==================
“ತಲೆಬಾಗಿದ ಪರಂಪರೆ, ತಲೆಎತ್ತಿದ ಅವಿವೇಕ”
========================
ಶ್ರೀಕಂಠ ಚೌಕೀಮಠ
=============================
(ವಿಶೇಷ ಸೂಚನೆ : ಈ ಲೇಖನವನ್ನು ಓದುವ ಮುನ್ನ ೦೨-೦೯-೨೦೨೫ರಂದು ಕಲಬುರಗಿಯಲ್ಲಿ ನಡೆದ “ಬಸವ ಸಂಸ್ಕೃತಿ ಅಭಿಯಾನ”ದ ವಿದ್ಯಾರ್ಥಿಗಳ ಸಂವಾದದ ವಿಡಿಯೋ, ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು, ಪೂಜ್ಯ ಸಾಣೇಹಳ್ಳಿ ಶ್ರೀಗಳ ಪಾದಪೂಜೆ ಹಾಗೂ ಒಂದು ಕುಟುಂಬದ ಶವಸಂಸ್ಕಾರ ಮಾಡುತ್ತಿರುವ ಚಿತ್ರಗಳು, ಜೊತೆಗೆ ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ, ವಯಸ್ಸಿನಲ್ಲಿ ಅತ್ಯಂತ ಕಿರಿಯವರಾದ ಕಲಕೇರಿಯ ಶಿವಾಚಾರ್ಯರ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸುತ್ತಿರುವ ವಿಡಿಯೋಗಳನ್ನು ಓದುಗರು ಸೂಕ್ಷ್ಮವಾಗಿ ಅವಲೋಕಿಸಲು ಪ್ರಾರ್ಥನೆ — ಲೇಖಕ)
ಇದೊಂದು ವಿಡಿಯೋ ಮಾತ್ರವಲ್ಲ.ಇದು ಒಂದು ಪರಂಪರೆಯ ಆತ್ಮ. ಒಂದು ಗುರು–ಶಿಷ್ಯ ಸಂಬಂಧದ ಗಂಭೀರತೆ.
ಒಂದು ಮಠಸಂಸ್ಕೃತಿಯ ವಿನಯಭಾವ.ಮತ್ತು ಇಂದಿನ ಗದ್ದಲಮಯ ಧಾರ್ಮಿಕ ವೇದಿಕೆಗಳ ನಡುವೆ ನಿಧಾನವಾಗಿ ಕಳೆದುಹೋಗುತ್ತಿರುವ “ಆತ್ಮಸಂಸ್ಕಾರ” ಎಂಬ ಮೌಲ್ಯದ ಜೀವಂತ ಸಾಕ್ಷಿ.
ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ, ವಯಸ್ಸಿನಲ್ಲಿ ಅತ್ಯಂತ ಕಿರಿಯವರಾದ ಕಲಕೇರಿಯ ಶಿವಾಚಾರ್ಯರ ಪಾದಪೂಜೆ ಮಾಡಿ ಪಾದೋದಕ ಸ್ವೀಕರಿಸುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಹದ್ದು.(ಕಲಕೇರಿಯ ಶಿವಾಚಾರ್ಯರು ಪೂಜ್ಯ ಶರಣಬಸವೇಶ್ವರರ ಗುರುಗಳಾದ ಕಲಕೇರಿಯ ಶ್ರೀ ಮರುಳಸಿದ್ದ ಶಿವಾಚಾರ್ಯರ ಮಠದ ಪೀಠಸ್ಥರು.)
ಅದು ವ್ಯಕ್ತಿಯೊಬ್ಬನಿಗೆ ಸಲ್ಲಿಸಿದ ಶರಣಾಗತಿ ಅಲ್ಲ.ಅದು ಗುರುಪೀಠಕ್ಕೆ ಸಲ್ಲಿಸಿದ ಗೌರವ.
ಅದು ದೇಹಕ್ಕೆ ಸಲ್ಲಿಸಿದ ನಮಸ್ಕಾರವಲ್ಲ — ಪರಂಪರೆಯ ಚೈತನ್ಯಕ್ಕೆ ತಲೆಬಾಗಿದ ವಿನಯ.
ಪರಮಪೂಜ್ಯ ಲಿಂ. ಶರಣಬಸವಪ್ಪ ಅಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ದಿನಗಳಲ್ಲಿ ನನ್ನ ತಂದೆಯವರ ಸಹಪಾಠಿಗಳೂ, ಅತ್ಯಂತ ಆತ್ಮೀಯ ಸ್ನೇಹಿತರೂ ಆಗಿದ್ದರು. ಆದರೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಎಂದಿಗೂ ನನ್ನ ತಂದೆಯವರಿಂದ ಪಾದನಮಸ್ಕಾರ ಮಾಡಿಸಿಕೊಂಡವರಲ್ಲ.
