ಶಿರಹಟ್ಟಿಮಠ ಅವರೇ, ಸಂಸ್ಥೆಗಳ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ತಮಗೆ ಕೊಟ್ಟವರಾರು? :ಸ್ಪಷ್ಟೀಕರಣ ಲೇಖನ : ಭಾಗ–9

ಶಿರಹಟ್ಟಿಮಠ ಅವರೇ, ಸಂಸ್ಥೆಗಳ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ತಮಗೆ ಕೊಟ್ಟವರಾರು?

===============

ಸ್ಪಷ್ಟೀಕರಣ ಲೇಖನ : ಭಾಗ–೯

================

ಶತಮಾನದ ಸಂಸ್ಥೆಗಳನ್ನು ‘ಮುಚ್ಚಬೇಕೆಂದು ಹೇಳಿಲ್ಲ’ ಎನ್ನುವ ಘೋಷಣೆಯ ಹಿಂದಿರುವ ಅಧಿಕಾರದ ಕಲ್ಪನೆಗೆ ಕೆಲವು ನೇರ ಪ್ರಶ್ನೆಗಳು!

==================

ಶ್ರೀಕಂಠ ಚೌಕೀಮಠ
ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ
ದೆಹಲಿ ರಾಜ್ಯ ಘಟಕ, ನವದೆಹಲಿ

=====================

ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಮನಸ್ಸಿಗೆ ಬಂದದ್ದನ್ನು ಹೇಳುವ ಹಕ್ಕು ಮಾತ್ರವಲ್ಲ; ಹೇಳಿದ ಮಾತಿಗೆ ಹೊಣೆಗಾರನಾಗುವ ಬೌದ್ಧಿಕ ಪ್ರಾಮಾಣಿಕತೆಯೂ ಹೌದು. ಇತಿಹಾಸವನ್ನು ಪ್ರಶ್ನಿಸುವವನಿಗೆ ವಿಮರ್ಶಕನ ಸ್ಥಾನವಿದೆ. ಆದರೆ ಆ ಸ್ಥಾನವೇ ಅವನಿಗೆ ನ್ಯಾಯಾಧೀಶನ ಅಧಿಕಾರವನ್ನು ನೀಡುವುದಿಲ್ಲ. ವೈಯಕ್ತಿಕ ಅಭಿಪ್ರಾಯವು ಶತಮಾನದ ಸಂಸ್ಥೆಯ ಅಸ್ತಿತ್ವವನ್ನು ನಿರ್ಧರಿಸುವ ಆಜ್ಞಾಪತ್ರವೂ ಅಲ್ಲ. ಈ ಮೂಲಭೂತ ವ್ಯತ್ಯಾಸವನ್ನು ಶ್ರೀ ವಿನಯ್ ಶಿರಹಟ್ಟಿಮಠ ಅವರಿಗೆ ನೆನಪಿಸಬೇಕಾದ ಸಂದರ್ಭ ಬಂದಿದೆ.

ತಮ್ಮ ‘ಆ ಮೂವತ್ತಾರು ವರ್ಷಗಳು!!!’ ಸರಣಿ ಲೇಖನಗಳಲ್ಲಿ ಅವರು ಎರಡು ಬಾರಿ ವಿಚಿತ್ರವಾದ ಸ್ಪಷ್ಟೀಕರಣ ನೀಡುತ್ತಾರೆ.

“ಶಿವಯೋಗ ಮಂದಿರವನ್ನು ಮುಚ್ಚಬೇಕೆಂದು ನಾನೆಂದೂ ಹೇಳಿಲ್ಲ. ವಟುಗಳಿಗೆ ತರಬೇತಿ ನೀಡುವುದು ತಪ್ಪೆಂದೂ ಹೇಳಿಲ್ಲ. ತರಬೇತಿ ಶಾಲೆ ಇರಬೇಕಾಗಿತ್ತು, ಆದರೆ ಅದು ಬಸವಾದಿ ಶರಣರ ತತ್ವಗಳ ಮೇಲೆ ನಿಂತಿರಬೇಕಾಗಿತ್ತು ಎಂದಷ್ಟೇ ಹೇಳಿದ್ದೇನೆ.”

ಮತ್ತೊಂದು ಕಡೆ,

“ಇದು ಯಾವ ಸಂಸ್ಥೆಯ ವಿರುದ್ಧದ ಬರಹವೂ ಅಲ್ಲ. ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶ್ರೀ ಶಿವಯೋಗ ಮಂದಿರ ಮುಚ್ಚಬೇಕೆಂದು ನಾನೆಂದೂ ಹೇಳಿಲ್ಲ, ಹೇಳುವುದೂ ಇಲ್ಲ.”

