ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರ ನುಡಿಗಳಲ್ಲಿ ಸಮಾಜದ ಆತ್ಮಾವಲೋಕನ
ಆ ಮೂವತ್ತಾರು ವರ್ಷಗಳು!!!
ಸ್ಪಷ್ಟೀಕರಣ ಲೇಖನ — ಭಾಗ ೫
ಒಂದು ಸಂಸ್ಥೆಯ ಸ್ಥಾಪನೆಯ ಆಶಯವನ್ನು ತಿಳಿಯಬೇಕಾದರೆ ಅದರ ಕುರಿತು ನಂತರದ ಕಾಲದಲ್ಲಿ ಮೂಡಿದ ವ್ಯಾಖ್ಯಾನಗಳಿಗಿಂತ ಮೊದಲು, ಸಂಸ್ಥಾಪಕರು ತಮ್ಮ ಕಾಲದಲ್ಲಿಯೇ ಆಡಿದ ಮಾತುಗಳನ್ನು ಆಲಿಸಬೇಕು. ೧೯೦೪ರ ಧಾರವಾಡ ಮಹಾಧಿವೇಶನದ ಅಧ್ಯಕ್ಷರಾದ ತ್ಯಾಗವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿಯವರ ಭಾಷಣವು ಅಂತಹ ಮಹತ್ವದ ಮೂಲದಾಖಲೆ. ಧಾರ್ಮಿಕ ಏಕತೆಯೊಂದಿಗೆ ಶಿಕ್ಷಣ, ಸ್ತ್ರೀಶಿಕ್ಷಣ, ಸಾಮಾಜಿಕ ಸುಧಾರಣೆ, ಉದ್ಯಮ, ಕೃಷಿ ಮತ್ತು ಪರಸ್ಪರ ಸಹಕಾರವನ್ನು ಅವರು ಸಮಾಜದ ಏಳಿಗೆಯ ಅವಿಭಾಜ್ಯ ಅಂಗಗಳೆಂದು ಪರಿಗಣಿಸಿದ್ದರು.
ಈ ಭಾಷಣದ ಐದನೆಯ ವಿಷಯವಾದ ‘ಲಿಂಗಾಯತ ಧರ್ಮದ ಕಾಲ ನಿರ್ಣಯವು’ ಇಂದಿನ ಚರ್ಚೆಯಲ್ಲಿ ವಿಶೇಷ ಗಮನ ಸೆಳೆಯುತ್ತದೆ. ಶ್ರೀ ವಿನಯ್ ಶಿರಹಟ್ಟಿಮಠ ಅವರ ಪ್ರತಿಪಾದನೆಯ ಹಿನ್ನೆಲೆಯಲ್ಲಿ, ಬಸವೇಶ್ವರರೇ ವೀರಶೈವ–ಲಿಂಗಾಯತ ಧರ್ಮದ ಸ್ಥಾಪಕರು ಎಂಬ ಪ್ರಶ್ನೆಯನ್ನು ಪರಿಶೀಲಿಸುವಾಗ ಒಂದು ಮೂಲಭೂತ ವ್ಯತ್ಯಾಸವನ್ನು ಮನಗಾಣಬೇಕು: ಧಾರ್ಮಿಕ ಪರಂಪರೆಯ ಪ್ರಾಚೀನತೆಯ ಪ್ರಶ್ನೆ ಮತ್ತು ಬಸವಣ್ಣನವರು ಅದಕ್ಕೆ ನೀಡಿದ ವಿಶಿಷ್ಟ ತಾತ್ವಿಕ, ಸಾಮಾಜಿಕ ರೂಪದ ಪ್ರಶ್ನೆ ಒಂದೇ ಅಲ್ಲ. ಒಂದಕ್ಕೆ ಉತ್ತರ ಹುಡುಕುವ ಪ್ರಯತ್ನ ಇನ್ನೊಂದರ ಮಹತ್ವವನ್ನು ನಿರಾಕರಿಸುವಂತಾಗಬೇಕಿಲ್ಲ.
ಲಿಂಗರಾಜ ದೇಸಾಯಿಯವರು ತಮ್ಮ ಭಾಷಣದಲ್ಲಿ ಬಸವಣ್ಣನವರಿಗಿಂತ ಮುಂಚೆಯೇ ವೀರಶೈವ–ಲಿಂಗಾಯತ ಪರಂಪರೆ ಅಸ್ತಿತ್ವದಲ್ಲಿತ್ತೆಂದು ಪ್ರತಿಪಾದಿಸಿ, ಅಕಳಂಕ ಚರಿತ್ರೆ, ಕರ್ಣಾಟಕದ ಇತಿಹಾಸ ಮತ್ತು ಕಾಶಿಯ ಶಾಸನದಂತಹ ಆಕರಗಳನ್ನು ಉಲ್ಲೇಖಿಸುತ್ತಾರೆ. ಇವು ೧೯೦೪ರಲ್ಲಿ ಅವರು ಮುಂದಿಟ್ಟ ಸಾಕ್ಷ್ಯಗಳೆಂಬುದು ಸ್ಪಷ್ಟ; ಆದರೆ ಅವುಗಳ ಮೂಲಪಾಠ, ದಿನಾಂಕ, ಪಾಠಾಂತರ ಮತ್ತು ಐತಿಹಾಸಿಕ ಪ್ರಾಮಾಣಿಕತೆಯ ಸ್ವತಂತ್ರ ಪರಿಶೀಲನೆ ಇಲ್ಲದೆ, ಅವುಗಳಿಂದ ಅಂತಿಮ ಕಾಲನಿರ್ಣಯ ಸಿದ್ಧವಾಗಿದೆ ಎನ್ನಲಾಗದು. ಅದೇ ರೀತಿ, ಬಸವಣ್ಣನವರನ್ನು ಧರ್ಮದ ಸ್ಥಾಪಕರೆಂದು ಪ್ರತಿಪಾದಿಸುವ ನಿಲುವಿಗೂ ಸ್ಪಷ್ಟವಾದ ಐತಿಹಾಸಿಕ ಹಾಗೂ ಪರಿಕಲ್ಪನಾತ್ಮಕ ಆಧಾರಗಳು ಅಗತ್ಯ.
ಬಸವಣ್ಣನವರ ಮಹತ್ವವನ್ನು ಕೇವಲ ‘ಸ್ಥಾಪಕ’ ಅಥವಾ ‘ಸ್ಥಾಪಕರಲ್ಲ’ ಎಂಬ ಎರಡು ಪದಗಳ ನಡುವೆ ಸೀಮಿತಗೊಳಿಸಲಾಗದು. ಅವರ ವಚನಚಿಂತನೆ, ಅನುಭವಮಂಟಪದೊಂದಿಗೆ ಸಂಬಂಧಿಸಿದ ಶರಣಪರಂಪರೆ, ಕಾಯಕ–ದಾಸೋಹದ ಆದರ್ಶ ಮತ್ತು ಸಾಮಾಜಿಕ ಸಮಾನತೆಯ ಪ್ರತಿಪಾದನೆಗಳು ಧಾರ್ಮಿಕ ಇತಿಹಾಸದಲ್ಲಿ ಅವರ ಅನನ್ಯ ಸ್ಥಾನವನ್ನು ಸೂಚಿಸುತ್ತವೆ. ಪೂರ್ವಪರಂಪರೆಯ ಕುರಿತು ನಡೆಯುವ ಚರ್ಚೆ ಈ ಸಾಧನೆಗಳನ್ನು ಮಸುಕುಗೊಳಿಸಬಾರದು; ಹಾಗೆಯೇ ಅವರ ಮಹಿಮೆಯನ್ನು ಪ್ರತಿಪಾದಿಸುವ ಉತ್ಸಾಹದಲ್ಲಿ ಪೂರ್ವಕಾಲದ ಕುರಿತು ಇರುವ ಆಕರಗಳನ್ನು ಪರಿಶೀಲನೆಯಿಲ್ಲದೆ ತಳ್ಳಿಹಾಕುವುದೂ ಸಂಶೋಧನೆಯ ಕ್ರಮವಲ್ಲ.
ಇಲ್ಲಿ ಇನ್ನೊಂದು ಸೂಕ್ಷ್ಮ ಅಂಶ ಗಮನಾರ್ಹ. ಲಿಂಗರಾಜ ದೇಸಾಯಿಯವರೇ ತಮ್ಮ ಭಾಷಣದ ಆರಂಭದಲ್ಲಿ ಬಸವೇಶ್ವರರ ಕಾಲದಲ್ಲಿ ಧಾರ್ಮಿಕ ಚರ್ಚೆಗಳ ಮಹಾಸಭೆಗಳು ನಡೆದಿದ್ದವು ಎಂದು ಗೌರವದಿಂದ ಸ್ಮರಿಸುತ್ತಾರೆ. ಹೀಗಾಗಿ ಐದನೆಯ ವಿಷಯದಲ್ಲಿ ಅವರು ವ್ಯಕ್ತಪಡಿಸಿದ ಕಾಲನಿರ್ಣಯದ ನಿಲುವನ್ನು ಬಸವಣ್ಣನವರ ಕೊಡುಗೆಯನ್ನು ತಿರಸ್ಕರಿಸುವ ಘೋಷಣೆಯೆಂದು ಓದುವುದು ಮೂಲಭಾಷಣದ ಸಮಗ್ರ ಧ್ವನಿಗೆ ನ್ಯಾಯ ಒದಗಿಸುವುದಿಲ್ಲ.
ಶ್ರೀ ವಿನಯ್ ಶಿರಹಟ್ಟಿಮಠ ಅವರ ಆಕ್ಷೇಪಣೆಗೆ ನನ್ನ ಉತ್ತರ ಇಷ್ಟೇ: ಸ್ಥಾಪನೆಯ ಪ್ರಶ್ನೆಯನ್ನು ವಾದದ ಘೋಷಣೆಯಾಗಿ ಅಲ್ಲ, ಆಕರಪರಿಶೀಲನೆಯ ವಿಷಯವಾಗಿ ಪರಿಗಣಿಸೋಣ. ‘ವೀರಶೈವ’, ‘ಲಿಂಗಾಯತ’, ‘ಲಿಂಗಧಾರಿ’ ಎಂಬ ಪದಗಳು ವಿವಿಧ ಕಾಲದ ದಾಖಲೆಗಳಲ್ಲಿ ಯಾವ ಅರ್ಥದಲ್ಲಿ ಬಳಕೆಯಾಗಿವೆ ಎಂಬುದನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡೋಣ. ಆ ಮೂಲಕ ಭಿನ್ನಾಭಿಪ್ರಾಯವನ್ನು ವೈಯಕ್ತಿಕ ಆರೋಪವಾಗಿ ಪರಿವರ್ತಿಸದೆ, ಐತಿಹಾಸಿಕ ಸತ್ಯಶೋಧನೆಗೆ ಅವಕಾಶ ಕಲ್ಪಿಸೋಣ.
ಕೆಳಗೆ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿಯವರ ಸಂಪೂರ್ಣ ಅಧ್ಯಕ್ಷೀಯ ಭಾಷಣವನ್ನು ಮೂಲದಲ್ಲಿರುವ ಕ್ರಮ, ಶಬ್ದಪ್ರಯೋಗ ಮತ್ತು ಆಶಯಕ್ಕೆ ಯಾವುದೇ ಬದಲಾವಣೆ ಮಾಡದೆ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಓದುಗರು ಐದನೆಯ ವಿಷಯವೊಂದನ್ನೇ ಪ್ರತ್ಯೇಕಿಸಿ ನೋಡದೆ, ಅದರ ಹಿಂದಿನ ಮತ್ತು ಮುಂದಿನ ವಿಚಾರಗಳೊಂದಿಗೆ ಓದಿ ತಮ್ಮದೇ ನಿರ್ಣಯಕ್ಕೆ ಬರಬೇಕೆಂಬುದು ನನ್ನ ವಿನಂತಿ.
=============
— ಶ್ರೀಕಂಠ ಚೌಕೀಮಠ
=============
ಮೂಲ ಅಧ್ಯಕ್ಷೀಯ ಭಾಷಣ — ಯಥಾವತ್ತು
ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರಾದ ಶ್ರೀಮಂತ ಲಿಂಗಪ್ಪ ಜಾಯಪ್ಪ ದೇಸಾಯಿ (ಸಿರಸಂಗಿ ಲಿಂಗರಾಜರು), ಸಂಸ್ಥಾನ ನವಲುಗುಂದ ಇವರು 1904ರ ಮೇ 13, 14 & 15ರಂದು ಧಾರವಾಡದಲ್ಲಿ ನಡೆದ ಅಧಿವೇಶನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ
ಪರಮ ಪೂಜ್ಯರಾದ ಧರ್ಮಗುರುವರರೆ, ಉಳಿದ ಯಾವತ್ತೂ ವೀರಶೈವ ಬಾಂಧವರೇ,
ಶ್ರೀಮದ್ವೀರಶೈವ ಮಹಾಸಭೆಯ ಅಧ್ಯಕ್ಷಸ್ಥಾನವನ್ನು ನೀವೆಲ್ಲರೂ ಬಹು ಪ್ರೀತಿಯಿಂದ ನನಗೆ ಕೊಟ್ಟಿರಿ. ಈ ಬಗ್ಗೆ ನಾನು ನಿಮ್ಮೆಲ್ಲರ ಆಭಾರಿಯಾಗಿದ್ದೇನೆ. ನಾನು ಈ ಸ್ಥಾನಕ್ಕೆ ಯೋಗ್ಯನಲ್ಲದಿದ್ದರೂ ನಿಮ್ಮೆಲ್ಲರ ಆಗ್ರಹ ಮೂಲಕ ನಿಮ್ಮ ಅಪ್ಪಣೆಗೆ ಮಾನಕೊಟ್ಟು ಇದನ್ನು ಸ್ವೀಕರಿಸಬೇಕಾಯಿತು. ಎಲ್ಲ ವಿಷಯಗಳಲ್ಲಿ ನನಗಿಂತಲೂ ಹೆಚ್ಚು ಯೋಗ್ಯತೆಯನ್ನು ಹೊಂದಿದ ವಿದ್ವಾಂಸರೂ, ವೇದಾಗಮಶಾಸ್ತ್ರ ನಿಪುಣರಾದ ಮತ್ತು ನಮಗೆ ಪೂಜ್ಯರಾದ ಚತುರ್ಥಾಶ್ರಮದ ಸ್ವಾಮಿಗಳೂ, ಆಚಾರ ವಿಚಾರ ಕರ್ತರಾದ ಸಿಂಹಾಸನಾಧಿಪತಿಗಳೂ ಶಾಸ್ತ್ರಜ್ಞರೂ ನಮ್ಮಲ್ಲಿ ಅನೇಕರುಂಟು.
ಅವರಲ್ಲಿ ಒಬ್ಬರನ್ನು ಈ ಸಭೆಯ ಅಧ್ಯಕ್ಷರನ್ನು ಮಾಡಿದ್ದರೆ ನನಗೆ ಇದಕ್ಕೂ ಬಹಳೇ ಸಂತೋಷವಾಗುತ್ತಿತ್ತು. ನಿಮ್ಮ ಈ ಸಭೆಯ ಕೆಲಸವಾದರೂ ಒಳ್ಳೆಯ ರೀತಿಯಿಂದ ಜರುಗುತ್ತಿತ್ತು. ನಮ್ಮ ಸಂಘದಲ್ಲಿ ಈ ಮಹಾಸಭೆಯು ಮೊದಲನೆಯದಿದ್ದು ಇದರ ಅಧ್ಯಕ್ಷ ಸ್ಥಾನದ ಮಾನವನ್ನು ನೀವೆಲ್ಲರೂ ಕೂಡಿ ನನಗೆ ಕೊಟ್ಟಿದ್ದನ್ನು ನಾನು ಆಮರಣ ಮರೆಯಲಾರೆನು. ಇಂಥ ಬಹುಮಾನವನ್ನು ನನಗೆ ಕೊಟ್ಟಿದ್ದಕ್ಕೆ ನಿಮ್ಮೆಲ್ಲರ ಉಪಕಾರವನ್ನು ಪುನಃ ನೆನಸಿ ಈ ಸಭೆಯ ಕೆಲಸಕ್ಕೆ ಆರಂಭಿಸುವೆನು.
-
-
- ಈ ಸಭೆಯನ್ನು ಕೂಡಿಸಿದ ಕಾರಣ
-
ಈ ವೀರಶೈವ ಮಹಾಸಭೆಯು ಯಾಕೆ ಕೂಡಿರುವದೆಂದು ನಿಮ್ಮೆಲ್ಲರಿಗೆ ಸೂಚನಾ ಪತ್ರ ಮುಖದಿಂದ ಹೆಚ್ಚು ಕಡಿಮೆಯಾಗಿ ವಿದಿತವಾಗಿರಬಹುದು. ಆದಾಗ್ಯೂ ಇವರ ಕಾರಣವನ್ನು ಸಂಕ್ಷಿಪ್ತ ರೀತಿಯಿಂದ ವಿವರಿಸುತ್ತೇನೆ.
ನಮ್ಮ ಈ ವೀರಶೈವ ಧರ್ಮವು ಬುನಾದಿಯಿಂದ ಹೆಸರಾದದ್ದು, ವೇದಮಾನ್ಯವಾದದ್ದು, ಉತ್ತಮವಾದದ್ದು. ಸುಗಮ್ಯವಾದದ್ದು, ನೀತಿಮಯವಾದದ್ದು, ಅಹಿಂಸೆ-ಯುಕ್ತವಾದದ್ದು ಮತ್ತು ಎಲ್ಲರಿಗೂ ತಮ್ಮ ತಮ್ಮ ಕರ್ತವ್ಯಕರ್ಮಗಳನ್ನು ನೆರವೇರಿಸಲು ಧರ್ಮಕೃತ್ಯಗಳನ್ನು ಆಚರಿಸಲಿಕ್ಕೂ ಬರುವಂಥಾದ್ದಿದ್ದು, ದೃಢತೆಯಿಂದ ಸ್ವಲ್ಪಕಾಲ, ಧರ್ಮವನ್ನೇ ಅನುಸರಿಸಿದವನಿಗೆ ಕೂಡ ಪೂರ್ಣ ಪ್ರತಿಫಲವನ್ನು ಕೊಡತಕ್ಕಂಥಾದ್ದಾಗಿದೆ.
ಇಂಥ ಸುಲಭವಾದ ಧರ್ಮ ಮಾರ್ಗವನ್ನು ಅನುಸರಿಸುವದು ಸಹ ನಮಗೆ ಈಗ ಕಠಿಣವಾಗಿದೆ. ಕಲಿಕಾಲದ ಪ್ರಾಬಲ್ಯದಿಂದ, ಧರ್ಮವು ಊರ್ಜಿತಸ್ಥಿತಿಗೆ ಬರುವದು ಒತ್ತಟ್ಟಿಗಿರಲಿ; ಅದು ದಿನಂಪ್ರತಿ ಮಲಿನವಾಗುತ್ತ ನಡೆದಿದೆ. ಈ ಮಲಿನತ್ವವು ಏನು ಮಾಡಿದರೆ ದೂರವಾಗುವದು? ನಮ್ಮ ಧರ್ಮವು ಮುಂದಿನ ಸ್ಥಿತಿಗೆ ಬಂದು ನಾವೆಲ್ಲರೂ ಧರ್ಮೈಕ್ಯಬದ್ಧರಾಗಬೇಕಾದರೆ ಏನು ಮಾಡಬೇಕೆಂಬುದೇ ಈ ಸಭೆಯ ಮುಖ್ಯ ಉದ್ದೇಶವು. ಇನ್ನು ಇದರೊಡನೆ ಕಾಲಕ್ಕೆ ಸರಿಯಾಗಿ ನಮ್ಮ ಸಂಘದಲ್ಲಿ ಸಾಮಾಜಿಕ ಸುಧಾರಣೆ, ಕಲಾಕೌಶಲ್ಯಗಳ ಜ್ಞಾನ, ವ್ಯವಹಾರಜ್ಞಾನ ಮೊದಲಾದವುಗಳಿಗೆ ಏನುಮಾಡಿದರೆ ಉತ್ತೇಜನ ಬಂದೀತೆಂದು ವಿಚಾರಮಾಡುವದೇ ಈ ಸಭೆಯ ಎರಡನೆಯ ಉದ್ದೇಶವು. ಧರ್ಮ ಸುಧಾರಣೆಯಲ್ಲಿಯೂ ಇತರ ಸಾಮಾಜಿಕ ಸುಧಾರಣೆಯಲ್ಲಿಯೂ ನಮ್ಮ ಸಂಘವು ಹಿಂದುಳಿದದ್ದು. ನಮ್ಮಲ್ಲಿ ಶೂನ್ಯ ಸಿಂಹಾಸನಾಧಿಪತಿಗಳ ಮತ್ತು ಉಳಿದ ದೊಡ್ಡ ದೊಡ್ಡ ಧರ್ಮಗುರುಗಳ ಹಾಗೂ ಅವರ ಅನುಯಾಯಿಗಳ ಮನಸ್ಸಿನಲ್ಲಿ ಆ ಸಂಬಂಧದಿಂದ ಜನಿಸಿದ ಕಲಂಕವನ್ನು ಹೋಗಲಾಡಿಸುವದಕ್ಕೋಸ್ಕರ ಯತ್ನಮಾಡಬೇಕೆಂದು ವಿಚಾರದಿಂದ ಈ ಪ್ರಕಾರದ ಸಭೆಗೂಡಿಸಿದ್ದು ನೋಡಿ ನನಗೆ ಪರಮಾನಂದವಾಗಿರುವದು.
ಇದಕ್ಕೂ ಹೆಚ್ಚಿನ ಆನಂದದ ಸಂಗತಿಯೇನೆಂದರೆ ಇಂಥ ಸಭೆಗಳು ನಮ್ಮಲ್ಲಿ ಎಂದೂ ಆಗಿದ್ದಿಲ್ಲ. ಇದೇ ಮೊದಲನೆಯದು. ಇದಕ್ಕೆ ದೇಶದ ಎಲ್ಲ ಪ್ರಾಂತಗಳಿಂದ ಜನರು ಇದರ ಉದ್ದೇಶ ತಿಳಿದು ತಮ್ಮ ಪ್ರತಿನಿಧಿಗಳನ್ನು ಆರಿಸಿ ಕಳಿಸಿರುವರು ಮತ್ತು ಪ್ರತಿನಿಧಿಗಳು ತಮ್ಮ ಸ್ವಂತ ಕಾರ್ಯದ ಕಡೆಗೆ ಲಕ್ಷ್ಯಗೊಡದೆ ಧರ್ಮ ಸಂಬಂಧದ ಕೆಲಸಕ್ಕಾಗಿ ಬದ್ಧಪರಿಕರರಾಗಿ ಬಂದಿರುವರು. ಈ ಬಗ್ಗೆ ನಮ್ಮೆಲ್ಲರಿಗೆ ಆನಂದವೂ ಅಭಿಮಾನವೂ ಉಂಟಾಗಿರುವವು. ಇಂಥ ಮಹಾಸಭೆಗಳು ಪೂರ್ವದಲ್ಲಿ ಶ್ರೀ ಬಸವೇಶ್ವರ ದೇವರ ಕಾಲಕ್ಕೆ ಕೂಡಿ, ಅವುಗಳಲ್ಲಿ ಧರ್ಮ ಸಂಬಂಧದ ಚರ್ಚೆಗಳು ಯಾವಾಗಲೂ ನಡೆಯುತ್ತಿದ್ದವು.
ಅದೇ ಕಾರಣದಿಂದ ನಮ್ಮ ಈ ಮತವು ವೃದ್ಧಿಹೊಂದಿ, ಈ ಹೊತ್ತಿನವರೆಗೂ ನಮ್ಮ ಈ ಭಾಗದಲ್ಲಿ ವಿಸ್ತ್ರತವಾಗಿ ಹಬ್ಬಿಕೊಂಡಿರುತ್ತದೆ. ಇನ್ನು ಮುಂದೆಯಾದರೂ ಇಂಥಾ ಮಹಾಸಭೆಗಳನ್ನು ಮೇಲಿಂದ ಮೇಲೆ ಕೂಡಿಸಿ ಧರ್ಮವೃದ್ಧಿ, ಸಮಾಜ ಸುಧಾರಣೆ, ವಿದ್ಯಾರ್ಜನೆ, ಕಲಾಕೌಶಲ್ಯಗಳ ಉನ್ನತಿ ಇವುಗಳ ಬಗ್ಗೆ ವಿಚಾರ ಮಾಡುವದು ಬಹಳ ಅವಶ್ಯವಾಗಿದೆ. ಇದರಿಂದಲೇ ನಮ್ಮ ಜನರಿಗೆ ಇಹಪರ ಸೌಖ್ಯಗಳು ದೊರಕತಕ್ಕವುಗಳಾಗಿವೆ. ಮತ್ತು ಇಂಥ ಸಭೆಗಳು ಕೂಡುವದರಿಂದ ಯಾವತ್ತೂ ಭಾಗಗಳಲ್ಲಿಯ ನಮ್ಮ ಮತದ ಮುಖ್ಯ ಮುಖ್ಯ ಜನರ ದರ್ಶನವು ಒಬ್ಬರಿಗೊಬ್ಬರಿಗೆ ಆಗಿ ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳಲಿಕ್ಕೂ ತಮ್ಮಲ್ಲಿದ್ದ ಕೀಳು ಆಚರಣೆಗಳನ್ನು ದೂರ ಮಾಡಲಿಕ್ಕೂ ವ್ಯಾಪಾರ ಉದ್ಯೋಗಗಳಲ್ಲಿದ್ದ ನೂನ್ಯತೆಗಳ ವಿಚಾರ ಮಾಡಿ ಅವುಗಳಲ್ಲಿ ಏನು ಸುಧಾರಣೆ ಮಾಡಬೇಕೆಂಬುದನ್ನು ನಿರ್ಣಯಿಸಲಿಕ್ಕೂ ನಾವೆಲ್ಲರೂ ಸಮರ್ಥರಾಗುತ್ತೇವೆ.
ನಮ್ಮ ಮತಸ್ಥರು ಏನಾದರೂ ಅಡಚಣೆಯಲ್ಲಿ ಬಂದರೆ ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬ ಸ್ವಾನುಭೂತಿಯು ಅವರಲ್ಲಿ ಹುಟ್ಟಿ ಯಾವತ್ತರ ಅಡಚಣೆಗಳು ತಮ್ಮಿಂದ ತಾವೇ ದೂರವಾಗುವವು. ಇದಾದರೂ ಈ ಮಹಾಸಭೆಯ ಫಲವೆಂದು ತಿಳಿಯಬೇಕು. ಇವೇ ಮೊದಲಾದ ಕಾರಣಗಳನ್ನು ಮನಸ್ಸಿನಲ್ಲಿ ತಂದು ನಮ್ಮಲ್ಲಿಯ ಮಹನೀಯರು ಈ ಮಹಾಸಭೆಯನ್ನು ಕೂಡಿಸಿರುತ್ತಾರೆ.
-
-
- ಮತ ಸಂಬಂಧೀ ಸಭೆಗಳನ್ನು ಕುರಿತು ಆಕ್ಷೇಪವು
-
ನಾವು ಈಗ ಕೂಡಿಸಿರುವ ಮಹಾಸಭೆಯನ್ನು ಕಂಡು ಕೆಲವು ಪಾಶ್ಚಿಮಾತ್ಯ ವಿದ್ಯಾ ಸಂಸ್ಕಾರವುಳ್ಳ ಪಂಡಿತರೂ, ರಾಷ್ಟ್ರಭಕ್ತರೂ ಕಾಂಗ್ರೆಸ್ ಮತ್ತು ಕಾನ್ಸರೆನ್ಸ್ ಸಭೆಗಳ ಅಭಿಮಾನಿಗಳೂ ಇಂಥಾ ಸಭೆಗಳಾಗುವುದರಿಂದ ಪರಮತದವರ ಕೂಡ ದ್ವೇಷವು ಬೆಳೆಯುತ್ತದೆಂದು ತಿಳಿಯುತ್ತಾರೆ. ಅದರ ಮುಖ್ಯವಾದ ಆಕ್ಷೇಪವೇನೆಂದರೆ “ಹಿಂದೂಸ್ಥಾನದಲ್ಲಿ ಅಗಣಿತ ಮತಗಳೂ ಜಾತಿಗಳೂ ಉಂಟು. ಪ್ರತಿಯೊಬ್ಬರೂ ತಮ್ಮ ತಮ್ಮ ಮತಗಳ ಸಭೆಗಳನ್ನು ಕೂಡಿಸುತ್ತಾ ನಡೆದರೆ ಹಿಂದೂಸ್ಥಾನದ ಯಾವತ್ತೂ ಮತದವರಲ್ಲಿ ರಾಷ್ಟ್ರೀಯ ಐಕ್ಯವು ಬೆಳೆಯುವದು ಅಸಾಧ್ಯವಾಗುತ್ತದೆ.” ಆದರೆ ಈ ಆಕ್ಷೇಪದಲ್ಲಿ ವಿಶೇಷವಾದ ಅರ್ಥವಿಲ್ಲ.
ಯಾಕೆಂದರೆ ಪ್ರತಿ ಒಬ್ಬರು ತಮ್ಮ ತಮ್ಮ ಕುಟುಂಬಗಳನ್ನು ಮತಗಳನ್ನು ಸುಧಾರಿಸಲಿಕ್ಕೆ ಪ್ರಯತ್ನ ಮಾಡಿದರೆ ದೇಶವು ತಾನಾಗಿಯೇ ಸುಧಾರಿಸುತ್ತದೆ. ಕೆಲವು ಕುಟುಂಬಗಳು ಕೂಡಿ ಒಂದು ಮತವು ಹಾಗೂ ಅನೇಕ ಮತದವರು ಕೂಡಿ ಹಿಂದುಸ್ಥಾನದ ರಾಷ್ಟ್ರವು ಆಗಿರುತ್ತದೆ. ಆದ್ದರಿಂದ ಎಲ್ಲ ಮತದವರನ್ನು ಒಂದೇ ಸಮನ್ವಯ ಮಾಡಿ ಸುಧಾರಣೆ ಮಾಡಲಿಕ್ಕೆ ಪ್ರಯತ್ನ ಮಾಡಹತ್ತಿದರೆ ದಿನಾವಧಿಯು ಹತ್ತುವದಲ್ಲದೆ ಬಹಳ ಶ್ರಮ ಮಾಡಬೇಕಾಗುತ್ತದೆ. ಆದರೆ ಬೇರೆ ಬೇರೆ ಮತದವರು ತಮ್ಮ ತಮ್ಮ ಮತದ ಮಟ್ಟಿಗೆ ಸುಧಾರಣೆ ಮಾಡಲಿಕ್ಕೆ ಯತ್ನಿಸಿದರೆ ಅವರ ಕೆಲಸವು ಸುಲಭವಾಗಿ ಆಗುತ್ತವೆ. ಮತ್ತು ಇದರಿಂದ ಮುಂದೆ ದೇಶಬಾಂಧವರೊಳಗೆ ಐಕ್ಯವು ಸಹ ಬೆಳೆಯುತ್ತದೆ.
ಬ್ರಾಹ್ಮಣರು ತಮ್ಮ ಮಹಾಸಭೆಯನ್ನು ಕೂಡಿಸಲಿ, ಜೈನರು ಕೂಡಿಸಲಿ, ಮುಸಲ್ಮಾನ ಜನರು ಕೂಡಿಸಲಿ, ಇದರಿಂದ ರಾಷ್ಟ್ರೀಯ ಐಕ್ಯಕ್ಕೆ ಏನೂ ಅಪಾಯವಿಲ್ಲ. ಪ್ರತಿಯೊಂದು ಮತದವರು ಎರಡನೇ ಮತದವರ ಉತ್ಕರ್ಷ ನೋಡಿ ಅಸಂತೋಷಪಡದೆ ಅವರು ಯಾವ ಮಾರ್ಗದಿಂದ ನಡೆದು ಆ ಉತ್ಕರ್ಷೆಯನ್ನು ಹೊಂದಿದರೋ ಅದೇ ಮಾರ್ಗದಿಂದ ತಾವು ನಡೆದು ಅವರಂತೆ ಊರ್ಜಿತ ಸ್ಥಿತಿಯನ್ನು ಹೊಂದಲಿಕ್ಕೆ ಯತ್ನಿಸಬೇಕು. ಇದಲ್ಲದೆ ಯಾವತ್ತೂ ಮತದವರಿಗೆ ಸಮಾನವಾದ ಕಷ್ಟಗಳನ್ನೂ ಪರಿಹರಿಸಿಕೊಳ್ಳಲಿಕ್ಕೆ ಎಲ್ಲ ಮತದವರು ಒಗ್ಗಟ್ಟಾಗಿ ಸಮಾನವಾದ ಮತ್ತು ಸರಿಯಾದ ಪ್ರಯತ್ನಗಳನ್ನು ಮಾಡಬೇಕು.
