• ಡಾ. ಹಿರೇಮಲ್ಲೂರ ಈಶ್ವರನ್

(ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ.  ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. ‘ಹರಿಹರ ಕವಿಯ ಕೃತಿಗಳು – ಒಂದು ಸಂಖ್ಯಾನಿರ್ಣಯವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್‌ ನಲ್ಲಿ ನೆಲೆಸಿದರು. ಮನುಸ್ಮೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ಗ್ರಂಥಗಳ ಸಂಪಾದಕರಾಗಿದ್ದರು. ಎರಡು ದಶಕಗಳ ಕಾಲ ಮೂರು ಅಂತಾರಾಷ್ಟ್ರೀಯ ತ್ರೈಮಾಸಿಕಗಳನ್ನು ಪ್ರಕಟಿಸುತ್ತಿದ್ದರು. 1998ರ ಜೂನ್ 23 ರಂದು ಹಾಲೆಂಡ್ ನಲ್ಲೇ ನಿಧನರಾದರು.)

ಬಾದಾಮಿಯ ಚಾಲುಕ್ಯರ ನಾಡಿನಲ್ಲಿ ಗುಳೇದಗುಡ್ಡದ ಜಟಕಾಸಾಬಿಯ ಕುದುರೆಓಡುತ್ತಿತ್ತು. ಗುಳೇದಗುಡ್ಡದ ಗೆಳೆಯರ ಔದಾರೆ. ನಾಡಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಶಿವಯೋಗಮಂದಿರದ ಕಡೆಗೆ ಹೊರಟಿದ್ದೆವು. ದಾರಿಯಲ್ಲಿ ಹಂಸನೂರು, ದೇವದಾಸಿಯರ ಊರು ಅದು: ತೋಗಣಸಿ ಮಾಂತ್ರಿಕರ ವಾಸಸ್ಥಾನ. ಕೆಂದೂರು ಅಂದವಾದ ಹಳ್ಳಿ, ಕುಟುಗನ ಕೆರೆ ಬಂದಿತು, ಗೆಳೆಯರು ಒತ್ತಾಯ ಮಾಡಿದರು. ಗಾಡಿಯಿಂದಿಳಿದವು. ದಾರಿಯ ಹತ್ತಿರವೇ ಉಪಾಹಾರ ಮಂದಿರ.ಗಾಳಿಗೆ ಮೈಯೊಡ್ಡಿ ಕುಟುಗನ ಕೆರೆಯ ಆತಿಥ್ಯ ಪಡೆದು ಮುಂದೆ ಸಾಗಿದಾಗ ಸುಮಾರು  ಹೊತ್ತೇರಿದ್ದಿತು.

ಲೈನದಾರಿಯ ಇಕ್ಕೆಲದಲ್ಲಿ ತರುಮರಾದಿಗಳು ಹಸಿರು ಮುಡಿದು ನಿಂತಿದ್ದವು. ಗಿಡಮರಗಳಿಂದಾಚೆಗೆ ಮೇರೆ ಮೀರಿ ಹಬ್ಬಿದ ಹೊಲಗದ್ದೆಗಳಲ್ಲಿ ಸಜ್ಜೆ ಜೋಳಗಳು ಚವರಿ ಬೀಸುತ್ತಿದ್ದವು. ಅಷ್ಟು ಬಿಸಿಲೂ ಅಲ್ಲ. ಅಷ್ಟು ನೆಳಲೂ ಅಲ್ಲ, ಅಂತಹ ಹೊತ್ತಿನಲ್ಲಿ ಗಾಳಿ ಸುಯ್ಕೆಂದು ಬೀಸಿ ಕಣ್ಮನಗಳಲ್ಲಿ ಕಾರ್ಯ ನಿಮಗ್ನರಾದ ರೈತಕುಲ, ದಾರಿಯಲ್ಲಿ ಅಡ್ಡಬರುವ ಜನ; ಈ ದೃಶ್ಯವನ್ನು, ಈ ನಾಡನ್ನು ಈ ಜನತೆಯನ್ನು ಎಲ್ಲಿಯೋ ಕಂಡ ನೆನಪು. ಇದಕ್ಕೂ ಮೊದಲು ಎಲ್ಲಿಯೋ ನೋಡಿದಂತೆ ಅನುಭವ.

ಹೌದೌದು. ಏಳನೆಯ ಶತಮಾನದಲ್ಲಿ ಇತ್ತ ಕಡೆ ಬಂದ ನೆನಪು. ಅದು ಎರಡನೆಯ ಪುಲಕೇಶಿಯ ಕಾಲ. ಹುವೆನ್ ಚಿಂಗನೊಡನೆ ಬಂದುದು ನಿಜ. ನಮ್ಮನಾಳುವ ದೊರೆ ಪುಲಕೇಶಿ, ಅವನ ಅಭಿಮಾನ ನಮ್ಮ ಅಭಿಮಾನ. ಅವನ ಕ್ಷಾತ್ರತೇಜ ಕನ್ನಡದ ಕ್ಷಾತ್ರತೇಜ, ಸ್ನೇಹ ಬೇಡಿದವರು ಧನ್ಯರು. ವೈರ ಬಗೆದವರು ಸತ್ತರು. ಛಲ ಛಲ, ಹಟ ಹಟ, ಪ್ರೇಮ ಪ್ರೇಮ. ಅರಸನಂತೆ ಪ್ರಜೆಗಳು. ಸುಭಟರ್ಕಳ್,ಕಲಿಗಳ, ಸುಪ್ರಭುಗಳ, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ  ಗಂಭೀರಚಿತ್ತರ್, ವಿವೇಕಿಗಳೇ, ಇವರೇ ಹರ್ಷವರ್ಧನನನ್ನು ಸೋಲಿಸಿದವರು. ಹರವಾದ ಎದೆ. ನೀಳವಾದ ತೋಳು, ಹೊಳೆವ ಕಂಗಳು, ದುಂಡು ಮೊಗ, ನುಡಿದಂತೆ ನಡೆ. ವಿಚಾರದಂತೆ ಆಚಾರ.

ದಾರಿ ದಾರಿಗುಂಟ ಭೀಕರವಾದ ಬಂಡೆಗಲ್ಲುಗಳು ಒಂದರಮೇಲೊಂದು ಒರಗಿಕೊಂಡಿದ್ದವು. ಕಾಲಕ್ಕೆ ಸಾಕ್ಷಿ ಹೇಳುತ್ತ ಮಲಗಿಕೊಂಡಂತೆ ತೋರುತ್ತಿದ್ದವು.ಶರಪಂಜರದ ಮೇಲೊರಗಿದ ಭೀಷ್ಮಾಚಾರ್ಯರಂತೆ ಎದೆಯೊಡ್ಡಿ ಮಲಗಿ ಕೊಂಡಿವೆ.ಎದೆಯ ಮೇಲೆ ಹದಿಮೂರುನೂರು ವರುಷ ಅಡ್ಡಾಡಿವೆ. ಹೆಜ್ಜೆ ಮೂಡಿವೆ. ಆದರೆ ಎದೆ ಹಣ್ಣಾಗಿಲ್ಲ. ಆತ್ಮಶ್ರೀ ಕಾಂತಿಗುಂದಿಲ್ಲ. ‘ಏನು ಬರುವುದೋ ಬರುವ ಕಾಲಕ್ಕೊಮ್ಮೆ ಬಂದು ಬಿಡಲಿ’ ಎಂದೆನ್ನುತ್ತ ಅಬ್ಬರದ ಆಶಾವಾದವನ್ನು ತಳೆದು ಇವು ಹೆಜ್ಜೆ ಕಿತ್ತಿಲ್ಲ ನಿಂತ ಜಾಗ ಬಿಟ್ಟಿಲ್ಲ. ಸ್ವಾಭಿಮಾನದ ವಜ್ರಕವಚ ಧರಿಸಿಕೊಂಡು ದಾರಿ ದಾರಿಗೆ ನಿಂತ ಶಿಲಾತಪಸ್ವಿಗಳಿಗೆ ಕೈಮುಗಿದು ಮುಂಬಂದರೆ ಮಹಾಕೂಟ, ದಕ್ಷಿಣ ಕಾಶಿ ಇದು, ಉತ್ತರ ಕಾಶಿ ಅದು, ಎರಡು ಸಾವಿರ ಲಿಂಗಗಳು ಮಹಾಕೂಟದ ಮಹೋನ್ನತಿಗೆಂದು ದಿವಾರಾತ್ರಿ ಕಾವಲುಗೆಯ್ಯುತ್ತಿವೆ. ಗರ್ಭಗುಡಿಯ ಶಿವಲಿಂಗದ ಎದುರು ಹಸಾದ ಬೇಡಿ ನಿಂತಿರುವ ಭಕ್ತಿ ಭಾಂಡಾರಿ ಬಸವಣ್ಣನಿಗೆ ನಮಸ್ಕಾರ ಮಾಡಿ ಎದುರಿನ ಮುಷ್ಕರಣಿಯ ತೀರ್ಥದ ಒಂದು ಹನಿ ಬಾಯಲ್ಲಿ ಹಾಕಿಕೊಂಡರೆ ಬದುಕೆಲ್ಲ ಅಮೃತ.

ಮುಂದೆ ಮೂರು ಮೈಲುಗಳ ದಾರಿ, ಶಿವಯೋಗ ಮಂದಿರದ ದಾರಿ. ದಾರಿಯುದ್ದಕ್ಕೂ ನಿಶ್ಚಲ ನೀರವತೆ. ಮಹಾಮೌನ, ತಪಸ್ವಿಗಳ ಕಡೆಗೆ ಹೋಗಬೇಕು. ಸಪ್ಪಳ ಮಾಡಿದರೆ ಶಿವಯೋಗಿಗಳ ನಿದ್ರಾಭಂಗವಾದೀತು. ಅವರು ಸಿಟ್ಟಾದರು. ಮುನಿಗಳ ಮುನಿಸು ಮೂಗುದುದಿಯೊಳಕ್ಕೆ! ಗಿಡ ಮರಗಳಿಗೂ ಈ ಮಾತು ತಿಳಿದಿದೆ.ಎಂತೆಯೇ ಗಾಳಿ ಬೀಸಿದರೂ ಎಲೆ ಅಲುಗಾಡದೆ ಹಾಗೆಯೇ ನಿಂತಿವೆ. ಪ್ರಕೃತಿ ಪ್ರೇಯಸಿ. ಆದರೂ ಹಕ್ಕಿ ಕಲರವಗೈಯದಿವೆ. ಈ ನಾಡಿನ ಅಣುರೇನು ತ್ರಣ ಕಾಷ್ಠ ಗಳಿಗೂ ಶಿವಯೋಗಮಂದಿರದ ಕತೆ ಗೊತ್ತಿದೆ. ಶಿವಯೋಗಮಂದಿರದ ಕತೆ…..?

ನನ್ನ ಮನಸ್ಸು ಎಂಟು ವರುಷಗಳ ಹಿಂದೆ ಓಡಿತು. ಹಿರೇಮಲ್ಲೂರಿಗೆ ಹೊರಟು ಹೋಯಿತು. ಮುಚ್ಚಂಜೆಯಾಗಿದೆ. ನಮ್ಮ ಶಿವು ಪಾಠ ಓದುತ್ತಿದ್ದಾನೆ. ನಾನು ಇಲ್ಲಿ ಕುಳಿತಿದ್ದೇನೆ. ನನ್ನ ತಾಯಿ ಅಲ್ಲಿ ಇದ್ದಾಳೆ. ನಮ್ಮ ಶಂಕರಿ ಇನ್ನೂ ಸಣ್ಣವಳು. ಶಿವು ಓದುತ್ತಿರುವುದನ್ನು ತಾಯಿ ಮಕ್ಕಳು ಕೇಳುತ್ತಿದ್ದಾರೆ. ಶಿವುನ ವಾಚನ ನಡೆದಿದೆ.

ರಾಣೆಬೆನ್ನೂರು ತಾಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದೊಂದು ಊರು.ನೀಲಮ್ಮ ಬಸವಯ್ಯನವರಿಗೆ ಬಹಳ ದಿನದ ಮೇಲೆ ಗಂಡು ಮಗುವೊಂದು ಜನಿಸಿತು.ಜನನವಾದ ಮೇಲೆ ಮಗು ಎರಡು ದಿನಗಳವರೆಗೂ ತಾಯಿಯ ಎದೆಯ ಹಾಲನ್ನೇ ಉಣಲಿಲ್ಲ. ಎಲ್ಲರಿಗೂ ಅಚ್ಚರಿ. ಬಂಧು ಬಾಂಧವರಿಗೆ ಗಾಬರಿ. ಆದರೂ ಸಾಧ್ಯೆ ಶಿವನನ್ನು ಸ್ಮರಿಸಿ ಶಿಶುವಿಗೆ ಭಸಿತವನ್ನು ಪೂಸಿ ಮುದ್ದಿಟ್ಟಳು. ಶಿಶು ನಕ್ಕು ನಲಿದು ಹಾಲು ಕುಡಿಯಲು ಮೊದಲು ಮಾಡಿತು. ಅಂದು ನಾಮಕರಣದ ದಿನ; ಹಾಲಯ್ಯ ಎಂದು ಕೂಸಿಗೆ ಹೆಸರಿಟ್ಟು ಜೋಗುಳ ಹಾಡಿದರು. ಹೂ ಬೆಳೆದಂತೆ ಹಾಲಯ್ಯ ಬೆಳೆದನು. ಕೋಕಿಲ ಕುಕಿಲುವದ ಕಲಿವಂತೆ ಹಾಲಯ್ಯ ಪಾಠ ಕಲಿತ, ಸಾಲೆಯಿಂದೊಂದು ದಿನ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ತಾಯಿ ಕೊಟ್ಟ ರೊಟ್ಟಿಯನ್ನು ಮಗನು ತಿನ್ನುತ್ತಿರುವ ಹೊತ್ತಿನಲ್ಲಿ ಹೊಸ್ತಿಲದ ಬಳಿ ಭಿಕ್ಷುಕನೊಬ್ಬನು ನಿಂತು ‘ಅವ್ವಾ! ಹಸಿವೆ. ಒಂದು ತುತ್ತು ರೊಟ್ಟಿ ಕೊಡು’ ಎಂದು ಬೇಡಿದನು. ‘ಇಗೋ’ ಎಂದೆನ್ನುತ್ತ ಹಾಲಯ್ಯ ಕೈಯಲ್ಲಿಯ ರೊಟ್ಟಿಯನ್ನು ಭಿಕ್ಷುಕನಿಗೆ ಕೊಟ್ಟನು. ತಾಯಿ ಅದನ್ನೆಲ್ಲ ನೋಡಿ ಹರ್ಷಿತಳಾದಳು.

