ಶ್ರೀಕಂಠ.ಚೌಕೀಮಠ.
ಸಂಪಾದಕರು.”ಶ್ರೀಕುಮಾರ ತರಂಗಿಣಿ “ ಮಾಸಿಕ ಬ್ಲಾಗ್
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ
ಸಹೃದಯ ಓದುಗರಿಗೆ ,
ಸಪ್ಟಂಬರ ತಿಂಗಳು ಪರಮಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜಯಂತಿಯ ಪವಿತ್ರ ಮಾಸ.
ಕಾರಣಿಕ ಯುಗ ಪುರುಷರ ಹುಟ್ಟು ಈ ಯುಗದ ಸಮಾಜೋತ್ಸಾಹ ! ಶ್ರೀಕುಮಾರೇಶ ಚರಿತ ದ ಸಾಹಿತಿ ಪೂಜ್ಯ ಗುರುಕಂದ ಅವರ ಸುಂದರ ಈ ಸಾಲುಗಳು ಓದಿದಷ್ಟು ಮತ್ತೊಮ್ಮೆ ಓದಿಸಿಕೊಳ್ಳುವ ಸಾಲುಗಳು…..
“ತಾಯಿ ನೀಲಮ್ಮನವರ ಗರ್ಭದ ಕೂಸು ಶಿವಾಂಶಿಕನೆಂಬುದು ಹೀಗೆ ಮತ್ತೆ ಕುರುಹಿಟ್ಟಿತ್ತು . ಏಳನೂರೆಪ್ಪತ್ತು ಅಮರಗಣರೊಂದಿಗೆ ಮತ್ರ್ಯದಲ್ಲಿ ಅವತರಿಸಿದ್ದ ದ್ವಿತೀಯ ಶಂಭುವೆನಿಸಿದ ನಂದಿ ಅಂದು ಕಲ್ಯಾಣದಲ್ಲಿ ಬಸವಣ್ಣನಾಗಿ ಚರಿತ್ರೆ ನಿರ್ಮಿಸಿದ್ದ . ಬಾಗೇವಾಡಿಯ ನಂದೀಶ್ವರನ ಅನುಗ್ರಹದಿಂದ ಆ ಮಾದಲಾಂಬಿಕಾ ತಾಯಿ ಬಸವಣ್ಣನವರನ್ನು ಪಡೆದು ಶಿವಶರಣಧರ್ಮ ಮೆರೆಸಲು ಕೂಡಲ ಸಂಗನ ಅಡಿಗಳಿಗೆ ನೀಡಿದ್ದರು. ಆ ಶಿವಶರಣರ ಕಾರ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಆ ನಂದಿಯೇ ಮತ್ತೆ ತಾಯಿ ನೀಲಮ್ಮನವರ ಗರ್ಭದಿಂದ ಅವತರಣಗೊಳ್ಳುವ ಕುರುಹನ್ನು ಹೀಗೆ ನಂದಿಕೇಶ್ವರ ಜಾತ್ರೆಯಲ್ಲಿ ಆ ಸಾದ್ವಿ ನೀಲಮ್ಮನವರಿಗೆ ಕುರುಹಿತ್ತಿದ್ದ. ಆ ಶಿವಪ್ರಸಾದ ಉತ್ತತ್ತಿಯನ್ನು ಜತನವಾಗಿ ಇರಿಸಿಕೊಂಡು ಮನೆಗೆ ಮರಳಿದ ನೀಲಮ್ಮನವರು ಲಿಂಗಪೂಜೆ ಮುಗಿಸಿ ಅರ್ಪಿತಗೊಳಿಸಿ ಸೇವಿಸಿದ್ದರು. ದಿನಗಳು ಉರುಳುತ್ತಿದ್ದವು. ಕೂತರೂ ನಿಂತರೂ, ಮಲಗಿದರೂ ಶಿವಧ್ಯಾನಕ್ಕೆಳಸುವ ಅಂತರಂಗದ ಸೆಳೆತ ಗರ್ಭದ ನೋವನ್ನು ಕ್ಷಣಾರ್ಧದಲ್ಲೇ ಮರೆಮಾಚುವ ಶಿವಮಂತ್ರದ ಶಕ್ತಿಗೆ ನೀಲಮ್ಮ ಬೆರಗಾಗಿದ್ದರು. ತನ್ನೊಳಗೇ ಯಾರೋ ಆ ಮಹಾಮಂತ್ರವನ್ನು ಎಡೆಬಿಡದೆ ಮೆಲ್ಲಗೆ ಉಸುರುತ್ತಿರು ವಂತಾಗಿತ್ತು ಆ ತಾಯಿಗೆ.
