ಆ ಮೂವತ್ತಾರು ವರ್ಷಗಳು!!!
ಸ್ಪಷ್ಟೀಕರಣ ಲೇಖನ — ಭಾಗ ೪
೧೯೦೪ರ ಪ್ರಥಮ ವೀರಶೈವ ಮಹಾಧಿವೇಶನ: ದುಡಿದವರ ನುಡಿಗಳಲ್ಲಿ ಅಡಗಿರುವ ಐತಿಹಾಸಿಕ ಸತ್ಯ
ಮಹಾಸಭೆಯ ನಡಾವಳಿಗಳೇ ಇಲ್ಲವೆಂದವರಿಗೆ — ಮೂಲ ದಾಖಲೆಗಳೇ ಉತ್ತರ!
========================
ಶ್ರೀಕಂಠ ಚೌಕೀಮಠ
ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ
ದೆಹಲಿ ರಾಜ್ಯ ಘಟಕ, ನವದೆಹಲಿ
=============================
ಪ್ರಸ್ತಾವನೆ: ಒಂದು ಶತಮಾನದ ಹಿಂದಿನ ನುಡಿಗಳು ಇಂದು ಸಾಕ್ಷಿಯಾಗಿ ನಿಂತಿವೆ!
ಇತಿಹಾಸವೆಂದರೆ ಕೇವಲ ಗತಕಾಲದ ಘಟನೆಗಳ ನಿರೂಪಣೆಯಲ್ಲ; ಅದು ಒಂದು ಯುಗದ ಸಂಕಟಗಳು, ಸಮಾಜದ ಆಶೋತ್ತರಗಳು ಮತ್ತು ದೂರದೃಷ್ಟಿಯುಳ್ಳ ಮಹನೀಯರ ಸಂಕಲ್ಪಗಳು ದಾಖಲಾಗಿರುವ ಜೀವಂತ ಸ್ಮೃತಿಕೋಶ. ಅದರ ಪುಟಗಳನ್ನು ತೆರೆಯುವಾಗ ಇಂದಿನ ಅಭಿಪ್ರಾಯಗಳನ್ನು ಹಿಂದಿನ ಕಾಲದ ಮೇಲೆ ಹೇರದೆ, ಆ ಕಾಲದ ಜನರ ನುಡಿಗಳಲ್ಲಿಯೇ ಅವರ ಆಶಯಗಳನ್ನು ಅರಿಯುವ ವಿವೇಚನೆ ಅಗತ್ಯ.
ಹತ್ತೊಂಬತ್ತನೆಯ ಶತಮಾನದ ಅಂತ್ಯ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಕರ್ನಾಟಕವು ಇಂದಿನಂತೆ ಒಂದೇ ಆಡಳಿತ ವ್ಯವಸ್ಥೆಯಡಿ ಇರಲಿಲ್ಲ. ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಆಡಳಿತಗಳ ನಡುವೆ ಹರಿದುಹಂಚಿಹೋಗಿದ್ದ ಕನ್ನಡನಾಡಿನ ವೀರಶೈವ ಸಮಾಜವು ಶೈಕ್ಷಣಿಕ ಹಿಂದುಳಿದಿರುವಿಕೆ, ಪರಸ್ಪರ ಸಂಪರ್ಕದ ಕೊರತೆ ಮತ್ತು ಸಂಘಟಿತ ಪ್ರಯತ್ನಗಳ ಅಭಾವದಿಂದ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಪ್ರಾಂತೀಯ ಗಡಿಗಳು ಭೌಗೋಳಿಕ ದೂರವನ್ನು ಮಾತ್ರ ಸೃಷ್ಟಿಸಿರಲಿಲ್ಲ; ಸಾಮಾಜಿಕ ಉನ್ನತಿಗಾಗಿ ನಡೆಯುತ್ತಿದ್ದ ಪ್ರತ್ಯೇಕ ಪ್ರಯತ್ನಗಳ ನಡುವೆ ಸಮನ್ವಯ ಸಾಧಿಸುವುದನ್ನೂ ಕಷ್ಟಕರವಾಗಿಸಿದ್ದವು.
ಆದರೆ ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಮಾಜದ ಭವಿಷ್ಯದ ಕುರಿತು ಚಿಂತಿಸಿದ ಮಹನೀಯರ ಕೊರತೆಯಿರಲಿಲ್ಲ. ಶಿಕ್ಷಣವೇ ಉನ್ನತಿಯ ಮೂಲಾಧಾರವೆಂದು ನಂಬಿದ ಸಮಾಜಸೇವಕರು, ಧಾರ್ಮಿಕ ಜಾಗೃತಿಗೆ ಶ್ರಮಿಸಿದ ಮಠಾಧಿಪತಿಗಳು, ತಮ್ಮ ಸಂಪತ್ತನ್ನು ವಿದ್ಯಾದಾನಕ್ಕೆ ಮೀಸಲಿಟ್ಟ ದಾನಿಗಳು ಮತ್ತು ಸಂಘಟನೆಯ ಕನಸು ಕಂಡ ಮುಂದಾಳುಗಳ ಪರಿಶ್ರಮವು ಕ್ರಮೇಣ ಒಂದು ಮಹತ್ತರ ಚಳವಳಿಗೆ ನಾಂದಿಯಾಯಿತು.
ಆ ಚಳವಳಿಯ ಸಂಘಟಿತ ಅಭಿವ್ಯಕ್ತಿಯೇ ೧೯೦೪ರ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಮಹಾಧಿವೇಶನ.
ಈ ಮಹಾಧಿವೇಶನವು ಆಕಸ್ಮಿಕವಾಗಿ ನಡೆದ ಸಮಾರಂಭವಲ್ಲ. ಅದರ ಹಿಂದೆ ದಶಕಗಳ ಶೈಕ್ಷಣಿಕ ಪ್ರಯತ್ನಗಳಿದ್ದವು; ಸಮಾಜದ ವಿವಿಧ ಭಾಗಗಳಲ್ಲಿ ರೂಪುಗೊಂಡ ಸುಧಾರಣಾ ಚಟುವಟಿಕೆಗಳಿದ್ದವು; ಎಲ್ಲ ಪ್ರಾಂತಗಳ ವೀರಶೈವರನ್ನು ಒಂದೇ ವೇದಿಕೆಗೆ ಕರೆತರುವ ದೂರದೃಷ್ಟಿಯಿತ್ತು.
ವಿಶೇಷವಾಗಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪ್ರೇರಣೆ, ಮಾರ್ಗದರ್ಶನ ಮತ್ತು ಸಂಘಟನಾತ್ಮಕ ಸಹಕಾರವು ಈ ಐತಿಹಾಸಿಕ ಪ್ರಯತ್ನದಲ್ಲಿ ವಹಿಸಿದ ಪಾತ್ರವನ್ನು ಅಂದಿನ ನಡಾವಳಿಗಳೇ ದಾಖಲಿಸಿವೆ. ಸಭೆಯ ರೂಪುರೇಷೆಗಳನ್ನು ನಿರ್ಧರಿಸುವುದರಿಂದ ಹಿಡಿದು ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸುವವರೆಗೆ ಅವರ ಸಕ್ರಿಯ ಭಾಗವಹಿಸುವಿಕೆಯ ವಿವರಗಳು ಮೂಲಪಾಠದಲ್ಲಿ ಕಾಣಿಸುತ್ತವೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ಪ್ರಥಮ ಮಹಾಧಿವೇಶನದ ದಾಖಲೆಗಳಲ್ಲಿ ‘ವೀರಶೈವ’ ಮತ್ತು ‘ಲಿಂಗಾಯತ’ ಎಂಬ ಎರಡೂ ಪದಗಳು ಬಳಕೆಯಾಗಿವೆ. ಅವುಗಳ ಬಳಕೆಯ ಸಂದರ್ಭವನ್ನು ಪರಿಶೀಲಿಸದೆ, ಇಂದಿನ ವೈಚಾರಿಕ ವಿವಾದಗಳ ಅರ್ಥವನ್ನು ಆ ಕಾಲದ ಭಾಷೆಯ ಮೇಲೆ ಹೇರುವುದು ಐತಿಹಾಸಿಕ ಅಧ್ಯಯನಕ್ಕೆ ನ್ಯಾಯ ಒದಗಿಸುವುದಿಲ್ಲ.
ಇತ್ತೀಚೆಗೆ ಶ್ರೀ ವಿನಯ್ ಶಿರಹಟ್ಟಿಮಠ ಅವರು ತಮ್ಮ ‘ಆ ಮೂವತ್ತಾರು ವರ್ಷಗಳು!!! — ೧೯೦೪ ಮತ್ತು ಆ ಮೂರು ನಿರ್ಣಯಗಳು’ ಎಂಬ ಲೇಖನದಲ್ಲಿ ಮಹಾಸಭೆಯ ಆರಂಭಿಕ ನಿಲುವುಗಳ ಕುರಿತು ಮಂಡಿಸಿರುವ ವ್ಯಾಖ್ಯಾನಗಳಿಗೆ ಉತ್ತರ ಹುಡುಕುವಾಗ ಈ ಮೂಲ ದಾಖಲೆಗಳ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
ಹದಿಮೂರು ನಿರ್ಣಯಗಳಲ್ಲಿ ಆಯ್ದ ಮೂರರ ಕುರಿತು ಚರ್ಚಿಸುವ ಮೊದಲು, ಆ ನಿರ್ಣಯಗಳನ್ನು ಅಂಗೀಕರಿಸಿದ ಸಂಸ್ಥೆಯ ಸ್ಥಾಪನೆಯ ಹಿಂದಿನ ಉದ್ದೇಶವೇನಾಗಿತ್ತು ಎಂಬುದನ್ನು ಅರಿಯಬೇಕಾಗಿದೆ. ಅದಕ್ಕೆ ಅತ್ಯಂತ ಸೂಕ್ತವಾದ ಮಾರ್ಗವೆಂದರೆ ಮಹಾಸಭೆಯ ಪ್ರಾರಂಭಿಕ ಸಂಘಟಕರೇ ಬರೆದ ಪೀಠಿಕೆಯನ್ನು ಹಾಗೂ ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರು ಮಾಡಿದ ಭಾಷಣವನ್ನು ಓದುವುದು.
