*ಮೌನದ ಮಮತೆ, ಗಾಂಭೀರ್ಯದೊಳಗಿನ ಕರುಣೆ*
ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಸ್ಮರಣೆಯಲ್ಲಿ
===================================
ಲೇಖಕರು: ಶ್ರೀಕಂಠ ಚೌಕೀಮಠ
ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ದೆಹಲಿ ರಾಜ್ಯ ಘಟಕ.
========================
ದೀಪದ ಬೆಳಕಿನಲ್ಲಿ ಕುಳಿತಾಗ ಅದರ ಜ್ವಾಲೆಯನ್ನು ಎಷ್ಟು ಹೊತ್ತು ನೋಡಿದೆವು ಎಂಬುದು ನೆನಪಿರುವುದಿಲ್ಲ. ಆದರೆ ಆ ಬೆಳಕಿನಲ್ಲಿ ಓದಿದ ಅಕ್ಷರಗಳು, ಕಂಡ ಮುಖಗಳು, ಮನಸ್ಸಿಗೆ ದೊರೆತ ನೆಮ್ಮದಿ ನಮ್ಮೊಂದಿಗೆ ಉಳಿಯುತ್ತವೆ. ಕೆಲವು ಮಹನೀಯರ ಒಡನಾಟವೂ ಹೀಗೆಯೇ. ಅವರ ಸನ್ನಿಧಿಯಲ್ಲಿ ಕಳೆದ ಸಮಯ ಅಲ್ಪವಾಗಿದ್ದರೂ, ಅವರು ನಮ್ಮ ಬದುಕಿನಲ್ಲಿ ಮೂಡಿಸಿದ ಬೆಳಕು ದೀರ್ಘಕಾಲ ಉಳಿಯುತ್ತದೆ.
ಹಾಲಕೆರೆಯ ಪರಮಪೂಜ್ಯ ಅಭಿನವ ಅನ್ನದಾನ ಮಹಾಸ್ವಾಮಿಗಳವರನ್ನು ನೆನೆಯುವಾಗ ನನ್ನ ಮನಸ್ಸಿನಲ್ಲಿ ಇಂತಹದೊಂದು ದೀಪ ಬೆಳಗುತ್ತದೆ.
ಪೂಜ್ಯರೊಂದಿಗೆ ನನಗೆ ಸುದೀರ್ಘ ಒಡನಾಟವಿರಲಿಲ್ಲ. ಅವರ ಮುಂದೆ ನಿಂತು ಮಾತನಾಡುವ ಧೈರ್ಯವೂ ನನಗಿರಲಿಲ್ಲ. ಹೇಳಬೇಕಾದ ಮಾತುಗಳಿದ್ದರೂ, ಅವರ ದರ್ಶನವಾದೊಡನೆ ಅವು ಮನಸ್ಸಿನಲ್ಲಿಯೇ ಉಳಿದುಬಿಡುತ್ತಿದ್ದವು. ಅವರ ಗಂಭೀರ ನಿಲುವು, ಮುಖಮುದ್ರೆಯಲ್ಲಿದ್ದ ತೇಜಸ್ಸು, ಸನ್ನಿಧಿಯ ಶಿಸ್ತು—ಇವೆಲ್ಲವೂ ನನ್ನನ್ನು ಮೌನವಾಗಿಸುತ್ತಿದ್ದವು. ಆ ಮೌನದಲ್ಲಿ ಭಯಕ್ಕಿಂತ ಹೆಚ್ಚಾಗಿ ಗೌರವವಿತ್ತು; ಅವರ ಮುಂದೆ ನನ್ನ ಮಾತುಗಳನ್ನು ಹೇಗೆ ನಿವೇದಿಸಿಕೊಳ್ಳಲಿ ಎಂಬ ಸಂಕೋಚವಿತ್ತು.
ಆದರೆ ಅವರಿಂದ ದೊರೆತ ಅನುಗ್ರಹವನ್ನು ನೆನೆದಾಗ, ಅಂದು ಹೇಳಲಾಗದ ಮಾತುಗಳೆಲ್ಲ ಇಂದು ಕೃತಜ್ಞತೆಯಾಗಿ ಹರಿದುಬರುತ್ತವೆ.
ಮಹಾಕವಿ ಭವಭೂತಿಯ ಸುಭಾಷಿತವೊಂದು ಆಗ ನೆನಪಾಗುತ್ತದೆ:
“ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ ॥”
ವಜ್ರಕ್ಕಿಂತಲೂ ಕಠಿಣವಾಗಿ, ಹೂವಿಗಿಂತಲೂ ಮೃದುವಾಗಿ ಇರಬಲ್ಲ ಮಹನೀಯರ ಮನಸ್ಸನ್ನು ಯಾರು ತಾನೆ ಸಂಪೂರ್ಣವಾಗಿ ಅರಿಯಬಲ್ಲರು?
