ಲೇಖಕರು : ಪೂಜ್ಯ  ವೀರಬಸವ ದೇವರುಆಸಂಗಿ

ಭಾರತ ಇತಿಹಾಸದಲ್ಲಿ ಯೋಗ ಒಂದು ದೊಡ್ಡ ವಿಜ್ಞಾನವೇ ಹೌದು. ಮನುಷ್ಯ ಯಾವಾಗಲೂ ನಿದ್ರೆ-ಕನಸುಗಳ ಹಿಂದೆ ಬಿದ್ದು ತನ್ನ ನಿಜ ಜೀವನವನ್ನು ಮರೆತು ಬದುಕುತ್ತಿರುವನು. ಆದರೆ ಯೋಗ ನಿಜವಾದ ಜೀವನವನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ.

ಯೋಗ ಎಂದರೆ? ತನ್ನನ್ನು ತಾನು ತಿಳಿಯುವ ಸ್ಥಿತಿಯೇ ಯೋಗ. ವಿಷಯೇಂದ್ರಿಗಳ ನಿವೃತ್ತಿಯೇ ಯೋಗ, ಅಂತರಂಗದ ಅರಿವೇ ಯೋಗ.

ಮನುಷ್ಯನು ತನ್ನ ದೀರ್ಘಾಯುಷ್ಯದಲ್ಲಿ ಅರ್ಧ ಆಯುಷ್ಯವನ್ನು ನಿದ್ರೆಗೆ, ವ್ಯಸನಕ್ಕೆ, ಹಗಲು ಕನಸುಗಳಿಗೆ ಕಳೆದು ತನ್ನ ತಾ ಮರೆತು ಹೋಗುತ್ತಾನೆ. ಆದರೆ ಯೋಗ ಸಾಧಕನನ್ನು ಈ ಸ್ಥಿತಿಯಿಂದ ಜಾಗೃತಗೊಳಿಸಿ ಸ್ಥಿರ ರೂಪವನ್ನಾಗಿಸಿ ಸಾಧನಾ ಪಥದತ್ತ ಕೊಂಡೊಯ್ಯುತ್ತದೆ. ಸಾಧಕನಲ್ಲಿ ಅಚಲವಾದ ಧೈರ್ಯ ವಿಚಲವಾಗದ ಬುದ್ಧಿ ಅರಿತುಕೊಳ್ಳುವ ಜ್ಞಾನ ಸ್ಥಿರವುಳ್ಳ ಮನಸ್ಸನ್ನು ಕೊಟ್ಟು ಸಾಧಕನನ್ನು ಯಾವಾಗಲೂ ಎಚ್ಚರದಿಂದಿರಿಸುತ್ತದೆ.

ಈಗಿನ ಯೋಗ ಬರಿ ವ್ಯಾಯಾಮವಲ್ಲ. ಶರೀರ ದಂಡನೆಯಲ್ಲಿ ಇದು ಜಾಗೃತಿಯ ದಾರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಪೂರ್ಣಗೊಳಿಸುವ ದಾರಿ. ಯೋಗ ಒಂದು ಶಕ್ತಿಯಾಗಿ ಸಾಧಕನ ದಾರಿಯನ್ನು ಸರಳಗೊಳಿಸುತ್ತದೆ.

ಒಂದೊಂದು ಯೋಗವೂ ಒಂದೊಂದು ರೀತಿಯಲ್ಲಿ ಸಾಧಕನ ಮೇಲೆ ಪ್ರಭಾವ ಬೀರುತ್ತದೆ. ಭಕ್ತಿ ಯೋಗ ಮನಸ್ಸಿಗೆ, ಜ್ಞಾನ ಯೋಗ ಬುದ್ಧಿಗೆ, ಕರ್ಮಯೋಗ ಇಂದ್ರಿಯಕ್ಕೆ, ಹಠ ಯೋಗ ಶರೀರಕ್ಕೆ ಹೀಗೆ ಯೋಗಗಳು ಸಾಧಕನ ಮೇಲೆ ಪ್ರಭಾವಿತಗೊಳಿಸಿ ಸಾಧಕನಲ್ಲಿ ಶಕ್ತಿಯನ್ನು ತುಂಬುತ್ತವೆ.

ಅಷ್ಟಾಂಗ ಯೋಗಗಳು ಸಾಧಕನಿಗೆ ಸೋಪಾನವಾಗಿವೆ. ಅಂದರೆ ಮೆಟ್ಟಿಲುಗಳಾಗಿವೆ. ಸಾಧನೆಯ ಪ್ರಾರಂಭ ಸ್ಥಿತಿ ಹೇಗಿರಬೇಕು, ಮಧ್ಯಮ ಸ್ಥಿತಿ ಹೇಗೆ, ಕೊನೆಯ ಸ್ಥಿತಿ ಯಾವುದು? ಎಂದು ಸೂಚಿಸುತ್ತವೆ. ಯಮ, ನಿಯಮ, ಆಸನ, ಪ್ರಾಣಾಯಾಮಗಳು ಆರಂಭ ಸ್ಥಿತಿಯಾಗಿ, ಪ್ರತ್ಯಾಹಾರ, ಧಾರಣಗಳು ಮಧ್ಯಮ ಸ್ಥಿತಿಯಾಗಿ, ಧ್ಯಾನ, ಸಮಾಧಿ, ಕೊನೆಯ ಸ್ಥಿತಿಯಾಗಿ ಸಾಧಕನಲ್ಲಿ ಬದಲಾವಣೆ ತರುತ್ತಾ ಹೋಗುತ್ತವೆ.

ಯೋಗ ಸಾಧನೆಯಲ್ಲಿ ಸಾಧಕನ ಅವಸ್ಥೆಗಳು ಹೇಗಿರಬೇಕೆಂಬ ವಿಷಯದ ಕುರಿತು ಪತಂಜಲಿ ಯೋಗ ಸೂತ್ರಗಳಲ್ಲಿ ಬಹಳ ಅದ್ಭುತವಾಗಿ ತಿಳಿಸಿದ್ದಾರೆ. ಮಾನಸಿಕ ರೋಗಗಳಿಂದ ಹೇಗೆ ನಿವೃತ್ತಿ ಹೊಂದಬಹುದು ಎಂದು ಹೇಳಿದ್ದಾರೆ. ಪತಂಜಲಿಯ ಎರಡನೇ ಸೂತ್ರದಂತೆ “ಯೋಗಶ್ಚಿತ್ತವೃತ್ತಿ ನಿರೋಧಃ” ಎನ್ನುವಂತೆ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದೇ ಯೋಗವೆಂದು ಹೇಳುತ್ತಾರೆ. ಏಕೆಂದರೆ ಮನಸ್ಸು ಎಲ್ಲದಕ್ಕೂ ಕಾರಣವಾಗಿರುವುದರಿಂದ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ “ಮನೇವ ಮನುಷ್ಯಾನಂ ಕಾರಣಂ ಬಂಧ ಮೋಕ್ಷಯೋ” ಎನ್ನುವ ಹಾಗೆ ಮನಸ್ಸು ಸಾಧಕನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗಿರುವುದರಿಂದಲೇ ಪತಂಜಲಿ ಮಹರ್ಷಿಗಳು ಈ ಸೂತ್ರವನ್ನು ಹೇಳಿದ್ದಾರೆ.

ಸಾಧಕ ಯಾವಾಗಲೂ ಅಭ್ಯಾಸದಲ್ಲಿ ಇರಬೇಕು. ಅಭ್ಯಾಸ ಇರಬೇಕು. ಅಭ್ಯಾಸದಲ್ಲಿ ನಿರತನಾದ ಸಾಧಕ ಕ್ರಿಯಾಶೀಲತೆಯಿಂದ ಇರುತ್ತಾನೆ. ಅದಕ್ಕೆ ಪತಂಜಲಿ ಮಹರ್ಷಿಗಳು “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ” ನಿರಪೇಕ್ಷತವಾದ ಅಭ್ಯಾಸ ವಿರತವಾದ ಅಭ್ಯಾಸದಿಂದ ತನ್ನನ್ನು ತಾನು ಅರಿಯಲು ಸಾಧ್ಯ. ಅಪೇಕ್ಷೆಯಿಂದ ಮಾಡಿದ ಅಭ್ಯಾಸ ವ್ಯರ್ಥವಾದಲ್ಲಿ ಕೋಪ ಹುಟ್ಟುತ್ತದೆ. ಕೋಪದಿಂದ ಸಾಧಕನ ಮನ ವಿಚಲಿತವಾಗುತ್ತದೆ. ಅದಕ್ಕೆ ನಿರಪೇಕ್ಷಿತ ಅಭ್ಯಾಸ ಬಹಳ ಮುಖ್ಯವೆಂದು ತಿಳಿಸುತ್ತಾರೆ.

ಯೋಗವೆಂದರೆ ಕೂಡುವಿಕೆ, ಒಂದಾಗುವಿಕೆ. ಆತ್ಮ-ಪರಮಾತ್ಮನನ್ನು ಕೂಡುವುದು ಎಂದರ್ಥ. ಧ್ಯಾನದಿಂದ ತನ್ನೊಳಗೆ ಇರುವ ದೇವರನ್ನು ಕೂಡುವುದಾಗಿದೆ. ಇಂದ್ರಿಯಗಳನ್ನು ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನವನ್ನು ಹೊಂದಿ ಪರಮ ಮುಕ್ತಿಯನ್ನು ಹೊಂದುವ ದಾರಿ ಇದಾಗಿದೆ.

   ಶರಣರೊಬ್ಬರು ಹೇಳಿರುವ ಹಾಗೆ,

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಚಿತ್ತದಲ್ಲಿ ನಿರಪೇಕ್ಷೆ, ವಿಷಯಗಳಲ್ಲಿ ಉದಾಸಿನ

ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ

ನೆಲೆಗೊಂಡ ಬಳಿಕ ಸೌರಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೊ.

ಆದಯ್ಯ ಶರಣರು ತನ್ನ ತಾನರಿದವನೆ ತಾನೆ ದೇವರಾಗುತ್ತಾನೆ. ಎಂಬುದನ್ನು ತಿಳಿಸಿದ್ದಾರೆ.

ಈಗಿನ ದಿನಮಾನದಲ್ಲಿ ಯೋಗವು ಬಹಳ ಮುಖ್ಯವಾದ ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕರೋನಾ ಎನ್ನುವ ರೋಗದಿಂದ ಬಾಧಿತನಾಗಿ ಖಿನ್ನನಾಗುತ್ತಿದ್ದಾನೆ. ಇಂತಹ ರೋಗಗಳಿಂದ ಮುಕ್ತವಾಗಲು ಆಸನ ಪ್ರಾಣಾಯಾಮಗಳು ಬಹಳ ಮುಖ್ಯವಾಗಿವೆ. ಜೊತೆಗೆ ಮಾನಸಿಕ ಸ್ಥೈರ್ಯ ಶಾರೀರಿಕ ಸದೃಢತೆಯನ್ನು ಯೋಗ ಕೊಡುತ್ತದೆ. ಆದಕಾರಣ ಪ್ರತಿಯೊಬ್ಬರೂ ಯೋಗ ಮಾಡಿರಿ ರೋಗ ದೂರ ಮಾಡಿರಿ ಎನ್ನುವುದೇ ನಮ್ಮ ಪ್ರಾರ್ಥನೆ.

