ್ಲಿ ಶಿವಧರ್ಮದ ಪ್ರಸಾರವನ್ನು ಮಾಡಿದರು. ಕಪನಳ್ಳಿಯ ಶಿವಯೋಗಾಶ್ರಮವು ಧರ್ಮಕಾರ್ಯಗಳ ಕೇಂದ್ರವಾಯಿತು. ಈಗ ಇಲ್ಲಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಭವ್ಯ ಭವನದ ನಿರ್ಮಾಣವಾಗಿದೆ; ಈಗ ಈ ಶಿವಯೋಗಾಶ್ರಮದ ಅಧ್ಯಕ್ಷರಾಗಿರುವ ಶ್ರೀ ನಿ. ಪ್ರ. ರುದ್ರಮುನಿಸ್ವಾಮಿಗಳವರು ಶ್ರೀಗಳವರ ಕೃಪಾ ವಲಯದಲ್ಲಿ ಬೆಳೆದು ಬಂದವರು. ಅವರು ಶಿವಯೋಗ ಮಂದಿರದ ಮಾದರಿಯಲ್ಲಿ ಈ ಆಶ್ರಮದ ಮುಖಾಂತರ ಅನೇಕ ಜನಹಿತದ ಕಾರ್ಯಗಳನ್ನು ಮಾಡುತ್ತ ಭಕ್ತರಿಗೆ ಪೂಜ್ಯರಾಗಿರುವರು. ಕೃಷಿ ಮತ್ತು ಗೋಸಂಗೋಪನ ಕಾರ್ಯದಲ್ಲಿ ಈ ಆಶ್ರಮ ಮಾದರಿಯ ಸೇವೆಯನ್ನು ಸಲ್ಲಿಸುತ್ತಿರುವುದು. ಈ ಆಶ್ರಮಕ್ಕೆ ಅನೇಕ ಭಕ್ತರು ಬಹು ಪ್ರಕಾರವಾಗಿ ಭಕ್ತಿ ಸಲ್ಲಿಸಿರುವರು. ಅವರಲ್ಲಿ ಹಳೇಪಟ್ಟಣದ ಶೆಟ್ಟರ ಹಾಲಪ್ಪನವರು ಅಗ್ರಗಣ್ಯರು. ಇವರು ಶ್ರೀಗಳವರಿಂದ ಅನುಗ್ರಹ ಪಡೆದು ಈಗಲೂ ಇಲ್ಲಿಯೇ ಶಿವಪೂಜಾನುಷ್ಠಾನ ಮತ್ತು ಸೇವೆಯನ್ನು ತ್ರಿಕರಣ ಪೂರ್ವಕ ಮಾಡುತ್ತ ಆದರ್ಶ ಶಿವಶರಣರೆನ್ನಿಸಿಕೊಂಡಿರುವರು.

ಪತ್ರಿಕೆ ಮತ್ತು ಗ್ರಂಥಗಳ ಪ್ರಕಟನೆಯ ರೂಪದಲ್ಲಿ ಧರ್ಮಕಾರ್ಯಗಳು ಸತತವಾಗಿ ನಡೆಯಬೇಕೆಂಬ ಮಹೋದ್ದೇಶ ಹಾವೇರಿ ಶ್ರೀಗಳವರದಾಗಿತ್ತು. ಅದರಂತೆ ಶ್ರೀಗಳವರು ಹಾವೇರಿಯಲ್ಲಿ ‘ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯ’ ವನ್ನು ಸ್ಥಾಪಿಸಿ ಅದನ್ನು ನನ್ನ ವಶಕ್ಕೆ ಕೊಟ್ಟರು. ‘ ಸದ್ದರ್ಮದೀಪಿಕೆ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವುದಕ್ಕೆ ಮತ್ತು ಅನೇಕ ಓಲೆಗರಿಯ ಗ್ರಂಥಗಳನ್ನು ಮುದ್ರಿಸಿ ಪ್ರಕಾಶಗೊಳಿಸುವುದಕ್ಕೂ ಈ ಮಹಾಸ್ವಾಮಿಗಳವರೇ ಮೂಲ ಕಾರಣ, ರೆಂದು ಹೇಳುವದು ಅತಿಶಯೋಕ್ತಿಯಲ್ಲ. ಒಮ್ಮೆ, ಚಿತ್ರದುರ್ಗದ ಬೃಹನ್ಮಠಾಧ್ಯಕ್ಷರಾದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾವೇರಿಗೆ ದಯಮಾಡಿಸಿದಾಗ ಶ್ರೀಗಳವರು ಜಗದ್ಗುರುಗಳ ಸನ್ನಿಧಿಯಲ್ಲಿ ಧರ್ಮ ಗ್ರಂಥಗಳ ಸಂಶೋಧನೆ ಮತ್ತು ಪ್ರಕಾಶನದ ಬಗೆಗೆ ಕಳಕಳಿಯಿಂದ ವಿಚಾರ ವಿನಿಮಯ ಮಾಡಿದ ಪ್ರಸಂಗ ನನಗೆ ಚೆನ್ನಾಗಿ ನೆನಪಿದೆ. ತಮ್ಮ ಮಠದ ಖರ್ಚಿನಲ್ಲಿ, ತಮ್ಮ ಸ್ವಂತದ ಅನುಕೂಲತೆಗಳಲ್ಲಿ ಏನಾದರೂ ಕೊರತೆ ಬಂದರೂ ಚಿಂತೆಯಿಲ್ಲ, ಧರ್ಮ ಪ್ರಸಾರವು ಮಾತ್ರ ಚೆನ್ನಾಗಿ ನಡೆಯಬೇಕೆಂದು ಶ್ರೀಗಳವರು ಹಂಬಲಿಸುತ್ತಿದ್ದರು. ಹಾವೇರಿಯಲ್ಲಿ ತಮ್ಮ ಮಠವನ್ನು ಕಲ್ಲುಮಠವನ್ನಾಗಿ ಮಾರ್ಪಡಿಸಿದ ಕೀರ್ತಿಯು ಶ್ರೀಗಳವರಿಗೆ ಸಲ್ಲುವಂತಾಗಿದ್ದರೂ, ಆ ಕಟ್ಟಡದ ನಿರ್ಮಾಣಕ್ಕೆ ದ್ರವ್ಯವು ಬೇಕಾಗಿದ್ದರೂ ಅದನ್ನು ಬದಿಗಿಟ್ಟು ಧರ್ಮಗ್ರಂಥಗಳ ಪ್ರಕಟನೆಯ ಕಾರ್ಯಕ್ಕೆ ಹೆಚ್ಚು ದ್ರವ್ಯವನ್ನು ವಿನಿಯೋಗಿಸುತ್ತಿದ್ದರು. ನನಗೆ ವರ್ಷ ಗಟ್ಟಲೆ ತಮ್ಮೊಡನೆ ಪೂಜೆ ಮತ್ತು ಪ್ರಸಾದಕ್ಕೂ ಅನುಕೂಲತೆಗಳನ್ನು ದಯಪಾಲಿಸಿದ ಶ್ರೀಗಳು ಎಂತಹ ಕೃಪಾಳುಗಳೆಂಬುದನ್ನು ಬೇರೆ ಹೇಳಬೇಕೆ ?

ಶ್ರೀಗಳವರು ಪದವೀಧರರಾಗ ಬಯಸಿದ ಅನೇಕ ಬಡ ವಿದ್ಯಾರ್ಥಿಗಳಿಗೂ ಮುಕ್ತಹಸ್ತದಿಂದ ಸಹಾಯ ನೀಡಿದರು. ಅವರ ಕೃಪೆಯಿಂದ ಅನೇಕರು ಪದವೀಧರರಾಗಿ ಉಚ್ಚ ಸ್ಥಾನಗಳನ್ನು ಪಡೆದಿರುವರು. ಪ್ರೊ ಎಸ್.ಎಸ್.ಭೂಸನೂರುಮಠ, ಶ್ರೀ ಅ. ಮ. ಪಾಟೀಲ ಮೊದಲಾದವರು ಶ್ರೀಗಳವರ ಕೃಪಾಶ್ರಯ ಪಡೆದು ವಿದ್ಯಾ ರ್ಜನೆ ಮಾಡಿದವರು. ಶ್ರೀಗಳವರಿಗೆ ಹಣವನ್ನು ಕೂಡಿಡಬೇಕೆಂಬ ಆಶೆಯಿರಲಿಲ್ಲ. ಭಕ್ತರಿಂದ ಕಾಣಿಕೆ ಬಂದುದೇ ತಡ ಆ ಕೂಡಲೇ ಅದು ಬಡವಿದ್ಯಾರ್ಥಿಗಳಿಗಾಗಿ ಯಥೇಚ್ಛವಾಗಿ ವಿನಿಯೋಗವಾಗುತ್ತಿತ್ತು. ಹಣ ಕೊಟ್ಟು ಅದಕ್ಕೆ ಪ್ರತಿಯಾಗಿ ಹೆಸರನ್ನು ಗಳಿಸಬೇಕೆಂದು ಶ್ರೀಗಳವರು ಕನಸು ಮನಸಿನಲ್ಲಿಯೂ ಬಗೆದವರಲ್ಲ.

ವೀರಶೈವರಲ್ಲಿ ಭಿಕ್ಷೆ ಬೇಡುವದು ಸಮಾಜಕ್ಕಾಗಿ ಎಂದಿರುವ ಧರ್ಮನಿಯಮವನ್ನು ಶ್ರೀಗಳವರು ಪಾಲಿಸಿ ಬಡವರಿಗೆ ಸಾವಿರಗಟ್ಟಲೆ ಧನಸಹಾಯ ಮಾಡಿ ಇತರ ಸ್ವಾಮಿಗಳಿಗೆ ಆದರ್ಶರಾಗಿದ್ದಾರೆ. ಶ್ರೀಗಳವರು ಅನೇಕ ಸಲ ವ್ಯಾಪಾರ ಮಾಡಿ ಹಾನಿಗೀಡಾದ ಭಕ್ತರಿಗೆ ಬಂಡವಾಳ ಕೊಟ್ಟಿದ್ದಾರೆ. ವ್ಯವಸಾಯದಲ್ಲಿ ಉತ್ಪತ್ತಿ ಕಡಿಮೆಯಾಗಿ ನಿರ್ಗತಿಕರಾದ ರೈತರಿಗೆ ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಕೆಲವರು ಶ್ರೀಗಳವರನ್ನು ಇನ್ನು ಹಾಡಿ ಹರಸುತ್ತಿದ್ದಾರೆ.

ಶಿವಯೋಗಮಂದಿರದಲ್ಲಿ ಹಾನಗಲ್ ಶ್ರೀಗಳವರೊಡನೆ ವಿಶೇಷ ಶ್ರದ್ಧೆಯಿಂದ ಕಾರ್ಯಮಾಡಿ ಶ್ರೀಗಳವರು ಮಂದಿರದ ಸಾಧಕರಿಗೆ, ವಟುಗಳಿಗೆ ಧರ್ಮ-ಯೋಗ ಆಚಾರ ಮುಂತಾದವುಗಳನ್ನು ಕಲಿಸಿ ಸಂಸ್ಥೆಯ ಉನ್ನತಿಗೆ ಕಾರಣರಾಗಿದ್ದಾರೆ. ಶ್ರೀಗಳ ತಪಃಪ್ರಭಾವದಿಂದಲೇ ಸಂಸ್ಥೆಯು ಇಂದಿನ ಯುಗದಲ್ಲಿ ಉಳಿದು ಬೆಳೆಯುತಿದೆ. ಹಾನಗಲ್ ಶ್ರೀಗಳವರು ಇವರ ಅಚ್ಚಳಿಯದ ಸಮಾಜ ಪ್ರೇಮ ಮತ್ತು ಧರ್ಮ ಕಾರ್ಯಕ್ಷಮತೆಯನ್ನು ಮನಗಂಡೇ ಇವರನ್ನು ಮಂದಿರದ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಶ್ರೀ ಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಮೇಲೆಯೂ ಶ್ರೀಗಳವರು ಧೈರ್ಯದಿಂದ ಸಂಸ್ಥೆಯ ಅಭಿವೃದ್ಧಿಯನ್ನು ಬಯಸಿ ಕಾರ್ಯ ಮಾಡಿದರು. ಕೆಲವರು ಹಾನಗಲ್ಲ ಪೂಜ್ಯರು ಲಿಂಗೈಕ್ಯರಾದ ಮೇಲೆ ಮಂದಿರವು ನಡೆಯಲಾರದು, ಅದನ್ನು ಒಂದು ವ್ಯವಸಾಯ ಕಾಲೇಜನ್ನಾಗಿ ಮಾರ್ಪಡಿಸಬೇಕೆಂಬ ವಿಚಾರವನ್ನು ಮುಂದು ಮಾಡಿದರು. ಆದರೆ ಶ್ರೀಗಳವರು ಮಂದಿರದಲ್ಲಿ ಧಾರ್ಮಿಕ ಶಿಕ್ಷಣವು ಆದರ್ಶವಾಗಿ ಎಂದಿನಂತೆ ನಡೆಯುವಂತೆ ಮಾಡಿ, ಸಂಸ್ಥೆಯು ಎಂದಿಗೂ ಅಳಿಯದಂತಹ ಧಾರ್ಮಿಕ ಅಡಿಪಾಯವನ್ನು ಹಾಕಿದರು; ಹಾನಗಲ್ ಶ್ರೀಗಳವರ ಧೈಯಧೋರಣೆಗಳನ್ನು ಉಳಿಯುವಂತೆ ಮಾಡಿದರು; ಕೆಲವು ಅಭಿಮಾನಿ ತರುಣ ಸ್ವಾಮಿಗಳನ್ನೂ ಉತ್ಸಾಹಿ ಭಕ್ತರನ್ನೂ ಮಂದಿರದ ಟ್ರಸ್ಟ ಕಮೀಟಿಯಲ್ಲಿ ತೆಗೆದುಕೊಂಡು ಸಂಸ್ಥೆಯ ಕಾರ್ಯಗಳು ಸುಗಮವಾಗಿ ನಡೆಯು ವಂತೆ ಯೋಜಿಸಿದರು. ಈ ವಿಷಮ ಕಾಲದಲ್ಲಿ ಶ್ರೀಗಳವರು ಪ್ರಯತ್ನಿಸಿರದಿದ್ದರೆ ಶಿವಯೋಗಮಂದಿರವೇ ಉಳಿಯುತ್ತಿರಲಿಲ್ಲ. ಶ್ರೀಗಳವರ ಉದ್ದೇಶವನ್ನು ಸಾಧಿಸಲು ಹಾಲಕೆರೆಯ ಶ್ರೀ ಅನ್ನದಾನ ಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಮತ್ತು ಉಳಿದವರೂ ಬಹು ಹೆಣಗಿದ್ದಾರೆ.

ಶ್ರೀಗಳವರು ಆಡಂಬರದ ಜೀವನದವರಲ್ಲ. ವೀರಶೈವ ಷಟ್‌ಸ್ಥಲಮಾರ್ಗದಲ್ಲಿ ಶ್ರೀಗಳವರು ಬಹು ನಿಷ್ಠೆಯಿಂದ ನಡೆದರು; ಉಳಿದವರಿಗೂ ಮಾರ್ಗ ತೋರಿದರು. ನೂತನ ಮಠಾಧಿಕಾರಿಗಳಿಗೆ ನಿರಂಜನ ಚರಪಟ್ಟಾಧಿಕಾರವನ್ನು ಶ್ರೀಗಳವರು ಹಾನಗಲ್ ಶ್ರೀಗಳವರ ಇಚ್ಛೆಯಂತೆ ಕೊಡುತ್ತಿದ್ದರು. ಶ್ರೀಗಳವರು ಅನೇಕ ಸ್ವಾಮಿಗಳಿಗೂ, ಗುರುಗಳಿಗೂ ಭಕ್ತರಿಗೂ ಅನುಗ್ರಹವನ್ನು ದಯಪಾಲಿಸಿರುವರು. ಅವರಿಂದ ಅನುಗ್ರಹ ಪಡೆದವರೆಲ್ಲರೂ ಸಮಾಜದಲ್ಲಿ ಸನ್ಮಾನ್ಯರಾಗಿ ಬಾಳಿದ್ದಾರೆ. ಅವರದು ಅಮೃತ ಹಸ್ತ. ಆ ಹಸ್ತ ಸ್ಪರ್ಶದಿಂದ ‘ ಗುರು ಮುಟ್ಟಿ ಗುರುವಾದರು’ ಎಂಬುದು ಸಿದ್ಧವಾಗುತ್ತಿತ್ತು. ಅಂತಹ ಆದರ್ಶ ಮಹಾಸ್ವಾಮಿಗಳ ಪರಮಾದರ್ಶದಲ್ಲಿ ಎಲ್ಲರೂ ನಡೆದರೆ ವೀರಶೈವ ಸಮಾಜವು ಅಮೃತಮಯ ವಾಗಿ ಬಾಳುವುದಲ್ಲವೆ ?.

ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ

ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟಿದ್ದು.