ಈ ಮಾತುಗಳನ್ನು ಓದಿದಾಗ ಆಶ್ಚರ್ಯಕ್ಕಿಂತ ವಿಷಾದವೇ ಹೆಚ್ಚಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಇಂತಹ ಸ್ಪಷ್ಟೀಕರಣಗಳ ಅಗತ್ಯವೇನಿತ್ತು ಎಂಬ ಪ್ರಶ್ನೆ ಕಾಡುತ್ತದೆ.

ಶಿರಹಟ್ಟಿಮಠ ಅವರೇ, ಶತಮಾನದ ಇತಿಹಾಸವುಳ್ಳ ಸಂಸ್ಥೆಗಳ ಅಸ್ತಿತ್ವದ ಕುರಿತು ತೀರ್ಪು ನೀಡುವ ಅಧಿಕಾರವನ್ನು ತಮಗೆ ಕೊಟ್ಟವರಾರು?

ಅಖಿಲ ಭಾರತ ವೀರಶೈವ ಮಹಾಸಭೆಯನ್ನಾಗಲಿ, ಶ್ರೀ ಶಿವಯೋಗಮಂದಿರವನ್ನಾಗಲಿ ಮುಚ್ಚಬೇಕೆಂದು ಯಾರಾದರೂ ತಮ್ಮ ಮುಂದೆ ಅರ್ಜಿ ಸಲ್ಲಿಸಿದ್ದಾರೆಯೇ? ಅವುಗಳನ್ನು ಉಳಿಸಬೇಕೆಂದು ಯಾರಾದರೂ ತಮ್ಮ ಕೃಪೆ ಯಾಚಿಸಿದ್ದಾರೆಯೇ? ಅವುಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ಯಾವ ನ್ಯಾಯಾಲಯ, ಯಾವ ಸರ್ಕಾರ ಅಥವಾ ಯಾವ ಭಕ್ತಸಮುದಾಯ ತಮಗೆ ವಹಿಸಿದೆ?

ಯಾರೂ ಕೇಳದ ಪ್ರಶ್ನೆಗೆ ತಾವೇ ಉತ್ತರ ಕೊಟ್ಟು, ಯಾರೂ ನೀಡದ ಅಧಿಕಾರವನ್ನು ತಾವೇ ಪ್ರದರ್ಶಿಸುವ ಈ ಧೋರಣೆಗೆ ಏನೆನ್ನಬೇಕು?

ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ನಿಂತಿರುವ ಸಂಸ್ಥೆಗಳು ಯಾರೊಬ್ಬರ ಅನುಮತಿಯನ್ನೂ ಬೇಡಿ ಅಸ್ತಿತ್ವಕ್ಕೆ ಬಂದಿಲ್ಲ. ಅವುಗಳ ಬಾಗಿಲುಗಳು ಯಾರೊಬ್ಬರ ವೈಯಕ್ತಿಕ ಅಭಿಪ್ರಾಯದ ಕೀಲಿಯಿಂದ ತೆರೆಯುವುದೂ ಇಲ್ಲ, ಮುಚ್ಚುವುದೂ ಇಲ್ಲ.

ತಾವು ಸಂಸ್ಥೆಗಳನ್ನು ಮುಚ್ಚಬೇಕೆಂದು ಹೇಳಿಲ್ಲವೆಂಬ ಘೋಷಣೆಯನ್ನು ಪದೇಪದೇ ನೀಡಿದಾಗ, ಅವುಗಳನ್ನು ಮುಚ್ಚುವ ಅಧಿಕಾರವೇ ತಮ್ಮ ಕೈಯಲ್ಲಿದ್ದು, ಅದನ್ನು ಬಳಸದೆ ಉದಾರತೆ ತೋರಿದವರಂತೆ ಭಾಸವಾಗುತ್ತದೆ. ಇಂತಹ ಅನಗತ್ಯ ಘೋಷಣೆಗಳ ಮೂಲಕ ತಮ್ಮ ಅಭಿಪ್ರಾಯಕ್ಕೆ ಇಲ್ಲದ ಅಧಿಕಾರದ ಮಹತ್ವವನ್ನು ಕಲ್ಪಿಸಿಕೊಳ್ಳುವುದು ಬೌದ್ಧಿಕ ಅತಿರೇಕವಲ್ಲವೇ?

