ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯನ್ನು ಹೊಸರೂಪದಲ್ಲಿ ತಮಗೆ ಅರ್ಪಿಸಲು  ಅತ್ಯಂತ ಹರ್ಷವೆನಿಸುತ್ತದೆ.

೨೦೨೧ ಬಸವ ಜಯಂತಿ ಯಂದು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತದಿಂದ ಆರಂಭಗೊಂಡ ಶ್ರೀಕುಮಾರ ತರಂಗಿಣಿ  ಬ್ಲಾಗ ಇಂದು ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಅಮೃತಹಸ್ತದಿಂದ ಹೊಸ ರೂಪ ದೊಂದಿಗೆ ಅನಾವರಣಗೊಳ್ಳುತ್ತಿದೆ.

ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

 ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ.

ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ.  ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ.

ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ  ಚೇತನಕಾರಿಯಾಗಿ ತೂರಿ ಬರುತ್ತದೆ.

2023 ಸಪ್ಟಂಬರ ಮತ್ತು ಅಕ್ಟೊಬರ ತಿಂಗುಳಗಳಲ್ಲಿ ಕರ್ನಾಟಕ,ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳ ಗಡಿಪ್ರದೇಶಗಳಲ್ಲಿ ನಡೆದ ಶ್ರೀಕುಮಾರೇಶ್ವರರ ೧೫೬ನೆಯ ಜಯಂತಿ ಮಹೋತ್ಸವದ ಚಿತ್ರಸಂಪುಟ “ಶ್ರೀಕುಮಾರೇಶ್ವರ ವೈಭವ”

ಚಿತ್ರಸಂಪುಟದ ಸಂಗ್ರಹಕ್ಕೆ ಸಹಕರಿಸಿದ ಸಮಸ್ತ ಶ್ರೀಕುಮಾರೇಶ್ವರರ ಅಭಿಮಾನಿ ಭಕ್ತರಿಗೆ ತುಂಬುಹೃದಯದ ಕೃತಜ್ಞತೆಗಳು

 

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ರೇವಣಸಿದ್ಧ ಗುರುದೇವ ಭಾವಜ ಹರಜೀವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ವೇದಾಂತಾಭ್ಯಾಸ-ಸಿದ್ಧಾಂತ ಹವ್ಯಾಸ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ನರಜನ್ಮ-ಹರಜನ್ಮ ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

(ರಾಗ – ಕಾಪಿ)

ರೇವಣಸಿದ್ಧ ಗುರುದೇವ | ಭಾವಜ ಹರಜೀವ |

ಓವಿನೀ ಕೊಡು ಮಂಗಲವ | || ಪ ||

ಕಾಮವೆನ್ನನು ಕೂಡಿ ಕಾಡಿ |

ನೇಮ ಸೀಮೆಯ ಕೆಡಿಸದಾಡಿ |

ಪ್ರೇಮದಪ್ಪಿಯು ಭವದೊಳು ನೂಂಕುವ

ನೀ ಮನಸಿಜನನು ಬಿಡಿಸು ಬೇಗ || 1 ||

ದುಷ್ಟ ವಾಸನೆಗಳ ಬಲದಿಂದ |

ಭ್ರಷ್ಟ ಕಾಮನತಾಚ್ಚಲದಿಂದ |

ಮುಟ್ಟಿ ಕೊರಗಿಪೆ ದುರ್ವಾಸನೆಯ |

ಕುಟ್ಟಿ ವರಸುಖವ ಕೊಡು ಜವದಿ || 2 ||

ಅಂಗಹೀನನ ಸೇವೆಯ ಬಿಡಿಸಿ |

ಲಿಂಗದೇವನ ಪೂಜೆಯ ಹಿಡಿಸಿ |

ಕಂಗಳಾಲಯನೀಕ್ಷಿಸು ಭಾವದಿ |

ಮಂಗಲಮಯನೆನಿಸೋ ಯತಿವರ || 3

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು  ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.

 

ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.

 

ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.

 

ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.

 

ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.

 

ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.

 

ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.

 

ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.

 

ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.

 

ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.

ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ     ||ಪ||

ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ

 

ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ

ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ

ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ

ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ           ||೧||

 

ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ

ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ

ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ

ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ                ||೨||

 

ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ

ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ

ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ

ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ       ||೩||

 

ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ

ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ

ಸುಜನ ಜನದ ಕೈವಾರವೆ ಮಂಗಳಪಾಠವಮ್ಮ

ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ            ||೪||

 

ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ

ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ

ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ

ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ                ||೫||

 

ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಮಠ ಗದಗ

 

ಜಂತೂನಾಂ ನರಜನ್ಮ ದುರ್ಲಭಂ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು

ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .

 

ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ

ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.

ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ

ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ವಚನಪಿತಾಮಹ ಶ್ರೀ ಫ.ಗು.ಹಳಕಟ್ಟಿಯವರ  ಶಿವಾನುಭವ ಫೆ. ೧೯೩೦  ಅವರ ಸಂಪಾದಕೀಯ ಲೇಖನದ ಆಯ್ದ ಭಾಗ

ಸಮಾಜವು ಹಿಂದೆ ಬಿದ್ದ ಕಾಲಕ್ಕೆ ಅದನ್ನು ಮುಂದಕ್ಕೆ ದೂಡಲು ಒಬ್ಬಾನೊಬ್ಬನು ಮೊದಲು ಪ್ರವೃತ್ತನಾಗುತ್ತಾನೆ. ಅವನು ಈ ಪ್ರಕಾರ ಉದ್ಭವಿಸಿ ಅದಕ್ಕೆ ಯೋಗ್ಯ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಮೇಲೆ ಅವನ ತರುವಾಯ ಅವನು ಹಾಕಿಕೊಟ್ಟ ಹಾದಿಯಂತೆ ಸಮಾಜವು ಕೆಲದಿವಸ ಹೋದ ಬಳಿಕ ಅದು ಪುನಃ ಸ್ತಬ್ಧವಾಗುವ ಪ್ರಸಂಗವು ಬರಲು ಮತ್ತೊಬ್ಬರು ಉತ್ಪನ್ನರಾಗಿ ಅದರಲ್ಲಿ ಹೊಸ ಚೈತನ್ಯವನ್ನು ಹುಟ್ಟಿಸುತ್ತಾರೆ. ಇಂಥವರೆಲ್ಲರೂ ಮಹಾವಿಭೂತಿಗಳೇಸರಿ. ಇಂಥವರ ವರ್ಗ ದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇರುತ್ತಾರೆ.

ಶ್ರೀ, ಹಾನಗಲ್ಲ ಕುಮಾರ ಸ್ವಾಮಿಗಳು ಮುಂದಕ್ಕೆ ಬಂದು ವೀರಶೈವ ಸಮಾಜದಲ್ಲಿ ಧರ್ಮದ ನಿಜವಾದ ಸಂಸ್ಕೃತಿಯನ್ನು ಹಬ್ಬಿಸಲಿಕ್ಕೆ ಕಾರಣವಾದರು. ಧರ್ಮ ಸಂಸ್ಕೃತಿಯೇ ಸಮಾಜದ ತಳಹದಿಯಾಗಿರುತ್ತದೆಂದು ಭಾವಿಸಿ ಅದಕ್ಕೋಸ್ಕರವೇ ಅವರು ತಮ್ಮ ಇಡೀ ಆಯುಷ್ಯವನ್ನೇ ಅರ್ಪಿಸಿದರು.

ವೀರಶೈವ ಮಹಾಸಭೆಯು ಇರುವ ವರೆಗೆ ವೀರಶೈವ ಜನ ಸಮುದಾಯದಲ್ಲಿ ಅದು ವಿಶೇಷ ಚಳವಳಿಯನ್ನು ಹಬ್ಬಿಸಲಿಕ್ಕೆ ಸಾಧನೀಭೂತವಾಯಿತು. ಅದರ ಮೂಲಕ ಸಾರ್ವಜನಿಕ ಕಾರ್ಯ ಮಾಡಲಿಚ್ಛಿಸುವವರಿಗೆ ತಮ್ಮ ಚಳವಳಿಗಳನ್ನು ಸಾಗಿಸಲಿಕ್ಕೆ ಬಹಳ ಉಪಯೋಗವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಮಹಾಸಭೆಯನ್ನು ಆರಂಭಿಸಿ, ಅದರ ೭-೮ ಅಧಿನಿವೇಶನಗಳಲ್ಲಿ ಪ್ರತ್ಯಕ್ಷ ಕಾರ್ಯ ಮಾಡಿ.ಜನರಲ್ಲಿ ಜಾಗ್ರತೆಯನ್ನು ಹುಟ್ಟಿಸಿದರು. ಇದು ಅವರು ಮಾಡಿದ ಮಹತ್ವದ ಕಾರ್ಯವಾಗಿದೆ. ಶ್ರೀ ಸ್ವಾಮಿಗಳು ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಉತ್ಸುಕರಾದ್ದರಿಂದ ಮಹಾಸಭೆಯು ಜಾಗ್ರತೆಯ ಮೂಲಕ ಅವರು ಬದಾಮಿ ಮಹಾಕೂಟದಲ್ಲಿ ಶಿವಯೋಗಮಂದಿರವೆಂಬ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರು ಮಾಡಿದ ಎರಡನೇ ಮಹತ್ವದ ಕಾರ್ಯವಾಗಿದೆ.

