ವ್ಯಕ್ತಿಯ ಎದೆಯ ಮೇಲಿದ್ದ ದಾರಕ್ಕಿಂತ, ಸಮಾಜಕ್ಕಾಗಿ ಮಿಡಿದ ಹೃದಯ ಮುಖ್ಯವಲ್ಲವೇ?
ಶ್ರೀಕಂಠ ಚೌಕೀಮಠ
==============
ಹಿರಿಯರಾದ ಶ್ರೀ ನಿಜಗುಣಮೂರ್ತಿಯವರು ಒಂದು ಕುತೂಹಲಕಾರಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
“ಜೆ.ಬಿ. ಮಲ್ಲಾರಾಧ್ಯರು ಜನಿವಾರ ಧರಿಸುತ್ತಿದ್ದರು; ಆದರೆ ಬಹಿರಂಗವಾಗಿ ತೋರ್ಪಡಿಸಿಕೊಳ್ಳುತ್ತಿರಲಿಲ್ಲ ಎಂಬುದು ಕೇವಲ ಗುಸುಗುಸೇ… ಅಥವಾ…?”
ಅವರ ಈ ಪ್ರಶ್ನೆ ನನಗೆ ಉತ್ತರಿಸುವುದಕ್ಕಿಂತ ಹೆಚ್ಚಾಗಿ, ಒಂದು ಅಪೂರ್ವ ವ್ಯಕ್ತಿತ್ವವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಶ್ರೀ ನಿಜಗುಣಮೂರ್ತಿಯವರು ಕುಶಾಗ್ರಮತಿಗಳು, ವಕೀಲರು ಮತ್ತು ನಿರಂತರ ವೈಚಾರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯರು. ಅವರನ್ನು ನಾನು ಮೊದಲ ಬಾರಿಗೆ ಕಂಡದ್ದು ೨೦೨೩ರಲ್ಲಿ ಬಸವಕಲ್ಯಾಣದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಥಮ ಅಧಿವೇಶನದಲ್ಲಿ. ಆ ಇಳಿವಯಸ್ಸಿನಲ್ಲಿಯೂ ಅವರ ಉತ್ಸಾಹ, ಚುರುಕುತನ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಆಶ್ಚರ್ಯದಿಂದ ಗಮನಿಸಿದ್ದೆ. ಪಾದರಸದಂತೆ ಓಡಾಡುತ್ತ, ಗೋಷ್ಠಿಯೊಂದರಲ್ಲಿ ಎದ್ದು ನಿಂತು ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲವು’ ಪುಸ್ತಕದ ಕುರಿತು ಮಾತನಾಡಿದ ನೆನಪು ಇಂದಿಗೂ ಹಸಿರಾಗಿದೆ.
ಇತ್ತೀಚೆಗೆ ಅವರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ತೀವ್ರವಾದ ವಾಗ್ವಾದವನ್ನೂ ನಡೆಸಿದ್ದೇನೆ! ಆದರೆ ವೈಚಾರಿಕ ಭಿನ್ನಾಭಿಪ್ರಾಯಗಳು ಹಿರಿಯರ ಮೇಲಿನ ಗೌರವವನ್ನು ಕಡಿಮೆ ಮಾಡಬೇಕಿಲ್ಲ ಎಂಬುದು ನನ್ನ ನಿಲುವು.
ಈಗ ಅವರ ಪ್ರಶ್ನೆಗೆ ಬರುತ್ತೇನೆ
ಲಿಂಗೈಕ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯರು ಜನಿವಾರ ಧರಿಸುತ್ತಿದ್ದರೋ ಅಥವಾ ಶಿವದಾರ ಧರಿಸುತ್ತಿದ್ದರೋ ಎಂಬುದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ. ತಿಳಿಯದ ವಿಷಯವನ್ನು ತಿಳಿದಂತೆ ಪ್ರತಿಪಾದಿಸುವುದೂ ನನಗೆ ಇಷ್ಟವಿಲ್ಲ. ಆದರೆ ಅಂತಹ ಗುಸುಗುಸುಗಳ ನಡುವೆ ಅವರ ಅಪೂರ್ವ ವ್ಯಕ್ತಿತ್ವ, ಸಾರ್ವಜನಿಕ ಸೇವೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವುದು ನ್ಯಾಯವೇ?
