ಪುಸ್ತಕದ ಪುಟಗಳಿಂದ ಮಸ್ತಕದ ಬೆಳಕಿನೆಡೆಗೆ…

‘ಯೇಗ್ದಾಗೆಲ್ಲಾ ಐತೆ’ ಎಂದ ಮುಕುಂದೂರು ಶಿವಯೋಗಿಗಳ ಅನುಭಾವದ ಹೆಜ್ಜೆಗುರುತುಗಳಲ್ಲಿ

==================

ಶ್ರೀಕಂಠ ಚೌಕೀಮಠ

==================

ಕೆಲವು ಮಹಾತ್ಮರ ಬದುಕೇ ಒಂದು ಗ್ರಂಥ; ಅವರ ಮೌನವೇ ಒಂದು ಮಹೋಪದೇಶ. ಅಂತಹವರನ್ನು ಅರಿಯಲು ಅಕ್ಷರಗಳ ಆಸರೆ ಬೇಕಾಗಬಹುದು; ಆದರೆ ಅನುಭಾವದ ಆಳವನ್ನು ಅಳೆಯಲು ಅಕ್ಷರಗಳೇ ಸಾಲದಾಗುತ್ತವೆ. ಲೋಕದ ಕಣ್ಣಿಗೆ ಅಲೆಮಾರಿ ಬೈರಾಗಿಯಂತೆ ಕಾಣುತ್ತ, ಅಂತರಂಗದಲ್ಲಿ ಶಿವಯೋಗದ ದೀಪಶಿಖೆಯನ್ನು ಬೆಳಗಿಸಿಕೊಂಡು ಬದುಕಿದ ಶ್ರೀ ಮುಕುಂದೂರು ಶಿವಯೋಗಿಗಳು ಅಂತಹ ಅಪರೂಪದ ಮಹಾಚೇತನ.

೨೦೨೦ರಲ್ಲಿ ನಾನು ದೆಹಲಿಯಲ್ಲಿದ್ದಾಗ ಹಿರಿಯರಾದ ಶ್ರೀ ಜಗದೀಶ ಹೊಸಮಠ ಅವರು ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ’ ಎಂಬ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದರು. ಕುತೂಹಲದಿಂದ ಓದಿದೆ; ಮತ್ತೊಮ್ಮೆ ಓದಿದೆ. ಪ್ರತಿಬಾರಿಯ ಓದಿನಲ್ಲಿಯೂ ಆ ಮಹಾತ್ಮನ ವ್ಯಕ್ತಿತ್ವದ ಹೊಸದೊಂದು ಆಯಾಮ ತೆರೆದುಕೊಳ್ಳುತ್ತಿತ್ತು. ಶ್ರೀಸಾಮಾನ್ಯನಂತೆ ಬದುಕುತ್ತಲೇ ಅಸಾಮಾನ್ಯ ಸಾಧನೆಯ ಶಿಖರವನ್ನೇರಿದ ಆ ಶಿವಯೋಗಿಯ ಬದುಕು ನನ್ನೊಳಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಮುಕುಂದೂರು ಸ್ವಾಮಿಗಳನ್ನು ಅತ್ಯಂತ ಸಮೀಪದಿಂದ ಕಂಡು, ಅವರ ವ್ಯಕ್ತಿತ್ವವನ್ನು ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಿ ನೋಡಲು ಪ್ರಯತ್ನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳು, ತಮ್ಮ ಹದಿನೆಂಟು ವರ್ಷಗಳ ಒಡನಾಟದ ವಿಸ್ಮಯಕಾರಿ ಅನುಭವಗಳನ್ನು ನೆನಪಿನ ಕೋಶದಿಂದ ಹೆಕ್ಕಿ, ಅಕ್ಷರಗಳ ಮಾಲೆಯನ್ನಾಗಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ತಮ್ಮನ್ನು ಪವಾಡಪುರುಷರೆಂದು ಕರೆಸಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದ ಸ್ವಾಮಿಗಳು, ಬಹುಶಃ ಅದಕ್ಕಾಗಿಯೇ ಪ್ರಚಾರದ ಬೆಳಕಿನಿಂದ ದೂರ ಸರಿದು ಅಲೆಮಾರಿ ಬೈರಾಗಿಯ ಬದುಕನ್ನು ಆಯ್ದುಕೊಂಡಿದ್ದಿರಬೇಕು. ಶಾಸ್ತ್ರಪಾಂಡಿತ್ಯದ ಆಡಂಬರವಿಲ್ಲದೆ, ಗ್ರಾಮೀಣ ಆಡುಭಾಷೆಯ ಸೊಗಡಿನಲ್ಲಿ ತಿಳಿಹಾಸ್ಯದ ಲಹರಿಯನ್ನು ಬೆರೆಸಿ, ಗಹನವಾದ ಆಧ್ಯಾತ್ಮಿಕ ತತ್ತ್ವಗಳನ್ನು ಅವರು ನಿರೂಪಿಸುತ್ತಿದ್ದ ಪರಿಯೇ ಅದ್ಭುತ. ಅವರ ಮಾತುಗಳ ಮೇಲಿದ್ದ ಹಾಸ್ಯದ ತೆಳುಹೊದಿಕೆಯನ್ನು ಸರಿಸಿ ಒಳಗಿಣುಕಿದರೆ, ವೇದಾಂತದ ಗಹನ ತತ್ತ್ವಗಳೆಲ್ಲ ಸಿಪ್ಪೆ ಸುಲಿದ ಬಾಳೆಹಣ್ಣಿನಂತೆ ಕೈಗೆಟುಕುತ್ತವೆ.

