General

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಮಠ ಗದಗ

 

ಜಂತೂನಾಂ ನರಜನ್ಮ ದುರ್ಲಭಂ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು

ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .

 

ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ

ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.

ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ

ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ನರಮನುಜನು ಪಟ್ಟ ದರಸಾಗಲವಗೆ ನೀ

ಶಿರಬಾಗದಿರಲು-ಶಿರದೊಳಗೆ ಲಿಂಗವನು

ಧರಿಸೆಂದ ಗುರುವೆ ಕೃಪೆಯಾಗು    || ೧೩೧ ||

ಭಕ್ತನು ಶಿವಶರಣರ ಕಿಂಕರರ ಕಿಂಕರನಾಗಲು ಬಯಸುತ್ತಾನೆ. ಆದರೆ ಭವಿಯಾದ ಅರಸನ ಆಸರವನ್ನೂ ಇಚ್ಛಿಸುವದಿಲ್ಲ. ಶಿವಭಕ್ತನಲ್ಲದ ಮನುಜನಿಗೆ ಮಣಿಯುವದೂ ಇಲ್ಲ. ಇಂಥ ಛಲವುಳ್ಳವನೇ ಶಿವಲಿಂಗವನ್ನು ಶಿರದಲ್ಲಿ ಧರಿಸ ಬೇಕೆಂಬುದನ್ನು ಶಿವಕವಿಯು ಲಿಂಗಧರಿಸುವ ನಾಲ್ಕನೆಯ ಸ್ಥಾನವನ್ನಾಗಿ ನಿರೂಪಿಸಿದ್ದಾನೆ.

ಭಕ್ತನಲ್ಲದ ಸಾಮಾನ್ಯ ನರನು ಪೂರ್ವದ ಪುಣ್ಯವಿಶೇಷದಿಂದ ರಾಜ್ಯಕ್ಕೆ ಪಟ್ಟದರಸನಾದರೆ ಶರಣನಾದವನು ಅವನನ್ನು ಶಿರಬಾಗಿ ವಂದಿಸಲಾರನು. ಭವಿಗೆ ಬಾಗದ ಭಕ್ತನು ಮಸ್ತಕದೊಳಗೆ ಮಹಾಲಿಂಗವನ್ನು ಧರಿಸಬೇಕೆಂಬುದು ಶ್ರೀಗುರುವಿನ ಬೋಧೆಯಾಗಿದೆ. ಕಾಯಕನಿಷ್ಠನಾದ ಭಕ್ತನು ಭವಿಯನ್ನು ಬೇಡನು. ಅವನಿಂದ ಯಾವ ಆಶೆಯನ್ನು ಮಾಡನು. ಅವನ ಹಂಗೂ ಅವನಿಗೆ ಇರದು. ಅರವತ್ತು ಮೂವರು ಪುರಾತನರಲ್ಲೊಬ್ಬರಾದ ಶರಣ ರಕ್ಷಕನಾದ ಕಲಿಗಣನಾಥನೆಂಬ ಶೂರ- ಶರಣನಾದ ಅರಸನು ಭವಿಯಾಗಿ ಬಂದ ಶಿವನಿಗೂ ವಂದಿಸಲಿಲ್ಲ. ಆದರೆ ಭವಿಯಾದ ಅವನಿಗೆ ಶಿಕ್ಷಿಸಿ ಲಿಂಗಧಾರಣಮಾಡಿದ ಕಥೆ ಅದ್ಭುತವಾದುದು. ಶರಣರು ನ್ಯಾಯನಿಷ್ಠುರರು. ದಾಕ್ಷಿಣ್ಯಪರರಾಗಿ ಬಾಳುವದಿಲ್ಲ. ಅಂತೆಯೇ ಭವಿಯಾದವನು ಅರಸನಾಗಿದ್ದರೂ ಅವನನ್ನು ಮನ್ನಿಸಲಾರರು. ಇಂಥ ಧೀರೋದಾತ್ತತೆಯಲ್ಲಿಯೇ ವೀರಶೈವನ ವೀರತ್ತ್ವವು ಪ್ರಕಟಗೊಳ್ಳುವದು.

ಭಕ್ತಿಭಾಂಡಾರಿಯೆನಿಸಿದ ವೀರಶೈವ ನಿರ್ಣಯಪರಮಾವತಾರಿಯೆನಿಸಿದ ಅಣ್ಣಬಸವಣ್ಣನವರು ಭವಿಯಾದ ಬಿಜ್ಜಳನಲ್ಲಿ ಕಾಯಕ ಮಾಡುತ್ತಿದ್ದರೇ ಹೊರತು   ಅವನಿಗೆ ವಂದಿಸುತ್ತಿರಲಿಲ್ಲ; ಆದರೆ ತನ್ನ ಬೆರಳಿನ ನಂದಿಯುಂಗುರವನ್ನು ಮುಂದೆ ಮಾಡಿ ಇಷ್ಟಲಿಂಗವನ್ನು ಗುರು-ಜಂಗಮ ಧ್ಯಾನಪೂರ್ವಕ ಔಪಚಾರಿಕವಾಗಿ, ರಾಜಗೌರವೋಚಿತಕ್ಕಾಗಿ ಬಿಜ್ಜಳನಿಗೆ ಕೈಮುಗಿಯುತ್ತಿದ್ದನು; ಅರ್ಥಾತ್ ತಮ್ಮ ಹಸ್ತದ ನಂದೀಶ್ವರನಿಗೆ ವಂದಿಸುವ ಭಾವವಿರುತ್ತಿತ್ತು. ಇದರ ರಹಸ್ಯವನ್ನರಿತ ಕೊಂಡೆಯವರು ರಾಜನಿಗೆ ತಿಳಿಸಿದರು. ಸಾರಾಸಾರ ವಿವೇಕವಿಲ್ಲದ ಅರಸನು ಅಣ್ಣನವರಿಗೆ ಉಂಗುರ ತೆಗೆದಿರಿಸಿ ಸಿಂಹಾಸನಕ್ಕೆ ಮಣಿಯ ಬೇಕೆಂದಾಗ ಬಸವ ಮಹಾನುಭಾವರು ಬಿಜ್ಜಳನನ್ನು ಕೆಳಗಿರಿಸಿ ವಂದಿಸುತ್ತಿರಲು ಆ ಸಿಂಹಾಸನವು ಧಗಧಗನೆ ಉರಿಯ ಹತ್ತುವದು. ದಿಗ್ಭ್ರಮೆಗೊಂಡ ಅರಸನು ದಂಡಾಧೀಶನಲ್ಲಿ ಕ್ಷಮೆ ಕೇಳಿದನು ಎಂಬ ಚರಿತ್ರೆ ಬಸವ ಪುರಾಣದಲ್ಲಿ ಕಾಣಸಿಕ್ಕುವದು.

ಶರಣರಿಂದ ವಂದಿಸಿಕೊಳ್ಳುವ ವ್ಯಕ್ತಿಯು ಮಹಾ ಮಹಿಮನೇ ಆಗಿರಬೇಕು. ದೊಡ್ಡವರಿಗೆ ಮಣಿಯುವದು ಲೋಕಾಚಾರ. ಅದಕ್ಕಪಚಾರ ಮಾಡಿದರೆ ಅನಾಹುತಕ್ಕೇನೆ ಔತಣ ಕೊಟ್ಟಂತಾಗುವದು. ಇದಕ್ಕೆ ಬಿಜ್ಜಳನ ಉದಾಹರಣೆಯೇ ಸಾಕ್ಷಿಯಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಮಾತುಗಳು ಎರಡು. ಭಕ್ತನಲ್ಲದವನು ಭಕ್ತರಿಂದ ನಮಸ್ಕರಿಸಿಕೊಳ್ಳಬಾರದು. ಇನ್ನೊಂದು ಭಕ್ತನಾದವನು ಭವಿಗಳ ಆಮಿಷಾದಿಗಳಿಗೆ ಆಶಿಸದೆ ಸ್ವತಂತ್ರ ಧೀರನಾಗುವ ಮನೋಭಾವವುಳ್ಳವನಾಗಬೇಕು.

ಈ ತ್ರಿಪದಿಯನ್ನು ರಚಿಸಿದ ಶಿವಕವಿಯು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ತ್ರಿಪದಿಯ ಅರ್ಥವನ್ನು  ಚನ್ನಬಸಣ್ಣನವರ ವಚನವು ಪುಷ್ಟಿಕರಿಸಿದೆ.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ

 ಅನ್ಯರಿಗೆ ತಲೆಬಾಗದಿರಬೇಕು; ಮಾನವರ ಬೇಡದಿರಬೇಕು.

 ಹಸಿವು ತೃಷೆ ವಿಷಯಂಗಳು ಲಿಂಗದಲ್ಲಿ ನಿಕ್ಷೇಪವಾಗಿರಬೇಕು

 ಜಾಗೃತ್ -ಸ್ವಪ್ನ-ಸುಷುಪ್ತಿಯಲ್ಲಿ ಲಿಂಗದ

ನಿಲುಕಡೆಯನರಿದು ತೆರಹಿಲ್ಲದಿರಬೇಕು.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮಹಾತ್ಮಂಗೆ

ಇದೆ ಮುಕ್ತಿ ಪಥವಯ್ಯ ಕೂಡಲ ಚನ್ನಸಂಗಮದೇವಾ. II ಚ. ಬ. ವ. ೯೧೦ |

 ಉರದಿಂದ ಉತ್ತಮಾಂಗಕ್ಕೆ ಲಿಂಗವನ್ನು ಬರಮಾಡಿಕೊಂಡ ಮಹಾತ್ಮನು ಸರ್ವಾಂಗ ಲಿಂಗಮಯನಾಗಿರುತ್ತಾನೆ. ಸಕಲವೂ ಲಿಂಗವೆಂದರಿದ ಬಳಿಕ ಲಿಂಗವಲ್ಲದ ಅನ್ಯ ವಸ್ತುವಿಗೆ, ಅನ್ಯವ್ಯಕ್ತಿಗೆ ವಂದಿಸಲಾರನು. ಸಕಲವನ್ನು ದಯಪಾಲಿಸುವವನು ದೇವನೇ ಎಂದರಿದು ಮಾನವರನ್ನು ಬೇಡುವದಿಲ್ಲ. ಜೀವಗುಣವೆನಿಸಿದ ಹಸಿವು, ತೃಷೆ; ವಿಷಯಗಳು ಲಿಂಗದಲ್ಲಿ ಅಡಗಿ ಲಿಂಗದ ಮಹಾಪ್ರಸಾದವಾಗುವವು. ತ್ರಿವಿಧಾವಸ್ಥೆ ಯಲ್ಲಿಯೂ ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡು ಜ್ಞಾನಿಯಾಗಿರುತ್ತಾನೆ.

ಅಂದಮೇಲೆ ಲೋಕದ ಮಾನವರಿಂದ ಅವನಿಗೇನಾಗಬೇಕು ? ಶರಣನ ಪರಿಯೇ ಲೋಕಕ್ಕೆ ಭಿನ್ನವಾಗಿರುವುದು. ಸರ್ವಸಂಗವನ್ನು ಪರಿಹರಿಸಿದ ಶರಣನು ಶಿವಭಕ್ತ ನಲ್ಲದವನಿಗೆ ಶಿರಬಾಗುವ ಅವಶ್ಯಕತೆಯೂ ಬೀಳಲಾರದು. ಉತ್ತಮಾಂಗದಲ್ಲಿ

ಲಿಂಗವನ್ನು ಧರಿಸುವ ಯೋಗ್ಯತೆಯನ್ನು ಪಡೆದ ಮಹಾನುಭಾವಿಗೆ ಇಂದಿನ ಕಾಲದಲ್ಲಿಯೂ ಅನ್ಯರಿಗೆ ವಂದಿಸುವ ಯಾವ ಅವಸರ ಬರಲಾರದು.

ಸಕಲರ್ಗೆ ಸಟೆಯು ಪಾ | ತಕವೆಂದು ನೀಗಿ ಚಿತ್

 ಸುಖದ ಲಿಂಗವನು-ಮುಖಸಜ್ಜೆಯೊಳಿಡಬೇಕೆಂ-

ದಕಳಂಕ ಗುರುವೆ ಕೃಪೆಯಾಗು     || ೧೩೨ ॥

ಶರಣರಿಗೆ ಶಿರಬಾಗಿಸುವದೇ ಶಿರಕ್ಕೆ ಭೂಷಣವಾಗಿರುವಂತೆ; ಮುಖಕ್ಕೆ ಸತ್ಯವಚನವೇ ಭೂಷಣವೆಂಬುದನ್ನು ಶಿವಕವಿಯು ತತ್ತ್ವಮಯವಾಗಿ ಪ್ರತಿಪಾದಿಸಿದ್ದಾನೆ. ಸತ್ಸ್ವರೂಪನಾದ ಶಿವನೊಲುಮೆಗೆ ಸತ್ಯವೇ ಮೂಲ. ಸಟೆಯೇ ಪಾತಕದ ಸತ್ಯದ ಪರಿಭಾಷೆ.ಮೂಲ. ಶಿವಭಕ್ತನಲ್ಲಿ ಸತ್ಯವು ನಿತ್ಯವಾಗಿರಬೇಕು. ನಡೆ-ನುಡಿಯೊಂದಾಗುವದೇ

ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತಃ

ಅಸತ್ಯಕ್ಕೆ ಅಸ್ತಿತ್ವವಿಲ್ಲ. ಸತ್ಯಕ್ಕೆ ಅಭಾವವಿಲ್ಲವೆಂಬ ಗೀತಾರ್ಥವೂ ಸತ್ಯದ ಘನತೆಯನ್ನೇ ಘೋಷಿಸುತ್ತದೆ. ಷಣ್ಮುಖ ಶಿವಯೋಗಿಗಳು-

ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ,

ಅಸತ್ಯದ ಮನೆಯಲ್ಲಿ ಶಿವನಿರ್ಪನೆ ?

ಇಲ್ಲಿಲ್ಲ ನೋಡಿರೋ

! ಇದು ಕಾರಣ

ನಮ್ಮ ಅಖಂಡೇಶ್ವರ ಲಿಂಗವನೊಲಿಸಬೇಕಾದಡೆ

ಸತ್ಯವನೆ ಸಾಧಿಸಬೇಕು ಕಾಣಿರೋ |

ಎಂದು ಸತ್ಯದ ನಿಲವನ್ನು ಸಾರಿದರೆ, ಅಣ್ಣ ಬಸವಣ್ಣನವರು-

ದಿಟವ ನುಡಿವುದು, ನುಡಿದಂತೆ ನಡೆವುದು

ಹುಸಿಯ ನಡೆದು ತಪ್ಪುವ

ಪ್ರಪಂಚಯನೊಲ್ಲ ಕೂಡಲ ಸಂಗಮದೇವ

ಎಂದು ದಿಟದ ಮಾಟವನ್ನು ಮೂಡಿಸಿದ್ದಾನೆ. ವೈರಾಗ್ಯನಿಧಿ ಅಕ್ಕನು

ಸಟೆ-ದಿಟವೆಂಬುವೆರಡು-ವಿಡಿದು ನಡೆವುದೀ ಲೋಕವೆಲ್ಲವು.

ಸಟೆ-ದಿಟವೆಂಬುವರೆದು ಎಡಿದು ನಡೆವ ಲೋಕದೊಡನೆ

ಶರಣನು ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದೊಡನೆ

ಆತನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ,

ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು,

ಕುಡಿವುದೆಲ್ಲ ಸುರೆ, ಹುಸಿಯೆಂಬುದೇ ಹೊಲೆ

ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ?

ಹುಸಿಯನಾಡಿ ಲಿಂಗವ ಪೂಜಿಸಿದೊಡೆ

ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚನ್ನಮಲ್ಲಿಕಾರ್ಜುನಾ |

ಸಟೆಯೆಂದರೆ ಅಸತ್ಯ. ದಿಟವೆಂದರೆ ಸತ್ಯ. ಈ ಸತ್ಯಾಸತ್ಯಗಳ ಸಮ್ಮಿಶ್ರಣವೇ ಸಂಸಾರದ ಇರವು. ಸಟೆ-ದಿಟಗಳೆರಡನ್ನು ಒಂದುಗೂಡಿಸಿ ನಡೆಯುವ ಲೋಕದ ನಡತೆಗೂ, ಶರಣನ ಸತ್ಯವಾದ ಸದಾಚರಣೆಯ ಪರಿಗೂ ತೀರ ಭಿನ್ನವಾಗಿದೆ. ಬಾಹ್ಯ ಜೀವನದಲ್ಲಿ ಶರಣನೆನಿಸಿ ಗುರು-ಲಿಂಗ-ಜಂಗಮದಲ್ಲಿ ಸಟೆಯಾಡಿದರೆ ಶರಣತ್ವಕ್ಕೇನೆ ಕುಂದು. ಅವನು ನಿಜ ಶರಣನೆನಿಸನು. ಆ ತ್ರಿವಿಧ ಪೂಜ್ಯರಿಗೆ ದ್ರೋಹಿಯಾಗುವನು. ಅಘೋರ ನರಕಿಯೆನಿಸುವನು. ಯಾಕಂದರೆ ಶಿವನು ಸತ್ಯದಲ್ಲಲ್ಲದೆ ಅಸತ್ಯದಲ್ಲಿಲ್ಲ. ಅಸತ್ಯವಾದಿಯಾದ ಸಂಸಾರಿಯು ಶಿವನಿಗೆ ದೂರವಾಗುವನು. ಅಸತ್ಯವನ್ನು ನುಡಿದು

ಮಾಡಿದ ಶಿವಲಿಂಗಪೂಜೆಯೂ ಸಫಲವಾಗಲಾರದು. ಈ ಹುಸಿಯಲ್ಲಿಯೇ ಹೊಲೆತನವಿದೆ. ಹುಸಿಕ ಭೋಗಿಸಿದುದೆಲ್ಲ ಹೊಲಸಾಗುವದು. ಜೊಳ್ಳನ್ನು ಬಿತ್ತಿದರೆ ಮೊಳಕೆ ಹುಸಿಯಾಗುವಂತೆ; ಅಸತ್ಯದಿಂದ ಸತ್ಯದ ಫಲ ದೊರೆಯದು ಎಂದು ಮುಂತಾಗಿ ಶರಣರು ಸತ್ಯದ ಸತ್ಯವನ್ನು ಸಾರಿದ್ದಾರೆ. ಸತ್ಯದ ಅರಿವುಳ್ಳ ಅಲ್ಲಮಪ್ರಭುಗಳು ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು. ಲಕ್ಷಕ್ಕೊಮ್ಮೆ

ನುಡಿಯ ಲಾಗದು. ಕೋಟಿಗೊಮ್ಮೆ ನುಡಿಯಲಾಗದೆಂದು ಅಪ್ಪಣೆ ಮಾಡಿದ್ದಾರೆ. ಕೇವಲ “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪ ವೆಂತಲೂ; ನುಡಿಗೆ ತಕ್ಕನಡೆಯ ಕಂಡೊಡ ಕೂಡಲ ಸಂಗಮದೇವನೊಳಗಿರುವನೆಂತಲೂ ಅಣ್ಣನವರು ನಡೆ-ನುಡಿಗಳ ಸಾಮರಸ್ಯದ ಸಾರವನ್ನು ಸೂಸಿದ್ದಾರೆ.

ಅಸತ್ಯವು ಜೀವಾತ್ಮನ ಜೀವನದಲ್ಲಿ ಅಪಾಯಕಾರಿಯೆನಿಸಿದರೂ ಮಾನವನು ಅದನ್ನೇ ಆಶಿಸುತ್ತಾನೆ. ಈ ಮಾತನ್ನು ತೋಂಟದ ಸಿದ್ಧಲಿಂಗ ಶಿವಯೋಗಿಗಳು-

ಹೆಣನ ಕಂಡರೆ ನಾಯಕಚ್ಚಿದಲ್ಲದೆ ಮಾಣ್ಣುದೇ ?

ಹಣವ ಕಂಡರೆ ಮನ ಕರಗಿದಲ್ಲದೆ ಮಾಣ್ಣುದೇ ?

ಬಿಸಿಯ ಕಂಡರೆ ಬೆಣ್ಣೆ ಕರಗಿದಲ್ಲದೆ ಮಾಣ್ಣುದೇ ?

ಹುಸಿಯ ಕಂಡರೆ ಲೋಕಮೆಚ್ಚುವದು, ನಚ್ಚುವದು

ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೇ !

ಸತ್ತಪ್ರಾಣಿಯನ್ನು ನೋಡಿದ ನಾಯಿ ಅಂದಣವನ್ನೇರಿದ್ದರೂ ಕೆಳಗೆ ಹಾರಿ ಕಚ್ಚದೆ ಬಿಡುವದಿಲ್ಲ. ಹಣಕಂಡು ಮನಕರಗದ ಮಾನವರಿಲ್ಲ. ಬೆಂಕಿಯ ಕಂಡು ಬೆವೆಯದ ಬೆಣ್ಣಿಯಿಲ್ಲ. ಇದರಂತೆ ಲೋಕದ ಮಾನವನು ಹುಸಿಯನ್ನು ಕಂಡು ಮೆಚ್ಚುತ್ತಾನೆ.ನಚ್ಚುತ್ತಾನೆಂದು ತಿಳಿಸಿದ್ದಾರೆ. ಬಹುಮುಖವಾದ ಪ್ರಪಂಚವು ಕೆಳಮುಖವಾಗಿಯೇ ಹರಿಯುವದು.ಅಧೋಮುಖವಾದ ಜಲವು ಹೊಂದಲಾರದೋ

ಊರ್ಧ್ವ ಗತಿಯನ್ನೆಂದೂ ಅದರಂತೆ ಅಸತ್ಯವನ್ನು ಅನುಸರಿಸುವ ನರನು ಸತ್ಯದ ನಿಲವನ್ನು

ಅರಿಯಲಾರನು. ಅಸತ್ಯ ಅನಿತ್ಯವಾದರೆ ಸತ್ಯವು ನಿತ್ಯವೆನಿಸುವದು.

ಮಹಾತ್ಮಾ ಗಾಂಧೀಜಿಯವರು ಸತ್ಯದ ಮಹತ್ವವನ್ನರಿತುಕೊಂಡು ನಿತ್ಯರಾದರು. ಅವರ ಭೌತಿಕ ದೇಹವು ಅನಿತ್ಯವಾಗಿ ನಾಶ ಹೊಂದಿದ್ದರೂ ಕೀರ್ತಿ ಕಾಯವು ಶಾಶ್ವತವಾಗಿದೆ. ನಿತ್ಯಸತ್ಯವೆನಿಸಿದೆ. ತಮ್ಮ ಜೀವನವನ್ನೇ ಸತ್ಯದ ಪ್ರಯೋಗದಲ್ಲಿ ಪ್ರಯೋಗಿಸಿಕೊಂಡ ಹಲವಾರು ಘಟನೆಗಳನ್ನು ಅವರ ಆತ್ಮಚರಿತ್ರೆಯಲ್ಲಿ ಕಾಣುತ್ತೇವೆ. ಸತ್ಯ ಹರಿಶ್ಚಂದ್ರನ ಜೀವನವನ್ನು ಚಿತ್ರಿಸಿದ ಮಹಾಕವಿ ರಾಘವಾಂಕನು ಆ ಮಹಾಕಾವ್ಯದಲ್ಲಿ “ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರ” ಎಂಬ ತತ್ತ್ವವನ್ನು

ಓತಪ್ರೋತವಾಗಿ ತುಂಬಿದ್ದಾನೆ. ಇಂಥ ಸತ್ಯ ಸ್ವರೂಪವನ್ನು ಜೀವನದಲ್ಲಿ ಅಳವಡಿಸಿಕೊಂಡವನು ಶರಣನಾಗುವನು.

ಸತ್ಯದಲ್ಲಿ ಚಿತ್‌ಸುಖದ ಲಿಂಗವು ಚಿತ್ರಕ್ಕೆ ಚೇತನವನ್ನು ನೀಡುವದು. ಅವನು ಚೈತನ್ಯಮಯನಾಗುವನು. ಸತ್ಯವನ್ನು ಪರಿಪಾಲಿಸುವ ಲಿಂಗಭಕ್ತನು ಜ್ಞಾನಾನಂದ ಮಯಲಿಂಗವನ್ನು ಮುಖವೆಂಬ ಸೆಜ್ಜೆ (ಕರಡಿಗೆ) ಯೊಳಗಿಡಬೇಕೆಂಬುದು ಗುರುವಿನ ವಚನ. ಕಲಂಕ ರಹಿತನಾದ ಸದ್ಗುರುನಾಥನು ಸತ್ಯದ ಮರ್ಮವನ್ನು ತಿಳಿಸಿ ಚಿತ್ಸುಖದ ಲಿಂಗವನ್ನು ಮುಖ ಸಜ್ಜೆಯಲ್ಲಿ ಧರಿಸಬಹುದೆಂದು ಬಣ್ಣಿಸುತ್ತಾನೆ. ಮುಖವೆಂಬ ಕರಡಿಗೆಯಲ್ಲಿ ಲಿಂಗವನ್ನು ಧರಿಸುವ ಶರಣನ ವಾಣಿ ಪ್ರಸಾದ ವಾಣಿಯಾಗುವದು. ಅವನಲ್ಲಿ ಸುಳ್ಳು ಸೋಂಕಲಾರದು. ಪ್ರಸಾದವಾಣಿಯಲ್ಲಿಯೇ ಚಿತ್ಸುಖದ

ಪ್ರೋತವಿದೆ. ಸತ್ಯವೇ ನಿತ್ಯಲಿಂಗದ ನಿಜವು. ಅಂಥ ಸತ್ಯವನ್ನು ಸಾಧಿಸಿ ಚಿತ್‌ಸುಖದ ಲಿಂಗವನ್ನು ಧರಿಸುವ ಶಕ್ತಿಯನ್ನು ದಯಪಾಲಿಸುವ ಪರಮ ಗುರುವೆ ! ನಿರಂಜನ ಪ್ರಭುವೆ ! ಕೃಪೆದೋರು.