ಓಡಿ ಬಂದು ಮಗನನ್ನು ಮುದ್ದಿಟ್ಟು, ‘ದಯಾಳು ಹಾಲಯ್ಯ’ ಎಂದಳು.ಹಾಲಯ್ಯ ಹೀಗೆ ‘ದಯಾಳು ಹಾಲಯ್ಯ’ನಾದ, ಹಳ್ಳಿಯ ಜಂಗಮರಂತೆ ದಯಾಳು ಹಾಲಯ್ಯನಿಗೂ ‘ಭವತಿ ಭಿಕ್ಷಾಂ ದೇಹಿ’ ಕೋರಾನ್ನ ಬೇಡುವ ಸರತಿ ಬರದೇ ಇರಲಿಲ್ಲ. ಜೋಯಿಸರ ಹರಳಳ್ಳಿ ಒಂದೇ ಅಲ್ಲ, ಹತ್ತಿರದ ಹಳ್ಳಿಗಳಿಗೂ ಹೋಗುವ ರೂಢಿ, ಮೊದಲೇ ಬಡತನ, ತಾಯಿಯ ಅಪ್ಪಣೆ ದಯಾಳು ಹಾಲಯ್ಯನಿಗೆ ದೇವಾಜ್ಞೆ, ಅದೊಂದು ದಿನ ಮುಂಜಾವಿನಲ್ಲಿ ಹತ್ತಿರದ ಹಳ್ಳಿಯಲ್ಲಿ ಹಾಲಯ್ಯನ ಕೋರಾನ್ನ ಭಿಕ್ಷೆ ನಡೆದಿತ್ತು.

“ಅಯ್ಯಪ್ಪ, ಪರಾನ್ನಭುಂಜಿಸುವವನು ಇದ್ದರೂ ಸತ್ತಂತೆ! ಓದು, ಓದಿ ಬುದ್ಧಿವಂತನಾಗು, ಅನ್ನಸಂಪಾದನೆ ಮಾಡು’, ಎಂದು ಯಾರೋ ಅಂದರು.ಭಿಕ್ಷೆಗೆಂದು ಹೋದ ಹಾಲಯ್ಯ ಅಳುತ್ತ ಬಂದ. ತಾಯಿಗೆ ಕಾರಣ ತಿಳಿಯಲಿಲ್ಲ.ಓದಬೇಕು. ಬುದ್ಧಿವಂತನಾಗಬೇಕು. ಮನುಷ್ಯನಾಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಮಾಡಬೇಕು. ತಾಯಿಗೆ ಹೇಳಲಿಲ್ಲ. ತಂದೆಗೆ ಹೇಳಲಿಲ್ಲ. ಯಾರಿಗೂ ಹೇಳದೇ ಕೇಳದೇ ಮುದ್ದಿನ ಜೋಯಿಸರ ಹಳ್ಳಿಯ ಕಡೆಗೆ ಹನಿಗಣ್ಣಿನಿಂದ ನೋಡುತ್ತ,ಹರಳಳ್ಳಿಯ ತಾಯಿಗೊಂದು ನಮಸ್ಕಾರ ಮಾಡಿ ಹಾಲಯ್ಯನು ಮನೆ ಬಿಟ್ಟು ಹೊರಟನು,ತೊಡಲು ಅಂಗಿಯಿಲ್ಲ. ಉಡಲು ಬಟ್ಟೆಯಿಲ್ಲ. ಒಂದು ಕಾವೀ ರುಮಾಲು, ಎರಡು ಕಾವೀ ಧೋತರ, ಕಜ್ಜರಿಗೆ ಓಡಿಬಂದ. ಹಾಲಯ್ಯನ ಹತ್ತಿರ ಇರುವ ಸಂಪತ್ತು ಅಷ್ಟೆ ಮುಲಕೀ ಓದಿದ. ಧಾರವಾಡಕ್ಕೆ ಕಾಲುನಡಿಗೆಯಿಂದ ಹೋಗಿ ಮುಲಕೀ ಪರೀಕ್ಷೆಗೆ ಕೂತರೆ ನಪಾಸು! ದಯಾಳು ಹಾಲಯ್ಯ! ಮುಲಕೀ ಪಾಸಾಗಿ ಮಾಸ್ತರನಾಗಬೇಕೆ? ಕಾಲ ಬರೆದ ದೈವಲೀಲೆಯೇ ಬೇರೆಯಾಗಿತ್ತು. ಅಷ್ಟೊತ್ತಿಗೆ ಕನ್ನಡದ ಪ್ರತಿಭಾವಂತ ತತ್ವಜ್ಞಾನಿ, ದಾರ್ಶನಿಕ, ಕಾವ್ಯಯೋಗಿ ನಿಜಗುಣಾಢ್ಯರ ಯೋಗದ ಗರಡಿಮನೆಯಲ್ಲಿ ಹಾಲಯ್ಯನವರು ಇಳಿದಿದ್ದರು.

ಲಿಂಗದ ಹಳ್ಳಿ ಹಾಲಯ್ಯನ ತಾಯಿಯ ತವರೂರು. ಅಲ್ಲಿ ಬಂದು ಕನ್ನಡ ಶಾಲೆಯ ಶಿಕ್ಷಕರಾಗಿ ನಿಂತರು. ಹಾಲುಗಲ್ಲದ ಹುಡುಗರು. ಕುಸುಮ ಕೋಮಲ ಗುರು, ಓದು, ಬೋಧನೆ ಆವ್ಯಾಹತವಾಗಿ ನಡೆಯಿತು. ತಾಯಿಗೆ ಸುದ್ದಿ ಹತ್ತಿತು.ಹುಡುಕುತ್ತ ಬಂದರು. ‘ಹಾಲಯ್ಯ! ಮದುವೆ ಮಾಡಿಕೋ ಬಾ, ನಮ್ಮ ಮನೆಯ ದೀಪ ನೀನು’ ಎಂದಳು.’ಒಂದು ವರುಷ ಬಿಟ್ಟು ಉತ್ತರ ಹೇಳುತ್ತೇನೆ’ ಎಂದು ಮಗನ ಉತ್ತರ, ಒಂದುವರುಷದ ಮೇಲೆ ಮತ್ತೆ ತಾಯಿ ಬಂದಾಗ ಮುನ್ನೂರು ರೂಪಾಯಿಗಳನ್ನು ತಾಯಿಯ ಉಡಿಯಲ್ಲಿ ಹಾಕಿ, ‘ಇದು ಕಂದನ ಭಕ್ತಿ, ನನ್ನ ಆಶೆ ಬಿಡು’ ಎಂದು ದಯಾಳು ಹಾಲಯ್ಯ ಹೇಳಿ ತಾಯ ಹರಕೆ ಪಡೆದು ಲಿಂಗದ ಹಳ್ಳಿ ಬಿಟ್ಟರು.

ಹುಬ್ಬಳ್ಳಿಗೆ ಬಂದು ಆರೂಢರಲ್ಲಿ ನಿಂತರು. ಎಮ್ಮಿಗನೂರಿಗೆ ಹೋಗಿ ಜಡೆಯ ಸಿದ್ಧರನ್ನೊಲಯಿಸಿದರು. ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ತೆರಳಿ ಎಳಂದೂರು ಬಸವಲಿಂಗ ಸ್ವಾಮಿಗಳ ಸೇವಾನುರಾಗಕ್ಕೆಳಸಿದರು. ಅಲ್ಲಿಯ ತಪಸ್ಸು ಕಠೋರವಾದ ತಪಸ್ಸು! ಇಂದ್ರಿಯ ನಿಗ್ರಹ, ಒಡಲ ದಂಡನೆ, ಜ್ಞಾನ, ಕರ್ಮ, ಭಕ್ತಿಯೋಗಗಳು ಬದುಕಿನಲ್ಲಿ ಒಂದೆಡೆ ಸಂಚಯಿಸತೊಡಗಿದವು. ಬದುಕು ಪರಿಪಕ್ವತೆಯ ದಾರಿಯಲ್ಲಿ ನಡೆಯ ಹತ್ತಿತು!

ಅಷ್ಟೊತ್ತಿಗೆ ವಿರಾಟರಾಯನ ರಾಜಧಾನಿ ಹಾನಗಲ್ಲಿನಿಂದ ಶಂಭುಲಿಂಗನ ಬೆಟ್ಟಕ್ಕೆ ಪ್ರಾರ್ಥನೆಯೊಂದು ಹೋಯಿತು. ದಯಾಳು ಹಾಲಯ್ಯನವರು ಹಾನಗಲ್ಲಿನ ಮಠದ ಅಧಿಕಾರ ವಹಿಸಬೇಕು! ಅಧಿಕಾರ? ಆಸ್ತಿ? ಒಡೆತನ? ಸನ್ಯಾಸವಿತ್ತ,ವ್ಯಾಮೋಹವತ್ತ? ಬಂಧನವಿತ್ತ, ಬಿಡುಗಡೆಯತ್ತ? ಯೋಚಿಸಿದರು. ದೀರ್ಘಾಲೋಚನ ಮಾಡಿ ಅವರು ಬಂದರು. ಹಾನಗಲ್ಲಿನ ಕುಮಾರ ಸ್ವಾಮಿಗಳಾದರು. ಕುಮಾರಸ್ವಾಮಿಗಳನ್ನು ಮಠದ ಆಸ್ತಿ ವಂಚಿಸಲಿಲ್ಲ. ಇಲ್ಲಿ ಲಕ್ಷ್ಮೀ ಸೋತಳು. ಚಂಚಲೆಯ ಆಟ ಬೈರಾಗಿಯ ಮುಂದೆ ನಡೆಯಲಿಲ್ಲ.

ಜನ ಬದುಕಬೇಕು. ಬಿದ್ದ ಸಮಾಜ ಏಳಬೇಕು. ದಾರಿದ್ರ್ಯ ಅಳಿಯಬೇಕು,ಎಂತಹ ದಾರಿದ್ರ? ಅಂತಃಸತ್ವದ ದಾರಿದ್ರ, ಆತ್ಮಬಲವಿಲ್ಲದೆ ಸಮಾಜ ಕುರುಡಾಗಿ ಗಾಢಾಂಧತಮದತ್ತ ಬಟ್ಟೆದೋರದೆ ತಡಬಡಗೊಳ್ಳುತ್ತಿತ್ತು. ಅದರ ದಾರಿದ್ರವಳಿದು ದಾರಿದೋರಬೇಕಾದರೆ ಅಧ್ಯಾತ್ಮ ಶಿಕ್ಷಣ ಸಾರ್ವತ್ರಿಕವಾಗಿ ಒದಗಬೇಕು. ಅಂತಹ ಶಿಕ್ಷಣ ಸಂಸ್ಥೆ ನಾಡಿನಲ್ಲಿ ಮೂಡದೆ ಗತಿಯಿಲ್ಲವೆಂದು ಹಾನಗಲ್ ಕುಮಾರ ಸ್ವಾಮಿಗಳು ಯೋಚಿಸಿದರು. ಅವರ ಯೋಚನೆಯನ್ನು ಕಾರ್ಯರಂಗಕ್ಕಿಳಿಸುವಲ್ಲಿ ಶಿರಸಂಗಿಯಲ್ಲಿ ಲಿಂಗಪ್ಪನವರಿದ್ದರು, ಅರಟಾಳದಲ್ಲಿ ರುದ್ರಗೌಡರು, ಬಾಗಲಕೋಟೆಯಲ್ಲಿ ಮಲ್ಲಪ್ಪನವರು ಇದ್ದರು. ಮತ್ತೆ ಇಳಕಲ್ಲಿನ ಮಹಾಂತ ಶಿವಯೋಗಿಗಳ ಮಾರ್ಗದರ್ಶನ ಬೇರೆ?

ಮಲಾಪಹಾರೀ ನದಿಯ ದಂಡೆಯ ಮೇಲೆ ಸುಂದರವಾದ ಬಿಲ್ವವೃಕ್ಷದ ತೋಟ. ತಪಸ್ವಿಗಳು ಬಂದು ನಿಲ್ಲುವುದಕ್ಕೆ ತಕ್ಕ ಭೂಮಿ, ಮೀಸಲು ಭೂಮಿ, ಗಿಡಮರಗಳು,ಕಂಟಿಕಾವಲುಗಳು ಸುತ್ತಲೂ ನಿಂತು ಮನುಷ್ಯ ಸಂಚಾರಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ.ವನ್ಯಮೃಗಗಳು ದಿವಾರಾತ್ರಿ ಆ ಭೂಮಿಯ ನೈರ್ಮಲ್ಯವನ್ನು ರಕ್ಷಿಸುತ್ತಿದ್ದವು.

ಅಲ್ಲಿಗೆ ಕುಮಾರ ಸ್ವಾಮಿಗಳವರು ಬಂದು ಧರ್ಮದಂಡವನ್ನು ಊರಿದರು.ಪಾದರಕ್ಷೆ ಕಳೆದರು. ಪೇಳ ಬಯಲಾಯಿತು. ಆ ಭೂಮಿಯಲ್ಲಿ ಮಂದಿರವೊಂದು ಏರಿತು. ಶಿಕ್ಷಣಾಲಯವೊಂದರ ಸಂಸ್ಥಾಪನೆಯಾಯಿತು. ಆಚೆಗೆ ಐಹೊಳೆಯ ಆದರ್ಶ ಮಹಾವಿದ್ಯಾಲಯ, ಈಚೆಗೆ ಬದಾಮಿಯ ಮೇಣ ಬಸತಿಗಳು. ಅಲ್ಲಿ ಮಹಾಕೂಟ.ಇಲ್ಲಿ ಬನಶಂಕರಿ, ನಟ್ಟನಡುವೆ ಕುಮಾರ ಸ್ವಾಮಿಗಳ ಶಿಕ್ಷಣಾಲಯ!