ನಾನು ಶಿವಯೋಗಮಂದಿರದ ಒಬ್ಬ ಸಾಧಕನಾಗಿ ನನಗೆ ಯೋಗವನ್ನು ಅರಿಯಲು ಸಾಧ್ಯವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪೆಯಿಂದ ಕನ್ನಡ ನಾಡಿನಲ್ಲಿ ಯೋಗವನ್ನು ಮಹತ್ವವಾದ ಆರೋಗ್ಯ ನಿಧಿಯನ್ನು ಈ ನಾಡಿಗೆ ಪರಿಚಯಿಸಿದರು. ಶ್ರೀ ಶಿವಯೋಗಮಂದಿರದಲ್ಲಿ ಹಠಯೋಗ ಮತ್ತು ಶಿವಯೋಗವನ್ನು ಮತ್ತು ಷಟ್ ಕ್ರಿಯಾದಿಗಳನ್ನು ಹೇಳುವ ಮುಖಾಂತರ ಈ ನಾಡಿಗೆ ಅನೇಕ ಶಿವಯೋಗಿ ಸಾಧಕರನ್ನು ಕೊಟ್ಟ ಮಹಾಸಂಸ್ಥೆ ಶ್ರೀ ಶಿವಯೋಗಮಂದಿರ. ಈ ನಾಡಿಗೆ ಯೋಗವನ್ನು ಪರಿಚಯಿಸಿದ ಮಹಾ ಚೇತನಕ್ಕೆ ಅನಂತ ಅನಂತ ಶರಣುಗಳು.

ಶ್ರೀ ಶಿವಯೋಗಮಂದಿರದ ಯೋಗ ಸಾಧನೆಗೈದ ಶಿವಯೋಗ ಸಿದ್ಧರು.

ಹಠಯೋಗ         –         ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು  ಕಂಚಗಲ್ ಬಿದರಿ

ರಾಜಯೋಗ       –         ಶ್ರೀ ಮ.ನಿ.ಪ್ರ ಲಿಂ. ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ                                   

ಕರ್ಮಯೋಗ-                 ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು   ಕಪನಳ್ಳಿ  ಶಾಖಾ ಶಿವಯೋಗಮಂದಿರ

ಜ್ಞಾನಯೋಗ       –         ಪೂಜ್ಯ ಶ್ರೀ ಜ.ಚ.ನಿ. ಮತ್ತು ಗಿರಿಯಾಪುರದ ಪೂಜ್ಯ ಶ್ರೀ ಸದಾಶಿವ ಶಿವಾಚಾರ್ಯರು

ಶಿವಯೋಗ         –         ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠ ಹಾನಗಲ್ಲ

                                         ಮತ್ತು  ಶ್ರೀ ಮ.ನಿ.ಪ್ರ.  ಅನ್ನದಾನ ಸ್ವಾಮಿಗಳು ಹಾಲಕೇರಿ

ಭಕ್ತಿಯೋಗ         –         ಪೂಜ್ಯ ಶ್ರೀ ನಾಲ್ವತವಾಡದ ವೀರೇಶ್ವರ ಶರಣರು ಸೋಲ್ಲಾಪೂರ

ನಾದಯೋಗ       –         ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು

                                      ವೀರೇಶ್ವರ ಪುಣ್ಯಾಶ್ರಮ ಗದಗ

                              –             

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರ ಹಸ್ತಾಕ್ಷರ ದಲ್ಲಿ ಔಷಧಿ

ಮುಂದೆ ತಿಂಗಳಿಗೆ ಕಣ್ಣು ನಿಚ್ಚಳವಾಗಿ ಕಾಣತೊಡಗಿತು. 1969ನೆಯ ಇಸ್ವಿ, ಹಾವೇರಿಯ ದ್ಯಾವಪ್ಪಶೆಟ್ಟರ ಮನೆಯಲ್ಲಿ ಶ್ರೀಗಳ ಪೂಜೆ. ಆ ಮನೆಯ ತಾಯಿಗೆ ಸಂಕಟ. ಆಕೆಯ ಕೂಸಿಗೆ ಆರೋಗ್ಯ ಸರಿಯಿರಲಿಲ್ಲ. ಸ್ವಾಮಿಗಳು ಆ ಮಗುವನ್ನು ಕರೆಸಿದರು. ಅದು ಶವದಂತೆ ಇತ್ತು. ಎಲ್ಲರನ್ನೂ ಹೊರಗೆ ಕಳುಹಿಸಿದರು. ಸ್ವಾಮಿಗಳು ಅದೇನು ವೈದ್ಯ ಮಾಡಿದರೆ ಮಗು ಕಿಲಕಿಲನೆ ನಗುತ್ತಿತ್ತು. ಇಂಥ ಘಟನೆಗಳು ಸಹಸ್ರಾರು. ಒಮ್ಮೆ ಗದುಗಿನ ಪುಟ್ಟರಾಜ ಗವಾಯಿಗಳೊಂದಿಗೆ ಸ್ವಾಮಿಗಳು ಮದರಾಸಿಗೆ ಹೋಗಿದ್ದರು.

ನಟಸಾರ್ವಭೌಮ ರಾಜಕುಮಾರರಿಗೆ ಪುಟ್ಟರಾಜ ಗವಾಯಿಗಳಲ್ಲಿ ಅಪರಿಮಿತ ಭಕ್ತಿ, ರಾಜಕುಮಾರ್ ಲಿಂಗಪೂಜೆ ನೋಡಬೇಕೆಂದು ಅಪೇಕ್ಷೆಪಟ್ಟರು. ಆದರೆ,ಲಿಂಗದೀಕ್ಷೆಯಿಲ್ಲದವರಿಗೆ ಅದು ಸಾಧ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಲೇಖಕರು : ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ

 

Rtd. Professor and Chairman Institute of Kannada Studies and

Former Hon. Professor Institute of Yoga Studies

Karnatak University, Dharwad

ಪ್ರಾಚೀನ ಕಾಲದಿಂದಲೂ ಭಾರತ ದೇಶವು ಅನೇಕ ಸಾಧು, ಸತ್ಪುರುಷರ ಜನ್ಮಭೂಮಿಯಾಗಿದೆ. ಜ್ಯೋತಿಯು ಸುತ್ತಲಿನ ಕತ್ತಲೆಯನ್ನೊಡಿಸಿ ಬೆಳಕನ್ನುಬೀರುವಂತೆ ಅವರು ತಮ್ಮ ದಿವ್ಯ ಜ್ಞಾನ ಬಲದಿಂದ ತಮ್ಮ ಸುತ್ತಮುತ್ತಲಿನಜನರಿಗೆಲ್ಲ ಜ್ಞಾನೋಪದೇಶ ನೀಡಿ ಅಜ್ಞಾನವನ್ನು ಕಳೆದು ಅವರನ್ನು ಉದ್ಧಾರ ಮಾಡಿದರು. ಇಂಥ ಪುಣ್ಯ ಪುರುಷರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೂ ಒಬ್ಬರು. ಅವರು ಮಾನವನ ವ್ಯಕ್ತಿತ್ವದ ಸರ್ವಾಂಗ ಉನ್ನತಿಗೆ ಸಹಕಾರವಾಗುವ ಸರ್ವಕ್ಷೇತ್ರಗಳನ್ನೂ ಸುಧಾರಿಸಿದರು. ಅದರಲ್ಲಿಯ ಶ್ರೀಗಳವರು ಭಾರತದ ಸರ್ವ ಶಾಸ್ತ್ರಗಳು ಬೋಧಿಸುವ ಆತ್ಮೋನ್ನತಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಅದಕ್ಕೆ ಸಾಧನೆಯಾದ ಯೋಗಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟರು. ಸರ್ವರು ಶಿವಯೋಗಿ

ಗಳಾಗಬೇಕೆಂಬುದು ಅವರ ಹಂಬಲವಾಗಿತ್ತು.

ಶ್ರೀಗಳವರು ಸ್ವತಃ ಮೊದಲು ತಾವು ಶಿವಯೋಗಿಗಳಾಗಿದ್ದು, ಉಳಿದವರನ್ನು ಶಿವಯೋಗದ ದಿವ್ಯಾನಂದದತ್ತ ಒಯ್ಯಲು ಸಾಕಷ್ಟು ಶ್ರಮಿಸಿ ಯಶಸ್ವಿಯಾದರು.ಸಮಾಜ ಸೇವೆಯಲ್ಲಿ ಅಪಾರ ನಿಷ್ಠೆಯುಳ್ಳ ಶಿವಾನುಭವಿಗಳನ್ನೂ, ಯೋಗ್ಯಧರ್ಮಗುರುಗಳನ್ನೂ, ಪ್ರತಿಭಾಶಾಲಿ ಪಂಡಿತರನ್ನೂ, ಭಕ್ತರನ್ನು ಬೆಳೆಯಿಸಲು ಒಂದು ಯೋಗ ಸಂಸ್ಥೆಯ ಅವಶ್ಯಕತೆಯನ್ನರಿತ ಶ್ರೀಗಳವರು ಶಿವಯೋಗವನ್ನು ಸರ್ವರೂ ಸಾಧಿಸಲೆಂದು ಅದೇ ಹೆಸರಿನಿಂದ ಶಿವಯೋಗ ಮಂದಿರವನ್ನು ೧೯೦೯ ನೇ ಇಸ್ವಿಯಲ್ಲಿ ಸ್ಥಾಪಿಸಿದರು. ಈ ಶಿವಯೋಗದ ತಳಹದಿ ಮತ್ತು ಮನೋನಿಗ್ರಹ ಸಾಧನವಾದ ಹಠಯೋಗಕ್ಕೂ ಶ್ರೀಗಳವರು ಶಿವಯೋಗದಷ್ಟೇ ಪ್ರಾಮುಖ್ಯತೆ-ಯನ್ನು ಕೊಟ್ಟಿದ್ದರು. ಕಾರಣ ಶ್ರೀಗಳವರು ಹಠಯೋಗವನ್ನು ತಾವು ಯಾವ ರೀತಿ ಸಾಧಿಸಿ ತಮ್ಮ ಶಿಷ್ಯ ಬಳಗಕ್ಕೆ ಬೋಧಿಸಿದರೆಂಬುದನ್ನು ತಿಳಿಯೋಣ.