ಸ್ವಮತಮಾರ್ಗವ ಬಿಟ್ಟು ವಿಮುಖನಾಗದೊಡೆ ಸ

ತೃಮದ ಲಿಂಗವ-ನಮಳ್ಳೆಕ್ಯದಿ ಧರಿಸೆಂದ

ವಿಮಲ ಶ್ರೀಗುರುವೆ ಕೃಪೆಯಾಗು || ೧೩ ||

ಶಿವಕವಿಯು ಲಿಂಗವನ್ನು ಧರಿಸಲು ಯೋಗ್ಯವೆನಿಸಿದ ಕರ, ಕಕ್ಷೆ, ಉರ, ಶಿರ,ಮುಖಸಜ್ಜೆಗಳನ್ನು ನಿರೂಪಿಸಿ ಆರನೆಯ ಸ್ಥಾನವಾದ ಅಮಲೈಕ್ಯದಲ್ಲಿ ಲಿಂಗಧಾರಣೆಯ ಗರಿಷ್ಠತೆಯನ್ನು ಗುರುತಿಸುತ್ತಾನೆ. ಅಮಲೈಕ್ಯ ಸ್ಥಿತಿಯನ್ನು ಸಾಧಿಸಲು ಸ್ವಮತಾಚರಣೆ ಅತ್ಯವಶ್ಯವಾದುದು. ಸ್ವಮತದಲ್ಲಿ ಸತ್ಯಮವಿರುವದು. ಪರಮತಾವಲಂಬನೆಯಲ್ಲಿ ಸತ್ಯಮ ನಿಲ್ಲುವದಿಲ್ಲ. ಯಾಕಂದರೆ ಪರಮತದ ಪರಿಪೂರ್ಣ ಪರಿಚಯವಿರುವದಿಲ್ಲ. ಆದ್ದರಿಂದ ಸ್ವಮತಮಾರ್ಗಾಚರಣೆಯೇ ಸತ್ಯಮದ ತವರು.

ಇಲ್ಲಿ ಮತವೆಂದರೆ ಅಭಿಪ್ರಾಯ ಅಥವಾ ಧರ್ಮವೆಂದು ಗ್ರಹಿಸಬಹುದು.ಸ್ವಮತವೆಂದರೆ ತನ್ನದೇ ಆದ ಧರ್ಮ. ಸ್ವಕೀಯ ಸಿದ್ಧಾಂತವುಳ್ಳುದಾಗುವದು. ತಮ್ಮ ಹಿರಿಯರು ಅರಿತು ಆಚರಿಸಿ ಕಲಿಸಿ ತೋರಿಸಿಕೊಟ್ಟ ಧರ್ಮಾಚರಣೆಯು ಸ್ವಮತವಾದುದು. ಇಂಥ ಸ್ಪಧರ್ಮಾಚರಣೆಯನ್ನು ತಿಳಿಯದೆ, ಅರ್ಥೈಸಿಕೊಳ್ಳದೆ ತ್ಯಜಿಸಿ ಪರಮತಾಚರಣೆಯು ಮನವೆಳಸಿದರೆ ಅವನಿಗೆ ಪ್ರತಿಕೂಲವೇ ಕಾದಿರುವದು. ಸ್ವಮತದ ಕ್ರಮವನ್ನು ಬಿಟ್ಟಲ್ಲಿ ಕಷ್ಟ ಬಿಟ್ಟಿದ್ದಲ್ಲ, ಯಾಕಂದರೆ ಪ್ರಥಮತಃ ತನ್ನ ಧರ್ಮದಲ್ಲಿಯೇ ಅಭಿಮಾನವಿಲ್ಲದವನು ಇನ್ನೊಂದರಲ್ಲಿ ಶ್ರದ್ಧೆಯನ್ನು ಇಡಲಾರನು.ಅಲ್ಲದೆ ಚಾಚೂತಪ್ಪದೆ ಅದನ್ನು ಅನುಸರಿಸಲಾರನು. ಅಂತೆಯೇ ಕ್ರಮ ತಪ್ಪಿ ನಡೆವುದರಿಂದ ಕಷ್ಟಮಿನ್ನುಂಟೆ ?”

ಎಂದಿದ್ದಾರೆ ನಿಜಗುಣರು. ನೈತಿಕ ಧರ್ಮವು ಪ್ರತಿಯೊಬ್ಬರಲ್ಲಿ ಸಮಾನವಾಗಿರುತ್ತದೆ.ಆಚರಣೆಯು ಭಿನ್ನವಾಗಿರಬಹುದು. ಬೇರೆ ಬೇರೆಯಾದ ಆಚರಣೆಗಳನ್ನು ಅನುಸರಿಸುವದು ಸುಲಭವಲ್ಲ. ಅದಕ್ಕಾಗಿ ಶಿವಕವಿಯು ಲಿಂಗನಿಷ್ಠೆಯು ಬೆಳೆಯಲೆಂದು ಸ್ವಮತಮಾರ್ಗವನ್ನು ಬಿಟ್ಟು ವಿಮುಖನಾಗಬಾರದೆಂದು ತಿಳಿಸಿದ್ದಾನೆ. ಉತ್ತಮ ಜೀವನವನ್ನು ಧಾರಣಮಾಡಬಲ್ಲ ಹಾಗೂ ಅದನ್ನು ಪೋಷಿಸಬಲ್ಲ ನೈತಿಕ ಸಾಧನೆಯೇ ಧರ್ಮವೆನಿಸುವದು. ಆತ್ಮನ ಅಭ್ಯುದಯ ಮತ್ತು ಮುಕ್ತಿಯ ನಿಲವುಗಳನ್ನೊಳಗೊಂಡುದೇ ನಿಜವಾದಧರ್ಮವೆನಿಸುವದು. ಯಥಾರ್ಥವಾದ* ಧರ್ಮ ಮರ್ಮವನ್ನು ತಿಳಿಯದೇ ಪರಮತವನ್ನು ಗ್ರಹಿಸುವದು ಭಯಾಕನವೇ ಆಗಿದೆ. ಕ್ಷತ್ರಿಯನಾದ ಅರ್ಜುನನು ರಣರಂಗದಲ್ಲಿ ದಾಯಾದಿಗಳನ್ನು ಗುರುಗಳನ್ನು ಕಂಡು ಮೋಹವಿದ್ದಲವಾಗಿ ತನ್ನ ಕರ್ತವ್ಯ ಕರ್ಮವನ್ನು ಮರೆತು ಕೈಯಲ್ಲಿಯ ಬಿಲ್ಲು ಬಾಣಗಳನ್ನು ಕೆಳಗೆಸೆಯುತ್ತಾನೆ. ನಪುಂಸಕನಂತೆ ಕುಳಿತುಕೊಳ್ಳುತಿರಲು ಕೃಷ್ಣನು ಉಪದೇಶಿಸಬೇಕಾಯಿತು- ಅರ್ಜುನ ! ನೀನು ಕ್ಷತ್ರಿಯ, ಯುದ್ಧ ಮಾಡುವದೇ ನಿನ್ನ ಧರ್ಮ, ಯುದ್ಧದಲ್ಲಿ ಗೆದ್ದರೆ ರಾಜ್ಯ ನಿನ್ನದು. ಸತ್ತರೆ ವೀರಸ್ವರ್ಗ ಸಿಕ್ಕುವದು. ಮತ್ತು-

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ನಿನ್ನ ಕ್ಷತ್ರಿಯ ಧರ್ಮದಲ್ಲಿ ಮಡಿದರೂ ಮುಕ್ತನಾಗುವಿ. ಅದುಕಾರಣ ಭಯಕ್ಕೆ ಕಾರಣವಾದ ಪರಧರ್ಮವನ್ನು ಅವಲಂಬಿಸುವದು ಬೇಡ. ಕ್ಷತ್ರಿಯನಿಗೆ ಅಧೈರ್ಯ ಮೋಹಗಳು ಹೇಡಿಯನ್ನಾಗಿಸುತ್ತವೆ. ಕೃಷ್ಣನ ಉಪದೇಶದಂತೆ ಕರ್ಮಸನ್ಯಾಸ ಭಾವದಿಂದ ಸ್ವಕರ್ತವ್ಯವನ್ನು ನಿರ್ವಹಿಸಿ ವೀರತನದಿಂದ ಕ್ಷತ್ರಿಯಧರ್ಮವನ್ನು ಕಾಪಾಡಿ, ಕಳೆದುಕೊಂಡ ತಮ್ಮ ರಾಜ್ಯವನ್ನು ಪುನಃ ಪಡೆದನು. ವೀರಶೈವನು ಸ್ವಧರ್ಮವಾದ ಲಿಂಗನಿಷ್ಠೆಯಲ್ಲಿ ತತ್ಪರನಾಗಬೇಕು. ತ್ರಿವಿಧ ಪೂಜ್ಯರನ್ನು ಗೌರವಿಸಬೇಕು ಲಿಂಗನಿಷ್ಠೆಯನ್ನು ತ್ಯಜಿಸದೆ ಅನ್ಯದೇವತೆಗಳಲ್ಲಿ ಮನವೆಳಸದಿದ್ದರೆ ಮಾತ್ರ ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವದು ಸಾರ್ಥಕವಾಗುವದು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸಬಲ್ಲವನು ಲಿಂಗವೇ ತಾನಾಗುವನು. ಶಿವನು ವಿಷವನ್ನು ಕಂಠದಲ್ಲಿರಿಸಿಕೊಂಡು ನೀಲಕಂಠನಾದಂತೆ ಲಿಂಗವನ್ನು ಅಮಲೈಕ್ಯ (ಕಂಠ) ದಲ್ಲಿ ಧರಿಸಿಕೊಳ್ಳುವ ಸಂಪ್ರದಾಯ ಬಂದಿದೆ. ಈ ಯೋಗ್ಯತೆ ಬಹುಜನರಿಗೆ ಸಾಧ್ಯವಾಗುವದಿಲ್ಲ. ಅಜಗಣ್ಣನ್ನು ಕೃಷಿಕಾಯಕ ಮಾಡುತ್ತಿರಲು ಒಮ್ಮೆ

ಹೊಲದಲ್ಲಿ ಘಟಸರ್ಪವು ತನ್ನ ಹಣೆಯಲ್ಲಿಯ ದಿವ್ಯರತ್ನವನ್ನು ಮುಂದಿಟ್ಟು ರಾತ್ರಿ ಸಮಯ ಆ ಪ್ರಕಾಶದಲ್ಲಿ ಮೇಯುತ್ತಿದ್ದುದನ್ನು ಕಂಡನು. ಇವನ ಸಪ್ಪಳದಿಂದ ಜಾಗ್ರತೆಗೊಂಡ ಹಾವು ತನ್ನ ರತ್ನವನ್ನು ಹೆಡೆಯಲ್ಲಿ ಸೇರಿಸಿಕೊಂಡಿತು. ಆಗ ಅಜಗಣ್ಣನಿಗೆ- ಇಂಥ ಪ್ರಾಣಿಯೂ ಸಹ ತನ್ನ ರತ್ನವನ್ನು ಗೌಪ್ಯವಾಗಿಟ್ಟು ಕೊಳ್ಳುವಾಗ ನಾನೇಕೆ ನನ್ನ ವರರತ್ನವೆನಿಸಿದ ಇಷ್ಟಲಿಂಗವನ್ನು ಅಮಳೆಕ್ಯ ಮಾಡಿಕೊಳ್ಳ ಬಾರದು ! ಎಂದು ವಿಚಾರಿಸಿ ತನ್ನ ಜೀವನಾಂತ್ಯದವರೆಗೂ ಲಿಂಗವನ್ನು ಅಮಲೈಕ್ಯದಲ್ಲಿಯೇ ಧರಿಸುತ್ತಿದ್ದನ್ನು ನಿಷ್ಠಾವಂತನೆನಿಸಿ ನಿಜೈಕ್ಯ ಪದವಿಯನ್ನು ಸಾಧಿಸಿ ಮಹಾಶರಣನೆನಿಸಿದನು.ಚನ್ನಬಸವಣ್ಣನವರು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಔಚಿತ್ಯವನ್ನು

ಹಾಗೂ ಯೋಗ್ಯತೆಯನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಅಮಳೋಕ್ಯದಲ್ಲಿ ಲಿಂಗವ ಧರಿಸುವಡೆ

ಅನ್ನಪಾನಾದಿಗಳ ಹಂಗಳಿಯಬೇಕು;

ಅಹಂಕಾರ, ಮಮಕಾರ, ಅಷ್ಟಮದಂಗಳಳಿಯಬೇಕು;

ಅನುಭಾವ ಘನವೇದ್ಯವಾಗಬೇಕು;

ಕಾಮದ ಕಣ್ಣ ತೆರೆಯದಿರಬೇಕು;

ಶಬ್ದ ನಿಃಶಬ್ದವಾಗಬೇಕು;

ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು;

ಕೂಡಲ ಚನ್ನ ಸಂಗಯ್ಯನಲ್ಲಿ ಅಮಳೋಕ್ಯದಲ್ಲಿ ಲಿಂಗವ ಧರಿಸಿ

ಪರಮ ಪರಿಣಾಮಿಯಾಗಬೇಕು || ೯೦೯ ||

ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಶರಣನ ಸತ್ಯಮವು ಇಂತಿದೆ. ಅನ್ನಪಾನಾದಿಗಳ ಹಂಗಳಿದು, ಪಾದೋದಕ ಪ್ರಸಾದಂಗಳಲ್ಲಿ ಶ್ರದ್ಧೆಯುಳ್ಳವನಾಗಬೇಕು, ಅಹಂಕಾರ,ಮಮಕಾರ, ಅಷ್ಟಮದಗಳಿಗೆ ಅವಕಾಶವಿಲ್ಲದಾಗಬೇಕು. ಅನುಭಾವವೇ ಮುಖ್ಯವಾಗಬೇಕು. ಕಣ್ಣ ನೋಟದಲ್ಲಿ ಕಾಮನಕಾಟವಳಿದು ಶಿವಮಯವಾಗಿ ಕಾಣುವ ನೋಟವು ಬಲಿಯಬೇಕು. ಲಿಂಗವಿಷಯವಲ್ಲದ ಶಬ್ದಗಳನ್ನು ಮಾತಾಡಲೂಬಾರದು ಕೇಳಲೂ ಬಾರದು. ಸಾಂಸಾರಿಕ ವ್ಯವಹಾರಕ್ಕಾಗಿ ಶಬ್ದಗಳನ್ನು ಬಳಸದೆ ಮಹಾಮಂತ್ರ ಜಪದಲ್ಲಿ ಮನಸ್ಸನ್ನು ಲೀನಗೊಳಿಸಿ ಬಾಹ್ಯ ಶಬ್ದಗಳನ್ನು ನಿಶ್ಯಬ್ದಗೊಳಿಸಬೇಕು. ಮಹಾಲಿಂಗದಲ್ಲಿಯೇ ಮನವು ಲೀನವಾದರೆ ಪರಮ ಪರಿಣಾಮಿಯೆನಿಸುವನು. ನಿಜೈಕ್ಯನಾಗುವನು.

ಇಂಥ ಸತ್ಯಮವನ್ನು ತಿಳಿಸಿ ಅಮಲೈಕ್ಯದಲ್ಲಿ ಲಿಂಗಧಾರಣೆಯನ್ನು ಬೋಧಿಸಿದ ಸದ್ಗುರುವೆ ! ಸದಾಕಾಲವೂ ನನ್ನವನಾಗಿರು. ನಿನ್ನವನನ್ನು ಲಿಂಗಮಯನನ್ನಾಗಿಸುವ ಶಕ್ತಿಯನ್ನು ಕರುಣಿಸು. ನಿನ್ನ ಕರುಣೆಯಿಲ್ಲದೆ ಅಂಗಾಂಗಗಳು ಲಿಂಗಗುಣವನ್ನು ಹೊಂದಲಾರವು.

ಪರಮೇಷ್ಟಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು  || ೧೩೪ ||

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಯಮವು, ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ. ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು ಪರರನ್ನೆಂದೂ ಬೇಡಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು. ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು.ಮನಬಂದಂತೆ ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು.ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾಕ್ರಮದಲ್ಲಿ ತಪ್ಪದಂತೆ ನಡೆಯಬೇಕು. ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯ ಶುದ್ಧ ನಡೆ ಮತ್ತು ನುಡಿಯು, ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ

ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣನವರು ಇಂಥ ಶರಣನ (ವರ್ಣನೆಯ) ನ್ನು ಮನವಾರೆ ಹೊಗಳಿದ್ದು ಗಮನೀಯವಾಗಿದೆ. ನೋಡಿ-

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

ಬಾಹ್ಯ ಪ್ರಪಂಚದ ಮಾತೇಕೆ ?

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಚಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

ಶ್ರೀಕಂಠ.ಚೌಕೀಮಠ

ಶ್ರೀ ರುದ್ರಮುನಿ ಶಿವಯೋಗಿ ಚರಿತೆ

ಸಂಪಾದಕರು:ಶ್ರೀಗುರುಕಂದ

ಪ್ರಕಾಶಕರು:ಶ್ರೀ.ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು .ಶಿವಯೋಗಾಶ್ರಮ,ಕಾಳೇನಹಳ್ಳಿ ಶಿಕಾರಿಪುರ ಶಿವಮೊಗ್ಗ.

ಈ ಗ್ರಂಥವನ್ನು ಪೂಜ್ಯ ಶ್ರೀ ಗುರುಕಂದ ( ಶ್ರೀ ಸ್ವಾಮಿ ಶಿವಾತ್ಮಾನಂದ ಪುರಿ) ಯವರು ದಿ.೮ ಅಕ್ಟೋಬರ್‌೨೦೨೩ ರಂದು ಆಶೀರ್ವದಿಸಿದರು. ಮಾರ್ಗದುದ್ದಕ್ಕೂ ಪುಸ್ತಕವನ್ನು ಕಣ್ಣಾಡಿಸುತ್ತಿದ್ದ ನನಗೆ ಒಂದು ವಿಶೇಷ ವಿಷಯವೊಂದು ಗೋಚರವಾಯಿತು.

ನಾನು ಹಲವುಬಾರಿ ಹಲವು ಪುಸ್ತಕಗಳನ್ನು ಓದುವಾಗ ಓದಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು ಎಂಬ ವಾಕ್ಯ ಬಹಳಬಾರಿ ಕೂತೂಹಲಕ್ಕೆಡೆಮಾಡಿತ್ತು.

ಆದರೆ ಈ ಪುಸ್ತಕ ಓದುವಾಗ ಒಂದು ಸನ್ನಿವೇಷವಂತೂ ಮಂತ್ರಮುಗ್ಧವನ್ನಾಗಿಸಿತು !.

ಶ್ರೀಗುರುಕಂದ ಅವರ  ಪುಸ್ತಕದ  ಕೆಲವು ಸಾಲುಗಳನ್ನೇ ಮತ್ತೆ ಮತ್ತೆ ಬರೆಯುತ್ತಿರುವೆ.

“ರುದ್ರಯ್ಯನ ಮುಖದಲ್ಲಿ ಶೋಭೆಗೊಂಡಿದ್ದ  ಶಿವಕಳೆಯನ್ನು ಶ್ರೀಕುಮಾರಸ್ವಾಮಿಗಳು ಸೂಕ್ಷ್ಮವಾಗಿ  ಗಮನಿಸಿದರು.ತನ್ನ ಮನದಿಂಗಿತವನ್ನು ನುಡಿಯಲಾಗದೆ ನಿಂತಿದ್ದ ರುದ್ರಯ್ಯನ ಬಯಕೆಯನ್ನು ಕೆಳದಿ ಶ್ರೀ ರೇವಣಸಿದ್ದ ಪಟ್ಟಾಧ್ಯಕ್ಷರು ನುಡಿದಿದ್ದರು.”ರುದ್ರಯ್ಯನ ಪ್ರೌಡಶಿಕ್ಷಣಕ್ಕೆ ಶಿವಯೋಗ ಮಂದಿರದಲ್ಲಿ ಅವಕಾಶ ಕಲ್ಪಿಸಿ ಬುದ್ಧಿ”

ಶ್ರೀಕುಮಾರಸ್ವಾಮಿಗಳು, ಕೆಳದಿ ಶ್ರೀಗಳವರ ಪ್ರಸ್ಥಾಪಕ್ಕೆ ಸಮ್ಮತಿಸಿದ್ದರು.ತಮ್ಮೊಡನೆ ರುದ್ರಯ್ಯ ಬರಲು ಅನುವಿತ್ತಿದ್ದರು.

ಆದರೆ ಶಿವಯೋಗಮಂದಿರದ ಆಡಳಿತ ವ್ಯವಸ್ಥೆಯ ವಿಶ್ವಸ್ಥ ಮಂಡಳಿ ವಯಸ್ಸಿನಲ್ಲಿ ಆಗಲೇ ಹಿರಿಯರಾಗಿದ್ದ ರುದ್ರಯ್ಯನಿಗೆ ಮಂದಿರದ ವಟುಗಳೊಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ.”ಸ್ವಾಮಿಗಳು ತಮ್ಮ ಜೊತೆ ಯಾವುದೋ “ಕರೆಮರಿ” ಕರಕೊಂಡು ಬಂದು ಸೇರಿಸೋಕೆ ನೋಡ್ತಾರೆ” ಎಂದು ಒಬ್ಬ ಸದಸ್ಯರು ಲಘುವಾಗಿ ಮಾತನಾಡಿದ್ದರು. ರುದ್ರಯ್ಯ ಕಪ್ಪಾಗಿದ್ದರಿಂದ “ಕರೆ ಮರಿ” ಎಂದು ಕರೆದಿದ್ದರು ! .

ಮಂದಿರದ ನಿಯಮಗಳಲ್ಲಿ ವಯೋಮಾನ ಮೀರಿದ್ದ ರುದ್ರಯ್ಯನಿಗೆ ಪ್ರವೇಶ  ನಿರಾಕರಿಸಲ್ಪಟ್ಟಿದ್ದನ್ನು ತಮ್ಮ ಅಧಿಕಾರದಲ್ಲಿ ಶ್ರೀಕುಮಾರಸ್ವಾಮಿಗಳು ನಿಯಮ ಸಡಿಲಿಸಿ ಪ್ರವೇಶಕ್ಕೆ ಅನುವು ನೀಡಬಹುದಾಗಿತ್ತು;

ಆದರೆ ಅವರು ಹಾಗೆ ವರ್ತಿಸಲಿಲ್ಲ.

ಒಬ್ಬ ಯೋಗ್ಯ  ಸಾಧಕನಿಗೆ ಮಂದಿರದ ಶಿಕ್ಷಣ ಲಭ್ಯವಾಗಬೇಕೆಂದು ರುದ್ರಯ್ಯನನ್ನು ತಮ್ಮ ಸೇವಾ ಕಾರ್ಯಗಳಿಗೆ ಮರಿದೇವರಾಗಿ ಇರಿಸಿಕೊಂಡರು. ಶ್ರೀಕುಮಾರಸ್ವಾಮಿಗಳ ಮೊದಲ ದರ್ಶನದಲ್ಲೇ ತನ್ನ ನಿಜ ಗುರುವನ್ನು ದರ್ಶಿಸಿದ್ದ ಧನ್ಯತೆಯಲ್ಲಿ ಶ್ರೀ ಗುರು ಚರಣಕ್ಕೆ ಅಂತರಂಗದಲ್ಲೇ ಸರ್ವಾರ್ಪಣೆ ಮಾಡಿಕೊಂಡಿದ್ದ ರುದ್ರಯ್ಯ ಕೊನೆಗೂ ತನ್ನ ಶ್ರೀ ಗುರುವಿನ ಕೃಪಾಕಂದನಾಗಿ ಅವರ ಆಪ್ತವಲಯದೊಳಗೆ ಸೇರಿದ್ದ……

ಶ್ರೀಕುಮಾರಸ್ವಾಮಿಗಳು ಮಂದಿರದ ವಿದ್ಯಾರ್ಥಿಗಳೊಂದಿಗೆ ರುದ್ರಮುನಿದೇವರನ್ನೂ  ಪರೀಕ್ಷೆಗೆ  ವಿದ್ಯಾರ್ಥಿಯಂದು ನೊಂದಾಯಿಸಿದ್ದರು.ಒಬ್ಬ ಕಾರಕೂನರ ಜೊತೆ ಪರೀಕ್ಷೆ ಕಟ್ಟಿದ್ದ ವಿದ್ಯಾರ್ಥಿಗಳು ರೈಲಿನಲ್ಲಿ ಮುಂಬಯಿಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದರು.ಫಲಿತಾಂಶ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.ರುದ್ರಮುನಿದೇವರು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿದ್ದರು.ಆಗ ಶ್ರೀ ಕುಮಾರಸ್ವಾಮಿಗಳು “ಕರೆ ಮರಿ”  ಎಂದು ರುದ್ರಮುನಿ ದೇವರನ್ನು ಕರೆಯುತ್ತಿದ್ದವರಿಗೆ ಅರಿವಾಗುವಂತೆ “ಇವನು ಕರೆ ಮರಿಯಲ್ಲ ,ಖರೆ ಮರಿ” ಎಂದು ನುಡಿದಿದ್ದರು.

…….. ಶ್ರೀಕುಮಾರಸ್ವಾಮಿಗಳು ತಮ್ಮ ಖರೆ ಮರಿ ರುದ್ರಮುನಿ ದೇವರನ್ನುತಾವು ಸ್ಥಾಪಿಸಿದ್ದ ಕಾಳೇನಹಳ್ಳಿಯ   ಶಿವಯೋಗಾಶ್ರಮಕ್ಕೆ ಕಳುಹಿಸಲು ತಿರ್ಮಾನ ಮಾಡಿದರು……

……ವರುಷಕ್ಕೆರಡು ಮೂರು ಸಲ ಮಲೆನಾಡ ಪ್ರವಾಸಕ್ಕೆ ಬರುತ್ತಿದ್ದ ಶ್ರೀಕುಮಾರಸ್ವಾಮಿಗಳು ತಮ್ಮ ಮಾತನ್ನು ಪಾಲಿಸುತ್ತ ಸಾಧನೆಯಲ್ಲಿರುವ ಶ್ರೀರುದ್ರಮುನಿದೇಶಿಕರನ್ನುಕಂಡು ಆನಂದಗೊಳ್ಳುತ್ತಿದ್ದರು.೪೦೦ ಎಕರೆ ಜಮೀನಿನ ಕೃಷಿಗಾಗಿ ಆಗಿನ್ನೂ ಅಪರೂಪವಾಗಿದ್ದ ಟ್ರಾಕ್ಟರ ತರಿಸಿ ಶ್ರೀಕುಮಾರಸ್ವಾಮಿಗಳು ವ್ಯವಸ್ಥೆ ಮಾಡಿದರು.ಹೀಗೆ ಭೇಟಿಯಿತ್ತು ತಂಗುವ ತಮ್ಮ ನಿಜಗುರುವಿನಲ್ಲಿ ಶ್ರೀರುದ್ರಮುನಿ ದೇಶಿಕರು ಮುಂದಿನ ದೀಕ್ಷೆಗೆ ಪ್ರಾರ್ಥಿಸುತ್ತಿದ್ದರು.”ಇನ್ನೂ ಸಮಯ ಬಂದಿಲ್ಲ ತಾಳಿಕೋ” ಎಂದು ಶ್ರೀಕುಮಾರಸ್ವಾಮಿಗಳು ಒಂದೇ ಒಂದು ಮಾತನ್ನು ಪ್ರತಿಸಲವೂ ಹೇಳುತ್ತಿದ್ದರು.

