Poem

ಡಾ. ಕಿರಣ ಪೇಟಕರ

MBBS, MS – General Surgery, MCh – Plastic & Reconstructive Surgery, DNB – Plastic Surgery Plastic Surgeon. Bengaluru

ಅರುವಿನ  ಕಣ್ಣನು ತೆರೆದು ತೋರಲು

ನೂರು ದೇವರೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಕರುಣೆಯ ಕೃಪೆಯೊಂದಿರೆ ಸಾಕು

ಗ್ಲಾನಿಯೆ ತುಂಬಿದ-ಅಜ್ಞಾನಿಯು ನಾನು

ದಾರಿಯ ಕಾಣದೆ ತಡವರಿಸಿರುವೆ

ಭುವಿಯೊಳು ಬಂದು ಮಾಯೆಯಲಿಂದು

ಸಿಲುಕಿ ಬಲು ತೊಳಲಾಡಿರುವೆ

ಭವಸಾಗರದ ಬಂಧ ಹರಿಸಲು

ಯಾಗಯಜ್ಞವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಆಶೀರ್ವಚನವೊಂದಿರೆ ಸಾಕು

ಕತ್ತಲೆಯಲಿ ತಡಕಾಡುತ ನಡೆದೆ

ಎತ್ತ ಪಯಣವೊ ನಾನರಿಯೆ

ಸುತ್ತಿ ಬಳಲಿಹೆ ಗೊತ್ತುಗುರಿಯಿಲ್ಲದೆ

ಎತ್ತಿ ಪೊರೆವ ತಾಯೆ ಗುರುವೆ

ಜ್ಞಾನದ ಮಾರ್ಗದ ಸತ್ವವ ಅರುಹಲು

ಕೇಳದ ತತ್ವವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಸನ್ಮಾರ್ಗದರ್ಶನವಿರೆ ಸಾಕು

ಶಾಸ್ತ್ರಗಳೋದದ ಸಾಮಾನ್ಯ ನಾನು

ವೇದಪುರಾಣಗಳೆಂತರಿಯೆ

ಮುಕ್ತಿಯ ಪಡೆಯುವ ಆಸೆಯಲಿ ನಿಮ್ಮ

ಭಕ್ತಿಯಲ್ಲಿ ಶರಣೆಂದಿರುವೆ

ದೇವರ ಉಕ್ತಿಯ ಅರ್ಥ ತಿಳಿಯಲು

ಯಂತ್ರ ತಂತ್ರವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಬೀಜಮಂತ್ರವೊಂದಿರೆ  ಸಾಕು

ರಚನೆ :ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಭೋದೇವ ಗಿರಿಜಾಧವ ಮುದವಿಲಸಿತ ಮದಹತ

(ರಾಗ – ಆನಂದಭೈರವಿ)

ಭೋದೇವ ಗಿರಿಜಾಧವ | ಮುದವಿಲಸಿತ ಮದಹತ |

ಇಂದ್ರಿಯಜಿತ | ಸಾಧು ಚರಿತ ‘ಆ’ ಜಯ |          || ಪ ||

ಸಂಪದಾಸುರದಿ ಚರಿಪ | ಪಾಪದಾಗರವಿಲೋಪ |

ಸುಪಥವೇ ಸುಪ್ರದೀಪ | ತಮರಜಗುಣವಿರಹಿತ |

ಸುಮನ ಸಹಿತ | ವಿಮಲರತ ‘ಆ’ ಭವ    || 1 ||

ಸಂತರಾಚರಣ ಸುಖವ | ಚಿಂತಿಪಾತ್ಮರ ಸುಭಾವ |

ಸಂತತಾನಂದವೀವ | ವರಗುರುಚರಣ ಕಮಲ |

ದಿರವೆ ಸಕಲ | ಚರಲೀಲಾ ‘ಆ’ ಗತ     || 2 ||

ಬಿಂದುನಾದ ಪರಯೋಗ | ದಿಂದಲಾದ ಶಿವಯೋಗಾ |

ನಂದದಾಚರಿಪ ಯೋಗ | ಜವದಿ ಕೊಡು ಪರಮೇಶ | ಭವವಿನಾಶ | ಸುವಿಲಾಸ ‘ಆ’ ಶಿವ       ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