ಆ ಪ್ರಯತ್ನಗಳು ದುಷ್ಟವಾಗಲೀ ಸ್ವಾರ್ಥಪರವಾಗಲೀ ಇರಬಾರದು. ಇದಲ್ಲದೆ ಸುಧಾರಣೆಯ ಮಾರ್ಗದಲ್ಲಿ ಮುಂದೆ ಹೆಜ್ಜೆಗಳನ್ನಿಟ್ಟಿರುವವರು ಹಿಂದುಳಿದವರ ಮೇಲೆ ಹೆಚ್ಚು ದಯ ದಾಕ್ಷಿಣ್ಯವನ್ನು ತೋರಿಸಬೇಕು. ಅಂದರೆ ಯಾವ ರೀತಿಯಿಂದಲೂ ರಾಷ್ಟ್ರೀಯ ಐಕ್ಯಕ್ಕೆ ಹಾನಿಯುಂಟಾಗಲಾರದು. ಈ ಮಾದರಿಯ ಪ್ರಯತ್ನವೇ ನಮ್ಮ ಈ ಮಹಾಸಭೆಯ ಉದ್ದೇಶವಿದ್ದು ಪರಮತಸ್ಥರ ಕೂಡ ಕಲಹವನ್ನೂ ಪರಮತಸ್ಥರ ನಿಂದೆಯನ್ನೂ ಮಾಡುವದು ನಮಗೆ ಇಷ್ಟವಿಲ್ಲ. ಇದನ್ನೂ ಯಾವತ್ತೂ ಮತ ಬಾಂಧವರು ಚನ್ನಾಗಿ ಗ್ರಹಿಸಲೆಂಬುವದು ನನ್ನ ಮುಖ್ಯ ಕೋರಿಕೆಯಾಗಿದೆ.
-
-
- ವೀರಶೈವರ ವಿದ್ಯಾಭ್ಯಾಸ
-
ಈ ವಿಷಯವು ಒಳ್ಳೆ ಮಹತ್ವದ್ದು ಇರುತ್ತದೆ. ನಮ್ಮಲ್ಲಿ ಮತ್ತು ನಮ್ಮ ಮುಂದಿನ ಪೀಳಿಗೆಯವರಲ್ಲಿ ವಿದ್ಯಾಭಿವೃದ್ಧಿಯು ಹ್ಯಾಗೆ ಆದೀತು. ಅನ್ನುವ ವಿಚಾರವು ಇತ್ತಿತ್ತ ನಮ್ಮಲ್ಲಿ ಕಲಿತ ಯಾವತ್ತೂ ಸದೃಹಸ್ಥರ ಮನಸ್ಸಿನಲ್ಲಿ ಬರಹತ್ತಿರುತ್ತದೆ. ಇದೊಂದು ಬಹಳ ಸಂತೋಷದ ಮಾತೇ ಸರಿ. ಅದಕ್ಕೆ ನಮ್ಮ ಪರಮದಯಾಳು ಇಂಗ್ಲೀಷ ಸರಕಾರದವರು ಎಲ್ಲ ಮತದವರನ್ನು ಸಮನಾಗಿ ತಿಳಿದು ಎಲ್ಲರಿಗೂ ಸರಿಯಾಗಿ ವಿದ್ಯಾದಾನ ಮಾಡುತ್ತಿರುವರು. ಆದ್ದರಿಂದ ನಮ್ಮ ಹಿಂದುಸ್ಥಾನದ ಎಲ್ಲ ಮತದ ಜನರು ಮೆಲ್ಲ ಮೆಲ್ಲನೆ ವಿದ್ಯೆಯಲ್ಲಿ ಮುಂದೆ ಬರಹತ್ತಿ ತಮ್ಮ ತಮ್ಮ ಕರ್ತವ್ಯಗಳು ಯಾವವು? ಅವುಗಳನ್ನು ಹ್ಯಾಗೆ ಸಿದ್ಧಿಗೆ ಒಯ್ಯಬೇಕು? ಎಂಬ ವಿಚಾರಗಳನ್ನು ಮನಸ್ಸಿನಲ್ಲಿ ತರಹತ್ತಿರುತ್ತಾರೆ.
ಇದಕ್ಕಾಗಿಯೇ ಕೈ ಗುರುಸಿದ್ಧಪ್ಪಾ ಅಣ್ಣಾ, ಗಿಲಗಂಚಿ ಹಾಗೂ ಈಗ ನಮ್ಮ ಈ ಸಭೆಯಲ್ಲಿರುವಂಥ ರಾ|| ಬ॥ ರುದ್ರಗೌಡ ಅರಟಾಳ ಇವರ ಮನಸ್ಸಿನಲ್ಲಿ ನಮ್ಮ ಜನರು ಹ್ಯಾಗೆ ಮುಂದಕ್ಕೆ ಬರುವರೆಂಬ ವಿಚಾರವು ಬಂದು ಇವರು ಹಗಲಿರುಳು ಶ್ರಮಪಟ್ಟು ಇದು ತಮ್ಮ ಸ್ವಂತ ಕಾರ್ಯವೆಂದು ತಿಳಿದು ನಮ್ಮಲ್ಲಿರುವ ಯಾವತ್ತೂ ಶ್ರೀಮಂತರಿಗೂ, ಸಾವಕಾರರಿಗೂ ವಿದ್ಯೆಯಿಂದ ಆಗುವ ಲಾಭಗಳನ್ನು ಬೋಧಿಸಿ, ಲಿಂಗಾಯತ ವಿದ್ಯಾವರ್ಧಕ ಫಂಡನ್ನು ಕೂಡಿಸಿದರು. ಅದಕ್ಕೆ ಮುಂದೆ ಶ್ರೀಮಂತ ಜನರು ಚನ್ನಾಗಿ ದ್ರವ್ಯಸಹಾಯವನ್ನು ಮಾಡಿದರು.
ಅವರಲ್ಲಿ ಶ್ರೀಮಂತ ಲಖಮನಗೌಡಾ ಸರ ದೇಸಾಯಿ ಒಂಟಿಮುರಿ ಇವರು ಮುಖ್ಯವಾಗಿರುವರು. ಈ ಫಂಡು ಸ್ಥಾಪನೆಯಾಗದ ಪೂರ್ವದಲ್ಲಿ ನಮ್ಮಲ್ಲಿ ಇಂಗ್ಲೀಷ್ ಕಲಿತವರು ತೀರ ಕಡಿಮೆ ಇದ್ದರು. ಆದರೆ ಈ ಫಂಡಿನ ಸಹಾಯದಿಂದ ಕೆಲವು ವಿದ್ಯಾರ್ಥಿಗಳು ಬಿ.ಎ. ಎಲ್ಎಲ್.ಬಿ. ಮುಂತಾದ ಪದವಿಗಳನ್ನು ಪಡೆದಿದ್ದಾರೆ. ಆದರೂ ಎರಡನೇ ಮತಸ್ಥರು ಎಷ್ಟು ತೀವ್ರ ಮುಂದೆ ಹೋಗುತ್ತಿರುವರೋ ಅಷ್ಟು ತೀವ್ರ ನಮ್ಮಲ್ಲಿ ವಿದ್ಯಾಭಿವೃದ್ಧಿಯು ಆಗಹತ್ತಿಲ್ಲ. ಇದಕ್ಕೆ ಕಾರಣಗಳು ಬಹಳ ಉಂಟು. ಮುಖ್ಯ ಕಾರಣವೇನೆಂದರೆ ನಮ್ಮಲ್ಲಿ ಬಡತನವು. ಇದರಿಂದ ಎಷ್ಟೋ ಜನ ತಾಯಿ-ತಂದೆಗಳಿಗೆ ತಮ್ಮ ಮಕ್ಕಳನ್ನು ಶಾಲೆಗೆ ಹಾಕಿ ಖರ್ಚು ಮಾಡತಕ್ಕ ಸಾಮರ್ಥ್ಯವು ಇರುವುದಿಲ್ಲ.
೨ನೇದು ನಮ್ಮ ಮತಸ್ಥರ ಮುಖ್ಯ ಉದ್ಯೋಗವೆಂದರೆ ವ್ಯಾಪಾರ ಮತ್ತು ಒಕ್ಕಲುತನಗಳಿದ್ದು ನಾನು ಮೇಲೆ ಹೇಳಿದ ದಾರಿದ್ರದ ಮೂಲಕವೇ ತಾಯಿ ತಂದೆಗಳು ತಮ್ಮ ಮಕ್ಕಳನ್ನು ಸ್ವಲ್ಪ ದೊಡ್ಡವರಾದ ಕೂಡಲೇ ಈ ಉದ್ಯೋಗಗಳಿಗೆ ಹಚ್ಚುತ್ತಾರೆ. ಅದರಿಂದ ಒಳ್ಳೆ ಜಾಣ ಹುಡುಗರಿದ್ದಾಗ್ಯೂ ಅವರ ಬುದ್ಧಿಯ ಉಪಯೋಗವು ವಿದ್ಯೆಯ ಕಡೆಗೆ ಆಗುವುದಿಲ್ಲ. ಈ ಎಲ್ಲರಿಗೂ ವಿದ್ಯೆ ಕಲಿಸಲಿಕ್ಕೆ ಸಹಾಯ ಮಾಡಬೇಕೆಂದರೆ ಈಗಿರುವ ನಮ್ಮ ಫಂಡು ಸಾಕಷ್ಟು ಇರುವದಿಲ್ಲ. ಆದ್ದರಿಂದ ಪ್ರತ್ಯೇಕ ಗ್ರಾಮದಲ್ಲಿ ಈ ಬಗ್ಗೆ ಸಣ್ಣ ಸಣ್ಣ ಫಂಡುಗಳನ್ನು ಕೂಡಿಸಿ ಅಲ್ಲಿಯ ಹುಡುಗರಿಗೆ ಪ್ರಾಥಮಿಕ ಶಿಕ್ಷಣವು ದೊರೆಯುವಂತೆ ಪ್ರಯತ್ನವನ್ನು ನಾವೆಲ್ಲರೂ ಅವಶ್ಯವಾಗಿ ಮಾಡಬೇಕು.
ಇಲ್ಲವೇ ಈ ಪ್ರಾಥಮಿಕ ಶಿಕ್ಷಣದ ಬಗ್ಗೆ ಇನ್ನೊಂದು ದೊಡ್ಡ ಫಂಡು ಕೂಡಿಸಿ ಅದರಿಂದ ಯಾವತ್ತೂ ಹುಡುಗರಿಗೆ ವಿದ್ಯಾದಾನ ಕೊಡದ ಹೊರ್ತು ನಮ್ಮಲ್ಲಿ ವಿದ್ಯಾ ಪ್ರಸಾರವಾಗುವುದಿಲ್ಲ. ಈ ಪ್ರಾಥಮಿಕ ಶಿಕ್ಷಣವು ವೃದ್ಧಿ ಹೊಂದಿದ ಹೊರ್ತು ನಮ್ಮಲ್ಲಿ ಬಹಳ ಮಂದಿ ದೊಡ್ಡ ವಿದ್ವಾಂಸರಾದರೆಂದು ಆಶಿಸುವದು ವ್ಯರ್ಥವದೆ ಮತ್ತು ಸಮುದ್ರ ಪರ್ಯಟನ ಮಾಡಿ ಪರದೇಶಗಳಿಗೆ ಹೋಗಲಿಕ್ಕೆ ನಮ್ಮ ಧರ್ಮಗುರುಗಳು ಆದಷ್ಟು ಮಟ್ಟಿಗೆ ಸುಲಭ ನೇಮಗಳನ್ನು ಮಾಡಿ ದೇಶಾಂತರಕ್ಕೆ ಹೋಗುವವರಿಗೆ ಉತ್ತೇಜನ ಕೊಡದ ಹೊರ್ತು ನಮ್ಮಲ್ಲಿ ಈಗ ಕಲಿತಿದ್ದ ಅಥವಾ ಮುಂದೆ ಕಲಿಯುವ ತೀಕ್ಷ್ಯ ಬುದ್ಧಿಯ ವಿದ್ಯಾರ್ಥಿಗಳಿಗೆ ಪರದೇಶಗಳಿಗೆ ಹೋಗಿ ತಮ್ಮ ವಿದ್ಯೆಯನ್ನು ಅಭಿವೃದ್ಧಿ ಹೊಂದಿಸಿ ಅಲ್ಲಲ್ಲಿ ವಿಶ್ವವಿದ್ಯಾಲಯಗಳಲ್ಲಿಯ ದೊಡ್ಡ ದೊಡ್ಡ ಪದವಿಗಳನ್ನು ದೊರಕಿಸಲಿಕ್ಕೆ ಬರುವಂತೆ ಇಲ್ಲ.
ಆದ್ದರಿಂದ ಇತ್ತಕಡೆಗೆ ಗುರುಪೀಠಸ್ಥರು ಲಕ್ಷಗೊಟ್ಟು, ಅನುಗ್ರಹಮಾಡಿ ಆದಷ್ಟು ಮಟ್ಟಿಗೆ ದೇಶಾಂತರಕ್ಕೆ ಹೋಗುವವರಿಗೆ ಸುಲಭ ಕಟ್ಟಳೆಗಳನ್ನು ಮಾಡಿ ಅನುಕೂಲ ಮಾಡಿಕೊಡಬೇಕು. ಹೀಗಾದಪಕ್ಷದಲ್ಲಿ ನಮ್ಮಲ್ಲಿಯೂ ಎರಡನೇ ಮತದಲ್ಲಿದ್ದ ಪಂಡಿತರಂಥವರನ್ನು ನಾವು ಬಯಸುವದು ವ್ಯರ್ಥವು.
-
-
- ಸಾಮಾಜಿಕ ಸುಧಾರಣೆಯ ಅವಶ್ಯಕತೆಯು
-
ಎಲ್ಲ ಸುಧಾರಣೆಗಳಿಗೆ ವಿದ್ಯೆಯೇ ಮುಖ್ಯವಾದದ್ದು. ವಿದ್ಯೆಯ ಬಲದಿಂದಲೇ ನಮ್ಮಲ್ಲಿಯ ಸಾಮಾಜಿಕ ನ್ಯೂನತೆಗಳನ್ನು ಶೋಧಿಸಿ ಅವುಗಳನ್ನು ಸುಧಾರಿಸಲಿಕ್ಕೆ ಯೋಗ್ಯ ಉಪಾಯಗಳನ್ನು ಹುಡುಕಲಿಕ್ಕೆ ಅನುಕೂಲವಾಗುತ್ತದೆ. ವಿದ್ಯೆಯು ಇಲ್ಲದಿದ್ದರೆ ನಮ್ಮಲ್ಲಿಯ ಸಾಮಾಜಕ ಪದ್ಧತಿಯನ್ನು ಬೇರೆಯವರ ಸಾಮಾಜಿಕ ಪದ್ಧತಿಗೆ ಸರಿಮಾಡಿ ನೋಡಲಿಕ್ಕೆ ಬರುವದಿಲ್ಲ. ನಮ್ಮ ಸಾಮಾಜಿಕ ಪದ್ಧತಿಯನ್ನು ಅವಶ್ಯಕವಾಗಿ ಸುಧಾರಿಸಬೇಕಾಗಿರುವ ವಿಷಯಗಳು ಅನೇಕ ಉಂಟು. ಅವುಗಳಲ್ಲಿ ಮುಖ್ಯವಾದುವುಗಳು ಯಾವವೆಂದರೆ-
೧ನೇದ್ದು ಬಾಲವಿವಾಹ : ಈ ಬಾಲವಿವಾಹ ಪದ್ಧತಿಯು ನಮ್ಮಲ್ಲಿ ಎಷ್ಟರಮಟ್ಟಿಗೆ ಹಬ್ಬಿಕೊಂಡಿದೆ ಎಂಬುದನ್ನು ನೋಡಿದರೆ ಮನಸ್ಸಿಗೆ ಬಹಳ ದುಃಖವಾಗುತ್ತದೆ. ಲಗ್ನವೆಂದರೇನು, ಗಂಡ ಹೆಂಡರ ಕರ್ತವ್ಯವೇನು ಎಂಬ ಸಂಗತಿಗಳನ್ನು ತಿಳಿದುಕೊಳ್ಳುವದಕ್ಕೆ ಮಕ್ಕಳು ಅಸಮರ್ಥರಿರುವಾಗ್ಗೆ ತಾಯಿ ತಂದೆಗಳು ಅವರ ಲಗ್ನ ಮಾಡುತ್ತಾರೆ. ಒಮ್ಮೆ ತಮ್ಮ ಕಣ್ಣೆದುರಿಗೆ ಲಗ್ನವಾಗಿ ಹೋದರೆ ತೀರಿತು. ಕಣ್ಣಿನ ಪ್ರೀತಿಯನ್ನು ತೀರಿಸಿಕೊಂಡರೆ ಕೃತಾರ್ಥರಾದೆವು ಎಂಬ ತಿಳುವಳಿಕೆಯು ಅನೇಕರಲ್ಲಿ ಇರುತ್ತದೆ.