ಪೂಜ್ಯರ ವ್ಯಕ್ತಿತ್ವದ ಎದುರು ನಿಂತಾಗ ನನಗೆ ಕಾಣಿಸಿದ್ದು ಆ ವಜ್ರದ ದೃಢತೆ. ಅವರ ನೆರವನ್ನು ಪಡೆದಾಗ ಅನುಭವಿಸಿದ್ದು ಹೂವಿನ ಮೃದುತ್ವ. ಈ ಎರಡನ್ನೂ ಒಂದೇ ಬದುಕಿನಲ್ಲಿ ಹೊತ್ತು ಸಾಗುವುದು ಎಷ್ಟು ದೊಡ್ಡ ಸಾಧನೆ ಎಂಬುದು ಅವರ ನೆನಪುಗಳನ್ನು ಮೆಲುಕುಹಾಕಿದಂತೆ ನನಗೆ ಅರಿವಾಗುತ್ತದೆ.
೨೦೧೯ರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಾಕ್ಷ್ಯಚಿತ್ರ ಹಾಗೂ ‘ವಿರಾಟಪುರ ವಿರಾಗಿ’ ಚಲನಚಿತ್ರದ ನಿರ್ಮಾಣಕಾರ್ಯದಲ್ಲಿ ತೊಡಗಿದ್ದೆ. ಮಹಾಗುರುವಿನ ಬದುಕನ್ನು ತೆರೆಯ ಮೇಲೆ ತರುವ ಸಂಕಲ್ಪ ನನ್ನೊಳಗಿತ್ತು. ಅವರ ಚರಿತ್ರೆಯ ಘನತೆ, ಸೇವೆಯ ವಿಸ್ತಾರ, ತಪಸ್ಸಿನ ಆಳ—ಇವೆಲ್ಲವನ್ನೂ ದೃಶ್ಯಗಳ ಮೂಲಕ ನಿರೂಪಿಸುವ ಹೊಣೆಗಾರಿಕೆ ಪ್ರತಿಹಂತದಲ್ಲಿಯೂ ನನ್ನನ್ನು ಎಚ್ಚರಿಸುತ್ತಿತ್ತು.
ಅಂತಹ ಸಂದರ್ಭದಲ್ಲಿ ಪೂಜ್ಯರ ಆಶೀರ್ವಾದವನ್ನು ಪ್ರಾರ್ಥಿಸಿಕೊಂಡೆ.
ಪೂಜ್ಯರು ನಮ್ಮ ಆಶಯಕ್ಕೆ ಸ್ಪಂದಿಸಿದರು. ಚಿತ್ರದಲ್ಲಿ ಬಳಸಿಕೊಳ್ಳಲು ನಾನು ಅಪೇಕ್ಷಿಸಿದ್ದ ಶಿವಯೋಗಮಂದಿರದ ಸಾಹಿತ್ಯ ಪ್ರಕಟಣೆಗಳಿಗೆ ಅನುಮತಿ ದಯಪಾಲಿಸಿದರು. ಚಿತ್ರೀಕರಣ ತಂಡದ ವಾಸ್ತವ್ಯಕ್ಕಾಗಿ ಯಾತ್ರಿನಿವಾಸದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೋಣೆಗಳನ್ನು ನಲವತ್ತೈದು ದಿನಗಳವರೆಗೆ ಉಚಿತವಾಗಿ ಒದಗಿಸಿಕೊಟ್ಟರು.
ಇಂದು ಆ ದಿನಗಳನ್ನು ನೆನೆಯುವಾಗ ಕೋಣೆಗಳ ಸಂಖ್ಯೆಗಿಂತಲೂ, ದಿನಗಳ ಲೆಕ್ಕಕ್ಕಿಂತಲೂ ಹೆಚ್ಚಾಗಿ ನನ್ನ ಮನಸ್ಸಿಗೆ ತಟ್ಟುವುದು ಆ ನೆರವಿನ ಹಿಂದಿದ್ದ ಕಾಳಜಿ.