ಅಂಥ ಅಪರೂಪದ ವಿನಯಶೀಲ ವ್ಯಕ್ತಿತ್ವದ ಮಹನೀಯರು, ತಮ್ಮ ಗುರುಪರಂಪರೆಯ ಪೀಠದ ಎದುರು ಭಕ್ತಿಪೂರ್ವಕವಾಗಿ ಪಾದಪೂಜೆ ಮಾಡುತ್ತಿರುವ ದೃಶ್ಯವನ್ನು ನೋಡಿದ ಕ್ಷಣ, ೨೦೨೫ರ ಸೆಪ್ಟೆಂಬರ್ನಲ್ಲಿ ಕಲಬುರಗಿಯಲ್ಲಿ ನಡೆದ “ಬಸವ ಸಂಸ್ಕೃತಿ ಅಭಿಯಾನ”ದ ಒಂದು ಘಟನೆ ಮನಸ್ಸಿನಲ್ಲಿ ಮಿಂಚಿನಂತೆ ಮರುಕಳಿಸಿತು.
ಅಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯುತ್ತಿತ್ತು. ಹಲವಾರು ವಿದ್ಯಾರ್ಥಿಗಳು ಬಸವಣ್ಣನವರ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಷ್ಟರಲ್ಲಿ ಒಬ್ಬ ಎತ್ತರದ, ಕಪ್ಪನೆಯ, ಬೋಳುತಲೆಯ ವ್ಯಕ್ತಿ ಏಕಾಏಕಿ ಒಬ್ಬ ವಿದ್ಯಾರ್ಥಿನಿಯಿಂದ ಮೈಕ್ ಕಸಿದುಕೊಂಡು, “ಕಲಬುರಗಿ ಕೆ.ಸಿ.ಡಿ.ಟಿ. ಪ್ರೌಢಶಾಲೆಯ ಸ್ನೇಹಾ” ಎಂದು ತಾನೇ ಪರಿಚಯಿಸಿಕೊಂಡ ವಿದ್ಯಾರ್ಥಿನಿಗೆ ಮೈಕ್ ನೀಡಿದರು. ಅದಕ್ಕೂ ಮೊದಲು ಆ ಬಾಲಕಿಗೆ ತಾನು ಬರೆದುಕೊಂಡು ಬಂದ ಪ್ರಶ್ನೆಯ ಚೀಟಿಯನ್ನು ನೀಡಿ ಕೆಲವು ಸೂಚನೆಗಳನ್ನು ನೀಡುತ್ತಿರುವ ದೃಶ್ಯ ಲೈವ್ ವಿಡಿಯೋದಲ್ಲೇ ಸ್ಪಷ್ಟವಾಗಿ ಸೆರೆಯಾಗಿತ್ತು.

ನಂತರ ಸ್ನೇಹಾ ಎಂಬ ವಿದ್ಯಾರ್ಥಿನಿ ಆ ಪ್ರಶ್ನೆಯನ್ನು ಓದಿದಳು. ಆದರೆ ಆಕೆಯ ಕನ್ನಡ ಭಾಷೆಯ ಮೇಲಿನ ಹಿಡಿತ, ತಡವರಿಸುತ್ತಿದ್ದ ಉಚ್ಚಾರಣೆ, ಮತ್ತು ಪ್ರಶ್ನೆ ಓದುವಾಗ ಕಂಡ ಸಂಕೋಚ — ಇವೆಲ್ಲವೂ ಆ ಪ್ರಶ್ನೆ ಆಕೆಯ ಮನಸ್ಸಿನಿಂದ ಹುಟ್ಟಿದದ್ದಲ್ಲ ಎಂಬುದನ್ನು ಕ್ಷಣಾರ್ಧದಲ್ಲೇ ಬಹಿರಂಗಪಡಿಸಿತು.
ಆಕೆಗೆ ಬರೆದು ಕೊಟ್ಟ ಪ್ರಶ್ನೆ ಹೀಗಿತ್ತು:
“ಕರ್ನಾಟಕದಲ್ಲಿ ವಿಶ್ವಗುರು ಬಸವಣ್ಣನವರಗಿಂತ ದೊಡ್ಡವರಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಶ್ರೀ ಶರಣ ಬಸವೇಶ್ವರರಿಗಿಂತ ಯಾರು ದೊಡ್ಡವರಿಲ್ಲ. ಇಂತಹ ಸಂಸ್ಥಾನದಲ್ಲಿ, ಇಂಥವರು ಲಿಂಗೈಕ್ಯರಾದಾಗ ಅವರ ತಲೆಯ ಮೇಲೆ ಪಾದವಿಡುವುದು ಸರಿಯೇ?”