( ರಾಗ – ದಕ್ಷಿಣಾದಿ ಕಾನಡಾ )

ಗುರುಬಸವೇಶನ ಹರುಷದಿ ಸ್ಮರಿಸೋ

ಸ್ಥಿರಸುಖ ಪೊಂದುವೆ ನಿರುತದಿ ಭಜಿಸೋ || ಪ ||

ಪರಶಿವನಾಜ್ಞೆಯಿಂದಿಳಿದೀ ಜಗವ

ಪರಿಪಾಲಿಸಿ ಬೋಧಿಸಿ ಸದ್ಗುಣವ  II 1 ||

ಶೈವಮತವ ಬಿಟ್ಟು ವೀರಶೈವದ |

ದಿವ್ಯಮಾರ್ಗವ ಹೊಂದಿ ನೆರೆ ಶೋಭಿಸಿದ || 2 ||

ಹೀನದೆಶೆಯೊಳಿಹ ವೀರಶೈವರನು |

ಕಾಣುತೆ ಕರುಣದಿ ಪೊರೆದಿಹ ಮಹಿಮ || 3 ||

ನಿಗಮಾಗಮತತ್ವ ಸಾರವನರುಪುವ |

ಬಗೆಯನು ಬೋಧಿಸಿ ಜಗದೊಳು ಮೆರೆವ || 4 ||

ಸಾಧಕಸಿದ್ದರ ಮಾರ್ಗದ್ವಯವನು |

ಬೋಧಿಸಿ – ತೋರಿಸಿ ಜಗದೊಳೊಪ್ಪಿಹನು Il 5 ||

ಪರುಷಪಂಚಕದಿಂ ದುರಿತವನೊರೆಸುತ |

 ಪರಿಶಿವಲಿಂಗವನವರೊಳು ಬೆರೆಸಿಹ    ||  6 ||

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

ಸುಶಾಂತ ಗುರುವರೇಣ್ಯ |

ರೇಣುಕಾರ್ಯ ಭೋ

ವರಶೈವ ಮತಸಾರ | ಪರಮಾವತಾರ |

ಗುರುದೇವ ನೀನೆ ಪರಿಪಾಲಿಸ್ಯೆ ಮತಾಚಾರ್ಯ

ಕಪಟವಕಟ ಮೋಸ | ಚಪಲ ಕುದೋಷ |

ವಿಪರೀತ ಮಾಡಿ | ಸುಪಥವೀಯೋ ಮಹಾಚಾರ್ಯ

ಶಿವಯೋಗಿ ಕುಲಪಾಲ | ಭವನಾಶಮೂಲ |

ಜವದಿಂದ ನೋಡು | ತವೆ ಮೋದದಿ ಶಿವಾಚಾರ್ಯ|

ರಚನೆ : ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ|

ಚಿನ್ಮಯ ಪ್ರಭು | ಮಾಯಾರಿ ! ಮಾರಾರಿ!! ಕಾಲಾರಿ!!! ||ಪ||೧

ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು ||೨

ನಾದಬ್ರಹ್ಮ ಭೇದವ ಶೋಧಿಸಿ ದೃಢಚಿತ್ತನಾಗಿ

ಸಾಧಿಸಿ ಶಿವಕಲೆಯನ್ನು ಮೋದಗೊಳ್ಳುವಂತೆ ಮಾಡಿ | ಚಿನ್ಮಯ ಪ್ರಭು!! ೩

ಲಿಂಗಾಂಗಸಂಗದ ಇಂಗಿತದ ಬೋಧವಿತ್ತು |

ಲಿಂಗೈಕ್ಯನ ಮಾಡುತೆ ಮಂಗಲ ಶಿವಯೋಗಿಯೆನಿಸಿ | ಚಿನ್ಮಯ ಪ್ರಭು||೪

ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ ಕುಮಾರ   || ೧||     

