ನಿನ್ನೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪಂಚಲೋಹದ ಮೂರ್ತಿಯನ್ನು ಅಣ್ಣಿಗೇರಿ–ಗದಗ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ ಉಂಟಾದ ಸಂಭ್ರಮ–ಸಡಗರದ ನಡುವೆ, ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಪೂಜ್ಯರ ಮೂರ್ತಿಯನ್ನು ಕಾರಿನಲ್ಲಿ ಕೊಂಡೊಯ್ಯುವಾಗ, ವಾಹನದ ಅಲುಗಾಟದಿಂದ ಯಾವುದೇ ಧಕ್ಕೆಯಾಗದಂತೆ ಹಗ್ಗದಿಂದ ಕಟ್ಟಲು ನನ್ನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಮೂರ್ತಿಯನ್ನು ಮುಂದಿನ ಆಸನದಲ್ಲಿ ಗೌರವಪೂರ್ವಕವಾಗಿ ಕುಳ್ಳಿರಿಸಿ, ರಕ್ಷಣಾತ್ಮಕ ಸೀಟ್ಬೆಲ್ಟ್ ಹಾಕಿದೆ. ಅದು ಮೂರ್ತಿಯನ್ನು ಕರಾರುವಾಕ್ಕಾಗಿ, ಭದ್ರವಾಗಿ ಹಿಡಿದಿಟ್ಟುಕೊಂಡಿತು.

ದಾರಿಯುದ್ದಕ್ಕೂ ರಸ್ತೆಯ ಅಡೆತಡೆಗಳಿಂದಲೂ, ನಿನ್ನೆ ಇಸ್ಲಾಂ ಧರ್ಮದ ಹಬ್ಬದ ಅಂಗವಾಗಿ ಮಾರ್ಗಮಧ್ಯದಲ್ಲಿ ನಡೆಯುತ್ತಿದ್ದ ಮೆರವಣಿಗೆಗಳಿಂದಲೂ ವಾಹನದ ವೇಗ ಅಲ್ಲಲ್ಲಿ ನಿಧಾನವಾಗುತ್ತಿತ್ತು. ಆಗೆಲ್ಲ ನಮ್ಮ ವಾಹನ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿತ್ತು.
ಜಾತಿ–ಧರ್ಮಗಳ ಭೇದವಿಲ್ಲದೆ ಜನರು ವಾಹನದಲ್ಲಿದ್ದ ಪೂಜ್ಯರ ಮೂರ್ತಿಗೆ ಕೈಮುಗಿದು ನಮಸ್ಕರಿಸಿದರು. ಕೆಲವರು ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.
ಆದರೆ ಗದುಗಿನ ಶ್ರೀ ತೋಂಟದಾರ್ಯ ಮಠದ ಮಹಾದ್ವಾರದ ಎದುರಿನ ಆಟೊ ನಿಲ್ದಾಣದಲ್ಲಿ ನಡೆದ ಘಟನೆ ಮಾತ್ರ ನಿಜಕ್ಕೂ ಅವಿಸ್ಮರಣೀಯ!
ಆಟೊ ಚಾಲಕರೊಬ್ಬರು ಓಡುತ್ತಾ ಬಂದು, ನಮ್ಮ ವಾಹನದ ಕಿಟಕಿಯ ಬಳಿ ಕೈಮುಗಿದು ಭಾವಪರವಶರಾಗಿ ಉದ್ಗರಿಸಿದರು:
“ನನ್ನಪ್ಪ ಕುಮಾರಪ್ಪಾ! ನೀನು ಹುಟ್ಟದಿದ್ದರೆ ನನ್ನಂಥ ಬಡ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!”
ಅವರ ಮಾತು ಕೇಳಿ ಆಶ್ಚರ್ಯಗೊಂಡ ನಾನು, ಅವರ ಪೂರ್ವಾಪರವನ್ನು ವಿಚಾರಿಸಿದೆ. ಅವರ ಹೆಸರು ಶಿವಾನಂದ ದೊಡ್ಡಮನಿ. ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಹಳೆಯ ವಿದ್ಯಾರ್ಥಿ ಹಾಗೂ ಹವ್ಯಾಸಿ ಕಲಾವಿದ!
