General

ಜ.ಚ.ನಿ

 

ಆಮೇಲೆ ಏಕಾಂತದಲ್ಲಿ ಏಕಾಂಗಿಯಾಗಿದ್ದು ಏಕಾಗ್ರಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು, ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಆಗಮಿಸಿದರು. ಬರುತ್ತ ಬೆಟ್ಟದ ಇಕ್ಕಟ್ಟಾದ ಹಾದಿಗಳಲ್ಲಿ ಹಾಯ್ದು ಮುಂದುವರೆಯುತ್ತಿದ್ದರು. ಒಮ್ಮೊಮ್ಮೆ ಹೋಗುವುದನ್ನೇ ಮರೆತು ಚಣಹೊತ್ತು ಸೀಳ್ದಾರಿಯಲ್ಲಿಯೇ ನಿಂತು ಬಿಡುತ್ತಿದ್ದರು. ಚಿಂತಾಮಗ್ನರಾಗಿರುತ್ತಿದ್ದರು. ಎಚ್ಚತ್ತು ಮತ್ತೆ ಹತ್ತಿಪ್ಪತ್ತು ಹೆಜ್ಜೆ ಮುನ್ನಡೆದು ಮತ್ತೇನನ್ನೂ ಯೋಚಿಸುತ್ತನಿಲ್ಲುತ್ತಿದ್ದರು. ಅಂತು ಇಂತು ದಾರಿ ಸಾಗಿತ್ತು. ನಿಶ್ಚಟದ ಗುರಿ ಮಾತ್ರ ತೋರದಾಗಿತ್ತು. ಗುರುವರ್ಯರ

ಗುರುತರವಾದ ಆಶೀರ್ವಾದದ ಪ್ರತಿಯೊಂದು ಮಾತನ್ನು ತಮಗೆ ಒರೆಹಚ್ಚಿಕೊಳ್ಳುತ್ತಿದ್ದರು. ತಮಗೆ ಆ ಶಕ್ತಿ ಎಲ್ಲಿ ? ಆ ಸಾಹಸವೆಲ್ಲಿ? ಸಂಘಶಕ್ತಿಗೂ ಸಾಧ್ಯವಾಗದ ಆ ಕಾರ್ಯ ನನ್ನಿಂದ ನೆರವೇರುವುದೆಂದರೇನು ? ನೆರವೇರಿಸುವದೆಂದರೇನು ಗುರುವಿನಾಜ್ಞೆ ತೊರೆಯುವಂತಿಲ್ಲ. ಮಾಡುವ ಬಗೆ ಹೇಗೆ ? ಮುಂದೋರದು ಎಂದು ಮುಂತಾಗಿ ಅಂತರಂಗದಲ್ಲಿಯೆ ಆಲೋಚಿಸುತ್ತಿದ್ದರು. ಅಷ್ಟರಲ್ಲಿ ನಿಜಗುಣರು ಹಿಂದೆ ನಿವಾಸಿಸಿ ನಿಯಮವ್ರತಗಳಿಂದ ತಪಸಿದ ಆಶ್ರಮ ಕಣ್ಣಿಗೆ ಬಿತ್ತು. ಅಲ್ಲಿನ ಆ ಅನನ್ಯ ಪ್ರಶಾಂತ ವಾತಾವರಣದಿಂದ ಅದೇ ಇರಬಹುದೆಂದು ಭಾವಿಸಿದರು. ಆ ತಪೋಭೂಮಿಗೆ ತಪೋನೇಮಿಯು ತವಕದಿಂದ ಬಂದು ತಲುಪಿದನು. ತತ್ವಪ್ರೇಮಿಯಾಗಿ ತಂಗಿದನು.

 

ಆ ತಪೋಭೂಮಿಯ ಭಾಗಗಳನ್ನು ಅಡ್ಡಾಡಿ ಅವಲೋಕಿಸಿದನು. ಒಂದೆಡೆ ಗವಿಯೊಂದು ಕಂಡಿತು. ವಾಸಕ್ಕೆ ನೆಲೆಸಿಕ್ಕಿತೆಂದು ಆನಂದಿಸಿದನು. ಆ ಆನಂದದ ವನವೈಭವವನ್ನು ನಿಟ್ಟಿಸಿ ನೋಡಿದನು. ಒಂದೆಡೆಗೆ ಬೆಟ್ಟದ ತುತ್ತುದಿ ನಿಶ್ಚಲವಾಗಿ ನಿಶ್ಚಿಂತೆಯಾಗಿ ನಿಂತಿತ್ತು. ಅದರ ಮಡುಲಲ್ಲಿ ಅನಂತ ಗಿಡಮರಗಳು ಬೆಳೆದಿದ್ದವು. ವನಮೃಗಗಳು ವಾಸವಾಗಿದ್ದವು, ಕಿರಿದಾದ ತೊರೆಯೊಂದು ಹರಿದಿತ್ತು. ಹಕ್ಕಿಗಳು ಬಾಳಿದ್ದವು. ಇದನ್ನೆಲ್ಲ ನೋಡಿ ಸ್ವಾಮಿಗಳವರ ಕಲ್ಪನೆ ಕೆರಳಿತು; ಬಯಕೆ ಬೇರೂರಿತು. ನಾನೂ ನಿಶ್ಚಲವಾಗಿ ತಪಸ್ಸನ್ನಾಚರಿಸಿದರೆ ನನ್ನಲ್ಲಿ ಸುಗುಣ ವೃಕ್ಷಗಳು ಶಿವರತಿ ಸಮರತಿ ಲತೆಗಳು ಬೆಳೆಯಬಲ್ಲವು. ಶಾಂತಿಜಲ ಪ್ರವಹಿಸಬಲ್ಲದು. ಸಮಾಜದ ಹಕ್ಕಿಗಳು ಭಯವಿಲ್ಲದೆ ಬಾಳಬಲ್ಲವು. ಇಷ್ಟಾದರು ದುರ್ಜನರೆಂಬ ವನ್ಯಪಶುಗಳು ಇಲ್ಲದಿರಲು ಸಾಧ್ಯವಾಗದು. ಇದ್ದರೂ ಇಲ್ಲಿರುವ ವನಮೃಗಗಳಂತೆ ಅವುಗಳ ಆಟವೂ ನಡೆಯದು.  ಹಾಗಾದಮೇಲೆ ನಾನೇಕೆ ಹೆದರಬೇಕು. ಅಖಂಡವಾದ ಅಚಲವಾದ ಆತ್ಮಶಕ್ತಿಯನ್ನು ಸಂಪಾದಿಸುವುದೇ ಈಗ ನನ್ನ ಆದ್ಯ ಕರ್ತವ್ಯ; ಆಮೇಲೆ ಅದು ಗಂತವ್ಯಗುರಿ ಎಂದು

ಭಾವಿಸಿ ತಪಸ್ಸಿಗೆ ಅಭಿಮುಖರಾದರು; ಮಿಗೆ ಹರುಷಿಸಿದರು.

 

ನಿತ್ಯವು ತಪ್ಪದೆ ತದೇಕ ಚಿತ್ತದಿಂದ ತಪಸ್ಸಾಧನೆ ಸಾಗಿತು. ತಿಳಿಯಾದ ತಣ್ಣೀರಿನಲ್ಲಿ ಮಿಂದು ನೀರ್ಗಾವಿಯ ಮಡಿಯುಟ್ಟು ಹೂವು ಹಣ್ಣುಗಳ ತಂದು ಲಿಂಗ ಪೂಜೆಯಲ್ಲಿ ಲೀನವಾಗುವರು. ಸಂಸಿದ್ಧಿಗೇರುವರು. ಜಪದ ಎಣಿಕೆ ನಿಲ್ಲುವುದು. ಕ್ರಮದ ಪ್ರಮೆ ಅಡಗುವುದು ದೃಕ್‌ ದೃಶ್ಯವೊಂದಾಗುವವು. ಇದಾದ ಮೇಲೆ ದ್ರಷ್ಟಾ ಇನ್ನೆಲ್ಲಿ ? ಹೀಗೆ

ತ್ರಿಪುಟಿಯಳಿದು ತನ್ಮಯರಾಗಿ ಇರುತ್ತಿದ್ದರು. ಹೊತ್ತುಹೋದಂತೆ ಮರಳಿ ದೃಶ್ಯದಿಂದ ದೃಕ್ಕು ಬೇರ್ಪಡುತ್ತಿತ್ತು. ಬಾಹ್ಯಸ್ಮೃತಿ ಬರುತ್ತಿತ್ತು. ಈಶ್ವರನೆ ಸಾಕಾರ ನಿರಾಕಾರನಾಗಿರುವಂತೆ ಸಾಧನ ಸಿದ್ಧಿಗಳಿಂದ ಭಕ್ತಿಮುಕ್ತಿಗಳಿಂದ ತಪಸ್ವಿ ತೇಜಸ್ವಿಯಾದರು. ಬಾಹ್ಯವಿಧಿ ಭಾವಸಮಾಧಿಗಳಿಂದ ಸಮಾಜದ ಭಾವೀ ಭಾಗ್ಯವಿಧಾತರಾದರು.

 

ಆದರೂ ಅವರಿಗೆ ನಂಬುಗೆ ನೆರವಾಗಲಿಲ್ಲ. ಹಂಬಲ ಹರಿಯಲಿಲ್ಲ. ನಿಜಗುಣರು ಶಂಭುಲಿಂಗನ, ವಿದ್ಯಾರಣ್ಯರು ಭುವನೇಶ್ವರಿಯ ಪ್ರಾರ್ಥಿಸಿದಂತೆ ಸದಾಶಿವಸ್ವಾಮಿಗಳು ತಮ್ಮ ಗುರುಗಳಾದ ಬಸವಲಿಂಗಸ್ವಾಮಿಗಳನ್ನು ಪ್ರಾರ್ಥಿಸುವರು. ತಮ್ಮ ವಾಣಿಯಲ್ಲಿ ನೇರವಾಗಿ ಪ್ರಾರ್ಥಿಸುವ ಮೊದಲು ಗುರುಕರುಣವನ್ನೆ ಕೋಗಿಲೆಯನ್ನಾಗಿ ಭಾವಿಸಿ ಹಾಡಿದ ನಿಜಗುಣರ ಈ ಪದ್ಯವು ಸ್ವಾಮಿಗಳ ನೆನಪಿಗೆ ಬರುವುದು. ಸೂಕ್ತವಾದ ಆ ಪದ್ಯದಲ್ಲಿ ಅವರ ಮನಸ್ಸು ಸಂಯುಕ್ತವಾಗಿ ಅವರ ವಾಣಿಯಿಂದ ಹೊರಹೊಮ್ಮುತ್ತದೆ, ಹಾಡತೊಡಗುವರು :

 

ಕೋಗಿಲೆ ದನಿದೋರು ಕರ್ಮವೆಸಿಸುವ ಮಾಗಿ ಪೋದುದಿನ್ನು

ಅನುನಯದಿ ಗುರುಕರುಣವೆಂಬ ಕೋಗಿಲೆ

ಘನವಸಂತವಿದೆನಗೆ ಸೊಗಸು ಮಿಗೆ ಪ್ರಣವರೂಪಿನ

ಚಿತ್ರತರವಾದ ಕೋಗಿಲೆ

 

ಹೀಗೆಂದು ಗುರುಕರುಣೆಗಾಗಿ ಹಾಡಿಹಾರೈಸುವರು, ಸಾಲದೆ

 

ಬಸವಲಿಂಗ ಯೋಗೀಶ್ವರ ! ನಿನ್ನ ಅಪ್ಪಣೆಯಂತೆ ಅನುಷ್ಠಿಸಿದ ನನ್ನ ಈ ಹನ್ನೆರಡು ವರುಷದ ತಪಃಪ್ರಭಾವವನ್ನು ತಾತ್ವಿಕ ಫಲವನ್ನು ಸಮಾಜದ ಉನ್ನತಿಗೆ ಉದ್ಧಾರಕ್ಕೆ ಧಾರೆಯೆರೆವೆನು; ಸೂರೆಗೈವೆನು. ಈ ಲೋಕದಲ್ಲಿ ನನ್ನದೆಂಬುದು ಯಾವುದು ಇಲ್ಲ. ಸಮಾಜದ ಸೇವಾ ಸೌಭಾಗ್ಯವೊಂದೇ ನನ್ನದು. ಸಮಾಜದ ಅಜ್ಞಾನ ವಿಮುಕ್ತಿಯೆ

ನನ್ನ ವಿಮುಕ್ತಿ ಸಮಾಜದ ವಿದ್ಯಾ ಪ್ರಾಪ್ತಿಯೆ ನನ್ನ ಪ್ರಾಪ್ತಿ ಸದ್ಧರ್ಮದ ಉದ್ಧಾರವೆ ನನ್ನ ಉದ್ಧಾರ, ಶಿವಯೋಗದ ಅಭ್ಯುದಯವೆ ನನ್ನ ಅಭ್ಯುದಯ. ನನಗೆ ಇದಕ್ಕಿಂತ ಬೇರೆ ಜೀವಿತ ಲಕ್ಷ್ಯವಿಲ್ಲ. ಇದಕ್ಕೆ ನಿನಗಿಂತ ಬೇರೆ ಸಾಕ್ಷ್ಯವಿಲ್ಲ. ಸಮಾಜಕ್ಕಾಗಿ ಆತ್ಮಶಕ್ತಿಯನ್ನು ಪ್ರಜಾಶಕ್ತಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುವೆನು. ಸೊಗಸು ನೋಡೆನು. ಸಮಾಜೋನ್ನತಿಯ ಸೊಗಸೆ ನನ್ನ ಸೊಗಸು. ಸಮಾಜದ ಚಿರಾಯುಷವ ನನ್ನ ಆಯುಷ. ಸಮಾಜ ಸೇವೆಗೈದು ಒಂದು ದಿನ ಬದುಕಿದರೆ ಸಾಲದೇನು? ಅದು ಸಾವೇನು ? ಅದುವೆ ಮಹಾನವಮಿಯಾಗದೇನು ?

 

ಯೋಗೀಶ್ವರ ! ನೀನು ಅನುಗ್ರಹಿಸಿದ ಬುದ್ಧಿಶಕ್ತಿಯಿದೆ; ಶುದ್ಧಿ ಸಂಪತಿಯಿದೆ. ಸಮಾಜವನ್ನು ಸಂಯುಕ್ತಗೊಳಿಸುವ ಸಿದ್ಧಿಯೊಂದನು ಆಶೀರ್ವದಿಸು. ಇದೊ ನೀನು ಆಶೀರ್ವದಿಸಿದೆಯಾದರೆ ಈಗಳೆ ಇಲ್ಲಿಂದ ಹೊರಡುವೆನು. ತಪದ ತಳುಮೆ ಸಾಕಿನ್ನು. ಸಮೆದು ಸಣ್ಣಾಗುವ ಸಮಾಜದ ಆರ್ತತೆಯ ಕರೆ ಗಾಳಿಗೂಡಿ ಬರುತಿದೆ. ಇನ್ನಿರಲಾರೆ,  ಹಿಸಲಾರೆ, ಎಲ್ಲಿ ದೇವ, ಆಶ್ವಾಸನವೀಯದೆ ಎಲ್ಲಿ ಅಡಗಿರುವೆ ? ಅಡಗಿದ ಬೆಡಗನುಬಿಟ್ಟು ಬಲುಹನು ತೋರೆಯಾ ? ಬಾರೆಯಾ ?

ಯಾವ ರೂಪದಿಂದ ಬರಲೆಂದು ಚಿಂತಿಸುವಿಯಾ ? ಯಾವ ರೂಪಾದರೇನು ? ಯಾವ ಮುಖವಾದರೇನು | ನಿನ್ನ ಕರುಣೆಯೆ ನನಗೆ ಮುಖ್ಯ. ಅದು ಯಾವ ರೂಪದಿಂದಲಾದರು ಬರಲಿ, ಅದು ನಿನ್ನದೆ, ನೀನಲ್ಲದೆ ಇನ್ನಾರು ಕರುಣಿಸುವರು ? ಇನ್ನಾರ ಕರುಣೆಯೂ ನನಗೆ ಬೇಕಿಲ್ಲ. ನಾನು ನಿನ್ನ ಕಂದ. ನೀನು ನನ್ನ ತಂದೆ, ನಿನ್ನ ಕಂದನ ಮೇಲೆ ನಿನಗೆ ಕರುಣೆಯಿಲ್ಲವೆ ? ನಿನ್ನ ಕಂದನನ್ನು ಕಂಡವರ ಕರುಣೆಗೆ ಒಪ್ಪಿಸುವುದು ನಿನ್ನ ಧರ್ಮವೆ ? ಅದೇ ನನ್ನ ಕರ್ಮವೆ ? ಅಲ್ಲದಿರೆ ಬೇಗ ಬಾ ! ಕರುಣ ಕಿರಣ ಕಾಣಿಸು, ಕರುಳ ಶಂಖೆಯ ಮಾಣಿಸು. ಸಮಾಜ ಸೇವೆಗೆ ಸಾಗಿಸು ಎಂದು

ಆರ್ತತೆಯಲಿ ಆಲಾಪಿಸುವರು; ಆತ್ಮೀಯತೆಯಲ್ಲಿ ಆಹ್ವಾನಿಸುವರು.

 

ಹೀಗಿರಲು ಒಂದು ದಿನ ಹುಣ್ಣಿಮೆ, ಹಾಲು ಚೆಲ್ಲಿದಂತೆ ಬೆಳದಿಂಗಳು ಬಿದ್ದಿತ್ತು. ಸ್ವಾಮಿಗಳವರು ಒಂದು ಎತ್ತರದ ಕಲ್ಲು ಬಂಡೆಯ ಮೇಲೆ ಕುಳಿತು ಜೀವನ ಜಂಜಡಕ್ಕೆ ಪರಿಹಾರವೇನೆಂದು ಯೋಚಿಸುತ್ತಿದ್ದರು. ಮನದ ಮಾಯಾ ಪಟಲ ಹರಿವುದೆಂದಿಗೆ  ಎಂದು ಬೇಗುದಿಗೊಳ್ಳುತ್ತಿದ್ದರು. ಅಜ್ಞ ಸಮಾಜಕ್ಕೆ ಅರಿವು ತರುವ ಶಕ್ತಿ ಮೈಗೂಡಿಬರುವುದಿನ್ನೆಂದಿಗೆ ಎಂದು ಚಿಂತಿಸುತ್ತಿದ್ದರು. ಗುರುವೆ, ಕಲ್ಪದ ತರುವೆ ! ಇನ್ನೂ ನಿನ್ನ ಮನಸ್ಸು ಕರಗಲಿಲ್ಲವೆ ? ಅಂದು ನಿನ್ನ ಕರುಣಾಜನಕ ಕೋಮಲ ಕಂಠದಿಂದ ಕುಮಾರಾ ಎಂದು ಕೂಗಿದೆ. ಕೈವಿಡಿದು ತಲೆದಡವಿ ನೇವರಿಸಿದೆ. ಇಂದೆಲ್ಲಿ? ಕಾಣದಂತೆ ಏಕೆ ಇರುವೆ ? ತಲ್ಲಣಿಸಿದ ಹೃದಯಕ್ಕೆ ತಣ್ಣೀರು ಎರೆಯಲಾರೆಯಾ ? ಕಾಣದ ಕಣ್ಣಿಗೆ ಕಿರಣವ ತೋರಲಾರೆಯಾ ? ಎಂದೆನ್ನುವಷ್ಟರಲ್ಲಿ ಅವರ ಕಣ್ಮುಂದೆ ಕೋಲ್ಮೀಂಚು ಮಿಣುಕಿದಂತಾಯಿತು. ಮೈಜುಮ್ಮೆಂದಿತು. ತೆರೆದ ಕಣ್ಣುಗಳು ತೆರೆದಂತೆಯೆ ಇದ್ದವು. ಅವುಗಳ ಮುಖದಲ್ಲಿ ಆ ಮಿಂಚಿನ ತೇಜಸ್ಸು ಹೊರಟು ಹೋಗಿ ಅಂತರಂಗವನ್ನು ಆವರಿಸಿ ಬಿಟ್ಟಿತ್ತು. ಅಪಾರ ಬೆಳಗ ಮೂಡಿತ್ತು. ಚಂದಿರನು ಹೊರಗಿನ ಸೃಷ್ಟಿಯನ್ನು ಬೆಳಗಿದಂತೆ ಚಿಜ್ಯೋತಿಯು ಚಿತ್ತದ ಪ್ರಪಂಚವನ್ನು ಬೆಳಗಿತು. ವಿಲಕ್ಷಣವಾದ ಶಕ್ತಿ ಮೈಗೂಡಿತು. ಯೋಚಿಸುತ್ತಿರುವ ಯೋಚನೆಗಳೆಲ್ಲ ಬಯಲಾಗಿ ಆತ್ಮಸ್ಪೂರ್ತಿ ಸ್ಫುರಿಸಿತು. ಹಾಗೆಯೆ ಎದ್ದು ಬಂದು ಹರ್ಷಚಿತ್ತದಿಂದ ನಿದ್ದೆ ಹೋದರು.

 

“ನಿಮಿಷವಾಗಲಿ ನಿಮ್ಮ ನೆನಹು ನಿಂದೊಡೆ ಮುಕ್ತಿ”

 

ಬೆಳಗಾಯಿತು. ಬಾಂದಳದಿ ಜಗಚ್ಚಕ್ಷುವು ಹೊಮ್ಮೂಡಿದನು. ಹೊಂಬೆಳಗ ಹರಡಿದನು. ಮರ ಮಣ್ಣುಗಳ ಹೊನ್ನಾಗಿಸಿದನು. ಹಕ್ಕಿಗಳ ಹಾರಾಡಿಸಿದನು; ಹಾಡಿಸಿದನು.  ತಪಸ್ವಿಗಳಾದ ತೇಜಸ್ವಿಗಳಾದ ಸದಾಶಿವ ಸ್ವಾಮಿಗಳವರು ಆ ಹಕ್ಕಿಗಳ ಹಾಡಿನೊಡನೆ ಹೊರಹೊರಟರು. ತಮ್ಮ ತಾತ್ವಿಕ ತೇಜಸ್ಸನ್ನು ಸಮಾಜದಲ್ಲಿ ಚೆಲ್ಲಿ ಆ ಜಗಚ್ಚಕ್ಷುವಿನ ಕಾರ್ಯ ಕಿಂತಲು ಮಿಗಿಲಾದ ಕಾರ್ಯ ನೆರವೇರಿಸಲು ಕಾಡ ಬಿಟ್ಟು ನಾಡ ಬಾಂದಳದಿ ಮೂಡಲು ಸಾಗಿದರು. ಹಾಡುವ ಹಕ್ಕಿಗಳ ಕಲರವವೆ ಭಾವೀ ಚೈತ್ರಯಾತ್ರೆಗೆ ಜಯಮಂಗಳವಾಯಿತು. ಕಾಡಿನ ಕಿಬ್ಬದಿಯಲ್ಲಿ ಹಾಯ್ದು ಹೋಗುತ್ತಿರುವಾಗ ವನಲತೆಗಳ ಬಗೆಬಗೆಯ ಬಣ್ಣದ ನರುಗಂಪಿನ ಹೂಗೊಂಚಲುಗಳು ಸ್ವಾಮಿಗಳವರ ವಿಶಾಲವಾದ ಎದೆಯ ಮೇಲೆ ಬಾಗಿ ತೂಗುತ್ತಿದ್ದುದು ಹಾರಹಾಕಿ ಕೈ ಮುಗಿಯುವಂತಿದ್ದಿತು.

ಜಗದ್ಗುರು ಡಾ||ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ

 

ಆಸೆ-ಆಮಿಷ ಶಬ್ದಗಳೆರಡಾದರೂ ಅರ್ಥ ಒಂದೇ; ಕ್ರಿಯೆಯೂ ಒಂದೇ. ಮನಸ್ಸಿನ ಸಲ್ಲದ ಬಯಕೆ ಹಾಗು ವಿಷಯ ಸುಖದ ಲಾಲಸೆಗಳೇ ಆಸೆ ಆಮಿಷಗಳು. ಇವುಗಳಿಗೆ ಲೋಭವೆಂದೂ ಹೆಸರು. ಈ ಲೋಭ ಮನುಷ್ಯನ ಅವನತಿಗೆ ಕಾರಣವಾಗುವ ಅರಿಷಡ್ವರ್ಗಗಳಲ್ಲಿ ಒಂದು. ಮನುಷ್ಯನ ಎಲ್ಲ ಪಾಪಗಳಿಗೂ ಲೋಭವೇ ಮೂಲ. ಅದು ಪಾಪದ ಜನಕ (ಲೋಭ ಪಾಪಕಾ ಬಾಪ ಹೈ). ಆಶೆಗೆ ಸಮನಾದ ದುರ್ಗುಣ ಇನ್ನೊಂದಿಲ್ಲ. ಆಶೆಯಿಂದ ಎಲ್ಲವೂ ತನಗೆ ಬೇಕೆಂದು ಎಲ್ಲವನ್ನೂ ತನ್ನಲ್ಲೇ ಬಚ್ಚಿಟ್ಟುಕೊಳ್ಳುವ ವ್ಯಕ್ತಿಗೆ ಕೃಪಣ, ಜಿಪುಣ ಅಥವಾ ಲೋಭಿ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಅವನಂಥ ದುರ್ಗುಣಿ ಮತ್ತೊಬ್ಬನಿಲ್ಲ.

 

ವ್ಯಕ್ತಿಯ ಅಧ್ಯಾತ್ಮ ಸಾಧನೆಯಲ್ಲಿಯೂ ಆಶೆ ಅನೇಕ ಅಡೆತಡೆಗಳನ್ನುಂಟು ಮಾಡುತ್ತದೆ. ಶರಣರು, ಸಂತರು ಈ ಆಶೆಯನ್ನು ‘ಮಾಯೆ’ ಎಂದು ಕರೆದಿರುವರು. ಮನದ ಮುಂದಣ ಆಶೆಯೆ ಮಹಾ ಮಾಯೆ ಕಾಣಾ ಗುಹೇಶ್ವರ’ ಎಂದು ಹೇಳುವ ಅಲ್ಲಮಪ್ರಭು ಇಹಲೋಕದ ಹೆಣ್ಣು, ಹೊನ್ನು, ಮಣ್ಣು ಅಥವಾ ಬೇರಾವುದೇ ವಸ್ತುಗಳು ವ್ಯಕ್ತಿಯ ಭವಬಂಧನಕ್ಕೆ ಕಾರಣಗಳಲ್ಲ. ಆ ವಸ್ತುಗಳ ಬಗೆಗಿರುವ ಅವನ ಅಲ್ಲಸಲ್ಲದ ಬಯಕೆಗಳೇ ಅವನ ಸಾಂಸಾರಿಕ ಬಂಧನಕ್ಕೆ, ದುಃಖಕ್ಕೆ ಕಾರಣವಾಗುತ್ತವೆ. ಮನುಷ್ಯ ಸಹಜವಾಗಿಯೇ ಸುಖಾಪೇಕ್ಷಿಯಾಗಿದ್ದಾನೆ. ಭೋಗ ವಸ್ತುಗಳಿಂದ ತಾನು ಬಯಸಿದ ಸುಖ ಸಿಗುವದೆಂಬ ಆಶೆಯಿಂದ ಆ ವಸ್ತುಗಳಿಗೆ ಹಾತೊರೆಯುತ್ತಾನೆ. ಭೋಗವಸ್ತುಗಳು ಎಂದೂ ತಾವಾಗಿಯೇ ನಮ್ಮನ್ನು ಆಕರ್ಷಿಸುವುದಿಲ್ಲ. ಕೇವಲ ಅವುಗಳ ತ್ಯಾಗದಿಂದ ಮಾತ್ರವೇ ಪರಮಸುಖ ಸಾಧ್ಯವೂ ಇಲ್ಲ. ಆದ್ದರಿಂದ ಮನವನ್ನೆಲ್ಲ ವ್ಯಾಪಿಸಿರುವ, ವಿಷಯ ವಸ್ತುಗಳನ್ನು ತನ್ನದಾಗಿಸಿಕೊಂಡು ಮನಸಾರೆ ಅನುಭವಿಸಬೇಕೆಂಬ ಹೀನ ಬಯಕೆಯನ್ನು ತ್ಯಾಗ ಮಾಡಬೇಕು. ಆಶೆ ಆಮಿಷ ಅಳಿದವರಿಗಲ್ಲದೆ ಪರಮಸುಖ ತೋರದು.

 

ಲೌಕಿಕ ವ್ಯವಹಾರದಲ್ಲಿ ಆಶೆ ಎಂಬುದು ಶೂಲವಾಗಿ ಮನುಷ್ಯರನ್ನು ಕಾಡುತ್ತದೆ. ಲೋಕದ ಅಸಮತೋಲನಕ್ಕೆ ಕಾರಣವಾಗುವ ಈ ದುರಾಶೆಗೆ ಎಂದಾವರೂ ಕೊನೆಯುಂಟೆ? ‘ಆಶಾ ನ ಜೀರ್ಣಾ ವಯಮೇವ ಜೀರ್ಣಾ’ ಆಶೆಗೆ ಎಂದು ಕೊನೆ ಎಂಬುದಿಲ್ಲ. ಅದನ್ನು ಹೊಂದಿದ ನಾವೇ ಕೊನೆಕೊಳ್ಳಬೇಕಾಗುತ್ತದೆ. “ಆಶೆಯೇ ದಾಸತ್ವ, ನಿರಾಶೆಯೇ ಈಶತ್ವ” ಸಲ್ಲದ ಆಶೆಗೆ ಒಳಗಾಗುವನು ಕೊಡುವವರ ದಾಸನಾಗಿ ಬದುಕಬೇಕಾಗುತ್ತದೆ. ಲೌಕಿಕ ವಸ್ತುಗಳ ಆಶೆ ಮೀರಿದವ ಈಶನಾಗುತ್ತಾನೆ. ಕಾಣಿಯ ಲೋಭ ಕೋಟಿಯ ಲಾಭವನ್ನು ಕೆಡಿಸಿ ನಮ್ಮ  ದುಃಖಕ್ಕೆ ಕಾರಣವಾಗುವುದು. ಒಬ್ಬ ವ್ಯಕ್ತಿಯ ಹತ್ತಿರ ಸುಂದರವಾದ ಕೋಳಿ ಇತ್ತು, ಅದು ಅವನಿಗೆ ಪ್ರತಿದಿನ ಬಂಗಾರದಂತಹ ಮೊಟ್ಟೆಯೊಂದನ್ನು ಕೊಡುತ್ತಿತ್ತು. ಅದನ್ನು ಮಾರಿ ತನ್ನ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ. ಒಂದು ದಿನ ಅವನು-‘ಈ ಕೋಳಿ ಪ್ರತಿದಿನ ಒಂದೇ ಮೊಟ್ಟೆಯನ್ನು ಕೊಡುತ್ತಿದೆ. ಇದನ್ನು ಕೊಂದು ಎಲ್ಲ ಮೊಟ್ಟೆಗಳನ್ನು ಒಮ್ಮೆಯೇ ಏಕೆ ತೆಗೆದುಕೊಳ್ಳಬಾರದು’ ಎಂದು ಯೋಚಿಸಿದನು. ಮನಸ್ಸಿನಲ್ಲಿ ಈ ದುರಾಶೆ ಹುಟ್ಟಿದಾಕ್ಷಣವೆ ಅವನು ಕೋಳಿಯನ್ನು ಕೊಂದು ಹಾಕಿದ, ಅವನಿಗೆ ಒಂದು ಮೊಟ್ಟೆಯೂ ಸಿಗಲಿಲ್ಲ. ಮೊದಲು ಒಂದು ಮೊಟ್ಟೆಯಾದರೂ ಪ್ರತಿದಿನ ದೊರೆಯುತ್ತಿತ್ತು. ಈಗ ಅದೂ ಕೊನೆಗೊಂಡಿತು. ಆದ್ದರಿಂದಲೇ ಅತಿ ಆಸೆ ಗತಿಗೆಡಿಸಿತು’ ಎಂಬ ಗಾದೆ ಪ್ರಚಲಿತವಾಗಿರುವುದು. ಅತಿ ಆಶೆ ಮಾಡಬಾರದು, ಅತಿ ಆಶೆಯೆ ನಮ್ಮ ವಿನಾಶಕ್ಕೆ ಹಾಗು ದುಃಖಕ್ಕೆ ಕಾರಣ.