ಈ ನಾಲ್ಕನೆಯ ಭಾಗದಲ್ಲಿ ಅಂತಹ ಎರಡು ಮಹತ್ವದ ಐತಿಹಾಸಿಕ ಆಕರಗಳನ್ನು ಓದುಗರ ಮುಂದಿಡುತ್ತಿದ್ದೇನೆ.
ಮೊದಲನೆಯದು, ಮಹಾಸಭೆಯ ಕಾರ್ಯನಿರ್ವಾಹಕ ಸಭೆಯ ಸದಸ್ಯರಾದ ಶ್ರೀ ಗುರುಬಸಪ್ಪ ಫಕೀರಪ್ಪ ಹಳಕಟ್ಟಿ ಮತ್ತು ಶ್ರೀ ವೀರಭದ್ರಪ್ಪ ಬಸಪ್ಪ ಹಾಲಭಾವಿ ಅವರು ಬರೆದ ಪೀಠಿಕೆ. ಸಮಾಜದ ಭೌಗೋಳಿಕ ವಿಭಜನೆ, ಶೈಕ್ಷಣಿಕ ಹಿನ್ನಡೆ, ಸಂಘಟನೆಯ ಅನಿವಾರ್ಯತೆ ಹಾಗೂ ಮಹಾಸಭೆಯ ಸ್ಥಾಪನೆಗೆ ಕಾರಣರಾದ ಮಹನೀಯರ ಕುರಿತು ಈ ಪೀಠಿಕೆ ಬೆಳಕು ಚೆಲ್ಲುತ್ತದೆ.
ಎರಡನೆಯದು, ೧೩ ಮೇ ೧೯೦೪ರಂದು ಧಾರವಾಡದ ದರ್ಬಾರು ಹಾಲ್ನಲ್ಲಿ ನಡೆದ ಪ್ರಥಮ ಮಹಾಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಚನ್ನಮಲ್ಲಪ್ಪ ಅಣ್ಣಾ ಟೆಂಗಿನಕಾಯಿ ಅವರ ಭಾಷಣ. ಇದು ಕೇವಲ ಔಪಚಾರಿಕ ಸ್ವಾಗತ ನುಡಿಯಲ್ಲ; ಅಂದಿನ ಸಮಾಜದ ಶೈಕ್ಷಣಿಕ ಹೋರಾಟಗಳು, ವಿದ್ಯಾವರ್ಧಕ ಸಂಸ್ಥೆಗಳ ಸ್ಥಾಪನೆ, ದಾನಿಗಳ ಕೊಡುಗೆಗಳು, ಮಹಾಸಭೆಯ ಉದಯದ ಹಿಂದಿನ ಚರ್ಚೆಗಳು ಮತ್ತು ಅದರ ಸಂಘಟನಾತ್ಮಕ ಬೆಳವಣಿಗೆಯನ್ನು ದಾಖಲಿಸುವ ಐತಿಹಾಸಿಕ ನಿರೂಪಣೆ.
ಈ ಭಾಷಣದಲ್ಲಿ ೧೮೬೯ರ ವಿದ್ಯಾರ್ಥಿ ಭೋಜನಾಲಯ, ೧೮೮೩ರ ಲಿಂಗಾಯತ ಎಜುಕೇಶನ್ ಫಂಡ್, ೧೯೦೩ರ ವೀರಶೈವ ಮತಪ್ರಚಾರಕ ಸಂಘ ಹಾಗೂ ಮಹಾಸಭೆಯ ಸ್ಥಾಪನೆಗೆ ಮುನ್ನ ನಡೆದ ಸಮಾಲೋಚನೆಗಳ ವಿವರಗಳಿವೆ. ಇವುಗಳ ಮೂಲಕ ಒಂದು ಸಮಾಜವು ತನ್ನ ಶೈಕ್ಷಣಿಕ ಮತ್ತು ಸಂಘಟನಾತ್ಮಕ ಭವಿಷ್ಯವನ್ನು ರೂಪಿಸಿಕೊಳ್ಳಲು ನಡೆಸಿದ ಪ್ರಯತ್ನಗಳ ಚಿತ್ರಣ ದೊರೆಯುತ್ತದೆ.
ಇನ್ನೂ ಗಮನಾರ್ಹವಾದ ಸಂಗತಿಯೆಂದರೆ, ಪ್ರಥಮ ಮಹಾಧಿವೇಶನವನ್ನು ಆರಂಭದಲ್ಲಿ ೧೯೦೩ರ ಡಿಸೆಂಬರ್ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದರೂ ಧಾರವಾಡದಲ್ಲಿ ಪ್ಲೇಗ್ ಹಾವಳಿ ಹೆಚ್ಚಾದ ಕಾರಣ ೧೯೦೪ರ ಮೇ ತಿಂಗಳಿಗೆ ಮುಂದೂಡಲಾಯಿತು ಎಂಬ ವಿವರವೂ ಸ್ವಾಗತ ಭಾಷಣದಲ್ಲಿ ದಾಖಲಾಗಿದೆ. ಇಂತಹ ಸಂಗತಿಗಳು ಅಧಿವೇಶನದ ಕಾಲಕ್ರಮವನ್ನು ತಿಳಿದುಕೊಳ್ಳಲು ನೆರವಾಗುತ್ತವೆ.
ಈ ಎರಡೂ ಮೂಲಪಾಠಗಳನ್ನು ಅವುಗಳ ಅಂದಿನ ಭಾಷಾಶೈಲಿ, ಪದಪ್ರಯೋಗ ಮತ್ತು ಐತಿಹಾಸಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಏಕೆಂದರೆ ಒಂದು ಶತಮಾನದ ಹಿಂದಿನ ನುಡಿಗಳನ್ನು ಇಂದಿನ ಭಾಷೆಗೆ ತಕ್ಕಂತೆ ತಿದ್ದುವಾಗ ಕೆಲವೊಮ್ಮೆ ಅವುಗಳ ಮೂಲ ಅರ್ಥದ ಸೂಕ್ಷ್ಮತೆ ಕಳೆದುಹೋಗಬಹುದು.
ಓದುಗರು ಈ ದಾಖಲೆಗಳನ್ನು ಕೇವಲ ಮಹಾಸಭೆಯ ಇತಿಹಾಸವೆಂದು ಓದದೆ, ಅಂದಿನ ಸಮಾಜವು ತನ್ನ ಏಳಿಗೆಗಾಗಿ ನಡೆಸಿದ ಸಂಘಟಿತ ಪ್ರಯತ್ನಗಳ ಸಾಕ್ಷ್ಯವೆಂದು ಪರಿಗಣಿಸಬೇಕೆಂಬುದು ನನ್ನ ಆಶಯ.
ಇಲ್ಲಿ ಯಾರೊಬ್ಬರ ವೈಚಾರಿಕ ನಿಲುವನ್ನು ಒಪ್ಪಿಕೊಳ್ಳಬೇಕೆಂಬ ಒತ್ತಾಯವಿಲ್ಲ. ಮೂಲಪಾಠವನ್ನು ಸ್ವತಃ ಓದಿ, ಅದರ ಕಾಲಘಟ್ಟವನ್ನು ಅರಿತು, ಮುಂದಿನ ಭಾಗಗಳಲ್ಲಿ ಪ್ರಕಟವಾಗಲಿರುವ ಅಧ್ಯಕ್ಷೀಯ ಭಾಷಣ ಮತ್ತು ಹದಿಮೂರು ನಿರ್ಣಯಗಳೊಂದಿಗೆ ಹೋಲಿಸಿ ನಿರ್ಣಯಿಸಿಕೊಳ್ಳುವ ಅವಕಾಶವಿದೆ.
ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಅದರ ಕುರಿತು ಇಂದು ಮಾತನಾಡುವವರ ಮಾತುಗಳಷ್ಟೇ ಸಾಲದು; ಆ ಇತಿಹಾಸವನ್ನು ನಿರ್ಮಿಸಿದವರ ನುಡಿಗಳನ್ನೂ ಕೇಳಬೇಕು.
ಆ ನುಡಿಗಳೇ ಈಗ ನಮ್ಮ ಮುಂದಿವೆ.
ಬನ್ನಿ, ೧೯೦೪ರ ಧಾರವಾಡ ಮಹಾಧಿವೇಶನದ ಮೂಲಪುಟಗಳನ್ನು ತೆರೆಯೋಣ. ಮಹಾಸಭೆಗೆ ದುಡಿದವರ ಮಾತುಗಳಲ್ಲಿಯೇ ಮಹಾಸಭೆಯ ಹುಟ್ಟಿನ ಆಶಯವನ್ನು ಅರಿಯೋಣ.
