ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ನೋವು-ಸಂತಸ ಗಳ ಮಿಶ್ರವಾಗಿದ್ದ ೨೦೨೧ ಕ್ಕೆ ವಿದಾಯ ವನ್ನೀಯುತ್ತ ೨೦೨೨ ವರ್ಷವನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳುವ ಪರ್ವದಲ್ಲಿ

ಮೂವರು ಮಹಾನ್‌ ಶಿವಯೋಗಿಗಳ  ಪವಿತ್ರ ಸ್ಮರಣೆ ಮಾಡುವ ಪುಣ್ಯ ಯೋಗ “ಸುಕುಮಾರ” ಕ್ಕೆ ಸಿಕ್ಕಿರುವುದು  ಒಂದು ಸುಯೋಗ.

ಶಿವಯೋಗಿಗಳು ಶಿವನಲ್ಲಿ ಒಂದಾಗಿ ಶಿವಸ್ವರೂಪಿಗಳಾದವರು

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು (೧೮೯೪)

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು (೧೯೧೧)

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಹಾವೇರಿ (೧೯೫೪)

ಈ ಮಹಾತ್ಮರು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪಾವನ ಜೀವನದಲ್ಲಿ ಮತ್ತು ಸಮಾಜಮುಖಿ ಹೆಜ್ಜೆಗಳಿಗೆ  ಅವಿಸ್ಮರಣೀಯ ಕೊಡುಗೆಗಳನ್ನಿತ್ತವರು.

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಚಿನ್ಮಯ ದೀಕ್ಷೆಯನ್ನಿತ್ತವರು.

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ನಿರಂಜನ ಪಟ್ಟಾಧಿಕಾರ ಅನುಗ್ರಹ ವನ್ನಿತ್ತವರು.

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ದೇಹ ಎರಡಾದರೂ ಒಂದೇ ಆತ್ಮದಂತೆ ,ಹೆಗಲಿಗೆ ಹೆಗಲು ಕೊಟ್ಟುಶ್ರೀ ಮದ್ವೀರಶೈವ ಶಿವಯೋಗಮಂದಿರಕ್ಕೆ ಮಾತೃಸ್ವರೂಪರಾಗಿ  ದುಡಿದವರು.

ಪರಮಪೂಜ್ಯರ ಕುರಿತು ವಿಶೇಷ ಲೇಖನಗಳ ಸಂಗ್ರಹ ಜನೇವರಿ ೨೦೨೨ ರಲ್ಲಿಮೂಡಿಬರುತ್ತಿವೆ.

ಸಂತಸದ ವಿಷಯ ವೇನೆಂದರೆ ಸುಕುಮಾರ ಪತ್ರಿಕೆಯ ಓದುಗರ ಸಂಖ್ಯೆ ೫೦೦೦ ರ ಗಡಿ ದಾಟಿದೆ. ವಿದೇಶದ ಕನ್ನಡಿಗ ಓದುಗರ ಅಭಿಮಾನದ ಜೊತೆಗೆ ಕರ್ನಾಟಕದ ಓದುಗರ ಸಹಕಾರದ ರಕ್ಷಾಕವಚ ಸುಕುಮಾರವನ್ನು ಲಕ್ಷದ ಗಡಿ ದಾಟುವ ಸಮಯ ದೂರವಿಲ್ಲ.

ಜನೆವರಿ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಯೋಗಿರಾಡ್ಜಯ ಮಂಗಲಂ|| ಪರತರಶಿವ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಮೂಲ ಲೇಖನ :ಲಿಂ. ಕುಮಾರ ಸ್ವಾಮಿಗಳು ಕಲ್ಮಠ ಸವದತ್ತಿ-ಬಿದರಿ.

ಮಾಹಿತಿ ಸಹಾಯ : ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಯೋಗಿರಾಡ್ಜಯ ಮಂಗಲಂ|| ಪರತರಶಿವ||

ಯೋಗಿರಾಡ್ಜಯ ಯ ಮಂಗಲಂ

ಲಿಂಗಾಂಗೊಭಯಸಂಗ ಶರಣರಪುಂಗಾ||

ಅಂಗಜಭವಭಂಗ!!

ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!

ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!

ಯೋಗಿರಾಡ್ಜಯ ಮಂಗಲಂ ||ಪರತಿರತಿವ!!

ಯೋಗಿರಾಡ್ಜಯ ಮಂಗಲಂ

ಈಡಪಿಂಗಳ ಜೋಡಿಸಿ ಹರಿದಾಡುವ 11

ಜೋಡಕ್ಕರವ ಕೂಡಿಸಿ

ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!

ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!

ಯೋಗಿರಾಡ್ಜಯ ಮಂಗಲಂ 11ಪರತರಶಿವ||

ಯೋಗಿರಾಡ್ಜಯ ಮಂಗಲಂ

ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||

ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ

ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!

ಯೋಗಿರಾಡ್ಜಯ ಮಂಗಲಂ ||ಪರತರಪಶಿವ||

ಯೋಗಿರಾಡ್ಜಯ ಮಂಗಲಂ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ತಾತಾ ಎಂದರೆ ಕೊಡುವ | ದಾತ್ರೈ ಭುವನ ಪ್ರ-

ಖ್ಯಾತ ಸದ್ಭಕ್ತಿ-ಪ್ರೀತನಾದಿಯೊಳೆನ್ನ

ತಾತ ಶ್ರೀಗುರುವೆ ಕೃಪೆಯಾಗು II ೩೬ ||

‘ತಾತ’ ‘ಪದವೂ ಅಜ್ಜನ ಪರ್ಯಾಯವೇ, ಕೆಲವೊಂದು ಭಾಗದಲ್ಲಿ ಅಜ್ಜನಿಗೆ ತಾತನೆನ್ನುವದು ರೂಢಿಯಾಗಿದೆ. ಮತ್ತು ಅಜ್ಜನ ಪಿತನಿಗೆ ತಾತನೆನ್ನುವ ವಾಡಿಕೆಯೂ ಉಂಟು. ಇಲ್ಲಿ ಕವಿಯು ಶಬ್ದ ಚಮತ್ಕಾರದಿಂದ ಅರ್ಥವಿಸ್ತಾರವನ್ನು ವಿಶದಗೊಳಿಸಿ ದ್ದಾನೆ. ತಾ ಯೆಂದರೆ ಕೊಡುವುದೆಂದರ್ಥ. ತಾತಾಯೆಂದರೆ ಅಜ್ಜ ಒಮ್ಮೆ ಕ್ರಿಯಾ ಪದವಾಗಿ ಇನ್ನೊಮ್ಮೆ ನಾಮಪದವಾಗಿ ಪ್ರಯೋಗವಾಗಿದೆ. ಗುರುದೇವನೂ ತಾತನಾಗಿದ್ದಾನೆ. ಶಿಷ್ಯನ ಬೇಡಿದ ಬಯಕೆಗಳನ್ನು ಪೂರೈಸುವಲ್ಲಿ ಸಮರ್ಥನು. ‘ತಾತಾ’ ಎಂದು ಪ್ರಾರ್ಥಿಸಿದರೆ ಪ್ರಾರ್ಥಿಸಿದ ಕೊಡುಗೆಯನ್ನು ಕೊಡುವಲ್ಲಿ ದಾತೃವಾಗಿದ್ದಾನೆ. ಈ ದಾತೃತ್ವದಿಂದ ಗುರುವರನು ಮೂರುಲೋಕದಲ್ಲಿಯೂ ಪ್ರಖ್ಯಾತನಾಗಿದ್ದಾನೆ. ದಾತೃತ್ವದ ಸೆಲೆಯು ಸದ್ಭಕ್ತಿಯಿಂದ ಮಾತ್ರ ಹೊರಸೂಸುವದು. ಸದ್ಭಕ್ತಿಯಿಂದಲೇ ಗುರುನಾಥನು ಪ್ರೀತಿಯುಳ್ಳವನಾಗುವನು. ತಾತನು ತನ್ನ ಸೇವೆ ಮಾಡುವ ಮೊಮ್ಮಕ್ಕಳಿಗೆ ತನ್ನ ಸೊತ್ತನ್ನು ಕೊಡುವಂತೆ ಗುರುವು ಸದ್ಭಕ್ತಿಯುಳ್ಳ ಶಿಷ್ಯರಿಗೆ ಕೃಪೆ ಮಾಡುವನು. ಈ ತಾತನು ಆದಿಯಿಂದ ಆದವನಲ್ಲ. ಅನಾದಿ ನಿರಂಜನನಾಗಿದ್ದಾನೆ. ನಿರಂಜನ ವಸ್ತುವಿಗೆ ಆದಿಯೆಂಬುದಿಲ್ಲ. ಆದರಿಂದ ಗುರುವು ಅನಾದಿ ತಾತನು.

ಶ್ರೀ ಜ.ಚ.ನಿ. ಯವರು ತಮ್ಮ ‘ಗುರುಕರುಣತ್ರಿವಿಧಿಯ ಭಾವ ವಿವರಣೆ’ ಯಲ್ಲಿ ‘ತ್ರೈಭುವನ’ ಎಂದರೆ ತ್ರಿವಿಧಾಂಗವೆಂದು ಅರ್ಥೈಸಿದ್ದಾರೆ. ಶ್ರೀಗುರುವು ತ್ಯಾಗಾಂಗಭುವನಕ್ಕೆ ಕ್ರಿಯಾಕಾರುಣ್ಯವನ್ನು, ಭೋಗಾಂಗಭುವನಕ್ಕೆ ಮಂತ್ರ ಕಾರುಣ್ಯವನ್ನು, ಯೋಗಾಂಗಭುವನಕ್ಕೆ ವೇಧಾಕಾರುಣ್ಯವನ್ನು ಕರುಣಿಸುವನು. ಶಿವದೀಕ್ಷೆಯಕಾಲಕ್ಕೆ ಕ್ರಿಯೆಯಿಂದ ಸೂಕ್ಷ್ಮತನುವನ್ನು ಶುದ್ಧಗೊಳಿಸಿ, ಸೂಕ್ಷ್ಮ ತನುವಿಗೆ ಮಂತ್ರಜಪವನ್ನು ಬೋಧಿಸುವನು. ಕಾರಣತನುವಿಗೆ ಮಂತ್ರಾನುಸಂಧಾನದ ವಿಧಾನವನ್ನು ಕಲಿಸುವನು. ಆದ್ದರಿಂದ ಕಾಣದ ಸ್ವರ್ಗ ಮತ್ತು ಪಾತಾಳದ ಕಲ್ಪನೆಗಿಂತ ತ್ರಿವಿಧಾಂಗಗಳಲ್ಲಿ ತ್ರೈಭುವನದ ಸಾರ್ಥಕತೆಯನ್ನು ತಿಳಿದು ಗುರುವಿನ ದಾತೃತ್ವದ ವಿಶಾಲತೆಯನ್ನು ಅರಿಯುವದು ಅವಶ್ಯವಾಗಿದೆ.

ಸುಳಿವ ಸೋದರಮಾವ | ನಳಿಯನಗ್ರಜಭಾವ

ಗೆಳೆಯ ನೀನೆನಗೆ ಹಳೆನೆಂಟ ಕುಲಕೋಟಿ

ಬಳಗವೈ ಗುರುವೆ ಕೃಪೆಯಾಗು || ೩೭ ||

ಈ ತ್ರಿಪದಿಯಲ್ಲಿ ಶಿವಕವಿಯು ಕೊನೆಯದಾಗಿ ಸಕಲ ಬಳಗವನ್ನೇ ಸರಗೊಳಿಸಿದ್ದಾನೆ. ಮಾನವನು ಶಿವನ ಸೃಷ್ಟಿಯಲ್ಲಿ ಹುಟ್ಟಿದ್ದರೆ, ತಂದೆ, ತಾತ, ತಮ್ಮ ಅಣ್ಣ, ಕಕ್ಕ, ಅಕ್ಕ, ತಾಯಿ, ತಂಗಿ, ಅತ್ತೆ, ಸೊಸೆ, ಮಾವ, ಅಳಿಯ ಗೆಳೆಯ ಇತ್ಯಾದಿ ಬಳಗವೆಲ್ಲ ಮಾನವನ ಸೃಷ್ಟಿಯಿಂದಾಗಿದೆ. ಸಾಮಾಜಿಕ ಜೀವನದಲ್ಲಿ ಸಮಾಜ ವ್ಯವಸ್ಥೆಗೆ ತಕ್ಕಂತೆ ಒಬ್ಬ ವ್ಯಕ್ತಿಯು ತಾಯಿ-ತಂದೆಗೆ ಮಗನಾಗುತ್ತಾನೆ. ತಾಯಿ- ತಂದೆಯ ತಂದೆ ಅಜ್ಜ, ಅಣ್ಣನಿಗೆ ತಮ್ಮ, ಅಜ್ಜನಿಗೆ ಮೊಮ್ಮಗ, ಮಾವನಿಗೆ ಅಳಿಯ, ಹೆಂಡತಿಗೆ ಗಂಡ, ಆತ್ಮೀಯ ಪರಿಚಯದ ಮತ್ತು ಹಿತಬಯಸುವವನು ಗೆಳೆಯ ನಾಗುವನು. ಹೀಗೆ ಕೆಲವರು ಸಮೀಪದ ಬಂಧುಗಳಾದರೆ ಮತ್ತೆ ಹಲವರು ಹಳೆಯ ನೆಂಟರಾಗುವರು. ಈ ರೀತಿ ಮಾನವ ನಿರ್ಮಿತ ಬಳಗವೆಲ್ಲ ಶ್ರೀಗುರುವಿನಲ್ಲಿದೆ  ಅಣ್ಣನವರೂ

“ತಂದೆ ನೀನು, ತಾಯಿ ನೀನು, ಬಂಧು ನೀನು

ಬಳಗ ನೀನು ನೀನಲ್ಲದೆ ಎನಗೆ ಮತ್ತಾರೂ ಇಲ್ಲವಯ್ಯಾ”

ಎಂದು ಸಂಗಮನಾಥನಲ್ಲಿ ಎಲ್ಲ ಬಳಗವನ್ನು ಕಂಡಿರುವರು. ಗುರುದೇವನನ್ನು ಅನನ್ಯ ಭಕ್ತಿಯಿಂದ ಭಜಿಸಿದರೆ, ಅವನು ಸಕಲಬಳಗಸ್ಥನಾಗಿ ಸುಜ್ಞಾನ ಸುಧೆಯನ್ನು ಕರುಣಿಸಿ ಮುಕ್ತನನ್ನಾಗಿ ಮಾಡುತ್ತಾನೆ. ಅಂತೆಯೇ ಅನುಭವಿಯಾದ ಸರ್ವಜ್ಞ ಕವಿಯು ಗುರುಬಂಧುತ್ವದ ಅಧಿಕ್ಯತೆಯನ್ನು, ಸಾಂಸಾರಿಕ ಬಳಗದ ಕನಿಷ್ಠತೆಯನ್ನು ಬಣ್ಣಿಸಿರುವನು.

ಬಂಧುಗಳಾದವರು ಬಂದುಂಡು ಹೋಗುವರು.

ಬಂಧನವ ಕಳೆಯಲರಿಯರು.

ಸಾಂಸಾರಿಕ ಬಂಧುಗಳು ಧನ ಇದ್ದಾಗ ಬಂದುಂಡು, ಹರಣಮಾಡಿಕೊಂಡು ಹೋಗುವರು. ಆದರೆ ಈ ಗುರುಬಂಧು ಜೀವನ ಭವಬಂಧನವನ್ನೇ ಕಳೆಯುವನು.

ಬಂದೆಡರಿಗಂಜಬೇ | ಡೆಂದು ಧೈರ್ಯವನಿತ್ತು

ಹಿಂದು ಮುಂದೆನ್ನ ಕಾಯ್ದಿರ್ಪ ಭಕ್ತಜನ

ಬಂಧು ಶ್ರೀಗುರುವೆ ಕೃಪೆಯಾಗು ||೩೮ ||

“ಆಪತ್ಕಾಲದಲ್ಲಾದವನೇ ನಿಜವಾದ ಬಂಧು” ಎಂದು ಅನುಭವಿಗಳು ಹೇಳುತ್ತಾರೆ. ಹಣ್ಣಾದ ಮರಕ್ಕೆ ಪಕ್ಷಿಗಳು ಮುತ್ತಿ ಹಣ್ಣು ತೀರಿದ ಮೇಲೆ ಹೋಗುವಂತೆ ಬಂಧುಗಳು ಹಣವಿರುವವರೆಗೆ ಹೆಚ್ಚುವರು. ಹಣ ತೀರಿ ಬಡವನಾದರೆ ಯಾರೂ ಮಾತನಾಡಿಸುವದಿಲ್ಲ. ಧನವಂತನ ತೊಂದರೆಗಳನ್ನು, ಕೇಳುವವರು ಹಲವರು. ದರಿದ್ರನ ದುಃಖವನ್ನು ಆಲಿಸುವವರು ವಿರಳ. ಲೋಕದಲ್ಲಿ ಹಣದಿಂದ ಬಂಧುಗಳಲ್ಲದೆ ಗುಣದಿಂದ ಬಂಧುಗಳಿಲ್ಲ.

ಗುರುನಾಥನು ತನುತೊಂದರೆ, ಮನ ತೊಂದರೆ, ಧನತೊಂದರೆ ಹಾಗೂ ಇತರ ತೊಂದರೆಗಳು ಬಂದರೂ ಅಂಜದಿರೆಂದು ಶಿಷ್ಯನಿಗೆ ಧೈರ್ಯವನ್ನು ಕೊಡುತ್ತಾನೆ ಗುರುದೇವನು ನಿಜವಾದ ಭಕ್ತಜನಬಂಧುವಾಗಿದ್ದಾನೆ. ಅವನು ಶಿಷ್ಯನ ತನುತಾಪ, ಹೃತ್ತಾಪ, ವಿತ್ತಾಪಗಳನ್ನು ಕಳೆಯುತ್ತಾನೆ. ಗುರುವರನು ನಂಬಿದ ಭಕ್ತರಿಗೆ ಇಂಬುಗೊಟ್ಟು ಹಿಂದೆ ಮಂದೆ (ಭೂತ-ಭವಿಷ್ಯತ್ತು ಮತ್ತು ವರ್ತಮಾನಕಾಲದಲ್ಲಿಯೂ ರಕ್ಷಿಸುವನು. ಸದಾ ಸದ್ಭಕ್ತರ ಹಿತಚಿಂತನೆಗೈಯುವ ಗುರುಸ್ವಾಮಿಯು ಭಕ್ತಜನಬಂಧುವಲ್ಲದೆ ಮತ್ತೇನು ?

ಭಕ್ತಿದಾಸೋಹವು ವಿ | ರಕ್ತಿ ದೃಢ ಛಲ ನೇಮ

ಭಕ್ತಿಯನೆ ನಡೆಸಿಕೊಡುವಲ್ಲಿ ಗುರುವೆ ನೀ

ಭಕ್ತವತ್ಸಲನೆ ಕೃಪೆಯಾಗು ||39 ||

‘ಪೂಜೈಷು ಅನುರಾಗೋ ಭಕ್ತಿಃ” ಪೂಜ್ಯರಲ್ಲಿ ಇಟ್ಟ ಪ್ರೇಮವೇ ಭಕ್ತಿಯಾಗುವುದು  ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನಗಳನ್ನು ಸಮರ್ಪಿಸುವ ಕೈಂಕರ್ಯವೇ ದಾಸೋಹ. ಶಿವಪ್ರಸಾದವಲ್ಲದುದನ್ನು ತ್ಯಜಿಸುವದೇ ವಿರಕ್ತಿ. ಶಿವಾಚಾರವಲ್ಲದುದನ್ನು ನಿರೋಧಿಸುವದೇ ಛಲ. ಆ ನಿರೋಧ ಗಟ್ಟಿಮುಟ್ಟಾದರೆ ದೃಢ ಛಲವೆನಿಸುವದು. ಶಿವನ ಅನುಭಾವದಲ್ಲಿ ತಪ್ಪದೇ ನಡೆಯುವದೇ ನಿಯಮ. ವಿರಕ್ತಿ ಛಲನೇಮಗಳಿಂದೊಡಗೂಡಿದ ದಾಸೋಹಂಭಾವವು ಸ್ಥಿರವಾಗಿ ನಿಂತರೆ ಭಕ್ತಿಯ ಪರಿಪೂರ್ಣತೆಯು ಅಳವಡುವದು. ಇಂಥ ಭಕ್ತಿಯೇ ಮುಕ್ತಿಯ ಸಾಧನವು. “ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ನೆಂದು ಅಣ್ಣ ಬಸವಣ್ಣನವರು ಭಕ್ತಿಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಶಿವನ ಪ್ರತಿರೂಪನಾದ ಗುರುವಿನ ಕೃಪೆಗೆ ಭಕ್ತಿಯೇ ಮೂಲ. ಭಕ್ತಿಯುಳ್ಳ ಭಕ್ತನಿಗೆ ಗುರುವು ಭಕ್ತವತ್ಸಲನಾಗುವನು. ಭಕ್ತವತ್ಸಲನೇ ! ಭಕ್ತರಲ್ಲಿ ಭಕ್ತಿಯ ಬೀಜವನ್ನು ಬಿತ್ತಿ ಶಿವಯೋಗ ಫಲವನ್ನು ಬೆಳೆ, ಅಂದರೆ ಮಾತ್ರ ಭಕ್ತವತ್ಸಲನೆನ್ನುವ ನಾಮ ಸಾರ್ಥಕವಾಗಬಲ್ಲುದು.

ಮೊದಲಿನ ತ್ರಿಪದಿಯಲ್ಲಿ ಅಭಯವನ್ನಿತ್ತು ಧೈರ್ಯವನ್ನು ಬೋಧಿಸಿದ ಶ್ರೀಗುರುವು ಇಲ್ಲಿ ಭಕ್ತಿದಾಸೋಹ-ವಿರಕ್ತಿ ದೃಡಛಲ ನೇಮಗಳನ್ನು ಕಲಿಸಿ ಕೊಡುತ್ತಾನೆ. ಭಕ್ತವತ್ಸಲನಾದ ಗುರುವು ತನ್ನ ಶಿಷ್ಯನ ಮೇಲಿನ ಅಂತಃಕರಣದಿಂದ ಶರಣ ಮಾರ್ಗದ ಮುಖ್ಯ ಸಿದ್ಧಾಂತವಾದ, ಪಂಚಪ್ರಾಣಗಳಂತಿರುವ ಪಂಚಸೂತ್ರಗಳನ್ನು ಅರ್ಥಾತ್ ಪಂಚಾಚಾರಗಳನ್ನು ಕಲಿಸಿಕೊಡುವನು ! ನುಡಿ ಮತ್ತು ನಡೆಯನ್ನು ಏಕರೂಪಗೊಳಿಸುವ ಶಿಕ್ಷಣವನ್ನಿತ್ತು ಮುಕ್ತನನ್ನಾಗಿಸುವನು. ಇಂಥವನೇ ಸಕಲಬಂಧು ಬಳಗ, ಭಕ್ತಜನ ವತ್ಸಲನೂ ಹೌದು.

ಯುಗನಾಲ್ಕು ವೊಂದಾದ | ಜಗದೊಳಗೆ ತಾನಿರ್ಪ

ಬಗೆಯನಾ ಜಗದೊಳೊಗೆದ ಕಣ್ಣಲಿ  ನೋಡಿ ನಗುವ

ಶ್ರೀಗುರುವೆ ಕೃಪೆಯಾಗು ||40||

ಕವಿಯಾದವನು ಯುಗ ಧರ್ಮವನ್ನು ಯಾವಾಗಲೂ ಜಾಗ್ರತಗೊಳಿಸುತ್ತಾನೆ. ಅದು ಅವನ ಕರ್ತವ್ಯ ಕರ್ಮ. ಕವಿಯು ಸಮಾಜದ ಸಂವೇದನೆಯನ್ನು ತನ್ನ ಕೃತಿಯಿಂದ ಚಿತ್ರಿಸಬೇಕು. ಸಮಾಜದಲ್ಲಿ ಜಾಗ್ರತೆಯನ್ನು ತುಂಬುವಂತಾಗಬೇಕು. ತ್ರಿವಿಧಿಯ ಶಿವಕವಿಯೂ ಸಮಾಜದಲ್ಲಿ ಬಾಳಿ ಬೆಳೆದು ಕಾಯಕ ಜೀವಿಯಾಗಿ, ಇತರ ಜೀವಿಗಳ ತೊಳಲಾಟವನ್ನು ಕಂಡು ಕನಿಕರ ಪಡುತ್ತಾನೆ. ಗುರುಕೃಪೆಯನ್ನು ಪಡೆದು ಮುಕ್ತರಾಗಲು ಸೂಚಿಸಿದ್ದಾನೆ. ಜಗದ ನೆಂಟರು ನಿಜವಾದವರಲ್ಲ. ಸದ್ಗುರುವಿನನ್ನೇ ನಂಬಿರಿ. ಅವನೇ ನಿತ್ಯ-ಸತ್ಯನಾದ ಭಕ್ತವತ್ಸಲನೆಂಬುದನ್ನು ಹಿಂದಿನ ಪದ್ಯಗಳಿಂದ ಮನವರಿಕೆ ಮಾಡಿಕೊಟ್ಟಿದ್ದಾನೆ. ಅಲ್ಲದೆ ಗುರುವಾದವನಲ್ಲಿಯೂ ಭಕ್ತಿ-ಪ್ರೇಮ, ಯಥಾರ್ಥತೆ, ಕರ್ತವ್ಯ ಕರ್ಮಗಳು, ಇರಬೇಕೆಂಬುದನ್ನು ಈ ಮೂಲಕ ಸೂಚಿಸಿದ್ದಾನೆ.

ಕೃತಯುಗ, ತ್ರೇತಾಯುಗ, ದ್ವಾಪಾರಯುಗ ಮತ್ತು ಕಲಿಯುಗಗಳೆಂಬ ನಾಲ್ಕು ಯುಗಗಳಿಂದ ಕೂಡಿದ ಈ ಜಗತ್ತು ಕಾಲಚಕ್ರ ತಿರುಗುತ್ತಿದ್ದರೂ, ಜಗದ ಇರುವಿಕೆ ನಿಂತಿಲ್ಲ. ಜಗತ್ತಿನ ವ್ಯವಹಾರವೆಲ್ಲ ನಡೆದೇ ಇದೆ. ಇದು ಜಗದೀಶನ ಲೀಲೆ. ಜಗವನ್ನು ನಿರ್ಮಿಸುವದು ಸೃಷ್ಟಿಯೆನಿಸಿದರೆ. ವ್ಯವಸ್ಥಿತವಾಗಿ ಇರಿಸುವದೇ ಸ್ಥಿತಿಯೆನಿಸುವದು. ನಿಯಮ ಬದ್ಧವಾದ ಜಗದ ಇರುವಿಕೆಯನ್ನು ಅರಿಯುವದೇ ನಿಜ ಸ್ಥಿತಿ. ಮಾನವನು ಈ ನಿಜಸ್ಥಿತಿಯನ್ನರಿಯದೇ ಅಜ್ಞಾನದಿಂದ, ಮಾಯಮೋಹಗಳಿಂದ ಬುದ್ಧಿ ಶೂನ್ಯನಾಗಿ ಕಣ್ಣು ಬಿಟ್ಟು ಬಯಸಿ ಬಳಲುತ್ತಾನೆ. ತನ್ನದಲ್ಲದುದನ್ನು ಆಶಿಸಿ ಮರಗುತ್ತಾನೆ. ಕರ್ತವ್ಯಕರ್ಮವನ್ನು ಮಾಡದೇ ತನಗಾಗಿ ಬೇಡುತ್ತಾನೆ. ಇದು ಮಾನವನ ಅಜ್ಞಾನ. ಶ್ರೀಗುರುವು ಇದೆಲ್ಲವನ್ನು ತನ್ನ ಜ್ಞಾನ ಕಣ್ಣಿನಿಂದ ನೋಡಿ ನಗುತ್ತಾನೆ. ಈ ನಗುವಿನಲ್ಲಿ ಆನಂದವಿಲ್ಲ. ಇದು ಆಶ್ಚರ್ಯದ ನಗು, ಸಂವೇದನೆಯ ನಗು, ಕನಿಕರದ ನಗು. ಕಳಕಳಿಯ ಕೊರಗು.

ಮನುಷ್ಯನು ತಿಳಿದೂ ತಪ್ಪು ಮಾಡುತ್ತಾನೆ. ಲಿಂಗೈಕ್ಯ ಜಗದ್ಗುರು ಅನ್ನ ದಾನಿ ಮಹಾಸ್ವಾಮಿಗಳು ಅಪ್ಪಣೆಕೊಡಿಸುತ್ತಿದ್ದಂತೆ – ‘ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳಬಾರದು.” ಜೀವಾತ್ಮನು ಅರಿತರೂ ಅಜ್ಞಾನದಿಂದ, ಮಾಯಾಪಾಶದಿಂದ ಮರೆತು ಮರಣವನ್ನಪ್ಪುತ್ತಾನೆ. ಭವಚಕ್ರದಲ್ಲಿ ತಾನೇ ತಿರುಗುತ್ತಾನೆ. ಮಾನವ ಜನ್ಮದ ಸಾಫಲ್ಯತೆಯನ್ನು ಪಡೆಯದೇ ಹೋಗುವನಲ್ಲವೆಂದು ಗುರುವಿಗೆ ವೇದನೆಯಾಗುತ್ತದೆ. ವೇದನೆ ಆಗಬೇಕು. ಅದುವೆ ಸದ್ಗುರುವಿನ ಪರಿಪೂರ್ಣ ಹೃದಯ. ಭಕ್ತವಾತ್ಸಲ್ಯದ ಪ್ರತೀಕ.

ಪ್ರತಿಯೊಬ್ಬ ಮಾನವನು ಮಾನವ ತನುವನ್ನು ಪಡೆದ ಮೇಲೆ ಮಹಾಲಿಂಗ ರಂಗ ಕವಿಯು ಹೇಳಿದ-

“ಹುಟ್ಟಿದರೆ ಸಾವಿಲ್ಲದಿಹ ಬಲು ಬಟ್ಟೆಯನ್ನು ಸಾಧಿಸಬೇಕದು |

ನೆಟ್ಟನಳವಡದಿರ್ದೊಡೀ ತನುವಿದ್ದ ಬಳಿಕೇನು”

ಎಂಬ ಮಾತನ್ನು ಅರಿತು ಆಚರಿಸಬೇಕು. ಜಡಕರ್ಮಗಳ ಜಾಲದಲ್ಲಿ ಸಿಕ್ಕು ನುಚ್ಚು ನೂರಾಗುವದನ್ನು ತಪ್ಪಿಸಿಕೊಂಡು ಮಾಯಾ ಪಾಶವನ್ನು ಹರಿದುಕೊಳ್ಳಬೇಕು. ಅಂದರೆ ಗುರುವಿಗೆ ಸಂತಸ, ಇಲ್ಲದಿದ್ದರೆ ನೋವು, ಶಿಷ್ಯನ ಸದಿಚ್ಛೆ, ಗುರುವಿನ ಸಂವೇದನೆ ಭವಸಾಗರದಿಂದ ದಾಟಿಸಬಲ್ಲುದು.