ಒಂದು ಚಿತ್ರೀಕರಣ ತಂಡದ ವಾಸ್ತವ್ಯವೆಂದರೆ ಅನೇಕ ವ್ಯವಸ್ಥೆಗಳ ಹೊಣೆ. ಆ ಹೊಣೆಯ ದೊಡ್ಡ ಭಾಗವನ್ನು ಪೂಜ್ಯರು ಹಗುರಗೊಳಿಸಿದ್ದರು. ನಮ್ಮ ಪ್ರಯತ್ನ ಮುಂದುವರಿಯಲು ಅಗತ್ಯವಿದ್ದ ಆಶ್ರಯವನ್ನು ನೀಡಿದ್ದರು. ಬೆಳಿಗ್ಗೆ ಚಿತ್ರೀಕರಣಕ್ಕೆ ಹೊರಟು, ಸಂಜೆಯ ದುಡಿಮೆಯ ದಣಿವಿನೊಂದಿಗೆ ಮರಳುತ್ತಿದ್ದ ತಂಡಕ್ಕೆ ಶಿವಯೋಗಮಂದಿರದಲ್ಲಿ ನೆಲೆ ದೊರಕಿತ್ತು. ಆ ವ್ಯವಸ್ಥೆಯ ಹಿಂದೆ ಪೂಜ್ಯರ ಸಹೃದಯ ಅನುಮತಿ ಇತ್ತು ಎಂಬುದನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಶ್ರೀ ಕುಮಾರ ಶಿವಯೋಗಿಗಳ ಮೇಲಿನ ಅವರ ಪ್ರೀತಿ, ಆ ಮಹಾಗುರುವಿನ ಚರಿತ್ರೆಯನ್ನು ಜನರಿಗೆ ತಲುಪಿಸಲು ಹೊರಟಿದ್ದ ನಮ್ಮ ಮೇಲೂ ನೆರಳಾಗಿ ಹರಡಿತ್ತು.
ಅಣ್ಣಿಗೇರಿಯಲ್ಲಿ ಮಹಾಗುರುವಿನ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಕ್ರಿಯಾಸಮಾಧಿಯ ಜೀರ್ಣೋದ್ಧಾರದ ಕಾರ್ಯ ಕೈಗೊಂಡಾಗಲೂ ಆ ನೆರಳು ನಮ್ಮೊಂದಿಗಿತ್ತು. ಪೂಜ್ಯರು ಸ್ವತಃ ಅಣ್ಣಿಗೇರಿಗೆ ಆಗಮಿಸಿ ಪ್ರೋತ್ಸಾಹ ನೀಡಿದರು.
ಒಂದು ಪವಿತ್ರ ಸ್ಮೃತಿಸ್ಥಳದ ಎದುರು ನಿಂತು ಕೆಲಸ ಮಾಡುವಾಗ ಮನಸ್ಸಿನಲ್ಲಿ ಅನೇಕ ಭಾವಗಳು ಮೂಡುತ್ತವೆ. ಹಿಂದೆ ಇಲ್ಲಿ ನಡೆದ ಸಾಧನೆ, ಈ ನೆಲದೊಂದಿಗೆ ಬೆಸೆದುಕೊಂಡ ಗುರುಪರಂಪರೆ, ಅದನ್ನು ಮುಂದಿನವರಿಗೆ ಉಳಿಸಿಕೊಡಬೇಕಾದ ನಮ್ಮ ಹೊಣೆ—ಎಲ್ಲವೂ ಮನಸ್ಸನ್ನು ಆವರಿಸುತ್ತವೆ. ಅಂತಹ ಸಂದರ್ಭದಲ್ಲಿ ಪೂಜ್ಯರ ಆಗಮನ ನಮ್ಮ ಪ್ರಯತ್ನಕ್ಕೆ ಧೈರ್ಯ ನೀಡಿತು. ನಾವು ಕೈಗೊಂಡಿದ್ದ ಕಾರ್ಯದ ಮಹತ್ವವನ್ನು ಇನ್ನಷ್ಟು ಮನಗಾಣಿಸಿತು.
ಯಳಂದೂರು ಬಸವಲಿಂಗ ಶಿವಯೋಗಿಗಳ ಕುರಿತಾದ ನನ್ನ ‘ಮಹಾಗುರುವಿನ ಗುರು’ ಪುಸ್ತಕಕ್ಕೂ ಅವರು ಆಶೀರ್ವಚನ ದಯಪಾಲಿಸಿದರು. ಆ ಅನುಗ್ರಹವನ್ನು ನೆನೆಯುವಾಗ ನನ್ನ ಬರವಣಿಗೆಯ ಶ್ರಮಕ್ಕೆ ದೊರೆತ ಹಿರಿಯರ ಮನ್ನಣೆ ನೆನಪಾಗುತ್ತದೆ. ಗುರುಚರಿತ್ರೆಯ ಕುರಿತು ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡಬೇಕೆಂಬ ಹೊಣೆಗಾರಿಕೆಯೂ ಮನಸ್ಸಿನಲ್ಲಿ ಮೂಡುತ್ತದೆ.