ಪರಮಪೂಜ್ಯ ಲಿಂ . ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು

ಶ್ರೀಗಳವರ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು ವೀರಶೈವ ತತ್ತ್ವಜ್ಞರೂ, ಆಚಾರ-ವಿಚಾರನಿಷ್ಠರೂ, ಯೋಗಪಿತಾಮಹರೂ, ಮಹಾತಪಸ್ವಿಗಳೂ ಆಗಿದ್ದರು, ಅವರು ಬಹುಕಾಲ ಪರಂಪರೆಯಿಂದ ಬಂದ ಶಿವಯೋಗ ಸಂಪತ್ತನ್ನುಳಿಸಲು ತಕ್ಕ ಅಧಿಕಾರಿಯನ್ನು ಹುಡುಕಾಡುತ್ತಿದ್ದಾಗ ಪಾರಮಾರ್ಥ ವಿದ್ಯೆಯ ಭಿಕ್ಷುಕನಾಗಿ ಬಂದ ಈ ಹಾನಗಲ್ಲ ಸದಾಶಿವ(ಶ್ರೀಗಳವರ ಬಾಲ್ಯದ ಹೆಸರು ) ನನ್ನು ನೋಡಿ ಆನಂದಪಟ್ಟರು. ಅವರು ಶ್ರೀ ನಿಜಗುಣರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸಮಾಡಿ, ಹಠಯೋಗ ಸಿದ್ದಿಯನ್ನು ಪಡೆದಿದ್ದರು. ಪಾತಂಜಲ ಯೋಗವು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಬಲ್ಲದೆಂಬುದನ್ನು ಆಚರಣೆಯಲ್ಲಿ ತಂದುಕೊಂಡು ಮಹಾಶಿವಯೋಗಿಗಳಾಗಿದ್ದರು. ತಮ್ಮ ಅನುಭವವನ್ನು ಯೋಗ ವಿದ್ಯೆಯನ್ನು ಪಡೆದು ಸಾರ್ಥಕಗೊಳಿಸಬಲ್ಲ ಸಮರ್ಥ ಶಿಷ್ಯನ ಶೋಧನೆಯಲ್ಲಿದ್ದಾಗ ಅವರಿಗೆ ಹಾನಗಲ್ಲ ಶ್ರೀಗಳವರು ಯೋಗ್ಯವಾಗಿ ಕಂಡರು.

ನಂತರ, ಪರಮಯೋಗಿ ಯಳಂದೂರ ಶ್ರೀಗಳವರ ಕೃಪೆಗೆ ಹಾನಗಲ್ಲ ಶ್ರೀಗಳವರು ಪಾತ್ರರಾಗಿ ಶಿವಯೋಗ ದೀಕ್ಷೆಯನ್ನು ಪಡೆದು, ಶಿವಯೋಗದ ನಿಜಸ್ವರೂಪ ವನ್ನರಿತುಕೊಂಡು ಹಠಯೋಗ ವಿದ್ಯೆಯನ್ನು ಪಡೆದರು. ಈ ಗುರುವರ್ಯರ ಪ್ರೇರಣೆಯಿಂದಲೇ ಶ್ರೀಗಳವರು ಹನ್ನೆರಡು ವರ್ಷಗಳವರೆಗೆ ನೈಷ್ಠಿಕ ತಪವನ್ನು ಅವರ ಅನುಜ್ಞೆಯಂತೆ ಶೀಲಾಚರಣೆಯೊಂದಿಗೆ ಆಚರಿಸಿ ಯೋಗಸಿದ್ಧಿಯನ್ನು, ಆತ್ಮಬಲವನ್ನು ಸಂಪಾದಿಸಿದರು. ನಂತರ ಆಜನ್ಮ ಸನ್ಯಾಸ, ಬ್ರಹ್ಮಚಚರ್ಯ ವ್ರತವನ್ನು ಕೈಗೊಂಡರು. ಹಲವು ವರ್ಷಗಳ ತರುವಾಯ ಗುರುಗಳು ಶಿವಸಾಯುಜ್ಯವನೈದುವ ಪ್ರಸಂಗ ಬಂದಾಗ ಇವರನ್ನು ಹತ್ತಿರದಲ್ಲಿ ಕರೆದು ಮಸ್ತಕದ ಮೇಲೆ ಹಸ್ತ ವನ್ನಿಟ್ಟು “ಕುಮಾರ ಮುಂದೆ ನೀನು ಕುಮಾರನೇ ಆಗುವೆ. ಆದರ್ಶ’ ವಿರತಿಯನ್ನು ತಳಿಯುವೆ. ಶಿವಯೋಗಿ ಕುಲತಿಲಕನಾಗುವೆ. ವತ್ಸ, ಶಿವಯೋಗ ವಿದ್ಯಾ ಪಾರಂಪರ್ಯವನ್ನು ಜಗತ್ತಿನಲ್ಲಿ ಬಿತ್ತಿ, ಬೆಳೆಯಿಸಿ ಧನ್ಯನಾಗು ಎಂದು ತಮ್ಮ ಯೋಗ ದಂಡವನ್ನು, ಯೋಗಸಾಧನ ಸಾಮಗ್ರಿಗಳನ್ನು ನೀಡಿ ಆಶೀರ್ವದಿಸಿದರು.

ಆ ಕ್ಷಣದಲ್ಲಿಯೇ ಸದಾಶಿವಯತಿಯು ಶ್ರೀ ಗುರುವಿನ ಮನದಾಸೆಯಂತೆ ಶಿವಯೋಗಾಲಯದ ಮಂದಿರವನ್ನು ತನ್ನ ಮನೋಭೂಮಿಯಲ್ಲೇ ಕಟ್ಟಿಸಿದನು.ಕಲ್ಪನೆಯ ಸೃಷ್ಟಿಯಲ್ಲಿ ಬಂದದ್ದು ಕಾರ್ಯಸೃಷ್ಟಿಯಲ್ಲಿ ಬರಬೇಕಾದರೆ ಅನುಕೂಲ ಪರಿಸ್ಥಿತಿಯಲ್ಲಿ ಒದಗಿ ಬರಬೇಕು. ಅದನ್ನು ತಂದುಕೊಳ್ಳುವದಕ್ಕಾಗಿ ಹಾನಗಲ್ಲ ಶ್ರೀಗಳವರು ಸ್ವಯೋಗಸಾಧನಕ್ಕೆ ಯೋಗ್ಯವಾದ ಏಕಾಂತ ಸ್ಥಾನವನ್ನು ಸಂಶೋಧಿಸುತ್ತ ಕಡೆಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ, ಅಲ್ಲೇ ಯೋಗಾಭ್ಯಾಸವನ್ನು ಮಾಡಿ-“ಉದಾರ ಚರಿತಾನಾಂತು ವಸುದೈವ ಕುಟುಂಬಕಮ್ ” ಎಂಬ ಉಕ್ತಿಯಂತೆ ಸದಾಶಿವಯೋಗಿಯು ಸದಾಕಾಲ ಯೋಗಾನಂದವನ್ನು ಅನುಭವಿಸದೆ ವೀರಶೈವರಿಗೆ ಶಿವಯೋಗವನ್ನು ಮತ್ತು ಇತರರಿಗೆ ಅಷ್ಟಾಂಗಯೋಗವನ್ನು ಬೋಧಿಸಬೇಕೆಂದು ಶಂಭುಲಿಂಗನ ಬೆಟ್ಟದಿಂದ ಪುನಃ ಸಂಚಾರಕ್ಕೆ ಹೊರಟರು. ನಾಡಿನಲ್ಲೆಲ್ಲ ಸಂಚರಿಸಿ ಮಹಾತ್ಮರನ್ನು, ಅನುಭವಿಗಳನ್ನೂ ಸಂದರ್ಶಿಸಿ ಶಿವಯೋಗಾಚರಣೆಯ ಅನುಭವವನ್ನು ಪಡೆದುಕೊಂಡರು, ಶಿವತತ್ತ್ವವೇತ್ತರಾದರು.

ಚಂಚಲ ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರಿಕರಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತು ಬಿಡುವುದು ಯೋಗಸಾಧನೆಯಿಂದ ಸಾಧ್ಯ, ಪ್ರಾಣಾಯಾಮದ ಅಂಗಗಳಾದ ಪೂರಕ, ಕುಂಭಕ, ರೇಚಕಗಳ ಸ್ಥೂಲ ಶರೀರದ ವ್ಯಾಧಿ-ಗಳನ್ನು ನಾಶಮಾಡಿ, ಚಿತ್ತಸ್ಥಿರತೆ ಮತ್ತು ಧ್ಯಾನವನ್ನು ಬಲಿಸುತ್ತವೆ. ಯೋಗದಿಂದ ಅಂತರಂಗ ಬಹಿರಂಗಗಳ ಶುದ್ದಿ ಯಾಗುವುದು, ಅಂತೆಯೇ ಯಮ, ನಿಯಮ,ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳಾದ ಅಷ್ಟಾಂಗಯೋಗದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರು ನಿಶ್ಚಲವಾದ ನಂಬಿಕೆಯನ್ನಿಟ್ಟಿದ್ದರು.

ಹಾನಗಲ್ಲ ಶ್ರೀಗಳವರ ಕರ್ಮೇಂದ್ರಿಯಗಳ ಶೀಲಾಚರಣೆಯು ಶಾಸ್ತ್ರದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಯಮಾಂಗದ ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚ ಸದ್ವೃತ್ತಿಗಗಳನ್ನುಳ್ಳದ್ದು.ಶ್ರೀಗಳವರ ಜ್ಞಾನೇಂದ್ರಿಯಗಳಿಗೆ ನಿಯಮಾದಿಗಳು ನಿಷ್ಠುರ ಶೀಲಾಚರಣೆಗಳಾಗಿದ್ದವು. ದಶೇಂದ್ರಿಯಗಳನ್ನೊಳಗೊಂಡ ಅವರ ಅಂಗವು ಆಸನರೂಪ ಅಪ್ಪುವಿನಲ್ಲಿ ಮಿಂದು ಸ್ವಚ್ಛವೂ ಸರಳವೂ ಆಗಿತ್ತು. ಅವರು ಸಿದ್ಧಾಸನ-ಸುಖಾಸನಗಳನ್ನು ಹಾಕಿಕೊಂಡು ಅದೆಷ್ಟು ಹೊತ್ತಾದರೂ ಸ್ಥಿರವಾಗಿ ಸುಖಿಯಾಗಿ, ರುಜುವಾಗಿ ಕುಳಿತುಕೊಳ್ಳುತ್ತಿದ್ದರು. ಅಂಗ ಚಲನವೇ ಅರುಚಿ, ಅಂಗ ಅಚಲವಾಗುವದೇ ಶುಚಿ,

ಇದುವೇ ಶ್ರೀಗಳವರ ಶೀಲಾಚರಣೆ. ದೇಹಾಂತರ್ಗತವಾಯು ದೋಷಯುಕ್ತವಾಗಿರುತ್ತದೆ. ಈ ದೋಷವನ್ನು ಪ್ರಾಣಾಯಾಮ ಮೂಲಕ ಕಳೆಯಲು ಸಾಧ್ಯ.

