Poem

ಶ್ರೀ ವೇ.ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು ಸೋ.ಹಿರೇಮಠ

ರಾಗ: ಕಾಫಿ      ತಾಳ: ತ್ರಿತಾಳ

ಚಾಲ: ಮಗುವೆ ವಿಮಲ ಕುಲಬಾಲ ರವಿಯೇ ಪೋಗು ಪರಾಕ್ರಮಿಯೆ ಎಂಬಂತೆ

 

 

ಗುರುವೇ ಸುಜನಕುಲ ಕಲ್ಪತರುವೆ      ||ಪ||

ಪಾಡುವೆ ಮಂಗಲವ ಗುರುವರಾ

ಯತಿಕುಲ ರಾಜಾ ನುತಸುರ ಭೂಜ      ||೧||

ಜಿತದಿನ ಕರತೇ ಜಾ   ||

ಧೃತರಕ್ತಾಂಬರ| ವರ ಪುಣ್ಯಾಂಕುರ

ಪರತರ ಅವತಾರ | ಭಾಸುರಾ||

ಕುಮತ ಕುಠಾರಾ ಸ್ವಮತೋದ್ಧಾರಾ    ||೨||

ಕರುಣಾವನ ವಿಹರಾ

ಪ್ರಣವಾಕಾರ ಸದ್ಗುಣ ನಿಕರ|

ತ್ರಿಣಯನ ಸಮಸಾರಾ ಸುಧೀರ

ಘೋರತರ ದುಸ್ತಾರ ಭವಾಭ್ದಿಯಿಂ   ||೩||

ಪಾರು ಗೊಳಿಸು ಪಿತನೆ

ಪರತರ ಮುಕ್ತನೆ ಪರಮ ವಿರಕ್ತನೆ

ಚರನುತ ಗುರುವರನೇ sss ಕುಮಾರನೆ

ಪೂಜ್ಯ ಕೇದಾರನಾಥ ದೇವರು ಯಾಳವಾರ

ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ||ಪ||

ತ್ಯಾಗಯೋಗ ಶಿವಯೋಗದ ಯೋಗಿಗೆ

ಯೋಗದ ನೆಲೆ ತೋರಿದ ಮಹಾಮಹಿಮಗೆ ಶಿವಯೋಗಿಗೆ

ವಂದಿಸುವೆ ,ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೧॥

ನೊಂದಬೆಂದ ಜೀವಕೆ ನೀ ತಂದೆಯಾದವ

ಕುಂದುವಡೆದ ಮನಸನು ಒಂದು ಗೈದವ, ಆಪದ್ಭಾಂದವ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ ವಂದಿಸುವೆ ||೨||

ಗಾನಜ್ಞಾನ ಅಭಿಯಾನದ ಯೋಗಿಗೆ

ಅನುಪಮ ನಿರಂಜನ ಶಿವಯೋಗಿಗೆ, ಮಹಾತ್ಯಾಗಿಗೆ

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೇ

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ॥೩॥

ಜಯ ವಿಜಯ ಅಜಯಾಜಯ ಧೀರಗೆ

ಜಯ ಜಯ ಜಯ ಜಯ ಕುಮಾರಗೆ, ಸುಕುಮಾರಗೆ,

ವಂದಿಸುವೆ, ವಂದಿಸುವೆ, ಹಾನಗಲ್ಲ ಸ್ವಾಮಿ ನಿಮಗೆ ವಂದನೆ,

ಕಲಿಯುಗದ ಕಾಮಧೇನು ವಂದಿಸುವೆ, ವಂದಿಸುವೆ ||೪||

(ರಾಗ – ಪಹಡಿ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಪಾಹಿ ಶಿವ | ನೀ ಪಾಹಿ ಶಿವ

ನಾ ಮೊರೆಹೊಕ್ಕೆ ದೇವ || ಪ ||

ಪುರಹರ ನಿನ್ನಯ ಕರುಣವಿಲ್ಲದೆ |

ಮರಳಿ ಮರಳಿ ಭವದೊಳು ತಿರುಗಿ ||

ಘೋರ ಕಷ್ಟದೊಳು ಪಾರುಗಾಣೆ ನಾ |

ಪರಮೇಶ | ಪರಿತೋಷ || ವರಕೋಶ | || 1 ||

ಮಲ ಮಾಯಾದಿ ಬಲು ಕಳವಳಗೊಳ್ಳುವೆ |

ಬಲವಂತನೆ ಸಲಹುವದೆನ್ನಂ ||

ಬಲುಮೆಯುಳ್ಳ ಬಹು ಕಲುಷದ ಕಾಟವು |

ಬಲುಶಾಂತ | ಕಲೆಯಾಂತ || ಛಲವಂತ | || 2 ||

ಶಿವನರ್ಚನೆಯೊಳು ತನು, ಮನ, ಧನವನು |

ಸವೆಸುವ ತವೆ ಸಾಧನವಿರಿಸಿ ||

ಜೀವಭಾವವನು ಕಳೆಯುತ ಕೃಪೆಯಿಂ

ಶಿವಯೋಗಿ | ಸುವಿರಾಗಿ || ಭವತ್ಯಾಗಿ | || 3 ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ಶ್ರೀ ವೇ. ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು

