Poem

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ರಚನೆ: ಪೂಜ್ಯ ಶಿವಬಸವ ದೇವರು ಧಾರವಾಡ

ಶಿವಯೋಗಿ ಕುಮಾರಯೋಗಿ

ಬಂದೆನು ನಿನ್ನಡಿ ಶಿರಬಾಗಿ

ಸಮಾಜಯೋಗಿ ಸಂಜೀವಿನಿಯಾಗಿ || ೧ ||

ಸ್ವಾಮಿ ಸಂಕುಲ ನಿನ್ನಯ ಮಂದಿರ

ಸೇರಿದೆ ನಾನು ಕುಮಾರನ ಹಂದರ

ಮೂಡಿತು ಮನದಿ ಯೋಗದ ಡಂಗುರ

ಆಗಸದಲ್ಲಿ ಕುಮಾರನೇ ಚಂದಿರ || ೨ ||

ಜ್ಯೋತಿಯ ಬೆಳಗುವೆ ನಿನ್ನಯ ಪಾದಕೆ

ಸೇವೆಯ ಮಾಡುವೆ ಬದುಕಿನ ಪುಣ್ಯಕೆ

ತೋರಿಸು ಜ್ಞಾನವ ಅರಿಯದ ಮನಕೆ

ನಿನ್ನಯ ನಾಮವು ನನ್ನಯ ಬಾಳಿಗೆ || ೩ ||

ಶಿವನೇ ನೀನು,  ಬಸವನೇ ನೀನು

ಸಮಾಜ ನೀನು, ಸ್ಮರಣೆಯು ನೀನು

ಭಾಗ್ಯವು ನೀನು ಭಕುತಿಯು ನೀನು

ಧ್ಯಾನವು ನೀನು ಹರಸು ನಮ್ಮನು || ೪ ||

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ದೇವಪೊರೆಯೊ  ಭವಮಾಲೆಯಜಿತ |

ಭಾವಜಮದಹತ  ಈ ವಸುಜಾತ  ||||

ಚಿತ್ತದ ರಾಗ  ಭ್ರಾಂತಿಯ ಪೂಗ ಗುಹೇಶ್ವರ

ಜೊತೆಗೂಡಿ ಅತಿಬೇಗ  || ||

ವೃತ್ತಿಯ ಜಾಲ  ಚಿಂತೆಯ ಮೂಲ  ಚರೇಶ್ವರ

ಹತಮಾಡಿ ಘನಲೀಲ  || ||

ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ

ಆನುಗೈದು ಶಿವಯೋಗ || ||

ರಾಗ – ಭೀಮಪಲಾಸ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ರಚನೆ: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳುಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ. ಕ್ಯಾಂಪ: ಅಧ್ಯಾತ್ಮ ಸಿರಿಗಿರಿ ಫಾರ್ಮ ಯಶವಂತನಗರ

ಜಯದೇವ ಗುರುದೇವ ಸದ್ಗುರು ಕುಮಾರ

ಇನ್ನಷ್ಟು ಬೇಡುವೆನು ಸ್ಮರಣೆಯನು ಕುಮಾರ

ಬಂದಷ್ಟು ಹಾಡುವೆನು ಅನುದಿನವು ಕುಮಾರ ||

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೧  ||

ಪೂರ್ಣ ನೀನು ಮಂದಿರದಿ ಪ್ರಕಟವಾದೆ ಕುಮಾರ

ಜಗದೊಳಗೆ ಜಗವಾಗಿ ಆಡಿರುವೆ ಕುಮಾರ

ಉಂಬಾತ ಉಣಿಸುವಾತ ನೀನೆ  ಕುಮಾರ

ಕೊಂಬಾತ ಕೊಡುವಾತ ನೀನೇ ಕುಮಾರ

ತನಗನ್ಯ ತಾ ಅನ್ಯ ಬಿಡಿಸಿಬಿಡು ಕುಮಾರ

ಮನೆಮಾರು ಬಂಧುಗಳು ಇಲ್ಲೆನಗೆ ಕುಮಾರ

ಕಡು ದುಃಖಿಯ ಸಲುಹುವ ಕರಣಾಳು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೨  ||

ನಿನ್ನಡಿಯ ಬಿಡಲಾರೆ ತೊರೆಯದಿರು ಕುಮಾರ

ಸಾಮಿಪ್ಯ ಬೇಡುವೆನು ಸದ್ಗುರು ಶ್ರೀ ಕುಮಾರ

ಕತ್ತಲೆಗೆ ತುತ್ತಾಗಿ ಸಾಯುವೆನು ಕುಮಾರ

ನಿನ್ನ ಪಾದ ಬಿಡದಂಥ ಮನವ ಕೊಡು ಕುಮಾರ

ನೀನಿರಿಸಿದಂತೆ ನಾನಿರುವೆನೈ ಕುಮಾರ

ನೀ ಮುಂದೆ ನಡೆದರೆ ಜಗ ಬೆಳಗು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೩  ||