ಶಿವಯೋಗವು ವೀರಶೈವ ಧರ್ಮದಲ್ಲಿ ಒಂದು ವಿಶಿಷ್ಟ ಯೋಗಪದ್ಧತಿಯಾಗಿರುತ್ತದೆ. ಇದನ್ನು ಪ್ರಸಾರಗೊಳಸಬೇಕೆಂಬುದೇ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಮುಖ್ಯ ಧ್ಯೇಯವಾಗಿತ್ತು. ಇದಕ್ಕೋಸ್ಕರವಾಗಿಯೇ ಅವರು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಹೀಗೆ ಶಿವಯೋಗ ಮಂದಿರದಲ್ಲಿ ಶಿಕ್ಷಣಹೊಂದಿ ಮಠಾಧಿಕಾರಿಗಳು ಮಠಗಳಲ್ಲಿ ಪಟ್ಟಾಧ್ಯಕ್ಷರಾಗುವದರಿಂದ ಸಮಾಜದ ಪ್ರಗತಿಯು ಬಹು ಬೇಗನೆ ಆಗುವದೆಂದು ಅವರ ಪೂರ್ಣ ತಿಳುವಳಿಕೆಯಾಗಿತ್ತು

ಈ ಶಿವಯೋಗ ಸಾಧನೆಗೋಸ್ಕರ, ಅತ್ಯಂತ ಬಿಗಿತರವಾದ ವರ್ತನೆಯು ಅವಶ್ಯವೆಂದು ಅವರ ಭರವಸೆ ಇದ್ದ ದರಿ೦ದ ಅವರು ಅಲ್ಲಿ ಶಿಕ್ಷಣ ಹೊಂದುವವರಿಗೆ ಬಹು ಕಟ್ಟಾಚರಣೆಗಳನ್ನು ಕಲ್ಪಿಸಿದರು. ಆ ಪ್ರಕಾರ ಈ ಆಚರಣೆಗೆ ಒಳಗಾಗಿ ಈ ಸಂಸ್ಥೆಯಿಂದ ಅನೇಕರು ಹೊರಬಿದ್ದು ಬಹುಕಡೆಗೆ ಮಠಾಧಿಕಾರಿಗಳಾಗಿದ್ದದ್ದೂ ಅವರು ಅನೇಕ ಬಗೆಯ ಸಮಾಜ ಕಾರ್ಯಗಳಲ್ಲಿ ತೊಡಗಿದ್ದೂ ತೋರಿಬರುತ್ತಿದೆ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದ ಈ ಕಾರ್ಯವು ಸಾಮಾನ್ಯವಾದುದಲ್ಲ.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಪ್ರಕಾರ ಕೇವಲ ಧಾರ್ಮಿಕ ಭಾವನೆಯುಳ್ಳವರಾಗಿದ್ದರೂ ಅವರು ವ್ಯವಹಾರವನ್ನು ತಿರಸ್ಕರಿಸಿಬಿಡಲಿಲ್ಲ. ಅವರು ಆಧುನಿಕ ಸುಧಾರಣೆಗಳನ್ನು ಕೈಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಅವರು ಅಸಂಖ್ಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ದೊರಕಿಸಲು ಬಹಳ ಸಹಾಯ ಮಾಡಿದರು. ಮತ್ತು ತಮ್ಮ ಶಿವಯೋಗಮಂದಿರದಲ್ಲಿಯೇ ಒಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಶಿವಯೋಗಮಂದಿರದ ಹಣದಿಂದಲೇ ಗಿರಣಿಯನ್ನು ಸ್ಥಾಪಿಸಿದ್ದು. ಅವರು ಶಿವಯೋಗಮಂದಿರದ ಜಮೀನುಗಳಲ್ಲಿ ಹೊಸ ತರದ ಒಕ್ಕಲುತನ ಸುಧಾರಣೆಗಳನ್ನು ಕೈಕೊಳ್ಳಲು ಬಹಳ ಆತುರ ಪಡುತ್ತಿದ್ದರು. ಮತ್ತು ಈ ದೃಷ್ಟಿಯಿಂದಲೇ ಅವರು ಅನೇಕ ಕಡೆಗೆ ಶಿವಯೋಗಮಂದಿರಕ್ಕೋಸ್ಕರ ಜಮೀನುಗಳನ್ನು ಸಂಪಾದಿಸಿರುವರು. ಅವರ ಮನಸ್ಸಿನಲ್ಲಿ ಶಿವಯೋಗ ಮಂದಿರದ ಮುಖಾಂತರ ಇಡೀ ದೇಶದಲ್ಲಿ ಧಾರ್ಮಿಕ ಪ್ರಚಾರ ಕಾರ್ಯಮಾಡಬೇಕೆಂದು ಬಹಳ ಇದ್ದ ದರಿಂದ ಅವರು ಅನೇಕ ಕಡೆಗೆ ಕೀರ್ತನಕಾರರೂ ಉಪನ್ಯಾಸಕರೂ ಹೋಗಿ ಉಪದೇಶ ಮಾಡಲು ಬಹಳ ಪ್ರೋತ್ಸಾಹಿಸುತಿದ್ದರು. ಹಾಗೆಯೇ ಅವರು ಗವಾಯಿಗಳಿಗೂ ಉತ್ತೇಜನ ಕೊಡುತ್ತಿದ್ದರು.

ಶ್ರೀಕುಮಾರ ತರಂಗಿಣಿ  ೨೦೨೩ ಅಕ್ಟೋಬರ  ಸಂಚಿಕೆಯ ಲೇಖನಗಳ ವಿವರ

  1. ಕೊಡು ಮಂಗಲವನು ಬೇಗನೆ ಶಿವನೆ ನೀನಿದನು” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3.   ಪುಸ್ತಕದ ಒಂದು ಸನ್ನಿವೇಶ: ಶ್ರೀಕಂಠ.ಚೌಕೀಮಠ
  4.  
  5. ೨ : ಶ್ರೀಕುಮಾರೇಶ್ವರ ಅಭಂಗ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಕೊಡು ಮಂಗಲವನು ಬೇಗನೆ ಶಿವನೆ ನೀನಿದನು

(ರಾಗ – ದೇಸ್)

ಕೊಡು ಮಂಗಲವನು ಬೇಗನೆ ಶಿವನೆ ನೀನಿದನು |

ಭವರೋಗವನು, ತವೆಹರಿಪುದನು ಸುವಿಲಾಸದೊಳು || ಪ ||

ಘೋರವೆನಿಪವೃತ್ತಿ | ಸಾರಿ ಕಾಡುವದತಿ |

ಕ್ರೂರತನದಿ ಮುತ್ತಿ | ಗಾರುಗೊಳಿಸಿ ಶಾಂತಿ |

ಪೂರವಳಿದು ಗತಿ | ಸೇರದಿರುವೆ || 1 ||

ಮುತ್ತಿ ತಾಮಸವದು | ವೃತ್ತಿ ಮೂಢವದು |

ಚಿತ್ತ ದಾವರಣದು | ಸತ್ಯ ಬ್ರಹ್ಮವ ಮರೆದು |

ಅತ್ತಿತ್ತಲೋಗದಂತೆ | ಸುತ್ತಕೊಂಡಿರುವೆ || 2 ||

ಆಂತು ಸತ್ಸಂಗವನು | ಕಂತು ಮರ್ದನನನು |

ಚಿಂತಿಸುತ್ತಿರುವದನು | ಭ್ರಾಂತಿ ನೀಗಿರುವದನು |

ಕಾಂತಿ ಹೊಂದುವದನು | ಇಂತು ಬೇಡುವೆ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ನರಮನುಜನು ಪಟ್ಟ ದರಸಾಗಲವಗೆ ನೀ

ಶಿರಬಾಗದಿರಲು-ಶಿರದೊಳಗೆ ಲಿಂಗವನು

ಧರಿಸೆಂದ ಗುರುವೆ ಕೃಪೆಯಾಗು    || ೧೩೧ ||

ಭಕ್ತನು ಶಿವಶರಣರ ಕಿಂಕರರ ಕಿಂಕರನಾಗಲು ಬಯಸುತ್ತಾನೆ. ಆದರೆ ಭವಿಯಾದ ಅರಸನ ಆಸರವನ್ನೂ ಇಚ್ಛಿಸುವದಿಲ್ಲ. ಶಿವಭಕ್ತನಲ್ಲದ ಮನುಜನಿಗೆ ಮಣಿಯುವದೂ ಇಲ್ಲ. ಇಂಥ ಛಲವುಳ್ಳವನೇ ಶಿವಲಿಂಗವನ್ನು ಶಿರದಲ್ಲಿ ಧರಿಸ ಬೇಕೆಂಬುದನ್ನು ಶಿವಕವಿಯು ಲಿಂಗಧರಿಸುವ ನಾಲ್ಕನೆಯ ಸ್ಥಾನವನ್ನಾಗಿ ನಿರೂಪಿಸಿದ್ದಾನೆ.

ಭಕ್ತನಲ್ಲದ ಸಾಮಾನ್ಯ ನರನು ಪೂರ್ವದ ಪುಣ್ಯವಿಶೇಷದಿಂದ ರಾಜ್ಯಕ್ಕೆ ಪಟ್ಟದರಸನಾದರೆ ಶರಣನಾದವನು ಅವನನ್ನು ಶಿರಬಾಗಿ ವಂದಿಸಲಾರನು. ಭವಿಗೆ ಬಾಗದ ಭಕ್ತನು ಮಸ್ತಕದೊಳಗೆ ಮಹಾಲಿಂಗವನ್ನು ಧರಿಸಬೇಕೆಂಬುದು ಶ್ರೀಗುರುವಿನ ಬೋಧೆಯಾಗಿದೆ. ಕಾಯಕನಿಷ್ಠನಾದ ಭಕ್ತನು ಭವಿಯನ್ನು ಬೇಡನು. ಅವನಿಂದ ಯಾವ ಆಶೆಯನ್ನು ಮಾಡನು. ಅವನ ಹಂಗೂ ಅವನಿಗೆ ಇರದು. ಅರವತ್ತು ಮೂವರು ಪುರಾತನರಲ್ಲೊಬ್ಬರಾದ ಶರಣ ರಕ್ಷಕನಾದ ಕಲಿಗಣನಾಥನೆಂಬ ಶೂರ- ಶರಣನಾದ ಅರಸನು ಭವಿಯಾಗಿ ಬಂದ ಶಿವನಿಗೂ ವಂದಿಸಲಿಲ್ಲ. ಆದರೆ ಭವಿಯಾದ ಅವನಿಗೆ ಶಿಕ್ಷಿಸಿ ಲಿಂಗಧಾರಣಮಾಡಿದ ಕಥೆ ಅದ್ಭುತವಾದುದು. ಶರಣರು ನ್ಯಾಯನಿಷ್ಠುರರು. ದಾಕ್ಷಿಣ್ಯಪರರಾಗಿ ಬಾಳುವದಿಲ್ಲ. ಅಂತೆಯೇ ಭವಿಯಾದವನು ಅರಸನಾಗಿದ್ದರೂ ಅವನನ್ನು ಮನ್ನಿಸಲಾರರು. ಇಂಥ ಧೀರೋದಾತ್ತತೆಯಲ್ಲಿಯೇ ವೀರಶೈವನ ವೀರತ್ತ್ವವು ಪ್ರಕಟಗೊಳ್ಳುವದು.

