“ಶ್ರೀ ಕುಮಾರೇಶ್ವರ ದೊಹೆ (ದ್ವಿಪದಿ) “)

ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ ಕುಮಾರ   || ೧||     

ಮನೆಯಬಿಟ್ಟೆ ಶಪಥವ ತೊಟ್ಟೆ ಬಂಧು ಬಳಗವಬಿಟ್ಟೆ

ಯಳಂದೂರ ಬಿದರಿ ಯತಿಗಳ ನಂಬಿದೆ ಮನಮುಟ್ಟಿ ಕುಮಾರ  || ೨ ||

ಜೋಳಿಗೆ ಬಿಟ್ಟೆ ಹಠವನು ತೊಟ್ಟೆ ಶಾಲೆ ಕಲಿಯಲೆಂದು

ಅಕ್ಷರ ಕಲಿಯುತ ಶಿಕ್ಷಣ ನೀಡಿದೆ ನಾಡಮಕ್ಕಳಿಗೆ ಕುಮಾರ  || ೩ ||

ಲಿಂಗವಿರದ ನಡೆ ಏನುಭೂಷಣ ಲಿಂಗಸಂಗವೆ ಲೇಸು

ಲಿಂಗವಿರದ ಭವಿಗಳ ಸಂಗ ಎಂದೆಂದಿಗೂ ಬೇಡ ಕುಮಾರ  || ೪ ||

ಮಠವು ಎಂದರೆ ಏನದಕರ್ಥ ಧರ್ಮ ಸಂಸ್ಕೃತಿ ಕೇಂದ್ರ

ನೊಂದ ಜೀವಕೆ ಸಾಂತ್ವನ ನೀಡುವ ನೆಮ್ಮದಿಯ ತಾಣ ಕುಮಾರ  || ೫ ||

ಅನ್ನ ಅರಿವು ಆಶ್ರಯ ನೀಡುವ ಪುಣ್ಯತಾಣ ಮಠಗಳು

 ಅನ್ನದಾಸೋಹ ಕನ್ನಡ ನಾಡಿನ ಹೆಮ್ಮೆ ನಮ್ಮ ಮಠವು ಕುಮಾರ  || ೬ ||

ಬಯಸದೆ ಬಂದಿತು ಮಠದಧಿಕಾರ ಹಾನಗಲ್ಲ ಮಠವು

ಮಲ್ಹಣಾರ್ಯನು ಕೈ ಹಿಡಿದು ಕರೆದನು ನಾಡಸೇವೆಗೆಂದು ಕುಮಾರ  || ೭ ||

ಹಳ್ಳಿ ಪಟ್ಟಣಗಳ ನಿಲ್ಲದೆ ಸುತ್ತಿದೆ ಬರಿಗಾಲಲಿ ನಡೆದೆ

ಧರ್ಮಜಾಗೃತಿಗಾಗಿ ಭಕ್ತ ಮನೆಯ ಬಾಗಿಲಿಗೆ ಕುಮಾರ  || ೮ ||

 ಶಿವಯೋಗ ಮಂದಿರ ಮಹಾಸಭೆಯನು ನಿಷ್ಠೆಯಿಂದಲಿ ಕಟ್ಟಿ

ವಚನದ ಕಟ್ಟನು ಶೋಧಿಸಿ ರಚಿಸಲು ಹಳಕಟ್ಟಿಗೆ ಕೊಟ್ಟೆ ಕುಮಾರ  || ೯ ||

ಗುರು ವಿರಕ್ತರು ನಾಡಿನ ಭಕ್ತರು ಕೂಡಿ ನಡೆಯೆ ಶಕ್ತಿ

ಸಮಯಭೇದವ ಕಳೆದು ಸಮರಸ ದಾರಿ ತೋರಿದನು ಕುಮಾರ  || ೧೦ ||

ಮಕ್ಕಳಿರದ ಶಿರಸಂಗಿ ದೊರೆಗೆ ಮನ ಒಲಿಸಿದೆ ತಿಳಿಸಿ

ನಾಡ ಮಕ್ಕಳ ಶಿಕ್ಷಣಕಾಗಿ ದಾನ ನೀಡಿಸಿದೆ ಕುಮಾರ   || ೧೧ ||

ಸ್ವಾಮಿ ಎಂದರೆ ಒಡೆಯನು ಅಲ್ಲ ನಿಜದಿ ಸೇವಕನು

 ಕಾಯ ವಾಚಾ ಮನಸ್ಸಿನಲ್ಲಿ ನಿರ್ಮೋಹಿಯು ನೀನು ಕುಮಾರ  || ೧೨ ||