ಮೂರು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮಹಾಗುರುವಿನ ಕುರಿತು ಹರಿದಾಡಿದ ಅವಹೇಳನಕಾರಿ ಬರಹಗಳನ್ನು ಓದಿ ನೊಂದಿದ್ದ ನನ್ನ ಮನಸ್ಸಿಗೆ, ಶ್ರೀ ಶಿವಾನಂದ ದೊಡ್ಡಮನಿಯವರ ಹೃದಯಾಂತರಾಳದಿಂದ ಹೊರಹೊಮ್ಮಿದ ಆ ಮಾತುಗಳು ತಂಪಿನ ಮಳೆಯನ್ನೇ ಸುರಿಸಿದವು.
ಅದೇ ಕ್ಷಣದಲ್ಲಿ ಶ್ರೀ ವಿನಯ್ ಶಿರಹಟ್ಟಿಮಠ ಅವರ ಫೇಸ್ಬುಕ್ ಬರಹದಲ್ಲಿ ವ್ಯಕ್ತವಾದ ಸಂಶಯಗಳು, ಅದಕ್ಕೆ ಶ್ರೀ ರುದ್ರಪ್ಪ ಪಗಡದಿನ್ನಿಯವರು ಸೇರಿಸಿದ ವಿಕಾರ ಮತ್ತು ಕ್ರೌರ್ಯ ತುಂಬಿದ ಅಪವಾದಗಳು, ಅವುಗಳಿಗೆ ಶ್ರೀ ಶರಣಪ್ಪ ಸಜ್ಜನ ನೀಡಿದ ಶಹಬ್ಬಾಸ್ಗಿರಿಗಳು ಹಾಗೂ ಅವುಗಳ ಬೆನ್ನಿಗೆ ಬಂದ ಹಲವು ವಿಕೃತ ಪ್ರತಿಕ್ರಿಯೆಗಳು—ಎಲ್ಲವೂ ನೆನಪಾದವು.
ಕಳೆದ ವರ್ಷ ಇದೇ ಗದುಗಿನ ಪ್ರೊ. ಸಿದ್ದು ಯಾಪಲಪರವಿ ಅವರು ನಾಲಿಗೆ ಹರಿ ಬಿಟ್ಟು, “ನಾನು ಹಾನಗಲ್ಲ ಕುಮಾರಸ್ವಾಮಿಗಳ ಮೇಲೆ ‘ಅಟ್ಯಾಕ್’ ಮಾಡಿದರೆ ಕೆಲವರಿಗೆ ಸಿಟ್ಟು ಬರುತ್ತದೆ” ಎಂದು ವೀರಾವೇಶದಿಂದ ಘರ್ಜಿಸಿದ್ದೂ ಸ್ಮರಣೆಗೆ ಬಂತು.
“ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು” ಎಂಬ ಗಾದೆಗೂ ಇಂತಹ ಬುದ್ಧಿಜೀವಿಗಳ ನಡವಳಿಕೆಗೂ ಬಹಳ ಹತ್ತಿರದ ಸಂಬಂಧವಿದೆ ಎಂಬುದನ್ನು ಅವರು ಮೇಲಿಂದ ಮೇಲೆ ಸಮಾಜದ ಮುಂದೆ ಜೀವಂತ ಉದಾಹರಣೆಗಳಾಗಿ ಸಾಬೀತುಪಡಿಸುತ್ತಲೇ ಇದ್ದಾರೆ.
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ, ಶ್ರೀ ಶಿವಯೋಗ ಮಂದಿರ ಹಾಗೂ ಅವರ ಪ್ರೇರಣೆಯಿಂದ ಪಂ. ಪಂಚಾಕ್ಷರಿ ಗವಾಯಿಗಳ ಮೂಲಕ ಸ್ಥಾಪಿತವಾದ ಗದುಗಿನ ವೀರೇಶ್ವರ ಪುಣ್ಯಾಶ್ರಮ—ಇವು ಸಮಾಜಕ್ಕೆ ನೀಡಿದ ಕೊಡುಗೆಗಳು ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ.
