Editorial

ಶ್ರೀಕಂಠ.ಚೌಕೀಮಠ.ವ್ಯವಸ್ಥಾಪಕ -ಸಂಪಾದಕ.

ಸಹೃದಯರಿಗೆ ನನ್ನ ನಮಸ್ಕಾರಗಳು.

ಬಸವ ಜಯಂತಿಯ ಪವಿತ್ರ ದಿನದಂದು (೧೪ -೦೫-೨೦೨೧) “ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ , ಅಂತರ್ಜಾಲದ ಮೂಲಕ ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.

“ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ ನ್ನು ಅಂತರ್ಜಾಲದ ಮೂಲಕಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.
ಅಪೂರ್ವ ಸಂದರ್ಭದಲ್ಲಿ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ , ಪೂಜ್ಯ ಕೊಟ್ಟೂರು ದೇಶಿಕರು ದರೂರ, ಪೂಜ್ಯ ನಾಗಭೂಷಣ ದೇವರು ಅಡವಿಅಮರೇಶ್ವರ ಪೂಜ್ಯರು ಉಪಸ್ಥಿತರಿದ್ದರು .

 

ಸುಕುಮಾರ ಬ್ಲಾಗ್‌ ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿ ,ಸಲಹೆ ,ಪ್ರತಿಕ್ರಿಯೆ ,ಪ್ರಶಂಸೆ ಮತ್ತು ಪ್ರೋತ್ಸಾಹದಾಯಕ ಸಂದೇಶಗಳ ಮಹಾಪೂರದಲ್ಲಿ ಮಿಂದೆದ್ದು,ತಪ್ಪುಗಳನ್ನುತಿದ್ದಿಕೊಳ್ಳುತ್ತ ,ಹೊಸ ರೂಪದ ಸುಕುಮಾರ ಬ್ಲಾಗ್‌ ನ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇನೆ.

ಪ್ರಸ್ತುತ ೨೦೨೧ನೇ ವರ್ಷ, ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಶತಮಾನೋತ್ಸವ .ತಮ್ಮ ಭೌತಿಕ ಶರೀರದ ಅಂತಿಮ ದಿನವನ್ನು “ಶಿವರಾತ್ರಿ” ಎಂದು ಸ್ವತಃ ಶಿವಯೋಗಿಗಳೇ ಮುನ್ಸೂಚನೆ ನೀಡಿದ ಪವಿತ್ರ ದಿನ ಕ್ಕೆ ನೂರು ವಸಂತಗಳ ಸಂಸ್ಮರಣೆ ಯಾಗಿರುತ್ತದೆ.

ಪೂಜ್ಯರ ಸ್ಮರಣೆ  ಮತ್ತು ಸುಕುಮಾರ ಬ್ಲಾಗ್‌ ನ ವಿಶೇಷ ಸಂಚಿಕೆಯ ಅರ್ಪಣೆ  ಪೂಜ್ಯದ್ವಯರ ಅವಿನಾಭಾವ ಸಂಬಂಧದ ಫಲಶೃತಿಗಳು.

ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳು ,ಪೂಜ್ಯ ಹಾನಗಲ್ಲ ಕುಮಾರಶಿವಯೋಗಿಗಳಿಗೆ  ಆದರ್ಶಪ್ರಾಯವಾದವರು . ಅಥಣಿ ಶಿವಯೋಗಿಗಳ ಮೇಲಿನ ಶ್ರೀ ಕುಮಾರ ಶಿವಯೋಗಿಗಳ ಗೌರವಕ್ಕೆ ಒಂದು ಘಟನೆಯನ್ನು  ಸ್ಮರಿಸಿಕೊಳ್ಳುತ್ತೇನೆ. ಕವಿರತ್ನ ದ್ಯಾಂಪುರ ಚೆನ್ನ ಕವಿಗಳು ಒಂದೊಮ್ಮೆ ಶ್ರೀ ಕುಮಾರ ಶಿವಯೋಗಿಗಳನ್ನು ಹೊಗಳಿ ಬರೆದ ಪದ್ಯವನ್ನು ಶ್ರೀ ಕುಮಾರ ಶಿವಯೋಗಿಗಳ ಮುಂದೆ ವಾಚನ ಮಾಡಿದರು.ಹೊಗಳಿಕೆಯ ಹಾಡನ್ನು ಕೇಳಿ ಪ್ರಚಾರ ಪ್ರಿಯರಲ್ಲದ ಶ್ರೀ ಕುಮಾರ ಶಿವಯೋಗಿಗಳು ಕೋಪಿಸಿಕೊಂಡು “ಚೆನ್ನಯ್ಯ !! ಇದೇ ಎನು ನಿನ್ನ ಕವಿತ್ವದ ಸದುಪಯೋಗ ? ಸಾಮಾನ್ಯ ವ್ಯಕ್ತಿಯನ್ನು ಹೊಗುಳುವುದೆ? ಕೀರ್ತಿಸಲು ನಿನಗೆ ಶಿವಶರಣರಿಲ್ಲವೆ ? ಅಥಣಿ ಶಿವಯೋಗಿಗಳಂತಃ ಮಹಾತ್ಮರಿಲ್ಲವೆ ?  ಎಂದು ನುಡಿದ ಸನ್ನಿವೇಶ .ಕವಿಗಳು “ಎನ್ನೊಡೆಯ ತಪ್ಪಾಯ್ತು ಮನ್ನಿಸಬೇಕೆಂದು ಎಂದು ಕ್ಷಮೆಯಾಚಿಸಿದ ಪ್ರಸಂಗ ವನ್ನು ಸ್ವತಃ ದ್ಯಾಂಪುರ ಚೆನ್ನ ಕವಿಗಳು ೫-೩-೧೯೪೬ರಂದು ಶಿವಯೋಗಮಂದಿರದ ಜಾತ್ರೆಯ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ  ಪ್ರಾಣ ಬಿಡುವ ಕೊನೆಯ ಕ್ಷಣದಲ್ಲಿ ಹೇಳಿದ ಮಾತುಗಳು.

ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ .

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶಿವಯೋಗಿಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

 

( ಧಾರವಾಡ ಮುರುಘಾಮಠದಲ್ಲಿರುವ  ಪೂಜ್ಯ  ಅಥಣಿಯ ಶಿವಯೋಗಿಗಳ ಶಿಲಾಮೂರ್ತಿ )

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶಿವಯೋಗಿಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ

 

.

(ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳು)

ಪೂಜ್ಯ ಅಥಣಿ ಶಿವಯೋಗಿಗಳ ಸ್ಮರಣೋತ್ಸವ ವಿಶೇಷ ಸಂಚಿಕೆಗೆ ತಮ್ಮ ಅಮೂಲ್ಯ ಲೇಖನಗಳನ್ನು ಕೊಟ್ಟ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ (ಸಂಗ್ರಹ ಸಹಾಯ: ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ ಲೇಖನ).

ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

ಶ್ರೀ  ಡಾ.ಪಂಚಾಕ್ಷರಿ ಹಿರೇಮಠ  (ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಶ್ರೀ ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

ಶ್ರೀ ಡಾ . ಬಿ . ಆರ್ . ಹಿರೇಮಠ (ಸುಕುಮಾರ : ಅಗಸ್ಟ ೨೦೦೨)

ಶ್ರೀ  ಡಾ . ಸಿದ್ದಣ್ಣ .ಬ . ಉತ್ನಾಳ (ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಶ್ರೀ ಪ್ರಕಾಶ ಗಿರಿಮಲ್ಲನವರ,