ಸಂಸ್ಥೆಗಳ ಇತಿಹಾಸವನ್ನು ಪ್ರಶ್ನಿಸುವ ಹಕ್ಕು ತಮಗಿದೆ. ಅವುಗಳ ಲೋಪಗಳನ್ನು ವಿಮರ್ಶಿಸುವ ಸ್ವಾತಂತ್ರ್ಯವೂ ಇದೆ. ಆದರೆ ಅವುಗಳ ಅಸ್ತಿತ್ವದ ಕುರಿತು ತೀರ್ಪು ನೀಡುವ ನ್ಯಾಯಪೀಠವನ್ನು ತಮ್ಮ ಲೇಖನದೊಳಗೇ ನಿರ್ಮಿಸಿಕೊಳ್ಳುವ ಅಧಿಕಾರವಿಲ್ಲ.

ಶಿರಹಟ್ಟಿಮಠ ಅವರೇ, ತಾವು ನ್ಯಾಯಾಧೀಶರಲ್ಲ; ತಮ್ಮ ಲೇಖನ ನ್ಯಾಯಾಲಯದ ಆದೇಶವೂ ಅಲ್ಲ. ತಮ್ಮ ಸ್ಪಷ್ಟೀಕರಣ ಸಂಸ್ಥೆಗಳಿಗೆ ನೀಡಿದ ಜೀವದಾನವೂ ಅಲ್ಲ!

ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶ್ರೀ ಶಿವಯೋಗಮಂದಿರಗಳು ಮಹನೀಯರ ದೂರದೃಷ್ಟಿ, ದಾನಿಗಳ ತ್ಯಾಗ, ಮಠಾಧಿಪತಿಗಳ ಪರಿಶ್ರಮ, ಭಕ್ತರ ಶ್ರದ್ಧೆ ಮತ್ತು ಸಮಾಜಸೇವೆಯ ಸುದೀರ್ಘ ಪರಂಪರೆಯಿಂದ ಬೆಳೆದುನಿಂತ ಸಂಸ್ಥೆಗಳು. ಅವುಗಳ ಕಾರ್ಯವೈಖರಿಯಲ್ಲಿ ಲೋಪಗಳಿದ್ದರೆ ವಿಮರ್ಶಿಸಬಹುದು; ಸುಧಾರಣೆಗಳನ್ನು ಆಗ್ರಹಿಸಬಹುದು. ಆದರೆ ಅವುಗಳ ಅಸ್ತಿತ್ವವನ್ನು ಒಬ್ಬ ಲೇಖಕನ ವೈಯಕ್ತಿಕ ಅಭಿಪ್ರಾಯದ ಅನುಗ್ರಹವೆಂಬಂತೆ ಬಿಂಬಿಸುವುದನ್ನು ಒಪ್ಪಲಾಗದು.

ಇಲ್ಲಿ ಮತ್ತೊಂದು ವೈರುಧ್ಯ ಗಮನಾರ್ಹ. ಮಹಾಸಭೆಯ ಸ್ಥಾಪನಾ ಆಶಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವುದು, ಅದರ ಐತಿಹಾಸಿಕ ಠರಾವುಗಳಿಗೆ ಆಯ್ದ ವ್ಯಾಖ್ಯಾನಗಳನ್ನು ನೀಡುವುದು, ಶಿವಯೋಗಮಂದಿರದ ಪಠ್ಯಕ್ರಮ ಮತ್ತು ಅಲ್ಲಿ ತರಬೇತಿ ಪಡೆದ ಮಠಾಧಿಪತಿಗಳ ಧಾರ್ಮಿಕ ನಿಲುವುಗಳ ಕುರಿತು ಅನುಮಾನಗಳನ್ನು ವ್ಯಕ್ತಪಡಿಸುವುದು; ಇಷ್ಟೆಲ್ಲ ಮಾಡಿದ ನಂತರ “ಇದು ಯಾವ ಸಂಸ್ಥೆಯ ವಿರುದ್ಧದ ಬರಹವೂ ಅಲ್ಲ” ಎಂದು ಸ್ಪಷ್ಟೀಕರಿಸುವುದು!

ಸಂಸ್ಥೆಯನ್ನು ವಿಮರ್ಶಿಸುವುದು ಮತ್ತು ಅದನ್ನು ವಿರೋಧಿಸುವುದು ಒಂದೇ ಅಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ವಿಮರ್ಶೆಯ ಹೆಸರಿನಲ್ಲಿ ಮಂಡಿಸಿದ ಗಂಭೀರ ಪ್ರತಿಪಾದನೆಗಳಿಗೆ ಮೂಲದಾಖಲೆಗಳನ್ನು ಒದಗಿಸುವ ಜವಾಬ್ದಾರಿಯಿಂದ ಇಂತಹ ಸ್ಪಷ್ಟೀಕರಣಗಳು ಯಾರನ್ನೂ ಮುಕ್ತಗೊಳಿಸುವುದಿಲ್ಲ.

