ಕೃಷ್ಣೆಯ ನಡುಗಡ್ಡೆಯಲ್ಲಿ ಬೆಳಗಿದ ಶಿವಯೋಗದ ದೀಪ: ರಾಯಚೂರು ಜಿಲ್ಲೆ ಮತ್ತು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಲೇಖಕ: ಶ್ರೀಕಂಠ ಚೌಕೀಮಠ

ಸೆಪ್ಟೆಂಬರ್ 23ರಿಂದ ಅಕ್ಟೋಬರ್ 4ರವರೆಗೆ ಸಿಂಧನೂರಿನಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 159ನೇ ಜಯಂತಿ ಮಹೋತ್ಸವವನ್ನು ಹನ್ನೆರಡು ದಿನಗಳ ಕಾಲ ಆಚರಿಸುತ್ತವ ಆಮಂತ್ರಣ ಪತ್ರಿಕೆಯನ್ನು ನೋಡುತ್ತಿದ್ದಂತೆ   ನನ್ನೊಳಗೆ ಬಹುಕಾಲದಿಂದ ಕುತೂಹಲ ಮೂಡಿಸಿದ್ದ ಇತಿಹಾಸದ ಹೆಜ್ಜೆಗುರುತುಗಳನ್ನು ಮತ್ತೆ ಹುಡುಕುವಂತೆ ಮಾಡಿತು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕಾರ್ಯಕ್ಷೇತ್ರವನ್ನು ನೆನೆದಾಗ ಸಾಮಾನ್ಯವಾಗಿ ಹಾನಗಲ್ಲ, ಶಿವಯೋಗಮಂದಿರ, ಗದಗ, ಧಾರವಾಡ ಮೊದಲಾದ ಪ್ರದೇಶಗಳು ನಮ್ಮ ಕಣ್ಣೆದುರು ಬರುತ್ತವೆ. ಆದರೆ ಅವರ ಶಿವಯೋಗದ ಬೆಳಕು ಕೃಷ್ಣೆಯ ಹರಿವನ್ನು ದಾಟಿ ರಾಯಚೂರಿನ ನೆಲದಲ್ಲಿಯೂ ಒಂದು ದೀಪವನ್ನು ಹಚ್ಚಿತ್ತು. ಆ ದೀಪವೇ ರಾಮಗಡ್ಡಿಯ ಶಾಖಾ ಶಿವಯೋಗಮಂದಿರ.

ಈ ಸಂಬಂಧವನ್ನು ಅರಿಯಲು ಕವಿರತ್ನ ದ್ಯಾಂಪುರ ಚನ್ನಕವಿಗಳು ರಚಿಸಿದ ಶ್ರೀ ಕುಮಾರೇಶ ಪುರಾಣ, ಅದರ ಭಾವಾರ್ಥವನ್ನು ನೀಡಿದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳ ವಿವರಣೆ ಹಾಗೂ ಶಿವಯೋಗಮಂದಿರದ ಸುವರ್ಣ ಮಹೋತ್ಸವದ ಸ್ಮರಣಸಂಚಿಕೆ ಬೆಳಗು ಅಮೂಲ್ಯ ಆಕರಗಳಾಗಿವೆ. ಅವುಗಳ ಪುಟಗಳನ್ನು ತೆರೆದಾಗ, ರಾಯಚೂರು ಜಿಲ್ಲೆಯ ನೆಲದಲ್ಲಿ ಶ್ರೀ ಕುಮಾರ ಶಿವಯೋಗಿಗಳು ಬಿತ್ತಿದ ಶಿವಯೋಗದ ಬೀಜದ ಚರಿತ್ರೆ ನಿಧಾನವಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ.

ಕೃಷ್ಣೆಯ ಮಡಿಲಿನ ರಾಮಗಡ್ಡಿ

ರಾಯಚೂರು ನಗರದಿಂದ ಸುಮಾರು ಇಪ್ಪತ್ತರಿಂದ ಇಪ್ಪತ್ತಮೂರು ಕಿಲೋಮೀಟರ್ ದೂರದಲ್ಲಿ, ಕೃಷ್ಣಾ ನದಿಯ ಮಧ್ಯೆ ಹಸಿರು ಹೊದ್ದುಕೊಂಡು ನಿಂತಿರುವ ನಡುಗಡ್ಡೆಯೇ ರಾಮಗಡ್ಡಿ—ಸ್ಥಳೀಯವಾಗಿ ರಾಮಗದ್ದೆ ಎಂದೂ ಕರೆಯಲ್ಪಡುವ ಪವಿತ್ರ ತಾಣ.

ನದಿ ತುಂಬಿ ಹರಿಯುವಾಗ ರಾಮಗಡ್ಡಿಗೆ ತಲುಪಲು ಹರಿಗೋಲಿನ ಸಹಾಯವೇ ಬೇಕು. ಸುತ್ತಲೂ ನೀರು; ನಡುವೆ ಹಸಿರಿನಿಂದ ಕಂಗೊಳಿಸುವ ನೆಲ; ನಗರದ ಗದ್ದಲದಿಂದ ದೂರವಾದ ಏಕಾಂತ; ನದಿಯ ಹರಿವಿನೊಂದಿಗೆ ಬೆರೆತು ಕೇಳಿಬರುವ ಮೌನ—ಇವೆಲ್ಲವೂ ಆ ಸ್ಥಳವನ್ನು ಸಹಜವಾಗಿಯೇ ಧ್ಯಾನ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗೆ ತಕ್ಕ ತಾಣವನ್ನಾಗಿ ಮಾಡಿವೆ.

ಸ್ಥಳಪುರಾಣದ ಪ್ರಕಾರ, ವನವಾಸ ಅಥವಾ ಸಂಚಾರದ ಸಂದರ್ಭದಲ್ಲಿ ಶ್ರೀರಾಮಚಂದ್ರನು ಈ ನಡುಗಡ್ಡೆಯಲ್ಲಿ ಕೆಲಕಾಲ—ಸುಮಾರು ಒಂದು ವರ್ಷ—ವಾಸವಾಗಿದ್ದನೆಂಬ ನಂಬಿಕೆಯಿದೆ. ಆತನು ಅಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದನೆಂಬ ಧಾರ್ಮಿಕ ಪ್ರತೀತಿಯೂ ಜನಮನದಲ್ಲಿ ಜೀವಂತವಾಗಿದೆ. ಬಹುಶಃ ಆ ಸ್ಮರಣೆಯೇ ಈ ನಡುಗಡ್ಡೆಗೆ “ರಾಮಗಡ್ಡಿ” ಎಂಬ ಹೆಸರನ್ನು ನೀಡಿರಬಹುದು.