ಪೂಜ್ಯರ ಪ್ರೋತ್ಸಾಹವನ್ನು ನೆನೆಯುವಾಗ ‘ಶ್ರೀಕುಮಾರ ತರಂಗಿಣಿ’ಯ ಹುಟ್ಟಿನ ಕಥೆಯೂ ಮನಸ್ಸಿನಲ್ಲಿ ತೆರೆದುಕೊಳ್ಳುತ್ತದೆ. ೧೯೩೦ರಲ್ಲಿ ಶಿವಯೋಗಮಂದಿರದ ವಟುಸಾಧಕರು ಒಟ್ಟಾಗಿ ‘ಸುಕುಮಾರ’ ಎಂಬ ಕೈಬರಹದ ಪತ್ರಿಕೆಯನ್ನು ಹೊರತಂದಿದ್ದರು. ಸಾಧನೆಯೊಂದಿಗೆ ಸಾಹಿತ್ಯದ ಅಭಿರುಚಿಯನ್ನೂ ಬೆಳೆಸಿಕೊಂಡಿದ್ದ ಆ ಎಳೆಯ ಮನಸ್ಸುಗಳ ಅಕ್ಷರಸೇವೆಗೆ ಮುಂದೆ ಐತಿಹಾಸಿಕ ಮಹತ್ವ ದೊರೆಯಿತು. ಹಲವು ಸಾಹಿತಿ ಸ್ವಾಮಿಗಳು, ಶಾಸ್ತ್ರಿಗಳು ಹಾಗೂ ವಿದ್ವಾಂಸರ ಚಿಂತನೆಗಳನ್ನು ಹೊರಜಗತ್ತಿಗೆ ಪರಿಚಯಿಸಿದ ವೇದಿಕೆಯಾಗಿ ಆ ಪತ್ರಿಕೆ ಬೆಳೆಯಿತು. ಕಾಲಾಂತರದಲ್ಲಿ ಮುದ್ರಣರೂಪವನ್ನೂ ಪಡೆದಿದ್ದ ‘ಸುಕುಮಾರ’, ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು.
ಒಮ್ಮೆ ನಡೆದ ಚರ್ಚೆಯಲ್ಲಿ ಹಾಲಕೆರೆ ಸಂಸ್ಥಾನಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಆ ಪತ್ರಿಕೆಗೆ ಮರುಚಾಲನೆ ನೀಡುವಂತೆ ನನಗೆ ಪ್ರೇರಣೆ ನೀಡಿದರು. ಹಿರಿಯರ ಅಕ್ಷರಸೇವೆಯನ್ನು ಹೊಸ ಮಾಧ್ಯಮದಲ್ಲಿ ಮುಂದುವರಿಸುವ ಆ ಹೊಣೆಗಾರಿಕೆಯನ್ನು ಸವಾಲಾಗಿ ಸ್ವೀಕರಿಸಿ, ಜಾಲತಾಣವನ್ನು ವಿನ್ಯಾಸಗೊಳಿಸಿ ಪರಮಪೂಜ್ಯ ಅಭಿನವ ಅನ್ನದಾನ ಮಹಾಸ್ವಾಮಿಗಳವರಿಗೆ ತೋರಿಸಿದೆ. ಪೂಜ್ಯರು ಬಹಳ ಸಂತೋಷಪಟ್ಟರು. ‘ಸುಕುಮಾರ — ಶ್ರೀಕುಮಾರ ತರಂಗಿಣಿ’ ಎಂಬ ಹೆಸರನ್ನು ಬಳಸಲು ಅನುಮತಿ ದಯಪಾಲಿಸಿ, ೨೦೨1ರ ಬಸವಜಯಂತಿಯಂದು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಿದರು. ಹಳೆಯ ಕೈಬರಹದ ಪುಟಗಳಲ್ಲಿ ಅರಳಿದ್ದ ಸಾಹಿತ್ಯಸೇವೆಗೆ ಅವರ ಆಶೀರ್ವಾದದಿಂದ ಡಿಜಿಟಲ್ ಜಗತ್ತಿನಲ್ಲಿ ಹೊಸ ಪಯಣ ಆರಂಭವಾಯಿತು.