ಮೈಸೂರಿನ ಚಾಮುಂಡಿಬೆಟ್ಟದ ಪರಿಸರದಲ್ಲಿರುವ ಜಂತಗಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಬಸವರಾಧ್ಯ ಮತ್ತು ಸಿದ್ಧಲಿಂಗಮ್ಮಣ್ಣಿ ದಂಪತಿಗಳ ಪುತ್ರರಾಗಿ ೧೨ ಡಿಸೆಂಬರ್ ೧೯೦೦ರಂದು ಜನಿಸಿದ ಜೆ.ಬಿ. ಮಲ್ಲಾರಾಧ್ಯರು, ೧೯೨೩ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಉಪಾಧ್ಯಾಯರಾಗಿ ವೃತ್ತಿಜೀವನ ಆರಂಭಿಸಿದ ಅವರು, ಮುಂದೆ ಸರ್ ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದರು. ಮೈಸೂರು ನಾಗರಿಕ ಸೇವೆಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಾರ್ವಜನಿಕ ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು.
ಮೈಸೂರು ಮಹಾರಾಜರ ಹುಜೂರು ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ, ಡೆಪ್ಯುಟಿ ಕಮಿಷನರ್, ಜನಗಣತಿ ಆಯುಕ್ತ, ಶಿಕ್ಷಣ ಸುಧಾರಣಾ ಸಮಿತಿಯ ಕಾರ್ಯದರ್ಶಿ ಹಾಗೂ ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಜವಾಬ್ದಾರಿಗಳು ಅವರ ಆಡಳಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.
೧೯೫೭ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರವೂ ಅವರ ಸಾರ್ವಜನಿಕ ಜೀವನ ನಿಲ್ಲಲಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಶಿಕ್ಷಣ ಮತ್ತು ಕ್ರೀಡಾ ಸಂಸ್ಥೆಗಳ ನೇತಾರರಾಗಿ ಸೇವೆ ಸಲ್ಲಿಸಿದರು. ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆ, ಕ್ರೀಡಾ ಮಂಡಳಿ ಹಾಗೂ ಶಿಕ್ಷಣ ಕ್ಷೇತ್ರದ ಸಂಘಟನೆಗಳಲ್ಲಿಯೂ ಅವರ ಪಾತ್ರ ಗಮನಾರ್ಹವಾಗಿತ್ತು.
ಆಡಳಿತದಲ್ಲಿ ಅಪಾರ ಅನುಭವ ಮತ್ತು ಉನ್ನತ ಶಿಕ್ಷಣ ಹೊಂದಿದ್ದ ಮಲ್ಲಾರಾಧ್ಯರು, ನಿವೃತ್ತಿಯ ನಂತರ ತಮ್ಮ ಆಯ್.ಎ. ಎಸ್. ಜ್ಞಾನವನ್ನು ವೀರಶೈವ–ಲಿಂಗಾಯತ ಸಮಾಜದ ಸಂಘಟನೆಗೆ ಬಳಸಿಕೊಂಡರೇ ಹೊರತು, ಸಮುದಾಯವನ್ನು ವಿಭಜಿಸುವ ಉದ್ದೇಶಕ್ಕೆ ಅಲ್ಲ ಎಂಬುದು ಐತಿಹಾಸಿಕ ಸತ್ಯ ಮತ್ತು ಎಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ.
ಅವರ ಸಾರ್ವಜನಿಕ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ ಅಖಿಲ ಭಾರತ ವೀರಶೈವ ಮಹಾಸಭೆಯೊಂದಿಗಿನ ಸಂಬಂಧ.
೧೯೭೩ರಲ್ಲಿ ಬೆಂಗಳೂರಿನಲ್ಲಿ ನಡೆದ ಮಹಾಸಭೆಯ ೧೯ನೇ ಮಹಾಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದ ಅವರು, ಒಂಬತ್ತು ವರ್ಷಗಳ ಕಾಲ ಮಹಾಸಭೆಯ ನೇತೃತ್ವ ವಹಿಸಿದ್ದರು ಎಂಬ ವಿವರಗಳು ಲಭ್ಯವಾಗುತ್ತವೆ.
ಆ ಮಹಾಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ಅವರು ವ್ಯಕ್ತಪಡಿಸಿದ ವಿಚಾರಗಳು ಇಂದಿಗೂ ಚಿಂತನೆಗೆ ಅರ್ಹವಾಗಿವೆ.