ಅದಕ್ಕಾಗಿ ಶಿಷ್ಯನು ಸದ್ಗುರುವಿನ ಅಪಾರ ಮಹಿಮಾತಿಶಯವನ್ನು ಅರಿತು ಶರಣಾಗತನಾಗಬೇಕು. ಬೇಡಬೇಕು. ಗುರುವಾದರೂ ವಿಶ್ವಕುಟುಂಬಿಯೂ ಭಕ್ತ ವತ್ಸಲನೂ ಆಗಬೇಕು. ಅಂಥವನು ಮಾನವನ ಮೂರ್ಖತನಕ್ಕೆ ನಗುತ್ತಾನೆ. ಕರುಣೆ ಯಿಂದ ಕನವರಿಸಿ ಉದ್ಧರಿಸುತ್ತಾನೆ. ಓ ಗುರುವೆ, ನಿನ್ನ ಅಂತಃಕರಣದ ಸಂವೇದನೆಯು ನಮ್ಮನ್ನು ಉದ್ಧರಿಸಲಿ.

ಲೇಖಕರು  :ಶ್ರೀಪ್ರಭುಚನ್ನಬಸವಸ್ವಾಮೀಜಿ ಮೋಟಗಿಮಠ, ಅಥಣಿ

ನವಸಮಾಜ ನಿರ್ಮಾಣಕ್ಕಾಗಿ ೧೯೦೪ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ ಸ್ಥಾಪಿಸಿದವರು, ನಾಡಿಗಾಗಿ ಶ್ರೀಗಳನ್ನು ನಿರ್ಮಿಸಲು ೧೯೦೯ರಂದು ‘ಶಿವಯೋಗಮಂದಿರ’ವನ್ನು ಕಟ್ಟಿದವರು, ಪರಳಿ ವ್ಯಾಜ್ಯದಲ್ಲಿ ಜಯಿಸಿದವರು, ಯೋಗಕ್ಕೆ ಸುಯೋಗವಿತ್ತವರು, ಸಂಸ್ಕೃತಿಸಂವರ್ಧನೆಗಾಗಿ ಶ್ರಮಿಸಿದವರು ಅವರೇ; ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳವರು. ಇಂತಹ ಕಾರಣಿಕ ಯುಗಪುರುಷನನ್ನು ನಿರ್ಮಿಸಿದ ನಿರ್ಮಾತೃಗಳು, ಯೋಗಸಿದ್ಧಿಯ ಶಿವಯೋಗಸಿದ್ಧರು, ಮಮತೆಯ ಮಂದಾರ ಯಳಂದೂರಿನ ಶ್ರೀ ಬಸವಲಿಂಗ ಸ್ವಾಮಿಗಳವರು.

           ನಿರಂಜನ ಪೀಠವನ್ನು ಅಲಂಕರಿಸಿದ್ದು ದಕ್ಷಿಣ ಕರ್ನಾಟಕ ಮೈಸೂರು ಪ್ರಾಂತದ ಕೊಳ್ಳೆಗಾಲ ಸಮೀಪವಿರುವ ಯಳಂದೂರಿನಲ್ಲಿ. ಈ ಊರಿನ ವಿರಕ್ತಮಠದ ಮಹಾಸ್ವಾಮಿ ಗಳಾಗಿ, ನಿಜಮುಕ್ತನಾದರೆ, ಕ್ರಿ.ಶ. ೧೮೧೦ ರ ಸುಮಾರಿಗೆ ಜನಿಸಿದ್ದು ಉತ್ತರ ಕರ್ನಾಟಕದ ವಾತಾಪಿ ಪರಿಸರದಲ್ಲಿ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಆಕಾರವಿಲ್ಲದ ಧ್ವನಿಗಳು ಸೇವೆಯ ಮೂಲಕ ಸತ್ಕೀರ್ತಿಯ ಬದುಕನ್ನು ಸಾಕಾರಗೊಳಿಸಿದರು’ ಎನ್ನುವಂತೆ, ತಂದೆ, ತಾಯಿ, ಬಂಧು-ಬಳಗ, ಊರು ಕೇರಿ, ಎಲ್ಲ ಲೌಕಿಕ ಸಂಬಂಧಗಳ ಹಂಗು ಹರಿದ ಅಲಕ್ ನಿರಂಜನ ಪ್ರಭುಗಳು ಶ್ರೀ ಬಸವಲಿಂಗ ಸ್ವಾಮಿಗಳು.

           ಶ್ರೀಮದ್ ಗುರುವಿನ ಹಸ್ತದಲ್ಲಿ ಹುಟ್ಟಿ ಸಾಧನೆಯನ್ನು ಅರಸಿ ಬಂದದ್ದು ಡಂಬಳದ ಜಗದ್ಗುರು ತೋಂಟದಾರ್ಯಮಠಕ್ಕೆ ಅರ್ಧನಾರೀಶ್ವರ ಗದ್ದುಗೆಯ ಸಾನ್ನಿಧ್ಯ ಸಾಧನೆಯ ತಲ್ಪವಾಯಿತು. ಶ್ರೀಮಠದ ಪುಣ್ಯಪರಿಸರವೇ ಬದುಕಿನ ಕಲ್ಪವಾಯಿತು. ಬಸವಲಿಂಗರು ಅಷ್ಟಾಂಗಯೋಗದ ಪರಿಣತರಾದರು. ಯಮ, ನಿಮಯ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಸ್ಥಳಗಳು ಸಿದ್ಧಿಯಾದವು. ಆ ಕುರಿತು ಅಥಣೀಶರ ಕಾವ್ಯವಾಣಿ ಹೀಗಿದೆ-

ಅಹಿಂಸೆ ಸತ್ಯಮಸ್ತೇಯ ಬ್ರಹ್ಮರ‍್ಯ ಅಪರಿಗ್ರಹ

ಯಮ ಆಸನ ಸಂವ್ಯಮದ ಆತ್ಮಸೂರ್ಯ

ಶೌಚ ತಪ ಸಂತೋಷ ಸ್ವಾಧ್ಯಾಯ ನಿಯಮಂ

ಅರಿತು ಮಾಡೊ ಒಮ್ಮೆ ಸ್ಥಿರಂ ಸುಖಂ ಆಸನಂ||

ಸವಿಕಲ್ಪ ನಿರ್ವಿಕಲ್ಪ ಸಿದ್ಧಿಯೆ ಶಿವಸಮಾಧಿ

ಸಾಧನೆಯಿಂದ ಸಿದ್ಧಿಗೆರೋ ಓ ನಿರುಪಾಧಿ

ಸೂರ್ಯನಮಸ್ಕಾರ ತಿಳಿಯುತ ಬೆಳಕಾಗೊ ಸಾಧಕ

ಅರಿವಿನ ಗುರು ಅಥಣೀಶನ ಅಂತರಂಗದ ಹೊಂಬೆಳಕ||

ಸತ್‌ಪ್ರೇರಣೆ

           ಶುಭೋದಯದಿಂದ ಶುಭರಾತ್ರಿಯ ವರೆಗೆ ಸಾಧನೆ-ಸಾಧನೆ ಮಾಡುವುದೇ ಅಂತರಂಗದ ಅನ್ವೇಷಣೆ ಆರಂಭವಾಯಿತು. ಒಂದು ದಿನ ಓರ್ವ ಯೋಗಸಿದ್ಧರು ಕನಸಿನಲ್ಲಿ ಬಂದು ‘ಏಳು ಸಾಧಕ ಎದ್ದೆಳು. ನೀನು ಕೇವಲ ಮಠೀಯ ವ್ಯವಸ್ಥೆಯ ಕೂಸಾಗಿ ಬಾಳಲು ಬಂದಿಲ್ಲ. ನೀನು ಇನ್ನೂ ಉನ್ನತವಾದದ್ದನ್ನು ಸಾಧಿಸಲು ಬಂದಿದ್ದೀಯಾ ಪ್ರಯಾಣ ಬೆಳೆಸು’ ಎಂದು ವಾಣಿಯಾಯಿತು. ಆ ಪ್ರೇರಣೆಯ ಮಾತುಗಳು ಬಸವಲಿಂಗರಲ್ಲಿ ಬದಲಾವಣೆ ಬೀರಿತು. ಅದೇ ದಿನ ಬೆಳಗಿನ ಜಾವ ಬೇಗ ಎದ್ದು ಡಂಬಳದ ಅರ್ಧನಾರೀಶ್ವರರ ಸನ್ನಿಧಿಗೆ ಶರಣಾರ್ಥಿ ಸಲ್ಲಿಸಿ, ಅಲ್ಲಿಂದ ನೇರವಾಗಿ ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ಪಾದ ಬೆಳೆಸಿದರು.

ಶಂಭುಲಿಂಗನ ತಟದಲ್ಲಿ…

           ಬಸವಲಿಂಗರಲ್ಲಿ ಸಾಧನೆಯ ಹಸಿವಿನ ಹಂಬಲ ಮನದ ತುಂಬೆಲ್ಲ ಮನೆ ಮಾಡಿತ್ತು. ಶಂಭುಲಿಂಗನ ಬೆಟ್ಟ ನೋಡತ್ತಿದ್ದಂತೆ ರೋಮಾಂಚನಗೊಂಡರು. ಇದೇ ನನ್ನ ಉಳವಿಯ ಓಂಕಾರ! ಇದೇ ನನ್ನ ಸಾಧನೆಯ ಶ್ರೀಕಾರ! ಇದೇ ನನ್ನ ಬದುಕಿನ ಆಕಾರ!! ಎಂದು ಪರಿಭಾವಿಸಿ, ಎತ್ತರದ ಬೆಟ್ಟದ ತುಟ್ಟತುದಿಯಲ್ಲಿ ಏಕಾಂಗಿಯಾಗಿ, ಮೌನಿಯಾಗಿ ಕುಳಿತುಬಿಟ್ಟರು. ಇದೇ ಸ್ಥಳದಲ್ಲಿ ಶ್ರೀಮನ್ನಿಜಗುಣರು ತಪೋಗೈದ ತಲ್ಪ ಎಂದು ಭಾವಪರವಶರಾದರು. ನಿಜಗುಣರೆಂದರೆ ಬಸವಲಿಂಗರಿಗೆ ಆರಾಧ್ಯದೈವ. ಅವರು ಬರೆದ ಕೈವಲ್ಯಗಳು ಜೀವದ ಜೀವ. ಹೀಗಿರುವಾಗ ಚಿಲಕವಾಡಿಯ ಓರ್ವ ಶರಣ ಬಂಧು ತಮ್ಮ ಮನೆಯಲ್ಲಿರುವ ತಾಳೆಗರಿಗಳ ಕಟ್ಟನ್ನು ಬಸವಲಿಂಗ ಶ್ರೀಗಳ ಸನ್ನಿಧಿಗೆ ತಂದು ಅರ್ಪಿಸಿದನು. ಅದನ್ನು ತೆರೆದು ನೋಡಿ ಕುಣಿದಾಡಿದರು. ಅದು ನಿಜಗುಣರ ಕೈವಲ್ಯದ ಕಂಪಾಗಿತ್ತು.

ಏಳು ಸುನಿಯಾಮದಿಂದೇಳು ಕುಟಿಲದ ಭಜಗ

ನೇಳು ತೋರುವ ಪ್ರಣವದೇಳು ಭೇದವನು ಕಂ

ಡೇಳು ಸುಜ್ಞಾನ ಭೂಮಿಕೆ ಸಿದ್ಧಿಯಾಗಿ ಪದಿನೇಳು ತತ್ವದ ತನುವನು

ಏಳು ಜನ್ಮದ ಕಲುಷವನು ಜಯಿಪ ಯೋಗಿವರ

ರೇಳು ತಾರಾಗ್ರಹದೊಳು ಕೇಳುವ ಸುನಾದಾತ್ಮಾ

ಏಳು ಮಲಪಾಶ ದೂರನೆ ಶಂಭುಲಿಂಗ ನೀನೇಳು ಮುನಿಕುಲವಂದ್ಯನೆ.

           ನಿಜಗುಣ ಶಿವಯೋಗಿಗಳ ಶಿವಕಾರುಣ್ಯದ ಸ್ಥಲದ ಈ ಏಳು ಎನ್ನುವ ತಾದ್ಯಾತ್ಮ ಸಿದ್ಧಿ ಬಡಿದೆಬ್ಬಿಸಿತು. ಸತತ ೧೨ ವರ್ಷಗಳ ಕಾಲ ಕಠೋರ ಸಿದ್ಧಿಯನ್ನು ಬಸವಲಿಂಗರು ಸಾಧಿಸಿದರು. ಇವರ ಸಾಧನೆಯನ್ನು ಕಂಡ ಕೊಳ್ಳೆಗಾಲದ ಪರಿಸರದ ಬಾಂಧವರೆಲ್ಲ ಸೇರಿ ಸುಕ್ಷೇತ್ರ ಯಳಂದೂರು ಶ್ರೀಮಠಕ್ಕೆ ಅಧಿಕಾರಿಗಳಾಗಲು ಬಿನ್ನವಿಸಿಕೊಂಡರು. ಎಲ್ಲ ಮಠ-ಪೀಠಗಳ ಹಂಗು ತೊರೆದ ನನಗೆ ಯಾವ ಮಠಗಳ ಸಹವಾಸ ಬೇಡ ಎಂದು ಏನೆಲ್ಲ ಮಾತನಾಡಿದರು. ಆದರೆ ದೈವಪ್ರೇರಣೆ ಬೇರೆಯಿತ್ತು. ಗುರುಹಿರಿಯರ ಒತ್ತಾಯಕ್ಕೆ ಮಣಿದು ಯಳಂದೂರು ವಿರಕ್ತಮಠದ ಅಧಿಪತಿಗಳಾದರು. ದಿನದಿಂದ ದಿನಕ್ಕೆ ಪೂಜ್ಯಶ್ರೀಗಳ ತಪಃ ಪ್ರಭಾವ ಪಸರಿಸತೊಡಗಿತು. ಅಲ್ಲಿಂದ ನಿಜಗುಣರ ಸಾಹಿತ್ಯದ ಮರ್ಮವನ್ನು ಅರಿಯಲು ಹುಬ್ಬಳ್ಳಿಗೆ ಆಗಮಿಸಿದರು.

ಹುಬ್ಬಳ್ಳಿಯಲ್ಲಿ ಹೃದಯವಂತ

           ಅದಾಗಲೇ ನಿಜಗುಣರ ಕೈವಲ್ಯ ಸಾಹಿತ್ಯವನ್ನು ಒಂದು ಶಾಸ್ತ್ರ ಆಚರಿಸಿಕೊಂಡು ಬಂದಿದ್ದರು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರು. ನಾಡಿನ ಅನೇಕ ಯತಿಗಳು, ಸಾಧಕರು, ಶರಣರು ಚಿಂತಕರು ನಿತ್ಯವೂ ಸಿದ್ಧಾರೂಢ ಅಪ್ಪಂಗಳು ಕೈಲಾಸ ಮಂಟಪದಲ್ಲಿ ಭಾಗಿಯಾಗುತ್ತಿದ್ದರು. ಹುಬ್ಬಳ್ಳಿಯ ಸಿದ್ಧಾರೂಢರ ಹತ್ತಿರ ಬಂದು ಪರಸ್ಪರ ಭೇಟಿ ಮಾಡಿ, ಗಹನವಾಗಿ ಬಸವಲಿಂಗರು ಚಿಂತನದಲ್ಲಿ ತೊಡಗಿದರು. ಚರ್ಚೆಗಳು ಆರಂಭವಾದವು. ಎರಡು ಮಹಾಚೇತನಗಳು ಪರಸ್ಪರ ಸತ್‌ಚಿಂತನೆಯಲ್ಲಿ ತೊಡಗಿದ್ದನ್ನೇ ಆಲಿಸುತ್ತ ಕುಳಿತಿದ್ದ ಓರ್ವ ಶ್ರೇಷ್ಠ ಸಾಧಕ. ಶಾಸ್ತ್ರ ಚಿಂತನಗಳನ್ನು ಪೂರೈಸಿ ಬಸವಲಿಂಗ ಸ್ವಾಮಿಗಳು ಹೊರಗೆ ಬಂದು ನಿಂತರು. ಬೆನ್ನ ಹಿಂದೆಯೇ ಓಡಿ ಬಂದ ಈ ಸಾಧಕ ಸಾಷ್ಟಾಂಗವೆರಗಿದ.

ಹಾಲಯ್ಯ ದೇವರಿಗೆ ಹರಕೆ!

           ಅಷ್ಟರಲ್ಲಿಯೇ ಗುರುಗಳು ನಾವು ಸಂಚಾರಕ್ಕೆ ಹೋಗಬೇಕು ಎಂದರು. ನೀರು ತುಂಬಿದ ಚರಿಗೆಯನ್ನು ತುಂಬಿ ಬಸವಲಿಂಗರ ಬೆನ್ನು ಹತ್ತಿದ. ಸೂಕ್ಷ್ಮತೆಯಿಂದ ಗ್ರಹಿಸಿದ ಶ್ರೀಗಳು ‘ತಮ್ಮಾ ಯಾರು ನೀನು’ ಅಂದರು. ‘ಅಜ್ಜಾರ ನಾನು ‘ಹಾಲಯ್ಯ ದೇವರು. ಹಾನಗಲ್ಲ ತಾಲೂಕು ಜೋಯಿಸರ ಹಳ್ಳಿಯಿಂದ ಬಂದಿದ್ದೀನ್ರಿ. ನಿತ್ಯ ಶಾಸ್ತç ಕೇಳಾಕ ಸಿದ್ಧಾರೂಢರ ಮಠಕ್ಕೆ ಬರತೀನ್ರಿ. ವಾಸ್ತವ್ಯ ಇದೇ ಊರಿನ ರುದ್ರಾಕ್ಷಿಮಠದಲ್ಲಿ ಇರತೀನಿ’ ಎಂದ. ಹೀಗೆ ತನ್ನ ಜೀವನದ ಬಾಲ್ಯದ ವಿವರಗಳನ್ನು ನೀಡಿದವರೇ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ಅವರ ಬಾಲ್ಯದಲ್ಲಿ ಸಾಧಕರಾಗಿದ್ದಾಗ ಕರೆಯುತ್ತಿದ್ದ ಮೂಲ ಹೆಸರು ಹಾಲಯ್ಯ. ಹಾಲಯ್ಯದೇವರು. ದೇವರ ವಿನಯ, ಭಕ್ತಿ ಸೌಜನ್ಯ ಕಂಡು ಬಸವಲಿಂಗರು ಸಂತಸಪಟ್ಟರು. ನಿರ್ಜನ ಪ್ರದೇಶದಲ್ಲಿ ಸಂಚಾರ ಮುಗಿಸಿ, ಒಂದು ಬಾವಿಯ ತಟದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದಾರೆ.

           ಹಾಲಯ್ಯದೇವರು ಮನ ಬಿಚ್ಚಿ ಮಾತನಾಡಿದರು. ಅಜ್ಜಾ ಅವರ ಸಿದ್ಧಾರೂಢರ ಮುಂದ ತಾವು ಲಿಂಗಾಂಗಸಾಮರಸ್ಯದ ಕುರಿತು ಮಾತನಾಡಿದ ಮಾತು ಕೇಳಿ ನನಗ ಬಹಳ ಸಂತೋಷ ಆತರೀ ಎಂದರು. ಆಗ ಮುಗುಳ್ನಕ್ಕ ಬಸವಲಿಂಗರು ಹೇಳುತ್ತಾರೆ. ‘ಏ ಮರೀ ನೀನು ಆರೂಢಮಠದ ಶಿಥಿಲಾಚರಣೆಯಲ್ಲಿ ಸಿಲುಕಿಕೊಂಡಿ ರುವೆ. ಇಲ್ಲಿ ಲಿಂಗ ಲಿಂಗಾಂಗ ಸಾಮರಸ್ಯ ಶಿವಯೋಗ ಸಾಧನೆ ಸಾಧ್ಯವಾಗೋದಿಲ್ಲೋ ತಮ್ಮಾ’ ಎಂದರು. ‘ಯಪ್ಪಾ ನೀವ ನನ್ನ ಉದ್ಧರಿಸಬೇಕು’ ಎಂದು ಪ್ರಾರ್ಥಿಸಿದರು. ಹಾಲಯ್ಯನ ಹಸಿವು ಕಂಡ ಸಿದ್ಧಿಪುರುಷ ಬಸವಲಿಂಗರು ‘ಆಗಲಿ ತಮ್ಮಾ ನಿನಗ ಲಿಂಗಾಂಗಯೋಗದ ಸಕೀಲ-ಸಾಧನೆಯ ಸಮಗ್ರತೆ ತಿಳಿಸುತ್ತೇನೆ, ಬಾ ನನ್ನೊಂದಿಗೆ ಅಂದರು. ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು. ಹಾಲಯ್ಯದೇವರು ಬಸವಲಿಂಗರ ಬೆನ್ನು ಹತ್ತಿದರು.

ಹಾಲಯ್ಯ-ಕುಮಾರ ಸ್ವಾಮಿಗಳಾದರು

           ಸಂಚಾರ ಮಾಡುತ್ತ ನೇರವಾಗಿ ತೋಂಟದಾರ್ಯ ಸಂಸ್ಥಾನಮಠ ಅಣ್ಣಿಗೇರಿಗೆ ದಯಮಾಡಿಸಿದರು. ಹಾಲಯ್ಯದೇವರು ಕಜ್ಜಾಯ ಭಿಕ್ಷೆ ಮಾಡಿಕೊಂಡು ಬರುತ್ತಿದ್ದರು. ಬಸವಲಿಂಗ ಸ್ವಾಮಿಗಳೊಂದಿಗೆ ಸೇರಿ ಪೂಜಾ ಪ್ರಸಾದ ನೆರವೇರಿಸುತ್ತಿದ್ದರು.

           ಗದುಗಿನ ತೋಂಟದಾರ್ಯಮಠದ ಪೀಠವೇರಬೇಕಿದ್ದ ಬಸವಲಿಂಗರು ಕೆಲವೊಂದು ಘಟನೆಗಳಿಂದ ಅಣ್ಣಿಗೆರಿಯಲ್ಲಿ ನೆಲೆಸಿದ್ದರು. ಜನರ ಬಾಯಿಂದ ಬಾಯಿಗೆ ಹರಿದಾಡಿತು. ಹಾಲಯ್ಯ ದೇವರಿಗೆ ಯೌಗಿಕ ಮಾರ್ಗವನ್ನು ತಿಳಿಹೇಳುತ್ತಿದ್ದರು. ಅಲ್ಲಿಂದ ಶಂಭುಲಿಂಗ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕೆಲವು ವರ್ಷ ಅನುಷ್ಠಾನ ಮಾಡಿಸಿದರು. ಅಲ್ಲಿಂದ ತಾವು ಪೀಠವೇರಿದ್ದ ಯಳಂದೂರು ವಿರಕ್ತಮಠಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯವರೆಗೂ ದೇವರಾಗಿದ್ದ ಹಾಲಯ್ಯ ದೇವರಿಗೆ ಬಸವಲಿಂಗ ಮಹಾಸ್ವಾಮಿಗಳು ೧೮೯೨ರಲ್ಲಿ ಹಸ್ತಮಸ್ತಕ ಸಂಯೋಗ ಮಾಡಿ ಚಿನ್ಮಯಾನುಗ್ರಹ ದೀಕ್ಷೆಯನ್ನು ಯಳಂದೂರು ಮಠದಲ್ಲಿ ದಯಪಾಲಿಸುತ್ತಾರೆ. ಅಂದಿನಿಂದ ಹಾಲಯ್ಯ ದೇಶಿಕರಾಗಿ ನೂತನ ನಾಮದೊಂದಿಗೆ ಮನ್ನಡೆಯುತ್ತಾರೆ. ಸಾಧನೆಯ ಅನುಗ್ರಹ ದಯಪಾಲಿಸಿದರು. ಇದಾದ ನಂತರ ನೇರವಾಗಿ ಅಣ್ಣಿಗೇರಿಗೆ ಬಂದು ನೆಲೆಸಿದರು ವೈರಾಗ್ಯನಿಧಿ ಬಸವಲಿಂಗ ಸ್ವಾಮಿಗಳು. ಬಸವಲಿಂಗ ಗುರುಗಳು ಸಾನಿಧ್ಯದಿಂದ ಹಾಲಯ್ಯ ದೇವರಲ್ಲಿದ್ದ ಅಧ್ಯಾತ್ಮ ಬೆಳಗು ಬೆಳಗತೊಡಗಿತು.

           ಅವಿಶ್ರಾಂತ ಅರವಿಂದರಾಗಿ ನಾಡಿನ ಹಾಗು ಸಾಧಕರ ಅಭ್ಯುದಯಕ್ಕಾಗಿ ಶ್ರಮಿಸಿದ ಬಸವಲಿಂಗ ಮಹಾಸ್ವಾಮಿಗಳು ವಯೋಸಹಜ ಒಂದಿಷ್ಟು ಆರೋಗ್ಯ ತೊಂದರೆಯಿಂದಾಗಿ ಕ್ರಿ.ಶ. ೧೮೯೪ರಂದು ಅಣ್ಣಿಗೇರಿ ಶ್ರೀ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯರಾದರು. ಅಂದು ಗದುಗಿನ ತೋಂಟದಾರ್ಯಮಠದ ಜಗದ್ಗುರುಗಳಾಗಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕ್ರಿಯಾಸಮಾಧಿ ನೆರವೇರಿತು.

           ಯೋಗಸಿದ್ಧಿಯ ಶಿವಪುರುಷ ಯಳಂದೂರು ಬಸವಲಿಂಗಪ್ರಭುಗಳು ಬಯಲಿನಲ್ಲಿ ಬಯಲಾದರು.

ಗ್ರಂಥಋಣ:

೧.       ಎಳಂದೂರು ಬಸವಲಿಂಗ ಸ್ವಾಮಿಗಳು

           ಪ್ರ: ತೋಂಟದಾರ್ಯಮಠ, ಗದಗ, ೧೯೯೦

೨.       ಹಾನಗಲ್ಲ ಗುರುಕುಮಾರ ಸ್ವಾಮಿಗಳು : ಗುರುಕಂದ

           ಪ್ರ: ಶಿವಯೋಗಮಂದಿರ ಸಂಸ್ಥೆ, ಶಿವಯೋಗಮಂದಿರ, ೨೦೧೦

ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

ಇಬ್ಬರೂ ಕುಮಾರ ಸ್ವಾಮಿಗಳೇ. ಆದರೆ ಒಬ್ಬರು ಗುರು ; ಇನ್ನೊಬ್ಬರು ಶಿಷ್ಯರು.ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಲಿಂಗೈಕ್ಯ ಬಿದರಿ ಕುಮಾರ ಶಿವಯೋಗಿಗಳೇ ಗುರುಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾನಗಲ್ಲಿನ ಫಕೀರ ಸ್ವಾಮಿಗಳು ಅಂತಿಮ ದಿನಗಳನ್ನು ಲಿಂಗ ಪೂಜೆಯಲ್ಲಿ ಕಳೆಯುತ್ತಾ ಬಿದರಿಯ ಕುಮಾರ ಶಿವಯೋಗಿಗಳನ್ನು ಕರೆಯಿಸಿ ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನಿಯಮಿಸಬೇಕೆಂದು ಅವರಿಂದ ಸಮ್ಮತಿ ಪಡೆದು ಕೆಲವೇ ದಿನಗಳಲ್ಲಿ ಲಿಂಗೈಕ್ಯವಾದರು.

ಪೂಜ್ಯರ ದೃಷ್ಟಿಗೆ, ಹಾಲಯ್ಯ ದೇಶಿಕೋತ್ತಮರೆ ಆಗ ಹೃದ್ಗೋಚರವಾದರು. ತಪಸ್ಸು, ಸಮಾಜಸೇವೆ ಎಂಬ ದೈತದಲ್ಲಿ ಅದ್ವೈತ ಸಾಧಿಸಲು, ಅಲ್ಲಲ್ಲಿ ಅನುಷ್ಠಾನ ಗಳನ್ನು ಕೈಗೊಳ್ಳುವಲ್ಲಿ ತತ್ಪರರಾಗಿದ್ದ ಅವರನ್ನು ಹಾನಗಲ್ಲಿನ ಮಠಾಧಿಕಾರದಂತಹ ಉಪಾಧಿಗೆ ಹಚ್ಚುವುದು ಸರಳವಾದ ಮಾತಾಗಿರಲಿಲ್ಲ!

ಪೀಠ ಒಂದು ಉಪಾದಿಯಾದರೂ ಅದಕ್ಕೆ ತಮ್ಮ ಅಗತ್ಯವಿದೆ, ತಮ್ಮಿಂದಾಗಿ ಅದು ಒಂದು ಘನತೆಯನ್ನು ; ತಮ್ಮಂತಹ ಸಾಧಕರಿಗೆ ಬೇಡವೆಂಬುದು ಭವಕ್ಕೆ ಬೀಜ ಎನ್ನುವುದನ್ನು ; ಷಟ್ ಶಾಸ್ತ್ರ ಬಲ್ಲವರಿಗೆ ನಾನು ವಿವರಿಸುವುದು ಅಷ್ಟು

ಉಚಿತವಾಗುವುದಿಲ್ಲ! ಎಂದೆಲ್ಲ ; ನುಡಿದು ಅವರ ಮನವಲಿಸಲು ಯಶಸ್ವಿಗಳಾದ ಅಂದು ಕುಮಾರಶ್ರೀಗಳು.

ವೈರಾಗ್ಯದ ಮಲ್ಲಣಾರ್ಯರು ಬಂದು ಒರಟು ಮಾತುಗಳನ್ನಾಡಿದರೂ ನಗುನಗುತ್ತಾ ಆಗಿಂದಾಗಲೆ ಮಠವನ್ನು ತೊರೆದು, ಅವರ ಸದಾಪೇಕ್ಷೆಯನ್ನು ಎರಡು ಬೃಹತ್ತ ಸಂಸ್ಥೆಗಳನ್ನು ಕಟ್ಟುವದರ ಮೂಲಕ ಈಡೇರಿಸಿದುದು ಈಗ ಇತಿಹಾಸ ಸೇರಿಹೋದ ಮಾತು, ಸಮಾಜ ಉಳಿಸಬಲ್ಲಂತಹ ಯೋಗ್ಯತೆಯನ್ನು ಶ್ರೀಗಳು ಆಗಲೆ ಅವರಲ್ಲಿ ಕಂಡುಕೊಂಡಿದ್ದರು.

ಅಂದಿನ ಅವರ ವಯಕ್ತಿಕ ತ್ಯಾಗವು ಸಾಮೂಹಿಕವಾಗಲು ಹಂಬಲಿಸಿದುದರ ಫಲವಾಗಿಯೇ ಇಂದು ಸಮಾಜವು, ಮೇಲೆ ನಿರೂಪಿಸಿದ ಆ ಎರಡು ಸಂಸ್ಥೆಗಳ ಬೆಳವಣಿಗೆಯ ಪರಿಣಾಮವನ್ನು ಹಲವಾರು ರೀತಿಯಲ್ಲಿ ಬಳಸಿಕೊಂಡಿದೆ. ಈ ಎರಡು ಸಂಸ್ಥೆಗಳು ಲಿಂಗಾಯತವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿವೆಯನ್ನುವ ಅನುಭವ ಎಲ್ಲರಿಗೂ ಅವಗತವಾದ ವಿಷಯ.

ಬಸವಣ್ಣ ಎಲ್ಲರಿಗೂ ಒಂದೊಂದು ಕಾಯಕವನ್ನು, ವ್ಯಕ್ತಿ ಗೌರವವನ್ನು ಪ್ರತಿಪಾದಿಸಿದರು. ತನ್ಮೂಲಕ ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆಲ್ಲ ಸರಿ ! “ಕುರುಡರಿಗೆ ಕಾಗತಿ ?” ಎಂದು ಕೇಳಿದರೆ ! ?

“ಮೌನವೇ ಉತ್ತರ’ವಾಗಬಾರದೆಂದು ಉದ್ದೇಶದಿಂದಲೋ ಏನೋ ! ಗದುಗಿನಲ್ಲಿ “ವೀರೇಶ್ವರ ಪುಣ್ಯಾಶ್ರಮ’ವು ಅಸ್ತಿತ್ವಕ್ಕೆ ಬಂದಿತು.