ಶ್ರೀರುದ್ರಮುನಿ ದೇಶಿಕರು ಶಿವಯೋಗಾಶ್ರಮಕ್ಕೆ ಬಂದು ನಿಂತು ಹತ್ತು ವರುಷ ಉರಳಿದ್ದವು.ಅವರು ಪ್ರಾರ್ಥಿಸುತ್ತಿದ್ದ ಶಿವಯೋಗಮಾರ್ಗದ ಮುಂದಿನ ದೀಕ್ಷೆ ಇನ್ನೂ ಪ್ರಾಪ್ತವಾಗಿರಲಿಲ್ಲ.ಹೀಗಿರುವಾಗಲೇ ಶ್ರೀರುದ್ರಮುನಿ ದೇಶಿಕರ ಸಾಧನೆ ಸುಳಿಯೊಳಗೆ ಸಿಲುಕಿದಂಥ ಆಘಾತದ ಸುದ್ದಿ ಅವರನ್ನು ದಿಕ್ಕೆಡಿಸುವಂತೆ ಮಾಡಿತ್ತು.ತಮ್ಮ ನಿಜಗುರು,ತಮ್ಮ ಭವಕ್ಕಂಟಿದ್ದ ಬಂಧನವನ್ನು ತೊಡೆದುಕೊಳ್ಳಲು ಶಿವಯೋಗ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿದ್ದ,ತಾವು ಸರ್ವಸ್ವವೆಂದು ನಂಬಿದ್ದ ಶ್ರೀಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದರು.

ತಮ್ಮ ಶ್ರೀಗುರುವಿನ ಅಗಲಿಕೆಯ ದುಃಖ ಶಮನಗೊಳ್ಳಲು ಶ್ರೀರುದ್ರಮುನಿ ದೇಶಿಕರಿಗೆ ಬಹಳಷ್ಟು ದಿನ ಹಿಡಿದವು.ಪೂಜೆಗೆ ಕುಳಿತಾಗ ತಮ್ಮ ನಿತ್ಯದ  ಕಾಯಕದಲ್ಲಿ ಮುಳುಗಿದಾಗ ಶ್ರೀಕುಮಾರೇಶನ ಮೂರ್ತಿ ಕಂಗಳೆದರು ಸುಳಿದು ನಿಲ್ಲುತ್ತಿತ್ತು,ಕಿವಿಯಲ್ಲಿ ಅವರ ನುಡಿಗಳು ಅನುರಣಿಸುತ್ತಿದ್ದವು. “ಹುಟ್ಟುಗುರುಡನಿಗೆ ಕೋಲ ಕೊಟ್ಟು ಕೈ ಬಿಟ್ಟಂತೆ,ಮುಟ್ಟಿ ಅಭಯವಿತ್ತು ಕೈ ಬಿಟ್ಟಿಯಾ ಕುಮಾರೇಶಾ…ನಿಮ್ಮಡಿಯ ಮರೆಸದಂತೆ ಮುನ್ನೆಡಸು ಕುಮಾರೇಶ..” ಎಂದು ಮೊರೆಯಿಡುತ್ತಿದ್ದರು.ಆಗ ಕನಸಿನಲ್ಲಿ ದರ್ಶನವಿತ್ತ ಶ್ರೀಕುಮಾರಸ್ವಾಮಿಗಳು “ಸಾಧಕ ಹೀಗೆ ದುಃಖಿಯಾಗಬಾರದು” ಎಂದಿದ್ದರು.ತಾವು ಸೂಕ್ಷ್ಮ ಕಾಯದಲ್ಲಿರುವ ಸುಳಿವು ನೀಡಿದ್ದರು.

ಮುಂದೆ ಕೆಲವು ದಿನ ಕಳೆಯುವದರಲ್ಲಿ ಶ್ರೀ ಶಿವಬಸವಸ್ವಾಮಿಗಳು ಶಿವಯೋಗಅಶ್ರಮಕ್ಕೆ ಆಗಮಿಸಿದರು.ಶ್ರೀಕುಮಾರ ಸ್ವಾಮಿಗಳ ಜೊತೆಗೂಡಿ ಬರುತ್ತಿದ್ದವರು ಈಗ ಒಬ್ಬರೇ ಬಂದಿರುವದನ್ನು ಕಂಡು ಶ್ರೀ ರುದ್ರಮುನಿ ದೇಶಿಕರಲ್ಲಿ ಮತ್ತೆ ತಮ್ಮ ಶ್ರೀಗುರುವಿನ ಅಗಲಿಕೆ ಪುಟಿದಿದ್ದರೂ ದುಃಖವನ್ನು ಹತ್ತಿಕ್ಕಿಕೊಂಡಿದ್ದರು.ತಮ್ಮ ಕೊನೆ ಕ್ಷಣಗಳಲ್ಲಿ ಶ್ರೀಕುಮಾರಸ್ವಾಮಿಗಳು ಶಿವಯೋಗಮಂದಿರವನ್ನು ,ಸಾಧಕ-ವಟುಗಳನ್ನು ತಮ್ಮ ಮಡಿಲಿಗೆ ಹಾಕಿರುವ ನುಡಿಯನ್ನು ನುಡಿದಿದ್ದು ಶ್ರೀರುದ್ರಮುನಿ ದೇಶಿಕರನ್ನುಕಂಡಾಗ ಶ್ರೀಶಿವಬಸವಸ್ವಾಮಿಗಳಿಗೆ ನೆನಪಾಗಿತ್ತು.ಪೂಜಾದಿಗಳನ್ನು ಮುಗಿಸಿ ಶ್ರೀಶಿವಬಸವ ಸ್ವಾಮಿಗಳು ಒಂದೆರಡು ದಿನ ತಂಗುವದಾಗಿ ತಿಳಿಸಿದರು.ಶ್ರೀರುದ್ರಮುನಿ ದೇಶಿಕರು ದುಗುಡಗೋಳ್ಳದಿರಲು ಹಿತೋಕ್ತಿಗಳನ್ನು ಹೇಳಿದರು.ದೇಶಿಕರು ಮೌನವಾಗಿ ಆಲಿಸಿದರು.

ಶಿವಯೋಗಾಶ್ರಮದಲ್ಲಿ ತಂಗಿದ್ದ ಶ್ರೀಶಿವಬಸವಸ್ವಾಮಿಗಳು ಅಂದು ಬಿಲ್ವ ವೃಕ್ಷದ ಕಟ್ಟೆಯಮೇಲೆ ಆಸೀನರಾಗಿದ್ದರು.

ದೃಷ್ಠಿಕಂಗೆಳೆದುರಿನ ಕುಮುದ್ವತಿಯಲ್ಲಿ ನೆಟ್ಟಿತ್ತು.ತೀಡುವ ಗಾಳಿಯ ಸುಯಿಲು ಕೂಡ ನಿಂತು ನಿಶ್ಚಲವಾಗಿತ್ತು.ತಮ್ಮ ಬೆನ್ನಿನ ಮೇಲೆ  ಯಾರೋ ನಿಧಾನವಾಗಿ ಅಕ್ಷರಗಲನ್ನು ಬರೆಯುತ್ತಿರುವ ಭಾಸವಾಯಿತು.

ಶ್ರೀಶಿವಬಸವ ಸ್ವಾಮಿಗಳು ಧ್ಯಾನಸ್ಥರಾಗಿ ತಮ್ಮ ಬೆನ್ನಿನ ಬರಹವನ್ನು ಗುರುತಿಸಲಾರಂಭಿಸಿದರು.”ರುದ್ರಮುನಿ ದೇಶಿಕರಿಗೆನಿರಂಜನ ಸ್ಥಲ ದೀಕ್ಷೆ ದಯಪಾಲಿಸುವದು” ಸಂದೇಶ ಪೂರ್ಣಗೊಂಡಾಗ ಇದು ಶ್ರೀಕುಮಾರಸ್ವಾಮಿಗಳ ಸೂಚನೆ ಎಂದು ಶ್ರೀಶಿವಬಸವ ಸ್ವಾಮಿಗಳಿಗೆ ಅರಿವಾಗಿತ್ತು. ಶ್ರೀ ರುದ್ರಮುನಿ ದೇಶಿಕರು ಈಗ ನಿಮ್ಮ ಬೆನ್ನು ಬಿದ್ದಿದ್ದಾರೆ ಎನ್ನುವದನ್ನು ಹೀಗೆ  ಶ್ರೀಕುಮಾರಸ್ವಾಮಿಗಳು ತಮಗೆ ತಿಳಿಸಿದ್ದು ಶ್ರೀ ಶಿವಬಸವ ಸ್ವಾಮಿಗಳಿಗೆ ಆಶ್ಚರ್ಯವಾಗಿತ್ತು.

ಈ ವಿಷಯವನ್ನು ಶ್ರೀ ರುದ್ರಮುನಿ ದೇಶಿಕರಿಗೆ ತಿಳಿಸಿದರು. ತಮ್ಮ ಅಂತರಂಗದ ಪ್ರಾರ್ಥನೆ ಫಲಿಸುವಂತೆ ತಮ್ಮನ್ನು ಉದ್ದರಿಸಲು ಶ್ರೀಕುಮಾರ ಸ್ವಾಮಿಗಳು ತೋರಿರುವ ಲೀಲೆ ಶ್ರೀರುದ್ರಮುನಿ ದೇಶಿಕರಿಗೆ “”ಸೂಕ್ಷ್ಮ ಕಾಯದಲ್ಲಿದ್ದೇವೆ”” ಎಂದು ನೀಡಿದ್ದ ಸುಳಿವಿಗೆ ಸಾಕ್ಷಿಯಂತೆ ಕಂಡಿತ್ತು…

ಗ್ರಂಥದ ಲೇಖಕರಾದ ಶ್ರೀಗುರುಕಂದ ಅವರ  ಕಣ್ಣಿಗೆ ಕಟ್ಟುವ ಈ ಸನ್ನಿವೇಷದ ವರ್ಣನೆ ಸರಳ ಭಾಷೆಯಲ್ಲಿ ಬಳಸಿದ ಒಂದು ಅವಿರಳ ಶಬ್ಧ  “ಸೂಕ್ಷ್ಮ ಕಾಯದಲ್ಲಿದ್ದೇವೆ” ಪುಸ್ತಕದ ಪುಟ-ಪುಟಗಳಲ್ಲಿ ಮತ್ತು ಶ್ರೀ ರುದ್ರಮುನಿ ಶಿವಯೋಗಿಗಳ ಲೀಲೆಗಳಲ್ಲಿ ಪ್ರತಿಧ್ವನಿಸಿತು. ಹಾಗೆಯೇ ಶ್ರೀಶಿವಬಸವ ಸ್ವಾಮಿಗಳಿಗಳ ಬೆನ್ನ ಮೇಲೆ ಮೂಡಿದ ಸಂದೇಶ ನನ್ನ ಕೂತೂಹಲದ ವಾಕ್ಯ “ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು “ ಎಂಬ ವಾಕ್ಯಕ್ಕೆ ಖಚಿತ ಸಾಕ್ಷಿ ನೀಡಿತು .

  • ಶ್ರೀಕಂಠ.ಚೌಕೀಮಠ

೧೦-೧೦-೨೦೨೩

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಇಂತಪ್ಪ ಲಿಂಗದಾ | ದ್ಯಂತ ಷಡುಸ್ಥಾನದೊಳು

ದಾಂತಾದಿ ಮಾಂತ-ಮಂತ್ರ ಮೂಲವ ತೋರಿ

ದಂತಪ್ಪ ಗುರುವೆ ಕೃಪೆಯಾಗು   ೧೨೬ |

ಮೇಲೆ ವಿವರಿಸಿದಂಥ ಈ ಇಷ್ಟಲಿಂಗದ ಆದ್ಯಂತಗಳೆನಿಸಿದ ವೃತ್ತ, ಕಟಿ ವರ್ತುಳ, ಗೋಮುಖ, ನಾಳ, ಚಿತ್ಪೀಠಗಳೆಂಬ ಆರು ಸ್ಥಾನಗಳಲ್ಲಿ ಕ್ರಮವಾಗಿ ನ ಕಾರ; ‘ಮ’ ಕಾರ; ‘ಶಿ’ ಕಾರ; ‘ವಾ’ ಕಾರ; ‘ಯ’ ಕಾರ; ಹಾಗೂ `ಓಂ’ ಕಾರಗಳೆಂಬ ಷಣ್ಮಂತ್ರವನ್ನು ತೋರಿಸಿದಂತಪ್ಪ ಸದ್ಗುರುವೆ ಕೃಪೆಯಾಗು ಎಂದು ಶಿವಕವಿಯು ಲಿಂಗಷಟ್‌ಸ್ಥಲಗಳಲ್ಲಿ ಷಡಕ್ಷರ ಮಂತ್ರದ ವ್ಯಾಪಕತೆಯನ್ನು ಹಾಗೂ ಮರ್ಮವನ್ನು ವಿವರಿಸಿ ಉಪಸಂಹಾರಗೊಳಿಸಿದ್ದಾನೆ. ಲಿಂಗದ ಷಟ್‌ಸ್ಥಾನಗಳನ್ನು ವಿಭಾಗಿಸಿ ಮಂತ್ರಗಳನ್ನು ಸಂಬಂಧಿಸುವ ಪರಿಯು ಶರಣಕವಿಯ ಮಂತ್ರಮಹತ್ವವನ್ನು ವ್ಯಕ್ತಗೊಳಿಸಿದೆ.

‘ದಾಂತಾದಿ ಮಾಂತ ಮಂತ್ರಮೂಲ’ ವೆಂಬ ವಾಕ್ಯ ಪ್ರಯೋಗದಿಂದ ಷಡಕ್ಷರ ಮಹಾಮಂತ್ರದ ಸುಂದರಸ್ವರೂಪ ಹೊರಹೊಮ್ಮಿದೆ. ಇಲ್ಲಿ ಶಿವಕವಿಯ ವೈಯಾಕರಣದ ಜ್ಞಾನ ವಿಸ್ತಾರತೆಯೂ ವಿಸ್ತೃತಗೊಂಡಿದೆ. ದಾಂತವೆಂದರೆ ತವರ್ಗದ ಅಂತ್ಯಾಕ್ಷರವು ‘ನ’ ಕಾರ. ನಕಾರವೇ ಆದಿಯಾಗಿಯುಳ್ಳ. ಮಾಂತದ ಆದಿಯಾದ ಅಕ್ಷರ ‘ಯ’ ಕಾರವು . ಅರ್ಥಾತ್ ಪವರ್ಗದ ಅಂತಿಮಾಕ್ಷರ ಮಕಾರ. ಈ ಮಕಾರದ ಮೇಲೆ ಆದಿಯಾಗಿ ಬರುವ ಅಕ್ಷರವೇ ಯಕಾರವು . ನಕಾರಾದಿ ಯಕಾರ ಕಡೆಯಾದ ಮಂತ್ರವೆ೦ದಾಗುವದು. ಇನ್ನು ”ಮಂತ್ರ ಮೂಲ’ ವೆಂದರೆ ಈ ಮೇಲಿನ ಪಂಚಾಕ್ಷರಿ ಮಂತ್ರಕ್ಕೆ ಆಧಾರವಾದ ಪ್ರಣವವೇ ಓಂಕಾರವು. ಇಲ್ಲಿ ಈ ದಾರ್ಶನಿಕ ಶಿವಕವಿಯು ವ್ಯಾಕರಣ ಜ್ಞಾನವೂ ಚಮತ್ಕಾರಿಕ ರೀತಿಯಲ್ಲಿ ಪ್ರಕಟಗೊಂಡಿದೆ.

ಈ ಷಡಕ್ಷರ ಮಹಾಮಂತ್ರದ ಷಟ್‌ತತ್ತ್ವವನ್ನು ‘ಶಿವತತ್ತ್ವ ರತ್ನಾಕರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ-

ಯಕಾರಃ ಪರಿಪೂರ್ಣತ್ವಂ ವಾಕಾರೋ ನಿತ್ಯಮೇವ ಚ |

 ಆನಂದಶ್ಚ ಶಿಕಾರಃ ಸ್ಯಾತ್ ಮಕಾರಶ್ಚಿತ್ ಸ್ವರೂಪಕಃ ||

ನಕಾರಃ ಸತ್‌ ಸ್ವರೂಪಂ ಚ ಪ್ರಣವೋ ವಿಶ್ವರೂಪಕಃ |

ಶಿವನು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾಗಿ ವ್ಯಾಪಕನಾಗಿರುವಂತೆ ಶಿವಾತ್ಮಕವಾದ ಈ ಮಹಾಮಂತ್ರವೆನಿಸಿದ ಷಡಕ್ಷರವೂ ಶಿವನ ಷಟ್‌ಸ್ವರೂಪಗಳನ್ನು ಒಳಗೊಂಡಿದೆ. ಯಕಾರವು ಪರಿಪೂರ್ಣತ್ವವನ್ನು ಹೊಂದಿದ್ದರೆ ವಾಕಾರವು ನಿತ್ಯತ್ವದ

ದ್ಯೋತಕವಾಗಿದೆ. ಶಿಕಾರವು ಆನಂದಮಯವೆನಿಸಿದರೆ ಮಕಾರವು ಜ್ಞಾನ ಸ್ವರೂಪವುಳ್ಳುದಾಗಿದೆ. ನಕಾರವು ಸತ್‌ಸ್ವರೂಪವನ್ನು ಪಡೆದು ಓಂಕಾರ ಪ್ರಣವವು ವಿಶ್ವವ್ಯಾಪಕತ್ವ ರೂಪವನ್ನು ಧರಿಸಿದೆ. ಅಂತೆಯೇ ಓಂಕಾರದಲ್ಲಿ ಸಕಲವು ಗರ್ಭೀಕರಿಸಿದೆ. ಹೀಗೆ ಷಟ್‌ಪ್ರಣವಗಳಲ್ಲಿ ಒಂದೊಂದು ಶಿವತತ್ತ್ವಸ್ವರೂಪವು ಸನ್ನಿಹಿತವಾಗಿದೆ. ಇಂಥ ಶಿವತತ್ತ್ವಭರಿತವಾದ ಮಹಾಮಂತ್ರವು ಅಸಾಧಾರಣ ಶಕ್ತಿಯುಳ್ಳುದು. ಇಂಥ ಷಣ್ಮಂತ್ರಭರಿತ ಇಷ್ಟಲಿಂಗವೂ ಅನುಪಮವಾದುದು. ಓ ಪರಮ ಗುರುವೆ

ಮಂತ್ರಮಯ ಮಹಾಲಿಂಗವನ್ನು ಅಂಗವಿಸಿಕೊಳ್ಳು ವಂತೆ ಹರಸು.

ತನಯ ಪೇಳುವೆ ನಿನ್ನ    | ತನುವಿನೊಳಗೀ ಲಿಂಗ

ವನು ಧರಿಸಿಕೊಂಬ ಘನ ಚಾರಿತ್ರವ ಕೇಳೆಂ

 ದನಘ ಶ್ರೀಗುರುವೆ ಕೃಪೆಯಾಗು   ||೧೨೭||

ಶ್ರೀಗುರುವು ಶಿಷ್ಯನ ತತ್ತ್ವಜಿಜ್ಞಾಸಾಭಾವವನ್ನು ಅರಿತು ಇಷ್ಟಲಿಂಗದ ಲಕ್ಷಣ-ಸ್ವರೂಪ ಹಾಗೂ ಮಹತ್ವವನ್ನು ತಿಳುಹಿ ಸದ್ಯಃ ಅಂಥ ಲಿಂಗವನ್ನು ಧರಿಸಿ ಕೊಳ್ಳುವ ಸ್ಥಾನವನ್ನು ಮತ್ತು ಯೋಗ್ಯತೆಯನ್ನು ತಿಳಿಸುವವನಾಗುತ್ತಾನೆ.

 “ಸದ್ಗುರು ಕರಕಮಲದಲ್ಲಿ ಸಂಜಾತನಾದ ತನಯನೆ ! ಚಿತ್ತವಿಟ್ಟು ಕೇಳು. ನಾನು ಪೇಳುವ ನುಡಿಗಳಲ್ಲಿ ಪರಮಪಾವನವೂ ದಿವ್ಯವೂ, ಭವ್ಯವೂ ಆದ ಈ ಇಷ್ಟಲಿಂಗವನ್ನು ಯಾವ ಯಾವ ಸ್ಥಾನಗಳಲ್ಲಿ ಯಾವ ಯಾವ ತತ್ತ್ವವನ್ನರಿತು ಘನತೆ ಪಡೆದು ಧರಿಸಿಕೊಳ್ಳಬೇಕೆಂಬ ಘನವಾದ ಚಾರಿತ್ರವಿದೆ. ಇಂಥ ಅನುಪಮ ಚರಿತ್ರವನ್ನರಿಯದೆ ಧರಿಸುವ ಲಿಂಗಧಾರಣೆ ಭಾರವಾದೀತು. ಹಾಗೆ ಧರಿಸಿದರೆ ಯಾವ ಪ್ರಯೋಜನವೂ ಎನಿಸದು. ಅದುಕಾರಣ ಅದರ ಮರ್ಮವನ್ನರಿತು ಧರಿಸುವದು ಪ್ರತಿಯೊಬ್ಬ ವೀರಶೈವನ ಕರ್ತವ್ಯವಾಗಿದೆ. ಅಲ್ಲಿಯೇ ವೀರಪದದ ಸಾರ್ಥಕತೆಯಿದೆ. ದಿವ್ಯತೆಯಿದೆ; ಭವ್ಯತೆಯಿದೆ. ಲಿಂಗಧಾರಣ ಚಾರಿತ್ರತೆಯ ಎಚ್ಚರಿಕೆಯನ್ನರಿತು  ಧರಿಸುವ ಭಕ್ತನೇ ನಿಜ ವೀರಶೈವನಾಗುವನು” ಎಂದ ಮುಂತಾಗಿ ಮಮತೆಯಿಂದ ಅಘ (ಪಾಪ) ರಹಿತನಾದ ಸದ್ಗುರುನಾಥನು ಸದುವಿನಯಶೀಲ ಶಿಷ್ಯನಿಗೆ ಬೋಧಿಸುತ್ತಾನೆ.

 ಲಿಂಗಧಾರಣೆಯ ಅಸಾಧಾರಣತೆಯನ್ನು ಮೈಗೂಡಿಸಿಕೊಂಡ ಶ್ರೀಗುರುವೇ ಅನಘನೆನಿಸುವನು. ಘನತೆವೆತ್ತವನಾಗುವನು. ಲಿಂಗಧಾರಣೆಯ ಸಾರ್ಥಕ್ಯವನ್ನು ಸಾಧಿಸಿದ ಚನ್ನವೀರ ಯತಿಗಳ ಶಿಷ್ಯನೆನಿಸಿದ ಈ ದಾರ್ಶನಿಕ ಶರಣನು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿದ್ದನೆಂಬುದು ಧ್ವನಿತವಾಗುತ್ತದೆ. ಆತನ ವೀರತ್ವದ ಕೆಚ್ಚು ಮೆಚ್ಚುವಂಥಹದು. ಮುಂದೆ ಕ್ರಮವಾಗಿ ಲಿಂಗಧಾರಣೆಯ ವಿವರವನ್ನು ವಿವರಿಸುತ್ತಾನೆ.

ನರಮಾನವರಿಗೊಮ್ಮೆ | ಕರವೊಡ್ಡಿ ಬೇಡುವಾ-

ಚರಣೆಯನೆ ಉಳಿದು-ಕರಪೀಠದೊಳು ಲಿಂಗ

ಧರಿಸೆಂದ ಗುರುವೆ ಕೃಪೆಯಾಗು   || ೧೨೮ ||

ಶರೀರದಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಸ್ಥಾನಗಳು ಆರು. ೧) ಕರ, ೨) ಕಕ್ಷೆ, ೩) ಉರ, ೪) ಶಿರ, ೫) ಮುಖಸೆಜ್ಜೆ, ೬) ಅಮಳೈಕ್ಯವೆಂದು ಆರು ಲಿಂಗಧರಿಸುವ ಅವಯವಗಳು. ಕರಪೀಠಾದಿಗಳಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಯೋಗ್ಯತೆ ಹೇಗಿರಬೇಕೆಂಬ ಮರ್ಮವನ್ನು ಕ್ರಮಶಃ ನಿರೂಪಿಸುತ್ತಾನೆ.

 ಸದ್ಗುರುನಾಥನು ಶಿರದ ಸಹಸ್ರದಳಕಮಲ ಮಧ್ಯದ ಕಳೆಯನ್ನು ತನ್ನ ಭಾವಕ್ಕೆ ಭಾವದಿಂದ ಶಿಷ್ಯನ ಮನದಲ್ಲಿ ತಂದು ಆ ಮನದಿಂದ ನೇತ್ರದ್ವಾರಾ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಮೂರ್ತಗೊಳಿಸುತ್ತಾನೆ. ಪ್ರಾಣ ಮತ್ತು ಭಾವಗಳನ್ನು ಒಳಗೊಂಡ  ಇಷ್ಟಲಿಂಗವನ್ನು ಧರಿಸುವ ಕರವು ಪರಮಪವಿತ್ರವಾಗಿರಬೇಕು. ಹಸ್ತಹಸನವಾಗದೇ ಶಿವನ ಪ್ರಸನ್ನತೆ ಪ್ರಾದುರ್ಭವಿಸುವದಿಲ್ಲ. ಶಿವಲಿಂಗವನ್ನು ಧರಿಸಿಕೊಳ್ಳುವ ಕೈಯು ಬೇರೊಬ್ಬ ನರನನ್ನು ಮರೆತೂ ಬೇಡಬಾರದು. ನರ ಮತ್ತು ಮಾನವ ಶಬ್ದಗಳು ಸಮಾನಾರ್ಥಕವಾಗುವದರಿಂದ ಶಿವಕವಿಯು ದ್ವಿರುಕ್ತಿದೋಷಕ್ಕೆ ಗುರಿಯಾಗಬೇಕಾಗುವದು. ಆದರೆ ನರ ಮತ್ತು ಮಾನವ ಪದಗಳೆರಡನ್ನು ಪ್ರಯೋಗಿಸುವಲ್ಲಿ ಧ್ವನಿಯಿದೆ. ವ್ಯಂಜನವಿದೆ. ಸಾಂಕೇತಿಕತೆಯಿದೆ. ಇಷ್ಟಲಿಂಗವನ್ನು ಧರಿಸಿಕೊಳ್ಳುವ ಭಕ್ತನು ಯಾರೊಬ್ಬರನ್ನು ಕೈಯೊಡ್ಡಿ ಬೇಡಬಾರದೆಂಬ ಅರ್ಥ ವಿಸ್ತಾರವು ವ್ಯಾಪಿಸಿದೆ. ದ್ವಿರುಕ್ತಿ ದೋಷದ ಲವಶೇವೂ ಶಿವಕವಿಗೆ ಸೋಂಕುವದಿಲ್ಲ.