ಶ್ರೀರಾಮನ ಪಾದಸ್ಪರ್ಶದ ಸ್ಮೃತಿಯನ್ನು ಹೊತ್ತ ಆ ನೆಲವು, ಶತಮಾನಗಳ ಬಳಿಕ ಮತ್ತೊಂದು ಆಧ್ಯಾತ್ಮಿಕ ಜಾಗೃತಿಗೆ ಸಾಕ್ಷಿಯಾಯಿತು. ಅದು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಶಿವಯೋಗ ಸಂಕಲ್ಪದ ಸ್ಪರ್ಶ.

ಮಂದಿರವಷ್ಟೇ ಅಲ್ಲ—ಮನುಷ್ಯ ನಿರ್ಮಾಣದ ಮಹಾಸಂಕಲ್ಪ

1909ರಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಿದ ಶ್ರೀ ಕುಮಾರ ಶಿವಯೋಗಿಗಳ ದೃಷ್ಟಿ ಒಂದು ಸ್ಥಳಕ್ಕೆ ಸೀಮಿತವಾಗಿರಲಿಲ್ಲ. ಶಿವಯೋಗಮಂದಿರವು ಕೇವಲ ಕಟ್ಟಡವಾಗಿರಬಾರದು; ಅದು ನಾಡಿನ ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿಯಾಗಬೇಕು ಎಂಬುದು ಅವರ ಸಂಕಲ್ಪವಾಗಿತ್ತು.

ಶಿವಯೋಗ, ಧರ್ಮಶಿಕ್ಷಣ, ಸಂಸ್ಕೃತಾಧ್ಯಯನ, ಸಂಸ್ಕಾರ ಮತ್ತು ಸಮಾಜಸೇವೆಯ ತರಬೇತಿ ಪಡೆದ ಸಾಧಕರು ನಾಡಿನ ವಿವಿಧ ಭಾಗಗಳಿಗೆ ತೆರಳಿ ಜನಜಾಗೃತಿಯನ್ನು ಉಂಟುಮಾಡಬೇಕು; ಹಳ್ಳಿಗಳಲ್ಲಿಯೂ ಶಿವಾನುಭವದ ಬೆಳಕು ಹರಿಯಬೇಕು; ಧರ್ಮವು ಕೇವಲ ಆಚರಣೆಯಲ್ಲಿ ಉಳಿಯದೆ ಬದುಕನ್ನು ತಿದ್ದುವ ಶಕ್ತಿಯಾಗಬೇಕು—ಇದು ಅವರ ಲೋಕಹಿತದ ಕನಸು.

ಆ ಕಾರಣದಿಂದಲೇ ನಾಡಿನ ವಿವಿಧ ಭಾಗಗಳಲ್ಲಿ ಶಾಖಾ ಶಿವಯೋಗಮಂದಿರಗಳ ಸ್ಥಾಪನೆಗೆ ಅವರು ಪ್ರೇರಣೆ ನೀಡಿದರು. ಶಿವಮೊಗ್ಗ, ಧಾರವಾಡ ಮೊದಲಾದ ದೂರದ ಜಿಲ್ಲೆಗಳಲ್ಲಿಯೂ ಶಿವಯೋಗಮಂದಿರದ ಪ್ರಭಾವ ಹರಡಿತು. ಕಪನಳ್ಳಿ, ನಿಡಗುಂದಿ–ಕೊಪ್ಪ, ಹಿರೇಹಾಳ, ಬದಾಮಿ ಮತ್ತು ರಾಮಗಡ್ಡಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳು ರೂಪುಗೊಂಡವು.

ಒಂದು ದೀಪದಿಂದ ಮತ್ತೊಂದು ದೀಪ ಬೆಳಗಿದರೆ ಮೊದಲ ದೀಪದ ಬೆಳಕು ಕಡಿಮೆಯಾಗುವುದಿಲ್ಲ; ಬದಲಾಗಿ ಕತ್ತಲೆ ಕಡಿಮೆಯಾಗುತ್ತದೆ. ಶ್ರೀ ಕುಮಾರ ಶಿವಯೋಗಿಗಳ ಶಾಖಾ ಮಂದಿರಗಳ ಪರಿಕಲ್ಪನೆಯೂ ಇದೇ ತತ್ತ್ವವನ್ನು ಒಳಗೊಂಡಿತ್ತು. ಶಿವಯೋಗಮಂದಿರದ ಮೂಲ ದೀಪದಿಂದ ನಾಡಿನ ಮೂಲೆಮೂಲೆಗಳಲ್ಲಿ ಜ್ಞಾನದ ದೀಪಗಳನ್ನು ಬೆಳಗಿಸುವ ಮಹಾಯಜ್ಞವದು.