ಭಕ್ತಿಭಾಂಡಾರಿಯೆನಿಸಿದ ವೀರಶೈವ ನಿರ್ಣಯಪರಮಾವತಾರಿಯೆನಿಸಿದ ಅಣ್ಣಬಸವಣ್ಣನವರು ಭವಿಯಾದ ಬಿಜ್ಜಳನಲ್ಲಿ ಕಾಯಕ ಮಾಡುತ್ತಿದ್ದರೇ ಹೊರತು   ಅವನಿಗೆ ವಂದಿಸುತ್ತಿರಲಿಲ್ಲ; ಆದರೆ ತನ್ನ ಬೆರಳಿನ ನಂದಿಯುಂಗುರವನ್ನು ಮುಂದೆ ಮಾಡಿ ಇಷ್ಟಲಿಂಗವನ್ನು ಗುರು-ಜಂಗಮ ಧ್ಯಾನಪೂರ್ವಕ ಔಪಚಾರಿಕವಾಗಿ, ರಾಜಗೌರವೋಚಿತಕ್ಕಾಗಿ ಬಿಜ್ಜಳನಿಗೆ ಕೈಮುಗಿಯುತ್ತಿದ್ದನು; ಅರ್ಥಾತ್ ತಮ್ಮ ಹಸ್ತದ ನಂದೀಶ್ವರನಿಗೆ ವಂದಿಸುವ ಭಾವವಿರುತ್ತಿತ್ತು. ಇದರ ರಹಸ್ಯವನ್ನರಿತ ಕೊಂಡೆಯವರು ರಾಜನಿಗೆ ತಿಳಿಸಿದರು. ಸಾರಾಸಾರ ವಿವೇಕವಿಲ್ಲದ ಅರಸನು ಅಣ್ಣನವರಿಗೆ ಉಂಗುರ ತೆಗೆದಿರಿಸಿ ಸಿಂಹಾಸನಕ್ಕೆ ಮಣಿಯ ಬೇಕೆಂದಾಗ ಬಸವ ಮಹಾನುಭಾವರು ಬಿಜ್ಜಳನನ್ನು ಕೆಳಗಿರಿಸಿ ವಂದಿಸುತ್ತಿರಲು ಆ ಸಿಂಹಾಸನವು ಧಗಧಗನೆ ಉರಿಯ ಹತ್ತುವದು. ದಿಗ್ಭ್ರಮೆಗೊಂಡ ಅರಸನು ದಂಡಾಧೀಶನಲ್ಲಿ ಕ್ಷಮೆ ಕೇಳಿದನು ಎಂಬ ಚರಿತ್ರೆ ಬಸವ ಪುರಾಣದಲ್ಲಿ ಕಾಣಸಿಕ್ಕುವದು.

ಶರಣರಿಂದ ವಂದಿಸಿಕೊಳ್ಳುವ ವ್ಯಕ್ತಿಯು ಮಹಾ ಮಹಿಮನೇ ಆಗಿರಬೇಕು. ದೊಡ್ಡವರಿಗೆ ಮಣಿಯುವದು ಲೋಕಾಚಾರ. ಅದಕ್ಕಪಚಾರ ಮಾಡಿದರೆ ಅನಾಹುತಕ್ಕೇನೆ ಔತಣ ಕೊಟ್ಟಂತಾಗುವದು. ಇದಕ್ಕೆ ಬಿಜ್ಜಳನ ಉದಾಹರಣೆಯೇ ಸಾಕ್ಷಿಯಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಮಾತುಗಳು ಎರಡು. ಭಕ್ತನಲ್ಲದವನು ಭಕ್ತರಿಂದ ನಮಸ್ಕರಿಸಿಕೊಳ್ಳಬಾರದು. ಇನ್ನೊಂದು ಭಕ್ತನಾದವನು ಭವಿಗಳ ಆಮಿಷಾದಿಗಳಿಗೆ ಆಶಿಸದೆ ಸ್ವತಂತ್ರ ಧೀರನಾಗುವ ಮನೋಭಾವವುಳ್ಳವನಾಗಬೇಕು.

ಈ ತ್ರಿಪದಿಯನ್ನು ರಚಿಸಿದ ಶಿವಕವಿಯು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ತ್ರಿಪದಿಯ ಅರ್ಥವನ್ನು  ಚನ್ನಬಸಣ್ಣನವರ ವಚನವು ಪುಷ್ಟಿಕರಿಸಿದೆ.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ

 ಅನ್ಯರಿಗೆ ತಲೆಬಾಗದಿರಬೇಕು; ಮಾನವರ ಬೇಡದಿರಬೇಕು.

 ಹಸಿವು ತೃಷೆ ವಿಷಯಂಗಳು ಲಿಂಗದಲ್ಲಿ ನಿಕ್ಷೇಪವಾಗಿರಬೇಕು

 ಜಾಗೃತ್ -ಸ್ವಪ್ನ-ಸುಷುಪ್ತಿಯಲ್ಲಿ ಲಿಂಗದ

ನಿಲುಕಡೆಯನರಿದು ತೆರಹಿಲ್ಲದಿರಬೇಕು.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮಹಾತ್ಮಂಗೆ

ಇದೆ ಮುಕ್ತಿ ಪಥವಯ್ಯ ಕೂಡಲ ಚನ್ನಸಂಗಮದೇವಾ. II ಚ. ಬ. ವ. ೯೧೦ |

 ಉರದಿಂದ ಉತ್ತಮಾಂಗಕ್ಕೆ ಲಿಂಗವನ್ನು ಬರಮಾಡಿಕೊಂಡ ಮಹಾತ್ಮನು ಸರ್ವಾಂಗ ಲಿಂಗಮಯನಾಗಿರುತ್ತಾನೆ. ಸಕಲವೂ ಲಿಂಗವೆಂದರಿದ ಬಳಿಕ ಲಿಂಗವಲ್ಲದ ಅನ್ಯ ವಸ್ತುವಿಗೆ, ಅನ್ಯವ್ಯಕ್ತಿಗೆ ವಂದಿಸಲಾರನು. ಸಕಲವನ್ನು ದಯಪಾಲಿಸುವವನು ದೇವನೇ ಎಂದರಿದು ಮಾನವರನ್ನು ಬೇಡುವದಿಲ್ಲ. ಜೀವಗುಣವೆನಿಸಿದ ಹಸಿವು, ತೃಷೆ; ವಿಷಯಗಳು ಲಿಂಗದಲ್ಲಿ ಅಡಗಿ ಲಿಂಗದ ಮಹಾಪ್ರಸಾದವಾಗುವವು. ತ್ರಿವಿಧಾವಸ್ಥೆ ಯಲ್ಲಿಯೂ ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡು ಜ್ಞಾನಿಯಾಗಿರುತ್ತಾನೆ.

ಅಂದಮೇಲೆ ಲೋಕದ ಮಾನವರಿಂದ ಅವನಿಗೇನಾಗಬೇಕು ? ಶರಣನ ಪರಿಯೇ ಲೋಕಕ್ಕೆ ಭಿನ್ನವಾಗಿರುವುದು. ಸರ್ವಸಂಗವನ್ನು ಪರಿಹರಿಸಿದ ಶರಣನು ಶಿವಭಕ್ತ ನಲ್ಲದವನಿಗೆ ಶಿರಬಾಗುವ ಅವಶ್ಯಕತೆಯೂ ಬೀಳಲಾರದು. ಉತ್ತಮಾಂಗದಲ್ಲಿ

ಲಿಂಗವನ್ನು ಧರಿಸುವ ಯೋಗ್ಯತೆಯನ್ನು ಪಡೆದ ಮಹಾನುಭಾವಿಗೆ ಇಂದಿನ ಕಾಲದಲ್ಲಿಯೂ ಅನ್ಯರಿಗೆ ವಂದಿಸುವ ಯಾವ ಅವಸರ ಬರಲಾರದು.

ಸಕಲರ್ಗೆ ಸಟೆಯು ಪಾ | ತಕವೆಂದು ನೀಗಿ ಚಿತ್

 ಸುಖದ ಲಿಂಗವನು-ಮುಖಸಜ್ಜೆಯೊಳಿಡಬೇಕೆಂ-

ದಕಳಂಕ ಗುರುವೆ ಕೃಪೆಯಾಗು     || ೧೩೨ ॥

ಶರಣರಿಗೆ ಶಿರಬಾಗಿಸುವದೇ ಶಿರಕ್ಕೆ ಭೂಷಣವಾಗಿರುವಂತೆ; ಮುಖಕ್ಕೆ ಸತ್ಯವಚನವೇ ಭೂಷಣವೆಂಬುದನ್ನು ಶಿವಕವಿಯು ತತ್ತ್ವಮಯವಾಗಿ ಪ್ರತಿಪಾದಿಸಿದ್ದಾನೆ. ಸತ್ಸ್ವರೂಪನಾದ ಶಿವನೊಲುಮೆಗೆ ಸತ್ಯವೇ ಮೂಲ. ಸಟೆಯೇ ಪಾತಕದ ಸತ್ಯದ ಪರಿಭಾಷೆ.ಮೂಲ. ಶಿವಭಕ್ತನಲ್ಲಿ ಸತ್ಯವು ನಿತ್ಯವಾಗಿರಬೇಕು. ನಡೆ-ನುಡಿಯೊಂದಾಗುವದೇ

ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತಃ

ಅಸತ್ಯಕ್ಕೆ ಅಸ್ತಿತ್ವವಿಲ್ಲ. ಸತ್ಯಕ್ಕೆ ಅಭಾವವಿಲ್ಲವೆಂಬ ಗೀತಾರ್ಥವೂ ಸತ್ಯದ ಘನತೆಯನ್ನೇ ಘೋಷಿಸುತ್ತದೆ. ಷಣ್ಮುಖ ಶಿವಯೋಗಿಗಳು-

ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ,

ಅಸತ್ಯದ ಮನೆಯಲ್ಲಿ ಶಿವನಿರ್ಪನೆ ?

ಇಲ್ಲಿಲ್ಲ ನೋಡಿರೋ

! ಇದು ಕಾರಣ

ನಮ್ಮ ಅಖಂಡೇಶ್ವರ ಲಿಂಗವನೊಲಿಸಬೇಕಾದಡೆ

ಸತ್ಯವನೆ ಸಾಧಿಸಬೇಕು ಕಾಣಿರೋ |

ಎಂದು ಸತ್ಯದ ನಿಲವನ್ನು ಸಾರಿದರೆ, ಅಣ್ಣ ಬಸವಣ್ಣನವರು-

ದಿಟವ ನುಡಿವುದು, ನುಡಿದಂತೆ ನಡೆವುದು

ಹುಸಿಯ ನಡೆದು ತಪ್ಪುವ

ಪ್ರಪಂಚಯನೊಲ್ಲ ಕೂಡಲ ಸಂಗಮದೇವ

ಎಂದು ದಿಟದ ಮಾಟವನ್ನು ಮೂಡಿಸಿದ್ದಾನೆ. ವೈರಾಗ್ಯನಿಧಿ ಅಕ್ಕನು

ಸಟೆ-ದಿಟವೆಂಬುವೆರಡು-ವಿಡಿದು ನಡೆವುದೀ ಲೋಕವೆಲ್ಲವು.

