ನಿನ್ನೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪಂಚಲೋಹದ ಮೂರ್ತಿಯನ್ನು ಅಣ್ಣಿಗೇರಿ–ಗದಗ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ ಉಂಟಾದ ಸಂಭ್ರಮ–ಸಡಗರದ ನಡುವೆ, ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಪೂಜ್ಯರ ಮೂರ್ತಿಯನ್ನು ಕಾರಿನಲ್ಲಿ ಕೊಂಡೊಯ್ಯುವಾಗ, ವಾಹನದ ಅಲುಗಾಟದಿಂದ ಯಾವುದೇ ಧಕ್ಕೆಯಾಗದಂತೆ ಹಗ್ಗದಿಂದ ಕಟ್ಟಲು ನನ್ನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಮೂರ್ತಿಯನ್ನು ಮುಂದಿನ ಆಸನದಲ್ಲಿ ಗೌರವಪೂರ್ವಕವಾಗಿ ಕುಳ್ಳಿರಿಸಿ, ರಕ್ಷಣಾತ್ಮಕ ಸೀಟ್‌ಬೆಲ್ಟ್ ಹಾಕಿದೆ. ಅದು ಮೂರ್ತಿಯನ್ನು ಕರಾರುವಾಕ್ಕಾಗಿ, ಭದ್ರವಾಗಿ ಹಿಡಿದಿಟ್ಟುಕೊಂಡಿತು.

ದಾರಿಯುದ್ದಕ್ಕೂ ರಸ್ತೆಯ ಅಡೆತಡೆಗಳಿಂದಲೂ, ನಿನ್ನೆ ಇಸ್ಲಾಂ ಧರ್ಮದ ಹಬ್ಬದ ಅಂಗವಾಗಿ ಮಾರ್ಗಮಧ್ಯದಲ್ಲಿ ನಡೆಯುತ್ತಿದ್ದ ಮೆರವಣಿಗೆಗಳಿಂದಲೂ ವಾಹನದ ವೇಗ ಅಲ್ಲಲ್ಲಿ ನಿಧಾನವಾಗುತ್ತಿತ್ತು. ಆಗೆಲ್ಲ ನಮ್ಮ ವಾಹನ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿತ್ತು.
ಜಾತಿ–ಧರ್ಮಗಳ ಭೇದವಿಲ್ಲದೆ ಜನರು ವಾಹನದಲ್ಲಿದ್ದ ಪೂಜ್ಯರ ಮೂರ್ತಿಗೆ ಕೈಮುಗಿದು ನಮಸ್ಕರಿಸಿದರು. ಕೆಲವರು ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.

ಆದರೆ ಗದುಗಿನ ಶ್ರೀ ತೋಂಟದಾರ್ಯ ಮಠದ ಮಹಾದ್ವಾರದ ಎದುರಿನ ಆಟೊ ನಿಲ್ದಾಣದಲ್ಲಿ ನಡೆದ ಘಟನೆ ಮಾತ್ರ ನಿಜಕ್ಕೂ ಅವಿಸ್ಮರಣೀಯ!
ಆಟೊ ಚಾಲಕರೊಬ್ಬರು ಓಡುತ್ತಾ ಬಂದು, ನಮ್ಮ ವಾಹನದ ಕಿಟಕಿಯ ಬಳಿ ಕೈಮುಗಿದು ಭಾವಪರವಶರಾಗಿ ಉದ್ಗರಿಸಿದರು:

“ನನ್ನಪ್ಪ ಕುಮಾರಪ್ಪಾ! ನೀನು ಹುಟ್ಟದಿದ್ದರೆ ನನ್ನಂಥ ಬಡ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!”
ಅವರ ಮಾತು ಕೇಳಿ ಆಶ್ಚರ್ಯಗೊಂಡ ನಾನು, ಅವರ ಪೂರ್ವಾಪರವನ್ನು ವಿಚಾರಿಸಿದೆ. ಅವರ ಹೆಸರು ಶಿವಾನಂದ ದೊಡ್ಡಮನಿ. ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಹಳೆಯ ವಿದ್ಯಾರ್ಥಿ ಹಾಗೂ ಹವ್ಯಾಸಿ ಕಲಾವಿದ!

ಮೂರು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮಹಾಗುರುವಿನ ಕುರಿತು ಹರಿದಾಡಿದ ಅವಹೇಳನಕಾರಿ ಬರಹಗಳನ್ನು ಓದಿ ನೊಂದಿದ್ದ ನನ್ನ ಮನಸ್ಸಿಗೆ, ಶ್ರೀ ಶಿವಾನಂದ ದೊಡ್ಡಮನಿಯವರ ಹೃದಯಾಂತರಾಳದಿಂದ ಹೊರಹೊಮ್ಮಿದ ಆ ಮಾತುಗಳು ತಂಪಿನ ಮಳೆಯನ್ನೇ ಸುರಿಸಿದವು.