ಅಲ್ಲಿ ಸತ್ಯದ ಪೂಜೆ, ಸೌಂದರದ ಶಿವನ ಪೂಜೆ, ಅಂತಹ ಪೂಜೆಯ “ಶಿವಯೋಗಮಂದಿರ’ವೆಂದು ನಾಮಕರಣ ಮಾಡಲಾಯಿತು.

ಶಿಕ್ಷಕರು ಬಂದರು. ವಿದ್ಯಾರ್ಥಿಗಳು ಬಂದು ನಿಂತರು. ನಾಡಿನ ತುಂಬ ಶಿವಯೋಗಮಂದಿರದ ಹೆಸರು ಸಂಚರಿಸಿ ಬಂದಿತು, ತಾಡವೋಲೆಗಳ ಸಂಪಾದನಾಕಾರ, ಚಿಂತನೆ, ಶಿಕ್ಷಣ ಪ್ರಸಾರ, ಸಮಾಜ ದರ್ಶನದ ಕಾರ್ಯ ಭರದಿಂದ ನಡೆದವು.ಶಿವಯೋಗಮಂದಿರದ ಆವರಣದಲ್ಲಿ ಬದ್ಧಪದ್ಮಾಸನರಾಗಿ ತದೇಕ ಚಿತ್ತದಿಂದ ಧ್ಯಾನಾಸಕ್ತರಾದ ಶಿವಯೋಗಿಗಳು ಜನಪದದ ಸ್ಫೂರ್ತಿಯಾದರು. ಗುಡಿಗುಡಾರಗಳಲ್ಲಿ,ದೇವಮಂದಿರಗಳಲ್ಲಿ ಹಾನಗಲ್ಲಿನ ಕುಮಾರ ಸ್ವಾಮಿಗಳು ಭಜನೆಯ ವಸ್ತುವಾದರು.ಪಠಣದ ಸಾಮಗ್ರಿಯಾದರು.

ಐಹೊಳೆಯ ದಾರಿಯಲ್ಲಿ, ನಳಂದಾ ತಕ್ಷಶಿಲೆಯ ದಾರಿಯಲ್ಲಿ ಶಿವಯೋಗ ಮಂದಿರವು ಹೆಜ್ಜೆ ಇಡುತ್ತಿರುವ ಕಾಲದಲ್ಲಿ ಶಿವಯೋಗಿಗಳು ಕುಳಿತಲ್ಲಿಂದಲೇ ಜೋಯಿಸರ ಹರಳಳ್ಳಿಯ ಕಡೆಗೊಮ್ಮೆ ನೋಡಿದರು. ಲಿಂಗದಹಳ್ಳಿಯ ಕಡೆಗೊಮ್ಮೆ ದಿಟ್ಟಿಸಿದರು. ಜೀವನದ ಮಾಯೆಯನ್ನು ಗೆಲಿದ ಶಿವಯೋಗಿಯ ಕಂಗಳು ಲಿಂಗದಲ್ಲಿ ನಟ್ಟು ನಿಬ್ಬೆರಗಾದವು, ಎಲ್ಲವೂ ಬಯಲು.

ನೆನಹು ಸತ್ತಿತ್ತು. ಭ್ರಾಂತಿ ಬೆಂದಿತು. ಅರಿವು ಮರೆಯಿತ್ತು.

ಕುರುಹುಗೆಟ್ಟಿತು. ಗತಿಯನರಸಲುಂಟೆ? ಮತಿಯರನಸಲುಂಟೆ?

ಅಂಗವೆಲ್ಲ ನಷ್ಟವಾಗಿ ಲಿಂಗಹೀನವಾಯಿತ್ತು

ಕಂಗಳದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ

ಅಲ್ಲಿಗೆ ಶಿವುನ ವಾಚನ ಮುಗಿಯಿತು. ಎಂಟು ವರುಷಗಳ ಹಿಂದೆ ಶಿವು ಓದುನಿಲ್ಲಿಸಿದ. ಪುನಃ ಆ ಪಾಠ ಓದಲಿಲ್ಲ. ಮನೆ ಬಿಟ್ಟು ಹೊರಟನು. ‘ನನ್ನ ಆಶೆ ಬಿಡು’ಎಂದು ತಾಯಿಗೆ ಹೇಳಿ ಶಿವು ‘ಶಿವಯೋಗಮಂದಿರ’ಕ್ಕೆ ಹೊರಟು ಹೋದನು.

ಹತ್ತಿರ ಹತ್ತಿರ ಶಿವಯೋಗಮಂದಿರವು ಬರುತ್ತಿದ್ದಿತು. ಗಿಡಮರಗಳ ನಡುವೆ,ಹಚ್ಚ ಹಸುರಿನ ಮಧ್ಯೆ, ಪ್ರಶಾಂತ ವಾತಾವರಣದ ನಟ್ಟನಡುವೆ ಅಡಗಿಸಿಕೊಂಡ ಶಿವಯೋಗಮಂದಿರವು ನೋಟಕ್ಕೆ ಸಮೀಪಿಸುತ್ತಿದ್ದಿತು.

“ಗುಹೇಶ್ವರಾ’ ಎಂದು ಹಕ್ಕಿಯೊಂದು ಹಾಡಿದಂತಾಯಿತು. ನಿಜ.ಶಿವಯೋಗಮಂದಿರವು ಬಂದುದೇ ನಿಜ!

ಗಾಡಿಯಿಂದಿಳಿದು ನೆಲದ ಮೇಲೆ ಕಾಲಿಟ್ಟಾಗ ಮೈಯಲ್ಲಿ ಮಿಂಚಿನ ಹೊಳೆ ತುಳುಕಾಡುತ್ತಿದ್ದಿತು. ಇಲ್ಲಿ ನಮ್ಮ ಶಿವು ಇರಬೇಕು. ಶಿವಯೋಗಿಯ ಸನ್ನಿಧಿಯ ಬಳಿ ನಮ್ಮ ಶಿವು ಇರಬೇಕು, ಸಿರಿಬಡತನಗಳ ಮಧ್ಯದಲ್ಲಿ ಸ್ಥಿತಪ್ರಜ್ಞನಾಗಿ ನಿಂತುಕೊಂಡು ಲೋಕಸಂಗ್ರಹಕ್ಕಾಗಿ ಬಾಳನ್ನೇ ಮೀಸಲಾಗಿರಿಸಿದ ಕಾರುಣ್ಯಮೂರ್ತಿಯ ಹತ್ತಿರ ನಮ್ಮಶಿವು ಇದ್ದಿರಬೇಕು ಎಂದೆನ್ನುತ್ತ ಶಿವಯೋಗಮಂದಿರದ ಆಶ್ರಯದಲ್ಲಿ ಕಾಲಿರಿಸಿದಾಗ ಕಂಡ ನೋಟ ಇನ್ನೂ ಅಚ್ಚಳಿಯದಿದೆ.ವಾಚನಾಲಯ, ತಾಡವೋಲೆಗಳ ಸಂಗ್ರಹಾಲಯಗಳನ್ನು ಸಂದರ್ಶಿಸಿ,

ಯೋಗಸಾಧನಯ ನೆಲೆಮನೆಯನ್ನು ಕಂಡು ಶಿವಯೋಗಿಗಳ ಸಮಾಧಿಯ ಹತ್ತಿರ ಬಂದಾಗ ಜೋಯಿಸರ ಹರಳಳ್ಳಿಯ ಹಾಲಯ್ಯನ ಚಿತ್ರ ಕಣ್ಮುಂದೆ ನಿಂತಿತ್ತು!

ಅವರು ಯಾವಾಗಲೂ ಒಮ್ಮೊಮ್ಮೆ ಬರುತ್ತಾರೆ. ಅಂತಹ ಕಾಲ ನೆಲದ ಪುಣ್ಯದಿಂದ ಬರುತ್ತದೆ. ನಮ್ಮ ಜೈನ ದಾರ್ಶನಿಕರು, ಲಿಂಗಾಯತ ದಾರ್ಶನಿಕರು. ವೈಷ್ಣವ ಭಕ್ತರು ಅವರದೊಂದು ಕಾಲ. ಆ ಕಾಲ ತಿರುಗಿ ಹೋಯಿತು. ಇನ್ನು ಅವರು ತಿರುಗಿ ಬಾರದೇ? ಎಂದು ಈ ನಮ್ಮ ಹೊಸಗಾಲದ ಜನತೆ ಹಾರಯಿಸಿ ನಿಂತ ಹೊತ್ತಿನಲ್ಲಿ ಯಾರಿಗೂ ತಿಳಿಯಗೊಡದಂತೆ ಅವರು ಬಂದರು, ಹೋದರು. ನಾವು ಗುರುತಿಸದಿದ್ದರೆ ಅದು ಯಾರ ತಪ್ಪು?

ಶಿವಯೋಗಿಗಳ ಸನ್ನಿಧಿಯಲ್ಲಿ ನಿಂತು ಹರಕೆ ಬೇಡಿ ಮಲಾಪಹಾರಿಯ ಕಡೆಗೆ ತಿರುಗಿದಂದು ಹತ್ತಿರದಲ್ಲೇ ಒಂದು ಬಾವಿ, ಬಾವಿಯ ಕಟ್ಟೆಯ ಮೇಲೆ ಯಾರೋ ನಿಂತಂತೆ ತೋರಿತು. ಗೆಳೆಯರನ್ನು ಹಿಂದೆ ಬಿಟ್ಟು ಮುಂದಕ್ಕೆ ಹೋಗಿ ನೋಡಿದಾಗ ಕಂಡವು ಇಬ್ಬರಲ್ಲಿ ಒಬ್ಬ ಹುಡುಗ, ಇನ್ನೊಬ್ಬ ಮುದುಕ.

ಹುಡುಗ ಅದೇ ಮುಖ, ಅದೇ ನಿಲುವು, ಅದೇ ಆಕಾರ, ಅದೇ ರೂಪ ಕಿವಿ ಟೊಪ್ಪಿಗೆ ಹಾಕಿಕೊಂಡಿದ್ದಾನೆ. ನಿಲುವಂಗಿ ತೊಟ್ಟಿದ್ದಾನೆ. ಬರಿಗಾಲು ನೊಂದಿಲ್ಲ,ಬೆಂದಿಲ್ಲ. ಆದರ್ಶದ ಕನಸ ಕನಸು; ಬದುಕ ಬದುಕು, ನಮ್ಮ ಶಿವು!

ಮುದುಕ ತಪಸ್ಸಿನ ಅಗ್ನಿಯಲ್ಲಿ ಬೆಂದ ಜೀವ, ಅಪ್ಪಟ ಚಿನ್ನ, ಹೊಳೆವ ಕಂಗಳು.ಮೊಗದ ತೇಜ, ಕಂಗಳ ನಿಶ್ಚಲ ನೋಟ, ಶಿವಯೋಗ ನಿದ್ರೆಯಲ್ಲಿ ನಿರತರಾಗಿರುವರೋ ಎಂಬ ಆಕೃತಿ, ಹಾನಗಲ್ಲ ಕುಮಾರ ಸ್ವಾಮಿಗಳು!

ಹಿರೇಮಲ್ಲೂರಿನ ಶಿವು ಶಿವಯೋಗಮಂದಿರದ ಶಿವಯೋಗಿಗಳ ಸನ್ನಿಧಿಯಲ್ಲಿ ಬಂದು ನಿಂತಿದ್ದಾನೆ.

ಮಲಪ್ರಭಾ ಪಕ್ಕದಲ್ಲಿ ವಿಶಾಲವಾದ ನದಿಯ ಹರವು. ಒಮ್ಮೆ ದುಡುಕು.ಇನ್ನೊಮ್ಮೆ ತಾಳ್ಮೆ. ಅಲ್ಲಿ ಏಳು, ಇಲ್ಲಿ ಬೀಳು. ಆ ಮೇಲೆ ಎಲ್ಲವೂ ಮೌನ, ಸಲಿಲವಾಗಿ,ಪ್ರಶಾಂತವಾಗಿ, ಮನೋಹರವಾಗಿ ಮಲಪ್ರಭೆ ಸನಿಹದಲ್ಲಿಯೇ ಹರಿಯುತ್ತಿದ್ದಳು.

ನಾನು ಹಾಗೆಯೇ ನಿಂತಿದ್ದೆ. ದಾರ್ಶನಿಕ ಕಂಡ ಆ ನಾಡಿನಲ್ಲಿ ನಾನು ಈಗಲೂ ಎವಯಿಕ್ಕದ ಹಾಗೆಯೆ ನಿಂತಿದ್ದೇನೆ.