ಸಟೆ-ದಿಟವೆಂಬುವರೆದು ಎಡಿದು ನಡೆವ ಲೋಕದೊಡನೆ

ಶರಣನು ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದೊಡನೆ

ಆತನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ,

ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು,

ಕುಡಿವುದೆಲ್ಲ ಸುರೆ, ಹುಸಿಯೆಂಬುದೇ ಹೊಲೆ

ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ?

ಹುಸಿಯನಾಡಿ ಲಿಂಗವ ಪೂಜಿಸಿದೊಡೆ

ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚನ್ನಮಲ್ಲಿಕಾರ್ಜುನಾ |

ಸಟೆಯೆಂದರೆ ಅಸತ್ಯ. ದಿಟವೆಂದರೆ ಸತ್ಯ. ಈ ಸತ್ಯಾಸತ್ಯಗಳ ಸಮ್ಮಿಶ್ರಣವೇ ಸಂಸಾರದ ಇರವು. ಸಟೆ-ದಿಟಗಳೆರಡನ್ನು ಒಂದುಗೂಡಿಸಿ ನಡೆಯುವ ಲೋಕದ ನಡತೆಗೂ, ಶರಣನ ಸತ್ಯವಾದ ಸದಾಚರಣೆಯ ಪರಿಗೂ ತೀರ ಭಿನ್ನವಾಗಿದೆ. ಬಾಹ್ಯ ಜೀವನದಲ್ಲಿ ಶರಣನೆನಿಸಿ ಗುರು-ಲಿಂಗ-ಜಂಗಮದಲ್ಲಿ ಸಟೆಯಾಡಿದರೆ ಶರಣತ್ವಕ್ಕೇನೆ ಕುಂದು. ಅವನು ನಿಜ ಶರಣನೆನಿಸನು. ಆ ತ್ರಿವಿಧ ಪೂಜ್ಯರಿಗೆ ದ್ರೋಹಿಯಾಗುವನು. ಅಘೋರ ನರಕಿಯೆನಿಸುವನು. ಯಾಕಂದರೆ ಶಿವನು ಸತ್ಯದಲ್ಲಲ್ಲದೆ ಅಸತ್ಯದಲ್ಲಿಲ್ಲ. ಅಸತ್ಯವಾದಿಯಾದ ಸಂಸಾರಿಯು ಶಿವನಿಗೆ ದೂರವಾಗುವನು. ಅಸತ್ಯವನ್ನು ನುಡಿದು

ಮಾಡಿದ ಶಿವಲಿಂಗಪೂಜೆಯೂ ಸಫಲವಾಗಲಾರದು. ಈ ಹುಸಿಯಲ್ಲಿಯೇ ಹೊಲೆತನವಿದೆ. ಹುಸಿಕ ಭೋಗಿಸಿದುದೆಲ್ಲ ಹೊಲಸಾಗುವದು. ಜೊಳ್ಳನ್ನು ಬಿತ್ತಿದರೆ ಮೊಳಕೆ ಹುಸಿಯಾಗುವಂತೆ; ಅಸತ್ಯದಿಂದ ಸತ್ಯದ ಫಲ ದೊರೆಯದು ಎಂದು ಮುಂತಾಗಿ ಶರಣರು ಸತ್ಯದ ಸತ್ಯವನ್ನು ಸಾರಿದ್ದಾರೆ. ಸತ್ಯದ ಅರಿವುಳ್ಳ ಅಲ್ಲಮಪ್ರಭುಗಳು ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು. ಲಕ್ಷಕ್ಕೊಮ್ಮೆ

ನುಡಿಯ ಲಾಗದು. ಕೋಟಿಗೊಮ್ಮೆ ನುಡಿಯಲಾಗದೆಂದು ಅಪ್ಪಣೆ ಮಾಡಿದ್ದಾರೆ. ಕೇವಲ “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪ ವೆಂತಲೂ; ನುಡಿಗೆ ತಕ್ಕನಡೆಯ ಕಂಡೊಡ ಕೂಡಲ ಸಂಗಮದೇವನೊಳಗಿರುವನೆಂತಲೂ ಅಣ್ಣನವರು ನಡೆ-ನುಡಿಗಳ ಸಾಮರಸ್ಯದ ಸಾರವನ್ನು ಸೂಸಿದ್ದಾರೆ.

ಅಸತ್ಯವು ಜೀವಾತ್ಮನ ಜೀವನದಲ್ಲಿ ಅಪಾಯಕಾರಿಯೆನಿಸಿದರೂ ಮಾನವನು ಅದನ್ನೇ ಆಶಿಸುತ್ತಾನೆ. ಈ ಮಾತನ್ನು ತೋಂಟದ ಸಿದ್ಧಲಿಂಗ ಶಿವಯೋಗಿಗಳು-

ಹೆಣನ ಕಂಡರೆ ನಾಯಕಚ್ಚಿದಲ್ಲದೆ ಮಾಣ್ಣುದೇ ?

ಹಣವ ಕಂಡರೆ ಮನ ಕರಗಿದಲ್ಲದೆ ಮಾಣ್ಣುದೇ ?

ಬಿಸಿಯ ಕಂಡರೆ ಬೆಣ್ಣೆ ಕರಗಿದಲ್ಲದೆ ಮಾಣ್ಣುದೇ ?

ಹುಸಿಯ ಕಂಡರೆ ಲೋಕಮೆಚ್ಚುವದು, ನಚ್ಚುವದು

ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೇ !

ಸತ್ತಪ್ರಾಣಿಯನ್ನು ನೋಡಿದ ನಾಯಿ ಅಂದಣವನ್ನೇರಿದ್ದರೂ ಕೆಳಗೆ ಹಾರಿ ಕಚ್ಚದೆ ಬಿಡುವದಿಲ್ಲ. ಹಣಕಂಡು ಮನಕರಗದ ಮಾನವರಿಲ್ಲ. ಬೆಂಕಿಯ ಕಂಡು ಬೆವೆಯದ ಬೆಣ್ಣಿಯಿಲ್ಲ. ಇದರಂತೆ ಲೋಕದ ಮಾನವನು ಹುಸಿಯನ್ನು ಕಂಡು ಮೆಚ್ಚುತ್ತಾನೆ.ನಚ್ಚುತ್ತಾನೆಂದು ತಿಳಿಸಿದ್ದಾರೆ. ಬಹುಮುಖವಾದ ಪ್ರಪಂಚವು ಕೆಳಮುಖವಾಗಿಯೇ ಹರಿಯುವದು.ಅಧೋಮುಖವಾದ ಜಲವು ಹೊಂದಲಾರದೋ

ಊರ್ಧ್ವ ಗತಿಯನ್ನೆಂದೂ ಅದರಂತೆ ಅಸತ್ಯವನ್ನು ಅನುಸರಿಸುವ ನರನು ಸತ್ಯದ ನಿಲವನ್ನು

ಅರಿಯಲಾರನು. ಅಸತ್ಯ ಅನಿತ್ಯವಾದರೆ ಸತ್ಯವು ನಿತ್ಯವೆನಿಸುವದು.

ಮಹಾತ್ಮಾ ಗಾಂಧೀಜಿಯವರು ಸತ್ಯದ ಮಹತ್ವವನ್ನರಿತುಕೊಂಡು ನಿತ್ಯರಾದರು. ಅವರ ಭೌತಿಕ ದೇಹವು ಅನಿತ್ಯವಾಗಿ ನಾಶ ಹೊಂದಿದ್ದರೂ ಕೀರ್ತಿ ಕಾಯವು ಶಾಶ್ವತವಾಗಿದೆ. ನಿತ್ಯಸತ್ಯವೆನಿಸಿದೆ. ತಮ್ಮ ಜೀವನವನ್ನೇ ಸತ್ಯದ ಪ್ರಯೋಗದಲ್ಲಿ ಪ್ರಯೋಗಿಸಿಕೊಂಡ ಹಲವಾರು ಘಟನೆಗಳನ್ನು ಅವರ ಆತ್ಮಚರಿತ್ರೆಯಲ್ಲಿ ಕಾಣುತ್ತೇವೆ. ಸತ್ಯ ಹರಿಶ್ಚಂದ್ರನ ಜೀವನವನ್ನು ಚಿತ್ರಿಸಿದ ಮಹಾಕವಿ ರಾಘವಾಂಕನು ಆ ಮಹಾಕಾವ್ಯದಲ್ಲಿ “ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರ” ಎಂಬ ತತ್ತ್ವವನ್ನು

ಓತಪ್ರೋತವಾಗಿ ತುಂಬಿದ್ದಾನೆ. ಇಂಥ ಸತ್ಯ ಸ್ವರೂಪವನ್ನು ಜೀವನದಲ್ಲಿ ಅಳವಡಿಸಿಕೊಂಡವನು ಶರಣನಾಗುವನು.

ಸತ್ಯದಲ್ಲಿ ಚಿತ್‌ಸುಖದ ಲಿಂಗವು ಚಿತ್ರಕ್ಕೆ ಚೇತನವನ್ನು ನೀಡುವದು. ಅವನು ಚೈತನ್ಯಮಯನಾಗುವನು. ಸತ್ಯವನ್ನು ಪರಿಪಾಲಿಸುವ ಲಿಂಗಭಕ್ತನು ಜ್ಞಾನಾನಂದ ಮಯಲಿಂಗವನ್ನು ಮುಖವೆಂಬ ಸೆಜ್ಜೆ (ಕರಡಿಗೆ) ಯೊಳಗಿಡಬೇಕೆಂಬುದು ಗುರುವಿನ ವಚನ. ಕಲಂಕ ರಹಿತನಾದ ಸದ್ಗುರುನಾಥನು ಸತ್ಯದ ಮರ್ಮವನ್ನು ತಿಳಿಸಿ ಚಿತ್ಸುಖದ ಲಿಂಗವನ್ನು ಮುಖ ಸಜ್ಜೆಯಲ್ಲಿ ಧರಿಸಬಹುದೆಂದು ಬಣ್ಣಿಸುತ್ತಾನೆ. ಮುಖವೆಂಬ ಕರಡಿಗೆಯಲ್ಲಿ ಲಿಂಗವನ್ನು ಧರಿಸುವ ಶರಣನ ವಾಣಿ ಪ್ರಸಾದ ವಾಣಿಯಾಗುವದು. ಅವನಲ್ಲಿ ಸುಳ್ಳು ಸೋಂಕಲಾರದು. ಪ್ರಸಾದವಾಣಿಯಲ್ಲಿಯೇ ಚಿತ್ಸುಖದ

ಪ್ರೋತವಿದೆ. ಸತ್ಯವೇ ನಿತ್ಯಲಿಂಗದ ನಿಜವು. ಅಂಥ ಸತ್ಯವನ್ನು ಸಾಧಿಸಿ ಚಿತ್‌ಸುಖದ ಲಿಂಗವನ್ನು ಧರಿಸುವ ಶಕ್ತಿಯನ್ನು ದಯಪಾಲಿಸುವ ಪರಮ ಗುರುವೆ ! ನಿರಂಜನ ಪ್ರಭುವೆ ! ಕೃಪೆದೋರು.