ರಾಷ್ಟ್ರ ನಿಷ್ಠೆಗೆ ಖಾದಿ ಧರಿಸಿದೆ  ರೋಗಿಗಳನುಪಚರಿಸಿ

 ಬರಗಾಲದಿ ದಾಸೋಹ ಗೈದು ಜನರ ಬದುಕಿಸಿದೆ ಕುಮಾರ  || ೧೩ ||

ಅಂಧ ಅನಾಥರು ಆಶ್ರಯ ರಹಿತರು ಯಾರಿಗೂ ಬೇಡಾದವರು

 ಗಾನಯೋಗಿ ಪಂಚಾಕ್ಷರಿ ಎಂದು ನಾಡ ಬೆಳಗಿದರು ಕುಮಾರ  || ೧೪ ||

ಯಾರಿಗೆ ಯಾರು ಯಾರಿಂದೇನು ನಮಗಾದವನೆ ದೈವ

 ಹಣೆಬರಹ ಬದಲಿಸಿ ಬಾಳಲು ಕಲಿಸಿದ ಅಂಧರ ತಂದೆಯು ನೀ ಕುಮಾರ  || ೧೫ ||

 ಲಿಂಗ ವಿಭೂತಿ ರುದ್ರಾಕ್ಷಿ ರೂಪ ಮಹಾ ಜಂಗಮ ನೀನೆ

 ಅಂಧ ಅನಾಥರ ದೈವ ನೀನೆ ತಾಯಿಯ ಪ್ರತಿರೂಪ ಕುಮಾರ || ೧೬ ||

 ಇಳಕಲ್ ಪೂಜ್ಯರು ವಿಜಯ ಮಹಾಂತರು ಹಾವೇರಿಯ ಶಿವಬಸವರು

 ಎಲ್ಲ ಯತಿಗಳು ಕೂಡಿ ಬೆಳಸಿದರು ಶಿವಯೋಗ ಮಂದಿರವ ಕುಮಾರ || ೧೭ ||

ಲಿಂಗವಂತರು ಶೂದ್ರರೆಂಬ ಪರಳಿಯ ವಾದದಲಿ

 ಶಾಸ್ತ್ರಸಮ್ಮತವಾಗಿ ಮಿಗಿಲೆಂದು ವ್ಯಾಜ್ಯ ಗೆಲ್ಲಿಸಿದೆ ಕುಮಾರ || ೧೮ ||

 ಶರಣರು ಮೆಟ್ಟಿದ ಧರೆಯು ಪಾವನ ಸೊನ್ನಲಿಗೆಯ ಪುರವು

ನಾಲತವಾಡದ ವೀರೇಶ್ವರರು ಕರುಳ ಕುಡಿಯವರು ಕುಮಾರ || ೧೯ ||

 ನಂಬಿ ಕೊಂಡರೆ ಶಿವನಪ್ರಸಾದ ನಂಬದಿರ್ದೊಡೆ ವಿಷವು

 ತುತ್ತಿಗೊಮ್ಮೆ ಶರಣೆಂದು ಉಂಡರೆ ಲಿಂಗ ಪ್ರಸಾದ ಕುಮಾರ  || ೨೦ ||

 ಬಯಸಿ ಉಣಲಿಲ್ಲ ಹಬ್ಬದೂಟವ ಬಾಯ ಚಪಲಕೆ ಬೇಡಿ

 ಬಯಸದಿಹ ಲಿಗಭೋಗವು ಲಿಂಗಕರ್ಪಿತವು ಕುಮಾರ  || ೨೧ ||

 ಬಸವನ ನೆನೆಯುತ ಧರಿಸೊ ಭಸ್ಮವ ಮುಕ್ತಿಯು ನಿನಗಹುದು

ಜಾಣ ಜಾಣರು ಸಂತ ಯತಿಗಳು ಮೋಕ್ಷ ಪಡೆದಿಹರು ಕುಮಾರ  || ೨೨ ||

ಭಸ್ಮಧೂಳಿಯು ಪಾವನ ಚಿನ್ನ ಶಿವನ ಮೈ ಬೆಳಗು

 ಶರಣರ ನೆನೆಯುತ ಧರಿಸಲು ನಿತ್ಯ ಪಾಪ ನಾಶವು ಕುಮಾರ  || ೨೩||

 ಹಿಡಿದ ನೇಮವ ಬಿಡದ ಹಠವು ತ್ಯಾಗಭಾವ ಸಿರಿಯು