ಆದಾನ-ಪ್ರದಾನಗಳೇ ಕರದ ಕರ್ಮವಾಗಿದ್ದರೂ ಪ್ರದಾನ ಗುಣವೇ ತನ್ನದಾಗಬೇಕು. ಕಾಯಕವನ್ನು ಮಾಡಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸುವ ಕರ್ತವ್ಯ ಭಕ್ತನದಾಗಬೇಕು. ಜೊತೆಗೆ ಆ ಪೂಜ್ಯರಿಂದ ಪಾದೋದಕ ಪ್ರಸಾದಗಳಿಗಾಗಿ ಕೈಯೊಡ್ಡಬೇಕಲ್ಲದೆ ತನ್ನ ಹೊಟ್ಟೆ ಹೊರೆಯಲು ಸತಿ-ಸುತರನ್ನು ಸಲುಹಲು ಕನಸಿನಲ್ಲಿಯೂ ಮಾನವರನ್ನು ಯಾಚಿಸಬಾರದು.

. ಭವಿಗಳನ್ನಂತೂ ಎಂದೂ ಬೇಡಬಾರದು. ಅವರ ಪದಾರ್ಥಗಳು ತನ್ನ ಶಿವಲಿಂಗಕ್ಕೆ ಸಲ್ಲಲಾರವು.  

 ‘’ಧರೆಗೆ ಯಾಚನೆಯಿಂದ ಲಘುತನಮುಂಟೆ ?’’

ನಿಜಗುಣ ಶಿವಯೋಗಿಗಳು ಯಾಚನೆಯ ಲಘುತ್ವವನ್ನು ಪ್ರತಿಪಾದಿಸಿರುವರು. ಬೇಡುವದು ಬಹುಕೀಳುತನ, ಬೇಡುವಕೈಯಿಂದ ಕಾಯಕಮಾಡಿ ದಾಸೋಹಿಯಾಗಿ ನೀಡಿ ಗುರುಪ್ರಸಾದವನ್ನು ಪಡೆಯಬೇಕು. ಲಿಂಗಭಕ್ತನು ಎಂದೂ ಯಾವ ಯಾವ ಕಾಲದಲ್ಲಿಯೂ ಇತರರನ್ನು ಬೇಡಬಾರದೆಂದು ಶರಣರು ಕಾಯಕದ ಕಟ್ಟಳೆಯನ್ನು ಕಟ್ಟಿದರು. ಕಲ್ಯಾಣದಲ್ಲಿ ಬೇಡದ ಜನರಿಲ್ಲವೆಂದೇ ಅಣ್ಣನವರು- “ಬೇಡವವರಿಲ್ಲದೇ ಬಡವನಾದೆನಯ್ಯಾ !” ಎಂದು ಉದ್ಗಾರ ತೆಗೆದರು. ಶರಣ ಸಂತತಿಗೆಲ್ಲ ಕಾಯಕ ನಿಯಮವನ್ನು ಕಲ್ಪಿಸಿಕೊಟ್ಟು ಸಮಾಜವನ್ನು ಸಮೃದ್ಧಗೊಳಿಸಿದರು. ಆರ್ಥಿಕ ಸಮತೋಲನವನ್ನು ತಂದುಕೊಟ್ಟರು. ದುರಾಶೆಯ ದುಷ್ಟ ಬೀಜವನ್ನು ಹುರಿದು ಹಾಕಿದರು. ಸಂತೃಪ್ತಿಯ ಜೀವನದ ಸಂಜೀವಿನಿಯನ್ನು ತಂದುಕೊಟ್ಟರು. ಕಾಯಕವು

ಶರಣರಿಗೆ ಮರುಜೇವಣಿಯಾಯಿತು.

 ಕಾಯಕಲ್ಪದಿಂದ ಕರಸ್ಥಲವೂ ಪರಸ್ಥಲವಾಗಬಲ್ಲುದು. ಜ್ಞಾನನಿಧಿ ಚನ್ನಬಸವಣ್ಣ ನವರು ಕರಸ್ಥಲದ ನಿಜವನ್ನು ನಿಚ್ಚಳವಾಗಿ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ-

ಕರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ

ಲಿಂಗದಲ್ಲಿ ಅನಿಮಿಷದೃಷ್ಟಿಯಾಗಿರಬೇಕು.

ತನ್ನ ತಾನೇ ಅನಿಮಿಷನಾಗಿರಬೇಕು.

ಜಂಗಮದ ನಿಲುಕಡೆಯನರಿಯಬೇಕು.

ಪ್ರಸಾದದಲ್ಲಿ ಪರಿಪೂರ್ಣನಾಗಿರಬೇಕು.

ಹಿರಣ್ಯಕ್ಕೆ ಕೈಯಾನದಿರಬೇಕು.

ತನ್ನ ನಿಲುಕಡೆಯ ತಾನರಿಯದಿರಬೇಕು

ಇದು ಕಾರಣ ಕೂಡಲ ಚನ್ನ ಸಂಗಯ್ಯನಲ್ಲಿ

ಕರಸ್ಥಲದ ನಿಜವನರಿವಡೆ ಇದೇ ಕ್ರಮ

ಕರಸ್ಥಲದಲ್ಲಿ ಲಿಂಗಧಾರಣವಾದ ಮೇಲೆ ಲಿಂಗಭಕ್ತನ ಅನಿಮಿಷ ದೃಷ್ಟಿಯಾಗಬೇಕು. ಎಲ್ಲವೂ ಲಿಂಗಮಯವಾಗಿ ಕಾಣಬೇಕು. ಲಿಂಗದ ಹರಣ ಜಂಗಮವೆಂದರಿದು ಕಾಯಕದಿಂದ ದಾಸೋಹ ಮಾಡಬೇಕು. ಜಂಗಮದ ಶೇಷ ಪ್ರಸಾದದ ಮಹತ್ವವನ್ನರಿತು ಪರಿಪೂರ್ಣವಾಗಿ ತೃಪ್ತಮನವುಳ್ಳವನಾಗಿರ ಬೇಕು. ಹೀಗಾದ ಬಳಿಕ ಅನ್ಯರ ಧನಕ್ಕೆ ಕೈಯಾನದಿರಬೇಕು. ಆಶಿಸದಿರಬೇಕು. ಕೇವಲ ತನ್ನತನ (ಸ್ವಾರ್ಥ) ಕ್ಕಾಗಿ ಸಂಗ್ರಹಿಸಿದ ಧನವು ತ್ರಿವಿಧ ದಾಸೋಹವೆನಿಸದು. ತ್ಯಾಗದಿಂದ ಭೋಗವಾಗಬೇಕು. ಅಂದರೆ ತ್ಯಾಗಾಂಗ ಶುದ್ಧಿ. ಪ್ರಸಾದ ಭೋಗದಿಂದ ಭೋಗಾಂಗ ಶುದ್ಧಿಯಾದೀತು. ಇಂಥ ನಿಜಾಚರಣೆಯು ಕರಸ್ಥಲವನ್ನು ಪರಸ್ಥಲ (ಲಿಂಗಸ್ಥಲ) ವನ್ನಾಗಿಸುವದು ಎಂದು ಬೋಧಿಸಿದ ಬೋಧಾಗುರುವೆ ! ಭವದ ಬೇರಾದ ಬೇಡುವಿಕೆಯನ್ನು ಬಹುದೂರಗೊಳಿಸು.

ಬೇಡುವಿಕೆಯು ತೀರ ಸಾಮಾನ್ಯವಾದುದು. ಬೇಡುವ ಕೈಯು ಕೆಳಗಿರುವದಲ್ಲದೆ; ನೀಡುವವನ ಕರ ಮೇಲಾಗಿರುತ್ತದೆ. ಬೇಡುವದರಿಂದ ಜೀವನವೇ ಕೀಳೆನಿಸುವದು. ನೀಡುವವನು ಮೇಲೆನಿಸುವನು. ದಾನಗುಣ ಅವರ್ಣನೀಯವಾದುದು.

ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು |

ಪರಿಣಾಮವಕ್ಕು ಪದವಕ್ಕು ಕೈಲಾಸ

ನೆರೆಮನೆಯು ಅಕ್ಕು ಸರ್ವಜ್ಞ || ಸ. ವ. ೬೦೪ ||

ಕೊಡುವಾತನೇ ಹರನು ಪಡೆವಾತನೇ ನರನು |

ಒಡಲ ಒಡವೆಗಳು ಕೆಡೆದು ಹೋಗದ ಮುನ್ನ

ಕೊಡು ಪಾತ್ರವರಿದು ಸರ್ವಜ್ಞ || ೬೧೯ ||

ಆಗ ಬಾ, ಈಗ ಬಾ, ಹೋಗಿ ಬಾ ಎನ್ನದಲೆ

ಆಗಲೇ ಕರೆದು ಕೊಡುವವನ ಧರ್ಮ ಹೊ-

ನ್ನಾಗದೆ ಬಿಡದು ಸರ್ವಜ್ಞ || ೨೨ ||

ಎಂದು ಮುಂತಾಗಿ ಸರ್ವಜ್ಞ ಕವಿಯು ದಾನದ ಅಪಾರ ಮಹಿಮೆಯನ್ನು ಮುಕ್ತ ಕಂಠದಿಂದ ಬಣ್ಣಿಸಿದ್ದಾನೆ. ಮಾನವನು ಸ್ವಭಾವತಃ ಲೋಭಿಯು. ಲೋಭಗುಣ ಅಂಟಿಕೊಂಡಿರುತ್ತದೆ. ಈ ಆಶಾಪಾಶವು ತೆರಣಿಯ ಹುಳದಂತೆ ಸುತ್ತಿಕೊಂಡು ತನ್ನನ್ನೇ ನಾಶಪಡಿಸುವದು. ಆಶೆಯು ನಿರಾಶೆಯಾಗಿ ಪರಿವರ್ತನ ಹೊಂದಬೇಕಾದರೆ ಬೇಡುವ ಕರ ನೀಡುವಂತಾಗಬೇಕು. ಭಿಕ್ಷೆ ಬೇಡುವ ಭಿಕ್ಷುಕನು ನೀಡುವವರಿಗೆ ಉತ್ತಮ ಉಪದೇಶವನ್ನೇ ನೀಡುತ್ತಾನೆ-ಹಿಂದಿನ ಜನ್ಮದಲ್ಲಿ ನಾನು ಯಾರಿಗೂ ನೀಡಿಲ್ಲವೆಂದು ಇಂದು ಈ ಭಿಕ್ಷಾ ಪಾತ್ರೆಯನ್ನು ಹಿಡಿದು ತಿರುಗುತ್ತಿರುವೆ. ನೀವಾದರೂ  ನನ್ನಂತಾಗ ಬೇಡಿ”ರೆಂದು ಸಾರುತ್ತಾನಂತೆ.

ಜನ-ಜೀವಿಗಳಿಗೆ ಜೀವನವ (ನೀರ) ನ್ನು ನೀಡುವ ಮೋಡಗಳು ಆಕಾಶದಲ್ಲಿ ಮೆರೆದರೆ ಆ ನೀರನ್ನು ಸಂಗ್ರಹಿಸುವ ಸಾಗರ ಕೆಳಗಿದೆ. ಅದುಕಾರಣ ಕೈಯೊಡ್ಡದ ಕರ ಸಾರ್ಥಕತೆಯನ್ನು ಪಡೆಯಬಲ್ಲುದು. ಈ ಸಾಫಲ್ಯತನ ಕಾಯಕಶೀಲದಲ್ಲಿದೆ. ದಾಸೋಹದ ನಿಯಮದಲ್ಲಿದೆ. ಇಂಥ ಕಾಯಕ ಮತ್ತು ದಾಸೋಹ ಕೈಕೊಂಡ ಕರವು ಇಷ್ಟಲಿಂಗವನ್ನು ಧರಿಸಿಕೊಳ್ಳಲು ಸಮರ್ಥವೆನಿಸುವನು. ಲಿಂಗವನ್ನು ದಯ ಪಾಲಿಸುವ ಸದ್ಗುರುನಾಥನು ಶಿಷ್ಯನಿಗೆ ಕರಸ್ಥಲದ ಸಾರ್ಥಕ್ಯವನ್ನು ಬೋಧಿಸುವನು. ನರಮಾನವರನ್ನು ಬೇಡುವ ಆಚರಣೆಯನ್ನು ನಿರಾಕರಿಸುತ್ತ ಕರದ ಪರಾವಲಂಬನೆ ಯನ್ನು ದೂರೀಕರಿಸುತ್ತ; ಸ್ವಾವಲಂಬನೆಯ ಸಿದ್ಧಿಯನ್ನು ದಯಪಾಲಿಸುವನು. ಧನ-ಧಾನ್ಯಾದಿಗಳಿಂದ ದರಿದ್ರನೆನಿಸಿದರೂ ದಾಸೋಹಿಯೆನಿಸುವ ಶಿವಭಕ್ತನಿಗೆ ಶಿವನು ಪ್ರಿಯನಾಗುವನೆಂಬುದನ್ನು ಗುರು ತಿಳಿಸುತ್ತಾನೆ.

ಇಂದ್ರಿಯೇಚ್ಛೆಗೆ ಹರಿವ | ಮಂದಬುದ್ಧಿಯ ನೀಗಿ

ದಂದು ಲಿಂಗವನು – ಕಂದ ಕಕ್ಷೆಯೊಳು ದರಿ-

ಸೆಂದ ಶ್ರೀಗುರುವೆ ಕೃಪೆಯಾಗು      ||೧೨೯ ||

ಶಿವಕವಿಯು-ಕರಸ್ಥಲದಲ್ಲಿ ಲಿಂಗಧಾರಣೆಯ ಮರ್ಮವನ್ನು ತಿಳಿಸಿ ಯಾಚನೆಯನ್ನು ನಿವಾರಿಸಿ ಕಾಯಕ-ದಾಸೋಹ ತತ್ತ್ವಗಳನ್ನು ಮನನ ಮಾಡಿಸಿದ ಸುಜ್ಞಾನ ಮೂರುತಿ ಗುರುದೇವನು ಇಂದ್ರಿಯೇಚ್ಛೆಯನ್ನು ಹರಿದು ಹಾಕುವ ನೀತಿಯನ್ನು

ನಿರೂಪಿಸುವನೆಂಬುದನ್ನು ನಿರ್ವಚಿಸುತ್ತಾನೆ.

ಬಲವಾನ್ ಇಂದ್ರಿಯಗ್ರಾಮಃ ” (ವ್ಯಾಸರ ನುಡಿ)

ಇಂದ್ರಿಯಗಳ ಸಮೂಹವು ಬಲಶಾಲಿಯಾಗಿದೆ. ಇಂದ್ರಿಯ ಶಕ್ತಿಗೆ ಮಣಿಯದವರಿಲ್ಲ. ಇಂದ್ರಿಯಗಳ ಶಕ್ತಿಗೆ ಅಶ್ವಶಕ್ತಿಯನ್ನು ಉಪನಿಷತ್ಕಾರರು ಉಪಮಿಸಿದ್ದಾರೆ. ಭೌತಿಕ ವಿಜ್ಞಾನಿಗಳೂ ಸಹ ಯಾವುದೇ ಎಂಜನ್ನಿನ ಬಲವನ್ನು ಗುರುತಿಸುವಾಗ ಅಶ್ವಶಕ್ತಿಗೆ ತುಲನೆ ಮಾಡುತ್ತಿರುವದು ಯಥೋಚಿತವಾಗಿದೆ. ಕಠೋಪನಿಷತ್ತಿನ ಪ್ರಥಮಾಧ್ಯಾಯದ ಮೂರನೆಯ ವಲ್ಲಿಯಲ್ಲಿ ಯಮಧರ್ಮನು ಧೀರಬಾಲಕ ಆತ್ಮತತ್ತ್ವಜಿಜ್ಞಾಸು ನಚಿಕೇತನಿಗೆ

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |

ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ || ೩ ||

ಇಂದ್ರಿಯಾಣಿ ಹಯಾನಾಹುರ್ವಿಷಯಾನ್ ತೇಷು ಗೋಚರಾನ್ |

ʼʼಶರೀರವೇ ರಥವು.  ಆತ್ಮನು ರಥಿಕನು.  ರಥದ ಸಾರಥಿಯೇ ಬುದ್ಧಿಯು. ಇಂದ್ರಿಯಗಳು ರಥವನ್ನು ಜಗ್ಗುವ ಕುದುರೆಗಳು.  ಮನವು ಅವುಗಳಿಗೆ ಜೋಡಿಸಿದ ಲಗಾಮು. ಶಬ್ದಾದಿ ವಿಷಯಂಗಳೇ ಪ್ರತ್ಯಕ್ಷ ಗೋಚರಿಸುವ ಪದಾರ್ಥಗಳೆಂದು ತಿಳಿʼʼ ಎಂಬುದಾಗಿ ಬೋಧಿಸಿದ್ದಾನೆ. ರಥದ ಸಾರಥಿಯು ಬುದ್ಧಿವಂತನಾಗಿದ್ದರೆ ರಥಿಕನು ಯೋಗ್ಯ ಗುರಿಯನ್ನು ಗುರುತಿಸಬಲ್ಲನು. ಅಂತೆಯೇ ಬುದ್ಧಿಗೆ ಸಾರಥಿಯ ಸಂಕೇತ ಸಮೀಚೀನವಾಗಿದೆ. ಬುದ್ಧಿಯಿಲ್ಲದ ಸಾರಥಿಯು ರಥವನ್ನು ಗುರಿಯತ್ತ ಸಾಗಿಸಲಾರನು. ರಥವನ್ನೆಳೆಯುವ ಕುದುರೆಗಳು ಅವನ ವಶವರ್ತಿಯಾಗಿ ವರ್ತಿಸಲಾರವು. ಇದರಂತೆ ಆಧ್ಯಾತ್ಮಿಕ ರಥವೆನಿಸಿದ ಶರೀರಕ್ಕೆ ಸಾರಥಿಯಾದ ಬುದ್ಧಿಯು ಮಂದವಾಗಿದ್ದರೆ ಕುದುರೆಗಳೆಂಬ ಇಂದ್ರಿಯಗಳು ತಮ್ಮಿಚ್ಛೆಯಂತೆ ಹರಿಯುತ್ತವೆ. ಸುಬುದ್ಧಿಯುಳ್ಳ ಮಾನವನು ಸುವಿವೇಕದಿಂದ ಇಂದ್ರಿಯಗಳನ್ನು ನಿಗ್ರಹಿಸುತ್ತಾನೆ. ಇಂದ್ರಿಯೇಚ್ಛೆಗೆ ಮನವನ್ನು ಮಾರುಗೊಳಿಸುವದಿಲ್ಲ. ಸುವಿಚಾರದಿಂದ, ಸತ್ಕ್ರಿಯೆಗಳಿಂದ, ಸತ್ಸಂಗದಿಂದ ಇಂದ್ರಿಯಗಳನ್ನು ಹಾಗೂ ಮನವನ್ನು ಉದಾತ್ತೀಕರಿಸಬೇಕು. ಪರಿಪಕ್ವಗೊಳಿಸಬೇಕು. ಈ ರೀತಿಯಾಗಿ ಮನ ಮತ್ತು ಇಂದ್ರಿಯಗಳು ಸುಬುದ್ಧಿಯಿಂದ ಸಮರ್ಥವಾದರೆ ಇಷ್ಟಲಿಂಗವನ್ನು ಕಕ್ಷೆಯಲ್ಲಿ ಧಾರಣ ಮಾಡಬೇಕು.

 ಕಕ್ಷೆಯೆಂದರೆ ಎಡದ ತೋಳು. ಇಂಜಕ್ಷನ್ ಮಾಡುವ ವೈದ್ಯನು ರೋಗಿಯ ಹೃದಯಕ್ಕೆ ಎಣ್ಣೆಯ ಪರಿಣಾಮವು ತೀವ್ರವಾಗಲೆಂದು ಎಡರಟ್ಟಿಗೇನೇ ಮಾರುವಂತೆ ಹೃದಯ ಮಧ್ಯದ ಚಿತ್ಕಳೆಯ ದ್ಯೋತಕವಾಗಿ ಮತ್ತು ಸಾಮೀಪ್ಯ ಸಂಬಂಧವನ್ನು ಸೂಚಿಸುವದಕ್ಕಾಗಿಯೂ ಕಕ್ಷೆಗೆ ಲಿಂಗಧಾರಣ ಮಾಡುವ ಕ್ರಮ ಪುರಾತನಕಾಲದಿಂದಲೂ ಬೆಳೆದುಬಂದಿದೆ. ಎಡರಟ್ಟೆಯಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಬುದ್ಧಿಯ ಮಂದತ್ವವನ್ನು ಕಳೆದುಕೊಂಡರೆ ಇಂದ್ರಿಯಗಳ ಇಚ್ಛೆಯು ಲಿಂಗೇಚ್ಛೆಯಾಗ ಬಲ್ಲುದೆಂದು ಸದ್ಗುರು ಬೋಧಿಸುತ್ತಾನೆ.

ಷಟ್‌ಸ್ಥಲ ಜ್ಞಾನಿ, ಸತ್ಕ್ರಿಯೆಯ ಸುಯಿದಾನಿ ಚನ್ನಬಸವಣ್ಣನರು-

ಕಕ್ಷೆಯಲ್ಲಿ ಲಿಂಗವ ಧರಿಸಿದ ಬಳಿಕ,

ಅನ್ಯಕಾಂಕ್ಷೆ ಇಲ್ಲದಿರಬೇಕು,

ಮಾಯದ ಉಸುರಡೆಯಾಡದಿರಬೇಕು.

ಸಂಸಾರ ಸಂಗವ ಹೊದ್ದದೆ ಮನವು

ಮಹಾಸ್ಥಲವನಿಂಬುಗೊಂಡಿರಬೇಕು.

ಕೂಡಲ ಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು

ಇದೆ ಕಕ್ಷೆಯಲ್ಲಿ ಲಿಂಗವ ಧರಿಸುವ ಕ್ರಮ || ೯೦೭ II

ಕಕ್ಷೆಯಲ್ಲಿ ಲಿಂಗವನ್ನು ಧರಿಸಿ ಲಿಂಗಭಕ್ತನು ಲಿಂಗದಿಚ್ಛೆಯಲ್ಲದ ವಸ್ತುವನ್ನು ಬಯಸಬಾರದು. ಮಾಯೆಯನ್ನು ಹೊದ್ದದಿರಬೇಕು. ಸಂಸಾರ ಸಂಗವನ್ನು ತ್ಯಜಿಸಿ ಮಹಾಲಿಂಗದಲ್ಲಿ ಮನವು ತಲ್ಲೀನಗೊಳ್ಳಬೇಕು. ಇಂತಾದರೆ ಕಕ್ಷೆಯಲ್ಲಿ ಲಿಂಗ ಧರಿಸಲು ಯೋಗ್ಯಕ್ರಮವೆಂದು ಬೋಧಿಸಿದ್ದಾರೆ.

ಅಂಗದ ಆರವಯವಗಳಲ್ಲಿ ಲಿಂಗವನ್ನು ಧರಿಸುವ ಶಿವಭಕ್ತನು ಸದ್ಗುರು ಬೋಧೆಯಂತೆ ಸದ್ಗುಣಗಳನ್ನು ಅಳವಡಿಸಿಕೊಳ್ಳುವದು ಸಮೀಚೀನವಾಗಿದೆ. ಮುಂದಿನ ತ್ರಿಪದಿಯಲ್ಲಿ ಎದೆಯ ಮೇಲೆ ಲಿಂಗಧಾರಣದ ಅಂತರಾರ್ಥವನ್ನು   ವಿವರಿಸುತ್ತಾನೆ.

 ಪರಹೆಣ್ಣಿಗೆದೆಗೊಟ್ಟು |  ಭರದಿಂದಲಪ್ಪುವಾ

ದುರಿತವನೆ ಉಳಿದು-ಉರಸಜ್ಜೆಯೊಳು ಲಿಂಗ

ಧರಿಸೆಂದ ಗುರುವೆ ಕೃಪೆಯಾಗು    || |

ಕರದಲ್ಲಿ ಕಾಣಿಸುವದು ಇಷ್ಟಲಿಂಗ, ಕಕ್ಷೆಯಲ್ಲಿ ಧರಿಸುವದು ಪ್ರಾಣಲಿಂಗ, ಉರದಲ್ಲಿ ಧಾರಣಮಾಡುವದು ಭಾವಲಿಂಗ ದ್ಯೋತಕವೆಂತಲೂ ಭಾವಿಸಬಹುದು. ಸ್ಥೂಲವಾಗಿ ಪ್ರತ್ಯಕ್ಷವಾಗಿ ಪೂಜೆಗೈಯಲು ಅನುಕೂಲವಾದುದು ಇಷ್ಟಲಿಂಗವು. ಶರೀರದ ಎಡಭಾಗದಲ್ಲಿಯೇ ಪ್ರಾಣಪುಪ್ಪುಸವಿರುವದರಿಂದ ಅದನ್ನು ಸೂಚಿಸುವ ಎಡದ ರಟ್ಟೆಯಲ್ಲಿ ಕಟ್ಟುವದು ಪ್ರಾಣಲಿಂಗದ ಪರಿಯಾಯವಾಗ ಬಹುದು. ಹೃದಯದಮೇಲೆ ಧರಿಸುವದು ಭಾವಲಿಂಗವೆನ್ನಬಹುದು. ದುಷ್ಕರ್ಮಗಳ ಭಾವವಳಿದು ಮನಪವಿತ್ರವಾದರೆ ಭಾವಲಿಂಗದ ಅನುಸಂಧಾನ ಸಾಧ್ಯವಾಗುವದು. ಅದು ಕಾರಣ ಉರದಮೇಲೆ ಲಿಂಗವನ್ನು ಧರಿಸುವ ಭಕ್ತನು ಪರರ ಹೆಣ್ಣು ಮಕ್ಕಳನ್ನು ಅಪ್ಪಿಕೊಳ್ಳುವ ಪಾಪವನ್ನು ಪರಿಹರಿಸಬೇಕು. ಲಿಂಗವನ್ನು ಅಪ್ಪಿಕೊಂಡ ಎದೆಯು ಪರಸ್ತ್ರೀಯಳ ಎದೆಯನ್ನು ಸೋಂಕಬಾರದು. ಪಂಚಪಾತಕಗಳಲ್ಲಿ ಪರಸ್ತ್ರೀ ಸಂಗವೊಂದೆಂದು ಅನುಭವಿಗಳು ಸಾರಿದ್ದಾರೆ. ಪರಸ್ತ್ರೀ ಸಂಗದಲ್ಲಿ ಲೋಲುಪನಾದ ಜೀವಿಯು ಅನಂತ ಪಾಪಗಳನ್ನು ಮಾಡುತ್ತಾನೆ. ತನ್ನ ತನುವನ್ನು, ಧನವನ್ನು, ಮನವನ್ನು ಅವಳಿಗಾಗಿ ಸೂರೆಮಾಡುತ್ತಾನೆ. ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಾನೆ. ಕಳ್ಳನಂತೆ ಸುಳ್ಳನಾಗಿ ಸುಳಿದಾಡುತ್ತಾನೆ. ಅಪರಾಧಿಯಾಗಿ ಸಜ್ಜನ ಸಹವಾಸದಿಂದ ದೂರಾಗಿ ದುರ್ಜನರ ಸಹವಾಸದಲ್ಲಿ ಬೀಳುತ್ತಾನೆ. ವಿಷಯ ಲಂಪಟತನದಿಂದ ತನ್ನ ಸತಿಸುತರನ್ನು, ಬಾಂಧವರನ್ನು ದುಃಖಕ್ಕೀಡು ಮಾಡುತ್ತಾನೆ. ಇದನ್ನರಿತ ಸದ್ಗುರುನಾಥನು ದಯೆಯಿಂದ ಇಂಥ ದುರಿತದಿಂದ ದೂರಿರಬೇಕೆಂದು ಸಾರುತ್ತಾನೆ. ಸಲಹುತ್ತಾನೆ.