ಸ್ವಮತಮಾರ್ಗವ ಬಿಟ್ಟು ವಿಮುಖನಾಗದೊಡೆ ಸ

ತೃಮದ ಲಿಂಗವ-ನಮಳ್ಳೆಕ್ಯದಿ ಧರಿಸೆಂದ

ವಿಮಲ ಶ್ರೀಗುರುವೆ ಕೃಪೆಯಾಗು || ೧೩ ||

ಶಿವಕವಿಯು ಲಿಂಗವನ್ನು ಧರಿಸಲು ಯೋಗ್ಯವೆನಿಸಿದ ಕರ, ಕಕ್ಷೆ, ಉರ, ಶಿರ,ಮುಖಸಜ್ಜೆಗಳನ್ನು ನಿರೂಪಿಸಿ ಆರನೆಯ ಸ್ಥಾನವಾದ ಅಮಲೈಕ್ಯದಲ್ಲಿ ಲಿಂಗಧಾರಣೆಯ ಗರಿಷ್ಠತೆಯನ್ನು ಗುರುತಿಸುತ್ತಾನೆ. ಅಮಲೈಕ್ಯ ಸ್ಥಿತಿಯನ್ನು ಸಾಧಿಸಲು ಸ್ವಮತಾಚರಣೆ ಅತ್ಯವಶ್ಯವಾದುದು. ಸ್ವಮತದಲ್ಲಿ ಸತ್ಯಮವಿರುವದು. ಪರಮತಾವಲಂಬನೆಯಲ್ಲಿ ಸತ್ಯಮ ನಿಲ್ಲುವದಿಲ್ಲ. ಯಾಕಂದರೆ ಪರಮತದ ಪರಿಪೂರ್ಣ ಪರಿಚಯವಿರುವದಿಲ್ಲ. ಆದ್ದರಿಂದ ಸ್ವಮತಮಾರ್ಗಾಚರಣೆಯೇ ಸತ್ಯಮದ ತವರು.

ಇಲ್ಲಿ ಮತವೆಂದರೆ ಅಭಿಪ್ರಾಯ ಅಥವಾ ಧರ್ಮವೆಂದು ಗ್ರಹಿಸಬಹುದು.ಸ್ವಮತವೆಂದರೆ ತನ್ನದೇ ಆದ ಧರ್ಮ. ಸ್ವಕೀಯ ಸಿದ್ಧಾಂತವುಳ್ಳುದಾಗುವದು. ತಮ್ಮ ಹಿರಿಯರು ಅರಿತು ಆಚರಿಸಿ ಕಲಿಸಿ ತೋರಿಸಿಕೊಟ್ಟ ಧರ್ಮಾಚರಣೆಯು ಸ್ವಮತವಾದುದು. ಇಂಥ ಸ್ಪಧರ್ಮಾಚರಣೆಯನ್ನು ತಿಳಿಯದೆ, ಅರ್ಥೈಸಿಕೊಳ್ಳದೆ ತ್ಯಜಿಸಿ ಪರಮತಾಚರಣೆಯು ಮನವೆಳಸಿದರೆ ಅವನಿಗೆ ಪ್ರತಿಕೂಲವೇ ಕಾದಿರುವದು. ಸ್ವಮತದ ಕ್ರಮವನ್ನು ಬಿಟ್ಟಲ್ಲಿ ಕಷ್ಟ ಬಿಟ್ಟಿದ್ದಲ್ಲ, ಯಾಕಂದರೆ ಪ್ರಥಮತಃ ತನ್ನ ಧರ್ಮದಲ್ಲಿಯೇ ಅಭಿಮಾನವಿಲ್ಲದವನು ಇನ್ನೊಂದರಲ್ಲಿ ಶ್ರದ್ಧೆಯನ್ನು ಇಡಲಾರನು.ಅಲ್ಲದೆ ಚಾಚೂತಪ್ಪದೆ ಅದನ್ನು ಅನುಸರಿಸಲಾರನು. ಅಂತೆಯೇ ಕ್ರಮ ತಪ್ಪಿ ನಡೆವುದರಿಂದ ಕಷ್ಟಮಿನ್ನುಂಟೆ ?”

ಎಂದಿದ್ದಾರೆ ನಿಜಗುಣರು. ನೈತಿಕ ಧರ್ಮವು ಪ್ರತಿಯೊಬ್ಬರಲ್ಲಿ ಸಮಾನವಾಗಿರುತ್ತದೆ.ಆಚರಣೆಯು ಭಿನ್ನವಾಗಿರಬಹುದು. ಬೇರೆ ಬೇರೆಯಾದ ಆಚರಣೆಗಳನ್ನು ಅನುಸರಿಸುವದು ಸುಲಭವಲ್ಲ. ಅದಕ್ಕಾಗಿ ಶಿವಕವಿಯು ಲಿಂಗನಿಷ್ಠೆಯು ಬೆಳೆಯಲೆಂದು ಸ್ವಮತಮಾರ್ಗವನ್ನು ಬಿಟ್ಟು ವಿಮುಖನಾಗಬಾರದೆಂದು ತಿಳಿಸಿದ್ದಾನೆ. ಉತ್ತಮ ಜೀವನವನ್ನು ಧಾರಣಮಾಡಬಲ್ಲ ಹಾಗೂ ಅದನ್ನು ಪೋಷಿಸಬಲ್ಲ ನೈತಿಕ ಸಾಧನೆಯೇ ಧರ್ಮವೆನಿಸುವದು. ಆತ್ಮನ ಅಭ್ಯುದಯ ಮತ್ತು ಮುಕ್ತಿಯ ನಿಲವುಗಳನ್ನೊಳಗೊಂಡುದೇ ನಿಜವಾದಧರ್ಮವೆನಿಸುವದು. ಯಥಾರ್ಥವಾದ* ಧರ್ಮ ಮರ್ಮವನ್ನು ತಿಳಿಯದೇ ಪರಮತವನ್ನು ಗ್ರಹಿಸುವದು ಭಯಾಕನವೇ ಆಗಿದೆ. ಕ್ಷತ್ರಿಯನಾದ ಅರ್ಜುನನು ರಣರಂಗದಲ್ಲಿ ದಾಯಾದಿಗಳನ್ನು ಗುರುಗಳನ್ನು ಕಂಡು ಮೋಹವಿದ್ದಲವಾಗಿ ತನ್ನ ಕರ್ತವ್ಯ ಕರ್ಮವನ್ನು ಮರೆತು ಕೈಯಲ್ಲಿಯ ಬಿಲ್ಲು ಬಾಣಗಳನ್ನು ಕೆಳಗೆಸೆಯುತ್ತಾನೆ. ನಪುಂಸಕನಂತೆ ಕುಳಿತುಕೊಳ್ಳುತಿರಲು ಕೃಷ್ಣನು ಉಪದೇಶಿಸಬೇಕಾಯಿತು- ಅರ್ಜುನ ! ನೀನು ಕ್ಷತ್ರಿಯ, ಯುದ್ಧ ಮಾಡುವದೇ ನಿನ್ನ ಧರ್ಮ, ಯುದ್ಧದಲ್ಲಿ ಗೆದ್ದರೆ ರಾಜ್ಯ ನಿನ್ನದು. ಸತ್ತರೆ ವೀರಸ್ವರ್ಗ ಸಿಕ್ಕುವದು. ಮತ್ತು-

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ನಿನ್ನ ಕ್ಷತ್ರಿಯ ಧರ್ಮದಲ್ಲಿ ಮಡಿದರೂ ಮುಕ್ತನಾಗುವಿ. ಅದುಕಾರಣ ಭಯಕ್ಕೆ ಕಾರಣವಾದ ಪರಧರ್ಮವನ್ನು ಅವಲಂಬಿಸುವದು ಬೇಡ. ಕ್ಷತ್ರಿಯನಿಗೆ ಅಧೈರ್ಯ ಮೋಹಗಳು ಹೇಡಿಯನ್ನಾಗಿಸುತ್ತವೆ. ಕೃಷ್ಣನ ಉಪದೇಶದಂತೆ ಕರ್ಮಸನ್ಯಾಸ ಭಾವದಿಂದ ಸ್ವಕರ್ತವ್ಯವನ್ನು ನಿರ್ವಹಿಸಿ ವೀರತನದಿಂದ ಕ್ಷತ್ರಿಯಧರ್ಮವನ್ನು ಕಾಪಾಡಿ, ಕಳೆದುಕೊಂಡ ತಮ್ಮ ರಾಜ್ಯವನ್ನು ಪುನಃ ಪಡೆದನು. ವೀರಶೈವನು ಸ್ವಧರ್ಮವಾದ ಲಿಂಗನಿಷ್ಠೆಯಲ್ಲಿ ತತ್ಪರನಾಗಬೇಕು. ತ್ರಿವಿಧ ಪೂಜ್ಯರನ್ನು ಗೌರವಿಸಬೇಕು ಲಿಂಗನಿಷ್ಠೆಯನ್ನು ತ್ಯಜಿಸದೆ ಅನ್ಯದೇವತೆಗಳಲ್ಲಿ ಮನವೆಳಸದಿದ್ದರೆ ಮಾತ್ರ ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವದು ಸಾರ್ಥಕವಾಗುವದು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸಬಲ್ಲವನು ಲಿಂಗವೇ ತಾನಾಗುವನು. ಶಿವನು ವಿಷವನ್ನು ಕಂಠದಲ್ಲಿರಿಸಿಕೊಂಡು ನೀಲಕಂಠನಾದಂತೆ ಲಿಂಗವನ್ನು ಅಮಲೈಕ್ಯ (ಕಂಠ) ದಲ್ಲಿ ಧರಿಸಿಕೊಳ್ಳುವ ಸಂಪ್ರದಾಯ ಬಂದಿದೆ. ಈ ಯೋಗ್ಯತೆ ಬಹುಜನರಿಗೆ ಸಾಧ್ಯವಾಗುವದಿಲ್ಲ. ಅಜಗಣ್ಣನ್ನು ಕೃಷಿಕಾಯಕ ಮಾಡುತ್ತಿರಲು ಒಮ್ಮೆ