ಈ ಪ್ರಶ್ನೆ “ಬಸವ ಸಂಸ್ಕೃತಿ ಅಭಿಯಾನ”ದಂತಹ ಕಾರ್ಯಕ್ರಮದಲ್ಲಿ ಉದ್ಭವಿಸಬೇಕಾದ ಸಹಜ ಜಿಜ್ಞಾಸೆಯ ಪ್ರಶ್ನೆಯಾಗಿರಲಿಲ್ಲ. ಅದು ಪೂರ್ವಸಿದ್ಧತೆಯೊಂದಿಗೆ ರೂಪಿಸಲಾದ ಪ್ರಚೋದನಾತ್ಮಕ ಪ್ರಶ್ನೆ ಎಂಬುದು ಸ್ಪಷ್ಟವಾಗುತ್ತಿತ್ತು. ಏನೂ ಅರಿಯದ ಒಂದು ಬಾಲಕಿಯ ಬಾಯಲ್ಲಿ ಇಂತಹ ಪ್ರಶ್ನೆಯನ್ನು ಹಾಕಿಸಿ, ತಮ್ಮ ಪೂರ್ವಗ್ರಹಗಳನ್ನು “ಸಂವಾದ”ದ ರೂಪದಲ್ಲಿ ವೇದಿಕೆಗೆ ತರುವ ಮೂಲಕ ಅಲ್ಲಿನ ಸಂಘಟಕರು ತಮ್ಮ “ಸಂಸ್ಕೃತಿ”ಯ ನಿಜಸ್ವರೂಪವನ್ನು ಅನಾವರಣಗೊಳಿಸಿದರು.
ಈ ಪ್ರಶ್ನೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಭಾಲ್ಕಿ ಶ್ರೀಗಳು ಅತ್ಯಂತ ಸಮತೋಲನದಿಂದ ಉತ್ತರಿಸುತ್ತಿದ್ದರು:
“ಶರಣ ಸಿದ್ಧಾಂತದಲ್ಲಿ ಸ್ಥಾವರ–ಜಂಗಮ ಸಿದ್ಧಾಂತಗಳಿದ್ದು, ಚೈತನ್ಯಕ್ಕೆ ಬೆಲೆ ಇದೆ; ಜಡತ್ವಕ್ಕಲ್ಲ. ವ್ಯಕ್ತಿ ಲಿಂಗೈಕ್ಯರಾದ ಮೇಲೆ ಅದು ಜಡವಾಗುತ್ತದೆ. ಅದು ಸ್ಥಾವರ ಸ್ಥಿತಿ. ಅದನ್ನು ಜಂಗಮ ತತ್ವದಂತೆ ಪಾದೋದಕ ಸಿಂಪಡಿಸಿ ಜಡತ್ವದಲ್ಲಿ ಚೈತನ್ಯವನ್ನು ತುಂಬುವ ಕ್ರಿಯೆ ಜರುಗುತ್ತದೆ…”
ಅವರು ಶರಣ ತತ್ವದ ಆಧ್ಯಾತ್ಮಿಕ ಅರ್ಥವನ್ನು ಶಾಂತವಾಗಿ ವಿವರಿಸುತ್ತಿರುವಾಗಲೇ, ಏಕಾಏಕಿ ಅವರ ಕೈಯಿಂದ ಮೈಕ್ ಕಸಿದುಕೊಂಡ ಪೂಜ್ಯ ಸಾಣೇಹಳ್ಳಿ ಶ್ರೀಗಳು ಮಾತು ಆರಂಭಿಸಿದರು.
“ಸ್ವಾಮೀಜಿಯವರು ಬಹಳ ಸೂಕ್ತ ಉತ್ತರವನ್ನು ಕೊಟ್ಟಿದ್ದಾರೆ. ಸ್ಥಾವರ–ಜಂಗಮ ಅಂತ. ಬಹುತೇಕ ಕಡೆಗಳಲ್ಲಿ ಈ ಜಂಗಮ ಸ್ವಾಮಿಗಳಿದ್ದಾರಲ್ಲ ಅವರಿಗೆ ವಿವೇಕ ಕಡಿಮೆ ಇದೆ. ವಿವೇಕ ಕಡಿಮೆ ಇರುವದರಿಂದ ಅವರು ಯಾರೇ ಸತ್ತರೂ ಅವರ ತಲೆಯ ಮೇಲೆ ಪಾದವಿಟ್ಟು ಆಶೀರ್ವಾದ ಮಾಡುತ್ತಾರೆ. ಇದು ಅವಿವೇಕದ ಪರಮಾವಧಿ. ಇದನ್ನು ಯಾರೇ ಮಾಡಿದರೂ ಕೂಡಾ ವಿರೋಧ ಮಾಡಬೇಕು. ಪಾದೋದಕ ಹಾಕುವದರಲ್ಲಿ ಅರ್ಥವಿದೆ. ಪಾದವಿಡುವದರಲ್ಲಿ ಖಂಡಿತ ಅರ್ಥವಿಲ್ಲ ಎಂದು ನಾವು ಈ ವೇದಿಕೆ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.”