ಪರಧನ ಪರಸ್ತ್ರೀಯನ್ನು ಪರಿಹರಿಸುವ ಶರಣ ಸಾಹಿತ್ಯ ಅಪಾರವಾಗಿದೆ. ಶರಣ ಧರ್ಮಕ್ಕೆ ನೀತಿಯೇ ನೆಲೆಗಟ್ಟಾಗಿದೆ. ಅಣ್ಣಬಸವಣ್ಣನವರು-

ನೋಡಲಾಗದು, ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ

ತಗರ ಬೆನ್ನಲಿ ಹರಿವ ಸೊಣಗನಂತೆ ಬೇಡ ಕಾಣಿರೋ !

ಒಂದಾಶೆಗೆ ಸಾಸಿರ ವರುಷ ನರಕದೊಳದ್ದುವ ಕೂಡಲ ಸಂಗಮದೇವ

ಚನ್ನ ಬಸವಣ್ಣನವರು-

ದಾಸಿಯರ ಸಂಗ ಕಸನೀರ ಹೊರಸಿತ್ತು.

ವೇಸಿಯರ ಸಂಗ ಎಂಜಲವ ತಿನಿಸಿತ್ತು. 

ಪರಸ್ತ್ರೀಯರ ಸಂಗ ಪಂಚಮಹಾ ಪಾತಕವ ತಂದಿತ್ತು.

ಈ ತ್ರಿವಿಧವು ನಾಸ್ತಿಯಾದಲ್ಲದೆ ಭಕ್ತನಲ್ಲ

ಭಕ್ತಿಯಿಲ್ಲದೆ ಮುಕ್ತಿಗೆ ಸಲ್ಲ ನಮ್ಮ ಕೂಡಲ ಚನ್ನಸಂಗಯ್ಯನಲ್ಲಿ

ದೇವರ ದಾಸಿಮಾರ್ಯರು-

ಈಶನ ಶರಣರು ವೇಶಿಯ ಹೋದರೆ

ಮೀಸಲೋಗರವ ಹೊರಗಿರಿಸಿದಡೆ

ಹಂದಿ ಮೂಸಿನೋಡಿದಂತೆ ಕಾಣಾ ರಾಮನಾಥಾ ?

ಮತ್ತು

ಶಿವಪೂಜೆಯೆತ್ತ ? ವಿಷಯದ ಸವಿಯೆತ್ತ?

ಆ ವಿಷಯದ ಸವಿ ತಲೆಗೇರಿ

ಶಿವಪೂಜೆಯ ಬಿಟ್ಟು ವೇಶಿಯರ ಎಂಜಲ

ಹೇಸದೆ ತಿಂಬ ದೋಷಿಗಳೇನೆಂಬೆನೈ ರಾಮನಾಥಾ ?

ಅಂಬಿಗರ ಚೌಡಯ್ಯ ಶರಣನು-

ಬ್ರಹ್ಮದ ಮಾತನಾಡಿ

ನ್ಯೆಯರ ಕಾಲದೆಸೆಯಲ್ಲಿ ಕುಳಿತಲ್ಲಿ

ಪರಬೊಮ್ಮದ ಮಾತು ಅಲ್ಲಿ

ನಿಂದಿತ್ತೆಂದನಂಬಿಗರ ಚೌಡಯ್ಯ

ಎಂದು ಮುಂತಾಗಿ ಪರಸ್ತ್ರೀಸಂಗವನ್ನು ಶರಣರು ನಿಷ್ಠುರವಾಗಿ ನಿಷೇಧಿಸಿದ್ದಾರೆ. ಪರಸ್ತ್ರೀಸಂಗವನ್ನು ತೊರೆಯದೆ ಉರದಲ್ಲಿ ಲಿಂಗವನ್ನು ಧರಿಸಬಾರದೆಂಬುದೇ ಶಿವ ಕವಿಯ ಸದಾಶಯವಾಗಿದೆ.

ಈ ಉರಸ್ಥಲದ ಹಿರಿಮೆಯನ್ನು ಗರಿಮೆಯನ್ನು ಚನ್ನಬಸವಣ್ಣನವರ ವಚನದಿಂದ ಅರಿತುಕೊಳ್ಳೋಣ-

ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ

ಮನದ ಕೊನೆಯಿಂದ ಲಿಂಗವನಗಲದಿರಬೇಕು

ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ,

ಉರ ಪ್ರಸಾದಿಸ್ಥಲ, ಉರ ಮಹಾಸ್ಥಲ,

ಉರ ಅನುಭಾವಸ್ಥಲವೆಂದರಿವುದು.

ಅನ್ಯ ಮಿಶ್ರಂಗಳ ಹೊದ್ದಲಾಗದು

ತಟ್ಟು-ಮುಟ್ಟು-ತಾಗು ನಿರೋಧಂಗಳಿಗೆ ಗುರಿಯಾಗಲಾರದು.

ಇಂದ್ರಿಯಗಳ ಕೂಡಿ ಮನಸ್ತಾಪಗೊಳ್ಳದೆ

ಉರಲಿಂಗ ಸ್ವಾಯತವಾಗಿರ್ದುದು

ಪ್ರಾಣಲಿಂಗಿ ಲಿಂಗಪ್ರಾಣಿಗಿದು ಚಿಹ್ನ

ಕೂಡಲ ಚನ್ನಸಂಗಮದೇವಾ || ೯೦೪ ||

ಉರಸ್ಥಲವು ಗುರು-ಲಿಂಗ-ಜಂಗಮ-ಪ್ರಸಾದಗಳೆಂಬ ಚತುರ್ವಿಧ ಸಾರಾಯ ಸಂಪತ್ತಿಗೆ ಆಶ್ರಯ ಸ್ಥಾನವೆನಿಸಿದ್ದರಿಂದ ಮಹಾಸ್ಥಲವೆಂದೆನಿಸಿದೆ. ಉರದಲ್ಲಿಯೇ ಅನುಭಾವ ಮಡುಗಟ್ಟಬಲ್ಲುದು. ಅದು ಕಾರಣ ಉರಕ್ಕೆ ಅನ್ಯವಸ್ತುಗಳ ಸಂಪರ್ಕ ಹೊಲ್ಲ. ಉರದಿಂದ ಪರಸ್ತ್ರೀಯರ ತಟ್ಟು-ಮುಟ್ಟುಗಳು ದೂರಾಗಬೇಕು. ಉರದ ಮೇಲೆ ಶಿವಲಿಂಗವನ್ನು ಸ್ವಾಯತಗೊಳಿಸಿಕೊಂಡ ಮೇಲೆ ಮನದ ಕೊನೆಯಿಂದ ಲಿಂಗವನಗಲದಂತಿರಬೇಕಲ್ಲದೆ ; ಪ್ರಾಣಲಿಂಗಿ-ಲಿಂಗಪ್ರಾಣಿಯೆನಿಸಬೇಕು. ಇದುವೆ ಉರದಲ್ಲಿ ಲಿಂಗವ ಧರಿಸುವ ಮಹಾ ಸಂಕೇತ.

ಜ.ಚ.ನಿ

ಮಗನು ಬಂದು ಲಿಂಗದಹಳ್ಳಿಯಲ್ಲಿರುವ ಸಮಾಚಾರವು ತಾಯಿಗೆ ತಿಳಿಯಿತು. ಮಗನನ್ನು ನೋಡದೆ ನಾಲೈದು ವರ್ಷಗಳಾಗಿದ್ದವು. ಮಗನಿಗೆ ಮದುವೆಯ ವಯಸ್ಸು ಪ್ರಾಪ್ತವಾಗಿತ್ತು. ಇವನ್ನೆಲ್ಲ ನೆನೆದು ತಾಯಿ ನೀಲಮ್ಮನವರು ತಮ್ಮ  ತವರೂರಾದ ಲಿಂಗದಹಳ್ಳಿಗೆ ಉತ್ಸುಕತೆಯಿಂದ ಬಂದರು. ಓದಿ ಬಂದ ಮಗನನ್ನು ನೋಡಿ ನಲಿದರು. ಮಗನ ಧೈರ್ಯ ಸಾಹಸಗಳನ್ನು ಮನಸಾರೆ ಕೊಂಡಾಡಿದರು. ‘ಮನೆಯಿಂದ ಕುರುಡುಕಾಸನ್ನು ಅಪೇಕ್ಷಿಸದೆ ನಿನ್ನ ಕುಶಲತೆಯಿಂದ ಅನ್ಯರ ಮನಕರಗಿಸಿ ಅವರ ಆಶ್ರಯ ಪಡೆದು ಇಲ್ಲಿಯವರೆವಿಗೂ ಓದಿಬಂದದ್ದೆ ಒಂದು ಹೆಚ್ಚು. ಅದೇ ನನಗೊಂದು ಸಂತೋಷ. ಅದೇ ನನಗೊಂದು ಸಾವಿರ. ಈ ವಿಷಯದಲ್ಲಿ ನಿನ್ನನ್ನು ಎಷ್ಟು ಕೊಂಡಾಡಿದರು ಕಡಿಮೆ ! ಸಾಕು ನಡೆ. ಇನ್ನು ನೀನು ಮಾಸ್ತರನಾಗಿ ಗಳಿಸುವುದು ಬೇಡ. ಮನೆಗೆ ನಡೆ, ವಯಸ್ಸೂ ಆಗಿದೆ. ಮದುವೆ ಮಾಡಲು ಒಂದು ಕನ್ಯೆಯನ್ನು ನೋಡಿ ನಿಶ್ಚಯಿಸಲಾಗಿದೆ, ಲಗ್ನಮಾಡಿಕೊಂಡು ಮನೆಬಾಳಿನ ಭಾರ ನಿರ್ವಹಿಸುವುದು ನಿನ್ನ ಕರ್ತವ್ಯಕೋಟಿಗೆ ಸೇರಿದ ಮಾತಾಗಿದೆ. ಅದಕ್ಕೆ ಮಗನು ‘ತಾಯಿ, ನೀನು ಹೇಳುವುದೆಲ್ಲ ನಿಜ. ಆದರೆ ಇಷ್ಟು ಬೇಗ ಮದುವೆಯಾಗಲು ನನ್ನ ಮನಸ್ಸಿಲ್ಲ: ಮನೆಗೆ ಬಂದಿರಲು ಇಷ್ಟವಿಲ್ಲ. ಒಂದೆರಡು ವರ್ಷ ಕಳೆದು ಬಂದಲ್ಲಿ ಆಗ ಯಾವುದನ್ನು ಖಚಿತವಾಗಿ ಹೇಳುತ್ತೇನೆ. ಈಗ ಸುಮ್ಮನೆ ಬಲವಂತಿಸಬೇಡ.’ ಎಂದು ಹೇಳಿ ತಾಯಿಯನ್ನು ಸಮಾಧಾನ ಮಾಡಿ ಊರಿಗೆ ಕಳುಹಿಸಿದರು.

ಸದಾಶಿವಯ್ಯನವರು ಎಂದಿಗಿಂತ ಊರಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ದಕ್ಷತೆಯಿಂದ ಮಾಡಿಸತೊಡಗಿದರು. ಊರಿನವರಿಗೆಲ್ಲ ಅಚ್ಚುಮೆಚ್ಚಿನವರಾಗಿದ್ದರು. ಅಂದಿನ ಅನಾಗರಿಕತೆಯ  ಕಾಲದಲ್ಲಿಯೂ ಸಹ ಹಳ್ಳಿಯ ಹುಡುಗರು  ಪ್ರೇಮೋತ್ಸಾಹಗಳಿಂದ ಶಾಲೆಗೆ ಬರುತ್ತಿದ್ದರೆಂಬುದು ಶಿಕ್ಷಕರಿಗೆ ಶಿಕ್ಷಣದಲ್ಲಿರುವ ವಿಚಕ್ಷಣತೆಯ ಕುರುಹಲ್ಲವೆ ? ಬುದ್ಧಿಬಲ್ಲವರಿಗೆ ವಿದ್ಯೆ ಕಲಿಸುವುದು ಒಂದು ಹೆಚ್ಚಲ್ಲ. ಏನೂ ತಿಳಿಯದ ಎಳೆ ಕಂದರಿಗೆ ವಿದ್ಯಾಭ್ಯಾಸ ಮಾಡಿಸುವುದು ತುಂಬಾ ಕಷ್ಟದ ಕೆಲಸ.  ಮಕ್ಕಳ ಮನಸ್ಸಿನಂತೆ ಹೋಗಿ ಮಕ್ಕಳನ್ನು ಒಲಿಸಿ ಅಕ್ಕರಿಗರನ್ನು ಮಾಡುವ ಹೊಣೆಗಾರಿಕೆಯ ಕೆಲಸವನ್ನು ಮಾಡಿ ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ- ಕಾರ್ಪಣ್ಯ, ಪ್ರಾಥಮಿಕ ಶಿಕ್ಷಣವು ನಿಜಕ್ಕು ತುಂಬಾ ಪ್ರಯಾಸಕರವಾದುದು. ಮಕ್ಕಳನ್ನು ಮುಂದಿನ ಮಹಾಜನಗಳನ್ನಾಗಿ ಮಾಡುವ ಮೊದಲನೆಯ ಹೊಣೆಗಾರಿಕೆಯದು. ಅದನ್ನು ತೃಪ್ತಿಕರವಾಗಿ ತಾಳ್ಮೆಯಿಂದ ಜಾಣ್ಮೆಯಿಂದ ನೆರವೇರಿಸುವವನೆ ನಿಜವಾದ ಶಿಕ್ಷಕ, ಸದಾಶಿವಯ್ಯನವರು ಅಂತಹ ಸಮರ್ಥರಾಗಿದ್ದರು. ಸೂಕ್ತ ಶಿಕ್ಷಣ ಕೊಡುತ್ತಿದ್ದರು.

ಊರಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಂತೆ, ತಾವೂ ಸಹ ವೇದಾಂತ ವಿದ್ಯಾವಂತರಾಗುತ್ತಿದ್ದರು. ಅದಾಗಳೆ ಅದೆಷ್ಟೋ ಆಗಿದ್ದರು. ಅಷ್ಟಕ್ಕೆ ನಿಲ್ಲಿಸದೆ ವೇದಾಂತ ಜಿಜ್ಞಾಸೆಯನ್ನು ಮುಂದುವರಿಸಿದ್ದರು. ನಿಜಗುಣರ ಗ್ರಂಥಗಳನ್ನು ಬಿಟ್ಟು ನಿಮಿಷವೂ ಇರುತ್ತಿರಲಿಲ್ಲ. ೧. ಕೈವಲ್ಯ ಪದ್ಧತಿ, ೨. ಪರಮಾನುಭವ ಬೋಧೆ, ೩. ಪರಮಾರ್ಥ ಗೀತೆ, ೪. ಪರಮಾರ್ಥ ಪ್ರಕಾಶಿಕೆ, ೫. ಅನುಭವಸಾರ, ೬. ವಿವೇಕ ಚಿಂತಾಮಣಿ ಇವೇ ಅವರ ಸೊತ್ತು. ಇವೇ ಅವರ ಗೊತ್ತು. ಅವುಗಳಿಗಾಗಿ ಅವರ ಮನಸ್ಸು ಮಾರುಹೋಗಿತ್ತು. ಆ ಆರು ಗ್ರಂಥಗಳ ಅವರಿಗೆ ಆರು ಮಂದಿ ಆಪ್ತ ಸ್ನೇಹಿತರಾಗಿದ್ದರು. ಯಾವಾಗಲೂ ಅವುಗಳಡೊನೆಯೆ ಕಾಲ ಕಳೆಯುತ್ತಿದ್ದರು. ರಾತ್ರಿ ಹನ್ನೆರಡು ಹೊಡೆಯುವವರೆವಿಗೂ ಬಿಡದೆ ಅವನ್ನು ಓದುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸಮಾಳದ ಬಸವಯ್ಯನವರಲ್ಲಿಗೆ ಹೋಗಿ ವಿಚಾರವಿನಿಮಯ ಮಾಡುತ್ತಿದ್ದರು; ವಿಶೇಷ ವಿಷಯಗಳನ್ನು ಪರಿಗ್ರಹಿಸುತ್ತಿದ್ದರು. ಆರು ಗ್ರಂಥಗಳಲ್ಲಿ ಮೊದಲನೆಯದಾದ ಕೈವಲ್ಯ ಪದ್ಧತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದುತ್ತಿದ್ದರು. ಪ್ರತಿಪದ್ಯದಲ್ಲಿ ಬುದ್ಧಿ ಮನಸ್ಸುಗಳನ್ನಿಟ್ಟು ಅರ್ಥವಿಸುತ್ತಿದ್ದರು. ಅವುಗಳಲ್ಲಿ ಈ ಪದ್ಯವು ಅವರ ಮನಸ್ಸಿನಲ್ಲಿ ನೇರವಾಗಿ ನಾಟಿತು.

ಸುಮ್ಮನಾಗದು ಅರಿವಿನಿಂದವೆ ಮುಕುತಿ

 ನೆಮ್ಮಿ ಲೇಸೆನಿಸುವ ಗುಣಗಣವಿಲ್ಲದವನಿಗೆ

ಗುರುಪಾದ ಸೇವೆ ಶರಣರ ಸಂಗ ಹರಪೂಜೆ

ಕರುಣ ವಿನಯ ನಿಜಸಮಯ ನಿಷ್ಠೆ

ವಿರತಿ ವಿವೇಕ ವಿದ್ಯೆ ಶಮೆ ದಮೆ ಸತ್ಯ ಧರ್ಮ

ವರಭಕ್ತಿ ನೀತಿಗಳ ಬಲವಿಲ್ಲದವನಿಗೆ

 ನಿಗಮಾಗಮದೊಳು ನಂಬುಗೆ ನಿತ್ಯವಿಧಿಗಳ

 ನಗಲದೆಚ್ಚರು ದೇಹದೊಳು ವಿಮೋಹ

 ಜಗದಪವಾದದೆಡೆಯೊಳು ಭೀತಿ, ಸುಜನರ

ಬಗೆಗೊಳಿಸುವ ನಡೆನುಡಿಯಿಲ್ಲದವನಿಗೆ

ಕಾವನಲರಂಬಿಗೆದೆಗೊಡದ ಬಲುವೆ ಜೀವ

 ಭಾವವೆಳ್ಳನಿತು ದೋರದಮಳಯೋಗ

 ತೀವಿದನುಭವ ಸುಖರೂಪನಾದ ಶಂಭುಲಿಂಗ

ವಾವರಿಸಿ ಕೀಟಭೃಂಗನ್ಯಾಯವಿಲ್ಲದವನಿಗೆ

ಈ ಪದ್ಯದ ಪ್ರತಿಶಬ್ದದ ರೂಪವೆ ತಾವಾಗಲು ಸದಾಶಿವಯ್ಯನವರು ಸಂಪೂರ್ಣ ಮನಸ್ಸು ಮಾಡಿದರು. ಈ ಪದ್ಯಬೀಜವು ಅವರ ಮನೋಭೂಮಿಕೆಯಲ್ಲಿ ಮೊಳಕೆಯಾಗಿ ಮೂಡಿತು. ಒಂದೆರಡು ವರ್ಷಗಳಲ್ಲಿ ಹೆಮ್ಮರವಾಗಿ ಚೆನ್ನಾಗಿ ಬೇರೂರಿತು. ಹೂ ಹಣ್ಣಾಗಿಸುವ ಬಯಕೆ ಹೆಬ್ಬಯಕೆಯಾಗಿ ನೆಲೆನಿಂತಿತ್ತು.

 ಈ ಸಮಯದಲ್ಲಿ ಇತ್ತ ತಾಯಿಯವರು ಮಗನ ಮದುವೆಯ ಮಾತನ್ನು ಮತ್ತೆ ನೆನಪಿಸಿಕೊಂಡರು. ನೆನವಿನೊಡನೆ ಬಡತನದ ಬಾಳಿನ ಚಿತ್ರವೂ ಎದುರು ನಿಂತಿತು. ಅದು ರಕ್ತವಿಲ್ಲದ ಚಿತ್ರ, ಶಕ್ತಿಯಿಲ್ಲದ ಚಿತ್ರ, ನೋಡಲಾಗದು, ನಿತ್ತರಿಸಲಾಗದು. ಬಡತನದ ಆ ಭಯಾನಕ ಚಿತ್ರ ಮದುವೆಯ ಮಾತನ್ನು ನಸುಹಿಂದೂಡಲೆಳಸಿತು. ಆದರೆ ಮಾತೆಯ ಮನಸ್ಸು ಅದಕ್ಕೆ ಒಳಪಡಲಿಲ್ಲ. ಈ ಬಡತನ ನಮಗೆ ಎಂದಿನಿಂದಲು ಇದ್ದದ್ದೆ: ಯಾವ ಕಾಲಕ್ಕು ತೀರದ್ದೆ : ಏನಾದರಾಗಲಿ ಮಗನ ಮದುವೆಯನ್ನು ಈ ಸಲ ನಿಲ್ಲಿಸಬಾರದು. ನೆರವೇರಿಸಿಯೇ ತೀರಬೇಕು.  ಬಡತನಕ್ಕೆ ಮಗನ ಮದುವೆಯನ್ನು ಮಾಡಿದಿರಲು ಸಾಧ್ಯವೆ ? ಅಲ್ಲದೆ ಮಗನು ಸಹ ಆ ದಿನ ಒಂದೆರಡು ವರ್ಷ ಬಿಟ್ಟು ಬಾ’ ಎಂದು ಹೇಳಿದ್ದಾನೆ. ಅದರಂತೆ ಎರಡು ವರ್ಷಗಳು ಕಳೆದವು. ಅಂದು ಕೊಟ್ಟು ಬಂದ ಮಾತನ್ನು ನೆರವೇರಿಸದೆ ಇರುವುದು ಹೇಗೆ ? ಮಗನಾದರೂ ಏನೆಂದುಕೊಂಡಾನು? ಏನಾದರಾಗಲಿ, ಈ ಸಲ ಮದುವೆ ಮಾಡಿಬಿಡುವುದೇ ನಿರ್ಧಾರ ಎಂದು ಆಲೋಚಿಸಿದಳು.

ಆದರೆ ನೀಲಮ್ಮ ತಾಯಿಯವರು ಎಣಿಸಿದಷ್ಟು ಮಗನ ಮದುವೆ ಸುಲಭವಾಗಿರಲಿಲ್ಲ. ಹಣ ಹೇಗಾದರು ಮಾಡಬಹುದಾಗಿತ್ತು. ಮಗನ ಮನಸ್ಸನ್ನು ಒಪ್ಪಿಸುವುದು ಆಗದ ಕೆಲಸವಾಗಿತ್ತು. ಈಚೆಗೆ ಉಂಟಾದ ಮಗನ ಮನದ ಉಪರತಿಯ ವಿಷಯ ಅವರಿಗೇನು ಗೊತ್ತು? ಸರ್ವಸಾಮಾನ್ಯ ಮಕ್ಕಳಂತೆ ತನ್ನ ಮಗನು ಒಪ್ಪಬಹುದೆಂದೆ ಅವರ ತಿಳುವಳಿಕೆ; ಹೃದಯ ಹರಕೆ, ಆ ಮನದ ಬಯಕೆಯಿಂದ ತಾಯಿ ಮಗನ ಬಳಿಗೆ ಬಂದಳು.