ಹೊಲದಲ್ಲಿ ಘಟಸರ್ಪವು ತನ್ನ ಹಣೆಯಲ್ಲಿಯ ದಿವ್ಯರತ್ನವನ್ನು ಮುಂದಿಟ್ಟು ರಾತ್ರಿ ಸಮಯ ಆ ಪ್ರಕಾಶದಲ್ಲಿ ಮೇಯುತ್ತಿದ್ದುದನ್ನು ಕಂಡನು. ಇವನ ಸಪ್ಪಳದಿಂದ ಜಾಗ್ರತೆಗೊಂಡ ಹಾವು ತನ್ನ ರತ್ನವನ್ನು ಹೆಡೆಯಲ್ಲಿ ಸೇರಿಸಿಕೊಂಡಿತು. ಆಗ ಅಜಗಣ್ಣನಿಗೆ- ಇಂಥ ಪ್ರಾಣಿಯೂ ಸಹ ತನ್ನ ರತ್ನವನ್ನು ಗೌಪ್ಯವಾಗಿಟ್ಟು ಕೊಳ್ಳುವಾಗ ನಾನೇಕೆ ನನ್ನ ವರರತ್ನವೆನಿಸಿದ ಇಷ್ಟಲಿಂಗವನ್ನು ಅಮಳೆಕ್ಯ ಮಾಡಿಕೊಳ್ಳ ಬಾರದು ! ಎಂದು ವಿಚಾರಿಸಿ ತನ್ನ ಜೀವನಾಂತ್ಯದವರೆಗೂ ಲಿಂಗವನ್ನು ಅಮಲೈಕ್ಯದಲ್ಲಿಯೇ ಧರಿಸುತ್ತಿದ್ದನ್ನು ನಿಷ್ಠಾವಂತನೆನಿಸಿ ನಿಜೈಕ್ಯ ಪದವಿಯನ್ನು ಸಾಧಿಸಿ ಮಹಾಶರಣನೆನಿಸಿದನು.ಚನ್ನಬಸವಣ್ಣನವರು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಔಚಿತ್ಯವನ್ನು

ಹಾಗೂ ಯೋಗ್ಯತೆಯನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಅಮಳೋಕ್ಯದಲ್ಲಿ ಲಿಂಗವ ಧರಿಸುವಡೆ

ಅನ್ನಪಾನಾದಿಗಳ ಹಂಗಳಿಯಬೇಕು;

ಅಹಂಕಾರ, ಮಮಕಾರ, ಅಷ್ಟಮದಂಗಳಳಿಯಬೇಕು;

ಅನುಭಾವ ಘನವೇದ್ಯವಾಗಬೇಕು;

ಕಾಮದ ಕಣ್ಣ ತೆರೆಯದಿರಬೇಕು;

ಶಬ್ದ ನಿಃಶಬ್ದವಾಗಬೇಕು;

ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು;

ಕೂಡಲ ಚನ್ನ ಸಂಗಯ್ಯನಲ್ಲಿ ಅಮಳೋಕ್ಯದಲ್ಲಿ ಲಿಂಗವ ಧರಿಸಿ

ಪರಮ ಪರಿಣಾಮಿಯಾಗಬೇಕು || ೯೦೯ ||

ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಶರಣನ ಸತ್ಯಮವು ಇಂತಿದೆ. ಅನ್ನಪಾನಾದಿಗಳ ಹಂಗಳಿದು, ಪಾದೋದಕ ಪ್ರಸಾದಂಗಳಲ್ಲಿ ಶ್ರದ್ಧೆಯುಳ್ಳವನಾಗಬೇಕು, ಅಹಂಕಾರ,ಮಮಕಾರ, ಅಷ್ಟಮದಗಳಿಗೆ ಅವಕಾಶವಿಲ್ಲದಾಗಬೇಕು. ಅನುಭಾವವೇ ಮುಖ್ಯವಾಗಬೇಕು. ಕಣ್ಣ ನೋಟದಲ್ಲಿ ಕಾಮನಕಾಟವಳಿದು ಶಿವಮಯವಾಗಿ ಕಾಣುವ ನೋಟವು ಬಲಿಯಬೇಕು. ಲಿಂಗವಿಷಯವಲ್ಲದ ಶಬ್ದಗಳನ್ನು ಮಾತಾಡಲೂಬಾರದು ಕೇಳಲೂ ಬಾರದು. ಸಾಂಸಾರಿಕ ವ್ಯವಹಾರಕ್ಕಾಗಿ ಶಬ್ದಗಳನ್ನು ಬಳಸದೆ ಮಹಾಮಂತ್ರ ಜಪದಲ್ಲಿ ಮನಸ್ಸನ್ನು ಲೀನಗೊಳಿಸಿ ಬಾಹ್ಯ ಶಬ್ದಗಳನ್ನು ನಿಶ್ಯಬ್ದಗೊಳಿಸಬೇಕು. ಮಹಾಲಿಂಗದಲ್ಲಿಯೇ ಮನವು ಲೀನವಾದರೆ ಪರಮ ಪರಿಣಾಮಿಯೆನಿಸುವನು. ನಿಜೈಕ್ಯನಾಗುವನು.

ಇಂಥ ಸತ್ಯಮವನ್ನು ತಿಳಿಸಿ ಅಮಲೈಕ್ಯದಲ್ಲಿ ಲಿಂಗಧಾರಣೆಯನ್ನು ಬೋಧಿಸಿದ ಸದ್ಗುರುವೆ ! ಸದಾಕಾಲವೂ ನನ್ನವನಾಗಿರು. ನಿನ್ನವನನ್ನು ಲಿಂಗಮಯನನ್ನಾಗಿಸುವ ಶಕ್ತಿಯನ್ನು ಕರುಣಿಸು. ನಿನ್ನ ಕರುಣೆಯಿಲ್ಲದೆ ಅಂಗಾಂಗಗಳು ಲಿಂಗಗುಣವನ್ನು ಹೊಂದಲಾರವು.

ಪರಮೇಷ್ಟಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು  || ೧೩೪ ||

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಯಮವು, ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ. ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು ಪರರನ್ನೆಂದೂ ಬೇಡಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು. ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು.ಮನಬಂದಂತೆ ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು.ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾಕ್ರಮದಲ್ಲಿ ತಪ್ಪದಂತೆ ನಡೆಯಬೇಕು. ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯ ಶುದ್ಧ ನಡೆ ಮತ್ತು ನುಡಿಯು, ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ

ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣನವರು ಇಂಥ ಶರಣನ (ವರ್ಣನೆಯ) ನ್ನು ಮನವಾರೆ ಹೊಗಳಿದ್ದು ಗಮನೀಯವಾಗಿದೆ. ನೋಡಿ-

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

ಬಾಹ್ಯ ಪ್ರಪಂಚದ ಮಾತೇಕೆ ?

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಚಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

ಶ್ರೀಕಂಠ.ಚೌಕೀಮಠ

ಶ್ರೀ ರುದ್ರಮುನಿ ಶಿವಯೋಗಿ ಚರಿತೆ

ಸಂಪಾದಕರು:ಶ್ರೀಗುರುಕಂದ

ಪ್ರಕಾಶಕರು:ಶ್ರೀ.ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು .ಶಿವಯೋಗಾಶ್ರಮ,ಕಾಳೇನಹಳ್ಳಿ ಶಿಕಾರಿಪುರ ಶಿವಮೊಗ್ಗ.

ಈ ಗ್ರಂಥವನ್ನು ಪೂಜ್ಯ ಶ್ರೀ ಗುರುಕಂದ ( ಶ್ರೀ ಸ್ವಾಮಿ ಶಿವಾತ್ಮಾನಂದ ಪುರಿ) ಯವರು ದಿ.೮ ಅಕ್ಟೋಬರ್‌೨೦೨೩ ರಂದು ಆಶೀರ್ವದಿಸಿದರು. ಮಾರ್ಗದುದ್ದಕ್ಕೂ ಪುಸ್ತಕವನ್ನು ಕಣ್ಣಾಡಿಸುತ್ತಿದ್ದ ನನಗೆ ಒಂದು ವಿಶೇಷ ವಿಷಯವೊಂದು ಗೋಚರವಾಯಿತು.

ನಾನು ಹಲವುಬಾರಿ ಹಲವು ಪುಸ್ತಕಗಳನ್ನು ಓದುವಾಗ ಓದಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು ಎಂಬ ವಾಕ್ಯ ಬಹಳಬಾರಿ ಕೂತೂಹಲಕ್ಕೆಡೆಮಾಡಿತ್ತು.

ಆದರೆ ಈ ಪುಸ್ತಕ ಓದುವಾಗ ಒಂದು ಸನ್ನಿವೇಷವಂತೂ ಮಂತ್ರಮುಗ್ಧವನ್ನಾಗಿಸಿತು !.

ಶ್ರೀಗುರುಕಂದ ಅವರ  ಪುಸ್ತಕದ  ಕೆಲವು ಸಾಲುಗಳನ್ನೇ ಮತ್ತೆ ಮತ್ತೆ ಬರೆಯುತ್ತಿರುವೆ.

“ರುದ್ರಯ್ಯನ ಮುಖದಲ್ಲಿ ಶೋಭೆಗೊಂಡಿದ್ದ  ಶಿವಕಳೆಯನ್ನು ಶ್ರೀಕುಮಾರಸ್ವಾಮಿಗಳು ಸೂಕ್ಷ್ಮವಾಗಿ  ಗಮನಿಸಿದರು.ತನ್ನ ಮನದಿಂಗಿತವನ್ನು ನುಡಿಯಲಾಗದೆ ನಿಂತಿದ್ದ ರುದ್ರಯ್ಯನ ಬಯಕೆಯನ್ನು ಕೆಳದಿ ಶ್ರೀ ರೇವಣಸಿದ್ದ ಪಟ್ಟಾಧ್ಯಕ್ಷರು ನುಡಿದಿದ್ದರು.”ರುದ್ರಯ್ಯನ ಪ್ರೌಡಶಿಕ್ಷಣಕ್ಕೆ ಶಿವಯೋಗ ಮಂದಿರದಲ್ಲಿ ಅವಕಾಶ ಕಲ್ಪಿಸಿ ಬುದ್ಧಿ”

ಶ್ರೀಕುಮಾರಸ್ವಾಮಿಗಳು, ಕೆಳದಿ ಶ್ರೀಗಳವರ ಪ್ರಸ್ಥಾಪಕ್ಕೆ ಸಮ್ಮತಿಸಿದ್ದರು.ತಮ್ಮೊಡನೆ ರುದ್ರಯ್ಯ ಬರಲು ಅನುವಿತ್ತಿದ್ದರು.