ಅದೇ ಕ್ಷಣದಲ್ಲಿ ಶ್ರೀ ವಿನಯ್ ಶಿರಹಟ್ಟಿಮಠ ಅವರ ಫೇಸ್‌ಬುಕ್ ಬರಹದಲ್ಲಿ ವ್ಯಕ್ತವಾದ ಸಂಶಯಗಳು, ಅದಕ್ಕೆ ಶ್ರೀ ರುದ್ರಪ್ಪ ಪಗಡದಿನ್ನಿಯವರು ಸೇರಿಸಿದ ವಿಕಾರ ಮತ್ತು ಕ್ರೌರ್ಯ ತುಂಬಿದ ಅಪವಾದಗಳು, ಅವುಗಳಿಗೆ ಶ್ರೀ ಶರಣಪ್ಪ ಸಜ್ಜನ ನೀಡಿದ ಶಹಬ್ಬಾಸ್‌ಗಿರಿಗಳು ಹಾಗೂ ಅವುಗಳ ಬೆನ್ನಿಗೆ ಬಂದ ಹಲವು ವಿಕೃತ ಪ್ರತಿಕ್ರಿಯೆಗಳು—ಎಲ್ಲವೂ ನೆನಪಾದವು.

ಕಳೆದ ವರ್ಷ ಇದೇ ಗದುಗಿನ ಪ್ರೊ. ಸಿದ್ದು ಯಾಪಲಪರವಿ ಅವರು ನಾಲಿಗೆ ಹರಿ ಬಿಟ್ಟು, “ನಾನು ಹಾನಗಲ್ಲ ಕುಮಾರಸ್ವಾಮಿಗಳ ಮೇಲೆ ‘ಅಟ್ಯಾಕ್’ ಮಾಡಿದರೆ ಕೆಲವರಿಗೆ ಸಿಟ್ಟು ಬರುತ್ತದೆ” ಎಂದು ವೀರಾವೇಶದಿಂದ ಘರ್ಜಿಸಿದ್ದೂ ಸ್ಮರಣೆಗೆ ಬಂತು.

“ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು” ಎಂಬ ಗಾದೆಗೂ ಇಂತಹ ಬುದ್ಧಿಜೀವಿಗಳ ನಡವಳಿಕೆಗೂ ಬಹಳ ಹತ್ತಿರದ ಸಂಬಂಧವಿದೆ ಎಂಬುದನ್ನು ಅವರು ಮೇಲಿಂದ ಮೇಲೆ ಸಮಾಜದ ಮುಂದೆ ಜೀವಂತ ಉದಾಹರಣೆಗಳಾಗಿ ಸಾಬೀತುಪಡಿಸುತ್ತಲೇ ಇದ್ದಾರೆ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ, ಶ್ರೀ ಶಿವಯೋಗ ಮಂದಿರ ಹಾಗೂ ಅವರ ಪ್ರೇರಣೆಯಿಂದ ಪಂ. ಪಂಚಾಕ್ಷರಿ ಗವಾಯಿಗಳ ಮೂಲಕ ಸ್ಥಾಪಿತವಾದ ಗದುಗಿನ ವೀರೇಶ್ವರ ಪುಣ್ಯಾಶ್ರಮ—ಇವು ಸಮಾಜಕ್ಕೆ ನೀಡಿದ ಕೊಡುಗೆಗಳು ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ.

ಅಖಿಲ ಭಾರತ ವೀರಶೈವ ಮಹಾಸಭಾದ 1904ರಿಂದ ಇಂದಿನವರೆಗಿನ 25 ಅಧ್ಯಕ್ಷರಲ್ಲಿ 23 ಮಂದಿ ಜಂಗಮೇತರ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮವು ಜಾತಿ–ಧರ್ಮಗಳ ಭೇದವಿಲ್ಲದೆ ಸಾವಿರಾರು ದೃಷ್ಟಿವಿಕಲರು, ಅಂಗವಿಕಲರು ಹಾಗೂ ಬಡ ಕಲಾವಿದರ ಬದುಕಿಗೆ ಬೆಳಕು ನೀಡಿದೆ. ಶಿವಯೋಗ ಮಂದಿರವು ತನ್ನ ಕಟ್ಟುನಿಟ್ಟಿನ ಆಚಾರ–ವಿಚಾರಗಳನ್ನು ಒಪ್ಪಿ ಬರುವ ಜಂಗಮ ವಟುಗಳಿಗೆ ಮತ್ತು ಜಂಗಮೇತರ ವಟುಗಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತ ಬಂದಿದೆ.

ಆದರೂ, ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮರೆಮಾಚಿ, ಕೆಲವು ಜಂಗಮ ವಟುಗಳನ್ನು ಮುಂದಿಟ್ಟುಕೊಂಡು ಮಹಾಗುರುವಿನ ವಿರುದ್ಧ ನಿರಂತರವಾಗಿ ಅವಹೇಳನ ಮಾಡುವವರು ತಮ್ಮನ್ನು ತಾವೇ ‘ಬುದ್ಧಿಜೀವಿಗಳು’ ಎಂದು ಕರೆದುಕೊಳ್ಳುತ್ತಿರುವುದು ಈ ಕಾಲದ ಬಹುದೊಡ್ಡ ವ್ಯಂಗ್ಯ!

ಅಂತಹವರ ಆಕ್ರಂದನ, ಅಪವಾದ ಮತ್ತು ಅಕ್ಷರ ದುರ್ವಾಸನೆಯ ನಡುವೆ, ಗದುಗಿನ ಶ್ರೀ ಶಿವಾನಂದ ದೊಡ್ಡಮನಿಯವರ ಹೃದಯಸ್ಪರ್ಶಿ ಉದ್ಗಾರವು ಸತ್ಯದ ಸಾಕ್ಷಿಯಾಗಿ ನಿಲ್ಲುತ್ತದೆ:

“ನನ್ನಪ್ಪ ಕುಮಾರಪ್ಪಾ! ನೀನು ಹುಟ್ಟದಿದ್ದರೆ ನನ್ನಂಥ ಬಡ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!”