ರೇಚಕ, ಪೂರಕ, ಕುಂಭಕ ಪ್ರಾಣಾಯಾಮಗಳಿಂದ ಪ್ರಾಣಾದಿ-ವಾಯುಗಳು ಪರಿಶುದ್ಧವಾಗುತ್ತವೆ. ಪ್ರಾಣಾದಿ-ವಾಯು ವಿರುದ್ದಿ ಯಿಂದ ಅಂತರ್ಗತ ಚಕ್ರಗಳು ಜಾಗ್ರತವಾಗುತ್ತವೆ. ಶ್ರೀಗಳವರು ಇವನ್ನೆಲ್ಲ ರೂಢಿಸಿಕೊಂಡಿದ್ದರು. ಇದು ಅವರ ಬಾಹ್ಯಶೀಲಾಚರಣೆಯಾದರೆ ಆಂತರಿಕ ಶೀಲಾಚರಣೆಯ ರೀತಿ ಇಂತಿದೆ ಅಂತರಿಂದ್ರಿಯಗಳ , ಸಂಯಮವೆ ಆಂತರಿಕ ಶೌಚ, ಚಿತ್, ಮನ, ಬುದ್ದಿ,ಅಹಂಕಾರಗಳೆಂಬ ಅಂತರಿಂದ್ರಿಯಗಳನ್ನು ಕ್ರಮವಾಗಿ ಪ್ರತ್ಯಾಹಾರ ಧಾರಣ,ಧ್ಯಾನ, ಸಮಾಧಿಗಳು ಶುಚಿಗೊಳಿಸಬಲ್ಲವು. ಚಿತ್ತವನ್ನು ವೃತ್ತಿಗಳಿಂದ ಹಿಂದಿರುಗಿಸುವುದೆ ಪ್ರತ್ಯಾಹಾರ, ಚಲಿಸುವ ಮನವನ್ನು ಆತ್ಮವೊಂದರಲ್ಲಿ ನೆಲೆನಿಲ್ಲಿಸುವುದೇ ಧಾರಣ, ಮತಿಯ ಮತ್ತೊಂದನ್ನು ಚಿಂತಿಸದೆ ಸೂಕ್ಷಾಹಂಕಾರಗಳನ್ನು ಬಿಟ್ಟು ಚಿದಹಂಭಾವದಲ್ಲಿ ಮಿಂದು ಮಡಿಯಾಗುವುದೇ ಸಮಾಧಿ. ಇವೆಲ್ಲವನ್ನು ಶ್ರೀಗಳವರು ಸಂಪಾದಿಸಿಕೊಂಡಿದ್ದರು,

ಹಠಯೋಗ (ಮನೋನಿಗ್ರಹ ಸಾಧನ) ವು ಶಿವಯೋಗಕ್ಕೆ ಸಹಕಾರಿಯೆಂದರಿತ ಪರಮಪೂಜ್ಯ ಲಿಂ. ಹಾನಗಲ್ಲ ಶ್ರೀಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮಗಳಲ್ಲಿ ಯೋಗಾಸನಗಳಿಗೆ ಪ್ರಥಮಸ್ಥಾನವನ್ನು ಕಲ್ಪಿಸಿದರು. ಆಸನಗಳನ್ನು ಕ್ರಮಬದ್ಧವಾಗಿ ಸಾಧನೆ ಮಾಡಿಸುವ ಯೋಜನೆಯನ್ನೂ ಮಾಡಿರುವರು. ಆದ್ದರಿಂದ ಮಂದಿರದಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಹಾಕಿಯೇ ಮುಂದಿನ ಪಾಠ ಪ್ರವಚನಾದಿ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.

ಶ್ರೀಗಳವರು ಸಾಧಕರನ್ನು ಮೊದಲು ಹಠಯೋಗ ಮಾರ್ಗದಲ್ಲಿ ಪಳಗಿಸುತಿದ್ದರು. ಅಷ್ಟಾಂಗಯೋಗದ ಮಹತ್ವವನ್ನೂ ಅವರಿಗೆ ಮನವರಿಕೆಯಾಗುವಂತೆ ಹೇಳಿಕೊಡುತ್ತಿದ್ದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇವು ಐದು ಬಾಹ್ಯಾಂಗಗಳು.ಧಾರಣ, ಧ್ಯಾನ, ಸಮಾಧಿ ಇವು ಮೂರು ಅಂತರಂಗಗಳು. ಈ ಹಠಯೋಗದಿಂದ ಸಾಧಕನ ಮೈ-ಮನ ಪ್ರಾಣಗಳ ಶುದ್ದಿಯಾಗುತ್ತದೆ. ನಿರೋಗವಾದ ಶರೀರವೇ ಧರ್ಮಕ್ಕೆ ಮೊದಲ ಸಾಧನ, ರೋಗದಿಂದ ಚಿತ್ತವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವಾಗಿಡಲು ಯೋಗಾಸನಗಳು ಪರಮೋಪಾಯ. ಆಸನಗಳು ಸಾತ್ವಿಕ ಅಂಗಸಾಧನೆಗಳು.

ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತವೆ, ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ. ಹಸಿವೆ ಸರಿಯಾಗಿ ಆಗಿ, ಲವಲವಿಕೆ ಮೂಡಿ ಜಾಡ್ಯವು ದೂರಾಗುತ್ತದೆ. ಆದ್ದರಿಂದ ಶ್ರೀಗಳವರು ಸಾಧಕರಿಗೆ ಈ ಹಠಯೋಗವನ್ನು ಶಿವಯೋಗಕ್ಕೆ ಪೂರಕವಾಗಿ ಯೋಜಿಸಿರುವರು.ಶಿವಯೋಗ ಮಂದಿರದಲ್ಲಿ ಮುಂಜಾನೆ ೬ಗಂಟೆಗೆ ಪ್ರಾರ್ಥನೆಯ ನಂತರ ಯೋಗಾಸನಗಳು ಆರಂಭವಾಗುತ್ತವೆ, ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನ-ಯೋಗ ಸಾಧನೆಯ ಹಾಸಿಗೆಗಳೊಂದಿಗೆ ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗಮಂದಿರದ ಗೀತೆಗಳನ್ನು ಹಾಡಿದ ಮೇಲೆ

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವ

ಗುರುದೇವಾತ್ಪರಂ ನಾಸ್ತಿ ತಸ್ಮಿ ಶ್ರೀ ಗುರುವೇನಮಃ

ಎಂದು ಶ್ರೀ ಸದಾಶಿವ ಗುರುದೇವನನ್ನು ಭಕ್ತಿಭಾವದಿಂದ ಸ್ಮರಿಸಿ ಹಿರಿಯಸಾಧಕರೊಬ್ಬರ ನೇತೃತ್ವದಲ್ಲಿ ಯೋಗಾಸನಗಳನ್ನು ಹಾಕಲಾರಂಭಿಸುವರು.

ಅರಂಭದಲ್ಲಿ ಶ್ರೀಗಳವರು, ಯೋಗಾಸನಗಳನ್ನು ಮಾಡುವ ವಿಧಾನವನ್ನು ಸಾಧಕರಿಗೆ ತೋರಿಸಿಕೊಡುತ್ತಿದ್ದರು. ಆಸನಗಳೊಂದಿಗೆ ಬಂಧ ಮುದ್ರೆ, ದೃಷ್ಟಿಗಳನ್ನೂ ತೋರಿಸಿ ಅವುಗಳ ಮಹತ್ವವನ್ನು ಸಾಧಕರಿಗೆ ಮನದಟ್ಟಾಗುವಂತೆ ವಿವರಿಸುತ್ತಿದ್ದರು. ಯೋಗಾಸನಗಳಲ್ಲಿ ಅವರು ಹೊಸ ಪ್ರಯೋಗಗಳನ್ನು ಮಾಡಿದರು. ಅವರು ಹೊಸ ಉತ್ತಮ ಆಸನಗಳನ್ನು ಕಲ್ಪಿಸಿ ಯೋಗಾಸನಗಳ ಸಂಖ್ಯೆಯನ್ನು ನೂರೆಂಟಕ್ಕೆ ಮುಟ್ಟಿಸಿದರು. ಇವುಗಳಲ್ಲಿ ಸಿದ್ಧಾಸನ ಸರ್ವಶ್ರೇಷ್ಠ ವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ.ಆಸನಗಳಿಂದ ಕೆಲವು ರೋಗಗಳು ಗುಣಹೊಂದುತ್ತವೆ. ಶೀರ್ಷಾಸನವು ತಲೆನೋವು,ದೃಷ್ಟಿಮಾಂದ್ಯವನ್ನು ದೂರಗೊಳಿಸಿದರೆ, ಮಯೂರಾಸನ ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆಂಬುದು ಶ್ರೀಗಳವರ ಸಂಶೋಧನೆಯಾಗಿತ್ತು.ಅವರು ಯಾವ ಆಸನಗಳಿಗೂ ತಮ್ಮ ಸಂಕೇತವನ್ನಿಡಲಿಲ್ಲ. ಅದೆಲ್ಲ ಗುರುವಿನ ಕೃಪೆ ಎಂದು ಹೇಳುತ್ತಿದ್ದರು.

ಒಮ್ಮೆ ಶಿವಯೋಗ ಮಂದಿರದಲ್ಲಿಯ ವಟುಗಳು ಗೋಲಿಯಾಟ ಆಡುತಿದ್ದಾಗ, ಶ್ರೀಗಳವರು ಅಲ್ಲಿಗೆ ಬಂದು ವಟುಗಳಿಗೆ “ಗುರಿ ತಪ್ಪದೆ ಗೋಲಿ ಹೊಡೆಯಿರಿ” ಎಂದರು. ಆಗ ವಟುವೊಬ್ಬ ಗುರಿ ತಪ್ಪದೆ ಹೊಡೆಯುವುದರಿಂದ ಏನು ಒಳ್ಳೆಯದಾಗುವುದೆಂದು ಕೇಳಿದ್ದಕ್ಕೆ ಶ್ರೀಗಳವರು “ ಗುರಿಯಿಟ್ಟು ಹೊಡೆಯುವುದರಿಂದ ದೃಷ್ಟಿ ಒಂದೇ ಕಡೆಗೆ ನಿಲ್ಲುವುದು. ಇದು ಯೋಗಸಾಧನೆಗೆ ಅತ್ಯವಶ್ಯವಾದುದು. ಗೊಲಿಯನ್ನು ಎದುರಿಟ್ಟು ನೋಡುತ್ತ, ನೋಡುತ್ತ ದೃಷ್ಟಿಯನ್ನು ಅನಿಮಿಷವಾಗಿ ನಿಲ್ಲಿಸಬೇಕು. ಇದು ಮನದ ಚಂಚಲತೆಯನ್ನು ಕಳೆಯುವ ಪರಮೋಪಾಯವಾಗಿದೆ” ಎಂದು ವಿವರಣೆಯಿತ್ತು ಅವರು ಮಕ್ಕಳ ಆಟವು ಯೋಗಕ್ಕೆ ಹೇಗೆ ಪರೋಕ್ಷವಾಗಿ ಸಹಾಯವಾಗುತ್ತದೆಂಬುದನ್ನು ತೋರಿಸಿಕೊಟ್ಟರು.