ಆದರೆ ಆ ಅನುಭಾವದ ಮಹಾವೃಕ್ಷದ ಬೇರುಗಳೆಲ್ಲಿದ್ದವು? ಆ ಮಹಾತ್ಮನ ಜನ್ಮಸ್ಥಳ ಯಾವುದು? ಹೆತ್ತವರು ಯಾರು? ಸಂಸಾರದ ಬಂಧನಗಳಿಂದ ವಿರಕ್ತಿಯ ಕಡೆಗೆ ಅವರನ್ನು ಕರೆದೊಯ್ದ ಸಂದರ್ಭ ಯಾವುದು? ಅವರ ಅಂತರಂಗದಲ್ಲಿ ಶಿವಯೋಗದ ದೀಪವನ್ನು ಬೆಳಗಿಸಿದ ಗುರು ಯಾರು? ಈ ಪ್ರಶ್ನೆಗಳಿಗೆ ಕೃಷ್ಣಶಾಸ್ತ್ರಿಗಳ ಕೃತಿಯಲ್ಲಿ ಉತ್ತರಗಳು ದೊರೆಯಲಿಲ್ಲ. ನನ್ನೊಳಗಿನ ಕುತೂಹಲದ ಕಿಡಿ ಮಾತ್ರ ಆರಲಿಲ್ಲ.

ಕಾಲದ ಗರ್ಭದಲ್ಲಿ ಹುದುಗಿದ್ದ ನೆನಪೊಂದು…

೨೦೨೪ರಲ್ಲಿ ಒಂದು ದಿನ ಪೂಜ್ಯ ಸ್ವಾಮಿ ಶಿವಾತ್ಮಾನಂದರು(ಶ್ರೀ ಗುರುಕಂದ) ಅವರು  ನನಗೊಂದು ಸಂದೇಶ ಕಳುಹಿಸಿದರು. ‘ಮುಕುಂದೂರು ಸ್ವಾಮಿಗಳು ಹೀಗಿದ್ದರು’ ಎಂಬ ಕೃತಿಯ ಲೇಖಕರಾದ ಶ್ರೀ ಬಸವಲಿಂಗರಾಜಯ್ಯನವರ ದೂರವಾಣಿ ಸಂಖ್ಯೆಯನ್ನು ನೀಡಿ, ಪುಸ್ತಕವೊಂದನ್ನು ತರಿಸಿಕೊಡಲು ತಿಳಿಸಿದರು. ತಕ್ಷಣವೇ ಪುಸ್ತಕಗಳನ್ನು ತರಿಸಿ, ಒಂದನ್ನು ಪೂಜ್ಯರಿಗೆ ಕಳುಹಿಸಿ, ಮತ್ತೊಂದನ್ನು ನಾನು ಓದಿಕೊಂಡೆ.

ಬೆಳಗೆರೆ ಕೃಷ್ಣಶಾಸ್ತ್ರಿಗಳ ಕೃತಿಯಲ್ಲಿ ಕಾಣದಿದ್ದ ಹಲವು ಸಂಗತಿಗಳು ಈ ಕೃತಿಯಲ್ಲಿ ದೊರೆತವು. ಆದರೆ ಪುಸ್ತಕದ ಪುಟಗಳಲ್ಲಿದ್ದ ಮಠದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆ ಕಾಲದ ಗರ್ಭದಲ್ಲಿ ಹುದುಗಿದ್ದ ನೆನಪೊಂದು ಇದ್ದಕ್ಕಿದ್ದಂತೆ ಜೀವತಳೆಯಿತು.

೨೦೦೭ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕರ್ನಾಟಕ ರಾಜ್ಯ ಯುವಘಟಕದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅರಸೀಕೆರೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದಕ್ಕೆ ತೆರಳಿದ್ದೆ. ಆಗ ಅರಸೀಕೆರೆ ತಾಲ್ಲೂಕಿನ ಮಾರಗೊಂಡನಹಳ್ಳಿ ಗ್ರಾಮದ ಚಿದಾನಂದ ಆಶ್ರಮ ವಿರಕ್ತಮಠಕ್ಕೆ ಭೇಟಿ ನೀಡಿ, ಅಲ್ಲಿಯ ಪೂಜ್ಯರಿಂದ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದ್ದೆ.