ಇದು ಕೇವಲ ಒಬ್ಬ ಆಟೊ ಚಾಲಕನ ಭಾವುಕ ಮಾತಲ್ಲ; ಮಹಾಗುರುವಿನ ಕರುಣೆಯಿಂದ ಬದುಕು ಕಂಡ ಅಸಂಖ್ಯಾತ ಬಡವರು, ಕಲಾವಿದರು ಹಾಗೂ ಅಶಕ್ತ ಜೀವಿಗಳ ಅಂತರಂಗದ ಕೃತಜ್ಞತೆಯ ಧ್ವನಿ.

ಕೆಲವರು ತಮ್ಮ ಲೇಖನಿಯ ಮಸಿಯಿಂದ ಸೂರ್ಯನ ಬೆಳಕನ್ನು ಮಸುಕಾಗಿಸಲು ಪ್ರಯತ್ನಿಸಬಹುದು. ಆದರೆ ಸಮಾಜಸಂಜೀವಿನಿ, ಕಾರುಣಿಕ ಯುಗಪುರುಷ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಸ್ಫಟಿಕದಷ್ಟು ಪಾರದರ್ಶಕವಾದ ಜೀವನ ಮತ್ತು ಲೋಕೋಪಕಾರಿ ಸಾಧನೆಯ ಯಶೋಗಾಥೆಯನ್ನು ಯಾವ ಅಪವಾದವೂ ಮಲೀನಗೊಳಿಸಲಾರದು.

ಸೂರ್ಯನತ್ತ ಉಗುಳಿದರೆ ಸೂರ್ಯ ಮಲಿನನಾಗುವುದಿಲ್ಲ; ಅದು ಉಗುಳಿದವನ ಮುಖಕ್ಕೇ ಮರಳುತ್ತದೆ!

— ಶ್ರೀಕಂಠ ಚೌಕೀಮಠ

@ವಿನಯ್ ಶಿರಹಟ್ಟಿಮಠ
@ಶರಣಪ್ಪ ಸಜ್ಜನ
@ರುದ್ರಪ್ಪ ಪಗಡದಿನ್ನಿ

@

ಪ್ರೀತಿಯ ಶ್ರೀ ವಿನಯ್ ಶಿರಹಟ್ಟಿಮಠ ಅವರಿಗೆ,

ದೀಪದ ಕೆಲಸ ಕೇವಲ ಬೆಳಕು ಕೊಡುವುದಲ್ಲ; ಕತ್ತಲಿನಲ್ಲಿ ಅಡಗಿರುವ ಮುಖಗಳನ್ನೂ ತೋರಿಸುವುದು.
ಇತಿಹಾಸದ ಬೆಳಕೂ ಹಾಗೆಯೇ—ಅದು ಸತ್ಯಕ್ಕೆ ಬೆಳಕು ಕೊಡುತ್ತದೆ; ವಿಕೃತಿಯ ಮುಖವಾಡವನ್ನು ಸುಡುತ್ತದೆ.

ತಾವು ೨೧-೦೮-೨೦೨೬ರಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ—

“ವಚನಗಳ ಸಾಕ್ಷ್ಯದಲ್ಲಿ ಲಿಂಗಾಯತ: ಶರಣರ ಲಿಂಗಾಯತ ಧರ್ಮಕ್ಕೆ ವೀರಶೈವ ಲೇಬಲ್ ಏಕೆ? ಷಟ್‌ಸ್ಥಲದ ಸೋಗಿನಲ್ಲಿ ಬಚ್ಚಿಟ್ಟ ಎರಡು ಬೇರೆ ಬೇರೆ ಪ್ರಪಂಚಗಳು”

ಎಂಬ ಲೇಖನದಲ್ಲಿ ಹೀಗೆ ಬರೆದಿರುವಿರಿ:

“೧೯೦೪ರಲ್ಲಿ ಹಿಂದೂ, ೧೯೪೦ರಲ್ಲಿ ಹಿಂದೂ ಅಲ್ಲ.

ಹಾನಗಲ್ ಮಠದ ಪೀಠಾಧಿಪತಿಗಳು ೧೯೦೪ರಲ್ಲಿ ಒಂದು ನಿಲುವು ತಳೆದರು—ನಾವು ಹಿಂದೂ ಎಂದು. ೧೯೪೦ರಲ್ಲಿ ಆ ನಿಲುವನ್ನು ಬದಲಾಯಿಸಿದರು.

ಶಾಶ್ವತ ಸತ್ಯಗಳು ಮೂವತ್ತಾರು ವರ್ಷಗಳಲ್ಲಿ ಬದಲಾಗುವುದಿಲ್ಲ. ರಾಜಕೀಯ ನಿಲುವುಗಳು ಬದಲಾಗುತ್ತವೆ.”

ಈ ಸಾಲುಗಳನ್ನು ಓದಿದಾಗ ಒಂದು ಪ್ರಶ್ನೆ ಕಿಡಿಯಂತೆ ಎದ್ದು ನಿಲ್ಲುತ್ತದೆ:

೧೯೩೦ರಲ್ಲಿ ಲಿಂಗೈಕ್ಯರಾದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ೧೯೪೦ರಲ್ಲಿ ಎದ್ದುಬಂದು ತಮ್ಮ ನಿಲುವನ್ನು ಬದಲಾಯಿಸಿದರೇ?