ಕೆಲಕೆಲವು ಮೂಢ ಜನರು ತೊಟ್ಟಿಲಕ್ಕೆ ಬಾಸಿಂಗ ಕಟ್ಟಿ ಲಗ್ನ ಮಾಡುತ್ತಾರೆ. ಈ ಪದ್ಧತಿಯು ಎಷ್ಟು ಕಾಡಸ್ಥಿತಿಯನ್ನು ವ್ಯಕ್ತಗೊಳಿಸುತ್ತದೆಂಬುವದನ್ನು ನೀವೇ ವಿಚಾರಮಾಡಿರಿ. ಲಗ್ನ ಮಾಡುವದೆಂದರೆ ತಮ್ಮ ತಲೆಮೇಲಿನ ಹೊರೆಯನ್ನು ಇಳಿಸುವದೆಂದೂ ಕೆಲವರು ತಿಳಿದುಕೊಳ್ಳುತ್ತಾರೆ. ಈ ಬಾಲ ವಿವಾಹ ಪದ್ಧತಿಯನ್ನು ಒಮ್ಮೆಲೆ ಎಲ್ಲರೂ ಬಿಟ್ಟುಬಿಡಬೇಕು. ಹುಡುಗನು ೧೮-೨೦ ವರುಷ ಪ್ರಾಯದವನೂ ಹುಡುಗಿಯು ೧೦-೧೨ವರ್ಷ ಪ್ರಾಯದವಳೂ ಆಗುವವರಿಗೆ ಲಗ್ನ ಮಾಡಬಾರದು.
೨ನೇದ್ದು ವೃದ್ಧ ವಿವಾಹ : ಕೆಲಕೆಲವು ಮುದುಕರು ೫೦-೬೦ ವರುಷದವರಾದರೂ ಲಗ್ನ ಮಾಡಿಕೊಳ್ಳುವ ಭ್ರಾಂತಿಯಲ್ಲಿರುತ್ತಾರೆ. ತಮ್ಮ ವಯಸ್ಸೇನು, ತಮ್ಮ ಬಾಳುವಿಕೆ ಎಷ್ಟು ವರ್ಷ, ತಮ್ಮಲ್ಲಿ ಶರೀರ ಸಾಮರ್ಥ್ಯವು ಎಷ್ಟರಮಟ್ಟಿಗೆ ಉಂಟು ಎಂಬುದನ್ನು ವಿಚಾರ ಮಾಡದೆ ಲಗ್ನ ಮಾಡಿಕೊಳ್ಳುತ್ತಾರೆ. ಇದಲ್ಲದೆ ಇಂಥ ಮುದುಕ ಗಂಡಂದಿರಿಗೆ ಹುಡುಗಿಯರ ತಾಯಿ ತಂದೆಗಳು ದ್ರವ್ಯದ ಆಸೆಗೆ ಬಾಯಿ ತೆರೆದು ತಮ್ಮ ಮಕ್ಕಳನ್ನು ನೀರು ಇಲ್ಲದ ಬಾವಿಯಲ್ಲಿ ನೂಕಿಕೊಟ್ಟಂತೆ ಲಗ್ನಮಾಡಿಕೊಡಲಿಕ್ಕೆ ಒಪ್ಪುತ್ತಾರೆ. ಇದು ತೀರ ತಪ್ಪು.
೩ನೇದ್ದು, ಲಗ್ನದಲ್ಲಿ ಕೆಲಕೆಲವು ಜನ ವರನ ಪಕ್ಷದವರು ವರದಕ್ಷಿಣೆ ವರೋಪಚಾರವನ್ನು ವ್ಯಾಪಾರದ ಪದ್ಧತಿಯಂತೆ ತೆಗೆದುಕೊಳ್ಳುವರು. ಹೆಣ್ಣು ಹಡೆದ ತಾಯಿತಂದೆಗಳು ಹೊಲಮನೆ ವತ್ತಿಹಾಕಿ ಸಾಲವನ್ನಾದರೂ ತಂದು ವರದಕ್ಷಿಣೆ ವರೋಪಚಾರಗಳನ್ನು ಕೊಡಬೇಕಾಗುವದು. ಹಾಗೂ ಕನ್ಯಾಪಕ್ಷದವರು ಕೆಲಕೆಲವರಲ್ಲಿ ವರನ ಪಕ್ಷದಿಂದ ತೆರವು ಅಥವಾ ಕನ್ಯಾ ವಿಕ್ರಯ ಹಣವನ್ನು ತೆಗೆದುಕೊಳ್ಳುತ್ತಾರೆ. ಈ ಪ್ರಕಾರ ತಮ್ಮ ಹೊಟ್ಟೆಯ ಮಕ್ಕಳನ್ನು ಮಾರಾಟ ಮಾಡುವ ಸ್ಥಿತಿಯು ಯಾವ ವಿವೇಕಿ ಮನುಷ್ಯನಿಗೂ ಸಮ್ಮತವಾಗಲಾರದು. ವರದಕ್ಷಿಣೆ ಪದ್ಧತಿಯಿಂದಾಗಲೀ ಕನ್ಯಾ ವಿಕ್ರಯ ಪದ್ಧತಿಯಿಂದಾಗಲೀ ಸಮಾನಸ್ಕಂದರಾದ ಬೀಗರು ಸಿಕ್ಕುವದಿಲ್ಲ.
ದೊಡ್ಡ ದೊಡ್ಡ ಶ್ರೀಮಂತರು ವರದಕ್ಷಿಣೆ ವರೋಪಚಾರ ಪದ್ಧತಿಯಿಂದಲೇ ಬಡತನಕ್ಕೆ ಬರುವದಿಲ್ಲೆಂಬುವದು ಸಹಜ. ಆದರೆ ಈ ವ್ಯಾಪಾರ ಪದ್ಧತಿಯಿಂದ ಧರ್ಮ ಲಗ್ನಕ್ಕೆ ಬದಲಾಗಿ ಅರಸು ಲಗ್ನವನ್ನೇ ಮಾಡಿದಂತೆ ಆಗುತ್ತದೆ. ಯೋಗ್ಯನಾದ ವರನಿಗೆ ತನ್ನ ಬಾಗಿಲ ಮುಂದೆ ಧಾರೆ ಎರೆದು ಕೊಡಬೇಕೆಂಬುವದು ವೃದ್ಧಾಚಾರವೂ, ಶಾಸ್ತ್ರ ಸಮ್ಮತವೂ, ವಿವೇಕ ಮಾರ್ಗವೂ ಇದ್ದು ನಮ್ಮ ಜನ ಬರಬರುತ್ತ ನೆರೆಹೊರೆಯವರನ್ನು ಕಂಡು ಈ ಪದ್ಧತಿಯನ್ನು ಅನುಕರಣ ಮಾಡುತ್ತ ನಡೆದಿರುತ್ತಾರೆ.
ಈ ಪದ್ಧತಿಯಿಂದ ತಾತ್ಕಾಲಿಕ ಲಾಭವು ಕಂಡಾಗ್ಯೂ ಕಡೆಗೆ ಹಾನಿಯಾಗುವದು. ತಾಯಿ ತಂದೆಗಳು ಯಾವಾಗಲೂ ಗಂಡು ಮಕ್ಕಳನ್ನೇ ಹಡೆಯುತ್ತಾರೆಂಬುವದು ಯಾರ ಮೇಲಿಂದ? ಗಂಡು ಮಕ್ಕಳಿಗೆ ವರದಕ್ಷಿಣೆಯನ್ನು ತೆಗೆದುಕೊಂಡರೆ ತಾವು ತಮ್ಮ ಹೆಣ್ಣುಮಕ್ಕಳನ್ನು ಲಗ್ನ ಮಾಡಿಕೊಡುವಾಗ್ಗೆ ಬೇರೆಯವರ ಮನೆತನಕ್ಕೆ ವರದಕ್ಷಿಣೆಯನ್ನು ಕೊಡಬೇಕಾಗುತ್ತದೆ. ಒಬ್ಬರನ್ನು ಸುಲಿದುಕೊಂಡು ಇನ್ನೊಬ್ಬರ ಕಡೆಯಿಂದ ತಾವು ಸುಲಿದುಕೊಳ್ಳುವುದರಲ್ಲಿ ಅರ್ಥಶಾಸ್ತ್ರದ ದೃಷ್ಟಿಯಿಂದ ಏನು ಲಾಭವಾಗುವುದಿಲ್ಲ. ಆದ್ದರಿಂದ ಈ ಪದ್ಧತಿಯನ್ನು ಬೇಗನೇ ನಿಲ್ಲಿಸತಕ್ಕದ್ದು.
೪ನೇದ್ದು-ಲಗ್ನದಲ್ಲಿ ದುಂದುಗಾರಿಕೆಯಿಂದ ಹಣವನ್ನು ವೆಚ್ಚಮಾಡುವ ಪದ್ಧತಿಯು ನಮ್ಮೊಳಗೆ ಬಹಳ ಉಂಟು. ನಮ್ಮ ಜನರು ಸ್ವಾಭಾವಿಕವಾಗಿ ಬಹು ದುಂದುಗಾರರು. ಅವರಿಗೆ ಮಿತವ್ಯಯವೆಂಬುವದು ಅಪರಿಚಿತ ವಸ್ತುವಾಗಿದೆ. ಲಗ್ನದಲ್ಲಿ ಮಾಡುವ ಖರ್ಚಿಗೆ ಮಿತಿಯೇ ಇಲ್ಲ. ಗಾಯನ, ನೃತ್ಯ ಮುಂತಾದ ಅನವಶ್ಯ ಖರ್ಚು ಮಾಡುವ ಪದ್ಧತಿಯು, ಲಗ್ನದಲ್ಲಿ ಬಹಳವಾಗಿ ಕಂಡುಬರುತ್ತದೆ. ಇದರಿಂದ ಬಡತನಕ್ಕೆ ಬಾಗಿಲ ತೆರೆದಿಟ್ಟಂತೆ ಆಗುವದು.
ನೂರು ರೂಪಾಯಿಗಳಲ್ಲಿ ಆಗುವ ಲಗ್ನಕ್ಕೆ ಸಾವಿರ ರೂಪಾಯಿಗಳನ್ನು ಖರ್ಚು ಮಾಡುವರು. ಸಾವಿರ ರೂಪಾಯಿ ಖರ್ಚು ಮಾಡುವಲ್ಲಿ ಹತ್ತು ಸಾವಿರ ಖರ್ಚು ಮಾಡುವರು. ಇದು ಯೋಗ್ಯವಾದದ್ದಲ್ಲ. ಇದನ್ನು ಎಲ್ಲರೂ ಬಿಡತಕ್ಕದ್ದು. ತಮ್ಮ ತಮ್ಮ ಯೋಗ್ಯತೆಗೆ ಅನುಸರಿಸಿ ಅವಶ್ಯಕವಾದ ಖರ್ಚನ್ನು ಮಾಡುವದು ವಿವೇಕತನವು.
೫ನೇದ್ದು ನಮ್ಮಲ್ಲಿ ಕೆಲವರು ಅನ್ಯ ಮತಸ್ಥರಿಂದ ಕಾರ್ಯಗಳನ್ನು ಮಾಡಿಸುತ್ತಾರೆ. ಅಂಥವರಿಗೆ ಆದಷ್ಟುಮಟ್ಟಿಗೆ ಉಪದೇಶಮಾಡಿ ಆ ಪದ್ಧತಿಯನ್ನು ಬಿಡಿಸಿ ಶಾಸ್ತೋಕ್ತ ರೀತಿಯಿಂದ ನಮ್ಮ ವೈದಿಕರ ಕಡೆಯಿಂದ ಲಗ್ನ ಮಾಡಿಸಬೇಕು. ಮತ್ತು ಈ ಪ್ರಕಾರದ ಉಪದೇಶದ ಕಡೆಗೆ ಲಕ್ಷ್ಯಗೊಡದೆ ಯಾವನು ವಿರುದ್ಧವಾಗಿ ಆಚರಿಸುವನೋ ಅಂಥವನಿಗೆ ಬಹಿಷ್ಕಾರ ಕೊಟ್ಟು ಅವನಲ್ಲಿ ಜಂಗಮರೂ ಉಳಿದ ಲಿಂಗಾಯಿತರೂ ಅನ್ನೋದ ತಕ್ಕೊಳ್ಳಬಾರದು.
೬ನೇದ್ದು-ಉಡಿಕಿ ಅಥವಾ ವಿಧವಾ ವಿವಾಹ : ಬ್ರಾಹ್ಮಣರಲ್ಲಿಯೂ ಕೆಲವರು ವಿಧವಾ ವಿವಾಹವನ್ನು ತರಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷತಃ ಪ್ಲೇಗಿನ ದಿವಸಗಳಲ್ಲಿ ಚಿಕ್ಕ ಬಾಲಿಕೆಯರು ಗಂಡನನ್ನು ಕಳಕೊಂಡು ವಿಧವೆಯಾಗಿರುವುದನ್ನು ನೋಡಿದರೆ ಎಂಥ ಪಾಷಾಣ ಹೃದಯನಿಗಾದರೂ ಅವರ ಬಗ್ಗೆ ಕನಿಕರ ಹುಟ್ಟದೇ ಇರಲಾರದು. ಅವರಲ್ಲಿ ವಿಧವಾ ವಿವಾಹದ ಪ್ರಚಾರವಿಲ್ಲದೆ ಇದ್ದು ಅದನ್ನು ಮಾಡಿದವರಿಗೆ ಬಹಿಷ್ಕಾರ ಕೊಟ್ಟಾಗ್ಯೂ ಅದಕ್ಕೆ ಹೆದರದೆ ವಿಧವಾವಿವಾಹ ಮಾಡುವದು ಅಲ್ಲಲ್ಲಿ ದೃಷ್ಟಿಗೆ ಬೀಳುತ್ತದೆ.
ಹಾಗೂ ವಿಧವಾವಿವಾಹೋತ್ತೇಜಕ ಮಂಡಳಿಗಳನ್ನು ಸ್ಥಾಪಿಸಿ ಬ್ರಾಹ್ಮಣ ಜಾತಿಯೊಳಗಿನ ಕೆಲವು ಸುಧಾರಕರು ಈ ವಿಷಯದಲ್ಲಿ ಮನಮುಟ್ಟಿ ಶ್ರಮಮಾಡಿ ಅನೇಕ ವಿಧವೆಯರ ಪುನರ್ವಿವಾಹಗಳನ್ನು ಮಾಡಿರುತ್ತಾರೆ. ಆದರೆ ನಮ್ಮಲ್ಲಿ ವಿಧವಾ ವಿವಾಹವು ಬಹು ವರ್ಷಗಳಿಂದ ಪ್ರಚಾರದಲ್ಲಿ ಉಂಟು. ಆದರೂ ಈ ಪದ್ಧತಿಗೆ ಸ್ವಲ್ಪ ಪರಿಮಿತಿ ಇರುವದು ಇಷ್ಟವದೆ. ಗಂಡನು ಚಿಕ್ಕವಯಸ್ಸಿನಲ್ಲಿ ಮರಣಪಟ್ಟರೆ, ಜಾತಿ ಭ್ರಷ್ಟನಾದರೆ, ಅಥವಾ ರೋಗಿಷ್ಟನಾಗಿ ಪ್ರಪಂಚ ಮಾಡಲಿಕ್ಕೆ ಅಸಮರ್ಥನಾದರೆ ಹೆಂಡತಿಯು ಪುನರ್ವಿವಾಹ ಮಾಡಿಕೊಳ್ಳುವುದು ವಿಹಿತವು.
ಆದರೆ ಮುದುಕಿಯರು ನಾಲ್ಕು ನಾಲ್ಕು ಯಂಟೆಂಟು ಮಕ್ಕಳನ್ನು ಹಡೆದು ಆ ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ತಾವು ಎರಡನೆ ಗಂಡನನ್ನು ಮಾಡಿಕೊಳ್ಳುವುದೂ, ಹೆಂಡತಿಯು ತನ್ನ ಗಂಡನ ಕೂಡ ಜಗಳಾಡಿ ಅವನನ್ನು ಬಿಟ್ಟುಹೋಗಿ ತನ್ನ ಮನಸ್ಸಿಗೆ ಬಂದ ಮತ್ತೊಬ್ಬನನ್ನು ಗಂಡನಾಗಿ ಮಾಡಿಕೊಳ್ಳುವದೂ, ಎರಡು ಮೂರು ನಾಲ್ಕು ಐದು ಆರು ಪುನರ್ವಿವಾಹಗಳನ್ನು ಒಬ್ಬಳೇ ಹೆಂಗಸು ಮಾಡಿಕೊಳ್ಳುವದೂ, ನಮ್ಮ ಸಮಾಜಕ್ಕೆ ಬಹಳೇ ಘಾತಕವಾಗಿರುತ್ತದೆ. ಇದರಿಂದ ಎಷ್ಟೋ ಬಡವರ ಹೆಂಡಂದಿರು ಅವರನ್ನು ತ್ಯಜಿಸಿ ಶ್ರೀಮಂತರನ್ನು ಅಪೇಕ್ಷೆ ಮಾಡುವದರಿಂದ ಆ ಬಡವರ ಪ್ರಪಂಚಗಳು ಮುಳುಗುವವು. ಆದ್ದರಿಂದ ಇಂಥ ಪುನರ್ವಿವಾಹಕ್ಕೆ ಉತ್ತೇಜನ ದೊರೆಯದೆ ಇರುವದೇ ಸಮಾಜಕ್ಕೆ ಹಿತಕರವಾದದ್ದೆಂದು ನನಗೆ ತೋರುತ್ತದೆ.