ಮುಂಗಾರಮಳೆಗೆ ಭೂಮಿ ಹಸನಾಗಿ ಸುತ್ತಣ ಸೀಮೆಯ ಹೊಲಗಳಲ್ಲಿ ಬಿತ್ತನೆ ಕೆಲಸಗಳೆಲ್ಲ ಮುಗಿದು ಹಸಿರ ಪೈರು ಕಂಗೊಳಿಸುತ್ತ ಪ್ರಕೃತಿ ಸಸ್ಯಶ್ಯಾಮಲೆಯಾಗಿ ನಳನಳಿಸುತ್ತ ಶ್ರಾವಣ ಉರುಳಿ ಭಾದ್ರಪದ ಮಾಸ ಅಡಿಯಿರಿಸಿತ್ತು . ಗೌರಿ-ಗಣೇಶ ಹಬ್ಬ ಸಂಭ್ರಮದಿಂದ ಜರುಗಿತ್ತು. ದಿನ ತುಂಬಿ ಜನನ ಕಾಲ ಸಮೀಪಿಸಿದೆ ಎಂದು ಮನೆಯವರೆಲ್ಲ ನೀಲಮ್ಮನವರತ್ತ ಸದಾ ಒಂದು ಕಣ್ಣಿರಿಸಿದ್ದರು. ಅಂದು ಮಂಗಳವಾರ ರಾತ್ರಿ ಮನೆಯವರೆಲ್ಲರೂ ಪ್ರಸಾದ ಮುಗಿಸಿ ಎಂದಿನಂತೆ ಮಲಗಿದ್ದರು. ನಡು ಇರುಳು ಹಿಂದೆ ಸರಿದಿತ್ತು. ನೀಲಮ್ಮ ನೋವಿನಿಂದ ಒಮ್ಮೆ ಹೊರಳಿದ್ದರು. ಕಾತರಿಸುವ ಜನನ ಕಾಲ ಸಮೀಪಿಸಿತೆಂದು ದೀಪ ಹೊತ್ತಿಸಿ ಮನೆಯ ಹೆಂಗಳೆಯರು ನೀಲಮ್ಮನವರ ಸುತ್ತ ನೆರೆದಿದ್ದರು. ಒಂದು ಮಗುವಿನ ಪ್ರಸವವೆಂದರೆ ಗರ್ಭ ಧರಿಸಿದ ಹೆಣ್ಣಿಗೆ ಹೋದ ಜೀವ ಮತ್ತೆ ಮರಳಿದಂತೆ. ಪ್ರಸವದ ನೋವಿಗೆ ನೀಲಮ್ಮನವರನ್ನು ಸಾಂತ್ವನ ಗೊಳಿಸಲು ನೆರೆದ ಹೆಂಗಸರಿಗೆ ಅಚ್ಚರಿಯಾಗಿತ್ತು. ತಾಯಿ ನೀಲಮ್ಮ ಹೆಚ್ಚು ನೋವಿಲ್ಲದೆ ಗರ್ಭದ ಕೂಸನ್ನು ಹೆತ್ತಿದ್ದರು. ಗರ್ಭ ಹೊತ್ತ ತಾಯಿಗೆ ನೋವು ನೀಡದೆಯೇ ಕೂಸು ಜನಿಸಿತ್ತು. `ಗಂಡು ಕೂಸು’ ! ಹೊರಗಿನವರಿಗೆ ಕೇಳುವಂತೆ ಹೆಂಗಳೆಯರು ಉದ್ಗರಿಸಿದ್ದರು. ಮೂಡಣ ದಿಶೆಯಲ್ಲಿ ನಸುಕು ಕುಡಿದೋರಲು ಅಣಿಯಾಗಿತ್ತು. ಅದು ಬುಧವಾರದ ಮುಂಜಾವ ಬ್ರಾಹ್ಮೀಕಾಲ. ಕೂಸು ಜನಿಸಿದ ಕಾಲಕ್ಕೆ ಶ್ರವಣ ನಕ್ಷತ್ರ ಮೂರನೇ ಪಾದವಿತ್ತು. ಭಾರತೀಯ ಕಾಲಮಾನದಂತೆ ಶಾಲಿವಾಹನ ಶಕೆ 1789ರ ಪ್ರಭವ ಸಂವತ್ಸರ ಭಾದ್ರಪದ ಶುಕ್ಲ ತ್ರಯೋದಶಿ ಬುಧವಾರ ಶ್ರವಣ ನಕ್ಷತ್ರದಲ್ಲಿ ಕಾರಣಿಕ ಕೂಸು ಜನಿಸಿತ್ತು. ಕ್ರಿಸ್ತ ಶಕೆಯಂತೆ ಅದು 1867 ನೇ ಇಸವಿ.”