-
- ಮಹಾಸಭೆಯ ನಡಾವಳಿಗಳ ಪೀಠಿಕೆ
ವೀರಶೈವರು ಮುಖ್ಯವಾಗಿ ಕರ್ನಾಟಕದಲ್ಲಿ ವಾಸಿಸುವರು. ಈ ಕರ್ನಾಟಕ ದೇಶವು ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಈ ನಾಲ್ಕು ಬೇರೆ ಬೇರೆ ಸರಕಾರದವರ ಆಡಳಿತಗಳಿಗೆ ಒಳಪಟ್ಟಿರುವುದರಿಂದ ಇವರು ತಮ್ಮ ಸಮಾಜದ ಏಳೆಯನ್ನು ಕುರಿತು ಮಾಡುವ ಪ್ರಯತ್ನಗಳ ದಿಕ್ಕುಗಳು ಸಹ ಬೇರೆ ಬೇರೆಯಾಗಿರುತ್ತವೆ. ಇದಲ್ಲದೆ ಮುಂಬೈ, ಮದ್ರಾಸ್ ಮತ್ತು ಹೈದರಾಬಾದ್ ಈ ಮೂರು ಪ್ರಾಂತ್ಯಗಳಲ್ಲಿರುವ ಈ ಜನರು ತಮ್ಮ ತಮ್ಮ ರಾಜಧಾನಿಗಳಿಂದಲೂ, ಮುಖ್ಯ ಮುಖ್ಯ ವಿದ್ಯಾಪೀಠಗಳಿಂದಲೂ ದೂರವಾದ ಮೂಲೆಗಳಲ್ಲಿ ವಾಸಿಸುವ ಕಾರಣ ಉಳಿದ ಸಮಾಜದವರಂತೆ ಮುಂದಕ್ಕೆ ಬರಲು ಇವರಿಗೆ ಬಹಳ ಅನಾನುಕೂಲವಾಗಿದೆ. ಆದರೂ ಇತ್ತಿತ್ತಲಾಗಿ ನಮ್ಮ ಮಹನೀಯರಾದ ಕೈ.ರಾ.ಬ. ಗಿಲಗಂಚಿ ಗುರುಸಿದಪ್ಪನವರ ಮತ್ತು ರಾ.ಬ. ಅರ್ಟಾಳ್ ರುದ್ರಗೌಡರ ಪ್ರಯತ್ನ ವಿಶೇಷದಿಂದ ನಮ್ಮ ಸಮಾಜದಲ್ಲಿ ಕೆಲ ಕೆಲವು ಜನರು ವಿದ್ಯಾವಂತರಾಗುತ್ತಾ ಬಂದರು. ಆದರೆ ನಮ್ಮ ಸಮಾಜದ ಸ್ಥಿತಿಯು ಎಲ್ಲ ಬಗೆಗಳಿಂದಲೂ ಸುಧಾರಿಸಬೇಕಾದರೆ- ಯಾವತ್ತು ಪ್ರಾಂತ್ಯಗಳಲ್ಲಿರುವ ವೀರಶೈವರು ಒತ್ತಟ್ಟಿಗೆ ಕೂಡಿ ಒಮ್ಮನಸ್ಸಿನಿಂದ ಪ್ರಯತ್ನ ಮಾಡದ ಹೊರತು ಈ ಉದ್ದೇಶವು ಕೊನೆಗಾಣುವುದು ಅಸಾಧ್ಯವೆಂಬ ಸಂಗತಿಯು ಸಮಾಜದ ಮುಂದಾಳುಗಳ ಲಕ್ಷದಲ್ಲಿ ಬರಲು ಅವರು ಈ ಮಹಾಸಭೆಯನ್ನು ಕೂಡಿಸಬೇಕೆಂದು ಸಂಕಲ್ಪಿಸಿ ತಮ್ಮ ಸಂಕಲ್ಪವನ್ನು ಸಿದ್ಧಿಗೈಯ್ದರು. ಇದರ ಸಾದ್ಯಂತ ವಿವರವು ಸತ್ಕಾರಕ ಸಂಘದ ಛೇರಮನ್ನರ ಭಾಷಣದಿಂದ ವಿದಿತವಾಗುವಂತಿದೆ.
ಈ ಸಭೆಯ ಮುಖ್ಯ ಚಾಲಕರಾದ ಶ್ರೀ ಕುಮಾರಸ್ವಾಮಿಗಳನ್ನೂ ಈ ಸಭೆಯ ಯಾವತ್ತೂ ಕೆಲಸಗಳನ್ನು ಉತ್ಸಾಹದಿಂದಲೂ-ಉತ್ಕಠತೆಯಿಂದಲೂ ಮಾಡಿದ ಕೈ, ಶಿ। ರಾ| ರಾ| ಕೊಂಗವಾಡ ಚನ್ನಪ್ಪ ಗೌಡರನ್ನೂ ಇಲ್ಲಿ ನೆನಿಯದೆ ಇರುವುದಕ್ಕಾಗುವುದಿಲ್ಲ. ಶ್ರೀ ಕುಮಾರಸ್ವಾಮಿಗಳು ದೀರ್ಘಾಯುವಂತರಾಗಿ ಈ ಸಭೆಯು ಚಿರಕಾಲ ಬಾಳುವಂತೆ ಆಶೀರ್ವದಿಸಲೆಂದು ಪ್ರಾರ್ಥಿಸಿ ಈ ಪೀಠಿಕೆಯನ್ನು ಮುಗಿಸುತ್ತೇನೆ.
ಗುರುಬಸಪ್ಪಾ ಫಕೀರಪ್ಪಾ ಹಳಕಟ್ಟಿ.
ವೀರಭದ್ರಪ್ಪಾ ಬಸಪ್ಪಾ ಹಾಲಭಾವಿ.-ಬಿ.ಎ., ಎಲ್ ಎಲ್.ಬಿ.
ಕಾರ್ಯನಿರ್ವಾಹಕ ಸಭೆಯ ಸದಸ್ಯರು
-
- ಈ ಸಭೆಯ ಮೊದಲು ಗೊತ್ತಾದ ಮೇರೆಗೆ ೧೯೦೪ನೇ ಇಸವಿಯ ಮೇ ತಿಂಗಳಿನ ೧೩ನೇ ತಾರೀಖು ಶುಕ್ರವಾರ ದಿವಸ ಮಧ್ಯಾಹ್ನದ ೧ ಘಂಟೆಗೆ ಸರಿಯಾಗಿ ಇಲ್ಲಿಯ “ದರ್ಬಾರು ಹಾಲ್” ಎಂಬ ವಿಶಾಲವಾದ ಸರಕಾರೀ ಕಟ್ಟಡದಲ್ಲಿ ನೆರವೇರಿತು. ಸ್ವಾಗತ ಕಮಿಟಿಯ ಚೇರ್ಮನ್ನರಾದ ಮ|| ರಾ|| ರಾ|| ಚನ್ನಮಲ್ಲಪ್ಪ ಅಣ್ಣಾ ಟೆಂಗಿನಕಾಯಿ ಇವರು ತಮ್ಮ ಭಾಷಣದಿಂದ ಸಭೆಯ ಕೆಲಸವನ್ನು ಆರಂಭಿಸಿದರು.
ಈ ಸಭಾಮಂಟಪವನ್ನು ಅಲಂಕರಿಸಿದ ಮಹಾಸ್ವಾಮಿಗಳೇ, ಪ್ರಿಯಬಾಂಧವರಾದ ಪ್ರತಿನಿಧಿಗಳೇ, ಸಭ್ಯ ಗೃಹಸ್ಥರೇ,
ತಾವೆಲ್ಲರೂ ದಯವಿಟ್ಟು ನಮ್ಮ ಆಮಂತ್ರಣವನ್ನು ಮನ್ನಿಸಿ, ಈ ಮಹಾಸಭೆಗೆ ಬಂದಿದ್ದರಿಂದ ಧಾರವಾಡ ನಿವಾಸಿಗಳಾದ ಸಮಸ್ತ ವೀರಶೈವರ ಪಕ್ಷದಿಂದಲೂ-ನನ್ನ ಸ್ವಂತ ಪಕ್ಷದಿಂದಲೂ ನಾನು ಮನಃಪೂರ್ವಕವಾಗಿ ನಿಮ್ಮ ಉಪಕಾರವನ್ನು ನೆನಸಿ, ನಿಮಗೆ ಪ್ರೇಮಪೂರ್ವಕವಾದ ಸ್ವಾಗತವನ್ನು ಮಾಡುತ್ತೇನೆ. ನೀವೆಲ್ಲರೂ ಸ್ವಧರ್ಮದಲ್ಲಿ ಅಭಿಮಾನವಿಟ್ಟು, ಸ್ವಜನಕ್ಕಾಗಿ ಅನುರಾಗಪಟ್ಟು, ನಿಮ್ಮ ಉದ್ಯೋಗ ವ್ಯವಸಾಯಗಳನ್ನು ತ್ಯಜಿಸಿ, ನಿಮ್ಮ ಹಣದ ಕಡೆಗೂ ಶ್ರಮದ ಕಡೆಗೂ ಲಕ್ಷ್ಯಗೊಡದೆ. ನಿಮ್ಮ ಅಮೂಲ್ಯ ವೇಳೆಯನ್ನು ವೆಚ್ಚಮಾಡಿ, ಈ ಧಾರ್ಮಿಕ ಮತ್ತು ಸಾಮಾಜಿಕ ಪರಿಷತ್ತಿಗೆ ಬಂದದ್ದರಿಂದ ನಮ್ಮ ಸಂತೋಷವು ಮೇರೆದಪ್ಪಿ ಹೊರಸೂಸ ಹತ್ತಿದೆ. ಇದಲ್ಲದೆ ಗುರುಸ್ಥಲಕ್ಕೆಲ್ಲ ಗೌರವವನ್ನು ಕೊಡುವ, ಸಮಸ್ತ ಭಕ್ತವೃಂದಕ್ಕೆ ಜ್ಞಾನವನ್ನೂ ಸನ್ಮಾನವನ್ನೂ ತೋರಿಸುವ, ಮಹಾಶ್ರೀಗಳವರು ದರ್ಶನಾನಂದವನ್ನು ಕೊಟ್ಟಿದ್ದರಿಂದ ನಮ್ಮ ಆನಂದಕ್ಕೆ ಎಣೆಯೇ ಇಲ್ಲದಂತಾಗಿದೆ. ಇದರ ಹೊರತು ದೊಡ್ಡ ದೊಡ್ಡ ಶಾಸ್ತ್ರಿಗಳೂ, ವಿದ್ವಾಂಸರೂ, ಮಹನೀಯರು ಬಂದಿರುವುದರಿಂದ ನಾವು ಅಲ್ಪಬುದ್ಧಿಯಿಂದ ಆರಂಭಿಸಿರುವ ಈ ಕಾರ್ಯಕ್ಕೆ ಮಹತ್ವವು-ಬಲವೂ ಉಂಟಾಗಿದೆ.