ಭಕ್ತಿಗೀತೆಯನ್ನು ಸಮರ್ಪಿಸಿದ ಚಿತ್ರದುರ್ಗದ ಕುಮಾರಿ ಚಿನ್ಮಯಿ ರೇವಣಸಿದ್ದಪ್ಪ ಹೆಗಡಾಳ ಹಾಗು ಮಂಗಳಾರತಿ ಯನ್ನು ಸಮರ್ಪಿಸಿದ ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ ತುಮುಕೂರ ಅವರಿಗೆ,

ಪೂಜ್ಯರಿಗೆ ಮತ್ತು ಮಹನಿಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಸಹೃದಯರ ಅಕ್ಷಿ ಪಟಲ ದ ಮೇಲೆ ಅಂತರ್ಜಾಲ ದ ಮೂಲಕ  ಮೂಡುತ್ತಿರುವ  ಹೊಸಹುಟ್ಟು ಪಡೆದ ಈ “ ಸುಕುಮಾರ  “ಪತ್ರಿಕೆಗೆ ಉಜ್ವಲ ಇತಿಹಾಸವಿದೆ .

ಆ ಇತಿಹಾಸದ ಒಂದು ನೋಟವನ್ನು ಹೀಗೆ ಅವಲೋಕಿಸಬಹುದು : ಲಿಂಗೈಕ್ಯ  ಪರಮ ಪೂಜ್ಯಶ್ರೀ ಕುಮಾರ  ಶಿವಯೋಗಿಗಳವರಿಂದ ಸ್ಥಾಪನೆಗೊಂಡ ಶ್ರೀ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಧಕರ ಶಿಕ್ಷಣಕ್ಕೆ ನೆರವಾಗಲೆಂಬ ಸದುದ್ದೇಶದಿಂದ ಆಗ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ನವಲಗುಂದದ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳವರು “ ಶ್ರೀ ರೇವಣಸಿದ್ದೇಶ್ವರ ವಾಚನಾಲಯ ” ವನ್ನು ಗ್ರಂಥಾಲಯದಲ್ಲಿ ಆರಂಭಿಸಿದರು . ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಲಭ್ಯವಿದ್ದ ಅಮೂಲ್ಯ ಪುಸ್ತಕ ಮತ್ತು ಉನ್ನತ ಮಟ್ಟದ ಪತ್ರಿಕೆಗಳು ಓದಿನಲ್ಲಿ ಸಾಧಕರು ತಮ್ಮನ್ನು ತಾವು ತೊಡಗಿಸಿಕೊಂಡರು . ಇದಲ್ಲದೆ ನಾಡಿನ ಹಿರಿಯ ಸಾಹಿತಿಗಳ ಮತ್ತು ವಿದ್ವಾಂಸರ ಪಾಂಡಿತ್ಯಪೂರ್ಣ , ವೈಚಾರಿಕ ಉಪನ್ಯಾಸ ಕೇಳುವ ಅವಕಾಶವೂ ಸಾಧಕರಿಗೆ ಆಗಾಗ ದೊರೆಯುತ್ತಿತ್ತು . ತತ್ಪಲವಾಗಿ ತಾವೂ ಏನನ್ನಾದರೂ ಬರೆಯಬೇಕೆಂಬ ಉತ್ಸುಕತೆ ಸಾಧಕರಲ್ಲಿ ಉಂಟಾಗುವುದು ಸಹಜ . ಅದನ್ನು ಗುರುತಿಸಿದ ಪೂಜ್ಯ ಶ್ರೀಗಳು , ಆ ಉತ್ಸಾಹ ಕಾರ್ಯರೂಪಕ್ಕಿಳಿಯಲೆಂದು ಹಾರೈಸಿ , ಆಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ “ ಶಿವಯೋಗಿ ಸಂಘ ‘ ದ ಹಿರಿಯ ಸದಸ್ಯರ ಬೆನ್ನು ತಟ್ಟಿದರು . ಅರ್ಥಪೂರ್ಣ ಹೆಸರು ಹೊತ್ತ “ ಸುಕುಮಾರ ‘ ಪತ್ರಿಕೆಯನ್ನು ಅವರು ಹೊರತಂದೇ ಬಿಟ್ಟರು (  ಯುಗಾದಿ ಕ್ರಿ.ಶ. 1933 ) , ಪತ್ರಿಕೆಯ ಉತ್ತಮಿಕೆಗಾಗಿ , ಅದರ ಶ್ರೇಯೋಭಿವೃದ್ಧಿಗಾಗಿ ಶಿವಯೋಗಿ ಸಂಘದ ಸದಸ್ಯರು ಒಮ್ಮನದಿಂದ ದುಡಿದರು . ಆಗ “ ಸುಕುಮಾರ ‘ ಪತ್ರಿಕೆ ಇದ್ದುದು ಕೈಬರಹದಲ್ಲಿ , ಅದನ್ನು ತಮ್ಮ ಮುತ್ತಿನಂತಹ ಅಕ್ಷರಗಳಿಂದ ಬರೆಯುತ್ತಿದ್ದವರು ಶ್ರೀ ಚಂದ್ರಶೇಖರ ದೇವರು ಅಡೂರ ( ಮುಂದೆ ಜ . ಚ . ನಿ . ) , ಅದರ ಮುಖಪುಟವನ್ನು ತಮ್ಮ ಭಾವದುಂಬಿದ ಚಿತ್ರಗಳಿಂದ ವಿನ್ಯಾಸಗೊಳಿಸುತ್ತಿದ್ದವರು , ಅಂದಿನ ಹಿರಿಯ ಸಾಧಕರೂ ಹುಟ್ಟು ಕಲಾವಿದರೂ ಆಗಿದ್ದ ಶ್ರೀ ರೇವಣಸಿದ್ಧ ದೇವರು ( ಮುಂದೆ ಹಾನಗಲ್ ಸದಾಶಿವ ಸ್ವಾಮಿಗಳು ) , ಪತ್ರಿಕೆಯ ಸಂಪಾದಕರು ಶ್ರೀ ಬಸವಲಿಂಗದೇವರು ಗುತ್ತಲ ( ಮುಂದೆ ಬಸವಲಿಂಗ ಪಟ್ಟಾಧ್ಯಕ್ಷರು , ತೆಲಸಂಗ ) , ಹೀಗೆ ಅತ್ಯಂತ ಹುರುಪಿನಿಂದ ಆರಂಭಗೊಂಡ ಪತ್ರಿಕೆ ತದನಂತರದ