ರಾಮಗಡ್ಡಿಗೆ ಬಂದ ಶಿವಯೋಗದ ಹೆಜ್ಜೆಗಳು

ಕವಿರತ್ನ ದ್ಯಾಂಪುರ ಚನ್ನಕವಿಗಳ ಶ್ರೀ ಕುಮಾರೇಶ ಪುರಾಣದ ಹದಿಮೂರನೆಯ ಸಂಧಿಯಲ್ಲಿ ರಾಮಗಡ್ಡಿ ಮತ್ತು ಶ್ರೀ ಕುಮಾರ ಶಿವಯೋಗಿಗಳ ಸಂಬಂಧವನ್ನು ಕಾವ್ಯಮಯವಾಗಿ ದಾಖಲಿಸಲಾಗಿದೆ:

ಶಿವಯೋಗಮಂದಿರದ ತತ್ವಮಂ ಕೇಳ್ದೀಕ್ಷೆ—
ಸುವ ಮಹಾಪೇಕ್ಷೆಯಿಂ ರಾಮಗಡ್ಡಿಯ ಮಠದ
ಶಿವಯೋಗಿವರ್ಯನೈತಂದು ಪರೀಕ್ಷಿಸುತಿರು ಮನಮೊಪ್ಪಿ ಹರುಷವಾಂತು

ತವಕದಂದೀ ಕುಮಾರೇಶನಂ ಸಾಧಕರ
ನಿವಹಮಂ ಕರೆದೊಯ್ದು ತಮ್ಮ ಮಠದೊಳು ಮಹೋ

ತ್ಸವದಿಂದ ಗಣತೃಪ್ತಿಪೂರ್ವಕಂ ಸಭೆಗರೆದು ಧರ್ಮವಿಷಯವ ಪೇಳಿಸಿ

ಇದರ ಭಾವಾರ್ಥ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಶಿವಯೋಗಮಂದಿರದ ತತ್ತ್ವ, ಶಿಕ್ಷಣಕ್ರಮ ಮತ್ತು ಸಾಧನಾಪದ್ಧತಿಯ ಕುರಿತು ಕೇಳಿದ ರಾಮಗಡ್ಡಿ ಮಠದ ಶಿವಯೋಗಿಗಳು, ಅವುಗಳನ್ನು ಕಣ್ಣಾರೆ ಕಾಣಬೇಕೆಂಬ ಮಹದಾಸೆಯಿಂದ ಶಿವಯೋಗಮಂದಿರಕ್ಕೆ ಬಂದರು. ಅಲ್ಲಿನ ಕಾರ್ಯಗಳನ್ನು ಪರಿಶೀಲಿಸಿದರು. ಕಂಡದ್ದು ಅವರ ಮನಸ್ಸಿಗೆ ಒಪ್ಪಿತು; ತಿಳಿದದ್ದು ಅವರ ಹೃದಯವನ್ನು ಹರ್ಷಗೊಳಿಸಿತು.

ಆ ಸಂತೋಷ ಕೇವಲ ಮೆಚ್ಚುಗೆಯಾಗಿ ಉಳಿಯಲಿಲ್ಲ. ಶ್ರೀ ಕುಮಾರೇಶ್ವರರನ್ನು ಮತ್ತು ಅವರೊಂದಿಗೆ ಸಾಧಕರ ಬಳಗವನ್ನು ರಾಮಗಡ್ಡಿಗೆ ಕರೆದುಕೊಂಡು ಹೋದರು. ತಮ್ಮ ಮಠದಲ್ಲಿ ಮಹೋತ್ಸವವನ್ನು ಏರ್ಪಡಿಸಿ, ಗಣಾರಾಧನೆ ನೆರವೇರಿಸಿ, ಸಭೆಯನ್ನು ಸೇರಿಸಿ ಧರ್ಮವಿಷಯಗಳ ಬೋಧನೆ ಮಾಡಿಸಿದರು.

ಇದು ಒಬ್ಬ ಮಠಾಧೀಶರು ಮತ್ತೊಬ್ಬ ಮಹಾತ್ಮರನ್ನು ಆಹ್ವಾನಿಸಿದ ಸಾಮಾನ್ಯ ಪ್ರಸಂಗವಲ್ಲ. ಒಂದು ಆಧ್ಯಾತ್ಮಿಕ ತತ್ತ್ವವು ಮತ್ತೊಂದು ನೆಲದಲ್ಲಿ ಬೇರುಬಿಟ್ಟ ಐತಿಹಾಸಿಕ ಕ್ಷಣ. ಶಿವಯೋಗಮಂದಿರದಲ್ಲಿ ಹೊತ್ತಿದ್ದ ಜ್ಞಾನಜ್ವಾಲೆಯನ್ನು ರಾಮಗಡ್ಡಿಯವರೆಗೆ ಕೊಂಡೊಯ್ದ ಪವಿತ್ರ ಪಯಣ.

ಮುಂದಿನ ಚರಣಗಳಲ್ಲಿ ಚನ್ನಕವಿಗಳು ಆ ಪ್ರಯತ್ನದ ವಿಸ್ತಾರವನ್ನು ಹೀಗೆ ಚಿತ್ರಿಸಿದ್ದಾರೆ:

ವಿನುತ ತತ್ತ್ವಂತದಖಿಲ ಪ್ರಸಿದ್ಧ ಪ್ರಮುಖ

ರನುಮತಿಯೊಳೊಂಡು ಶಿವಯೋಗಶಾಲೆಯನೆಸಗಿ,
ಸನುಮತದೊಳೈತಂದ ಸಾಧಕವಿತಾನಕಾಸನಧರ್ಮಶಾಸ್ತ್ರಗಳನು

ಘನಪಂಡಿತರ್ಕಳಂ ಪಡೆದು ಪೇಳಿಸಲಾದ

ನನುರಾಗದಿಂ ಮುಂದೆ ಕೆಲಕಾಲವಾದ ಬಳಿ
ಕನನುಕೂಲತೆಯಡಸಿ ನಿಂದುದಕೇಗ್ವೆವುದನುತ ತಾಪಗೊಂಡವನು

ರಾಮಗಡ್ಡಿ ಪ್ರದೇಶದ ಪ್ರಮುಖರ ಒಪ್ಪಿಗೆ ಮತ್ತು ಸಹಕಾರ ಪಡೆದು ಅಲ್ಲಿ ಶಿವಯೋಗ ಶಿಕ್ಷಣಕೇಂದ್ರವನ್ನು ಸ್ಥಾಪಿಸಲಾಯಿತು. ಅಲ್ಲಿಗೆ ಬಂದ ಸಾಧಕರಿಗೆ ಯೋಗಾಸನ, ಧರ್ಮಶಾಸ್ತ್ರ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಪ್ರಸಿದ್ಧ ವಿದ್ವಾಂಸರಿಂದ ಪ್ರೀತಿಪೂರ್ವಕವಾಗಿ ಬೋಧಿಸುವ ವ್ಯವಸ್ಥೆ ಮಾಡಲಾಯಿತು.

