Poem

ಪರ ಶಿವಯೋಗದ ಸಾರ

(ರಾಗ – ಭೂಪ)

 

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ || 1 ||

 

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ                                   || 2 ||

 

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ                                || 3 ||

 

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ                              || 4 ||

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

 

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಹರನಾಮವನು ಬಿಡದೆ ಜಪಿಸಬಲ್ಲವರ ಭವ

ಮರಣಮಾಯಾಕರ್ಮಮಲಪಾಶಬಂಧಬಹು

ದುರಿತಸಂಸಾರಸಂತಾಪಸಂಚಯವಳಿದು ವರಭೋಗ  ಮೋಕ್ಷವಹುದು   |ಪ||

 

ಶಿವ ಮಹಾದೇವ ಶಂಕರ ಶರ್ವ ಪಾರ್ವತೀ

ಧವ ನಂದಿವಾಹ ದೇವೇಶಾನುದಕ್ಷ ವಾ

ಸವನತಪದಾಂಭೋಜ ನಗಚಾಪ ನಿರ್ಮಲ  ನಿರಾತಂಕ ನೀಲಕಂಠ

 

ಭುವನೇಶ ವಿಜಯ ವೇದಾಂಗ ವೈಶ್ರವಣಸಖ

ಪವಮಾನ ಪಂಚಮುಖ ಪಶುಪತಿ ಸಹಸ್ರಾಕ್ಷ

ಭವ ಭರ್ಗ ಭಾಳಲೋಚನ ಮೇರುಕಾರ್ಮುಕ  ಕಪರ್ದಿಯೆಂದು   ||1||

 

ಸೋಮ ಶಾಂತಾಭಯ ವಿರೂಪಾಕ್ಷ ವಿಶ್ವಾಭಿ

ರಾಮ ಗಂಭೀರ ಕಾಲಾರಿ ಕೂಟಸ್ಥ ವಿಭು

ವಾಮದೇವಾಘೋರ ಪಂಚಾಕ್ಷರೋಂಕಾರ  ತತ್ಪುರುಷ ರುದ್ರ ಭದ್ರ

 

ಭೀಮ ಸದ್ಯೋಜಾತ ಮೃಡ ಮಹಾಕಾಲ ಜಿತ

ಕಾಮ ಮೃತ್ಯುಂಜಯ ಪುರಾತನ ಪರಾತ್ಪರ ನಿ-

ರಾಮಾಯಾನಂತತೇಜೋರಾಶಿ ಸರ್ವಜ್ಞ ಶಾಶ್ವತ  ಕಪಾಲಿಯೆಂದು    ||2||

 

ಶೂಲಿ ಸುಜನೈಕೆಬಾಂಧವ ಸದಾಶಿವ ಚಂದ್ರ

 ಮೌಳಿ  ಮಹಿಮೋಗ್ರಚರ್ಮಾಂಬರಾಸುರಶಿರೋ

ಮಾಲಿ ಮಂದಾಕಿನೀಧರ ಮಹೇಶ್ವರ ಮೇಘವಾಹ ಮಂದಾರನಿವಾಸ

 

 

 ನೀಲಲೋಹಿತ ಪಾರಿಜಾತ ಪಾವನ ಲೋಕ

ಪಾಲ ಕೈಲಾಸಮಂದಿರ ಮಂತ್ರಮಯ ಭಕ್ತಿ

ಲೋಲ ಪಂಚಬ್ರಹ್ಮ ಪರನಾದ ಬಿಂದು ಪರಮಾತ್ಮ ಪುರವೈರಿಯೆಂದು   |3||

 

ವರದ ವಾಗೀಶ ವರ್ಣಾತೀತ ವಂದ್ಯ ಜಯ

ಪರಮ ಪರತರ ಪರಂಜ್ಯೋತಿ ಪರಮಾನಂದ

ನಿರಪಾಯ ನಿರುಪಮ ನಿರಾವರಣ ನಿರ್ಲೇಪ  ನಿರವಯವ ನಿತ್ಯತೃಪ್ತ

 