ಅಂದು ನನಗೆ ಅರಿವಿರಲಿಲ್ಲ, ನಾನು ದರ್ಶನ ಪಡೆದ ಆ ಪವಿತ್ರ ಸ್ಥಳವೇ ಶ್ರೀ ಮುಕುಂದೂರು ಶಿವಯೋಗಿಗಳ ಕ್ರಿಯಾ ಸಮಾಧಿಯ ನೆಲೆಯೆಂದು!

ಹದಿನೇಳು ವರ್ಷಗಳ ಹಿಂದೆ ನನಗೇ ಅರಿವಿಲ್ಲದಂತೆ ಅವರ ಗದ್ದುಗೆಯ ಮುಂದೆ ತಲೆಬಾಗಿದ್ದೆ. ಇಂದು ಅದೇ ಮಹಾತ್ಮನ ಬದುಕಿನ ಮುಂದೆ ನನ್ನ ಬುದ್ಧಿ ತಲೆಬಾಗುತ್ತಿತ್ತು. ಅಂದು ದರ್ಶನ ಪಡೆದ ಸ್ಥಳದ ಮಹತ್ವವನ್ನು ಇಂದು ಅಕ್ಷರಗಳ ಮೂಲಕ ಅರಿಯುತ್ತಿದ್ದೆ.

ಬದುಕಿನ ಕೆಲವು ಘಟನೆಗಳಿಗೆ ಕಾಲವೇ ವ್ಯಾಖ್ಯಾನ ಬರೆಯುತ್ತದೆ. ಕೆಲವು ಭೇಟಿಗಳ ಅರ್ಥವನ್ನು ಅರಿಯಲು ವರ್ಷಗಳೇ ಉರುಳಬೇಕಾಗುತ್ತದೆ!

ಅಕ್ಷರಗಳ ನಡುವೆ ಹೊತ್ತಿಕೊಂಡ ಅನುಭಾವದ ದೀಪ

೨೦ ನವೆಂಬರ್ ೨೦೨೬ರಂದು ‘ಮುಕುಂದೂರು ಸ್ವಾಮಿಗಳು ಹೀಗಿದ್ದರು’ ಎಂಬ ಕೃತಿಯನ್ನು ಮತ್ತೊಮ್ಮೆ ಓದಲೆಂದು ನನ್ನ ಕಚೇರಿಗೆ ತೆಗೆದುಕೊಂಡು ಹೋಗಿದ್ದೆ. ಬಿಡುವಿನ ವೇಳೆಯಲ್ಲಿ ಪುಸ್ತಕವನ್ನು ಓದುತ್ತ, ಈ ಮಹಾತ್ಮನ ಕುರಿತು ನನ್ನ ‘ಶ್ರೀ ಕುಮಾರ ತರಂಗಿಣಿ’ಯಲ್ಲಿ ಅಂಕಣವೊಂದನ್ನು ಬರೆಯಬೇಕೆಂದು ಸಂಕಲ್ಪಿಸಿಕೊಂಡೆ.

ವಿಸ್ಮಯವೆಂದರೆ, ಆ ಸಂಕಲ್ಪ ಮೂಡಿದ ಕೆಲವೇ ನಿಮಿಷಗಳಲ್ಲಿ ಅದೇ ಕೃತಿಯ ಲೇಖಕರಾದ ಶ್ರೀ ಬಸವಲಿಂಗರಾಜಯ್ಯನವರಿಂದ ವಾಟ್ಸ್ಯಾಪ್ ಮೂಲಕ ಧ್ವನಿಸಂದೇಶವೊಂದು ಬಂತು. ಅದರಲ್ಲಿ ಸಂತರೊಬ್ಬರ ಪ್ರವಚನದ ತುಣುಕಿತ್ತು.

“ಹೊರಗಣ್ಣು ತೆರೆದು ಪುಸ್ತಕವನ್ನು ಓದುವಂತೆ,

 ಒಳಗಣ್ಣು ತೆರೆದು ಮಸ್ತಕದ ಒಳಗೆ ಬಂದುಹೋಗುವ

ಹಸ್ತತ್ರಯಗಳ, ಮಲತ್ರಯಗಳ ಹಾಗೂ ಶರೀರತ್ರಯಗಳ

 ಬದಲಾವಣೆಗಳನ್ನು ಅಧ್ಯಯನ ಮಾಡಬೇಕು.

 ಆಗ ಮಸ್ತಕವೇ ಪುಸ್ತಕವಾಗುತ್ತದೆ.

ನೋಡುವವನು ಯಾರು? ಓದುವ ನಾನು ಯಾರು? ಎಂದು ವಿಚಾರಿಸಿದರೆ, ಅವಸ್ಥಾತೀತ, ಗುಣಾತೀತ, ಶರೀರಾತೀತ ಆತ್ಮ ನಾನು ಎಂಬ ಅರಿವು ಮೂಡುತ್ತದೆ.”