ನೀವೆಲ್ಲರೂ ನಮ್ಮ ವ್ಯವಸ್ಥೆಗಳಲ್ಲಿ ಕಂಡುಬರುವ ಕುಂದುಕೊರತೆಗಳನ್ನು ಲಕ್ಷಿಸದೇ-ನಮ್ಮ ಅಲ್ಪಶಕ್ತಿಗನುಗುಣವಾಗಿ ಮಾಡುವ ಆದರೋಪಚಾರಗಳನ್ನು ಸ್ವೀಕರಿಸಿ ಈ ಮಹತ್ಕಾರ್ಯಕ್ಕೆ ನಿಮ್ಮ ಹಸ್ತಾವಲಂಬನವನ್ನು ಕೊಟ್ಟು ಈ ಕಾರ್ಯವನ್ನು ಸಾಂಗಗೊಳಿಸಬೇಕೆಂದು ಪ್ರಾರ್ಥಿಸುತ್ತೇನೆ. ಬಹುಕಾಲದಿಂದ ಮೈಸೂರು ಸೀಮೆಯವರೂ, ಮಹಾರಾಷ್ಟ್ರ ದೇಶದವರೂ, ಮದ್ರಾಸು ಇಲಾಖೆಯವರೂ, ಮುಂಬೈ ಅಧಿಕಾರಕ್ಕೊಳಪಟ್ಟು ಉತ್ತರ ಕರ್ನಾಟಕದವರೂ, ನಿಜಾಮ ಸಂಸ್ಥಾನಕ್ಕೆ ಸೇರಿದವರೂ ಪರಸ್ಪರ ಬಳಕೆ ಇಲ್ಲದೆ ಒಬ್ಬರ ಪರಿಚಯವು ಸಹ ಒಬ್ಬರಿಗಿಲ್ಲದೇ ಸ್ವತಂತ್ರವಾಗಿ ಇರುತ್ತ ಬಂದಿದ್ದರಿಂದ ವೀರಶೈವ ಸಮಾಜದ ಧಾರ್ಮಿಕ, ಸಾಮಾಜಿಕ ಸಂಬಂಧದ ಯಾವದೊಂದು ಸರ್ವಸಾಧಾರಣವಾದ ತಿದ್ದುಪಡಿಯನ್ನು ಮಾಡಲು ಆಸ್ಪದವಿಲ್ಲದೇ ಹೋಗಿತ್ತು.
ಆದಕಾರಣ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ಕೆಲಜನ ವೀರಶೈವ ಮಹನೀಯರು ಒಬ್ಬೊಬ್ಬರಾಗಿ ಇಲ್ಲವೆ, ಕೆಲವು ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಬಗೆ ಬಗೆಯ ಮತ ಸುಧಾರಣೆಯ ಕಾರ್ಯಗಳನ್ನು ದಕ್ಷತೆಯಿಂದ ನಡೆಯಿಸುತ್ತಾ ಬರುತ್ತಿರುವರು. ಈ ಸ್ತುತ್ಯ ಉದ್ಯೋಗಗಳಿಗೋಸ್ಕರ ಅವರನ್ನು ಶಿರಸಾ ಶ್ಲಾಘಿಸುವುದು ನಮ್ಮ ಕರ್ತವ್ಯವಾಗಿದೆ.
ಮಹನೀಯರೆ, ಇನ್ನು ಮುಂದೆ ಮುಂಬೈ ಇಲಾಖೆಗೆ ಸೇರಿದ ನಮ್ಮ ಉತ್ತರ ಕರ್ನಾಟಕದ ವೀರಶೈವರ ವಿಷಯವಾಗಿ ಒಂದೆರಡು ಮಾತುಗಳನ್ನು ಹೇಳಿದರೆ ಅದು ಅಪ್ರಾಸಂಗಿಕವಾಗಲಾರದೆಂದು ಕಂಡುಬಂದದ್ದರಿಂದ ಅವುಗಳೊಳಗಿನ ಮುಖ್ಯ ಮುಖ್ಯ ಸಂಗತಿಗಳನ್ನಷ್ಟೇ ಸಂಕ್ಷಿಪ್ತವಾಗಿ ತಮಗೆ ವಿವರಿಸುತ್ತೇನೆ. ಉತ್ತರ ಕರ್ನಾಟಕವು ಮುಸಲ್ಮಾನರ ರಾಜ್ಯಾಡಳಿತೆಗೆ ಒಳಪಟ್ಟು ಸುಮಾರು ಎರಡುನೂರು ವರ್ಷಗಳವರೆಗೂ, ಆಮೇಲೆ ಮಹಾರಾಷ್ಟ್ರ ಮತ್ತು ಪೇಶ್ವಯರ ಅಧಿಕಾರಕ್ಕೆ ಅಧೀನವಾಗಿ ಸುಮಾರು ೧೦೦ ವರ್ಷಗಳವರೆಗೂ ಇರಬೇಕಾಯಿತು.
ಈ ಕಾಲದಲ್ಲಿ ದೇಶಕ್ಕೊದಗಿದ ಸರ್ವಸಾಧಾರಣವಾದ ಪೀಡೆಗಳೂ ಹಿಂಸೆಗಳೂ ವೀರಶೈವ ಸಮಾಜಕ್ಕೆ ತಪ್ಪಲಿಲ್ಲ. ಇದಲ್ಲದೆ ಅದರ ಉನ್ನತಿಗೆ ಮುಖ್ಯ ಕಾರಣವಾಗಿರುವ ಶಿಕ್ಷಣವೂ ತೀರ ಕಟ್ಟಾಯಿತು. ಇದರಿಂದ ನಮ್ಮ ಸಮಾಜಕ್ಕೆ ಒದಗಿದಷ್ಟು ನಷ್ಟವು ಯಾವ ಕಾಲಕ್ಕೂ ಯಾರಿಗೂ ಒದಗಿದ್ದಿಲ್ಲ. ಎಂದರೆ ಪೇಶ್ವೆಗಳಲ್ಲಿ ಕಡೆಯವನಾದ ಎರಡನೇ ಬಾಜಿರಾಯನನ್ನು ನಮ್ಮ ಈಗಿನ ಸಾರ್ವಭೌಮರಾದ ಇಂಗ್ಲೀಷರು ಸನ್ ೧೮೧೮ರಲ್ಲಿ ಗೆದ್ದು, ಅವನ ರಾಜ್ಯವನ್ನು ಬ್ರಿಟಿಷ್ ರಾಜ್ಯಕ್ಕೆ ಸೇರಿಸಿಕೊಂಡರು. ಇದರಿಂದ ನಮ್ಮ ಕರ್ನಾಟಕ ಸೀಮೆಯೂ ಇಂಗ್ಲೀಷು ರಾಜ್ಯಕ್ಕೆ ಒಳಪಟ್ಟಿತು. ಈ ಸಾರ್ವಭೌಮರು ಹುಟ್ಟು ಸ್ವಾತಂತ್ರಪ್ರಿಯರೂ, ಉದಾರರೂ, ನಿಷ್ಪಕ್ಷಪಾತಿಗಳೂ ಆಗಿರುವುದರಿಂದ ಇವರ ಆಡಳಿತೆಯಲ್ಲಿ ಎಲ್ಲ ಮತಸ್ಥರಿಗೂ ನ್ಯಾಯ ಶಿಕ್ಷಣವು ಸಮನಾಗಿ ಹಂಚಲ್ಪಡಲು ಪ್ರಾರಂಭವಾಯಿತು. ಇವರು ಮಾಡಿದ ವಿದ್ಯಾದಾನದ ಪ್ರಭಾವದಿಂದ ವೀರಶೈವರಲ್ಲಿ ಮುಂದಾಳುಗಳು ಒಬ್ಬೊಬ್ಬರೇ ಬರಲಾರಂಭಿಸಿದರು.