ಶಿವಯೋಗಮಂದಿರಕ್ಕೆ ಡೊಂಬರು ಬಂದಾಗ ಅವರ ಆಟವನ್ನು ಶ್ರೀಗಳ ವರು ವಟುಗಳಿಗೆ ತಪ್ಪದೆ ತೋರಿಸುತ್ತಿದ್ದರು. ಅದರಿಂದ ಅವರಿಗೆ ಮನೋರಂಜನೆ ಯಾಗಲಿ ಎಂದಲ್ಲ, ವಟುಗಳಿಗೆ ಆಸನಗಳನ್ನು ಹಾಕುವ ಅಭಿರುಚಿ ಬೆಳೆಯಲೆಂದು ಮತ್ತು ಸಾಧಕರು ತಮ್ಮ ಯೋಗಾಸನಗಳ ಹಾಗೂ ಡೊಂಬರ ಮೈ ಮಣಿತಗಳಲ್ಲಿಯ ವ್ಯತ್ಯಾಸವನ್ನು ಕಂಡುಕೊಳ್ಳಲೆಂದು. ಯೋಗಾಸನಗಳನ್ನು ದೃಷ್ಟಿ, ಬಂಧ ಮುದ್ರೆ-ಗಳಿಲ್ಲದೆ ಹಾಕಿದರೆ ಅವು ಡೊಂಬರಾಟವಾಗಿಯೇ ಉಳಿಯುವವು ಎಂದು ಸಾಧಕರ ಮನದಲ್ಲಿ ನಾಟುವಂತೆ ಹೇಳುತ್ತಿದ್ದರು. ನೇತಿ, ದೌತಿ, ಬಸ್ತಿ ಮುಂತಾದ ಷಟ್ಕರ್ಮಗಳ ಪ್ರಯೋಗ ಸಾಧನೆಯನ್ನು ಶ್ರೀಗಳವರು ಕೆಲವು ಸಾಧಕರಿಗೆ ಕಲಿಸಿ

ಅವರನ್ನು ನಿಪುಣರನ್ನಾಗಿ ಮಾಡಿದರು.

ಈ ರೀತಿ ಶ್ರೀಗಳವರು ವಟುಗಳಿಗೆ, ಸಾಧಕರಿಗೆ ಯೋಗಾಸನಗಳನ್ನು ತಾವೇಹಾಕಿಸಿ, ಅವರ ಮೈಮಣಿತವನ್ನು ಕಂಡು ಸಂತಸಪಟ್ಟ ಮೇಲೆ ಹಸುವಿನ ನೊರೆ ಹಾಲನ್ನು ಅವರಿಗೆ ಕುಡಿಯಲು ಕೊಡುತ್ತಿದ್ದರು ಆಹಾರ ಶುದ್ಧಿಯಿಂದ ಸ್ವಭಾವ ಶುದ್ದಿ ಯಾಗುವದೆಂದರಿತ ಶ್ರೀಗಳವರು ತಮ್ಮ ಶಿವಯೋಗ ಸಾಧಕರಿಗೆ ಸತ್ವಾಹಾರದ ಮಹತ್ವವನ್ನು ತಾವು ಸ್ವತಃ ಆಚರಿಸಿ ತೋರಿಸಿಕೊಡುತ್ತಿದ್ದರು. ಹೀಗೆ ಶ್ರೀಗಳವರು ಹಠಯೋಗಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಸಾಧಕರಿಗೆ ಆಸಕ್ತಿಯಿಂದ ಬೋಧಿಸು

ತಿದ್ದುದನ್ನು ಕಂಡು ಆಗಿನ ಕೆಲವು ಮಂದಮತಿಗಳು “ ವಚನಕಾರರು ಶಿವಯೋಗಕ್ಕೆ ಹಠಯೋಗ ಅವಶ್ಯವಿಲ್ಲ. ಪ್ರಮಥರು ವಚನಗಳಲ್ಲಿ ಹಠಯೋಗವನ್ನು ಕಟುವಾಗಿ ಟೀಕಿಸಿ, ವೀರಶೈವರಿಗೆ ಆ ಯೋಗವು ಬೇಕಿಲ್ಲವೆಂದು ಅವರು ಹೇಳಿರುವಾಗ, ಈ

ಹಠಯೋಗ ಶಿಕ್ಷಣ ನಮಗೇಕೆ ಬೇಕು? ಮುಂದೆ ಶಿವಯೋಗಿಗಳಾಗುವವರಿಗೆ ಶಾಲೆಯನ್ನಿಟ್ಟು ಕಲಿಸಿದರೆ ಮಾತ್ರ ಶಿವಯೋಗಿಗಳಾಗುವರೆ ? ಆಗುವುವದಿದ್ದರೆ ಸಹಜವಾಗಿ ತಾವೇ ಅವರು ಆಗುವರು ಎಂದು ತಟ್ಟನೆ ನುಡಿದರಲ್ಲದೆ”. ವಚನದಲ್ಲಿ ಎಂಥ ಯೋಗವು ಅನಾದರಣೀಯವಾಗಿದೆ. ಯಾವುದು ಎಷ್ಟು ಅವಶ್ಯವಾಗಿದೆ ಎಂಬುದನ್ನು ಕರೆದು ನೋಡಲಿಲ್ಲ. ಈ ಆಕ್ಷೇಪಣಿಯರಿಗೆ ಶ್ರೀಗಳವರು ಮಂತ್ರಯೋಗ, ಹಠಯೋಗ ಮುಂತಾದ ಯೋಗಗಳು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಿವೆಯೆಂಬುದನ್ನು ವಿವರಿಸಿ, ಶಿವಯೋಗದ ಗುರಿಯಿಲ್ಲದ ಹಠಯೋಗ ಮಾತ್ರ ಶುಷ್ಕವಾದುದು,ನಿಷ್ಟ್ರಯೋಜಕವಾದುದು ಎಂಬ ಹೇಳಿಕೆಯನ್ನು ಕೊಟ್ಟರು.

ಒಮ್ಮೆ ಪರಮ ವೈರಾಗ್ಯಶಾಲಿಗಳಾದ ಬಾಗಲಕೋಟೆಯ ಶ್ರೀ ಮಲ್ಲಣಾರ್ಯರು ಯೋಗವಿದ್ಯಾನ್ವೇಷಣ ಮಾಡುತ್ತ ಬಂದು ಹಾನಗಲ್ಲ ಶ್ರೀಗಳವರನ್ನು ಭೆಟ್ಟಿಯಾಗಿ ಯೋಗ ವಿಷಯ ಕುರಿತು ಚರ್ಚೆ ನಡೆಸಿದರು. ಶ್ರೀಗಳವರು ಮಲ್ಲಣಾರ್ಯರಿಗೆ ಯೋಗದ ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಾಗ ಮಲ್ಲಣಾರ್ಯರು ಯೋಗ ಸಾಧನವನ್ನು ಮಾಡಿ, ಅದರ ಮಹಿಮೆಯನ್ನು ಮನ

ಗಂಡರು. ಮತ್ತೊಮ್ಮೆ, ಸರ್ವಜ್ಞ ಮೂರ್ತಿಯ ವಚನಗಳನ್ನು ಸಂಶೋಧಿಸಿ ಪ್ರಕಟಸಿದ ಶ್ರೀ ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನ ಗಡುಚಾದ ಯೋಗಪರಬೆಡಗಿನ ವಚನಗಳ ಅರ್ಥವನ್ನು ಅನುಭವದೊಂದಿಗೆ ಶ್ರೀಗಳವರಿಂದಲೇ ಅರಿತುಕೊಂಡರು. ಹೀಗೆ ಶ್ರೀಗಳು ಶಿವಯೋಗಮಂದಿರದಲ್ಲಿ ಮುಕ್ತಿಗಾಮಿಗಳಾದ ಗೃಹಸ್ಥರಿಗೂ ಸಮಾನವಾದ ಯೋಗ ಶಿಕ್ಷಣವನ್ನು ಪಡೆಯಲು ಸದಾವಕಾಶ ದೊರಕಿಸಿಕೊಟ್ಟರು,

ಹಾನಗಲ್ಲ ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಸ್ವಾಮಿಗಳಂತೆ ಶ್ರೀ ನಿಜಗುಣ ಶಿವಯೋಗಿಗಳಲ್ಲಿ ಅಪಾರವಾದ ಶ್ರದ್ಧೆಯನ್ನಿಟ್ಟು,ಅವರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ನಿಜಗುಣರ ‘ಪಾರಮಾರ್ಥ ಪ್ರಕಾಶಿಕೆ’ಯನ್ನು ಶ್ರೀಗಳವರು ‘ ಶಿವಯೋಗದ ಕೈಪಿಡಿ ‘ ಎಂದು ಭಾವಿಸಿದ್ದರು. ‘ಪಾರಮಾರ್ಥ ಪ್ರಕಾಶಿಕೆ’ಯಲ್ಲಿ ತಿಳಿಸಿರುವಂತೆ ಶ್ರೀಗಳವರು ಶಿವಯೋಗಸಾಧನೆಗೆ ಪವಿತ್ರ ಪ್ರಶಾಂತ ನದಿಯ ವನಪ್ರದೇಶದಲ್ಲಿ ಯೋಗ-ಮಂದಿರವನ್ನುಕಟ್ಟಿಸಿದರು.

ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲೆ ಶ್ರೀ ಶಿವಯೋಗಮಂದಿರ ಸ್ಥಾಪನೆ

ಶಿವಯೋಗಮಂದಿರದ ವಟುಗಳು ಮತ್ತು ಸಾಧಕರ ಶರೀರ ಶುದ್ಧಿಗಾಗಿ ಯೋಗಾಸನ, ಪ್ರಾಣಾಯಾಮ ಮತ್ತು ಷಟ್ಕರ್ಮಗಳನ್ನು ಕಲಿಸಿದರು. ಒಟ್ಟಿನಲ್ಲಿ ಶ್ರೀಗಳವರು ನಿಜಗುಣರ ಯೋಗದ ಬಗೆಗಿನ ಸರ್ವ ಆದರ್ಶವನ್ನು ಚಾಚೂ ತಪ್ಪದೆ ನಡೆಯಿಸಿಕೊಂಡು ಬಂದರು, ಮತ್ತು ಅವರ ಶಿವರಾತ್ರಿಯ ಉತ್ಸವ ಕಾಲದಲ್ಲಿ ಸಾಧಕರಿಗಾಗಿ ಧರ್ಮ ಮತ್ತು ಯೋಗಗಳ ಬಗೆಗೆ ವ್ಯಾಖ್ಯಾನವನ್ನು ನಡೆಸುತ್ತಿದ್ದರು.ಈ ಪರಂಪರೆ ಇಂದಿನವರೆಗೂ ಅಲ್ಲಿ ನಡೆದುಕೊಂಡು ಬಂದಿದೆ.