ಸಂಗ್ರಹ : ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ನಿಚ್ಚಲುಂ ಶಿವರಾತ್ರಿಯಂ ಮಾ |

ಳ್ಪಚ್ಚರಿಯೆನಿಪ ಭಾಷೆ ಭಕ್ತರ |

ನಚ್ಚ ಶಿವನೆಂದಿರ್ಪ ಭಾಷೆ ಶಿವೈಕ್ಯರೆಗ್ಗುಗಳ ||

ಎಚ್ಚರಿಸದಿಹ ಭಾಷೆ ಶರಣರ |

ಹೆಚ್ಚು ಕುಂದುಗಳಂ ನುಡಿಯದಿಹ |

ಸಚ್ಚರಿತ್ರದ ಭಾಷೆ ಏನುವಂ ವಂಚಿಸದ ಭಾಷೆ.         ||೧||

ಮೃಡನನಾದೊಡೆಯೊಂದು ಬಾರಿಗೆ |

ಕಡಗಿ ಬೇಡಡ ಭಾಷೆ ಏನಾ|

ದೊಡೆ ಬಯಸಿದೊಡವಿಗಳನಡಿಯಿಡದೀವುದದು ಭಾಷೆ ||

ನುಡಿದು ಪುಸಿಯದ ಭಾಷೆ ನೆನಪಿನ |

ಗಡಣೆಯಂತಂ ತೋರೆಯಿಲ್ಲದೆ |

ನುಡಿವ ಭಾಷೆಯು ನುಡಿದಹಗೆ ತಾಂ ನಡೆಸುವುದು ಭಾಷೆ.      ||೨||

ಛಲವನಳಿಯದ ಭಾಷೆ ಭಕ್ತರ |

ಸಲುಗೆಯಂ ಸಲಿಸುವುದು ಭಾಷೆಯ |

ಚಲಿತ ದಾಸೋಹವನು ವಿರತಂ ಮಾಳ್ಪುದದು ಭಾಷೆ |

ನಲಿದು ಕನಸಿನೊಳುಂ ಪಿನಾಕಿಗೆ |

ಗೆಲವನೀಯದ ಭಾಷೆ ಭಕ್ತರು |

ಗಳಿಗೆ ಗೆಲವಂ ಕೊಟ್ಟು ತಾಂ ಶರಣೆಂಬುದದು ಭಾಷೆ.         ||೩||

ಪರಸಮಯಿಗಳ ದರ್ಪಮಂ ಸಂ

ಹರಿಪ ಭಾಷೆ ಕುತರ್ಕದಿಂ ಮ |

ತ್ಸರಿಪ ಪರವಾದಿಗಳನೊಮ್ಮೆಗೆ ಸೋಲಿಸುವ ಭಾಷೆ ||

ಪರಮನಂ ನಿಂದಿಸುವವೊಂದಿರ |

ನೊರಸಿ ಕಳೆವುದು ಭಾಷೆ ಹರ ಭ|

ಕ್ತರನುದಾಸೀನದಿ ನುಡಿವ ನುಡಿಗೇಳದದು ಭಾಷೆ.         ||೪||

ಹರ ಶರಣ ಪರತಂತ್ರ ಭಾವದೆ|

ಬೆರಸಿ ಚರಿಸುವ ಭಾಷೆ ಎಂದುಂ |

ಹರ ಗಣಾರ್ಪಿತವಾಗದಿನಿತುಂ ಮುಟ್ಟದಿಹ ಭಾಷೆ ||

ಶರಣರೇನೆಂದೊಡೆಯವರಿಗು |

ತ್ತರವನೀಯದ ಭಾಷೆ ಜಂಗಮ|

ವರರ ನೆಗಳು ಪ್ರಾಣಲಿಂಗವೆನಿಪ್ಪುದದು ಭಾಷೆ.       ||೫||

ನರರುಮಂ ಯಾಚಿಸದ ಭಾಷೆ ಇ ]

ತರ ಜನಕೆ ಕೈ ಮುಗಿಯದದು ನಿ|

ರ್ಬರದ ಭಾಷೆ ಭವೌಘ ಬಾಧೆಗೆ ಸಿಲ್ಕದಿಹ ಭಾಷೆ ||

ಕರಣವಿಷಯಕ್ಕಿಂಬುಗುಡದ |

ಚ್ಚರಿಯ ಭಾಷೆ ಷಡರಿಗಳಂ ಪರಿ |

ಹರಿಪ ಭಾಷೆ ಶಿವೈಕ್ಯ ಭಕ್ತಿಯನಲರಿಸುವ ಭಾಷೆ.       ||೬||

ನೆಟ್ಟ ನೀಶಾಚಾರಮಂ ಮುಂ |

ದಿಟ್ಟು ಬಳೆಯಿಪ ಭಾಷೆ ತಲೆ ಪರಿ |

ದಟ್ಟಿಯುಳಿದೊಡೆ ಶರಣೆನುತ್ತಿಹ ಭಾಷೆ ತಲೆಗಟ್ಟಿ ||

ಬಿಟ್ಟೊಡಂ ವಂದಿಸುವ ಭಾಷೆಯು |

ಮುಟ್ಟಿದೊಡೆ ಹಿಮ್ಮೆಟ್ಟದಗ್ಗದ |

ಗಟ್ಟಿ ಭಾಷೆ ಇವೆಲ್ಲವಂ ತುದಿ ಮುಟ್ಟಿಸುವ ಭಾಷೆ        ||೭||

ದ್ವಿತೀಯ ಶಂಭುವೆನಿಸಿದ ನಂದಿಕೇಶ್ವರನು ಭೂಲೋಕದಲ್ಲಿ ಕಾರಣಿಕ ಪುರುಷನಾಗಿ ಬಸವನಾಮದಿಂದ ಅವತರಿಸಿ ಅನೇಕ ಪ್ರತಿಜ್ಞೆಗಳನ್ನು ಮಾಡಿ ಅದರಂತೆ ನಡೆದು ತೋರಿಸಿದುದು ಜಗತ್ಪಸಿದ್ಧವಾಗಿರುವುದು. ಭೀಮ ಕವಿಯು ತನ್ನಿಂದ ರಚಿಸಲ್ಪಟ್ಟ ಬಸವಪುರಾಣದ ಆರನೆಯ ಸಂಧಿಯ ಪ್ರಾರಂಭದಲ್ಲಿ ಆ ಅನೇಕ ಪ್ರತಿಜ್ಞೆಗಳಲ್ಲಿ ೩೪ ನ್ನು ಮಾತ್ರ ೭ ಪದ್ಯಗಳಲ್ಲಿ ಉಸುರಿರುವನು. ಅವುಗಳನ್ನೇ ಮೇಲೆ ಉದ್ಧರಿಸಲಾಗಿದೆ.

ಈ ೩೪ ಭಾಷೆಗಳಲ್ಲಿ ಮಾದರಿಗಾಗಿ ಒಂದನ್ನು ಮಾತ್ರ ಇಲ್ಲಿ ವಿಶದವಾಗಿ ವಿವರಿಸಿರುತ್ತೇವೆ. ಹೀಗೆಯೇ ಎಲ್ಲ ಭಾಷೆಗಳ ಅರ್ಥ-ತಾತ್ಪರ್ಯವನ್ನು ತಿಳಿಯಲು ಇಚ್ಛಿಸುವ ಓದುಗರು ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟು. ಶಿ. ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ ಇವರಿಂದ ಪ್ರಸಿದ್ಧಿಸಲ್ಪಟ್ಟ ‘ಬಸವ ಭಾಷೆ ‘ ಎಂಬ ಪುಸ್ತಕವನ್ನು ಅವಲೋಕಿಸ ಬೇಕಾಗಿ ಸೂಚನೆ.

ಮೊದಲನೆಯ ಭಾಷೆ : ನಿಚ್ಚಲುಂ ಶಿವರಾತ್ರಿಯಂ ಮಾಚ್ಚರಿಯೆನಿಪ ಭಾಷೆ

ಅರ್ಥ:- ನಿಚ್ಚಲು = ಪ್ರತಿದಿನವೂ, ಶಿವರಾತ್ರಿಯಂ = ಶಿವಯೋಗವನ್ನು, ಮಾಳ್ಪ = ಮಾಡುತ್ತಿರುವ, ಅಚ್ಚರಿಯೆನಿಪ = ಆಶ್ಚರ್ಯವೆಂದು, ತೋರುವ ಭಾಷೆ=ಪ್ರತಿಜ್ಞೆಯು.

ವಿವರಣೆ :- ಶಿವರಾತ್ರಿ* ಇದು ವರ್ಷಕ್ಕೊಂದುಸಾರೆ ಮಾಘ ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಹಾ ಶಿವರಾತ್ರಿಯೆಂದೂ – ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಾಸ ಶಿವರಾತ್ರಿಯೆಂದೂ ಕರೆಯಲ್ಪಡುವುದು. ಶಿವಭಕ್ತರು ಈ ಎರಡೂ ಪ್ರಕಾರದ ಶಿವರಾತ್ರಿಗಳಲ್ಲಿಯೂ ಶಿವಸನ್ನಿಧಿಯನೈದು, ಕಾಮ – ನಿಷ್ಕಾಮವೆಂಬ ಉಭಯ ವಿಧಿಗಳಲ್ಲಿ, ತಮಗೆ ಬೇಕಾದ ವಿಧಿಯಿಂದ, ಶಿವಾರ್ಚನೆ, ಶಿವಕಥಾಶ್ರವಣ, ಜಾಗರಣ ಮೊದಲಾದ ಸತ್ಕ್ರಿಯೆಗಳನ್ನು ಮಾಡುವುದು ಪ್ರಸಿದ್ಧವಾಗಿರುವುದು.

ಶ್ರೋತ್ರಾದಿ ಜ್ಞಾನೇಂದ್ರಿಯಗಳೈದು, ವಾಗಾದಿ ಕರ್ಮೇಂದ್ರಿಯಗಳೈದು, ಮಾನಸಾದಿ ಅಂತಃಕರಣಗಳು ನಾಲ್ಕು – ಅಂತು ಹದಿನಾಲ್ಕು ಕರಣಗಳನ್ನು ಶಿವಲಿಂಗಕ್ಕರ್ಪಿಸಿದರೆ ( ಶಿವಧರ್ಮ ಕಾರ್ಯಗಳಲ್ಲಿ ಸವೆಸಿದರೆ) ಅದು ಚತುರ್ದಶಿ ಎನಿಸುವುದು. ಆ ಶಿವಲಿಂಗದ ನೆನಹಿನಲ್ಲಿ ಮನವು ಮಗ್ನವಾಗಿ ಹೋಗಲು ಅದು ಶಿವರಾತ್ರಿ ಎನಿಸುವುದು. ಆ ಶಿವಜ್ಞಾನದ ಎಚ್ಚರ ಕುಂದದಿರಲು ಜಾಗರಣವೆನಿಸುವುದು. ಇದೇ ವೀರಶೈವರು ಮುಖ್ಯವಾಗಿ ಪ್ರತಿ ದಿನದಲ್ಲಿ ಆಚರಿಸುವ ಆಶ್ಚರ್ಯಕರವಾದ ಶಿವರಾತ್ರಿಯು.** ಇದೇ ಶಿವಯೋಗವೆಂದು ಹೇಳಲ್ಪಡುತ್ತಿದೆ.

ಜ್ಞಾನ, ಭಕ್ತಿ, ಧ್ಯಾನ, ವೃತ, ಅರ್ಚನವೆಂಬ ಅಂಗಗಳುಳ್ಳ ಶಿವಯೋಗಕ್ಕೆ ಶಿವಜ್ಞಾನಾದಿ ನಾಲ್ಕು ಅಂಗಗಳು ಗರ್ಭೀಕರಿಸಿಕೊಂಡಿರುವುದರಿಂದ ಶಿವಾರ್ಚನೆಯೇ ಮುಖ್ಯವೆನಿಪ ಶಿವಯೋಗವೆಂಬುದಾಗಿ ಹೇಳಿರುವುದು. ಈ ಉಭಯ ಪಕ್ಷವನ್ನು ವಿಚಾರಿಸಿ ನೋಡಿದರೆ ಶಿವಾರ್ಚನೆಗಿಂತಲೂ ಮೊದಲೆ ಶಿವಜ್ಞಾನಾದಿ ನಾಲ್ಕು ಅಂಗಗಳನ್ನು ಸಾಮಾನ್ಯವಾಗಿ ಸಂಗ್ರಹಿಸಿ ಶಿವಾರ್ಚನೆಯ ಕಾಲಕ್ಕೆ ವಿಶೇಷ ರೂಪದಿಂದ ಕೂಡಿಕೊಂಡು ಆಚರಿಸತಕ್ಕದ್ದು ಎಂದು ಗೊತ್ತಾಗುವುದು. ಅನ್ಯ ಮತಜ್ಞಾನ ನಿಷೇಧವೂ ಅನ್ಯ ದೇವತಾ ನಿಷೇಧವೂ ಜ್ಞಾನ – ಭಕ್ತಿಗಳೆಂಬ ಎರಡು ಅಂಗ ಗಳಲ್ಲಿ ಉಕ್ತವಾಗಿರುವುದರಿಂದ ಈ ಎರಡನ್ನೂ ಪೂಜಾ ಕಾಲದಲ್ಲಿ ಆಚರಿಸಿದರೆ ಶಿವಯೋಗಕ್ಕೆ ಕೇವಲ ವಿರೋಧವೆನಿಸುವುದು. ಆದ್ದರಿಂದ ಶಿವಾರ್ಚನೆಯಲ್ಲಿ ಅನ್ಯ ಭಾವನೆಯಿಲ್ಲದೆ ಶಿವಾಕಾರ ವೃತ್ತಿಯುಳ್ಳ ಶಿವಜ್ಞಾನ, ಶಿವಭಕ್ತಿಗಳನ್ನು ಗುರುಮುಖದಿಂದರಿದು ವಿಶೇಷ ರೂಪದಿಂದ ಆಚರಿಸತಕ್ಕದ್ದು. ಮತ್ತು ಶಿವಧ್ಯಾನ, ಶಿವವೃತ ಈ ಎರಡು ಅಂಗಗಳನ್ನು ರುದ್ರರೂಪಿಯಾಗುವುದಕೋಸ್ಕರ ಪೂಜಾಸನದಲ್ಲಿ ಕುಳಿತನಂತರ ಸಾಮಾನ್ಯ ರೂಪದಿಂದ ಮಾಡತಕ್ಕದ್ದು. ಶಿವಾರ್ಚನೆಯ ಕಾಲದಲ್ಲಿ ಗುರು ನಿರೂಪಿಸಿದಂತೆ ವಿಶೇಷ ರೂಪವಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಅರ್ಚನೆಯನ್ನು ಆಚರಿಸತಕ್ಕದ್ದು. ಹೀಗೆ ಐದು ಅಂಗಗಳಿಂದ ಕೂಡಿದುದೇ ಶಿವಯೋಗವೆಂದು ಎನಿಸಿಕೊಳ್ಳುವುದು. ಇದೇ ವೀರಶೈವರ ಶಿವರಾತ್ರಿಯು, ಇಂತಹ ಶಿವರಾತ್ರಿಯನ್ನು ಪ್ರತಿದಿನವೂ ಮಾಡುವೆನೆಂಬುದು ಭಗವಾನ್ ಬಸವೇಶ್ವರನ ಮೊದಲನೆಯ ಪ್ರತಿಜ್ಞೆಯು.

* ಶಿವರಾತ್ರಿ- ರಾಶಿ ಸುಖಮಿತಿ ರಾತ್ರಿಃ – ಸುಖವನ್ನು ಕೊಡುವುದಾದುದರಿಂದ ರಾತ್ರಿಯೆನಿಸಿಕೊಳ್ಳುವುದು. ಶಿವಸ್ಯ ರಾತ್ರಿಃ – ಶಿವರಾತ್ರಿ – ಶಿವಸಂಬಂಧ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸುವುದು. (ಶಿವಯೋಗಿಗಳಿಗೆ ಶಿವಸಂಬಂಧ ನಿತ್ಯವಾದ ಅಖಂಡ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸಿಕೊಳ್ಳು ವುದು, ಮಿಕ್ಕವರಿಗೆ ಕ್ಷಣಿಕವೆನಿಸಿ ಮಾಯಾ ಸಂಬಂಧ ಸುಖವನ್ನು ಕೊಡುವುದರಿಂದ ರಾತ್ರಿಯೆನಿಸಿಕೊಳ್ಳು ವುದು. ) ವಿವೇಕಿಗಳಾದವರು ಶಿವಸಂಬಂಧವಾದ ರಾತ್ರಿಯನ್ನೇ ಸಾಧಿಸಬೇಕು.

** ಈ ಶಿವರಾತ್ರಿಯ ದಿವಸ ನಿರಾಹಾರಿಯಾಗಿ, ಉಪವಾಸ ಮಾಡಬೇಕೆಂಬ ವಿಧಿಯು ಕರ್ಮಿಗೆ ಉಂಟು. ಆದರೆ ವೀರಶೈವನು ಶಿವಪೂಜಾಕರ್ಮನಿಷ್ಠನಾದುದರಿಂದ ಶಿವಸನ್ನಿಧಿಯಲ್ಲಿ ವಾಸ ಮಾಡುವುದೇ ಉಪವಾಸವೆಂತಲೂ ಜಡ ಜೀವಿಗಳಂತೆ ಅಂಗಭೋಗಿಯಾಗದೆ ಲಿಂಗಭೋಗೋಪಭೋಗಿಯಾದುದರಿಂದ ನಿರಾಹಾರಿಯೆಂತಲೂ ಉಂಡು ಉಪವಾಸಿಯೆಂತಲೂ ಹೇಳಿರುವುದರಿಂದ ವೀರಶೈವನು ಇತರರಂತೆ ಉಪವಾಸ ಮಾಡುವವನಲ್ಲವೆಂದು ತಿಳಿಯತಕ್ಕದ್ದು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಕಳೆದ 22 ನವಂಬರ 2021 ರಂದು ಪೂಜ್ಯ ಜಗದ್ಗುರು ಶ್ರೀ ಸಂಗನಬಸವ ಮಹಾಸ್ವಾಮಿಗಳು ಶಿವನಲ್ಲಿ ಒಂದಾದದಿನ. ಪೂಜ್ಯರ ಭೌತಿಕ ಲಿಂಗದೇಹ ಅಗಲುವಿಕೆಯಿಂದ  ಲಕ್ಷಾಂತರ ಭಕ್ತರ ಹೃದಯಗಳು ನೋವು ಹತಾಶೆಗಳಿಂದ ಕನಲಿದವು.

ನವಂಬರ ೧೦ ರವರೆಗೆ  ಸತತ ಎರಡುತಿಂಗಳ ಪರ್ಯಂತ  ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀಗಳ ಪಟ್ಟಾಧಿಕಾರ ಮತ್ತು ಚಿನ್ಮಯ ದೀಕ್ಷೆಗಳ ಎಲ್ಲ ಕಾರ್ಯಗಳಲ್ಲಿ ಪಾಲ್ಗೊಂಡು, ಸಲಹೆ ಸೂಚನೆಗಳನ್ನು ನೀಡಿ, ಭಕ್ತರ ಉತ್ಸಾಹ ಗಳನ್ನು ಕಣ್ತುಂಬ ತುಂಬಿಕೊಂಡು, ಆನಂದ ಭಾಷ್ಪಗಳನ್ನು ಸುರಿಸಿದ್ದು ಪೂಜ್ಯರ ಮಮತೆಯ ಹೃದಯಕ್ಕೆ ಸಾಕ್ಷಿಯಾಗಿತ್ತು. ಅವರ ದೃಢ ನಿಶ್ಚಯ ಪೂರ್ಣಗೊಳ್ಳುವವರೆಗೂ ಶಿವನ ಕರೆಯನ್ನು ನಿಲ್ಲಿಸಿಕೊಂಡಂತೆ ಜರುಗಿದ ಅಭೂತಪೂರ್ವ ಪಟ್ಟಾಧಿಕಾರ ಕಾರ್ಯಕ್ರಮ ಪವಾಡಸದೃಶಮಯವಾಯಿತು .

ಪೂಜ್ಯ ಜಗದ್ಗುರುಗಳು ತಮ್ಮ ಎಲ್ಲ ಆಶೀರ್ವಚನಗಳ ಆರಂಭಕ್ಕೆ ಬಸವೇಶ್ವರರ ಒಂದೇ ಒಂದು ವಚನದಿಂದ ಪ್ರಾರಂಭಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಿರುವೆ.

ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು .

ಹರಿದು ಹೆದ್ದೊರೆಯು ,ಕೆರೆ ತು೦ಬಿದ೦ತಯ್ಯಾ .

ನೆರೆಯದು ವಸ್ತು ನೆರೆವುದು ನೋಡಯ್ಯಾ

ಅರಸು ಪರಿವಾರ ಕೈವಾರ  ನೋಡಯ್ಯಾ.

ಪರಮ ನಿರಂಜನನ ಮರೆವ ಕಾಲಕ್ಕೆ

ತುಂಬಿದ ಹರವಿಯ ಕಲ್ಲು ಕೊಂಡಂತೆ , ಕೂಡಲಸಂಗಮದೇವಾ.”

 ಭಗವಂತನು ಕೊಡುವ ಕಾಲಕ್ಕೆ ಸಂಪತ್ತು ಬೆನ್ನುಹತ್ತಿ ಬರುತ್ತದೆ ; ಹೆದ್ದೊರೆಯೆ ಹರಿದು ಕೆರೆ ತುಂಬಿದಂತೆ ಲಭಿಸದೇ ಇರುವ ವಸ್ತುಗಳು ಲಭಿಸುತ್ತವೆ . ಅರಸು ಮನ್ನಣೆ , ಪರಿವಾರ , ಕೈವಾರ ಈ ಎಲ್ಲವೂ ದೊರಕುತ್ತವೆ . ಆದರೆ ಆ ಪರಮನಿರಂಜನ ನಮ್ಮನ್ನು ಮರೆತರೆ ಅಥವಾ ನಾವೇನಾದರೂ ಅವನನ್ನು ಮರೆತರೆ , ತುಂಬಿದ ಮಣ್ಣಿನ ಕೊಡಕ್ಕೆ ಕಲ್ಲೇಟು ಬಿದ್ದು ಅದು ಒಡೆದು ಹೋದಂತೆ ಆಗುತ್ತದೆ . ಭಗವಂತನ ಕೃಪೆಯನ್ನು ಕುರಿತ ಈ ಶ್ರದ್ಧೆ , ಸ್ವಪ್ರಯತ್ನದಿಂದ ವಿಮುಖಗೊಳಿಸುವುದಿಲ್ಲ ; ಸಾಧನೆಯಲ್ಲಿರುವ ನಿಷ್ಠೆಯನ್ನು ಬಲಗೊಳಿಸುತ್ತಿದೆಯೆಂದು ಭಾವಿಸಬೇಕು.