ಆಕರ: ಹಿರೇಮಲ್ಲೂರ ಈಶ್ವರನ್ ಅವರ ಕವಿಕಂಡ ನಾಡು ಕೃತಿಯಿಂದ

ಲೇಖಕರು : ಶ್ರೀ ಡಾ. ಜಿ.ವೆಂಕಟೇಶ ಮಲ್ಲೇಪುರಂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಹುಬ್ಬಳ್ಳಿಯ ಸಿದ್ಧಾರೂಢರು ಜ್ಞಾನಯೋಗಕ್ಕೆ, ಎಮ್ಮಿಗನೂರಿನ ಜಡೆಯ ಸಿದ್ಧರು ಭವದ ಬೆಳಗು ಕ್ರಿಯಾಯೋಗಕ್ಕೆ, ಎಳಂದೂರು ಬಸವಲಿಂಗ ಶಿವಯೋಗಿಗಳು ಭಕ್ತಿಯೋಗಕ್ಕೆ ಕಾರಣವಾಗಿ ಪ್ರಸಿದ್ಧರಾಗಿದ್ದಾರೆ. ಈ ಮೂರು ಯೋಗಗಳೂ ಮುಪ್ಪುರಿಗೊಂಡದ್ದನ್ನು ಹಾನಗಲ್ಲ ಕುಮಾರಸ್ವಾಮಿಗಳಲ್ಲಿ ಕಾಣುತ್ತೇವೆ. ಈ ನಾಲ್ವರು ಆಧುನಿಕ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಕಾರಣರಾದವರು! ಹಾನಗಲ್ಲ ಕುಮಾರಸ್ವಾಮಿಗಳು ಹಲವು ಹೊಸತುಗಳ ಪ್ರಕಲ್ಪಕ್ಕೆ ಕಾರಣರಾದದ್ದು ಚರಿತ್ರಾರ್ಹ ಸಂಗತಿ. ನೂರು ವರ್ಷಗಳ ಹಿಂದೆ ವೀರಶೈವ ಸಮಾಜ ಮಹಾಂಧಕಾರದಲ್ಲಿ ಮುಳುಗಿತ್ತು; ಆಗ ಕಾರಣಿಕಪುರುಷರಾಗಿ ಒದಗಿ ಬಂದವರೇ ಹಾನಗಲ್ಲ ಶ್ರೀಕುಮಾರಸ್ವಾಮಿಗಳು.

ಬಾಲ್ಯ-ವಿದ್ಯಾಭ್ಯಾಸ:

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದು ಪುಟ್ಟಗ್ರಾಮ. ಆ ಗ್ರಾಮದಲ್ಲಿ ವೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ಮತ್ತು ಆತನ ಮಡದಿ ನೀಲಮ್ಮ ಇದ್ದರು. ಇವರ ಮಗನೇ ಸದಾಶಿವಕುಮಾರಸ್ವಾಮಿ). ಇವರು ಲೀಲಾವತರಣಗೊಂಡ ವರ್ಷ 1867.

ಸದಾಶಿವನ ಜನನ ಒಂದು ವಿಸ್ಮಯಕಾರಿಯೇ. ಅದೊಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮ ನಿದ್ದೆಯಲ್ಲಿದ್ದಾರೆ.ಆಕೆಗೊಂದು ಸ್ವಪ್ನ ಬಿದ್ದಿದೆ. ಒಬ್ಬ ಜಂಗಮವೇಷಧಾರಿ ಕನಸಿನಲ್ಲಿ ಕಾಣಿಸಿಕೊಂಡಿದ್ದಾನೆ. ಅವನು ‘ಮಗನೊಬ್ಬ ಜನಿಸುತ್ತಾನೆ. ಅವನ ಬದಲು ಮತ್ತೊಬ್ಬ ಮಗನನ್ನು ಕೊಡು’ ಎಂದು ಹೇಳಿ ಆಶೀರ್ವದಿಸುತ್ತಾನೆ. ತಾಯಿ ನೀಲಮ್ಮ ಒಪ್ಪಿಗೆ ನೀಡುತ್ತಾರೆ. ನಂತರ ಶುಭಮುಹೂರ್ತದಲ್ಲಿ ಕಾರಣಿಕ ಮಗು ಜನಿಸುತ್ತದೆ. ಸದಾಶಿವ ಜನಿಸಿದ ದಿನ ಜಂಗಮನೊಬ್ಬ ಬಂದು ಊರಿಗೆ ಕಾರಣಿಕ ಮಗು ಜನಿಸಿದೆಯೆಂದು ಸಾರಿ ಹೋಗುತ್ತಾನೆ. ನಂತರ ಜಂಗಮನೊಬ್ಬ ಬಂದು ಜನ್ಮಲಿಂಗಧಾರಣೆ ಮಾಡಿ ಹೋಗುತ್ತಾನೆ. ಮಗುವನ್ನು ಹಾಲಯ್ಯನೆಂದೂ ಸದಾಶಿವನೆಂದೂ ಜನ ಕರೆಯುತ್ತಾರೆ. ಆರನೆಯ ವಯಸ್ಸಿಗೆ ಅಕ್ಷರಭ್ಯಾಸ ಪ್ರಾರಂಭವಾಯಿತು. ಊರಲ್ಲಿದ್ದ ಗಾಂವಟಿಶಾಲೆಗೆ ಸದಾಶಿವ ಹೋದ. ಅವನ ಅಜ್ಜಂದಿರಾದ ಕೊಟ್ರಪ್ಪಯ್ಯ ಆ ಶಾಲೆಯನ್ನು ತೆರೆದಿದ್ದರು. ಅಲ್ಲಿ 1872 ರಿಂದ 1875ರವರೆಗೆ ಮೂರನೆಯ ತರಗತಿ ತನಕ ವಿದ್ಯಾಭ್ಯಾಸ ಜರುಗಿತು. ಸಾಲೀಮಠದ ಬಸವಯ್ಯನವರದ್ದು ಸಾಮಾನ್ಯ ಮನೆತನ.ಧನ-ಧಾನ್ಯಕ್ಕೆ ಸದಾ ತತ್ವಾರ. ಆದರೆ, ಬಂದುಹೋಗುವ ಜನ ಅಪಾರ. ಮನೆಯಲ್ಲೂ ಹತ್ತು-ಹನ್ನೆರಡು ಜನ ಸದಾ ಇರುತ್ತಿದ್ದರು.ಶಾಲೆಯಿಂದ ಬರುತ್ತಿದ್ದ ವಾರ್ಷಿಕ ವರಮಾನ ಅಷ್ಟಕಷ್ಟೆ. ಪ್ರತಿನಿತ್ಯ ಭಿಕ್ಷೆ ಬೇಡಬೇಕಾಗುತ್ತಿತ್ತು. ಈ ನಡುವೆ ತಂದೆ ನಿಧನರಾದರು.

ಸದಾಶಿವನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಮನೆಗೆ ಬಂದಾಗ ಅಣ್ಣನ ಚಾಟಿಮಾತು, ಅಮ್ಮನ ಆರ್ಭಟ ಕಂಡು ಅವನಿಗೆದಿಕ್ಕುತೋಚದಂತಾಯಿತು. ಮುಂದೇನು ಮಾಡಬೇಕೆಂದು ಯೋಚಿಸಿದ. ಇದಕ್ಕೆಲ್ಲ ವಿದ್ಯಾಭ್ಯಾಸವೇ ಕೊನೆಯೆಂದು ಅರಿತು,ಕಜ್ಜರಿಗ್ರಾಮಕ್ಕೆ ಹೊರಟು ಬಂದ. 1876ರಿಂದ 1880ರವರೆಗೆ ನಾಲ್ಕುವರ್ಷ ಮುಲಕೀ ಪರೀಕ್ಷೆಗೆ ಅಭ್ಯಾಸ ಮಾಡಿದ.ಸದಾಶಿವಯ್ಯ ಜ್ಞಾನಾಕಾಂಕ್ಷಿ. ಅವರು ಲಿಂಗದಹಳ್ಳಿಯಲ್ಲಿ ಪ್ರಾಥಮಿಕಶಾಲೆ ಆರಂಭಿಸಿದರು. ಅನೇಕರು ಬಂದು ಶಾಲೆಗೆ ಸೇರಿದರು. ವಿದ್ಯಾಶಿಕ್ಷಣ ಪ್ರಾರಂಭವಾಯಿತು. ಆದರೆ, ತನಗೆ ‘ಆತ್ಮಶಿಕ್ಷಣ’ ಬೇಕೆಂದೆನಿಸಿತು. ಆ ಊರಿನ, ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯ ಬಳಿ ಆಸೆ ಹೇಳಿಕೊಂಡರು. ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ತಿಳಿದುಕೊಳ್ಳಲು ಅವರೊಡನೆ ನೆಲೆನಿಂತರು. ವೇದಾಂತದ ರುಚಿ ಮನಸ್ಸಿಗೆ ಹಿಡಿಸಿತು. ಲಿಂಗಪೂಜೆಯಲ್ಲಿ ಅಪರಿಮಿತ ಪ್ರೇಮಹುಟ್ಟಿತು! ತಾಯಿಗೆ ತನ್ನ ಮಗ ತವರುಮನೆಯಲ್ಲಿ ಇರುವುದು ತಿಳಿಯಿತು. ತಾಯಿ-ಮಗನ ಸಮಾಗಮವೇನೋ ಆಯಿತು. ಮದುವೆ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಬೇಕೆಂಬ ಕಾತರ ತಾಯಿಯದು. ಆದರೆ, ಆಕೆಯ ಹಂಬಲಕ್ಕೆ ಸದಾಶಿವ ಕಡಿವಾಣ ಹಾಕಿ ಒಂದೆರಡು ವರ್ಷ ಕಳೆಯಲೆಂದು ಸಮಾಧಾನ ಮಾಡಿ ಊರಿಗೆ ಕಳಿಸಿದರು. ಇತ್ತ ನಿಜಗುಣರ ‘ಕೈವಲ್ಯಪದ್ಧತಿ’ ಅವರ ಮನಸ್ಸನ್ನು ತಟ್ಟಿತು.ವೈರಾಗ್ಯ ದೇಹ-ಮನಸ್ಸನ್ನು ಆವರಿಸಿತು.

ಅವರು ಲಿಂಗದಹಳ್ಳಿ ತೊರೆದು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರ ಬಳಿ ನೆಲೆನಿಂತರು. ಹುಬ್ಬಳ್ಳಿಯಲ್ಲಿ ವಾಸ, ರುದ್ರಾಕ್ಷಿ ಮಠದಲ್ಲಿ ವಾಸ್ತವ್ಯ. ಭಿಕ್ಷಾಟನೆಯಿಂದ ಪ್ರಸಾದ ಅರ್ಪಿತ. ಪ್ರತಿನಿತ್ಯ ಅಧ್ಯಾತ್ಮಪ್ರವಚನದ ಶ್ರವಣಕ್ಕೆ ಸಿದ್ಧಾರೂಢರ ಬಳಿ ಹೋಗುತ್ತಿದ್ದರು.ಅವರು ಅಲ್ಲಿರುವಾಗ ‘ಇಷ್ಟಲಿಂಗ’ದ ಜಿಜ್ಞಾಸೆ ಬೆಳೆಯಿತು! ಇಷ್ಟಲಿಂಗದ ಅವಶ್ಯಕತೆ ಇಲ್ಲವೆಂದು ಸಿದ್ಧಾರೂಢರಿಂದ ತಿಳಿಯಿತು.ಆಗ ಎಮ್ಮಿಗನೂರು ಶ್ರೀಜಡೆಸಿದ್ಧರ ದರ್ಶನಕ್ಕಾಗಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿದರು. ಅದು 1885ನೇ ವರ್ಷ, ಜಡೆಸಿದ್ಧರ ದರ್ಶನ ವಾಯಿತು . ಇಷ್ಟಲಿಂಗದ ಜಿಜ್ಞಾಸೆ ಅವರಿಂದ ಪರಿಹಾರ ಆಯಿತು. ಅವರು ಹುಬ್ಬಳ್ಳಿಗೆ ಬಂದು ಬಸವಲಿಂಗ ಸ್ವಾಮಿಗಳ ದರ್ಶನ ಪಡೆದರು. ಎಳಂದೂರು ಬಸಲಿಂಗ ಸ್ವಾಮಿಗಳಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. 1885 ರಿಂದ 1895ರ ವರೆಗೆ ಹತ್ತು ಗಳ ಕಾಲ ಶಿಷ್ಯವೃತ್ತಿ ಕೈಗೊಂಡು ಅವರೊಡನೆ ದೇಶಸಂಚಾರ ಮಾಡಿದರು. ಬಸವಲಿಂಗಸ್ವಾಮಿಗಳು ಯೋಗಧುರಂಧರರು. ಜೀವನದಲ್ಲಿ ಸದಾಚಾರ, ಶಿವಪೂಜೆ ಮತ್ತು ಶಿವಾನುಭವಗಳನ್ನು ಕಲಿತರು. ಸ್ವಾಮಿಗಳಿಂದ ಕ್ರಿಯೋಪದೇಶ ಪಡೆದರು. ಅವರಿಬ್ಬರು ಪ್ರಯಾಣದಲ್ಲಿ ಇರುವಾಗಲೇ ಸ್ವಾಮಿಗಳು ತಮ್ಮೆಲ್ಲ ವಿದ್ಯೆಯನ್ನು ಶಿಷ್ಯನಿಗೆ ಧಾರೆಎರೆದರು. ಅಣ್ಣಿಗೆರೆ ಗ್ರಾಮದಲ್ಲಿರುವಾಗ ಎಳಂದೂರು ಶ್ರೀಗಳಿಗೆ ದೇಹಾಲಸ್ಯ ಉಂಟಾಯಿತು. ಸದಾಶಿವ ಸ್ವಾಮಿಗಳನ್ನು ಕರೆದು ಅಸಾಧಾರಣ ಶಿವಯೋಗಿ ಆಗೆಂದು ಅನುಗ್ರಹ ದೀಕ್ಷೆಕೊಟ್ಟು ಅವರು ಲಿಂಗೈಕ್ಯರಾದರು. ಸದಾಶಿವಸ್ವಾಮಿಗಳಿಗೆ ಗುರುಬಸವರ ಗದ್ದುಗೆಯಲ್ಲಿ ಅನುಷ್ಠಾನ ಮಾಡುವ ಅಪೇಕ್ಷೆ ಉಂಟಾಯಿತು. ಅವರು ಕ್ಯಾಸನೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಹಾನಗಲ್ ಶ್ರೀಮಠದ ಫಕೀರಸ್ವಾಮಿಗಳ ದರ್ಶನಕ್ಕೆ ಹೋದರು. ಆ ಕಾಲಕ್ಕೆ ಫಕೀರಸ್ವಾಮಿಗಳು ಸಿದ್ಧಿಪುರುಷರೆಂದು ಖ್ಯಾತಿ ಪಡೆದಿದ್ದರು. ಸದಾಶಿವ ಸ್ವಾಮಿಗಳ ಶಿವಯೋಗಾನುಷ್ಠಾನ, ಜ್ಞಾನಾಭಿಲಾಷೆ ನೋಡಿದ ಫಕೀರಸ್ವಾಮಿಗಳಿಗೆ ಶ್ರೀಮಠದ ಪೀಠಾಧಿಕಾರ ಸ್ವೀಕರಿಸುವಂತೆ ಪ್ರಸ್ತಾಪ ಮಾಡಿದರು. ಈ ಪ್ರಸ್ತಾಪ ನಡೆದದ್ದು 1895ನೆಯ ಇಸವಿಯಲ್ಲಿ. ನಂತರ ಫಕೀರಸ್ವಾಮಿಗಳು ಲಿಂಗೈಕ್ಯರಾದರು. ಬಿದರಿ ಶ್ರೀಕುಮಾರಸ್ವಾಮಿಗಳಿಂದ ‘ನಿರಂಜನಸ್ಥಲ’ ದೀಕ್ಷೆಯೊಂದಿಗೆ ಶ್ರೀಮಠದ ಪಟ್ಟಾಧಿಕಾರವನ್ನು ಸದಾಶಿವಸ್ವಾಮಿಗಳು ಸ್ವೀಕರಿಸಬೇಕಾಯಿತು. ಹಾನಗಲ್ ಶ್ರೀಕುಮಾರ ಸ್ವಾಮಿಗಳು ಎಂಬ ಅಭಿದಾನವನ್ನು ನೀಡಲಾಯಿತು.