ಈ ಮಾತುಗಳು ಕೇವಲ ಒಂದು ವೈಯಕ್ತಿಕ ಅಭಿಪ್ರಾಯವಾಗಿರಲಿಲ್ಲ.
ಅವು ಒಂದು ಸಮುದಾಯದ ಶತಮಾನಗಳ ಧಾರ್ಮಿಕ ಆಚರಣೆಗಳ ಮೇಲೆ ಸಾರ್ವಜನಿಕವಾಗಿ ಎಸೆಯಲಾದ ಅವಹೇಳನದ ಕಲ್ಲಾಗಿತ್ತು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠ — ಕರ್ನಾಟಕದ ಅತ್ಯಂತ ಪ್ರಸಿದ್ಧ, ಪ್ರಭಾವಶಾಲಿ ಮತ್ತು ಶ್ರೀಮಂತ ಮಹಾಸಂಸ್ಥಾನಗಳಲ್ಲಿ ಒಂದು. ಅದರ ಆಡಳಿತ ಮತ್ತು ಧಾರ್ಮಿಕ ವಿಧಿವಿಧಾನಗಳು ಪೂಜ್ಯ ಶರಣಬಸವೇಶ್ವರ ಅಪ್ಪ ಅವರ ಧರ್ಮಪತ್ನಿಯವರ ನೇತೃತ್ವದಲ್ಲಿ ನಡೆಯುತ್ತವೆ.
ಇಂತಹ ಮಹಾಸಂಸ್ಥಾನದ ಆಂತರಿಕ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದೇ ಸೂಕ್ಷ್ಮ ವಿಷಯವಾಗಿರುವಾಗ, ಅದನ್ನೇ “ಅವಿವೇಕದ ಪರಮಾವಧಿ” ಎಂದು ಘೋಷಿಸುವುದು ಯಾವ ಸಂಸ್ಕೃತಿಯ ಭಾಷೆ? ಯಾವ ಆಧ್ಯಾತ್ಮಿಕ ವಿವೇಕ?
ಪೂಜ್ಯ ಶರಣಬಸವೇಶ್ವರ ಅಪ್ಪ ಅವರು ಲಿಂಗೈಕ್ಯರಾದದ್ದು ಆಗಸ್ಟ್ ೧೪, ೨೦೨೫.
“ಬಸವ ಸಂಸ್ಕೃತಿ ಅಭಿಯಾನ” ಕಲಬುರಗಿಯಲ್ಲಿ ನಡೆದದ್ದು ಸೆಪ್ಟೆಂಬರ್ ೨, ೨೦೨೫.
ಅಂದರೆ ಕೇವಲ ಹದಿನೇಳು ದಿನಗಳ ಅಂತರ.
ತಮ್ಮ ಮಹಾಸಂಸ್ಥಾನದ ಹಿರಿಯರನ್ನು ಕಳೆದುಕೊಂಡ ಆ ಮಹಾಮನೆ ಇನ್ನೂ ಶೋಕದ ನಿಶ್ಶಬ್ದತೆಯಿಂದ ಹೊರಬಂದಿರಲಿಲ್ಲ. ಅಂಗಳದಲ್ಲಿ ನೆನಪುಗಳ ಭಾರ ಇತ್ತು. ಭಕ್ತರ ಕಣ್ಣಲ್ಲಿ ಕಣ್ಣೀರು ಇನ್ನೂ ಒಣಗಿರಲಿಲ್ಲ. ಪೂಜ್ಯ ಅಪ್ಪರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲಾರದೆ ಸಾವಿರಾರು ಮನಸ್ಸುಗಳು ಒಳಗೆ ಒಳಗೆ ಕುಸಿದುಕೊಳ್ಳುತ್ತಿದ್ದವು.
ಆದರೂ ಆ ಮಹಾಮನೆ ತನ್ನ ವೈಯಕ್ತಿಕ ದುಃಖವನ್ನು ಬದಿಗಿಟ್ಟು, ಕಲಬುರಗಿಗೆ ಆಗಮಿಸಿದ ಎಲ್ಲ ಮಹಾಸ್ವಾಮಿಗಳಿಗೆ ಪೂಜೆ–ಪ್ರಸಾದದ ಆತಿಥ್ಯ ನೀಡಿತು. ಅದು ಕೇವಲ ಸಂಪ್ರದಾಯದ ಕರ್ತವ್ಯವಾಗಿರಲಿಲ್ಲ; ಶರಣ ಸಂಸ್ಕೃತಿಯ ಹೃದಯವಂತಿಕೆ.