ಆದರೆ ಯಾವುದೇ ಮಹತ್ಕಾರ್ಯವು ಸವಾಲುಗಳಿಲ್ಲದೆ ಸಾಗುವುದಿಲ್ಲ. ಕೆಲವು ಕಾಲದ ಬಳಿಕ ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ, ಈ ಕಾರ್ಯ ನಿಂತುಹೋಗಬಹುದೆಂಬ ಚಿಂತೆ ಶ್ರೀ ಕುಮಾರೇಶ್ವರರನ್ನು ಕಾಡಿತು. ತಮ್ಮ ವೈಯಕ್ತಿಕ ಕೀರ್ತಿಗಾಗಿ ಅವರು ಚಿಂತಿಸಲಿಲ್ಲ; ಸಾಧಕರ ಶಿಕ್ಷಣ ಮತ್ತು ಸಮಾಜದ ಆಧ್ಯಾತ್ಮಿಕ ಹಿತಕ್ಕಾಗಿ ಆರಂಭಿಸಿದ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂಬುದೇ ಅವರ ಮನಸ್ಸಿನ ನೋವಾಗಿತ್ತು.

ಮಹಾಪುರುಷರ ಕಣ್ಣೀರಿಗೆ ವೈಯಕ್ತಿಕ ದುಃಖ ಕಾರಣವಾಗುವುದಿಲ್ಲ; ಲೋಕಹಿತದ ಕಾರ್ಯಕ್ಕೆ ಎದುರಾಗುವ ಅಡ್ಡಿಯೇ ಅವರ ಅಂತರಂಗವನ್ನು ನೋಯಿಸುತ್ತದೆ. ರಾಮಗಡ್ಡಿಯ ಕುರಿತು ಶ್ರೀ ಕುಮಾರ ಶಿವಯೋಗಿಗಳು ಅನುಭವಿಸಿದ ಆ ತಳಮಳ, ಈ ನೆಲದೊಂದಿಗೆ ಅವರಿಗಿದ್ದ ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ.

1914ರಲ್ಲಿ ರೂಪುಗೊಂಡ ಶಿವಯೋಗಾಶ್ರಮ

ಶಿವಯೋಗಮಂದಿರದ ಸುವರ್ಣ ಮಹೋತ್ಸವದ ಸ್ಮರಣಸಂಚಿಕೆ ಬೆಳಗು ರಾಮಗಡ್ಡಿಯ ಶಾಖಾಮಂದಿರದ ಕುರಿತು ಮಹತ್ವದ ಮಾಹಿತಿಯನ್ನು ದಾಖಲಿಸಿದೆ.

ಶಾಲಿವಾಹನ ಶಕ 1836ನೇ ಆನಂದನಾಮ ಸಂವತ್ಸರದ ಮಾಘ ಶುಕ್ಲ ಚತುರ್ದಶಿಯಂದು—ಅಂದರೆ ಕ್ರಿ.ಶ. 1914ರಲ್ಲಿ—ಶ್ರೀ ಸಿದ್ಧಲಿಂಗಸ್ವಾಮಿ (ಚೋಳೇಂದ್ರಸ್ವಾಮಿ) ಗಳಿಂದ ರಾಮಗಡ್ಡಿಯಲ್ಲಿ ಶಿವಯೋಗಾಶ್ರಮ ಸ್ಥಾಪನೆಯಾಯಿತು.

(ಶ್ರೀ ಚೋಳೇಂದ್ರ ಸ್ವಾಮಿಗಳು)

ನದಿಯ ನಡುವಿನ ರಮ್ಯವಾದ, ಫಲವತ್ತಾದ ಪ್ರದೇಶದಲ್ಲಿ ಸ್ಥಾಪಿಸಲಾದ ಈ ಆಶ್ರಮವು ಆರಂಭದಲ್ಲಿ ಚಿಕ್ಕದಾಗಿದ್ದರೂ ಅದರ ಆಶಯ ಬಹುದೊಡ್ಡದಾಗಿತ್ತು. ಮೊದಲ ಹಂತದಲ್ಲಿ ಐವರು ಸಾಧಕರು ಹಾಗೂ ಸಂಸ್ಕೃತ ಕಲಿಯುತ್ತಿದ್ದ ಹದಿನೈದು ವಿದ್ಯಾರ್ಥಿಗಳು ಅಲ್ಲಿದ್ದರು. ಅದು ಕೇವಲ ವಸತಿ ಅಥವಾ ಪೂಜಾಕೇಂದ್ರವಾಗಿರದೆ, ಯೋಗ–ಧರ್ಮ–ಸಂಸ್ಕೃತ ಶಿಕ್ಷಣದ ಜೀವಂತ ಪಾಠಶಾಲೆಯಾಗಿತ್ತು.

ಪಶ್ಚಿಮಾದ್ರಿಯ ಪರಂಪರೆಯಲ್ಲಿ ಅರಳಿದ ರಾಮಗಡ್ಡಿ

ರಾಮಗಡ್ಡಿಯ ಶಿವಯೋಗಾಶ್ರಮದ ಬೆಳವಣಿಗೆಯಲ್ಲಿ ನೀರಡಗುಂಬದ ಪಶ್ಚಿಮಾದ್ರಿ ಸಂಸ್ಥಾನಮಠದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಕ್ರಿ.ಶ. 1920ರಲ್ಲಿ ಪಶ್ಚಿಮಾದ್ರಿ ಸಂಸ್ಥಾನಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ರಾಮಗಡ್ಡಿ ಶಾಖಾ ಶಿವಯೋಗಮಂದಿರದ ಅಧಿಕಾರವನ್ನು ವಹಿಸಿಕೊಂಡರು.