ಬಂದು ಮಗನನ್ನು ಕರೆದರು. ಮದುವೆಯ ಮಾತೆತ್ತಿದರು. ಮಗನು ನನಗೆ ಮನೆಯೂ ಬೇಡ, ಮದುವೆಯೂ ಬೇಡ’ ಎಂದನು. ಆ ಮಾತನ್ನು ಕೇಳಿ ಮಾತೆಯ ಮನಸ್ಸು ಕಸಿವಿಸಿಗೊಂಡಿತು ಕಳವಳಗೊಂಡಿತು. ಚಿತ್ತಸ್ಥೈರ್ಯ ತಂದುಕೊಂಡು ಮಗನ ಮನಸ್ಸು ಒಲಿಸಲು ಸಾಹಸ ಮಾಡಿದರು; ಸಾಧ್ಯವಿದ್ದಷ್ಟು ಹೇಳಿದರು. ಮತ್ತೊಬ್ಬರಾದರೆ ಮನಸ್ಸು ಆಗಳೆ ತವಕಿಸುವಷ್ಟರ ಮಟ್ಟಿಗೆ ಹೇಳಿದರು. ಹೇಳಿದರೇನು ಪ್ರಯೋಜನವಾಗಲಿಲ್ಲ. ಪ್ರತಿಯಾಗಿ ಅಮ್ಮಾ! ಅದಾಗದು. ಅಜೀರ್ಣ ಆದವನಿಗೆ ಅಮೃತವು ವಿಷವಾಗುವುದಿಲ್ಲವೇನಮ್ಮ. ಹೀಗಿರುವಾಗ ವಿಷ ಕುಡಿಸಿದರೇ ಬದುಕವರೇನಮ್ಮ ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವರೇನಮ್ಮ. ಬೀಳದವರನ್ನು ಬಲವಂತದಿಂದ ನೂಕಿ ಬೀಳಿಸುವರೇನಮ್ಮ! ಅದರಲ್ಲಿಯೂ ತಾಯಿಯಾದವರು ಈ ಹಾಳುಭಾವಿಯಲ್ಲಿ ತಬ್ಬುವರೇನಮ್ಮ! ಬೇಡ, ಅಂತಹ ಅಕರುಣೆಯ ಅಕೃತ್ಯವನ್ನು ಮಾಡಬೇಡ. ಆಲೋಚಿಸದೆ ದುಡುಕಬೇಡ, ನೀನು ಹೇಳುವುದು ಮೂರು ದಿನದ ಸಂಸಾರ, ನಾಲ್ಕನೆಯ ದಿನಕ್ಕೆ ದುಃಖದ ಸಾಗರ. ಇದರಲ್ಲಿಲ್ಲ ಸತ್ಯಸುಖದ ಸಾರ, ಇದರಲ್ಲಿ ನನ್ನನ್ನು ಸರ್ವಥಾ ಕೆಡುವ ಬೇಡ, ಈ ನಶ್ವರವಾದ ಶರೀರದಿಂದ ನಿತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕತ್ತಲೆಯ ಕೋಣೆಯಲ್ಲಿ ಕೊನೆಯಿಲ್ಲದೆ ಕಾಂತಿಯನ್ನು ಹಚ್ಚಬೇಕಾಗಿದೆ. ಆ ಅಚ್ಚಳಿಯದ ಬೆಳಗಿನಲ್ಲಿ ಅನೇಕ ಜೀವರು ಕಣ್ಣರಳಿಸಬೇಕಾಗಿದೆ. ಬಾಳ ಬಗೆಗಳನ್ನು ಕಣ್ಣಾರ ಕಾಣಬೇಕಾಗಿದೆ. ಅದಿರಲಿ ಈಗ ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡಿತವ, ಕಾಮನು ಮತ್ತೇಭವಿ ಕ್ರೀಡಿಗವ ಮಾಡಹತ್ತಿದ್ದಾರೆ. ಇವರನ್ನು ಸೆದೆಬಡೆಯಲು ಕಾಲಾರಿಯು ಕಾಮಾರಿಯು ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯ ಹಂಬಲಿಸುತ್ತಿದೆ; ಹಾತೊರೆಯುತ್ತಿದೆ. ಅದಕ್ಕಾಗಿಯೇ ನಿನ್ನನ್ನು ನಿರೀಕ್ಷಿಸಿಕೊಂಡಿದ್ದೆನು. ನೀನು ಬಂದದ್ದು ಲೇಸಾಯಿತು ಮಾತೆ, ಜನ್ಮದಾತೆ ! ಇಲ್ಲಿಯವರೆವಿಗೂ ನನ್ನ ಸರ್ವಸ್ವ ನೀನಾಗಿದ್ದೆ. ನನ್ನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟೆ. ನೀನು ಸುಮ್ಮನಿರದೆ ನನ್ನನ್ನು ಊರಿಗೆ ಕರೆಯಿಸಿಕೊಂಡು ಮನೆಯ ಬಾಳಿಗೆ ನೂಕಿದ್ದರೆ ನಾನೆಲ್ಲಿ ಇಷ್ಟಾದರೂ ಓದುತ್ತಿದ್ದೆನು. ಈಗ ಓದಿದ್ದು ನಿನ್ನ ಕೃಪೆ. ಈಗ ಅರಿತಿದ್ದುದು ನಿನ್ನ ಆಶೀರ್ವಾದ. ತಾಯೆ, ತಿರುಗಿ ಆ ಸಂಸ್ಕೃತಿಗೆ ಎಳೆಯಬೇಡ, ಮುನ್ನೋಡುವ ಕಾಲಿಗೆ ತೊಡಕ ಸುತ್ತಬೇಡ. ನಿನಗೆ ಇನ್ನೂ ಒಬ್ಬ ಹಿರಿಯ ಮಗನು ಇದ್ದಾನೆ. ಅವರಿಂದ ಸಂಸಾರ ನಿರ್ವಹಣೆಯಾಗುತ್ತದೆ. ನನ್ನನ್ನು ವೃಥಾ ಆಶಿಸಬೇಡ, ಶೋಕಿಸಬೇಡ, ಎಷ್ಟಾದರು ತಾಯಿ ಋಣ ದೊಡ್ಡದು. ಅದನ್ನು ತೀರಿಸಿದಲ್ಲದೆ ಮುಂದಾರಿಯಿಲ್ಲ. ಅದಕ್ಕಾಗಿ ಈ ಒಂದೆರಡು ವರ್ಷಗಳಲ್ಲಿ ಶಿಕ್ಷಕವೃತ್ತಿಯಿಂದ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ. ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀನು ತಾಯಿಯೆಂಬ ಮಮತೆ ನನ್ನಲ್ಲಿಯು ನಾನು ಮಗನೆಂಬ ಮಮತೆ ನಿನ್ನಲ್ಲಿಯು ಖಂಡಿತವಾಗಿ ಇರಕೂಡದು. ಸಂತೋಷವಾಗಿ ಹರಸು” ಎಂದು ಹೇಳಿ ನಮಸ್ಕರಿಸಿ ಹಾಗೆಯೇ ಹೊರಟು ಬಿಟ್ಟರು; ದೂರ ಹೋದ ಮೇಲೆ ಕಣ್ಣಿಗೆ ಕಾಣದಂತಾದರು. ಜನತಾ ಜನಾರ್ದನನು ಕಡೆಗು ತನ್ನ ಭಿಕ್ಷವನ್ನು ಕೊಂಡೊಯ್ದೆ ಬಿಟ್ಟನು.   

 ತಾಯಿ ನೀಲಮ್ಮನವರಿಗೆ ದಿಕ್ಕು ತೋಚದಂತಾಯಿತು. ತಾನು ಯೋಚಿಸಿದ ಯೋಚನೆಗಳನ್ನೆಲ್ಲ ಕನಸಿನಲ್ಲಿ ಕಂಡಂತಾಯಿತು. ಕಣ್ಣಿಗೆ ಕತ್ತಲು ಕವಿದಂತಾಯಿತು. ತುಂಬು ಹರೆಯದ ಹುಡುಗ ಹೀಗೆಲ್ಲ ಮಾಡುತ್ತಾನೆಂದು ಅವಳು ಬಯಸಿರಲಿಲ್ಲ; ಭಾವಿಸಿರಲಿಲ್ಲ. ಅನಿರೀಕ್ಷಿತವಾಗಿ ಮರಕ್ಕೆ ಸಿಡಿಲು ಬಡಿದಂತಾಯಿತು. ಹೃದಯ ತಳಮಳಿಸಿತು. ಮನಸ್ಸು ಮರಗಿತು. ಕಣ್ಣೀರು ಕಾಲುವೆಯಾಗಿ ಹರಿಯಿತು. ಕಾರ್ಗತ್ತಲೆ ಕವಿದಂತಾಯಿತು. ಮುಂದಾಲೋಚನೆ ಹರಿಯದಂತಾಯಿತು. ಬಾಳಿನ ಭಾಗ್ಯ ಸಾಗಿ ಹೋದಂತಾಯಿತು. ಹರುಷದ ಹೊಳೆ ಹರಿದು ಹೋದಂತಾಯಿತು. ಬೆಳಗುವ ಜ್ಯೋತಿ ನಂದಿದಂತಾಯಿತು. ಕೊನರುವ ಮರ ಕಮರಿದಂತಾಯಿತು. ಈ ದುರ್ದಮ್ಯ ವಾತಾವರಣದಲ್ಲಿ ಕೊಂಚಕಾಲ ಆ ತಾಯಿ ಅಚಲದೆ ಕುಳಿತಳು. ಬಾಹ್ಯಸ್ಮೃತಿಯಿಲ್ಲದಾದಳು. ಆಮೇಲೆ ಎಚ್ಚೆತ್ತು ನಿಡುಸುಯ್ದು ನೋಡುತ್ತಾಳೆ. ಕುಮಾರನಿಲ್ಲ. ಶೂನ್ಯವಾದ ಮನೆ. ಮೌನವಾತಾವರಣ. ಏನನ್ನು ನೋಡುವುದು, ಯಾರನ್ನು ಕೇಳುವುದು? ಸಾಗಿ ಹೋದ ಕುಮಾರನನ್ನು ಅಗಲಿ ಹೋದ ಕುಮಾರನನ್ನು ಕರೆದು ತಂದು ತೋರುವರಾರು ? ತಾನು ಹೆತ್ತ ಕುಮಾರನನ್ನು ತನ್ನ ಕಣ್ಣಮುಂದಿದ್ದ ಕುಮಾರನನ್ನು ಕೊಂಡೊಯ್ದವರಾರು? ಸ್ವಪ್ನದ ಸಾಧುವೆ? ಜಾಗೃತದ ಜೋಗಿಯೆ? ಇದೇನು ಜಾದು ಆಟವೆ? ಮಾಯೆ ಮಾಟವೇ? ಯಾವ ಜಾಯಮಾನವಿದು? ಕಾಲ ಜರಡಿಯಲ್ಲಿ ಪತಿದೇವರು ಮಾವಂದಿರು ಸೋಸಿ ಹೋದರು. ಜನತಾ ಜೋಗಿಯ ಜೋಳಿಗೆಗೆ ಮಗನು ಮಾರುಹೋದನು. ಕಣ್ಣಿನ ಹಬ್ಬ ಕಳೆದುಹೋಯಿತು. ಇಲ್ಲಿದ್ದು ಮಾಡುವುದೇನು ಎಂದು ನಿರ್ವಾಹವಿಲ್ಲದೆ ನಿಧಾನವಾಗಿ

ಎದ್ದು ಊರದಾರಿ ಹಿಡಿದಳು. ದಾರಿಯುದ್ದಕ್ಕೆ ಆ ತಾಯಿಯ ಕೋಮಲ ಹೃದಯದಲ್ಲಿ ಚಿಂತೆ ವ್ಯಥೆ ಕಥೆ ತಾಂಡವಾಡಿದವು. ತೀರದ ನೋವಿನಿಂದ ನೊಂದಳು. ತಾಗದ ಉರಿಯಿಂದ ಬೆಂದಳು. ಹಾಗು ಹೀಗು ಮನೆ ಬಂದು ಸೇರಿದಳು. ಮಕ್ಕಳನ್ನು ನೋಡಿ

ಮತ್ತೆ ದುಃಖ ಇಮ್ಮಿಗಿಲಾಯಿತು. ನಡೆದುದನ್ನೆಲ್ಲ ತೋಡಿದಳು. ತನ್ನ ದೌರ್ಭಾಗ್ಯವನ್ನು ಬಿಚ್ಚಿ ತೋರಿದಳು; ಮಕ್ಕಳನ್ನು ಅತ್ತು ತೋರಿದಳು. ದುಃಖದಲ್ಲಿ ಮುಳುಗಿಸಿದಳು. ಅಂದಿನ ದಿನ ಆ ಮನೆಯೆ ಶೋಕಸಾಗರದಲ್ಲಿ ಮುಳುಗಿದಂತಿತ್ತು. ಅವರಿಗೇನು ಗೊತ್ತು ಹೀಗಾದುದು ಮುಂಬೆಳಸಿನ ಬಿತ್ತು ಎಂಬುದು. ಬಿತ್ತಿದ ಬೀಜ ಕೈ ಬಿಟ್ಟುಹೋಯಿತೆಂದು ಮರುಗಿದಂತಾಯಿತು; ಕೊರಗಿದಂತಾಯಿತು. ಪ್ರೇಮ ಕುರುಡೆಂಬ ಮಾತು ಸಾರ್ಥಕವಾಗಬೇಕಲ್ಲವೆ? ಸಂಭವವಾಗಬೇಕಲ್ಲವೆ?

ಸದಾಶಿವಯ್ಯನವರು ಸತ್ಯ ಸಂಕಲ್ಪದಿಂದ ಕಾಯಕಷ್ಟದಿಂದ ಸಂಪಾದಿಸಿ ಕೊಟ್ಟ ಆ ಸ್ವಲ್ಪ ಸಂಪದವೆ ಮನೆತನದ ಮೂಲನಿಧಿಯಾಯಿತು. ಅದರಿಂದಾಗಿ ಮನೆಯ ಬಾಳು ಯಾವ ತೊಂದರೆಯಿಲ್ಲದೆ ಸಾಗಿತು. ವಿವೇಕಾನಂದರು ತಮ್ಮ ಮನೆಯಲ್ಲಿರುವ ಅನ್ನ ಬಟ್ಟೆಗಳ ಕೊರತೆಯನ್ನು ಗುರು ಮುಖಾಂತರ ಕೇಳಿ ಪಡೆದರು. ನಮ್ಮ ಸದಾಶಿವ ಸ್ವಾಮಿಗಳವರು ತಮ್ಮ ಕಷ್ಟಾರ್ಜಿತವನ್ನೇ ಕೊಟ್ಟು ಹರಿಸಿದರು; ಕಷ್ಟ ಹರಿಸಿದರು. 

 

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಶಮೆ, ದಮೆ, ಉಪರತಿ, ತಿತೀಕ್ಷೆ, ಶ್ರದ್ಧೆ ಮತ್ತು ಸಮಾಧಾನ ಇವುಗಳಿಗೆ “ಸಾಧನ ಸಂಪತ್ತಿ’ ಎಂದು ಹೆಸರು. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್‌ಗಳೆಂಬ ಅಂತರಿಂದ್ರಿಯ (ಅಂತಃಕರಣ)ಗಳ ನಿಗ್ರಹಕ್ಕೆ ‘ಶಮೆ’ ಎಂದೂ, ಕಣ್ಣು, ಕಿವಿ, ನಾಲಿಗೆ ಇತ್ಯಾದಿ ಬಹಿರಿಂದ್ರಿಯಗಳ ನಿಗ್ರಹಕ್ಕೆ ‘ದಮೆ’ ಎಂದೂ ಕರೆಯಲಾಗಿದೆ. ದೇಹ ಭೂಮಿಯಲ್ಲಿ ಪರತತ್ವದ ಬೆಳೆಯನ್ನು ಬೆಳೆಯುವ ಕೃಷಿ ಕಾಯಕದಲ್ಲಿ ‘ಶಮೆ’ ‘ದಮೆ’ಗಳೆರಡನ್ನೂ ಎತ್ತುಗಳನ್ನಾಗಿಸಬೇಕೆಂಬ ಸರ್ಪಭೂಷಣ ಶಿವಯೋಗಿಗಳ ಮಾತು ಇವೆರಡೂ ಸದಾ ಜೊತೆಯಾಗಿರುವ ‘ಸಾಧನ’ಗಳೆಂಬುದರ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಬರೀ ಬಾಹ್ಯ ಇಂದ್ರಿಯಗಳನ್ನು ನಿಗ್ರಹಿಸಿದರೆ ಸಾಲದು. ಅಂತರಂಗದ ಇಂದ್ರಿಯಗಳನ್ನೂ ನಿಯಂತ್ರಿಸಬೇಕು. ‘ಹುತ್ತ ಬಡಿದೊಡೆ ಹಾವು ಸಾಯಬಲ್ಲುದೆ?” ಎಂದು ಬಸವಣ್ಣ ಕೇಳುತ್ತಾನೆ. ‘ಶಮೆ’ ಇಲ್ಲದ ‘ದಮೆ’ ನಿರರ್ಥಕ. ಆದ್ದರಿಂದ ಮೊದಲು ಅಂತರಿಂದ್ರಿಯ (ಅಂತಃಕರಣ)ದ ಮೇಲೆ ಜಯ ಸಾಧಿಸಬೇಕು. ಅಂತರಿಂದ್ರಿಯವಾದ ಮನಸ್ಸು ಅತ್ಯಂತ ಚಂಚಲವಾದುದು ಹಾಗು ಬಲವಾದುದು. ಅದನ್ನು ನಿಲ್ಲಿಸುವುದು ಗಾಳಿಯನ್ನು ತಡೆಯುವಷ್ಟೇ ದುಸ್ಸಾಧ್ಯವಾದುದು. ನಿರಂತರ ಅಭ್ಯಾಸ, ವೈರಾಗ್ಯ ಭಾವ ಹಾಗು ಪರಮಾತ್ಮನ ನಿತ್ಯಸ್ಮರಣೆಯಿಂದ ಇದು ಸಾಧ್ಯ. ವಿವೇಕ ಚೂಡಾಮಣಿಯಲ್ಲಿ ‘ಸ್ವಲಕ್ಷೇ ನಿಯತಾವಸ್ಥಾ ಮನಸಃ ಶಮ ಉಚ್ಯತೇʼ ಅಂದರೆ ವಿಷಯ ವಾಸನೆಯಳಿದು ತನ್ನ ಪರಮಗುರಿಯಲ್ಲಿ (ಪರಮಾತ್ಮ) ಸದಾ ಮನವನ್ನಿರಿಸುವುದೇ ‘ಶಮೆ’ ಎಂದು ಹೇಳಲಾಗಿದೆ.

 ಬಾಹ್ಯ ಇಂದ್ರಿಯಗಳನ್ನು ಕೃತಕವಾಗಿ ನಿಗ್ರಹಿಸುವುದೂ ಕೂಡ ಅಪಾಯಕಾರಿ. ನಿಗ್ರಹ ಮಾಡಿದಷ್ಟು ಅವು ಬೃಹದಾಕಾರವಾಗಿ ಬೆಳೆಯುತ್ತವೆ. ‘ಇಂದ್ರಿಯ ನಿಗ್ರಹ ಮಾಡಿದಡೆ, ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು’ ಎನ್ನುವ ಬಸವಣ್ಣ, ಅಸಹಜವಾದ ಸಂಯಮವನ್ನು ನಿರಾಕರಿಸುತ್ತಾನೆ. ಇಂದ್ರಿಯಗಳು ಬಲಿಷ್ಠವಾಗಿದ್ದು ಅಸಹಜ ಸಂಯಮ ತೋರುವ ಎಂಥ ಬಲಶಾಲಿಯನ್ನು ಅವು ಧೃತಿಗೆಡಿಸದೆ ಬಿಡಲಾರವು. ಒಮ್ಮೆ-ವೇದವ್ಯಾಸರು ಗುರುಕುಲದಲ್ಲಿ ತಮ್ಮ ಶಿಷ್ಯರಿಗೆ ಪಾಠ ಮಾಡುವ ಸಂದರ್ಭದಲ್ಲಿ ‘ಬಲವಾನ್ ಇಂದ್ರಿಯಗ್ರಾಮೋ ವಿದ್ವಾಂಸಮಪ್ಯಪಕರ್ಷತಿ’ ಅಂದರೆ ‘ಇಂದ್ರಿಯಗಳ ಸಮೂಹವು

ಬಲಿಷ್ಠವಾಗಿದ್ದು, ವಿದ್ವಾಂಸರನ್ನೂ, ಜ್ಞಾನಿಗಳನ್ನೂ ಕೂಡ ದಾರಿ ತಪ್ಪಿಸುತ್ತದೆ’ ಎಂದು ಬೋಧೆ ಮಾಡಿದರು. ಆದರೆ ಅವರ ಶಿಷ್ಯ ಮಹಾಜ್ಞಾನಿ ಜೈಮಿನಿ ಈ ಮಾತನ್ನು ಒಪ್ಪಿಕೊಳ್ಳದೆ ‘ಜ್ಞಾನಿಯನ್ನು ಇಂದ್ರಿಯಗಳೆಂದೂ ವಿಚಲಿತಗೊಳಿಸಲಾರವು’ ಎಂದು ಪ್ರತಿಪಾದಿಸಿ ತನ್ನ ಆಶ್ರಮಕ್ಕೆ ಹೊರಟು ಹೋದನು. ಅದೇ ದಿನ ರಾತ್ರಿ ಗುಡುಗು ಸಿಡಿಲುಗಳಿಂದ ಕೂಡಿದ ಭಾರೀ ಮಳೆ ಪ್ರಾರಂಭವಾಯಿತು. ಮಳೆಯಲ್ಲಿ ಸಂಪೂರ್ಣ ತೊಯ್ದ ಬಟ್ಟೆಗಳಿಂದ ನಡುಗುತ್ತಿದ್ದ ಮಹಿಳೆಯೊಬ್ಬಳು ಜೈಮಿನಿಯ ಆಶ್ರಮದ ಬಾಗಿಲನ್ನು ತಟ್ಟಿದಳು. ಬಾಗಿಲು ತೆರೆದ ಜೈಮಿನಿ ಮಹಿಳೆಯ ಸ್ಥಿತಿಗತಿಗಳನ್ನು ನೋಡಿ ಕನಿಕರಪಟ್ಟು ಆಶ್ರಯಕೊಟ್ಟನು. ಉಣ್ಣಲು ಅನ್ನ, ಉಡಲು ಬಟ್ಟೆಗಳನ್ನು ಕೊಟ್ಟು ಉಪಚರಿಸಿದನು. ಆ ಮಹಿಳೆಯ ರೂಪ ಲಾವಣ್ಯಕ್ಕೆ ಮನಸೋತು ತನ್ನ ಆಶ್ರಮ ಧರ್ಮವನ್ನು ತ್ಯಾಗ ಮಾಡಿ ಅವಳನ್ನು ಮದುವೆಯಾಗಲು ಬಯಸಿದನು. ಇದೇ ಸಂದರ್ಭದಲ್ಲಿ ಕಾಯುತ್ತಿದ್ದ ಮಹಿಳಾವೇಷದ ವೇದವ್ಯಾಸರು ನಿಜರೂಪವನ್ನು ಪ್ರಕಟಗೊಳಿಸಿದಾಗ ಜೈಮಿನಿ ನಾಚಿಕೆಯಿಂದ ತಲೆ ತಗ್ಗಿಸಿದ. ಅಲ್ಲದೆ ‘ಇಂದ್ರಿಯಗಳು ದಾರಿ ತಪ್ಪಿಸದೇ ಬಿಡುವುದಿಲ್ಲ’ ಎಂಬ ಗುರುಗಳ ಮಾತನ್ನು ಒಪ್ಪಿಕೊಂಡ.

ಆದ್ದರಿಂದ ಶಮೆ, ದಮೆಗಳನ್ನು ಸಾಧಿಸುವಲ್ಲಿ ಸಹಜ ಸಂಯಮ ತೋರಬೇಕು. ವಿಷಯ ಸುಖದ ಕ್ಷಣಿಕತೆಯನ್ನರಿಯಬೇಕು. ಸಮಾಜ ಸೇವಾ ಕಾರ್ಯಗಳಲ್ಲಿ (ಕಾಯಕ) ಸರ್ವಾರ್ಪಣ ಮನೋಭಾವದಿಂದ ತೊಡಗಬೇಕು. ಹಾಗೆಯೇ ಭಗವಂತನ ನಿರಂತರ ಧ್ಯಾನ ಮಾಡುವುದರಿಂದ ನಾವು ಆಂತರಿಕ ಹಾಗು ಬಾಹ್ಯ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು. ಆಗ ನಮ್ಮ ಉದ್ವೇಗಗಳೆಲ್ಲವೂ ದೂರವಾಗಿ ಮನಶ್ಯಾಂತಿ ಲಭಿಸುವುದು.

• ಪಂಡಿತ ನಾಗಭೂಷಣ ಶಾಸ್ತ್ರಿಗಳು

(ಪಂ. ನಾಗಭೂಷಣ ಶಾಸ್ತ್ರಿಗಳು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದವರು. ತಂದೆ ಶಾಸ್ತ್ರೀಮಠದ ಪರ್ವತರಾಯಯ್ಯ ಹಾಗೂ ತಾಯಿ ಲಿಂಗಮ್ಮ . ಸಂಗನಾಳದ ನಾಗನಾಥಗುಡಿಯ ಗಾವಟಿ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದರು. ಪ್ರಸಿದ್ಧ ಸಾಹಿತಿ-ಕವಿ ಸಿದ್ದಯ್ಯ ಪುರಾಣಿಕರ ತಂದೆ ಕಲ್ಲಯ್ಯ ಪುರಾಣಿಕ ದ್ಯಾಮಪುರ ಅವರು ಇವರ ಮೊದಲ ಗುರುಗಳು. 1-5ನೇ ತರಗತಿಯವರೆಗೆ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿಪೂರೈಸಿದರು. ಆ ವೇಳೆಗೆ ಸೋದರತ್ತೆಯ ಮಗಳು ಶಿವಗಂಗಾಳೊಂದಿಗೆ ಬಾಲ್ಯ ವಿವಾಹ. ಹಾಲಕೆರೆ ಶ್ರೀ ಅನ್ನದಾತಸ್ವಾಮಿಗಳ ಸಂಸ್ಕೃತ ಪಾಠಶಾಲೆಯಲ್ಲಿ (1924ರವರೆಗೆ) ಸಂಸ್ಕೃತ ಅಭ್ಯಾಸವನ್ನು ಮಾಡಿದರು.

ಶಾಸ್ತ್ರಿಗಳು 37ಕ್ಕೂ ಅಧಿಕ ಪ್ರಾಚೀನ ಗ್ರಂಥಗಳನ್ನು ಸಂಶೋಧಿಸಿ, ಸಂಪಾದನೆ ಮಾಡಿದ್ದಾರೆ. ವೀರಶೈವ ತತ್ವ, ಆಚಾರಗಳನ್ನು ಸರಳ ಸುಲಭ ಶೈಲಿಯಲ್ಲಿ ನಿರೂಪಿಸುವ ಗ್ರಂಥಗಳನ್ನು, ಪುಟ್ಟ ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ. ಅವರು ಸಂಪಾದಿಸಿ ಪ್ರಕಟಿಸಿದ ‘ಶಿವಯೋಗ ಪ್ರದೀಪಿಕಾ’ ಸಂಸ್ಕೃತ ಗ್ರಂಥವು ಈಗ ಪಾಶ್ಚಾತ್ಯ ಶಿವಯೋಗ ಸಾಧಕರಿಗೂ ಮಾರ್ಗದರ್ಶಿಯಾಗಿದೆ. ಗದುಗಿನ ಭಕ್ತರ ನೆರವಿನಿಂದ ಶಾಸ್ತ್ರಿಗಳು ’ಅಖಿಲ ಭಾರತ ವೀರಶೈವ ವಿದ್ಯಾಪೀಠ’ ಸ್ಥಾಪಿಸಿದರು. ವೀರಶೈವಕ್ಕೆ ಸಂಬಂಧಿಸಿದ ಸಾಹಿತ್ಯ ಪ್ರವೇಶ, ಸಾಹಿತ್ಯ ಮಧುಕರ, ಸಾಹಿತ್ಯ ಭೂಷಣ, ಸಾಹಿತ್ಯ ಶಿರೋಮಣಿ ಎಂಬ ತರಗತಿಗಳನ್ನು ಏರ್ಪಡಿಸಿ ಅದಕ್ಕೆ ಬೇಕಿರುವ ಪಠ್ಯಗಳನ್ನು ತಾವೇ ಸಿದ್ಧಪಡಿಸಿದರು.