ವರ್ಷಗಳಲ್ಲಿ ಏಳು – ಬೀಳುಗಳನ್ನು ಕಂಡರೂ ನಿಲ್ಲದೆ ಕೈಬರಹ ರೂಪದಲ್ಲಿಯೇ ಮುಂದುವರಿದುಕೊಂಡು ಬಂದಿತು . ಹುಬ್ಬಳ್ಳಿಯ ಮೂರುಸಾವಿರ ಮಠದ ಅಂದಿನ ಪೂಜ್ಯ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರ ಉದಾರ ಕೃಪೆ ಮತ್ತು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಪ್ರೋತ್ಸಾಹದಿಂದ ಸುಕುಮಾರ ‘ ಪತ್ರಿಕೆ ಶ್ರೀ ಶಿವಯೋಗ ಮಂದಿರದ * ಸದಾಶಿವ ಮುದ್ರಣಾಲಯ ‘ ದಲ್ಲಿಯೇ ಅಚ್ಚಾಗಿ ಹೊರಬರಲಾರಂಭಿಸಿತು ( ೧-೧೦-೧೯೫೦ ವಿಜಯದಶಮಿ ) . ಆಗ ಅದರ ಸಂಪಾದಕರಾಗಿದ್ದವರು ಶ್ರೀ ಜಿ . ಎಂ . ಉಮಾಪತಿ ಶಾಸ್ತ್ರಿಗಳು . ಅದನ್ನು ಉದ್ಘಾಟಿಸಿದವರು ಪೂಜ್ಯ ಹಾನಗಲ್ ಸದಾಶಿವ ಮಹಾಸ್ವಾಮಿಗಳವರು . ಅವರು ಪತ್ರಿಕೆ ಬಿಡುಗಡೆಯ ಭಾಷಣದಲ್ಲಿ “ ವಿನಾಶದತ್ತ ನಡೆದಿರುವ ಸಮಾಜದ ಸುಧಾರಣೆಗಾಗಿ ಕರುಣಾಳು ಪರಮಪೂಜ್ಯ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರು ಈ ಮಂದಿರವನ್ನು ಕಟ್ಟಿದರು . ಶರಣರ ವ್ಯಾಪಕ ತತ್ವಗಳ ಪ್ರಚಾರದ ಮೂಲಕ ವಿಶ್ವಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆಯೊಂದನ್ನು ಪ್ರಕಟಿಸಲು ಈ ಅಚ್ಚುಕೂಟವನ್ನು ಏರ್ಪಡಿಸಿದ್ದರು . ಇಂದು ಆ ಅಚ್ಚಿನಮನೆಯಿಂದಲೇ ಅವರ ಸತ್ಸಂಕಲ್ಪವು ಅಂಕುರಿತವಾಗಿದೆ . ಅದು ಚಿಗುರಿ ಫಲಿಸಿ ಆ ಫಲದ ಸುಸ್ವಾದವನ್ನು ಸಮಾಜದ ಜನರೆಲ್ಲ ಉಣ್ಣುವಂತಾಗಲಿ ” ಎಂದು ಅಪ್ಪಣೆ ಕೊಡಿಸುವುದರ ಜೊತೆಗೆ “ ಸುಪ್ತ ಸಮಾಜವನ್ನು ಎಚ್ಚರಿಸಿ , ಸನ್ಮಾರ್ಗದಲ್ಲಿ ಪ್ರವೃತ್ತಿಯನ್ನುಂಟುಮಾಡುವಂತಹ ಲೇಖನಗಳು ಪತ್ರಿಕೆಗಳಿಗೆ ಭೂಷಣಪ್ರಾಯವಾದವು . ಪತ್ರಿಕೆಯ ಉದ್ಯಮವು ಅರ್ಥಾಗಮದ ಸಾಧನವಾಗಬಾರದು . ಹಾಳು ಹರಟೆಯ ನೋಟೀಸುಗಳಿಂದ ಅಶೋಭನೀಯವಾಗಬಾರದು . ಸಮಾಜದ ಪ್ರಗತಿಯ ಸಾಮಯಿಕ ಸಮಸ್ಯೆಗಳನ್ನು ಕುರಿತು ವಿವೇಚಿಸಿದ ಪ್ರೌಢಲೇಖನಗಳು ಬೇಕು . ಮಾನವನ ನೈತಿಕಮಟ್ಟವನ್ನು ಉನ್ನತಗೊಳಿಸುವ ನೈತಿಕ ನಿಬಂಧ ಮತ್ತು ಪ್ರಬಂಧಗಳು ಪ್ರಕಟವಾಗಬೇಕು ….. ಸಮಾಜಸೇವೆಯೊಂದಿಗೆ ಕನ್ನಡ ನುಡಿ ಮತ್ತು ಸಾಹಿತ್ಯ ಸೇವೆಗಾಗಿ ಪ್ರಕಟವಾದ ಚೆನ್ನಿಗ “ ಸುಕುಮಾರ ‘ ನು ಕನ್ನಡಿಗರ ಹೃದಯವನ್ನು ಬೆಳಗಿ ಕನ್ನಡ ಮಾತೆಗೆ ಉನ್ನತ ಕೀರ್ತಿಯನ್ನು ತರಲಿ ” ಎಂದು ಹಾರೈಸಿದರು . ಪೂಜ್ಯರ ಈ ಮಾತುಗಳಲ್ಲಿ ಲಿಂ . ಶ್ರೀ ಕುಮಾರ ಸ್ವಾಮಿಗಳವರ ಸತ್ಸಂಕಲ್ಪ , ಅವರ ಸದುದ್ದೇಶ , ಸಮಾಜ ಸುಧಾರಣೆಯ ಬಗ್ಗೆ ಅವರಿಗಿದ್ದ ಕಾಳಜಿ , ಕಳಕಳಿಗಳನ್ನು ಗುರುತಿಸಬಹುದಾಗಿದೆ . ಅವರ ಮಾತುಗಳಲ್ಲಿರುವ ಇನ್ನೊಂದು ಮಹತ್ವದ ಅಂಶವೆಂದರೆ ಪತ್ರಿಕೆಯಲ್ಲಿ ಎಂತಹ ಲೇಖನಗಳಿರಬೇಕು , ಎಂತಹ ಲೇಖನಗಳಿರಬಾರದು , ಅದರ ಧೈಯೋದ್ದೇಶಗಳೆಂಥವಿರಬೇಕು ಎಂಬುದರ ವಿವೇಚನೆ . ಇವು ಅಂದಿನ ಸಂಪಾದಕರನ್ನು ಕುರಿತು ಹೇಳಿರುವ ಮಾತುಗಳಾದರೂ ಇಂದಿನ ಸಂಪಾದಕರಿಗೂ ಅನ್ವಯಿಸುತ್ತವೆ .