 

 

ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು

ಹೂವಿನಶಿಗ್ಲಿ ಶ್ರೀ ವಿರಕ್ತಮಠ.

ಮಣ್ಣು ಇರದೇ ಮಡಿಕೆ ಆಗದು. ಹಾಗೆಯೇ ಸದ್ಗುರುವಿನ ಸಂಗ ಸಿಗದೆ ಭಗವಂತನ ಸಾನಿಧ್ಯ ಸಿಗಲು ಸಾಧ್ಯವಿಲ್ಲ. ದೇವರು ತಂದೆಯಂತೆ ಗುರುವು ತಾಯಿಯಂತೆ ,ಗುರುವೆಂಬ ತಾಯಿಯನ್ನು ಬಿಟ್ಟು ತಂದೆಯಂಬ ದೇವರನ್ನು ಕಾಣಲು ಸಾಧ್ಯವಿಲ್ಲ. ತಾಯಿ ತನ್ನ ಎದೆ ಹಾಲಿನಿಂದ ತನ್ನ ಮಗನ ತನುವನ್ನು ಸಲುಹಿದರೆ , ಗುರುವು ತನ್ನ ಅಂತರಂಗದ ಉಪದೇಶಾಮೃತವನಿತ್ತು ಶಿಷ್ಯನ ಅತ್ಮವನ್ನು ಸಲುಹಿ ದೇವನಿಗೆ ಎಡೆ ಮಾಡುತ್ತಾನೆ.

 

ಒಬ್ಬ ಮನುಷ್ಯ ದಾರಿಯಲ್ಲಿ ಹೋಗುತ್ತಿದ್ದ. ಆತನ ಹತ್ತಿರ ಒಂದಿಷ್ಟು ಸಂಪತ್ತು ಇತ್ತು. ದಾರಿ ನಿರ್ಜನವಾಗಿತ್ತು. ಢಕಾಯತರು ಬಂದರು, ಸಂಪತ್ತನ್ನೆಲ್ಲ ಕಸಿದುಕೊಂಡರು. ಆ ಬಳಿಕ ಸುಮ್ಮನೆ ಬಿಡಲಿಲ್ಲ. ಕಣ್ಣುಕಟ್ಟಿ ಆತನನ್ನು ದಟ್ಟ ಅರಣ್ಯದಲ್ಲಿ ಬಿಟ್ಟರು.  ಯಾರೂ ಇಲ್ಲ. ಕಣ್ಣುಕಾಣದು, ಕೈ ಕಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಎಷ್ಟು ತಳಮಳಿಸುತ್ತಾ ಇರಬೇಡ ?

 

ಆತ ಪಾರಾಗುವುದು ಹೇಗೆ?  ಭಗವಂತನನ್ನು ಪ್ರಾರ್ಥಿಸಿದ.  ಅಲ್ಲಿಗೆ ಒಬ್ಬ ವ್ಯಕ್ತಿ ಬಂದ.ಅ ನಿಮಿತ್ತ ಭಂಧುವಾಗಿ ಬಂದ   ಕಣ್ಣು ಕೈ ಬಿಚ್ಚಿ ಈ ದಾರಿಯಿಂದ ನೀನು ಹೋಗು  ಎಂದು ದಾರಿ ತೋರಿದ.

 

ಹಾಗೆ ನಮ್ಮ ಬದಕು ಒಂದು ದಟ್ಟವಾದ ಕಾಡು. ಇಂತಲ್ಲಿ ನಮ್ಮನ್ನು ಯಾರೋ ತಂದು ಬಿಟ್ಟಿದ್ದಾರೆ. ನಾವು ಕಣ್ಣು ತೆರೆದಾಗ ಕಂಡದ್ದು ಒಂದು ಮನೆ, ತಂದೆ, ತಾಯಿ, ಈ ಮಾಯಾ ಪ್ರಂಪಚ ಹಿಂದೆ ಏನಾಗಿದೆ ಗೊತ್ತಿಲ್ಲ, ಮುಂದೆ ಏನಾಗಲಿದೆ ಗೊತ್ತಿಲ್ಲ. ತಿಳಿದವರು ನಮಗೆ ಸಿಕ್ಕಿಲ್ಲ. ಉಳಿದವರೆಲ್ಲ ಕಣ್ಣುಕಟ್ಟಿಸಿ  ಕೊಂಡವರೇ. ಇಂತಹ ಸ್ಥಿತಿಯಲ್ಲಿ ಯಾರು ನಮ್ಮ ಕಣ್ಣು ಬಿಚ್ಚುತ್ತಾರೆ. ಯಾರು ನಮಗೆ ನಿಖರವಾದ ಮಾರ್ಗ ತೋರಿಸುತ್ತಾರೆ. ಅವರೇ ಸದ್ಗುರು ದೇವರು.

 

ಅದಕ್ಕಾಗಿಯೇ ಬಸವಣ್ಣನವರು

ಮಡಿಕೆಯ ಮಾಡುವರೆ ಮಣ್ಣೇ ಮೊದಲು

ತೊಡಿಗೆಯ ಮಾಡುವರೇ ಹೊನ್ನ ಮೊದಲು

ಶವಪಥವನರಿವಡೆ ಗುರುಪಥವೇ ಮೊದಲು ಎಂದಿದ್ದಾರೆ

 

 

ಸಂಗ್ರಹ -ಸಂಪಾದನೆ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟಸ್ಥಲವೇ ಆತ್ಮ . ಇವು ವೀರಶೈವ ಲಿಂಗಾಯತರ ತತ್ವತ್ರಯಗಳು.

ಅಷ್ಟಾವರಣ ಎಂಬ ಪದದಲ್ಲಿ ಎರಡು ಪದಗಳಿವೆ.

ಅಷ್ಟ – ಎಂಟು. ಆವರಣ – ಹೊದಿಕೆ, ಲಾಂಛನ, ರಕ್ಷಾಕವಚ, ಪ್ರಕಾರ,

ದೇಹಕ್ಕೆ ಚರ್ಮ ಎಷ್ಟು ಮುಖ್ಯವೋ ಅಷ್ಟೇ ವೀರಶೈವ ಸಾಧಕನಿಗೆ ಅಷ್ಟಾವರಣವು ಅಷ್ಟೇ ಮುಖ್ಯ.  ಅಷ್ಟಾವರಣಗಳನ್ನು ಮೈಗೂಡಿಸಿಕೊಂಡಿರುವನಿಗೆ ಯಾವುದರ ಅಂಜಿಕೆ ಇರುವುದಿಲ್ಲಾ.

ವೀರಶೈವ ಲಿಂಗಾಯತರಿಗೆ ಎಂಟು ಹೊದಿಕೆಗಳುಂಟು, ಚರ್ಮಗಳುಂಟು.

ಅವುಗಳು –

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ.

ಈ ಎಂಟುಕೂಡಿ ಒಂದು ಅಂಗ, ಇದರಿಂದಲೇ ಪಂಚಚಾರಗಳೆಂಬ ಪ್ರಾಣಗಳು ಸುಳಿದಾಡುತ್ತೇ, ಷಟಸ್ಥಲಗಳೆಂಬ ಆತ್ಮವು ನೆಲೆಗೊಂಡಿದೆ.

ಈ ಆವರಣ ಇಲ್ಲದೇ ಯಾವ ವಸ್ತುಗಳು ವ್ಯಕ್ತವಾಗಲಾರದು, ಯಾವ ರೀತಿ ಹೂವಿಲ್ಲದೇ ಸುಗಂಧ ಬರುವುದಿಲ್ಲವೋ, ಹಣ್ಣಿಲ್ಲದೇ ರಸ ಬರುವುದಿಲ್ಲವೋ, ಅಂಗವಿಲ್ಲದೇ ಪ್ರಾಣ ನೆಲೆನಿಲ್ಲಲಾರದು, ಆತ್ಮ ಸಾಧನೆ ಸಾಧ್ಯವಾಗದು.

ಒಟ್ಟಿನಲ್ಲಿ ಹೇಳುವುದಾದರೆ ಅಂಗವಿಲ್ಲದೇ ಯಾವ ಕಾರ್ಯವೂ ನೆರವೇರುವುದು ಇಲ್ಲಾ.

  1. ಗುರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಮೂರು ಪೂಜೆಗೊಳ್ಳುವವು ಗುರು, ಲಿಂಗ, ಜಂಗಮ.

ಅದರಲ್ಲಿ ಗುರುವಿಗೆ ಮೊದಲನೆಯ ಸ್ಥಾನ.

ಜೀವಿ ತನ್ನ ಜನ್ಮದ ಸಫಲತೆಯನ್ನು ಪಡೆಯಬೇಕಾದರೆ ಗುರುವಿನ ಅನುಗ್ರಹ ಬೇಕು. ಅವನು ತನ್ನ ಶಿಷ್ಯನಲ್ಲಿರುವ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನ ಎಂಬ ಬೆಳಕನ್ನು ನೀಡಿ ಶಿಷ್ಯನ ಜನನ ಮರಣಗಳನ್ನು ಕಳೆದು ನಿತ್ಯಾನಂದ ಪ್ರಾಪ್ತಿಮಾಡಿಕೊಡುವವನು ಗುರು.

ಅವನು ಬ್ರಹ್ಮ ವಿಷ್ಣು ಶಿವನಿಂತ ದೊಡ್ಡವನು-

ಗುರುಃಬ್ರಹ್ಮಾ ಗುರುಃವಿಷ್ಣುಃ ಗುರುಃದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ.

ಗುರು ಬ್ರಹ್ಮನಾಗಬಲ್ಲಾ, ಗುರು ವಿಷ್ಣುವಾಗಬಲ್ಲಾ, ಗುರು ಮಹೇಶ್ವರನಾಗಬಲ್ಲಾವನು ಎಂದಿದ್ದಾರೆ.

 

ಗುರುವಿನ ವೇಷವನ್ನು ಹಾಕಿದ ಮಾತ್ರಕ್ಕೆ ಗುರುತ್ವವು ಬರುವುದಿಲ್ಲಾ, ಗುರುವಾದವನು ಸತ್ಯ ಶುದ್ಧ ಕಾಯಕವನ್ನು ಮಾಡಬೇಕು, ನಿತ್ಯವೂ ಲಿಂಗಾರ್ಚನೆಯನ್ನು ಮಾಡಬೇಕು, ಸದ್ಭಕ್ತರಿಗೆ ಉಪದೇಶವನ್ನು ಮಾಡುತ್ತಾ ಅವರನ್ನು ಕಷ್ಟದ ಕೋಟೆಯಿಂದ ಹೊರಗೆ ತರಬೇಕು, ತನ್ನ ಶಿಷ್ಯನನ್ನು ‘ಲಿಂಗಾಂಗ ಸಾಮರಸ್ಯವೇ ನಿಜವಾದ ಸುಖ’ ಎಂದು ಭೋದಿಸಿ ಅದರಲ್ಲಿಯೇ ಅವನನ್ನು ಗುರಿ ತೋರಿಸಬೇಕು.

ಮೈಲಾರ ಬಸವಲಿಂಗ ಶರಣರು  ಗುರುವಿನ ಸ್ವರೂಪ, ಗುರುವಿನ ಮಹತ್ವ ತಿಳಿಸಲು ಹೊರಟಿದ್ದಾರೆ –

ಗುರುವೇ ಭಕ್ತರ ಕಲ್ಪ ತರುವೆ ಸಜ್ಜನ ಮನೋ

ಹರವೆ ನಿಜಭಕ್ತಿ ಜ್ಞಾನ ವೈರಾಗ್ಯ

ಮಂದಿರವೇ ಮದ್ಗುರುವೇ ಕೃಪೆಯಾಗು.

ಗುರುವಾದವನು ಭಕ್ತರ ಇಷ್ಟಾರ್ಥ ಫಲವನ್ನು ಕೊಡುವ ಕಲ್ಪವೃಕ್ಷ, ಬೇಡಿದ ಬಯಕೆಯನ್ನೆಲ್ಲಾ ನಿವಾರಿಸುವವನು, ಭಕ್ತನಿಗೆ ಸತ್ಯ ಶುದ್ಧ ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ನೀಡುವವನು, ಸುಜ್ಞಾನವನ್ನು ಉಪದೇಶಿಸಿ ಲಿಂಗಾಂಗ ಸಾಮರಸ್ಯ ಆನಂದವನ್ನು ಕರುಣಿಸುವವನು, ನೈಜವಾದ ಭಕ್ತಿ, ಜ್ಞಾನ, ವೈರಾಗ್ಯವನ್ನು ತನ್ನಲ್ಲಿ ಅಳವಡಿಸಿರುವ ಆಶ್ರಮ ಸ್ವರೂಪನಾಗಿರುವವನೇ ಗುರು, ಅವನಲ್ಲಿ ಭಕ್ತಿ ಜ್ಞಾನ ವೈರಾಗ್ಯ ಕಪಟಿತನವಿರುವುದಿಲ್ಲಾ ಅವೆಲ್ಲವೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆ.

ಗುರುವಾದವನು ಶಿವಾನುಭವಿಯಾಗಿ ತನ್ನ ಅನುಭವ ಉಪದೇಶದಿಂದ ಶಿಷ್ಯನ ಮನಸ್ಸಿನಲ್ಲಿ ಮನೆಮಾಡಿಕೊಂಡಿರುವ ದುರ್ಗುಣಗಳನ್ನು ಕಳೆದು, ಮನಸ್ಸಿನ ಸಂಕಲ್ಪ ವಿಕಲ್ಪಗಳನ್ನು ನಾಶಮಾಡಿ ನಿಷ್ಕಾಮ ಭಕ್ತಿ ಅಳವಡಲೆಂದು ಆಣವ, ಮಾಯಾ, ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು, ಮನ, ಧನಗಳನ್ನು ಶುದ್ಧಗೊಳಿಸುವವನಾಗಿರುತ್ತಾನೆ .

ಗುರುವೂ ಶಿಷ್ಯನ ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಗುರುನೇ ಧೈರ್ಯವಾಗಿರುತ್ತಾನೆ. ಗುರುವನ್ನು ಹೊಂದಿರುವ, ಧೈರ್ಯವಂತನಾದ ಶಿಷ್ಯನು ಏನೆಲ್ಲಾ ಸಾಧನೆಯನ್ನು ಮಾಡಲು ಹಿಂಜರಿಯುವುದಿಲ್ಲ. ಶಿಷ್ಯನ ತ್ರಿಮಲಗಳನ್ನು ಕಳೆದು ತ್ರಿವಿಧ ಅಂಗಗಳಲ್ಲಿ ತ್ರಿಲಿಂಗವನ್ನು ಸ್ಥಾಪಿಸಿ ಅವನನ್ನು ತನ್ನಂತೆ ಮಾಡಿಕೊಳ್ಳುವವನು ಗುರು ಎನಿಸಿಕೊಳ್ಳುವನು.

ಶರಣರು ಗುರುವಿಗಿಂತ ಮಿಗಿಲಾದ ದೈವವಿಲ್ಲಾ ಎನ್ನುವಲ್ಲಿ ” ನ ಗುರೋರಧಿಕಂ, ನ ಗುರೋರಧಿಕಂ” ಎನ್ನುವ ಶೃತಿಯನ್ನು ಬಿತ್ತರಿಸಿದ್ದಾರೆ.

ಹರನಿಂದಲಧಿಕ ಸದ್ಗುರುವೆಂಬುದನು ಕೇಳಿ

ಗುರುವೆ ನಾ ನಿಮ್ಮ ಚರಣವನು ನುತಿಸುವೆನು

ಕರುಣಾದಿಂದೆನೆಗೆ ಕೃಪೆಯಾಗು.-

ಹರನಿಗಿಂತ ಗುರುವೇ ದೊಡ್ಡವನು

ಬಸವೇಶ್ವರರು – ಶಿವಪಥವ ಅರಿದೊಡೆ ಗುರುಪಥವೆ ಮೊದಲು.

ಹರ ಮುನಿದರೆ ಗುರು ಕಾಯುವನು

ಗುರು ಮುನಿದರೆ ಹರ ಕಾಯಾಲಾರ.

ಎಂಬುದನ್ನು ಗುರುವಿನ ಮಹತಿಯನ್ನೇ ತಿಳಿಸಿದೆ.

ಅಕ್ಕಮಹಾದೇವಿ –

ನರ ಜನ್ಮವ ತೊಡೆದು ಹರಜನ್ಮವ ಮಾಡಿದ,

ಭವಿ ಎಂಬುದನ್ನು ತೊಡೆದು ಭಕ್ತನೆಂದೆನಿಸಿದವನು ಶ್ರೀಗುರು ಎಂದು ಬನ್ನಿಸಿದ್ದಾಳೆ.

ಗುರುವು ತಂದೆಯೂ ಆಗಬಲ್ಲಾ, ತಾಯಿಯೂ ಆಗಬಲ್ಲಾ, ಬಂದು ಬಳಗವೂ ಆಗುವನು.

ಮಾಯಾ ಪಾಶವ ಹರಿದು ಕಾಯೋ ನೀನೆನ್ನುವನು

ತಾಯಿ ಜನ್ಮದೊಳು ಬೇಡಿದುದೀವ ಗುರು

ತಾಯಿ ನೀನೆನಗೆ ಕೃಪೆಯಾಗು.

ನಮ್ಮ ವೇದದಲ್ಲಿ ತಾಯಿಗೆ ಮೊದಲನೆಯ ಪೂಜ್ಯಸ್ಥಾನವನ್ನು ಕೊಟ್ಟಿದೆ.

“ಮಾತೃ ದೇವೋಭವ” ಎಂದು ತಾಯಿಯನ್ನು ಗೌರವಿಸಿದ ದೇಶ ಭಾರತ.

ತಂದೆಯ ಹೃದಯ ಸಿಟ್ಟಿನಿದ್ದರೂ, ತಾಯಿಯ ಹೃದಯ ಎಂದೂ ಕಠೋರವಾಗುವುದಿಲ್ಲಾ.

ಹುಟ್ಟುವ ಮಕ್ಕಳು ಕೆಟ್ಟವರಾಗಿ ಹುಟ್ಟಬಹುದು, ಆದರೆ ಯಾವ ತಾಯಿಯೂ ಕೆಟ್ಟವಳಾಗಿ ಹುಟ್ಟುವುದಿಲ್ಲ ,

ಶರಣರು ತಮ್ಮ ಗುರುಗಳಾದ ಶ್ರೀ ಚೆನ್ನವೀರ ಶಿವಯೋಗಿಗಳ ಮುಂದೆ,

ಓ ಗುರುವೇ, ಗುರುತಾಯಿಯೇ, ನೀ ನನ್ನನ್ನು ಕರುಣಿಸು ಯಾವುದರಿಂದ ಅಂದರೆ ಈ ಭವ ಎನ್ನುವ ಮಾಯಾ ಪಾಶವನ್ನು ನಾಶಮಾಡಿ ಈ ಭೌತಿಕ ಬಯಕೆಗಳನ್ನು ಕಳೆದು ನಿನ್ನ ಕರಗರ್ಭದಲ್ಲಿ ಉದಯವಾಗುವಂತೆ ಭವಬಂದನದಿಂದ ನನ್ನನ್ನು ಪಾರುಮಾಡು, ಹೊನ್ನು ಹೆಣ್ಣು ಮಣ್ಣು ಅವು ನಿಜವಾದ ಮಾಯೆ, ಅವು ನನಗೆಲ್ಲವೂ ಬೇಕು ಎನ್ನುವ ಆಸೆಯೆಂಬ ಮಾಯೆಯನ್ನು ನಾಶಮಾಡು, ನನ್ನ ಮಲತ್ರಯಗಳನ್ನು ನಾಶಿಸು,  ಗುರುತಾಯಿಯೇ.  ನಿನ್ನ ಕಿರಿಯ ಮಗನಂತೆ (ತಾಯಿಗೆ ಕಿರಿಯ ಮಗನ ಮೇಲೆ ಬಹಳ ಪ್ರೀತಿ ಇರುತ್ತದೆ ಎಂದು ಸಹಜವಾದ ವಾಡಿಕೆ) ಶರಣಾಗತನಾದ ನನ್ನನ್ನು ನಿನ್ನ ಮಡುವಿನಲ್ಲಿ ಹಾಕಿಕೊಳ್ಳು ಎಂದು ಬೇಡುತ್ತಿದ್ದಾರೆ.

ಕಾಯ, ಕರ್ಮ, ಮಾಯೆಯಲ್ಲಿ ಬಿದ್ದು ಒದ್ದಾಡುವ ಜೀವಿಯನ್ನು ಎತ್ತುವವನೆ ಗುರು ಎನಿಸಿಕೊಳ್ಳುವನು,

ಇಂತಹ ಶಿಷ್ಯನ ಬಯಕೆಯನ್ನು ಈಡೇರಿಸುವವನು ಗುರು ಎನಿಸಿಕೊಳ್ಳುವನು.

  1. ಲಿಂಗ.

ಲಿಂಗ ಎಂದರೆ ಪರಾತ್ಪರ ವಸ್ತು, ಈ ಜಗತ್ತಿನ  ಸೃಷ್ಟಿಗೆ ಕಾರಣಿಭೂತವಾಗಿದೆ,

ಲಿಂಗ ಆತ್ಮದ ಕುರುಹು, ಗುರುಕೃಪೆಯ ಚಿನ್ಹೆ, ಶಿಷ್ಯನು ಗುರುವಿನ ಅನುಗ್ರಹಕ್ಕೆ ಪಾತ್ರವಾಗಿದ್ದಾನೆ ಅನ್ನುವುದಕ್ಕೆ ದೇಹದ ಮೇಲೆ ಧರಿಸಿರುವ ಇಷ್ಟಲಿಂಗವೇ ಸಾಕ್ಷಿ,

ವೀರಶೈವ ಲಿಂಗಾಯತ ಧರ್ಮದ ಜೀವಾಳ ಇಷ್ಟಲಿಂಗ,

ಜಗದಗಲ ಮುಗಿಲಗಲ ಮಿಗೆಯಗಲ ಅಗಮ್ಯ ಅಗೋಚರ ಅಪ್ರಮಾಣ ಆಗಿರುವ ಪರತರ ಶಿವಲಿಂಗ, ಶ್ರೀ ಗುರುವಿನ ಕರುಣೆಯಿಂದ ಕರಿಯು ಕನ್ನಡಿಯಲ್ಲಿ ಅಡಗಿದ ಹಾಗೆ ಇಷ್ಟಲಿಂಗದಲ್ಲಿ ಇಡೀ ಬ್ರಹ್ಮಾಂಡವು ಚುಳುಕಾಗಿದೆ.

‘ದೃಷ್ಟಿಯಿಂದ ಸೃಷ್ಟಿ’ ಎಂಬ ಅನುಭವಿಗಳು ನುಡಿಯಂತೆ, ದೃಷ್ಟಿಯ ಮುಖಾಂತರ ನಮ್ಮ ಮನಸ್ಸು ಸೃಷ್ಟಿಯ ವಿಷಯಗಳ ಮೇಲೆ ಹರಿದು ಹೋಗುತ್ತದೆ, ವಿಷಯಾಸಕ್ತನಾಗಿ ದುಃಖಕ್ಕೆ ತಳ್ಳುತ್ತದೆ, ನಮ್ಮ ಮನಸ್ಸನ್ನು ನಿಲ್ಲಿಸಬೇಕಾದರೆ ನಮ್ಮ ದೃಷ್ಟಿಯನ್ನು ನಿಲ್ಲಿಸಬೇಕು,

ಪ್ರಭುಲಿಂಗಲೀಲೆಯಲ್ಲಿ-

ಆಲಿ ನಿಂದೊಡೆ ಸುಳಿದು ಸೂಸುವ

ಗಾಳಿ ನಿಲ್ಲುವುದು ಗಾಳಿ ನಿಲೆ ಮನ

ಮೇಲೆ ನಿಲ್ಲುವುದು,,,

ನಮ್ಮ ಮನಸ್ಸು ನಿಲ್ಲಬೇಕಾದರೆ ಮನಸ್ಸು ನಿಲ್ಲಬೇಕು ಆ ಮನವನ್ನು ನಿಲ್ಲಿಸಲು ಇಷ್ಟಲಿಂಗ ಬೇಕು, ಇಷ್ಟಲಿಂಗದಲ್ಲಿ ತದೇಕಚಿತ್ತದಿಂದ ದೃಷ್ಟಿಯನ್ನಿಟ್ಟರೇ ಮನಸ್ಸಿನ ಚಾಪಲ್ಯವು ಅಡಗಿಹೋಗುತ್ತದೆ.

ಕರೆದು ಮಂಡೆಯ ಮೇಲೆ ಕರವಿಟ್ಟು ಸಿರದಡಹಿ

ಗುರುಪುತ್ರನೆನಸಿ ಸ್ಥಿರವಾಗಿ ಬಾಳೆಂದು

ಹರಸಿದೈ ಗುರುವೇ ಕೃಪೆಯಾಗು.

ಗುರುವು ಶಿಷ್ಯನನ್ನು ಆತ್ಮೀಯವಾಗಿ ಅವನ ಶಿರದ ಮೇಲೆ ತನ್ನ ವರದ ಹಸ್ತವನ್ನಿಟ್ಟು ಅನುಗ್ರಹಿಸಿದರೇ ಶಿಷ್ಯ ಗುರುಪುತ್ರನಾಗುವನು, ಅಧ್ಯಾತ್ಮದಲ್ಲಿ ಗುರುಪುತ್ರ ಎನ್ನುವುದು ಉನ್ನತವಾದ ಮಾರ್ಗ, ಹಲವಾರು ಗುರುಗಳು ಅಂತಹಾ ಶಿಷ್ಯನನ್ನು ಮಾಡಿಕೊಂಡಿದ್ದು ಓದುತ್ತೇವೆ.

ರಾಮಕೃಷ್ಣ ಪರಮಹಂಸರ – ಸ್ವಾಮಿ ವಿವೇಕಾನಂದರು.

ಭಗವಾನ್ ನಿತ್ಯಾನಂದರು – ಪರಮಹಂಸ ಮುಕ್ತಾನಂದರು.

ಯಳಂದೂರು ಬಸವಲಿಂಗ ಶಿವಯೋಗಿಗಳು – ಶ್ರೀ ಕುಮಾರ ಶಿವಯೋಗಿಗಳು.

ಇವರೆಲ್ಲರನ್ನೂ ಗುರುಗಳಾದವರು ತಮ್ಮ ಸಮೀಪದಲ್ಲಿದ್ದು ಉನ್ನತಮಟ್ಟಕ್ಕೆ ಏರಿಸಿದ್ದಾರೆ.

ಗುರುಪುತ್ರನಾದರೇ ಶಿಷ್ಯನ ಪೂರ್ವಾಶ್ರಮವು ಅಳೆಯುವುದು.

ಕಾಯ ಕರ್ಮಗಳೆಂಬ ಮಾಯ ಸಂಸಾರದಲ್ಲಿ ಗತಿಗಾಣದ ಶಿಷ್ಯನನ್ನು ಉದ್ಧಾರಗೊಳಿಸಬೇಕಾದ್ದು ಗುರುವಿನ ಕರ್ತವ್ಯವಾಗಿದೆ, ಎನ್ನ ಶಿರದ ಮೇಲೆ ತಮ್ಮ ಹಸ್ತವನ್ನಿಟ್ಟು ಗುರುಪುತ್ರನನ್ನಾಗಿ, ನನ್ನ ಮಾಂಸಮಯ ಪಿಂಡವನ್ನು ಮಂತ್ರಮಯವನ್ನಾಗಿಸಿದೆ, ಶಿವಬಾಳಿನಲ್ಲಿ ಧೈರ್ಯದಿಂದ ಬದುಕಲು ಹರಿಸಿದೆ,

ಪರಮಗುರುವು ಕರುಣದಿಂದ ಶಿರದಮೇಲೆ ಕರವನಿಡಲು

ಪರುಷಮುಟ್ಟಿದ ಲೋಹದಂತೆ ಶರೀರವಾದ ಲಿಂಗವಾದ

ಶರಣಗಿನ್ನು ಉಂಟೆ ಪರಿಭವ,

– ಎಂದು ಶರಣರು ಗುರು ಕರಸ್ಪರ್ಶದ ಮಹತಿಯನ್ನು ವರ್ಣಿಸಿದ್ದಾರೆ.

ಗುರು ಶಿಷ್ಯನ ಮಲತ್ರಯವನ್ನು ನಾಶಮಾಡಿ ಲಿಂಗತ್ರಯವನ್ನು ಸ್ಥಾಪಿಸಲು ದೀಕ್ಷೆ ಎನ್ನುವ ಮಹತ್ತರವಾದ ಹಸ್ತಮಸ್ತಕ ಸಂಯೋಗಮಾಡಿ ಶಿಷ್ಯನನ್ನು ಲಿಂಗಿಯನ್ನಾಗಿ ಮಾಡುವನು.

ತನುವಿಂಗೆ ದೀಕ್ಷೆಯನ್ನು, ಮನಸ್ಸಿಗೆ ಶಿಕ್ಷೆಯನ್ನು, ಆತ್ಮಕ್ಕೆ ಮೋಕ್ಷ ಕೊಡಬೇಕಾದರೆ ಸ್ಥೂಲ ಶರೀರಕ್ಕೆ ಇಷ್ಟಲಿಂಗವನ್ನು, ಸೂಕ್ಷ್ಮ ಶರೀರಕ್ಕೆ ಪ್ರಾಣಲಿಂಗವನ್ನು, ಕಾರಣಶರೀರಕ್ಕೆ ಭಾವಲಿಂಗವನ್ನು ಸ್ಥಾಪಿಸುವನು.