ಕಾಲವೇ ಇಲ್ಲಿ ಸಾಕ್ಷಿ.
ದಿನಾಂಕವೇ ಇಲ್ಲಿ ತೀರ್ಪುಗಾರ.
ದಾಖಲೆಯೇ ಇಲ್ಲಿ ಬೆಳಕು !.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಲಿಂಗೈಕ್ಯರಾದುದು ೧೯೩೦ರಲ್ಲಿ. ಕುಂಭಕೋಣಂನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನ ನಡೆದದ್ದು ೧೯೪೦ರಲ್ಲಿ.

ಈ ಹತ್ತು ವರ್ಷಗಳ ಅಂತರವನ್ನು ಮರೆಮಾಚಿ, ೧೯೪೦ರ ಮಹಾಸಭೆಯ ನಿರ್ಣಯವನ್ನು ೧೯೩೦ರಲ್ಲಿ ಲಿಂಗೈಕ್ಯರಾದ ಗುರುಗಳ ವೈಯಕ್ತಿಕ ನಿಲುವಿನ ಬದಲಾವಣೆ ಎಂದು ಬಿಂಬಿಸುವುದು ಇತಿಹಾಸದ ವ್ಯಾಖ್ಯಾನವಲ್ಲ; ಕಾಲಕ್ರಮದ ಕತ್ತು ಹಿಸುಕಿ, ಲಿಂಗೈಕ್ಯ ಗುರುಗಳ ಬಾಯಲ್ಲಿ ಕಲ್ಪಿತ ರಾಜಕೀಯ ಮಾತುಗಳನ್ನು ಇಡುವ ಬೌದ್ಧಿಕ ದುಸ್ಸಾಹಸ.

ತಾವು ಹೇಳಿರುವ ಒಂದು ಮಾತು ಮಾತ್ರ ಸತ್ಯ:

“ಶಾಶ್ವತ ಸತ್ಯಗಳು ಮೂವತ್ತಾರು ವರ್ಷಗಳಲ್ಲಿ ಬದಲಾಗುವುದಿಲ್ಲ.”

ಹೌದು, ಸತ್ಯ ಬದಲಾಗುವುದಿಲ್ಲ.
ಆದರೆ ಲೇಖಕರು ದಿನಾಂಕವನ್ನು ಮರೆತರೆ ಸತ್ಯ ಮಸುಕಾಗುತ್ತದೆ.
ವ್ಯಕ್ತಿಯ ಸ್ಥಾನದಲ್ಲಿ ಸಂಸ್ಥೆಯನ್ನು ನಿಲ್ಲಿಸಿದರೆ ಇತಿಹಾಸ ವಿಕೃತಗೊಳ್ಳುತ್ತದೆ.
೧೯೪೦ರ ನಿರ್ಣಯವನ್ನು ೧೯೩೦ರಲ್ಲಿ ಲಿಂಗೈಕ್ಯರಾದ ಗುರುಗಳ ತಲೆಯ ಮೇಲೆ ಹೊರಿಸಿದರೆ ಅದು ಸಂಶೋಧನೆಯಾಗುವುದಿಲ್ಲ—ಅಪವಾದವಾಗುತ್ತದೆ.

ಇತಿಹಾಸದಲ್ಲಿ ಸರ್ವನಾಮಗಳಿಗೂ ಸಾಕ್ಷ್ಯ ಬೇಕು, ವಿನಯ್ ಅವರೇ!

“ಹಾನಗಲ್ ಮಠದ ಪೀಠಾಧಿಪತಿಗಳು” ಎಂದು ಅಸ್ಪಷ್ಟವಾಗಿ ಬರೆಯುವುದರಿಂದ ಕಾಲಕ್ರಮದ ಪ್ರಶ್ನೆ ಮರೆಯಾಗುವುದಿಲ್ಲ. ೧೯೦೪ರಲ್ಲಿ ನಿಲುವು ತೆಗೆದುಕೊಂಡವರು ಯಾರು? ಅದರ ಮೂಲ ನಿರ್ಣಯ ಯಾವುದು? ೧೯೪೦ರಲ್ಲಿ ಅದನ್ನು ಬದಲಿಸಿದವರು ಯಾರು? ಆ ನಿರ್ಣಯದ ಸಂಖ್ಯೆ ಯಾವುದು?

ವ್ಯಕ್ತಿ ಬೇರೆ, ಸಂಸ್ಥೆ ಬೇರೆ.
ಸಂಸ್ಥಾಪಕರು ಬೇರೆ, ಅವರ ಲಿಂಗೈಕ್ಯದ ಹತ್ತು ವರ್ಷಗಳ ನಂತರ ನಡೆದ ಅಧಿವೇಶನ ಬೇರೆ.

ಇವೆರಡನ್ನೂ ಒಂದೇ ವಾಕ್ಯದ ಕುಲುಮೆಯಲ್ಲಿ ಕರಗಿಸಿ, “ರಾಜಕೀಯ ನಿಲುವು ಬದಲಾಯಿತು” ಎಂದು ಸುರಿದರೆ ಅದು ಇತಿಹಾಸವಾಗುವುದಿಲ್ಲ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಿವಯೋಗಮಂದಿರಗಳ ಮೂಲ ನಾಮಕರಣದಲ್ಲಿಯೇ “ಶ್ರೀಮದ್ವೀರಶೈವ” ಎಂಬ ಗುರುತು ಪ್ರಜ್ವಲಿಸುತ್ತಿದೆ; “ಹಿಂದೂ” ಎಂಬ ಹೆಸರಲ್ಲ.