ಆದರೆ ಶಿವಯೋಗಮಂದಿರದ ಆಡಳಿತ ವ್ಯವಸ್ಥೆಯ ವಿಶ್ವಸ್ಥ ಮಂಡಳಿ ವಯಸ್ಸಿನಲ್ಲಿ ಆಗಲೇ ಹಿರಿಯರಾಗಿದ್ದ ರುದ್ರಯ್ಯನಿಗೆ ಮಂದಿರದ ವಟುಗಳೊಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ.”ಸ್ವಾಮಿಗಳು ತಮ್ಮ ಜೊತೆ ಯಾವುದೋ “ಕರೆಮರಿ” ಕರಕೊಂಡು ಬಂದು ಸೇರಿಸೋಕೆ ನೋಡ್ತಾರೆ” ಎಂದು ಒಬ್ಬ ಸದಸ್ಯರು ಲಘುವಾಗಿ ಮಾತನಾಡಿದ್ದರು. ರುದ್ರಯ್ಯ ಕಪ್ಪಾಗಿದ್ದರಿಂದ “ಕರೆ ಮರಿ” ಎಂದು ಕರೆದಿದ್ದರು ! .

ಮಂದಿರದ ನಿಯಮಗಳಲ್ಲಿ ವಯೋಮಾನ ಮೀರಿದ್ದ ರುದ್ರಯ್ಯನಿಗೆ ಪ್ರವೇಶ  ನಿರಾಕರಿಸಲ್ಪಟ್ಟಿದ್ದನ್ನು ತಮ್ಮ ಅಧಿಕಾರದಲ್ಲಿ ಶ್ರೀಕುಮಾರಸ್ವಾಮಿಗಳು ನಿಯಮ ಸಡಿಲಿಸಿ ಪ್ರವೇಶಕ್ಕೆ ಅನುವು ನೀಡಬಹುದಾಗಿತ್ತು;

ಆದರೆ ಅವರು ಹಾಗೆ ವರ್ತಿಸಲಿಲ್ಲ.

ಒಬ್ಬ ಯೋಗ್ಯ  ಸಾಧಕನಿಗೆ ಮಂದಿರದ ಶಿಕ್ಷಣ ಲಭ್ಯವಾಗಬೇಕೆಂದು ರುದ್ರಯ್ಯನನ್ನು ತಮ್ಮ ಸೇವಾ ಕಾರ್ಯಗಳಿಗೆ ಮರಿದೇವರಾಗಿ ಇರಿಸಿಕೊಂಡರು. ಶ್ರೀಕುಮಾರಸ್ವಾಮಿಗಳ ಮೊದಲ ದರ್ಶನದಲ್ಲೇ ತನ್ನ ನಿಜ ಗುರುವನ್ನು ದರ್ಶಿಸಿದ್ದ ಧನ್ಯತೆಯಲ್ಲಿ ಶ್ರೀ ಗುರು ಚರಣಕ್ಕೆ ಅಂತರಂಗದಲ್ಲೇ ಸರ್ವಾರ್ಪಣೆ ಮಾಡಿಕೊಂಡಿದ್ದ ರುದ್ರಯ್ಯ ಕೊನೆಗೂ ತನ್ನ ಶ್ರೀ ಗುರುವಿನ ಕೃಪಾಕಂದನಾಗಿ ಅವರ ಆಪ್ತವಲಯದೊಳಗೆ ಸೇರಿದ್ದ……

ಶ್ರೀಕುಮಾರಸ್ವಾಮಿಗಳು ಮಂದಿರದ ವಿದ್ಯಾರ್ಥಿಗಳೊಂದಿಗೆ ರುದ್ರಮುನಿದೇವರನ್ನೂ  ಪರೀಕ್ಷೆಗೆ  ವಿದ್ಯಾರ್ಥಿಯಂದು ನೊಂದಾಯಿಸಿದ್ದರು.ಒಬ್ಬ ಕಾರಕೂನರ ಜೊತೆ ಪರೀಕ್ಷೆ ಕಟ್ಟಿದ್ದ ವಿದ್ಯಾರ್ಥಿಗಳು ರೈಲಿನಲ್ಲಿ ಮುಂಬಯಿಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದರು.ಫಲಿತಾಂಶ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.ರುದ್ರಮುನಿದೇವರು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿದ್ದರು.ಆಗ ಶ್ರೀ ಕುಮಾರಸ್ವಾಮಿಗಳು “ಕರೆ ಮರಿ”  ಎಂದು ರುದ್ರಮುನಿ ದೇವರನ್ನು ಕರೆಯುತ್ತಿದ್ದವರಿಗೆ ಅರಿವಾಗುವಂತೆ “ಇವನು ಕರೆ ಮರಿಯಲ್ಲ ,ಖರೆ ಮರಿ” ಎಂದು ನುಡಿದಿದ್ದರು.

…….. ಶ್ರೀಕುಮಾರಸ್ವಾಮಿಗಳು ತಮ್ಮ ಖರೆ ಮರಿ ರುದ್ರಮುನಿ ದೇವರನ್ನುತಾವು ಸ್ಥಾಪಿಸಿದ್ದ ಕಾಳೇನಹಳ್ಳಿಯ   ಶಿವಯೋಗಾಶ್ರಮಕ್ಕೆ ಕಳುಹಿಸಲು ತಿರ್ಮಾನ ಮಾಡಿದರು……

……ವರುಷಕ್ಕೆರಡು ಮೂರು ಸಲ ಮಲೆನಾಡ ಪ್ರವಾಸಕ್ಕೆ ಬರುತ್ತಿದ್ದ ಶ್ರೀಕುಮಾರಸ್ವಾಮಿಗಳು ತಮ್ಮ ಮಾತನ್ನು ಪಾಲಿಸುತ್ತ ಸಾಧನೆಯಲ್ಲಿರುವ ಶ್ರೀರುದ್ರಮುನಿದೇಶಿಕರನ್ನುಕಂಡು ಆನಂದಗೊಳ್ಳುತ್ತಿದ್ದರು.೪೦೦ ಎಕರೆ ಜಮೀನಿನ ಕೃಷಿಗಾಗಿ ಆಗಿನ್ನೂ ಅಪರೂಪವಾಗಿದ್ದ ಟ್ರಾಕ್ಟರ ತರಿಸಿ ಶ್ರೀಕುಮಾರಸ್ವಾಮಿಗಳು ವ್ಯವಸ್ಥೆ ಮಾಡಿದರು.ಹೀಗೆ ಭೇಟಿಯಿತ್ತು ತಂಗುವ ತಮ್ಮ ನಿಜಗುರುವಿನಲ್ಲಿ ಶ್ರೀರುದ್ರಮುನಿ ದೇಶಿಕರು ಮುಂದಿನ ದೀಕ್ಷೆಗೆ ಪ್ರಾರ್ಥಿಸುತ್ತಿದ್ದರು.”ಇನ್ನೂ ಸಮಯ ಬಂದಿಲ್ಲ ತಾಳಿಕೋ” ಎಂದು ಶ್ರೀಕುಮಾರಸ್ವಾಮಿಗಳು ಒಂದೇ ಒಂದು ಮಾತನ್ನು ಪ್ರತಿಸಲವೂ ಹೇಳುತ್ತಿದ್ದರು.

ಶ್ರೀರುದ್ರಮುನಿ ದೇಶಿಕರು ಶಿವಯೋಗಾಶ್ರಮಕ್ಕೆ ಬಂದು ನಿಂತು ಹತ್ತು ವರುಷ ಉರಳಿದ್ದವು.ಅವರು ಪ್ರಾರ್ಥಿಸುತ್ತಿದ್ದ ಶಿವಯೋಗಮಾರ್ಗದ ಮುಂದಿನ ದೀಕ್ಷೆ ಇನ್ನೂ ಪ್ರಾಪ್ತವಾಗಿರಲಿಲ್ಲ.ಹೀಗಿರುವಾಗಲೇ ಶ್ರೀರುದ್ರಮುನಿ ದೇಶಿಕರ ಸಾಧನೆ ಸುಳಿಯೊಳಗೆ ಸಿಲುಕಿದಂಥ ಆಘಾತದ ಸುದ್ದಿ ಅವರನ್ನು ದಿಕ್ಕೆಡಿಸುವಂತೆ ಮಾಡಿತ್ತು.ತಮ್ಮ ನಿಜಗುರು,ತಮ್ಮ ಭವಕ್ಕಂಟಿದ್ದ ಬಂಧನವನ್ನು ತೊಡೆದುಕೊಳ್ಳಲು ಶಿವಯೋಗ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿದ್ದ,ತಾವು ಸರ್ವಸ್ವವೆಂದು ನಂಬಿದ್ದ ಶ್ರೀಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದರು.

ತಮ್ಮ ಶ್ರೀಗುರುವಿನ ಅಗಲಿಕೆಯ ದುಃಖ ಶಮನಗೊಳ್ಳಲು ಶ್ರೀರುದ್ರಮುನಿ ದೇಶಿಕರಿಗೆ ಬಹಳಷ್ಟು ದಿನ ಹಿಡಿದವು.ಪೂಜೆಗೆ ಕುಳಿತಾಗ ತಮ್ಮ ನಿತ್ಯದ  ಕಾಯಕದಲ್ಲಿ ಮುಳುಗಿದಾಗ ಶ್ರೀಕುಮಾರೇಶನ ಮೂರ್ತಿ ಕಂಗಳೆದರು ಸುಳಿದು ನಿಲ್ಲುತ್ತಿತ್ತು,ಕಿವಿಯಲ್ಲಿ ಅವರ ನುಡಿಗಳು ಅನುರಣಿಸುತ್ತಿದ್ದವು. “ಹುಟ್ಟುಗುರುಡನಿಗೆ ಕೋಲ ಕೊಟ್ಟು ಕೈ ಬಿಟ್ಟಂತೆ,ಮುಟ್ಟಿ ಅಭಯವಿತ್ತು ಕೈ ಬಿಟ್ಟಿಯಾ ಕುಮಾರೇಶಾ…ನಿಮ್ಮಡಿಯ ಮರೆಸದಂತೆ ಮುನ್ನೆಡಸು ಕುಮಾರೇಶ..” ಎಂದು ಮೊರೆಯಿಡುತ್ತಿದ್ದರು.ಆಗ ಕನಸಿನಲ್ಲಿ ದರ್ಶನವಿತ್ತ ಶ್ರೀಕುಮಾರಸ್ವಾಮಿಗಳು “ಸಾಧಕ ಹೀಗೆ ದುಃಖಿಯಾಗಬಾರದು” ಎಂದಿದ್ದರು.ತಾವು ಸೂಕ್ಷ್ಮ ಕಾಯದಲ್ಲಿರುವ ಸುಳಿವು ನೀಡಿದ್ದರು.