ಶಿರಹಟ್ಟಿಮಠ ಅವರೇ, ತಮ್ಮ ಲೇಖನಗಳು ಸಂಸ್ಥೆಗಳ ವಿರುದ್ಧವಲ್ಲವೆಂದು ಹೇಳುವುದಕ್ಕಿಂತ, ಅವುಗಳಲ್ಲಿ ಮಾಡಿರುವ ಪ್ರತಿಪಾದನೆಗಳಿಗೆ ಯಾವ ಮೂಲದಾಖಲೆಗಳು ಆಧಾರವಾಗಿವೆ ಎಂಬುದನ್ನು ಸ್ಪಷ್ಟಪಡಿಸಿ. ಅದೇ ಹೆಚ್ಚು ಪ್ರಾಮಾಣಿಕವಾದ ಉತ್ತರವಾಗುತ್ತದೆ.

ಬಸವಣ್ಣನವರ ತತ್ತ್ವಗಳನ್ನು ಪ್ರತಿಪಾದಿಸುವುದು ಶ್ಲಾಘನೀಯ. ಆದರೆ ಬಸವಣ್ಣನವರನ್ನು ಗೌರವಿಸುವುದಕ್ಕೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ವ್ಯಕ್ತಿತ್ವವನ್ನು ಕುಗ್ಗಿಸಬೇಕಾಗಿಲ್ಲ. ಶರಣಸಾಹಿತ್ಯದ ಮಹತ್ವವನ್ನು ಎತ್ತಿಹಿಡಿಯುವುದಕ್ಕೆ ಶಿವಯೋಗಮಂದಿರದ ಕೊಡುಗೆಗಳನ್ನು ನಿರಾಕರಿಸಬೇಕಾಗಿಲ್ಲ. ಒಂದು ತಾತ್ವಿಕ ಪರಂಪರೆಯ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಕ್ಕೆ ಮತ್ತೊಂದು ಪರಂಪರೆಯ ಅಧ್ಯಯನವನ್ನೇ ಸಂಶಯದ ನೆರಳಿನಲ್ಲಿ ನಿಲ್ಲಿಸುವ ಅಗತ್ಯವೂ ಇಲ್ಲ.

ಒಬ್ಬ ಮಹಾಪುರುಷನನ್ನು ಎತ್ತರಕ್ಕೆ ಏರಿಸುವುದಕ್ಕಾಗಿ ಮತ್ತೊಬ್ಬ ಮಹಾಪುರುಷನನ್ನು ಕೆಳಕ್ಕೆ ಎಳೆಯುವುದು ತಾತ್ವಿಕ ಗೆಲುವಲ್ಲ; ವಿಚಾರದ ಸೋಲು.

ಬಸವಣ್ಣನವರ ಚಿಂತನೆಗಳನ್ನು ಪ್ರತಿಪಾದಿಸುವಾಗ ಅವರ ಸತ್ಯನಿಷ್ಠೆ, ಆತ್ಮಾವಲೋಕನ, ನುಡಿನಡೆಯ ಪ್ರಾಮಾಣಿಕತೆ ಮತ್ತು ಮಾನವೀಯ ಗೌರವಗಳೂ ನಮ್ಮ ಸಾರ್ವಜನಿಕ ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಈ ಮೌಲ್ಯಗಳಿಲ್ಲದ ವಿಮರ್ಶೆ ಎಷ್ಟೇ ಆಕರ್ಷಕವಾಗಿ ಕಾಣಿಸಿದರೂ ಅದರ ನೈತಿಕ ನೆಲೆ ದುರ್ಬಲವಾಗುತ್ತದೆ.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಕಟ್ಟಿದ ಸಂಸ್ಥೆಗಳು, ಪ್ರೇರೇಪಿಸಿದ ಸೇವಾಕಾರ್ಯಗಳು ಮತ್ತು ಸಮಾಜದಲ್ಲಿ ಬಿತ್ತಿದ ಸಂಘಟನೆಯ ಬೀಜಗಳು ಅವರ ಬದುಕಿನ ಸಾಕ್ಷಿಗಳಾಗಿ ಉಳಿದಿವೆ. ಆ ಪರಂಪರೆಯ ಕುರಿತು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವುಗಳನ್ನು ಪರಿಹರಿಸುವ ಮಾರ್ಗ ಅಪೂರ್ಣ ಮಾಹಿತಿಯ ಆಧಾರದ ಮೇಲಿನ ನಿರ್ಣಯಗಳಲ್ಲ; ಸಮಗ್ರ ದಾಖಲೆಗಳ ಪರಿಶೀಲನೆ.