೭ನೇದ್ದು-ಸಮುದ್ರ ಪರ್ಯಟಣವು : ಈ ವಿಷಯವು ಬಹಳ ಮಹತ್ವದ್ದಿರುತ್ತದೆ. ಆತ್ರೋನ್ನತಿಗಾಗಲೀ ದೇಶೋನ್ನತಿಗಾಗಲೀ ಬೇರೆ ಬೇರೆ ಸುಧಾರಿಸಿದ ರಾಷ್ಟ್ರಗಳೊಳಗಿನ ವಸ್ತು ಸ್ಥಿತಿಗಳ ಜ್ಞಾನವನ್ನು ಪಡಕೊಂಡು ಬರುವದಕ್ಕಾಗಲೀ ಸಮುದ್ರ ಪರ್ಯಟಣವು ಬಹಳ ಅಗತ್ಯವಾದದ್ದು. ನಮ್ಮನ್ನಾಳುವ ಅರಸರ ರಾಜಧಾನಿಯೂ, ಶ್ರೇಷ್ಠವಾದ ವಿದ್ಯಾಕಲಾಕೌಶಲ್ಯಗಳನ್ನು ಅಭ್ಯಾಸ ಮಾಡುವ ಸಾಧನಗಳೂ ಸಮುದ್ರದಾಚೆಗೆ ಇರುವದರಿಂದ ನಾವು ಈ ಅನುಕೂಲತೆಯನ್ನು ಮಾಡಿಕೊಡಲಿಕ್ಕೇಬೇಕು.
ಇಲ್ಲದಿದ್ದರೆ ನಮ್ಮ ದೇಶದಲ್ಲಿಯ ಉಳಿದ ಮತ- ಬಾಂಧವರು ಈ ಅನುಕೂಲತೆಯನ್ನು ಮಾಡಿಕೊಟ್ಟು ಜ್ಞಾನವೃದ್ಧಿಗೆ ಸಹಾಯ ಮಾಡುತ್ತಿರುವಾಗ ನಾವು ಮಾತ್ರ ಇದಕ್ಕೆ ಪ್ರತಿಬಂಧಮಾಡಿ ಅಜ್ಞಾನಾವಸ್ಥೆಯಲ್ಲಿರುವದು ಇಷ್ಟವಿಲ್ಲ. ಆದರೆ ಸಮುದ್ರ ಪರ್ಯಟಣವನ್ನು ಮಾಡುವವರು ಭ್ರಷ್ಟವಾದ ಆಚಾರಗಳನ್ನು ಮಾಡಲಾಗದೆಂತಲೂ, ಅವರ ಅನ್ನಪಾನಾದಿಗಳು ಶುದ್ಧವಾಗಿರಬೇಕೆಂತಲೂ ಹೋಗಲಿಚ್ಛಿಸುವವರಿಗೆ ನಮ್ಮ ಗುರುಗಳೂ ಉಳಿದ ಸಮಾಜದವರೂ ನಾನು ಮೇಲೆ ಹೇಳಿದಂತೆ ಅನುಕೂಲ ಮಾಡಿಕೊಟ್ಟಲ್ಲಿ ಅವರು ನಮ್ಮ ಸಮಾಜಕ್ಕೆ ಬಹಳ ಉಪಕಾರ ಮಾಡಿದಂತೆ
ಆಗುವದು.
-
-
- ಲಿಂಗಾಯತ ಧರ್ಮದ ಕಾಲ ನಿರ್ಣಯವು
-
ಲಿಂಗಾಯತ ಧರ್ಮವು ಬಹಳ ಪ್ರಾಚೀನ ಕಾಲದಿದ್ದು ಕೆಲವು ಅನ್ಯ ಮತದವರು ಕೇವಲ ಅಜ್ಞಾನದಿಂದ, ಈ ಮತವು ಶ್ರೀ ಬಸವೇಶ್ವರನಿಂದ ಸ್ಥಾಪಿತವಾಯಿತೆಂದು ಬರೆದಿರುತ್ತಾರೆ. ಇವರು ತಮ್ಮ ಈ ಪ್ರಕಾರದ ಬರಹಕ್ಕೆ ಆಧಾರವೇನೂ ಕೊಟ್ಟಿಲ್ಲ.
ಇದನ್ನು ನಾವು ಶಾಸ್ತ್ರಾಧಾರದಿಂದ ಖಂಡನೆ ಮಾಡುವದು ನಮ್ಮ ಕರ್ತವ್ಯವು. ನಮ್ಮೊಳಗೆ ಕೆಲವು ವಿದ್ವಾಂಸರು ಈ ಮೊದಲೇ ಲಿಂಗಾಯತ ಮತದ ಕಾಲ ನಿರ್ಣಯದ ಬಗ್ಗೆ ಸಣ್ಣ ಪುಟ್ಟ ಗ್ರಂಥಗಳನ್ನು ಪ್ರಸಿದ್ಧಿಸತಕ್ಕದ್ದು. ಆದರೆ ಸೋಮಾರಿತನದಿಂದ ಹಾಗೂ ದುರ್ಲಕ್ಷ್ಯದಿಂದ ಈ ಮಹತ್ವದ ಕೆಲಸವು ಹಾಗೇ ಉಳಿದಿರುತ್ತದೆ. ಆದ್ದರಿಂದ ಮಹಾಸಭೆಯವರು ಈ ವಿಷಯಕ್ಕೆ ಮೊದಲಿನ ಸ್ಥಳವನ್ನೇ ಕೊಟ್ಟದ್ದು ಬಹಳ ಆನಂದದ ಮಾತು.
ಶ್ರೀ ಬಸವೇಶ್ವರನು ಕ್ರಿಸ್ತಶಕದ ೧೨ನೇ ಶತಮಾನದಲ್ಲಿ ಬಿಜ್ಜಳನ ಕಾಲಕ್ಕೇ ಇದ್ದನೆಂಬುವದು ಇತಿಹಾಸ ಪ್ರಸಿದ್ಧವಿದೆ. ಆದರೆ ಕ್ರಿಸ್ತಶಕದ ೯ನೆಯ ಶತಮಾನದಲ್ಲಿ ಕಂಚಿ ಎಂಬ ಊರಲ್ಲಿ ಶಿವಕೋಟಿಯೆಂಬ ಅರಸನು ರಾಜ್ಯವಾಳುವಾಗ್ಗೆ ಅಕಳಂಕನೆಂಬವನು ವೀರಶೈವರ ಪಕ್ಷ ವಹಿಸಿ ಜೈನ ಪಂಡಿತರನ್ನು ಸೋಲಿಸಿದನೆಂದು ಅಕಳಂಕ ಚರಿತ್ರವೆಂಬ ಜೈನ ಗ್ರಂಥದಲ್ಲಿ ಬರೆದಿದೆ.
ಇದರಿಂದ ಶ್ರೀ ಬಸವೇಶ್ವರನು ಇದ್ದ ಕಾಲಕ್ಕಿಂತ ೩೦೦ ವರುಷಗಳ ಪೂರ್ವದಲ್ಲಿ ವೀರಶೈವರು ಇದ್ದರೆಂದು ಸಿದ್ದವಾಗುತ್ತವೆ. ಮತ್ತು ಚೇರ ದೇಶದಲ್ಲಿ ೮ನೆಯ ಶತಮಾನದಲ್ಲಿ ರಾಜ್ಯವಾಳಿದ ರಾಯಗೋವಿಂದನೆಂಬ ಅರಸನು ಲಿಂಗಧಾರಿಗಳ ಅಭಿಮಾನಿ ಇದ್ದನೆಂದು ಬ್ರಾವುನ ಸಾಹೇಬರು ಬರೆದ ಕರ್ಣಾಟಕದ ಇತಿಹಾಸದ ಮೇಲಿಂದ ತಿಳಿಯುತ್ತದೆ.
ಇದಲ್ಲದೆ ವಿಕ್ರಮಾರ್ಕಶಕದ ೬೩೧ನೇ ವರ್ಷದಲ್ಲಿ ಅಂದರೆ ೧೩೨೯ ವರುಷಗಳ ಹಿಂದೆ ಕಾಶೀ ಅರಸನಾದ ಜಯನಂದದೇವನು ಅಲ್ಲಿಯ ಧರ್ಮಪೀಠಕ್ಕೆ ಜಂಗಮಪುರವನ್ನು ಉಂಬಳಿಯಾಗಿ ಕೊಟ್ಟಿದ್ದನೆಂಬುವದು ಶಾಸನದಿಂದ ಸಿದ್ಧವಾಗುತ್ತವೆ.
ಶ್ರೀ ಬಸವೇಶ್ವರನ ಕಾಲಕ್ಕಿಂತ ಪೂರ್ವದಲ್ಲಿ ಲಿಂಗಾಯಿತರಿದ್ದರೆಂದು ಮೇಲೆ ಬರೆದ ಪ್ರಮಾಣಗಳಿಂದ ಸಭಲವಾಗಿ ಸಿದ್ಧವಾಗುತ್ತಿರಲು ನಮ್ಮ ಪ್ರೀತ್ಯಾಸ್ಪದ ಲೇಖಕರು ಇದಕ್ಕೆ ಏನು ಉತ್ತರ ಕೊಡುವರು? ಮೇಲಾಗಿ ವೇದಾಗಮಗಳಲ್ಲಿ ಲಿಂಗಧಾರಿ ‘ವೀರಶೈವ’ ಮತ್ತು ಇವುಗಳಂತ ಇನ್ನು ಕೆಲವು ವೀರಶೈವ ಧರ್ಮ ಸಮ್ಮಂಧಿಯ ಉಲ್ಲೇಖಗಳು ಸ್ಪಷ್ಟವಾಗಿ ತಿಳಿಯುವಂತೆ ಬರೆಯಲ್ಪಟ್ಟಿರುತ್ತವೆ. ಇವೆಲ್ಲ ಕಾರಣಗಳಿಂದ ಶ್ರೀ ಬಸವೇಶ್ವರರು ಇದ್ದ ಕಾಲಕ್ಕಿಂತ ಪೂರ್ವದಲ್ಲಿ ಲಿಂಗಾಯತ ಮತವಿತ್ತವೆಂದು ಸಿದ್ಧವಾಗುತ್ತದೆ.
-
-
- ಲಿಂಗಾಯತ ಧರ್ಮೋಪದೇಶಕರು
-
ಲಿಂಗಾಯತರಲ್ಲಿ ಧರ್ಮೋಪದೇಶಕರು ಇರುವದು ಬಹಳೇ ಅಗತ್ಯವಿದೆ. ಇವರು ಪ್ರತಿಯೊಂದು ಊರಿಗೆ ಹೋಗಿ ಲಿಂಗಾಯತ ಧರ್ಮವನ್ನು ಜಂಗಮರ ಮತ್ತು ಭಕ್ತರ ಕರ್ತವ್ಯಗಳನ್ನೂ, ದಿನಾಲು ಶಿವಪೂಜೆಯನ್ನು ಮಾಡುವ ಕಾಲಕ್ಕೆ ಬೇಕಾಗುವ ಮಂತ್ರೋಕ್ತ ವಿಧಾನಗಳನ್ನು, ಲಗ್ನದ ಕಾರ್ಯಗಳಲ್ಲಿ ಜಂಗಮರು ಮಾಡಬೇಕಾದ ಶಾಸ್ರೋಕ್ತ ವಿಧಿಗಳನ್ನು, ಅವರಿಗೆ ತಿಳಿಸಿ ಕೊಡಬೇಕು. ಲಿಂಗವೆಂದರೇನು, ಜಂಗಮವೆಂದರೇನು ಮುಂತಾದ ಅಷ್ಟಾವರಣಗಳ ವಿಷಯವನ್ನು ಎಲ್ಲ ಜನರಿಗೆ ತಿಳಿಯುವಂಥ ಶಬ್ದಗಳನ್ನು ಬೋಧಿಸಬೇಕು ಮತ್ತು ಯಾರು ಲಿಂಗಧಾರಣವನ್ನು ಮಾಡುವದಿಲ್ಲವೋ ಅಂಥವರಿಗೆ ಬೋಧ ಮಾಡಿ ಲಿಂಗಧಾರಣೆ ಮಾಡಿಸಬೇಕು.
ಮತ್ತು ಯಾವನು ಈ ಉಪದೇಶಕ್ಕೆ ಒಳಗಾಗದೆ ಇರುವನೋ ಅಂಥವನು ಕೂಡ ಅನ್ನೋದಕ ಮತ್ತು ಶರೀರ ಸಂಬಂಧ ಮಾಡಕೂಡದೆಂದು ಅಲ್ಲಲ್ಲಿಯ ಮಠಸ್ಥರಿಗೆ ಮತ್ತು ಸಮೀಪದಲ್ಲಿರುವ ಪಂಚಾಯತ ಜನರಿಗೆ ತಿಳಿಸಬೇಕು. ಇದಲ್ಲದೆ ಪ್ರತಿಯೊಂದು ಗ್ರಾಮದಲ್ಲಿ ತಾವು ಎಷ್ಟು ಮಂದಿಗೆ ಲಿಂಗಧಾರಣೆ ಮಾಡಿಸಿ ಆಚಾರಕ್ಕೆ ಹಚ್ಚಿದರೆಂಬ ಬಗ್ಗೆ ಮೇಲಿಂದ ಮೇಲೆ ರಿಪೋರ್ಟು ಮಾಡಬೇಕೆಂಬ ಬಗ್ಗೆ ಈ ಸಭೆಯವರು ನಿಯಮ ಮಾಡಿದರೆ ವಿಹಿತವಾಗುವದು. ಮತ್ತು ನೀತಿಯ ಬೋಧವನ್ನು ಚನ್ನಾಗಿ ಮಾಡಿ ಇಂತಿಂಥ ಒಳ್ಳೆಕಾರ್ಯದಿಂದ ಇಂತಿಂಥ ಒಳ್ಳೆ ಫಲವು ದೊರಕುವದೆಂದು ತಿಳುಹಿಸಬೇಕು.
ಇದಲ್ಲದೆ ಲಿಂಗಾಯತ ಜನರು ತಮ್ಮ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲಿಕ್ಕೆ ಶಾಲೆಗೆ ಕಳಿಸುತ್ತಾರೆ ಇಲ್ಲವೋ ತಿಳಿಸದೆ ಇದ್ದರೆ ಅವರಿಗೆ ಏನು ಅಡಚಣೆಯುಂಟು, ಅವರಿಗೆ ಹಣದ ಸಹಾಯ ಬೇಕಾಗಿದ್ದರೆ, ಅಥವಾ ಸರಕಾರಿಗಳು ಇಲ್ಲದಿದ್ದರೆ, ಶಾಲಾಗುರುಗಳು ಬೇಕಾಗಿದ್ದರೆ ಅವೆಲ್ಲವನ್ನು ಧಾರವಾಡ, ಬೆಳಗಾವ. ಸೊಲ್ಲಾಪೂರ, ಮೈಸೂರು ಅಥವಾ ಮತ್ಯಾವದಾದರೊಂದು ಪ್ರಸಿದ್ಧ ಪಟ್ಟಣದ ಪ್ರಮುಖ ಗೃಹಸ್ಥರಿಗೆ ತಿಳಸಬೇಕು. ನಮ್ಮ ಧರ್ಮೋಪದೇಶಕರು ಲಿಂಗಾಯತರು ಇರುವ ದೊಡ್ಡ ಪಟ್ಟಣಕ್ಕೆ ಮಾತ್ರ ಅಲ್ಲದೆ ಯಾವತ್ತೂ ಸಣ್ಣ ಸಣ್ಣ ಹಳ್ಳಿಗೆ ಸಹ ಹೋಗಿ ತಮ್ಮ ವ್ಯಾಖ್ಯಾನ ರೂಪದಿಂದಲೂ, ಶಿವಕೀರ್ತನೆಯ ರೂಪದಿಂದಲೂ ಲಿಂಗಾಯತ ಧರ್ಮೋಪದೇಶವನ್ನು ಮಾಡಬೇಕು.