ಆದರೆ ಆ ಆತಿಥ್ಯಕ್ಕೆ ಪ್ರತಿಯಾಗಿ ದೊರೆತದ್ದು ಏನು?
“ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ” ಎಂಬ ಸಾರ್ವಜನಿಕ ಘೋಷಣೆ.
“ಇದು ಅವಿವೇಕದ ಪರಮಾವಧಿ” ಎಂಬ ವೇದಿಕೆಯ ತೀರ್ಪು.
ಒಂದು ಶೋಕಸಂತಪ್ತ ಮಹಾಮನೆಯ ಧಾರ್ಮಿಕ ಆಚರಣೆಯನ್ನು, ಅದರ ಭಕ್ತಿಯ ಆಂತರ್ಯವನ್ನು, ಅದರ ಶತಮಾನಗಳ ಗುರುಪರಂಪರೆಯನ್ನು — ಅದೇ ಮನೆಯ ಅಂಗಳದಲ್ಲಿ ನಿಂತು ಸಾರ್ವಜನಿಕವಾಗಿ ಅವಹೇಳನ ಮಾಡಿದ ಕ್ಷಣದಲ್ಲಿ, ಅಲ್ಲಿ ನೋವಾದದ್ದು ಕೇವಲ ಒಂದು ಮಠವಲ್ಲ; ಸಾವಿರಾರು ಭಕ್ತರ ಹೃದಯ.
ಮರುದಿನ ಕರ್ನಾಟಕದ ಪ್ರಮುಖ ದಿನಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ಸಾಣೇಹಳ್ಳಿ ಶ್ರೀಗಳು ಜಂಗಮ ಸ್ವಾಮಿಗಳ ಕುರಿತು ಮಾಡಿದ ಈ ಹೇಳಿಕೆಯನ್ನು ರಾಷ್ಟ್ರೀಯ ಸುದ್ದಿಯಂತೆ ಪ್ರಸಾರ ಮಾಡಿದ್ದವು. ಆದರೆ ಆ ಸುದ್ದಿಗಳ ಹಿಂದೆ ಮೌನವಾಗಿ ರಕ್ತಸ್ರಾವವಾಗುತ್ತಿದ್ದ ಭಕ್ತಮನಸ್ಸಿನ ನೋವನ್ನು ಯಾರೂ ನೋಡಲಿಲ್ಲ.

ಒಂದು ವಿಷಯವನ್ನು ಇಲ್ಲಿ ಪೂಜ್ಯ ಸಾಣೇಹಳ್ಳಿ ಶ್ರೀಗಳಿಗೇ ಸ್ಪಷ್ಟವಾಗಿ ನೆನಪಿಸಬೇಕಾಗಿದೆ.
ಯಾವ ಜಂಗಮರಾಗಲಿ, ಜಂಗಮ ಸ್ವಾಮಿಗಳಾಗಲಿ — ಯಾರ ಮನೆಯ ಅಂಗಳಕ್ಕೂ, ಯಾವ ಕಾರ್ಯಕ್ರಮಕ್ಕೂ ಆಮಂತ್ರಣವಿಲ್ಲದೆ ಹೋಗುವುದಿಲ್ಲ. ವಿಶೇಷವಾಗಿ ಶರಣಪರಂಪರೆಯ ಮಹಾಸಂಸ್ಥಾನಗಳ ಧಾರ್ಮಿಕ ವಿಧಿವಿಧಾನಗಳಲ್ಲಿ ಅವರು “ಆಮಂತ್ರಿತ ಅತಿಥಿಗಳು”; ಅನಧಿಕೃತ ಪ್ರವೇಶಿಗಳು ಅಲ್ಲ.
ಮೂಲತಃ ಜೀವರ್ಗಿ ತಾಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು (೧೭೪೬–೧೮೨೨), ವೀರಶೈವ ಲಿಂಗಾಯತ ಧರ್ಮದ ಸಂದೇಶಗಳನ್ನು ಸಾರುತ್ತ ಗುಲಬರ್ಗಾಕ್ಕೆ ಬಂದು ನೆಲೆನಿಂತು, ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದದ್ದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಶರಣಬಸವೇಶ್ವರರಿಗೆ ಕಲಬುರಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು. ಗುರು–ಶಿಷ್ಯರ ಈ ಆತ್ಮಸಂಬಂಧವೇ ನಂತರ ಒಂದು ಮಹಾಪರಂಪರೆಯಾಗಿ ಬೆಳೆದದ್ದು. ಅದಕ್ಕಾಗಿಯೇ ಇಂದು ಶರಣಬಸವೇಶ್ವರರ ಸಮಾಧಿ ಇರುವ ಗರ್ಭಗೃಹದಲ್ಲಿ, ಅವರ ಗುರುಗಳಾದ ಕಲಕೇರಿಯ ಶ್ರೀ ಮರುಳಸಿದ್ದ ಶಿವಾಚಾರ್ಯರು ಮತ್ತು ಶರಣಬಸವೇಶ್ವರರ ಜೋಡಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅದು ಕೇವಲ ಮೂರ್ತಿಪ್ರತಿಷ್ಠಾಪನೆ ಅಲ್ಲ; ಗುರು–ಶಿಷ್ಯರ ಅವಿನಾಭಾವ ಬಾಂಧವ್ಯಕ್ಕೆ ನೀಡಿದ ಶಾಶ್ವತ ಆಧ್ಯಾತ್ಮಿಕ ರೂಪ.