ಉರಗಕಂಕಣ ವಿಶ್ವತೋಬಾಹು ವಿಶ್ವಾತ್ಮ

ಸುರಗಣಾರ್ಚಿತ ಸನಾತನ ಸದಾಗತಿ ಹಂಸ

ಗಿರಿಶ ಗಾಂಗೇಯಪಿತ ಗಣನಾಥ ಜಗದೀಶ ವಿಷಧರ ಪಿನಾಕಿಯೆಂದು  || 4 ||

 

ಉದಯಾಸ್ತಮಾನದೊಳು ನೂರೆಂಟು ನಾಮವನು

ಪದುಳದಿಂದೋದಿಕೇಳಿದವರ್ಗೆ ಶಂಭುಲಿಂಗದ

ಕರುಣದಿಂದಿನಿತು ಕೊರತೆಯಿಲ್ಲದ ಸಕಲ ಸಂಪದದೊಳೊಂದುಗೂಡಿ

 

ಸದಮಲಜ್ಞಾನ ಸದ್ಭಕ್ತಿಗಳು ಮೇಲೆ ಮೇ-

 ಲೊದವಿ ಕೈಸಾರುತಿಹವಿಲ್ಲಿ ಪರದೊಳೊಂ-

ದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆವುದಿದು ಸತ್ಯವೆಂದು    ||೫||

 

 

 

 

                               

ರಚನೆ. ಶಶಿಧರ ಜಿಗಜಿನ್ನಿ ಬಾಗಲಕೋಟೆ

 

ಕರುಣಿಸಿ ಎನ್ನ ಕರೆದುಕೊ ನಿನ್ನಲಿ

ಶಿರವ ಬಾಗಿಸಿ ಮುಗಿಯುವೆ ಕೈ

 

ಎನ್ನ ತಂದೆ ಗುರುಕುಮಾರ

ನಿನ್ನ ಸೇವೆಗೆ ನಾ ಬಂದೆ ಓಡಿ

ಸೇವೆಯ ಭಾಗ್ಯವ ನೀ ನೀಡಿ

ಕರುಣಿಸಿ ಕಂದನ ಕರೆದುಕೊ ಮಡಿಲಲಿ

 

ಎನ್ನ ಗುರುವೆ ಹಾನಗಲ್ ಸ್ವಾಮಿ

ನಮಿಸುವೆ ನಾನು ಶಿರವ ಬಾಗಿ

ಪೂಜಿಸುವೆ ನಿನ್ನ ಪಾದಕೆ ಎರಗಿ

ಕರುಣಿಸಿ ಕಂದನ ಕರೆದುಕೊ ಒಡಲಲಿ

 

ಎನ್ನ ದೇವನೇ ಮಂದಿರದ ಯೋಗಿ

ಸಂಗೀತ ಕಲೆಯ ಕೋರಿ ನಿಂದೆ

ನಿನ್ನಯ ನಂಬಿ ನಿನ್ನಲಿ ಬಂದೆ

ಕರುಣಿಸಿ ಕಂದನ ಕರೆದುಕೊ ನಿನ್ನಲಿ

 

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

ರಾಗ-ದರ್ಬಾರಿ ಕಾನಡಾ)

 

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು

 

ಪರಮೇಶ್ವರಿಯ ಪುಣ್ಯನಾಮವನು ಪಗಲಿರುಳು

ಸರಸಾನುರಾದಿಂದೋದಿ ಕೇಳಿದವರ್ಗೆ

ದುರಿತಕಂಟಕವಳಿದು ಕೈಸಾರುತಿಹವಮಳತರ ಭೋಗಮೋಕ್ಷಂಗಳು ||ಪ||

 

ಹ್ರೀಂಕಾರಿ ವಾಣಿ ಕಲ್ಯಾಣಿ ರುದ್ರಾಣಿ ರಮೆ

ಓಂಕಾರರೂಪಿಣಿ ಗಣಾನಿ ಗಾನಪ್ರೀತೆ

ಹ್ರೈಂಕಿಲಾಮಾಲಿನಿ ಮಹಾಮಾಯೆ ಮಾತಂಗಿ ಕ್ಲಿಂಕಲೇ ವರವರೇಣ್ಯೆ

 

