ಮೂಲ ಲೇಖಕರು  ಶ್ರೀ ಕಿಶನ್.ಕುಲಕರಣಿ ಕುಷ್ಟಗಿ

ಸಂಗ್ರಹ : ಶ್ರೀ ಕುಮಾರ ಹಿರೇಮಠ  ಮತ್ತು ಶ್ರೀ ರವಿ ಹುಲಕೋಟೆ

ಹಸಿರೆ ಉಸಿರೆಂದು ತಿಳಿದಿದ್ದ ಶರಣ ಈ ಸ್ವಾಮಿಗೆ ಹಗಲಿರುಳೂ ಹಸಿರಿನದೇ ಧ್ಯಾನ!

 

ಈ ಕರ್ಮಯೋಗಿ ಸ್ವಾಮಿ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರ, ಸಾವಿರಾರು ಗಿಡಬಳ್ಳಿಗಳನ್ನು ನೆಟ್ಟು ಪೋಷಿಸಿದ್ದಾರೆ. ಕರ್ಮ ಇವರ ಗುರಿ. ಫಲ ಬೇಡುವುದಲ್ಲ. ಈತನೊಬ್ಬ ನಡೆದಾಡುವ ಬೇಲಿ. ಇಡೀ ಜಗತ್ತಿಗೇ ಹಸಿರು ತುಂಬುವ ಹುಮ್ಮಸ್ಸಿನ ಜೀವಿ. ಫಲ ಯಾರಿಗೇ ಸಿಗಲಿ, ಇಡೀ ಭೂಮಿಗೆ ಅದು ಸತ್ಫಲ ಎನ್ನುವ ಯೋಗಿ.

ಬಾದಾಮಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ‘ಶಿವಯೋಗಮಂದಿರ’ಕ್ಕೆ ನೀವು ಬಂದಿರಲಿಕ್ಕಿಲ್ಲ. ಬಂದರೂ ಇಲ್ಲಿ ವೀರಭದ್ರಪ್ಪ ದೇಸಾಯಿ ಎಂಬ ಎಂಬತ್ತು ವರ್ಷದ ಯಜಮಾನನ ಕರ್ಮಯೋಗವನ್ನು ನೋಡಿರಲಿಕ್ಕಿಲ್ಲ, ಕೇಳಿರಲಿಕ್ಕಿಲ್ಲ.

ಕಳೆದ ಸುಮಾರು ಐವತ್ತು ವರ್ಷದ ಹಿಂದೆ ಯಾವ ಆಸೆಯಿಲ್ಲದೇ ಈತ ಸಾವಿರಾರು ತೆಂಗಿನ ಗಿಡ, ಸಾವಿರಾರು ಹಣ್ಣಿನ ಗಿಡ, ಸಾವಿರಾರು ಹೂ ಬಳ್ಳಿಗಳನ್ನು ನೆಟ್ಟು ಬೆಳೆಸಿ ಪೋಷಿಸಿದ್ದಾರೆ. ಅದೂ ಒಬ್ಬಂಟಿಯಾಗಿ.

ವೀರಭದ್ರಪ್ಪ ಆಗಿನ್ನೂ ಯುವಕ. ಎಲ್ಲ ಭಕ್ತರಂತೆ ತಾನು ಶಿವಯೋಗಮಂದಿರ ನೋಡಲು ಬೆಳವಡಿಯಿಂದ ಬಂದವನು. ಎಲ್ಲರಂತೆ ಈತ ತಿರುಗಿ ಹೋಗಲಿಲ್ಲ. ಪಟ್ಟದಕಲ್ಲಿನ ಸಮೀಪದ ಕುಮಾರ ಸ್ವಾಮಿಗಳ ಈ ‘ನಿಸರ್ಗಧಾಮ’ ಈತನನ್ನು ಇಲ್ಲಿಯೇ ಕಟ್ಟಿ ಹಾಕಿತು. ಕುಮಾರೇಶನ ಈ ಪವಿತ್ರ ಸ್ಥಾನ ಇವರನ್ನು ‘ನಿನ್ನ ಸೇವೆ ಇಲ್ಲಿ ಅವಶ್ಯ’ವಿದೆ, ಎನ್ನುವ ಹಾಗೆ ಇವರನ್ನು ಇಲ್ಲಿಯೇ ಇರಿಸಿಕೊಂಡಿತು

.