ಇಂದು ಅದೇ ಭಕ್ತರ ಆರಾಧನಾ ಬಿಂದುವಾಗಿದೆ.
ಅದೇ ಪರಂಪರೆಯನ್ನು, ಅದೇ ಗುರುಸ್ಮರಣೆಯ ವಿನಯವನ್ನು, ಅದೇ ಆಧ್ಯಾತ್ಮಿಕ ಸಂಬಂಧದ ಗೌರವವನ್ನು ಪೂಜ್ಯ ಶರಣಬಸವಪ್ಪ ಅಪ್ಪ ಅವರು ತಮ್ಮ ಬದುಕಿನ ಕೊನೆಯ ಉಸಿರಿನವರೆಗೂ ಅತ್ಯಂತ ಭಕ್ತಿಯಿಂದ ಮುಂದುವರೆಸಿಕೊಂಡು ಬಂದಿದ್ದರು.
ಅವರು ಜೀವಮಾನವಿಡೀ ಗೌರವಿಸಿಕೊಂಡು, ಭಕ್ತಿಯಿಂದ ಪೂಜಿಸಿಕೊಂಡು ಬಂದ ಆ ಪವಿತ್ರ ಗುರುಸಂಬಂಧವನ್ನು, ಗುರುಪೀಠದ ಮೇಲಿನ ಅವಿನಾಭಾವ ಬಾಂಧವ್ಯವನ್ನು, ಮತ್ತು ಮಹಾಸಂಸ್ಥಾನದ ಧಾರ್ಮಿಕ ಆಚರಣೆಗಳನ್ನು “ಅವಿವೇಕತನ” ಹಾಗೂ “ಅವಿವೇಕತನದ ಪರಮಾವಧಿ” ಎಂದು ಸಾರ್ವಜನಿಕ ವೇದಿಕೆಯಲ್ಲಿ ಘೋಷಿಸುವುದು — ಅದೂ ಪೂಜ್ಯ ಶರಣಬಸವಪ್ಪ ಅಪ್ಪ ಅವರು ಲಿಂಗದೊಳಗಾಗಿ ಕೇವಲ ಹದಿನೇಳು ದಿನಗಳೊಳಗೆ ಅದೇ ಕ್ಷೇತ್ರಕ್ಕೆ ತೆರಳಿ ಹೇಳುವುದು — ಪೂಜ್ಯ ಸಾಣೇಹಳ್ಳಿ ಶ್ರೀಗಳ ಹಿರಿತನಕ್ಕೂ ಯೋಗ್ಯವಲ್ಲ; ಅವರ ಆಧ್ಯಾತ್ಮಿಕ ವ್ಯಕ್ತಿತ್ವಕ್ಕೂ ಭೂಷಣವಲ್ಲ.
ಇದರಲ್ಲಿನ ವಿಪರ್ಯಾಸ ಇನ್ನೂ ಗಾಢವಾಗಿದೆ.
ಸ್ವತಃ ಪೂಜ್ಯ ಸಾಣೇಹಳ್ಳಿ ಶ್ರೀಗಳು ದಾವಣಗೇರಿಯ ಶ್ಯಾಮನೂರು ಕುಟುಂಬದಲ್ಲಿ ಪಾದಪೂಜೆ ಮಾಡಿಸಿಕೊಳ್ಳುತ್ತಿರುವ ಚಿತ್ರಗಳು ಸಾರ್ವಜನಿಕ ವಲಯದಲ್ಲಿವೆ. ಹಾಗೆಯೇ ಒಂದು ಶವಸಂಸ್ಕಾರದ ಸಂದರ್ಭದಲ್ಲಿ, ಒಂದು ಮೊರದ ಮೇಲೆ ಮತ್ತೊಂದು ಮೊರವನ್ನು ಮುಚ್ಚಿ ಪ್ರದಕ್ಷಿಣೆ ಮಾಡುವ ವಿಧಿವಿಧಾನದ ಚಿತ್ರಗಳೂ ಹರಿದಾಡುತ್ತಿವೆ. ಈ ಆಚರಣೆಗಳ ಕುರಿತು ಇದುವರೆಗೆ ಲಭ್ಯವಾಗಿರುವ ಇಪ್ಪತ್ತ್ನಾಲ್ಕು ಸಾವಿರಕ್ಕೂ ಹೆಚ್ಚು ಶರಣರ ವಚನಗಳಲ್ಲಿ ಯಾವುದೇ ನೇರ ಉಲ್ಲೇಖವಿದೆಯೇ ಎಂಬ ಪ್ರಶ್ನೆಯನ್ನು ನಾನು ಇಲ್ಲಿ ಎತ್ತುವುದಿಲ್ಲ. ಅದರ ಹಿನ್ನಲೆಗಳನ್ನು ಅಗೆಯಲು ಹೋಗುವುದಿಲ್ಲ. ಅವರವರ ಸಂಪ್ರದಾಯಗಳನ್ನು ಪ್ರಶ್ನಿಸುವ ಉದ್ದೇಶವೂ ನನ್ನದಲ್ಲ.