ಪಶ್ಚಿಮ ಚಕ್ರದಲ್ಲಿ ನಿರಂಜನಬ್ರಹ್ಮ ಎನ್ನುವ ಭಾವಲಿಂಗ,

ಶಿಖಾ ಚಕ್ರದಲ್ಲಿ ನಿಶೂನ್ಯಬ್ರಹ್ಮ ಎನ್ನುವ ಪ್ರಾಣಲಿಂಗ,

ಸಹಸ್ರದಳ ಪದ್ಮದಲ್ಲಿ ನಿಷ್ಕಳಬ್ರಹ್ಮ ಎನ್ನುವ ಇಷ್ಟಲಿಂಗ,

ಆಜ್ಞಾಚಕ್ರದಲ್ಲಿ ನಿಸ್ಸೀಮಬ್ರಹ್ಮ ಎನ್ನುವ ಮಹಾಲಿಂಗ,

ವಿಶುದ್ಧಿಚಕ್ರದಲ್ಲಿ ವಿಜ್ಞಾನಬ್ರಹ್ಮ ಎನ್ನುವ ಪ್ರಸಾದಲಿಂಗ,

ಅನಾಹತಚಕ್ರದಲ್ಲಿ ಆನಂದಬ್ರಹ್ಮ ಎನ್ನುವ ಜಂಗಮಲಿಂಗ,

ಮಣಿಪೂರಕಚಕ್ರದಲ್ಲಿ ಸತ್ಕಲಾಬ್ರಹ್ಮ ಎನ್ನುವ ಶಿವಲಿಂಗ,

ಸ್ವಾದಿಷ್ಠಾನಚಕ್ರದಲ್ಲಿ ಪಿಂಡಬ್ರಹ್ಮ ಎನ್ನುವ ಗುರುಲಿಂಗ,

ಆಧಾರ ಚಕ್ರದಲ್ಲಿ ಮೂರ್ತಿಬ್ರಹ್ಮ ಎನ್ನುವ ಆಚಾರಲಿಂಗ,

ಈ ರೀತಿ ಒಂದೇ ಲಿಂಗ ಮೂರು ತೆರನಾಗಿ ಅವುಗಳು ಷಡಿಂದ್ರಿಯಗಳಲ್ಲಿ ಷಡಚಕ್ರಗಳಲ್ಲಿ ಆರು ಲಿಂಗಗಳಾಗುತ್ತವೆ, ಆ ಆರು ಲಿಂಗ ಮತ್ತು ಇಷ್ಟ ಪ್ರಾಣ ಭಾವಲಿಂಗಳು ಕೂಡಿ ನವಚಕ್ರಗಳಲ್ಲಿ ನವಲಿಂಗಗಳಾಗುತ್ತವೆ.

ಕಾಯವಿಡಿದು ಕೈವಲ್ಯಪಡೆಯುವ ಕಷ್ಟವಿಲ್ಲದೆ ಸುಲಭೋಪಯಯಾದ ಯೋಗವೇ ಅದು ಶಿವಯೋಗ .

ಹಲವು ಯೋಗವ ಮಾಡಿ ಫಲವೇನು ಮಗನೆ

ಎಂದೊಲಿದು ಲಿಂಗಾಂಗ ಸುಲಭಯೋಗವನೊಡನೆ ಕಲಿಸಿದಾ ಗುರುವೆ ಕೃಪೆಯಾಗು.

ಯೋಗಗಳಲ್ಲಿ ಹಲವಾರು ಯೋಗಗಳಿವೆ ಅವುಗಳಲ್ಲಿ ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ಇವೆಲ್ಲ ಯೋಗಗಳನ್ನು ಸಾಧಿಸಿದರೆ ಒಂದೊಂದೇ ಫಲವನ್ನು ಕೊಡಬಹುದು, ಇವೆಲ್ಲಾ ಒಂದೇ ಫಲವು ಯಾವ ಯೋಗದಲ್ಲಿ ಸಿಗುತ್ತದೆ ಅಂದರೆ ಅದುವೆ ಶಿವಯೋಗ. ಶಿವಯೋಗವನ್ನು ಸಾಧಿಸಿದ ಮೇಲೆ ಕರ್ಮದ ಅಂಜಿಕೆ ಇರುವುದಿಲ್ಲಾ, ಭವ ಬಂಧನದ ಸೋಂಕಿಲ್ಲ, ಪುನರ್ಜನ್ಮವಿಲ್ಲಾ, ಶಿವಭಕ್ತನನ್ನು ಮುಕ್ತನ್ನನ್ನಾಗಿ ಮಾಡುವ ಯೋಗವೇ ಅದು ಶಿವಯೋಗ, ಲಿಂಗಾಂಗಯೋಗ.

ಗುರುವಿನ ಕರುಣೆಯಿಂದ ಬಂದು ಇಷ್ಟಲಿಂಗವನ್ನು ಪೂಜಿಸುತ್ತಾ, ಪೂಜಿಸುತ್ತಾ ಲಿಂಗಯ್ಯನಾಗು ಮನವೇ. ಎಂದು ಬಸವಾದಿ ಶರಣರು ತಿಳಿಸಿದ್ದಾರೆ.

ಗುರು ಕೊಟ್ಟ ಲಿಂಗವನ್ನು ಅಂಗವನ್ನಗಲದೆ ನೋಡಿಕೊಳ್ಳಬೇಕು, ಲಿಂಗವೇ ಪ್ರಾಣ ಪ್ರಾಣವೇ ಲಿಂಗ ಎಂಬ ಭಾವದಲ್ಲಿ ತಲ್ಲೀನನಾಗಿ ಸಂಪೂರ್ಣ ಶರೀರವನ್ನು ಲಿಂಗಮಯ ಮಾಡಿಕೊಳ್ಳಬೇಕು. ಆಗ ಅವನಿಗೆ ಮುಕ್ತಿ ದೊರೆಯುತ್ತದೆ.

  1. ಜಂಗಮ.

ನಿರಂತರವಾಗಿ ಸಂಚರಿಸುತ್ತಾ ಉಪದೇಶಿಸುವ ಶಿವಯೋಗಿಯೇ ಜಂಗಮ. ವೀರಶೈವರಲ್ಲಿ ಸಾಮಾನ್ಯವಾಗಿ ಊರಿನ ಮಹೇಶ್ವರರಿಗೆ ಜಂಗಮವೆಂದು ಕರೆಯುವುದುಂಟು,  ತಾತ್ವಿಕವಾಗಿ ಅದು ಸುಳ್ಳು, ಜಂಗಮ ಜಾತಿಯ ವಾಚಕವಲ್ಲಾ ಅದು ಜ್ಞಾನಯ ಕುರುಹು.

‘ಜಂಗಮನ ಸುಳಿವು ವಸಂತದ ತಂಗಾಳಿಯಂತೆ’ ಎಂದು ಪ್ರಭು ಹೇಳಿದ್ದಾರೆ.

ಇಷ್ಟಲಿಂಗದ ಚೈತನ್ಯವೇ ಜಂಗಮ,

ಲಿಂಗದ ಪ್ರಾಣವೇ ಜಂಗಮನೋಡಾ. ಎಂದು ಶರಣರು ಸಾರಿದ್ದಾರೆ.

ಜಂಗಮನಿಂದಲೇ ಲಿಂಗಕ್ಕೆ ಪ್ರಾಣಬರುತ್ತದೆ, ಜಂಗಮ ತೃಪ್ತಿಯಾದರೆ ಲಿಂಗವೇ ತೃಪ್ತಿಯಾಗುತ್ತೆ, ಲಿಂಗ ತೃಪ್ತಿಯಾದರೆ ಇಡೀ ಬ್ರಹ್ಮಾಂಡವು ಸಂತೋಷದಿಂದ ಇರಲು ಸಾಧ್ಯ.

ಕೇಶ ಕಾಷಾಂಬರವನಿಕ್ಕಿದರೇನು?

ರುದ್ರಾಕ್ಷಿ ಮಕುಟವ ಧರಿಸಿದರೆ ಏನು?

ಸಾಕಾರದಲ್ಲಿ ಸನುಮತರಲ್ಲ, ನಿರಾಕರಿಸಿದಲ್ಲಿ ನಿರುತರಲ್ಲ,

ಪರಮಾರ್ಥದಲ್ಲಿ ಪರಿಣಾಮಿಗಳಲ್ಲ,

ಇದು ಕಾರಣ ಕೂಡಲ ಚೆನ್ನಸಂಗಯ್ಯಾ

ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ.

ಕೇವಲ ಜಂಗಮತ್ವವು ವೇಷದರಿಸುವುದರಿಂದ ಬರುವದಲ್ಲಾ, ಜಂಗಮನ ಲಕ್ಷಣವು ಇರಬೇಕು.

ಜಂಗಮನ ಮುಖ್ಯ ಲಕ್ಷಣವೆಂದರೆ ಅರಿವು ಆಚಾರದಿಂದ ಇರಬೇಕು, ಕಾಮ ಕ್ರೋಧಗಳನ್ನು ಮೆಟ್ಟಿ ನಿಂತಿರಬೇಕು, ಮೋಹ ಮಾಯೆಗೆ ಒಳಗಾಗಿರಬಾರದು, ನಿರಹಂಕಾರನಾಗಿ ನಿರಂಜನ ನಿರಾಬಾರಿಯಾಗಿರಬೇಕು,  ಮಾತಿನಲ್ಲಿ ಹಿತವಿರಬೇಕು, ವಿನಯವಂತಿಕೆ ಇರಬೇಕು, ಇನ್ನೊಬ್ಬರಿಗೆ ನೋವುಂಟು ಮಾಡದಿರಬೇಕು,

ಹೀಗಲ್ಲದಿದ್ದರೆ ಅವನು ಜಂಗಮನಿಗೆ ಅಯೋಗ್ಯ ಎನೆಸಿಕೊಳ್ಳುವನು.

ಮೈಲಾರ ಬಸವಲಿಂಗ ಶರಣರು –

ಲಿಂಗದ ಹರಣವೇ ಜಂಗಮ, ಜಂಗಮಕೆ ಲಿಂಗ ಅಂಗ. ಎಂದಿದ್ದಾರೆ.

ಲಿಂಗ ಜಂಗಮದಲ್ಲಿ ವ್ಯತ್ಯಾಸವನ್ನು ಹುಡುಕಬಾರದು, ಭಕ್ತನು ಲಿಂಗಪೂಜೆಮಾಡಿಕೊಳ್ಳುವುದೇ ಜಂಗಮನ ದರ್ಶನ ಮಾಡಿಕೊಳ್ಳಲು,  ಜಂಗಮನಿದ್ದರೆ ಲಿಂಗಪೂಜೆಯ ಬೇಕಾಗುವುದಿಲ್ಲ.

 

ಚನ್ನಬಸವಣ್ಣನವರು-

ಲಿಂಗಾರ್ಚನೆಯ ಮಾಡುವೆನಯ್ಯಾ ನಾನು ಜಂಗಮ ಮನೆಗೆ ಬರಬೇಕೆಂದು,

ಜಂಗಮ ಮನೆಗೆ ಬಂದಡೆ ಆ ಲಿಂಗಾರ್ಚನೆಯ ಮಾಡದೆ ಜಂಗಮಾರ್ಚನೆ ಮಾಡುವೆನಯ್ಯಾ.

ಅಂತಾ ಹೇಳಿದ್ದಾರೆ.

 

ಶ್ರೀ ಬಸವಲಿಂಗ ಶರಣರು –

ಕರದಿಷ್ಟ ಲಿಂಗದಾ ಹರಣ ಜಂಗಮವೆಂದು

ನೆರೆ ನಂಬಿ ಬಳಿಕ ಎರವ ಬಾವಿಸಬೇಡೆಂ

ದೊರೆದ ಶ್ರೀ ಗುರುವೇ ಕೃಪೆಯಾಗು.

 

ಪರಶಿವನು ಜಂಗಮನ ಅವತಾರಹೊತ್ತು ಜಗತ್ತಿನಲ್ಲಿ ನಡೆಯುತ್ತಿರುತ್ತಾನೆ,

 

ಬಸವಲಿಂಗ ಶರಣರು –

ಧರೆಗೆ ನೀರೆರೆಯಲ್ಕೆ ಮರವು ಫಲವಾಂತಂತೆ

ಚರಲಿಂಗ ತೃಪ್ತಿ ಕರದಿಷ್ಟ ಲಿಂಗಕೆಂ

ದೊರೆದ ಶ್ರೀ ಗುರುವೇ ಕೃಪೆಯಾಗು.

 

ಮರಕ್ಕೆ ಭೂಮಿಯೇ ಮುಖ,

ಲಿಂಗದ ಮುಖವೇ ಜಂಗಮನಾಗಿದ್ದಾಗ ಅವನಿಗೆ ಸಮರ್ಪಿಸಬೇಕು, ಹಾಗೂ ಅವರಲ್ಲಿ ಬಿನ್ನ ಭಾವವನ್ನು ನೋಡಬಾರದು.

ಆ ಜಂಗಮವ ಹರನೆಂದು ಕಂಡು ನರನೆಂದು ಬಾವಿಸಿದಡೆ ನರಕ ತಪ್ಪದು ಎಂದು ಬಸವಣ್ಣನವರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಶರಣರು ಜಂಗಮ ಲಿಂಗದ ಸಮಾನತೆಯನ್ನು ವರ್ಣಿಸಿದ್ದಾರೆ.

ವೃಕ್ಷಗಳಲ್ಲಿ ಕಲ್ಪವೃಕ್ಷವು ಕಲ್ಪಿಸಿದವರಿಗೆ ಕೊಡುವ ಹಾಗೆ ಮುಮುಕ್ಷುವಾದ ಜಂಗಮನು ಮೋಕ್ಷವನ್ನು ಕೇಳುವ ಸದ್ಭಕ್ತರಿಗೆ ಮುಕ್ತಿಯನ್ನು ಕೊಡುವನು.

ಶಿಲೆಯ ರಾಶಿಗಳಲ್ಲಿ ಪರುಷಮಣಿಯೂ ಶ್ರೇಷ್ಠವಾಗಿದೆ, ಅದರ ಬೆಲೆಯೂ ಅಮೂಲ್ಯ, ಹಾಗೆ ನರಲೋಕದೋಳಗೆ ಮಹಾಜ್ಞಾನಿಯಾದ ಚರಲಿಂಗ (ಜಂಗಮ)ನೆ ಶ್ರೇಷ್ಠನಾಗಿರುವನು.

 

ಮುಂದೆ ಶರಣರು ಜಂಗಮನು ಭಕ್ತಿ ಜ್ಞಾನ ವೈರಾಗ್ಯಗಳನ್ನು ತನ್ನಲ್ಲಿ ಇಂಗಿತವನ್ನು ಮಾಡಿಕೊಂಡು ಸ್ವಯ, ಚರ, ಪರವೆಂದು ಮೂರು ತೆರನಾಗುವನು.

ಎಂದಿದ್ದಾರೆ.

ಸ್ವಯ ಚರ ಪರ ಸದ್ ಭಕ್ತಿಯು ಜ್ಞಾನ ವೈರಾಗ್ಯ ತ್ರಯವನ್ನ ನೀ ವಿನಯದಿಂದ ಕೇಳ್ವುದು

ತನಯ ಎಂದ ಗುರುವೆ ಕೃಪೆಯಾಗು.

ನಿರಂಜನ ಜಂಗಮನಲ್ಲಿ ಸ್ವಯ ಚರ ಪರವೆಂಬ ಬೇಧತ್ರಯವಿರುವದು.

ಸ್ವಯ ಜಂಗಮ.

ಒಂದೇ ಮಠವನ್ನು ಆಶ್ರಯಿಸಿ ಲಿಂಗ ಪೂಜೆ ಮಾಡುತ್ತಾ,  ಸಮಾಧಾನಿಯಾಗಿ ನಿರಂತರ ಸತ್ಯಜ್ಞಾನ ಪರನಾಗಿ ಬಂದು ಹೋಗುವ ಭಕ್ತರಿಗೆ ಜಂಗಮಮೂರ್ತಿಗಳಿಗೆ ಉಪಚಾರವನ್ನು ಮಾಡುತ್ತಾ ಮಠದಲ್ಲಿ ಇರುತ್ತಾನೆಯೋ ಅವನೇ ಸ್ವಯಜಂಗಮ.

ಇದೇ ಸಾರವನ್ನೇ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸ್ವಯಜಂಗಮನ ಬಗ್ಗೆ ಮಂಗಲಪಾಡಿದ್ದಾರೆ –

ಒಂದೇ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ.

ನಿಂದು ಏಕಾಂತದಾನಂದದ ಯೋಗದ

ಚಂದವನರಿದನುಷ್ಠಾನಿಪನೇ ಶಿವಸ್ವಯಗೆ.

ಚರ ಜಂಗಮ.

ಷಟಸ್ಥಲಾಚಾರಸಂಪನ್ನನಾಗಿ, ಸುಜ್ಞಾನ ಮೂರುತಿಯಾಗಿ ಭೂಮಂಡಲವನ್ನು ಸಂಚರಿಸುತ್ತಾ ತನ್ನ ನಂಬಿದ ಭಕ್ತರಿಗೆ ತತ್ತ್ವಜ್ಞಾನವನ್ನು ಶಿವಾನುಭವವನ್ನು ಬೋಧಿಸುತ್ತಾ, ಪಾದಸ್ಪರ್ಶದಿಂದ, ಹಸ್ತ ಸ್ಪರ್ಶದಿಂದ, ದರ್ಶನ ಸ್ಪರ್ಶದಿಂದ ಪವಿತ್ರ ರನ್ನಾಗಿ ಮಾಡುತ್ತಾ, ಭಕ್ತರ ಹಿತ ಕಾಯುವವನೇ ಚರ ಜಂಗಮ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಚರ ಜಂಗಮನನ್ನು ಕುರಿತು –

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ.

ಎಂದು ಮಂಗಲಪಾಡಿದ್ದಾರೆ.

ಪರ ಜಂಗಮ.

 

ಪರ ಜಂಗಮನು ಪರಮ ವೈರಾಗಿ, ಷಟಸ್ಥಲಾಚರಣೆಯಿಂದ ಸಚ್ಚಿದಾನಂದ ಸ್ವರೂಪಿಯಾದ ಜಂಗಮ ಶಿವನ ಸಾಮ್ರಾಜ್ಯ(ಕೈಲಾಸ) ವನ್ನೆ ದಿಕ್ಕರಿಸುವನು, ಆಶಿಸನು. ಪರಶಿವನ ಚತುರ್ವಿಧ ಪದವಿಗಳನ್ನು ಕವಡೆಗೆ ಸಾಮಾನ ಎಂದು ತಿಳಿಯುವನು, ತನ್ನ ಭಕ್ತರು ತನ್ನೆಡೆಗೆ ಬಂದ ಭಕ್ತರನ್ನು ಶಿವಭಾವದಿಂದ ದೃಷ್ಟಿಸಿ ಪಾವನಗೊಳಿಸುವವನೆ ಪರ ಜಂಗಮ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಪರಜಂಗಮನ ಕುರಿತು ಮಂಗಲಪಾಡಿದ್ದಾರೆ –

ಪಾಪ ಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣಗಳ ತೂರಿ

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯ ವಳಿದು ಶಿವನಾತಹ ಪರತರಗೆ.

ಸ್ವಯ ಜಂಗಮನು ಸದ್ಭಕ್ತಿಯುಳ್ಳವನಾಗಿರುತ್ತಾನೆ,

ಚರ ಜಂಗಮನು ಜ್ಞಾನವುಳ್ಳವನಾಗಿರುತ್ತಾನೆ,

ಪರ ಜಂಗಮನು ವೈರಾಗ್ಯದಿಂದಿರುವನು.

ಸಾಮಾನ್ಯವಾಗಿ ಸ್ವಯ ಚರ ಜಂಗಮರು ಸಿಗಬಹುದು, ಪರ ಜಂಗಮನು ಸಿಗುವುದು ದುರ್ಬಲವಾಗಿದೆ.

ಮುಂದೆ ಶರಣರು ಜಂಗಮನ ಸಹಜಾಚರಣೆಯನ್ನು ಹೇಳಿದ್ದಾರೆ,

ಜಂಗಮನಾದವನು ತಲೆಯನ್ನು ಮೀಸೆಯನ್ನು ಬೋಳಿಸಬೇಕು, ಹಣೆಯಲ್ಲಿ ತ್ರಿಪುಂಡ್ರ ಭಸ್ಮಧಾರಣೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿರಬೇಕು, ಕೌಪೀನ ಧರಿಸಿ, ಕಾವಿಯನ್ನ ಹೊದ್ದು, ಕೈಯಲ್ಲಿ ಯೋಗ ದಂಡವನ್ನು ಹಿಡಿದಿರಬೇಕು, ಸಂಚಾರ ಮೂರ್ತಿಯಾದ ಕಾರಣ ಕ್ರಿಯಾ ಭಸ್ಮವನ್ನು ಎಡತಓಳಇನಲ್ಲಇ ಕಟ್ಟಿಕೊಂಡಿರಬೇಕು, ಬಲಗೈಯಲ್ಲಿ ಜಪಮಾಲೆ ಧರಿಸಿರಬೇಕು, ಬರಿಗಾಲಿನಲ್ಲಿ ನಡೆಯದೇ ಆವುಗೆಯನ್ನು ಮೆಟ್ಟಿರಬೇಕು, ಪಾದಗಳನ್ನು ಮುಂದಿಟ್ಟು ಕಣ್ಣನ್ನು ಪಾದಗಳಲ್ಲಿ ಇಟ್ಟಿರಬೇಕು, ಜಂಗಮನ ಪಂಚ ಮುದ್ರೆಗಳಾದ – 1) ಕೈಯಲ್ಲಿ ಕೋಲು, 2) ನಡದಲ್ಲಿ ಕೌಪೀನ, 3) ಮೈ ಮೇಲೆ ಕಂಥೆ, 4) ಕಮಂಡಲು, 5) ಪ್ರಸಾದ ಬಟ್ಟಲು ಈ ಮುದ್ರೆಗಳು ಬೇಕೆಬೇಕು ಎನ್ನುವರು

ಬಸವಲಿಂಗ ಶರಣರು –

ಹಳ್ಳಿಗೇಕವೆ ಭುಕ್ತ ಡಿಳ್ಳಿಗೇ ಐದೂಟ

ಹೊಳ್ಳದೊಳು ಒರಗಿ ಇಳ್ಳುಗಳೆವಯ್ಯಗೆ

ಜಗಸುಳ್ಳೆಂದ ಗುರುವೇ ಕೃಪೆಯಾಗು.

ಜಂಗಮನಾದವನು ಜಂಗಮತ್ವವವನ್ನು ಮೈಗೂಡಿಸಿಕೊಂಡು “ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿ” ಇದ್ದುಕೊಂಡು ಹಳ್ಳಿ ಪಟ್ಟಣಗಳಲ್ಲಿ ಚಂಚಸುತ್ತಾ ಸಕಲ ಜೀವಿಗಳಿಗೆ ಲೇಸ ಬಯಸುವ ದಯಾಮಯಿ ಆಗಿರುತ್ತಾನೆ ಎಂದು ಶ್ರೀ ಬಸವಲಿಂಗ ಶರಣರು ತಿಳಿಸಿದ್ದಾರೆ

ಅಂತರಂಗದ ಜಂಗಮ.

ಬಹಿರಂಗದ ಜಂಗಮ.

 

ಜಂಗಮ ತತ್ವವನ್ನು ಅರಿತು ಅಂತರಂಗದಲ್ಲಿ ಜಂಗಮನಾಗಿ ಅರ್ಚಿಸಬೇಕು, ಪೂಜಿಸಬೇಕು.

ಸ್ಥೂಲ ಮತ್ತು ಸೂಕ್ಷ್ಮ ಶರೀರಗಳಿಗೆ ಕಾರಣವಾದ ಪಂಚಭೂತಗಳು, ಕರ್ಮೆಂದ್ರಿಯಗಳು, ಜ್ಞಾನೇಂದ್ರಿಯಗಳು, ಅವುಗಳ ಗುಣಗಳ, ಪಂಚವಿಷಯಗಳು, ಮಾತು, ದಶೇಂದ್ರಿಯವಾದ ಮನಸ್ಸು, ವಿವೇಕರೂಪಾದ ಅರಿವಿಗೆ ಸಾಕ್ಷೀಭೂತ ಚೈತನ್ಯವೇ ಅಂತರಂಗದ ಜಂಗಮ.

ಕಾರಣ ಶರೀರಕ್ಕೆ ಕಾರಣವಾದ ಷಡ್ಭಾವಗಳು, ಜೀವತ್ರಯ (ವಿಶ್ವ, ತೈಜಸ, ಪ್ರಾಜ್ಞಾ)ಗಳಿಗೆ ಚೈತನ್ಯವನ್ನು ಕೊಡುವ ಸಂಜೀವಿಯಾಗಿದವನೆ ಜಂಗಮ.

ಷಡ್ಭಾವಗಳಾದ – ಭಾವ, ಜ್ಞಾನ, ಮನ, ಅಹಂಕಾರ, ಬುದ್ಧಿ, ಚಿತ್ತಗಳು ಜಂಗಮನ ಸಾಕ್ಷಾತ್ಕಾರದಿಂದ ಸದ್ಭಾವ, ಸುಜ್ಞಾನ, ಸುಮನ, ನಿರಹಂಕಾರ, ಸುಬುದ್ಧಿ, ಸುಚಿತ್ತಗಳಾಗಿ ಪರಿಣಮಿಸುತ್ತವೆ. ಈ ಹಸ್ತದಿಂದಲೇ ಭಾವಲಿಂಗಗೊಳಗಿನ ಷಡ್ಲಿಂಗಳನ್ನು ಪೂಜಿಸಲು ಸಾಧ್ಯವಾಗುತ್ತದೆ ಆದರಿಂದ ಆಂತರಿಕ ಜಂಗಮತತ್ವವನ್ನು ಮೈಗೊಡಿಸಿಕೊಳ್ಳಬೇಕೆಂದು ಬಸವಲಿಂಗ ಶರಣರು ತಿಳಿಸಿದ್ದಾರೆ.

ಇನ್ನೂ ಬಹಿರಂಗದ ಜಂಗಮನನ್ನು ಕುರಿತು – ಅಂತರಂಗದ ಆತ್ಮಚೈತನ್ಯ ರೂಪ ಜಂಗಮನ ಕೃಪೆಯಿಂದ ಬಾಹ್ಯ ಕ್ರಿಯೆಗಳೆಲ್ಲಾ ನಡೆಯುತ್ತವೆ.

“ಕಾಯ ಜಂಗಮವೆಂಬು ಪಾಯವನು ಕೇಳೆಲವೊ

ಬಾಹ್ಯವೇ ಸಹಜ ಕ್ರಿಯೆ ಜಂಗಮ” ಎನ್ನುತ್ತಾ

ಶರೀರಕ್ಕೆ ಬಾಯಿ ಎಂಬ  ಇಂದ್ರಿಯವೇ ಮುಖ್ಯ, ಬಾಹ್ಯವಾದ ಸಹಜ ಕ್ರಿಯೆಗಳೆ ಆಂತರಿಕವಾಗಿ ಸುಜ್ಞಾನವನ್ನು ಬೆಳೆಸುತ್ತದೆ.

ಬಾಯಿಯಿಂದ ಸ್ವೀಕರಿಸುವ ಪ್ರಸಾದ ಮತ್ತು ನಾಲಿಗೆಯಿಂದ ಹೊರ ಬರುವ ನುಡಿ ಸಹಜಸಿದ್ಧಿಯನ್ನು ಹೊಂದಬೇಕು, ಪ್ರಸಾದದಿಂದ ಕಾಯ ಕಾಯಪ್ರಸಾದವಾಗಿ, ನುಡಿಯುವ ಮಾತು ಮಂತ್ರವಾಗಿರಬೇಕು. ದಾನ – ಧರ್ಮ ಹುಟ್ಟುವುದೇ ಕೈಗಳಿಂದ, ಅಂತರಂಗದ ಸುಜ್ಞಾನದ ಸತ್ಪ್ರೇರಣೆಯಿಂದ ಕೈಗಳೆರಡು ದಾನ ಧರ್ಮಕ್ಕೆ ಕಾರಣ ಎಂದು ತಿಳಿದಿರಬೇಕು, ಪಾದಗಳು ಸನ್ಮಾರ್ಗ ಕಡೆ ನಡೆಗೆ ಕಾರಣವಾಗುತ್ತದೆ, ತನ್ನ ಸದ್ಭಕ್ತರಿಗೆ ಸಹಜ ಸನ್ಮಾರ್ಗದಲ್ಲಿ ತೋರಿಸಿ ಕೊಡುವ ಶರಣನ ನಡೆಯು ಮಾರ್ಗದರ್ಶನ ಮಾಡಿ ಮೋಹ ಮಾಯೆಯಲ್ಲಿ ಬಿದ್ದ ಭಕ್ತರನ್ನು ನಾಶಮಾಡುತ್ತದೆ, ಹೀಗೆ ಶರಣರು ಕಾಯ ಮತ್ತು ಬಾಯಿ ಸಹಜ ಸತ್ರ್ಕಿಯೆಗಳೇ  ಬಹಿರಂಗದ ಜಂಗಮವತ್ವ ಎಂದಿದ್ದಾರೆ.

ಬಾಹ್ಯ ಮತ್ತು ಅಂತರಂಗದಲ್ಲಿ ಜಂಗಮನನ್ನು ಅಳವಡಿಸಿಕೊಳ್ಳಬೇಕು, ಅರಿವೇ ಗುರುವಾಗಿ ಅರುವಿನೊಳಗಣ ಅನುಭವವೇ ಲಿಂಗವಾಗಿ ಅನುಭವದೊಳಗಣ ಆನಂದವೇ ಜಂಗಮನನ್ನು ಸಾಕ್ಷಾತ್ಕರಿಸಬೇಕೆಂದಿದ್ದಾರೆ.

  1. ಪಾದೋದಕ.

ವೀರಶೈವ ಲಿಂಗಾಯತರ ಆರಾಧ್ಯ ವಸ್ತುಗಳಾದ ಗುರು ಲಿಂಗ ಜಂಗಮದ ಆರಾಧನೆಯಿಂದ ಬರುವ ಫಲವೇ ಪಾದೋದಕ ಮತ್ತು ಪ್ರಸಾದ.

ಪಾದೋದಕದಲ್ಲಿ ಎರಡು ಪದಗಳಿವೆ. ಪಾದ – ಉದಕ,

ಶಬ್ದದಲ್ಲಿ ನಾಲ್ಕು ಅಕ್ಷರ,

ಪಾ – ಪಾಪವನ್ನು ನಾಶಮಾಡಿ ಜ್ಞಾನವನ್ನು ಉದಯಿಸುತ್ತೆ,

ದೋ – ದೋಷವನ್ನು ನಿವಾರಿಸಿ ಶುದ್ಧನನ್ನಾಗಿಸುತ್ತೆ,

ದ – ದರ್ಪವನ್ನು ಸಂಹಾರಮಾಡುತ್ತೆ,

ಕ – ಕರ್ಮವನ್ನು ನಾಶಮಾಡುತ್ತದೆ.

 

ಗುರು ಜಂಗಮರ ನೀರಿನಿಂದ ಪಾದಗಳನ್ನು ತೊಳೆಯುವದೆ ಪಾದೋದಕ, ಭಕ್ತನಾದವನು ಅಂತಹ ಪಾದಗಳನ್ನು ಹೂವಿನಂತೆ ತನ್ನ ಶಿರದ ಮೇಲೆ ಇಟ್ಟುಕೊಂಡು ಮೆರೆದಾಡುತ್ತಾ, ಪೂಜಿಸಿ ವಂದಿಸಿ ತನ್ನ ಭಕ್ತಿಯನ್ನು ಸಮರ್ಪಣೆಮಾಡುತ್ತಾನೆ, ಅಂತಹ ಪವಿತ್ರ ಪಾದದಿಂದ ನೆಲವೇ ಸುಕ್ಷೇತ್ರ, ಜಲವೇ ಪಾವನ ಆಗುತ್ತದೆ. ಜಡವಾಗಿರುವಂತಹ ನೀರು ಗುರು ಜಂಗಮರ ಪಾದ ಸ್ಪರ್ಶದಿಂದ ಪಾದೋದಕವಾಗುತ್ತೆ.