ಇಂದು ‘ಶ್ರೀಕುಮಾರ ತರಂಗಿಣಿ’ ಜಗತ್ತಿನಾದ್ಯಂತ ಮೂವತ್ತು ಸಾವಿರಕ್ಕೂ ಹೆಚ್ಚು ಓದುಗರನ್ನು ಹೊಂದಿ ಪ್ರಸಾರಗೊಳ್ಳುತ್ತಿದೆ. ಅದರ ಮೂಲಕ ಓದುಗರನ್ನು ತಲುಪುವ ಪ್ರತಿ ಲೇಖನದ ಹಿಂದೆಯೂ ಪೂಜ್ಯರು ಅಂದು ನೀಡಿದ ಪ್ರೋತ್ಸಾಹದ ನೆನಪಿದೆ. ಜಾಲತಾಣವನ್ನು ಅವರಿಗೆ ತೋರಿಸಿದಾಗ ಅವರು ವ್ಯಕ್ತಪಡಿಸಿದ ಸಂತೋಷವನ್ನು ನೆನೆಯುತ್ತೇನೆ. ಹಿರಿಯರು ಉಳಿಸಿಕೊಟ್ಟ ಅಕ್ಷರಪರಂಪರೆಯನ್ನು ಮುಂದುವರಿಸುವ ನನ್ನ ಪ್ರಯತ್ನಕ್ಕೆ ಅವರು ನೀಡಿದ ಅನುಮತಿ ಮತ್ತು ಆಶೀರ್ವಾದ, ಇಂದಿಗೂ ಈ ಸೇವೆಯನ್ನು ಶ್ರದ್ಧೆಯಿಂದ ನಡೆಸಿಕೊಂಡು ಹೋಗುವ ಬಲವಾಗಿದೆ.
ಪೂಜ್ಯರು ನೀಡಿದ ಇಂತಹ ನೆರವುಗಳೆಲ್ಲ ನನ್ನ ನೆನಪಿನಲ್ಲಿವೆ. ಆದರೆ ಅವುಗಳ ನಡುವೆ ಒಂದು ಸ್ಮರಣೆ ಮಾತ್ರ ಮನಸ್ಸಿನ ಅತ್ಯಂತ ಮೃದುವಾದ ಜಾಗದಲ್ಲಿ ನೆಲೆಗೊಂಡಿದೆ.
ಅದು ಗುರುನಾಮವನ್ನು ಆಲಿಸಿ ಪೂಜ್ಯರು ಸುರಿಸಿದ ಆನಂದಬಾಷ್ಪದ ಸ್ಮರಣೆ.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನಾಮಾವಳಿಗಳಿಗೆ ರಾಗ ಸಂಯೋಜಿಸಿ, ಮಾದರಿ ಸಂಗೀತವನ್ನು ಪೂಜ್ಯರಿಗೆ ಕಳುಹಿಸಿಕೊಟ್ಟಿದ್ದೆ. ಆಗ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೈಹಿಕ ನೋವಿನ ನಡುವೆ ದಿನಗಳನ್ನು ಕಳೆಯುತ್ತಿದ್ದ ಸಂದರ್ಭವದು.
ಆ ಸ್ಥಿತಿಯಲ್ಲಿಯೂ ಅವರು ನಾಮಾವಳಿಗಳನ್ನು ಆಲಿಸಿದರು. ಗುರುಸ್ಮರಣೆಯ ಸ್ವರಗಳಿಗೆ ಅವರ ಮನಸ್ಸು ಮಿಡಿಯಿತು. ಸಂತೋಷ ಉಕ್ಕಿಬಂದು ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿತು.
ಈ ಸಂಗತಿಯನ್ನು ನೆನೆದಾಗ ನಾನು ಬಹಳ ಹೊತ್ತು ಮೌನವಾಗುತ್ತೇನೆ.
ಮೂರು ದೊಡ್ಡ ಧಾರ್ಮಿಕ ಸಂಸ್ಥೆಗಳ ಹೊಣೆ ಹೊತ್ತಿದ್ದ ಹಿರಿಯ ಯತಿ. ಅನೇಕ ಸಂಸ್ಥೆಗಳನ್ನು ಮುನ್ನಡೆಸಿದ ಅನುಭವಿ ಮಾರ್ಗದರ್ಶಕ. ಶಿಸ್ತಿನ ಗಾಂಭೀರ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಗುರುಗಳು. ಅಂತಹ ಅವರ ಅಂತರಂಗದಲ್ಲಿ ಗುರುನಾಮವು ಎಷ್ಟು ಆಳವಾಗಿ ನೆಲೆಸಿತ್ತು! ದೇಹದ ನೋವಿನ ನಡುವೆಯೂ ಆ ಸ್ಮರಣೆ ಅವರಿಗೆ ಸಂತೋಷ ನೀಡಿತ್ತು.