ಈ ಧರ್ಮೋಪದೇಶವನ್ನು ಮಾಡುವುದಕ್ಕಾಗಿ “ಧರ್ಮೋಪದೇಶಕರ ಫಂಡು” ಕೂಡಿಸಬೇಕು. ಮತ್ತು ಈ ಸಭೆಯವರು ಶಿವಭಕ್ತಿ ಆಚಾರ ಸಂಬಂಧವಾಗಿ ಚಿಕ್ಕ ಚಿಕ್ಕ ಪುಸ್ತಕಗಳನ್ನು ಕನ್ನಡ, ಮರಾಠಿ, ಮತ್ತು ತೆಲುಗುಭಾಷೆಗಳಲ್ಲಿ ಛಾಪಿಸಿ ಉಪದೇಶಕರ ದ್ವಾರದಿಂದ ಹಂಚಬೇಕು. ಧರ್ಮೋಪದೇಶಕರ ಫಂಡು ಪ್ರತಿ ಒಂದು ಊರಲ್ಲಿ ಸ್ಥಾಪನವಾಗಬೇಕು. ಅಂದರೆ ಕೆಲಸವು ಸುಲಭವಾಗಿ ಸಾಗುವದು. ಆದರೆ ಕೆಲಕೆಲವು ಗ್ರಾಮಗಳಲ್ಲಿ ಫಂಡುಗಳು ಸ್ಥಾಪನವಾಗಿ ಚನ್ನಾಗಿ ಉಪಯೋಗವಾಗದೆ ಅವುಗಳ ದುರುಪಯೋಗವಾದೀತೆಂಬ ಭಯದಿಂದ ನಾನು ಒಂದು ಉಪಾಯವನ್ನು ಸೂಚಿಸುತ್ತೇನೆ.
ಇದು ನಿಮ್ಮೆಲ್ಲರಿಗೆ ಮಾನ್ಯ ಕಂಡರೆ ಬೇಗನೆ ಇದರಂತ ಯತ್ನಿಸಿರಿ. ಅದೇನೆಂದರೆ, ಇದೇ ಮಹಾಸಭೆಯಲ್ಲಿ ಕೂಡಿದ ಧರ್ಮಾಭಿಮಾನಿ ಜನರೊಳಗೆ ವರ್ಷಕ್ಕೆ ೩ ರೂಪಾಯಿ ಅಥವಾ ೫ ರೂಪಾಯಿ ವರ್ಗಣೆ ಹಾಕತಕ್ಕವರನ್ನು ಕಾಯಮ ಸಭಾಸದರನ್ನು ಮಾಡಿ ಅವರ ಹೆಸರಿನ ಯಾದಿ ಇಟ್ಟು ಅವರಿಂದ ಬಂದ ಹಣದಲ್ಲಿ ಪ್ರತಿ ವರ್ಷ ಇಂಥಾ ಮಹಾಸಭೆ ಕೂಡಿಸಬೇಕು. ಪರಿಷತ್ತಿಗೆ ಬರುವವರು ತಮ್ಮ ಊಟದ ಮತ್ತು ಇಳುಕೊಳ್ಳುವ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳಬೇಕೆಂಬ ನಿರ್ಬಂಧನೆಯನ್ನಿಟ್ಟರೆ ಬರೆ ಪರಿಷತ್ತಿನ ರಿಪೋರ್ಟು ಮುದ್ರಿಸಲಿಕ್ಕೆ ಮತ್ತು ಮಹಾಸಭೆಯ ವ್ಯವಸ್ಥೆಯನ್ನಿಡುವ ಉಳಿದ ಕೆಲಸಕ್ಕೆ ೨೦೦-೩೦೦ ರೂಪಾಯಿ ಖರ್ಚು ಮಾಡಿಕೊಂಡು ಉಳಿದ ಹಣವನ್ನು ಧರ್ಮೋಪದೇಶಕರಿಗೆ ಸಂಬಳಕ್ಕಾಗಿ ಕೊಡಬೇಕು.
ಈಗ ತುರ್ತಕ್ಕೆ ೫ ಜನ ಧರ್ಮೋಪದೇಶಕರ ಸಂಬಳಕ್ಕೆ ಖರ್ಚಾಗಿ ಉಳಿದ ಹಣವನ್ನು ಹಳ್ಳಿಗಳಲ್ಲಿ ಶಾಲಿಗೆ ಹೋಗುವ ಹುಡುಗರಿಗೆ ಫೀ ಕೊಡಲಿಕ್ಕೆ ಮತ್ತು ಪುಸ್ತಕ ಕೊಳ್ಳಲಿಕ್ಕೆ ಕೊಡಬೇಕು. ಮತ್ತು ವೀರಶೈವ ಪಾಠಶಾಲೆಗಳಿಗೆ ಸಹಾಯ ಮಾಡಬೇಕು. ಈ ರೀತಿಯಿಂದ ಪ್ರಯತ್ನ ಮಾಡಿದರೆ ಏನು ಫಲವು ಆಗುತ್ತದೆಂದು ಅನುಭವ ತೆಗೆದುಕೊಳ್ಳುವುದು ಬಹಳ ಮಹತ್ವವುಳ್ಳದ್ದೆಂದು ನನಗೆ ಕಾಣಿಸಿದ್ದರಿಂದ ಈ ವಿಷಯವನ್ನು ಮುಖ್ಯವಾಗಿ ನಿಮ್ಮೆಲ್ಲರ ಮುಂದೆ ಇಟ್ಟಿದ್ದೇನೆ. ಈ ಹೊತ್ತು ನಮ್ಮ ಧರ್ಮ ಬುದ್ಧಿಯು ನಿಜವಾಗಿ ಜಾಗ್ರತೆಯಾಗಿದ್ದರೆ, ನಿಜವಾಗಿ ನಮ್ಮ ಸಮಾಜದ ಕಲ್ಯಾಣವಾಗಬೇಕೆಂದು ನಾವು ಅಪೇಕ್ಷಿಸುತ್ತಿದ್ದರೆ,ಕೇವಲ ಉದರಂಭರಣಾರ್ಥವಾಗಿ ಜೀವಿಸಿಕೊಳ್ಳದೆ ನಮ್ಮ ಕೈಯಿಂದ ಏನಾದರೂ ಪರೋಪಕಾರ, ಸ್ವಜನಸೇವಾ, ಸ್ವಜಾತಿ ಕಲ್ಯಾಣಗಳು ಆಗಬೇಕೆಂಬುದು ನಮ್ಮ ಮನಸ್ಸಿನಲ್ಲಿ ಎಳ್ಳಷ್ಟಾದರೂ ಬಂದಿದ್ದರೆ ಒಂದು ಸ್ಥಿರವಾದ ವ್ಯವಸ್ಥಾಪಕ ಸಂಘವನ್ನು ಅವಶ್ಯಕವಾಗಿ ಸ್ಥಾಪಿಸಿಕೊಳ್ಳತಕ್ಕದ್ದು.
ಇಲ್ಲದಿದ್ದರೆ ನಾವು ಇಲ್ಲಿ ಮಹಾಸಭೆಗೆ ಬಂದು ಬರೇ ವಾಕ್ಚಾತುರ್ಯವುಳ್ಳ ಭಾಷಣಗಳನ್ನು ಮಾಡಿ ಮಹಾಸಭೆಯಲ್ಲಿ ಕೂತಾಗ್ಗೆ ಮಾತ್ರ ಅಭಿಮಾನವನ್ನು ಮೈಯಲ್ಲಿ ಸೇರಿಸಿಕೊಂಡು ಮಹಾಸಭೆಯನ್ನು ಬಿಟ್ಟು ಮನೆಗೆ ಹೋದ ಕೂಡಲೇ ನಮ್ಮ ಅಭಿಮಾನದ ಮೇಲೆ ನೀರು ಎರೆದು ಚೌಕಾಸವನ್ನು ಹಾಕಿಕೊಂಡು ಕೂಡುವದು ಅಥವಾ ನಿದ್ರಾವಶರಾಗುವದು ಯೋಗ್ಯರಲ್ಲ. ಏನಾದರೂ ಕೃತಿಯನ್ನು ನಡಿಸಿರಿ, ಬಾಯಿಂದ ಮಾತಾಡಿ ಸುಮ್ಮನೇ ಕೂಡ್ರಬೇಡಿರಿ, ಎಂದು ನಾನು ನಿಮಗೆ ಪುನಃ ಬೇಡಿಕೊಳ್ಳುತ್ತೇನೆ. ಹಾಗೂ ಈ ವಿಷಯವನ್ನು ಸಬ್ಜೆಕ್ಟ್ ಕಮಿಟಿಯವರು ಲಕ್ಷದಲ್ಲಿ ತೆಗೆದುಕೊಂಡು ಏನಾದರೂ ವ್ಯವಸ್ಥೆ ಮಾಡುವರೆಂದು ಆಶಿಸುತ್ತೇನೆ.
-
-
- ವೀರಶೈವ ಪಾಠಶಾಲೆಗಳು
-
ನಮ್ಮ ಜನರೊಳಗೆ ವಿದ್ಯಾಭ್ಯಾಸವು ಬಹಳ ಕಡಿಮೆ ಇರುತ್ತದೆ. ೧೦೦ಕ್ಕೆ ಇಬ್ಬರು ಸಹ ಅಭ್ಯಾಸ ಮಾಡಿರುವದಿಲ್ಲ. ವೈದ್ಯಕೀಯ ವಿದ್ಯೆಯು ಮೊದಲು ಜಂಗಮರಿಗೆ ತಕ್ಕಮಟ್ಟಿಗೆ ಬರುತ್ತಿತ್ತು. ಆದರೆ ಈಗ ಜಂಗಮರು ಬಹುಶಃ ಈ ಅಭ್ಯಾಸವನ್ನು ಮಾಡುವದಿಲ್ಲ. ಭಕ್ತರು ಮತವೆಂದರೇನು ಎಂಬುದನ್ನು ತಿಳಿದುಕೊಳ್ಳಲಿಕ್ಕೆ ಪ್ರಯತ್ನಿಸುವದಿಲ್ಲ. ಮತಗ್ರಂಥಗಳು ಯಾವುವು? ಯಾವ ಭಾಷೆಯಲ್ಲಿರುತ್ತವೆ? ಇದು ಸಹ ಅನೇಕರಿಗೆ ಗೊತ್ತಿಲ್ಲ. ಆದ್ದರಿಂದ ಅಲ್ಲಲ್ಲಿ ವೀರಶೈವ ಪಾಠಶಾಲೆಗಳನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಊಟ ಉಪಚಾರಕ್ಕೂ ಅನುಕೂಲತೆಯನ್ನು ಮಾಡಿಕೊಡಬೇಕು.
ಈ ಪಾಠಶಾಲೆಗಳಲ್ಲಿ ಸಂಸ್ಕೃತ ಅಭ್ಯಾಸವನ್ನು ಸಹ ತಕ್ಕಮಟ್ಟಿಗೆ ಮಾಡಿ, ಕನ್ನಡ ಮರಾಠಿ ಭಾಷೆಗಳನ್ನು ಮತಗ್ರಂಥಗಳನ್ನು ಕಲಿಸಬೇಕು. ಅಂದರೆ ಈ ಪಾಠಶಾಲೆಯಿಂದ ಹೊರಬೀಳುವ ವಿದ್ಯಾರ್ಥಿಗಳೂ ಶಾಸ್ತ್ರಿಗಳೂ ಧರ್ಮೋಪದೇಶಕರೂ ಆಗಿ ನಮ್ಮ ಸಮಾಜಕ್ಕೆ ಬಹು ಪ್ರಯೋಜನವಾಗುವದಲ್ಲದೆ ನಮ್ಮ ಧರ್ಮಕೃತ್ಯಗಳೆಲ್ಲ ಶಾಸ್ತೋಕ್ತವಾಗಿ ಜರುಗುವವು. ಇದನ್ನು ಎಲ್ಲ ವೀರಶೈವ ಮತಾಭಿಮಾನಿಗಳು ಚೆನ್ನಾಗಿ ಲಕ್ಷದಲ್ಲಿ ತರತಕ್ಕದ್ದು.
-
-
- ನಮ್ಮ ಜನರು ತಂಟೆ ಮುಂತಾದ್ದರಲ್ಲಿ ಹಣವನ್ನು ಹಾಳು ಮಾಡುವಿಕೆ
-
ಕೋರ್ಟಿನಲ್ಲಿ ವ್ಯಾಜ್ಯಗಳನ್ನು ಮಾಡುವವರು ನಮ್ಮ ಜನರೇ ಬಹಳ ಮಂದಿ, ದಕ್ಷಿಣ ಮಹಾರಾಷ್ಟ್ರ ದೇಶದ ಎಲ್ಲ ದಿವಾಣಿ ಮತ್ತು ಫೌಜದಾರಿ ಕೋರ್ಟುಗಳಲ್ಲಿರುವ ವ್ಯಾಜ್ಯಾಗಳ ಸಂಖ್ಯೆಯನ್ನು ನೋಡಿದರೆ ೧೦೦ಕ್ಕೆ ೭೫ ತಂಟೆಗಳೂ ವ್ಯಾಜ್ಯಗಳೂ ನಮ್ಮ ಜನರವೇ ಇರುತ್ತವೆ. ಈರ್ಷೆಯಿಂದಲೂ, ಸಿಟ್ಟಿನಿಂದಲೂ, ನಿರರ್ಥಕವಾಗಿ ತಂಟೆಗಳನ್ನು ಮಾಡಿ ವರ್ಷಕ್ಕೆ ಲಕ್ಷಗಟ್ಟೆ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಕೋರ್ಟು ಫೀ ರೂಪದಿಂದ ಸರಕಾರಕ್ಕೆ ದಂಡ ಕೊಡುವದಲ್ಲದೆ, ವಕೀಲರಿಗೆ ಫೀ ಬಯಾನು ಮುಂತಾದ ರೂಪಗಳಿಂದ ಬೊಗಸೆ ತುಂಬ ರೂಪಾಯಿಗಳನ್ನು ಕೊಟ್ಟು ತಮ್ಮ ಹೊಲ ಮನೆಯನ್ನು ವತ್ತೀಹಾಕಿ ಇಲ್ಲವೆ ಮಾರಾಟ ಮಾಡಿ ಬಡತನಕ್ಕೆ ಬರುತ್ತಾರೆ. ಇದು ಎಂಥ ಶೋಚನೀಯವಾದ ಮಾತು! ಆಟ ನೋಟಗಳಲ್ಲಿ ಮತ್ತು ಶುಭಕಾರ್ಯಗಳಲ್ಲಿ ಹಣವನ್ನು ಖರ್ಚು ಮಾಡುವದು ಪ್ರಚಾರದಲ್ಲಿ ಇದೆ. ಇದಲ್ಲದೆ ತಂಟೆ ಮಾಡಿ ಕೋರ್ಟಿಗೆ ಹೋದ ಬಳಿಕ “ಗಾಣದಲ್ಲಿ ಕಬ್ಬುಗಳನ್ನು ಹಾಕಿ ರಸವನ್ನು ಹಿಂಡಿದ ಮೇಲೆ ಉಳಿದ ಹಿಪ್ಪಿಯಂತೆ” ನಮ್ಮ ಜನರ ಅವಸ್ಥೆಯಾಗುವುದು ಏನಾಶ್ಚರ್ಯವು. ಇನ್ನಾದರೂ ನಮ್ಮ ಜನರು ಬುದ್ದಿಯನ್ನು ಕಲಿತು ತಮ್ಮ ತಂಟೆಗಳನ್ನು ಪಂಚರ ವಿದ್ಯಮಾನ ತೀರಿಸಿಕೊಂಡರೆ ಅರ್ಥಹಾನಿಯೂ ಮಾನಹಾನಿಯೂ ತಪ್ಪುವವು.
-
-
- ಸ್ತ್ರೀ ಶಿಕ್ಷಣ
-
ಎಲ್ಲ ಸುಧಾರಣೆಗಳಿಗೆ ವಿದ್ಯೆಯೇ ಮುಖ್ಯ. ಹಣವನ್ನು ಹಾಳು ಮಾಡಿಕೊಡಬಾರದೆಂಬುದನ್ನು ತಿಳಿದುಕೊಳ್ಳಲಿಕ್ಕೆ ವಿದ್ಯೆಯು ಬೇಕು, ತಂಟೆ ಮಾಡುವದನ್ನು ಬಿಡುವದಕ್ಕೆ ವಿದ್ಯೆಯು ಬೇಕು. ಸಾರಾಂಶ, ವಿದ್ಯೆಯು ಎಲ್ಲ ಕೆಲಸಕ್ಕೆ ಮುಖ್ಯವಾಗಿ ಬೇಕು. ಆದರೆ ಗಂಡಸು ಮಾತ್ರ ವಿದ್ಯೆ ಕಲಿತರೆ ಸಾಕಾಗದು. ಹೆಂಗಸರೂ ನಿತ್ಯ ಪ್ರಪಂಚದ ಕೆಲಸಕ್ಕೆ ಮತ್ತು ಬಾಲಕರ ಆರಂಭದ ಶಿಕ್ಷಣಕ್ಕೆ ಬೇಕಾಗುವಷ್ಟು ವಿದ್ಯೆಯನ್ನು ಕಲಿಯಲಿಕ್ಕೆ ಬೇಕು.