ಆದರೆ ಪ್ರಶ್ನೆ ಒಂದೇ.
ಸಾರ್ವಜನಿಕ ವೇದಿಕೆಯಲ್ಲಿ ಜಾತಿ ಜಂಗಮರನ್ನು “ಅವಿವೇಕಿಗಳು” ಎಂದು ಕರೆಯುವ ನೈತಿಕ ಹಕ್ಕು ಯಾರಿಗಿದೆ?
ನಾನು ಇಲ್ಲಿ ಕೋಪದಿಂದ ಕೇಳುತ್ತಿಲ್ಲ.
ಅಪಮಾನ ಮಾಡುವ ಉದ್ದೇಶದಿಂದಲೂ ಕೇಳುತ್ತಿಲ್ಲ.
ಒಂದು ನೋವಿನ ಮನಸ್ಸಿನಿಂದ, ವಿನಮ್ರವಾಗಿ ಕೇಳುತ್ತಿರುವೆ —
ಇತರರ ಆಚರಣೆಗಳನ್ನು “ಅವಿವೇಕ” ಎಂದು ಘೋಷಿಸುವ ಮುನ್ನ, ತಮ್ಮದೇ ಆಚರಣೆಗಳತ್ತ ಆತ್ಮಾವಲೋಕನದಿಂದ ನೋಡುವುದು ನಿಜವಾದ ವಿವೇಕವಲ್ಲವೇ?
ಸ್ವತಃ ಪೂಜ್ಯ ಭಾಲ್ಕಿ ಶ್ರೀಗಳು “ಸ್ಥಾವರ–ಜಂಗಮ” ತತ್ವದ ಆಧ್ಯಾತ್ಮಿಕ ಅರ್ಥವನ್ನು ಸಮತೋಲನದಿಂದ ವಿವರಿಸುತ್ತಿರುವ ಸಂದರ್ಭದಲ್ಲಿ, ಅವರ ಉತ್ತರವನ್ನು ಅರ್ಧದಲ್ಲೇ ನಿಲ್ಲಿಸಿ ಉದ್ದೇಶಪೂರ್ವಕವಾಗಿ ಮಧ್ಯಪ್ರವೇಶಿಸಿ ಜಂಗಮರ ಕುರಿತು ಅವಹೇಳನಾತ್ಮಕವಾಗಿ ಮಾತನಾಡಬೇಕಾದ ಅಗತ್ಯವೇನಿತ್ತು? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಪೂಜ್ಯ ಸಾಣೇಹಳ್ಳಿ ಶ್ರೀಗಳಿಗೆ ಜಾತಿ ಜಂಗಮರ ಮೇಲೆ ಅಥವಾ ಜಂಗಮ ಸ್ವಾಮಿಗಳ ಮೇಲೆ ಅಸಮಾಧಾನ, ಆಕ್ರೋಶ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ, ಅದನ್ನು ಚರ್ಚಿಸಲು ಬೇರೆ ವೇದಿಕೆಗಳ ಕೊರತೆಯಿರಲಿಲ್ಲ. ಆದರೆ “ಬಸವ ಸಂಸ್ಕೃತಿ ಅಭಿಯಾನ”ವೆಂಬ ಹೆಸರಿನ ವೇದಿಕೆಯನ್ನು ಬಳಸಿಕೊಂಡು, ಒಂದು ಸಮುದಾಯದ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕವಾಗಿ “ಅವಿವೇಕ” ಎಂದು ಘೋಷಿಸುವ ಅಗತ್ಯವೇನಿತ್ತು? ಬಸವ ಸಂಸ್ಕೃತಿಯ ಅರ್ಥವೇ ಸಾಮರಸ್ಯವಾಗಿರುವಾಗ, ಅದೇ ವೇದಿಕೆಯನ್ನು ವಿಭಜನೆಯ ಭಾಷೆಗೆ ಬಳಸಿಕೊಂಡದ್ದು ನಿಜಕ್ಕೂ ವಿಷಾದನೀಯ.