ಅವರೊಳಗೆ ನಮ್ಮೆಲ್ಲರ ಸ್ತುತಿಗೆ ಪಾತ್ರರಾದ ಕೈ “ರಾವ್ ಬಹದ್ದೂರ ವೀರಭದ್ರ ಮಡಿವಾಳೇಶ್ವರ ಪಂಡಿತ, ಪ್ರಿನ್ಸಿಪಾಲ ಸದರ ಅಮೀನ ಅಂದರೆ (ಫಸ್ಟಕ್ಲಾಸ್ ಸಬ್ಬಜಡ್ಜ) ಮತ್ತು ಕೈ|| ರಾವಸಾಹೇಬ ಚನ್ನಬಸಪ್ಪ ಬಸವಲಿಂಗಪ್ಪಾ ಅಣ್ಣಾ, ಧಾರವಾಡ ಡಿಪ್ಯುಟಿ ಎಜ್ಯೂಕೇಶನಲ್ ಇನಸ್ಪೆಕ್ಟರ್, ಜಿಲ್ಲಾ ಬೆಳಗಾಂವ ಇವರೇ ಮೊದಲನೆಯವರಾಗಿರುತ್ತಾರೆ.
ಇವರು ಆ ಕಾಲಕ್ಕೆ ಗಾಢ ನಿದ್ರೆಯಲ್ಲಿದ್ದ ವೀರಶೈವ ಸಮಾಜವನ್ನು ಬಡಿದೆಬ್ಬಿಸಿ, ವಿದ್ಯಾರ್ಜನೆಯ ಹೊರತು ಉನ್ನತಿಯುಂಟಾಗಲಾರದೆಂಬ ಮಂತ್ರವನ್ನು ಪ್ರದರ್ಶಿಸಿ ತಮ್ಮಿಂದಾದಷ್ಟು ಸಹಾಯ ಮಾಡಿದರು. ಇವರು ಶ್ರೀಮನ್ ನಿರಂಜನ ಜಗದ್ಗುರು ಚಿತ್ರದುರ್ಗದ ಮುರುಘಾ ರಾಜೇಂದ್ರ ಸ್ವಾಮಿಗಳ ಮತ್ತು ಕೆಲವು ಜನ ವೀರಶೈವ ಧನವಂತರ ಮನವಲಿಸಿ ಸನ್ ೧೮೬೯ನೇ ಇಸವಿಯಲ್ಲಿ ೫೦ ಜನ ಲಿಂಗಾಯತ ವಿದ್ಯಾರ್ಥಿಗಳ ಒಂದು ಭೋಜನಾಲಯವನ್ನು ಬೆಳಗಾಂವಿಯಲ್ಲಿ ಸ್ಥಾಪಿಸಿ ವಿದ್ಯೆ ಕಲಿಸಲಿಕ್ಕೆ ಪ್ರಾರಂಭಮಾಡಿದರು.
ಈ ಸಂಸ್ಥೆಗೆ ಶ್ರೀಗಳವರಿಂದ ಪ್ರತಿತಿಂಗಳೂ ೩೦೦ ರೂಪಾಯಿಗಳ ಧನಸಹಾಯವು ದೊರೆಯುತ್ತಿತ್ತು. ಒಂದು ವೇಳೆ ಈ ಸಂಸ್ಥೆಯ ಅಬಾಧಿತವಾಗಿ ಸಾಗಿದ್ದರೆ ಲಿಂಗಾಯತ ಸಮಾಜಕ್ಕೆ ಬಹಳ ಪ್ರಯೋಜನವಾಗುತ್ತಿತ್ತು. ಆದರೆ ನಮ್ಮ ದುರ್ದೈವದಿಂದ ಶ್ರೀಗಳವರು ಬೇಗನೇ ಲಿಂಗೈಕ್ಯರಾದ್ದರಿಂದ ಅದು ಅಷ್ಟಕ್ಕೇ ನಿಂತುಹೋಯಿತು. ಈ ಉಭಯತರಲ್ಲಿ ರಾವ್ ಬಹದ್ದೂರ ಪಂಡಿತರವರು ಅಕಾಲದಲ್ಲಿ ಅಂದರೆ ತಮ್ಮ ೨೯ನೇ ವಯಸ್ಸಿನಲ್ಲಿ ತೀರಿಕೊಂಡದ್ದರಿಂದ ರಾವ್ ಸಾಹೇಬ ಚೆನ್ನಬಸಪ್ಪನವರ ಬಲಗೈಯೇ ಮುರಿದಂತಾಯಿತು. ಆದರೂ ಅವರು ಧೈರ್ಯಗೆಡದೇ ಸಮಾಜ ಸುಧಾರಣೆ ಕೆಲಸವನ್ನು ಹಾಗೇ ನಡೆಯಿಸುತ್ತಾಯಿದ್ದು ಸನ್ ೧೮೧೮ನೇ ಇಸವಿ ಜನವರಿ ತಿಂಗಳಲ್ಲಿ ನಮ್ಮ ಕೈಬಿಟ್ಟು ಹೊರಟುಹೋದರು. ಮುಂದೆ ಸುಮಾರು ೮-೧೦ ವರ್ಷದವರೆಗೆ ಈ ಉಭಯತರಂಥ ಕಾರ್ಯಾಧ್ಯಕ್ಷರು ಯಾರೂ ಮುಂದಾಗಲಿಲ್ಲ.
ಆದರೆ ನಮಗೆ ಆಂಗ್ಲೆಯ ಸಾರ್ವಭೌಮರಿಂದ ಪಾಶ್ಚಾತ್ಯ ಶಿಕ್ಷಣವು ಅವಿಚ್ಛಿನ್ನವಾಗಿ ದೊರೆಯುತ್ತಾ ಹೋಗಲು ಅಲ್ಪ ಕಾಲದೊಳಗೆ ಎಷ್ಟೋ ಜನ ವೀರಶೈವ ಮುಂದಾಳುಗಳು ಸಿದ್ಧರಾದರು. ಅವರಲ್ಲಿ ಕೈ| ರಾವ್ ಬಹದ್ದೂರ ಗುರುಸಿದ್ದಪ್ಪ ಅಣ್ಣಾ ಗಿಲಗಂಚಿ ಮತ್ತು ರಾವ್ಬಹದ್ದೂರ ರುದ್ರಗೌಡ ಅಣ್ಣಾ ಅರ್ಟಾಳ್ ಇವರೇ ಅಗ್ರಗಣ್ಯರಾಗಿರುತ್ತಾರೆ. ಈ ಉಭಯರೂ ಕೆಲವು ಜನ ಪ್ರಮುಖ ಲಿಂಗಾಯಿತರೊಡನೆ ವಿಚಾರಮಾಡಿ ವೀರಶೈವರಿಗೆ ಮೇಲ್ತರದ ಶಿಕ್ಷಣವು ದೊರಕಿದ ಹೊರತು ಸಮಾಜವು ಮುಂದಕ್ಕೆ ಬರಲಾರದು ಎಂದು ಯೋಚಿಸಿ, ಅಶ್ರಾಂತ ಶ್ರಮಪಟ್ಟು “ಲಿಂಗಾಯತ ಎಜುಕೇಶನ ಫಂಡು” ಎಂಬ ಸಂಸ್ಥೆಯನ್ನು ಸನ್ ೧೮೮೩ನೇ ಇಸವಿಯಲ್ಲಿ ಸ್ಥಾಪಿಸಿ, ಒಂತಿಗೆಯಿಂದ ೧ ಲಕ್ಷ ರೂಪಾಯಿಗಳನ್ನು ಕೂಡಿಸಿದರು.
ಈ ಫಂಡಿನಿಂದ ಎಷ್ಟು ಫಲವಾಗಿದೆಯೆಂಬ ಸಂಗತಿಯು ನಿಮ್ಮೆಲ್ಲರಿಗೂ ಗೊತ್ತುಂಟು. ಈ ಮಹನೀಯರು ಇಷ್ಟಕ್ಕೇ ತೃಪ್ತರಾಗದೆ ಈ ಹೊತ್ತಿನವರೆಗೂ ಈ ಫಂಡನ್ನು ೨ ಲಕ್ಷ ರೂಗಿಂತ ಹೆಚ್ಚಿಗೆ ಕೂಡಿಸಿದ್ದಾರೆ. ಇನ್ನೂ ಹೆಚ್ಚಿಗೆ ಕೂಡಿಸುವ ಕ್ರಮವು ನಡೆದಿದೆ. ಇದಲ್ಲದೆ ಸಮಾಜದ ಉನ್ನತಿಗೆ ಧರ್ಮ ಶಿಕ್ಷಣವು ಅತ್ಯವಶ್ಯಕವಾದದ್ದೆಂದು ತಿಳಿದುಕೊಂಡು ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ಸ್ವಾಮಿಗಳವರ ಉದಾರಾಶ್ರಯದಿಂದ ಗದಗಿನಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಿದರು.
ಈ ಮೇರೆಗೆ ವೀರಶೈವರಿಗೆ ಉದಾರ ಶಿಕ್ಷಣವು ಧರ್ಮ ಶಿಕ್ಷಣವು ದೊರೆಯಹತ್ತಿದೆ. ಅಲ್ಪಕಾಲದಲ್ಲಿಯೇ ಈ ವಿದ್ಯೆಯ ಪ್ರಕಾಶದಿಂದ ಇಲ್ಲಿಯ ವೀರಶೈವರಲ್ಲಿ ಚೆನ್ನಾಗಿ ಜಾಗರೂಕತೆಯುಂಟಾಗಿ ತಮ್ಮ ಸಮಾಜದಲ್ಲಿ ಒಳ್ಳೇ ಉತ್ಕಲಾಟವು ಕಂಗೊಳಿಸಹತ್ತಿದೆ. ಗದಗಿನ ಒಂದು ಪಾಠಶಾಲೆಯ ಸ್ಥಳದಲ್ಲಿ ಹಾವೇರಿ, ಹಾನಗಲ್ಲು, ಹಲವಡಿ, ರಾಣೀಬೆನ್ನೂರ, ಸಂಶಿ ಅಬ್ಬಿಗೇರಿ, ಹನಗುಂದ ಮುಂತಾದ ಸ್ಥಳಗಳಲ್ಲಿ ಪಾಠಶಾಲೆಗಳು ಸ್ಥಾಪಿಸಲ್ಪಟ್ಟು ಯೋಗ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ ದೊರೆಯಲಾರಂಭಿಸಿತು.