ಇನ್ನು ಶಿವಯೋಗ ಮಂದಿರದಲ್ಲಿ ಶ್ರೀಗಳವರ ನೇತೃತ್ವದಲ್ಲಿ ಯೋಗ ವಿದ್ಯೆಯನ್ನು ಪಡೆದು ಶಿವಯೋಗಿಗಳಾದ ಅನೇಕ ಶಿಷ್ಯರಲ್ಲಿ ಕೆಲವರ ಪರಿಚಯ ಹೀಗಿದೆ

“ಯೋಗಿರಾಜ” ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಗುರುವರ್ಯರಿಂದ ಪಡೆದ ಹಠಯೋಗ ವಿದ್ಯೆಯನ್ನೆಲ್ಲ ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಕೊಟ್ಟು ಅವರನ್ನು ಆದರ್ಶ ಹಠಯೋಗಿಗಳನ್ನಾಗಿ ಮಾಡಿದರು.ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಷಟ್ಕರ್ಮಗಳಲ್ಲಿ ನಿಪುಣರಾಗಿ, ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ನೇ ಇಸ್ವಿಯಲ್ಲಿ ನಾಸಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ಥಾನದ ಯೋಗಿಗಳೆಲ್ಲ ಸೇರಿದ್ದರು.ಶ್ರೀಗಳವರು ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ದಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾಗಿ, ಅವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು. ಅವರಯೋಗದ ವಿಶೇಷ ಸಾಧನೆಗಳನ್ನು ಕಂಡು ‘ಯೋಗಿರಾಜ’ ಎಂಬ ಬಿರುದನ್ನು ಅವರಿಗೆ

ಕೊಟ್ಟು ಮನ್ನಿಸಿದರು. ಶಿವಯೋಗ ಮಂದಿರದ ಸಾಧಕರು ಯೋಗಸಿದ್ಧ ರಾಗ ಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲುವುದು, ಬಿದರಿ ಪಟ್ಟಾಧ್ಯಕ್ಷರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಸಹ ಆಶ್ಚರ್ಯಪಡುತ್ತಿದ್ದರು. ಬಿದರಿ ಪಟ್ಟಾಧ್ಯಕ್ಷರು ಶಿವಯೋಗದಲ್ಲಿಯೂ ಸಿದ್ಧಿ ಪಡೆದಿದ್ದರು.

ಮತ್ತೊಬ್ಬ ಶಿಷ್ಯರಾದ ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಯೋಗ ಸಾಧನೆಯಲ್ಲಿ ಪರಿಣಿತರಾಗಿದ್ದು, ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯರಿಗೆ ಯೋಗಸಾಧನೆಯನ್ನು ಬೋಧಿಸುವಷ್ಟು ದಕ್ಷರಾಗಿದ್ದರು.

ಅಲ್ಲದೆ ಸಂಪಗಾವಿಯ ಶ್ರೀ ಶಿವಾಚಾರ್ಯ ಚರಮೂರ್ತಿಗಳು, ಬನವಾಸಿಯ ಶ್ರೀ.ಮ. ನಿ: ಪ್ರ. ಸಿದ್ಧ ವೀರಸ್ವಾಮಿಗಳು, ಶ್ರೀ ಮನ್ಮಹಾರಾಜ ನಿರಂಜನ ಜಗದ್ಗು ರು ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೋಡಿಮಠದ ಅಧಿಪತಿಗಳಾದ ಹಾರಹಳ್ಳಿಯ ಶ್ರೀ.ಮ. ನಿ. ಪ್ರ. ಗುರುಲಿಂಗ ಸ್ವಾಮಿಗಳು, ಕಪನಹಳ್ಳಿಯ ಶ್ರೀ ನಿ. ಪ್ರ.ರುದ್ರವುನಿ ಸ್ವಾಮಿಗಳು, ವಿರಕ್ತಮಠದ ಅಧಿಕಾರಿ ಹಾನಗಲ್ಲ ಶ್ರೀ.ಮ. ನಿ. ಪ್ರ. ಸದಾಶಿವ ಸ್ವಾಮಿಗಳು, ಶಾಖಾ ಶಿವಯೋಗ ಮಂದಿರದ ಅಧಿಕಾರಿ ನಿಡಗುಂದಿ-ಕೊಪ್ಪದ ಶ್ರೀ.ಮ. ನಿ.ಪ್ರ. ಚೆನ್ನಬಸವ ಸ್ವಾಮಿಗಳು, ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಹಾರಹಳ್ಳಿಯ ನೀಲಲೋಚನ ಸ್ವಾಮಿಗಳು, ಸಾಲೂರ ಶ್ರೀ ಘ.ಚ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಭಾಲ್ಕಿ ಶ್ರೀ ಘ, ಚ, ಚನ್ನಬಸವ ಸ್ವಾಮಿ ಪಟ್ಟದ್ದೇವರು, ಬಾರಂಗಿ ಕೂಡ್ತಿ ಯ  ಶ್ರೀ.ಮ. ನಿ. ಪ್ರ, ಸದಾನಂದ ಸ್ವಾಮಿಗಳು,ಸಿಂದಗಿಯ ಶ್ರೀ ಘ, ಚ, ಶಾಂತವೀರ ಪಟ್ಟಾಧ್ಯಕ್ಷರು, ನೀಲಗುಂದ ಶ್ರೀ ಘ, ಚ,

ವಿರುಪಾಕ್ಷ ಶಿವಾಚಾರ್ಯರು, ಸವದತ್ತಿಯ ಶ್ರೀ.ಮ.ನಿ.ಪ್ರ. ಕುಮಾರ ಸ್ವಾಮಿಗಳು, ಈ ಎಲ್ಲ ಧರ್ಮ ಗುರುಗಳು ಹಾನಗಲ್ಲ ಶ್ರೀಗಳವರು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಯೋಗಾಸನ, ಯೋಗಕ್ರಿಯೆಗಳು ಸಾಧನೆಯಲ್ಲಿ ಹಾಗೂ ನಿಷ್ಣಾತರಾದರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಮೂರುಸಾವಿರಮಠ, ಹುಬ್ಬಳ್ಳಿ ಇವರು ಸಹ ಬಾಲ್ಯದಲ್ಲಿಯೇ ಪವಿತ್ರಾಶ್ರಮವಾದ ಶಿವಯೋಗ ಮಂದಿರಕ್ಕೆ ಆಗಮಿಸಿ ವಿದ್ಯಾಭ್ಯಾಸ ಮತ್ತು ಯೋಗಾಭ್ಯಾಸವನ್ನು ಪ್ರಾರಂಭಿಸಿದರು. ಒಟ್ಟಿನಲ್ಲಿ ಶ್ರೀಗಳವರು, ಮತ್ತು ಅವರ ಶಿಷ್ಯರು ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ.

ವಿಶಾಲಬುದ್ದಿ , ಬ್ರಹ್ಮ-ತೇಜೋವೃದ್ಧಿ ಮುಂತಾದ ಬಗೆಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿದ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಲೋಕದ ಬಂಧನ ಮಾಯೆಯನ್ನು ಒದ್ದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸಿದರು.

ಈ ರೀತಿ ಹಾನಗಲ್ಲ ಶ್ರೀಗಳವರು ಸ್ವತಃ ಯೋಗಸಾಧಕರಾಗಿ ಮತ್ತು ಇನ್ನುಳಿದ ಯೋಗಸಾಧಕರಿಗೆ ಬೋಧಕರಾಗಿ ಅವರನ್ನು ಸಮಾಜದ ಸಮರ್ಥ ಧರ್ಮಗುರುಗಳನ್ನಾಗಿ ಮಾಡಿದರು. ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲೊಂದಾದ ಯೋಗಶಾಸ್ತ್ರವನ್ನು ಬೆಳಕಿಗೆ ತಂದರು, ಹೀಗೆ ಶ್ರೀಗಂಧದಂತೆ ಜೀವನವನ್ನು ಸವೆಸಿ ವಿಶ್ವ ಕುಟುಂಬಿಗಳಾದ ಹಾನಗಲ್ಲ ಶ್ರೀಗಳವರ ಪುಣ್ಯಶರೀರದಲ್ಲಿಯೇ ಇದ್ದಕ್ಕಿದ್ದಂತೆ ಒಂದುದಿನ ಅಸ್ವಸ್ಥತೆ ಆವಿರ್ಭವಿಸಿ, ಅತಿಶಯಕ್ಕಿಟ್ಟಿತು  ಆ ಕ್ಷಣದಲ್ಲಿಯೂ ಅವರು ಸಮಾಜದೇಳ್ಗೆಗಾಗಿ, ಸಮಾಜದ ಐಕ್ಯತೆಗಾಗಿ ಚಿಂತಿಸುತ್ತಿದ್ದರು. ಕೊನೆಗೆ ಅವರು ಮಾಘ ಬಹುಳ ಸಪ್ತಮಿ ೧೯೩೦ ನೇ ಇಸ್ವಿಯ

ಗುರುವಾರ ಸಂಜೆಯ ಹೊತ್ತಿಗೆ ಶಿವೈಕ್ಯರಾಗಿ, ತಮ್ಮ ಬಳಗವನ್ನೆಲ್ಲಾ ತಬ್ಬಲಿಯಾಗಿ ಮಾಡಿದರು. ಇಂತಹ ಮಹಾಶಿವಯೋಗಿಗಳು ಇನ್ನೊಮ್ಮೆ ಇಳೆಗೆ ಅವತರಿಸಿ ಬರಲೆಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.

 (ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

ಲೇಖಕರು ; ಕೆ. ಎಸ್. ಪಲ್ಲೇದ

ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗವು ವಿಶ್ವಕಲ್ಯಾಣಕ್ಕಾಗಿ ಮತ್ತು ಮಾನವನ ಶ್ರೇಯೋಭಿವೃದ್ಧಿಗಾಗಿ ನಮ್ಮ ಪೂರ್ವಜರು ನೀಡಿದ ಮಹಾನ್ ಕೊಡುಗೆಯಾಗಿದೆ. ಈ ಕೊಡುಗೆಯನ್ನು ಆದಿಶಿವನಿಂದ ಮೊದಲ್ಗೊಂಡು ವಶಿಷ್ಠ, ಪತಂಜಲಿ, ಸ್ವಾತ್ಮಾರಾಮ ಇನ್ನಿತರೆ ಋಷಿಮುನಿಗಳಾದಿಯಾಗಿ, ಅಲ್ಲಮ, ಬಸವಾದಿ ಶಿವಶರಣರು ಮನುಕುಲಕ್ಕೆ ಕರುಣಿಸಿದ ವರಪ್ರಸಾದವಾಗಿದೆ. ಮುಖ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

ಇತ್ತೀಚೆಗೆ ವಿಶ್ವಸಂಸ್ಥೆಯು “ಜೂನ್ 21 ಅಂತರಾಷ್ಟ್ರೀಯ ಯೋಗ ದಿನ” ಎಂದು ಘೋಷಿಸಿದ ಮೇಲಂತೂ “ಯೋಗ ಎಲ್ಲರಿಗಾಗಿ, ಎಲ್ಲರೂ ಯೋಗಕ್ಕಾಗಿ, ಯೋಗದಲ್ಲಿ ಎಲ್ಲಾ ಐತಿ “ ಎಂಬ ಹೆಗ್ಗಳಿಕೆಯಿಂದ ಯೋಗವು ಜಗತ್ಪ್ರಸಿದ್ಧಿಯಾಗಿದೆ. ಅಂದು ಅಧ್ಯಾತ್ಮ ಸಾಧನೆಗೆ ಮೋಕ್ಷ ಸಂಪಾದನೆಗೆ ಸೀಮಿತವಾಗಿದ್ದ ಯೋಗ ಇಂದು ಕೊರೋನಾ ಕಾಯಿಲೆಯಂತ ಮಾರಕ ಕಾಯಿಲೆಗಳಿಗೆ ಮಹಾಮದ್ದಾಗಿ ಮಾನವನ ನೆಮ್ಮದಿಯ ಬದುಕಿಕೊಂದು ಆಧಾರಸ್ತಂಭವಾಗಿದೆ. ವಿಶ್ವಶಾಂತಿ ಸ್ಥಾಪನೆಗೆ ಅಡಿಪಾಯವಾಗಿದೆ. ಹಾಗೆಯೇ ಯೋಗವು ಒಂದು ವಿಸ್ಮಯ ವಿಜ್ಞಾನವೂ ಆಗಿದ್ದು, ಪ್ರಸ್ತುತ ದಿನಮಾನಕ್ಕೆ ಕಾಮಧೇನು, ಕಲ್ಪವೃಕ್ಷ ಸ್ವರೂಪದಲ್ಲಿದೆ.