ನಾವು ಹಿರಿಯರ ಪಾಂಡಿತ್ಯವನ್ನು ಕೇಳಿ ತಿಳಿಯಬಹುದು. ಅವರ ಕಾರ್ಯಸಾಧನೆಗಳ ವಿವರಗಳನ್ನು ಓದಿ ಅರಿಯಬಹುದು. ಆದರೆ ಅವರ ಹೃದಯವನ್ನು ಸ್ಪರ್ಶಿಸಿದ ಭಾವವೊಂದನ್ನು ಇಂತಹ ಸಂದರ್ಭದಲ್ಲಿ ಕಂಡಾಗ, ಅವರ ವ್ಯಕ್ತಿತ್ವ ನಮಗೆ ಮತ್ತಷ್ಟು ಹತ್ತಿರವಾಗುತ್ತದೆ.
ಪೂಜ್ಯರ ಆನಂದಬಾಷ್ಪ ನನ್ನ ಪಾಲಿಗೆ ಅಂತಹದೊಂದು ಅಪರೂಪದ ಪರಿಚಯ.
ಅವರೊಳಗಿದ್ದ ಗುರುಭಕ್ತಿಯ ಆಳವನ್ನು ಅದು ನನಗೆ ತಿಳಿಸಿತು. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಆದರ್ಶಗಳನ್ನು ಅವರು ಎಷ್ಟು ಪ್ರೀತಿಯಿಂದ ಹೃದಯದಲ್ಲಿ ಹೊತ್ತಿದ್ದರು ಎಂಬುದನ್ನು ಮನಗಾಣಿಸಿತು. ಅಂದು ನಾನು ಕಳುಹಿಸಿದ್ದ ಸಂಗೀತದ ಸ್ವರಗಳು ಅವರ ಮನಸ್ಸನ್ನು ಮುಟ್ಟಿದ್ದವು; ಅವರ ಆನಂದದ ಸ್ಮರಣೆ ಇಂದಿಗೂ ನನ್ನ ಮನಸ್ಸನ್ನು ಮುಟ್ಟುತ್ತಲೇ ಇದೆ.
ಮುಂದೆ ಆ ನಾಮಾವಳಿಗಳ ಲೋಕಾರ್ಪಣೆಗೆ ಪೂಜ್ಯರು ಸ್ವತಃ ಶಿವಯೋಗಮಂದಿರಕ್ಕೆ ಬಂದರು. ಎಲ್ಲ ವಟುಸಾಧಕರನ್ನೂ ತಮ್ಮ ಸುತ್ತಲೂ ಕುಳ್ಳಿರಿಸಿಕೊಂಡರು.
ಆ ದೃಶ್ಯ ನನ್ನ ನೆನಪಿನಲ್ಲಿ ಒಂದು ಶಾಂತಚಿತ್ರದಂತೆ ಉಳಿದಿದೆ.
ಮಧ್ಯದಲ್ಲಿ ಪೂಜ್ಯರು. ಸುತ್ತಲೂ ಕಿರಿಯ ಸಾಧಕರು. ಅವರ ನಡುವೆ ಗುರುನಾಮದ ಸ್ವರಗಳು.
ಹಿರಿಯರ ಬದುಕಿನಲ್ಲಿ ಆಳವಾಗಿ ಬೇರೂರಿದ್ದ ಭಕ್ತಿ, ಕಿರಿಯರ ಮನಸ್ಸಿನಲ್ಲಿ ಮೊಳಕೆಯೊಡೆಯುವಂತಹ ಕ್ಷಣವದು. ಪೂಜ್ಯರು ಆ ವಟುಗಳಿಗೆ ಎಷ್ಟೋ ವಿಷಯಗಳನ್ನು ಬೋಧಿಸಿರಬಹುದು. ಆದರೆ ಆ ದಿನ ಅವರೊಂದಿಗೆ ಕುಳಿತು ಗುರುನಾಮವನ್ನು ಆಲಿಸಿದ ಅನುಭವವೂ ಆ ಪೂಜ್ಯ ವಟುಸಾಧಕರ ಮನಸ್ಸಿನಲ್ಲಿ ಉಳಿದಿರಬಹುದೆಂದು ನನಗನಿಸುತ್ತದೆ.
ಗುರುಗಳ ಸಾನ್ನಿಧ್ಯದಲ್ಲಿ ಪಡೆದ ಇಂತಹ ಅನುಭವಗಳು ಮುಂದೆ ಬದುಕಿನ ಯಾವ ಘಳಿಗೆಯಲ್ಲಿ ನೆನಪಾಗಿ ಬಲ ನೀಡುತ್ತವೆಯೋ ಯಾರು ಹೇಳಬಲ್ಲರು?