 

ಶ್ರೀ ಬಸವೇಶ್ವರರು ಪಾದದ ಹಿರಿಮೆಯನ್ನು ಕುರಿತು  –

ಬ್ರಹ್ಮಂಗೆ ವಾಕ್ಪರುಷ,

ವಿಷ್ಣುವಿಂಗೆ ನಯನ ಪರುಷ,

ರುದ್ರಂಗೆ ಹಸ್ತ ಪರುಷ,

ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ.

 

ಶ್ರೀ ಬಸವಲಿಂಗ ಶರಣರು ಜಂಗಮರ ಪಾದದಿಂದ ಉತ್ಪತ್ತಿಯಾದ  ಪಾದೋದಕವೇ ಪರಬ್ರಹ್ಮವಾದುದು ಎಂದು –

ಭೇದಿಸುತ ನೋಡಲಾ  ಪಾದದಿಂದೊಗೆದ

ಪಾದೋದಕ ಪರಬ್ರಹ್ಮ ವಾದುದೆಂದೆನೆಗೆ

ನೀ ಭೋದಿಸಿದ ಗುರುವೇ ಕೃಪೆಯಾಗು.

ವೀರಶೈವ ಲಿಂಗಾಯತರಿಗೆ ಅರ್ಚನೆ ಅರ್ಪಣೆ ಅನುಭವಗಳೇ ಸಿದ್ಧಾಂತ.

ಗುರು ಲಿಂಗ ಜಂಗಮರನ್ನು ಅರ್ಚಿಸುವುದರಿಂದ ದೊರೆಯುವ ಫಲವೇ ಪಾದೋದಕ ಪ್ರಸಾದ.

ಪರಬ್ರಹ್ಮಸ್ವರೂಪಿಯಾದ ಜಂಗಮನಿಂದ ಚರಣೋದಕವಾಗಿ ಸೃಷ್ಟಿಯಾಗಿದೆ, ಪಾದೋದಕವು ಭಕ್ತನ ಸತ್ಕ್ರಿಯೆ ಹಾಗೂ ಜಂಗಮನ ಸುಜ್ಞಾನ ಮಥನದಿಂದ ಹುಟ್ಟಿದೆ.

ಪಾದಕ್ಕೂ ಪರಬ್ರಹ್ಮಕ್ಕೂ ಅತ್ಯಂತ ಸಂಬಂಧ ಇದೆ, ಪಶ್ಚಿಮ ಶಿಖಾ ಚಕ್ರದಲ್ಲಿಯೇ ನಿರಂಜನ ಪರಬ್ರಹ್ಮನ ವಾಸಸ್ಥಳ, ಅದಕ್ಕೆ ಮೆದುಳು ಅಂತಾನೇ ಕರೆಯುತ್ತಾರೆ, ಆ ಮೆದುಳಿಗೂ ಪಾದಕ್ಕೂ ನೇರ ಸಂಬಂಧ ಇದೆ, ಜಂಗಮತತ್ವವು ಪಾದದಲ್ಲಿ ಪ್ರಕಟವಾಗುವುದರಿಂದ ಭಕ್ತರು ಪಾದಕ್ಕೆ ನಮಸ್ಕರಿಸುತ್ತಾರೆ.

ನಿರಂಜನಮೂರುತಿ ಜಂಗಮನ ಪಾದಾಂಗುಷ್ಠದಲ್ಲಿ ಪಶ್ಚಿಮ ಶಿಖಾ ಚಕ್ರದ ಅಮೃತವೂ ಹರಿದು ಹೋಗುತ್ತಿರುತ್ತದೆ ಅದಕ್ಕೆ ಎಲ್ಲರೂ ಪಾದಕ್ಕೆ ನಮಸ್ಕರಿಸುತ್ತಾರೆ.

ಚನ್ನಬಸವಣ್ಣನವರು –

“ಗುರುವಾಗಲಿ ಲಿಂಗವಾಗಲಿ ಜಂಗಮನಾಗಲಿ ಪಾದೋಕದ ಪ್ರಸಾದವಿಲ್ಲದ ಪಾಪಿಯ ಮುಖವ ನೋಡಲಾಗದು” ಎಂದಿದ್ದಾರೆ.

ಪಾದೋದಕವು ಗುರುವಿಗೂ ಬೇಕು, ಜಂಗಮನಿಗೂ ಬೇಕು, ಸ್ಥಾವರ ಲಿಂಗದಲ್ಲಿ ಕಲೆಬರುವುದಕ್ಕೆ ಜಂಗಮನ ಪಾದೋದಕವು ಬೇಕೇಬೇಕು.

ಗುರುಪಾದೋದಕದಿಂದ ಸಂಚಿತ ಕರ್ಮ ನಾಸ್ತಿ,

ಲಿಂಗ ಪಾದೋದಕದಿಂದ ಪ್ರಾರಬ್ಧ ಕರ್ಮ ನಾಸ್ತಿ,

ಜಂಗಮ ಪಾದೋದಕದಿಂದ ಆಗಾಮಿ ಕರ್ಮ ನಾಸ್ತಿ.

ಎಂದಿದ್ದಾರೆ.

ಯಾರು ಪಾದೋದಕದ ಮಹಿಮೆಯನ್ನು ತಿಳಿಯಲಾರದೆ ಅದನ್ನು ಉದಾಸೀನ ಮಾಡಿದರೆ, ಅದರ ತತ್ವಕ್ಕೆ ಅಪಚಾರ ಮಾಡಿದಂತೆ, ಅಂತವನು ನರಕದಲ್ಲಿ ಬಿದ್ದು ಒದ್ದಾಡುವನು, ಎಂದು ಶಾಸ್ತ್ರಗಳು ಹೇಳುತ್ತವೆ.

ಗುರು ಜಂಗಮರ ಪಾದವನ್ನು ತೊಳೆದ ನೀರು ಪಾದೋದಕವಾಗಿರುತ್ತೆ, ನೀರಿನಲ್ಲಿರುವ ಜಡತ್ವವು ಹೋಗಿ ಪಾದೋದಕ ಆಗಿರುತ್ತೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟು ಕೊಂಡು ಕೈಕಾಲು ಮುಖ ತೊಳೆದು ಸ್ನಾನ ಮಾಡಬೇಕು, ಅದನ್ನು ಬಳಸಿಯೆ‌ ಅಡುಗೆಯನ್ನು ಮಾಡಬೇಕು, ಎಂದು ಬಸವಲಿಂಗ ಶರಣರು ತಿಳಿಸಿದ್ದಾರೆ. ಮುಂದೆ ಪಾದೋದಕವನ್ನು ಯಾವ ರೀತಿ ಗುರುವಿನ ಪಾದದಿಂದ ಮಾಡಬೇಕು ಮೂರು ಸಾರಿ ಲಿಂಗದ ಮೇಲೆ ಗುರು ಪಾದೋದಕ, ಲಿಂಗಪಾದೋದಕ, ಜಂಗಮ ಪಾದೋದಕ,ಎಂದು ಎರೆದು ಭಕ್ತಿಯಿಂದ ಸ್ವೀಕರಿಸಬೇಕು ಎಂದು ತಿಳಿಸುತ್ತಾರೆ.

ಪಾದೋದಕ ಮಹಿಮೆ

ಶರಣರು ಅನೇಕ ಪುರಾಣ ಕಾವ್ಯಗಳಲ್ಲಿರುವ ದೃಷ್ಟಾಂತಗಳಿಂದ ನಮ್ಮೆಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ –

ನರಿಯ ಹಿಂಡಿನ ಮೇಲೆ ಚರಣೋದಕವನ್ನು(ಪಾದೋದಕವನ್ನು) ಸಿಂಪಡಿಸಿದಾಗ ಆ ನರಿಗಳೆಲ್ಲಾ ಕುದುರೆಗಳಾದವು ಎಂದು ಪ್ರೌಢರಾಯನ ಕಾವ್ಯದಲ್ಲಿರುವ ದೃಷ್ಟಾಂತವನ್ನು ಹೇಳಿದ್ದಾರೆ.

ಅರಣ್ಯದಲ್ಲಿ ಒಬ್ಬ ಜಂಗಮಮೂರುತಿ ಪೂಜೆಯನ್ನು ಮಾಡಿ ಪಾದೋದಕ ಸ್ವೀಕರಿಸುವಾಗ ಬಿರುಗಾಳಿ ಬಂದಾಗ ಪಾದೋದಕದ ಹನಿ ಅಲ್ಲಿಯೇ ಇದ್ದ ಹಾವಿನ ಬಾಯಲ್ಲಿ ಬೀಳುತ್ತೇ ಆ ಹಾವಿನ ಮೇಲೆ ಕಳ್ಳನು ಕಾಲಿಟ್ಟಾಗ ಅವನಿಗೆ ಕಡಿದರೂ ಆ ಕಳ್ಳ ಸಾಯುವುದಿಲ್ಲ. ಎಂದು “ಅನಾದಿ ವೀರಶೈವ ಸಾರಸಂಗ್ರಹ” ದಲ್ಲಿರುವ ದೃಷ್ಟಾಂತವನ್ನು ಹೇಳಿದ್ದಾರೆ.

ಜಂಗಮನನ್ನು ಆರಾಧಿಸಿ ಭಕ್ತಿಯಿಂದ ಪಾದೋದಕವನ್ನೂ ಸ್ವಿಕರಿಸುವುದರಿಂದ ಮುಕ್ತಿವು ದೊರೆಯುತ್ತದೆ.

ಜಗತ್ತಿನ ಅರವತ್ತೆಂಟು ಪುಣ್ಯಕ್ಷೇತ್ರದ ತೀರ್ಥದ ಮುಂದೆ ಜಂಗಮನ ಪಾದೋದಕವು ಸಮನಿಸದು, ಗುರು ಲಿಂಗ ಜಂಗಮರ ಪಾದೋದಕವೇ ಶ್ರೇಷ್ಠವಾದುದು ಎಂದು ಬಸವಲಿಂಗ ಶರಣರು ಪಾದೋದಕದ ಮಹಿಮೆಯನ್ನು ತಿಳಿಸಿದ್ದಾರೆ.

 

ಇಲ್ಲಿಯ ತನಕ ಬಾಹ್ಯವಾಗಿ ಪಾದೋದಕ ಅಂದರೇನು? ಅದರಲ್ಲಿ ಎಷ್ಟು ವಿಧ? ಯಾವ ರೀತಿ ಅದನ್ನು ತಯಾರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿತ್ತಾಯಿತು, ಈಗ ಪಾದೋದಕವನ್ನು ತೆಗೆದುಕೊಳ್ಳುವುದರಿಂದ ಅಂತರಂಗದ ಅರಿವಿನಲ್ಲಿ ತನಗೆ ಯಾವ ಯಾವ ಪರಿಣಾಮವೂ ಆಗುತ್ತದೆ ಎಂಬುದನ್ನು ಅನುಭವಿಸಿ ತಿಳಿದುಕೊಳ್ಳಬೇಕು ಎಂಬುದನ್ನು ತಿಳಿಸುತ್ತಾ,

ಪಾದೋದಕವನ್ನು ಭಕ್ತಿವಂತನಾಗಿ ಲಿಂಗದ ಮೇಲೆ ಎರೆದು ಸ್ವೀಕರಿಸಬೇಕು ಎಂಬುದನ್ನು ತಿಳಿದಿದ್ದೇವೆ, ಮೊದಲನೆಯದಾಗಿ ಎರೆದ ಪಾದೋದಕವು ಗುರುಪಾದೋದಕವಾಗಿ, ಇಷ್ಟಲಿಂಗಕ್ಕರ್ಪಣವಾಗುತ್ತದೆ, ಅದೇ ಕರುಣಜಲ ಎನಿಸುತ್ತದೆ ,ಸರ್ವಜೀವಿಗಳಲ್ಲಿ ಅಂತಃಕರಣ ಭಾವದಿಂದ ಕಾಣುವ ಮನೋಭಾವವು ಹುಟ್ಟುತ್ತದೆ.

ಎರಡನೆಯದಾಗಿ ಎರದ ಪಾದೋದಕವು  ಲಿಂಗಪಾದೋದಕವಾಗಿ, ಪ್ರಾಣಲಿಂಗಕ್ಕೆ ಅರ್ಪಣವಾಗುತ್ತದೆ ಅದೇ ವಿನಯಜಲ ಎನಿಸುತ್ತದೆ, ಭಯ-ಭಕ್ತಿ, ನಯ-ವಿನಯ, ದಯೆ-ಕರುಣೆಯಿಂದ ಬಾಳುವನು.

ಮೂರನೆಯದಾಗಿ ಎರೆದ ಪಾದೋದಕವು ಜಂಗಮಲಿಂಗಪಾದೋದಕವಾಗಿ, ಭಾವಲಿಂಗಕ್ಕೆ ಅರ್ಪಣೆ ಆಗುತ್ತದೆ ಅದೇ ಸಮತಾಜಲ ಎನಿಸಿಕೊಂಡು ಜ್ಞಾನ ಪಾದೋದಕ ಆಗುತ್ತದೆ, ಜ್ಞಾನವಂತನಾದ ವ್ಯಕ್ತಿಯ ಭಾವದಿಂದ “ಪಂಡಿತಾಃ ಸಮದರ್ಶಿನಃ” ಎಲ್ಲವನ್ನೂ ಸಮಾನವಾಗಿ ಕಾಣುತ್ತಾನೆ.

ಶಿವಭಕ್ತನಾಗಿರುವವ ಗುರು ಲಿಂಗ ಜಂಗಮರನ್ನು ಆರಾಧಿಸಿಕೊಂಡು ಹೋಗುವವನಲ್ಲಿ ಕರುಣ, ವಿನಯ, ಸಮತ್ವವು ಬರುವುದು, ಅವನು ಕಾಲ ಕರ್ಮ ಮಾಯಾ ರಹಿತವಾಗಿ ಅಮರನಾಗುವನು.

ಪಾದೋದಕವನ್ನು ಸ್ವೀಕರಿಸುವ ಭಕ್ತನ ಪ್ರಾಣ ಚೇತನವಾಗಿ ಪ್ರಕಟಗೊಳ್ಳುತ್ತದೆ, ಸಕಲ ಪದಾರ್ಥಗಳು ಹೋಗಿ ಪ್ರಸಾದ ಆಗುತ್ತದೆ, ಶಿಲೆಯು ಹೋಗಿ ಲಿಂಗವಾಗುತ್ತೆ, ಜಡತ್ವವು ಹೋಗಿ ದೈವತ್ವವು ಬರುತ್ತದೆ.

  1. ಪ್ರಸಾದ.

ಸದ್ಭಕ್ತನು ಸತ್ಯ ಶುದ್ಧ ಕಾಯಕವನ್ನು ಮಾಡಿ ತಂದಿರುವ ಪದಾರ್ಥವನ್ನು ಗುರು ಜಂಗಮರಿಗೆ ಅರ್ಪಿಸಿದಾಗ ಪದಾರ್ಥ ಭಾವ ಹೋಗಿ ಪ್ರಸಾದ ಎನ್ನುವ ಭಾವ ಬರುತ್ತದೆ, ಗುರು ಲಿಂಗ ಜಂಗಮರ ಅನುಗ್ರಹದಿಂದ ಬರುವಂತಹದ್ದೇ ಪ್ರಸಾದ,

ಬಸವಲಿಂಗ ಶರಣರು –

ಗುರುದೇವನೊಳು ಶುದ್ಧ ವರಲಿಂಗದೊಳು ಸಿದ್ಧ

ಚರದೊಳ್ಪ್ರಸಿದ್ಧ ದಿರದ ತೋರಿಸಿ ಎನ್ನ

ಪೊರೆದ ಶ್ರೀ ಗುರುವೇ ಕೃಪೆಯಾಗು.

ಬಂದ ಪದಾರ್ಥವನ್ನು ಗುರುವಿಗೆ ಅರ್ಪಿಸಿದಾಗ ಶುದ್ಧಪ್ರಸಾದ ಆಗುತ್ತದೆ, ಲಿಂಗಕ್ಕೆ ಅರ್ಪಿಸಿದಾಗ ಸಿದ್ಧಪ್ರಸಾದ, ಜಂಗಮನಿಗೆ ಅರ್ಪಿಸಿದಾಗ ಪ್ರಸಿದ್ಧಪ್ರಸಾದ ಆಗುತ್ತದೆ, ಗುರುವಿಗೆ ಪದಾರ್ಥಗಳು ಅರ್ಪಿಸಿದಾಗ ತನ್ನಲ್ಲಿರುವ ಲಿಂಗ ಜಂಗಮರಿಗೆ ಸಲ್ಲಿಸಕೊಳ್ಳುತ್ತಾನೆ, ಜಂಗಮನಿಗೆ ಪದಾರ್ಥವನ್ನು ಅರ್ಪಿಸಿದಾಗ ಜಂಗಮನು ತನ್ನಲ್ಲಿರುವ ಗುರು ಲಿಂಗಕ್ಕೆ ಸಲ್ಲಿಸಿ ಶುದ್ಧ ಸಿದ್ಧ ಪ್ರಸಿದ್ಧಪ್ರಸಾದವನ್ನಾಗಿಸಿ ಸ್ವೀಕರಿಸುತ್ತಾನೆ.

ಗುರು ಜಂಗಮರು ತಾವು ಸ್ವೀಕರಿಸುವ ಮೊದಲು ಪ್ರಸಾದ ಬಟ್ಟಲನ್ನು ಭಸ್ಮವನ್ನು ಹಚ್ಚಿ ಪ್ರಣವಸಂಬಂಧವನ್ನು ಮಾಡಿಕೊಂಡು ಶುದ್ಧಗೈಸಿಕೊಂಡಿರುತ್ತಾರೆ, ಭಕ್ತನು ತಂದು ನೀಡಿದ ಪದಾರ್ಥವು ಕ್ರಿಯಾ ಬಟ್ಟಲಲ್ಲಿ ಸ್ಪರ್ಶವಾದಾಗ ಅದು ಶುದ್ಧಪ್ರಸಾದ ವಾಗುತ್ತದೆ, ಗುರು ಜಂಗಮರು ಆ ಪ್ರಸಾದವನ್ನು  ಮೂರು ವೇಳೆ ಕುರಂಗ, ಪತಾಕ,  ಸೂಚಕವೆಂಬ ಮುದ್ರೆಯಿಂದ ಲಿಂಗಕ್ಕೆ ತೋರಿಸುವಾಗ ಸಿದ್ಧಪ್ರಸಾದ ಆಗುತ್ತದೆ, ಹಸ್ತದಿಂದ ಜಿಹ್ವೆಗೆ ಮುಟ್ಟುವಾಗ ಪ್ರಸಿದ್ಧ ಪ್ರಸಾದವಾಗುತ್ತದೆ, ಎಂದು ಶರಣರು ಸಾರಿದ್ದಾರೆ.

ಪ್ರತಿಯೊಂದು ತಯಾರಾದ ಪದಾರ್ಥದಲ್ಲಿ ರೂಪು, ರುಚಿ ಮತ್ತು ತೃಪ್ತಿ ಎನ್ನುವ ಗುಣಗಳಿರುತ್ತವೆ.

ಆಹಾರ ಪದಾರ್ಥಗಳನ್ನು ವಿವಿಧ ರೂಪಗಳಿಂದ ನೋಡುತ್ತೇವೆ, ಎಲ್ಲಾ ಪ್ರಸಾದ ರೂಪವನ್ನು ಇಷ್ಟಲಿಂಗಕ್ಕೆ ತೋರಿಸಿದಾಗ ಗುರುಪ್ರಸಾದ ಶುದ್ಧಪ್ರಸಾದ ರೂಪ ಎನಿಸಿಕೊಳ್ಳುತ್ತದೆ, ನಾಲಿಗೆಯ ಮೇಲೆ ಇಟ್ಟುಕೊಂಡಾಗ ರುಚಿಯ ಅನುಭವ ಆ  ಲಿಂಗಪ್ರಸಾದ ಸಿದ್ಧಪ್ರಸಾದ ಎನಿಸಿಕೊಳ್ಳುತ್ತದೆ, ಚಪ್ಪರಿಸಿ ಲಾಲರಸದೊಡನೆ ನುರಿಸುವಾಗ ತೃಪ್ತಿಯಾಗುತ್ತದೆ, ಬಿನ್ನ ರುಚಿಗಳು ಸಮರಸಗೊಂಡು ಸಿದ್ಧ ಪ್ರಸಾದ ಎನಿಸಿ ಭಾವಲಿಂಗಕ್ಕೆ ತೃಪ್ತಿಗೊಳ್ಳುತ್ತದೆ. ಹೀಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಗಳ ರೂಪು ರುಚಿ ತೃಪ್ತಿಗಳು ಪ್ರಸಾದವಾಗಿ ಆತ್ಮಕ್ಕೆ ಸಂತೃಪ್ತಿಯನ್ನು ನೀಡಬಲ್ಲದು ಎಂದು ಶರಣರು ತಿಳಿಸಿದ್ದಾರೆ.

ರೂಪು ರುಚಿ ತೃಪ್ತಿಗಳು ಸಮರ್ಪಣ ಕಾಯಕ್ಕೆ ಚೇತನವನ್ನು ನೀಡಿ ಪ್ರಸಾದ ತೃಪ್ತಿಯಿಂದಲೇ ದೇಹಕ್ಕೆ ಪ್ರಾಣ ಬರುತ್ತದೆ.

ಗುರುವಿನಿಂದ ಬಂದ ಪ್ರಸಾದ ಶುದ್ಧ ಪ್ರಸಾದವಾಗುತ್ತದೆ ಅದರಿಂದ ತಾನು ಶುದ್ಧಿಯಾಗುತ್ತದೆ, ಲಿಂಗದಿಂದ ಬಂದದ್ದು ಸಿದ್ಧ ಪ್ರಸಾದ ಅದರಿಂದ ಮನಶುದ್ಧಿ ಆಗುತ್ತದೆ, ಜಂಗಮನಿಂದ ಬಂದದ್ದು ಪ್ರಸಿದ್ಧ ಪ್ರಸಾದ ಅದರಿಂದ ಭಾವಶುದ್ಧಿಯಾಗುತ್ತದೆ ಹೀಗೆ ಮೂರು ವಿಧ ಪ್ರಸಾದಗಳು ನಮಗೆ ಸದ್ಭಾವವನ್ನು ತುಂಬುತ್ತವೆ, ತ್ರಿವಿಧ ಪ್ರಸಾದಗಳು ಜೀವನವನ್ನು ಉದ್ಧರಿಸುತ್ತವೆ, ಅಂಗನು ಲಿಂಗನಾಗುವ ಶಕ್ತಿಯನ್ನು ಕೊಡುತ್ತದೆ.

ಬಸವಲಿಂಗ ಶರಣರು –

ಏಕ ನೈಷ್ಠೆಯೊಳು ನೀ ನೇಕಾದಶ ಶೇಷವನು

ಸ್ವೀಕರಿಸುತಿರಲು ಕಾಕು ಫಲಪದದಾಸೆ

ಏಕೆಂದ ಗುರುವೇ ಕೃಪೆಯಾಗು.

ಇಲ್ಲಿ ಶೇಷ ಎಂಬ ಪದ ಅರ್ಥ ಗುರು ಜಂಗಮರ ಪ್ರಸಾದದ ನಂತರ ಉಳಿದ ಪ್ರಸಾದಕ್ಕೆ ಶೇಷ ಎಂದು ಕರೆಯುತ್ತಾರೆ,

ಗುರು ಲಿಂಗ ಜಂಗಮರ ಪ್ರಸಾದವನ್ನು ಸ್ವೀಕರಿಸಿದರೆ ಭ

ಭವವು ನಾಶವಾಗುತ್ತದೆ, ಹೀಗಿರುವಾಗ ಕಾಕು ಫಲಗಳ ಆಸೆ ಏಕೆ ಎಂದು ಪ್ರಶ್ನಿಸಿದ್ದಾರೆ, ಗುರು ಲಿಂಗ ಜಂಗಮರ ಪ್ರಸಾದಕ್ಕೆ ಆಸೆ ಪಡಬೇಕೆ ವಿನಃ ಇನ್ನುಳಿದುದಕ್ಕೆ ಆಸೆ ಪಡಬಾರದು.

ಗುರು ಲಿಂಗ ಜಂಗಮರ ತ್ರಿವಿಧ ಪ್ರಸಾದವು ಮುಂದೆ ಹನ್ನೊಂದು ಪ್ರಸಾದಗಳಾಗುತ್ತವೆ.

1-ಶುದ್ಧ ಪ್ರಸಾದ, (ಗುರು ಪ್ರಸಾದ)

2-ಸಿದ್ಧ ಪ್ರಸಾದ, (ಲಿಂಗ ಪ್ರಸಾದ)

3-ಪ್ರಸಿದ್ಧ ಪ್ರಸಾದ, (ಜಂಗಮ ಪ್ರಸಾದ)

4-ಪ್ರಸಾದಿಯ ಪ್ರಸಾದ. (ಜಂಗಮ ಪ್ರಸಾದವನ್ನು ಹಸ್ತದಲ್ಲಿ ತೆಗೆದುಕೊಂಡಾಗ ಆಗುವುದು),

5-ಸಮಯ ಪ್ರಸಾದ, (ಜಂಗಮ ಪ್ರಸಾದವನ್ನು ಪುನಃ ಕೇಳಿ ನೀಡಿಸಿಕೊಳ್ಳುವದು)

6-ಭೋಜ್ಯಪ್ರಸಾದ, (ಜಂಗಮನು ಪ್ರಸಾದವನ್ನು ತುತ್ತು ಮಾಡಿಕೊಂಡಿದ್ದು),

7-ಪಾನ್ಯ ಪ್ರಸಾದ, (ಪ್ರಸಾದವನ್ನು ಸ್ವೀಕರಿಸಿದ್ದು)

8-ಭಕ್ಷ್ಯ ಪ್ರಸಾದ,(ದಂತದಿಂದ ಜಗಿಯದ್ದು)

9-ಚೋಹ್ಯ ಪ್ರಸಾದ, (ಪ್ರಸಾದವನ್ನು ಜಿಹ್ವೆಯಿಂದ ಚಪ್ಪರಿಸಿದ್ದು)

10-ಲೇಹ್ಯ ಪ್ರಸಾದ, (ಬಟ್ಟಲಲ್ಲಿನ ಪ್ರಸಾದವನ್ನು ಸಂಪೂರ್ಣವಾಗಿ ಸೇವಿಸಿ ನಾಲಿಗೆಯಿಂದ ನೆಕ್ಕುವದು)

11- ತೃಪ್ತಿಪ್ರಸಾದ, ( ಸಂತೋಷ ಆಗುವಷ್ಟು ಪ್ರಸಾದವನ್ನು ಸ್ವೀಕರಿಸಿದಾಗ ತೃಪ್ತಿ ಕೊಡುವದೇ)

* ವೀರಶೈವ ದಾರ್ಶನಿಕ ಸಿದ್ಧಾಂತ ಎಂಬ ಗ್ರಂಥದಲ್ಲಿ ಮುಂಡರಗಿಯ ಜಗದ್ಗುರುಗಳು ವಿವರಿಸಿದ್ದಾರೆ.

ಶಿವಾದ್ವೈತಿಯಾದ ಶರಣನು ನಿತ್ಯ ಪ್ರಸಾದವನ್ನು ಸ್ವೀಕರಿಸಿ ಪ್ರಸಾದಕಾಯನಾಗಿ ಪರವಸ್ತುವೇ ತಾನಾಗಿರುತ್ತಾನೆ, ವೇದಗಳು ಪ್ರತಿಪಾದಿಸುವ ಚತುರ್ವಿಧ ಪದವಿಗಳಾದ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ಪದವಿಗಳನ್ನು ತೃಣಕ್ಕೆ ಸಮಾನ ಎಂದು ತಿಳಿದು ಅವುಗಳನ್ನು ಆಸೆ ಪಡನು, ಪ್ರಸಾದದಿಂದಲೇ ಜೀವನ್ಮುಕ್ತಿ, ಪ್ರಸಾದದ ಜ್ಞಾನಪರಿಪೂರ್ಣನಾಗಿ ಪ್ರಸನ್ನತೆ ಪರಮ ಕಳೆಯನ್ನು, ಸಚ್ಚಿದಾನಂದವನ್ನು ಪಡೆಯುವನು, ಎಂದು ಶರಣರು ಸಾರಿದ್ದಾರೆ.

ಪ್ರಸಾದದ ಪರಿಣಾಮವನ್ನು ತಿಳಿಸುವರು,

ಗುರು ಕರುಣೆಯಿಂದ ಒಲಿದ ಶ್ರೇಷ್ಠವಾದ ಶುದ್ಧ ಪ್ರಸಾದ, ಸತ್ಕ್ರಿಯಾ ಸಂಸ್ಕಾರಗಳಿಂದ ಪದಾರ್ಥ ಹೋಗಿ ಪ್ರಸಾದವಾಗಿ ಪರಿಣಮಿಸುತ್ತದೆ, ಈ ಪ್ರಸಾದವು ಇಷ್ಟಲಿಂಗಕ್ಕೆ ಸಮರ್ಪಿತವಾಗಿದೆ, ಇದು ಇಷ್ಟಲಿಂಗನಿಗೆ ಇಷ್ಟವಾದಂತೆ ಪ್ರಾಣಲಿಂಗ ಭಾವಲಿಂಗಕ್ಕೂ ಪ್ರಿಯವಾಗಿದೆ, ಇದರಿಂದ ತೃಪ್ತನಾದ ಭಕ್ತನ ಭಾವವು ಸಕಲ ಕ್ರಿಯೆಗಳೆಲ್ಲಾ ಸತ್ಯ ಸ್ವರೂಪವನ್ನು ಹೊಂದುವದು.

ಸತ್ರ್ಕಿಯಾ ಸ್ವರೂಪವಾದ ಶುದ್ಧ ಪ್ರಸಾದ ಇಷ್ಟಲಿಂಗಕ್ಕೆ ಅರ್ಪಿತವಾಗಿ ರೂಪವಾದದ್ದು ರುಚಿಯೆನಿಸಿ ಸಿದ್ಧಪ್ರಸಾದವೇ ಪ್ರಾಣಲಿಂಗಕ್ಕೆ ತ್ರಾಣ ಆಗುತ್ತದೆ, ಸತ್ಕ್ರಿಯೆಯಿಂದ ಕೂಡಿದ ಸುಜ್ಞಾನದ ಪರಿಣಾಮದಿಂದ ಮಾತು ಮನವು ಪವಿತ್ರವಾಗಿ ಮಂತ್ರವಾಗುತ್ತದೆ,  ಅವರು ಮಾತನಾಡಿದ್ದು ಮಂತ್ರವಾಗಿ, ಅವರ ಯೋಚನೆಯು ಲಿಂಗತತ್ವದ್ದೇ ಆಗಿರುತ್ತದೆ, ಸತ್ಕ್ರಿಯೆಗಳು ಶುದ್ಧವಾಗಿರುವ, ಮನ ಮಾತು ಪವಿತ್ರವಾಗಿ ಮಂತ್ರವಾಗಿದ ಮೇಲೆ ಅವನ ಅಂಗ ಮನ ಭಾವಗಳೆಲ್ಲಾ ಪರಿಶುದ್ಧನಾದ ಮೇಲೆ ಪ್ರಸಾದವೇ ವಿಶೇಷ ಶ್ರೇಷ್ಠತೆಯ ಭಾವವನ್ನು ಹೊಂದುವನು, ಅಂಗವೇ ಗುರುವಾಗಿ, ಮನವೇ ಲಿಂಗವಾಗಿ, ಭಾವವೇ ಜಂಗಮನಾಗಿ ಪರಿಣಮಿಸುವುದರಿಂದ ಪ್ರಸಾದಗಳು ಒಳಹೊರಗೆ ಪರಿಶುದ್ಧ ಪರಿಣಾಮವೂ ಬೀರುತ್ತದೆ ಎಂದು ಶರಣರು ಸಾರಿದ್ದಾರೆ

  1. ವಿಭೂತಿ.