ರಾಗ: ಯಮನ     ತಾಳ: ಝಫ್ತ

ಚಾಲ:

ಬಾ ಗುರುವೆ ! ಸುರತರುವೆ !

ಬಾಗಿಲವ ತೆರೆದಿರುವೆ |

ಸ್ವಾಗತಿಪೆ ಜೀವದೇವತೆ |

ಯರಸಬರಲೆಂದು ||ಪ||    

ದೇಹದೇಗುಲದೊಳಗೆ |

ಭಾವ ಸಿಂಹಾಸನವ

ಸಾಹಸದಿ ರಚಿಸಿರುವೆ |

ನೇಹಮನದಿಂದಿಂದು ||೧||

ಲಿಂಗಾಂಗ ಸಮರಸದ |

ಮಂಗಲದ ಸುಧೆಯುಣಿಸಿ |

ತುಂಗ ಗುರು – ಲಿಂಗ |

ಜಂಗಮ ಲೀಲೆಯಿಂ ಮೆರೆವ ||೨||

ಎಲ್ಲ ದೈವಕೂ ನಿನ್ನ |

ಮೆಲ್ಲಡಿಯೆ ಮಿಗಿಲೆಂದು |

ಬಲ್ಲಿದನೆ ನುತಿಪೆ ನಿ ।

ನೋಲ್ಮೆ ಎನ್ನಲ್ಲಿರಲಿ||೩||

ಮೆಲ್ಲಡಿಗೆ ಮನವೆಂಬ |

ಮಲ್ಲಿಗೆಯ ಹಾಸುವೆನು ||

“ನಲ್ಲೆ’ ಭಕ್ತಿಯ ರಸವ |

ನಲ್ಮೆಯಿಂದೆರೆಯುವೆನು||೪||

ಎನ್ನಯ್ಯ ಬರಲೆಂದು |

ಪನ್ನೀರ ನೆರಚುವೆನು |

“ಚೆನ್ನಬಸವನ” ಪುಣ್ಯ |

ರನ್ನ ಶ್ರೀ ಸುಕುಮಾರ |

ಡಾ. ಶಿವಯೋಗಿ ದೇವರು ಕಾರಂಜಿಮಠ ಬೆಳಗಾವಿ

ಹೊಂಗಿರಣಗಳು ಸುಕುಮಾರಗೆ ಸುಪ್ರಭಾತ ಹಾಡ್ಯಾವು

ತರುಲತೆಗಳು ತಲೆದುಗುತ ತಂಗಾಳಿ ಬಿಸ್ಯಾವು

 

ಶಿವಯೋಗದ ಸೋನೆ ಸುರಿದು ,ಮಲಪಹಾರಿ ನದಿಯು ಹರಿದು

ಮನುಕುಲದ ಜ್ಯಾಡ್ಯ ತೊಳೆದು ,ಮಹಾದೇವನ ಇರುವ ತೋರ್ಯಾವು

 

ತೆಂಗು ಕಂಗು ಮಾವು ಬಿಲ್ವ ಫಲವ ಬಿಟ್ಟಾವು

ಲಿಂಗ ಪೂಜೆಗೆ ಸೇವೆ ಸಲಿಸಿ ಸಾರ್ಥಕಾಗ್ಯಾವು

 

ನಾದ ನಿನಾದ ಸುನಾದಗಳ ಕಂಪನಗಳೆದ್ದಾವು

ಅಂಧ ಅನಾಥರ ಭಾಳಬೆಳಗಿದ  ತಂದೆ ಎಂದಾವು

 

ಗಿರಿನವಿಲು ಗಿಳಿಕೋಗಿಲೆ ಸರಿಸಮಯಕೆ ಹಾಡ್ಯಾವು

ಸಮಯ ಬೇದವನಳಿದು ಸಮತೆ ಅರಿದೆ ಎಂದಾವು

 