ವೀರಶೈವ ಮಹಾಸಭೆ: ದಕ್ಷಿಣ ಭಾರತದಲ್ಲಿ ವೀರಶೈವ ಸಮಾಜ ಎಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯದಿಂದ ಬೆಳೆದು ಬಂದಿತ್ತು.ಇಂಥ ಸಮಾಜವು ಕಳೆಗುಂದಿ ‘ಕೃಷ್ಣಪಕ್ಷದಲ್ಲಿ ಕಾಲಿಟ್ಟಿತ್ತು. ಇದಲ್ಲದೆ, ಇಪ್ಪತ್ತನೆಯ ಶತಮಾನದ ಸುಧಾರಣೆಯನ್ನು ಸಮಾಜ ತಕ್ಕಷ್ಟು ಬಳಸಿಕೊಂಡಿರಲಿಲ್ಲ. ಇಂಥ ಸಮಾಜವನ್ನು ಸುಧಾರಿಸಲು ಯಾವ ಮಹಾಪುರುಷನೂ ಮುಂದೆ ಬಂದಿರಲಿಲ್ಲ. ಆಗ ಕಾರಣಿಕಪುರುಷ ಕುಮಾರಸ್ವಾಮಿಗಳ ಅಂತರ್‌ನೇತ್ರವು ಇತ್ತ ಹೊರಳಿತು! ಈ ನಡುವೆ ಅನೇಕ ಕಡೆಗಳಲ್ಲಿ ಸಂಚರಿಸುತ್ತ ಧಾರವಾಡಕ್ಕೆ ಬಂದರು. ಕುಮಾರಸ್ವಾಮಿಗಳು ಪಟ್ಟಾಧಿಕಾರಕ್ಕೆ ಬಂದಾಗ ನಾಡಿನಲ್ಲಿ ಬರಗಾಲದ ಬಿಸಿಗಾಳಿ ಬೀಸಿತ್ತು. ಆಗ ಬರಪೀಡಿತರಿಗೆ ದಾಸೋಹಸೇವೆ ಕೈಗೊಂಡರು. 1898ರಲ್ಲಿ ಹಾನಗಲ್ಲಿನ ಶ್ರೀಮಠದಲ್ಲಿ ಪಾಠಶಾಲೆ ಪ್ರಾರಂಭಿಸಿದರು. ಅವರು ಸಮಾಜದ ಜಾಗೃತಿಗಾಗಿ ಹಲವಾರು ಸಮಾಲೋಚನ ಸಭೆಗಳನ್ನು ನಡೆಸಿದರು. ಅನೇಕ ಪ್ರಮುಖರ ಜತೆಗೂಡಿ ಮಹಾಸಭೆಯ ಸ್ಥಾಪನೆ ವಿಷಯವನ್ನು ಸಮಾಲೋಚನೆ ಮಾಡಿದರು. ಇದೆಲ್ಲದರ ಫಲವಾಗಿ 1904 ಮೇ ತಿಂಗಳಲ್ಲಿ ‘ಶ್ರೀಮದ್ವೀರಶೈವ ಮಹಾಸಭೆ’ ಅಸ್ತಿತ್ವಕ್ಕೆ ಬಂದಿತು. ಸ್ವಾಮಿಗಳು ಆವರೆಗೂ ಸಂಗ್ರಹಿಸಿದ್ದ ಒಂದುಲಕ್ಷ ರೂಪಾಯಿಗಳನ್ನು ‘ಲಿಂಗಾಯತ ಎಜುಕೇಷನ್ ಫಂಡ್’ ಆಗಿ ಇರಿಸಿದರು. ಅದರಿಂದ ಬರುವ ಬಡ್ಡಿ ಹಣವನ್ನು ಬಡವಿದ್ಯಾರ್ಥಿಗಳಿಗಾಗಿ ವಿನಿಯೋಗಿಸತೊಡಗಿದರು. ವೀರಶೈವ ಸಂಸ್ಕೃತಿಯ ಸಂರಕ್ಷಣೆಗಾಗಿಯೂ ಅವರು ಕಟಿಬದ್ಧರಾದರು. ಅಲ್ಲಲ್ಲಿ ಧನಸಂಗ್ರಹ ಮಾಡಿ ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ರೋಣ, ಇಳಕಲ್ಲ, ಅನಂತಪುರ, ಕೆಳದಿ, ಚಿತ್ತಾಪುರ-ಹಲವಾರು ಕಡೆ ನೂತನ ಪಾಠಶಾಲೆಗಳನ್ನು ಸ್ಥಾಪಿಸಿದರು. ನೂರು ವರ್ಷಗಳ ಹಿಂದೆ ಹಾನಗಲ್ಲು ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಹತ್ತಾರು ಶಾಲೆಗಳು ಸ್ಥಾಪನೆಗೊಂಡವು. ಇವುಗಳಿಗೆ ಹೊಂದಿಕೊಂಡಂತೆ ‘ವಾಚನ ಮಂದಿರಗಳನ್ನು ತೆರೆದರು. ಪ್ರಾಚೀನ ಗ್ರಂಥಗಳ ಅಧ್ಯಯನಕ್ಕೂ ಸಂಶೋಧನೆಗೂ ‘ಸಂಶೋಧನ ಮಂಡಳ’ವನ್ನು ಸ್ಥಾಪಿಸಿದರು. ಹೊರರಾಜ್ಯಗಳಿಗೆ ವಿದ್ವಾಂಸರನ್ನು ಕಳಿಸಿ ಕೆಲವು ಮಹತ್ವದ ವಿಷಯಗಳನ್ನು  ಸಂಗ್ರಹಿಸಿದರು.

ಶಿವಯೋಗ ಮಂದಿರ: 1908ನೆಯ ಇಸವಿಯಲ್ಲಿ ಶಿವಯೋಗಮಂದಿರ ಸ್ಥಾಪಿಸುವ ಯೋಜನೆ ಅವರ ಮನಸ್ಸಿನಲ್ಲಿ ರೂಪುಪಡೆಯುತ್ತಿತ್ತು. ಅದೇ ಕಾಲಕ್ಕೆ ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಇವರ ಬಳಿಗೆ ಬಂದರು. ಅವರು “ಧರ್ಮೋನ್ನತಿಗೆ ಬ್ರಹ್ಮಬಲ ಮತ್ತು ಕ್ಷಾತ್ರಬಲ ಎರಡೂ ಬೇಕೆಂದು ಪ್ರಸ್ತಾಪಿಸುತ್ತ-‘ಕ್ಷಾತ್ರಬಲ’ ಈಗ ಸಮಾಜದಲ್ಲಿ ರೂಪು ಪಡೆಯುತ್ತಿದೆ. ಆದರೆ, ‘ಬ್ರಹ್ಮಬಲ’ವನ್ನು ರೂಪಿಸಬೇಕಾಗಿದೆ. ಇದರಿಂದ ಶಿವಯೋಗಧರ್ಮಕ್ಕೆ ಮೆರುಗು ನೀಡಬೇಕಾಗಿದೆ.ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡಯೋಗಸಂಸ್ಥೆಯ ಅವಶ್ಯಕತೆಯಿದೆ. ಅದು ನಿಮ್ಮಿಂದ ನೆರವೇರಬೇಕು’ ಎಂದು ಆಗ್ರಹಿಸಿದರು. ಅವರು ಆ ಕಾಲಕ್ಕೆ 14 ಸಾವಿರ ಧನಸಂಗ್ರಹ ಮಾಡಿದರು. ಬಾಗಲಕೋಟೆಯಲ್ಲಿ ನಡೆದ ವೀರಶೈವ ಮಹಾಸಭೆಯಲ್ಲಿ ‘ಶಿವಯೋಗಮಂದಿರ’ ಸ್ಥಾಪನೆಗೆ ಒಪ್ಪಿಗೆ ದೊರೆಯಿತು. ಹುನಗುಂದ ಮಾರ್ಗವಾಗಿ ಐಹೊಳೆ-ಪಟ್ಟದಕಲ್ಲುಗಳನ್ನು ಸ್ಥಳಪರಿಶೀಲನೆ ಮಾಡಿ ಮಲಾಪಹಾರಿಣಿ ನದಿಯ ದಂಡೆಯಲ್ಲಿದ್ದ ಜಾಗವೊಂದಿತ್ತು. ಗಮನಿಸಿದರು. ಸುತ್ತ-ಮುತ್ತ ಪಾಪಾಸುಕಳ್ಳಿ ಬೆಳೆದಿತ್ತು. ಆದರೆ, ಒಂದೆಡೆ ಬಿಲ್ವಪತ್ರೆಯ ವನವಿತ್ತು. ಅದರ ಪಕ್ಕದಲ್ಲಿ ಹೊಳೆ ಹರಿಯುತ್ತಿತ್ತು.ಮುರಿದುಬಿದ್ದ ಸಣ್ಣಗುಡಿಯನ್ನು ಇಳಕಲ್ಲ ಸ್ವಾಮಿಗಳು ಕಂಡರು. ಆಗ ‘ಶಿವಯೋಗಮಂದಿರ’ಕ್ಕೆ ಇದೇ ಪ್ರಶಸ್ತವಾದ ಸ್ಥಳವೆಂದು ಹೇಳಿ ತೀರ್ಮಾನಿಸಿದರು. ಆಗ ಪುಷ್ಯಮಾಸ. ಅದು ಕಳೆದು ಮಾಘಮಾಸದ ಬೆಳಗಿನಲ್ಲಿ ಐದಾರು ಪರ್ಣಕುಟೀರಗಳು ನಿರ್ಮಾಣಗೊಂಡವು. ಶ್ರೀಕುಮಾರಸ್ವಾಮಿಗಳ ಪರಿಶ್ರಮದ ಫಲವಾಗಿ ಹತ್ತು-ಹನ್ನೆರಡು ಭವ್ಯ ಕಟ್ಟಡಗಳಾದುವು. ಮಂದಿರದ ಸುತ್ತ-ಮುತ್ತ ಇದ್ದ ಐವತ್ತು ಎಕರೆಗಳನ್ನು ಸರ್ಕಾರದಿಂದ ಇನಾಮಾಗಿ ಪಡೆದರು. ಗೋವುಗಳನ್ನು ಸಂರಕ್ಷಿಸಿದರು. ದೊಡ್ಡ ಪುಸ್ತಕಾಲಯ ಸ್ಥಾಪಿಸಿದರು. ಶಿವಯೋಗಮಂದಿರವು ವೀರಶೈವ ಸಮಾಜದ ಕಣ್ಣಾಗಿ ಕಾಲಕ್ರಮೇಣ ರೂಪಿತಗೊಂಡಿತು. ಅಲ್ಲಿ ಕನ್ನಡ-ಸಂಸ್ಕೃತ-ಸಂಗೀತ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಜ್ಞಾನ ಸಂಪಾದಿಸಿಕೊಂಡರು. ಈ ಮಂದಿರದಿಂದ ಭಾಷಣಕಾರರು, ಕೀರ್ತನಕಾರರು,ಪೌರಾಣಿಕರು, ಲೇಖಕರು, ಯೋಗಿಗಳು ಅನುಭಾವಿಗಳು, ಸ್ವಾಮಿಗಳು, ಸಂಗೀತಜ್ಞರು ತಯಾರಾಗಿ ಕೀರ್ತಿಗಳಿಸಿದರು. ಇಲ್ಲಿ ಪಂಚಸೂತ್ರಗಳಿಗೆ ಅನುಗುಣವಾಗಿ ಲಿಂಗಗಳು ತಯಾರಾಗುತ್ತವೆ. 1914ರಲ್ಲಿ ಬಸವಜಯಂತಿ ದಿನದಂದು ರೋಣ ತಾಲೂಕು ನಿಡಗುಂದಿಕೊಪ್ಪದಲ್ಲಿ ಶಾಖಾ ಶಿವಯೋಗಮಂದಿರದ ಸ್ಥಾಪನೆಯನ್ನು ಶ್ರೀಗಳು ನೆರವೇರಿಸಿದರು. ನಂತರ 1917ರಲ್ಲಿ ಶಿಕಾರಿಪುರ ‘ಪ ಕಾಳೇನಹಳ್ಳಿಯ ಕುಮುದ್ವತಿ-ವೃಷಭ ನದಿ ಸಂಗಮದಲ್ಲಿ ಮತ್ತೊಂದು ಶಾಖಾ ಶಿವಯೋಗಾಶ್ರಮ ಸ್ಥಾಪನೆಗೊಂಡಿತು.