ವೀರಶೈವ ಲಿಂಗಾಯತ ಸಿದ್ಧಾಂತದ ಅಷ್ಟಾವರಣದಲ್ಲಿ ಪೂಜ್ಯಗೊಳ್ಳುವ ಮೂರು ಸಂಪತ್ತುಗಳನ್ನು ಕಂಡಿದ್ದೇವೆ ಪೂಜಿಸಿದ ನಂತರ ಪ್ರಾಪ್ತವಾಗುವ ಎರಡು ಫಲಗಳನ್ನು ಕಂಡಿದ್ದೇವೆ ಈಗ ಪೂಜೆಯನ್ನು ಮಾಡುವ ಸಾಧನೆಗಳನ್ನು ನೋಡಬೇಕಾಗಿದೆ, ಪೂಜಿಸುವ ಸಾಧನೆಗಳು ವಿಭೂತಿ, ರುದ್ರಾಕ್ಷಿ, ಮಂತ್ರ.

ಇಂತು ಗುರು ಚರ ಲಿಂಗ ದಂತರಂಗದೊಳಿರ್ದ

ಶಾಂತಿ ಚಿತ್ಕಳೆಯೆ ಮುಂತೆ ಭಸಿತವೆಯಾದು

ದಿಂತೆಂದ ಗುರುವೆ ಕೃಪೆಯಾಗು.

 

ಗೋಮಯವನ್ನು ಕ್ರಿಯಾ ಬದ್ದವಾಗಿ ಸುಟ್ಟು ಭಸ್ಮ ಮಾಡುವುದಕ್ಕೂ , ಆಂತರಂಗದೊಳಗೆ ನೆಲೆಸಿರುವ ಶಾಂತಿಚಿತ್ಕಳೆಯ ವಿಭೂತಿಗೂ ವ್ಯತ್ಯಾಸವುಂಟು.

ಭಸ್ಮದಲ್ಲಿ ಎರಡು ಒಂದು ಸೋಪಾಧಿಕ ಭಸ್ಮ ಇನ್ನೊಂದು ನಿರುಪಾಧಿಕ ಭಸ್ಮ ಎಂದು ಕರೆಯುತ್ತಾರೆ.

ಜ್ಞಾನಾಗ್ನಿಯಿಂದ ಕಾಮ ಕ್ರೋಧಾದಿಗಳನ್ನು ಸುಟ್ಟು ತೊಳಗಿ ಬೆಳಗುವದೇ ನಿರುಪಾಧಿಕ ಭಸ್ಮ ಎನ್ನುವರು.

ನಿರುಪಾಧಿಕ ಭಸ್ಮವು ಅಂತರಂಗಿಕವಾಗಿರುವುದು, ಅದು ಶಿವನ ಚಿತ್ಕಲೆ, ಗುರು ಲಿಂಗ ಜಂಗಮರ ಅನುಗ್ರಹದಿಂದ ಬರುವಂತಹದ್ದೇ ನಿರುಪಾಧಿಕ ಭಸ್ಮವು, ಇದು ಯಾವುದೇ ಉಪಆಧಇಗಳಇಲ್ಲದಏ ದೊರೆಯುವುದರಿಂದ ಇದಕ್ಕೆ ನಿರುಪಾಧಿಕ ಎಂಬ ಹೆಸರು ಬಂದಿರಬಹುದು.

ಪವಿತ್ರ ಗೋವಿನ ಗೋಮಯವನ್ನು ತೆಗೆದು ಶಿವಾಗ್ನಿಯಿಂದ ಸುಟ್ಟು ಪುಡಿಮಾಡಿ ಉಂಡೆಗಳನ್ನಾಗಿ ಮಾಡಿ ಮತ್ತೆ ಅದನ್ನು ಅಗ್ನಿಯಲ್ಲಿ ಹಾಕಿ ತಯಾರು ಮಾಡುವುದಕ್ಕೆ ಸೋಪಾಧಿಕ ಭಸ್ಮ ಎಂದು ಕರೆಯುವರು, ಆಕಳು ಕಾಡಿಗೆ ಹೋಗಿ ಅಲ್ಲಿ ನಾನಾ ವಿಧ ಗಿಡಗಳನ್ನು ತಿಂದು ಬರುತ್ತದೆ, ಗಿಡದಲ್ಲಿ ವನಸ್ಪತಿಯೂ ಇರುವ ಕಾರಣ ಆಕಳು ತಿಂದ ಗಿಡದಲ್ಲಿ ಔಷಧಿಗುಣಗಳು ಇರುತ್ತದೆ, ತಾನು ತಿಂದ ಹುಲ್ಲನ್ನು ಜಠರಾಗ್ನಿಯಲ್ಲಿ ಸುಟ್ಟು ಸೆಗಣಿಯನ್ನು ಕೊಡುತ್ತದೆ ಅದನ್ನು ಅಗ್ನಿಯಿಂದ ಸುಟ್ಟು ಪುಡಿಮಾಡಿ ತಯಾರಿಸುವವ ಪರಿಶುದ್ಧ ಶಿವಭಾವದಿಂದ ಕ್ರಿಯಾಪದ್ಧತಿಯಂತೆ ಅದನ್ನು ಭಸ್ಮವನ್ನು ಆಗಿ ಮಾಡುತ್ತಾನೆ, ಅದನ್ನು ಹಚ್ಚಿಕೊಂಡನಿಗೆ ಅನಾರೋಗ್ಯವು ಬರುವುದಿಲ್ಲಾ, ಚರ್ಮವ್ಯಾದಿಗಳಿಂದ ಮುಕ್ತಿಯಾಗುವನು, ಹಚ್ಚಿಕೊಂಡವನನ್ನು ನೋಡಿದರೆ ಶಿವಭಾವದಿಂದ ಕೈಮುಗಿಯಬೇಕೆನುಸುತ್ತದೆ, ಅವನಿಗೆ ಶಿವಕಳೆಯು ಬರುತ್ತದೆ, ಅವನಿಗೆ ಸಮಾಧಾನವಾಗುತ್ತದೆ,

ನಿರುಪಾಧಿಕ ಭಸ್ಮವು ಸತ್ವ ರಜ ತಮೋಗುಣಗಳನ್ನು ಕಳೆದು ಶುದ್ಧ ಸಾತ್ವಿಕ ಇಂದ್ರಿಯಗಳನ್ನು ಸದ್ಗುಣ ಸತ್ಕ್ರಿಯೆಗಳೆಂಬ ಸಗುಣವನ್ನು ಜ್ಞಾನಾಗ್ನಿಯಲ್ಲಿ ಸುಟ್ಟರೇ ನಿರುಪಾಧಿಕ ಭಸ್ಮವು ತಯಾರಾಗುತ್ತದೆ, ಸಾಧಕನ ಕರ್ಮೆಂದ್ರಿಯಗಳ, ಜ್ಞಾನೇಂದ್ರಿಯಗಳ , ಕರಣೇಂದ್ರಿಯಗಳ ತ್ರಿಗುಣಗಳು ದಹಿಸಿ ಲಿಂಗರೂಪವನ್ನು ಪಡೆದರೆ ಸರ್ವಾಂಗವು ಲಿಂಗ ಎನಿಸಿದ ಗುರು ಲಿಂಗ ಜಂಗಮ ಪೂಜ್ಯತ್ರಯರನ್ನು ತನ್ನಲ್ಲಿ ಸಾಕ್ಷಾತ್ಕರಿಸಿಕೊಂಡ ಸದ್ಭಕ್ತ ಸಾಧಕನು ಚಿದ್ಭಸಿತವನ್ನು (ನಿರುಪಾಧಿಕ ಭಸ್ಮ) ಧರಿಸುವನು, ಎಲ್ಲಾ ಉಪಾದಿಯು ನಾಶವಾಗಿ ಸತ್ಕ್ರಿಯಾಚರಣೆಯಿಂದ ಬೆಳಗುವ ಶಿವತೇಜವಾಗುವನು, ಅವನಲ್ಲಿ ಪರಶಿವನ ಕಳೆಯನ್ನು ಬೆಳಗಿಸುವದೇ ನಿರುಪಾಧಿಕ ಭಸ್ಮವು ಎಂದು ಬಸವಲಿಂಗ ಶರಣರು ತಿಳಿಸುತ್ತಾರೆ.

ಆಕಳಿನ ಸೆಗಣೆಗೆ ಸಂಸ್ಕಾರವನ್ನು ಕೊಟ್ಟಾಗ ಅದು ಭಸ್ಮವಾಗುತ್ತದೆ, ಆ ಭಸ್ಮವನ್ನು ಹಾಗೆ ಅದನ್ನು ಧರಿಸಬಾರದು ಅದಕ್ಕೆ ಗುರು ಜಂಗಮರಿಂದ ಸಂಸ್ಕಾರವನ್ನು ಕೊಡಬೇಕು ಅದಕ್ಕೆ ಅವರ ಪಾದೋದಕವನ್ನು ಹಾಕಿದರೆ ಶುದ್ಧಿಯಾಗುತ್ತದೆ.

ಭಸ್ಮವನ್ನು ಶುದ್ಧಮಾಡುವಾಡುವಾಗ ಮೊದಲು ಗುರುಪಾದೋದಕದಲ್ಲಿ ಅದ್ದಿ ನಂತರ ಪುನಃ ಕ್ರಿಯಾ ಪಾದೋದಕದಲ್ಲಿ  ಅದ್ದಬೇಕು, ನಿರಂಜನ ಗುರುದೇವನ ಕೃಪೆಯಿಂದ ಪಾದೋದಕವು ಅದರಲ್ಲಿ ವ್ಯಾಪಿಸಿಕೊಂಡು ಎರಡು ಇದ್ದದ್ದು ಒಂದಾಗುತ್ತದೆ.

ಬಸವಲಿಂಗ ಶರಣರು –

ಪಾದುದಕ ಪಿಂಡಕ್ಕೆ ವೇಧಾ ಮಂತ್ರವು ಕ್ರಿಯಾ

ತ್ರೈದೀಕ್ಷೆ ಮಾಡಿ ಆದಿ ಮೂಲವ ಲೇಖಂ

ಗೆಯ್ದ ಶ್ರೀ ಗುರುವೇ ಕೃಪೆಯಾಗು.

 

ದೇಹ ಪಿಂಡಕ್ಕೆ ವೇಧಾ ಮಂತ್ರ ಕ್ರಿಯಾ ದೀಕ್ಷೆ ಆಗುವ ಹಾಗೆ ಭಸ್ಮದ ಪಿಂಡಕ್ಕೂ ತ್ರೈದೀಕ್ಷೆ ಅವಶ್ಯಕ ಗುರು ಜಂಗಮರು ತನ್ನ ಎಡಗೈ ಹಸ್ತದಲ್ಲಿರಿಸಿಕೊಂಡು ವಿಧಿವತ್ತಾಗಿ ಪೂಜೆ ಮಾಡಿ ಬಲಗೈ ಹಸ್ತವನ್ನು ಭಸ್ಮದ ಮೇಲೆ ಇಟ್ಟು ಕೊಳ್ಳುವುದು ವೇಧಾದೀಕ್ಷೆ, ಹಾಗೆ ಎರಡು ಹಸ್ತವನ್ನು ಭಸ್ಮದ ಮೇಲೆ ಇಟ್ಟು ಮೂಲ ಪ್ರಣವವನ್ನು ಬರೆದು ಮಂತ್ರೋಚ್ಛಾರಣೆಯೊಂದಿಗೆ ಹಸ್ತ ಮಸ್ತಕ ಸಂಯೋಗವೇ ಮಂತ್ರದೀಕ್ಷೆ, ಮಂತ್ರದೊಂದಿಗೆ ಶುದ್ಧಗೈಸಿರುವ ಭಸ್ಮವನ್ನು ತನ್ನ ಆರು ಸ್ಥಾನಕ್ಕೆ ಮುಟ್ಟಿಸಿ ಹಣೆಗೆ ಮೂರು ಸಾರೇ ಹಚ್ಚಿಕೊಳ್ಳುವದೇ ಕ್ರಿಯಾದೀಕ್ಷೆ. ಇಂತಹ ಶುದ್ಧ ಗೈಸಿರುವ ಕ್ರಿಯಾಭಸ್ಮವನ್ನು ಅನುಗ್ರಹಿತರಾದ ಸಾಧಕರು ಮಾತ್ರ ಇದನ್ನು ಹಚ್ಚಿಕೊಳ್ಳಲು ಯೋಗ್ಯ.

ಕ್ರಿಯಾಭಸ್ಮವನ್ನು ಪಾವನವಾದುದು, ಭಸ್ಮದ ಮಹಿಮೆಯನ್ನು ಅರಿತ ಶ್ರೀ ಬಸವೇಶ್ವರರು ಭಸ್ಮವು ಹಚ್ಚಿಕೊಂಡರೆ ಹಣೆಬರಹವನ್ನು ಬರೆಯುತ್ತದೆ ಎಂದಿದ್ದಾರೆ -ಲಲಾಟದಲ್ಲಿ ವಿಭೂತಿಯ ಬರೆಯಲಿಕೆ ಪಾಪ ಪಲ್ಲಟವಾಗುವುದು.

ಬಸವಲಿಂಗ ಶರಣರು –

ಧ್ಯಾನ ಮಂತ್ರಗಳಿಂದ ಸ್ನಾನ ದೂಳನ ಗೆಯ್ದ

ನೀ ನಾಲ್ವತ್ತೆಂಟು ಸ್ಥಾನದೊಳು ಧರಿಸೆಂದು

ನೀನೊರೆದೆ ಗುರುವೆ ಕೃಪೆಯಾಗು.

ಬಸವ ಪೆಸರಕ್ಷರದಿ ಅಸಮ ತ್ರೈಪುಂಡ್ರವನು

ನೊಸಲು ಮೊದಲಾದ ಎಸೆವ ಸರ್ವಾಂಗಕ್ಕೆ

ಸಸಿನೆ ಧರಿಸೆಂದ ಗುರುವೆ ಕೃಪೆಯಾಗು.

ತ್ರೈಕಾಲ ಪೂಜೆ ಮಾಡುವ ಸಂದರ್ಭದಲ್ಲಿ ಭಸ್ಮವನ್ನು ಷಡಕ್ಷರಿ ಮೂಲಪ್ರಣವದೊಡನೆ ಪೂಜೆ ಮಾಡಿ ಸಮಾಧಾನದೊಳು ಭಸ್ಮಸ್ನಾನ(ಭಸ್ಮವನ್ನು ಶರೀರಕ್ಕೆ ಪ್ರೋಕ್ಷಣೆ ಮಾಡುವುದು), ಭಸ್ಮದೂಳನ( ಭಸ್ಮದ ಕಣವನ್ನ ಹಸ್ತಕ್ಕೆ ಹಚ್ಚಿಕೊಂಡು ಶರೀರಕ್ಕೆ ಲೇಪಿಸಿಕೊಳ್ಳುವದು), ಭಸ್ಮಧಾರಣೆ(ಮಧ್ಯದ ಬೆರಳಿನಿಂದ ಶರೀರಕ್ಕೆ ಹಚ್ಚಿಕೊಳ್ಳುವುದು)

ಮೂರು ಬೆರಳುಗಳಿಗೆ ಆ ಊ ಮಾ ಎಂಬ ಮಂತ್ರದೊಂದಿಗೆ ಹಣೆಗೆ ಹಚ್ಚಿ ಭಸ್ಮವನ್ನು ಶರೀರದ 48 ಸ್ಥಾನಗಳಿಗೆ ಧಾರಣೆ ಮಾಡಿಕೊಳ್ಳಬೇಕು.

ತ್ರೈಪುಂಡವು ಸತ್ವ ರಜ ತಮೋಗುಣಗಳನ್ನು ಮೆಟ್ಟಿನಿಂತ ವ್ಯಕ್ತಿಯನ್ನು ಸೂಚಿಸುತ್ತವೆ, ಭಕ್ತಿ ಜ್ಞಾನ ವೈರಾಗ್ಯವನ್ನು ತೊಟ್ಟಿನಿಂತವನ ಕುರುಹು, ಹೊನ್ನು ಹೆಣ್ಣು ಮಣ್ಣುಗಳೆಂಬ ತ್ರಿಮವಗಳಿಂದ ಮುಕ್ತನಾದವನ ಸಂಕೇತವಾಗಿವೆ, ಬಸವಾತ್ರಯ ಮಹಾಮಂತ್ರದಿಂದ ನೊಸಲಾದಿಯಿಂದ ಸರ್ವಾಂಗಕ್ಕೆ ಭಸ್ಮವನ್ನು ಧರಿಸಬೇಕು. ಬಸವ ಮಂತ್ರದಲ್ಲಿ ಅಗಾಧವಾದ ಶಕ್ತಿ ತುಂಬಿದೆ, ಶಿವನೇ ಬಸವನಾಗಿ, ಬಸವನೆ ಶಿವನಾದವನು, ಬಸವ ಎಂದರೆ ಪಾಪವು ದಿಕ್ಕುಗಾಣದೆ ಹೋಗುತ್ತದೆ.

ಬಾಲಲೀಲ ಮಹಾಂತ ಶಿವಯೋಗಿಗಳು –

ಬಸವ ಬಸವಾಯೆಂದು ಭಸಿತಮಂ ಧರಿಸಿದರೆ ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ‌

ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು, ಭಸಿತಮಂ ಧರಿಸಿ ಬಯಲಾದರಯ್ಯ.

ಘನಮಠ ಶಿವಯೋಗಿಗಳು –

ಶ್ರೀ ಗುರು ಬಸವನ ಸ್ಮರಿಸಲು ನಿಜಪದವಾಗುವದಿದು ನಂಬೋ ಮನುಜ.

ಬಸವ ಮಂತ್ರದ ಮಹಿಮೆಯ ಕುರಿತು ಅನೇಕರು ಕೊಂಡಾಡಿದ್ದಾರೆ.

ಸುಲಭಮಂತ್ರವಾದ ಬಸವಾಕ್ಷರವನ್ನು ಧ್ಯಾನಿಸುತ್ತಾ ಭಸ್ಮವನ್ನು ಸರ್ವಾಂಗಕ್ಕೆ ಧರಿಸಬೇಕು.

 

ಸಕಲಾಚಾರದ ಕವಚ ಸಕಲ ವಶ್ಯದ ತಿಲಕ

ಸಕಲ ಸುಖ ಮುಖದ ಮುಕುರವೀಭಸಿತವೆಂ

ದಕಳಂಕ ಗುರುವೆ ಕೃಪೆಯಾಗು.

ಯೋಧನಿಗೆ ಕವಚಗಳು ಎಷ್ಟು ಮುಖ್ಯವೋ ಅಷ್ಟೇ ಭಸ್ಮವು ಸಕಲ ಆಚಾರಗಳಿಗೆ ರಕ್ಷಾ ಕವಚ ಇದ್ದಂತೆ, ಭಸ್ಮಧಾರಣೆಯಿಂದ ಪಾಪವು ನಾಶವಾಗಿ ಸದಾಚಾರಗಳನ್ನೂ ಸಂರಕ್ಷಿಸುತ್ತದೆ, ಭಸ್ಮಕ್ಕೆ ಸಕಲವನ್ನೂ ವಶೀಕರಣ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದೆ, ವಶ್ಯದ ತಿಲಕವಾಗಿದೆ, ಭಸ್ಮವು ವೀರಶೈವರಿಗೆ ಪರಮಾಲಂಕಾರವಾಗಿದೆ, ಧರಿಸುವುದರಿಂದ ಸುಖ ದುಖಃದ ಅರಿವಾಗುತ್ತದೆ,  ಧರಸಿ ಲಿಂಗಾಂಗ ಯೋಗ ಸಾಧನೆಮಾಡುವುದರಿಂದ ಭವಿಷ್ಯವನ್ನು ಅರಿಯಬಲ್ಲವನು ಎಂದು ಬಸವಲಿಂಗ ಶರಣರು ಭಸ್ಮದ ಮಹಿಮೆ ಅಪಾರವಾದದ್ದು, ಅಡಿಗಡಿಗೆ ಪರಮಾತ್ಮನನ್ನು ಸ್ವರೂಪಿಯಾದ ಗುರು ಲಿಂಗ ಜಂಗಮರನ್ನು ನೆನೆಯುತ್ತಾ ನೊಸಲಿಗೆ ಭಸ್ಮವನ್ನು ಧರಿಸುವುದರಿಂದ ಭವ ಬಂಧನವು ಅಳಿಯುತ್ತದೆ ಎಂದು ನೆನಪಿಸಿದ್ದಾರೆ.

ಭೂಮಂಡಲದಲ್ಲಿ ಸೂರ್ಯೋದಯ ವಾದರೆ ಕತ್ತಲೆ ಹೋಗುವ ಹಾಗೆ ಚಿದ್ಭಸಿತವನ್ನು ಧರಿಸುವುದರಿಂದ ಪಿಂಡಾಂಡದಲ್ಲಿ ತನು ಮನದ ಅಜ್ಞಾನವೆಂಬ ಕತ್ತಲೆಯು ಹೋಗುತ್ತದೆ.

ಭಸ್ಮದಲ್ಲಿ ವಿಭೂತಿ,  ಭಸಿತ, ಭಸ್ಮ, ಕ್ಷಾರ, ರಕ್ಷ ಎಂದು ಐದು ವಿಧವುಂಟು.

ಅಣಿಮಾದಿ ಅಷ್ಟಸಿದ್ಧಿಯನ್ನು ಕೊಡುವುದು ವಿಭೂತಿ, ಶಿವತತ್ವವನ್ನು ಧರಿಸುವುದೇ ಭಸಿತ,

ಪಾಪಗಳನ್ನು ಸುಟ್ಟು ಪರಿಹರಿಸುವದೇ ಭಸ್ಮ, ತಾಪತ್ರಯದಿಂದ ಒದಗುವ ಆಪತ್ತನ್ನು ಕಳೆಯುವುದೇ ಕ್ಷಾರ,

ಸಕಲ ಭೂತ ಪೀಶಾಚದ ಭಯವನ್ನು ನಿಲ್ಲಿಸುವದೇ ರಕ್ಷ ಎನ್ನುವರು.

ಭಸ್ಮ ಎಂದರೇನು? ಭಸ್ಮದ ಮಹಿಮೆ, ಅದರ ತಯಾರಿಕೆ, ಅದರ ಗುಣಗಳನ್ನು ಬಸವಲಿಂಗ ಶರಣರು ತಿಳಿಸುತ್ತಾ ಬಂದಿದ್ದಾರೆ. ಸಾಧಕನು ಚಿದ್ಭಸ್ಮವನ್ನು‌ ಧರಿಸಿಕೊಳ್ಳಬೇಕು ಮಾನವನಿಗೆ ಬಹುವಾಗಿ ಕಾಡುವ ವೈರಿ ಅಂದರೆ ನಾನೆಂಬ ಅಹಂ, ಇದು ಬಂದಮೇಲೆ ವ್ಯಕ್ತಿಯ ಬದುಕು ಮಂಕಾಗುತ್ತದೆ, ನಾಶದ ಕಡೆಗೆ ಹೋಗುತ್ತಾನೆ. ಈ ಅಹಂಕಾರವನ್ನು  ಅಜ್ಞಾನ ಎಂಬ ಬೆರಣಿಯನ್ನು ಸುಜ್ಞಾನವೆಂಬ ಅಗ್ನಿಯಲ್ಲಿ ಸುಟ್ಟು ಹಾಕಿದಾಗ ಉಳಿದದ್ದೇ ಚಿದ್ಭಸಿತ, ಇದನ್ನು ಧರಿಸಿವನಿಗೆ ನಾನೆಂಬ ಹೋಗಿ ತಾನೆಂಬದು ಉಳಿದು ಪರಶಿವನ ಸ್ವರೂಪನಾಗುವನು.

  1. ರುದ್ರಾಕ್ಷಿ.

ರುದ್ರನ ಅಕ್ಷಿಯೆ ರುದ್ರಾಕ್ಷಿ, ರುದ್ರನ ನೇತ್ರದಿಂದ ಉತ್ಪನ್ನವಾಗಿದ್ದಕ್ಕೆ ಇದಕ್ಕೆ ರುದ್ರಾಕ್ಷಿ ಎಂಬ ಹೆಸರು ಬಂದಿದೆ, ಯೋಗ ಸಮಾದಿಯಲ್ಲಿರುವ ಶಿವನು ತಾರಕಾಕ್ಷ , ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರಿಂದ ಬಂಗಾರ, ಬೆಳ್ಳಿ, ಕಬ್ಬಿಣಗಳ ತ್ರಿಪುರಗಳನ್ನು  ನಾಶಮಾಡಲು ತ್ರಿನೇತ್ರ ತೆಗೆಯುತ್ತಾನೆ ಆಗ ಕಣ್ಣಿನಿಂದ ಕಣ್ಣೀರು ಭೂಮಿಯಲ್ಲಿ ಬಿದ್ದು ಹುಟ್ಟಿದ ಬೀಜವೇ ರುದ್ರಾಕ್ಷಿಯು, ರುದ್ರಾಕ್ಷಿ ಯಲ್ಲಿ ಔಷದಿ ಗುಣವಿದೆ, ಇದು ವಾಯು ಶುದ್ಧಿ ಮಾಡುತ್ತದೆ, ಸಾಮಾನ್ಯವಾಗಿ ಜನರು ಬಂಗಾರಾಭರಣವನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾರೆ ಸಾಧಕನಾದವನು ರುದ್ರಾಕ್ಷಿಯನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾನೆ, ರುದ್ರಾಕ್ಷಿಯ ನೀರು ಮೈಮೇಲೆ ಬೀಳುವುದರಿಂದ ಚರ್ಮರೋಗವು ಹೋಗುತ್ತದೆ, ಯಾರು ರುದ್ರಾಕ್ಷಿಯನ್ನು ಕೊರಳಲ್ಲಿ ಹಾಕಿಕೊಂಡಿರುತ್ತಾರೋ ಅಂತವರಿಗೆ ಶಿವನ ಅನುಗ್ರಹ ಇರುತ್ತದೆ.

ಬಸವಲಿಂಗ ಶರಣರು –

ಆಕಳಂಕ ಶರಣನಾ ಶಿಖೆಯ ಲಿಂಗದ ಗೋಪ್ಯ

ಮುಖವೆ ರುದ್ರಾಕ್ಷ ಸಕಲ ಭೂಷಣ ಮಣಿಯ

ಶಿಖೆಯೆಂದ ಗುರುವೆ ಕೃಪೆಯಾಗು.

ಶರಣರು ತ್ರಿಪದಿಯಲ್ಲಿ ಆಂತರಿಕ ರುದ್ರಾಕ್ಷಿಯನ್ನು ಧರಿಸುವುದನ್ನು ಹೇಳಿದ್ದಾರೆ, ಶರಣನಾದವನು ಆಧಾರಾದಿ ಷಡ್ಚಕ್ರಗಳಲ್ಲಿ ಆಚಾರಾದಿ ಲಿಂಗಗಳನ್ನು ಆರಾಧಿಸುತ್ತಾ, ಬ್ರಹ್ಮರಂದ್ರ ಸ್ಥಲಕ್ಕೆ ಏರಿ ಶಿಖಾಚಕ್ರದ ನಿಶೂನ್ಯಲಿಂಗದ ಗೋಪ್ಯ ಮುಖವೇ ರುದ್ರಾಕ್ಷಿ, ಅಂತಹ ಸಾಧಿಸಿರುವ ಸಾಧಕನು ಮಾತ್ರಾ ಸೂಕ್ಷ್ಮವಾದ ಆಂತರಿಕ ರುದ್ರಾಕ್ಷಿಯನ್ನು ಧರಿಸುವನು, ಎಂದು ತಿಳಿಸಿದ್ದಾರೆ.

ಶ್ರೀ ಬಸವೇಶ್ವರರು –

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಪಾವನವು,

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಕಾರಣವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಸಾಧನವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಸಿದ್ಧಿ

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಪಾಪಕ್ಷಯವು

ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖ ರುದ್ರಾಕ್ಷಿಗಳಾದವಾಗಿ

ಅಯ್ಯಾ ಕೂಡಲಸಂಗಮದೇವ

ಎನಗೆ ಮುಕ್ತಿ ಪಥಕ್ಕೆ ಶ್ರೀ ರುದ್ರಾಕ್ಷಿಯೆ ಸಾಧನವಯ್ಯಾ.

ಸರ್ವ ಕಾರ್ಯ ಕಾರಣಕ್ಕೂ ರುದ್ರಾಕ್ಷಿಯೇ ಕಾರಣ, ಮುಕ್ತಿಯನ್ನು ಪಡೆಯಲು ರುದ್ರಾಕ್ಷಿಯೆ ಸಾಧನ ಎಂದು ಈ ವಚನದಲ್ಲಿ ಸೂಚಿಸಿದ್ದಾರೆ.

ಆ ರುದ್ರಾಕ್ಷಿಯನ್ನು ಯಾವ ಯಾವ ಸ್ಥಾನಗಳಲ್ಲಿ ಧರಿಸಬೇಕು ಎಂದು ಶರಣರು ತಿಳಿಸಿದ್ದಾರೆ.

ಧರಿಸುವ ಕ್ರಮ – ಎರಡು ಮುಂಗೈಗೆ ಕಂಕಣದ ರೀತಿ ಹನ್ನೆರಡು ಹನ್ನೆರಡು ರುದ್ರಾಕ್ಷಿ ಮಾಲೆ ಹಾಕಿಕೊಳ್ಳಬೇಕು, ಎರಡು ಭುಜದಲ್ಲಿ ತೋಳಬಂದ ರೀತಿ ಬಲಕ್ಕೆ ಹದಿನಾರು, ಎಡಬುಜಕ್ಕೆ ಹದಿನಾರು, ಕಂಠದಲ್ಲಿ ಮೂವತ್ತೆರಡು ರುದ್ರಾಕ್ಷಿಯ ಮಾಲೆಮಾಡಿ ಹಾಕಿಕೊಳ್ಳಬೇಕು, ಕಿವಿಯಲ್ಲಿ ಕರ್ಣಕುಂಡಲದಂತೆ ಒಂದೊಂದು ರುದ್ರಾಕ್ಷಿ, ಎದೆಯ ಮೇಲೆ ಐವತ್ತೇಳು ರುದ್ರಾಕ್ಷಿಯ ಮಾಲೆ ಹಾಕಿಕೊಳ್ಳಬೇಕು, ಕಕ್ಷೆಯ ಬಾಗಕ್ಕೆ ನೂರೆಂಟು ರುದ್ರಾಕ್ಷಿಗಳನ್ನು, ನೆತ್ತಿಯ ಮೇಲೆ ಮೂರು, ತಲೆಯ ಸುತ್ತಲೂ ಮೂವತ್ತಾರು, ಹಾಗೆ ಶಿಖೆಯಲ್ಲಿ ಒಂದು ರುದ್ರಾಕ್ಷಿಯನ್ನು ಧರಿಸಬೇಕು.