ಒಂದು ಕ್ಷಣ ಸ್ತಬ್ಧನಾದೆ!

ಕೈಯಲ್ಲಿ ಮುಕುಂದೂರು ಸ್ವಾಮಿಗಳ ಚರಿತ್ರೆಯ ಪುಸ್ತಕವಿತ್ತು; ಕಿವಿಯಲ್ಲಿ ಮಸ್ತಕವನ್ನೇ ಪುಸ್ತಕವನ್ನಾಗಿಸಿಕೊಳ್ಳುವ ಉಪದೇಶ ಮೊಳಗುತ್ತಿತ್ತು. ‘ಯೇಗ್ದಾಗೆಲ್ಲಾ ಐತೆ’ ಕೃತಿಯ ಸಾಲುಗಳೆಲ್ಲ ದರ್ಪಣದಂತೆ ನನ್ನ ಕಣ್ಣೆದುರು ಬಂದು ನಿಂತವು.

ಇದೊಂದು ಕಾಕತಾಳೀಯ ಘಟನೆಯಿರಬಹುದು. ಆದರೆ ಆ ಘಟನೆಯು ನನ್ನೊಳಗೆ ಹೊತ್ತಿಸಿದ ಚಿಂತನೆಯ ದೀಪ ಮಾತ್ರ ಕಾಕತಾಳೀಯವೆನಿಸಲಿಲ್ಲ.

ಹಸ್ತತ್ರಯ, ಮಲತ್ರಯ ಮತ್ತು ಶರೀರತ್ರಯಗಳ ಕುರಿತು ಮತ್ತೆ ಹುಡುಕತೊಡಗಿದೆ. ಗುರುವಿನ ದೀಕ್ಷಾನುಗ್ರಹಕ್ಕೆ ಸಂಬಂಧಿಸಿದ ಜ್ಞಾನಹಸ್ತ, ಭಾವಹಸ್ತ ಮತ್ತು ಚಿದ್ಹಸ್ತಗಳೇ ಹಸ್ತತ್ರಯಗಳು; ಆತ್ಮವನ್ನು ಬಂಧಿಸುವ ಆಣವಮಲ, ಮಾಯಾಮಲ ಮತ್ತು ಕಾರ್ಮಿಕಮಲಗಳೇ ಮಲತ್ರಯಗಳು; ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳೇ ಶರೀರತ್ರಯಗಳು.

ಈ ತ್ರಯಗಳ ಅಂತರಂಗದ ಅಧ್ಯಯನವೇ ಮಸ್ತಕವನ್ನು ಪುಸ್ತಕವನ್ನಾಗಿಸಿಕೊಳ್ಳುವ ಸಾಧನೆಯಿರಬೇಕು.

ಪುಸ್ತಕವನ್ನು ಓದಲು ಹೊರಗಣ್ಣಿನ ಬೆಳಕು ಸಾಕು; ಮಸ್ತಕವನ್ನು ಓದಲು ಒಳಗಣ್ಣಿನ ಬೆಳಕು ಬೇಕು. ಅಕ್ಷರಗಳ ಅಧ್ಯಯನದಿಂದ ಪಾಂಡಿತ್ಯ ದೊರೆಯಬಹುದು; ಅಂತರಂಗದ ಅಧ್ಯಯನದಿಂದ ಆತ್ಮಜ್ಞಾನ ಮೂಡಬಹುದು.

ಇದು ಲೌಕಿಕನಾದ ನನ್ನ ಅನುಭವದ ನಿಲುಕಿಗೆ ಇನ್ನೂ ಸಿಗದ ಸಾಧನೆ. ಆದರೂ ಒಳಗಣ್ಣಿನ ಬೆಳಕಿನಲ್ಲಿ ಬದುಕಿದ ಮಹಾಯೋಗಿಯೊಬ್ಬರನ್ನು ನನ್ನ ಹೊರಗಣ್ಣುಗಳಿಂದಲೇ ಅರಿಯಲು ಪ್ರಯತ್ನಿಸುತ್ತಿದ್ದೇನೆ.

ಮಣ್ಣಿನ ಮಗನೊಬ್ಬ ಮಹಾಯೋಗಿಯಾದ ಪರಿ

ಮುಕುಂದೂರು ಸ್ವಾಮಿಗಳ ಪೂರ್ವಾಶ್ರಮದ ಹೆಸರು ಬೋರಯ್ಯ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಿದ್ಧರಾಮನಪಾಳ್ಯದಲ್ಲಿ ಸಿದ್ಧಲಿಂಗಯ್ಯ ಮತ್ತು ಶಿವನಂಜಮ್ಮ ದಂಪತಿಯ ಪುತ್ರನಾಗಿ ಜನಿಸಿದ ಬೋರಯ್ಯ, ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥನಾದ.