ಪೂಜ್ಯರು ನಮಗೆ ನೀಡಿ ಹೋದ ಸಂದೇಶ !!!.

“ ಸುಕುಮಾರ” ಪತ್ರಿಕೆಯನ್ನು ಬ್ಲಾಗ ರೂಪದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಲು ಅನುಮತಿ ನೀಡಿ ಆಶೀರ್ವದಿಸದವರು ಪೂಜ್ಯ ಜಗದ್ಗುರುಗಳು.

 

ಪೂಜ್ಯರ ಅಂತಃಕರುಣೆಯ ಪವಿತ್ರಾತ್ಮ ದಲ್ಲಿ  ಅವರು ಸಂದೇಶ ನೀಡಿದಂತೆ-” ನಮ್ಮ ಸಾಧನೆಯಲ್ಲಿರುವ , ನಮ್ಮ ನಿಷ್ಠೆಯನ್ನು ಬಲಗೊಳಿಸಲಿ “ಎಂದು ಪ್ರಾರ್ಥಿಸಿಕೊಳ್ಳುವೆ

ಈ ಸಂಚಿಕೆಯ ಲೇಖನಗಳ ವಿವರ

  1. | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2.      ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3.   ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  4. , ಅಕ್ಕಿಆಲೂರು
  5. . ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ ಇಟಗಿ ಗ್ರಂಥ ಋಣ: ಸುಕುಮಾರ ದೀಪ್ತಿ  ಸಂಪಾದಕರು : ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ -ವಿಜಯಪುರ
  6.  

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮಾರಾರಿಯೆ ಪಾಲಿಸು ಕಾಲಾರಿ ಬೇಗ

ಪಾರುಗೊಳಿಸದೆನ್ನ ಮಾಯಾಸಂಗ  ||

ಮನಸಿಜನಾಗಿತಾ  ಘನಬಾಧೆಗೊಳಿಪನು

ವನಿತೆಯರೊಲವಿತ್ತು  ವಿನಯದಿ ಸಾಧಿ

ಸನುಮತದಿಂದಿವ ನಾಶಗೊಳಿಸಿ   ||  ||

ಮರಣದ ಭೀತಿಯಿಂ ಕೊರಗುತ್ತಿರುವೆನು                         

ಕರುಣವಿಲ್ಲದ ಯಮ ಧೂತರ ಕಾಟದಿ

 ದುರುಳರ ಸಾಹಸ ಪರಿಹರಿಸಭವ   ||  ||

 ಆಶಾಪಾಶದಿ ಘಾಸಿಯಾಗುವೆ ನಾನು !

ಮೋಸದ ಮಾಯೆಯ ಬಲೆಯೊಳು ವಾಸಿಪೆ

ಭಾಸುರಾನಂದ ಶಿವಯೋಗದೊಳಿರಿಸಿ  ||  ||

ರಚನೆ: ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಶಿವಮಂಗಲವನು ಕೊಡು ಬೇಗ

ಭವದುಃಖದಿ ಬಳಲುವೆವೀಗ ||

ಭುವಿಗವತರಿಸಿದ ಕಾರಣವ

ಜವದೊಳು ನೆನೆಯುತೆ ಗುರುದೇವ ||||

ಮನುಜ ಜನ್ಮವನು ತೊಟ್ಟಿಹೆವು

ಘನಮಹಿಮ ಪಥ ಬಿಟ್ಟಿಹೆವು  ||

ಮನದಿಹೀನಗುಣ ತೊಡರಿಹೆವು

ಮುನಿವಂದ್ಯನೆ ನಮಿಸುತ್ತಿಹೆವು || 2 ||

ಹುಟ್ಟಿ ಹುಟ್ಟಿ ಸಾಯ್ವುದ ನೋಡಿ

ಕಷ್ಟ ತೆರದಿ ಬಹು ಚರಿಸಾಡಿ  ||

ದುಷ್ಟರೆನಿಸಿಕೊಂಬುದ ನೋಡಿ

ಶಿಷ್ಟನೆ ನೀನತಿದಯೆಗೂಡಿ || 3 ||

ಇದ್ದ ಗುಣಗಳೆಲ್ಲವಮರಿಸಿ

ಶುದ್ಧಗುಣದಮನವನ್ನಿರಿಸಿ ||

ಸಿದ್ಧರಾಮ ಗುರುದಯಕರಿಸಿ

ತಿದ್ದುವದತಿ ನೀ ಮುದವಿರಿಸಿ  ||||

(ಶಿವಯೋಗ ಮಂದಿರ ರಾಗ ಸಂಯೋಜನೆ : ರಾಗ ಮಾಂಡ)

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಡಿಸೆಂಬರ  ೨೦೨೧ ರ ಸಂಚಿಕೆ

ಶೈವಮಾರ್ಗದ ಭವದ ನೋವ ತಾರಿಸಿ ವೀರ-

ಶೈವಾಮೃತ ಮೊಲೆಯನುಣಿಸಿ ಪೊರೆದೆನ್ನ ಹೆ-

ತವ್ವ ಶ್ರೀಗುರುವೆ ಕೃಪೆಯಾಗು   || ೩೨ ||

ಕವಿಯು ಹೆತ್ತವ್ವೆಯ ನೋವನ್ನು ನೆನಿಸುತ್ತಾನೆ ತಾಯಿಯು ಮಗುವನ್ನು ಹೆರಬೇಕಾದರೆ ಅನಂತ ಕಷ್ಟ-ನಷ್ಟಗಳನ್ನು ಅನುಭವಿಸಿ ಮೊಲೆಯುಣಿ’ಸಿ ಸಲಹುತ್ತಾಳೆ.ಮಗನ ನೋವನ್ನು ಸ್ಮರಿಸುವದಿಲ್ಲ. ನೋವು ನನಗಿರಲಿ, ಮಗನು ಸುಖವಾಗಿರಲೆಂದೇ ಬಯಸುತ್ತಾಳೆ. ಪೂಜ್ಯಗುರುವರರು ‘ಮಕ್ಕಳಿಗೆ ಕಷ್ಟ-ನಷ್ಟಗಳೆಷ್ಟೇ ಬಂದರೂ, ಎಡರು-ತೊಡರಗಳು ಬಂದರೂ ಅವೆಲ್ಲವುಗಳನ್ನು ನನಗೇ ತಾಯೆನ್ನುವವಳೇ ತಾಯಿ” ಎಂದು ತಾಯಿ ಶಬ್ದದ ಅರ್ಥವನ್ನು ಅಪ್ಪಣೆ ಮಾಡುತ್ತಿದ್ದರು.ಗುರುತಾಯಿಯೂ ಅಷ್ಟೇ ಭಕ್ತನ ಭವದ ನೋವನ್ನು ಸ್ಮರಿಸುವದಿಲ್ಲ. ಶೈವ ಮಾರ್ಗವು ಭವದ ಬೀಜವೆನಿಸಿದೆ. ಸ್ಥಾವರಲಿಂಗವನ್ನು ಆರಾಧಿಸುವವನು ಶೈವನೆನಿಸುವನು. ಶಿವನೂ ಸಹ ಲಿಂಗವಿಲ್ಲದೆ ಭವಿಯಾಗಿರುವದರಿಂದ ಭಕ್ತನನ್ನು ನಿಜ ಮುಕ್ತನನ್ನಾಗಿ ಮಾಡಲಾರನೆಂಬುದು ಶರಣರ ವಾದ, ಶಿವನು ಶೈವಭಕ್ತರಿಗೆ ಚತುರ್ವಿಧ ಮುಕ್ತಿಗಳನ್ನು ಕರುಣಿಸಿ ಅವರ ಪುಣ್ಯ ತೀರಿದ ಮೇಲೆ ಪುನಃ ಭವಕ್ಕೆ ನೂಕುವನು. ಭವದಲ್ಲಿ ಬರುವದರಿಂದ ಮಾಯಾ ಮೋಹದ ಬಂಧನವು ಜೀವಾತ್ಮನನ್ನು ದುಃಖಿ

ಯನ್ನಾಗಿ ಮಾಡುವದು. ಶೈವನಾದವನು ಶಿವನು ಬೇರೆ; ತಾನು ಬೇರೆಂದು ಭಾವಿಸುವನು ಅವನಲ್ಲಿ ಪೂಜ್ಯ ಪೂಜಕ ದ್ವಂದ್ವಭಾವ ಅಳಿಯುವದಿಲ್ಲ. ಕೈಲಾಸ ಬೇರೆ ಶಿವನು ಬೇರೆಯೆಂಬ ದ್ವಂದ್ವವನ್ನು ಕಳೆದುಕೊಳ್ಳಲಾರನು. ಈ ದ್ವಂದ್ವವಳಿಯದೇ ಭವದನೋವು ಇದೇ ವಿಷಯವನ್ನು ಬಸವಲಿಂಗಶರಣರು ತಮ್ಮ ಧರ್ಮಾಚಾರ ಪ್ರಕರಣದಲ್ಲಿ ಅಳಿಯದು.

ಶ್ರೀ ಮಹಾ ಸದ್ ಭಕ್ತನಂಗವೇ ಕೈಲಾಸ, ಲಿಂಗವ ಸಾಕ್ಷಾತ್ ಶಿವಂ |

ಈ ಮರ್ಮವನರಿಯದದಶ್ಚಿದ ಶಾಸ್ತ್ರವನೋದಿ

ಭೂಮಿಯೊಳಗಿರ್ದು ಕೈಲಾಸಬೇಡುಂಟೆಂಬ

ಕಾಮಿತಾರ್ಥಿಗಳೆಲ್ಲರಗಗನಭವಾಂತರದೊಳರಸಿ ಕಾಣದೆ ಪೋದರು

ಮತ್ತು

‘ಭವಿಗಳವರು ಶಿವನೋಲಗದೊಳೆಡೆಯು

ಭುವನದೊಳು ಭವಿಗೆ ಭವಮುಂಟಿಲ್ಲದಂದು-ಸದ್ಭಕ್ತರಿಗೆ ಭವಗಳುಂಟೆ ? || ೨೬ ||

ಎಂದು ಭವಿಗಳಿಗೆ ಭವದನೋವಲ್ಲದೆ ವೀರಶೈವನಿಗೆ (ಶರಣನಿಗೆ) ಭವವಿಲ್ಲೆಂದು ಖಂಡಿತವಾಗಿ ತಿಳಿಸಿದ್ದಾರೆ. ಸ್ವಾನುಭಾವದಿಂದ ಮುಪ್ಪುರಿಗೊಂಡ ವೀರಶೈವತತ್ವಾಚರಣೆಯು ಶ್ರೇಷ್ಠವಾಗಿದೆ. ಗುರುನಾಥನು ಶೈವಮಾರ್ಗವು ಭವದ ಬುನಾದಿ ಯೆಂದು ಅದನ್ನು ಹೋಗಲಾಡಿಸಿ ಕರುಣೆಯಿಂದ ವೀರಶೈವ ತತ್ವದ ಮಹತ್ವವನ್ನು ತಿಳಿಸುತ್ತಾನೆ. ವೀರಶೈವತತ್ತ್ವವು ಅಮೃತ ಸಮಾನವಾಗಿದೆ. ಶರಣತತ್ತ್ವವನ್ನುಅನುಸರಿಸಿದವನು ಅಮರನಾಗುತ್ತಾನೆಂದು ಗುರುಬೋಧಿಸಿ ಹೆತ್ತವ್ವೆಯಂತೆ ಶಿಷ್ಯನನ್ನು ಸಾಕಿಸಲಹುತ್ತಾನೆ. ತಾನೆಷ್ಟೇ ಕಷ್ಟಗಳನ್ನು ಪಟ್ಟರೂ ಶಿಷ್ಯನಿಗೆ ಸುಖವನ್ನೇ ಬಯಸುತ್ತಾನೆ. ಹೆತ್ತವ್ವೆಯ ಹೃದಯ ಹರವಾದುದು,

ಓ ಹೆತ್ತವೆಯೇ ! ಪಾದೋದಕ ಪ್ರಸಾದವೆಂಬ ಅಮೃತವನ್ನು ನಿತ್ಯದಲ್ಲಿತ್ತು

ಕಾಪಾಡು, ಪಾದೋದಕ ಪ್ರಸಾದಗಳು ಸವೆಯದಮೃತವಲ್ಲವೇ ?

ಉಪ್ಪುನೆಲ್ಲಿಯು ಕೂಡಿ | ಒಪ್ಪಿ ರುಚಿಗೊಡುವಂತೆ

ತಪ್ಪದೆಂದೆಂದು ಅಗಲಿಕೆಯಿಲ್ಲದೆ

ನ್ನಪ್ಪ ಶ್ರೀಗುರುವೆ ಕೃಪೆಯಾಗು  || ೩೩||

ಶಿವಮಾರ್ಗದ ಜಾಡ್ಯವನ್ನು ಬಿಡಿಸಿ ವೀರಶೈವಾಮೃತವನ್ನು ಉಣಿಸಿ ಪೋಷಿಸಿದ ಶ್ರೀಗುರು ಹೆಮ್ಮೆಯಾದಂತೆ ಹೆತ್ತಪ್ಪನೂ ಆಗಿದ್ದಾನೆ. ಅಪ್ಪ ಮತ್ತು ಮಗನ ಸಂಬಂಧದ ಸ್ವಾರಸ್ಯವನ್ನು ಉತ್ತಮ ಉದಾಹರಣೆಯಿಂದ ಸಮರ್ಥಿಸುತ್ತಾನೆ. ಗುರುಶಿಷ್ಯರ ಸಂಬಂಧದ ಬಗ್ಗೆ ಅಲ್ಲಮ ಪ್ರಭುಗಳ ವಚನವೂ ಮನನೀಯವಾಗಿದೆ.

ಎತ್ತಣ ಮಾಮರ, ಎತ್ತಣ ಕೋಗಿಲೆ

ಎತ್ತಣಿಂದೆತ್ತ ಸಂಬಂಧವಯ್ಯಾ ?

ಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು.

ಎತ್ತಣಿಂದೆತ್ತ ಸಂಬಂಧವಯ್ಯಾ ?

ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ ?

ಮಾವಿನಮರಕ್ಕೂ ಕೋಗಿಲೆಗೂ ಏನು ಸಂಬಂಧ ? ಮರ ಉಬ್ದಿಜ, ಕೋಗಿಲೆ ಅಂಡಜ ಒಂದಕ್ಕೊಂದು ಸಂಬಂಧವಿಲ್ಲ. ಆದರೂ ವಸಂತಕಾಲದಲ್ಲಿ ಮಾಮರ ಚಿಗುರಲು ಚಿಗುರೆಲೆಗಳನ್ನು ತಿಂದ ಕೋಗಿಲೆ ಇಂಪಾಗಿ ಕೂಜನಮಾಡುತ್ತದೆ. ಗುಡ್ಡ ಗಾಡಿನಲ್ಲಿ ಬೆಳೆದ ನೆಲ್ಲಿಕಾಯಿ, ಸಮುದ್ರದ ದಂಡೆಯಲ್ಲಿ ತಯಾರಾಗುವ ಉಪ್ಪಿಗೆ ಯಾವ ಸಂಬಂಧವಿಲ್ಲ. ಆದರೂ ಅವೆರಡರ ಸಂಗಮ ಆರೋಗ್ಯಕ್ಕೆ ಹಿತಕರ ರುಚಿಕವಾಗುತ್ತೆ. ಹಾಗೆ ಅಂಗಲಿಂಗಗಳ ಸಂಬಂಧವೂ ವಿಚಿತ್ರವಾಗಿದೆ. ಈ ಬಗ್ಗೆ ಲಿಂಗಲೀಲಾ ವಿಲಾಸಕಾರರ ಟೀಕೆ ಉಲ್ಲೇಖನೀಯವಾಗಿದೆ. “ಅಂಗಕ್ಕೆಯೂ ಲಿಂಗಕ್ಕೆಯೂ ಸಂಬಂಧವೇನೂ ಇಲ್ಲ, ಅದೇನು ಕಾರಣವೆಂದರೆ-ಅಂಗವೆ ಜಡ, ಲಿಂಗವೇ ಜಡಾಜಡ ರಹಿತನಾಗಿ; ಮನಕ್ಕೆಯೂ ಅರುವಿಂಗೆಯೂ ಸಂಬಂಧವಿಲ್ಲ. ಅದೇನುಕಾರಣವೆಂದರೆ- ಮನವ ಮರವ; ಅರಿವೆ ಬೆಳಗಾಗಿ ಇಂತಪ್ಪ ತನು-ಮನವಿಡಿದಾತಂಗೆ ಮಹಾಲಿಂಗ ಸಂಗ ಒಮ್ಮೆಯೂ ಇಲ್ಲದೆ ಇರುತ್ತಿರಲಾ ಗುರುಕರುಣದಿಂದ ತನುಧರ್ಮ ಮನಧರ್ಮವಳಿದು ಮಹಾಲಿಂಗವು ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದಿತು.” (ಪುಟ ೧೦೭) ಸಾಹಸಿ ವ್ಯಕ್ತಿಯುಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪನ್ನು ಕೂಡಿಸುವಂತೆ ಕರುಣಾಮಯನಾದ ಸದ್ಗುರುವು ಶಿವದೀಕ್ಷೆಮಾಡಿ ಜಡಶರೀರವನ್ನು ಶುದ್ಧಗೊಳಿಸಿ ಅಂಗವನ್ನಾಗಿಸಿ ಅರುಹಿನ ಕುರುಹನ್ನೇ ಲಿಂಗವನ್ನಾಗಿ ನನ್ನ ಕರಸ್ಥಲಕ್ಕೆ ಕರುಣಿಸುತ್ತಾನೆ. ಅಂಗದಲ್ಲಿಯ ಮಹಾಲಿಂಗದ ಚೈತನ್ಯವನ್ನು ಲಿಂಗವನ್ನಾಗಿ ಪರಿವರ್ತಿಸಿ ಈ ಅಂಗದಿಂದ ಎಂದೂ ಅಗಲಲಾರದಂತೆ ಇರಿಸುವನು ತಿಳಿಯದ ಅಜ್ಞಾನದಿಂದ ದೂರವಾದ ಅಂಗಲಿಂಗಗಳನ್ನು ಒಂದುಗೂಡಿಸಿ ಒಪ್ಪುವಂತೆ ಮಾಡುವನು. ತಂದೆಯು ಲೌಕಿಕ ಸತಿಪತಿಗಳನ್ನು ಒಂದುಗೂಡಿಸಿ ಸುಖಿಯಾಗಿರಿಸುವಂತೆ ; ಗುರುತಂದೆಯು ಶರಣ ಸತಿಯೊಡನೆ ಲಿಂಗಪತಿಯನ್ನು

ಸಮರಸಗೊಳಿಸುವನು. ಈ ಸತಿಪತಿ ಸಮರಸದ ಬಾಳುವೆಗೆ ಪ್ರತಿಯುಂಟೆ?” ಎಂದು ಬಾಲಲೀಲಾ ಮಹಾಂತರು ಹಾಡಿದ್ದು ಯಥೋಚಿತವಾಗಿದೆ. ಗುರುಪಿತನು ನನ್ನನ್ನು ಲಿಂಗಪತಿಯೊಡನೆ ಕೂಡಿಸಿ ಮಹದುಪಕಾರ ಮಾಡಿದ್ದಾನೆ. ಇಂಥ ಕರುಣಾಮಯನಾದ ಅಪ್ಪನು ಇನ್ನಾರುಂಟು ?