ಇಷ್ಟೆಲ್ಲ ಶ್ರೇಷ್ಠತೆ ಹೊಂದಿರುವ ಯೋಗವು ಋಷಿಮುನಿಗಳಿಂದ ಪರಂಪರಾಗತವಾಗಿ ಗುರು-ಶಿಷ್ಯ ಬಳಗದಿಂದ ಬೆಳೆದು ಬಂದಿದೆ. ಈಗ ಬಾಬಾ ರಾಮದೇವ, ರವಿಶಂಕರ ಗುರೂಜಿ ಮತ್ತು ಅನೇಕ ಯೋಗ ಕೇಂದ್ರಗಳು ಯೋಗ ಪ್ರಸಾರ ಸೇವೆಯಲ್ಲಿ ಇರುವರು. ಈ ನಿಟ್ಟಿನಲ್ಲಿ ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ ವಿಶಿಷ್ಟ ರೀತಿಯಲ್ಲಿ ನಿರತವಾಗಿರುವುದು.

ಪೂರ್ವ ಕಾಲದಿಂದಲೂ ಮಠಗಳು ಅನ್ನ, ಆಶ್ರಯಗಳಿಗೆ ಹೆಸರುವಾಸಿಯಾಗಿದ್ದರೆ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠವು ಅನ್ನ, ಅಕ್ಷರ, ಆರೋಗ್ಯ ಸೇವೆಗಳಿಗೆ ಪ್ರಸಿದ್ಧಿಯಾಗಿದೆ. ಆರೋಗ್ಯ ಸೇವೆಗಾಗಿಯೇ ಈ ಮಠದ 19 ನೆಯ ಪೀಠಾಧಿಪತಿಗಳಾದ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಎಂಬ ನಾಮೆಯಿಂದ ಯೋಗ ಪಾಠಶಾಲೆ ಸ್ಥಾಪಿಸಿದರು (19-05-1975). ಯೋಗ ಶಬ್ದವೇ ಕೇಳರಿಯದ ವಾತಾವರಣವಿದ್ದಾಗ ಗದುಗಿನ ಯೋಗ ಪಾಠಶಾಲೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಉದಯವಾಗಿರುವದು ಸೋಜಿಗ ಮತ್ತು ನಮ್ಮ ಸೌಭಾಗ್ಯವಾಗಿದೆ. ಈಗ ಇದು ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆ ಎಂದು ಪ್ರಚಲಿತದಲ್ಲಿದೆ.

ಯೋಗ ಪಾಠಶಾಲೆ ಯೋಗ ಪ್ರಸಾರ ಸೇವೆಗಾಗಿ ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ವ್ಯಕ್ತಿಯ ಆರೋಗ್ಯ ಮತ್ತು ಸಮಾಜ ಸ್ವಾಸ್ಥ್ಯಯ ಸಂರಕ್ಷಣೆ ಪ್ರಮುಖವಾಗಿದ್ದು, ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ, ಆರೋಗ್ಯವಂತನಾಗಿರುವುದೇ ಆರೋಗ್ಯ. ಈ ಆರೋಗ್ಯ ಶ್ರೀಸಾಮಾನ್ಯರೆಲ್ಲರಿಗೂ ದೊರೆಯಬೇಕೆಂಬುದು ಮೂಲ ಧ್ಯೇಯವಾಗಿದೆ. ಅಂತೆಯೇ ಯೋಗ ಪಾಠಶಾಲೆಯು ಸ್ಥಾಪನೆಯಾದಂದಿನಿಂದ ಈ ತನಕ ಯೋಗದ ಮುಂಚೂಣಿಯಲ್ಲಿ ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ, ರಾಷ್ಟ್ರ ಸೇವಾ ಕಾರ್ಯಗಳಲ್ಲಿ ನಿರತವಾಗಿರುವುದು.

ಆರೋಗ್ಯ ಸೇವೆ : “ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಸಾಮಾಜಿಕ ಮತ್ತು ಅಧ್ಯಾತ್ಮಿಕ ಯೋಗ ಕ್ಷೇಮದ ಸ್ಥಿತಿಯಾಗಿದೆ ಹಾಗೂ ಕೇವಲ ರೋಗ ಅಥವಾ ದುರ್ಬಲತೆಯ ಅನುಪ ಸ್ಥಿತಿಯಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಆರೋಗ್ಯವೇ ನಮ್ಮೆಲ್ಲರಿಗೆ ಭಾಗ್ಯವಾಗಿದೆ. ನಾವೆಲ್ಲ ಆರೋಗ್ಯವಾಗಿದ್ದರೆ ಮಾತ್ರ ನಮಗೆ ಎಲ್ಲ ಭಾಗ್ಯ (ಸಂಪತ್ತು) ಗಳು ದೊರೆಯುವವು. ಆರೋಗ್ಯವಿಲ್ಲದ ಬಾಳು ಬರಿಗೋಳು. ಪ್ರಸ್ತುತದಲ್ಲಿ ಕೊರೋನಾ ಕಾಯಿಲೆಯಿಂದ, ವೈಯ್ಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಇನ್ನಿತರೆ ಸರ್ವ ಕ್ಷೇತ್ರಗಳಲ್ಲಿ ಅನಾರೋಗ್ಯ, ಅವ್ಯವಸ್ಥೆಗಳಿಂದ ಜನತೆ ನಾನಾ ಸಂಕಷ್ಟಗಳಿಗೆ ಬಲಿಯಾಗಿದ್ದಾರೆ. ವ್ಯಕ್ತಿ ಆರೋಗ್ಯವಂತನಾಗಿದ್ದರೆ ಇವೆಲ್ಲ ಸಂಕಷ್ಟಗಳು ಇಲ್ಲದಾಗುವವು. ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪರಿಣಾಮಕಾರಿ ಸಾಧನೆ ಮಾರ್ಗವಾಗಿದೆ. ಆದ್ದರಿಂದಲೇ ಯೋಗ ಪಾಠಶಾಲೆಯು ಪ್ರತಿದಿನ ಬೆಳಿಗ್ಗೆ ಜಾತಿ, ಮತ, ಪಂಥ, ಸ್ತ್ರೀ-ಪುರುಷ ವಯೋಮಿತಿಗಳ ಭೇದವಿಲ್ಲದೆ ಆಸಕ್ತರಿಗೆ ಯೋಗ ಸಾಧನೆ, ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಹಾಗೆಯೇ ಸಾಯಂಕಾಲ ಮಹಿಳಾ ಶಿಕ್ಷಕಿಯರಿಂದ ಮಹಿಳೆಯರಿಗಾಗಿ ಯೋಗ ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಇದಲ್ಲದೆ ದಸರಾ ಬೇಸಿಗೆ ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಬೇಡಿಕೆ ಇದ್ದಲ್ಲಿ ಸಾರ್ವಜನಿಕವಾಗಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿ ಜನತೆಯಲ್ಲಿ ಆರೋಗ್ಯ ಯೋಗದ ಅರಿವು ಮೂಡಿಸುತ್ತಿದೆ. ಜನತೆಯ ಆರೋಗ್ಯ ಭಾಗ್ಯವೇ ದೇಶದ ನಿಜವಾದ ಸಂಪತ್ತಾಗಿದೆ.

ಶಿಕ್ಷಣ ಸೇವೆ : ಶಕ್ತಿಗಳಲ್ಲಿ ಯಾಂತ್ರಿಕ ಶಕ್ತಿ, ವಿದ್ಯುತ್ ಶಕ್ತಿ, ಸಂಘಟನಾ ಶಕ್ತಿ, ದೈವ ಶಕ್ತಿ ಮುಂತಾದ ಶಕ್ತಿಗಳಿಗಿಂತ ಯೋಗ ಶಿಕ್ಷಣ ಶಕ್ತಿ ಹೆಚ್ಚಿನದಾಗಿದೆ. ಕಾರಣ ಯೋಗ ಶಿಕ್ಷಣ ಶಕ್ತಿಯಿಂದ ನಾವು ಇನ್ನುಳಿದ ಸರ್ವ ಶಕ್ತಿಗಳನ್ನು ಪಡೆಯಬಹುದು. ಇಂದು ದೇಶಕ್ಕೆ ಬೇಕಾಗಿರುವುದು ಯುವಶಕ್ತಿ. ಈ ಯುವಶಕ್ತಿ ಬಲಗೊಳಿಸಲು ಮತ್ತು ಯುವಕರಲ್ಲಿ ಯೋಗಾಸಕ್ತಿ ಬೆಳೆಸಲು ಯೋಗ ಪಾಠಶಾಲೆಯು ತನ್ನ ಅಂಗ ಸಂಸ್ಥೆಯಾದ ಬಸವ ಯೋಗ ಕೇಂದ್ರದಿಂದ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಜ್ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಜ್ ಕೋರ್ಸ್‍ಗಳನ್ನು ನಡೆಸುತ್ತಿದೆ. ಪ್ರತಿವರ್ಷ 50-60 ವಿದ್ಯಾರ್ಥಿಗಳು ಯೋಗ ಪದವಿ ಪಡದು ಯೋಗ ಶಿಕ್ಷಣ ಪ್ರಸಾರಕ್ಕೆ ಸಿದ್ಧರಾಗುತ್ತಿದ್ದಾರೆ. ಯೋಗ ವಿಷಯವಾಗಿ ಉಪನ್ಯಾಸ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಯೋಗ ಶಿಕ್ಷಣ ಸೇವೆ ಸಲ್ಲಿಸುತ್ತಿದೆ.