ತಂದೆ ನೀನಿತ್ತ ಕಣ್ಣು ಮೂಡಿದರೆ ಕುಮಾರ

ಜಡ ದೇಹಿ ಮನುಜರ ಭವದೂರ ಕುಮಾರ

ನಡೆಯಿತ್ತು ಶಿವಗೋಷ್ಟಿ ನೆನಹಿನಲಿ ಕುಮಾರ

ಒಂದಾಯ್ತು ಗುನಗುನಸಿ ನಿನ್ನಲ್ಲಿ ಕುಮಾರ

ಆಕಾಶದತ್ತತ್ತ ನೀನೆ ಕುಮಾರ

ಪಾತಾಳದತ್ತಾಚೆ ನೀನೆ ಶ್ರೀ ಕುಮಾರ

ಎನ್ನಗಲ ನಿಮ್ಮಗಲ ಜಗದಗಲ ಕುಮಾರ

ದಿಕ್ಕುಗಳು ಕಟ್ಟದ ಅನಂತ ನೀ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೪  ||

ಎನ್ನಂಗದೊಳು ನೀ ಮೂಡಲ್ಕೆ ಕುಮಾರ

ಎನ್ನ ನಾಸಿಕದ ಗಂಧ ಆಚಾರಲಿಂಗ ಕುಮಾರ

ಎನ್ನ ನಾಲಗೆಯ ರಸ ಗುರುಲಿಂಗ ಕುಮಾರ

ಎನ್ನ ಕಣ್ಣಿನ ರೂಪ ಶಿವಲಿಂಗ ಕುಮಾರ

ಎನ್ನ ಚರ್ಮದ ಸ್ಪರ್ಷ ಚರಲಿಂಗ ಕುಮಅರ

ಎನ್ನ ಕಿವಿಯ ಶಬ್ಧ ಪ್ರಸಾದಲಿಂಗ ಕುಮಾರ

ನಾನಾಗಿ  ಇರುವುದೆಲ್ಲ ಮಹಾಲಿಂಗ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ   || ೫  ||

 ದೇಹ ದೇವಾಲಯದಲಿ ಚೈತನ್ಯ ಕುಮಾರ

ನೆಲ ನೀರುಗಾಳಿ ಬೆಂಕಿ ಬಯಲು ಶ್ರೀಕುಮಾರ

ದ್ವೈತ ಲೀಲೆಯ ಸುಖ ಗೀತಭಕ್ತಿ ಕುಮಾರ

ಸ್ವರವಿಟ್ಟು ಹಾಡಿದರೆ ಕೆಡುವ ಗೌಪ್ಯ ಕುಮಾರ

ಸ್ವಯಮೇವ ಸ್ವಯಂಭು ಪರಮ ಶ್ರೀಕುಮಾರ

ರತಿರಹಿತ ಅನ್ನದಾನಿ ಪರಿಣಾಮಿ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೬  ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ದರ್ಬಾರಿ ಕಾನಡಾ)

ಶ್ರೀ ಪರಾತ್ಪರ ಬಸವೇಶ್ವರನನು |

ಸಾರುತ -ಸೇರುತ ಭಜಿಸೋ ನೀ ಮಾನವ || ಪ ||

ಭಕ್ತಿಯ ಮಾರ್ಗದಿ ನಡೆಯುವ ಜನರಿಗೆ

ಶಕ್ತಿಯನರಿತು ಫಲಗಳ ಕೊಡುವ

ಮುಕ್ತಿಯ ಪಥವನ್ನೀಯುವ ಪರಮ || 1 ||

ವೀರಶೈವ ಮತ ಜೀರ್ಣೋದ್ಧಾರಕ

ಸಾರ ಸುಬೋಧಕ ಪರತರಶೋಧಕ

ಪೂರಿತ ಕರುಣದಿ ದೀನಸುರಕ್ಷಕ || 2 ||

ಶಿವಯೋಗದಲಿ ಸುವಿರಾಗದಲಿ

ಭವಿಗಳನೀಕ್ಷಿಸಿ ಭಕ್ತರ ಮಾಡಿದ

ಸುವಿವೇಕದ ಗುರುವಿಗೆ ಗುರುವೆನಿಸಿದ || 3 ||

(ರಾಗ – ಕೇದಾರ ಗೌಳ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ದೇವ | ಕಾಯೋ ನೀ ಮಾಯಾತೀತನೆ || ಪ ||