ಮನೆಯಬಿಟ್ಟೆ ಶಪಥವ ತೊಟ್ಟೆ ಬಂಧು ಬಳಗವಬಿಟ್ಟೆ

ಯಳಂದೂರ ಬಿದರಿ ಯತಿಗಳ ನಂಬಿದೆ ಮನಮುಟ್ಟಿ ಕುಮಾರ  || ೨ ||

ಜೋಳಿಗೆ ಬಿಟ್ಟೆ ಹಠವನು ತೊಟ್ಟೆ ಶಾಲೆ ಕಲಿಯಲೆಂದು

ಅಕ್ಷರ ಕಲಿಯುತ ಶಿಕ್ಷಣ ನೀಡಿದೆ ನಾಡಮಕ್ಕಳಿಗೆ ಕುಮಾರ  || ೩ ||

ಲಿಂಗವಿರದ ನಡೆ ಏನುಭೂಷಣ ಲಿಂಗಸಂಗವೆ ಲೇಸು

ಲಿಂಗವಿರದ ಭವಿಗಳ ಸಂಗ ಎಂದೆಂದಿಗೂ ಬೇಡ ಕುಮಾರ  || ೪ ||

ಮಠವು ಎಂದರೆ ಏನದಕರ್ಥ ಧರ್ಮ ಸಂಸ್ಕೃತಿ ಕೇಂದ್ರ

ನೊಂದ ಜೀವಕೆ ಸಾಂತ್ವನ ನೀಡುವ ನೆಮ್ಮದಿಯ ತಾಣ ಕುಮಾರ  || ೫ ||

ಅನ್ನ ಅರಿವು ಆಶ್ರಯ ನೀಡುವ ಪುಣ್ಯತಾಣ ಮಠಗಳು

 ಅನ್ನದಾಸೋಹ ಕನ್ನಡ ನಾಡಿನ ಹೆಮ್ಮೆ ನಮ್ಮ ಮಠವು ಕುಮಾರ  || ೬ ||

ಬಯಸದೆ ಬಂದಿತು ಮಠದಧಿಕಾರ ಹಾನಗಲ್ಲ ಮಠವು

ಮಲ್ಹಣಾರ್ಯನು ಕೈ ಹಿಡಿದು ಕರೆದನು ನಾಡಸೇವೆಗೆಂದು ಕುಮಾರ  || ೭ ||

ಹಳ್ಳಿ ಪಟ್ಟಣಗಳ ನಿಲ್ಲದೆ ಸುತ್ತಿದೆ ಬರಿಗಾಲಲಿ ನಡೆದೆ

ಧರ್ಮಜಾಗೃತಿಗಾಗಿ ಭಕ್ತ ಮನೆಯ ಬಾಗಿಲಿಗೆ ಕುಮಾರ  || ೮ ||

 ಶಿವಯೋಗ ಮಂದಿರ ಮಹಾಸಭೆಯನು ನಿಷ್ಠೆಯಿಂದಲಿ ಕಟ್ಟಿ

ವಚನದ ಕಟ್ಟನು ಶೋಧಿಸಿ ರಚಿಸಲು ಹಳಕಟ್ಟಿಗೆ ಕೊಟ್ಟೆ ಕುಮಾರ  || ೯ ||

ಗುರು ವಿರಕ್ತರು ನಾಡಿನ ಭಕ್ತರು ಕೂಡಿ ನಡೆಯೆ ಶಕ್ತಿ

ಸಮಯಭೇದವ ಕಳೆದು ಸಮರಸ ದಾರಿ ತೋರಿದನು ಕುಮಾರ  || ೧೦ ||

ಮಕ್ಕಳಿರದ ಶಿರಸಂಗಿ ದೊರೆಗೆ ಮನ ಒಲಿಸಿದೆ ತಿಳಿಸಿ

ನಾಡ ಮಕ್ಕಳ ಶಿಕ್ಷಣಕಾಗಿ ದಾನ ನೀಡಿಸಿದೆ ಕುಮಾರ   || ೧೧ ||

ಸ್ವಾಮಿ ಎಂದರೆ ಒಡೆಯನು ಅಲ್ಲ ನಿಜದಿ ಸೇವಕನು

 ಕಾಯ ವಾಚಾ ಮನಸ್ಸಿನಲ್ಲಿ ನಿರ್ಮೋಹಿಯು ನೀನು ಕುಮಾರ  || ೧೨ ||

ರಾಷ್ಟ್ರ ನಿಷ್ಠೆಗೆ ಖಾದಿ ಧರಿಸಿದೆ  ರೋಗಿಗಳನುಪಚರಿಸಿ

 ಬರಗಾಲದಿ ದಾಸೋಹ ಗೈದು ಜನರ ಬದುಕಿಸಿದೆ ಕುಮಾರ  || ೧೩ ||