ಗಂಡಸರಿಗೆ ಉತ್ತರವಾಗಿ ಸಂಸಾರ ಮಾಡಲಿಕ್ಕೆ ಸದ್ಧರ್ಮ ಸುನೀತಿಗಳಿಂದ ಆಚರಿಸಲಿಕ್ಕೂ ಕಲಿತ ಹೆಂಡಂದಿರ ಸಹಾಯವು ಮುಖ್ಯವಾಗಿ ಬೇಕಾಗುತ್ತದೆ. ಚಿಕ್ಕ ಮಕ್ಕಳಿಗೆ ತಂದೆಯ ವಿದ್ಯೆಗಿಂತ ತಾಯಿಗಳ ವಿದ್ಯೆಯು ಹೆಚ್ಚು ಉಪಯೋಗಕ್ಕೆ ಬೀಳುವದು. ಯಾಕೆಂದರೆ ಚಿಕ್ಕ ಮಕ್ಕಳು ತಂದೆಗಿಂತ ತಾಯಿಯ ಬಳಿಯಲ್ಲಿ ಹೆಚ್ಚು ಕಾಲದವರೆಗೆ ಇರುವರು. ಆದ್ದರಿಂದ ತಾಯಂದಿರ ಗುಣದ ಮೇಲೂ ಅವರ ಶಿಕ್ಷಣದ ಮೇಲೂ ಮಕ್ಕಳ ಗುಣವೂ ಅವಲಂಬಿಸಿರುತ್ತದೆ. ಮಕ್ಕಳು ಸಣ್ಣವರಿರುವಾಗ್ಗೆ ಕಲಿತ ಗುಣವನ್ನು ಮುಂದೆ ದೊಡ್ಡವರಾದ ಮೇಲೆ ಬಹುಶಃ ಬಿಡುವದಿಲ್ಲ. ತಾಯಂದಿರು ಸುರಕ್ಷಿತರಿದ್ದರೆ ಅವರು ಮಕ್ಕಳಿಗೆ ಸುಶಿಕ್ಷಣವನ್ನು ಕೊಡುವರು. ಅವರಿಂದ ವಿದ್ಯೆಯು ನಮ್ಮೊಳಗೆ ಈಗಿರುವದಕ್ಕಿಂತ ಇಮ್ಮಡಿ ಮುಮ್ಮಡಿ ವೇಗದಿಂದ ಪ್ರಸಾರವಾಗುವದು. ಆದ್ದರಿಂದ ಸ್ತ್ರೀ ಶಿಕ್ಷಣದ ಬಗ್ಗೆ ನಮ್ಮ ಜನರು ಆದಷ್ಟು ಉತ್ತೇಜನ ಕೊಡುವರೆಂದು ನಂಬುತ್ತೇನೆ.
-
-
- ನೀತಿ ಶಿಕ್ಷಣ
-
ಧರ್ಮ ಶಿಕ್ಷಣದಲ್ಲಿ ನೀತಿ-ಶಿಕ್ಷಣವೂ ಸಮಾವೇಶವಾಗುತ್ತದೆ. ಧರ್ಮ ಶಿಕ್ಷಣ ಕೊಟ್ಟರೆ ನೀತಿ ಶಿಕ್ಷಣವು ತಾನಾಗಿ ಬರುತ್ತದೆ. ವಿದ್ಯೆಯನ್ನು ಧರ್ಮ ಶಿಕ್ಷಣ ಮತ್ತು ನೀತಿ ಶಿಕ್ಷಣಗಳನ್ನನುಸರಿಸಿ ಕೊಟ್ಟರೆ ನಮ್ಮಲ್ಲಿ ಘನ ವಿದ್ವಾಂಸರೂ ಧರ್ಮಿಷ್ಠರೂ ನೀತಿವಂತರೂ ಆಗುವರು. ಧರ್ಮ ಮತ್ತು ನೀತಿಗಳು ಇರದಿದ್ದರೆ ವಿದ್ಯೆಯು ಬಂದರೂ ವ್ಯರ್ಥ. ಸುಳ್ಳುಗಾರರೂ, ಕೊಲೆಗಾರರೂ, ಚಾಡಿಗಾರರೂ ಮನೆಗೆ ಬೆಂಕಿ ಹಚ್ಚುವವರೂ, ಅಪ್ರಮಾಣಿಕರೂ, ವ್ಯಭಿಚಾರಿಗಳೂ, ಯಾವ ಜನರಲ್ಲಿ ಹೆಚ್ಚಾಗಿರುವರೋ ಅವರು ಗ್ರಹಣ ಹಿಡಿದ ಸೂರ್ಯನಂತೆ ತೇಜಹೀನರಾಗುವರು ಅವರು ಎಂದಿಗೂ ಮುಂದಕ್ಕೆ ಬರಲಾರರು. ಆದ್ದರಿಂದ ನಾವು ನೀತಿ ಶಿಕ್ಷಣದ ಕಡೆಗೆ ವಿಶೇಷ ಲಕ್ಷ ಕೊಡತಕ್ಕದ್ದು.
-
-
- ತುರಂಗದಲ್ಲಿಯ ವೀರಶೈವ ಕೈದಿಗಳು
-
ನಾನು ಮೇಲೆ ನೀತಿ ಶಿಕ್ಷಣದ ವಿಷಯಕ್ಕೆ ಹೇಳಿದ್ದರಲ್ಲಿ ಅನೀತಿಯಿಂದ ನಡೆದ ಜನರಿಂದ ಸಮಾಜಕ್ಕೆ ಆಗುವ ಅಪಾಯಗಳನ್ನು ವಿವರಿಸಿದ್ದೇನೆ. ಇಂಥ ಜನರೇ ಸರಕಾರದ ದಂಡನೆಗೆ ಒಳಪಟ್ಟು ತುರಂಗದಲ್ಲಿ ವಾಸ ಮಾಡುವ ಪ್ರಸಂಗವು ಬಂದಾಗ್ಗೆ ನಮ್ಮ ಮತಕ್ಕೆ ಅತಿ ವಿರುದ್ಧವಾದ ಆಚರಣೆಗಳು, ಅಂದರೆ, ಅಂಥ ಕೈದಿಯರ ಲಿಂಗವನ್ನು ತೆಗೆಸುವದೂ, ಅವರಿಗೆ ಪರಮತಸ್ಥರ ಕಡೆಯಿಂದ ಅನ್ನ ನೀರು ಕೊಡಿಸುವದೂ ನಮ್ಮ ಮತಕ್ಕೆ ಬಹಳೇ ಕುಂದದಾಯಕಗಳಾಗಿರುತ್ತವೆ. ಬ್ರಾಹ್ಮಣ ಕೈದಿಗಳಿಗೆ ಬ್ರಾಹ್ಮಣರಿಂದಲೇ ಅನ್ನೋದಕಗಳು ದೊರಕುವಂತೆ ನಮ್ಮ ಮತದ ಕೈದಿಗಳಿಗೂ ದೊರಕಬೇಕೆಂಬ ಬಗ್ಗೆ ನಮ್ಮ ಸರಕಾರದವರಿಗೆ ನಾವು ವಿನಯಪೂರ್ವಕವಾಗಿ ಅರ್ಜಿಯ ದ್ವಾರಾ ಬೇಡಿಕೊಳ್ಳತಕ್ಕದ್ದು.
-
-
- ವ್ಯಾಪಾರ ಒಕ್ಕಲತನಗಳು
-
ವ್ಯಾಪಾರವು ನಮ್ಮ ಮತದವರ ಮುಖ್ಯ ಉಪಜೀವನದ ಸಾಧನವಿದು. ಇದಕ್ಕೂ ಸಹ ವಿದ್ಯೆಯ ಅವಶ್ಯಕತೆಯು ಬಹಳೇ ಉಂಟು. ಯಾಕೆಂದರೆ ಪೂರ್ವ ಕಾಲದಲ್ಲಿ ನಮ್ಮ ವ್ಯಾಪಾರವು ನಮ್ಮ ದೇಶದಲ್ಲಿಯೇ ನಡೆಯುತ್ತಿತ್ತು. ಈಗ ಹಿಂದುಸ್ಥಾನದ ವ್ಯಾಪಾರವು ಇಡೀ ಪೃಥ್ವಿಯೊಳಗಿನ ಬಹುಶಃ ಎಲ್ಲ ದೇಶಗಳ ಸಂಗಡ ನಡಿಯುತ್ತದೆ. ಅದುಕಾರಣ ಆ ದೇಶಗಳ ಮತ್ತು ಆ ಜನಾಂಗಗಳ ಕೂಡ ನಡಿಯುವ ವ್ಯಾಪಾರದ ಸಂಗತಿಗಳು ನಮಗೆ ತಿಳಿಯುವದು ಅತಿಶಯ ಮಹತ್ವದ್ದಾಗಿರುತ್ತದೆ. ಇದಲ್ಲದೆ ವ್ಯಾಪಾರದಲ್ಲಿ ಮೊದಲಿಗಿಂತ ಈಗ ಬಹಳ ಭೇದಗಳಾಗಿವೆ.
ಮೊದಲಿನಂತೆ ನಾವು ಚಿಕ್ಕ ತಕ್ಕಡಿ ಅಂಗಡಿಯಿಂದ ಅಥವಾ ಧ್ಯಾನದ ಕಿರುಕುಳ ವ್ಯಾಪಾರದಿಂದ ಎಂದೂ ಮುಂದಾಗಲಾರೆವು. ಈಗಿನ ಕಾಲಕ್ಕೆ ಸರಿಯಾಗಿ ವ್ಯಾಪಾರದಲ್ಲಿ ಮುಂದಾಗಬೇಕಾದರೆ ನಾವು ರೇಷ್ಮೆ, ಅರಳಿ, ಬೆಳ್ಳಿ, ಬಂಗಾರ, ನೂಲಿನ ಮತ್ತು ಉಣ್ಣೆಯ ವಸ್ತ್ರ, ಚಾಕೂ, ಕತ್ತರಿ, ಸಬಕಾರ, ದೀಪದ ಕಡ್ಡಿ ಮುಂತಾದ ಎಲ್ಲ ಸರಕುಗಳ ವ್ಯಾಪಾರವನ್ನು ದೊಡ್ಡ ಬಂಡವಾಳದ ಸಹಾಯದಿಂದ ಮಾಡಬೇಕು.
ಇದಲ್ಲದೆ ಯಂತ್ರ ಸಂಬಂಧದ ಮತ್ತು ಕಲಾಕೌಶಲ್ಯದ ಜ್ಞಾನವನ್ನು ವ್ಯಾಪಾರದ ಜ್ಞಾನವನ್ನು ಕಲಿತುಕೊಳ್ಳಲಿಕ್ಕೆ ಪರದೇಶಕ್ಕೆ ಹೋಗಬೇಕು. ಸುಧಾರಿಸಿದ ರಾಷ್ಟ್ರದವರಿಂದ ರಾಜ, ಸಬಕಾರ, ದೀಪದ ಕಡ್ಡಿ, ಛತ್ರಿ ಮುಂತಾದ ಅನೇಕ ನಿತ್ಯೋಪಯೋಗವುಳ್ಳ ಪದಾರ್ಥಗಳನ್ನು ಮಾಡಲಿಕ್ಕೆ ಕಲಿತು, ಅವುಗಳ ಕಾರಖಾನೆಗಳನ್ನು ನಮ್ಮಲ್ಲಿರುವ ಶ್ರೀಮಂತರ ಸಹಾಯದಿಂದ ಇಲ್ಲಿ ಸ್ಥಾಪಿಸಲಿಕ್ಕೆ ಬೇಕು. ಇವುಗಳಲ್ಲಿ ಕೆಲವು ಪದಾರ್ಥಗಳು ಒಳ್ಳೆ ಕ್ಷುಲ್ಲಕವೆಂದು ತೋರಿದಾಗ್ಯೂ ಅವುಗಳ ಮಾರಾಟವು ನಮ್ಮ ದೇಶದಲ್ಲಿ ಕೋಟ್ಯಾವಧಿ ರೂಪಾಯಿ ಕಿಮ್ಮತ್ತಿನದು ಆಗಿ ಈಗ ಅವುಗಳಿಂದ ಬರುವ ಲಾಭಗಳನ್ನು ಎರಡನೇ ಜನರು ತೆಗೆದುಕೊಳ್ಳುತ್ತಾರೆ.
ನಮ್ಮ ಜನರಿಗೆ ನಿತ್ಯ ಬೇಕಾಗುವ ಪದಾರ್ಥಗಳನ್ನು ನಾವೇ ಮಾಡಿ ಮಾರಿದರೆ ನಮ್ಮ ಸಮಾಜದ ಉನ್ನತಿಯಾಗುವದರಲ್ಲಿ ಸಂಶಯವಿಲ್ಲ. ಕೆಲವರು. ನಮ್ಮಿಂದ ಇಂಥ ಕಾರಖಾನೆಗಳು ಹ್ಯಾಗೆ ತೆಗೆಯಲ್ಪಟ್ಟವು ಎಂಬ ಆಕ್ಷೇಪ ತಗೆಯಬಹುದು. ಆದರೆ ನಾವು ಪಾಶ್ಚಿಮಾತ್ಯ ಜನರ ಅನುಕರಣೆ ಮಾಡಿದರೆ ಈ ಮಾತಿನ ನಿರ್ಣಯವು ಸ್ವಲ್ಪದರಲ್ಲಿಯೇ ಆಗುವದು. ಹ್ಯಾಗೆಂದರೆ ನಮ್ಮಲ್ಲಿರುವ ದೊಡ್ಡ ದೊಡ್ಡ ವರ್ತಕರು, ಕಂಪನಿಗಳನ್ನು ಸ್ಥಾಪಿಸಿ ಮೇಲೆ ಹೇಳಿದಂತೆ, ಸರಕುಗಳನ್ನು ಮಾಡುವ ಕಾರಖಾನೆಗಳನ್ನು ವೃದ್ಧಿಗೊಳಿಸಬೇಕು.
ಆದರೆ ನಮ್ಮ ಹಿಂದೂದೇಶದ ದುರ್ದೈವದಿಂದ ನಮ್ಮಲ್ಲಿದ್ದ ಸದ್ಗುಣಗಳೂ, ಸತ್ಯತೆಯೂ, ಅಪ್ರಮಾಣಿಕತನವೂ, ಆಲಸ್ಯವೂ ನಮ್ಮಲ್ಲಿ ಸೇರಿಕೊಂಡಿರುತ್ತವೆ. ಆದ್ದರಿಂದ ಇಂಥ ಕೆಲಸಗಳಾಗುವದು ಒಂದು ವೇಳೆ ದುಸ್ತರವಾದರೂ ನಮ್ಮ ವರ್ತಕರು ವಿಶ್ವಾಸವುಳ್ಳ ಜನರನ್ನು ಕೂಡಿಸಿಕೊಂಡು ಮೊದಲು ಸಣ್ಣ ಕಂಪನಿಗಳನ್ನು ಸ್ಥಾಪಿಸಿ ಅದರಲ್ಲಿ ಇಂಗ್ಲಿಷ್ ಓದುಬರಹವರಿತ ತಮ್ಮ ಮಕ್ಕಳನ್ನು ಸೇರಿಸಿ, ಅವರ ಸದ್ಗುಣ ಮುಂತಾದ್ದರ ಕಡೆಗೆ ಲಕ್ಷ ಕೊಡುತ್ತ ನಡೆದರೆ, ಕೆಲವು ಕಾಲದ ಮೇಲೆ ಆ ಮಕ್ಕಳು ಸದ್ಗುಣಿಗಳೂ,ಪ್ರಾಮಾಣಿಕರೂ ಆಗಿ ಮುಂದೆ ದೊಡ್ಡ ದೊಡ್ಡ ಕಂಪನಿಗಳನ್ನು ಸ್ಥಾಪಿಸಲಿಕ್ಕೆ ಅನಾಯಾಸವಾಗಿ ಅನುಕೂಲತೆಯಾಗುವದು.