ಸದಾ ದೇವರ ಸ್ಮರಣೆ, ಬಾಯಿ ತೆರೆದರೆ ವಚನ ಸಾಹಿತ್ಯ ತುಂಬಿಕೊಂಡ ಇವರಿಗೆ ಸುತ್ತಮುತ್ತಲಿನ ಜನರು ‘ಶರಣರೆ’ ಎಂದು ಕರೆಯುತ್ತಿದ್ದರು.

ಗೇಣು ಲಂಗೋಟಿ, ಹಣೆಯಲ್ಲಿ ವಿಭೂತಿ, ಮಧ್ಯದಲ್ಲಿ ಕುಂಕುಮ, ಕೊರಳಲ್ಲಿ ರುದ್ರಾಕ್ಷಿಮಾಲೆ ಅದರಲ್ಲೊಂದು ಜಪಮಾಲೆ. ಕೈಯಲ್ಲೊಂದು ಸದಾ ಕೆಲಸಕ್ಕೆ ಸಿದ್ದವಿರುವ ಕುಡುಗೋಲು. ಹೀಗೆ ಮಠದ ತೋಟದಲ್ಲಿ ಹಗಲು ರಾತ್ರಿ ಎನ್ನದೇ ಸಸ್ಯ ಸಂಪತ್ತು ಬೆಳೆಸುವಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು

.

ಇಲ್ಲೀಗ ಅವರು ಬೆಳಸಿದ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಬೆಳೆದು ನಿಂತಿವೆ. ಇದರಲ್ಲಿ ಈಗ ನಾಲ್ಕು ಸಾವಿರಕ್ಕೂ ಮಿಕ್ಕು ಫಲ ನೀಡುತ್ತಿವೆ. ಇದರಿಂದ ಬಂದ ಆದಾಯ ಸಂಪೂರ್ಣ ಮಠಕ್ಕೆ. ವೀರಭದ್ರಪ್ಪನವರು ಆಗಿನ ಸಮಯದಲ್ಲಿ ಕಾಯಿ ಕೀಳಲು ಸ್ವತಃ ಮರ ಹತ್ತುತ್ತಿದ್ದರು.  ವಯಸ್ಸಾದಂತೆಲ್ಲ ಮರ ಹತ್ತುವದನ್ನು ಬಿಟ್ಟು, ಉದ್ದನೆಯ ದೋಟಿ, ಮೂಟೆ ಗಟ್ಟಲೆ ತೆಂಗು ತುಂಬಿದ ಚೀಲಗಳನ್ನು ಹೊರುವುದು, ಸುಲಿಯುವುದು ಗಿಡಗಳಿಗೆ ರಾತ್ರಿ, ಹಗಲು ನೀರುಣಿಸುವುದು, ಇಂತಹ ಎಲ್ಲ ಕೆಲಸ ಮಾಡುತ್ತಿದ್ದರು. ಇವೆಲ್ಲವೂ ಅವರ ಭಕ್ತಿ ಸೇವೆ ಹಾಗೂ ಪರಿಸರದ ಮೇಲಿರುವ ಅವರ ಅಪಾರ ಪ್ರೀತಿ. ‘ಶರಣರೇ, ಈ ವಯಸ್ಸಿನಲ್ಲಿ ಯಾರಿಗಾಗಿ ಈ ಸೇವೆ?’ ಎಂದು ಕೇಳಿದರೆ ತುಟಿ ಪಿಟಕ್ಕೆಂದು ವಚನವೊಂದು ಅವರ ಬಾಯಿಂದ ಹೊಮ್ಮುತ್ತಿತ್ತು.