 

ಸಾಮಾನ್ಯವಾಗಿ ಪಂಚಮುಖ ರುದ್ರಾಕ್ಷಿಯನ್ನು ಧರಿಸುವುದೇ ಉತ್ತಮ, ವಿಭಿನ್ನ ಸ್ಥಾನದಲ್ಲಿ ಆಯಾ ಸಂಖ್ಯೆಗಣುಗುಣವಾಗಿ ದೊಡ್ಡ ಗಾತ್ರದ ರುದ್ರಾಕ್ಷಿಯನ್ನು ಧರಿಸಬೇಕು, ರುದ್ರಾಕ್ಷಿಯನ್ನು ಪೋಣಿಸುವುದು ಅಷ್ಟೇ ಮುಖ್ಯ ಒಂದೊಂದು ರುದ್ರಾಕ್ಷಿಯು ಮುಖ ಪೃಷ್ಠ ಅಂತಾ ಇರುತ್ತವೆ ಅವುಗಳನ್ನು ತಿಳಿದು ಮುಖಕ್ಕೆ ಮುಖವನ್ನು, ಪೃಷ್ಠಕ್ಕೆ ಪೃಷ್ಠ ಭಾಗವು ಕಲೆಯಬೇಕು.

ಈ ದೇಹ ಮೂವತ್ತಾರು ತತ್ವದಿಂದ ಕೂಡಿದೆ, ಅಂಥ ತತ್ವಜ್ಞಾನಿ ಆಗಬೇಕೆಂದು ತಲೆಯಲ್ಲಿ ಮೂವತ್ತಾರು ರುದ್ರಾಕ್ಷಿಯನ್ನು ಧರಿಸುವುದ ಸೂಚಕ.

ಪರಮ ರುದ್ರಾಕ್ಷಿಯನ್ನು ಕೈ, ಬಾಹು, ಕಿವಿ, ಎದೆ, ಕಕ್ಷಗಳಲ್ಲಿ, ತಲೆ, ಶಿಖೆಯನ್ನು ಬಿಡದಂತೆ ಎಲ್ಲಾ ಸ್ಥಾನಗಳಲ್ಲಿ  ಭಕ್ತಿಯಿಂದ ರುದ್ರಾಕ್ಷಿಯನ್ನು ಧರಿಸುವನೋ ಅವನು ಮೋಕ್ಷವನ್ನು ಹೊಂದುತ್ತಾನೆ, ಮುಖಬೇದವನ್ನು ಕಂಡುಕೊಂಡು ಧರಿಸುವವನಿಗೆ ರುದ್ರ ಪದವಿಯನ್ನು ಪಡೆಯುತ್ತಾನೆ ಎಂದಿದ್ದಾರೆ.

ಹಾಗೆ – ರುದ್ರಾಕ್ಷಿಯೂ ಭವದ ಬೀಜವನ್ನು ತೆಗೆಯುತ್ತದೆ ಎನ್ನುವರು, ಹೊಲದಲ್ಲಿ ಕರಕಿಯನ್ನು ತೆಗೆಯಲು ನೇಗಿಲನ್ನು ಹಾಕಿದರೆ ಹೋಗುವುದಿಲ್ಲ ಅದಕ್ಕೆ ಗುದ್ದಲಿ ಎನ್ನುವ ಸಾಧನಾದಿಂದ ಸಂಪೂರ್ಣ ನಾಶಮಾಡಬಹುದು, ಹಾಗೆ ಈ ಭವದ ನಾಶ ಮಾಡಲು ರುದ್ರಾಕ್ಷಿಯನ್ನು ಧರಿಸಬೇಕು.

ರುದ್ರಾಕ್ಷಿಯ ಧಾರಣೆಯ ಫಲ.

ಅಣುಗ ಶ್ರೀ ಗುರುಚರಕೆ ಮಣಿದು ಭಕ್ತಿಯ ಮಾಳ್ಪ

ಮಣಿಹವೀವುದಕೆ ಶೃಣು ರುದ್ರಾಕ್ಷಿಯೆ ಚಿಂತಾ

ಮಣಿಯೆಂದ ಗುರುವೆ ಕೃಪೆಯಾಗು.

ಶ್ರೀ ಗುರು ಜಂಗಮರಲ್ಲಿ ಭಕ್ತಿಯನ್ನು ಇಟ್ಟುಕೊಳ್ಳುವದು ಭಕ್ತನಾದವನ ಕರ್ತವ್ಯವಾಗಿದೆ, ಇವನು ಸ್ಥಾವರಲಿಂಗಕ್ಕೆ ಮಹತ್ವವನ್ನು ಕೊಡದೆ ಗುರು ಜಂಗಮರಿಗೆ ಭಕ್ತಿಯನ್ನು ಅರ್ಪಿಸಬೇಕು, ಭಕ್ತನಲ್ಲಿ ಕಿಂಕರತೆ ಇರಬೇಕು, ಆ ಕಿಂಕರ ಬರಬೇಕು ಅಂದರೆ ರುದ್ರಾಕ್ಷಿಯ ಧಾರಣೆಯ ಅವಶ್ಯಕತೆ ಇದೆ, ಈ ರುದ್ರಾಕ್ಷಿಯೆ ಚಿಂತಾಮಣಿಯಾಗಿದೆ  ಚಿಂತಾಮಣಿ ಅಂದರೆ ಬೇಡಿದವರಿಗೆ ಬೇಡಿದ್ದು ನೀಡುವ ಕೆಲಸ ಆ ವರವನ್ನು ಬೇಡಿದವರಿಗೆ ಚಿಂತೆಯನ್ನು ದೂರಮಾಡಿ ಅವರಿಗೆ ಇಷ್ಟಾರ್ಥವನ್ನು ಈಡೇರುತ್ತದೆ,

ಲೌಕಿಕ ಜೀವನದಲ್ಲಿ ನಾನು ನೀನು ಎನ್ನುವ ಭಾವಗಳು ಇರುತ್ತವೆ, ಅಲೌಕಿಕ ಜೀವನದಲ್ಲಿ ಅವುಗಳು ಇಲ್ಲದೆ ಎಲ್ಲವೂ ಶಿವನ ಕಾರ್ಯ ಎಲ್ಲವೂ ಶಿವನೇ ನಡೆಸುವುದು ಎನ್ನುವ ಭಾವ ಇರುತ್ತದೆ, ರುದ್ರಾಕ್ಷಿ ಧಾರಣೆಯಿಂದ ನಾನು ನೀನು ಎನ್ನುವ ಭಾವ ಅಳಿದು ಸುಜ್ಞಾನದಿಂದ ಎಲ್ಲವೂ ಶಿವಭಾವ ಬಂದು ಅವನು ಲಿಂಗಸ್ವರೂಪಿಯಾಗಿ ಅವನೇ ರುದ್ರನಾಗುತ್ತಾನೆ ಎಂದು ಬಸವಲಿಂಗ ಶರಣರು ಫಲವನ್ನು ಹೇಳಿದ್ದಾರೆ.

ಈ ರೀತಿ ರುದ್ರಾಕ್ಷಿಯ ಮಹತ್ವವನ್ನು ತಾತ್ವಿಕವಾಗಿ ವೈಜ್ಞಾನಿಕವಾಗಿ ತಿಳಿದು ರುದ್ರಾಕ್ಷಿಯನ್ನು ಧರಿಸಿದವನಿಗೆ ಚರ್ಮ ರೋಗ, ಅವನ ದೇಹದಲ್ಲಿ ಶೀತ ಉಷ್ಣತೆಯು ಸಮತೋಲನದಲ್ಲಿ ಬರುತ್ತದೆ.

 

 

 

  1. ಮಂತ್ರ.

ಏಳುಕೋಟಿ ಮಂತ್ರಗಳಿವೆ ಎಂದು ಶಾಸ್ರ್ತಾಕಾರರು ಹೇಳುವರು, ನದಿಯನ್ನು ದಾಟಲು ದೋಣಿ ಅವಶ್ಯಕತೆ ಇರುವ ಹಾಗೆ ಈ ಭವಬಂದನದ ಸಂಸಾರ ಸಾಗರವನ್ನು ದಾಟಲು ಮಂತ್ರಗಳು ಅವಶ್ಯಕ, ಏಳು ಕೋಟಿ ಮಂತ್ರದಲ್ಲಿ ಪ್ರಣವ ಸಹಿತ ಷಡಕ್ಷರಿ ಮಹಾಮಂತ್ರವೇ ಮಿಗಿಲು,

ಅಕ್ಕಮಹಾದೇವಿ –

“ದುರಿತವ ಪರಿಹರಿಸಬಲ್ಲದೆ, ಓಂ ನಮಃ ಶಿವಾಯ ಶರಣೆಂಬುದೇ ಮಂತ್ರ”.

ಶ್ರೀ ಬಸವೇಶ್ವರರು –

ಕರಿಯಂಜುವುದು ಅಂಕುಶಕ್ಕಯ್ಯಾ,

ಗಿರಿಯಂಜುವುದು ಕುಲಿಶಕ್ಕಯ್ಯಾ, ತಮಂಧವಂಜುವುದು ಜ್ಯೋತಿಗಯ್ಯಾ, ಕಾನನವಂಜುವುದು ಬೇಗೆಗಯ್ಯಾ, ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯಾ.

ಎಂದು ಮಂತ್ರದ ಶಕ್ತಿಯನ್ನು ತಿಳಿಸುತ್ತಾ,

“ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎನಗಿದೆ ಮಂತ್ರ, ಇದೇ ಜಪ. ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.”

ತನು ಮನದಲ್ಲಿಯೂ ನಿನ್ನ ನಾಮವನ್ನು ಬಿಟ್ಟು ಏನನ್ನು ಆಸೆಪಡುವುದಿಲ್ಲಾ ಎಂದಿದ್ದಾರೆ.

“ಮನಸಾ ತ್ರಾಯತ ಇತಿ ಮಂತ್ರ”ಮನಸ್ಸಿನಿಂದ ಗೌಪ್ಯವಾಗಿ ರಕ್ಷಿಸುವುದೇ ಮಂತ್ರ,

ಅಸಮ ಲಿಂಗದ ದಿವ್ಯ ಪೆಸರೆಂಬ ಷಣ್ಮಂತ್ರ

ವಿಸರವೆ ನಿನ್ನಂಗ ದಸುವಿನೊಳಗಿಹುದೆಂಬು

ದುಸುರಿದಾ ಗುರುವೆ ಕೃಪೆಯಾಗು.

 

ಇಡೀ ಮನುಷ್ಯನ ದೇಹಕ್ಕೆ ಒಂದೇ ಹೆಸರು ಇದೆ, ಒಂದೊಂದು ಅಂಗಕ್ಕೆ ಒಂದೊಂದು ಹೆಸರು ಇರುವುದಿಲ್ಲಾ , ಹಾಗೆ ಲಿಂಗದ ನಾಮವೂ ಕೂಡ ಅಂಗನ ಪ್ರಾಣದಲ್ಲಿ ವ್ಯಾಪಿಸಿಕೊಂಡಿದೆ, ಅದು ಷಣ್ಮಂತ್ರ, ಮಹಾಮಂತ್ರ.

ಮಂತ್ರ ಧ್ಯಾನದಿಂದ ಪ್ರಾಣವನ್ನು ಪ್ರಣವಮಂತ್ರವನ್ನಾಗಿ ಮಾಡಿಕೊಳ್ಳಬೇಕು, ಅವನ ಜೀವನದ ಉಸಿರಿನಲ್ಲಿ ಮಂತ್ರವು ಸಮರಸವಾಗಬೇಕು, ಅಂದಾಗ ಮಾತ್ರ ಅವನಿಗೆ ಮಂತ್ರಮಯನೆನಿಸಿಕೊಳ್ಳುತ್ತಾನೆ ಎಂದಿದ್ದಾರೆ.

 

ಷಡಕ್ಷರಿ ಮಂತ್ರವು ಅಪ್ರತಿಮ, ದಿವ್ಯಮಂತ್ರವಾಗಿದೆ, ಲಿಂಗದೇವನ ದಿವ್ಯ ಹೆಸರು ಷಡಕ್ಷರಿ ಮಂತ್ರವಾಗಿದೆ ಅದನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು, ಹೇಗೆ ಹಿಂದಿನ ಕಾಲದಲ್ಲಿ ಸತಿಯು ತನ್ನ ಪತಿಯ ಹೆಸರನ್ನು ಭಯ ಭಕ್ತಿಯಿಂದ ಕರೆಯುತ್ತಿದ್ದಳು, ಲಿಂಗದ ದಿವ್ಯ ಹೆಸರಾದ ಷಡಕ್ಷರಿ ಮಹಾಮಂತ್ರವನ್ನು ಶರಣನಾದವನು ‘ಶರಣ ಸತಿ ಲಿಂಗ ಪತಿ’ ಭಾವದಿಂದ ವ್ಯಕ್ತವಾಗಿ ನುಡಿಯುವುದಲ್ಲಾ, ಮನಸ್ಸಿನಲ್ಲಿಯೇ ತುಂಬಿಕೊಳ್ಳುತ್ತಾನೆ.

ಮಂತ್ರವನ್ನು ಪುಸ್ತಕವನ್ನು ನೋಡಿ ಪಠಿಸಬಾರದು ಅದು ಶ್ರೀ ಗುರುಗಳಿಂದಲೇ ಮೂಡಿ ಬರಬೇಕು, ಅದು ಫಲವನ್ನು ಕೊಡುತ್ತದೆ ಹೊರತು ಪುಸ್ತಕ ನೋಡಿ ಕಲಿತ ಮಂತ್ರವು ಫಲಗೊಳಿಸುವುದಿಲ್ಲಾ.

 

ಮಂತ್ರವನ್ನು ಯಾರು ಜಪಿಸಬೇಕು? ಯಾರು ಜಪಿಸಬಾರದು ಎಂದು ಹೇಳುವರು.

ಸಾಮಾನ್ಯವಾಗಿ ಯುವಕ ಯುವತಿ ದಂಪತಿಗಳು ಆಗಬೇಕಾದರೆ ಅವರಿಗೆ ಮದುವೆ ಎನ್ನುವ ಕಾರ್ಯವೂ ನಡೆಯಬೇಕು, ಅವರ ತಂದೆ ತಾಯಿಗಳು, ಬಂದು ಬಳಗದವರು ಆ ಕಾರ್ಯದಲ್ಲಿ ಇದ್ದು ನಡೆಸಿದರೆ ಅವರು ದಂಪತಿಯಾಗಿ ಸಂಸಾರವನ್ನು ನಡೆಸಲು ಅರ್ಹರಾಗುತ್ತಾರೆ.

ಪಾರಮಾರ್ಥಿಕ ಜೀವನದಲ್ಲಿ ದೀಕ್ಷೆಯನ್ನುವ ಮದುವೆಯಾಗಬೇಕು, ಲೌಕಿಕದಲ್ಲಿ ಗಂಡ ಹೆಂಡತಿ ಸತಿ ಪತಿ ಇರುವ ಹಾಗೆ ಇಲ್ಲಿ ಶರಣನೆ ಸತಿಯಾಗುತ್ತಾನೆ ಲಿಂಗವೇ ಪತಿಯಾಗುತ್ತಾನೆ ಈ ವಿವಾಹಕ್ಕೆ ಸಂಬಂಧಿಕರು ಇವರ ಹಾಗೆ ಶಿವಭಕ್ತರೇ ಭಾಂದವರು ಶ್ರೀ ಗುರುವೇ ಈ ಮದುವೆಯನ್ನು ಮಾಡುತ್ತಾನೆ, ಅದಕ್ಕೆ ದೀಕ್ಷೆ ಎಂದು ಕರೆಯುತ್ತಾರೆ, ಈ ಕಾರ್ಯ ಮಾಡುವಾಗ ಗುರುವು ಶಿಷ್ಯನ ಕಿವಿಯಲ್ಲಿ ಮಂತ್ರೋಪದೇಶವನ್ನು ಮಾಡುತ್ತಾನೆ ಆ ಮಂತ್ರ ಮಗ್ಗಲು ಕುಳಿತ ವ್ಯಕ್ತಿಗೆ ಕೇಳದ ಹಾಗೆ ಶಿಷ್ಯನ ಕಿವಿಯಲ್ಲಿ ಲಿಂಗಪತಿಯ ಷಡಕ್ಷರಿ ಮಂತ್ರವನ್ನು ಉಪದೇಶಿಸುತ್ತಾನೆ.

ಉಪದೇಶಿಸಿಕೊಂಡ ಶಿಷ್ಯನು ಮಂತ್ರವನ್ನು ಜಪಿಸಲು ಅರ್ಹರಾಗುತ್ತಾರೆ, ಸದ್ಗುರು ಹೇಳಿದ ಮಹಾಮಂತ್ರವನ್ನು ಜಪ ಮಾಡುವ ವಿಧಾನವನ್ನು ಅರಿತು, ಏಕಚಿತ್ತನಾಗಿ ಲಿಂಗದಲ್ಲಿ ದೃಷ್ಟಿಸುತ್ತಾ ಮಂತ್ರವನ್ನು ಮನಸ್ಸಿನಲ್ಲಿಯೇ ಜಪಿಸಬೇಕು, ಜೋರಾಗಿ ಎಲ್ಲರಿಗೂ ಕೇಳುವ ಹಾಗೆ ಹೇಳುವುದರಿಂದ ಮಂತ್ರದ ಉಪಯೋಗವಾಗುವುದಿಲ್ಲಾ.

ಜಪವನ್ನು ಮಾಡುವ ವಿಧಾನ ಮೂರು ಪ್ರಕಾರಗಳಿವೆ.

1- ವಾಚಕ.

2- ಉಪಾಂಶು.

3- ಮಾನಸಿಕ.

ತನ್ನ ಸುತ್ತಲಿನ ಇನ್ನಿತರ ಜನರಿಗೆ ಕೇಳುವ ಹಾಗೆ ಜಪಿಸುವದು ವಾಚಕಜಪ.

ತುಟಿಗಳನ್ನು ಅಲ್ಲಾಡಿಸುತ್ತಾ ಸುತ್ತಲಿನ ಜನರಿಗೆ ಕೇಳದ ಹಾಗೆ ಜಪಿಸುವದು ಉಪಾಂಶುಜಪ.

ತುಟಿಗಳನ್ನು, ನಾಲಿಗೆಯನ್ನು ಅಲುಗಾಡಿಸಿದೆ ಏಕಚಿತ್ತನಾಗಿ ಮನಸ್ಸಿನಲ್ಲಿಯೇ ಜಪಿಸುವದು ಮಾನಸಿಕಜಪ.

ವಾಚಕಜಪಕಿಂತ ಉಪಾಂಶುಜಪ ಶ್ರೇಷ್ಠ, ಉಪಾಂಶುಜಪಕಿಂತ ಮಾನಸಿಕ ಜಪವು ಅತ್ಯಂತ ಶ್ರೇಷ್ಠವಾದದ್ದು.

ಸದ್ಗುರು ದಯಾಪಾಲಿದ ಇಷ್ಟಲಿಂದಲ್ಲಿ ದೃಷ್ಟಿಯನ್ನಿಟ್ಟು ಮನಸಿನಲ್ಲಿಯೆ ಜಪಮಾಡುವುದು ಸಾವಿರ ಪಾಲು ಶ್ರೇಷ್ಠವಾಗಿದೆ,ಷಜಪಮಣಿಯನ್ನು ಎಳೆಯುತ್ತಾ ಪ್ರಣವ ಷಡಕ್ಷರಿಮಹಾಮಂತ್ರವನ್ನು ಜಪಿಸಬೇಕು,

 

ಎಲ್ಲಾ ಮಂತ್ರಗಳಲ್ಲಿ ಷಡಕ್ಷರಿ ಮಹಾಮಂತ್ರವೇ ರಾಜ ಅನಿಸಿಕೊಂಡಿದೆ, ಈ ಮಂತ್ರವನ್ನು ಬಿಟ್ಟು ಬೇರೆ ಮಂತ್ರವನ್ನು ಜಪಿಸದೆ ಇದನ್ನು ಯಾರು ನಯ ವಿನಯದಿಂದ ಮಂತ್ರವನ್ನು ಜಪಿಸುವವರಿಗೆ ಬೇಡಿದ್ದು ಕೊಡುವ ಕಾಮಧೇನು, ತನ್ನನ್ನೇ ಬೇಡಿದರೂ ನೀಡಬಲ್ಲವ ಮಹಾಮಂತ್ರ, ಅದುಕಾರಣ ಇದು ಕಾಮಧೇನು ಎನಿಸಿಕೊಂಡಿದೆ, ಈ ಮಂತ್ರವನ್ನು ಸಿದ್ಧಿಸಿಕೊಂಡನಿಗೆ ಯಾವುದೇ ಫಲವು ಬೇಕಾದಲ್ಲಿ ಸುಲಭವಾಗಿ ಸಿಗುತ್ತದೆ.

‘ಈ ಷಡಕ್ಷರಿ ಮಂತ್ರವೇ ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರಣವಾದುದು’ ಎಂದು ಉರಿಲಿಂಗ ದೇವರು ಹೇಳಿದ್ದಾರೆ.

ಸಾಕ್ಷಾತು ಶಿವಮಂತ್ರ ಮೋಕ್ಷಾಪೇಕ್ಷಿತರ ತಾ

ರಕ್ಷಿಸುವ ಕಲ್ಪವೃಕ್ಷವೆಂದೊರೆದ ಮುಮುಕ್ಷು ಶ್ರೀ ಗುರುವೇ ಕೃಪೆಯಾಗು.

ಪ್ರಣವ ಸಹಿತ ಷಡಾಕ್ಷರಿ ಮಹಾ ಮಂತ್ರವು ಮೋಕ್ಷವನ್ನು ಬಯಸುವ ಮುಮುಕ್ಷುಗಳಿಗೆ ಮೋಕ್ಷ ಪದವಿಯನ್ನು ಕೊಡುವ ಕಲ್ಪವೃಕ್ಷ ಆಗಿದೆ, ಷಡಕ್ಷರಿ ಮಂತ್ರವನ್ನು ಜಪಿಸುವವನು ಸದಾನಂದದಲ್ಲಿರುತ್ತಾನೆ, ಈ ಷಡಕ್ಷರಿ ಮಹಾಮಂತ್ರವನ್ನು ಜಪಿಸುವವನು, ಧ್ಯಾನಿಸುವವನು ಸದಾಕಾಲ ಪರಿಶುದ್ಧನಾಗಿ ಅವನ ದೇಹ ಅಷ್ಟೇ ಅಲ್ಲ ಮನವು ಕೂಡ ಶಿವಾನಂಧದಲ್ಲಿರುತ್ತಾನೆ.

ಅಣಿಮಾದಿ ಅಷ್ಟಸಿದ್ಧಿಗಳು ಶಿವನ ಸಾಕಾರಕ್ಕೆ, ಶಿವನ ಸ್ವರೂಪವನ್ನು ಹೊಂದಲಾರವು, “ಅಣಿಮಾದಿ ಸಿದ್ಧಿಗಳು ತೃಣವು” ಎಂದು ಶರಣರು ಸಾರಿದ್ದಾರೆ. ಸ್ಥಿರವಾಗಿ ನಿತ್ಯವೂ ಆನಂದವು ಈ ಸಿದ್ಧಿಯು ಕೊಡಲಾರವು, ಸುಲಭ ಸಾಧ್ಯವಾದ ಷಡಕ್ಷರಿ ಮಹಾಮಂತ್ರವನ್ನು ಜಪಿಸಲು ಹೇಳಿದ್ದಾರೆ, ಕ್ಷಣಕ್ಷಣಕ್ಕೂ ಕೇಳಿದ್ದನ್ನು ಕೊಡುವ, ಚಿಂತಿಸಿದ್ದನ್ನು ದೊರೆಯಿಸುವ, ಚಿಂತಾಮಣಿ ಕಾಮಧೇನು ಕಲ್ಪವೃಕ್ಷವು ಎಂದು ಷಡಕ್ಷರಿ ಮಂತ್ರದ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

ನಮ್ಮ ಮಾತು ಮನವು ಒಂದಾದರೆ ನಾವಾಡುವ ಮಾತು ಮಂತ್ರವಾಗಿ ಜ್ಯೋತಿರ್ಲಿಂಗವಾಗುತ್ತದೆ, ಮನ ಮತ್ತು ಮಾತು ಏಕರ್ಥವಾಗಿರುಬೇಕು ನಡೆಯುವುದು ಒಂದು ರೀತಿ ನುಡಿಯುವುದು ಒಂದು ರೀತಿ ಇದ್ದರೆ ಅವನಿಗೆ ಶಿವನ ಕರುಣೆ ಸಿಗುವುದಿಲ್ಲ, ಸಾಧಕನು ಸದಾಕಾಲ ಮನವನ್ನು ಮಂತ್ರದಲ್ಲಿ ತೊಡಗಿಸಿಕೊಂಡಿರಬೇಕು, ತ್ರಿಕರಣಪೂರ್ವಕವಾಗಿ ಶ್ರೀ ಗುರುವು ಉಪದೇಶಿಸಿದ ಮಂತ್ರವನ್ನು ಶ್ರದ್ಧೆಯಿಂದ ನೆನೆದರೆ ಅವನು ಮಹಾದೇವನ ಆಗುವನು.

ನಿಜಗುಣರ ವೇದಾಂತ ಗ್ರಂಥಗಳಲ್ಲಿಯೆ ಅದರಲ್ಲಿಯು ಕೈವಲ್ಯ ಪದ್ಧತಿಯಲ್ಲಿಯ ತಲ್ಲೀನರಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢರವರು ಅವರ ಈ ಇಷ್ಟಲಿಂಗದ ಮಹಿಮೆ ಹಿರಿಮೆಗಳ ಹಿತೋಪದೇಶವನ್ನೆ ಲೆಕ್ಕಿಸಿರಲಿಲ್ಲ. ಆತ್ಮಲಿಂಗವಿದ್ದ ಆರೂಢನಿಗೆ ಬಾಹ್ಯಲಿಂಗವೇಕೆ ಎಂದು ಅವರ ಗ್ರಹಿಕೆ. ಆದರೆ ತಮ್ಮ ಗ್ರಹಿಕೆಯಲ್ಲಿ ಗಂಧವಿಲ್ಲೆಂಬುದು ಅವರಿಗೆ ತಿಳಿದಿರಲಿಲ್ಲ. ಅಂತರ್ಲಿಂಗಧಾರಣ ಸಮರ್ಥನಿಗೂ ಬಾಹ್ಯಲಿಂಗದ ಅಗತ್ಯವಿದೆಯೆಂಬುದನ್ನು ಅವರು ಕಂಡುಕೊಂಡಿರಲಿಲ್ಲ. ನಿಜಗುಣರೆ ಮತ್ತೊಂದೆಡೆಯಲ್ಲಿ ಸೊಗಸಾದ ಇಸಾದೃಶ್ಯಕೊಟ್ಟು ಹೇಳಿದ್ದಾರೆ; ಇಷ್ಟ-  ಪ್ರಾಣ-ಭಾವಲಿಂಗಗಳು ಕ್ರಮವಾಗಿ ದೀಪ-ದೀಪದ ಕಿರಣ- ದೀಪದ ಪ್ರಕಾಶಗಳಂತೆ ಅವಿನಾಭಾವ ಸಂಬಂಧದಿಂದ ಇವೆಯೆಂದು ಇನಿದಾಗಿ ಬಿತ್ತರಿಸಿದ್ದಾರೆ. ಕತ್ತಲೆಯ ಮನೆಯಲ್ಲಿ ಹಣತೆ ಹಚ್ಚಿದ ಮೇಲೆ ಬೆಳಕು ಬಿತ್ತೆಂದು ದೀವಿಗೆಯನ್ನು ಆರಿಸಿದರೆ, ಎತ್ತಿ ಬಿಸುಡಿದರೆ ಬೆಳಗು ಉಳಿಯುತ್ತದೆಯೊ? ಉಳಿದಿರಲು ಸಾಧ್ಯವೊ? ಹಾಗೆಯೇ  ದೀಪದಂತಿದ್ದ ಇಷ್ಟಲಿಂಗ ಇಲ್ಲದಿರಲು ಪ್ರಾಣಕಿರಣವು ಇಲ್ಲ, ಭಾವ ಬೆಳಗು ಇಲ್ಲ. ಅನ್ನದ ಅವಶ್ಯಕತೆ ಇರುವವರೆವಿಗು ಇಷ್ಟಲಿಂಗದ ಅವಶ್ಯಕತೆ ಅನಿವಾರ್ಯ. ಸ್ಥೂಲ  ಶರೀರ ಹೊದ್ದಿರುವವರೆವಿಗು ಸ್ಥೂಲಲಿಂಗದ ಸಂಬಂಧ ಅಪರಿಹಾರ. ಈ ನಿಜವನರಿಯದವ ನಿಜವಾದ ಆರೂಢನಲ್ಲ, ಆರೂಢಪತಿತ. ಈ ತತ್ವವ ತಿಳಿಯದೆ ಸಿದ್ಧಾರೂಢರು ಅವರ ಕೆಲವು ಶಿಷ್ಯರು ಇಷ್ಟಲಿಂಗವನ್ನು ಬಿಟ್ಟುಬಿಟ್ಟಿದ್ದರು. ಅವರು ವೇದಾಂತಬಲ್ಲಿದರಾಗಿದ್ದರು. ಈ ಒಂದು ಕೊರತೆಯಿಂದ ಸ್ವಾಮಿಗಳವರು ಯೋಚನಾಕ್ರಾಂತರಾಗಿದ್ದರು. ಅವರ ಮನಸ್ಸು ಅಲ್ಲಿಂದ ಹಿಂಜರಿಯುತ್ತಿತ್ತು. ಯೋಗ್ಯಗುರುವಿನ ಬರುವನ್ನು ಹಾರೈಸುತ್ತಿತ್ತು. ಇಲ್ಲಿಯೇ ಇರು’ ಎಂದರ್ಥದ ಜಡೆಸಿದ್ದರ ಅಮೃತವಾಣಿಯಿಂದ ಇಲ್ಲಿಯೆ ನನಗೆ ಸದ್ಗುರುವಿನ ಸಂದರ್ಶನ ಭಾಗ್ಯಲಭಿಸಬಹುದೆಂದು ನಚ್ಚಿ ವಿಧಿಯಿಲ್ಲದೆ ಅಲ್ಲಿಯೆ ವಾಸವಾಗಿದ್ದರು.