ಅಂತಿಮ ದಿನಗಳು: ಸ್ವಾಮೀಜಿ ಸ್ತ್ರೀಶಿಕ್ಷಣಕ್ಕೆ ಆದ್ಯತೆ ನೀಡಿದರು. ವ್ಯವಸಾಯ, ವಾಣಿಜ್ಯಕ್ಕೆ ಬೆಲೆಕೊಟ್ಟರು. ಪ್ರತಿಯೊಬ್ಬರೂ ಶಿಕ್ಷಣ’ ಪಡೆಯಬೇಕೆಂದು ಸೂಚಿಸುತ್ತಿದ್ದರು. ಶಿವಯೋಗ ಮಂದಿರದಲ್ಲಿ ಅದನ್ನು ಜಾರಿಗೆ ತಂದರು. ಇವರ ಸಂಪತ್ತು ಅಗಣ್ಯ. ಗದಗಿನ ಪಂಚಾಕ್ಷರಿ ಗವಾಯಿಗಳು ಸ್ವಾಮಿಗಳ ಆಶ್ರಯದಲ್ಲಿ ಬೆಳೆದು ಕೀರ್ತಿತರಾದರು. ದೇವಲಾಪುರದ  ‘ಲಿಂಗಶಾಸ್ತ್ರಿ ಕೀರ್ತನಕಲೆಯಲ್ಲಿ ಬೆಳೆದರು. ದ್ಯಾಂಪೂರದ ಚನ್ನಕವಿಗಳು ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು! ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಸರಳಜೀವನ ನಡೆಸುತ್ತಿದ್ದರು. ದಪ್ಪಾದ ಕಾವಿಯ ಕಪನೆ, ಮಸ್ತಕಕ್ಕೆ ಒಂದು ಚೌಕಪಾವುಡ, ಲಿಂಗಮೂರ್ತಿಗೆ ವಸ್ತ್ರ, ಹಸ್ತಕ್ಕೊಂದು ಬೆತ್ತ, ಪಾದಗಳಿಗೆ ಪಾದುಕೆ. ಇದಿಷ್ಟೆ ಅವರ ದಿರಿಸು, ಸ್ವಾಮಿಗಳವರ ವಾಕ್ಸಿದ್ಧಿ ಅಪೂರ್ವವಾದುದೇ.ಅವರ ಪ್ರತಿಮಾತಿನಲ್ಲೂ ಓಂಕಾರದ ಮಹತ್ತು ಸದಾ ಇರುತ್ತಿತ್ತು. ಅವರು ಬಿಡುವಿಲ್ಲದೆ ನಾಡನ್ನೆಲ್ಲ ಸುತ್ತಿದರು. 1930ರಲ್ಲಿ ಕುಮುದ್ವತಿ-ತುಂಗಭದ್ರಾ ಸಂಗಮಸ್ಥಳ ಸಂಗಮೇಶ್ವರ ದೇವಾಲಯದಲ್ಲಿ ಇಪ್ಪತ್ತೊಂದು ದಿನ ಅನುಷ್ಠಾನ ಮಾಡಿದರು. ಆ ಅನುಷ್ಠಾನದ ಕೊನೆಗೆ ಅವರಿಗೆ ಅಸ್ವಸ್ಥತೆ ಉಂಟಾಯಿತು. ಅಂದು ಮಾಘ ಬಹುಳ ಸಪ್ತಮಿ 1930ನೆಯ ಇಸವಿ ಗುರುವಾರ ಸಂಜೆ ಸ್ನಾನ ಮಾಡಿ, ಶಿವಪೂಜೆಯಲ್ಲಿ ತಲ್ಲೀನರಾದರು. ಸಂಜೆ ಏಳುಗಂಟೆಯ ಸಮಯದಲ್ಲಿ ಲಿಂಗದಲ್ಲಿ ಬೆರೆತರು. ಅವರ ಕಣ್ಣುಗಳು ತೆರೆದಂತೆಯೇ ಇತ್ತು. ಶಿವಲಿಂಗದಲ್ಲಿ ಅವರು ಶಿವೈಕ್ಯರಾದರು. ಅವರ ಮಹಾಸಮಾಧಿಯನ್ನು ಶಿವಯೋಗಮಂದಿರದಲ್ಲಿ ನೆರವೇರಿಸಲಾಯಿತು. ವೀರಶೈವ ಸಮಾಜದ ಮಹಾಸೂರ್ಯ ಅಸ್ತಂಗತವಾದರೂ ಆ ‘ಶಿವಪ್ರಭೆ’ ನೂರಾರು ವರ್ಷಗಳ ಕಾಲ ಬೆಳಗುತ್ತ, ಬೆಳೆಯುತ್ತಲೇ ಇದೆ.