‘ಆವ ಲೋಹವಾದರೇನು? ಪೌರುಷಕ್ಕೆ ಸಮಭಾವ

                ಆವ ಕಾಷ್ಠವಾದರೇನು? ಅನಲಕ್ಕೆ ಸಮಭಾವ

                ಆವ ಕುಲವಾದರೇನು? ಸದ್ಗುರುವಿಗೆ ಸಮಭಾವ…’

ಸ್ವಾತಂತ್ರ್ಯದ ಪೂರ್ವ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಇವರು ಬೆಳಗಾವಿ ಜಿಲ್ಲೆಯ ಬೆಳವಡಿಯಲ್ಲಿ ಸ್ವಾತಂತ್ರ್ಯದ ಚಳುವಳಿಯಲ್ಲಿ ಭಾಗವಹಿಸಿದ ಸನ್ನಿವೇಶಗಳನ್ನು ವಿವರಿಸುತ್ತಿದ್ದರು. ನೀವೇಕೆ ಸರಕಾರದಿಂದ ಮಾಶಾಸನ ತೆಗೆದುಕೊಳ್ಳಬಾರದೆಂದು ಪ್ರಶ್ನಿಸಿದರೆ….. ‘ಕೆಲಸ ಮಾಡಿದ್ದಕ್ಕೆ ಕೂಲಿ ತೊಗೊಂಡ್ರ ಕೆಲಸ ಮಾಡಿದ ಹೆಮ್ಮೆ ನಮ್ಮತಾಕ ಉಳೀಂಗಿಲ್ರಿ ಬುದ್ದಿ!’ ಎಂದು ನಿರಹಂಕಾರ ಉತ್ತರ ಬರುತ್ತಿತ್ತು. ‘ಬಟ್ಟೆ ಮ್ಯಾಲಾಗಲಿ, ಹೊಟ್ಟೆ ಮ್ಯಾಲಾಗಲಿ ಆಶಾ ಇಲ್ಲದ ಈ ದೇಹಕ್ಕೆ ಮಾಶಾಸನ ಯಾಕೆ ಬೇಕ್ರಿ ಬುದ್ದಿ?’ ಎಂದು ಆ ಸೌಮ್ಯ ಮುಖ ಕಿರುನಗೆ ಬೀರುತ್ತಿತ್ತು.

ಪೂಜ್ಯ ಕುಮಾರ ಸ್ವಾಮಿ ಗಳು  ಲಿಂಗೈಕ್ಯರಾದ ನಂತರ ಮಠಕ್ಕೆ ಸೇರಿದ 60 ಎಕರೆ ಸ್ಥಳದ ನಿರ್ವಹಣೆ ಮಾಡುವವರು ಯಾರೂ ಇರಲಿಲ್ಲ. ಬೇಲಿಯೂ ಇರಲಿಲ್ಲ. ಈತನೇ ನಡೆದಾಡುವ ಬೇಲಿ. ಈಗಿನ ಹಾಗೆ ಆ ಸಮಯದಲ್ಲಿ ಸುತ್ತ ಐದಾರು ಕಿ.ಮೀ ದೂರದಲ್ಲಿ ಯಾವ ಊರೂ ಇಲ್ಲದ ಕಾರಣ, ಇಲ್ಲಿಗೆ ಕಳ್ಳಕಾಕರು ಬರುತ್ತಿರಲಿಲ್ಲ.

ಪಕ್ಕದ ಮಲಪ್ರಭ ನದಿಗೆ ವಿದ್ಯುತ್ ಪಂಪ್ ಅಳವಡಿಸಿ, ಆಗಾಗ ಅದನ್ನು ಚಾಲೂ ಮಾಡುವುದು, ಬೀಜ ನೆಡುವುದು ಈತನ ಕೆಲಸ. ಗಿಡಗಳಿಗೆ ರಸಗೊಬ್ಬರವಿಲ್ಲ. ಎಲ್ಲಾ ನೈಸರ್ಗಿಕ. ಇದು ಅವರ ಭೂಮಿ ಹಾಗೂ ಪರಿಸರದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಅಲ್ಲವೇ? ತನ್ನಷ್ಟೇ ತನ್ಮಯವಾಗಿ ದುಡಿಯುವ ಆಳುಗಳು ಸಿಕ್ಕರೆ ಉತ್ತಮವೆಂದು ಈತನ ಬಯಕೆ. ಆದರೆ ಎಲ್ಲಿ ಸಿಗುತ್ತಾರೆ ಅಂಥವರು?

ಒಂದೇ ವರ್ಷದಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ತೆಂಗಿನ ಕಾಯಿಗಳನ್ನು ಇವರು ಸಂಗ್ರಹಿಸುತ್ತಿದ್ದರು. ಅದರಲ್ಲೂ ಕೆಲವು ಸಸಿ ಮಾಡಲಿಕ್ಕಂತೆ.

ಮತ್ತಷ್ಟು ಸಸಿಗಳೆ? ಯಾವಾಗ ನಿಮಗೆ ವಿಶ್ರಾಂತಿ? ಎಂದು ಕೇಳಿದರೆ,

ಆ ಮುಗ್ದ ಮನಸ್ಸಿನ ಉತ್ತರ ಹೀಗಿತ್ತು ‘ಸ್ವಾಮಿ, ಜಗ ಭಾಳ ದೊಡ್ಡದೈತ್ರಿ, ಇನ್ನೂ ಅದರ ತುಂಬ ತೆಂಗಿನ ಗಿಡ, ಹಣ್ಣಿನ ಗಿಡ, ಹೂವಿನ ಗಿಡ ಹಾಕಬೇಕ್ರಿ. ಇದನ್ನ ಲತಾ ಮಂಟಪ ಮಾಡಬೇಕಾಗೈತ್ರಿ, ಎಷ್ಟು ಹಾಕಿದ್ರೂ ಮುಗೀವಲ್ದು ಎನ್ನುತ್ತಿತ್ತು.

ತೋಟದಲ್ಲಿ ಅಷ್ಟೆಲ್ಲ ದಾಳಿಂಬೆ, ಚಿಕ್ಕು, ಪೇರಲ, ಗಿಡಗಳು ಹಣ್ಣು ನೀಡುತ್ತಿವೆ ‘ಇವುಗಳನ್ನು ಯಾಕೆ ಮಾರೋದಿಲ್ಲ’ ಎಂದು ಕೇಳಿದರೆ,

ಆ ನಿರ್ಮಲ ಮನದ ವೀರಭದ್ರಪ್ಪ ಹೇಳುತ್ತಿದ್ದರು ‘ಹಣ್ಣು ಮಾರಬೇಕಂತ ಗಿಡ ಹಚ್ಚಿಲ್ರೀ ಶಿವಾ! ಇಲ್ಲಿದಾರಲ್ರೀ ಗುರುವಿನ ಗಿಣಿಗಳು, ಇವರು ತಿಂದು ಶಾಂತಿಯಿಂದ ಇರ್ಲಿ ಅಂತಾ ಹಚ್ಚೇನ್ರಿ’ ಎಂದು ನಗುತ್ತಾ ಅಲ್ಲಿ ವಿದ್ಯಾಭ್ಯಾಸ ಮಾಡುವ ಸಾಧಕರನ್ನು ಹಾಗೂ ವಟುಗಳನ್ನು ತೋರಿಸುತ್ತಿದ್ದರು.

ಹಸಿರೆ ಉಸಿರೆಂದು ತಿಳಿದ ಈ ವೀರಭದ್ರಪ್ಪ ಶರಣರು ಈ ಶಿವನ ಮಂದಿರವಾದ ಶಿವಯೋಗಮಂದಿರಕ್ಕೆ ತಮ್ಮ ಜೀವಿತಾವಧಿಯ ಸೇವೆಯನ್ನು ಸಲ್ಲಿಸಿ, ತಮ್ಮ 85-86 ವಯಸ್ಸಿನಲ್ಲಿ ಈಹಲೋಕ ತ್ಯಜಿಸಿದರು.

                                                            .