ಮುಂದೆ ಕೆಲವು ದಿನ ಕಳೆಯುವದರಲ್ಲಿ ಶ್ರೀ ಶಿವಬಸವಸ್ವಾಮಿಗಳು ಶಿವಯೋಗಅಶ್ರಮಕ್ಕೆ ಆಗಮಿಸಿದರು.ಶ್ರೀಕುಮಾರ ಸ್ವಾಮಿಗಳ ಜೊತೆಗೂಡಿ ಬರುತ್ತಿದ್ದವರು ಈಗ ಒಬ್ಬರೇ ಬಂದಿರುವದನ್ನು ಕಂಡು ಶ್ರೀ ರುದ್ರಮುನಿ ದೇಶಿಕರಲ್ಲಿ ಮತ್ತೆ ತಮ್ಮ ಶ್ರೀಗುರುವಿನ ಅಗಲಿಕೆ ಪುಟಿದಿದ್ದರೂ ದುಃಖವನ್ನು ಹತ್ತಿಕ್ಕಿಕೊಂಡಿದ್ದರು.ತಮ್ಮ ಕೊನೆ ಕ್ಷಣಗಳಲ್ಲಿ ಶ್ರೀಕುಮಾರಸ್ವಾಮಿಗಳು ಶಿವಯೋಗಮಂದಿರವನ್ನು ,ಸಾಧಕ-ವಟುಗಳನ್ನು ತಮ್ಮ ಮಡಿಲಿಗೆ ಹಾಕಿರುವ ನುಡಿಯನ್ನು ನುಡಿದಿದ್ದು ಶ್ರೀರುದ್ರಮುನಿ ದೇಶಿಕರನ್ನುಕಂಡಾಗ ಶ್ರೀಶಿವಬಸವಸ್ವಾಮಿಗಳಿಗೆ ನೆನಪಾಗಿತ್ತು.ಪೂಜಾದಿಗಳನ್ನು ಮುಗಿಸಿ ಶ್ರೀಶಿವಬಸವ ಸ್ವಾಮಿಗಳು ಒಂದೆರಡು ದಿನ ತಂಗುವದಾಗಿ ತಿಳಿಸಿದರು.ಶ್ರೀರುದ್ರಮುನಿ ದೇಶಿಕರು ದುಗುಡಗೋಳ್ಳದಿರಲು ಹಿತೋಕ್ತಿಗಳನ್ನು ಹೇಳಿದರು.ದೇಶಿಕರು ಮೌನವಾಗಿ ಆಲಿಸಿದರು.

ಶಿವಯೋಗಾಶ್ರಮದಲ್ಲಿ ತಂಗಿದ್ದ ಶ್ರೀಶಿವಬಸವಸ್ವಾಮಿಗಳು ಅಂದು ಬಿಲ್ವ ವೃಕ್ಷದ ಕಟ್ಟೆಯಮೇಲೆ ಆಸೀನರಾಗಿದ್ದರು.

ದೃಷ್ಠಿಕಂಗೆಳೆದುರಿನ ಕುಮುದ್ವತಿಯಲ್ಲಿ ನೆಟ್ಟಿತ್ತು.ತೀಡುವ ಗಾಳಿಯ ಸುಯಿಲು ಕೂಡ ನಿಂತು ನಿಶ್ಚಲವಾಗಿತ್ತು.ತಮ್ಮ ಬೆನ್ನಿನ ಮೇಲೆ  ಯಾರೋ ನಿಧಾನವಾಗಿ ಅಕ್ಷರಗಲನ್ನು ಬರೆಯುತ್ತಿರುವ ಭಾಸವಾಯಿತು.

ಶ್ರೀಶಿವಬಸವ ಸ್ವಾಮಿಗಳು ಧ್ಯಾನಸ್ಥರಾಗಿ ತಮ್ಮ ಬೆನ್ನಿನ ಬರಹವನ್ನು ಗುರುತಿಸಲಾರಂಭಿಸಿದರು.”ರುದ್ರಮುನಿ ದೇಶಿಕರಿಗೆನಿರಂಜನ ಸ್ಥಲ ದೀಕ್ಷೆ ದಯಪಾಲಿಸುವದು” ಸಂದೇಶ ಪೂರ್ಣಗೊಂಡಾಗ ಇದು ಶ್ರೀಕುಮಾರಸ್ವಾಮಿಗಳ ಸೂಚನೆ ಎಂದು ಶ್ರೀಶಿವಬಸವ ಸ್ವಾಮಿಗಳಿಗೆ ಅರಿವಾಗಿತ್ತು. ಶ್ರೀ ರುದ್ರಮುನಿ ದೇಶಿಕರು ಈಗ ನಿಮ್ಮ ಬೆನ್ನು ಬಿದ್ದಿದ್ದಾರೆ ಎನ್ನುವದನ್ನು ಹೀಗೆ  ಶ್ರೀಕುಮಾರಸ್ವಾಮಿಗಳು ತಮಗೆ ತಿಳಿಸಿದ್ದು ಶ್ರೀ ಶಿವಬಸವ ಸ್ವಾಮಿಗಳಿಗೆ ಆಶ್ಚರ್ಯವಾಗಿತ್ತು.

ಈ ವಿಷಯವನ್ನು ಶ್ರೀ ರುದ್ರಮುನಿ ದೇಶಿಕರಿಗೆ ತಿಳಿಸಿದರು. ತಮ್ಮ ಅಂತರಂಗದ ಪ್ರಾರ್ಥನೆ ಫಲಿಸುವಂತೆ ತಮ್ಮನ್ನು ಉದ್ದರಿಸಲು ಶ್ರೀಕುಮಾರ ಸ್ವಾಮಿಗಳು ತೋರಿರುವ ಲೀಲೆ ಶ್ರೀರುದ್ರಮುನಿ ದೇಶಿಕರಿಗೆ “”ಸೂಕ್ಷ್ಮ ಕಾಯದಲ್ಲಿದ್ದೇವೆ”” ಎಂದು ನೀಡಿದ್ದ ಸುಳಿವಿಗೆ ಸಾಕ್ಷಿಯಂತೆ ಕಂಡಿತ್ತು…

ಗ್ರಂಥದ ಲೇಖಕರಾದ ಶ್ರೀಗುರುಕಂದ ಅವರ  ಕಣ್ಣಿಗೆ ಕಟ್ಟುವ ಈ ಸನ್ನಿವೇಷದ ವರ್ಣನೆ ಸರಳ ಭಾಷೆಯಲ್ಲಿ ಬಳಸಿದ ಒಂದು ಅವಿರಳ ಶಬ್ಧ  “ಸೂಕ್ಷ್ಮ ಕಾಯದಲ್ಲಿದ್ದೇವೆ” ಪುಸ್ತಕದ ಪುಟ-ಪುಟಗಳಲ್ಲಿ ಮತ್ತು ಶ್ರೀ ರುದ್ರಮುನಿ ಶಿವಯೋಗಿಗಳ ಲೀಲೆಗಳಲ್ಲಿ ಪ್ರತಿಧ್ವನಿಸಿತು. ಹಾಗೆಯೇ ಶ್ರೀಶಿವಬಸವ ಸ್ವಾಮಿಗಳಿಗಳ ಬೆನ್ನ ಮೇಲೆ ಮೂಡಿದ ಸಂದೇಶ ನನ್ನ ಕೂತೂಹಲದ ವಾಕ್ಯ “ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು “ ಎಂಬ ವಾಕ್ಯಕ್ಕೆ ಖಚಿತ ಸಾಕ್ಷಿ ನೀಡಿತು .

  • ಶ್ರೀಕಂಠ.ಚೌಕೀಮಠ

೧೦-೧೦-೨೦೨೩

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಸಪ್ಟಂಬರ ತಿಂಗಳು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಭುವಿಗೆ ಅವತರಿಸಿದ ಪವಿತ್ರ ಮಾಸ.

೧೫೬ ನೆಯ ಜಯಂತಿ ಮಹೋತ್ಸವ ಸಂಭ್ರಮಾಚರಣೆಯ ಪರ್ವಕಾಲ.

ಈ ಸಂಧರ್ಭದಲ್ಲಿ ಪ್ರಕಟವಾಗುತ್ತಿರವ  “ಋಣಮುಕ್ತರು” ಎಂಬ ಲೇಖನದ ಆಯ್ದ ಸಾಲುಗಳು ಹೀಗಿವೆ……

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಶ್ರೀಕುಮಾರ ತರಂಗಿಣಿ  ೨೦೨೩ ಸಪ್ಟಂಬರ್  ಸಂಚಿಕೆಯ ಲೇಖನಗಳ ವಿವರ

  1. ಮಂಗಳಾರತಿಯನು ನಾನು ಎತ್ತಿ ಪಾಡುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ೬: ಮಾತೆಯ ಆಗಮನ, ಮದುವೆಯ ಆಲೋಚನೆಲೇಖಕರು: ಪೂಜ್ಯ ಜ.ಚ.ನಿ
  4. : ಲೇಖಕರು :ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಲೇಖಕರು : ಡಾ. ಬಸವರಾಜ ಜಗಜಂಪಿ
  6.   ಲೇಖಕರು : ಬಿ. ಶಿವಮೂರ್ತಿ ಶಾಸ್ತ್ರಿ
  7. ಲೇಖಕರು : ಪಂಡಿತ ನಾಗಭೂಷಣ ಶಾಸ್ತ್ರಿಗಳು
  8.  
  9. ೨ : ಶ್ರೀಕುಮಾರೇಶ್ವರ ಅಭಂಗ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