೧೯೦೪ರಲ್ಲಿ ಶ್ರೀ ಕುಮಾರ ಶಿವಯೋಗಿಗಳು ಏಕಾಂಗಿಯಾಗಿ ಸಮಾಜ ಸಂಘಟನೆ ಮಾಡಲಿಲ್ಲ. ಅವರ ಹಿಂದೆ ತ್ಯಾಗ, ತಪಸ್ಸು, ಪಾಂಡಿತ್ಯ ಮತ್ತು ಸಾಮಾಜಿಕ ಕಳಕಳಿಯಿಂದ ತುಂಬಿದ ಬಲಾಢ್ಯ ಸಿಂಹಪಡೆಯೇ ಇತ್ತು.

ಅಂದಿನ ಸಮಾಜಸೇವಕರು ನಿವೃತ್ತಿಯಾದ ಮೇಲೆ ಕಾಲಹರಣಕ್ಕೆಂದು ಸಮಾಜಸೇವೆಗೆ ಬಂದವರಲ್ಲ. ಅಧಿಕಾರ ಕಳೆದುಕೊಂಡ ಮೇಲೆ ಸಮಾಜದ ವೇದಿಕೆ ಹುಡುಕಿದವರೂ ಅಲ್ಲ. ರಾಜಕಾರಣಿಗಳ ನೆರಳಿನಲ್ಲಿ ನಿಂತು ಸಮಾಜಸೇವೆಯ ಮುಖವಾಡ ತೊಟ್ಟವರೂ ಅಲ್ಲ.

ಅವರು ತಮ್ಮ ಬದುಕಿನ ಬೆಳಕನ್ನೇ ಸಮಾಜದ ಕತ್ತಲಿಗೆ ದೀಪವಾಗಿ ಅರ್ಪಿಸಿದವರು. ತಮ್ಮ ಶ್ರಮ, ಸಮಯ, ಸಂಪತ್ತು ಮತ್ತು ಸರ್ವಸ್ವವನ್ನೇ ಸಮಾಜಕ್ಕೆ ಧಾರೆಯೆರೆದವರು.

ಇಂದಿನ ಧರ್ಮಹಂತಕ ರಾಜಕೀಯ ವಾತಾವರಣವನ್ನು ೧೯೦೪ರ ಮೇಲೆ ಹೇರಿಕೊಂಡು, ಯಾರೋ ಬರೆದ ಕುಹಕದ ನಿರೂಪಣೆಯನ್ನು ಇತಿಹಾಸವೆಂದು ಪುನರಾವರ್ತಿಸುವುದು ಆ ಮಹನೀಯರ ತ್ಯಾಗಕ್ಕೆ ಮಾಡುವ ಅವಮಾನ.

ಇನ್ನು ೧೯೪೦ರ ಕುಂಭಕೋಣಂ ಅಧಿವೇಶನದ ದಾಖಲೆಗಳ ಮೇಲೆಯೇ ದೀಪ ಹಚ್ಚೋಣ.

ನಿರ್ಣಯ ಸಂಖ್ಯೆ ೧೫ ಏನು ಹೇಳುತ್ತದೆ?

ಪ್ರತಿ ಲಿಂಗಾಯತರೂ ತಮ್ಮ ಉಪಪಂಗಡ ಏನೇ ಇರಲಿ—

“ಲಿಂಗಾಯತ” ಅಥವಾ “ವೀರಶೈವ”

ಎಂದು ನೋಂದಾಯಿಸಿಕೊಳ್ಳಬೇಕೆಂದು ಹೇಳುತ್ತದೆ.

ಅಷ್ಟೇ ಅಲ್ಲ—

“ಲಿಂಗಾಯತ” ಮತ್ತು “ವೀರಶೈವ” ಪದಗಳು ಸಮಾನಾರ್ಥಕ

ಎಂದು ಮದ್ರಾಸ್ ಸರ್ಕಾರ ಗಮನಿಸಬೇಕೆಂದೂ, “ವೀರಶೈವ” ಎಂದು ಹೇಳಿಕೊಳ್ಳುವವರನ್ನೂ ಎಲ್ಲ ರೀತಿಗಳಲ್ಲಿಯೂ “ಲಿಂಗಾಯತರು” ಎಂದೇ ಪರಿಗಣಿಸಬೇಕೆಂದೂ ಮನವಿ ಮಾಡುತ್ತದೆ.

ಈ ನಿರ್ಣಯದಲ್ಲಿ ವೀರಶೈವವನ್ನು ತಿರಸ್ಕರಿಸಲಾಗಿದೆಯೇ?
ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಪ್ರಪಂಚಗಳೆಂದು ಹೇಳಲಾಗಿದೆಯೇ?
ವೀರಶೈವ ಎಂಬುದು ಹೊರಗಿನಿಂದ ಅಂಟಿಸಿದ “ಲೇಬಲ್” ಎಂದು ಎಲ್ಲಿಯಾದರೂ ಬರೆಯಲಾಗಿದೆಯೇ?

ಇಲ್ಲ!

ತಾವು ಲೇಖನದ ಶೀರ್ಷಿಕೆಯಲ್ಲಿ—

“ಶರಣರ ಲಿಂಗಾಯತ ಧರ್ಮಕ್ಕೆ ವೀರಶೈವ ಲೇಬಲ್ ಏಕೆ?”