ಇದೇ ಸಮಯದಲ್ಲಿ ಎಂದರೆ ೧೯೦೩ರ ಪ್ರಾರಂಭದಲ್ಲಿ ಧಾರವಾಡ ವೀರಶೈವರು “ವೀರಶೈವ ಮತ ಪ್ರಚಾರಕ ಸಂಘ” ಎಂಬ ಸಂಸ್ಥೆಯನ್ನು ಸ್ಥಾಪಿಸಿ, ವಾರಕ್ಕೊಮ್ಮೆ ಧರ್ಮೋಪದೇಶ ಮಾಡುವ ಉದ್ಯೋಗವನ್ನೂ, ಸಂಸ್ಕೃತ ಅಥವಾ ಮತ ಸಂಬಂಧದ ಪಾಠಶಾಲೆಗಳಿಲ್ಲದ ಗ್ರಾಮಗಳ ವೀರಶೈವ ಮಹನೀಯರಿಗೆ ಪತ್ರಗಳನ್ನು ಬರೆದು ತಮ್ಮಲ್ಲಿಯೂ ಸಂಸ್ಕೃತ ಅಥವಾ ಮತಸಂಬಂಧದ ಪಾಠಶಾಲೆಗಳನ್ನು ಸ್ಥಾಪಿಸಿಕೊಳ್ಳಬೇಕೆಂದು ಸೂಚಿಸುವ ಕ್ರಮವನ್ನು ನಡೆಸಿದರು.
ಪರಸ್ಥಳದ ವಿದ್ಯಾರ್ಥಿಗಳಿದ್ದಲ್ಲಿ ಅನ್ನ ಷಾದಿನಾದಿಗಳನ್ನು ಕೊಟ್ಟು ಸಂಸ್ಕೃತ ಭಾಷಾಧ್ಯಯನವನ್ನೂ ವೀರಶೈವಾಚರಣೆಯ ಸಂಬಂಧದ ಮತ್ತು ಮತ ತತ್ವಪರಿಶೀಲನೆಯ ಸಂಬಂಧದ ಗ್ರಂಥಾಭ್ಯಾಸವನ್ನು ಮಾಡಿಸಬೇಕೆಂತಲೂ ಮತತತ್ವಗಳನ್ನರಿಯದವರು ವಾರಕ್ಕೊಂದು ಸಾರಿ, ಎರಡು ಸಾರಿ ಇಲ್ಲವೆ ಅನುಕೂಲವಿದ್ದಾಗ್ಗೆ ತಮ್ಮ ತಮ್ಮ ಪಾಠಶಾಲೆಗಳ ಶಾಸ್ತ್ರಿಗಳ ಬಳಿಗೆ ಹೋಗಿ, ಮತ ವಿಚಾರಗಳನ್ನೂ ಆಚಾರ-ವಿಚಾರಗಳನ್ನೂ ಅವರಿಂದ ಚೆನ್ನಾಗಿ ತಿಳಿದುಕೊಂಡು, ತದ್ವರ್ತನವುಳ್ಳವರಾಗಬೇಕೆಂತಲೂ, ಶಾಸ್ತ್ರಿಗಳು ಬೇಕಾಗಿದ್ದಲ್ಲಿ ಅವರನ್ನು ತೀವ್ರವಾಗಿ ದೊರಕಿಸಿಕೊಡುವೆವೆಂತಲೂ ವಿಜ್ಞಪ್ತಿ ಮಾಡಿಕೊಳ್ಳುವ ಕ್ರಮ ನಡೆಸಿರುವಷ್ಟರಲ್ಲಿಯೇ ಧಾರವಾಡದೊಳಗಿನ ಶಿವಮೂರ್ತಿ ರಾ| ರಾ| ಹೂಲಿಮಠದ ಶಿವಮೂರ್ತೆಯ್ಯನವರು ೨೭ ಎಕರೆ ೨೪ ಗುಂಟೆ ಹೊಲವನ್ನು ಒಂದು ಮನೆಯನ್ನೂ ಕೊಟ್ಟು ಇದೇ ಕಟ್ಟಡದಲ್ಲಿ ವೀರಶೈವ ಪಾಠಶಾಲೆಯೊಂದನ್ನು ಸ್ಥಾಪಿಸಿ, ಇವುಗಳ ಆಡಳಿತವನ್ನು ಈ ವೀರಶೈವ ಮತಪ್ರಚಾರಕ ಸಂಘದವರ ಕಡೆಗೇ ಒಪ್ಪಿಸಿದರು.
ಈ ಪಾಠಶಾಲೆಯ ಕೆಲಸವು ಯಥಾಸ್ತಿತವಾಗಿ ಈಗ ನಡೆದಿರುವುದು. ಬ್ಯಾಡಗಿಯ ವೀರಶೈವ ಮಹನೀಯರು ಹಣಕೂಡಿಸಿ, ವೀರಶೈವ ಮತಗ್ರಂಥಗಳನ್ನು ಶೋಧಿಸಿ, ಅವುಗಳನ್ನು ಪ್ರಸಿದ್ಧಪಡಿಸುವ ಘನವಾದ ಕಾರ್ಯಕ್ಕೆ ಕೈಹಾಕಿರುವರು. ಹೋದವರ್ಷದ ಆರಂಭದಲ್ಲಿ ಒಂಟಿಮುರಿ ಸರ್ ದೇಸಾಯಿ ಶ್ರೀಮಂತ ಲಕಮನಗೌಡ ಬಸವ ಪ್ರಭುಗಳವರು ೫೦ ಸಾವಿರ ರೂಪಾಯಿಗಳ ಉದಾರಾಶ್ರಯವನ್ನು ನಮ್ಮ ಲಿಂಗಾಯತ ವಿದ್ಯಾವರ್ಧಕ ಫಂಡಿಗೆ ಕೊಟ್ಟರೆಂದು ತಿಳಿಸಲಿಕ್ಕೂ- ನವುಂದ ಸಂಸ್ಥಾನದ ಶ್ರೀಮಂತ ಲಿಂಗಪ್ಪ ಜಾಯಪ್ಪ ಸರ್ ದೇಸಾಯಿರವರು ವರ್ಷ ೧ಕ್ಕೆ ೧೨೦೦ ರೂಪಾಯಿಗಳ ಉತ್ಪನ್ನವುಳ್ಳ ಅಮ್ಮಗಿಣ ಎಂಬ ಇನಾಂಗ್ರಾಮವನ್ನು ಮೇಲ್ಕಂಡ ಫಂಡಿನ ಸಹಾಯಕ್ಕಾಗಿ ಕೊಟ್ಟಿರುವರೆಂದು ಹೇಳಲಿಕ್ಕೂ ಮ। ರಾ| ರಾ। ಅಪ್ಪಯ್ಯಪ್ಪ ಅಣ್ಣಾ ಸಿಂತ್ರೆ ಸಾ|| ಕುರ್ಲಿ, ತಾ|| ಚಿಕ್ಕೋಡಿ ಈ ಘನವಂತರು ಇದೇ ಸಂಸ್ಥೆಗೆ ೧೦೦೦ ರೂಪಾಯಿಗಳನ್ನು ಕೊಟ್ಟಿರುವರೆಂದು ಈ ಸಭೆಯವರಿಗೆ ತಿಳಿಸಲಿಕ್ಕೂ ನಾನು ಬಹು ಅಭಿಮಾನಪಡುತ್ತೇನೆ.
ಹೋದ ವರ್ಷ ಮೇ ತಿಂಗಳಿನಲ್ಲಿ ಅಂದರೆ ಹುಬ್ಬಳ್ಳಿಯ ಮೂರುಸಾವಿರ ಮಠದ ಈಗಿನ ಶ್ರೀಗಳವರ ಅಡ್ಡಪಲ್ಲಕ್ಕಿಯ ಮಹೋತ್ಸವದ ಕಾಲಕ್ಕೆ ಒಂದು ಪಾಠಶಾಲೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವುದಕ್ಕೋಸ್ಕರ ಸ್ವಾಮಿಗಳವರು ೮ ಸಾವಿರ ರೂಪಾಯಿಗಳನ್ನು ದಯಪಾಲಿಸಿರುವರು. ಕಳೆದ ಜುಲೈ ತಿಂಗಳಲ್ಲಿ ಬಾಗಲಕೋಟೆಯ ಮಲ್ಲಣಾರ್ಯರೆಂಬುವರು ರೋಣದೊಳಗಿನ ವೀರಶೈವರಿಗೆ ಉಪದೇಶಮಾಡಿ ಅದರಿಂದ ೧೨೦೦ ರೂಪಾಯಿಗಳನ್ನು ಕೂಡಿಸಿ, ವೀರಶೈವ ಮತ ತತ್ವಗಳನ್ನು ಉಪದೇಶ ಮಾಡುವ ಒಂದು ಸ್ಥಿರವಾದ ಸಂಸ್ಥೆಯನ್ನು ಸ್ಥಾಪಿಸುವ ವ್ಯವಸ್ಥೆಯನ್ನು ಮಾಡಿರುವರು.