ಹದಿನೆಂಟನೆಯ ವಯಸ್ಸಿನಲ್ಲಿ ತುಮಕೂರು–ಅರಸೀಕೆರೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರ್ಮಿಕನಾಗಿ ದುಡಿದ. ನಂತರ ಜಾವಗಲ್ಲಿನ ಮಂಡಿವರ್ತಕರಾಗಿದ್ದ ಶಂಕರನಹಳ್ಳಿ ಮಲ್ಲೇಗೌಡರ ಜಮೀನಿನಲ್ಲಿ ಕೃಷಿಕಾಯಕ ಮಾಡತೊಡಗಿದ. ಸಿಂಗನಹಳ್ಳಿಯ ಚನ್ನಬಸಪ್ಪನವರ ಪುತ್ರಿ ರಾಮಕ್ಕನೊಂದಿಗೆ ವಿವಾಹವಾಗಿ, ಸಣ್ಣರಾಮಕ್ಕ ಎಂಬ ಹೆಣ್ಣುಮಗುವಿನ ತಂದೆಯೂ ಆದ.

ಬೋರಯ್ಯನಿಗೆ ನಾಟಕಗಳಲ್ಲಿ ಅಭಿನಯಿಸುವುದೆಂದರೆ ಅಪಾರ ಆಸಕ್ತಿ. ಆದರೆ ಅಳಿಯನ ಈ ಹವ್ಯಾಸ ಮಾವ ಚನ್ನಬಸಪ್ಪನವರಿಗೆ ಹಿಡಿಸಲಿಲ್ಲ. ಮಾವನ ವಾಕ್ಪ್ರಹಾರದಿಂದ ನೊಂದ ಬೋರಯ್ಯನ ಬದುಕು ವಿರಕ್ತಿಯ ಕಡೆಗೆ ತಿರುಗಿತು. ಉಟ್ಟ ಬಟ್ಟೆಗಳನ್ನು ಕಳಚಿಟ್ಟು, ತುಂಡುಪಂಚೆಯುಟ್ಟು ಊರಿನ ಉತ್ತರಕ್ಕಿದ್ದ ಕಣಿವೆ ರಾಮೇಶ್ವರನ ಸನ್ನಿಧಿಯಲ್ಲಿ ಪಾರಮಾರ್ಥಿಕ ಸಾಧನೆಗೆ ತೊಡಗಿದ.

ವಿಧಿಯ ವಿಪರ್ಯಾಸವೇನೋ! ನಾಟಕದ ರಂಗಭೂಮಿಯಲ್ಲಿ ಪಾತ್ರಗಳನ್ನು ನಿರ್ವಹಿಸಲು ಬಯಸಿದ್ದ ಬೋರಯ್ಯ, ಬದುಕಿನ ರಂಗಭೂಮಿಯಲ್ಲಿನ ತನ್ನ ಪಾತ್ರದ ಅರ್ಥವನ್ನೇ ಹುಡುಕುತ್ತ ಹೊರಟ.

ಅಂದು ಮಾವನ ಬಾಯಿಂದ ಹೊರಬಿದ್ದ ಕಟುನುಡಿಗಳು ಬೋರಯ್ಯನ ಮನಸ್ಸನ್ನು ಘಾಸಿಗೊಳಿಸಿದ್ದಿರಬಹುದು. ಆದರೆ ಕಾಲಾಂತರದಲ್ಲಿ ಆ ಘಟನೆಯೇ ಅವನ ಆಧ್ಯಾತ್ಮಿಕ ಪಯಣಕ್ಕೆ ನಾಂದಿಯಾಯಿತು.

ಗುರು ಬೆಳಗಿಸಿದ ಶಿವಯೋಗದ ದೀಪ

ವಿರಕ್ತಿಯ ಹಾದಿ ಹಿಡಿದ ಬೋರಯ್ಯನಿಗೆ ಅರಸೀಕೆರೆ ತಾಲ್ಲೂಕಿನ ಹೊನ್ನುಡುಕೆ ಗ್ರಾಮದ ಶ್ರೀ ನಂಜುಂಡಾರಾಧ್ಯ ಶಿವಯೋಗಿಗಳ ಸಂಪರ್ಕ ದೊರೆಯಿತು. ಅವರ ಸನ್ನಿಧಿಯಲ್ಲಿ ಐದಾರು ವರ್ಷಗಳ ಕಾಲ ಸೇವೆಯಲ್ಲಿ ನಿರತನಾದ ಬೋರಯ್ಯ, ಗುರುಗಳಿಂದ ಕುಂಡಲಿನೀಯೋಗದ ದೀಕ್ಷೆಯನ್ನು ಪಡೆದು ‘ಬಸವಲಿಂಗ ಶಿವಯೋಗಿ’ ಎಂಬ ಅಭಿಧಾನವನ್ನು ಪಡೆದ.