*

ಜ್ಜೀವ ನಿಮ್ಮ ಪಾ | ದಾಬ್ಜವನು ಭಜಿಸಿ ಹ –

ಸ್ತಾಜ್ಜದೂಳ್ಜನಿಸಿ-ಸಜ್ಜೀವವಾದುದೆ –

ಜ್ಜಯ್ಯ ಗುರುವೆ ಕೃಪೆಯಾಗು  || ೩೪||

ಲೌಕಿಕ ತಂದೆಯ ತಂದೆಯು ಅಜ್ಜನಾಗುವಂತೆ ಗುರುನಾಥನೂ ಅಜ್ಜನಾಗುತಾನೆ. ಯಾಕೆಂದರೆ ಈ ಜೀವಾತ್ಮನು ಗುರುವಿನ ಪಾದಕಮಲದ ಸೇವೆ ಮಾಡಿ ಸಜೀವವಾಯಿತು. ಅಂದರೆ ಶಿವದೀಕ್ಷಾಸಂಸ್ಕಾರದಿಂದ ಎಲ್ಲ ಕ್ರಿಯೆಗಳು ಸತ್ ಕ್ರಿಯೆಗಳಾಗುವವು. ಜೀವನ ಜಡತ್ವವು ದೂರವಾಗುವದು. ಸಕಲಾಚಾರಗಳು ಸದಾಚಾರಗಳಾಗುವವು. ಗುರುನಾಥನ ಕೃಪೆಯಿಂದ ಅವನ ಹಸ್ತಕಮಲದಲ್ಲಿ ಶಿಷ್ಯನ ಲಿಂಗತಂದೆಯ ಜನನವಾಗುತ್ತದೆ. ಆ ಲಿಂಗತಂದೆಯನ್ನು ಹಡೆದ ತಂದೆ ಗುರುವರನಲ್ಲವೇ, ಹಾಗಾದರೆ ಗುರುವು ಅಜ್ಜನಲ್ಲದೆ ಮತ್ತೇನು ?

ಶಿವಕವಿಯು ಗುರುವಿನಲ್ಲಿ ವಿಭಿನ್ನ ಸ್ವರೂಪವನ್ನು ಕಂಡು ತಣಿದಿದ್ದಾನೆ. ಮನದುಂಬಿ ಹಾಡಿದ್ದಾನೆ. ಗುರುನಾಥನೆ ! ಲೌಕಿಕ ಅಜ್ಜನು ಮೊಮ್ಮಗನಿಗೆ ಸುಜ್ಞಾನವನ್ನು ಕಲಿಸುವಂತೆ, ನೀನು ಅಧ್ಯಾತ್ಮದ ಅಜ್ಜನು, ನಿನ್ನ ಕರುಣೆ ಅಗಾಧವಾದುದು. ನನ್ನ ಹೃದಯ ಕಮಲವನ್ನರಳಿಸಿ ಸುಜ್ಞಾನವನ್ನಿತ್ತು ಆತ್ಮೀಯ ಅಜ್ಜನಾಗಿರುವೆ. ನಿನಗಿಂತಲೂ ಆತ್ಮೀಯರುಂಟೆ ?

ಮತ್ತೆ ನಾ ನಿಮ್ಮ | ಸತ್ಪುತ್ರನಾತ್ಮಜನಣುಗ

ಪೆತ್ತವನ ಮಗನ ಭೃತ್ಯನೈ ನೀನೆನ್ನ

ಮುತ್ತಯ್ಯ ಗುರುವೆ ಕೃಪೆಯಾಗು || ೩೫ ||

ಲೌಕಿಕದಲ್ಲಿ ಅಜ್ಜಯ್ಯನಿಗೇನೇ ಮುತ್ತಯ್ಯನೆನ್ನುವದು ಪ್ರೀತಿಯ ಸಂಕೇತವಾಗಿದೆ. ಮೇಲೆ ವಿವರಿಸಿದುದನ್ನೇ ಒತ್ತಿ ಹೇಳುತ್ತಾನೆ.

ಗುರುವೆ ! ನಾನು ನಿಮ್ಮ ಮೊಮ್ಮಗನು. ನನ್ನ ಪೆತ್ತವನು (ಲಿಂಗವು) ನಿನ್ನ ಕರಕಮಲದಲ್ಲಿ ಹುಟ್ಟಿ ನಿನಗೆ ಸತ್ಪುತ್ರನಾದನು. ಅವನ ಅಣುಗ (ಮಗ)ನಾದವನು ನಾನು, ಎನ್ನ ಅಂಗದಿಂದ ಅಗಲದ ಅಧ್ಯಾತ್ಮಿಕ ಪಿತನು ಲಿಂಗದೇವನು. ಅವನು ನಿನ್ನಿಂದ ಬಂದವನು. ಆ ಲಿಂಗ ಪತಿಯ, ಲಿಂಗಪಿತನ ಸೇವೆಮಾಡಲು ಅಣಿಯಾದ ಮೊಮ್ಮಗನು ನಾನು. ಆದ್ದರಿಂದ ನೀನು ನನ್ನ ಮುತ್ತಯ್ಯನಲ್ಲವೆ ? ಇಂಥ ಅನನ್ಯ ಸಂಬಂಧವನ್ನು ಹೊಂದಿದ ನಾನೇ ಧನ್ಯನು.

ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ ಇಟಗಿ

ಗ್ರಂಥ ಋಣ: ಸುಕುಮಾರ ದೀಪ್ತಿ

 ಸಂಪಾದಕರು : ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ -ವಿಜಯಪುರ

ಕಾಲ ಚಕ್ರದ ಕೊನೆ ಮೊದಲಂತೆ ಕಲಿಪುರುಷನ ಹಗಲಿರುಳಿನಂತೆ ಭಾರತಾಂಬೆಯ ಭಾಗ್ಯೋದಯದಿಂದ ಆಗಾಗ ಯುಗ ಯುಗಾಂತರದಿಂದಲೂ ಯುಗಪುರುಷರೂ, ಮಹಾ ತಪಸ್ವಿಗಳೂ, ಮಹಾ ಮಹಾ ಮಂತ್ರ ದ್ರಷ್ಟಾರರೂ, ಯೋಗಿ- ಶಿವಯೋಗಿಗಳೂ ಭಾರತ ಮಾತೆಯ ಪುಣ್ಯಗರ್ಭದಿಂದ ಉದಿಸಿ ಲೋಕವ ನಾಕಕ್ಕೆ ಹಿರಿದೆನ್ನುವಂತೆ ತೊಳಗಿ ಬೆಳಗಿ ಕೀರ್ತಿ ಜ್ಯೋತಿಗಳಾಗಿದ್ದಾರೆ. ಆಗುತ್ತಲಿದ್ದಾರೆ.

ಖಣಿಯಿಂದ ರತ್ನ, ಮೃಗದಿಂದ ಕಸ್ತೂರಿ, ಪುಷ್ಟದಿಂದ ಪರಿಮಳವು ಹೊರ ಹೊಮ್ಮುವಂತೆ ಮಹಾತ್ಮರ ಉದಯವು ಕಿರಿ ಹಳ್ಳಿಗಳಲ್ಲಿ ಮತ್ತು ಬಡತನದ ಮನೆತನದಲ್ಲಿ ಎಂಬುದು ಸರ್ವಶೃತ. ಅಂತೆಯೇ ಯುಗ ಪುರುಷ ಕಾರಣಿಕ ಪರಮ ಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀ ನಿ. ಪ್ರ. ಕುಮಾರ ಶಿವಯೋಗಿ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸರ್ವಮಾನ್ಯ ಸಂಚಾಲಕರೂ ಸೌಹಾರ್ದದಿಂದ ಪಾಲಕರೂ ಆಗಿರುವ ಹಾನಗಲ್ಲಿನ ವೀರ ವಿರಕ್ತಮಠಾಧೀಶರಾಗಿರುವ ಪರಮಪೂಜ್ಯ ಶ್ರೀ ನಿ. ಪ್ರ. ಸ್ವರೂಪಿ ಸದಾಶಿವ ಮಹಾಸ್ವಾಮಿಗಳವರ ಉದಯವು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಎಂಬ ಹಳ್ಳಿಯಲ್ಲಿ ಆಯಿತು. ಆ ಅರಳಿಕಟ್ಟಿ ಚಿಕ್ಕ ಗ್ರಾಮದಲ್ಲಿ ಸಧ್ಬಕ್ತಿ ಸದಾಚಾರ ಸಂಪನ್ನರೂ ಗುರು-ಲಿಂಗ-ಜಂಗಮ ಪ್ರಾಣಿಗಳೂ ಆದ ವೇ. ಶ್ರೀ ಗಂಗಯ್ಯನವರು ಅವರ ಧರ್ಮ ಪತ್ನಿಯಾದ ಸಾಧ್ವೀಶೀಲವತೀ ರಾಚಮ್ಮನವರ ಪವಿತ್ರ ಗರ್ಭ ಸುಧಾಂಬುಧಿಯಲ್ಲಿ ಇಶ್ವಿ ಸನ್‌ ಸಾವಿರದ ಒಂಬೈನೂರಾ ಆರ (1906) ರಲ್ಲಿ ಬಾಂದಳದಲ್ಲಿ ಬಿದಿಗೆಯ ಚಂದ್ರನು ಉದಿಸಿ ಬಂದಂತೆ ಜನ್ಮ ತಾಳಿದರು. ಇವರಿಗೆ ತಾಯ್ತುಂದೆಗಳು ಬಂಧು ಬಳಗದವರು ಮತ್ತು ಹಲವಾರು ಸುಮಂಗಲೆಯರು.

ಭವರೋಗ ಕಳಿಯಲ್ಕೆ ಶಿವಯೋಗ ಬೆಳಸಲ್ಕೆ ಶಿವನಿಳೆಗೆ ಬಂದೆ ಜೋ ಜೋ

ಕವಿದಿರ್ದ ಕತ್ತಲೆಯ ಶಿವತೇಜೋ ಬಲದಿಂದ ಬೆಳಗಿ ಕಳೆಯಲು ಬಂದೆ

ಎಂದು ಮುಂತಾಗಿ ಮುದ್ದಿಕ್ಕಿ ಜೋಗುಳ ಹಾಡಿ ಶ್ರೀ ಗುರುವಿನಿಂ ಲಘು ದೀಕ್ಷೆಗೈದ ಶಿಶುವಂ ಕಣ್ಮನದುಂಬಿ ನೋಡಿದ ಒಳಗಣ್ಣಿನ ಶ್ರೀ ಗುರುಗಳು ಹೊಂಬೆಳಗಿನ ಈ ಶಿಶುವಿಗೆ ಚಂದ್ರಶೇಖರ ಎಂದು ಬಳಗದಿಂದೊಡಗೂಡಿ ನಾಮಕರಣ ಮಾಡಿದರು. ಕೆಲವೇ ದಿನಗಳಲ್ಲಿ ದೇವರ ಕೋಣೆಯಲ್ಲಿ      ಶಿವ ತೇಜೋಮೂರ್ತಿ ಯಾದ ಚಂದ್ರಶೇಖರಯ್ಯನ ತಲೆಯ ಮೇಲೆ ಘಣಿರಾಜನು (ನಾಗರಾಜ) ಹೆಡೆ ಎತ್ತಿ ಲೀಲಾಜಾಲವಾಗಿ ಆನಂದದಿಂದ ಆಡತೊಡಗಿತ್ತು. ಇದನ್ನು ಕಂಡು ಮಾತಾಪಿತರು ಆಶ್ಚರ್ಯಚಕಿತರಾಗಿ ಭಯಬೀತರಾಗಿ, ಶಿವಸಂಕೇತದಂತ 1907ರಲ್ಲಿ ಬಿಕ್ಷಾಟನೆಗಾಗಿ ದಯಮಾಡಿಸಿದ ಶ್ರೀ ಶಿವಯೋಗಮಂದಿರದ ಸಂಸ್ಥಾಪಕರೂ, ದೀಪಕರೂ, ಪರಮ ಪರಂಜ್ಯೋತಿ ಸ್ವರೂಪರೂ ಆದ ಪೂಜ್ಯ ಕಾರಣಿಕ ಶ್ರೀ ನಿ. ಪ್ರ. ಕುಮಾರ ಶಿವಯೋಗಿಗಳಿದ್ದೆಡೆಗೆ ಧಾವಿಸಿ ಬಂದು ಸನ್ನಿಧಿಯಲ್ಲಿ ನಡೆದ ಘಟನೆಯನ್ನು ಆರಿಕೆ ಮಾಡಿಕೊಳ್ಳಲು, ಶ್ರೀಗಳವರು ಥಟ್ಟನೆ ಆತನಿಂದ ಲೋಕೋಪಕಾರವಾಗಬೇಕಾಗಿದೆ. ಸಮಾಜ ಜೀವಿಯಾಗಬೇಕಾಗಿದೆ ಮತ್ತು ಆ ಕೂಸು ನಿಮ್ಮದಾಗದೆ. ಶ್ರೀಗುರುವಿನದಾಗುವದು, ಶ್ರೀ ಗುರುವಾಗುವದು. ಸಮಾಜಜೀವಿ, ಸಮಾಜೋದ್ಧಾರಕ ವಸ್ತುವಾಗುವುದು. ಆದ್ದರಿಂದ ಈ ಘಟನೆ ನಡೆದಿದೆ. ನೀವು ಅಂಜಬೇಡಿರಿ. ಅಂಥ ಪುಣ್ಯ ಪುರುಷನನ್ನು ಪಡೆದ ಗರ್ಭವೇ ಮಹಾ ಗರ್ಭ, ನೀವೇ ಭಾಗ್ಯಶಾಲಿಗಳು, ಧನ್ಯರು, ಎಂದು ಆನಂದದಿಂದ ಆಶೀರ್ವದಿಸಿದರು. ದಿವ್ಯಜ್ಞಾನಿಗಳಾದ ಶ್ರೀ ಕುಮಾರ ಶಿವಯೋಗಿಶ್ವರರ ಅಮರವಾಣಿ ಎಂದಾದರೂ ಸುಳ್ಳಾದೀತೆ ? ಅದೆಂದು ಸಾಧ್ಯ !

ಹತ್ತೊಂಬತ್ತು ನೂರಾ ಹದಿನೈದು (1915)ರಲ್ಲಿ ಅಲ್ಲಿಯ ಮಠದ ಶಿಷ್ಯ ಪ್ರಮುಖರು ಶ್ರೀ ಚಂದ್ರಶೇಖರನನ್ನುತಮ್ಮ ಊರ ಹಿರಿಯ ಮಠದ ಅಧಿಕಾರಿಯನ್ನಾಗಿಸಲು, ಹಾನಗಲ್ಲ ಕುಮಾರ ಶಿವಯೋಗಿಗಳವರ ಪಾದಾರವಿಂದಗಳಲ್ಲಿ ಅರ್ಪಿಸಿದರು. ಆಗ ಮಹಾಶಿವಯೋಗಿಗಳು ಆತನ ಪೂರ್ವಾಶ್ರಮದ ಹೆಸರಿನ ಸ್ಥಾನದಲ್ಲಿ ಶ್ರೀ ರೇಣುಕಾರ್ಯನೆಂದು ನೂತನ ಪುಣ್ಯ ನಾಮವನ್ನು ದಯಪಾಲಿಸಿ ಅವರಿಗೆ ಅಧ್ಯಯನ, ಅನುಷ್ಠಾನಾದಿಗಳಿಂದ ಸರ್ವ ಸೌಹಾರ್ದ ಸೌಕರ್ಯಗಳಿಂದ ತರಬೇತು ಕೊಡಿಸಿದರು. ತತ್ಪರಿಣಾಮವಾಗಿ ಕನ್ನಡ-ಸಂಸ್ಕೃತ ಘನ ವಿದ್ವಾಂಸರೂ, ಶಿವಾನುಭವಿಗಳೂ ಶಿವಯೋಗಿ ಸಿದ್ಧರೂ ಆದ ಶ್ರೀ ವ್ಯಕ್ರನಾಳ ಪಟ್ಟಾಧ್ಯಕ್ಷರಿಂದ ವೀರ ಮಾಹೇಶ್ವರ ದೀಕ್ಷೆ ಪಡೆದರು. ಗಣಿಯಿಂದ ಹೊರ ಹೊಮ್ಮಿ, ಶಿಲ್ಪಿಯಿಂದ ಸಂಸ್ಕರಿಸಿದ  ರತ್ನದಂತೆ ಮೇಧಾವಿ (ಜಾಣ)ಯಾದ ಈ ವಟುವು ಕನ್ನಡ, ಸಂಸ್ಕೃತ, ಸಂಗೀತ, ಚಿತ್ರಕಲೆಗಳಲ್ಲಿ ಪರಿಣತೆಯಿಂದ ಪಳಗಿದನು. ಈತನಲ್ಲಿರುವ ಸಹಜ ಶೀಲ ಸೌಜನ್ಯ ಶಾಂತಿ-ದಾಕ್ಷಿಣ್ಯಾದಿ ಗುಣಗಳನ್ನು ಕ್ರಮೇಣ ನಿರೀಕ್ಷಿಸಿ ಶ್ರೀ ಕುಮಾರ ಪರಂಜ್ಯೋತಿಃ ಪ್ರಭಾ ಹೊಂಗಿರಣ (ತಪೋನಿಧಿಗಳ ಪ್ರೇಮಾಂತಃಕರಣ)ಗಳು ಶ್ರೀಗಳ ಪ್ರಜ್ಞಾಂತಃ ಪಟಲದ ಮೇಲೆ ಸಂಪೂರ್ಣ ಬಿದ್ದಂತೆ ಪ್ರಕಾಂಡ ಪಂಡಿತರಿಂದ, ಸೂಜ್ಞರಿಂದ ಪದವಾಕ್ಯ- -ಪ್ರಮಾಣಜ್ಞರೂ ಶಿವಾನುಭವಿಗಳೂ ಆದ ಇವರು ಶ್ರೀ ಶಿವಯೋಗಿಯ ಕರುಣೆಯ ಪಡೆದು ಚಿದ್ಗುರುವಿನಿಂದ ಅನುಗ್ರಹಿತರಾಗಿ ಶ್ರೀ ರೇಣುಕಾ ದೇಶಿಕ ರಾದರಲ್ಲದೆ ಅಧ್ಯಯನವನ್ನು ಪುಷ್ಪದೊಳಗಿನ ಮಧುವಿಗೆರಗುವ ತುಂಬಿಯಂತೆ ಸದ್ವಿದ್ಯಾ ವ್ಯಸನಿ-ವ್ಯಾಸಂಗವನ್ನು ಮುಂದುವರಿಸುವದರೊಂದಿಗೆ ಶ್ರೀ ಶಿವಯೋಗಮಂದಿರದ ಕಾರ್ಯಭಾರವು ಚರಿತ್ರ ನಾಯಕನ ದಾಯಿತು. ಯಾವಾಗಲೂ ಬೆಳೆಯುವ ಸಿರಿಯ ಮೊಳಕೆಯಲ್ಲಿ ನೋಡು ಎಂಬಂತೆ ಮಹಾತ್ಮರ ಜೀವನದ ಉಜ್ವಲತೆಯು ಜ್ಯೋತಿ ಸ್ವರೂಪವಾಗಿ ಪ್ರಜ್ವಲಿಸುತ್ತಿತ್ತು.