ಎಂದು ಪ್ರಶ್ನಿಸುತ್ತೀರಿ. ಆದರೆ ತಾವು ಆಧಾರವೆಂದು ತೋರಿಸುವ ೧೯೪೦ರ ದಾಖಲೆಯೇ—

“ಲಿಂಗಾಯತ ಮತ್ತು ವೀರಶೈವ ಪದಗಳು ಸಮಾನಾರ್ಥಕ”

ಎಂದು ತಮ್ಮ ಪ್ರಶ್ನೆಯ ಬುಡಕ್ಕೇ ಬೆಂಕಿ ಹಚ್ಚುತ್ತದೆ.

ತಮ್ಮ ವಾದವನ್ನು ಸೋಲಿಸಲು ಬೇರೆಯವರ ದಾಖಲೆ ಬೇಕಾಗಿಲ್ಲ; ತಾವು ಉಲ್ಲೇಖಿಸುವ ದಾಖಲೆಯೇ ಸಾಕಾಗಿದೆ! (ಕುಂಬಕೋಣಂ ಅದೀವೇಶನದ ಎಲ್ಲ ನಿರ್ಣಯಗಳ ಚಿತ್ರಗಳನ್ನು ಲೇಕನದ ಕೆಳಗೆ ಲಗತ್ತಿಸಿರುವೆ)

ನಿರ್ಣಯ ಸಂಖ್ಯೆ ೧೬ ಏನು ಹೇಳುತ್ತದೆ?

ಲಿಂಗಾಯತ ಸಮುದಾಯಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ವದ ಪಾಲು ಇರುವುದರಿಂದ, ಭವಿಷ್ಯದ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಯೋಗ್ಯ ಪ್ರಾತಿನಿಧ್ಯ ನೀಡಬೇಕು ಹಾಗೂ ರಾಜಕೀಯ, ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಲಿಂಗಾಯತರನ್ನು **“ಮುಖ್ಯ ಅಲ್ಪಸಂಖ್ಯಾತ ಸಮುದಾಯ”**ವೆಂದು ಪರಿಗಣಿಸಬೇಕೆಂದು ಮನವಿ ಮಾಡುತ್ತದೆ.

ಇದು ೧೯೪೦ರ ಬ್ರಿಟಿಷ್ ಭಾರತದ ರಾಜಕೀಯ ಪ್ರಾತಿನಿಧ್ಯದ ಭಾಷೆ.

ಆ ಕಾಲದ “ಮುಖ್ಯ ಅಲ್ಪಸಂಖ್ಯಾತ ಸಮುದಾಯ” ಎಂಬ ಪದವನ್ನು ಇಂದಿನ ಸಂವಿಧಾನಬದ್ಧ “ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ” ಎಂಬ ಅರ್ಥಕ್ಕೆ ಎಳೆದುತಂದು—

“೧೯೪೦ರಲ್ಲಿ ಹಿಂದೂ ಅಲ್ಲ”

ಎಂದು ತೀರ್ಪು ಬರೆಯುವುದು ಕಾಲವ್ಯತ್ಯಾಸದ ವಿಕೃತಿ.

ದಾಖಲೆಯಲ್ಲಿರುವುದನ್ನು ಓದುವುದು ಸಂಶೋಧನೆ;
ತಮ್ಮ ವಾದಕ್ಕೆ ಬೇಕಾದುದನ್ನು ದಾಖಲೆಯೊಳಗೆ ತುರುಕುವುದು ಪ್ರಚಾರ.

ನಿರ್ಣಯ ಸಂಖ್ಯೆ ೨೩ ಏನು ಹೇಳುತ್ತದೆ?

ಬ್ರಿಟಿಷ್ ಭಾರತ ಮತ್ತು ಭಾರತೀಯ ಸಂಸ್ಥಾನಗಳಲ್ಲಿ ಲಿಂಗಾಯತರಿಗೆ ಹಿಂದೂ ಕಾನೂನು ಅನ್ವಯಿಸುವಾಗ ನಡೆಯುತ್ತಿದ್ದ ಅನ್ಯಾಯವನ್ನು ಖಂಡಿಸಿ, ಲಿಂಗಾಯತರಿಗೆ ಪ್ರತ್ಯೇಕ ಕಾನೂನು ಸಂಹಿತೆ ಸಿದ್ಧಪಡಿಸಬೇಕೆಂದು ನಿರ್ಣಯಿಸುತ್ತದೆ.

ಆ ಪ್ರತ್ಯೇಕ ಸಂಹಿತೆಯನ್ನು ಯಾವುದರ ಆಧಾರದ ಮೇಲೆ ರೂಪಿಸಬೇಕೆಂದು ಹೇಳಲಾಗಿದೆ?

“ವೀರಶೈವ ಶಾಸ್ತ್ರಗಳು ಮತ್ತು ಶಾಶ್ವತಾಚಾರಗಳ ಆಧಾರದ ಮೇಲೆ.”

ಗಮನಿಸಿ—ಅಲ್ಲಿ “ವೀರಶೈವ”ವನ್ನು ಅಳಿಸಿಲ್ಲ.
ಅದನ್ನು ಲೇಬಲ್ ಎಂದು ತಿರಸ್ಕರಿಸಿಲ್ಲ.
ಬದಲಾಗಿ ವೀರಶೈವ ಶಾಸ್ತ್ರಗಳು ಮತ್ತು ಶಾಶ್ವತಾಚಾರಗಳನ್ನೇ ಲಿಂಗಾಯತ ಕಾನೂನು ಸಂಹಿತೆಯ ಮೂಲಾಧಾರವಾಗಿ ಅಂಗೀಕರಿಸಲಾಗಿದೆ.