“ವೀರಶೈವರ ಕಾಲವು ಶಿವಾಗಮಗಳಷ್ಟು ಪ್ರಾಚೀನವಾದುದೆಂಬುದಕ್ಕೆ ಕಾಮಿಕಾದಿ ವಾತುಲಪರ್ಯಂತವಾದ ಆಗಮಗಳಲ್ಲಿ ಕಂಡುಬರುವ ಷಟ್ಸ್ಥಲ, ಇಷ್ಟಲಿಂಗ ಮೊದಲಾದವುಗಳ ಕಲ್ಪನೆಯೇ ಸಾಕ್ಷಿ. ತಾತ್ವಿಕ ಕ್ಷೇತ್ರದಲ್ಲಿ, ಧಾರ್ಮಿಕ ವಿಚಾರದಲ್ಲಿ, ಸಾಮಾಜಿಕ ರೀತಿ ನೀತಿಗಳಲ್ಲಿ ಕಾಲಕಾಲಕ್ಕೆ ಮಾರ್ಪಡುತ್ತ ಹೋಗುವುದು ವೀರಶೈವದ ಲಕ್ಷಣ.”
ಮುಂದುವರಿದು ಅವರು ಪ್ರತಿಪಾದಿಸಿದ್ದು:
“ವೀರಶೈವ ಒಂದು ಸಹಜ ಧರ್ಮ. ವೀರಶೈವ ಒಂದು ಜಾತಿಯಲ್ಲ.”
ಪ್ರಪಂಚದಲ್ಲಿದ್ದುಕೊಂಡೇ ತನ್ನ ದೈನಂದಿನ ವ್ಯವಹಾರವನ್ನು ದೈವೀ ವ್ಯವಹಾರವನ್ನಾಗಿ ಪರಿವರ್ತಿಸಿಕೊಳ್ಳುವ, ಅಂಗಕ್ರಿಯೆಗಳನ್ನು ಲಿಂಗಕ್ರಿಯೆಗಳನ್ನಾಗಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ವೀರಶೈವದ ಆಧ್ಯಾತ್ಮಿಕ ದರ್ಶನ ತೆರೆದಿದೆ ಎಂಬುದು ಅವರ ಚಿಂತನೆಯ ಸಾರ.
ಅದನ್ನು ವಿವರಿಸಲು ಅವರು ಅಲ್ಲಮಪ್ರಭುದೇವರ ವಿಶ್ವವ್ಯಾಪಿ ಲಿಂಗಪೂಜೆಯ ಭಾವವನ್ನು ಪ್ರತಿಪಾದಿಸುವ ವಚನವನ್ನು ಉಲ್ಲೇಖಿಸಿದ್ದರು. ಪೃಥ್ವಿಯನ್ನೇ ಪೂಜೆಯ ಪೀಠವಾಗಿ, ಆಕಾಶವನ್ನೇ ಲಿಂಗವಾಗಿ, ಸಪ್ತಸಮುದ್ರಗಳನ್ನೇ ಪಂಚಾಮೃತವಾಗಿ, ಪ್ರಕೃತಿಯ ಸಮಸ್ತ ಚಟುವಟಿಕೆಗಳನ್ನೇ ಶಿವಾರಾಧನೆಯಾಗಿ ಕಾಣುವ ಆ ವಚನದ ಆಧ್ಯಾತ್ಮಿಕ ವ್ಯಾಪ್ತಿ ಎಷ್ಟು ವಿಶಾಲವಾದುದು!
ವೀರಶೈವವು ಕೇವಲ ಆಚರಣೆಗಳ ಸಂಕೋಲೆಯಲ್ಲ; ಬದುಕನ್ನೇ ಶಿವಾನುಭವದ ಸಾಧನೆಯನ್ನಾಗಿ ಪರಿವರ್ತಿಸುವ ತತ್ತ್ವ ಎಂಬುದು ಮಲ್ಲಾರಾಧ್ಯರ ಪ್ರತಿಪಾದನೆಯ ಹೃದಯವಾಗಿತ್ತು.