ಹಾನಗಲ್ಲ ಮಠದ ಪರಮ ಗುರು ಶ್ರೀ ಕುಮಾರ ಪರಂಜ್ಯೋತಿಯ ಬೆಳಗು, ಮಹಾ ಬೆಳಗಿನಲ್ಲಿ ಬೆರೆದ ಬಳಿಕ ಉತ್ತರಾಧಿಕಾರ ಸ್ಥಾನಾಪನ್ನರಾದ ಪರಮಪೂಜ್ಯ ಶ್ರೀ ನಿ. ಪ್ರ. ಮಹೇಶ್ವರ ಮಹಾಸ್ವಾಮಿಗಳು ತಮ್ಮ ಅಂಗಕರಣಂಗಳನ್ನು ಲಿಂಗಕಿರಣಂಗಳನ್ನಾಗಿಸಿದ ಬಳಿಕ (ಲಿಂಗರೂಪಿಗಳಾದ ಬಳಿಕ) ಹಲವಾರು ಗಣ್ಯ ಪೂಜ್ಯರು ವಿಚಾರಿಸಿ ಮಠಗಳು ಮಹದರುವಿನ ಚಿದ್ಬೆಳಕನ್ನೀಯುವ ಶಿವಾದ್ವೈತದ ಹೊಂಬೆಳಗಿನ ಹೊನಲನ್ನು ಹೊರಚಿಮ್ಮುವ ದೀಪಸ್ತಂಭಗಳು. ನಾಸ್ತಿಕರನ್ನು ಆಸ್ತಿಕರನ್ನಾಗಿ, ಮಾನವತೆಯಿಂದ ಮನಸ್ವಿಗಳನ್ನಾಗಿಸುವ, ಮಠದ ಪೀಠಗಳಿಗೆ ಯೋಗ್ಯತಾ ಸಂಪನ್ನರನ್ನೇ ಹುಡುಕುತ್ತಿರುವಾಗ ಶಿವಯೋಗ ಧಾಮದ ಶ್ರೀ ಶಿವಯೋಗ ಮಂದಿರದಲ್ಲಿ ಶಿವಯೋಗ ಸದಾಚಾರ ಸತತಾಭ್ಯಾಸದಲ್ಲಿ ಪಳಗಿದ ಕುಶಲ ಮತಿ-ಮೇಧಾವಿಗಳಾದ ಶ್ರೀ ರೇಣುಕ ದೇಶಿಕರನ್ನು ಆ ಮಠದ (ಹಾನಗಲ್ಲ ವಿರಕ್ತಮಠ) ಉತ್ತರಾಧಿಕಾರಿಗಳನ್ನಾಗಿ ಮಾಡಲು ಹುಬ್ಬಳ್ಳಿಯ ಮೂರು ಸಾವಿರಮಠದ ಅಂದಿನ ಜಗದ್ಗುರುಗಳಾದ ಲಿಂ. ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ನವಲಗುಂದದ ಲಿಂ. ಶ್ರೀ ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು, ಗುತ್ತಲದ ಲಿಂ. ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀಮಾನ್‌ ದೇವಿಹೊಸೂರ ಶೆಟ್ಟರು ಇನ್ನುಳಿದ ಪ್ರಮುಖ ಸದ್ಭಕ್ತರ ಬಯಕೆಯಂತೆ ಶ್ರೀ ರೇಣುಕ ದೇಶಿಕರನ್ನು ಹಾನಗಲ್ಲಿನ ವಿರಕ್ತ ಪೀಠಾಧಿಕಾರಿಗಳನ್ನಾಗಿ ಮಾಡಿದರು. ಜಡೆಮಠದ ಲಿಂ. ಶ್ರೀ ನಿ. ಪ್ರ. ಸಿದ್ದಬಸವ ಮಹಾಸ್ವಾಮಿಗಳವರಿಂದ ಅಧಿಕಾರ ಪಡೆದು. ಪಂ. ಸೋಮನಾಥ ಶಾಸ್ತ್ರಿಗಳು ಇಟಗಿ. ಗೊಗ್ಗೀಹಳ್ಳಿ ಸಂಸ್ಥಾನಮಠ ಅವರ ಪೌರೋಹಿತ್ಯದಲ್ಲಿ ಶೂನ್ಯ ಸಿಂಹಾನಾಧೀಶರಾದರು. ಕ್ರೀ. ಶ. 1936ರಲ್ಲಿ ಆ ಶುಭ ಮಂಗಲ ಸಮಯಕ್ಕೆ ಪರಮ ಗುರುವಿನ ಮೊದಲ ಪುಣ್ಯನಾಮವಾದ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳೆಂದು ಅಭಿನವ ಅಭಿದಾನವಾಯಿತು.

ಪರಮಗುರು ಪರಮಾರಾಧ್ಯರಾದ ಶ್ರೀ ನಿ. ಪ್ರ. ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗ ಮಂದಿರದ ಶ್ರೇಯಸ್ಸಿಗಾಗಿ ತಮ್ಮ ಮಠವನ್ನು ಬದಿಗಿರಿಸಿ, ಲೋಕವೇ ನನ್ನ ಮಠ, ಮಾನವ ಕುಲಕೋಟಿಯ ಸರ್ವಾಂಗೀಣ ಶ್ರೇಯಸ್ಸೇ ನನ್ನ ಶ್ರೇಯಸ್ಸು, ಎಂದು ಭಾವಿಸಿ ಅಧ್ಯಾತ್ಮ ತತ್ವ್ತಾಮೃತ ಪಿಪಾಸುಗಳ ನೆಲೆವೀಡಾದ ಋಷಿಪುಂಗವರ, ಮಹಾ ಶಿವಯೋಗಿಗಳ ತಪೋ ಧನವನ್ನು ಮುಡುಪಿಟ್ಟ ಭಾರತ ಹೃದಯ ಪೀಠದಂತಿರುವ ಶ್ರೀ ಶಿವಯೋಗಮಂದಿರವೆ ಮಹಾ ಮಠವೆಂದು ಭಾವಿಸಿ ಶಿವಯೋಗ ನಿದ್ರೆಯಲ್ಲಿ ಕಾಲಕಳೆಯುತ್ತ ಪ್ರತಿಯೊಬ್ಬ ವ್ಯಕ್ತಿಯೂ ಶಿವ ಭಾವನೆಯಿಂದ, ವ್ಯಕ್ತಿ-ವ್ಯಕ್ತಿಯೂ ಶಿವಯೋಗಮಂದಿರವಾಗ ಬೇಕೆಂದು ಶ್ರೀ ಗುರು ಕುಮಾರೇಶನ ಹಿರಿಯಾಸೆಯಂತೆ ಅವರ ಆಶಯವೆಂಬ ದಾರಿ ದೀಪದ ಹೊಂಗಿರಣದ ಮುಂಬೆಳಗಿನಲ್ಲಿ ಸಹಜವಾಗಿ ಮುನ್ನಡೆಯುತ್ತ ಶಿವ- ಜೀವನದ ಹೂದೋಟದಲ್ಲಿ ಹೂಗಳಂತೆ ಅರಳುತ್ತಿರುವ ವಟು ಶಿವಯೋಗ ಸಾಧಕರಿಗೆ ಸಮಯೋಚಿತವಾಗಿ ಧರ್ಮದ ಸಮನ್ವಯದ ಸಾಹಿತ್ಯದ ತಿಳುವಳಿಕೆಯೊಂದಿಗೆ ಪಂಡಿತರಿಂದ ಕನ್ನಡ, ಸಾಹಿತ್ಯ ಸಂಗೀತ-ನ್ಯಾಯ-ವ್ಯಾಕರಣ ವಚನ ವಾಜ್ಮಯ ರೂಪಷಡ್ರಸಾನಿತ್ವ ಮೃಷ್ಟಾನ್ನವನ್ನು ಉಣಿಸಿ ತಣಿಸುತ್ತ, ತಮ್ಮ ಜೀವನವನ್ನೇ ಅವರ ಆತ್ಮೋನ್ನತಿಗೆ ಮೀಸಲಾಗಿರಿಸಿ ಸತ್ಕಾರ್ಯ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಮಾಜದ ಮೂಲ ಸ್ತಂಭಗಳಂತಿರುವ ಗುರು-ವಿರಕ್ತ ಮೂರ್ತಿಗಳನ್ನು ಭೇದ ಭಾವವಿಲ್ಲದೆ ಮಮತೆಯಿಂದ ತರಬೇತಿಗೊಳಿಸಿ, ಶಿವಯೋಗಿ, ವಟು, ಸಾಧಕರು ಆದರ್ಶ ಸಮಾಜ ಸುಧಾರಕರು, ಧರ್ಮ ಪ್ರಚಾರ ದುರಂಧರರು, ಶಿವಯೋಗದಲ್ಲಿ ಪಳಗಿದವರು (ಶಿವಯೋಗಿ ಸಿದ್ದರು) ಆಗಬೇಕೆಂಬ ಹಿರಿಯಾಸೆ ಶ್ರೀಗಳವರದು. ಆ ದಿಶೆಯಲ್ಲಿ (ವಟುಗಳ ಪುರೋಭಿವೃದ್ಧಿಗೆ) ತನು-ಮನ-ಧನವನ್ನೇ ಧಾರೆಯೆರೆದು ವಟು ಪಟುಗಳ ಮೂಲಕ ಶ್ರೀ ವೀರಶೈವ ಧರ್ಮವು ಅಷ್ಟೇ ಅಲ್ಲದೆ ಸರ್ವಧರ್ಮ ಸರ್ವಾಂಗ ಸುಂದರವಾಗಲಿ, ಮಾನವ ದೇವನಾಗಲಿ ಎಂಬ ಮಹದಾಶೆಯಿಂದ ಸತತವೂ ದುಡಿಯುತ್ತಿದ್ದಾರೆ. ಸಾಧಕರಿಗಾಗಿ ಆಗಾಗ ಪಾಕ್ಷಿಕ, ಮಾಸಿಕ, ವಾಕ್‌ ಸ್ಪಧೆರ್ಯನ್ನೇರ್ಪಡಿಸುತ್ತಿದ್ದಾರೆ.ಇದರಿಂದ ಆತ್ಮೋನ್ನತಿಗೆ ಅಧ್ಯಾತ್ಮ ತಾಯಿಯಂತೆ ವಟು ವಾತ್ಸಲ್ಯವು ಸಹಜವಾಗಿಯೇ ಎಷ್ಟಿದೆ ಎಂಬುದು ರವಿ ಪ್ರಕಾಶದಂತೆ ಸ್ಪಷ್ಟವಾಗುವುದು.

ಪರೋಪಕಾರವೇ ಮಹಾತ್ಮರ ಜನ್ಮ ಸಿದ್ಧ ಗುಣವಾಗಿರುವದು. ಅದು ನಿಜ ಅಂತೆಯೇ ಜನಸೇವೆಯೇ ಶಿವನ ಸೇವೆ, ದೇಶ ಸೇವೆಯೇ ಈಶ ಸೇವೆ, ಎಂಬುದನ್ನು ಮನಗಂಡು ತಮ್ಮ ಸರ್ವಸ್ವವನ್ನೆ ಪರರ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದಾರೆ.  ಶ್ರೀಗಳು ಸಮಾಜದಲ್ಲಿ ನಡೆಯುತಕ್ಕ ಅನ್ಯಾಯ, ಅನಾಚಾರ, ಅತ್ಯಾಚಾರಗಳನ್ನು ಉಚ್ಛೃಂಖಲ ವಿಚಾರಗಳನ್ನು ಕಂಡು ಕನಿಕರಬಟ್ಟು ಸಮಾಜವನ್ನು ಚೇತರಿಸಲು ಎಚ್ಚರಿಸಲು ತಮ್ಮ ಅಮೋಘ ಜ್ಞಾನಜ್ಯೋತಿಯನ್ನು ಹೊರ ಹೊಮ್ಮಿಸಿ ಅವರಲ್ಲಿರುವ  ಮೂಢ ನಂಬುಗೆಯ ಹೋಗಲಾಡಿಸಿ ಓಂಕಾರಸ್ವರೂಪವಾದ ಶಿವಾದ್ವೈತ, ಶಕ್ತಿವಿಶಿಷ್ಟಾದ್ವೈತ ರೂಪವಾದ ಷಡಕ್ಷರಿ ಮಹಾ ಮಂತ್ರರ್ಥರೂಪ ವಾದ ಇಷ್ಟಲಿಂಗ ವನ್ನು ಪೂಜಿಸಲು ಮೃದು ಮಧುರ ಸದುಕ್ತಿಗಳಿಂದ ಸಲಹೆ- ಸೂಚನೆಗಳನ್ನು ನೀಡಿ ಜನರನ್ನು ಎಚ್ಚರಿಸುತ್ತಾರೆ.

ಬಾಹ್ಯಾಚಾರಿ ಶ್ರೇಷ್ಠ ಲಿಂಗಾರ್ಚನಾರೂಪ ಕ್ರಿಯೆಗಳು ಅತ್ಯವಶ್ಯವು. ನಿಜವಾದ ಶಕ್ತಿಯ ಕೇಂದ್ರ ಸೂಕ್ಷ್ಮ-ಕಾರಣಗತ ಪ್ರಾಣ-ಭಾವಗಳೇ ಅಲ್ಲ ಸ್ಥೂಲಾಂಗಗತ ಇಷ್ಟಲಿಂಗ ವೂ ಅಹುದು. ಮನಸ್ಸು ಮೂರ್ತವಸ್ತು ನಿರಾಕಾರ ವಸ್ತುವನ್ನು ಗ್ರಹಿಸದು. ಸ್ಥೂಲೇಂದ್ರಿಯಗಳಿಗೆ ಗೋಚರ ಗ್ರಾಹ್ಯವಾಗಬೇಕಾದರೆ ಇಷ್ಟಲಿಂಗೋಪಾಸನೆ ಬೇಕೇ ಬೇಕು. ಹಾಲು ಹೆಪ್ಪು ಗಟ್ಟಿ ಸ್ಥೂಲವಾದಾಗ ಅದರ ಶಕ್ತಿ ಸಣ್ಣದೇ ? ಸಂಸ್ಕಾರದಿಂದ ಬೆಣ್ಣೆ ಸಂಸ್ಕಾರದಿಂದ ತುಪ್ಪ ಅದರ ಮಾಧುರ್ಯ ಸಾಲದೆ ಸಣ್ಣದೇ ? ಬೀಜ ಮೊಳೆತು ಬೆಳೆದು ಹಣ್ಣಾಗಿ ನಿಂತಾಗ ಕೇವಲ ಬೀಜಕ್ಕಿಂತ ಹಣ್ಣು ಕಡಿಮೆಯೇನು ? ಬೀಜ ಸೂಕ್ಷ್ಮವಿರಬಹುದು ಹಣ್ಣು ಸ್ಥೂಲವಿರಬಹುದು. ಆದರೆ ಹಣ್ಣಿನಲ್ಲಿ ಆ ಬೀಜವು ಇದ್ದು ಮಿಗಿಲಾಗಿ ಮಧುರ ರಸವೂ ಇರುತ್ತದೆ. ಈ ರಸ ಬೀಜದಲ್ಲಿ ಇದ್ದರೂ ಅಭಿವ್ಯಕ್ತವಾಗಿರದು. ಸವಿಯಲುಬಾರದು. ಈ ದೃಷ್ಟಿಯಿಂದ ಸ್ಥೂಲಕ್ಕೆ ಇರುವ ಕೊರತೆಯೇನು ? ಜೀವನ ಉಪಯುಕ್ತತೆಯ ಹಂತದಲ್ಲಿ ಬಾಹ್ಯೇಂದ್ರಿಯ ಹಾಗೂ ಮನೋಗ್ರಾಹ್ಯ ಇಷ್ಟಲಿಂಗ ಕ್ಕೆ ಶ್ರೇಷ್ಠತೆಯಿಲ್ಲದಿಲ್ಲ. ಅತ್ಯಾಧಿಕ್ಯತೆಯಿದೆ. ಸೂಕ್ಷ-ಸ್ಥೂಲಗಳೆರಡರ ಸಮಷ್ಟಿ ಸಹಕಾರವೇ ಜೀವನ, ಜೀವನ ನಾಣ್ಯದ ಎರಡು ಮಗ್ಗಲುಗಳು. ಈ ಮೂಲಕ ಶಕ್ತಿ ರಹಸ್ಯವನ್ನರಿಯಬೇಕು. ಅರಿತು ಅನುಭವಿಸಬೇಕು. ಅನುಭವಿಸಿ ಆನಂದಿಸಬೇಕು. ರೂಹಿಲ್ಲದ (ಕಣ್ಮನೋ ಗೋಚರ) ನೆನಹು ಅರಣ್ಯರೋಧನ. ಕನ್ನಡಿಯಿಲ್ಲದೆ ತನ್ನ ಮುಖವ ಕಾಣಬಹುದೆ ? ಭೂಮಿಯಿಲ್ಲದೆ ಬಂಡಿ ನಡೆಯಬಹುದೆ ? ಆಕಾಶದಲ್ಲಿ ಹಾರುವ ಪಟಕ್ಕಾದರೂ ಸೂತ್ರವಿರಬೇಕು. ದೇಹವಿಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಉಂಟೆ ? ಆತ್ಮನಿಗೆ ಆಶ್ರಯ ಉಂಟೆ ಬಯಲು ಬಮ್ಮವಾದಿಗಳಿಗೆ ನೆಲೆ ಕಲೆ ಉಂಟೆ ? ಮುಮುಕ್ಷುಗಳಿಗೆ ಇಷ್ಟಲಿಂಗದ ಅವಶ್ಯಕತೆಯಿದೆ. ಗರ್ಭದೊಳಿರುವ ಶಿಶುವಿನ ಕುರುಹು (ಗಂಡೋ ? ಹೆಣ್ಣೋ ? ಗುಣೀಯೋ ದುರ್ಗುಣಿಯೋ ಎಂದು) ಕಂಡು ಆನಂದಿಸಲು ಅಸಾಧ್ಯ. ಅಸಮಂಜಸ, ಅದೇ ಶಿಶು ಹೊರ ಬಂದ ಮೇಲೆ ಶಿಶುವನ್ನು ನೋಡಿ ಲಾಲಿಸಿ ಮುದ್ದಾಡುವ ತಾಯಿಗಾದ ಆನಂದಕ್ಕೆ ಮೇರೆಯು ಉಂಟೆ ? ಮೂರು ಅಂಗಗಳಿಗೆ ಮೂರು ಲಿಂಗ, ಸ್ಥೂಲ ಸೂಕ್ಷ್ಮಕಾರಣ ಶರೀರಗಳಿಗೆ ಕ್ರಮವಾಗಿ ಇಷ್ಟ, ಪ್ರಾಣ, ಬಾವವೆಂದು ಮೂರು ಲಿಂಗ ಸಂಬಂಧವನ್ನು ಶ್ರೀ ಗುರು ತನ್ನ ಜ್ಞಾನ ಕ್ರಿಯಾರೂಪ ಯೋಗಿಕ ಶಕ್ತಿಯಿಂದ ಕೇಂದ್ರೀಕರಿಸಿ ತನ್ನ ಶಿಷ್ಯನಾದ ಉಪಾಸಕನ ಸಹಸ್ರಾರದಲ್ಲಿರುವ ಚಿತ್ಕಲೆಯನೆ ಕರ ದಿಷ್ಟಲಿಂಗವ ನ್ನಾಗಿ ಕರುಣಿಸಿ ಸ್ಥೂಲ – ಸೂಕ್ಷ್ಮ – ಕಾರಣ ಮೂರು ಹಂತದ ಕಾಜಿನ ಪೆಟ್ಟಿಗೆ ಇದ್ದು ಅದರ ಮೇಲೆ ದೀಪವನ್ನಿಟ್ಟಂತೆ. ೧) ದೀಪ ೨) ದೀಪದ ಕಿರಣ ೩) ದೀಪ ಪ್ರಕಾಶವಿದ್ದಂತೆ ಕ್ರಮವಾಗಿ, ೧) ಇಷ್ಟ ೨) ಪ್ರಾಣ ೩) ಭಾವ ಲಿಂಗ ರೂಪಗಳು ಕಂಗೊಳಿಸುತ್ತಿದ್ದು ಆ ದೀಪವನ್ನೇ ತೆಗೆದು ಬಿಟ್ಟರೆ ದೀಪದ ಕಿರಣ ಪ್ರಕಾಶ ಎಲ್ಲವೂ ಇಲ್ಲವಾದಂತೆ. ಇಷ್ಟಲಿಂಗವು ಉಪಾಸಕನಿಗೆ ಅತ್ಯವಶ್ಯ. ಮನಸ್ಸು ಬಲು ಚಂಚಲ. ಇದಕ್ಕೆ ಏನಾದರೂ ಉದ್ಯೋಗಬೇಕು. ಯೋಗಃ ಚಿತ್ತವೃತ್ತಿ ನಿರೋಧಃ ಎಂದು ಅದರ ಹರಿದಾಡುವಿಕೆಯನ್ನು ಕೇವಲ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ ಮಹಾಪೂರಕ್ಕೆ ಆಣೆಕಟ್ಟು ಕಟ್ಟಿ ನಿಲ್ಲಿಸಿದರೆ ಆಗದು. ಆ ಪ್ರವಾಹಕ್ಕೆ ಸದುಪಯೋಗ ಭೂ ಸುಧಾರಣೆ ಬೆಳೆಸುವ ಮುಂತಾದವುಗಳಿಗೆ  ಉಪಯೋಗಿಸುವಂತೆ ಗುರು-ಚರ-ಧ್ಯಾನ-ಪೂಜಾ ಸಕಲೇಷ್ಟವಾದ ವಾದ ಇಷ್ಟಲಿಂಗ ದ ನಿಷ್ಠೆಯ ಧ್ಯಾನ, ಜಪ, ತಪಃ ಪೂಜಾಧಿಗಳಲ್ಲಿ ಮನ ತೊಡಗಿದರೆ ಮನಸ್ಸಿನ ಸದುದ್ಯೋಗ ಸಾಥರ್ಕವಾಗುವದು.