ಮತಮತಿಗಳ ಮಾತು ಮತಿಸಿ ಮಹಾಸಭೆಗಳೇ ಆಗ್ಯಾವು

ಮನುಜ ಮತ ವಿಶ್ವಪಥ ಎಂಬುದನೇ ಸಾರ್ಯಾವು

 

ಸಮಾಜವೆನುತಲಿ ಸುಕುಮಾರ ಶಿವನೊಳು ಬೆರೆತಾನು

ಇದ ನೋಡುತ ಶಿವಯೋಗಿ ಶರಣೆಂದು ನಿಂತಾನು

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಭೀಮಪಲಾಸ)

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಭೂಪ)

ಪರ ಶಿವಯೋಗದ ಸಾರ |

ಕರುಣ ವಿಹಾರ | ತೋಂಟದಾರ್ಯ ಹೋ  || 1 ||

ಮನವು ನೇತ್ರವು ಸುಷುಮ್ನದಿ ಕೂಡಿ |

ತನುವನು ಮೀರಿ ಶಿವಸುಭಾನುತೋಷ |

ಆನಂದಸಕ್ತ ಗುಹದಲಿ ನೀ

ಅನನ್ಯ ವಿಲಾಸ ಹೋ          || 2 ||

ಶರಣಲೋಕ ಮುನ್ನ ಪರಿದು ಬಂದು ನಿನ್ನ |

ಮರೆಯೊಳು ಸಾರೆ ವರವಿಜ್ಞಾನವನ್ನು |

ಪರಂಪರಾನಂದಭ್ಧಿಯಾ ಕರುಣಿಸಿ |

ಪರಿಪಾಲಿಸೆನ್ನ ಹೋ      || 3 ||

ಸಿದ್ಧಲಿಂಗ ಭೂಷ ಬದ್ಧಜೀವ ಪಾಶ |

ವಿದ್ದುರೆ ಸಾರೆ ಸಿದ್ಧ ಶಿವಯೋಗ ವಾಸ |

ಸಿದ್ಧಾಂತ ಶೇಖರಾವೇಶ ಮುದದೊಳು ನೀ

ಪರಿಪಾಲಿಸೇಶ ಹೋ     || 4 ||

ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಭೋದೇವ ಗಿರಿಜಾಧವ ಮುದವಿಲಸಿತ ಮದಹತ

(ರಾಗ – ಆನಂದಭೈರವಿ)

ಭೋಧೇವಗಿರಿಜಾಧವ | ಮುದವಿಲಸಿತ ಮದಹತ |

ಇಂದ್ರಿಯಜಿತ | ಸಾಧು ಚರಿತ ‘ಆ’ ಜಯ | || ಪ ||

ಸಂಪದಾಸುರದಿ ಚರಿಪ | ಪಾಪದಾಗರವಿಲೋಪ |

ಸುಪಥವೇ ಸುಪ್ರದೀಪ | ತಮರಜಗುಣವಿರಹಿತ |

ಸುಮನ ಸಹಿತ | ವಿಮಲರತ ‘ಆ’ ಭವ || 1 ||

ಸಂತರಾಚರಣ ಸುಖವ | ಚಿಂತಿಪಾತ್ಮರ ಸುಭಾವ |

ಸಂತತಾನಂದವೀವ | ವರಗುರುಚರಣ ಕಮಲ |

ದಿರವೆ ಸಕಲ | ಚರಲೀಲಾ ‘ಆ’ ಗತ || 2 ||

ಬಿಂದುನಾದ ಪರಯೋಗ | ದಿಂದಲಾದ ಶಿವಯೋಗಾ |

ನಂದದಾಚರಿಪ ಯೋಗ | ಜವದಿ ಕೊಡು ಪರಮೇಶ |

ಭವವಿನಾಶ | ಸುವಿಲಾಸ ‘ಆ’ ಶಿವ || 3 |

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಸಿಂಧುರ)

ದೇವ, ದೇವ | ಜೀವಗುಣವ ಜವದಿ

ನಾಶಗೊಳಿಸಿ ಕಾಯೋ              || ಪ ||

ಘನಪಾಶವು ಮುಸುಕಿ | ನಿರ್ನಾಮನಾದೆ |

ಮನುಮುನಿವಂದ್ಯಾ           || 1 ||

ಮಮತಾ ವಿಷಯದೊಡನೆ | ಪ್ರಮಾದಗೊಳುವೆ |

ಸುಮನವನಿತ್ತು                 || 2 ||

ಶಿವಯೋಗದೊಳಿರಿಸಿ | ನಿರ್ವಾಣ ಸುಖವ

ತವೆ ಪಾಲಿಸುತೆ                                || 3 ||