ಅಂಧ ಅನಾಥರು ಆಶ್ರಯ ರಹಿತರು ಯಾರಿಗೂ ಬೇಡಾದವರು

 ಗಾನಯೋಗಿ ಪಂಚಾಕ್ಷರಿ ಎಂದು ನಾಡ ಬೆಳಗಿದರು ಕುಮಾರ  || ೧೪ ||

ಯಾರಿಗೆ ಯಾರು ಯಾರಿಂದೇನು ನಮಗಾದವನೆ ದೈವ

 ಹಣೆಬರಹ ಬದಲಿಸಿ ಬಾಳಲು ಕಲಿಸಿದ ಅಂಧರ ತಂದೆಯು ನೀ ಕುಮಾರ  || ೧೫ ||

 ಲಿಂಗ ವಿಭೂತಿ ರುದ್ರಾಕ್ಷಿ ರೂಪ ಮಹಾ ಜಂಗಮ ನೀನೆ

 ಅಂಧ ಅನಾಥರ ದೈವ ನೀನೆ ತಾಯಿಯ ಪ್ರತಿರೂಪ ಕುಮಾರ || ೧೬ ||

 ಇಳಕಲ್ ಪೂಜ್ಯರು ವಿಜಯ ಮಹಾಂತರು ಹಾವೇರಿಯ ಶಿವಬಸವರು

 ಎಲ್ಲ ಯತಿಗಳು ಕೂಡಿ ಬೆಳಸಿದರು ಶಿವಯೋಗ ಮಂದಿರವ ಕುಮಾರ || ೧೭ ||

ಲಿಂಗವಂತರು ಶೂದ್ರರೆಂಬ ಪರಳಿಯ ವಾದದಲಿ

 ಶಾಸ್ತ್ರಸಮ್ಮತವಾಗಿ ಮಿಗಿಲೆಂದು ವ್ಯಾಜ್ಯ ಗೆಲ್ಲಿಸಿದೆ ಕುಮಾರ || ೧೮ ||

 ಶರಣರು ಮೆಟ್ಟಿದ ಧರೆಯು ಪಾವನ ಸೊನ್ನಲಿಗೆಯ ಪುರವು

ನಾಲತವಾಡದ ವೀರೇಶ್ವರರು ಕರುಳ ಕುಡಿಯವರು ಕುಮಾರ || ೧೯ ||

 ನಂಬಿ ಕೊಂಡರೆ ಶಿವನಪ್ರಸಾದ ನಂಬದಿರ್ದೊಡೆ ವಿಷವು

 ತುತ್ತಿಗೊಮ್ಮೆ ಶರಣೆಂದು ಉಂಡರೆ ಲಿಂಗ ಪ್ರಸಾದ ಕುಮಾರ  || ೨೦ ||

 ಬಯಸಿ ಉಣಲಿಲ್ಲ ಹಬ್ಬದೂಟವ ಬಾಯ ಚಪಲಕೆ ಬೇಡಿ

 ಬಯಸದಿಹ ಲಿಗಭೋಗವು ಲಿಂಗಕರ್ಪಿತವು ಕುಮಾರ  || ೨೧ ||

 ಬಸವನ ನೆನೆಯುತ ಧರಿಸೊ ಭಸ್ಮವ ಮುಕ್ತಿಯು ನಿನಗಹುದು

ಜಾಣ ಜಾಣರು ಸಂತ ಯತಿಗಳು ಮೋಕ್ಷ ಪಡೆದಿಹರು ಕುಮಾರ  || ೨೨ ||

ಭಸ್ಮಧೂಳಿಯು ಪಾವನ ಚಿನ್ನ ಶಿವನ ಮೈ ಬೆಳಗು

 ಶರಣರ ನೆನೆಯುತ ಧರಿಸಲು ನಿತ್ಯ ಪಾಪ ನಾಶವು ಕುಮಾರ  || ೨೩||

 ಹಿಡಿದ ನೇಮವ ಬಿಡದ ಹಠವು ತ್ಯಾಗಭಾವ ಸಿರಿಯು

ಎಲ್ಲರೊಂದಿಗೆ ಬೆರೆತು ಬಾಳುವ  ಸಮತೆಯ ಸನ್ನಿಧಿಯು ಕುಮಾರ  || ೨೪ ||

 ಪೂಜಿಪೆಯಾದರೆ ಯಾವುದು ಪೂಜೆ ತಿಳಿದು ಮಾಡು ಮನುಜ

ಸಮಾಜ ಸೇವೆಯೆ ಲಿಂಗಪೂಜೆ ಮಾಡಿತೋರಿದೆ ನೀ ಕುಮಾರ  || ೨೫ ||

 ಉಳಿಯ ಮುಟ್ಟದ ಲಿಂಗವೆಂತು ಮನವ ಮುಟ್ಟುವುದು