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ, ಎನ್ನಗುಳ್ಳದೊಂದು ಮನ, ಆ ಮನ ನಿಮ್ಮೊಳ ಒಡವೆರೆದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? ಎಂಬ ಮಹಾ ವೈರಾಗ್ಯ ಶಿರೋಮಣಿ, ಮಹಾ ಶಿವಶರಣೆ ಅಕ್ಕಮಹಾದೇವಿಯ ಅನುಭವದ ಅಮರ ವಾಣಿಯಂತೆ ಮನಸ್ಸನ್ನು ಮಹಾದೇವನಲ್ಲಿ ತೊಡಗಿಸಿದರೆ ಭವದ ಭೀತಿ ಇನ್ನಿಲ್ಲ, ನಿರ್ಭವ.

ಯಾವ ಪ್ರಕಾರವಾಗಿ ಬೀಜವು ಮೊಳೆತು ಪಲ್ಲವಿಸಿ ವೃಕ್ಷವಾಗುವದಕ್ಕೆ ಸ್ಥಲ, ಜಲ, ಕಾಲಾವಧಿಗಳು ಹೇಗೆ ಅವಶ್ಯವೋ ಹಾಗೆ ಶಿವನನ್ನು ಕಾಣಲು, ನೆಮ್ಮದಿಯಿಂದ ಸಾಕ್ಷತ್ಕಾರವಾಗಲು ಪ್ರತಿಯೊಬ್ಬ ಮಾನವನು ಅದರಲ್ಲೂ ವೀರಶೈವನು ಶಿವಾದ್ವೈತ ರೂಪವಾದ ಲಿಂಗಾಂಗ ಸಾಮರಸ್ಯ ರೂಪವಾದ ಶಿವದೀಕ್ಷೆ ವೀರ ಮಾಹೇಶ್ವರ ದೀಕ್ಷೆ ಯನ್ನು ಹೊಂದಲೇಬೇಕೆಂದೂ ಇದರಿಂದ ಮಾನವ ಕೋಟಿಗೆ ಜಯವಾಗುತ್ತದೆ. ನಿಜವಾದ ಸುಖ ಶಾಂತಿಯು ನೆಲೆಸುತ್ತದೆ. ಮತ್ತು ಭಾರತ ಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿ ಬಂದದ್ದು ಸಾರ್ಥಕವಾಗುತ್ತದೆ. ಎಂಬುದನ್ನು ನಿಃಸಂದೇಹವಾಗಿ ಹೇಳಬಹುದು ಎಂದು ಬಂದಂಥ ಸಕಲ ಭಕ್ತರಿಗೆ ಬೋಧೆ ಮಾಡುತ್ತಹೋದ ಹೋದಲ್ಲಿ, ಗ್ರಾಮ ಗ್ರಾಮಗಳಲ್ಲಿ, ಸೀಮೆ ಸೀಮೆಗಳಲ್ಲಿ ಸಂಚರಿಸಿ ಉಕ್ಕಿದ ಆನಂದದಿ ಭಕ್ತರ ಮೇಲಣ ವಾತ್ಸಲ್ಯದಿಂದ ತಾಯಿ ತನ್ನ ಭಾಗ್ಯದ ಮಗುವಿಗೆ ಮಮತೆಯಿಂದ, ನೇಹದಿಂದ ಹೇಳಿ ಸಂತೈಸುವಂತೆ ಮನಂಬುಗುವಂತೆ ಇಂಥ ಗಂಭೀರ ಅರ್ಥಗರ್ಭೀತ ಮಹತ್ವಪೂರ್ಣ ತತ್ತ್ವರೂಪ ಉಕ್ಕಿನ ಕಡಲೆಗಳನ್ನು ತಮ್ಮ ಅಮೋಘ ಅನುಭಾವಾಮೃತ ರಸಾಯನದಿಂದ ಪಂಚಪಕ್ವಾನ್ನವನ್ನೇ ಮಾಡಿ ಉಣಿಸಿ ತಣಿಸಿಂದತೆ ಬೋಧಿಸುತ್ತಾರೆ. ತತ್‌ ಪರಿಣಾಮವಾಗಿ ಸಂಸಾರದಂದುಗದಲ್ಲಿ ಬೆಂದು ಬೆಂಡಾಗಿ ಘಾಸಿಗೊಂಡು ದಿಕ್ಕು ತೋಚದೆ ಧಾವಿಸಿ ಬಂದ ಸಾವಿರಾರು ಜನ ನಿಜಸುಖಾಮೃತ ಪಿಪಾಸುಗಳಿಗೆ ಸಂದರ್ಶನ ಸದ್ಭೋಧೆಯಿತ್ತು ಸಂತೈಸುತ್ತಿರುವರು. ಇದು ಶ್ರೀಗಳವರ ಸತ್ಯ-ಶುಧ್ಧ ಕಾಯಕವಾಗಿ ಬಿಟ್ಟಿದೆ. ಇದನ್ನು ಅನುಲಕ್ಷಿಸಿ ಶ್ರೀಗಳು ವ್ಯಕ್ತಿ-ವ್ಯಕ್ತಿಗಳನ್ನು ಶೋಧಿಸಿ ತಮ್ಮ ಅಂತಃಕರಣ ತಪಃಕಿರಣಗಳಿಂದ ಪರಿಪೂತ ಗೊಳಿಸಿ, ಕರುಣಾಮೃತದಿಂದ ಪರಿಮಾರ್ಜಿಸಿ ಅಮರ ಶಕ್ತಿಗಳನ್ನಾಗಿಸಿ, ವ್ಯಕ್ತಿ ವ್ಯಕ್ತಿಯ ಶಕ್ತಿಯೆ ಸಮಷ್ಟಿ ಸಮಾಜ, ಉನ್ನತ, ಮಹಾ ಮೇರು, ಸರ್ವಾಂಗ ಸುಂದರ ಸಮಾಜ ನಿರ್ಮಾಣವೇ ಶ್ರೀಗಳ ಉದ್ದೇಶವಾಗಿದೆ. ಸಮಾಜದ ಹಿತ ಸಾಧನೆಯನ್ನೇ ಕುರಿತು ನಿತ್ಯವೂ ಅವರು ಚಿಂತಿಸುತ್ತಿದ್ದಾರೆ.

ಶ್ರೀ ಮದ್ವೀರಶೈವ ಶಿವಯೋಗಮಂದಿರದಲ್ಲಿ ಪ್ರಮಥರ ಹಸು ಮಕ್ಕಳಂತಿರುವ ಸಾಧಕರಿಗೆ ಶ್ರೀಗಳು ಅವರ ಪೋಷಣೆ ಪಾಲನೆಗಾಗಿ ಹಳ್ಳಿ ಹಳ್ಳಿಗೆ ಭಿಕ್ಷಾಟನೆಗೆಂದು ದಯ ಮಾಡಿಸಿದರೆ ಅಲ್ಲಲ್ಲಿ ಸದ್ಭಕ್ತರು ಆನಂದದ ಭರದಲ್ಲಿ ಧನ-ಧಾನ್ಯಗಳನ್ನು ಕೊಡುವ ಭಕ್ತರು ಹೆಚ್ಚು ಸಲ್ಲಿಸ ಹೋದರೆ, ಇಷ್ಟೇಕೆ ಅಪ್ಪಾ, ಇದಿಷ್ಟೇ ಸಾಕು, ಇದು ನಿನಗೆ ಆಶೀರ್ವಾದವಿರಲಿ, ಎಂದು ಕೆಲವೇ ಭಾಗವನ್ನು ಸ್ವೀಕರಿಸಿ ಹರಸುತ್ತಾರೆ. ಅದು ಸೂಕ್ತ ಭ್ರಮರವು ಪುಷ್ಪದೊಳಗಿನ ಮಧುವನ್ನು ಈಂಟುವಾಗ ಪಾನ ಮಾಡಲು ಹೂಗಳ ಮೇಲೆ ಕುಳಿತರೂ, ಹೂವಿಗೆ ಭಾರವಾಗದಂತೆ ವ್ಯವಹರಿಸುವಂತೆ ಶ್ರೀಗಳು ಯಾರಿಗೂ ಭಾರವಾಗದಂತೆ ಭಿಕ್ಷಾಟನೆ ಲೀಲೆಗೈಯುತ್ತಾರೆ. ಅಂತೆಯೇ ಅವರ ಭಿಕ್ಷೆಯು ಭಿ-ಕ್ಷಾ-ಭಯಂ ಸಂಸಾರ ತಾಪತ್ರಯೋದ್ಭೂತ ಭಯಂ, ಕ್ಷೀಯತೇ ಅನಯಾ – ಇತಿ –ಭಿಕ್ಷಾ ಎಂದೇ ಜನವು ಭಾವಿಸಿ ಕೃತಾರ್ಥರಾಗುತ್ತಲಿದ್ದಾರೆ. ಮಾನವದ ಕುಲ ಮೂಲ ಸಂಬಂಧದಂತಿರುವ ವಿದ್ಯಾರ್ಥಿಗಳ, ಅಲ್ಲದೆ ಅವಿಮುಕ್ತ ಕ್ಷೇತ್ರವಾಗಿರುವ ಶ್ರೀ ಶಿವಯೋಗಮಂದಿರದಲ್ಲಿ ಆ ಪರಂಜ್ಯೋತಿಯ ಕಿರಣಗಳಂತಿರುವ ಭಾವೀ ವೀರಶೈವ ಧರ್ಮ ಗುರುಗಳಾದ ಶ್ರೀ ಶಿವಯೋಗ ಸಾಧಕರ ಪೋಷಣೆಗಾಗಿ ಪಾಮರರನ್ನು ಪಾವನರನ್ನಾಗಿಸುವ ಭಿಕ್ಷಾಟನ ಲೀಲೆಯನ್ನು ಸಹಜ ಸೌಹಾರ್ದ ಸೌಜನ್ಯ ಭಾವದಿಂದಲೇ ಶ್ರೀಗಳು ನಡೆಸುತ್ತಿದ್ದಾರೆ. ಕೆಲ ಸಮಯ ಮಳೆ-ಬೆಳೆಗಳ ಕುಗ್ಗು-ನುಗ್ಗುಗಳನ್ನರಿತು ಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರೆ ಆ ಗ್ರಾಮದ ಭಕ್ತ ಪ್ರಮುಖರು ಬಂದು ಆಗ್ರಹದಿಂದ ಕರೆದದ್ದೂ, ಕರೆಯುವದೂ ಉಂಟು.

ಶಿವಯೋಗಮಂದಿರದಲ್ಲಿ ಪರಮಪೂಜ್ಯ ಶ್ರೀ ನಿ. ಪ್ರ. ಸದಾಶಿವ ಶಿವಯೋಗಿಗಳು –

ಸರ್ವಲೋಕೋಪಕಾರಾಯ ಯೋದೇವಃ ಪರಮೇಶ್ವರಃ

ಚರತ್ಯತಿಥಿರೂಪೇಣ  ನಮಸ್ತೆ ಜಂಗಮಾತ್ಮನೇ

ಎಂಬಂತೆ ಅವತರಿಸಿ ಶಿವರೂಪಿ ಜಂಗಮಪುಂಗವರಾಗಿ ಕಂಗೊಳಿಸುತ್ತ ದಾಸೋಹಂ ಭಾವದಿ ನೆಲೆಸಿದ್ದಾರೆ. ಅವರ ಅಂತಃಕರಣ ಹೇಳಲಸಾಧ್ಯ; ಅದು ಅನುಪಮ ವಾದುದು. ವೀರ ವಿರಕ್ತ ಮಹಾಸ್ವಾಮಿಗಳ ಪ್ರಮಥರ ಸಮೂಹದಲ್ಲಿ ಅಗ್ರಗಣ್ಯರಾಗಿ ಜೀತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ಎಂಬಂತೆ ವಿರಾಗಿಗಳೂ, ಜಿತಾಕ್ಷರೂ, ತಪೋಧನರೂ, ತೇಜಸ್ವಿಗಳೂ ಆಗಿದ್ದಾರೆ.

 

ಲೇಖಕರು : ಶ್ರೀ ವಿಜಯಪ್ರಭು ದೇವರು ಬೂದಗುಂಪಾ.

(ಸುಕುಮಾರ ಬ್ಲಾಗ ನ ಮಾರ್ಗದರ್ಶಿಗಳು ,ಪ್ರೋತ್ಸಾಹಕರೂ ಆಗಿದ್ದ ಪರಮ ಪೂಜ್ಯ ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರಿಗೆ ಸುಕುಮಾರ  ಬ್ಲಾಗನ ನುಡಿನಮನ )

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ

ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೇ

ಭವಬಂಧನವ ಬಿಡಿಸಿ ಪರಮಸುಖವ ತೊರಿದ ಗುರುವೇ

ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ  ನಮೋ ನಮೋ

  ಶರಣ ಬಂಧುಗಳೇ ಈ ನಾಡಿನಲ್ಲಿ ಹಲವಾರು ಸಾಧಕರು ತಮ್ಮ ಸಾಧನೆಯ ಮೂಲಕ ಸಿದ್ಧಿಯ ಶಿಖರವನ್ನು ತಲುಪಿದ್ದಾರೆ.ಆ ಸಿದ್ದಿಯ ಶಿಖರ ತಲುಪಲು ಮುಕ್ಯವಾಗಿ ಬೇಕಾಗಿರುವುದು ಗುರುವಿನ ಮಾರ್ಗ ದರ್ಶನ,ಈ ಬಾಳೆಂಬ ನೌಕೆಯನ್ನ ನಡೆಸುವ ಅಂಬಿಗನವನು,ನರಜನ್ಮ ದಿಂದ ಹರಜನ್ಮನೀಡಿ,ಭವಿತನದಿಂದ ಭಕ್ತನನ್ನ ಮಾಡಿ,ಭವಬಂಧನದಿಂದ ಪರಮಸುಖನೀಡಿ ,ಹೀಗೆ ಎಲ್ಲದರಿಂದಲು ಪಾರುಮಾಡುತ್ತಾ ಮುಕ್ತಿಯನ್ನ ನೀಡುವವನು ಗುರು.ಅದಕ್ಕಾಗಿಯೇ “ನ ಗುರೂರಧಿಕಂ” ಎನ್ನುವರು.                 ಬಂಧುಗಳೇ ಈ ಎಲ್ಲ ಮಾತುಗಳ ಹಿಂದೆ ಒಂದು ಅಮೋಘವಾದ ಶಕ್ತಿ ಇದೆ.

ಬಳಲಿ ಬೆಂಡಾಗಿ ಬರಡಾದ ಬದುಕಿಗೆ ಚೈತನ್ಯದ ಚಿತೂಹಾರಿಯಂತೆ, ಕಷ್ಟ-ಕಾರ್ಪಣ್ಯ ದಲ್ಲಿರುವ ಭಕ್ತರ ಬಾಳಿಗೆ ಬೆಳಕಾಗಿ, ನೆಲೆಯಾಗಿ, ಸ್ಪೂರ್ತಿಯಾಗಿ, ಕುಮಾರ ಶಿವಯೋಗಿಗಳ ತತ್ವ ನಿಷ್ಠರಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನೆ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು, ಎನ್ನಂತ ಹಲವಾರು ಸಾಧಕರ ಬಾಳ ಬೆಳಗುವ ನಂದಾದೀಪವಾಗಿ ಬೆಳಗುತ್ತಿರುವ ಪೂಜ್ಯ ಗುರುಗಳೇ ಜಗದ್ಗುರು ಸಂಗನಬಸವ ಮಹಾಶಿವಯೋಗಿಗಳು.

ಪೂಜ್ಯಗುರುಗಳು ಶಿವಯೋಗಮಂದಿರದ ಕುಮಾರೇಶ್ವರರ ಸನ್ನಿಧಾನದಲ್ಲಿ ಐದು ವರ್ಷಗಳವರೆಗೆ ಅಧ್ಯಯನ ನಡೆಸಿ ಅಧ್ಯಾತ್ಮ, ಶಿವಯೋಗ, ಲಿಂಗ ನಿಷ್ಠೆ, ಅನುಷ್ಠಾನ, ಯೋಗ, ಸಂಸ್ಕೃತ, ಹೀಗೆ ಎಲ್ಲದರ ಅಪಾರ ಅನುಭವವನ್ನು ಪಡೆದುಕೊಂಡು, ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸುತ್ತಾ ತ್ರಿಕಾಲ ಲಿಂಗಪೂಜಕರಾಗಿ 85 ನೇ ವಯೋಮಾನದಲ್ಲಿಯೂ ಸಹಿತ ಸ್ನಾನ ಪೂಜಾದಿಗಳ ನಂತರವೇ ಪ್ರಸಾದ ಸ್ವೀಕರಿ ಕುಮಾರೇಶ್ವರರನ್ನ ಸಂಪೂರ್ಣ ನಂಬಿ ಬದುಕುತ್ತಿರುವ ಪೂಜ್ಯ ಗುರುಗಳು. ಹೊಸಪೇಟೆ- ಬಳ್ಳಾರಿ, ಹಾಲಕೆರೆಯ ಸಂಸ್ಥಾನಮಠದ ಹಾಗೂ ಶಿವಯೋಗ ಮಂದಿರದ ಸಂಸ್ಥೆಯ ಅಧ್ಯಕ್ಷರಾಗಿ ಸಮಾಜಸೇವೆಗೆ ಕಟಿಬದ್ಧರಾಗಿ ನಿಂತವರು.

2009 ಫೆಬ್ರುವರಿ ರಥಸಪ್ತಮಿಯಂದು ನಾನು ಶಿವಯೋಗ ಮಂದಿರದ ಕುಮಾರ ಶಿವಯೋಗಿಗಳ ಸನ್ನಿಧಾನಕ್ಕೆ ಅಧ್ಯಯನಕ್ಕೆಂದು ಹೋದೆ ಕುಮಾರ ಶಿವಯೋಗಿಗಳ ಗದ್ದುಗೆ ದರ್ಶನ ನಂತರ, ಪೂಜ್ಯ ಗುರು ಜಗದ್ಗುರು ಸನ್ನಿಧಿಯವರ ದರ್ಶನವನ್ನ ಪಡೆದುಕೊಂಡೆ ಅಳುತ್ತಿರುವ ಬಾಲಕನಿಗೆ ಕಲ್ಲುಸಕ್ಕರೆಯನ್ನನೀಡಿ ಆಶೀರ್ವದಿಸಿ ಇನ್ನ ಮುಂದೆ ನಿನ್ನ ಜೀವನದ ತಂದೆ- ತಾಯಿಯೆಂದರೆ ಕುಮಾರ ಶಿವಯೋಗಿಗಳೇ ಎಂದು ತಿಳುಹೇಳಿ ಮುದ ನೀಡಿದ ಮೊದಲ ಗುರುಗಳು.