ಸಾಂಸ್ಕೃತಿಕ ಸೇವೆ : ಇಂದು ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮರುಳಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರಿಯಬಾರದೆಂಬ ಅಭಿಲಾಷೆಯಿಂದ ಯೋಗ ಪಾಠಶಾಲೆಯು ಸಾಂದರ್ಭಿಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನತೆಯ ಮನ ಪರಿವರ್ತನಗೊಳಿಸುತ್ತಲಿದೆ. ಉದಾಹರಣೆಯಾಗಿ ಹೇಳುವುದಾದರೆ-

ದಸರಾ, ಬೇಸಿಗೆ ರಜಾ ದಿನಗಳಲ್ಲಿ ಪ್ರತಿವರ್ಷ ಶಾಲಾ ಮಕ್ಕಳಿಗಾಗಿ “ ಸಂಸ್ಕೃತಿ -ಸಂಸ್ಕಾರ” ಶಿಬಿರ ನಡೆಸುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಭಾರತೀಯ ಕ್ರೀಡೆ, ಕಲೆ, ಸಾಹಿತ್ಯ, ಆದರ್ಶ ಮಹಾತ್ಮರ ಪರಿಚಯ, ಪರಂಪರೆ, ಸಂಸ್ಕಾರಗಳ ತರಬೇತಿ ನೀಡಲಾಗುತ್ತಿದೆ. ಇವುಗಳ ಜೊತೆಯಲ್ಲಿ ನೀಡುವ ಯೋಗ ತರಬೇತಿಯು ಮಕ್ಕಳಲ್ಲಿ ಆತ್ಮಸ್ಥೈರ್ಯ, ನೈತಿಕ ಬಲಗಳನ್ನು ಹೆಚ್ಚಿಸಿ ಅವರು ಸುಸಂಸ್ಕೃತರಾಗಿ ಬೆಳೆಯಲು ಸಹಾಯಕವಾಗುತ್ತದೆ. ಹೀಗೆ ಯೋಗ ಪಾಠಶಾಲೆಯು ಸಾಂಸ್ಕೃತಿಕವಾಗಿ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೋಳಿಸುತ್ತಿದೆ.

ಧ್ಯಾತ್ಮ ಸೇವೆ : ಇಂದು ನಾವು ವೈಜ್ಞಾನಿಕವಾಗಿ ಮುಂದುವರೆದು ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದರೂ ಅಧ್ಯಾತ್ಮ ಕೊರತೆಯಿಂದ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ. ಆಧ್ಯಾತ್ಮ ಎಂದರೆ ನಂಬಿಗೆ, ಒಳ್ಳೆಯದು ಎಂದು ಅರ್ಥೈಸಬಹುದು. ವ್ಯಕ್ತಿಯಲ್ಲಿ ವಿಶ್ವಾಸ ಮತ್ತು ಒಳ್ಳೆಯದನ್ನು ಗುರುತಿಸುವ ಮನೋಭಾವ ಹೆಚ್ಚಿಸಲು ಯೋಗ ಪಾಠಶಾಲೆಯು ತನ್ನ ಸಮೂಹ ಸಂಸ್ಥೆಗಳ ಜೊತೆಯಲ್ಲಿ ಪ್ರತಿ ತಿಂಗಳಿನ ಕೊನೆಯ ಬುಧವಾರದಂದು “ಮಾಸಿಕ ವಚನ ಶ್ರವಣ” ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಶಿವಶರಣರ ವಚನ ಮತ್ತು ಮಹಾತ್ಮರು, ಸಾಧು ಸತ್ಪುರುಷರು ತಿಳಿಸಿದ ಮಾತುಗಳ ಕುರಿತು ಅನುಭವಿಕರು ಉಪನ್ಯಾಸ ನೀಡುತ್ತಾರೆ. ಈಗಾಗಲೇ 47 ಮಾಸಿಕ ವಚನ ಶ್ರವಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೇಯೆ ಧರ್ಮ ಭಾವ ಬೆಳೆಸಲು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ವಾರ ಕಾಲ “ಸಾಪ್ತಾಹಿಕ ವಚನ ಶ್ರಾವಣ” (ವಚನ ಸಪ್ತಾಹ) ಕಾರ್ಯಕ್ರಮ ನಡೆಸಿ ಆ ಕಾರ್ಯಕ್ರಮದಲ್ಲಿ ಒಂದು ವಾರ ಕಾಲ ದಿನಕ್ಕೊಂದು ವಚನ ವಿಶ್ಲೇಷಣೆಯನ್ನು ಬಲ್ಲಿದವರಿಂದ ತಿಳಿಸಲಾಗುತ್ತದೆ ಇಂತಹ ಕಾರ್ಯಕ್ರಮಗಳಿಂದ ವ್ಯಕ್ತಿಯಲ್ಲಿ `ಸ್ವಧರ್ಮ ರಕ್ಷಣೆ ಪರಧರ್ಮ ಸಂಹಿಷ್ಣುತೆ’ ಭಾವ ಮೂಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು.

ರಾಷ್ಟ್ರ ಸೇವೆ : ರಾಷ್ಟ್ರ ಸೇವೆ ಎಂದರೆ ರಾಷ್ಟ್ರೋನ್ನತಿಗಾಗಿ ಸಮಾಜ ಅಭಿವೃದ್ಧಿಗಾಗಿ ಸರಕಾರ ಕೈಕೊಂಡ ಯೋಜನೆ ಯೋಚನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು. ಇಲ್ಲವೆ ಸ್ವತಃ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವದು ರಾಷ್ಟ್ರ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪಾಠಶಾಲೆಯು ರಾಷ್ಟ್ರ ಪ್ರಗತಿಗಾಗಿ ಪೂರಕವಾಗುವ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ರಾಷ್ಟ್ರೀಯ ಹಬ್ಬ, ನಾಡ ಹಬ್ಬ, ದಿನಾಚರಣೆ, ಜಯಂತ್ಯೋತ್ಸವ,  ಸ್ಮರಣೋತ್ಸವ, ಮುಂತಾದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾರ್ಯಗತಗೊಳಿಸುವದು ಉದಾಹರಣೆಗಾಗಿ ಹೊಸ ವರ್ಷಾಚರಣೆಯನ್ನು ಹರ್ಷೋತ್ಸವ ಎಂದು, ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಸಂಭ್ರಮ ಎಂದು ವಿಶ್ವ ಪರಿಸರ ದಿನದಂದು ವನಮಹೋತ್ಸವ ಆಚರಿಸುವುದು. ಅಂತರಾಷ್ಟ್ರೀಯ ಯೋಗ ದಿನ ನಿಮಿತ್ತ ಯೋಗ ಸಪ್ತಾಹ ಕಾರ್ಯಕ್ರಮ ಆಚರಿಸುವುದು ಶಿಕ್ಷಕರ ದಿನಾಚರಣೆ ದಿನ ಯೋಗ ಕೋರ್ಸ್, ವರ್ಗಗಳ ಪ್ರಾರಂಭೋತ್ಸವ, ಪ್ರಕೃತಿ ಚಿಕಿತ್ಸಾ ದಿನಾಚರಣೆ ಮುಂತಾದವುಗಳು.

ವಿಶೇಷವಾಗಿ ರಾಷ್ಟ್ರ ಸೇವೆ ಸಲ್ಲಿಸುವುದಕ್ಕೋಸ್ಕರ ಪ್ರತಿ ತಿಂಗಳಿನ ಪ್ರತಿ ರವಿವಾರ ದಿನ ಯೋಗ ತರಬೇತಿ ನಂತರ “ಅನ್ವೇಷಣೆ” ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಚಲಿತ ವಿಷಯ, ಸಮಸ್ಯೆ-ಸಮಾಧಾನಗಳ ಕುರಿತು ಚರ್ಚೆ ಮಾಡಲಾಗುವುದು. ಅಂದರೆ 12 ನೇ ಶತಮಾನದ ಅನುಭವ ಮಂಟಪ ಮಾದರಿಯಲ್ಲಿ `ಅನ್ವೇಷಣ’ ಕಾರ್ಯಕ್ರಮ ನಡೆಸುವುದು. ಈಗಾಗಲೆ 381 “ಅನ್ವೇಷಣೆ” ಕಾರ್ಯಕ್ರಮಗಳು ನಡೆದಿವೆ.

ಇಷ್ಟೆಲ್ಲ ಸೇವೆಗಳ ಸಫಲತೆಗೆ ಯೋಗ ಪಾಠಶಾಲೆಯ ಸಮೂಹ ಸಂಸ್ಥೆಗಳಾದ ಬಸವ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಬಸವ ಯೋಗ ಚಿಂತನ ಕೂಟ, ಕುಮಾರೇಶ್ವರ ಯೋಗ ಜಿಮ್, ಹಳೆಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಕಾರ ಮತ್ತು ಪ್ರಸ್ತುತ ಶ್ರೀಮಠದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳವರ ಕೃಪಾಶೀರ್ವಾದ, ಸಾರ್ವಜನಿಕರ ಪ್ರೋತ್ಸಾಹಗಳು ಯೋಗ ಪಾಠಶಾಲೆಗೆ ಮೂಲ ಬಂಡವಾಳಗಳಾಗಿವೆ. ಇನ್ನೂ ತನಕ ಸರಕಾರದಿಂದ ಯಾವದೇ ರೀತಿಯ ಅನುದಾನ ಮೊತ್ತವನ್ನು ಪಡೆಯದಿರುವುದು ವಿಶೇಷವಾಗಿದೆ.

ಯೋಗ ಪಾಠಶಾಲೆಯು ಮುಂಬರುವ 2025 ಕ್ಕೆ ತನ್ನ ಸುವರ್ಣೋತ್ಸವ (1975-2025) ಆಚರಣೆಯ ಸವಿನೆನಪಿಗಾಗಿ ಸುಸಜ್ಜಿತ ಯೋಗ ಮಂದಿರ, ಯೋಗ ಗ್ರಂಥಾಲಯ, ಯೋಗ ವಸ್ತು ಸಂಗ್ರಹಾಲಯ, ಯೋಗ ಉದ್ಯಾನವನ, ಯೋಗ ಚಿಕಿತ್ಸಾಲಯ ಯೋಗ ಸಂಶೋಧನಾಲಯಗಳನ್ನು ನಿರ್ಮಿಸುವ ಯೋಜನೆಗಳ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆಯ ಅಭಿವೃದ್ಧಿ ಸೇವಾ ಸಮಿತಿ ಸ್ಥಾಪಿಸಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯು ಯೋಗ ಪ್ರಸಾರ ಸೇವೆಯನ್ನು ಯೋಗ ಶಿಬಿರ, ಸ್ಪರ್ಧೆ, ತರಬೇತಿವರ್ಗ, ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನ, ಉತ್ಸವಗಳ ಮೂಲಕ ಕಳೆದ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಉಚಿತವಾಗಿ ನಿತ್ಯ ನಿರಂತರವಾಗಿ ಎಲೆಮರೆಯ ಕಾಯಿಯಂತೆ ಯೋಗ ಪ್ರಸಾರ ಸೇವೆಯಲ್ಲಿ ನಿರತವಾಗಿರುವದು ಶ್ಲಾಘನೀಯ ವಿಷಯವಾಗಿದೆ.

ಯೋಗ ಪ್ರಸಾರ ಸೇವೆಗೆ ಸರಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದೊರೆತರೆ ಸದೃಢ, ಸಮೃದ್ಧ ಭಾರತ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಈ ಕಾರ್ಯ ಯಶಸ್ಸಿಗೆ ನಾವೆಲ್ಲರೂ ಕೈಜೋಡಿಸೋಣ. ಯೋಗ ಕಲಿಯೋಣ-ಕಲಿಸೋಣ. `ಯೋಗದಿಂದ ಆರೋಗ್ಯ-ಆರೋಗ್ಯದಿಂದ ಅಭಿವೃದ್ಧಿ’ ವಾಣಿ ಸಾರ್ಥಕಗೊಳಿಸೋಣ.