ಗುರುವಿನ ಆದೇಶದಂತೆ ತೀರ್ಥಕ್ಷೇತ್ರಗಳನ್ನು ಪರ್ಯಟಿಸಿ, ಗುರು ತೋರಿದ ಸಾಧನಾಮಾರ್ಗದಲ್ಲಿ ಮುನ್ನಡೆದರು. ಅಂತಿಮವಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದ ಸಮೀಪ ಹೇಮಾವತಿ ನದೀತೀರದಲ್ಲಿರುವ ಮುಕುಂದೂರು ಮಲ್ಲಿಕಾರ್ಜುನ ಗಿರಿಯನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡರು.

ಅಲ್ಲಿ ಇಪ್ಪತ್ತೆರಡು ದಿನಗಳ ಕಾಲ ಹಗಲಿರುಳು ಅಖಂಡ ಕುಂಡಲಿನೀಯೋಗದ ಸಾಧನೆ ನಡೆಸಿದರೆಂದೂ, ನೂರಿಪ್ಪತ್ತು ಅಡಿ ಎತ್ತರದ ಕೋಡುಗಲ್ಲಿನ ಮೇಲೆ ನಿಂತು ಒಂಬತ್ತು ದಿನಗಳ ಕಾಲ ಯೋಗಸಾಧನೆಯಲ್ಲಿ ನಿರತರಾಗಿದ್ದರೆಂದೂ ಅವರ ಜೀವನಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.

ಮುಕುಂದೂರು ಗಿರಿಯ ಗವಿಯೊಂದರಲ್ಲಿ ನೆಲೆಸಿದ್ದ ಬಸವಲಿಂಗ ಶಿವಯೋಗಿಗಳನ್ನು ಜನರು ‘ಮುಕುಂದೂರು ಸ್ವಾಮಿಗಳು’ ಎಂದು ಕರೆಯತೊಡಗಿದರು.

ಅವರ ಸಾಧನೆಯಿಂದ ಮುಕುಂದೂರು ಗಿರಿ ಪ್ರಸಿದ್ಧವಾಯಿತೋ ಅಥವಾ ಮುಕುಂದೂರು ಗಿರಿಯ ಹೆಸರಿನಿಂದ ಆ ಮಹಾಯೋಗಿ ಪ್ರಸಿದ್ಧರಾದರೋ! ಕಾಲಕ್ರಮೇಣ ಸಾಧಕ ಮತ್ತು ಸಾಧನಾಭೂಮಿಯ ಹೆಸರುಗಳು ಒಂದರೊಳಗೊಂದು ಬೆರೆತುಹೋದವು.

ಸಿದ್ಧಿಯ ಶಿಖರದಲ್ಲಿ ಸಹಜತೆಯ ಸೌಂದರ್ಯ

ಮುಕುಂದೂರು ಸ್ವಾಮಿಗಳ ಬದುಕಿನಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಅವರ ಪವಾಡಗಳ ವರ್ಣನೆಯಲ್ಲ; ಅಷ್ಟೆಲ್ಲ ಸಾಧನೆಯ ನಡುವೆಯೂ ಅವರು ಉಳಿಸಿಕೊಂಡಿದ್ದ ನಿರಾಡಂಬರತೆ ಮತ್ತು ಸಹಜತೆ.

ಬೆಟ್ಟದ ಗವಿಯಲ್ಲಿ ಸಾಧನೆಗೈದ ಈ ಶಿವಯೋಗಿ ಜನಸಾಮಾನ್ಯರಿಂದ ದೂರವಾಗಲಿಲ್ಲ. ಸುತ್ತಮುತ್ತಲಿನ ಹಳ್ಳಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡುತ್ತಿದ್ದರು. ಜನರೊಂದಿಗೆ ಬೆರೆಯುತ್ತಿದ್ದರು. ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದರು. ಅವರ ಅನುಗ್ರಹದಿಂದ ರೋಗರುಜಿನಗಳು ದೂರವಾದವು ಎಂಬ ಅನುಭವಗಳನ್ನು ಅನೇಕ ಭಕ್ತರು ದಾಖಲಿಸಿದ್ದಾರೆ. ಜನರ ಮನಸ್ಸಿನಲ್ಲಿ ಬೇರೂರಿದ್ದ ಜಾತಿಭಾವನೆಯನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದರು.

ಅವರ ಮಾತುಗಳಲ್ಲಿ ಶಾಸ್ತ್ರಗಳ ಭಾರವಿರಲಿಲ್ಲ; ಅನುಭಾವದ ಸಾರವಿತ್ತು. ಪಾಂಡಿತ್ಯದ ಗಾಂಭೀರ್ಯವಿರಲಿಲ್ಲ; ಸಹಜತೆಯ ಸೌಂದರ್ಯವಿತ್ತು. ನಗಿಸುತ್ತಲೇ ಚಿಂತನೆಗೆ ಹಚ್ಚುವ, ಚಿಂತನೆಗೆ ಹಚ್ಚುತ್ತಲೇ ಅಂತರಂಗದ ಮೌನಕ್ಕೆ ಕರೆದೊಯ್ಯುವ ಅಪೂರ್ವ ಶಕ್ತಿ ಅವರ ಮಾತುಗಳಲ್ಲಿತ್ತು.

‘ನಾನು ಯಾರು?’ ಎಂಬ ಪ್ರಶ್ನೆಯನ್ನು ತಮ್ಮನ್ನು ತಾವೇ ಕೇಳಿಕೊಳ್ಳತೊಡಗಿದರೆ ಅಧ್ಯಾತ್ಮದ ದಾರಿ ತೆರೆಯುತ್ತದೆ ಎಂಬುದು ಅವರ ಉಪದೇಶದ ಸಾರವಾಗಿತ್ತು.

ಅವರ ಜೀವನಚರಿತ್ರೆಯ ಪ್ರಕಾರ ೧೯೪೦ರವರೆಗೆ ಮುಕುಂದೂರು ಗಿರಿಯಲ್ಲಿ ಸಾಧನೆಗೈದ ಸ್ವಾಮಿಗಳು ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದರೆಂದು ಭಕ್ತರು ನಂಬಿದ್ದರು. ವೃದ್ಧಾಪ್ಯದಲ್ಲಿ ಬೆಟ್ಟವನ್ನು ಹತ್ತಿಳಿಯುವುದು ಕಷ್ಟವಾದಾಗ ಮಾರಗೊಂಡನಹಳ್ಳಿಯ ಇಬ್ಬರು ಭಕ್ತರು ೧೯೪೩ರಲ್ಲಿ ಅವರನ್ನು ತಮ್ಮ ಗ್ರಾಮಕ್ಕೆ ಕರೆತಂದರು. ಅಲ್ಲಿಯೇ ತಮ್ಮ ಅಂತಿಮ ದಿನಗಳನ್ನು ಕಳೆದ ಬಸವಲಿಂಗ ಶಿವಯೋಗಿಗಳು ೧೯೬೭ರ ಅಕ್ಟೋಬರ್ ೮ರಂದು ಶಿವೈಕ್ಯರಾದರು. ಅವರ ಆಯುಷ್ಯ ನೂರಮೂವತ್ತು ವರ್ಷಗಳಾಗಿತ್ತೆಂದು ಜೀವನಚರಿತ್ರೆಯಲ್ಲಿ ದಾಖಲಿಸಲಾಗಿದೆ.

ಪವಾಡಗಳ ಪರದೆಯಾಚೆಗಿನ ಮಹಾಯೋಗಿ

ಮುಕುಂದೂರು ಸ್ವಾಮಿಗಳನ್ನು ಕೇವಲ ಪವಾಡಪುರುಷರನ್ನಾಗಿ ಪರಿಚಯಿಸುವುದು ಅವರ ಮಹೋನ್ನತ ಸಾಧನೆಗೆ ಸಲ್ಲಿಸುವ ಅಪೂರ್ಣ ಗೌರವವೆನಿಸುತ್ತದೆ.

ಹೂವಿನ ಪರಿಮಳಕ್ಕೆ ಮಾರುಹೋಗುವ ನಾವು ಆ ಹೂವನ್ನು ಅರಳಿಸಿದ ಬೇರುಗಳ ಕಡೆಗೆ ದೃಷ್ಟಿ ಹರಿಸುವುದಿಲ್ಲ. ಅಂತೆಯೇ ಮಹಾಯೋಗಿಗಳ ಸಿದ್ಧಿಗಳ ಕುರಿತು ವಿಸ್ಮಯಪಡುವ ನಾವು, ಆ ಸಿದ್ಧಿಗಳ ಹಿಂದಿದ್ದ ಗುರುನಿಷ್ಠೆ, ವೈರಾಗ್ಯ, ತಪಸ್ಸು ಮತ್ತು ಆತ್ಮಾನುಸಂಧಾನದ ಕಡೆಗೆ ಗಮನಹರಿಸುವುದಿಲ್ಲ.

ಇಂದು ಯೋಗವನ್ನು ದೈಹಿಕ ಆಸನಗಳ ಚೌಕಟ್ಟಿನೊಳಗೆ ಗ್ರಹಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ನೆಲದಲ್ಲಿ ಗುರುದೀಕ್ಷೆ ಮತ್ತು ಕುಂಡಲಿನೀಯೋಗದ ಮೂಲಕ ಸಾಧನೆಯ ಶಿಖರವನ್ನೇರಿದ ಮುಕುಂದೂರು ಸ್ವಾಮಿಗಳಂತಹ ಶಿವಯೋಗಿಗಳ ಬದುಕಿನ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ.