ಸಮಾಜ ಸೇವೆಯೇ ಕುಮಾರ ಸೇವೆ

ಹೇಗೆ ಪೂಜ್ಯ ಕುಮಾರ ಶಿವಯೋಗಿಗಳು ಸಮಾಜದಲ್ಲಿ ಲಿಂಗವನ್ನ ಕಂಡು ಸಮಾಜಸೇವೆಯೇ ಲಿಂಗಪೂಜೆ ಎಂದು ಹೇಗೆ ಪೂಜಿಸಿದರು, ಹಾಗೆ ಪೂಜ್ಯ ಗುರುಗಳು ಅವರ ಸತ್ಪಥದಲ್ಲಿ ನಡೆದು ಸಮಾಜಸೇವೆಯೆ ಭಗವಂತನ ಸೇವೆ ಎಂದು ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯ ಗುರುಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ,ದೀನ-ದಲಿತ ಮಕ್ಕಳಿಗೆ, ಬಡಮಕ್ಕಳಿಗೆ, ನಿರಾಶ್ರಿತರಿಗೆ, ಅಷ್ಟೇ ಅಲ್ಲದೆ ಹಲವಾರು ಪ್ರತಿಭಾವಂತ ಮಕ್ಕಳಿಗಾಗಿ, ಹಲವಾರು ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಿ, ಉಚಿತ ಪ್ರಸಾದ ನಿಲಯಗಳನ್ನ ತೆರೆದು ಅನ್ನ ಅಕ್ಷರ ಅರಿವು ನೀಡುತ್ತಿರುವ ಮಾತೃ ಹೃದಯದ ಮಮತಾ ಮೂರ್ತಿಗಳು.

 ಸರಳತೆಯ ಸೂತ್ರದಲಿ ಸುಖವ ಕಂಡವರು

ಪ್ರತಿಯೊಬ್ಬ ಸಾಧಕರ, ಸಂತರ, ಮಹಾತ್ಮರ ಜೀವನವನ್ನ ಅವರ ನಡತೆಯಿಂದ ಅಳೆಯಲಾಗುತ್ತದೆ. ಸಾಧನೆಯ ಸಿದ್ಧಿಯ ಶಿಖರ ತಲುಪಿದ ಮೇಲೆ ಅವರ ನಡತೆಯಲಿರುವ ವಿನಮ್ರತೆಯನ್ನ, ಮಾತಿನಲ್ಲಿರುವ ಮಧುರತೆಯನ್ನ, ಕಾರ್ಯದಲ್ಲಿರುವ ದಕ್ಷತೆಯನ್ನ, ನಿತ್ಯ ಜೀವನದಲ್ಲಿ ಸರಳತೆಯನ್ನ ಅಳವಡಿಸಿಕೊಂಡ ಸಾಧಕರನ್ನ ಪರಿಪೂರ್ಣ ಸಾಧಕರೆಂದು ಗುರುತಿಸುತ್ತಾರೆ. ಅಂತಹ ಮಹಾತ್ಮರ ಸಾಧಕರ ಸಾಲಿನಲ್ಲಿ ನಮ್ಮ ಗುರುಗಳು ಒಬ್ಬರೆಂದು ಹೇಳಲು ಅಭಿಮಾನ ನೂರ್ಮಡಿಯಾಗುತ್ತದೆ.

ಪೂಜ್ಯ ಗುರುಗಳು 50 ವಸಂತಗಳಿಂದ ಮಠಗಳನ್ನ ಆಳುತ್ತಿದ್ದಾರೆ ಆದರೆ ತಮಗಾಗಿ ಎಂದೂ ಒಂದು ವಸತಿಯಕೊಠಡಿಯನ್ನ ಕಟ್ಟಿಸಿ ಕೊಂಡಿಲ್ಲ, ಬಳಲಿ ಬಂದ ಭಕ್ತರಿಗೆ ಕುಳಿತು ಆಶೀರ್ವಾದ ನೀಡುವ ಮುಂಭಾಗದ ಪಲ್ಲಂಗದ ಮೇಲೆ ಸುಖವಾದ ನಿದ್ರೆ, ತಮಗಿಂತಲೂ ವಯಸ್ಸಿನಲ್ಲಿ ಚಿಕ್ಕವರು, ಸ್ಥಾನದಲ್ಲಿ ಚಿಕ್ಕವರಾದವರು ನಮಸ್ಕರಿಸಿದರೆ ಮರಳಿ ಕೈಮುಗಿದು ಶರಣಾರ್ತಿಯನ್ನುವ ಧನ್ಯತೆಯ ಭಾವದ ಮಹಾಶಿವಯೋಗಿ. ವ್ಯಕ್ತಿ ತಪ್ಪುಮಾಡಿದಾಗ ಬೈದು,ತಿದ್ದಿ,ತಿಳಿಪಡಿಸಿ ನಂತರ ಆ ವ್ಯಕ್ತಿಯನ್ನ ಬೈದಿದ್ದಕ್ಕೆ ಮಮ್ಮಲನೆ ಮರಗಿ, ಮರಳಿ ಕರೆಯಿಸಿ ಪ್ರಸಾದ ತೆಗೆದುಕೋ ಎಂದು ಅಪ್ಪಣೆ ಪಡಿಸುವ ಪೂಜ್ಯರು. ಕ್ಷಣಕ್ಷಣಕ್ಕೂ ನಮ್ಮೆಲ್ಲ ತಪ್ಪುಗಳನ್ನು ತಿದ್ದುತ್ತ, ತಿಳಿಹೇಳಿ ಸತ್ಪಥದಲ್ಲಿ ನಡೆಸುತ್ತಿರುವವರು. ಅಂತಹ ಪೂಜ್ಯಗುರುಗಳ ಶಿಷ್ಯರಾಗಿದ್ದು ಏಳು ಜನ್ಮಗಳ ಪುಣ್ಯದ ಫಲವೇ ಆಗಿದೆ.

ಕ್ಷಣ ಕ್ಷಣಕ್ಕೂ ಕುಮಾರ ಯೋಗಿಯ ಧ್ಯಾನ

ಪೂಜ್ಯ ಗುರುಗಳು L L B ಓದಿ ವಕೀಲನಾಗುವ ಕನಸು ಕಂಡಿದ್ದರು,ಆದರೆ ಕುಮಾರ ಶಿವಯೋಗಿಗಳ ಧ್ಯಿವ್ಯ ಪುರಾಣ,ಶ್ರೀಗಳ ಪವಿತ್ರಜೀವನವನ್ನ ಒಳಗೂಂಡ ಕೃತಿಗಳನ್ನ ಓದಿ, ಯತಿಪುಂಗವರ ಅಪ್ಪಟ ಅಭಿಮಾನಿಗಳಾಗಿ, ಸ್ವಾಮಿತ್ವದ ದೀಕ್ಷೆಯತೂಟ್ಟು ಅವರ ತತ್ವಾದರ್ಶಗಳನ್ನ ಅಳವಡಿಸಿಕೊಂಡು  ಪ್ರತಿದಿನ ಕುಮಾರೇಶನ ನೆನೆದು ಪ್ರಸಾದತೆಗೆದುಕುಂಡು ಜೀವಿಸುತ್ತಿರುವ  ಶ್ರೀಗಳು. 2014ರಲ್ಲಿ ಪೂಜ್ಯ ಗುರುಗಳ ಹೃದಯಕ್ಕೆ (ಸ್ಟಂಟ್ )ನ್ನ  ಅಳವಡಿಸಿದರು, ಮಧ್ಯರಾತ್ರಿ ವಿಪರೀತ ಎದೆನೂವು ಕಾಣಿಸಿ ಗುರುಗಳು ತಮ್ಮ ಆಪ್ತ ಶಿಷ್ಯನನ್ನ ಕರೆದು ಇಂದೆ ಭಗವಂತನೆಡೆಗೆ ನಮ್ಮಯಾತ್ರೆ ಎಂದು ಹೇಳಿ,ಮುಖಮಾರ್ಜನೆ ಮಾಡಿಕೂಂಡು ಕುಮಾರೇಶ್ವರ ಪುರಾಣ ಕೈಗೆತ್ತಿಕೊಂಡು ಒಂದೆರೆಡು ಸಂಧಿಯನ್ನ ಓದುವುದರೊಳಗೆ ಎಲ್ಲ ನೋವು ಮಾಯವಾಗಿ 5-6 ವರ್ಷಗಳವರೆಗೆ ಯಾವುದೇ ನೋವಿಲ್ಲದೆ ಜೀವನ ನೆಡೆಸಿದರು. ಇಂದಿಗೂ ಪೂಜ್ಯ ಗುರುಗಳು ಪ್ರತಿನಿತ್ಯ ಕುಮಾರ ಶಿವಯೋಗಿಗಳ ಪುರಾಣವನ್ನ ಪಾರಾಯಣ ಮಾಡುತ್ತಾರೆ. ವ್ಯಕ್ತಿ ಒಂದು ಸಮಾಜದ ಶಕ್ತಿಯನ್ನ ನಂಬಿ ಆ ಶಕ್ತಿಯನ್ನ ಪೂಜಿಸುವ, ಆರಾಧಿಸುವ ಫಲವನ್ನು ಪೂಜ್ಯ ಗುರುಗಳ ಈ ಒಂದು ಪವಾಡದ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ. ಹಾಗೆ ಪೂಜ್ಯ ಗುರುಗಳು ಸಹಿತ ನಮ್ಮೆಲ್ಲರಿಗೂ ಉಪದೇಶಿಸುವುದು ಏನೆಂದರೆ ಪ್ರತಿನಿತ್ಯ ಲಿಂಗಪೂಜೆಯನ್ನು ಮಾಡಿ, ಶಿವಯೋಗ ಮಂದಿರದ ಆಚಾರ-ವಿಚಾರಗಳನ್ನು ತಪ್ಪದೇ ಪಾಲಿಸಿ, ಕುಮಾರೇಶ್ವರರ ಧ್ಯಾನವನ್ನ ಎಂದೂ ಮರೆಯಬೇಡಿ, ಇತ್ತೀಚಿಗಷ್ಟೇ ಪೂಜ್ಯ ಗುರುಗಳ ಆರೋಗ್ಯ ಅಶ್ವಸ್ಥವಾದಾಗ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ದರ್ಶನಕ್ಕೆ ಹೋದಾಗ

ನಮಗೆಲ್ಲರಿಗೂ ಆಶೀರ್ವದಿಸಿ ಹೇಳಿದ ಮಾತು ” ಪ್ರತಿನಿತ್ಯ ಪೂಜೆಯನ್ನ ಮಾಡಿ ಅದರಿಂದ ನಿಮಗೂ ನಮಗೂ ಒಳ್ಳೆದಾಗುತ್ತೆ”ಎಂಬ ಮಾತು ಅಕ್ಷರಶಹ ಸತ್ಯವಾದ ಮಾತು.  ಹೀಗೆ ಪೂಜ್ಯ ಗುರುಗಳು ಕುಮಾರೇಶ್ವರರನ್ನ ಅಪಾರವಾಗಿ ನಂಬಿ, ಸೊಂಡೂರು ತಾಲೂಕಿನ ಯಶವಂತನಗರದ ಶ್ರೀಮಠದ ತೋಟದಲ್ಲಿ ಹಾಗೂ ಶಾಖಾ ಮಠವಾದ ಶ್ರೀಧರಗಡ್ಡೆ ಮಠದಲ್ಲಿ ಕುಮಾರೇಶ್ವರ ಶೀಲಾ ಮೂರ್ತಿಯನ್ನ ಪ್ರತಿಷ್ಠಾಪಿಸಿದರು. ಅಷ್ಟೇ ಅಲ್ಲದೆ 2010ನೇ ರಲ್ಲಿ ಶಿವಯೋಗಮಂದಿರ ಶತಮಾನೋತ್ಸವ ಸಂದರ್ಭದಲ್ಲಿ ಕುಮಾರೇಶ್ವರರ ಸನ್ನಿಧಾನಕ್ಕೆ 1.50ಕೊಟಿ ವೆಚ್ಚದಲ್ಲಿ ಬೃಹತ್ ರಥವನ್ನ ಗುರುಕಾಣಿಯಾಗಿ ನೀಡಿದರು. ಇಂದಿನ ಪರಿಸ್ಥಿತಿ ಅವಲೋಕಿಸಿದಾಗ ಜನ್ಮಕೂಟ್ಟತಂದೆ – ತಾಯಿಯನ್ನ, ಅಕ್ಷರ- ಅರಿವುಕೂಟ್ಟಗುರುವನ್ನ, ಕೊನೆಗೆ ಬಾಳುಕೊಟ್ಟ ಭಗವಂತನನ್ನೆ ಮರೆಯುವ ಇಂತಹ ಸಂದಿಗ್ದ ಸಮಯದಲ್ಲಿ ,

ಪೂಜ್ಯರು ಮಹಾಗುರುಗಳನ್ನ ನಂಬಿ ಅಪಾರ ಸೇವೆ ಸಲ್ಲಿಸಿ ಕುಮಾರೇಶ್ವರರ ಜೀವನ ಸಿದ್ಧಾಂತವನ್ನ ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತಂದವರು .

ಪ್ರಸಾದದಲ್ಲಿ ಪ್ರಸನ್ನತೆ

ಬಂಧುಗಳೇ ಶರಣವಾಣಿಯಾದ “ಸೋಹಂ ಎಂದೆನಿಸದೆ ದಾಸೋಹಂ ಎಂದೇನಿಸಯ್ಯ”ಎಂಬ ವಾಣಿಗೆ ವ್ಯಾಖ್ಯಾನವಾದವರು ಪೂಜ್ಯ ಗುರುಗಳು.ಗುರುಗಳ ಯಾವುದೇ ಮಠವನ್ನ ಅವಲೋಕಿಸಿ ಎಲ್ಲ ಮಠದಲ್ಲಿ ಪ್ರಸಾದದ ವ್ಯವಸ್ಥೆಇದೆ,ದಾಸೋಹ ಭವನನಿರ್ಮಿಸಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ  ಎಲ್ಲಕ್ಕೂ ಬೇಕು ಬೇಕು ಎಂದು ಹಪಹಪಿಸುತ್ತಾನೆ, ಹಾತೊರೆಯುತ್ತಾನೆ, ಆದರೆ ಸಾಕೆನ್ನುವದು ಪ್ರಸಾದಕ್ಕೆ (ಊಟಕ್ಕೆ)ಮಾತ್ರ.ಅಲ್ಲಿ ತೃಪ್ತಿಯ ಭಾವ ಇದೆ,ಅದಕ್ಕಾಗಿ ಪೂಜ್ಯರು ಮಠಕ್ಕೆ ಯಾವ ಜನಾಂಗದವರೆಬರಲಿ,ಬೇರೆ ಧರ್ಮದವರೆಯಾಗಲಿ,ಬೇರೆ ಸಮಾಜದವರೇ ಯಾಗಲಿ ಹೀಗೆ ಯಾರೆ ಬರಲಿ,  ಯಾರೂ ಹಾಗೆ ಹೂಗಬಾರದು ಎಲ್ಲರು ಮಠದಲ್ಲಿ  ಪ್ರಸಾದ ತೆಗೆದುಕೊಂಡು ಪ್ರಸನ್ನರಾದಾಗ  ಸಂತೋಷ ಪಡುವ ಹಿರಿಯಜೀವಿ ಪೂಜ್ಯ ಜಗದ್ಗುರು ಸಂಗನಬಸವ ಶಿವಯೋಗಿಗಳು. ಶ್ರೀಗಳು ಯಾದುದೇ ಮಠಕ್ಕೆ ಭೇಟಿ ನೀಡಿದರೂ ಸಹಿತ  ಮೋದಲು ಕೇಳುವ ಮಾತು ದಾಸೋಹ ವ್ಯವಸ್ಥೆ ಇದೆಯೋ ಇಲ್ಲವೋ ಅಂತ ಕೇಳುವರು ಅಂದರೆ ಅಷ್ಟು ಭಕ್ತ ಪ್ರೇಮ,ಭಕ್ತ ವತ್ಸಲ,ಮಠಕ್ಕೆ ಬಂದ ಭಕ್ತರು ಯಾರೂ ಉಪವಾಸ ಹೋಗಬಾರದು ಎಂಬ ದೂರದೃಷ್ಟಿ ಹೊಂದಿದ ಭಕ್ತಾನುರಾಗಿ ಪೂಜ್ಯರು.

 ಆದರ್ಶ ಕೃಷಿ ಕಾಯಕ ಯೋಗಿ

ಭಾರತ ದೇಶ ಕೃಷಿ ಪ್ರಧಾನವಾದ ದೇಶ. “ದುಡಿವ ರಟ್ಟೆಗೆ ಶರಣು, ಕೊಡುವ ಕೈ ಗಳಿಗೆ ಶರಣು” ದುಡಿಮೆ ಬೇಸರವೆಂದು ರೈತ ಮಲಗಿದರೆ ಇಡೀ ವಿಶ್ವವೇ ಉಪವಾಸವಿರಬೇಕಾಗುತ್ತದೆ.ಯಾರು ಭೂತಾಯಿಗೆ ಬೆವರನ್ನ ಸುರಿಸುತ್ತಾರೆ ಅಂಥವರನ್ನ ಭೂತಾಯಿ ಎಂದೂ ಮರೆಯುವುದಿಲ್ಲ.ಪೂಜ್ಯ  ಗುರುಗಳೂ ಸಹಿತ ಅಷ್ಟು ಕೃಷಿಗೆ ಮಹತ್ವವನ್ನು ಕೊಟ್ಟರು. ಪೂಜ್ಯರು ಮಠಕ್ಕೆ ಆದನಂತರ ಮಠಗಳ ಎಲ್ಲ ಹೊಲವನ್ನ ಅವಲೋಕಿಸಿ ತಮ್ಮ ಶಿಷ್ಯರೊಂದಿಗೆ ತಾವೇ ಕೃಷಿ ಕಾಯಕವನ್ನ ಮಾಡುತ್ತಿದ್ದರು. ಭೂಮಿಯ ಜೈವಿಕ ಸತ್ವವನ್ನ ಉಳಿಸಲು ಪ್ರೇರಣೆ ನೀಡುತ್ತಾ ಹಾಗೂ ನಶಿಸಿ ಹೋಗುತ್ತಿರುವ ಸಾವಯವ ಕೃಷಿ ಪದ್ಧತಿಯನ್ನ ಜಾರಿಗೊಳಿಸಿದರು. 29ಅಗಷ್ಟ್1986ರಲ್ಲಿ ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕಿನ ಯಶವಂತ ನಗರದ ಮುಸ್ಲಿಮ್ ಬಾಂಧವರಾದ ಪಂಡಿತ್ ಹುಸೇನ್ ಸಾಬ್ ರಿಂದ 17 ಏಕರೆ 40 ಗುಂಟೆ ಜಮೀನನ್ನ 17000 ರೂ ಗಳಿಗೆ ಪಡೆದು ಕಲ್ಲು ಕಂಠಿಗಳ ಗುಡ್ಡವಾದ, ಕಾಡು ಪ್ರಾಣಿಗಳ ತಾಣವಾದ ಈ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು, ಹಗಲು-ರಾತ್ರಿಯೆನ್ನದೆ  ಮುಂದೆ ನಿಂತು ಹೊಲವನ್ನ ಸಮಾನ ಮಾಡಿಸಿ, ಮಾವು, ತೆಂಗು, ಬೆಟ್ಟದ ನೆಲ್ಲಿಕಾಯಿ, ಚಿಕ್ಕು,ಹೀಗೆ ಹಲವಾರು ರೀತಿಯ ಮರಗಳನ್ನು ನೆಟ್ಟು ಅವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೆ, ಸಾವಯವ ಕೃಷಿಯ ಗೊಬ್ಬರವಾದ  ಜೀವಾಮೃತವನ್ನ,ಬೇವಿನ ಎಣ್ಣೆ ಹಾಗೂ ಗೋ ಶಾಲೆಯನ್ನು ತೆರೆದು ಗೋ ಸಗಣಿಯ ಗೊಬ್ಬರವನ್ನ ಹೀಗೆ ಔಷಧಗಳನ್ನು ಉಪಯೋಗಿಸಿ ಬೆಳೆಸುತ್ತಾ ಬಂದಿದ್ದಾರೆ.ಇತ್ತೀಚೆಗೆ ಗೋಡಂಬಿ,ದಾಲ್ಚಿನ್ನಿ,ಮಹಾಘನಿ ಎಂತಹ ಬೆಲೆಬಾಳುವ ಸಸಿಗಳನ್ನು ನೆಟ್ಟು ಅವುಗಳಿಗೂ ಸಹಿತ ಇದೆ ಗೊಬ್ಬರವನ್ನ ಹಾಕಿ ಬೆಳೆಸಲಾಗುತ್ತದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ ಪೂಜ್ಯ ಗುರುಗಳ ಸೇವೆ ಅವಿಸ್ಮರಣೀಯ, ಅನುಪಮಾ.  ಸ್ವಾಮಿ ಯಾಗುವವನಿಗೆ ಎಲ್ಲದರ ಅನುಭವ ವಿರಬೇಕೆಂದು ಪ್ರವಚನ, ಕೃಷಿ, ಅಧ್ಯಾತ್ಮ , ಶಿವಯೋಗ ಹೀಗೆ ಎಲ್ಲದರ ಅನುಭವವನ್ನು ನೀಡುತ್ತಾ ಸ್ವಾಮಿತ್ವದ ಪಟ್ಟಕ್ಕೆ ಸಮರ್ಥರನ್ನಾಗಿ ಮಾಡುತ್ತಿರುವ ಪೂಜ್ಯ ಗುರುಗಳಿಗೆ ಸಾವಿರದ ಒಂದನೇ.ಹೀಗೆ ಗುರುಗಳನ್ನ ಕುರಿತು ಬರೆಯುತ್ತಾ ಹೋದರೆ ಶಬ್ದಗಳು ಸಾಲದು, ಸಾವಿರ ಪುಟಗಳನ್ನೊಳಗೊಂಡ ಸುದೀರ್ಘ ಲೇಖನವೇ ಆಗುವದು.