ಅಂದಿನ ಗುಲಬರ್ಗಾ ಜಿಲ್ಲೆಯ ಜೇವರಗಿ ತಾಲ್ಲೂಕಿನ ಮಧುರಾ ಗ್ರಾಮದವರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಪಂಚಕಾವ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು. ಬಳಿಕ ಶಿವಯೋಗಮಂದಿರದಲ್ಲಿ ಕೊಪ್ಪದ ಶ್ರೀ ಮಹಾಂತ ಮಹಾಸ್ವಾಮಿಗಳವರಲ್ಲಿ ನಿಜಾಚರಣೆಯ ದೀಕ್ಷೆಯನ್ನು ಪಡೆದು, ಸಿದ್ಧಾರ್ಥಿ ನಾಮ ಸಂವತ್ಸರದಲ್ಲಿ—ಕ್ರಿ.ಶ. 1919–20ರಲ್ಲಿ—ನೀರಡಗುಂಬದ ಪಶ್ಚಿಮಾದ್ರಿ ಸಂಸ್ಥಾನಮಠದ ಅಧಿಕಾರವನ್ನು ಸ್ವೀಕರಿಸಿದರು.

(ಶ್ರೀ ಸಿದ್ಧಲಿಂಗ ಸ್ವಾಮಿಗಳು)

ಪಶ್ಚಿಮಾದ್ರಿ ಸಂಸ್ಥಾನಮಠಕ್ಕೂ ಒಂದು ತಪೋಮಯ ಪರಂಪರೆಯಿತ್ತು. ಸುಮಾರು ಒಂದು ಶತಮಾನದ ಹಿಂದೆ ಪರಮತಪಸ್ವಿಗಳಾಗಿದ್ದ ಶ್ರೀ ಹಿರೇಸಿದ್ಧಲಿಂಗ ಮಹಾಸ್ವಾಮಿಗಳು ಈ ಮಠವನ್ನು ಸ್ಥಾಪಿಸಿದ್ದರು. ಪರಮ ಶಿವಜ್ಞಾನದ ಸಾಧನೆಯಲ್ಲಿ ತಮ್ಮ ತನು–ಮನ–ಭಾವಗಳನ್ನು ಲೀನಗೊಳಿಸಿದ್ದ ಅವರು, ತಮ್ಮ ತಪಸ್ಸು, ಅನುಷ್ಠಾನ ಮತ್ತು ಸರಳ ಬದುಕಿನಿಂದ ಭಕ್ತರ ಹೃದಯಗಳನ್ನು ಗೆದ್ದಿದ್ದರು. ನೀರಡಗುಂಬ ಗ್ರಾಮದ ಪಶ್ಚಿಮ ದಿಕ್ಕಿನ ಬೆಟ್ಟದ ಮೇಲಿನ ಶಿಖರಪ್ರದೇಶದಲ್ಲಿ ಮಠವನ್ನು ಸ್ಥಾಪಿಸಿದ್ದರಿಂದ ಅದಕ್ಕೆ “ಪಶ್ಚಿಮಾದ್ರಿ” ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.

(ಶ್ರೀ ಮ ನಿ ಪ್ರ ೩ನೇ ಸಿದ್ಧಲಿಂಗ ಮಹಾಸ್ವಾಮಿಗಳು.ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೇರಡಗುಂಬ)

ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಠದ ಅಧಿಕಾರ ವಹಿಸಿಕೊಂಡ ನಂತರ ಸಾಧನೆಯೊಂದಿಗೆ ಸೇವೆಯನ್ನೂ ಬೆಸೆದರು. ಮಠದಲ್ಲಿ ನಿತ್ಯದಾಸೋಹದ ವ್ಯವಸ್ಥೆಯನ್ನು ಆರಂಭಿಸಿ, ಹಸಿದವನಿಗೆ ಅನ್ನ ಮತ್ತು ಜ್ಞಾನಾರ್ಥಿಗೆ ವಿದ್ಯೆ ನೀಡುವುದೇ ಮಠಧರ್ಮದ ಜೀವಾಳವೆಂಬುದನ್ನು ಕಾರ್ಯರೂಪದಲ್ಲಿ ತೋರಿಸಿದರು. ಅವರ ಕಾಲದಲ್ಲಿ ಯಾದಗಿರಿಯ ಇಂಟರ್‌ ಕಾಲೇಜಿಗೆ ನೂರು ಎಕರೆ ಭೂಮಿಯನ್ನು ಹಾಗೂ ಹೈದರಾಬಾದ್‌ನ ವೀರಶೈವ ಬೋರ್ಡಿಂಗ್‌ಗೆ ಐದು ಸಾವಿರ ರೂಪಾಯಿಗಳನ್ನು ದಾನವಾಗಿ ನೀಡಲಾಯಿತು. ಆ ಕಾಲಘಟ್ಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿದರೆ, ಅದು ವಿದ್ಯಾದಾಸೋಹದ ಬಗ್ಗೆ ಅವರಿಗಿದ್ದ ದೂರದೃಷ್ಟಿ ಮತ್ತು ಉದಾರ ಮನೋಭಾವಕ್ಕೆ ಮಹತ್ತರ ಸಾಕ್ಷಿಯಾಗಿದೆ.

ರಾಮಗಡ್ಡಿಯ ಶಾಖಾ ಶಿವಯೋಗಮಂದಿರದಲ್ಲಿ ವಟುಗಳು ಮತ್ತು ಸಾಧಕರನ್ನು ಇರಿಸಿ ಎಂಟರಿಂದ ಹತ್ತು ವರ್ಷಗಳ ಕಾಲ ಪಾಠಶಾಲೆಯನ್ನು ನಡೆಸಿದರು. ನದಿಯ ನಡುವಿನ ಆ ಪ್ರಶಾಂತ ನೆಲದಲ್ಲಿ ಸಂಸ್ಕೃತ, ವೈದಿಕ ಜ್ಞಾನ, ಶಿವಯೋಗ, ಧರ್ಮಾಚರಣೆ ಮತ್ತು ಸಂಸ್ಕಾರಗಳ ಪಾಠ ನಿರಂತರವಾಗಿ ಮೊಳಗುವಂತೆ ಮಾಡಿದರು. ಅಷ್ಟಕ್ಕೇ ಅವರ ವಿದ್ಯಾಸೇವೆಯ ಹೆಜ್ಜೆಗಳು ನಿಲ್ಲಲಿಲ್ಲ; ನಾರಾಯಣಪೇಟೆಯಲ್ಲಿಯೂ ವೈದಿಕ ಪಾಠಶಾಲೆಯನ್ನು ಸ್ಥಾಪಿಸಿ ಜ್ಞಾನಪ್ರಸಾರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದರು.

ಹೀಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ರಾಮಗಡ್ಡಿಯಲ್ಲಿ ಬಿತ್ತಿದ ಶಿವಯೋಗದ ಬೀಜಕ್ಕೆ, ಪಶ್ಚಿಮಾದ್ರಿ ಸಂಸ್ಥಾನಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ತಪಸ್ಸು, ದಾಸೋಹ ಮತ್ತು ವಿದ್ಯಾಸೇವೆಯ ನೀರೆರೆದರು. ಆ ಬೀಜವು ಸಾಧಕರನ್ನು ರೂಪಿಸುವ ಪಾಠಶಾಲೆಯಾಗಿ, ಸಮಾಜವನ್ನು ಬೆಳಗಿಸುವ ಜ್ಞಾನಕೇಂದ್ರವಾಗಿ ಬೆಳೆಯಿತು. ಕೃಷ್ಣೆಯ ನಡುಗಡ್ಡೆಯಲ್ಲಿ ಹೊತ್ತಿದ ಆ ಪುಟ್ಟ ದೀಪಕ್ಕೆ ಪಶ್ಚಿಮಾದ್ರಿಯ ಗುರುಪರಂಪರೆ ಎಣ್ಣೆಯಾಗಿ, ಸೇವಾಸಂಕಲ್ಪವೇ ಬತ್ತಿಯಾಗಿ ನಿಂತಿತು.

ಈ ಕೇಂದ್ರದಲ್ಲಿ ತರಬೇತಿ ಪಡೆದ ಒಂಬತ್ತು ಜನ ಮೂರ್ತಿಗಳು ಯೋಗ ಮತ್ತು ಧರ್ಮಶಿಕ್ಷಣವನ್ನು ಪಡೆದು ತಮ್ಮ ತಮ್ಮ ಪ್ರಾಂತಗಳಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹಲವಾರು ಶಾಸ್ತ್ರಿಗಳು ವೈದಿಕ ಶಿಕ್ಷಣವನ್ನು ಪಡೆದು ವಿವಿಧೆಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಒಂದು ನಡುಗಡ್ಡೆಯಲ್ಲಿ ಕುಳಿತು ಕಲಿತ ಪಾಠಗಳು ನದಿಯ ಹರಿವಿನಂತೆ ಅನೇಕ ಊರುಗಳಿಗೆ ತಲುಪಿದವು. ಅಲ್ಲಿ ರೂಪುಗೊಂಡ ಸಾಧಕರು ಸಮಾಜದ ಮಧ್ಯೆ ತೆರಳಿ ಧಾರ್ಮಿಕ ಬೋಧನೆ ಮಾತ್ರ ಮಾಡಲಿಲ್ಲ; ಜನರ ಬದುಕಿಗೆ ಸಂಸ್ಕಾರ, ಶಿಕ್ಷಣ ಮತ್ತು ಸೇವೆಯ ಸ್ಪರ್ಶವನ್ನೂ ನೀಡಿದರು.

ಶಿವಯೋಗಮಂದಿರದಲ್ಲಿಯೇ ಶಿಕ್ಷಣ ಪಡೆದ ಪೂಜ್ಯ ಶ್ರೀ ಶಿವಪುತ್ರ ಮಹಾಸ್ವಾಮಿಗಳು, ನೀರಡಗುಂಬ ಅವರ ಮಾರ್ಗದರ್ಶನದಲ್ಲಿ ಈ ಆಶ್ರಮವು ಬೆಳೆಯಿತು. ಹೀಗೆ ರಾಮಗಡ್ಡಿಯ ಶಾಖೆ, ಶಿವಯೋಗಮಂದಿರದ ತತ್ತ್ವವನ್ನು ರಾಯಚೂರು ಜಿಲ್ಲೆಯ ಜನಜೀವನದೊಂದಿಗೆ ಬೆಸೆದ ಜೀವಂತ ಸೇತುವೆಯಾಯಿತು.

ಕೃಷ್ಣೆಯ ಹರಿವು—ಕುಮಾರೇಶ್ವರರ ಬೆಳಕು

ರಾಯಚೂರು ಜಿಲ್ಲೆಯ ಇತಿಹಾಸದಲ್ಲಿ ಅನೇಕ ರಾಜವಂಶಗಳ ಹೆಜ್ಜೆಗುರುತುಗಳಿವೆ. ಕೋಟೆಗಳು, ಶಾಸನಗಳು, ದೇವಾಲಯಗಳು ಮತ್ತು ಯುದ್ಧಗಳ ನೆನಪುಗಳಿವೆ. ಆದರೆ ಇತಿಹಾಸವೆಂದರೆ ಕೇವಲ ಅರಸರು ಮತ್ತು ಯುದ್ಧಗಳ ಕಥೆಯಲ್ಲ. ಸಮಾಜದ ಅಂತರಂಗವನ್ನು ಮೌನವಾಗಿ ಪರಿವರ್ತಿಸಿದ ಮಹಾತ್ಮರ ಹೆಜ್ಜೆಗಳೂ ಇತಿಹಾಸವೇ.

ಶ್ರೀ ಕುಮಾರ ಶಿವಯೋಗಿಗಳು ರಾಯಚೂರು ಜಿಲ್ಲೆಯನ್ನು ರಾಜಕೀಯ ನಕ್ಷೆಯ ಒಂದು ಭಾಗವಾಗಿ ನೋಡಲಿಲ್ಲ. ಅವರಿಗೆ ಅದು ಶಿವಾನುಭವದ ಬೀಜ ಬಿತ್ತಬೇಕಾದ ಜನಪದವಾಗಿತ್ತು. ರಾಮಗಡ್ಡಿಯ ನೈಸರ್ಗಿಕ ಏಕಾಂತದಲ್ಲಿ ಅವರು ಸಾಧನೆಯ ಸಾಧ್ಯತೆಯನ್ನು ಕಂಡರು. ಗ್ರಾಮೀಣ ಜನರ ಬದುಕಿನಲ್ಲಿ ಧರ್ಮ, ಶಿಕ್ಷಣ ಮತ್ತು ಸಂಸ್ಕಾರದ ಬೆಳಕು ಮೂಡಿಸುವ ಅವಕಾಶವನ್ನು ಗುರುತಿಸಿದರು.