“ನೀನೊಲಿದರೆ ಕೊರಡು ಕೊನರುವುದಯ್ಯ ;

ನೀನೊಲಿದರೆ ಬರಡು ಹಯನಹುದಯ್ಯ’

ಎಂಬುದು ಆಶ್ರಮದ ಉಗಮದಿಂದ ಬಸವನಂಬಿಕೆಗೊಂದು ಬಲ ಬಂದಂತಾಯಿತು. “ಹಣಮುಟ್ಟದವರೆ ಇಂದು ಮಹಾತ್ಮಾ’ ಎಂದು ಜನರ ಮನದಲ್ಲಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಹಾಗಾಗಿ ನಿಂತವರು ಹಣದ ಸಂದರ್ಭದಲ್ಲಿ, ಚರ್ಚೆಗೂ ಗ್ರಾಸವಾಗಬಾರದು. ಏಕೆಂದರೆ ನಿಜವಾದ ಆಧ್ಯಾತ್ಮಿಕ : ಬೇಡವೆಂಬುದು ಭವಕ್ಕೆ ಬೀಜ“ ಬಿಡಬೇಕು ಬಲುಹಿಂದೆ ಬರಿದೆ ತನ್ನಿರವನು” ಎನ್ನುತ್ತಾರೆ ನಿಜಗುಣರು ಈ ಮೇಲಿನ ಭೂಮಿಕೆಯು ಲಿಂಗೈಕ್ಯ ಹಾನಗಲ್ಲ ಶ್ರೀಗಳಿಗೆ ಸಂಬಂಧಿಸುದುದರಿಂದ ಅವರ ಘನವಾದವ್ಯಕ್ತಿತ್ವವು ಹಣವೆಂಬುದನ್ನು ಹೇಗೆ ? ಅದನ್ನು ಮುಟ್ಟದ ಸದ್ವಿನ ಯೋಗಿಸಬೇಕೆಂಬುದರಲ್ಲಿ ವ್ಯಕ್ತವಾಗುತ್ತದೆ. ಶ್ರೀಗಳ ದೂರದೃಷ್ಟಿಕೋನಕ್ಕೆ ಅವರಿಂದ ಸ್ಥಾಪಿತವಾದ ಹಿಂದೆ ವಿವರಿಸಿದ ಸಂಸ್ಥೆಗಳು ; ನಿಸ್ಪೃಹತ್ವದ ಬಿಕ್ಷೆಯ ಅಲೆದಾಟಗಳು ವಿವೇಚಕರಿಗೆ  ಗೌರವಪಡುವಂತಹ ಸಂಗತಿಗಳಾಗಿದ್ದವು ; ಈಗಲೂ ಅವು ಯತಿಗಳಾದವರಿಗೆಲ್ಲ ಮಾದರಿಯಾದವುಗಳೆಂಬುದನ್ನು ಯಾರೂ ಮರೆಯಬಾರದು

. ಕೇವಲ ಧರ್ಮದ, ಶಾಸ್ತ್ರದ ಭೀಕರ ಪ್ರವಚನಗಳನ್ನು ಉದುರಿಸಿ, ಕಪ್ಪು ಕಾಣಿಕೆ ಯನ್ನು ಪಡೆದು ಮಾಯವಾಗಿಬಿಡುವ ಸ್ವಾಮಿಗಳವರಾಗಿರಲಿಲ್ಲಾ.

 ಕರ್ನಾಟಕ ಯಾವ ಮೂಲೆಯಲ್ಲೂ ಅವರಿಗೆ ಜನ ತೊಂದರೆ ಪಡುವುದನ್ನು ಕೇಳಲಾಗುತ್ತಿರಲಿಲ್ಲ. ಕಾಲ್ನಡಿಗೆಯಿಂದಲೂ ತಮ್ಮ ಮಡಿಗೆಬಾಧ್ಯವಾಗದ ಚಕ್ಕಡಿ ಏರಿಯೊ, ಅಂಥಲ್ಲಿಗೆ ಹೋಗಿ ಜನರಲ್ಲಿ ಸಾಮರಸ್ಯ ಬರುವವರೆಗೆ, ಆ ಊರನ್ನು ಬಿಟ್ಟು ಕದಲುತ್ತಿರಲಿಲ್ಲವೆಂದು ಹಳಕಟ್ಟಿಯವರು ಶಿವಯೋಗಮಂದಿರದ ಬೆಳಗೆನಲ್ಲಿ ಸ್ಮರಿಸುತ್ತಾರೆ. ಜನತೆ, ಶ್ರೀಗಳು ವಿಶಾಲಮನೋಭಾವವರಿತು ಊರಲ್ಲಿ ಮತ್ತೆಂದೂ ಜಗಳ ಕಾಯಲು ಹೋಗುತ್ತಿರಲಿಲ್ಲ,

ಹೀಗೆ ಶ್ರೀಗಳ ಬಗೆಗೆ ಬರೆಯುತ್ತ ಹೋದರೆ, ಅವರದು ಮುಗಿಯದ ಚರಿತ್ರೆ. ನಾವಾಗಿಯೇ ಅವರ ಚರಿತ್ರೆಯ ಬರಹಕ್ಕೆ ಅನಿವಾರ್ಯವಾಗಿ ಒಂದು ಸೀಮೆಯನ್ನು ಕೊರೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ವಿಷಯಕ್ಕೆ ಬರುತ್ತೇನೆ : ಶ್ರೀಗಳು ಹಲವಾರು ಸುಂದರ-ತಾತ್ವಿಕ ಪದಪದ್ಯ ಮಂಗಳಾರುತಿ ಪದಗಳನ್ನು ರಚಿಸಿದುದು ಧರ್ಮ ಜಿಜ್ಞಾಸುಗಳಿಗೆಲ್ಲ ಗೊತ್ತಿರುವ ಸಂಗತಿ. ಲಿ೦. ಬಿದರಿ ಕುಮಾರಶಿವಯೋಗಿಗಳನ್ನು ಕೊಂಡಾಡುತ್ತ ರಚಿಸಿದ ಮಂಗಲಗೀತೆಗಳು ಬಹಳ ಯೋಗಿಕ ಅನುಭಾವದ ಮೌಲ್ಯವನ್ನು ಹೊಂದಿವೆ. ನಮ್ಮ ಜಮಖಂಡಿಯ ಬೇರೊಬ್ಬ ದಾರ್ಶನಿಕನ ಅವುಭವದ ನಿಲಸುವಿಗೆ ಸಮದಂಡಿಯಾಗಿ ನಿಂತು, ನಮ್ಮ ಸಮಕಾಲೀನ ಒಬ್ಬ ಮಹಾಶಿವಯೋಗಿಯ ಅನುಭಾವಸಂಪತ್ತನ್ನು ಕೂಡಿಸಿ ಓದುವ ಸೌಭಾಗ್ಯದ ಆನಂದ ಬೇರೆಯೇ ಆಗಿರುತ್ತಿತ್ತು ಎಂದು, ರಾನಡೆ ಸಾಹಿತ್ಯ ಓದಿದವರಿಗೆಲ್ಲ ಅನ್ನಿಸುವುದು ಸಹಜ. ಒಂದು ವೇಳೆ ಡಿ.ಸಿ. ಪಾವಟೆಯ

ವರಂತಹವರು ಶ್ರೀಯುತರ ಕೈಗೆ ಇಂತಹ ಪದ್ಯವೊಂದನ್ನು ತಲುಪಿಸಿದ್ದರೆ, ಅಲ್ಲವೆ !ಇದೆಲ್ಲ ಸಾಧ್ಯವಾಗಬಹುದಿತ್ತು.

ಇದು ಆ ಮಂಗಲ ಪದ್ಯ

ಯೋಗಿರಾಡ್ಜಯ ಮಂಗಲಂ|| ಪರತರಶಿವ||

ಯೋಗಿರಾಡ್ಜಯ ಯ ಮಂಗಲಂ

ಲಿಂಗಾಂಗೊಭಯಸಂಗ ಶರಣರಪುಂಗಾ||

ಅಂಗಜಭವಭಂಗ!!

ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!

ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!

ಯೋಗಿರಾಡ್ಜಯ ಮಂಗಲಂ ||ಪರತಿರತಿವ!!

ಯೋಗಿರಾಡ್ಜಯ ಮಂಗಲಂ

ಈಡಪಿಂಗಳ ಜೋಡಿಸಿ ಹರಿದಾಡುವ 11

ಜೋಡಕ್ಕರವ ಕೂಡಿಸಿ

ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!

ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!

ಯೋಗಿರಾಡ್ಜಯ ಮಂಗಲಂ 11ಪರತರಶಿವ||

ಯೋಗಿರಾಡ್ಜಯ ಮಂಗಲಂ

ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||

ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ

ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!

ಯೋಗಿರಾಡ್ಜಯ ಮಂಗಲಂ ||ಪರತರಪಶಿವ||

ಯೋಗಿರಾಡ್ಜಯ ಮಂಗಲಂ

ಈ ಮಂಗಲಪದ್ಯ ಬಿದರಿ ಕುಮಾರ ಶಿವಯೋಗಿಗಳ ಅಮೋಘ ವ್ಯಕ್ತಿತ್ವವನ್ನು ಪ್ರತಿಪಾದಿಸಿದೆ. ಹಾನಗಲ್ಲ ಲಿಂll ಕುಮಾರಶಿವಯೋಗಿಗಳು ಶ್ರೀಗಳ ಆಪ್ತ ಶಿಷ್ಯರಲ್ಲಿ ಒಬ್ಬರು, ಅವರಲಿಂಗೈಕ್ಯದ ಸಂದರ್ಭದಲ್ಲಿ ತಾವೇ ರಚಿಸಿ ಹಾಡಿದುದಾಗಿ ಹಿರಿಯ ಸ್ವಾಮಿಗಳೊಬ್ಬರು ಹೇಳಿದ ನೆನಪು. ಈ ಪದ್ಯವನ್ನು ಈಗಲೂ ಶಿವಯೋಗ ಮಂದಿರದಲ್ಲಿ, ತುಂಬ ಚನ್ನಾಗಿ ವಟುಸಾಧಕರು ದಿನನಿತ್ಯ ಹಾಡುತ್ತಾರೆ. ಕರ್ನಾಟಕ ಸಂಗೀತದಲ್ಲಿ ಹಾಡಲಾಗುವ ಈ ಮಂಗಲಕ್ಕೆ ವಿಶಿಷ್ಟವಾದ ಏರು ಇಳುವುಗಳಿವೆ  ಕೇಳುತ್ತ ಹೋದಂತೆ ಹಾಡುತ್ತಾ ಹೋದಂತೆ, ಹಾಡುವವರನ್ನು ಕೇಳುವವರನ್ನು ತೂರ್ಯಾವಸ್ಥೆಗೆ ಒಯ್ಯುವ ಮಾಂತ್ರಿಕತೆಯು, ಈ ಮಂಗಲ ಪದ್ಯಕ್ಕಿದೆ.

“ಶಿವಮಂಗಲವನ್ನು ಕೊಡುಬೇಗ ಭವದುಃಖದಿ ಬಳಲುವೆವೀಗ” ಎಂಬ ಮಂಗಲಪದ್ಯವೂ ತುಂಬ ಪ್ರಾಖ್ಯಾತ. ಜನಸಾಮಾನ್ಯರ ತುದಿ ನಾಲಗೆಯಲ್ಲಿ ಈ ಪದ್ಯ ರಾರಾಜಿಸುತ್ತಿರುತ್ತದೆ. ಈ ಪದ್ಯವು ಹಾನಗಲ್ಲ ಕಮಾರಶಿವಯೋಗಿಗಳದ್ದೆಂದು ನನಗೆ  ತಡವಾಗಿ ತಿಳಿಯಿತು. ಇರಲಿ ! ತಮಗೆ ಚಿನ್ಮಯಾನುಗ್ರಹದೀಕ್ಷೆನೀಡಿದ ಗುರುಗಳ ಯೋಗಿಕ ಸಾಮರ್ಥ್ಯವು ಈ ಪದ್ಯದತುಂಬೆಲ್ಲ ಚೆಲ್ಲುವರೆದಿದೆ. ಇವರಿಂದ ರಚಿತವಾದ ಎಲ್ಲ ಪದ್ಯಗಳಿಗಿಂತ, ಈ ಪದ್ಯ ಕಾರಣದಿಂದಾಗಿ ಇರಬಹುದು ಇದಕ್ಕೆ ಇದರದೆ ಆದ.,ವೈಶಿಷ್ಟ್ಯವಿದೆ. ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ’ ಎಂಬ ತಾತ್ವಿಕ ಮಂಗಲವು ವೇದಾಂತಿಗಳಿಗೂ, ವೀರಶೈವ-ಲಿಂಗಾಯತರಿಗೂ, ತುಂಬ ಪರಿಚಯದ ಮಂಗಲಪದ್ಯವದು. ದರ್ಶನದ ಹಿನ್ನೆಲೆ ಆ ಮಂಗಲಕ್ಕಿದೆ. ‘ಜಯಮಂಗಲಂ ನಿತ್ಯಶುಭಮಂಗಲಂ’ ಎಂಬ ಬಾಲಲೀಲಾ ಮಹಾಂತ ಶಿವಯೋಗಿಗಳು, ತಮ್ಮನ್ನು ಬಸವಾದಿಪ್ರಮಥರ ಮಗು, ಎಂದು ವೀರಶೈವ- ಲಿಂಗಾಯತದ ಶುದ್ಧಮಾರ್ಗಾವಲಂಬಿಗಳಾಗಿ ತಾವೇ ರಚಿಸಿ ಹಾಡಿದ ಮಂಗಲಪದ್ಯ ಅದಾಗಿದೆ.

ಆದರೆ ಈ “ಯೋಗಿರಾಡ್ಜಯ ” ಎಂಬ ಮಂಗಲಪದ್ಯವು ಒಬ್ಬ ಜಂಗಮ ಮೂರುತಿ ಗೈದ ಸಾಧನೆ, ಸಿದ್ದಿ-ಎಲ್ಲ ಜಂಗಮರೂ ಸಾಧಿಸಲೇಬೇಕಾದ ಸಾಧ್ಯತೆಯ ದಿಗ್ದರ್ಶನವನ್ನು ಏಕಕಾಲಕ್ಕೆ ಮಾಡಿಸುತ್ತದೆ.

‘ಲಿಂಗಾಂಗಗಳ ಸಂಗದಲ್ಲಿ, ಅಂಗಗುಣಗಳನ್ನು ಅತಿಗಳೆಂದು, ಶರಣರಿಗೆ ಪುಂಗಜಂಗಮನೆನಿಸಿ, ಅಂಗದಿಂದ ಹುಟ್ಟುವ ಕಾಯವಿಕಾರ ಮನೋ ವಿಕಾರಗಳೆಂಬ ಭವತಾಪಗಳನ್ನು ಲಿಂಗ ನೆನಹಿನಿಂದ ಭಂಗಗೊಳಿಸಿ,ಮಂಗಲಾತ್ಮಕನಾಗಿ ಭಕ್ತ ಜನರ  ಹೃದಯದಲ್ಲಿ ವಾಸವಾಗಿರುವಂತಹ, ಶ್ರೇಷ್ಠ ಮಹಾಯೋಗಿಯೇ !  ಪರತರ ಶಿವಯೋಗಿಯೇ! ಎಂದು ಮಹಾಗುರವರ್ಯರನ್ನು ಹೃದಯದುಂಬಿ ಬಣ್ಣಿಸುತ್ತಾರಿಲ್ಲಿ ಪಲ್ಲವೀ ಹಾಗೂ ಪದ್ಯದ, ಒಂದನೆಯ ಭಾಗದಲ್ಲಿ ಇದು ಬಾಲಲೀಲಾ ಮಹಾಂತ ಶಿವಯೋಗಿಗಳು

“ಜಯಮಂಗಲಡಿ” ಎಂಬ ಮಂಗಲದ  ದಾರ್ಶನಿಕ  ನಿಲುವನ್ನು ಒಳಗೊಂಡಂತಹ ಮಂಗಲಪದ್ಯಇದಾಗಿರುವುದು ಮನವರಿಕೆ ಆಗಲಿರುವುದು,

ಅಂದಹಾಗೆ, ಬಾಲಲೀಲಾಮಹಾಂತ ಶಿವಯೋಗಿಗಳು, ತಮ್ಮನ್ನು ತಾವು :

“ಧರೆಯ ಭಕ್ತರು ಮಾಹೇಶ್ವರರಗಳ ಪುತ್ರನಿಗೆ |

ಶರಣ ಬಸವಾದಿ ಪ್ರಮಥರ ಕಂದಗೆ ||’

ಎಂಬುದಾಗಿ ಕರೆದುಕೊಳ್ಳುತ್ತಾರೆ .ಈ ಮಂಗಲಪದ್ಯದಲ್ಲಿಯೂ, “ಶರಣರಪುಂಗಾ”ಎಂಬಲ್ಲಿ ಅದು ಧ್ವನಿತವಾಗಿದೆ. ‘ಪೂರ್ವಾಶ್ರಮ ನಿರಸನಸ್ಥಲದಲ್ಲಿ ಎಲ್ಲ ಲಿಂಗಧಾರಿಗಳು ಬಸವಾದಿ ಶಿವಶರಣರ ಮಕ್ಕಳೆ, ಲಿಂಗ ಹಾಗೂ ಅಂಗ-ಇವೆರಡು, ಇಲ್ಲಿ ವಿಶ್ಲೇಷಣಾರ್ಹ ಪದಗಳಾಗಿ ನನಗೆ ಕಂಡಿವೆ. (ಈ ವಿಷಯದ ವಿವೇಚನೆಯು ಟಿ.ಎನ್. ಮಲ್ಲಪ್ಪನವರು ಬರೆದ ವಚನೋಪನಿಷತ್ತಿನಲ್ಲಿ ವಿಸ್ತಾರವಾಗಿರುವದನ್ನು ಗಮನಿಸಬಹುದು.) ಉಭಯಸಂಗ ಎಂಬಲ್ಲಿ ಇದು ವ್ಯಕ್ತವಾಗಲಿದೆ. ಅವುಗಳಲ್ಲಿ, ಕಾಣದ ಯಾವುದೋ ಜಂಗಮ ವ್ಯಕ್ತಿತ್ವವನ್ನು ಕೊಂಡಾಡುತ್ತಿಲ್ಲ. ಅವರ ಒಡನಾಡಿಗಳಾದ ಓರ್ವ ಸಾಕ್ಷಾತ್ ತಮ್ಮ ಗುರುವರರನ್ನು ಈ ಸಂದರ್ಭದಲ್ಲಿ ಕೊಂಡಾಡುತ್ತಿದ್ದಾರೆಂಬುದನ್ನು ಮರೆಯುವಂತಿಲ್ಲ.

ಅಂಗವೇ + ಲಿಂಗವಾಯಿತು ಲಿಂಗವೇ + ನಡೆಲಿಂಗವಾಗಿ = ಜಂಗಮ ವೆನ್ನಿಸುವುದು. ಇದು ಮುಂದಿನ ಯೋಗಿಕ ಸತ್ಕ್ರಿಯೆಗಳಿಂದ  ಪ್ರಾಪ್ತವಾಗುವಂತಹದು.

“ಇಡಾಪಿಂಗಳಜೋಡಿಸಿ” ಎಂಬ ಈ ಪದ್ಯದಲ್ಲಿ ಅಂಗ ಹಾಗೂ ಲಿಂಗ ಎರಡೂ ಜಂಗಮನಲ್ಲಿ ಹೇಗೆ ಕೆಲಸಮಾಡಬಲ್ಲವು ಎಂಬುದಕ್ಕೆ ವಿವರಣೆಯಾಗಿವೆ. ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಗತಿಗೆ ಆರು ನಿಲ್ದಾಣಗಳುಂಟು. ಅವು ಷಟ್ ಚಕ್ರಗಳೆಂದು ಕರೆಯಲಾಗಿದೆ. ಈ ಬಗೆಗೆ ಗುರುದೇವ ರಾನಡೆ ಅವರ, ‘ಕನ್ನಡ ಸಂತರ ಪಾರಮಾರ್ಥ ಪಥ’ದಲ್ಲಿಯ ಮಾತುಗಳನ್ನು ಓದಬೇಕು : “ನೀವು ಆ ಚಕ್ರಗಳನ್ನು ಸೇರಿ ಅವುಗಳೊಳಗಿಂದ ಮೇಲಕ್ಕೇರಬೇಕು. ಅಂದರೆ ನೀವು ಮಿದುಳಿನ ಶಿಖರವನ್ನು ಮುಟ್ಟುವಿರಿ. ಅಲ್ಲಿ ನಾಲ್ಕು ದಾರಿಗಳುಂಟು ; ಒಂದು ಮುಂಭಾಗದ ಕುಹರ, ಒಂದು ಹಿಂಭಾಗದ ಕುಹರ, ಎರಡು ಪಾರ್ಶ್ವದ ಕುಹರಗಳು. ನೀವು ಸುಷುಮ್ಮೆಯೊಳಗಿಂದ ಹಾದು, ಈ ನಾಲ್ಕು ದಾರಿಗಳು ಕೂಡುವಸ್ಥಳಕ್ಕೆ ಹೋಗಬೇಕು. ಈ ಸ್ಥಳವು ಬೇರೆಡೆ ಶೃಂಗಾಟಕವೆಂದು ಹೆಸರಿಸಲಾಗಿದೆ. ಈ ರೀತಿ ನೀವು ಸುಷುಮ್ಮಯೊಳಗಿಂದ ಏರಿ, ಮಿದುಳಿನಲ್ಲಿಯ ಈ ನಾಲ್ಕು ದಾರಿಗಳನ್ನು ಸೇರಿದರೆಂದರೆ, ನಿಮಗೆ ಭಗವಂತನ ದರ್ಶನವು ಲಭಿಸುವುದು” ಎಂಬುದಾಗಿ ವಿವರಿಸುತ್ತಾರೆ. (ಪು, ೨೩೦).

ಇಲ್ಲಿ, ಇಡಾ ಹಾಗೂ ಪಿಂಗಳ ಎಂಬನಾಡಿಗಳೇ, ಎರಡು ಕೈಗಳು, ಅವುಗಳನ್ನು ಕೂಡಿಸುವದು ಹರಿದಾಡುವ ಕೈಗಳನ್ನು ಕೂಡಿಸಿದಷ್ಟೇ ಸರಳವಾದುದು ಯೋಗಿಗಳಿಗೆ, ನಡುನಾಡಿಯೋಳು, ಕೂಡಿ ಅಡರಿದ ಅತೀ ಶಾಂತಯುತವಾದ ಕಾಂತಿಯು,

ನಿಜಗುಣರ,-“ಜ್ಯೋತಿ ಬೆಳಗುತಿದೆ” ಎಂಬ ಪದ್ಯದ ಗುಣ ಲಕ್ಷಣಗಳೆನ್ನೆಲ್ಲ ಪ್ರಕಾಶಿಸುತ್ತದೆ. ಜ್ಞಾನೇಶ್ವರರು ಕುಂಡಲಿನಿಯ ಬಗೆಗೆ ಹೇಳುತ್ತಾ ಅದರ ಬಣ್ಣವು ಕುಂಕುಮ ಬಣ್ಣದಂತಿರುತ್ತದೆ ಎನ್ನುತ್ತಾರೆ. ನಾಭಿಯ ಕೆಳಭಾಗದಲ್ಲಿ ಅದು ದುಂಡಾದ ಸಣ್ಣ ಹಾವಿನಂತೆ ಇರುವುದಾಗಿ ಹೇಳುತ್ತಾರೆ. ಡಾ. ರಾಯರವರ ಪ್ರಕಾರ ಅದು ಮೆದುಳುಬಳ್ಳಿಯಲ್ಲಿರದೆ, ಮಿದುಳಿನಲ್ಲಿಯೆ ಚಕ್ರದಂತಿರುತ್ತದೆ. ಅದು ಮಿದುಳು ಕೋಶದ ಹತ್ತನೆಯ ನರದಂತಿರುತ್ತದೆ ಎಂದು ಡಾ. ರೇಳೆ ಅವರು ವಾದಿಸುತ್ತಾರೆ. ಇದೇನೇ ಇರಲಿ ! ಕುಮಾರ ಶ್ರೀಗಳು ಅನಾಹತನಾದದಲ್ಲಿ ಗುಪ್ತವಾಗಿ ಇರುವ ಪರದಿಂದಲೂ ಮುಕ್ತರಾಗಿರುವರಾಗಿ ಕವಿಗಳಾದ ಕುಮಾರಪ್ರಭುಗಳು ತಮ್ಮ ಗುರುಗುಣ ಸಾಮರ್ಥ್ಯವನ್ನು ಬಣ್ಣಿಸುತ್ತಾರೆ.

“ಮಂಡಲತ್ರಯದಗ್ರದಿ’ ಎಂಬ ಕೊನೆಯ ಸಾಲುಗಳಲ್ಲಿ,

“ಗಂಗೆ-ಯಮುನೆಗಳ ಸಂಗಮದೊಳುಮಿಂದು |

ಶೃಂಗಾಟದುಪರಿಯ ರಂಗಮಂಟಪದೊಳು ||

ಲಿಂಗಪೂಜೆಯಮಾಡಿರೋ ನಿಮ್ಮೊಳಿ ಪ್ರಾಣ ||

ಲಿಂಗಪೂಜೆಯಮಾಡಿರೋ ||”

ಎಂಬ ಹೋಲಿಕೆಯು ಕೊಂಚಭಿನ್ನವಾಗಿ, ಮೂರುಮಂಡಲಗಳ ಮದ್ಯದಲ್ಲಿ, ದೀಪಿಸುತ್ತಿರುವ ಅಖಂಡ ಜ್ಯೋತಿ ಸ್ವರೂಪರು, ಬಿದರಿ ಕುಮಾರಶಿವಯೋಗಿಗಳು ; ಅಖಂಡ ವಿಷಯಗಳನ್ನು ಲಿಂಗಮುಖವಾಗಿಸಿಕೊಂಡು, ಐಕ್ಯತ್ವದ ಆನಂದದಲ್ಲಿ ಮೂಹೂರ್ತ ಮಾಡಿದ ಭಾವ ಭಂಗಿಯನ್ನು ನೆನಪಿಗೆ ತಂದುಕೊಂಡು, ಭಾವದುಂಬಿ, ಭಕ್ತಿಪರವಶರಾಗಿ, ಹಾಡಿದ ಹಾಡಿನ ಹಿನ್ನೆಲೆಗೆ, ಹಿರಿಯಸ್ವಾಮಿಗಳೊಬ್ಬರು, ಬಹಳ ಮಹತ್ವದ ಸನ್ನಿವೇಶವನ್ನು ನಿರೂಪಿಸಿದ ನೆನಪು. “ಅಪಗೋಳ ಬಿದರಿ ಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗ ಆಶು ಕವಿಗಳಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ದುಃಖ ತಡಿಯಲಾಗದೆ ಬಿಕ್ಕಿ ಬಿಕ್ಕಿ ಕಳೆಬರಹದ ಮುಂದೆ ಅಳುತ್ತ ಹಾಡಿದ ಹಾಡಿದು’, ಎಂದಿದ್ದರು.

ಮೇನೇದ ಕೋಲಿಯಲ್ಲಿ ಬಿದರಿಕುಮಾರಶ್ರೀಗಳು ಅಂತಿಮ ಕ್ಷಣಗಳನ್ನು ಇಷ್ಟಲಿಂಗದಲ್ಲಿ ಅರ್ಪಿಸುತ್ತಿದ್ದ ಸಂದರ್ಭವದು : ಯಾರೋ “ಕುಮಾರಸ್ವಾಮಿಗೋಳ ನೀವು ಎರಡು ಸಾರೆ ಗುರುಗಳ ಪುಣ್ಯತಿಥಿ ಅಚರಿಸಬೇಕಾಗುವುದು’ ಎಂದರಂತೆ ಇದು ಬಿದರಿ ಕುಮಾರಶ್ರೀಗಳಿಗೆ ಕೇಳಿಸಿ, ಕೊಲಿಯಮುಂದೆ ಕುಳಿತವರಲ್ಲಿ ಒಬ್ಬರನ್ನು ಕರೆಯಿಸಿ : ‘ತಮ್ಮಾ ಯಳಂದೂರಿನ ಬಸವಲಿಂಗಸ್ವಾಮಿಗಳು ಲಿಂಗೈಕ್ಯ ದಿನವೆ ಬಿದರಿ ಕುಮಾರಶ್ರೀಗಳು ಲಿಂಗೈಕ್ಯವಾದರೆಂದು ಅಪ್ಪಣೆಕೊಡಿಸುತ್ತಿರುತ್ತಿದ್ದರು.  ಈಗಲೂ ಶಿವಯೋಗ ಮಂದಿರದಲ್ಲಿ ಲಿಂ, ಬಿದರಿ ಕುಮಾರ ಶ್ರೀ ಗಳ ಹಾಗೂ ಯಳಂದೂರ ಲಿಂ, ಬಸವಲಿಂಗ ಶ್ರೀಗಳ ಸ್ಮರಣೋತ್ಸವವನ್ನು ಪುಷ್ಯ ಶುದ್ಧ ಪಂಚಮಿಯಂದೇ ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಗೆಂದೇ ಶಿವಯೋಗ ಮಂದಿರಕ್ಕೆ ಸವದತ್ತಿಯ, ಶ್ರೀಮಾನ್, ನಾರಾಯಣಪ್ಪ, ಮೊರಬದ ದಂಪತಿಗಳ ವತಿಯಿಂದ ೫೦,೦೦೦ ರೂಪಾಯಿಗಳನ್ನು ಈ ಲೇಖಕನ ಸಲಹೆ ಸದಾಶಯದಮೇರೆಗೆ ಫಿಕ್ಸ್ ಡಿಪಾಸಿಟ ಇರಿಸಲಾಗಿದೆ. ಇಂತಹ ಮಹಿಮಾಶಾಲಿಗಳಗಿದ್ದರು ಉಭಯ ಯತೀಂದ್ರರು  ಇವರಿಬ್ಬರ ವ್ಯಕ್ತಿತ್ವವನ್ನು ಎಷ್ಟು ಬಣ್ಣಿಸಿಯೇನು ? ಇದೆಲ್ಲ, ನಮ್ಮ ನೆಮ್ಮದಿಗಷ್ಟೆ !

ಲೇಖಕರು : ಪೂಜ್ಯ ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

ಶ್ರೀಗಳು ಸ್ವಾವಲಂಬಿಗಳಾಗಿದ್ದರು. “ತನ್ನ ನಿತ್ಯ ನೇಮವೆಲ್ಲವ ತಾ ಮಾಡ ಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?” ಎನ್ನುತ್ತಿದ್ದರು. ಅಥಣಿ ಅಪ್ಪಂಗಳವರಂತೆ ಅವರು ತಮ್ಮ ಪೂಜೆಗೆ ಕೈ ಜೋಳಿಗೆಯಲ್ಲಿ ಪತ್ರೆ ಪುಷ್ಪಗಳನ್ನು ತಾವೇ  ಎತ್ತಿ ತರುತ್ತಿದ್ದರು. ಅವರು ಬಹಿರ್ದೇಸಿಗೆ ಮೂಲಿಮಠದ ತೋಟದಾಚೆಗೆ ಹೋಗುತ್ತಿದ್ದರು, ತೋಟದ ಬಾವಿಯಲ್ಲಿ ಕೈ ಕಾಲು ತೊಳೆದು ಕೊಂಡು, ತಮ್ಮ ಕೌಪೀನಾದಿಗಳನ್ನು ತಾವೇ ತೊಳೆದು ಒಂದೆಡೆ ಹಾಕುತ್ತಿದ್ದರು. ಹೂ ಪತ್ರೆ ಎತ್ತಿಕೊಂಡ ಮೇಲೆ ಸ್ವಲ್ಪ ವೇಳೆ ವಿಶ್ರಮಿಸುತ್ತಿದ್ದರು.