ಹೀಗಿರುವಾಗ—

“೧೯೦೪ರಲ್ಲಿ ಹಿಂದೂ; ೧೯೪೦ರಲ್ಲಿ ಹಿಂದೂ ಅಲ್ಲ”

ಎಂಬ ಚಮತ್ಕಾರದ ಘೋಷಣೆ ಎಲ್ಲಿಂದ ಬಂತು?

ಹಿಂದೂ ಕಾನೂನಿನ ಅನ್ವಯದಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ವಿರೋಧಿಸುವುದಕ್ಕೂ, “ನಾವು ಹಿಂದೂಗಳಲ್ಲ” ಎಂದು ಧಾರ್ಮಿಕ ಘೋಷಣೆ ಮಾಡುವುದಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಉದ್ದೇಶಪೂರ್ವಕವಾಗಿ ಅಳಿಸಿದರೆ ಮಾತ್ರ ತಮ್ಮ ವಾದ ಉಳಿಯುತ್ತದೆ. ಆದರೆ ವಾದವನ್ನು ಉಳಿಸಲು ಇತಿಹಾಸವನ್ನು ಕೊಲ್ಲಬಾರದು.

ತಮ್ಮ ನಿರೂಪಣೆ ಡಾ. ಎಸ್. ಎಂ. ಜಾಮದಾರ್ ಅವರ ‘ಅಖಿಲ ಭಾರತ ವೀರಶೈವ ಮಹಾಸಭೆಯು ಸತ್ಯವನ್ನು ಅರ್ಥಮಾಡಿಕೊಳ್ಳುವುದೇ?’ ಎಂಬ ಪುಸ್ತಕ ಹಾಗೂ ಅದೇ ನಿಲುವನ್ನು ಆಧರಿಸಿ ಡಾ. ಜೆ. ಎಸ್. ಪಾಟೀಲರು ಪ್ರಸಾರ ಮಾಡಿದ ‘ಅಖಿಲ ಭಾರತ ವೀರಶೈವ ಮಹಾಸಭೆ ಸೃಷ್ಟಿಸಿದ ಗೊಂದಲಗಳು—ಲಿಂಗಾಯತ ಧರ್ಮ ಇತಿಹಾಸ ಮಾಲಿಕೆ–೨೩’ ವಿಡಿಯೊದ ಪ್ರತಿಧ್ವನಿಯಂತೆ ಕಾಣುತ್ತದೆ.

ಡಾ. ಜಾಮದಾರ್, ಡಾ. ಜೆ. ಎಸ್. ಪಾಟೀಲ, ಡಾ. ಶಶಿಕಾಂತ ಪಟ್ಟಣ, ಪ್ರೊ. ಸಿದ್ದು ಯಾಪಲಪರವಿ ಮುಂತಾದವರ ನಿರೂಪಣೆಗಳು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪವಿತ್ರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನಗಳೆಂದು ನಾನು ದಾಖಲೆಗಳ ಆಧಾರದ ಮೇಲೆ ಹಿಂದಿನಿಂದಲೂ ಪ್ರತಿವಾದಿಸುತ್ತ ಬಂದಿದ್ದೇನೆ.

ಆದರೆ ಒಂದು ಸುಳ್ಳಿಗೆ ಹಲವು ವಿದ್ವಾಂಸರ ಸಹಿ ಬಿದ್ದರೂ ಅದು ಸತ್ಯವಾಗುವುದಿಲ್ಲ.
ಒಂದು ತಪ್ಪು ಸಾವಿರ ಬಾರಿ ಪುನರಾವರ್ತನೆಯಾದರೂ ಅದು ಇತಿಹಾಸವಾಗುವುದಿಲ್ಲ.

ತಮ್ಮ ಬಳಿ ೧೯೦೪ರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು—

“ನಾವು ಹಿಂದೂ”

ಎಂದು ನಿರ್ಣಯಿಸಿದ ಮೂಲ ದಾಖಲೆ ಇದ್ದರೆ, ಅದರ ಅಧಿವೇಶನದ ಹೆಸರು, ದಿನಾಂಕ, ನಿರ್ಣಯ ಸಂಖ್ಯೆ, ಮೂಲಪಠ್ಯ, ಪುಟಸಂಖ್ಯೆ ಮತ್ತು ಸಹಿ ಮಾಡಿದವರ ವಿವರಗಳೊಂದಿಗೆ ಸಾರ್ವಜನಿಕವಾಗಿ ಪ್ರಕಟಿಸಿ.

ದಾಖಲೆ ಇದ್ದರೆ ದೀಪದ ಮುಂದೆ ಇಡಿ.
ಇಲ್ಲದಿದ್ದರೆ ಕತ್ತಲಿನಲ್ಲಿ ನೆರಳುಗಳೊಂದಿಗೆ ಯುದ್ಧ ಮಾಡಬೇಡಿ.

ಮೂಲ ದಾಖಲೆ ಇಲ್ಲದಿದ್ದರೆ—

“ಹಾನಗಲ್ ಮಠದ ಪೀಠಾಧಿಪತಿಗಳು ೧೯೦೪ರಲ್ಲಿ ಒಂದು ನಿಲುವು ತಳೆದರು; ೧೯೪೦ರಲ್ಲಿ ಅದನ್ನು ಬದಲಾಯಿಸಿದರು”

ಎಂಬ ವಾಕ್ಯವನ್ನು ಹಿಂಪಡೆದು ಸಾರ್ವಜನಿಕವಾಗಿ ತಿದ್ದುಪಡಿ ಮಾಡುವುದು ತಮ್ಮ ಜ್ಞಾನಕ್ಕೂ, ಬರವಣಿಗೆಗೂ ಸಲ್ಲಿಸುವ ಗೌರವ.