 

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಮಹಾಮಹಿಮರಾದ ವೀರವೈರಾಗ್ಯ ಸಂಪನ್ನರಾದ ಎಳಂದೂರು ಬಸವಲಿಂಗಸ್ವಾಮಿಗಳವರು ಆ ಪ್ರಾಂತದಲ್ಲಿ ಪ್ರಯಾಣ ಮಾಡುತ್ತ ಹುಬ್ಬಳ್ಳಿಗೆ ಬಂದರು. ಅದೇ ಊರಿನಲ್ಲಿಯೇ ಪ್ರಸಿದ್ಧರಾದ ಆರೂಢರಿಗೆ ನಿಜಗುಣರ ಕೃತಿಗಳಲ್ಲಿರುವ ಪರಿಣತಿಯನ್ನು ಕೇಳಿ ನೋಡಿ ಸಂತೋಷಿಸಬೇಕೆಂದು ಆರೂಢರಲ್ಲಿಗೆ ಆಗಮಿಸಿದರು. ಆರೂಢರೊಡನೆ ಆಧ್ಯಾತ್ಮಜಿಜ್ಞಾಸೆ ಆರಂಭವಾಯಿತು.   ಶ್ರೀಗಳ ಅಸ್ಖಲಿತವಾದ ಅನನ್ಯ ಸಾಧಾರಣವಾದ ಅನುಭವವನ್ನು ಕಂಡು ಆರೂಢರಿಗೆ ಅಚ್ಚರಿಯಾಯಿತು. ತಾವು ಮೌನತಾಳಿ ತಮ್ಮ ಶಿಷ್ಯರನ್ನು ವಾದಕ್ಕೆ ಮುಂದುಮಾಡಿದರು. ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದ ಸದಾಶಿವ ಸ್ವಾಮಿಗಳವರು ಚುರುಕಾಗಿ ಚರ್ಚೆಮಾಡಿದರು. ಏನು ಮಾಡಿದರೇನು ? ಅಪಕ್ವತೆಯನ್ನು ಶ್ರೀಗಳು ಕಂಡುಕೊಂಡರು. ಬರೀ ವಾದವಿಮರ್ಶೆಯ ಹೊರತು ಆಳ ಅನುಭವದ ಹುರುಳಿಲ್ಲ. ಕೇವಲ ಬೌದ್ಧಿಕವಾದವು ಆತ್ಮಶಾಂತಿಗೆ ಕಾರಣವಲ್ಲ ಎಂದು ಹೇಳಿ ಹೊರಗೆ ಬಂದು ಒಂದು ತಂಬಿಗೆಯನ್ನು ಕೇಳಿದರು. ಶ್ರೀಗಳ ಅನುಭವಕ್ಕೆ ಮೆಚ್ಚಿದ ಸದಾಶಿವಸ್ವಾಮಿಗಳವರೆ ತಂಬಿಗೆಯನ್ನು ತೆಗೆದುಕೊಂಡು ಬಂದರು. ಅವರೊಡನೆ ಬಹಿರ್ದೆಶಕ್ಕೆ ತೆರಳುತ್ತ ತಮ್ಮ ಹಿಂದೆ ಬರುತ್ತಲಿದ್ದ ಶಿಷ್ಯನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಷ್ಟರಲ್ಲಿ ಜಲಾಶಯವೊಂದು ಹತ್ತಿರ ಕಂಡಿತು. ಶ್ರೀಗಳು ತಂಬಿಗೆಯನ್ನು ತೆಗೆದುಕೊಂಡು ಹೋಗಿ ಬಂದು ಹಸ್ತ ತೊಳೆದರು. ಹಲ್ಲುಜ್ಜಲು ಕಡ್ಡಿಯೊಂದನ್ನು ತರಹೇಳಿದರು. ಆರೂಢರ ಶಿಷ್ಯವೃತ್ತಿಯಲ್ಲಿದ್ದ ಸದಾಶಿವ ಸ್ವಾಮಿಗಳಿಗೆ ಹಲ್ಲುಕಡ್ಡಿಯ ಪರಿಚಯವಿರಲಿಲ್ಲ. ಅನುಮಾನಿಸುತ್ತ ನಾಲ್ಕು ಬೆರಳುದ್ದದ ಒಂದು ಕಡ್ಡಿಯನ್ನು ತಂದುಕೊಟ್ಟರು. ಅದನ್ನು ಶ್ರೀಗಳು ನೋಡಿ ‘ತಮ್ಮಾ ನಿನ್ನ ಬುದ್ಧಿಯೂ ಸಹ ಇಷ್ಟೇ ಉದ್ದಿದೆ. ಅದ್ವೈತದಲ್ಲಿ ಮುಳುಗಿದ್ದ ನಿಮಗೆ ಬಾಹ್ಯಶೀಲಾಚರಣೆಯ ಅರಿವಿಲ್ಲ. ಬಾಹ್ಯ ಶೌಚಾಚರಣೆಯ ಮಾಡದವನು ಆತ್ಮನನ್ನು ಅರಿತು ಫಲವಿಲ್ಲ. ತಾನು ಶುಚಿಯಾಗಿದ್ದು ಮನೆ ಮೂಲೆಗಳಲ್ಲಿ ಅಶುಚಿಯಾಗಿದ್ದರೆ ಸಾಕೇನು? ತನ್ನ ಮನೆ ಶುಚಿಯಾಗಿರಬೇಡವೆ? ತಾನು ಶುಚಿಯಾಗಿದ್ದರೆ ಆರೋಗ್ಯ ಬರುವುದೇನು? ತಾನು ತನ್ನ ಮೈತೊಳೆದು ಬಿಳಿಯ ಬಟ್ಟೆಯನ್ನು ತೊಡುವಂತೆ ಮನೆಯ ಶುಭ್ರತೆಮಾಡಿ ಸುಣ್ಣ ಬಣ್ಣ ಬಳಿದರಲ್ಲವೆ? ಹಾಗೆ ಆತ್ಮನಿಗೆ ಅರಿವಿನ ಬೆಳಗು ಒಂದಿದ್ದರೆ ಸಾಲದು. ಶರೀರೇಂದ್ರಿಯಗಳೂ ಶುಭ್ರವಾಗಿರಬೇಕು. ಸುಣ್ಣ ಬಣ್ಣ ಬಳಿವ ಕುಂಚು ಎಷ್ಟುದ್ದವಿದ್ದರೆ ಲೇಸೆಂಬುದನ್ನು ತಿಳಿಯಬೇಡವೆ ? ಹಾಗೆ ಹಲ್ಲುಜ್ಜುವ ಕಡ್ಡಿ ಹನ್ನೆರಡು ಅಂಗುಲ ಉದ್ದಿರಬೇಕು ಇದು ಶಾಸ್ತ್ರ, ಆತ್ಮವಿಚಾರ ಮಾತ್ರ ಹೇಳುವುದೇ ಶಾಸ್ತ್ರವಲ್ಲ, ದೇಹಾತ್ಮಗಳ ಆಚಾರ ವಿಚಾರಗಳೆರಡನ್ನು ಹೇಳುವುದೇ ಶಾಸ್ತ್ರ, ಶರೀರೇಂದ್ರಿಯ ಮೋಹ ತ್ಯಜಿಸುವುದೆಂದರೆ ನೀವೆಲ್ಲ ತಿಳಿದಿರುವಂತೆ ಶರೀರೇಂದ್ರಿಯಗಳನ್ನು ಕೊಳೆಯಾಗಿ ಇರಿಸುವದಲ್ಲ. ಶೌಚ-ಸ್ನಾನ, ಹಲ್ಲುಜ್ಜುವಿಕೆ ಮುಂತಾದ ಬಾಹ್ಯ ಶೌಚಾಚಾರಗಳನ್ನು ಯಥಾವಿಧಿಯಾಗಿ ಆಚರಿಸಲೇ ಬೇಕು. ಆಚರಿಸದೆ ಇರುವದರಿಂದ ನಿಮಗೆಲ್ಲ ಹಲ್ಲುಜ್ಜುವ ಕಡ್ಡಿ ಎಷ್ಟಿರಬೇಕೆಂಬುದೇ ಗೊತ್ತಿಲ್ಲ. ಹೊರಗೆ ಹೋಗಿ ಬಂದಾದ ಮೇಲೆ  ತೊಳೆವುದೂ ಸಹ ನಿಮಗೆ ಗೊತ್ತಿದೆಯೊ ಇಲ್ಲೊ. ಹೊರಗಿನದನ್ನೆ ಅರಿಯದವನು ಒಳಗಿನದನ್ನು ಇನ್ನೆಷ್ಟು ಅರಿತಿರಬೇಕು? ಎಂದು ಚೆನ್ನಾಗಿ ಬುದ್ಧಿವಾದ ಹೇಳಿದರು.

 

ಇದನ್ನು ಕೇಳಿ ಸದಾಶಿವ ಸ್ವಾಮಿಗಳವರ ಮನಸ್ಸು ಪರಿವರ್ತನವಾಯಿತು. ಶಾರೀರಿಕ ಶೌಚವಿಧಾನವನ್ನೇ ಅರಿಯದ ಆತ್ಮವಿಚಾರದಿಂದ ಏನೂ ತಿರುಳಿಲ್ಲ ಎಂಬ  ವಾದ ಅವರ ಮನಸ್ಸಿಗೆ ಆಚ್ಚೊತ್ತಿದಂತಾಯಿತು. ಅದನರಿಯಲು ಮನಸ್ಸು ಉತ್ಸುಕಗೊಂಡಿತು. ಮೊದಲೆ ಆರೂಢರ ಕ್ರಿಯಾಲೋಪವನ್ನು ಒಪ್ಪದ ಸ್ವಾಮಿಗಳಿಗೆ ಇದನ್ನೆಲ್ಲ ಕಂಡಮೇಲೆ ಮತ್ತೂ ಮನಸ್ಸು ಅಲ್ಲಿರಲು ಹಿಮ್ಮೆಟ್ಟಿತು. ಶ್ರೀಗಳೊಡನೆ ಹೋಗಲು ಅಭಿಲಾಷೆಯಾಗಿ ಅವಾಗಳೆ ಅಪ್ಪಣೆ ಕೇಳಿದರು

 

ಯೋಗಧುರಂಧರರಾದ ಶ್ರೀಗಳವರು ‘ತಮ್ಮಾ ನಮ್ಮ ಸೇವೆ ಕಠಿಣವಾದುದು. ನೀನಾದರೊ ಆರೂಢರ ಶಿಥಿಲಾಚಾರ ಶಿಕ್ಷಣದಲ್ಲಿದ್ದವನು. ಕಷ್ಟದ ಸೇವೆಗೆ ಒಳಪಟ್ಟು ತೊಳಲಬೇಕಾದೀತು ? ತುಂಬಾ ವಿಚಾರಿಸಿ ಹೇಳು. ಎನ್ನಲು ಸ್ವಾಮಿಗಳ ಕಣ್ಣಲ್ಲಿ ನೀರೂರಿ ‘ಮಹಿಮರೆ, ಶಿವಯೋಗದ ಕಟ್ಟುಗಳು ಎಷ್ಟೇ ಕಷ್ಟದಾಯಕಗಳಾಗಿದ್ದರು ಸಹಿಸಬಲ್ಲೆನು, ಸೇವಿಸಬಲ್ಲೆನು. ತಮ್ಮೊಡನೆ ಬರಲು ತಮ್ಮ ಶಿಷ್ಯನಾಗಿರಲು ಅಪ್ಪಣೆ ಆಗಿಯೇ ತೀರಬೇಕೆಂದು ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರ ದೃಢನಿಶ್ಚಯವನ್ನು ಸತ್ಯಸಂಕಲ್ಪವನ್ನು ಕಂಡು ಶ್ರೀಗಳವರು ಶಿಷ್ಯನನ್ನಾಗಿ ಪರಿಗ್ರಹಿಸಿದರು.

ಸದಾಶಿವ ಸ್ವಾಮಿಗಳವರ ಸಂತೋಷಕ್ಕೆ ಪಾರವೆ ಇಲ್ಲದಾಯಿತು. ಬಹುದಿನಗಳ ನಿರೀಕ್ಷಣೆ ಇಂದು ಫಲಿಸಿತು; ಅಭೀಷ್ಟವು ತಾನೇ ಪ್ರಾಪ್ತಿಯಾಯಿತು; ತಾನಿದ್ದಲ್ಲಿಗೆ ಬಂದೊದಗಿತು. ವಿವೇಕಾನಂದರು ಪರಮಾತ್ಮನ ಪಿಪಾಸುಗಳಾಗಿ ದಕ್ಷಿಣೇಶ್ವರಕ್ಕೆ ಹೋದರೆ ನಮ್ಮ ಕಥಾನಾಯಕರಲ್ಲಿಗೆ ಶಿವನನ್ನು ಕಂಡ ಸದ್ಗುರುಗಳು ತಾವಾಗಿಯೇ ಆಗಮಿಸಿದರು; ಅನುಗ್ರಹಿಸಿದರು. ಭಾಗ್ಯವಿಶೇಷವಲ್ಲವೆ? ತಾನು ಹಂಬಲಿಸುತ್ತಿರುವ ವಸ್ತು ಅಥವಾ ಮಹಾವ್ಯಕ್ತಿ ತನ್ನಲ್ಲಿಗೆ ಬರುವುದೆಂದರೆ ಪುಣ್ಯದ ಪ್ರಭಾವ ಎಷ್ಟಿರಬೇಕು?

 

ಗುರುಗಳು ಬದುಕಿರುವವರೆವಿಗೂ ಅವರ ಸನ್ನಿಧಿಯಲ್ಲಿದ್ದು ಸೇವೆಗೈಯುತ್ತಾ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಶಿವಾನುಭವ ಸಾರಸವಿಯ ಸವಿದರು. ಅದಕ್ಕೆ ಮುಗ್ಧರಾದರು. ಪ್ರತಿದಿನ ರಾತ್ರಿ ನಿದ್ರೆ ಬರುವವರೆವಿಗು ಶಿವಾನುಭವ ಗ್ರಂಥಗಳನ್ನು ಓದುತ್ತಿದ್ದರು. ಹಗಲು ಗುರುಗಳ ಸಕಲವಿಧ ಸೇವೆಯಲ್ಲಿ ತೊಡಗಿರುತ್ತಿದ್ದರು. ಸೇವೆಯಲ್ಲಿ ಮೇಲು ಕೀಳೆಂಬ ಭಾವನೆಯಿರಲಿಲ್ಲ. ಯಾವ ಕೆಲಸವೆ ಆಗಲಿ ಗುರುಸೇವೆಯೆಂದು ಹರುಷದಿಂದ ಉಲ್ಲಾಸದಿಂದ ಮಾಡುತ್ತಿದ್ದರು. ಗುರುಗಳು ಶಿವಪೂಜೆಗೆ ಕುಳಿತಾಗ ಅದನ್ನು ತದೇಕ ಧ್ಯಾನದಿಂದ ತಲ್ಲೀನ ಮನಸ್ಸಿನಿಂದ ನಿರೀಕ್ಷಿಸುತ್ತಿದ್ದರು. ಆಗ ಬಾಹ್ಯ ಜಗತ್ತನ್ನು ಮರೆತಿರುತ್ತಿದ್ದರು. ಅವರಂತೆ ಅಂತರಾತ್ಮನ ಸಮರಸಕ್ಕೆ ಹಂಬಲಿಸುತ್ತಿದ್ದರು. ಗುರುಗಳ ಪೂಜೆಯ ಪ್ರಭಾವವು ಅವರ ಕಣ್ಣುಗಳ ಹೊಲಬಿನಿಂದ ಹೋಗಿ ಮನೋಮಂದಿರದಲ್ಲಿ ನಿಂದು ಅಂತರಂಗದಾದ್ಯಂತವನ್ನು ವ್ಯಾಪಿಸುತ್ತಿತ್ತು.  ಹೀಗೆ ಗುರುಗಳವರಲ್ಲಿ ಸದಾಚಾರ ಶಿವಪೂಜೆ ಶಿವಾನುಭವಗಳನ್ನು ಕಲಿತುದಲ್ಲದೆ ಯೋಗವಿದ್ಯೆಯನ್ನು ಅಭ್ಯಸಿಸಿದರು. ಕ್ರಿಯೋಪದೇಶವನ್ನು ಪಡೆದರು. ಗುರುಶಿಷ್ಯ ಸಂಬಂಧ ತೀರ ಹತ್ತಿರದ್ದಾಯಿತು; ತಾದಾತ್ಮ್ಯಭಾವದ್ದಾಯಿತು.

 

ಗುರುಶಿಷ್ಯರಿಬ್ಬರು ಸೇರಿ ಪ್ರಾಂತ ಪ್ರಯಾಣವನ್ನು ಕೈಕೊಂಡರು. ಅಲ್ಲಲ್ಲಿ ಸಂಚರಿಸುತ್ತ ಭಕ್ತಸಮೂಹಕ್ಕೆ ಸದ್ಬೋಧೆಯನ್ನು ಮಾಡುತ್ತ ಧಾರವಾಡ ಜಿಲ್ಲೆಯ ಅಣ್ಣಿಗೆರೆ ಗ್ರಾಮಕ್ಕೆ ಆಗಮಿಸಿದರು.  ಅಲ್ಲಿರುವಾಗಲೆ ಎಳಂದೂರು ಶ್ರೀಗಳವರಿಗೆ ದೇಹಾಲಸ್ಯವಾಯಿತು. ದಿನದಿನಕ್ಕೆ ದೇಹಾಲಸ್ಯವು ಉಲ್ಬಣಾವಸ್ಥೆಗೆ ಹೋಗಹತ್ತಿತು. ಇದನ್ನು ಕಂಡು ಸದಾಶಿವ ಸ್ವಾಮಿಗಳವರು ಚಿಂತಿಸತೊಡಗಿದರು. ಇದನ್ನು ಕಂಡು ಗುರುವರ್ಯರು ಹತ್ತಿರಕ್ಕೆ ಕರೆದು ನೇವರಿಸಿ ಕುಮಾರಾ! ನಿನ್ನಲ್ಲಿ ಯೋಗವಿದೆ; ತ್ಯಾಗವಿದೆ. ವಿರತಿಯಿದೆ ಉಪರತಿಯಿದೆ. ಕಾರ್ಯದಕ್ಷತೆಯಿದೆ; ಅಧ್ಯಾತ್ಮಿಕ ಬಲವಿದೆ. ಇನ್ನೇನಾಗಬೇಕು? ಸುಮ್ಮನೆ ಅಂಜದಿರು, ಅಳುಕದಿರು. ಧೈರ್ಯಗುಂದದೆ ಸತ್ಕಾರ್ಯ ತತ್ಪರನಾಗು. ಸಮಾಜಸೇವೆಯನೆಸಗು. ಸಮಾಜವು ಯೋಗಬಲ ಹೀನವಾಗಿದೆ. ತ್ಯಾಗಗುಣ ರಹಿತವಾಗಿದೆ. ವಿದ್ಯೆ-ಧರ್ಮಗಳಿಲ್ಲದೆ ಕುರುಡಾಗಿದೆ. ನಿರ್ವೀರ್ಯವಾದ ಸಮಾಜಕ್ಕೆ ಕಳೆತುಂಬಿ ಕಣ್ಣರಳಿಸಲು ನೀನು ಮುಂದೆ ಬರಬೇಕು.ಕೇವಲ ಯೋಗಿಯಾಗಿ ವಿರಾಗಿಯಾಗಿ ಕಣ್ಮುಚ್ಚಿ ಕುಳಿತರೆ ಸುಖವಿಲ್ಲ. ಸಮಾಜವು ಶಕ್ತಿಗುಂದಿ ಸಣ್ಣಾಗುತ್ತಿರುವಾಗ ಒಬ್ಬನೆ ಮುಕ್ತನಾಗಲು ಹವಣಿಸುವುದು ಹೆಚ್ಚಿನ ಸ್ವಾರ್ಥ. ಸಮಾಜ ಸೇವೆಯ ಯುಕ್ತಯೋಗ, ಅದೇ ತಾತ್ವಿಕ ತಪಸ್ಸು, ಸಮಾಜವೇ ನಿನ್ನ ಜೀವನ.  ಸಮಾಜಸೇವೆಯೆ ನಿನಗೆ ಪಾವನ, ಸಮಾಜದ ಮಕ್ಕಳೆ ನಿನ್ನ ಮಕ್ಕಳು. ಸಮಾಜದೇಳ್ಗೆಯೆ ನಿನ್ನ ಏಳ್ಗೆ.  ಸಮಾಜ ಮುಕ್ತಿಯೆ ನಿನ್ನ ಮುಕ್ತಿ .  ಯೋಚಿಸಬೇಡ. ಯೋಧನಂತೆ ಧೈರ್ಯತಾಳು. ನಿನಗೆ ದೇವನ ಬೆಂಬಲವಿದೆ. ಆಯುಷ್ಯರೇಖೆಯಿದೆ. ಸಮಾಜವೇ ನಾನೆಂದು ಭಾವಿಸಿ ಸೇವಿಸು. ಇದರಿಂದ ನೀನು ಆದರ್ಶಜೀವಿಯಾಗುವೆ. ಅಸಾಧಾರಣ ಶಿವಯೋಗಿಯಾಗುವೆ ಎಂದು ಹೇಳಿ ತಮ್ಮ ಯೋಗದ ಸಾಧನ ಸಾಮಗ್ರಿಗಳನ್ನು ಪೂರ್ಣ ಕೃಪಾ ಪ್ರಸಾದಾನುಗ್ರಹ ದೀಕ್ಷೆಯಿತ್ತು ಶುಭಾಶೀರ್ವಾದವನ್ನು ಕೊಟ್ಟು, ಲಿಂಗೈಕ್ಯರಾಗುವರು. ಸ್ವಾಮಿಗಳಾದರೊ ಗುರು ಅನುಗ್ರಹಿಸಿದುದನ್ನೆ ತಮ್ಮ ಭಾವೀ ಜೀವನದ ಪರಮ ಸಂಪತ್ತೆಂದು ಪರಮಾರ್ಥ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತರಾದರು. ಆದರೂ ಗುರುವಿರಹದ ವ್ಯಥೆಯನ್ನು ಕೆಲವು ಕಾಲ ಅನುಭವಿಸದೆ ಇರಲಿಲ್ಲ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 

 

ಗ್ರಹಗೋಂಕಿದವ ತಾನೆ | ಗ್ರಹವಾಗುತಿಹನಂತೆ

ಮಹಲಿಂಗವ ನೀ | ವಹಿಸಲ್ಕೆ ನೀ ಲಿಂಗ

ವಹೆಯೆಂದ ಗುರುವೆ ಕೃಪೆಯಾಗು   || ೧೩೬ ॥

 

ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕರು ಭೂತ-ಪ್ರೇತ-ಪಿಶಾಚಿಗಳನ್ನು ನಂಬುವದಿಲ್ಲ. ಹಲವರು ಹೆಚ್ಚಾಗಿ ನಂಬುತ್ತಾರೆ. ಕೆಲವರಂತೂ ಅತ್ಯಂತ ಭಯ ಪಡುತ್ತಾರೆ. ಆದರೆ ಅವುಗಳ ಯಥಾರ್ಥತೆಯನ್ನರಿತರೆ ಅಧೈರ್ಯಪಡಲೇಬೇಕಾಗುವದಿಲ್ಲ. ಮಾನವನ ಅತ್ಯಧಿಕವಾದ ದುರಾಶೆಯು ಶಾಂತವಾಗದೆ ದುರ್ಮರಣ ವನ್ನಪ್ಪಿದರೆ ಅವನ ಕಾರಣ ಶರೀರಗತವಾದ ಅತೃಪ್ತವಾಸನೆಯು ದುರ್ಬಲ ಮನಸ್ಸಿನ ಮಾನವರಲ್ಲಿ ಪ್ರವೇಶಿಸಿ ತನ್ನ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೇನೆ ಗ್ರಹಬಡಿಯುವದೆಂಬ ವಾಡಿಕೆ ಬೆಳೆದು ಬಂದಿದೆ. ವಾಸನಾಮಯೀ ಜೀವಿಯು ಪರಕಾಯವನ್ನು ಪ್ರವೇಶಿಸಿ ವಿವಿಧ ರೀತಿಯಲ್ಲಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಪ್ರಯತ್ನಸುತ್ತದೆ. ಆದ್ದರಿಂದ ಗ್ರಹಹೊಡೆದವನು ಆ ಪಿಶಾಚಿಯ ನಡೆ-ನುಡಿಯನ್ನು ಅವಶ್ಯ ಅನುಸರಿಸುವನು. ಹೆಣ್ಣುಗಂಡಿನಂತೆ ವರ್ತಿಸುವದು ಅಥವಾ ಗಂಡು ಹೆಣ್ಣಿನಂತೆ ವರ್ತಿಸುವದು ಕಾಣಬರುತ್ತದೆ.

 

ಗ್ರಹಸೋಂಕಿದವನು ಗ್ರಹದಂತಾಗುತ್ತಿರುವಾಗ ಪರಮ ಪವಿತ್ರವಾದ ಮಹಾಲಿಂಗದ ಸಂಬಂಧದಿಂದ ಜೀವಾತ್ಮನು ಲಿಂಗಮಯನಾಗುವದು ಸಾಧ್ಯವಿದೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ

 

 ಇಷ್ಟಲಿಂಗಮಿದಂ ಸಾಕ್ಷಾದನಿಷ್ಟ – ಪರಿಹಾರಕಮ್ |

ಧಾರಯೇದವಧಾನೇನ ಶರೀರೇ ಸರ್ವದಾ ಬುಧಃ  || ೬-೫೦ ||

 

ಸುಜ್ಞಾನಿಯಾದವನು ಪ್ರತ್ಯಕ್ಷವಾಗಿ ಸಾಂಸಾರಿಕ ಅನಿಷ್ಟವನ್ನು ಪರಿಹರಿಸಬಲ್ಲ. ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿಯೂ ಶರೀರದ ಮೇಲೆ ಸಾವಧಾನದಿಂದ ಧರಿಸಬೇಕೆಂದು ಶ್ರೀ ರೇಣುಕಾಚಾರ್ಯರ ವಾಣಿಯಲ್ಲಿ ತಿಳಿಸಿದ್ದಾರೆ.

 

ಹಿಂದೆ ವಿವರಿಸಿದ ಆರೂ ಸ್ಥಾನಗಳನ್ನು ಹೊರತುಪಡಿಸಿ ಕೆಲವರು ಲಿಂಗವನ್ನು ನಡದಲ್ಲಿ ಹಾಕುವರು .. ಕೆಲವರಿಗಂತೂ ಇದೊಂದು ಹೊಸಬಗೆಯಾಗಿದೆ. ಆದರೆ ಇದು ಶುದ್ಧತಪ್ಪು. ಯಾಕಂದರೆ-

 

ನಾಭೇರಧಸ್ತಾತ್ ಲಿಂಗಸ್ಯ ಧಾರಣಂ ಪಾಪಕಾರಣಮ್ || ಸಿ. ಶ. ೬-೫೨ ||

 

ನಾಭಿಯ ಕೆಳಗೆ ಲಿಂಗವನ್ನು ಧರಿಸುವದರಿಂದ ಪಾಪ ಭಾಗಿಗಳಾಗಬೇಕಾಗುವದು. ಅಗಸ್ತ್ಯರಿಗೆ ರೇಣುಕರು ಎಚ್ಚರಿಕೆಯನ್ನಿತ್ತಿದ್ದಾರೆ. ಇಷ್ಟಲಿಂಗವು ಸಾಮಾನ್ಯವಾದುದಲ್ಲ. ನಮ್ಮ ಸಕಲ ಅನಿಷ್ಟಗಳನ್ನು ಕಳೆಯಬಲ್ಲ ಮಹಾಸಾಧನವಾಗಿದೆ. ಜ.ಚ.ನಿ. ಯವರು ಸಿದ್ಧಾಂತ ಶಿಖಾಮಣಿಯ ಅನುವಾದ ಕಾವ್ಯವೆನಿಸಿದ ‘ಮಣಿ ಮುಕುರ’ದಲ್ಲಿ

 

ಇಷ್ಟಲಿಂಗವಿದು ತಾಂ ಸಾಕ್ಷಾದನಿಷ್ಟ ಪರಿ-

ಹಾರಕಮಿದನಂ ಬಲ್ಲಿದರಾವಾಗಳುಂ

ಶರೀರದೊಳವಧಾನದಿಂದಗಲದಂತೆವೊಲ್

ಧರಿಸಿರ್ಪುಳ್ಕರಿಂ ಸುಕ್ಷೇಮ ಕಾರಣಂ || ಪು ೫೬ ||

 

ಇಷ್ಟಲಿಂಗವನ್ನು ಅವಧಾನಪೂರ್ವಕ ಸದಾ ಶರೀರದ ಮೇಲೆ ಧರಿಸಿಕೊಂಡಿರ ಬೇಕೆಂದು ಹೇಳಿದ್ದಾರೆ. ಆದರೆ ಇಂದಿನ ವೀರಶೈವ ಧರ್ಮಾನುಯಾಯಿಗಳು – ಲಿಂಗವನ್ನು ಹಾಕಿಕೊಳ್ಳುವದೇ ಬೇಡವಾಗಿದೆ. ಹಾಕಿದರೆ ನಾಚಿಕೆ, ಅದನ್ನು ದೇವರ ಜಗುಲಿಯ ಮೇಲೋ, ಮನೆಯಗೂಟಕ್ಕೂ ಹಾಕುತ್ತಾರೆ. ಹಲವರಿಗೆ ದೇವರೂ ಇರುವದಿಲ್ಲ. ಕೆಲವರು ಸ್ನಾನ ಮಾಡಿದಾಗ ಪೂಜಿಸಿ ಪುನಃ ಜಗುಲಿಗೆ ಕಳಿಸುತ್ತಾರೆ. ಜಗುಲಿಯ ಮೇಲೆ ಇಡುವದರಿಂದ ಅದು ಇಷ್ಟಲಿಂಗವೆನಿಸುವದಿಲ್ಲ. ಗುರುದೀಕ್ಷೆಯ ಸಂಸ್ಕಾರದಿಂದ ಬಂದ ಲಿಂಗವೇ ಲಿಂಗಗುಣಗಳನ್ನು ಕರುಣಿಸಬಲ್ಲುದು. ಮತ್ತೆ ಕೆಲವರು ಲಿಂಗದ ಕರಡಿಗೆಯನ್ನು ಶೋಭೆಗೆಂದು ಧರಿಸುತ್ತಾರೆ. ಆದರೆ ಅದು ಖಾಲಿಯಾಗಿಯೋ ಅಥವಾ ಚಿಲ್ಲರೆ ನಾಣ್ಯಗಳನ್ನಿಡುವ ಪೆಟ್ಟಿಗೆಯಾಗಿಯೋ ಉಪಯೋಗಿಸಲ್ಪಡುತ್ತದೆ. ಇಂಥ ಲಿಂಗವಂತರಿಗೆ ಲಿಂಗವಂತಿಕೆಯಾಗಲಿ ಅಥವಾ ಲಿಂಗಗುಣಗಳಾಗಲಿ ಯಾವ ಕಾಲದಲ್ಲಿಯೂ ಬರಲಾರವು. ಅವರು ಲಿಂಗವಂತರೆಂದೆನ್ನಿಸಿಕೊಳ್ಳಲು ಯೋಗ್ಯರಲ್ಲ.