ಶ್ರೀಗಳು ಪಾದದಲ್ಲಿ ಬಹಳ ತ್ರಾಣವುಳ್ಳವರಾಗಿದ್ದರು. ಅವರಿಗೆ ಕಂತೆ ಕಂಬಳಿ ಕೊಪ್ಪಿ ಬೇಕೇಬೇಕಾಗುತ್ತಿದ್ದಿತ್ತು. ಸವದತ್ತಿಯಿಂದ ಪಾದಚಾರಿಗಳಾಗಿ ಮುಂಜಾನೆ ಹೋರಟ ಸಂಜೆಯೊಳಗೆ ಬಿದಿರೆಗೆ ತಲುಪುವರು; ಮತ್ತೆ ಮರುದಿನ ನಡೆಯುತ್ತಲೇ ಹೊತ್ತು ಮುಳುಗುವಷ್ಟರಲ್ಲಿ ಸವದತ್ತಿಗೆ ಮರಳುವರು. ಅಷ್ಟು ಅವಸರವಾಗಿದ್ದಿತ್ತು .ಅವಿಶ್ರಾಂತವಾಗಿದ್ದಿತ್ತು  ಅವರ ನಡಿಗೆ ಅವರ ಪ್ರೇರಣಾ ಬಲದಿಂದ ಬಿದರಿ ತುಪ್ಪದ ಸಿದ್ಧ ಗಿರಿಯಪ್ಪನೂ ಕಾಲಲ್ಲಿ  ಬಲುಸತ್ವವುಳ್ಳವನಾಗಿದ್ದನು. ಒಂದು ಸಲ, ಆತ ಗುರುಗಳ ಆದೇಶದಂತೆ, ಬಿದರಿಯಿಂದ ಮುಂಜಾವ ನಸುಕಿನಲ್ಲಿ ಹೊರಟವನು ಸೂರ್ಯಾಸ್ತದೊಳಗೆ ಮಿರಜಿಗೆ ಹೋಗಿ ಬಂದಿದ್ದನು.

ಆಥಣಿಯಪ್ಪ, ಬಿಳ್ಳೂರಪ್ಪ, ಬಿದರಿಯಪ್ಪಂಗಳವರು ದೇಹದಿಂದ ಮೂವರಾಗಿದ್ದರೂ, ಆತ್ಮದಿಂದ ಒಂದೇ ಎಂಬಂತಿದ್ದರು. ತಂತಮ್ಮ ಭಾಗದಲ್ಲಿ ಎಲ್ಲಿಯಾದರು ಏನಾದರೂ ವಿಶಿಷ್ಟ ಮಂಗಲಕಾರ್ಯವಿದ್ದಲ್ಲಿ ಮೂವರೂ ಅನ್ನೋನ್ಯ ವಾಗಿ ಕೂಡಿರಬೇಕು; ಲಿಂಗಲೀಲಾ ವಿಲಾಸದಲಲ್ಲಿ ಪರಸ್ಪರರು ಜೋಡಿರಬೇಕು. ಅವರು  ಶಿವಯೋಗಿ ತ್ರಿಮೂರ್ತಿಗಳಾಗಿದ್ದರು; ಶಿವಯೋಗದಲ್ಲಿ ಹಣ್ಣಾಗಿದ್ದರು. ಆ ಭಾಗದ ಕಣ್ಣಾಗಿದ್ದರು.

ಬಿದರಿಯಪ್ಪಂಬಿಗಳವರು ತಮ್ಮಲ್ಲಿಗೆ ಜಂಗಮರಾರಾದರೂ ಬರುವಂತಿದ್ದರೆ, ಅದನ್ನು ಮೊದಲೇ ಸೂಚಿಸುತ್ತಿದ್ದರು; ಅವರಿಗಾಗಿ ಪೂಜಾ – ಪ್ರಸಾದದ ವ್ಯವಸ್ಥೆಯನ್ನು ಮಾಡಿಸಿಡುತ್ತಿದ್ದರು. ಶರಣೆ ಸಾಹುಕಾರ ತಾಯವ್ವ ಶ್ರೀಗಳಿಗೆ ಅರಿಯದಂತೆ ಮಠಕ್ಕೆ ಬಂದಿದ್ದ ಗಣಂಗಳಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಹೋಗುತ್ತಿದ್ದಳು. ಜಂಗಮರಿಗೆ ಎಷ್ಟು ಉಣಿಸಿ ತಣಿಸಿದರೂ ಶ್ರೀಗಳಿಗೆ ಬೇಸರವಿದ್ದಿಲ್ಲ. ತಾವು ಜಂಗಮ ಜ್ಯೋತಿ ಯಾಗಿದ್ದರೂ, ಅವರಿಗೆ ಜಂಗಮರೆಂದರೆ ಪಂಚಪ್ರಾಣ, ಒಮ್ಮೊಮ್ಮೆ ಹಿರೇಹೊಳೆಗೆ ದಯಮಾಡಿಸಿದ್ದಾಗ, ಅವರು ಜಂಗಮರ ಮಂಡೆಯ ಮೇಲೆ ಚವಲಿಪಾವಲಿಗಳನ್ನು ಸುರಿದುದುಂಟು; ಬಹಳಷ್ಟು ಉಣ್ಣುತ್ತಿದ್ದ ಗಣಂಗಳಿಗೆ ಬಹಳಷ್ಟು ದಕ್ಷಣೆ ನೀಡಿದು ದುಂಟು. ಅವರು ಮೇಲಿಂದ ಮೇಲೆ ಗಣಾರಾಧನೆಗಳನ್ನು ಇಡಿಸಿದುದುಂಟು.

ಶ್ರೀಗಳಲ್ಲಿ ತಮ್ಮ ಮಠದ ಆಸ್ತಿ ಬೆಳಸಬೇಕೆಂಬ ಹವ್ಯಾಸ ಎಳ್ಳಷ್ಟು ಇದ್ದಿಲ್ಲ. ಎಷ್ಟೋ ಸಾರೆ, ತ್ಯಾಗವೀರ ಶಿರಸಂಗಿ ಲಿಂಗರಾಜರು ಸವದತ್ತಿಯಲ್ಲಿ ಶ್ರೀಗಳ ಪಾದದರ್ಶನ ತೆಗೆದುಕೊಂಡ ಮೇಲೆ ತಾವು ಮಠಕ್ಕೆ ಕೆಲವೊಂದು ಭೂಮಿಯನ್ನು ದತ್ತಿ ಹಾಕಿ ಕೊಡಬೇಕೆಂದು ಮಾಡಿದ್ದರು. ಶ್ರೀಗಳಾದರೋ ಅದಕ್ಕೆ ಸರ್ವಥಾ ಒಪ್ಪಲಿಲ್ಲ. ಆ ದೊರೆಗಳ ಭಕ್ತಿಯ ಸೆಳತಕ್ಕೆ ಸಿಲುಕಿ, ಅವರು ಸೊಡ ಬಲಿಯ ಮಸಣ ಚೌಕಿಗೆ ಸ್ವಲ್ಪ ಜಾಗೆ ಕೊಡಬಹುದೆಂದರು.

ಶ್ರೀಗಳು ಬಿಳ್ಳೂರಪ್ಪಗಳಂತೆ ಜಟ್ಟಿಗಳೆಂದರೆ, ಯೋಗಾಸನ ಪಟುಗಳೆಂದರೆ ಬಲು ಪ್ರೀತಿ : ಒಳ್ಳೆಯ ರೀತಿಯಲ್ಲಿ ಯಾವುದೊಂದು ಶಕ್ತಿ ಪ್ರದರ್ಶನ ಮಾಡಿ ತೋರಿಸಿದವರಿಗೆ ಅವರು ವೆಗ್ಗಳವಾಗಿ ಬಹುಮಾನವಿತ್ತು ಕಳಿಸುತ್ತಿದ್ದರು; ಹುಡುಗರನ್ನು ಕರೆದು ಒಬ್ಬರಿಗೊಬ್ಬರು ಕುಸ್ತಿ ಹಿಡಿಯುವಂತೆ ಹುರಿದುಂಬಿಸುತ್ತಿದ್ದರು; ಗೆದ್ದವರಿಗೂ – ಬಿದ್ದವರಿಗೂ ಕೂಡಿಯೇ ಹುರಿಡಗಲೆ, ಚುರಮರಿ ಕೊಟ್ಟು ‘ಲೇಸಾಗಲಿ!’ ಎಂದು ಆಶೀರ್ವದಿಸುತ್ತಿದ್ದರು. ಹೀಗೆ ಶ್ರೀಗಳ ಆಚಾರ-ವಿಚಾರಗಳ ವಿಕಾಸವಾಗಿದ್ದಿತು; ಅವರು ವ್ಯಕ್ತಿತ್ವ-ಬಹುಮುಖವಾಗಿ ಬೆಳೆದು ಬಂದಿತ್ತು.

ಶ್ರೀಗಳು ಲೋಕಸಂಗ್ರಹದ ಅನೇಕ ಕಾರ್ಯಗಳನ್ನು ಪೂರೈಸಿದರು ಅವುಗಳಲ್ಲಿ ಕೆಲವನ್ನು ಉದಾಹರಿಸಬೇಕೆಂದರೆ –

1.  ಶರಣ -ಬಂದರದ ರುದ್ರಪ್ಪನವರೊಂದಿಗೆ ಅನೇಕ ಸದ್ಭಕ್ತರನ್ನು  ಕರೆದುಕೊಂಡು ಉತ್ತೂರು ಮಹಾಲಿಂಗ ಶರಣರ ದರ್ಶನಕ್ಕೆ ದಯಮಾಡಿಸಿ, ಅಲ್ಲಿ ಶಿವಾನುಭವ ಗೋಷ್ಠಿ ಸಾಗುವಂತೆ ಪ್ರೇರೇಪಿಸಿದರು;  ಬಸವಾದಿ ಪ್ರಮಥರ ತತ್ವಗಳನ್ನು ಪ್ರಸಾರಪಡಿಸಿದರು. ತಮ್ಮ ಕರುಣೆಯ ಕಂದ-ಅಪ್ಪಯ್ಯ ದೇವರನ್ನು ತಮ್ಮ ಉತ್ತರಾಧಿಕಾರಿಯೆಂದು ನೇಮಿಸಿಕೊಂಡು ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಒಪ್ಪಿಸಿ ಶಿವಯೋಗಮಂದಿರದಲ್ಲಿ ಇಡಿಸಿದರು.

೨. ಸವದತ್ತಿ ಕಲ್ಮಠದಲ್ಲಿ ಒಮ್ಮೆ ಚೋರಬಸವ ಪುರಾಣವನ್ನೂ, ಕ್ರಿ.ಶ. ೧೯೦೨ರಲ್ಲಿ ಭೀಮಕವಿಯ ಬಸವಪುರಾಣವನ್ನು ಹಚ್ಚಿಸಿ, ಜನತೆಯಲ್ಲಿ ದಾಸೋಹಂ ಭಾವದ ಬೀಜವನ್ನು ಬಿತ್ತಿದರು. ಸವದತ್ತಿ ಪುರಾಣಮಂಗಲೋತ್ಸವ ನಿಜಕ್ಕೂ ಸಮಾಜದಲ್ಲಿ ನವ ಮನ್ವಂತರ ಮೂಡಿಬರುವಲ್ಲಿ ಶುಭನಾಂದಿ ಹಾಕಿತೆನ್ನಬಹುದು.

೩. ಕಲ್ಯಾಣದಪ್ಪ – ಬಸವಣ್ಣವರಂತೆ, ಬಿದಿರಿ ಶಿವಯೋಗಿಗಳು ಗುಣ ಸಂತೃಪ್ತಿಯ ನೇಮವನ್ನು ಕೈಗೊಂಡು, ತಾವಿರುವ ಪರ್ಯಂತರ – ಕೈಯಲ್ಲಿ ಕಾಸಿಲ್ಲದಾಗಲೂ ಇಚ್ಛಾ ಭೋಜನ ಮಾಡಿಸುತ್ತ ಪ್ರಸಾದ ಮಹಿಮೆಯನ್ನು ಬಸವ ಭಕ್ತಿಯನ್ನು ಎತ್ತಿ ತೋರಿಸಿದರು.

೪, ಒಮ್ಮೆ ಶಿವಯೋಗಿಗಳು ಬಿದರಿ, ಚಿಚಡಿ, ಗೊರವನ ಕೊಳ್ಳಗಳ ಭಕ್ತರನ್ನೊಡಗೊಂಡು – ಐವತ್ತು ಬಂಡಿಗಳನ್ನು ಕೂಡಿಸಿಕೊಂಡು, ಹಳೆಗಾಲದ ಶರಣ ‘ಹರಳಯ್ಯನ, ಗುಂಡ’ ಎಂಬ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಅಲ್ಲಿ ಬಬಲೇಶ್ವರ ಬೃಹನ್ಮಠಾಧ್ಯಕ್ಷ – ಶ್ರೀ ಷ. ಬ್ರ. ಶಾಂತವೀರ ಶಿವಾಚಾರ್ಯರ ಶಿವ ಯೋಗಾಶ್ರಮಕ್ಕೆ ಸಮದರ್ಶನ ನೀಡಿದರು; ಶರಣ ಹರಳಯ್ಯನ ಆದರ್ಶ ಜೀವನವನ್ನು ಮಾರ್ಮಿಕವಾಗಿ ಬೋಧಿಸಿದರು.

೫. ಮತ್ತೊಮ್ಮೆ ಶಿವಯೋಗಿಗಳು ಭಕ್ತರೊಂದಿಗೆ ಮಾಘ ಮಾಸದಲ್ಲಿ ಕೃಷ್ಣ (ಹಿರೇಹೊಳೆಗೆ) ಗೆ ಬಿಜಯಂಗೈದು, ಅಲ್ಲಿ ಅಸಂಖ್ಯ ಗಣಂಗಳನ್ನು ಧಾರಾಳವಾಗಿ ಪ್ರಸಾದ- ದಕ್ಷಿಣೆಗಳಿಂದ ತಣಿಸಿ ಗುರು-ಲಿಂಗ ಜಂಗಮ ಭಕ್ತಿಯನ್ನು ವ್ಯಕ್ತಪಡಿಸಿದರು.

೬. ಅಥಣಿ ನೇಸರಗಿಗಳಲ್ಲಿ ಚರ್ಚಿಸಿದ ಬಸವ ಪುರಾಣ ಮಂಗಲೋತ್ಸವಗಳಲ್ಲಿ ಶಿವಯೋಗಿಗಳು ತಮ್ಮ ಇನ್ನಿಬ್ಬರು ಆತ್ಮೀಯರೊಂದಿಗೆ ಉಪಸ್ಥಿತರಾಗಿದ್ದರು. ಅವರು ಅಥಣಿಯಿಂದ ತಿರುಗಿ ಬರುತ್ತಿದ್ದಾಗ ದಾರಿಯಲ್ಲಿ ಪತ್ರೆಯ ಮಹಿಮೆಯನ್ನು ಲೋಕಕ್ಕೆ ಮನಗಾಣಿಸಿಕೊಟ್ಟರು.

೭. ಶಿವಯೋಗಿಗಳು ಬಬಲೇಶ್ವರ ಶ್ರೀ ಫ. ಚ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯ ಶ್ರೀ ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಗಂಗಾಧರ ರಾಜ ಯೋಗೀಂದ್ರ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರು ಲಿಂಗೈಕ್ಯ ಶ್ರೀ ಹಾವೇರಿ ಶಿವಬಸವ ಮಹಾಸ್ವಾಮಿಗಳು- ಇವರೇ ಮೊದಲಾದ ಗುರು – ವಿರಕ್ತರಿಗೆ ಅನುಗ್ರಹವಿತ್ತು ಅವರವರಿಂದ ಲೋಕಕಲ್ಯಾಣ ಕೃತಿಗಳಾಗುವಂತೆ ಪ್ರೇರೇಪಿಸಿದರು.

ಲಿಂಗೈಕ್ಯ ಲೀಲೆ

ಸಂವತ್ಸರ ತಿರುಗಿತ್ತು ಶರಣರಿಗೆ – ಶಿವಯೋಗಿಗಳಿಗೆ ಮರಣವೇ ಮಹಾ ನವಮಿ’, ಬಿದರಿ ಕುಮಾರ ಶಿವಯೋಗಿಗಳಿಗೆ ಒಮ್ಮಿಂದೊಮ್ಮೆ ತಮ್ಮ ಲಿಂಗೈಕೈ ಮಿತಿ ಭಾವದಲ್ಲಿ ಸ್ಪುರಿಸಿದ್ದಿರಬೇಕು; ಅವರು ಯಳಂದೂರು ಬಸವಲಿಂಗ ಶಿವಯೋಗಿಶ್ವರರ ಲಿಂಗೈಕ್ಯ ಮಿತಿಯನ್ನು ಮನದಲ್ಲಿ ಇರಿಸಿದ್ದಿರಬೇಕು; ಅಂತೆಯೇ, ಅವರು ಒಂದೆರಡು ದಿನ ಮುಂಚೆ ಬಿಳೂರು, ಹಾನಗಲ್ಲು ಹಾವೇರಿ ಚರಮೂರ್ತಿಗಳನ್ನು; ಮಂಟೂರು, ಬಬಲೇಶ್ವರ, ಕೋಹಳ್ಳಿ ಗುರುಮೂರ್ತಿಗಳನ್ನು ಸವದತ್ತಿಗೆ ಕರೆಸಿದ್ದಿರಬೇಕು. ತಮ್ಮ ಅಪ್ಪಯ್ಯ ದೇಶಿಕರ ಮುಖಾಂತರ ಅಥಣಿ ಶಿವಯೋಗಿಗಳ ಪಾದಕ್ಕೆ ೨೫ ರೂ, ಕಾಣಿಕೆ ಮುಟ್ಟಿಸುವ ಏರ್ಪಾಡು ಮಾಡಿದುದಾಯಿತು; ಮೇಲುಕಟ್ಟಿ ಸಂಗಪ್ಪ, ಅಥಣಿ ಮಾಕೊಂಡಪ್ಪ, ಎಡಹಳ್ಳಿ ದೇಸಾಯಿ ಮಲ್ಲಪ್ಪ, ದೇವಿ ಹೊಸೂರು ಶೆಟ್ಟಿ ಚೆನ್ನಬಸವಪ್ಪ – ಇವೆಲ್ಲರ ಸಮಕ್ಷಮ ಹಾನಗಲ್ಲ – ಹಾವೇರಿ ಶ್ರೀಗಳವರಿಗೆ ಏನೇನು ಅಪ್ಪಣೆ ಮಾಡಬೇಕೋ ಮಾಡಿದುದಾಯಿತು  ಕಲ್ಮಠದ ಮುಂದಿನ ಹರವಾದ ಹಂದರದಲ್ಲಿ ಒಂದು ದಿನ ಶಿವಭಜನೆ, ಶಿವ ಕೀರ್ತನೆಗಳೂ – ಮತ್ತೊಂದು ದಿನ ಶಿವಗಣಾರಾಧನೆ, ಶಿವಾನುಭವ ಬೋಧನೆಗಳೂ ಎಡೆಬಿಡದೆ ಸಾಗಿದ್ದವು. ಶಾಲಿವಾಹನ ಶಕ ೧೮೩೩. (ಕ್ರಿ.ಶ. ೧೯೧೧, ಡಿಸೆಂಬರ್ ಕಡೇವಾರ) ಪುಷ್ಯ ಶುದ್ಧ ಪಂಚಮಿ ಸೋಮವಾರ ಬೆಳಗಿನ ಲಿಂಗಪೂಜೆಗೆ ಶಿವಯೋಗಿಗಳು ಎದ್ದರು, ಅವರ ಸ್ನಾನವಾಯಿತು. ಆದರೆ ಅವರೊಬ್ಬರಿಗೇ ಪೂಜಾ ಮಂದಿರಕ್ಕೆ ಹೋಗಲು ಆಗಲಿಲ್ಲವೇನೋ ಮಡಿಯಲ್ಲಿದ್ದ ಸದ್ಭಕ್ತರೊಬ್ಬಿಬ್ಬರು ಅವರನ್ನು ಅತ್ತ ಕರೆದೊಯ್ಯುತ್ತಿದ್ದಾಗಲೇ, ಶಿವಯೋಗಿಗಳಿಗೆ ನಿಂತು ನಿಂತಲ್ಲೇ ಬಾಹ್ಯ ಸ್ಮೃತಿ ಹಾರಿತು; ನಿಂತು ನಿಂತಲ್ಲೇ ಅವರ ಕಿವಿಯಲ್ಲಿ ಮಹಾಮಂತ್ರ ಪಠಿಸಿದುದಾಯಿತು ಅವರ ಬಾಯಲ್ಲಿ ಜಂಗಮ ಪಾದೋದಕ ಹಾಕಿದುದಾಯಿತು. ಪ್ರಾಣ ಪಕ್ಷಿ ಹಾರಿಹೋಗುತ್ತಿದ್ದಾಗಲೆ, ಅವರ ಲಿಂಗ ದೇಹ ತಾನೆ ಕುಸಿಯಿತು. ಹೀಗೆ ಶಿವಯೋಗಿಗಳು ಎದ್ದು ನಿಂತಿದ್ದಾಗಲೇ ಲಿಂಗದಲ್ಲಿ ಬೆರೆದರೆಂದು ದಟ್ಟವದಂತಿ ಹಾನಗಲ್ಲ ಶಿವಯೋಗಿಗಳು ಪೂಜೆಗೆ ಕುಳಿತ್ತಿದ್ದಾಗಲೇ ಲಿಂಗ ನಿರೀಕ್ಷಣೆಯಲ್ಲಿದ್ದಾಗಲೆ ಕೊನೆಯುಸಿರೆಳೆದು ಲಿಂಗೈಕ್ಯರಾದರೆಂತಲೂ ಐತಿಹ್ಯವುಂಟು. ಅವರು ಲಿಂಗದೊಳಗಾದಾಗ ಪ್ರಾತಃಕಾಲ ಸರಿಯಾಗಿ ಎಂಟು ಗಂಟೆಯಾಗಿದ್ದಿತು. ಅಲ್ಲಿಯ ಶಿಲಾಮಠದಲ್ಲಿ ಶಿವಯೋಗಿಗಳ ಕ್ರಿಯಾ ಸಮಾಧಿಯಾಯಿತು, ಆ ಭಾಗದಲ್ಲಿ ಅದೊಂದು ಜಾಗ್ರತ ಸಮಾಧಿಯಾಗಿದೆ.

ಸಂಸ್ಮರಣೀಯ ಸಂಗತಿಗಳು

  1. ಪರಮ ತಪಸ್ವಿ ಶ್ರೀ ಘ.ಚ. ಬಬಲೇಶ್ವರದ ಶಾಂತವೀರ ಮಹಾಸ್ವಾಮಿಗಳು ತಾವಿರುವ ಶ್ರೀ ಹರಳಯ್ಯನ ಗುಂಡ ಕ್ಷೇತ್ರದಲ್ಲಿಯ ಗುಂಡಕ್ಕೆ ಶ್ರೀ ಬಿದರಿ ಕುಮಾರೇಶ್ವರ ತೀರ್ಥ’ವೆಂದು ಹೆಸರಿಟ್ಟಿರುವರು; ಪ್ರತಿವರ್ಷ ಪುಷ್ಯ ಶುದ್ಧ ಪಂಚಮಿಯಂದು ಬಿದರಿ ಅಪ್ಪಂಗಳವರ ಪುಣ್ಯ ತಿಥಿಯನ್ನು ಆಚರಿಸುತ್ತಿರುವರು.
  2. ಅಪ್ಪಂಗಳವರು ನವಿಲು ತೀರ್ಥದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದಾಗಿನ ರೂಪಚಿತ್ರ  ವೊಂದು ಅವರ ಸಾಮಾನ್ಯ ರೂಪ ಚಿತ್ರದೊಂದಿಗೆ ಪ್ರಚಾರದಲ್ಲಿರುತ್ತದೆ.
  3. ಚಿಕ್ಕಲಿಗೆಯ ಊರ ಹೊರಗಿರುವ ಪತ್ರೆ ಮರಕ್ಕೆ ಅಪ್ಪಂಗಳವರ ವಾಕ್ಪುರುಷ ಬಲದಿಂದ ತ್ರಿದಳಗಳು ಪಂಚದಳವಾಗಿ ಪರಿವರ್ತನೆಗೊಂಡುದರ ಕುರುಹಿಗಾಗಿ ಆ ಮಠಕ್ಕೆ ಶ್ರೀ ಬಿದರಿ ಕುಮಾರೇಶ್ವರ ಪತ್ರಿಮರ’ವೆಂದು ಕರೆಯಲಾಯಿತು. ಭಕ್ತರು ಪ್ರತಿ ಶ್ರಾವಣದಲ್ಲಿ ಆ ಗಿಡವನ್ನು ಪೂಜಿಸುವರು. ಗಣರಾಧನೆ ಮಾಡುವರು.
  4. ಪ್ರಿಯ ಭಕ್ತರಲ್ಲೊಬ್ಬರಾಗಿದ್ದ ಲಿಂಗೈಕ್ಯ ಶ್ರೀ ಎಡಹಳ್ಳಿ ಮಲ್ಲಪ್ಪ ದೇಸಾಯಿಯವರಿಗೆ ಅಪ್ಪಂಗಳವರು ಒಮ್ಮೆ ಐದು ಬಿಲ್ವ ಸಸಿಗಳನ್ನು ದಯಪಾಲಿಸಿದ್ದರು. ಅವು ಬೆಳೆ ಬೆಳೆದಂತೆ ದೇಸಾಯಿಯವರ ಮನೆತನ ಇನ್ನಷ್ಟು ಬೆಳೆಯಿತೆಂದೂ, ಅವುಗಳಲ್ಲಿ ಈಗ ಮೂರು ಮಾತ್ರ ಉಳಿದಿವೆಯೆಂದೂ ಕಂಡು ಬಂದಿದೆ.
  5. ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಅಪ್ಪನವರು ಅನುಷ್ಠಾನಿಸಿದ ನವಿಲು ತೀರ್ಥದಲಿ ತೆಪ್ಪೋತ್ಸವ ನಡೆಯುತ್ತಿದೆ.
  6. ಅಪ್ಪಂಗಳವರ ಮೇಲೆ ಪದ- ಪದ್ಯಗಳನ್ನು ಕಟ್ಟಿ ಆ ಕಡೆ ಭಜನಾದಿಗಳಲ್ಲಿ ಭಕ್ತರು ಹಾಡಿ ನಲಿಯುತ್ತಿರುವರು. ಅವರ ಮೇಲೊಂದು ‘ನಾಮಾವಳಿ’ಯೂ ಇದೆ. ಮೂರು ಧ್ವನಿ ಮುದ್ರಣಗಳಿವೆ.
  7.  ನಾಡಿನಲ್ಲಿ ಕೆಲವೆಡೆ ಅಪ್ಪಂಗಳವರ ಪುರಾಣ ಪ್ರವಚನಗಳು ಸಾಗುತ್ತಿದ್ದು ಅಲ್ಲಲ್ಲಿ ಅವರ ಪುಣ್ಯ ದಿನಾಚರಣೆ ರೂಢಿಗತವಾಗಿದೆ. ಹೆಚ್ಚು ಹೆಚ್ಚು ಪುರಾಣಗಳನ್ನು ನೆರವೇರಿಸಿದ ಶ್ರೇಯಸ್ಸು ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು,  ಹಂಪಿ-ಹಾಲಕೆರೆ ಅವರಿಗೆ ಸಲ್ಲುವುದು.
  8.  ಚಚಡಿ ಊರ ಹೊರಗಿರುವ ಬಾವಿಯ ಮೇಲ್ಗಡೆ ಬಂಡೆಯ ಮೇಲೆ ಒಂದು ಸಾರೆ ಮೂರು ದಿನ ಅಚ್ಚಳಿಯದೆ ಮೂಡಿ ಮಿನುಗಿದ್ದ ಅಪ್ಪಂಗಳವರ ನಸುಕಾವಿ ಬಣ್ಣದ ಹಸಿ ಹೆಜ್ಜೆಯ ನೆನೆಪೆಂದು ಆ ಬಂಡೆಗಲ್ಲನ್ನು ಇಂದಿಗೂ ತೋರಿಸುತ್ತಿದ್ದಾರೆ.
  9.  ಅಪ್ಪಂಗಳವರ ಸಾನ್ನಿಧ್ಯದಿಂದ ಮತ್ತಷ್ಟು ಶೋಭಿಗೊಂಡಿದ್ದ ಅಥಣಿ ಶೆಟ್ಟರ ಮಠಕ್ಕೆ ‘ಕುಮಾರ ಮಠ’ವೆಂತಲೂ ಕರೆಯುವುದಂಟು.
  10.  ಬಿದರಿ ಮಠದಲ್ಲಿ ೧೯೮೩ರಲ್ಲಿ ಹುಲಿ ಹೆಜ್ಜೆ ಮೂಡಿದುದಾಗಿ ತಿಳಿದು ಗಣಾರಾಧನೆಯನ್ನು ಮಾಡಲಾಯಿತು.ಜನರು ಜಾತ್ರೆಯಂತೆ ನೆರೆದು  ಶ್ರೀ ಕುಮಾರೇಶ್ವರರು ಹುಲಿಏರಿ ಶ್ರೀಮಠದಲ್ಲಿ ತಿರುಗುತ್ತಾರೆ ಎಂಬುದು ನಂಬಿಕೆ.
  11. ಮುಪ್ಪಿನ ಕಾಲದಲ್ಲಿ ದೇಸಾಯಿಯವರು ಮಾಡಿಸಿಕೊಟ್ಟ ‘ಮೇನೆ’ ಬಿದರಿ ಮಠದಲ್ಲಿ ಇನ್ನೂ ಕಾಯ್ದಿರಿಸಲಾಗಿದೆ.

ಪವಾಡದ ಪಥದಲ್ಲಿ

1. ಹುಲಸಿನ ಹುಗ್ಗಿ : ಸವದತ್ತಿಮಠದ ಹಿತ್ತಲಲ್ಲಿಯ ಕುಂಬಳ ಕಾಯಿಗಳನ್ನು ಹರಿಸಿಟ್ಟಿದ್ದರು. ಬಸವ ಪುರಾಣ ಮಂಗಲೋತ್ಸವದ ಮರುದಿನ ಶಿವಯೋಗಿಗಳು ಪ್ರತ್ಯೇಕವಾಗಿ ಜಂಗಮಾರಾಧನೆಯಿಟ್ಟು ಕೊಂಡಿದ್ದರು. ಬೆಲ್ಲ, ಶುಂಠಿ, ಯಾಲಕ್ಕಿ, ಪತ್ರೆ, ಲವಂಗ, ಜಾಜಿಕಾಯಿ ಹಾಕಿ; ಕುಂಬಳ ಪಾಯಸವನ್ನು ಸಿದ್ಧಪಡಿಸಲಾಗಿದ್ದಿತು; ಅದಕ್ಕೆ ಶಿವಯೋಗಿಗಳ ಹಸ್ತ ಸ್ಪರ್ಶವಾಗಿದ್ದಿತು. ಆ ಹುಗ್ಗಿ ನೂರಾರು ಗಣಂಗಳಿಗೆ ಸಾಕಾಗಿ, ಊರ ಬಡಬಗ್ಗರು ಉಂಡರೂ ಉಳಿಯಿತು. ಅದು ಅಷ್ಟು ಹುಲುಸಾಗಿದ್ದಿತು.