ಡಾ.ಜಿ.ಕೆ.ಹಿರೇಮಠ

          ಕಾಲದ ಕೂಗು, ಜನಾಂಗದ ಕರುಳಿನ ಕರೆ, ನೊಂದವರ ನಿಟ್ಟುಸಿರು, ಬೆಂದವರ ಬೇಗೆಯ ಫಲರೂಪವಾಗಿ ಮಹಾಪುರುಷರೊಬ್ಬರ ಜನನ ಆಗುತ್ತದೆ ಎಂಬುದು ಜನತೆಯ ನಂಬಿಕೆ. ಸಾಮಾಜಿಕ, ಧಾರ್ಮಿಕ ಸ್ಥೀತ್ಯಂತರಗಳು ವೈಪರಿತ್ಯಕ್ಕೆ ಮುಟ್ಟಿದಾಗ ಒಂದು ಮಹಾನ್ ಆತ್ಮವು ಉಗಮಿಸಿ ಸಮಾಜ ಸುಧಾರಣೆಯ ಹಾಗೂ ಮಾನವ ಜನಾಂಗದ ಮೌಲ್ಯಗಳನ್ನು ಬಿತ್ತಿ ಮೇಲೆತ್ತಿ ತರುವ ಮಹಾಹೊಣೆಯನ್ನು ಹೊತ್ತು ನಿಲ್ಲುತ್ತದೆ. ಬುದ್ಧ, ಬಸವ, ಏಸು, ಪೈಗಂಬರ, ಮಹಾವೀರರಂಥವರು ಹೊಸಬೆಳಗು ಮೂಡಿಸಿದ ಮಹಾತ್ಮರುಗಳು.      ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಅದರಲ್ಲೂ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಸಮಾಜ ಕಟ್ಟುವ ಕ್ರಾಂತಿಯಲ್ಲಿ ಮಿಂಚಿನಂತೆ ಪ್ರಜ್ವಲವಾಗಿ ಪ್ರಕಾಶಿಸಿ ಸ್ವಾಮಿತ್ವಕ್ಕೆ ಮುಕುಟಮಣಿಯಾಗಿ ಶೋಭಿಸಿದ ಕುಮಾರಯೋಗಿ ಒಬ್ಬ ಅಪೂರ್ವ ಅನುಭಾವಿ, ಅಪೂರ್ವ ಶಿವಯೋಗಿ, ನಿರ್ಲಿಪ್ತ, ನಿರ್ಮೋಹಿ, ನಿರಹಂಕಾರಿಗಳಾಗಿ ಬೆಳಗಿದ ಮಾನವಿಕ ವ್ಯಕ್ತಿತ್ವ ಅವರದು. ತಮ್ಮ ಸುತ್ತ ಏನಿತ್ತೊ ಅದೆಲ್ಲಕ್ಕೂ ಬದುಕುಕೊಟ್ಟ ಪ್ರಬುದ್ಧ ಮಹಾಜಂಗಮರು. ಹನಿಯಾಗಿ, ಹಳ್ಳವಾಗಿ, ಹೊಳೆಯಾಗಿ ಮಹಾನದಿಯಾಗಿ ಪ್ರವಹಿಸಿದ ಕುಮಾರಯೋಗಿಯು ಅಳಿಯದ ವಿಭೂತಿಯಾಗಿದ್ದಾರೆ. ಮಾನವೇತಿಹಾಸದಲ್ಲಿ ಅಚ್ಚುಗೊಂಡ ಪ್ರಭಾವ ಮುದ್ರೆಯ ನಿಜಶಾಸನವಾಗಿದ್ದಾರೆ. ಕನ್ನಡ ನಾಡಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ಸಾಲಿಮಠ ಮನೆತನ ಧರ್ಮ-ಸಂಸ್ಕøತಿಗಳ ತಾಣ. ಆಗ ಬಳ್ಳಾರಿ ಭಾಗದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದರಿಂದ ಮೂಲತಃ ಈ ಮನೆತನದವರು ಬಳ್ಳಾರಿ ಜಿಲ್ಲೆ ಕೊಟ್ಟೂರಿನಿಂದ ವಲಸೆ ಬಂದು ನೆಲೆಸಿದವರು ದರಿಹಂಚಿನ ಚಿಕ್ಕ ಮನೆಯನ್ನು ನಿರ್ಮಿಸಿಕೊಂಡು, ಒಂದು ನೂರಾ ಐದು ವರ್ಷ ಬಾಳಿದ ಕೊಟ್ಟೂರು ಬಸವಾರ್ಯರು ಈ ಗ್ರಾಮಕ್ಕೆ ಬಂದು ನೆಲೆಸಿದ ಮೇಲೆ ಕೈಕೊಂಡ ವೃತ್ತಿಯೆಂದರೆ ‘ಅಕ್ಷರದೀಕ್ಷೆ’. ಸುಶಿಕ್ಷಿತರೂ, ಓದು-ಬರಹ ಬಲ್ಲವರೂ ಆಗಿದ್ದ ಬಸವಾರ್ಯರು ಗ್ರಾಮದ ಮನೆಮನೆಗೆ ಹೋಗಿ ಪಾಲಕರಲ್ಲಿ ಖುದ್ದಾಗಿ ಮಕ್ಕಳು ಅಕ್ಷರ ಕಲಿಯಲು ಕಳುಹಿಸಿಕೊಡುವಂತೆ ವಿನಂತಿಸುತ್ತಾರೆ. ಊರಿನ ಎಲ್ಲ ಮಕ್ಕಳನ್ನು ತಮ್ಮ ಮನೆಯ ಶಾಲಾ ತೆಕ್ಕೆಗೆ ತರುತ್ತಾರೆ. ಮಕ್ಕಳಿಗೆಲ್ಲ ಅಕ್ಷರ ತೀಡಿಸಿ, ರೂಢಿಸಿ ‘ಕನ್ನಡ ಅಕ್ಷರದೀಕ್ಷೆ’ ನೀಡಿ ಶಿಕ್ಷಕ ವೃತ್ತಿಗೆ ಆದರ್ಶಪ್ರಾಯರಾದ ಅವರು ವೃತ್ತಿಯ ಘನತೆಯಿಂದಾಗಿ ಸಾಲಿಮಠ ಬಸವಾರ್ಯರು ಎಂಬುದಾಗಿ ಗ್ರಾಮ ಜನರಲ್ಲಿ ಮನೆಮಾತಾದರು. ಅಕ್ಷರ ಸಂಸ್ಕøತಿಯ ಕಾರಣವಾಗಿ ಈ ಮನೆತನಕ್ಕೆ ‘ಸಾಲಿಮಠ’ ಎಂಬ ಹೆಸರು ಅಡ್ಡ ಹೆಸರಾಗಿ ಬಂದಿತು.      ಸಾಲಿಮಠ ಬಸವಾರ್ಯರ ಮಗನಾದ ಬಸಯ್ಯನವರು ಹಿರಿಯರ ಆದರ್ಶಗಳನ್ನು ಅಚ್ಚೊತ್ತಿಕೊಂಡವರು. ನೀಲಮ್ಮನವರನ್ನು ಧರ್ಮಪತ್ನಿಯಾಗಿ ಪಡೆದ ಮೇಲಂತೂ ಸಾಲಿಮಠ ಮನೆತನ ಸಂಸ್ಕಾರದ ಕಣಜವಾಯಿತು. ಬಸಯ್ಯ-ನೀಲಮ್ಮರ ಎರಡನೆಯ ಪುತ್ರನಾಗಿ 11-09-1867 ರಂದು ಬುಧವಾರ ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಜನಿಸಿದ ಮಗುವೇ ‘ಹಾಲಯ್ಯ’. ಈ ಬಾಲಕನು ನೆರೆಯವರ ನೇಹದ ಶಿಶುವಾಗಿ, ಮುದ್ದಿಸುವವರ ಮುಂಗೈ ಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಸಕಲರ ಅಕಳಂಕ ವಾತ್ಸಲ್ಯದ ಕುಡಿಯಾಗಿ ಬೆಳೆದನು. ವಯೋವೃದ್ಧ ಬಸವಾರ್ಯರ ‘ಅಕ್ಷರ ದೀಕ್ಷೆ’ಯು ಶುಭ್ರಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಯಿತು.      ಆಟದ ವಯಸ್ಸಿನಲ್ಲಂತೂ ಗೋಲಿಗುಂಡ, ಬುಗುರಿ, ಚಿಣ್ಣಿದಾಂಡು, ಚಕ್ರಬಿಡುವುದು ಮೊದಲಾದ ಆಟಗಳನ್ನು ಆಡುವುದರ ಜೊತೆಗೆ ಈ ಆಟಗಳ ವಸ್ತುಗಳನ್ನು ಸಂಗ್ರಹಿಸುವುದು, ಜೊತೆ ಗೆಳೆಯರೊಡನೆ ಈಜಲು ಹೋಗುವುದು, ಪಾಠಗಳನ್ನು ಏಕಚಿತ್ತದಿಂದ ಆಲಿಸುವುದು. ಪಟಪಟನೆ ಲೆಕ್ಕ ಬಿಡಿಸಿ ಅರಳು ಹುರಿದಂತೆ ಹೇಳುವದು, ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ದುಂಡಾಗಿ ಬರೆಯುವುದು, ಪದ್ಯಗಳನ್ನು ರಾಗಬದ್ಧವಾಗಿ ಕಂಠಪಾಠ ಮಡುವುದು, ಗದ್ಯಪಾಠಗಳನ್ನು ಮನನ ಮಾಡಿಕೊಳ್ಳುವಲ್ಲಿ ತನ್ನ ಪ್ರತಿಭೆಯನ್ನು ಮೆರೆದು ಶಿಕ್ಷಕರಿಂದ ‘ಜಾಣ ವಿದ್ಯಾರ್ಥಿ’ ಎನಿಸಿಕೊಂಡನು. ಗೋಲಿಗುಂಡ ಹಿಡಿದಿದ್ದರೂ ಇನ್ನೇನನ್ನೋ ಮೆಲಕು ಹಾಕುತ್ತಿದ್ದ ಹಾಲಯ್ಯನ ಮನಸ್ಸು ತುಂಭ ಕಿರಿಯ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಚಿಂಥನ, ತಾರ್ಕಿಕತೆ, ಏಕಾಗ್ರತೆ, ಬಡತನ, ಬವಣೆ, ಸಮಾಜ-ಶಿಕ್ಷಣ ಜನರ ನೋವು-ನಲಿವು, ದೇಶ-ಭಾಷೆ, ಹೀಗೆ ಮನ ಆಲಿಯುತ್ತ ಒಮ್ಮೊಮ್ಮೆ ಪಾಪ-ಪೂಣ್ಯ ದೇವರು, ಜಗಸೃಷ್ಠಿಯಂತಹ ತುಂಬ ಗಹನವೂ, ಉನ್ನತವೂ ಆದ ವಿಚಾರಗಳ ಕಡೆಗೂ ಏರಿಳಿಯುತ್ತಿತ್ತು.      ಕನ್ನಡ ಮುಲ್ಕೀ ತರಗತಿಯವರೆಗೂ ಓದಿದ ಹಾಲಯ್ಯ ಮುಲ್ಕೀ ಪರೀಕ್ಷೆ ಬರೆಯಲು ರಾಣೀಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದುಕೊಂಡು ಬಂದು ಪರೀಕ್ಷೆ ಬರೆದರು. ಸಾಕಷ್ಟು ಓದಿಯೇ ಪರೀಕ್ಷೆ ಬರೆದಿದ್ದರೂ ಪರೀಕ್ಷೆಯ ಫಲಿತಾಂಶ ಅನುತ್ತೀರ್ಣವೆಂದು ಗೊತ್ತಾದಾಗ ಬಾಲಕ ಹಾಲಯ್ಯನಿಗೆ ನಿರಾಶೆಯಾದರೂ ಎದೆಗುಂದಲಿಲ್ಲ. “ವಿದ್ಯಾಬಲ ಉಡುಗಿದರೂ ಚಿಂತೆಯಿಲ್ಲ ಛಲ ಉಡುಗದು” ಎಂಬಂತೆ ಮುಂದಿನ ವೀರ ಸಂಕಲ್ಪದ ದೀರ್ಘಾಲೋಚನೆ ಮಾಡುತ್ತ “ಬಟ್ಟೆ-ಹಿಟ್ಟು ಕೊಡುವ ವಿದ್ಯೆ ನನಗೆ ಬೇಡ” ಎಂದು ಗಟ್ಟಿ ನಿಲುವು ಮಾಡದನು. ತಾಯಿಯ ತವರೂರಾದ ಲಿಂಗದಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಿ ತಾವೆ ಶಿಕ್ಷಕರಾಗಿ ಅನೇಕರ ಬಾಳನ್ನು ಬೆಳಗಿದರು. ಆಗ ಹಾಲಯ್ಯ ಮಾಸ್ತರರಿಗೆ ವರ್ಷಕ್ಕೆ ಒಂದು ನೂರು ರೂಪಾಯಿ ಸರಕಾರದ ಸಂಬಳವಿತ್ತು. ನಿಸ್ಪøಹ ಭಾವನೆಯ ಶಿಕ್ಷಕ ವೃತ್ತಿ, ವೈರಾಗ್ಯದ ಜೀವನ ಅಧ್ಯಾತ್ಮ ಮನೋಧರ್ಮ, ಸಾತ್ವಿಕತೆಯ ಸ್ವಭಾವ ಎಲ್ಲವೂ ತಾವಿದ್ದ ಗ್ರಾಮೀಣ ಪರಿಸರದ ಮೇಲೆ ಪ್ರಭಾವ ಬೀರಿದವು.      ಹೀಗಿರುವಾಗ ತಾಯಿ ನೀಲಮ್ಮಳು ಮದುವೆಯ ಪ್ರಸ್ತಾಪ ಮಾಡಿದಾಗ ಆ ಮಾತಿಗೆ ತಡೆಹಾಕಿ ‘ಇಕೋ! ಈ ನಿನ್ನ ಉದರದಲ್ಲಿ ಜನಿಸಿದ ಋಣಭಾರವನ್ನು ಸ್ವಲ್ಪು ಮಟ್ಟಿಗಾದರೂ ಇಳಿಸಿಕೊಳ್ಳಬಹುದೆಂದು ಭಾವಿಸಿ ಮೂರು ವರ್ಷ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತಿದ್ದೇನೆ. ನನ್ನದೇ ಆದ ದಾರಿಯಲ್ಲಿ ನಾನು ಸಾಗುತ್ತಿರುವಾಗ ಇನ್ನು ಮೇಲೆ ತಾಯಿ ಎಂಬ ಮೋಹವು ನನ್ನಲ್ಲಿಯೂ; ಮಗನೆಂಬ ಮೋಹವು ನಿನ್ನಲ್ಲಿಯೂ ಇರಕೂಡದು! ಎಂದು ಹೇಳಿ ಮದುವೆಯ ವಿಚಾರ ಸ್ಪಷ್ಟವಾಗಿ ತಳ್ಳಿಬಿಡುತ್ತಾರೆ. ತಾಯಿ ನೀಲಮ್ಮ ಮಗನ ಸಹಜ ಹಾಗೂ ವೀರ ವೈರಾಗ್ಯಗಳನ್ನು ತಿಳಿದು ಗಟ್ಟಿ ಮನಸ್ಸು ಮಾಡಿದಳು.      ‘ವೈರಾಗ್ಯ’ ಇದೊಂದು ಅಗ್ನಿದಿವ್ಯ. ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ ಜೀವ-ಭಾವಗಳ ನಿರಸನ ಸಾಧಿಸಿ ಇಷ್ಟ ದೈವದ ಉಪಾಸಣೆಯಿಂದ ಸರ್ವಾರ್ಪಣ ಸಿದ್ಧಿಯನ್ನು ಸಂಪಾದಿಸಿದವರೇ ವಿರಾಗಿಗಳು. ಸಾಹಸ ಪ್ರವೃತ್ತಿಯ ಸಾಧಕರ ಅಂತಶಕ್ತಿಗೆ ವೈರಾಗ್ಯ ಒಂದು ಸವಾಲು. ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದರಂತಹ ವೀರವಿರಾಗಿಗಳ ವೈರಾಗ್ಯವೇ ಹಾಲಯ್ಯನವರದಾಗಿತ್ತು. ವೈರಾಗ್ಯದ ಜೊತೆಗೆ ‘ಶೀಲ’ವೂ ಅವರ ಆಂತರಿಕ ಬದುಕಿನ ಮೌಲ್ಯವಾಗಿತ್ತು. ಜೀವಧನವಾಗಿತ್ತು. ಸತ್ಯದಲ್ಲಿ ನಡೆಯುವುದು, ಸತ್ಯದಲ್ಲಿ ನುಡಿಯುವುದು, ಆಚಾರ-ವಿಚಾರಗಳಲ್ಲಿ ಗಟ್ಟಿತನ, ಅಂತರಂಗ-ಬಹಿರಂಗಗಳಲ್ಲಿ ಶುದ್ಧಿ, ಯೋಚನೆಗಳು-ಯೋಜನೆಗಳಾಗಿ ಸಾಕಾರಗೊಳಿಸುವುದು ಇವುಗಳ ಜೊತೆಗೆ ಮಾನವನ ಏಳ್ಗೆಯೇ ಶೀಲ, ಜಾತಿ-ಮತಗಳ ವಿಷ ಬೀಜ ಬಿತ್ತದಿರುವುದೆ ಶೀಲ, ಮೇಲು-ಕೀಳುಗಳ ಭಾವನೆ ತಂದುಕೊಳ್ಳದಿರುವುದೇ ಶೀಲ, ಸಮಾಜದ ಸಂಸ್ಕರಣೆಯೇ ಶೀಲ, ಸಕಲ ಜೀವರಾಶಿಗಳ ಸಂರಕ್ಷಣೆಯೇ ಶೀಲ, ಈ ಬಗೆಯ ಗಟ್ಟಿಗೊಂಡ ವ್ಯಕ್ತಿತ್ವ ಹಾಲಯ್ಯನವರದಾಗಿತ್ತು. ಹಾಲಯ್ಯ ಬೆಳೆದಂತೆ ಹಾಲಯ್ಯ ಮಾಸ್ತರರಾಗಿ, ಹಾಲಯ್ಯ ದೇಶಿಕರಾಗಿ, ಹಾನಗಲ್ಲ ವಿರಕ್ತಮಠದ ಅಧಿಕಾರ ಹೊಂದಿ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮಿಗಳಾಗಿ ನಾಮಕರಣಗೊಂಡು, ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಕುಮಾರ ಸ್ವಾಮಿಗಳೆಂದು ನಂತರ ಗುರುಗಳ ಅಭಿಧಾನರಾಗಿ ಸಮಾಜೋದ್ಧಾರದ ಕ್ರಾಂತದರ್ಶಿ ಕುಮಾರ ಯೋಗಿಯಾಗಿ ಯುಗಪುರುಷರೆಂದೆನಿಸಿದರು. ಅವರ ಬದುಕು ಆತ್ಮಸಂಸ್ಕಾರದ ಪ್ರತಿಬಿಂಬ. ಮಾನವ ಕಲ್ಯಾಣ ಸಾಧನೆಯ ಮಹಾಮಾರ್ಗ. ವಿದ್ಯೆ, ಸಂಸ್ಕøತಿ, ಸಮಾಜ, ಧರ್ಮ, ಸಾಹಿತ್ಯ, ಸಂಗೀತ ಕಲೆಗಳ ಸಂಚ ಲನ ಮಹಾಕಾವ್ಯವಾಗಿದೆ. ದೀನ-ದುರ್ಬಲರ, ದಲಿತ-ದರಿದ್ರರ, ಅನಾಥ-ಅಂಧರ ಏಳ್ಗೆಗಾಗಿ ಸ್ವಾತಂತ್ರ್ಯದ ಪೂರ್ವದ ದಿನಗಳಲ್ಲಿ ಸ್ಥಾಪನೆ ಮತ್ತು ಸುಧಾರಣೆಗಳ ಕ್ರಾಂತಿಯೆನ್ನಸಗಿದವರು. 1903ರ ವೇಳೆಗಾಗಲೇ ಹಾನಗಲ್ಲು, ಹಾವೇರಿ, ಶೆಲವಡಿ, ರಾಣೆಬೆನ್ನೂರು, ಸಂಶಿ, ಅಬ್ಬಿಗೇರಿ ಆಮೇಲೆ ಹುಬ್ಬಳ್ಳಿ, ರೋಣ, ಮುಂಡರಗಿ, ಬದಾಮಿ, ಬಗಲಕೋಟೆ ಹೀಗೆ ಅನೇಕ ಕಡೆಗಳಲ್ಲಿ ಸಂಸ್ಕøತ ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾ ಸಂಚಲನಗೈದರು. ಪಾಠಶಾಲೆಗಳಲ್ಲಿ ಅಭ್ಯಾಸ ಮಾಡಿ ಪಂಡಿತರಾಗುವ, ಮಠಾಧಿಪತಿಗಳಾಗುವ ಘನ ಕಾರ್ಯಗಳು ನಡೆದವು. ಕಬ್ಬಿಣ ಕಡಲೆಯಾಗಿದ್ದ ಸಂಸ್ಕøತವನ್ನು ತಿಳಿಯುವ ಮತ್ತು ಆ ಭಾಷೆಯ ಧಾರ್ಮಿಕ ತತ್ವಗಳನ್ನು ಕನ್ನಡಕ್ಕೆ ತರುವ ತೀವ್ರತರ ಚಟುವಟಿಕೆಗಳು ಉಂಟಾದವು. ಯಾವುದೇ ಭಾಷೆಯು ಎಲ್ಲರಿಗೂ ಎಂಬುದನ್ನು ಮನದಟ್ಟು ಮಾಡಿಕೊಡಲು ಸತತ ಶ್ರಮಿಸಿದರು. ಬಸವಣ್ಣನವರ ಅನುಭವ ಮಂಟಪ ಸಂಸ್ಕøತಿಯನ್ನು ಸಜೀವಗೊಳಿಸುವ ಸಾಧನೆಯಾಗಿ ‘ಐತಿಹಾಸಿಕ ಅಗತ್ಯದ ಸೃಷ್ಟಿ’ ಎಂಬಂತೆ 1904ರಲ್ಲಿ ಶ್ರೀಮದ್ವೀರಶೈವ ಮಹಾಸಭೆ ಸ್ಥಾಪಿಸಿದರು. ದೀನರ, ದುರ್ಬಲರ, ಮಕ್ಕಳ, ಮಹಿಳೆಯರ ಏಳ್ಗೆಗಾಗಿ ದುಡಿಯುವುದು, ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಾಮರಸ್ಯ ಬೆಸೆಯುವುದು. ಧರ್ಮ, ಸಾಹಿತ್ಯ, ಸಂಸ್ಕøತಿ, ಸಂಶೋಧನೆಗಳು ನಡೆಯುವಂತೆ ಮಾಡುವುದು ಮಹಾಸಭೆಯ ಉದ್ಧೇಶವಾಗಿದೆ. ಸಾಮಾಜಿಕ ಕುಂದು-ಕೊರತೆಗಳನ್ನು ದೂರಮಾಡಿ ಸಮಾನತೆಯನ್ನು ಸಾರುವ ಧಾರ್ಮಿಕ ಸಂವಿಧಾನವೂ ಹೌದು. ವಿಶ್ವದ ಮಾನವೀಯತೆಯ ಮಹಾಪುರುಷರಲ್ಲೊಬ್ಬರಾದ ಕುಮಾರ ಶಿವಯೋಗಿಗಳು ಮಾನವ ಕುಲದ ಸಮಗ್ರ ಉನ್ನತಿಗಾಗಿ ಅಧ್ಯಾತ್ಮ ಸಾಧನೆಯ ತರಬೇತಿ ನೀಡುವ ಅಗತ್ಯತೆಯನ್ನು ಮನಗಂಡಿದ್ದರು. ಸ್ವಾತಂತ್ರ್ಯಪೂರ್ವ, ಕರ್ನಾಟಕ ಏಕೀಕರಣ ಪೂರ್ವ ಕಾಲದಲ್ಲಿ 1909ರಲ್ಲಿ ಶ್ರೀಮದ್ವೀರಶೈವ ಶಿವಯೋಗಮಂದಿರ ಎಂಭ ಧಾರ್ಮಿಕ ಸಂಸ್ಥೆಯನ್ನು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನಲ್ಲಿ ಸ್ಥಾಪಿಸಿದರು. ಧರ್ಮಗುರುಗಳಾಗುವ ಮುನ್ನ ಧಾರ್ಮಿಕ, ನೈತಿಕ, ಯೌಗಿಕ, ಶಿಕ್ಷಣದ ಸಂಸ್ಕಾರ ಕೊಡುವ ಸಾಂಸ್ಕøತಿಕ ಹೆದ್ದಾರಿಯೊಂದು ತೆರೆದುಕೊಂಡಿತು. ಧಾರ್ಮಿಕ ಹೆಗ್ಗುರುತು ಈ ಸಂಸ್ಥೆಯದಾಗಿದೆ. ವ್ಯಷ್ಟಿಯಿಂದ ಸಮಷ್ಟಿ ಬದಕಿಗೆ ಹೊಸರೂಪ ನೀಡಲು ಮುಂದಾದ ಶಿವಯೋಗಮಂದಿರವು ಇಂದು ನಾಡಿನ ನಾನಾ ಮಠಗಳಿಗೆ ಮಠಾಧಿಪತಿಗಳನ್ನು ಕೊಟ್ಟಿದೆ. ಶಿಕ್ಷಣ, ಉಚಿತ ಪ್ರಸಾದ ನಿಲಯಗಳ ಮೂಲಕ ಸಹಸ್ರಾರು ಮಠಗಳು ಘನಕಾರ್ಯ ಮಾಡುತ್ತಿರುವುದು ನಾಡಿನ ಶೈಕ್ಷಣಿಕ ಇತಿಹಾಸದಲ್ಲಿ ಬಹುಮಹತ್ವವಾಗಿದೆ. ಗದಗನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕರಾದ ಕುಮಾರ ಶಿವಯೋಗಿಗಳು ಅಂಧರ, ಅನಾಥರ, ಅಂಗವಿಕಲರ ಬಾಳಿಗೆ ಬೆಳಕು ನೀಡಿದವರು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳಿಗೆ ಸಂಗೀತದ ಶಿಕ್ಷಣ ಕೊಡಿಸಿ ಅವರಂಥ ಸಹಸ್ರಾರು ಅಂಧರು ಒಳಗಣ್ಣಿನಿಂದ ಲೋಕ ಅರಿತರು. ಸಂಗೀತ, ಕೀರ್ತನ, ಪ್ರವಚನಗಳ ಮುಖಾಂತರ ಜ್ಞಾನದ ಬೆಳಕು ನೀಡಿದರು. ಭಕ್ತರ ಮನೆಗೆ ಹೋದಾಗ ಭಕ್ತರು ಕೊಟ್ಟ ಕಾಣಿಕೆಯನ್ನು ಭಕ್ತರಿಗೇ ಮರಳಿಸಿ ಅವರ ಮನೆಗಳ ಗೋಡೆ-ಗದ್ದುಗೆಗಳಲ್ಲಿ ಹುದುಗಿ ಪೂಜಿಸಲ್ಪಡುತ್ತಿದ್ದ ಕೈಬರಹ, ತಾಳೆಗರಿ ತಾಡೋಲೆಗಳನ್ನು ಸಂಗ್ರಹಿಸಿದರು. ಫ.ಗು.ಹಳಕಟ್ಟಿಯವರನ್ನು ಜೊತೆಗೆ ಕರೆದುಕೊಂಡು ಮುದ್ರಣಕ್ಕೆ ಮುಂದಾದರು. ಹೋದ ಹೋದಲ್ಲೆಲ್ಲ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಪತ್ರಕೆಗಳನ್ನು ಆರಂಭಿಸಿ ಸಾಹಿತ್ಯ ಪ್ರಸಾರ ಮಾಡಿದವರು. ಉದ್ಧರಣೆಗಳನ್ನು ಪೋಷಿಸಿದರು. ಅನೇಕ ಗ್ರಂಥಗಳ ಸಂಶೋಧನೆಗೆ ಪ್ರೋತ್ಸಾಹ ನೀಡಿದರು. ಅನುಭಾವದ ಹಾಡುಗಬ್ಬಗಳನ್ನು ರಚಿಸಿದವರು ತಾವಾಗಿದ್ದರೂ ಎಲ್ಲಿಯೂ ತಮ್ಮ ಹೆಸರನ್ನು ನಮೂದಿಸಿಕೊಂಡವರಲ್ಲ. ಗೋಶಾಲೆಯನ್ನು ಸ್ಥಾಪಿಸಿ ಲಕ್ಷಲಕ್ಷ ಗೋವುಗಳನ್ನು ಸಂರಕ್ಷಿಸಿ ಪ್ರಾಣಿಪ್ರೇಮಕ್ಕೆ ಸಾಕ್ಷಿಯಾದವರು. ಪಕ್ಷಿ, ಪರಿಸರ, ಗಿಡ, ಬಳ್ಳಿ ಒಟ್ಟಾರೆ ತಮ್ಮ ಸುತ್ತಮುತ್ತ ಏನಿತ್ತೊ ಅದೆಲ್ಲವನ್ನು ತಮ್ಮಂತೆ ಬದುಕಿಸಿದ ಬೆಳೆಯಲು ಆಶ್ರಯವನ್ನಿತ್ತವರದು ಅಂತಃಕರಣದ ಹೃದಯ! ದಯಾಭಾವದ ಹೃದಯ! ತಮ್ಮ ಜೀವಿತಾವಧಿಯ ಅರವತ್ಮೂರು ವರ್ಷಗಳನ್ನು ಕಾಲ್ನಡಿಗೆಯಲ್ಲೆ ಕಳೆದವರು. ಸಮಯದ ಅಪವ್ಯಯ ಎಂದರೆ ಅಪರಾಧ ಎಂದು ನಂಬಿದವರು. ಅವರ ವ್ಯಕ್ತಿತ್ವದ ಪ್ರಭಾವ ಮುದ್ರೆ ಇಂದಿನ ವರೆಗೂ ಜನತೆಯ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎನ್ನುವುದಕ್ಕೆ ಅವರ ಹೆಸರನ್ನು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ, ಭಕ್ತರು ಮಠಾಧಿಪತಿಗಳಿಗೆ ನಾಮಕರಣಗೊಳಿಸುತ್ತಿರುವುದು. ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣಗೊಳ್ಳುತ್ತಿರುವುದು. ಅಲ್ಲದೆ ಅವರನ್ನು ಕುರಿತ ಕಾವ್ಯ-ಸಾಹಿತ್ಯ, ಸಂಶೋಧನಾ ಸಾಹಿತ್ಯ ನಿರ್ಮಾಣವಾಗುತ್ತಿರುವುದೇ ಪ್ರತ್ಯಕ್ಷ ನಿದರ್ಶನವಾಗಿದೆ. ಕುಮಾರ ಶಿವಯೋಗಿಗಳ ಕ್ರಾಂತದರ್ಶಿತ್ವವು ಆ ಒಂದು ಯುಗಕ್ಕೂ ಸೀಮಿತಗೊಳ್ಳುವಂತಹದ್ದಲ್ಲ. ಅವರ ಅಧ್ಯಾತ್ಮ ಅನುಭಾವ ಸಾಧನೆಗಳ ಔನ್ನತ್ಯವು ಯುಗ-ಯುಗಗಳಿಗೆ ಪ್ರಭಾವ ಬೀರಬಹುದಾದುದು. ಕಾರಣ ಜಾತಿ, ಕುಲ, ಭಾಷೆ, ದೇಶಗಳನ್ನು ಮೀರಿದ ವ್ಯಕ್ತಿತ್ವ ಅವರದು. 19-02-1930 ನೇ ಇಸ್ವಿ ಗುರುವಾರ ದಿವಸ ಸಂಜೆ 7 ಗಂಟೆಗೆ ಕುಮಾರ ಶಿವಯೋಗಿಗಳ ಉಸಿರು ಲಿಂಗದಲ್ಲಿ ಲೀನವಾದಾಗ ನಾಡಿನ ಹೃದಯಗಳು ಮಮ್ಮಲ ಮರಗಿದವು. ಧರ್ಮಸ್ತಂಭದ ಮೇಲೆ ಹೃದಯದ ಹಣತೆಯನ್ನಿರಿಸಿ ಧ್ಯಾನತೈಲವನ್ನೆರೆದು ಕ್ರಿಯಾಬತ್ತಿವಿಡಿದ ಅವರ ಜ್ಞಾನಜ್ಯೋತಿ ಉರಿಯುತ್ತಲೇ ಇದೆ. ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಲೇ ಇದೆ. ವಿಶ್ವದ ಕಲ್ಯಾಣದ ಬಯಕೆ ಬಯಸಿ ಬಂದ ಸಮರ್ಥ ವ್ಯಕ್ತಿ-ಶಕ್ತಿಗಳ ಮನದ ತಂತಿಗಳನ್ನು ಮೀಟುತ್ತಲೇ ಇದೆ. “ಆಚಾರದಲ್ಲಿ ತಪ್ಪಿದರೆ ನಮ್ಮ ದೋಷ; ಅನಾಚಾರದಲ್ಲಿ ನಡೆದರೆ ನಿಮ್ಮ ದೋಷ ಇವೇ ನಮ್ಮ-ನಿಮ್ಮ ಹೊಣಾಗಾರಿಕೆ” ಎಂದು ಅಳಿಸಲಾರದ ವಿಭೂತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧಕರಲ್ಲಿಯೂ, ಸಂಸ್ಕøತಿಯಲ್ಲಿ ನಿರತರಾಗಿರುವ ಮಠಾಧಿಪತಿಗಳಲ್ಲಿಯೂ ಗಟ್ಟಿಗೊಂಡಿದ್ದಾರೆ.    