ಆದರೆ ಈ ಮಹನೀಯರು ನಮ್ಮ ಕೈಬಿಟ್ಟು ಅಕಾಲದಲ್ಲಿ ಶಿವಾಧೀನರಾದರೆಂದು ತಿಳಿಸಲಿಕ್ಕೆ ಬಹು ಖೇದವುಂಟಾಗುತ್ತದೆ. ಇದೇ ಪ್ರಕಾರದ ಪ್ರಯತ್ನಗಳು ಅನ್ಯಪ್ರಾಂತಗಳಲ್ಲಿಯೂ ನಡೆದಿರುತ್ತವೆ. ಮೈಸೂರು ಸಂಸ್ಥಾನಕ್ಕೆ ಸೇರಿದ ಮ। ರಾ| ರಾ| ಪಿ. ಮಹದೇವಯ್ಯನವರೆಂಬ ಮಹನೀಯರು ತಮ್ಮಲ್ಲಿಯೂ “ವೀರಶೈವ ವಿದ್ಯಾವರ್ಧಕ ಫಂಡು” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಣವನ್ನು ಕೂಡಿಸುತ್ತಿರುವರು. ಈ ಕಾರ್ಯದಲ್ಲಿ ಅವರಿಗೆ ತಕ್ಕ ಯಶಸ್ಸು ಬಂದಿದೆಯೆಂದು ಕೇಳಿ ಆನಂದಪಡುತ್ತೇನೆ. ಸೊಲ್ಲಾಪೂರದ ರಾವ್ ಸಾಹೇಬ್ ಮಲ್ಲಪ್ಪ ಅಣ್ಣಾ ಉರ್ಫ್ ಅಪ್ಪಾಸಾಹೇಬ ವಾರದ ಈ ದೊಡ್ಡ ಮನುಷ್ಯರು ಸಂಸ್ಕೃತ ಪಾಠಶಾಲಾ ಮತಗ್ರಂಥ ಶೋಧನ ಮುಂತಾದ ವೀರಶೈವ ಸಮಾಜೋತ್ಕರ್ಷದ ವಿಷಯವಾಗಿ ಅಹೋರಾತ್ರಿ ಅವಿಶ್ರಾಂತ ಶ್ರಮಪಡುತ್ತಲಿರುವರು. ಮೈಸೂರಿನೊಳಗಿನ ಮರಿಮಲ್ಲಪ್ಪನವರ ಪಾಠಶಾಲೆಯ ವಿವರವು ಸರ್ವಶ್ರುತವೇ ಇರುವುದು. ಈ ಮೇರೆಗೆ ನಾಲ್ಕೂ ಕಡೆಯಲ್ಲೂ ಇಂತಹ ಮಹನೀಯರು ಕಂಕಣಬದ್ಧರಾಗಿ ಉದ್ಯೋಗ ಮಾಡುತ್ತಿರಲು ನಮ್ಮ ಸಮಾಜವು ಬೇಗನೇ ಘನ ತೋರುವದೆಂಬಲ್ಲಿ ಅಣುಮಾತ್ರವೂ ಸಂಶಯವಿಲ್ಲ.
ಇನ್ನು ಮೇಲೆ ಈ ಶ್ರೀಮದ್ವೀರಶೈವ ಮಹಾಸಭೆಯ ಉತ್ಪಾದಕರು ಯಾರು? ಈ ಸಭೆಯನ್ನು ಸ್ಥಾಪಿಸುವ ವಿಚಾರವು ಮೊದಲು ಯಾರಲ್ಲಿ ಹುಟ್ಟಿತು? ಇದಕ್ಕೆ ಪ್ರೋತ್ಸಾಹ ಕೊಟ್ಟವರು ಯಾರು? ಎಂಬ ವಿವರವನ್ನು ಸಂಕ್ಷೇಪವಾಗಿ ವಿವರಿಸುವುದು ಅವಶ್ಯಕವಾಗಿದೆ. ಈ ಮೊದಲು ಧಾರವಾಡದಲ್ಲಿ ಮತಪ್ರಚಾರಕ ಸಭೆಯು ಸ್ಥಾಪಿತವಾದ ಸಂಗತಿಯನ್ನು ಹೇಳಿದ್ದು ತಮ್ಮ ಸ್ಮರಣದಲ್ಲಿರಬಹುದು.
ಈ ಸಭೆಯವರು ಬೇರೆ ಬೇರೆ ಪ್ರಾಂತಗಳಿಗೆ ಸೇರಿರುವ ವೀರಶೈವ ಮಹನೀಯರು ತಮ್ಮ ತಮ್ಮ ಸೀಮೆಗಳಲ್ಲಿ ಸಮಾಜೋನ್ನತಿಯ ಉದ್ಯೋಗಗಳನ್ನು ನಡೆಸಿರುವ ಸಂಗತಿಗಳನ್ನು ಕೇಳಿ ಬೇರೆ ಬೇರೆ ಪ್ರಾಂತದೊಳಗಿನ ಪ್ರಮುಖ ವೀರಶೈವರು ವರ್ಷಕ್ಕೊಂದು ಸಾರಿ-ಒಂದು ಸ್ಥಳದಲ್ಲಿ ಸೇರಿ ಧಾರ್ಮಿಕ ಮತ್ತು ವ್ಯವಹಾರಿಕ ವಿಷಯಗಳನ್ನು ಕುರಿತು ಪರ್ಯಾಲೋಚಿಸಿ ಒಮ್ಮನಸ್ಸಿನಿಂದ ವರ್ತಿಸಿದರೆ ಸಮಾಜ ಸುಧಾರಣೆಯು ತೀವ್ರವಾಗಿ ಆಗುವುದೆಂದು ಯೋಚಿಸುತ್ತಿರುವಷ್ಟರಲ್ಲಿ ತುಮಕೂರಿನ ಅಡ್ವಕೇಟರಾದ ಮ। ರಾ| ರಾ| ಪಿ. ಮಹದೇವಯ್ಯನವರ ಆಗಮನವೂ ಮ| ರಾ| ರಾ| ಜೆ. ಶಾಂತವೀರಪ್ಪ ಅಣ್ಣಾ, ಬಿ.ಎ., ಹಾಸನ ಇವರ ಆಗಮನವೂ ಹೋದವರ್ಷ ಜನವರಿ ತಿಂಗಳಿನಲ್ಲಿ ಆದವು.
ಇವರ ಆಗಮನಗಳಿಂದ ವೀರಶೈವ ಮಹಾಸಭೆಯನ್ನು ಸೇರಿಸುವುದು ಅವಶ್ಯಕವಾದದ್ದೆಂದು ಸರ್ವರಿಗೂ ತೋರಹತ್ತಿತು. ಮುಂದೆ ಮೇ ತಿಂಗಳಿನಲ್ಲಿ ನಮ್ಮ ಸುದೈವದಿಂದ ಶ್ರೀ ಬಸವೇಶ ಪುರಾಣ ಮಂಗಲಕ್ಕಾಗಿ ಇಲ್ಲಿಯ ವೀರಶೈವ ಮತಪ್ರಚಾರಕ ಸಭೆಯವರು ಸವದತ್ತಿಗೆ ಹೋಗಬೇಕಾಯಿತು. ಈ ಮಹಾಸಮಾರಂಭಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗಳವರೂ ಅಥಣಿಯ ಶಿವಯೋಗಿಗಳಾದ ಶ್ರೀ ಮುರಿಗೆಪ್ಪ ಸ್ವಾಮಿಗಳವರೂ, ಹಾನಗಲ್ಲಿನ ಶ್ರೀ ಕುಮಾರಸ್ವಾಮಿಗಳವರೂ ಹಾಗೂ ಇನ್ನೂ ಅನೇಕ ದೇಶಿಕೋತ್ತಮರೂ ದಯಮಾಡಿಸಿದ್ದರು.
ಆ ಕಾಲಕ್ಕೆ ಸಮಾಜೋನ್ನತಿಯ ಬಗ್ಗೆ ಚರ್ಚೆ ನಡೆದು ಸ್ವತಂತ್ರ ಧರ್ಮಬೋಧಕರನ್ನು ನೇಮಿಸಬೇಕೆಂದು ಗೊತ್ತಾಯಿತು. ಈ ಕೆಲಸಕ್ಕೆ ಹಾನಗಲ್ಲಿನ ಶ್ರೀಗಳವರು ತಮ್ಮ ತಪೋಮಹಿಮೆಯ ಹಸ್ತದಿಂದ ೧೦೦ ರೂಪಾಯಿಗಳನ್ನು ಕೊಟ್ಟಿದ್ದನ್ನು ನೋಡಿ ಉಳಿದ ವೀರಶೈವ ಸದೃಹಸ್ಥರು ೨೦೦ ರೂಪಾಯಿಗಳನ್ನು ವರ್ಗವಣೆಯಿಂದ ಕೂಡಿಸಿದರು.
ಬಳಿಕ ಕೆಲವು ದಿನಗಳು ಗತಿಸುವಷ್ಟರಲ್ಲಿಯೇ ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಶ್ರೀಗಳ ಅಡ್ಡಪಲ್ಲಕ್ಕಿಯ ಉತ್ಸವವು ಆಯಿತು. ಈ ಉತ್ಸವಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ಸೇರಿದ ವೀರಶೈವ ಸದೃಹಸ್ಥರು ಬಂದಿದ್ದರು. ಇವರೆಲ್ಲರೂ ಕೂಡಿ ಸಮಾಜ ಸುಧಾರಣೆಯ ಪ್ರಸ್ತಾಪ ತೆಗೆದು ವೀರಶೈವ ಮಹಾಸಭೆಯನ್ನು ವರ್ಷಕ್ಕೊಮ್ಮೆ ಬೇರೆ ಬೇರೆ ಪ್ರಸಿದ್ಧ ಪಟ್ಟಣಗಳಲ್ಲಿ ನಡೆಸಬೇಕೆಂತಲೂ, ಮೊದಲನೇ ಸಭೆಯನ್ನು ಧಾರವಾಡದಲ್ಲಿ ೧೯೦೩ನೇ ಇಸವಿಯ ಡಿಸೆಂಬರ ತಿಂಗಳಲ್ಲಿ ಕೂಡಿಸಬೇಕೆಂತಲೂ ಹಾನಗಲ್ಲಿನ ಶ್ರೀಗಳವರ ಸಮ್ಮುಖದಲ್ಲಿ ನಿಶ್ಚಯಿಸಿದರು.