2. ಸಾಯುವವ ಬದುಕಿದ : ಸವದತ್ತಿಯಲ್ಲಿ ಗಡೇಕಾರ ನಾಗಪ್ಪನಿಗೆ ದೊಡ್ಡ ಬೇನೆ ಅಂಟಿಕೊಂಡು, ಆತ ಈಗ ಆಗ ಸಾಯುವ ಸ್ಥಿತಿಯಲ್ಲಿದ್ದನು, ನೆಲಪಟ್ಟಾಗಿ ಬಿದ್ದಿದ್ದನು. ಆತನಾದರೋ ಶ್ರೀಗಳ ಪ್ರೀತಿಯ ಶಿಷ್ಯ. ಶ್ರೀಗಳೇ ಆತನ ಮನೆತನಕ ದಯಮಾಡಿಸಿ, ಆತನ ಮೈಮೇಲೆ, ತಲೆಯ ಮೇಲೆ ಕೈಯಾಡಿಸಿ, “ನಾಗಣ್ಣಾ ಅಪ್ಪ-ಬಸವ ನಿನ್ನ ಕಂಟಕ-ಕಳೆಯುವನು!” ಎಂದು ನುಡಿದರು. ಆತ ವಾರೆಂದು ಕಳೆಯುವುದರೊಳಗೆ ಪೂರಾ ಗುಣಮುಖವಾದವು. ಆತ ತಾನು ಎಂದೆ ಸಂಕಲ್ಪಿಸಿದ್ದಂತೆ, ಮಠದಲ್ಲಿ ನಗಾರಿಖಾನೆ’ ಯನ್ನು ಕಟ್ಟಿಸಿ ಕೊಟ್ಟನು. ಹರಕೆ ಹನ್ನೆರಡು ವರುಷ   

3. ಬಾವು ಇಳಿಯಿತು : ಚಚಡಿ ಅಣ್ಣಾ ಸಾಹೇಬ ದೇಸಾಯಿಯವರ ಆಮಂತ್ರಣದಂತೆ, ಶಿವಯೋಗಿಗಳು ಅಲ್ಲಿಗೆ ಬಿಜಯಂಗೈಸಿ, ಅರಮನೆಯಲ್ಲಿ ಪೂಜಾ ಪ್ರಸಾದ ತೀರಿಸಿಕೊಂಡು, ತಿರುಗಿ ಸವದತ್ತಿಗೆ ಬಂಡಿಯಲ್ಲಿ ಬರುತ್ತಿದ್ದರು. ಅಕಸ್ಮಾತ್ತಾಗಿ, ಒಂದು ಎತ್ತಿನ ಹೊಟ್ಟೆಗೆ ಬುರುಬುರು ಬಾವು ಬಂದಿತು. ಶಿವಯೋಗಿಗಳು  ಚಕ್ಕಡಿಯಿಂದಿಳಿದು, ಆ ಎತ್ತಿನ ಬೆನ್ನ ಮೇಲೆ ‘ಬಸವಾ ಬಸವಾ!” ಎಂದು ಕೈಯಾಡಿಸಿದೊಡನೆ, ಆ ಬಾವು ಜರ್ರನೆ ಇಳಿಯಿತು.

4. ಕಂಬಳಿ ನಡುಗಿತು : ಶ್ರೀಗಳು ಒಮ್ಮೆ ಸವದತ್ತಿ ಮಠದಲ್ಲಿ ಉರಿಚಲ್ಲಿ ಬಂದು ಪವಡಿಸಿದ್ದರು; ಬಿಳಿ ಕಂಬಳಿ ಹೊತ್ತಿದ್ದರು. ಸಲುಗೆಯ ಭಕ್ತನೊಬ್ಬನು ‘ಬುದ್ದಿ ತಮ್ಮಂತಹವರಿಗೂ ಇಂತಹ ಬೇನೆಯೇ ?” ಎಂದು ಸಹಜವಾಗಿ ಕೇಳಿಕೊಂಡನು. ಶ್ರೀಗಳಾದರೋ “ಯಾಕೆ ಬರಬಾರದು ? “ಘಟ ಹೊತ್ತಿರುವವರೆಲ್ಲರಿಗೂ ಸುಖ-ದುಃಖಗಳು ಬಿಟ್ಟುವಲ್ಲ!” ಎನ್ನುತ್ತಾ ತಾವು ಹೊತ್ತಿದ್ದ ಕಂಬಳಿಯನ್ನು ತೆಗೆದು ಆತನ ಮುಂದಿರಿಸಿದರು. ಆ ಕಂಬಳಿ ಗದಗದನೆ ನಡುಗಿ ಮೇಲಕ್ಕೆ ಹಾರಹತ್ತಿತು! “ಸಾಕು ಬುದ್ಧಿ, ನನ್ನದು ತಪ್ಪಾಯಿತು” ಎಂದು ಆತ ಬಿದ್ದು ಬೇಡಿಕೊಂಡನು. ಅವನ ಒಡಲೂ ನಡುಗಿತು’ ಮುಂಚಿನಂತೆ ಶ್ರೀಗಳ ದೇಹವೂ ಕಂಪಿಸಿತು. ಸಮತೆಗಿದು ಸಾಕ್ಷ್ಯವಲ್ಲವೆ ?

5. ಇಬ್ಬರಿಗೂ ತೃಪ್ತಿ : ಚಚಡಿ ದೇಶಮುಖರು ಒಂದು ಸಲ ತಮ್ಮೂರ ನರಸಿಂಗಪ್ಪ ಎಂಬ ವಿಜಾತೀಯ ಸದ್ಗೃಹಸ್ಥನೊಂದಿಗೆ ಶ್ರೀಗಳ ಪಾದದರ್ಶನಕ್ಕಾಗಿ ಸವದತ್ತಿಗೆ ಹೋಗಿದ್ದರು. ಮಠದಲ್ಲಿ ಆಗಲೇ ಮಹಾಲಿಂಗ ತೃಪ್ತಿಯಾಗಿತ್ತು. ಮಿಕ್ಕ ಪ್ರಸಾದವಿದ್ದಿಲ್ಲ. ಶ್ರೀಗಳಾದರೋ ಅವರಿಬ್ಬರನ್ನು ಊಟಕ್ಕೆ ಎಬ್ಬಿಸಿದರು. ಮಠದಲ್ಲಿದ್ದವರು ಅವರಿಗೆ ಸ್ನಾನ ಪೂಜೆಗೊಸ್ಕರ ತಕ್ಕ ವ್ಯವಸ್ಥೆ ಮಾಡಿದರು. ಮಠದ ಭಕ್ತನೊಬ್ಬನು ಅನಿರೀಕ್ಷಿತವಾಗಿ ಅದೇ ಸಮಯಕ್ಕೆ ಪಕ್ಷಾನ್ನ ತುಂಬಿದ ಬುಟ್ಟಿಯನ್ನು ಹೊತ್ತು ತಂದನು. ಅದರಲ್ಲಿ ಫಲಾಹಾರವೂ ಇತ್ತು. ಇಬ್ಬರೂ ಆಯಾ ಪದಾರ್ಥದಿಂದ ಸಂತೃಪ್ತರಾಗಿ, ಶ್ರೀಗಳವರನ್ನು ಹಾಡಿ ಹರಿಸಿದರು.

6. .ನಾಲ್ಕು ಉತ್ತತ್ತಿ; ನಾಲ್ವರು ಮಕ್ಕಳು : ಶ್ರೀಗಳು ಒಂದು ವರ್ಷ ಶ್ರೀಗಳು ಸೋಮೇಶ್ವರ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಪಾದಸೇವಕ ಮಠಪತಿ ಮಹಾರುದ್ರಯ್ಯ ಅವರ ಪರಿವಾರದಲ್ಲಿದ್ದನು. ಅಲ್ಲಿ ಶ್ರೀಗಳದೇ ಗಣಾರಾಧನೆ ನಡೆಯಿತು. ಆ ಕಾಲಕ್ಕೆ ಶ್ರೀಗಳ ಮುಂದೆ ಮಹಾರುದ್ರಯ್ಯ ತನಗೆ ಬಹುದಿನದಿಂದ ಮಕ್ಕಳಾಗದಿದ್ದುದನ್ನು ಬಾಯಿಬಿಚ್ಚಿ ಹೇಳಿಕೊಂಡನು. ಶ್ರೀಗಳು ಆತನಿಗೆ ನಾಲ್ಕು ಉತ್ತತ್ತಿಗಳನ್ನು ಆಶೀರ್ವದಿಸುತ್ತ “ಕಲ್ಯಾಣ ಬಸವ ನಿನಗೆ ಕಲ್ಯಾಣ ಮಾಡುವನು” ಎಂದಿಷ್ಟೆ ಆಡಿದರು. ಅದರಂತೆ, ಆತನಿಗೆ ಮುಂದೆ ನಾಲ್ವರು ಮಕ್ಕಳಾದರು.

7. ಮೂರು ದಳ ಐದು ದಳಗಳಾದವು : ಅಥಣಿ ಬಸವಪುರಾಣ ಮಂಗಲೋತ್ಸವ ತೀರಿಸಿಕೊಂಡು, ಶಿವಯೋಗಿಗಳು ತಿರುಗಿ ಬಿದರಿಗೆ ಪಯಣ ಬೆಳೆಸಿದ್ದಾಗ; ಹಾದಿಯಲ್ಲಿ ಚಿಕ್ಕಲಿಗೆಯ ಬಂದರದವರ ತೋಟದಲ್ಲಿ ಶಿವಾರ್ಚನೆಗೋಸ್ಕರ ಇಳಿದುಕೊಂಡರು. ಸೇವಕನು ಪದ್ಧತಿಯಂತೆ ತ್ರಿದಳದ ಪತ್ರೆಯನ್ನು ತಂದನು. ಶ್ರೀಗಳು ಆತನಿಗೆ ಪಂಚದಳದ ಪತ್ರೆಯನ್ನು ತರಲಿಕ್ಕೆ ಪುನಃ ಅಪ್ಪಣೆ  ಗೈದರು. ಅಲ್ಲಿ ಒಂದೇ ಒಂದು ಪತ್ರೆಯ ಗಿಡವಿದ್ದಿತು. ಅದರಲ್ಲಿ ಮೂರು ದಳದ ಪತ್ರೆಯಿದ್ದವು. ಇದು ಊರಿಗೇ ಗೊತ್ತಿದ್ದಿತು. “ಅದೇ ಮರದಲ್ಲಿ ಐದು ದಳದವೇ ಇರುತ್ತವೆ, ಹೋಗಿ ನೋಡು” ಎಂದು ಶ್ರೀಗಳು ನುಡಿದಿದ್ದರು. ಆ ಸೇವಕ ಮರಳಿ ಹೋಗಿ ನೋಡುತ್ತಾನೆ ಆ ಮರದ ತುಂಬ ಐದು ದಳದ ಪತ್ರೆಗಳೇ ಕಾಣುತ್ತಿದ್ದವು. ಆತ ಅವನನ್ನು ಎತ್ತಿ ತಂದುಕೊಟ್ಟನು. ಶ್ರೀಗಳ ಪೂಜೆ ಎಂದಿಗಿಂತ ಹೆಚ್ಚು ಆನಂದದಿಂದ ಪೂರ್ತಿಗೊಂಡಿತು.

8.. ಹುಡಿಯಲ್ಲ, ಭಸ್ಮದ ಪುಡಿ : : ಬಿದರಿಯಲ್ಲಿ ಅಕ್ಕಸಾಲಿಗ ಮನೆತನದ ಹದಿನೈದು ವಯಸ್ಸಿನ ಗೋವಿಂದನಿಗೆ ಬಂದ ವಿಷಮ ಜ್ವರ ಆರಿದ್ದಿಲ್ಲ. ಆತ ಸಾವಳಿಗಿಗೆ ತೋರಿಸಲಿಕ್ಕೆ ಹೋದವನು ತನ್ನ ಸೋದರಮಾವನ ಮನೆಯಲ್ಲೇ ಇದ್ದನು. ಆತನ ಜಡ್ಡು ವೈದ್ಯರಿಗೂ ಮಿಕ್ಕಿತು. ತಾಯಿಗೆ ಆತನೊಬ್ಬನೇ ಮಗ ‘ ಗೋವಿಂದ ಉಳಿಯುವುದಿಲ್ಲ ಎಂಬ ಸುದ್ದಿ ಬಿದರಿಯಲ್ಲಿದ್ದ ಆತನ ಅಕ್ಕನಿಗೆ ಮುಟ್ಟಿತು. ಆಕೆ ತಮ್ಮೂರಿಗೆ ತಮ್ಮನನ್ನು ಕರೆಸಿಕೊಂಡಳು. ಬಂದರದ ಚನ್ನಪ್ಪನವರ ಸಂಗಡ ಶ್ರೀಗಳ ಸನ್ನಿಧಿಗೆ ಬಂದಳು; ಇದ್ದುದನ್ನೆಲ್ಲಾ ಶ್ರೀಗಳಿಗೆ ಅರಿಕೆ ಮಾಡಿಕೊಂಡಳು. ಶ್ರೀಗಳಿಗೆ ಕರುಣೆ ಹುಟ್ಟಿತು. ಆಕೆಗೆ ಒಂದಿಷ್ಟು ಭಸ್ಮದ ಪುಡಿಯನ್ನು ಕರುಣಿಸಿದರು. ಅಕ್ಕ ತಮ್ಮನ ಮೈಗೆ ಅದನ್ನಷ್ಟು ಸವರಿದಳು. ಒಂದಿಷ್ಟನ್ನು ಆತನ ಬಾಯಲ್ಲಿ ಉದುರಿಸಿದಳು. ಮೂರೇ ದಿವಸಗಳಲ್ಲಿ ಗೋವಿಂದನ ಜಡ್ಡು ಹೇಳಹೆಸರಿಲ್ಲದಾಯಿತು.

9. ಪ್ರಸಾದ ಮಹಿಮೆ : ಒಂದು ವರ್ಷ ಹರಶರಣ ಹರಳಯ್ಯನ ಗುಂಡದಲ್ಲಿ ಗಣಪ್ರಸ್ಥಕ್ಕೆ ಆಯತ ವೇಳೆಯಲ್ಲಿ ಪ್ರಸಾದ ಬೆಳೆದುಬಿಟ್ಟಿತು. ಇನ್ನೂ ಬಹಳ ಗಣಂಗಳು ಉಣ್ಣುವವರಿದ್ದರು. ““ಬಸವ ಬಡವನಲ್ಲ ಪಂಕ್ತಿ ಸಾಗಲಿ” ಎಂದು ಶ್ರೀಗಳ ಅಪ್ಪಣೆಯಾಯಿತು. ಬಬಲೇಶ್ವರ ಪಟ್ಟದದೇವರಿಂದ ಒಂದು ಉದ್ದನ್ನ ಪಾವಡ ತರಿಸಿಕೊಂಡು, ಶ್ರೀಗಳು ಮಾಡಿಟ್ಟ ಅಡಿಗೆಯ ಮೇಲೆ ಅದನ್ನು ಹಾಸಿ, ತಾವೇ ತಮ್ಮ ಹಸ್ತದಿಂದ ಪ್ರಸಾದ ತೆಗೆದು ಕೊಡಹತ್ತಿದರು. ಅನ್ನಕ್ಕೆ ಕೊರತೆಯಲ್ಲದೆ, ಪ್ರಸಾದಕ್ಕೆ ಕೊರತೆಯೆಂಬುದುಂಟೆ ? ತುಪ್ಪವೂ ಬೆಳೆದಿದ್ದಿತೇನೋ ಶ್ರೀಗಳು ‘ಗುಂಡ’ ದಲ್ಲಿಯ ತೀರ್ಥವನ್ನೇ ತರಿಸಿ, ತುಪ್ಪದಂತೆ ನೀಡಿದರು; ಹಿಂದಿನಿಂದ ಬಂದ ಕೊಡ ತುಪ್ಪವನ್ನು ಗುಂಡದಲ್ಲಿ ಸುರಿಸಿ, ಗಂಗಮ್ಮನ ಕಡ ತೀರಿಸಿದರು.

10. ಮೂವರ ಮಾತೂ ನಿಜವಾಯಿತು : ಬಿದರಿ ಅಪ್ಪಂಗಳವರು ಒಮ್ಮೆ ಬಿಳಿಜೋಳದ ಬೆಳೆಸಿಯ ಸೇವನೆಗಾಗಿ ಅಥಣಿ ಅಪ್ಪಂಗಳವರನ್ನೂ, ಬಿಳೂರು ಅಪ್ಪಂಗಳವರನ್ನೂ ನವಿಲುತೀರ್ಥಕ್ಕೆ ಕರೆಯಿಸಿಕೊಂಡಿದ್ದರು. ಬೆಳಸಿಯ ಕಾರ್ಯಕ್ರಮ ಮುಗಿದ ಮೇಲೆ, ಸದ್ಭಕ್ತನೊಬ್ಬನ ಮನೆಯಲ್ಲಿ ಆಕಳು ಬೇನೆ ತಿನ್ನುತ್ತಿದ್ದ ವಾರ್ತೆ ಆಗ ತಾನೆ ಊರಿಂದ ಬಂದಿತು. ಆ ಸಲುಗೆಯ ಭಕ್ತ ಸಹಜವಾಗಿ ಬಿದರಿ ಅಪ್ಪನವರಲ್ಲಿ “ಬುದ್ಧಿ, ಆಕಳು ಏನು ಈಯುತ್ತದೆ ?” ಎಂದು ಕೇಳಿಕೊಂಡನು. “ಹೆಣ್ಣು ಕರ ಈಯುತ್ತದಪ್ಪಾ” ಎಂದರು ಬಿದರಿ ಶ್ರೀಗಳು ಆತ ಅಷ್ಟಕ್ಕೆ ಸುಮ್ಮನಾಗದೆ, ಅಥಣಿಯಪ್ಪಂಗಳವರಿಗೂ ಅದೇ ಪ್ರಶ್ನದಿಂದ ಅರಿಕೆ ಮಾಡಿಕೊಂಡನು. ‘ಹೋರಿಕರ ಈಯುತ್ತದೆ’ ಎಂದರು ಅಥಣಿ ಶ್ರೀಗಳು ಆತ ಅಷ್ಟಕ್ಕೂ ಬಿಡದೆ, ಕೊನೆಯದಾಗಿ ಬಿಳೂರು ಅಪ್ಪಂಗಳವರನ್ನೂ ಅದೇ ತೆರನಾದ ಪ್ರಶ್ನೆಯಿಂದ ವಿಜ್ಞಾಪಿಸಿಕೊಂಡನು. “ಏನು ಕೇಳುವಿಯಪ್ಪಾ, ನಮ್ಮವರಿಬ್ಬರೂ ಹೇಳಿದುದು ಸಾಲುದೇ ? ಅದರಂತೆಯೇ ಈಯುತ್ತದೆ!” ಎಂದರು ಬೀಳೂರು ಶ್ರೀಗಳು.

ಅದೇ ಪ್ರಕಾರ, ಆಕಳು ಮೊದಲು ಹೆಣ್ಣು ಕುರುವನ್ನೂ, ಆಮೇಲೆ ಮತ್ತೊಂದು ಹೋರಿ ಕರುವನ್ನೂ ಈಯ್ದಿತು. ಮೂವರ ಮಾತೂ ನಿಜವಾಯಿತು,

 

ಮೂಲ ಲೇಖನ :ಲಿಂ. ಕುಮಾರ ಸ್ವಾಮಿಗಳು ಕಲ್ಮಠ ಸವದತ್ತಿಬಿದರಿ.

ಮಾಹಿತಿ ಸಹಾಯ : ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ

ನಮ್ಮೀ ಭಾರತಭೂಮಿಯಲ್ಲಿ ಅನೇಕ ಸಾಧು-ಸತ್ಪುರುಷರು, ಮಹಾಯೋಗಿಗಳು ಜನಿಸಿ ಜನಜೀವನವನ್ನು ಪಾವನಗೊಳಿಸಿರುವುದು ಸರ್ವವೇದ್ಯವಾದ ವಿಷಯ. ಕನ್ನಡನಾಡಂತೂ ಶತಶತಮಾನಗಳಿದ ಬಹುಜನ ಯೋಗಿಗಳಿಗೆ, ತ್ಯಾಗಿಗಳಿಗೆ, ವೀರರಿಗೆ ಕಲೆಗಾರರಿಗೆ ತವರುಮನೆಯಾಗಿದೆ. ಅವರೆಲ್ಲರು ಕಾಲಕಾಲಕ್ಕೆ ಅವತರಿಸಿ ಜನಮನದ ಮಾಲಿನ್ಯವನ್ನು ಕಳೆದು ಹೊಸ ಕಳೆಯನ್ನು ಶಿವಮಯ ಚೈತನ್ಯವನ್ನು ತುಂಬಿದ ಮಹಾಕಾರ್ಯವೆಸಗಿದ್ದಾರೆ. ಅಂತಹರಲ್ಲಿ ಬಸವಾದಿ ಪ್ರಮಥರು ಚಿರಸ್ಮರಣೀಯರು, ಹನ್ನೆರಡನೆಯ ಶತಮಾನದಲ್ಲಿ ಬಸವ, ಚೆನ್ನಬಸವ, ಪ್ರಭುದೇವ, ಅಕ್ಕಮಹಾದೇವ, ಸಿದ್ದರಾಮ ಮೊದಲಾದ ಜಗದ್ವಿಭೂತಿಗಳು ಉದಯಿಸಿ ಜನತೆಗೆ ವಚನಾಮೃತ ಸವಿಯನುಣಿಸಿದರು, ಜಗವನುದ್ಧರಿಸಿದರು. ಹದಿನಾಲ್ಕನೆಯ ಶತನಮಾನದಲ್ಲಿ ನೂರೊಂದು ವಿರಕ್ತರು ಧಮರ್ಜಾಗೃತಿಯನ್ನುಂಟು ಮಾಡಿದರು. ಹದಿನಾರನೆಯ ಶತಮಾನದಲ್ಲಿ ಎಡೆಯರೂ ಶ್ರೀ ತೋಂಟದ ಸಿದ್ದಲಿಂಗಯತಿವರೇಣ್ಯರು ಅವರ ಶಿಷ್ಯಕೋಟಿಯೂ ಅನೇಕ ಬಗೆಯಾಗಿ ಧರ್ಮ-ಸಾಹಿತ್ಯಗಳನ್ನು ಬೆಳಗಿಸಿದ ಮಹತ್ಕಾರ್ಯ ಮಾಡಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿಯೂ ಬಿದರಿಯ ಶ್ರೀ ಕುಮಾರ ಶಿವಯೋಗಿಗಳು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಬಿಳೂರ ಶ್ರೀಗುರುಬಸವ ಮಹಾಸ್ವಾಮಿಗಳು ಮೊದಲಾದ ಪೂಜ್ಯರು ತಮ್ಮ ತಪಃಸಾಮರ್ಥ್ಯದಿಂದ ಅನೇಕ ಬಗೆಯ ಲೋಕಹಿತದ ಮಹಾಕಾರ್ಯಗಳನ್ನು ಮಾಡಿರುವರು, ಸೊಲ್ಲಾಪೂರದ ಶ್ರೀ ವೀರೇಶ್ವರ ಶಿವಶರಣರೂ, ಸಿರಸಂಗಿಯ ಶ್ರೀ ಲಿಂಗರಾಜರಂಥ ಉದಾರಿ ದಾನಿಗಳೂ ಆಗಿ ಹೋಗಿದ್ದಾರೆ. ಪೂಜ್ಯ ಶಿವಯೋಗಿಗಳ ಮಾಲಿಕೆಯಲ್ಲಿ ಹಾವೇರಿಯ ಹುಕ್ಕೇರಿ ಮಠದ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳವರು ತಪೋನಿಷ್ಠರೂ, ವೈರಾಗ್ಯಸಂಪನ್ನರೂ. ಕರುಣಾಳುಗಳೂ ಆಗಿದ್ದು ಜಗದ್ವಂದ್ಯರಾಗಿದ್ದಾರೆ. ಅವರು ಶಿವಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾಶಿವಯೋಗಿಗಳಾದರು. ಅಷ್ಟೆ ಅಲ್ಲದೆ. ಶಿವಯೋಗದ ರಹಸ್ಯವನ್ನು ಸಾಧಕರಿಗೆ ಅರುಹಲು ಶಿವಯೋಗಮಂದಿರದಂಥ ಅಧ್ಯಾತ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಆ ಮಹಾಸಂಸ್ಥೆಯ ಅಂಗವಾಗಿ ಉದಯಿಸಿದ ಅನೇಕ ಶಾಖಾಮಂದಿರಗಳು ಹಾವೇರಿ ಶ್ರೀಗಳವರ ತಪಃ ಸಾಮರ್ಥ್ಯದ ಹೆಗ್ಗುರುತಾಗಿವೆ. ಅವರಲ್ಲಿದ್ದ ಸಮಾಜ ಕಲ್ಯಾಣ ಭಾವನೆ, ಅದಕ್ಕಾಗಿ ಅವರು ತೋರಿದ ವಿರತಿ, ವ್ಯಕ್ತಿಯ ಉದ್ಧಾರಕ್ಕಾಗಿಯೇ ಇದ್ದ ಅವರ ಕೃಪಾಬಲ, ಭಕ್ತವೃಂದದ ಮೇಲೆ ಅವರಿಟ್ಟ ಪ್ರೀತಿ ಮೊದಲಾದವು ಚಿರಸ್ಮರಣೀಯವಾದವು,

ಜನನ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಪ್ತಸಾಗರವೆಂಬ ಗ್ರಾಮ, ಅಲ್ಲಿಯ ಹಿರಿಯಮಠದ ಶಿವಗಂಗಮ್ಮ ಗಿರಿಮಲ್ಲಯ್ಯನವರೆಂಬ ಮಾಹೇಶ್ವರ ದಂಪತಿಗಳ ಪವಿತ್ರ ಉದರಾಂಬುಧಿಯಲ್ಲಿ ‘ಶಿವಬಸವ’ ಎಂಬ ಶಿಶುರತ್ನ ಕ್ರಿ.ಶ. 1857 ಆನಂದನಾಮ ಸಂವತ್ಸರ. ಮಾಘ ಬ. ೧4 ಶುಕ್ರವಾರ ಶಿವರಾತ್ರಿಯಂದು ಅಶ್ವಿನೀ ನಕ್ಷತ್ರ ಬೆಳಗುಜಾವದ ೪ ಘಂಟೆಗೆ ಉದಯಿಸಿತು. ಶಿವಪೂಜಾ ಪ್ರೇಮಿ ಶಿವಗಂಗವ್ವ ತಾಯಿಗೆ ಮೊದಲೇ ತಪಸ್ವಿ ಶಿವಯೋಗಿಯೊಬ್ಬರು ಜನಿಸುವ ಶಿಶು ಸಾಮಾನ್ಯ ಮಾನವನಾಗದೆ ‘ಪರಮವಿರಾಗಿ ಲೋಕೋದ್ಧಾರಿ ಶಿವಯೋಗಿ’ ಎಂದು ಭವಿಷ್ಯ ನುಡಿದಿದ್ದರಂತೆ. ಮಹಾತಾಯಿ ಈ ಲೋಕೋತ್ತರ ಶಿಶುವನ್ನು ಹೆಚ್ಚಿನ ಮಮತೆ ಮತ್ತು ಭಕ್ತಿಯಿಂದ ಸಲುಹಿದಳು. ಶಿವಬಸವೇಶನ ಬಾಲಲೀಲೆಗಳನ್ನು ಕಂಡು ಸಪ್ತಸಾಗರದ ಸಮಸ್ತ ಜನರೂ ಅಚ್ಚರಿ ಪಡುತ್ತಿದ್ದರು.

ಬಾಲ್ಯ

ಐದು ವರ್ಷದ ಶಿವಬಸವೇಶನು ಕನ್ನಡ ಓದುಮಠದಲ್ಲಿ ಪ್ರವೇಶ ಪಡೆದನು. ಬಾಲಕ ಶಿವಬಸವೇಶನ ಬುದ್ಧಿ. ಜ್ಞಾಪಕಶಕ್ತಿಯನ್ನು ಗುರುಗಳು ಕಂಡು ಮೆಚ್ಚಿದರು. ಉಳಿದ ಬಾಲಕರಂತೆ ಅವನಿಗೆ ಸಲ್ಲದ ಆಟನೋಟಗಳಲ್ಲಿ ಆಸಕ್ತಿಯಿರಲಿಲ್ಲ. ಓದಿನಲ್ಲಿ ಮುಂದುವರಿದಂತೆ ಶಿವಬಸವೇಶನು ಶಾರೀರಿಕ ಚಟುವಟಿಕೆಗಳಲ್ಲಿಯೂ ಮೇಲಾಗಿದ್ದನು. ಸುಂದರವಾದ ಮೈಕಟ್ಟು ಗಟ್ಟಿಮುಟ್ಟಾದ ಆಳು, ಕುಸ್ತಿಯಾಡುವುದೆಂದರೆ ಶಿವಬಸವೇಶನಿಗೆ ಬಲು ಹಿಗ್ಗು. ತನಗಿಂತಲೂ ಮಿಗಿಲಾದ ಹುಡುಗರನ್ನು ಸ್ಪರ್ಧೆಯಲ್ಲಿ ಸೋಲಿಸದೆ ಬಿಡುತ್ತಿರಲಿಲ್ಲ. ಎಲ್ಲ ಸರಿಕರಲ್ಲಿ ಪ್ರಿತಿಯಿಂದ ವರ್ತಿಸುವುದು ಶಿವಬಸವೇಶನ ಗುರುಗಳಿಗೆ ಬಹಳ ಸಂತೋಷವನ್ನುಂಟು ಮಾಡಿತ್ತು. ವಿದ್ಯೆ, ಬುದ್ದಿ ಸದ್ಗುಣಗಳಿಂದ ಶೋಭಿಸುವ ಮಗುವನ್ನು ಕಂಡು ತಂದೆತಾಯಿಗಳಿಗೆ ಸಂತೋಷವಾಯಿತು, ಗ್ರಾಮಸ್ಥರಿಗೆ ಹೆಮ್ಮೆಯೆನಿಸಿತು, ಶಿವಬಸವೇಶ ಎಲ್ಲರ ಕಣ್ಮಣಿಯಾಗಿದ್ದ.

ಶಿಕ್ಷಣ

ಶಿವಬಸವೇಶ ಕುಲಕೋಟಿಯನ್ನು ಉದ್ಧಿರಿಸಲು ಅವತರಿಸಿದ ಮಹಾಪುರುಷನೆಂದು ಭಕ್ತರೆಲ್ಲ ಬಗೆದಿದ್ದರು. ಬಾಲ್ಯದಲ್ಲಿಯೇ ಅವನ ವಿಲಕ್ಷಣ ಲೀಲೆಗಳನ್ನು ಕಂಡು ಜನ ಅವನನ್ನು ಸಾಮಾನ್ಯ ಬಾಲಕನೆಂದು ಎಣಿಸಿರಲಿಲ್ಲ.