ಇಂತಹ ಗುರುಗಳ ಕುರಿತು ಬರೆಯುವಷ್ಟು ಜ್ಞಾನಿ ನಾನಲ್ಲ, ಗುರುಗಳ ಶಿಷ್ಯನಾಗಿ ನಾ ಕಂಡಗುರುಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತ ರೀತಿಯಲ್ಲಿ  ಬರೆದು ಓದುಗರಿಗೆ ನೀಡಬೇಕೆನ್ನುವ ಪುಟ್ಟ ಪ್ರಯತ್ನ ಈ ಲೇಖನವನ್ನ ಪೂಜ್ಯ ಗುರುಗಳ ಪಾದಕ್ಕೆ ಅರ್ಪಿಸುತ್ತೇನೆ.

ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಹೇಮಕೂಟ ಸಿಂಹಾಸನಾಧೀಶ್ವರ, ತ್ರಿವಿಧ ದಾಸೋಹಿ ಜಗದ್ಗುರು ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳು ಹಂಪಿ, ಹೊಸಪೇಟೆ, ಬಳ್ಳಾರಿ, ಹಾಲಕೆರೆ, ಶಿವಯೋಗ ಮಂದಿರದ ಪರಮಪೂಜ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಲೇಖಕರು  : ಪೂಜ್ಯ ಮ.ನಿ.ಪ್ರ.ಶಿವಬಸವಸ್ವಾಮಿಗಳು  ವಿರಕ್ತಮಠ, ಅಕ್ಕಿಆಲೂರು

ಭರತ ಭೂಮಿಯಲ್ಲಿ ವಿಶ್ವಶಾಂತಿ ಸಾರಿದ ತೇಜೋಮೂರ್ತಿಗಳ ಭವ್ಯಪರಂಪರೆಯಿದೆ ಮಾನವ ಕುಲದ ಉದ್ಧಾರಕ್ಕಾಗಿ ಬುದ್ಧ, ಅಹಿಂಸೆಯ ಖಡ್ಗವಿಡಿದು, ಸಮಾನತೆ,ಕಾಯಕ, ದಾಸೋಹಗಳ ತ್ರಿವೇಣಿ ಸಂಗಮವಾಗಿ ಬಸವ, ಶರಣರ ಚಳುವಳಿಯ ನಿಜವಾರಸುದಾರರಾಗಿ ಯಡೆಯೂರು ಸಿದ್ಧಲಿಂಗ ಯತಿಗಳು, ಒಂದೊಂದು ಕ್ರಾಂತಿಯ ಬೀಜದೊಂದಿಗೆ ಬಂದವರು, ಹೆಮ್ಮರವಾಗಿ ಬೆಳೆದರು ನಿಜ, ಆದರೆ ೧೯ನೇ ಶತಮಾನ ವೀರಶೈವ-ಲಿಂಗಾಯತರ ಪಾಲಿಗೆ ಕತ್ತಲೆ, ಶಿಕ್ಷಣ ವಂಚಿತ ಸಮಾಜವನ್ನು ಅಂಧಶ್ರದ್ಧೆ ತನ್ನ ಭದ್ರಬಾಹುಗಳಿಂದ ಮತ್ತೆ ಬಂಧಿಸಿತ್ತು, ಆಗ ಮಾನವೀಯತೆ, ಸಮಾನತೆ, ಕಾಯಕ,

ದಾಸೋಹ, ಅಹಿಂಸೆ, ಸಾಹಿತ್ಯ ರಚನೆ, ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ವೈದ್ಯಭಾನುವಿನ ಉದಯವಾಯಿತು. ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿಯ ಸಾಲಿಮಠ ಕನ್ನಡ ಶಿಕ್ಷಣ ಪ್ರಸಾರಕ್ಕೆ ಹೆಸರಾದ ಕೇಂದ್ರಸ್ಥಾನ. ಸತಿ-ಪತಿ ಭಾವಕ್ಕೆ ಭಾಷ್ಯ ಬರೆದಂತಿದ್ದ ಬಸಯ್ಯ ಮತ್ತು ನೀಲಮ್ಮನವರ ಪವಿತ್ರ ಗರ್ಭದಲ್ಲಿ ಕ್ರಿ.ಶ. ೧೮೬೭ರ ಪ್ರಭವನಾಮ

ಸಂವತ್ಸರ ಭಾದ್ರಪದ ಶುಕ್ಲಪಕ್ಷ ತ್ರಯೋದಶಿಯ ಬುಧವಾರ ಬ್ರಾಹ್ಮಿಮುಹೂರ್ತದಲ್ಲಿ ಶ್ರೀಕುಮಾರ ಶಿವಯೋಗಿಗಳ ಜನನವಾಯಿತು. ಭಿಕ್ಷಾವೃತ್ತಿಗೆ ತಿಲಾಂಜಲಿ ಇತ್ತು ನಿಜಗುಣರ ಶಾಸ್ತ್ರವನ್ನು ಆಮೂಲಾಗ್ರವಾಗಿ ಅಧ್ಯಯನಗೈದರು. ಯಳಂದೂರಿನ ಬಸವಲಿಂಗ ಶಿವಯೋಗಿಗಳ ಜೊತೆಗೂಡಿ ಹನ್ನೊಂದು ಸಂವತ್ಸರ ಉಗ್ರ ತಪಸ್ಸನ್ನಾಚರಿಸಿ ಆಚಾರ ವಿಚಾರ ಸಂಪನ್ನರಾದರು. ಧಾರ್ಮಿಕ ಮಠಗಳನ್ನು ಸಮಾಜಮುಖಿಯಾಗಿ ಪರಿವರ್ತಿಸಿದರು. ಹಾನಗಲ್ಲ ವಿರಕ್ತಮಠದ ಪೀಠಾಧೀಶರಾಗಿ ಸಮಾಜ ಸೇವೆಗೆ ತೊಡಗಿದರು. ವೈರಾಗ್ಯ ಮಲ್ಲಣಾರ್ಯರ ಪ್ರಾಂಜಲ ಮನಸ್ಸಿನ ಸಾಮಾಜಿಕ ಕಳಕಳಿಗೆ ಕಿವಿಗೊಟ್ಟರು. ಜನಸೇವಾ ದೀಕ್ಷೆತೊಟ್ಟರು. ಕತ್ತಲುಂಡ ಸಮಾಜಕ್ಕೆ ಬೆಳಕಾಯಿತು. ಅಜ್ಞಾನ ಅಳಿದು ಆಚಾರ ಮೊಳಕೆಯೊಡೆಯಿತು. ಲಲಾಟದ ಮೇಲೆ ವಿಭೂತಿ ರಾರಾಜಿಸಿತು. ಅಂಗಕ್ಕೆ ಲಿಂಗಸ್ಪರ್ಶವಾಯಿತು. ಜಿಡ್ಡುಗಟ್ಟಿದ ಸಮಾಜ ಜಂಗಮರೂಪ ವಾಯಿತು. ಮಠಗಳು ಮಾನವೀಯತೆಯ ವಿಶ್ವವಿದ್ಯಾಲಯಗಳಾದವು, ಭಕ್ತರ ಮನೆಗಳೆಲ್ಲ ಕಲ್ಯಾಣದ ಮಹಾಮನೆಗಳಾದವು.

ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಕೈಗೊಂಡ ಕಾರ್ಯಗಳು ಒಂದೆರಡಲ್ಲ ಅನೇಕ. ಅಂತೆಯೇ ನಾಡಿನ ಗಣ್ಯ ಮಾನ್ಯರಾದ ವರಕವಿ ದ.ರಾ.ಬೇಂದ್ರೆ, ಹರ್ಡೆಕರ ಮಂಜಪ್ಪ, ಎಸ್.ಸಿ.ನಂದೀಮಠ, ಎಸ್.ಎಸ್.ಬಸವನಾಳ, ಡಾ. ಜಚನಿ ಹಾಗು ದ್ಯಾಂಪೂರ ಚನ್ನಕವಿಗಳು ‘ಯುಗಪುರುಷ’ ಹಾಗು ‘ಕಾರಣಿಕ ಶಿವಯೋಗಿ ಎಂದು ಉದ್ಗಾರವೆತ್ತಿದ್ದರು. ವಚನ ಸಾಹಿತ್ಯದ ಗಂಧ ಗಾಳಿಯು ಗೊತ್ತಿರದ ಸಮಾಜಕ್ಕೆ ವಕೀಲ ವೃತ್ತಿಯನ್ನು ಧಿಕ್ಕರಿಸಿ, ವಚನ ಸಾಹಿತ್ಯ ಸಂಶೋಧನೆಯಲ್ಲಿ ಮುಳುಗಿ ವಚನ ಸಾಹಿತ್ಯ ಸಾಗರ ಹರಿಸಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ‘ಶಿವಶರಣರ ವಚನಗಳನ್ನು ಮೊದಲು ಪ್ರಸಾರ ಮಾಡಿದವರು ಹಾನಗಲ್ಲಶ್ರೀ ಕುಮಾರ ಸ್ವಾಮಿಗಳೇ ಆಗಿದ್ದಾರೆ. ಅವರು ಹೋದಲ್ಲೆಲ್ಲಶಿವಶರಣರ ವಿಚಾರಗಳನ್ನು ತಮ್ಮ ವಾಣಿಯಿಂದ ಜನರ ಮುಂದೆ ಪ್ರಸ್ತಾಪಿಸಿ ಅವುಗಳನ್ನು ಮುಂದಕ್ಕೆ ತಂದರು. ಅಲ್ಲದೇ ಭಕ್ತರ ಮನೆಯ ಪೂಜಾಗದ್ದುಗೆಯಲ್ಲಿ ಪೂಜೆಗೊಳ್ಳುತ್ತಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ನನ್ನ  ಸಂಶೋಧನೆಗೆ ನೆರವಾದರು’ ಮತ್ತು ‘ವಚನ ಶಾಸ್ತ್ರಸಾರ’ ಮೊದಲ ಗ್ರಂಥಕ್ಕೆ ಹಣದ ದಾಸೋಹ ನೀಡಿದರೆಂದು ಸ್ಮರಿಸಿದ್ದಾರೆ.           

ವೀರಶೈವ ಮಹಾಸಭೆಯ ಜನ್ಮದಾತ

ವೀರಶೈವ-ಲಿಂಗಾಯತ ಸಮಾಜಕ್ಕೆ ಶಿಕ್ಷಣದ ಗಂಧ-ಗಾಳಿ ತಿಳಿದಿರಲಿಲ್ಲ, ವಿದ್ಯಾವಂತರಿಲ್ಲದ ವಿಷಮ ಪರಿಸ್ಥಿತಿ. ಮೊದಲಿನಿಂದಲೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಶೋಷಣೆಗೆ ಒಳಗಾದುದು ವೀರಶೈವ-ಲಿಂಗಾಯತ ಸಮಾಜ, ಅಂತೆಯೇ ಶ್ರೀ ಕುಮಾರ ಶಿವಯೋಗಿಗಳು ಸಮಾಜಸಂಘಟನೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ದಿಟ್ಟ ದೀಕ್ಷೆ ತೊಟ್ಟರು. ೧೯೦೪ನೇ ಇಸ್ವಿ ಧಾರವಾಡದಲ್ಲಿ ಅಖಂಡ ವೀರಶೈವ-ಲಿಂಗಾಯತ ಸಮಾಜವನ್ನು ಒಂದುಗೂಡಿಸಿದರು. ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನ ಶ್ರೀಮಂತ ಲಿಂಗರಾಜ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕರ್ನಾಟದಲ್ಲಿಯೇ ಯಾವ ವಿಧವಾದ ಸಾರ್ವಜನಿಕ ಸಮ್ಮೇಳನಗಳು ಜರುಗದಿದ್ದ ಕಾಲದಲ್ಲಿ ಜನಾಂಗವು ಗಾಢನಿದ್ರೆ ಹೋಗಿದ್ದ ಕಾಲದಲ್ಲಿ ಹಿಂದೂ ಮಹಾಸಭೆ ಸ್ಥಾಪನೆಯಾಗದ ಕಾಲದಲ್ಲಿ ವೀರಶೈವ ಮಹಾಸಭೆಯ ಅಧಿವೇಶನ ನಡೆಸಿದ್ದು ಶ್ರೀ ಕುಮಾರ ಶಿವಯೋಗಿಗಳ ಅದ್ವಿತೀಯವಾದ ಮುಂದಾಲೋಚನೆಯ ದ್ಯೋತಕವಾದುದು. ತಮ್ಮ ಜೀವಿತಾವಧಿಯಲ್ಲಿ ಹತ್ತು ಸಮ್ಮೇಳನಗಳು ನಡೆದರೂ ಎಂದೂ ಅಧ್ಯಕ್ಷರಾಗಬೇಕೆಂದು ಬಯಸಿದವರಲ್ಲ, ಬಸವಣ್ಣ ಅನುಭವ ಮಂಟಪಕ್ಕೆ ಅಲ್ಲಮಪ್ರಭುವನ್ನು ಕೂರಿಸಿದಂತೆ ವೀರಶೈವ- ಲಿಂಗಾಯತ ಸಮಾಜದ ಗಣ್ಯರನ್ನು ಕೂರಿಸಿ ಆನಂದ ಪಟ್ಟರು, ನಿಸ್ವಾರ್ಥ ಸೇವಾ ಧರ್ಮದ ದೃಷ್ಟಾರರು.

ವೀರಶೈವ-ಲಿಂಗಾಯತರ ಧರ್ಮಕ್ಷೇತ್ರ ಶಿವಯೋಗಮಂದಿರ

ಸಮಾಜವೆಂಬುದೆ ಮಂತ್ರ, ಸೇವಾಧರ್ಮವೇ ಶ್ರೀಕುಮಾರ ಶಿವಯೋಗಿಗಳ ಜೀವನ ಧರ್ಮ. ಶಿಕ್ಷಣ ಕ್ರಾಂತಿಯ ಕಹಳೆ ಮೊಳಗಿತು. ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನ ಆರಂಭಿಸಿದಂತೆ, ಅರವಿಂದರು ಅರವಿಂದಾಶ್ರಮ ಪ್ರಾರಂಭಿಸಿದಂತೆ,ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮ ನಿರ್ಮಿಸಿದಂತೆ, ಮನುಷ್ಯರನ್ನು ಮಹಾಂತರನ್ನಾಗಿ ಮಾಡಲು ಕುಮಾರ ಶಿವಯೋಗಿಗಳು ಶಿವಯೋಗಮಂದಿರವನ್ನು೬-೨.೧೯೦೯ ಮಾಘಮಾಸ ರಥಸಪ್ತಮಿ ದಿನ ಸ್ಥಾಪಿಸಿದರು. ಮಂದಿರದ ಮೊದಲ ಸಪ್ತಸಾಧಕರಾಗಿ ನವಿಲುಗುಂದದ ಶ್ರೀ ಬಸವಲಿಂಗದೇವರು, ಬಿದರಿಯ ಶ್ರೀ ಅಪ್ಪಯ್ಯ ದೇವರು, ಕಂಚುಗಲ್ಲಿನ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು, ಕುರವತ್ತಿ ಮಹಾದೇವ ದೇಶಿಕರು, ಬಾಗಲಕೋಟೆಯ ಶಿವಮೂರ್ತಿದೇವರು, ವ್ಯಾಕರಣಾಳದ ಸಿದ್ಧಲಿಂಗ ಪಟ್ಟದ್ದೇವರು, ಮಮದಾಪುರದ ಶ್ರೀ ಗುರುಸಿದ್ಧದೇವರು, ಶಿವಯೋಗ ಸಂಪನ್ನರಾಗಿ ಮೂಡಿಬಂದರು. ಗುರು-ವಿರಕ್ತರು ಸಮಾನರೆಂಬ ಅಂಶವು ಇಲ್ಲಿ ಎದ್ದು ಕಾಣುತ್ತಿದೆ. ಶ್ರೀ ಕುಮಾರ ಶಿವಯೋಗಿಗಳ ೬೩ರ ತುಂಬು ಜೀವನದಲ್ಲಿ ಅನೇಕ ಸ್ವಾಮಿಗಳು ಸಮಾಜ ಸೇವೆಗೆ ಸನ್ನದ್ಧರಾದರು. ಮುಂದೆ ಕರ್ನಾಟಕದಲ್ಲಿ ಸ್ಥಾಪನೆಯಾದ ‘ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ’ಗಳ ತಲಕಾವೇರಿಯಾಯಿತು ಶಿವಯೋಗಮಂದಿರ.

ಕವಿ,ಕಲಾವಿದರ ಕರುಣಾಳು

ಉಭಯಗಾನ ವಿಶಾರದ ಪಂ. ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಶಿಕ್ಷಣ ಕೊಡಿಸುವ ಮೂಲಕ ಗಾನಗಂಗೆಯನ್ನು ಹರಿಸಿದರು. ಸಂಗೀತಗಾರರು,ಕವಿ-ಕಲಾವಿದರು, ಕೀರ್ತನ ಪ್ರವಚನಕಾರರು, ಕಾಯಕ ಜೀವಿಗಳು, ಕಾಣಹತ್ತಿದರು. ಗೋಸಂರಕ್ಷಣೆ, ವಿಭೂತಿ ತಯಾರಿಕೆ, ಪಂಚಸೂತ್ರ ಲಿಂಗಗಳ ತಯಾರಿಕೆ, ಕೃಷಿ ಸಾಹಿತ್ಯ ಸಂರಕ್ಷಣೆ, ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡರು.ಅವರ ತಪದ ಮಹಾಮೌನವು ಮಥಿಸಿ ತಂದ ನವನೀತ! ಅದನ್ನು ಆಶ್ರಯಿಸಿದವರು; ಸೇವಿಸಿದವರು ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತಪುತ್ರರಾದರು. ಶ್ರೀಕುಮಾರ ಶಿವಯೋಗಿಗಳು ‘ಸಮಾಜ-ಸಮಾಜ’ವೆನ್ನುತಲೆ ೧೯.೦೨.೧೯೩೦ನೇ ಗುರುವಾರದಂದು ಲಿಂಗದಲ್ಲಿ  ಸಮರಸವಾದರು