ಇಂತಹ ವ್ಯಕ್ತಿತ್ವದ ಕುರಿತು ಚರ್ಚಿಸುವಾಗ ಅವರ ಎದೆಯ ಮೇಲಿದ್ದ ದಾರದ ಸ್ವರೂಪವೇ ನಮ್ಮ ಸಂಶೋಧನೆಯ ಪ್ರಧಾನ ವಿಷಯವಾಗಬೇಕೇ?
ಇದಕ್ಕಿಂತ ಹೆಚ್ಚಾಗಿ ನಾನೇನೂ ಬರೆಯಲಾರೆ!
ಏಕೆಂದರೆ, ನನ್ನ ಸಮುದಾಯದ ಆಚಾರ–ವಿಚಾರಗಳು ಆಧುನಿಕತೆಯತ್ತ ಎಷ್ಟೊಂದು ವೇಗವಾಗಿ ಸಾಗುತ್ತಿವೆ ಎಂಬುದಕ್ಕೆ ೨೦೨೫ರ ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ‘ವಚನ ದರ್ಶನ: ಮಿಥ್ಯೆ/ಸತ್ಯ’ ಪುಸ್ತಕ ಬಿಡುಗಡೆ ಸಮಾರಂಭವೇ ನನಗೆ ನೆನಪಾಗುತ್ತದೆ.
ಅಂದು ತತ್ತ್ವಜ್ಞಾನಿಯೊಬ್ಬರು ತಮ್ಮ ಭಾಷಣದ ವಿಷಯಾಂತರ ಮಾಡಿ, ಇಷ್ಟಲಿಂಗ ಧಾರಣೆಯ ಸರಳೀಕರಣದ ಕುರಿತು ಅಗಾಧವಾದ ಸಲಹೆಗಳನ್ನು ನೀಡಿದ್ದನ್ನು ಸ್ಮರಿಸುತ್ತೇನೆ!
ಬೆಳಗಿನಿಂದ ಸಾಯಂಕಾಲದವರೆಗೆ ಲಿಂಗಾಯತ ಧರ್ಮ, ಬಸವತತ್ತ್ವ ಮತ್ತು ಷಟ್ಸ್ಥಲಗಳ ಕುರಿತು ಉಪದೇಶ ಮಾಡುತ್ತ, ವೀರಶೈವ ಪರಂಪರೆ ಹಾಗೂ ಪಂಚಪೀಠಗಳನ್ನು ಹಿಗ್ಗಾಮುಗ್ಗಾ ಅವಹೇಳನ ಮಾಡುತ್ತ, ‘ವೀರಶೈವ–ಲಿಂಗಾಯತ’ ಎಂದು ಕರೆದುಕೊಳ್ಳುವವರನ್ನು ‘ತೃತೀಯ ಲಿಂಗಿಗಳು’ ಎಂದು ತೆಗಳುತ್ತ, ಆ ಎರಡು ಪದಗಳ ನಡುವಿನ ಅಡ್ಡಗೆರೆಯನ್ನೇ ‘ಬಾರ್’ಗೆ ಹೋಲಿಸಿ ವ್ಯಂಗ್ಯವಾಡಿದವರು, ಕೊನೆಗೆ ಇಷ್ಟಲಿಂಗ ಧಾರಣೆಯ ಸರಳೀಕರಣಕ್ಕೂ ಒಂದು ಹೊಸ ವ್ಯಾಖ್ಯಾನ ನೀಡಿದರು!
ಸಂಜೆಯ ಹೊತ್ತು ಬಾರ್ಗೆ ಹೋಗುವಾಗಲೂ, ಅಲ್ಲಿ ಮಾಂಸಾಹಾರ ಸೇವಿಸುವಾಗಲೂ ದೇಹದ ಮೇಲೆ ಧರಿಸಿದ ಇಷ್ಟಲಿಂಗವನ್ನು ತೆಗೆದಿಡಬೇಕಾದ ಅಗತ್ಯವಿಲ್ಲದಂತೆ ಸ್ವಾಮಿಗಳು ಇಷ್ಟಲಿಂಗ ಧಾರಣೆಯನ್ನು ಸರಳೀಕರಿಸಬೇಕು ಎಂಬುದೇ ಅವರ ಸಲಹೆಯಾಗಿತ್ತು!