ಒಂದು ದಿನ ಪರಮ ಶಿವಯೋಗಿಗಳಾದ ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳವರು ಸಪ್ತಸಾಗರಕ್ಕೆ ದಯಮಾಡಿಸಿದರು, ಹಿರಿಯಮಠದಲ್ಲಿ ಶಿವಲಿಂಗಾರ್ಚನೆಗೆ ಗಿರಿಮಲ್ಲಯ್ಯನವರು ಎಲ್ಲವನ್ನು ಅಣಿ ಮಾಡಿದ್ದರು, ಅರ್ಚನೆ-ಅರ್ಪಣ-ಅನು ಭಾವಗಳನ್ನು ಮುಗಿಸಿ ಭಕ್ತರ ಕ್ಷೇಮವನ್ನು ವಿಚಾರಿಸುತ್ತಿರುವಾಗ ಮುಗ್ಧ ಬಾಲಕ ಶಿವಬಸವೇಶನ ಮೇಲೆ ಪೂಜ್ಯರ ದೃಷ್ಟಿಹರಿಯಿತು. ಅವನ ಮುದ್ದಾದ ಮಾತುಗಳು, ವಿನೀತ ನಡೆ ಶ್ರೀಗಳವರ ಮನವನ್ನು ಸೆಳೆದವು. ಆ ಬಾಲಕನಲ್ಲಿ ಶಿವಯೋಗಿಯಾಗುವ ಲಕ್ಷಣಗಳನ್ನು ದಿವ್ಯದೃಷ್ಟಿಯಿಂದ ತಿಳಿದ ಶ್ರೀಗಳವರು ಭಕ್ತರನ್ನು ತಂದೆ-ತಾಯಿಗಳನ್ನು ಒಪ್ಪಿಸಿ ಶಿವಬಸವೇಶನನ್ನು ಕರೆದುಕೊಂಡು ಅಥಣಿಗೆ ದಯಮಾಡಿಸಿದರು.

ಶ್ರೀ ಮರುಳಸಿದ್ದ ಶಿವಯೋಗಿಗಳೇ ಶಿವಬಸವೇಶನ ತಂದೆ-ತಾಯಿಯಾದರು, ಶಿವಬಸವೇಶನು ಗುರುವಿನ ಕೃಪಾಶ್ರಯದಲ್ಲಿ ಬೆಳೆಯಹತ್ತಿದ, ಗುರುಕುವರ ಶಿವಬಸವೇಶ ಕನ್ನಡ ಪ್ರಾಥಮಿಕ ಶಿಕ್ಷಣ ಪಡೆಯಹತ್ತಿದ, ಹತ್ತನೆಯ ವರ್ಷದಲ್ಲಿ  ಶ್ರೀಗಳವರು ಅಡಹಳ್ಳಿಯ ಹಿರಿಯಮಠದ ಗುರುಗಳಿಂದ ವಿಧಿಪ್ರಕಾರ ಲಿಂಗದೀಕ್ಷೆಯನ್ನು ಕೊಡಿಸಿದರು, ಬಿಳಿಯ ಟೊಪ್ಪಿಗೆ ಕಪನಿಗಳನ್ನು ಧರಿಸಿ ಶಿವಬಸವಾರ್ಯ ಗುರುವಿಗೆ ತಕ್ಕ ಶಿಷ್ಯನಾಗುವ ರೀತಿ-ನೀತಿಗಳನ್ನು ಕಲಿಯಹತ್ತಿದ, ತಪ್ಪದೆ ಶುಚಿಯಾಗಿ ಲಿಂಗಪೂಜೆಯನ್ನು ಮಾಡಿಕೊಳ್ಳುವುದು, ವಿನಯದಿಂದ ವರ್ತಿಸುವುದು, ಜೀವಿಗಳಲ್ಲಿ ದಯೆ ತೋರುವುದು, ಸತ್ಯ-ಕ್ಷಮೆ ದಯೆಗುಣಗಳನ್ನು ಒಂದೊಂದನ್ನಾಗಿಯೇ ಗುರೂಪದಿಷ್ಟ ರೀತಿಯಲ್ಲಿ ಸಾಧಿಸುವುದು ಹೀಗೆ ಶಿವಬಸವಾರ್ಯನ ಸಾಧನೆಯ ಮಾರ್ಗವಾಯಿತು.

ಶಿವಬಸವಾರ್ಯರಿಗೆ ದೈವದತ್ತವಾದ ಮಂಜುಳ ಕಂಠವಿತ್ತು, ಶಿವಪೂಜೆಯ ಕಾಲದಲ್ಲಿ, ಪ್ರತಿನಿತ್ಯ ಮುಂಜಾನೆ ಏಳುವಾಗಲೂ ಮಲಗುವಾಗಲೂ ಮಂಜುಳವಾಗಿ ನಿಜಗುಣ-ಸರ್ಪಭೂಷಣ-ಘನಮಠಾರ್ಯರ ಅನುಭವದ ಪದಗಳನ್ನು ಹಾಡುವುದು ಶಿವಬಸವಾರ್ಯರ ನಿಯಮವಾಗಿತ್ತು, ಮಠದಲ್ಲಿ ಇನ್ನು ಅನೇಕ ಶಿಷ್ಯರು, ವಟುಗಳು ಇದ್ದರು. ಅವರೆಲ್ಲರಲ್ಲಿ ಶಿವಬಸವಾರ್ಯರು ಹಿರಿಯ ಮಣಿಯಂತೆ ಬೆಳಗುತ್ತಿದ್ದರು. ಶ್ರೀಗಳವರ ನೆಚ್ಚಿನ ಗುರುಕರಜಾತರಾಗಿದ್ದರು.

ಶ್ರೀಗಳವರ ಅಪ್ಪಣೆಯಂತೆ ಶಿವಬಸವದೇವರು ಕೆಲವು ವರ್ಷ, ಮಿರಜಿಯಲ್ಲಿದ್ದು ಸಂಗೀತಶಾಸ್ತ್ರವನ್ನು ಕಲಿತರು ಪ್ರೌಢವಿದ್ಯೆಯ ವ್ಯಾಸಂಗಕ್ಕಾಗಿ ಬಳ್ಳಾರಿಯಲ್ಲಿಯ ಸಕ್ಕರಿ ಕರಡೆಪ್ಪ ಮಹಾಶಿವಶರಣರ ಸಂಸ್ಕೃತ ಪಾಠಶಾಲೆಗೆ ಬಂದರು, ಅಲ್ಲಿ ಕನ್ನಡ-ಸಂಸ್ಕೃತ ಕಾವ್ಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ 1900ರಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ವಿದ್ವತ್ತನ್ನು ಸಂಪಾದಿಸಲು ಕಾಶಿಗೆ ದಯಮಾಡಿಸದರು, ಭಕ್ತರು ತಮಗೆ ಕಳಿಸುತ್ತಿದ್ದ ಹಣದಲ್ಲಿ ಮಿತವಾಗಿ ಇದ್ದು, ಉಳಿದುದನ್ನು ಬಡವಿದ್ಯಾರ್ಥಿಗಳಿಗೆ ಕೊಟ್ಟು ಶಿವಬಸವದೇವರು ಕಾಶಿಯಲ್ಲಿ ಆದರ್ಶ ‘ಶಾಸ್ತ್ರಿ’ಗಳೆಂದು (ಕನ್ನಡ ನಾಡಿನಿಂದ ಕಾಶಿಗೆ ಸಂಸ್ಕೃತ ಶಾಸ್ತ್ರಾಭ್ಯಾಸ ಮಾಡಲು ಹೋದ ಮಠಾಧಿಪತಿ ವಿದ್ಯಾರ್ಥಿಗಳನ್ನು ಅಲ್ಲಿಯ ಜನರ ‘ಶಾಸ್ತ್ರಿ’ಗಳೆಂದು ಕರೆಯುವುದು ವಾಡಿಕೆ)ಹೆಸರಾಗಿದ್ದರು. ಶ್ರೀ ಶಿವಬಸವದೇವರು ಆರು ವರ್ಷಗಳವರೆಗೆ ಕಾಶಿಯಲ್ಲಿದ್ದು ವ್ಯಾಕರಣ ಅಲಂಕಾರ ಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ದೇಶಕ್ಕೆ ಮರಳಿದರು.

ಶ್ರೀಮರುಳಸಿದ್ದ ಶಿವಯೋಗಿಗಳು ತಮ್ಮ ನೆಚ್ಚಿನ ಶಿಷ್ಯನ ಬರುವನ್ನೆ ನಿರೀಕ್ಷಿಸಿದ್ದರು, ಅವರಿಗೆ ಆಗಲೆ ಮುಪ್ಪು ಆವರಿಸಿತ್ತು, ಶಾರೀರಿಕ ಬಲ ಉಡುಗಿತ್ತು, ಆಗ ಅವರ ಅನುಗ್ರಹವನ್ನು ಪಡೆದ ಬಿದರಿಯ ಶ್ರೀ ಕುಮಾರ ಮಹಾಸ್ವಾಮಿಗಳವರು ಅಥಣಿಗೆ ದಯಮಾಡಿಸಿದರು. ಗುರುವರ್ಯರ ಅನುಜ್ಞೆಯಂತೆ ಶಿವಬಸವ ದೇವರಿಗೆ ಅನುಗ್ರಹ-ಅಧಿಕಾರಗಳನ್ನು ಕೊಡುವ ಹೊಣೆಯನ್ನು ಹೊತ್ತರು. ಶ್ರೀ ಮರುಳಸಿದ್ಧ ಶಿವಯೋಗಿಗಳು ಲಿಂಗೈಕ್ಯವಾದರು. ಗುರುವಿನ ಕೃಪೆಗೆ ಪಾತ್ರರಾದ ಉಭಯ ಗುರುಕರಜಾತರೂ ಬಹುವಾಗಿ ಪರಿತಪಿಸಿದರು. ಗುರುವಿನ ಉಪದೇಶವನ್ನು ನೆನೆದು ಮುಂದಿನ ಸಾಧನೆಗೆ ಸನ್ನಧ್ಧರಾದರು. ಬಿದರಿ ಶ್ರೀಗಳವರು ಬಹುವಾಗಿ ಸಂತಯಿಸಿ ಶಿವಬಸವದೇವರ ದು: ಖವನ್ನು ಕಳೆದರು. ಕೆಲವು ಕಾಲ ಅಥಿಣಿಯಲ್ಲಿಯೇ ವಾಸವಾಗಿದ್ದರು.  ನಂತರ ಶಿವಬಸವ ದೇವರು ಬಿದರಿ ಶ್ರೀಗಳವರ ಸೇವೆಯಲ್ಲಿಯೇ ನಿಂತರು. ಗುರುವಿನ ಸೇವೆಯನ್ನು ಮನಮುಟ್ಟಿ ಮಾಡುತ್ತ ಬಿಡುವಿನ ವೇಳೆಯಲ್ಲಿ ಲಿಂಗಾಯತ ಸಿದ್ದಾಂತ ಮತ್ತು ಶಿವಾನುಭವಶಾಸ್ತ್ರವನ್ನು ಗುರುಮುಖವಾಗಿ ತಿಳಿದು ಆಚರಿಸಹತ್ತಿದರು.

ಬಿದರಿ ಶ್ರೀ ಕುಮಾರ ಮಹಾಸ್ವಾಮಿಗಳು ಸವದತ್ತಿ ಗ್ರಾಮದ ತಮ್ಮ ಮಠದಲ್ಲಿ ಭೀಮಕವಿಯ ಬಸವಪುರಾಣ ವನ್ನು ಪ್ರಾರಂಭಿಸಬೇಕೆಂದು ವಿಚಾರ ಮಾಡಿದರು. ಅದಕ್ಕೆ ಭಕ್ತರೆಲ್ಲ ಒಪ್ಪಿದರು. ಶ್ರೀಮಠದಲ್ಲಿ ವಿಶಾಲವಾದ ಮಂಟಪವನ್ನು ನಿರ್ಮಿಸಿದರು. ಪುರಾಣವನ್ನು ಶ್ರೀ ಶಿವಬಸವದೇವರೇ ಹೇಳಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು. ಕಾರ್ತಿಕ ಮಾಸದ ಶುದ್ಧ ಪ್ರತಿಪದೆಯಿಂದ ಪುರಾಣವು ಪ್ರಾರಂಭವಾಗಿ ಅಖಂಡ ಆರು ತಿಂಗಳು ನಡೆಯಿತು. ಶ್ರೀ ಶಿವಬಸವದೇವರ ಸಂಸ್ಕೃತ –ಕನ್ನಡ ಸಾಹಿತ್ಯಗಳ ಆಳವಾದ ಅಭ್ಯಾಸ, ಲಿಂಗಾಯತ ಸಿದ್ಧಾಂತಗಳ ಮನನ, ಸಂಗೀತದ ಮೇಳ ಎಲ್ಲವೂ ಅವರ ಪುರಾಣ ಹೇಳುವ ಕಲೆಗೆ ಬಹು ಮೆರಗನ್ನು ತಂದುಕೊಟ್ಟಿದ್ದವು. ಭಕ್ತರ ಆನಂದಕ್ಕೆ ಮೇರೆ ಇರಲಿಲ್ಲ

 ಶ್ರೀಗಳವರೂ ಪುರಾಣ ಸಮಾಪ್ತಿಯ ಕಾಲಕ್ಕೆ ಶಿವಬಸವದೇರಿಗೆ ಅನುಗ್ರಗವನ್ನು ಮಾಡಿ ನಿರಂಜನ ಚರಪಟ್ಟಾಧಿಕಾರವನ್ನು ಕೊಟ್ಟು ಲಿಂಗಾಗ ಸಾಮರಸ್ಯ ರಹಸ್ಯವನ್ನು ಸಕೀಲವಾಗಿ ಅರುಹಿದರು. ಶ್ರೀ ಶಿವಬಸವದೇವರು ಗುರುದೇವನ ಕರುಣೆಯಿಂದ ಗುರುಸ್ವರೂಪವೇ ಆದರು, ನಿರಂಜನ ಪ್ರಣವಸ್ವರೂಪಿಗಳಾದರು – ಶ್ರೀ ಶಿವಬಸವ ಸ್ವಾಮಿಗಳೆಂದು ಸಂಪೂಜ್ಯರಾದರು. ಯೋಗ್ಯ ಗುರುಗಳಿಗೆ ಯೋಗ್ಯಶಿಷ್ಯರು, ಕುಂದಣಕ್ಕೆ ಸುಗಂಧವಿಟ್ಟಂತೆ ಅಪೂರ್ವ ಕಳೆ ಬಂದಿತು. ಶ್ರೀ ಶಿವಬಸವ ಸ್ವಾಮಿಗಳವರ ವೀರ ವಿರತಿ, ಶಿವಲಿಂಗ ಪೂಜಾನುರಕ್ತಿ, ಭಕ್ತನುಗ್ರಹಶಕ್ತಿ ಮೊದಲಾದ ಸಾತ್ವಿಕ ಗುಣಗಳನ್ನು ಕಂಡು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೆಚ್ಚಿದರು, ತಮ್ಮ ಗುರುಗಳಿಗೆ ಯೋಗ್ಯತಾ ಸಂಪನ್ನರಾದ ಉತ್ತಮ ಶಿಷ್ಯರೆಂದು ಬಗೆದು ಶ್ರೀ ಶಿವಬಸವ ಸ್ವಾಮಿಗಳವರನ್ನು ಪೂಜ್ಯ ಗುರುಗಳ ಅಪ್ಪಣೆ ಪಡೆದು ಹಾನಗಲ್ಲ ಪ್ರಾಂತಕ್ಕೆ ಕರೆದುಕೊಂಡು ಬಂದರು. ಶ್ರೀ ಶಿವಬಸವ ಮಹಾಸ್ವಾಮಿಗಳವರ ಉಫದೇಶಾಮೃತವನ್ನು ಸವಿದು ಭಕ್ತರು ಸಂತಸಗೊಂಡರು

ಹಾವೇರಿಯಲ್ಲಿ ಹುಕ್ಕೇರಿ ವಿರಕ್ತಮಠವು ಬಹುಪ್ರಸಿದ್ಧವಾದ ವಿರಕ್ತಪೀಠ, ಅದಕ್ಕೆ ಬಹುವರ್ಷಗಳಿಂದ ಯೋಗ್ಯ ಅಧಿಕಾರಿಗಳಿರಲಿಲ್ಲ. ಶ್ರೀಮಠದ ಭಕ್ತರು ಬಹಳ ಚಿಂತೆಯಲ್ಲಿದ್ದರು. ಶ್ರೀಗಳವರ ಸಾತ್ವಿಕವೃತ್ತಿ ಮತ್ತು ಲಿಂಗಪೂಜಾನಿಷ್ಠೆಯ ಕೀರ್ತಿವಾರ್ತೆಯನ್ನು ಕೇಳಿದ ಹಾವೇರಿಯ ಸದ್ಭಕ್ತರೆಲ್ಲ ಹಾನಗಲ್ಲ ಶ್ರೀಗಳವರಲ್ಲಿ ವಿನಯದಿಂದ ಬಿನ್ನಯಿಸಿಕೊಂಡರು. ಭಕ್ತರ ಆಗ್ರಹಕ್ಕೆ ಮೆಚ್ಚಿ ಹಾನಗಲ್ಲ ಶ್ರೀಗಳವರು ಯಕ್ಕುಂಡಿಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರನ್ನು ಕರೆಯಿಸಿ ಅವರ ಸನ್ನಿಧಿಯಲ್ಲಿ ಹಾವೇರಿ ಹುಕ್ಕೇರಿಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವನ್ನು 1905ರಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸದರು; ಧರ್ಮೋತ್ತೇಜಕ ಸಭೆಯನ್ನು ಈ ಪ್ರಸಂಗದಲ್ಲಿ ಏರ್ಪಡಿಸಿ ಅದರ ಮುಖಾಂತರ ನೀತಿ ಮತ್ತು ಧರ್ಮಗಳ ಉಪದೇಶವು ಭಕ್ತರಿಗೆ ದೊರಕುವಂತೆ ಮಾಡಿದರು. ಶ್ರೀ ಶಿವಬಸವ ಸ್ವಾಮಿಗಳು ಅಧಿಕಾರದ ಉತ್ಸವದಲ್ಲಿ ಭಕ್ತರಿಂದ ಬಂದ ಕಾಣಿಕೆಯನ್ನು ಮಠದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಲು ವಿನಿಯೋಗಿಸಿದರು; ತಮ್ಮ ನೂತನ ಗುರುಗಳ ಉದಾರ ಹೃದಯವನ್ನು ಸಮಾಜ ಸೇವಾಭಾವವನ್ನು ಕಂಡು ಹಾವೇರಿಯ ಭಕ್ತರು ಬಹು ಹಿಗ್ಗಿದರು.

ಉಭಯ ಶ್ರೀಗಳವರು ನಾಡಿನ ತುಂಬೆಲ್ಲ ಸಂಚರಿಸಿ ಭಕ್ತರಲ್ಲಿ ಅರುವಿನ ಬೆಳಗನ್ನು ಮೂಡಿಸಿದರು; ಮಂದಿರದ ಅಭಿವೃದ್ದಿಗಾಗಿ ಧನವನ್ನು ಶೇಖರಿಸಿದರು. ಅಲ್ಲಲ್ಲಿ ಶಾಖಾಮಂದರಿಗಳನ್ನು ಸ್ಥಾಪಿಸಿ ಅವುಗಳ ಮುಖಾಂತರ ಧಾರ್ಮಿಕ ವಿಚಾರಗಳ ಪ್ರಚಾರವನ್ನು ಮಾಡಿದರು;

ಹಾನಗಲ್ಲ ಮತ್ತು ಹಾವೇರಿಯ ಉಭಯ ಶ್ರೀಗಳವರು ಒಂದು ಹೃದಯ, ಎರಡು ಶರೀರವಾಗಿದ್ದು. ಉಭಯ ಶ್ರೀಗಳವರು ಒಂದುಗೂಡಿ ಅನೇಕ ಸಮಾಜ ಕಾರ್ಯಗಳನ್ನು ನೆರವೇರಿಸಿದರು. ಈ ಕಾರ್ಯಗಳಲ್ಲಿ ಹಾವೇರಿಯ ಶ್ರೀಗಳವರು ಹಾನಗಲ್ಲ ಶ್ರೀಗಳವರಿಗೆ ಬಲಭುಜವಾಗಿದ್ದರು, ಈ ಮಹಾಕಾರ್ಯಗಳಲ್ಲಿ 1909ರಲ್ಲಿ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯು ಬಹುಮುಖ್ಯವಾದುದು, ಅದೇ ಸ್ಥಾಪಿತವಾಗಿದ್ದ ಶಿವಯೋಗಮಂದಿರವೆಂಬ ‘ಶಿಶು’ ವಿಗೆ ಹಾನಗಲ್ಲ ಶ್ರೀಗಳವರು ತಂದೆಯಾಗಿದ್ದರೆ ಹಾವೇರಿಯ ಶ್ರೀಗಳವರು ತಾಯಿಯಂತಿದ್ದರು. ಅವರೀರ್ವರ ಸತ್‌ಪ್ರಯತ್ನಗಳ ಪರಿಣಾಮವಾಗಿ ಆ ಸಂಸ್ಥೆಯು ಮಹೋದ್ದೇಶಗಳ ಸಾಧನೆಗಾಗಿ ವಿಶಾಲವಾಗಿ ಬೆಳೆಯಿತು.

ಶ್ರೀಗಳವರಲ್ಲಿ ಹಾನಗಲ್ಲ ಪೂಜ್ಯರ ಬಗೆಗೆ ಅಪಾರವಾದ ಪ್ರೀತಿ ವಿಶ್ವಾಸಗಳಿದ್ದವು. ಉಭಯ ಶ್ರೀಗಳವರು ಪರಸ್ಪರಂ ಭಾವಯಂತಃ ಪರಮ ಶ್ರೇಯಸ್ಸನ್ನು ಪಡೆದವರು. ಹಾನಗಲ್ಲ ಶ್ರೀಗಳವರೂ ಹಾವೇರಿ ಶ್ರೀಗಳವರ ಇಚ್ಛೇಗೆ ತಪಸ್ಸಿಗೆ ಯಾವ ಆತಂಕವೂ ಬಾರದಂತೆ ವ್ಯವಹರಿಸುತ್ತಿದ್ದರು. ಯಾವ ಕಾರ್ಯಕ್ಕೂ ಹಾವೇರಿ ಶ್ರೀಗಳವರ ಅನುಮತಿಯಿಲ್ಲದೆ ಕೈಹಾಕುತ್ತಿರಲಿಲ್ಲ. ಉಭಯ ಶ್ರೀಗಳವರು ಶಿವಯೋಗಮಂದಿರ ಪುರುಷನ ಎರಡು ಕಣ್ಣುಗಳಂತೆ ಅಗಲದೆ ಇದ್ದು ಸಮಾಜದ ಆಗು-ಹೋಗುಗಳನ್ನು ಅರ್ಥೈಸಿ ಉಪಾಯಗಳನ್ನು ಕಂಡು ಹಿಡಿದರು. ಸಾಧಕರ ಅಧಿಕಾರ-ಅನುಗ್ರಹ ಕಾರ್ಯಗಳನ್ನು ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರಿಗೇ ಒಪ್ಪಿಸಿ ಬಿಡುವರು. ನವಿಲುಗುಂದ ಶ್ರೀಗಳ ಮತ್ತು ಶ್ರೀ ಅಪ್ಪಯ್ಯ ಸ್ವಾಮಿಗಳ ಅನುಗ್ರಹ ಕಾರ್ಯ ಹಾವೇರಿ ಶ್ರೀಗಳವರಿಂದ ಹಾನಗಲ್ಲ ಶ್ರೀಗಳವರ ಪ್ರೇರಣೆಯಿಂದ ನೆರವೇರಿತು. ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಸಮಾಜ ಸೇವೆಯನ್ನುಮಾಡಿ ಬಳಲಿದ್ದರು. ಮುದೇನೂರಿನಿಂದ ಕಾಯಿಲೆಯಾಗಿ ಶ್ರೀಗಳವರು ಹಾವೇರಿಗೆ ದಯಮಾಡಿಸಿದರು. ಆಗ ಹಾವೇರಿ ಶ್ರೀಗಳವರು ಹಾನಗಲ್ಲ ಶ್ರೀಗಳವರ ಶುಶ್ರೂಷೆಯನ್ನು ಬಹುವಾಗಿ ನಿರ್ವಹಿಸಿದರು. ಸಮಾಜದ ಉದ್ಧಾರಕ ಮಹಾವಿಭೂತಿಯು ಇನ್ನು ಅಪೂರ್ಣವಾಗಿ ಉಳಿದ ಮಹತ್ಕಾರ್ಯಗಳ ಸಂಪೂರ್ತಿಗಾಗಿ ಉಳಿಯಬೇಕೆಂದು ಬಗೆದು ಶ್ರೀಗಳವರು ಸರ್ವಪ್ರಯತ್ನಗಳನ್ನು ಮಾಡಿದರು. ಎಲ್ಲ ಸಾತ್ವಿಕ ಔಷಧೋಪಚಾರಗಳನ್ನು ಮಾಡಿಸಿದರು. ಆದರೆ ಶ್ರೀಗಳವರ ಪ್ರಕೃತಿ ಗುಣಮುಖವಾಗಲಿಲ್ಲ. ಹಾನಗಲ್ಲ ಶ್ರೀಗಳವರಿಗೆ ತಮ್ಮ ದೇಹಾಲಸ್ಯದ ಯೋಚನೆಯಿರಲಿಲ್ಲ. ಸಮಾಜದ ಉದ್ಧಾರವಾಗುವ ಬಗೆಗೆ ಸಮಾಜದಲ್ಲಿ ಪರಸ್ಪರ ತಿಳಿವಳಿಕೆ ಐಕ್ಯಭಾವ ಮೂಡಿ ಬರುವ ಬಗೆಗೆ ಬಹು ಯೋಚನೆಯಲ್ಲಿದ್ದರು ಆಗ ಹಾವೇರಿ ಶ್ರೀಗಳವರು ಸಾಧ್ಯವಿದ್ದ ಮಟ್ಟಿಗೂ ಅವರ ಮಹಾಕಾರ್ಯಗಳನ್ನು ಕೈಗೂಡಿಸಲು ಪ್ರಯತ್ನಿಸುವುದಾಗಿಯೂ ಶಿವಯೋಗಮಂದಿರದ ಭಾರವನ್ನು ನಿರ್ವಹಿಸುವುದಾಗಿಯೂ ಭರವಸೆಯಿತ್ತು ಹಾನಗಲ್ಲ ಶ್ರೀಗಳವರ ಕೊನೆಯ ಇಚ್ಛೆಯಂತೆ ಅವರನ್ನು ಶಿವಯೋಗಮಂದಿರಕ್ಕೆ ಕಾರಿನಲ್ಲಿ ಕರೆತಂದರು ಶ್ರೀಗಳವರ ಶೀಲಾಚರಣೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ಅಂತ್ಯವಿಧಿಗಳನ್ನು ಮಾಡಿಸಿದರು;  ಶ್ರೀಗಳವರು ಲಿಂಗೈಕ್ಯರಾದುದಕ್ಕೆ ಶರೀರರೂಪದಿಂದ ಅಗಲಿದುದಕ್ಕೆ ಸಮಾಧಿಯ ಗುದ್ದಲಿಯನ್ನು ಎತ್ತಿದಾಗ ನನ್ನ ಬಲಗೈ ಹೋಯಿತೆಂದು ಬಹುವಾಗಿ ಪರಿತಪಿಸಿದರು; ಆದರೂ ಧೈರ್ಯ ತಂದುಕೊಂಡು ಮಂದಿರದ ಅಭ್ಯುದಯವನ್ನು ತನ್ಮೂಲಕ ಸಮಾಜದ ಹಿತವನ್ನುಮಾಡಿ ಶ್ರೀಗಳವರ ಧ್ಯೇಯಗಳನ್ನು ಸಾಧಿಸಲು ಪ್ರಯತ್ನಿಸಿದರು

ಶತಮಾನಗಳಿಂದ ಸಮಾಜದಲ್ಲಿ ಕವಿದ ಮೌಢ್ಯದ ಮಬ್ಬನ್ನು ಕರಗಿಸಲು ಜ್ಞಾನದ ತಿಳಿಬೆಳಗು ಮೂಡುವಂತಾಯಿತು. 1930ರಲ್ಲಿ ಹಾನಗಲ್ಲ ಶ್ರೀ ಕುಮಾರ ಮಾಹಾಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಭಾರವೆಲ್ಲ ಹಾವೇರಿ ಶ್ರೀಗಳವರ ಮೇಲೆ ಬಿದ್ದಿತು.  ಹಾನಗಲ್ಲ ಶ್ರೀಗಳವರ ಇಚ್ಚೆಯಂತೆ ಅವರೇ ಆ ಸಂಸ್ಥೆಯ ಆಜೀವ ಅಧ್ಯಕ್ಷರಾಗಿದ್ದು ಬಿಕ್ಕಟ್ಟಿನ ಪ್ರಸಂಗಗಳಲ್ಲಿಯೂ ಸಂಸ್ಥೆಗೆ ಯಾವ ಕೊರತೆಯೂ ಬಾರದಂತೆ ನಡೆಯಿಸಿಕೊಂಡು ಬಂದರು.

 ಪ್ರಾರಂಭದಲ್ಲಿ ಏಳು ಜನ ಸಾಧಕರಿದ್ದರು. (೧. ವ್ಯಾಕರಣಾಳ ಸಿದ್ಧಲಿಂಗ ಪಟ್ಟಾಧ್ಯಕ್ಷರು; ೨. ಸವದತ್ತಿ ಅಪ್ಪಯ್ಯದೇವರು ;  ೩ ಕಂಚಗಲ್ಲ ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ೪. ಮಹಾದೇವ ದೇಶಿಕರು (ಕುರುವತ್ತಿ ಶ್ರೀಗಳು) .೫. ಮಮದಾಪುರದ ಗುರುಸಿದ್ದದೇವರು ೬. ಬಸವಲಿಂಗದೇವರು ನವಿಲಗುಂದ ೭. ಶಿವಮೂರ್ತಿದೇವರು ಚರಂತಿಮಠ ಬಾಗಲಕೋಟಿ) ಹಾವೇರಿ ಶ್ರೀಗಳವರೇ ಇವರೆಲ್ಲರ ಯೋಗಕ್ಷಮವನ್ನು ವಹಿಸಿದ್ದರು. ನಿಬಿಡವಾದ ಕಾಡಿನಲ್ಲಿ ಕಲ್ಲು-ಮುಳ್ಳುಗಳನ್ನು ತೆಗೆದು ಪರ್ಣಕುಟೀರಗಳನ್ನು ನಿರ್ಮಿಸಿ ಸಾಧಕರಿಗೆ ಯಾವ ತೆರನಾದ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಿದ್ದರು. ಹಾನಗಲ್ಲ  ಶ್ರೀಗಳವರು ತಂದೆಯಂತೆ ನಾಡಿನ ಮೂಲೆಮೂಲೆಯಲ್ಲಿ ಸಂಚರಿಸಿ ಧರ್ಮಜಾಗೃತಿಯೊಂದಿಗೆ ಮಂದಿರಕ್ಕಾಗಿ ಭಿಕ್ಷೆಯನ್ನು ಮಾಡಿದರು.