ಸೌಂಕಾರಸದನೆ  ಶರ್ವಾಣಿ ಶಾರದೆ ಸತ್ಯೆ

ಕ್ರೌಂಕವಚಮುಖ್ಯೆ   ಮಂತ್ರಾಧಿದೇವತೆ ದೇವಿ

ಶ್ರೀಂಕಿಲಾಕಾರೆ  ವಿದ್ಯಾಂಗಿ ಮಾತೃಕೆ ಮಾನ್ಯೆ ಶಾಂಕರೀಶಾನಿಯೆಂದು         ||೧|

 

ಗಿರಿಜೆ ಗೀರ್ವಾಣಪೂಜಿತೆ ಗೌರಿ ಗುಹಜನನಿ

ಪರನಾದಬಿಂದುಮಂದಿರೆ ಮನೋಂಬುಜಹಂಸೆ

ವರದೆ ವೈಭವೆ ನಿತ್ಯಮುಕ್ತೆ  ನಿರ್ಮಲೆ ನಿರಾವರಣೆ ಶಿವೆ ಶಾಂತೆ ಕಾಂತೆ

 

ಧರಣಿ ಧರ್ಮಾನುಗತೆ ಸಾವಿತ್ರಿ ಗಾಯತ್ರಿ  

ವಿರಜೆ ವಿಶ್ವಾತ್ಮಕೆ  ವಿಧೂತಪಾಪವ್ರಾತೆ

 ಶರಣಹಿತೆ ಸರ್ವಮಂಗಳೆ ಸಚ್ಚಿದಾನಂದೆ ಪರಸುಧಾಕಾರಿಯೆಂದು          ||೨||

 

ಚಂಡೆ ಚಂಡೇಶ್ವರಿ ಚತುರೆ ಕಾಳಿ ಕೌಮಾರಿ

 ಕುಂಡಲೆ ಕುಟಿಲೆ ಬಾಲೆ ಭೈರವಿ ಭವಾನಿ ಚಾ-

ಮುಂಡಿ ಮೂಲಾಧಾರೆ ಮನುವಂದೆ ಮುನಿಪೂಜ್ಯೆ ಪಿಂಡಾಂಡಮಯೆ ಚಂಡಿಕೆ

 

 

ಮಂಡಲತ್ರಯನಿಲಯೆ ದಂಡಿ ಜಯೆ  ದುರ್ಗಿ ಫಣಿ

 ಕುಂಡಲೆ ಮಹೇಶ್ವರಿ ಮನೋನ್ಮನಿ ಜಗನ್ಮಾತೆ

ಖಂಡಶಶಿಮಂಡನೆ ಮೃಡಾಣಿ ಪಾರ್ವತಿ ಪರಮ ಚಂಡಕರಮೂರ್ತಿಯೆಂದು      ||೩||

 

ವಿಮಲೆ ವಿಖ್ಯಾತೆ ಮಧುಮತಿಮುಖ್ಯೆ  ಮಹನೀಯೆ

 ಸುಮತಿ ಸುಲಲಿತ ಹೈಮವ ಭಾವೆ ಭೋಗಾರ್ಥಿ

ಕಮಲೆ ಕಾತ್ಯಾಯನಿ ಕರಾಳೆ ತ್ರಿಪುರವಿಜಯೆ ದಮೆ ದಯಾರಸಪೂರಿತೆ

 

ಅಮೃತೆ ಅಂಬಿಕೆ ಅನ್ನಪೂರ್ಣೆ ಅಶ್ವಾರೂಢೆ

ಶಮೆ ಶುದ್ಧ ಸಿಂಹವಾಹಿನಿ ಶುಭಕಲಾಪೆ ಸು

ಪ್ರಮದೆ ಪಾವನೆ ಪದ್ಯೆ ಪಾಶದೆ ಪರಬ್ರಹ್ಮ ಉಮೆ ಸಹಜ ಸುಮುಖಿಯೆಂದು     ||೪||

 