ಪೂಜ್ಯರ ಎಂಬತ್ತಮೂರು ವರ್ಷಗಳ ಬದುಕಿನತ್ತ ಕಣ್ಣಾಡಿಸಿದಾಗ, ಈ ಮಮತೆಯೊಂದಿಗೆ ಬೆರೆತ ಮಹತ್ತರ ಹೊಣೆಗಾರಿಕೆಗಳೂ ಕಾಣಿಸುತ್ತವೆ. ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿತ್ವ, ಹಂಪಿ–ಹೊಸಪೇಟೆ–ಬಳ್ಳಾರಿಯ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಧಿಪತ್ಯ, ಶ್ರೀ ಶಿವಯೋಗಮಂದಿರದ ಅಧ್ಯಕ್ಷರಾಗಿ ಸತತ ಇಪ್ಪತ್ತು ವರ್ಷಗಳ ಸೇವೆ—ಇವುಗಳೊಂದಿಗೆ ಅನೇಕ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳು ಹಾಗೂ ಪ್ರಸಾದನಿಲಯಗಳ ಆಡಳಿತ ಅವರ ಕಾರ್ಯವ್ಯಾಪ್ತಿಯಲ್ಲಿತ್ತು.
ಪ್ರತಿ ಸಂಸ್ಥೆಯ ಹಿಂದೆ ನೂರಾರು ನಿರೀಕ್ಷೆಗಳಿರುತ್ತವೆ. ಓದಲು ಬಂದ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರಿಯಬೇಕು. ಆಶ್ರಯ ಪಡೆದವನಿಗೆ ನೆಮ್ಮದಿ ದೊರೆಯಬೇಕು. ಪ್ರಸಾದನಿಲಯಕ್ಕೆ ಬಂದವನ ಹಸಿವು ನೀಗಬೇಕು. ಧಾರ್ಮಿಕ ಸಂಸ್ಥೆಯ ಪರಂಪರೆ ಮುಂದುವರಿಯಬೇಕು. ಇವೆಲ್ಲವನ್ನೂ ಸಮತೋಲನದಿಂದ ಮುನ್ನಡೆಸಲು ದೃಢತೆ ಬೇಕು; ಜನರ ಅಗತ್ಯಗಳನ್ನು ಅರಿಯಲು ಸಹೃದಯತೆ ಬೇಕು.
ಪೂಜ್ಯರ ಬದುಕಿನಲ್ಲಿ ಈ ಎರಡೂ ಗುಣಗಳು ಒಂದಕ್ಕೊಂದು ಬೆಂಬಲವಾಗಿ ನಿಂತಿದ್ದವು.
ಅವರ ವಿದ್ಯಾಭ್ಯಾಸವೂ ಇಂತಹ ಸೇವೆಗೆ ಸಮೃದ್ಧವಾದ ನೆಲೆಯನ್ನು ಒದಗಿಸಿತ್ತು. ನರೆಗಲ್ಲಿನ ಶಿಕ್ಷಣದಿಂದ ಶಿವಯೋಗಮಂದಿರದ ಅಧ್ಯಯನದವರೆಗೆ, ಅಲ್ಲಿಂದ ಕಾಶಿಯ ಉನ್ನತ ಶಾಸ್ತ್ರಾಭ್ಯಾಸದವರೆಗೆ ಅವರ ಜ್ಞಾನಯಾತ್ರೆ ಸಾಗಿತ್ತು. ಶಾಸ್ತ್ರ, ಭಾಷೆ, ಯೋಗ, ಶಿವಯೋಗಗಳ ಅಧ್ಯಯನದೊಂದಿಗೆ ಪಡೆದ ವಿಶಾಲ ತಿಳಿವಳಿಕೆ ಅವರ ಮುಂದಿನ ಹೊಣೆಗಾರಿಕೆಗಳಲ್ಲಿ ನೆರವಾಯಿತು.
ಬದುಕಿನ ಒಂದು ಹಂತದಲ್ಲಿ ವಕೀಲರಾಗಿ ಬಡವರಿಗೆ, ದೀನದುರ್ಬಲರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಹಂಬಲ ಅವರಿಗಿತ್ತು ಎಂಬ ಸಂಗತಿ ವಿಶೇಷವಾಗಿ ಮನಸ್ಸನ್ನು ಸೆಳೆಯುತ್ತದೆ. ನೊಂದವರ ಪರವಾಗಿ ನಿಲ್ಲಬೇಕೆಂಬ ಆಶಯ ಎಷ್ಟು ಸುಂದರವಾದದ್ದು! ಮುಂದೆ ಅವರ ಬದುಕು ಸ್ವಾಮಿತ್ವದ ದಾರಿಯಲ್ಲಿ ಸಾಗಿದಾಗಲೂ ಆ ಆಶಯ ಸೇವೆಯ ವಿವಿಧ ರೂಪಗಳಲ್ಲಿ ಮುಂದುವರಿಯಿತು. ವಿದ್ಯಾಭ್ಯಾಸಕ್ಕೆ ನೆರವಾದ ಕೈಗಳಲ್ಲಿ, ಆಶ್ರಯ ಒದಗಿಸಿದ ಕಾಳಜಿಯಲ್ಲಿ, ಅನ್ನದಾಸೋಹದ ವ್ಯವಸ್ಥೆಯಲ್ಲಿ ಅದರ ಫಲ ಕಾಣಿಸಿತು.