ಹಾವೇರಿ ಶ್ರೀಗಳವರು ತಾಯಿಯಂತೆ ಪ್ರೀತಿಯಿಂದ ಮಂದಿರದ ವಟುಗಳನ್ನು ಸಾಧಕರನ್ನು ಸಲಹಿದರು ಮೊದಮೊದಲು ಮಂದಿರದಲ್ಲಿ ಕಟ್ಟಡಗಳಿಗಾಗಿ ಗುಡ್ಡದಿಂದ ಕಲ್ಲು-ಕಟ್ಟಿಗೆಗಳನ್ನು ತಾವೇ ಸ್ವತಃ ಸಾಧಕರೊಂದಿಗೆ ಹೊತ್ತು ತಂದರು. ಗ್ರಂಥ ಸಂಗ್ರಹ, ಕೀರ್ತನಕಾರರು ಮತ್ತು ಗವಾಯಿಗಳ ಶಿಕ್ಷಣ ಮುಂತಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದರು; ತಂದೆ ತಾಯಂದಿರನ್ನು ಅಗಲಿದ ಚಿಕ್ಕ ಚಿಕ್ಕ ವಟುಗಳ ಮನವು ಮನೆಯತ್ತ ವಿಹಾರದೊಂದಿಗೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಸಮಾಧಿಯೆಂಬ ಅಷ್ಟಾಂಗಯೋಗದ ಸಾಧನೆಯೊಂದಿಗೆ ದೃಷ್ಟಿಯೋಗವನ್ನು ಸಾಧಿಸಿ ಶಿವಯೋಗದಲ್ಲಿ ಪರಿಣಿತರಾಗುವಂತೆ ಶ್ರೀಗಳವರು ಯೋಜಿಸಿದರು. ಶ್ರೀಗಳವರ ಪ್ರಯತ್ನಗಳಿಂದಾಗಿ ಮಂದಿರವು ಪ್ರಶಾಂತವಾದ ಆಶ್ರಮವಾಗಿ, ಆದರ್ಶ ಧಾರ್ಮಿಕ ವಿದ್ಯಾಕೇಂದ್ರವಾಗಿ ರೂಪುಗೊಂಡಿತು. ಶ್ರೀಗಳವರ ಕಾರ್ಯಕ್ಷಮತೆಯನ್ನು ಕಂಡೇ ಹಾನಗಲ್ಲ ಪೂಜ್ಯರು ಇವರನ್ನು ಅಜೀವ ಅಧ್ಯಕ್ಷರನ್ನಾಗಿ ಮಾಡಿದ್ದರು.) ಹಾನಗಲ್ಲ ಶ್ರೀಗಳವರು ಲಿಂಗೈಕ್ಯರಾದ ಮೇಲೆ ಶ್ರೀಗಳವರು ಸ್ವತಃ ಬಿಕ್ಷೆ ಮಾಡಿ ಶಿವಯೋಗಮಂದಿರದ ಸರ್ವತೋಮುಖ ಅಭಿವೃದ್ಧಿಯನ್ನು ಲಿಂಗೈಕ್ಯರಾಗುವವರೆಗೂ ಸಾಧಿಸಿದರು.

ವಟುವಾತ್ಸಲ್ಯ

ಶ್ರೀಗಳವರದು ಮಾತೃಹೃದಯ. ಮಂದಿರದ ವಟುಗಳನ್ನು ಸಾಧಕರನ್ನು ಬಹುಪ್ರೀತಿಯಿಂದ ಸಾಕಿ ಸಲುಹಿದರು. ವಟುಗಳ ಸಾಧಕರ ಶಾರೀರಿಕ ಪೋಷಣೆಯೊಂದಿಗೆ ಅವರ ಭೌದ್ಧಿಕ ಮತ್ತು ಆಧ್ಯಾತ್ಮ ವಿಕಾಸಕ್ಕೂ ಅವರು ಕಾರಣರಾದರು. ತಪ್ಪಿದಾಗ ಒಮ್ಮೊಮ್ಮೆ ಸಿಟ್ಟು ಮಾಡಿದರೂ. ಅವರ ಸ್ವಭಾವ ಕುಸುಮಾದಪಿ ಮೃದುವಾಗಿತ್ತು. ಉಷ್ಣತ್ವಮಗ್ನ್ಯಾತಪ ಸಂಪ್ರಯೋಗಾತ್‌ ಶೈತ್ಯಂ ಹಿಯತ್‌ ಸಾ ಪ್ರಕೃತಿರ್ಜಲಸ್ಯ ಎಂದು ಮಹಾಕವಿ ಕಾಳಿದಾಸು ಹೇಳುವಂತೆ ಶ್ರೀಗಳವರ ಸ್ವಭಾವ ಬೆಂಕಿ-ಬಿಸಿಲುಗಳ ಸಂಪರ್ಕದಿಂದ ನೀರು ಕೆಲವು ಕ್ಷಣ ಕಾದರೂ ಅದು ಆರಿ ತನ್ನ ಸಹಜ ಗುಣದಂತೆ ತಣ್ಣಗಾಗುವ ಹಾಗೆ ದಯಾರ್ದ್ರವಾಗಿದ್ದಿತು. ಸಾಧಕರಿಗೆ ತಮ್ಮ ಕಟು ಅನುಭವಗಳನ್ನು ವಿವರಿಸಿ, ಹೇಗೆ ಇಂದ್ರಿಯನಿಗ್ರಹವನ್ನು ಸಾಧಿಸಬೇಕು, ಶಿವಯೋಗಾನುಷ್ಠಾನವನ್ನು ಮಾಡಬೇಕೆನ್ನುವುದನ್ನು ಹೃದಯಕ್ಕೆ ತಾಕುವಂತೆ ಆತ್ಮೀಯತೆಯಿಂದ  ತಿಳಿಸಿ ಹೇಳುತ್ತಿದ್ದರು. ಅದೆಷ್ಟೋ ಶಿವಯೋಗ ಸಾಧಕರು ಶ್ರೀಗಳವರಿಂದ ಸ್ಪೂರ್ತಿ ಪಡೆದು ಶಿವಯೋಗದ ಸಾಧನೆಯಲ್ಲಿ ತೊಡಗಿ ಸಿದ್ಧಿ ಪಡೆದರು.

ಲಿಂಗಪೂಜಾನಿಷ್ಠೆ

ಶ್ರೀಗಳವರಿಗೆ ಲಿಂಗಪೂಜೆಯೆಂದರೆ ಮಹದಾನಂದ, ಬಿಲ್ಪಪತ್ರಿ ಪುಷ್ಪಗಳ ಬನ, ನದಿ-ಜರಿಗಳ ಸೊಂಪಾದ ತಾಣಗಳನ್ನು ಕಂಡು ಶ್ರೀಗಳರವರ ಅನುಷ್ಠಾನ ಮಾಡುವ ಲವಲವಿಕೆ ಹೆಚ್ಚುತ್ತಿತ್ತು. ಅಲ್ಲಿಯೇ ಒಂದು ಪರ್ಣಕುಟಿಯನ್ನು ಕಟ್ಟಿ ಶಿವಯೋಗಾನಂದದಲ್ಲಿ ತಲ್ಲೀನರಾಗಿ ಬಿಡುವರು. ಎಂತಹ ರೋಗ ಬಂದರೂ ಜಾಡ್ಯ ಬಂದರೂ ಅವರು ಲಿಂಗಪೂಜೆಯನ್ನು ಬಿಡುತ್ತಿರಲ್ಲಿಲ್ಲ. ಅವರು ಪೂಜೆಯಲ್ಲಿ ಅಂಗೈಯೊಳಗಣ ಲಿಂಗಯ್ಯನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ಗಂಟೆಗಟ್ಟೆಲೆ ನಿಶ್ಚಲವಾಗಿ ಬಿಡುತ್ತಿದ್ದರು. ದೃಷ್ಟಿಯೋಗದಲ್ಲಿ ಅವರು ಸಿದ್ದಿಯನ್ನು ಪಡೆದಿದ್ದರು. ಶಿವಯೋಗ ಸಿದ್ದಿಗೆ ದೃಷ್ಟಿಯೋಗ ತಳಹದಿಯೆಂದು ಅವರು ಮಂದಿರದ ಸಾಧಕರಿಗೆ ಪದೇ ಪದೇ ಅಪ್ಪಣೆಕೊಡಿಸುತ್ತಿದ್ದರು. ಎಲ್ಲಿಯಾದರೂ ಪ್ರಯಾಣ ಮಾಡುವಾಗ ಮಾರ್ಗದಲ್ಲಿ ಜಲ ಪತ್ರಿ-ಪುಷ್ಪಗಳಿಂದ ಸಮೃದ್ಧವಾದ ನಿಸರ್ಗವನ್ನು ಕಂಡರೆ ಸಾಕು, ಅಲ್ಲಿಯೇ ಉಳಿದು ಶಿವಾರ್ಚನೆಯನ್ನು ಮನದುಂಬಿ ಮುಗಿಸಿ ಮುಂದೆ ಪ್ರಯಾಣ ಬೆಳೆಸುವದು ಶ್ರೀಗಳವರ ಸ್ವಭಾವವಾಗಿದ್ದತು,

ಒಂದು ಸಲ ಶಿವಯೋಗಮಂದಿರದಲ್ಲಿ ಬೆಳಗು ಮುಂಜಾನೆ ಮಹಾಕೂಟದ ಕಡೆ ಸಂಚಾರಕ್ಕೆ ಹೊರಟಾಗ, ಅಲ್ಲಿಯ ಪ್ರಶಾಂತ ಸ್ಥಾನವನ್ನು ಕಂಡು ಶಿವಾರ್ಚನೆಯನ್ನು ಮಾಡಬೇಕೆಂದು ಬಯಸಿದರು; ಅಂದವಾದ ಸುಗಂಧಮಯ ಪುಷ್ಪಗಳು, ಕೋಮಲವಾದ ಬಿಲ್ವದಳಗಳು, ಜುಳುಜುಳು ಹರಿಯುವ ನಿರ್ಮಲ ಜಲಧಾರೆ-ಮತ್ತೇನು ಬೇಕು ಶಿವನಿಗೆ? ಸ್ನಾನ ಮಾಡಿ ಅಲ್ಲಿಯೇ ಒಂದು ಮರದಡಿ ಶಿವಪೂಜೆಯನ್ನು ಮನದಣಿ ಮಾಡಿದರು. ಅಷ್ಟರಲ್ಲಿ ಅವರ ಲಿಂಗನಿಷ್ಠೆಯಿಂದ ಬಂದ ಶಿವಪ್ರಸಾದವನ್ನು ಸೇವಿಸಿ ಮಂದಿರಕ್ಕೆ ದಯಮಾಡಿಸಿದರು. ಅವರ ಲಿಂಗಪೂಜೆಯ ಪ್ರಭಾವದಿಂದಲೇ ಕಪನಳ್ಳಿಯ ಶಿವಯೋಗಾಶ್ರಮ, ಕೊಪ್ಪದ ಶಾಖಾ ಶಿವಯೋಗಮಂದಿರ, ಹಿರೇಹಾಳ-ಬದಾಮಿಯ ಶಾಖಾಮಂದಿರಗಳು, ತೊದಲಬಗಿ ಹಳ್ಳದ ದಂಡೆಯ ಆಶ್ರಮ ಮೊದಲಾದವು ಶಿವಯೋಗಿಯಿರ್ದ ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸಿವೆ.

ಶಿವಲಿಂಗ ಪೂಜೆಯು ಭವರೋಗಕ್ಕೆ ಸಿದ್ಧೌಷದಿಯೆಂದು ಶ್ರೀಗಳವರು ಅಪ್ಪಣೆ ಕೊಡಿಸುತ್ತಿದ್ದರು. ಅನುವು ಆಪತ್ತುಗಳಿಂದ ಬಳಲಿ ಬಂದ ಭಕ್ತರಿಗೆ ಲಿಂಗಪೂಜೆ ಮಾಡಿರಪ್ಪ! ನಿಮ್ಮ ಕಷ್ಟ ಪರಿಹಾರವಾಗುವುದು’ ಎಂದು ಕೃಪಾದೃಷ್ಟಿ ಬೀರಿ ಸಂತೈಸುತ್ತಿದ್ದರು.

. ಮಣ್ಣನ್ನು ಅವರು ಕೈಯಿಂದ ಮುಟ್ಟಿದವರಲ್ಲ. ಯಾವ ಆಸ್ತಿ-ಪಾಸ್ತಿಗಳಿಗೂ ಮನಸ್ಸು ಮಾಡಿದವರಲ್ಲ; ಅವರೆಲ್ಲಿಯೂ ಬಹಳ ದಿನವಿರುತ್ತಿರಲಿಲ್ಲ. ಭಕ್ತರನ್ನು ಉದ್ಧರಿಸುತ್ತ ಸಂಚರಿಸುವುದೇ ಲೇಸೆಂದು ಅವರು ಬಗೆದಿದ್ದರು. ಜಂಗಮರೂಪದಲ್ಲಿ ಪರಶಿವನು ಸಾಕಾರನಾಗಿ ಅತಿಥಿರೂಪದಲ್ಲಿ ಸಂಚರಿಸುವನೆಂದು ಹೇಳುವರು. ಅಂತಹ ನಿರಾಭಾರ ಜಂಗಮತ್ವವನ್ನು ಶ್ರೀಗಳವರು ಪಡೆದಿದ್ದರು. ಸರ್ವಜನ ಸಂಪೂಜ್ಯರಾಗಿದ್ದರು. ಮಠವನ್ನು ಹಿಡಿದು ಕುಳಿತವರಲ್ಲ. ಸ್ವಂತ ಮಠದ ಏಳ್ಗೆಗಾಗಿಯಲ್ಲ. ಸಮಾಜವೆಂಬ ಸದೃಢವಾದ ಮಹಾಮಠವನ್ನುಕಟ್ಟಲು ಹೆಣಗಿದರು. ಹಾವೇರಿಯ ನೂತನ ಮಠವನ್ನು ಬಿಕ್ಷೆ ಬೇಡಿ ದುಡ್ಡು ತಂದು ಕಟ್ಟಿಸಲಿಲ್ಲ. ಅದನ್ನು ಶಿವನೇ ಭಕ್ತರ ರೂಪದಲ್ಲಿ ಬಂದು ಕಟ್ಟಿರಬೇಕು. ಕಷ್ಟದಲ್ಲಿ ಬಿದ್ದ ಪ್ರತಿಯೊಂದು ಪ್ರಾಣಿಯಲ್ಲಿ ಶ್ರೀಗಳವರು ದಯಾರ್ದ್ರ ಭಾವನೆಯುಳ್ಳವರಾಗಿದ್ದರು. ಮೌನಿಯೂ ಭೂತ ದಯಾಯುಕ್ತನೂ ಆದ ನಿರಾಭಾರನೇ ನಿಜ ಜಂಗಮನೆಂಬ ವಚನೋಕ್ತಿಗೆ ಶ್ರೀಗಳವರ ದಯಾಳು ಭಾವ ಸರಿದೂಗುವಂತಿತ್ತು. ಬಡವರಿಗೆ ಆರ್ತರಿಗೆ ಕೈಲಾದ ಮಟ್ಟಿಗೆ ಸಹಾಯ ನೀಡುವುದು ಶ್ರೀಗಳವರ ಸ್ವಭಾವವಾಗಿದ್ದಿತು. ಶ್ರೀಗಳವರ ಉದಾರತೆಯಿಂದ ಕೃತಾರ್ಥರಾದ ಶಾಸ್ತ್ರೀಗಳೆಷ್ಟೋ? ಭಕ್ತರೆಷ್ಟೋ? ದೀನ-ದರಿದ್ರರೆಷ್ಟು ಜನರೋ? ಅಗಣಿತವಾದುದು.

ಶ್ರೀಗಳವರು ಶಿವಯೋಗಮಂದಿರದ ಸ್ಥಾಪನೆಯ ಕಾಲದಲ್ಲಿ ಸಂಸ್ಥೆಯ ಆಕಳು – ದನ – ಕರುಗಳನ್ನು ತಾವೇ ಸ್ವತಃ ಮೇಯಿಸಿ ಜೋಪಾನ ಮಾಡಿದ್ದು ಅವರ ಪ್ರಾಣಿ ದಯಾಪರತೆಯ ಕುರುಹಾಗಿದೆ. ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರು ಹೇಳಿದ ತತ್ವದ ಮರ್ಮವನ್ನು ಅರಿತು ಶ್ರೀಗಳವರು ಆದರ್ಶ ದಯಾಳುವಾಗಿ ಬಾಳಿ ಬೆಳಗಿದರು.

ತಪೋಜೀವನ                                                                                    

ಮಾಡಲಿಲ್ಲವೆ ತಪವ ಮಾಡಲಿಲ್ಲವೆ                                          

ಕೂಡೆ ಸುಗುಣದೊಡನೆ ತಿಳಿದು ನೋಡಿ ತ್ರಿವಿಧ ಕರಣ ದಲ್ಲಿ                                 ||ಪ||    

ಗುರುಭಜನೆ ಸುಕರ್ಮವೃತ್ತಿ

ಹರನ ಪೂಜೆ ಶರಣ ಸೇವೆ

ಪರಮ ಸಾತ್ವಿಕಂಗಳೆಂಟು ನೆರೆದು ನೆಲಸಿ ತನುವಿನಲ್ಲಿ                                      ||ಪ||

ವಿನಯವನ್ಯಹಿತವತರ್ಕ

ವನಪಶಬ್ಧವಚಲಿತಾರ್ಥ

ವನಘಮಂತ್ರವಾಗಮಂಗಳಿನಿತುವಿಡಿದು ವಚನದಲ್ಲಿ                                         ||ಪ||

ಶಮೆ ವಿವೇಕವಾತ್ಮವಿದ್ಯೆ

ದಮೆ ದಯಾವಿರಕ್ತಿಯೋಗ

ವಮರರೂಪು ಶಂಭುಲಿಂಗವಮರ್ದು ತೋರಿ ಸಮನದಲ್ಲಿ                                     ||ಪ||

ಎಂದು ನಿಜಗುಣ ಶಿವಯೋಗಿಗಗಳು ಅಪ್ಪಣೆ ಕೊಡಿಸಿದಂತೆ ಶ್ರೀಗಳವರು ಪ್ರತನಿತ್ಯ ಪ್ರಾತಃಕಾಲ ಎದ್ದು ಗುರುಸೋತ್ರವನ್ನು ಮಧುರ ಕಂಠದಿಂದ ಭಕ್ತಿಭಾವದಿಂದ ಹಾಡುತ್ತಿದ್ದರು ಗುರುಸೇವೆ ಮೊದಲಾದ ಸಾತ್ವಿಕಾಚರಣೆಯಲ್ಲಿ ನಿಷ್ಠೆಯುಳ್ಳವರು ಲಿಂಗಪೂಜೆಯನ್ನು ಜೀವನದ ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡವರು; ಅಥಣಿಯ ಶ್ರೀ ಮರುಳಸಿದ್ಧ ಶಿವಯೋಗಿಗಳು ಮತ್ತು ಬಿದರಿಯ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸೇವೆಯನ್ನು ಭಕ್ತಿಪೂರ್ವಕವಾಗಿ ಮಾಡಿ ತನು ತಪಸ್ಸನ್ನು ಸಾಧಿಸಿದರು; ವಿನಯಶೀಲರು ಮತ್ತು ಪರೋಪಕಾರಿಗಳೂ ಆಗಿದ್ದು ಯಾರ ಮನವನ್ನೂ ಬಿರುನುಡಿಗಳಿಂದ ನೋಯಿಸದೆ, ಷಡಕ್ಷರ ಮಂತ್ರಾನುರಾಗಿಗಳಾಗಿ, ಆದ್ಯರ ವಚನಗಳನ್ನು ಹೇಳುವಲ್ಲಿ ಕೇಳುವಲ್ಲಿ ಅನುರಕ್ತಿಯುಳ್ಳವರಾಗಿದ್ದು ವಾಚಿಕ ತಪವನ್ನು ಮಾಡಿದರು; ಅಂತರ್ಬಹಿರಿಂದ್ರಿಯ ನಿಗ್ರಹವನ್ನು ಸಾಧಿಸಿ, ಸ್ವಸ್ವರೂಪಜ್ಞಾನ-ದಯೆ-ಅಪರಿಗ್ರಹ-ಶಿವಯೋಗ ಮೊದಲಾದ ಸದ್ಗುಣಗಳನ್ನು ಪಡೆದು ಮಾನಸತಪವನ್ನು ಮಾಡಿದರು.

ಭಕ್ತ ವಾತ್ಸಲ್ಯ

ಶ್ರೀಗಳವರ ದರ್ಶನಕ್ಕೆ ಅನೇಕ ಭಕ್ತರು ಬರುತ್ತಿದ್ದರು. ಬಂದವರ ಯೋಗಕ್ಷೇಮವನ್ನು ಕೇಳಿ ಅವರಿಗೆ ಬಂದಿರುವ ಕಷ್ಟಗಳ ಪರಿಹಾರವನ್ನು ಹೇಳುತ್ತಿದ್ದರು. ಅವರ ನುಡಿ, ಅವರ ಕರುಣಾಕಟಾಕ್ಷ, ಅವರ ಸ್ಪರ್ಶನ-ದರ್ಶನ ಮಾತ್ರದಿಂದಲೇ ಎಷ್ಟೋ ಜನರ ತಾಪತ್ರಯಗಳು ತೊಲಗುತ್ತಿದ್ದವು ಯಾರಾದರೂ ಭಕ್ತರು ಆಕಸ್ಮಾತ್ತಾಗಿ ಬಹುದಿನಗಳ ಮೇಲೆ ಬೇಟಿಯಾದರೆ ಅವರ ಅಜ್ಜ- ಮುತ್ತಜ್ಜಂದಿರ ಇಡಿಯ ಪರಿಚಯವನ್ನೇ ಹೇಳಿ ಬಿಡುವರು. ಕೇಡು ಬಗೆದವರಿಗೂ ಪ್ರೀತಿಯಿಂದ ಕರೆದು ಪ್ರಸಾದ ಕರುಣಿಸಿ ಕಳಿಸುವರು. ಉದಾರಚರಿತಾನಾಂ ತು ವಸುದೈವ ಕುಟುಂಬಕಂ ಎಂಬಂತೆ ಶ್ರೀಗಳವರು ಲೋಕೋತ್ತರ ಚರಿತರು. ಅವರ ಹೃದಯ ಶುದ್ಧ ಹಾಲಿನಂತಹದು; ಅವರೊಬ್ಬ ಪತಿತ ಪಾವನರಾದ ಮಹಾಸಂತರಾಗಿದ್ದರು.

ಶ್ರೀಗಳವರು ಭಕ್ತರ ಮನೋಭಿಷ್ಟಗಳನ್ನು ಪೂರೈಸುತ್ತ ಅಲ್ಲಲ್ಲಿ ಪ್ರಶಾಂತವಾದ ಸ್ಥಾನಗಳಲ್ಲಿ ಅನುಷ್ಠಾನ ಮಾಡಿ ಅನೇಕ ಶಾಖಾ ಶಿವಯೋಗಮಂದಿರಗಳು ತಾವಾಗಿಯೇ ಬೆಳೆದು ಬರುವಂತೆ ಅನುಗ್ರಹಿಸಿದರು; ಆ ಪುಣ್ಯಾಶ್ರಮಗಳಲ್ಲಿ ಅನೇಕರು ಶಿವಯೋಗ ಸಾಧನೆ ಮಾಡಿ ಸಿದ್ಧಿಪಡೆದರು; ತಮ್ಮ ಕೊನೆಯುಸಿರಿರುವರೆಗೂ ಅವರು ಭಕ್ತರ ಹಿತಕ್ಕಾಗಿ, ಶಿವಯೋಗಮಂದಿರದ ಶ್ರೇಯಸ್ಸಿಗಾಗಿ ಹೆಣಗಿದರು, ಲಿಂಗಪೂಜೆಯೇ ಅಧ್ಯಾತ್ಮಸಾಧನೆಯೇ ಜೀವನದ ಸಾರಸರ್ವಸ್ವವೆಂದು ಜನರಿಗೆ ತೋರಿದ ಮಹಾಮಹಿಮರವರು. ಶ್ರೀಗಳವರು ತಮ್ಮ 89ನೇಯ ವಯೋಮಾನದಲ್ಲಿ ಶಾ. ಶಕ 1868 ಪುಷ್ಯ ಶು. 11   13-1-1946 ರಂದು ಹಾವೇರಿಯ ಹುಕ್ಕೇರಿಮಠದಲ್ಲಿ ಉರಿಯೊಳಗೈದ ಕರ್ಪೂರದಂತೆ ಲಿಂಗದೊಳೈಕ್ಯವಾದರು.

 

ಲೇಖಕರು : ಲಿಂ.ಶ್ರೀ ಚೆನ್ನಮಲ್ಲಿಕಾರ್ಜುನ, ಮೈಸೂರು,

ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಲಿಂ. ಶಿವಬಸವ ಮಹಾಸ್ವಾಮಿಗಳರು ಹುಕ್ಕೇರಿಮಠ ಹಾವೇರಿ, ಅವರು ಪರಮ ಪೂಜ್ಯರಾದ ಲಿಂ. ಶ್ರೀ ಸದಾಶಿವ ಮಹಾ ಸ್ವಾಮಿಗಳು (ಕುಮಾರ ಸ್ವಾಮಿಗಳು) ಹಾನಗಲ್ಲ, ಅವರ ಪ್ರಥಮ ಪರಿಚಯ ಮಾಡಿಕೊಂಡ ಕಾಲದಿಂದಲೂ ನಾನು ಹಾವೇರಿ ಶ್ರೀಗಳವರ ಸಂಪರ್ಕದಲ್ಲಿದ್ದೆನು. ಉಭಯ ಶ್ರೀಗಳವರು ವೀರಶೈವ ಸಮಾಜ ಪುರುಷನ ಎಡಗೈ-ಬಲಗೈಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿರುವರು. ಪ್ರತಿಯೊಂದು ಕಾರ್ಯದಲ್ಲಿಯೂ ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರ ಅಭಿಪ್ರಾಯವನ್ನು ತೆಗೆದುಕೊಂಡು ಇಬ್ಬರೂ ಸೇರಿ ಕಾರ್ಯಗಳನ್ನು ಪ್ರಯತ್ನ ಪೂರ್ವಕವಾಗಿ ನಿರ್ವಹಿಸುತ್ತಿದ್ದರು.

ಹಾವೇರಿ ಶ್ರೀಗಳವರಲ್ಲಿ ಒಂದು ದಿವ್ಯ ತೇಜಸ್ಸಿದ್ದಿತು. ಅವರಿಗೆ ಶಿವ ಯೋಗವು ಸಂಪೂರ್ಣವಾಗಿ ಸಾಧಿಸಿದ್ದಿತು. ಅದರಲ್ಲಿ ಅವರು ಸಿದ್ಧಿ ಪಡೆದಿದ್ದರು. ಲಿಂಗಪೂಜೆಯನ್ನು ಮಾಡುವಾಗ ಯಾವ ಜನರು ಎಷ್ಟು ದೂರದಲ್ಲಿದ್ದರೂ, ಅವರನ್ನು ಲಿಂಗದಲ್ಲಿ ಕಂಡುದರ ವಿಚಾರವನ್ನು ಶ್ರೀಗಳವರು ಆ ಕೂಡಲೇ ಹೇಳಿ ಬಿಡುತಿದ್ದರು; ಮುಂದಿನ ಕೆಲಸಗಳ ಆಗುಹೋಗುಗಳನ್ನೂ ತಿಳಿಸುತ್ತಿದ್ದರು. ಈ ದಿವ್ಯ ದೃಷ್ಟಿಯಿಂದಲೂ ಶ್ರೀಗಳವರಲ್ಲಿ ಭಕ್ತರ ಭಕ್ತಿ-ವಿಶ್ವಾಸಗಳು ಬಹಳ ಹೆಚ್ಚಿದವು.

ಶ್ರೀಗಳವರು ನಡೆದ ಧರೆ ಪಾವನವಾಗುತ್ತಿತ್ತು; ಅವರು ನಿಂದ ನೆಲ ನಿಜ ಕ್ಷೇತ್ರವಾಗುತ್ತಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿವಯೋಗಾಶ್ರಮವು ಶಿವಪೂಜಾ ಪ್ರೇಮಿಗಳಾದ ಶ್ರೀಗಳವರ ಕೃಪೆಯಿಂದಲೇ ಮೊಟ್ಟ ಮೊದಲು ಸ್ಥಾಪಿತವಾಯಿತು. ಅವರು ಹಾನಗಲ್ಲ ಶ್ರೀಗಳವರೊಂದಿಗೆ ಸಂಚರಿಸಿ ಮಲೆನಾಡ ಪ್ರಾಂತದಲ್ಲಿ ಶಿವಧರ್ಮದ ಪ್ರಸಾರವನ್ನು ಮಾಡಿದರು. ಕಪನಳ್ಳಿಯ ಶಿವಯೋಗಾಶ್ರಮವು ಧರ್ಮಕಾರ್ಯಗಳ ಕೇಂದ್ರವಾಯಿತು. ಈಗ ಇಲ್ಲಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಭವ್ಯ ಭವನದ ನಿರ್ಮಾಣವಾಗಿದೆ; ಈಗ ಈ ಶಿವಯೋಗಾಶ್ರಮದ ಅಧ್ಯಕ್ಷರಾಗಿರುವ ಶ್ರೀ ನಿ. ಪ್ರ. ರುದ್ರಮುನಿಸ್ವಾಮಿಗಳವರು ಶ್ರೀಗಳವರ ಕೃಪಾ ವಲಯದಲ್ಲಿ ಬೆಳೆದು ಬಂದವರು. ಅವರು ಶಿವಯೋಗ ಮಂದಿರದ ಮಾದರಿಯಲ್ಲಿ ಈ ಆಶ್ರಮದ ಮುಖಾಂತರ ಅನೇಕ ಜನಹಿತದ ಕಾರ್ಯಗಳನ್ನು ಮಾಡುತ್ತ ಭಕ್ತರಿಗೆ ಪೂಜ್ಯರಾಗಿರುವರು. ಕೃಷಿ ಮತ್ತು ಗೋಸಂಗೋಪನ ಕಾರ್ಯದಲ್ಲಿ ಈ ಆಶ್ರಮ ಮಾದರಿಯ ಸೇವೆಯನ್ನು ಸಲ್ಲಿಸುತ್ತಿರುವುದು. ಈ ಆಶ್ರಮಕ್ಕೆ ಅನೇಕ ಭಕ್ತರು ಬಹು ಪ್ರಕಾರವಾಗಿ ಭಕ್ತಿ ಸಲ್ಲಿಸಿರುವರು. ಅವರಲ್ಲಿ ಹಳೇಪಟ್ಟಣದ ಶೆಟ್ಟರ ಹಾಲಪ್ಪನವರು ಅಗ್ರಗಣ್ಯರು. ಇವರು ಶ್ರೀಗಳವರಿಂದ ಅನುಗ್ರಹ ಪಡೆದು ಈಗಲೂ ಇಲ್ಲಿಯೇ ಶಿವಪೂಜಾನುಷ್ಠಾನ ಮತ್ತು ಸೇವೆಯನ್ನು ತ್ರಿಕರಣ ಪೂರ್ವಕ ಮಾಡುತ್ತ ಆದರ್ಶ ಶಿವಶರಣರೆನ್ನಿಸಿಕೊಂಡಿರುವರು.