ಇಂತು ಗುರು ಶಂಭುಲಿಂಗದ ಶಕ್ತಿ ಸೌಭಾಗ್ಯ

ಸಂತತಶರೀರಸಮ್ಯಜ್ಞಾನಸತ್ಕ್ರಿಯೆ

ಸಮಂತು ಕರುಣಾಸನಾಭರಣಾಯುಧಾದಿ  ಸುಗುಣಾಂತರಾದಿಗಳಾಗುತ

 

ಸಂತಸವನೀವ ಶಾಂಭವಿಯ ನೂರೆಂಟು ಶುಭ

ವಾಂತ ನಾಮಂಗಳು ಜಪಿಸಿದೊಡೆ ಸತಿಪುತ್ರ

ಸಂತಾನಸಕಲಸಂಪದಸಿದ್ದಿಯಪ್ಪುದೋರಂತೆ ನಿಶ್ಚಯಮಿದೆಂದು      ||೫|

ಶಂಕರ ಕಾಯೊ ಸದಾ  ಕಿಂಕರನು |

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

  

ಶಂಕರ ಕಾಯೊ ಸದಾ  ಕಿಂಕರನು |

ಸಂಕಟವನು ದೂರಿಕರಿಸುತ   || ||

 

ಭೋಂಕನೆ ಮನದ , ಬಿಂಕವ ಬಿಡಿಸಿ |

ಅಂಕಿತದೊಳಗಿರಿಸಿ  ಕಿಂಕರರನು || ||

 

 ಪರತರ ಶಿವನೀ , ಗುರುಚರವೆನಿಸಿ |

 ನಿರುತದಿ ಸಂಚರಿಸಿ ಪರಿಪಾಲಿಸಿ  || ||

 

ಸಾಭಾರಿ ನಿರಾಭಾರಿ , ಗುರು ನೀನೆ |

ಲೋಭಾದಿಗಳನಳಿದು  ಲಾಭದಿಸುಳಿದು || ||

 

 ದೀಕ್ಷ  ಶಿಕ್ಷ ಮೋಕ್ಷ ಗುರು ನೀ ।

ದಕ್ಷನೆ ಮುಮ್ಮಲವ ಈಕ್ಷಿಸಿ ಕಳೆವ || ||

 

 ಕಾಮಕಾಲ ಮಾಯ , ಸೀಮೆಯ ಬಿಡಿಸಿ |

ಕಾಮಾರಿ ಗುರುವರನೆ  ಪ್ರೇಮದಿ ನೀನೆ || ||

 

 ಇಷ್ಟ ಪ್ರಾಣ , ಶ್ರೇಷ್ಠ ಭಾವದಿ ।

ಕಷ್ಟವನತಿಗಳೆದು  ಶಿಷ್ಟತನದಿ || ||

  

ತನು ಮೂರರಲಿ ಜನಿಪದೋಷವನು |

ಸನುಮತದಿಂದ ಕಳೆದು ತನುವಳಿದು || ||

  

ಸ್ವಯಚರಪರವು , ಭಯಲಯದಿರವು |

ಪಯಶೇಷಕರವಾಗಿ ದಯಯುತನಾಗಿ || ||

 

 ಶಿವಯೋಗಾಲಯ , ಭುವನದಿ ಮೆರೆಯುವ |

ತವೆ ಸಾಧನವಿರಿಸಿ  ನಿವಾಸಿಸಿ  || ||

 

 

 

ಕವಿ : ..ಡಾ. ಕಿರಣ ಪೇಟಕರ

Plastic Surgeon.MBBS, MS,  MCh, and DNB Bengaluru.