ಕೃಷ್ಣಾ ನದಿ ತನ್ನ ಎರಡೂ ದಡಗಳ ನಡುವೆಯೇ ಹರಿದರೂ, ಅದರ ನೀರು ಒಂದೇ ದಡಕ್ಕೆ ಸೀಮಿತವಾಗುವುದಿಲ್ಲ. ಹಾಗೆಯೇ ಶ್ರೀ ಕುಮಾರ ಶಿವಯೋಗಿಗಳ ಕರುಣೆ ಮತ್ತು ಕಾರ್ಯಸಂಕಲ್ಪವೂ ಒಂದು ಊರು, ಒಂದು ಮಠ ಅಥವಾ ಒಂದು ಜಿಲ್ಲೆಗೆ ಸೀಮಿತವಾಗಿರಲಿಲ್ಲ. ಅವರು ನಡೆದ ನೆಲದಲ್ಲಿ ಶಿಕ್ಷಣದ ಹಂಬಲ ಮೂಡಿತು; ಅವರು ನಿಂತ ಸ್ಥಳದಲ್ಲಿ ಸಂಘಟನೆ ರೂಪುಗೊಂಡಿತು; ಅವರು ಮಾತನಾಡಿದಲ್ಲಿ ಶಿವಾನುಭವದ ಅರಿವು ಹುಟ್ಟಿತು; ಅವರು ಕಳುಹಿಸಿದ ಸಾಧಕರು ಹೋದ ಕಡೆ ಸಮಾಜಸೇವೆಯ ದೀಪಗಳು ಬೆಳಗಿದವು.

ರಾಮಗಡ್ಡಿಯ ಶಾಖಾಮಂದಿರವು ಇಂದು ನಮಗೆ ಹೇಳುವ ಸಂದೇಶವೂ ಇದೇ—ಮಹಾತ್ಮರ ಸ್ಮರಣೆ ಉತ್ಸವದ ವೇದಿಕೆಗೆ ಮಾತ್ರ ಸೀಮಿತವಾಗಬಾರದು. ಅವರ ಸಂಕಲ್ಪವನ್ನು ಕಾಲಕ್ಕೆ ತಕ್ಕ ರೀತಿಯಲ್ಲಿ ಮುಂದುವರಿಸುವುದೇ ನಿಜವಾದ ಜಯಂತ್ಯುತ್ಸವ.

ರಾಯಚೂರಿನಲ್ಲಿ ಮತ್ತೆ ಬೆಳಗುತ್ತಿರುವ ಪರಂಪರೆ

ಇಂದು  ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆಯುತ್ತಿರುವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 159ನೇ ಜಯಂತಿ ಮಹೋತ್ಸವವು ಕೇವಲ ಒಂದು ಸ್ಮರಣೋತ್ಸವವಲ್ಲ. ಅದು ಸುಮಾರು ಒಂದು ಶತಮಾನದ ಹಿಂದೆ ರಾಮಗಡ್ಡಿಯಲ್ಲಿ ಬೆಳಗಿದ ಶಿವಯೋಗ ಪರಂಪರೆಯ ಮುಂದುವರಿದ ಅಧ್ಯಾಯ.

2026ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 4ರವರೆಗೆ ನಡೆಯುತ್ತಿರುವ ಈ ಹನ್ನೆರಡು ದಿನಗಳ ಮಹೋತ್ಸವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಧರ್ಮೋಪದೇಶ, ವಚನ–ಭಜನೆ, ರುದ್ರಾಭಿಷೇಕ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿ. ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೇ ಭಕ್ತಿವೇದಿಕೆಯಲ್ಲಿ ಸೇರಿಸುವ ಈ ಆಚರಣೆ, ಶ್ರೀ ಕುಮಾರ ಶಿವಯೋಗಿಗಳ ಸಂಘಟನಾ ದೃಷ್ಟಿಯನ್ನೇ ನೆನಪಿಸುತ್ತದೆ.

ಈ ಮಹೋತ್ಸವವನ್ನು ಆಯೋಜಿಸಿರುವ ಶ್ರೀ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿಯ ಅಧ್ಯಕ್ಷರೂ, ಪಶ್ಚಿಮಾದ್ರಿ ವಿರಕ್ತಮಠ, ನೀರಡಗುಂಬದ ಪೂಜ್ಯ ಶ್ರೀ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳೂ ಆಗಿರುವುದು ವಿಶೇಷ ಅರ್ಥವನ್ನು ಹೊಂದಿದೆ. ರಾಮಗಡ್ಡಿಯ ಶಿವಯೋಗಾಶ್ರಮವನ್ನು ಬೆಳೆಸಿದ ಗುರುಪರಂಪರೆಯೇ ಇಂದು ಸಿಂಧನೂರಿನಲ್ಲಿ ಶ್ರೀ ಕುಮಾರೇಶ್ವರರ ಜಯಂತಿಯನ್ನು ವೈಭವದಿಂದ ಆಚರಿಸುತ್ತಿರುವುದು ಇತಿಹಾಸದ ಸುಂದರ ಪುನರ್ಮಿಲನವೆನಿಸುತ್ತದೆ.

ಒಮ್ಮೆ ರಾಮಗಡ್ಡಿಯ ನಡುಗಡ್ಡೆಯಲ್ಲಿ ಶ್ರೀ ಕುಮಾರೇಶ್ವರರ ಸಮ್ಮುಖದಲ್ಲಿ ಧರ್ಮಸಭೆ ಸೇರಿತ್ತು. ಇಂದು ಸಿಂಧನೂರಿನ ಜನಸಾಗರದಲ್ಲಿ ಅವರ ಜೀವನ, ಸಾಧನೆ ಮತ್ತು ಸಂದೇಶಗಳ ಸ್ಮರಣೆ ನಡೆಯುತ್ತಿದೆ. ಅಂದು ಹರಿಗೋಲಿನಲ್ಲಿ ನದಿ ದಾಟಿ ತಲುಪಬೇಕಾಗಿದ್ದ ಶಿವಯೋಗದ ಕೇಂದ್ರ, ಇಂದು ಸಾವಿರಾರು ಮನಸ್ಸುಗಳನ್ನು ತಲುಪುವ ಮಹೋತ್ಸವವಾಗಿ ವಿಸ್ತರಿಸಿದೆ.