ಯಾಕೆಂದರೆ ವೀರಶೈವ–ಲಿಂಗಾಯತ ಪರಂಪರೆ ಕೇವಲ ತತ್ವಗಳ ಸಂಗ್ರಹವಲ್ಲ; ಅದು ಸಂಬಂಧಗಳ ಸಂಸ್ಕೃತಿ.
ಅಲ್ಲಿ ಗುರು ಎಂದರೆ ಅಧಿಕಾರವಲ್ಲ — ಆತ್ಮಸಂಬಂಧ.
ಜಂಗಮ ಎಂದರೆ ಜಾತಿಯಲ್ಲ — ಚೈತನ್ಯದ ಪ್ರತೀಕ.
ಪಾದಪೂಜೆ ಎಂದರೆ ದೇಹಾರಾಧನೆ ಅಲ್ಲ — ಪರಂಪರೆಯ ಎದುರು ಅಹಂಕಾರ ಕರಗುವ ಆಧ್ಯಾತ್ಮಿಕ ಕ್ಷಣ.
ಇಂದು ಸಮಸ್ಯೆ ಆಚರಣೆಗಳಲ್ಲಿ ಇಲ್ಲ;
ಅವುಗಳ ಒಳಾರ್ಥವನ್ನು ಅರಿಯದೆ, ವೇದಿಕೆಗಳ ಮೇಲೆ ನಿಂತು ತೀರ್ಪು ಕೊಡುವ ಮನೋಭಾವದಲ್ಲಿದೆ. ಸಾವಿರಾರು ಭಕ್ತರ ನಂಬಿಕೆ, ಶತಮಾನಗಳ ಗುರು–ಶಿಷ್ಯ ಪರಂಪರೆ, ಒಂದು ಮಹಾಮನೆಯ ಭಾವನಾತ್ಮಕ ಸಂಸ್ಕೃತಿ — ಇವೆಲ್ಲವನ್ನೂ ಕೆಲವೇ ನಿಮಿಷಗಳ ಚಪ್ಪಾಳೆಗಾಗಿ “ಅವಿವೇಕ” ಎಂದು ಘೋಷಿಸುವುದು ಜ್ಞಾನವಲ್ಲ; ಅದು ಆತ್ಮಸಂಸ್ಕೃತಿಯ ಬಡತನ.
ಶರಣಬಸವಪ್ಪ ಅಪ್ಪ ಅವರ ಆ ಮೌನ ಪಾದಪೂಜೆಯ ವಿಡಿಯೋ, ಬಹುಶಃ ಸಾವಿರ ಭಾಷಣಗಳಿಗಿಂತ ದೊಡ್ಡ ಪಾಠವನ್ನು ಹೇಳುತ್ತದೆ —
ನಿಜವಾದ ಹಿರಿತನ ಎತ್ತರದ ಆಸನಗಳಲ್ಲಿ ಕಾಣಿಸುವುದಿಲ್ಲ; ತಲೆಬಾಗುವ ವಿನಯದಲ್ಲಿ ಕಾಣಿಸುತ್ತದೆ.
ಆದ್ದರಿಂದಲೇ ಇತಿಹಾಸದಲ್ಲಿ ಉಳಿಯುವವರು ವೇದಿಕೆಗಳ ಮೇಲೆ ಗಟ್ಟಿಯಾಗಿ ಕೂಗಿದವರು ಅಲ್ಲ; ಪರಂಪರೆಯ ಮುಂದೆ ಮೌನವಾಗಿ ತಲೆಬಾಗಿದವರು.
ಆದರೆ ಕೆಲವೊಮ್ಮೆ ರಂಗ ವೇದಿಕೆಯ ಮಧ್ಯಭಾಗದಲ್ಲಿ ಕುಳ್ಳಿರಿಸುವ ಗೌರವ, ಮುಖದ ಮೇಲೆ ಬೀಳುವ ರಂಗದ ಬೆಳಕು, ಜಯಘೋಷಗಳು ಮತ್ತು ಚಪ್ಪಾಳೆಗಳು — ಎಂಥ ರಂಗಜಂಗಮ ವಯೋವೃದ್ಧರನ್ನೂ ಆತ್ಮಾವಲೋಕನದ ದಾರಿಯಿಂದ ತಪ್ಪಿಸುತ್ತವೆ ಎಂಬುದಕ್ಕೆ ಈ ಘಟನೆ ಒಂದು ನೋವಿನ ಸಾಕ್ಷಿಯಾಗಿ ಉಳಿಯುತ್ತದೆ.
*ಶ್ರೀಕಂಠ.ಚೌಕೀಮಠ

























Total views : 25454