ಅಖಿಲ ಭಾರತ ವೀರಶೈವ ಮಹಾಸಭಾದ 1904ರಿಂದ ಇಂದಿನವರೆಗಿನ 25 ಅಧ್ಯಕ್ಷರಲ್ಲಿ 23 ಮಂದಿ ಜಂಗಮೇತರ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮವು ಜಾತಿ–ಧರ್ಮಗಳ ಭೇದವಿಲ್ಲದೆ ಸಾವಿರಾರು ದೃಷ್ಟಿವಿಕಲರು, ಅಂಗವಿಕಲರು ಹಾಗೂ ಬಡ ಕಲಾವಿದರ ಬದುಕಿಗೆ ಬೆಳಕು ನೀಡಿದೆ. ಶಿವಯೋಗ ಮಂದಿರವು ತನ್ನ ಕಟ್ಟುನಿಟ್ಟಿನ ಆಚಾರ–ವಿಚಾರಗಳನ್ನು ಒಪ್ಪಿ ಬರುವ ಜಂಗಮ ವಟುಗಳಿಗೆ ಮತ್ತು ಜಂಗಮೇತರ ವಟುಗಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತ ಬಂದಿದೆ.
ಆದರೂ, ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮರೆಮಾಚಿ, ಕೆಲವು ಜಂಗಮ ವಟುಗಳನ್ನು ಮುಂದಿಟ್ಟುಕೊಂಡು ಮಹಾಗುರುವಿನ ವಿರುದ್ಧ ನಿರಂತರವಾಗಿ ಅವಹೇಳನ ಮಾಡುವವರು ತಮ್ಮನ್ನು ತಾವೇ ‘ಬುದ್ಧಿಜೀವಿಗಳು’ ಎಂದು ಕರೆದುಕೊಳ್ಳುತ್ತಿರುವುದು ಈ ಕಾಲದ ಬಹುದೊಡ್ಡ ವ್ಯಂಗ್ಯ!
ಅಂತಹವರ ಆಕ್ರಂದನ, ಅಪವಾದ ಮತ್ತು ಅಕ್ಷರ ದುರ್ವಾಸನೆಯ ನಡುವೆ, ಗದುಗಿನ ಶ್ರೀ ಶಿವಾನಂದ ದೊಡ್ಡಮನಿಯವರ ಹೃದಯಸ್ಪರ್ಶಿ ಉದ್ಗಾರವು ಸತ್ಯದ ಸಾಕ್ಷಿಯಾಗಿ ನಿಲ್ಲುತ್ತದೆ:
“ನನ್ನಪ್ಪ ಕುಮಾರಪ್ಪಾ! ನೀನು ಹುಟ್ಟದಿದ್ದರೆ ನನ್ನಂಥ ಬಡ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!”
ಇದು ಕೇವಲ ಒಬ್ಬ ಆಟೊ ಚಾಲಕನ ಭಾವುಕ ಮಾತಲ್ಲ; ಮಹಾಗುರುವಿನ ಕರುಣೆಯಿಂದ ಬದುಕು ಕಂಡ ಅಸಂಖ್ಯಾತ ಬಡವರು, ಕಲಾವಿದರು ಹಾಗೂ ಅಶಕ್ತ ಜೀವಿಗಳ ಅಂತರಂಗದ ಕೃತಜ್ಞತೆಯ ಧ್ವನಿ.
ಕೆಲವರು ತಮ್ಮ ಲೇಖನಿಯ ಮಸಿಯಿಂದ ಸೂರ್ಯನ ಬೆಳಕನ್ನು ಮಸುಕಾಗಿಸಲು ಪ್ರಯತ್ನಿಸಬಹುದು. ಆದರೆ ಸಮಾಜಸಂಜೀವಿನಿ, ಕಾರುಣಿಕ ಯುಗಪುರುಷ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಸ್ಫಟಿಕದಷ್ಟು ಪಾರದರ್ಶಕವಾದ ಜೀವನ ಮತ್ತು ಲೋಕೋಪಕಾರಿ ಸಾಧನೆಯ ಯಶೋಗಾಥೆಯನ್ನು ಯಾವ ಅಪವಾದವೂ ಮಲೀನಗೊಳಿಸಲಾರದು.
ಸೂರ್ಯನತ್ತ ಉಗುಳಿದರೆ ಸೂರ್ಯ ಮಲಿನನಾಗುವುದಿಲ್ಲ; ಅದು ಉಗುಳಿದವನ ಮುಖಕ್ಕೇ ಮರಳುತ್ತದೆ!
— ಶ್ರೀಕಂಠ ಚೌಕೀಮಠ
@ವಿನಯ್ ಶಿರಹಟ್ಟಿಮಠ
@ಶರಣಪ್ಪ ಸಜ್ಜನ
@ರುದ್ರಪ್ಪ ಪಗಡದಿನ್ನಿ
@

























Total views : 27856