ಎಲ್ಲರೊಂದಿಗೆ ಬೆರೆತು ಬಾಳುವ  ಸಮತೆಯ ಸನ್ನಿಧಿಯು ಕುಮಾರ  || ೨೪ ||

 ಪೂಜಿಪೆಯಾದರೆ ಯಾವುದು ಪೂಜೆ ತಿಳಿದು ಮಾಡು ಮನುಜ

ಸಮಾಜ ಸೇವೆಯೆ ಲಿಂಗಪೂಜೆ ಮಾಡಿತೋರಿದೆ ನೀ ಕುಮಾರ  || ೨೫ ||

 ಉಳಿಯ ಮುಟ್ಟದ ಲಿಂಗವೆಂತು ಮನವ ಮುಟ್ಟುವುದು

ಕೊಟ್ಟ ಗುರುವಿನ ಕಷ್ಟವೇನು ಯಾರು ಬಲ್ಲವರು ಕುಮಾರ  || ೨೬ ||

 ಲಿಂಗ ಪ್ರಾಣ ಪ್ರಾಣವೆ ಲಿಂಗ ಇಷ್ಟಲಿಂಗದಿ ನಿಷ್ಠೆ

 ಲಿಂಗತಾನು ತಾನೆ ಲಿಂಗವು ಲಿಂಗ ರೂಪನು ಕುಮಾರ  || ೨೭ ||

 ಕಿಂಕರನಾದವ ಶಂಕರ ನೋಡು ಕಿಂಕರನಾಗಿರ ಬೇಕು

ಮೇಲು ಗದ್ದುಗೆ ಬಯಸದ ಜೀವ ದ್ವಿತಿಯ ಶಿವನಾಯ್ತು ಕುಮಾರ  || ೨೮ ||

 ಸುಖವ ಬಯಸದೆ ದುಡಿದ ಜೀವ ನಾಡಿನೇಳ್ಗೆಯ ಬಯಸಿ

ನೊವನುಂಗಿ ನಂಜನುಂಡು ನೀಡಿದೆ ಅಮೃತವ ಕುಮಾರ  || ೨೯ ||

 ಸಾವು ನೋವಿಗೆ ಹೆದರುವಿ ಯಾಕೊ ಸಾಯದವರು ಯಾರು

ಕಾಯ ಮಾಯಾ ಮೋಹನಳಿದು ಮರಣ ಗೆಲಿದವನೊ ಕುಮಾರ  || ೩೦ ||

 ಮುಕ್ತಿಯಂತೆ ಯಾವುದು ಮುಕ್ತಿ ಮೋಕ್ಷ ಅವರಿಗಿರಲಿ

ಜನ್ಮ ಜನ್ಮದಲು ಸೇವೆಗಾಗಿ ಮತ್ತೆ ಬರುವೆನೆಂದ ಕುಮಾರ  || ೩೧ ||

 ಕೋಪವಂಟಿದ ಯತಿಯ ತಪವು ಪಾಪ ಕೂಪ ಕೆಸರು

ಸಹಜ ಪ್ರವೃತ್ತಿ ಶಾಂತಮತಿ ಪಡೆವನೊ ಸದ್ಗತಿ ಕುಮಾರ  || ೩೨ ||

 ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ ಕುಮಾರ  || ೩೩ ||

 ಸಮಾಜ ಸೇವೆಯೆ ತಮ್ಮಯ ಉಸಿರು ಸಮಾಜ

ನಿಮ್ಮ ಮಠವು ಸಮಾಜ ಸಮಾಜ ಸಮಾಜವೆಂದು ಪ್ರಾಣ ನೀಗಿದೆ ನೀ ಕುಮಾರ || ೩೪ ||

 ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ಕುಮಾರ  || ೩೫ ||

 ನಿನ್ನ ಹೊರತು ಯಾರಿಲ್ಲ ಗತಿ ಮತಿ ನಾಸ್ತಿ ಅನ್ಯಥಾ ನಾಸ್ತಿ

 ನಿನ್ನ ಪಾದಕೆ ಕೋಟಿ ಕೊಟಿ ಶರಣು ಶರಣಾರ್ಥಿ ಕುಮಾರ  || ೩೬ ||

Related Posts