ಹೀಗೆ ಕ್ರಿ . ಶ . ೧೯೫೦ ರಿಂದ ಪ್ರೊ . ಜಿ . ಎಂ . ಉಮಾಪತಿ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಮುದ್ರಣರೂಪದಲ್ಲಿ ಪ್ರಕಟವಾಗುತ್ತ ಬಂದ ಸುಕುಮಾರ ‘ ಪತ್ರಿಕೆ ಹಲವಾರು ವರ್ಷ ಸರಾಗವಾಗಿ ನಡೆದುಕೊಂಡು ಬಂದು , ಮುಂದೆ ನಿಂತು ಹೋಯಿತು .

ಶಿವಯೋಗ ಮಂದಿರ , ಒಂದು ವಿಶಿಷ್ಟ ಧಾರ್ಮಿಕ ಸಂಸ್ಥೆ . ಇಲ್ಲಿ ತರಬೇತಿ ಹೊಂದಿದ ಸಾವಿರಾರು ಸಾಧಕರು ನಾಡಿನ ತುಂಬ ಹರಡಿರುವ ಮಠಗಳ ಮಠಾಧಿಪತಿಗಳಾಗಿ ಧರ್ಮ , ಶಿಕ್ಷಣ , ಸಾಹಿತ್ಯ , ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ . ಮಠಾಧಿಪತಿಗಳ ಟಂಕಸಾಲೆಯಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಹಾಗೂ ಧೈಯೋದ್ದೇಶಗಳನ್ನು ಪ್ರಚುರಪಡಿಸುವಲ್ಲಿ ಸಂಸ್ಥೆಯ ಮುಖಪತ್ರಿಕೆಯ ಅವಶ್ಯಕತೆಯನ್ನರಿತು  ದಿನಾಂಕ ೭-೫-೨೦೦೨ ರಂದು ಸಭೆ ಸೇರಿದ ಶಿವಯೋಗಮಂದಿರ ಸಂಸ್ಥೆಯ ಗೌರವಾನ್ವಿತ ಸದಸ್ಯರು ನಿಂತು ಹೋಗಿರುವ “ ಸುಕುಮಾರ ‘ ಪತ್ರಿಕೆಯನ್ನು ಪುನಃ ಪ್ರಕಟಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಉಪಾಧ್ಯಕ್ಷರಾದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು  ಡಾ. ಬಿ.ವಿ.ಮಲ್ಲಾಪುರ ಮತ್ತು ಡಾ. ಬಿ.ಆರ್.ಹಿರೇಮಠ  ಅವರಿಗೆ ವಹಿಸಿದರು . ಪುನರ್ಜನ್ಮ ಗೊಂಡ ಪತ್ರಿಕೆ ಉತ್ತಮ ಕಾರ್ಯನಿರ್ವಹಿಸಿತು.