ಒಟ್ಟು 14 ಮೌಲಿಕ ಗ್ರಂಥಗಳನ್ನು ರಚಿಸಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆಯ ಮುಖವಾಣಿಯಾಗಿ ಪ್ರಕಟಗೊಳ್ಳುತ್ತಿದ್ದ‘ಸಾವಧಾನ’ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು. ಅವರ ‘ಸಾಧಕರಿಗೊಂದು ಕಿವಿಮಾತು’ ಅಂಕಣ ಬರಹಗಳು ಜನಮನದ ಕಣ್ಣು ತೆರಸುವಂತಿತ್ತು. ಅಕ್ಕನ ಆದರ್ಶ ಜೀವನ (1937), ಅಣ್ಣನ ಆದರ್ಶ ಜೀವನ (1937), ಜೀವನ ಯಾತ್ರೆ ಭಾಗ-1 (1954), ವೀರಶೈವ ತತ್ವ ಪ್ರವೇಶ (1959),ನಿಜಗುಣ ಶಿವಯೋಗಿ ಹಾಗೂ ಅವರ ಕೃತಿಗಳನ್ನು ಕುರಿತು ಉಪನ್ಯಾಸ (1963), ವೀರಶೈವ ಧರ್ಮ ವಿವೇಚನೆ(1976) , ಸಂಕ್ಷಿಪ್ತ ಶಿವಪೂಜಾ ವಿಧಿ(1977), ಅಷ್ಟಾವರಣಗಳು(1981), ಪಾದೋದಕ(1981), ಘನಮಠ ನಾಗಭೂಷಣ ಶಿವಯೋಗಿಗಳು(1981), ಜಂಗಮ(1981), ರುದ್ರಾಕ್ಷಿ ಪ್ರಭೆ(1986), ಜ್ಞಾನ ಪ್ರಸಾದ(1986), ಭಾರತೀಯ ದರ್ಶನ ಸಮೀಕ್ಷೆ(1986), ಮುಂತಾದುವು.

ನಾಗಭೂಷಣ ಶಾಸ್ತ್ರಿಗಳ ಸಂಪಾದಕತ್ವದ ಕೃತಿಗಳೆಂದರೆ ಅಷ್ಟಾವರಣ ಮಹತ್ವ(1943), ವಚನ ಮಧು ಭಾಗ-1(1944), ವಚನ ಮಧು ಭಾಗ-2, ವೀರಶೈವ ತತ್ವ ಪ್ರವೇಶ (1950), ಸನ್ಮಾರ್ಗ ದರ್ಶನ ತತ್ವಗೀತೆ (1954), ಗದ್ಯ ಸಂಗ್ರಹ ಭಾಗ-3, ಪಂಚಾಚಾರ, ಸರ್ವಜ್ಞನ ವಚನ ಸಂಗ್ರಹ (1954), ಧರ್ಮಾಚಾರ(1966), ವಚನ ಸುಧೆ (1966),ನಿಜಗುಣ ಶಿವಯೋಗಿಕೃತ ಕೈವಲ್ಯ ಪದ್ಧತಿ(1969), ಷಟಸ್ಥಲ ಚಕ್ರವರ್ತಿ,ಶ್ರೀ ಚನ್ನ ಬಸವಣ್ಣನವರ ನೂರೆಂಟು ವಚನಗಳು (1971), ಮಿಶ್ರಾರ್ಪಣ(1973), ಶ್ರೀ ಸರ್ಪಭೂಷಣ ಶಿವಯೋಗಿಕೃತ ಕೈವಲ್ಯ ಕಲ್ಪವಲ್ಲರಿ (1973), ಪದ ಮಂತ್ರ ಗೋಪ್ಯ (1974), ನೂರೆಂಟು ವಚನಗಳ ಸಂಗ್ರಹ (1986), ಸೊಗಸಿನ ಬಾಳು (1986), ಕರಣ ಹಸಿಗೆ (1972), ಪಂಚಾಚಾರಗಳು(1972), ಶಿವಯೋಗಿ (1962), ಶಂಕರಲಿಂಗನ ಕಂದ(1988), ಸರ್ವಜ್ಞನ ವಚನ ಸಂಗ್ರಹ (1954), ಚನ್ನಬಸವಣ್ಣನವರ ವಚನ ಸಂಗ್ರಹ(1970), ಅನುಭವ ಮುದ್ರೆ(1967), ಹಿರಿಯ ಮಂತ್ರ ಗೋಪ್ಯ(1975), ವಚನಾಮೃತ ಬಿಂದುಗಳು(1984), ಪದ್ಯಸಂಗ್ರಹ(1954), ಗುರು ಬಸವಕೃತ ಮನೋವಿಜಯಂ(1968), ಶಂಕರ ಕವಿ ವಿರಚಿತ ಚೋರ ಬಸವೇಶ್ವರ ಕಾವ್ಯ(1971), ಸ್ವರೂಪಾಮೃತ(1967), ಅವಧೂತ ಗೀತೆ(1967), ಯೋಗಾಂಗ ವಿಭೂಷಣ(1966), ವೃಷಭ ಗೀತೆ ಗುರುಬಸವ ಕೃತ(1966) ಪ್ರಮುಖವಾಗಿವೆ.)

ಭಾರತ ದೇಶದ ಅದರಲ್ಲಿಯೂ ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಅನಾದಿ ಕಾಲದಿಂದಲೂ ಅಸಂಖ್ಯ ಮಹಾಪುರುಷರು ಮೇಲಿಂದ ಮೇಲೆ ಜನ್ಮವೆತ್ತುತ್ತಲೇ ಬಂದಿರುವರೆಂಬ ಬಗೆಗೆ ಪ್ರಾಜ್ಞಭಾರತೀಯರಿಗೆಲ್ಲ ವಿದಿತವಾದ ಸಂಗತಿಯೇ ಆಗಿದೆ. ಶಾಂತಸ್ವಭಾವದ ಆ ಮಹಾಪುರುಷರೆಲ್ಲರೂ ವಸಂತಮಾಸದಂತೆ ಲೋಕ ಹಿತವನ್ನು ಸಾಧಿಸುವಲ್ಲಿಯೇ ತಮ್ಮ  ಕೃತಕೃತ್ಯತೆಯನ್ನು ಕಂಡುಕೊಳ್ಳುವಂತಹ ನಿರ್ಮಲ ಹೃದಯದವರು. ಆತ್ಮವಿಸ್ಮೃತಿ ರೂಪ ಮರಣವನ್ನು ಹೊಂದಿದ ಜನಾಂಗದಲ್ಲಿ ಆತ್ಮ ಸಂಸ್ಕೃತಿರೂಪ ಜೀವ ಕಳೆಯನ್ನು ತುಂಬುವ ಮಹಾ ಕಾರ್ಯವು ಮಹಾಪುರುಷೇತರರಿಂದ ಎಂದೆಂದೂ ಸಾಧ್ಯವಾದದ್ದು. ಅವಿಚಾರದ ತಮಸ್ಸು ಮುಸುಕಿದ ಜನಾಂಗದ ಹೃದಯ ಪದ್ಯದಲ್ಲಿ ಸುವಿಚಾರದ ನಂದಾದೀಪವನ್ನು ಹಚ್ಚಿ ಬೆಳಗುವ ಪ್ರಯತ್ನ ಮಾಡುವ ಮಹಾಪುರುಷರ ಜೀವನ ಚರಿತ್ರಗಳು ಭಾರತೀಯ ಧಾರ್ಮಿಕೇತಿಹಾಸಗಳಲ್ಲಿ ತುಂಬ ಕಂಡು  ಬರುವವು. ನಿಜವಾಗಿಯೂ ಇಂತಹ ಮಹಾಪುರುಷರ ಇತಿಹಾಸಗಳೇ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹೆಚ್ಚಳವನ್ನು ನಿಚ್ಚಳವಾಗಿ ತೋರಿಸಿಕೊಡುವವು. ನಡೆಶುಚಿ, ನುಡಿಶುಚಿ, ಮನಶುಚಿ, ತನುಶುಚಿ, ಭಾವಶುಚಿ ಈ  ಪಂಚಶುಚಿಗಳನ್ನೊಳಗೊಂಡ ಮಹಾತ್ಮರಲ್ಲಿ ಕಂಡು ಬರುವ ಸಂಪತ್ತೆಂದರೆ ಪಾವಿತ್ರ್ಯ, ಪ್ರೇಮ, ತ್ಯಾಗ ಇಂಥವರ ಬಗೆಗೆ ಧಾರ್ಮಿಕ ಜನತೆ  ಇಟ್ಟುಕೊಂಡ ಪ್ರೇಮಾಭಿಮಾನ ಗೌರವಗಳು ಅಸದೃಶವಾದವು. ಕೇವಲ ಜಡಸಂಪತ್ತಿನ ವ್ಯಾಮೊಹದಲ್ಲಿ ಮಗ್ನರಾಗಿದ್ದ ಮಹಾ ಮಹಾ ಚಕ್ರವರ್ತಿಗಳ ಪಲ್ಲಕ್ಕಿಗಳನ್ನು ಹೊರುವ ಪ್ರಸಂಗ ಬಂದಾಗ ಪೂರ್ಣ ಹಿಂಜರಿಯುತ್ತಿದ್ದ ವ್ಯಕ್ತಿಗಳು ಸತ್ಪುರುಷರನ್ನು ಪಲ್ಲಕಿಯಲ್ಲಿ ಕೂಡ್ರಿಸಿ ಹೊತ್ತು ನಡೆಯುವ ಪ್ರಸಂಗವೊದಗಿ ಬಂದಾಗ ಅಹೋಭಾಗ್ಯವೆಂದು ಭಾವಿಸುತ್ತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಧಾವಿಸಿ ಬರುವ ದೃಶ್ಯವು ಅಚ್ಚರಿಯದೇನಲ್ಲ. ನಿಜವಾದ ಧಾರ್ಮಿಕ ಪ್ರಜ್ಞೆಯನ್ನು ಕಳಕೊಂಡು ಅಪಮಾರ್ಗದಲ್ಲಿ ಸಾಗಿ ತೀರ ಅವನತಿಯನ್ನು ಹೊಂದುತ್ತಿದ್ದ ವ್ಯಕ್ತಿಗಳನ್ನು ಕಣ್ಣಾರೆ ಕಂಡ ಮಹಾಪುರುಷರು ಸುಮ್ಮನೆ ಕಣ್ಣು ಬಡಿಯುತ್ತ ಕುಳಿತುಕೊಳ್ಳಲು ಎಂದೂ ಮನಸ್ಸು ಮಾಡರು. ಅವರ ನಿಜವಾದ  ಪೂಜೆಯೆಂಬುದು ಪರಹಿತಕಾರ್ಯವೇ ಆಗುವದು.

ಸಂತೋಷಂ ಜನಯೆತ್ ಪ್ರಾಜ್ಞಸ್ಥದೇವೇಶ್ವರ ಪೂಜನಂ ।

ಸಕರ್ಮಣಾ ತಮಭ್ಯರ್ಚ್ಯ ಸಿದ್ದಿಂ ವಿಂದತಿ ಮಾನವಃ

ಇವೇ ಮೊದಲಾದ ಸೂಕ್ತಿಗಳು ಸತ್ಪುರುಷರ ನೈಜ ಜೀವನದ ಪರಿಚಾಯಕವಾಗಿರುವವು.

ಇಂತಹ ಮಹಾಪುರುಷರ ಪಂಕ್ತಿಯಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸರ್ವಾತ್ಮನಾ ಪಡೆದುಕೊಂಡವರು. ಇವರು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಅನಾದಿ ಸಂಸಿದ್ಧವಾದ ವೀರಶೈವ ಧರ್ಮದ ಪುನರುತ್ಥಾನ ಮಹಾಕಾರ್ಯವು ನಡೆಯಬೇಕಾದಾಗ ಸಮರ್ಥ ಕಾರಣಿಕ ಮಹಾಪುರುಷ ರೂಪದಲ್ಲಿ ಕಾಣಿಸಿಕೊಂಡರು.

ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ನಡಬಿಗಿದು ನಿಂತುಕೊಂಡದ್ದಷ್ಟೇ ತಡ ಸಮಾಜದ ನಾಡಿನ ಜನರೆಲ್ಲರೂ ಶಿವಯೋಗಿಗಳಿಗೆ ತಮ್ಮ ಹಾರ್ದಿಕ ಭಕ್ತಿ ಭಾವಗಳನ್ನು ಸಮರ್ಪಿಸಲು ಮುಂದಾಗಿಯೇ ಬಿಟ್ಟರು. ಇಂಥ ಪ್ರಸಂಗದಲ್ಲಿಯೂ ಪೂಜ್ಯ ಶಿವಯೋಗಿಗಳು ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳುತ್ತ ಸ್ವಕರ್ತವ್ಯಗಳಲ್ಲಿಯೇ ತನ್ಮಯರಾಗಿ ಬಿಡುತ್ತಿದ್ದರಲ್ಲದೆ ಜನರಿಂದ ಬರುವ ಮಾನಮರ್ಯಾದೆಗಳ ಬಗ್ಗೆ ತಮ್ಮ ಚಿತ್ತವನ್ನು ಎಷ್ಟೋ ಹರಿಸುತ್ತಿರಲಿಲ್ಲ. ಇದು ಶಿವಯೋಗಿಗಳ ಮಹಾವ್ಯಕ್ತಿತ್ವವನ್ನು ಎತ್ತಿ ತೋರಿಸುವದಾಗಿತ್ತು. ಜನರು ನೀಡುವ ಮಾನಮಯ್ಯಾದೆಗಳತ್ತ ತಮ್ಮ ದೃಷ್ಟಿಯನ್ನು ಸದಾ ಹರಿಸುವ ವ್ಯಕ್ತಿಗಳು ಜನತೆಯ ಹಿತವನ್ನು ಸಾಧಿಸುವ ಸಾಮರ್ಥ್ಯವನ್ನು ಕಳೆದುಕೊಂಡವರೇ ಆಗುವರು, ಜನಸೇವೆಯನ್ನು ಜಗದೀಶನ ಸೇವೆಯೆಂದು ನಂಬಿದ್ದ ಬಸವಾದಿ ಪ್ರಮಥರು ಅನ್ಯರ ಹೊಗಳಿಕೆಯನ್ನು ಆತ್ಮಪ್ರಗತಿಯಲ್ಲಿ ದೊಡ್ಡ ವಿಘ್ನಕಾರಿಯೆಂದು ತಿಳಿಯುತ್ತಿದ್ದರೆಂಬುದನ್ನು ಅವರ ವಾಣಿಯಿಂದಲೇ ತಿಳಿದು ಬರುವದು. “ಎನ್ನವರೆನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕಿಕ್ಕಿದರು” ಎಂದು ಹೇಳುವ ಭಾವ ಎಷ್ಟು ಜನ ಪರಹಿತ ಸಾಧಕರೆಂಬವರಲ್ಲಿರುವದೋ ನೋಡಬೇಕು.

 ಅನಾದಿ ಸಂಸಿದ್ಧವಾದ ವೀರಶೈವ ಧರ್ಮವನ್ನು ಎತ್ತಿ ಹಿಡಿಯುವ ಮಹಾಕಾರ್ಯಗಳಲ್ಲಿ ತೊಡಗಿದ ಕುಮಾರ ಶಿವಯೋಗಿಗಳಿಗೆ ಸರ್ವಾತ್ಮಭಾವದಿಂದ ವರ್ತಿಸುವದಕ್ಕಿಂತ ಮತ್ತಾವುದೂ ಅವರಿಗೆ ಗೋಚರಿಸುತ್ತಿರಲಿಲ್ಲ. ಧರ್ಮ ಹಾಗೂ ಸಮಾಜದ ಪುನರುತ್ಥಾನ ಕಾರ್ಯದಲ್ಲಿ ಸಮಯ ಕಳೆಯುವಲ್ಲಿ ದೊರೆಯುವ ಆನಂದ ಅಪರಿಮಿತವಾದುದು.

ಪೂಜ್ಯ ಶಿವಯೋಗಿಗಳು ತಾವು ಕೈಕೊಂಡ ಕಾರ್ಯಗಳಲ್ಲಿ ಅತ್ಯಂತ ಮಹತ್ವ ಪಡೆದವೆರಡು. ಅವೇ ಅ – ಭಾ. ವೀರಶೈವ ಮಹಾಸಭೆ, ಮತ್ತು ಶಿವಯೋಗ ಮಂದಿರ, ಮೊದಲನೆಯದು ವೀರಶೈವ ಸಮಾಜ ಪುರುಷನ ಸರ್ವತೋಮುಖವಾದ ಬಾಹ್ಯ ಸುಧಾರಣೆಯ ಸಾಧನಗಳ ಬಗೆಗೆ ಕೂಲಂಕಷವಾಗಿ ವಿಚಾರಿಸಿ ನಿರ್ಣಯಿಸಲು ಉಪಾಯಪೂರಿತವಾಗಿತ್ತು. ಎರಡನೆಯದು ಸಮಾಜ ಪುರುಷನ ಅಂತರಂಗದ ಪಾವನತೆ ಹಾಗೂ ಸ್ಥಿರತೆಯನ್ನುಂಟು ಮಾಡಿ ಆತ್ಮಾನುಭೂತಿಯ ಮಹಾ ಬೆಳಕನ್ನು ಬೆಳಗಲು ಸಾಧನಭೂತವಾಗಿತ್ತು. ಇವೆರಡು ಮಹಾಕಾರ್ಯಗಳನ್ನು ವೀಕ್ಷಿಸುವವರಿಗೆ ಕುಮಾರ ಶಿವಯೋಗಿಗಳು ಎಂಥ ಕರ್ಮಕೌಶಲ್ಯ ಪಡೆದವರಾಗಿದ್ದರೆಂಬ ಕಲ್ಪನೆಯು  ಸಹಜವಾಗಿಯೇ ಮೂಡಿ ಬರದಿರಲಾರದು. ಇನ್ನೊಂದು ದೊಡ್ಡ ವ್ಯಕ್ತಿಗಳ ಬಗೆಗೆ ತಿಳಿದುಕೊಳ್ಳುವದು ಅತ್ಯವಶ್ಯವಾಗಿದೆ. ಅವರು ಹೊರಗೆ ನಿರ್ಧನಿಕರಾಗಿ ಕಂಡು ಬಂದರು ಅಂತಸ್ಸತ್ವದ ಬಲದಿಂದ ಎಂಥ ಕಠಿಣ ಕಾರ್ಯಗಳನ್ನೂ ಸುಲಭವಾಗಿಯೇ ಸಾಧಿಸಬಲ್ಲರೆಂಬುವದು.

ಕ್ರಿಯಾಸಿದ್ದಿಃ:ಸತೇ ವಸತಿ ಮಹಾತಾಂನೋಪಕರಣೇ”

ಎಂಬ ಸೂಕ್ತಿಯು ಮಹಾಪುರುಷರ ದಿವ್ಯವ್ಯಕ್ತಿತ್ವದ ಸುಂದರ ಶಬ್ದ ಚಿತ್ರವೇ ಆಗಿರುವದು. ಬೇಕಾದಷ್ಟು ಉಪಕರಣಗಳ ಅನುಕೂಲವಿದ್ದಾಗಲು ಯಾವ ಮಹಾಕಾರ್ಯವನ್ನು ಸಾಧಿಸದ, ಯಾವ ಉಪಕರಣಗಳ ಅನುಕೂಲವಿಲ್ಲದಿದ್ದಾಗಲೂ ಮಹಾ ಮಹಾ ಕಾರ್ಯಗಳನ್ನು ಸಾಧಿಸುವವರನ್ನು ನಾವು ಕಂಡದ್ದುಂಟು. ಇದಕ್ಕೆಲ್ಲ ಅಂತಸ್ಸತ್ವದ ಇರುವಿಕೆ ಕಾರಣ.

ಕುಮಾರ ಶಿವಯೋಗಿಗಳು ತಮ್ಮ ಅಂತಸ್ಸತ್ವದ ಪ್ರಭಾವದಿಂದಲೇ ಎಲ್ಲ ಮಹಾ ಕಾರ್ಯಗಳನ್ನು ಸುಲಭವಾಗಿಯೇ ನಿರ್ವಹಿಸುವವರಾಗಿದ್ದರು. ಇವತ್ತಿಗೂ ಅವರು ನಿರ್ಮಿಸಿದ ಉಭಯ ಸಂಸ್ಥೆಗಳು ಅವರ ಅಂತಸ್ಸತ್ವದ ಪ್ರತೀಕವಾಗಿ  ಉಳಿದುಕೊಂಡಿರುವವು

ಕುಮಾರ ಶಿವಯೋಗಿಗಳು ತಮಗಿಂತ ಪೂರ್ವದಲ್ಲಿ ಆಗಿ ಹೋದ ಬಸವಾದಿ ಪ್ರಮಥರು, ರೇಣುಕಾದ್ಯಾಚಾರ್ಯರು, ಪ್ರಭು ಮೊದಲಾದ ನಿರಂಜನ ಮೂರ್ತಿಗಳು ಯಾವ ಧರ್ಮದ ಏಳೆಗಾಗಿ ಅನವರತ ಪ್ರಯತ್ನಿಸಿದರೊ ಅಂತಹ ವೀರಶೈವ ಧರ್ಮದ ರಕ್ಷಣೆಯೇ ಕುಮಾರ ಶಿವಯೋಗಿಗಳ ಜೀವನದ ಚರಮ-ಪರಮ ಗುರಿಯಾಗಿತ್ತು. ಸಮಾಜದಲ್ಲಿ ಮಠಗಳು, ಮಠಾಧಿಪತಿಗಳು ಇರುವದು ಜನಾಂಗದ ಕಲ್ಯಾಣೈಕ ದೃಷ್ಟಿಯಿಂದಲ್ಲವೇ ! ಅದು ಸಾಧ್ಯವಾಗಬೇಕಾದರೆ ಮಠಾಧಿಕಾರಿಗಳು ಸಚ್ಚರಿತ್ರರೂ, ತತ್ತ್ವವೇತ್ತರೂ ಕಾರ್ಯತತ್ಪರರೂ ಆಗಿರಲೇಬೇಕೆಂಬುದು ನಿರ್ವಿವಾದವಾಗಿರುವದು. ಇಂಥ ಮಹಾ ವ್ಯಕ್ತಿಗಳನ್ನು ಸಿದ್ಧಪಡಿಸುವದಕ್ಕಾಗಿ ಪ್ರಯತ್ನಿಸಿದ್ದು ಕುಮಾರ ಶಿವಯೋಗಿಗಳ ದೂರದರ್ಶಿತ್ವ ಹಾಗೂ ಕಾರಣಿಕ ಮಹಾಪುರುಷತ್ವದ ದ್ಯೋತಕವಲ್ಲದೆ ಮತ್ತೇನು !

 ಶಿವಯೋಗ ಮಂದಿರ ಸಂಸ್ಥೆಯು ಭಾರತದ ಆಧ್ಯಾತ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುವದು. ಇಂತಹ ಸಂಸ್ಥೆಯನ್ನು ಕಟ್ಟಿದವರ ಬಗ್ಗೆ ಅವರ ಸಮಕಾಲೀನರಾದ ಅನೇಕ ಪೂಜ್ಯ ಮಹಾಸ್ವಾಮಿಗಳು ಕುಮಾರ ಶಿವಯೋಗಿಗಳ ಬಗೆಗೆ ಗೌರವ ಬುದ್ಧಿಯನ್ನಿಟ್ಟುಕೊಂಡದ್ದೇನೂ ಅಚ್ಚರಿ ಸಂಗತಿಯಲ್ಲ. ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು, ಇಲಕಲ್ಲ ವಿಜಯಮಹಾಂತ ಶಿವಯೋಗಿಗಳು, ಹಾಲಕೆರೆಯ ಶ್ರೀ ಅನ್ನದಾನ ಶಿವಯೋಗಿಗಳು ಮತ್ತು ಸೊಲ್ಲಾಪುರದ ಶ್ರೀ ವೀರೇಶ ಶಿವಶರಣರು ಮೊದಲಾದವರು ಕುಮಾರ ಶಿವಯೋಗಿಗಳ ಬಗೆಗೆ ಹಾರ್ದಿಕ ಪ್ರೇಮಾದರಗಳನ್ನು ತೋರಿಸುತ್ತಲಿದ್ದರೆಂಬುದನ್ನು ಪ್ರತ್ಯಕ್ಷ ನೋಡಿದವರು ಕೆಲವರಿನ್ನೂ ಬದುಕಿಕೊಂಡಿರುವರು.

  ನಾವು ೧೯೨೫ನೆಯ ಸಾಲಿನಲ್ಲಿ ಕಾಶೀಕ್ಷೇತ್ರಕ್ಕೆ ಉಚ್ಚ ಶಿಕ್ಷಣಕ್ಕಾಗಿ ಹೊರಡುವ ಪ್ರಸಂಗದಲ್ಲಿ ಹಾಲಕೆರೆಯ ಶ್ರೀಮದನ್ನದಾನಿಮಹಾಸ್ವಾಮಿಗಳು ನಮಗೆ ಅಪ್ಪಣೆಕೊಡಿಸಿದ್ದು ಹೀಗೆ –

 ‘ಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ದರ್ಶನಾಶೀರ್ವಾದಗಳನ್ನು ಪಡೆದೇ ನೀವು ಕಾಶೀ ಕ್ಷೇತ್ರಕ್ಕೆ ಹೊರಡಬೇಕು’ ಹಾಗೆ ಪೂಜ್ಯರ ಅಪ್ಪಣೆಯಾಗಬೇಕಾದರೆ ಹಾನಗಲ್ಲ ಪೂಜ್ಯ ಮಹಾಸ್ವಾಮಿಗಳಲ್ಲಿ ಅವರಿಗೆ ನಂಬಿಗೆಯಿದ್ದಿತೆಂಬುದು ವ್ಯಕ್ತವಾಗುವದು ಆದರೆ ನಮಗಾಗ ಅನುಕುಲವಾಗದ್ದಕ್ಕೆ ಹಾಗೇ ಹೊರಡುವ ಪ್ರಸಂಗ ಬಂತು. ಪುನಃ ಮಾರನೆಯ ವರ್ಷ ಕಾಶಿಯಿಂದ ಬಂದಾಗ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನ ಪಡೆದುಕೊಂಡದ್ದು ಇಲಕಲ್ಲ ಮಠಕ್ಕೆ ದೋತ್ಯಾಳ ದೇವರನ್ನು ಅಧಿಕಾರಿಗಳನ್ನಾಗಿ ಮಾಡುವ ಶುಭಸನ್ನಿವೇಶದಲ್ಲಿ ಶಿವಯೋಗ ಮಂದಿರದಿಂದ ಒಂದೇ ವಾಹನದಲ್ಲಿ ಕುಮಾರ ಶಿವಯೋಗಿಗಳ ಅನ್ನದಾನಿ ಮಹಾಸ್ವಾಮಿಗಳ ಕೂಡ ಇಲಕಲ್ಲಿಗೆ ಹೋದದ್ದು ನನ್ನ ಅಹೋ ಭಾಗ್ಯವೆಂದು ಭಾವಿಸಿದೆ.