ಪೂಜ್ಯರು ನಡೆದ ಹಾದಿಯನ್ನು ಸಂಪೂರ್ಣವಾಗಿ ನಿರೂಪಿಸುವಷ್ಟು ಪರಿಚಯ ನನಗಿಲ್ಲ. ಅವರಿಂದ ಉಪಕೃತನಾದವನಾಗಿ ನನ್ನ ಮನಸ್ಸಿನಲ್ಲಿ ಉಳಿದ ಕೆಲವು ಬೆಳಕಿನ ಕ್ಷಣಗಳನ್ನು ಮಾತ್ರ ಹಂಚಿಕೊಳ್ಳಬಲ್ಲೆ.
ನಾನು ಅವರ ಮುಂದೆ ನಿಂತಾಗ ಮಾತುಗಳು ಕಡಿಮೆಯಾಗಿದ್ದವು. ಇಂದು ಅವರ ನೆನಪಿನ ಮುಂದೆ ಕುಳಿತಾಗ ಮಾತುಗಳು ತುಂಬಿಕೊಳ್ಳುತ್ತಿವೆ. ಆದರೆ ಮನಸ್ಸಿನ ಕೃತಜ್ಞತೆಯನ್ನು ಹೇಳಲು ಅವು ಸಾಲುತ್ತಿಲ್ಲ.
ಅವರು ಒದಗಿಸಿದ ಆಶ್ರಯದಲ್ಲಿ ನಮ್ಮ ತಂಡ ಕೆಲಸ ಮಾಡಿತು. ಅವರು ನೀಡಿದ ಪ್ರೋತ್ಸಾಹದಲ್ಲಿ ನಮ್ಮ ಸೇವಾಕಾರ್ಯ ಮುಂದುವರಿಯಿತು. ಅವರು ದಯಪಾಲಿಸಿದ ಆಶೀರ್ವಚನ ಪುಸ್ತಕದ ಪುಟಗಳಲ್ಲಿ ಉಳಿಯಿತು. ಅವರು ಸುರಿಸಿದ ಆನಂದಬಾಷ್ಪ ನನ್ನ ಹೃದಯದಲ್ಲಿ ಉಳಿಯಿತು.
ಪೂಜ್ಯರೇ, ನಿಮ್ಮ ಗಾಂಭೀರ್ಯದ ಎದುರು ಅಂದು ಸಂಕೋಚದಿಂದ ನಿಂತಿದ್ದ ನನಗೆ, ನಿಮ್ಮ ಕರುಣೆಯ ನೆನಪು ಇಂದು ಧೈರ್ಯದಿಂದ ಮಾತನಾಡಿಸುತ್ತಿದೆ. ನಿಮ್ಮಿಂದ ಪಡೆದ ನೆರವನ್ನು ನೆನೆಯುವಾಗ ಕೈಗಳು ಮತ್ತೆ ನಮಸ್ಕಾರಕ್ಕೆ ಮಣಿಯುತ್ತವೆ.
ಗುರುನಾಮಕ್ಕೆ ತೇವಗೊಂಡ ನಿಮ್ಮ ಕಣ್ಣುಗಳನ್ನು ನೆನೆಯುತ್ತೇನೆ. ಆ ನೆನಪಿನ ಬೆಳಕಿನಲ್ಲಿ, ನನ್ನ ಸೇವೆಯ ಮುಂದಿನ ಹೆಜ್ಜೆಯನ್ನು ಇನ್ನಷ್ಟು ಶ್ರದ್ಧೆಯಿಂದ ಇಡಬೇಕೆಂದು ಮನಸ್ಸು ಹೇಳುತ್ತದೆ. ನಿಮ್ಮ ಅನುಗ್ರಹಕ್ಕೆ ನಾನು ಸಲ್ಲಿಸಬಹುದಾದ ಕೃತಜ್ಞತೆ ಬಹುಶಃ ಅದೇ.























Total views : 30299