ಆಮೇಲೆ ಈ ಮಹಾಸ್ವಾಮಿಗಳವರು ಧಾರವಾಡಕ್ಕೆ ಕೂಡಲೇ ದಯಮಾಡಿಸಿ ಭಕ್ತಜನರನ್ನು ಕರೆಸಿಕೊಂಡು ಅವರಿಗೆ ಉತ್ತೇಜನ ಕೊಟ್ಟು, ಧನವನ್ನ ಕೂಡಿಸಿದರು. ಆಮೇಲೆ ನಿಯಮಿತವಾದ ಮೇರೆಗೆ ಡಿಸೆಂಬರ ತಿಂಗಳಿನಲ್ಲಿ ಸಭೆಯನ್ನು ನೆರವೇರಿಸುವ ಬಗ್ಗೆ ಪ್ರಕಟಣೆಯ ಪತ್ರಗಳು ಜೂನ್ ೨೨ನೇ ತಾರೀಖಿಗೆ ಸುತ್ತಲೂ ಕಳುಹಿಸಲ್ಪಟ್ಟವು. ೨-೩ ತಿಂಗಳುಗಳ ತರುವಾಯ ಈ ಸಭೆಯಾಗುವ ವೃತ್ತಾಂತವನ್ನು ಹಿಂದೂಸ್ಥಾನ ಸರ್ಕಾರದವರಿಂದ ಜನಾಂಗ ವರ್ಗಣೆಯನ್ನು ಸಂಗ್ರಹಿಸುವ ಕೆಲಸಕ್ಕೆ ನೇಮಿಸಲ್ಪಟ್ಟ ಮೆಹರ್ಬಾನ ಎಂತೋವನ್ ಸಾಹೇಬ ಬಹದ್ದೂರವರು ಕೇಳಿ, ವೀರಶೈವ ಮತದವರ ಸಾಂದ್ಯಂತ ವೃತ್ತಾಂತವನ್ನು ಈ ಮಹಾಸಭೆಯವರು ಪೂರೈಸುವರೋ ಹೇಗೆ? ಎಂದು ರಾವ್ಬಹದ್ದೂರ ಅರ್ಟಾಳ್ ರುದ್ರಗೌಡರನ್ನು ಪತ್ರ ಮುಖದಿಂದ ಕೇಳಿದರು.
ರಾವ್ಬಹದ್ದೂರವರು ಈ ಕೆಲಸವನ್ನು ನಮ್ಮ ವ್ಯವಸ್ಥಾಪಕ ಸಂಘದವರಿಗೆ ಒಪ್ಪಿಸಿದರು. ಆಮೇಲೆ ಈ ಸಂಘದವರು ಈ ಕೃತ್ಯಕ್ಕೆ ಧನಸಹಾಯವು ವಿಶೇಷ ತಗಲುವಂತೆ ಕಂಡುಬಂದದ್ದರಿಂದ ಹಾನಗಲ್ಲಿನ ಶ್ರೀಗಳವರನ್ನು ಪುನಃ ಧಾರವಾಡಕ್ಕೆ ದಯಮಾಡಿಸಿಕೊಂಡು ಬೇರೆ ಬೇರೆ ಸ್ಥಳಗಳಿಂದ ಪ್ರಮುಖ ವೀರಶೈವರನ್ನು ಕರೆಸಿ ಅವರೊಡನೆ ಆಲೋಚಿಸುವಲ್ಲಿ ಬ್ಯಾಡಗಿ, ಹುಬ್ಬಳ್ಳಿ, ಮಹಾರಾಜಪೇಟೆ, ಸಂಸಿ, ಗರಗ, ಮಮ್ಮಿಗಟ್ಟೆ ಮುಂತಾದ ಗ್ರಾಮಗಳ ವೀರಶೈವ ಗೃಹಸ್ಥರು ಮುಂದಾಳುಗಳಾಗಿ ನಿಂತು ಈ ಕೆಲಸಕ್ಕೆ ಧನಸಹಾಯ ಮಾಡಲು ಉತ್ಸಾಹಪಟ್ಟರು.
ಹಾನಗಲ್ಲ ಶ್ರೀಗಳವರು ಆ ತಕ್ಷಣವೇ ಬ್ಯಾಡಗಿ, ಹಾವೇರಿ, ದೇವಿಹೊಸೂರು, ಆಲೂರು, ಹಾನಗಲ್ಲು ಮುಂತಾದ ಸ್ಥಳಗಳಿಗೆ ಧನಸಂಚಯಾರ್ಥವಾಗಿ ತೆರಳಿದರು. ಆಮೇಲೆ ಜನಾಂಗವರ್ಗಣೆಗೆ ಅವಶ್ಯಕವಾದ ವಿವರಣೆಯನ್ನು ಸಂಗ್ರಹಿಸುವ ಕೆಲಸವು ಸುಗಮವಾಗಿ ಸಾಗಹತ್ತಿತು. ಮುಂದೆ ಡಿಸೆಂಬರ ತಿಂಗಳಲ್ಲಿ ಪ್ಲೇಗಿನ ಹಾವಳಿಯು ಧಾರವಾಡದಲ್ಲಿ ವಿಶೇಷವಾದ್ದರಿಂದ ಈ ಸಭೆಯನ್ನು ಇದೇ ಮೇ ತಿಂಗಳಿನಲ್ಲಿ ನೆರವೇರಿಸಬೇಕೆಂದು ನಿರ್ಣಯವಾಯಿತು. ಅದೇ ಮೇರೆಗೆ ಪುನಃ ಹೊಸ ಪ್ರಕಟಣೆಯ ಪತ್ರಗಳನ್ನು ಮುದ್ರಿಸಿ ಅವುಗಳ ಮುಖಾಂತರವಾಗಿ ತಮ್ಮೆಲ್ಲರ ಆಗಮನವನ್ನು ಕೋರಿದ್ದಾಯಿತು. ಪರಶಿವನ ಕೃಪೆಯಿಂದ ನಾವೆಲ್ಲರೂ ಈ ಸಭಾಸ್ಥಾನದಲ್ಲಿ ನೆರೆಯುವ ಈ ಹೊತ್ತಿನಲ್ಲಿ ಸುದಿನವು ಪ್ರಾಪ್ತವಾಯಿತು.
ಈಗ ನಾವು ಕೂಡಿರುವ ಮಹಾಸಭೆಯು ಇಂಗ್ಲೀಷ್ ರಾಜ್ಯದ ಮತ್ತು ಇಂಗ್ಲೀಷ್ ವಿದ್ಯೆಯ ಫಲವಾಗಿದೆ. ನಾವು ಈಗ ಕೂಡಿರುವ ಸ್ಥಳವನ್ನು ಅಂದರೆ ದರ್ಬಾರ ಹಾಲನ್ನು ಇಲ್ಲಿಯ ಲೋಕಪ್ರಿಯ ಕಲೆಕ್ಟರರಾದ ಮೆ ಗಿಬ್ದೊರೆಗಳವರು ಪರೋಪಕಾರ ಬುದ್ಧಿಯಿಂದಲೂ, ನಮ್ಮೆಲ್ಲರ ಮೇಲಿನ ಅಂತಃಕರಣದಿಂದಲೂ ಕೊಟ್ಟಿರುವುದರಿಂದ ನಾವೆಲ್ಲರೂ ಅವರ ಉಪಕಾರವನ್ನು ನೆನಿಸುವುದು ತಕ್ಕದ್ದಾಗಿದೆ.
ಪ್ರಿಯ ಬಾಂಧವರೇ, ನೀವು ಮಹಾಸಭೆಗೆ ಬಂದದ್ದಕ್ಕಾಗಿ ನಿಮ್ಮೆಲ್ಲರ ಉಪಕಾರವನ್ನು ಪುನಃ ನೆನೆಸಿ ನೀವು ಇನ್ನು ಮೇಲೆ ನಿಮ್ಮ ಮಹಾಸಭೆಯ ಅಧ್ಯಕ್ಷರನ್ನು ಆರಿಸಿಕೊಂಡು ಸಭೆಯ ಕೆಲಸವನ್ನು ಆರಂಭಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಮ್ಮ ಕೆಲಸದಲ್ಲಿ ಶ್ರೀಮತ್ಪರಮೇಶ್ವರನು ಯಶಸ್ಸುಕೊಡಲೆಂದು ಅವನನ್ನು ಅನನ್ಯ ಭಾವದಿಂದ ಪ್ರಾರ್ಥಿಸುತ್ತೇನೆ.
ಚನ್ನಮಲ್ಲಪ್ಪ ಅಣ್ಣಾ ಟೆಂಗಿನಕಾಯಿ ಸ್ವಾಗತ ಸಮಿತಿ ಅಧ್ಯಕ್ಷರು
೧೩.೫.೧೯೦೪



























Total views : 29475