ಅವರನ್ನು ಲೋಕಕ್ಕೆ ಪರಿಚಯಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೂ, ಅವರ ಪೂರ್ವಾಶ್ರಮ ಮತ್ತು ಸಾಧನಾಪರಂಪರೆಯ ಬೇರುಗಳನ್ನು ಶೋಧಿಸಿ ದಾಖಲಿಸಿದ ಶ್ರೀ ಬಸವಲಿಂಗರಾಜಯ್ಯನವರಿಗೂ ಕನ್ನಡದ ಆಧ್ಯಾತ್ಮಿಕ ಸಾಹಿತ್ಯಲೋಕ ಋಣಿಯಾಗಿರಬೇಕು.

ಮಸ್ತಕದೊಳಗೊಂದು ಓದದ ಗ್ರಂಥ!

ನಾವು ಜ್ಞಾನವನ್ನು ಗ್ರಂಥಗಳಲ್ಲಿ ಹುಡುಕುತ್ತೇವೆ; ದೇವರನ್ನು ಕ್ಷೇತ್ರಗಳಲ್ಲಿ ಹುಡುಕುತ್ತೇವೆ; ನೆಮ್ಮದಿಯನ್ನು ಸಂಪತ್ತಿನಲ್ಲಿ ಹುಡುಕುತ್ತೇವೆ. ಬದುಕಿನುದ್ದಕ್ಕೂ ಏನನ್ನಾದರೂ ಹುಡುಕುತ್ತಲೇ ಇರುತ್ತೇವೆ. ಆದರೆ ಈ ಎಲ್ಲವನ್ನೂ ಹುಡುಕುತ್ತಿರುವವನನ್ನು ಹುಡುಕುವ ಪ್ರಯತ್ನ ಮಾತ್ರ ಮಾಡುವುದಿಲ್ಲ.

ಮುಕುಂದೂರು ಸ್ವಾಮಿಗಳ ‘ಯೇಗ್ದಾಗೆಲ್ಲಾ ಐತೆ’ ಎಂಬ ಸರಳ ಆಡುಮಾತಿನೊಳಗೆ ಅಡಗಿರುವ ಅನುಭಾವದ ಧ್ವನಿ ಬಹುಶಃ ಇದೇ ಇರಬೇಕು.

೨೦೦೭ರಲ್ಲಿ ಅವರ ಗದ್ದುಗೆಯ ಮುಂದೆ ನಿಂತಿದ್ದೆ. ೨೦೨೦ರಲ್ಲಿ ಅವರ ಬದುಕಿನ ಅಕ್ಷರಗಳ ಮುಂದೆ ಕುಳಿತಿದ್ದೆ. ೨೦೨೪ರಲ್ಲಿ ಅವರ ಸಾಧನೆಯ ಬೇರುಗಳನ್ನು ಹುಡುಕುತ್ತಿದ್ದೆ. ಇದೀಗ ೨೦೨೬ರಲ್ಲಿ ಅವರ ಕುರಿತು ಅಕ್ಷರಗಳನ್ನು ಜೋಡಿಸುತ್ತಿದ್ದೇನೆ.

ಇಷ್ಟೆಲ್ಲ ವರ್ಷಗಳ ಅಕ್ಷರಯಾತ್ರೆಯ ನಂತರವೂ ನನ್ನೊಳಗೆ ಉಳಿದಿರುವ ಪ್ರಶ್ನೆಯೊಂದಿದೆ.

ಹೊರಗಣ್ಣು ತೆರೆದು ಅನೇಕ ಪುಸ್ತಕಗಳನ್ನು ಓದಿದ್ದೇನೆ. ಮಹಾತ್ಮರ ಚರಿತ್ರೆಗಳನ್ನು ಅಧ್ಯಯನ ಮಾಡಿದ್ದೇನೆ. ಅವರ ಬದುಕಿನ ಕುರಿತು ಅಕ್ಷರಗಳನ್ನು ಹೆಣೆದಿದ್ದೇನೆ. ಆದರೆ ನನ್ನ ಮಸ್ತಕದೊಳಗೇ ಇರುವ ಆ ಓದದ ಗ್ರಂಥದ ಮೊದಲ ಪುಟವನ್ನಾದರೂ ತೆರೆದಿದ್ದೇನೆಯೇ?

ಪುಸ್ತಕವನ್ನು ಓದಿದ ನನ್ನ ಹೊರಗಣ್ಣಿಗೆ, ಮಸ್ತಕವನ್ನು ಓದುವ ಒಳಗಣ್ಣು ತೆರೆಯುವುದೆಂದು?

ಬಹುಶಃ ಅಂದು ಮುಕುಂದೂರು ಶಿವಯೋಗಿಗಳ ‘ಯೇಗ್ದಾಗೆಲ್ಲಾ ಐತೆ’ ಎಂಬ ಮಾತು ನನಗೆ ಕೇವಲ ಪುಸ್ತಕದ ಶೀರ್ಷಿಕೆಯಾಗಿ ಉಳಿಯಲಾರದು; ಅದು ನನ್ನೊಳಗೆ ಬೆಳಗುವ ಅನುಭಾವದ ದೀಪವಾಗಬಹುದು!

Related Posts