Poem

ಡಾ. ಕಿರಣ ಪೇಟಕರ

MBBS, MS – General Surgery, MCh – Plastic & Reconstructive Surgery, DNB – Plastic Surgery

Plastic Surgeon.Bengaluru

 

 

ಅರುವಿನ  ಕಣ್ಣನು ತೆರೆದು ತೋರಲು

ನೂರು ದೇವರೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಕರುಣೆಯ ಕೃಪೆಯೊಂದಿರೆ ಸಾಕು

 

ಗ್ಲಾನಿಯೆ ತುಂಬಿದ-ಅಜ್ಞಾನಿಯು ನಾನು

ದಾರಿಯ ಕಾಣದೆ ತಡವರಿಸಿರುವೆ

ಭುವಿಯೊಳು ಬಂದು ಮಾಯೆಯಲಿಂದು

ಸಿಲುಕಿ ಬಲು ತೊಳಲಾಡಿರುವೆ

ಭವಸಾಗರದ ಬಂಧ ಹರಿಸಲು

ಯಾಗಯಜ್ಞವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಆಶೀರ್ವಚನವೊಂದಿರೆ ಸಾಕು

 

ಕತ್ತಲೆಯಲಿ ತಡಕಾಡುತ ನಡೆದೆ

ಎತ್ತ ಪಯಣವೊ ನಾನರಿಯೆ

ಸುತ್ತಿ ಬಳಲಿಹೆ ಗೊತ್ತುಗುರಿಯಿಲ್ಲದೆ

ಎತ್ತಿ ಪೊರೆವ ತಾಯೆ ಗುರುವೆ

ಜ್ಞಾನದ ಮಾರ್ಗದ ಸತ್ವವ ಅರುಹಲು

ಕೇಳದ ತತ್ವವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಸನ್ಮಾರ್ಗದರ್ಶನವಿರೆ ಸಾಕು

 

ಶಾಸ್ತ್ರಗಳೋದದ ಸಾಮಾನ್ಯ ನಾನು

ವೇದಪುರಾಣಗಳೆಂತರಿಯೆ

ಮುಕ್ತಿಯ ಪಡೆಯುವ ಆಸೆಯಲಿ ನಿಮ್ಮ

ಭಕ್ತಿಯಲ್ಲಿ ಶರಣೆಂದಿರುವೆ

ದೇವರ ಉಕ್ತಿಯ ಅರ್ಥ ತಿಳಿಯಲು

ಯಂತ್ರ ತಂತ್ರವೇತಕೆ ಬೇಕು

ಹಾನಗಲ್ಲ ಶ್ರೀ ಗುರುಕುಮಾರರ

ಬೀಜಮಂತ್ರವೊಂದಿರೆ  ಸಾಕು

ಮಾನವಾ, ನೀನಾರೋ ? ಕಾಯಾ

(ರಾಗ-ದರ್ಬಾರಿ ಕಾನಡಾ)

 ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

( ರಾಗ – ದಕ್ಷಿಣಾದಿ ಕಾನಡಾ )

ಗುರುಬಸವೇಶನ ಹರುಷದಿ ಸ್ಮರಿಸೋ

ಸ್ಥಿರಸುಖ ಪೊಂದುವೆ ನಿರುತದಿ ಭಜಿಸೋ || ಪ ||

ಪರಶಿವನಾಜ್ಞೆಯಿಂದಿಳಿದೀ ಜಗವ

ಪರಿಪಾಲಿಸಿ ಬೋಧಿಸಿ ಸದ್ಗುಣವ  II 1 ||

ಶೈವಮತವ ಬಿಟ್ಟು ವೀರಶೈವದ |

ದಿವ್ಯಮಾರ್ಗವ ಹೊಂದಿ ನೆರೆ ಶೋಭಿಸಿದ || 2 ||

ಹೀನದೆಶೆಯೊಳಿಹ ವೀರಶೈವರನು |

ಕಾಣುತೆ ಕರುಣದಿ ಪೊರೆದಿಹ ಮಹಿಮ || 3 ||

ನಿಗಮಾಗಮತತ್ವ ಸಾರವನರುಪುವ |

ಬಗೆಯನು ಬೋಧಿಸಿ ಜಗದೊಳು ಮೆರೆವ || 4 ||

ಸಾಧಕಸಿದ್ದರ ಮಾರ್ಗದ್ವಯವನು |

ಬೋಧಿಸಿ – ತೋರಿಸಿ ಜಗದೊಳೊಪ್ಪಿಹನು Il 5 ||

ಪರುಷಪಂಚಕದಿಂ ದುರಿತವನೊರೆಸುತ |

ಪರಿಶಿವಲಿಂಗವನವರೊಳು ಬೆರೆಸಿಹ    ||  6 ||

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

(ರಾಗ-ದರ್ಬಾರಿ ಕಾನಡಾ)

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

 

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ಯೋಗಿವರೇಣ್ಯ ನಾನಪರಾಧಿ

(ರಾಗ – ಭೈರವಿ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

 

 

ಯೋಗಿವರೇಣ್ಯ ನಾನಪರಾಧಿ | ಭೋಗ ಭವಾಂಬುಧಿ

ನೀಗಿದ ಮಹಿಮ || ಪ ||

ಮಾಯವಿದೂರ | ಮೋಹಕೆಪಾರ |

ಕಾಯ ವಿಷಯ ಪರಿಪಕ್ವ ವಿಚಾರ || 1 ||

ನಾಶಿಕ ತ್ರ್ಯಂಬಕ ಈಶನ ವಚನದಿ |

ಕಾಸಿನಿವಾಶಿಗಳ್ ತೋಷ ಮಾಗಿರುವ || 2 ||

ಶುದ್ಧಶಿಲಾಗ್ರದೊಳಿದ್ದು ತಪವಮಾಡಿ |

ಸಿದ್ಧಗಂಗೆಯ ತೋರಿ ಸಿದ್ಧನಾಗಿರುವ || 3 ||

(ರಾಗ – ಕಾಪಿ)