ಕೊಟ್ಟ ಗುರುವಿನ ಕಷ್ಟವೇನು ಯಾರು ಬಲ್ಲವರು ಕುಮಾರ  || ೨೬ ||

 ಲಿಂಗ ಪ್ರಾಣ ಪ್ರಾಣವೆ ಲಿಂಗ ಇಷ್ಟಲಿಂಗದಿ ನಿಷ್ಠೆ

 ಲಿಂಗತಾನು ತಾನೆ ಲಿಂಗವು ಲಿಂಗ ರೂಪನು ಕುಮಾರ  || ೨೭ ||

 ಕಿಂಕರನಾದವ ಶಂಕರ ನೋಡು ಕಿಂಕರನಾಗಿರ ಬೇಕು

ಮೇಲು ಗದ್ದುಗೆ ಬಯಸದ ಜೀವ ದ್ವಿತಿಯ ಶಿವನಾಯ್ತು ಕುಮಾರ  || ೨೮ ||

 ಸುಖವ ಬಯಸದೆ ದುಡಿದ ಜೀವ ನಾಡಿನೇಳ್ಗೆಯ ಬಯಸಿ

ನೊವನುಂಗಿ ನಂಜನುಂಡು ನೀಡಿದೆ ಅಮೃತವ ಕುಮಾರ  || ೨೯ ||

 ಸಾವು ನೋವಿಗೆ ಹೆದರುವಿ ಯಾಕೊ ಸಾಯದವರು ಯಾರು

ಕಾಯ ಮಾಯಾ ಮೋಹನಳಿದು ಮರಣ ಗೆಲಿದವನೊ ಕುಮಾರ  || ೩೦ ||

 ಮುಕ್ತಿಯಂತೆ ಯಾವುದು ಮುಕ್ತಿ ಮೋಕ್ಷ ಅವರಿಗಿರಲಿ

ಜನ್ಮ ಜನ್ಮದಲು ಸೇವೆಗಾಗಿ ಮತ್ತೆ ಬರುವೆನೆಂದ ಕುಮಾರ  || ೩೧ ||

 ಕೋಪವಂಟಿದ ಯತಿಯ ತಪವು ಪಾಪ ಕೂಪ ಕೆಸರು

ಸಹಜ ಪ್ರವೃತ್ತಿ ಶಾಂತಮತಿ ಪಡೆವನೊ ಸದ್ಗತಿ ಕುಮಾರ  || ೩೨ ||

 ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ ಕುಮಾರ  || ೩೩ ||

 ಸಮಾಜ ಸೇವೆಯೆ ತಮ್ಮಯ ಉಸಿರು ಸಮಾಜ

ನಿಮ್ಮ ಮಠವು ಸಮಾಜ ಸಮಾಜ ಸಮಾಜವೆಂದು ಪ್ರಾಣ ನೀಗಿದೆ ನೀ ಕುಮಾರ || ೩೪ ||

 ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ಕುಮಾರ  || ೩೫ ||

 ನಿನ್ನ ಹೊರತು ಯಾರಿಲ್ಲ ಗತಿ ಮತಿ ನಾಸ್ತಿ ಅನ್ಯಥಾ ನಾಸ್ತಿ

 ನಿನ್ನ ಪಾದಕೆ ಕೋಟಿ ಕೊಟಿ ಶರಣು ಶರಣಾರ್ಥಿ ಕುಮಾರ  || ೩೬ ||

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

(ರಾಗ-ದರ್ಬಾರಿ ಕಾನಡಾ)

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ಯೋಗಿರಾಡ್ಜಯ ಮಂಗಲಂ|| ಪರತರಶಿವ||

ಯೋಗಿರಾಡ್ಜಯ ಯ ಮಂಗಲಂ

ಲಿಂಗಾಂಗೊಭಯಸಂಗ ಶರಣರಪುಂಗಾ||

ಅಂಗಜಭವಭಂಗ!!

ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!

ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!

ಯೋಗಿರಾಡ್ಜಯ ಮಂಗಲಂ ||ಪರತಿರತಿವ!!

ಯೋಗಿರಾಡ್ಜಯ ಮಂಗಲಂ

ಈಡಪಿಂಗಳ ಜೋಡಿಸಿ ಹರಿದಾಡುವ 11

ಜೋಡಕ್ಕರವ ಕೂಡಿಸಿ

ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!

ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!

ಯೋಗಿರಾಡ್ಜಯ ಮಂಗಲಂ 11ಪರತರಶಿವ||

ಯೋಗಿರಾಡ್ಜಯ ಮಂಗಲಂ

ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||

ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ

ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!

ಯೋಗಿರಾಡ್ಜಯ ಮಂಗಲಂ ||ಪರತರಪಶಿವ||

ಯೋಗಿರಾಡ್ಜಯ ಮಂಗಲಂ

ರಚನೆ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮಾರಾರಿಯೆ ಪಾಲಿಸು ಕಾಲಾರಿ ಬೇಗ

ಪಾರುಗೊಳಿಸದೆನ್ನ ಮಾಯಾಸಂಗ  ||

ಮನಸಿಜನಾಗಿತಾ  ಘನಬಾಧೆಗೊಳಿಪನು

ವನಿತೆಯರೊಲವಿತ್ತು  ವಿನಯದಿ ಸಾಧಿ

ಸನುಮತದಿಂದಿವ ನಾಶಗೊಳಿಸಿ   ||  ||

ಮರಣದ ಭೀತಿಯಿಂ ಕೊರಗುತ್ತಿರುವೆನು                         

ಕರುಣವಿಲ್ಲದ ಯಮ ಧೂತರ ಕಾಟದಿ

 ದುರುಳರ ಸಾಹಸ ಪರಿಹರಿಸಭವ   ||  ||

 ಆಶಾಪಾಶದಿ ಘಾಸಿಯಾಗುವೆ ನಾನು !

ಮೋಸದ ಮಾಯೆಯ ಬಲೆಯೊಳು ವಾಸಿಪೆ

ಭಾಸುರಾನಂದ ಶಿವಯೋಗದೊಳಿರಿಸಿ  ||  ||

ರಚನೆ: ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಶಿವಮಂಗಲವನು ಕೊಡು ಬೇಗ

ಭವದುಃಖದಿ ಬಳಲುವೆವೀಗ ||

ಭುವಿಗವತರಿಸಿದ ಕಾರಣವ

ಜವದೊಳು ನೆನೆಯುತೆ ಗುರುದೇವ ||||

ಮನುಜ ಜನ್ಮವನು ತೊಟ್ಟಿಹೆವು

ಘನಮಹಿಮ ಪಥ ಬಿಟ್ಟಿಹೆವು  ||

ಮನದಿಹೀನಗುಣ ತೊಡರಿಹೆವು

ಮುನಿವಂದ್ಯನೆ ನಮಿಸುತ್ತಿಹೆವು || 2 ||

ಹುಟ್ಟಿ ಹುಟ್ಟಿ ಸಾಯ್ವುದ ನೋಡಿ

ಕಷ್ಟ ತೆರದಿ ಬಹು ಚರಿಸಾಡಿ  ||

ದುಷ್ಟರೆನಿಸಿಕೊಂಬುದ ನೋಡಿ

ಶಿಷ್ಟನೆ ನೀನತಿದಯೆಗೂಡಿ || 3 ||

ಇದ್ದ ಗುಣಗಳೆಲ್ಲವಮರಿಸಿ

ಶುದ್ಧಗುಣದಮನವನ್ನಿರಿಸಿ ||

ಸಿದ್ಧರಾಮ ಗುರುದಯಕರಿಸಿ

ತಿದ್ದುವದತಿ ನೀ ಮುದವಿರಿಸಿ  ||||

(ಶಿವಯೋಗ ಮಂದಿರ ರಾಗ ಸಂಯೋಜನೆ : ರಾಗ ಮಾಂಡ)