ವೀರಶೈವವ ಸಾರಿ ತೋರುವ |

ಭೂರಿ ಭಕ್ತಿಯುಕ್ತರ ಪಾರುಗೊಳಿಸುತೆ || 1 ||

ಶಿಷ್ಟ ಮತವಿದು ನಷ್ಟಗೊಳ್ವುದು |

ತುಷ್ಟಿಗೊಳಿಸುವೆನೆಂದ ಭೀಷ್ಟ ವೀಯುತೆ || 2 ||

ಮತವೆ ನಿನ್ನದು ಪತಿಯೆ ಕಾಯ್ವುದು |

ಗತಿಯ ಕಾಣದಿರ್ಪರ ಜತಿಯಗೂಡುತೆ || 3 ||

ಇಂತು ಸಭೆಯೊಳು ಕುಂತು ಜನಗಳು |

ಪಂಥಗಾರರಾಗಿರುವಂತೆ ಮಾಡುತೆ || 4 ||

ಬೇಡಿಕೊಂಬೆನು ಮಾಡು ಕೃಪೆಯನು |

ಮೂಢರಾದ ಜನಗಳ ನೋಡಿ ಮರೆಯದೆ || 5 ||

ವೇದವೆಂಬುದು ಭೇದವೀವುದು |

ಬೋಧಿಸೈಕ್ಯ ಮತದ ಹಾದಿ ತೋರಿಸಿ || 6 ||

ಮತವು ನಿನ್ನಯ ಹಿತದ ಸೀಮೆಯ |

ಗತಿಯೊಳೈಕ್ಯಗೊಳ್ಳುವ ಮತಿಯ ಕೊಡುತೆ || 7 ||

ಸ್ವಂತಪರರಿಗೆ ಸಂತ ಜನರಿಗೆ |

ಅಂತರ್ಯಾಮಿಯಾಗಿ ಹಂತೆ ತೊಲಗಿಸಿ || 8 ||

ಸಿದ್ಧಲಿಂಗನೆ  ಪೊದ್ದಿರ್ದದವರನೆ |

ಶುದ್ಧರಾಗಿರುವಂತೆ ತಿದ್ದಿ ತೋರುತೆ || 9 ||

ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ತೆಳ್ಳನೆಯ ಮೈಕಟ್ಟು,

ತಿಳಿಯ ಕಾವಿಯ ತೊಟ್ಟು,

ಬಂಧನಗಳ ಮೋಹವ ಬಿಟ್ಟು,

ಆತ್ಮನಲಿ ಮನಸನು ಇಟ್ಟು,

ನಿಜಗುರುವಿನ ಅರಸುತ ಹೊರಟು,

ದಿವ್ಯತೆಯ ಭಾವವ ತೊಟ್ಟು,

ಗುರುಪದದಲಿ ಶಿರವನು ಇಟ್ಟು,

ಸಮಾಜೋನ್ನತಿಯ ದೀಕ್ಷೆಯ ತೊಟ್ಟು,

ನಾಡಿಗೆ ಧಾರ್ಮಿಕ ಕೇಂದ್ರವ ಕೊಟ್ಟು,

ಶಿವಮಂದಿರವೆಂಬ ನಾಮವ ಇಟ್ಟು,

ಬಾಲವಟುಗಳ ಪೋಷಿಸ ಹೊರಟು,

ದೈವೀಶಕ್ತಿಯ ಕುರುಹನು ಇಟ್ಟು,

ದುರಿತ ಗುಣಗಳ ದೂಡುತ ಹೊರಟು,

ಕಲ್ಯಾಣ ರಾಜ್ಯವ ಕಟ್ಟುತ ಹೊರಟ

ದ್ವಿತೀಯ ಬಸವ ಅಪ್ಪ ಹಾನಗಲ್ಲ ಕುಮಾರೇಶ

(ರಾಗ – ಭೂಪ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ವೀರಶೈವಾಚಾರ ಪರಾ |

ಘೋರ ಬಸವ ಧೀರಾ |            || ಪ ||

ಆದಿ, ನಾದ, ಬಿಂದು ಕಲಾ |

ಹೃದಯಾಲಯ ನಾಶಮಲ |

ಮೋದ ಘನಾನಂದವನ |

ಬೋಧಾಮೃತ ಸದನ            || 1 ||

ಕಾಮ ಕಲಿಯ ವೈರಿ ಸದಾ |

ಮಮತಾ ಮತಿವಾರಿಸಿದ ||

ಸೋಮಧರಾಪಾರಸುಖ |

ಪ್ರೇಮಾಬ್ಧಿ ಶಿವಸಖ                             || 2 ||

ತ್ರಾಹಿ ಶಿವಯೋಗ ನಿದ್ರ |

ವಹಿಸಿ ಪರಮ ಶಾಂತಿಮುದ್ರ ||

ಸಾಹಸದಿಂ ಕೂಡಿಸುತ ಸೋಹಂ ಭಾವಯುತ         || 3 ||