ರೇವಣಸಿದ್ಧ ಗುರುದೇವ | ಭಾವಜ ಹರಜೀವ |

ಓವಿನೀ ಕೊಡು ಮಂಗಲವ | || ಪ ||

ಕಾಮವೆನ್ನನು ಕೂಡಿ ಕಾಡಿ |

ನೇಮ ಸೀಮೆಯ ಕೆಡಿಸದಾಡಿ |

ಪ್ರೇಮದಪ್ಪಿಯು ಭವದೊಳು ನೂಂಕುವ

ನೀ ಮನಸಿಜನನು ಬಿಡಿಸು ಬೇಗ || 1 ||

ದುಷ್ಟ ವಾಸನೆಗಳ ಬಲದಿಂದ |

ಭ್ರಷ್ಟ ಕಾಮನತಾಚ್ಚಲದಿಂದ |

ಮುಟ್ಟಿ ಕೊರಗಿಪೆ ದುರ್ವಾಸನೆಯ |

ಕುಟ್ಟಿ ವರಸುಖವ ಕೊಡು ಜವದಿ || 2 ||

ಅಂಗಹೀನನ ಸೇವೆಯ ಬಿಡಿಸಿ |

ಲಿಂಗದೇವನ ಪೂಜೆಯ ಹಿಡಿಸಿ |

ಕಂಗಳಾಲಯನೀಕ್ಷಿಸು ಭಾವದಿ |

ಮಂಗಲಮಯನೆನಿಸೋ ಯತಿವರ || 3

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಕೊಡು ಮಂಗಲವನು ಬೇಗನೆ ಶಿವನೆ ನೀನಿದನು

(ರಾಗ – ದೇಸ್)

ಕೊಡು ಮಂಗಲವನು ಬೇಗನೆ ಶಿವನೆ ನೀನಿದನು |

ಭವರೋಗವನು, ತವೆಹರಿಪುದನು ಸುವಿಲಾಸದೊಳು || ಪ ||

ಘೋರವೆನಿಪವೃತ್ತಿ | ಸಾರಿ ಕಾಡುವದತಿ |

ಕ್ರೂರತನದಿ ಮುತ್ತಿ | ಗಾರುಗೊಳಿಸಿ ಶಾಂತಿ |

ಪೂರವಳಿದು ಗತಿ | ಸೇರದಿರುವೆ || 1 ||

ಮುತ್ತಿ ತಾಮಸವದು | ವೃತ್ತಿ ಮೂಢವದು |

ಚಿತ್ತ ದಾವರಣದು | ಸತ್ಯ ಬ್ರಹ್ಮವ ಮರೆದು |

ಅತ್ತಿತ್ತಲೋಗದಂತೆ | ಸುತ್ತಕೊಂಡಿರುವೆ || 2 ||

ಆಂತು ಸತ್ಸಂಗವನು | ಕಂತು ಮರ್ದನನನು |

ಚಿಂತಿಸುತ್ತಿರುವದನು | ಭ್ರಾಂತಿ ನೀಗಿರುವದನು |

ಕಾಂತಿ ಹೊಂದುವದನು | ಇಂತು ಬೇಡುವೆ || 3 ||

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಜಂಗಲ್)

ಮಂಗಳಾರತಿಯನು ನಾನು ಎತ್ತಿ ಪಾಡುವೆ |

ಪೊಂಗಿ ಶ್ರೀ ಗುರು ಲಿಂಗ

ಜಂಗಮರನು ಬೇಡುವೆ | || ಪ ||

ತುಂಗ ಶಿವನ ಮುಖದಿ ಜನಿಸಿ |

ಮಂಗಲಾತ್ಮನಾಜ್ಞವಹಿಸಿ |

ಲಿಂಗಮೂರ್ತಿ ಅಂಗಗೊಳಿಸಿ |

ಸಂಗ ಶರಣರ ಭೋ ಪುಂಗ ಗುರುವರ |

ಮಂಗಗುಣವ ಕಳೆದು ಜನರ ಹಂಗು ತೊಲಗಿಸೈ || 1 ||

ಭವ್ಯ ಶಿರದ ಲಿಂಗ ಮೂರ್ತಿ |

ಸೇವ್ಯ ಗುರುವರನ ಕೀರ್ತಿ |                                  

ದಿವ್ಯ ತರದ ರೂಪವೆತ್ತಿ |

ಸರ್ವ ಭಕ್ತರ ಭೋ ಗರ್ವಸಂಹರ |

ಪೂರ್ವದೋಷವನ್ನು ಕಳೆದು ಸರ್ವ ಪಾಲಿಸೈ || 2 ||

ದೈನ್ಯ ತನದಿ ಗುರುವು ತಾನು |

ಚೆನ್ನ ಶಿವನ ಪ್ರಾರ್ಥಿಸಿಹನು |

ಶೂನ್ಯ ಚಕ್ರ ಸ್ವಾಮಿಯನ್ನು |

ಎನ್ನ ಪಾಲಿಸೈ ಭೋ ಮುನ್ನ ಲಾಲಿಸೈ |

ಬನ್ನಗುಣವ ಕಳೆದು ಉನ್ನತದಿ ಪೋಷಿಸೈ || 3

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |