ಲೇಖಕರು : ಶ್ರೀ ಡಾ. ಜಿ.ವೆಂಕಟೇಶ ಮಲ್ಲೇಪುರಂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
ಹುಬ್ಬಳ್ಳಿಯ ಸಿದ್ಧಾರೂಢರು ಜ್ಞಾನಯೋಗಕ್ಕೆ, ಎಮ್ಮಿಗನೂರಿನ ಜಡೆಯ ಸಿದ್ಧರು ಭವದ ಬೆಳಗು ಕ್ರಿಯಾಯೋಗಕ್ಕೆ, ಎಳಂದೂರು ಬಸವಲಿಂಗ ಶಿವಯೋಗಿಗಳು ಭಕ್ತಿಯೋಗಕ್ಕೆ ಕಾರಣವಾಗಿ ಪ್ರಸಿದ್ಧರಾಗಿದ್ದಾರೆ. ಈ ಮೂರು ಯೋಗಗಳೂ ಮುಪ್ಪುರಿಗೊಂಡದ್ದನ್ನು ಹಾನಗಲ್ಲ ಕುಮಾರಸ್ವಾಮಿಗಳಲ್ಲಿ ಕಾಣುತ್ತೇವೆ. ಈ ನಾಲ್ವರು ಆಧುನಿಕ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಕಾರಣರಾದವರು! ಹಾನಗಲ್ಲ ಕುಮಾರಸ್ವಾಮಿಗಳು ಹಲವು ಹೊಸತುಗಳ ಪ್ರಕಲ್ಪಕ್ಕೆ ಕಾರಣರಾದದ್ದು ಚರಿತ್ರಾರ್ಹ ಸಂಗತಿ. ನೂರು ವರ್ಷಗಳ ಹಿಂದೆ ವೀರಶೈವ ಸಮಾಜ ಮಹಾಂಧಕಾರದಲ್ಲಿ ಮುಳುಗಿತ್ತು; ಆಗ ಕಾರಣಿಕಪುರುಷರಾಗಿ ಒದಗಿ ಬಂದವರೇ ಹಾನಗಲ್ಲ ಶ್ರೀಕುಮಾರಸ್ವಾಮಿಗಳು.
ಬಾಲ್ಯ-ವಿದ್ಯಾಭ್ಯಾಸ:
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದು ಪುಟ್ಟಗ್ರಾಮ. ಆ ಗ್ರಾಮದಲ್ಲಿ ವೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ಮತ್ತು ಆತನ ಮಡದಿ ನೀಲಮ್ಮ ಇದ್ದರು. ಇವರ ಮಗನೇ ಸದಾಶಿವಕುಮಾರಸ್ವಾಮಿ). ಇವರು ಲೀಲಾವತರಣಗೊಂಡ ವರ್ಷ 1867.
ಸದಾಶಿವನ ಜನನ ಒಂದು ವಿಸ್ಮಯಕಾರಿಯೇ. ಅದೊಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮ ನಿದ್ದೆಯಲ್ಲಿದ್ದಾರೆ.ಆಕೆಗೊಂದು ಸ್ವಪ್ನ ಬಿದ್ದಿದೆ. ಒಬ್ಬ ಜಂಗಮವೇಷಧಾರಿ ಕನಸಿನಲ್ಲಿ ಕಾಣಿಸಿಕೊಂಡಿದ್ದಾನೆ. ಅವನು ‘ಮಗನೊಬ್ಬ ಜನಿಸುತ್ತಾನೆ. ಅವನ ಬದಲು ಮತ್ತೊಬ್ಬ ಮಗನನ್ನು ಕೊಡು’ ಎಂದು ಹೇಳಿ ಆಶೀರ್ವದಿಸುತ್ತಾನೆ. ತಾಯಿ ನೀಲಮ್ಮ ಒಪ್ಪಿಗೆ ನೀಡುತ್ತಾರೆ. ನಂತರ ಶುಭಮುಹೂರ್ತದಲ್ಲಿ ಕಾರಣಿಕ ಮಗು ಜನಿಸುತ್ತದೆ. ಸದಾಶಿವ ಜನಿಸಿದ ದಿನ ಜಂಗಮನೊಬ್ಬ ಬಂದು ಊರಿಗೆ ಕಾರಣಿಕ ಮಗು ಜನಿಸಿದೆಯೆಂದು ಸಾರಿ ಹೋಗುತ್ತಾನೆ. ನಂತರ ಜಂಗಮನೊಬ್ಬ ಬಂದು ಜನ್ಮಲಿಂಗಧಾರಣೆ ಮಾಡಿ ಹೋಗುತ್ತಾನೆ. ಮಗುವನ್ನು ಹಾಲಯ್ಯನೆಂದೂ ಸದಾಶಿವನೆಂದೂ ಜನ ಕರೆಯುತ್ತಾರೆ. ಆರನೆಯ ವಯಸ್ಸಿಗೆ ಅಕ್ಷರಭ್ಯಾಸ ಪ್ರಾರಂಭವಾಯಿತು. ಊರಲ್ಲಿದ್ದ ಗಾಂವಟಿಶಾಲೆಗೆ ಸದಾಶಿವ ಹೋದ. ಅವನ ಅಜ್ಜಂದಿರಾದ ಕೊಟ್ರಪ್ಪಯ್ಯ ಆ ಶಾಲೆಯನ್ನು ತೆರೆದಿದ್ದರು. ಅಲ್ಲಿ 1872 ರಿಂದ 1875ರವರೆಗೆ ಮೂರನೆಯ ತರಗತಿ ತನಕ ವಿದ್ಯಾಭ್ಯಾಸ ಜರುಗಿತು. ಸಾಲೀಮಠದ ಬಸವಯ್ಯನವರದ್ದು ಸಾಮಾನ್ಯ ಮನೆತನ.ಧನ-ಧಾನ್ಯಕ್ಕೆ ಸದಾ ತತ್ವಾರ. ಆದರೆ, ಬಂದುಹೋಗುವ ಜನ ಅಪಾರ. ಮನೆಯಲ್ಲೂ ಹತ್ತು-ಹನ್ನೆರಡು ಜನ ಸದಾ ಇರುತ್ತಿದ್ದರು.ಶಾಲೆಯಿಂದ ಬರುತ್ತಿದ್ದ ವಾರ್ಷಿಕ ವರಮಾನ ಅಷ್ಟಕಷ್ಟೆ. ಪ್ರತಿನಿತ್ಯ ಭಿಕ್ಷೆ ಬೇಡಬೇಕಾಗುತ್ತಿತ್ತು. ಈ ನಡುವೆ ತಂದೆ ನಿಧನರಾದರು.
ಸದಾಶಿವನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಮನೆಗೆ ಬಂದಾಗ ಅಣ್ಣನ ಚಾಟಿಮಾತು, ಅಮ್ಮನ ಆರ್ಭಟ ಕಂಡು ಅವನಿಗೆದಿಕ್ಕುತೋಚದಂತಾಯಿತು. ಮುಂದೇನು ಮಾಡಬೇಕೆಂದು ಯೋಚಿಸಿದ. ಇದಕ್ಕೆಲ್ಲ ವಿದ್ಯಾಭ್ಯಾಸವೇ ಕೊನೆಯೆಂದು ಅರಿತು,ಕಜ್ಜರಿಗ್ರಾಮಕ್ಕೆ ಹೊರಟು ಬಂದ. 1876ರಿಂದ 1880ರವರೆಗೆ ನಾಲ್ಕುವರ್ಷ ಮುಲಕೀ ಪರೀಕ್ಷೆಗೆ ಅಭ್ಯಾಸ ಮಾಡಿದ.ಸದಾಶಿವಯ್ಯ ಜ್ಞಾನಾಕಾಂಕ್ಷಿ. ಅವರು ಲಿಂಗದಹಳ್ಳಿಯಲ್ಲಿ ಪ್ರಾಥಮಿಕಶಾಲೆ ಆರಂಭಿಸಿದರು. ಅನೇಕರು ಬಂದು ಶಾಲೆಗೆ ಸೇರಿದರು. ವಿದ್ಯಾಶಿಕ್ಷಣ ಪ್ರಾರಂಭವಾಯಿತು. ಆದರೆ, ತನಗೆ ‘ಆತ್ಮಶಿಕ್ಷಣ’ ಬೇಕೆಂದೆನಿಸಿತು. ಆ ಊರಿನ, ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯ ಬಳಿ ಆಸೆ ಹೇಳಿಕೊಂಡರು. ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ತಿಳಿದುಕೊಳ್ಳಲು ಅವರೊಡನೆ ನೆಲೆನಿಂತರು. ವೇದಾಂತದ ರುಚಿ ಮನಸ್ಸಿಗೆ ಹಿಡಿಸಿತು. ಲಿಂಗಪೂಜೆಯಲ್ಲಿ ಅಪರಿಮಿತ ಪ್ರೇಮಹುಟ್ಟಿತು! ತಾಯಿಗೆ ತನ್ನ ಮಗ ತವರುಮನೆಯಲ್ಲಿ ಇರುವುದು ತಿಳಿಯಿತು. ತಾಯಿ-ಮಗನ ಸಮಾಗಮವೇನೋ ಆಯಿತು. ಮದುವೆ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಬೇಕೆಂಬ ಕಾತರ ತಾಯಿಯದು. ಆದರೆ, ಆಕೆಯ ಹಂಬಲಕ್ಕೆ ಸದಾಶಿವ ಕಡಿವಾಣ ಹಾಕಿ ಒಂದೆರಡು ವರ್ಷ ಕಳೆಯಲೆಂದು ಸಮಾಧಾನ ಮಾಡಿ ಊರಿಗೆ ಕಳಿಸಿದರು. ಇತ್ತ ನಿಜಗುಣರ ‘ಕೈವಲ್ಯಪದ್ಧತಿ’ ಅವರ ಮನಸ್ಸನ್ನು ತಟ್ಟಿತು.ವೈರಾಗ್ಯ ದೇಹ-ಮನಸ್ಸನ್ನು ಆವರಿಸಿತು.
ಅವರು ಲಿಂಗದಹಳ್ಳಿ ತೊರೆದು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರ ಬಳಿ ನೆಲೆನಿಂತರು. ಹುಬ್ಬಳ್ಳಿಯಲ್ಲಿ ವಾಸ, ರುದ್ರಾಕ್ಷಿ ಮಠದಲ್ಲಿ ವಾಸ್ತವ್ಯ. ಭಿಕ್ಷಾಟನೆಯಿಂದ ಪ್ರಸಾದ ಅರ್ಪಿತ. ಪ್ರತಿನಿತ್ಯ ಅಧ್ಯಾತ್ಮಪ್ರವಚನದ ಶ್ರವಣಕ್ಕೆ ಸಿದ್ಧಾರೂಢರ ಬಳಿ ಹೋಗುತ್ತಿದ್ದರು.ಅವರು ಅಲ್ಲಿರುವಾಗ ‘ಇಷ್ಟಲಿಂಗ’ದ ಜಿಜ್ಞಾಸೆ ಬೆಳೆಯಿತು! ಇಷ್ಟಲಿಂಗದ ಅವಶ್ಯಕತೆ ಇಲ್ಲವೆಂದು ಸಿದ್ಧಾರೂಢರಿಂದ ತಿಳಿಯಿತು.ಆಗ ಎಮ್ಮಿಗನೂರು ಶ್ರೀಜಡೆಸಿದ್ಧರ ದರ್ಶನಕ್ಕಾಗಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿದರು. ಅದು 1885ನೇ ವರ್ಷ, ಜಡೆಸಿದ್ಧರ ದರ್ಶನ ವಾಯಿತು . ಇಷ್ಟಲಿಂಗದ ಜಿಜ್ಞಾಸೆ ಅವರಿಂದ ಪರಿಹಾರ ಆಯಿತು. ಅವರು ಹುಬ್ಬಳ್ಳಿಗೆ ಬಂದು ಬಸವಲಿಂಗ ಸ್ವಾಮಿಗಳ ದರ್ಶನ ಪಡೆದರು. ಎಳಂದೂರು ಬಸಲಿಂಗ ಸ್ವಾಮಿಗಳಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. 1885 ರಿಂದ 1895ರ ವರೆಗೆ ಹತ್ತು ಗಳ ಕಾಲ ಶಿಷ್ಯವೃತ್ತಿ ಕೈಗೊಂಡು ಅವರೊಡನೆ ದೇಶಸಂಚಾರ ಮಾಡಿದರು. ಬಸವಲಿಂಗಸ್ವಾಮಿಗಳು ಯೋಗಧುರಂಧರರು. ಜೀವನದಲ್ಲಿ ಸದಾಚಾರ, ಶಿವಪೂಜೆ ಮತ್ತು ಶಿವಾನುಭವಗಳನ್ನು ಕಲಿತರು. ಸ್ವಾಮಿಗಳಿಂದ ಕ್ರಿಯೋಪದೇಶ ಪಡೆದರು. ಅವರಿಬ್ಬರು ಪ್ರಯಾಣದಲ್ಲಿ ಇರುವಾಗಲೇ ಸ್ವಾಮಿಗಳು ತಮ್ಮೆಲ್ಲ ವಿದ್ಯೆಯನ್ನು ಶಿಷ್ಯನಿಗೆ ಧಾರೆಎರೆದರು. ಅಣ್ಣಿಗೆರೆ ಗ್ರಾಮದಲ್ಲಿರುವಾಗ ಎಳಂದೂರು ಶ್ರೀಗಳಿಗೆ ದೇಹಾಲಸ್ಯ ಉಂಟಾಯಿತು. ಸದಾಶಿವ ಸ್ವಾಮಿಗಳನ್ನು ಕರೆದು ಅಸಾಧಾರಣ ಶಿವಯೋಗಿ ಆಗೆಂದು ಅನುಗ್ರಹ ದೀಕ್ಷೆಕೊಟ್ಟು ಅವರು ಲಿಂಗೈಕ್ಯರಾದರು. ಸದಾಶಿವಸ್ವಾಮಿಗಳಿಗೆ ಗುರುಬಸವರ ಗದ್ದುಗೆಯಲ್ಲಿ ಅನುಷ್ಠಾನ ಮಾಡುವ ಅಪೇಕ್ಷೆ ಉಂಟಾಯಿತು. ಅವರು ಕ್ಯಾಸನೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಹಾನಗಲ್ ಶ್ರೀಮಠದ ಫಕೀರಸ್ವಾಮಿಗಳ ದರ್ಶನಕ್ಕೆ ಹೋದರು. ಆ ಕಾಲಕ್ಕೆ ಫಕೀರಸ್ವಾಮಿಗಳು ಸಿದ್ಧಿಪುರುಷರೆಂದು ಖ್ಯಾತಿ ಪಡೆದಿದ್ದರು. ಸದಾಶಿವ ಸ್ವಾಮಿಗಳ ಶಿವಯೋಗಾನುಷ್ಠಾನ, ಜ್ಞಾನಾಭಿಲಾಷೆ ನೋಡಿದ ಫಕೀರಸ್ವಾಮಿಗಳಿಗೆ ಶ್ರೀಮಠದ ಪೀಠಾಧಿಕಾರ ಸ್ವೀಕರಿಸುವಂತೆ ಪ್ರಸ್ತಾಪ ಮಾಡಿದರು. ಈ ಪ್ರಸ್ತಾಪ ನಡೆದದ್ದು 1895ನೆಯ ಇಸವಿಯಲ್ಲಿ. ನಂತರ ಫಕೀರಸ್ವಾಮಿಗಳು ಲಿಂಗೈಕ್ಯರಾದರು. ಬಿದರಿ ಶ್ರೀಕುಮಾರಸ್ವಾಮಿಗಳಿಂದ ‘ನಿರಂಜನಸ್ಥಲ’ ದೀಕ್ಷೆಯೊಂದಿಗೆ ಶ್ರೀಮಠದ ಪಟ್ಟಾಧಿಕಾರವನ್ನು ಸದಾಶಿವಸ್ವಾಮಿಗಳು ಸ್ವೀಕರಿಸಬೇಕಾಯಿತು. ಹಾನಗಲ್ ಶ್ರೀಕುಮಾರ ಸ್ವಾಮಿಗಳು ಎಂಬ ಅಭಿದಾನವನ್ನು ನೀಡಲಾಯಿತು.
ವೀರಶೈವ ಮಹಾಸಭೆ: ದಕ್ಷಿಣ ಭಾರತದಲ್ಲಿ ವೀರಶೈವ ಸಮಾಜ ಎಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯದಿಂದ ಬೆಳೆದು ಬಂದಿತ್ತು.ಇಂಥ ಸಮಾಜವು ಕಳೆಗುಂದಿ ‘ಕೃಷ್ಣಪಕ್ಷದಲ್ಲಿ ಕಾಲಿಟ್ಟಿತ್ತು. ಇದಲ್ಲದೆ, ಇಪ್ಪತ್ತನೆಯ ಶತಮಾನದ ಸುಧಾರಣೆಯನ್ನು ಸಮಾಜ ತಕ್ಕಷ್ಟು ಬಳಸಿಕೊಂಡಿರಲಿಲ್ಲ. ಇಂಥ ಸಮಾಜವನ್ನು ಸುಧಾರಿಸಲು ಯಾವ ಮಹಾಪುರುಷನೂ ಮುಂದೆ ಬಂದಿರಲಿಲ್ಲ. ಆಗ ಕಾರಣಿಕಪುರುಷ ಕುಮಾರಸ್ವಾಮಿಗಳ ಅಂತರ್‌ನೇತ್ರವು ಇತ್ತ ಹೊರಳಿತು! ಈ ನಡುವೆ ಅನೇಕ ಕಡೆಗಳಲ್ಲಿ ಸಂಚರಿಸುತ್ತ ಧಾರವಾಡಕ್ಕೆ ಬಂದರು. ಕುಮಾರಸ್ವಾಮಿಗಳು ಪಟ್ಟಾಧಿಕಾರಕ್ಕೆ ಬಂದಾಗ ನಾಡಿನಲ್ಲಿ ಬರಗಾಲದ ಬಿಸಿಗಾಳಿ ಬೀಸಿತ್ತು. ಆಗ ಬರಪೀಡಿತರಿಗೆ ದಾಸೋಹಸೇವೆ ಕೈಗೊಂಡರು. 1898ರಲ್ಲಿ ಹಾನಗಲ್ಲಿನ ಶ್ರೀಮಠದಲ್ಲಿ ಪಾಠಶಾಲೆ ಪ್ರಾರಂಭಿಸಿದರು. ಅವರು ಸಮಾಜದ ಜಾಗೃತಿಗಾಗಿ ಹಲವಾರು ಸಮಾಲೋಚನ ಸಭೆಗಳನ್ನು ನಡೆಸಿದರು. ಅನೇಕ ಪ್ರಮುಖರ ಜತೆಗೂಡಿ ಮಹಾಸಭೆಯ ಸ್ಥಾಪನೆ ವಿಷಯವನ್ನು ಸಮಾಲೋಚನೆ ಮಾಡಿದರು. ಇದೆಲ್ಲದರ ಫಲವಾಗಿ 1904 ಮೇ ತಿಂಗಳಲ್ಲಿ ‘ಶ್ರೀಮದ್ವೀರಶೈವ ಮಹಾಸಭೆ’ ಅಸ್ತಿತ್ವಕ್ಕೆ ಬಂದಿತು. ಸ್ವಾಮಿಗಳು ಆವರೆಗೂ ಸಂಗ್ರಹಿಸಿದ್ದ ಒಂದುಲಕ್ಷ ರೂಪಾಯಿಗಳನ್ನು ‘ಲಿಂಗಾಯತ ಎಜುಕೇಷನ್ ಫಂಡ್’ ಆಗಿ ಇರಿಸಿದರು. ಅದರಿಂದ ಬರುವ ಬಡ್ಡಿ ಹಣವನ್ನು ಬಡವಿದ್ಯಾರ್ಥಿಗಳಿಗಾಗಿ ವಿನಿಯೋಗಿಸತೊಡಗಿದರು. ವೀರಶೈವ ಸಂಸ್ಕೃತಿಯ ಸಂರಕ್ಷಣೆಗಾಗಿಯೂ ಅವರು ಕಟಿಬದ್ಧರಾದರು. ಅಲ್ಲಲ್ಲಿ ಧನಸಂಗ್ರಹ ಮಾಡಿ ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ರೋಣ, ಇಳಕಲ್ಲ, ಅನಂತಪುರ, ಕೆಳದಿ, ಚಿತ್ತಾಪುರ-ಹಲವಾರು ಕಡೆ ನೂತನ ಪಾಠಶಾಲೆಗಳನ್ನು ಸ್ಥಾಪಿಸಿದರು. ನೂರು ವರ್ಷಗಳ ಹಿಂದೆ ಹಾನಗಲ್ಲು ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಹತ್ತಾರು ಶಾಲೆಗಳು ಸ್ಥಾಪನೆಗೊಂಡವು. ಇವುಗಳಿಗೆ ಹೊಂದಿಕೊಂಡಂತೆ ‘ವಾಚನ ಮಂದಿರಗಳನ್ನು ತೆರೆದರು. ಪ್ರಾಚೀನ ಗ್ರಂಥಗಳ ಅಧ್ಯಯನಕ್ಕೂ ಸಂಶೋಧನೆಗೂ ‘ಸಂಶೋಧನ ಮಂಡಳ’ವನ್ನು ಸ್ಥಾಪಿಸಿದರು. ಹೊರರಾಜ್ಯಗಳಿಗೆ ವಿದ್ವಾಂಸರನ್ನು ಕಳಿಸಿ ಕೆಲವು ಮಹತ್ವದ ವಿಷಯಗಳನ್ನು ಸಂಗ್ರಹಿಸಿದರು.
ಶಿವಯೋಗ ಮಂದಿರ: 1908ನೆಯ ಇಸವಿಯಲ್ಲಿ ಶಿವಯೋಗಮಂದಿರ ಸ್ಥಾಪಿಸುವ ಯೋಜನೆ ಅವರ ಮನಸ್ಸಿನಲ್ಲಿ ರೂಪುಪಡೆಯುತ್ತಿತ್ತು. ಅದೇ ಕಾಲಕ್ಕೆ ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಇವರ ಬಳಿಗೆ ಬಂದರು. ಅವರು “ಧರ್ಮೋನ್ನತಿಗೆ ಬ್ರಹ್ಮಬಲ ಮತ್ತು ಕ್ಷಾತ್ರಬಲ ಎರಡೂ ಬೇಕೆಂದು ಪ್ರಸ್ತಾಪಿಸುತ್ತ-‘ಕ್ಷಾತ್ರಬಲ’ ಈಗ ಸಮಾಜದಲ್ಲಿ ರೂಪು ಪಡೆಯುತ್ತಿದೆ. ಆದರೆ, ‘ಬ್ರಹ್ಮಬಲ’ವನ್ನು ರೂಪಿಸಬೇಕಾಗಿದೆ. ಇದರಿಂದ ಶಿವಯೋಗಧರ್ಮಕ್ಕೆ ಮೆರುಗು ನೀಡಬೇಕಾಗಿದೆ.ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡಯೋಗಸಂಸ್ಥೆಯ ಅವಶ್ಯಕತೆಯಿದೆ. ಅದು ನಿಮ್ಮಿಂದ ನೆರವೇರಬೇಕು’ ಎಂದು ಆಗ್ರಹಿಸಿದರು. ಅವರು ಆ ಕಾಲಕ್ಕೆ 14 ಸಾವಿರ ಧನಸಂಗ್ರಹ ಮಾಡಿದರು. ಬಾಗಲಕೋಟೆಯಲ್ಲಿ ನಡೆದ ವೀರಶೈವ ಮಹಾಸಭೆಯಲ್ಲಿ ‘ಶಿವಯೋಗಮಂದಿರ’ ಸ್ಥಾಪನೆಗೆ ಒಪ್ಪಿಗೆ ದೊರೆಯಿತು. ಹುನಗುಂದ ಮಾರ್ಗವಾಗಿ ಐಹೊಳೆ-ಪಟ್ಟದಕಲ್ಲುಗಳನ್ನು ಸ್ಥಳಪರಿಶೀಲನೆ ಮಾಡಿ ಮಲಾಪಹಾರಿಣಿ ನದಿಯ ದಂಡೆಯಲ್ಲಿದ್ದ ಜಾಗವೊಂದಿತ್ತು. ಗಮನಿಸಿದರು. ಸುತ್ತ-ಮುತ್ತ ಪಾಪಾಸುಕಳ್ಳಿ ಬೆಳೆದಿತ್ತು. ಆದರೆ, ಒಂದೆಡೆ ಬಿಲ್ವಪತ್ರೆಯ ವನವಿತ್ತು. ಅದರ ಪಕ್ಕದಲ್ಲಿ ಹೊಳೆ ಹರಿಯುತ್ತಿತ್ತು.ಮುರಿದುಬಿದ್ದ ಸಣ್ಣಗುಡಿಯನ್ನು ಇಳಕಲ್ಲ ಸ್ವಾಮಿಗಳು ಕಂಡರು. ಆಗ ‘ಶಿವಯೋಗಮಂದಿರ’ಕ್ಕೆ ಇದೇ ಪ್ರಶಸ್ತವಾದ ಸ್ಥಳವೆಂದು ಹೇಳಿ ತೀರ್ಮಾನಿಸಿದರು. ಆಗ ಪುಷ್ಯಮಾಸ. ಅದು ಕಳೆದು ಮಾಘಮಾಸದ ಬೆಳಗಿನಲ್ಲಿ ಐದಾರು ಪರ್ಣಕುಟೀರಗಳು ನಿರ್ಮಾಣಗೊಂಡವು. ಶ್ರೀಕುಮಾರಸ್ವಾಮಿಗಳ ಪರಿಶ್ರಮದ ಫಲವಾಗಿ ಹತ್ತು-ಹನ್ನೆರಡು ಭವ್ಯ ಕಟ್ಟಡಗಳಾದುವು. ಮಂದಿರದ ಸುತ್ತ-ಮುತ್ತ ಇದ್ದ ಐವತ್ತು ಎಕರೆಗಳನ್ನು ಸರ್ಕಾರದಿಂದ ಇನಾಮಾಗಿ ಪಡೆದರು. ಗೋವುಗಳನ್ನು ಸಂರಕ್ಷಿಸಿದರು. ದೊಡ್ಡ ಪುಸ್ತಕಾಲಯ ಸ್ಥಾಪಿಸಿದರು. ಶಿವಯೋಗಮಂದಿರವು ವೀರಶೈವ ಸಮಾಜದ ಕಣ್ಣಾಗಿ ಕಾಲಕ್ರಮೇಣ ರೂಪಿತಗೊಂಡಿತು. ಅಲ್ಲಿ ಕನ್ನಡ-ಸಂಸ್ಕೃತ-ಸಂಗೀತ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಜ್ಞಾನ ಸಂಪಾದಿಸಿಕೊಂಡರು. ಈ ಮಂದಿರದಿಂದ ಭಾಷಣಕಾರರು, ಕೀರ್ತನಕಾರರು,ಪೌರಾಣಿಕರು, ಲೇಖಕರು, ಯೋಗಿಗಳು ಅನುಭಾವಿಗಳು, ಸ್ವಾಮಿಗಳು, ಸಂಗೀತಜ್ಞರು ತಯಾರಾಗಿ ಕೀರ್ತಿಗಳಿಸಿದರು. ಇಲ್ಲಿ ಪಂಚಸೂತ್ರಗಳಿಗೆ ಅನುಗುಣವಾಗಿ ಲಿಂಗಗಳು ತಯಾರಾಗುತ್ತವೆ. 1914ರಲ್ಲಿ ಬಸವಜಯಂತಿ ದಿನದಂದು ರೋಣ ತಾಲೂಕು ನಿಡಗುಂದಿಕೊಪ್ಪದಲ್ಲಿ ಶಾಖಾ ಶಿವಯೋಗಮಂದಿರದ ಸ್ಥಾಪನೆಯನ್ನು ಶ್ರೀಗಳು ನೆರವೇರಿಸಿದರು. ನಂತರ 1917ರಲ್ಲಿ ಶಿಕಾರಿಪುರ ‘ಪ ಕಾಳೇನಹಳ್ಳಿಯ ಕುಮುದ್ವತಿ-ವೃಷಭ ನದಿ ಸಂಗಮದಲ್ಲಿ ಮತ್ತೊಂದು ಶಾಖಾ ಶಿವಯೋಗಾಶ್ರಮ ಸ್ಥಾಪನೆಗೊಂಡಿತು.
ಅಂತಿಮ ದಿನಗಳು: ಸ್ವಾಮೀಜಿ ಸ್ತ್ರೀಶಿಕ್ಷಣಕ್ಕೆ ಆದ್ಯತೆ ನೀಡಿದರು. ವ್ಯವಸಾಯ, ವಾಣಿಜ್ಯಕ್ಕೆ ಬೆಲೆಕೊಟ್ಟರು. ಪ್ರತಿಯೊಬ್ಬರೂ ಶಿಕ್ಷಣ’ ಪಡೆಯಬೇಕೆಂದು ಸೂಚಿಸುತ್ತಿದ್ದರು. ಶಿವಯೋಗ ಮಂದಿರದಲ್ಲಿ ಅದನ್ನು ಜಾರಿಗೆ ತಂದರು. ಇವರ ಸಂಪತ್ತು ಅಗಣ್ಯ. ಗದಗಿನ ಪಂಚಾಕ್ಷರಿ ಗವಾಯಿಗಳು ಸ್ವಾಮಿಗಳ ಆಶ್ರಯದಲ್ಲಿ ಬೆಳೆದು ಕೀರ್ತಿತರಾದರು. ದೇವಲಾಪುರದ ‘ಲಿಂಗಶಾಸ್ತ್ರಿ ಕೀರ್ತನಕಲೆಯಲ್ಲಿ ಬೆಳೆದರು. ದ್ಯಾಂಪೂರದ ಚನ್ನಕವಿಗಳು ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು! ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಸರಳಜೀವನ ನಡೆಸುತ್ತಿದ್ದರು. ದಪ್ಪಾದ ಕಾವಿಯ ಕಪನೆ, ಮಸ್ತಕಕ್ಕೆ ಒಂದು ಚೌಕಪಾವುಡ, ಲಿಂಗಮೂರ್ತಿಗೆ ವಸ್ತ್ರ, ಹಸ್ತಕ್ಕೊಂದು ಬೆತ್ತ, ಪಾದಗಳಿಗೆ ಪಾದುಕೆ. ಇದಿಷ್ಟೆ ಅವರ ದಿರಿಸು, ಸ್ವಾಮಿಗಳವರ ವಾಕ್ಸಿದ್ಧಿ ಅಪೂರ್ವವಾದುದೇ.ಅವರ ಪ್ರತಿಮಾತಿನಲ್ಲೂ ಓಂಕಾರದ ಮಹತ್ತು ಸದಾ ಇರುತ್ತಿತ್ತು. ಅವರು ಬಿಡುವಿಲ್ಲದೆ ನಾಡನ್ನೆಲ್ಲ ಸುತ್ತಿದರು. 1930ರಲ್ಲಿ ಕುಮುದ್ವತಿ-ತುಂಗಭದ್ರಾ ಸಂಗಮಸ್ಥಳ ಸಂಗಮೇಶ್ವರ ದೇವಾಲಯದಲ್ಲಿ ಇಪ್ಪತ್ತೊಂದು ದಿನ ಅನುಷ್ಠಾನ ಮಾಡಿದರು. ಆ ಅನುಷ್ಠಾನದ ಕೊನೆಗೆ ಅವರಿಗೆ ಅಸ್ವಸ್ಥತೆ ಉಂಟಾಯಿತು. ಅಂದು ಮಾಘ ಬಹುಳ ಸಪ್ತಮಿ 1930ನೆಯ ಇಸವಿ ಗುರುವಾರ ಸಂಜೆ ಸ್ನಾನ ಮಾಡಿ, ಶಿವಪೂಜೆಯಲ್ಲಿ ತಲ್ಲೀನರಾದರು. ಸಂಜೆ ಏಳುಗಂಟೆಯ ಸಮಯದಲ್ಲಿ ಲಿಂಗದಲ್ಲಿ ಬೆರೆತರು. ಅವರ ಕಣ್ಣುಗಳು ತೆರೆದಂತೆಯೇ ಇತ್ತು. ಶಿವಲಿಂಗದಲ್ಲಿ ಅವರು ಶಿವೈಕ್ಯರಾದರು. ಅವರ ಮಹಾಸಮಾಧಿಯನ್ನು ಶಿವಯೋಗಮಂದಿರದಲ್ಲಿ ನೆರವೇರಿಸಲಾಯಿತು. ವೀರಶೈವ ಸಮಾಜದ ಮಹಾಸೂರ್ಯ ಅಸ್ತಂಗತವಾದರೂ ಆ ‘ಶಿವಪ್ರಭೆ’ ನೂರಾರು ವರ್ಷಗಳ ಕಾಲ ಬೆಳಗುತ್ತ, ಬೆಳೆಯುತ್ತಲೇ ಇದೆ.