ದಿ.08-04-2021 ರಂದು  ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ,ಉತ್ತರಾಧಿಕಾರಿ ಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರಿ,  ಅವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಉದಯೋನ್ಮುಖ  ಲೇಖಕರ ಲೇಖನ ಗಳ ಕುರಿತು ಚರ್ಚೆ ಮಾಡುವಾಗ , ಪೂಜ್ಯರು ”  ಸುಕುಮಾರ” ಪತ್ರಿಕೆಯ ಪುನರಾಂಬರದ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಆಗ ಹೊಳದಿದ್ದೇ  ಆಧುನಿಕ ತಂತ್ರಜ್ಞಾನದ ಮೂಲಕ ಅಂತರ್ಜಾಲ ದ ಪತ್ರಿಕೆ.

ಶ್ರೀಮದ್ವೀ ರಶೈವ ಶಿವಯೋಗ ಮಂದಿರದ ಅಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ  ಆಶೀರ್ವಾದ ಮತ್ತು ಅನುಮತಿ ಗಳ ಜೊತೆಗೆ “ಸುಕುಮಾರ” ಪತ್ರಿಕೆಯ ಮೌಲ್ಯ ಮತ್ತು ಹಿರಿಮೆಗಳಿಗೆ ಧಕ್ಕೆಯಾಗದಂತೆ  ಪತ್ರಿಕೆ ಮುನ್ನೆಡೆಯಬೇಕು ಎಂಬ ಕಳಕಳಿಯ ಎಚ್ಚರಿಕೆ ಯ ಮಾರ್ಗದರ್ಶನ ದೊಂದಿಗೆ  “ಸುಕುಮಾರ” ಪ್ರಕಾಶಗೊಳ್ಳುತ್ತಲಿದೆ.

ಇಂಥ ಗುರುತರ ಕಾರ್ಯವನ್ನು  ಸಾಧ್ಯ ಮಾಡುವುದಕ್ಕೆ  ಶ್ರೀಕುಮಾರೇಶನ ಕೃಪೆ ಬೇಕು . ಹಾಗೆಯೇ ವಿದ್ವಾಂಸರ , ಸಂಶೋಧಕರ , ಸಾಹಿತಿಗಳ ಸಮಯೋಚಿತ ಸಹಾಯ ಸಹಕಾರಗಳೂ ಬೇಕು . ಮೌಲಿಕ , ವೈಚಾರಿಕ ಹಾಗೂ ಸಂಶೋಧನಾತ್ಮಕ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ . ಕಾರಣ ಅಂಥ ಲೇಖನಗಳನ್ನು ನಾವು ನಿರೀಕ್ಷಿಸುತ್ತೇವೆ .

ಹೊಸಹುಟ್ಟು , ಹೊಸರೂಪ ಪಡೆದು ಹೊರಬರುತ್ತಿರುವ ಸುಕುಮಾರ ‘ ಪತ್ರಿಕೆಯನ್ನು ಸಹೃದಯರು ತುಂಬು ಹೃದಯದಿಂದ ಸ್ವಾಗತಿಸುವರೆಂದು ಭಾವಿಸಿದ್ದೇವೆ .

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ಸೌಜನ್ಯ:  ಡಾ. ಬಿ.ವಿ.ಮಲ್ಲಾಪುರ ಲೇಖನಗಳು .)