ನದಿಗಳು ಹರಿಯುತ್ತವೆ—ದೀಪಗಳು ಬೆಳಗುತ್ತವೆ

ರಾಮಗಡ್ಡಿಯ ದಡದಲ್ಲಿ ನಿಂತು ಕೃಷ್ಣೆಯ ಹರಿವನ್ನು ನೋಡಿದರೆ ಕಾಲವೇ ನಮ್ಮೆದುರು ಹರಿಯುತ್ತಿರುವಂತೆ ಭಾಸವಾಗುತ್ತದೆ. ನೀರು ಬದಲಾಗುತ್ತಿರುತ್ತದೆ; ಹರಿವು ಮಾತ್ರ ನಿಲ್ಲುವುದಿಲ್ಲ. ತಲೆಮಾರುಗಳು ಬದಲಾಗುತ್ತವೆ; ಆದರೆ ಮಹಾತ್ಮರು ಬಿತ್ತಿದ ಸತ್ಯ, ಸೇವೆ ಮತ್ತು ಸಾಧನೆಯ ಮೌಲ್ಯಗಳು ನಶಿಸುವುದಿಲ್ಲ.

1914ರಲ್ಲಿ ರಾಮಗಡ್ಡಿಯಲ್ಲಿ ನೆಡಲಾದ ಶಿವಯೋಗದ ಸಸಿಗೆ ಇಂದು ಶತಮಾನಕ್ಕೂ ಹೆಚ್ಚಿನ ವಯಸ್ಸಾಗಿದೆ. ಅದರ ಕೊಂಬೆಗಳು ಎಲ್ಲಿವೆ, ಅದರ ನೆರಳಿನಲ್ಲಿ ಎಷ್ಟು ಜನರು ಆಶ್ರಯ ಪಡೆದರು, ಅದರ ಫಲದಿಂದ ಎಷ್ಟು ಬದುಕುಗಳು ಹಸನಾದವು ಎಂಬುದನ್ನು ಸಂಪೂರ್ಣವಾಗಿ ಲೆಕ್ಕಿಸಲು ಸಾಧ್ಯವಿಲ್ಲ. ಆದರೆ ಆ ಸಸಿಯನ್ನು ನೆಟ್ಟ ಕೈಗಳ ದಿವ್ಯಸ್ಪರ್ಶವನ್ನು ಇತಿಹಾಸ ಮರೆಯಲಾರದು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ರಾಯಚೂರು ಜಿಲ್ಲೆಗೆ ಕೇವಲ ಭೇಟಿ ನೀಡಲಿಲ್ಲ; ಅವರು ಇಲ್ಲಿ ಒಂದು ಕನಸನ್ನು ಬಿತ್ತಿದರು. ರಾಮಗಡ್ಡಿಯಲ್ಲಿ ಶಿವಯೋಗದ ದೀಪವನ್ನು ಬೆಳಗಿಸಿದರು. ಸಾಧಕರನ್ನು ರೂಪಿಸಿದರು. ಶಿಕ್ಷಣದ ದಾರಿ ತೆರೆದರು. ಧರ್ಮವನ್ನು ಸಮಾಜಸೇವೆಯೊಂದಿಗೆ ಬೆಸೆದರು.

ಇಂದು ಸಿಂಧನೂರಿನಲ್ಲಿ ನಡೆಯುತ್ತಿರುವ 159ನೇ ಜಯಂತಿ ಮಹೋತ್ಸವದ ಪ್ರತಿಯೊಂದು ಮಂಗಳಾರತಿ, ಪ್ರತಿಯೊಂದು ಉಪನ್ಯಾಸ, ಪ್ರತಿಯೊಂದು ಭಜನೆ ಮತ್ತು ಪ್ರತಿಯೊಂದು ಸೇವಾಕಾರ್ಯವೂ ರಾಮಗಡ್ಡಿಯಲ್ಲಿ ಬೆಳಗಿದ ಆ ಮೊದಲ ದೀಪಕ್ಕೆ ಸಲ್ಲಿಸುವ ಕೃತಜ್ಞತೆಯಾಗಿದೆ.

ಕೃಷ್ಣೆ ಎಂದಿನಂತೆ ಹರಿಯುತ್ತಿದ್ದಾಳೆ. ರಾಮಗಡ್ಡಿ ಎಂದಿನಂತೆ ನದಿಯ ಮಡಿಲಲ್ಲಿ ಮೌನವಾಗಿ ನಿಂತಿದೆ. ಆದರೆ ಆ ಮೌನದೊಳಗೆ ಈಗಲೂ ಒಂದು ಧ್ವನಿ ಕೇಳಿಸುತ್ತದೆ:

ಶಿವಯೋಗದ ಬೆಳಕು ಒಂದು ಸ್ಥಳಕ್ಕೆ ಸೀಮಿತವಲ್ಲ; ಅದು ಮನುಷ್ಯನಿಂದ ಮನುಷ್ಯನಿಗೆ, ಊರಿನಿಂದ ಊರಿಗೆ, ತಲೆಮಾರಿನಿಂದ ತಲೆಮಾರಿಗೆ ಸಾಗಬೇಕಾದ ಜ್ಞಾನದ ದೀಪ.

ಆ ದೀಪವನ್ನು ರಾಯಚೂರು ಜಿಲ್ಲೆಯ ನೆಲದಲ್ಲಿ ಬೆಳಗಿಸಿದವರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಅದನ್ನು ಆರದಂತೆ ಕಾಯ್ದು, ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಜಯಂತಿಯ ಗೌರವ.

*ಶ್ರೀಕಂಠ ಚೌಕೀಮಠ

 

Related Posts