ಸದ್ಯಕ್ಕೆ ಸಣ್ಣ ಸಣ್ಣ ಕಂಪನಿಗಳನ್ನು ಸ್ಥಾಪಿಸಿ, ಸಣ್ಣ ಸಣ್ಣ ಕಾರಖಾನೆಗಳಲ್ಲಿ ಬಂಡವಾಳವನ್ನು ಉಪಯೋಗಿಸಿದರೂ ನಮ್ಮ ವ್ಯಾಪಾರವು ತಕ್ಕಮಟ್ಟಿಗೆ ವೃದ್ಧಿಯಾಗುವದು. ಈ ಕೆಲಸಕ್ಕೆ ಪ್ರಥಮತಃ ಭಾಷಾ ಜ್ಞಾನವು, ತದನಂತರ ಕಲಾಕೌಶಲ್ಯದ ಜ್ಞಾನವು, ಆಮೇಲೆ ವ್ಯಾಪಾರದ ಸಂಗತಿಗಳ ಜ್ಞಾನವು ಅವಶ್ಯವಾಗಿ ಬೇಕಾಗಿರುವವು. ಆದ್ದರಿಂದ ನಮ್ಮಲ್ಲಿರುವ ಶ್ರೀಮಂತರು ತಮ್ಮ ಮಕ್ಕಳಿಗೆ ಈಗಿನಂತೆ ಬೇರೀಜು, ವಜಾಬಾಕಿ, ಗುಣಾಕಾರ, ಅಂಕೆಗಳ ಉಪಯೋಗ ಮುಂತಾದವುಗಳನ್ನಷ್ಟೇ ಕಲಿಸದೆ, ಉಚ್ಚಪ್ರತಿಯ ಶಿಕ್ಷಣವನ್ನು ಕೊಟ್ಟರೆ ವ್ಯಾಪಾರಕ್ಕೆ ಬಹಳ ಉಪಯೋಗವಾದೀತೆಂದು ನನ್ನ ಅಭಿಪ್ರಾಯವಿದೆ.
ಈ ಬಗ್ಗೆ ನಾವು ನಮ್ಮ ನೆರೆಯಲ್ಲಿರುವ ಜಪಾನ ದೇಶದವರ ಉದಾಹರಣೆಯನ್ನು ಮೇಲಿಂದ ಮೇಲೆ ಧ್ಯಾನದಲ್ಲಿ ತರತಕ್ಕದ್ದು. ಕೆಲವು ವರ್ಷಗಳ ಹಿಂದೆ ಈ ಸಣ್ಣ ರಾಷ್ಟ್ರವು ಯಾರಿಗೂ ಗೊತ್ತಿದ್ದಿಲ್ಲ. ಆದರೆ ಅಲ್ಲಿಯ ಜನರು ದೀರ್ಘ ಪ್ರಯತ್ನ ಮಾಡಿ ತಮ್ಮ ಮಕ್ಕಳನ್ನು ಸುಧಾರಿಸಿದ ಪರದೇಶಗಳಿಗೆ ಕಳಿಸಿ, ಅಲ್ಲಿಯ ಕಲಾಕೌಶಲ್ಯದ ಜ್ಞಾನವನ್ನು ಕಲಿತುಕೊಂಡು, ಅವರು ತಿರುಗಿ ಬಂದ ಮೇಲೆ, ಅವರ ಸಹಾಯದಿಂದ ದೊಡ್ಡ ದೊಡ್ಡ ಕಾರಖಾನೆಗಳನ್ನು ಸ್ಥಾಪಿಸಿ ವಿಧವಿಧವಾದ ಸರಕುಗಳನ್ನು ಹುಟ್ಟಿಸಹತ್ತಿದಂದಿನಿಂದ ಅವರು ವ್ಯಾಪಾರದಲ್ಲಿ ಒಳ್ಳೆ ಕೀರ್ತಿಯನ್ನು ಪಡೆದಿರುವರು. ವ್ಯಾಪಾರದ ವಿಷಯದಲ್ಲಿ ಜಪಾನರು ಈವತ್ತಿನ ಮಿತಿಗೆ ಪಾಶ್ಚಿಮಾತ್ಯ ಯಾವ ರಾಷ್ಟ್ರಕ್ಕೂ ಹಿಂದಿಲ್ಲ. ಇದನ್ನು ಕೇಳಿ ನಾವು ನಾಚದೆ ಇರಬಾರದು. ಇದರ ಉದಾಹರಣೆಯನ್ನು ನಾವು ಕ್ಷಣಶಃ ಮನಸ್ಸಿನಲ್ಲಿ ತಂದು, ದೀರ್ಘದ್ಯೋಗ ಮಾಡಿದರೆ ನಿಶ್ಚಯವಾಗಿ ನಾವು ಘನತೆಗೇರುವೆವು.
ಇನ್ನು ಮೇಲೆ ಒಕ್ಕಲುತನದ ವಿಷಯಕ್ಕೆ ಸ್ವಲ್ಪ ವಿಚಾರ ಮಾಡೋಣ. ನಮ್ಮ ಹಿಂದುಸ್ಥಾನವು ಸುವರ್ಣ ಭೂಮಿಯೆಂದು ಹೆಸರು ಹೊಂದುವದಕ್ಕೆ ವಕ್ಕಲುತನವೇ ಕಾರಣವಾದದ್ದು. ಆದರೆ ಇತ್ತಿತ್ತಲಾಗಿ ಅನಾವೃಷ್ಟಿಯ ಮೂಲಕ ಮೇಲಿಂದ ಮೇಲೆ ಬರ ಬೀಳಹತ್ತಿ, ನಮ್ಮಲ್ಲಿಯ ಒಕ್ಕಲುತನವು ಬಹಳೇ ಕ್ಷೀಣಸ್ಥಿತಿಗೆ ಬಂದಿರುತ್ತದೆ. ಇದಕ್ಕೆ ಅನಾವೃಷ್ಟಿಯ ಹೊರ್ತು ಇನ್ನು ಅನೇಕ ಕಾರಣಗಳುಂಟು. ಪೂರ್ವದಲ್ಲಿ ನಮ್ಮ ಇಡೀ ಹಿಂದೂಸ್ಥಾನದಲ್ಲಿ ಒಕ್ಕಲುತನಕ್ಕೆ ಎಷ್ಟು ಭೂಮಿಯು ಉಪಯೋಗದಲ್ಲಿತ್ತೋ ಅದಕ್ಕಿಂತಲೂ ಈಗ ಹೆಚ್ಚು ಭೂಮಿಯು ಸಾಗಾಗಿ ಇನ್ನು ಮುಂದೆ ಹೆಚ್ಚು ಸಾಗುವಳಿಯಾಗಲಿಕ್ಕೇ ಬೀಳುಭೂಮಿಯೇ ಇಲ್ಲದ ಹಾಗಿರುತ್ತದೆ.
ಇದರ ಮೇಲಿಂದ ನೋಡಿದರೆ ಯಾವತ್ತು ಭೂಮಿಯು ವರ್ಷ ವರ್ಷಕ್ಕೇ ಸಾಗಾಗುತ್ತಿದ್ದು ಅದರಲ್ಲಿಯ ಪೈರಿಗೆ ಉಪಯೋಗ ಬೀಳುವ ದ್ರವ್ಯಗಳು ಖರ್ಚಾಗಹತ್ತವೆ. ಅವುಗಳ ಬದಲು ಭೂಮಿಗಳಿಗೆ ಹಾಕತಕ್ಕ ಗೊಬ್ಬರವೇ ಮೊದಲಾದ ದ್ರವ್ಯಗಳು ನಮ್ಮಲ್ಲಿ ಸಾಕಷ್ಟು ಇರದೇ, ಇದ್ದು, ಕೃಷಿ ಕರ್ಮ ಶಾಸ್ತ್ರದ ಪ್ರಕಾರ ತರ ತರದ ದ್ರವ್ಯಗಳುಳ್ಳ ಗೊಬ್ಬರವನ್ನು ಮಾಡುವ ಜ್ಞಾನವು ನಮ್ಮಲ್ಲಿ ಇಲ್ಲ. ಆದ್ದರಿಂದ ಭೂಮಿಗಳು ದಿನೇ ದಿನೇ ಬಡವಾಗುತ್ತ ನಡೆದು ಪೂರ್ವದಲ್ಲಿ ಯಾವ ಭೂಮಿಯಿಂದ ಎಷ್ಟು ಹುಟ್ಟುವಳಿ ಆಗುತ್ತಿತ್ತೋ ಅದರ ಅರ್ಧದಷ್ಟು ಸಹ ಆಗುವುದಿಲ್ಲ. ಇದಲ್ಲದೆ ಜನಸಂಖ್ಯೆಯು ಬೆಳೆದದ್ದರಿಂದಲೂ, ನಮ್ಮಲ್ಲಿ ಹುಟ್ಟುವ ಧಾನ್ಯಗಳೂ ಪರದೇಶಕ್ಕೆ ಹೋಗುವದರಿಂದಲೂ ಧಾನ್ಯದ ಉತ್ಪನ್ನಕ್ಕಿಂತ ಹತ್ತಿಯ ಉತ್ಪನ್ನವು ಹೆಚ್ಚು ಕಿಮ್ಮತ್ತಿನದಾಗಿರುವುದರಿಂದಲೂ ಹತ್ತಿಯನ್ನು ಬಿತ್ತುವ ಭೂಮಿಯು ೧/೩ಕ್ಕಿಂತ ಹೆಚ್ಚು ಇರುವುದರಿಂದಲೂ ಸ್ವಲ್ಪ ಅನಾವೃಷ್ಟಿಯಾದ ಕೂಡಲೆ ನಮಗೆ ಧಾನ್ಯವೂ ದನಗಳಿಗೆ ಮೇವೂ ಸಾಕಷ್ಟು ಸಿಗದೆ ದುಷ್ಟುಳವು ಬೀಳುತ್ತದೆ.
ನಾವು ಇದರಿಂದ ಮುಕ್ತರಾಗಬೇಕಾದರೆ ನಮಗೆ ಸರಕಾರದವರ ಸಹಾಯವು ಬೇಕು. ಈ ಸಹಾಯವೆಂದರೆ ಸರಕಾರದವರು ಅಲ್ಲಲ್ಲಿಗೆ ಆಗ್ರಿಕಲರ ಫಾರ್ಮ ಅಂದರೆ “ಒಕ್ಕಲುತನದ ಶಾಲೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಹೊಸ ಹೊಸ ಗೊಬ್ಬರಗಳನ್ನು ಹ್ಯಾಗೆ ತಯಾರು ಮಾಡಬೇಕೆಂಬುವದನ್ನು ನಮ್ಮ ರೈತರಿಗೆ ತೋರಿಸಬೇಕು. ನಮ್ಮಲ್ಲಿ ಒಕ್ಕಲುತನದ ಆಯುಧಗಳು ಹಳೇತರದವು ಇದ್ದು ಅವುಗಳಿಂದ ಈಗಿನ ಸುಧಾರಿಸಿದ ಆಯುಧಗಳಂತೆ ಕೆಲಸವಾಗುವುದಿಲ್ಲ.
ಆದ್ದರಿಂದ ಈಗಿನ ಹೊಸ ಸುಧಾರಿಸಿದ ಆಯುಧಗಳನ್ನು ಸರಕಾರದವರು ಅಲ್ಲಲ್ಲಿಗೆ ತಂದು ಅವುಗಳ ಉಪಯೋಗವನ್ನು ರೈತರಿಗೆ ತೋರಿಸಿ ಅವುಗಳನ್ನು ಪ್ರಚಾರದಲ್ಲಿ ತರುವ ಬಗ್ಗೆ ಜನರಿಗೆ ಸಹಾಯ ಮಾಡಬೇಕು. ನಮ್ಮ ದೇಶದಲ್ಲಿ ಅನಾವೃಷ್ಟಿಯಂತೂ ಮೇಲಿಂದ ಮೇಲೆ ನಡೆದಿರುವದು. ಇದಕ್ಕೆ ಈಶ್ವರನ ಕೋಪವ ಹೊರ್ತು ಎರಡನೇ ಕಾರಣವ್ಯಾವದೂ ಇಲ್ಲ. ಆದರೂ ನಮ್ಮ ದೇಶದಲ್ಲಿ ಹರಿದುಹೋಗುವ ನೀರನ್ನು ಅಲ್ಲಿಂದಲ್ಲಿಯೇ ತಡೆ ಹಾಕಿ ಕಟ್ಟಿ, ಸಣ್ಣ ಸಣ್ಣ ಕೆರೆಗಳನ್ನು ಬಾವಿಗಳನ್ನು ಕಟ್ಟಿಸಿ, ಅವುಗಳಿಂದ ಆದಷ್ಟು ಭೂಮಿಯನ್ನು ತೋಯಿಸಿ ಕೊಡುವ ಯತ್ನವನ್ನು ಸರಕಾರದವರು ಮಾಡದಿದ್ದರೆ ನಮ್ಮ ಒಕ್ಕಲುತನವು ಕೆಲವು ಕಾಲದಲ್ಲಿ ನಾಮಶೇಷ ಮಾತ್ರ ಉಳಿಯುವದು. ಆದ್ದರಿಂದ ಈ ಬಗ್ಗೆ ನಾವೆಲ್ಲರೂ ಸರಕಾರಕ್ಕೆ ವಿನಂತಿ ಮಾಡಿಕೊಳ್ಳಬೇಕು.
ಪ್ರಿಯಬಾಂಧವರೇ ನಾನು ಇಷ್ಟೊತ್ತಿನವರೆಗೆ ನಿಮ್ಮ ಮುಂದೆ ಕೇವಲ ವ್ಯವಹಾರಿಕ ವಿಷಯಗಳನ್ನು ವಿಸ್ತರಿಸಿರುತ್ತೇನೆ. ಧಾರ್ಮಿಕ ವಿಷಯಗಳು ಅಂದರೆ ವೀರಶೈವಧರ್ಮದ ನಿಜತತ್ವಗಳು, ವೀರಶೈವ ದೀಕ್ಷಾವಿಧಿಗಳ ಲಗ್ನ ಮುಂತಾದ ಶುಭ ಕಾರ್ಯಗಳಲ್ಲಿ ಮಾಡುವ ಸಂಸ್ಕಾರಗಳು, ಜಂಗಮರು ಮಾಡುವ ಕರ್ತವ್ಯ ಮಠದವರು ಮಾಡುವ ಕರ್ತವ್ಯಗಳು ಇವೇ ಮುಂತಾದ ವಿಷಯಗಳನ್ನು ನಿಮ್ಮೊಳಗಿರುವ ಶಾಸ್ತ್ರಿ ಪಂಡಿತರಿಗೂ ಮತಗ್ರಂಥಗಳನ್ನು ಪರಿಶೀಲನೆ ಮಾಡಿದ ವಿದ್ವಜ್ಜನರಿಗೂ ಪ್ರತಿಪಾದನೆ ಮಾಡಲಿಕ್ಕೇ ಬಿಟ್ಟಿರುತ್ತೇನೆ.
ಆದರೆ ಈ ಮಹಾಸಭೆಯ ಮುಂದೆ ವಿಷಯಗಳನ್ನು ತರುವಾಗ್ಗೆ ಕಠಿಣ ಮತ್ತು ಅನಿಶ್ಚಿತ ಅಲಾಭಕಾರಕ ವಿಷಯಗಳನ್ನು ಆದಷ್ಟು ಹಿಂದಕ್ಕೆ ಇಡಬೇಕಾಗಿ ಸಬ್ಜೆಕ್ಟ್ ಕಮಿಟಿಯವರಿಗೆ ನನ್ನ ಸೂಚನೆ ಅದೆ. ಇನ್ನು ನೀವೆಲ್ಲರೂ ನಿಮ್ಮ ಮುಂದಿನ ಕೆಲಸವನ್ನು ಮುಂಚಿತವಾಗಿಯೇ ಗೊತ್ತುಪಡಿಸಲ್ಪಟ್ಟ ಕಾರ್ಯಕ್ರಮದಂತೆ ನಡೆಸಬೇಕೆಂದು ವಿನಂತಿ ಮಾಡಿಕೊಂಡು, ನನ್ನ ಭಾಷಣವನ್ನು ಶಾಂತತೆಯಿಂದಲೂ ಲಕ್ಷ್ಯ ಪೂರ್ವಕವಾಗಿಯೂ, ಕೇಳಿಕೊಂಡದ್ದಕ್ಕಾಗಿ ನಿಮ್ಮ ಉಪಕಾರವನ್ನು ನೆನಸಿ ನನ್ನ ಭಾಷಣವನ್ನು ಮುಗಿಸುತ್ತೇನೆ.
ಇತಿ ತಮ್ಮ
ತಾ॥ ೧೩-೫-೧೯೦೪ ಧಾರವಾಡ
ಸಿರಸಂಗಿ ಲಿಂಗರಾಜ ದೇಸಾಯಿ
ಆಕರ : ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರುಗಳ ಭಾಷಣ ಸಂಗ್ರಹ ಗ್ರಂಥ / ೧೪




























Total views : 29559