ಇಂತಹ ಆಧುನಿಕ ಧಾರ್ಮಿಕ ಚಿಂತನೆಗಳು ಕೇಳಿಬರುತ್ತಿರುವ ಕಾಲಘಟ್ಟದಲ್ಲಿ, ದಶಕಗಳ ಹಿಂದೆ ಬದುಕಿ ಸಮಾಜಕ್ಕಾಗಿ ದುಡಿದ ಶ್ರೀ ಜೆ.ಬಿ. ಮಲ್ಲಾರಾಧ್ಯರು ಜನಿವಾರ ಧರಿಸುತ್ತಿದ್ದರೋ ಇಲ್ಲವೋ ಎಂಬ ಗುಸುಗುಸನ್ನು ಹಿಡಿದು ಚರ್ಚಿಸುವುದು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ!
ಒಂದೆಡೆ ಇಷ್ಟಲಿಂಗದ ಆಚರಣೆಯನ್ನೇ ಬಾರ್ನ ಬಾಗಿಲಿನವರೆಗೆ ಕೊಂಡೊಯ್ಯುವ ಆಧುನಿಕತೆಯ ಪ್ರತಿಪಾದನೆ; ಮತ್ತೊಂದೆಡೆ ಮಲ್ಲಾರಾಧ್ಯರ ಎದೆಯ ಮೇಲಿದ್ದಿರಬಹುದಾದ ಜನಿವಾರವನ್ನು ಹುಡುಕುವ ಐತಿಹಾಸಿಕ ಕುತೂಹಲ! ಎಂತಹ ವೈರುಧ್ಯ!
ಮಲ್ಲಾರಾಧ್ಯರ ಎದೆಯ ಮೇಲೆ ಯಾವ ದಾರವಿತ್ತು ಎಂಬುದಕ್ಕಿಂತ, ಅವರ ಎದೆಯೊಳಗೆ ಸಮಾಜಕ್ಕಾಗಿ ಎಂತಹ ಹೃದಯ ಮಿಡಿಯುತ್ತಿತ್ತು ಎಂಬುದನ್ನು ಅರಿಯುವುದೇ ನನಗೆ ಮುಖ್ಯ.
ಅಷ್ಟಕ್ಕೂ, ಇತಿಹಾಸವು ವ್ಯಕ್ತಿಯ ಎದೆಯ ಮೇಲಿನ ದಾರದಿಂದ ಅಳೆಯಲ್ಪಡುವುದಿಲ್ಲ; ಆ ವ್ಯಕ್ತಿ ಸಮಾಜಕ್ಕೆ ನೀಡಿದ ಕೊಡುಗೆಯಿಂದ ಅಳೆಯಲ್ಪಡುತ್ತದೆ!
ಹಿರಿಯರಾದ ಶ್ರೀ ನಿಜಗುಣಮೂರ್ತಿಯವರ ಪ್ರಶ್ನೆಯನ್ನು ನಾನು ಗೌರವದಿಂದಲೇ ಸ್ವೀಕರಿಸುತ್ತೇನೆ. ಏಕೆಂದರೆ ಅವರ ಪ್ರಶ್ನೆ ಮಲ್ಲಾರಾಧ್ಯರಂತಹ ಮಹತ್ವದ ವ್ಯಕ್ತಿತ್ವವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವಂತೆ ಮಾಡಿದೆ.
ನನಗೆ ಮಲ್ಲಾರಾಧ್ಯರ ಎದೆಯ ಮೇಲಿದ್ದಿರಬಹುದಾದ ಜನಿವಾರಕ್ಕಿಂತ, ಸಮಾಜಕ್ಕಾಗಿ ಮಿಡಿದ ಅವರ ಹೃದಯ, ಶಿಕ್ಷಣಕ್ಕಾಗಿ ದುಡಿದ ಅವರ ಬುದ್ಧಿಶಕ್ತಿ, ಸಾರ್ವಜನಿಕ ಸೇವೆಗೆ ಮೀಸಲಾದ ಅವರ ಜೀವನ ಮತ್ತು ವೀರಶೈವ ಧರ್ಮದ ಕುರಿತು ವ್ಯಕ್ತಪಡಿಸಿದ ವಿಶಾಲ ದೃಷ್ಟಿಕೋನವೇ ಹೆಚ್ಚು ಮಹತ್ವದ್ದು.
— ಶ್ರೀಕಂಠ ಚೌಕೀಮಠ




























Total views : 29804