“ ಶ್ರೀ ಕುಮಾರೇಶರು ಅವತರಿಸಿದ್ದು ಧರ್ಮದ ಬುನಾದಿ ಸಡಿಲಗೊಂಡು ಸಮಾಜ ಇಬ್ಬಂದಿತನದಲ್ಲಿ ಮುಳುಗಿದ್ದ ಅತಂತ್ರ ಸ್ಥಿತಿಯನ್ನು ದೂರ ಮಾಡಲೆಂದು. ಒಬ್ಬೊಬ್ಬ ಸಂತ ಮಹನೀಯರ ಜೀವಿತವೂ ಒಂದೊಂದು ವೈಚಿತ್ರವನ್ನು ತೋರುವಂಥಹುದು. ಎಲ್ಲ ಯೋಗಿ ಮಹಾತ್ಮರೂ ಬೆಳಕಿನತ್ತ ಮುಖ ಮಾಡಿರುವಂಥವರೇ. ತನ್ನ ಮೋಕ್ಷವನ್ನಷ್ಟೇ ಗುರಿಯಾಗಿಸಿಕೊಂಡ ಸಾಧಕ ಜಗತ್ತಿಗೆ ಬೆಳಕು ತೋರಲಾರ; ಅಲ್ಲಿ ಸ್ವಾರ್ಥವೇ ಅಂತಿಮಗುರಿ. ಶ್ರೀ ಕುಮಾರೇಶರಂಥ ಶಿವಯೋಗಿವರ್ಯ ಅಂಥ ಸ್ವಾರ್ಥಕ್ಕೆ ದೂರರಾಗಿ ತನ್ನ ಬಳಿಗೆ ಬಂದವರಿಗೆ ಮಹಾಬೆಳಗಿನ ಹಾದಿ ಎಂಥಹುದೆಂಬುದನ್ನು ತೋರುತ್ತ ಆ ಪರಾತ್‍ಪರ ಪರಮನಿರಂಜನ ವಸ್ತುವಿನ ಕಾಣ್ಕೆಗೆ ಕಾರಣಿಕನಾಗಿ ಮೆರೆದ ಜ್ಯೋತಿಪುಂಗವ, ಈ ಜಂಗಮಜ್ಯೋತಿ ಲೋಕಕ್ಕೆ ಅವತರಿಸಿದ್ದು ಒಂದು ಬಡ ಕುಟುಂಬದಲ್ಲಿ .”
ಸರ್ವರಿಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೭ ನೆಯ ಜಯಂತಿ ಮಹೋತ್ಸವದ ಹಾರ್ದಿಕ ಶುಭ ವಂದನೆಗಳು
ಶ್ರೀಕುಮಾರ ತರಂಗಿಣಿ ಸಪ್ಟಂಬರ ೨೦೨೪ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ಶಂಕರ ಕಾಯೊ ಸದಾ ಕಿಂಕರನು |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಕಾರುಣಿಕ ಕುಮಾರಯೋಗಿ ಧಾರವಾಹಿ: ಪರಳಿ ವ್ಯಾಜ್ಯದಲ್ಲಿ ಪ್ರಯತ್ನ-ಲೇಖಕರು-ಜ.ಚ.ನಿ
- ಮಹಾನುಭಾವಿ ಮೈಲಾರ ಬಸವಲಿಂಗ ಶರಣರು : ಶಾಪಗ್ರಸ್ಥರಲ್ಲ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ನಡೆ-ನುಡಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು
ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
- ಸಮಾಜದ ಕಣ್ಣುಗಳು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು
ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು :ಲೇಖಕ: ಶ್ರೀಕಂಠ.ಚೌಕೀಮಠ.
- ಹಾನಗಲ್ಲ ಕುಮಾರಸ್ವಾಮಿಗಳಿಗೆ ಪಾದಪೂಜೆ : ಕವಿ : ..ಡಾ. ಕಿರಣ ಪೇಟಕರ
-ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