 

ಪಂಪನ ನಂದನ ದೇಶದೊಳು

ಸೊಂಪಿನ ಕಬ್ಬಿಗ ವೇಶದೊಳು

ಬನವಾಸಿಯ ಬನಸಿರಿ ಗಾನ

ಇಂಪಲಿ ಹಾಡುವ ಕೋಗಿಲೆಯು

 

ಕೇಳಿದೆ ಹಾರುವ ದುಂಬಿಗೆ

“ತುಂಬಿತೆ ಜೇನಿನ ಬಿಂದಿಗೆ?”

 

ದುಂಬಿಯು ಗುಂಯ್ಗುಡುತೆಂದಿತು

“ವಿರಕ್ತಮಠದ ಬನದಲಿ,

ಅಜ್ಜನ ದರುಶನವಾಯಿತು;

ಅಮೃತ ಪಾಶನವಾದಡೆ,

ಜೇನಿನ ಗೊಡವೆಯದೇತಕೆ?”

 

ತೆಂಕಣ ಗಾಳಿಯು ಸುಯ್ಯನೆ ಸುಳಿದು

ತೇಲಿಸಿ ತಂದಿದೆ ಪರಿಮಳವ

ಮೊಲ್ಲೆ ಸಂಪಿಗೆ ಜಾಜಿ ಸೇವಂತಿಗೆ

ಗಂಧವು ಸೂಸಿದೆ ಸುಮಘಮವ

ನಿಲ್ಲಿಸಿ ಕೇಳಿದೆನೆಲ್ಲಿಗೆ ಪಯಣ?

ನಿಲದೇ ಓಡಿವೆ ಸಡಗರದಿ

“ಮಠವನು ಬೇಗ ತಲುಪುವ ಬಾರಾ

ಕುಮಾರಸ್ವಾಮಿಗಳ ಪೂಜೆಯ ಸಮಯದಿ”

 

ಆನಿಕೆರೆಯಾಚೆ  ಮೂಡಿ ಮೇಲೇರಿದ

ದಟ್ಟಕಪ್ಪನೆ ಮೋಡಗಳು

ಊರ ಗಡಿಯೊಳಗೆ ನಿಧಾऽ..ನಕೆ

ತೊನೆದಾಡುತ  ತೆವಳುತಿವೆ ನೋಡು

 

ಪುಣ್ಯಭೂಮಿ ಹಾನಗಲ್ಲಿನ ಮಣ್ಣಲಿ

ಮಳೆಯಾಗಿ ಸುರಿದು; ಜುಳುಜುಳನೆ  ಹರಿದು

ಶಿವಶರಣರ ಪಾದ ತೊಳೆವ

ಪುಳಕದೊಳಿವೆ ನೋಡು

 

ಕಾಣದ ದೇವರ ಕಾಯಕದಿ ತೋರಿ

ಕರ್ಮಸಿದ್ಧಾಂತವ ಲೋಕಕೆ ಸಾರಿ

ಜನಮಾನಸದಲಿ ನೆಲೆನಿಂತ

ಗುರುವಿಗೆ ಶರಣು ಕೋಟಿ ಶರಣು

ಶರಣು ಶರಣು ಶರಣು ಶರಣು ಶರಣು

 

..ಡಾ. ಕಿರಣ ಪೇಟಕರ

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ದೇವ ದೇವ ಜೀವಗುಣವ ಜೀವದಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

(ರಾಗ – ಸಿಂಧುರ)

 

ದೇವ, ದೇವ | ಜೀವಗುಣವ ಜವದಿ

ನಾಶಗೊಳಿಸಿ ಕಾಯೋ              || ಪ ||

 

ಘನಪಾಶವು ಮುಸುಕಿ | ನಿರ್ನಾಮನಾದೆ |

ಮನುಮುನಿವಂದ್ಯಾ           || 1 ||

 

ಮಮತಾ ವಿಷಯದೊಡನೆ | ಪ್ರಮಾದಗೊಳುವೆ |

ಸುಮನವನಿತ್ತು                 || 2 ||

 

ಶಿವಯೋಗದೊಳಿರಿಸಿ | ನಿರ್ವಾಣ ಸುಖವ

ತವೆ ಪಾಲಿಸುತೆ                                || 3 ||