ಇದು ಶ್ರಾವಣ ಮಾಸ.

“ಶಿವ ಶಿವ” ಎಂದು ಆತ್ಮಾನುಸಂಧಾನ ಮಾಡಿಕೊಳ್ಳಬೇಕಾದ ಪವಿತ್ರ ಕಾಲ. ಹೊರಗೆ ಶಿವನಿಗೆ ದೀಪ ಹಚ್ಚಿ, ಒಳಗೆ ಶಿವಯೋಗಿಯ ಸ್ಮೃತಿಗೆ ಮಸಿ ಎರಚಿದರೆ ಅದು ಯಾವ ಅನುಸಂಧಾನ? ಶಿವನಿಗೆ ಬಿಲ್ವಪತ್ರ ಅರ್ಪಿಸುತ್ತಾ, ಶಿವಯೋಗಿಗಳ ವ್ಯಕ್ತಿತ್ವದ ಮೇಲೆ ಅಪವಾದದ ಮುಳ್ಳು ಎಸೆಯುವುದು ಯಾವ ಭಕ್ತಿ?

 

ಕಳೆದ ಹಲವು ದಿನಗಳಿಂದ ತಾವು ಪ್ರಕಟಿಸುತ್ತಿರುವ ಪ್ರಚೋದನಾತ್ಮಕ ಲೇಖನಗಳು ಮತ್ತು ಅವುಗಳ ಕೆಳಗೆ ಹರಿಯುತ್ತಿರುವ ಅಸ್ವಸ್ಥ ಪ್ರತಿಕ್ರಿಯೆಗಳು ಆರೋಗ್ಯಕರ ಸಂವಾದಕ್ಕೆ ಬೆಳಕು ನೀಡುತ್ತಿಲ್ಲ; ಸಮಾಜದೊಳಗಿನ ಬಿರುಕುಗಳಿಗೆ ಎಣ್ಣೆ ಸುರಿಯುತ್ತಿವೆ. ಇದನ್ನು ನಾನು ಸಾರ್ವಜನಿಕವಾಗಿ, ಆದರೆ ಅತ್ಯಂತ ಗೌರವದಿಂದ ತಮ್ಮ ಗಮನಕ್ಕೆ ತರುತ್ತಿದ್ದೇನೆ.

ವೈಚಾರಿಕ ಭಿನ್ನಾಭಿಪ್ರಾಯ ತಮ್ಮ ಹಕ್ಕು.
ಲಿಂಗಾಯತ ಪ್ರತ್ಯೇಕ ಧರ್ಮವನ್ನು ಪ್ರತಿಪಾದಿಸುವುದೂ ತಮ್ಮ ಸ್ವಾತಂತ್ರ್ಯ.

ಆದರೆ ತಮ್ಮ ವೈಚಾರಿಕ ಅಭಿಮಾನದ ಅವಸರದಲ್ಲಿ ಮತ್ತೊಬ್ಬರ ಆರಾಧ್ಯ ಗುರುಗಳ ಪವಿತ್ರ ವ್ಯಕ್ತಿತ್ವವನ್ನು ಬಲಿಪೀಠಕ್ಕೆ ಏರಿಸುವ ಹಕ್ಕು ಯಾರಿಗೂ ಇಲ್ಲ.

ಗುರುಗಳನ್ನು ಪ್ರಶ್ನಿಸಬಹುದು;
ಆದರೆ ಅವರ ಕಾಲವನ್ನು ಕೊಲ್ಲಬಾರದು.

ಇತಿಹಾಸವನ್ನು ವಿಮರ್ಶಿಸಬಹುದು;
ಆದರೆ ಲಿಂಗೈಕ್ಯರಾದವರ ಬಾಯಲ್ಲಿ ಕಲ್ಪಿತ ಮಾತುಗಳನ್ನು ಇಡಬಾರದು.

ವಾದವನ್ನು ಹರಿತಗೊಳಿಸಬಹುದು;
ಆದರೆ ದಾಖಲೆಗಳ ಕತ್ತು ಹಿಸುಕಬಾರದು.

ದಾಖಲೆಯಿಲ್ಲದ ಆರೋಪ ಹೊಗೆ.
ಸತ್ಯದ ದಾಖಲೆಯ ಬೆಳಕು.
ಹೊಗೆ ಕೆಲಕಾಲ ಕಣ್ಣು ಮಂಜಾಗಿಸಬಹುದು;
ಆದರೆ ಬೆಳಕಿನ ಎದುರು ಅದು ಬಹುಕಾಲ ಬದುಕುವುದಿಲ್ಲ.

ತಮ್ಮ ಅಭಿಮಾನದ ಅವಸರದಲ್ಲಿ ಮತ್ತೊಬ್ಬರ ಆರಾಧ್ಯ ಗುರುಗಳ ನಿಂದನೆ ತಮ್ಮಿಂದ ಭವಿಷ್ಯದಲ್ಲಿ ಮತ್ತೆ ಜರುಗಬಾರದೆಂದು ಅತ್ಯಂತ ಸ್ಪಷ್ಟವಾಗಿ ಕೇಳಿಕೊಳ್ಳುತ್ತೇನೆ.

 

ಶ್ರೀಕಂಠ ಚೌಕೀಮಠ