ಈವರೆಗೆ ಪ್ರಕಟಿಸಿರುವ ಸ್ಪಷ್ಟೀಕರಣ ಲೇಖನಗಳಲ್ಲಿ ನಾನು ಪ್ರತಿಪಾದಿಸಿರುವುದು ವ್ಯಕ್ತಿದ್ವೇಷವನ್ನಲ್ಲ; ಇತಿಹಾಸದ ಕುರಿತು ನಡೆಯುವ ಚರ್ಚೆಯಲ್ಲಿ ದಾಖಲೆಗಳ ಪ್ರಾಮುಖ್ಯತೆಯನ್ನು. ಶ್ರೀ ವಿನಯ್ ಶಿರಹಟ್ಟಿಮಠ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಆದರೆ ಅವರ ಅಭಿಪ್ರಾಯಗಳನ್ನು ಐತಿಹಾಸಿಕ ಸತ್ಯಗಳೆಂದು ಸ್ವೀಕರಿಸುವ ಮೊದಲು ಅವುಗಳನ್ನು ಪ್ರಶ್ನಿಸುವ ಮತ್ತು ಪರಿಶೀಲಿಸುವ ಹಕ್ಕನ್ನು ಅಷ್ಟೇ ದೃಢವಾಗಿ ಪ್ರತಿಪಾದಿಸುತ್ತೇನೆ.

ಶಿರಹಟ್ಟಿಮಠ ಅವರೇ, ಸಂಸ್ಥೆಗಳು ತಮ್ಮನ್ನು ಮುಚ್ಚಬೇಡಿ ಎಂದು ತಮ್ಮ ಮುಂದೆ ಅರ್ಜಿ ಸಲ್ಲಿಸಿಲ್ಲ. ಅವುಗಳನ್ನು ಉಳಿಸುತ್ತೇನೆಂದು ತಾವು ಆಶ್ವಾಸನೆ ನೀಡುವ ಅಗತ್ಯವೂ ಇಲ್ಲ!

ಶಿರಹಟ್ಟಿಮಠ ಅವರೇ, ಸಂಸ್ಥೆಗಳ ಭವಿಷ್ಯದ ಕುರಿತು ಅನಗತ್ಯ ಘೋಷಣೆಗಳನ್ನು ಮಾಡುವುದನ್ನು ಬಿಟ್ಟು, ಅವುಗಳ ಭೂತಕಾಲದ ಕುರಿತು ತಾವು ಮಾಡಿರುವ ಪ್ರತಿಪಾದನೆಗಳಿಗೆ ಮೊದಲು ದಾಖಲೆಗಳನ್ನು ಒದಗಿಸಿ.

ಆದರೆ ಈ ಚರ್ಚೆ ಇಲ್ಲಿಗೆ ಮುಗಿಯುವುದಿಲ್ಲ. ಅಖಿಲ ಭಾರತ ವೀರಶೈವ ಮಹಾಸಭೆಯ ಹೋರಾಟಗಳ ವೈಫಲ್ಯಗಳನ್ನು ಪ್ರಶ್ನಿಸುವವರು, ಪ್ರತ್ಯೇಕ ಧರ್ಮ ಉದ್ದೇಶಕ್ಕಾಗಿ ಸ್ಥಾಪನೆಯಾದ ಜಾಗತಿಕ ಲಿಂಗಾಯತ ಮಹಾಸಭೆಯ ಸಾಧನೆ–ವೈಫಲ್ಯಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಸಿದ್ಧರಿದ್ದಾರೆಯೇ ಎಂಬ ಮತ್ತೊಂದು ಮಹತ್ವದ ಪ್ರಶ್ನೆ ಉಳಿದಿದೆ.

ಒಂದು ಸಂಸ್ಥೆಯ ವೈಫಲ್ಯವನ್ನು ಇತಿಹಾಸದ ಅಪರಾಧವೆಂಬಂತೆ ಚಿತ್ರಿಸುವವರು, ಮತ್ತೊಂದು ಸಂಸ್ಥೆಯ ವೈಫಲ್ಯದ ಮುಂದೆ ಮೌನವಾಗಿರುವುದೇಕೆ?

ಆ ಪ್ರಶ್ನೆಯೊಂದಿಗೆ ಮುಂದಿನ ಭಾಗದಲ್ಲಿ ಭೇಟಿಯಾಗೋಣ.

— ಶ್ರೀಕಂಠ ಚೌಕೀಮಠ

ಮುಂದುವರಿಯುವುದು — ಭಾಗ–೧೦ರಲ್ಲಿ…

 

Related Posts