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವೆಂಬ ಭಾವ ಬಲಿಯಬೇಕು. ಆಗ ಪ್ರಾಣಲಿಂಗದ ಸಂಬಂಧವಾಗುವದು. ಇಷ್ಟಲಿಂಗವು ಅಕಸ್ಮಾತ್ ಕಳಚಿದರೆ ಪ್ರಾಣವು  ತಾನಾಗಿ ಹೋದಂತಾಗಬೇಕು. ಇಂಥ ಭಾವ ಬೆಳೆಯುವದರಿಂದ ಭಾವಲಿಂಗ ಸಂಗಿಯೆನಿಸುವನು. ಇವನಿಗೆ ಭಾವಲಿಂಗದ ಸಾಕ್ಷಾತ್ಕಾರ ಸುಲಭವಾಗುವದು. ನಿಜ ಲಿಂಗಮಯನಾಗುವನು, ಓ ಗುರುವೆ’! ಕರುಣಿಸು ನಿಜಲಿಂಗಸ್ವರೂಪಿ ನಾನಾಗುವಂತೆ

‘ಪೂಜ್ಯೇಷು ಅನುರಾಗೋ ಭಕ್ತಿಃ’ ಪೂಜ್ಯರಲ್ಲಿರುವ ಅನುರಾಗ(ಪ್ರೇಮ)ವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರು, ತಂದೆ- ತಾಯಿಗಳು ನಮಗೆ ಪೂಜ್ಯರು. ಅವರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರೇಮವನ್ನು ಹೊಂದಿರುತ್ತೇವೆ. ಇದು ಭಕ್ತಿ ಎನಿಸಿದರೂ ‘ಈಶ್ವರೇ ಪರಾನುರಕ್ತಿಃ ಭಕ್ತಿ’ ಅಂದರೆ ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ ಎಂದು ಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಾತ್ಮನಲ್ಲಿರುವ ನಮ್ಮ ಶ್ರದ್ಧೆ, ಅನುರಕ್ತಿಗಳು ನಿಷ್ಠೆಯಾಗಿ ಮುಂದುವರೆಯಬೇಕು. ಆ ನಿಷ್ಠೆ ಏಕೋಭಾವವಾಗಿ ಸಹಜಗುಣವಾಗಿ ಬೆಳೆಯಬೇಕು. ಅಂದರೆ ಇಹಪರಗಳೆಲ್ಲವನ್ನು ಮರೆತು ಪರಮಾತ್ಮನೊಬ್ಬನನ್ನೆ ಮನದಲ್ಲಿ ನೆನೆವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಎನಿಸುವುದು.

ಜಗತ್ತಿನಲ್ಲಿ ಅನೇಕರು ಬರೀ ಆಡಂಬರದ ಪೂಜಾದಿಗಳನ್ನು ನೆರವೇರಿಸುತ್ತ ತಾವೇ ಪರಮಭಕ್ತರೆಂದೂ, ತಾವು ಆಚರಿಸುವ ಭಕ್ತಿಯೇ ಶ್ರೇಷ್ಠ ಭಕ್ತಿ ಎಂದೂ ಗರ್ವದಿಂದ ನುಡಿಯುತ್ತಾರೆ. ಮನಸ್ಸಿನಲ್ಲಿ ಯಾವುದೇ ಶ್ರದ್ಧೆ, ನಿಷ್ಠೆ ಹಾಗು ದೃಢತೆ ಇಲ್ಲದ ಇಂತಹವರ ಭಕ್ತಿಯನ್ನು ಕಂಡು ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ’ ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮ. ಅದು ನಿರರ್ಥಕವಾದ ಭಕ್ತಿ, ಅದೆಂದೂ ಪರಮಾತ್ಮನಿಗೆ ಸಲ್ಲದು ಎಂದು ಸ್ಪಷ್ಟಪಡಿಸುತ್ತಾಳೆ. ನಿಜವಾದ ಭಕ್ತನು ಸದಾಚಾರವನ್ನು ಅರಿತು ಆಚರಿಸುತ್ತಾನೆ. ಸಿರಿಸಂಪತ್ತುಗಳ ವಿಷಯದಲ್ಲಿ ಅವನೆಂದೂ ಅಹಂಕಾರ, ಮಮಕಾರಗಳನ್ನು ಹೊಂದುವುದಿಲ್ಲ. ಅವೆಲ್ಲವೂ ಪರಮಾತ್ಮನ ಸೊಮ್ಮು ಎಂಬ ಭಾವ ಅವನಲ್ಲಿ ಗಟ್ಟಿಗೊಂಡಿರುತ್ತದೆ. ದಾಸೋಹಂಭಾವದಿಂದ ಶಿವನ ಸೊಮ್ಮು ಶಿವನಿಗೆ ಅರ್ಪಿಸುವ ಭಕ್ತನು ಶಿವನಿಗೆ ಪ್ರಿಯನಾಗಿರುತ್ತಾನೆ. ಭಕ್ತಿಯ ಕುರುಹಾದ ದಾಸೋಹವನ್ನು ಮಾಡುವುದು ಭಕ್ತನ ಕರ್ತವ್ಯಗಳಲ್ಲೊಂದು. ಪರಮಾತ್ಮನು ಭಕ್ತಿಪ್ರಿಯ. ಭಕ್ತಿಯಿಂದ ಸಮರ್ಪಿಸಿದ ನೀರೂ ಕೂಡ ಅವನಿಗೆ ಪ್ರಿಯವೆ.

ಭಕ್ತಿಯ ಪ್ರಾರಂಭದ ಹಂತದಲ್ಲಿ ಪೂಜ್ಯನಾದ ದೇವ ಬೇರೆ, ಪೂಜಕನಾದ ತಾನು ಬೇರೆ ಎಂಬ ಭಾವ ಇರುತ್ತದೆ. ಭಕ್ತಿವಿಕಾಸವಾದಂತೆ ಪೂಜ್ಯ ಪೂಜಕನೆಂಬ ಭೇದಭಾವ ಇಲ್ಲದಂತಾಗಿ ಭಕ್ತ ಮತ್ತು ದೇವರಲ್ಲಿ ಸಹಜ ಸಾಮರಸ್ಯ ಉಂಟಾಗುತ್ತದೆ. ಇದೇ ಭಕ್ತಿಯ ನಿಜವಾದ ಉದ್ದೇಶ ಈ ಉದ್ದೇಶ ಈಡೇರಿದಾಗ ಭಕ್ತನು ಜನನ ಮರಣಗಳಿಂದ ಮುಕ್ತನಾಗಿ ಸ್ವಸ್ವರೂಪಾನುಸಂಧಾನದಲ್ಲಿ ನಿರತನಾಗುತ್ತಾನೆ. ಅದುವೇ ಮೋಕ್ಷ ಸ್ಥಿತಿ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ’ ಮೋಕ್ಷ ಸಂಪಾದನೆಯ ಅನೇಕ ಮಾರ್ಗಗಳಲ್ಲಿ ಭಕ್ತಿಮಾರ್ಗದಷ್ಟು ಸರಳವಾದ, ಸುಲಭವಾದ ಮಾರ್ಗ ಬೇರೊಂದಿಲ್ಲ. ಅನನ್ಯಗತಿಕನಾಗಿ ಭಕ್ತಿಯಿಂದ ನೆನೆವ ಭಕ್ತನನ್ನು ಸರ್ವವಿಧದಿಂದಲೂ ದೇವನೆ ರಕ್ಷಿಸುವನು. ಭಕ್ತನು ಮಾತ್ರ ಸದಾ ಆನಂದಾನುಭೂತಿಯಲ್ಲಿ ಮಗ್ನನಾಗಿರುತ್ತಾನೆ. ಕೊನೆಗೆ ದೇವರಲ್ಲಿಯೇ ಲೀನನಾಗುತ್ತಾನೆ. ಆನಂದಾನುಭೂತಿಯ ಸ್ಥಿತಿಯಂತೂ ಮೋಕ್ಷಕ್ಕಿಂತಲೂ ಶ್ರೇಷ್ಠವಾದುದು. ಅದು ಭಕ್ತನಿಗೆ ಮಾತ್ರ ಸಾಧ್ಯವಾದುದು. ಅದಕ್ಕಾಗಿಯೇ ನಿಜಗುಣ ಶಿವಯೋಗಿಗಳು:

ಕರುಣಿಸೆನಗಿದನ ಬೇಡುವನಭವ ಬೇರೊಂದು

ವರವನೊಲ್ಲೆನು ಮುಕ್ತಿದೊರೆವ ಸಾಧನವ

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತಿಯನ್ನಾಚರಿಸುವ ಸಂದರ್ಭದಲ್ಲಿ ದೊರೆವ ಸುಖ, ಆನಂದ ಮುಕ್ತಿಯ ಸ್ಥಿತಿಯಲ್ಲಿ ದೊರೆಯದು. ಮುಕ್ತಿ ಎಂಬ ಸಕ್ಕರೆಯಾಗುವುದಕ್ಕಿಂತ ಇರುವೆಯಾಗಿ ಸಕ್ಕರೆಯ ಸವಿಯನ್ನು ಸವಿಯುವುದೇ ಮೇಲು ಎಂಬುದು ಅವರ ಅಭಿಪ್ರಾಯ. ಮುಕ್ತಿಗಿಂತ ಭಕ್ತಿಯೇ ಶ್ರೇಷ್ಠ, ಭಕ್ತಿಯೇ ಮುಕ್ತಿಯ ಜನನಿ. ಭಕ್ತಿಯ ಬಲದಿಂದ ಏನೆಲ್ಲವನ್ನೂ ಭಕ್ತನು ಸಾಧಿಸುತ್ತಾನೆ. ಆದರೆ ಅವನ ಭಕ್ತಿಯಲ್ಲಿ ಶ್ರದ್ಧೆ ನಿಷ್ಠೆಗಳು ನೆಲೆಗೊಂಡಿರಬೇಕು. ಅದುವೆ ನಿಜಭಕ್ತಿ, ಅದುವೇ ಮುಕ್ತಿಗೆ ಸಾಧನ.

ವೀರಶೈವ ಸಾಧಕನು ಗುರು,ಲಿಂಗ,ಜಂಗಮರನ್ನ ವಿಭೂತಿ,ರುದ್ರಾಕ್ಷಿ,ಮಂತ್ರಗಳಿಂದ ಪೂಜಿಸಿದಾಗ ದೊರೆಯುವ ಫಲವೇ ಪಾದೋದಕ-ಪ್ರಸಾದ.

ಪದಾರ್ಥವೆಂದರೆ:- ತಾನೆ ದುಡಿದದ್ದು,ತನ್ನದು ಎಂಬ ಅಹಂಕಾರ ಮಮಕಾರಗಳಿಂದ ಭುಂಜಿಸುವ ಆಹಾರ ಅದು ಪದಾರ್ಥ.

ಪ್ರಸಾದವೆಂದರೆ:- ಅದು ಪೂಜ್ಯರ ಕೃಪೆ,ಭಗವಂತನದಯೆ, ಹಿರಿಯರಿಂದ ಪಡೆದದ್ದು ಅನ್ನುವ ಭಾವದೊಂದಿಗೆ , ದೇವರಿಗೆ ಅರ್ಪಿಸಿ ಬಂದುದ್ದನ್ನ ದಾಸೋಹಂ ಭಾವದಿಂದ ಸೇವಿಸುವ ಆಹಾರ ಅದು ಪ್ರಸಾದ.

“ಎಲ್ಲಿ ಸೋಹಂ ಭಾವವಿದೆ ಅದು ಪದಾರ್ಥ, ಎಲ್ಲಿ  ದಾಸೋಹಂ ಭಾವವಿದೆ ಅದು ಪ್ರಸಾದ”

“ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮುಕ್ತಿ”

ಯಾವುದನ್ನು ಸ್ವೀಕರಿಸಿದಾಗ ಪ್ರಸನ್ನತೆ ಉಂಟಾಗುವುದು ಅದುವೇ ಪ್ರಸಾದ.

ಬಾಹ್ಯ ದ್ರವ್ಯವು ಪದಾರ್ಥವಾದರೆ, ಅಂತರ್ದ್ರವ್ಯವು (ಶುದ್ಧ ಭಾವ) ಪ್ರಸಾದವಾಗುತ್ತದೆ.

ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ನೀಡುವುದೇ ಪ್ರಸಾದ ರಹಸ್ಯ.

“ಒಲ್ಲೆನೆಂಬುದು ವೈರಾಗ್ಯ;ಒಲಿವೆನೆಂಬುದು ಕಾಯ ಗುಣ

ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ

ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ

ಕೂಡಲಸಂಗಮ ದೇವರ ನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು”

– ಜೀವಿಯು ದಿಕ್ಷೆಯಿಂದ ಶುದ್ಧನಾಗಿ ಗುರುಲಿಂಗ ಜಂಗಮರನ್ನ ಪೂಜಿಸಿ, ಇವರಿಗೆ ತನ್ನದೆನ್ನುವದನ್ನೆಲ್ಲವನ್ನು ಅಂದರೆ ಬರಿ ಆಹಾರವನ್ನಷ್ಟೇ ಅಲ್ಲ, ಭೋಗ್ಯ ವಿಷಯಗಳನ್ನು, ಭೋಗಸಾಧನಗಳಾದದೇಹಂದ್ರಿಯಗಳನ್ನು,

ಭೋಕೃತವಾದ ತನ್ನನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ

ಇವೆಲ್ಲವುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು.

ಆಗ ಜೀವಿಯು ಶಿವನಂತೆ ಪ್ರಸಾದ ರೂಪನಾಗುವನು.

:- ಪ್ರಸಾದದಲ್ಲಿ 11 ವಿಧ

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬರು ನೀವು ಕೇಳಿರಿ

ಶುದ್ಧ ಪ್ರಸಾದ ಗುರು ಮುಖದಿಂದ ಬಂದುದು

ಸಿದ್ಧ ಪ್ರಸಾದ ಲಿಂಗ ಮುಖದಿಂದ ಬಂದುದು

ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದುದು

ಇದರೊಳಗೆ ಆವುದ ಘನವೆಂಬೇ? ಆವುದ ಕಿರಿದೆಂಬೇ

ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ.

ಗುರುಪ್ರಸಾದದಿಂದ ತನು ಶುದ್ಧವಾಯಿತು.

ಲಿಂಗಪ್ರಸಾದದಿಂದ ಮನಶುದ್ದವಾಯಿತು.

ಜಂಗಮಪ್ರಸಾದದಿಂದ ಭಾವ ಶುದ್ಧವಾಯಿತು.

ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತು

ಕೂಡಲ ಚನ್ನಸಂಗಮದೇವಯ್ಯ ಈ ತ್ರಿವಿಧ ಪ್ರಸಾದವ ಕೊಂಡೆನ್ನ ಭವಂನಾಸ್ತಿಯಾಯಿತ್ತು.

 

1 ಶುದ್ಧ ಪ್ರಸಾದ:- ಭಸ್ಮ ಲೇಪಿತಹಸ್ತದಿಂದ ಊಟದ ಪಾತ್ರೆಯಲ್ಲಿರುವ ಭೋಜನ ಪದಾರ್ಥಗಳನ್ನು ಶುದ್ಧ ಮಾಡುವುದು ಶುದ್ಧ ಪ್ರಸಾದ.

2 ಸಿದ್ದಪ್ರಸಾದ:- ಶುದ್ಧ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ  ಅಲ್ಲಿ ಪ್ರಸಾದ ಕಳೆವೇಧಿಸುವುದೇ ಸಿದ್ದ ಪ್ರಸಾದ.

3 ಪ್ರಸಿದ್ಧ ಪ್ರಸಾದ:- ಸಿದ್ದಪ್ರಸಾದವನ್ನು ಜಂಗಮಾರ್ಪಣ ಭಾವದಿಂದ ನಾಲಿಗೆಮೇಲಿಟ್ಟು ಸ್ವೀಕರಿಸುವುದೇ ಪ್ರಸಿದ್ಧ ಪ್ರಸಾದ .

4ಆಪ್ಯಾಯನ ಪ್ರಸಾದ:-ಶುದ್ಧ,ಸಿದ್ಧ,ಪ್ರಸಿದ್ಧ ಪ್ರಸಾದ ಸೇವನೆಯಿಂದಾದ ಮನೋವಿಕಾಸವೇ ಅಪ್ಯಾಯನ ಪ್ರಸಾದವೆನಿಸುತ್ತದೆ.

5 ಸಮಯ ಪ್ರಸಾದ:-ಈ ಪ್ರಸಾದ ಸೇವನೆಯ ಸಮಯದಲ್ಲಿ ಇತರ ಪದಾರ್ಥಗಳನ್ನು ಸೇವಿಸುವುದು ಅನರ್ಪಿತವೆಂದು ತಿಳಿಯುವುದು ಸಮಯಪ್ರಸಾದವಾಗಿದೆ.

6 ಪಂಚೇಂದ್ರಿಯವಿರಹಿತ ಪ್ರಸಾದ:- ಇತರ ವಿಷಯಗಳ ಕಡೆಗೆ ಪಂಚೇಂದ್ರಿಯಗಳನ್ನು ಹೋಗಗೊಡದಿರುವುದು.

7 ಅಂತಃಕರಣ ವಿರಹಿತ ಪ್ರಸಾದ:- ಇತರ ಸಂಕಲ್ಪಾದಿಗಳಿಗೆ ಅಂತಃಕರಣ ಸುಳಿಯದಂತೆಮಾಡಿ ನಿಶ್ಚಲತೆಯಿಂದ ಪ್ರಸಾದ ಸೇವಿಸುವುದು.

8 ಪ್ರಸಾದೀಯ ಪ್ರಸಾದ:- ಗುರುಲಿಂಗ ಜಂಗಮದಿಂದ ಪಡೆದ ಪ್ರಸಾದದೊಡನೆ ತನ್ನ ಪ್ರಸಾದವನ್ನು ಭುಂಜಿಸುವುದು ಪ್ರಸಾದೀಯ ಪ್ರಸಾದ.

9 ಸದ್ಭಾವ ಪ್ರಸಾದ:- ಪ್ರಸಾದದಲ್ಲಿ ಪದಾರ್ಥ ಭಾವನೆಯನ್ನಳಿದು ಸದ್ಭಾವದಿಂದ ಭೋಗಿಸುವುದು.

10 ಸಮತಾ ಪ್ರಸಾದ:- ಪ್ರಸಾದ ಸೇವನೆಯ ಸಮಯದ ಹೊರತು ಇನ್ನೇನನ್ನೂ ಸೇವಿಸದೆ ಶಾಂತಿ ಸಹನೆಗಳಿಂದ ಇರುವುದು.

11 ಜ್ಞಾನ ಪ್ರಸಾದ:- ಈ ಸಮತಾಪ್ರಸಾದದಿಂದ ಪುನಃ ಪೂಜೆ ಪ್ರಾರಂಭವಾಗುವವರೆಗೂ ಪ್ರಸಾದಕಾಯನಾಗಿರುವುದು ಜ್ಞಾನ ಪ್ರಸಾದವಾಗಿ ಕಂಗೊಳಿಸುತ್ತದೆ.

-ಗುರುವಿನ ಮುಖಾಂತರ ಬಂದ ಪ್ರಸಾದಕ್ಕೆ ಶುದ್ಧ ಪ್ರಸಾದ, ಇಷ್ಟಲಿಂಗಪ್ರಸಾದ,ರೂಪ ಪ್ರಸಾದ,ತ್ಯಾಗಾಂಗ ಪ್ರಸಾದವೆಂಬರು.

ಲಿಂಗ ಮುಖಾಂತರ ಬಂದ ಪ್ರಸಾದಕ್ಕೆ ಸಿದ್ಧ ಪ್ರಸಾದ,ಪ್ರಾಣ ಲಿಂಗಪ್ರಸಾದ, ರುಚಿ ಪ್ರಸಾದ ಭೋಗಾಂಗ ಪ್ರಸಾದವೆಂಬರು.

ಜಂಗಮನ ಮುಖಾಂತರ ಬಂದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ, ಭಾವಲಿಂಗ ಪ್ರಸಾದ,ತೃಪ್ತಿ ಪ್ರಸಾದ,ಯೋಗಾಂಗ ಪ್ರಸಾದವೆಂಬರು.

ಈ ಪ್ರಸಿದ್ಧ ಪ್ರಸಾದ ಅರ್ಥಾತ್ ಜಂಗಪ್ರಸಾದವನ್ನ ಮಹಾಮನೆಯಲ್ಲಿ ಬಸವೇಶ್ವರರು ಸ್ವೀಕರಿಸುತ್ತಿದ್ದರು

ಬಸವೇಶ್ವರರು ಮಿಗಿಸಿದ ಪ್ರಸಾದವನ್ನ ಅವರ ಸೇವಕರು ಸ್ವೀಕರಿಸುತ್ತಿದ್ದರು, ಅವರ ಸೇವಕರು ಮಿಗಿಸಿದ ಪ್ರಸಾದವನ್ನ ಕಲ್ಯಾಣದ ಅಂಗಳಕ್ಕೆ ಪ್ರಭುದೇವರ ದರ್ಶನಕ್ಕೆಂದು ಅಪಘಾನಿಸ್ತಾನದಿಂದ ಆಗಮಿಸಿದ ಮರುಳ ಶಂಕರ ದೇವ

ಚಂದ್ರಮನಿಗೆ ಚಕೋರ ಪಕ್ಷಿಯು ಹಾರೈಸಿಕೊಂಡಿರುವಂತೆ, ವಸಂತ ಋತುವನ್ನು ಕೋಗಿಲೆ ನಿರೀಕ್ಷಿಸಿದ್ದು ಕೊಂಡಿರುವಂತೆ 12 ವರ್ಷಗಳ ಕಾಲ ಮಹಾಮನೆಯ ಪ್ರಸಾದ ಕುಂಡಲದಲ್ಲಿದ್ದು ಮಿಕ್ಕ ಪ್ರಸಾದವನ್ನ ಸ್ವೀಕರಿಸಿದ.

ಆ ಶರಣರ ಮಾತನ್ನ ಕೇಳಲೇಬೇಕು

“ಜಂಗಮ ಪಾದೋದಕವ ಮಜ್ಜನವ ಮಾಡಿ,

ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ, ಶಿವ ಕಲ್ಯಾಣ ಮಾಡಿದ.

ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.

ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,

ತನಗೆ ಚೈತನ್ಯ ಜಂಗಮವೆಂದು,

ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.

ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ.

ಒಡೆಯರೊಕ್ಕುದ ತಾ ಸವಿದು,

ತನ್ನೊಕ್ಕೂದ ಮಿಕ್ಕುದ ತನ್ನ ಗೃಹಚರರಂಡು,

ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕಾಯಿತ್ತು.

ಆ ಪ್ರಸಾದ ಗುಂಡವೇ ಗೃಹವಾಗಿತ್ತು.

ಆ ಪ್ರಸಾದ ಅರ್ಪಿಸುತ್ತಲೇ ಎನ್ನ ಲಿಂಗಕ್ಕೆ ಪೂಜೆ.

ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧ ಪ್ರಸಾದವಾಯಿತ್ತು, ಮನಸ್ಸಿದ್ದ ಪ್ರಸಾದವಾಯಿತ್ತು.

ಗುರುವವಿಡಿದನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯ.

ಇನ್ನು ಬದುಕಿದೆನು ಕಾಣ,

ಶುದ್ಧ ಸಿದ್ದ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ,

ನಿಮ್ಮ ಶರಣ ಸಿದ್ದರಾಮಯ್ಯನ ಕಂಡು ಸಿಕಿಕರ್ಪೂರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.

ನಿಜವಾಗಿಯೂ ನೋಡಿದರೆ ಮನುಷ್ಯ ಬದುಕಲಿಕ್ಕಾಗಿ ಆಹಾರ ಸೇವಿಸಬೇಕು, ಆದರೆ ಆಹಾರ ಸೇವಿಸಲಿಕ್ಕಾಗಿ ಬದುಕಿರುವವರೇ ಬಹಳಜನ ಈ ಲೋಕದಲ್ಲಿ.

ಕೇವಲ ಒಕ್ಕೂ-ಮಿಕ್ಕುದ ತೆಗೆದುಕೊಳ್ಳುವವನು ಮಾತ್ರ ಪ್ರಸಾದಿಯಲ್ಲ, ಬಂದುದನ್ನು ಬೇಕು-ಬೇಡನ್ನದೆ, ಹಿತ- ಅಹಿತವೆನ್ನದೆ, ಸ್ತುತಿ-ನಿಂದೆ ಎನ್ನದೆ ಸಮಭಾವವಾಗಿ ಸ್ವೀಕರಿಸುವುದು ಪ್ರಸಾದಿಯಾದವನ ಸಲ್ಲಕ್ಷಣವೆನ್ನುವರು ಶರಣರು.

ಅದನ್ನೇ ಷಣ್ಮುಖ ಶಿವಯೋಗಿಗಳು ವಿವರಿಸುವಂತೆ :-

ಎನ್ನ ಆಗು ಹೋಗು, ಸುಖ-ದುಃಖ,ಆನಿ-ವೃದ್ಧಿ,ಭಯ-ಭೀತಿ, ಲಜ್ಜೆ-ಮೋಹ,ಸಜ್ಜನ-ಸಮತೆ,ಸಳುವು-ಸಂಚಾರ,ಚಿತ್ತ -ಸುಚಿತ್ತ,ಬುದ್ಧಿ-ಸುಬುದ್ಧಿ,ಅಹಂಕಾರ-ನಿರಹಂಕಾರ,ಭಾವ -ಸದ್ಭಾವ, ಎಡ-ಬಲ,ಮೇಲು-ಕೀಳು ಮೊದಲಾದವುಗಳೆಲ್ಲ ಪ್ರಸಾದವೆಂಬುದು ಇಂತಾಗಿ ಅಖಂಡೇಶ್ವರ             ನೀನೆಂಬ ಪ್ರಸಾದ ಸಾಗರದಲ್ಲಿ ನಾನೆಂಬುದು ಮುಳುಗಿ ನೆಲೆದಪ್ಪಿ ಹೋದೆನಯ್ಯ.

ಹೀಗೆ ಪರಿಶುದ್ಧ ಕ್ರಿಯೆಯಿಂದ ಪ್ರಸಾದಿಯು ನಡೆದುದೆ ಶಿವಪಥವೆನಿಸುತ್ತದೆ.

:-ಗುರು ಕರುಣ ತ್ರಿವಿಧಿಯಲ್ಲಿ ಪ್ರಸಾದ ತ್ರೈವಿಧವನ್ನು ಶ್ರೀ ಗುರು ಶಿಷ್ಯನಿಗೆ ಉದ್ದರಿಸುವನು

“ಶುದ್ಧ ಶೇಷವೇ ಇಷ್ಟ, ಸಿದ್ಧವೇ ಪ್ರಾಣ,    ಪ್ರಸಿದ್ಧವೇ ಭಾವ, ನಿರ್ಧರ ತ್ರೈಲಿಂಗವ

ಸಮುದ್ದರಿಪ -ಗುರುವಿಗೆ ಕೃಪೆಯಾಗು”

ಈ ಮೂರು ಪ್ರಸಾದವ ಸ್ವೀಕರಿಸುವಲ್ಲಿ ಪ್ರಸಾದದಲ್ಲಿ ನಿರ್ಧರ (ನಿಷ್ಠೆಯ) ಭಾವವಿರಬೇಕೆನ್ನುವರು ಮೈಲಾರದ ಬಸವಲಿಂಗ ಶರಣರು.

“ನಂಬಿದರೆ ಪ್ರಸಾದ;ನಂಬದಿದ್ದರೆ ವಿಷ ವೆನಿಸುವುದು”

ದೃಢನಿಷ್ಠೆಯಿಂದಲೇ ಪದಾರ್ಥವು ಪ್ರಸಾದವೆನಿಸುವುದು, ಇಂಥ ಪ್ರಸಾದಿಕ ಕ್ರಿಯೆಗಳಿಂದ, ಪ್ರಸಾದಿಕ ಪ್ರಜ್ಞೆಯಿಂದ, ಪ್ರಸಾದಿಕಾನುಭೂತಿಯಿಂದ ಅಂಗನು  ಪ್ರಸಾದ ಕಾಯನಾಗುವನು ಜೊತೆಗೆ ಯಾವಾಗಲೂ ಪ್ರಸನ್ನ ಚಿತ್ತವುಳ್ಳವನಾಗುವನು “ಪ್ರಸಾದಸ್ತು ಪ್ರಸನ್ನತಾ”.

ಆಹಾರವನ್ನು ಭಗವಂತನ ಪ್ರಸಾದವೆಂದು ಆತನಿಗೆ ಅರ್ಪಿಸಿ ತುತ್ತಿಗೊಮ್ಮೆ ಆತನನ್ನು ನೆನೆಯುತ್ತ ಉಣ್ಣಬೇಕು,

ಇದು ದೇಹ ಭಾವವನ್ನು ಕಳೆದುಕೊಂಡು ಪ್ರಸಾದ ಭಾವವನ್ನು ಅಳವಡಿಸಿಕೊಳ್ಳುವ ಸುಂದರ ಸೂತ್ರವಾಗಿದೆ

ಅದನ್ನೇ ಬಸವಣ್ಣನವರು ತಿಳಿಸುತ್ತಾರೆ

“ಮೌನದಲುಂಬುವುದು ಆಚಾರವಲ್ಲ,

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಾ ಶರಣೆನ್ನುತ್ತಿರಬೇಕು,

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡಡೆ”

ಆತನ ಕರುಣೆಯ ಸ್ಮರಣೆಯಿಂದ ಕರಣವೃತ್ತಿಗಳು ಅಂದರೆ ಇಂದ್ರಿಯವಿಕಾರಗಳು ಅರ್ಥಾತ್ ಮನಸ್ಸು ಪ್ರಸನ್ನವಾಗುತ್ತದೆ.

ಹೀಗೆ ಪ್ರಸಾದ ಸ್ವೀಕರಿಸುವಲ್ಲಿ ಮನೋನೈರ್ಮಲ್ಯ ನೆಲೆಗೊಂಡು, ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು, ಹೀಗೆ ಸ್ವೀಕರಿಸುತ್ತಾ ಬದುಕುವಲ್ಲಿ ಸಾಧಕನು ಲಿಂಗ ಭೂಗೋಪಭೋಗಿಯಾಗಿರುತ್ತಾನೆ.

ಭಗವಂತನಿಗೆ ಅರ್ಪಿಸುವದನ್ನ ಶ್ರದ್ಧೆಯಿಂದ ಅರ್ಪಿಸಬೇಕು, ಅಟ್ಟಹಾಸದಿಂದ ಅಥವಾ ಪ್ರಸಿದ್ಧಿಗೊಸ್ಕರ,ದೇವರ ಕಾಟ ಕಳೆಯಲೆಂದು ಅರ್ಪಿಸಬಾರದು.

ಅರ್ಪಣ ಮನೋಭಾವ ಸಾಧಕನಲ್ಲಿ ನೆಲೆಗೊಳ್ಳಬೇಕು. ಅರ್ಪಿಸಿದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೆ ಉಪಯೋಗಿಸಬೇಕು ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು  ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.

 

ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.

 

ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.

 

ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.

 

ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.

 

ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.

 

ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.

 

ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.

 

ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.

 

ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.

ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ     ||ಪ||

ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ

 

ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ

ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ

ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ

ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ           ||೧||

 

ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ

ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ

ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ

ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ                ||೨||

 

ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ

ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ

ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ

ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ       ||೩||

 

ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ

ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ

ಸುಜನ ಜನದ ಕೈವಾರವೆ ಮಂಗಳಪಾಠವಮ್ಮ

ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ            ||೪||

 

ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ

ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ

ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ

ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ                ||೫||

 

ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.