ಪತ್ರಿಕೆ ಮತ್ತು ಗ್ರಂಥಗಳ ಪ್ರಕಟನೆಯ ರೂಪದಲ್ಲಿ ಧರ್ಮಕಾರ್ಯಗಳು ಸತತವಾಗಿ ನಡೆಯಬೇಕೆಂಬ ಮಹೋದ್ದೇಶ ಹಾವೇರಿ ಶ್ರೀಗಳವರದಾಗಿತ್ತು. ಅದರಂತೆ ಶ್ರೀಗಳವರು ಹಾವೇರಿಯಲ್ಲಿ ‘ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯ’ ವನ್ನು ಸ್ಥಾಪಿಸಿ ಅದನ್ನು ನನ್ನ ವಶಕ್ಕೆ ಕೊಟ್ಟರು. ‘ ಸದ್ದರ್ಮದೀಪಿಕೆ’ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವುದಕ್ಕೆ ಮತ್ತು ಅನೇಕ ಓಲೆಗರಿಯ ಗ್ರಂಥಗಳನ್ನು ಮುದ್ರಿಸಿ ಪ್ರಕಾಶಗೊಳಿಸುವುದಕ್ಕೂ ಈ ಮಹಾಸ್ವಾಮಿಗಳವರೇ ಮೂಲ ಕಾರಣ, ರೆಂದು ಹೇಳುವದು ಅತಿಶಯೋಕ್ತಿಯಲ್ಲ. ಒಮ್ಮೆ, ಚಿತ್ರದುರ್ಗದ ಬೃಹನ್ಮಠಾಧ್ಯಕ್ಷರಾದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾವೇರಿಗೆ ದಯಮಾಡಿಸಿದಾಗ ಶ್ರೀಗಳವರು ಜಗದ್ಗುರುಗಳ ಸನ್ನಿಧಿಯಲ್ಲಿ ಧರ್ಮ ಗ್ರಂಥಗಳ ಸಂಶೋಧನೆ ಮತ್ತು ಪ್ರಕಾಶನದ ಬಗೆಗೆ ಕಳಕಳಿಯಿಂದ ವಿಚಾರ ವಿನಿಮಯ ಮಾಡಿದ ಪ್ರಸಂಗ ನನಗೆ ಚೆನ್ನಾಗಿ ನೆನಪಿದೆ. ತಮ್ಮ ಮಠದ ಖರ್ಚಿನಲ್ಲಿ, ತಮ್ಮ ಸ್ವಂತದ ಅನುಕೂಲತೆಗಳಲ್ಲಿ ಏನಾದರೂ ಕೊರತೆ ಬಂದರೂ ಚಿಂತೆಯಿಲ್ಲ, ಧರ್ಮ ಪ್ರಸಾರವು ಮಾತ್ರ ಚೆನ್ನಾಗಿ ನಡೆಯಬೇಕೆಂದು ಶ್ರೀಗಳವರು ಹಂಬಲಿಸುತ್ತಿದ್ದರು. ಹಾವೇರಿಯಲ್ಲಿ ತಮ್ಮ ಮಠವನ್ನು ಕಲ್ಲುಮಠವನ್ನಾಗಿ ಮಾರ್ಪಡಿಸಿದ ಕೀರ್ತಿಯು ಶ್ರೀಗಳವರಿಗೆ ಸಲ್ಲುವಂತಾಗಿದ್ದರೂ, ಆ ಕಟ್ಟಡದ ನಿರ್ಮಾಣಕ್ಕೆ ದ್ರವ್ಯವು ಬೇಕಾಗಿದ್ದರೂ ಅದನ್ನು ಬದಿಗಿಟ್ಟು ಧರ್ಮಗ್ರಂಥಗಳ ಪ್ರಕಟನೆಯ ಕಾರ್ಯಕ್ಕೆ ಹೆಚ್ಚು ದ್ರವ್ಯವನ್ನು ವಿನಿಯೋಗಿಸುತ್ತಿದ್ದರು. ನನಗೆ ವರ್ಷ ಗಟ್ಟಲೆ ತಮ್ಮೊಡನೆ ಪೂಜೆ ಮತ್ತು ಪ್ರಸಾದಕ್ಕೂ ಅನುಕೂಲತೆಗಳನ್ನು ದಯಪಾಲಿಸಿದ ಶ್ರೀಗಳು ಎಂತಹ ಕೃಪಾಳುಗಳೆಂಬುದನ್ನು ಬೇರೆ ಹೇಳಬೇಕೆ ?

ಶ್ರೀಗಳವರು ಪದವೀಧರರಾಗ ಬಯಸಿದ ಅನೇಕ ಬಡ ವಿದ್ಯಾರ್ಥಿಗಳಿಗೂ ಮುಕ್ತಹಸ್ತದಿಂದ ಸಹಾಯ ನೀಡಿದರು. ಅವರ ಕೃಪೆಯಿಂದ ಅನೇಕರು ಪದವೀಧರರಾಗಿ ಉಚ್ಚ ಸ್ಥಾನಗಳನ್ನು ಪಡೆದಿರುವರು. ಪ್ರೊ ಎಸ್.ಎಸ್.ಭೂಸನೂರುಮಠ, ಶ್ರೀ ಅ. ಮ. ಪಾಟೀಲ ಮೊದಲಾದವರು ಶ್ರೀಗಳವರ ಕೃಪಾಶ್ರಯ ಪಡೆದು ವಿದ್ಯಾ ರ್ಜನೆ ಮಾಡಿದವರು. ಶ್ರೀಗಳವರಿಗೆ ಹಣವನ್ನು ಕೂಡಿಡಬೇಕೆಂಬ ಆಶೆಯಿರಲಿಲ್ಲ. ಭಕ್ತರಿಂದ ಕಾಣಿಕೆ ಬಂದುದೇ ತಡ ಆ ಕೂಡಲೇ ಅದು ಬಡವಿದ್ಯಾರ್ಥಿಗಳಿಗಾಗಿ ಯಥೇಚ್ಛವಾಗಿ ವಿನಿಯೋಗವಾಗುತ್ತಿತ್ತು. ಹಣ ಕೊಟ್ಟು ಅದಕ್ಕೆ ಪ್ರತಿಯಾಗಿ ಹೆಸರನ್ನು ಗಳಿಸಬೇಕೆಂದು ಶ್ರೀಗಳವರು ಕನಸು ಮನಸಿನಲ್ಲಿಯೂ ಬಗೆದವರಲ್ಲ.

ವೀರಶೈವರಲ್ಲಿ ಭಿಕ್ಷೆ ಬೇಡುವದು ಸಮಾಜಕ್ಕಾಗಿ ಎಂದಿರುವ ಧರ್ಮನಿಯಮವನ್ನು ಶ್ರೀಗಳವರು ಪಾಲಿಸಿ ಬಡವರಿಗೆ ಸಾವಿರಗಟ್ಟಲೆ ಧನಸಹಾಯ ಮಾಡಿ ಇತರ ಸ್ವಾಮಿಗಳಿಗೆ ಆದರ್ಶರಾಗಿದ್ದಾರೆ. ಶ್ರೀಗಳವರು ಅನೇಕ ಸಲ ವ್ಯಾಪಾರ ಮಾಡಿ ಹಾನಿಗೀಡಾದ ಭಕ್ತರಿಗೆ ಬಂಡವಾಳ ಕೊಟ್ಟಿದ್ದಾರೆ. ವ್ಯವಸಾಯದಲ್ಲಿ ಉತ್ಪತ್ತಿ ಕಡಿಮೆಯಾಗಿ ನಿರ್ಗತಿಕರಾದ ರೈತರಿಗೆ ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಅವರಲ್ಲಿ ಕೆಲವರು ಶ್ರೀಗಳವರನ್ನು ಇನ್ನು ಹಾಡಿ ಹರಸುತ್ತಿದ್ದಾರೆ.

ಶಿವಯೋಗಮಂದಿರದಲ್ಲಿ ಹಾನಗಲ್ ಶ್ರೀಗಳವರೊಡನೆ ವಿಶೇಷ ಶ್ರದ್ಧೆಯಿಂದ ಕಾರ್ಯಮಾಡಿ ಶ್ರೀಗಳವರು ಮಂದಿರದ ಸಾಧಕರಿಗೆ, ವಟುಗಳಿಗೆ ಧರ್ಮ-ಯೋಗ ಆಚಾರ ಮುಂತಾದವುಗಳನ್ನು ಕಲಿಸಿ ಸಂಸ್ಥೆಯ ಉನ್ನತಿಗೆ ಕಾರಣರಾಗಿದ್ದಾರೆ. ಶ್ರೀಗಳ ತಪಃಪ್ರಭಾವದಿಂದಲೇ ಸಂಸ್ಥೆಯು ಇಂದಿನ ಯುಗದಲ್ಲಿ ಉಳಿದು ಬೆಳೆಯುತಿದೆ. ಹಾನಗಲ್ ಶ್ರೀಗಳವರು ಇವರ ಅಚ್ಚಳಿಯದ ಸಮಾಜ ಪ್ರೇಮ ಮತ್ತು ಧರ್ಮ ಕಾರ್ಯಕ್ಷಮತೆಯನ್ನು ಮನಗಂಡೇ ಇವರನ್ನು ಮಂದಿರದ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಶ್ರೀ ಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಮೇಲೆಯೂ ಶ್ರೀಗಳವರು ಧೈರ್ಯದಿಂದ ಸಂಸ್ಥೆಯ ಅಭಿವೃದ್ಧಿಯನ್ನು ಬಯಸಿ ಕಾರ್ಯ ಮಾಡಿದರು. ಕೆಲವರು ಹಾನಗಲ್ಲ ಪೂಜ್ಯರು ಲಿಂಗೈಕ್ಯರಾದ ಮೇಲೆ ಮಂದಿರವು ನಡೆಯಲಾರದು, ಅದನ್ನು ಒಂದು ವ್ಯವಸಾಯ ಕಾಲೇಜನ್ನಾಗಿ ಮಾರ್ಪಡಿಸಬೇಕೆಂಬ ವಿಚಾರವನ್ನು ಮುಂದು ಮಾಡಿದರು. ಆದರೆ ಶ್ರೀಗಳವರು ಮಂದಿರದಲ್ಲಿ ಧಾರ್ಮಿಕ ಶಿಕ್ಷಣವು ಆದರ್ಶವಾಗಿ ಎಂದಿನಂತೆ ನಡೆಯುವಂತೆ ಮಾಡಿ, ಸಂಸ್ಥೆಯು ಎಂದಿಗೂ ಅಳಿಯದಂತಹ ಧಾರ್ಮಿಕ ಅಡಿಪಾಯವನ್ನು ಹಾಕಿದರು; ಹಾನಗಲ್ ಶ್ರೀಗಳವರ ಧೈಯಧೋರಣೆಗಳನ್ನು ಉಳಿಯುವಂತೆ ಮಾಡಿದರು; ಕೆಲವು ಅಭಿಮಾನಿ ತರುಣ ಸ್ವಾಮಿಗಳನ್ನೂ ಉತ್ಸಾಹಿ ಭಕ್ತರನ್ನೂ ಮಂದಿರದ ಟ್ರಸ್ಟ ಕಮೀಟಿಯಲ್ಲಿ ತೆಗೆದುಕೊಂಡು ಸಂಸ್ಥೆಯ ಕಾರ್ಯಗಳು ಸುಗಮವಾಗಿ ನಡೆಯು ವಂತೆ ಯೋಜಿಸಿದರು. ಈ ವಿಷಮ ಕಾಲದಲ್ಲಿ ಶ್ರೀಗಳವರು ಪ್ರಯತ್ನಿಸಿರದಿದ್ದರೆ ಶಿವಯೋಗಮಂದಿರವೇ ಉಳಿಯುತ್ತಿರಲಿಲ್ಲ. ಶ್ರೀಗಳವರ ಉದ್ದೇಶವನ್ನು ಸಾಧಿಸಲು ಹಾಲಕೆರೆಯ ಶ್ರೀ ಅನ್ನದಾನ ಸ್ವಾಮಿಗಳು ಮತ್ತು ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಮತ್ತು ಉಳಿದವರೂ ಬಹು ಹೆಣಗಿದ್ದಾರೆ.

ಶ್ರೀಗಳವರು ಆಡಂಬರದ ಜೀವನದವರಲ್ಲ. ವೀರಶೈವ ಷಟ್‌ಸ್ಥಲಮಾರ್ಗದಲ್ಲಿ ಶ್ರೀಗಳವರು ಬಹು ನಿಷ್ಠೆಯಿಂದ ನಡೆದರು; ಉಳಿದವರಿಗೂ ಮಾರ್ಗ ತೋರಿದರು. ನೂತನ ಮಠಾಧಿಕಾರಿಗಳಿಗೆ ನಿರಂಜನ ಚರಪಟ್ಟಾಧಿಕಾರವನ್ನು ಶ್ರೀಗಳವರು ಹಾನಗಲ್ ಶ್ರೀಗಳವರ ಇಚ್ಛೆಯಂತೆ ಕೊಡುತ್ತಿದ್ದರು. ಶ್ರೀಗಳವರು ಅನೇಕ ಸ್ವಾಮಿಗಳಿಗೂ, ಗುರುಗಳಿಗೂ ಭಕ್ತರಿಗೂ ಅನುಗ್ರಹವನ್ನು ದಯಪಾಲಿಸಿರುವರು. ಅವರಿಂದ ಅನುಗ್ರಹ ಪಡೆದವರೆಲ್ಲರೂ ಸಮಾಜದಲ್ಲಿ ಸನ್ಮಾನ್ಯರಾಗಿ ಬಾಳಿದ್ದಾರೆ. ಅವರದು ಅಮೃತ ಹಸ್ತ. ಆ ಹಸ್ತ ಸ್ಪರ್ಶದಿಂದ ‘ ಗುರು ಮುಟ್ಟಿ ಗುರುವಾದರು’ ಎಂಬುದು ಸಿದ್ಧವಾಗುತ್ತಿತ್ತು. ಅಂತಹ ಆದರ್ಶ ಮಹಾಸ್ವಾಮಿಗಳ ಪರಮಾದರ್ಶದಲ್ಲಿ ಎಲ್ಲರೂ ನಡೆದರೆ ವೀರಶೈವ ಸಮಾಜವು ಅಮೃತಮಯ ವಾಗಿ ಬಾಳುವುದಲ್ಲವೆ ?.

ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ

ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟಿದ್ದು.

ಸಂಗ್ರಹ : ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ನಿಚ್ಚಲುಂ ಶಿವರಾತ್ರಿಯಂ ಮಾ |

ಳ್ಪಚ್ಚರಿಯೆನಿಪ ಭಾಷೆ ಭಕ್ತರ |

ನಚ್ಚ ಶಿವನೆಂದಿರ್ಪ ಭಾಷೆ ಶಿವೈಕ್ಯರೆಗ್ಗುಗಳ ||

ಎಚ್ಚರಿಸದಿಹ ಭಾಷೆ ಶರಣರ |

ಹೆಚ್ಚು ಕುಂದುಗಳಂ ನುಡಿಯದಿಹ |

ಸಚ್ಚರಿತ್ರದ ಭಾಷೆ ಏನುವಂ ವಂಚಿಸದ ಭಾಷೆ.         ||೧||

ಮೃಡನನಾದೊಡೆಯೊಂದು ಬಾರಿಗೆ |

ಕಡಗಿ ಬೇಡಡ ಭಾಷೆ ಏನಾ|

ದೊಡೆ ಬಯಸಿದೊಡವಿಗಳನಡಿಯಿಡದೀವುದದು ಭಾಷೆ ||

ನುಡಿದು ಪುಸಿಯದ ಭಾಷೆ ನೆನಪಿನ |

ಗಡಣೆಯಂತಂ ತೋರೆಯಿಲ್ಲದೆ |

ನುಡಿವ ಭಾಷೆಯು ನುಡಿದಹಗೆ ತಾಂ ನಡೆಸುವುದು ಭಾಷೆ.      ||೨||

ಛಲವನಳಿಯದ ಭಾಷೆ ಭಕ್ತರ |

ಸಲುಗೆಯಂ ಸಲಿಸುವುದು ಭಾಷೆಯ |

ಚಲಿತ ದಾಸೋಹವನು ವಿರತಂ ಮಾಳ್ಪುದದು ಭಾಷೆ |

ನಲಿದು ಕನಸಿನೊಳುಂ ಪಿನಾಕಿಗೆ |

ಗೆಲವನೀಯದ ಭಾಷೆ ಭಕ್ತರು |

ಗಳಿಗೆ ಗೆಲವಂ ಕೊಟ್ಟು ತಾಂ ಶರಣೆಂಬುದದು ಭಾಷೆ.         ||೩||

ಪರಸಮಯಿಗಳ ದರ್ಪಮಂ ಸಂ

ಹರಿಪ ಭಾಷೆ ಕುತರ್ಕದಿಂ ಮ |

ತ್ಸರಿಪ ಪರವಾದಿಗಳನೊಮ್ಮೆಗೆ ಸೋಲಿಸುವ ಭಾಷೆ ||

ಪರಮನಂ ನಿಂದಿಸುವವೊಂದಿರ |

ನೊರಸಿ ಕಳೆವುದು ಭಾಷೆ ಹರ ಭ|

ಕ್ತರನುದಾಸೀನದಿ ನುಡಿವ ನುಡಿಗೇಳದದು ಭಾಷೆ.         ||೪||

ಹರ ಶರಣ ಪರತಂತ್ರ ಭಾವದೆ|

ಬೆರಸಿ ಚರಿಸುವ ಭಾಷೆ ಎಂದುಂ |

ಹರ ಗಣಾರ್ಪಿತವಾಗದಿನಿತುಂ ಮುಟ್ಟದಿಹ ಭಾಷೆ ||

ಶರಣರೇನೆಂದೊಡೆಯವರಿಗು |

ತ್ತರವನೀಯದ ಭಾಷೆ ಜಂಗಮ|

ವರರ ನೆಗಳು ಪ್ರಾಣಲಿಂಗವೆನಿಪ್ಪುದದು ಭಾಷೆ.       ||೫||

ನರರುಮಂ ಯಾಚಿಸದ ಭಾಷೆ ಇ ]

ತರ ಜನಕೆ ಕೈ ಮುಗಿಯದದು ನಿ|

ರ್ಬರದ ಭಾಷೆ ಭವೌಘ ಬಾಧೆಗೆ ಸಿಲ್ಕದಿಹ ಭಾಷೆ ||

ಕರಣವಿಷಯಕ್ಕಿಂಬುಗುಡದ |

ಚ್ಚರಿಯ ಭಾಷೆ ಷಡರಿಗಳಂ ಪರಿ |

ಹರಿಪ ಭಾಷೆ ಶಿವೈಕ್ಯ ಭಕ್ತಿಯನಲರಿಸುವ ಭಾಷೆ.       ||೬||

ನೆಟ್ಟ ನೀಶಾಚಾರಮಂ ಮುಂ |

ದಿಟ್ಟು ಬಳೆಯಿಪ ಭಾಷೆ ತಲೆ ಪರಿ |

ದಟ್ಟಿಯುಳಿದೊಡೆ ಶರಣೆನುತ್ತಿಹ ಭಾಷೆ ತಲೆಗಟ್ಟಿ ||

ಬಿಟ್ಟೊಡಂ ವಂದಿಸುವ ಭಾಷೆಯು |

ಮುಟ್ಟಿದೊಡೆ ಹಿಮ್ಮೆಟ್ಟದಗ್ಗದ |

ಗಟ್ಟಿ ಭಾಷೆ ಇವೆಲ್ಲವಂ ತುದಿ ಮುಟ್ಟಿಸುವ ಭಾಷೆ        ||೭||

ದ್ವಿತೀಯ ಶಂಭುವೆನಿಸಿದ ನಂದಿಕೇಶ್ವರನು ಭೂಲೋಕದಲ್ಲಿ ಕಾರಣಿಕ ಪುರುಷನಾಗಿ ಬಸವನಾಮದಿಂದ ಅವತರಿಸಿ ಅನೇಕ ಪ್ರತಿಜ್ಞೆಗಳನ್ನು ಮಾಡಿ ಅದರಂತೆ ನಡೆದು ತೋರಿಸಿದುದು ಜಗತ್ಪಸಿದ್ಧವಾಗಿರುವುದು. ಭೀಮ ಕವಿಯು ತನ್ನಿಂದ ರಚಿಸಲ್ಪಟ್ಟ ಬಸವಪುರಾಣದ ಆರನೆಯ ಸಂಧಿಯ ಪ್ರಾರಂಭದಲ್ಲಿ ಆ ಅನೇಕ ಪ್ರತಿಜ್ಞೆಗಳಲ್ಲಿ ೩೪ ನ್ನು ಮಾತ್ರ ೭ ಪದ್ಯಗಳಲ್ಲಿ ಉಸುರಿರುವನು. ಅವುಗಳನ್ನೇ ಮೇಲೆ ಉದ್ಧರಿಸಲಾಗಿದೆ.

ಈ ೩೪ ಭಾಷೆಗಳಲ್ಲಿ ಮಾದರಿಗಾಗಿ ಒಂದನ್ನು ಮಾತ್ರ ಇಲ್ಲಿ ವಿಶದವಾಗಿ ವಿವರಿಸಿರುತ್ತೇವೆ. ಹೀಗೆಯೇ ಎಲ್ಲ ಭಾಷೆಗಳ ಅರ್ಥ-ತಾತ್ಪರ್ಯವನ್ನು ತಿಳಿಯಲು ಇಚ್ಛಿಸುವ ಓದುಗರು ಲಿಂಗೈಕ್ಯ ಶ್ರೀಮನ್ನಿರಂಜನ ಪ್ರ. ಸ್ವ, ಶ್ರೀ. ಶಿವಯೋಗಮಂದಿರದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರಿಂದ ಪರಿಷ್ಕರಿಸಲ್ಪಟ್ಟು. ಶಿ. ಮಹಾಲಿಂಗಯ್ಯನವರು ವೀರಯ್ಯನವರು ಹಿರೇಮಠ ಇವರಿಂದ ಪ್ರಸಿದ್ಧಿಸಲ್ಪಟ್ಟ ‘ಬಸವ ಭಾಷೆ ‘ ಎಂಬ ಪುಸ್ತಕವನ್ನು ಅವಲೋಕಿಸ ಬೇಕಾಗಿ ಸೂಚನೆ.

ಮೊದಲನೆಯ ಭಾಷೆ : ನಿಚ್ಚಲುಂ ಶಿವರಾತ್ರಿಯಂ ಮಾಚ್ಚರಿಯೆನಿಪ ಭಾಷೆ

ಅರ್ಥ:- ನಿಚ್ಚಲು = ಪ್ರತಿದಿನವೂ, ಶಿವರಾತ್ರಿಯಂ = ಶಿವಯೋಗವನ್ನು, ಮಾಳ್ಪ = ಮಾಡುತ್ತಿರುವ, ಅಚ್ಚರಿಯೆನಿಪ = ಆಶ್ಚರ್ಯವೆಂದು, ತೋರುವ ಭಾಷೆ=ಪ್ರತಿಜ್ಞೆಯು.

ವಿವರಣೆ :- ಶಿವರಾತ್ರಿ* ಇದು ವರ್ಷಕ್ಕೊಂದುಸಾರೆ ಮಾಘ ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಹಾ ಶಿವರಾತ್ರಿಯೆಂದೂ – ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ದಶಿಯಲ್ಲಿ ಮಾಡಲ್ಪಡುವುದು ಮಾಸ ಶಿವರಾತ್ರಿಯೆಂದೂ ಕರೆಯಲ್ಪಡುವುದು. ಶಿವಭಕ್ತರು ಈ ಎರಡೂ ಪ್ರಕಾರದ ಶಿವರಾತ್ರಿಗಳಲ್ಲಿಯೂ ಶಿವಸನ್ನಿಧಿಯನೈದು, ಕಾಮ – ನಿಷ್ಕಾಮವೆಂಬ ಉಭಯ ವಿಧಿಗಳಲ್ಲಿ, ತಮಗೆ ಬೇಕಾದ ವಿಧಿಯಿಂದ, ಶಿವಾರ್ಚನೆ, ಶಿವಕಥಾಶ್ರವಣ, ಜಾಗರಣ ಮೊದಲಾದ ಸತ್ಕ್ರಿಯೆಗಳನ್ನು ಮಾಡುವುದು ಪ್ರಸಿದ್ಧವಾಗಿರುವುದು.

ಶ್ರೋತ್ರಾದಿ ಜ್ಞಾನೇಂದ್ರಿಯಗಳೈದು, ವಾಗಾದಿ ಕರ್ಮೇಂದ್ರಿಯಗಳೈದು, ಮಾನಸಾದಿ ಅಂತಃಕರಣಗಳು ನಾಲ್ಕು – ಅಂತು ಹದಿನಾಲ್ಕು ಕರಣಗಳನ್ನು ಶಿವಲಿಂಗಕ್ಕರ್ಪಿಸಿದರೆ ( ಶಿವಧರ್ಮ ಕಾರ್ಯಗಳಲ್ಲಿ ಸವೆಸಿದರೆ) ಅದು ಚತುರ್ದಶಿ ಎನಿಸುವುದು. ಆ ಶಿವಲಿಂಗದ ನೆನಹಿನಲ್ಲಿ ಮನವು ಮಗ್ನವಾಗಿ ಹೋಗಲು ಅದು ಶಿವರಾತ್ರಿ ಎನಿಸುವುದು. ಆ ಶಿವಜ್ಞಾನದ ಎಚ್ಚರ ಕುಂದದಿರಲು ಜಾಗರಣವೆನಿಸುವುದು. ಇದೇ ವೀರಶೈವರು ಮುಖ್ಯವಾಗಿ ಪ್ರತಿ ದಿನದಲ್ಲಿ ಆಚರಿಸುವ ಆಶ್ಚರ್ಯಕರವಾದ ಶಿವರಾತ್ರಿಯು.** ಇದೇ ಶಿವಯೋಗವೆಂದು ಹೇಳಲ್ಪಡುತ್ತಿದೆ.

ಜ್ಞಾನ, ಭಕ್ತಿ, ಧ್ಯಾನ, ವೃತ, ಅರ್ಚನವೆಂಬ ಅಂಗಗಳುಳ್ಳ ಶಿವಯೋಗಕ್ಕೆ ಶಿವಜ್ಞಾನಾದಿ ನಾಲ್ಕು ಅಂಗಗಳು ಗರ್ಭೀಕರಿಸಿಕೊಂಡಿರುವುದರಿಂದ ಶಿವಾರ್ಚನೆಯೇ ಮುಖ್ಯವೆನಿಪ ಶಿವಯೋಗವೆಂಬುದಾಗಿ ಹೇಳಿರುವುದು. ಈ ಉಭಯ ಪಕ್ಷವನ್ನು ವಿಚಾರಿಸಿ ನೋಡಿದರೆ ಶಿವಾರ್ಚನೆಗಿಂತಲೂ ಮೊದಲೆ ಶಿವಜ್ಞಾನಾದಿ ನಾಲ್ಕು ಅಂಗಗಳನ್ನು ಸಾಮಾನ್ಯವಾಗಿ ಸಂಗ್ರಹಿಸಿ ಶಿವಾರ್ಚನೆಯ ಕಾಲಕ್ಕೆ ವಿಶೇಷ ರೂಪದಿಂದ ಕೂಡಿಕೊಂಡು ಆಚರಿಸತಕ್ಕದ್ದು ಎಂದು ಗೊತ್ತಾಗುವುದು. ಅನ್ಯ ಮತಜ್ಞಾನ ನಿಷೇಧವೂ ಅನ್ಯ ದೇವತಾ ನಿಷೇಧವೂ ಜ್ಞಾನ – ಭಕ್ತಿಗಳೆಂಬ ಎರಡು ಅಂಗ ಗಳಲ್ಲಿ ಉಕ್ತವಾಗಿರುವುದರಿಂದ ಈ ಎರಡನ್ನೂ ಪೂಜಾ ಕಾಲದಲ್ಲಿ ಆಚರಿಸಿದರೆ ಶಿವಯೋಗಕ್ಕೆ ಕೇವಲ ವಿರೋಧವೆನಿಸುವುದು. ಆದ್ದರಿಂದ ಶಿವಾರ್ಚನೆಯಲ್ಲಿ ಅನ್ಯ ಭಾವನೆಯಿಲ್ಲದೆ ಶಿವಾಕಾರ ವೃತ್ತಿಯುಳ್ಳ ಶಿವಜ್ಞಾನ, ಶಿವಭಕ್ತಿಗಳನ್ನು ಗುರುಮುಖದಿಂದರಿದು ವಿಶೇಷ ರೂಪದಿಂದ ಆಚರಿಸತಕ್ಕದ್ದು. ಮತ್ತು ಶಿವಧ್ಯಾನ, ಶಿವವೃತ ಈ ಎರಡು ಅಂಗಗಳನ್ನು ರುದ್ರರೂಪಿಯಾಗುವುದಕೋಸ್ಕರ ಪೂಜಾಸನದಲ್ಲಿ ಕುಳಿತನಂತರ ಸಾಮಾನ್ಯ ರೂಪದಿಂದ ಮಾಡತಕ್ಕದ್ದು. ಶಿವಾರ್ಚನೆಯ ಕಾಲದಲ್ಲಿ ಗುರು ನಿರೂಪಿಸಿದಂತೆ ವಿಶೇಷ ರೂಪವಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಅರ್ಚನೆಯನ್ನು ಆಚರಿಸತಕ್ಕದ್ದು. ಹೀಗೆ ಐದು ಅಂಗಗಳಿಂದ ಕೂಡಿದುದೇ ಶಿವಯೋಗವೆಂದು ಎನಿಸಿಕೊಳ್ಳುವುದು. ಇದೇ ವೀರಶೈವರ ಶಿವರಾತ್ರಿಯು, ಇಂತಹ ಶಿವರಾತ್ರಿಯನ್ನು ಪ್ರತಿದಿನವೂ ಮಾಡುವೆನೆಂಬುದು ಭಗವಾನ್ ಬಸವೇಶ್ವರನ ಮೊದಲನೆಯ ಪ್ರತಿಜ್ಞೆಯು.

* ಶಿವರಾತ್ರಿ- ರಾಶಿ ಸುಖಮಿತಿ ರಾತ್ರಿಃ – ಸುಖವನ್ನು ಕೊಡುವುದಾದುದರಿಂದ ರಾತ್ರಿಯೆನಿಸಿಕೊಳ್ಳುವುದು. ಶಿವಸ್ಯ ರಾತ್ರಿಃ – ಶಿವರಾತ್ರಿ – ಶಿವಸಂಬಂಧ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸುವುದು. (ಶಿವಯೋಗಿಗಳಿಗೆ ಶಿವಸಂಬಂಧ ನಿತ್ಯವಾದ ಅಖಂಡ ಸುಖವನ್ನು ಕೊಡುವುದರಿಂದ ಶಿವರಾತ್ರಿಯೆನಿಸಿಕೊಳ್ಳು ವುದು, ಮಿಕ್ಕವರಿಗೆ ಕ್ಷಣಿಕವೆನಿಸಿ ಮಾಯಾ ಸಂಬಂಧ ಸುಖವನ್ನು ಕೊಡುವುದರಿಂದ ರಾತ್ರಿಯೆನಿಸಿಕೊಳ್ಳು ವುದು. ) ವಿವೇಕಿಗಳಾದವರು ಶಿವಸಂಬಂಧವಾದ ರಾತ್ರಿಯನ್ನೇ ಸಾಧಿಸಬೇಕು.

** ಈ ಶಿವರಾತ್ರಿಯ ದಿವಸ ನಿರಾಹಾರಿಯಾಗಿ, ಉಪವಾಸ ಮಾಡಬೇಕೆಂಬ ವಿಧಿಯು ಕರ್ಮಿಗೆ ಉಂಟು. ಆದರೆ ವೀರಶೈವನು ಶಿವಪೂಜಾಕರ್ಮನಿಷ್ಠನಾದುದರಿಂದ ಶಿವಸನ್ನಿಧಿಯಲ್ಲಿ ವಾಸ ಮಾಡುವುದೇ ಉಪವಾಸವೆಂತಲೂ ಜಡ ಜೀವಿಗಳಂತೆ ಅಂಗಭೋಗಿಯಾಗದೆ ಲಿಂಗಭೋಗೋಪಭೋಗಿಯಾದುದರಿಂದ ನಿರಾಹಾರಿಯೆಂತಲೂ ಉಂಡು ಉಪವಾಸಿಯೆಂತಲೂ ಹೇಳಿರುವುದರಿಂದ ವೀರಶೈವನು ಇತರರಂತೆ ಉಪವಾಸ ಮಾಡುವವನಲ್ಲವೆಂದು ತಿಳಿಯತಕ್ಕದ್ದು.