ರಚನೆ: ಗುರು ಪಾದ ಸೇವಕ

ಶ್ರೀ ರೇವಣಸಿದ್ದಯ್ಯ ಹಿರೇಮಠ

ಆಕಾಶವಾಣಿ ಕಲಾವಿದರು ಚಿಂಚೋಳಿ

ಕಲಿಯುಗದಿ ಸತ್ಯ ಸಾರಿದ ಕಾರಣಿಕ ಶಿವಯೋಗಿ |

ಕಾವಿ ಲಾಂಛನಕ್ಕೆ ಬೆಲೆ ತಂದ ಸಮರ್ಥ ಗುರುವಾಗಿ |

ಅರಿವು ಆಚಾರ ಶುಚಿಯಾಗಿಸಿದ ಸಮಾಜ ಜಾಗ್ರತೆಗಾಗಿ |

ವಿಶ್ವಮಾನ್ಯ ವ್ಯಕ್ತಿತ್ವದ ವೀರಶೈವ ಧರ್ಮದ ನಿಜಯೋಗಿ ||||

ಭರತ ಖಂಡದಲ್ಲಿ ಅಧ್ಯಾತ್ಮ ನಕ್ಷತ್ರದ ಜೊತಿಯಾಗಿ|

ಆಧ್ಯಾತ್ಮಿಕ ಸಿರಿಯಲ್ಲಿ ವಿಶ್ವದೆತ್ತರಕ್ಕೆ ತಾ ಬೆಳಗಿ|

ಘನವಂತ ಗುಣವಂತ ದಯಾವಂತ ಸ್ವಾಮಿಯಾಗಿ|

ಜನ ಮನ ಕೊಟಿಯ ಸತ್ಯಯುಗದ ಶ್ರೇಷ್ಠಯೋಗಿ ||||

ಜಗದ ಲೇಸನೆ ಬಯಸಿದ ವಿರಾಟ್ಟುರದ ಯತಿಯಾಗಿ |

ಬರದ ಭವಣೆ ನೀಗುವರೆಗೆ ಲೋಟ ಗಂಜಿ ಕುಡಿದ ಹಠಯೋಗಿ |

ಪೂರ್ಣ ಬ್ರಹ್ಮ ನಿರಾಕಾರ ಮೂರ್ತಿ ಲಿಂಗವೆಂದರುಹಿದ ಲಿಂಗಾಗಿ |

ವೀರಶೈವ ವಿಶ್ವಧರ್ಮವೆಂಬ ಸತ್ಯ ಸಾರಿದ ಕುಮಾರ ಶಿವಯೋಗಿ ||||

ಧರ್ಮತತ್ವ ಭೋಧೆಗೈವ ಧರ್ಮಸಭೆ ರಚಿಸಿದ ಶಿವಯೋಗಿ |

ವೀರ ವೈರಾಗ್ಯದ ಅಪರಂಜಿ ರನ್ನ ಜೊತಿ ನಿಜ ವಿರಕ್ತನಾಗಿ |

ಗುರುವಿರಕ್ತರ ಹೃದಯದಿ ಬೆಳಗುತ್ತಿದೆ ನಿರಂಜನ ನಂದಾದೀಪವಾಗಿ |

ಕರ ಮುಗಿದು ಬರೆದನು ಪುಟ್ಟ ರಸಿಕನು ಮಂದಿರದ ಶಿಶುವಾಗಿ ||||