ಶ್ರೀ ಕುಮಾರ ಶಿವಯೋಗಿಗಳಂಥ ಮಹಾವ್ಯಕ್ತಿಗಳಿಗೆ ಜನ್ಮಕೊಡುವಂತಹ ಭಾಗ್ಯ ಪಡೆದ ಕನ್ನಡಮ್ಮನಿಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ! ಮತ್ತೊಮ್ಮೆ ಕುಮಾರಶಿವಯೋಗಿಗಳು ಮೈದೋರಿ ವೀರಶೈವ ಸಮಾಜವನ್ನು ಎತ್ತಿ ಹಿಡಿಯುವ ಮಹಾಕಾರ್ಯವನ್ನೆಸಗುವಂತೆ ಕರುಣಿಸಲೆಂದು ಅನನ್ಯಭಾವದಿಂದ ಜಗಚ್ಚಾಲಕನಾದ ಮಹಾದೇವನನ್ನು ಪ್ರಾರ್ಥಿಸಲಾಗುವದು

• ಬಿ. ಶಿವಮೂರ್ತಿ ಶಾಸ್ತ್ರಿ

(ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

)

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)

ಡಾ. ಬಸವರಾಜ ಜಗಜಂಪಿ

(ಸಾಹಿತಿ ಬಸವರಾಜ ಜಗಜಂಪಿ ಅವರು 1950 ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪನವರ, ತಾಯಿ ಈರವ್ವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,ಪ್ರಸ್ತುತ ಗ್ರಂಥಾಲಯ ಆಡಳಿತ ನಿರ್ದೇಶಕರಾಗಿ ಕೆ.ಎಲ್.ಇ. ಮಹಾವಿದ್ಯಾಲಯ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಚನ ಸಾಹಿತ್ಯ, ಜನಪದ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಪ್ರಮುಖ ಕೃತಿಗಳೆಂದರೆ ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಬಸವಪ್ರಭಪ್ಪನವರು ಹಂಪಣ್ಣವರ, ಮಲ್ಲಿಕಾರ್ಜುನ ದರ್ಶನ, ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ, ಕವಿ ಸಿದ್ದೇನಂಜೇಶ, ಕೆ.ಎಲ್.ಇ. ಸೊಸೈಟಿ, ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಬೆಳಗಲಿ ಬಯಲ ಸಿರಿ, ರಸಾಯನ, ಸ್ಪಂದನ, ಶ್ರೀಗುರು, ಬಸವಪ್ರಸಾದ ಮುಂತಾದವು.)

ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.

ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.

ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.

ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು

‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು. 

ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ  ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.

ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.

ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ  ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.

ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?

 ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.

ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.

ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.

ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ  ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.

ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.

 ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು  ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ  ಸ್ವಾಮಿಗಳೊಂದಿಗೆ ಚರ್ಚಿಸುತ್ತ  ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು.  , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ  ದೇಶಿಕರೆನಿಸಿದರು.

ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.

ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.

ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.

ಮಠಾಧಿಕಾರವನ್ನು ಅವರೆಂದೂ  ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ  ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.

ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.

 ಶ್ರೀಗಳ ದೂರದರ್ಶಿತ್ವ ತುಂಬ  ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ  ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು  ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ  ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು

. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.

ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.

ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.

ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ,  ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.

ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.

ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು,  ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:

೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪರಮ ಕಟಯೊಳಗಿರ್ದ | ಗುರುಲಿಂಗದೊಳಗೆ ಮಾ-

ಕ್ಷರವೆ ಮೊದಲಾದವರವರ ಷಡಕ್ಷರ ಮಂತ್ರ

ವೊರೆದ ಶ್ರೀಗುರುವೆ ಕೃಪೆಯಾಗು     I ೧೨೧ |

ಲಿಂಗದ ಎರಡನೆಯ ಅವಯವ ಕಟಿ, ಇದು ಪರಮವೆನಿಸಿದೆ. ಅರ್ಥಾತ್ ಶ್ರೇಷ್ಠವೆನಿಸಿದೆ. ಕಟಿಭಾಗವು ಸಣ್ಣಾಗಿರುವದರಿಂದ ಅಂದವಾಗಿ ಕಾಣುವದು. ಮೃಗ ರಾಜವೆನಿಸಿದ ಸಿಂಹದ ನಡುವು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ. ಕುಲವಧುವಿನ ಕಟಿಭಾಗವೂ ಸಣ್ಣದಾಗಿರುವದೆಂಬ ವರ್ಣನೆಯು ಕಾವ್ಯಗಳಲ್ಲಿ ಕಾಣ ಸಿಕ್ಕುವದು. ಶಕ್ತಿ ಸೂಚಕವಾದ ಲಿಂಗ ಪೀಠದ ಮಧ್ಯಭಾಗವೂ ಚಿಕ್ಕದಾಗಿರುವಲ್ಲಿ ವಿಶೇಷತೆಯಿದೆ. ಲೋಕ ವ್ಯವಹಾರಕ್ಕೆ ಯಥೋಚಿತವೆನಿಸಿದೆ.

ಕ್ರಿಯಾಲಿಂಗವೆನಿಸಿದ ಇಷ್ಟಲಿಂಗದ ಎರಡನೆಯ ಲಿಂಗವೇ ಗುರುಲಿಂಗವೆನಿಸಿದೆ. ಈ ಗುರುಲಿಂಗವು ಕಟಿಭಾಗದಲ್ಲಿದೆ. ಗುರುಲಿಂಗದಲ್ಲಿ ‘ಮಃ’ ಪ್ರಣವವಿದೆ. ಇಲ್ಲಿ ಮಾಕ್ಷರ (ಮಕಾರ) ವೆ ಮೊದಲಾಗಿ ಷಡಕ್ಷರ ಮಂತ್ರವು ಅಡಕವಾಗಿದೆ. ಅಂದರೆ ಈ ಗುರುಲಿಂಗ ಷಟ್‌ಸ್ಥಲದಲ್ಲಿ “ಮಃ” ಪ್ರಣವದ ಶ್ರೇಷ್ಠ ಷಡಕ್ಷರ ಮಂತ್ರದ ಇರುವು ಗುಪ್ತವಾಗಿರುತ್ತದೆಂದು ಗುರುವು ಪ್ರಿಯ ಶಿಷ್ಯನಿಗೆ ಲಿಂಗಸ್ಥಾನದಲ್ಲಿಯ ಮಂತ್ರರೂಪವನ್ನು ಬೋಧಿಸುತ್ತಾನೆ. ಮಕಾರ ಮಂತ್ರದ ಸ್ತೋತ್ರ ಕೆಳಗಿನಂತಿದೆ-

ಮಂದಾಕಿನಿ-ಸಲಿಲ-ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ-ಮಹೇಶ್ವರಾಯ |

ಮಂದಾರಪುಷ್ಪ-ಬಹುಪುಷ್ಪ-ಸುಪೂಜಿತಾಯ

ಸ್ಮೈ ಮಕಾರಾಯ ನಮಃ ಶಿವಾಯ (೨) (ಬ್ರಹತ್ ಸ್ತೋತ್ರ ರತ್ನಾಕರ)

ಶ್ರೀರುದ್ರಯಾಮಲ ತಂತ್ರದಲ್ಲಿ ‘ಮ’ಕಾರ ಮಂತ್ರದ ಮಹಿಮೆ

ಮಹಾದೇವಂ ಮಹಾತ್ಮಾನಂ

ಮಹಾಧ್ಯಾನಪರಾಯಣಮ್ |

ಮಹಾಪಾಪಹರಂ ದೇವಂ

ಮಕಾರಾಯ ನಮೋ ನಮಃ (೨)

ಎಂದಿದೆ. ಮಕಾರವು ಮಹಾಧ್ಯಾನ ಪರಾಯಣ ಮಹಾದೇವನ ಸ್ವರೂಪದ್ದಾಗಿದೆ. ಪಾಪನಾಶಕವಾದ ಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲದಲ್ಲಿ ಅವಶ್ಯ ನುತಿಸಬಹುದು.

ಅವಿರಳದ ವರ್ತುಳದ | ಶಿವಲಿಂಗದೊಳು ಶಿಕಾ-

ರವೇ ಮೊದಲಾಗಿರ್ದ – ತವೆ ಷಣ್ಮಂತ್ರವ ತೋ-

ರ್ದವಿರಳ ಗುರುವೆ ಕೃಪೆಯಾಗು     | ೧೨೨||

ಲಿಂಗ ಪೀಠದ ಮೇಲಿನ ಸುತ್ತಳತೆಯೇ ವರ್ತುಳವು. ಇದು ಅವಿರತವಾದುದು. ವಿರಾಮವಿಲ್ಲದೆ ದುಂಡಾದ ಪೂರ್ಣಗೊಂಡ ರೇಖೆಯೇ (ಪರಿಘವೆ) ವರ್ತುಳವು. ಇಲ್ಲಿ ಶಿವಲಿಂಗದ ವಾಸ. ಶಿವಲಿಂಗಕ್ಕೆ ‘ಶಿ’ ಕಾರ ಪ್ರಣವಾಕ್ಷರ ಸಂಬಂಧವಿರುವದು. ಹೀಗೆ ‘ಶಿ’ ಕಾರ ಷಣ್ಮಂತ್ರವನ್ನು ಜ್ಞಾನನಿಬಿಡವಾದ (ಅವಿರಳನೆನಿಸಿದ) ಗುರುನಾಥನು  ತೋರಿಸಿ ರಕ್ಷಿಸುತ್ತಾನೆ. ಇದು ಸದ್ಗುರುವಿನ ಕರ್ತವ್ಯ.

 ‘ಶಿ’ ಕಾರದಲ್ಲಿಯ ‘ಇ’ಕಾರವೇ ಶಕ್ತಿಯು. ʼʼಇಕಾರಃ ಶಕ್ತಿರುಕ್ತಾʼ’ ಎಂದು ಶಾಸ್ತ್ರಕಾರರು ನಿರ್ವಚಿಸಿದ್ದಾರೆ. ವೃತ್ತ, ಕಟಿ, ವರ್ತುಳದಿಂದ ಕೂಡಿದ ಪೀಠವೇ ಲಿಂಗದ ಆಧಾರ ಸ್ಥಾನವಾಗಿದೆ. ಪೂರ್ಣತೆಯನ್ನು ಪಡೆದ ವಸ್ತುವಿನಲ್ಲಿ ಶಕ್ತಿಯ ಆವಿರ್ಭಾವವಾಗುವಂತೆ ಈ ವರ್ತುಳದಲ್ಲಿ ಶಿಕಾರ ಪ್ರಣವವು ಶಕ್ತಿಯ ವೈಶಿಷ್ಟ್ಯತೆ ಯನ್ನು ಸೂಚಿಸುತ್ತದೆ. ಇಂಥ ಶಿಕಾರ ಪ್ರಣವಕ್ಕೆ ಜಗದ್ಗುರು ಶಂಕರಾಚಾರ್ಯರು ವಂದಿಸಿದ್ದಾರೆ.

 ಶಿವಾಯ ಗೌರೀವದನಾಬ್ಜ-ವೃಂದ-

ಸೂರ್ಯಾಯ ದಕ್ಷಾಧ್ವರ ನಾಶಕಾಯ  |

ಶ್ರೀ ನೀಲಕಂಠಾಯ ವೃಷಭ ಧ್ವಜಾಯ

 ಸ್ಮೈ ಶಿಕಾರಾಯ ನಮಃ ಶಿವಾಯ

ಪಾರ್ವತಿಯ ಮುಖಕಮಲವನ್ನು ಅರಳಿಸುವಲ್ಲಿ ಸೂರ್ಯಸದೃಶನಾದ, ದಕ್ಷನ ಯಜ್ಞವನ್ನು ನಾಶಮಾಡಿದ, ವಿಷವನ್ನು ಧರಿಸಿ ನೀಲಕಂಠನೆನಿಸಿದ, ವೃಷಭ ವಾಹನನೆನಿಸಿದ ಶಿವನಿಗೆ ಹಾಗೂ ಶಿವನ ಸ್ವರೂಪವೆನಿಸಿದ ಶಿಕಾರ ಪ್ರಣವಕ್ಕೆ ನಮಸ್ಕಾರವು. ಇದರಂತೆ ಶಿವಷಡಕ್ಷರ ಸ್ತೋತ್ರದಲ್ಲಿ ‘ಶಿ’ ಕಾರ ಮಂತ್ರದ ವರ್ಣನೆ ಕೆಳಗಿನಂತಿದೆ.

ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಂ |

ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ” ||

ಮಂಗಲಕರನೂ, ಶಾಂತನೂ, ಜಗದೊಡೆಯೆನಿಸಿ ಲೋಕಕ್ಕೆ ಅನುಗ್ರಹಿಸ ತಕ್ಕವನೂ, ನಿತ್ಯನೂ, ಆದ ಶಿವ ಪದದ ಏಕಾಕ್ಷರವೆನಿಸಿದ ‘ಶಿ’ ಕಾರ ಪ್ರಣವಕ್ಕೆ ಅನಂತ ವಂದನೆಗಳು.

*

ಇಂತು ಗೋಮುಖದೊಳಗಿ | ಪ್ಪಂಥ ಜಂಗಮ ಲಿಂಗ

ಮಂತ್ರ ವಾಕಾರ-ಮುಂತಾದ ಷಣ್ಮಂತ್ರ

ಮಂ ತೋರ್ದ ಗುರುವೆ ಕೃಪೆಯಾಗು   || ೧೨೩ ||

ಇನ್ನು ಕ್ರಮಪ್ರಾಪ್ತವಾದ ಸ್ಥಾನ ಗೋಮುಖವು. ಎಲ್ಲ ಅವಯವಗಳಲ್ಲಿ ಮುಖ ಮುಖ್ಯವಾಗಿರುವಂತೆ ಲಿಂಗಕ್ಕೆ ಗೋಮುಖವು ಸುಂದರ ಅವಯವವಾಗಿದೆ. ಗೋಮುಖಕ್ಕೆ ಜಲಹರಿಯೆಂತಲೂ ಕರೆಯುತ್ತಾರೆ. ಸ್ಥಾವರಲಿಂಗದ ಮೇಲೆ ಅಭಿಷೇಕ ಮಾಡಿದ ಅಭಿಷೇಕವು ಜಲಹರಿಯ ಮುಖಾಂತರವೇ ಹರಿದು ಹೋಗುವದು. ಇಷ್ಟಲಿಂಗದ ಮೇಲೆ ಅಭಿಷೇಕ ಮಾಡಿದರೂ ಜಲಹರಿಯ ಭಾಗದ ಮೂಲಕವೇ ಹೋಗುವದು. ಶಿವನ ಎಡಭಾಗದಲ್ಲಿ ಶಕ್ತಿಯು ಇರುವಂತೆ ಈ ಗೋಮುಖವು ಲಿಂಗದ ಎಡಭಾಗದಲ್ಲಿ ಇರುವದು.

ಈ ಗೋಮುಖದಲ್ಲಿ ಜಂಗಮಲಿಂಗವಿರುತ್ತದೆ. ಅಂತೆಯೇ ಲಿಂಗಕ್ಕರ್ಪಿಸಿದ ಅಭಿಷೇಕಾದಿಗಳು ಗೋಮುಖದಲ್ಲಿ ಸಮರ್ಪಿತಗೊಳ್ಳುವವು. ಜಂಗಮಲಿಂಗಕ್ಕೆ ‘ವಾ’ ಕಾರ ಪ್ರಣವವು ಸಂಬಂಧಗೊಳ್ಳುವದು. ಈ ಜಂಗಮ ಲಿಂಗದಲ್ಲಿ ‘ವಾ’ ಕಾರ

ಮುಖ್ಯವಾದ ಷಣ್ಮಂತ್ರವು ನೆಲೆಗೊಂಡಿರುತ್ತದೆ. ಗುರುದೇವನು ಈ ಗೋಮುಖದಲ್ಲಿ ‘ವಾ’ ಕಾರ ಮಂತ್ರವನ್ನು ಸಂಬಂಧಗೊಳಿಸಿ ಲಿಂಗವನ್ನು ಶಕ್ತಿಯುಕ್ತವನ್ನಾಗಿ ಕರುಣಿಸುತ್ತಾನೆ. ಇಲ್ಲಿ ಲಿಂಗದ ಮುಖವೇ ಜಂಗಮವಾಗಿರುವ ಅನ್ಯೋನ್ಯ ಸಂಬಂಧವೂ

ವ್ಯಕ್ತವಾಗುವದು.

ವಶಿಷ್ಠ ಕಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರ ಲೋಚನಾಯ

ಸ್ಮೈ ವಕಾರಾಯ ನಮಃ ಶಿವಾಯ (೪) ||

ಎಂದು ಶಂಕರ ಭಗವತ್ಪಾದರು ‘ವಾ’ ಕಾರ ಪ್ರಣವವನ್ನು ನುತಿಸಿದರೆ  ಶಿವಷಡಕ್ಷರ ಸ್ತೋತ್ರದಲ್ಲಿ

ವಾಹನಂ ಋಷಭೋ ಯಸ್ಯ

ವಾಸುಕಿಃ ಕಂಠಭೂಷಣಮ್ |

ವಾಮೇ ಶಕ್ತಿಧರಂ ದೇವಂ

ವ ಕಾರಾಯ ನಮೋ ನಮಃ ||

ಯಾವಾತನಿಗೆ ಋಷಭವು ವಾಹನವೋ, ಸರ್ಪವು ಕಂಠಾಭರಣವೋ, ವಾಮಭಾಗದಲ್ಲಿ ಶಕ್ತಿಸಮೇತನೋ ಅಂಥ ವಾಕಾರ ಮಂತ್ರ ಮೂರ್ತಿಗೆ ನಮಸ್ಕಾರವು.

ನಾದನಾಳದ ಸುಪ್ರ | ಸಾದ ಲಿಂಗದೊಳು ನಿ

ರ್ಭೇದವಹ ಯಕಾ ರಾದಿ ಷಣ್ಮಂತ್ರಗಳ

ಬೋಧಿಸಿದ ಗುರುವೆ ಕೃಪೆಯಾಗು   || ೧೨೪ ||

ಲಿಂಗದ ಐದನೆಯ ಅವಯವ ನಾಳ, ಇದು ನಾದ ರೂಪಾಗಿದೆ. ನಾದವು ಕಳಾಲಿಂಗ ಸ್ವರೂಪವು. ಲಿಂಗಪೀಠದ ಮಧ್ಯ ತಗ್ಗು ಪ್ರದೇಶವೇ ನಾಳವು; ಅಥವಾ ರಂಧ್ರವು. ಪೀಠರಂಧ್ರದ ಸ್ಥಾನವೇ ಲಿಂಗಕ್ಕೆ ಆಶ್ರಯಸ್ಥಾನ. ಈ ನಾದಮಯ (ಕಳಾಮಯ) ನಾಳದಲ್ಲಿರುವದು ಪ್ರಸಾದಲಿಂಗವು. ಅದರೊಳು ಭೇದವಳಿದ ‘ಯ’ ಕಾರ ಪ್ರಣವಾಕ್ಷರವುಂಟು. ಇಲ್ಲಿ ನಾಳಕ್ಕೂ ಮತ್ತು ಅದರೊಳಡಗಿದ ಚಿತ್ಪೀಠವಾದ ಲಿಂಗಕ್ಕೂ ಅಭೇದವಿರುತ್ತದೆ. ಪೀಠ ಹಾಗೂ ಚಿತ್ಪೀಠಗಳೆರಡೂ ಭಿನ್ನವಾಗಿ ಕಂಡರೂ ಶಕ್ತಿವಿಶಿಷ್ಟಾದ್ವೈತ ತತ್ತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.

ಪ್ರಸಾದ ಲಿಂಗಕ್ಕೆ ಮುಖ್ಯವಾದ ‘ಯ’ ಕಾರಾದಿ ಬೀಜಾಕ್ಷರವುಳ್ಳ ಷಣ್ಮಂತ್ರವು ಅಲ್ಲಿ ಸಂಬಂಧವಾಗುತ್ತದೆ. ಎಂದು ಮುಂತಾಗಿ ಬೋಧಿಸುವನು ಗುರುದೇವನು. ಪಂಚಾಕ್ಷರಿಯ ಅಂತಿಮ ಪ್ರಣವದ ವರ್ಣನೆಯನ್ನು ಶಂಕರಾಚಾರ್ಯರು ಹೀಗೆ ನುತಿಸಿದ್ದಾರೆ.

ಯಕ್ಷಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ |

ದಿವ್ಯಾಯ ದೇವಾಯ ದಿಗಂಬರಾಯ

ಸ್ಮೈಯ’ ಕಾರಾಯ ನಮಃ ಶಿವಾಯ (೫)

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿದೌ

ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ (೬)

ಪುಣ್ಯಪ್ರದವಾದ ಪಂಚಾಕ್ಷರ ಮಹಾಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲಕ್ಕೆ ಪಠಿಸುವವನು ಶಿವಲೋಕವನ್ನು ಹೊಂದಿ ಶಿವನೊಡನೆ ಆನಂದದಿಂದಿರುವ ಸೌಭಾಗ್ಯವನ್ನು ಪಡೆಯುವನು. ಶಿವಷಡಕ್ಷರ ಸ್ತೋತ್ರದಲ್ಲಿ ಯಕಾರ ಪ್ರಣವದ ಸ್ತುತಿ ಕೆಳಗಿನಂತಿದೆ.

ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ

ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ

ಬಹು ಮೇಲು ಪೀಠದಾ | ಮಹಲಿಂಗದೊಳಗೆ ತಾ

ನಿಹ ಓಂಕಾರಾದಿ ಸಹಜ ಷಣ್ಮಂತ್ರವನ-

ರುಹಿದೆಯೈ ಗುರುವೆ ಕೃಪೆಯಾಗು   | ೧೨೫ |

ಲಿಂಗಷಟ್‌ಸ್ಥಲದಲ್ಲಿ ಬಹು ಮೇಲಾದುದು ಚಿತ್ಪೀಠವು . ಚಿಚ್ಛಕ್ತಿಮಯ ವಾದುದೇ ಚಿತ್ಪೀಠವೆನಿಸುವದು. ಚಿಚ್ಛಕ್ತಿಭರಿತನಾದ ಐಕ್ಯನು ಮಹಾಲಿಂಗದಲ್ಲಿ ಸಮರಸನಾಗಿರುವಂತೆ, ಚಿತ್ಪೀಠದಲ್ಲಿರುವುದು ಮಹಾಲಿಂಗವು. ಈ ಮಹಾಲಿಂಗದಲ್ಲಿ ಮಹವಾದುದು (ಶ್ರೇಷ್ಠವಾದುದು) ಓಂಕಾರ ಪ್ರಣವವು. ಇದು ಸಹಜವೆನಿಸಿದೆ. ಯಾಕಂದರೆ ಓಂಕಾರವು ಷಣ್ಮಂತ್ರವನ್ನು ಸಂಪೂರ್ಣವಾಗಿ ಹುದುಗಿಸಿಕೊಂಡಿದೆ. ಓಂಕಾರದಿಂದಲೇ ಪಂಚ ಪ್ರಾಣಗಳು ಪ್ರಕಟಗೊಳ್ಳುವದರಿಂದ ಸಹಜ ಷಣ್ಮಂತ್ರವೆನಿಸುವದು. ಇಂಥ ಓಂಕಾರದ ಚಿಂತನ ಸಮರಸವಾದ ಚೇತನವಾಗಿದೆ. ಷಡಕ್ಷರ ಸ್ತೋತ್ರದಲ್ಲಿ-

ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |

ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||

ಬಿಂದು ಸಹಿತವಾದ ಓಂಕಾರವನ್ನು ಯೋಗಿಗಳು ಹೃದಯದಲ್ಲಿ ಸದಾಕಾಲವೂ ಧ್ಯಾನಿಸುತ್ತಾರೆ. ಈ ಓಂಕಾರವು ಕಾಮ (ಬಯಸಿದ್ದ)ವನ್ನು ಮೋಕ್ಷವನ್ನುಕೊಡುವಂಥಹ ದಾಗಿದೆ. ʼʼಶಿವತತ್ತ್ವ ರತ್ನಾಕರ’ದ ಪ್ರಥಮ ಕಲ್ಲೋಲದ ಐದನೆಯ ತರಂಗದಲ್ಲಿ

ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಃ ಸ್ವರಾಃ |

ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ||

ಪ್ರಣವೋ ಹಿ ಪರಂ ಬ್ರಹ್ಮ ಪ್ರಣವಃ ಪರಮಂ ಪದಮ್ |

ತಸ್ಮಾದುಚ್ಚಾರಣಾತ್ ಸಮ್ಯಕ್ ಪ್ರಣವಸ್ಯ ಶಿವಾತ್ಮನಃ |

ಪಾತಕಾನಿ ವಿನಶ್ಯಂತಿ ಹೃದಿಧ್ಯಾತೇ ಪರೇ ಶಿವೇ |

ವೇದಗಳು, ಸ್ವರಗಳು ಓಂಕಾರದಿಂದ ಪ್ರಾದುರ್ಭವಿಸಿವೆ. ತ್ರೈಲೋಕದ ಸಕಲ ಸಚರಾಚರ ಪ್ರಾಣಿಗಳಿಗೂ ಓಂಕಾರವೇ ಆಶ್ರಯವಾಗಿದೆ. ಇಂಥ ಓಂಕಾರ ಪ್ರಣವವು ಪರಬ್ರಹ್ಮವೂ, ಪರಮಪದವೂ ಆಗಿದೆ. ಆದ್ದರಿಂದ ಶಿವನ ಆತ್ಮವೇ ಓಂಕಾರ ಪ್ರಣವವು. ಇದನ್ನು ಧ್ಯಾನಪೂರ್ವಕ ಜಪಿಸುವದರಿಂದ ಸಕಲ ಪಾತಕಗಳು ನಾಶವಾಗುತ್ತವೆ. ಎಂದು ಓಂಕಾರದ ಅಪಾರ ಮಹಿಮೆಯನ್ನು ಬಣ್ಣಿಸಿದ್ದಾರೆ. ಇಂಥ ಓಂಕಾರದ ಉಪದೇಶವನ್ನು ಕರುಣಿಸುವ ಗುರುನಾಥನು ಕೃತಕೃತ್ಯನು. ಉಪದೇಶ ಪಡೆಯುವ ಶಿಷ್ಯನೂ ಧನ್ಯನು.

ಚಿತ್ಪೀಠದ ಮಹಾಲಿಂಗ ಮತ್ತು ಓಂಕಾರ ಪ್ರಣವವು ಒಂದಾಗಿದೆ. ಅಂತೆಯೇ ಓಂಕಾರದಲ್ಲಿ ಪಂಚಪ್ರಣವಗಳು ಕೂಡಿಕೊಂಡಿವೆ. ಮತ್ತು ಮಹಾಲಿಂಗದ ಸುನಾಮವೇ ಷಣ್ಮಂತ್ರವು. ಆದ್ದರಿಂದ ಅದು ಸಾರ್ಥಕವಾಗಿದೆ.